ಸಾಹಿತ್ಯ ಸಮ್ಮೇಳನ-೯ : ಬಿಜಾಪುರ
ಮೇ ೧೯೨೩

ಅಧ್ಯಕ್ಷತೆ: ಸಿದ್ಧಾಂತಿ ಶಿವಶಂಕರಶಾಸ್ತ್ರಿ

೯ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಸಿದ್ಧಾಂತಿ ಶಿವಶಂಕರ ಶಾಸ್ತ್ರಿ

ಸಿದ್ಧಾಂತಿ ಶಿವಶಂಕರಶಾಸ್ತ್ರಿ ಅವರು ೧೮೬೪ರಲ್ಲಿ ಜನಿಸಿದರು. ತಂದೆ ಸುಬ್ರಹ್ಮಣ್ಯಶಾಸ್ತ್ರಿಗಳು ಕನ್ನಡ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಅದ್ವಿತೀಯ ಪಂಡಿತರು. ತಂದೆಯಿಂದಲೇ ಪ್ರಾಥಮಿಕ ಶಿಕ್ಷಣ ಪಡೆದು ಅವರಂತೆಯೇ ವಿದ್ವಾಂಸರಾದರು.

ಮದರಾಸಿನ ಕ್ರಿಶ್ಚಿಯನ್ ಕಾಲೇಜು ಮತ್ತು ಪ್ರೆಸಿಡೆನ್ಸಿ ಕಾಲೇಜಿನಲ್ಲೂ ೩0 ವರ್ಷಗಳ ಕಾಲ ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಿದರು. ೧೯೨೧ರಲ್ಲಿ ನಿವೃತ್ತರಾದ ಮೇಲೆ ಬೆಂಗಳೂರಿಗೆ ಬಂದು ನೆಲೆಸಿದರು.

ಶಿವಶಂಕರ ಶಾಸ್ತ್ರಿಗಳು ತಮ್ಮ ಪಾಂಡಿತ್ಯದಿಂದ ವಿದ್ವಜ್ಜನರ ಮನಸೆಳೆದಿದ್ದರು. ಬೆಂಗಳೂರು ಬಸವನಗುಡಿಯ ನರಹರಿರಾಯನ ಗುಡ್ಡದಲ್ಲಿ ಆನಂದಗಿರಿಯ ದೇವಾಲಯದಲ್ಲಿ ಧರ್ಮಸೇವೆಗೆ ತೊಡಗಿದರು.

ಮೈಸೂರು, ಶೃಂಗೇರಿ ಮುಂತಾದ ಕಡೆಗಳಲ್ಲಿ ಶಾಸ್ತ್ರಿಗಳಿಗೆ ಬಿರುದು-ಬಹುಮಾನಗಳನ್ನು ಕೊಟ್ಟು ಸನ್ಮಾನಿಸಿದ್ದಾರೆ. ಭಾರತ ಸರ್ಕಾರದವರು ಮಹಾ ಮುಖ್ಯೋಪಾಧ್ಯಾಯ ಬಿರುದನ್ನು ನೀಡಿತು: ಮೈಸೂರು ಮಹಾರಾಜರು ೧೯೩೮ರಲ್ಲಿ ವಿದ್ಯಾನಿಧಿ ಬಿರುದನ್ನು ನೀಡಿ ಸನ್ಮಾನಿಸಿದರು. ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಇವರು ಪರಿಷತ್ತಿನ ಸ್ಥಾಪನೆಗೆ ಮುನ್ನ ಅನೇಕ ಸಲಹೆಗಳನ್ನು ನೀಡಿದ್ದರು.

ಪಾಂಡಿತ್ಯಪೂರ್ಣ ಕೃತಿಗಳನ್ನು ರಚಿಸಿರುವುದು ಇವರ ಹೆಗ್ಗಳಿಕೆ:

ಕರ್ಣಾಟಕ ನಳೋಪಾಖ್ಯಾನ, ಕರ್ಣಾಟಕ ನರಕಾಸುರ ವಿಜಯ ವ್ಯಾಯೋಗ, ಶ್ರೀಶಂಕರಕಥಾಮೃತಂ, ಪ್ರಶ್ನೋತ್ತರ ಮಾಲಿಕೆ, ಶ್ರೀ ಕಾವೇರಿ ಮಹಾತ್ಮೆ ಇತ್ಯಾದಿ

ಜ್ಯೋತಿಷ್ಯಶಾಸ್ತ್ರದ ಪಂಡಿತರಾದ ಇವರು ೧೯೪೨ರಲ್ಲಿ ಸ್ವರ್ಗಸ್ಥರಾದರು.

ಕನ್ನಡ ಸಾಹಿತ್ಯ ಸಮ್ಮೇಳನ,

ಅಧ್ಯಕ್ಷರು : ಸಿದ್ಧಾಂತಿ ಶಿವಶಂಕರಶಾಸ್ತ್ರಿ

ದಿನಾಂಕ ೨೧, ೨೨, ೨೩ ಮೇ ೧೯೨೩

ಸ್ಥಳ : ಬಿಜಾಪುರ

ಹಿಂದಿನ ೮ ಸಮ್ಮೇಳನಗಳ ಸಿಂಹಾವಲೋಕನ 

ಇದು ನಮ್ಮ ಕರ್ಣಾಟ ಸಾಹಿತ್ಯ ಸಮ್ಮೇಳನ ಮಹಾಸಭೆ. ಈವರೆಗೆ ಎಂಟು ಮಹಾಸಮ್ಮೇಳನಗಳು ನಡೆದು ಒಂದೊಂದರಲ್ಲಿ ಓರ್ವರು ಅಧ್ಯಕ್ಷ ಪದಾರೂಢರಾಗಿ ಅಷ್ಟದಿಗ್ಗಜಂಗಳಂತೆ ನಮ್ಮ ಈ ಕರ್ಣಾಟಕ ಭಾಷಾ ಭೂಮಿಯನ್ನು ಉದ್ಧರಿಸಿರುವಲ್ಲಿ, ‘’ನವ ಸಂಖ್ಯೈವ ಸಜ್ಜನ ಪ್ರಕೃತಿಃ” ಎಂಬಂತೆ ಆ ಮಹಾಶಯರಾದ ವಿದ್ವತ್ಸುಗುಣಾಲಂಕೃತದ ಸೂಕ್ತಿಸಂಗ್ರಹವನ್ನು ಸ್ಮಾರಕಕ್ಕೆ ತರುವುದು ನನ್ನ ಕೃತಜ್ಞತೆಯಾಗಿದೆ.

೧. ರಾಕ್ಷಸ ಸಂ||-‘’ಸಾಕ್ಷರಾ ವಿಪರೀತಾಶ್ಚೇದ್ರಾಕ್ಷಸಾ ಏವ ಕೇವಲಂ” ಎಂಬಂತೆ ಸಾಕ್ಷರಾರು?  ಆಂಗ್ಲಭಾಷ ಪಂಡಿತರವರೇ? ಎಂಬಲ್ಲಿ ನಮ್ಮ ಕನ್ನಡಕ್ಕೆ ಎಲ್ಲರೂ ರಾಕ್ಷಸರೇ (ಹಿಂಸಕರು) ಸರಿ ಎಂಬುದು ವಿಪರೀತವಾಗಿ, ಅಂತಹ ಆಂಗ್ಲಭಾಷಾಪಟ್ಟಿ ಪದಾಂಚಿತರು ದೈವಯೋಗದಿಂದಲೂ ಕಾಲ ಬಲಾನುಕೂಲದಿಂದಲೂ ಸಾಕ್ಷರರಾರು? ಕರ್ಣಾಟಕಗೀರ್ವಾಣಾದಿ ಭಾಷಾಪರಿಶ್ರಮಗೊಂಡವರೂ ಕೂಡ ಎಂಬ ಸೌಜನ್ಯವು ಹುಟ್ಟಿ ಮುನ್ನಿನ ‘ಸ್ವಾತಿರಿಕ್ತರು ಏನು ತಿಳಿಯುವರು, ನಮ್ಮ ಗ್ರಂಥಗಳಲ್ಲಿ ಏನೂ ರಸವಿಲ್ಲ’ ಇತ್ಯಾದಿ ಭಾವನೆ ಬಿಡತೊಡಗಿ ವಿಪರೀತರಾಗಲು, ಕೇವಲಂ=ಮುಖ್ಯವಾಗಿ, ರಾಕ್ಷಸಾ ಏವ=ಸಮರ್ಥರೇ ಆಗಿರುವರು, ಆವುದಕ್ಕೆ? ಸ್ವಕರ್ಣಾಟ ಭಾಷಾಭಿವೃದ್ಧಿಗೆ ಎಂಬಂತೊಪ್ಪಿದ ಉಪಸಂಘವೊಂದೆದ್ದು ಐದು ವಿಷಯಗಳನ್ನು ಗುರಿಯಲ್ಲಿಟ್ಟುಕೊಂಡು ವಿದ್ವತ್ಪ್ರಾರ್ಥನೆಯನ್ನು ಮಾಡಿತು. ಅದನ್ನೇ ಸದುದ್ದೇಶ ಪಂಚಕವನ್ನಾಗಿ ಗ್ರಹಿಸಿ ತನ್ನಾಮ ಮುಖಾಂಕಿತವಾದ ಉಪನ್ಯಾಸವನ್ನು (೧0-೪-೧೯೧೫ರಲ್ಲಿ) ಬರೆದಿತ್ತೆನು. ಬಳಿಕ ಪ್ರಥಮ ಕರ್ಣಾಟಕ ಸಾಹಿತ್ಯ ಸಮ್ಮೇಳನ ಮಹಾಸಭೆಗೆ ಬೆಂಗಳೂರಲ್ಲಿ ಮೇ ತಿಂಗಳ, ೩,೪, ೫ನೆಯ ದಿನತ್ರಯವೂ ಕೀರ್ತಿಶೇಷರಾದ ರಾಜಮಂತ್ರ ಪ್ರವೀಣ ಎಚ್.ವಿ. ನಂಜುಂಡಯ್ಯ, ಎಂ.ಎ., ಎಂ.ಎಲ್., ಸಿ.ಐ.ಇ., ಅವರೂ, ರಾಜಸಭಾಭೂಷಣ ಕರ್ಪೂರ ಶ್ರೀನಿವಾಸರಾವ್, ಬಿ.ಎಸ್.ಸಿ., ಎಲ್.ಸಿ.ಇ., ಅವರೂ ಅಧ್ಯಕ್ಷತೆಗೊಂಡು ಬಹು ವಿಷಯವಿಚಾರ ವಿಮರ್ಶೆಯಿಂದ ಕರ್ಣಾಟಕ ಭಾಷೋಜ್ಜೀವನ ಪ್ರೋತ್ಸಾಹಕ್ಕೆ ಪ್ರಾಥಮಿಕಾಧ್ಯಕ್ಷತೆಯಿಂದ ಪ್ರಶಂಸನೀಯರಾದರು. ಇದರಿಂದ ರಾಕ್ಷಸ ಸಂಘವತ್ಸರವು ಹಿಂಸಕವೆನಿಸದೆ ಪ್ರಶಂಸಕವೆನಿಸಲು ಯುಕ್ತವೆಂದು ಸಮರ್ಥನಂಗೊಳಿಸಿದಂತಾಯ್ತು.

೨. ನಳ ಸಂ||- ಈ ವರುಷದ ಮೇ ತಿಂಗಳ ೬-೭-೮ ಮೂರು ದಿನಗಳು ದ್ವಿತೀಯ ಕರ್ಣಾಟಕ ಸಾಹಿತ್ಯ ಸಮ್ಮೇಳನ ಮಹಾಸಭೆ ಕೀರ್ತಿಶೇಷರಾದ ಎಚ್.ವಿ. ನಂಜುಂಡಯ್ಯನವರ ಅಧ್ಯಕ್ಷತೆಯಲ್ಲಿ ಬೆಂಗಳೂರಲ್ಲಿ ಮೇ ಊರ್ಜಿತ ಸ್ಥಿತಿಗೊಂಡುದು. ಇವರ ಸಮಾದರಣವಲ್ಲವೇ ಈ ನಮ್ಮ ಕರ್ಣಾಟ ಭಾಷೋಜ್ಜೀವನ ಕೃತ್ಯಂಗಳು ರಾಜ್ಯಾಂಗ ಜನಾಂಗ ಜನಪದಾಂಗಗಳಲ್ಲಿ ಹರಡಿಕೊಂಡು ವ್ಯವಸಾಯವು ನಡೆಯಲು ಸಹಾಯಕವಾಯಿತು. ಇದರಿಂದ ನಳ ಸಂವತ್ಸರವು ನಮ್ಮೆಲ್ಲರಿಗೂ ಸ್ವದೇಶಭಾಷಾವಿಹಾರದಲ್ಲಿ ನಳನಳಿಸುವಂತೆ ಮಾಡಿತೆಂದು ಸಂತಪಿಸಬೇಕಾಗಿರುವುದು.

೩. ಪಿಂಗಳ ಸಂ||- ಮೈಸೂರಲ್ಲಿ ಜೂನ್ ೮-೯-೧0ರಲ್ಲಿ ತೃತೀಯ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾಸಭೆಯಾಯಿತು. ಪ್ರಥಮ ದಿನದಲ್ಲಿ ಅಧ್ಯಕ್ಷಪದವಿಗೆ ಶ್ರೀಮದ್ಯುವರಾಜರು ಶ್ರೀಕಂಠೀರವ ನರಸಿಂಹರಾಜವೊಡೆಯರ್, ಜಿ.ಸಿ.ಐ.ಇ.ಯವರು ಅಗ್ರಾಸನವನ್ನಲಂಕರಿಸಲು, ಕೀರ್ತಿಶೇಷ ನಂಜುಂಡಯ್ಯನವರೇ ನಿಜ ವಕ್ತೃತೆಯಿಂದ ಸಕಲ ಜನಾನಂದವನಿತ್ತು ಕರ್ಣಾಟಕ ಪರಿಷತ್ಕಾರ್ಯೋತ್ತೇಜನವು ಶ್ರೀಮದ್ಯುವರಾಜ ಸಮಾದೃತವನ್ನಾಗಿಸಲು, ದ್ವಿತೀಯ ದಿನದಲ್ಲಿ ಮ|| ರಾ|| ಬಿ. ವೆಂಕಟಾಚಾರ್, ಬಿ.ಎ., ಯವರೂ, ಮೂರನೆಯ ದಿನದಲ್ಲಿ ರಾಜಸಭಾಭೂಷಣ ಕರ್ಪೂರ ಶ್ರೀನಿವಾಸರಾಯರವರೂ ಅಗ್ರಾಸನಾಲಂಕೃತರಾಗಿ ಸಭೋದ್ದೇಶಗಳನ್ನು ಸರಳವಾಗಿ ನಡೆಯಿಸಿ ಭಾಷಾಕಾರ್ಯನಿರ್ವಾಹಕ ಪ್ರೋತ್ಸಾಹಕರಾದರು. ಇಂತು ಪಿಂಗಳ ವರ್ಷವೂ ಮಂಗಳಾವಹವಾಗಿ ನಮ್ಮ ಭಾಷಾರಕ್ಷಣೆಗೆಯ್ದುದು ಭಾಗ್ಯವಲ್ಲವೆ!

೪. ಕಾಳಯುಕ್ತಿ ಸಂ||- ಧಾರವಾಡದಲ್ಲಿ ಚತುರ್ಥ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾ ಸಭೆ ನಡೆಯಿತು. ಪ್ರಾಕ್ತನವಿರ್ಮಶ ವಿಚಕ್ಷಣ ಆರ್. ನರಸಿಂಹಾಚಾರ್ಯ ಎಂ.ಎ., ಎಂ.ಆರ್.ಎಸ್., ಅವರು ಅಧ್ಯಕ್ಷ ಪದವಿಯಲ್ಲಿ ಮೂರು ದಿನವೂ ಇದ್ದು, ರಸಯುಕ್ತವಾಗಿಯೂ ರಮ್ಯವಾಗಿಯೂ ಸಾಹಿತ್ಯೋಪಯೋಗಿಯಾಗಿಯೂ ಸಾರಾಂಶವಾಗಿಯೂ ಉಪನ್ಯಾಸವಿತ್ತು ಸಭಾಕಾರ್ಯವಂ ನಿರ್ವಹಿಸಿ ಸಭಿಕ ಜನಾನಂದಕರರಾಗಿರಲು, ನಮ್ಮಗಳಿಗೆ ಮಹೋಪಕಾರಿಗಳೆಂದು ಕೊಂಡಾಡುತ್ತೆ ಕಾಲಯುಕ್ತಿ ವತ್ಸರವೂ ಕಾಲೋಚಿತವಾದ ಭಾಷೋಜ್ಜೀವಕ ಯುಕ್ತಿ ಪ್ರದರ್ಶಕವಾಗಿ ಇದರಿಂದ ಸಾರ್ಥಕ ನಾಮವಾಂತುದೆಂದು ಸಂಶ್ಲಾಘಿಸಲ್ಪಡುತ್ತಿರುವುದು.

೫. ಸಿದ್ದಾಸಂ||- ಹಾಸನದಲ್ಲಿ ವೈಶಾಖ ಶು|| ೭-೮-೯ಬುಧ, ಗುರು, ಶುಕ್ರವಾರಗಳಲ್ಲಿ ಪಂಚಮ ಕರ್ಣಾಟಕ ಸಾಹಿತ್ಯಸಂಮೇಳನ ಮಹಾಸಭೆ ನಡೆಯಲು ಮೂರು ದಿನಗಳಲ್ಲಿಯೂ ರಾಜಸಭಾಭೂಷಣ ಕರ್ಪೂರ ಶ್ರೀನಿವಾಸರಾಯರವರೇ ಅಧ್ಯಕ್ಷತೆಗೆ ಅಲಂಕಾರವಿತ್ತು ಉಪಕ್ರಮೋಪಸಂಹಾರಗಳಲ್ಲಿ ತಮ್ಮ ಅಮೂಲ್ಯವಾದ ವಾಗ್ವೈಖರಿಯಿಂದ ಬಹುವಿಷಯ ಚರ್ಚೆಗೆಯ್ದು ಸರಸ ಹೃದಯಾನಂದಕರಾರೆಂದೆಂದು, ಸಿದ್ಧರಾದ, ಅರ್ಥ=ಯಾಚಕರು, ಉಳ್ಳುದು:ಯಾವುದಕ್ಕೆ?  ಭಾಷಾಭಿವೃದ್ಧಿಗೆ’ ಎಂಬ ಅರ್ಥ ಸ್ವಾರಸ್ಯಮನಂಗೀಕರಿಸುವಲ್ಲಿ, ನಮಗೆ ಸಿದ್ಧಾರ್ಥಿಯೇ ಸಿದ್ಧಾರ್ಥವಾಗಿ ಪರಿಣಮಿಸಿತೆಂದರೆ ಸಿದ್ಧವಾದ ಪ್ರಯೋಜನಂಗಳುಳ್ಳುದೆನಿಸಿ ಸಂತಸವನ್ನಿತ್ತುದು.

೬. ರೌದ್ರಿ ಸ||- ಹೊಸಪೇಟೆಯಲ್ಲಿ ಜ್ಯೇಷ್ಠ ಶುದ್ಧ ಪಾಡ್ಯ ಮೊದಲ್ಗೊಂಡು ಮೂರು ದಿನಗಳು ಷಷ್ಠ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾಸಭೆ ನಡೆಯಿತು. ರಾವ್ಬಹದ್ದೂರ್ ರೊದ್ದ ಕೋನೇರರಾವ್ ಶ್ರೀನಿವಾಸರಾಯರು ಅಧ್ಯಕ್ಷ ಪದವಿಯನ್ನು ವಹಿಸಿದ್ದರು. ಇವರ ಉಪನ್ಯಾಸವೂ ಕಾರ್ಯನಿರ್ವಹಣವೂ ಕನ್ನಡ ನಾಡಿಗರಿಗೆ ರೌದ್ರ ರಸೋದಯಕರವಾಗಿಯೇ ದೇಶಭಾಷಾಭಿಮಾನ ಪ್ರೋತ್ಸಾಹಕವೆನಿಸಿ ವಿಷಯ ವಿಚಾರದಿಂದ ವಿಪುಲಾನಂದಕರವಾಯಿತೆಂದು ವಿಶೇಷವಾಗಿ ಸಂಶ್ಲಾಘಿಸುತೆ ನಾಡಿಗರು ಕೃತಜ್ಞರಾಗಿರಬೇಕಲ್ಲವೆ!

೭. ದುರ್ಮತಿ ಸಂ||- ಚಿಕ್ಕಮಗಳೂರಿನಲ್ಲಿ ಮೇ ೧೯-೨0-೨೧ ರಲ್ಲಿ ಸಪ್ತಮ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾಸಭೆ ರಾಜಸಭಾಭೂಷಣ ಕೆ.ಪಿ. ಪುಟ್ಟಣಶೆಟ್ಟಿರವರು, ಸಿ.ಐ.ಇ. ಅವರು ಅಲಂಕರಿಸಿದ ಅಧ್ಯಕ್ಷತೆಯಿಂದ ಕಾಲೋಚಿತ ಕರ್ತವ್ಯತಾನಿರೂಪಣವು ಅವರ ವಾಗ್ವೈಖರಿಯಲ್ಲಿ ಸರಸ ಸಮುಚಿತ ಗಂಭೀರ ಪದರಚನೆಯೊಡನೆ ನಡೆದುದೂ, ಉಪನ್ಯಾಸಾಂತ್ಯದ ಸ್ವಾಪ್ನಿಕ ವೈಖರಿಯೂ ಎಲ್ಲರಿಗೂ ಚಿರಕಾಲ ಸ್ಮರಣೀಯವಾಗಿರಬೇಕೆಂದು ಸಂಶ್ಲಾಘಿಸುವೆನು. ಸುಯೋಧನನು ದುರ್ಯೋಧನನಾಗಿ ದುಷ್ಟನೆನಿಸಿದನು. ನಮ್ಮ ಕನ್ನಡಿಗರಿಗೆ ಇವರಿಂದ ದುರ್ಮತಿಯೆಂಬುದು ಸುಮತಿಯಾಗಿ ಪರಿಣಮಿಸಲು ಸುಖಾವಹವಾಯಿತೆಂದೂ ಸೂಚಿಸುವೆನು. ಸ್ವಾಪ್ನಿ ಫಲಾನುಭವವು ಪ್ರಾತ್ಯಕ್ಷಿಕವಾಗಿ ದೇವರ ದಯೆಯಿಂದಲ್ಲದೆ ಬರುವುದೆ!

೮. ದುಂದುಭಿ ಸಂ- ಚಿತ್ರದುರ್ಗದ ಡಿ|| ದಾವಣಗೆರೆಯಲ್ಲಿ ಅಷ್ಟಮ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾಸಭೆ ಮೇ೧೨-೧೩-೧೪ ತಾ|| ಗಳಲ್ಲಿ ನಡೆಯಿತು. ಆದ್ಯಂತವಾಗಿ ಅಧ್ಯಕ್ಷಪದವನೇರಿದ ಮ|| ರಾ|| ಸುಪ್ರಸಿದ್ಧರಾದ ಎಂ. ವೆಂಕಟಕೃಷ್ಣಯ್ಯನವರು ಉಪನ್ಯಸಿಸಿದ ವಿಷಯ ವಿಚಾರವು ರಮಣೀಯವೂ ರಸಭರಿತವೂ ಅದುದೊಂದೇ ಅಲ್ಲದೆ ಜಾತಿ ಕುಲ ಮತಾಭಿನಿವೇಶಂಗಳು ಭಾಷಾಸೇವೆಗೆ ದೂರವೆಂಬುದನ್ನು ಒತ್ತಿಹೇಳಿದ ಅವರ ವಾಗ್ದುದುಂಭಿ ನಾದದಿಂದ ಎಲ್ಲರೂ ಕರ್ಣಾನಂದವನ್ನು ಹೊಂದದೆ ಇರಬಾರದು; ಏಕೆಂದರೆ, ಜಾತಿ ಮತ ಕುಲಂಗಳು ವಿಶೇಷ ವ್ಯವಸ್ಥೆಗೊಂಡುದು, ಸ್ವದೇಶ ಭಾಷೆಯೆಂಬುದು ಸಾಮಾನ್ಯ ವ್ಯವಸ್ಥೆಗೊಂಡುದು. ಅದರಿಂದ ಎಲ್ಲರೂ ಭಾಷಾವಿಷಯದಲ್ಲಿ ಐಕಮತ್ಯದಿಂ ಮದಮಾತ್ಸರ್ಯಂಗಳಿಗೊಳಗಾಗದೆ ಸೌಜನ್ಯದಿಂದ ವರ್ತಿಸಬೇಕೆಂದು ಹಾರೈಸುವೆನು. ಇದರಿಂದ ದುಂದುಭಿ ವತ್ಸರವು ದುಂದುಭಿಯಾಗಿಯೇ ಘೋಷಿಸುತ ಸಾರ್ಥಕವಾಗಿ ನಮ್ಮ ಸ್ವದೇಶ ಭಾಷೋಜ್ಜೀವವೆಂದು ಸಂಶ್ಲಾಘಿಸುವೆನು.

೯. ರುಧಿರೋದ್ಗಾರಿ ಸಂ||- ಕರ್ಣಾಟಕ  ಸಾಹಿತ್ಯ ಸಮ್ಮೇಳನ ಮಹಾಸಭೆ (ಬಿಜಾಪುರ)

ಪರಿಷತ್ತಿಗೆ ತಿಂಗಳಿಗೊಮ್ಮೆ  ತಲೆಗೊಂದು ಕಾಸು ಕೊಡಿ

ಇನ್ನು, ನಮ್ಮ ಈ ಕನ್ನಡನಾಡಿಗರೆಲ್ಲರೂ ತಿಂಗಳಿಗೊಮ್ಮೆ ತಲೆಗೊಂದು ಕಾಸು ಕನ್ನಡಕ್ಕೆ ಎಂದು ಪ್ರತಿ ಕುಟುಂಬದಿಂದಲೂ ದ್ರವ್ಯಸಹಾಯವನ್ನು  ಪಡೆದವರಾಗಿ, ಅದನ್ನು ಕರ್ಣಾಟ ಪರಿಷತ್ತಿಗೆ ಮೂಲಧನವಾಗಿ ಬೆಳೆಯಿಸಿಕೊಂಡು  ಸದುದ್ದೇಶ ಪಂಚಕವೆಂಬ ಮುಖ ನಾಮಾಂಕಿತವಾಗಿ ಕರ್ಣಾಟ ಪರಿಷತ್ತಿನ ಪ್ರಥಮ ಸಂಪುಟದ ಪ್ರಥಮ ಭಾಗದಲ್ಲಿ ಮುದ್ರಿತವಾಗಿರುವ ನನ್ನ ಪ್ರಾರ್ಥನೋಪನ್ಯಾಸದಂತೆ ಸತ್ಕೃತಿ ಪ್ರಚಾರದಲ್ಲಿ ವಿನಿಯೋಗಿಸುತ್ತ ಬಂದಲ್ಲಿ ಕರ್ಣಾಟ ಭಾಷಾವಿಚಕ್ಷಣರು ಉದಯಿಸಿಬಾರರೇ!

ಉಪಸಂಹಾರ ಭಾಷಣ

ಸರಸಿಗಳಾದ ಸಭ್ಯರೇ! ನಲ್ನುಡಿಗಳನಾದರಿಸುವರಾದ ನಾಡಿಗರೇ! ನಿಮ್ಮೆಲ್ಲರ ಸಮಾವೇಶದ ಬಲದಿಂದ ಕರ್ಣಾಟಕ ಸಾಹಿತ್ಯ ಸಮ್ಮೇಳ ಮಹಾಸಭಾ ಕೃತ್ಯಂಗಳು ಈ ಮೂರುಂ ದಿನಂಗಳಿಂದ ಸುಲಲಿತವಾಗಿ ಸಾಗಿತು. ಚರ್ಚಿಸುವ ವಿಷಯಂಗಳು ಚರಿತಾರ್ಥಂಗಳಾದುವು. ಈ ಮೂರು ದಿನಗಳ ಸಮ್ಮೇಳನವೆಂಬುದೇ ಕರ್ಣಾಟ ಲೋಕದೌತಣದ ಅಡಿಗೆ. ಇದರ ಒಗ್ಗರೆಣೆಯಂತೆ ನನ್ನ ಸಭಾಸಮುಪ ಸಂಹಾರದ ಸೂಕ್ತಿಗಳನಾಲಿಸಿಯೆಲ್ಲರಾನಂದಿಸಬೇಕು. ವರುಷಕ್ಕೊಂದಡಿಗೆಯಟ್ಟು ಕನ್ನಡನಾಡುಗಳಲ್ಲಿರುವ ಅಕ್ಷರಾಸ್ಯರೆಲ್ಲರೂ ಆನಂದಿಸುತ್ತ ಕರ್ಣಾಟ ಸರಸ್ವತಿ ಸರಸಾಲಂಕೃತೆಯಾಗಿ ಸಂತತವೂ ತಾಂಡವವಾಡುತ್ತ ನಮ್ಮ ಕುಟುಂಬಗಳನ್ನು ಸಲಹುತ್ತಿರಬೇಕೆಂಬುದೇ ನಮ್ಮ ಸುದ್ದೇಶವಾಗಿರುವುದು. ಇದರಲ್ಲಿ ಸ್ವಾರ್ಥಪರತೆಯನ್ನು ತೊರೆದು ಪರೋಪಕಾರಪರತೆಯನ್ನೂ, ಲೋಭತ್ವವನ್ನು ಬಿಟ್ಟು ಉದಾರತೆಯನ್ನೂ, ಮೈಗಳ್ಳತನವನೊದೆದು ಶ್ರಮಸಹನವನ್ನೂ, ಡಾಂಭಿಕತ್ವವನ್ನು ತ್ಯಜಿಸಿ ಯಥಾಯೋಗ್ಯವರ್ತನವನ್ನೂ, ದೋಷಗ್ರಹಣವನ್ನು ಧಿಕ್ಕರಿಸಿ ಗುಣಗ್ರಹಣತೆಯನ್ನೂ ಕ್ರಮವಾಗಿ ನಮ್ಮ ಅಭ್ಯಾಸದಲ್ಲಿ ತಂದುಕೊಳ್ಳಬೇಕು. ಕಡೆಗೆ ನಾವೆಲ್ಲರೂ, ‘ನಮ್ಮಲ್ಲಿ ಲೋಪವೆಂಬುದೇನು?’ ಎಂಬುದನ್ನೇ ಲಕ್ಷ್ಯವಿಟ್ಟು ತಿದ್ದಿಕೊಳ್ಳುವ ಸರಳ ಬುದ್ಧಿ ವಿವೇಕದಿಂದಲೇ ನಮ್ಮಲ್ಲಿ ಐಕಮತ್ಯವೂ ಅದರಿಂದ ಭಾಷಾಭಿವೃದ್ಧಿಯೂ ಅದರಿಂದ ದೇಶೋನ್ನತಿಯೂ ನೆಲೆಗೊಳ್ಳುವುದು.

೯ನೇ ಸಮ್ಮೇಳನದಲ್ಲಿ ಮಂಡಿಸಿದ ಉಪನ್ಯಾಸಗಳು:-

ಈ ಮೂರು ದಿನಗಳಲ್ಲಿ ವರ್ಧಿಷ್ಣುಗಳಾಗಿ ವ್ಯಾಸಂಗಗಳನ್ನು ಬರೆದು ತಂದೋದಿದ ಧೀಮಂತರನ್ನು ಉತ್ಸಾಹವಂತರನ್ನಾಗಿಸಲು ಕೆಳಗಣ ಪದ್ಯಂಗಳಿಂದ ಇಂತು ಸಂಶ್ಲಾಘಿಸುವೆನು:-

ಕಂ|| ಲಕ್ಷ್ಮೀ ಕವಿಯ ಕಾಲಿಕ ||

ಸೂಕ್ಷ್ಮಾಂಶ ವಿಚಾರ ವರ್ಣನಂ ಸರಸಮೆನಲ್ ||

ಪಕ್ಷ್ಮಂ ಬಿಟ್ಟುದು ಕನ್ನಡ ||

ಲಕ್ಷ್ಮೀಮಣಿಯಲ್ತೆ ರಾಜಸುಪುರೋಹಿತರಿಂ ||           ||೧||

ಕನ್ನಡ ನಾಡಿನ ಜನರಿಗೆ ||

ಬಿನ್ನಾಣಂ ಕಲ್ಪದೆಡೆಗೆ ಬಗೆಯೇರಿಸಲೇಂ ||

ಚೆನ್ನೆನೆ ಹಾರನಹಳ್ಳಿಯ ||

ಬಿನ್ನಪದ ವಿಲೇಖನಾರ್ಥನೊಪ್ಪುತ್ತಿರ್ಕುಂ ||            ||೨||

ಪ್ರತಿಭಾಂಕಿತ ವ್ಯಾಸಂ ||

ಪ್ರತಿಬಿಂಬಿಸುಗುಂ ಬುಧಾಂತರಂಗಂಗಳೊಳೆಂ ||

ದತಿ ಮಮತೆಯಿನೊರವುದುಮೇ ||

ನತಿಶಯಮೇ ರಾಮಚಂದ್ರ ಬೆಳಗಾಂ ಶ್ಲಾಘ್ಯಂ ||        ||೩||

ನಮಗಾವಶ್ಯಕ ಕಾವ್ಯಾಂ ||

ಕಮೊಂದಿ ಬಂದಿರ್ಪ ನೂತನೀಪನ್ಯಾಸಂ ||

ಸುಮನೋಹರಮೆಂಬುದರಿಂ ||

ದಮಿತಾನಂದಪ್ರದಂ ವಿಜಯಪುರಮೆಂಬೆಂ ||          ||೪||

ದತ್ತಾತ್ರೇಯಾ ಬೇಂದ್ರೇ ||

ಚಿತ್ತಾಕರ್ಷಣಮನೆಲ್ಲರೊಳ್ಮಾಡಿರ್ಪಂ ||

ದುತ್ತೇಜಕ ಕನ್ನಡ ||

ಕೆತ್ತಾನುಂ ಕುಡದೆ ಗುಣಮೆ ಸಂಗ್ರಹಣೀಯಂ ||        ||೫||

ಹಳ್ಳಿಯ ಹಾಡುಗಳೆಂಬುದು ||

ನೊಳ್ಳಿತುಪನ್ಯಾಸಮಾಯ್ತು ಜನ ರಂಜನೆಯಿಂ ||

ಬಳ್ಳಿವೊಲೆತ್ತಂ ಪರ್ಬುಗು ||

ಮುಳ್ಳ ತಿರುಳ್ ಚೆನ್ನಮಲ್ಲಪಯ್ಯಾ ಗಲಗಲ್ ||       ||೬||

ಇನಿವಾತುಗಳಿಂ ಪ್ರಹ್ಲಾ ||

ದನಿರೂಪಿತ ವಿಲೇಖನೋಪನ್ಯಾಸಂ ||

ಜನಮನಮನೆಳೆಯದಿಳುಮೆ ||

ತನಗದಲಿಂಕಾರ ವಿಷಯವೆಂಬುದದೆತ್ತು ||      ||೭||

ಗೆಳೆಯರ ಸಂಘಂ ಕನ್ನಡ

ಹಳಬಟ್ಟೆಯನುಳಿದು ಪೊಸತು ಹಾದಿಗೆ ಬರ್ಪು ||

ಜ್ಜ್ವಳ ಸರ್ವಜ್ಞನ ಬನ್ನಣೆ ||

ತಿಳಿಯಲ್ ಸಂಗೀತದಂತೆ  ಹೃದಯಮಣಿಯಂ || ||೮||

Tag: Kannada Sahitya Sammelana 9, Siddhanthi Shivashankara Shasthri, Siddhanti

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)