ಸಾಹಿತ್ಯ ಸಮ್ಮೇಳನ-೭ : ಚಿಕ್ಕಮಗಳೂರು
ಮೇ ೧೯೨೧

ಅಧ್ಯಕ್ಷತೆ: ಕೆ.ಪಿ. ಪುಟ್ಟಣ್ಣಶೆಟ್ಟಿ

೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕೆ.ಪಿ. ಪುಟ್ಟಣ್ಣಶೆಟ್ಟಿ

ಬೆಂಗಳೂರಿನ ಸುಧಾರಕರಲ್ಲಿ ಒಬ್ಬರಾಗಿ ಸಮಾಜಸೇವಕರಾದ ಕೆ.ಪಿ. ಪುಟ್ಟಣ್ಣಶೆಟ್ಟಿ ಅವರು ೨೯-೪-೧೮೫೬ರಲ್ಲಿ ಬೆಂಗಳೂರಿನ ಕೃಷ್ಣರಾಜಪುರದಲ್ಲಿ ಜನಿಸಿದರು. ಎಲ್ಲರಂತೆ ಸಾಮಾನ್ಯ ಶಿಕ್ಷಣ ಪಡೆದವರು ಶ್ರಮಜೀವಿಗಳಾಗಿ ಜ್ಞಾನದಾಹಿಗಳಾಗಿ ಶಿಕ್ಷಣ ಪೂರೈಸಿದರು.

೧೮೭೬ರಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಮೈಸೂರು ಸರ್ಕಾರದಲ್ಲಿ ಉದ್ಯೋಗಾರಂಭ ಮಾಡಿದ ಇವರು ೧೮೯೮ರಲ್ಲಿ ಡೆಪ್ಯುಟಿ ಕಮೀಷನರ್ ಆದರು. ೧೯೧೧ರಲ್ಲಿ ಕೌನ್ಸಿಲರ ಪ್ರಥಮ ಸದಸ್ಯರಾದರು.

೧೯೧೨ರಲ್ಲಿ ನಿವೃತ್ತರಾದ ಮೇಲೆ ಮೈಸೂರು ಬ್ಯಾಂಕಿನ ಅಧ್ಯಕ್ಷರಾದರು.  ೧೯೧೫ರಿಂದ ೧೯೨೨ರವರೆಗೆ ಬೆಂಗಳೂರು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷಗಿರಿ ಹೊಂದಿದ ಇವರು ೧೯೨೭ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದರು. ಬೆಂಗಳೂರು ವೀರಶೈವ ವಿದ್ಯಾನಿಲಯವನ್ನು ೧೯೩೮ರಲ್ಲಿ ಸ್ಥಾಪಿಸಿದರು. ಅನೇಕ ಧರ್ಮಸಂಸ್ಥೆಗಳಿಗೆ ನ್ಯಾಯಪಾಲಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಧನಸಹಾಯ ಮಾಡಿದ ಇವರು ೧೯೩೬ರಲ್ಲಿ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿದ್ದರು. ಪರಿಷತ್ತಿನ ಸ್ಥಾಪನೆ ಕಾರ್ಯದಲ್ಲಿ ಭಾಗವಹಿಸಿದರು. ೧೯೩೬ರಲ್ಲಿ ವಿಜಯನಗರ ಸ್ಮಾರಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ೧೯೧೫ರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.

ಮೈಸೂರು ಮಹಾರಾಜರಿಂದ ೧೯೧೧ರಲ್ಲಿ ರಾಜಸಭಾಭೂಷಣ, ಭಾರತ ಸರ್ಕಾರದಿಂದ ದಿವಾನ್, ರಾವ್ ಬಹಾದೂರ್ ಪ್ರಶಸ್ತಿಯೂ ದೊರಕಿತು. ೧೯೨೫ರಲ್ಲಿ ಸಿ.ಐ.ಇ. ಸನ್ಮಾನ, ೧೯೨೫ರಲ್ಲಿ ಸರ್ ಪ್ರಶಸ್ತಿ, ೧೯೧೪ರಲ್ಲಿ ಕೈಸರ್-ಇ-ಹಿಂದ್ ಪದಕವು ಇವರಿಗೆ ಲಭ್ಯವಾಯಿತು.

ಚಿಕ್ಕಮಗಳೂರಿನ ೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾದ ಇವರು ೨೩-೭-೧೯೩೮ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ,

ಅಧ್ಯಕ್ಷರು, ಕೆ.ಪಿ. ಪುಟ್ಟಣ್ಣಶೆಟ್ಟರು

ದಿನಾಂಕ ೧೯,0,೨೧ ಮೇ ೧೯೨೧,

ಸ್ಥಳ : ಚಿಕ್ಕಮಗಳೂರು

ಈ ಸಂಬಂಧದಲ್ಲಿ ಒಂದು ವಿಷಯವನ್ನು ಅರಿಕೆ ಮಾಡುವೆನು. ಕನ್ನಡ ನಾಡಿನ ಚರಿತ್ರೆಯು ಪತ್ರಿಕೆಗಳಲ್ಲಿಯೂ ಸರ್ಕಾರದ ಶಾಸನ ಇಲಾಖೆಯಿಂದ ಹೊರಡುವ ವಾರ್ಷಿಕ ವರದಿಗಳಲ್ಲಿಯೂ ಇಲ್ಲಷ್ಟು ಅಲ್ಲಷ್ಟು ತುಂಡುತುಂಡಾಗಿ ಇಂಗ್ಲಿಷು ಭಾಷೆಯಲ್ಲಿ ದೊರೆಯುವುದೇ ವಿನಾ ಮೊದಲಿನಿಂದ ಈಗಿನವರಿಗೆ ಪಾಙ್ಕ್ತವಾಗಿಯೂ ಜೋಡಣೆಯಾಗಿಯೂ ಬರೆದಿರುವ ಪುಸ್ತಕವೇ ಇಲ್ಲವೆಂದು ಹೇಳಬಹುದು. ಚರಿತ್ರೆಯನ್ನು ಬರೆಯುವುದಕ್ಕೆ ಈಚೆಗೆ ಬೇಕಾದಷ್ಟು ಸಾಮಗ್ರಿಗಳು ದೊರೆತಿವೆ. ಅವುಗಳನ್ನು ಸರಿಯಾಗಿ ಉಪಯೋಗಿಸಿ ವಿಷಯಕ್ಕನುರೂಪವಾದ ಶೈಲಿಯಲ್ಲಿ ನೂಲುವ ಐತಿಹಾಸಿಕರು ಬೇಕು.  ಅಂತಹ ಪುಸ್ತಕಗಳು ವಿದ್ಯಾರ್ಥಿಗಳಿಗೂ ಇತರರಿಗೂ ಉಪಯೋಗವಾಗಿ ಅವರ ಕಣ್ಣುಗಳನ್ನು ತೆರೆಯಿಸುವುದರಲ್ಲಿ ಯಾವ ಸಂಶಯವೂ ಇರಲಾರದು. ಅನೇಕ ಐತಿಹಾಸಿಕ ನಾಟಕಗಳ ಕಥಾ ಶರೀರಕ್ಕೆ ಉಪಯೋಗವಾಗುವ ವಿಷಯಗಳು ನಮ್ಮ ದೇಶ ಚರಿತ್ರೆಯಲ್ಲಿ ದೊರೆಯುವುದೆಂಬುದು ನನ್ನ ನಂಬಿಕೆಯು. ಕರ್ಣಾಟಕ ಸಾಹಿತ್ಯ ಪರಿಷತ್ತು ಇಂತಹ ಕರ್ಣಾಟ ದೇಶದ ಚರಿತ್ರೆಯನ್ನು ಬರೆಯಿಸಿದರೆ ಒಟ್ಟು ಕನ್ನಡ ನಾಡಿಗೇ ಮಹೋಪಕಾರವನ್ನು ಮಾಡಿದಂತಾಗುವುದು.

ಜನರಲ್ಲಿ ಭಾಷಾವಿಷಯವಾಗಿ ಜಾಗ್ರತಿಯನ್ನುಂಟುಮಾಡುವ ಪರಿ ಏನು? ಕನ್ನಡ ನುಡಿಯನ್ನೂ ಕರ್ಣಾಟಕ ವಾಙ್ಮಯವನ್ನೂ ವೃದ್ಧಿಗೊಳಿಸುವುದಕ್ಕಾಗಲ್ಲವೆ ಕರ್ಣಾಟಕ ಸಾಹಿತ್ಯ ಪರಿಷತ್ತು ಕೆಲವು ವರ್ಷಗಳ ಹಿಂದೆ ಸ್ಥಾಪಿತವಾದುದು! ಕನ್ನಡಿಗರು ಇನ್ನೂ ಚೆನ್ನಾಗಿ ಕಣ್ಣು ತೆರೆದಿಲ್ಲವೆಂಬುದಕ್ಕೆ ಈ ಪರಿಷತ್ತಿನ ಸದಸ್ಯರುಗಳ ಪಟ್ಟಿಯೇ ದೃಷ್ಟಾಂತವು. ನಾವು ಬೆಳೆಯಿಸಿದ ಗಿಡಕ್ಕೆ ನಾವೇ ನೀರೆರೆಯದೆ ಗಿಡ ಬಾಡಿದರೆ ತಪ್ಪು ಯಾರದು? ನಮ್ಮದೋ ಗಿಡದ್ದೋ? ಪರಿಷತ್ತಿನ ಉದ್ದೇಶವು ನೆರವೇರಬೇಕಾದರೆ ಅದರ ಸದಸ್ಯರ ಪಟ್ಟಿಯು ಬೆಳಯುತ್ತಾ ಬರಬೇಕು.

ಒಂದೊಂದು ಊರಿನಲ್ಲಿಯೂ ಕರ್ಣಾಟಕ ಭಾಷಾ ಸೇವಾಸಂಘಗಳು ಏರ್ಪಡಬೇಕು; ಅವೆಲ್ಲವೂ ಈ ಸಂಸ್ಥೆಗೆ ಶಾಖೆಗಳಾಗಬೇಕು. ಸಾಮಾನ್ಯವಾಗಿ ಪ್ರತಿಯೊಂದು ಊರಿನಲ್ಲಿಯೂ ಒಂದು ಪಾಠಶಾಲೆ ಇರುವುದಷ್ಟೇ. ಅದಕ್ಕೆ ಸೇರಿದ ಉಪಾಧ್ಯಾಯರೂ ವಿದ್ಯಾರ್ಥಿಗಳೂ ಕೂಡಿ ಇಂತಹ ಸಂಘಗಳನ್ನು ಸ್ಥಾಪಿಸಬಹುದು. ಈ ಸಂದರ್ಭದಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ‘’ಸೆಂಟ್ರ್ರಲ್ ಕಾಲೇಜಿನ ಕರ್ಣಾಟಕ ಸಂಘ” ವೆಂಬ ನಾಮಧೇಯವುಳ್ಳ ಒಂದು ಸಂಘವನ್ನು ಏರ್ಪಡಿಸಿ ಒಂದು ಕನ್ನಡ ಪತ್ರಿಕೆಯನ್ನು ಹೊರಡಿಸುತ್ತಿರುವುದು ಕನ್ನಡ ನುಡಿಯ ಏಳಿಗೆಗೆ ಶುಭ ಸೂಚಕವಾಗಿರುವುದೆಂದು ತಮಗೆ  ತಿಳಿಸಲು ನನಗೆ ಬಹಳ ಸಂತೋಷವು. ಇಂತಹ ಸಂಘವೊಂದು ಪ್ರತಿಯೊಂದು ಹೈಸ್ಕೂಲಿಗೂ ಬೇಕು. ಅದನ್ನು ಏರ್ಪಡಿಸುವುದು ಸುಲಭವೆಂದು ನನ್ನ ಬುದ್ಧಿಗೆ ತೋರುತ್ತದೆ. ಈ ಸಂಘಗಳ ಸದಸ್ಯರುಗಳು ಆಗಾಗ ಸೇರಿ ದೇಶಭಾಷಾಭಿವೃದ್ಧಿಯ ಮತ್ತು ದೇಶೋನ್ನತಿಯ ಸಾಧನಗಳ ವಿಷಯವಾಗಿ ಕನ್ನಡದಲ್ಲಿ ಚರ್ಚಿಸಬೇಕು. ಈ ಚರ್ಚೆಗಳನ್ನು ನೋಡುವುದಕ್ಕೂ ಅವುಗಳಲ್ಲಿ ಭಾಗಿಗಳಾಗುವುದಕ್ಕೂ ಸದಸ್ಯರಲ್ಲದ ಇತರರನ್ನೂ ಕರೆಯಬೇಕು. ನಾಲ್ಕೈದು ಸಂಘವತ್ಸರಗಳು ಈ ರೀತಿ ನಡೆಯುವುದರೊಳಗೆ ಫಲವು ವ್ಯಕ್ತವಾಗುವುದಕ್ಕೆ ಪ್ರಾರಂಭವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

Tag: Kannada Sahitya Sammelana 7, K.P. Puttannachetty, K.P. Puttanna shetty, K.P. Puttannashetty

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)