ಸಾಹಿತ್ಯ ಸಮ್ಮೇಳನ-೮ : ದಾವಣಗೆರೆ
ಮೇ ೧೯೨೨

ಅಧ್ಯಕ್ಷತೆ: ಎಂ. ವೆಂಕಟಕೃಷ್ಣಯ್ಯ

೮ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎಂ. ವೆಂಕಟಕೃಷ್ಣಯ್ಯ

ತಾತಯ್ಯ ಎಂದು ಪ್ರಸಿದ್ಧರಾದ ಎಂ. ವೆಂಕಟಕೃಷ್ಣಯ್ಯ ಅವರು ಹೆಗ್ಗಡೆದೇವನಕೋಟೆ ತಾಲ್ಲೂಕಿನ ಮೊಗ್ಗೆ ಗ್ರಾಮದಲ್ಲಿ ೨0-೮-೧೮೪೪ ರಲ್ಲಿ ಸುಬ್ಬಯ್ಯ-ಭಾಗೀರಥಮ್ಮ ದಂಪತಿಗಳಿಗೆ ಪುತ್ರರಾಗಿ ಜನಿಸಿದರು.

ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆ ಆದರು. ಅನಂತರ ಮೈಸೂರಿನಲ್ಲಿ ಮರಿಮಲ್ಲಪ್ಪ ಶಾಲೆಗಳಲ್ಲಿ ಉಪಾಧ್ಯಾಯರಾದರು. ಅನಂತರ ಹಲವಾರು ಶಾಲೆಗಳಲ್ಲಿ ಉಪಾಧ್ಯಾಯರಾಗಿ ಸುಮಾರು ೫0 ವರುಷಗಳವರೆಗೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಅಧ್ಯಾಪಕ ವೃತ್ತಿ ಜತೆಗೆ ಪತ್ರಿಕಾಸೇವೆ ಸಲ್ಲಿಸಿದ ಹಿರಿಮೆ ವೆಂಕಟಕೃಷ್ಣಯ್ಯನವರದು. ಕನ್ನಡದಲ್ಲಿ ಸ್ವತಂತ್ರ ಪತ್ರಿಕೆ ‘ಸಾಧ್ವಿ’ಯನ್ನು ಪ್ರಾರಂಭಿಸಿದ ಇವರು ವೆಲ್ತ್ ಆಫ್ ಮೈಸೂರು, ಮೈಸೂರು ಪೇಟ್ರಿಯಟ್, ನೇಚರ್ಕ್ಯೂರ್, ದಿ ಸಿವಿಕ್ ಅಂಡ್ ಸೋಷಿಯಲ್ ಜರ್ನಲ್ ಮುಂತಾದ ಪತ್ರಿಕೆಗಳನ್ನು ನಡೆಸಿದರು. ಪತ್ರಿಕಾ ಪ್ರಪಂಚದ ಭೀಷ್ಮರೆಂದೆನಿಸಿದರು. ಮೈಸೂರು ಪ್ರಜಾಪ್ರತಿನಿಧಿ ಸರ್ಕಾರದ ಪ್ರತಿನಿಧಿಯಾಗಿಯೂ, ನ್ಯಾಯವಿಧಾಯಕಸಭೆ, ಸಂಪದಭ್ಯುದಯ ಸಭೆ, ಜಿಲ್ಲಾಮಂಡಳಿ, ಪೌರ ಪರಿಷತ್ತು, ಲಿಟರರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ಅನಾಥಾಲಯದ ಸ್ಥಾಪಕರಲ್ಲಿ ಒಬ್ಬರಾಗಿದ್ದರು.

೧೯೨೨ರಲ್ಲಿ ದಾವಣಗೆರೆಯಲ್ಲಿ ನಡೆದ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅಧ್ಯಕ್ಷಪೀಠದಲ್ಲಿ ಶ್ರೀಮನ್ಮಹಾರಾಜರ ಭಾವಚಿತ್ರವಿಟ್ಟು ಅಧ್ಯಕ್ಷ ಕಾರ್ಯನಿರ್ವಹಿಸಿದರು. ಇದು ಅವರ ರಾಜನಿಷ್ಠೆ. ಪರಿಷತ್ತಿನ ಸ್ಥಾಪನೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಜನ ಇವರ ಸೇವೆಯನ್ನು ಕಂಡು ತಾತಯ್ಯ, ದಯಾಸಾಗರ, ಪತ್ರಿಕಾ ಪಿತಾಮಹ, ಭೀಷ್ಮಾಚಾರ್ಯ ಎಂದೆಲ್ಲಾ ಪ್ರೀತಿಯಿಂದ ಕರೆದು ಗೌರವಿಸಿದರು.

ಕೃತಿಗಳು: ಚೋರಗ್ರಹಣತಂತ್ರ (ಕಾದಂಬರಿ), ಪರಂತಪವಿಜಯ (ಕಾದಂಬರಿ), ವಿದ್ಯಾಕರಭೂಷಣ ಧನಾರ್ಜನೆಯ ಕ್ರಮ, ಅರ್ಥಸಾಧನ, ಹರಿಶ್ಚಂದ್ರ ಚರಿತೆ, ಆರೋಗ್ಯ ಸಾಧನ ಪ್ರಕಾಶಿಕೆ, ಬೂಕರ್ ಇ ವಾಷಿಂಗ್ಟನ್ ಚರಿತ್ರೆ ಇತ್ಯಾದಿ.

ಸಾಹಿತಿಗಳೂ, ಪತ್ರಿಕಾಕರ್ತರೂ, ಸಾಮಾಜಿಕ ಸೇವಾ ಧುರಂಧರರೂ ಆದ ವೆಂಕಟಕೃಷ್ಣಯ್ಯನವರು ೮-೧೧-೧೯೩೩ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ,

ಅಧ್ಯಕ್ಷರು, ಎಂ. ವೆಂಕಟಕೃಷ್ಣಯ್ಯ

ದಿನಾಂಕ ೧೨,೧೩ ಮೇ ೧೯೨೨

ಸ್ಥಳ : ದಾವಣಗೆರೆ

ಪರಿಷತ್ತಿನ ಸ್ಥಾಪನೆಯ ಹಿನ್ನೆಲೆ

ದಿವಾನ್ ರಂಗಾಚಾರ್ಯ ಅವರು ವಿದ್ಯಾಶಾಲೆಗಳನ್ನು ಹೆಚ್ಚಿಸಿ, ವಿದ್ಯಾವೇತನಗಳನ್ನು ಕಲ್ಪಿಸಿ, ವಿದ್ಯಾಭ್ಯಾಸದ ಇಲಾಖೆಯನ್ನು ಕ್ರಮಪಡಿಸಿದರು; ಶ್ರೀಚಾಮರಾಜೇಂದ್ರ ಸಂಸ್ಕೃತ ಮಹಾಪಾಠಶಾಲೆಯನ್ನು ಏರ್ಪಡಿಸಿ, ಅಲ್ಲಿಯ ವಿದ್ಯಾರ್ಥಿಗಳಿಗೂ ಪಂಡಿತರಿಗೂ ಪಾರಿತೋಷಕಗಳನ್ನು ಹಂಚುವ ವಾರ್ಷಿಕೋತ್ಸವಕ್ಕೆ ಸ್ವಯಂ ಶ್ರೀಮನ್ಮಹಾರಾಜರವರೇ ಬರುವಂತೆ ಮಾಡಿದರು. ಇದೇ ಸಮಯದಲ್ಲಿ ಕರ್ಣಾಟಕ ಭಾಷೋಜ್ಜೀವಿನೀ ಸಭೆಯು ಪ್ರಾರಂಭವಾಗಿ ಕರ್ಣಾಟಕ ಪ್ರೌಢವಿದ್ಯಾಶಾಲೆಯೆಂದು ಏರ್ಪಾಡಾಯಿತು. ಅದಕ್ಕೆ ರಾಜಕಾರ್ಯ ಪ್ರಸಕ್ತ ರಾವ್ ಬಹದ್ದೂರ್ ಎಂ. ಶ್ಯಾಮರಾಯರು ಕಾರ್ಯದರ್ಶಿಯಾಗಿದ್ದರು. ಆ ಸಂಸ್ಥೆಯು ಕನ್ನಡ ಲೇಖಕರಿಗೆ ಪ್ರಾಶಸ್ತ್ಯವನ್ನುಂಟುಮಾಡಿಕೊಟ್ಟಿತು. ಗರಳಪುರಿ ಶಾಸ್ತ್ರಿಗಳು, ಬಸಪ್ಪಶಾಸ್ತ್ರಿಗಳು, ಸಿದ್ಧಲಿಂಗಪ್ಪನವರು, ಕರಿಬಸಪ್ಪ ಶಾಸ್ತ್ರಿಗಳು, ಮಲ್ಲಪ್ಪನವರು, ಜಯರಾಯಾಚಾರ್ಯರು – ಈ ಮೊದಲಾದವರು ಉತ್ತಮಗಳಾದ ಕಾವ್ಯ ನಾಟಕಗಳನ್ನು ಬರೆದು ಪ್ರಸಿದ್ಧರಾದರು. ಇವರೆಲ್ಲರೂ ಅಳಿಯ ಲಿಂಗರಾಜ ಅರಸಿನವರಿಂದ ಪ್ರೋತ್ಸಾಹ ಪಡೆಯುತ್ತಿದ್ದರು.

ಈ ರೀತಿಯಲ್ಲಿ ಶ್ರೀಚಾಮರಾಜೇಂದ್ರ ಒಡೆಯರವರು ಕರ್ಣಾಟಕ ಭಾಷೆಗೆ ಕೊಟ್ಟ ಪೋಷಣೆಯು ಈಗ ನಮ್ಮನಾಳುತ್ತಿರುವ ಶ್ರೀಮನ್ಮಹಾರಾಜರು ನಾಲ್ಮಡಿ ಕೃಷ್ಣರಾಜೇಂದ್ರ ಒಡೆಯರವರ ಪ್ರಭುತ್ವದಲ್ಲಿ ವೃದ್ಧಿಹೊಂದಿದೆ. ಅವರ ಪ್ರೇರಣೆಯಂತೆ ಏರ್ಪಟ್ಟ ‘ಎಕನಾಮಿಕ್ಸ್ ಕಾನ್ಪರೆನ್ಸ್’ (Economic Conference) ಎಂಬ ಸಂಪದಭಿವೃದ್ಧಿ ಸಮಾಜದಿಂದ ದಿವಾನ್ ಸರ್.ಎಂ. ವಿಶ್ವೇಶ್ವರಯ್ಯನವರು ಈ ನಮ್ಮ ಕರ್ಣಾಟಕ ಸಾಹಿತ್ಯ ಪರಿಷತ್ತನ್ನು ಏರ್ಪಾಡು ಮಾಡಿಸಿದರು. ಇದಕ್ಕೆ ಶ್ರೀಮನ್ಮಹಾರಾಜರವರ ಸರಕಾರದವರು ಸಾವಿರಾರು ರೂಪಾಯಿಗಳ ಸಹಾಯ ದ್ರವ್ಯವನ್ನು ವರ್ಷವರ್ಷವೂ ಕೊಡುತ್ತಬಂದಿರುವುದಲ್ಲದೆ ಇತರ ವಿಧದಲ್ಲಿಯೂ ಬಹುವಾಗಿ ಸಹಾಯ ಮಾಡಿರುವರು. ಇದಕ್ಕಾಗಿ ಸಮಸ್ತ ಕರ್ಣಾಟಕಾಭಿಮಾನಿಗಳೂ ಶ್ರೀಮನ್ಮಹಾರಾಜರವರಿಗೂ ಅವರ ಸರಕಾರಕ್ಕೂ ಬಹಳ ಕೃತಜ್ಞರಾಗಿರುವರು.

ಪ್ರತಿ ಗ್ರ್ರಾಮದಲ್ಲಿಯೂ ಪರಿಷತ್ತಿನ ಶಾಖೆ ಇರಲಿ

ದೇಶಭಾಷೆಯನ್ನು ಪ್ರಬಲಗೊಳಿಸಬೇಕೆಂಬ ಆಸೆಯು ನಮ್ಮ ಮಹಾರಾಜರವರಿಗೆ ಸಂಪೂರ್ಣವಾಗಿರುವುದು. ಅದು ಅವರ ಹುಕುಮುಗಳಲ್ಲಿಯೂ ಅವರ ಕಾರ್ಯಗಳಲ್ಲಿಯೂ ಚೆನ್ನಾಗಿ ಕಾಣಬರುತ್ತದೆ. ಆದರೆ ಪ್ರಜೆಗಳ ಸಹಾಯವಿಲ್ಲದೆ ಅವರು ಯಾವ ಕೆಲಸ ಮಾಡುವುದಕ್ಕೂ ಸಾಧ್ಯವಿಲ್ಲ. ಈ ಭಾಷೋಜ್ಜೀವನ ಕಾರ್ಯಕ್ಕೆ ಪ್ರಜಾಸಹಾಯ ಅತ್ಯಂತಾವಶ್ಯಕವು. ಆದಕಾರಣ ಪ್ರತಿಯೊಬ್ಬ ಕನ್ನಡಿಗನೂ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಸದಸ್ಯನಾಗಿ ಸೇರಬೇಕು. ಅದು ಸಾಧ್ಯವಾಗದಿದ್ದರೆ ಪರಿಷತ್ಪತ್ರಿಕೆಗೆ ಚಂದಾದಾರನಾದರೂ ಆಗಬೇಕು. ಐದು ಸಾವಿರ ಮಂದಿ ಚಂದಾದಾರರು ದೊರೆತರೆ ಎಷ್ಟೋ ಕೆಲಸ ಮಾಡಬಹುದು. ಪ್ರತಿಯೊಂದು ಗ್ರಾಮದಲ್ಲಿಯೂ ನಮ್ಮ ಪರಿಷತ್ತಿನ ಶಾಖೆಯೊಂದಿರಬೇಕು. ಅದಕ್ಕೆ ನಮ್ಮ ಮ|| ರಾ|| ಶ್ರೀ ಬೆಳ್ಳಾವೆ  ವೆಂಕಟನಾರಾಯಣಪ್ಪನವರಂತಹ ಉತ್ಸಾಹ ಶಾಲಿಗಳೂ ಕರ್ತವ್ಯನಿಷ್ಠರೂ ಆದ ಕಾರ್ಯದರ್ಶಿಯೊಬ್ಬರಿರಬೇಕು. ಹೀಗಾದರೆ ಭಾಷಾಕಾರ್ಯವು ದೇಶದಲ್ಲೆಲ್ಲ್ಲ ಸಾಂಗವಾಗಿ ನಡೆದು ನಮ್ಮ ಉದ್ದೇಶಗಳು ಬೇಗ ನೆರವೇರುವುವು.

Tag: Kannada Sahitya Sammelana 8, M. Venkatakrishnaiah

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)