ಸಾಹಿತ್ಯ ಸಮ್ಮೇಳನ-೭೧ : ಮೂಡಬಿದರೆ
ಡಿಸೆಂಬರ್ ೨00೩

ಅಧ್ಯಕ್ಷತೆ: ಕಮಲಾ ಹಂಪನಾ

೭೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕಮಲಾ ಹಂಪನಾ

ಲೇಖಕಿಯಾಗಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಕಮಲಾ ಹಂಪನಾ ಅವರು, ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್-ಲಕ್ಷಮ್ಮ ದಂಪತಿಗಳ ಪುತ್ರಿಯಾಗಿ ೨೮-೧0-೧೯೩೫ರಲ್ಲಿ ಜನಿಸಿದರು. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ೧೯೫೩ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ೧೯೫೫-೫೮ರಲ್ಲಿ ಬಿ.ಎ. ಆನರ್ಸ್ ಮಾಡಿದರು. ೧೯೫೯ರಲ್ಲಿ ಕನ್ನಡ ಅಧ್ಯಾಪಕಿಯಾಗಿ ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.

ಅಧ್ಯಾಪನ, ಲೇಖನ, ಭಾಷಣಗಳ ಮೂಲಕ ಮಾಡಿರುವ ಸಾಹಿತ್ಯ ಸೇವೆಯನ್ನು ಗುರುತಿಸಿ ನಾಡಿನ ನಾನಾ ಸಂಘ ಸಂಸ್ಥೆಗಳಿಂದ ಅನೇಕ ಗೌರವ ಪ್ರಶಸ್ತಿಗಳು ದೊರೆತಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ರನ್ನಕವಿ ಪ್ರಶಸ್ತಿ, ಐಐಟಿ ಮದರಾಸು ಕನ್ನಡ ಸಂಘದ ರಜತೋತ್ಸವ ಪುರಸ್ಕಾರ, ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕದ ರಾಷ್ಟ್ರೀಯ ಪುರಸ್ಕಾರ, ಶ್ರೀ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಇತ್ಯಾದಿ ಪ್ರಶಸ್ತಿಗಳು ದೊರೆತಿವೆ. ೨00೩ರಲ್ಲಿ ಮೂಡಬಿದ್ರೆಯಲ್ಲಿ ನಡೆದ ೭೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಲಭಿಸಿದೆ.

ಮಹಿಳಾ ಸಾಹಿತಿಯಾಗಿ ಕನ್ನಡದಲ್ಲಿ ಹೆಚ್ಚು ಕೃತಿಗಳನ್ನು ರಚಿಸಿದವರಲ್ಲಿ ಕಮಲಾ ಹಂಪನಾ ಅವರೂ ಒಬ್ಬರು. ೪೮ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜೈನಧರ್ಮ ಹಳಗನ್ನಡ ಗ್ರಂಥ ಸಂಪಾದನೆ, ಜೀವನ ಚರಿತ್ರೆ, ಕಥೆ, ಕವನ, ವ್ಯಕ್ತಿಚಿತ್ರ ಮುಂತಾದ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಇವರು ಕೃತಿರಚನೆ ಮಾಡಿದ್ದಾರೆ. ತುರಂಗ ಭಾರತವನ್ನು ಕುರಿತು ವಿಶೇಷ ಅಧ್ಯಯನಮಾಡಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಅವರು ರಚಿಸಿದ ಕೆಲವು ಮುಖ್ಯಕೃತಿಗಳು ಇವು – ಕಾವ್ಯ : ಬಿಂದಲಿ, ಬುಗುಡಿ. ವ್ಯಕ್ತಿಚಿತ್ರ: ನುಡಿಮಲ್ಲಿಗೆ, ಆ ಮುಖ. ವೈಚಾರಿಕ: ಬಾಸಿಂಗ, ಬಾಂದಳ, ಬಡಬಾಗಿ, ಬಿತ್ತರ, ಬಕುಳ. ನಾಟಕ : ಬೆಳ್ಳಕ್ಕಿ, ಬಾನಾಡಿ, ಗ್ರಂಥಸಂಪಾದನೆ : ಸುಕುಮಾರ ಚರಿತೆಯ ಸಂಗ್ರಹ, ಶ್ರೀ ಪಚ್ಚೆ, ಧರಣೇಂದ್ರಯ್ಯ ಸ್ಮೃತಿಗ್ರಂಥ, ಡಿ.ಎಲ್.ಎನ್. ಆಯ್ದ ಲೇಖನಗಳು, ಹಳೆಯ ಗದ್ಯಸಾಹಿತ್ಯ (ಇತರರೊಡನೆ) ಅನುವಾದ: ಬೀಜಾಕ್ಷರ ಮಾಲೆ.

ಕನ್ನಡ ಸಾಹಿತ್ಯ ಸಮ್ಮೇಳನ೭೧

ಅಧ್ಯಕ್ಷರು, ಕಮಲಾ ಹಂಪನಾ

ದಿನಾಂಕ ೧೮, ೧೯, 0, ೨೧ ಡಿಸೆಂಬರ್ ೨00

ಸ್ಥಳ : ಮೂಡಬಿದರೆ

 

ಪರಿಷತ್ತಿನ ಎಲ್ಲಾ ಶಾಖೆಗಳಲ್ಲಿ ಪುಸ್ತಕ ಮಳಿಗೆ

ಹೈಟೆಕ್ ಮತ್ತು ತಂತ್ರಜ್ಞಾನದ ಎಲ್ಲ ಕ್ಷೇತ್ರಗಳ ಮೇಲೆ ಸಾಹಿತಿಗಳು, ಕಲಾವಿದರೂ, ಚಲನಚಿತ್ರ ನಿರ್ಮಾಪಕರು, ಪುಸ್ತಕ  ಪ್ರಕಾಶಕರೂ ತಟಸ್ಥರಾಗಿರುವುದು  ಅಸಾಧ್ಯ. ಪುಸ್ತಕ ಸಂಸ್ಕೃತಿಯ ಅಪಾಯಗಳನ್ನು ನಿವಾರಿಸುವುದಕ್ಕೂ ಸನ್ನದ್ಧವಾಗಿರಬೇಕಾಗುತ್ತದೆ. ನಾಡಿನ ಸಂಸ್ಕೃತಿಯ ಅಂತಸ್ಸತ್ವವನ್ನು ಅರಿಯಲೂ ಪರಿಚಯಿಸಲೂ ಸೂಕ್ತ ಪರಿಸರವನ್ನು ನಿರ್ಮಿಸುವ ಸದುದ್ದೇಶದಿಂದ ಪ್ರೇರಿತರಾಗಿ ಹಿಂದೆ ಕೆಂಗಲ್ ಹನುಮಂತಯ್ಯನವರು ಕನ್ನಡ-ಸಂಸ್ಕೃತಿ ಇಲಾಖೆಯನ್ನು ತೆರೆದರು, ಹಳ್ಳಿಗಳಲ್ಲಿ ಉಪನ್ಯಾಸಗಳಿಗೆ ಎಡೆಮಾಡಿದರು, ಎರಡು ರೂಪಾಯಿಗೆ ಕುಮಾರವ್ಯಾಸ ಭಾರತ ಕಾವ್ಯ ಜನರಿಗೆ ಎಟಕುವಂತೆ ಮಾಡಿದರು.  ಇಂದು ಪುಸ್ತಕ ವಿತರಣಾ ನೀತಿ ಸಂಹಿತೆಯನ್ನು ರೂಪಿಸಿ ಗ್ರಂಥ ಉದ್ಯಮವನ್ನು ಸಶಕ್ತವಾಗಿಸಬೇಕಾಗಿದೆ. ವಿಶ್ವವಿದ್ಯಾಲಯಗಳು, ಅನುದಾನಿತ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ- ಇವೆಲ್ಲದರ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯಲಿ. ಓದುಗನಿಗೆ ಒಂದೇ ಸೂರಿನಡಿ ತನಗೆ ಬೇಕಾದ ಪುಸ್ತಕ ಸಿಗುವ ಹಾಗೆ ಅನುಕೂಲ ಕಲ್ಪಿಸುವುದೆಂದರೆ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಮಾರಾಟ ಮಳಿಗೆ ತೆರೆಯಲಿ.

ಸಾಹಿತಿಗಳಿಗೆ ವೇದಿಕೆ ಸಲ್ಲಲಿ

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳ ಅನಭಿಷಿಕ್ತ ಸಾರ್ವಭೌಮ ಸಂಸ್ಥೆ. ನಾಡು ನುಡಿ ಕಲೆ ಸಂಸ್ಕೃತಿಗಳ ಸರ್ವಾಂಗೀಣ ಸಂವರ್ಧನೆಗಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಂಸ್ಥೆ ಲೇಖಕರಿಗೂ ಸಾಹಿತ್ಯಾಸಕ್ತರಿಗೂ ಅಂತರ್ಜಾಲವನ್ನು ನೇಯುವ,  ಸಾಂಸ್ಕೃತಿಕ ಚೈತನ್ಯವನ್ನು ಉಕ್ಕಿಸುವ ಸಂಸ್ಥೆ. ನಾಡಿನ ಉದ್ದಗಲಗಳಲ್ಲಿ ಇದರ ಕೊಂಬೆ ರೆಂಬೆಗಳು ಪಲ್ಲವಿಸಿವೆ. ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳಲ್ಲದೆ ಇತರ ಚಟುವಟಿಕೆಗಳೂ ಚೆನ್ನಾಗಿ ನಡೆಯುತ್ತಿವೆ. ಆದರೆ ಅಲ್ಲಿಯೂ ಸಾಹಿತಿಗಳಿಗೆ ವೇದಿಕೆಗಳು ಸಲ್ಲುವಂತೆ ನಿಗಾ ವಹಿಸುವುದು ಒಳ್ಳೆಯದು.

ಕನ್ನಡ ಭವನಗಳು ನಿರ್ಮಾಣವಾಗಲಿ

ಸಮ್ಮೇಳನ ಇನ್ನಷ್ಟು ಪ್ರಭಾವಶಾಲಿ ಆಗಲು ಸಾಧ್ಯವಿದೆ. ಗೋಷ್ಠಿಗಳ ವಿನ್ಯಾಸ ಅರ್ಥಪೂರ್ಣ ವಾಗಿಸಬಹುದು. ನಾಲ್ಕೈದು ತಿಂಗಳ ಮುಂಚೆಯೇ ಪತ್ರವ್ಯವಹಾರ ನಡೆಸಿದರೆ ಪ್ರಬಂಧಕಾರರಿಗೆ ಸಿದ್ದತೆಗೆ ಹೆಚ್ಚು ಸಮಯಾವಕಾವಿರುತ್ತದೆ.

ಸಾಹಿತ್ಯ ಪರಿಷತ್ತಿನ ಜಿಲ್ಲೆ ಮತ್ತು ತಾಲ್ಲೂಕು ಘಟಕಗಳ ಪುನಶ್ಚೇತನಕ್ಕೆ ತಕ್ಕ ತಳಪಾಯವೆಂದರೆ ಕನ್ನಡ ಭವನಗಳ ನಿರ್ಮಾಣ, ಬಹುಪಯೋಗಿ ಜಿಲ್ಲಾ ಕನ್ನಡ ಭವನಗಳ ಪರಿಕಲ್ಪನೆಯನ್ನು ೧೯೭೮-೭೯ರಲ್ಲಿ ಆಗಿನ ಪರಿಷದಧ್ಯಕ್ಷರು ಸರಕಾರಕ್ಕೆ ಒಪ್ಪಿಸಿದ್ದರೂ ಇದುವರೆಗೆ ನಾಲ್ಕೈದು ಜಿಲ್ಲಾ ಕನ್ನಡ ಭವನಗಳು ರೂಪುಗೊಂಡಿವೆ. ಇದು ಇನ್ನೂ ಬೇಗ ವ್ಯಾಪಕವಾಗಿ ಎಲ್ಲ ಜಿಲ್ಲೆ- ತಾಲ್ಲೂಕುಗಳಿಗೆ ಹಬ್ಬಿದರೆ ಆಗ ಕನ್ನಡಪರ ಸಾಹಿತ್ಯ ಸಂಸ್ಕೃತಿ ಚಟುವಟಿಕೆಗಳಿಗೆ ಕಾಯಕಲ್ಪವಾಗುತ್ತದೆ. ಕನ್ನಡದ ಪುಸ್ತಕಗಳು, ಪ್ರಕಾಶಕರು, ಯಾರೇ ಇರಲಿ, ಎಲ್ಲ ಲೇಖಕರ ಪುಸ್ತಕಗಳು ಕನ್ನಡ ಭವನದಲ್ಲಿ ದೊರೆಯುವಂತಾಗಲಿ. ಕನ್ನಡ ಕಾರ್ಯಕ್ರಮಗಳಿಗೆ ಅದರಲ್ಲಿ ಸುಸಜ್ಜಿತ, ಅತ್ಯಾಧುನಿಕ ಸಭಾಂಗಣವಿರಲಿ. ಲಾಭ-ನಷ್ಟ ಇರದ ಕಡಿಮೆ ಬಾಡಿಗೆ  ದರದಲ್ಲಿ ಆ ಸಭಾಂಗಣ ಎಲ್ಲ ಕನ್ನಡ ಚಟುವಟಿಕೆಗಳಿಗೆ ಸಿಗಬೇಕೆ ವಿನಾ ಅದು ಮದುವೆಗಳಿಗೆ ತೆರೆದ ಇನ್ನೊಂದು ಕಲ್ಯಾಣಮಂಟಪ ಆಗಬಾರದು.

ಪರಿಷತ್ತು ಗದಾ ಪ್ರಹಾರ ತಡೆಯಲಿ

ಹಳ್ಳಿಗಳ ಅಚ್ಚಗನ್ನಡದ ಹಳೆಯ ಹೆಸರುಗಳು ಸಂಸ್ಕೃತಮಯವಾಗಿರುವುದು ತರವಲ್ಲ. ಸಾಂಸ್ಕೃತಿಕ  ಇತಿಹಾಸ ಹಿನ್ನೆಲೆ ಇರುವ ಎಮ್ಮೆಯೂರು, ಬೆಳ್ಳೂರುಗಳನ್ನು ಸುರಧೇನುಪುರ, ಶ್ವೇತಪುರ ಎಂದೇಕೆ ಬದಲಾಯಿಸಬೇಕು. ದೊಮ್ಮಲೂರನ್ನು ಭಗತ್ಸಿಂಗ್ರನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ. ಕನ್ನಡ ಪರಂಪರೆಯ ಮೇಲೆ ಆಗುವ ಈ ಬಗೆಯ ಗದಾಪ್ರಹಾರವನ್ನು ತಡೆಯುವ ಭೀಮಬಲ ಸಾಹಿತ್ಯ ಪರಿಷತ್ತಿನಿಂದ ವ್ಯಕ್ತವಾಗಬೇಕು. ನಮ್ಮ ನಾಡಿನ ಮೂಲೆ ಮುಡುಕಗಳಿಗೆ ಕನ್ನಡವನ್ನು ಬೆಳಗಿಸುವ ನಂದಾದೀಪವಾಗುವುದರ ಜೊತೆಗೆ ಅವಿರತ ಎಚ್ಚರಿಸುವ ದುಂದುಭಿಯೂ ಆಗಿರಬೇಕು.

Tag: Kannada Sahitya Sammelana 71, Kamala Hampana

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)