ಸಾಹಿತ್ಯ ಸಮ್ಮೇಳನ-೧೩ : ಮಂಗಳೂರು
ಮೇ ೧೯೨೭

ಅಧ್ಯಕ್ಷತೆ: ಆರ್. ತಾತಾಚಾರ್ಯ

೧೩ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಆರ್. ತಾತಾಚಾರ್ಯ (ಆರ್. ತಾತಾ)

ಕನ್ನಡ ನಾಡಿನಲ್ಲಿ ಇರದೆ ಆಚೆ ಇರುವ ಕನ್ನಡಿಗರಲ್ಲಿ ಅನೇಕರು ಕನ್ನಡಕ್ಕೆ ಸಾಕಷ್ಟು ದುಡಿದಿದ್ದಾರೆ. ಅವರಲ್ಲಿ ನಿಷ್ಠಾವಂತ ಕನ್ನಡ ಭಕ್ತ ಆರ್. ತಾತಾಚಾರ್ಯರೂ ಒಬ್ಬರು. ಕನ್ನಡ ಭಾಷಾ ಏಕೀಕರಣಕ್ಕೆ ಶ್ರಮಿಸಿದ ಇವರು ೧೮೭೬ರಲ್ಲಿ ಜನಿಸಿದರು. ತಂದೆ ರಾಜಕವಿ ತಿರುಮಲೆ ವೆಂಕಟಾಚಾರ್ಯರು ಘನ ವಿದ್ವಾಂಸರು. ಪ್ರಸಿದ್ಧ ನಟ ವರದಾಚಾರ್ಯರಿಗೆ ನಾಟಕಗಳನ್ನು ರಚಿಸಿಕೊಡುತ್ತಿದ್ದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ., ಎಲ್.ಟಿ ಪದವಿಗಳನ್ನು ಪಡೆದರು.

ಮದ್ರಾಸಿನ ವಿದ್ಯಾ ಇಲಾಖೆಗೆ ಸೇರಿ ರಾಜಮಹೇಂದ್ರಿ ಟ್ರೈನಿಂಗ್ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಮದರಾಸಿನ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ೧೯೨0ರಲ್ಲಿ ವಿದ್ಯಾಧಿಕಾರಿಯಾದರು.

ಆರ್. ತಾತಾ ಎಂದು ಇವರು ಕನ್ನಡ ಪಂಡಿತ ವರ್ಗದಲ್ಲಿ ಪ್ರಸಿದ್ಧರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ೧೯೨೭ರಲ್ಲಿ ಇವರ ಕನ್ನಡ ಸೇವೆಯನ್ನು ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಆರಿಸಿತು.

ಜೈನ ಮತ್ತು ವೀರಶೈವ ಶಾಸ್ತ್ರಗಳಲ್ಲಿ ಘನ ಪಂಡಿತರಾದ ಇವರು ರಚಿಸಿದ ಕೆಲವು ಕೃತಿಗಳು ಹೀಗಿವೆ.

   ೧. ಮರುನ್ನಂದನ ಶತಕ ೨. ಗಿರಿಮಲ್ಲಿಕಾರ್ಜುನ ಶತಕಂ ೩. ಗುರುದತ್ತರಾಯನ ಚರಿತ್ರೆ ೪. ಕಿತ್ತೀಳೆಯೂ ಕನ್ನಡವೂ (ವಿಮರ್ಶಾ ಲೇಖನ) ೫. ಕನ್ನಡ ಶಬ್ದದ ವ್ಯುತ್ಪತ್ತಿ (ವಿಮರ್ಶಾ ಲೇಖನ)

ವಿನಯಶಾಲಿ, ಸ್ಪಷ್ಟವಾದಿಗಳು ಆಗಿದ್ದ ಇವರು ೩0-೧೨-೧೯೩೨ರಲ್ಲಿ ಮರಣಿಸಿದರು.

ಕನ್ನಡ ಸಾಹಿತ್ಯ ಸಮ್ಮೇಳನ೧೩

ಅಧ್ಯಕ್ಷರು: ಆರ್. ತಾತಾಚಾರ್ಯ

ದಿನಾಂಕ ೧೯, 0, ೨೧ ಮೇ ೧೯೨೭             ಸ್ಥಳ : ಮಂಗಳೂರು

ಮಲ್ಲಪ್ಪನವರ ವ್ಯಾಕರಣ ಸಾಕು

ಕನ್ನಡ ಭಾಷೆಯಲ್ಲಿ ಈಗಿನ ಕಾಲಕ್ಕೆ ತಕ್ಕ ವ್ಯಾಕರಣವೊಂದು ಆಗಬೇಕೆಂದು ಪರಿಷತ್ಪತ್ರಿಕೆಯಲ್ಲಿ ಒಂದೆಡೆಯಲ್ಲಿ ಸೂಚನೆ ಹೊರಟಿದೆ. ಈ ಕೆಲಸವು ಪರಿಷತ್ತಿನ ಸಂಬಂಧವಾಗಿದ್ದರೆ ಅದನ್ನು ಪರಿಷತ್ತಿನವರು ಕೈಕೊಳ್ಳಬಹುದಾದರೂ ಮಲ್ಲಪ್ಪನವರ ಶಬ್ದಾದರ್ಶವು ಸಾಕೆಂದು ತೋರುವುದು. ಅದು ಸಾಲದಿದ್ದಲ್ಲಿ ಮತ್ತೊಮ್ಮೆ ಪುನರಾವೃತ್ತಿ ಆದರೆ ಸಾಕು.

ಪ್ರಾಚೀನ ಗ್ರಂಥಗಳ ಪ್ರಕಟನೆ ಮುಖ್ಯ

ಮಹಾಶಯರೇ! ಈ ಪ್ರಾಚೀನ ಗ್ರಂಥಗಳ ವಿಷಯದಲ್ಲಿ ಎಷ್ಟು ಹೇಳಿದರೂ ಸಮಯವು ಸಾಲದು. ಸುಮ್ಮನೆ ಚಿಂತಿಸುವುದರಿಂದ ಈ ಕರ್ತವ್ಯವೇನೂ ಆದಂತೆ ಕಾಣುವುದಿಲ್ಲ. ಈ ವಿಷಯದಲ್ಲಿ ಪರಿಷತ್ತಿನವರ ಸಂಪಾದಕ ಮಂಡಲಿ ಎಷ್ಟು ವಿಶಾಲವಾದರೂ ಸಾಲದು. ಹಣದ ವಿಷಯದಲ್ಲಿ ಪ್ರತಿಫಲವನ್ನುದ್ದೇಶಿಸಿ ಮಾಡುವ ಖರ್ಚಲ್ಲವೆಂದು ನಿಷ್ಕರ್ಷೆಯಿಂದ ದಾನವೆಂದೇ ಎಣಿಸಿ ಉದಾರ ರಾಜಪೋಷಕರಾದ ಶ್ರೀಮನ್ಮಹಾರಾಜರವರೂ ಶ್ರೀಮದ್ಯುವರಾಜರವರೂ ತಮ್ಮ ನಿಸರ್ಗವಾದ ಉದಾರತೆಯಿಂದ ಇದಕ್ಕೆ ನೆರವಾಗುವಂತೆ ಪ್ರಾರ್ಥಿಸುವುದೇ ನಮ್ಮ ಕರ್ತವ್ಯವು.

ಪರಿಷತ್ತಿನ ಕೆಲಸಗಳಿಗೆ ನೆರವಾಗೋಣ

ಪರಿಷತ್ತಿನ ಮೇಲೆಯೇ ಭಾರವೆಲ್ಲವನ್ನೂ ಹೊರಿಸಿ ನಮ್ಮಲ್ಲಿ ಕೆಲವರು ತೆಪ್ಪನೆ ಕುಳಿತಿರುವರು. ತಪ್ಪು ಕಂಡುಬಂದಾಗ ಬುಸುಗುಟ್ಟುವುದಾಗಲಿ ಗೊಣಗುಟ್ಟುವುದಾಗಲಿ ಎಂತಹ ನ್ಯಾಯ? ಪರಿಷದ್ವರ್ತಮಾನಗಳು ಸರ್ವಜನಸಮ್ಮತವವಾಗಿರಲಾರವಾದರೂ ಅವರು ಮಾಡಿರುವ ಕೆಲಸಗಳನ್ನು ಚೆನ್ನಾಗಿ ಪರಿಶೀಲಿಸಿದಲ್ಲಿ ಹನ್ನೆರಡು ವರುಷಗಳೊಳಗೆ ಇಷ್ಟೊಂದು ಕೆಲಸವಾದುದು ಆಶ್ಚರ್ಯವೇ ಸರಿ. ಮತ್ತಿನವರ ನೆರವಷ್ಟಿಲ್ಲದೆ ತಮ್ಮಲ್ಲಿ ತಾವೇ ಶ್ರಮಪಟ್ಟು ಗ್ರಂಥಗಳನ್ನು ರಚಿಯಿಸಿ ಮುದ್ರಿಸಿ ಪ್ರಚರಿಸಿದುದೂ ಅಲ್ಲದೆ ವಿಶೇಷ ವಿಷಯಗಳನ್ನೊಳಗೊಂಡ ಪರಿಷತ್ಪತ್ರಿಕೆಯನ್ನು ತಕ್ಕಷ್ಟು ಗೌರವದಿಂದ ನಡೆಯಿಸುತ್ತಿರುವುದನ್ನು ನೋಡಿದರೆ ಪರಿಷಜ್ಜನರಿಗೆ  ನಾವು ಅಂಜಲಿಬದ್ಧರಾಗಿ ಧನ್ಯವಾದಗಳನ್ನು ಹೇಳಲೆಬೇಕು. ತಪ್ಪು ಕಂಡು ಹಿಡಿವುದೇ ಮುಖ್ಯೋದ್ದೇಶವೆಂದಿರು ಮೇಲಿಟ್ಟಿರುವ ಮಹಾಶಯರಿಗೆ ಸ್ವಲ್ಪವಾದರೂ ಗುಣವು ಕಣ್ಣಿಗೆ ಬೀಳುವುದಿಲ್ಲ. ಪರಿಷತ್ತಿಗೆ ಇರುವ ಅಧಿಕ ಕಾರ್ಯವನ್ನು ಲಘುವಾಗಿ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿರುವುದು. ವಾಙ್ಮಯ ರಾಜ್ಯದಲ್ಲಿ ಪರಿಷಜ್ಜನರೇ ರಾಜ್ಯಭಾರವನ್ನು ಮಾಡುತ್ತಿರಲಿ; ಭಯವಿಲ್ಲ; ಅನ್ಯಾಯವಾದೀತೆಂಬ ಹೆದರಿಕೆಯೂ ಬೇಡ. ನಮ್ಮ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಪಾಧ್ಯಕ್ಷರುಗಳ ಹೆಸರುಗಳೇ ಅಂತಹ ದುಶ್ಯಬ್ದಕ್ಕೂ ದುರ್ಗಂಧಕ್ಕೂ ಎಡೆಗೊಡದೆ ರಕ್ಷಿಸುವ ರಕ್ಷಾಮಣಿಗಳು. ಪರಿಷತ್ತಿಗೆ ರಾಜ್ಯಭಾರವಾಗಲಿ ರಾಜಕಾರ್ಯವಾಗಲಿ ರಾಜತಂತ್ರವೇ ಇರಲಿ ನಮಗೇಕದರ ಗೊಡವೆ? ಸಾಹಿತ್ಯದಲ್ಲಿ ನಡೆಯಬೇಕಾಗಿರುವ ಊಳಿಗವನ್ನು ಮಾತ್ರ ನಾವೆಲ್ಲರೂ ಕೂಡಿ ಈವರೆಗೆ ಅಶ್ರದ್ಧೆಯೋ ಸಮಯ ವಿರೋಧವೋ ವ್ಯಕ್ತಿವೈರವೋ ದೇಶಾಂತರ ವಿವಾದವೋ ವಿಷಯಾಂತರಾಳವೋ ಮತವಿರೋಧವೋ ಏನಿದ್ದರೂ ತೊರೆದು ಮರೆತು ನಮ್ಮ ಸಜ್ಜನಿಕೆಯನ್ನೂ ಕಾರ್ಯದಕ್ಷತೆಯನ್ನೂ ನೈಪುಣ್ಯವನ್ನೂ ಸಾಹಿತ್ಯವನ್ನೂ ಮೆರೆಯಲು ನಾವೆಲ್ಲರೂ ನೆರೆಯಬೇಕೆಂಬುದು ನನ್ನ ಸವಿನಯ ಪ್ರಾರ್ಥನೆ.

Tag: Kannada Sahitya Sammelana 13, R. Thathacharya, R. Thatha

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)