ಸಾಹಿತ್ಯ ಸಮ್ಮೇಳನ-೧೪ : ಕಲ್ಬುರ್ಗಿ
ಜೂನ್ ೧೯೨೮

ಅಧ್ಯಕ್ಷತೆ: ಬಿ.ಎಂ. ಶ್ರೀಕಂಠಯ್ಯ

೧೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಬಿ.ಎಂ. ಶ್ರೀಕಂಠಯ್ಯ

ಹೊಸಗನ್ನಡ ಆಚಾರ್ಯ ಪುರುಷರೆನಿಸಿದ ‘ಶ್ರೀ’ ಕಾವ್ಯನಾಮದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು, ಬಿಎಂಶ್ರೀ ಎಂದೇ ಪ್ರಖ್ಯಾತರಾದವರು. ಮೈಲಾರಯ್ಯ-ಭಾಗೀರಥಮ್ಮ ದಂಪತಿಗಳಿಗೆ ೩-೧-೧೮೮೪ರಲ್ಲಿ ಜನಿಸಿದರು. ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪಡೆದ ನಂತರ ಸೆಂಟ್ರಲ್ ಕಾಲೇಜಿನಲ್ಲಿ ೧೯0೩ರಲ್ಲಿ ಬಿ.ಎ. ಪದವಿಯನ್ನು, ೧೯0೬ರಲ್ಲಿ ಮದರಾಸಿನಲ್ಲಿ ಬಿ.ಎಲ್ ಪದವಿಯನ್ನು ಪಡೆದರು. ೧೯0೭ರಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು.

೧೯೧೧ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿ ನೇಮಕಗೊಂಡು ೩0 ವರ್ಷಗಳವರೆಗೆ ದುಡಿದರು. ೧೯೨೬ ರಿಂದ ೧೯೩0ರವರೆಗೆ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ೧೯೨೭ರಿಂದ ಗೌರವ ಕನ್ನಡ ಪ್ರಾಧ್ಯಾಪಕರಾಗಿ ಅನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೪೨ರಲ್ಲಿ ನಿವೃತ್ತರಾದ ಮೇಲೆ ಧಾರವಾಡದ ಆರ್ಟ್ಸ್ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡ ಇವರು ೫-೧-೧೯೪೬ರಲ್ಲಿ ನಿಧನರಾದರು.

ಇವರು ೬000 ರೂಪಾಯಿಗಳ ದೇಣಿಗೆ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಚ್ಚುಕೂಟವನ್ನು  ಸ್ಥಾಪಿಸಿದರು. ೧೯೩೧ರಲ್ಲಿ ವಿಶ್ವವಿಖ್ಯಾತ ಕನ್ನಡ ಪುಸ್ತಕ ಮಾಲೆ ಪ್ರಾರಂಭಿಸಿದರು. ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದರು. ಪರಿಷತ್ತಿನಲ್ಲಿ ಕನ್ನಡನುಡಿ ಪತ್ರಿಕೆ, ಮಹಿಳಾಶಾಖೆ ಪ್ರಾರಂಭಿಸಿದರು.

೧೯೩೮ರಲ್ಲಿ ರಾಜಸೇವಾಸಕ್ತ ಎಂಬ ಬಿರುದನ್ನು ಮಹಾರಾಜರಿಂದ ಪಡೆದರು. ೧೯೩೮ರಿಂದ ೧೯೪೩ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು.

ನವೋದಯ ಸಾಹಿತ್ಯದಲ್ಲಿ ಮೈಲಿಗಲ್ಲುಗಳಂಥ ಕೃತಿಗಳನ್ನು ರಚಿಸಿದ್ದಾರೆ.

ಇಂಗ್ಲಿಷ್ ಗೀತಗಳು, ಅಶ್ವತ್ಥಾಮನ್ (ನಾಟಕ), ಪಾರಸೀಕರು  (ಗ್ರೀಕ್ ಅನುವಾದಿತ ನಾಟಕ), ಹೊಂಗನಸುಗಳು (ಕವಿತೆಗಳು), ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯಕನ್ನಡ ಸಾಹಿತ್ಯ ಚರಿತ್ರೆ ಇತ್ಯಾದಿ

ಕನ್ನಡ ಸಾಹಿತ್ಯ ಸಮ್ಮೇಳನ೧೪

ಅಧ್ಯಕ್ಷರು: ಬಿ.ಎಂ. ಶ್ರೀಕಂಠಯ್ಯ

ದಿನಾಂಕ ೧, , ಜೂನ್ ೧೯೨೮

ಸ್ಥಳ ಕಲ್ಬುರ್ಗಿ

 

ಪರಿಷತ್ತಿನ ಕೆಲಸ ಸಾಹಿತ್ಯದ ಕೆಲಸ

ಮಹಾಶಯರೇ ಒಂದು ದೇಶದ ಶ್ರೇಯೋಭಿವೃದ್ಧಿಗೆ ಅವಶ್ಯವಾದ ಅನೇಕ  ಮುಖ್ಯವಾದ ಸಾಧನೆಗಳಲ್ಲಿ ಸಾಹಿತ್ಯಕೃಷಿ ಒಂದಾಗಿರುತ್ತದೆ. ಈ ಸಾಹಿತ್ಯ ಪರಿಷತ್ತಿನಲ್ಲಿ ಮುಖ್ಯವಾಗಿ ನಾವು ವಿಚಾರಮಾಡತಕ್ಕದ್ದು ಸಾಹಿತ್ಯದ ವಿಷಯವೇ ಆಗಿರುತ್ತದೆ. ಒಳ್ಳೆಯ ಸಾಹಿತ್ಯವನ್ನು ಪಡೆದ ಜನಾಂಗದ ಹೃದಯದಲ್ಲಿ ಜ್ಞಾನವೂ ನಿಷ್ಕಲ್ಮಷವಾದ ಆನಂದವೂ ಸತ್ಪ್ರೇರಣೆಯೂ ಸಮಾಜದ ಪ್ರಚಾರ ನಿರ್ಮಾಣ ಕಾರ್ಯದಲ್ಲಿ ಐಕಮತ್ಯವಾಗಿ ಬಲವಾಗಿ ಬೇರೂರಿರುತ್ತದೆ.

“ಮಿತ್ರರಿರಾ,  ಬೆಳೆಯೇನೂ ಬೇಕಾದ ಹಾಗಿದೆ; ಕುಯಿಲುಗಾರರು ಕಡಿಮೆ.” ಬನ್ನಿ, ಜನ್ಮವನ್ನು ತಮ್ಮ ಜನರ ಬೋಧೆಗಾಗಿ ಸಮರ್ಪಣಮಾಡಿದ  ಹೊಸಬಗೆಯ ದೀಕ್ಷಿತರಾಗಿ. ಪೂರ್ಣವಿದ್ಯರಾಗಿ.  ಸ್ವತಂತ್ರಪ್ರಿಯರಾಗಿ (ಸ್ವತಂತ್ರವೆಂದರೆ ಸ್ವೇಚ್ಛೆಯಲ್ಲ). ಧರ್ಮಕಾಮರಾಗಿ. ಆತ್ಮಸಾಧಕರಾಗಿ. ಕಲಾಪುತ್ರರಾಗಿ – ಉದ್ದೇಶ, ವಿಷಯ, ರೀತಿ, ಶೈಲಿ, ಭಾವ, ಛಂದಸ್ಸು- ಹೊಸದು ಬೇಕಾದರೆ ಹೊಸದು, ಹಳದು ಸಾಕಾದರೆ ಹಳದು – ನಮ್ಮ ಸಿಂಗರವಾದ, ಮಂಗಳಮಯವಾದ ಕನ್ನಡ ನಾಡಿನಲ್ಲಿ ಬದುಕಾಗತಕ್ಕುದೇನಿದ್ದರೂ ಎಲ್ಲವನ್ನೂ ಬಳಸಿಕೊಂಡು ಹೊಸ ಜೀವವನ್ನು ಎಲ್ಲೆಲ್ಲಿಯೂ ತುಂಬಿ! ಆಗ್ಗೆ, ವಿಶ್ವವಿದ್ಯಾನಿಲಯಗಳೂ, ಪರಿಷತ್ತುಗಳೂ, ಪಂಡಿತವರ್ಯರೂ, ಗ್ರಂಥಕರ್ತರೂ, ದೇಶಬಾಂಧವರೂ ಜನ್ಮವೆತ್ತಿರುವುದಕ್ಕೆ ಸಾರ್ಥಕತೆ ತೋರುವುದು. ಆಗ್ಗೆ ಕನ್ನಡಕ್ಕೆ ಹಿಂದಿನ ಸಾಹಿತ್ಯದ ಸೌಭಾಗ್ಯಕ್ಕಿಂತಲೂ ಮುಂದಿನ ಸಾಹಿತ್ಯದ ಶಕ್ತಿ ಹೆಮ್ಮೆಯ ವಿಷಯವಾಗುವುದು.

ಕನ್ನಡಿಗರೇ, ಏಳಿ, ಎಚ್ಚರಗೊಳ್ಳಿ, ಆರಂಭಮಾಡಿ. ಪೂರ್ಣಚರಿತ್ರೆಯು, ವಿಶ್ವವಿದ್ಯಾನಿಲಯದ, ಸಾಹಿತ್ಯ ಪರಿಷತ್ತಿನ, ನೂತನ ಸಾಹಿತ್ಯಕಾರರ, ಉತ್ಸಾಹಪೂರಿತವಾಗಿ ಸೇವಾತುರದಾರರಾದ ಯುವಕ ದೇಶವತ್ಸಲರ, ಕರ್ಣಾಟಕ ಭಾಷೋಜ್ಜೀವನವನ್ನು ಸದಾಕಾಲದಲ್ಲಿಯೂ ತಮ್ಮ ಘನವಾದ ದಿವ್ಯಚಿತ್ತದಲ್ಲಿ ಪರ್ಯಾಲೋಚಿಸುತ್ತಿರುವ ನಮ್ಮ ಮೈಸೂರು ಶ್ರೀಮನ್ಮಹಾರಾಜರವರ, ಸಾಹಿತ್ಯ ಸಂಸ್ಕೃತಿಗಳ ಕಟ್ಟಿನಿಂದ ಏಕಜನತೆಯನ್ನು ಬಯಸುತ್ತಿರುವ ಸಕಲ ಕರ್ಣಾಟಕರ, ಮಹತ್ಪ್ರೇರಣೆಯಿಂದ, ಮಹತ್ಪ್ರಯತ್ನದಿಂದ ಸಾಧ್ಯವಾಗದ ಕಾರ್ಯವು ಯಾವುದು? ಏಳಿ, ಎಚ್ಚರಗೊಳ್ಳಿ, ಆರಂಭಮಾಡಿ. ಹಿಂದೆ ಯೂರೋಪಿನಲ್ಲಿ ರಿನೇಸಾನ್ಸ್ ಎಂಬ ಸಾಹಿತ್ಯದ ಪುನರ್ಜನ್ಮವುಂಟಾದಾಗ, ಒಬ್ಬ ಮಹಾಪಂಡಿತನು – “ನಾವು ಸತ್ತವರನು ಎಬ್ಬಿಸುವುದಕ್ಕೆ ಹೋಗುತ್ತೇವೆ” ಎಂದು ಘೋಷಿಸಿದನು. ನಾವು ಕನ್ನಡಿಗರು ಇಂದು, ಸತ್ತವರನ್ನು ಎಬ್ಬಿಸುವುದೇ ಅಲ್ಲ; ಬದುಕಿರುವವರನ್ನೂ ಎಚ್ಚರಗೊಳಿಸುವುದಕ್ಕೆ ಹೊರಟಿರುವೆವು. ಹಿಂದಿನ ಸಾಹಿತ್ಯವನ್ನು ಪ್ರಯೋಜನಕಾರಿಯಾಗಿ ಮಾಡುವುದಕ್ಕೆ ಅಲ್ಲ; ಹೊಸ ಉತ್ತಮ ಸಾಹಿತ್ಯವೊಂದನ್ನು ಸೃಷ್ಟಿಮಾಡುವುದಕ್ಕೆ ಹೊರಟಿರುವೆವು. ಹೊರಟವರು ವಿಲಾಸವತಿಯ ಕೊರಳಿನ ಪುಷ್ಪಮಾಲಿಕೆಯೇ ಅಲ್ಲ. ಸಾಹಿತ್ಯ, ಮಾನವಜೀವನದ ಪುನರ್ನಿರ್ಮಾಣದ ಕಾರ್ಯದಲ್ಲಿ ಬದ್ಧಕಂಕಣನಾಗಿರುವ ವೀರನ ಖಡ್ಗವೂ ಅಹುದೆಂದು ತಿಳಿದಿರುವೆವು.

ಸಮ್ಮೇಳನವನ್ನು ಒಂದು ವರ್ಷ ಎಲ್ಲಾದರೂ ಕೂಡಿಸಿದರೆ ನಾವು ಇಚ್ಛಿಸಿದ ಕಾರ್ಯಗಳು ನೆರವೇರಲಾರವು. ಪ್ರತಿಯೊಂದು ಜಿಲ್ಲೆಯ ಕನ್ನಡ ಭಾಷಾಪ್ರೇಮಿಗಳು ತಮ್ಮ ಜಿಲ್ಲೆಯಲ್ಲಿಯೂ ಅದರಂತೆಯೇ ತಮ್ಮ ಹಿಂದೆ ಬಿದ್ದ ನೆರೆಜಿಲ್ಲೆಗಳಲ್ಲಿಯೂ ಕರ್ಣಾಟಕತ್ವದ ಭಾವನೆಯನ್ನು ಜಾಗ್ರತೆಪಡಿಸಲಿಕ್ಕೆ ಸದಾ ಪ್ರಯತ್ನಿಸುತ್ತಿರಬೇಕು. ಅವರು ಕರ್ನಾಟಕ ವಾಙ್ಮಯ ಮತ್ತು ಇತಿಹಾಸವನ್ನು ವಿಶೇಷ ಅಭ್ಯಾಸಮಾಡಿದವರನ್ನು ತಮ್ಮಲ್ಲಿಗೆ ಆಗಿಂದಾಗ್ಗೆ ಬರಮಾಡಿಕೊಂಡು ಅವರ ಜ್ಞಾನದ ಲಾಭವನ್ನು ಜನರಿಗೆ ಮಾಡಿಕೊಡುತ್ತಿರಬೇಕು.

ಉಪಸಂಹಾರ

ಸಭ್ಯಗೃಹಸ್ಥರೇ, ಈ ಮೇರೆಗೆ ನಾವು ಮಾಡತಕ್ಕ ಪ್ರಯತ್ನಗಳನ್ನು ಸ್ಥೂಲಮಾನದಿಂದ ಇಲ್ಲಿ ನಿರ್ದೇಶಿಸಿದ್ದೇನೆ. ಈ ಸಂಗತಿಗಳ ಬಗ್ಗೆ ಪರಿಷತ್ತುಗಳಲ್ಲಿ ಅನೇಕ ನಿರ್ಣಯಗಳು ಆಗಿರುತ್ತವೆ. ಆದರೆ, ಈ ಬಗ್ಗೆ ಪ್ರಯತ್ನಗಳು ಮಾತ್ರ ಬಲವಾಗಿಯೂ ವ್ಯವಸ್ಥೆಯಿಂದಲೂ ನಮ್ಮಲ್ಲಿ ನಡೆದಿರುವದಿಲ್ಲೆಂಬುದು ಬಹು ವಿಷಾದಕರವಾದದ್ದು. ವಾಙ್ಮಯಾಭಿವೃದ್ಧಿಯು ಒದಗಬೇಕಾದರೆ ವಿದ್ವಜ್ಜನರು ಒಂದೇ ಸಮನೇ ಪ್ರಯತ್ನಿಸುವದು ಅವಶ್ಯವಿದೆ. ಈ ಅಭಿವೃದ್ಧಿಯು ಪರಿಷತ್ತಿನಲ್ಲಿ ಮಾಡುವ ನಿರ್ಣಯಗಳನ್ನೇ ಅವಲಂಬಿಸಿಲ್ಲ. ಈ ಕಾರ್ಯಭಾರವನ್ನು ನಮ್ಮಲ್ಲಿಯ ಸುಶಿಕ್ಷಿತರು ವಿಶೇಷವಾಗಿ ಕೈಕೊಳ್ಳತಕ್ಕದ್ದು.

Tag: Kannada Sahitya Sammelana 14, B.M. Srikantaiah, B.M.Sri

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)