ಸಾಹಿತ್ಯ ಸಮ್ಮೇಳನ-೪೪ : ತುಮಕೂರು
ಡಿಸೆಂಬರ್ ೧೯೬೩

ಅಧ್ಯಕ್ಷತೆ: ರಂ. ಶ್ರೀ. ಮುಗಳಿ

೪೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ರಂಗನಾಥ ಶ್ರೀನಿವಾಸ ಮುಗಳಿ

ಕರ್ನಾಟಕದ ಗಡಿನಾಡಿನ ಕನ್ನಡ ದೀಪ, ಕನ್ನಡದ ಪಾರಿಜಾತ ಇತ್ಯಾದಿ ಬಿರಾದಾಂಕಿತರಾದ ರಂ.ಶ್ರೀ. ಮುಗಳಿ (ರಂಗನಾಥ ಶ್ರೀನಿವಾಸ ಮುಗಳಿ) ಶ್ರೀನಿವಾಸರಾವ್-ಕಮಲಕ್ಕನವರ ಪುತ್ರರಾಗಿ ೧೫-೭-೧೯0೬ರಲ್ಲಿ ಜನಿಸಿದರು. ಬಾಗಲಕೋಟೆ, ಬಿಜಾಪುರಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಬಿ.ಎ. ೧೯೩0ರಲ್ಲಿ ಎಂ.ಎ. ಮಾಡಿದರು. ೧೯೩೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಿಕ್ಷಕರಾಗಿ ಸೇರಿದರು. ೧೯೩೩ರಲ್ಲಿ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ೧೯೬೬ರಲ್ಲಿ ನಿವೃತ್ತರಾದರು. ಕೆಲವು ಕಾಲ ಸರಕಾರದ ಸಾಹಿತ್ಯ ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅನಂತರ ಬೆಂಗಳೂರಿನಲ್ಲಿ ೧೯೬೭-೧೯೭0ರ ಅವಧಿಯಲ್ಲಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.

ಮುಗಳಿಯವರು ೧೯೪0-೪೩ರಲ್ಲಿ ಜೀವನ ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಸಿದರು.

೧೯೫೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಇವರ ಕನ್ನಡ ಸಾಹಿತ್ಯ ಚರಿತ್ರೆ ಗ್ರಂಥಕ್ಕೆ ದೊರೆಯಿತು. ೧೯೫೫ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಮರ್ಶಾ ಗೋಷ್ಠಿಯ ಅಧ್ಯಕ್ಷತೆ, ೧೯೫೭ರಲ್ಲಿ ಧಾರವಾಡದಲ್ಲಿ ೧೯ನೇ ಶತಮಾನದ ಸಾಹಿತ್ಯ ವಿಮರ್ಶೆಯ ಗೋಷ್ಠಿಯ ಅಧ್ಯಕ್ಷತೆಗಳನ್ನು ವಹಿಸಿದ್ದರು. ೧೯೬೩ರಲ್ಲಿ ತುಮಕೂರು ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದ ೪೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಮುಗಳಿ ಅವರು ಬರೆದಿರುವ ಪ್ರಮುಖ ಕೃತಿಗಳಲ್ಲಿ ಕೆಲವು:

ಕನ್ನಡ ಸಾಹಿತ್ಯ ಚರಿತ್ರೆ

ಹೆರಿಟೇಜ್ ಆಫ್ ಕರ್ನಾಟಕ (ಇಂಗ್ಲಿಷ್)

ಕನ್ನಡ ಕೃತಿರತ್ನ

ಕನ್ನಡ ಕಾವ್ಯ ಸಂಚಯ

ಅನ್ನ (ಕಾದಂಬರಿ)

ಸಾಹಿತ್ಯ ವಿಮರ್ಶೆಯ ಮಾರ್ಗದರ್ಶನ ಸೂತ್ರಗಳು (ವಿಮರ್ಶೆ)

ರಂ.ಶ್ರೀ ಮುಗಳಿ ಅವರು ೨0-೨-೧೯೯೩ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೪೪

ಅಧ್ಯಕ್ಷರು, ರಂ.ಶ್ರೀ.ಮುಗಳಿ

ದಿನಾಂಕ ೨೮,೨೯,೩0 ಡಿಸೆಂಬರ್ ೧೯೬೩                               

ಸ್ಥಳ : ತುಮಕೂರು

ಪರಿಷತ್ತು ಸಮ್ಮೇಳನಗಳ ವಿಚಾರಕ್ಷೇತ್ರ್ರ-ಕಾರ್ಯಕ್ಷೇತ್ರ

ಎಲ್ಲಕ್ಕೆ ಮೊದಲು ಕನ್ನಡ ಸಾಹಿತ್ಯ  ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನ ಇವುಗಳ ವಿಚಾರಕ್ಷೇತ್ರ ಮತ್ತು ಈ ವಿಷಯದಲ್ಲಿ ಸ್ಪಷ್ಟವಾದ ತಿಳಿವಳಿಕೆ ಇಂದು ತೀರ ಆವಶ್ಯಕವೆಂದು ನನಗೆ ತೋರುತ್ತದೆ. ಸಾಹಿತ್ಯದ ಎಲ್ಲ ಶಾಖೆಗಳಲ್ಲಿ ಆಗಿರುವ ಪ್ರಗತಿ, ಆಗಬೇಕಾದ ಕಾರ್ಯ, ಸಾಹಿತ್ಯ ಸಂವರ್ಧನೆಗೆ ಆವಶ್ಯಕವಾದ ವಿಮರ್ಶೆಯ ಸ್ಥಿತಿಗತಿ, ಸಾಹಿತ್ಯ ಸೇವಕರ ಮತ್ತು ಪ್ರಕಾಶಕರ ಪರಿಸ್ಥಿತಿ, ಈ ಮುಂತಾದ ಸಾಹಿತ್ಯ ಸಂಬಂಧಿಯಾದ ವಿಷಯಗಳಿಗೆ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನಗಳು ತಮ್ಮ ಮುಖ್ಯವಾದ ಗಮನವನ್ನೀಯಬೇಕು; ಉದಾತ್ತ ಧ್ಯೇಯದಿಂದ, ವಿಧಾಯಕ ಕಾರ್ಯದಿಂದ, ವರುಷದಿಂದ ವರುಷಕ್ಕೆ ಮುನ್ನಡೆಯುತ್ತ ಸಾರ್ಥಕತೆಯನ್ನು ಗಳಿಸಬೇಕು. ಸಾಹಿತ್ಯದ ಮಂದಿರಕ್ಕೆ ಮೂಲ ಆಧಾರ ಭಾಷೆ, ಅದರ ಶಿಖರ ಸಂಸ್ಕೃತಿ. ಭಾಷೆ, ಸಾಹಿತ್ಯ, ಸಂಸ್ಕೃತಿ ಈ ಮುಪ್ಪರಿಯ ಮುನ್ನಡೆ, ಪರಿಷತ್ತು-ಸಮ್ಮೇಳನಗಳ ಹಿರಿಯ ಗುರಿಯಾಗಿರಬೇಕು. ಅಷ್ಟರಮಟ್ಟಿಗೆ ಅವುಗಳ ವಿಚಾರಕ್ಷೇತ್ರ, ಕಾರ್ಯಕ್ಷೇತ್ರಗಳು ವಿಸ್ತಾರಗೊಳ್ಳುತ್ತವೆ. ಆದರೆ ಅವು ಇನ್ನೂ ಹಿಗ್ಗುತ್ತ ಹೋಗಿ ರಾಜಕೀಯದ ರಣರಂಗವಾಗುವುದಾದರೆ ಅದಕ್ಕಿಂತ ಬೇರೆ ಅನಿಷ್ಟವಿಲ್ಲ. ಸಾಹಿತ್ಯ ಸೇವಕರಿಗೆ ಭಾಷಿಕ ರಾಜಕಾರಣ, ದೇಶದ ರಾಜಕಾರಣ ಮುಂತಾದ ಅನೇಕ ವಿಷಯಗಳಲ್ಲಿ ಆಸ್ಥೆಯಿರಬಹುದು. ಆ ಬಗ್ಗೆ ಅವರ ಸ್ವಂತ ಅಭಿಪ್ರಾಯಗಳೂ ಇರಬಹುದು. ಆದರೆ ಅವನ್ನು ವ್ಯಕ್ತಗೊಳಿಸಲು ಸಾಹಿತ್ಯದ ವೇದಿಕೆಯನ್ನು ಅವರು ಬಳಸಬಾರದು. ಅವಕ್ಕೆ ಸಂಬಂಧಪಟ್ಟ ವೇದಿಕೆಗಳಲ್ಲಿ ಹೋಗಿ ನಿಲ್ಲಬೇಕು. ಈ ಸೂಕ್ಷ್ಮಸಂಯಮ ಇಂದು ನಮ್ಮ ಜನಕ್ಕೆ ಅತ್ಯಂತ ಅವಶ್ಯವಾಗಿದೆ. ಯಾರೂ ಬೇಕಾದವರು ಯಾವಲ್ಲಿಯೂ ನುಗ್ಗಬಹುದು, ಏನನ್ನೂ ಹೇಳಬಹುದು ಎಂಬುದು ಕೇಡಿಗೆ ತೋಡಿಕೊಟ್ಟ ದಾರಿಯಾಗುವುದು ಖಂಡಿತ. ಭಾಷೆ-ಭಾಷೆಗಳ ಅನ್ಯೋನ್ಯ ಸಂಬಂಧ, ಭಾಷಾನುಗುಣ ಪ್ರಾಂತರಚನೆಯಿಂದ ತಲೆಯೆತ್ತಿದ ಸಮಸ್ಯೆಗಳು, ಇವನ್ನು  ಸಾಹಿತ್ಯ ಪರಿಷತ್ತು ಹಾಗೂ ಸಮ್ಮೇಳನಗಳು ತಾತ್ವಿಕವಾಗಿ ಪರಿಶೀಲಿಸಬೇಕು-ಆಂದೋಲನ ದೃಷ್ಟಿಯಿಂದಲ್ಲ. ಆಂದೋಲನ್ನಕೆ ಬೇರೆ ಸಮ್ಮುಖಗಳಿರುತ್ತವೆ. ಭಾಷಿಕ ರಾಜಕಾರಣದ ಅತಿರೇಕಗಳಿಂದ ಭಾರತೀಯ ಐಕ್ಯಕ್ಕೆ ಬಾಧೆ ತರುವ ಮತ್ತು ಸರಸ್ವತಿಯ ಪವಿತ್ರ ಪೀಠವನ್ನು ಮಲಿನಗೊಳಿಸುವ ಪ್ರವೃತ್ತಿಯನ್ನು ಯಾವ ಭಾಷೆಯವರೇ ತೋರಲಿ ಅದು ಅವರಿಗೂ ನಾಡಿಗೂ ಅಪಶಕುನವೆಂದು ತಿಳಿಯಬೇಕು.

ಸಾಹಿತಿಗಳು ಭಾರತ ಸಂಚಾರ ಮಾಡಬೇಕು?

ಪ್ರಾಂತಪ್ರಾಂತದ ಜನರಲ್ಲಿ ಅನ್ಯೋನ್ಯ ಸ್ನೇಹ ಬೆಳೆಯಲೆಂದೂ ಅವರವರ ಸಾಹಿತ್ಯ ಪರಿಚಯವಾಗಲೆಂದೂ, ಪಿ.ಇ.ಎನ್., ಅಂತರಭಾರತಿ ಸಾಹಿತ್ಯ ಅಕಾಡೆಮಿ ಮುಂತಾದ ಸಂಸ್ಥೆಗಳು ತಂತಮ್ಮ ರೀತಿಯಲ್ಲಿ ಬೆಲೆಯುಳ್ಳ ಕಾರ್ಯ ಮಾಡುತ್ತ ಬಂದಿರುತ್ತವೆ. ಭಾರತೀಯ ಭಾವೈಕ್ಯದ ಮಹತ್ವವನ್ನರಿತ ವಿಚಾರವಂತರು ಮತ್ತು ಕಾರ್ಯಕರ್ತರು ಇಂಥ ಸಂಸ್ಥೆಗಳ ಉತ್ಕರ್ಷಕ್ಕಾಗಿ ಹೆಚ್ಚು ಗಮನ ಕೊಡಬೇಕು. ಇವುಗಳಿಂದ ಪ್ರಕಾಶಿತವಾಗುವ ಪತ್ರಿಕೆ ಪುಸ್ತಕಗಳ ಪ್ರಸಾರವು ಜನರಲ್ಲಿ ಹೆಚ್ಚುವಂತೆ ಪ್ರಯತ್ನಿಸಬೇಕು. ಸಾಹಿತಿಗಳು ಮತ್ತು ಸಾಹಿತ್ಯ ಪ್ರೇಮಿಗಳು, ಇಷ್ಟೇಕೆ ಸಾಧ್ಯವಿದ್ದಷ್ಟು ಭಾರತೀಯರೂ ಭಾರತದ ಎಲ್ಲ ಪ್ರಾಂತಗಳಲ್ಲಿ ಸಂಚಾರ ಮಾಡಿ ಅಲ್ಲಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ಕಂಡು ಜನರೊಡನೆ ಸಂಪರ್ಕ ಬೆಳೆಯಿಸಿ ಪ್ರತ್ಯಕ್ಷವಾಗಿ ಭಾರತದರ್ಶನವನ್ನು ಪಡೆಯಬೇಕು. ಹೊಸ ಬಂಧುತ್ವದ ಪರಂಪರೆಯನ್ನು ನಿರ್ಮಿಸಬೇಕು. ತಂತಮ್ಮ ಸರಕಾರಗಳ ನೆರವಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ ಸಂಸ್ಥೆಗಳು ಇತರ ಪ್ರಾಂತಗಳಲ್ಲಿ  ತಮ್ಮಲ್ಲಿಯ ಸಾಹಿತಿಗಳ ಸಂಚಾರವನ್ನು ಏರ್ಪಡಿಸಬೇಕು, ಅಲ್ಲಲ್ಲಿಯ ಸಾಹಿತಿಗಳ ಸಂಪರ್ಕವುಂಟಾಗುವಂಥ ಕಾರ್ಯಕ್ರಮಗಳನ್ನು ಯೋಜಿಸಬೇಕು.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ

ಕರ್ನಾಟಕ ವಿದ್ಯಾವರ್ಧಕ ಸಂಘ, ತರುವಾಯ ಕನ್ನಡ ಸಾಹಿತ್ಯ ಪರಿಷತ್ತು ಈ ಸಂಸ್ಥೆಗಳು ಅತ್ಯಂತ ಪ್ರತಿಕೂಲವಾದ ಪರಿಸ್ಥಿತಿಯಲ್ಲಿ ಕನ್ನಡಿಗರನ್ನು ಒಂದುಗೂಡಿಸಲು ಮತ್ತು ಅವರ ಆಶೋತ್ತರಗಳನ್ನು ಮೂರ್ತಗೊಳಿಸಲು ಪ್ರಯತ್ನಮಾಡಿದವು. ಕರ್ನಾಟಕ ಪ್ರಾಂತವಾಗಬೇಕೆಂಬುದು ಅವು ಕಂಡ ಹಿರಿಗನಸುಗಳಲ್ಲಿ ಹಿರಿಯದಾಗಿತ್ತು. ಆ ಕನಸು ನನಸಾಗಿ ಕನ್ನಡ ನಾಡು ಒಂದಾಗಿರುವ ಸಂದರ್ಭದಲ್ಲಿ ಈ ಸಂಸ್ಥೆಗಳನ್ನೂ ಇವನ್ನು ಕಟ್ಟಲೆಸಗಿದ ಹಿರಿಯರನ್ನೂ, ಇಂದಿಗೂ ಮನಃಪೂರ್ವಕವಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರನ್ನೂ ನಾವು ಅತ್ಯಂತ ಕೃತಜ್ಞತೆಯಿಂದ ವಂದಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಭಾಗದ ಕನ್ನಡಿಗರ ಮತ್ತು ಸಾಹಿತ್ಯ ಪ್ರೇಮಿಗಳ ಪ್ರಾತಿನಿಧಿಕ ಸಂಸ್ಥೆಯಾಗಿ ಸುಮಾರು ಐವತ್ತು ವರ್ಷಗಳವರೆಗೆ ಅವ್ಯಾಹತವಾಗಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಗಳ ಅಭಿವೃದ್ಧಿ ಕಾರ್ಯವನ್ನು ಮಾಡುತ್ತ ಬಂದಿದೆ.  ಅದು ಕೈಗೊಂಡಿರುವ ಅನೇಕ ಕಾರ್ಯಗಳಲ್ಲಿ ಕನ್ನಡ-ಕನ್ನಡ-ನಿಘಂಟು ಚಿರಸ್ಮರಣೀಯವಾದ ಕಾರ್ಯ. ಶಾಸ್ತ್ರಶುದ್ಧವಾದ ತಳಹದಿಯ ಮೇಲೆ ಅದರ ಯೋಜನೆಯನ್ನು ಮಾಡಿ ಸಾಧ್ಯವಾದಷ್ಟು ಮಟ್ಟಿಗೆ ಸರ್ವಸಂಗ್ರಹವೂ ನಿರ್ದಿಷ್ಟವೂ ಆಗುವಂತೆ ಅದನ್ನು ರಚಿಸಲಾಗುತ್ತಿದೆ. ಅದರ ಮೊದಲನೆಯ ಸಂಚಿಕೆ ಬೇಗನೆ ಪ್ರಕಟವಾಗಲಿದೆಯೆಂಬ ನಿರೀಕ್ಷೆಯಿದೆ. ಕನ್ನಡದ ಮೇಲಿನ ಅಕ್ಕರೆಯಿಂದ ಅದಕ್ಕಾಗಿ ಶ್ರಮಿಸುತ್ತಿರುವ ವಿದ್ವಾಂಸರಿಗೂ ಅದರ ಪ್ರಕಟನೆಗಾಗಿ ಧನಸಹಾಯವನ್ನು ಪೂರ್ತಿಯಾಗಿ ನೀಡಿರುವ ಮೈಸೂರು ಸರಕಾರಕ್ಕೂ ಕನ್ನಡಿಗರು ಕೃತಜ್ಞರಾಗಿರಬೇಕು. ತುರ್ತು ಪರಿಸ್ಥಿತಿಯ ಝಳವು ಅದಕ್ಕೆ ತಾಕದಂತೆ, ಎಲ್ಲ ಸಂಚಿಕೆಗಳು ಬೇಗನೆ ಪ್ರಕಟವಾಗುವಂತೆ ಸರಕಾರವು ಎಲ್ಲ ಬಗೆಯ ಸೌಕರ್ಯಗಳನ್ನು ನಿಯತವಾಗಿ ಒದಗಿಸುವುದೆಂದು ನಾವು ಹಾರೈಸೋಣ. ಸಾಹಿತ್ಯ ಪರಿಷತ್ತು ಘಟನಾಬದ್ಧವಾದ, ಅನೇಕ ಹಿರಿಯರ ತ್ಯಾಗಸೇವೆಗಳಿಂದ ಪರಿಪೂತವಾದ, ಕನ್ನಡಿಗರ ಆಶಾಸ್ಥಾನವಾದ ಸಂಸ್ಥೆ. ಅದರ ಉದಾತ್ತವಾದ ಪರಂಪರೆಯನ್ನು ಸಾಗಿಸಿಕೊಂಡು ಹೋಗುವ ಹೊಣೆ ಎಲ್ಲ ಸಾಹಿತ್ಯ ಪ್ರೇಮಿಗಳ ಮೇಲಿದೆ. ಅದರಲ್ಲಿ ನಡೆಯುವ ಯಾವ ಚಟುವಟಿಕೆಯೂ ಉನ್ನತ ಮಟ್ಟದಲ್ಲಿ ನಡೆಯುವುದು ಅವಶ್ಯ. ಅದರ ಲೋಪದೋಷಗಳ ವಿಮರ್ಶೆ ಇರಲಿ, ಘಟನೆಗೆ ಸಂಬಂಧವಾದ ಚರ್ಚೆಯಿರಲಿ ಎಲ್ಲವೂ ಒಂದು ಮಾದರಿಯ ತೂಕದಿಂದ ನಡೆಯಬೇಕು. ಕೊನೆಗೆ ನಿಯಮಾನುಸಾರವಾಗಿ ಕೈಕೊಂಡ ನಿರ್ಣಯಗಳನ್ನು ನಾವೆಲ್ಲರೂ ಅನುಸರಿಸಬೇಕು. ಲೋಕಕ್ಕೆಲ್ಲ ವಿವೇಕವನ್ನು ಹೇಳ ಹೊರಟ ಸಾಹಿತ್ಯಪ್ರೇಮಿಗಳಾದ ನಾವು ಅದಕ್ಕೆ ವಿರುದ್ಧವಾಗಿ ನಡೆದರೆ ಗತಿಯೇನು? ಪರಿಷತ್ತಿನ ಆರ್ಥಿಕಸ್ಥಿತಿ ಎಷ್ಟೂ ಸಮಾಧಾನಕರವಾಗಿಲ್ಲ. ಎರಡು ಕೋಟಿಗೂ ಹೆಚ್ಚಾಗಿರುವ ಕನ್ನಡಿಗರನ್ನು ಪ್ರತಿನಿಧಿಸುವ ಸಾಹಿತ್ಯ ಪರಿಷತ್ತಿಗೆ ಸಾವಿರ ಜನ ಕೂಡ ಸದಸ್ಯರಿಲ್ಲವೆಂದರೆ ಏನು? ಹತ್ತು ಸಾವಿರ ಜನರಾದರೂ ಸದಸ್ಯರಾಗುವಂತೆ ನಾವು ನೀವೆಲ್ಲ ಯತ್ನಿಸಬೇಕು, ಐವತ್ತು ಸಾವಿರವಾದರೂ ವಾರ್ಷಿಕ ಸಹಾಯ ದ್ರವ್ಯ ನೀಡುವಂತೆ ಸರಕಾರವನ್ನು ಪ್ರಾರ್ಥಿಸಬೇಕು.

ಎಲ್ಲ ಪುಸ್ತಕಗಳ ಪಟ್ಟಿ ಪ್ರಕಟನೆ ಆಗಬೇಕು

ಗ್ರಂಥರಚನೆಗೆ ಪೂರ್ವಸಿದ್ಧತೆಯಾಯಿತು, ಅದಕ್ಕೆ ಸಂಸ್ಕಾರವಾಗಿ ಅದು ಪ್ರಕಾಶಿತವೂ ಆಯಿತು ಎಂದು ಇಟ್ಟು ಕೊಳ್ಳೋಣ. ಅದನ್ನು ಬೆಲೆಕೊಟ್ಟು ಕೊಳ್ಳುವುದೆಲ್ಲಿ? ಓದುವರೆಷ್ಟು ಜನ? ಓದಿದ ಮೇಲೆ ಮೆಚ್ಚಿಗೆಯನ್ನೊ ವಿಮರ್ಶೆಯನ್ನೊ ತಿಳಿಸುವವರು ಎಲ್ಲಿದ್ದಾರೆ? ಹಿಂದಿಗಿಂತ ಇಂದು ವಾಚನಾಭಿರುಚಿ ಹೆಚ್ಚಿದೆ. ಗ್ರಂಥಕಾರರಿಗೆ ಕೆಲಮಟ್ಟಿಗೆ ಪ್ರತಿಫಲ ದೊರೆಯುತ್ತದೆ. ಇದನ್ನೆಲ್ಲ ಒಪ್ಪಿಯೂ ಕನ್ನಡಿಗರ ಜನಸಂಖ್ಯೆ, ಓದಬಲ್ಲ ಓದುಗರ ಸಂಖ್ಯೆ ಈ ಮಾನದಿಂದ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಲಿಕ್ಕೆ ಬಾರದು. ಕೆಲವೊಂದು ಸಲ ಯಾವೊಂದು ಪುಸ್ತಕವನ್ನು ಕೊಳ್ಳುವವರು ಕಡಿಮೆ, ಓದುವವರು ಹೆಚ್ಚು, ರಸಜ್ಞರಂತೂ ಶೂನ್ಯ ಎಂಬ ಪರಿಸ್ಥಿತಿಯಿರುತ್ತದೆ. ಅದೂ ಕತೆ, ಕಾದಂಬರಿಯಿದ್ದರೆ ಮಾತ್ರ. ಕವಿತೆಯಿದ್ದರೆ, ಎಲ್ಲಕ್ಕೂ ಶೂನ್ಯವೇ ದೊರೆಯುವ ಪ್ರತಿಫಲ! ನಾಟಕ ಪ್ರಬಂಧಾದಿಗಳು ಇವೆರಡರ ಮಧ್ಯದಲ್ಲಿ ಬಹುಶಃ ಇರುತ್ತವೆ. ಒಟ್ಟಿನಲ್ಲಿ ಬೆಲೆಕೊಟ್ಟು ಪುಸ್ತಕಗಳನ್ನು ಸ್ವಂತಕ್ಕೆ  ಸಂಗ್ರಹಿಸುವ ಮತ್ತು ಓದುವ ವಾಚಕವರ್ಗದ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯಬೇಕು. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಒಂದು ಯೋಜನೆಯನ್ನು ಮಾಡಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ಸಾಹಿತ್ಯ ರೂಪದ ಪ್ರಕಾರ ವಿಂಗಡಿಸಿ ಆಯಾ ವರ್ಷದಲ್ಲಿ ಪ್ರಕಟವಾಗಿರುವ ಎಲ್ಲ ಪುಸ್ತಕಗಳ ಪಟ್ಟಿಯನ್ನು ಸಂಕ್ಷಿಪ್ತ ಪರಿಚಯದೊಡನೆ ‘ಕನ್ನಡ ನುಡಿ’ಯಲ್ಲಿ ಪ್ರಕಟಿಸಬೇಕು. ಜೊತೆಗೆ ಒಮ್ಮೆ ಕಾವ್ಯ ಇನ್ನೊಮ್ಮೆ ಕತೆ ಕಾದಂಬರಿ, ಮುಂದೆ ನಾಟಕ, ಕೊನೆಗೆ ಪ್ರಬಂಧಾದಿ ವಾಙ್ಮಯ ಹೀಗೆ ಪ್ರತ್ಯೇಕ ಸಾಹಿತ್ಯ ರೂಪದಲ್ಲಿ ಹಿಂದಿನ ವರುಷದಲ್ಲಿ ಆಗಿರುವ ಪ್ರಗತಿಯನ್ನು, ಎತ್ತಿತೋರಿಸಬೇಕಾದ ಕೃತಿಪರಿಚಯದೊಡನೆ ವಿಮರ್ಶಕರಿಂದ ಬರೆಯಿಸಿ ಪ್ರಕಟಿಸಬೇಕು. ಬೇರೆ ಭಾಷೆಗಳಲ್ಲಿ ಇಂಥ ಕಾರ್ಯ ನಡೆದಿರುತ್ತವೆ. ಇದರಿಂದ ವಾಚನಾಭಿರುಚಿಯಿದ್ದವರು ತಮ್ಮ ವೇದಿಕೆಯ ಪುಸ್ತಕಗಳನ್ನಾಯ್ದುಕೊಂಡು ತಂತಮ್ಮ ಯೋಗ್ಯತಾನುಸಾರವಾಗಿ ಬೆಲೆಕೊಟ್ಟು ಕೊಂಡು ಓದಬಹುದು. ಮನೆಮನೆಯ ವಾಚನಾಲಯಗಳನ್ನು ಸಮೃದ್ಧಗೊಳಿಸಬಹುದು. ಶಾಲೆ ಕಾಲೇಜುಗಳ ಮತ್ತು ಇತರ ಸಂಸ್ಥೆಗಳ ಗ್ರಂಥಾಲಯಗಳಿಗೂ ಇಂಥ ಪರಿಚಯ ಪಟ್ಟಿಗಳಿಂದ ಪ್ರಯೋಜನವಾಗುವುದು. ಸಾಹಿತ್ಯ ಪರಿಷತ್ತಲ್ಲದೆ ಇಂಥ ಸೇವೆಯ ಅಭಿರುಚಿ ಮತ್ತು ಹವ್ಯಾಸವುಳ್ಳ ವ್ಯಕ್ತಿಗಳೂ ಇದನ್ನು ಕೈಕೊಳ್ಳಬಹುದು. ಭಿನ್ನ ಭಿನ್ನ ಪರಿಚಯ ಪಟ್ಟಿಗಳಿಂದ ಆಯ್ಕೆಗೆ ಇನ್ನೂ ಹೆಚ್ಚು ಅವಕಾಶವಿರುತ್ತದೆ.

ಸಮ್ಮೇಳನಗಳು ಮತ್ತು ಗೋಷ್ಠಿಗಳು

ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿವರ್ಷವೂ ಒಂದೆರಡು ಸಾಹಿತ್ಯ ರೂಪಗಳನ್ನು ಕುರಿತು ಗೋಷ್ಠಿಗಳು ಏರ್ಪಡಬೇಕೆಂಬ ಮನೀಷೆ ಬಹುಕಾಲದಿಂದ ವ್ಯಕ್ತವಾಗಿದೆ. ಆದರೆ ಇದಕ್ಕೆ ೨-೩ ತಿಂಗಳ ಸಿದ್ದತೆ ಸಾಲದು, ಹನ್ನೆರಡು ತಿಂಗಳಾದರೂ ಬೇಕು. ಯಾವೊಂದು ಸಮ್ಮೇಳನದ ಕಾಲಕ್ಕೆ ಲೇಖಕರೂ ವಿಮರ್ಶಕರೂ ಸೇರಿ ಮುಂಬರುವ ವರ್ಷದ ಗೋಷ್ಠಿಯ ರೂಪರೇಖೆಯನ್ನು ಗೊತ್ತುಪಡಿಸಿ ಅದರ ಚಾಲಕರನ್ನು ನಿರ್ಧರಿಸಿ ಕಾರ್ಯ ಪ್ರಾರಂಭ ಮಾಡಬೇಕು. ಸಮ್ಮೇಳನದ ಕಾಲಕ್ಕೆ ಎಲ್ಲ ಕನ್ನಡಿಗರಿಗೆ ಮುಕ್ತದ್ವಾರವಿದ್ದ ಕಾರ್ಯಕ್ರಮಗಳು ಎರಡು ದಿನ ನಡೆದು ಮುಗಿದ ಮೇಲೆ ಒಂದು ಸಂಪೂರ್ಣ ದಿನವಾದರೂ ಆಯಾ ಗೋಷ್ಠಿಗೆ ಮೀಸಲಾಗಿರಬೇಕು. ಗೋಷ್ಠಿಯ ನಿಯೋಜಿತ ಅಧ್ಯಕ್ಷರು ಆ ಸಾಹಿತ್ಯರೂಪದಲ್ಲಿ ಅಲ್ಲಿಯವರೆಗಾದ ನಿರ್ಮಿತಿಯ ಅವಲೋಕನ ಮಾಡಬೇಕು, ಕೆಲವರು ಬರೆದು ತಂದ ಪ್ರಬಂಧಗಳನ್ನು ಓದಬೇಕು, ಅವುಗಳ ಮೇಲೆ ಚರ್ಚೆ ನಡೆಯಬೇಕು. ಪ್ರಬಂಧ ವಿಷಯಗಳನ್ನು ಪೂರ್ವಭಾವಿಯಾಗಿ ಸರ್ವಂಕಷವಾಗುವಂತೆ ಪುನರುಕ್ತಿಯಾಗದಂತೆ ಆರಿಸಿ ಸಾಕಷ್ಟು ಮುಂಚಿತವಾಗಿ ಲೇಖಕರಿಗೆ ತಿಳಿಸಿರಬೇಕು. ಗೋಷ್ಠಿಯ ಫಲಶ್ರುತಿಯೆಂದು ಅಧ್ಯಕ್ಷರ ಅವಲೋಕನದೊಂದಿಗೆ ಎಲ್ಲ ಪ್ರಬಂಧಗಳನ್ನಾಗಲಿ ಅವುಗಳ ಸಾರವನ್ನಾಗಲಿ ಪುಸ್ತಕರೂಪದಲ್ಲಿ ಪ್ರಕಟಿಸಬೇಕು. ಸಾಹಿತ್ಯ ಸಮ್ಮೇಳನಗಳು ಇಂತ ಗೋಷ್ಠಿಯೊಡನೆ ಜರಗುವುದಾದರೆ ಸಾಹಿತಿಗಳೂ ಸಹೃದಯರೂ ಸಮ್ಮೇಳನಗಳಿಗೆ ಹೆಚ್ಚು ಹೆಚ್ಚಾಗಿ ಪ್ರೇಮದಿಂದಲೂ ಆಸಕ್ತಿಯಿಂದಲೂ ಬರುವರೆಂದು ನೀರಿಕ್ಷಿಸಲು ಆಸ್ಪದವುಂಟಾಗುತ್ತದೆ.

Tag: Kannada Sahitya Sammelana 44, Ram.Shree. Mugali, Ranganatha Sreenivasa Mugali

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)