ಸಾಹಿತ್ಯ ಸಮ್ಮೇಳನ-೬೬ : ಮಂಗಳೂರು
ಡಿಸೆಂಬರ್ ೧೯೯೭

ಅಧ್ಯಕ್ಷತೆ: ಕಯ್ಯಾರ ಕಿಞ್ಞಣ್ಣ ರೈ

೬೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕಯ್ಯಾರ ಕಿಞ್ಞಣ್ಣ ರೈ

ಗಡಿನಾಡಿನಲ್ಲಿ ಕನ್ನಡದ ದನಿಯಾಗಿ, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಸತತವಾಗಿ ಹೋರಾಟ ನಡೆಸಿದ ಶಿಕ್ಷಕ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ಮುಂದಾಳು, ಶತಾಯುಷಿ ಕಯ್ಯಾರ ಕಿಞ್ಞಣ್ಣರೈ ಅವರು ಕಾಸರಗೋಡು ತಾಲ್ಲೂಕಿನ ಪೆರಡಾಲದಲ್ಲಿ ದುಗ್ಗಪ್ಪ ರೈ ಮತ್ತು ಶ್ರೀಮತಿ ಕಯ್ಯಾರ ಯ್ಯ ರೈ ದಂಪತಿಗಳ ಮಗನಾಗಿ ೮-೬-೧೯೧೫ರಲ್ಲಿ ಜನಿಸಿದರು. ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂತ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದರು. ಅನಂತರ ಕನ್ನಡ ಮತ್ತು ಸಂಸ್ಕೃತಗಳಲ್ಲಿ ವಿದ್ವಾನ್ ಪದವಿ ಗಳಿಸಿದರು. ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ೩೨ ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. ಶಿಕ್ಷಕರಾಗಿದ್ದಾಲೇ ಬಿ.ಎ. ಪದವಿಯನ್ನು, ಅಧ್ಯಾಪಕ ತರಬೇತಿಯನ್ನು ಪಡೆದರು. ಸ್ವಾತಂತ್ರ್ಯ ಸಂಗ್ರಾಮದ ಕಾಲಟ್ಟದಲ್ಲಿ ಪತ್ರಿಕೋದ್ಯಮಿಯಾಗಿ ಮಂಗಳೂರಿನ ಪ್ರಸಿದ್ಧ ಪತ್ರಿಕಾ ಕಚೇರಿಯಲ್ಲಿ ಬರವಣಿಗೆಗೆ ತೊಡಗಿದ್ದ ಇವರು ರಾತ್ರಿವೇಳೆ ಸ್ವಾತಂತ್ರ್ಯ ಹೋರಾಟಗಾರರಾಗಿ ಸಾಹಿತ್ಯ ಒದಗಿಸುತ್ತಿದ್ದರು. ಗಾಂಧೀಜಿಯ ಕರೆಗೆ ಓಗೊಟ್ಟು ತಮ್ಮ ಜಮೀನಿನಲ್ಲಿ ಕೃಷಿಕರಾಗಿ ಕಾಯಕ ಮಾಡುತ್ತಿದ್ದರು. ೧೯೮೬-೮೭ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಕಯ್ಯಾರರ ಸಾಹಿತ್ಯ ಸೇವೆ, ಕೃಷಿ ಕಾಯಕ. ಸ್ವಾತಂತ್ರ್ಯ ಹೋರಾಟ ಸಾಮಾಜಿಕ ಸೇವೆಯನ್ನು ಗೌರವಿಸಿ ಹಲವಾರು ಪ್ರಶಸ್ತಿ ಗೌರವಗಳನ್ನು ಅವರಿಗೆ ಸಂಘ-ಸಂಸ್ಥೆಗಳು, ಸರಕಾರ ನೀಡಿವೆ. ೧೯೬೯ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, ೧೯೬೯-೭0ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೫ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಫೆಲೋಷಿಪ್, ಬೆಂಗಳೂರಿನ ಕನ್ನಡ ಸಂಘಗಳ ಸನ್ಮಾನ. ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ. ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ೧೯೯೭ರಲ್ಲಿ ನಡೆದಾಗ ಅದರ ಅಧ್ಯಕ್ಷತೆ, ೧೯೬೯ರಲ್ಲಿ ಅಖಿಲ ಭಾರತ ತುಳು ಸಮ್ಮೇಳನದ ಸನ್ಮಾನ ಇವರಿಗೆ ಲಭಿಸಿದೆ. ೨0೧೩ರಲ್ಲಿ ಪಂಪ ಪ್ರಶಸ್ತಿಯನ್ನು ಸರಕಾರ ಇವರಿಗೆ ನೀಡಿತು.

ದೇಶಪ್ರೇಮಿ, ಖಾದಿಧಾರಿ, ಕೃಷಿಕ, ಅಧ್ಯಾಪಕ, ಸಾಹಿತಿ, ಹೋರಾಟಗಾರ ಕಯ್ಯಾರ ಕಿಞ್ಞಣ್ಣರೈ ಅವರು ನಾನಾ ಬಗೆಯ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅವರ ಮುಖ್ಯವಾದ ಕೆಲವು ಕೃತಿಗಳು ಹೀಗಿವೆ :

ಕವನಸಂಕಲನಗಳು: ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಪಂಚಮಿ, ಶತಮಾನದ ಗಾನ, ಪ್ರತಿಭಾ ಪಯಾಸ್ವಿನಿ, ಗಂಧವತೀ ಇತ್ಯಾದಿ.

ತುಳು ಭಾಷೆಯ ಎನ್ನಪ್ಪೆ ತುಳುವಪ್ಪೆ ಕವನಸಂಕಲನ.

ಅನುವಾದಗಳು :ಕುಮಾರನ್ ಆಶಾನ್ ಅವರ ಖಂಡಕಾವ್ಯ ಅನುವಾದ, ಮಲೆಯಾಳಂ ಸಾಹಿತ್ಯ ಚರಿತ್ರೆಯ ಅನುವಾದ.

ಕಥಾಸಂಗ್ರಹಗಳು :ಲಕ್ಷ್ಮೀಶನ ಲಲಿತ ಕಥೆಗಳು, ಅನ್ನದೇವರು ಮತ್ತು ಇತರ ಕಗಳು.

ಜೀವನಚರಿತ್ರೆಗಳು : ಪರಶುರಾಮ, ಎಬಿಶೆಟ್ಟಿ, ಕಾರ್ನಾಡು ಸದಾಶಿವರಾಮ್, ನಾರಾಯಣ ಕಿಲ್ಲೆ ಸಾಹಿತ್ಯ ಸಾಧನೆ.

ಪದ್ಯಗಳು : ಕನ್ನಡಪಾಠ ಮಾಲೆ ೮ ಭಾಗಗಳು, ಮಕ್ಕಳ ಪದ್ಯ ಮಂಜರಿ ಭಾಗ ೧, ವ್ಯಾಕರಣ ಮತ್ತು ಪ್ರಬಂಧ ಕುರಿತು ೪ ಕೃತಿಗಳು.

ಆತ್ಮಕಥನ : ದುಡಿತವೇ ನನ್ನ ದೇವರು, ನಾಟಕ : ವಿರಾಗಿಣಿ ಇತ್ಯಾದಿ.

ಶತಾಯುಷಿಗಳಾಗಿ  ಬಾಳಿ  ಮಹತ್ಸಾಧನೆ  ಮಾಡಿದ ಕಯ್ಯಾರ ಕಿಞ್ಞಣ್ಣ ರೈ ಅವರು ಆಗಸ್ಟ್ ೯, ೨0೧೫ರಂದು  ಈ ಲೋಕವನ್ನಗಲಿದರು.

ಕನ್ನಡ ಸಾಹಿತ್ಯ ಸಮ್ಮೇಳನ೬೬

ಅಧ್ಯಕ್ಷರು, ಕಯ್ಯಾರ ಕಿಞ್ಞಣ್ಣ ರೈ

ದಿನಾಂಕ ೧೧, ೧೨, ೧೩, ೧೪ ಡಿಸೆಂಬರ್ ೧೯೯೭

ಸ್ಥಳ : ಮಂಗಳೂರು

 

ಅಖಿಲ ಭಾರತ ವ್ಯಾಪ್ತಿಯ ಸಮ್ಮೇಳನ

ಜಗತ್ತಿನ ಸಕಲ ಭಾಷೆಗಳ ಉತ್ಪತ್ತಿಯೂ ನಿಸರ್ಗ ಸಹಜ ಸ್ಪೂರ್ತಿಯಿಂದ ಒಂದೇ ತೆರನ ನಿಯಮದಂತೆ, ಭಾವನೆಗಳ ಭಿನ್ನತೆಗೆ ಅನುಗುಣವಾಗಿ ಆಗಿದೆ ಎಂದು ತಿಳಿದುಕೊಂಡಲ್ಲಿ, ವಿಶ್ವಮಾನವ್ಯ ವಿಶಾಲ ಸಂಸ್ಕೃತಿ ನಮ್ಮಲ್ಲಿ ಉಂಟಾಗುವುದು: ವಾಗ್ದೇವಿ ‘ಸರ್ವಭಾಷಾಮಯಿದೇವಿ’ ಎಂಬ ಕನ್ನಡ ವೈಯಾಕರಣಿಯ ವಾಣಿ ಉತ್ತಮ ಆದರ್ಶ ತೋರುವ ಮಂತ್ರವಾಣಿಯಂತಿದೆ. ಈ ಮಹಾ ಸಮ್ಮೇಳನ, ಅಖಿಲ ಭಾರತ ವ್ಯಾಪ್ತಿಯದ್ದಾಗಿದ್ದು. ದೇಶ ವಿದೇಶಗಳಿಂದಲೂ ಧೀಮಂತರು ಆಗಮಿಸಿದ್ದೀರಿ ಎಂಬುದರಿಂದ ನಿಮ್ಮೆಲ್ಲರ ಉದಾರ ಅವಗಾಹನೆಗಾಗಿ ಪ್ರಾರಂಭದಲ್ಲಿ ಈ ಪ್ರಸ್ತಾವನೆಯನ್ನು ಮಾಡಲಾಗಿದೆ. ‘ಮನುಷ್ಯಜಾತಿ ತಾನೊಂದು ವಲಂ’ ಎಂಬ ಆದಿಕವಿ ಪಂಪನ ಸೂಕ್ತಿಗೂ ಈ ವಿಚಾರಧಾರೆ ಅನ್ವಯಿಸುತ್ತದೆ.

ಪುಸ್ತಕಕೊಳ್ಳುವ ಸಂಸ್ಕೃತಿ ಬೆಳೆಸೋಣ

ಈ  ಸಮಸ್ಯೆಯನ್ನು ಕನ್ನಡ ಹಿತಚಿಂತಕರು ರಚನಾತ್ಮಕ ರೀತಿಯಲ್ಲಿ  ಪರಿಹರಿಸಬೇಕು.  ಈ ಬಗ್ಗೆ ಒಂದು ಸಲಹೆ ತಮ್ಮೆಲರ ಮುಂದಿಡಲು ಅನುಮತಿ ಯಾಚಿಸುತ್ತೇನೆ.

ಕೇರಳದಲ್ಲಿ ಕಾರ್ಮಿಕರೆಂಬವರೂ ದಿನನಿತ್ಯ  ಪತ್ರಿಕೆ ಕೊಂಡು ಓದುತ್ತಾರೆ: ಹೊಸ ಪುಸ್ತಕಗಳು ಪ್ರಕಟವಾದಾಗ ಪಡೆದು ಓದುವುದು ಅವರ ನಿತ್ಯದ ಅಭ್ಯಾಸಗಳಲ್ಲಿ ಒಂದು. ಕನ್ನಡಿಗರೂ ಪತ್ರಿಕೆಗಳನ್ನು ಪುಸ್ತಕಗಳನ್ನೂ ಓದುತ್ತಾರೆ. ವಾಚನಾಲಯಗಳಿಂದಲೋ ಪುಸ್ತಕ ಭಂಡಾರಗಳಿಂದಲೋ ಓದುವವರು ಹೆಚ್ಚು. ಇನ್ನು ಕೆಲವರು, ಸ್ವತಃ ಕೊಂಡು ಓದಲು ಶಕ್ತರಿದ್ದರೂ ಬೇರೆಯವರಿಂದ ಕೇಳಿ ಪಡೆದು ಓದಿ ಮರಳಿಸುತ್ತಾರೆ. ಈ ಪ್ರವೃತ್ತಿ ನಿಲ್ಲಬೇಕು: ಅದಕ್ಕೆ ಒಂದು ಸೂಚನೆಯೆಂದರೆ, ಪ್ರತಿಮನೆಯಲ್ಲೂ ಅವರವರ ಅಭಿರುಚಿಗೆ ತಕ್ಕಂತಹ ವಿಷಯಗಳ ಕನ್ನಡ ಪುಸ್ತಕಗಳನ್ನು ಪಡೆದು ಒಂದೊಂದು ಪುಸ್ತಕಭಂಡಾರ ಪ್ರಾರಂಭಿಸಬೇಕು. ಒಂದೊಂದು ಕನ್ನಡ ದೈನಿಕ, ವಾರಿಕ, ಪಾಕ್ಷಿಕ, ಮಾಸಿಕಗಳನ್ನಾದರೂ ಪ್ರತಿಮನೆಗೂ ತರಿಸಬೇಕು. ಸಾಕಷ್ಟು ಮಂದಿ ಶ್ರೀಮಂತರೂ ಧೀಮಂತರೂ ಇದ್ದಾರೆ. ಈ ರಚನಾತ್ಮಕ ಸಾಹಿತ್ಯಿಕ ಆಂದೋಲನವನ್ನು ಇಂದು ಕೈಗೊಳ್ಳತಕ್ಕದ್ದಿದೆ. ಅದರಿಂದ ಕನ್ನಡಿಗರ ಜ್ಞಾನ ಭಂಡಾರ, ಸಂಸ್ಕೃತಿ ಸಂಪತ್ತು ಹೆಚ್ಚುವುದಲ್ಲದೆ ಇಡೀ ಕುಟುಂಬದ ಸಂಸ್ಕೃತಿ  ಸಮುನ್ನತಿಯೂ ಸಾಧಿತವಾಗುವುದು. ಇಂತಹ ಒಂದು ಜನಾಂದೋಲನ ಈ ಸಮ್ಮೇಳನದ ಸುಮೂಹರ್ತ ಕಾಲದಿಂದಲೆ ಪ್ರಾರಂಭವಾಗಲಿ. ಸಮ್ಮೇಳನ ಸಭಾಮಂಟಪದ ಸುತ್ತ ಶೋಭಿಸುತ್ತಿರುವ ಪುಸ್ತಕ ಮಾರಾಟದ ಮಳಿಗೆಗಳಲ್ಲಿರುವ ಉತ್ತಮ ಗ್ರಂಥಗಳೆಲ್ಲವೂ ಮಾರಾಟವಾಗುವ ಚಾರಿತ್ರಿಕ ದಾಖಲೆ ಇಲ್ಲಿಂದಲೇ ತೊಡಗಲಿ ಎಂದೂ ಅರಿಕೆಮಾಡಿಕೊಳ್ಳುತ್ತೇನೆ. ಇದು ಪರೋಪಕಾರ ತ್ಯಾಗವಲ್ಲ; ಆಶೋದ್ಧಾರ, ಕುಟುಂಬ, ಸಂತಾನದ ಏಳಿಗೆಯ ಮಾರ್ಗ. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದೊಡನೆಯೂ ನನ್ನ ವಿನಂತಿಯೊಂದಿದೆ; ಕನ್ನಡದಲ್ಲಿ ಪ್ರಕಟವಾಗುವ ಉತ್ತಮ ಸಾಹಿತ್ಯ ಕೃತಿಗಳನ್ನು ರಾಜ್ಯದ ಎಲ್ಲ ಪುಸ್ತಕ ಭಂಡಾರಗಳಿಗೂ ಸರಕಾರ ಒದಗಿಸುವ ವ್ಯವಸ್ಥಿತ ಕಾರ್ಯಕ್ರಮ ಕೈಗೊಳ್ಳಬೇಕು. ನನ್ನ ಸೂಚನೆಗಳು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತ್ಯಕ್ಷವಾಗಿಯೇ ಸಂಬಂಧಿಸಿದವುಗಳಾದುದರಿಂದ ಸಮಸ್ತರೂ ಸಂಪೂರ್ಣ ಮನಸ್ಸಿನಿಂದ ಸಹಕರಿಸುವಂತಾಗಲೂ ಒಂದು ನೈತಿಕ ಅಂದೋಲನ ಪ್ರಾರಂಭಿಸತಕ್ಕದಿದೆ. ಅದರ ಯಶಸ್ಸಿಗೆ ಇಂದು ಇಲ್ಲಿಯೇ ಪ್ರತಿಜ್ಞಾಬದ್ಧರಾಗಿ ನಾಡು-ನುಡಿಗಳ ಏಳಿಗೆಯ ಪವಿತ್ರಕಾರ್ಯದಲ್ಲಿ ಪಾಲ್ಗೊಳ್ಳೋಣ ಎಂದು ಪ್ರಾರ್ಥಿಸುತ್ತೇನೆ.

ಕಾಸರಗೋಡು ಸಮ್ಮೇಳನ

ಶತಮಾನಗಳ ತನಕವೂ ದಾಸ್ಯದ ಕೆಸರಲ್ಲಿ ಅದ್ದಿ ಹೋಗಿದ್ದ ನಮ್ಮ ರಾಷ್ಟ್ರ ಗಾಂಧೀಜಿಯಂತಹವರ ನೇತೃತ್ವದಲ್ಲಿ ಸ್ವತಂತ್ರವಾಯಿತು. ಸ್ವಾತಂತ್ರ್ಯ ಸಂಗ್ರಾಮದ ಆ ಸಂದರ್ಭದಲ್ಲಿಯೇ ಭಾಷಾಮೂಲವಾದ ರಾಜ್ಯರಚನೆಯಾಗಬೇಕೆಂಬ ಸಂಕಲ್ಪದಿಂದ ರಚಿಸಿದ  ಸಮಿತಿ ಅನುಕೂಲ ವರದಿಯೊಪ್ಪಿಸಿತು. ಆಡಳಿತಭಾಷೆ, ಕೋರ್ಟು ಕಚೇರಿಗಳ ವ್ಯವಹಾರ, ಸಾಮಾನ್ಯ ಜನತೆಗೂ ಮನದಟ್ಟಾಗುವಂತೆ ಆಗಬೇಕೆಂಬುದು ಆ ಬಗ್ಗೆ ಭಾಷಾ ರಾಜ್ಯವಾಗಬೇಕೆಂದು ದೇಶಧುರೀಣರು ನಿರ್ಧರಿಸಿದರು. ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರರಾಯರು, ರಂಗನಾಥ ದಿವಾಕರರು, ಕೋಟ ರಾಮಕೃಷ್ಣ ಕಾರಂತರು, ಜಿನರಾಜ ಹೆಗ್ಗಡೆಯವರು, ನಿಜಲಿಂಗಪ್ಪನವರು ಇಂತಹ ರಾಷ್ಟ್ರನಾಯಕರೇ ಏಕೀಕರಣದ ಮುಂದಾಳುಗಳೂ ಆದರು. ಇಂದಿಗೆ ಐವತ್ತು ವರ್ಷಗಳ ಹಿಂದೆ ದೇಶ ಸ್ವತಂತ್ರವಾಯಿತು. ದೇಶಧುರೀಣರು ಸಮ್ಮತಿಸಿದಂತೆ ಭಾಷಾರಾಜ್ಯ ರಚನೆಯಾಗಲಿಲ್ಲವೆಂದು ಆಂಧ್ರದ ಪೊಟ್ಟಿ ಶ್ರೀರಾಮಲು ಆತ್ಮಬಲಿದಾನವಿತ್ತರು. ಅದರಿಂದಾಗಿ, ಆ ಕೂಡಲೇ ಆಂಧ್ರಪ್ರಾಂತ ನಿರ್ಮಾಣವಾಯಿತು. ಅದೇ ವರ್ಷ ಕಾಸರಗೋಡಿನಲ್ಲೇ ಸೇರಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ಹಿರಿಯ ನೇಕಾರರೆಲ್ಲರೂ ಏಕಕಂಠದಿಂದ ಏಕೀಕರಣ ಆಗಲೇಬೇಕೆಂಬ ಘೋಷಣೆ ಮಾಡಿದರು. ಕೇಂದ್ರ ಸರಕಾರ, ಫಜಲಾಲಿ ಆಯೋಗ ನೇಮಿಸಿ, ಅದರ ವರದಿಯಂತೆ ಸಮಸ್ತ ಭಾರತದಲ್ಲಿ ಭಾಷಾ ಮೂಲ ರಾಜ್ಯಗಳ ರಚಿತವಾದವು;  ಹತ್ತಾರು ಆಡಳಿತಗಳಲ್ಲಿ ಹರಿದುಹಂಚಿ ಹೋಗಿದ್ದ ಕರ್ನಾಟಕವೂ ಏಕೀಕೃತವಾಗಿ ಜನತೆಯ ಇಚ್ಛೆಗೆ ಮನ್ನಣೆ ದೊರೆತಂತಾಯಿತು.

ಕರ್ನಾಟಕದ ಹೊರಗೆ ಘಟಕಗಳಾಗಲಿ

ಸ್ವಾತಂತ್ರ್ತವು ದೊರೆತು ಏಕೀಕರಣವಾದ ಈ ಅವಕಾಶದಲ್ಲಿ ಯಾವುದೇ ದೌರ್ಬಲ್ಯವನ್ನು ಕಿತ್ತೊಗೆವ ಸಾಮರ್ಥ್ಯ ಕನ್ನಡಿಗರಲ್ಲಿ ಮೂಡಿಬರಬಹುದು ಎಂದು ನಾನು ಭರವಸೆಯುಳ್ಳವನು. ‘ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪಕಲಿಗೆ ಕಲಿಯುಗ ವೀಪರಿತನ್’ ಎಂಬ ಕನ್ನಡಿಗನ ಕುರಿತಾದ ಪ್ರಾಚೀನ ಶಾಸನ ಉಲ್ಲೇಖದಂತೆ, ಕನ್ನಡಿಗರು ಜನ್ಮತಃ ಕೆಲವೊಂದು ಆರ್ಹತೆಯುಳ್ಳವರು. ಇಂದು ಮುಂಬಯಿ, ಚೆನ್ನೈ, ದೆಹಲಿ ಇಂತಹ ಕೇಂದ್ರ ನಗರಗಳಲ್ಲಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಕನ್ನಡದ ಕೀರ್ತಿಯನ್ನು ಎತ್ತಿಹಿಡಿಯುತ್ತಿದ್ದಾರೆ. ಅಲ್ಲಿನ ಅನ್ಯಭಾಷಿಕರೊಂದಿಗೆ ಸಮರಸವಾಗಿ ಬೆರೆತು ಕನ್ನಡತನ ಬೆಳೆಸಿಕೊಳ್ಳುತ್ತಿರುವುದು ಅಭಿನಂದನೀಯ. ಮುಂಬಯಿಗೆ ಹೋದಲ್ಲಿ ನಾವು ಕರ್ನಾಟಕ ರಾಜ್ಯದ ಒಂದು ನಗರಕ್ಕೆ ಹೋದಂತೆಯೂ ನಮಗನ್ನಿಸುತ್ತದೆ. ಅಷ್ಟು ಮಂದಿ ಕನ್ನಡಿಗರು, ಕನ್ನಡ ಸಂಸ್ಥೆಗಳು, ಪತ್ರಿಕೆಗಳೆಲ್ಲವೂ ಅಲ್ಲಿವೆ. ಅಲ್ಲಿ ಕನ್ನಡವನ್ನು ಅಭಿಮಾನದಿಂದ ಅಭ್ಯಸಿಸುತ್ತಿದ್ದಾರೆ. ಕನ್ನಡ ವಿದ್ವಾಂಸರು, ಕವಿಗಳು, ಕತೆಗಾರರು, ಲೇಖಕರು ಬಹುಮಂದಿ ಅಲ್ಲಿರುವರು. ಹೊರರಾಜ್ಯಗಳಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಕನ್ನಡ ಸಂಘ ಸಂಸ್ಥೆಗಳು ಚಟುವಟಿಕೆ ನಡೆಸುತ್ತಿವೆ. ಹೀಗೆ ದೇಶ ವಿದೇಶಗಳಲ್ಲಿ ಕನ್ನಡ ಬಾವುಟವನ್ನು ಎತ್ತಿ ಹಿಡಿದಿರುವ ಕನ್ನಡಿಗರನ್ನು ನಾವು ಮನಸಾರೆ ಅಭಿನಂದಿಸಬೇಕು. ಕರ್ಣಾಟಕ ಸರ್ಕಾರವೂ ಅವರನ್ನು ಪ್ರೋತ್ಸಾಹಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅಲ್ಲೆಲ್ಲಾ ಸದಸ್ಯರನ್ನು ನೋಂದಾಯಿಸುವುದಲ್ಲದೆ ವಿಶೇಷ ಘಟಕಗಳನ್ನು ಸ್ಥಾಪಿಸುವ ಮೂಲಕವೂ ಸಂಪರ್ಕ ಸಂವರ್ಧನೆ ಮಾಡತಕ್ಕದ್ದು ಅತ್ಯಗತ್ಯ.

ಪರಿಷತ್ತಿನ ಬೆಳವಣಿಗೆ

ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಮಹಾರಾಜರ ಕೃಪಾಶ್ರಯದಿಂದ ಪ್ರಾರಂಭವಾಗಿ ಮುಂದೆ ಸಮಸ್ತ ಕನ್ನಡಿಗರ ಮನ್ನಣೆಗೂ ಪಾತ್ರವಾಯಿತೆಂಬುದು ಅಭಿನಂದನೀಯ. ಬೆಂಗಳೂರು ಮಾತ್ರ ಕೇಂದ್ರವಾಗಿ ಸಾಹಿತ್ಯಿಕ ಚಟುವಟಿಕೆಗಳು ಪ್ರಾರಂಭದಲ್ಲಿ ನಡೆಯುತ್ತಿದ್ದರೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ಷೇತ್ರ ಮತ್ತೆ ನಾಡಿನಾದ್ಯಂತ ವಿಸ್ತಾರಗೊಂಡಿತು. ಆ ಕಾಲದಲ್ಲಿಯೇ ಭಿನ್ನ ಭಿನ್ನ ಆಡಳಿತಗಳಿಗೆ ಸೇರಿದ ಕನ್ನಡದ ಜಿಲ್ಲೆ ಜಿಲ್ಲೆಗಳಲ್ಲೂ ಶಾಖೆಗಳನ್ನು ತೆರೆದು ಸಾಹಿತ್ಯ ಕಾರ್ಯಕ್ರಮಗಳನ್ನು ಪರಿಷತ್ತು ವಿಸ್ತರಿಸಿದ್ದಲ್ಲದೆ ಈಚೆಗೆ ತಾಲ್ಲೂಕು ಮಟ್ಟದಲ್ಲಿಯೂ ಶಾಖೋಪಶಾಖೆಗಳನ್ನು ಸ್ಥಾಪಿಸುತ್ತಾ ಬಂದಿರುವುದು ನಿಜವಾಗಿಯೂ ಉತ್ತಮ ಕಾರ್ಯ. ಅಖಿಲ ಭಾರತ ಸಮ್ಮೇಳಗಳನ್ನು ವಿಜೃಂಭಣೆಯಿಂದ ಜರುಗಿಸುತ್ತಿರುವಂತೆ ಜಿಲ್ಲಾ ತಾಲ್ಲೂಕು ಮಟ್ಟಗಳಲ್ಲಿಯೂ ಸಾಹಿತ್ಯ ಸಮ್ಮೇಳನಗಳು ಇಂದು ಜರುಗುತ್ತಿವೆ. ಈ ಸ್ತುತ್ಯಕಾರ್ಯ ಗ್ರಾಮ, ಗ್ರಾಮಗಳಿಗೂ ಪಸರಿಸಬೇಕು. ನಮ್ಮ ದೇಶಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲದರ ಭದ್ರವಾದ ತಳಹದಿ ಗ್ರಾಮಗಳಲ್ಲಿಯೂ ವ್ಯವಸ್ಥಿತವಾಗಿ ಸ್ಥಾಪಿತವಾಗುವುದೇ ಸರಿಯಾದ ಸಾಹಿತ್ಯ ಸಂಸ್ಕೃತಿಗಳ ಜನಸಂಪರ್ಕ ಕಾರ್ಯವಾಗಿದೆ. ಈ ಮಹತ್ಕಾರ್ಯ ವ್ಯವಸ್ಥಿತವಾಗಿ ಜರುಗಿ ಹಳ್ಳಿಯಿಂದ ಡಿಲ್ಲಿಯ ತನಕ ವಿಸ್ತರಿಸುತ್ತಾ  ಹೋಗಬೇಕೆಂದು ನಾವೆಲ್ಲರೂ ಪ್ರಯತ್ನಿಸೋಣ.

ವಿದ್ಯಾವರ್ಧಕ ಸ್ಥಾಪನೆ ನೆರವು

ಕನ್ನಡ ಸಾಹಿತ್ಯ ಪರಿಷತ್ತಿನ ಈ ಬೆಳವಣಿಗೆಯನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಕನ್ನಡನಾಡು ನುಡಿಗಳ ಅಭಿವೃದ್ಧಿಗಾಗಿ ಪರಿಷತ್ತಿಗಿಂತಲೂ ಹಿಂದೆಯೇ ಸ್ಥಾಪಿತವಾಗಿ, ಕನ್ನಡದ ಉತ್ತಮ ಕಾರ್ಯಗಳನ್ನು ಅಂದಿನಿಂದ ಇಂದಿನವರೆಗೂ ಮಾಡುತ್ತ ಬರುತ್ತಿರುವ ಧಾರವಾಡದ ವಿದ್ಯಾವರ್ಧಕ ಸಂಘದ ಸಾಧನೆಗಳನ್ನೂ ಕೊಂಡಾಡಲೇಬೇಕಾಗಿದೆ. ಕನ್ನಡದ ಶ್ರೇಷ್ಠಕವಿ ಸಾಹಿತಿಗಳು, ಏಕೀಕರಣದ ಅಗ್ರಗಣ್ಯ ನೇತಾರರು ಅನೇಕರು ಈ ಮಹಾಸಂಸ್ಥೆಯಲ್ಲಿ ದುಡಿದಿದ್ದಾರೆ. ಇಂದಿಗೂ ಹಲವರು ಧುರೀಣರು ದುಡಿಯುತ್ತ ಇದ್ದು ನಾಡುನುಡಿಗಳ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಧಾರವಾಡದ ವಿದ್ಯಾವರ್ಧಕ ಸಂಘ, ಸಾಹಿತ್ಯ ಪರಿಷತ್ತಿಗಿಂತ ಪ್ರಾಚೀನ ಸಂಸ್ಥೆಯಾದರೂ ತನ್ನ ವೈಯಕ್ತಿಕ ಘನತೆ ಯೋಗ್ಯತೆಗಳನ್ನು ಉಳಿಸಿಕೊಂಡೇ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗಳಿಗೆ ಸಂಪೂರ್ಣ ಸಹಕರಿಸುತ್ತಾ ಬಂದಿರುವುದು ಅಭಿನಂದನೀಯ. ವಿದ್ಯಾವರ್ಧಕ ಸಂಘದ ಈ ಉತ್ತಮ ಸಹಕಾರವನ್ನು ಕೊಂಡಾಡುವುದೂ ಮಾತ್ರವಲ್ಲ ಆ ಸಂಸ್ಥೆಯು ಇತ್ಯೋಪತಿಶಯ ಸಾಧನೆಗಳನ್ನು ಮಾಡಿ ಕನ್ನಡಿಗರೆಲ್ಲರ ಅಭಿಮಾನದ ಸಂಸ್ಥೆಯಾಗಿ ಚಿರಕಾಲ ಪ್ರಗತಿಪಥದಲ್ಲಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ.

ಸಮ್ಮೇಳನಗಳ ವಿಷಯಗಳ ವ್ಯಾಪ್ತಿ

ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಕಲೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ವಿವಿಧ ಗೋಷ್ಠಿಗಳು ಏರ್ಪಡಿಸಲಾಗುತ್ತಿದೆ. ಈ ಗೋಷ್ಠಿಗಳಲ್ಲಿ ಅಖಿಲ ಭಾರತ, ಅಖಿಲ ಕರ್ನಾಟಕ ಹಾಗೂ ಸಮ್ಮೇಳನ ಜರಗುವ ಪ್ರದೇಶಗಳಿಗೆ ಸಂಬಂಧಿಸಿದ ವಿಷಯ ವಿಚಾರಗಳಿರಬೇಕು.  ಐತಿಹಾಸಿಕ, ಧಾರ್ಮಿಕ, ಸಾಹಿತ್ಯಿಕ ಸಾಮಾಜಿಕ ವಿಷಯಗಳು ಹಿಂದಿನಿಂದ ಇಂದಿನ ತನಕವೂ ಮುಂದಕ್ಕೂ ಹೇಗಿರಬೇಕು ಎಂಬ ಚಿಂತನ-ಮಂಥನಗಳು ಗೋಷ್ಠಿಗಳಲ್ಲಿ ನಡೆಯತಕ್ಕದ್ದು. ಅದರಿಂದ ಸಮ್ಮೇಳನದ ಸಭಾಸದರಿಗೆ ತೃಪ್ತಿಕರವಾದ ಜ್ಞಾನದ ಉಣಿಸನ್ನು ಬಡಿಸಿದಂತಾಗುವುದು. ಪರಂಪರೆಯಿಂದ ಇಂದಿನ ಈ ಇಪ್ಪತ್ತನೆಯ ಶತಮಾನದ ತನಕದ ಮತ್ತೆ ಮುಂದಿನ ಶತಮಾನದ ಸಾಹಿತ್ಯ ಇತಿಹಾಸಾದಿಗಳಿಗೂ ಅನ್ವಯಿಸುವ  ಪ್ರಗತಿ ಚರ್ಚೆಗಳು ಈ ಗೋಷ್ಠಿಗಳಲ್ಲಿ ನಡೆಯಬೇಕು. ನಿರಂಕುಶಾಃ ಎಂಬ ಸೂಕ್ತಿಯಿದ್ದರೂ, ವ್ಯವಹಾರದಲ್ಲಿ, ಲೇಖಕರಿಗೆ, ಪತ್ರಿಕೆಯವರಿಗೆ ಅವರ ಬರೆಹಗಳ ಕುರಿತು ಟೀಕೆಗಳನ್ನು ಆಗಾಗ ಕೇಳುತ್ತಾ ಇದ್ದೇವೆ. ಇಂತಹ ವಿಚಾರ ಸಮ್ಮೇಳನದ ಗೋಷ್ಠಿಗಳಲ್ಲಿ ಚರ್ಚಿಸಬೇಕಾದ ಒಂದು ಮಹತ್ವದ ವಿಷಯ. ಜಗತ್ತಿನಲ್ಲಿ ಹಾಗೂ ಭಾರತದಲ್ಲಿ ಕನ್ನಡದ ಸ್ಥಾನಮಾನ, ಗಡಿನಾಡು ಹೊರನಾಡುಗಳಲ್ಲಿ ವಿದೇಶಗಳಲ್ಲೂ ಕನ್ನಡದ ಉಳಿವು, ಬೆಳವಣಿಗೆ, ಕನ್ನಡಿಗರ ಉದ್ಯೋಗ, ನಾಡಿನ ಪರಿಸರ, ಜಲ ಗಡಿ ಸಮಸ್ಯೆಗಳೂ ಸಮ್ಮೇಳನದಲ್ಲಿ ಚರ್ಚಿತವಾಗತಕ್ಕದ್ದು; ಗೋಷ್ಠಿಗಳ ಚರ್ಚೆಯಿಂದ ಸಾರ್ವಜನಿಕರಿಗೂ ಸರಕಾರಕ್ಕೂ ಸರಿಯಾದ ಮಾರ್ಗದರ್ಶನ ನೀಡಬೇಕು. ದೇಶದ ವಿವಿಧ ಭಾಷೆಗಳ ಕವಿಗೋಷ್ಠಿಗಳು ಸಮ್ಮೇಳನಕ್ಕೆ ಶೋಭೆ ತರುವವು. ಸರ್ವ ಭಾಷೆಗಳ ಸಾಮರಸ್ಯವು ಅದರಿಂದ ಸ್ಥಾಪಿತವಾಗುವುದು.

ಪರಿಷತ್ತಿನ  ಪ್ರಕಟಣೆಗಳು ಹೇಗಿರಬೇಕು?

ಇಂದು ಜಿಲ್ಲಾ ತಾಲ್ಲೂಕು ಮಟ್ಟಗಳಲ್ಲಿ ಸಾಹಿತ್ಯ ಪರಿಷತ್ತು ಸ್ಥಾಪಿತವಾಗಿ ಸಾಹಿತ್ಯಿಕ ಕಾರ್ಯಕಲಾಪಗಳನ್ನು ನಡೆಸುತ್ತಿರುವುದು. ಸಮ್ಮೇಳನಗಳನ್ನು ಜರಗಿಸುತ್ತಿರುವುದೂ ಯೋಗ್ಯವೇ; ಆದರೆ ಸಮ್ಮೇಳನವೆಂದಾಗ ಹೆಚ್ಚಾಗಿ ಜಾತ್ರೆಗಳ ರೀತಿಯಲ್ಲಿ ಜನ ಸೇರುವಿಕೆ ಹಬ್ಬಗಳ ಆಚರಣೆಯಂತೆ ಎಲ್ಲರೂ ಒಗ್ಗೂಡಿ ನಡೆಯುವ ಊಟೋಪಚಾರ – ಇದೇ ಮನೋಭಾವನೆಯಿರುತ್ತದೆ. ಅದೂ ಇರಲಿ, ಸಾಹಿತ್ಯ ಸಮ್ಮೇಳನಗಳನ್ನು ಜಿಲ್ಲಾ ತಾಲ್ಲೂಕು ಮಟ್ಟಗಳಲ್ಲಿಯೂ ಜರುಗಿಸುವ ಜೊತೆಗೆ ಪ್ರತಿ ಜಿಲ್ಲೆಯ, ಪ್ರತಿ ತಾಲ್ಲೂಕಿನ ಪ್ರಾತಿನಿಧಿಕ ಕವಿ, ಕತೆಗಾರ, ನಾಟಕಕಾರ, ಲೇಖಕರ ಆಯ್ದ ಕೃತಿಗಳನ್ನು ವರ್ಷಕ್ಕೆ ಒಂದರಂತೆ ಪ್ರಕಟಿಸುವ ಕಾರ್ಯಕ್ರಮವನ್ನೂ ಇಟ್ಟುಕೊಳ್ಳಬಹುದು. ಪರಿಷತ್ತಿನ ಘಟನೆಯಂತೆ, ಪ್ರತಿ ಜಿಲ್ಲಾ ತಾಲ್ಲೂಕು ಪರಿಷತ್ತುಗಳ ಕಾಲಾವಧಿ ಮೂರು ವರ್ಷವಾಗಿರುವಾಗ, ಒಂದು ವರ್ಷ ಅಲ್ಲಿನ ಕವಿಗಳ ಕವಿತಾ ಸಂಪುಟ, ಇನ್ನೊಂದು ವರ್ಷ ಕಥಾಸಂಗ್ರಹ, ಮುಂದಿನ ವರ್ಷ ಇತರ ಶೈಲಿಯ ಲೇಖನಗಳು- ಹೀಗೆ ವರ್ಷಕ್ಕೆ ಒಂದರಂತೆ ಉತ್ತಮ ಸಾಹಿತ್ಯಕೃತಿ ಸಂಗ್ರಹಗಳು ಪ್ರಕಟವಾಗಬೇಕು. ಆಯಾಯ ಪ್ರದೇಶದ ಸಾಹಿತ್ಯಾಭಿಮಾನಿಗಳ ನೆರವನ್ನು ಸರಿಯಾಗಿ ಪಡೆದುಕೊಳ್ಳತಕ್ಕದ್ದು, ಆ ಸಂಗ್ರಹ ಕೃತಿಯ ಬಿಡುಗಡೆಯ ಸಮಾರಂಭವನ್ನು ಏರ್ಪಡಿಸಬೇಕು. ಬಿಡುಗಡೆಯ ಸಮಾರಂಭದಂದೇ ಆ ಪ್ರಕಟಿತ ಪುಸ್ತಕದ ಮುದ್ರಣ ವೆಚ್ಚವಾದರೂ ಬರುವ ರೀತಿಯಲ್ಲಿ ಮಾರಾಟದ ವ್ಯವಸ್ಥೆ ಮಾಡುವುದು ಅಗತ್ಯ. ಮತ್ತೆ ಇಡೀ ವರ್ಷದಲ್ಲಿ ಉಳಿದ ಪುಸ್ತಕಗಳ ಮಾರಾಟ ಮಾಡಿಕೊಳ್ಳಬಹದು. ಸಾಹಿತ್ಯ ಭಾವನಾತ್ಮಕವಾಗಿರುವಂತೆ, ವ್ಯಾವಹಾರಿಕವೂ ಆದಲ್ಲಿ ಆ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸಬಹುದು. ತಾಲ್ಲೂಕು ಮಟ್ಟದ ಈ ತೆರನ ಪ್ರಾತಿನಿಧಿಕ ಲೇಖಕರ ಪುಸ್ತಕ ಪ್ರಕಟಣೆಯ ಆಧಾರದಲ್ಲಿ ಅವುಗಳಿಂದಲೇ ಶ್ರೇಷ್ಠವಾದವುಗಳನ್ನು ಆಯ್ಕೆ ಮಾಡಿ ಕೇಂದ್ರ ಸಾಹಿತ್ಯ ಪರಿಷತ್ ಮಟ್ಟದಲ್ಲಿ ಹೀಗೆ ಇಡೀ ಕನ್ನಡನಾಡಿನ ಪ್ರಾತಿನಿಧಿಕ ಲೇಖಕರ ಕೃತಿಪರಿಚಯ ಸಮಸ್ತ ಕನ್ನಡಿಗರಿಗೆ ಪ್ರತಿವರ್ಷ ಆಗುವುದು ಯೋಗ್ಯ. ಆ ಮೂಲಕ ಸಾಹಿತ್ಯ ಸಂಸ್ಕೃತಿಯ ಪ್ರಚಾರವೂ ನಡೆಯುತ್ತಾ ಇದ್ದಲ್ಲಿ ಕನ್ನಡ ಭಾಷೆ ಸಾಹಿತ್ಯದ ಸಂವರ್ಧನೆ ಸಮೃದ್ಧವಾದೀತು.

ತಿಂಗಳ ಗೋಷ್ಠಿ ನಡೆಸಿ

ಇಂದು ಗ್ರಾಮ ತಾಲ್ಲೂಕು ಜಿಲ್ಲಾ ಮಟ್ಟಗಳಲ್ಲಿ ಅಲ್ಲಲ್ಲಿ ನಾಡಿನಾದ್ಯಂತ ಕನ್ನಡ ಸಂಘ ಸಂಸ್ಥೆಗಳು ಇರುವುದು ಶುಭ ಚಿಹ್ನೆ. ಆ ಸಂಘ ಸಂಸ್ಥೆಗಳು ಆಯಾಯ ಪ್ರದೇಶಗಳಲ್ಲಿ ಎಂದರೆ ಗ್ರಾಮ ತಾಲ್ಲೂಕು ಜಿಲ್ಲಾ ಮಟ್ಟದ ಒಂದು ಕೇಂದ್ರ ಸ್ಥಳದಲ್ಲಿ ಪ್ರಾತಿನಿಧಿಕವಾಗಿ ಸೇರಿ ಪ್ರತಿ ತಿಂಗಳೂ ಒಂದೊಂದು ಸಾಹಿತ್ಯ ಗೋಷ್ಠಿ ನಡೆಸುವುದು ಸಾಹಿತ್ಯಾಭಿವೃದ್ಧಿಗೆ ಪೋಷಕ. ಈ ಗೋಷ್ಠಿಗಳು ಸಮಕಾಲೀನ ಪ್ರಕಟಿತ ಕೃತಿಗಳ ಕುರಿತು ಇರಬಹುದು. ಪಂಪ, ರನ್ನ, ಕುಮಾರವ್ಯಾಸಾದಿ ಮಹಾಕವಿಗಳ ಹಾಗೂ ಆಧುನಿಕರಾದ ಬಿ.ಎಂ.ಶ್ರಿ, ಪಂಜೆ, ಕುವೆಂಪು, ಬೇಂದ್ರೆ ಇಂತಹವರ ಕೃತಿ ವಿಷಯವಾಗಿಯೂ ನಡೆಸಬಹುದು. ಪತ್ರಿಕೆಗಳಲ್ಲಿ ಆಧುನಿಕ ಲೇಖಕರ ಕೃತಿ ವಿಮರ್ಶೆ ಬರುವವುಗಳಲ್ಲಿ ಯಾವುದನ್ನಾದರೂ ಆರಿಸಿಕೊಂಡು ಗೋಷ್ಠಿ ನಡೆಸುವುದೂ ಸೂಕ್ತ. ಶ್ರೇಷ್ಠ ಗಮಕಿಗಳನ್ನು ಆಹ್ವಾನಿಸಿ ಅದರಿಂದ ಕವನ ಹಾಡಿಸಿ ಆನಂದಪಡಬಹುದು. ಸ್ವರಚಿತ ಕೃತಿಗಳನ್ನೋ ಇತರರ ಕಾವ್ಯಗಳನ್ನೋ ಸ್ವಾರಸ್ಯಕರವಾದ ರೀತಿಯಲ್ಲಿ ಹಾಡಿ, ಹೇಳಿ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವ ಕವಿಗಳನ್ನೋ ವಿದ್ವಾಂಸರನ್ನೋ ಆಮಂತ್ರಿಸಿ ಗೋಷ್ಠಿಗಳ ವ್ಯವಸ್ಥೆ ಮಾಡುವುದೂ ವಿಹಿತ. ಯಾವುದೇ ರೀತಿಯಲ್ಲಿ ಸಾಹಿತ್ಯ ಗೋಷ್ಠಿ ನಡೆಸಿದರೂ ಅದರಿಂದ ಶ್ರೋತೃಗಳಲ್ಲಿ ಉತ್ತಮ ಪರಿಣಾಮವಾದೀತು, ಸಾಹಿತ್ಯ ಸಂಸ್ಕೃತಿಗಳ ಪ್ರಚಾರದ ಫಲ ದೊರಕುವುದು. ‘ಮಾಲೆಗಾರನ ಪೊಸಬಾಸಿಗಂ ಮುಡಿವ ಯೋಗಿಗಳಿಲ್ಲದೆ ಬಾಡಿಪೊಗದೇ” ಎಂದು ಕನ್ನಡದ ಹಿರಿಯ ಕವಿಯೊಬ್ಬನು ಉದ್ಗರಿಸಿದ್ದಾನೆ. ಮಾಲೆಗಳನ್ನು ಕನ್ನಡ ಲೇಖಕರಿಗೆ ನಾಡಿನ ಜನತೆ ನೀಡುವ ಅವಶ್ಯವಿದೆ. ಆದರಿಂದ ರಚನಾತ್ಮಕವಾಗಿ ಸಾಹಿತ್ಯಾಭಿವೃದ್ಧಿ ಕಾರ್ಯ ಆಗುವುದು.

ಸಮ್ಮೇಳನಗಳಿಗೆ ಹಣದ ವ್ಯವಸ್ಥೆ

ಸಾಹಿತ್ಯ ಸಮ್ಮೇಳನಗಳಲ್ಲಿ ಇಂದು ಖರ್ಚು ವೆಚ್ಚಗಳು ಹೆಚ್ಚಾಗುತ್ತಿವೆ; ಸಾಹಿತಿಗಳಿಗಿಂತ ಹೆಚ್ಚು ಸಾಹಿತ್ಯೇತರ ಧುರೀಣರಿಗೆ ಮನ್ನಣೆ ಮಣೆ ನೀಡಲಾಗುತ್ತಿದೆ. ಸಮ್ಮೇಳನಗಳು ಜಾತ್ರೆ ಆಡಂಬರಗಳಾಗದೆ ಕ್ರಿಯಾತ್ಮಕ ಸಾಹಿತ್ಯ ವಿಚಾರಗಳ ವೇದಿಕೆಯಂತಿರಬೇಕು – ಎಂಬಿತ್ಯಾದಿ ಮಾತುಗಳನ್ನು ಕೇಳುತ್ತಿದ್ದೇವೆ. ಮಹಾರಾಷ್ಟ್ರ ಸಾಹಿತ್ಯ ಸಮ್ಮೇಳನಗಳ ಮಾದರಿಯನ್ನು ಅನುಸರಿಸಬೇಕು. ಹಿತೋಪದೇಶವೂ ಬಂದಿದೆ. ಈ ಉಪದೇಶವೂ ಸ್ವೀಕಾರಾರ್ಹ, ಮನುಷ್ಯರ ಒಂದು ಸಹಜ ಪ್ರವೃತ್ತಿಯೆಂದರೆ ತಮ್ಮ ತಮ್ಮ ಸ್ವಂತ ಮನೆಗಳಲ್ಲಿಯಾದರೂ ಆಗುವ ವಿವಾಹಾದಿ ಸಾಮಾಜಿಕ ಕಾರ್ಯಗಳನ್ನೂ ಆದಷ್ಟು ವಿಜೃಂಭಣೆಯಿಂದ ಸಾಲಮಾಡಿಯಾದರೂ ನೆರವೇರಿಸಬೇಕೆಂಬುದು; ಆಮಂತ್ರಿತರನ್ನು ಸಂತುಷ್ಟಗೊಳಿಸುವ ಉತ್ಸಾಹದಲ್ಲಿ ಕೆಲವೊಮ್ಮೆ ಆಡಂಬರದ ಸಂದರ್ಭವೂ ಬರುತ್ತದೆ. ಅಂತಹ ಪ್ರವೃತ್ತಿಯನ್ನು ಗೃಹಸ್ಥರು ಸಡಿಲುಬಿಡದೆ, ಅಂಕೆಯಲ್ಲಿಟ್ಟುಕೊಂಡು, ಆಹ್ವಾನಿತರನ್ನು ಸಂತೋಷಗೊಳಿಸುವುದರೊಂದಿಗೆ ತಮ್ಮ ಗೃಹ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ಮುನ್ನೆಡೆಸುವ ಮುಂಜಾಗ್ರತೆ ಇಟ್ಟುಕೊಳ್ಳತಕ್ಕದ್ದು ಯೋಗ್ಯವಷ್ಟೆ.  ಕರ್ನಾಟಕ ರಾಜ್ಯರಚನೆಯಾದ ನಂತರ ಮಾತ್ರ ಸಾಹಿತ್ಯ ಸಮ್ಮೇಳನಗಳಿಗೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಲು ಪ್ರಾರಂಭಿಸಿದ್ದು ಅದಕ್ಕಿಂತ ಹಿಂದೆಯೇ ಮದ್ರಾಸು, ಬೊಂಬಾಯಿ, ಹೈದರಾಬಾದ್ ಮುಂತಾದ ರಾಜ್ಯಗಳಲ್ಲಿ ಕನ್ನಡ ಹಂಚಿದ್ದಾಗಲೂ ಸರಕಾರದ ಹಣ ಪಡೆಯದೆ ಬೇರೆ ಬೇರೆ ಪ್ರದೇಶಗಳಲ್ಲಿ ಯಶಸ್ವಿಯಾಗಿ ಸಮ್ಮೇಳನಗಳು ಜರುಗಿವೆ. ವಸತಿ ಊಟೋಪಚಾರಗಳೂ ವ್ಯವಸ್ಥಿತವಾಗಿ ಆಗಿವೆ. ಇಂದು ಸರಕಾರ ಧನಸಹಾಯ ಮಾಡುವುದಿದ್ದರೂ, ಅದು ಜನತೆ ನೀಡಿದ ತೆರಿಗೆಗಳು ಆದಾಯದ ಭಾಗವಲ್ಲದೆ, ಬೇರೆಯಲ್ಲ; ಅದೂ ಜನಸಾಮಾನ್ಯರ ಕೊಡುಗೆಯೇ; ಅದನ್ನು ಸ್ವೀಕರಿಸುವುದರಲ್ಲಿ ಅಪರಾಧವಿಲ್ಲ; ಹಣ ನೀಡಿದ ಬಗ್ಗೆ ಸರಕಾರಕ್ಕೆ ಸಂಪೂರ್ಣ ಕೃತಜ್ಞರಾಗಿರಲೇಬೇಕು. ಸಕಾಲದಲ್ಲಿ ಸರಿಯಾದ ಲೆಕ್ಕಪತ್ರಗಳನ್ನು ಒದಗಿಸತಕ್ಕದ್ದು. ಹಾಗೆಂದು ಹಣ ಪಡೆದದ್ದರಿಂದ ಆತ್ಮಾಭಿಮಾನಶೂನ್ಯವಾಗಬಾರದು. ಅಥವಾ ಧನಸಹಾಯ ಪಡೆದು ಆಡಂಬರ ಮಾಡಕೂಡದು. ಸಾಹಿತ್ಯ ಸಮ್ಮೇಳನಗಳು ನಿರುದ್ದೇಶದ ಜನಜಂಗುಳಿಯ ಜಾತ್ರೆಯಾಗಿ ಸದುದ್ದೇಶದ ಪುಣ್ಯಯಾತ್ರೆಯಂತಿರಬೇಕು’ ಈ ಸಲದ ಸಾಹಿತ್ಯ ಸಮ್ಮೇಳನ ಅಂತಹ ಉತ್ತಮ ಆದರ್ಶವನ್ನು ಮುಂದಿಟ್ಟು ಸುವ್ಯವಸ್ಥಿತವಾಗಿ ಜರುಗುತ್ತದೆ. ಜರುಗಲಿ ಎಂಬುದು ನನ್ನ ಹಾರೈಕೆ. ಸಮ್ಮೇಳನಗಳನ್ನು ರಾಜ್ಯ ಜಿಲ್ಲಾ ತಾಲ್ಲೂಕು ಮಟ್ಟಗಳಲ್ಲಿ ಯಶಸ್ವಿಯಾಗಿಸಿದ ಮಹನಿಯರೇ ಇಲ್ಲಿಯೂ ಮುಂದಾಳುತನ ವಹಿಸಿರುವುದು ಅಭಿನಂದನೀಯ. ಮುಂದಿನ ಸಮ್ಮೇಳನಗಳ ಸಮರ್ಥ ಸಂಘಟನೆಗೆ ಈ ಸಮ್ಮೇಳನ ಮಾದರಿಯಾಗಲಿ ಎಂದು ಹಾರೈಸುವುದರೊಂದಿಗೆ, ಆ ಬಗ್ಗೆ ಮುಂದೆಯೂ ಉದಾರಹೃದಯದಿಂದ ಸರ್ವರೂ ಸಹಕರಿಸಬೇಕೆಂದು ವಿನಂತಿಸುತ್ತೇನೆ.

ಸಮ್ಮೇಳನದ ನಿರ್ಣಯಗಳು

ಸಾಹಿತ್ಯ ಸಮ್ಮೇಳನಗಳಲ್ಲಿ ಮಂಜೂರಾಗುವ ನಿರ್ಣಯಗಳು ಜಾರಿಯಾಗುವಂತೆ ಪ್ರಯತ್ನಿಸಬೇಕಾದ ಮಹತ್ವದ ಕರ್ತವ್ಯವಿದೆ. ಪ್ರತಿ ಸಮ್ಮೇಳನದಲ್ಲೂ ಆದ ನಿರ್ಣಯಗಳನ್ನು ಸಂಬಂಧಪಟ್ಟವರಿಗೆ ತಿಳಿಸಿ ಯೋಗ್ಯ ಕಾರ್ಯಕ್ರಮ ಕೈಕೊಳ್ಳುವರ ಕೇಳಿಕೊಂಡು ಪತ್ರವ್ಯವಹಾರ ಮಾಡಿ ಅವರಿಂದ ಸಕಾಲದಲ್ಲಿ ಉತ್ತರ ಬರದಿದ್ದರೆ ಮರಳಿ ನೆನಪಿಸುವ ಪತ್ರವನ್ನೂ ಪರಿಷತ್ತು ಕಳುಹಿಸಬೇಕು. ನಿರ್ಣಯಗಳಲ್ಲಿ ಪ್ರಸ್ತಾಪಿಸಿದ ವಿಷಯದಲ್ಲಿ ಸಂಬಂಧಪಟ್ಟವರು ಅವಶ್ಯವಿರುವ ಕಾರ್ಯಕ್ರಮ ಕೈಗೊಳ್ಳುತ್ತಾರೆ. ಅಥವಾ ಕೈಗೊಳ್ಳುವುದಿಲ್ಲ ಈ ಸಂಗತಿಗಳನ್ನು ಖಚಿತವಾಗಿ ತಿಳಿದುಕೊಳ್ಳುವುದು  ತೀರಾ ಅವಶ್ಯ; ಹಾಗಿಲ್ಲವಾದರೆ ಸಹಸ್ರ ಸಹಸ್ರ ಕಂಠಗಳ ಒಮ್ಮತದಿಂದ ಮಾಡಿದ ನಿರ್ಣಯಗಳಿಗೆ ಬೆಲೆಯೇನು? ಯಾರು ಯಾವ ನಿರ್ಣಯ ಮಂಡಿಸಿದ್ದಾರೋ ಅವರಿಗೆ ಅದರ ಪರಿಣಾಮದ ಕುರಿತು ತಿಳಿಸುವುದೂ ಅಗತ್ಯ. ಹಾಗೆ ತಿಳಿಸಿದಲ್ಲಿ ಮಂಡಿತವಾಗಿ ಮಂಜೂರಾದ ನಿರ್ಣಯಗಳು ತಿರಸ್ಕೃತವಾದರೆ ಮುಂದಿನ ಹೆಜ್ಜೆ ಅವರೂ ನಿರ್ಣಯಿಸಬಹುದು. ಸಮ್ಮೇಳನಗಳಲ್ಲಿ ಮಂಜೂರು ಮಾಡತಕ್ಕ ನಿರ್ಣಯಗಳನ್ನು ನಾಡುನುಡಿಗಳಿಗೆ, ಸಾಹಿತ್ಯ ಸಂಸ್ಕೃತಿಗಳಿಗೆ ಸಂಬಂಧಪಟ್ಟವುಗಳೇ ಆಗಿರಬೇಕೆಂಬ ಮೂಲತತ್ವವನ್ನು ಎಲ್ಲರೂ ಪರಿಪಾಲಿಸತಕ್ಕದ್ದು, ಹಾಗಾದರೆ ಮಾತ್ರ ನಿರ್ಣಯಗಳಿಗೆ ಬೆಲೆ ಬರುವುದು.  ಸಂಬಂಧಪಟ್ಟವರಾದರೂ ಅದನ್ನು ಪರಿಶೀಲಿಸಿ ಯುಕ್ತ ಕಾರ್ಯಕ್ರಮ ಕೈಗೊಂಡರೆ ಅನುಕೂಲವಾಗುವುದು. ಹಾಗಾಗಿ ನಿರ್ಣಯ ಮಂಡನೆ  ಕುರಿತೂ, ಗಂಭೀರ ಪರಿಶೀಲನೆ ಅಗತ್ಯ. ಹೀಗೆ ಶ್ರದ್ಧೆಯಿಂದ ಈ ನಿರ್ಣಯ ಮಂಜೂರಾತಿ ಕಾರ್ಯ ನಡೆದಲ್ಲಿ ಕೆಲವು ಕಡೆಗಳಿಂದ ಕೇಳಿಬರುವ ದೂರು ಇಲ್ಲವಾಗಿ ಸಮ್ಮೇಳನದ ಕಾರ್ಯಕಲಾಪಗಳಿಗೆ ಕಳೆಯೇರುವುದು.

Tag: Kannada Sahitya Sammelana 66, Kayyara Kinhanna Rai

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)