ಕನ್ನಡ ಸಾಹಿತ್ಯ ಸಮ್ಮೇಳನ-೧0 : ಕೋಲಾರ
ಮೇ ೧೯೨೪

ಅಧ್ಯಕ್ಷತೆ: ಹೊಸಕೋಟೆ ಕೃಷ್ಣಶಾಸ್ತ್ರಿ

0ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಹೊಸಕೋಟೆ ಕೃಷ್ಣಶಾಸ್ತ್ರಿ

ಕನ್ನಡ ನಾಡಿನ ಉತ್ತಮ ಶಾಸನತಜ್ಞರು ಕರ್ಣಾಟಕ ಇತಿಹಾಸದ ಮೇಲೆ ಹೊಸಬೆಳಕನ್ನು ಬೀರಿದ ಸಂಶೋಧಕರಾದ ಹೆಚ್. ಕೃಷ್ಣಶಾಸ್ತ್ರಿಗಳು ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು.

ಬಿ.ಎ. ನಂತರ ಭಾರತದ ಸರ್ಕಾರದ ಶಾಸನ ಇಲಾಖೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ಇವರು ಸೇವಾಕಾಲದಲ್ಲಿ ೩೫ ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿಮಿತ್ತ ವಿದೇಶಗಳಿಗೂ ಹೋಗಿ ಬಂದಿದ್ದಾರೆ. ೧೯೨೫ರಲ್ಲಿ ಸರ್ಕಾರದ ಸೇವೆಯಿಂದ ನಿವೃತ್ತರಾದರು.

ಇವರು ೩೫ ವರ್ಷಗಳ ಕಾಲ ಕರ್ಣಾಟಕದಾಚೆ ಇದ್ದರು. ಪರಿಷತ್ತಿನ ಬಗ್ಗೆ ಅಭಿಮಾನವಿರಿಸಿಕೊಂಡಿದ್ದರು. ಮಹಾರಾಷ್ಟ್ರದಲ್ಲಿನ ಚಾಳುಕ್ಯ, ರಾಷ್ಟ್ರಕೂಟರ ಶಾಸನಗಳು ಮರಾಠಿಯಲ್ಲಿಲ್ಲ, ಕನ್ನಡದಲ್ಲಿದೆ ಎಂಬುದನ್ನು ಶೋಧಿಸಿದ್ದಾರೆ. ಕರ್ನಾಟಕದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ.

ಕೇಂದ್ರ ಸರ್ಕಾರ ಇವರ ಸೇವೆಯನ್ನು ಪುರಸ್ಕರಿಸಿ ೧೯೧೨ರಲ್ಲಿ ರಾವ್ ಸಾಹೇಬ್ ಮತ್ತು ೧೯೨0ರಲ್ಲಿ ರಾವ್ ಬಹಾದ್ದೂರ್ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿದೆ. ೧೯೨೪ರಲ್ಲಿ ಕೋಲಾರದಲ್ಲಿ ನಡೆದ ೧0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯನ್ನು ಇವರಿಗೆ ನೀಡಲಾಗಿದೆ.

ದಕ್ಷಿಣ ಭಾರತದ ಪ್ರತಿಮೆಗಳು (೧೯೬೬), ದಕ್ಷಿಣ ಭಾರತದ ಸಂಪುಟ (ಸಂ.೫, ೨ನೇ ಭಾಗ), ಮಸ್ಕಿಯ ಅಶೋಕನ ಶಾಸನ (ಲೇಖನ), ೫ ಪಲ್ಲವ ಶಾಸನಗಳು (ಲೇಖನ), ಮಹಾಬಲಿಪುರದ ೨ ವಿಗ್ರಹಗಳು (ಲೇಖನ), ಎಫಿಗ್ರಾಫಿಯಾ ಇಂಡಿಕಾದಲ್ಲಿ ಹಲವು ಪ್ರಬಂಧಗಳು

ಶಾಸನಪ್ರಕಾರಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಇವರು ೧೯೨೮ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ0

ಅಧ್ಯಕ್ಷರುಹೊಸಕೋಟೆ ಕೃಷ್ಣಶಾಸ್ತ್ರಿ

ದಿನಾಂಕ ೧೬, ೧೭, ೧೮ ಮೇ ೧೯೨೪

ಸ್ಥಳ : ಕೋಲಾರ

 

ಪರಿಷತ್ತಿಗೆ ಬೇಕಾಗಿದ್ದುದು ಧನಶಕ್ತಿ

ಪ್ರಕೃತೋದ್ದೇಶವು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಹತ್ತನೆಯ ವಾರ್ಷಿಕೋತ್ಸವ. ಈ ಉತ್ಸವವು ಸಕಲೋಪಕರಣಗಳಿಂದ ಶೋಭಾಯಮಾನವಾಗಿ ನಡೆಯಲುಳ್ಳದ್ದಾಗಿದೆ. ಯಾವ ಸಲಕಣೆಗಳು ಹೇಗಿದ್ದರೂ ಪರಿಷದಭಿವೃದ್ಧಿಗೂ ಅದರಿಂದುಂಟಾಗಬೇಕಾದ ಜಾತೀಯ ಸಾಂಗತ್ಯಕ್ಕೂ ತಕ್ಕ  ಪ್ರಯತ್ನಗಳಾವಶ್ಯಕಗಳೆಂಬುದರಲ್ಲಿ ಎಲ್ಲರ ಮತವೂ ಒಂದಾಗಿರುತ್ತದೆ. ಪರಿಷದಭಿವೃದ್ಧಿಗೆ ಮೊದಲು ಬೇಕಾದದ್ದು ರಾಜಾನುಗ್ರಹ; ಎರಡನೆಯದು ಧನಸಂಪತ್ತಿ; ಇದರ ಮೇಲೆ ಕಾರ್ಯಾನುರಕ್ತಿ, ಜಾತೀಯ ಸಂಶಕ್ತಿ ಮುಂತಾದವುಗಳು. ಇವುಗಳನ್ನು ಸಂಪಾದಿಸುವುದರಲ್ಲಿ ಸರ್ವಥಾ ನಮ್ಮ ಪರಿಷಧ್ಯಕ್ಷರೂ ಉಪಾಧ್ಯಕ್ಷರೂ ಗೌರವ ಕಾರ್ಯದರ್ಶಿಗಳೂ ಇನ್ನೂ ಇತರ ಪರಿಷತ್ಪ್ರಮುಖರೂ ಯಾವಚ್ಛಕ್ತಿ ಪ್ರಯತ್ನ ಪಡುತ್ತಲೇ ಇರುವರೆಂದು ಈ ಒಂಬತ್ತು ವರ್ಷಗಳ ವರದಿಗಳಿಂದಲೇ ವೇದ್ಯವಾಗುತ್ತಿದೆ.

ಪರಿಷತ್ಪತ್ರಿಕೆ ಹಿರಿಮೆ

ಪ್ರಥಮ ಸಾಧನವಾದ ಪರಿಷತ್ಪತ್ರಿಕೆಯೆಂತೂ ‘’ಪ್ರತಿವರ್ಷ ರಸೋದಯ” ವೆಂಬಂತೆ ಸಂಚಿಕೆ ಸಂಚಿಕೆಗೂ ಶ್ಲಾಘ್ಯತರವಾದ ವ್ಯಾಸಗಳಿಂದಲೂ ಉದಾರವಾದ ವಿಮರ್ಶನೆಗಳಿಂದಲೂ ಆದರಣೀಯಗಳಾದ ಧರ್ಮಪ್ರವಚನಗಳಿಂದಲೂ ತುಂಬಿದೆ. ಅಲ್ಲದೆ, ಪುರಾತನಾಧುನಿಕ ಗ್ರಂಥಗಳೂ ಪರಿಷ್ಕೃತಗಳಾಗಿ ಗ್ರಂಥಮಾಲೇತ್ಯಾದಿ ಮಾಸಪುಸ್ತಕಗಳಲ್ಲಿ ಮುದ್ರಿತಗಳಾಗುತ್ತಿವೆ. ದಿನಪತ್ರಿಕೆಗಳೂ ವಾರಪತ್ರಿಕೆಗಳೂ ಎಲ್ಲೆಲ್ಲಿಯೂ ಕರ್ಣಾಟಕ ದಿಗಂತವ್ಯಾಪಿಗಳಾಗಿ ಕರ್ಣಾಟ ಭಾಷಾಪ್ರಾಬಲ್ಯವನ್ನು ನೆಲೆಗೊಳಿಸುತ್ತಿವೆ. ಇವೆಲ್ಲಕ್ಕಿಂತಲೂ ಹೆಚ್ಛಾಗಿ ಜನರಲ್ಲಿ ಹೊರಟಿರುವ ಭಾಷೋಪನ್ಯಾಸಗಳೂ ಕಥಾಪ್ರಸಂಗಳೂ ಪುರಾಣಕಥನಗಳೂ ಭಾಷಾಭಿವೃದ್ಧಿಗೆ ಸಹಾಯಪಡುತ್ತಲಿವೆ.

ಪರಿಷತ್ತು ಮಾಡಬೇಕಾದ ಕೆಲಸಗಳು

ಪರಿಷತ್ಕಾರ್ಯನೇಕಗಳಿರುವುವು. ಕರ್ಣಾಟಕ ಜನಸಾಮಾನ್ಯದಲ್ಲಿ ದೇಶ ಭಾಷಾರುಚಿಯನ್ನುಂಟು ಮಾಡುವುದು, ವಿದ್ವಜ್ಞನರಲ್ಲಿ ಸ್ವಾರ್ಥಪರಾಯಣತೆಯನ್ನು ಬಿಡಿಸಿ ಪಾರಮಾರ್ಥಿಕವೂ ಪರಮೋತ್ಕೃಷ್ಟವೂ ಆದ ದೇಶಭಾಷಾ ಸೇವೆಯಲ್ಲಿ ಅಮರತ್ವವನ್ನು ಕಲ್ಪಿಸುವುದು, ಇವಕ್ಕೆ ಸಾಧನಗಳಾಗಿ ಸರ್ಕಾರದ ಸಹಾಯವನ್ನು ಬೇಡುವುದು, ವಿದ್ಯಾಶಿಕ್ಷಣದಲ್ಲಿ ಬದಲಾವಣೆಗಳನ್ನು ಸೂಚಿಸುವುದು, ಕರ್ಣಾಟಕ ಪ್ರಾಂತಗಳೆಲ್ಲೆಡೆಯಲ್ಲಿಯೂ ಪಾಠಶಾಲೆಗಳ ಪುಸ್ತಕ ಭಂಡಾರಗಳ, ವಾಚಕ ಸಂಘಗಳ ಸ್ಥಾಪನೆಯನ್ನು ಮಾಡುವುದು, ಇಂಗ್ಲಿಷ್ ವಿಜ್ಞಾನ ಗ್ರಂಥ ಪರಿವರ್ತನೆ, ಕಾವ್ಯನಾಟಕಾಲಂಕಾರ ಗ್ರಂಥಗಳ ನವೀನ ನಿರ್ಮಾಣ, ಪ್ರಾಂತಕರ್ಣಾಟಕ ಭಾಷಾ ಸಾಂಪ್ರದಾಯಗಳನ್ನು ಮೈಸೂರು ಕನ್ನಡದೊಡನೆ ಏಕೀಭವಿಸಲು ಪ್ರಯತ್ನಗಳು, ಪೂರ್ವಕಾವ್ಯ ವಿಮರ್ಶೆ-ಇವನ್ನು ಮಾಡುವುದು, ಕವಿಚರಿತ್ರೆ, ದೇಶಚರಿತ್ರೆ, ಭಾಷಾಚರಿತ್ರೆ, ಕಾದಂಬರೀ ಗ್ರಂಥಗಳು-ಇವನ್ನು ನಿರ್ಮಾಣ ಮಾಡುವುದು, ಪುರಾಣಪಠನ, ಕಥಾಪ್ರಸಂಗ, ನಾಟಕ ಪ್ರದರ್ಶನ, ಸಂಗೀತ ಸಮಾಜ- ಇವನ್ನೇರ್ಪಡಿಸುವುದು; ಇತ್ಯಾದ್ಯನೇಕಗಳು ಸಾಹಿತ್ಯ ಪರಿಷತ್ತಿನ ಪ್ರಯತ್ನಗಳಲ್ಲಿ ಮೊದಲಿನಿಂದಲೂ ಮುಖ್ಯವಾದುವುಗಳಾಗಿ ಏರ್ಪಟ್ಟಿವೆ. ಇದರ ಮೇಲೆ ವಿದ್ವನ್ಮಣಿಗಳಾದ ಅಧ್ಯಕ್ಷರ ಪ್ರ್ರೌಢೋಪನ್ಯಾಸಗಳಿಂದ ಮೇಲ್ಕಂಡ ಪ್ರಯತ್ನಗಳ ಸಾಧ್ಯಾಸಾಧ್ಯತೆಗಳ ವಿಚಾರ ನಡೆದು ಮುಂದಿನ ಮಾರ್ಗವು ನಿರರ್ಗಳವಾಗಿ ತೋರಲ್ಪಟ್ಟಿದೆ.

ಹಿಂದಿನ ಸಮ್ಮೇಳನಗಳ ಸಿಂಹಾವಲೋಕನ

ಕೀರ್ತಿಶೇಷರಾದ ರಾಜಮಂತ್ರಪ್ರವೀಣ ಶ್ರೀಮಾನ್ ಹೆಚ್.ವಿ. ನಂಜುಂಡಯ್ಯನವರ ಪ್ರಪ್ರಥಮೋಪನ್ಯಾಸವು ಮುಖ್ಯಾಂಶಗಳನ್ನೆಲ್ಲ ಬಹಳ ಸ್ಪಷ್ಟವಾಗಿ ಪ್ರಕಟಪಡಿಸಿ, ತಕ್ಕವಿದ್ಯಾವಂತರ ಸಹಾಯದಿಂದಲೂ ಜನರ ಅನ್ಯೋನ್ಯ ಸದ್ಭಾವದಿಂದಲೂ ನವೀವಾದೀ ಕರ್ಣಾಟಕ ಭಾಷಾಪ್ರಚಾರವು ಪ್ರಸ್ತುತ ಕರ್ಣಾಟ ದೇಶೀಯರಲ್ಲಿ ಉತ್ಸಾಹೋದ್ಬೋಧವನ್ನು ಮಾಡಿ, ಅವರ ಜಾತೀಯ ಜೀವಿತವು ಮೂರ್ತೀಭವಿಸುವಂತೆಯೂ ಅವರ ಸುಖದುಃಖಗಳು ಪ್ರತಿಫಲಿಸುವಂತೆಯೂ ಮಾಡುತ್ತ, ಪೂರ್ವಗ್ರಂಥಾವಳಿಗಳಂತೆ ಮಾಡಿದ ವರ್ಣನೆಗಳನ್ನೇ ಮಾಡುತ್ತ, ಹೇಳಿದ ಕಥೆಗಳನ್ನೇ ಹೇಳುತ್ತ ಮನಸ್ಸಿಗುಲ್ಲಾಸಕರವಾಗಿದ್ದರೇನು? ಮನಸ್ಸಿನ ಉತ್ಸಾಹಕ್ಕೆ ಮಾತ್ರ ಕಾರಣವಾಗದೆ ಇರಬಾರದೆಂತಲೂ, ಆಧುನಿಕ ಕಾರ್ಯಾಸಕ್ತಿಯನ್ನೂ ಸಂಸಂಸ್ಕರಣವನ್ನೂ ದೇಶಾಭಿಮಾನವನ್ನೂ ಸೂರೆ ಗೊಳ್ಳುವಂತಿರಬೇಕೆಂತಲೂ ಆಶೀರ್ವದಿಸಿತು. ಜನರಲ್ಲಿ ಸಾಮಾನ್ಯವಾಗಿ ಮನಸ್ಸಿಗುತ್ಸಾಹವನ್ನುಂಟುಮಾಡಬೇಕಾಗಿದ್ದರೆ ಗ್ರಂಥರಚನೆಯು ಹೊಸಹೊಸ ವಿವಿಧ ವಿಷಯಗಳನ್ನು ಕುರಿತದ್ದಾಗಿರಬೇಕೆಂದೂ, ಮುದ್ದಾದ ಮಾತುಗಳಿಂದಲೂ, ಭಾಷಾ ಸಂಪ್ರದಾಯಗಳಿಂದಲೂ, ಉತ್ಸಾಹಕರವಾದ ಮಹನೀಯ ದೇಶೋದ್ಧಾರಕರ ಕಥೆಗಳಿಂದಲೂ, ಅಪೂರ್ವವಾದ ಶಾಸ್ತ್ರ ವಿಮರ್ಶೆಗಳಿಂದಲೂ, ಪ್ರಕೃತೋಪಯೋಗಿಗಳೂ ಸರ್ವಜನಸಮ್ಮತಗಳೂ ಆದ ನೈತಿಕಾಕ ರಾಜಕೀಯ ಬೋಧಿಗಳಿಂದಲೂ ತುಂಬಿ ತುಳುಕಾಡುತ್ತಿರಬೇಕೆಂದೂ ರಾಜಮಂತ್ರಪ್ರವೀಣರ ಪ್ರವಚನದಿಂದ ಸಿದ್ಧವಾಯಿತು. ಆ ಸಮಯದಲ್ಲಿ ಮಹಾಮಹೋಪಾಧ್ಯಾಯರಾದ ಸಿದ್ಧಾಂತಿ ಶಿವಶಂಕರಶಾಸ್ತ್ರಿಗಳು ಭಾಷೋಜ್ಜೀವನ ಪ್ರಯತ್ನಗಳಲ್ಲಿ ಜಾತಿ ಕುಲ ಮತಾಭಿನಿವೇಶಗಳು ಬಾಹ್ಯಗಳೆಂದು ಪರಾಮರ್ಶಿಸಿದರು. ದೇಶಭಕ್ತಾಗ್ರಗಣ್ಯರಾದ ವೆಂಕಟಕೃಷ್ಣಯ್ಯನವರು ಸಾಂಘಿಕ ಅಖಂಡಶಕ್ತಿಗೆ ಕೂಡ ದೈವಸಹಾಯವು ಕೂಡಿ ಬರಬೇಕೆಂದು ಹೇಳಿದರು. ಬೊಂಬಾಯಿಯ ವಿದ್ವದ್ವರ್ಯರಾದ ಜಹಗೀರ್ದಾರರು ತಮ್ಮ ಉತ್ಕೃಷ್ಟವಾದ ಉಪನ್ಯಾಸದಲ್ಲಿ ಪರಿಷತ್ಪ್ರಚಾರ ಸಾಧನಗಳನ್ನು ಸಂಗ್ರಹಿಸುತ್ತ ವಿದ್ವನ್ಮಂಡಲಿಗಳಲ್ಲಿ ಸ್ನೇಹಾಭಿವೃದ್ಧಿಯೂ ಆಚಾರ ವ್ಯವಹಾರಗಳಲ್ಲಿ ಐಕ್ಯತೆಯೂ, ಕನ್ನಡಿಗರಲ್ಲೆಲ್ಲಿಯೂ ತನು ಧನ ಮನಂಗಳಿಂದ ಸಹಾಯಮಾಡಬೇಕೆಂಬ ವಾಂಛೆಯೂ, ಗಣನೆಗೆ ಬರುವ ಪ್ರತಿಪಟ್ಟಣದಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥರು, ವರ್ತಕರು ಮೊದಲಾದ ಸಮಸ್ತರೂ ಕಲೆತು ಮೆಲತು ಸೇರಲುಳ್ಳ ಸಭೆಗಳ ನಿರ್ಮಾಣವೂ ಇರಬೇಕೆಂದು ವ್ಯಕ್ತಪಡಿಸಿದರು. ಕೀರ್ತಿಶೇಷವಿದ್ವನ್ಮಣಿಗಳಾದ ರಘುನಾಥರಾಯರು ಭಾಷೆಯ ಅಭಿವೃದ್ಧಿಯನ್ನು ತೋರಿ ಸರ್ಕಾರದವರ ಪ್ರೋತ್ಸಾಹವನ್ನೂ, ಸಂಸ್ಕರಣ ವಿಷಯದಲ್ಲಿ ಶಾಸ್ತ್ರೀಯ ಮಾರ್ಗಾಪೇಕ್ಷೆಯನ್ನೂ, ಕೃತಿ ನಿರ್ಮಾಣದಲ್ಲಿ ದೇಶೀಯ ಭಾಷಾಭೇದಗಳಿದ್ದೂ ಗ್ರಾಂಥಿಕ ರೂಪವನ್ನೇ ಪ್ರಾಜ್ಞರಾದವರು ಉಪಯೋಗಿಸಬೇಕೆಂಬುದನ್ನೂ ತಿಳಿಯಪಡಿಸಿ ಇದಕ್ಕಾಗಿಯೆಂದು ದೊಡ್ಡ ವ್ಯಾಕರಣವನ್ನೂ ನಿಘಂಟುವನ್ನೂ ಬರೆಯತಕ್ಕುದೆಂಭಿಪ್ರಾಯಪಟ್ಟರು. ಹಾಗೆಯೇ                   ಮ|| ರಾ||ನಾರಾಯಣರಾವ್ ಕರಿಗುದರಿಯವರು ಲೋಕಜ್ಞಾನವು ಮಾತೃಭಾಷೆಯ ಮೂಲಕವೇ ಹರಡಬೇಕೆಂಬ ಸಿದ್ಧಪ್ರತೀತಿಯನ್ನು ತೋರ್ಪಡಿಸಿ ಗ್ರಂಥ ವಿಷಯಗಳನ್ನು ಚಿತ್ರಗಳ ಮೂಲಕ, ನಿದರ್ಶನಗಳ ಮೂಲಕ, ಕಾದಂಬರಿ ಕಥೆಗಳಾಗಿ ಸಂಭಾಷಣ ಶೈಲಿಯಲ್ಲಿ ಬರೆಯಬೇಕೆಂದು ಸೂಚಿಸಿದರು. ಆಂಗ್ಲಭಾಷಾ ಪ್ರಾಚುರ್ಯವು ಸಾರ್ವಜನೀಕ ಸಂಪತ್ತಿಗೆ ಆವಶ್ಯಕವಾದದ್ದಾದರೂ ಕನ್ನಡಿಗರ ಜ್ಞಾನೋದಯಕ್ಕೆ ಕನ್ನಡವೇ ಬೇಕೆಂದು ಪರಮಸ್ವಾಮಿಗಳೂ ಕರ್ಣಾಟವಂಶಭೂಷಣರೂ ಆದ ನಮ್ಮ ಯುವರಾಜರು ಅಪ್ಪಣೆಕೊಡಿಸಿದರು;  ಮುಖ್ಯವಾಗಿ, ಕರ್ಣಾಟ ಜನಾಂಗಗಳ ನಡೆನುಡಿಗಳಭಿವೃದ್ಧಿಯನ್ನು ತೋರ್ಪಡಿಸುವ ಸದ್ಗ್ರಂಥಗಳು ವೃದ್ಧಾಚಾರಗಳಲ್ಲಿ ವಿಶ್ವಾಸವುಳ್ಳ ವಿದ್ವಾಂಸರಿಂದಲೇ ಬರೆಯಲ್ಪಡಬೇಕೆಂತಲೂ ಅಭಿಪ್ರಾಯಪಟ್ಟರು. ಮ|| ರಾ|| ಎಸ್.ಎನ್.ನರಸಿಂಹಯ್ಯನವರು, “ಗ್ರಾಂಥಿಕರೂಪಗಳ ಏಕೀಕರಣ”ವೆಂಬ ಒಂದು ಉತ್ತಮವಾದ ಉಪನ್ಯಾಸದಲ್ಲಿ ವ್ಯಾಕರಣ ನಿಘಂಟುಗಳ ರಚನೆಯಿಂದ ಮಾತ್ರ ಭಾಷಾಭೇದಗಳು ಲೋಪಿಸಲಾರವೆಂದೂ ಆಯಾ ರಾಷ್ಟ್ರೀಯ ಹಾಸ್ಯ ವಿನೋದ ಕುಹಕಗಳು ಆಯಾ ರಾಷ್ಟ್ರೀಯ ಭಾಷಾಭೇದಗಳನ್ನುಸರಿಸಿಯೇ ಇರಬೇಕೆಂತಲೂ ದೃಶ್ಯ ಕಾವ್ಯಗಳಲ್ಲಿ, ಎಂದರೆ ಗ್ರಂಥಗಳನ್ನು ಬರೆಯುವಾಗ ಸಂಸ್ಕೃತ ಶಬ್ದಗಳನ್ನು ತತ್ಸಮಾರ್ಥದಲ್ಲಿಯೇ ಪ್ರಯೋಗಿಸಬೇಕೆಂತಲೂ, ಶೀಘ್ರ ಪ್ರಚಾರಕ್ಕೆ ಪ್ರೋತ್ಸಾಹಕರಗಳಾದ ಪುಸ್ತಕಗಳನ್ನು ಸುಲಭ ಶೈಲಿಯಲ್ಲಿ ಬರೆದು ಕನ್ನಡಿಗರ ಮನೆಮನೆಗಳ ಬಾಗಿಲುಗಳಲ್ಲಿ ಬಿಕರಿಮಾಡಬೇಕೆಂತಲೂ ಸೂಚಿಸಿದರು, ರಾವ್ ಬಹಾದ್ದೂರ್ ನರಸಿಂಹಾಚಾರ್ಯರವರು ಕರ್ಣಾಟ ಭಾಷಾ ಮಹೋನ್ನತಿಯನ್ನು ಪೂರ್ವಾದಾರಾಭ್ಯ ಚಾರಿತ್ರ ವಿಮರ್ಶನದಿಂದ ದೇಸಾಯಿಗಳು ಹೇಳಿದಂತೆ ಕನ್ನಡಕ್ಕೆ ಬಂದ ದೀನಸ್ಥಿತಿಗೆ ವಿದ್ವಾಂಸರಾಗಿಯೂ ಸಮರ್ಥರಾಗಿಯೂ ಇರುವ ಕನ್ನಡಿಗರ ಪರಾಙ್ಮುಖತೆಯೂ ಪ್ರೌಢಶಾಲೆಗಳ ಆನಾದರಣೆಯೂ ಇತರ ಪ್ರಾಂತಭಾಷೆಗಳ ಹೆಚ್ಚಿದ ಪ್ರಚಾರವೂ ಮುಖ್ಯ ಕಾರಣಗಳೆಂಬರ್ಥವನ್ನನುಮೋದಿಸಿ, ಅಭಿವೃದ್ಧಿ ಮಾರ್ಗಗಳಲ್ಲೆಲ್ಲ ಹೆಚ್ಚಿನದ್ದು ಮಾಧ್ಯಮಿಕ (Secondary) ಶಾಲೆಗಳಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯೇ ಎಂದು ಹೇಳಿದರು. ಆ ಮಹನೀಯರ ಉಪಸಂಹಾರ ವಾಕ್ಯಗಳ ಚಮತ್ಕೃತಿಯನ್ನೂ ರಸವತ್ತತೆಯನ್ನೂ ಸರ್ವರೂ ಅನುಭವಿಸಿಯೇ ಇರುವಿರಿ.

ರಾಜಸಭಾಭೂಷಣ ಮ|| ರಾ|| ಕರ್ಪೂರ ಶ್ರೀನಿವಾಸರಾಯರು ಶಾಸ್ತ್ರ ಸಂಪ್ರದಾಯವಾದ ವಾಗ್ಧೋರಣೆಯಿಂದ ಮುಂದು ನಮ್ಮ ವಾಙ್ಮಯಕ್ಕೆ ಪರಿಚಲನ ಉಂಟಾಗಬೇಕಾಗಿದ್ದರೆ ಕಾಂತಾಸಮ್ಮಿತವಾದ ಕಾವ್ಯ ನಾಟಕ ರೂಪವಾಗಿಯೇ ಆಗಬೇಕೆಂದು ಹೇಳಿ ಕರ್ಣಾಟಕರಾದ ಸರ್ವರಲ್ಲಿಯೂ ಜ್ಞಾನೇಚ್ಛಾಕ್ರಿಯಾಶಕ್ತಿಗಳೆಂಬ ಮುಖ್ಯ ಸಾಧನೆಗಳು ಅಭಿವೃದ್ಧಿಗೆ ಬರಬೇಕೆಂದು ದೇವರನ್ನು ಪ್ರಾರ್ಥಿಸಿದರು. ಪ್ರಸಿದ್ಧರಾದ ರೊದ್ದದ ರಾಯರವರು, ತೆಲುಗು, ಉರ್ದು, ಮರಾಠಿ ಭಾಷೆಗಳ ಮಧ್ಯೆ ಸಿಕ್ಕಿ ತಿಣಕಲಾಡುತ್ತಿರುವ ಪ್ರಾಂತಕರ್ಣಾಟಕದ ದುರವಸ್ಥೆಯನ್ನು ವರ್ಣಿಸಿ ಇಂತಹ ಕ್ಲಿಷ್ಟ ಪರಿಣಾಮಕ್ಕೆ ಆಯಾ ರಾಜ್ಯಾಂಗ ಪ್ರಭುತ್ವ ಸಭ್ಯರಲ್ಲಿಯೂ ಅಲ್ಲಿಯ ವಿದ್ಯಾಧಿಕಾರಿಗಳಲ್ಲಿಯೂ ಕರ್ಣಾಟಕರ ನ್ಯೂನತೆಯೇ ಮುಖ್ಯ ಕಾರಣವೆಂದು ಸೂಚಿಸಿದರು. ಅಲ್ಲದೆ ಕರ್ಣಾಟ ಪ್ರಾಂತಗಳು ಆಯಾ ದೇಶದ ಬಹು ದೂರದಲ್ಲಿರುವ ಕಾರಣ ಯಾವುದೊಂದು ಸುಧಾರಣೆಯಾಗಲಿ ಅವುಗಳನ್ನು ಮುಟ್ಟಲು ಬಹುಕಾಲವಾಗುತ್ತದೆ ಎಂಬೀಯೆರಡು ಕುಂದಕಗಳಿಂದ ಪ್ರಾಂತ ಕರ್ಣಾಟದ ರಾಜಕೀಯ, ಸಾಮಾಜಿಕ ವಾಙ್ಮಯಾಭಿವೃದ್ಧಿಗಳ ದೈನ್ಯತೆ ಪ್ರಾಪ್ತವಾಯಿತೇ ಹೊರತು ಜ್ಞಾನೇಚ್ಛಾಕ್ರಿಯಾ ಶಕ್ತಿಗಳ ಮಾಂದ್ಯದಿಂದಲ್ಲವೆಂದು ತೋರಿಸಿದರು. ದಿವಾನ್ ಬಹಾದ್ದೂರ್ ರಾಜಸಭಾಭೂಷಣ ಕೆ.ಪಿ. ಪುಟ್ಟಣ್ಣಶೆಟ್ಟರವರು ಪೂರ್ವದಲ್ಲಿದ್ದ ವಾಙ್ಮಯ ವ್ಯಾಪ್ತಿಗೂ ಈಗಿನ ಅಸಡ್ಡೆಗೂ ಸಮಗ್ರ ಕಾರಣಗಳನ್ನು ತಿಳಿಸಿ, ಪೂರ್ವದಂತೆ ಪುರಾಣ ಶ್ರವಣಾದಿಗಳು ವೃದ್ಧಿಗೆ ಬರಬೇಕೆಂಬುದನ್ನೂ, ಹಳೇ ಓಲೆಯ ಗ್ರಂಥಗಳನ್ನು ಭದ್ರಪಡಿಸಿ ಕ್ರಮೇಣ ಮುದ್ರಿಸಬೇಕೆಂಬುದನ್ನೂ, ದೇಶೀಯ ಐತಿಹಾಸಿಕ ಚರಿತ್ರೆಗಳನ್ನು ಬರೆಯಿಸಬೇಕೆಂಬುದನ್ನೂ, ಇಂಗ್ಲಿಷು ಭಾಷೆಯಲ್ಲಿ ಹೆಚ್ಚಾದ ವ್ಯಾಮೋಹವನ್ನು ತಗ್ಗಿಸಬೇಕೆಂಬುದನ್ನೂ ಕಾರ್ಯಕ್ರಮದಲ್ಲಿ ಕಾದಂಬರೀ ಗ್ರಂಥಗಳನ್ನು ರಸವತ್ತಾಗಿಯೂ ಭಾವಗರ್ಭಿತವಾಗಿಯೂ  ಬರೆಯಿರಿ, ಸಭಾವಾಗ್ಮಿಗಳನ್ನು ಸಮ್ಮಾನಿಸಿ,  ವಿಜ್ಞಾನ ವಿಷಯಗ್ರಂಥಗಳನ್ನು (Scientfic Works) ಆಂಗ್ಲಭಾಷೆಯಿಂದ ಪರಿವರ್ತನ ದ್ವಾರಾ ವೃದ್ಧಿಪಡಿಸಿ, ನಮ್ಮ ಕರ್ಣಾಟಕ ಪರಿಷತ್ಸದಸ್ಯರ ಸಂಖ್ಯೆಯು ಶತಶಃ, ಸಹಸ್ರಶಃ, ಬೆಳೆಯುವಂತೆ ಮಾಡಬೇಕೆಂಬುದೇ ನಮ್ಮ ಮುಖ್ಯೋದ್ದೇಶವಾಗಿರಬೇಕೆಂದು ಪರಾಮರ್ಶಿಸಿದರು. ಮ|| ರಾ|| ವೆಂಕಟಕೃಷ್ಣಯ್ಯನವರು ಎಂಟನೆಯ ಸಮ್ಮೇಳನದ ಅಗ್ರಾಸನಾಧಿಪತ್ಯವನ್ನು ವಹಿಸಿ, ಸೂಕ್ಷ್ಮವಾಗಿ ಮೈಸೂರು ದೇಶದಲ್ಲಿ ಆಳಿದ ಮಹಾಸ್ವಾಮಿ ಮುಮ್ಮಡಿ ಕೃಷ್ಣರಾಜ ಒಡೆಯರವರ ಮಹೋತ್ಕೃಷ್ಟವಾದ ಭಾಷಾಸೇವೆಯನ್ನು ಪ್ರಾರಂಭಿಸಿ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ದೇಶಾಭಿಮಾನಭರಿತವಾದ ಸುದ್ದೇಶಗಳಲ್ಲೊಂದಾದ ಕರ್ಣಾಟಕ ಸಾಹಿತ್ಯ ಪರಿಷತ್ಸ್ಥಾಪನದವರೆಗೂ, ನಡೆದ ಭಾಷಾಪರಂಪರಾಭಿವೃದ್ಧಿಯನ್ನು ತಿಳಿಸಿ, ಪಾಶ್ಚಾತ್ಯ ಗ್ರಂಥಗಳು ಲೋಕಜ್ಞಾನಕ್ಕವಶ್ಯವಾದುವುಗಳೆಂತಲೂ, ಜಪಾನಿನ ಅಭಿವೃದ್ಧಿಗೆ ಇದೇ ಕಾರಣವೆಂತಲೂ, ಆದದ್ದರಿಂದ ಸರ್ವಥಾ ಜೇನುದುಂಬಿಗಳಂತೆ ಎಲ್ಲಾ ಭಾಷಾಕುಸುಮಗಳಲ್ಲಿರತಕ್ಕ ಗ್ರಂಥಸಾರವೆಂಬ  ಜೇನನ್ನು ಕುಡಿದು ತಂದು ಕರ್ಣಾಟಕ ಭಾಷಾಭಿಮಾನಿಗಳೆಂಬ ಜೇನುಹುಳುಗಳು ಈ ದೇಶೀಯರಿಗುಣಿಸಿ ಪರಮೋಪಕಾರಿಗಳಾಗಿರುವುದರಿಂದ ಐಕಮತ್ಯದೊಡನೆ ಜಾತಿದ್ವೇಷ ಮತದ್ವೇಷಗಳನ್ನು ಬಿಟ್ಟು ತಂಡೋಪತಂಡವಾಗಿ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕೆಂದೂ ಗಂಭೀರೋಪನ್ಯಾಸವನ್ನು ಮಾಡಿದರು. ಕಳೆದ ವರ್ಷದಲ್ಲಿ ಮಹಾಮಹೋಪಾಧ್ಯಾಯ ವಿದ್ವನ್ಮಣಿಗಳಾದ ಸಿದ್ದಾಂತಿ ಶಿವಶಂಕರಶಾಸ್ತ್ರಿಗಳು ತಾವು ಪರಿಷತ್ಪ್ರಾರಂಭದ ದಶೆಯಲ್ಲಿಯೇ ಬರೆದ ಸದುದ್ದೇಶ ಪಂಚಕವೆಂಬ ವ್ಯಾಸದಭಿಪ್ರಾಯಗಳನ್ನೇ ದೃಢೀಕರಿಸಿ ಭಾಷಾಭಿವೃದ್ಧಿ ಪ್ರಯತ್ನಗಳಿಗೆಲ್ಲ ಶ್ರೇಯಸ್ಸುಂಟಾಗಲೆಂದು ಆಶೀರ್ವದಿಸಿದರು.

ಹೀಗೆ ಅಧ್ಯಕ್ಷ ಸ್ಥಾನದಿಂದಲೂ ವಿದ್ವದ್ವರ್ಯರ ವಿಮರ್ಶೆಗಳಿಂದಲೂ ಸಭಾಸದರ ಸಮಸ್ಯೆಗಳಿಂದಲೂ ಪೂರ್ವಪಕ್ಷ ಸಮಾಧಾನಗಳಿಂದಲೂ ಇನ್ನೂ ಬಗೆಬಗೆಯಾಗಿ ಪರಿಷತ್ಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟು ತೋರ್ಪಡಿಸುವ ಉತ್ತಮ ವ್ಯಾಸಗಳಿಂಲೂ, ನಮ್ಮೀ ಪರಿಷತ್ತಿನ ಉದ್ದೇಶಗಳು ಸಂಪೂರ್ಣ ಫಲವನ್ನು ಹೇಗೆ ಹೊಂದತಕ್ಕದ್ದೆಂದು ಸ್ಪಷ್ಟವಾಗಿ ತಿಳಿಸಲ್ಪಟ್ಟಿರುವಾಗ ಅವುಗಳನ್ನೇ ಮತ್ತೆ ಹೇಳುವುದು ಪಿಷ್ಟಪೇಷಣ ನ್ಯಾಯವಾಗಿರುತ್ತದೆ.

Tag: Kannada Sahitya Sammelana 10, Hosakote Krishnashasthri

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)