MENU

ಸಾಹಿತ್ಯ ಸಮ್ಮೇಳನ-೭೨ : ಬೀದರ
ಜನವರಿ ೨00೬

ಅಧ್ಯಕ್ಷತೆ: ಶಾಂತರಸ ಹೆಂಬೇರಾಳು

೭೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಶಾಂತರಸ ಹೆಂಬೇರಾಳು

ಕಾವ್ಯ-ಕಥೆ-ಕಾದಂಬರಿ-ಸಂಶೋಧನೆ-ಅನುವಾದ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಾಂತಯ್ಯ (ಹೆಂಬೇರಾಳು ಶಾಂತರಸರು) ನಿಜನಾಮ, (ಶಾಂತರಸ ಕಾವ್ಯನಾಮ) ಚೆನ್ನಬಸವಯ್ಯ-ಸಿದ್ಧಲಿಂಗಮ್ಮ ದಂಪತಿಗಳಿಗೆ ೭-೪-೧೯೨೪ರಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸ ಉರ್ದು ಮಾಧ್ಯಮದಲ್ಲಿ ಸಿರಿವಾರ, ಮುಷ್ಟೂರು, ಗುಲ್ಬರ್ಗ, ರಾಯಚೂರು, ಲಾತೂರುಗಳಲ್ಲಿ ನಡೆಯಿತು. ೧೯೩೯ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಶಾಲೆಯಿಂದ ಹೊರದೂಡಿಸಿಕೊಂಡಿದ್ದರು.

ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ(೧೯೮೫), ರಾಜ್ಯ ನಾಟಕ ಅಕಾಡಮಿಯ ಫೆಲೋಷಿಪ್(೧೯೯೩), ವಿದ್ಯಾವರ್ಧಕ ಸಂಘದ ಬಹುಮಾನ(೧೯೮೫), ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ(೧೯೯೭) ಮೊದಲಾದವು ಇವರಿಗೆ ಲಭಿಸಿದೆ.

ಕನ್ನಡ ಗಜಲ್ (ಕಾವ್ಯ) ಬಯಲು ಸೀಮೆಯ ಬಯಲು (ಕಾವ್ಯ) ಸತ್ಯಸ್ನೇಹಿ (ನಾಟಕ) ನಂಜು ನೊರೆವಾಲು (ನಾಟಕ), ಉಮ್ ರಾವ್ ಜಾನ್ ಅದಾ (ಅನುವಾದ), ಬಸವಪೂರ್ವ ಯುಗದ ಶರಣರು (ಸಂಶೋಧನ), ಪುರಾತನರ ಪುರಾಣ, ಮುಸುಕು ತೆರೆ, ಬೆನ್ನ ಹಿಂದಿನ ಬೆಳಕು ಇತ್ಯಾದಿಗಳು ಇವರ ಕೃತಿಗಳು.

ಶಾಂತರಸರು ೧೩-೪-೨00೮ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೭೨

ಅಧ್ಯಕ್ಷರು, ಶಾಂತರಸ ಹೆಂಬೇರಾಳು

ದಿನಾಂಕ ೨೭, ೨೮, ೨೯ ಜನವರಿ ೨00

ಸ್ಥಳ : ಬೀದರ

 

ಸಮ್ಮೇಳನ ಪಟ್ಟ ದಲಿತರಿಗೆ ಸಿಗಲಿ

ಎಪ್ಪತ್ತೊಂದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಮೇಲು ಜಾತಿಯ ಪ್ರತಿಭೆಗಳಲ್ಲೆ ಹಂಚಿಹೋಗಿವೆ.  ಮುಂಬರುವ ಸಮ್ಮೇಳನದಲ್ಲಾದರೂ  ದಲಿತ ಪ್ರತಿಭೆಗಳನ್ನು ಗುರುತಿಸಿ ಕನ್ನಡ ನುಡಿ ತಾಯಿಯ ಚೊಚ್ಚಲ ಪಟ್ಟ ನೀಡಲಿ. ತನ್ಮೂಲಕ ನೆಲಪರಂಪರೆ ಉತ್ತರೋತ್ತರವಾಗಿ ಉತ್ತುಂಗಕ್ಕೇರಲಿ ಎಂದು ಆಶಿಸೋಣ.

ಪ್ರಾದೇಶಿಕ ಅಸಮಾನತೆ

ಅಖಂಡ ಕರ್ನಾಟಕದ ಶಿರೋಮಕುಟವೂ, ಹೈದ್ರಾಬಾದ್ ಕರ್ನಾಟಕ ಧರಿಸೀಮೆಯೂ ಎನಿಸಿಕೊಂಡಿರುವ ಈ ಬೀದರಿನಲ್ಲಿ ಈಗಾಗಲೇ ಅಖಿಲ ಭಾರತ ಮಟ್ಟದ ಎರಡು ಸಮ್ಮೇಳನಗಳು ಜರುಗಿಹೋಗಿವೆ. ಇದು ಮೂರನೇ ಸಮ್ಮೇಳನ. ಬದುಕಿನುದ್ದಕ್ಕೂ ಈ ಭಾಗವನ್ನು ಕುರಿತು ಧ್ವನಿ ಎತ್ತಿದ ನಾನು ಪ್ರಸ್ತುತ ಸಮ್ಮೇಳನಾಧ್ಯಕ್ಷನಾಗಿರುವ ವಿಶೇಷ ಅವಕಾಶವನ್ನು ಬಳಸಿಕೊಂಡು ಕೆಲವು ವಿಷಯಗಳನ್ನು ಪ್ರಸ್ತಾಪಿಸಬೇಕು. ಹೈದ್ರಾಬಾದ್ ಕರ್ನಾಟಕದ ಸ್ವಾತಂತ್ರ್ಯ ಚಳುವಳಿ, ಸ್ವಾತಂತ್ರ್ಯೋತ್ತರ ಇತಿಹಾಸ ಮತ್ತು ನನ್ನ ಬದುಕಿನ ಚರಿತ್ರೆ ಅಭಿನ್ನ. ನೈಜಾಂ ಇಲಾಖೆಯ ಹೃದಯಭಾಗವಾಗಿದ್ದ ಬೀದರ, ಗುಲಬರ್ಗಾ, ರಾಯಚೂರು, ಕೊಪ್ಪಳ ಈ ಜಿಲ್ಲೆಗಳು ಸ್ವಾತಂತ್ರ್ಯಪೂರ್ವಕಾಲದಿಂದಲೂ ಕನ್ನಡವನ್ನು ಉಳಿಸಿ ಬೆಳೆಸಲು ಅವಿರತ ಶ್ರಮಪಟ್ಟಿವೆ. ಭಾಲ್ಕಿಯ ಚೆನ್ನಬಸವ ಪಟ್ಟದ್ದೇವರು ಆಳರಸ ನಿಜಾಮರ ಒತ್ತಡದ ನಡುವೆಯೂ ಹೊರಗೆ ಉರ್ದು ಬೋರ್ಡು ಹಾಕಿ ಒಳಗೆ ಕನ್ನಡ ಶಾಲೆಗಳನ್ನು ನಡೆಸಿದ್ದಾರೆ.  ನನ್ನಂಥ ಬಡವಿದ್ಯಾಗಳಿಗಾಗಿ ಮುಷ್ಟಿ ಫಂಡ್ ಅಂದರೆ ಮನೆಮನೆಗೆ ಭಾರವಾಗದಂತೆ ಒಂದು ಹಿಡಿಹಿಟ್ಟು ಭಿಕ್ಷೆ ಎತ್ತಿ ವಸತಿ  ನಿಲಯಗಳನ್ನು  ನಡೆಸಿದ್ದಾರೆ. ಅಂದು ಭಾಲ್ಕಿ ಅಪ್ಪನವರು, ಪ್ರಭುರಾವ ಕಂಬಳಿವಾಲಾ ಇಂಥವರು ಆಳರಸರನ್ನು ಎದುರು ಹಾಕಿಕೊಂಡು ಕನ್ನಡ ಶಾಲೆಗಳನ್ನು ನಡೆಸಿರದಿದ್ದರೆ ನಾನು ಕನ್ನಡ ಕವಿಪಟ್ಟ ಹೊತ್ತು ಇವತ್ತು ಈ ವೇದಿಕೆ ಮೇಲೆ ನಿಲ್ಲುವ ಪ್ರಮೇಯವೇ ಬರುತ್ತಿರಲಿಲ್ಲ.

ಸ್ವಾಯತ್ತ ಸಂಸ್ಥೆಗಳು

ಸರಕಾರವು ರಾಜ್ಯದಲ್ಲಿರುವ ವಿವಿಧ ಅಕಾಡೆಮಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಸಮಿತಿ ಮುಂತಾದ ಸ್ವಾಯುತ್ತ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡಿ ಅಷ್ಟೇ ಅಲ್ಲ ಅಕಾಡೆಮಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ವಿವಿಧ ಜಿಲ್ಲೆಗಳಲ್ಲಿ ವಿಕೇಂದ್ರೀಕರಣಗೊಂಡು ಕಾರ್ಯ ನಿರ್ವಹಿಸುವಂತಾಬೇಕು. ಈ ಸಂಸ್ಥೆಗಳಾದರೂ ರಾಜಧಾನಿ ಕೇಂದ್ರಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಪ್ರತಿ ಹಳ್ಳಿ, ಪ್ರತಿ ವ್ಯಕ್ತಿಗೂ ಕಾರ್ಯಕ್ರಮಗಳನ್ನು ಮುಟ್ಟಿಸಬೇಕು. ಇಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಅಲಕ್ಷಿತರು ಹೆಚ್ಚೆಚ್ಚು ತೊಡಗುವಂತೆ ನಿಗಾ ವಹಿಸಬೇಕು. ಈ ಮೇಲಿನ ಎಲ್ಲ ಅಕಾಡೆಮಿಗಳು ಗಡಿಭಾಗಗಳಲ್ಲಿ ವಿಶೇಷ ಮುತುವರ್ಜಿ ವಹಿಸಿ ಕಾರ್ಯಕ್ರಮ ನಡೆಸುವ ಮೂಲಕ ಈ ಜನತೆಯಲ್ಲಿ ನಾಡು-ನುಡಿಯ ಪ್ರೇಮ ಗಟ್ಟಿಗೊಳಿಸುವಂತೆ ಮಾಡಬೇಕು. ಈ ತೆರನ ಸಾಂಸ್ಕೃತಿಕ ಐಡೆಂಟಿಟಿಯನ್ನು  ತಾಜಾಗೊಳಿಸುವ ಮೂಲಕವೇ ಅವರಲ್ಲಿ ಅವರಿಸಿಕೊಂಡಿರುವ ಅನಾಥ ಪ್ರಜ್ಞೆ, ಅಭದ್ರತೆಯನ್ನು ಹೋಗಲಾಡಿಸಬೇಕು.

ಸಮ್ಮೇಳನಗಳು ಸಾರ್ಥಕವೆನಿಸಬೇಕು

ಮಹನೀಯರೇ, ನಮ್ಮ ಮುಂದಿನ ಸಮಸ್ಯೆಗಳು, ಸವಾಲುಗಳು ಸಂಖ್ಯಾತೀತವಾಗುತ್ತಿವೆ.  ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ಕಳೆದ ಅರ್ಧ ಶತಮಾನದಿಂದಲೂ ಈ ನಾಡ ಮನೆಯ ಅಂಗಳದ ಮೂಲೆ ಮೊಡಕುಗಳಲ್ಲಿ ಕಸ ತುಂಬಿಟ್ಟಿದ್ದೇವೆ. ನಮ್ಮ ಮನಸ್ಸುಗಳಲ್ಲಿಯೂ ಸಹಸ್ರಮಾನದ ಮೌಢ್ಯವೆಂಬ ಧೂಳು ತುಂಬಿಬಿಟ್ಟಿದ್ದೇವೆ. ಇದನ್ನು ಹಸನುಗೊಳಿಸಲು ಸಾವಿರ, ಲಕ್ಷ, ಕೋಟಿ ಅಸಂಖ್ಯ ಕೈಗಳು ಮುಂದೆ ಬರಬೇಕು.  ದೇಶವನ್ನು ಆಳುತ್ತಿರುವ ಸರಕಾರ, ಪಕ್ಷಗಳು ನಿಜವಾದ ಜನಪರ ಕಾಳಜಿಯೊಂದಿಗೆ ಮುನ್ನುಗ್ಗಬೇಕು. ಧರ್ಮದ ಮುಖಂಡರು ಸ್ವಾರ್ಥ ಸಂಕುಚಿತತೆಯ ಪರದೆ ಹರಿದು ಅಸಲಿ ಮಾನವೀಯತೆಯ ಹಣತೆ ಹಚ್ಚಬೇಕು. ಅಂದಾಗಲೇ ಇಂಥ ನುಡಿ ಶಬ್ದಗಳಿಗೆ ಅರ್ಥ ಮತ್ತು ಗೌರವ ಬರುತ್ತದೆ. ಇಲ್ಲವಾದರೆ ಸಮ್ಮೇಳನಗಳು ಬರುತ್ತವೆ ಹೋಗುತ್ತವೆ. ಜನರ ಬದುಕು ಮಾತ್ರ ಅದೇ ದುಃಖ ದುಮ್ಮಾನಗಳಲ್ಲಿ ಕೊಳೆಯುತ್ತಿದ್ದರೆ ಇವು ಯಾರಿಗಾಗಿ ಮತ್ತು ಏತಕ್ಕಾಗಿ ಎಂಬ ಪ್ರಶ್ನೆಗಳು ಕಾಡುತ್ತಲೆ ಇರುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಹಂಚಿಕೊಳ್ಳುವ ಹಾದಿಯಲ್ಲಿ ನಾವೂ ನೀವೂ ಹಣತೆಯ ಒಂದೊಂದೇ ಹನಿ ಎಣ್ಣೆಯಾಗಿ ಒಂದಾಗಿ ಜಗವ ಬೆಳೆಸೋಣ.

Tag: Kannada Sahitya Sammelana 72, Shantarasa Hemberaalu

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)