ಸಾಹಿತ್ಯ ಸಮ್ಮೇಳನ-೨೪ : ಬೆಳಗಾವಿ
ಡಿಸೆಂಬರ್ ೧೯೩೯

ಅಧ್ಯಕ್ಷತೆ: ಮುದವೀಡು ಕೃಷ್ಣರಾಯ

೨೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಮುದವೀಡು ಕೃಷ್ಣರಾಯ

ಮುದದ ಬೀಡಾಗಿದ್ದ ಮುದವೀಡು ಕೃಷ್ಣರಾಯರು ಕನ್ನಡಿಗರನ್ನು ಅಭಿಮಾನಧನರನ್ನಾಗಿಸಿದವರಲ್ಲಿ ಅಗ್ರಗಣ್ಯರು. ಹನುಮಂತರಾಯ ಗಂಗಾಬಾಯಿ ದಂಪತಿಗಳಿಗೆ ೨೪-೨-೧೮೭೪ರಲ್ಲಿ ಸುಪುತ್ರರಾಗಿ ಜನಿಸಿದ ಇವರು ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡಿದ್ದರಿಂದ ಚಿಕ್ಕಮ್ಮನ ಮನೆಯಲ್ಲಿ ಬೆಳೆದರು. ಪ್ರಾಥಮಿಕ ಶಿಕ್ಷಣ ಕಾರವಾರದಲ್ಲಿ ಮರಾಠಿ ಭಾಷೆಯಲ್ಲಿ ಆಗಿ, ಧಾರವಾಡದಲ್ಲಿ ಕನ್ನಡ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಣ ಪಡೆದರು. ಲೋಕಮಾನ್ಯ ತಿಲಕರ ಪ್ರಭಾವಕ್ಕೆ ಒಳಗಾಗಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿತ್ತರು.

೧೯೧0ರ ಸುಮಾರಿನಲ್ಲಿ ಕರ್ನಾಟಕ ವೃತ್ತ ಪತ್ರಿಕೆಯ ಸಂಪಾದಕರಾಗಿ ೧೮ ವರ್ಷಗಳ ಕಾಲ ಸಮರ್ಥವಾಗಿ ನಡೆಸಿದರು. ಸ್ವಲ್ಪಕಾಲ ಧನಂಜಯ ಪತ್ರಿಕೆ ನಡೆಸಿದರು. ಬಾಳಿನುದ್ದಕ್ಕೂ ನಿಶ್ಚಿತ ಗಳಿಕೆಯಿಲ್ಲದೆ ಬಾಳನ್ನು ಸಾಗಿಸಿದರು.

೧೯೨೪ರಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು. ಗಾಂಧೀಜಿ ಅವರ ಪಾನನಿರೋಧ ಚಳವಳಿಯಲ್ಲಿ ಭಾಗವಹಿಸಿ ೨ ವರ್ಷ ಜೈಲುವಾಸ ಅನುಭವಿಸಿದರು. ಪ್ರಭಾವಶಾಲಿ ಭಾಷಣಕಾರರಾಗಿದ್ದರು. ಗುಡುಗಿನ ಮೊಳಗಿನಂತೆ ಭಾಷಣ ಮಾಡುತ್ತಿದ್ದರಿಂದ ಕರ್ನಾಟಕ ಗಂಡುಗಲಿ ಎಂದು ಹೆಸರಾದರು. ಸಮಾರಂಭಗಳಲ್ಲಿ ತಕ್ಷಣದಲ್ಲಿ ಅನುವಾದ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದರು. ಭಾರತ ಕಲೋತ್ತೇಜಕ ಸಮಾಜವೆಂಬ ಅಮೆಚೂರ್ ನಾಟಕ ಸಂಘವನ್ನು ಕಟ್ಟಿದರು. ಚಿರಂಜೀವಿ ಚಲನಚಿತ್ರ ತಯಾರಿಸಿ ನಷ್ಟಕ್ಕೆ ಒಳಗಾದರು.

ಕನ್ನಡದ ಕೆಚ್ಚೆದೆಯ ಸಿಂಹವಾಣಿಯ ಈ ಅಪೂರ್ವ ವ್ಯಕ್ತಿಯನ್ನು ೧೯೩೯ರಲ್ಲಿ ಬೆಳಗಾವಿಯಲ್ಲಿ ನಡೆದ ೨೪ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.

ಚಿತ್ತೂರು ಮುತ್ತಿಗೆ (ಕಾದಂಬರಿ), ವಿಕ್ರಮ (ನಾಟಕ ಅನುವಾದಿತ), ಶಶಿಕಲಾ (ನಾಟಕ ಅನುವಾದಿತ), ಸುಭದ್ರಾ (ನಾಟಕ ಅನುವಾದಿತ), ರಾಮರಾಜವಿಯೋಗ (ನಾಟಕ ಅನುವಾದಿತ), ಪ್ರೇಮಭಂಗ (ಸ್ವತಂತ್ರ ನಾಟಕ) – ಇವರ ಕೃತಿಗಳು

ದಿನಾಂಕ ೨-೯-೧೯೪೭ರಲ್ಲಿ ಮುದವೀಡರು ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೨೪

ಅಧ್ಯಕ್ಷರು, ಮುದವೀಡು ಕೃಷ್ಣರಾಯ

ದಿನಾಂಕ ೨೫, ೨೬, ೨೭, ೨೮ ಡಿಸೆಂಬರ್ ೧೯೩೯

ಸ್ಥಳ : ಬೆಳಗಾವಿ

 

ಸಮ್ಮೇಳನದ ಅಧ್ಯಕ್ಷರು ಎಂತವರಿರಬೇಕು?

ನಾಡಿನ ಮುನ್ನಡೆಯನ್ನು ನಿಷ್ಕರ್ಷಿಸಿ ಅದನ್ನು ನೀಗಿಸಿ ಕೊಂಡು ಹೋಗಲು ಸಮರ್ಥರಾದ ಯೋಗ್ಯತಾ ಸಂಪನ್ನ ಪ್ರೌಢರನ್ನೇ ಮಹಾಸಭೆ ಸಮ್ಮೇಳನಗಳ ಅಧ್ಯಕ್ಷ ಸ್ಥಾನಕ್ಕೆ ಆರಿಸಬೇಕಲ್ಲದೆ, ದಿನ ಹೋಗಿ ದುರ್ಬಲರಾಗಿ, ವಿಚಾರಶಕ್ತಿ ಕುಂಠಿತವಾಗಿ, ಕಾರ್ಯಶಕ್ತಿ ನಶಿಸಿ ಹೋದವರನ್ನು ಅರಿಸತಕ್ಕದ್ದಲ್ಲವೆಂದು ಹಿಂದಿನ ಸಮ್ಮೇಳನದ ಕೊನೆಯಲ್ಲಿಯೇ ನಾನು ಎಚ್ಚರಿಸಿದೆನು. ಆದರೆ ನನಗೆ ಈ ಆಸಕ್ತಿಯು ಬಿಡಲಿಲ್ಲ. ಕೊನೆಗೆ ಇದೊಂದು ಇಷ್ಟಾಪತ್ತಿಯೆಂದೇ ನಾನು ಭಾವಿಸಿಕೊಳ್ಳಬೇಕಾಯಿತು. ಕನ್ನಡ ತಾಯಿಯ ಸೇವೆಗೆಂದು ಬಂದ ಯಾವ ಕರೆಯನ್ನೂ ನನ್ನೀ ಆಯುಷ್ಯದಲ್ಲಿ ಎಂದೂ ನಿರಾಕರಿಸದ ನಾನು ಇಡಿಯ ನಾಡಿನ ಒಪ್ಪಿತದ ಬಲದಿಂದ ನನಗೆ ಬಂದ ಬೆಳಗಾವಿಯವರ ಕರೆಯನ್ನು ಯಾವ ಮೋರೆಯಿಂದ ಅನಾದರಿಸಲೆಂಬ ನಾಚಿಕೆಯು ನನ್ನ ಅಂತರಂಗದಲ್ಲಿ ಪ್ರಬಲವಾಗಿ ನನ್ನನ್ನು ಇಂದು ತಮ್ಮೆಲ್ಲರ ನಡುವೆ ತಂದು ನಿಲ್ಲಿಸಿದೆ.

ಪರಿಷತ್ತನ್ನು ಕಟ್ಟಿದ ಕೀರ್ತಿಶೇಷರಾದ ಕನ್ನಡಿಗರು

ಮಹನೀಯರೇ, ಹೋದ ಸಲ ನಾವು ಬಳ್ಳಾರಿಯಲ್ಲಿ ಕೂಡಿದಾಗಿನಿಂದಿತ್ತ ಕಡೆಗೆ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಹೆಸರಾಂತ ಮಹನೀಯರು ಕೆಲವರು ನಮ್ಮನ್ನು  ಅಗಲಿ ನಮಗೆ ಕಣ್ಮರೆಯಾಗಿರುವುದು ಅತ್ಯಂತ ವಿಷಾದಕರವಾಗಿದೆ. ಅಂತಹರೊಳಗೆ ಶ್ರೀಮಾನ್ ಮಹಿಷಿ ಶಾಮರಾಯರ ನಾಮನಿರ್ದೇಶನವನ್ನು ನಾನು ಮೊದಲು ಮಾಡಬೇಕಾಗಿದೆ. ಮೈಸೂರು ಸಂಸ್ಥಾನದ ಶಿಕ್ಷಣಶಾಖೆಯ ವರಿಷ್ಠಾಧಿಕಾರಿಗಳಾಗಿ ಕನ್ನಡಕ್ಕೆ ವಿಶೇಷವಾದ ಸೇವೆಯನ್ನು ಇವರು ಸಲ್ಲಿಸಿದುದುಂಟು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ವಿಷಯದಲ್ಲಿಯೂ ಈ ಮಹನೀಯರು ಹೆಚ್ಚಿನ ಆಸ್ಥೆಯಿಂದ ಕಾರ್ಯಮಾಡಿದರು. ಎರಡನೆಯದಾಗಿ ಮೈಸೂರು ಮಹಾರಾಜರ ಕಾಲೇಜಿನಲ್ಲಿ ಕನ್ನಡದ ಪ್ರೊಫೆಸರರಾಗಿದ್ದ ನನ್ನ ಜೀವದ ಗೆಳೆಯರು ಶ್ರೀಮಾನ್ ತಳುಕಿನ ವೆಂಕಣ್ಣಯ್ಯನವರು. ಇವರನ್ನು ಅರಿಯದ ಕನ್ನಡಿಗರೇ ವಿರಳವೆಂದು ಹೇಳಬಹುದು. ಇವರು ಕನ್ನಡ ನಾಡಿಗೂ ಸಾಹಿತ್ಯಕ್ಕೂ ಮಾಡಿದ ಸೇವೆಯನ್ನು ಬಣ್ಣಿಸುವುದು ನನ್ನ ಯೋಗ್ಯತೆಗೆ ಮೀರಿದ ಮಾತು. ಮೂರನೆಯವರು ಕೊಡಗಿನ ಶ್ರೀಮತಿ ಸೌಭಾಗ್ಯವತಿ ಗೌರಮ್ಮನವರು: ಕನ್ನಡ ಸಣ್ಣಕತೆಗಳ ಹೆಸರಾದ ಬರಹಗಾರ್ತಿಯರು. ಬಿ.ಟಿ.ಜಿ. ಕೃಷ್ಣ ಎಂಬ ಹೆಸರಿನಿಂದ ಕನ್ನಡ ಸಾಹಿತ್ಯ ಪ್ರಪಂಚಕ್ಕೆಲ್ಲ ಇವರು ಚೆನ್ನಾಗಿಯೇ ಪರಿಚಿತರಾಗಿದ್ದಾರೆ.

ಕೊಡಗಿನಿಂದ ಒಬ್ಬರೇ ಹೊರಟು ಅತಿ ದೂರದ ತಾಪದಾಯಕ ಪ್ರವಾಸವನ್ನು ಧೈರ್ಯದಿಂದ ಕೈಕೊಂಡು ಅನೇಕ ಬಗೆಯ ದೈಹಿಕ ಕಷ್ಟ ತಾಪಗಳನ್ನು ಆನಂದದಿಂದ ಸಹಿಸಿ, ಇತ್ತ ಕಡೆಯ ಕನ್ನಡ ಬಂಧು-ಭಗನಿಯರ ಜೊತೆಯಲ್ಲಿ ನಾಲ್ಕೆಂಟು ದಿನಗಳನ್ನು ಕಳೆಯಬೇಕೆಂಬ ಉತ್ಕಂಠೆಯಿಂದ ೧೯೩೭ರ ಜಮಖಂಡಿಯ ಸಾಹಿತ್ಯ ಸಮ್ಮೇಳನಕ್ಕೆ ಕೊಡಗಿನ ಕರ್ನಾಟಕ ಸಂದ ಪ್ರತಿನಿಧಿಗಳಾಗಿ ಅವರು ಬಂದದ್ದೇ ಅವರ ಅಂತರಂಗದೊಳಗಿನ ಕನ್ನಡದ ಭಕ್ತಿಯನ್ನು ಚೆನ್ನಾಗಿ ತೋರಿಸಿಕೊಡುತ್ತಿದೆ. ನಮ್ಮ ಮಿಕ್ಕ ಕನ್ನಡ ಭಗಿನಿಯರ ಮಾತು ಹಾಗಿರಲಿ- ಬಂಧುಗಳಾದರೂ ಸೌಭಾಗ್ಯವತಿ ಗೌರಮ್ಮನವರ ಕನ್ನಡಭಕ್ತಿಯನ್ನು ಅನುಕರಿಸಿದರೆ ಕನ್ನಡನಾಡಿನ ಉನ್ನತಿಗೆ ತಡವಾಗಲಾರದು.

ಪರಿಷತ್ತಿನ ಸ್ಥಾಪನೆಗೆ ಆಲೂರರ ಸಾಹಸ

ಕನ್ನಡನಾಡಿನ ಬೇರೆ ಬೇರೆ ಭಾಗಳಲ್ಲೆಲ್ಲ ತಾವು ಕನ್ನಡಮ್ಮನ ಮಕ್ಕಳು, ತಮ್ಮ ತಾಯಿಯ ನುಡಿ ಕನ್ನಡ, ಅದನ್ನುಳಿದ ಬೇರೆ ಭಾಷೆಗಳು ತಮ್ಮ ಮೇಲೆ ನಡೆಸುವುದು ದಬ್ಬಾಳಿಕೆ ಎಂಬ ‘ಸ್ವ’ತ್ವದ ಅಂಕುರವೂ ಸ್ವಸಂರಕ್ಷಣೆಯ ವಿಚಾರವೂ ಮೊಳೆದೋರಿ ಬೆಳೆಯುವಂತ ಕನ್ನಡನಾಡಿನ ಏಕೀಕರಣದ ಕಾರ್ಯವನ್ನು ಕೈಗೊಳ್ಳದೆ ಗತಿಯಿಲ್ಲ, ವಿಧಿಯಿಲ್ಲ ಎಂಬ ಮಾತು ವಿಚಾರವಂತ ಕನ್ನಡಿಗರಿಗೆಲ್ಲ ತಟ್ಟನೆ ಮನದಟ್ಟಾಯಿತು. ಆ ಮಾರ್ಗದಿಂದ ಪ್ರಯತ್ನ ನಡೆಯಿತು. ಶ್ರೀಮಾನ್ ಆಲೂರ ವೆಂಕಟರಾಯರು ಈ ಸತ್ಕಾರ್ಯದ ಪುರಸ್ಕಾರವನ್ನು ಕೈಗೊಂಡರು. ೧೯೧೭ರಲ್ಲಿ ಮೊದಲನೆಯ ‘’ಕನ್ನಡ ಗ್ರಂಥಕಾರರ ಸಮ್ಮೇಳನ”ವನ್ನು ವಿದ್ಯಾವರ್ಧಕ ಸಂಘದ ವಾರ್ಷಿಕೋತ್ಸವದ ಜೊತೆಯಲ್ಲಿಯೇ ಕೂಡಿಸಲಾಯಿತು. ಮೈಸೂರಿನ ದಿವಂಗತ ಶ್ರೀಮಾನ್ ಎಸ್.ಜಿ. ನರಸಿಂಹಾಚಾರ್ಯ, ಎಂ.ಎ. ಅವರು ಅದಕ್ಕೆ ಅಧ್ಯಕ್ಷರಾಗಿದ್ದರು. ಎರಡನೆಯ ಸಮ್ಮೇಳನವೂ ಧಾರವಾಡದಲ್ಲಿಯೇ ನಡೆಯಿತು. ಒಂದೇ ಸ್ಥಳದಲ್ಲಿ ಕೆಲವರೇ ಕೂಡಿ ನಡೆಸುವ ಸಮ್ಮೇಳನಗಳು ಫಲಕಾರಿಯಾಗಲಾರವೆಂಬ ಅನುಭವ ಬಂತು.

ಕನ್ನಡನಾಡು ಒಂದಾಗ ಬೇಕಾದರೆ ಇಂಥ ಸಮ್ಮೇಳನಗಳು ಎಲ್ಲ ಕಡೆಗೆ ಆಗಬೇಕೆಂಬ ಆಲೋಚನೆ ಹೊರಟಿತು. ಎಷ್ಟಾದರೂ ಮೈಸೂರು ಸೀಮೆ ಕನ್ನಡಕ್ಕೆ ತವರೂರು; ಗತಕಾಲದ ಕನ್ನಡ ವೈಭವಾವಶೇಷದ ಕುರುಹು; ವಿದ್ಯಮಾನ ಕಾಲದಲ್ಲಿ ಕನ್ನಡಕ್ಕೆ ಉಳಿದಿರುವ ಒಂದೆ ಒಂದು ಆಶ್ರಯಸ್ಥಾನ. ಇವೇ ಮೊದಲಾದ ವಿಚಾರಗಳಿಂದ ಮೈಸೂರಿನಲ್ಲಿಯೇ ಎಲ್ಲಿಯಾದರೂ ಮುಂದಿನ ಸಮ್ಮೇಳನದ ಯೋಜನೆ ಮಾಡಬೇಕೆಂದು ಶ್ರೀ ಆಲೂರ ವೆಂಕಟರಾಯರು ಯತ್ನಿಸಿದರು. ಅಲ್ಲಿಯ ವರಿಷ್ಠಾಧಿಕಾರಿಗಳನ್ನು ಕಂಡರು. ಪ್ರತಿಷ್ಠಿತ ಕನ್ನಡ ಪ್ರೇಮಿಗಳಿಗೆ ಭೆಟ್ಟಿಯಾದರು. ಕೊನೆಗೆ ನಾಲ್ಕಾರು ವರುಷಗಳ ಸತತ ಪ್ರಯತ್ನದಿಂದ ೧೯೧೫ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಅಲ್ಲಿಂದ ಮುಂದೆ ಕನ್ನಡದ ಚಳವಳಿಗೆ ಒಂದು ಬಗೆಯ ಕಸುವು ಬರತೊಡಗಿತು. ಅಂದಿನಿಂದಲೇ ಕನ್ನಡದ ಪುನರುದ್ಧಾರ ಕಾರ್ಯಕ್ಕೆ ಅಂದರೆ ಕರ್ನಾಟಕದ ಏಕೀಕರಣ ಕಾರ್ಯಕ್ಕೆ  ನಿಜವಾಗಿಯೂ ಪ್ರಾರಂಭವಾಯಿತೆಂದು ಹೇಳಬಹುದು.

ಪರಿಷತ್ತಿನ ಸಂಟನೆಯ ಪ್ರೇರಕಶಕ್ತಿ

ವಿಭಕ್ತವಾದ, ಸಂಘಟಿತವಾದ, ವಿಸ್ಖಲಿತವಾದ ಕನ್ನಡ ಜನಾಂಗವು ಸುಸಂಘಟಿತವಾಗುವಂತೆ ಅವ್ಯಾಹತವಾಗಿ ಪ್ರಯತ್ನಪಟ್ಟು ಬಲುಮಟ್ಟಿಗೆ ಶ್ರೇಯಸ್ಸು ಪಡೆದ ಇಡಿಯ ಕನ್ನಡನಾಡಿನ ನಾಲ್ಕಾರು ಸಂಸ್ಥೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಲ್ಲೇಖನವನ್ನು ನಾನಿಲ್ಲಿ ಮೊದಲು ಮಾಡಬೇಕಾಗಿದೆ. ಅದುವೇ ಎಲ್ಲವುಗಳಿಗೂ ಹಿರಿದಾದ ಸಂಸ್ಥೆ. ಕಳೆದ ೨೫ ವರ್ಷಗಳಲ್ಲಿ ಕನ್ನಡ ಜನಾಂಗದಲ್ಲಿ ಉಂಟಾಗಿರುವ ಅಭಿನವ ಜಾಗೃತಿಯ ಶ್ರೇಯಸ್ಸಿನ ಬಹುಭಾಗವು ಪರಿಷತ್ತಿನದೇ ಎಂದು ಹೇಳಲು ಯಾವ ಅನುಮಾನವು ಇಲ್ಲ. ಹುಟ್ಟಿದ ನಾಲ್ಕನೆಯ ವರುಷದಿಂದಲೇ ಅದು ತನ್ನ ಅಖಿಲ ಕರ್ನಾಟಕದ ದೃಷ್ಟಿಯನ್ನು ನಾಲ್ಕು ಕಡೆಗಳಲ್ಲಿಯೂ ಹರಡಿ, ನಾಲ್ಕೂ ನಿಟ್ಟುಗಳ ಕನ್ನಡಿಗರನ್ನು ತನ್ನ ಕ್ಷೇತ್ರದೊಳಗೆ ಆಕರ್ಷಿಸಿಕೊಂಡು, ಕನ್ನಡ ನುಡಿಯ ವಿಷಯವಾಗಿ ಎಲ್ಲೆಲ್ಲಿಯೂ ಅಭಿಮಾನವನ್ನು ಜಾಗ್ರತಗೊಳಿಸಿ, ಎಲ್ಲ ಕಡೆಗಳ ಸುಶಿಕ್ಷಿತ ಸುಸಂಸ್ಕೃತ ಜನಸಮೂಹದಲ್ಲಿ ಕನ್ನಡಿಗರೆಲ್ಲರೂ ಒಂದೆಂಬ ಭಾವನೆಯನ್ನು ಬೇರೂರಿಸಿತು. ನಾನು ಬಲ್ಲಮಟ್ಟಿಗೆ ಕೀರ್ತಿಶೇಷ ಕರ್ಪೂರ ಶ್ರೀನಿವಾಸರಾಯರೂ ಹಾಗೆಯೇ ವಿದ್ಯಮಾನ ಶ್ರೀ ಡಿ.ವಿ. ಗುಂಡಪ್ಪನವರೂ ಸಾಹಿತ್ಯ ಪರಿಷತ್ತಿನ  ಉಪಾಧ್ಯಕ್ಷರಾಗಿ ಮಾಡಿದ ಕಾರ್ಯಕಲಾಪಗಳಲ್ಲಿ ಅಖಂಡ ಕರ್ನಾಟಕದ ದೃಷ್ಟಿಯೇ ಪ್ರಭಾವಶಾಲಿಯಾಗಿರುವಂತೆ ಮೊದಲಿನಿಂದಲೂ ಪ್ರಯತ್ನಿಸಿದುದು ಕಂಡುಬರುತ್ತದೆ. ಪ್ರಕೃತದಲ್ಲಿ ಉಪಾಧ್ಯಕ್ಷರಾಗಿರುವ ಶ್ರೀಮಾನ್ ಬಿ.ಎಂ. ಶ್ರೀಕಂಠಯ್ಯನವರು ಪರಿಷತ್ತಿನಲ್ಲಿ ಅದೇ ಅಖಂಡ ಕರ್ನಾಟಕ ದೃಷ್ಟಿಯನ್ನು ಇನ್ನೂ ಹೆಚ್ಚಾಗಿ ಬೆಳೆಯಿಸುತ್ತಿರುವುದು ಎರಡು ವರ್ಷಗಳಲ್ಲಿ ಅನುಭವಕ್ಕೆ ಬಂದಿದೆ. ಪಂಡಿತ ಸಾಹಿತ್ಯ ಪ್ರಕಟನೆಯ ‘ಪರಿಷತ್ಪತ್ರಿಕೆ’ಯ ಜೊತೆಯಲ್ಲಿ ‘ಕನ್ನಡ ನುಡಿ’ಯು ಸಾಮಾನ್ಯ ಜನತೆಯಲ್ಲಿ ಕನ್ನಡ ಭಾಷೆ, ಸಾಹಿತ್ಯಗಳ ಅಭಿಮಾನವನ್ನು ಹೆಚ್ಚಿಸುತ್ತ, ಕನ್ನಡನಾಡಿನ ನಾಲ್ಕೂ ನಿಟ್ಟುಗಳ ಕನ್ನಡ ಚಟುವಟಿಕೆಗಳನ್ನು ತಿಳಿಸುತ್ತ ಇಡಿಯ ಕನ್ನಡ ಜನಾಂಗವನ್ನೊಂದುಗೂಡಿಸಿದ ಕಟ್ಟನ್ನು ಹೆಚ್ಚಾಗಿ ಬಿಗಿಯಲಾರಂಭಿಸಿದೆ. ವಾರ್ಷಿಕ ಸಮ್ಮೇಳನಗಳಲ್ಲದೆ ನಾಲ್ಕು ಕಡೆಗಳಲ್ಲಿಯೂ ವಸಂತೋತ್ಸವಗಳೂ, ಸಾಹಿತ್ಯಗೋಷ್ಠಿಗಳೂ ನಡೆಯಲಾರಂಭಿಸಿದುದರಿಂದ ಎಲ್ಲೆಲ್ಲಿಯೂ ಕನ್ನಡ ನುಡಿಯು ಭರದಿಂದ ಮುಂದೆ ಸಾಗಲನುವಾಗಿದೆ. ಪರಿಷತ್ತಿನಲ್ಲಿ ಮಹಿಳೆಯರಿಗಾಗಿ ಸ್ವತಂತ್ರ ಶಾಲೆಯೊಂದು ಏರ್ಪಟ್ಟಿದೆ. ಮಹಿಳಾ ಸಮ್ಮೇಳನಗಳನ್ನೂ, ಸಂತೋಷಕೂಟಗಳನ್ನೂ ನಡೆಯಿಸಿ ಕನ್ನಡದ ಬಗೆಗೆ ಅವರಲ್ಲಿ ಭಕ್ತಿ ಆದರಗಳನ್ನು ಹುಟ್ಟಿಸಿ ಹಬ್ಬಿಸುವ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಕನ್ನಡ ಕಾವ್ಯಗಳನ್ನು ಗಮಕಪದ್ಧತಿಯಿಂದ ಹಾಡಿ ಜನತೆಯಲ್ಲಿ ಅವುಗಳ ವಿಷಯವಾಗಿ ಅಭಿರುಚಿಯನ್ನು ಹುಟ್ಟಿಸಲೆಂದು ಕನ್ನಡ ಯುವ ಯುವತಿಯರಿಗೆ ಗಮಕ ಕಲೆಯನ್ನು ಕಲಿಸುವುದನ್ನು ಏರ್ಪಡಿಸಲಾಗಿದೆ. ಕನ್ನಡ ಸಾಹಿತ್ಯ ಪರೀಕ್ಷೆಗಳ ತರಗತಿಗಳು ನಿಷ್ಕರ್ಷಿಸಲ್ಪಟ್ಟು, ಅವುಗಳಲ್ಲಿ ಅಭ್ಯಾಮಾಡಿ ತೇರ್ಗಡೆ ಹೊಂದಿದವರಿಗೆ ಬಿರುದುಗಳನ್ನು ಕೊಡುವ ವ್ಯವಸ್ಥೆಮಾಡಿ, ಹಳಗನ್ನಡ ಸಾಹಿತ್ಯದ ಅಭ್ಯಾಸಮಾಡಿ ಪ್ರೋತ್ಸಾಹಿಸುವ ನೂತನ ಉಪಕ್ರಮವನ್ನು ಆರಂಭಿಸಲಾಗಿದೆ. ಎಂದರೆ, ಸಾಮಾನ್ಯವಾಗಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಈಗೀಗ ನಿಜವಾಗಿಯೂ ಕನ್ನಡ ವಿದ್ಯಾಪೀಠವಾಗುವ ಪೂರ್ವ ರೂಪವನ್ನು ಅಳವಡಿಸಿಕೊಳ್ಳಲು ಅನುವಾಗಿದೆಯೆಂದು ಹೇಳಬಹುದು. ಪರಿಷತ್ತು ಉದ್ದೇಶವಾಗಿಟ್ಟುಕೊಂಡಿರುವ ಕಾರ್ಯಗಳು ಕನ್ನಡನಾಡಿನ ಎಲ್ಲ ಭಾಗಗಳಲ್ಲಿಯೂ ಒಂದೇ ಬಗೆಯಾಗಿ ಸರಾಗವಾಗಿ ಸಾಗಲನುವಾಗುವಂತೆ ನಾಲ್ಕುಕಡೆಗಳಲ್ಲಿಯೂ ಪ್ರಾಂತ ಸಮಿತಿಗಳನ್ನು ನಿರ್ಮಿಸಿ, ಆಯಾ ಕ್ಷೇತ್ರಗಳಲ್ಲಿ ಕನ್ನಡದ ಬೆಳವಣಿಗೆಗೆ ಹೆಚ್ಚು ಅವಕಾಶ ದೊರೆಯುವಂತೆ ಹೆಚ್ಚಾಗಿ ಕಾರ್ಯ ಜರುಗಲು ಅನುಕೂಲತೆ ಕಲ್ಪಿಸಲಾಗಿದೆ. ಈ ಬಗೆಯಾಗಿ ಆಖಂಡ ಕರ್ನಾಟಕದಲ್ಲಿ ಕನ್ನಡಭಾಷೆ,  ಸಾಹಿತ್ಯ, ವಾಙ್ಮಯ, ಸಂಸ್ಕೃತಿಗಳ ಸಂಗೋಪನ, ಸಂಘವರ್ಧನ ಕಾರ್ಯವು ಒಮ್ಮುಖವಾಗಿ ಶೀಘ್ರಗತಿಯಿಂದ ನಡೆಯಲು ಅನುಕೂಲವಾಗುವಂತೆ ನಮ್ಮ ಪರಿಷತ್ತಿನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಈ ಕಾರ್ಯಸಾಧನೆಗಾಗಿ ಹಗಲಿರುಳೂ ಹೆಣಗುತ್ತಿರುವ ಶ್ರೀಮಾನ್ ಶ್ರೀಕಂಠಯ್ಯನವರಿಗೆ ಕನ್ನಡಿಗರೆಲ್ಲರೂ ಕೃತಜ್ಞರಾಗಿರಬೇಕಾಗಿದೆ.

ಶ್ರೀಯುತರ ಆಗಾಧವಾದ ವಿದ್ವತ್ತು, ಕವಿತ್ವಪ್ರತಿಭೆ, ಇಂಗ್ಲಿಷ್ ವಾಙ್ಮಯ ಮೇಲೆ ಅವರಿಗಿರುವ ಪ್ರಭುತ್ವ- ಇವು ಅಸಾಮಾನ್ಯವಾಗಿದ್ದರೂ ಕನ್ನಡಕ್ಕಾಗಿ ಅವರಲ್ಲಿರುವ ಅಪಾರವಾದ ಪ್ರೇಮಾದರ ಭಕ್ತಿಗಳು, ಕನ್ನಡನಾಡು ಎಲ್ಲ ಬಗೆಯಿಂದಲೂ ಸ್ವತಂತ್ರವಾಗಿ ಏಕಸೂತ್ರನಿಬದ್ಧವಾಗಿ ಅದರ ಸಾಹಿತ್ಯವು ಸರ್ವಾಂಗ ಸುಂದರವಾಗಿ ವಿಪುಲವಾಗಿ ಸರ್ವಾದರಣೀಯವಾಗಿ ಬೆಳೆದು ಭಾರತದಲ್ಲಿಯೂ, ಜಗತ್ತಿನಲ್ಲಿಯೂ ಅದು ತನ್ನ ಯಶಸ್ಸನ್ನು ಮೆರೆಯಿಸಬೇಕೆಂಬ ಮಹದಾಕಾಂಕ್ಷೆಯಿಂದ ಅವರು ನಡೆಯಿಸಿರುವ ಜನಜಾಗೃತಿಯ ಕಾರ್ಯಗಳು ಹಾಗೆಯೇ ಕನ್ನಡಕ್ಕಾಗಿ ಅವರು ಮಾಡಿರುವ, ಮಾಡುತ್ತಿರುವ, ಅನನ್ಯ ಸಾಧಾರಣವಾದ ತ್ಯಾಗವು-ಇವೆಲ್ಲವುಗಳ ಮೂಲಕವಾಗಿ ಶ್ರೀಮನ್ಮಹಾರಾಜರವರಿಂದ ‘’ರಾಜಸೇವಾಸಕ್ತ”ರೆಂಬ ಬಹುಮಾನದ ಬಿರುದಿಗೆ ಪಾತ್ರರಾಗಿರುವ ಅವರು ನಿಜವಾಗಿಯೂ ‘ಕನ್ನಡ ಕುಲ ರನ್ನ’ ರಾಗಿರುವರೆಂದು ನಾನಿಲ್ಲಿ ನಿರ್ದೇಶಿಸದಿರಲಾರೆನು. ಇಂತಹ ಮಹನೀಯರ ನೇತೃತ್ವದಲ್ಲಿ ನಮ್ಮ ಸಾಹಿತ್ಯ ಪರಿಷತ್ತು ಯಾವ ಅಕುಂಚಿತ ದೃಷ್ಟಿಗೂ, ಸಂಕುಚಿತ ಬುದ್ಧಿಗೂ ಎಷ್ಟೂ ಎಡೆಗೊಡದಂತೆ, ವಿಶಾಲವಾದ ನಮ್ಮ ಕನ್ನಡ ಜನಾಂಗದ ಸರ್ವವಿಧದ ಆಭ್ಯುದಯ, ಸಾಧನಕ್ಕೆ ಹೆಚ್ಚುಹೆಚ್ಚಾಗಿ ತತ್ಪರವಾಗಿ ಪ್ರಯತ್ನಿಸುವಂತೆ ನಾವೆಲ್ಲರೂ ಅವರಿಗೆ ಅಂತಃಕರಣಪೂರ್ವಕವಾಗಿ ನೆರವನ್ನು ನೀಡಿ ನಮ್ಮೆಲ್ಲರ ಸಾಮಾನ್ಯಗುರಿಯನ್ನು ಬೇಗನೆ ಸಾಧಿಸಲು ಸಾಹಸಪಡೋಣ.

Tag: Kannada Sahitya Sammelana 24, Mudaveedu Krishnarao, Krishnaraya

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)