ಸಾಹಿತ್ಯ ಸಮ್ಮೇಳನ-೬೨ : ಕೊಪ್ಪಳ
ಫೆಬ್ರವರಿ ೧೯೯೩

ಅಧ್ಯಕ್ಷತೆ: ಸಿಂಪಿ ಲಿಂಗಣ್ಣ

೬೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಸಿಂಪಿ ಲಿಂಗಣ್ಣ

ಹಿರಿಯ ಜಾನಪದ ದಿಗ್ಗಜ, ಆದರ್ಶ ಶಿಕ್ಷಕ, ಸಾಹಿತಿ ಆಗಿದ್ದ ಸಿಂಪಿ ಲಿಂಗಣ್ಣನವರು ಶಿವಯೋಗಪ್ಪ-ಸಾವಿತ್ರಿ ದಂಪತಿಗಳಿಗೆ ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದಲ್ಲಿ ೧0-೨-೧೯0೫ರಂದು ಜನಿಸಿದರು. ೧೯೨೨ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಪಾಸಾದ ಇವರು ೧೯೨೫ರಿಂದ ೧೯೬0ವರೆಗೆ ೩೫ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬0ರಲ್ಲಿ ಇವರು ಅತ್ಯುತ್ತಮ ಶಿಕ್ಷಕರೆಂದು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದರು. ೧೯೨೩ರಲ್ಲಿ ವಾಗ್ವಿಲಾಸ ಭವನ ಎಂಬ ವಾಚನಾಲಯವನ್ನು ಚಡಚಣದಲ್ಲಿ ಸ್ಥಾಪಿಸಿದರು. ೧೯೨೫ರಲ್ಲಿ ಬತಗುಣಶಿಯಲ್ಲಿದ್ದಾಗ ಬಸವೇಶ್ವರ ವಾಚನಾಲಯ ಪ್ರಾರಂಭಿಸಿದರು. ‘ಮುದ್ದು’ ಮತ್ತು ‘ಕಮತಿಗ’ ಎಂಬ ಕೈಬರಹ ಪತ್ರಿಕೆಗಳನ್ನು ಮೂಡಿಸುವುದರ ಮೂಲಕ  ನಾಗಪ್ಪ ಶಿವಯೋಗಪ್ಪ ಸಿಂಪಿ ಅವರು ಸಿಂಪಿ ಲಿಂಗಣ್ಣ ಎಂಬ ಹೆಸರಿನಲ್ಲಿ ಬರಹಕ್ಕೆ ಇಳಿದರು. ‘ಭರತ’ ಎಂಬ ಕಾವ್ಯನಾಮ ಇವರದು.

ಹಲಸಂಗಿಯ ಮಧುರಚೆನ್ನ, ಕಾಪಸೆ ರೇವಣ್ಣ, ಧೂಲಾಸಾಹೇಬ್ ಅವರುಗಳ ನಡುವಿನ ಒಡನಾಟದಲ್ಲಿ ಕನ್ನಡ ಜಾನಪದ ಗೀತೆಗಳನ್ನು ಸಂಗ್ರಹಿಸಿ, ಗರತಿಯ ಬಾಳು ಕೃತಿಯನ್ನು ಅಧ್ಯಯನ ಮಾಡಿದರು. ಅರವಿಂದರ ಹೆಸರಿನಲ್ಲಿ ಚಡಚಣದಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿದರು. ಅನೇಕ ಪುಸ್ತಕಗಳನ್ನು ಹೊರತಂದರು.

‘ಜನಾಂಗದ ಜೀವಾಳ’ ಗ್ರಂಥಕ್ಕೆ ೧೯೬೧ರಲ್ಲಿ, ಶ್ರುತಾಶ್ರುತ ಕವನ ಸಂಕಲನಕ್ಕೆ ೧೯೬೯ರಲ್ಲಿ, ‘ನಾಟ್ಯ ಸಾಧನೆ’ ಕೃತಿಗೆ ೧೯೭೬ರಲ್ಲಿ ರಾಜ್ಯ ಸರಕಾರ ಬಹುಮಾನ ನೀಡಿದೆ. ಸ್ವರ್ಗದೋಲೆಗಳು ಕೃತಿಗೆ ಮುಂಬಯಿ ಸರಕಾರದ ಬಹುಮಾನ ೧೯೫೬ರಲ್ಲಿ, ‘ನೂರುಗಡಿಗೆ ಒಂದು ಬಡಿಗೆ’ಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ೧೯೮0ರಲ್ಲಿ ಬಂದಿದೆ. ೧೯೮೮ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಪ್ರತಿಷ್ಠಿತ ಜಾನಪದ ತಜ್ಞ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ೧೯೮೯ರಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೧೯೯0ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮುಂತಾದವು ಲಭಿಸಿತ್ತು. ೧೯೬೯ರಲ್ಲಿ ಮಂಗಳೂರಿನಲ್ಲಿ ಜರುಗಿದ ೨ನೇ ಜಾನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೭೯ರಲ್ಲಿ ಇಳಕಲ್ಲಿನಲ್ಲಿ ನಡೆದ ೯ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸೊಲ್ಲಾಪುರದಲ್ಲಿ ನಡೆದ ಹೊರನಾಡ ಕನ್ನಡಿಗರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೌರವ ಇವರದು.

೧೯೯೩ರಲ್ಲಿ ಕೊಪ್ಪಳದಲ್ಲಿ ನಡೆದ ೬೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನೂ ಇವರು ವಹಿಸಿದ್ದರು.

ಸಿಂಪಿ ಲಿಂಗಣ್ಣನವರು ರಚಿಸಿರುವ ಕೃತಿಗಳು ನೂರಕ್ಕೂ ಹೆಚ್ಚು ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಲಾಗಿದೆ.

ಜಾನಪದ ಕೃತಿಗಳು : ಗರತಿಯ ಬಾಳು(೧೯೫೪), ಜನಾಂಗದ ಜೀವಾಳ(೧೯೬0), ಉತ್ತರ ಕರ್ನಾಟಕದ ಜನಪದ ಕಥೆಗಳು(೧೯೭೨)

ಕಥಾಸಂಕಲನಗಳು: ಬೆಟ್ಟದ ಹೊಳೆ, ಪವಿತ್ರ ಜೀವನ, ದೀಪವರ್ತಿ ದೃಷ್ಟಾಂತ ಕಥೆಗಳು.

ನಾಟಕಗಳು: ಮರೆಮುಚ್ಚಕ, ಜನಜೀವನ, ಭಕ್ತರಹಸ್ಯ, ಚಂಡಾಳ ಚೌಕಡಿ

ಜೀವನ ಚರಿತ್ರೆಗಳು : ಕನ್ನಡಿಗರ ಕುಲಗುರು, ದತ್ತವಾಣಿ ಅರವಿಂದರು

ಕವನಸಂಕಲನಗಳು :ಮುಗಿಲ ಜೇನು, ಮಾತೃವಾಣಿ, ಶ್ರುತಾಶ್ರುತ

ಸಿಂಪಿ ಲಿಂಗಣ್ಣನವರು ೫-೫-೧೯೯೩ರಲ್ಲಿ ದಿವಂಗತರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೬೨

ಅಧ್ಯಕ್ಷರು, ಸಿಂಪಿ ಲಿಂಗಣ್ಣ

ದಿನಾಂಕ ೫, , ಫೆಬ್ರವರಿ ೧೯೯೩

ಸ್ಥಳ : ಕೊಪ್ಪಳ

 

ಅಮೃತನಿಧಿ ಯೋಜನೆ

ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಯೊಬ್ಬ ಕನ್ನಡಿಗನಿಂದ ಒಂದು ರೂ. ನಂತೆ ಹಣ ಸಂಗ್ರಹಿಸುವ ‘ಅಮೃತ ನಿಧಿ’ಯ ಕಾರ್ಯ ಕನ್ನಡಿಗನಿಂದ ಕೈಗೊಂಡಿದೆ. ಇದೊಂದು ಅತ್ಯಂತ ಯೋಗ್ಯವಾದ ಉಪಕ್ರಮವಾಗಿದೆ. ನಾಲ್ಕು ಕೋಟಿ ಕನ್ನಡಿಗರಿರುವ ಕರ್ನಾಟಕದಲ್ಲಿ ಕನಿಷ್ಠ ಒಂದು ಕೋಟಿ ರೂ. ಹಣ ಕೂಡಿದರೂ ಅದೆಷ್ಟೋ ಕಾರ್ಯ ಸುಗಮವಾಗಿ ಸಾಗುತ್ತದೆ. ಕನ್ನಡ ನಾಡಿನ ಸಾಹಿತ್ಯಕ ಸಾಂಸ್ಕೃತಿಕ ಸಾರ್ವಭೌಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯುತ್ತ ಸಂಸ್ಥೆಯಾಗಿ ಬೆಳೆದು ನಿಲ್ಲುವ ಆವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಾಗಿದೆ. ಅದು ಸರ್ಕಾರದ ಬಾಗಿಲಲ್ಲಿ ನಿಂತು ಹಣ ಯಾಚಿಸುವ ಪ್ರಸಂಗ ಬರಬಾರದು. ಯಾವುದೇ ಮುಲಾಜಿಲ್ಲದೆ ಪರಿಷತ್ತು ವರುಷದುದ್ದಕ್ಕೂ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತಹ ಸ್ಥಿತಿಯಲ್ಲಿರಬೇಕು. ಆದರೆ ಪರಿಷತ್ತಿನಂತಹ ಸಾಂಸ್ಕೃತಿಕ ಹಾಗೂ ಪ್ರಾತಿನಿಧಿಕ ಸಂಸ್ಥೆಗೆ ಉದಾರ ನೆರವು ನೀಡುವುದು ಸರ್ಕಾರದ ಕರ್ತವ್ಯವೂ ಹೌದೆಂಬುದನ್ನು ನಾವು ಮರೆಯುವಂತಿಲ್ಲ. ಆದುದರಿಂದ ಸಕಾರ ಇದಕ್ಕೆ ಒಂದು ಶಾಶ್ವತ ವ್ಯವಸ್ಥೆ ಮಾಡಬೇಕು. ಪ್ರತಿ ವರ್ಷ ಸರ್ಕಾರದ ಮಂಜೂರಾತಿಗಾಗಿಯೇ ಪರಿಷತ್ತು ಕಾಯುವಂತಾಗಬಾರದು. ಅಂತಾದರೆ ಕನ್ನಡದ ಸಂದರ್ಭದಲ್ಲಿ ಅದರ ಕೀರ್ತಿ ಚಿರಸ್ಥಾಯಿಯಾಗುತ್ತದೆ.

ದತ್ತಿನಿಧಿ ಯೋಜನೆ

ವರ್ಷದ ೩೬೫ ದಿನಗಳಲ್ಲಿ ಕರ್ನಾಟಕದ ಎಲ್ಲ ಹಳ್ಳಿ  ಪಟ್ಟಣಗಳಲ್ಲಿ ಒಂದಿಲ್ಲೊಂದು ಕಡೆ ಸಾಹಿತ್ಯಕ ಕಾರ್ಯಕ್ರಮ ನಡೆಯುವಂತೆ ದತ್ತಿ ಉಪನ್ಯಾಸಗಳನ್ನು ಇಡುವ ಪರಿಷತ್ತಿನ ಇನ್ನೊಂದು ಯೋಜನೆ ತುಂಬ ಒಳ್ಳೆಯದಾಗಿದೆ. ಪ್ರತಿ ತಾಲ್ಲೂಕಿಗೆ ಎರಡು ದತ್ತಿ ಉಪನ್ಯಾಸಗಳ ಲಾಭವಾಗಲಿದೆ. ಒಂದೊಂದು ದತ್ತಿ ಉಪನ್ಯಾಸಕ್ಕೆ ೧0,000 ರೂ. ಕೊಟ್ಟರೆ ಸಾಕು. ಅದರ ಬಡ್ತಿ ಬಡ್ಡಿಯ ಮೇಲಿಂದ ಶಾಶ್ವತವಾಗಿ ದತ್ತಿ ಉಪನ್ಯಾಸಗಳನ್ನು ಇಡಬೇಕೆನ್ನುವ ಪರಿಷತ್ತಿನ ಯೋಜನೆ ತುಂಬ ಚೆನ್ನಾಗಿದೆ.

ವಿವಿಧ ವಿಷಯಗಳ ಕುರಿತು ಜನಸಮುದಾಯಕ್ಕೆ ತಿಳುವಳಿಕೆ ಕೊಡುವ ನೂರಾರು ಪುಸ್ತಕಗಳನ್ನು ಪ್ರಕಟಿಸುವ ಪರಿಷತ್ತಿನ ಯೋಜನೆ ತುಂಬ ಸೂಕ್ತವಾಗಿದೆ. ಇಂದು ನಮ್ಮ ಜನರಲ್ಲಿ ಮನೆಮಾಡಿಕೊಂಡಿರುವ ಅಜ್ಞಾನವನ್ನು ಹೋಗಲಾಡಿಸಲು ಇಂಥ ಪುಸ್ತಕ ಪ್ರಕಟನೆಗಳಿಗಿಂತ ಬೇರೆ ಯಾವ ಉಪಾಯವೂ ಇಲ್ಲ.

ಶತಮಾನದ ಸಾಹಿತ್ಯ ಚರಿತ್ರೆ

ಆಧುನಿಕ ಕನ್ನಡ ಸಾಹಿತ್ಯಕ್ಕೆ ಈಗ ಕನಿಷ್ಠ ೧00 ವರ್ಷಗಳಾದವು ಅದಕ್ಕಾಗಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿಯೂ ಸಾಧನೆಯನ್ನು ಬಿಂಬಿಸುವ ಶತಮಾನದ ಸಾಹಿತ್ಯ ಚರಿತ್ರೆಯ ಸಂಪುಟಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು, ಕನ್ನಡ ವಿಶ್ವವಿದ್ಯಾಲಯಗಳು, ಸಂಯುಕ್ತವಾಗಿ ಪ್ರಕಟಿಸುವ ಯೋಜನೆ ಹಾಕಿಕೊಳ್ಳಬೇಕು.

ವಿಚಾರಸಂಕೀರ್ಣಗಳು

ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಇತರ ಸಾಂಸ್ಕೃತಿಕ ಕೇಂದ್ರಗಳಾದ ಮಂಗಳೂರು, ಧಾರವಾಡ, ಶಿವಮೊಗ್ಗ, ಚಿತ್ರದುರ್ಗಗಳಲ್ಲಿ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಸಾಹಿತ್ಯದ ವಿವಿಧ ಮಗ್ಗಲುಗಳ ಬಗ್ಗೆ ವಿಚಾರ ಸಂಕೀರ್ಣಗಳನ್ನು ಸಾಹಿತ್ಯ ಪರಿಷತ್ತು ಏರ್ಪಡಿಸಬೇಕು.

ಸಾಹಿತ್ಯ ವಿಮರ್ಶಾ ಚರಿತ್ರೆ ಗ್ರಂಥ ಬರಲಿ

ಸಾಹಿತ್ಯ ವಿಮರ್ಶೆ ಈಗ ಪ್ರಬುದ್ಧವಾಗಿ ಬೆಳೆದಿದೆ. ವಿಮರ್ಶೆಯ ಪರಿಕರಗಳನ್ನು ಸೂಕ್ಷ್ಮವಾಗಿ ಬಳಸುವ ವಿಮರ್ಶಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸಾಹಿತ್ಯ ವಿಮರ್ಶೆಯ ಸಾಧನೆಯ ಕುರಿತು ವಿಸ್ತೃತವಾದ ಚರಿತ್ರೆ ಬರೆಯಿಸಿ ಪ್ರಕಟಿಸುವ ಕಾಲ ಇದೀಗ ಸನ್ನಿಹಿತವಾಗಿದೆ.

ಅನುವಾದ ಸಂಯುಕ್ತ ಯೋಜನೆ

ಕನ್ನಡ ಸಾಹಿತ್ಯದ ಮೇರುಕೃತಿಗಳನ್ನು ಇಂಗ್ಲಿಷಿಗೆ ಹಾಗೂ ಇತರ ಭಾರತೀಯ ಭಾಷೆಗಳಿಗೆ ಅನುವಾದಿಸುವ ಒಂದು ಮಹಾಯೋಜನೆಯನ್ನು ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ರೂಪಿಸಬೇಕು.  ಹಾಗಾದಾಗ ಮಾತ್ರ ಕನ್ನಡ ಸಾಹಿತ್ಯದ ಶ್ರೇಷ್ಠತೆ ಎಲ್ಲ ಕಡೆಗೆ ಹರಡುತ್ತದೆ. ಅದರಂತೆ ವಿವಿಧ ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಜ್ಞಾನ ವಿಜ್ಞಾನ ಮಹತ್ವ ಗ್ರಂಥಗಳನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನೂ ಮಾಡಬೇಕು.  ವಿಚಾರ ಸಾಹಿತ್ಯದ ಸಂವರ್ಧನೆಗೆ ಹೆಚ್ಚಿನ ಒತ್ತು ಕೊಡಬೇಕು.

Tag: Simpi Linganna, Kannada Sahitya Sammelana 62

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)