ಸಾಹಿತ್ಯ ಸಮ್ಮೇಳನ-೫೮ : ಕಲಬುರ್ಗಿ
ನವೆಂಬರ್ ೧೯೮೭

ಅಧ್ಯಕ್ಷತೆ: ಸಿದ್ದಯ್ಯ ಪುರಾಣಿಕ

೫೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಸಿದ್ದಯ್ಯ ಪುರಾಣಿಕ 

ಪ್ರಸಿದ್ಧ ಕವಿ, ಆಡಳಿತಗಾರ, ಆಧುನಿಕ ವಚನಕಾರ ಸಾಹಿತಿ ಸಿದ್ದಯ್ಯ ಪುರಾಣಿಕರು ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲ್ಲೂಕಿನ ದ್ಯಾಂಪುರದಲ್ಲಿ ಕಲ್ಲಿನಾಥಶಾಸ್ತ್ರಿ-ದಾನಮ್ಮ ದಂಪತಿಗಳಿಗೆ ೧೮-೮-೧೯೧೮ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ದ್ಯಾಂಪುರ, ಕುಕ್ಕನೂರುಗಳಲ್ಲಿ ಮುಗಿಸಿ, ಇಂಟರ್‍ಮೀಡಿಯೇಟ್‍ವರೆಗಿನ ಶಿಕ್ಷಣವನ್ನು ಗುಲ್ಬರ್ಗದಲ್ಲಿ ಪೂರೈಸಿದರು. ಬಿ.ಎ., ಎಲ್.ಎಲ್.ಬಿ ಪದವಿಗಳನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪಡೆದ ಮೇಲೆ ಐ.ಎ.ಎಸ್ ಪರೀಕ್ಷೆಯನ್ನು ಪಾಸು ಮಾಡಿದರು. ಅಸಿಸ್ಟೆಂಟ್ ಕಲೆಕ್ಟರ್ ಆಗಿ ೧೯೪೪ರಲ್ಲಿ ಕೆಲಸಕ್ಕೆ ಸೇರಿ, ಅನಂತರ ಸಹಾಯಕ ಕಂದಾಯ ಕಾರ್ಯದರ್ಶಿ, ಆಡಳಿತ ಸಚಿವರ ಕಾರ್ಯದರ್ಶಿ, ಡೆಪ್ಯೂಟಿ ಕಲೆಕ್ಟರ್ ಮೊದಲಾದ ಸ್ಥಾನಗಳಲ್ಲಿ ಕಾರ್ಯನಿರ್ವಹಣೆ ಮಾಡಿದರು. ಐ.ಎ.ಎಸ್. ಅಧಿಕಾರಿಗಳಾದ ಮೇಲೆ ವಿದ್ಯಾ ಇಲಾಖೆಯ ಉಪಕಾರ್ಯದರ್ಶಿ, ವಾರ್ತಾ ಪ್ರವಾಸೋದ್ಯಮ ನಿರ್ದೇಶಕರಾಗಿ ಅರ್ಥಖಾತೆಯಲ್ಲಿ ಉಪಕಾರ್ಯದರ್ಶಿಗಳಾಗಿ, ಚಿನ್ನ ನಿಯಂತ್ರಣಾಧಿಕಾರಿಯಾಗಿ, ಡೆಪ್ಯುಟಿ ಕಮಿಷನರ್ ಆಗಿ, ಸಾರಿಗೆ ಖಾತೆಯ ಆಯುಕ್ತರಾಗಿ, ರಾಜ್ಯದ ಲೇಬರ್ ಕಮಿಷನರ್ ಆಗಿ ನಾನಾ ಹುದ್ದೆಗಳಲ್ಲಿ ಸಮರ್ಥ ರೀತಿಯಲ್ಲಿ ಸೇವೆ ಸಲ್ಲಿಸಿ ೧೯೭೬ರಲ್ಲಿ ನಿವೃತ್ತಿ ಹೊಂದಿದರು.

ಇವರ ಆಡಳಿತ ಸೇವೆ, ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿ ಗೌರವ ಸನ್ಮಾನಗಳು ಇವರಿಗೆ ಲಭಿಸಿವೆ. ಅವುಗಳಲ್ಲಿ ಮುಖ್ಯವಾದವುವೆಂದರೆ ೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ನೀಡಿದ ಡಾಕ್ಟರೇಟ್, ೧೯೭೮ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿ, ೧೯೮೧ರಲ್ಲಿ ಪ್ರದಾನ ಮಾಡಿದ ಸ.ಸ.ಮಾಳನಾಡರ ಪ್ರಶಸ್ತಿ, ವಚನೋದ್ಯಾನ ಗ್ರಂಥಕ್ಕೆ ಭಾರತೀಯ ಭಾಷಾ ಪರಿಷತ್ತು ನೀಡಿದ ಬಿಲ್ವಾ ಪ್ರಶಸ್ತಿ, ಮೊದಲಾದವು. ಉರ್ದು, ಮರಾಠಿ, ಪರ್ಷಿಯನ್, ಸಂಸ್ಕೃತ ಭಾಷೆಗಳನ್ನು ಚೆನ್ನಾಗಿ ಅರಿತಿದ್ದ ಸಿದ್ದಯ್ಯ ಪುರಾಣಿಕರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಕೆಲವು ಕಾಲ ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವರು ಗುಲ್ಬರ್ಗದಲ್ಲಿ ಜರುಗಿದ ೫೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

‘ಕಾವ್ಯಾನಂದ’ ಎಂಬ ಕಾವ್ಯನಾಮದಲ್ಲಿ ಇವರು ೩೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ : ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ವಚನೋದ್ಯಾನ, ಮರುಳ ಸಿದ್ದನ ಕತೆ ಇತ್ಯಾದಿ ಕವನ ಸಂಕಲನಗಳು, ಮೊದಲು ಮಾನವನಾಗು, ಕಲ್ಲೋಲಮಾಲೆ, ಹಾಲ್ದೆನೆ, ಹರ್ಡೇಕರ ಮಂಜಪ್ಪ, ಮಿರ್ಜಾಗಾಲಿಬ್, ಶರಣ ಚರಿತಾಮೃತ, ಮಹಾದೇವಿ ಇತ್ಯಾದಿ ಜೀವನ ಚರಿತ್ರೆಗಳು. ಗಿಲ್‍ಗಿಲ್‍ಗಿಲ್‍ಗಚ್ಚಿ, ತುಪ್ಪರೊಟ್ಟಿ, ಗೇಗೇಗೇ ಎಂಬ ಮಕ್ಕಳ ಕೃತಿಗಳು.

ಕನಕದಾಸ ಪ್ರಶಸ್ತಿ ಮಣಿಹ, ಶರಣರ ಪ್ರಸಾದ ಇವರ ಸಂಪಾದಿತ ಕೃತಿಗಳು. ಕಥಾಮಂಜರಿ, ತುಷಾರಹಾರ ಎಂಬ ಕಥಾಸಂಕಲನಗಳು, ರಜತರೇಖೆ, ನಿರ್ಬಂಧನ, ಆತ್ಮಾರ್ಪಣ, ಗಿರಿಜಾಕಲ್ಯಾಣ-ನಾಟಕಗಳು ಇತ್ಯಾದಿ ಕೃತಿಗಳನ್ನು ಕೂಡ ರಚಿಸಿದ್ದರೂ ಇವರು ಕವಿಗಳೆಂದೇ ಪ್ರಸಿದ್ಧರಾಗಿದ್ದಾರೆ.

ಇವರು ಬೆಂಗಳೂರಿನಲ್ಲಿ ೧೮-೯-೧೯೯೪ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೫೮

ಅಧ್ಯಕ್ಷರು, ಸಿದ್ದಯ್ಯ ಪುರಾಣಿಕ

ದಿನಾಂಕ: ೨೯, ೩0, ೩೧ ಅಕ್ಟೋಬರ್, ೧ ನವೆಂಬರ್ ೧೯೮೭

ಸ್ಥಳ : ಕಲಬುರ್ಗಿ

(ಟಿಪ್ಪಣಿ ೧೯೮೬ರಲ್ಲಿ ಸಮ್ಮೇಳನ ನಡೆಯಲಿಲ್ಲ)

ಕನ್ನಡ ಹಿಂದಕ್ಕೆ ಹೋಗಿದೆ

ಮೊದಲನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದ ಆರಂಭದಲ್ಲಿಯೇ-೧೯೧೫ರಷ್ಟು ಹಿಂದೆಯೇ- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರೂ, ಆ ಕಾಲಕ್ಕೇ ಅರ್ಥಶಾಸ್ತ್ರ, ಲೇಖ್ಯಬೋಧಿನಿ, ವ್ಯವಹಾರ ದೀಪಿಕೆಯಂಥ ಉಪಯುಕ್ತ ಗ್ರಂಥಗಳನ್ನು ಕನ್ನಡಿಗರಿಗೆ ಕೊಟ್ಟವರೂ ಆದ ರಾಜಮಂತ್ರ ಪ್ರವೀಣ ಎಚ್.ವಿ. ನಂಜುಂಡಯ್ಯನವರು ಹೇಳಿದುದು ಹೀಗಿದೆ:  ಪತ್ರಗಳಲ್ಲಿಯೂ, ವಾಣಿಜ್ಯದಲ್ಲಿಯೂ ಬಳಕೆಯಲ್ಲಿರತಕ್ಕ ಭಾಷೆಯಾಗಿದೆ. ಈ ದೇಶದಲ್ಲಿ ಕನ್ನಡವನ್ನು ಮಾತೃಭಾಷೆಯಾಗಿ ಮನೆಯಲ್ಲಿ ಮಾತನಾಡದಿರುವ ಅನೇಕ ಜನಗಳು ಇರುವುದೂ ನಿಶ್ಚಯವೇ; ಆದರೆ ಅವೆಲ್ಲರೂ ಚಿಕ್ಕಂದಿನಿಂದಲೂ ದೇಶಭಾಷೆಯಾದ ಕನ್ನಡವನ್ನು ಕಲಿಯುವರು. ಪ್ರಾಯಶಃ ಮುಸಲ್ಮಾನರನ್ನು ಬಿಟ್ಟರೆ ಮಿಕ್ಕ ಜನರೆಲ್ಲರೂ ಕನ್ನಡವನ್ನೇ ಮೊದಲು ಕಲಿತು, ತಮ್ಮ ಬಂಧುಗಳಿಗೆ ಕ್ಷೇಮ ಸಮಾಚಾರದ ಕಾಗದಗಳನ್ನು ಬರೆಯುವಾಗಲೂ ತೆಲುಗು, ತಮಿಳುಗಳಿಗೆ ಬದಲಾಗಿ ಕನ್ನಡವನ್ನೇ ಬಳಸುವರು.”

೧೯೧೫ರಲ್ಲಿ ಇದ್ದ ಈ ಸುಸ್ಥಿತಿ ಕನ್ನಡಕ್ಕೆ ಈಗ ಇದೆಯೆಂದು-ಸಾಹಿತ್ಯ ಸೃಷ್ಟಿಯು ದೃಷ್ಟಿಯಿಂದಲ್ಲ, ಜನಬಳಕೆಯ ದೃಷ್ಟಿಯಿಂದ ಇದೆಯೆಂದು-ನಮ್ಮ ಸರಕಾರದ ಸೂತ್ರಧಾರಿಗಳು ಎದೆ ತಟ್ಟಿ ಹೇಳಬಲ್ಲರೆ? ಹೊಸಗನ್ನಡ ಸಾಹಿತ್ಯ ಸೃಷ್ಟಿ ಅದ್ಭುತವಾಗಿ ಆಗಿದೆ. ನಿಜ. ಅದರ ಬಗ್ಗೆ ಮುಂದೆ ಪ್ರಸ್ತಾಪಿಸುವೆನು. ಆದರೆ ಜನಬಳಕೆಯ ದೃಷ್ಟಿಯಿಂದ, ಕನ್ನಡ ರಾಜ್ಯೋದಯವಾಗಿ ಮೂರು ದಶಕಗಳು ಕಳೆದ ಮೇಲೂ, ಕನ್ನಡದ ತೇರು ೧೯೧೫ಕ್ಕೂ ಹಿಂದೇ ಹೋಗಿದೆಯೆಂಬುದು ಎಂತ ಲಜ್ಜಾಸ್ಪದವಾದ ವಿಷಯ.

ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ನಾಡು ಚರಗ ಚೆಲ್ಲಿದಂತೆ  ಚೆದುರಿ ಚೆಲ್ಲಾಪಿಲ್ಲಿಯಾಗಿದ್ದಾಗಲೂ ಕನ್ನಡಕುಲದ ಗಮನೀಯ ಕಲ್ಪನೆಯನ್ನು ವಿದ್ಯಾವರ್ಧಕ ಸಂಘದೊಡನೆ ಎಲ್ಲ ಭಾಗಗಳ ಕನ್ನಡಿಗರ ಮುಂದೆ ಮನೋಜ್ಞವಾಗಿ ಮಂಡಿಸಿ, ಕನ್ನಡಿಗರ ಸಾಂಸ್ಕೃತಿಕ ಏಕೀಕರಣಕ್ಕೆ ಬುನಾದಿಯನ್ನು ಹಾಕಿ, ಕನ್ನಡ ನುಡಿ ತಲೆ ಎತ್ತಲು, ಹೊಸಗನ್ನಡ ಸಾಹಿತ್ಯ ಹುಲುಸಾಗಿ ಬೆಳೆಯಲು ಕಳೆದ ಏಳು ದಶಕಗಳಿಂದಲೂ ಸಾಕಷ್ಟು ಶ್ರಮಿಸುತ್ತ ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲೋದ್ದೇಶಗಳಲ್ಲಿ ಕೆಲವು ಈಡೇರಿದ ಸಂತೃಪ್ತಿಯೊಡನೆ, ನಿರಂತರವಾಗಿ ಮುಂದುವರಿಯಬೇಕಾದ ಇನ್ನುಳಿದ ಉದ್ದೇಶಗಳನ್ನು ಮುಂದುವರಿಸಿಕೊಂಡು ನಡೆದಿದೆ, ಧನಬಲ ಜನಬಲಗಳನ್ನು ಗಳಿಸಿಕೊಳ್ಳುತ್ತ ನಡೆದಿದೆ, ಸಂತೋಷ.

ಪರಿಷತ್ತಿನ ಸಾಮರ್ಥ್ಯ ಹೆಚ್ಚಬೇಕು

ಆದರೆ ವ್ಯಕ್ತಿ, ಸಂಘ, ಸಂಸ್ಥೆ, ನಾಡು, ರಾಷ್ಟ್ರಗಳ ಬೆಳವಣಿಗೆ, ಅರ್ಥಪೂರ್ಣ ಅಭಿವೃದ್ಧಿಗೆ ಜನಬಲ ಧನಬಲಗಳಷ್ಟೇ ಸಾಲವು; ಅವುಗಳೊಡನೆ ನೈತಿಕ ಬಲವೂ ಬೇಕೆಂಬುದು ಪರಿಷತ್ತಿನ ಭವಿತವ್ಯದ ಬಗ್ಗೆ ನಿಷ್ಪಕ್ಷಪಾತವಾಗಿ ಚಿಂತಿಸುವವರ ನ್ಯಾಯವಾದ ನಿಲುವಾಗಿದೆ. ಕನ್ನಡ ಸರಸ್ವತಿಯ ಈ ಪವಿತ್ರ ಮಂದಿರ ಪವಿತ್ರವಾಗಿಯೇ ಉಳಿಯಬೇಕೆಂಬುದು ಅವರ ಆಸೆ. ಈ ಆಸೆ ಈಡೇರಬೇಕು. ಪರಿಷತ್ತಿನ ಘನತೆ ಗೌರವಗಳಿಗೆ ಧಕ್ಕೆ ಬರದ ರೀತಿಯಲ್ಲಿ ಈಡೇರಬೇಕು. ಪದಾಧಿಕಾರಿಗಳು, ಪರಿಷತ್ತು ಒಂದೇ ಅಲ್ಲ. ಪದಾಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ, ಆದರೆ ಪರಿಷತ್ತು ಕೊನೆಯವರೆಗೆ ಉಳಿಯಬೇಕಾದುದು, ಉಳಿಯಬೇಕು. ನೈತಿಕ ನೆಲಗಟ್ಟಿನ ಮೇಲೆ ಪರಿಷತ್ತು ಪ್ರಚಂಡ ಶಕ್ತಿಯಾಗಿ ಬೆಳೆಯುವಂತೆ ಪರಿಷತ್ತಿನ ಪದಾಧಿಕಾರಿಗಳೂ ಸರ್ವಕನ್ನಡಿಗರೂ ಧ್ಯೇಯರತಿಯೊಡನೆ ದುಡಿಯಬೇಕು. ಅದರ ಅಂಗರಚನೆಯಲ್ಲಿ ಇನ್ನೂ ಮಾರ್ಪಾಟುಗಳು ಅಗತ್ಯವೆನಿಸಿದರೆ ಮುಕ್ತ, ಮನಸ್ಸಿನ ಚರ್ಚೆ ನಡೆಸಿ ತೀರ್ಮಾನಿಸಿಕೊಳ್ಳಬೇಕು. ಈ ಮಾರ್ಪಾಟುಗಳಲ್ಲಿ ಪರಿಷತ್ತಿನ ಚುನಾವಣಾಧಿಕಾರಿಗಳನ್ನು ಸರಕಾರವೇ ನೇಮಿಸಬೇಕೆಂಬುದು ಬಹಳ ಮುಖ್ಯವಾದುದು. ಪರಿಷತ್ತು ಪ್ರಜಾಸತ್ತಾತ್ಮಕ ಸಂಸ್ಥೆಯಾಗಿ ಉಳಿದೂ ಅದಕ್ಕೆ ಹೊರಗುಳಿವ ಹಿರಿಯ ಸಾಹಿತಿಗಳೆಲ್ಲರ ಸಲಹೆ ಸಿಕ್ಕುತ್ತಿರುವಂತೆ ಏರ್ಪಾಟು ಆಗಬೇಕು; ಎಲ್ಲ ಭಾಗಗಳ ಕನ್ನಡ ಸೇವಾಸಕ್ತರ ಸಕ್ರಿಯ ಸಹಕಾರ ಅದಕ್ಕೆ ದೊರೆಯುವ ಹಾಗೆ ವ್ಯವಸ್ಥೆಯಾಗಬೇಕು; ಜಿಲ್ಲಾ ಪರಿಷತ್ತುಗಳ ಶಕ್ತಿ, ಕಾರ್ಯ, ಕ್ಷಮತೆಗಳು ಹೆಚ್ಚಬೇಕು.

ಪರಿಷತ್ತಿಗೆ ನೂರಾರು ಹೊಣೆಗಳು

ಯಾಕೆಂದರೆ ಪರಿಷತ್ತು ಹೊರಬೇಕಾದ ಹೊಣೆಗಳು ಹೆಚ್ಚುತ್ತಿವೆ. ‘ಕನ್ನಡಕುಲ’ ವೆಂಬುದು ಕೇವಲ ಕವಿಗಳ ಕಲ್ಪನೆ ಮಾತ್ರವಲ್ಲ, ಅದು ನಮ್ಮ ಸಾಂಸ್ಕೃತಿಕ ಸತ್ಯವೆಂಬುದನ್ನು ಪರಿಷತ್ತು ಪ್ರತ್ಯಕ್ಷೀಕರಿಸಿ ತೋರಿಸಬೇಕಾಗಿದೆ; ಕನ್ನಡ ನಾಡಿನ ಗಡಿಹುದ್ದೆಗಳು ಎಚ್ಚತ್ತ ಕೆಚ್ಚೆದೆಯ ಕನ್ನಡಿಗರ ಕೋಟೆಯನ್ನು ಕಟ್ಟಬೇಕಾಗಿದೆ; ಗಡಿಯಾಚೆ ಕನ್ನಡಿಗರು, ಹೊರದೇಶಗಳಲ್ಲಿರುವ ಕನ್ನಡಿಗರು ತಮ್ಮ ಕನ್ನಡತನವನ್ನು ಉಳಿಸಿಕೊಳ್ಳುವುದು ಸಾಧ್ಯವಾಗುವಂತೆ ಅವರಿಗೆ ಶಕ್ಯವಿರುವ ಎಲ್ಲ ನೆರವನ್ನೂ ನೀಡಬೇಕಿದೆ; ಕನ್ನಡನಾಡಿನ ಹೊರಗೆ ಉಳಿದಿರುವ ಕಾಸರಗೋಡಿನಂಥ ಕನ್ನಡ ಭಾಗಗಳನ್ನು ಕನ್ನಡ ನಾಡಿಗೆ ಕೂಡಿಸಲು ಪ್ರಭಾವೀ ಪ್ರಯತ್ನಗಳನ್ನು ಮಾಡಬೇಕಿದೆ: ಬಹಳಷ್ಟು ಭರವಸೆಯನ್ನು ಹುಟ್ಟುಸಿರುವ ಕನ್ನಡ ಲೇಖಕಿಯರಿಗೆ ವಿಶೇಷ ಪ್ರೋತ್ಸಾಹವನ್ನು ನೀಡಬೇಕಿದೆ; ಮಕ್ಕಳ ಸಾಹಿತ್ಯ ಅಕಾಡೆಮಿ, ಮಕ್ಕಳ ಸಾಹಿತ್ಯ ಪರಿಷತ್ತು, ಗಮಕ ಕಲಾ ಪರಿಷತ್ತು, ಕನ್ನಡ ಇತಿಹಾಸ ಅಕಾಡೆಮಿಗಳು ಹುಟ್ಟಿರುವುದು ಹಿಗ್ಗಿನ ಸಂಗತಿ; ಅವುಗಳನ್ನು ಬೆಳೆಸಬೇಕಿದೆ; ಕನ್ನಡ ರಂಗಭೂಮಿಯ ಪುನರುಜ್ಜೀವನ ಪ್ರಯತ್ನ ಪ್ರಾರಂಭವಾಗಬೇಕಿದೆ; ಕನ್ನಡ ಪದವೀಧರರ, ಬೆರಳಚ್ಚುಗಾರರ, ಶೀಘ್ರಲಿಪಿಕಾರರ, ಪಂಡಿತ ವಿದ್ವಾನ್ ಪದವಿಗಳನ್ನು ಪಡೆದವರ, ಕನ್ನಡ ಜಾಣ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಉದ್ಯೋಗಾವಕಾಶಗಳ ವಿಸ್ತರಣೆಗಾಗಿ ಹೋರಾಟ ನಡೆಸಬೇಕಿದೆ. ಕನ್ನಡ ಸಂಗೀತ ಸಭೆಗಳನ್ನು ಜನಪ್ರಿಯಗೊಳಿಸಬೇಕಿದೆ; ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ, ವಿಚಾರ ಸಾಹಿತ್ಯ, ಶಾಸ್ತ್ರ ಸಾಹಿತ್ಯಗಳು ವೆಗ್ಗಳವಾಗಿ ಬೆಳೆಯುವಂತೆ ಉಳುಮೆ ಮಾಡಬೇಕಿದೆ; ಹೊಸಗನ್ನಡ ಸಾಹಿತ್ಯವು ನಮಗೆ ನೀಡಿರುವ ವಿವಿಧ ಪ್ರಕಾರಗಳ ಅತ್ಯುತ್ತಮ ಭಾಗಗಳ ಸಂಕಲನಗಳನ್ನು ಪ್ರಕಟಿಸಿ ಶ್ರೀಸಾಮಾನ್ಯರೂ ಕೊಳ್ಳಬಹುದಾದ ಬೆಲೆಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕಿದೆ; ವಾಚನಾಲಯಗಳ ಚಳುವಳಿಯನ್ನು ವ್ಯಾಪಕವಾಗಿ ನಡೆಸಬೇಕಿದೆ; ಮಹಾರಾಷ್ಟ್ರದಲ್ಲಿ ಜನಪ್ರಿಯವೂ ಬಹೂಪಯೋಗಿಯೂ ಆಗಿರುವ ‘ಗ್ರಂಥಾಲಿ’ ಆಂದೋಲನಕ್ಕೆ ಸಂವಾದಿಯಾದ ಸಾಹಿತ್ಯ ಪ್ರಕಟನ, ಸಾಹಿತ್ಯದಾನ ಅಭಿಯಾನವೊಂದನ್ನು ಪ್ರಾರಂಭಿಸಬೇಕಿದೆ. ಈ ಯಾದಿಯನ್ನು ವಿಸ್ತರಿಸುತ್ತಲೇ ಹೋಗಬಹುದು. ಪರಿಷತ್ತಿನ ಕಾರ್ಯಕ್ಷೇತ್ರ ಎಷ್ಟು ವಿಸ್ತಾರವಾಗುತ್ತ ನಡೆದಿದೆ, ಅದರ ಹೊಣೆಗಳು ಎಷ್ಟು ಹೆಚ್ಚಿವೆ ಎಂಬುದಕ್ಕೆ- ಸಂಕೇತ ಮಾತ್ರ ಈ ಯಾದಿ. ಇದನ್ನು ಅನುಲಕ್ಷಿಸಿ ಪರಿಷತ್ತಿನ ಶಕ್ತಿ ಸಂವರ್ಧನೆಗೆ, ಶೀಲ ಸಂವರ್ಧನೆಗೆ ಅದರ ಪದಾಧಿಕಾರಿಗಳೂ ಪ್ರಯತ್ನಿಸಬೇಕು. ಸರ್ವ ಕನ್ನಡಿಗರೂ ಸಹಕರಿಸಬೇಕು.

Tag: Kannada Sahitya Sammelana 58, Siddaiah Puranika, Sidhaiah Puranik

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)