ಸಾಹಿತ್ಯ ಸಮ್ಮೇಳನ-೬೪ : ಮುಧೋಳ
ಜೂನ್ ೧೯೯೫

ಅಧ್ಯಕ್ಷತೆ: ಹೆಚ್. ಎಲ್. ನಾಗೇಗೌಡ

೬೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಹೆಚ್. ಎಲ್. ನಾಗೇಗೌಡ

ಜಾನಪದ ವಿದ್ವಾಂಸ, ಕಾದಂಬರಿಕಾರ, ಅನುವಾದಕ, ದಕ್ಷ ಆಡಳಿತಗಾರ ಎನಿಸಿದ ಹೆಚ್.ಎಲ್. ನಾಗೇಗೌಡ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯಲ್ಲಿ ಲಿಂಗೇಗೌಡ-ಹುಚ್ಚಮ್ಮದೇವಿ ದಂಪತಿಗಳಿಗೆ ೭-೧೨-೧೯೧೫ರಲ್ಲಿ ಜನಿಸಿದರು. ನಾಗತಿಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಚೆನ್ನರಾಯಪಟ್ಟಣದಲ್ಲಿ ಲೋಯರ್ ಸೆಕೆಂಡರಿಯನ್ನು, ಬೆಂಗಳೂರಿನಲ್ಲಿ ಇಂಟರ್ ಡಿಯೇಟ್ ಪರೀಕ್ಷೆಯನ್ನು ಪಾಸು ಮಾಡಿದ ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.ಸ್ಸಿ ಪದವಿಯನ್ನೂ, ಪುನಾದಲ್ಲಿ ಎಲ್.ಎಲ್.ಬಿ. ಪದವಿಯನ್ನೂ ಪಡೆದರು.

೧೯೪0ರಲ್ಲಿ ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ೧೯೬0ರಲ್ಲಿ ಐ.ಎ.ಎಸ್ ಶ್ರೇಣಿಗೆ ಆಯ್ಕೆಯಾದರು. ೧೯೬೧ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ, ೧೯೬೩ರಲ್ಲಿ ಚಿಕ್ಕಮಗಳೂರಿನಲ್ಲಿ, ೧೯೬೫ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಪ್ಯೂಟಿ ಕಷನರ್ ಆಗಿ ಕೆಲಸ ಮಾಡಿದ ಇವರು, ೧೯೬೯ರಲ್ಲಿ ರಾಜ್ಯದ ಲೇಬರ್ ಕಷನರ್ ಆದರು. ೧೯೭೩ರಲ್ಲಿ ಲೋಕಸೇವಾ ಆಯೋಗದ ಸದಸ್ಯರಾದರು. ೧೯೭೮ರಲ್ಲಿ ನಿವೃತ್ತರಾದರು.

ಇವರು ಬೆಂಗಳೂರು ರಾಮನಗರದ ಬಳಿ ಜಾನಪದ ಲೋಕವೆಂಬ ಜಾನಪದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದ್ದಾರೆ. ‘ಜಾನಪದ ಜಗತ್ತು’ ಎಂಬ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನೂರಾರು ಜಾನಪದ ಮೇಳಗಳನ್ನು ಸಂಟಿಸಿ ನೂರಾರು ಜಾನಪದ ಕಲಾವಿದರಿಗೆ ಮಾಸಾಶನ, ಪ್ರಶಸ್ತಿ, ಗೌರವಧನ, ನೀಡಿದ್ದಾರೆ. ನೂರಾರು ಗಂಟೆಗಳ ಕಾಲ ಕೇಳುವಷ್ಟು ಪ್ರಮಾಣದ ಮೂಲ ಜಾನಪದ ಗಾಯಕರ ಧ್ವನಿಗಳನ್ನು ಮುದ್ರಿಸಿಕೊಂಡಿದ್ದಾರೆ. ಸುಮಾರು ೫0 ಗಂಟೆಗಳ ಕಾಲದಷ್ಟು ದೃಶ್ಯ ಚಿತ್ರೀಕರಣ(ವೀಡಿಯೋ) ಮಾಡಿದ್ದಾರೆ.

೧೯೯೫ರಲ್ಲಿ ಮುಧೋಳದಲ್ಲಿ ನಡೆದ ೬೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ನಾಗೇಗೌಡರ  ಜಾನಪದ ಸೇವೆಯನ್ನು, ಸಾಹಿತ್ಯ ಸೇವೆಯನ್ನು, ಪರಿಗಣಿಸಿ ನಾಡಿನ ನಾನಾ ಸಂಘ ಸಂಸ್ಥೆಗಳೂ ಮತ್ತು ಸರಕಾರವೂ ಸನ್ಮಾನ, ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿವೆ. ೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ೧೯೮೮ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ೧೯೯0ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ೧೯೯೨ರಲ್ಲಿ ಪಂಪ ಪ್ರಶಸ್ತಿ, ೨00೩ರಲ್ಲಿ ನಾಡೋಜ ಗೌರವ ಪ್ರಶಸ್ತಿ ಇವೇ ಮುಂತಾದ ಪ್ರಶಸ್ತಿಗಳು ದೊರಕಿವೆ.

ಇವರ ಅನೇಕ ಗ್ರಂಥಗಳು ಪ್ರಶಸ್ತಿ ಪಡೆದಿವೆ, ನಾಡಿನ ಜನರ ಮನ್ನಣೆಗೆ ಪಾತ್ರವಾಗಿವೆ. ಜಾನಪದತಜ್ಞರಾಗಿ, ಸಾಹಿತಿಗಳಾಗಿ ಇವರು ರಚಿಸಿರುವ ಕೆಲವು ಮುಖ್ಯ ಕೃತಿಗಳು ಹೀಗಿವೆ :

ಜಾನಪದ ಕೃತಿಗಳು : ಪದವವೆ ನಮ್ಮ ಎದೆಯಲ್ಲಿ, ಮೈಲಾರ ಲಿಂಗನ ಕಾವ್ಯ, ಹಾಡಾನ ಬನ್ನಿ ದನಿಯೆತ್ತಿ, ಆನೆ ಬಂತೊಂದಾನೆ, ಗಾದೆಗಳು, ಗ್ರಾಮದೇವತೆ ಮಾರಮ್ಮ, ಸೋಬಾನೆ ಚಿಕ್ಕಮ್ಮನ ಪದಗಳು, ಹೆಳವರು ಮತ್ತು ಅವರ ಕಾವ್ಯಗಳು ಇತ್ಯಾದಿ.

ಕಾದಂಬರಿಗಳು : ದೊಡ್ಡ ಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗಿಳಿದು ಬಂದ ಗಂಧರ್ವ, ಕೆನಿಲ್ವರ್ತ್

ಪ್ರವಾಸ ಸಾಹಿತ್ಯ :ಪ್ರವಾಸಿ ಕಂಡ ಇಂಡಿಯಾ ಎಂಬ ಹೆಸರಿನಲ್ಲಿ ಹತ್ತು ಸಂಪುಟಗಳಲ್ಲಿ ೨00ಕ್ಕೂ ಹೆಚ್ಚು ವಿದೇಶೀಯರು ಭಾರತದಲ್ಲಿ ಸಂಚರಿಸಿ ಬರೆದಿಟ್ಟ ಬರಹಗಳ ಅನುವಾದ.

ಕವನಸಂಕಲನ :ನಾನಾಗುವೆ ಗೀಜಗನ ಹಕ್ಕಿ, ಕಥೆವ್ಯಥೆ

ಇತರ ಗ್ರಂಥಗಳು : ಸರೋಜಿನಿದೇವಿ(ಜೀವನ ಚರಿತ್ರೆ), ವೆರಿಯರ್ ಎಲ್ವಿನ್ನರ ಗಿರಿಜನ ಪ್ರಪಂಚ(ಅನುವಾದ), ನಾಗಸಿರಿ(ಆತ್ಮ ಕಥೆ), ನನ್ನೂರು, ಬೆಟ್ಟದಿಂದ ಬಟ್ಟಲಿಗೆ.

ಎಚ್.ಎಲ್. ನಾಗೇಗೌಡರು ೨೫-೯-೨00೫ರಲ್ಲಿ ನಿಧನರಾದರು.

 

ಕನ್ನಡ ಸಾಹಿತ್ಯ ಸಮ್ಮೇಳನ೬೪

ಅಧ್ಯಕ್ಷರು, ಎಚ್.ಎಲ್. ನಾಗೇಗೌಡ

ದಿನಾಂಕ ೩, ,   ಜೂನ್ ೧೯೯೫

ಸ್ಥಳ : ಮುಧೋಳ

 

ಸಮ್ಮೇಳನಾಧ್ಯಕ್ಷರ ವಯೋಮಾನ

ಇಲ್ಲಿ ನಡೆಯುತ್ತಿರುವುದು ೬೪ನೇ ಸಾಹಿತ್ಯ ಸಮ್ಮೇಳನ ಇದಕ್ಕೆ ಮುಂಚೆ ೬೩ ಸಮ್ಮೇಳನಗಳು ಆಗಿಹೋಗಿವೆ. ೬೩ ಮಹಾನುಭಾವರುಗಳು ಹಿಂದಿನ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ. ಅವರಲ್ಲಿ ಕೇವಲ ಸಾಹಿತಿಗಳು, ಪಂಡಿತರುಗಳಷ್ಟೇ ಅಲ್ಲ. ನನ್ನಂಥವರೂ ಅಧ್ಯಕ್ಷರಾಗಿದ್ದರು. ೧೯೭೬ರಲ್ಲಿ ಶಿವಮೊಗ್ಗಾದಲ್ಲಿ ನಡೆದ ೪೯ನೆಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀ ಎಸ್.ವಿ. ರಂಗಣ್ಣವರು ತಮ್ಮ ಭಾಷಣದಲ್ಲಿ ಪೀಠಿಕೆಯಾಗಿ ಸಮ್ಮೇಳನದ ಅಧ್ಯಕ್ಷರುಗಳ ವಯಸ್ಸುಗಳ ಮಾಹಿತಿಯನ್ನು ಕೊಟ್ಟಿದ್ದಾರೆ. ೪೬ ಅಧ್ಯಕ್ಷರುಗಳಲ್ಲಿ ೩೪ ಮಂದಿಗೆ ವಯಸ್ಸು ೫0ರ ಮೇಲೆ, ೯ ಮಂದಿಗೆ ೬0ರ ಮೇಲೆ, ಮೂವರಲ್ಲಿ ಇಬ್ಬರಿಗೆ ೭0, ಇನ್ನೊಬ್ಬರಿಗೆ ೭೮, ೭೮ ವರ್ಷದವರೆಂದರೆ  ಮೈಸೂರಿನ ಎಂ. ವೆಂಕಟಕೃಷ್ಣಯ್ಯ ಉರುಫ್ ತಾತಯ್ಯನವರು. ರಂಗಣ್ಣನವರಿಗೂ ಅಧ್ಯಕ್ಷರಾದಾಗ ೭೮. ಅಲ್ಲಿಂದೀಚೆಗೆ ಅಧ್ಯಕ್ಷರಾದವರಲ್ಲಿ ೮0 ಮೀರಿದವರೆಂದರೆ ಡಾ|| ಶಂಬಾ ಜೋಶಿ ಮತ್ತು ಡಾ|| ಎ, ಎನ್. ಮೂರ್ತಿರಾವ್. ಈ ಇಬ್ಬರು ಮಹಾನುಭಾವರ ಪಂಕ್ತಿಗೆ ವಯಸ್ಸಿನಲ್ಲಾದರೂ ಸೇರಲಿ ಎಂದು ನನಗೆ ೮0 ಆಗುವುದಕ್ಕಾಗಿ ಕಾಯುತ್ತಿದ್ದಂತೆ ಕಾಣುತ್ತದೆ. ಅಷ್ಟೇ ಅಲ್ಲ, ಕಾಕತಾಳೀಯ ನ್ಯಾಯವೋ ಎಂಬಂತೆ ಸಾಹಿತ್ಯ ಪರಿಷತ್ತಿಗೆ ೮0 ಆದ ವರ್ಷ ನಾನು ಸಮ್ಮೇಳನದ ಅಧ್ಯಕ್ಷನಾಗಬೇಕೆ! ವಾಸ್ತವವಾಗಿ ನಾನು ಸಾಹಿತ್ಯ ಪರಿಷತ್ತಿಗಿಂತ ಮೂರು ತಿಂಗಳು ಹಿರಿಯ.

ಸಮ್ಮೇಳನಾಧ್ಯಕ್ಷರ ನಾಲ್ಕು ಮಾತುಗಳು

ಇನ್ನೊಂದು ವೈಚಿತ್ರವನ್ನು ರಂಗಣ್ಣನವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅದೇನೆಂದರೆ ಅಧ್ಯಕ್ಷ ಭಾಷಣಗಳಲ್ಲಿ ಪಲ್ಲವಿಯೋಪಾದಿ ಪುನಃ ಪುನಃ ಕೇಳಿಬರುವ ‘ಅಲ್ಪಮತಿ ನಾನು, ಹೊರಿಸಿರುವ ಜವಾಬ್ದಾರಿ ಗುರುಭಾರ. ಅನರ್ಹನನ್ನು ಒಲುಮೆಯಿಂದ ಮನ್ನಿಸಿ’ ಎಂಬ ಮಾತುಗಳು.

Tag: Kannada Sahitya Sammelana 64, H.L. Nagegowda

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)