ಸಾಹಿತ್ಯ ಸಮ್ಮೇಳನ-೬೮ : ಬಾಗಲಕೋಟೆ
ಜೂನ್ ೨000

ಅಧ್ಯಕ್ಷತೆ: ಶಾಂತಾದೇವಿ ಮಾಳವಾಡ

೬೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಶಾಂತಾದೇವಿ ಮಾಳವಾಡ

ಉತ್ತರ ಕರ್ನಾಟಕದಲ್ಲಿ ಮಹಿಳಾ ಸಾಹಿತ್ಯ ಪರಂಪರೆಯ ಪ್ರವರ್ತಕರಲ್ಲಿ ಒಬ್ಬರಾದ ಶಾಂತಾದೇವಿ ಮಾಳವಾಡರು ಸಾಹಿತಿಯಾಗಿ ಸಾಮಾಜಿಕ ಕಾರ್ಯಕರ್ತೆಯಾಗಿ ಶ್ರಮಿಸಿದವರು. ಕರ್ಜಗಿ ಮುರಗಪ್ಪ ಶೆಟ್ಟಿ-ಜಯವಂತಿ ದೇವಿ ದಂಪತಿಗಳಿಗೆ ಬೆಳಗಾವಿಯಲ್ಲಿ ೧0-೧೨-೧೯೨೨ರಲ್ಲಿ ಜನಿಸಿದ ಸುಪುತ್ರಿ ಶಾಂತಾದೇವಿಯವರ ಹುಟ್ಟು ಹೆಸರು ದಾನಮ್ಮ. ಬೆಳಗಾವಿ ವನಿತಾ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಪ್ರಾರಂಭಿಸಿದ ಇವರು ಹೈಸ್ಕೂಲ್ ಎರಡನೇ ತರಗತಿಯಲ್ಲಿ ಇರುವಾಗ ಶಾಲೆಯನ್ನು ಬಿಡಬೇಕಾಯಿತು. ಮನೆಯಲ್ಲಿಯೇ ಕುಳಿತು ಇಂಗ್ಲಿಷ್ ಹಿಂದಿ ಭಾಷೆಯನ್ನು ಕಲಿತರು. ಸಾಹಿತ್ಯ ಪರಿಷತ್ತಿನ ಕಾವ್ಯ, ಜಾಣ ಪರೀಕ್ಷೆಗಳಿಗೆ ಕುಳಿತು ಉತ್ತೀರ್ಣರಾದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಸ.ಸ. ಮಾಳವಾಡರ ಧರ್ಮಪತ್ನಿ ಅದಮೇಲೆ ಇವರ ವ್ಯಾಸಂಗಕ್ಕೆ ಅವರಿಂದ ಸ್ಪೂರ್ತಿ ಮಾರ್ಗದರ್ಶನ ಸಿಕ್ಕಿತು. ಮಹಿಳೆಯರ ಉನ್ನತಿಗಾಗಿ ಶ್ರಮಿಸುತ್ತ ಸಾಮಾಜಿಕ ಸೇವೆಯಲ್ಲಿ ನಿರತರಾದ ಶಾಂತಾದೇವಿ ಅವರು ಧಾರವಾಡ ಜಿಲ್ಲಾ ಮಹಿಳಾ ಮಂಡಳಕ್ಕೆ ಹೊಸ ಚೈತನ್ಯ ನೀಡಿದರು. ೧೯೫೮ ರಿಂದ ಧಾರವಾಡ ಜಿಲ್ಲಾ ರಿಮ್ಯಾಂಡ್ ಹೋಂ ಕಾರ್ಯಕಾರಿ ಮಂಡಳದ ಸದಸ್ಯೆಯಾಗಿಯೂ ೧೯೫೯ ರಿಂದ ೧೯೬೪ ವರೆಗೆ ಆನರರಿ ಲೇಡಿ ಮ್ಯಾಜಿಸ್ಟ್ರೇಟ್ ಆಗಿಯೂ ಸೇವೆ ಸಲ್ಲಿಸಿದರು. ರಾಜ್ಯಮಟ್ಟದ ಸಾಮಾಜಿಕ ನೈತಿಕ ಸ್ವಾಸ್ಥ ಸಮಿತಿ ಸದಸ್ಯರಾಗಿ ಕೆಲಸ ಮಾಡಿದರು. ಧಾರವಾಡದ ಗಾಂಧೀ ಶಾಂತಿ ಪ್ರತಿಷ್ಠಾನ ಕೇಂದ್ರದಲ್ಲಿ ಮಹಿಳಾ ವಿಭಾಗಕ್ಕೆ ಕಾರ್ಯಾಧ್ಯಕ್ಷರಾಗಿ, ತೋಟಗಾರಿಕಾ ಸಂಸ್ಥೆಯ ಸದಸ್ಯೆಯಾಗಿ, ಜಿಲ್ಲಾ ಅಭಿವೃದ್ಧಿ ಮಂಡಳದಲ್ಲಿ ಮಹಿಳಾ ಸಾಮಾಜಿಕ ಶಿಕ್ಷಣ ಸಮಿತಿ ಸದಸ್ಯೆಯಾಗಿ ಹೀಗೆ ನಾನಾ ಸಂಸ್ಥೆಗಳಲ್ಲಿ ಮಹಿಳೆಯರ ಉನ್ನತಿಗೆ ಶ್ರಮಿಸಿದರು.

ಶಾಂತಾದೇವಿ ಮಾಳವಾಡರ ಸಾಹಿತ್ಯ ಸೇವೆಗೆ ಮತ್ತು ಮಹಿಳಾ ಉನ್ನತಿಗಾಗಿ ಶ್ರಮಿಸಿದ್ದಕ್ಕೆ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಪ್ರಶಸ್ತಿ ನೀಡಿವೆ. ೧೯೭೭ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೭ರಲ್ಲಿ ಕರ್ನಾಟಕ ಸರ್ಕಾರದ ಅತ್ತಿಮಬ್ಬೆ ಪ್ರಶಸ್ತಿ ಇವರಿಗೆ ದೊರಕಿದೆ. ಬಾಗಲುಕೋಟೆಯಲ್ಲಿ ೨000ರಲ್ಲಿ ಜರುಗಿದ ೬೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪರಿಷತ್ತಿನ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಅಧ್ಯಕ್ಷಿಣಿಯಾದವರಲ್ಲಿ ಇವರು ೨ನೆಯವರು. ೧೯೯೭ರಲ್ಲಿ ಸ್ವರಲಿಪಿ ಪ್ರತಿಷ್ಠಾನದ ಲಿಪಿಪ್ರಾಜ್ಞ ಪ್ರಶಸ್ತಿ, ೧೯೯೬ರಲ್ಲಿ ಚಿತ್ರದುರ್ಗದ ಬೃಹ್ಮಮಠದ ಜಗದ್ಗುರುಗಳಿಂದ ಸಾಹಿತ್ಯರತ್ನ ಪ್ರಶಸ್ತಿ, ೧೯೯೪ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯುನ್ನತ ಪ್ರಶಸ್ತಿಯಾದ ಗೌರವ ಸದಸ್ಯತ್ವ, ೧೯೯೧ರಲ್ಲಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ೧೯೯೩ರಲ್ಲಿ ಅಖಿಲ ಕರ್ನಾಟಕ ಲೇಖಕಿಯರ ಮೂರನೇ ಸಮ್ಮೇಳನದ ಅಧ್ಯಕ್ಷತೆ ಮೊದಲಾದ ಸನ್ಮಾನ ಪ್ರಶಸ್ತಿ ಗೌರವಗಳು ಇವರಿಗೆ ಲಭ್ಯವಾಗಿವೆ.

೪೫ಕ್ಕೂ ಜಾಸ್ತಿ ಕೃತಿಗಳನ್ನು ರಚಿಸಿರುವ ಶಾಂತಾದೇವಿ ಮಾಳವಾಡರು ಕಥೆ, ಕಾದಂಬರಿ, ವೈಚಾರಿಕ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಅವರ ಕೆಲವು ಮುಖ್ಯ ಕೃತಿಗಳು ಹೀಗಿವೆ.

ಗೃಹೋಪಯೋಗಿ ಕೃತಿಗಳು : ಸೋಗಿನಮನೆ, ಮಹಿಳೆಯರ ಅಲಂಕಾರ, ದಾಂಪತ್ಯಯೋಗ, ವಧುವಿಗೆ ಉಡುಗೊರೆ, ರಸಪಾಕ ಗ್ರಂಥಗಳು.

ಕಥಾಸಂಕಲನಗಳು : ಮೊಗ್ಗೆಯಮಾಲೆ, ಕುಂಕುಮ ಬಲ.

ಕಾದಂಬರಿ : ಬಸವ ಪ್ರಕಾಶ, ಶೂರರಾಣಿ, ಕೆಳದಿಯ ಚೆನ್ನಮ್ಮಾಜಿ.

ಜೀವನಚರಿತ್ರೆಗಳು : ಭಾರತದ ಮಾನಸ ಪುತ್ರಿಯರು, ನೀಲಾಂಬಿಕೆ, ಬೆಳವಾಡಿ ಮಲ್ಲಮ್ಮ, ಗಂಗಾಂಬಿಕೆ, ಕನ್ನಡತಾಯಿ ಇತ್ಯಾದಿ.

ಶಾಂತಾದೇವಿ ಮಾಳವಾಡರು ೭-೮-೨00೫ರಲ್ಲಿ ದೈವಾಧೀನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೬೮

ಅಧ್ಯಕ್ಷರು, ಶಾಂತಾದೇವಿ ಮಾಳವಾಡ

ದಿನಾಂಕ ೨೪, ೨೫, ೨೬ ಜೂನ್ ೨000

ಸ್ಥಳ : ಬಾಗಲಕೋಟೆ

 

 ಒಗ್ಗೂಡಲಿ ಎರಡು ಸಂಸ್ಥೆ

ಕನ್ನಡದ ಕಣ್ವರೆನಿಸಿದ್ದ ಬಿ.ಎಂ.ಶ್ರೀ ಅವರು ತಮ್ಮ ಒಂದು ಭಾಷಣದಲ್ಲಿ ಹೀಗೆ ಹೇಳಿದ್ದರು. ಧಾರವಾಡ ಕನ್ನಡ, ಗಂಡು ಕನ್ನಡ, ಬೆಂಗಳೂರು ಕನ್ನಡ, ಹೆಣ್ಣು ಕನ್ನಡ, ಈ ಎರಡೂ ಭಾಷೆಯ ನಾಡು ಒಂದಾದರೆ ಒಳಿತು, ನಾಡಿನ ಜನತೆಯಲ್ಲಿ ಭಾವೈಕ್ಯ ಮೂಡಿದರೆ, ಕನ್ನಡದ ಅಭಿಮಾನ ರಕ್ತದ ಕಣಕಣದಲ್ಲಿ ಮಿಡಿದರೆ ನಾಡು ಅಖಂಡ ಕರ್ನಾಟಕ ಆಗುವುದು ಎನ್ನುವ ಅವರ ಮಾತುಗಳೂ ಇಂದಿಗೂ ಪ್ರಸ್ತುತವಾಗಿದೆ.  ಶತಮಾನ ಕಂಡ ಉತ್ತರ ಕರ್ನಾಟಕದ ಹಿರಿಯ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಪರಸ್ಪರ ಕೂಡಿಕೊಂಡು ಒಂದಾಗಿ ಕನ್ನಡದ ಕಾರ್ಯಕ್ಕೆ ಅಣಿಯಾದರೆ ನಾಡು ನುಡಿಯ ಅಭಿಮಾನ ಜನಕೋಟಿಯಲ್ಲಿ ಇನ್ನೂ ಹೆಚ್ಚುಹೆಚ್ಚಾಗಿ ಬೆಳೆಯುತ್ತದೆಂಬ ವಿಜ್ಞಾನ ನನ್ನದಾಗಿದೆ.

ಸಮ್ಮೇಳನಗಳು ಅಭಿಮಾನ ಬೆಳಸಲಿ

ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದ ಪ್ರತಿಭಾವಂತರಿದ್ದಾರೆ. ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದ ಪ್ರತಿಭಾವಂತರಿದ್ದಾರೆ. ಇಷ್ಟೆಲ್ಲಾ ಇದ್ದರೂ, ಒಂದೇ ಒಂದು ಕೊರತೆಯಿದೆ. ಅದು ನಾಡು ನುಡಿಯ ಅಭಿಮಾನದ ಕೊರೆತ. ಕನ್ನಡಾಭಿಮಾನ ನಮ್ಮೆಲ್ಲರ ರಕ್ತ ಕಣಕಣದಲ್ಲಿರಬೇಕು. ನರನರಗಳಲ್ಲಿ ಮಿಡಿಯಬೇಕು. ಕನ್ನಡ ಎಂಬ ಮಂತ್ರ ಸದಾ ನಮ್ಮೆಲ್ಲರ ಮನದಲ್ಲಿ ಮಿಡಿಯುತಿರಲಿ. ಕನ್ನಡಿಗರಲ್ಲಿ ನಾಡು-ನುಡಿ-ಸಾಹಿತ್ಯ-ಕಲೆ ಇವುಗಳ ಅಭಿಮಾನವನ್ನು ಬೆಳೆಸುವುದು ಇಂಥ ಕನ್ನಡ ಸಾಹಿತ್ಯ ಸಮ್ಮೇಳನಗಳ ಪ್ರಧಾನ ಗುರಿಯಾಗಿರಬೇಕು.

ಪರಿಷತ್ತಿಗೆ ಸರ್ಕಾರದ ನೆರವು ಎಷ್ಟು ಬೇಕು?

ಕನ್ನಡ ಸಂಸ್ಕೃತಿ ಇಲಾಖೆಯು ಬೇಂದ್ರೆ ಭವನ, ಸಾಹಿತ್ಯ ಭವನ, ಮನಸೂರ ಟ್ರಸ್ಟ್ ಇವೇ ಮೊದಲಾದ ವಿವಿಧ ಟ್ರಸ್ಟ್ಗಳಿಗೆ ನೆರವು ನೀಡಿದ್ದು ಅವು ಈಗ ಆನಾಥ ಸ್ಥಿತಿಯಲ್ಲಿವೆ.  ಅವುಗಳಲ್ಲಿ ಸಾಹಿತ್ಯ ಸಂಸ್ಕೃತಿ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಕ್ರಮ ಕೈಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಾಹಿತ್ಯ ಸಂಸ್ಥೆಯಾಗಿದೆ. ಕನ್ನಡದ ಕಾರ್ಯಗಳನ್ನು ಕ್ರಿಯಾಶೀಲವಾಗಿ ನಡೆಸುವುದಕ್ಕೆ ಪ್ರತಿವರ್ಷ ಕನಿಷ್ಠ ೧ ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ನಿರಂತರವಾಗಿ ನೀಡಬೇಕು.

Tag: Kannada Sahitya Sammelana 68, Shantha Devi Malavada

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)