[elementor-template id=”7871″]
ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ, ಅಧ್ಯಾಪನ, ಆಡಳಿತ ಹೀಗೆ ವಿವಿಧಮುಖೀ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಇವರ ಬಾಲ್ಯದ ವಸಾಹತು ಸಂದರ್ಭದ ಅನುಭವಗಳನ್ನು ‘ನನ್ನ ಬದುಕು-ಬರಹ’ ಎಂಬ ಲೇಖನದಲ್ಲಿ ಅವರೇ ಸೂಚಿಸಿದ್ದಾರೆ. ಅಂಥ ವಸಾಹತು ಸಂದರ್ಭದ ಸಂವೇದನೆಯುಳ್ಳ ಕಂಬಾರರು ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅನಂತರ 1968ರಿಂದ 1969ರವರೆಗೆ ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿಯೂ, 1971ರಿಂದ 1991ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೂ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ನಂತರ 1992ರಿಂದ 1998ರವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ, ಮೈಸೂರಿನ ಕರ್ನಾಟಕ ನಾಟಕ ರಂಗಾಯಣದ ಸದಸ್ಯರಾಗಿಯೂ, ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ ಶಾಲೆಯ ಅಧ್ಯಕ್ಷರಾಗಿ ಹೀಗೆ ಅವರು ವಿವಿಧ ರಂಗಗಳಲ್ಲಿ ಸಮಸ್ತರಾಗಿ ಎಲ್ಲೆಲ್ಲಿಯೂ ಸಂದಿದ್ದಾರೆ.
ಕನ್ನಡದ ಮಹತ್ವದ ಕವಿಗಳು, ನಾಟಕಕಾರರು, ಜಾನಪದ ತಜ್ಞರು ಹಾಗೂ ಉತ್ತಮ ಆಡಳಿತಗಾರರಾದ ಕಂಬಾರರು ಸುಮಾರು ಇಪ್ಪತ್ತೈದು ನಾಟಕಗಳು, ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು, ಮೂರು ಕಾದಂಬರಿಗಳು, ಹತ್ತಕ್ಕೂ ಹೆಚ್ಚು ಜಾನಪದ ಕೃತಿಗಳನ್ನು ರಚಿಸಿದ್ದಾರೆ. ವಿಶ್ವದಾದ್ಯಂತ ಪ್ರಮುಖ ವೇದಿಕೆಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮೂರು ಸಾವಿರ ಪುಟಗಳಿಗೂ ಅಧಿಕವಾದ ‘ಕನ್ನಡ ಜಾನಪದ ವಿಶ್ವಕೋಶ’ವನ್ನು ಸಂಪಾದಿಸಿದ್ದಾರೆ.
ಕಂಬಾರರ ಐದು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಂಬಾರರ ‘ಜೋಕುಮಾರಸ್ವಾಮಿ’ ಭಾರತದ ಅತ್ಯುತ್ತಮ ನಾಟಕವೆಂದು ‘ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದಿದೆ. ‘ಜೈ ಸಿದ್ಧ ನಾಯಕ’ ವರ್ಧಮಾನ್ ಪ್ರಶಸ್ತಿ ಪಡೆದಿದೆ. ‘ಸಾವಿರ ನೆರಳು’ ಕವನ ಸಂಕಲನ ಕೇರಳ ರಾಜ್ಯದ ‘ಆಶಾನ್’ ಪ್ರಶಸ್ತಿ ಪಡೆಯಿತು. ಕೆ.ವಿ. ಶಂಕರೇಗೌಡ ಪ್ರಶಸ್ತಿ, ಭಾರತ ನಾಟಕ ಆಕಡೆಮಿಯ ‘ಶ್ರೇಷ್ಠ ನಾಟಕಕಾರ’ ಪ್ರಶಸ್ತಿ, ಆಂಧ್ರ ಸರ್ಕಾರದ ‘ಅತ್ಯುತ್ತಮ ಕವಿ’ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಜಾನಪದ ಕ್ಷೇತ್ರ ಸಾಧನೆಗೆ ಹಲವು ಪ್ರಶಸ್ತಿ ಹೀಗೆ ಪ್ರಶಸ್ತಿಗಳ ಸುರಿಮಳೆ ಕಂಬಾರರಿಗೆ ದೊರೆತಿದೆ. ಇವೆಲ್ಲಕ್ಕೂ ಮಿಗಿಲಾಗಿ ಅವರಿಗೆ ಸಾಹಿತ್ಯದ ಮೇರುಪ್ರಶಸ್ತಿಯಾದ ‘ಜ್ಞಾನಪೀಠ’ ಸಂದಿದೆ.
ಸಾಹಿತ್ಯ, ಜಾನಪದ, ಸಂಗೀತ, ನಾಟಕ ಜೊತೆಗೆ ಸಿನಿಮಾದಲ್ಲಿ ಅಪಾರ ಸಾಧನೆ ಮಾಡಿದ್ದಾರೆ ಕಂಬಾರರು. ಇವರು 5 ಚಲನಚಿತ್ರಗಳನ್ನೂ, 8 ಸಾಕ್ಷಗಳನ್ನೂ ತಯಾರಿಸಿದ್ದಾರೆ. ಅನೇಕ ಚಲನಚಿತ್ರಗಳಿಗೆ ಹಾಗೂ ಸಾಕ್ಷಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರ ‘ಕಾಡುಕುದುರೆ’ ಭಾರತೀಯ ಪನೋರಮವನ್ನು ಪ್ರವೇಶಿಸಿತು ಹಾಗೂ ಉತ್ತಮ ಹಿನ್ನಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು. 1981ರಲ್ಲಿ ‘ಸಂಗೀತಾ’ ಚಿತ್ರ ರಾಜ್ಯಪ್ರಶಸ್ತಿ ಪಡೆಯಿತು. ಸಂಭಾಷಣೆ, ನಿರ್ದೇಶನ, ಸಂಗೀತ ನಿರ್ದೇಶನ, ಉತ್ತಮ ಚಿತ್ರಕತೆ ಈ ಎಲ್ಲ ಪ್ರಶಸ್ತಿಗಳನ್ನೂ ಕಂಬಾರರು ಪಡೆದಿದ್ದಾರೆ. ಇನ್ನೂ ತುಂಬಾ ತುಂಬಾ ಇದೆ. ಹೇಳುತ್ತಾ ಹೋದರೆ, ಅದರಲ್ಲೇ ಲೇಖನ ತುಂಬಿ ಹೋದೀತು!
ಸುಮಾರು 1963ರಲ್ಲಿ ಹುಟ್ಟಿಕೊಂಡ ಕಂಬಾರರ ಕವಿತೆ ‘ಹೇಳತೇನ ಕೇಳ’ ಒಂದು ರೀತಿಯಲ್ಲಿ ತಮ್ಮ ಸಮಗ್ರ ಕಾವ್ಯವನ್ನು ಬಣ್ಣಿಸಿದಂತಿದೆ. ಒಂದು ಪ್ರತಿಭಾವಂತ ಸಂವೇದನೆ ಏನೆಲ್ಲಾ ಬಗೆಯಬಹುದೋ ಅದೆಲ್ಲವನ್ನೂ’ಹೇಳತೇನ ಕೇಳ’ ಪ್ರತಿಮೆ ತನ್ನಲ್ಲಿರಿಸಿಕೊಂಡಿರುವುದರಿಂದಲೇ ಕಂಬಾರರು ಮತ್ತೆ ಮತ್ತೆ ಪುರಾಣಗಳನ್ನು ಹೆಕ್ಕಿ ಮರು ಸೃಷ್ಟಿಗೆ ತೊಡಗುತ್ತಾರೆ. ‘ಋಷ್ಯಶೃಂಗ’, ‘ಹುಲಿಯ ನೆರಳು’ ನಾಟಕಗಳಲ್ಲೂ ‘ಕರಿಮಾಯಿ’ ಕಾದಂಬರಿಯಲ್ಲೂ ಇದೇ ಪುರಾಣ ಮತ್ತೂ ಬೇರೆಯದೇ ಆದ ಆಯಾಮಗಳ ವಿಶ್ಲೇಷಣೆ ಇದೆ. ‘ಹೇಳತೇನ ಕೇಳ’ದಲ್ಲಿ ಅತ್ಯಂತ ಅಮೂರ್ತವಾದ ವಸಾಹತು ಸಂಸ್ಕೃತಿ ತಂದ ಸಂಕೀರ್ಣವಾದ ಬದುಕಿನ ನೋವುಗಳನ್ನು ವ್ಯಕ್ತಪಡಿಸಲು ಕಂಬಾರರು ಗಟ್ಟಿದನಿಯಲ್ಲಿ ಹಾಡುವ ಜಾನಪದ ಲಾವಣಿಯ ಮಾಧ್ಯಮವನ್ನು ಅಭಿವ್ಯಕ್ತಿಗೆ ಶೋಧಿಸಿಕೊಂಡಿರುವುದು ಕವಿತೆ ಹೊರಡಿಸುವ ಒಟ್ಟು ಧ್ವನಿ ಪರಂಪರೆಗೆ ಅನನ್ಯತೆಯನ್ನು ಒದಗಿಸಿಕೊಟ್ಟಿದೆ
ಆಧುನಿಕ ನಾಗರೀಕ ಪ್ರಪಂಚವು ಗ್ರಾಮದ ಸಹಜತೆಗಳನ್ನು ಇಲ್ಲವಾಗಿಸುವ ಹಾಗೂ ಹಳ್ಳಿಯ ಅನನ್ಯತೆಗಳ ಮೇಲೆ ಸವಾರಿ ಮಾಡುವ ಪ್ರಕ್ರಿಯೆಗಳನ್ನು ಕಂಬಾರರು ‘ಕರಿಮಾಯಿ’ ಕಾದಂಬರಿಯಲ್ಲಿ ಮುಖಾಮುಖಿಯಾಗಿಸಿದ್ದಾರೆ. ನಾಗರೀಕ ಪ್ರಪಂಚದ ಬಗೆಗಿನ ಆಕರ್ಷಣೆಗಳ ಮತ್ತು ಗ್ರಾಮದ ನೈಜತೆಗಳ ಮುಖಾಮುಖಿಯಿಂದ ಎದುರಾಗುವ ದ್ವಂದ್ವಗಳ ಪುರಾಣದಂತೆ ‘ಕರಿಮಾಯಿ’ ಕಾದಂಬರಿ ಕಾಣುತ್ತದೆ. ಈ ಬಗೆಯ ದ್ವಂದ್ವಗಳು ‘ಹುಲಿಯ ನೆರಳು’. ‘ನಾಯಿಕತೆ’, ‘ಋಷ್ಯಶೃಂಗ’ ನಾಟಕಗಳಲ್ಲಿ ಹಾಗೂ ಅವರ ಅನೇಕ ಕವಿತೆಗಳಲ್ಲಿ ಬೇರೆ ಬೇರೆ ಅಯಾಮಗಳಲ್ಲಿ ಮೈದಾಳುವ ಕ್ರಮವು ವಿಶಿಷ್ಟವಾಗಿದೆ.
ಕಂಬಾರರ ಕೃತಿಗಳ ಮತ್ತೊಂದು ಮುಖ್ಯ ನೆಲೆಯೆಂದರೆ ಜಮೀನ್ದಾರಿ ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಒಡಕುಗಳನ್ನು ಕುರಿತ ಚಿಂತನೆ. ತನ್ನ ದರ್ಪ ಮತ್ತು ಅಹಂಕಾರಗಳಿಂದ ನಿರ್ಮಾಣಮಾಡುವ ಜಮೀನ್ದಾರಿ ವ್ಯವಸ್ಥೆಯ ಕ್ರೌರ್ಯ, ಅದರ ಪ್ರಭಾವ ಪರಿಣಾಮಗಳ ಸ್ವರೂಪವನ್ನು ‘ಜೋಕುಮಾರಸ್ವಾಮಿ’, ‘ನಾಯೀಕತೆ’, ‘ಜೈ ಸಿದ್ಧನಾಯಕ’ ಮೊದಲಾದ ಕೃತಿಗಳಲ್ಲಿ ವಿವೇಚಿಸುತ್ತಾರೆ.
‘ಸಾವಿರದ ನೆರಳು’ ಸಂಕಲನದ ಅನೇಕ ಕವನಗಳಲ್ಲಿ ‘ನೆರಳು’ ಮತ್ತು ‘ಕಾಮ’ ಮೂಲಪ್ರತಿಮೆಗಳಾಗಿ ಮೈ ಪಡೆಯುತ್ತವೆ. ಹೊಸ ಸಂಸ್ಕೃತಿಯೊಂದು ದೇಸೀ ಸಂಸ್ಕೃತಿಯ ಮೇಲೆ ನಡೆಸಿದ ಅನೈತಿಕ ದಾಳಿಯಿಂದ ದೇಸೀ ಪರಿಸರ ಬರಡಾಗುವ ಬಗೆಯನ್ನು ಕಂಬಾರರ ಕಾವ್ಯ ಚಿಂತನೆಗೆ ಗುರಿಪಡಿಸುತ್ತದೆ. ಉದಾಹರಣೆಗೆ ‘ಏಕಕಾಲಕ್ಕೆ ಇಬ್ಬರಿಗೆ ಮಗ ಆಗುವ’ ದುರಂತಗಳ ಪ್ರಶ್ನೆಯನ್ನು ನೋಡಬಹುದು. ಇಬ್ಬರಿಗೆ ಮಗನಾಗಿ ಬದುಕುವ ಕಷ್ಟಗಳ ಪರಂಪರೆಯು ಆಕ್ರಮಣಶೀಲ ಸಂಸ್ಕೃತಿಯ ಆಗಮನದಿಂದ ಎದುರಾಯಿತೆಂದು ಕಂಬಾರರ ಕೃತಿಗಳ ಹಿಂದಿರುವ ತಾತ್ವಿಕ ಚಿಂತನೆಯಾಗಿದೆ. ಇಂಥ ಆತಂಕಗಳಿಂದ, ಪಶ್ಚಿಮ ಸಂಸ್ಕೃತಿಯ ಸಹವಾಸದ ಫಲವಾಗಿ ಬದುಕಿನ ಎಲ್ಲ ಮಟ್ಟದ ಸಂದರ್ಭಗಳಲ್ಲಿ ಉಂಟಾದ ಅಧಃಪತನಗಳನ್ನು ಕಂಬಾರರ ಕಾವ್ಯ ವಿಶ್ಲೇಷಣೆಗೆ ಗುರಿಪಡಿಸುತ್ತದೆ. ಅಂಥ ವಿಶ್ಲೇಷಣೆ ‘ಸಾವಿರದ ನೆರಳು’, ‘ಬೆಳ್ಳಿಮೀನು’, ‘ಅಕ್ಕಕ್ಕು ಹಾಡುಗಳೆ’ ಕವನ ಸಂಕಲನಗಳಲ್ಲಿ ಬೆಳೆಯುತ್ತದೆ.
‘ಗುಡು ಗುಡು ಗುಮ್ಮ’ ಕವನದ ವಸ್ತು ಪಶ್ಚಿಮ ಸಂಸ್ಕೃತಿಯ ಸಂಬಂಧದಿಂದ ಎದುರಾದ ಅಧಃಪತನ. ಕಂಬಾರರೇ ಸೂಚಿಸುವಂತೆ, “ಪಶ್ಚಿಮ, ಅದರ ಸಹವಾಸದ ಫಲದ ವಾಣಿಜ್ಯ ಸಂಸ್ಕೃತಿ, ಅದಕ್ಕೆ ಮನೆ, ಮಠ ಕೆಡವಿ ಮಾಡಿದ ರಸ್ತೆ, ಅದರ ಪರಿಣಾಮ ರಾಜ್ಯ, ವೃತ್ತಿ, ಸಮಾಜ, ಸಂಸ್ಕೃತಿ, ಕುಟುಂಬಗಳ ಸಂಬಂಧದ ಅಧಃಪತನ ಇದರ ವಸ್ತು”.
ಕಿಟಕಿಯ ಗಾಜು ಒಡೆಯುತ್ತಿವೆ, ಮುರಿಯುತ್ತಿವೆ
ಬಾಗಿಲು, ಗೋಡೆ ಬಿರಿಯುತ್ತಿವೆ ಬರುತ್ತಿದೆ
ಮನೆಯಲ್ಲೇ ನಮ್ಮ ಸದರಿನಲ್ಲೇ ಗುಮ್ಮ
ನುಗ್ಗುತ್ತಿದೆ! ಮನೆಯಲ್ಲೇ ಹಾಯುತ್ತಿದೆ
ಮನೆಯನ್ನೆಲ್ಲ ರಸ್ತೆ ನಾಡುತ್ತದೆ, ಹೆಮ್ಮೆ ಪಡುತ್ತದೆ.
ನಾನು?
ಕಸದ ಗುಂಡಿಯಲ್ಲಿ ಕಳಕೊಂಡ ವಿಳಾಸದ
ಚೀಟಿ ಹುಡುಕುತ್ತ
ಹುಡುಕುತ್ತ
ಹುಡುಕುತ್ತಾ ಅಲೆದಾಡುತ್ತೇನೆ….
ಈ ಮೇಲಿನ ಉದ್ದರಣೆಯಲ್ಲಿ ‘ಗುಡು ಗುಡು ಗುಮ್ಮ’ನ ದಮನಕಾರೀ ಶಕ್ತಿಯ ಪರಿಣಾಮದ ಚಿತ್ರಗಳನ್ನು ಕಾಣುತ್ತೇವೆ. ‘ದಿಲ್ಲಿಯೆಂಬ ಕ್ಯಾಬರಿ’, ‘ಇಟ್ಟಿಗೆಯ ಪಟ್ಟಣ’, ‘ನಾಡು-ಕಾಡು’, ‘ಸೈನಿಕರ ಕೋವಿಯ ಹಾಡು’, ‘ಸೈನಿಕರ ಸಿಟಿ ಬಗೆಗಿನ ಹಾಡು’, ‘ಶಿವಾಪುರದ ಹಾಡು’, ‘ಭಾರತಿ’, ‘ಕೇಳೆನ್ನ ದೇಶವೆ’ ಮೊದಲಾದ ಕವಿತೆಗಳಲ್ಲಿ ನಗರ ಮತ್ತು ಗ್ರಾಮಸಂಸ್ಕೃತಿಗಳ ಸಂಘರ್ಷ ಮೈಪಡೆಯುತ್ತವೆ.
ಸ್ಥಳೀಯ ಪುರೋಹಿತ ವ್ಯವಸ್ಥೆ ಮತ್ತು ಕಮ್ಯುನಿಸ್ಟ್ ವಿರೋಧಿ ನಿಲುವುಗಳು ಕಂಬಾರರ ‘ತಕರಾರಿನವರು’ ಮತ್ತು ‘ಸಾವಿರದ ನೆರಳು’ ಕವನಗಳಲ್ಲಿ ಮುಖ್ಯ ಬಿಟ್ಟಿಯಾಗಿ ಮೈಪಡೆಯುತ್ತವೆ. ‘ಮಾವೊತ್ಸೆತುಂಗನಿಗೆ’ ಕವಿತೆಯಲ್ಲಿ ಭಾರತಾಂಬೆಯ ಚಿತ್ರವನ್ನೇ ಹೀಗೆ ನೋಡುತ್ತಾರೆ..
ನಮ್ಮ ಭಾರತಾಂಬೆ, ರೂಪಾಯಾಗಲ ಕುಂಕುಮದಾಕಿ
ಕೈತುಂಬ ಹಸಿರುಬಳೆ ಕುಪ್ಪಸದಾಕಿ,
ಒಬ್ಬರ ಕೈಬೆರಳಿಗೆ ಗುರಿಯಾಗದೆ ಮರ್ಯಾದೆಯೊಳಗೆ ಬಾಳಿದಾಕಿ
ಮುಖದಗಲ ಪುರಾಣಗತಿಯ ಸೆರಗು ತೂಗಿ ಕಣ್ಣು ಕಾಣಿಸದಾಕಿ
ಈ ಮೇಲಿನ ಸಾಲುಗಳಲ್ಲಿ ಭಾರತಾಂಬೆಯ ಭಾವುಕ ಚಿತ್ರವನ್ನು ಪ್ರಕಟಿಸುತ್ತಲೆ, ಅವಳ ನಂಬಿಕೆ, ಕಲ್ಪನೆಗಳನ್ನು ವಿಡಂಬನೆಗೆ ಗುರಿಪಡಿಸಲಾಗಿದೆ. ಹಾಗೆಯೇ ಭಾರತಾಂಬೆಯ ಮೇಲೆ ಕಣ್ಣು ಹಾಕಿದೆಯೋ ಕೀಚಕನ ಗತಿಯೇ ನಿನಗೆಂದು ಮಾವೊತ್ಸೆಂಗನಿಗೆ ಕಟ್ಟೆಚ್ಚರದ ಮಾತನ್ನೂ ಕವನ ಭಿತ್ತರಿಸುತ್ತದೆ.
‘ಗಂಗಾಮಾಯಿ’ ಊರ ಕೆರೆಯ ಹೆಸರು. ಕೆರೆ, ಈ ಪ್ರತಿಮೆಯೇ ಜಡಾವಸ್ಥೆಗಳನ್ನು ಧ್ವನಿಸುವಂಥದ್ದು. ಇದು ಹರಿಯಬೇಕಾದ ನೀರು ಕೆರೆಯಾಗಿ ಸ್ಥಗಿತಗೊಂಡ ಸ್ಥಿತಿಯನ್ನು ಸಂಕೇತಿಸುತ್ತದೆ. ಪಾಪಗಳನ್ನು ತೊಳೆಯುವ ಗಂಗೆ ಹರಿಯಲಾಗದೆ ಮಡುಗೂಡು ಪಾಪಗಳ ಆಗರವಾದ ಸ್ಥಿತಿಯನ್ನು ಈ ಕವಿತೆ ಕಟ್ಟಿಕೊಡುತ್ತದೆ. ಗಂಗೆಯ ಒಡಲಿನಲ್ಲಿ ನಡೆಯುವ ದೈನಂದಿನ ಕ್ರಿಯೆಗಳು, ಅನ್ಯಾಯಗಳು, ಪಾಪಕರ ಘಟನೆಗಳಿಂದ ಕೃತ್ಯಗಳಿಂದ ಗಂಗೆಯೂ ಮಲಿನಗೊಂಡ ಸ್ಥಿತಿಯನ್ನು ಪ್ರಕಟಿಸುತ್ತ ಸ್ಥಳೀಯ ಸಂಸ್ಕೃತಿಯ ಮಲಿನಾವಸ್ಥೆಗಳನ್ನು ಎದುರಾಗಿಸುವುದು ‘ಗಂಗಾಮಾಯಿ’ ಕವಿತೆಯ ಅನನ್ಯತೆಯಾಗಿದೆ. ‘ಎಲ್ಲ ಬಗೆಯ ಕೊಳೆ, ಪಾಪಗಳನ್ನು ತೊಳೆದು ಶುಭ್ರಗೊಳಿಸಬೇಕಾದ ಗಂಗೆ ಅಶುಚಿಯಾಗಿ ಅಶುಭ್ರಳಾಗಿ ಕೊಳೆತು ಹೀನಾವಸ್ಥೆಗೆ ಒಳಗಾದುದರ ಬಗೆಗೆ ಇಲ್ಲಿ ಒಮ್ಮೆಗೆ ವಿಷಾದ ಮತ್ತು ವ್ಯಂಗ್ಯ ಪ್ರಕಟವಾಗುತ್ತದೆ. ಮಡುಗಟ್ಟಿದ ಪರಂಪರೆಯ ಮೌಲ್ಯಗಳನ್ನು ಹಿಡಿದಿಡಲು ಕಂಬಾರರ ಸಂವೇದನೆ ಸೃಷ್ಟಿಸುವ ರೂಪಕ ಪ್ರತಿಮೆಗಳು ಓದುಗನನ್ನು ಒಮ್ಮೆಗೆ ದಂಗುಬಡಿಸುತ್ತವೆ.
‘ಚಕೋರಿ’ಯನ್ನು ಓದುತ್ತ ಹೋದಂತೆ ಕೃತಿಯಲ್ಲಿ ಅಭಿವ್ಯಕ್ತಗೊಂಡಿರುವ ಜೀವನಾನುಭವ, ದೇಸೀ ಸಂಸ್ಕೃತಿ, ನಂಬಿಕೆ-ಆಚರಣೆ, ಮಾಟ-ಮಂತ್ರ, ಕನಸು-ಕಲ್ಪನೆ, ತಂತ್ರ-ಭಾಷಿಕ ನೆಲೆಗಳು ಓದುಗನನ್ನು ಬೆಚ್ಚಿ ಬೀಳಿಸುತ್ತವೆ. ಆದಿಕಾಲದ ಕೃಷಿ, ಕುಟುಂಬ, ವಿದ್ಯೆ, ಕಲೆ, ಸಾಂಸ್ಕೃತಿಕ ರಾಜಕೀಯ ಜಿಜ್ಞಾಸೆಗಳು ‘ಚಕೋರಿ’ಯಲ್ಲಿ ಮುಖ್ಯವಾಗಿವೆ. ಅಖಂಡತೆಯನ್ನು ಒಡೆದರೆ ಎದುರಾಗುವ ಅನಾಹುತಗಳನ್ನು ಚಕೋರಿ ಧ್ವನಿಸುತ್ತಾ, ಅಂಥ ಅನಾಹುತಗಳನ್ನು ದಾಟಿ ಪ್ರತಿಬಿಂಬಗಳೆಲ್ಲವೂ ಬಿಂಬಗಳಲ್ಲಿ ಐಕ್ಯವಾಗುವ, ಬಯಲು ನಿರ್ಬಯಲಾಗುವ ಕಡೆಗೆ ಚಕೊರಿಯ ಶೋಧ ನಡೆಯುತ್ತದೆ.
ಚಂದ್ರಾಮನಂಬೂವ ಕನ್ನಡಿ ಮಾಡಿ
ನನ್ನ ಕನ್ನಡಿ ಮಾಡಿ ಅದರ ಎದುರಿಟ್ಟಿ
ಪ್ರತಿಬಿಂಬ ನೆರೆದಾವು ಬಿಂಬದ ಜೋಡಿ||ಬಯಲು||
ಬಯಲಾಗ ಸೇರ್ಯಾವು ನಿರ್ವಯಲಾಗಿ
ಜೋ ಜೋ ಎನ್ನ ಜ್ಯೋತಿಯ ಕಂದಾ ಜೋ ಜೋ||
ಒಟ್ಟಂದದಲ್ಲಿ ನವೋದಯ ಕಾವ್ಯದ ಅನಂತರದ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕಂಬಾರರದು ವಿಶಿಷ್ಟ ಅಭಿವ್ಯಕ್ತಿಯಾಗಿದೆ. ಸ್ಥಳೀಯತೆಯ ಸತ್ವಗಳನ್ನು ಕೇಂದ್ರಪ್ರಜ್ಞೆಯನ್ನಾಗಿಸಿಕೊಂಡ ಅವರ ಕೃತಿ ಸಮೂಹ ಸ್ವಾತಂತ್ರ್ಯಾ ನಂತರದ ನೆಲೆಯಲ್ಲಿ ನಿಂತು ವಸಾಹತುಶಾಹಿಯ ಪ್ರಭಾವ ಪರಿಣಾಮಗಳು ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಬೇರೂರಿದ ನೆಲೆಗಳನ್ನು ಮುಖ್ಯಭಿತ್ತಿಯನ್ನಾಗಿಸಿಕೊಂಡು ವಿವೇಚಿಸಿತು. ಅವರ ಸಾಹಿತ್ಯ ವಸಾಹತು ಹಾಗೂ ವಸಾಹತು ಆಳ್ವಿಕೆಯ ಅನಂತರದ ಸಂಕೀರ್ಣತೆಯ ಸಂದರ್ಭಗಳನ್ನು ಗಂಭೀರವಾಗಿ ಜಿಜ್ಞಾಸೆಗೆ ಒಳಪಡಿಸುವ ಅಭಿವ್ಯಕ್ತಿಯಾಗಿದೆ.
[elementor-template id=”7835″]
[forminator_form id=”386″]
[custom_comment_form]
[forminator_form id=”386″]
[forminator_form id=”386″]
[forminator_form id=”386″]
[elementor-template id=”8430″]
[elementor-template id=”8373″]
[elementor-template id=”8354″]
[elementor-template id=”8337″]
[elementor-template id=”8289″]
[elementor-template id=”8273″]
[elementor-template id=”8183″]
[elementor-template id=”8140″]
[elementor-template id=”8126″]
[elementor-template id=”8089″]
[elementor-template id=”8076″]
[elementor-template id=”8059″]
[elementor-template id=”8259″]
[elementor-template id=”8059″]
[elementor-template id=”8223″]
[elementor-template id=”8034″]
[elementor-template id=”8021″]
[elementor-template id=”8009″]
[elementor-template id=”7992″]
[elementor-template id=”7871″]
[elementor-template id=”7905″]
[elementor-template id=”7751″]
[elementor-template id=”7779″]
[elementor-template id=”7796″]
[elementor-template id=”7822″]
[elementor-template id=”7807″]
[elementor-template id=”7704″]
[elementor-template id=”8548″]
[elementor-template id=”7669″]
[elementor-template id=”7651″]
[elementor-template id=”7731″]
[elementor-template id=”7623″]
[elementor-template id=”7567″]
[elementor-template id=”7555″]
[elementor-template id=”7522″]
[elementor-template id=”7498″]
[elementor-template id=”7519″]

ಬೆಂಗಳೂರು: ಮಂಡ್ಯದಲ್ಲಿ ಡಿಸಂಬರ್ 20,21 ಮತ್ತು 22ರಂದು ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಬರಹಗಾರ, ಜನಪದ ವಿದ್ವಾಂಸ ಗೊ.ರು.ಚನ್ನಬಸಪ್ಪನವರು ಆಯ್ಕೆಯಾಗಿದ್ದಾರೆ. ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಸರ್ವಾನುಮತದಿಂದ ಈ ನಿರ್ಣಯವನ್ನು ತೆಗೆದು ಕೊಳ್ಳಲಾಯಿತೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಇಂದು ಸಂಜೆ 5 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ 60 ಸದಸ್ಯರಲ್ಲಿ 53 ಜನ ಭಾಗವಹಿಸಿದ್ದು ಐತಿಹಾಸಿಕವೆಂದು ತಿಳಿಸಿದ ಅವರು ಸೌಹಾರ್ದಯುತ ವಾತಾವರಣದಲ್ಲಿ ಈ ಚರ್ಚೆ ನಡೆದು ಗೊ.ರು.ಚ ಅವರ ಆಯ್ಕೆಯಾಯಿತು ಎಂದು ತಿಳಿಸಿದರು. ಆಯ್ಕೆಯ ನಂತರ ನಾಡೋಜ ಡಾ.ಮಹೇಶ ಜೋಷಿಯವರು ದೂರವಾಣಿಯ ಮೂಲಕ ಗೊ.ರು.ಚ ಅವರಿಗೆ ವಿಷಯವನ್ನು ತಿಳಿಸಿ ಅಭಿನಂದಿಸಿದಾಗ ಅವರು ಅತ್ಯಂತ ಸಂತೋಷದಿಂದ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದನ್ನೂ ನಾಡೋಜ ಡಾ.ಮಹೇಶ ಜೋಶಿ ಪತ್ರಿಕಾ ಗೋಷ್ಟಿಯಲ್ಲಿ ಹಂಚಿ ಕೊಂಡರು.
ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿಯೇ ಮೊದಲ ಸಲ ಸಮ್ಮೇಳನಾದಧ್ಯಜಕ್ಷರ ಆಯ್ಕೆ ಸಾರ್ವಜನಿಕವಾಗಿ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಸಾರ್ವಜನಿಕರಿಂದಲೇ ಅನೇಕ ಹೆಸರುಗಳು ಪ್ರಸ್ತಾಪವಾಗಿದ್ದು ವಿಶೇಷವಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ (33)ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಸ್ತಾಪವಿದ್ದು ಇದರಲ್ಲಿ ಸಮ್ಮೇಳನಾಧ್ಯಕ್ಷತೆಯ ಕುರಿತು ಯಾವ ಮಾನದಂಡವನ್ನು ನಿಗಧಿ ಪಡಿಸಿಲ್ಲದ ಹಿನ್ನೆಲೆಯಲ್ಲಿ ಎಲ್ಲಾ ಅಭಿಪ್ರಾಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮುಕ್ತವಾಗಿ ಸ್ವೀಕರಿಸಿ ಪರಿಶೀಲಿಸಿತು ಎಂದು ಪತ್ರಿಕಾ ಗೋಷ್ಟಿಯಲ್ಲಿ ನಾಡೋಜ ಡಾ.ಮಹೇಶ ಜೋಶಿಯವರು ವಿವರಿಸಿದರು.
ಇಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಲವಾರು ಹೆಸರುಗಳು ಪರಿಗಣನೆಗೆ ಬಂದವು. ಹಿರಿತನ ಮತ್ತು ಕನ್ನಡಕ್ಕೆ ಸಲ್ಲಿಸಿರುವ ಅಪಾರ ಸೇವೆಯ ಹಿನ್ನೆಲೆಯಲ್ಲಿ ಗೊ.ರು.ಚನ್ನಬಸಪ್ಪನವರ ಹೆಸರನ್ನು ಎಲ್ಲರೂ ಏಕಕಂಠದಿಂದ ಒಪ್ಪಿಗೆ ಸೂಚಿಸಿ ಸರ್ವಾನುಮತದ ಆಯ್ಕೆಗೆ ಕಾರಣರಾದರು. ಪರಿಶೀಲನೆಗೆ ಬಂದ ಹೆಸರುಗಳಾದ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಹಂಪ.ನಾಗರಾಜಯ್ಯ, ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಸುಧಾಮೂರ್ತಿ, ಡಾ.ಲತಾ ರಾಜಶೇಖರ್, ನಾ.ಮೊಗಸಾಲೆ ಅವರಿಗಿಂತ ಗೊ.ರು.ಚನ್ನಬಸಪ್ಪನವರ (94 ವರ್ಷ, ಆರು ತಿಂಗಳು) ಹಿರಿತನವನ್ನು ಆಯ್ಕೆ ಸಂದರ್ಭದಲ್ಲಿ ಗಮನಿಸಲಾಯಿತು, ಜಾನಪದ ಭೀಷ್ಮ ಎನ್ನಿಸಿ ಕೊಂಡ ಅವರು ನಾಡು-ನುಡಿ-ನೆಲ-ಜಲದ ಕುರಿತು ಸದಾ ತುಡಿಯುತ್ತಿರುವ ಶ್ರೇಷ್ಠ ಚಿಂತಕ ಎನ್ನುವುದನ್ನು ಪರಿಗಣಿಸಲಾಯಿತು. ಅವರು ಕನ್ನಡಕ್ಕೆ ನೀಡಿದ ಕೊಡುಗೆ, ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವಲ್ಲಿ ವಹಿಸಿದ ಪಾತ್ರವನ್ನೂ ಈ ಸಂದರ್ಭದಲ್ಲಿ ಗಮನಿಸಲಾಯಿತು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿ 1994ರಲ್ಲಿ ಮಂಡ್ಯದಲ್ಲಿ ಚದುರಂಗರ ಅಧ್ಯಕ್ಷತೆಯಲ್ಲಿ 63ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಗೊ.ರು.ಚ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಮೂವತ್ತು ವರ್ಷಗಳ ನಂತರ ಮಂಡ್ಯದಲ್ಲಿಯೇ ಅಯೋಜನೆಗೊಳ್ಳುತ್ತಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರು ಅಧ್ಯಕ್ಷರಾಗುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಬಣ್ಣಿಸಿದರು. ಸಮ್ಮೇಳನಾಧ್ಯಕ್ಷತೆಗೆ ಒಬ್ಬರನ್ನು ಮಾತ್ರ ಆಯ್ಕೆ ಮಾಡುವ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಗೊ.ರು.ಚ ಅವರನ್ನು ಪರಿಗಣಿಸಲಾಯಿತು. ಉಳಿದವರೂ ಸಮ್ಮೇಳನಾಧ್ಯಲಕ್ಷತೆಗೆ ಅರ್ಹರಾಗಿದ್ದು ಅವಕಾಶವಿದ್ದರೆ ಎಲ್ಲರನ್ನೂ ಆಯ್ಕೆ ಮಾಡಲಾಗುತ್ತಿತ್ತು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಅರ್ಥಪೂರ್ಣವಾಗಿ ನುಡಿದರು
ಗೊ.ರು.ಚನ್ನಬಸಪ್ಪನವರ ಸ್ಥೂಲ ಪರಿಚಯವನ್ನು ಮಾಡಿಕೊಟ್ಟ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ಸಾಹಿತ್ಯಲೋಕಕ್ಕೆ ಅದರಲ್ಲೂ ಜಾನಪದ ಸಾಹಿತ್ಯಕ್ಕೆ ಅಪಾರ ಸೇವೆಸಲ್ಲಿಸಿರುವ ಗೊ. ರು. ಚೆನ್ನಬಸಪ್ಪನವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ 1930ರಮೇ 18 ರಂದು ಜನಿಸಿದರು. 1948 ವರ್ಷದಲ್ಲಿ ಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಚನ್ನಬಸಪ್ಪನವರು ಗಾಂಧೀಗ್ರಾಮದಲ್ಲಿ ಸಮಾಜಶಿಕ್ಷಣ ತರಬೇತಿಯನ್ನು ಪಡೆದರು. ಭೂದಾನ ಚಳುವಳಿ, ವಯಸ್ಕರ ಶಿಕ್ಷಣ ಮತ್ತು ಸೇವಾದಳಗಳಲ್ಲಿ ಚನ್ನಬಸಪ್ಪನವರು ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ್ದಾರೆ. ಚನ್ನಬಸಪ್ಪನವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಕಮಿಷನರ್ ಆಗಿ ಸಹಾ ಮಹತ್ವದ ಸೇವೆ ಸಲ್ಲಿಸಿದವರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ಮತ್ತು ಅಧ್ಯಕ್ಷರಾಗಿ (1992-95) ಸೇವೆ ಸಲ್ಲಿಸಿ ಅನೇಕ ಮಹತ್ವಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ನೂರೈವತ್ತಕ್ಕೂ ಹೆಚ್ಚು ಮಹತ್ವ ಪೂರ್ಣ ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತು. ಚನ್ನಬಸಪ್ಪನವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿವರಿಸಿ
ಮಹಾದೇವಿ, ಸದಾಶಿವ ಶಿವಾಚಾರ್ಯ, ಕರ್ನಾಟಕ ಪ್ರಗತಿಪಥ, ಚೆಲುವಾಂಬಿಕೆ, ಕುನಾಲ, ಸಾಕ್ಷಿ ಕಲ್ಲು, ಬೆಳ್ಳಕ್ಕಿ ಹಿಂಡು ಬೆದರ್ಯಾವೊ, ಬಾಗೂರು ನಾಗಮ್ಮ, ಗ್ರಾಮ ಗೀತೆಗಳು, ವಿಭೂತಿ, ಕರ್ನಾಟಕ ಜನಪದ ಕಲೆಗಳು ಹೀಗೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಗೊ.ರು. ಚನ್ನಬಸಪ್ಪನವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಮಾಗಿದ ತಮ್ಮ ಹಿರಿಯ ವಯಸ್ಸಿನಲ್ಲಿಯೂ ನಗೆಮೊಗದಿಂದ ಕನ್ನಡ ಸೇವೆಯಲ್ಲಿ ನಿರತರಾಗಿರುವ ಗೊ.ರು.ಚನ್ನಬಸಪ್ಪನವರ ಆಯ್ಕೆಯನ್ನು ಎಲ್ಲಾ ವಲಯಗಳಿಂದಲೂ ಮುಕ್ತವಾಗಿ ಪ್ರಶಂಸಿಸಲಾಗುತ್ತಿದೆ ಎಂದ ನಾಡೋಜ ಡಾ.ಮಹೇಶ ಜೋಶಿ ಮುಂದೆ ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರವನ್ನು ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
[forminator_form id=”386″]


ವೀರಪ್ಪ ಮೊಯ್ಲಿ ಅವರು ಕರ್ನಾಟಕ ರಾಜ್ಯದ ೧೩ನೇ ಮುಖ್ಯಮಂತ್ರಿಗಳಾಗಿ ಮತ್ತು ಕೇಂದ್ರಸಚಿವರಾಗಿ ರಾಜಕಾರಣದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಸಾಹಿತ್ಯಕೃಷಿಯಲ್ಲೂ ಮಹತ್ವದ ಸಾಧನೆ ಮಾಡಿದವರಾಗಿದ್ದಾರೆ.
ವೀರಪ್ಪ ಮೊಯ್ಲಿಯವರು ೧೯೪೦ ಜನೆವರಿ ೧೨ರಂದು ಜನಿಸಿದರು. ಇವರ ತಾಯಿ ಪೂವಮ್ಮ ಮತ್ತು ತಂದೆ ತಮ್ಮಯ್ಯ ಮೊಯ್ಲಿ ಅವರು. ಮೊಯ್ಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದರು. ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ ನಂತರ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಂತೆಯೆ, ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು. ಕಾರ್ಕಳ ಹಾಗು ಮಂಗಳೂರುಗಳಲ್ಲಿ ವಕೀಲಿ ವೃತ್ತಿಯನ್ನಾರಂಭಿಸಿ ಮೊಯ್ಲಿಯವರು ನಂತರದಲ್ಲಿ ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿ ಮುಂದುವರಿದರು.
೧೯೬೮ರಲ್ಲಿ ಮೊಯ್ಲಿಯವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೯ರಲ್ಲಿ ಕಿಸಾನ ಸಭಾ ಸ್ಥಾಪಿಸಿದರು. ೧೯೭೨ರಿಂದ ೧೯೯೯ರವರೆಗೆ ಮೊಯ್ಲಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ೧೯೭೪ರಿಂದ ೧೯೭೭ರವರೆಗೆ ಮೊಯ್ಲಿಯವರು ಸಣ್ಣ ಕೈಗಾರಿಕೆ ಖಾತೆಯ ಮಂತ್ರಿಯಾಗಿದ್ದರು. ೧೯೮೦ರಿಂದ ೧೯೮೨ರವರೆಗೆ ಹಣಕಾಸು ಮತ್ತು ಯೋಜನಾ ಖಾತೆಯ ಮಂತ್ರಿಯಾಗಿದ್ದರು. ೧೯೮೯ರಿಂದ ೧೯೯೨ರ ವರೆಗೆ ವಿವಿಧ ಇಲಾಖೆಗಳ ಸಚಿವರಾಗಿದ್ದ ಮೊಯ್ಲಿ ಅವರು,
೧೯೯೨ರಿಂದ ೧೯೯೪ರವರೆಗೆ ಕರ್ನಾಟಕದ ೧೩ನೇ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.
ಸಾಹಿತ್ಯ ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿರುವ ವೀರಪ್ಪ ಮೊಯ್ಲಿಯವರ ಪ್ರಮುಖ ಕೃತಿಗಳು ಇಂತಿವೆ:
ಕಾದಂಬರಿ: ಸುಳಿಗಾಳಿ, ಸಾಗರದೀಪ, ಕೊಟ್ಟ, ತೆಂಬರೆ
ನಾಟಕಗಳು: ಮಿಲನ, ಪ್ರೇಮವೆಂದರೆ, ಪರಾಜಿತ, ಮೂರು ನಾಟಕಗಳು
ಕಾವ್ಯ: ಹಾಲು ಜೇನು, ಮತ್ತೆ ಮಡೆಯಲಿ ಸಮರ, ಯಕ್ಷಪ್ರಶ್ನೆ, ಜೊತೆಯಾಗಿ ನಡೆಯೋಣ (ಶ್ರೀಮತಿ ಮಾಲತಿ ಮೊಯ್ಲಿಯವರ ಜೊತೆಯಲ್ಲಿ), ಶ್ರೀರಾಮಾಯಣ ಅನ್ವೇಷಣಂ
ವೀರಪ್ಪ ಮೊಯ್ಲಿ ಅವರಿಗೆ ೨೦೦೦ನೆಯ ಸಾಲಿನಲ್ಲಿ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ, ೨೦೦೧ನೆಯ ಸಾಲಿನಲ್ಲಿ ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರ ಸುಧಾರಣೆಗಾಗಿ ಕೊಡಮಾಡುವ ದೇವರಾಜ ಅರಸು ಪ್ರಶಸ್ತಿ, ೨೦೦೧ರ ಆರ್ಯಭಟ ಪುರಸ್ಕಾರ, ೨೦೦೨ರಲ್ಲಿ ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ೨೦೦೨ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ, 2013ರ ಬ್ಯಾಂಕಾಕಿನ ಎಷಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ಲೋಬಲ್ ಸಿಟಿಜನ್ ಪ್ರಶಸ್ತಿ, ನ್ಯಾಯ್ಯಾಂಗದಲ್ಲಿನ ವೈಶಿಷ್ಟ್ಯಮಯ ಕೊಡುಗೆಗಳಿಗಾಗಿ ಯುನೈಟೆಡ್ ಕಿಂಗ್ಡಂನ ಹೌಸ್ ಆಫ್ ಕಾಮನ್ಸ್ ನೀಡುವ ನೆಕ್ಸ್ಟ್ ಸ್ಟೆಪ್ ಫೌಂಡೆಶನ್ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ವೈವಿಧ್ಯಮಯ ಗೌರವಗಳು ಸಂದಿವೆ. ಜೊತೆಗೆ ಇವರ ‘ಶ್ರೀರಾಮಾಯಣ ಅನ್ವೇಷಣಂ’ ಕೃತಿಗೆ ಸಾಹಿತ್ಯಕ್ಷೆತ್ರದ ಮಹತ್ವದ ಪ್ರಶಸ್ತಿಗಳಾದ ಭಾರತೀಯ ಜ್ಞಾನಪೀಠ ಪ್ರತಿಷ್ಠಾನ ನೀಡುವ ೨೦೧೦ರ ಸಾಲಿನ ಮೂರ್ತಿದೇವಿ ಪ್ರಶಸ್ತಿ ಹಾಗೂ ೨೦೧೪ರ ಸಾಲಿನ ಪ್ರತಿಷ್ಟಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಗೌರವಗಳು ಸಂದಿವೆ.
Tag: Veerappa Moily
ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ಒಬ್ಬ ಮಹತ್ವದ ಕನ್ನಡ ಸಾಹಿತ್ಯ ಪ್ರಕಾರದ ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ, ಹಾಗೂ ಉತ್ಕೃಷ್ಟ ಸಂಪಾದಕರಾಗಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುತ್ತಾ ಬಂದಿದ್ದಾರೆ.
ವೆಂಕಟಾಚಲ ಶಾಸ್ತ್ರಿಗಳು, ೨೬ ಆಗಸ್ಟ್, ೧೯೩೩ ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಸುಬ್ಬಾಶಾಸ್ತ್ರಿಗಳು ಮತ್ತು ತಾಯಿ ಸುಬ್ಬಮ್ಮನವರು. ಎಂ.ಎ. ಮತ್ತು ಪಿ.ಎಚ್.ಡಿ. ಪದವಿಗಳನ್ನು ಪಡೆದ ಬಳಿಕ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿ ಕೆಲಸಮಾಡಿದರು. ಮುಂದೆ, ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು.
ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ, ನಿಘಂಟು, ಗ್ರಂಥಸಂಪಾದನೆ, ಸಾಹಿತ್ಯ ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ, ಅನುವಾದ, ನಾಟಕ, ಪಬಂಧ, ಇವೇ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಹಳಗನ್ನಡ ಸಾಹಿತ್ಯ ಪರಂಪರೆಯ ಕೊಂಡಿಯೆಂದೇ ಇಂದಿಗೂ ಸಾಹಿತ್ಯವಲಯದಲ್ಲಿ ಅವರು ಚಿರಪರಿಚಿತರಾಗಿದ್ದಾರೆ. ಪೂಜ್ಯ ಡಿ.ಎಲ್. ನರಸಿಂಹಾಚಾರ್ ಅವರ ಆಪ್ತ ಶಿಷ್ಯರಾದ ಇವರು, ಆಚಾರ್ಯರ ನಂತರ ಆ ಜಾಗವನ್ನು ತುಂಬಿಕೊಟ್ಟರು ಎಂದು ಪ್ರೊ. ಜಿ. ಬ್ರಹ್ಮಪ್ಪನವರು ವ್ಯಕ್ತಪಡಿಸಿರುವ ಅಭಿಪ್ರಾಯ ಕೇವಲ ಹೊಗಳಿಕೆಯ ಮಾತೆನಿಸದು.
ಪ್ರೊ. ಶಾಸ್ತ್ರಿಗಳ ಸಂಶೋಧನಾ ಕೃತಿಗಳಲ್ಲಿ ‘ಕನ್ನಡ ನೇಮಿನಾಥ ಪುರಾಣ, ತೌಲನಿಕ ಅಧ್ಯಯನ’ (೧೯೭೩), ‘ಜೈನ ಸಾಹಿತ್ಯ, ಜೈನ ಭಾಗವತ ಭಾರತಗಳು-ಒಂದು ಸಮೀಕ್ಷೆ’-(೧೯೮೦), ‘ಹರಿವಂಶ ಪುರಾಣ ಸಾರ’ (೧೯೮೭) ಕರ್ಣ ಪಾರ್ಯ, ‘ನೇಮಿನಾಥ ಪುರಾಣ ಕಥಾಸಾರ’ ೨೦೦೧, ‘ಅರ್ಧ ನೇಮಿನಾಥ ಪುರಾಣ ಕಥಾಸಾರ ವಸ್ತು ವಿಮರ್ಶೆ’ (೨೦೦೦), ‘ಕನ್ನಡ ಜೈನ ಪುರಾಣಗಳಲ್ಲಿ ಸಿದ್ಧಾಂತ ವಿಷಯ’, ‘ಜೈನ ಭಾರತ ಕಥೆ ಮತ್ತು ಸ್ವರೂಪ ಜೈನ ಧರ್ಮ ಮತ್ತು ಕನ್ನಡ ಸಾಹಿತ್ಯ’ : ‘ಕಾವ್ಯ ಮೀಮಾಂಸೆ’, ‘ಕನ್ನಡ ಚಿತ್ರ ಕಾವ್ಯ'(೧೯೮೭), ‘ಶಾಸ್ತ್ರೀಯ : ೨ ಸಂಪುಟಗಳು’, ‘ಮಹಾಕಾವ್ಯ ಲಕ್ಷಣ’ ಮುಂತಾದವು ಸೇರಿವೆ.
ಛಂದಃಶಾಸ್ತ್ರದಲ್ಲಿ ಅವರ ‘ಕನ್ನಡ ಛಂದ ಸ್ವರೂಪ;’ ‘ವ್ಯಾಕರಣ’ಗಳು ಸೇರಿವೆ.
ನಿಘಂಟು ಕಾರ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಕಾರ್ಯದಲ್ಲಿ ನೀಡಿರುವ ಬೃಹತ್ ಕೊಡುಗೆ ಅಲ್ಲದೆ ‘ದರ್ಪಣ ವಿವರಣ’ ಕೃತಿಯೂ ಸೇರಿದೆ.
ಅವರ ಗ್ರಂಥ ಸಂಪಾದನೆಗಳಲ್ಲಿ ‘ಆದಿಪುರಾಣ’, ‘ಛಂದೋಂಬುಧಿ’, ‘ಶಬ್ದಮಣಿ ದರ್ಪಣ’, ‘ಮುದ್ರಾ ಮಂಜೂಷ’, ‘ಗೊಮ್ಮಟ ಜಿನಸ್ತುತಿ’, ‘ಪಂಪ ಸಂಪುಟ’, ‘ಸಮಯ ಪರೀಕ್ಷೆ’ ಮುಂತಾದ ಬೃಹತ್ ಕೃತಿಗಳು ಸೇರಿವೆ. ಇದಲ್ಲದೆ ಗ್ರಂಥ ಸಂಪಾದನೆಯ ಪಾರಿಭಾಷಿಕ ಕೋಶವನ್ನೂ ಅವರು ಸೃಜಿಸಿದ್ದಾರೆ.
ಶಾಸ್ತ್ರಿಗಳು ರಚಿಸಿರುವ ಜೀವನ ಚರಿತ್ರೆಗಳಲ್ಲಿ ‘ಶ್ರೀ ಸಹಜಾನಂದ ಭಾರತಿ ಸ್ವಾಮಿಗಳು’ (೨೦೦೬) ಮತ್ತು ‘ಸರ್.ಎಂ.ವಿಶ್ವೇಶ್ವರಯ್ಯನವರ ಪೂರ್ವಜರು’ (೨೦೦೪) ಕೃತಿಗಳು ಸೇರಿವೆ.
‘ಮೆಲುಗಾಳಿಯ ಮಾತುಗಳು’ ಎಂಬುದು ಶಾಸ್ತ್ರಿಗಳ ಪ್ರಬಂಧ ಸಂಗ್ರಹ.
ಈ ಮೇಲ್ಕಂಡ ಕೃತಿಗಳೇ ಅಲ್ಲದೆ ಸಾಹಿತ್ಯ ಶಿಲ್ಪಿಗಳು, ಆಪ್ತರು-ಆಚಾರ್ಯರು, ಮಾರ್ಗದರ್ಶಕ ಮಹನೀಯರು, ಉದಾರಚರಿತರು- ಉದಾತ್ತಪ್ರಸಂಗಗಳು ಮುಂತಾದ ಅನೇಕ ಪ್ರಸಿದ್ಧ ಕೃತಿಗಳನ್ನೂ ಅವರು ರಚಿಸಿದ್ದಾರೆ.
ಪ್ರೊ. ವೆಂಕಟಾಚಲಶಾಸ್ತ್ರಿಗಳಿಗೆ ಅನೇಕ ಪ್ರಶಸ್ತಿಗಳು ಸಂದಿದ್ದು ಅವುಗಳಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ತೀನಂ’ಶ್ರೀ ಸ್ಮಾರಕ ಬಹುಮಾನ, ಶಂಭಾ ಜೋಶಿ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಕೇಂದ್ರ ಭಾಷಾ ಸಮ್ಮಾನ್ ಪ್ರಶಸ್ತಿ, ಮನುಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು 2015 ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿಗಳು ಸಂದಿವೆ.
Tag: Prof. T.V. Venkatachala Shastri
ಕುಂ. ವೀರಭದ್ರಪ್ಪನವರು ಜನಿಸಿದ ದಿನ ಅಕ್ಟೋಬರ್ 1, 1953. ಊರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರು.
‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದವರು ಕುಂಬಾರ ವೀರಭದ್ರಪ್ಪನವರು.
ಕುಂ.ವೀ. ಎಂದೇ ಜನಪ್ರಿಯರಾಗಿರುವ ಕುಂ. ವೀರಭದ್ರಪ್ಪ ಸಾಹಿತ್ಯ ಚಳುವಳಿಗಳಿಂದ ದೂರ ಉಳಿದವರು. ಆದರೆ ಬಂಡಾಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಬಂಡಾಯದ ಬಿಸುಪನ್ನು ಕಲೆಯಾಗಿಸುವ ಸಶಕ್ತ ರೂಪಕ ಶಕ್ತಿ ಅವರಲ್ಲಿತ್ತು. ಹೀಗಾಗಿ ಅವರ ಕೃತಿಗಳು ಬಂಡಾಯದ ಮ್ಯಾನಿಫೆಸ್ಟೋಗಳಂತೆ ಕಾಣಿಸದೇ ಇದ್ದದ್ದಕ್ಕೆ ಅದೇ ಕಾರಣ.
ಕುಂ.ವೀ. ಎಷ್ಟು ಜನಪರ ಲೇಖಕರಾಗಿದ್ದರು ಅನ್ನುವುದಕ್ಕೆ ಸಾಕ್ಷಿಯಾಗಿ ಅವರ ಕಾದಂಬರಿ ಜನಪ್ರಿಯ ಸಿನಿಮಾ ಆಗಿಯೂ ಗೆದ್ದದ್ದೇ ಸಾಕ್ಷಿ. ಶಿವರಾಜ್ ಕುಮಾರ್ ಅಭಿನಯದ ’ಮನ ಮೆಚ್ಚಿದ ಹುಡುಗಿ’ ಅವರ ಕಾದಂಬರಿ ’ಬೇಟೆ’ ಆಧರಿಸಿದ ಚಿತ್ರ. ಅವರ ’ಬೇಲಿಯ ಹೂಗಳು’ ಕಾದಂಬರಿಯನ್ನು ಆಧರಿಸಿ ಬಂದದ್ದು ’ದೊರೆ’ ಸಿನಿಮಾ. ‘ಕೊಟ್ರೇಶಿ ಕನಸು’, ‘ಕೆಂಡದ ಮಳೆ’ ಅವರ ಕತೆಯಾರಿತ ಮತ್ತೆರಡು ಪ್ರಮುಖ ಚಿತ್ರಗಳು. ಅವರ ಮತ್ತೊಂದು ಮಹತ್ವದ ಕೃತಿಯಾದ ‘ಕೂರ್ಮಾವತಾರ’ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದೆ.
’ಕಪ್ಪು’ ಕಥಾ ಸಂಕಲನ ಆ ಕಾಲಕ್ಕೆ ಅತ್ಯಂತ ಹೆಚ್ಚು ಮಾರಾಟ ಕಂಡ ಕಥಾ ಸಂಕಲನ. ಬಳ್ಳಾರಿಯ ಕೊಟ್ಟೂರಿನಂಥ ಕುಗ್ರಾಮದಲ್ಲಿ ಕುಳಿತು ಕನ್ನಡ ಸಾಹಿತ್ಯ ಲೋಕ ಬೆಚ್ಚಿ ಬೀಳಿಸುವಂಥ ಕೃತಿಗಳನ್ನು ಕೊಟ್ಟ ಕುಂ.ವೀ. ಆಂಧ್ರದ ಹಿರೇಹಳ್ಳದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು. ಕ್ರಮೇಣ ಸೃಜನಶೀಲ ಸಾಹಿತ್ಯದಿಂದ ಸೃಜನೇತರ ಸಾಹಿತ್ಯದತ್ತಲೂ ಹೊರಳಿಕೊಂಡ ಕುಂ.ವೀ. ಚಾಪ್ಲಿನ್ ಕುರಿತು ಮಹತ್ವದ ಕೃತಿಯೊಂದನ್ನು ಬರೆದರು. ಆಮೇಲೆ ಸಣ್ಣ ಕತೆಯತ್ತ ಮಹಾಕಾದಂಬರಿಗಳತ್ತ ಹೊರಳಿಕೊಂಡ ಕುಂ.ವೀ ಅವರು ಶಾಮಣ್ಣ, ಯಾಪಿಲ್ಲು ಮತ್ತು ಅರಮನೆ ಕಾದಂಬರಿಗಳನ್ನು ಬರೆದರು. ಶಾಮಣ್ಣ ಕಾದಂಬರಿ ಕೂಡ ಸಾಹಿತ್ಯ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿತ್ತು. ಕುಂ.ವೀ ಅವರ ಜ್ಞಾಪಕ ಚಿತ್ರಶಾಲೆ ಎಂದು ಕರೆಯಬಹುದಾದ ಕೃತಿ ’ಭಳಾರೆ ವಿಚಿತ್ರಂ’ . ಅರಮನೆ ಕೃತಿಗೆ 2007ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
‘ದಿವಿ ಸೀಮೆಯ ಹಾಡು’, ‘ನೀನಿಲ್ಲದ ಮನೆ’ ಕುಂ.ವೀ ಅವರ ಕವನ ಸಂಕಲನಗಳು. ಅವರ ಕಥಾ ಸಂಕಲನಗಳಲ್ಲಿ ‘ಡೋಮ ಮತ್ತಿತರ ಕಥೆಗಳು’, ‘ಭಳಾರೆ ವಿಚಿತ್ರಂ’, ‘ಇನ್ನಾದರೂ ಸಾಯಬೇಕು’, ‘ಕುಂವೀ ಆಯ್ದ ಕಥೆಗಳು’, ‘ಭಗವತಿ ಹಾಡು’, ‘ನಿಜಲಿಂಗ’, ‘ಅಪೂರ್ವ ಚಿಂತಾಮಣಿ ಕಥೆ’, ‘ಸುಶೀಲೆ ಎಂಬ ನಾಯಿಯೂ ವಾಗಿಲಿ ಎಂಬ ಗ್ರಾಮವೂ’, ‘ಉಡುಮರೂಪಿ ಆಯುಕಮ್ಮ ಉರ್ತ್ತಾಂ ತಲು’, ‘ಊರಿವೇಮಲ’, ‘ಕುಂವೀ ಬರೆದ ಕಥೆಗಳು’ ಪ್ರಮುಖವಾಗಿವೆ.
‘ಕಪ್ಪು’, ‘ಬೇಲಿ ಮತ್ತು ಹೊಲ’, ‘ಆಸ್ತಿ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’, ‘ಯಾಪಿಲ್ಲು’, ‘ಶ್ಯಾಮಣ್ಣ’, ‘ಕೆಂಡದ ಮಳೆ’, ‘ಬೇಟೆ’, ‘ಪಕ್ಷಿಗಳು’, ‘ಪ್ರತಿಧ್ವನಿ’, ‘ದ್ವಾವಲಾಪುರ’, ‘ಹನುಮ’, ‘ಅರಮನೆ’, ‘ಸೋಲೋ’, ‘ಬೇಲಿಯ ಹೂಗಳು’, ‘ಅರೊಹಣ’ ಕಾದಂಬರಿಗಳು.
‘ಚಾಪ್ಲಿನ್’, ‘ರಾಹುಲ ಸಾಂಕೃತ್ಯಾಯನ’, ‘ಗಾಂದೀ ಕ್ಲಾಸ್’ ವ್ಯಕ್ತಿ ಚಿತ್ರಣಗಳು. ತೆಲುಗು ಕಥೆಗಳು ಅನುವಾದಿತ ಕೃತಿ. ‘ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ’ ಅವರ ವಿಮರ್ಶಾತ್ಮಕ ಕೃತಿ. ‘ಕಥೆಗಳು: 1989’ ಅವರ ಸಂಪಾದನೆಯಲ್ಲಿ ಮೂಡಿ ಬಂತು.
ಕನ್ನಡ ಸಣ್ಣ ಕಥೆಯ ಭಾಷೆಗೆ ಹೊಸ ಮೊನಚು ಕೊಟ್ಟ ಕುಂ.ವೀ ಅವರ ಶೈಲಿ ಒಂದು ಕಾಲಕ್ಕೆ ಎಷ್ಟು ಜನಪ್ರಿಯವಾಗಿತ್ತು ಎಂದರೆ ಅದೇ ಭಾಷೆ, ನಿರೂಪಣಾ ಶೈಲಿ ಮತ್ತು ವಸ್ತುಗಳನ್ನು ಇಟ್ಟುಕೊಂಡು ಬರೆಯುವ ಲೇಖಕರ ದೊಡ್ಡ ದಂಡೇ ಹುಟ್ಟಿಕೊಂಡಿತು. ಕನ್ನಡ ಗದ್ಯದ ಪರಿಭಾಷೆಯನ್ನು ದೇವನೂರು ಸಮಾಕಾಲೀನರಾಗಿದ್ದುಕೊಂಡೂ ಅವರ ಪ್ರಭಾವದಿಂದ ಮುಕ್ತರಾಗಿದ್ದುಕೊಂಡು ಬದಲಾಯಿಸಿದರು. ಕುಂ. ವೀ ಅವರ ಅಂಕಣಕಾರರಾಗಿಯೂ ಪ್ರಸಿದ್ಧರಾಗಿದ್ದಾರೆ.
ಕು. ವೀರಭದ್ರಪ್ಪನವರಿಗೆ ಕೆಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೇ ಅಲ್ಲದೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಲಂಕೇಶ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿವೆ.
Tag: Kum Vee, Kum Veerabhadrappa, Nrupatunga Prashasthi
ಕನ್ನಡ ಸಾಹಿತ್ಯ, ಸಿನಿಮಾ, ಪ್ರಾಧ್ಯಾಪನ, ಚಳವಳಿ ಮತ್ತು ಸಾಂಸ್ಕೃತಿಕ ಲೋಕದ ಮಹತ್ವದ ಪ್ರತಿನಿಧಿಗಳೆಂದು ಖ್ಯಾತರಾಗಿರುವ ಡಾ. ಬರಗೂರು ರಾಮಚಂದ್ರಪ್ಪನವರು ರಾಯಚೂರಿನಲ್ಲಿ ಬರುವ ಡಿಸೆಂಬರ್ ೨ರಿಂದ ಮೂರು ದಿನಗಳವರೆಗೆ ನಡೆಯಲಿರುವ ೮೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
‘ಬ್ರಹ್ಮಪುತ್ರ, ಗಂಗಾನದಿಗಳಷ್ಟೆ ಶ್ರೇಷ್ಠವಲ್ಲ, ನಮ್ಮೂರಿನ ಹಳ್ಳ- ಕೊಳ್ಳಗಳೂ ಶ್ರೇಷ್ಠ. ಶ್ರೀಗಂಧ ಮಾತ್ರವಲ್ಲ, ನಮ್ಮೂರಿನ ಜಾಲಿ ಮರವೂ ಶ್ರೇಷ್ಠ. ಕೋಗಿಲೆ ಅಷ್ಟೇ ಅಲ್ಲ, ನಮ್ಮೂರಿನ ಕಾಗೆಯೂ ನನಗೆ ಶ್ರೇಷ್ಠವೇ ಆಗಿದೆ`. ಈ ಬರಗೂರು ರಾಮಚಂದ್ರಪ್ಪನವರ ಮಾತುಗಳು ಅವರ ಅಂತರಾಳದ ಒಂದು ನೋಟ. ತಳ ಮಟ್ಟದ ಜನರ ನೋವುಗಳಿಗೆ ಸದಾ ತುಡಿಯುವ, ಚಿಂತಿಸುವ ಮನಸ್ಸು ಅವರದು. ಅವರನ್ನು ಜನ ಗುರುತಿಸುವುದು ಬಂಡಾಯ ವ್ಯಕ್ತಿತ್ವದವರಾಗಿ, ಬಂಡಾಯ ಸಾಹಿತಿಯಾಗಿ, ಬಂಡಾಯದ ಮಾತುಗಾರರಾಗಿ. ಈ ಕುರಿತು ಬರಗೂರರು ಹೇಳುತ್ತಾರೆ “ಬಂಡಾಯವೆಂದರೆ ಹೊಡಿ, ಬಡಿ, ಕೊಲ್ಲು ಎಂದಲ್ಲ. ಬಂಡಾಯವೆಂಬುದು ನನ್ನ ಪ್ರಕಾರ ಸಿದ್ಧಾಂತ. ಯಾವುದೇ ಒಂದು ಅನಿವಾರ್ಯ ಪರಿಸ್ಥಿತಿ ಒದಗಿದಾಗ ಅದಕ್ಕೆ ಅಗತ್ಯವಾದ ಪ್ರತಿಕ್ರಿಯೆ ನೀಡದೆ ಸುಮ್ಮನೆ ಮೂಖನಾಗಿರುವುದು ನನಗೆ ಸಾಧ್ಯವಿಲ್ಲ. ಹಾಗೆ ಸುಮ್ಮನಿರುವುದು ನನಗೆ ಸಮ್ಮತವೂ ಅಲ್ಲ”. ನಾವು ಬರಗೂರರ ಅಭಿಪ್ರಾಯಗಳನ್ನು ಒಪ್ಪದಿರಬಹುದು ಅಥವಾ ಬಿಡಬಹುದು. ಆದರೆ ಅವರ ಕನ್ನಡ ಪ್ರೀತಿ, ಕನ್ನಡದ ಹೋರಾಟಗಳು, ಕನ್ನಡ ಕಾಳಜಿಗಳು, ಕನ್ನಡಕ್ಕಾಗಿ ಮಾಡಿದ ಕೆಲಸವನ್ನು ತೆಗೆದು ಹಾಕಲು ಸಾಧ್ಯವಿಲ್ಲ.
ಬರಗೂರು ರಾಮಚಂದ್ರಪ್ಪನವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಪಾಟಿ ಚೀಲ ಹಿಡಿದು ಕೆಂಪು ಬಸ್ಸಿನ ಹಿಂದೆ ಓಡುತ್ತಿದ್ದ ಬರಗೂರರು, ತುಮಕೂರು, ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ನಾಡಿನಲ್ಲಿ ಹೊಸ ಆಲೋಚನೆ, ಚಿಂತನೆಗಳಿಗೆ ಕಾರಣರಾದವರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಬರಗೂರರು ಸಲ್ಲಿಸಿದ ಸೇವೆ ಗಣನೀಯವಾದ್ದದ್ದು. ಸಾಹಿತ್ಯದಷ್ಟೆ ಸಿನೆಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನೆಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ಕೂಡ ವಿಭಿನ್ನ ಹಾದಿ ಹಿಡಿದವರು. ಬರಗೂರರ ಚಿತ್ರಗಳು ಬಡವರ, ದಲಿತರನ್ನು ಧ್ವನಿಸುವ ಮೂಲಕ ಭಾರತೀಯ ಸಿನೆಮಾ ರಂಗದ ಚರಿತ್ರೆಯ ಪುಟಗಳಾಗಿ ಮಿಂಚಿವೆ. ಅವರು ಕನ್ನಡದ ಮೇರು ನಟ ಡಾ.ರಾಜ್ಕುಮಾರ್ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಸಿನಿಮಾ ನಿರ್ದೇಶನ, ಹಾಡುಗಳು, ಕಥೆ, ಚಿತ್ರಕಥೆ ಇವೆಲ್ಲಾ ಕಲಾತ್ಮಕ ಹಾಗೂ ಜನಮಾನಸಗಳನ್ನು ತನ್ನದೇ ಆದ ರೀತಿಯಲ್ಲಿ ಸೆಳೆದಿವೆ.
ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಇವುಗಳಲ್ಲಿ ಬರಗೂರರು ದಕ್ಷರಾಗಿ ಕೆಲಸಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯಲ್ಲಿದ್ದಾಗ ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿ, ೪೦ಕ್ಕೂ ಅಧಿಕ ಕೃತಿಗಳು ಪ್ರಕಟವಾಗಲು ಕಾರಣರಾಗಿದ್ದಾರೆ. ಪ್ರಸಕ್ತದಲ್ಲಿ ಅವರು ಪ್ರಾಥಮಿಕ ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಪರ ಹೋರಾಟ ಮತ್ತು ಚಿಂತನೆಗಳಲ್ಲಿ ಅವರು ಎಂದೂ ಹಿಂದೆ ಬೀಳದವರು. ಕನ್ನಡ ಪರ ಕಾರ್ಯಕ್ರಮಗಳು, ಕನ್ನಡದ ಸಾಮಾನ್ಯ ಜನತೆ, ಕನ್ನಡತನವನ್ನು ಬಿತ್ತುವ ಕೆಲಸ ಅವರಿಗೆ ಎಂದೆಂದೂ ಪ್ರಿಯ. ಹೀಗಾಗಿ ಕನ್ನಡ ಪರ ಆಸಕ್ತರಿಗೆ ಅವರು ಎಂದೆಂದೂ ಪ್ರಿಯರು. ಹಾಗೆಂದ ಮಾತ್ರಕ್ಕೆ ಅವರು ಎಲ್ಲರನ್ನೂ ಪ್ರಿಯವಾಗಿಸಲು ಬಣ್ಣ ಬಣ್ಣದ ಮಾತುಗಳನ್ನಾಡುವವರಲ್ಲ. ಹೀಗಾಗಿ ಅವರ ಬಂಡಾಯ ಮನೋಧರ್ಮದ ಮಾತುಗಳು ಎಲ್ಲ ಜನರ ವೈಯಕ್ತಿಕ ಪ್ರೀತಿಗಳನ್ನೂ, ನಿಲುವುಗಳನ್ನೂ ಆಗಾಗ ಕೆದಕುತ್ತದೆ. ಅವರ ಮಾತುಗಳಿಗೆ ಹಲವು ಬಣ್ಣಗಳನ್ನು ಹಚ್ಚಿ ಅವರು ಹೀಗೆಂದರು, ಹಾಗೆಂದರು, ಅವರನ್ನು ಎಡಬಿಡಂಗಿ ಅಂದರು, ಮತ್ತೊಬ್ಬರು ಪ್ರಶಸ್ತಿಗೆ ಯೋಗ್ಯರಲ್ಲ ಎಂದರು, ಇನ್ನೊಬ್ಬರು ಏಕೆ ವಿಶ್ವಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಬಾರದು ಎಂದರು ಇತ್ಯಾದಿ ವಾಗ್ವಾದಗಳು ಹಲವು ಬಾರಿ ಪತ್ರಿಕೆಗಳಲ್ಲಿ ಕಂಡಬಂದದ್ದಿದೆ. ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ಅವರು ಎಲ್ಲರಿಗೂ ಪ್ರಿಯರು ಆದರೆ, ಎಲ್ಲವನ್ನೂ ತಮ್ಮ ಬಂಡಾಯದ ಸಿದ್ಧಾಂತಗಳ ಆಳವಾದ ನಿಲುವಿನ ಮೂಸೆಯಲ್ಲಿಟ್ಟು ಕನ್ನಡದ ಕಾಳಜಿಗಳಲ್ಲಿ ಅಳೆಯುವ ತಮ್ಮ ಮೂಲಭೂತ ಗುಣವನ್ನು ಅವರು ಬಿಟ್ಟುಕೊಡಲು ತಯಾರಿಲ್ಲ.
ಜಾಗತೀಕರಣವೆಂಬ ಭ್ರಮೆಯಲ್ಲಿ ಕಳೆದು ಹೋಗುತ್ತಿರುವ ವಿಶ್ವವನ್ನು ಅವರು ಮನನೀಯವಾಗಿ ಗುರುತಿಸುತ್ತಾರೆ. “ಕೈಗಾರಿಕೀಕರಣ ಕಾಲದಲ್ಲಿದ್ದ ಜನರ ಕನಸುಗಳೇ ಬೇರೆ. ಜಾಗತೀಕರಣ ಕಾಲದ ಕನಸುಗಳೇ ಬೇರೆ. ಈಗಲೂ ಹಿಂದಿನ ಕನಸುಗಳೇ ಇರಬೇಕೆಂದು ನಾನು ಹೇಳುತ್ತಿಲ್ಲ. ನಮಗೆ ಆರೋಗ್ಯಕರ ಮನೋಧರ್ಮವನ್ನು ಬೆಳೆಸುವ ಕನಸುಗಳು ಬೇಕು; ಆ ಕನಸುಗಳು ಸಾಕಾರಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವುದು, ತಕ್ಕಮಟ್ಟಿನ ಉದ್ಯೋಗ ಪಡೆಯುವುದು, ಬದುಕಲಿಕ್ಕೆ ಬೇಕಿರುವಷ್ಟು ಸಂಬಳ ಪಡೆಯುವುದು, ಮನೆ ಕಟ್ಟಿಸುವುದು, ಕುಟುಂಬದಲ್ಲಿ ನೆಮ್ಮದಿ ಕಾಯ್ದುಕೊಳ್ಳುವುದು – ಈ ಕೆಲವು, ಕೈಗಾರಿಕೀಕರಣ ಕಾಲದ ಕನಸುಗಳು. ಇವು ‘ಸುಖಮುಖಿಯಾದ’ ಕನಸುಗಳು.
ಆದರೆ ಜಾಗತೀಕರಣ ಹುಟ್ಟುಹಾಕುತ್ತಿರುವುದು ‘ಭೋಗಮುಖಿಯಾದ’ ಕನಸುಗಳು. ಬದುಕಲಿಕ್ಕೆ ಮಾತ್ರ ಸಂಬಳ ಸಾಲದು, ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬೇಕು. ವೈಭೋಗದ ಜೀವನಕ್ಕೆ ವಿಲಾಸದ ವಸ್ತುಗಳು ಬೇಕು. ಇದೇ ಜೀವನ ವಿಧಾನವಾಗಬೇಕು – ಹೀಗೆ ಭೋಗ ಬದುಕನ್ನು ಬಯಸುವ ಜಾಗತೀಕರಣ ಅರ್ಥಾತ್ ಖಾಸಗೀಕರಣ, ಜೀವನದ ಆದ್ಯತೆ ಮತ್ತು ಆದರ್ಶಗಳನ್ನೂ ಬದಲಿಸುತ್ತಿದೆ. ಖಾಸಗಿ ಬಂಡವಾಳಗಾರರ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡುವ ದೃಷ್ಟಿಯಿಂದಲೇ ಮನೋಧರ್ಮವನ್ನು ಬದಲಾಯಿಸಲಾಗುತ್ತಿದೆ.
ಬದುಕಿನ ಬದಲಾವಣೆಯೆಂದರೆ ಮೇಲ್ಪದರದ ಬದಲಾವಣೆ ಎಂದಾಗುತ್ತಿದೆ. `ಮೇಲ್ಪದರ’ ಎನ್ನುವುದು ಸಾಮಾಜಿಕ, ಆರ್ಥಿಕ ಮೇಲ್ಪದರವೂ ಹೌದು; ತೆಳು ಬದಲಾವಣೆಯ ಸ್ವರೂಪವೂ ಹೌದು. ಹೀಗಾಗಿ ಕೈಗಾರಿಕೀಕರಣ ಕಾಲದ ‘ವಿಕಾಸ ಜೀವನ’ವು ಖಾಸಗೀಕರಣ ಕಾಲದಲ್ಲಿ ‘ವಿಲಾಸ ಜೀವನ’ವಾಗುತ್ತಿದೆ. ಖಾಸಗೀಕರಣದ ‘ಕೆನೆಪದರ’ವಾದ ಕಾರ್ಪೊರೇಟ್ ವಲಯವು ಭೋಗವನ್ನೇ ಸುಖವೆಂದು ಬಿಂಬಿಸುತ್ತಿದೆ. ವಾಸ್ತವವಾಗಿ ಭೋಗವೇ ಬೇರೆ, ಸುಖವೇ ಬೇರೆ. ಆದರೆ ಭೋಗದ ಬೆನ್ನು ಹತ್ತಿದವರು ಸುಖಕ್ಕೆ ಬೆನ್ನು ತೋರಿಸುತ್ತಾರೆಂಬ ಸತ್ಯವನ್ನು ಕಾರ್ಪೊರೇಟ್ ವಲಯ ಹೂತುಹಾಕುತ್ತಿದೆ.”
ಬರಗೂರರ ಸಾಹಿತ್ಯದ ಹಾದಿಯಲ್ಲಿನ ಕೆಲವು ಕೃತಿಗಳನ್ನು ನೆನೆಸಿಕೊಳ್ಳುವುದಾದರೆ ‘ಒಂದು ಊರಿನ ಕತೆಗಳು’, ‘ಕನ್ನಡಾಭಿಮಾನ’, ‘ಕಪ್ಪು ನೆಲದ ಕೆಂಪು ಕಾಲು’, ‘ಮರಕುಟಿಗ’, ‘ರಾಜಕಾರಣಿ’, ‘ಸಾಹಿತ್ಯ’, ‘ಸುಂಟರಗಾಳಿ’, ‘ಸೂತ್ರ’, ‘ಕಾಂಟೆಸ್ಸಾ ಕಾವ್ಯ’, ‘ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ’, ‘ನೆತ್ತರಲ್ಲಿ ನೆಂದ ಹೂ’, ‘ಗುಲಾಮನ ಗೀತೆ’, `ಸಿನಿಮಾ : ಒಂದು ಜನಪದ ಕಲೆ`, ‘ಮರ್ಯಾದಸ್ಥ ಮನುಷ್ಯರಾಗೋಣ’ ಮುಂತಾದವು ತಕ್ಷಣ ನೆನಪಿಗೆ ಬರುತ್ತವೆ. ಬರಗೂರರ ‘ಸುಂಟರಗಾಳಿ’ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
‘ಪಂಪ ಪ್ರಶಸ್ತಿ’, ‘ನಾಡೋಜ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’ ಹಾಗೂ ಹಲವಾರು ರಾಜ್ಯಮಟ್ಟದ, ಸಂಘ ಸಂಸ್ಥೆಗಳ ಗೌರವಗಳು ಬರಗೂರು ರಾಮಚಂದ್ರಪ್ಪನವರಿಗೆ ಸಂದಿವೆ. ಇವೆಲ್ಲಕ್ಕೂ ಕಿರೀಟವಿಟ್ಟಂತೆ ಕನ್ನಡ ಸಾಹಿತ್ಯ ಪರಿಷತ್ತು ಬರಗೂರು ರಾಮಚಂದ್ರಪ್ಪನವರನ್ನು ರಾಯಚೂರಿನಲ್ಲಿ ಡಿಸೆಂಬರ್ ೨, ೩, ೪ರಂದು ನಡೆಯಲಿರುವ ೮೨ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬರಗೂರರು “ಇದು ಕನ್ನಡ ಸಾಹಿತ್ಯ ಲೋಕದಲ್ಲಿ ದೊರೆಯುವ ಅತ್ಯುನ್ನತ ಗೌರವ ಎಂಬುದು ನನ್ನ ಭಾವನೆ. ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಸಂತಸ ಮೂಡಿಸಿದೆ. ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ನನ್ನಂಥವರ ಪ್ರತಿಭೆ ಮೇಲೆ ಬರಲು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಇವೆ. ಪ್ರತಿಯೊಬ್ಬ ವ್ಯಕ್ತಿ ಪ್ರತಿಭೆ ಮತ್ತು ಸಂಕಲ್ಪಗಳನ್ನು ಒಗ್ಗೂಡಿಸಿಯೇ ಮೇಲೆ ಬರಬೇಕು. ಸಾಮಾಜಿಕ ನ್ಯಾಯವು ಪ್ರತಿಭೆಗೆ ವಿರೋಧವಾಗಿ ಇರಬಾರದು. ನಾನು ಎಂದಿಗೂ ಇಂಥ ದೊಡ್ಡ ಗೌರವದ ಕನಸನ್ನೇ ಕಂಡವನಲ್ಲ. ಕೊಳೆಗೇರಿಗಳ ನಿವಾಸಿಗಳಿಗೆ, ದುರ್ಬಲರಿಗೆ, ಬಡವರಿಗೆ ಐಡೆಂಟಿಟಿ ಏನು ಎಂಬುದು ಈ ಪ್ರಶ್ನೆಗಳ ಸಾಲಿನಲ್ಲಿ ಮೊದಲನೆಯದು. ಸಾಮಾಜಿಕ, ಆರ್ಥಿಕ ಐಡೆಂಟಿಟಿ ನಮ್ಮಂಥವರಿಗೆ ಕನಸು ಎಂಬ ಸ್ಥಿತಿಯಲ್ಲಿ ನಾನು ಶ್ರೇಷ್ಠತೆಯ ಬೆಂಬಲ ಇದ್ದರೆ ಒಳ್ಳೆಯದು ಎಂದುಕೊಂಡು ಅರಸಿದ್ದು ಶಿಕ್ಷಣದ ಐಡೆಂಟಿಟಿಯನ್ನ. ನಮ್ಮ ಮನೆಯಲ್ಲಿದ್ದ ‘ಜೈಮಿನಿ ಭಾರತ’ದ ಪ್ರತಿಯನ್ನು ಹಿಡಿದಿಕೊಂಡು ಊರೆಲ್ಲ ಓಡಾಡಿದ ಪರಿಯಿಂದಲೇ, ‘ಈತ ಓದುವ ಹುಡುಗ’ ಎಂದು ಕರೆಯಿಸಿಕೊಂಡು, ಐಡೆಂಟಿಟಿ ಕಂಡುಕೊಂಡೆ. ಅದರಿಂದಲೇ ನನ್ನ ಅಸ್ಮಿತೆಯ ಸಮಸ್ಯೆಯನ್ನು ನೀಗಿಸಿಕೊಂಡೆ. ಹಾಗೆಯೇ ಓದುತ್ತ ಸಾಗಿದೆ. ‘ಶ್ರೀಮಂತರಲ್ಲದವರೂ ಬರೆಯುವ ಮೂಲಕ ಬೆಳೆಯಬಹುದು’ ಎಂದು ರವೀಂದ್ರನಾಥ್ ಠಾಗೂರರು ಹೇಳಿದಂತೆ, ನಾನೂ ಬದ್ಧತೆಯೊಂದಿಗೆ ಬರೆಯಲು ಆರಂಭಿಸಿದೆ. ಎಂದಿಗೂ ಸಾಮಾಜಿಕ ಕಾಳಜಿ, ಸೃಜನಶೀಲತೆಯನ್ನು ಬಿಡದೆ ಬರೆದೆ. ನನ್ನ ಮೂಲಕ ನನ್ನಂತಹ ಅಸಂಖ್ಯಾತ ಪ್ರತಿಭೆಗಳಿಗೆ ಈ ಗೌರವ ಸಂದಿದೆ ಎಂಬುದೇ ನನ್ನ ಭಾವನೆ. ಇದು ಅಸ್ಮಿತೆಯ ಸವಾಲನ್ನು ಎದುರಿಸಿದ ಫಲ” ಎಂದಿದ್ದಾರೆ.
ಯಾವುದೇ ವ್ಯಾಪಾರೀ ಮಾಧ್ಯಮದ ಸರಕಿಲ್ಲದಿದ್ದರೂ ಉತ್ತಮ ಸಾಂಸ್ಕೃತಿಕ ಮೌಲ್ಯಗಳಿಂದ ಜನಪ್ರೀತಿಗಳಿಸಿ ಶತದಿನೋತ್ಸವ ಆಚರಿಸಿದ ‘ಭಾಗೀರತಿ’ ಚಿತ್ರವೇ ಅಲ್ಲದೆ ‘ಒಂದು ಊರಿನ ಕಥೆ’, ‘ಬೆಂಕಿ’, ‘ಸೂರ್ಯ’, ‘ಕೋಟೆ’, ‘ಕ್ಷಾಮ’, ‘ಶಾಂತಿ’, ‘ಕರಡಿಪುರ’, ‘ತಾಯಿ’, ‘ಏಕಲವ್ಯ’, ‘ಶಬರಿ’, ‘ಹಗಲು ವೇಷ’, ‘ಭೂಮಿತಾಯಿ’ ಮುಂತಾದವು ಬರಗೂರರ ಚಿತ್ರಗಳು. ಇವರ ಹಲವಾರು ಚಿತ್ರಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿವೆ. ಒಂದೇ ಪಾತ್ರವನ್ನು ಒಳಗೊಂಡ ವಿಶಿಷ್ಟ ಚಿತ್ರ ‘ಶಾಂತಿ’ ಗಿನ್ನೆಸ್ ಸಾಧನೆಗಳಲ್ಲಿ ದಾಖಲುಗೊಂಡಿದೆ. ಇವಲ್ಲದೆ ಬರಗೂರರ ಕಥೆ ಮತ್ತು ಹಾಡುಗಳು ಇತರ ನಿರ್ದೇಶಕರ ಚಲನಚಿತ್ರಗಳಲ್ಲಿ ಖ್ಯಾತಿಗಳಿಸಿವೆ. ‘ತಾಯಿ’ ಚಿತ್ರದ ಗೀತರಚನೆಗೆ ರಾಷ್ಟ್ರಪ್ರಶಸ್ತಿ ದೊರೆತಿದ್ದು ಚಿತ್ರ ಸಂಭಾಷಣೆಗೂ ರಾಜ್ಯಪ್ರಶಸ್ತಿಗಳಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.
ಹೀಗೆ ಹಲವು ರೀತಿಯಲ್ಲಿ ಕನ್ನಡದಲ್ಲಿ ಕ್ರಿಯಾಶೀಲರಾಗಿರುವ ಬರಗೂರು ರಾಮಚಂದ್ರಪ್ಪನವರು ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಕೂಟವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಸಂತಸದ ಸಂಗತಿಯಾಗಿದೆ.
Tag: Baraguru Ramachandrappa, 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, Baragur Ramachandrappa, 82 Sahitya Sammelana, Nrupatunga Prashasthi
ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು ಜೂನ್ 30, 1936ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು. ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಅವರ ಬಾಲ್ಯದಲ್ಲೇ ಮೂಡಿಬಂದಿತ್ತು.
ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ ಆಕರ್ಷಣೆ ಹುಟ್ಟಿಸಿದವು. ಬದುಕುತ್ತಿದ್ದ ಸುತ್ತಮುತ್ತಲಿನ ಪರಿಸರದಲ್ಲಿ ಮನೋವ್ಯಾಕುಲತೆಗೊಳಗಾಗುತ್ತಿದ್ದ ಬಹಳಷ್ಟು ಸಹ ಧರ್ಮೀಯರ ಕುರಿತು ಅವರ ಮನ ನಿರಂತರವಾಗಿ ಮಿಡಿಯುತ್ತಿತ್ತು. ತಲಾಕ್ ಸಂಪ್ರದಾಯ, ಮಕ್ಕಳಾದ ನಂತರದ ಅಸಹನೀಯ ಬದುಕು ಇವೆಲ್ಲಾ ಅವರನ್ನು ಅಪಾರವಾಗಿ ಕಾಡುತ್ತಿದ್ದವು.
ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೊರಹೊಮ್ಮುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ಧ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಡೆಯಿಂದ ಮೆಚ್ಚುಗೆ ಪಡೆಯಿತು.
ಆ ನಂತರದಲ್ಲಿ ಸಾರಾ ಅವರು ಬರೆದ ಇತರ ಹಲವಾರು ಕಾದಂಬರಿಗಳೆಂದರೆ ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ, ಪಂಜರ ಮುಂತಾದವು.
ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನಗಳು-ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡ ಮುಂತಾದವು.
ಬಾನುಲಿ ನಾಟಕಗಳು-ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವು.
ಲೇಖನ ಮತ್ತು ಅನುವಾದಗಳು-ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ (ಕಾದಂಬರಿಗಳು).
ಪ್ರವಾಸಕಥನ-ಐಷಾರಾಮದಲ್ಲಿ.
ಸಾರಾ ಅಬೂಬಕ್ಕರ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.
ತಮ್ಮಲ್ಲಿ ಮೂಡಿಬಂದ ಮುಕ್ತ ಮಾನೋಭಾವದ ಬಗ್ಗೆ ಸಾರಾ ಅಬೂಬಕ್ಕರ್ ಹೀಗೆ ಹೇಳುತ್ತಾರೆ: “ನನ್ನ ಅಜ್ಜ ಪುಡಿಯಾಪುರ ಮಹಮದ್ ಅವರು ಕೇರಳದ ಕಾಸರಗೋಡಿನಲ್ಲಿ ಕೃಷಿಕರಾಗಿದ್ದರು. ಹಳೆಯ ಕಾಲದವರಾಗಿದ್ದರೂ ಪ್ರಗತಿಪರ ಧೋರಣೆ ಹೊಂದಿದ್ದರು. ಅವರ ಕಾಲದಲ್ಲೇ ಮಹಿಳಾ ಸ್ವಾತಂತ್ರ್ಯದ ಕನಸು ಕಂಡಿದ್ದರು. ನನ್ನ ತಂದೆ ಪುಡಿಯಾಪುರ ಅಹಮದ್ ವಕೀಲರಾಗಿದ್ದುಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಿದ್ದರು. ಏನನ್ನೇ ಆದರೂ ಪ್ರಶ್ನಿಸದೆ ಒಪ್ಪಿಕೊಳ್ಳಬಾರದು ಎಂಬ ಪಾಠ ನನಗೆ ಹೇಳಿಕೊಟ್ಟರು. ನನ್ನನ್ನು ಶಾಲೆಗೆ ಸೇರಿಸಿ ಓದಿಸಿದರು. ಹಾಗಾಗಿ ನಾನು ಪ್ರತಿಯೊಂದನ್ನೂ ಪ್ರಶ್ನಿಸಲು ಆರಂಭಿಸಿದೆ. ಮುಸ್ಲಿಂ ಮಹಿಳೆಗೆ ಪ್ರತಿನಿತ್ಯ ಆಗುವ ಶೋಷಣೆ, ಅವಮಾನಗಳನ್ನು ನನಗೆ ಸಹಿಸಲಾಗಲಿಲ್ಲ. ಅದನ್ನು ಲೇಖನಿಯ ಮೂಲಕ ಬಿಚ್ಚಿಟ್ಟೆ. ನಾನು ಓದಿದ್ದು ಮೆಟ್ರಿಕ್ವರೆಗೆ ಮಾತ್ರ (11ನೇ ತರಗತಿ). ನನ್ನನ್ನು ಮತ್ತಷ್ಟು ಓದಿಸಬೇಕು ಎಂಬ ಆಸೆ ತಂದೆಗೆ ಇತ್ತು. ಆದರೆ ಅಂದಿನ ಸಮಾಜ ಮುಸ್ಲಿಂ ಹೆಣ್ಣು ಮಕ್ಕಳು ಓದುವುದನ್ನು ಸಹಿಸುತ್ತಿರಲಿಲ್ಲ. ಹಾಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಲೇಬೇಕು, ಇದಕ್ಕಾಗಿ ಹೋರಾಡಬೇಕು ಎಂದು ನಾನು ಆಗಲೇ ನಿರ್ಧರಿಸಿಕೊಂಡೆ.”
ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂದು ನಿರಂತರವಾಗಿ ಪ್ರತಿಪಾದಿಸುವ ಸಾರಾ ಅಬೂಬಕ್ಕರ್ “ಹೆಣ್ಣು ಮಕ್ಕಳು ಪ್ರಾಣಿಗಳು, ಹೆರಲು ಇರುವ ಯಂತ್ರಗಳು ಎಂದು ಬಿಂಬಿಸಿರುವ ಸಮಾಜ ನಮ್ಮದು. ಇಸ್ಲಾಂನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿವೆ. ಆದರೆ ಸೌದಿ ಅರೇಬಿಯಾ ಮೂಲದ ‘ವಹಾದಿಸಂ’ ಅನ್ನು ಮುಂದಿಟ್ಟುಕೊಂಡು ಈಗೀಗ ವಿಶ್ವದ ನಾನಾ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದೆಲ್ಲಾ ವಾದಿಸುತ್ತಿದ್ದಾರೆ. ಮಹಿಳೆಗೆ ಶಿಕ್ಷಣ ಸಿಗಬೇಕು. ಅದರಲ್ಲೂ ತಾಯಂದಿರಿಗೆ ಅಕ್ಷರ ಜ್ಞಾನ ಬೇಕು. ಆದರೆ ಕೇರಳ, ಕರ್ನಾಟಕ ಕರಾವಳಿ ಭಾಗದ ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿನ ತಾಯಂದಿರಿಗೆ ಶಿಕ್ಷಣ ಇಲ್ಲ. ಎಲ್ಲೋ ದೂರದ ದುಬೈನಲ್ಲೋ, ಮತ್ತೊಂದೆಡೆಯೋ ಕುಳಿತ ಪತಿ ಹಣ ಕಳುಹಿಸುತ್ತಾನೆ. ಅದನ್ನು ಮಕ್ಕಳು ಮಜಾ ಮಾಡುತ್ತಾರೆ. ಹಣವನ್ನು ಸರಿಯಾಗಿ ನಿರ್ವಹಿಸಲೂ ಬಾರದ ಮಕ್ಕಳು ಕುಟುಂಬ ಸಮೇತ ಹಾಳಾಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಮಹಿಳೆಯನ್ನು ಶಿಕ್ಷಣದಿಂದ ವಂಚಿಸುವುದು ಸರಿಯಲ್ಲ.” ಎಂದು ಸ್ಪಷ್ಟಪಡಿಸುತ್ತಾರೆ.
Tag: Sara Abubakkar, Nrupatunga Prashasthi
ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು, ಕರ್ನಾಟಕದ ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಪರಿಪ್ರೇಕ್ಷ್ಯವಿದೆ.
ಕಲಬುರ್ಗಿಯವರು 1938ರ ನವಂಬರ 28ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ1960ರಲ್ಲಿ ಬಿ.ಎ ಮತ್ತು 1962ರಲ್ಲಿ ಎಂ..ಎ ಪದವಿಗಳನ್ನು ಪ್ರಥಮ ಸ್ಥಾನದೊಂದಿಗೆ ಪಡೆದರು. 1968ರಲ್ಲಿ ಆವರು ಡಾ. ಆರ್. ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ, ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತು. 1962 ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲಬುರ್ಗಿಯವರು, 1966 ರ ವರ್ಷದಲ್ಲಿ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’ದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ಅಲ್ಲಿ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿ ಸುಮಾರು ಹತ್ತೊಂಬತ್ತು ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದ ಕಲಬುರ್ಗಿಯವರು, ಒಟ್ಟಿನಲ್ಲಿ ಮೂವತ್ತೊಂಬತ್ತು ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಅವರು ಆ ಅವಧಿಯಲ್ಲಿ ಅನೇಕ ಸಂಶೋಧನ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. 1998-2001 ರ ಕಾಲಾವಧಿಯಲ್ಲಿ ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಅಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಆಗುಮಾಡಿದ ಕಲಬುರ್ಗಿಯವರು ನಿವೃತ್ತಿಯ ನಂತರವೂ ಅವರು ಸಂಶೋಧನಾ ಚಟುವಟಿಕೆಗಳಲ್ಲಿಯೇ ಮಗ್ನರಾದರು. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ ‘ವಚನಸಾಹಿತ್ಯ ಸಂಪುಟ’ ಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ‘ಸಮಗ್ರ ಕೀರ್ತನ ಸಂಪುಟ’ಗಳ ಸಂಪಾದಕ ಮಂಡಳಿಯ ಸದಸ್ಯರೂ ಆಗಿದ್ದರು.
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನೂ ಪ್ರಕಟಿಸಿದ್ದಾರೆ.
‘ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’, ‘ಮಾರ್ಗ’, ‘ಐತಿಹಾಸಿಕ’ ಇವು ಸಂಶೋಧನ ಗ್ರಂಥಗಳು. ‘ಶಾಸನ ವ್ಯಾಸಂಗ’, ‘ಶಾಸನ ಸಂಪದ’, ‘ಧಾರವಾಡ ಜಿಲ್ಲೆಯ ಶಾಸನಸೂಚಿ’ ಇವು ಶಾಸನ ಗ್ರಂಥಗಳು.
ಕಲಬುರ್ಗಿಅವರ ಪ್ರಮುಖ ಶೈಕ್ಷಣಿಕ ಗ್ರಂಥಗಳೆಂದರೆ, ‘ಕನ್ನಡ ಗ್ರಂಥಸಂಪಾದನ ಶಾಸ್ತ್ರ’, ‘ಕನ್ನಡ ಹಸ್ತಪ್ರತಿಶಾಸ್ತ್ರ’, ‘ಕನ್ನಡ ಸಂಶೋಧನ ಶಾಸ್ತ್ರ’ ಮತ್ತು ‘ಕನ್ನಡ ಸ್ಥಳನಾಮ ವಿಜ್ಞಾನ’.
ಕಲಬುರ್ಗಿ ಅವರು 30ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ‘ಶಿವಯೋಗ ಪ್ರದೀಪಿಕಾ’, ‘ಕೊಂಡಗುಳಿ ಕೇಶೀರಾಜನ ಕೃತಿಗಳು’, ‘ಬಸವಣ್ಣನ ಟೀಕಿನ ವಚನಗಳು’, ‘ಸಿರುಮನಾಯಕನ ಸಾಂಗತ್ಯ’ ಹೀಗೆ ಅವರ ಸಂಪಾದನೆಗಳು ಬೃಹತ್ ಪಟ್ಟಿ ಬೆಳೆಯುತ್ತದೆ.
ಜಾನಪದದಲ್ಲಿ ಅಪಾರ ಸಾಧನೆ ಮಾಡಿರುವ ಕಲಬುರ್ಗಿ ಅವರ ಪ್ರಮುಖ ಕೃತಿಗಳೆಂದರೆ ‘ಜಾನಪದ ಮಾರ್ಗ’ ಮತ್ತು ‘ಉತ್ತರ ಕರ್ನಾಟಕದ ಜನಪದ ಸಾಹಿತ್ಯ’.
ಕಲಬುರ್ಗಿ ಅವರ ‘ನೀರು ನೀರಡಿಸಿತ್ತು’, ‘ಕೆಟ್ಟಿತ್ತು ಕಲ್ಯಾಣ’ ಇವರ ಹಲವು ಸೃಜನಶೀಲ ಬರಹಗಳ ಸಾಲಿಗೆ ಸೇರುತ್ತವೆ. ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಕವನ ಸಂಕಲವನ್ನೂ ಪ್ರಕಟಿಸಿದ್ದಾರೆ
ಕಲಬುರ್ಗಿ ಅವರ ‘ಮಾರ್ಗ’ ಸಂಶೋಧನಾ ಗ್ರಂಥದ ನಾಲ್ಕು ಸಂಪುಟಗಳು, ಕರ್ನಾಟಕದ ಸಂಸ್ಕೃತಿಯನ್ನು ಕುರಿತ ಅನೇಕ ಸಂಶೋಧನ ಲೇಖನಗಳನ್ನು ಒಳಗೊಂಡಿವೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು ಕಾಣಬಹುದು. ತಮ್ಮ ಸಂಶೋಧನೆಯ ಫಲಿತಗಳ ನಿಕರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದವಲ್ಲ. ಅವರು ತಮ್ಮ ಆಕರಗಳನ್ನು ಖಚಿತಪಡಿಸಿಕೊಂಡಿರುತ್ತಾರೆ ಮತ್ತು ಮಹತ್ವದ ಒಳನೋಟಗಳನ್ನು ನೀಡುತ್ತಾರೆ. ಆಕರಗಳ ಶೋಧನೆಯಲ್ಲಿ ಹಲವು ದೇಶಗಳನ್ನು ಸುತ್ತಿರುವ ಕಲಬುರ್ಗಿಯವರು ಅವುಗಳನ್ನು ವಿವೇಚನೆಯಿಂದ ಬಳಸಿಕೊಂಡಿದ್ದಾರೆ.
ಅಮೇರಿಕಾದಲ್ಲಿ ನಡೆದ ಸಮ್ಮೇಳನದಲ್ಲಿನ ಅವರ ಭಾಷಣವನ್ನು ಓದಿದರೆ ಅಲುಗಾಡಿದ ಅನುಭವವಾಗುತ್ತದೆ. ಕನ್ನಡ ನಾಡಿಗೆ ಇವತ್ತು ಬಂದೊದಗಿರುವ ಆಪತ್ತುಗಳನ್ನು ಡಾ.ಕಲಬುರ್ಗಿ ಆವರು ತಮ್ಮ ಸುದೀರ್ಘ ಭಾಷಣದಲ್ಲಿ ಪಟ್ಟಿ ಮಾಡುತ್ತ ಹೋಗುತ್ತಾರೆ. ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡನಾಡು ಇವತ್ತು ಮೂವತ್ತು ಜಿಲ್ಲೆಗಳಿಗೆ ಸೀಮಿತವಾಗಿರುವ ದುರಂತವನ್ನು ನೆನೆದು ಕಲಬುರ್ಗಿ ವಿಷಣ್ಣರಾಗುತ್ತಾರೆ. ಶಿವಾಜಿಯು ಕನ್ನಡ ನೆಲದ ಭೋಂಸ್ಲೆ ಮನೆತನದ ಒಬ್ಬ ಧೀರ ಎಂದು ಯಾರ ಬಳಿ ಹೇಳಲಿ? ಕಾಲಕಾಲಕ್ಕೆ ಕನ್ನಡ ನಾಡಿನ ಇತಿಹಾಸಗಳನ್ನು ದಾಖಲಿಸುವಲ್ಲಿ ಕನ್ನಡ ಬರಹಗಾರರು ಆಸ್ಥೆ ವಹಿಸಿದ್ದರೆ ಇಂಥ ಗೋಜಲುಗಳನ್ನು ನಾವು ನೋಡಬೇಕಾಗಿರಲಿಲ್ಲ. ಇತಿಹಾಸ ಬರೆಯುವ ಮಹತ್ವವನ್ನು ಕನ್ನಡಿಗರು ಮನಗಾಣದೆ ಇರುವುದು ವಿಷಾದಕರ ಎಂದು ಕಲಬುರ್ಗಿ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಕಲಬುರ್ಗಿಯವರು ತಮ್ಮ ಸಾಧನೆಗಾಗಿ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿಗಳು ಅವುಗಳಲ್ಲಿ ಕೆಲವು. ಅವರ ‘ಮಾರ್ಗ-4’ ಎಂಬ ಕೃತಿಯು ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿದೆ. ಅವರು ಬರೆದಿರುವ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಗಳನ್ನು ಪಡೆದಿವೆ. ಕಲಬುರ್ಗಿ-60 ಮತ್ತು ಮಹಾಮಾರ್ಗಗಳು ಈ ವಿದ್ವಾಂಸರಿಗೆ ಸಲ್ಲಿಸಲಾಗಿರುವ ಅಭಿನಂದನ ಗ್ರಂಥಗಳಲ್ಲಿ ಮುಖ್ಯವಾದವು. ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ನೃಪತುಂಗ ಪ್ರಶಸ್ತಿ ಪ್ರಧಾನ ಮಾಡಿತ್ತು.
ಕಲಬುರ್ಗಿ ಅವರು ಆಗಸ್ಟ್ ೩೦, ೨೦೧೫ರಂದು ಹತ್ಯಗೀಡಾದದ್ದು ವಿಷಾದದ ಸಂಗತಿಯಾಗಿದೆ.
Tag: M.M. Kalburgi, Nrupatunga Prashasthi
ಪಾಟೀಲ ಪುಟ್ಟಪ್ಪ
ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು `ಪಾಪು’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದಲ್ಲಿ ಸಿದ್ಧಲಿಂಗಪ್ಪ-ಮಲ್ಲಮ್ಮ ದಂಪತಿಗಳಿಗೆ ೧೪-೧-೧೯೨೨ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. ೧೯೪೯ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು.
ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ನವಯುಗ ಮಾಸಪತ್ರಿಕೆ ಸಂಪಾದಕರಾದರು. ಆಮೇಲೆ ೧೯೫೪ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ತಾವೇ ಹುಟ್ಟು ಹಾಕಿದರು. ೧೯೫೭ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟನ್ನು ಪ್ರಾರಂಭಿಸಿದರು. ೧೯೫೯ರಲ್ಲಿ ವಿಶ್ವವಾಣಿ ದಿನಪತ್ರಿಕೆಯನ್ನೂ ಮನೋರಮಾ ಎಂಬ ಚಲನಚಿತ್ರ ಮಾಸಿಕವನ್ನೂ ಆರಂಭಿಸಿದರು. ಹೀಗೆ ಪತ್ರಿಕೆಗಳನ್ನು ಹುಟ್ಟು ಹಾಕುತ್ತಲೂ ನಡೆಸುತ್ತಲೂ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಇದರ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ, ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಅಂಕಣಕಾರರಾಗಿ ಮಿಂಚಿದರು. ಹೀಗೆ ಪತ್ರಿಕಾ ಸಂಪಾದಕರಾಗಿ ನಾಡಿನ ಮನೆಮಾತಾದರು. ಇದಲ್ಲದೆ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ರಂಗಗಳಲ್ಲಿ ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ರಾಜ್ಯ ಸಭೆಯ ಸದಸ್ಯರಾಗಿ (೧೯೬೨-೭೧) ಧಾರವಾಡ ಮತ್ತು ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ೧೯೬೭ ರಿಂದ ಅಧ್ಯಕ್ಷರಾಗಿದ್ದಾರೆ. ಗೋಕಾಕ ವರದಿ ಜಾರಿಗೆ ಬರಲು ನಡೆದ ಚಳುವಳಿಯ ನೇತೃತ್ವ ವಹಿಸಿದ್ದರು. ಕರ್ನಾಟಕ ಸರಕಾರ ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ರಚಿಸಿ ಇವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದಾಗ ಕನ್ನಡ ಅನುಷ್ಠಾನಕ್ಕೆ ಇವರು ಶ್ರಮಿಸಿದರು. ೧೯೯೨ರಲ್ಲಿ ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಹೀಗೆ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೯೪ರಲ್ಲಿ ಡಿ’ಲಿಟ್’ ಪದವಿ ಕೊಟ್ಟಿದೆ. ಕರ್ನಾಟಕ ಸರಕಾರ ನೀಡುವ ಟಿ.ಎಸ್.ಆರ್.ಪ್ರಶಸ್ತಿ ಇವರಿಗೆ ೧೯೯೪ರಲ್ಲಿ ಲಭಿಸಿದೆ. ೧೯೭೬ರಲ್ಲಿ ರಾಜ್ಯ ಪ್ರಶಸ್ತಿ, ೧೯೯0 ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ, ೧೯೯೯ರಲ್ಲಿ ಹುಬ್ಬಳ್ಳಿಯ ತಿಲಕ್ ಮೊಹರೆ ಪ್ರಶಸ್ತಿ, ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲದ ನಾಡೋಜ ಗೌರವ, ೨00೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೨00೨ರಲ್ಲಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ‘ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ’ ಪ್ರಶಸ್ತಿ ಇತ್ಯಾದಿ ಲಭಿಸಿವೆ. ಬೆಳಗಾವಿಯಲ್ಲಿ ನಡೆದ ೭0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ೨00೩ರಲ್ಲಿ ದೊರೆಕಿತು.
ಪಾಟೀಲ ಪುಟ್ಟಪ್ಪನವರು ಕೇವಲ ಪತ್ರಕರ್ತರಲ್ಲ ಗ್ರಂಥಕರ್ತರೂ ಹೌದು. ಅವರು ಬರೆದ ಗ್ರಂಥಗಳಲ್ಲಿ ಕೆಲವು ಹೀಗಿವೆ: ನನ್ನದು ಈ ಕನ್ನಡ ನಾಡು(೧೯೭೫), ನಮ್ಮದು ಈ ಭರತಭೂಮಿ(೧೯೭೭), ಕರ್ನಾಟಕ ಕಥೆ(೧೯೯೧), ಸೋವಿಯತ್ ದೇಶ ಕಂಡೆ(೧೯೪೪), ಗವಾಕ್ಷಿ ತೆರೆಯಿತು(೧೯೭೪), ಶಿಲಾಬಾಲಿಕೆ ನುಡಿದಳು(೧೯೭೪), ನಮ್ಮ ದೇಶ ನಮ್ಮ ಜನ(೧೯೭೩), ಈಗ ಹೊಸದನ್ನು ಕಟ್ಟೋಣ(೧೯೭೫), ಪಾಪು ಪ್ರಪಂಚ(೨000).
Tag: Patil Puttappa, Pateela Puttapa, Nrupatunga Prashasthi
ಕನ್ನಡಕ್ಕಾಗಿ ಹೋರಾಟ ಮಾಡಿದ ಕುವೆಂಪು ಅವರ ಪರಮಶಿಷ್ಯರಾದ ದೇ.ಜ.ಗೌ(ದೇವೇಗೌಡ ಜವರೇಗೌಡ) ಕೃಷಿಕ ಕುಟುಂಬದಿಂದ ಬಂದವರು. ದೇವೇಗೌಡ- ಚೆನ್ನಮ್ಮ ದಂಪತಿಗಳಿಗೆ ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ ೬-೭-೧೯೧೮ರಲ್ಲಿ ಜನಿಸಿದರು. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ೧೯೪೩ರಲ್ಲಿ ಕುವೆಂಪು ಅವರ ಶಿಷ್ಯರಾಗಿ ಎಂ.ಎ. ಪದವಿ ಗಳಿಸಿದರು.
೧೯೪೪ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಸ್ಥಾನವನ್ನು ೧೯೭0ರಲ್ಲಿ ಅಲಂಕರಿಸಿದರು.
ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ದೇಜಗೌ ಟ್ರಸ್ಟ್ಗಳನ್ನು ಸ್ಥಾಪಿಸಿದ ಇವರು ಜನಪದವಸ್ತು ಸಂಗ್ರಹಾಲಯ, ಜನಪದ ಭಾಷಾಂತರ ಡಿಪ್ಲೋಮಾ ತರಗತಿಗಳನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಮಿತಿ ಸದಸ್ಯರಾಗಿ ೧೯೬೭ರಲ್ಲಿ ಶ್ರವಣಬೆಳಗೊಳದಲ್ಲಿ ಸಾಹಿತ್ಯಗೋಷ್ಠಿ ಅಧ್ಯಕ್ಷರೂ ಆಗಿದ್ದರು. ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಕೇಂದ್ರ ಸಾಹಿತ್ಯ ಅಕಾಡೆಮಿಗಳು ವಯಸ್ಕರ ಶಿಕ್ಷಣ ಸಮಿತಿ, ಮೊದಲಾದ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೭0ರಲ್ಲಿ ೪೭ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಾಗ ಅದರ ಅಧ್ಯಕ್ಷ ಪಟ್ಟದ ಗೌರವ ಇವರದಾಗಿತ್ತು.
ಟಾಲ್ಸ್ಟಾಯ್ ಅವರ ಕಾದಂಬರಿ ಅನುವಾದ ಪುನರುತ್ಥಾನಕ್ಕೆ ಸೋವಿಯಟ್ಲ್ಯಾಂಡ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್, ತಿರುವಾಂಕೂರಿನ ದ್ರಾವಿಡಭಾಷಾ ವಿಜ್ಞಾನ ಸಂಸ್ಥೆಯಿಂದ ಫೆಲೋಷಿಪ್, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಾಯವಾಗಿವೆ. ಪ್ರತಿಷ್ಠಿತ ನೃಪತುಂಗ ಪ್ರಶಸ್ತಿಯನ್ನು ೨00೮ರಲ್ಲಿ ಪರಿಷತ್ತು ಇವರಿಗೆ ನೀಡಿತು.
೧೨0ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ದೇಜಗೌ ಅವರ ಕೆಲವು ಮುಖ್ಯ ಕೃತಿಗಳಿವು:
ಕಬ್ಬಿಗರ ಕಾವಂ(ಸಂಪಾದನೆ), ಲೀಲಾವತಿ ಪ್ರಬಂಧ(ಸಂಪಾದನೆ), ಶ್ರೀರಾಮಾಯಣ ದರ್ಶನಂ ವಚನ ಚಂದ್ರಿಕೆ, ನಂಜುಂಡ ಕವಿ (ವಿಮರ್ಶೆ), ಕಡುಗಲಿ ಕುಮಾರರಾಮ, ವಿದೇಶದಲ್ಲಿ ನಾಲ್ಕು ವಾರ(ಪ್ರವಾಸ), ಧರ್ಮಾಮೃತ ಸಂಗ್ರಹ (ಜೈನಶಾಸ್ತ್ರ), ಹೋರಾಟದ ಬದುಕು (ಆತ್ಮಕಥೆ) ಇತ್ಯಾದಿ.
ದೇಜಗೌ ಅವರು ಏಪ್ರಿಲ್ ೩೦, ೨೦೧೬ರಂದು ಈ ಲೋಕವನ್ನಗಲಿದರು.
ಗಿರೀಶ್ ಕಾರ್ನಾಡ್ ಎಲ್ಲಾ ಸೀಮೆಗಳನ್ನೂ ಮೀರಿದ ಮಹಾನ್ ಪ್ರತಿಭೆ. ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದ ನಟರಾಗಿ, ನಿರ್ದೇಶಕರಾಗಿ, ಪ್ರಾಚಾರ್ಯರಾಗಿ, ಸಂಗೀತ ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಹೀಗೆ ಅವರು ಹಲವು ರಂಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರು.
ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ವಿರಳವಾಗಿ ಬರೆದಿದ್ದಾರಾದರೂ ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಯಲ್ಪಡುವ ಗಿರೀಶ್ ಕಾರ್ನಾಡ್, ಕನ್ನಡದಲ್ಲಿ ನಾಟಕ ರಚಿಸುತ್ತಾ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಾಂಸ್ಕ್ರತಿಕ ವಕ್ತಾರರಾಗಿ ಕೆಲಸ ಮಾಡಿದವರು.
ಗಿರೀಶ್ ಕಾರ್ನಾಡರು 1934 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರಕನ್ನಡದ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ, ಹಾಗೂ ಪದವಿ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಇವರು. ಮದ್ರಾಸಿನಲ್ಲಿ ನೌಕರಿಯಲ್ಲಿದ್ದ ಇವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೂಡಾ ಅವರು ಕಾರ್ಯನಿರ್ವಹಿಸಿರುವರು.
ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಕಾರ್ನಾಡರ ಪ್ರಮುಖ ನಾಟಕ ಕೃತಿಗಳು. ಅಲ್ಲದೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಹೌದು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮುಂತಾದ ಸಿನಿಮಾಗಳು; ಸೂಫಿ ಪಂಥ, ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಸಾಹಿತ್ಯಕ್ಷೇತ್ರದಲ್ಲಿ ನಾಟಕಗಳನ್ನು ಮಾತ್ರ ರಚಿಸಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಕಾರ್ನಾಡರು ಮೊದಲಿಗರು. ಹಾಗಾಗಿ ಅವರಿಗೆ ಸಂದ ಈ ಗೌರವ ಕಾರ್ನಾಡರಿಗೆ ಮಾತ್ರವಾಗಿರದೆ ಅದು ಇಡೀ ಭಾರತೀಯ ರಂಗಭೂಮಿಗೆ ಬಂದ ಗೌರವವೆಂದು ಪರಿಗಣಿತವಾಯಿತು. ಕನ್ನಡ ರಂಗಭೂಮಿಯ ಪತಾಕೆ ಮತ್ತಷ್ಟು ಎತ್ತರದಲ್ಲಿ ಹಾರಲು ಪುಷ್ಟಿಯನ್ನು ಒದಗಿಸಿಕೊಟ್ಟಿತು.
ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾದವರ ಕೃತಿಗಳು ಪ್ರಶಸ್ತಿ ಬಂದ ಮೇಲೆ ಕೃತಿಗಳ ಮೂಲಭಾಷೆಯಿಂದ ಇತರ ಭಾಷೆಗಳಿಗೆ ಅನುವಾದಿತವಾಗುವುದು ಸರ್ವೇ ಸಾಮಾನ್ಯವಾದರೆ ಕಾರ್ನಾಡರ ಕೃತಿಗಳು ಪ್ರಶಸ್ತಿ ಬರುವ ಮುಂಚೆಯೇ ಹಲವು ಭಾರತೀಯ ಭಾಷೆಗಳಿಗೆ ಅನುವಾದಿತವಾಗಿ, ಆ ಭಾಷೆಗಳಲ್ಲಿ ಪ್ರಯೋಗವೂ ಆಗಿ ಯಶಸ್ವಿಯಾಗಿದ್ದವು, ಇಂಗ್ಲಿಷ್ ಭಾಷೆಯೂ ಸೇರಿದಂತೆ. ಪ್ರಯೋಗ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಇಬ್ರಾಹಿಂ ಅಲ್ಕಾಜಿಯವರು ನಿರ್ದೇಶಿಸಿದ ‘ತುಘಲಕ್’ ವಿದೇಶ ಸಂಚಾರವನ್ನೇ ಕೈಗೊಂಡಿತ್ತು. ‘ಹಯವದನ’ ಆಸ್ಟ್ರೇಲಿಯಾ, ಜರ್ಮನಿಗಳಲ್ಲಿ ಅಲ್ಲಿನವರಿಂದಲೇ ಪ್ರಯೋಗಗೊಂಡಿತ್ತು. ‘ನಾಗಮಂಡಲ’ವನ್ನು ಅಮೆರಿಕದ ಗಥ್ರಿ ಥಿಯೇಟರಿನವರು ಪ್ರದರ್ಶಿಸಿದರು. ಹೀಗೆ ‘ಜ್ಞಾನಪೀಠ’ ಬರುವ ಮುನ್ನವೇ ಕಾರ್ನಾಡರು ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು.
ಕನ್ನಡ ರಂಗಭೂಮಿಯಂತೂ ಕಾರ್ನಾಡರಿಗೆ ಋಣಿಯಾಗಿದೆ. 70ರ ದಶಕದ ಬಯಲು ರಂಗೋತ್ಸವದ ಯಶಸ್ಸಿಗೆ ಅವರ ನಟನೆಯೂ ಒಂದು ಕಾರಣ. ಈಡಿಪಸ್ ನಾಟಕದಲ್ಲಿ ದೊರೆ ಈಡಿಪಸ್ ಪಾತ್ರವನ್ನು ಅವರೇ ವಹಿಸಿದ್ದರು. ಮುಂದೆ ಅವರು ರಂಗಭೂಮಿಯಲ್ಲಿ ನಟಿಸದಿದ್ದರೂ ಅವರ ನಾಟಕಗಳು ದೇಶವಿದೇಶಗಳಲ್ಲಿ ಯಶಸ್ವಿಯಾಗಿರುವಂತೆ ಕನ್ನಡದಲ್ಲೂ ಯಶಸ್ಸು ಕಂಡಿವೆ. 60ರ ದಶಕದಲ್ಲಿ ಅವರ ‘ತುಘಲಕ್’ ಪ್ರದರ್ಶನ ತುಘಲಕ್ ಪಾತ್ರವಹಿಸಿದ ಸಿ.ಆರ್. ಸಿಂಹರನ್ನು ಬೆಳಕಿಗೆ ತಂದದ್ದಲ್ಲದೆ ಹವ್ಯಾಸಿರಂಗಕ್ಕೆ ಹೊಸಜೀವ ಸಂಚಾರವನ್ನೇ ತಂದಿತು.
ಪುರಾಣ ಬಳಸಿ ಕಾರ್ನಾಡರು ಯಯಾತಿ ಬರೆದರು. ಇತಿಹಾಸ ಬಳಸಿ ತುಘಲಖ್ ಬರೆದರು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕೆಲವು ಗಣ್ಯರು ಭಾರತೀಯ ರಂಗಭೂಮಿಯನ್ನು ಪಾಶ್ಚಾತ್ಯ ಪ್ರಭಾವದಿಂದ ಬಿಡಿಸಿ ಕಟ್ಟಬೇಕೆಂದು ಮಾಡಿದ ಆಲೋಚನೆ, ತೋರಿದ ಕಾಳಜಿಗೆ ಸ್ಪಂದಿಸಿದ ಕಾರ್ನಾಡರು ಜಾನಪದ ತಂತ್ರಗಳನ್ನು ಬಳಸಿ ‘ಹಯವದನ’ ಬರೆದರು.
ಪರಿಪೂರ್ಣತೆಯ ಆಕಾಂಕ್ಷೆಯನ್ನು ವಸ್ತುವಾಗುಳ್ಳ ‘ಹಯವದನ’ದಲ್ಲಿ ಜಾನಪದ ರಂಗದ ಮಹತ್ವವನ್ನು ಬಯಲುಗೊಳಿಸುವುದರ ಜೊತೆಗೆ ಕಾರ್ನಾಡರು ರಂಗಸಾಧ್ಯತೆಗಳನ್ನು ವಿಸ್ತರಿಸಿದರು. ದೇಶಾದ್ಯಂತ ಸತ್ಯ ದೇವ ಧುಬೆ, ಬಿ.ವಿ.ಕಾರಂತರಂತಹ ಹಲವಾರು ಶ್ರೇಷ್ಠ ನಿರ್ದೇಶಕರು ‘ಹಯವದನ’ವನ್ನು ನಿರ್ದೇಶಿಸಿ ಸ್ಪರ್ಧಿಸಿದರು. ಹಯವದನ ಅಖಿಲಭಾರತ ವ್ಯಾಪ್ತಿಯನ್ನು ಮೀರಿ ಆಸ್ಟ್ರೇಲಿಯಾದಲ್ಲೂ ಪ್ರಯೋಗ ಕಂಡಿತು. ಅನಂತರ ಅವರು ಬರೆದ ನಾಟಕಗಳಲ್ಲಿ ತಲೆದಂಡ, ನಾಗಮಂಡಲ ಕಾರ್ನಾಡರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ಈ ಎಲ್ಲ ನಾಟಕಗಳು ವಿವಿಧ ಭಾಷೆಗಳಿಗೆ ತರ್ಜುಮೆಯಾಗಿ ಯಶಸ್ವೀ ಪ್ರಯೋಗ ಕಂಡಿದೆ. ‘ನಾಗಮಂಡಲ’ ಚಲನಚಿತ್ರ ರೂಪದಲ್ಲೂ ಜಯಗಳಿಸಿದೆ. ಕಾರ್ನಾಡರ ‘ಅಗ್ನಿ ಮತ್ತು ಮಳೆ’ ಅವರಿಂದಲೇ ಇಂಗ್ಲಿಷಿಗೆ ‘Fire and Rain’ ಆಗಿ ರೂಪುಗೊಂಡು ಆಂಗ್ಲ ರಂಗ ವಲಯದಲ್ಲಿ ಅಪರಿಮಿತವಾದ ಯಶಸ್ಸನ್ನು ಪಡೆಯಿತು. ‘ಅಂಜುಮಲ್ಲಿಗೆ’ ಹಿಂದಿಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿತು.
‘ತಲೆದಂಡ’ ಕಾರ್ನಾಡರ ಮಹತ್ವದ ಕೃತಿಗಳಲ್ಲೊಂದು. ಜನಸಾಮಾನ್ಯರು, ವಿಶೇಷವಾಗಿ ಭಕ್ತರು, ತಾವು ಆರಾಧಿಸುವ ವ್ಯಕ್ತಿಯೊಬ್ಬನ ಕೆಲವು ಮಹತ್ವದ ಕೆಲಸಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದಾಗ ಅದನ್ನು ಪವಾಡಗಳೆಂದು ಕರೆದು ಬಿಡುವುದನ್ನು 12ನೆಯ ಶತಮಾನದಲ್ಲದೆ 21ನೆಯ ಶತಮಾನದಲ್ಲೂ ಕಾಣಬಹುದಾಗಿದೆ. ಕಲ್ಯಾಣದಲ್ಲಿ ನಡೆಯುತ್ತಿದ್ದ ದಾಸೋಹಗಳಿಗೆ ಬಸವಣ್ಣ ಬೊಕ್ಕಸದಿಂದ ದುಡ್ಡು ತೆಗೆಯುತ್ತಿದ್ದಾನೆಂದು ನಂಬುವ ರಾಜಕುಮಾರ ಸೋವಿದೇವ ಬೊಕ್ಕಸದ ಪರೀಕ್ಷೆ ಮಾಡಿ ಅಲ್ಲಿ ಒಂದು ದಮಡೀ (ಕಾಸು) ವೆತ್ಯಾಸ ಕಾಣದ ಸಂಗತಿ ಶರಣ ಭಕ್ತರಿಗೆ ಪವಾಡವೆನಿಸಿಬಿಡುತ್ತದೆ. ಭಕ್ತರು ಬಸವಣ್ಣನನ್ನು ಕೊಂಡಾಡುತ್ತಾರೆ. ಈ ಜನ ಬಸವಣ್ಣ ಹಣ ಒಳ್ಳೆಯ ಕೆಲಸಕ್ಕೆ ತೆಗೆಯುತ್ತಿದ್ದಾನೆ ಎಂದು ಸಂದೇಹಪಡುತ್ತಾರೆ, ಆದರೆ ಅದು ಪವಾಡ ಸದೃಶವಾಗಿ ಹೊರಹೋಗದಂತೆ ಕಾಣುತ್ತಿದೆ ಎಂದು ಭಾವಿಸಿ ತಮ್ಮ ಅರಿವಿಗೆ ಬಾರದ್ದನ್ನು ಪವಾಡವೆನ್ನುತ್ತಾ ಸಾಗುತ್ತಾರೆ. ಈ ರೀತಿಯ ಭಕ್ತರ ನಡೆ ಬಸವಣ್ಣನ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಕೊಡುವ ಕೊಡಲಿ ಪೆಟ್ಟಾಗುತ್ತದೆ. ಅದೇ ಪವಾಡಕ್ಕೆ ಕಾರ್ನಾಡರು ಕೊಡುವ ಸಮಾಜೋ-ಆರ್ಥಿಕ ವಿಶ್ಲೇಷಣೆ ಶರಣರ ಕಾಯಕದ ಮೌಲ್ಯವನ್ನೇ ಹೆಚ್ಚಿಸುತ್ತದೆ. ಕಾಯಕವೇ ಕೈಲಾಸ ಎಂದುಕೊಂಡು ಶರಣರು ದುಡಿದದ್ದರಿಂದ ಕಲ್ಯಾಣರಾಜ್ಯ ಸಮೃದ್ಧಿಹೊಂದಿ ಶ್ರೀಮಂತರು ಗಳಿಸಿದ ಲಾಭದಲ್ಲಿ ಅದರ ಒಂದಂಶವನ್ನು ದಾಸೋಹಗಳಿಗೆ ನೀಡುತ್ತಿದ್ದರು. ಬಸವಣ್ಣ ಬೊಕ್ಕಸಕ್ಕೆ ಕೈ ಹಾಕಬೇಕಾದ ಅವಶ್ಯಕತೆಯೇ ಇರಲಿಲ್ಲವೆಂದು ಕಾರ್ನಾಡರು ವಿಶ್ಲೇಷಿಸುತ್ತಾರೆ. ಪವಾಡದ ಹಣೆ ಪಟ್ಟಿ ಕಟ್ಟಿ ಬಸವಣ್ಣನ ವ್ಯಕ್ತಿತ್ವಕ್ಕೇ ಮಸಿಬಳಿಯುವುದಕ್ಕಿಂತ ಬಸವಣ್ಣನ ತತ್ವದ ಘನತೆಯನ್ನು ಹೆಚ್ಚಿಸುವಂಥ ಕಾರ್ನಾಡರ ವಿಶ್ಲೇಷಣೆ ಮಹತ್ವವಾದದ್ದು.
ತಲೆದಂಡ ನಾಟಕದ ಇನ್ನೊಂದು ಸಂದರ್ಭದಲ್ಲಿ ಲೇಖಕರು ಬಸವಣ್ಣನ ಕೆಲಸಗಳಲ್ಲಿ ಪವಾಡವೆನ್ನುವಷ್ಟು ಮಹತ್ವವಾದುದನ್ನು ಬಿಜ್ಜಳನ ಮಾತಿನಲ್ಲಿ ತರುತ್ತಾರೆ.
ಬಿಜ್ಜಳ: ” ಒಬ್ಬ ಹಾರುವರ ಹುಡುಗಿ ತಾನಾಗಿ ಪಂಚಮನ ಮಾಡಿಕೋತೀನಿ ಅಂತಾಳೇನು – ಎರಡು ಲಕ್ಷ ಜನ ಅದಕ್ಕೆ ಬೆಂಬಲ ಕೊಡತೈತೇನು? ಬಸವಣ್ಣನ ಖರೀ ಪವಾಡ ಇದು. ಇದು ನನ್ನ ರಾಜಧಾನಿಯೊಳಗ ಆಗತೈತಿ ಅಂದಾಗ ನಾ ಅಡ್ಡಗಾಲು ಹಾಕಿಸೇನ?
ಧಾಮೊದರಭಟ್ಟ: (ಕನಲಿ) ಅದು ಪವಾಡ ಅಲ್ಲ, ಮಹಾಸ್ವಾಮಿ. ನಿಸರ್ಗದ್ರೋಹ-
ಬಿಜ್ಜಳ: ” (ಕೈಯೆತ್ತಿ, ದನಿಯೆತ್ತದೆ) ಹೇಳೆದೆನಲ್ಲ ನಿಮಗೆ ತಿಳಿಯೋ ಮಾತಲ್ಲಿದು. ಹುಟ್ಟಾ ಪವಾಡಕ್ಕಾಗಿ ಹಂಬಲಿಸಿ ಕೂತವಗ ಮಾತ್ರ ಪವಾಡ ಕಂಡ ಗಳಿಗೆ ಅದರ ಗುರ್ತ ಹತ್ತತೈತಿ, ಉಳಿದವರಿಗೆ ಹೇಳಿದ್ದಲ್ಲದು!
ಬಿಜ್ಜಳನ ಈ ಮಾತುಗಳೇ ಎಲ್ಲವನ್ನೂ ಸ್ಪಷ್ಟಪಡಿಸುತ್ತವೆ. ಶೀಲ, ಕಲಾವತಿಯರ ವಿವಾಹ ಪ್ರಸ್ತಾಪದ ಇಡೀ ದೃಶ್ಯ, ಅಲ್ಲಮಪ್ರಭು ಬಸವಣ್ಣನಿಗೆ ಕೊಟ್ಟ ದಿವ್ಯದರ್ಶನದಂತೆ ನಾಟಕ ಹಿಂಸೆ, ರಕ್ತಪಾತಗಳಲ್ಲಿ ಕೊನೆಯಾಗುವುದು, ಇವೇ ಮುಂತಾದವುಗಳು ನಾಟಕವನ್ನು ಶ್ರೇಷ್ಠಕೃತಿಯಾಗಿಸಿವೆ.
ಕಾರ್ನಾಡರ ಮತ್ತೊಂದು ಮಹತ್ವದ ಕೃತಿಯಾದ ತುಘಲಕ್ ನಾಟಕದಲ್ಲಿ, ತುಘಲಕ್ ಚದುರಂಗದಾಟದ ಪ್ರೇಮಿ. ಈ ಆಟದಲ್ಲಿ ಸಾಮಾನ್ಯ ಸಿಪಾಯಿ ಮೇಲಕ್ಕೆ ಚಲಿಸಿ ತನ್ನ ಗುರಿ ಮುಟ್ಟಿದರೆ ಮಂತ್ರಿಯಾಗಬಲ್ಲ. ದೊರೆಯೂ ಆಗಬಲ್ಲ. ನಾಟಕದಲ್ಲಿ ದೊರೆ ತನ್ನ ಜನರನ್ನು ಪಗಡೆಕಾಯಿಗಳಂತೆ ತನ್ನ ಉದ್ದೇಶಕ್ಕೆ ಬಳಸಿಕೊಳ್ಳುವುದು, ನಾಟಕದ ಹಾಸಿನಲ್ಲಿ ಸಾಮಾನ್ಯ ಕೊಲೆಗಾರ, ಕಳ್ಳನೊಬ್ಬ ಮೇಲೇರಿ ಕಡೆಯಲ್ಲಿ ದೊರೆಗೆ ಸರಿಸಮಾನನಾಗಿ ನಿಲ್ಲುವುದು ‘ತುಘಲಕ್’ ನಾಟಕದ, ಚದುರಂಗದ ಹಾಸಿನ ಸಂವಿಧಾನದ ಕ್ರೂರ ವ್ಯಂಗ್ಯಗಳು. ಅಂತೆಯೇ ತುಘಲಕ್ ಕನಸುವ ಗುಲಾಬಿ ಉದ್ಯಾನವನ ವಾಸ್ತವದಲ್ಲಿ ಶವಗಳ ಕಾರ್ಯಾಗಾರಗಳಾಗುವುದು. ಹೀಗೆ ಬರೆಯುತ್ತ ಹೋದಷ್ಟೂ ತುಘಲಕ್ ನಾಟಕದ ಶ್ರೇಷ್ಟತೆ, ಮಹತ್ವತೆ ಹೆಚ್ಚುತ್ತದೆ.
ಕಾರ್ನಾಡರು ತಮ್ಮ ಮನಸ್ಸನ್ನು ನಾಟಕ ರಚನೆಯಲ್ಲಿ ನೆಟ್ಟು ತಮ್ಮ ದೇಹವನ್ನು ಚಲನಚಿತ್ರದಲ್ಲಿ ತೊಡಗಿಸಿಕೊಂಡವರು. ಕಿರು ಮತ್ತು ದೊಡ್ಡ ತೆರೆಯಲ್ಲಿ ಅಭಿನಯಿಸುತ್ತ, ಚಿತ್ರಕಥೆಗಳನ್ನು ಬರೆಯುತ್ತ, ಒಮ್ಮೊಮ್ಮೆ ಚಿತ್ರಗಳನ್ನು ನಿರ್ದೇಶಿಸುತ್ತ ತಮ್ಮ ಮನಸ್ಸಿನಲ್ಲಿ ಕಾಡುತ್ತಿರುವ ನಾಟಕಗಳ ಶಿಲ್ಪವನ್ನು ಕಡೆದವರು.
ಚಲನಚಿತ್ರ ಕ್ಷೇತ್ರಕ್ಕೂ ಅವರ ಕೊಡುಗೆ ಗಣನೀಯ. ಅರವತ್ತರ ದಶಕದಲ್ಲಿ ಅವರು ಚಿತ್ರಕತೆ ರಚಿಸಿ ಅಭಿನಯಿಸಿದ ‘ಸಂಸ್ಕಾರ’ ರಾಷ್ಟ್ರಪಶಸ್ತಿಯನ್ನು ಗಳಿಸಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತು. ಪ್ರತಿಭಾವಂತ ಯುವ ನಿರ್ದೇಶಕರು ಸಮಾಜದ ವಾಸ್ತವತೆಗಳನ್ನು ಪ್ರತಿಬಿಮ್ಬಿಸುವಂಥ ಚಿತ್ರಗಳನ್ನು ತೆಗೆಯಲು ಧೈರ್ಯವನ್ನು ದೊರಕಿಸಿಕೊಟ್ಟಿತು. ಕನ್ನಡ ಚಿತ್ರರಂಗ ರಾಷ್ಟ್ರೀಯ, ಅಂತರರಾಷ್ಟ್ರೀಯ ರಂಗದಲ್ಲಿ ಮನ್ನಣೆ ಗಳಿಸಿತು. ಬಿ. ವಿ. ಕಾರಂತರೊಡನೆ ಅವರು ನಿರ್ದೇಶಿಸಿದ ಚಿತ್ರಗಳು ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ. ಕಾರ್ನಾಡರು ಸ್ವಯಂ ನಿರ್ದೇಶಿಸಿದ ಚಿತ್ರಗಳು ಒಂದಾನೊಂದು ಕಾಲದಲ್ಲಿ, ಕಾಡು, ಕಾನೂರು ಹೆಗ್ಗಡತಿ, ಹಿಂದಿಯಲ್ಲಿ ಉತ್ಸವ್, ಚೆಲ್ವಿ ಇತ್ಯಾದಿ. ನಟರಾಗಿ ಶ್ಯಾಂ ಬೆನೆಗಲ್ ಅವರ ನಿಶಾಂತ್, ಮಂಥನ್, ಭೂಮಿಕಾ; ಶಂಕರ ನಾಗರ ಮಾಲ್ಗುಡಿ ಡೇಸ್, ಕನ್ನಡ ಮತ್ತು ತೆಲುಗಿನ ಆನಂದ ಭೈರವಿ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಶರೀಫ್ ಹೀಗೆ ಹಲವಾರು ನೆನಪುಗಳು ಮರುಕಳಿಸುತ್ತವೆ. ಎಪ್ಪತ್ತರ ದಶಕದಲ್ಲಿ ಬಂದ ಮಹಾನ್ ಪ್ರತಿಭೆಗಳಾದ ನಾಸಿರುದ್ದೀನ್ ಷಾ, ಓಂ ಪುರಿ, ಗಿರೀಶ್ ಕಾಸರವಳ್ಳಿ ಮುಂತಾದ ಹಲವಾರು ಪ್ರಸಿದ್ಧರು ಗಿರೀಶರು ಪೂನಾ ಫಿಲಂ ಇನ್ಸ್ಟಿಟ್ಯೂಟಿನಲ್ಲಿದ್ದಾಗ ಮೂಡಿಬಂದವರು. ಓಂ ಪುರಿಯಂತವ ನಟನೆಗೆ ಯೋಗ್ಯನೆ ಎಂಬುದನ್ನು ಪ್ರಶ್ನಿಸಿದ್ದ ಅಂದಿನ ಕಾಲದಲ್ಲಿ ಆತನಲ್ಲಿದ್ದ ಪ್ರತಿಭೆಯನ್ನು ಕಂಡವರು ಗಿರೀಶ್. ಕನ್ನಡದಲ್ಲಿ ವಿಷ್ಣುವರ್ಧನ್, ಶಂಕರನಾಗ್, ಸಿ. ಆರ್. ಸಿಂಹ ಮುಂತಾದ ಅನನ್ಯ ಪ್ರತಿಭೆಗಳನ್ನು ಹುಡುಕಿಕೊಟ್ಟವರು ಕೂಡಾ ಗಿರೀಶರೆ. ಅವರು ಎಷ್ಟು ಪ್ರಾಜ್ಞರಾಗಿ ಕಲಾವಂತಿಕೆ ಹೊತ್ತ ಚಿತ್ರಗಳಲ್ಲಿ ನಟಿಸುತ್ತಾರೋ, ಅಷ್ಟೇ ಸರಾಗವಾಗಿ ಕನ್ನಡ, ತಮಿಳು, ಹಿಂದಿ, ಮಲಯಾಳ, ಮರಾಠಿ ಹೀಗೆ ವಿವಿದ ಭಾಷೆಗಳ ಕಮರ್ಷಿಯಲ್ ಹಣೆಪಟ್ಟಿಯ ಚಿತ್ರಗಳಲ್ಲೂ ಸರಾಗವಾಗಿ ಎಂಬಂತೆ ನಟಿಸಿಬರುವುದನ್ನು ಕಂಡು ಇವರ ಅಪ್ರತಿಮ ವೈವಿಧ್ಯತೆಯ ಕುರಿತಾಗಿ ಅಚ್ಚರಿಹುಟ್ಟುತ್ತದೆ.
ಗಿರೀಶರ ಆತ್ಮಚರಿತ್ರೆಯಾದ ‘ಆಡಾಡತ ಆಯುಷ್ಯ’ ನಮ್ಮ ಕಾಲದಲ್ಲಿ ಮೂಡಿ ಬಂದ ಹೊಸ ನಿಟ್ಟಿನ ಬದುಕಿನ, ನವ್ಯ ಕಾಲದ ಸಾಹಿತ್ಯ, ರಂಗಭೂಮಿ, ಸಿನಿಮಾ, ಲಲಿತ ಕಲೆ ಮತ್ತು ಸಾಂಸ್ಕೃತಿಕ ಜಗತ್ತಿನ ಬಹು ದೊಡ್ಡ ಜಗತ್ತನ್ನೇ ನಮ್ಮ ಕಣ್ಣೆದುರು ತೆರೆದಿಡುವಂತದ್ದಾಗಿದೆ.
Tag: Girish Karnad, Jnanapitha
ಕೋಟ ಶಿವರಾಮಕಾರಂತ
ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು.
ಹರಿಜನೋದ್ಧಾರಕ, ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಿಕೆ, ಸ್ವಾತಂತ್ರ್ಯ ಚಳವಳಿಗಳಲ್ಲಿ, ನೃತ್ಯ ಸಂಗೀತ ರಂಗಗಳಲ್ಲಿ ನಾನಾರೀತಿ ಸೇವೆ ಮಾಡಿದ ಇವರು ಬಾಲವನವನ್ನು ಮಕ್ಕಳಿಗಾಗಿ ನಡೆಸಿದರು. ಬಿಎಂಶ್ರೀ ಸ್ಮಾರಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು, ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದರು.
೧೯೫೮ರಲ್ಲಿ ಇವರ ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸ್ವೀಡನ್ ಪ್ರಶಸ್ತಿ ಬಂದಿತು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕರ್ನಾಟಕ ವಿಶ್ವವಿದ್ಯಾನಿಲಯ ೧೯೬೩ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ, ೧೯೬೮ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಬಿರುದಿತ್ತು ಗೌರವಿಸಿತು. ೧೯೫೧ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು.
ಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳ. ೪೪ ಕಾದಂಬರಿ, ೧೪ ನಾಟಕ, ೩ ಕಥಾಸಂಕಲನ, ೬ ಪ್ರಬಂಧಗಳು, ೯ ಕಲಾ ಗ್ರಂಥಗಳು, ೫ ಆತ್ಮಕಥೆ-ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ-೨೫, ಇತ್ಯಾದಿ ೧೫0ಕ್ಕೂ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಮೂಕಜ್ಜಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳಾಗಿವೆ.
ತಮ್ಮ ಪ್ರತಿಭೆ ಪ್ರದರ್ಶನ, ಸಾಹಿತ್ಯದ ಕೊಡುಗೆ, ಆದರ್ಶ ವ್ಯಕ್ತಿತ್ವಗಳಿಂದ ಕನ್ನಡದ ಅಪೂರ್ವ ಸಾಹಿತಿಯಾಗಿದ್ದ ಶಿವರಾಮ ಕಾರಂತರು ೯-೧೨-೧೯೯೭ರಲ್ಲಿ ಮಂಗಳೂರಿನಲ್ಲಿ ನಿಧನರಾದರು.
Tag: Shivarama Karnatha, Shivaram Karanth, Jnanapitha
ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂ. ಗೋವಿಂದ ಪೈ. ಹಳಗನ್ನಡ ವಿದ್ವಾಂಸರೂ ಕವಿಗಳೂ ಆದ ಇವರು ಸಾಹುಕಾರ ತಿಮ್ಮಪ್ಪ – ದೇವಕಿಯಮ್ಮ ದಂಪತಿಗಳ ಪುತ್ರರಾಗಿ ೨೩-೩-೧೮೮೩ರಲ್ಲಿ ಮಂಜೇಶ್ವರದಲ್ಲಿ ಜನಿಸಿದರು.
ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದ ಬಿ.ಎ. ವ್ಯಾಸಂಗವನ್ನು ತಂದೆಯ ನಿಧನದ ದೆಸೆಯಿಂದ ನಿಲ್ಲಿಸಿದರು. ಸ್ವಂತ ವ್ಯಾಸಂಗದಲ್ಲೇ ಕನ್ನಡ, ಇಂಗ್ಲಿಷ್, ಗ್ರೀಕ್, ಫ್ರೆಂಚ್, ಸಂಸ್ಕೃತ, ಜರ್ಮನ್, ಪ್ರಾಕೃತ ಮೊದಲಾದ ದೇಶ – ವಿದೇಶಗಳ ಭಾಷೆಗಳನ್ನು ಕಲಿತರು. ಸಾಹಿತ್ಯ ರಚನೆ – ಸಂಶೋಧನೆಯಲ್ಲಿ ತೊಡಗಿದರು. ಎಲ್ಲೂ ಉದ್ಯೋಗಕ್ಕೆ ಸೇರಲಿಲ್ಲ.
ಪೈಗಳ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಮದರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿತು. ಪೈಯವರನ್ನು ೧೯೪೯ರಲ್ಲಿ ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಸನ್ಮಾಸಿದರು.
ಅವರಿಗೆ ಸಾಹಿತ್ಯ ಪರಿಷತ್ತು ೧೯೫೧ರಲ್ಲಿ ಬೊಂಬಾಯಿಯಲ್ಲಿ ನಡೆದ ೩೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಪುರಸ್ಕರಿಸಿತು.
ಸಾಹಿತ್ಯ ಸೇವೆ: ಗೊಮ್ಮಟ ಜಿನಸ್ತುತಿ, ನಂದಾದೀಪ, ಗಿಳಿವಿಂಡು, ಗೊಲ್ಗೊಥಾ ವೈಶಾಖಿ, ಹೆಬ್ಬೆರಳು, ಶ್ರೀಕೃಷ್ಣ ಚರಿತ್ರೆ, ಬರಹಗಾರನ ಹಣೆಬರಹ, ಪಾಶ್ರ್ವನಾಥ ತೀರ್ಥಂಕರ ಚರಿತೆ ಇತ್ಯಾದಿ ಇವರ ಪ್ರಮುಖ ಕೃತಿಗಳು.
ಗೋವಿಂದ ಪೈ ಅವರು ಮಂಜೇಶ್ವರದಲ್ಲಿ ೬-೯-೧೯೬೩ರಲ್ಲಿ ನಿಧನರಾದರು.
Tag: M. Govinda Pai, Rashtrakavi
೧೨ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಫ.ಗು. ಹಳಕಟ್ಟಿ
‘ವಚನ ಪಿತಾಮಹ’ರೆಂದು ಪ್ರಸಿದ್ಧರಾದ ಫ.ಗು. ಹಳಕಟ್ಟಿ ಅವರು ದಿನಾಂಕ ೨-೭-೧೮೮0ರಲ್ಲಿ ಗುರುಬಸಪ್ಪ ಹಳಕಟ್ಟಿ – ದಾನಾದೇವಿ ದಂಪತಿಗಳಿಗೆ ಜನಿಸಿದರು. ಇವರು ೧೮೯೬ರಲ್ಲಿ ಧಾರವಾಡದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮುಂಬೈಯಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ೧೯0೪ರಲ್ಲಿ ಎಲ್.ಎಲ್.ಬಿ. ಮುಗಿಸಿ ೧೯0೭ ವಕೀಲಿ ವೃತ್ತಿ ಪ್ರಾರಂಭಿಸಿದರು.
ಬಿಜಾಪುರದಲ್ಲಿ ೧೯೨೩ರಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡರು. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿ ಮುಂಬಯಿ ವಿಧಾನಸಭಾ ಸದಸ್ಯರೂ ಕಾರ್ಯನಿರ್ವಹಿಸಿದರು. ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು.
ಬಿಜಾಪುರದಲ್ಲಿ ಕನ್ನಡ ಶಾಲೆಗಳ ಪ್ರಗತಿಗಾಗಿ ಶ್ರಮಿಸಿದರು. ಶಿವಾನುಭವ ಪತ್ರಿಕೆಯನ್ನು, ೧೯೨೬ರಲ್ಲಿ ಪ್ರಾರಂಭಿಸಿದರು. ೧೯೨೮ರಲ್ಲಿ ಕರ್ನಾಟಕ ವಾರಪತ್ರಿಕೆ ಪ್ರಾರಂಭಿಸಿದರು. ವೀರಶೈವ ಶಿಕ್ಷಣ ಫಂಡ್ ವೀರಶೈವ ವಿದ್ಯಾವರ್ಧಕ ಸಂಘ, ಸಿದ್ಧೇಶ್ವರ ಬ್ಯಾಂಕ್ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದರು.
ಪರಿಷತ್ತಿನ ಸ್ಥಾಪಕವರ್ಗದಲ್ಲಿ ಒಬ್ಬರಾದ ಇವರು ಪರಿಷತ್ತಿನ ಆಜೀವಸದಸ್ಯರಾಗಿ ಜೀವನ ಪರ್ಯಂತ ಶ್ರಮಿಸಿದರು. ಬ್ರಿಟಿಷ್ ಸರ್ಕಾರ ಇವರಿಗೆ ರಾವ್ ಬಹದ್ದೂರ್, ರಾವ್ ಸಾಹೇಬ್ ಪ್ರಶಸ್ತಿಗಳನ್ನು ನೀಡಿದರು. ೧೯೨೮ರಲ್ಲಿ ಪರಿಷತ್ತಿನ ಪರವಾಗಿ ಮರಾಠಿ ಪ್ರಭಾವದ ಜಾಗಗಳಲ್ಲಿ ಕನ್ನಡ ಪ್ರಾಥಮಿಕ ಶಾಲಾ ಸ್ಥಾಪನೆಗೆ ಶ್ರಮಿಸಿದರು. ಇವರನ್ನು ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನಿಸಿತು. ಕರ್ನಾಟಕ ವಿಶ್ವವಿದ್ಯಾಲಯ ೧೯೫೬ರಲ್ಲಿ ಗೌರವ ಡಾಕ್ಟರೇಟ್ ನೀಡಿತು. ಬಳ್ಳಾರಿಯಲ್ಲಿ ೧೯೨೬ರಲ್ಲಿ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೩೩ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದರು.
ಇವರು ಸಂಪಾದಿಸಿದ ಮತ್ತು ರಚಿಸಿದ ಕೃತಿಗಳು :
ವಚನಶಾಸ್ತ್ರಸಾರ (೩ ಭಾಗಗಳು), ೭೭0 ಅಮರ ಗಣಾಧೀಶ್ವರ ಚರಿತ್ರೆಗಳು, ಶಿವಶರಣ ಕೃತಿಗಳು, ಬಸವೇಶ್ವರ ವಚನಗಳು ಮೊದಲಾದ ಶಿವಶರಣರ ವಚನಸಂಗ್ರಹಗಳು; ಶಿವಾನುಭವ ಶಬ್ದಕೋಶ, ಶೂನ್ಯ ಸಂಪಾದನೆ, ದೇವರ ದಾಸಿಮಯ್ಯ ವಚನ ಮೊದಲಾದ ೬0 ಗ್ರಂಥಗಳು, ಕೆಳದಿ ಸಂಸ್ಥಾನದ ರಾಯರ ವಂಶಾವಳಿ, ಕೊಡಗು ಸಂಸ್ಥಾನದ ರಾಜೆಂದ್ರನಾಮೆ.
೨೭-0೬-೧೯೬೪ರಲ್ಲಿ ಇವರು ನಿಧನರಾದುದರಿಂದ ವಚನ ಸಾಹಿತ್ಯದ ಮೇರು ವ್ಯಕ್ತಿ ಮರೆಯಾದಂತಾಯಿತು.
ಕನ್ನಡ ಸಾಹಿತ್ಯ ಸಮ್ಮೇಳನ–೧೨,
ಅಧ್ಯಕ್ಷರು: ಫ.ಗು. ಹಳಕಟ್ಟಿ
ದಿನಾಂಕ ೨೨, ೨೩, ೨೪ ಮೇ ೧೯೨೬
ಸ್ಥಳ : ಬಳ್ಳಾರಿ
(೧) ಯೋಗ್ಯ ಶಿಕ್ಷಣ ಕ್ರಮ
ನಮ್ಮ ಕರ್ನಾಟಕಸ್ಥರಲ್ಲಿ ಕರ್ನಾಟಕತ್ವದ ಅಂಕುರವನ್ನು ಬೇರೂರಿಸಬೇಕಾದರೆ, ನಮ್ಮ ವಿದ್ಯಾಸಂಸ್ಥೆಗಳ ಶಿಕ್ಷಣಕ್ರಮದಲ್ಲಿ ಯೋಗ್ಯ ಬದಲಾವಣೆಗಳು ಆಗುವುದು ಅವಶ್ಯವಿರುತ್ತದೆ. ಯೋಗ್ಯ ಶಿಕ್ಷಣಕ್ರಮವಿಲ್ಲದೆ ಹೋದರೆ, ಯಾವ ದೇಶವೂ ಮುಂದುವರಿಯಲಾರದು. ಸಾಮಾನ್ಯವಾಗಿ ಹಿಂದುಸ್ಥಾನವು, ಅದರಲ್ಲಿ ವಿಶೇಷವಾಗಿ ಕರ್ನಾಟಕ ದೇಶವು ಚೈತನ್ಯಶೂನ್ಯವಾದುದಕ್ಕೆ ಅದರಲ್ಲಿ ಯೋಗ್ಯ ಶಿಕ್ಷಣಕ್ರಮವಿಲ್ಲದ್ದೇ ಮುಖ್ಯ ಕಾರಣವೆಂದು ನನಗೆ ತೋರುತ್ತದೆ. ಅಕ್ಷರಜ್ಞರ ಸಂಖ್ಯೆಯು ಈಗಿನ ಕಾಲಕ್ಕೆ ಮೊದಲಿಗಿಂತಲೂ ಹೆಚ್ಚಾಗಿರಬಹುದು. ಆದರೆ ಅವರಲ್ಲಿ ತಮ್ಮ ದೇಶದ ಬಗ್ಗೆ ಜಾಜ್ವಲ್ಯ ಪ್ರೀತಿಯೂ ತಮ್ಮ ಸಂಸ್ಕೃತಿಯ ಜ್ಞಾನವೂ ಇರದೆ ಹೋದರೆ, ಆ ವಿದ್ಯೆಯ ಪ್ರಯೋಜನವೇನು? ಆದ್ದರಿಂದ ಸಾಹಿತ್ಯ ಪರಿಷತ್ತಿವರು ಕೈಕೊಳ್ಳಬಹುದಾದ ಅನೇಕ ಕಾರ್ಯಗಳಲ್ಲಿ ಯೋಗ್ಯ ಪಠ್ಯ ಪುಸ್ತಕಗಳನ್ನು ನಿರ್ಮಿಸುವ ಕಾರ್ಯಕ್ಕೆ ನಾನು ಅಗ್ರಸ್ಥಾನವನ್ನು ಕೊಡುತ್ತೇನೆ. ನಮ್ಮ ಶಿಕ್ಷಣಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ, ಹೈಸ್ಕೂಲು ಶಿಕ್ಷಣ, ಕಾಲೇಜು ಶಿಕ್ಷಣ ಅಥವಾ ಉಚ್ಛಶಿಕ್ಷಣ ಎಂಬ ಮೂರು ಭಾಗಗಳು ಇವೆ. ಈ ಮೂರು ಶಿಕ್ಷಣಕ್ರಮದಲ್ಲಿಯೂ ಮೇಲ್ಕಂಡ ದೋಷಗಳು ಇರುತ್ತವೆ. ಇವುಗಳನ್ನು ನಾವು ತೀವ್ರವಾಗಿ ತೆಗೆದು ಹಾಕಲಿಕ್ಕೆ ಯತ್ನಿಸಬೇಕು.
ಪಠ್ಯನಿರ್ಮಾಣ ಪರಷತ್ತಿನದಾಗಬೇಕು
ಪ್ರಾಥಮಿಕ ಶಾಲೆಗಳಲ್ಲಿ ತಕ್ಕ ಪಠ್ಯಪುಸ್ತಕಗಳನ್ನು ನಿರ್ಮಿಸುವ ಕಾರ್ಯವನ್ನು ಮುಂಬಯಿ ಕರ್ನಾಟಕದಲ್ಲಿಯ ಲೋಕಲ್ ಬೋರ್ಡ, ಮುನಿಸಿಪಾಲಿಟಿಯವರು ಈಗ ತೀವ್ರವಾಗಿ ಅಂಗೀಕರಿಸಬೇಕೆಂದು ನನ್ನ ಒತ್ತಾಯದ ಸೂಚನೆ ಇದೆ. ಮುಂಬಯಿ ಇಲಾಖೆಯಲ್ಲಿ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಯು ಲೋಕಲ್ ಬೋರ್ಡ್ ಮುನಿಸಿಪಾಲಿಟಿಗಳಿಗೆ ಒಪ್ಪಿಸಲ್ಪಟ್ಟಿದ್ದು ಒತ್ತಾಯದ ಶಿಕ್ಷಣವು ಇಲ್ಲಿ ಕೂಡಲೆ ಪ್ರಚಾರದಲ್ಲಿ ಬರತಕ್ಕದ್ದಾಗಿರುತ್ತವೆ. ಈ ಕಾಯಿದೆಯ ಪ್ರಕಾರ ಕ್ರಮಿಕ ಪುಸ್ತಕಗಳನ್ನು ಸಿದ್ಧಗೊಳಿಸುವ ಅಧಿಕಾರವೂ ಈ ಸಂಸ್ಥೆಗಳಿಗೆ ಕೊಡಲ್ಪಟ್ಟಿರುತ್ತದೆ. ಈ ಅಧಿಕಾರದ ಉಪಯೋಗವನ್ನು ಕರ್ನಾಟಕದಲ್ಲಿಯ ಲೋಕಲ್ ಬೋರ್ಡ್ ಮುನಿಸಿಪಾಲಿಟಿಯವರು ತೀವ್ರವಾಗಿ ಮಾಡಬೇಕೆಂದು ನನ್ನ ಸೂಚನೆ ಇದೆ. ಈ ಬೋರ್ಡಿನವರು ಸಾಹಿತ್ಯ ಪರಿಷತ್ತಿನ ಮತ್ತು ಮಂಗಳೂರು, ಬಳ್ಳಾರಿ ಪ್ರಾಂತಗಳ ಮಹನೀಯರ ಸಲಹೆ ಮತ್ತು ಸಹಾನುಭೂತಿಯನ್ನು ತೆಗೆದುಕೊಂಡು ಈ ಪಠ್ಯಪುಸ್ತಕಗಳನ್ನು ನಿರ್ಮಿಸತಕ್ಕದ್ದು. ಹೀಗೆ ನಿರ್ಮಿಸಿದ ಪುಸ್ತಕಗಳು ಎಲ್ಲ ಪ್ರಾಂತಗಳ ಕನ್ನಡ ಶಾಲೆಗಳಲ್ಲಿ ಉಪಯೋಗಿಸಲ್ಪಡಲು ಪ್ರಯತ್ನಿಸತಕ್ಕದ್ದು. ಹೀಗೆ ನಾವು ಈ ಪ್ರಯತ್ನದಲ್ಲಿ ಯಶಸ್ಸನ್ನು ಸಂಪಾದಿಸಿದರೆ, ಒಂದೇ ಮಾದರಿಯ ಪಠ್ಯಪುಸ್ತಕಗಳು ಎಲ್ಲ ಕಡೆಗೆ ಪ್ರಚಾರಕ್ಕೆ ಬಂದು, ಇದರಿಂದ ಕರ್ನಾಟಕದ ಅರಿವು ನಮ್ಮ ಜನರಿಗೆ ಆಗುವುದಲ್ಲದೆ, ಕರ್ನಾಟಕದ ಭಾಷೆಯಲ್ಲಿ ಈಗ ತೋರುವ ಭಿನ್ನತೆಗಳೂ ಕಡಿಮೆಯಾಗುತ್ತ ಹೋಗುವವು. ಈ ಪ್ರಯತ್ನದಲ್ಲಿ ನಾವು ಜಯಶೀಲರಾದರೆ ಒಂದು ಮಹತ್ವದ ಕಾರ್ಯವನ್ನು ಮಾಡಿದಂತೆ ಆಗುವದು.
ಶಾಖಾಸಂಘಗಳು ಬೇಕು
ದೇಶದಲೆಲ್ಲ ಜಾಗೃತಿಯನ್ನುಂಟುಮಾಡಲಿಕ್ಕೆ ಒಂದೇ ಒಂದು ಮಧ್ಯವರ್ತಿ ಸಾಹಿತ್ಯಪರಿಷತ್ತಿಗೆ ಸಾಧ್ಯವಾಗಲಾರದು? ಅವರ ಸಹಾಯಕ್ಕೋಸ್ಕರ ಎಲ್ಲ ಕಡೆಗೆ ಶಾಖಾಸಂಘಸಂಸ್ಥೆಗಳು ಆಗುವುದು ಅವಶ್ಯವಿದೆ. ಈ ತೆರದ ಜಾಗೃತಿಯನ್ನು ಹುಟ್ಟಿಸಲಿಕ್ಕೆ ಸಾಹಿತ್ಯ ಪರಿಷತ್ತಿನವರು ವಿಶೇಷ ಕ್ರಮವನ್ನು ವಹಿಸಲಿಕ್ಕೆ ಬೇಕು. ಸಾಹಿತ್ಯ ಸಮ್ಮೇಳನವನ್ನು ಒಂದು ವರ್ಷ ಎಲ್ಲಾದರೂ ಕೂಡಿಸಿದರೆ ನಾವು ಇಚ್ಛಿಸಿದ ಕಾರ್ಯಗಳು ನೆರವೇರಲಾರವು. ಪ್ರತಿಯೊಂದು ಜಿಲ್ಲೆಯ ಕನ್ನಡ ಭಾಷಾಪ್ರೇಮಿಗಳು ತಮ್ಮ ಜಿಲ್ಲೆಯಲ್ಲಿಯೂ ಅದರಂತೆಯೇ ತಮ್ಮ ಹಿಂದೆ ಬಿದ್ದ ನೆರೆಜಿಲ್ಲೆಗಳಲ್ಲಿಯೂ ಕರ್ಣಾಟಕತ್ವದ ಭಾವನೆಯನ್ನು ಜಾಗ್ರತೆಪಡಿಸಲಿಕ್ಕೆ ಸದಾ ಪ್ರಯತ್ನಿಸುತ್ತಿರಬೇಕು. ಅವರು ಕರ್ನಾಟಕ ವಾಙ್ಮಯ ಮತ್ತು ಇತಿಹಾಸವನ್ನು ವಿಶೇಷ ಅಭ್ಯಾಸಮಾಡಿದವರನ್ನು ತಮ್ಮಲ್ಲಿಗೆ ಆಗಿಂದಾಗ್ಗೆ ಬರಮಾಡಿಕೊಂಡು ಅವರ ಜ್ಞಾನದ ಲಾಭವನ್ನು ಜನರಿಗೆ ಮಾಡಿಕೊಡುತ್ತಿರಬೇಕು.
ಉಪಸಂಹಾರ
ಸಭ್ಯಗೃಹಸ್ಥರೇ, ಈ ಮೇರೆಗೆ ನಾವು ಮಾಡತಕ್ಕ ಪ್ರಯತ್ನಗಳನ್ನು ಸ್ಥೂಲಮಾನದಿಂ ಇಲ್ಲಿ ನಿರ್ದೇಶಿಸಿದ್ದೇನೆ. ಈ ಸಂಗತಿಗಳ ಬಗ್ಗೆ ನನಗೆ ಪರಿಷತ್ತುಗಳಲ್ಲಿ ಅನೇಕ ನಿರ್ಣಯಗಳು ಆಗಿರುತ್ತವೆ. ಆದರೆ, ಈ ಬಗ್ಗೆ ಪ್ರಯತ್ನಗಳು ಮಾತ್ರ ಬಲವಾಗಿಯೂ ವ್ಯವಸ್ಥೆಯಿಂದಲೂ ನಮ್ಮಲ್ಲಿ ನಡೆದಿರುವದಿಲ್ಲೆಂಬುದು ಬಹು ವಿಷಾದಕರವಾದದ್ದು. ವಾಙ್ಮಯಾಭಿವೃದ್ಧಿಯು ಒದಗಬೇಕಾದರೆ ವಿದ್ವಜ್ಜನರು ಒಂದೇ ಸಮನೇ ಪ್ರಯತ್ನಿಸುವದು ಅವಶ್ಯವಿದೆ. ಈ ಅಭಿವೃದ್ಧಿಯು ಪರಿಷತ್ತಿನಲ್ಲಿ ಮಾಡುವ ನಿರ್ಣಯಗಳನ್ನೇ ಅವಲಂಬಿಸಿಲ್ಲ. ಈ ಕಾರ್ಯಭಾರವನ್ನು ನಮ್ಮಲ್ಲಿಯ ಸುಶಿಕ್ಷಿತರು ವಿಶೇಷವಾಗಿ ಕೈಕೊಳ್ಳತಕ್ಕದ್ದು.
Tag: Kannada Sahitya Sammelana 12, Fa.Gu. Halakatti
ರ್ಣಾಟಕ ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ವಿಷಯಗಳನ್ನು ಆ ಆ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆ ಪಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು”- ಇದು ಹತ್ತನೆಯ ಉದ್ದೇಶವು. ಪರಿಷತ್ತಿನವರು ಈ ಕಾರ್ಯವನ್ನು ಕೈಕೊಂಡಿರುವುದು ಮಾತ್ರವಲ್ಲದೆ ನಿರೀಕ್ಷಣೆಗಿಂತಲೂ ಅತಿಶಯವಾಗಿಯೇ ಇದನ್ನು ಕುರಿತು ಕೆಲಸಮಾಡಿ, ಕರ್ಣಾಟಕ ಶಿಕ್ಷಣದ ವಿಷಯದಲ್ಲಿಯೂ ಕನ್ನಡಿಗರ ಆಡಚಣೆಗಳನ್ನು ಹೋಗಲಾಡಿಸುವ ವಿಷಯದಲ್ಲಿಯೂ ದೇಶೀಯ ಸಂಸ್ಥಾನಗಳಲ್ಲಿ ಮಾತ್ರವಲ್ಲದೆ ಬ್ರಿಟಿಷ್ ಇಂಡಿಯಾದಲ್ಲಿಯೂ ತಕ್ಕ ಅಧಿಕಾರಿಗಳಲ್ಲಿ ಅರಿಕೆಮಾಡಿ ಕೊಂಡಿರುವರು. ಇಷ್ಟೊಂದನ್ನು ಮಾಡಿಯೂ ಫಲ ಪರಿಣಾಮವು ಏಕರೂಪವಾಗಿರದಿದ್ದರೆ, ಅದು ಪರಿಷತ್ತಿನ ಲೋಪವೆನ್ನುವಂತಿಲ್ಲ. ಇಷ್ಟು ಮಾತ್ರದಿಂದಲೇ ನಾವು ಎದೆಗುಂದಿ ಹಿಂಜರಿಯಬಾರದು. ಪರಿಷತ್ತಿನ ಮುಖ್ಯಾಧಿಕಾರಿಗಳು ಈ ಉದ್ದೇಶವು ನೆರವೇರುವವರೆಗೂ ಚೆನ್ನಾಗಿ ಪರಿಶ್ರಮವನ್ನು ವಹಿಸಿ ಅದನ್ನು ನಡೆಯಿಸದಿರಲಾರರೆಂಬ ಭರವಸೆಯು ನನಗೆ ದೃಢವಾಗಿರುವುದು. ಮೈಸೂರು ಶ್ರೀಮನ್ಮಹಾರಾಜಾ ಸರಕಾರದವರು ಕೆಲವು ಅಂತಸ್ತಿನವರೆಗೆ ಕನ್ನಡವನ್ನೇ ವ್ಯಾವಹಾರಿಕ ಮತ್ತು ರಾಜಕೀಯ ಭಾಷೆಯಾಗಿ ಉಪಯೋಗಿಸುವಂತೆ ಇತ್ತಲಾಗೆ ಅಪ್ಪಣೆ ಕೊಡಿಸಿರುತ್ತಾರೆ, ಈ ವಿಷಯದಲ್ಲಿ ನಮ್ಮೆಲ್ಲರ ಮನಃಪೂರ್ವಕವಾದ ಕೃತಜ್ಞತೆಯು ಆ ಸರಕಾರದವರಿಗೆ ಸಲ್ಲತಕ್ಕುದಾಗಿದೆ.
೧೧ ಮತ್ತು ೧೨. “ಕರ್ಣಾಟಕದ ಸಕಲ ಪ್ರಾಂತಗಳಲ್ಲಿಯೂ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವಿಕೆ” ಮತ್ತು “ಕನ್ನಡನಾಡುಗಳ ಪ್ರಮುಖರುಗಳು ಸಮ್ಮೇಳನಗಳನ್ನು ಆಗಾಗ ಏರ್ಪಡಿಸುವುದು ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಕೊಡಿಸುವಿಕೆ” ಎಂಬಿವು ಹನ್ನೊಂದನೆಯ ಮತ್ತು ಹನ್ನೆರಡನೆಯ ಉದ್ದೇಶಗಳಾಗಿವೆ. ಈ ವಿಷಯಗಳಲ್ಲಿ ಪರಿಷತ್ತಿನವರು ಇದುವರೆಗೂ ವಿಶೇಷವಾಗಿ ತಕ್ಕಷ್ಟು ಪ್ರಯತ್ನಗಳನ್ನು ನಡೆಯಿಸಿದಂತೆಯೇ ತೋರಲಿಲ್ಲ. ಈ ಉದ್ದೇಶಗಳನ್ನು ನೆರವೇರಿಸುವ ಸಲುವಾಗಿ ಕೂಡಲೆ ತಕ್ಕ ಪ್ರಯತ್ನಗಳನ್ನು ಕೈಕೊಂಡು ಪರಿಷತ್ಪತ್ರಿಕೆಯ ಪ್ರತಿಯೊಂದು ಸಂಚಿಕೆಯಲ್ಲಿಯೂ ಅದರ ಫಲಿತಾಂಶವನ್ನು ಕನ್ನಡಿಗರಿಗೆ ತಿಳಿಯಪಡಿಸಬೇಕೆಂದು ನಾನು ಒತ್ತಿ ಒತ್ತಿ ಹೇಳುವೆನು.
ಸಮ್ಮೇಳನದ ನಿರ್ಣಯಗಳು ಏನಾದವು?
ಈಗಲಿನ್ನು, ಹಿಂದೆ ಹತ್ತು ವರ್ಷಗಳಿಂದ ನಡೆದ ಸಮ್ಮೇಳನಗಳಲ್ಲಿ ನಿರ್ಣೀತವಾದ ನಿಬಂಧನೆಗಳಲ್ಲಿ ಯಾವ ಯಾವುವು ಎಷ್ಟರಮಟ್ಟಿಗೆ ನೆರವೇರಿರುವುವು ಎಂಬುದನ್ನು ನನಗೆ ತಿಳಿದಮಟ್ಟಿಗೆ ತಿಳಿಸಬೇಕೆಂದು ಅಪೇಕ್ಷಿಸುವೆನು. ಆದರೆ ಅವುಗಳಲ್ಲಿ ಮುಖ್ಯ ಮುಖ್ಯವಾದ ವಿಷಯಗಳನ್ನು ಮಾತ್ರವೇ ಸಂಗ್ರಹವಾಗಿ ವಿವರಿಸುವೆನು. “ಆಧುನಿಕ ಕವಿಗಳು, ಗ್ರಂಥಕಾರರು ಮತ್ತು ಗ್ರಂಥಪ್ರಚಾರಕರಲ್ಲಿ ಪ್ರಮುಖರಾದವರ ಜೀವನ ಚರಿತ್ರೆಗಳನ್ನು ಸಂಗ್ರಹಿಸಿ ಪುನರ್ಮುದ್ರಣ ಮಾಡಿಸುವಿಕೆ” ಎಂಬ ವಿಷಯವು ಬಿಜಾಪುರದಲ್ಲಿ ನಡೆದ (ಕಳೆದ ಒಂಬತ್ತನೆಯ) ಸಮ್ಮೇಳನದಲ್ಲಿ ನಿರ್ಣೀತವಾಯಿತು. (ಸಾಧ್ಯವಾದರೆ ಅವರವರ ಭಾವಚಿತ್ರಗಳೊಂದಿಗೆ ಪ್ರಕಟಗೊಳಿಸುವುದು ಮಾತ್ರವಲ್ಲದೆ ಬೇರೆ ಯಾವ ವಿಧವಾದ ಕಾರ್ಯವೂ ನಡೆದಂತೆ ತೋರಲಿಲ್ಲ. ಅದಕ್ಕಿಂತಲೂ ಮುಂಚಿತವಾಗಿ ದಾವಣಗೆರೆಯಲ್ಲಿ ನಡೆದ (೮ನೆಯ) ಸಮ್ಮೇಳನದಲ್ಲಿ “ಕನ್ನಡಿಗರಲ್ಲಿ ಐಕಮತ್ಯವು ಹೆಚ್ಚುವ ಸಲುವಾಗಿ ಕರ್ಣಾಟಕದ ಮಹಾಪುರುಷರ ಗೌರವಾರ್ಥವಾದ ಉತ್ಸವಗಳನ್ನು ಕರ್ಣಾಟಕದ ಸಮಸ್ತ ಭಾಗಗಳಲ್ಲಿಯೂ ಪ್ರತಿವರ್ಷವೂ ನಡೆಯಿಸಬೇಕು” ಎಂಬುದಾಗಿ ನಿರ್ಣೀತವಾಗಿದ್ದಿತು. “ಈ ತೀರ್ಮಾನವು ಪರಿಷತ್ಪತ್ರಿಕೆಯಲ್ಲಿಯೂ ಇನ್ನು ಕೆಲವು ವರ್ತಮಾನ ಪತ್ರಿಕೆಗಳಲ್ಲಿಯೂ ಪ್ರಕಟಗೊಳಿಸಲಾಗಿದೆ” ಎಂದು ಮಾತ್ರವೇ ದುಂದುಭಿ ಸಂಘವತ್ಸರ ವಾರ್ಷಿಕ ವರದಿಯಲ್ಲಿ ಹೇಳಿದೆ. ಈ ವಿಷಯದಲ್ಲಿ ಪರಿಷತ್ತಿನವರು ನಡೆಯಿಸಿದ ಪ್ರಯತ್ನಕ್ಕಿಂತಲೂ ಅವರು ತೋರಿದ ಔದಾಸೀನ್ಯವೇ ಅಧಿಕವಾಗಿರುವುದೆಂದೂ, ಪರಿಷತ್ತಿನ ಕಾರ್ಯನಿರ್ವಾಹಕ ಮಂಡಲಿಗೆ ಇದು ಗೌರವಾರ್ಹವಲ್ಲವೆಂದೂ ನನಗೆ ತೋರುವುದು. ಪರಿಷತ್ತು ಇಂತಹ ಸೂಚನೆಗಳನ್ನು ಮಾತ್ರ ಮಾಡಬಲ್ಲುದೇ ವಿನಾ ಅದಕ್ಕೆ ಕನ್ನಡ ಮಹಾಜನರ ಮೇಲೆ ಅಧಿಕಾರವಿಲ್ಲವೆಂಬುದನ್ನು ನಾನು ಒಪ್ಪಿಕೊಳ್ಳುವೆನು. ಆದರೆ ಪರಿಷತ್ತಿನ ಆಶ್ರಯದಲ್ಲಿಯೇ ಸಾರ್ವಜನಿಕವಾಗಿ ಇಂತಹ ಉತ್ಸವಗಳನ್ನು ನಡೆಯಿಸಬಾರದಾಗಿದ್ದಿತೇ? ನೂರಾರು ಪತ್ರಿಕೆಗಳಲ್ಲಿ ನೂರಾರು ಪ್ರಕಟಣೆಗಳನ್ನು ಹಾಕಿಸುವುದಕ್ಕಿಂತಲೂ ಈ ಉತ್ಸವಗಳನ್ನು ಇವರೇ ನಡೆಯಿಸಿದ್ದ ಪಕ್ಷದಲ್ಲಿ ಅವು ಜನರ ಲಕ್ಷ್ಯವನ್ನು ಮತ್ತಷ್ಟು ಹೆಚ್ಚಾಗಿ ಆಕರ್ಷಿಸುತ್ತಿರಲಿಲ್ಲವೇ? ಈ ಲೋಪವನ್ನು ಪರಿಷತ್ ಅಧಿಕಾರಿಗಳು ಕೂಡಲೇ ಸವರಿಸುವರೆಂದೂ, ಇತಃಪರ ಇಂತಹ ಉತ್ಸವಗಳಲ್ಲಿ ಭಾಗಿಗಳಾಗುವ ಭಾಗ್ಯವು ನಮ್ಮೆಲ್ಲರಿಗೂ ದೊರೆಯುವುದೆಂದೂ ನಾನು ನಂಬುತ್ತೇನೆ. ಇನ್ನು, “ವಿಜಯನಗರ ಸಾಮ್ರಾಜ್ಯಕ್ಕೆ ರಾಜಧಾನಿಯಾಗಿದ್ದ ಪಂಪಾಕ್ಷೇತ್ರದ ಜೀರ್ಣೋದ್ಧಾರ” ವಿಷಯವೂ ಆ ಸಮ್ಮೇಳನದಲ್ಲಿಯೇ ನಿರ್ಣಯವಾಗಿದ್ದಿತು. ಆದರೆ ದ್ರವ್ಯಾನುಕೂಲತೆಯಿಲ್ಲದ ಕಾರಣ ಈ ಕಾರ್ಯವು ನೆರವೇರಲಿಲ್ಲವೆಂಬುದು ಪರಿಷತ್ತಿನ ವಾರ್ಷಿಕ ವರದಿಯಿಂದ ತಿಳಿಯೆ ಬರುವುದು. ಕ್ಷೇತ್ರದ ಮಹಿಮೆಯನ್ನೂ ನಡೆಯಬೇಕಾದ ‘ಕಾಮಗಾರಿ’ಗಳ ವಿವರವನ್ನೂ ಬರೆಯುವ ಸಲುವಾಗಿ ಪರಿಮಿತವಾದ ಸದಸ್ಯರನ್ನೊಳಗೊಂಡ ಒಂದು ಉಪಸಭೆಯನ್ನು ಏರ್ಪಡಿಸಿ ಆ ಉಪಸಭೆಗೆ ಈ ಕಾರ್ಯವನ್ನು ವಹಿಸಿದ್ದ ಪಕ್ಷದಲ್ಲಿ ಸ್ವಲ್ಪಮಟ್ಟಿಗಾದರೂ ಈ ಕಾರ್ಯವು ನೆರವೇರದೆ ಇರುತ್ತಿರಲಿಲ್ಲ. ಪರಿಷತ್ಪತ್ರಿಕೆಯಲ್ಲಿಯೇ ಆಗಲಿ ಅಥವಾ ಇತರ ವಾರ್ತಾಪತ್ರಿಕೆಗಳಲ್ಲಿಯೇ ಆಗಲಿ ಪ್ರಕಟಿಸುವ ಮೂಲಕ ಸ್ವಲ್ಪಮಟ್ಟಿಗಾದರೂ ಹಣವು ಸಂಗ್ರಹವಾಗದಿದ್ದ ಬಳಿಕ ಕಾರ್ಯಸಾಧನೆಗೆ ಸಾಕಾಗುವಷ್ಟು ದ್ರವ್ಯವನ್ನು ಸಂಗ್ರಹಿಸುವ ಭರವಸೆಯ ತಾನೇ ಎತ್ತಣದು?
ಬಂಡವಾಳ ಸಂಗ್ರಹಿಸುವ ಯೋಜನೆ
ಇನ್ನು ಇತರ ಚಿಲ್ಲರೆ ವಿಷಯಗಳನ್ನೂ ಕನ್ನಡದಲ್ಲಿ ವಿಶ್ವಕೋಶವನ್ನು ಬರೆಯಿಸುವಿಕೆಯೇ ಮಂತಾದ, ಪ್ರಕೃತದಲ್ಲಿ ನಮ್ಮ ಶಕ್ತಿಗೆ ಸಾಧ್ಯವಲ್ಲದ ಒಂದೆರಡು ವಿಷಯಗಳನ್ನೂ ಬಿಟ್ಟು, ಕನ್ನಡ ಗ್ರಂಥಗಳನ್ನು ಮುದ್ರಿಸುವ ಸೌಕರ್ಯಾರ್ಥವಾಗಿ ಸುಮಾರು ಐವತ್ತು ಸಾವಿರ ರೂಪಾಯಿಗಳ ಬಂಡವಾಳದಿಂದ ದೊಡ್ಡದಾದ ಒಂದು “ಜಾಯಿಂಟ್ ಸ್ಟಾಕ್ ಕಂಪನಿ” ಯನ್ನು ಸ್ಥಾಪಿಸಬೇಕೆಂದಿದ್ದ ಪರಿಷತ್ತಿನ ಮತ್ತೊಂದು ಉದ್ದೇಶವು ನಾವೆಲ್ಲರೂ ಆವಶ್ಯಕವಾಗಿ ಗಮನಿಸತಕ್ಕುದಾಗಿರುವುದು. ‘ಈ ವಿಷಯದಲ್ಲಿ ಮಹಾಜನರ ಮೂಲಕ ಸಾಕಾದಷ್ಟು ಪ್ರೋತ್ಸಾಹವು ದೊರೆಯದ ಕಾರಣ ಪ್ರಕೃತದಲ್ಲಿ ಈ ವಿಷಯವನ್ನು ಮಾನಸಿಕ ಮಾಡಲಾಯಿತು’ ಎಂಬುದಾಗಿ ವಾರ್ಷಿಕ ವರದಿಯಿಂದ ತಿಳಿದುಬರುವುದು. ಆದರೆ ಮಹಾಜನರ ಸಹಾಯವನ್ನು ಪಡೆಯುವ ಸಲುವಾಗಿ ಈ ವಿಷಯದಲ್ಲಿ ನಡೆಯಿಸಿದ ಪ್ರಯತ್ನಗಳಾದರೂ ಯಾವುವು? ಎಂಬುದೇ ನನ್ನ ಪ್ರಶ್ನೆ. ಸಹಕಾರ ಸಂಘಗಳ ನಿಬಂಧನೆಗಳನ್ನನುಸರಿಸಿ ಕೆಲವು ಮಂದಿ ಚಂದಾದಾರರನ್ನು ಕೂಡಿಸಿ ಪರಿಷತ್ತಿನ ಹೆಸರಿನಲ್ಲಿ ಒಂದು ಚಿಕ್ಕ ಮುದ್ರಣಾಲಯದಲ್ಲಿ ಮುದ್ರಿಸುವುದಾದರೆ ಅವರಿಗೆ ವಿಶೇಷವಾದ `ರಿಯಾಯಿತಿ’ಯನ್ನು ತೋರುವುದಾಗಿಯೂ ಸೂಚಿಸಿದರಾದರೆ ಈ ಉದ್ದೇಶವು ಕೈಗೂಡದಿರದೆಂದುದು ನನ್ನ ಭಾವನೆ. ಆದುದರಿಂದ ಈ ವಿಷಯವನ್ನೂ ಮರಳಿ ವಿಮರ್ಶಿಸಬೇಕೆಂದು ಸೂಚಿಸುವೆನು.
ಪರಿಷತ್ತಿನ ಪದಾಧಿಕಾರಿಗಳನ್ನು ಗಮನಿಸಿ
ಮಹಾಶಯರೇ! ಹೀಗೆ ಈ ಪರಿಷತ್ತು ಸ್ಥಾಪಿತವಾದ ಮೊದಲ್ಗೊಂಡು ಹತ್ತು ವರ್ಷಗಳಿಂದಲೂ ಸಮರ್ಪಕವಾಗಿ ಕೆಲಸ ಮಾಡಿರುವುದು; ಮತ್ತು ಪರಿಷತ್ತಿನ ಉಪಾಧ್ಯಕ್ಷರೂ ಕಾರ್ಯದರ್ಶಿಗಳೂ ಇತರ ಗೌರವಾಧಿಕಾರಿಗಳೂ ಅನೇಕವೇಳೆ ಹಲವು ವಿಧವಾದ ಕ್ಲೇಶಗಳಿಗೆ ಗುರಿಯಾಗಿದ್ದರೂ ಅವುಗಳನ್ನು ಲೆಕ್ಕಿಸದೆ ಎಷ್ಟೋ ಸಲ, ಮಾಡುವ ಕೆಲಸದ ಸುಳಿವು ಕೂಡ ಹೊರಗಿನವರಿಗೆ ತಿಳಿಯದಂತೆ ಸಭೆಯ ಮೇಲ್ಮೆಗಾಗಿ ವಿಶೇಷವಾದ ಪರಿಶ್ರಮವನ್ನು ವಹಿಸುವುದಕ್ಕಾಗಿ ನಾವೆಲ್ಲರೂ ಅಂತಃಕರಣಪೂರ್ವಕವಾದ ನಮ್ಮ ಕೃತಜ್ಞತೆಯನ್ನು ಅವರಿಗೆ ಆರ್ಪಿಸಬೇಕಾಗಿರುವುದು. ಪುರೋಭಾಗಿಗಳಾದ ಕೆಲವರು. “ಇನ್ನೂ ಸಮರ್ಪಕವಾದ ರೀತಿಯಿಂದ ಕೆಲಸಮಾಡಲು ಸಾಧ್ಯವಾಗಿರಲಿಲ್ಲವೆ?”- ಎಂದು ಕೇಳಬಹುದು. ಆದರೆ, ಇಂತಹ ಮಹತ್ತರವಾದ ರಾಷ್ಟ್ರೀಯ ಕಾರ್ಯಗಳಲ್ಲಿ ಮುಂದೆ ಬಂದು ಕೆಲಸ ಮಾಡುವವರ ವಿಷಯದಲ್ಲಿ ದೋಷಗಳನ್ನು ಕಂಡುಹಿಡಿಯುವುದು ಸುಲಭ; ಶ್ರಮವನ್ನು ವಹಿಸಿ ಕೆಲಸಮಾಡುವುದು ಕಷ್ಟ. ಅದಕ್ಕೆ ಮೊದಲೂ ಏನೊಂದೂ ಇಲ್ಲದಿರುತ್ತ, ಕಳೆದ ಹತ್ತು ವರ್ಷಗಳಲ್ಲಿ ಸಾವಿರಾರು ಗ್ರಂಥಗಳನ್ನೊಳಗೊಂಡ ಒಂದು ಭಂಡಾರವನ್ನು ಸ್ಥಾಪಿಸಿ, ಅತ್ಯುತ್ತಮ ವರ್ಗಕ್ಕೆ ಸೇರಿದ ಒಂದು ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಗೊಳಿಸುತ್ತ, ಕೆಲವು ಪ್ರೌಢ ಗ್ರಂಥಗಳನ್ನು ಪರಿಷ್ಕರಿಸಿ, ಪ್ರಕಾಶಮಾಡಿ, ಪ್ರತಿವರ್ಷವೂ ಕನ್ನಡ ಪ್ರಾಂತದ ಬೇರೆಬೇರೆ ಕಡೆಗಳಲ್ಲಿ ಉತ್ಸಾಹಭರಿತರೂ ಭಾಷಾಭಿಮಾನಿಗಳೂ ಆದ ಸಾವಿರಾರುಮಂದಿ ಕನ್ನಡಿಗರನ್ನು ಒಟ್ಟುಗೂಡಿಸಿ ಪರಿಷತ್ ಅಧಿಕಾರಿಗಳು ಸಮ್ಮೇಳಗಳನ್ನು ನಡೆಯಿಸುತ್ತಿರುವರು.
ಸಹೋದರರೇ! ತಮ್ಮನ್ನೇ ಪ್ರಶ್ನೆಮಾಡುವೆನು:- ಬೇರೆ ಬೇರೆ ಭಾಗಗಳಿಗೆ ಸೇರಿದವರಾದರೂ ಕನ್ನಡಿಗರೆಲ್ಲರೂ ಒಂದೇ ಪಂಗಡದವರು. ಅವರ ಅಭಿಸಂಧಿಗಳೂ ಅನ್ಯೋನ್ಯಾಶ್ರಿತಗಳಾಗಿವೆ” ಎಂಬ ಅಭಿಪ್ರ್ರಾಯವನ್ನು ಮೊತ್ತಮೊದಲು ನಮ್ಮ ಗಮನಕ್ಕೆ ತಂದವರು ಯಾರು? ಕನ್ನಡ ಪ್ರಾಂತಕ್ಕೆ ಪ್ರತ್ಯೇಕವಾದ ವಿಶ್ವವಿದ್ಯಾಮಂದಿರವು ಆವಶ್ಯಕವೆಂಬುದನ್ನು ನಾವು ಕಂಡುಹಿಡಿದುದಾದರೂ ಯಾರ ಮೂಲಕ? ನಮ್ಮ ಮಾತೃಭೂಮಿಯ ದೂರದೂರವಾದ ಮೂಲೆಗಳಲ್ಲಿ ವಾಸಮಾಡುವ ಕನ್ನಡ ಜನರು ಬಗೆಬಗೆಯ ಕಷ್ಟಗಳಿಗೆ ಈಡಾಗಿರುವರೆಂಬುದನ್ನೂ ಅವರಿಗೆ ನೆರವಾಗುವುದು ನಮ್ಮ ಕರ್ತವ್ಯವೆಂಬುದನ್ನೂ ನಾವು ಯಾರಿಂದ ತಾನೇ ತಿಳಿದುಕೊಂಡೆವು? ಕೆಲವು ವರ್ಷಗಳ ಹಿಂದೆ ನಮಗೂ ಇತರ ಪ್ರಾಂತಗಳಲ್ಲಿರುವ ಕನ್ನಡಿಗರಿಗೂ ಇದ್ದ ಪ್ರೀತಿ ವಿಶ್ವಾಸಗಳಿಗೂ ಇಂದಿನ ಪ್ರೀತಿ ವಿಶ್ವಾಸಗಳಿಗೂ ಎಷ್ಟೋ ತಾರತಮ್ಯವಿರುವುದೆಂಬುದನ್ನು ನಾವು ನಿಷ್ಪಕ್ಷಪಾತವಾಗಿ ಒಪ್ಪಿಕೊಳ್ಳಬೇಕಾಗಿರುವುದಲ್ಲವೆ? ಗ್ರಂಥಗಳಲ್ಲಿ ಗ್ರಾಮ್ಯ ಶಬ್ದಗಳನ್ನು ಉಪಯೋಗಿಸುವ ವಿಷಯದಲ್ಲಿಯೂ ಶೈಲಿಯ ವಿಷಯದಲ್ಲಿಯೂ ಏಕರೂಪತೆಯನ್ನು ಅನುಸರಿಸುವ ವಿಷಯದಲ್ಲಿ ಕನ್ನಡನಾಡಿನವರೆಲ್ಲರೂ ಅನ್ಯೋನ್ಯಭಾವದಿಂದ ಸರ್ವಸಾಮಾನ್ಯವಾದ ಒಂದು ಕಟ್ಟುಪಾಡಿಗೆ ಒಳಪಡಬೇಕೆಂಬುದು ನಮ್ಮ ಗ್ರಂಥಕಾರರಲ್ಲಿ ಇತ್ತೀಚೆಗೆ ಒಂದು ವಿಧವಾದ ಭಾವವು ಅಂಕುರಿತವಾಗಿರುವುದನ್ನು ನೀವು ಗಮನಿಸಲಿಲ್ಲವೇ? ಇವುಗಳಿಗೆಲ್ಲಾ ಸಾಕ್ಷಾತ್ತಾಗಿಯಾಗಲಿ, ಪರಂಪರೆಯಿಂದಾಗಲಿ ಕಾರಣಭೂತರಾದವರು ಯಾರು? ಎಷ್ಟೋ ದೂರದಲ್ಲಿರುವ ಅರ್ರಾ(Arrah) ಎಂಬ ಪಟ್ಟಣದಿಂದ ಪಂಪ ಭಾರತದ ಅಮೂಲ್ಯವಾದ ಪುರಾತನ ಹಸ್ತಪ್ರತಿಯು ಯಾರ ಸಾಹಸದಿಂದ ನಮಗೆ ದೊರೆಯಿತು? ಇದಲ್ಲದೆ ರಾಷ್ಟೀಯ ವಿಚಾರಗಳನ್ನು ಸಕಲ ಕರ್ಣಾಟಕಕ್ಕೂ ಸಮರ್ಪಕವಾಗುವಂತೆಯೂ ಪ್ರಯೋಜನಕಾರಿಯಾಗುವಂತೆಯೂ ನಾವು ವಿಚಾರಮಾಡತೊಡಗಿದುದು ಯಾವ ಕಾಲದಲ್ಲಿ? ಕರ್ಣಾಟಕ ದೇಶವು ಭಿನ್ನಭಿನ್ನವಾಗಿರುವ ಕಾರಣ ಕನ್ನಡಿಗರೆಲ್ಲರೂ ಶೋಚನೀಯವಾದ ದುರ್ಬಲ ಸ್ಥಿತಿಯಲ್ಲಿರುವರೆಂಬ ವಿಷಯವು ನಮ್ಮ ಅಂತರಂಗದಲ್ಲಿ ಯಾರ ಪ್ರೇರಣೆಯಿಂದ ಮೂಡಿತು? ಕಳೆದ ಸಮ್ಮೇಳನದಲ್ಲಿ, ಆಂಗ್ಲೇಯರ ಆಡಳಿತದಲ್ಲಿರುವ ಕರ್ಣಾಟಕಕ್ಕೆ ಪ್ರತ್ಯೇಕವಾದ ಒಂದು ಅಧಿಪತ್ಯವನ್ನು ಏರ್ಪಡಿಸುವುದು ಆವಶ್ಯಕವೆಂದು ಕನ್ನಡಿಗರೆಲ್ಲರೂ ಬಯಸುವ ಮಟ್ಟಿಗಾದರೂ ಮುಂದುವರಿದುದು ಏತರಿಂದ?
ಪರಿಷತ್ತಿನ ಸಾಧನೆಗಳ ಪುಸ್ತಕಗಳು ಪ್ರಕಟವಾಗಲಿ
‘ಪರಿಷತ್ತಿನ ಅಧಿಕಾರ ಸೂತ್ರಗಳು ಬಹಳಮಟ್ಟಿಗೆ ಬೆಂಗಳೂರಿನವರ ಕೈಯಲ್ಲಿಯೇ ಇರುವುವು’ ಎಂಬುದಾಗಿ ಅಲ್ಲಲ್ಲಿ ದೂರು ಕೇಳಿಸುತ್ತಲಿದೆ. ಇದೊಂದು ಕುಂದೆಂದು ಭಾವಿಸುವ ಪಕ್ಷದಲ್ಲಿ, ಇಂತಹ ಪ್ರತಿಯೊಂದು ಸಾರ್ವಜನಿಕ ಸಂಸ್ಥೆಯಲ್ಲಿಯೂ ಅಪರಿಹಾರ್ಯಗಳಾದ ಈ ಬಗೆಯ ಕುಂದುಗಳಿರುವುದು ಸಹಜವಾದ ಕಾರಣ. ಅದಕ್ಕೆ ಪ್ರತೀಕಾರ ಮಾಡಲು ಸಾಧ್ಯವಿಲ್ಲ. ಆದರೆ ನಾವು ಅದರ ಕಾರ್ಯನಿರ್ವಾಹಕರಲ್ಲಿ ದೋಷಗಳನ್ನು ಆರೋಪಿಸುವುದಕ್ಕಿಂತಲೂ, ಅವರ ಧ್ಯೇಯದಲ್ಲಿ ದೃಷ್ಟಿಯನ್ನಿರಿಸಿ ಪರಿಷತ್ತಿನಿಂದ ಎಷ್ಟರಮಟ್ಟಿನ ಕೆಲಸವು ನಡೆದಿದೆ ಎಂಬುದನ್ನು ಗಮನಿಸಿ ಅದರ ಗುಣಾವಗುಣಗಳನ್ನು ನಿರ್ಧರಿಸವುದು ಯುಕ್ತವು. ಹೀಗೆ ಮಾಡಿದಲ್ಲಿ ಪರಿಷತ್ತು ನಮ್ಮ ನಿರೀಕ್ಷೆಗಿಂತಲೂ ಹೆಚ್ಚಾಗಿಯೇ ಮಹತ್ತರವಾದ ಎಷ್ಟೋ ಕಾರ್ಯಗಳನ್ನು ನೆರವೇರಿಸುವುದೆಂಬ ಅಭಿಪ್ರಾಯವು ಖಂಡಿತವಾಗಿ ನಮ್ಮೆಲ್ಲರಿಗೂ ಉಂಟಾಗದಿರದು. ಪರಿಷತ್ತಿನ ಕಾರ್ಯನಿರ್ವಹಣಕ್ಕೆ ಸಾಕಾದಷ್ಟು ‘ಸಿಬ್ಬಂದಿ’ಯು ಇಲ್ಲವೆಂದು ನನ್ನ ತಿಳಿವಳಿಕೆ. ಗೌರವಾಧಿಕಾರಿಗಳು ಎಷ್ಟೋ ಶ್ರಮಪಟ್ಟು ಕೆಲಸಮಾಡುತ್ತಿರುವರಾದರೂ, ವಾಡಿಕೆಯ ಕೆಲಸಗಳನ್ನು ನಿರಾತಂಕವಾಗಿ ನೆರವೇರಿಸುವ ಸಲುವಾಗಿ ಇನ್ನೂ ಕೆಲವು ಮಂದಿ ಸಂಬಳದ ನೌಕರರನ್ನು ಇಟ್ಟುಕೊಳ್ಳುವುದು ಆವಶ್ಯಕವೆಂದು ನಾನು ಭಾವಿಸುತ್ತೇನೆ. ಪರಿಷತ್ತಿನಲ್ಲಿ ನಡೆಯುತ್ತಿರುವ ಕಾರ್ಯಕಲಾಪಗಳನ್ನು ಏತದಧಿಕಾರಿಗಳು ಪತ್ರಿಕೆಗಳ ಮೂಲಕವಾಗಿ ಆಗಾಗ ತಕ್ಕಂತೆ ತಿಳಿಯಪಡಿಸದಿರುವಿಕೆಯಿಂದಲೂ, ಸ್ವಲ್ಪಮಟ್ಟಿಗೆ ನಿಂದಕರು ದುಡುಕಿ ದೋಷಾರೋಪಣೆಗಳನ್ನು ಮಾಡುತ್ತಿರುವುದರ ಮೂಲಕವೂ, ಪರಿಷತ್ತಿನ ವಿಷಯದಲ್ಲಿ ಮಹಾಜನರು ತುಂಬ ಅಸಮಾಧಾನಪಟ್ಟಿರುವರೆಂದು ನನಗೆ ತೋರುವುದು. ಆದುದರಿಂದ ಪರಿಷತ್ತು ಪ್ರಾರಂಭವಾದುದು ಮೊದಲು ಇಂದಿನವರೆಗೆ, ಎಂದರೆ ಕಳೆದ ಹತ್ತು ವರ್ಷಗಳಲ್ಲಿ ನಡೆದ ಕಾರ್ಯಕಲಾಪ, ಪರಿಷತ್ತಿನ ಉದ್ದೇಶ, ವಾರ್ಷಿಕ ಸಮ್ಮೇಳನಗಳಲ್ಲಿ ಪರಿಷತ್ತಿನವರು ನೆರವೇರಿಸಬೇಕೆಂದು ಮಾಡಲಾದ ಹಲವು ನಿರ್ಣಯಗಳು, ಅವುಗಳನ್ನು ನೆರವೇರಿಸುವಲ್ಲಿ ಪ್ರಾಪ್ತವಾದ ಜಯಾಪಜಯಗಳು, ಮಹಾಜನರ ಮೂಲಕ ದೊರೆತ ಒತ್ತಾಸೆ, ಬೇರೆ ಬೇರೆ ಕಾಲಗಳಲ್ಲಿ ಸೇರಿದ ಅಥವಾ ಬಿಟ್ಟ ಸದಸ್ಯರುಗಳ ಪಟ್ಟಿ, ಆರ್ಥಿಕ ಪರಿಸ್ಥಿತಿ-ಇವೇ ಮುಂತಾದುವುಗಳನ್ನೆಲ್ಲ ಕ್ರೋಢೀಕರಿಸಿ ಸಣ್ಣ ಪುಸ್ತಕ ರೂಪವಾಗಿ ಮುದ್ರಿಸಬೇಕೆಂದು ಪರಿಷತ್ತಿನ ಅಧಿಕಾರಿಗಳನ್ನು ನಾನು ಕೇಳಿಕೊಳ್ಳುವೆನು. ಹೀಗೆ ಮಾಡಿದರಾದರೆ ಇಷ್ಟು ವರ್ಷಗಳಿಂದಲೂ ಪರಿಷತ್ತಿನಲ್ಲಿ ನಡೆಯುತ್ತಿರುವ ಕೆಲಸವು ಜನರಿಗೆ ವ್ಯಕ್ತವಾಗಿ ತಿಳಿದುಬಂದು ತಪ್ಪು ತಿಳವಳಿಕೆಗೆ ಕಾರಣವು ಕಡಿಮೆಯಾಗುವುದಲ್ಲದೆ ಪರಿಷತ್ತಿನ ವಾಸ್ತವಸ್ಥಿತಿಯು ಪ್ರಕಟವಾಗುವ ಮೂಲಕ ನಮ್ಮ ಸಂಸ್ಥೆಯು ಅತಿಶಯವಾಗಿ ಅಥವಾ ಇತ್ಯೋಪ್ಯತಿಶಯವಾಗಿ ಜನಗಳ ಮೆಚ್ಚಿಕೆಗೆ ಪಾತ್ರವಾಗದಿರದೆಂದು ಭಾವಿಸುವೆನು.
ಆಗಾಗ ಸಭೆ ಸೇರಿ ನಡೆಯಿಸಿದ ನಡೆವಳಿಕೆಗಳನ್ನು ಓದಿ ನಾನು ಗ್ರಹಿಸಿದಮಟ್ಟಿಗೆ ಪರಿಷತ್ತಿನಿಂದ ಕಳೆದ ಹತ್ತುವರ್ಷಗಳಲ್ಲಿ ಎಷ್ಟರಮಟ್ಟಿನ ಕೆಲಸವು ನಡೆದಿರುವುದೆಂಬ ಅಂಶವನ್ನು ತಮಗೆ ಈ ರೀತಿ ವಿಜ್ಞಾಪಿಸುವೆನು. ಮತ್ತು ಅವರು ನಡೆಯಿಸಿದ ಕೆಲಸಗಳನ್ನು ನಮ್ಮ ರಾಷ್ಟ್ರ ಜಾಗೃತಿಗಾಗಿ ಸಾಹಿತ್ಯಾಭಿವೃದ್ಧಿಗೂ ಎಷ್ಟರಮಟ್ಟಿಗೆ ಪ್ರಯೋಜಕಾರಿಗಳಾಗಿವೆ ಎಂಬ ವಿಷಯದಲ್ಲಿಯೂ ಮುಂದೆ ಯಾವ ಯಾವ ಮಾರ್ಗಗಳನ್ನು ಕೈಗೊಂಡ ಕೆಲಸಗಳನ್ನು ನಡೆಯಿಸಬೇಕಾಗಿದೆ ಎಂಬ ವಿಷಯದಲ್ಲಿಯೂ ನನ್ನ ಸ್ವಾಭಿಪ್ರ್ರಾಯಗಳನ್ನು ತಿಳಿಸಿದಂತಾಯಿತು.
ಏಕರೂಪ ಶಿಕ್ಷಣ ವಿಚಾರ
ನಮ್ಮ ದೇಶದ ವಿದ್ಯಾ ವಿಷಯವಾದ ಸಮಸ್ಯೆಗಳನ್ನು ಕುರಿತು ಮಾಡನಾಡುವಲ್ಲಿ ಒಂದು ಆಲೋಚನೆಯು ನಮ್ಮ ಮನಸ್ಸಿನಲ್ಲಿ ಅಂಕುರಿತವಾಗುವುದು. ಅದೇನೆಂದರೆ – ಮೈಸೂರು, ಮದ್ರಾಸ್, ಬೊಂಬಾಯಿ ಮತ್ತು ಹೈದ್ರಾಬಾದ್ ಯೂನಿವರ್ಸಿಟಿ ಮೆಂಬುರುಗಳನ್ನೂ, ಇತರ ವಿದ್ಯಾಭಿಮಾನಿಗಳನ್ನೂ ಒಳಗೊಂಡ ಒಂದು ಉಪಸಭೆಯನ್ನು ಈ ಸಮ್ಮೇಳನದವರಾಗಲಿ, ಸಾಹಿತ್ಯ ಪರಿಷತ್ತಿನವರಾಗಲಿ ನೇಮಿಸುವುದು ಉತ್ತಮ. ಇಂತಹ ಉಪಸಭೆಯವರು ಒಂದು ಕಡೆ ಸೇರಿ ಬೇರೆ ಬೇರೆ ಭಾಗಗಳಲ್ಲಿಯು ಮಾಧ್ಯಮಿಕ ಮತ್ತು ವಿಶ್ವವಿದ್ಯಾಲಯದ ಅಭ್ಯಾಸಕ್ರಮಗಳಲ್ಲಿ ಕನ್ನಡವು ಯಾವ ಸ್ಥಾನದಲ್ಲಿದೆಯೆಂಬುದನ್ನು ಪರಸ್ಪರ ಚರ್ಚೆಯಿಂದ ಪರ್ಯಾಲೋಚಿಸಿದ್ದಲ್ಲಿ ಕನ್ನಡದ ಅಭಿವೃದ್ಧಿಪಥದಲ್ಲಿರುವ ಕಂಟಕಗಳನ್ನು ತೆಗೆದುಹಾಕುವುದಕ್ಕೂ ಕರ್ನಾಟಕ ದೇಶದ ಸಮಸ್ತಭಾಗಗಲ್ಲಿಯೂ ಕನ್ನಡದ ಅಭ್ಯಾಸವು ಇತ್ಯೋದ್ಯತಿಶಯವಾಗಿ ಏಕರೂಪತೆಯನ್ನು ಪಡೆಯುವುದಕ್ಕೂ ಜನಪ್ರಿಯವಾಗುವುದಕ್ಕೂ ವಿಸ್ತಾರವಾದ ಪ್ರಮಾಣದಲ್ಲಿ ಬೆಳೆಯುವುದಕ್ಕೂ ಉಪಾಯಗಳನ್ನು ಕಂಡುಹಿಡಿಯಲು ಸಾಧ್ಯವಾಗುವುದು.
ಜಾಯಿಂಟ್ ಸ್ಟಾಕ್ ಕಂಪನಿ ಸ್ಥಾಪನೆ ವಿಚಾರ
ನಮ್ಮ ಜನರು – ಖಾಸಗೀ ಜನರಿಂದ ಅಲ್ಲ-ಸಾಹಿತ್ಯ ಪರಿಷತ್ತಿನವರಿಂದಲೇ ಹೊರಡಬೇಕೆಂದಿದ್ದ ‘ಜಾಯಿಂಟ್ ಸ್ಟಾಕ್’ ಕಂಪನಿಯಲ್ಲಿ ಬರಿಯ ಐದು ರೂಪಾಯಿಗಳ ಪಾಲುಗಳನ್ನು ಸಹ ಕೊಂಡುಕೊಳ್ಳುವುದಕ್ಕೆ ಮುಂದೆ ಬಾರದೆಹೋದರು. ನಮ್ಮ ಜನರ ಈ ಔದಾಸೀನ್ಯವೂ ಅಶ್ರದ್ಧೆಯೂ ಅವರ ಪರಂಪರಾ ಪ್ರಾಪ್ತವಾದ ಹೆಸರುವಾಸಿಗೆ ತಕ್ಕುದೆಂದು ಹೇಳಬರುವಂತಿದೆಯೇ? ಎಂದೂ ಇಲ್ಲ. ಈ ನನ್ನ ವಿನಯಪುರಸ್ಸರವೂ ಆಂತರಂಗಿಕವೂ ಆದ ಪ್ರಾರ್ಥನೆಯನ್ನು ನಮ್ಮ ಜನರು ಉದಾಸೀನಭಾವದಿಂದ ಕಾಣಲಿಲ್ಲವೆಂದು ತಿಳಿಯುವ ಭಾಗ್ಯವು ನನಗೆ ಪ್ರಾಪ್ತವಾಗದಿರದೆಂದು ನಾನು ನಂಬಿರುತ್ತೇನೆ.
ಬೇರೆ ಬೇರೆ ಪಂಗಡಗಳ ಪ್ರತಿನಿಧಿಗಳೂ ಉಚ್ಚಪದದಲ್ಲಿರುವವರೂ ಅದ ಪರಿಷತ್ತಿನ ಪ್ರಮುಖ ಸದಸ್ಯರು ಮೂರು ಮಂದಿಯಾದರೂ ಇರುವ ಬಲವತ್ತರವಾದ ಮಂಡಲಿಯೊಂದನ್ನು ಏರ್ಪಡಿಸಬೇಕು. ಈ ಮಂಡಲಿಯವರು ಕರ್ಣಾಟಕ ರಾಷ್ಟ್ರದೊಳಗಣ ಮುಖ್ಯವಾದ ಪ್ರತಿಯೊಂದು ಪಟ್ಟಣಕ್ಕೂ ಹೋಗಿ, ಅಲ್ಲಲ್ಲಿಯ ದೇಶಾಭಿಮಾನಿಗಳೂ ಗೌರವಾರ್ಹರೂ ಆದ ಜನಗಳಿಂದ ಸಹಾಯಪಡೆದು ಅಲ್ಲಲ್ಲಿಯ ಸ್ಥಳೀಯ ವಿದ್ಯಮಾನಗಳನ್ನು ಗಮನಿಸಿ, ಉಪನ್ಯಾಸಗಳನ್ನು ಮಾಡುತ್ತಲೂ, ಖಾಸಗಿಯಾಗಿ ಮಾತನಾಡುತ್ತಲೂ, ಅಮುದ್ರಿತವಾದ ಗ್ರಂಥಗಳ, ಶಾಸನಗಳ ಮತ್ತು ಚರಿತ್ರ ಸಂಬಂಧವಾದ ವಸ್ತುಗಳ ಸಮಾಚಾರಗಳನ್ನು ಸಂಗ್ರಹಿಸುತ್ತಲೂ, ಪರಿಷತ್ತಿಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳುತ್ತಲೂ, ಕರ್ಣಾಟಕ ಸಭೆಗಳನ್ನೂ ಭಾಷಾಪೋಷಕ ಸಂಘಗಳನ್ನೂ ವಾಚನಾಲಯಗಳನ್ನೂ ಪುಸ್ತಕ ಭಂಡಾರಗಳನ್ನೂ ನಾಟಕ ಸಭೆಗಳನ್ನೂ ಏರ್ಪಡಿಸುತ್ತಲೂ, ಕನ್ನಡ ಕೀರ್ತನೆಗಳನ್ನೂ ಗಾಯನ ಸಮಾಜಗಳನ್ನೂ ಪುರಾಣಶ್ರವಣ ಮಂಡಲಿಗಳನ್ನೂ ಏರ್ಪಾಡು ಮಾಡುತ್ತಲೂ, ಕೊನೆಗೆ ಆವಶ್ಯಕವಾದ ಸ್ಥಳಗಳಲ್ಲಿ ವಿದ್ಯಾರ್ಥಿಗಳ ಕನ್ನಡ ಶಿಕ್ಷಣಕ್ಕಾಗಿ ಕನ್ನಡ ಶಾಲೆಗಳನ್ನೂ ಕನ್ನಡ ಸಾಹಿತ್ಯದ ಪ್ರೌಢಾಭ್ಯಾಸಕ್ಕಾಗಿ ಕೂಟಗಳನ್ನೂ ಸ್ಥಾಪಿಸುತ್ತಲೂ ಸಂಚರಿಸುತ್ತಿರಬೇಕು. ಜನರಲ್ಲಿ ಜಾಗೃತಿಯನ್ನುಂಟುಮಾಡತಕ್ಕುದೇ ನಮಗೆ ಪ್ರಕೃತದಲ್ಲಿ ಆವಶ್ಯಕವಾದ ವಿಷಯವಾಗಿದೆ. ಇದನ್ನು ಚಟುವಟಿಕೆಯಿಂದಲೂ ಅವಿರತವಾಗಿಯೂ ಹಲವು ವಿಧದಿಂದ ನಡೆಯಿಸುತ್ತಿರಬೇಕು. ನಮ್ಮ ಕನ್ನಡಿಗರಿಗೆ ಅವರ ಪೂರ್ವದ ಸೌಭಾಗ್ಯವನ್ನು ಜ್ಞಾಪಕಕ್ಕೆ ತಂದುಕೊಡಬೇಕು. ಮತ್ತು ಇಂದಿನ ದುಸ್ಥಿತಿಯಲ್ಲಿಯೂ ಕನ್ನಡಿಗರಿಂದ ಪ್ರಪಂಚದ ಉನ್ನತಿಗಾಗಿ ಮಹತ್ತರವಾದ ಸೇವೆಯು ನಡೆಯತಕ್ಕುದಾಗಿದೆಯೆಂಬುದನ್ನು ಮನಮುಟ್ಟುವಂತೆ ತಿಳಿಯ ಹೇಳಬೇಕು.
ಪೂಜನೀಯರೂ ನಮ್ಮ ಪರಿಷತ್ತಿನ ಉಪಾಧ್ಯಕ್ಷರೂ ಆದ ರಾಜಸಭಾಭೂಷಣ ಶ್ರೀಮಾನ್ ಕರ್ಪೂರ ಶ್ರೀನಿವಾಸರಾಯರವರು ನನಗೆ ಬರೆದ ಪತ್ರದಲ್ಲಿ ಅಂತಹ ಒಂದು ಮಂಡಲಿಯನ್ನೂ ಶೀಘ್ರದಲ್ಲಿಯೇ ಹೊರಡಿಸಬೇಕೆಂಬುದಿಷ್ಟೇ ಅಲ್ಲದೆ ಅನುಕೂಲವಾದಲ್ಲಿ ಅದನ್ನು ತಾವೇ ಹಿರಿಯರಾಗಿ ಮುಂದು ನಿಂತು ಕರೆದುಕೊಂಡು ಹೊರಡುವಂತೆ ಕೂಡ ತಮ್ಮ ಉದ್ದೇಶವಿರುವುದೆಂದು ನನಗೆ ತಿಳಿಸಿರುವರು. ಇದಕ್ಕಾಗಿ ಅವರನ್ನು ಎಷ್ಟು ಹೊಗಳಿದರೂ ಸಾಲದು. ಈ ಮಂಡಲಿಯವರು ಸುಕ್ಷೇಮದಿಂದ ತುಂಬಿದ ಚೀಲಗಳೊಂದಿಗೆ ಪ್ರಸ್ಥಾನಕ್ಕೆ ಹಿಂದಿರುಗಿ ಬರಲೆಂದು ನಾವೆಲ್ಲರೂ ಅನವರತವೂ ಪ್ರಾರ್ಥಿಸೋಣ.
Tag: Kannada Sahitya Sammelana 11, Benagal Ramarao
೧0ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಹೊಸಕೋಟೆ ಕೃಷ್ಣಶಾಸ್ತ್ರಿ
ಕನ್ನಡ ನಾಡಿನ ಉತ್ತಮ ಶಾಸನತಜ್ಞರು ಕರ್ಣಾಟಕ ಇತಿಹಾಸದ ಮೇಲೆ ಹೊಸಬೆಳಕನ್ನು ಬೀರಿದ ಸಂಶೋಧಕರಾದ ಹೆಚ್. ಕೃಷ್ಣಶಾಸ್ತ್ರಿಗಳು ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು.
ಬಿ.ಎ. ನಂತರ ಭಾರತದ ಸರ್ಕಾರದ ಶಾಸನ ಇಲಾಖೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ಇವರು ಸೇವಾಕಾಲದಲ್ಲಿ ೩೫ ವರ್ಷಗಳಿಗೂ ಹೆಚ್ಚು ಕಾಲ ಕಾರ್ಯ ನಿಮಿತ್ತ ವಿದೇಶಗಳಿಗೂ ಹೋಗಿ ಬಂದಿದ್ದಾರೆ. ೧೯೨೫ರಲ್ಲಿ ಸರ್ಕಾರದ ಸೇವೆಯಿಂದ ನಿವೃತ್ತರಾದರು.
ಇವರು ೩೫ ವರ್ಷಗಳ ಕಾಲ ಕರ್ಣಾಟಕದಾಚೆ ಇದ್ದರು. ಪರಿಷತ್ತಿನ ಬಗ್ಗೆ ಅಭಿಮಾನವಿರಿಸಿಕೊಂಡಿದ್ದರು. ಮಹಾರಾಷ್ಟ್ರದಲ್ಲಿನ ಚಾಳುಕ್ಯ, ರಾಷ್ಟ್ರಕೂಟರ ಶಾಸನಗಳು ಮರಾಠಿಯಲ್ಲಿಲ್ಲ, ಕನ್ನಡದಲ್ಲಿದೆ ಎಂಬುದನ್ನು ಶೋಧಿಸಿದ್ದಾರೆ. ಕರ್ನಾಟಕದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ.
ಕೇಂದ್ರ ಸರ್ಕಾರ ಇವರ ಸೇವೆಯನ್ನು ಪುರಸ್ಕರಿಸಿ ೧೯೧೨ರಲ್ಲಿ ರಾವ್ ಸಾಹೇಬ್ ಮತ್ತು ೧೯೨0ರಲ್ಲಿ ರಾವ್ ಬಹಾದ್ದೂರ್ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿದೆ. ೧೯೨೪ರಲ್ಲಿ ಕೋಲಾರದಲ್ಲಿ ನಡೆದ ೧0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯನ್ನು ಇವರಿಗೆ ನೀಡಲಾಗಿದೆ.
ದಕ್ಷಿಣ ಭಾರತದ ಪ್ರತಿಮೆಗಳು (೧೯೬೬), ದಕ್ಷಿಣ ಭಾರತದ ಸಂಪುಟ (ಸಂ.೫, ೨ನೇ ಭಾಗ), ಮಸ್ಕಿಯ ಅಶೋಕನ ಶಾಸನ (ಲೇಖನ), ೫ ಪಲ್ಲವ ಶಾಸನಗಳು (ಲೇಖನ), ಮಹಾಬಲಿಪುರದ ೨ ವಿಗ್ರಹಗಳು (ಲೇಖನ), ಎಫಿಗ್ರಾಫಿಯಾ ಇಂಡಿಕಾದಲ್ಲಿ ಹಲವು ಪ್ರಬಂಧಗಳು
ಶಾಸನಪ್ರಕಾರಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಇವರು ೧೯೨೮ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೧0
ಅಧ್ಯಕ್ಷರು: ಹೊಸಕೋಟೆ ಕೃಷ್ಣಶಾಸ್ತ್ರಿ
ದಿನಾಂಕ ೧೬, ೧೭, ೧೮ ಮೇ ೧೯೨೪
ಸ್ಥಳ : ಕೋಲಾರ
ಪರಿಷತ್ತಿಗೆ ಬೇಕಾಗಿದ್ದುದು ಧನಶಕ್ತಿ
ಪ್ರಕೃತೋದ್ದೇಶವು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಹತ್ತನೆಯ ವಾರ್ಷಿಕೋತ್ಸವ. ಈ ಉತ್ಸವವು ಸಕಲೋಪಕರಣಗಳಿಂದ ಶೋಭಾಯಮಾನವಾಗಿ ನಡೆಯಲುಳ್ಳದ್ದಾಗಿದೆ. ಯಾವ ಸಲಕಣೆಗಳು ಹೇಗಿದ್ದರೂ ಪರಿಷದಭಿವೃದ್ಧಿಗೂ ಅದರಿಂದುಂಟಾಗಬೇಕಾದ ಜಾತೀಯ ಸಾಂಗತ್ಯಕ್ಕೂ ತಕ್ಕ ಪ್ರಯತ್ನಗಳಾವಶ್ಯಕಗಳೆಂಬುದರಲ್ಲಿ ಎಲ್ಲರ ಮತವೂ ಒಂದಾಗಿರುತ್ತದೆ. ಪರಿಷದಭಿವೃದ್ಧಿಗೆ ಮೊದಲು ಬೇಕಾದದ್ದು ರಾಜಾನುಗ್ರಹ; ಎರಡನೆಯದು ಧನಸಂಪತ್ತಿ; ಇದರ ಮೇಲೆ ಕಾರ್ಯಾನುರಕ್ತಿ, ಜಾತೀಯ ಸಂಶಕ್ತಿ ಮುಂತಾದವುಗಳು. ಇವುಗಳನ್ನು ಸಂಪಾದಿಸುವುದರಲ್ಲಿ ಸರ್ವಥಾ ನಮ್ಮ ಪರಿಷಧ್ಯಕ್ಷರೂ ಉಪಾಧ್ಯಕ್ಷರೂ ಗೌರವ ಕಾರ್ಯದರ್ಶಿಗಳೂ ಇನ್ನೂ ಇತರ ಪರಿಷತ್ಪ್ರಮುಖರೂ ಯಾವಚ್ಛಕ್ತಿ ಪ್ರಯತ್ನ ಪಡುತ್ತಲೇ ಇರುವರೆಂದು ಈ ಒಂಬತ್ತು ವರ್ಷಗಳ ವರದಿಗಳಿಂದಲೇ ವೇದ್ಯವಾಗುತ್ತಿದೆ.
ಪರಿಷತ್ಪತ್ರಿಕೆ ಹಿರಿಮೆ
ಪ್ರಥಮ ಸಾಧನವಾದ ಪರಿಷತ್ಪತ್ರಿಕೆಯೆಂತೂ ‘’ಪ್ರತಿವರ್ಷ ರಸೋದಯ” ವೆಂಬಂತೆ ಸಂಚಿಕೆ ಸಂಚಿಕೆಗೂ ಶ್ಲಾಘ್ಯತರವಾದ ವ್ಯಾಸಗಳಿಂದಲೂ ಉದಾರವಾದ ವಿಮರ್ಶನೆಗಳಿಂದಲೂ ಆದರಣೀಯಗಳಾದ ಧರ್ಮಪ್ರವಚನಗಳಿಂದಲೂ ತುಂಬಿದೆ. ಅಲ್ಲದೆ, ಪುರಾತನಾಧುನಿಕ ಗ್ರಂಥಗಳೂ ಪರಿಷ್ಕೃತಗಳಾಗಿ ಗ್ರಂಥಮಾಲೇತ್ಯಾದಿ ಮಾಸಪುಸ್ತಕಗಳಲ್ಲಿ ಮುದ್ರಿತಗಳಾಗುತ್ತಿವೆ. ದಿನಪತ್ರಿಕೆಗಳೂ ವಾರಪತ್ರಿಕೆಗಳೂ ಎಲ್ಲೆಲ್ಲಿಯೂ ಕರ್ಣಾಟಕ ದಿಗಂತವ್ಯಾಪಿಗಳಾಗಿ ಕರ್ಣಾಟ ಭಾಷಾಪ್ರಾಬಲ್ಯವನ್ನು ನೆಲೆಗೊಳಿಸುತ್ತಿವೆ. ಇವೆಲ್ಲಕ್ಕಿಂತಲೂ ಹೆಚ್ಛಾಗಿ ಜನರಲ್ಲಿ ಹೊರಟಿರುವ ಭಾಷೋಪನ್ಯಾಸಗಳೂ ಕಥಾಪ್ರಸಂಗಳೂ ಪುರಾಣಕಥನಗಳೂ ಭಾಷಾಭಿವೃದ್ಧಿಗೆ ಸಹಾಯಪಡುತ್ತಲಿವೆ.
ಪರಿಷತ್ತು ಮಾಡಬೇಕಾದ ಕೆಲಸಗಳು–
ಪರಿಷತ್ಕಾರ್ಯನೇಕಗಳಿರುವುವು. ಕರ್ಣಾಟಕ ಜನಸಾಮಾನ್ಯದಲ್ಲಿ ದೇಶ ಭಾಷಾರುಚಿಯನ್ನುಂಟು ಮಾಡುವುದು, ವಿದ್ವಜ್ಞನರಲ್ಲಿ ಸ್ವಾರ್ಥಪರಾಯಣತೆಯನ್ನು ಬಿಡಿಸಿ ಪಾರಮಾರ್ಥಿಕವೂ ಪರಮೋತ್ಕೃಷ್ಟವೂ ಆದ ದೇಶಭಾಷಾ ಸೇವೆಯಲ್ಲಿ ಅಮರತ್ವವನ್ನು ಕಲ್ಪಿಸುವುದು, ಇವಕ್ಕೆ ಸಾಧನಗಳಾಗಿ ಸರ್ಕಾರದ ಸಹಾಯವನ್ನು ಬೇಡುವುದು, ವಿದ್ಯಾಶಿಕ್ಷಣದಲ್ಲಿ ಬದಲಾವಣೆಗಳನ್ನು ಸೂಚಿಸುವುದು, ಕರ್ಣಾಟಕ ಪ್ರಾಂತಗಳೆಲ್ಲೆಡೆಯಲ್ಲಿಯೂ ಪಾಠಶಾಲೆಗಳ ಪುಸ್ತಕ ಭಂಡಾರಗಳ, ವಾಚಕ ಸಂಘಗಳ ಸ್ಥಾಪನೆಯನ್ನು ಮಾಡುವುದು, ಇಂಗ್ಲಿಷ್ ವಿಜ್ಞಾನ ಗ್ರಂಥ ಪರಿವರ್ತನೆ, ಕಾವ್ಯನಾಟಕಾಲಂಕಾರ ಗ್ರಂಥಗಳ ನವೀನ ನಿರ್ಮಾಣ, ಪ್ರಾಂತಕರ್ಣಾಟಕ ಭಾಷಾ ಸಾಂಪ್ರದಾಯಗಳನ್ನು ಮೈಸೂರು ಕನ್ನಡದೊಡನೆ ಏಕೀಭವಿಸಲು ಪ್ರಯತ್ನಗಳು, ಪೂರ್ವಕಾವ್ಯ ವಿಮರ್ಶೆ-ಇವನ್ನು ಮಾಡುವುದು, ಕವಿಚರಿತ್ರೆ, ದೇಶಚರಿತ್ರೆ, ಭಾಷಾಚರಿತ್ರೆ, ಕಾದಂಬರೀ ಗ್ರಂಥಗಳು-ಇವನ್ನು ನಿರ್ಮಾಣ ಮಾಡುವುದು, ಪುರಾಣಪಠನ, ಕಥಾಪ್ರಸಂಗ, ನಾಟಕ ಪ್ರದರ್ಶನ, ಸಂಗೀತ ಸಮಾಜ- ಇವನ್ನೇರ್ಪಡಿಸುವುದು; ಇತ್ಯಾದ್ಯನೇಕಗಳು ಸಾಹಿತ್ಯ ಪರಿಷತ್ತಿನ ಪ್ರಯತ್ನಗಳಲ್ಲಿ ಮೊದಲಿನಿಂದಲೂ ಮುಖ್ಯವಾದುವುಗಳಾಗಿ ಏರ್ಪಟ್ಟಿವೆ. ಇದರ ಮೇಲೆ ವಿದ್ವನ್ಮಣಿಗಳಾದ ಅಧ್ಯಕ್ಷರ ಪ್ರ್ರೌಢೋಪನ್ಯಾಸಗಳಿಂದ ಮೇಲ್ಕಂಡ ಪ್ರಯತ್ನಗಳ ಸಾಧ್ಯಾಸಾಧ್ಯತೆಗಳ ವಿಚಾರ ನಡೆದು ಮುಂದಿನ ಮಾರ್ಗವು ನಿರರ್ಗಳವಾಗಿ ತೋರಲ್ಪಟ್ಟಿದೆ.
ಹಿಂದಿನ ಸಮ್ಮೇಳನಗಳ ಸಿಂಹಾವಲೋಕನ
ಕೀರ್ತಿಶೇಷರಾದ ರಾಜಮಂತ್ರಪ್ರವೀಣ ಶ್ರೀಮಾನ್ ಹೆಚ್.ವಿ. ನಂಜುಂಡಯ್ಯನವರ ಪ್ರಪ್ರಥಮೋಪನ್ಯಾಸವು ಮುಖ್ಯಾಂಶಗಳನ್ನೆಲ್ಲ ಬಹಳ ಸ್ಪಷ್ಟವಾಗಿ ಪ್ರಕಟಪಡಿಸಿ, ತಕ್ಕವಿದ್ಯಾವಂತರ ಸಹಾಯದಿಂದಲೂ ಜನರ ಅನ್ಯೋನ್ಯ ಸದ್ಭಾವದಿಂದಲೂ ನವೀವಾದೀ ಕರ್ಣಾಟಕ ಭಾಷಾಪ್ರಚಾರವು ಪ್ರಸ್ತುತ ಕರ್ಣಾಟ ದೇಶೀಯರಲ್ಲಿ ಉತ್ಸಾಹೋದ್ಬೋಧವನ್ನು ಮಾಡಿ, ಅವರ ಜಾತೀಯ ಜೀವಿತವು ಮೂರ್ತೀಭವಿಸುವಂತೆಯೂ ಅವರ ಸುಖದುಃಖಗಳು ಪ್ರತಿಫಲಿಸುವಂತೆಯೂ ಮಾಡುತ್ತ, ಪೂರ್ವಗ್ರಂಥಾವಳಿಗಳಂತೆ ಮಾಡಿದ ವರ್ಣನೆಗಳನ್ನೇ ಮಾಡುತ್ತ, ಹೇಳಿದ ಕಥೆಗಳನ್ನೇ ಹೇಳುತ್ತ ಮನಸ್ಸಿಗುಲ್ಲಾಸಕರವಾಗಿದ್ದರೇನು? ಮನಸ್ಸಿನ ಉತ್ಸಾಹಕ್ಕೆ ಮಾತ್ರ ಕಾರಣವಾಗದೆ ಇರಬಾರದೆಂತಲೂ, ಆಧುನಿಕ ಕಾರ್ಯಾಸಕ್ತಿಯನ್ನೂ ಸಂಸಂಸ್ಕರಣವನ್ನೂ ದೇಶಾಭಿಮಾನವನ್ನೂ ಸೂರೆ ಗೊಳ್ಳುವಂತಿರಬೇಕೆಂತಲೂ ಆಶೀರ್ವದಿಸಿತು. ಜನರಲ್ಲಿ ಸಾಮಾನ್ಯವಾಗಿ ಮನಸ್ಸಿಗುತ್ಸಾಹವನ್ನುಂಟುಮಾಡಬೇಕಾಗಿದ್ದರೆ ಗ್ರಂಥರಚನೆಯು ಹೊಸಹೊಸ ವಿವಿಧ ವಿಷಯಗಳನ್ನು ಕುರಿತದ್ದಾಗಿರಬೇಕೆಂದೂ, ಮುದ್ದಾದ ಮಾತುಗಳಿಂದಲೂ, ಭಾಷಾ ಸಂಪ್ರದಾಯಗಳಿಂದಲೂ, ಉತ್ಸಾಹಕರವಾದ ಮಹನೀಯ ದೇಶೋದ್ಧಾರಕರ ಕಥೆಗಳಿಂದಲೂ, ಅಪೂರ್ವವಾದ ಶಾಸ್ತ್ರ ವಿಮರ್ಶೆಗಳಿಂದಲೂ, ಪ್ರಕೃತೋಪಯೋಗಿಗಳೂ ಸರ್ವಜನಸಮ್ಮತಗಳೂ ಆದ ನೈತಿಕಾಕ ರಾಜಕೀಯ ಬೋಧಿಗಳಿಂದಲೂ ತುಂಬಿ ತುಳುಕಾಡುತ್ತಿರಬೇಕೆಂದೂ ರಾಜಮಂತ್ರಪ್ರವೀಣರ ಪ್ರವಚನದಿಂದ ಸಿದ್ಧವಾಯಿತು. ಆ ಸಮಯದಲ್ಲಿ ಮಹಾಮಹೋಪಾಧ್ಯಾಯರಾದ ಸಿದ್ಧಾಂತಿ ಶಿವಶಂಕರಶಾಸ್ತ್ರಿಗಳು ಭಾಷೋಜ್ಜೀವನ ಪ್ರಯತ್ನಗಳಲ್ಲಿ ಜಾತಿ ಕುಲ ಮತಾಭಿನಿವೇಶಗಳು ಬಾಹ್ಯಗಳೆಂದು ಪರಾಮರ್ಶಿಸಿದರು. ದೇಶಭಕ್ತಾಗ್ರಗಣ್ಯರಾದ ವೆಂಕಟಕೃಷ್ಣಯ್ಯನವರು ಸಾಂಘಿಕ ಅಖಂಡಶಕ್ತಿಗೆ ಕೂಡ ದೈವಸಹಾಯವು ಕೂಡಿ ಬರಬೇಕೆಂದು ಹೇಳಿದರು. ಬೊಂಬಾಯಿಯ ವಿದ್ವದ್ವರ್ಯರಾದ ಜಹಗೀರ್ದಾರರು ತಮ್ಮ ಉತ್ಕೃಷ್ಟವಾದ ಉಪನ್ಯಾಸದಲ್ಲಿ ಪರಿಷತ್ಪ್ರಚಾರ ಸಾಧನಗಳನ್ನು ಸಂಗ್ರಹಿಸುತ್ತ ವಿದ್ವನ್ಮಂಡಲಿಗಳಲ್ಲಿ ಸ್ನೇಹಾಭಿವೃದ್ಧಿಯೂ ಆಚಾರ ವ್ಯವಹಾರಗಳಲ್ಲಿ ಐಕ್ಯತೆಯೂ, ಕನ್ನಡಿಗರಲ್ಲೆಲ್ಲಿಯೂ ತನು ಧನ ಮನಂಗಳಿಂದ ಸಹಾಯಮಾಡಬೇಕೆಂಬ ವಾಂಛೆಯೂ, ಗಣನೆಗೆ ಬರುವ ಪ್ರತಿಪಟ್ಟಣದಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥರು, ವರ್ತಕರು ಮೊದಲಾದ ಸಮಸ್ತರೂ ಕಲೆತು ಮೆಲತು ಸೇರಲುಳ್ಳ ಸಭೆಗಳ ನಿರ್ಮಾಣವೂ ಇರಬೇಕೆಂದು ವ್ಯಕ್ತಪಡಿಸಿದರು. ಕೀರ್ತಿಶೇಷವಿದ್ವನ್ಮಣಿಗಳಾದ ರಘುನಾಥರಾಯರು ಭಾಷೆಯ ಅಭಿವೃದ್ಧಿಯನ್ನು ತೋರಿ ಸರ್ಕಾರದವರ ಪ್ರೋತ್ಸಾಹವನ್ನೂ, ಸಂಸ್ಕರಣ ವಿಷಯದಲ್ಲಿ ಶಾಸ್ತ್ರೀಯ ಮಾರ್ಗಾಪೇಕ್ಷೆಯನ್ನೂ, ಕೃತಿ ನಿರ್ಮಾಣದಲ್ಲಿ ದೇಶೀಯ ಭಾಷಾಭೇದಗಳಿದ್ದೂ ಗ್ರಾಂಥಿಕ ರೂಪವನ್ನೇ ಪ್ರಾಜ್ಞರಾದವರು ಉಪಯೋಗಿಸಬೇಕೆಂಬುದನ್ನೂ ತಿಳಿಯಪಡಿಸಿ ಇದಕ್ಕಾಗಿಯೆಂದು ದೊಡ್ಡ ವ್ಯಾಕರಣವನ್ನೂ ನಿಘಂಟುವನ್ನೂ ಬರೆಯತಕ್ಕುದೆಂಭಿಪ್ರಾಯಪಟ್ಟರು. ಹಾಗೆಯೇ ಮ|| ರಾ||ನಾರಾಯಣರಾವ್ ಕರಿಗುದರಿಯವರು ಲೋಕಜ್ಞಾನವು ಮಾತೃಭಾಷೆಯ ಮೂಲಕವೇ ಹರಡಬೇಕೆಂಬ ಸಿದ್ಧಪ್ರತೀತಿಯನ್ನು ತೋರ್ಪಡಿಸಿ ಗ್ರಂಥ ವಿಷಯಗಳನ್ನು ಚಿತ್ರಗಳ ಮೂಲಕ, ನಿದರ್ಶನಗಳ ಮೂಲಕ, ಕಾದಂಬರಿ ಕಥೆಗಳಾಗಿ ಸಂಭಾಷಣ ಶೈಲಿಯಲ್ಲಿ ಬರೆಯಬೇಕೆಂದು ಸೂಚಿಸಿದರು. ಆಂಗ್ಲಭಾಷಾ ಪ್ರಾಚುರ್ಯವು ಸಾರ್ವಜನೀಕ ಸಂಪತ್ತಿಗೆ ಆವಶ್ಯಕವಾದದ್ದಾದರೂ ಕನ್ನಡಿಗರ ಜ್ಞಾನೋದಯಕ್ಕೆ ಕನ್ನಡವೇ ಬೇಕೆಂದು ಪರಮಸ್ವಾಮಿಗಳೂ ಕರ್ಣಾಟವಂಶಭೂಷಣರೂ ಆದ ನಮ್ಮ ಯುವರಾಜರು ಅಪ್ಪಣೆಕೊಡಿಸಿದರು; ಮುಖ್ಯವಾಗಿ, ಕರ್ಣಾಟ ಜನಾಂಗಗಳ ನಡೆನುಡಿಗಳಭಿವೃದ್ಧಿಯನ್ನು ತೋರ್ಪಡಿಸುವ ಸದ್ಗ್ರಂಥಗಳು ವೃದ್ಧಾಚಾರಗಳಲ್ಲಿ ವಿಶ್ವಾಸವುಳ್ಳ ವಿದ್ವಾಂಸರಿಂದಲೇ ಬರೆಯಲ್ಪಡಬೇಕೆಂತಲೂ ಅಭಿಪ್ರಾಯಪಟ್ಟರು. ಮ|| ರಾ|| ಎಸ್.ಎನ್.ನರಸಿಂಹಯ್ಯನವರು, “ಗ್ರಾಂಥಿಕರೂಪಗಳ ಏಕೀಕರಣ”ವೆಂಬ ಒಂದು ಉತ್ತಮವಾದ ಉಪನ್ಯಾಸದಲ್ಲಿ ವ್ಯಾಕರಣ ನಿಘಂಟುಗಳ ರಚನೆಯಿಂದ ಮಾತ್ರ ಭಾಷಾಭೇದಗಳು ಲೋಪಿಸಲಾರವೆಂದೂ ಆಯಾ ರಾಷ್ಟ್ರೀಯ ಹಾಸ್ಯ ವಿನೋದ ಕುಹಕಗಳು ಆಯಾ ರಾಷ್ಟ್ರೀಯ ಭಾಷಾಭೇದಗಳನ್ನುಸರಿಸಿಯೇ ಇರಬೇಕೆಂತಲೂ ದೃಶ್ಯ ಕಾವ್ಯಗಳಲ್ಲಿ, ಎಂದರೆ ಗ್ರಂಥಗಳನ್ನು ಬರೆಯುವಾಗ ಸಂಸ್ಕೃತ ಶಬ್ದಗಳನ್ನು ತತ್ಸಮಾರ್ಥದಲ್ಲಿಯೇ ಪ್ರಯೋಗಿಸಬೇಕೆಂತಲೂ, ಶೀಘ್ರ ಪ್ರಚಾರಕ್ಕೆ ಪ್ರೋತ್ಸಾಹಕರಗಳಾದ ಪುಸ್ತಕಗಳನ್ನು ಸುಲಭ ಶೈಲಿಯಲ್ಲಿ ಬರೆದು ಕನ್ನಡಿಗರ ಮನೆಮನೆಗಳ ಬಾಗಿಲುಗಳಲ್ಲಿ ಬಿಕರಿಮಾಡಬೇಕೆಂತಲೂ ಸೂಚಿಸಿದರು, ರಾವ್ ಬಹಾದ್ದೂರ್ ನರಸಿಂಹಾಚಾರ್ಯರವರು ಕರ್ಣಾಟ ಭಾಷಾ ಮಹೋನ್ನತಿಯನ್ನು ಪೂರ್ವಾದಾರಾಭ್ಯ ಚಾರಿತ್ರ ವಿಮರ್ಶನದಿಂದ ದೇಸಾಯಿಗಳು ಹೇಳಿದಂತೆ ಕನ್ನಡಕ್ಕೆ ಬಂದ ದೀನಸ್ಥಿತಿಗೆ ವಿದ್ವಾಂಸರಾಗಿಯೂ ಸಮರ್ಥರಾಗಿಯೂ ಇರುವ ಕನ್ನಡಿಗರ ಪರಾಙ್ಮುಖತೆಯೂ ಪ್ರೌಢಶಾಲೆಗಳ ಆನಾದರಣೆಯೂ ಇತರ ಪ್ರಾಂತಭಾಷೆಗಳ ಹೆಚ್ಚಿದ ಪ್ರಚಾರವೂ ಮುಖ್ಯ ಕಾರಣಗಳೆಂಬರ್ಥವನ್ನನುಮೋದಿಸಿ, ಅಭಿವೃದ್ಧಿ ಮಾರ್ಗಗಳಲ್ಲೆಲ್ಲ ಹೆಚ್ಚಿನದ್ದು ಮಾಧ್ಯಮಿಕ (Secondary) ಶಾಲೆಗಳಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯೇ ಎಂದು ಹೇಳಿದರು. ಆ ಮಹನೀಯರ ಉಪಸಂಹಾರ ವಾಕ್ಯಗಳ ಚಮತ್ಕೃತಿಯನ್ನೂ ರಸವತ್ತತೆಯನ್ನೂ ಸರ್ವರೂ ಅನುಭವಿಸಿಯೇ ಇರುವಿರಿ.
ರಾಜಸಭಾಭೂಷಣ ಮ|| ರಾ|| ಕರ್ಪೂರ ಶ್ರೀನಿವಾಸರಾಯರು ಶಾಸ್ತ್ರ ಸಂಪ್ರದಾಯವಾದ ವಾಗ್ಧೋರಣೆಯಿಂದ ಮುಂದು ನಮ್ಮ ವಾಙ್ಮಯಕ್ಕೆ ಪರಿಚಲನ ಉಂಟಾಗಬೇಕಾಗಿದ್ದರೆ ಕಾಂತಾಸಮ್ಮಿತವಾದ ಕಾವ್ಯ ನಾಟಕ ರೂಪವಾಗಿಯೇ ಆಗಬೇಕೆಂದು ಹೇಳಿ ಕರ್ಣಾಟಕರಾದ ಸರ್ವರಲ್ಲಿಯೂ ಜ್ಞಾನೇಚ್ಛಾಕ್ರಿಯಾಶಕ್ತಿಗಳೆಂಬ ಮುಖ್ಯ ಸಾಧನೆಗಳು ಅಭಿವೃದ್ಧಿಗೆ ಬರಬೇಕೆಂದು ದೇವರನ್ನು ಪ್ರಾರ್ಥಿಸಿದರು. ಪ್ರಸಿದ್ಧರಾದ ರೊದ್ದದ ರಾಯರವರು, ತೆಲುಗು, ಉರ್ದು, ಮರಾಠಿ ಭಾಷೆಗಳ ಮಧ್ಯೆ ಸಿಕ್ಕಿ ತಿಣಕಲಾಡುತ್ತಿರುವ ಪ್ರಾಂತಕರ್ಣಾಟಕದ ದುರವಸ್ಥೆಯನ್ನು ವರ್ಣಿಸಿ ಇಂತಹ ಕ್ಲಿಷ್ಟ ಪರಿಣಾಮಕ್ಕೆ ಆಯಾ ರಾಜ್ಯಾಂಗ ಪ್ರಭುತ್ವ ಸಭ್ಯರಲ್ಲಿಯೂ ಅಲ್ಲಿಯ ವಿದ್ಯಾಧಿಕಾರಿಗಳಲ್ಲಿಯೂ ಕರ್ಣಾಟಕರ ನ್ಯೂನತೆಯೇ ಮುಖ್ಯ ಕಾರಣವೆಂದು ಸೂಚಿಸಿದರು. ಅಲ್ಲದೆ ಕರ್ಣಾಟ ಪ್ರಾಂತಗಳು ಆಯಾ ದೇಶದ ಬಹು ದೂರದಲ್ಲಿರುವ ಕಾರಣ ಯಾವುದೊಂದು ಸುಧಾರಣೆಯಾಗಲಿ ಅವುಗಳನ್ನು ಮುಟ್ಟಲು ಬಹುಕಾಲವಾಗುತ್ತದೆ ಎಂಬೀಯೆರಡು ಕುಂದಕಗಳಿಂದ ಪ್ರಾಂತ ಕರ್ಣಾಟದ ರಾಜಕೀಯ, ಸಾಮಾಜಿಕ ವಾಙ್ಮಯಾಭಿವೃದ್ಧಿಗಳ ದೈನ್ಯತೆ ಪ್ರಾಪ್ತವಾಯಿತೇ ಹೊರತು ಜ್ಞಾನೇಚ್ಛಾಕ್ರಿಯಾ ಶಕ್ತಿಗಳ ಮಾಂದ್ಯದಿಂದಲ್ಲವೆಂದು ತೋರಿಸಿದರು. ದಿವಾನ್ ಬಹಾದ್ದೂರ್ ರಾಜಸಭಾಭೂಷಣ ಕೆ.ಪಿ. ಪುಟ್ಟಣ್ಣಶೆಟ್ಟರವರು ಪೂರ್ವದಲ್ಲಿದ್ದ ವಾಙ್ಮಯ ವ್ಯಾಪ್ತಿಗೂ ಈಗಿನ ಅಸಡ್ಡೆಗೂ ಸಮಗ್ರ ಕಾರಣಗಳನ್ನು ತಿಳಿಸಿ, ಪೂರ್ವದಂತೆ ಪುರಾಣ ಶ್ರವಣಾದಿಗಳು ವೃದ್ಧಿಗೆ ಬರಬೇಕೆಂಬುದನ್ನೂ, ಹಳೇ ಓಲೆಯ ಗ್ರಂಥಗಳನ್ನು ಭದ್ರಪಡಿಸಿ ಕ್ರಮೇಣ ಮುದ್ರಿಸಬೇಕೆಂಬುದನ್ನೂ, ದೇಶೀಯ ಐತಿಹಾಸಿಕ ಚರಿತ್ರೆಗಳನ್ನು ಬರೆಯಿಸಬೇಕೆಂಬುದನ್ನೂ, ಇಂಗ್ಲಿಷು ಭಾಷೆಯಲ್ಲಿ ಹೆಚ್ಚಾದ ವ್ಯಾಮೋಹವನ್ನು ತಗ್ಗಿಸಬೇಕೆಂಬುದನ್ನೂ ಕಾರ್ಯಕ್ರಮದಲ್ಲಿ ಕಾದಂಬರೀ ಗ್ರಂಥಗಳನ್ನು ರಸವತ್ತಾಗಿಯೂ ಭಾವಗರ್ಭಿತವಾಗಿಯೂ ಬರೆಯಿರಿ, ಸಭಾವಾಗ್ಮಿಗಳನ್ನು ಸಮ್ಮಾನಿಸಿ, ವಿಜ್ಞಾನ ವಿಷಯಗ್ರಂಥಗಳನ್ನು (Scientfic Works) ಆಂಗ್ಲಭಾಷೆಯಿಂದ ಪರಿವರ್ತನ ದ್ವಾರಾ ವೃದ್ಧಿಪಡಿಸಿ, ನಮ್ಮ ಕರ್ಣಾಟಕ ಪರಿಷತ್ಸದಸ್ಯರ ಸಂಖ್ಯೆಯು ಶತಶಃ, ಸಹಸ್ರಶಃ, ಬೆಳೆಯುವಂತೆ ಮಾಡಬೇಕೆಂಬುದೇ ನಮ್ಮ ಮುಖ್ಯೋದ್ದೇಶವಾಗಿರಬೇಕೆಂದು ಪರಾಮರ್ಶಿಸಿದರು. ಮ|| ರಾ|| ವೆಂಕಟಕೃಷ್ಣಯ್ಯನವರು ಎಂಟನೆಯ ಸಮ್ಮೇಳನದ ಅಗ್ರಾಸನಾಧಿಪತ್ಯವನ್ನು ವಹಿಸಿ, ಸೂಕ್ಷ್ಮವಾಗಿ ಮೈಸೂರು ದೇಶದಲ್ಲಿ ಆಳಿದ ಮಹಾಸ್ವಾಮಿ ಮುಮ್ಮಡಿ ಕೃಷ್ಣರಾಜ ಒಡೆಯರವರ ಮಹೋತ್ಕೃಷ್ಟವಾದ ಭಾಷಾಸೇವೆಯನ್ನು ಪ್ರಾರಂಭಿಸಿ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ದೇಶಾಭಿಮಾನಭರಿತವಾದ ಸುದ್ದೇಶಗಳಲ್ಲೊಂದಾದ ಕರ್ಣಾಟಕ ಸಾಹಿತ್ಯ ಪರಿಷತ್ಸ್ಥಾಪನದವರೆಗೂ, ನಡೆದ ಭಾಷಾಪರಂಪರಾಭಿವೃದ್ಧಿಯನ್ನು ತಿಳಿಸಿ, ಪಾಶ್ಚಾತ್ಯ ಗ್ರಂಥಗಳು ಲೋಕಜ್ಞಾನಕ್ಕವಶ್ಯವಾದುವುಗಳೆಂತಲೂ, ಜಪಾನಿನ ಅಭಿವೃದ್ಧಿಗೆ ಇದೇ ಕಾರಣವೆಂತಲೂ, ಆದದ್ದರಿಂದ ಸರ್ವಥಾ ಜೇನುದುಂಬಿಗಳಂತೆ ಎಲ್ಲಾ ಭಾಷಾಕುಸುಮಗಳಲ್ಲಿರತಕ್ಕ ಗ್ರಂಥಸಾರವೆಂಬ ಜೇನನ್ನು ಕುಡಿದು ತಂದು ಕರ್ಣಾಟಕ ಭಾಷಾಭಿಮಾನಿಗಳೆಂಬ ಜೇನುಹುಳುಗಳು ಈ ದೇಶೀಯರಿಗುಣಿಸಿ ಪರಮೋಪಕಾರಿಗಳಾಗಿರುವುದರಿಂದ ಐಕಮತ್ಯದೊಡನೆ ಜಾತಿದ್ವೇಷ ಮತದ್ವೇಷಗಳನ್ನು ಬಿಟ್ಟು ತಂಡೋಪತಂಡವಾಗಿ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕೆಂದೂ ಗಂಭೀರೋಪನ್ಯಾಸವನ್ನು ಮಾಡಿದರು. ಕಳೆದ ವರ್ಷದಲ್ಲಿ ಮಹಾಮಹೋಪಾಧ್ಯಾಯ ವಿದ್ವನ್ಮಣಿಗಳಾದ ಸಿದ್ದಾಂತಿ ಶಿವಶಂಕರಶಾಸ್ತ್ರಿಗಳು ತಾವು ಪರಿಷತ್ಪ್ರಾರಂಭದ ದಶೆಯಲ್ಲಿಯೇ ಬರೆದ ಸದುದ್ದೇಶ ಪಂಚಕವೆಂಬ ವ್ಯಾಸದಭಿಪ್ರಾಯಗಳನ್ನೇ ದೃಢೀಕರಿಸಿ ಭಾಷಾಭಿವೃದ್ಧಿ ಪ್ರಯತ್ನಗಳಿಗೆಲ್ಲ ಶ್ರೇಯಸ್ಸುಂಟಾಗಲೆಂದು ಆಶೀರ್ವದಿಸಿದರು.
ಹೀಗೆ ಅಧ್ಯಕ್ಷ ಸ್ಥಾನದಿಂದಲೂ ವಿದ್ವದ್ವರ್ಯರ ವಿಮರ್ಶೆಗಳಿಂದಲೂ ಸಭಾಸದರ ಸಮಸ್ಯೆಗಳಿಂದಲೂ ಪೂರ್ವಪಕ್ಷ ಸಮಾಧಾನಗಳಿಂದಲೂ ಇನ್ನೂ ಬಗೆಬಗೆಯಾಗಿ ಪರಿಷತ್ಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟು ತೋರ್ಪಡಿಸುವ ಉತ್ತಮ ವ್ಯಾಸಗಳಿಂಲೂ, ನಮ್ಮೀ ಪರಿಷತ್ತಿನ ಉದ್ದೇಶಗಳು ಸಂಪೂರ್ಣ ಫಲವನ್ನು ಹೇಗೆ ಹೊಂದತಕ್ಕದ್ದೆಂದು ಸ್ಪಷ್ಟವಾಗಿ ತಿಳಿಸಲ್ಪಟ್ಟಿರುವಾಗ ಅವುಗಳನ್ನೇ ಮತ್ತೆ ಹೇಳುವುದು ಪಿಷ್ಟಪೇಷಣ ನ್ಯಾಯವಾಗಿರುತ್ತದೆ.
Tag: Kannada Sahitya Sammelana 10, Hosakote Krishnashasthri
೯ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಸಿದ್ಧಾಂತಿ ಶಿವಶಂಕರ ಶಾಸ್ತ್ರಿ
ಸಿದ್ಧಾಂತಿ ಶಿವಶಂಕರಶಾಸ್ತ್ರಿ ಅವರು ೧೮೬೪ರಲ್ಲಿ ಜನಿಸಿದರು. ತಂದೆ ಸುಬ್ರಹ್ಮಣ್ಯಶಾಸ್ತ್ರಿಗಳು ಕನ್ನಡ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಅದ್ವಿತೀಯ ಪಂಡಿತರು. ತಂದೆಯಿಂದಲೇ ಪ್ರಾಥಮಿಕ ಶಿಕ್ಷಣ ಪಡೆದು ಅವರಂತೆಯೇ ವಿದ್ವಾಂಸರಾದರು.
ಮದರಾಸಿನ ಕ್ರಿಶ್ಚಿಯನ್ ಕಾಲೇಜು ಮತ್ತು ಪ್ರೆಸಿಡೆನ್ಸಿ ಕಾಲೇಜಿನಲ್ಲೂ ೩0 ವರ್ಷಗಳ ಕಾಲ ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಿದರು. ೧೯೨೧ರಲ್ಲಿ ನಿವೃತ್ತರಾದ ಮೇಲೆ ಬೆಂಗಳೂರಿಗೆ ಬಂದು ನೆಲೆಸಿದರು.
ಶಿವಶಂಕರ ಶಾಸ್ತ್ರಿಗಳು ತಮ್ಮ ಪಾಂಡಿತ್ಯದಿಂದ ವಿದ್ವಜ್ಜನರ ಮನಸೆಳೆದಿದ್ದರು. ಬೆಂಗಳೂರು ಬಸವನಗುಡಿಯ ನರಹರಿರಾಯನ ಗುಡ್ಡದಲ್ಲಿ ಆನಂದಗಿರಿಯ ದೇವಾಲಯದಲ್ಲಿ ಧರ್ಮಸೇವೆಗೆ ತೊಡಗಿದರು.
ಮೈಸೂರು, ಶೃಂಗೇರಿ ಮುಂತಾದ ಕಡೆಗಳಲ್ಲಿ ಶಾಸ್ತ್ರಿಗಳಿಗೆ ಬಿರುದು-ಬಹುಮಾನಗಳನ್ನು ಕೊಟ್ಟು ಸನ್ಮಾನಿಸಿದ್ದಾರೆ. ಭಾರತ ಸರ್ಕಾರದವರು ಮಹಾ ಮುಖ್ಯೋಪಾಧ್ಯಾಯ ಬಿರುದನ್ನು ನೀಡಿತು: ಮೈಸೂರು ಮಹಾರಾಜರು ೧೯೩೮ರಲ್ಲಿ ವಿದ್ಯಾನಿಧಿ ಬಿರುದನ್ನು ನೀಡಿ ಸನ್ಮಾನಿಸಿದರು. ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಇವರು ಪರಿಷತ್ತಿನ ಸ್ಥಾಪನೆಗೆ ಮುನ್ನ ಅನೇಕ ಸಲಹೆಗಳನ್ನು ನೀಡಿದ್ದರು.
ಪಾಂಡಿತ್ಯಪೂರ್ಣ ಕೃತಿಗಳನ್ನು ರಚಿಸಿರುವುದು ಇವರ ಹೆಗ್ಗಳಿಕೆ:
ಕರ್ಣಾಟಕ ನಳೋಪಾಖ್ಯಾನ, ಕರ್ಣಾಟಕ ನರಕಾಸುರ ವಿಜಯ ವ್ಯಾಯೋಗ, ಶ್ರೀಶಂಕರಕಥಾಮೃತಂ, ಪ್ರಶ್ನೋತ್ತರ ಮಾಲಿಕೆ, ಶ್ರೀ ಕಾವೇರಿ ಮಹಾತ್ಮೆ ಇತ್ಯಾದಿ
ಜ್ಯೋತಿಷ್ಯಶಾಸ್ತ್ರದ ಪಂಡಿತರಾದ ಇವರು ೧೯೪೨ರಲ್ಲಿ ಸ್ವರ್ಗಸ್ಥರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೯,
ಅಧ್ಯಕ್ಷರು : ಸಿದ್ಧಾಂತಿ ಶಿವಶಂಕರಶಾಸ್ತ್ರಿ
ದಿನಾಂಕ ೨೧, ೨೨, ೨೩ ಮೇ ೧೯೨೩
ಸ್ಥಳ : ಬಿಜಾಪುರ
ಹಿಂದಿನ ೮ ಸಮ್ಮೇಳನಗಳ ಸಿಂಹಾವಲೋಕನ
ಇದು ನಮ್ಮ ಕರ್ಣಾಟ ಸಾಹಿತ್ಯ ಸಮ್ಮೇಳನ ಮಹಾಸಭೆ. ಈವರೆಗೆ ಎಂಟು ಮಹಾಸಮ್ಮೇಳನಗಳು ನಡೆದು ಒಂದೊಂದರಲ್ಲಿ ಓರ್ವರು ಅಧ್ಯಕ್ಷ ಪದಾರೂಢರಾಗಿ ಅಷ್ಟದಿಗ್ಗಜಂಗಳಂತೆ ನಮ್ಮ ಈ ಕರ್ಣಾಟಕ ಭಾಷಾ ಭೂಮಿಯನ್ನು ಉದ್ಧರಿಸಿರುವಲ್ಲಿ, ‘’ನವ ಸಂಖ್ಯೈವ ಸಜ್ಜನ ಪ್ರಕೃತಿಃ” ಎಂಬಂತೆ ಆ ಮಹಾಶಯರಾದ ವಿದ್ವತ್ಸುಗುಣಾಲಂಕೃತದ ಸೂಕ್ತಿಸಂಗ್ರಹವನ್ನು ಸ್ಮಾರಕಕ್ಕೆ ತರುವುದು ನನ್ನ ಕೃತಜ್ಞತೆಯಾಗಿದೆ.
೧. ರಾಕ್ಷಸ ಸಂ||-‘’ಸಾಕ್ಷರಾ ವಿಪರೀತಾಶ್ಚೇದ್ರಾಕ್ಷಸಾ ಏವ ಕೇವಲಂ” ಎಂಬಂತೆ ಸಾಕ್ಷರಾರು? ಆಂಗ್ಲಭಾಷ ಪಂಡಿತರವರೇ? ಎಂಬಲ್ಲಿ ನಮ್ಮ ಕನ್ನಡಕ್ಕೆ ಎಲ್ಲರೂ ರಾಕ್ಷಸರೇ (ಹಿಂಸಕರು) ಸರಿ ಎಂಬುದು ವಿಪರೀತವಾಗಿ, ಅಂತಹ ಆಂಗ್ಲಭಾಷಾಪಟ್ಟಿ ಪದಾಂಚಿತರು ದೈವಯೋಗದಿಂದಲೂ ಕಾಲ ಬಲಾನುಕೂಲದಿಂದಲೂ ಸಾಕ್ಷರರಾರು? ಕರ್ಣಾಟಕಗೀರ್ವಾಣಾದಿ ಭಾಷಾಪರಿಶ್ರಮಗೊಂಡವರೂ ಕೂಡ ಎಂಬ ಸೌಜನ್ಯವು ಹುಟ್ಟಿ ಮುನ್ನಿನ ‘ಸ್ವಾತಿರಿಕ್ತರು ಏನು ತಿಳಿಯುವರು, ನಮ್ಮ ಗ್ರಂಥಗಳಲ್ಲಿ ಏನೂ ರಸವಿಲ್ಲ’ ಇತ್ಯಾದಿ ಭಾವನೆ ಬಿಡತೊಡಗಿ ವಿಪರೀತರಾಗಲು, ಕೇವಲಂ=ಮುಖ್ಯವಾಗಿ, ರಾಕ್ಷಸಾ ಏವ=ಸಮರ್ಥರೇ ಆಗಿರುವರು, ಆವುದಕ್ಕೆ? ಸ್ವಕರ್ಣಾಟ ಭಾಷಾಭಿವೃದ್ಧಿಗೆ ಎಂಬಂತೊಪ್ಪಿದ ಉಪಸಂಘವೊಂದೆದ್ದು ಐದು ವಿಷಯಗಳನ್ನು ಗುರಿಯಲ್ಲಿಟ್ಟುಕೊಂಡು ವಿದ್ವತ್ಪ್ರಾರ್ಥನೆಯನ್ನು ಮಾಡಿತು. ಅದನ್ನೇ ಸದುದ್ದೇಶ ಪಂಚಕವನ್ನಾಗಿ ಗ್ರಹಿಸಿ ತನ್ನಾಮ ಮುಖಾಂಕಿತವಾದ ಉಪನ್ಯಾಸವನ್ನು (೧0-೪-೧೯೧೫ರಲ್ಲಿ) ಬರೆದಿತ್ತೆನು. ಬಳಿಕ ಪ್ರಥಮ ಕರ್ಣಾಟಕ ಸಾಹಿತ್ಯ ಸಮ್ಮೇಳನ ಮಹಾಸಭೆಗೆ ಬೆಂಗಳೂರಲ್ಲಿ ಮೇ ತಿಂಗಳ, ೩,೪, ೫ನೆಯ ದಿನತ್ರಯವೂ ಕೀರ್ತಿಶೇಷರಾದ ರಾಜಮಂತ್ರ ಪ್ರವೀಣ ಎಚ್.ವಿ. ನಂಜುಂಡಯ್ಯ, ಎಂ.ಎ., ಎಂ.ಎಲ್., ಸಿ.ಐ.ಇ., ಅವರೂ, ರಾಜಸಭಾಭೂಷಣ ಕರ್ಪೂರ ಶ್ರೀನಿವಾಸರಾವ್, ಬಿ.ಎಸ್.ಸಿ., ಎಲ್.ಸಿ.ಇ., ಅವರೂ ಅಧ್ಯಕ್ಷತೆಗೊಂಡು ಬಹು ವಿಷಯವಿಚಾರ ವಿಮರ್ಶೆಯಿಂದ ಕರ್ಣಾಟಕ ಭಾಷೋಜ್ಜೀವನ ಪ್ರೋತ್ಸಾಹಕ್ಕೆ ಪ್ರಾಥಮಿಕಾಧ್ಯಕ್ಷತೆಯಿಂದ ಪ್ರಶಂಸನೀಯರಾದರು. ಇದರಿಂದ ರಾಕ್ಷಸ ಸಂಘವತ್ಸರವು ಹಿಂಸಕವೆನಿಸದೆ ಪ್ರಶಂಸಕವೆನಿಸಲು ಯುಕ್ತವೆಂದು ಸಮರ್ಥನಂಗೊಳಿಸಿದಂತಾಯ್ತು.
೨. ನಳ ಸಂ||- ಈ ವರುಷದ ಮೇ ತಿಂಗಳ ೬-೭-೮ ಮೂರು ದಿನಗಳು ದ್ವಿತೀಯ ಕರ್ಣಾಟಕ ಸಾಹಿತ್ಯ ಸಮ್ಮೇಳನ ಮಹಾಸಭೆ ಕೀರ್ತಿಶೇಷರಾದ ಎಚ್.ವಿ. ನಂಜುಂಡಯ್ಯನವರ ಅಧ್ಯಕ್ಷತೆಯಲ್ಲಿ ಬೆಂಗಳೂರಲ್ಲಿ ಮೇ ಊರ್ಜಿತ ಸ್ಥಿತಿಗೊಂಡುದು. ಇವರ ಸಮಾದರಣವಲ್ಲವೇ ಈ ನಮ್ಮ ಕರ್ಣಾಟ ಭಾಷೋಜ್ಜೀವನ ಕೃತ್ಯಂಗಳು ರಾಜ್ಯಾಂಗ ಜನಾಂಗ ಜನಪದಾಂಗಗಳಲ್ಲಿ ಹರಡಿಕೊಂಡು ವ್ಯವಸಾಯವು ನಡೆಯಲು ಸಹಾಯಕವಾಯಿತು. ಇದರಿಂದ ನಳ ಸಂವತ್ಸರವು ನಮ್ಮೆಲ್ಲರಿಗೂ ಸ್ವದೇಶಭಾಷಾವಿಹಾರದಲ್ಲಿ ನಳನಳಿಸುವಂತೆ ಮಾಡಿತೆಂದು ಸಂತಪಿಸಬೇಕಾಗಿರುವುದು.
೩. ಪಿಂಗಳ ಸಂ||- ಮೈಸೂರಲ್ಲಿ ಜೂನ್ ೮-೯-೧0ರಲ್ಲಿ ತೃತೀಯ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾಸಭೆಯಾಯಿತು. ಪ್ರಥಮ ದಿನದಲ್ಲಿ ಅಧ್ಯಕ್ಷಪದವಿಗೆ ಶ್ರೀಮದ್ಯುವರಾಜರು ಶ್ರೀಕಂಠೀರವ ನರಸಿಂಹರಾಜವೊಡೆಯರ್, ಜಿ.ಸಿ.ಐ.ಇ.ಯವರು ಅಗ್ರಾಸನವನ್ನಲಂಕರಿಸಲು, ಕೀರ್ತಿಶೇಷ ನಂಜುಂಡಯ್ಯನವರೇ ನಿಜ ವಕ್ತೃತೆಯಿಂದ ಸಕಲ ಜನಾನಂದವನಿತ್ತು ಕರ್ಣಾಟಕ ಪರಿಷತ್ಕಾರ್ಯೋತ್ತೇಜನವು ಶ್ರೀಮದ್ಯುವರಾಜ ಸಮಾದೃತವನ್ನಾಗಿಸಲು, ದ್ವಿತೀಯ ದಿನದಲ್ಲಿ ಮ|| ರಾ|| ಬಿ. ವೆಂಕಟಾಚಾರ್, ಬಿ.ಎ., ಯವರೂ, ಮೂರನೆಯ ದಿನದಲ್ಲಿ ರಾಜಸಭಾಭೂಷಣ ಕರ್ಪೂರ ಶ್ರೀನಿವಾಸರಾಯರವರೂ ಅಗ್ರಾಸನಾಲಂಕೃತರಾಗಿ ಸಭೋದ್ದೇಶಗಳನ್ನು ಸರಳವಾಗಿ ನಡೆಯಿಸಿ ಭಾಷಾಕಾರ್ಯನಿರ್ವಾಹಕ ಪ್ರೋತ್ಸಾಹಕರಾದರು. ಇಂತು ಪಿಂಗಳ ವರ್ಷವೂ ಮಂಗಳಾವಹವಾಗಿ ನಮ್ಮ ಭಾಷಾರಕ್ಷಣೆಗೆಯ್ದುದು ಭಾಗ್ಯವಲ್ಲವೆ!
೪. ಕಾಳಯುಕ್ತಿ ಸಂ||- ಧಾರವಾಡದಲ್ಲಿ ಚತುರ್ಥ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾ ಸಭೆ ನಡೆಯಿತು. ಪ್ರಾಕ್ತನವಿರ್ಮಶ ವಿಚಕ್ಷಣ ಆರ್. ನರಸಿಂಹಾಚಾರ್ಯ ಎಂ.ಎ., ಎಂ.ಆರ್.ಎಸ್., ಅವರು ಅಧ್ಯಕ್ಷ ಪದವಿಯಲ್ಲಿ ಮೂರು ದಿನವೂ ಇದ್ದು, ರಸಯುಕ್ತವಾಗಿಯೂ ರಮ್ಯವಾಗಿಯೂ ಸಾಹಿತ್ಯೋಪಯೋಗಿಯಾಗಿಯೂ ಸಾರಾಂಶವಾಗಿಯೂ ಉಪನ್ಯಾಸವಿತ್ತು ಸಭಾಕಾರ್ಯವಂ ನಿರ್ವಹಿಸಿ ಸಭಿಕ ಜನಾನಂದಕರರಾಗಿರಲು, ನಮ್ಮಗಳಿಗೆ ಮಹೋಪಕಾರಿಗಳೆಂದು ಕೊಂಡಾಡುತ್ತೆ ಕಾಲಯುಕ್ತಿ ವತ್ಸರವೂ ಕಾಲೋಚಿತವಾದ ಭಾಷೋಜ್ಜೀವಕ ಯುಕ್ತಿ ಪ್ರದರ್ಶಕವಾಗಿ ಇದರಿಂದ ಸಾರ್ಥಕ ನಾಮವಾಂತುದೆಂದು ಸಂಶ್ಲಾಘಿಸಲ್ಪಡುತ್ತಿರುವುದು.
೫. ಸಿದ್ದಾಸಂ||- ಹಾಸನದಲ್ಲಿ ವೈಶಾಖ ಶು|| ೭-೮-೯ಬುಧ, ಗುರು, ಶುಕ್ರವಾರಗಳಲ್ಲಿ ಪಂಚಮ ಕರ್ಣಾಟಕ ಸಾಹಿತ್ಯಸಂಮೇಳನ ಮಹಾಸಭೆ ನಡೆಯಲು ಮೂರು ದಿನಗಳಲ್ಲಿಯೂ ರಾಜಸಭಾಭೂಷಣ ಕರ್ಪೂರ ಶ್ರೀನಿವಾಸರಾಯರವರೇ ಅಧ್ಯಕ್ಷತೆಗೆ ಅಲಂಕಾರವಿತ್ತು ಉಪಕ್ರಮೋಪಸಂಹಾರಗಳಲ್ಲಿ ತಮ್ಮ ಅಮೂಲ್ಯವಾದ ವಾಗ್ವೈಖರಿಯಿಂದ ಬಹುವಿಷಯ ಚರ್ಚೆಗೆಯ್ದು ಸರಸ ಹೃದಯಾನಂದಕರಾರೆಂದೆಂದು, ಸಿದ್ಧರಾದ, ಅರ್ಥ=ಯಾಚಕರು, ಉಳ್ಳುದು:ಯಾವುದಕ್ಕೆ? ಭಾಷಾಭಿವೃದ್ಧಿಗೆ’ ಎಂಬ ಅರ್ಥ ಸ್ವಾರಸ್ಯಮನಂಗೀಕರಿಸುವಲ್ಲಿ, ನಮಗೆ ಸಿದ್ಧಾರ್ಥಿಯೇ ಸಿದ್ಧಾರ್ಥವಾಗಿ ಪರಿಣಮಿಸಿತೆಂದರೆ ಸಿದ್ಧವಾದ ಪ್ರಯೋಜನಂಗಳುಳ್ಳುದೆನಿಸಿ ಸಂತಸವನ್ನಿತ್ತುದು.
೬. ರೌದ್ರಿ ಸ||- ಹೊಸಪೇಟೆಯಲ್ಲಿ ಜ್ಯೇಷ್ಠ ಶುದ್ಧ ಪಾಡ್ಯ ಮೊದಲ್ಗೊಂಡು ಮೂರು ದಿನಗಳು ಷಷ್ಠ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾಸಭೆ ನಡೆಯಿತು. ರಾವ್ಬಹದ್ದೂರ್ ರೊದ್ದ ಕೋನೇರರಾವ್ ಶ್ರೀನಿವಾಸರಾಯರು ಅಧ್ಯಕ್ಷ ಪದವಿಯನ್ನು ವಹಿಸಿದ್ದರು. ಇವರ ಉಪನ್ಯಾಸವೂ ಕಾರ್ಯನಿರ್ವಹಣವೂ ಕನ್ನಡ ನಾಡಿಗರಿಗೆ ರೌದ್ರ ರಸೋದಯಕರವಾಗಿಯೇ ದೇಶಭಾಷಾಭಿಮಾನ ಪ್ರೋತ್ಸಾಹಕವೆನಿಸಿ ವಿಷಯ ವಿಚಾರದಿಂದ ವಿಪುಲಾನಂದಕರವಾಯಿತೆಂದು ವಿಶೇಷವಾಗಿ ಸಂಶ್ಲಾಘಿಸುತೆ ನಾಡಿಗರು ಕೃತಜ್ಞರಾಗಿರಬೇಕಲ್ಲವೆ!
೭. ದುರ್ಮತಿ ಸಂ||- ಚಿಕ್ಕಮಗಳೂರಿನಲ್ಲಿ ಮೇ ೧೯-೨0-೨೧ ರಲ್ಲಿ ಸಪ್ತಮ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾಸಭೆ ರಾಜಸಭಾಭೂಷಣ ಕೆ.ಪಿ. ಪುಟ್ಟಣಶೆಟ್ಟಿರವರು, ಸಿ.ಐ.ಇ. ಅವರು ಅಲಂಕರಿಸಿದ ಅಧ್ಯಕ್ಷತೆಯಿಂದ ಕಾಲೋಚಿತ ಕರ್ತವ್ಯತಾನಿರೂಪಣವು ಅವರ ವಾಗ್ವೈಖರಿಯಲ್ಲಿ ಸರಸ ಸಮುಚಿತ ಗಂಭೀರ ಪದರಚನೆಯೊಡನೆ ನಡೆದುದೂ, ಉಪನ್ಯಾಸಾಂತ್ಯದ ಸ್ವಾಪ್ನಿಕ ವೈಖರಿಯೂ ಎಲ್ಲರಿಗೂ ಚಿರಕಾಲ ಸ್ಮರಣೀಯವಾಗಿರಬೇಕೆಂದು ಸಂಶ್ಲಾಘಿಸುವೆನು. ಸುಯೋಧನನು ದುರ್ಯೋಧನನಾಗಿ ದುಷ್ಟನೆನಿಸಿದನು. ನಮ್ಮ ಕನ್ನಡಿಗರಿಗೆ ಇವರಿಂದ ದುರ್ಮತಿಯೆಂಬುದು ಸುಮತಿಯಾಗಿ ಪರಿಣಮಿಸಲು ಸುಖಾವಹವಾಯಿತೆಂದೂ ಸೂಚಿಸುವೆನು. ಸ್ವಾಪ್ನಿ ಫಲಾನುಭವವು ಪ್ರಾತ್ಯಕ್ಷಿಕವಾಗಿ ದೇವರ ದಯೆಯಿಂದಲ್ಲದೆ ಬರುವುದೆ!
೮. ದುಂದುಭಿ ಸಂ- ಚಿತ್ರದುರ್ಗದ ಡಿ|| ದಾವಣಗೆರೆಯಲ್ಲಿ ಅಷ್ಟಮ ಕರ್ಣಾಟಕ ಸಾಹಿತ್ಯ ಸಂಮೇಳನ ಮಹಾಸಭೆ ಮೇ೧೨-೧೩-೧೪ ತಾ|| ಗಳಲ್ಲಿ ನಡೆಯಿತು. ಆದ್ಯಂತವಾಗಿ ಅಧ್ಯಕ್ಷಪದವನೇರಿದ ಮ|| ರಾ|| ಸುಪ್ರಸಿದ್ಧರಾದ ಎಂ. ವೆಂಕಟಕೃಷ್ಣಯ್ಯನವರು ಉಪನ್ಯಸಿಸಿದ ವಿಷಯ ವಿಚಾರವು ರಮಣೀಯವೂ ರಸಭರಿತವೂ ಅದುದೊಂದೇ ಅಲ್ಲದೆ ಜಾತಿ ಕುಲ ಮತಾಭಿನಿವೇಶಂಗಳು ಭಾಷಾಸೇವೆಗೆ ದೂರವೆಂಬುದನ್ನು ಒತ್ತಿಹೇಳಿದ ಅವರ ವಾಗ್ದುದುಂಭಿ ನಾದದಿಂದ ಎಲ್ಲರೂ ಕರ್ಣಾನಂದವನ್ನು ಹೊಂದದೆ ಇರಬಾರದು; ಏಕೆಂದರೆ, ಜಾತಿ ಮತ ಕುಲಂಗಳು ವಿಶೇಷ ವ್ಯವಸ್ಥೆಗೊಂಡುದು, ಸ್ವದೇಶ ಭಾಷೆಯೆಂಬುದು ಸಾಮಾನ್ಯ ವ್ಯವಸ್ಥೆಗೊಂಡುದು. ಅದರಿಂದ ಎಲ್ಲರೂ ಭಾಷಾವಿಷಯದಲ್ಲಿ ಐಕಮತ್ಯದಿಂ ಮದಮಾತ್ಸರ್ಯಂಗಳಿಗೊಳಗಾಗದೆ ಸೌಜನ್ಯದಿಂದ ವರ್ತಿಸಬೇಕೆಂದು ಹಾರೈಸುವೆನು. ಇದರಿಂದ ದುಂದುಭಿ ವತ್ಸರವು ದುಂದುಭಿಯಾಗಿಯೇ ಘೋಷಿಸುತ ಸಾರ್ಥಕವಾಗಿ ನಮ್ಮ ಸ್ವದೇಶ ಭಾಷೋಜ್ಜೀವವೆಂದು ಸಂಶ್ಲಾಘಿಸುವೆನು.
೯. ರುಧಿರೋದ್ಗಾರಿ ಸಂ||- ಕರ್ಣಾಟಕ ಸಾಹಿತ್ಯ ಸಮ್ಮೇಳನ ಮಹಾಸಭೆ (ಬಿಜಾಪುರ)
ಪರಿಷತ್ತಿಗೆ ತಿಂಗಳಿಗೊಮ್ಮೆ ತಲೆಗೊಂದು ಕಾಸು ಕೊಡಿ
ಇನ್ನು, ನಮ್ಮ ಈ ಕನ್ನಡನಾಡಿಗರೆಲ್ಲರೂ ತಿಂಗಳಿಗೊಮ್ಮೆ ತಲೆಗೊಂದು ಕಾಸು ಕನ್ನಡಕ್ಕೆ ಎಂದು ಪ್ರತಿ ಕುಟುಂಬದಿಂದಲೂ ದ್ರವ್ಯಸಹಾಯವನ್ನು ಪಡೆದವರಾಗಿ, ಅದನ್ನು ಕರ್ಣಾಟ ಪರಿಷತ್ತಿಗೆ ಮೂಲಧನವಾಗಿ ಬೆಳೆಯಿಸಿಕೊಂಡು ಸದುದ್ದೇಶ ಪಂಚಕವೆಂಬ ಮುಖ ನಾಮಾಂಕಿತವಾಗಿ ಕರ್ಣಾಟ ಪರಿಷತ್ತಿನ ಪ್ರಥಮ ಸಂಪುಟದ ಪ್ರಥಮ ಭಾಗದಲ್ಲಿ ಮುದ್ರಿತವಾಗಿರುವ ನನ್ನ ಪ್ರಾರ್ಥನೋಪನ್ಯಾಸದಂತೆ ಸತ್ಕೃತಿ ಪ್ರಚಾರದಲ್ಲಿ ವಿನಿಯೋಗಿಸುತ್ತ ಬಂದಲ್ಲಿ ಕರ್ಣಾಟ ಭಾಷಾವಿಚಕ್ಷಣರು ಉದಯಿಸಿಬಾರರೇ!
ಉಪಸಂಹಾರ ಭಾಷಣ
ಸರಸಿಗಳಾದ ಸಭ್ಯರೇ! ನಲ್ನುಡಿಗಳನಾದರಿಸುವರಾದ ನಾಡಿಗರೇ! ನಿಮ್ಮೆಲ್ಲರ ಸಮಾವೇಶದ ಬಲದಿಂದ ಕರ್ಣಾಟಕ ಸಾಹಿತ್ಯ ಸಮ್ಮೇಳ ಮಹಾಸಭಾ ಕೃತ್ಯಂಗಳು ಈ ಮೂರುಂ ದಿನಂಗಳಿಂದ ಸುಲಲಿತವಾಗಿ ಸಾಗಿತು. ಚರ್ಚಿಸುವ ವಿಷಯಂಗಳು ಚರಿತಾರ್ಥಂಗಳಾದುವು. ಈ ಮೂರು ದಿನಗಳ ಸಮ್ಮೇಳನವೆಂಬುದೇ ಕರ್ಣಾಟ ಲೋಕದೌತಣದ ಅಡಿಗೆ. ಇದರ ಒಗ್ಗರೆಣೆಯಂತೆ ನನ್ನ ಸಭಾಸಮುಪ ಸಂಹಾರದ ಸೂಕ್ತಿಗಳನಾಲಿಸಿಯೆಲ್ಲರಾನಂದಿಸಬೇಕು. ವರುಷಕ್ಕೊಂದಡಿಗೆಯಟ್ಟು ಕನ್ನಡನಾಡುಗಳಲ್ಲಿರುವ ಅಕ್ಷರಾಸ್ಯರೆಲ್ಲರೂ ಆನಂದಿಸುತ್ತ ಕರ್ಣಾಟ ಸರಸ್ವತಿ ಸರಸಾಲಂಕೃತೆಯಾಗಿ ಸಂತತವೂ ತಾಂಡವವಾಡುತ್ತ ನಮ್ಮ ಕುಟುಂಬಗಳನ್ನು ಸಲಹುತ್ತಿರಬೇಕೆಂಬುದೇ ನಮ್ಮ ಸುದ್ದೇಶವಾಗಿರುವುದು. ಇದರಲ್ಲಿ ಸ್ವಾರ್ಥಪರತೆಯನ್ನು ತೊರೆದು ಪರೋಪಕಾರಪರತೆಯನ್ನೂ, ಲೋಭತ್ವವನ್ನು ಬಿಟ್ಟು ಉದಾರತೆಯನ್ನೂ, ಮೈಗಳ್ಳತನವನೊದೆದು ಶ್ರಮಸಹನವನ್ನೂ, ಡಾಂಭಿಕತ್ವವನ್ನು ತ್ಯಜಿಸಿ ಯಥಾಯೋಗ್ಯವರ್ತನವನ್ನೂ, ದೋಷಗ್ರಹಣವನ್ನು ಧಿಕ್ಕರಿಸಿ ಗುಣಗ್ರಹಣತೆಯನ್ನೂ ಕ್ರಮವಾಗಿ ನಮ್ಮ ಅಭ್ಯಾಸದಲ್ಲಿ ತಂದುಕೊಳ್ಳಬೇಕು. ಕಡೆಗೆ ನಾವೆಲ್ಲರೂ, ‘ನಮ್ಮಲ್ಲಿ ಲೋಪವೆಂಬುದೇನು?’ ಎಂಬುದನ್ನೇ ಲಕ್ಷ್ಯವಿಟ್ಟು ತಿದ್ದಿಕೊಳ್ಳುವ ಸರಳ ಬುದ್ಧಿ ವಿವೇಕದಿಂದಲೇ ನಮ್ಮಲ್ಲಿ ಐಕಮತ್ಯವೂ ಅದರಿಂದ ಭಾಷಾಭಿವೃದ್ಧಿಯೂ ಅದರಿಂದ ದೇಶೋನ್ನತಿಯೂ ನೆಲೆಗೊಳ್ಳುವುದು.
೯ನೇ ಸಮ್ಮೇಳನದಲ್ಲಿ ಮಂಡಿಸಿದ ಉಪನ್ಯಾಸಗಳು:-
ಈ ಮೂರು ದಿನಗಳಲ್ಲಿ ವರ್ಧಿಷ್ಣುಗಳಾಗಿ ವ್ಯಾಸಂಗಗಳನ್ನು ಬರೆದು ತಂದೋದಿದ ಧೀಮಂತರನ್ನು ಉತ್ಸಾಹವಂತರನ್ನಾಗಿಸಲು ಕೆಳಗಣ ಪದ್ಯಂಗಳಿಂದ ಇಂತು ಸಂಶ್ಲಾಘಿಸುವೆನು:-
ಕಂ|| ಲಕ್ಷ್ಮೀ ಕವಿಯ ಕಾಲಿಕ ||
ಸೂಕ್ಷ್ಮಾಂಶ ವಿಚಾರ ವರ್ಣನಂ ಸರಸಮೆನಲ್ ||
ಪಕ್ಷ್ಮಂ ಬಿಟ್ಟುದು ಕನ್ನಡ ||
ಲಕ್ಷ್ಮೀಮಣಿಯಲ್ತೆ ರಾಜಸುಪುರೋಹಿತರಿಂ || ||೧||
ಕನ್ನಡ ನಾಡಿನ ಜನರಿಗೆ ||
ಬಿನ್ನಾಣಂ ಕಲ್ಪದೆಡೆಗೆ ಬಗೆಯೇರಿಸಲೇಂ ||
ಚೆನ್ನೆನೆ ಹಾರನಹಳ್ಳಿಯ ||
ಬಿನ್ನಪದ ವಿಲೇಖನಾರ್ಥನೊಪ್ಪುತ್ತಿರ್ಕುಂ || ||೨||
ಪ್ರತಿಭಾಂಕಿತ ವ್ಯಾಸಂ ||
ಪ್ರತಿಬಿಂಬಿಸುಗುಂ ಬುಧಾಂತರಂಗಂಗಳೊಳೆಂ ||
ದತಿ ಮಮತೆಯಿನೊರವುದುಮೇ ||
ನತಿಶಯಮೇ ರಾಮಚಂದ್ರ ಬೆಳಗಾಂ ಶ್ಲಾಘ್ಯಂ || ||೩||
ನಮಗಾವಶ್ಯಕ ಕಾವ್ಯಾಂ ||
ಕಮೊಂದಿ ಬಂದಿರ್ಪ ನೂತನೀಪನ್ಯಾಸಂ ||
ಸುಮನೋಹರಮೆಂಬುದರಿಂ ||
ದಮಿತಾನಂದಪ್ರದಂ ವಿಜಯಪುರಮೆಂಬೆಂ || ||೪||
ದತ್ತಾತ್ರೇಯಾ ಬೇಂದ್ರೇ ||
ಚಿತ್ತಾಕರ್ಷಣಮನೆಲ್ಲರೊಳ್ಮಾಡಿರ್ಪಂ ||
ದುತ್ತೇಜಕ ಕನ್ನಡ ||
ಕೆತ್ತಾನುಂ ಕುಡದೆ ಗುಣಮೆ ಸಂಗ್ರಹಣೀಯಂ || ||೫||
ಹಳ್ಳಿಯ ಹಾಡುಗಳೆಂಬುದು ||
ನೊಳ್ಳಿತುಪನ್ಯಾಸಮಾಯ್ತು ಜನ ರಂಜನೆಯಿಂ ||
ಬಳ್ಳಿವೊಲೆತ್ತಂ ಪರ್ಬುಗು ||
ಮುಳ್ಳ ತಿರುಳ್ ಚೆನ್ನಮಲ್ಲಪಯ್ಯಾ ಗಲಗಲ್ || ||೬||
ಇನಿವಾತುಗಳಿಂ ಪ್ರಹ್ಲಾ ||
ದನಿರೂಪಿತ ವಿಲೇಖನೋಪನ್ಯಾಸಂ ||
ಜನಮನಮನೆಳೆಯದಿಳುಮೆ ||
ತನಗದಲಿಂಕಾರ ವಿಷಯವೆಂಬುದದೆತ್ತು || ||೭||
ಗೆಳೆಯರ ಸಂಘಂ ಕನ್ನಡ
ಹಳಬಟ್ಟೆಯನುಳಿದು ಪೊಸತು ಹಾದಿಗೆ ಬರ್ಪು ||
ಜ್ಜ್ವಳ ಸರ್ವಜ್ಞನ ಬನ್ನಣೆ ||
ತಿಳಿಯಲ್ ಸಂಗೀತದಂತೆ ಹೃದಯಮಣಿಯಂ || ||೮||
Tag: Kannada Sahitya Sammelana 9, Siddhanthi Shivashankara Shasthri, Siddhanti
೮ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎಂ. ವೆಂಕಟಕೃಷ್ಣಯ್ಯ
ತಾತಯ್ಯ ಎಂದು ಪ್ರಸಿದ್ಧರಾದ ಎಂ. ವೆಂಕಟಕೃಷ್ಣಯ್ಯ ಅವರು ಹೆಗ್ಗಡೆದೇವನಕೋಟೆ ತಾಲ್ಲೂಕಿನ ಮೊಗ್ಗೆ ಗ್ರಾಮದಲ್ಲಿ ೨0-೮-೧೮೪೪ ರಲ್ಲಿ ಸುಬ್ಬಯ್ಯ-ಭಾಗೀರಥಮ್ಮ ದಂಪತಿಗಳಿಗೆ ಪುತ್ರರಾಗಿ ಜನಿಸಿದರು.
ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆ ಆದರು. ಅನಂತರ ಮೈಸೂರಿನಲ್ಲಿ ಮರಿಮಲ್ಲಪ್ಪ ಶಾಲೆಗಳಲ್ಲಿ ಉಪಾಧ್ಯಾಯರಾದರು. ಅನಂತರ ಹಲವಾರು ಶಾಲೆಗಳಲ್ಲಿ ಉಪಾಧ್ಯಾಯರಾಗಿ ಸುಮಾರು ೫0 ವರುಷಗಳವರೆಗೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಅಧ್ಯಾಪಕ ವೃತ್ತಿ ಜತೆಗೆ ಪತ್ರಿಕಾಸೇವೆ ಸಲ್ಲಿಸಿದ ಹಿರಿಮೆ ವೆಂಕಟಕೃಷ್ಣಯ್ಯನವರದು. ಕನ್ನಡದಲ್ಲಿ ಸ್ವತಂತ್ರ ಪತ್ರಿಕೆ ‘ಸಾಧ್ವಿ’ಯನ್ನು ಪ್ರಾರಂಭಿಸಿದ ಇವರು ವೆಲ್ತ್ ಆಫ್ ಮೈಸೂರು, ಮೈಸೂರು ಪೇಟ್ರಿಯಟ್, ನೇಚರ್ಕ್ಯೂರ್, ದಿ ಸಿವಿಕ್ ಅಂಡ್ ಸೋಷಿಯಲ್ ಜರ್ನಲ್ ಮುಂತಾದ ಪತ್ರಿಕೆಗಳನ್ನು ನಡೆಸಿದರು. ಪತ್ರಿಕಾ ಪ್ರಪಂಚದ ಭೀಷ್ಮರೆಂದೆನಿಸಿದರು. ಮೈಸೂರು ಪ್ರಜಾಪ್ರತಿನಿಧಿ ಸರ್ಕಾರದ ಪ್ರತಿನಿಧಿಯಾಗಿಯೂ, ನ್ಯಾಯವಿಧಾಯಕಸಭೆ, ಸಂಪದಭ್ಯುದಯ ಸಭೆ, ಜಿಲ್ಲಾಮಂಡಳಿ, ಪೌರ ಪರಿಷತ್ತು, ಲಿಟರರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ಅನಾಥಾಲಯದ ಸ್ಥಾಪಕರಲ್ಲಿ ಒಬ್ಬರಾಗಿದ್ದರು.
೧೯೨೨ರಲ್ಲಿ ದಾವಣಗೆರೆಯಲ್ಲಿ ನಡೆದ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅಧ್ಯಕ್ಷಪೀಠದಲ್ಲಿ ಶ್ರೀಮನ್ಮಹಾರಾಜರ ಭಾವಚಿತ್ರವಿಟ್ಟು ಅಧ್ಯಕ್ಷ ಕಾರ್ಯನಿರ್ವಹಿಸಿದರು. ಇದು ಅವರ ರಾಜನಿಷ್ಠೆ. ಪರಿಷತ್ತಿನ ಸ್ಥಾಪನೆಯಲ್ಲಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಜನ ಇವರ ಸೇವೆಯನ್ನು ಕಂಡು ತಾತಯ್ಯ, ದಯಾಸಾಗರ, ಪತ್ರಿಕಾ ಪಿತಾಮಹ, ಭೀಷ್ಮಾಚಾರ್ಯ ಎಂದೆಲ್ಲಾ ಪ್ರೀತಿಯಿಂದ ಕರೆದು ಗೌರವಿಸಿದರು.
ಕೃತಿಗಳು: ಚೋರಗ್ರಹಣತಂತ್ರ (ಕಾದಂಬರಿ), ಪರಂತಪವಿಜಯ (ಕಾದಂಬರಿ), ವಿದ್ಯಾಕರಭೂಷಣ ಧನಾರ್ಜನೆಯ ಕ್ರಮ, ಅರ್ಥಸಾಧನ, ಹರಿಶ್ಚಂದ್ರ ಚರಿತೆ, ಆರೋಗ್ಯ ಸಾಧನ ಪ್ರಕಾಶಿಕೆ, ಬೂಕರ್ ಇ ವಾಷಿಂಗ್ಟನ್ ಚರಿತ್ರೆ ಇತ್ಯಾದಿ.
ಸಾಹಿತಿಗಳೂ, ಪತ್ರಿಕಾಕರ್ತರೂ, ಸಾಮಾಜಿಕ ಸೇವಾ ಧುರಂಧರರೂ ಆದ ವೆಂಕಟಕೃಷ್ಣಯ್ಯನವರು ೮-೧೧-೧೯೩೩ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೮,
ಅಧ್ಯಕ್ಷರು, ಎಂ. ವೆಂಕಟಕೃಷ್ಣಯ್ಯ
ದಿನಾಂಕ ೧೨,೧೩ ಮೇ ೧೯೨೨
ಸ್ಥಳ : ದಾವಣಗೆರೆ
ಪರಿಷತ್ತಿನ ಸ್ಥಾಪನೆಯ ಹಿನ್ನೆಲೆ
ದಿವಾನ್ ರಂಗಾಚಾರ್ಯ ಅವರು ವಿದ್ಯಾಶಾಲೆಗಳನ್ನು ಹೆಚ್ಚಿಸಿ, ವಿದ್ಯಾವೇತನಗಳನ್ನು ಕಲ್ಪಿಸಿ, ವಿದ್ಯಾಭ್ಯಾಸದ ಇಲಾಖೆಯನ್ನು ಕ್ರಮಪಡಿಸಿದರು; ಶ್ರೀಚಾಮರಾಜೇಂದ್ರ ಸಂಸ್ಕೃತ ಮಹಾಪಾಠಶಾಲೆಯನ್ನು ಏರ್ಪಡಿಸಿ, ಅಲ್ಲಿಯ ವಿದ್ಯಾರ್ಥಿಗಳಿಗೂ ಪಂಡಿತರಿಗೂ ಪಾರಿತೋಷಕಗಳನ್ನು ಹಂಚುವ ವಾರ್ಷಿಕೋತ್ಸವಕ್ಕೆ ಸ್ವಯಂ ಶ್ರೀಮನ್ಮಹಾರಾಜರವರೇ ಬರುವಂತೆ ಮಾಡಿದರು. ಇದೇ ಸಮಯದಲ್ಲಿ ಕರ್ಣಾಟಕ ಭಾಷೋಜ್ಜೀವಿನೀ ಸಭೆಯು ಪ್ರಾರಂಭವಾಗಿ ಕರ್ಣಾಟಕ ಪ್ರೌಢವಿದ್ಯಾಶಾಲೆಯೆಂದು ಏರ್ಪಾಡಾಯಿತು. ಅದಕ್ಕೆ ರಾಜಕಾರ್ಯ ಪ್ರಸಕ್ತ ರಾವ್ ಬಹದ್ದೂರ್ ಎಂ. ಶ್ಯಾಮರಾಯರು ಕಾರ್ಯದರ್ಶಿಯಾಗಿದ್ದರು. ಆ ಸಂಸ್ಥೆಯು ಕನ್ನಡ ಲೇಖಕರಿಗೆ ಪ್ರಾಶಸ್ತ್ಯವನ್ನುಂಟುಮಾಡಿಕೊಟ್ಟಿತು. ಗರಳಪುರಿ ಶಾಸ್ತ್ರಿಗಳು, ಬಸಪ್ಪಶಾಸ್ತ್ರಿಗಳು, ಸಿದ್ಧಲಿಂಗಪ್ಪನವರು, ಕರಿಬಸಪ್ಪ ಶಾಸ್ತ್ರಿಗಳು, ಮಲ್ಲಪ್ಪನವರು, ಜಯರಾಯಾಚಾರ್ಯರು – ಈ ಮೊದಲಾದವರು ಉತ್ತಮಗಳಾದ ಕಾವ್ಯ ನಾಟಕಗಳನ್ನು ಬರೆದು ಪ್ರಸಿದ್ಧರಾದರು. ಇವರೆಲ್ಲರೂ ಅಳಿಯ ಲಿಂಗರಾಜ ಅರಸಿನವರಿಂದ ಪ್ರೋತ್ಸಾಹ ಪಡೆಯುತ್ತಿದ್ದರು.
ಈ ರೀತಿಯಲ್ಲಿ ಶ್ರೀಚಾಮರಾಜೇಂದ್ರ ಒಡೆಯರವರು ಕರ್ಣಾಟಕ ಭಾಷೆಗೆ ಕೊಟ್ಟ ಪೋಷಣೆಯು ಈಗ ನಮ್ಮನಾಳುತ್ತಿರುವ ಶ್ರೀಮನ್ಮಹಾರಾಜರು ನಾಲ್ಮಡಿ ಕೃಷ್ಣರಾಜೇಂದ್ರ ಒಡೆಯರವರ ಪ್ರಭುತ್ವದಲ್ಲಿ ವೃದ್ಧಿಹೊಂದಿದೆ. ಅವರ ಪ್ರೇರಣೆಯಂತೆ ಏರ್ಪಟ್ಟ ‘ಎಕನಾಮಿಕ್ಸ್ ಕಾನ್ಪರೆನ್ಸ್’ (Economic Conference) ಎಂಬ ಸಂಪದಭಿವೃದ್ಧಿ ಸಮಾಜದಿಂದ ದಿವಾನ್ ಸರ್.ಎಂ. ವಿಶ್ವೇಶ್ವರಯ್ಯನವರು ಈ ನಮ್ಮ ಕರ್ಣಾಟಕ ಸಾಹಿತ್ಯ ಪರಿಷತ್ತನ್ನು ಏರ್ಪಾಡು ಮಾಡಿಸಿದರು. ಇದಕ್ಕೆ ಶ್ರೀಮನ್ಮಹಾರಾಜರವರ ಸರಕಾರದವರು ಸಾವಿರಾರು ರೂಪಾಯಿಗಳ ಸಹಾಯ ದ್ರವ್ಯವನ್ನು ವರ್ಷವರ್ಷವೂ ಕೊಡುತ್ತಬಂದಿರುವುದಲ್ಲದೆ ಇತರ ವಿಧದಲ್ಲಿಯೂ ಬಹುವಾಗಿ ಸಹಾಯ ಮಾಡಿರುವರು. ಇದಕ್ಕಾಗಿ ಸಮಸ್ತ ಕರ್ಣಾಟಕಾಭಿಮಾನಿಗಳೂ ಶ್ರೀಮನ್ಮಹಾರಾಜರವರಿಗೂ ಅವರ ಸರಕಾರಕ್ಕೂ ಬಹಳ ಕೃತಜ್ಞರಾಗಿರುವರು.
ಪ್ರತಿ ಗ್ರ್ರಾಮದಲ್ಲಿಯೂ ಪರಿಷತ್ತಿನ ಶಾಖೆ ಇರಲಿ
ದೇಶಭಾಷೆಯನ್ನು ಪ್ರಬಲಗೊಳಿಸಬೇಕೆಂಬ ಆಸೆಯು ನಮ್ಮ ಮಹಾರಾಜರವರಿಗೆ ಸಂಪೂರ್ಣವಾಗಿರುವುದು. ಅದು ಅವರ ಹುಕುಮುಗಳಲ್ಲಿಯೂ ಅವರ ಕಾರ್ಯಗಳಲ್ಲಿಯೂ ಚೆನ್ನಾಗಿ ಕಾಣಬರುತ್ತದೆ. ಆದರೆ ಪ್ರಜೆಗಳ ಸಹಾಯವಿಲ್ಲದೆ ಅವರು ಯಾವ ಕೆಲಸ ಮಾಡುವುದಕ್ಕೂ ಸಾಧ್ಯವಿಲ್ಲ. ಈ ಭಾಷೋಜ್ಜೀವನ ಕಾರ್ಯಕ್ಕೆ ಪ್ರಜಾಸಹಾಯ ಅತ್ಯಂತಾವಶ್ಯಕವು. ಆದಕಾರಣ ಪ್ರತಿಯೊಬ್ಬ ಕನ್ನಡಿಗನೂ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಸದಸ್ಯನಾಗಿ ಸೇರಬೇಕು. ಅದು ಸಾಧ್ಯವಾಗದಿದ್ದರೆ ಪರಿಷತ್ಪತ್ರಿಕೆಗೆ ಚಂದಾದಾರನಾದರೂ ಆಗಬೇಕು. ಐದು ಸಾವಿರ ಮಂದಿ ಚಂದಾದಾರರು ದೊರೆತರೆ ಎಷ್ಟೋ ಕೆಲಸ ಮಾಡಬಹುದು. ಪ್ರತಿಯೊಂದು ಗ್ರಾಮದಲ್ಲಿಯೂ ನಮ್ಮ ಪರಿಷತ್ತಿನ ಶಾಖೆಯೊಂದಿರಬೇಕು. ಅದಕ್ಕೆ ನಮ್ಮ ಮ|| ರಾ|| ಶ್ರೀ ಬೆಳ್ಳಾವೆ ವೆಂಕಟನಾರಾಯಣಪ್ಪನವರಂತಹ ಉತ್ಸಾಹ ಶಾಲಿಗಳೂ ಕರ್ತವ್ಯನಿಷ್ಠರೂ ಆದ ಕಾರ್ಯದರ್ಶಿಯೊಬ್ಬರಿರಬೇಕು. ಹೀಗಾದರೆ ಭಾಷಾಕಾರ್ಯವು ದೇಶದಲ್ಲೆಲ್ಲ್ಲ ಸಾಂಗವಾಗಿ ನಡೆದು ನಮ್ಮ ಉದ್ದೇಶಗಳು ಬೇಗ ನೆರವೇರುವುವು.
Tag: Kannada Sahitya Sammelana 8, M. Venkatakrishnaiah
೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕೆ.ಪಿ. ಪುಟ್ಟಣ್ಣಶೆಟ್ಟಿ
ಬೆಂಗಳೂರಿನ ಸುಧಾರಕರಲ್ಲಿ ಒಬ್ಬರಾಗಿ ಸಮಾಜಸೇವಕರಾದ ಕೆ.ಪಿ. ಪುಟ್ಟಣ್ಣಶೆಟ್ಟಿ ಅವರು ೨೯-೪-೧೮೫೬ರಲ್ಲಿ ಬೆಂಗಳೂರಿನ ಕೃಷ್ಣರಾಜಪುರದಲ್ಲಿ ಜನಿಸಿದರು. ಎಲ್ಲರಂತೆ ಸಾಮಾನ್ಯ ಶಿಕ್ಷಣ ಪಡೆದವರು ಶ್ರಮಜೀವಿಗಳಾಗಿ ಜ್ಞಾನದಾಹಿಗಳಾಗಿ ಶಿಕ್ಷಣ ಪೂರೈಸಿದರು.
೧೮೭೬ರಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಮೈಸೂರು ಸರ್ಕಾರದಲ್ಲಿ ಉದ್ಯೋಗಾರಂಭ ಮಾಡಿದ ಇವರು ೧೮೯೮ರಲ್ಲಿ ಡೆಪ್ಯುಟಿ ಕಮೀಷನರ್ ಆದರು. ೧೯೧೧ರಲ್ಲಿ ಕೌನ್ಸಿಲರ ಪ್ರಥಮ ಸದಸ್ಯರಾದರು.
೧೯೧೨ರಲ್ಲಿ ನಿವೃತ್ತರಾದ ಮೇಲೆ ಮೈಸೂರು ಬ್ಯಾಂಕಿನ ಅಧ್ಯಕ್ಷರಾದರು. ೧೯೧೫ರಿಂದ ೧೯೨೨ರವರೆಗೆ ಬೆಂಗಳೂರು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷಗಿರಿ ಹೊಂದಿದ ಇವರು ೧೯೨೭ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾದರು. ಬೆಂಗಳೂರು ವೀರಶೈವ ವಿದ್ಯಾನಿಲಯವನ್ನು ೧೯೩೮ರಲ್ಲಿ ಸ್ಥಾಪಿಸಿದರು. ಅನೇಕ ಧರ್ಮಸಂಸ್ಥೆಗಳಿಗೆ ನ್ಯಾಯಪಾಲಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಧನಸಹಾಯ ಮಾಡಿದ ಇವರು ೧೯೩೬ರಲ್ಲಿ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿದ್ದರು. ಪರಿಷತ್ತಿನ ಸ್ಥಾಪನೆ ಕಾರ್ಯದಲ್ಲಿ ಭಾಗವಹಿಸಿದರು. ೧೯೩೬ರಲ್ಲಿ ವಿಜಯನಗರ ಸ್ಮಾರಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ೧೯೧೫ರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.
ಮೈಸೂರು ಮಹಾರಾಜರಿಂದ ೧೯೧೧ರಲ್ಲಿ ರಾಜಸಭಾಭೂಷಣ, ಭಾರತ ಸರ್ಕಾರದಿಂದ ದಿವಾನ್, ರಾವ್ ಬಹಾದೂರ್ ಪ್ರಶಸ್ತಿಯೂ ದೊರಕಿತು. ೧೯೨೫ರಲ್ಲಿ ಸಿ.ಐ.ಇ. ಸನ್ಮಾನ, ೧೯೨೫ರಲ್ಲಿ ಸರ್ ಪ್ರಶಸ್ತಿ, ೧೯೧೪ರಲ್ಲಿ ಕೈಸರ್-ಇ-ಹಿಂದ್ ಪದಕವು ಇವರಿಗೆ ಲಭ್ಯವಾಯಿತು.
ಚಿಕ್ಕಮಗಳೂರಿನ ೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾದ ಇವರು ೨೩-೭-೧೯೩೮ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೭,
ಅಧ್ಯಕ್ಷರು, ಕೆ.ಪಿ. ಪುಟ್ಟಣ್ಣಶೆಟ್ಟರು
ದಿನಾಂಕ ೧೯,೨0,೨೧ ಮೇ ೧೯೨೧,
ಸ್ಥಳ : ಚಿಕ್ಕಮಗಳೂರು
ಈ ಸಂಬಂಧದಲ್ಲಿ ಒಂದು ವಿಷಯವನ್ನು ಅರಿಕೆ ಮಾಡುವೆನು. ಕನ್ನಡ ನಾಡಿನ ಚರಿತ್ರೆಯು ಪತ್ರಿಕೆಗಳಲ್ಲಿಯೂ ಸರ್ಕಾರದ ಶಾಸನ ಇಲಾಖೆಯಿಂದ ಹೊರಡುವ ವಾರ್ಷಿಕ ವರದಿಗಳಲ್ಲಿಯೂ ಇಲ್ಲಷ್ಟು ಅಲ್ಲಷ್ಟು ತುಂಡುತುಂಡಾಗಿ ಇಂಗ್ಲಿಷು ಭಾಷೆಯಲ್ಲಿ ದೊರೆಯುವುದೇ ವಿನಾ ಮೊದಲಿನಿಂದ ಈಗಿನವರಿಗೆ ಪಾಙ್ಕ್ತವಾಗಿಯೂ ಜೋಡಣೆಯಾಗಿಯೂ ಬರೆದಿರುವ ಪುಸ್ತಕವೇ ಇಲ್ಲವೆಂದು ಹೇಳಬಹುದು. ಚರಿತ್ರೆಯನ್ನು ಬರೆಯುವುದಕ್ಕೆ ಈಚೆಗೆ ಬೇಕಾದಷ್ಟು ಸಾಮಗ್ರಿಗಳು ದೊರೆತಿವೆ. ಅವುಗಳನ್ನು ಸರಿಯಾಗಿ ಉಪಯೋಗಿಸಿ ವಿಷಯಕ್ಕನುರೂಪವಾದ ಶೈಲಿಯಲ್ಲಿ ನೂಲುವ ಐತಿಹಾಸಿಕರು ಬೇಕು. ಅಂತಹ ಪುಸ್ತಕಗಳು ವಿದ್ಯಾರ್ಥಿಗಳಿಗೂ ಇತರರಿಗೂ ಉಪಯೋಗವಾಗಿ ಅವರ ಕಣ್ಣುಗಳನ್ನು ತೆರೆಯಿಸುವುದರಲ್ಲಿ ಯಾವ ಸಂಶಯವೂ ಇರಲಾರದು. ಅನೇಕ ಐತಿಹಾಸಿಕ ನಾಟಕಗಳ ಕಥಾ ಶರೀರಕ್ಕೆ ಉಪಯೋಗವಾಗುವ ವಿಷಯಗಳು ನಮ್ಮ ದೇಶ ಚರಿತ್ರೆಯಲ್ಲಿ ದೊರೆಯುವುದೆಂಬುದು ನನ್ನ ನಂಬಿಕೆಯು. ಕರ್ಣಾಟಕ ಸಾಹಿತ್ಯ ಪರಿಷತ್ತು ಇಂತಹ ಕರ್ಣಾಟ ದೇಶದ ಚರಿತ್ರೆಯನ್ನು ಬರೆಯಿಸಿದರೆ ಒಟ್ಟು ಕನ್ನಡ ನಾಡಿಗೇ ಮಹೋಪಕಾರವನ್ನು ಮಾಡಿದಂತಾಗುವುದು.
ಜನರಲ್ಲಿ ಭಾಷಾವಿಷಯವಾಗಿ ಜಾಗ್ರತಿಯನ್ನುಂಟುಮಾಡುವ ಪರಿ ಏನು? ಕನ್ನಡ ನುಡಿಯನ್ನೂ ಕರ್ಣಾಟಕ ವಾಙ್ಮಯವನ್ನೂ ವೃದ್ಧಿಗೊಳಿಸುವುದಕ್ಕಾಗಲ್ಲವೆ ಕರ್ಣಾಟಕ ಸಾಹಿತ್ಯ ಪರಿಷತ್ತು ಕೆಲವು ವರ್ಷಗಳ ಹಿಂದೆ ಸ್ಥಾಪಿತವಾದುದು! ಕನ್ನಡಿಗರು ಇನ್ನೂ ಚೆನ್ನಾಗಿ ಕಣ್ಣು ತೆರೆದಿಲ್ಲವೆಂಬುದಕ್ಕೆ ಈ ಪರಿಷತ್ತಿನ ಸದಸ್ಯರುಗಳ ಪಟ್ಟಿಯೇ ದೃಷ್ಟಾಂತವು. ನಾವು ಬೆಳೆಯಿಸಿದ ಗಿಡಕ್ಕೆ ನಾವೇ ನೀರೆರೆಯದೆ ಗಿಡ ಬಾಡಿದರೆ ತಪ್ಪು ಯಾರದು? ನಮ್ಮದೋ ಗಿಡದ್ದೋ? ಪರಿಷತ್ತಿನ ಉದ್ದೇಶವು ನೆರವೇರಬೇಕಾದರೆ ಅದರ ಸದಸ್ಯರ ಪಟ್ಟಿಯು ಬೆಳಯುತ್ತಾ ಬರಬೇಕು.
ಒಂದೊಂದು ಊರಿನಲ್ಲಿಯೂ ಕರ್ಣಾಟಕ ಭಾಷಾ ಸೇವಾಸಂಘಗಳು ಏರ್ಪಡಬೇಕು; ಅವೆಲ್ಲವೂ ಈ ಸಂಸ್ಥೆಗೆ ಶಾಖೆಗಳಾಗಬೇಕು. ಸಾಮಾನ್ಯವಾಗಿ ಪ್ರತಿಯೊಂದು ಊರಿನಲ್ಲಿಯೂ ಒಂದು ಪಾಠಶಾಲೆ ಇರುವುದಷ್ಟೇ. ಅದಕ್ಕೆ ಸೇರಿದ ಉಪಾಧ್ಯಾಯರೂ ವಿದ್ಯಾರ್ಥಿಗಳೂ ಕೂಡಿ ಇಂತಹ ಸಂಘಗಳನ್ನು ಸ್ಥಾಪಿಸಬಹುದು. ಈ ಸಂದರ್ಭದಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ‘’ಸೆಂಟ್ರ್ರಲ್ ಕಾಲೇಜಿನ ಕರ್ಣಾಟಕ ಸಂಘ” ವೆಂಬ ನಾಮಧೇಯವುಳ್ಳ ಒಂದು ಸಂಘವನ್ನು ಏರ್ಪಡಿಸಿ ಒಂದು ಕನ್ನಡ ಪತ್ರಿಕೆಯನ್ನು ಹೊರಡಿಸುತ್ತಿರುವುದು ಕನ್ನಡ ನುಡಿಯ ಏಳಿಗೆಗೆ ಶುಭ ಸೂಚಕವಾಗಿರುವುದೆಂದು ತಮಗೆ ತಿಳಿಸಲು ನನಗೆ ಬಹಳ ಸಂತೋಷವು. ಇಂತಹ ಸಂಘವೊಂದು ಪ್ರತಿಯೊಂದು ಹೈಸ್ಕೂಲಿಗೂ ಬೇಕು. ಅದನ್ನು ಏರ್ಪಡಿಸುವುದು ಸುಲಭವೆಂದು ನನ್ನ ಬುದ್ಧಿಗೆ ತೋರುತ್ತದೆ. ಈ ಸಂಘಗಳ ಸದಸ್ಯರುಗಳು ಆಗಾಗ ಸೇರಿ ದೇಶಭಾಷಾಭಿವೃದ್ಧಿಯ ಮತ್ತು ದೇಶೋನ್ನತಿಯ ಸಾಧನಗಳ ವಿಷಯವಾಗಿ ಕನ್ನಡದಲ್ಲಿ ಚರ್ಚಿಸಬೇಕು. ಈ ಚರ್ಚೆಗಳನ್ನು ನೋಡುವುದಕ್ಕೂ ಅವುಗಳಲ್ಲಿ ಭಾಗಿಗಳಾಗುವುದಕ್ಕೂ ಸದಸ್ಯರಲ್ಲದ ಇತರರನ್ನೂ ಕರೆಯಬೇಕು. ನಾಲ್ಕೈದು ಸಂಘವತ್ಸರಗಳು ಈ ರೀತಿ ನಡೆಯುವುದರೊಳಗೆ ಫಲವು ವ್ಯಕ್ತವಾಗುವುದಕ್ಕೆ ಪ್ರಾರಂಭವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
Tag: Kannada Sahitya Sammelana 7, K.P. Puttannachetty, K.P. Puttanna shetty, K.P. Puttannashetty
೬ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ರೊದ್ದ ಶ್ರೀನಿವಾಸರಾಯರು
ಕರ್ನಾಟಕದ ಪಿತಾಮಹರೆನಿಸಿದ, ಪರೋಪಕಾರಿ ರೊದ್ದ ಶ್ರೀನಿವಾಸರಾಯರು ಧಾರವಾಡದ ಮರಿಹಾಳದಲ್ಲಿ ೧೭-೯-೧೮೫0ರಲ್ಲಿ ಜನಿಸಿದರು. ತಂದೆ ಕೋನೇರಿರಾಯ, ತಾಯಿ ಸುಬ್ಬಮ್ಮ. ಮುದಿಹಾಳ, ಹುಬ್ಬಳ್ಳಿ, ಬೆಳಗಾವಿ, ಪುಣೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ ಇವರು ಕಷ್ಟಪಟ್ಟು ಓದಿದರು.
೧೮೭೨ರಲ್ಲಿ ಕಾರವಾರದಲ್ಲಿ ಪ್ರೌಢಶಾಲೆ ಶಿಕ್ಷಕರಾಗಿ, ನಂತರ ಧಾರವಾಡದಲ್ಲಿ ಶಿಕ್ಷಣಾಧಿಕಾರಿಯಾಗಿ ಕೊನೆಗೆ ಧಾರವಾಡದ ಟ್ರೈನಿಂಗ್ ಕಾಲೇಜಿನ ಪ್ರಿನ್ಸಿಪಾಲರಾಗಿ ಸೇವೆಗೈದು ೧೯0೮ರಲ್ಲಿ ನಿವೃತ್ತರಾದರು.
ಬಡವಿದ್ಯಾರ್ಥಿಗಳ ಹಿತೈಷಿಗಳಾದ ಇವರು ವಿದ್ಯಾರ್ಥಿಗಳ ಸಲುವಾಗಿ ನಾನಾ ಬಗೆಯ ಫಂಡುಗಳನ್ನು ವ್ಯವಸ್ಥೆ ಮಾಡಿದರು. ಧಾರವಾಡದ ಹೆಣ್ಣುಮಕ್ಕಳ ಶಿಕ್ಷಣ ವಿದ್ಯಾಲಯ, ಕರ್ನಾಟಕ ಹೈಸ್ಕೂಲ್ ಮೊದಲಾದ ಸಂಸ್ಥೆಗಳನ್ನು ಸ್ಥಾಪಿಸಿದರು. ೧೯೧೯ರಲ್ಲಿ ಕರ್ನಾಟಕ ಎಜುಕೇಷನ್ ಬೋರ್ಡ್ ಸ್ಥಾಪಿಸಿದರು. ಮುಂಬಯಿ ಲೆಜಿಸ್ಲಿಟಿವ್ ಕೌನ್ಸಿಲ್ ಸದಸ್ಯರಾಗಿದ್ದು ಇವರು ಧಾರವಾಡದ ನಗರಸಭೆಯ ಅಧ್ಯಕ್ಷರೂ ಆಗಿದ್ದರು.
ರೊದ್ದ ಅವರು ಸಮಾಜಕ್ಕಾಗಿ ಶಿಕ್ಷಣಕ್ಕಾಗಿ ಮಾಡಿದ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ೧೯0೯ರಲ್ಲಿ ರಾವ್ ಬಹದ್ದೂರ್ ಬಿರುದನ್ನು, ಸಾರ್ವಜನಿಕ ಸೇವೆಗಾಗಿ ೧೯೨೩ರಲ್ಲಿ ದಿವಾನ್ ಬಹದ್ದೂರ್ ಬಿರುದನ್ನು ನೀಡಿತು. ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಇವರು ಕರ್ಣಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿದ್ದರು.
ಇವರು ರಚಿಸಿದ ಕೃತಿಗಳು: ೧. ನಂದಿನಿ (ಬುದ್ಧನ ಚರಿತ್ರೆ) ೨. ಸ್ತ್ರೀ ಶಿಕ್ಷಣದ ಆವಶ್ಯಕತೆ
ಪರಿಷತ್ತಿನ ಆರಂಭಕಾಲದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ೪-೮-೧೯೨೯ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೬,
ಅಧ್ಯಕ್ಷರು, ರೊದ್ದ ಶ್ರೀನಿವಾಸರಾಯರು
ದಿನಾಂಕ ೨0, ೨೧ ಜೂನ್ ೧೯೨0
ಸ್ಥಳ : ಹೊಸಪೇಟೆ
ಪರಿಷತ್ತಿನ ಸ್ಥಾಪನೆಗೆ ಕಾರಣ
ಧಾರವಾಡದಲ್ಲಿ ಕರ್ಣಾಟಕ ವಿದ್ಯಾವರ್ಧಕ ಸಂಘವು ಸ್ಥಾಪಿತವಾಗಿ ಪ್ರಾಚೀನ ಕನ್ನಡ ವಾಙ್ಮಯದ ಅಭ್ಯಾಸಕ್ಕೂ ನೂತನ ವಾಙ್ಮಯದ ನಿರ್ಮಾಣಕ್ಕೂ ಅವಸರ ದೊರೆಯಲು ಮಾರ್ಗವಾಯಿತು. ಮೈಸೂರು ಶ್ರೀಮನ್ಮಹಾರಾಜರವರ ಸರಕಾರದವರೂ ಇತ್ತ ಮುಂಬಯಿ ಸರಕಾರದವರೂ ನಮ್ಮ ಸಂಘದ ಮಾಹಿತಿಯನ್ನು ಕೃಪಾಪೂರ್ವಕ ಒಪ್ಪಿಕೊಂಡು ಅದಕ್ಕೆ ಪ್ರತಿಯೊಂದು ಬಗೆಯ ಸಹಾಯವನ್ನೂ ಮಾಡಲು ಸಿದ್ಧರಾದರು. ಮೈಸೂರು ಸರಕಾರದ ವಿಶೇಷಾನುಗ್ರಹದಿಂದ ಅಲ್ಲಿಯ ಕನ್ನಡ ವಾಙ್ಮಯ ಪಂಡಿತರಿಬ್ಬರು ವಿದ್ಯಾವರ್ಧಕ ಸಂಘದ ವಾರ್ಷಿಕ ಪರೀಕ್ಷೆ ಹಾಗೂ ಇನಾಮಿನ ಸಮಾರಂಭಗಳಿಗಾಗಿ ಪ್ರತಿವರ್ಷ ಬರಹತ್ತಿದ್ದೇ ಮೈಸೂರು ಮತ್ತು ಮುಂಬಯಿ ಕರ್ಣಾಟಕಗಳನ್ನು ಭಾಷೆಯ ದೃಷ್ಟಿಯಿಂದ ಒಂದುಗೂಡಿಸುವ ಪ್ರಚಂಡ ಕಾರ್ಯದ ಮಂಗಳಾಚರಣರೂಪವಾದ ಮಂಗಳಮೂರ್ತಿಯ ಪೂಜನವೆಂದು ಹೇಳಲು ಅಡ್ಡಿಯಿಲ್ಲ. ಮೈಸೂರು, ಮುಂಬಯಿ, ಕರ್ಣಾಟಕಗಳ ಈ ಸಂಘಟನವು ವಿಶೇಷ ದೃಢಮೂಲವಾಗುವಂತೆ ಪರಸ್ಪರ ಬಳಕೆಯೂ ಪರಿಚಯವೂ ಬೆಳೆಯಲು ಅನುಕೂಲವಾಗಬೇಕೆಂದು ಕರ್ಣಾಟಕ ವಿದ್ಯಾವರ್ಧಕ ಸಂಘದ ಪರೀಕ್ಷೆಗಳ ಜತೆಗೆ ಕನ್ನಡ ಗ್ರಂಥಕಾರರ ಸಮ್ಮೇಳನವೆಂಬ ಕೂಟವೊಂದು ೧೯0೭ನೇ ವರ್ಷ ಉಪಕ್ರಮವಾಯಿತು. ಕರ್ಣಾಟಕ ವಾಙ್ಮಯದ ನಿಸ್ಸೀಮ ಭಕ್ತರೂ ಪ್ರಖ್ಯಾತ ಪಂಡಿತರೂ ಆದ ಗತಿಸಿದ ಶ್ರೀಮಾನ್ ಎಸ್.ಜಿ. ನರಸಿಂಹಾಚಾರ್ಯರವರ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನವು ಎರಡು ವರ್ಷಕೂಡಿತ್ತು. ಮುಂದೆ ಇದೇ ಕಾರ್ಯವು ಕರ್ಣಾಟಕದ ಎಲ್ಲ ಭಾಗಗಳ ಜನರ ಸಂಯುಕ್ತ ಪ್ರಯತ್ನದಿಂದ ಸುಸಂಘಟಿತವಾಗಿ ಸಾಗುವಂತಾಗಬೇಕೆಂದು ೧೯೧೫ರಲ್ಲಿ ಬೆಂಗಳೂರಿನಲ್ಲಿ ಮೊದಲನೆಯ ಕರ್ಣಾಟಕ ಸಾಹಿತ್ಯ ಸಮ್ಮೇಳನವು ಕೂಡಿ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಪ್ರಾಚೀನ ಮತ್ತು ಅರ್ವಾಚೀನ ಕನ್ನಡ ವಾಙ್ಮಯದ ಅಭಿವೃದ್ಧಿಗಾಗಿ ನಡೆದಿರುವ ಪ್ರಯತ್ನಗಳೆಲ್ಲ ಎಲ್ಲರಿಗೂ ತಿಳಿದ ವಿಷಯವೇ ಆಗಿರುವುದು.
Tag: Kannada Sahitya Sammelana 6, Rodda Srinivasa Rao
೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕರ್ಪೂರ ಶ್ರೀನಿವಾಸರಾವ್
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ಕಾರ್ಯದಲ್ಲಿ ಸಕ್ರಿಯವಾಗಿ ದುಡಿದವರಲ್ಲಿ ಕರ್ಪೂರ ಶ್ರೀನಿವಾಸರಾಯರು ಪ್ರಮುಖರಾಗಿದ್ದಾರೆ. ಪರಿಷತ್ತಿಗೆ ಸ್ವಂತ ಕಟ್ಟಡವನ್ನು ದೊರಕಿಸುವಲ್ಲಿ ಅವರ ಪಾತ್ರ ಅಮೋಘವಾದುದು.
ಕರ್ಪೂರ ಸುಬ್ಬರಾಯರ ದ್ವಿತೀಯ ಪುತ್ರರಾದ ಕರ್ಪೂರ ಶ್ರೀನಿವಾಸರಾಯರು ೧೮೬೩ರಲ್ಲಿ ಜನಿಸಿದರು. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವಾಗ ಇವರ ಮನೆತನದ ಹಿರಿಯರು ಬೆಟ್ಟದಡಿಯಿಂದ ಬೆಟ್ಟದ ತುದಿಯವರೆಗೆ ಕರ್ಪೂರ ಉರಿಸಿದ್ದರಿಂದ ಇವರ ಮನೆತನಕ್ಕೆ ಕರ್ಪೂರದವರು ಎಂದು ಹೆಸರಾಯಿತು.
ಬಡತನದ ಕುಟುಂಬದಲ್ಲಿ ಜನಿಸಿದ ಇವರು ನೌಕರಿಗಾಗಿ ಪೂನಾದಲ್ಲಿ ಪ್ರಯತ್ನಿಸುತ್ತಿದ್ದಾಗ ವಕೀಲರೊಬ್ಬರು ಕೊಡಿಸಿದ ವಿದ್ಯಾರ್ಥಿವೇತನದಿಂದ ವಿದ್ಯಾಭ್ಯಾಸ ಮುಂದುವರೆಸಿದರು. ಬಿ.ಎಸ್.ಸಿ ಮತ್ತು ಎಲ್.ಸಿ.ಇ. ಪದವಿಗಳನ್ನು ಗಳಿಸಿ ಬೊಂಬಾಯಿಯಲ್ಲಿ ಇಂಜಿನಿಯರ್ ಆಗಿ ನೇಮಕಗೊಂಡ ಇವರು ರಿಲೀಫ್ ಇಂಜಿನಿಯರ್ ಆಗಿ ನಿವೃತ್ತರಾದರು. ಅನಂತರ ಮೈಸೂರು ಸರ್ಕಾರದ ಪ್ರಧಾನ ಇಂಜಿನಿಯರ್ ಆಗಿ ನೇಮಕಗೊಂಡರು.
೧೯೧೫ರಲ್ಲಿ ಪರಿಷತ್ತು ಪ್ರಾರಂಭವಾದಾಗ ೫00 ರೂ. ಕೊಟ್ಟ ಪ್ರಥಮ ಪೋಷಕರು ಶ್ರೀನಿವಾಸರಾಯರು, ೧೩ ವರ್ಷಗಳ ಕಾಲ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿಯೇ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಶಂಕುಸ್ಥಾಪನೆ ಆದುದು. ಇವರೇ ನಿರ್ಮಾಣದ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಇವರು ಕೃಷ್ಣರಾಜ ಜಲಾಶಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕರ್ಪೂರ ಶ್ರೀನಿವಾಸರ ಸೇವೆಯನ್ನು ಪರಿಗಣಿಸಿ ಮಹಾರಾಜರು ರಾಜಸಭಾಭೂಷಣ ಎಂಬ ಬಿರುದನ್ನು ಇತ್ತರು. ಮೈಸೂರು ಸಂಸ್ಥಾನದ ಪ್ರಥಮ ಕಾರ್ಯಕಾರಿ ಮಂಡಲಿಯ ಚುನಾಯಿತ ಸದಸ್ಯರಾಗಿದ್ದರು.
ಶ್ರೀನಿವಾಸರಾಯರು ಬರೆದ ಕೃತಿಗಳು ಹಲವಾರು:
೧. ಸಾಹಿತ್ಯ ಶಾಸ್ತ್ರ (ಲೇಖನಗಳು) ೨. ವಿದ್ಯಾಕರಭೂಷಣ ೩. ಧನಾರ್ಜನೆಯ ಕ್ರಮ ೪. ಅರ್ಥಸಾಧನೆ ೫. ಹರಿಶ್ಚಂದ್ರ ಚರಿತ್ರೆ ೬. ದೇಶಾಭಿಮಾನ ೭. ಸಾಧನೆ ಪ್ರಕಾಶಿಕೆ ಇತ್ಯಾದಿ
ಇಂಗ್ಲಿಷ್, ಕನ್ನಡ ಮರಾಠಿ ಭಾಷೆಗಳಲ್ಲಿ ಪರಿಶ್ರಮ ಹೊಂದಿದ ಇವರು ಸುಭೋಧ ರಾಮರಾಯರ ಗ್ರಂಥಮಾಲೆಗೆ ವಿಶೇಷ ಪ್ರೋತ್ಸಾಹವಿತ್ತರು. ೮-೧೧-೧೯೩೩ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೫
ಅಧ್ಯಕ್ಷರು: ಕರ್ಪೂರ ಶ್ರೀನಿವಾಸರಾಯರು
ದಿನಾಂಕ ೬, ೭, ೮ ಮೇ ೧೯೧೯
ಸ್ಥಳ : ಹಾಸನ
ಈ ಸಮ್ಮೇಳನದ ಸ್ವಾಗತ ಮಂಡಲಿಯ ಅಧ್ಯಕ್ಷರಾದ ಹಾಸನದ ಡಿಸ್ಟ್ರಿಕ್ಟು ಡೆಪ್ಯುಟಿ ಕಮಿಷನರ್ ಮ|| ರಾ|| ಸಿ. ವೆಂಕಟರಾಯರವರ ಪರವಾಗಿ ಮ|| ರಾ|| ಅಡ್ವೊಕೇಟ್ ರಾಮಸ್ವಾಮಯ್ಯನವರು ತಮ್ಮನ್ನು ಸ್ವಾಗತಾಭಿನಂದನಗಳಿಂದ ಈ ನಗರಕ್ಕೆ ಬರಮಾಡಿಕೊಂಡು ಈಗ ತಾನೆ ಈ ಡಿಸ್ಟ್ರಿಕ್ಟಿನ ವಿಶೇಷಾಂಶಗಳನ್ನು ವಿವರಿಸಿದುದನ್ನು ತಾವುಗಳೆಲ್ಲರೂ ಕೇಳಿ ಐಕಮತ್ಯದಿಂದ ನನ್ನನ್ನು ಸಮ್ಮೇಳನದ ಅಧ್ಯಕ್ಷನಾಗಿರುವಂತೆ ನಿಯಮಿಸಿರುವುದರಿಂದ ತಮ್ಮ ಆಜ್ಞಾನುಸಾರವಾಗಿ ಇಲ್ಲಿನ ಕಾರ್ಯಗಳನ್ನು ನನ್ನ ಶಕ್ತ್ಯನುಸಾರ ನಡೆಯಿಸುವುದು ನನ್ನ ಕರ್ತವ್ಯವಾಗಿದೆ. ಮುಖ್ಯವಾಗಿ ಇಂತಹ ದೊಡ್ಡ ಕಾರ್ಯವು ಸರಿಯಾಗಿ ನೆರವೇರಬೇಕಾದರೆ ತಮ್ಮೆಲ್ಲರ ಸಹಾಯವು ಅತ್ಯಾವಶ್ಯಕವಾಗಿರುವುದು.
ಈ ಸಂಘವನ್ನು ‘’ಕರ್ಣಾಟಕ ಸಾಹಿತ್ಯ ಪರಿಷತ್ತ್ತು” ಎಂದು ಕರೆಯುವೆನಷ್ಟೆ! ಈ ನಾಮಧೇಯದಿಂದಲೇ ಈ ಸಂಘದವರ ಕರ್ತವ್ಯವು ಇಂತಹದೆಂದು ನಿಶ್ಚಯಿಸಬಹುದು. ಈ ಹೆಸರಿನಲ್ಲಿ “ಕರ್ಣಾಟಕ ಸಾಹಿತ್ಯ ಪರಿಷತ್ತು” ಎಂಬ ಮೂರು ಶಬ್ದಗಳು ಇರುತ್ತವೆ; ಇವುಗಳಲ್ಲೊಂದಾದ ‘ಸಾಹಿತ್ಯ’ ಎಂಬ ಶಬ್ದದ ಅರ್ಥವನ್ನು ಮೊದಲು ವಿಚಾರಮಾಡಬೇಕಾಗಿದೆ.
ಸಾಹಿತ್ಯ ಎಂದರೆ, ‘’ಯಾವುದಾದರೊಂದು ಕಾರ್ಯವನ್ನು ನೆರವೇರಿಸಬೇಕಾದರೆ ಒಂದನ್ನೊಂದವಲಂಬಿಸಿಕೊಂಡಿರುವ ಸಮಾನ ಧರ್ಮಗಳುಳ್ಳ ಅನೇಕ ಪದಾರ್ಥಗಳು, ಅಥವಾ ಜನರು, ಒಂದೇ ಕಾರ್ಯದಲ್ಲಿ ಸಮವಾಗಿ ಸಂಬಂಧಿಸಿ ಸೇರತಕ್ಕದ್ದು” ಎಂದರ್ಥವಾಗುತ್ತದೆ. ಇದರಿಂದ ಸಾಹಿತ್ಯ ಶಬ್ದಾರ್ಥವನ್ನು ವಿಶಾಲವಾಗಿ ಮಾಡಿದಂತಾಗುತ್ತದೆ; ಆದರೆ ಪ್ರಕೃತಕ್ಕೆ ತಕ್ಕಂತೆ ಅದನ್ನು ಸಂಕೋಚಮಾಡಿ ಮನುಷ್ಯಕೃತ ಗ್ರಂಥ ವಿಶೇಷಗಳಿಗೆ ಮಾತ್ರ ನಿಯಮ ಮಾಡಿಕೊಂಡರೆ ಸಂಸ್ಕೃತದಲ್ಲಿ ರಘುವಂಶ, ಮಾಘ, ಭಾರವಿ, ಭಟ್ಟ, ಮೇಘದೂತ, ಕಾದಂಬರಿ, ಹರ್ಷಚರಿತ, ಭೋಜಚಮ್ಪು, ಶಾಕುಂತಲ, ಮುದ್ರಾರಾಕ್ಷಸ, ರತ್ನಾವಳಿ, ಉತ್ತರರಾಮಚರಿತ- ಇವೇ ಮೊದಲಾದ ಗ್ರಂಥಗಳ ಸಮುದಾಯವೆಂದು ತಾತ್ಪರ್ಯವಾಗುತ್ತದೆ.
ಇದರಂತೆಯೇ ಕನ್ನಡದಲ್ಲಿಯೂ ಅರ್ಥವಾಗಲೆಂದು ಕರ್ಣಾಟಕ ಸಾಹಿತ್ಯವೆಂದಿಟ್ಟಿದೆ. ಇದರಿಂದ ಕವಿರಾಜಮಾರ್ಗ, ಪಂಪಭಾರತ, ಪಂಪರಾಮಾಯಣ, ಲೀಲಾವತಿ, ಗದಾಯುದ್ಧ, ರಾಮಾಶ್ವಮೇಧ ಮಿತ್ರವಿಂದಾಗೋವಿಂದ- ಮೊದಲಾದ ಕನ್ನಡದ ಗ್ರಂಥಗಳ ಸಮುದಾಯವೆಂಬರ್ಥವನ್ನು ಕೊಡುತ್ತದೆ.
“ಪರಿಷತ್” ಎಂದರೆ ಸಭೆಯೆಂದರ್ಥವು-ಇತ್ಥಂಚ ‘’ಕರ್ಣಾಟಕ ಸಾಹಿತ್ಯ ಪರಿಷತ್” ಎಂದರೆ ಕನ್ನಡ ಭಾಷಾಗ್ರಂಥಗಳಲ್ಲಿ ಪ್ರಾಚೀನವಾದುವನ್ನು ಪರಿಷ್ಕರಣಮಾಡಿ ಪ್ರಕಟಿಸುವುದೂ, ಆಧುನಿಕ ಗ್ರಂಥಗಳನ್ನು ಸಂಗ್ರಹಿಸಿ ಉತ್ತಮವಾದವುಗಳಿಗೆ ಪ್ರೋತ್ಸಾಹವನ್ನು ಕೊಡುವುದೂ, ಉತ್ತಮವಾದ ಭಾಷಾಗ್ರಂಥಗಳನ್ನು ರಚಿಸಲು ಉತ್ತೇಜನ ಕೊಡುವುದೂ ಮತ್ತು ಎಲ್ಲಾ ಕರ್ಣಾಟಕ ದೇಶ ಭಾಗಗಲ್ಲಿಯೂ ಪ್ರಚಾರದಲ್ಲಿರುವ ಈ ಭಾಷೆಯ ವೃದ್ಧಿಯ ವಿಷಯದಲ್ಲಿರುವ ಸಮಯವರಿತು ತಕ್ಕ ಏರ್ಪಾಟುಗಳನ್ನು ಮಾಡಿ ಆಚರಣೆಗೆ ತರುವುದೂ-ಇದೇ ಮೊದಲಾದ ಕಾರ್ಯಗಳನ್ನು ಕೈಕೊಂಡು ನೆರವೇರಿಸಲು ಏರ್ಪಟ್ಟ ವಿದ್ವಾಂಸರ ಸಭೆ-ಎಂದು ನಿಷ್ಕೃಷ್ಟಾರ್ಥವು.
ಈ ಪರಿಷತ್ತಿನಲ್ಲಿ ಎಂತೆಂತಹ ಗ್ರಂಥಗಳು ಅಂಗೀಕಾರವನ್ನು ಹೊಂದಿರುತ್ತವೆ ಎಂದು ವಿಚಾರ ಮಾಡಬೇಕಾಗಿದೆ.
ಮಿತ್ರ ಸಮ್ಮಿತಗಳು
ಮಿತ್ರರು ಪರಸ್ಪರ ವಿಚಾರಮಾಡಿ ಸನ್ಮಾರ್ಗವನ್ನವಲಂಬಿಸುವುದಕ್ಕೂ ದುರ್ಮಾರ್ಗವನ್ನು ತ್ಯಜಿಸುವುದಕ್ಕೂ ಹೇಗೆ ಅವಕಾಶವಿರುತ್ತದೆಯೋ ಹಾಗೆಯೇ ಪುರಾಣೇತಿಹಾಸಗಳು ವಿಚಾರಕ್ಕೆ ಅವಕಾಶವನ್ನು ಕೊಟ್ಟು ವಿಹಿತ ಕರ್ಮದಲ್ಲಿ ಪ್ರವೃತ್ತಿಯನ್ನೂ ನಿಷಿದ್ಧ ಕರ್ಮದಲ್ಲಿ ನಿವೃತ್ತಿಯನ್ನೂ ಬೋಧಿಸುತ್ತವೆ.
ಇಂತಹ ಪುರಾಣೇತಿಹಾಸಗಳಲ್ಲಿರುವ ಉಪಾಖ್ಯಾನಗಳನ್ನು ಕನ್ನಡದಲ್ಲಿ ಬೇರೆ ಬೇರೆ ಮುದ್ರಿಸಿ ಲೋಕೋಪಕಾರವನ್ನು ಮಾಡಬೇಕೆಂಬುದೂ ಈ ಪರಿಷತ್ತಿನ ಉದ್ದೇಶವಾಗಿರುತ್ತದೆ.
ಕಾಂತಾಸಮ್ಮಿತಗಳು
ಕಾವ್ಯಾನಾಟಕಾದಿಗಳಲ್ಲಿ ಮನುಷ್ಯನಿಗೆ ಕರ್ತವ್ಯಾಕರ್ತವ್ಯಗಳಲ್ಲಿ ಪ್ರವೃತ್ತಿ ನಿವೃತ್ತ್ಯುಪದೇಶವನ್ನು ಸರಸವಾಗಿ ಬೋಧಿಸುವುದರಿಂದ ಇವುಗಳನ್ನು ಓದಿದ ಮನುಷ್ಯನು ಮಾಡಬೇಕಾದುದನ್ನು ಮಾಡುವುದೂ, ಬಿಡಬೇಕಾದುದನ್ನು ಬಿಡುವುದೂ, ಕಂಡುಬರುತ್ತದೆ.
ರಾಮಾಯಣವನ್ನು ಓದಿದವನು, ‘’ಶ್ರೀರಾಮನಂತೆಯೇ ನಾನಿರಬೇಕು. ರಾವಣನಂತಿರಬಾರದು” ಎಂಬ ವಿಷಯವನ್ನು ಮನಸ್ಸಿಗೆ ತಂದುಕೊಂಡು ಕೂಡಿದ ಮಟ್ಟಿಗೆ ಇದನ್ನು ಆಚರಣೆಯಲ್ಲಿ ತರುತ್ತಾನೆ. ಆದಕಾರಣ ಕಾವ್ಯಗಳಿಂದ ಸಾಮಾನ್ಯ ಜನರಿಗೆ ತಿಳಿವಳಿಕೆಯೂ ಉಪಕಾರವೂ ಆಗುವಷ್ಟು ವೇದಶಾಸ್ತ್ರಗಳಿಂದಾಗಲಾರದು. ಆದುದರಿಂದಲೇ ಈ ಪರಿಷತ್ತಿನಲ್ಲಿ ಮುಖ್ಯವಾಗಿ ಕರ್ಣಾಟಕ ಕಾವ್ಯಗಳನ್ನು ಪ್ರಕಟಿಸಿ ಕನ್ನಡಿಗರಿಗೆ ಉಪಕಾರಮಾಡಬೇಕೆಂಬ ಉದ್ದೇಶವಿರುತ್ತದೆ.
ಹಿಂದೆ ಒಂದೇ ರಾಜ್ಯವಾಗಿದ್ದ ‘ಕರ್ಣಾಟಕವು ಈಗ ತುಂಡು ತುಂಡುಗಳಾಗಿ ಬೇರೆ ಬೇರೆ ಆಧಿಪತ್ಯಗಳಿಗೆ ಸೇರಲು ಅನೇಕ ರಾಜಕೀಯ ಮತ್ತು ಸಾಮಾಜಿಕ ಕಾರಣಗಳುಂಟು. ಅವುಗಳನ್ನು ಈ ಸಮ್ಮೇಳನದಲ್ಲಿ ಚರ್ಚಿಸುವುದು ಯುಕ್ತವಲ್ಲ; ಕಳೆದುಹೋದುದನ್ನು ಕುರಿತು ಪ್ರಸಂಗಮಾಡುವುದು ಅಷ್ಟು ಪ್ರಯೋಜನಕಾರಿಯೂ ಅಲ್ಲ. ಕರ್ಣಾಟಕದ ಈಗಿನ ಸ್ಥಿತಿಯು ಸಕಲ ವಿಧಗಳಲ್ಲಿಯೂ ಮೇಲಾಗಬೇಕು. ಹೀಗಾಗಲು ಬಗೆಬಗೆಯ ಪ್ರಯತ್ನಗಳು ಆವಶ್ಯಕಗಳು. ಆದರೆ ಅವುಗಳಲ್ಲಿ ಒಂದನ್ನು ಮಾತ್ರವೇ ನಮ್ಮ ಪರಿಷತ್ತು ಕೈಕೊಳ್ಳುವುದಕ್ಕೆ ಸಾಧ್ಯವು. ಅದೇನೆಂದರೆ – ಭಾಷಾ ಸೇವೆ, ಎಂದರೆ ಕರ್ಣಾಟಕ ಸಾಹಿತ್ಯ ಸಂಪತ್ತನ್ನು ಹೆಚ್ಚಿಸುವುದು. ಇದಕ್ಕಾಗಿ ನಾವು ಮಾಡತಕ್ಕುದೇನು! ಕರ್ಣಾಟಕ ಸಾಹಿತ್ಯ ಸಂಪತ್ತಿನ ಈಗಿನ ಸ್ಥಿತಿಯನ್ನು ಅದರ ಪೂರ್ವಸ್ಥಿತಿಯೊಡನೆ ಹೋಲಿಸುವುದಲ್ಲದೆ, ಇತರ ದೇಶಗಳ ಸಾಹಿತ್ಯ ಸಂಪತ್ತಿಗಳ ಅಭಿವೃದ್ಧಿಗೆ ಕಾರಣಗಳನ್ನು ತಿಳಿದು, ನಮ್ಮದೂ ಅವುಗಳಂತೆ ಏಳಿಗೆಯನ್ನು ಹೊಂದಬೇಕಾದರೆ ಆವಶ್ಯಕಗಳಾದ ಪ್ರಯತ್ನಗಳಾವುವೋ ಅವುಗಳನ್ನು ಕುರಿತು ವಿಚಾರಮಾಡುವುದು.
ಯಾವ ಕಾರ್ಯಸಿದ್ಧಿಗೂ ತತ್ಸಂಬಂಧವಾದ ಜ್ಞಾನ, ಇಚ್ಛಾ, ಕೃತಿ ಎಂಬ ಮೂರು ಘಟ್ಟಗಳುಂಟು. ಅವುಗಳಲ್ಲಿ ಮೊದಲನೆಯದು ಯಾವುದೆಂದರೆ, ಕಾರ್ಯ ವಿಷಯವಾಗಿ ಜ್ಞಾನಸಂಪಾದನೆ. ಮುಂದೆ, ಕಾರ್ಯದಲ್ಲಿ ಇಚ್ಛೆ ಹುಟ್ಟುವುದೇ ಎರಡನೆಯ ಸೋಪಾನ. ಕಾರ್ಯವು ಒಳ್ಳೆಯದೆಂದು ತಿಳಿದುಬಂದರೆ ಅದರಲ್ಲಿ ಉಪಾದೇಯಬುದ್ಧಿಯೂ, ಕೆಟ್ಟದೆಂದು ಕಂಡುಬಂದರೆ ಅದರಲ್ಲಿ ಹೇಯಬುದ್ಧಿಯೂ ಜನಿಸುತ್ತದೆ. ಮೂರನೆಯ ಮೆಟ್ಟಲು ಕೃತಿ. ಇಚ್ಛೆಯು ಉತ್ಕಟವಾದಂತೆ ತತ್ಸಂಬಂಧವಾದ ಕೃತಿಯೂ ಬಲವಾಗುತ್ತದೆ. ಉತ್ಕಟೇಚ್ಛೆಗೆ ಪೂರ್ಣಜ್ಞಾನವೇ ಮೂಲ. ಆದುದರಿಂದ ನಮ್ಮ ಕರ್ಣಾಟಕ ವಾಙ್ಮಯ ವಿಷಯವಾಗಿ ನಾವು ಮೊದಲು ಸರಿಯಾದ ಜ್ಞಾನವನ್ನು ಸಂಪಾದಿಸುವುದೇ ನಮ್ಮ ಪ್ರಥಮ ಕರ್ತವ್ಯವು. ಈ ಜ್ಞಾನಸಂಪಾದನೆಗೆ ನಾನು ಈಗತಾನೇ ಹೇಳಿದಂತೆ ಕರ್ಣಾಟಕ ಸಾಹಿತ್ಯ ಸಂಪತ್ತಿನ ಪೂರ್ವ ಮತ್ತು ಆಧುನಿಕ ಸ್ಥಿತಿಗಳನ್ನು ಒಂದರೊಡನೆ ಒಂದನ್ನು ಹೋಲಿಸುವುದು ಅತ್ಯಾವಶ್ಯಕವು.
ಸರ್ಕಾರದ ವಿದ್ಯಾಭ್ಯಾಸದ ಇಲಾಖೆಯವರೂ, ಕರ್ಣಾಟಕ ಗ್ರಂಥಮಾಲಾ ಸಂಪಾದಕರೂ ಸ್ವಲ್ಪಮಟ್ಟಿಗೆ, ಕನ್ನಡಭಾಷೆಗೆ ಪ್ರೋತ್ಸಾಹವನ್ನು ಕೊಡುತ್ತಿದ್ದರೂ, ಜನರಲ್ಲಿ ಭಾಷಾವಿಷಯವಾಗಿ ನಿಜವಾದ ಜಾಗ್ರತೆಯು ಇತರ ಕಡೆಗಳಲ್ಲಿರುವಂತೆ ಇನ್ನೂ ಹುಟ್ಟಿಲ್ಲ. ಈ ನ್ಯೂನತೆಯ ನಿವಾರಣಾರ್ಥವಾಗಿ ಈಚೆಗೆ ಪ್ರಯತ್ನಗಳು ನಡೆಯುತ್ತಲಿವೆ. ಅವುಗಳಲ್ಲಿ ಮುಖ್ಯವಾದುವುಗಳನ್ನು ಇಲ್ಲಿ ಸೂಚಿಸುತ್ತೇನೆ.
ಪ್ರಜೆಗಳು ತಮ್ಮ ಕ್ಷೇಮ ಮತ್ತು ಏಳಿಗೆಯ ಚಿಂತನೆಯನ್ನು ತಾವೇ ಸಂತತವೂ ಪರಾವಲಂಬನವಿಲ್ಲದೆ ಮಾಡಿಕೊಳ್ಳುವುದಕ್ಕೆ ಪ್ರವರ್ತಿಸಬೇಕೆಂಬ ದೂರದೃಷ್ಟಿಯೊಡನೆ ನಮ್ಮ ಶ್ರೀಮನ್ಮಹರಾಜರು ಉದಾರ ಮನಸ್ಸಿನಿಂದ ಈಗ್ಗೆ ೮ ವರುಷಗಳ ಹಿಂದೆ ಸಂಸದಭ್ಯುದಯ ಸಂಘವೊಂದನ್ನು ಸ್ಥಾಪಿಸಿ ದೇಶೋನ್ನತಿಗೆ ಅವಕಾಶವನ್ನು ಕಲ್ಪಿಸಿದ್ದಾರೆ.
ಪರಿಷತ್ತಿಗೆ ದ್ರವ್ಯ ಸಹಾಯಮಾಡಿ
ಕರ್ಣಾಟಕ ಭಾಷಾಸೇವೆಗಾಗಿ ಈ ಕರ್ಣಾಟಕ ಸಾಹಿತ್ಯ ಪರಿಷತ್ತು ನಾಲ್ಕು ವರುಷಗಳ ಹಿಂದೆ ಸ್ಥಾಪಿಸಲ್ಪಟ್ಟಿತೆಂಬ ವಿಷಯವು ತಮ್ಮೆಲ್ಲರಿಗೂ ತಿಳಿದ ವಿಷಯವೇ. ಪರಿಷತ್ತಿನ ಕಾರ್ಯಗಳು ಕರ್ಣಾಟಕರೆಂದು ಯಾರುಯಾರು ಹೇಳಿಸಿಕೊಳ್ಳುತ್ತಾರೋ ಅವರೆಲ್ಲರ ಸಹಾಯದಿಂದಲೂ ಸಾಧ್ಯವಾದ ಮಟ್ಟಿಗೆ ನಡೆಯುತ್ತಲಿದೆ. ಇಂತಹ ಸಹಾಯವು ಮುಂದೆ ಇನ್ನೂ ಹೆಚ್ಚಾಗಬೇಕು. ಪ್ರಥಮತಃ ಅನೇಕ ವಿಷಯಗಳಲ್ಲಿ ಸರಿಯಾದ ಏರ್ಪಾಟುಗಳನ್ನು ಮಾಡಿ ಅವುಗಳನ್ನು ನಡೆಯಿಸುವುದೇ ಪರಿಷತ್ತಿಗೆ ಸಾಕಾದಷ್ಟು ಕೆಲಸವಾಗಿದ್ದೀತು. ಆದುದರಿಂದ ಪರಿಷತ್ತಿನ ಮುಖ್ಯೋದ್ದೇಶಗಳ ಸಿದ್ಧಿಗಾಗಿ ತಕ್ಕ ಪ್ರಯತ್ನಗಳು ಜರುಗಲಿಲ್ಲವೆಂದು ಅಪಾತತಃ ತೋರಬಹುದು. ಆದರೆ ಈ ವಿಷಯದಲ್ಲಿ ಕೆಲವು ಮುಖ್ಯಾಂಶಗಳನ್ನು ಇಲ್ಲಿ ಪರ್ಯಾಲೋಚಿಸುವುದು ಯುಕ್ತವಾಗಿ ತೋರುತ್ತದೆ. ಈಗ ಮೈಸೂರು ಸಂಸ್ಥಾನದಿಂದ ಪ್ರತಿಮಾಸವೂ ಸಲ್ಲುವ ೧೩0 ರೂಪಾಯಿಗಳ ಸಹಾಯದ್ರವ್ಯವು ಪರಿಷ್ಮನಂದಿರದ ಬಾಡಿಗೆಗೂ ಇತರ ಅವಶ್ಯಕವಾದ ಸಿಬ್ಬಂದಿ ಖರ್ಚಿಗೂ ಸಾಕಾದರೂ ಪರಿಷತ್ತಿನ ಉದ್ದೇಶಗಳನ್ನೆಲ್ಲಾ ಸಫಲಗೊಳಿಸಲು ಅಧಿಕ ದ್ರವ್ಯವು ಅತ್ಯಂತ ಆವಶ್ಯಕ. ಹೊಸ ಪುಸ್ತಕಗಳನ್ನು ಬರೆಯಿಸಿ, ಗ್ರಂಥಕರ್ತರಿಗೆ ಬಹುಮಾನಗಳನ್ನು ನೀಡುವುದಕ್ಕೆ ಸರ್ಕಾರದಿಂದ ಸಲ್ಲುವ ದ್ರವ್ಯವು ಸಾಲದೆಂದು ನಾನು ಹೇಳಬೇಕಾದುದಿಲ್ಲ. ಇಂತಹ ಕಾರ್ಯಗಳೆಲ್ಲವೂ ಸರ್ಕಾರದಿಂದಲೇ ಆಗಬೇಕೆಂದು ನಾವು ನಿರೀಕ್ಷಿಸುವುದು ನಮಗೆ ಭೂಷಣಕರವಾಗಿಲ್ಲ. ಇತರ ಪ್ರಾಂತಗಳಲ್ಲಿ ಸರ್ಕಾರದಿಂದ ಇಷ್ಟು ಮಟ್ಟಿಗೆ ಕೂಡ ಸಹಾಯ ದೊರೆಯುವುದಿಲ್ಲ. ಆದುದರಿಂದ ನಮ್ಮ ಪರಿಷತ್ತಿನ ಉದ್ದೇಶಗಳೆಲ್ಲವೂ ಸಮರ್ಪಕವಾಗಿ ನೇರವೇರುವುದಕ್ಕೆ ಕರ್ಣಾಟಕರೆಲ್ಲರೂ ಏಕಮನಸ್ಸಿನಿಂದ ತಮ್ಮ ಶಕ್ತ್ಯನುಸಾರ ದ್ರವ್ಯಸಹಾಯವನ್ನು ಮಾಡಬೇಕೆಂಬುದು ನನ್ನ ಪ್ರಾರ್ಥನೆ.
ಪರಿಷತ್ತಿನ ಕರ್ತವ್ಯಗಳು
ಪರಿಷತ್ತಿನ ಕರ್ತವ್ಯಗಳ ವಿಷಯದಲ್ಲಿ ನಾವು ಪ್ರಕೃತ ಕೈಕೊಳ್ಳತಕ್ಕ ಪ್ರಯತ್ನಗಳನ್ನು ನಿರೂಪಿಸಿದುದಾಯಿತು. ಈಗ ಸಾಹಿತ್ಯ ಪರಿಷತ್ತು ಯಾವ ಯಾವ ಭಾಗಗಳಲ್ಲಿ ಏಳಿಗೆ ಹೊಂದುವಂತೆ ಮಾಡಬೇಕೆಂಬುದನ್ನು ನಾವು ಪರ್ಯಾಲೋಚನೆ ಮಾಡಬಹುದು. ಇದಕ್ಕಾಗಿ ಬಂಗಾಳ, ಮಹಾರಾಷ್ಟ್ರ, ಗುಜರಾತಿ, ಆಂಧ್ರ್ರ ಮುಂತಾದ ಭಾಷೆಗಳ ಅಭಿವೃದ್ಧಿಗಾಗಿ ಆಯಾ ಪ್ರಾಂತದ ಭಾಷಾಭಿಮಾನಿಗಳು ಸ್ಥಾಪಿಸಿರುವ ಸಾಹಿತ್ಯ ಪರಿಷತ್ತುಗಳ ಕಡೆ ನಮ್ಮ ದೃಷ್ಟಿಯನ್ನಿಡಬೇಕು. ಆಯಾ ದೇಶದ ಭಾಷೆಯನ್ನೇ ಸರಿಯಾಗಿ ವ್ಯಾಸಂಗ ಮಾಡಿ ಆ ಭಾಷೆಯಲ್ಲಿಯೇ ಪುಸ್ತಕ ಭಾಂಡಾಗಾರವನ್ನು ಹೆಚ್ಚಿಸಿ, ತನ್ಮೂಲಕ ಜನಸಾಮಾನ್ಯರಲ್ಲಿ ಜ್ಞಾನವನ್ನು ಹರಡಬೇಕೆಂಬ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಲಿವೆ. ಇದಕ್ಕಾಗಿ ಪಾಶ್ಚಾತ್ಯರಲ್ಲಿ ಪ್ರಚಾರಗೊಂಡಿರುವ ನಾನಾ ಆಧುನಿಕ ಶಾಸ್ತ್ರವಿಷಯವಾದ ಪುಸ್ತಕಗಳನ್ನು ದೇಶ ಭಾಷೆಯಲ್ಲಿ ಸಾಧ್ಯವಾದಮಟ್ಟಿಗೆ ಬರೆಯಿಸಿ, ಅವುಗಳನ್ನು ಪ್ರಚಾರಕ್ಕೆ ತರುವುದರಲ್ಲಿ ಜನರು ಉದ್ಯುಕ್ತರಾಗಿದ್ದಾರೆ. ಇದಲ್ಲದೆ, ನಮ್ಮ ಪ್ರಾಚೀನ ಸಾಹಿತ್ಯ ಸಂಪತ್ತಿನ ಪ್ರಚಾರಕ್ಕೂ ತಕ್ಕ ಏರ್ಪಾಡುಗಳು ನಡೆಯುತ್ತಲಿದೆ ಮತ್ತು ನಮ್ಮ ಪ್ರಾಚೀನ ತರ್ಕ, ವೇದಾಂತ, ಧರ್ಮಶಾಸ್ತ್ರ, ಸ್ಮೃತಿ ಮುಂತಾದ ಗ್ರಂಥಗಳಲ್ಲಿಯ ವಿಷಯಗಳನ್ನುಳ್ಳ ಪುಸ್ತಕಗಳು ಸಾಮಾನ್ಯರ ತಿಳಿವಳಿಕೆಗೋಸ್ಕರ ದೇಶಭಾಷೆಗಳಲ್ಲಿ ಹೊರಡುತ್ತಲಿವೆ. ಈ ಕಾರ್ಯಗಳೆಲ್ಲವನ್ನೂ ಕರ್ಣಾಟಕ ಭಾಷೆಯಲ್ಲಿ ನಾವೂ ಕೈಕೊಳ್ಳುವುದು ನಮ್ಮ ಕರ್ತವ್ಯವು.
ಈಗ ಸಾಹಿತ್ಯ ಪರಿಷತ್ ಸಮ್ಮೇಳನದ ಕಾರ್ಯವು ಮುಗಿದಂತಾಯಿತು. ಮುಖ್ಯವಾಗಿ, ಈ ಡಿಸ್ಟ್ರಿಕ್ಟಿನ ಡೆಪ್ಯೂಟಿ ಕಮಿಷನರ್ ಸಾಹೇಬರೂ, ಇಲ್ಲಿಯ ನಿವಾಸಿಗಳಲ್ಲಿ ಪ್ರಮುಖರಾದ ಮ|| ರಾ|| ಅಡ್ವೋಕೇಟ್ ವೆಂಕಟೇಶಯ್ಯನವರೂ, ಮ|| ರಾ|| ಅಡ್ವೋಕೇಟ್ ರಾಮಸ್ವಾಮಯ್ಯನವರೂ, ವಾಲಂಟಿಯರುಗಳೂ, ಇನ್ನೂ ಇತರರೂ ಬಹಳವಾಗಿ ಶ್ರಮಪಟ್ಟು, ದೂರದೇಶಗಳಿಂದ ಬಂದಿರುವ ನಮ್ಮೆಲ್ಲರನ್ನೂ ಸತ್ಕರಿಸಿ, ಸಮ್ಮೇಳನದ ಕಾರ್ಯವು ನಿರ್ವಿಘ್ನವಾಗಿ ನಡೆಯುವಂತೆ ಮಾಡಿಕೊಟ್ಟುದಕ್ಕಾಗಿ ಇಲ್ಲಿ ನೆರೆದಿರುವ ನಮ್ಮೆಲ್ಲರ ಕೃತಜ್ಞತೆಯನ್ನು ಪ್ರಕಟಪಡಿಸುವುದು ನನ್ನ ಪ್ರಥಮ ಕರ್ತವ್ಯವಾಗಿವೆ. ಇದನ್ನು ನೀವೆಲ್ಲರೂ ಏಕಕಂಠ್ಯದಿಂದ ಅನುಮೋದಿಸಿ ಈ ವಿಷಯದಲ್ಲಿ ನಿಮಗಿರುವ ಸಮಾಧಾನವನ್ನು ಕರತಾಡನ ಧ್ವನಿಯಿಂದ ತೋರ್ಪಡಿಸಬೇಕೆಂಬುದು ನನ್ನ ಕೋರಿಕೆಯಾಗಿದೆ.
ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಗಳು
ಇನ್ನು, ಈ ಮೂರುದಿವಸಗಳು ನಡೆದ ಕಾರ್ಯಗಳನ್ನು ಸಂಕ್ಷೇಪವಾಗಿ ಸೂಚಿಸಬೇಕಾಗಿದೆ. ಪರಿಷತ್ತಿನ ಪಂಡಿತರಾದ ಮ|| ರಾ|| ಎನ್. ನಂಜುಂಡಶಾಸ್ತ್ರಿಗಳು ನಮ್ಮ ದೇಶದಲ್ಲಿ ಲಿಪಿಯು ಮೊದಲು ಹುಟ್ಟಿದುದು ಹೇಗೆ, ಅದು ಕ್ರಮೇಣ ಹೇಗೆ ವಿಕಾರವನ್ನು ಹೊಂದುತ್ತ ಬಂದಿರುವುದು-ಈ ಮುಂತಾದ ವಿಷಯಗಳನ್ನು ಬಹು ಶ್ರಮಪಟ್ಟು ಎಲ್ಲರಿಗೂ ಸುಲಭವಾಗಿ ಬೋಧಕವಾಗುವಂತೆ ಉಪನ್ಯಾಸ ಮಾಡಿದರು. ಈ ವಿಷಯದಲ್ಲಿ ನಾನು ಅಲ್ಪಸ್ವಲ್ಪ ವಿಚಾರಮಾಡಿದ್ದೇನೆ. ಬಾಲಬೋಧ ಲಿಪಿಯು ಮೊದಲು ಉತ್ತರದಲ್ಲಿ ಹುಟ್ಟಿತು. ನಮ್ಮ ದಕ್ಷಿಣ ದೇಶದ ಲಿಪಿಗಳು ಅದರಿಂದ ಅಪಾತತಃ ಭಿನ್ನವಾದುವುಗಳಂತೆ ತೋರಿದರೂ ಮೂಲವಾದ ಬಾಲಬೋಧೆ ಲಿಪಿಯನ್ನೇ ಅನುಸರಿಸಿ ಕ್ರಮೇಣ ಈಗ ರೂಢಿಯಲ್ಲಿರುವ ಕನ್ನಡ, ತೆಲುಗು, ತಮಿಳು ಲಿಪಿಗಳೂ ಹುಟ್ಟ್ಟಿವೆ ಎಂದು ನಂಬುವುದಕ್ಕೆ ಅನೇಕ ಪ್ರಮಾಣಗಳಿವೆ. ಈ ವಿಷಯಗಳನ್ನೆಲ್ಲಾ ಇಲ್ಲಿ ಚರ್ಚಿಸಲು ಕಾಲ ಸಾಲದುದರಿಂದ ಒಂದು ಸಂಗತಿಯನ್ನು ಮಾತ್ರ ಹೇಳುತ್ತೇನೆ. ಕನ್ನಡ ಮತ್ತು ತೆಲುಗು ಪ್ರತಿ ಅಕ್ಷರದ ಮೇಲೆ ಕೊಡುವ ತಲೆಕಟ್ಟೂ ಬಾಲಬೋಧೆ ಲಿಪಿಯಲ್ಲಿರುವ ಪ್ರತಿ ಅಕ್ಷರದ ಮೇಲಣ ಸರಳ ರೇಖೆಯೂ ಎರಡೂ ಒಂದೇ ಎಂದು ತಿಳಿಯಬಹುದು. ಈ ಉಪನ್ಯಾಸವು ಪರಿಷತ್ಪತ್ರಿಕೆಯಲ್ಲಿ ವಿಸ್ತಾರವಾಗಿ ಮುದ್ರಿತವಾಗಿರುವುದರಿಂದ ಅದನ್ನು ಸರ್ವರೂ ಓದಿ ಸಂತೋಷಪಡಬಹುದು.
ಪರಿಷತ್ತಿನ ಪಂಡಿತರಾದ ಮ|| ರಾ|| ಕಡಬದ ನಂಜುಂಡಶಾಸ್ತ್ರಿಗಳು ‘ಕುಸುಮಾವಳಿ’ ಎಂಬ ಗ್ರಂಥದ ಉತ್ಕೃಷ್ಟವಾದ ಕೆಲವು ಭಾಗಗಳನ್ನು ಆರಿಸಿ ಓದಿದರಲ್ಲದೆ, ಗ್ರಂಥವನ್ನು ರಚಿಸಿದ ಕವಿಯ ವಿಷಯವಾಗಿ ಅನೇಕ ಸಂಗತಿಗಳನ್ನು ನಿರೂಪಣೆ ಮಾಡಿದರು. ಈ ಉಪನ್ಯಾಸವು ಪರಿಷತ್ಪತ್ರಿಕೆಯಲ್ಲಿ ಮುಂದೆ ಪ್ರಕಟವಾಗುತ್ತದೆ.
ಮ|| ರಾ|| ರಾಜಪುರೋಹಿತರು ಅತ್ಯಂತ ಶ್ರಮಪಟ್ಟು ವಿಷಯ ಸಂಗ್ರಹವನ್ನು ಮಾಡಿ ಕರ್ಣಾಟಕದಲ್ಲಿ ಈಗ ಪ್ರಚಾರದಲ್ಲಿರುವ ಕನ್ನಡ ಮಾಸಪತ್ರಿಕೆಗಳನ್ನು ಕುರಿತು ಸ್ವಾರಸ್ಯವಾದೊಂದು ಉಪನ್ಯಾಸವನ್ನು ಓದಿದರು. ಮುಖ್ಯವಾಗಿ, ಇವುಗಳಲ್ಲಿ ‘ವಿಜ್ಞಾನ’ ವೆಂಬುದು ಮ|| ರಾ|| ವೆಂಕಟೇಶಯ್ಯಂಗಾರ್ಯರು ಮತ್ತು ಮ|| ರಾ|| ವೆಂಕಟನಾರಣಪ್ಪನವರಿಂದ ಪ್ರಕಟವಾಗಿ ಈಗಿನ ಪದ್ಧತಿಯನ್ನನುಸರಿಸಿ ಪಾಶ್ಚಾತ್ಯರ ಆಧುನಿಕ ಶಾಸ್ತ್ರಗಳನ್ನು ಸಾಮಾನ್ಯರಿಗೆ ಸುಲಭವಾಗಿ ತಿಳಿಯುವುದರಿಂದ ನಮ್ಮೆಲ್ಲರ ಅವಲೋಕನೆಗೆ ಆರ್ಹವಾಗಿದೆ. ಅಲ್ಲದೆ, ಧಾರವಾಡದ ವಾಗ್ಭೂಷಣ, ಮೈಸೂರಿನ ಕರ್ಣಾಟಕ ಗ್ರಂಥಮಾಲೆ, ಉಡುಪಿಯ ಕೃಷ್ಣಸೂಕ್ತಿ-ಇವೇ ಮುಂತಾದವು ವಾಚನಾರ್ಹವಾಗಿದೆ.
ಮ|| ರಾ|| ತೋರಣಗಲ್ ರಾಜಾರಾಯರು, ಕರ್ಣಾಟಕದಲ್ಲಿ ಪ್ರಚಾರಗೊಂಡಿರುವ ನಾಟಕಗಳ ವಿಷಯವಾಗಿ ಸ್ವಾರಸ್ಯವಾದೊಂದು ಭಾಷಣವನ್ನು ಮಾಡಿದರು. ಕನ್ನಡ ಭಾಷೆಯಲ್ಲಿ ಅತಿ ಪ್ರಾಚೀನವಾದ ನಾಟಕವು ಕ್ರಿ.ಶ. ೧೫ನೆಯ ಶತಮಾನದಲ್ಲಿ ರಚಿತವಾಯಿತೆಂದೂ, ಈಚೆಗೆ ಅನೇಕ ನಾಟಕಗಳು ಹುಟ್ಟಿರುವುವೆಂದೂ, ಇವರು ಸೂಚಿಸಿದರು.
ನಮ್ಮ ಪರಿಷತ್ತಿಗೆ ವಯಸ್ಸು ತುಂಬಿ ಅದಕ್ಕೆ ಪ್ರಾಶಸ್ತ್ಯ ಬಂದಿದ್ದ ಪಕ್ಷದಲ್ಲಿ ನಮ್ಮ ಪಂಡಿತ ಲಿಂಗರಾಜ ಅರಸಿನವರಿಗೆ ಒಂದು ಬಂಗಾರದ ಪದಕವನ್ನು ಭೂಷಣವಾಗಿಯೂ ಬಿರುದಾಗಿಯೂ ಕೊಡಬಹುದಾಗಿತ್ತು. ಮುಂದೆ ಈ ಪರಿಷತ್ತು ಇಂಥ ಪಂಡಿತರಿಗೆ ತಕ್ಕ ಬಹುಮಾನ ಕೊಡುವ ಸ್ಥಿತಿಗೆ ಬರಬೇಕೆಂದು ನಾವು ಪ್ರಾರ್ಥಿಸಬೇಕಲ್ಲದೆ, ಆ ಸ್ಥಿತಿಗೆ ತರತಕ್ಕ ಪ್ರಯತ್ನಗಳನ್ನು ನಾವು ಕೈಗೊಳ್ಳಬೇಕು.
Tag: Karpoora Srinivasa Rao, Karpura Srinivasa Rao
೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಆರ್. ನರಸಿಂಹಾಚಾರ್
ಶಾಸನಗಳ ಸಂಶೋಧನಾ ತಜ್ಞರು ಮತ್ತು ಕರ್ಣಾಟಕ ಕವಿಚರಿತೆ ರಚಕರು, ಕರ್ನಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ಆರ್. ನರಸಿಂಹಾಚಾರ್ಯ ಮಂಡ್ಯದ ಕೊಪ್ಪಲು ಗ್ರಾಮದಲ್ಲಿ ತಿರುನಾರಾಯಣ ಪೆರುಮಾಳ್ ಮತ್ತು ಶಿಂಗಮ್ಮಾಳ್ ದಂಪತಿಗಳಿಗೆ ೯-೪-೧೮೬0ರಲ್ಲಿ ಜನಿಸಿದರು. ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮದರಾಸಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮೆಟ್ರಿಕ್ ಪರೀಕ್ಷೆಯಲ್ಲಿ ಪಾಸಾಗಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ೧೮೮೨ರಲ್ಲಿ ಬಿಎ ಪದವಿಯನ್ನು ೧೮೮೩ರಲ್ಲಿ ಮದರಾಸ್ ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿ ಗಳಿಸಿದರು. ಆ ವಿಶ್ವವಿದ್ಯಾನಿಲಯದಿಂದ ಮೊಟ್ಟಮೊದಲನೆಯ ಕನ್ನಡ ಎಂ.ಎ. ಪದವಿ ಪಡೆದ ಹಿರಿಮೆ ಇವರದು.
ವಿದ್ಯಾಭ್ಯಾಸದ ಕಾಲದಲ್ಲಿಯೇ ಪ್ರೌಢಶಾಲೆ, ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಮಾಡಿದ ಇವರು ಎಂ.ಎ. ಪದವಿ ಪಡೆದ ಮೇಲೆ ೧೮೯೪ರಲ್ಲಿ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಭಾಷಾಂತರಕಾರರಾಗಿ ೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ೧೮೯೯ರಲ್ಲಿ ಪ್ರಾಚ್ಯವಿದ್ಯಾ ಇಲಾಖೆಯಲ್ಲಿ ಲೂಯಿರೈಸರಿಗೆ ಸಹಾಯಾಧಿಕಾರಿಯಾಗಿ ನೇಮಕಗೊಂಡು, ಪಂಪ ಭಾರತದ ಪರಿಷ್ಕರಣ ಕಾರ್ಯದಲ್ಲಿ ನೆರವಾದರು.೧೯0೬ರಿಂದ ೧೯೨೨ರವರೆಗೆ ಶಾಸನ ಇಲಾಖೆಯಲ್ಲಿಯೇ ಮುಖ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ರಾಯಲ್ ಏಷ್ಯಾಟಿಕ್ ಸೊಸೈಟಿಯ ಸದಸ್ಯರಾಗಿದ್ದ ಇವರು ಎಸ್.ಜಿ. ನರಸಿಂಹಾಚಾರ್ಯರೊಂದಿಗೆ ಕವಿಚರಿತೆಯ ಮೊದಲನೇ ಸಂಪುಟವನ್ನೂ ಉಳಿದೆರಡು ಸಂಪುಟಗಳನ್ನು ತಾವೇ ಸಂಪಾದಿಸಿದರು. ೫000 ಹೊಸ ಶಾಸನಗಳನ್ನು ಶೋಧಿಸಿದರು; ೧000 ಪ್ರಾಚ್ಯ ಕಟ್ಟಡಗಳನ್ನು ಪರಿಶೀಲಿಸಿದರು. ೧00 ನಾಣ್ಯ ಸಂಶೋಧನೆ, ನಕ್ಷೆಗಳ ತಯಾರಿ ಮಾಡಿದ ಇವರು ಶಿಲ್ಪಕಲೆಯಲ್ಲಿ ಹೊಯ್ಸಳ ಶೈಲಿಯನ್ನು ಗುರುತಿಸಿದರು. ಉಭಯವೇದಾಂತ ಪ್ರದರ್ಶನ ಸಭೆಗೆ ೩೫ ವರ್ಷಗಳ ಕಾಲ ಮಾರ್ಗದರ್ಶಕರಾಗಿದ್ದರು. ಪರಿಷತ್ತಿನ ಸ್ಥಾಪನೆಗೆ ಮಾರ್ಗದರ್ಶನ ಪ್ರೇರಣೆ ನೀಡಿದ ಆರ್. ನರಸಿಂಹಾಚಾರ್ಯರು ಆ ಕಾಲದಲ್ಲಿ ಎಲ್ಲರಿಗೂ ಪೂಜ್ಯರಾಗಿದ್ದರು.
ನಾಡು, ನುಡಿಗಳಿಗೆ, ಶಾಸನ ಸಾಹಿತ್ಯ ಸಂಶೋಧನೆಗಳಿಗೆ ಅಪಾರ ಸೇವೆ ಸಲ್ಲಿಸಿದ ಆರ್. ನರಸಿಂಹಾಚಾರ್ಯರಿಗೆ ಅನೇಕ ಪ್ರಶಸ್ತಿಗಳು ಲಭ್ಯವಾಗಿವೆ. ಕಲ್ಕತ್ತಾದ ಅಖಿಲ ಭಾರತ ಸಾಹಿತ್ಯ ಸಂಘ `ಪ್ರಾಚ್ಯವಿದ್ಯಾವೈಭವ’ ಬಿರುದನ್ನು ೧೯೨೯ರಲ್ಲಿ ನೀಡಿತು. ಮಹಾರಾಜರು ಪ್ರಾಕ್ತನ ವಿಮರ್ಶೆ ವಿಚಕ್ಷಣ ಪ್ರಶಸ್ತಿ (೧೯೧೩) ಪ್ರದಾನ ಮಾಡಿದರು. ಕೇಂದ್ರ ಸರ್ಕಾರ ೧೯೩೪ರಲ್ಲಿ ‘ಮಹಾಮಹೋಪಾಧ್ಯಾಯ ಪ್ರಶಸ್ತಿ’ ನೀಡಿತು. ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಇವರು ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠ ಅಲಂಕರಿಸಿದರು.
ಶಾಸನ, ಸಾಹಿತ್ಯ ಚರಿತ್ರೆ ಗ್ರಂಥಸಂಪಾದನೆ ಅನುವಾದ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಇವರ ಕೆಲವು ಕೃತಿಗಳು ಹೀಗಿವೆ.
೧. ನೀತಿಮಂಜರಿ (ತಮಿಳಿನ ಕುರುಳ್ ಅನುವಾದ) ೨. ನಗೆಗಡಲು (ಹಾಸ್ಯಪ್ರಸಂಗಗಳ ಸಂಕಲನ) ೩. ಕಾವ್ಯಾವಲೋಕನ (ಸಂಪಾದನೆ) ೪. ಶಬ್ದಾನುಶಾಸನ (ಸಂಪಾದನೆ) ೫. ಭಾಷಾಭೂಷಣ (ಸಂಪಾದನೆ) ೬. ಕರ್ಣಾಟಕ ಕವಿಚರಿತೆ (೩ ಭಾಗಗಳು), ೭. ಹಿಸ್ಟರಿ ಆಫ್ ಕನ್ನಡ ಲಿಟರೇಚರ್ (ಇಂಗ್ಲಿಷ್) ೮. ಹಿಸ್ಟರಿ ಆಫ್ ಕನ್ನಡ ಲ್ಯಾಂಗ್ವೇಜ್ (ಇಂಗ್ಲಿಷ್) ೯. ಶಾಸನ ಪದ್ಯಮಂಜರಿ ಇತ್ಯಾದಿ
ನೂರಾರು ಸಂಶೋಧನ ಲೇಖನಗಳು (ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟ)
ಶ್ರೀಯುತರು ದಿನಾಂಕ ೬-೧೨-೧೯೩೬ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೪
ಅಧ್ಯಕ್ಷರು: ಆರ್. ನರಸಿಂಹಾಚಾರ್
ದಿನಾಂಕ ೧೧, ೧೨, ೧೩ ಮೇ ೧೯೧೮
ಸ್ಥಳ : ಧಾರವಾಡ
ಕನ್ನಡನುಡಿಯ ಈಗಿನ ಸ್ಥಿತಿ
ಈಗಲಾದರೋ ಕನ್ನಡನುಡಿ ನಾವು ಪೂರ್ವದಲ್ಲಿ ಭಾಷೋನ್ನತಿಗಾಗಿ ಉತ್ಕಟೇಚ್ಛೆಯಿಂದ ಕೃಷಿ ಮಾಡಿದ ಕನ್ನಡಿಗರ ಸಂತತಿಯವರೋ ಅಲ್ಲವೋ ಎಂದು ಸಂದೇಹಪಡಬಹುದಾದಷ್ಟು ಹೀನಸ್ಥಿತಿಗೆ ಬಂದಿದೆ. ಈ ಹೀನಸ್ಥಿತಿಯನ್ನು ನೋಡಿ ಯಾವ ನಿಜವಾದ ಕನ್ನಡಿಗನ ಹೃದಯ ತಾನೇ ಶೋಕಪೂರಿತವಾಗದು? ಯಾವ ದೇಶಬಾಂಧವನಾದ ಕನ್ನಡಿಗನ ಮುಖವು ತಾನೇ ಕಂದದು? ಯಾವ ಭಾಷಾಭಿಮಾನಿಯಾದ ಕನ್ನಡಿಗನ ಕಣ್ಣು ತಾನೇ ನೀರಿನಿಂದ ತುಂಬದು? ಈ ಹೀನಸ್ಥಿತಿಯನ್ನು ನಿವಾರಣ ಮಾಡಲಿಕ್ಕಾಗಿ ಬದ್ಧಕಂಕಣರಾಗಿ ಸರ್ವಪ್ರಯತ್ನವನ್ನು ಮಾಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಈ ಹೀನಸ್ಥಿತಿಗೆ ಹಲವು ಕಾರಣಗಳುಂಟು. ಅವುಗಳಲ್ಲಿ ಕೆಲವನ್ನು ತಿಳಿಸುತ್ತೇನೆ. ಕನ್ನಡಿಗರಿಗೆ ತಮ್ಮ ಭಾಷೆಯಲ್ಲಿರಬೇಕಾದ ಆದರಾತಿಶಯಕ್ಕೆ ಪ್ರತಿಯಾಗಿ ಅಸಡ್ಡೆ ನೆಲೆಗೊಂಡಿರುವುದು ಪ್ರಬಲ ಕಾರಣವೆಂದು ಹೇಳಬಹುದು. ಅನೇಕರು ಕನ್ನಡ ಭಾಷೆಯಲ್ಲಿ ಮಾತನಾಡುವುದನ್ನು, ಪತ್ರಗಳನ್ನು ಬರೆಯುವುದನ್ನು ಅವಮಾನಕರವೆಂದು ಭಾವಿಸಿದ್ದಾರೆ. ಇದಕ್ಕಿಂತಲೂ ಶೋಚನೀಯವಾದ ವಿಷಯವುಂಟೆ? ಈಗಿನ ಶಿಕ್ಷಣ ಪದ್ಧತಿಯೂ ಈ ಅಸಡ್ಡೆಗೆ ಸಹಕಾರಿಯಾಗಿದೆ. ಪಾಠಶಾಲೆಗಳಲ್ಲಿ ಎಲ್ಲಾ ವಿಷಯಗಳನ್ನೂ ಇಂಗ್ಲಿಷ್ ಭಾಷೆಯಲ್ಲಿಯೇ ಕಲಿಸುತ್ತಾರೆ. ಬ್ರಿಟಿಷ್ ಕರ್ಣಾಟಕದ ಪ್ರಾಂತಗಳಲ್ಲಿ ಪ್ರಾಥಮಿಕ ಶಿಕ್ಷಣವು ಕನ್ನಡದಲ್ಲಿ ದೊರೆಯುವುದಿಲ್ಲ. ಭಾಷೆಗೂ ಸಾಹಿತ್ಯಕ್ಕೂ ಪೂರ್ವದಂತೆ ರಾಜರ ಪ್ರೋತ್ಸಾಹವಿಲ್ಲ. ನಮ್ಮಲ್ಲಿಯೂ ಇಂಗ್ಲಿಷ್ ಬಲ್ಲವರೇ ಬುದ್ಧಿವಂತರು, ದೇಶ ಭಾಷಾಪಂಡಿತರು ಅಪ್ರಯೋಜಕರು ಎಂಬ ನಿಷ್ಕಾರಣವಾದ ಭಾವನೆ ಹುಟ್ಟಿದೆ. ಸರಕಾರದ ಕಾಗದಪತ್ರಗಳೆಲ್ಲಾ ಇಂಗ್ಲಿಷ್ ಭಾಷೆಯಲ್ಲಿಯೇ ಇವೆ. ಮುಂಬಯಿ, ಮದರಾಸು, ಕೊಡಗು ಎಂಬ ಬ್ರಿಟಿಷ್ ಕರ್ಣಾಟಕದ ದೇಶವಿಭಾಗವು ಭಾಷೆಯ ಅನವಸ್ಥೆಗೂ ಭಿನ್ನರೂಪತೆಗೂ ಕಾರಣವಾಗಿದೆ. ಮೇಲೆ ಹೇಳಿದ ಕಾರಣಗಳಲ್ಲಿ ಕೆಲವು ಪ್ರಕೃತಸ್ಥಿತಿಯಲ್ಲಿ ಅಪರಿಹಾರ್ಯವೆಂದು ತೋರಿದರೂ ನಮ್ಮಲ್ಲಿ ನೆಲೆಗೊಂಡಿರುವ ಅಸಡ್ಡೆಯೆಂಬ ಪಿಶಾಚವನ್ನು ದೇಶಾಭಿಮಾನ ಭಾಷಾಭಿಮಾನಗಳೆಂಬ ಮಂತ್ರಗಳ ಬಲದಿಂದ ಉಚ್ಛಾಟನ ಮಾಡಿದರೆ ಭಾಷೋನ್ನತಿಯ ಕೆಲಸವು ಕೂಡಿದ ಮಟ್ಟಿಗೆ ಫಲಕಾರಿಯಾಗಬಹುದು.
ಕನ್ನಡನುಡಿಯ ಏಳಿಗೆಗೆ ಉಪಾಯಗಳು
ಪೂರ್ವದಂತೆ ಉದ್ದಾಮಕವಿಗಳು ಹುಟ್ಟಬೇಕೆಂದಾಗಲಿ ಪೂರ್ವದಂತೆ ರಾಜರೂ ಮಂಡಲಿಕರೂ ಅಧಿಕಾರಿಗಳೂ ಪ್ರೋತ್ಸಾಹಕರಾಗಬೇಕೆಂದಾಗಲಿ ಹಾರೈಸುವುದರಿಂದ ಫಲವಿಲ್ಲ. ಪ್ರಕೃತ ಕಾಲಕ್ಕೆ ಅನುಗುಣವಾಗಿ ಕನ್ನಡಿಗರೆಲ್ಲರೂ ಅಸಡ್ಡೆಯನ್ನು ತೊಲಗಿಸಿ ಭಾಷಾಸೇವೆಯಲ್ಲಿ ನಿರತರಾಗಬೇಕು. ಪಂಡಿತರನ್ನು ಗೌರವಿಸಬೇಕು. ಕನ್ನಡನುಡಿಗಾಗಿ ಶ್ರಮಪಡುವವರಿಗೆ ಮರ್ಯಾದೆಯನ್ನು ಮಾಡಬೇಕು. ಸಾಹಿತ್ಯವನ್ನು ವೃದ್ಧಿಗೊಳಿಸುವುದಕ್ಕಾಗಿ ಶಾಸ್ತ್ರೀಯ ಗ್ರಂಥಗಳೇ ಮೊದಲಾದುವನ್ನು ಅನ್ಯಭಾಷೆಗಳಿಂದ ಪರಿವರ್ತಿಸಬೇಕು. ಕೋಶಗಳನ್ನೂ ಸಾಂಕೇತಿಕ ಶಬ್ದಗಳ ಪಟ್ಟಿಯನ್ನೂ ಏರ್ಪಡಿಸಬೇಕು. ಗ್ರಂಥಸ್ಥಭಾಷೆಗೆ ಏಕರೂಪತೆಯನ್ನು ಉಂಟುಮಾಡಬೇಕು. ವಿದ್ಯಾವಂತನಾದ ಪ್ರತಿಯೊಬ್ಬ ಕನ್ನಡಿಗನೂ ತನಗಿಂತ ವಿದ್ಯೆಯಲ್ಲಿ ಕಡಿಮೆಯಾದ ಕನ್ನಡಿಗರ ಉಪಯೋಗಾರ್ಥವಾಗಿ ಗ್ರಂಥ ನಿರ್ಮಾಣವನ್ನು ಮಾಡುವುದು ತನ್ನ ಕರ್ತವ್ಯವೆಂದು ತಿಳಿಯಬೇಕು. ಜ್ಞಾನವೃದ್ಧಿಕರವಾದ ಪತ್ರಿಕೆಗಳನ್ನು ಹೊರಡಿಸಬೇಕು. ಭಾಷೆಯ ಏಕೀಭಾವ, ಪರಸ್ಪರ ಮೈತ್ರಿ. ಮುದ್ರಣ ಸೌಕರ್ಯ, ಗ್ರಂಥ ಪ್ರಚಾರಕ್ಕೆ ಅನುಕೂಲ ಇವುಗಳನ್ನು ಉಂಟು ಮಾಡುವುದಕ್ಕಾಗಿ ಗ್ರಂಥರ್ತರ ಮತ್ತು ಪತ್ರಿಕಾಸಂಪಾದಕರ ಒಂದು ಸಂಘವನ್ನು ಏರ್ಪಡಿಸಬಹುದು. ಎಲ್ಲಾ ಕರ್ಣಾಟಕ ಭಾಗಗಳ ವಿದ್ವಾಂಸರನ್ನು ಸೇರಿಸಿ ಒಂದು ಗ್ರಂಥಪರಿಶೀಲಕ ಮಂಡಲಿಯನ್ನೂ ಏರ್ಪಡಿಸಬಹುದು.
ಬೃಹತ್ ಕೋಶದ ರಚನೆಯ ಅಗತ್ಯ
ಸರಿಯಾದ ಬೃಹತ್ಕೋಶವಿಲ್ಲದುದರಿಂದ ಉಂಟಾಗಿರುವ ಅನರ್ಥಕ್ಕೆ ಒಂದು ಉದಾಹರಣವನ್ನು ಕೊಡುತ್ತೇನೆ:-
ಕ್ರಿಸ್ತಶಕ ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿದ ಒಂದು ಶಾಸನದಲ್ಲಿ ‘’ಬಿಸುಗೆಯೆ ಕಳನಾಗೆ ಬೂತುಗಂ ರಾಜಾದಿತ್ಯನಂ ಕೊಂದಂ” ಎಂಬ ವಾಕ್ಯವಿದೆ. ಇದಕ್ಕೆ ಆಂಗ್ಲೇಯ ಪಂಡಿತರು ‘’ರೇಗಿಸಲು ಕಳ್ಳನಾಗಿ ಬೂತುಗನು ರಾಜಾದಿತ್ಯವನ್ನು ಕೊಂದನು” ಎಂದು ಅಪಾರ್ಥವನ್ನು ಮಾಡಿ ಗಂಗರಾಜನಾದ ಬೂತಗನ ಮೇಲೆ ಇಲ್ಲದ ಕಳಂಕವನ್ನು ಆರೋಪಿಸಿದರು. ಈ ಅಪಾರ್ಥವೇ ಇಂಪೀರಿಯಲ್ ಗೆಜೆಟಿಯರಲ್ಲಿಯೂ ಪ್ರಕಟವಾಗಿದೆ. ನಮ್ಮ ಕನ್ನಡನಾಡಿನ ಪೂರ್ವರಾಜನಾದ ಬೂತುಗನ ಮೇಲೆ ಅಜ್ಞಾನದಿಂದ ಆರೋಪಿತವಾದ ಈ ಅಪವಾದವನ್ನು ನೋಡಿ ಮನಮರುಗಿ ನಾನು ಶೋಧನೆಮಾಡಿ ಈ ವಾಕ್ಯದ ನಿಜವಾದ ಅರ್ಥವನ್ನು ನಿರ್ಧರಿಸಿ ಈ ವಿಚಾರವನ್ನು ರಾಯಲ್ ಏಷಿಯಾಟಿಕ್ ಸೊಸೈಟಿ ಜರ್ನಲಿನಲ್ಲಿ ಪ್ರಕಟಮಾಡಿದ ಬಳಿಕ ಯೂರೋಪಿನಲ್ಲಿ ಅನೇಕ ಪಂಡಿತರು ಬೂತುಗನಿಗೆ ಅನ್ಯಾಯವಾಗಿ ಉಂಟಾಗಿದ್ದ ಅಪಯಶಸ್ಸನ್ನು ಹೋಗಲಾಡಿಸಿದುದಕ್ಕಾಗಿ ನನಗೆ ಶ್ಲಾಘಾಪತ್ರಗಳನ್ನು ಬರೆದರು. ‘ಬಿಸುಗೆ’ ಯೆಂದರೆ ಆನೆಯ ಮೇಲಣ ಅಂಬಾರಿ. ‘ಕಳ’ ಎಂದರೆ ಯುದ್ಧರಂಗ. ಅಂಬಾರಿಯೇ ಯುದ್ಧರಂಗವಾಗಲು ಬೂತಗನು ರಾಜಾದಿತ್ಯವನ್ನು ಕೊಂದನು-ಎಂಬುದು ಆ ವಾಕ್ಯದ ನಿಜವಾದ ಅರ್ಥ. ಆದುದರಿಂದ ಶುದ್ಧವಾದ ಬೃಹತ್ ಕೋಶವನ್ನು ಏರ್ಪಡಿಸಿದರೆ ಇಂತಹ ಅನರ್ಥಗಳಿಗೆ ಅವಕಾಶವಿಲ್ಲದಂತಾಗವುದು.
ಸ್ವಾಗತಮಂಡಳಿ ವ್ಯವಸ್ಥೆ
ಸ್ವಾಗತಮಂಡಲಿಯವರು ಸಮ್ಮೇಳನಕ್ಕೆ ಬಂದಿರುವ ಪ್ರತಿನಿಧಿಗಳ ಮಾನಸಿಕ ಸುಖ ಮತ್ತು ಶಾರೀರಿಕ ಸುಖ ಇವುಗಳಿಗಾಗಿ ಮಾಡಿದ ಏರ್ಪಾಡುಗಳು ಬಹಳ ಶ್ಲಾಘನೀಯವಾಗಿವೆ. ನಾಟಕ, ಸಂಗೀತ, ಹರಿಕಥೆ, ಪಾಂಡಿತ್ಯಸೂಚಕವಾದ ನಿಬಂಧಗಳು, ನಾನಾ ಪ್ರಾಂತಗಳ ಕನ್ನಡಿಗರ ಪರಸ್ಪರದರ್ಶನ ಸಲ್ಲಾಪಾದಿಗಳಿಗೆ ಅವಕಾಶ-ಇವೆಲ್ಲವೂ ಮನಸ್ಸಿಗೆ ಹೇರಳವಾಗಿ ಆನಂದವನ್ನುಂಟುಮಾಡಿವೆ. ಇನ್ನು ಶರೀರಸೌಖ್ಯಕ್ಕೆ ಮಾಡಿದ ಆನುಕೂಲ್ಯವಾದರೋ ವರ್ಣನಾತೀತವಾಗಿದೆ.
Tag: Kannada Sahitya Sammelana 4, R. Narasimhachar
೧, ೨, ೩ನೇ ಸಮ್ಮೇಳನಾಧ್ಯಕ್ಷರು
ಹೆಚ್.ವಿ. ನಂಜುಂಡಯ್ಯ
ಆಂಧ್ರದಿಂದ ಕರ್ನಾಟಕಕ್ಕೆ ವಲಸೆಬಂದ ಸಾಮಾನ್ಯ ಬಡ ಕುಟುಂಬದಲ್ಲಿ ಸುಬ್ಬಯ್ಯ ಮತ್ತು ಅನ್ನಪೂರ್ಣಮ್ಮ ದಂಪತಿಗಳಿಗೆ ೨ನೇ ಮಗನಾಗಿ ಹೆಚ್.ವಿ. ನಂಜುಂಡಯ್ಯನವರು (ಹೆಬ್ಬಳಲು ವೇಲ್ಪನೂರು ನಂಜುಂಡಯ್ಯ) ೧೩-೧0-೧೮೬0ರಲ್ಲಿ ಜನ್ಮ ತಾಳಿದರು. ಮೈಸೂರು ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ೧೮೮೬ರಲ್ಲಿ ಬಿಎಲ್ ಪರೀಕ್ಷೆಯಲ್ಲಿ ೧೮೮೫ರಲ್ಲಿ ಎಂಎ ಪದವಿಯನ್ನು ಪಡೆದರು. ೧೮೯೫ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯ ಫೆಲೋಷಿಪ್ ನೀಡಿ ಗೌರವಿಸಿತು.
೧೮೮೫ರಲ್ಲಿ ಮೈಸೂರು ಸರ್ಕಾರದಲ್ಲಿ ಉದ್ಯೋಗಕ್ಕೆ ಸೇರಿ ಮುನ್ಸೀಫರಾದರು. ೧೮೮೬ರಲ್ಲಿ ರೆವಿನ್ಯೂ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಅನಂತರ ಅಂಡರ್ ಸೆಕ್ರೆಟರಿ, ಸಬ್ ಜಡ್ಜ್ ಆಗಿ ಸೇವೆ ಸಲ್ಲಿಸಿದ ನಂತರ ಚೀಫ್ ಜಡ್ಜ್ ಆಗಿ ಸೇವೆ ಸಲ್ಲಿಸಿ ೧೯೧೬ರಲ್ಲಿ ನಿವೃತ್ತರಾದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಉಪಕುಲಪತಿಗಳಾಗಿ ನೇಮಕಗೊಂಡು ೪ ವರ್ಷಗಳ ಕಾಲ ಅದರ ಪ್ರಗತಿಗೆ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಶ್ರಮಿಸಿದವರಲ್ಲಿ ಇವರೂ ಒಬ್ಬರು ಮತ್ತು ೧೯೧೫ರಿಂದ ೩ ಸಮ್ಮೇಳನಗಳಿಗೆ ಅಧ್ಯಕ್ಷರಾದ ಇವರು ಸಮ್ಮೇಳನಗಳ ಇತಿಹಾಸದಲ್ಲೇ ವಿಕ್ರಮ ಸಾಧಿಸಿದ್ದಾರೆ. ಬೇರಾವ ಅಧ್ಯಕ್ಷರೂ ಒಂದಕ್ಕಿಂತ ಹೆಚ್ಚು ಬಾರಿ ಸಮ್ಮೇಳನಾಧ್ಯಕ್ಷರಾಗಿಲ್ಲ.
ಬ್ರಿಟಿಷ್ ಸರ್ಕಾರ ೧೯೧೪ರಲ್ಲಿ ಸಿ.ಐ.ಇ. (ಕಂಪಾನಿಯನ್ ಆಫ್ ದಿ ಇಂಡಿಯನ್ ಎಂಪೈರ್) ಬಿರುದು ನೀಡಿತು. ಮೈಸೂರು ಮಹಾರಾಜರು ರಾಜಮಂತ್ರಪ್ರವೀಣ ಬಿರುದನ್ನು ನೀಡಿದರು.
ಕನ್ನಡ ನವೋದಯ ಕಾಲದ ಪ್ರಾರಂಭಘಟ್ಟದಲ್ಲಿ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದವರಲ್ಲಿ ಹೆಚ್.ವಿ. ನಂಜುಂಡಯ್ಯನವರೂ ಒಬ್ಬರು. ಇವರು ರಚಿಸಿದ ಪ್ರಮುಖ ಕೃತಿಗಳು ಹೀಗಿವೆ.
೧. ವ್ಯವಹಾರದೀಪಿಕೆ (ನ್ಯಾಯಶಾಸ್ತ್ರ) – ೧೮೯0 ೨. ಅರ್ಥಶಾಸ್ತ್ರ – ೧೯0೧ ೩. ಲೇಖ್ಯಬೋಧಿನಿ ೪. ರಿಲಿಜನ್ ಅಂಡ್ ಮಾರೆಲ್ ಎಜುಕೇಷನ್ (ಇಂಗ್ಲಿಷ್) ೫. ಆಂಗ್ಲೋ ಇಂಡಿಯನ್ ಎಂಪೈರ್ (ಇಂಗ್ಲಿಷ್) ೬. ಮೈಸೂರು ಟ್ರೈಬ್ಸ್ ಅಂಡ್ ಕ್ಯಾಸ್ಟ್ಸ್ (ಸಂಪಾದನೆ) ೭. ವ್ಯವಹಾರ ಧರ್ಮಶಾಸ್ತ್ರ ೮. ವಿಕ್ಟರ್ ಹ್ಯೂಗೋವಿನ ಫ್ರೆಂಚ್ ಕವಿತೆಗಳ ಅನುವಾದ
ಶ್ರೀಯುತರು ದಿನಾಂಕ ೨-೫-೧೯೨0ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೧
ಅಧ್ಯಕ್ಷರು: ಹೆಚ್.ವಿ. ನಂಜುಂಡಯ್ಯ
ದಿನಾಂಕ ೩, ೪, ೫, ೬ ಮೇ ೧೯೧೫,
ಸ್ಥಳ : ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು, ಬೆಂಗಳೂರು
ದೇಶಭಾಷೆಗೆ ಮಹಾರಾಜರ ಪ್ರೋತ್ಸಾಹ
ಈ ಸಂಸ್ಥಾನದಲ್ಲಿ ಕನ್ನಡಭಾಷೆಯ ಪ್ರಚಾರಕ್ಕಾಗಿ ಸರ್ಕಾರದವರೂ ಪ್ರಜೆಗಳೂ ವಿಶೇಷವಾದ ಆದರದಿಂದ ಪ್ರೋತ್ಸಾಹವನ್ನು ಕೊಡುತ್ತಿರಬೇಕಾದುದು ಸಹಜವಾಗಿಯೇ ಇದೆ. ಇಲ್ಲಿಯ ಪಾಠಶಾಲೆಗಳಲ್ಲಿ ಸ್ವಲ್ಪ ದೂರದವರೆಗೆ ಕನ್ನಡವನ್ನು ಕಲಿಸುತ್ತಿರುವರು; ಪಾಠಶಾಲೆಗಳಲ್ಲಿ ಉಪಯೋಗಿಸುವ ಪುಸ್ತಕಗಳ ಮೂಲಕವೂ ಕರ್ಣಾಟಕ ಭಾಷಾಭಿವೃದ್ಧಿಯು ತಕ್ಕಮಟ್ಟಿಗೆ ಆಗುತ್ತಿರುವುದು; ಸಂಸ್ಥಾನದ ವಿದ್ಯಾಭ್ಯಾಸದ ಇಲಾಖೆಯೂ, ಇತರ ಇಲಾಖೆಗಳೂ, ಅಕ್ಷರಜ್ಞರಾದ ಜನಗಳೂ ಕೊಡುತ್ತಿರುವ ಪ್ರೋತ್ಸಾಹದಿಂದ, ಕರ್ಣಾಟಕ ಭಾಷಾಪಾಂಡಿತ್ಯಕ್ಕೆ ಸ್ವಲ್ಪಮಟ್ಟಿಗೆ ಸಹಾಯವು ದೊರೆಯುತ್ತಿರುವುದು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಶ್ರೀಮನ್ ಮಹಾರಾಜರವರೂ ಅವರ ಪೂರ್ವಿಕರೂ, ಸಹಜವಾದ ರಾಜಧರ್ಮಾನುಗುಣವಾಗಿ ಕಲಾಸಾಹಿತ್ಯಗಳ ವಿಷಯದಲ್ಲಿ ಸಮರ್ಥರಾದವರನ್ನು ವಿಮರ್ಶೆಯಿಂದ ಸತ್ಕರಿಸಿ, ಅವರವರ ಯೋಗ್ಯತೆಗೆ ತಕ್ಕಂತೆ ಅವರನ್ನು ಸಂಭಾವಿಸುವುದರಲ್ಲಿ ಬದ್ಧರಾಗಿದ್ದುದರಿಂದ ದೇಶಭಾಷೆಯು ಬಹಳವಾಗಿ ಅಭಿವೃದ್ಧಿ ಹೊಂದಿರುವುದು.
ಕನ್ನಡಭಾಷೆಯು ಮೈಸೂರು ಸಂಸ್ಥಾನದವರಿಗೆ ಮಾತ್ರವೇ ಸೇರಿರುವುದಾಗಿಲ್ಲ. ಕನ್ನಡವನ್ನು ಮಾತನಾಡುವವರಲ್ಲಿ ಅರ್ಧಸಾಲಿಗಿಂತಲೂ ಹೆಚ್ಚುಮಂದಿ ಸಂಸ್ಥಾನದ ಸುತ್ತಮುತ್ತಲೂ ಇರುವ ಬ್ರಿಟಿಷ್ ಇಂಡಿಯಾದಲ್ಲಿಯೂ ಹೈದರಾಬಾದ್ ಸಂಸ್ಥಾನದಲ್ಲಿಯೂ ವಾಸಿಸುತ್ತಿರುವರು. ರಾಜಕೀಯ ವಿಷಯಗಳಲ್ಲಿ ಮೂರು ನಾಲ್ಕು ಸರ್ಕಾರದವರಿಗೆ ಅಧೀನವಾಗಿದ್ದರೂ, ಬೇರೆ ಬೇರೆಯಾಗಿ ಕಾಣುವ ಕನ್ನಡ ನಾಡುಗಳಲ್ಲಿಯೂ, ಕನ್ನಡ ಮಾತನಾಡುವವರಲ್ಲಿಯೂ, ಕೆಲವು ಸಾಮಾನ್ಯ ಲಕ್ಷಣಗಳು ಕಾಣಬರುತ್ತವೆ. ಆದುದರಿಂದ ಭಾಷಾಭಿವೃದ್ಧಿ, ಗ್ರಂಥರಚನೆ ಇವುಗಳ ವಿಷಯದಲ್ಲಿ ಕನ್ನಡಿಗರೆಲ್ಲರನ್ನೂ ಒಟ್ಟುಗೂಡಿಸಲಾದರೆ, ವಿಶೇಷ ಪ್ರಯೋಜನವುಂಟು. ಈ ಉದ್ದೇಶದಿಂದಲೇ, ಕನ್ನಡ ಭಾಷಾಭಿವೃದ್ಧಿಯಲ್ಲಿ ಆಸಕ್ತರಾಗಿಯೂ, ಸಮರ್ಥರಾಗಿಯೂ, ಕಾರ್ಯಭಾರವನ್ನು ವಹಿಸಲು ತಕ್ಕವರಾಗಿಯೂ ಇರುವ ಜನಗಳು ಸೇರಿ, ಅನ್ಯೋನ್ಯ ಸಹಾಯದಿಂದ ಒಟ್ಟುಗೂಡಿ ಕೆಲಸಮಾಡತಕ್ಕ ಒಂದು ಸಭೆಯನ್ನು ಸರ್ಕಾರದ ಸಂಬಂಧವಿಲ್ಲದೆ ನಿರ್ಮಿಸಬೇಕೆಂದು ಈ ಸಮ್ಮೇಳನವನ್ನು ಏರ್ಪಾಡು ಮಾಡಲಾಗಿದೆ.
ಮೈಸೂರು ಕನ್ನಡಕ್ಕೆ ಪ್ರಾಶಸ್ತ್ಯ ಕೊಡಿ
ಅನೇಕ ಮಹನೀಯರು ಹೊರಗಿನಿಂದ ದಯಮಾಡಿ ಸೇರಿರುವ ಈ ಸಭೆಯಲ್ಲಿ ಮೈಸೂರು ದೇಶದಲ್ಲಿ ವಾಡಿಕೆಯಾಗಿರುವ ಕನ್ನಡವೇ ಈ ಸ್ಥಾನಕ್ಕೆ ಯೋಗ್ಯವಾದುದೆಂದು ಹೇಳಲು ಸ್ವಲ್ಪ ಸಂಕೋಚಪಡಬೇಕಾಗಿದೆ. ಆದರೂ ನಾನು ಹೀಗೆ ನಂಬಿರುವೆನೆಂದು ಹೇಳುವ ಮಾತು ಕೇವಲ ಸ್ವದೇಶ ಪಕ್ಷವಾದ ದುರಭಿಮಾನದಿಂದ ನಾನು ಹೇಳಿದಂತೆ ಭಾವಿಸಕೂಡದು.
ಬುದ್ಧಿ ಕೌಶಲ್ಯದ ವಿಷಯದಲ್ಲಿ ಬ್ರಿಟಿಷ್ ಇಂಡಿಯಾದಲ್ಲಿರುವ ಜನರಿಗೆ ನಮಗಿಂತಲೂ ಹೆಚ್ಚು ಆನುಕೂಲ್ಯಗಳಿವೆ. ಇಲ್ಲಿಯವರಿಗಿಂತಲೂ ಆ ಜನರಿಗೆ ಉದಾರಾಶ್ರಯರಾದ ಪಂಡಿತರ ಸಹವಾಸವು ದೊರೆಯುವುದು ಹೆಚ್ಚು. ಒಟ್ಟು ಚಕ್ರಾಧಿಪತ್ಯಕ್ಕೆ ಸಂಬಂಧಪಟ್ಟ ರಾಜಕೀಯ ವಿಷಯ ವಿಚಾರದಲ್ಲಿಯೂ ಜಿಜ್ಞಾಸೆಯಲ್ಲಿಯೂ ಇಲ್ಲಿಯವರಿಗಿಂತ ಅವರಿಗೆ ಪ್ರವೇಶ ಹೆಚ್ಚು. ಇಲ್ಲಿಯವರಾದ ನಮಗಾದರೋ, ದೇಶದಲ್ಲಿ ನೆಲೆಗೊಂಡಿರುವ ಶಾಂತಿ ತೃಪ್ತಿಗಳಿಂದ ಸುಲಭ ಜೀವನವು ಅಭ್ಯಾಸವಾಗಿ, ಎಲ್ಲಾ ಕೆಲಸಗಳನ್ನೂ ಪಿತೃವಾತ್ಸಲ್ಯದಿಂದ ಕಾಪಾಡುವ ನಮ್ಮ ಸರಕಾರದವರಿಗೆ ಒಪ್ಪಿಸಿಬಿಡುವುದರಲ್ಲಿಯೇ ಬದ್ಧರಾಗಿದ್ದೇವೆ. ಆದುದರಿಂದ ಒಂದು ಭಾಗಕ್ಕೆ ಹೊರಗಿನವರಿಗಿರುವ ಆನುಕೂಲ್ಯಗಳಲ್ಲಿ ಕೆಲವನ್ನು ನಾವೂ ಸಂಪಾದಿಸಿಕೊಳ್ಳುವ ಉದ್ದೇಶದಿಂದ ಭಾಷಾವಿಷಯದಲ್ಲಿ ಅವರೊಡನೆ ಸಮೀಪ ಸಂಬಂಧವನ್ನು ಬೆಳೆಯಿಸುವುದಕ್ಕೆ ಅಪೇಕ್ಷಿಸಬೇಕಾಗಿದೆ. ಆದರೆ ಈ ವಿಷಯದಲ್ಲಿ, ಅವರು ಉಪಯೋಗಿಸುತ್ತಿರುವ ಭಾಷೆಯಲ್ಲಿ ಕಾಣಬರುವ ವೈಲಕ್ಷಣ್ಯಗಳು ನಮಗೆ ಪ್ರತಿಬಂಧಕವಾಗಿವೆ.
ದಕ್ಷಿಣ ಕನ್ನಡ, ಅಥವಾ ಧಾರವಾಡ ಬೆಳಗಾಂ ಪ್ರಾಂತಗಳಲ್ಲಿ ಈಗಲೂ ಕೆಲವು ಶಬ್ದಗಳೂ ಪ್ರಯೋಗಗಳೂ ಪೂರ್ವದಲ್ಲಿದ್ದಂತೆ ಶಬ್ದರೂಪದಲ್ಲಿ ಉಳಿದುಕೊಂಡಿರಬಹುದು; ಅವುಗಳನ್ನು ಇಲ್ಲಿ ನಾವು ನಿಷ್ಕಾರಣವಾಗಿ ಬಿಟ್ಟುಬಿಟ್ಟಿರಬಹುದು; ಇಲ್ಲವೆ ಆ ರೂಪಗಳನ್ನು ಕೆಡಿಸಿರಬಹುದು. ಅಂತಹ ಸಂದರ್ಭಗಳು ಸರಿಯಾಗಿ ಸಿದ್ದಾಂತಪಟ್ಟರೆ, ನಾವು ಅವರನ್ನೇ ಅನುಸರಿಸಲಿಚ್ಛಿಸುವೆವು. ವ್ಯಾಕರಣ ನಿಯಮಗಳಿಗೂ ಔಚಿತ್ಯ ನ್ಯಾಯಕ್ಕೂ ವಿರುದ್ಧವಾದ ಪ್ರಯೋಗಗಳು ಎಲ್ಲಿದ್ದರೂ ಅವುಗಳನ್ನು ತಿದ್ದಲೇಬೇಕು. ಆದರೆ ಯಾವುದಾದರೂ ಭಾಷಾರೂಢಿಯ ಅಥವಾ ಭಾಷಾವೈಪರೀತ್ಯದ ಪ್ರಯೋಗವು ಸಾಧುವೇ ಅಲ್ಲವೇ ಎಂದು ಚರ್ಚೆ ಹುಟ್ಟಿದಾಗ ಮೈಸೂರು ಕನ್ನಡಕ್ಕೆ ಪ್ರಾಶಸ್ತ್ಯವನ್ನು ತೋರಿಸುವುದು ಉಚಿತವಾಗಿರುತ್ತದೆ.
ಮೈಸೂರು ದೇಶದಲ್ಲಾದರೋ ಕನ್ನಡವೇ ಎಲ್ಲೆಲ್ಲಿಯೂ ಹರಡಿಕೊಂಡಿದೆ. ಇಂಗ್ಲಿಷ್ ಒಂದನ್ನು ಬಿಟ್ಟರೆ, ಕನ್ನಡವನ್ನು ಮರೆಯಿಸಿ ತಲೆಯೆತ್ತಬಲ್ಲ ಭಾಷೆ ಮತ್ತೊಂದು ಕಾಣುವುದಿಲ್ಲ. ಶ್ರೀಮಾನ್ ಮಹಾರಾಜರವರ ಆಸ್ಥಾನದಲ್ಲಿಯೂ, ಸರಕಾರದ ಅನೇಕ ಕಚೇರಿಗಳಲ್ಲಿಯೂ ನಡೆಯುವ ವ್ಯವಹಾರಗಲ್ಲೆಲ್ಲಾ ಕನ್ನಡವನ್ನೇ ಪೂರ್ವಕಾಲದಿಂದಲೂ ಉಪಯೋಗಿಸುತ್ತಿರುವರು. ಬಹುಕಾಲದಿಂದ ಮೈಸೂರಿನಲ್ಲಿ ಮುಖ್ಯವಾಗಿ ಜೈನಪಂಡಿತರೂ ಲಿಂಗಾಯತ ವಿದ್ವಾಂಸರೂ ಪಾರಂಪರ್ಯವಾಗಿ ಕನ್ನಡವನ್ನೇ ವ್ಯಾಸಂಗ ಮಾಡುತ್ತ ಬಂದಿರುವರು. ಈಚೆಗೆ ಶ್ರೀಮಾನ್ ಮಹಾರಾಜರವರು ಮತ್ತು ಮಹಾಸ್ವಾಮಿಯವರ ಕೃಪಾಪೋಷಣೆಯಿಂದ ಕನ್ನಡಕ್ಕೆ ಮತ್ತಷ್ಟು ಪ್ರಾಶಸ್ತ್ಯವುಂಟಾಗಿದೆ. ನಮ್ಮ ಶ್ರೀಮಾನ್ ಮಹಾರಾಜರವರ ಪಿತಾಮಹರು ಇತರ ಭಾಷೆಗಳ ಜೊತೆಯಲ್ಲಿ ಕನ್ನಡ ಭಾಷೆಗೂ ಉದಾರಾಶ್ರಯವನ್ನು ಕೊಟ್ಟಿರುವರಲ್ಲದೆ, ಸ್ವಯಂ ಅನೇಕ ಉದ್ಗ್ರಂಥಗಳನ್ನು ರಚಿಸಿರುವರು.
ತಮ್ಮಂತಹ ಮಹನೀಯರು ಸೇರಿ ಉದಾರವಾದ ಆಶ್ರಯವುಳ್ಳುದಾಗಿಯೂ ಶಾಶ್ವತವಾಗಿಯೂ ನಡೆದು ಬರತಕ್ಕ ಒಂದು ಸಂಘವನ್ನು ಸ್ಥಾಪಿಸಿದುದೇ ಆದರೆ ಸ್ವಭಾಷೆಯನ್ನು ಸಂಸ್ಕರಿಸಿ ಗ್ರಂಥಾಭಿವೃದ್ಧಿಯನ್ನು ಮಾಡುವ ಘನವಾದ ಕಾರ್ಯವನ್ನು ನಡೆಯಿಸಲು ಬಹು ವಿಧದಲ್ಲಿ ಅನುಕೂಲವಾಗುವುದು.
ಮುಖ್ಯವಾಗಿ ಇಂತಹ ಸಂಘದಿಂದ ಗ್ರಂಥಗಳ ಗುಣದೋಷ ವಿಮರ್ಶೆ ಮಾಡುವ ಸಾಮರ್ಥ್ಯಕ್ಕೆ ಪ್ರಬಲವಾದ ಸಾಧನವಿದ್ದಂತಾಗುವುದು. ಈ ಕೆಲಸಕ್ಕಾಗಿ ಧಾರಾಳವಾದ ಮನಸ್ಸನ್ನೂ, ಅಲ್ಪಧಿಷಣಗಳನ್ನು ಲೆಕ್ಕಿಸದೆ ಗುಣಗ್ರಹಣ ಮಾಡುವ ತಾಳ್ಮೆಯನ್ನೂ ಪಡೆದ ಪಂಡಿತರ ಉಪಸಭೆಯೊಂದನ್ನು ನಿರ್ಮಿಸಿದುದೇ ಆದರೆ ಈ ಮಹಾಕಾರ್ಯವು ಬಹು ಸಮರ್ಪಕವಾಗಿ ನಡೆಯುವುದು; ಹಾಗಲ್ಲದೆ ತಮ್ಮ ತಮ್ಮ ಗ್ರಂಥಗಳಿಗೇ ಪ್ರಶಸ್ತಿಯನ್ನುಂಟುಮಾಡಿಕೊಳ್ಳುತ್ತಲೂ, ತಮ್ಮ ತಮ್ಮೊಳಗೆ ಒಬ್ಬರಿಗೊಬ್ಬರು ದಾಕ್ಷಿಣ್ಯದಿಂದ ಸಹಾಯಮಾಡುತ್ತಲೂ ಇರುವವವವರ ಕೈಗೆ ಈ ಕೆಲಸವು ಸಿಕ್ಕಿಹೋಯಿತೆಂದರೆ, ಉಪಕಾರವಾಗುವುದಕ್ಕೆ ಪ್ರತಿಯಾಗಿ ಅಪಾರವಾದ ಅನರ್ಥವುಂಟಾಗುವುದು. ಇದಲ್ಲದೆ ಇಂತಹ ಸಂಘವು ಗ್ರಂಥಕಾರರಿಗೆ ಆಶ್ರಯವನ್ನು ಕೊಟ್ಟು ಪ್ರೋತ್ಸಾಹಿಸಬಹುದು. ಆದರೆ ಈ ಭಾಗದಲ್ಲಿ ಸಂಘದಿಂದ ಆಗತಕ್ಕ ಸಹಾಯವು, ಅದಕ್ಕೆ ಸರ್ಕಾರದಿಂದಲೂ, ಪರೋಪಕಾರ ಬುದ್ಧಿಯುಳ್ಳ ಜನರಿಂದಲೂ ದೊರೆಯುವ ದ್ರವ್ಯಸಹಾಯಕ್ಕೆ ತಕ್ಕಂತೆ ಇರುವುದು. ಸರ್ಕಾರದವರು ತೋರಿಸಬಹುದಾದ ಸಹಾಯವನ್ನೂ, ಐಶ್ವರ್ಯವಂತರು ತಾವು ಕೊಡುವುದು ಸಾರ್ಥಕವಾಗುವುದೆಂದು ನಂಬಿ ಕೊಡಬಹುದಾದ ಸಹಾಯ ದ್ರವ್ಯವನ್ನೂ ಪಡೆದುಕೊಳ್ಳಲು ಈ ಸಂಘವು ಸರಿಯಾದ ಪಾತ್ರವೇ ಸರಿ. ಆದರೆ ಬೇಕಾದಷ್ಟು ಪ್ರಪಂಚಕ್ಕೆ ಶುಭ ಪರಿಣಾಮವೆ ಉಂಟಾಗುವುದೆಂಬ ಭಾವನೆಯನ್ನು ಹುಟ್ಟಿಸತಕ್ಕ ಲಘುಕಾವ್ಯಗಳು ನಮ್ಮಲ್ಲಿ ಇಲ್ಲವೇ ಇಲ್ಲವೆಂದು ಹೇಳಬೇಕಾಗಿದೆ. ನಮ್ಮ ದೇಶದ ಮತ್ತು ನಮ್ಮ ಜನಸಮುದಾಯದ ಆಚಾರ ವಿಚಾರಗಳನ್ನು ಪರಿಶೀಲಿಸಿ ತಿಳಿಯುವುದಕ್ಕೆ ತಕ್ಕ ಅವಕಾಶವಿಲ್ಲದ ಕಾರಣ ಈ ಲಘುಕಾವ್ಯರಚನೆಯ ಪ್ರಯತ್ನವು ಅಷ್ಟಾಗಿ ಸಫಲವಾಗದೆ ಇರಬಹುದು. ಆದರೂ ಲೇಖಕರಿಗೂ ವಾಚಕರಿಗೂ ಈ ವಿಧವಾದ ಗ್ರಂಥ ಲೇಖನದಲ್ಲಿಯೂ ಗ್ರಂಥಾವಲೋಕನದಲ್ಲಿಯೂ, ಅಭಿರುಚಿಯನ್ನು ಹುಟ್ಟಿಸುವುದಕ್ಕೆ ಪ್ರಯತ್ನಿಸುವುದರಿಂದ ಬಹಳ ಪ್ರಯೋಜನವಿದೆ.
ಇಂಗ್ಲಿಷ್ ಬಲ್ಲವರು ಮಾಡಬೇಕು ಎಂದು ಅವುಗಳನ್ನು ಇಲ್ಲಿ ನಾವು ನಿಷ್ಕಾರಣವಾಗಿ ಬಿಟ್ಟುಬಿಟ್ಟಿರಬಹುದಾ ಕೆಲಸ
ಇಷ್ಟಾಗಿ,ಈ ಕಾಲಕ್ಕೆ ತಕ್ಕ ಕನ್ನಡ ಗ್ರಂಥಗಳು ಅಭಿವೃದ್ಧಿಯಾಗದಿರುವುದಕ್ಕೆ, ಸಂಘಗಳೂ ಪೋಷಕರೂ ಇಲ್ಲದೆ ಇರುವುದು ಮುಖ್ಯ ಕಾರಣವಲ್ಲ; ಅದಕ್ಕೆ ಉತ್ಸಾಹಶೀಲರಾಗಿಯೂ ಅಲ್ಪ ಲಾಭದಿಂದಲೇ ತೃಪ್ತಿಪಡತಕ್ಕವರಾಗಿಯೂ ಇರುವ ಗ್ರಂಥಕಾರರು ಹೇರಳವಾಗಿ ಇಲ್ಲದಿರುವುದೇ ಕಾರಣವು. ಅಲ್ಲದೆ ನಮ್ಮವರೊಳಗೆ ಪಾಶ್ಚಾತ್ಯವಿದ್ಯೆಯಲ್ಲಿ ಪಾರಂಗತರಾದವರು ದೇಶ ಭಾಷೆಯನ್ನು ದೇಶ ಭಾಷಾಗ್ರಂಥಗಳನ್ನೂ ವ್ಯಾಸಂಗಮಾಡತಕ್ಕ ವಿಷಯದಲ್ಲಿ ಉದಾಸೀನರಾಗಿಯೂ ಇದ್ದಾರೆ. ದಿನಪತ್ರಿಕೆಗಳಲ್ಲಿರುವ ಕ್ಷಣಿಕ ವೃತ್ತಾಂತಗಳನ್ನೂ ತಾತ್ಕಾಲಿಕ ಗ್ರಂಥಗಳೆನ್ನಿಸಿಕೊಂಡು ಅತಿಸಾಮಾನ್ಯವಾದ ಕಲ್ಪಿತಕಥೆಗಳ ರೂಪದಲ್ಲಿ ಅಪರಿಮಿತವಾಗಿ ಪ್ರಕಟವಾಗುತ್ತಿರುವ ಅಲ್ಪವಿಷಯಗಳನ್ನೂ ಓದುವುದರಿಂದ ಎಷ್ಟು ಆನಂದವುಂಟಾಗುವುದೋ, ಅಷ್ಟೇ ಆನಂದವನ್ನೇ ನಮ್ಮ ಸ್ವಭಾಷೆಯಲ್ಲಿ ಬರೆದಿರುವ ಪ್ರಾಚೀನ ಗ್ರಂಥಗಳ ವ್ಯಾಸಂಗದಿಂದ, ಮತ್ತೊಂದು ರೀತಿಯಿಂದಲಾದರೂ ಅನುಭವಿಸಬಹುದೆಂಬುದನ್ನು ಈ ಜನರು ಅರಿಯಲಾರದವರಾಗಿದ್ದಾರೆ. ಆದುದರಿಂದ ಅಂತಹವರು ತಮ್ಮ ಭಾಷೆಯಲ್ಲಿಯೇ ದೊರೆಯುವ ಉತ್ಕೃಷ್ಟವಾದ ಗ್ರಂಥಗಳನ್ನು ಮನಃಪೂರ್ವಕವಾಗಿ ವ್ಯಾಸಂಗಮಾಡಿ, ಆ ಮೂಲಕ ತಾನಾಗಿ ಹುಟ್ಟುವ ದೇಶ ಭಾಷಾವಾತ್ಸಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ವಿನಯಪೂರ್ವಕವಾಗಿ ವಿಜ್ಞಾಪಿಸುತ್ತೇನೆ. ಹೀಗೆ ಮಾಡಿದುದೇ ಆದರೆ, ಇಂಗ್ಲಿಷ್ ಮೊದಲಾದ ಪಾಶ್ಚಾತ್ಯ ವಿದ್ಯೆಯಿಂದಲೂ, ಶಿಕ್ಷಣಕ್ರಮದಿಂದಲೂ ಉಂಟಾಗುವ ವಿಸ್ತಾರವಾದ ಜ್ಞಾನಭಂಡಾರಗಳ ಸಹಾಯದಿಂದ ಸ್ವಭಾಷೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಏನಾದರೂ ಯತ್ನಮಾಡಬೇಕೆಂಬ ಪ್ರೇರಣೆಯು ಅವರಿಗೇ ಹುಟ್ಟುವುದು.
ಕನ್ನಡ ಪುರೋಭಿವೃದ್ಧಿಗೆ ಮಹಾರಾಜರು ಸಿದ್ಧ
ಹಿಂದೆ ಬಹುಕಾಲದವರೆಗೆ ಉತ್ಕೃಷ್ಟದಶೆಯಲ್ಲಿದ್ದುದಾಗಿಯೂ, ಮುಂದೆಯೂ ಮಹಾಮಹಿಮರಾದ ಪಾಶ್ಚಾತ್ಯರ ನವೀನ ವಿದ್ಯಾಪಾಂಡಿತ್ಯದೊಡನೆಯೂ ನವೀನ ಶಿಕ್ಷಣಕ್ರಮದೊಡನೆಯೂ ತಕ್ಕ ಮಟ್ಟಿಗೆ ಸೇರಿ ಉತ್ತರೋತ್ತರಾಭಿವೃದ್ಧಿಗೆ ಬರಬಹುದಾಗಿಯೂ ಇರುವ ಈ ಕನ್ನಡ ಭಾಷೆಯನ್ನು ಪುರೋಭಿವೃದ್ಧಿಗೆ ತಂದು ಊರ್ಜಿತಪಡಿಸುವುದಕ್ಕೆ ನಮ್ಮ ಶ್ರೀಮನ್ಮಹಾರಾಜರವರು ತಮ್ಮ ದಿವ್ಯಚಿತ್ತದಲ್ಲಿ ನಿಜವಾದ ಅಭಿಮಾನವನ್ನೂ ಆದರಾತಿಶಯವನ್ನೂ ಧರಿಸಿದವರಾಗಿ ತಾವೂ ತಮ್ಮ ಸರ್ಕಾರದವರೂ ಸಾಧ್ಯವಾದ ಸಕಲ ಸಹಾಯಗಳನ್ನೂ ಕಲ್ಪಿಸಿಕೊಡಲು ಸಿದ್ಧರಾಗಿರುವರೆಂದು ನಾನು ದೃಢವಾಗಿ ಹೇಳುತ್ತೇನೆ.
Tag: Kannada Sahitya Sammelana 1, 1st Kannada Sahitya Sammelana
೨೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಮುದವೀಡು ಕೃಷ್ಣರಾಯ
ಮುದದ ಬೀಡಾಗಿದ್ದ ಮುದವೀಡು ಕೃಷ್ಣರಾಯರು ಕನ್ನಡಿಗರನ್ನು ಅಭಿಮಾನಧನರನ್ನಾಗಿಸಿದವರಲ್ಲಿ ಅಗ್ರಗಣ್ಯರು. ಹನುಮಂತರಾಯ ಗಂಗಾಬಾಯಿ ದಂಪತಿಗಳಿಗೆ ೨೪-೨-೧೮೭೪ರಲ್ಲಿ ಸುಪುತ್ರರಾಗಿ ಜನಿಸಿದ ಇವರು ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡಿದ್ದರಿಂದ ಚಿಕ್ಕಮ್ಮನ ಮನೆಯಲ್ಲಿ ಬೆಳೆದರು. ಪ್ರಾಥಮಿಕ ಶಿಕ್ಷಣ ಕಾರವಾರದಲ್ಲಿ ಮರಾಠಿ ಭಾಷೆಯಲ್ಲಿ ಆಗಿ, ಧಾರವಾಡದಲ್ಲಿ ಕನ್ನಡ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಣ ಪಡೆದರು. ಲೋಕಮಾನ್ಯ ತಿಲಕರ ಪ್ರಭಾವಕ್ಕೆ ಒಳಗಾಗಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿತ್ತರು.
೧೯೧0ರ ಸುಮಾರಿನಲ್ಲಿ ಕರ್ನಾಟಕ ವೃತ್ತ ಪತ್ರಿಕೆಯ ಸಂಪಾದಕರಾಗಿ ೧೮ ವರ್ಷಗಳ ಕಾಲ ಸಮರ್ಥವಾಗಿ ನಡೆಸಿದರು. ಸ್ವಲ್ಪಕಾಲ ಧನಂಜಯ ಪತ್ರಿಕೆ ನಡೆಸಿದರು. ಬಾಳಿನುದ್ದಕ್ಕೂ ನಿಶ್ಚಿತ ಗಳಿಕೆಯಿಲ್ಲದೆ ಬಾಳನ್ನು ಸಾಗಿಸಿದರು.
೧೯೨೪ರಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರು. ಗಾಂಧೀಜಿ ಅವರ ಪಾನನಿರೋಧ ಚಳವಳಿಯಲ್ಲಿ ಭಾಗವಹಿಸಿ ೨ ವರ್ಷ ಜೈಲುವಾಸ ಅನುಭವಿಸಿದರು. ಪ್ರಭಾವಶಾಲಿ ಭಾಷಣಕಾರರಾಗಿದ್ದರು. ಗುಡುಗಿನ ಮೊಳಗಿನಂತೆ ಭಾಷಣ ಮಾಡುತ್ತಿದ್ದರಿಂದ ಕರ್ನಾಟಕ ಗಂಡುಗಲಿ ಎಂದು ಹೆಸರಾದರು. ಸಮಾರಂಭಗಳಲ್ಲಿ ತಕ್ಷಣದಲ್ಲಿ ಅನುವಾದ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದರು. ಭಾರತ ಕಲೋತ್ತೇಜಕ ಸಮಾಜವೆಂಬ ಅಮೆಚೂರ್ ನಾಟಕ ಸಂಘವನ್ನು ಕಟ್ಟಿದರು. ಚಿರಂಜೀವಿ ಚಲನಚಿತ್ರ ತಯಾರಿಸಿ ನಷ್ಟಕ್ಕೆ ಒಳಗಾದರು.
ಕನ್ನಡದ ಕೆಚ್ಚೆದೆಯ ಸಿಂಹವಾಣಿಯ ಈ ಅಪೂರ್ವ ವ್ಯಕ್ತಿಯನ್ನು ೧೯೩೯ರಲ್ಲಿ ಬೆಳಗಾವಿಯಲ್ಲಿ ನಡೆದ ೨೪ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.
ಚಿತ್ತೂರು ಮುತ್ತಿಗೆ (ಕಾದಂಬರಿ), ವಿಕ್ರಮ (ನಾಟಕ ಅನುವಾದಿತ), ಶಶಿಕಲಾ (ನಾಟಕ ಅನುವಾದಿತ), ಸುಭದ್ರಾ (ನಾಟಕ ಅನುವಾದಿತ), ರಾಮರಾಜವಿಯೋಗ (ನಾಟಕ ಅನುವಾದಿತ), ಪ್ರೇಮಭಂಗ (ಸ್ವತಂತ್ರ ನಾಟಕ) – ಇವರ ಕೃತಿಗಳು
ದಿನಾಂಕ ೨-೯-೧೯೪೭ರಲ್ಲಿ ಮುದವೀಡರು ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨೪
ಅಧ್ಯಕ್ಷರು, ಮುದವೀಡು ಕೃಷ್ಣರಾಯ
ದಿನಾಂಕ ೨೫, ೨೬, ೨೭, ೨೮ ಡಿಸೆಂಬರ್ ೧೯೩೯
ಸ್ಥಳ : ಬೆಳಗಾವಿ
ಸಮ್ಮೇಳನದ ಅಧ್ಯಕ್ಷರು ಎಂತವರಿರಬೇಕು?
ನಾಡಿನ ಮುನ್ನಡೆಯನ್ನು ನಿಷ್ಕರ್ಷಿಸಿ ಅದನ್ನು ನೀಗಿಸಿ ಕೊಂಡು ಹೋಗಲು ಸಮರ್ಥರಾದ ಯೋಗ್ಯತಾ ಸಂಪನ್ನ ಪ್ರೌಢರನ್ನೇ ಮಹಾಸಭೆ ಸಮ್ಮೇಳನಗಳ ಅಧ್ಯಕ್ಷ ಸ್ಥಾನಕ್ಕೆ ಆರಿಸಬೇಕಲ್ಲದೆ, ದಿನ ಹೋಗಿ ದುರ್ಬಲರಾಗಿ, ವಿಚಾರಶಕ್ತಿ ಕುಂಠಿತವಾಗಿ, ಕಾರ್ಯಶಕ್ತಿ ನಶಿಸಿ ಹೋದವರನ್ನು ಅರಿಸತಕ್ಕದ್ದಲ್ಲವೆಂದು ಹಿಂದಿನ ಸಮ್ಮೇಳನದ ಕೊನೆಯಲ್ಲಿಯೇ ನಾನು ಎಚ್ಚರಿಸಿದೆನು. ಆದರೆ ನನಗೆ ಈ ಆಸಕ್ತಿಯು ಬಿಡಲಿಲ್ಲ. ಕೊನೆಗೆ ಇದೊಂದು ಇಷ್ಟಾಪತ್ತಿಯೆಂದೇ ನಾನು ಭಾವಿಸಿಕೊಳ್ಳಬೇಕಾಯಿತು. ಕನ್ನಡ ತಾಯಿಯ ಸೇವೆಗೆಂದು ಬಂದ ಯಾವ ಕರೆಯನ್ನೂ ನನ್ನೀ ಆಯುಷ್ಯದಲ್ಲಿ ಎಂದೂ ನಿರಾಕರಿಸದ ನಾನು ಇಡಿಯ ನಾಡಿನ ಒಪ್ಪಿತದ ಬಲದಿಂದ ನನಗೆ ಬಂದ ಬೆಳಗಾವಿಯವರ ಕರೆಯನ್ನು ಯಾವ ಮೋರೆಯಿಂದ ಅನಾದರಿಸಲೆಂಬ ನಾಚಿಕೆಯು ನನ್ನ ಅಂತರಂಗದಲ್ಲಿ ಪ್ರಬಲವಾಗಿ ನನ್ನನ್ನು ಇಂದು ತಮ್ಮೆಲ್ಲರ ನಡುವೆ ತಂದು ನಿಲ್ಲಿಸಿದೆ.
ಪರಿಷತ್ತನ್ನು ಕಟ್ಟಿದ ಕೀರ್ತಿಶೇಷರಾದ ಕನ್ನಡಿಗರು
ಮಹನೀಯರೇ, ಹೋದ ಸಲ ನಾವು ಬಳ್ಳಾರಿಯಲ್ಲಿ ಕೂಡಿದಾಗಿನಿಂದಿತ್ತ ಕಡೆಗೆ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಹೆಸರಾಂತ ಮಹನೀಯರು ಕೆಲವರು ನಮ್ಮನ್ನು ಅಗಲಿ ನಮಗೆ ಕಣ್ಮರೆಯಾಗಿರುವುದು ಅತ್ಯಂತ ವಿಷಾದಕರವಾಗಿದೆ. ಅಂತಹರೊಳಗೆ ಶ್ರೀಮಾನ್ ಮಹಿಷಿ ಶಾಮರಾಯರ ನಾಮನಿರ್ದೇಶನವನ್ನು ನಾನು ಮೊದಲು ಮಾಡಬೇಕಾಗಿದೆ. ಮೈಸೂರು ಸಂಸ್ಥಾನದ ಶಿಕ್ಷಣಶಾಖೆಯ ವರಿಷ್ಠಾಧಿಕಾರಿಗಳಾಗಿ ಕನ್ನಡಕ್ಕೆ ವಿಶೇಷವಾದ ಸೇವೆಯನ್ನು ಇವರು ಸಲ್ಲಿಸಿದುದುಂಟು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯ ವಿಷಯದಲ್ಲಿಯೂ ಈ ಮಹನೀಯರು ಹೆಚ್ಚಿನ ಆಸ್ಥೆಯಿಂದ ಕಾರ್ಯಮಾಡಿದರು. ಎರಡನೆಯದಾಗಿ ಮೈಸೂರು ಮಹಾರಾಜರ ಕಾಲೇಜಿನಲ್ಲಿ ಕನ್ನಡದ ಪ್ರೊಫೆಸರರಾಗಿದ್ದ ನನ್ನ ಜೀವದ ಗೆಳೆಯರು ಶ್ರೀಮಾನ್ ತಳುಕಿನ ವೆಂಕಣ್ಣಯ್ಯನವರು. ಇವರನ್ನು ಅರಿಯದ ಕನ್ನಡಿಗರೇ ವಿರಳವೆಂದು ಹೇಳಬಹುದು. ಇವರು ಕನ್ನಡ ನಾಡಿಗೂ ಸಾಹಿತ್ಯಕ್ಕೂ ಮಾಡಿದ ಸೇವೆಯನ್ನು ಬಣ್ಣಿಸುವುದು ನನ್ನ ಯೋಗ್ಯತೆಗೆ ಮೀರಿದ ಮಾತು. ಮೂರನೆಯವರು ಕೊಡಗಿನ ಶ್ರೀಮತಿ ಸೌಭಾಗ್ಯವತಿ ಗೌರಮ್ಮನವರು: ಕನ್ನಡ ಸಣ್ಣಕತೆಗಳ ಹೆಸರಾದ ಬರಹಗಾರ್ತಿಯರು. ಬಿ.ಟಿ.ಜಿ. ಕೃಷ್ಣ ಎಂಬ ಹೆಸರಿನಿಂದ ಕನ್ನಡ ಸಾಹಿತ್ಯ ಪ್ರಪಂಚಕ್ಕೆಲ್ಲ ಇವರು ಚೆನ್ನಾಗಿಯೇ ಪರಿಚಿತರಾಗಿದ್ದಾರೆ.
ಕೊಡಗಿನಿಂದ ಒಬ್ಬರೇ ಹೊರಟು ಅತಿ ದೂರದ ತಾಪದಾಯಕ ಪ್ರವಾಸವನ್ನು ಧೈರ್ಯದಿಂದ ಕೈಕೊಂಡು ಅನೇಕ ಬಗೆಯ ದೈಹಿಕ ಕಷ್ಟ ತಾಪಗಳನ್ನು ಆನಂದದಿಂದ ಸಹಿಸಿ, ಇತ್ತ ಕಡೆಯ ಕನ್ನಡ ಬಂಧು-ಭಗನಿಯರ ಜೊತೆಯಲ್ಲಿ ನಾಲ್ಕೆಂಟು ದಿನಗಳನ್ನು ಕಳೆಯಬೇಕೆಂಬ ಉತ್ಕಂಠೆಯಿಂದ ೧೯೩೭ರ ಜಮಖಂಡಿಯ ಸಾಹಿತ್ಯ ಸಮ್ಮೇಳನಕ್ಕೆ ಕೊಡಗಿನ ಕರ್ನಾಟಕ ಸಂದ ಪ್ರತಿನಿಧಿಗಳಾಗಿ ಅವರು ಬಂದದ್ದೇ ಅವರ ಅಂತರಂಗದೊಳಗಿನ ಕನ್ನಡದ ಭಕ್ತಿಯನ್ನು ಚೆನ್ನಾಗಿ ತೋರಿಸಿಕೊಡುತ್ತಿದೆ. ನಮ್ಮ ಮಿಕ್ಕ ಕನ್ನಡ ಭಗಿನಿಯರ ಮಾತು ಹಾಗಿರಲಿ- ಬಂಧುಗಳಾದರೂ ಸೌಭಾಗ್ಯವತಿ ಗೌರಮ್ಮನವರ ಕನ್ನಡಭಕ್ತಿಯನ್ನು ಅನುಕರಿಸಿದರೆ ಕನ್ನಡನಾಡಿನ ಉನ್ನತಿಗೆ ತಡವಾಗಲಾರದು.
ಪರಿಷತ್ತಿನ ಸ್ಥಾಪನೆಗೆ ಆಲೂರರ ಸಾಹಸ
ಕನ್ನಡನಾಡಿನ ಬೇರೆ ಬೇರೆ ಭಾಗಳಲ್ಲೆಲ್ಲ ತಾವು ಕನ್ನಡಮ್ಮನ ಮಕ್ಕಳು, ತಮ್ಮ ತಾಯಿಯ ನುಡಿ ಕನ್ನಡ, ಅದನ್ನುಳಿದ ಬೇರೆ ಭಾಷೆಗಳು ತಮ್ಮ ಮೇಲೆ ನಡೆಸುವುದು ದಬ್ಬಾಳಿಕೆ ಎಂಬ ‘ಸ್ವ’ತ್ವದ ಅಂಕುರವೂ ಸ್ವಸಂರಕ್ಷಣೆಯ ವಿಚಾರವೂ ಮೊಳೆದೋರಿ ಬೆಳೆಯುವಂತ ಕನ್ನಡನಾಡಿನ ಏಕೀಕರಣದ ಕಾರ್ಯವನ್ನು ಕೈಗೊಳ್ಳದೆ ಗತಿಯಿಲ್ಲ, ವಿಧಿಯಿಲ್ಲ ಎಂಬ ಮಾತು ವಿಚಾರವಂತ ಕನ್ನಡಿಗರಿಗೆಲ್ಲ ತಟ್ಟನೆ ಮನದಟ್ಟಾಯಿತು. ಆ ಮಾರ್ಗದಿಂದ ಪ್ರಯತ್ನ ನಡೆಯಿತು. ಶ್ರೀಮಾನ್ ಆಲೂರ ವೆಂಕಟರಾಯರು ಈ ಸತ್ಕಾರ್ಯದ ಪುರಸ್ಕಾರವನ್ನು ಕೈಗೊಂಡರು. ೧೯೧೭ರಲ್ಲಿ ಮೊದಲನೆಯ ‘’ಕನ್ನಡ ಗ್ರಂಥಕಾರರ ಸಮ್ಮೇಳನ”ವನ್ನು ವಿದ್ಯಾವರ್ಧಕ ಸಂಘದ ವಾರ್ಷಿಕೋತ್ಸವದ ಜೊತೆಯಲ್ಲಿಯೇ ಕೂಡಿಸಲಾಯಿತು. ಮೈಸೂರಿನ ದಿವಂಗತ ಶ್ರೀಮಾನ್ ಎಸ್.ಜಿ. ನರಸಿಂಹಾಚಾರ್ಯ, ಎಂ.ಎ. ಅವರು ಅದಕ್ಕೆ ಅಧ್ಯಕ್ಷರಾಗಿದ್ದರು. ಎರಡನೆಯ ಸಮ್ಮೇಳನವೂ ಧಾರವಾಡದಲ್ಲಿಯೇ ನಡೆಯಿತು. ಒಂದೇ ಸ್ಥಳದಲ್ಲಿ ಕೆಲವರೇ ಕೂಡಿ ನಡೆಸುವ ಸಮ್ಮೇಳನಗಳು ಫಲಕಾರಿಯಾಗಲಾರವೆಂಬ ಅನುಭವ ಬಂತು.
ಕನ್ನಡನಾಡು ಒಂದಾಗ ಬೇಕಾದರೆ ಇಂಥ ಸಮ್ಮೇಳನಗಳು ಎಲ್ಲ ಕಡೆಗೆ ಆಗಬೇಕೆಂಬ ಆಲೋಚನೆ ಹೊರಟಿತು. ಎಷ್ಟಾದರೂ ಮೈಸೂರು ಸೀಮೆ ಕನ್ನಡಕ್ಕೆ ತವರೂರು; ಗತಕಾಲದ ಕನ್ನಡ ವೈಭವಾವಶೇಷದ ಕುರುಹು; ವಿದ್ಯಮಾನ ಕಾಲದಲ್ಲಿ ಕನ್ನಡಕ್ಕೆ ಉಳಿದಿರುವ ಒಂದೆ ಒಂದು ಆಶ್ರಯಸ್ಥಾನ. ಇವೇ ಮೊದಲಾದ ವಿಚಾರಗಳಿಂದ ಮೈಸೂರಿನಲ್ಲಿಯೇ ಎಲ್ಲಿಯಾದರೂ ಮುಂದಿನ ಸಮ್ಮೇಳನದ ಯೋಜನೆ ಮಾಡಬೇಕೆಂದು ಶ್ರೀ ಆಲೂರ ವೆಂಕಟರಾಯರು ಯತ್ನಿಸಿದರು. ಅಲ್ಲಿಯ ವರಿಷ್ಠಾಧಿಕಾರಿಗಳನ್ನು ಕಂಡರು. ಪ್ರತಿಷ್ಠಿತ ಕನ್ನಡ ಪ್ರೇಮಿಗಳಿಗೆ ಭೆಟ್ಟಿಯಾದರು. ಕೊನೆಗೆ ನಾಲ್ಕಾರು ವರುಷಗಳ ಸತತ ಪ್ರಯತ್ನದಿಂದ ೧೯೧೫ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಅಲ್ಲಿಂದ ಮುಂದೆ ಕನ್ನಡದ ಚಳವಳಿಗೆ ಒಂದು ಬಗೆಯ ಕಸುವು ಬರತೊಡಗಿತು. ಅಂದಿನಿಂದಲೇ ಕನ್ನಡದ ಪುನರುದ್ಧಾರ ಕಾರ್ಯಕ್ಕೆ ಅಂದರೆ ಕರ್ನಾಟಕದ ಏಕೀಕರಣ ಕಾರ್ಯಕ್ಕೆ ನಿಜವಾಗಿಯೂ ಪ್ರಾರಂಭವಾಯಿತೆಂದು ಹೇಳಬಹುದು.
ಪರಿಷತ್ತಿನ ಸಂಟನೆಯ ಪ್ರೇರಕಶಕ್ತಿ
ವಿಭಕ್ತವಾದ, ಸಂಘಟಿತವಾದ, ವಿಸ್ಖಲಿತವಾದ ಕನ್ನಡ ಜನಾಂಗವು ಸುಸಂಘಟಿತವಾಗುವಂತೆ ಅವ್ಯಾಹತವಾಗಿ ಪ್ರಯತ್ನಪಟ್ಟು ಬಲುಮಟ್ಟಿಗೆ ಶ್ರೇಯಸ್ಸು ಪಡೆದ ಇಡಿಯ ಕನ್ನಡನಾಡಿನ ನಾಲ್ಕಾರು ಸಂಸ್ಥೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಲ್ಲೇಖನವನ್ನು ನಾನಿಲ್ಲಿ ಮೊದಲು ಮಾಡಬೇಕಾಗಿದೆ. ಅದುವೇ ಎಲ್ಲವುಗಳಿಗೂ ಹಿರಿದಾದ ಸಂಸ್ಥೆ. ಕಳೆದ ೨೫ ವರ್ಷಗಳಲ್ಲಿ ಕನ್ನಡ ಜನಾಂಗದಲ್ಲಿ ಉಂಟಾಗಿರುವ ಅಭಿನವ ಜಾಗೃತಿಯ ಶ್ರೇಯಸ್ಸಿನ ಬಹುಭಾಗವು ಪರಿಷತ್ತಿನದೇ ಎಂದು ಹೇಳಲು ಯಾವ ಅನುಮಾನವು ಇಲ್ಲ. ಹುಟ್ಟಿದ ನಾಲ್ಕನೆಯ ವರುಷದಿಂದಲೇ ಅದು ತನ್ನ ಅಖಿಲ ಕರ್ನಾಟಕದ ದೃಷ್ಟಿಯನ್ನು ನಾಲ್ಕು ಕಡೆಗಳಲ್ಲಿಯೂ ಹರಡಿ, ನಾಲ್ಕೂ ನಿಟ್ಟುಗಳ ಕನ್ನಡಿಗರನ್ನು ತನ್ನ ಕ್ಷೇತ್ರದೊಳಗೆ ಆಕರ್ಷಿಸಿಕೊಂಡು, ಕನ್ನಡ ನುಡಿಯ ವಿಷಯವಾಗಿ ಎಲ್ಲೆಲ್ಲಿಯೂ ಅಭಿಮಾನವನ್ನು ಜಾಗ್ರತಗೊಳಿಸಿ, ಎಲ್ಲ ಕಡೆಗಳ ಸುಶಿಕ್ಷಿತ ಸುಸಂಸ್ಕೃತ ಜನಸಮೂಹದಲ್ಲಿ ಕನ್ನಡಿಗರೆಲ್ಲರೂ ಒಂದೆಂಬ ಭಾವನೆಯನ್ನು ಬೇರೂರಿಸಿತು. ನಾನು ಬಲ್ಲಮಟ್ಟಿಗೆ ಕೀರ್ತಿಶೇಷ ಕರ್ಪೂರ ಶ್ರೀನಿವಾಸರಾಯರೂ ಹಾಗೆಯೇ ವಿದ್ಯಮಾನ ಶ್ರೀ ಡಿ.ವಿ. ಗುಂಡಪ್ಪನವರೂ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಮಾಡಿದ ಕಾರ್ಯಕಲಾಪಗಳಲ್ಲಿ ಅಖಂಡ ಕರ್ನಾಟಕದ ದೃಷ್ಟಿಯೇ ಪ್ರಭಾವಶಾಲಿಯಾಗಿರುವಂತೆ ಮೊದಲಿನಿಂದಲೂ ಪ್ರಯತ್ನಿಸಿದುದು ಕಂಡುಬರುತ್ತದೆ. ಪ್ರಕೃತದಲ್ಲಿ ಉಪಾಧ್ಯಕ್ಷರಾಗಿರುವ ಶ್ರೀಮಾನ್ ಬಿ.ಎಂ. ಶ್ರೀಕಂಠಯ್ಯನವರು ಪರಿಷತ್ತಿನಲ್ಲಿ ಅದೇ ಅಖಂಡ ಕರ್ನಾಟಕ ದೃಷ್ಟಿಯನ್ನು ಇನ್ನೂ ಹೆಚ್ಚಾಗಿ ಬೆಳೆಯಿಸುತ್ತಿರುವುದು ಎರಡು ವರ್ಷಗಳಲ್ಲಿ ಅನುಭವಕ್ಕೆ ಬಂದಿದೆ. ಪಂಡಿತ ಸಾಹಿತ್ಯ ಪ್ರಕಟನೆಯ ‘ಪರಿಷತ್ಪತ್ರಿಕೆ’ಯ ಜೊತೆಯಲ್ಲಿ ‘ಕನ್ನಡ ನುಡಿ’ಯು ಸಾಮಾನ್ಯ ಜನತೆಯಲ್ಲಿ ಕನ್ನಡ ಭಾಷೆ, ಸಾಹಿತ್ಯಗಳ ಅಭಿಮಾನವನ್ನು ಹೆಚ್ಚಿಸುತ್ತ, ಕನ್ನಡನಾಡಿನ ನಾಲ್ಕೂ ನಿಟ್ಟುಗಳ ಕನ್ನಡ ಚಟುವಟಿಕೆಗಳನ್ನು ತಿಳಿಸುತ್ತ ಇಡಿಯ ಕನ್ನಡ ಜನಾಂಗವನ್ನೊಂದುಗೂಡಿಸಿದ ಕಟ್ಟನ್ನು ಹೆಚ್ಚಾಗಿ ಬಿಗಿಯಲಾರಂಭಿಸಿದೆ. ವಾರ್ಷಿಕ ಸಮ್ಮೇಳನಗಳಲ್ಲದೆ ನಾಲ್ಕು ಕಡೆಗಳಲ್ಲಿಯೂ ವಸಂತೋತ್ಸವಗಳೂ, ಸಾಹಿತ್ಯಗೋಷ್ಠಿಗಳೂ ನಡೆಯಲಾರಂಭಿಸಿದುದರಿಂದ ಎಲ್ಲೆಲ್ಲಿಯೂ ಕನ್ನಡ ನುಡಿಯು ಭರದಿಂದ ಮುಂದೆ ಸಾಗಲನುವಾಗಿದೆ. ಪರಿಷತ್ತಿನಲ್ಲಿ ಮಹಿಳೆಯರಿಗಾಗಿ ಸ್ವತಂತ್ರ ಶಾಲೆಯೊಂದು ಏರ್ಪಟ್ಟಿದೆ. ಮಹಿಳಾ ಸಮ್ಮೇಳನಗಳನ್ನೂ, ಸಂತೋಷಕೂಟಗಳನ್ನೂ ನಡೆಯಿಸಿ ಕನ್ನಡದ ಬಗೆಗೆ ಅವರಲ್ಲಿ ಭಕ್ತಿ ಆದರಗಳನ್ನು ಹುಟ್ಟಿಸಿ ಹಬ್ಬಿಸುವ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಕನ್ನಡ ಕಾವ್ಯಗಳನ್ನು ಗಮಕಪದ್ಧತಿಯಿಂದ ಹಾಡಿ ಜನತೆಯಲ್ಲಿ ಅವುಗಳ ವಿಷಯವಾಗಿ ಅಭಿರುಚಿಯನ್ನು ಹುಟ್ಟಿಸಲೆಂದು ಕನ್ನಡ ಯುವ ಯುವತಿಯರಿಗೆ ಗಮಕ ಕಲೆಯನ್ನು ಕಲಿಸುವುದನ್ನು ಏರ್ಪಡಿಸಲಾಗಿದೆ. ಕನ್ನಡ ಸಾಹಿತ್ಯ ಪರೀಕ್ಷೆಗಳ ತರಗತಿಗಳು ನಿಷ್ಕರ್ಷಿಸಲ್ಪಟ್ಟು, ಅವುಗಳಲ್ಲಿ ಅಭ್ಯಾಮಾಡಿ ತೇರ್ಗಡೆ ಹೊಂದಿದವರಿಗೆ ಬಿರುದುಗಳನ್ನು ಕೊಡುವ ವ್ಯವಸ್ಥೆಮಾಡಿ, ಹಳಗನ್ನಡ ಸಾಹಿತ್ಯದ ಅಭ್ಯಾಸಮಾಡಿ ಪ್ರೋತ್ಸಾಹಿಸುವ ನೂತನ ಉಪಕ್ರಮವನ್ನು ಆರಂಭಿಸಲಾಗಿದೆ. ಎಂದರೆ, ಸಾಮಾನ್ಯವಾಗಿ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಈಗೀಗ ನಿಜವಾಗಿಯೂ ಕನ್ನಡ ವಿದ್ಯಾಪೀಠವಾಗುವ ಪೂರ್ವ ರೂಪವನ್ನು ಅಳವಡಿಸಿಕೊಳ್ಳಲು ಅನುವಾಗಿದೆಯೆಂದು ಹೇಳಬಹುದು. ಪರಿಷತ್ತು ಉದ್ದೇಶವಾಗಿಟ್ಟುಕೊಂಡಿರುವ ಕಾರ್ಯಗಳು ಕನ್ನಡನಾಡಿನ ಎಲ್ಲ ಭಾಗಗಳಲ್ಲಿಯೂ ಒಂದೇ ಬಗೆಯಾಗಿ ಸರಾಗವಾಗಿ ಸಾಗಲನುವಾಗುವಂತೆ ನಾಲ್ಕುಕಡೆಗಳಲ್ಲಿಯೂ ಪ್ರಾಂತ ಸಮಿತಿಗಳನ್ನು ನಿರ್ಮಿಸಿ, ಆಯಾ ಕ್ಷೇತ್ರಗಳಲ್ಲಿ ಕನ್ನಡದ ಬೆಳವಣಿಗೆಗೆ ಹೆಚ್ಚು ಅವಕಾಶ ದೊರೆಯುವಂತೆ ಹೆಚ್ಚಾಗಿ ಕಾರ್ಯ ಜರುಗಲು ಅನುಕೂಲತೆ ಕಲ್ಪಿಸಲಾಗಿದೆ. ಈ ಬಗೆಯಾಗಿ ಆಖಂಡ ಕರ್ನಾಟಕದಲ್ಲಿ ಕನ್ನಡಭಾಷೆ, ಸಾಹಿತ್ಯ, ವಾಙ್ಮಯ, ಸಂಸ್ಕೃತಿಗಳ ಸಂಗೋಪನ, ಸಂಘವರ್ಧನ ಕಾರ್ಯವು ಒಮ್ಮುಖವಾಗಿ ಶೀಘ್ರಗತಿಯಿಂದ ನಡೆಯಲು ಅನುಕೂಲವಾಗುವಂತೆ ನಮ್ಮ ಪರಿಷತ್ತಿನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಈ ಕಾರ್ಯಸಾಧನೆಗಾಗಿ ಹಗಲಿರುಳೂ ಹೆಣಗುತ್ತಿರುವ ಶ್ರೀಮಾನ್ ಶ್ರೀಕಂಠಯ್ಯನವರಿಗೆ ಕನ್ನಡಿಗರೆಲ್ಲರೂ ಕೃತಜ್ಞರಾಗಿರಬೇಕಾಗಿದೆ.
ಶ್ರೀಯುತರ ಆಗಾಧವಾದ ವಿದ್ವತ್ತು, ಕವಿತ್ವಪ್ರತಿಭೆ, ಇಂಗ್ಲಿಷ್ ವಾಙ್ಮಯ ಮೇಲೆ ಅವರಿಗಿರುವ ಪ್ರಭುತ್ವ- ಇವು ಅಸಾಮಾನ್ಯವಾಗಿದ್ದರೂ ಕನ್ನಡಕ್ಕಾಗಿ ಅವರಲ್ಲಿರುವ ಅಪಾರವಾದ ಪ್ರೇಮಾದರ ಭಕ್ತಿಗಳು, ಕನ್ನಡನಾಡು ಎಲ್ಲ ಬಗೆಯಿಂದಲೂ ಸ್ವತಂತ್ರವಾಗಿ ಏಕಸೂತ್ರನಿಬದ್ಧವಾಗಿ ಅದರ ಸಾಹಿತ್ಯವು ಸರ್ವಾಂಗ ಸುಂದರವಾಗಿ ವಿಪುಲವಾಗಿ ಸರ್ವಾದರಣೀಯವಾಗಿ ಬೆಳೆದು ಭಾರತದಲ್ಲಿಯೂ, ಜಗತ್ತಿನಲ್ಲಿಯೂ ಅದು ತನ್ನ ಯಶಸ್ಸನ್ನು ಮೆರೆಯಿಸಬೇಕೆಂಬ ಮಹದಾಕಾಂಕ್ಷೆಯಿಂದ ಅವರು ನಡೆಯಿಸಿರುವ ಜನಜಾಗೃತಿಯ ಕಾರ್ಯಗಳು ಹಾಗೆಯೇ ಕನ್ನಡಕ್ಕಾಗಿ ಅವರು ಮಾಡಿರುವ, ಮಾಡುತ್ತಿರುವ, ಅನನ್ಯ ಸಾಧಾರಣವಾದ ತ್ಯಾಗವು-ಇವೆಲ್ಲವುಗಳ ಮೂಲಕವಾಗಿ ಶ್ರೀಮನ್ಮಹಾರಾಜರವರಿಂದ ‘’ರಾಜಸೇವಾಸಕ್ತ”ರೆಂಬ ಬಹುಮಾನದ ಬಿರುದಿಗೆ ಪಾತ್ರರಾಗಿರುವ ಅವರು ನಿಜವಾಗಿಯೂ ‘ಕನ್ನಡ ಕುಲ ರನ್ನ’ ರಾಗಿರುವರೆಂದು ನಾನಿಲ್ಲಿ ನಿರ್ದೇಶಿಸದಿರಲಾರೆನು. ಇಂತಹ ಮಹನೀಯರ ನೇತೃತ್ವದಲ್ಲಿ ನಮ್ಮ ಸಾಹಿತ್ಯ ಪರಿಷತ್ತು ಯಾವ ಅಕುಂಚಿತ ದೃಷ್ಟಿಗೂ, ಸಂಕುಚಿತ ಬುದ್ಧಿಗೂ ಎಷ್ಟೂ ಎಡೆಗೊಡದಂತೆ, ವಿಶಾಲವಾದ ನಮ್ಮ ಕನ್ನಡ ಜನಾಂಗದ ಸರ್ವವಿಧದ ಆಭ್ಯುದಯ, ಸಾಧನಕ್ಕೆ ಹೆಚ್ಚುಹೆಚ್ಚಾಗಿ ತತ್ಪರವಾಗಿ ಪ್ರಯತ್ನಿಸುವಂತೆ ನಾವೆಲ್ಲರೂ ಅವರಿಗೆ ಅಂತಃಕರಣಪೂರ್ವಕವಾಗಿ ನೆರವನ್ನು ನೀಡಿ ನಮ್ಮೆಲ್ಲರ ಸಾಮಾನ್ಯಗುರಿಯನ್ನು ಬೇಗನೆ ಸಾಧಿಸಲು ಸಾಹಸಪಡೋಣ.
Tag: Kannada Sahitya Sammelana 24, Mudaveedu Krishnarao, Krishnaraya
೨೩ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ದಿವಾಕರ ರಂಗರಾಯರು
ಕರ್ನಾಟಕ ಏಕೀಕರಣದ ನೇತಾರರೂ, ದಕ್ಷ ಆಡಳಿತಗಾರರೂ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರೂ ಆದ ರಂಗರಾವ್ ರಾಮಚಂದ್ರ ದಿವಾಕರ (ಆರ್.ಆರ್. ದಿವಾಕರ್) ಅವರು ರಾಮಚಂದ್ರರಾವ್-ಸೀತಮ್ಮ ದಂಪತಿಗಳಿಗೆ ೩0-೯-೧೮೯೪ರಲ್ಲಿ ಧಾರವಾಡದಲ್ಲಿ ಜನಿಸಿದರು. ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದ ನಂತರ ೧೯೧೯ರಲ್ಲಿ ಎಲ್.ಎಲ್.ಬಿ ಪದವೀಧರರಾದರು. ೧೯೨0ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು.
೧೯೨೧ರಲ್ಲಿ ಕರ್ಮವೀರ ವಾರಪತ್ರಿಕೆ ಪ್ರಾರಂಭಿಸಿದರು. ಅನಂತರ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು.
ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು. ೧೯೪೮ರಿಂದ ೧೯೫೨ರವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. ೧೯೫೨ರಿಂದ ೧೯೫೭ರವರೆಗೆ ಬಿಹಾರದ ರಾಜ್ಯಪಾಲರಾಗಿದ್ದರು. ೧೯೬೨ರಿಂದ ೧೯೬೮ರವರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ಕರನಿರಾಕರಣ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಕರ್ಣಾಟಕ ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಕನ್ನಡ ಸಾಹಿತ್ಯ ಪರಿಷತ್ತು ೧೯೩೮ರಲ್ಲಿ ಬಳ್ಳಾರಿಯಲ್ಲಿ ನಡೆದ ೨೩ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿ ಗೌರವಿಸಿತು.
ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಕೃತಿಗಳನ್ನು ರಚಿಸಿರುವ ದಿವಾಕರರು ನಾನಾ ವಿಷಯಗಳಲ್ಲಿ ಗ್ರಂಥರಚನೆ ಮಾಡಿದ್ದಾರೆ. ದಿವಾಕರರ ಕೆಲವು ಮುಖ್ಯ ಕೃತಿಗಳು ಹೀಗಿವೆ:
ಉಪನಿಷತ್ಪ್ರಕಾಶ ಭಾಗ ೧-೨, ಉಪನಿಷತ್ತಿನ ಕಥಾವಲಿ, ಗೀತೆಯ ಗುಟ್ಟು, ಕರ್ಮಯೋಗವಚನಶಾಸ್ತ್ರ ರಹಸ್ಯವು, ಹರಿಭಕ್ತಿಸುಧೆ, ಮಹಾತ್ಮರ ಮನೋರಂಗ, ಎಂ.ಆರ್.ಶ್ರೀ ಅವರ ‘ನಾಗರಿಕ’ (ಹಿಂದಿಗೆ ಅನುವಾದ), ಮಹಾಯೋಗಿ (ಇಂಗ್ಲಿಷ್), ಬಿಹಾರ್ ಥ್ರೂ ದಿ ಏಜಸ್ (ಇಂಗ್ಲಿಷ್), ಕರ್ನಾಟಕ ಥ್ರೂ ದಿ ಏಜಸ್ (ಇಂಗ್ಲಿಷ್).
ಆರ್.ಆರ್. ದಿವಾಕರ್ ಅವರು ೧೫-೧-೧೯೯0ರಂದು ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨೩,
ಅಧ್ಯಕ್ಷರು, ರಂಗನಾಥ ರಾಮಚಂದ್ರ ದಿವಾಕರ
ದಿನಾಂಕ ೨೯,೩0,೩೧ ಡಿಸೆಂಬರ್ ೧೯೩೮
ಸ್ಥಳ : ಬಳ್ಳಾರಿ
ಪರಿಷತ್ತಿನ ಕಾರ್ಯಕ್ರಮ
ಭಾಷಾನುಗುಣ ಪ್ರಾಂತ ರಚನೆಯ ತತ್ತ್ವಕ್ಕೆ ಒಪ್ಪಿ, ಮುಂಬಯಿ, ಮದ್ರಾಸು ಸರಕಾರದವರು ಕರ್ನಾಟಕ ಪ್ರಾಂತೀಕರಣದ ಗೊತ್ತುವಳಿಗಳನ್ನು ಸ್ವೀಕರಿಸಿದ್ದು ನಮ್ಮ ಧ್ಯೇಯ ಸಾಧನೆಗೆ ಅನುಕೂಲವಾದ್ದರಿಂದ ನಾವು ಆಯಾ ಸರಕಾರದವರನ್ನು ಅಭಿನಂದಿಸುವದು ನಮ್ಮ ಕರ್ತವ್ಯ.
ಸಾಹಿತ್ಯ ಪರಿಷತ್ ಸಂಸ್ಥೆಯನ್ನು ಸದಸ್ಯ ಸಂಖ್ಯೆ, ಧನ, ಕಾರ್ಯಕರ್ತರು ಇವುಗಳಿಂದ ಹೆಚ್ಚು ಬಲವುಳ್ಳದ್ದನ್ನಾಗಿ ಮಾಡಲಿಕ್ಕೇಬೇಕು. ನಮ್ಮ ಸಾಹಿತ್ಯ ಪರಿಷತ್ತಿನ ಉದ್ದೇಶನೂಲಿಕೆಯನ್ನು ನೋಡಿದರೆ ಸಾಹಿತ್ಯದ ಬಗ್ಗೆ ಇದಕ್ಕೂ ಹೆಚ್ಚಿನದೇನಾದರೂ ಆಗಬೇಕು ಎಂದು ಹೇಳುವಂತೆ ಏನೂ ಉಳಿದಿಲ್ಲ. ಆ ಉದ್ದೇಶಗಳಲ್ಲಿಯೂ ಹಲವನ್ನೆತ್ತಿ ಸಾಧಿಸಲು ಯತ್ನಿಸುವದು ಅವಶ್ಯ ಎಂದು ಹೇಳಬಹುದು.
ಕನ್ನಡದಲ್ಲಿ ಅತ್ಯುಚ್ಛ ಸಾಹಿತ್ಯವು ನಿರ್ಮಾಣವಾಗಬೇಕೆಂದು ನಾವು ಬಯಸುವಂತೆ ಕರ್ನಾಟಕದಲ್ಲಿಯ ಪ್ರತಿಯೊಬ್ಬನಿಗೂ ಕನ್ನಡ ಓದು ಬರಹ ಬರುವಂತೆ ಮತ್ತು ಸರ್ವೇಸಾಮಾನ್ಯ ಜ್ಞಾನವೆಲ್ಲ ಅವನಿಗೆ ಕನ್ನಡದಲ್ಲಿ ದೊರಕುವಂತೆ ವ್ಯವಸ್ಥೆ ಮಾಡುವದು ನಮ್ಮ ಕರ್ತವ್ಯವೆಂದು ನಾವು ತಿಳಿದು ಸಾಗಲಿಕ್ಕೇಬೇಕು. ಈ ವಿಷಯದತ್ತ ನಾವು ಇನ್ನೂ ಅಷ್ಟು ಲಕ್ಷ್ಯ ಕೊಟ್ಟಿಲ್ಲ. ಕೊನೆಗೆ ಸರಕಾರದವರೇ ಇಂಥ ಕೆಲಸಗಳನ್ನು ಕೈಕೊಳ್ಳಬೇಕಾಗುತ್ತದೆ ಎಂಬ ಮಾತು ನಿಜ. ಆದರೆ ಸರಕಾರ ಈ ಕೆಲಸವನ್ನು ಕೈಕೊಳ್ಳುವಂತೆ ಮಾಡುವುದು ನಮ್ಮ ದೀರ್ಘಪ್ರಯತ್ನದಿಂದಲೇ ಐಕ್ಯವು. ಇದೇ ನಾಲ್ಕು ಒಳ್ಳೆ ಕಾವ್ಯಪುಸ್ತಕಗಳು ಹೊರಟರೆ ಅದರಿಂದ ನಮ್ಮ ಉದ್ಧಾರವಾಗುವುದಿಲ್ಲ. ಜನಸಾಮಾನ್ಯರ ಕಾಲವಿದು. ಆದುದರಿಂದ ಎಲ್ಲರಿಗೂ ನುಡಿಯ ಜ್ಞಾನವಾದಾಗಲೇ ಮುಂದೆ ಆ ತಳಹದಿಯ ಮೇಲೆ ನಮ್ಮ ಸಾಹಿತ್ಯಮಂದಿರವನ್ನು ಸುವ್ಯವಸ್ಥಿತವಾಗಿ ಕಟ್ಟಲು ಅಸ್ಪದವಿರುವದು.
ಕನ್ನಡದಲ್ಲಿ ಸುಧಾರಣೆಗಳು
ಕನ್ನಡ ಮೊಳೆಗಳ ಜೋಡಣೆಯಲ್ಲಿ ಸುಧಾರಣೆಯಾಗುವದು ಆವಶ್ಯವೆಂದು ಎಲ್ಲರಿಗೂ ಎನಿಸುತ್ತ ಬಂದಿದೆ. ಈಗ ಹೊಸ ಮೊಳೆಗಳನ್ನು ತಯಾರಿಸದೆ, ಇದ್ದುದರಲ್ಲಿ ಯಾವ ಸುಧಾರಣೆ ಮಾಡಬಹುದೆಂಬುದನ್ನು ಪರಿಷತ್ತಿನವರು ‘ಕನ್ನಡ ಬಾವುಟ’ದಲ್ಲಿ ತೋರಿಸಿರುವರು. ಅದರಲ್ಲಿಯ ಅನೇಕ ಸೂಚನೆಗಳು ಗ್ರಹಿಸಲು ಯೋಗ್ಯವಾಗಿವೆ. ದಿನಪತ್ರಿಕೆ ಹಾಗೂ ಇತರ ಪತ್ರಿಕೆಯವರು ಅವುಗಳಲ್ಲಿಯ ಹಲವನ್ನಾದರೂ ಸ್ವೀಕರಿಸಿದರೆ ಅದು ಸುಧಾರಣೆಯ ಮೊದಲನೆಯ ಹೆಜ್ಜೆಯಾಗಬಹುದು.
ಕನ್ನಡದಲ್ಲಿ ಲಘುಲಿಪಿ ಹಾಗೂ ಟೈಪ್ರೈಟರ್ ಇವುಗಳ ಅತ್ಯಂತ ಆವಶ್ಯಕತೆ ಇದೆ. ಇವು ಆಗುವವರೆಗೆ ನಮ್ಮ ಪತ್ರವ್ಯವಹಾರವನ್ನೂ, ಪರಿಷ್ಪತ್ರಗಳನ್ನು ಕನ್ನಡದಲ್ಲಿ ಬರೆಯುವುದು ಅವಶ್ಯಕವೇ ಆಗಿದೆ. ಆದ್ದರಿಂದ ಇತ್ತ ನಾವೆಲ್ಲರೂ ಗಮನಕೊಡಬೇಕು. ಗ್ರಾಮೋಫೋನ್, ರೇಡಿಯೋ, ಸಿನಿಮಾ ಮುಂತಾದ ಕ್ಷೇತ್ರಗಳಲ್ಲಿಯೂ ಕನ್ನಡಿಗರು ತಮ್ಮ ಹಕ್ಕುಬಾಧ್ಯತೆಗಳನ್ನು ಸ್ಥಾಪಿಸಲಿಕ್ಕೇ ಬೇಕು. ಹಾಗೂ ಆ ರೀತಿ ಮಾಡುವವರಿಗೆ ನಾವು ಬಲಕೊಡಬೇಕು.
Tag: Kannada Sahitya Sammelana 23, Diwakara Rangarao, Diwakara Rangaraya
೨೨ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಬೆಳ್ಳಾವೆ ವೆಂಕಟನಾರಣಪ್ಪ
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ವಿಜ್ಞಾನರಂಗದಲ್ಲಿ ಮತ್ತು ಸಾರ್ವಜನಿಕರಂಗದಲ್ಲಿ ಅವಿಶ್ರಾಂತವಾಗಿ ದುಡಿದ ಮಹನೀಯರು ಬೆಳ್ಳಾವೆ ವೆಂಕಟನಾರಣಪ್ಪ. ಅವರು ವೆಂಕಟಕೃಷ್ಣಯ್ಯ- ಲಕ್ಷ್ಮೀದೇವಿ ಅವರ ಪುತ್ರರಾಗಿ ೨-೧0-೧೮೭೨ರಲ್ಲಿ ಜನಿಸಿದರು. ತುಮಕೂರಿನಲ್ಲಿ ಪ್ರೌಢಶಾಲಾಶಿಕ್ಷಣ ಮುಗಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ೧೮೯೨ ರಲ್ಲಿ ಬಿ.ಎ. ಪದವಿ ಪಡೆದು ಮದ್ರಾಸ್ ವಿಶ್ವವಿದ್ಯಾನಿಲಯದಿಂದ ೧೯0೩ರಲ್ಲಿ ಎಂ.ಎ. ಪದವಿ ಗಳಿಸಿದರು.
೧೮೯೨ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ೧೪ ವರ್ಷಗಳ ಕಾಲ ಎಫ್.ಎ. ತರಗತಿಗಳಿಗೆ ಮಾನವ ಶರೀರ ಶಾಸ್ತ್ರ ಬೋಧಿಸಿದರು. ೩0 ವರ್ಷಗಳ ಸೇವೆಯ ನಂತರ ಸ್ವಇಚ್ಛೆಯಿಂದ ೧೯೨೩ರಲ್ಲಿ ನಿವೃತ್ತರಾದರು.
ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾಗಿ ಆಧಾರಸ್ತಂಭದಂತೆ ದುಡಿದು ಕೃಷ್ಣರಾಜ ಪರಿಷನ್ಮಂದಿರ ಕಟ್ಟಡದ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸಿದರು. ಪರಿಷತ್ತಿನ ಕಾರ್ಯದರ್ಶಿಗಳಾಗಿ (೧೯೧೬, ೧೯೨೨-೨೬ರಲ್ಲಿ) ದುಡಿದಿದ್ದರು. ೧೯೨0-೧೯೨೧, ೧೯೨೭-೧೯೩೩ವರೆಗೆ ಕೋಶಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು. ೧೯೧೯-೧೯೩೬ರವರೆಗೆ ಪರಿಷತ್ಪತ್ರಿಕೆ ಸಂಪಾದಕ ಮಂಡಳಿ ಸದಸ್ಯರಾಗಿದ್ದರು. ಬಸವನಗುಡಿ ಸಹಕಾರಿ ಸಂಘಗಳ ಸ್ಥಾಪಕ ಸದಸ್ಯರಾಗಿ, ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಸ್ಥಾಪಕರಾಗಿ, ಬೆಂಗಳೂರು ಸಿಟಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ, ಮಾಗಡಿ ವೈದಿಕ ಧರ್ಮಶಾಲೆಯ ನಿರ್ದೇಶಕರಾಗಿ, ಮುಲಕನಾಡು ಸಭೆಯ ಅಧ್ಯಕ್ಷರಾಗಿ- ಇನ್ನೂ ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದರು. ಬಸವನಗುಡಿಯ ಮಲ್ಲಿಕಾರ್ಜುನ ಗುಡಿಯನ್ನು ಜೀರ್ಣೋದ್ಧಾರ ಮಾಡಿದ್ದಾರೆ.
ಶ್ರೀಮನ್ಮಹಾರಾಜರು ಇವರ ಸಾರ್ವಜನಿಕ ಸೇವೆಗೆ ಮೆಚ್ಚಿ ರಾಜಸೇವಾಸಕ್ತ ಬಿರುದನ್ನು ದಯಪಾಲಿಸಿದರು. ೧೯೩೭ರಲ್ಲಿ ಜಮಖಂಡಿಯಲ್ಲಿ ನಡೆದ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ನೀಡಿ ಗೌರವಿಸಿದರು. ೧-೧೧-೧೯೪೧ರಲ್ಲಿ ಬೆಂಗಳೂರಿನ ನಾಗರಿಕರು ಮಾನಪತ್ರ ನೀಡಿ ಗೌರವಿಸಿದರು.
ನಿಘಂಟು, ವಿಜ್ಞಾನ, ಪಠ್ಯಗ್ರಂಥಗಳನ್ನು ರಚಿಸಿರುವ ಬೆಳ್ಳಾವೆ ವೆಂಕಟರಮಣಯ್ಯನವರ ಮುಖ್ಯ ಕೃತಿಗಳು ಹೀಗಿವೆ:
ಜೀವವಿಜ್ಞಾನ (೧೯೩೯), ಗುಣಸಾಗರ (ಅನುವಾದಿತ ಕಾದಂಬರಿ), ಕನ್ನಡ ಐದನೆಯ ಪುಸ್ತಕ (ಪಠ್ಯ), ವಿಕ್ರಮಾರ್ಜುನ ವಿಜಯ (ಸಂಪಾದಿತ), ಸೋಮೇಶ್ವರ ಶತಕ (ಸಂಪಾದಿತ), ಶಬ್ದಮಣಿದರ್ಪಣ (ಸಂಪಾದಿತ), ಇಂಗ್ಲಿಷ್-ಕನ್ನಡ ನಿಘಂಟು (ಸಂಪಾದಕತ್ವ), ವಿಜ್ಞಾನ ಮಾಸಪತ್ರಿಕೆ (ಸಂಪಾದನೆ), ಪಂಪರಾಮಾಯಣ (ಸಂಪಾದಿತ) ಇತ್ಯಾದಿ
೩-೮-೧೯೪೩ರಲ್ಲಿ ಬೆಂಗಳೂರಿನಲ್ಲಿ ಬೆಳ್ಳಾವೆ ವೆಂಕಟನಾರಣಪ್ಪನವರು ವಿಧಿವಶರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨೨
ಅಧ್ಯಕ್ಷರು, ಬೆಳ್ಳಾವೆ ವೆಂಕಟನಾರಾಯಣಪ್ಪ
ದಿನಾಂಕ ೨೯,೩0,೩೧ ಡಿಸೆಂಬರ್ ೧೯೩೭
ಸ್ಥಳ : ಜಮಖಂಡಿ
ಪರಿಷತ್ತಿನ ಸ್ಥಾಪನೆ ವಿಚಾರ
ಇನ್ನು ಕಾರ್ಯರಂಗಕ್ಕೆ ಇಳಿಯೋಣ. ಮೊದಲನೆಯ ಪ್ರಸ್ತಾಪವು ಕರ್ಣಾಟಕ ಸಾಹಿತ್ಯ ಪರಿಷತ್ತಿನದು. ಈ ಸಂಸ್ಥೆಯು ಈಗ ೨೨ ವರ್ಷಗಳ ಹಿಂದೆ ಮೈಸೂರು ಶ್ರೀಮನ್ಮಹಾರಾಜರ ಉದಾರಾಶ್ರಯದಲ್ಲಿ ದೇಶವತ್ಸಲರಾದ ಸರ್. ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಂದ ಸ್ಥಾಪಿತವಾಯಿತು. ಇದನ್ನು ಆದಿಯಿಂದಲೂ ಅಖಿಲ ಕರ್ಣಾಟಕ ಸಂಸ್ಥೆಯೆಂದೇ ಮೈಸೂರಿನವರು ಭಾವಿಸಿಕೊಂಡಿರುತ್ತಾರೆ. ಇಷ್ಟು ಕಾಲ ಈ ಸಂಸ್ಥೆಯು ಒಂದೇ ಸಮನಾಗಿ ಕೆಲಸ ಮಾಡುತ್ತಿರುವುದು, ಮೈಸೂರು ಶ್ರೀಮನ್ಮಹಾರಾಜರವರ ಸರ್ಕಾರದ ಉದಾರಾಶ್ರಯದಿಂದ, ಇದುವರೆಗೆ ಅರ್ಧ ಲಕ್ಷ ರೂಪಾಯಿಗಳ ಮೇಲೆ ಆ ಸರ್ಕಾರದ ಸಹಾಯ ದೊರೆತಿರಬಹುದು. ಇನ್ನು ಮುಂದೆಯೂ ಈ ಸಹಾಯ ದೊರೆಯಬೇಕಾದರೆ ಎಲ್ಲ ಪ್ರಾಂತಗಳ ಕನ್ನಡಿಗರೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಹೊರತು ಸಾಗುವಂತಿಲ್ಲ. ಈ ೨೨ ವರ್ಷಗಳಲ್ಲಿ ಪರಿಷತ್ತು ಕನ್ನಡಕ್ಕೆ ಎಷ್ಟು ಅಮೂಲ್ಯವಾದ ಪ್ರೋತ್ಸಾಹವಿತ್ತಿದೆಯೆಂಬುದನ್ನು ಆದಿಯಿಂದಲೂ ಪ್ರಕಟವಾಗುತ್ತಿರುವ ‘’ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿ”ಯ ಸಂಚಿಕೆಗಳನ್ನು ಓದುವುದರಿಂದಲೂ ಪರಿಷತ್ತಿನ ‘’ಹನ್ನೆರಡು ವರ್ಷದ ಕಾರ್ಯಕಲಾಪ”ದ ವರದಿಯಿಂದಲೂ ತಿಳಿಯಬಹುದು. ಕನ್ನಡ ನಾಡಿನ ನಾನಾ ಭಾಷೆಗಳ ಕನ್ನಡ ಭಾಷಾಭಿಮಾನಗಳನ್ನು ಒಟ್ಟುಗೂಡಿಸಿ ಅವರಲ್ಲಿ ಭ್ರಾತೃಭಾವವನ್ನು ಹುಟ್ಟಿಸಿ ಕನ್ನಡ ಸಾಹಿತ್ಯವನ್ನು ಇಷ್ಟರಮಟ್ಟಿಗೆ ಮುಂದುವರಿಸಿದ ಕೀರ್ತಿಯು ಪರಿಷತ್ತಿಗೆ ಸಲ್ಲುವುದು. ೧೯೧೫ನೆಯ ಇಸವಿಯಲ್ಲಿ ಬೆಂಗಳೂರಲ್ಲಿ ನೆರೆದ ಮೊದಲನೆಯ ಪರಿಷತ್ ಸಮ್ಮೇಳನದ ವೈಭವವನ್ನು ನೋಡಿದವರು ಈ ಸಭೆಯಲ್ಲಿ ಕೆಲವರಿರುವರು. ಅಂದಿನ ಕನ್ನಡದ ಕಡುಗಲಿಗಳಲ್ಲಿ ಅನೇಕರು ಈಗ ಅದೃಶ್ಯರಾಗಿರುವರು; ಕೆಲವರು ಕನ್ನಡಕ್ಕಾಗಿ ಇನ್ನೂ ದುಡಿಯುತ್ತಿರುವರು. ಆದರೆ ಇಷ್ಟು ದೀರ್ಘ ಕಾಲ ಕಳೆದರೂ ಪರಿಷತ್ತಿನ ಉದ್ದೇಶಗಳು, ಇನ್ನೂ ನೆರವೇರದೆ ಇರುವುದು ನಮ್ಮ ದುರ್ದೈವವೆಂದೇ ಹೇಳಬೇಕು. ಮಹಾರಾಷ್ಟ್ರದಂತೆ ಕನ್ನಡಿಗರಲ್ಲಿ ಒಗ್ಗಟ್ಟಿಲ್ಲ: ನಮ್ಮ ಮಾತೆಯ ಹೆಸರನ್ನು ‘ಕರ್ಣಾಟಕ’ ಎಂದು ಕೆಲವರೂ, ‘ಕರ್ನಾಟಕ’ ಎಂದು ಮತ್ತೆ ಕೆಲವರೂ ಹಠ ಹಿಡಿದು ಬರೆಯಲು ಸಾಧಿಸುತ್ತ ಬಂದು, ಒಂದು ಶಬ್ದಕ್ಕೆ ಏಕರೂಪತೆ ಕೊಡಲು ಕೂಡ ಒಪ್ಪದ ನಾವು ಒಗ್ಗಟ್ಟಾಗುವುದು ಹೇಗೆ?
ಪರಿಷತ್ತು ಮಾಡಬೇಕಾದ ಕಾರ್ಯಗಳು
ಕರ್ಣಾಟಕ ಸಾಹಿತ್ಯ ಪರಿಷತ್ತು ಮಾಡಬೇಕಾದ ಮುಖ್ಯ ಕಾರ್ಯಗಳು ಯಾವುವೆಂದೂ, ಅವು ಕಾರ್ಯರೂಪಕ್ಕೆ ಬರಬೇಕಾದರೆ ಏನು ಮಾಡಬೇಕೆಂದೂ ೧೯೧೪ನೆಯ ಇಸವಿಯಲ್ಲಿ ಮೈಸೂರು ಅರ್ಥಸಾಧಕ ಸಮಾಜದ ಉಪಸಂಘದವರು ಅಲೋಚಿಸಿ ಒಂದು ತೀರ್ಮಾನಕ್ಕೆ ಬಂದು ಆ ವಿಷಯಗಳನ್ನು ಕುರಿತು ಸಲಹೆಗಳನ್ನು ಬರೆದು ಕಳುಹಿಸುವಂತೆ ಕರ್ಣಾಟಕದ ಎಲ್ಲ ಪ್ರಾಂತಗಳವರಿಗೂ ಆಹ್ವಾನವಿತ್ತರು. ಎಲ್ಲ ಪ್ರಾಂತಗಳಿಂದಲೂ ಸಲಹೆಗಳೇನೋ ಬಂದುವು; ಆದರೆ ಕಾರ್ಯ! ಇಗೋ ನೋಡಿರಿ, ಆ ವಿಷಯಗಳು:-
೧. ಕನ್ನಡನಾಡಿನ ಬೇರೆ ಬೇರೆ ಭಾಗಗಳಲ್ಲಿರುವ ಭಾಷಾಭಿಜ್ಞರಲ್ಲಿ ಐಕಮತ್ಯವನ್ನೂ ಪರಸ್ಪರ ಸೌಹಾರ್ದವನ್ನೂ ಹೆಚ್ಚಿಸುವುದಕ್ಕಾಗಿ ಉತ್ತಮೋತ್ತಮೋಪಾಯಗಳನ್ನು ನಿರ್ಧರಿಸುವುದು;
೨. ಕನ್ನಡ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಪ್ರಚಾರದಲ್ಲಿರುವ ಗ್ರಾಂಥಿಕ ಭಾಷೆಯನ್ನು ಒಂದೇ ರೂಪಕ್ಕೆ ತರಲು ತಕ್ಕ ಮಾರ್ಗವನ್ನು ನಿಶ್ಚಯಿಸುವುದು;
೩. ಕನ್ನಡವನ್ನೋದುವ ವಿದ್ಯಾರ್ಥಿಗಳಿಗೆ ಎಲ್ಲ ವಿದ್ಯಾ ಶಾಲೆಗಳಲ್ಲಿಯೂ ಪಾಠದ ಪುಸ್ತಕಗಳು ಒಂದೇ ಆಗಿರುವುದಕ್ಕೆ ಬೇಕಾದ ಪ್ರಯತ್ನಗಳನ್ನು ಮಾಡುವುದು;
೪. ಕನ್ನಡವನ್ನಾಡುವ ಜನಸಾಮಾನ್ಯರಲ್ಲಿ ಲೋಕ ವ್ಯವಹಾರ ಜ್ಞಾನವು ಸುಲಭವಾಗಿ ಹರಡುವಂತೆ ತಕ್ಕ ಪುಸ್ತಕಗಳನ್ನು ಬರೆಯಿಸಿ ಪ್ರಚಾರ ಮಾಡುವುದಕ್ಕೆ ಸಾಧಕವಾದ ಉತ್ತಮೋಪಾಯಗಳನ್ನು ನಿರ್ಣಯಿಸುವುದು;
೫. ಕನ್ನಡದಲ್ಲಿ ಬರೆಯುವ ಭೌತಿಕಾದಿ ನಾನಾ ಶಾಸ್ತ್ರಗಳಲ್ಲಿ ಪ್ರಯೋಗಿಸಬೇಕಾದ ಪಾರಿಭಾಷಿಕ ಶಬ್ದಗಳನ್ನು ನಿರ್ಣಯಿಸುವುದಕ್ಕೆ ತಕ್ಕ ಉತ್ತಮೋಪಾಯಗಳನ್ನು ಪರಿಶೀಲಿಸುವುದು.
ಇವನ್ನು “ಸದ್ದೇಶ ಪಂಚಕ” ಎಂದು ಒಬ್ಬ ಪಂಡಿತರು ಹೇಳಿರುತ್ತಾರೆ. ಈ ಉದ್ದೇಶಗಳಲ್ಲಿ ಒಂದಾದರೂ ಅವಶ್ಯಕವಲ್ಲದುದು ಉಂಟೆ? ಈ ೨೨ ವರ್ಷಗಳಲ್ಲಿ ಈ ಉದ್ದೇಶಗಳು ತಕ್ಕಮಟ್ಟಿಗಾದರೂ ಫಲವಾಗುವಂತೆ ನಾವೇನು ಮಾಡಿರುವೆವು?
ಪರಿಷತ್ತಿನ ನಿರ್ಣಯಗಳು
ಪ್ರತಿ ಸಾಹಿತ್ಯ ಸಮ್ಮೇಳನದಲ್ಲಿಯೂ ಅನೇಕ ಠರಾವುಗಳನ್ನು ಏಕಕಂಠತೆಯಿಂದ ಹೊರಡಿಸುವೆವು. ಆದರೆ ಅವುಗಳ ವಿಷಯವಾಗಿ ನಮ್ಮ ಮೇಲಿರುವ ಜವಾಬ್ದಾರಿಯನ್ನು ಎಷ್ಟು ಮಟ್ಟಿಗೆ ಲಕ್ಷ್ಯಕ್ಕೆ ತಂದುಕೊಂಡಿರುವೆವು? ಉದಾಹರಣೆಗಾಗಿ, ಕೆಲವು ಗೊತ್ತುವಳಿಗಳನ್ನು ತೆಗೆದುಕೊಳ್ಳೋಣ:-
೬/೧೪) ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಪ್ರಕಟ ಮಾಡುವವರು ಒಂದು ಪ್ರತಿಯನ್ನು ಪರಿಷತ್ತಿಗೆ ಉಚಿತವಾಗಿ ಕೊಡಬೇಕು.
ಇದನ್ನು ಎಷ್ಟು ಮಂದಿ ಬರೆಹಗಾರರು ಲಕ್ಷ್ಯಕ್ಕೆ ತಂದುಕೊಂಡಿರುವರು?
೭/೨, ೧೨/೩, ೧೭/೮, ೧೯/೭,೨೪, ಕರ್ಣಾಟಕ ಕ್ರಮಿಕ ಪುಸ್ತಕಗಳನ್ನು ಏಕರೂಪತೆಗೆ ತರುವುದು.
ಈ ಕಾರ್ಯವನ್ನು ನಡೆಸಲು ದೊಡ್ಡ ದೊಡ್ಡ ಭಾಷಾ ಪ್ರೇಮಿಗಳ ಮಂಡಲಿಗಳು ಏರ್ಪಟ್ಟುವು; ಆದರೆ ಕಾರ್ಯವೇನೂ ನಡೆಯಲಿಲ್ಲ.
೭/೧೨, ೮/೧೬, ೧೮/೧೭ ಕನ್ನಡದಲ್ಲಿ ವಿಶ್ವಕೋಶ ರಚನೆ.
ಇಷ್ಟು ಭಾರಿ ಕೆಲಸವು ಹಣವಿಲ್ಲದೆ ನಡೆಯುವ ಬಗೆ ಹೇಗೆ?
೮/೮, ಪಂಪಾ ಕ್ಷೇತ್ರ ಜೀರ್ಣೋದ್ಧಾರಕ ಸಭೆ.
೮/೧೧ ‘’ಶ್ರೀ ಕೃಷ್ಣರಾಜ ವಾಣಿವಿಲಾಸ” ಭಾರತದ ಪುರ್ನಮುದ್ರಣ.
೮/೧೩ ಕನ್ನಡ ಭಾಷೆಯ ಪ್ರಸಾರಕ್ಕೆ ದೊಡ್ಡದೊಂದು ಗ್ರಂಥ ಪ್ರಕಾಶಮಂಡಲಿ ಇರುವುದು ಅವಶ್ಯ. ಪುಸ್ತಕ ಪ್ರಕಟನೆಯೇ ಮುಖ್ಯೋದ್ದೇಶವುಳ್ಳ ‘’ಜಾಯಿಂಟ್ ಸ್ಟಾಕ್ ಕಂಪನಿ” ಏರ್ಪಾಡಾಗಬೇಕು.
೯/೭, ೧, ೨, ೩ನೆಯ ಇಯತ್ತೆಯ ಬಾಲಕರಿಗಾಗಿ ಅಧಿಕಪಾಠಗಳ ಪುಸ್ತಕಗಳನ್ನು ತೃಪ್ತಿಕರವಾಗಿ ಬರೆಯಿಸಬೇಕು.
೧೪/೨0 ಕರ್ಣಾಟಕಕ್ಕೆಲ್ಲ ಒಂದೇ ಬಾಲಬೋಧೆಯಾಗಬೇಕು.
ಬಾಲಬೋಧೆಯ ವಿಷಯವಾಗಿ ನನ್ನದೊಂದು ವಿಜ್ಞಾಪನೆ:ಆಡುವ ಭಾಷೆಯಲ್ಲಿ ಪ್ರಾಂತ ಪ್ರಾಂತಕ್ಕೂ ವ್ಯತ್ಯಾಸವಿರುವುದು ಸಹಜ. ಇದು ಎಲ್ಲ ದೇಶಗಳಲ್ಲೂ ಉಂಟು. ಬಾಲಕರು ಓದುವ ಪುಸ್ತಕಗಳಲ್ಲಿ ಅವರು ಮನೆಯಲ್ಲಾಡುವ ಮಾತುಗಳಿದ್ದರೆಯೇ ವಿಷಯ ಅವರ ಮನಸ್ಸಿಗೆ ಹತ್ತುವುದು. ಆದಕಾರಣ, ಮೊದಲೆ ಬಾಲಬೋಧೆಗೆ ಕೈ ಹಾಕದೆ ಭಾಷೆಯನ್ನು ಏಕರೂಪತೆಗೆ ತರುವ ಕಾರ್ಯವನ್ನು ಮೇಲಿನ ತರಗತಿಯ ಪುಸ್ತಕಗಳ ಮೇಲೆ ಮೊದಲು ನಡೆಸಬೇಕು. ಹೀಗೆ ಮಾಡಿದಲ್ಲಿ ಕನ್ನಡ ಭಾಷೆಯು ಎಂದಿಗಾದರೂ ಏಕರೂಪಕ್ಕೆ ಬಂದು ಕನ್ನಡಿಗರನ್ನು ಒಗ್ಗೂಡಿಸಲು ಸಾಧ್ಯವಾಗಬಹುದು.
ಭಾಷಾ ಏಕರೂಪತೆ ವಿಚಾರ
ಧಾರವಾಡ ಪ್ರಾಂತದ ಕೆಲವು ಗ್ರಂಥಗಳ ಭಾಷೆಯು ‘’ಮೈಸೂರಿನ ಭಾಷೆಗೆ ಹತ್ತಿರಹತ್ತಿರವಾಗಿ ಬರುತ್ತಿರುವುದು ನಮಗೆ ಸಂತೋಷಕರವಾದ ವಿಷಯ” ಎಂದು ಪರಿಷತ್ತಿನ ಗ್ರಂಥ ವಿಮರ್ಶಕಾರರು ಬರೆದರು. ಅದಕ್ಕೆ ‘’ಕರ್ಮವೀರ”ದ ಸಂಪಾದಕರು ರೇಗಿ ಬಿದ್ದು, “ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಮೈಸೂರು ಪ್ರಾಂತಿಕ ಅಭಿಮಾನವು ಪ್ರಮಾಣ ಮೀರಿರುತ್ತದೆಂಬುದು ನಮ್ಮ ಮೊದಲನೆಯ ಆಕ್ಷೇಪ. ಕರ್ಣಾಟಕದ ಎಲ್ಲ ಭಾಗದೊಳಗಿನ ಕನ್ನಡಕ್ಕಿಂತಲೂ ಮೈಸೂರ ಕನ್ನಡವೇ ಶ್ರೇಷ್ಠತರದ್ದೆಂದು ಇದರ ಸಂಪಾದಕರ ಕಲ್ಪನೆಯಿದ್ದಂತೆ ತೋರುತ್ತದೆ. ಇದು ಕನ್ನಡ ಭಾಷೆಯು ಅಭಿವೃದ್ಧಿ ದೃಷ್ಟಿಯಿಂದ ಎಳ್ಳಷ್ಟೂ ಹಿತಕರವಲ್ಲವೆಂದು ವಿನಯಪೂರ್ವಕವಾಗಿ ಅರಿಕೆ ಮಾಡಿಕೊಳ್ಳುತ್ತೇವೆ” ಎಂದು ಬರೆದಿರುತ್ತಾರೆ.
೧0/೩ ಕನ್ನಡನಾಡಿನ ಚರಿತ್ರೆ ಬರೆಯಿಸಬೇಕು.
೧೩/೯, ೧೪/೨೩, ೧೬/೧0 ಅಖಿಲ ಕರ್ಣಾಟಕಕ್ಕೆ ಒಂದು ವಿಶ್ವವಿದ್ಯಾನಿಲಯವಾಗಬೇಕು.
೧೫/೧0, ೧೮/೧೭ ಹೊಸಗನ್ನಡ ವ್ಯಾಕರಣ ರಚನೆ.
೧೬/೭, ಮುದ್ರಿತವಾದ ಪ್ರಾಚೀನ ಅರ್ವಾಚೀನ ಕನ್ನಡ ಪುಸ್ತಕಗಳೆಲ್ಲವೂ ಒಂದು ಕಡೆ ಇರುವಂತೆ ಕರ್ಣಾಟಕ ಸಾಹಿತ್ಯ ಪರಿಷತ್ತಿನವರು ಒಂದು ದೊಡ್ಡ ಪುಸ್ತಕಾಲಯವನ್ನು ಏರ್ಪಡಿಸಬೇಕು.
ಈ ವಿಷಯವನ್ನು ಇಷ್ಟು ವಿಸ್ತರಿಸಿ ಹೇಳುವುದಕ್ಕೆ ಕಾರಣ ತಿಳಿಯಬೇಕಾಗಿಲ್ಲ. ನಾನು ಪರದೂಷಣೆಗಾಗಿ ಇದನ್ನು ಹೇಳಿದೆನೆಂದು ತಿಳಿಯಲಾಗದು. ಮೇಲೆ ಹೇಳಿದ ಕೆಲಸಗಳನ್ನು ಮಾಡುವ ಜವಾಬ್ದಾರಿ ಹೊತ್ತ ಕೆಲವು ಮಂಡಲಿಗಳಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೇನೆ. ಒಪ್ಪಿಕೊಂಡ ಕೆಲಸವನ್ನು ಮಾಡದೆ ನಿರ್ಲಕ್ಷ್ಯದಿಂದಿದ್ದರೆ ನಾವು ದೋಷಿಗಳಾಗುವುದಿಲ್ಲವೆ? ಅಖಿಲ ಕರ್ಣಾಟಕಕ್ಕೆ ಒಂದು ವಿಶ್ವವಿದ್ಯಾನಿಲಯವು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಾಗಲಾರದೆಂದು ತೋರುತ್ತದೆ.
ಅಂಚೆ ಇಲಾಖೆಗೆ ಕನ್ನಡಾನುವಾದಗಳು
ಈ ಸಂದರ್ಭದಲ್ಲಿ ತಮಗೆ ಸಂತೋಷವನ್ನುಂಟು ಮಾಡುವ ಒಂದು ಸಂಗತಿಯನ್ನು ಬಿನ್ನಯಿಸುತ್ತೇನೆ. ಪೋಸ್ಟಲ್ ಇಲಾಖೆಯ ಮೇಲಧಿಕಾರಿಗಳು ಪೋಸ್ಟ್ ಆಫೀಸಿನ ಮನಿಆರ್ಡರ್ ನಮೂನೆ ಮೊದಲಾದ ಅನೇಕ ವಿಕೃತ ಕನ್ನಡ ಭಾಷೆಯ ನಮೂನೆಗಳನ್ನು ತಿದ್ದಿ ಸರಿಪಡಿಸುವುದಕ್ಕಾಗಿ ಪರಿಷತ್ತಿಗೆ ಕಳುಹಿಸಿದರು. ಈ ಕೆಲಸವನ್ನು ಪರಿಷತ್ತು ಒಪ್ಪಿಕೊಂಡು ಮಾಡಿ ಕಳುಹಿಸಿತು. ಹಾಗೆ ತಿದ್ದಿದ ಕನ್ನಡದ ನಮೂನೆಗಳನ್ನು ಪೋಸ್ಟ್ ಆಫೀಸಿನ ಅಧಿಕಾರಿಗಳು ಮುದ್ರಿಸಿದ್ದಾರೆ. ಇವು ಮುಂಬಯಿ ಮತ್ತು ಮದ್ರಾಸು ಪ್ರಾಂತಗಳಲ್ಲಿ ಚಲಾವಣೆಯಲ್ಲಿರಬಹುದು. ಅಲ್ಲಿಂದೀಚೆಗೆ ಬಂದ ಪೋಸ್ಟ್ ಆಫೀಸಿನ ಸೇವಿಂಗ್ಸ್ ಬ್ಯಾಂಕ್ ನಿಬಂಧನೆಗಳ ಇಂಗ್ಲಿಷ್ ಪುಸ್ತಕವನ್ನು ಪರಿಷತ್ತಿನಲ್ಲಿ ಸುಲಭವಾದ ಬಳಕೆಯ ಕನ್ನಡಕ್ಕೆ ಪರಿವರ್ತನೆ ಮಾಡಿ ಹಿಂದಕ್ಕೆ ಕಳುಹಿಸಲಾಯಿತು. ಇದು ಮದ್ರಾಸಿನಲ್ಲಿ ಮುದ್ರಣವಾಗಿದೆ. ಪ್ರತಿಗಳು ಕನ್ನಡನಾಡಿನ ಪೋಸ್ಟ್ ಅಫೀಸುಗಳಲ್ಲಿ ದೊರೆಯಬಹುದು.
ಕರ್ಣಾಟಕ ಸಾಹಿತ್ಯ ಪರಿಷತ್ತು ಏನೂ ಕೆಲಸ ಮಾಡಲಿಲ್ಲವೆಂದು ಆಗಾಗ್ಗೆ ದೂರು ಕೇಳುತ್ತೇವೆ. ನಾವೆಲ್ಲರೂ ಸೇರಿದುದೇ ಅಲ್ಲವೆ ಪರಿಷತ್ತು! ಕೆಲಸ ಮಾಡದೆ ನಮ್ಮನ್ನು ನಾವೇ ದೂರಿಕೊಂಡಲ್ಲಿ ಸಾರ್ಥಕವೇನು? ಯಾವ ಕೆಲಸಕ್ಕೂ ಹಣ ಬೇಕು. ಪರಿಷತ್ತು ಇಷ್ಟುಮಟ್ಟಿಗೆ ಕೆಲಸ ಮಾಡುತ್ತಿರುವುದು ಮೈಸೂರು ಶ್ರೀಮನ್ಮಾಹಾರಾಜರ ಉದಾರಾಶ್ರಯದಿಂದ. ನಾವೆಲ್ಲರೂ ನಮ್ಮ ಯೋಗ್ಯತೆಗೆ ತಕ್ಕಂತೆ ಕಾಣಿಕೆ ಸಲ್ಲಿಸದಿದ್ದರೆ ಪರಿಷತ್ತಿನ ಕೆಲಸಗಳು ನಡೆಯುವುದೆಂತು? ಪರಿಷತ್ತಿನ ಸದಸ್ಯರ ಪಟ್ಟಿಯನ್ನು ನೋಡಿರಿ, ಎಷ್ಟು ಪುಟ್ಟದ್ದಾಗಿದೆ!
ಕನ್ನಡಿಗರಿಗೆ ತಮ್ಮ ಭಾಷೆಯಲ್ಲಿ ಅಭಿಮಾನ ಹುಟ್ಟಿಸಿ ಭಾಷಾಭಿವೃದ್ಧಿ ಮಾಡಲು ಪರಿಷತ್ತು ಹೊಸ ಮಾರ್ಗಗಳನ್ನು ಹುಡುಕುತ್ತಿದೆ; ಈಗ ನಾಲ್ಕು ವರ್ಷಗಳಿಂದಲೂ ಬಹಳ ವಿಜೃಂಭಣೆಯಿಂದ ನಡೆಯುತ್ತಿರುವ ವಿಶೇಷ ಸಾಹಿತ್ಯೋತ್ಸವಗಳಿಂದ, ಕನ್ನಡ ಭಾಷಣ ಮಾಡಲು ಬಾರದೆಂದು ಇಂಗ್ಲಿಷಿನಲ್ಲೇ ಭಾಷಣ ಮಾಡುತ್ತಿದ್ದ ಅನೇಕ ಮಂದಿ ಪ್ರಮುಖ ಕನ್ನಡಿಗರನ್ನು ಕನ್ನಡದಲ್ಲಿ ಮಾತನಾಡುವಂತೆ ತಯಾರಿಸಿದೆ. ವಿಜ್ಞಾನ ವಿಷಯಗಳನ್ನೂ ಇತರ ಆಧುನಿಕ ವಿಚಾರಗಳನ್ನೂ ಆಯಾ ಭಾಗದಲ್ಲಿ ಇಂಗ್ಲಿಷ್ ಶಿಕ್ಷಣ ಹೊಂದಿ ಪಾಂಡಿತ್ಯ ಪಡೆದ ಕನ್ನಡಿಗರು ಜನಸಾಮಾನ್ಯಕ್ಕೆ ಅರ್ಥವಾಗುವಂತೆ ಕನ್ನಡದಲ್ಲಿಯೇ ಹೇಳುತ್ತಿರುವರು. ಇದೇನೂ ಆಶ್ಚರ್ಯವಲ್ಲ; ಏಕೆಂದರೆ, ಈ ಕೆಲಸಕ್ಕಾಗಿಯೇ ಟೊಂಕ ಕಟ್ಟಿ ನಿಂತಿರುವ ಇಬ್ಬರು ಮುಖಂಡರಿರುತ್ತಾರೆ. ಅಂಥವರು ಹಠ ಹಿಡಿದಲ್ಲಿ ಯಾವುದು ತಾನೆ ಆಸಾಧ್ಯವಾದೀತು?
ಗ್ರಂಥ ರಚನೆ ಮತ್ತು ಪತ್ರಿಕಾ ಪ್ರಕಟನೆ:- ಕನ್ನಡನಾಡಿನಲ್ಲಿ ಗ್ರಂಥರಚನೆಯ ಕಾರ್ಯವು ಹೆಚ್ಚುಹೆಚ್ಚಾಗಿ ನಡೆಯುತ್ತಿದೆ. ಕರ್ಣಾಟಕ ಸಾಹಿತ್ಯ ಪರಿಷತ್ತಿನ ಗ್ರಂಥ ಪ್ರದರ್ಶನಕ್ಕಾಗಿ ಎಲ್ಲ ಕನ್ನಡ ಪ್ರಾಂತಗಳಿಂದಲೂ ಬಂದ ಪುಸ್ತಕಗಳಲ್ಲಿ, ೧೯೧೫ನೆಯ ಇಸವಿಯಿಂದ ೧೯೩೪ನೆಯ ಇಸವಿಯವರೆಗಿನ ೧೯ ವರ್ಷಗಳಲ್ಲಿ, ೨,೩೮೭ ಗ್ರಂಥಗಳಾದರೂ ಪ್ರಕಟವಾಗಿರುವಂತೆ ತಿಳಿದುಬರುತ್ತದೆ. ಪ್ರದರ್ಶನಕ್ಕೆ ಬಾರದಿರುವ ಅನೇಕ ಪುಸ್ತಕಗಳಿರಬಹುದು. ೧೯೩೫ನೆಯ ವರ್ಷದ ಲೆಕ್ಕದಿಂದ, ೧೫ ತಿಂಗಳಲ್ಲಿ ಪ್ರಕಟವಾದ ೧೭೩ ಗ್ರಂಥಗಳು ಪ್ರದರ್ಶನಕ್ಕೆ ಬಂದಿವೆ. ಇವುಗಳಲ್ಲಿ ಎಷ್ಟು ಗ್ರಂಥಗಳು ಜಳ್ಳೊ ಎಷ್ಟು ಗಟ್ಟಿಯೊ ಎಂಬ ವಿಚಾರ ಬೇರೆ. ಇವುಗಳಲ್ಲಿ ಅನೇಕ ಗ್ರಂಥಗಳ ವೇಷಭೂಷಣಗಳು ನಮ್ಮ ದರಿದ್ರಾವಸ್ಥೆಯನ್ನು ಬಿಚ್ಚಿ ತೋರಿಸುತ್ತಿವೆ. ಇದನ್ನು ಪರಿಹರಿಸಿ ನಾವೂ ನಮ್ಮ ದೇಶದ ಇತರ ಭಾಷಾ ಬಂಧುಗಳೊಡನೆ ಹೆಮ್ಮೆಯಿಂದ ನಡೆಯುವುದಕ್ಕೆ ತಕ್ಕಷ್ಟು ಪ್ರಯತ್ನ ಮಾಡಬೇಡವೆ?
ದಿವಾನ್ ಬಹಾದ್ದೂರ್ ಶ್ರೀಮಾನ್ ಎಸ್.ಟಿ. ಕಂಬಳಿಯವರು ಮುಂಬಯಿ ಸಮ್ಮೇಳನದ ತಮ್ಮ ಭಾಷಣದಲ್ಲಿ ಕೊಟ್ಟಿರುವ ಲೆಕ್ಕದಿಂದ, ಮುಂಬಯಿ ಇಲಾಖೆಯಲ್ಲಿಯೇ ೧೯೩೨ರಿಂದ ೧೯೩೪ರವರೆಗೆ ಒಟ್ಟು ೩೭೫ ಕನ್ನಡ ಗ್ರಂಥಗಳು ಪ್ರಕಟವಾದಂತೆ ತಿಳಿಯಬರುತ್ತದೆ. ಇದೇ ಕಾಲದಲ್ಲಿ, ಗುಜರಾತಿ ಭಾಷೆಯಲ್ಲಿ ೧,೮೩0 ಗ್ರಂಥಗಳೂ, ಮರಾಠಿಯಲ್ಲಿ ೧,೯೬೩ ಗ್ರಂಥಗಳೂ ಪ್ರಕಟವಾಗಿವೆಯಂತೆ! ಮುಂಬಯಿ ಇಲಾಖೆಯಲ್ಲಿ ಕನ್ನಡ ದೈನಂದಿನ ಪತ್ರಿಕೆಗಳು ೪, ವಾರ ಮತ್ತು ಪಕ್ಷ ಪತ್ರಿಕೆಗಳು ೧೬, ಮಾಸ ಪತ್ರಿಕೆಗಳು ೨0 ಇರುವಂತೆ, ಗುಜರಾತಿಯಲ್ಲಿ ಈ ಸಂಖ್ಯೆಗಳು ೧೯, ೯೬, ೧೯೫; ಮರಾಠಿಯಲ್ಲಿ ೨೩, ೮೪, ೧೩0, ಈ ಅಂಕಿಗಳಿಂದ ಗುಜರಾತಿ ಮರಾಠಿ ಭಾಷೆಗಳು ಕನ್ನಡದ ಆರರಷ್ಟಾದರೂ ಮುಂದುವರಿದಿರುವಂತೆ ತೋರುವುದಿಲ್ಲವೆ!
ಪರಿಷತ್ತಿನ ಗ್ರಂಥ ಪ್ರದರ್ಶನಕ್ಕೆ ೧೯೩೫ರಲ್ಲಿ ಬಂದ ೧೭೩ ಪುಸ್ತಕಗಳಲ್ಲಿ ಪದ್ಯ ಕಾವ್ಯಗಳು ೨೪, ಕಾದಂಬರಿ ೧೪, ಮತಾಚಾರಧರ್ಮ ೨೩, ಸಮಾಜ ವಿಜ್ಞಾನ ೧೪, ಜೀವನ ಚರಿತ್ರೆ೧೭, ಸಣ್ಣ ಕಥೆ ೧0, ಸಾಹಿತ್ಯ ಪ್ರಬಂಧ, ವಿಮರ್ಶೆ೧೫, ಶಾಲಾ ಪುಸ್ತಕ ೮, ನಾಟಕ ೧೪, ಪ್ರಕೃತಿ ವಿಜ್ಞಾನ ೬.
ಪದ್ಯ ಕಾವ್ಯಗಳು ಹೆಚ್ಚಾಗಿ ಬರಬೇಕಾದುದು ನಮಗೆ ತುಂಬಿರುವಾಗ, ಹಸಿದಿರುವಾಗಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಪ್ರವೇಶವಿಲ್ಲದವರೂ ಕವನಕಟ್ಟಲು ಹೊರಟಿದ್ದಾರೆ. ಬಹುಶಃ ಇದನ್ನು ಅರಿತೇ ನಮ್ಮ ಪೂರ್ವಿಕರು, ಸಾಹಿತ್ಯದ ಈ ಪ್ರದೇಶಕ್ಕೆ ಸಾಮಾನ್ಯರು ಹಾರಲಾಗದ ಬೇಲಿ ಹಾಕಿದ್ದು.
ಉಪ ಸಂಹಾರ:
ಮಹನೀಯರೆ. ಪರಿಷತ್ತಿನ ಅಧಿಕಾರಿಗಳು ನನ್ನನ್ನು “ಘನ ವಿದ್ವಾಂಸ” ನೆಂದು ಹೊಗಳಿರುವುದಕ್ಕಾಗಿ ಮನಸ್ಸಿಗೆ ನೋವಾಗುತ್ತದೆ. ನಮ್ಮಲ್ಲಿ ಹೊಗಳು ಭಟ್ಟತನವು ಮೊದಲಿಂದಲೂ ಸಹಜಗುಣವಾಗಿರುವುದು. ಇನ್ನು ಮೇಲಾದರೂ ಈ ಕುಟ್ಟು ಹುಳುವನ್ನು ನಿರ್ಮೂಲ ಮಾಡಿ ಯಥಾರ್ಥವಾದಿತ್ವವನ್ನು ಅಭ್ಯಾಸಮಾಡದಿದ್ದರೆ ನಮಗೆ ಕೇಡು ತಪ್ಪದು. ನಾಣ್ನುಡಿಯಂತೆ, ಯಾವ ಸಂದರ್ಭದಲ್ಲಿ ಎಷ್ಟು ಮಟ್ಟಿಗೆ ಹೇಳಬೇಕೊ ಅಷ್ಟು ಮಾತ್ರ ಹೇಳಿ ಅನ್ಯರ ಮನಸ್ಸನ್ನು ನೋಯಿಸದೆಯೂ, ತಾನು ನೋಯದೆಯೂ ತಪ್ಪಿಸಿಕೊಂಡು ತಿರುಗುವವನೇ ಧನ್ಯ! ಕನ್ನಡಿಗರ ಪಾಂಡಿತ್ಯವನ್ನೂ ಹಿರಿಮೆಯನ್ನೂ ತಿಳಿಯಬೇಕಾದರೆ ನನ್ನ ಹಿಂದೆ ಈ ಪವಿತ್ರ ಪೀಠವನ್ನಲಂಕರಿಸಿದ್ದ ಮಹನೀಯರ ಭಾಷಣಗಳನ್ನೋದಿರಿ. ಕರ್ಣಾಟಕ ಸಾಹಿತ್ಯ ಪರಿಷತ್ತಿನ ಅಧಿಕಾರಿಗಳು ಈ ಭಾಷಣಗಳನ್ನು ಪ್ರತ್ಯೇಕವಾಗಿ ಮುದ್ರಿಸಿ ಕನ್ನಡಿಗರೆಲ್ಲರಿಗೂ ಸುಲಭವಾಗಿ ದೊರೆಯುವಂತೆ ಮಾಡಬೇಕೆಂಬುದೇ ನನ್ನ ಬೇಡಿಕೆ. ಬಾಂಧವರೆ! ಸ್ವಾತಂತ್ರ್ಯಬೇಕೆಂದು ಸುಮ್ಮನೆ ಗಲಭೆ ಮಾಡುವುದರಿಂದ ಪ್ರಯೋಜನವಿಲ್ಲ. ಅದಕ್ಕೆ ತಕ್ಕ ಯೋಗ್ಯತೆಯನ್ನು ಮೊದಲು ಸಂಪಾದಿಸಿಕೊಳ್ಳಬೇಕು. ದೇಶಭಕ್ತಿ, ರಾಜಭಕ್ತಿ, ಆತ್ಮಭಕ್ತಿ ಮೊದಲಾದ ಸದ್ಗುಣಗಳನ್ನು ಜಪಾನಿನವರಿಂದ ಕಲಿಯಲು ಯತ್ನಿಸೋಣ. ಕನ್ನಡಿಗರೊಳಗೆ ಎಷ್ಟೋ ಒಳ್ಳೆಯ ಮುತ್ತುಗಳಿರುವುವು. ಕೆಲವು ಆಣಿಮುತ್ತುಗಳು. ಆದರೆ ಅವೆಲ್ಲವೂ ಒಟ್ಟುಗೂಡದೆ ಬಿಡಬಿಡಿಯಾಗಿರುವುದು. ಅದಕ್ಕೆ ರಂಧ್ರ ಕೊರೆದು ಅದನ್ನು ಚಿನ್ನದ ಸರಿಗೆಯಿಂದ ಕೊಯ್ದು ಆ ಸರವನ್ನು ನಮ್ಮ ಕನ್ನಡ ಮಾತೆಯ ಕೊರಳಿಗೆ ಹಾಕಿ, ಆಕೆಯ ಸಿರಿ ಸಹಜವಾದುದೆಂದು ತೋರಿಸೋಣ. ಸರ್ವೇಶ್ವರನು ಕನ್ನಡಿಗರಲ್ಲಿಯೂ ಏಕೀಭಾವವನ್ನು ಬೆಳೆಯಿಸಿ ಕನ್ನಡದೇಶವು ಹಿಂದಿನ ಉಚ್ಛ್ರಾಯ ಸ್ಥಿತಿಗೇರುವಂತೆ ಅನುಗ್ರಹಿಸಲಿ.
Tag: Tag: Kannada Sahitya Sammelana 22, Bellave Venkatanaranappa
೨೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎನ್.ಎಸ್. ಸುಬ್ಬರಾವ್
ದಿಟ್ಟ ನಿಲುವು, ಸ್ಪಷ್ಟನಡೆ ಅಸಾಮಾನ್ಯ ಸ್ಮೃತಿಶಕ್ತಿಯ ಶಿಕ್ಷಣ ತಜ್ಞ ಎನ್.ಎಸ್. ಸುಬ್ಬರಾಯರು (ನಂಜನಗೂಡು ಸುಬ್ಬಣ್ಣರಾಯರ ಮಗ ಸುಬ್ಬರಾವ್) ಶ್ರೀಮಂತ ಕುಟುಂಬದಲ್ಲಿ ೧೮೮೫ರಲ್ಲಿ ಹುಟ್ಟಿ ಬೆಳೆದವರು. ಬೆಂಗಳೂರು, ಮದರಾಸುಗಳಲ್ಲಿ ಶಿಕ್ಷಣ ಪಡೆದು ಎಂ.ಎ. ಮತ್ತು ಬಾರ್ ಅಟ್ ಲಾ ಪದವಿಗಳನ್ನು ಕೇಂಬ್ರಿಜ್ ವಿಶ್ವವಿದ್ಯಾನಿಲಯದಿಂದ ಗಳಿಸಿದ ಪ್ರತಿಭಾನ್ವಿತರು. ಕನ್ನಡ ಇಂಗ್ಲಿಷ್, ಫ್ರೆಂಚ್, ಜರ್ಮನ್ ಭಾಷೆಗಳಲ್ಲಿ ಪರಿಣತಿ ಹೊಂದಿದ ಇವರು ನಡೆ ನುಡಿ ಉಡಿಗೆ ತೊಡಿಗೆಗಳಲ್ಲಿ ಶಿಸ್ತಿನ ಸಿಪಾಯಿ ಆಗಿದ್ದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಅನಂತರ ವಿದ್ಯಾಇಲಾಖೆಯ ನಿರ್ದೇಶಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ನಿವೃತ್ತಿಯ ನಂತರ ಅಲಹಾಬಾದ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಮೊದಲ ದುಂಡುಮೇಜಿನ ಪರಿಷತ್ತಿಗೆ ಮೈಸೂರಿನ ಪರವಾಗಿ ಹೋದ ಮಿರ್ಜಾ ಇಸ್ಮಾಯಿಲರ ಕಾರ್ಯದರ್ಶಿ ಆಗಿದ್ದರು. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲನಗೊಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಚಾರ ಪುಸ್ತಕಮಾಲೆ ಯೋಜನೆ ಜಾರಿಗೆ ತಂದರು. ತಾರಿಫ್ ಬೋರ್ಡ್ ಸದಸ್ಯರಾಗಿ ಬೊಂಬಾಯಿ ಸಮ್ಮೇಳನಕ್ಕೆ ಹೋಗಿದ್ದರು. ಆಲ್ ಇಂಡಿಯಾ ಎಕನಾಮಿಕಲ್ ಕಾನ್ಫರೆನ್ಸಿನ ಅಧ್ಯಕ್ಷರಾಗಿದ್ದುರು. ೧೯೩೫ರಲ್ಲಿ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ಶಿಕ್ಷಣ ಇಲಾಖೆಯಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿದರು.
ಸುಬ್ಬರಾಯರ ಸೇವೆಯನ್ನು ಮೆಚ್ಚಿ ಮಹಾರಾಜರು ರಾಜಕಾರ್ಯಪ್ರವೀಣ ಬಿರುದನ್ನಿತ್ತರು.
ಅಪಾರ ಪಾಂಡಿತ್ಯವಿದ್ದರೂ ತಮ್ಮ ಬರವಣಿಗೆಯ ಕಡೆಗೆ ಸುಬ್ಬರಾವ್ ಅವರು ಲಕ್ಷ್ಯ ನೀಡಲಿಲ್ಲ. ೧೯೩೩-೩೪ರ ಸುಮಾರಿನಲ್ಲಿ ‘ಸಂ ಆಸ್ಪೆಕ್ಟ್ಸ್ ಆಫ್ ಎಕನಾಮಿಕ್ ಪ್ಲಾನಿಂಗ್’ ಕುರಿತು ಮಾಡಿದ ಭಾಷಣಗಳು ಪುಸ್ತಿಕೆಯ ರೂಪದಲ್ಲಿ ಪ್ರಕಟವಾಗಿವೆ.
ಶ್ರೀ ಸುಬ್ಬರಾಯರು ೨೯-೬-೧೯೪೩ರಂದು ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೨೧
ಅಧ್ಯಕ್ಷರು, ಎನ್.ಎಸ್. ಸುಬ್ಬರಾವ್
ದಿನಾಂಕ ೨೬,೨೭,೨೮ ಡಿಸೆಂಬರ್ ೧೯೩೫
ಸ್ಥಳ : ಮುಂಬಯಿ
ಬೊಂಬಾಯಿ ಸಮ್ಮೇಳನ ಸೇರಿದ ಔಚಿತ್ಯ
ಅನುಗ್ರಹಿಯಾದ ಒಂದು ಕನ್ನಡ ಪತ್ರಿಕೆಯು ಈ ಅಧ್ಯಕ್ಷತೆಯಲ್ಲಿ ಕುರಿತು ಬರೆದ ಕೆಲವು ಚತುರೋಕ್ತಿಗಳು ನನ್ನ ನೆನಪಿಗೆ ಬರುತ್ತಿವೆ. ಆ ವಾಕ್ಯಗಳು ನನ್ನ ಅಧ್ಯಕ್ಷತೆಯನ್ನು ಹೀಗೆ ಸಲುವಳಿಸಿವೆ :- ಬೊಂಬಾಯಿಯು ಕರ್ನಾಟಕದ ಭಾಗವಲ್ಲ ಎಂಬುದು ನಿಶ್ಚಯ. ಅಲ್ಲಿ ಈ ಪರಿಷತ್ತನ್ನು ಮಾಡುವುದು. ಅವಧಿಯೇ ಸರಿ. ಆದರೆ ಅಧ್ಯಕ್ಷರೂ ಕನ್ನಡ ಸಾಹಿತ್ಯದಲ್ಲಿ ಅಷ್ಟೇನೂ ಪಾಂಡಿತ್ಯ ಉಳ್ಳವರಲ್ಲ. ಈ ಭಾಷೆಯಲ್ಲಿ ಯಾವೊಂದು ಸಾಹಿತ್ಯ ಸೃಷ್ಟಿಯನ್ನು ಮಾಡಿಸಿದವರಲ್ಲ. ಆದುದರಿಂದ ಕನ್ನಡಕ್ಕೆ ವಿದೇಶಿಯವಾದ ಬೊಂಬಾಯಿಗೆ ಈ ಅಧ್ಯಕ್ಷರೇ ಯೋಗ್ಯರು. ಚೆನ್ನಾಯಿತು ತೀರ್ಮಾನ ವಾಕ್ಯರಚನೆಯಲ್ಲ ಎರಡು ಅಲ್ಲಗಳ ಹೊಂದಿಕೆಯಿಂದ ಇಂದು ಅಹುದು ಎಂಬುವನ್ನೇ ಧೃಢಿಕರಿಸಿದಂತಾಯಿತಲ್ಲವೇ ಇದು! ಇರಲಿ.
ಈ ಬೊಂಬಾಯಿಯು ನಿಶ್ಚಯವಾಗಿ ಕರ್ನಾಟಕದ ಅಂಗವಲ್ಲ; ಅದಕ್ಕಾಗಿ ನಾವು ವಿಷಾದಿಸಬೇಕಾಗಿಯೂ ಇಲ್ಲ. ಹಾಗೆಯೇ ಈ ನಗರವು ಮಹಾರಾಷ್ಟ್ರ, ಗುಜರಾತ್ಗಳಿಗೆ ಬೇರೆಯಾಗಿ ಸೇರಿದ್ದೂ ಅಲ್ಲ. ಕೆಲವು ವರ್ಷಗಳ ಹಿಂದೆ ಇದಕ್ಕೆ ‘’ಪೂರ್ವದ ಅಲೆಗ್ಸಾಂಡ್ರಿಯ” ಎಂದು ಜಗತ್ತು ಕರೆಯಿತು. ಮತ್ತೀ ವಿಶ್ವವ್ಯಾಪ್ತ ಬಿರುದು ಇದಕ್ಕಿಂದಿಗೂ ಇದೆ. ಇದರ ಜಾತಿಯು ಇವರದೇ. ಯಾವ ಜಾತಿ ಮತ ವರ್ಣ ಸಂಪತ್ತಿಗಳ ದುರಭಿಮಾನಕ್ಕೂ ಸಿಲುಕದ್ದು, ನಿಲುಕದ್ದು. ಯೋಗ್ಯತೆಗೆ ಮುಕ್ತದ್ವಾರ. ಕುಶಲತೆಯ ಕರ್ಮರಂಗ. ನಮ್ಮ ಪರಿಷತ್ತನ್ನು ಇಲ್ಲಿ ಮೆರೆಸಿರುವುದು ನಮ್ಮ ಗ್ರಾಣಾನುರಾಗವನ್ನು ಮೆರೆಸಲಿಕ್ಕಲ್ಲ, ನಮ್ಮ ಪ್ರಾಂತದೊಳಗಣ ಭೇದ ಭಿನ್ನತ್ವ ಕಲಹಗಳ ಕೊಳೆಯನ್ನು ತೊಳಿಯಲಿಕ್ಕಲ್ಲ. ತಂಡ ಪಂಗಡಗಳ ಅಭಿಮಾನ ಗೀತೆಯು ಇಂಥ ಜಗನ್ಮಿತ್ರ ನಗರದಲ್ಲಿ ಅಭಾಸವನ್ನುಂಟುಮಾಡದಿರದು.
ಇಲ್ಲಿ ನಾವು ನಮ್ಮ ವಿಚಾರೋಪಾಯಗಳ ನಿರ್ದೋಷತೆ ನಿರ್ವಹಣತ್ವಗಳನ್ನು ತೋರಿಸಿಕೊಡಬೇಕು. ಇಲ್ಲಿ ನಮ್ಮ ಆಕಾಂಕ್ಷೆಗಳ ಔಚಿತ್ಯ ಯಥಾರ್ಥತೆಗಳನ್ನು ನಾವು ಸಾಧಿಸಬೇಕು: ಅಂದರೆ, ನಮ್ಮ ಪ್ರಾಂತದೊಳಗೆಲ್ಲೆಲ್ಲಿಯೂ ನಮ್ಮ ಧ್ಯೇಯಶಕ್ತಿಯು ಹರಡುವದು: ಅಷ್ಟೇ ಅಲ್ಲ, ಈ ಬೊಂಬಾಯಿಯು ಇಂದು ಜಗತ್ತಿನ ಒಂದು ಮುಖವೂ ಆಗಿರೋದರಿಂದ, ತನ್ಮೂಲಕ ವಿಶಾಲ ವಿಶ್ವಕ್ಕೂ ನಮ್ಮ ಆದರ್ಶ ಪಥವನ್ನು ಸ್ಥಾಪಿಸಿ ತೋರಿಸಿದಂತಾಗುವದು. ಈ ವರ್ಷದ ಪರಿಷತ್ತನ್ನು ಇಲ್ಲಿ ಕೂಡಿಸಿದುದರ ಮಹತ್ವವು ಹೀಗಿದೆಯೆಂದು ನನಗೆ ತೋರುತ್ತದೆ. ಈಗ ಈ ಸ್ಥಾನಕ್ಕೆ ತಕ್ಕಂತೆ ಕಾರ್ಯಮಾನವೂ ಭರದಿಂದ ನಡೆದರೇನೇ ಇದೆಲ್ಲವೂ ಸಾರ್ಥಕ.
ಪರಿಷತ್ತು ಹಳ್ಳಿಗಳಲ್ಲಿ ಕೈಗೊಳ್ಳಬೇಕಾದ ಕಾರ್ಯ
ಹಳ್ಳಿಗಳಲ್ಲಿ ಜ್ಞಾನ ಮತ್ತು ಸಂಸ್ಕೃತಿ ಪ್ರಸಾರಣೆ ಮಾಡಲು ಕರ್ಣಾಟಕ ಸಾಹಿತ್ಯ ಪರಿಷತ್ತು ಈಚೆಗೊಂದು ವ್ಯಾಪಕ ಕಾರ್ಯಕ್ರಮವನ್ನು ಯೋಚಿಸಿರುವುದು. ಅದಕ್ಕೆ ಮೈಸೂರು ಸರಕಾರದ ಒಪ್ಪಿಗೆಯೂ ಬೆಂಬಲವೂ ದೊರೆತಿದೆ. ಆ ಯೋಜನೆಯ ಪ್ರಕಾರ ಪರಿಷತ್ತು ಆಗಾಗ್ಗೆ ಮಾತ್ರ ಭಾಷಣ ಮಾಡದೆ. ಸತತೋದ್ಯೋಗವನ್ನು ಮಾಡಬೇಕೆಂದಿರುವದು. ಮತ್ತೆ ಹಳ್ಳಿಗಳಲ್ಲಿ ಕೆಲಸ ಮಾಡುವದಕ್ಕಾಗಿ ತರುಣರನ್ನು ತರಬೇತು ಮಾಡುವ ಏರ್ಪಾಟುಗಳನ್ನೂ ಅದು ಕೈಕೊಳ್ಳುವದಾಗಿದೆ. ಈ ಸಂದರ್ಭದಲ್ಲಿ ನಾನು ಇನ್ನೊಂದು ಸಾಧ್ಯವಾಗಬಹುದಾದ ಕಾರ್ಯಕ್ರಮವನ್ನು ಸೂಚಿಸುವೆನು: ಇಂಗ್ಲೆಂಡಿನಲ್ಲಿ “ಯೂನಿವರ್ಸಿಟಿ ಸೆಟ್ಲ್ಮೆಂಟ್ಸ್” ಎಂಬ ಸಂಸ್ಥೆಗಳಿವೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯವೂ, ಅದರ ಆಶ್ರಯದಲ್ಲಿರುವ ಹಲವು ಕಾಲೇಜುಗಳೂ, ಲಂಡನ್, ಮತ್ತು ಲಿವರ್ಪೂಲ್ನಂಥಾ ಶಹರುಗಳಲ್ಲಿ, ಬಡಜನರ ವಸತಿಗಳ ಮಧ್ಯೆ ವಾಸಸ್ಥಾನಗಳನ್ನು ಕಾಯಂ ಆಗಿ ಸ್ಥಾಪಿಸಿಕೊಂಡಿವೆ. ಅಲ್ಲಿ ಆ ವಿದ್ಯಾಲಯಗಳ ಅಧಿಕಾರಿಗಳೂ ಪದವಿ ಪರೀಕ್ಷೆಗಳ ಉಮೇದುವಾರರೂ ಹೋಗಿ, ಕೆಲಕಾಲ ಅಲ್ಲಿಯೆ ವಾಸಿಸಿ, ತಮ್ಮ ನೆರೆಹೊರೆಯವರಿಗೆ ಆಮೋದ ಪ್ರಮೋದಗಳಿಂದ ಶಿಕ್ಷಣ ಕೊಡಲೆತ್ನಿಸವರು. ನಮ್ಮ ದೇಶದಲ್ಲಿಯೂ ಅಂಥಾ ಕೆಲಸವು ಆಗಬೇಕಾಗಿದೆ. ಆದರೆ ತರಬೇತಾದ ಕೆಲಸಗಾರರ ಅಧೀನದಲ್ಲಿ “ಗ್ರಾಮ ವಸಾಹತು”ಗಳನ್ನು ಸ್ಥಾಪಿಸಿ, ಅವುಗಳ ಮೂಲಕ ನಮ್ಮ ಕಾಲೇಜಿನ ತರುಣರು ಹಳ್ಳಿಗಳಿಗೆ ಹೋಗಿ ಹಳ್ಳಿಗರ ಹಿತ ಮತ್ತು ಬೋಧನೆಗಾಗಿ ಕೆಲಸ ಮಾಡುವಂತಾಗಬೇಕು. ಈ ಕಾರ್ಯಕ್ಷೇತ್ರವು ಬಹು ವಿಶಾಲವಾಗಿದೆ. ಇಲ್ಲಿ ವಿಶ್ವವಿದ್ಯಾನಿಲಯಗಳನ್ನೂ ವಿದ್ಯಾಭ್ಯಾಸ ಇಲಾಖೆ, ಆರೋಗ್ಯ ಇಲಾಖೆ- ಇವೇ ಮೊದಲಾದ ಸರಕಾರಿ ಸಂಸ್ಥೆಗಳೂ ಪರಿಷತ್ತು ಮತ್ತು ಕರ್ನಾಟಕ ಸಂಘಗಳಂಥಾ ಭಾಷೆ ಮತ್ತು ಸಂಸ್ಕೃತಿಗಾಗಿ ದುಡಿಯುವ ಸಂಸ್ಥೆಗಳೂ ಒಟ್ಟಾಗಿ ಸೇರಿಸಿ ತ್ರಿವೇಣಿ ಸಂಗಮವಾಗಿ ವಿಶಾಲವಾಗಿ ಗ್ರಾಮಕ್ಕೆ ಪುನರ್ಘಟನಾ ಕಾರ್ಯವನ್ನು ಕೈಗೊಳ್ಳಬಹುದಾಗಿದೆ.
Tag: Kannada Sahitya Sammelana 21, N.S. Subbarao
೨0ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಪಂಜೆ ಮಂಗೇಶರಾಯರು
ಮಕ್ಕಳ ಸಾಹಿತಿಯಾಗಿ, ಶಿಕ್ಷಣಾಧಿಕಾರಿಗಳಾಗಿ, ಹೆಸರು ಮಾಡಿದ್ದ ಪಂಜೆ ಮಂಗೇಶರಾಯರು ರಾಮಪ್ಪಯ್ಯ- ಶಾಂತದುರ್ಗ ದಂಪತಿಗಳ ಎರಡನೇ ಮಗನಾಗಿ ೨೨-೨-೧೮೭೪ರಲ್ಲಿ ದಕ್ಷಿಣಕನ್ನಡದ ಬಂಟವಾಳದಲ್ಲಿ ಜನಿಸಿದರು.
ಪಂಜೆಯವರು ೧೮೯೫ರಲ್ಲಿ ಬಿ.ಎ. ಇಂಗ್ಲಿಷ್ ಕನ್ನಡ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ೧೯00ರಲ್ಲಿ ಐಚ್ಛಿಕ ವಿಷಯಗಳನ್ನು ಮುಗಿಸಿದರು. ೧೯0೪ರಲ್ಲಿ ಎಲ್.ಬಿ. ಪದವಿ ಗಳಿಸಿದರು. ಅನಂತರ ೧೮೯೬ರಲ್ಲಿ ಬಿ.ಎ. ಮುಗಿಸಿ, ಮಂಗಳೂರು ಗೌರ್ನಮೆಂಟ್ ಕಾಲೇಜಿನಲ್ಲಿ ಜೂನಿಯರ್ ಕನ್ನಡ ಪಂಡಿತರಾಗಿ ಕಾರ್ಯ ನಿರ್ವಹಿಸಿದರು. ೧೯೧೫ರಲ್ಲಿ ಮಂಗಳೂರು ಗೌರ್ನಮೆಂಟ್ ಹೈಯರ್ ಎಲಿಮೆಂಟರಿ ಟ್ರೈನಿಂಗ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದರು. ೧೯೨೧ರಲ್ಲಿ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿಗೆ ಮುಖ್ಯೋಪಾಧ್ಯಾಯರಾಗಿ ವರ್ಗವಾದರು. ೧೯೨೯ರಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದರು. ಇವರು ೧೯೩೪ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ೧೯೩೫ರಲ್ಲಿ ಹೈದ್ರಾಬಾದ್ ನಾಡಹಬ್ಬದಲ್ಲಿ ಬಾಲಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು.
ಶಬ್ದಮಣಿದರ್ಪಣಂ (೧೯೨0), ಲಘುಕೋಶ(೧೯೨೩) ಇವರ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ. ಹಲ್ಲಿ, ಬಂದಣಿಕೆ, ಭಾರತ ಶ್ರವಣ, ಕಮಲಾಪುರದ ಹೋಟ್ಲಿನಲ್ಲಿ, ಹಳೆಯ ಸಬ್ ಅಸಿಸ್ಟೆಂಟಿನ ಸುಳ್ಳು ಡೈರಿಯಿಂದ ಮೊದಲಾದ ಪ್ರಬಂಧಗಳನ್ನು ಬರೆದಿದ್ದಾರೆ.
ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುವಾಸಿನಿ ಪತ್ರಿಕೆಯಲ್ಲಿ ಹತ್ತಾರು ಲೇಖನಗಳನ್ನು ಬರೆದಿದ್ದಾರೆ. ಶಿಲಾಶಾಸನಗಳ ಬಗ್ಗೆ ಅಭ್ಯಾಸ ಮಾಡಿದ್ದಾರೆ. ಪ್ರಾಣಿಗಳೂ, ಪ್ರದೇಶಗಳೂ (೧೯೩೩) ಭೂಗೋಲಶಾಸ್ತ್ರ ಪ್ರಸಿದ್ಧ ಗ್ರಂಥವಾಗಿದೆ. ಹೀಗೆ ವೈವಿಧ್ಯಮಯ ಗ್ರಂಥಗಳನ್ನು ರಚಿಸಿರುವ ಪಂಜೆಯವರು ಹೈದ್ರಾಬಾದಿನಲ್ಲಿ ೨೪-೧0-೧೯೩೭ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨0,
ಅಧ್ಯಕ್ಷರು, ಪಂಜೆ ಮಂಗೇಶರಾಯ
ದಿನಾಂಕ ೨೮,೨೯,೩0 ಡಿಸೆಂಬರ್ ೧೯೩೪
ಸ್ಥಳ : ರಾಯಚೂರು
ಸಮ್ಮೇಳನದ ಸಾಧನೆಗೆ ಉಪಾಧ್ಯಾಯರ ಪಾತ್ರ
ನಮ್ಮ ಹಳ್ಳಿಯ ಶಾಲೆಗಳನ್ನೂ ಹಳ್ಳಿಯ ಉಪಾಧ್ಯಾಯರನ್ನು ನಾವು ಸಾಹಿತ್ಯ ಸಮ್ಮೇಳನದ ಕಾರ್ಯಸಾಧನೆಗಾಗಿ ಎಳಕೊಳ್ಳಲೇಬೇಕು. ಸಾಹಿತ್ಯರಚನೆ, ಭಾಷಾಭಿವೃದ್ಧಿ, ಗ್ರಾಮಾರೋಗ್ಯ, ದೇಶಾಭ್ಯುದಯದ ಯಾವ ಸತ್ಕಾರ್ಯವಾದರೂ ಈ ಅಧ್ಯಾಪಕರ ಕೈಯಲ್ಲಿದೆ. ಸಮ್ಮೇಳನದ ಉದ್ದೇಶಗಳನ್ನೂ ಹಳ್ಳಿಯ ಉಪಾಧ್ಯಾಯರಿಗೆ ಮೊಟ್ಟಮೊದಲು ತಿಳಿಯಹೇಳಿ ಅವರ ಸಂಗತಿಯಲ್ಲಿ ಬೇಕಾದರೆ ವರಮಾನವನ್ನು ತಗ್ಗಿಸಿ, ಅವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಅಧ್ಯಾಪಕರು ತಮ್ಮ ಕೈದೀವಟಿಗೆಗಳನ್ನು ಸಾಹಿತ್ಯಾಗ್ನಿಯಿಂದ ಹೊತ್ತಿಸಿಬಿಟ್ಟರೆ, ಪ್ರತಿಯೊಂದು ಗ್ರಾಮಶಾಲೆ ಒಂದು ಪರಿಷನ್ಮಂದಿರ! ಅಲ್ಲಿಯ ಮಕ್ಕಳಕೂಟ ಚಿಕ್ಕ ಸಾಹಿತ್ಯ ಸಭೆ! ಹೀಗಾಗುವುದರಲ್ಲಿ ಸಂಶಯವಿಲ್ಲ. ಕನ್ನಡ ಭಾಷೆಯ ವ್ಯಾಪನೆಗೂ, ಜನಜೀವನದ ಸಂಸ್ಥಾನಕ್ಕೂ, ಸಾಹಿತ್ಯರಚನೆಗೂ ಹಳ್ಳಿಯ ಶಿಕ್ಷಣವೇ ಸ್ಥಿರವಾದ ತಳಹದಿ. ಈ ತಳಹದಿಯನ್ನು ಕಟ್ಟತಕ್ಕ ಶಿಲ್ಪಿಗಳು ನನ್ನ ಗೆಳೆಯರಾದ ಹಳ್ಳಿಯ ಯುವಕ ಉಪಾಧ್ಯಾಯರು.
ಪರಿಷತ್ತಿನ ಉತ್ತರಾಧಿಕಾರಿಗಳು ಹೇಗಿರಬೇಕು
ಇನ್ನು ಮುಂದೆ ಯಾರು ಪರಿಷತ್ತಿಗೆ ಹೆಚ್ಚುಮಂದಿ ಸದಸ್ಯರನ್ನು ಸೇರಿಸುತ್ತಾರೆಯೋ ಅವರಿಗೆ ಇಂತಹ ಸಮ್ಮೇಳನದ ಅಧ್ಯಕ್ಷಪಟ್ಟವನ್ನು ಕಟ್ಟುವುದು ಯುಕ್ತವೆಂದು `ಶ್ರೀಮಾನ್ ಡಿ.ವಿ. ಗುಂಡಪ್ಪನವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಒಮ್ಮೆ ವಿನೋದಪರವಾಗಿ ಮಾಡಿದ ಸೂಚನೆಯಲ್ಲಿ ನಾನು ಎರಡೇ ಮಾತುಗಳನ್ನು ಕೂಡಿಸಬೇಕಾಗಿದೆ – ‘ವಯಸ್ಸಾದವರಿಗೆ ಪಟ್ಟಕಟ್ಟಬಾರದು.’ ನಿಜವಾಗಿಯೂ ಸಾಹಿತ್ಯ ಸಮ್ಮೇಳನಕ್ಕೆ ಮುಪ್ಪಿನ ಮುದುಕರು ಅಷ್ಟೊಂದು ಬೇಕಾಗಿಲ್ಲ; ಅದಕ್ಕೆ ಬೇಕಾದವರು ಶಕ್ತಿವಂತರಾದ ಉತ್ಸಾಹಶಾಲಿಗಳಾದ ಯುವಕರು! ಕರ್ಣಾಟಕದ ಏಕೀಕರಣ ಮೊದಲಾದ ಜಟಿಲ ರಾಜಕೀಯ ವಿಷಯಗಳನ್ನು ವಾದಿಸಿ, ದೇಶಹಿತವನ್ನು ಸಾಧಿಸಬಲ್ಲ ಪತ್ರಿಕಾಕರ್ತರು! ಸರಕಾರದ ಮನ್ನಣೆಗೂ ಕನ್ನಡಿಗರ ವಿಶ್ವಾಸಕ್ಕೂ ಪಾತ್ರರಾದ ದೇಶಭಕ್ತರು! ಸಮ್ಮೇಳನದ ಕಾರ್ಯಕಲಾಪಗಳು ಇಂಥವರ ಪ್ರೇಮ, ಅಭಿಮಾನ, ಮನೋಭಾವಗಳಿಗೆ ಅನುರೂಪವಾದವುಗಳು. ಪಂಪಾದಿ ಕವಿಗಳೂ ಪೊನ್ನಮ್ಮಾದಿ ಕವಯತ್ರಿಯರೂ ರಚಿಸಿದ ಪುರಾತನ ಸಾಹಿತ್ಯ ಮತ್ತು ಅದರಿಂದ ಜನಿಸಿದ ಆಧುನಿಕ ಸಾಹಿತ್ಯ ಹೀಗೆ ಸಕಲ ಕನ್ನಡ ಸಾಹಿತ್ಯಕ್ಕೆ – ಹಲವು ತಲೆಮಾರು ಕಳೆದು ನಮ್ಮ ಕೈಗೆ ಬಂದ ಇಷ್ಟು ವಿಸ್ತಾರವಾದ ಈ ಆಸ್ತಿಗೆ ಕನ್ನಡಿಗರು, ಮುಸಲ್ಮಾನರು, ಕ್ರೈಸ್ತರು, ಹಿಂದೂಗಳು, ಬೃಹತ್ ಕರ್ಣಾಟಕದವರೆಲ್ಲರೂ ಹಕ್ಕುದಾರರು. ಕನ್ನಡ ಸಾಹಿತ್ಯದ ಮುಂದಿನ ಕೃಷಿಕಾರ್ಯವು ನಡೆಯಬೇಕು. ನಮ್ಮ ಯುವಕರಿಂದ; ಭಾಷಾಭಕ್ತರೂ, ಸಾಹಿತ್ಯಪ್ರೇಮಿಗಳೂ, ಉತ್ತಮ ಚರಿತರೂ ಉದ್ಯೋಗಶೀಲರೂ ಆಗಿರುವ ವೀರ ಯುವಕರಿಂದ, ಅಂಥವರ ಕೈಗಳಿಗೆ ಹಿರಿಯರ ಹೆಗಲಮೇಲಿನ ನೇಗಿಲು ಬರಲಿಕ್ಕಿದೆ.
ಇಂಗ್ಲಿಷ್ ವಿದ್ಯಾಭ್ಯಾಸವು ಬಂದು ಹಿಂದೂಸ್ಥಾನವನ್ನು ಕೈಹಿಡಿದು ಎಬ್ಬಿಸುವವರೆಗೆ ಕನ್ನಡವು ಚೇತರಿಸಿಕೊಳ್ಳುವಷ್ಟು ಸಮರ್ಥವಾಗಿರಲಿಲ್ಲ. ದೂರದ ದಿಗಂತದಲ್ಲಿಯ ಹೊಸ ಪ್ರಪಂಚವನ್ನು ಕನ್ನಡಿಗನ ಮುಂದೆ ತೋರಿ, ‘ನೋಡಲ್ಲಿ ಮುಂಬೆಳಗು ಮೂಡುತಿದೆ ಹೊಂಬಿಸಿಲು’ ಎಂಬ ಸೊಲ್ಲನ್ನು ಕನ್ನಡಿಗನ ಕಿವಿಯಲ್ಲಿ ಹಾಡಿದುದು ಇಂಗ್ಲಿಷ್ ಐತಿಹಾಸ! ಭಾಷಾಪ್ರೇಮ, ದೇಶವಾತ್ಸಲ್ಯ, ಐಕ್ಯಸಾಧನೆ, ಸ್ವಾತಂತ್ರ್ಯ ಸಿದ್ಧಿ ಎಂಬೀ ಉದಾತ್ತ ವಿಚಾರಗಳನ್ನು ಅವನ ಮನಸ್ಸಿನಲ್ಲಿ ಒತ್ತಿದುದು ಇಂಗ್ಲಿಷ್ ವಾಙ್ಮಯ! ಈ ವಿಚಾರಗಳ ಪ್ರೇರಣೆಯ ಫಲವೇ ಈ ಸಾಹಿತ್ಯ ಸಮ್ಮೇಳನ.
ಹಿಂದಿನವರ ಧ್ಯೇಯಕ್ಕಿಂತ ಈ ಸಾಹಿತ್ಯ ಸಮ್ಮೇಳನದ ಉದ್ದೇಶಗಳು ಇನ್ನೂ ಅಧಿಕವಾಗಿವೆ. ಅವುಗಳ ಕಾರ್ಯಕ್ಷೇತ್ರ ವಿಸ್ತಾರವಾಗಿದೆ. ಸಮ್ಮೇಳನವು ಕನ್ನಡಿಗರಲ್ಲಿ ಪರಸ್ಪರ ಪರಿಚಯಕ್ಕೆ ಅವಕಾಶವನ್ನು ಒದಗಿಸುತ್ತದೆ. ಯೋಗ್ಯ ಸಾಹಿತ್ಯ ರಚನೆಗೆ ಅನುಕೂಲವನ್ನು ಕಲ್ಪಿಸುತ್ತದೆ. ಗ್ರಂಥಕರ್ತರಿಗೆ ಬರಬಹುದಾದ ಸಮಸ್ಯೆಗಳನ್ನು ವಿಚಾರಿಸುತ್ತದೆ. ಕರ್ಣಾಟಕತ್ವ ಸಿದ್ಧಿಗಾಗಿ ಕನ್ನಡ ಪ್ರಾಂತದಲ್ಲಿ ಜಾಗೃತಿಯುಂಟು ಮಾಡುತ್ತದೆ.
ಈ ಘನೋದ್ದೇಶಗಳನ್ನು ಮುಂದಿಟ್ಟು ಸಮ್ಮೇಳನವು ಅನೇಕ ಕಾರ್ಯಗಳನ್ನು ಮಾಡಿದೆ, ಮಾಡುತ್ತಿದೆ. ಶಬ್ದಮಣಿದರ್ಪಣ, ಚಾವುಂಡರಾಯಪುರಾಣ, ಪಂಪಭಾರತ ಮೊದಲಾದ ಪ್ರಸಿದ್ಧ ಕೃತಿಗಳನ್ನು ಪರಿಷ್ಕರಿಸಿ ಮುದ್ರಿಸಿದೆ. ಒಬ್ಬರ ಮುಖ ಒಬ್ಬರು ನೋಡದೆ, ‘ಬೆಕ್ಕಿನ ಬಿಡಾರ ಬೇರೆ’ಯೆಂದು ನೆನಸಿ, ಪ್ರತ್ಯೇಕವಾಗಿದ್ದವರು ಇಂದು ಕನ್ನಡಕ್ಕಾಗಿ ದುಡಿಯಲು ಸಮೀಪವರ್ತಿಗಳು; ಕರೆದಲ್ಲಿ ಹೋಗಿ ಕಂಡ ತಿಳಿವನ್ನು ಮನವಾರೆ ತಿಳಿಸುವ ಸ್ನೇಹಿತರು. ಇಂಥವರ ಪರಿಚಯದಿಂದ, ಮಾತಾಳಿಕೆಯಿಂದ, ಹುರುಪಿನಿಂದ ಕನ್ನಡವು ತಲೆಯೆತ್ತಿದೆ. ಇದಕ್ಕೆ ಅಲ್ಲಲ್ಲಿ ಸ್ಥಾಪಿತವಾದ ಕರ್ಣಾಟಕಸಂಘ, ಮಂಡಳ, ಗುಂಪು ಇವೇ ಸಾಕ್ಷ್ಯಗಳು. ಜನಸಾಮಾನ್ಯಕ್ಕೆ ಕನ್ನಡದಮೇಲೆ ಅಭಿಮಾನ ಹುಟ್ಟಿಸುವಂಥ ಸಾಹಿತ್ಯ ಸಮಾರಂಭ, ಕವಿಗಳ ಜನ್ಮ ದಿನಾಚರಣ, ಧರ್ಮೋಪದೇಶಕರ ವರ್ಧಂತ್ಯುತ್ಸವ, ಪುಸ್ತಕ ಪ್ರದರ್ಶನ, ಇವು ಸಮ್ಮೇಳನವು ಪರಿಷತ್ಪತ್ರಿಕೆಯ ಮೂಲಕ ಮಾಡುತ್ತಲಿರುವ ಪ್ರಯತ್ನಫಲಗಳು. ಸಮ್ಮೇಳನದ ಕಾರ್ಯಗಳನ್ನು ಕುರಿತು ನಾನು ಹೇಳುವುದಕ್ಕಿಂತ ಮೈಸೂರು ಸಂಸ್ಥಾನದ ದಿವಾನ್ ಸಾಹೇಬರು ಕಳೆದ ಮೇ ತಿಂಗಳಲ್ಲಿ ಕೊಟ್ಟ ಅಮೂಲ್ಯ ಭಾಷಣದೊಳಗಣ ನಾಲ್ಕು ವಾಕ್ಯಗಳು ಎಷ್ಟು ಸ್ಫುಟವಾಗಿ ಹೇಳುತ್ತವೆ!
ಮುಖ್ಯವಾಗಿ, ಕರ್ಣಾಟಕ ಸಾಹಿತ್ಯ ಪರಿಷತ್ತು ಸ್ಥಾಪಿತವಾದ ಕಾಲದಿಂದಲಂತು ವರ್ಷವರ್ಷವೂ ಪುಸ್ತಕ ಪ್ರಕಟನೆಯು ಹೆಚ್ಚುತ್ತ ಬಂದಿದೆ. ಪುಸ್ತಕಗಳ ಸಂಖ್ಯೆಯು ಹೆಚ್ಚಿರುವುದು ಮಾತ್ರವೇ ಅಲ್ಲದೆ ಪುಸ್ತಕಗಳನ್ನು ಬರೆದಿರುವ ನಾನಾ ವಿಷಯಗಳ ಸಂಖ್ಯೆಯೂ ಹೆಚ್ಚು. ಪುಸ್ತಕಗಳ ಬಾಹ್ಯರೂಪವೂ ಹೆಚ್ಚು ಹೆಚ್ಚಾಗಿ ಅಂದವಾಗುತ್ತ ಬಂದಿವೆ. ದೇಶದಲ್ಲಿ ಗ್ರಂಥರಚನೆಯ ಕಾರ್ಯವು ಈ ರೀತಿ ಶ್ರೇಷ್ಠ ರೀತಿಯಲ್ಲಿ ನಡೆದುದಕ್ಕೆ ಪ್ರಚೋದಕವಾಗಿ ಪ್ರೇರಣೆಗೊಳಿಸಿದ ಖ್ಯಾತಿಯು ಪರಿಷತ್ತಿಗೆ ಸಲ್ಲತಕ್ಕುದಾಗಿದೆ.’
Tag: Kannada Sahitya Sammelana 20, Panje Mangesha Rao, Rayaru
೧೯ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ವೈ. ನಾಗೇಶಶಾಸ್ತ್ರಿ
ಸಂಸ್ಕೃತ-ಕನ್ನಡ ವಿದ್ವಾಂಸರಾದ ವೈ. ನಾಗೇಶಶಾಸ್ತ್ರಿಗಳು ಬಳ್ಳಾರಿ ಜಿಲ್ಲೆಯ ಏಳುಬೆಂಚೆಯಲ್ಲಿ ೧೮೯೩ರಲ್ಲಿ ವೀರಶೈವ ಗುರುಸ್ಥಲಮಠದ ನೀಲಾಂಬಿಕೆ-ನಮನಸ್ವಾಮಿಗಳ ಪುತ್ರರಾಗಿ ಜನಿಸಿದರು. ನಿಜಾಮ ಕರ್ನಾಟಕದ ಕೊಪ್ಪಳ ಗವಿಮಠದ ಕೊಂಗೋಡು ವೀರಭದ್ರಶಾಸ್ತ್ರಿಗಳಲ್ಲಿ ೩ ವರ್ಷ ಸಂಸ್ಕೃತ ಸಾಹಿತ್ಯ ಅಭ್ಯಾಸ ಮಾಡಿ ಪಂಡಿತರಾದರು. ಕನ್ನಡ, ಸಂಸ್ಕೃತ, ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾದ ಇವರು ೧೯೧೪ರಿಂದ ಬಳ್ಳಾರಿಯ ವಾಡ್ರ್ಲಾ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾದರು. ಅನಂತರ ಮದನಪಲ್ಲಿಯ ಥಿಯಾಸಫಿಕಲ್ ಕಾಲೇಜಿನಲ್ಲಿ, ಬೆಳಗಾಂನ ಲಿಂಗರಾಜ ಕಾಲೇಜಿನಲ್ಲಿ ಮತ್ತು ಬಳ್ಳಾರಿ ವೀರಶೈವ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಇವರ ಅಗಾಧ ಪಾಂಡಿತ್ಯವನ್ನು ಮೆಚ್ಚಿ ೧೯೨೫ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯವು ‘ಸರ್ವದರ್ಶನತೀರ್ಥ’ ಎಂದೂ ತಮಿಳುನಾಡಿನ ವಿಶ್ವವಿದ್ಯಾಲಯವು ‘ಕನ್ನಡ-ಸಂಸ್ಕೃತ ವಿದ್ವಾನ್’ ಎಂದೂ ಪ್ರಶಸ್ತಿ ನೀಡಿದವು. ೧೯೩೨ರಲ್ಲಿ ಮೈಸೂರು ಮಹಾರಾಜರು ನಾಗೇಶಶಾಸ್ತ್ರಿಗಳನ್ನು ಆಸ್ಥಾನ ವಿದ್ವಾಂಸರನ್ನಾಗಿ ಪರಿಗಣಿಸಿದರು. ಸೊಂಡೂರು ಮಹಾರಾಜರೂ ಇವರನ್ನು ಸನ್ಮಾನಿಸಿದ್ದಾರೆ.
೨೪-೪-೧೯೫೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ೨0ನೆಯ ಶತಮಾನದ ಮಹಾಕವಿ ಎಂದು ಹೊಗಳಿ ಸನ್ಮಾನಿಸಿತು. ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೧೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಪರಿಷತ್ತು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿತು. ೧೯೩೮ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
೧೯೨೫ರಲ್ಲಿ ಬಳ್ಳಾರಿಯಿಂದ ಕರ್ನಾಟಕ ಬಂಧು ವಾರಪತ್ರಿಕೆಗೆ ಹೊರಡಿಸಿ ಪತ್ರಿಕಾಕ್ಷೇತ್ರದಲ್ಲೂ ದುಡಿದ ಇವರು ಅನೇಕ ಸಾಹಿತ್ಯ ಪೂರ್ಣಗ್ರಂಥಗಳನ್ನು ರಚಿಸಿದ್ದಾರೆ.
ಗವಿಸಿದ್ಧೇಶ್ವರ ಪುರಾಣ, ಮರಿಯೋಗೀಶ್ವರ ಪುರಾಣ (ಪುರಾಣ ಕಾವ್ಯ), ಕಾಳಿದಾಸನ ರಘುವಂಶ, ಕುಮಾರಸಂಭವ ಕಾವ್ಯಗಳು (ಅನುವಾದ), ಮೊಗ್ಗೆಯ ಮಾಯಿದೇವನ ಅನುಭವಸೂತ್ರ (ಕನ್ನಡ ಭಾಷಾಂತರ), ಅಭಿನವ ಸೀತೆ, ವಿದ್ಯಾವಿನೋದಿನಿ (ಕಾದಂಬರಿಗಳು) ವಜ್ರಾಂಗುಳೀಯ, ವಿಜಯನಗರಾಭ್ಯುದಯ (ನಾಟಕಗಳು) – ಇವುಗಳು ಇವರು ರಚಿಸಿದ ಕೃತಿಗಳಲ್ಲಿ ಮುಖ್ಯವಾಗಿವೆ.
ಇವರು ೧೯೭೪ನೆಯ ಇಸವಿಯಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೧೯
ಅಧ್ಯಕ್ಷರು: ವೈ. ನಾಗೇಶಶಾಸ್ತ್ರಿ
ದಿನಾಂಕ ೨೯, ೩0, ೩೧ ಡಿಸೆಂಬರ್ ೧೯೩೩
ಸ್ಥಳ : ಹುಬ್ಬಳ್ಳಿ
ಸಾಹಿತ್ಯ ಪರಿಷತ್ತಿನ ಪ್ರಯೋಜನ
ಪೂರ್ವದಲ್ಲಿ ರಾಜರೂ ಮಂತ್ರಿಗಳೂ ಸಾಹಿತ್ಯ ಪಾರಂಗತರಾದಂತೆ ಅವರು ಬರೆದ ಗ್ರಂಥಗಳಿಂದಲೂ ಚರಿತ್ರಾಂಶಗಳಿಂದಲೂ ತಿಳಿದುಬರುವುದು. ಅವರು ತಮ್ಮ ರಾಜನೀತಿಯನ್ನು ಅಧಿಕಾರದ ಭಯ ದರ್ಪಗಳಿಂದ ಪ್ರಜೆಗಳಲ್ಲಿ ಪ್ರಸರಿಸಲು ಪ್ರಯತ್ನಿಸಲಿಲ್ಲ. ಅವರ ಪ್ರಯತ್ನವು ಸಾಹಿತ್ಯಮುಖದಿಂದ ಸಫಲವಾಗುವಷ್ಟು ಭಯದರ್ಪಗಳಿಂದಾಗುತ್ತಿರಲಿಲ್ಲ. ಅವರ ರಾಜನೀತಿಯೆಲ್ಲವೂ ಸಾಹಿತ್ಯಮಯವಾಗಿತ್ತು. ಜನರು ಉತ್ತಮ ಕಾವ್ಯಗಳನ್ನು ಓದುತ್ತ ಸುಲಭವಾಗಿ ರಾಜನೀತಿಗೊಳಪಟ್ಟು ರಾಜಭಕ್ತಿಯನ್ನು ಪ್ರಕಟಿಸತಕ್ಕವರಾಗುತ್ತಿದ್ದರು, ಸಾಹಿತ್ಯದಲ್ಲಿ ಅಂತಹ ಶಕ್ತಿಯೊಂದಿದೆ. ರಾಜಕೀಯ, ಸಾಮಾಜಿಕ, ಧಾರ್ಮಿಕಾದಿ ವಿಷಯಗಳು ಯಾವ ತರಹದ ಸಮಸ್ಯೆಯನ್ನಾದರೂ ಸರಳವಾಗಿ ಬಿಡಿಸುವ ಶಕ್ತಿಯು ಅದರಲ್ಲಿದೆ. ರಾಜಕೀಯ ಸಾಮಾಜಿಕಾದಿ ಸುಸಂಸ್ಕೃತಿಯನ್ನು ಜನಜೀವನದಲ್ಲಿ ನೆಲೆಗೊಳಿಸಿ ಜನತೆಯನ್ನು ಹುರುಪುಗೊಳಿಸಿ ಕಾರ್ಯಮಾಡಿಸುವ ಮುಂದಾಳಿನಂತಿರುವುದು ಈ ಶಕ್ತಿಯು. ಅಂತಹ ಶಕ್ತಿಯಿಂದ, ಪರಿಸ್ಥಿತಿಗನುಸರಿಸಿ ಜನತೆಯಲ್ಲಿ ಸುಸಂಸ್ಕೃತಿಯನ್ನು ಸ್ಥಾಪಿಸುವುದಕ್ಕಾಗಿಯೇ ಸಾಹಿತ್ಯ ಪರಿಷತ್ತಿನ ಉದಯವೆಂದರೆ ತಪ್ಪಾಗದು.
ಆಗಿರುವ ಪ್ರಯೋಜನಗಳು
ಈ ಪರಿಷತ್ತಿನಿಂದ ಆಗಿರುವ ಪ್ರಯೋಜನಗಳಲ್ಲಿ ಮುಖ್ಯವಾದುದೆಂದರೆ ಸಮ್ಮೇಳನಗಳನ್ನು ನಡೆಸುವುದು. ಈ ಕಾರ್ಯವು ಅತಿಮಹತ್ವದ್ದೆಂದು ನನ್ನ ಭಾವನೆ. ಪಂಡಿತರೂ ಕವಿಗಳೂ ಮೊದಲಾದ ಸಾಹಿತ್ಯಜ್ಞರು ಒಬ್ಬರಿಗೊಬ್ಬರು ಕೂಡಿ ಮೈತ್ರಿಯಿಂದ ಮಾತನಾಡುವುದೇ ಅಪೂರ್ವ. ಒಬ್ಬರಿಗೊಬ್ಬರು ಮತ್ಸರಗೊಳ್ಳುವುದು ಅವರ ಸ್ವಭಾವ. ಈ ಮತ್ಸರದಿಂದ, ಆಗಬಾರದ ಕೆಲಸವಾಗಿ ಜನತೆಯ ಬಾಳೇ ಹಾಳಾಗುತ್ತಿರುವುದು ನಮ್ಮೆಲ್ಲರ ಅನುಭವ. ಸಮ್ಮೇಳನಗಳು ಇಂತಹ ದೋಷಗಳನ್ನು ಕಳೆದು ಗೆಳೆತನವನ್ನು ಬೆಳೆಯಿಸುವುವು. ಸಾಹಿತ್ಯಜ್ಞರಲ್ಲಿ ಗೆಳೆತನವುಂಟಾದರೆ ಜಗತ್ತಿಗೆ ಮಹೋಪಕಾರವಾಯಿತೆಂದೇ ಹೇಳಬಹುದು. ನಮ್ಮೆಲ್ಲರನ್ನೂ ಅಂತಹ ಸ್ನೇಹರಜ್ಜುವಿನಿಂದ ಬಂಧಿಸಿ ಒಗ್ಗಟ್ಟಿನಲ್ಲಿರಿಸಿ ಹುರಿದುಂಬಿಸಿ ಭಾಷಾಸೇವೆಯನ್ನೂ ತನ್ಮೂಲಕ ದೇಶಸೇವೆಯನ್ನೂ ಮಾಡಲು ಮುಂದುವರಿಸುವುದಕ್ಕಾಗಿಯೇ ಇಂತಹ ಸಮ್ಮೇಳನಗಳು ನಡೆಯುವುವು. ಪರಿಷತ್ತಿನಿಂದ ಪ್ರಯೋಜನಗಳಲ್ಲಿ ಇದು ಮುಖ್ಯವಲ್ಲವೇ? ಈ ಸಮ್ಮೇಳನವು ಕವಿಗಳ, ಪತ್ರಿಕಾಕರ್ತರ, ನಾಯಕರ, ವಾಗ್ಮಿಗಳ, ಇನ್ನು ಸಾಹಿತ್ಯಾಂಗಗಳಾದ ಇತರ ಕಲೆಗಳನ್ನು ಬಲ್ಲವರ ಸಮ್ಮೇಳನಗಳನ್ನು ಈಗ ನಡೆಸುವುದಕ್ಕಿಂತಲೂ ಹೆಚ್ಚಾಗಿ ನಡೆಯಿಸಿ ಪ್ರೋತ್ಸಾಹವನ್ನುಂಟುಮಾಡಿದರೆ ಕನ್ನಡ ಸಾಹಿತ್ಯದೇವಿಯು ಸರ್ವಾಂಗಸುಂದರಳಾಗಿ ರಾರಾಜಿಸುವುದರಲ್ಲಿ ಸಂಶಯವಿಲ್ಲ
ಈ ಪರಿಷತ್ತು ಸ್ಥಾಪಿತವಾದಂದಿನಿಂದ ವಿಶ್ವವಿದ್ಯಾಪೀಠಗಳಿಗೂ, ರಾಜ್ಯಾಧಿಕಾರಿಗಳಿಗೂ ಸ್ಥಾನಿಕ ಸಂಸ್ಥೆಗಳ ಅಧಿಕಾರಿಗಳಿಗೂ, ಭಾಷಾಸೇವೆಯ ಸಂಸ್ಥೆಗಳಿಗೂ ಕಾಲಕಾಲಕ್ಕೆ ತಕ್ಕ ಸೂಚನೆಗಳನ್ನು ಸಮ್ಮೇಳನದಲ್ಲಾಗುವ ಗೊತ್ತುವಳಿಗಳ ಮೂಲಕವಾಗಿ ತಿಳಿಸುತ್ತ ಕನ್ನಡ ಭಾಷೆಯನ್ನೂ ಸಾಹಿತ್ಯವನ್ನೂ ಉತ್ತಮಗೊಳಿಸಿ ಅಭಿವೃದ್ಧಿಪಡಿಸುತ್ತಿರುವುದು ಮುಖ್ಯ ಪ್ರಯೋಜನವಲ್ಲವೆ? ಇದರಂತೆ ಗ್ರಂಥಗಳನ್ನು ಶೋಧಿಸಿ ಪ್ರಕಟಿಸುವುದೂ, ಉತ್ತಮ ರೀತಿಯ ಪರಿಷತ್ಪತ್ರಿಕೆಯೊಂದನ್ನು ಪ್ರಕಟಿಸುತ್ತಿರುವುದೂ, ಗ್ರಂಥಕರ್ತರಿಗೆ ಪ್ರೋತ್ಸಾಹವನ್ನೀಯುವುದೂ-ಇವೇ ಮೊದಲಾದ ಪ್ರಯೋಜನಗಳಾಗಿರುವುದು ತಮಗೆ ತಿಳಿದ ವಿಷಯವಾಗಿದೆ.
ಆಗಬೇಕಾದ ಪ್ರಯೋಜನಗಳು
ಪರಿಷತ್ತಿನಿಂದ ಆಗಬೇಕಾದ ಪ್ರಯೋಜನಗಳು ಅನೇಕವಾಗಿರುವುವು; ಅವೆಲ್ಲಕ್ಕೂ ಜನಸಹಾಯವೂ ಧನಸಹಾಯವೂ ಅವಶ್ಯವೆಂಬುದು ವಿಧಿತವೇ. ಸದ್ಯದಲ್ಲಿರುವ ಪರಿಷತ್ತಿನ ಸದಸ್ಯರ ಸಂಖ್ಯೆಯು ಕನ್ನಡಿಗರ ಭಾಷಾಭಿಮಾನ ಶ್ಯೂನ್ಯತೆಯನ್ನು ಸೂಚಿಸುತ್ತಿರುವುದು. ಸದಸ್ಯರ ಸಂಖ್ಯೆಯನ್ನು ವೃದ್ಧಿಪಡಿಸುವುದು ನಮ್ಮ ಆದ್ಯಕರ್ತವ್ಯವು. ಇದಲ್ಲದೆ, ಜನತೆಯಲ್ಲಿ ವಾಚನಾಭಿರುಚಿಯನ್ನು ವೃದ್ಧಿಪಡಿಸಲಿಕ್ಕೆ ಅನುಕೂಲವಾದ ಕಾರ್ಯಗಳನ್ನು ಪರಿಷತ್ತಿನವರು ಹೆಚ್ಚಾಗಿ ಕೈಕೊಳ್ಳಬೇಕಾಗಿದೆ. ವಾಚನಾಭಿರುಚಿಯುಂಟಾದೊಡನೆ ಜನತೆಯು ಸಾಹಿತ್ಯಾಭಿಮುಖವಾಗುವುದು. ಆಗ ಪರಿಷತ್ತಿಗೆ ಜನಸಹಾಯವು ಅಧಿಕವಾಗಿ ದೊರೆಯಬಹುದು. ಸದ್ಯದಲ್ಲಿ ಪರಿಷತ್ತಿಗೆ ಮೈಸೂರಿನ ಮಹಾರಾಜರೂ ಅವರ ಸರ್ಕಾರದವರೂ ಧನ ಸಹಾಯವನ್ನೂ ಮಾಡಿಯೂ ಮಾಡುತ್ತಲೂ ಇರುವುದು ಅಭಿನಂದನೀಯವೂ ಸ್ತುತ್ಯವೂ ಆಗಿರುವುದು. ಈ ಪರಿಷತ್ತು ಮೈಸೂರು ಬೆಂಗಳೂರಿನವರಿಗೆ ಮಾತ್ರ ಸಂಬಂಧಿಸುದುದಲ್ಲ; ಸರ್ವಪ್ರಾಂತಗಳ ಕನ್ನಡಿಗರಿಗೂ ಸಂಬಂಧಿಸಿರುವುದು. ಕನ್ನಡಿಗರ ಸಾಹಿತ್ಯವನ್ನು ವೃದ್ಧಿಗೊಳಿಸುವುದರಲ್ಲಿ ಅಭಿಮಾನವುಳ್ಳ ಎಲ್ಲಾ ಭಾಗದ ಪ್ರಾಂತಿಕ ಸರಕಾರದವರೂ, ಲೋಕಲ್ ಬೋರ್ಡಿನವರೂ, ಶ್ರೀಮಂತರೂ, ಇನ್ನುಳಿದವರೂ ಈ ಪರಿಷತ್ತಿಗೆ ಧನಸಹಾಯ ಮಾಡುವಂತೆ ಬೇಡುವ ಹಕ್ಕು ಕನ್ನಡಿಗರೆಲ್ಲರಿಗೂ ಇರುವುದು. ಪರಿಷತ್ತಿಗೆ ಜನಧನ ಸಹಾಯವಾದಂತೆ ಅದರಿಂದ ಅನೇಕ ಪ್ರಯೋಜನಗಳು ನಮಗುಂಟಾಗುವುದರಲ್ಲಿ ತೊಡಕಿಲ್ಲ.
ಇನ್ನು ಮುಂದೆ ಬ್ರಿಟಿಷರ ಸರಕಾರಲ್ಲಿಯೂ ದೇಶೀಯ ಸಂಸ್ಥಾನಗಳಲ್ಲಿಯೂ ಹೊಸ ಸುಧಾರಣೆಗಳಾಗಿ ರಾಜ್ಯಭಾರಕ್ರಮಗಳು ಮಾರ್ಪಡುತ್ತಿರುವುವೆಂಬುದು ನಮಗೆ ತಿಳಿದ ವಿಷಯ. ಹೊಸ ಸುಧಾರಣೆಯ ರಾಜ್ಯಭಾರದಲ್ಲಿ ಇತರ ಪ್ರಾಂತಗಳಿಗೂ ಅವುಗಳ ಭಾಷೆಗಳಿಗೂ ಸಲ್ಲುವ ಅನುಕೂಲಗಳು ನಮಗೂ ನಮ್ಮ ಭಾಷೆಗೂ ಸಲ್ಲಲು ಅವಕಾಶವಿರುವುದೆ? ಅಂತಹ ಅನುಕೂಲಗಳನ್ನು ಪಡೆಯಲಿಕ್ಕೆ ಈಗ ನಾವು ಮಾಡಿಕೊಳ್ಳತಕ್ಕ ಪೂರ್ವಸಿದ್ಧತೆಯೇನು? ಈ ಪ್ರಶ್ನೆಯೇ ಸದ್ಯದಲ್ಲಿ ನಮ್ಮ ಮುಂದಿರುವುದು. ಕರ್ಣಾಟಕ ಪ್ರಾಂತರಚನೆಯಾಗಿ ಕನ್ನಡಿಗರಿಗೊಂದು ಸ್ವತಂತ್ರ ವಿಶ್ವವಿದ್ಯಾಲಯವಾದರೆ ಸಾಕೆಂದು ಹಲವರ ಅಭಿಪ್ರಾಯ. ಇದು ಶೀಘ್ರದಲ್ಲಿ ಸಫಲವಾಗಲಾರದೆಂಬುದೂ ಈಗಿನ ಪರಿಸ್ಥಿತಿಯ ಮೂಲಕ ನಮಗೆ ಗೊತ್ತಾಗುತ್ತಿರುವುದು. ಹೀಗೆಂದು ನಾವು ನಿರಾಶೆಯಿಂದ ಸುಮ್ಮನೆ ಕುಳಿತುಕೊಳ್ಳಲಿಕ್ಕೂ ಇರುವಂತಿಲ್ಲ. ನಮಗೆ ಅನುಕೂಲವನ್ನುಂಟುಮಾಡುವ ಕಾರ್ಯಗಳಲ್ಲಿ ಮುಂದುವರಿಯಬೇಕಾಗಿದೆ. ಪರಿಷತ್ತು ಸಮ್ಮೇಳನಗಳಲ್ಲಿಯೂ ತನ್ನ ವಾರ್ಷಿಕಾಧಿವೇಶನಗಳಲ್ಲಿಯೂ ನಿರ್ಣಯಿಸಿದ ಗೊತ್ತುವಳಿಗಳನ್ನೆಲ್ಲ ಕಾರ್ಯರೂಪದಲ್ಲಿ ತರುವುದೇನೋ ವಿಹಿತವೆ. ಆದರೆ ಹಾಗೆ ಮಾಡಬೇಕಾದರೆ ಮೇಲೆ ಹೇಳಿದಂತೆ ಜನಧನ ಸಹಾಯವು ಸಾಕಾದಷ್ಟಿರಬೇಕು. ಪರಿಷತ್ತು ಈಗ ತನಗಿರುವ ಜನಧನ ಸಹಾಯಕ್ಕೆ ತಕ್ಕಂತೆ, ಸದ್ಯದ ಪರಿಸ್ಥಿತಿಗೆ ಯಾವುದು ಮುಖ್ಯವೋ ಅಂತಹ ಒಂದೆರಡು ವಿಷಯಗಳನ್ನು ಕಾರ್ಯರೂಪದಲ್ಲಿ ತರುವುದಕ್ಕಾಗಿ ವರ್ಷಾವಧಿ ದುಡಿಯುವುದೇ ಮುಖ್ಯ ಪ್ರಯೋಜನವೆಂದು ನನ್ನ ಭಾವನೆ. ಅಂತಹ ಕಾರ್ಯಗಳು ಯಾವುವೆಂಬುದನ್ನು ನಿರ್ಣಯಿಸುವುದು ತಮ್ಮೆಲ್ಲರ ವಿಚಾರಕ್ಕೊಳಪಟ್ಟಿರುವುದು.
ಪರಿಷತ್ತಿನ ಇತರ ಪ್ರಯೋಜನಗಳು
ಪರಿಷತ್ತಿನಿಂದ ನಮಗೆ ಬೇಕಾದ ಇತರ ಪ್ರಯೋಜನಗಳಲ್ಲಿ, ನನಗೆ ತಿಳಿದವುಗಳಲ್ಲಿ ಕೆಲವನ್ನು ಇಲ್ಲಿ ಸೂಚಿಸುವೆನು:-
ಈಚೆಗೆ ಭಾಷೆಯಲ್ಲಿ ಎಷ್ಟೋ ವ್ಯತ್ಯಾಸಗಳಾಗಿರುವುವು. ಈ ವ್ಯತ್ಯಾಸಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಅವಶ್ಯವೂ ಅನಿವಾರ್ಯವೂ ಆಗಿರುವ ವ್ಯತ್ಯಾಸಗಳು ಆಕ್ಷೇಪರಹಿತಗಳೆಂದು ಹೇಳುವ ಹೊಸ ವ್ಯಾಕರಣ ಗ್ರಂಥವೊಂದು ಪರಿಷತ್ತಿನ ಪಂಡಿತ ಮಂಡಲದಿಂದ ರಚಿತವಾಗುವುದು ಅವಶ್ಯ. ಕನ್ನಡ ಭಾಷಾಶಾಸ್ತ್ರವೂ, ಶಾಸ್ತ್ರೀಯ ತತ್ತ್ವಗಳನ್ನು ವಿವರಿಸುವ ಗ್ರಂಥಗಳೂ, ಗ್ರಾಮ ಸುಧಾರಣೆಗೆ ಬೇಕಾದ ಸಣ್ಣಸಣ್ಣ ಪುಸ್ತಕಗಳೂ ನಮ್ಮ ಸಾಹಿತ್ಯಕ್ಕೆ ಬೇಕಾಗಿವೆ. ಇವುಗಳನ್ನು ಬರೆಯಿಸುವುದೂ ಬರೆಯುವವರಿಗೆ ಪ್ರೋತ್ಸಾಹ ವನ್ನುಂಟುಮಾಡುವುದೂ ಪರಿಷತ್ತಿಗೆ ಅವಶ್ಯ.
ಕನ್ನಡದಲ್ಲಿ ಮುದ್ರಿತವಾದ ಪ್ರತಿಯೊಂದು ಗ್ರಂಥವೂ ಸಾಹಿತ್ಯ ಪರಿಷತ್ತಿನ ಪುಸ್ತಕ ಭಾಂಡಾರದಲ್ಲಿ ಸಿಕ್ಕುವಂತೆ ಅದನ್ನು ವೃದ್ಧಿಪಡಿಸಬೇಕು. ಬೇಕಾದ ಗ್ರಂಥವು ಕನ್ನಡಿಗರಿಗೆ ಸಮಯಕ್ಕೆ ಸರಿಯಾಗಿ ಸಿಕ್ಕದೆ ಎಷ್ಟೋ ತೊಂದರೆಯಾಗುತ್ತಿರುವುದು. ಈ ತೊಂದರೆಯನ್ನು ಪರಿಷತ್ತು ಪರಿಹರಿಸಬೇಕು. ಮುದ್ರಿತವಾಗದ ಪುಸ್ತಕಗಳನ್ನು ಸಾಧ್ಯವಾದಮಟ್ಟಿಗೆ ಸಂಗ್ರಹಿಸಬೇಕು.
Tag: Kannada Sahitya Sammelana 19, Y. Nagesha Shastri, Y. Nagesh Shasthri, Nageshshasthri
೧೮ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಡಿ.ವಿ. ಗುಂಡಪ್ಪ
ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರಾಗಿ ಮಂಕುತಿಮ್ಮನ ಕಗ್ಗದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ವೆಂಕಟರಮಣಯ್ಯ-ಅಲಮೇಲಮ್ಮ ದಂಪತಿಗಳಿಗೆ ಮಗನಾಗಿ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ೧೭-೩-೧೮೮೭ರಂದು ಜನಿಸಿದರು. ಶಾಲಾ ವಿದ್ಯಾಭ್ಯಾಸವನ್ನು ಮುಳುಬಾಗಿಲಿನಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಮುಗಿಸಿದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು.
ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲ ಕಾಲ ಕೆಲಸ ಮಾಡಿದರು.
ಅನಂತರ ಪತ್ರಿಕಾರಂಗ ಪ್ರವೇಶಿಸಿ ಸೂರ್ಯೋದಯ ಪ್ರಕಾಶಿಕಾ, ಭಾರತ ದಿನಪತ್ರಿಕೆ, ಕರ್ನಾಟಕ, ಮೈಸೂರು ಟೈಂಸ್ ಮೊದಲಾದ ಪತ್ರಿಕೆಗಳ ಸಂಪಾದನಾ ಕಾರ್ಯ ಮಾಡಿದರು.. ೧೬ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು. ಮೈಸೂರು ಪತ್ರಿಕೋದ್ಯಮ ಸಂಘದ ಸ್ಥಾಪನೆ ಮಾಡಿದರು. ಬೆಂಗಳೂರು ಪುರಸಭೆ ಸದಸ್ಯರು, ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರು, ಪ್ರಜಾಜನ ಪರಿಷತ್ತು ದೇಶೀಯ ಸಂಸ್ಥಾನಗಳ ಪರಿಷತ್ತು ಮೊದಲಾದ ಹತ್ತಾರು ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದರು. ಇಂಗ್ಲಿಷ್ ಕನ್ನಡ ನಿಘಂಟಿನ ಸಂಪಾದಕ ಸಮಿತಿಯಲ್ಲಿದ್ದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ೧೯೪೫ರಲ್ಲಿ ಸ್ಥಾಪಿಸಿದರು. ೧೯೧೫ರಲ್ಲಿ ಪರಿಷತ್ತಿನ ಸ್ಥಾಪಕವರ್ಗದಲ್ಲಿದ್ದವರೂ ಆಗಿದ್ದ ಇವರು ೧೯೩೩-೩೭ರಲ್ಲಿ ಪರಿಷತ್ತಿನ ಉಪಾಧ್ಯಾಕ್ಷರಾಗಿದ್ದರು.
ಡಿವಿಜಿ ಅವರಿಗೆ ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಡಿಲಿಟ್ ನೀಡಿತು. ೧೯೬೭ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಸಿಕ್ಕಿತು. ೧೯೨೮ರಲ್ಲಿ ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಕರ್ನಾಟಕ ವೃತ್ತ ಪತ್ರಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷರಾದರು. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿತು. ಬೆಂಗಳೂರು ನಾಗರಿಕರು ಸಾರ್ವಜನಿಕ ಸಮಾರಂಭದಲ್ಲಿ ಸನ್ಮಾನಿಸಿ ೧ ಲಕ್ಷ ಗೌರವನಿಧಿ ನೀಡಿದರು. ಅದನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ನೀಡಿದರು.
ಡಿವಿಜಿ ಅವರ ಸಮಗ್ರ ಕೃತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿದೆ. ಅವರ ಕೆಲವು ಮುಖ್ಯಕೃತಿಗಳು ಹೀಗಿವೆ.
ಜೀವನ ಸೌಂದರ್ಯ ಮತ್ತು ಸಾಹಿತ್ಯ, ಮಂಕುತಿಮ್ಮನ ಕಗ್ಗ, ಬಾಳಿಗೊಂದು ನಂಬಿಕೆ, ಅಂತಃಪುರಗೀತೆ, ಸಂಸ್ಕೃತಿ. ಉಮರನ ಒಸಗೆ, ದಿವಾನ್ ರಂಗಾಚಾರ್ಲು, ಕೃಷ್ಣ ಪರೀಕ್ಷಣ, ಗೋಪಾಲಕೃಷ್ಣ ಗೋಖಲೆ, ಗೀತಾ, ಶಕುಂತಳ, ರಾಜ್ಯಶಾಸ್ತ್ರ, ಜ್ಞಾಪಕ ಚಿತ್ರಶಾಲೆ, ವಸಂತಕುಸುಮಾಂಜಲಿ(೮ ಸಂಪುಟಗಳು)
ಕನ್ನಡ ಸಾಹಿತ್ಯ ಸಮ್ಮೇಳನ–೧೮,
ಅಧ್ಯಕ್ಷರು: ಡಿ.ವಿ. ಗುಂಡಪ್ಪ
ದಿನಾಂಕ ೨೮, ೨೯, ೩0 ಡಿಸೆಂಬರ್ ೧೯೩೨
ಸ್ಥಳ : ಮಡಿಕೇರಿ
ಈಗಿನ ಸಾಹಿತ್ಯ
ಅನ್ಯ ಸಾಹಿತ್ಯ ಸಂಪರ್ಕದಿಂದ ಕನ್ನಡಕ್ಕ ಪ್ರಯೋಜವುಂಟೆಂಬುದು ಈಗ ಎಲ್ಲರಿಗೂ ಪ್ರತ್ಯಕ್ಷವಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯವು ಒಂದು ನವೀನ ಕಾಂತಿಯನ್ನೂ ಶಕ್ತಿಯನ್ನೂ ಸಂಪಾದಿಸಿಕೊಳ್ಳುತ್ತ ಬಂದಿದೆ. ಅದರಲ್ಲಿಯೂ ಈಗ ೧೫-೨0 ವರ್ಷಗಳಲ್ಲಿ-ಕರ್ಣಾಟಕ ಸಾಹಿತ್ಯ ಪರಿಷತ್ತು, ಧಾರವಾಡದ ವಿದ್ಯಾವರ್ಧಕ ಸಂಘ, ಬೆಂಗಳೂರಿನ ಕರ್ಣಾಟಕ ಸಂಘ, ಧಾರವಾಡದ ಗೆಳೆಯರ ಗುಂಪು ಮಂಗಳೂರಿನಲ್ಲಿ ಬಾಲಸಾಹಿತ್ಯಮಂಡಲ, ಮೈಸೂರು ಕರ್ಣಾಟಕ ಸಂಘ ಮೊದಲಾದ ಸಂಸ್ಥೆಗಳ ಸ್ಥಾಪನೆಯಾದ ಮೇಲೆ- ಈ ಸಂಸ್ಥೆಗಳ ಮೂಲಕವೂ, ಅವುಗಳ ಪ್ರಭಾವದಿಂದುಂಟಾದ ವಾತಾವರಣದ ಪ್ರೇರಣೆಯಿಂದಲೂ ಹೊಸ ಜಾತಿಯ ಗ್ರಂಥ ರಾಶಿಯು ದೇಶದ ಗಮನವನ್ನಾಕರ್ಷಿಸಿಕೊಳ್ಳುವಷ್ಟರಮಟ್ಟಿಗೆ ಬೆಳದಿದೆ. ಈ ಗ್ರಂಥಗಳಲ್ಲಿ ಕೆಲವುಗಳ ವಿಷಯ ಹೊಸದು, ಕೆಲವುಗಳ ರೀತಿ ಹೊಸದು. ವಾತಾವರಣದ ಲಕ್ಷಣಗಳನ್ನು ನೋಡಿದರೆ ಈಗ ಇನ್ನೂ ವಸಂತಾರಂಭದಂತೆ ತೋರುತ್ತದೆ. ಸಾಹಿತ್ಯೋಪಾಸನೆಯ ಉತ್ಸಾಹವು ನೂರಾರು ಎಳೆಯ ಕಣ್ಣುಗಳಲ್ಲಿ ಹೊಳೆಯುತ್ತಿದೆ.
ಇಂತಹ ಸಮಯದಲ್ಲಿ ತರುಣನಲ್ಲದೆ ಪರಿಣತನಾಗದೆ ಇರುವ ನನ್ನಂಥವನು ನೂತನ ಸಾಹಿತ್ಯವನ್ನು ಕುರಿತು ಒಂದೆರಡು ಮಾತನ್ನಾಡಿದರೆ ಅದು ಕಿರಿಯರ ಗಮನಕ್ಕೆ ತಕ್ಕುದಾಗಿರಬಹುದಲ್ಲವೆ? ಅದು ನಾನು ಗ್ರಂಥ ಲೇಖಕಕನಾಗಿಯಾದಂದಿನಿಂದ ಅದಕ್ಕೆ ಆಧಾರಸ್ತಂಭಪ್ರಾಯರೂ ಆಗಿದ್ದ ರಾಜಸಭಾಭೂಷಣ ಶ್ರೀಮನ್ ಕರ್ಪೂರ ಶ್ರೀನಿವಾಸರಾಯರು ಕಾಲವಶರಾದುದು ನಮಗೆ ಎಣಿಸಲಾಗದಷ್ಟು ದೊಡ್ಡನಷ್ಟವಾಗಿದೆ. ಅವರಂತಹ ವಿದ್ವತ್ಪಕ್ಷಪಾತಿಗಳೂ ಸಾಹಿತ್ಯಪ್ರೇಮಿಗಳೂ ಸಹಾಯಕರ್ತರೂ ದೊರಕುವುದು ಸುಲಭವಲ್ಲ.
ಪರಿಷ್ಮನಂದಿರ
ಮತ್ತೊಂದು ಲಾಭ : ಕರ್ಣಾಟಕ ಸಾಹಿತ್ಯ ಪರಿಷತ್ತು ಈ ೧೮ ವರ್ಷವೂ ಬಾಡಿಗೆಯ ಮನೆಗಳಲ್ಲಿ ವಾಸಮಾಡಿಕೊಂಡಿರಬೇಕಾಗಿತ್ತು. ಈಗ ಮೈಸೂರಿನ ಶ್ರೀಮನ್ಮಹಾರಾಜರವರ, ಅವರ ಸರಕಾರದವರ ಮತ್ತು ಇತರ ಪರಿಷದಭಿಮಾನಿಗಳ ಔದಾರ್ಯದಿಂದ, “ಶ್ರೀಕೃಷ್ಣರಾಜೇಂದ್ರ ಕರ್ಣಾಟಕ ಸಾಹಿತ್ಯ ಪರಿಷನ್ಮಂದಿರ”ವು ಬೆಂಗಳೂರಿನಲ್ಲಿ ನಿರ್ಮಿತವಾಗಿ, ಆವಾಸಕ್ಕೆ ಸಿದ್ಧವಾಗಿದೆ. ಶುಭದಿನ, ಶುಭಹಸ್ತದಿಂದ ಅವರ ಕವಾಟಪಾಟನೋತ್ಸವವನ್ನು ಮಾಡಿಸಿದ ಬಳಿಕ, ಪರಿಷತ್ತಿನ ಮುಂದಿನ ಕಾರ್ಯಸಮಾರಂಭಗಳು ಸಾಂಗವಾಗಿ ನಡೆಯಲು ಅಲ್ಲಿ ಬೇಕಾದ ಅನುಕೂಲಗಳಿರುವುವು. ಪುಸ್ತಕ ಭಾಂಡಾಗಾರಕ್ಕೂ, ಪತ್ರಿಕಾವಾಚಕರಿಗೂ, ಉಪನ್ಯಾಸ ಚರ್ಚೆಗಳಿಗಾಗಿ ಸೇರುವ ಪಂಡಿತ ಪರಿಶೋಧಕ ಸಭೆಗಳಿಗೂ ಅಲ್ಲಿ ತಕ್ಕ ಸ್ಥಳಾನುಕೂಲವನ್ನು ಕಲ್ಪಿಸಿದೆ. ಅಲ್ಲಿ ನೆಲಸಿದ ಬಳಿಕ, ಪರಿಷತ್ತಿನ ಕಾರ್ಯಗಳು ಹತ್ತರಷ್ಟಿಪ್ಪತ್ತರಷ್ಟಾಗಿ ಬೆಳೆದು ನಡೆದಾವೆಂದು ನನ್ನ ಭರವಸೆ. ಆ ಮುಂದಿರವು ಮೈಸೂರಿನವರದು ಮಾತ್ರ ಅಲ್ಲ. ಎಲ್ಲ ಕನ್ನಡಿಗರಿಗೂ ಸೇರಿದ್ದು. ಕರ್ಣಾಟಕ ಸಾರಸ್ವತ ಪ್ರಪಂಚಕ್ಕೆ ಅದು ಕೇಂದ್ರಸ್ಥಾನವಾಗಬೇಕು. ಎಲ್ಲ ಸಾಹಿತ್ಯ ಸೇವಕರೂ ಅದನ್ನು ನಮ್ಮ ಕುಲದೈವ ಕ್ಷೇತ್ರವೆಂದು ತಿಳಿಯಬೇಕು. ಹೀಗಾಗಲೂ ತಮ್ಮೆಲ್ಲರ ವಿಶ್ವಾಸವು ಸಹಕಾರವು ಬೇಕೆಂದು ಪ್ರಾರ್ಥಿಸುತ್ತೇನೆ.
ಸದ್ಯಕ್ಕೆ ನಮ್ಮ ಪರಿಷತ್ತನ್ನು ನಾವು ಬಲಪಡಿಸಿದರೆ ಅದರ ಮೂಲಕ, ಮೈಸೂರಿನ ಮತ್ತು ಇತರ ಪ್ರಾಂತಗಳ ವಿದ್ಯಾಪ್ರಚಾರದ ಇಲಾಖೆಗಳ ಸಹಕಾರದಿಂದ, ಕನ್ನಡ ಸಾಹಿತ್ಯ ಪಾಂಡಿತ್ಯಕ್ಕೊಂದು ಪ್ರೋತ್ಸಾಹನಕ್ರಮವು ಏರ್ಪಡಬಹುದೆಂದು ತೋರುತ್ತದೆ. ಈಗ ಮೈಸೂರಿನಲ್ಲಿ ನಡೆಯುತ್ತಿರುವ ಅಪ್ಪರ್ಸೆಕೆಂಡರಿ ಮತ್ತು ಪಂಡಿತ ಪರೀಕ್ಷೆಗಳನ್ನು ಪರಿಷ್ಕಾರಗೊಳಿಸಿ, ಆ ಪ್ರಶಸ್ತಿಗಳನ್ನು ಬೊಂಬಾಯಿ, ಮದ್ರಾಸು, ಕೊಡಗು, ಹೈದರಾಬಾದುಗಳ ಸರಕಾರಗಳು ಗೌರವಿಸುವಂತೆ ಮಾಡಿದರೆ ನಾನಾಭಾಗಗಳ ಕನ್ನಡ ವಿದ್ಯಾರ್ಥಿಗಳೂ ಒಂದು ಗೋಷ್ಠಿಯಲ್ಲಿ ಸೇರುವಂತಾಗಿ ಆ ಮೂಲಕ ಕನ್ನಡದ ವಾತಾವರಣವು ಹಬ್ಬಿಕೊಂಡೀತೆಂದು ತೊರುತ್ತದೆ.
ಕನ್ನಡ ಪಾಠಕ್ರಮ
ನಮ್ಮ ಪರಿಷತ್ತಿನ ಕನ್ನಡ ಪಠ್ಯಪುಸ್ತಕಗಳ ಕಡೆಗೂ ಪಾಠಕ್ರಮಗಳ ಕಡೆಗೂ ಹೆಚ್ಚು ಗಮನಕೊಡಬೇಕೆಂದು ತೋರುತ್ತದೆ. ಈ ಸಂಗತಿ ಹೊರಗಡೆ ಹೇಗಿದೆಯೋ ನನಗೆ ತಿಳಿಯದು; ಮೈಸೂರಿನಲ್ಲಿ ಮಾತ್ರ ಪರಿಷ್ಕಾರಕ್ಕೆಡೆ ಬಿಟ್ಟಿದೆ. ಪಾಠಪುಸ್ತಕಗಳನ್ನಾರಿಸುವುದರಲ್ಲಿ ವಿಷಯ ಗೌರವ, ಭಾವಪುಷ್ಟಿ, ಶೈಲಿಯ ಶುದ್ಧತೆ – ಈ ಮೂರಂಶಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳಬೇಕು. ನೀರಸವಾದ ಗ್ರಂಥಗಳಿಂದ ವಿದ್ಯಾರ್ಥಿಗಳಿಗೆ ಬೇಸರಹುಟ್ಟಿ, ಅಮೇಲೆ ಅವರಿಗೆ ಕನ್ನಡವೆಂದರೆ ಸಾಕೆನಿಸುವುದು.
ಪರಿಷತ್ತು ಕಾರ್ಯೋತ್ಸಾಹ ಹುಟ್ಟಿಸಬೇಕು
ಪಾಠಕರ ಶಿಕ್ಷಣವೂ ಉತ್ತಮಪಡಬೇಕಾಗಿದೆ. ಹಿಂದೆ ಕಾವ್ಯಪಾಠ ಮಾಡಿಸುತ್ತಿದ್ದವರು ಅಷ್ಟಿಷ್ಟಾದರೂ ಸಾಹಿತಿಗಳಾಗಿದ್ದವರು. ಅವರಿಗೆ ವ್ಯಾಕರಣದ ಮೇಲೆಯೂ ಭಾವಾರ್ಥದ ಮೇಲೆಯೂ ದೃಷ್ಟಿಯಿರುತ್ತಿತ್ತು; ಅವರಿಗೆ ಪುರಾಣ ಪೂರ್ವಕಥೆಗಳ ಜ್ಞಾನವಿತ್ತು. ಈಗಿನವರಿಗೆ ಪೂರ್ವಸಾಹಿತ್ಯದ ಪರಿಚಯ ಅಷ್ಟಿಲ್ಲ; ಇಂಗ್ಲಿಷ್ ಸಾಹಿತ್ಯದ ಸೊಬಗನ್ನೂ ಅವರು ಅರಿತವರಲ್ಲ. ಸಾಹಿತ್ಯಸ್ವರೂಪನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಂಡಿರದವರು, ಶಿಷ್ಯರಿಗೆ ಭಾಷಾಮರ್ಯಾದೆಯನ್ನು ವಿವರಿಸುವುದೂ, ಅವರಿಗೆ ಕವಿಹೃದಯವನ್ನು ಬಿಚ್ಚಿತೋರಿಸುವುದೂ, ಅವರಲ್ಲಿ ಕಾವ್ಯೋತ್ಸಾಹವನ್ನು ಹುಟ್ಟಿಸುವುದೂ ಹೇಗಾದೀತು? ಇಂಗ್ಲೆಂಡಿನಲ್ಲಿ ಇಂಥಾ ಪ್ರಶ್ನೆಗಳು “ಇಂಗ್ಲಿಷ್ ಅಸೋಸಿಯೇಷನ್” ಎಂಬ ಆಂಗ್ಲ ಸಾಹಿತ್ಯ ಪರಿಷತ್ತಿನ ಪರಿಶೀಲನೆಗೆ ಬಂದು, ಸಂಸ್ಕಾರ ಪ್ರಯತ್ನಗಳು ನಡೆದಿವೆ. ನಮ್ಮ ಪರಿಷತ್ತು ಆ ಮೇಲ್ಪಂಕ್ತಿಯನ್ನನುಸರಿಸಿ ಕೆಲಸ ನಡೆಸಬೇಕು.
ಕಛೇರಿಯ ಕನ್ನಡ
ಸರಕಾರದ ನಾನಾ ಇಲಾಖೆಗಳವರು ದೇಶಭಾಷೆಗೆ ಸಹಾಯಮಾಡಲು ಬಹುವಿಧವಾಗಿ ಅವಕಾಶವುಂಟು. ಮುಖ್ಯವಾಗಿ, ಅವುಗಳ ಲೆಕ್ಕಪತ್ರಗಳನ್ನು ಕೂಡಿದಮಟ್ಟಿಗೂ ಕನ್ನಡದಲ್ಲಿಯೇ ಬರೆಯಿಸಿಡಬೇಕು. ಅವುಗಳ ನಾನಾ ಪಟ್ಟಿಕೆಗಳೂ ವರದಿಗಳೂ ಸಾಮಾನ್ಯ ಜನರನ್ನು ಮುಟ್ಟುತ್ತವೆ. ಅವುಗಳಲ್ಲಿ ಒಳ್ಳೆಯ ಭಾಷೆಯಿದ್ದರೆ ಎಲ್ಲರಿಗೂ ಒಳ್ಳೆಯದೆ. ಈ ಶೈಲಿಯನ್ನು ನೋಡಿರಿ:-
“ಈ ಹುಕುಂಮಿಗೆ ಲಗತ್ತಿರುವ ತಃಖ್ತೆಯ ಕಲಂಗಳಲ್ಲಿ ಸವಾಲಿಗೆ ಜವಾಬನ್ನು ಹುಷ್ಯಾರೀಯಿಂದ ನಮೂದಿಸತಕ್ಕದ್ದಿದೆ.”
“ಈ ಕೊಳದಲ್ಲಿ ಗಲೀಜುವಗೈರೆ ಮಾಡುವವರನ್ನು ಪ್ರಾಸಿಕ್ಯೂಷನ್ ಮಾಡಲ್ಪಡುತ್ತದೆ.”
ಇದು ಯಾವ ಸೀಮೆಯ ಕನ್ನಡ? ಈ ಉದಾಹರಣೆಗಳು ನನ್ನ ಕಲ್ಪನೆಯಲ್ಲ. ಇಂಥಾ ಅಪಸ್ಮಾರಗಳನ್ನು ತಪ್ಪಿಸುವುದು ಸರಕಾರದ ಅಧಿಕಾರಿಗಳ ಕೈಯಲ್ಲಿದೆ.
ಈ ಸಂಧರ್ಭದಲ್ಲಿ ಬೊಂಬಾಯಿ, ಮದ್ರಾಸು ಪ್ರಾಂತಗಳ ಅಂಚೆಯ ಇಲಾಖೆಗಳರು ತಮ್ಮ ಕೆಲವು ನಿಬಂಧನೆಗಳ ಮತ್ತು ಪತ್ರಿಕೆಗಳ ಕನ್ನಡ ಪ್ರತಿಯನ್ನು ತಿದ್ದಿ ಸರಿಪಡಿಸುವ ಕಾರ್ಯವನ್ನು ಪರಿಷತ್ತಿನ ಕಾರ್ಯದರ್ಶಿಗಳವರಿಗೆ ಒಪ್ಪಿಸುವರೆಂದು ಕೇಳಲು ಸಂತೋಷವಾಗಿದೆ.
ಹೊಸ ವ್ಯಾಕರಣ
ಎಲ್ಲಕ್ಕಿಂತ ದೊಡ್ಡದಾದ ವಿಚಾರವನ್ನು ಕಡೆಗೆ ಉಳಿಸಿಕೊಂಡಿದ್ದೇನೆ; ಅದು ನಮ್ಮ ಪರಿಷತ್ತನ್ನು ಬಲಪಡಿಸುವ ವಿಚಾರ. ಪರಿಷತ್ತಿನಿಂದ ಆಗಬೇಕಾಗಿ, ಆಗಬಹುದಾಗಿ, ಇರುವ ಕೆಲಸಗಳು ಎಣಿಸಲಾಗದಷ್ಟಿವೆ. ಅವುಗಳಲ್ಲಿ ಕೆಲವನ್ನು ತಮ್ಮ ನೆನಪಿಗೆ ತರುತ್ತೇನೆ.
ನಿಘಂಟುವಿನ ಪ್ರಸ್ತಾಪ ಮೊದಲೇ ಆಗಿದೆ. ಪರಿಷತ್ತು ಈ ದೊಡ್ಡ ಕೆಲಸದಲ್ಲಿ ಭಾಗಿಯಾಗಲೇಬೇಕು. ಕನ್ನಡಕ್ಕೆ ಒಂದು ಹೊಸ ವ್ಯಾಕರಣವು ಅತ್ಯಂತ ಅವಶ್ಯವಾಗಿದೆ. ಶಬ್ದಮಣಿದರ್ಪಣ, ಶಬ್ದಾನುಶಾಸನಗಳ ಕಾಲದಿಂದ ಈಚೆಗೆ ಭಾಷೆಯಲ್ಲಿ ಎಷ್ಟೋ ವ್ಯತ್ಯಾಸಗಳಾಗಿವೆ. ಆದರೆ ಈ ವ್ಯತ್ಯಾಸಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಅನುಕೂಲವೂ ಅನಿವಾರ್ಯವೂ ಆಗಿರುವ ವ್ಯತ್ಯಾಸಗಳನ್ನು ನಿರಾಕ್ಷೇಪಣೀಯಗಳೆಂದು ಸ್ಪಷ್ಟವಾಗಿ ಹೇಳುವ ವ್ಯಾಕರಣವು ಇನ್ನೂ ಹುಟ್ಟಬೇಕಾಗಿದೆ. ಇನ್ನು ಮುಂದೆ ಭಾಷೆಯು ಹಿಂದಿಗಿಂತ ಹೆಚ್ಚಾದ ಅವಸರ ಆತುರಗಳಿಂದ ಬೆಳೆಯತಕ್ಕದ್ದಾಗಿದೆ. ಇಂಥಾ ಸಂಧಿ ಸಮಯದಲ್ಲಿ ಭಾಷೆಗೆ ಅಸಹನೀಯವೆಂದು ತೋರಿ ಬಂದಿರುವ ಕಟ್ಟುಗಳನ್ನು ಸಡಲಿಸಿ, ಅದರ ಅಂಗಾಂಗಳ ಸ್ವತಂತ್ರ ಚಲನೆಗೆ ಅವಕಾಶ ಕೊಡಿಸುವ ವ್ಯಾಕರಣವು ಮಹೋಪಕಾರಕವಾಗುತ್ತದೆ.
ಪರಿಷತ್ತಪತ್ರಿಕೆ
ಪರಿಷತ್ಪತ್ರಿಕೆಯನ್ನು ಇನ್ನೂ ಫಲದಾಯಕವಾಗುವಂತೆ ಮಾಡುವುದಿನ್ನೊಂದು ಕೆಲಸ. ಅದು ಎಂದಿಗಾದರೂ ಪ್ರಜಾಸಾಮಾನ್ಯದ ಪತ್ರಿಕೆಯಾಗುವುದೆಂದು ನಾನು ನಂಬಿಕೊಂಡಿಲ್ಲ. ಅದು ವಿದ್ವತ್ಕಾರ್ಯಕ್ಕೆ ಸಾಧನವಾಗಿರಬೇಕಾದ ಪತ್ರಿಕೆ. ಅದರಿಂದ ಕಾವ್ಯತತ್ತ್ವ ಜಿಜ್ಞಾಸೆಯೂ, ಪೂರ್ವೇತಿಹಾಸಾನ್ವೇಷಣೆಯೂ, ಪ್ರಾಚೀನಗ್ರಂಥ ಯೋಗ್ಯತಾ ನಿರ್ಣಯವೂ, ಭಾಷಾಶಾಸ್ತ್ರ ವ್ಯವಸಾಯವೂ ಆಗುವುದು ಸಾಧುವಾಗಿದೆ. ಇದಕ್ಕೆ ಬೇಕಾದುದು ಶೋಧನಪಟುಗಳಾದ ಪಂಡಿತರ ಸಹಕಾರ.
ಸಾರಸ್ವತ ಸನ್ನಿಧಿ
ಪರಿಷನ್ಮಂದಿರದ ಗ್ರಂಥ ಭಾಂಡಾಗಾರವನ್ನು ಸಮೃದ್ಧಿಗೊಳಿಸುವುದಿನ್ನೊಂದು ಕೆಲಸ. ಇದುವರೆಗೆ ಅಚ್ಚಾಗಿರುವ ಪ್ರತಿಯೊಂದು ಕನ್ನಡ ಪುಸ್ತಕದ ಒಂದು ಪ್ರತಿಯಾದರೂ ಅಲ್ಲಿರಬೇಕು. ತಾಳೆಯೋಲೆಗಳ ಸಂಗ್ರಹವೂ ಇರಬೇಕು. ಇಂಥಾ ಗ್ರಂಥ ಸಮುಚ್ಚಯವು ಒಂದು ಕಡೆ ಕೈಗೆ ಸಿದ್ಧವಾಗಿ ದೊರೆಯದಿದ್ದರೆ ಶೋಧನ ಕಾರ್ಯ ನಡೆಯಲಾರದು.
ಸಂಸ್ಥಾ ಸಂಯೋಜನೆ
ಕನ್ನಡಕ್ಕಾಗಿ ಕೆಲಸಮಾಡಬೇಕೆಂಬ ಸಂಸ್ಥೆಗಳು ಕರ್ಣಾಟಕದೊಳಗೆ ಅನೇಕ ಸ್ಥಳಗಳಲ್ಲಿವೆ; ಹೊರಗೂ ಕೆಲವು ಕಡೆ ಇವೆ. ಅವುಗಳ ವಿವರಗಳನ್ನೆಲ್ಲ ಆಗಾಗ ತರಿಸಿ, ಅವುಗಳ ಕಾರ್ಯಕ್ರಮಗಳನ್ನು ಒಂದು ಸಂಯೋಜನ ವ್ಯವಸ್ಥೆಗೆ ತಂದು, ಅವಕ್ಕೆ ಬೆಂಬಲಕೊಟ್ಟು ಅವುಗಳಿಂದ ಪ್ರಯೋಜನ ಪಡೆದುಕೊಳ್ಳುವ ಏರ್ಪಾಟೂ ಪರಿಷತ್ತಿನಿಂದ ನಡೆಯಬೇಕಾಗಿದೆ.
ಪರಿಷತ್ತಿನ ಸ್ಥಿತಿ
ಪರಿಷತ್ತಿನ ಕೆಲಸಗಳಿನ್ನೆಷ್ಟೋ ಇವೆ. ಆದರೆ ಜನವೆಲ್ಲಿ? ಹಣವೆಲ್ಲಿ? ಈಗಿನ ಸದಸ್ಯರ ಒಟ್ಟು ಸಂಖ್ಯೆ ೧೨೫. ಅದರ ವರ್ಷದ ಸಾಧಾರಣ ವರಮಾನ ಸುಮಾರು ೨,೨00 ರೂಪಾಯಿಗಳು; ವೆಚ್ಚ ಅದಕ್ಕಿಂತ ಸ್ವಲ್ಪ ಹೆಚ್ಚು. ಈ ವರಮಾನದಲ್ಲಿ ಸರಕಾರದ ಸಹಾಯದ್ರವ್ಯ ೧,೮00 ರೂಪಾಯಿಗಳು. ಹಣದ ಮುಗ್ಗಟ್ಟಿನ ಕಾರಣದಿಂದ ಅದಕ್ಕೂ ಊನ ತಟ್ಟಬಹುದು. ಹೀಗಿದ್ದರೆ, ಪರಿಷತ್ತಿನಿಂದ ವೆಂಕಟನಾರಾಯಣಪ್ಪನವರ ಬೆನ್ನೆಲುಬು ಬಗ್ಗಿಸುವ ಒಂದು ಕೆಲಸಮಾತ್ರ ಸಾಧಿಸಲಾಗುತ್ತದೆ. ಪರಿಷತ್ತಿಗೆ ಪರಿಚಯದವರು ಬೇಕು. ಇನ್ನು ಮುಂದೆ ಯಾರು ಪರಿಷತ್ತಿಗೆ ಹೆಚ್ಚುಮಂದಿ ಸದಸ್ಯರನ್ನು ಸೇರಿಸುತ್ತಾರೆಯೋ ಅವರಿಗೆ ಇಂಥಾ ಸಮ್ಮೇಳನದ ಅಧ್ಯಕ್ಷಪಟ್ಟವನ್ನು ಕಟ್ಟುವುದು ಯುಕ್ತವೆಂದು ನನಗೆ ತೋರುತ್ತದೆ. ಏಕೆಂದರೆ, ಅವರ ಕೆಲಸವು ಭಾಷಾಪ್ರಸಾರದ ತಳಹದಿಯನ್ನು ಭದ್ರಪಡಿಸತಕ್ಕುದು. ಭಾಷಾಪ್ರೇಮಿಗಳ ಕೃತಜ್ಞತೆ ಗೌರವ ವಿಶ್ವಾಸಗಳು ಮೊದಲು ಅವರಿಗೆ ಸಲ್ಲುವುದು ನ್ಯಾಯ.
ಕೊಡಗಿನ ಪರಿಷತ್ತಿನ ಪ್ರೇಮ
ಕೊಡಗಿನ ಮಹಾಜನರೇ, ನಿಮ್ಮ ದೇಶವು ಸೃಷ್ಟಿಯ ಸೌಂದರ್ಯದಿಂದಲೂ ನಿಮ್ಮ ಸರಳತೆ ಉದಾರತೆಗಳಿಂದಲೂ ಕನ್ನಡಿಗರಿಗೆಲ್ಲ ಅತ್ಯಂತ ಪ್ರಿಯವಾಗಿದೆ. ಕರ್ಣಾಟಕ ಮಹಾಸಮಾರಂಭದಲ್ಲಿ ಈ ನಾಡು ತಕ್ಕಷ್ಟು ಮುಂದೆ ಬಂದು ಸೇರಿಲ್ಲವಲ್ಲಾ ಎಂಬ ಕಳವಳವು ಕೆಲವರಿಗೆ ಇದುವರೆಗೂ ಇದ್ದಿತು. ಅಂಥಾ ಕೊರತೆಗೆ ಕಾರಣವಿಲ್ಲವೆಂಬುದು ಈಗ ಸ್ಪಷ್ಟವಾಗಿದೆ. ತಾವು ಭ್ರಾತೃವಾತ್ಸಲ್ಯದಿಂದ ಹೊರಗಿನ ಕನ್ನಡಿಗರನ್ನು ಬರಮಾಡಿಕೊಂಡು, ಕರ್ಣಾಟಕ ಸಾಹಿತ್ಯ ಪರಿಷತ್ತು ನಮಗೂ ಸೇರಿದ್ದೆಂದು ಭಾವಿಸಿ, ಅದನ್ನು ಇಲ್ಲಿಗೆ ಕರೆದು ಅದರಿಸುವುದಕ್ಕಾಗಿ ಎಲ್ಲ ಕನ್ನಡಿಗರ ಪರವಾಗಿ ನಾನು ತಮ್ಮನ್ನು ಅಭಿವಂದಿಸುತ್ತೇನೆ. ನಿಮ್ಮ ನಮ್ಮ ಸೋದರಭಾವವೂ, ನಮ್ಮೆಲ್ಲರ ನುಡಿಯೂ ನಾಡೂ ಏಳಿಗೆ ಪಡೆಯಲಿ.
Tag: Kannada Sahitya Sammelana 18, D.V. Gundappa
೧೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಮುಳಿಯ ತಿಮ್ಮಪ್ಪಯ್ಯ
ಶ್ರೇಷ್ಠ ಅಧ್ಯಾಪಕರಾಗಿ ಪ್ರಸಿದ್ಧ ಸಾಹಿತಿಗಳಾಗಿ ಕನ್ನಡದಲ್ಲಿ ಪ್ರಸಿದ್ಧರಾದ ಮುಳಿಯ ತಿಮ್ಮಪ್ಪಯ್ಯನವರು ದಕ್ಷಿಣ ಕನ್ನಡ ಜಿಲ್ಲೆಯ ಮುಳಿಯ ಗ್ರಾಮದಲ್ಲಿ ೩-೩-೧೮೮೮ರಲ್ಲಿ ಕೇಶವಭಟ್ಟ-ಮೂಕಾಂಬಿಕಾ ದಂಪತಿಗಳ ಸುಪುತ್ರರಾಗಿ ಜನಿಸಿದರು. ಸ್ಥಳೀಯ ವಿದ್ವಾಂಸರಿಂದ ಸಂಸ್ಕೃತ ಕಲಿತ ಅವರು ಜ್ಞಾನತೃಷೆಯಿಂದ ತಿರುವಾಂಕೂರಿಗೆ ೧೯0೬ರಲ್ಲಿ ಹೋಗಿ ಅನಂತರ ಅಲ್ಲಿಂದ ಬಂದು ಮೈಸೂರಿನಲ್ಲಿ ಸಂಸ್ಕೃತ ಕಾಲೇಜಿನಲ್ಲಿ ವಿದ್ವಾನ್ ವಾಸುದೇವಾಚಾರ್ಯರಿಂದ ಸಂಗೀತ ಕಲಿತರು. ಮಂಗಳೂರಿನಲ್ಲಿ ವಿದ್ವಾನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ೧೯೧೧ರಲ್ಲಿ ಮಂಗಳೂರಿನ ಕೆನರಾ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತರಾಗಿ ಉದ್ಯೋಗಕ್ಕೆ ಸೇರಿದರು.
ಏಳು ವರ್ಷಗಳ ನಂತರ ಕೆನರಾ ಪ್ರೌಢಶಾಲೆ ಬಿಟ್ಟು ಸೈಂಟ್ ಅಲೋಷಿಯೆಸ್ ಕಾಲೇಜಿಗೆ ಪಂಡಿತರಾಗಿ ಸೇರಿ ಸುಮಾರು ೩0 ವರ್ಷ ಸೇವೆ ಸಲ್ಲಿಸಿ ೧೯೪೮ರಲ್ಲಿ ನಿವೃತ್ತರಾದರು. ೧೯೧೪-೧೯ರವರೆಗೆ ಕನ್ನಡ ಕೋಗಿಲೆ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.
೧೯೨೭ರಲ್ಲಿ ಮಂಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಂಡಯ್ಯನೂ ಕನ್ನಡಮೆನಿಪ್ಪಾ ನಾಡೂ ಎಂಬ ವಿದ್ವತ್ಪೂರ್ಣ ಪ್ರಬಂಧವನ್ನು ಮಂಡಿಸಿದರು. ೧೯೪೧ರಲ್ಲಿ ಲಕ್ಷ್ಮೇಶ್ವರದ ಪಂಪೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದರು.
೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಿದರು.
ಮುಳಿಯ ಅವರ ಸಮಗ್ರ ಕೃತಿಗಳು ಈಚೆಗೆ ಪ್ರಕಟವಾಗಿದೆ. ಇವರ ಕೆಲವು ಮುಖ್ಯ ಕೃತಿಗಳು ಹೀಗಿವೆ:
೧. ವೀರಬಂಕೆಯ (ಕಾದಂಬರಿ) ೨. ಚಂದ್ರಾವಳಿವಿಳಾಸ (ಕಾದಂಬರಿ) ೩. ನವನೀತ ರಾಮಾಯಣ (ಕಾವ್ಯ) ೪. ಸೊಬಗಿನಬಳ್ಳಿ (ಕಾವ್ಯ) ೫. ನಾಡೋಜ ಪಂಪ (ವಿಮರ್ಶೆ) ೬. ನಡತೆಯ ಹಾಡು (ನಾಟಕ) ೭. ಹಗಲಿರುಳು (ನಾಟಕ) ೮. ಕವಿರಾಜಮಾರ್ಗ ವಿವೇಕ ೯. ಪಾರ್ತಿಸುಬ್ಬ ಇತ್ಯಾದಿ
ಮುಳಿಯ ತಿಮ್ಮಪ್ಪಯ್ಯ ೧೬-೧-೧೯೫0ರಲ್ಲಿ ವಿಧಿವಶರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೧೭,
ಅಧ್ಯಕ್ಷರು: ಮುಳಿಯ ತಿಮ್ಮಪ್ಪಯ್ಯ
ದಿನಾಂಕ ೨೮, ೨೯, ೩0 ಡಿಸೆಂಬರ್ ೧೯೩೧
ಸ್ಥಳ : ಕಾರವಾರ
ಕಾರ್ಯಜಾರಿಗೆ ತರುವ ಮಂಡಳಿ ಇರಲಿ
ಈ ಸಾಹಿತ್ಯ ಸಮ್ಮೇಳನವೆಂಬುದು ವರ್ಷಕ್ಕೊಮ್ಮೆ ಜರುಗುವುದು. ಸಾಹಿತ್ಯೋದ್ಧಾರಕ್ಕಾಗಿ ಕೆಲಕೆಲವು ನಿರ್ಣಯಗಳನ್ನು ಮಾಡುವುದು; ಮೇಲೆ ಒಟ್ಟುಗೂಡಿ ವಿಚಾರಿಸುವುದೆಂದರೆ ಆ ಮೇಲಿನ ವರ್ಷದಲ್ಲಿ. ಅದರಿಂದಾಗಿ ಈವರೆಗೆ ನಿರ್ಣಯಿಸಲ್ಪಟ್ಟ ಉದ್ದೇಶಗಳು ಬಹಳಮಟ್ಟಿಗೆ ಕಾರ್ಯರೂಪವಾಗಿ ತಲೆದೋರಲಿಲ್ಲವೆಂದು ತೋರುತ್ತದೆ. ಆ ಉದ್ದೇಶಗಳನ್ನು ಪೂರ್ತಿಗೊಳಿಸಲಿಕ್ಕೂ ಇತರ ಸಾಹಿತ್ಯ ಸುಧಾರಣೆಗಳನ್ನು ಒದಗಿಸಲಿಕ್ಕೂ ಸಮರ್ಥರಾದ ಒಂದು ‘ಕಾರ್ಯಕಾರಿ ಮಂಡಲಿ’ ನಮಗೆ ಅವಶ್ಯವೆಂದು ನನ್ನ ಭಾವನೆ. ಅಖಂಡ ಕರ್ಣಾಟಕದ ನುರಿತ ವಿದ್ವಾಂಸರೇ ಅದರಲ್ಲಿ ಸದಸ್ಯರಾಗಿರಬೇಕು. ಸದಸ್ಯರಾದರೂ ಬಹಳ ಹೆಚ್ಚಾಗಿ ಕಾರ್ಯಸಾಧನೆಗೆ ತೊಡಕಾಗುವಂತಿರಬಾರದು. ಆ ಮಂಡಲಿ ನಮ್ಮ ಸಾಹಿತ್ಯ ಪರಿಷತ್ತಿಗೆ ಸಂಪೂರ್ಣವಾಗಿ ಅಧೀನವಾಗಿರಬೇಕೆಂದು ನನ್ನೆಣಿಕೆಯಲ್ಲ; ಅದಕ್ಕೂ ಕೆಲವು ಸ್ವಾತಂತ್ರ್ಯವಿರತಕ್ಕದ್ದು. ಯಾವಯಾವ ನಿಯಮಗಳಿರತಕ್ಕುದೆಂಬುದನ್ನು ಅರಿತ ವಿದ್ವಾಂಸರೇ ಅಲೋಚಿಸಿ ನಿರ್ಣಯಿಸತಕ್ಕುದು. ಆ ಮೂಲಕವಾಗಿ ಆಯಾ ಪ್ರಾಂತಗಳ ಮುಖ್ಯ ಪಟ್ಟಣಗಳಲ್ಲಿ ಮಾತ್ರವಲ್ಲ ಹಳ್ಳಿಹಳ್ಳಿಗಳಲ್ಲಿಯೂ ಪುಸ್ತಕಾಲಯಗಳನ್ನು ನೆಲೆಗೊಳಿಸಬಹುದು. ಪಟ್ಟಣಗಳಿಂದಲೂ ಹೆಚ್ಚಾಗಿ ಹಳ್ಳಿಯವರಲ್ಲಿ ಸಾಹಿತ್ಯದ ಪ್ರಸಾರವಾದೀತು; ಏಕೆ? ಆಗುತ್ತದೆ. ನೋಡಿರಿ: ನಮ್ಮ ಸಾಹಿತ್ಯ ಪರಿಷತ್ತು ನೆಲೆವಡೆದು ಹದಿನೇಳು ವರ್ಷಗಳಾದರೂ, ಸಾಹಿತ್ಯ ಪರಿಷತ್ತೆಂದರೇನು? ಎಂದು ಪ್ರಶ್ನಿಸುವ ಕನ್ನಡಿಗರು ಈಗಲೂ ಹಳ್ಳಿಗಳಲ್ಲಿದ್ದಾರೆ. ಅವರಿಗೂ ಈಗಿನ ಸಾಹಿತ್ಯದ ಸವಿ ಗೊತ್ತಿದೆ; ಸಾಹಿತ್ಯ ಪರಿಷತ್ತಿನ ಹೊಲವೇ ಗೊತ್ತಿಲ್ಲ. ನಮ್ಮ ಸಾಹಿತ್ಯವು ಸಾರ್ವಜನಿಕವಾಗಬೇಕಲ್ಲ? ಅದರಿಂದ ನುರಿತ ಸಾಹಿತ್ಯಭಕ್ತರ ಸಂಘವೊಂದನ್ನು ಸ್ಥಾಪಿಸಿ ಆ ಮೂಲಕವಾಗಿ ಉದ್ಯೋಗಿಸಬೇಕೆಂದು ನನ್ನ ಸೂಚನೆ.
ಪರಿಷತ್ತು ಏಕರೂಪತೆಗೆ ಶ್ರಮಿಸಬೇಕು
ನಮ್ಮ ಕರ್ಣಾಟಕದ ಆದಿಯ ರಾಜವಂಶಜರಾದ ಕದಂಬಾದಿಗಳೆಲ್ಲರೂ ಕನ್ನಡದೇಳ್ಗೆಗಾಗಿ ಯತ್ನಿಸಿ ಕೃತಾರ್ಥರಾಗಿದ್ದಾರೆ. ಆದರೂ ಪ್ರಾಂತಭೇಧದಿಂದಾಗಿ ಕನ್ನಡ ಸಾಹಿತ್ಯಕ್ಕೆ ಒದಗಿದ ನಾನಾತ್ವವನ್ನು ನಿವಾರಿಸಿ ಏಕರೂಪಯನ್ನು ಒದಗಿಸಿದ ರಾಜನೆಂದರೆ ನೃಪತುಂಗನು. ಅವನು “ಸಭಾಸದ”ರಾದ ವಿದ್ವಾಂಸರ ಮೂಲಕವಾಗಿ ಆ ಪುಣ್ಯಕಾರ್ಯವನ್ನು ಮಾಡಿಸಿದನೆಂದು ತಿಳಿದುಬರುತ್ತದೆ. ಅದರಂತೆ ಈಗಿನ ಕನ್ನಡ ಸಾಹಿತ್ಯದ ಕವಲುಗಳನ್ನು ಹೋಗಲಾಡಿಸಿ ಅದನ್ನು ವೃದ್ಧಿಗೊಳಿಸುತ್ತಿರುವ ನಮ್ಮ ಸಾಹಿತ್ಯ ಪರಿಷತ್ಪೋಷಕರು ಕರ್ಣಾಟಕ ರಾಜರೂ ಆಗಿರುವ ಮೈಸೂರು ಶ್ರೀಮನ್ಮಹಾರಾಜ ಕೃಷ್ಣರಾಜ ಒಡೆಯರವರಿಗೆ ಆಯುರಾರೋಗ್ಯಾದಿಗಳು ಒದಗಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸುತ್ತೇನೆ.
Tag: Kannada Sahitya Sammelana 18, Muliya Thimmappaiah
೧೬ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಆಲೂರು ವೆಂಕಟರಾಯರು
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣಕರ್ತರಲ್ಲಿ ಒಬ್ಬರು ಮತ್ತು ಪರಿಷತ್ತಿಗೆ ಪ್ರಾರಂಭದಲ್ಲಿ ದುಡಿದವರು ಎಂದರೆ ಆಲೂರರು. ಭೀಮರಾಯ-ಭಾಗೀರಥಿ ದಂಪತಿಗಳಿಗೆ ೧೨-೭-೧೮೮0ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಧಾರವಾಡದಲ್ಲಿ ಪೂರೈಸಿ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ೧೯0೩ರಲ್ಲಿ ಬಿಎ ಪದವಿಯನ್ನು ೧೯0೫ರಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿದರು.
ಧಾರವಾಡದಲ್ಲಿ ವಕೀಲಿ ವೃತ್ತಿ ಕೈಗೊಂಡ ಆಲೂರರು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ವಕೀಲಿವೃತ್ತಿಯನ್ನು ದೂರ ಮಾಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸೂತ್ರಧಾರರಲ್ಲಿ ಒಬ್ಬರಾದರು. ಕನ್ನಡ ಗ್ರಂಥಕರ್ತರ ಸಮ್ಮೇಳನಗಳನ್ನು ನಡೆಸಿದರು. ಕರ್ಣಾಟಕ, ವಾಗ್ಭೂಷಣ ಪತ್ರಿಕೆಗಳನ್ನು ಆರಂಭಿಸಿ ನಡೆಸಿದರು.
ಕರ್ನಾಟಕ ಏಕೀಕಕರಣಕ್ಕೆ ದುಡಿದು ಕರ್ನಾಟಕ ಕುಲ ಪುರೋಹಿತರು ಎನಿಸಿದರು. ಕರ್ನಾಟಕವನ್ನೆಲ್ಲ ಸುತ್ತಿ ಇತಿಹಾಸದ ಮಹತ್ವದ ಸಂಗತಿಗಳನ್ನು ಕನ್ನಡಿಗರಿಗೆ ತಿಳಿಸಿ ಕರ್ನಾಟಕ ಗತ ವೈಭವ ಕೃತಿಯ ಮೂಲಕ ಕನ್ನಡ ಜಾಗೃತಿಯನ್ನು ಉಂಟುಮಾಡಿದರು. ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲಿಯನ್ನು ಸ್ಥಾಪಿಸಿದರು. ಬೆಂಗಳೂರಿನಲ್ಲಿ ಮೂರನೇ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ಏರ್ಪಡಿಸಲು ಪ್ರಯತ್ನ ನಡೆಸಿ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಆಗಲು ಪ್ರೇರಣಕರ್ತರಾದರು. ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಂಡರು. ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
೧೯೪೧ರಲ್ಲಿ ಕರ್ನಾಟಕಕ್ಕೆ ಇವರು ಸಲ್ಲಿಸಿದ ಸೇವೆಗಾಗಿ ಹೈದ್ರಾಬಾದ್ ಕನ್ನಡಿಗರು ಕರ್ನಾಟಕ ಕುಲ ಪುರೋಹಿತರೆಂಬ ಬಿರುದನ್ನಿತ್ತರು. ೧೯೬೧ರಲ್ಲಿ ಸಾಹಿತ್ಯ ಪರಿಷತ್ತು ಸನ್ಮಾನಿಸಿತು. ೧೯೫೬ರಲ್ಲಿ ಕನ್ನಡ ರಾಜ್ಯೋದಯದಲ್ಲಿ ಭುವನೇಶ್ವರಿಯ ಉತ್ಸವವನ್ನು ಹಂಪೆಯಲ್ಲಿ ನಡೆಸಿ ಅದರ ನೇತೃತ್ವ ವಹಿಸಿದ್ದರು.
ರಾಷ್ಟ್ರೀಯ ಜಾಗೃತಿಯನ್ನುಂಟು ಮಾಡುವ ಕೃತಿಗಳನ್ನು ರಚಿಸಿದ ಹಿರಿಮೆಯ ಆಲೂರರು ಕನ್ನಡದ ಹತ್ತಾರು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಹೀಗಿವೆ:
ಕರ್ನಾಟಕ ಗತವೈಭವ, ಶಿಕ್ಷಣ ಮೀಮಾಂಸೆ, ಸಂಸಾರ ಸುಖ, ಕರ್ನಾಟಕ ವೀರರತ್ನಗಳು, ಕರ್ನಾಟಕತ್ವದ ವಿಕಾಸ, ಗೀತಾ ರಹಸ್ಯ (ಅನುವಾದ), ನನ್ನ ಜೀವನ ಸ್ಮೃತಿಗಳು (ಆತ್ಮಕಥೆ), ಮಧ್ವ ಸಿದ್ಧಾಂತ ಪ್ರಕಾಶಿಕೆ, ಗೀತಾಪರಿಮಳ, ಗೀತಾ ಪ್ರಕಾಶ ಇತ್ಯಾದಿ
ಕನ್ನಡ ಸಾಹಿತ್ಯ ಸಮ್ಮೇಳನ-೧೬
ಅಧ್ಯಕ್ಷರು, ಆಲೂರು ವೆಂಕಟರಾಯ
ದಿನಾಂಕ ೫, ೬, ೭ ಅಕ್ಟೋಬರ್ ೧೯೩0
ಸ್ಥಳ : ಮೈಸೂರು
“ನಾಹಂ ಕರ್ತಾ ಹರಃ ಕರ್ತಾ ತತ್ಪೂಜಾ ಕರ್ಮ ಚಾಖಿಲಂ”
ಸ್ವಸ್ತಿ ಶ್ರಿ ಮತ್ಕರ್ನಾಟಕ ವಾಙ್ಮಯ ದೇವತಾಪೂಜೆಗೆ ಸನ್ನದ್ಧರಾದ ಮಹಾಜನಗಳ ಚರಣ ಸನ್ನಿಧಿಯಲ್ಲಿ- ಸರಸ್ವತಿಯ ಪಾದಪದ್ಮಾರಾಧಕನಾದ ನಾನು ತಮ್ಮೆಲ್ಲರಿಗೆ ಸಹಸ್ರ ವಂದನೆಗಳನ್ನು ಸಮರ್ಪಿಸಿ ಅರಿಕೆಮಾಡಿಕೊಳ್ಳುವುದೇನೆಂದರೆ:-
ನಾನು ಮಾತೃಭಾಷಾ ಪುತ್ರರಲ್ಲೊಬ್ಬನೆಂಬ ಪ್ರೇಮದಿಂದ ತಾವೆಲ್ಲರೂ ನನ್ನನ್ನು ಈ ಸಮ್ಮೇಳನದ ಪ್ರಾಣ ಪ್ರತಿಷ್ಠಾಚಾರ್ಯನಾಗಲು ಆಜ್ಞಾಪಿಸಿರುವಿರಿ. ಆ ಮಹಾಪದವಿಗೆ ನಾನು ತೀರ ಆಯೋಗ್ಯನಿರುವೆನೆಂಬುದು ನನಗೆ ಗೊತ್ತಿದ್ದರೂ, ತಮ್ಮ ಅಪ್ಪಣೆಯನ್ನು ಮೀರಲು ಮನಸ್ಸಿಲ್ಲದ್ದರಿಂದ ಅದನ್ನು ಅಂಗೀಕರಿಸಿರುವೆನು. ಹಿಂದಕ್ಕೆ ಈ ಪೀಠವನ್ನಲಂಕರಿಸಿದವರು ಅನೇಕ ವಿಧವಾಗಿ ಆಕೆಯ ಪೂಜೆಯನ್ನು ಕಟ್ಟಿರುತ್ತಾರೆ; ಕೆಲವರು ಜ್ಞಾನದೀಪದಿಂದ ಆಕೆಗೆ ಆರತಿಯನ್ನೆತ್ತಿರುತ್ತಾರೆ; ಕೆಲವರು ಅನನ್ಯವಾದ ಭಕ್ತಿಯಿಂದ ಆಕೆಯ ಗುಣಗಳನ್ನು ಗಾನಮಾಡಿ ಆಕೆಯ ಪ್ರಸಾದವನ್ನು ಪಡೆದಿರುತ್ತಾರೆ; ಕೆಲವರು ತಮ್ಮ ಸ್ನಿಗ್ಧ ಮಧುರ ಕಾವ್ಯಮಯವಾಣಿಯಿಂದ ಆಕೆಗೆ ಪಂಚಾಮೃತಾಭಿಷೇಕ ಮಾಡಿರುತ್ತಾರೆ; ಕೆಲವರು ಸಂಶೋಧನದ ನಂದಾದೀಪಗಳನ್ನಿಟ್ಟು ಆಕೆಯ ಮೂರ್ತಿಯನ್ನು ಪ್ರಕಾಶಮಾನವಾಗಿ ಮಾಡಿರುತ್ತಾರೆ; ಮತ್ತೆ ಕೆಲವರು, ಶ್ರೀಮನ್ಮಹಾರಾಜರವರ ಕೃಪಾಜಲಪೋಷಿತವಾದ ಸುಂದರವಾದ ಉದ್ಯಾನಗಳಿಂದ ಸುಂಗಧಪುಷ್ಪಗಳನ್ನು ತೆಗೆದುಕೊಂಡು ಆಕೆಯನ್ನು ಪೂಜಿಸಿರುತ್ತಾರೆ. ನಾನಾದರೋ, ಇವುಗಳಲ್ಲೊಂದನ್ನೂ ಮಾಡಲಾರೆ. ಗಾನದಿಂದ ಹೃದಯವನ್ನು ಸೆಳೆಯಲರಿಯೆ, ಜ್ಞಾನದಿಂದ ಬಗೆಯನ್ನರಳಿಸಲರಿಯೆ, ಸಂಶೋಧನ ದೀಪದಿಂದ ಬೆಳಗಲರಿಯೆ; ಕರ್ಣಾಟಕ ಸಾಹಿತ್ಯಸಾಗರದಲ್ಲಿ ಸ್ನಾನಮಾಡಿ ಶುಚಿರ್ಭೂತನಾದವನೂ ನಾನಲ್ಲ. ಆದಕಾರಣ, ಪಾವನತರವಾದ ಆಕೆಯ ಮೂರ್ತಿಯನ್ನು ಮುಟ್ಟಿ, ಆಕೆಯನ್ನು ಭ್ರಷ್ಟಗೊಳಿಸಲಿಚ್ಛಿಸುವುದಿಲ್ಲ. ಸುಗಂಧ ಪುಷ್ಪಗಳನ್ನಾದರೂ ಏರಿಸಬೇಕೆಂದರೆ ಸಹಾನುಭೂತಿಯ ದ್ರವವು ಕೂಡ ಇಲ್ಲದ ಮರುಭೂಮಿಯಲ್ಲಿ ಹುಟ್ಟಿದ ನನ್ನ ಬಳಿಯಲ್ಲಿ ಹೂವುಗಳೆಲ್ಲಿಂದ ಬರಬೇಕು? ಆದರೆ, ನಾನದರ ಪೂಜೆ ಮಾಡಲಿಕ್ಕೆ ಬೇರೊಂದು ಬಗೆಯ ಅಧಿಕಾರವಿದೆ: ನಾನು ಆರ್ತಭಕ್ತನು; ಆದುದರಿಂದ ಆರ್ತಧ್ವನಿಯಿಂದ ಕೂಗಿಕೊಂಡು, ದೂರದಿಂದಲೇ ನಾಲ್ಕು ದೂರ್ವಾಪತ್ರಗಳನ್ನೇರಿಸಿ ಪೂಜೆ ಮಾಡುವೆನು.
ವಾಙ್ಮಯವನ್ನು ಬೆಳೆಯಿಸುವುದೆಂದರೆ ಉತ್ಕೃಷ್ಟವಾದ ಗ್ರಂಥಗಳನ್ನು ಬರೆದರೆ ತೀರಿತೆಂದು ಕೆಲವರ ತಿಳಿವಳಿಕೆ; ಇದು ತಪ್ಪು. ಪೂಜಾರಿಯು ಪರಿವಾರ ಸಮೇತನಾಗಿಯೇ ಪೂಜೆಯನ್ನು ಸಾಂಗಗೊಳಿಸುವಂತೆ ನಾವು ನಮ್ಮ ಪರಿವಾರ ಸಮೇತರಾಗಿಯೇ ವಾಗ್ದೇವತೆಯ ಪೂಜೆಯನ್ನು ಸಾಂಗಗೊಳಿಸಬೇಕಾಗುತ್ತದೆ. ಮುದ್ರಕರು, ಪುಸ್ತಕ ಮಾರುವವರು, ಇವರೇ ಮುಂತಾದವರು ನಮ್ಮ ಪರಿವಾರ, ಲಘು ಪುಸ್ತಕಮಾಲೆ, ಮಧ್ಯಮ ಪುಸ್ತಕಮಾಲೆ, ಉದಾತ್ತ ಗ್ರಂಥಮಾಲೆ ಮುಂತಾದವುಗಳನ್ನು ಹೊರಡಿಸಿ ನಾವು ವಾಙ್ಮಯದ ಪ್ರಕಾಶವನ್ನು ಮಾಡಬೇಕು. ಕರ್ನಾಟಕವನ್ನೆಲ್ಲ ವಾಚನಾಲಯಗಳ ಜಾಳಿಗೆಯಿಂದ ತುಂಬಿಬಿಡಬೇಕು. ವಾಚನಾಲಯಗಳೆಂದರೆ ಕರ್ನಾಟಕತ್ವದ ವಿದ್ಯುಚ್ಛಕ್ತಿಯನ್ನೊಯ್ಯುವ ತಂತಿಗಂಬಗಳು, ಆದರೆ ಇವೆಲ್ಲ ಕಾರ್ಯಗಳು ಜರುಗಬೇಕಾದರೆ, ನಾವು ಮುಂದೆ ಅಭಿಮಾನವನ್ನು ಜಾಗ್ರತಪಡಿಸಬೇಕು. ಅದಕ್ಕೋಸ್ಕರ ಪ್ರಚಾರಕರು ಸತತವಾಗಿ ಕರ್ನಾಟಕವನ್ನು ಸುತ್ತುತ್ತಿರಬೇಕು.
Tag: Kannada Sahitya Sammelana 18, Alur Venkatarao
೧೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಮಾಸ್ತಿ ವೆಂಕಟೇಶ ಅಯ್ಯಂಗಾರ್
‘ಕನ್ನಡದ ಆಸ್ತಿ’ ಎಂದೇ ಪರಿಗಣಿತರಾದ ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ದಂಪತಿಗಳಿಗೆ ೮-೬-೧೮೯೧ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿಯನ್ನು ೧೯೧೪ರಲ್ಲಿ ಪಡೆದರು.
ಇವರು ೧೯೧೪ರಲ್ಲಿ ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ಮಾಸ್ತಿ ಅವರು ಸಬ್ ಡಿವಿಜನ್ ಆಫೀಸರ್ (೧೯೨೭) ಮ್ಯಾಜಿಸ್ಟ್ರೇಟ್ ಮತ್ತು ಕಂಟ್ರೋಲರ್ (೧೯೩0) ಡೆಪ್ಯುಟಿ ಕಮೀಷನರ್ (೧೯೩೪) ಎಕ್ಸೈಜ್ ಕಮೀಷನರ್ (೧೯೪0) ಮೊದಲಾದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ೧೯೪೩ ಸ್ವಇಚ್ಛೆಯಿಂದ ಸರ್ಕಾರಿ ಸೇವೆಯಿಂದ ನಿವೃತ್ತರಾದರು.
ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (೧೯೪೩-೪೮) ಅಧ್ಯಕ್ಷರಾಗಿ (೧೯೫0-೬೪) ಸೇವೆ ಸಲ್ಲಿಸಿರುವ ಇವರು ‘ಜೀವನ’ ಮಾಸಪತ್ರಿಕೆಯನ್ನು ೨೫ ವರ್ಷ ಪ್ರಕಟಿಸಿದರು. ಕನ್ನಡ ಏಕೀಕರಣಕ್ಕೆ ಶ್ರಮಿಸಿದರು. ಸಹಾಯನಿಧಿ ಮೂಲಕ ಕನ್ನಡ ಲೇಖಕರನ್ನು ಬೆಳಕಿಗೆ ತಂದರು. ಪಿಇಎನ್ ಸಂಸ್ಥೆಯ ಉಪಾಧ್ಯಕ್ಷರಾಗಿ (೧೯೬೪) ಆಯ್ಕೆಯಾಗಿದ್ದರು. ೧೯೪೨ರಲ್ಲಿ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು. ಅನೇಕ ಅಖಿಲ ಭಾರತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ಮೈಸೂರು ಮಹಾರಾಜರು ರಾಜಸೇವಾ ಪ್ರಸಕ್ತ ಬಿರುದನ್ನು ೧೯೪೨ರಲ್ಲಿ ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(೧೯೫೬), ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ(೧೯೬೮), ವರ್ಧಮಾನ ಪ್ರಶಸ್ತಿ (೧೯೮೩), ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್(೧೯೭೭) ಭಾರತೀಯ ಜ್ಞಾನಪೀಠ ಪ್ರಶಸ್ತಿ (೧೯೮೩) ಕರ್ನಾಟಕ ಸರ್ಕಾರದ ಸನ್ಮಾನ (೧೯೮೪) ನಾಡಿನ ನಾನಾ ಸಂಸಂಸ್ಥೆಗಳಿಂದ ನೂರಾರು ಸನ್ಮಾನ ಪ್ರಶಸ್ತಿ ಗೌರವಗಳು ಮಾಸ್ತಿ ಅವರಿಗೆ ಸಂದಿವೆ.
ಕನ್ನಡ ಸಣ್ಣಕತೆಗಳ ಜನಕರೆಂದೇ ಖ್ಯಾತಿ ಹೊಂದಿದ ಮಾಸ್ತಿ ಅವರು ನೂರಕ್ಕೂ ಮೀರಿ ಕೃತಿಗಳನ್ನು ವಿವಿಧ ವಿಷಯಗಳ ಮೇಲೆ ರಚಿಸಿ ಕನ್ನಡವನ್ನು ಬೆಳೆಸಿದವರಲ್ಲಿ ಒಬ್ಬರಾಗಿದ್ದಾರೆ. ಇಲ್ಲಿ ಅವರ ಕೆಲವು ಕೃತಿಗಳನ್ನು ಉದಾಹರಿಸಿದೆ.
ಸಣ್ಣಕಥೆಗಳು(೧0 ಭಾಗಗಳು), ನವರಾತ್ರಿ(ಕಥನ ಕವನಗಳು), ಚಿಕವೀರರಾಜೇಂದ್ರ(ಕಾದಂಬರಿ), ಕೃಷ್ಣಕರ್ಣಾಮೃತ (ಸಂಸ್ಕೃತ ಕಾವ್ಯಾನಂದ), ನಮ್ಮ ನುಡಿ(ಭಾಷಾಶಾಸ್ತ್ರ), ಷೇಕ್ಸ್ಪಿಯರನ ನಾಟಕಗಳು(ಗದ್ಯಾನುವಾದ), ಜನಪದ ಸಾಹಿತ್ಯ(ಪ್ರಬಂಧ), ಪುರಂದರದಾಸ, ಕನಕಣ್ಣ(ನಾಟಕಗಳು), ಪ್ರಸಂಗ(೪ ಭಾಗಗಳು), ಸಂಪಾದಕೀಯ(೫ ಭಾಗಗಳು), ಶ್ರೀರಾಮಪಟ್ಟಾಭಿಷೇಕ (ಕಥನಕಾವ್ಯ), ಸರ್ ಎಂ. ವಿಶ್ವೇಶ್ವರಯ್ಯ(ಸಂಪಾದನೆ) ಇತ್ಯಾದಿ.
ಹಲವು ಕೃತಿಗಳನ್ನು ಇಂಗ್ಲಿಷಿಗೆ ಮಾಸ್ತಿ ಮತ್ತು ಇತರರು ಅನುವಾದಿಸಿದ್ದಾರೆ.
ಕನ್ನಡದ ಅತಿ ಮುಖ್ಯ ಸಾಹಿತಿಗಳಲ್ಲಿ ಒಬ್ಬರಾದ ಮಾಸ್ತಿ ಅವರು ೭-೬-೧೯೮೬ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೧೫,
ಅಧ್ಯಕ್ಷರು, ಮಾಸ್ತಿ ವೆಂಕಟೇಶ ಅಯ್ಯಂಗಾರ್
ದಿನಾಂಕ ೧೨,೧೩,೧೪ ಮೇ ೧೯೨೯
ಸ್ಥಳ : ಬೆಳಗಾವಿ
ನಮ್ಮ ಪರಿಷತ್ತು
ನಮ್ಮ ಕರ್ಣಾಟಕ ಸಾಹಿತ್ಯ ಪರಿಷತ್ತು ಏರ್ಪಾಡಾಗಿ ಈಗ್ಗೆ ಹದಿನಾಲ್ಕು ವರ್ಷಗಳು ಕಳೆದಿವೆ. ಕನ್ನಡದ ಸ್ಥಿತಿಯು ಈ ಹದಿನಾಲ್ಕು ವರುಷಗಳಲ್ಲಿ ಬಹಳ ವ್ಯತ್ಯಾಸ ಹೊಂದಿದೆ. ‘ಪರಿಷತ್ತು ಮಾಡಿರುವ ಕಾರ್ಯವನ್ನು ನಾನು ಈ ಸಂದರ್ಭದಲ್ಲಿ ಪರಿಶೀಲಿಸುವುದಕ್ಕೆ ತೊಡಗುವುದಿಲ್ಲ. ಈಗ ನಾಲ್ಕು ವರ್ಷಗಳ ಹಿಂದೆ ಶ್ರೀಮಾನ್ ಬೆನಗಲ್ ರಾಮರಾಯರು ತಮ್ಮ ಭಾಷಣದಲ್ಲಿ ಪರಿಷತ್ತು, ಅದುವರೆಗೆ ಮಾಡಿದ ಕೆಲಸವನ್ನೆಲ್ಲ ವಿವರಿಸಿ ಅದು ತೃಪ್ತಿಕರವಾಗಿ ನಡೆದಿದೆಯೆಂದು ತಿಳಿಸಿದರು. ಅವರು ಅಷ್ಟು ವಿಚಕ್ಷಣತೆಯಿಂದ ಮಾಡಿದ ಕೆಲಸವನ್ನು ನಾನು ಮತ್ತೆ ಮಾಡುವ ಆವಶ್ಯಕತೆಯಿಲ್ಲ. ಅಲ್ಲದೆ, ಪರಿಷತ್ತು ಈ ಕೆಲಸವನ್ನು ಮಾಡಿತು. ಆ ಕೆಲಸವನ್ನು ಮಾಡಲಿಲ್ಲ ಎಂದು ನಾವು ಯಾರೂ ಯಾರನ್ನೂ ಹೇಳುವಂತಿಲ್ಲ. ನಾವು ಮಾಡಿದುದನ್ನು ಪರಿಷತ್ತು ಮಾಡುತ್ತದೆ, ನಾವು ಮಾಡದೆ ಇದ್ದುದನ್ನು ಪರಿಷತ್ತು ಮಾಡಲಾರದು. ಪರಿಷತ್ತೇ ನಾವು ಮಾಡಿದುದು. ಒಟ್ಟಿನಲ್ಲಿ, ಪರಿಷತ್ತು ಕನ್ನಡಕ್ಕೆ ಈಗ ಮಾಡಿರುವುದಕ್ಕಿಂತ ಹೆಚ್ಚಾದ ಕೆಲಸವನ್ನು ಮಾಡದೆ ಇರುವುದಕ್ಕೆ ವಿದ್ಯಾವಂತರಾದ ಕನ್ನಡಿಗರ ಔದಾಸೀನ್ಯವೇ ಮುಖ್ಯಕಾರಣ. ಈ ವಿಷಯವನ್ನು ಹೇಳಲು ನನಗೆ ವ್ಯಸನವಾಗುತ್ತದೆ. ಮಹನೀಯರೇ, ಕನ್ನಡನಾಡಿನ ಇಷ್ಟು ಸಾವಿರಮಂದಿ ಸುಶಿಕ್ಷಿತರಾದವರಲ್ಲಿ ಹತ್ತರಲ್ಲಿ ಒಂದರ ಸಂಖ್ಯೆಯಷ್ಟು ಜನ ಪರಿಷತ್ತಿಗೆ ಸದಸ್ಯರಾಗಿಲ್ಲವೇಕೆ? ‘ಪರಿಷತ್ತು ಚೆನ್ನಾಗಿ ಕೆಲಸಮಾಡಲಿ, ಆಮೇಲೆ ನಾನು ಬಂದು ಅದಕ್ಕೆ ಸದಸ್ಯನಾಗುತ್ತೇನೆ’ ಎಂದು ಅನೇಕರು ಹೇಳುವರು. ಮೈಚೆನ್ನಾಗಿ ಕೆಲಸ ಮಾಡಲಿ, ಅಮೇಲೆ ನಾನು ಅದಕ್ಕೆ ನೆರವಾಗುತ್ತೇನೆ ಎಂದು ಹೇಳಿ ಕೈಯ್ಯೋ ಕಣ್ಣೋ ಕೆಲಸಮಾಡದೆ ನಿಂತರೆ ಅದನ್ನು ಏನೆಂದು ವರ್ಣಿಸಬಹುದು? ಪರಿಷತ್ತು ಮಾಡಬಹುದಾದ ಕೆಲಸ ನೂರು ಇದೆ. ಜನರು ಬಂದು ಸದಸ್ಯರಾಗಿ ಹಣವನ್ನು ಕೊಟ್ಟು ಇತರ ಸಹಾಯಮಾಡಿ ಅದಕ್ಕಾಗಿ ದುಡಿದರೆ ಆ ಕೆಲಸ ನಡೆಯಬಹುದು; ಇಲ್ಲದಿದ್ದರೆ ಅದು ನಡೆಯುವ ಸಂಭವವೇ ಇಲ್ಲ.
ಪರಿಷತ್ಪತ್ರಿಕೆ
ಇದಕ್ಕೆ ಉದಾಹರಣೆಯಾಗಿ ನಮ್ಮ ಪರಿಷತ್ಪತ್ರಿಕೆಯ ಕೆಲಸವನ್ನು ಕುರಿತು ಅಲೋಚಿಸಿರಿ. ವರ್ಷಕ್ಕೆ ನಾಲ್ಕು ಸಲ ಹೊರಡಬೇಕಾದ ಈ ಪತ್ರಿಕೆಗೆ ಸಲಸಲಕ್ಕೂ ಲೇಖನಗಳನ್ನು ಹವಣಿಸುವ ಕೆಲಸ ಬಹಳ ದುಸ್ತರವಾಗಿ ಕುಳಿತಿದೆ. ಈಗ ಹಲವು ಸಂಚಿಕೆಗಳು ಹಿಂದೆ ಬಿದ್ದಿವೆ. ವರ್ಷದಲ್ಲಿ ನಾನೂರು ಪುಟಗಳಷ್ಟು ಬರೆವಣಿಗೆ ನಮ್ಮ ಸೀಮೆಯಲ್ಲಿ ಸಿಕ್ಕದೆ ಹೋದರೆ ಪರಿಷತ್ಪತ್ರಿಕೆಯ ಗತಿ ಏನು? ಈ ಪತ್ರಿಕೆಯನ್ನು ನಡೆಯಿಸಲಾರದ ನಮ್ಮ ಶಕ್ತಿ ಇನ್ನೆಷ್ಟರದು? ನಮ್ಮ ಸಾಹಿತ್ಯ ಇತರ ಸಾಹಿತ್ಯಗಳು, ನಮ್ಮ ಸೀಮೆಯ ಇತಿಹಾಸ, ಸಂಸ್ಕೃತಿ, ಇವುಗಳಲ್ಲಿ ಆಸಕ್ತಿಯುಳ್ಳವರು ನಮ್ಮಲ್ಲಿ ಅನೇಕರಿದ್ದೇವೆ. ಇಪ್ಪತ್ತು ಜನ ವರ್ಷಕ್ಕೆ ಒಂದು ಲೇಖನದಂತೆ ಕೊಟ್ಟರೆ ಪತ್ರಿಕೆ ಸಕಾಲದಲ್ಲಿ ಹೊರಡಬಹುದು. ನಾವು ಇಷ್ಟನ್ನು ಮಾಡಲಾರವೆ? ಪತ್ರಿಕೆ ಹೊರಡುವದಿಲ್ಲ ಎಂದು ಎಲ್ಲರೂ ಅಸಮಾಧಾನವನ್ನು ಮಾತ್ರ ಸೂಚಿಸಿದರೆ ಏನು ಮಾಡಿದ ಹಾಗಾಯಿತು? ಈಚೆಗೆ ಪತ್ರಿಕೆಯ ಕೆಲಸಕ್ಕೆ ಸ್ವಲ್ಪ ಹೆಚ್ಚಿನ ಏರ್ಪಾಡುಗಳನ್ನು ಮಾಡಿಕೊಂಡಿರುವುದರಿಂದ ಇನ್ನು ಮೇಲೆ ಅದು ಸಕಾಲದಲ್ಲಿ ಬರಬಹುದೆಂದು ಭರವಸೆ ಇದೆ. ಮುಖ್ಯ, ನಾನು ಅರಿಕೆಮಾಡುವುದು ಇಷ್ಟೇ; ನಮ್ಮಲ್ಲಿ ವಿದ್ಯಾವಂತರೆಲ್ಲ ಪರಿಷತ್ತನ್ನು ತಾವು ನಮ್ಮ ಜನರ ಸೇವೆಗಾಗಿ ಮಾಡಿಕೊಂಡಿರುವ ಸಂಸ್ಥೆಯೆಂದು ಭಾವಿಸಿ ಸಾಧ್ಯವಾದಷ್ಟು ಜನರನ್ನು ಅದಕ್ಕೆ ಸದಸ್ಯರನ್ನಾಗಿ ಮಾಡಿ ಅದು ಈಗ ಮಾಡುತ್ತಿರುವ ಕೆಲಸವೂ ಇನ್ನೂ ಮಾಡಬಹುದಾದ ಕೆಲಸವೂ ಚೆನ್ನಾಗಿ ನಡೆಯುವಂತೆ ನೆರವಾಗಬೇಕು. ಇದನ್ನು ಮಾಡುವ ಹೊಣೆ ನಮ್ಮದು. ಇದನ್ನು ಮಾಡದೆ ಇದ್ದರೆ ತಪ್ಪೂ ನಮ್ಮದು; ಪರಿಷತ್ತಿನದಲ್ಲ.
Tag: Kannada Sahitya Sammelana 15, Masthi Venkatesha Iyengar
೧೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಬಿ.ಎಂ. ಶ್ರೀಕಂಠಯ್ಯ
ಹೊಸಗನ್ನಡ ಆಚಾರ್ಯ ಪುರುಷರೆನಿಸಿದ ‘ಶ್ರೀ’ ಕಾವ್ಯನಾಮದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು, ಬಿಎಂಶ್ರೀ ಎಂದೇ ಪ್ರಖ್ಯಾತರಾದವರು. ಮೈಲಾರಯ್ಯ-ಭಾಗೀರಥಮ್ಮ ದಂಪತಿಗಳಿಗೆ ೩-೧-೧೮೮೪ರಲ್ಲಿ ಜನಿಸಿದರು. ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪಡೆದ ನಂತರ ಸೆಂಟ್ರಲ್ ಕಾಲೇಜಿನಲ್ಲಿ ೧೯0೩ರಲ್ಲಿ ಬಿ.ಎ. ಪದವಿಯನ್ನು, ೧೯0೬ರಲ್ಲಿ ಮದರಾಸಿನಲ್ಲಿ ಬಿ.ಎಲ್ ಪದವಿಯನ್ನು ಪಡೆದರು. ೧೯0೭ರಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು.
೧೯೧೧ರಲ್ಲಿ ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿ ನೇಮಕಗೊಂಡು ೩0 ವರ್ಷಗಳವರೆಗೆ ದುಡಿದರು. ೧೯೨೬ ರಿಂದ ೧೯೩0ರವರೆಗೆ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ೧೯೨೭ರಿಂದ ಗೌರವ ಕನ್ನಡ ಪ್ರಾಧ್ಯಾಪಕರಾಗಿ ಅನಂತರ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೪೨ರಲ್ಲಿ ನಿವೃತ್ತರಾದ ಮೇಲೆ ಧಾರವಾಡದ ಆರ್ಟ್ಸ್ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡ ಇವರು ೫-೧-೧೯೪೬ರಲ್ಲಿ ನಿಧನರಾದರು.
ಇವರು ೬000 ರೂಪಾಯಿಗಳ ದೇಣಿಗೆ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಚ್ಚುಕೂಟವನ್ನು ಸ್ಥಾಪಿಸಿದರು. ೧೯೩೧ರಲ್ಲಿ ವಿಶ್ವವಿಖ್ಯಾತ ಕನ್ನಡ ಪುಸ್ತಕ ಮಾಲೆ ಪ್ರಾರಂಭಿಸಿದರು. ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದರು. ಪರಿಷತ್ತಿನಲ್ಲಿ ಕನ್ನಡನುಡಿ ಪತ್ರಿಕೆ, ಮಹಿಳಾಶಾಖೆ ಪ್ರಾರಂಭಿಸಿದರು.
೧೯೩೮ರಲ್ಲಿ ರಾಜಸೇವಾಸಕ್ತ ಎಂಬ ಬಿರುದನ್ನು ಮಹಾರಾಜರಿಂದ ಪಡೆದರು. ೧೯೩೮ರಿಂದ ೧೯೪೩ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು.
ನವೋದಯ ಸಾಹಿತ್ಯದಲ್ಲಿ ಮೈಲಿಗಲ್ಲುಗಳಂಥ ಕೃತಿಗಳನ್ನು ರಚಿಸಿದ್ದಾರೆ.
ಇಂಗ್ಲಿಷ್ ಗೀತಗಳು, ಅಶ್ವತ್ಥಾಮನ್ (ನಾಟಕ), ಪಾರಸೀಕರು (ಗ್ರೀಕ್ ಅನುವಾದಿತ ನಾಟಕ), ಹೊಂಗನಸುಗಳು (ಕವಿತೆಗಳು), ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯಕನ್ನಡ ಸಾಹಿತ್ಯ ಚರಿತ್ರೆ ಇತ್ಯಾದಿ
ಕನ್ನಡ ಸಾಹಿತ್ಯ ಸಮ್ಮೇಳನ–೧೪
ಅಧ್ಯಕ್ಷರು: ಬಿ.ಎಂ. ಶ್ರೀಕಂಠಯ್ಯ
ದಿನಾಂಕ ೧, ೨, ೩ ಜೂನ್ ೧೯೨೮
ಸ್ಥಳ : ಕಲ್ಬುರ್ಗಿ
ಪರಿಷತ್ತಿನ ಕೆಲಸ ಸಾಹಿತ್ಯದ ಕೆಲಸ
ಮಹಾಶಯರೇ ಒಂದು ದೇಶದ ಶ್ರೇಯೋಭಿವೃದ್ಧಿಗೆ ಅವಶ್ಯವಾದ ಅನೇಕ ಮುಖ್ಯವಾದ ಸಾಧನೆಗಳಲ್ಲಿ ಸಾಹಿತ್ಯಕೃಷಿ ಒಂದಾಗಿರುತ್ತದೆ. ಈ ಸಾಹಿತ್ಯ ಪರಿಷತ್ತಿನಲ್ಲಿ ಮುಖ್ಯವಾಗಿ ನಾವು ವಿಚಾರಮಾಡತಕ್ಕದ್ದು ಸಾಹಿತ್ಯದ ವಿಷಯವೇ ಆಗಿರುತ್ತದೆ. ಒಳ್ಳೆಯ ಸಾಹಿತ್ಯವನ್ನು ಪಡೆದ ಜನಾಂಗದ ಹೃದಯದಲ್ಲಿ ಜ್ಞಾನವೂ ನಿಷ್ಕಲ್ಮಷವಾದ ಆನಂದವೂ ಸತ್ಪ್ರೇರಣೆಯೂ ಸಮಾಜದ ಪ್ರಚಾರ ನಿರ್ಮಾಣ ಕಾರ್ಯದಲ್ಲಿ ಐಕಮತ್ಯವಾಗಿ ಬಲವಾಗಿ ಬೇರೂರಿರುತ್ತದೆ.
“ಮಿತ್ರರಿರಾ, ಬೆಳೆಯೇನೂ ಬೇಕಾದ ಹಾಗಿದೆ; ಕುಯಿಲುಗಾರರು ಕಡಿಮೆ.” ಬನ್ನಿ, ಜನ್ಮವನ್ನು ತಮ್ಮ ಜನರ ಬೋಧೆಗಾಗಿ ಸಮರ್ಪಣಮಾಡಿದ ಹೊಸಬಗೆಯ ದೀಕ್ಷಿತರಾಗಿ. ಪೂರ್ಣವಿದ್ಯರಾಗಿ. ಸ್ವತಂತ್ರಪ್ರಿಯರಾಗಿ (ಸ್ವತಂತ್ರವೆಂದರೆ ಸ್ವೇಚ್ಛೆಯಲ್ಲ). ಧರ್ಮಕಾಮರಾಗಿ. ಆತ್ಮಸಾಧಕರಾಗಿ. ಕಲಾಪುತ್ರರಾಗಿ – ಉದ್ದೇಶ, ವಿಷಯ, ರೀತಿ, ಶೈಲಿ, ಭಾವ, ಛಂದಸ್ಸು- ಹೊಸದು ಬೇಕಾದರೆ ಹೊಸದು, ಹಳದು ಸಾಕಾದರೆ ಹಳದು – ನಮ್ಮ ಸಿಂಗರವಾದ, ಮಂಗಳಮಯವಾದ ಕನ್ನಡ ನಾಡಿನಲ್ಲಿ ಬದುಕಾಗತಕ್ಕುದೇನಿದ್ದರೂ ಎಲ್ಲವನ್ನೂ ಬಳಸಿಕೊಂಡು ಹೊಸ ಜೀವವನ್ನು ಎಲ್ಲೆಲ್ಲಿಯೂ ತುಂಬಿ! ಆಗ್ಗೆ, ವಿಶ್ವವಿದ್ಯಾನಿಲಯಗಳೂ, ಪರಿಷತ್ತುಗಳೂ, ಪಂಡಿತವರ್ಯರೂ, ಗ್ರಂಥಕರ್ತರೂ, ದೇಶಬಾಂಧವರೂ ಜನ್ಮವೆತ್ತಿರುವುದಕ್ಕೆ ಸಾರ್ಥಕತೆ ತೋರುವುದು. ಆಗ್ಗೆ ಕನ್ನಡಕ್ಕೆ ಹಿಂದಿನ ಸಾಹಿತ್ಯದ ಸೌಭಾಗ್ಯಕ್ಕಿಂತಲೂ ಮುಂದಿನ ಸಾಹಿತ್ಯದ ಶಕ್ತಿ ಹೆಮ್ಮೆಯ ವಿಷಯವಾಗುವುದು.
ಕನ್ನಡಿಗರೇ, ಏಳಿ, ಎಚ್ಚರಗೊಳ್ಳಿ, ಆರಂಭಮಾಡಿ. ಪೂರ್ಣಚರಿತ್ರೆಯು, ವಿಶ್ವವಿದ್ಯಾನಿಲಯದ, ಸಾಹಿತ್ಯ ಪರಿಷತ್ತಿನ, ನೂತನ ಸಾಹಿತ್ಯಕಾರರ, ಉತ್ಸಾಹಪೂರಿತವಾಗಿ ಸೇವಾತುರದಾರರಾದ ಯುವಕ ದೇಶವತ್ಸಲರ, ಕರ್ಣಾಟಕ ಭಾಷೋಜ್ಜೀವನವನ್ನು ಸದಾಕಾಲದಲ್ಲಿಯೂ ತಮ್ಮ ಘನವಾದ ದಿವ್ಯಚಿತ್ತದಲ್ಲಿ ಪರ್ಯಾಲೋಚಿಸುತ್ತಿರುವ ನಮ್ಮ ಮೈಸೂರು ಶ್ರೀಮನ್ಮಹಾರಾಜರವರ, ಸಾಹಿತ್ಯ ಸಂಸ್ಕೃತಿಗಳ ಕಟ್ಟಿನಿಂದ ಏಕಜನತೆಯನ್ನು ಬಯಸುತ್ತಿರುವ ಸಕಲ ಕರ್ಣಾಟಕರ, ಮಹತ್ಪ್ರೇರಣೆಯಿಂದ, ಮಹತ್ಪ್ರಯತ್ನದಿಂದ ಸಾಧ್ಯವಾಗದ ಕಾರ್ಯವು ಯಾವುದು? ಏಳಿ, ಎಚ್ಚರಗೊಳ್ಳಿ, ಆರಂಭಮಾಡಿ. ಹಿಂದೆ ಯೂರೋಪಿನಲ್ಲಿ ರಿನೇಸಾನ್ಸ್ ಎಂಬ ಸಾಹಿತ್ಯದ ಪುನರ್ಜನ್ಮವುಂಟಾದಾಗ, ಒಬ್ಬ ಮಹಾಪಂಡಿತನು – “ನಾವು ಸತ್ತವರನು ಎಬ್ಬಿಸುವುದಕ್ಕೆ ಹೋಗುತ್ತೇವೆ” ಎಂದು ಘೋಷಿಸಿದನು. ನಾವು ಕನ್ನಡಿಗರು ಇಂದು, ಸತ್ತವರನ್ನು ಎಬ್ಬಿಸುವುದೇ ಅಲ್ಲ; ಬದುಕಿರುವವರನ್ನೂ ಎಚ್ಚರಗೊಳಿಸುವುದಕ್ಕೆ ಹೊರಟಿರುವೆವು. ಹಿಂದಿನ ಸಾಹಿತ್ಯವನ್ನು ಪ್ರಯೋಜನಕಾರಿಯಾಗಿ ಮಾಡುವುದಕ್ಕೆ ಅಲ್ಲ; ಹೊಸ ಉತ್ತಮ ಸಾಹಿತ್ಯವೊಂದನ್ನು ಸೃಷ್ಟಿಮಾಡುವುದಕ್ಕೆ ಹೊರಟಿರುವೆವು. ಹೊರಟವರು ವಿಲಾಸವತಿಯ ಕೊರಳಿನ ಪುಷ್ಪಮಾಲಿಕೆಯೇ ಅಲ್ಲ. ಸಾಹಿತ್ಯ, ಮಾನವಜೀವನದ ಪುನರ್ನಿರ್ಮಾಣದ ಕಾರ್ಯದಲ್ಲಿ ಬದ್ಧಕಂಕಣನಾಗಿರುವ ವೀರನ ಖಡ್ಗವೂ ಅಹುದೆಂದು ತಿಳಿದಿರುವೆವು.
ಸಮ್ಮೇಳನವನ್ನು ಒಂದು ವರ್ಷ ಎಲ್ಲಾದರೂ ಕೂಡಿಸಿದರೆ ನಾವು ಇಚ್ಛಿಸಿದ ಕಾರ್ಯಗಳು ನೆರವೇರಲಾರವು. ಪ್ರತಿಯೊಂದು ಜಿಲ್ಲೆಯ ಕನ್ನಡ ಭಾಷಾಪ್ರೇಮಿಗಳು ತಮ್ಮ ಜಿಲ್ಲೆಯಲ್ಲಿಯೂ ಅದರಂತೆಯೇ ತಮ್ಮ ಹಿಂದೆ ಬಿದ್ದ ನೆರೆಜಿಲ್ಲೆಗಳಲ್ಲಿಯೂ ಕರ್ಣಾಟಕತ್ವದ ಭಾವನೆಯನ್ನು ಜಾಗ್ರತೆಪಡಿಸಲಿಕ್ಕೆ ಸದಾ ಪ್ರಯತ್ನಿಸುತ್ತಿರಬೇಕು. ಅವರು ಕರ್ನಾಟಕ ವಾಙ್ಮಯ ಮತ್ತು ಇತಿಹಾಸವನ್ನು ವಿಶೇಷ ಅಭ್ಯಾಸಮಾಡಿದವರನ್ನು ತಮ್ಮಲ್ಲಿಗೆ ಆಗಿಂದಾಗ್ಗೆ ಬರಮಾಡಿಕೊಂಡು ಅವರ ಜ್ಞಾನದ ಲಾಭವನ್ನು ಜನರಿಗೆ ಮಾಡಿಕೊಡುತ್ತಿರಬೇಕು.
ಉಪಸಂಹಾರ
ಸಭ್ಯಗೃಹಸ್ಥರೇ, ಈ ಮೇರೆಗೆ ನಾವು ಮಾಡತಕ್ಕ ಪ್ರಯತ್ನಗಳನ್ನು ಸ್ಥೂಲಮಾನದಿಂದ ಇಲ್ಲಿ ನಿರ್ದೇಶಿಸಿದ್ದೇನೆ. ಈ ಸಂಗತಿಗಳ ಬಗ್ಗೆ ಪರಿಷತ್ತುಗಳಲ್ಲಿ ಅನೇಕ ನಿರ್ಣಯಗಳು ಆಗಿರುತ್ತವೆ. ಆದರೆ, ಈ ಬಗ್ಗೆ ಪ್ರಯತ್ನಗಳು ಮಾತ್ರ ಬಲವಾಗಿಯೂ ವ್ಯವಸ್ಥೆಯಿಂದಲೂ ನಮ್ಮಲ್ಲಿ ನಡೆದಿರುವದಿಲ್ಲೆಂಬುದು ಬಹು ವಿಷಾದಕರವಾದದ್ದು. ವಾಙ್ಮಯಾಭಿವೃದ್ಧಿಯು ಒದಗಬೇಕಾದರೆ ವಿದ್ವಜ್ಜನರು ಒಂದೇ ಸಮನೇ ಪ್ರಯತ್ನಿಸುವದು ಅವಶ್ಯವಿದೆ. ಈ ಅಭಿವೃದ್ಧಿಯು ಪರಿಷತ್ತಿನಲ್ಲಿ ಮಾಡುವ ನಿರ್ಣಯಗಳನ್ನೇ ಅವಲಂಬಿಸಿಲ್ಲ. ಈ ಕಾರ್ಯಭಾರವನ್ನು ನಮ್ಮಲ್ಲಿಯ ಸುಶಿಕ್ಷಿತರು ವಿಶೇಷವಾಗಿ ಕೈಕೊಳ್ಳತಕ್ಕದ್ದು.
Tag: Kannada Sahitya Sammelana 14, B.M. Srikantaiah, B.M.Sri
೧೩ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಆರ್. ತಾತಾಚಾರ್ಯ (ಆರ್. ತಾತಾ)
ಕನ್ನಡ ನಾಡಿನಲ್ಲಿ ಇರದೆ ಆಚೆ ಇರುವ ಕನ್ನಡಿಗರಲ್ಲಿ ಅನೇಕರು ಕನ್ನಡಕ್ಕೆ ಸಾಕಷ್ಟು ದುಡಿದಿದ್ದಾರೆ. ಅವರಲ್ಲಿ ನಿಷ್ಠಾವಂತ ಕನ್ನಡ ಭಕ್ತ ಆರ್. ತಾತಾಚಾರ್ಯರೂ ಒಬ್ಬರು. ಕನ್ನಡ ಭಾಷಾ ಏಕೀಕರಣಕ್ಕೆ ಶ್ರಮಿಸಿದ ಇವರು ೧೮೭೬ರಲ್ಲಿ ಜನಿಸಿದರು. ತಂದೆ ರಾಜಕವಿ ತಿರುಮಲೆ ವೆಂಕಟಾಚಾರ್ಯರು ಘನ ವಿದ್ವಾಂಸರು. ಪ್ರಸಿದ್ಧ ನಟ ವರದಾಚಾರ್ಯರಿಗೆ ನಾಟಕಗಳನ್ನು ರಚಿಸಿಕೊಡುತ್ತಿದ್ದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ., ಎಲ್.ಟಿ ಪದವಿಗಳನ್ನು ಪಡೆದರು.
ಮದ್ರಾಸಿನ ವಿದ್ಯಾ ಇಲಾಖೆಗೆ ಸೇರಿ ರಾಜಮಹೇಂದ್ರಿ ಟ್ರೈನಿಂಗ್ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಮದರಾಸಿನ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ೧೯೨0ರಲ್ಲಿ ವಿದ್ಯಾಧಿಕಾರಿಯಾದರು.
ಆರ್. ತಾತಾ ಎಂದು ಇವರು ಕನ್ನಡ ಪಂಡಿತ ವರ್ಗದಲ್ಲಿ ಪ್ರಸಿದ್ಧರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ೧೯೨೭ರಲ್ಲಿ ಇವರ ಕನ್ನಡ ಸೇವೆಯನ್ನು ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಆರಿಸಿತು.
ಜೈನ ಮತ್ತು ವೀರಶೈವ ಶಾಸ್ತ್ರಗಳಲ್ಲಿ ಘನ ಪಂಡಿತರಾದ ಇವರು ರಚಿಸಿದ ಕೆಲವು ಕೃತಿಗಳು ಹೀಗಿವೆ.
೧. ಮರುನ್ನಂದನ ಶತಕ ೨. ಗಿರಿಮಲ್ಲಿಕಾರ್ಜುನ ಶತಕಂ ೩. ಗುರುದತ್ತರಾಯನ ಚರಿತ್ರೆ ೪. ಕಿತ್ತೀಳೆಯೂ ಕನ್ನಡವೂ (ವಿಮರ್ಶಾ ಲೇಖನ) ೫. ಕನ್ನಡ ಶಬ್ದದ ವ್ಯುತ್ಪತ್ತಿ (ವಿಮರ್ಶಾ ಲೇಖನ)
ವಿನಯಶಾಲಿ, ಸ್ಪಷ್ಟವಾದಿಗಳು ಆಗಿದ್ದ ಇವರು ೩0-೧೨-೧೯೩೨ರಲ್ಲಿ ಮರಣಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನ–೧೩
ಅಧ್ಯಕ್ಷರು: ಆರ್. ತಾತಾಚಾರ್ಯ
ದಿನಾಂಕ ೧೯, ೨0, ೨೧ ಮೇ ೧೯೨೭ ಸ್ಥಳ : ಮಂಗಳೂರು
ಮಲ್ಲಪ್ಪನವರ ವ್ಯಾಕರಣ ಸಾಕು
ಕನ್ನಡ ಭಾಷೆಯಲ್ಲಿ ಈಗಿನ ಕಾಲಕ್ಕೆ ತಕ್ಕ ವ್ಯಾಕರಣವೊಂದು ಆಗಬೇಕೆಂದು ಪರಿಷತ್ಪತ್ರಿಕೆಯಲ್ಲಿ ಒಂದೆಡೆಯಲ್ಲಿ ಸೂಚನೆ ಹೊರಟಿದೆ. ಈ ಕೆಲಸವು ಪರಿಷತ್ತಿನ ಸಂಬಂಧವಾಗಿದ್ದರೆ ಅದನ್ನು ಪರಿಷತ್ತಿನವರು ಕೈಕೊಳ್ಳಬಹುದಾದರೂ ಮಲ್ಲಪ್ಪನವರ ಶಬ್ದಾದರ್ಶವು ಸಾಕೆಂದು ತೋರುವುದು. ಅದು ಸಾಲದಿದ್ದಲ್ಲಿ ಮತ್ತೊಮ್ಮೆ ಪುನರಾವೃತ್ತಿ ಆದರೆ ಸಾಕು.
ಪ್ರಾಚೀನ ಗ್ರಂಥಗಳ ಪ್ರಕಟನೆ ಮುಖ್ಯ
ಮಹಾಶಯರೇ! ಈ ಪ್ರಾಚೀನ ಗ್ರಂಥಗಳ ವಿಷಯದಲ್ಲಿ ಎಷ್ಟು ಹೇಳಿದರೂ ಸಮಯವು ಸಾಲದು. ಸುಮ್ಮನೆ ಚಿಂತಿಸುವುದರಿಂದ ಈ ಕರ್ತವ್ಯವೇನೂ ಆದಂತೆ ಕಾಣುವುದಿಲ್ಲ. ಈ ವಿಷಯದಲ್ಲಿ ಪರಿಷತ್ತಿನವರ ಸಂಪಾದಕ ಮಂಡಲಿ ಎಷ್ಟು ವಿಶಾಲವಾದರೂ ಸಾಲದು. ಹಣದ ವಿಷಯದಲ್ಲಿ ಪ್ರತಿಫಲವನ್ನುದ್ದೇಶಿಸಿ ಮಾಡುವ ಖರ್ಚಲ್ಲವೆಂದು ನಿಷ್ಕರ್ಷೆಯಿಂದ ದಾನವೆಂದೇ ಎಣಿಸಿ ಉದಾರ ರಾಜಪೋಷಕರಾದ ಶ್ರೀಮನ್ಮಹಾರಾಜರವರೂ ಶ್ರೀಮದ್ಯುವರಾಜರವರೂ ತಮ್ಮ ನಿಸರ್ಗವಾದ ಉದಾರತೆಯಿಂದ ಇದಕ್ಕೆ ನೆರವಾಗುವಂತೆ ಪ್ರಾರ್ಥಿಸುವುದೇ ನಮ್ಮ ಕರ್ತವ್ಯವು.
ಪರಿಷತ್ತಿನ ಕೆಲಸಗಳಿಗೆ ನೆರವಾಗೋಣ
ಪರಿಷತ್ತಿನ ಮೇಲೆಯೇ ಭಾರವೆಲ್ಲವನ್ನೂ ಹೊರಿಸಿ ನಮ್ಮಲ್ಲಿ ಕೆಲವರು ತೆಪ್ಪನೆ ಕುಳಿತಿರುವರು. ತಪ್ಪು ಕಂಡುಬಂದಾಗ ಬುಸುಗುಟ್ಟುವುದಾಗಲಿ ಗೊಣಗುಟ್ಟುವುದಾಗಲಿ ಎಂತಹ ನ್ಯಾಯ? ಪರಿಷದ್ವರ್ತಮಾನಗಳು ಸರ್ವಜನಸಮ್ಮತವವಾಗಿರಲಾರವಾದರೂ ಅವರು ಮಾಡಿರುವ ಕೆಲಸಗಳನ್ನು ಚೆನ್ನಾಗಿ ಪರಿಶೀಲಿಸಿದಲ್ಲಿ ಹನ್ನೆರಡು ವರುಷಗಳೊಳಗೆ ಇಷ್ಟೊಂದು ಕೆಲಸವಾದುದು ಆಶ್ಚರ್ಯವೇ ಸರಿ. ಮತ್ತಿನವರ ನೆರವಷ್ಟಿಲ್ಲದೆ ತಮ್ಮಲ್ಲಿ ತಾವೇ ಶ್ರಮಪಟ್ಟು ಗ್ರಂಥಗಳನ್ನು ರಚಿಯಿಸಿ ಮುದ್ರಿಸಿ ಪ್ರಚರಿಸಿದುದೂ ಅಲ್ಲದೆ ವಿಶೇಷ ವಿಷಯಗಳನ್ನೊಳಗೊಂಡ ಪರಿಷತ್ಪತ್ರಿಕೆಯನ್ನು ತಕ್ಕಷ್ಟು ಗೌರವದಿಂದ ನಡೆಯಿಸುತ್ತಿರುವುದನ್ನು ನೋಡಿದರೆ ಪರಿಷಜ್ಜನರಿಗೆ ನಾವು ಅಂಜಲಿಬದ್ಧರಾಗಿ ಧನ್ಯವಾದಗಳನ್ನು ಹೇಳಲೆಬೇಕು. ತಪ್ಪು ಕಂಡು ಹಿಡಿವುದೇ ಮುಖ್ಯೋದ್ದೇಶವೆಂದಿರು ಮೇಲಿಟ್ಟಿರುವ ಮಹಾಶಯರಿಗೆ ಸ್ವಲ್ಪವಾದರೂ ಗುಣವು ಕಣ್ಣಿಗೆ ಬೀಳುವುದಿಲ್ಲ. ಪರಿಷತ್ತಿಗೆ ಇರುವ ಅಧಿಕ ಕಾರ್ಯವನ್ನು ಲಘುವಾಗಿ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿರುವುದು. ವಾಙ್ಮಯ ರಾಜ್ಯದಲ್ಲಿ ಪರಿಷಜ್ಜನರೇ ರಾಜ್ಯಭಾರವನ್ನು ಮಾಡುತ್ತಿರಲಿ; ಭಯವಿಲ್ಲ; ಅನ್ಯಾಯವಾದೀತೆಂಬ ಹೆದರಿಕೆಯೂ ಬೇಡ. ನಮ್ಮ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಪಾಧ್ಯಕ್ಷರುಗಳ ಹೆಸರುಗಳೇ ಅಂತಹ ದುಶ್ಯಬ್ದಕ್ಕೂ ದುರ್ಗಂಧಕ್ಕೂ ಎಡೆಗೊಡದೆ ರಕ್ಷಿಸುವ ರಕ್ಷಾಮಣಿಗಳು. ಪರಿಷತ್ತಿಗೆ ರಾಜ್ಯಭಾರವಾಗಲಿ ರಾಜಕಾರ್ಯವಾಗಲಿ ರಾಜತಂತ್ರವೇ ಇರಲಿ ನಮಗೇಕದರ ಗೊಡವೆ? ಸಾಹಿತ್ಯದಲ್ಲಿ ನಡೆಯಬೇಕಾಗಿರುವ ಊಳಿಗವನ್ನು ಮಾತ್ರ ನಾವೆಲ್ಲರೂ ಕೂಡಿ ಈವರೆಗೆ ಅಶ್ರದ್ಧೆಯೋ ಸಮಯ ವಿರೋಧವೋ ವ್ಯಕ್ತಿವೈರವೋ ದೇಶಾಂತರ ವಿವಾದವೋ ವಿಷಯಾಂತರಾಳವೋ ಮತವಿರೋಧವೋ ಏನಿದ್ದರೂ ತೊರೆದು ಮರೆತು ನಮ್ಮ ಸಜ್ಜನಿಕೆಯನ್ನೂ ಕಾರ್ಯದಕ್ಷತೆಯನ್ನೂ ನೈಪುಣ್ಯವನ್ನೂ ಸಾಹಿತ್ಯವನ್ನೂ ಮೆರೆಯಲು ನಾವೆಲ್ಲರೂ ನೆರೆಯಬೇಕೆಂಬುದು ನನ್ನ ಸವಿನಯ ಪ್ರಾರ್ಥನೆ.
Tag: Kannada Sahitya Sammelana 13, R. Thathacharya, R. Thatha
೨೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ
ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ ಹಿರೇಮಠರು ವೀರಶೈವ ಸಾಹಿತ್ಯದಲ್ಲಿ ಪ್ರಕಾಂಡ ಪಂಡಿತರು. ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ ೩-೧-೧೮೯೨ರಲ್ಲಿ ಪಟ್ಟದಯ್ಯ ಮತ್ತು ಬಸವಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಬ್ಯಾಡಗಿ ಹಾವೇರಿ ಗದಗುಗಳಲ್ಲಿ ಮುಗಿಸಿ ಕಾಶಿ, ಕಲ್ಕತ್ತ ಸಂಸ್ಕೃತ ಕೇಂದ್ರಗಳಿಗೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ೧೯೨೪ರಲ್ಲಿ ವ್ಯಾಕರಣ ತೀರ್ಥ ಪದವಿಯನ್ನು ಸಾಹಿತ್ಯಾಚಾರ್ಯ ಪದವಿಯನ್ನು ಪಡೆದು ಕರ್ನಾಟಕಕ್ಕೆ ಹಿಂದಿರುಗಿದರು.
ಕರ್ನಾಟಕಕ್ಕೆ ಹಿಂದಿರುಗಿದ ಮೇಲೆ ಯಾದಗಿರಿಯಲ್ಲಿ ಶಂಕರ ಸಂಸ್ಕೃತ ಕಾಲೇಜು ಸ್ಥಾಪಿಸಿ ೧೯೨೪ರಿಂದ ಅದರ ಪ್ರಿನ್ಸಿಪಾಲರಾದರು. ಹುಬ್ಬಳ್ಳಿಯ ಜಗದ್ಗುರು ಗಂಗಾಧರ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದರು. ೧೯೩೧ರಿಂದ ೧೯೩೮ರವರೆಗೆ ಸಂಸ್ಕೃತ ಮುಖ್ಯಾಧ್ಯಾಪಕರಾಗಿ ದುಡಿದರು.
೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ಸಮಾವೇಶಗೊಂಡಿದ್ದ ೧೯ನೇ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು. ಅನೇಕ ಗ್ರಂಥಗಳನ್ನು ಪರಿಶೋಧಿಸಿ ಪರಿಷ್ಕರಿಸಿ ಪ್ರಕಟಿಸಿದರು. ಹಂಪೆಯಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ೬ನೇ ಶತಮಾನೋತ್ಸವ ಕಾರ್ಯಕ್ರಮದ ಸಮಿತಿಯ ಕಾರ್ಯದರ್ಶಿಯಾಗಿ ಶ್ರಮಿಸಿದ್ದಾರೆ. ೨೫ಕ್ಕೂ ಹೆಚ್ಚಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ದಾಖಲೆ ಸ್ಥಾಪಿಸಿದ್ದಾರೆ.
ಕಾಶಿಯಲ್ಲಿ ವ್ಯಾಸಂಗದ ಕಾಲದಲ್ಲಿ ಸಾಹಿತ್ಯಾಚಾರ್ಯರಾಗಿ ವಿದ್ಯಾಲಂಕಾರ, ವಿದ್ಯಾವಾಗೀಶ ಬಿರುದನ್ನು ಗಳಿಸಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವದ ಜತೆಯಲ್ಲೇ ೧೯೪0ರಲ್ಲಿ ನಡೆದ ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಸವತತ್ತ್ವ ರತ್ನಾಕರ ಗ್ರಂಥಕ್ಕೆ ದೊರೆತಿದೆ. ೧೯೮೩ರಲ್ಲಿ ಸರ್ಕಾರದ ರಾಜ್ಯ ಪ್ರಶಸ್ತಿ, ೧೯೯೩ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ ದೊರೆತಿದೆ. ಶಾಸ್ತ್ರಿಗಳು ಶತಾಯುಷಿಗಳಾದಾಗ ಹಡಗಲಿ ಸಂಘರ್ಷ ಸಮಿತಿ ಚಂದ್ರಚೇತನ ಗ್ರಂಥವನ್ನೂ, ಕನ್ನಡ ಸಾಹಿತ್ಯ ಪರಿಷತ್ತು ವ್ಯಾಕರಣ ತೀರ್ಥ ಸಂಭಾವನಾ ಗ್ರಂಥವನ್ನೂ ಸಮರ್ಪಿಸಿದೆ.
ಸಂಸ್ಕೃತ, ಕನ್ನಡ, ಇಂಗ್ಲಿಷ್, ಮರಾಠಿ, ಉರ್ದು ಭಾಷೆಗಳನ್ನು ಬಲ್ಲ ಇವರು ಅನೇಕ ಧಾರ್ಮಿಕ ಗ್ರಂಥಗಳನ್ನು ರಚಿಸಿದ್ದಾರೆ.
ಬಸವತತ್ತ್ವ ರತ್ನಾಕರ, ಚಾಣಕ್ಯ ನೀತಿ ದರ್ಪಣ, ರೇಣುಕ ವಿಜಯ, ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ, ಸಿದ್ಧಲಿಂಗ ವಚನ, ಕಾಡು ಸಿದ್ದೇಶ್ವರ ವಚನ ಇತ್ಯಾದಿ ರಚಿಸಿದ್ದಾರೆ.
ಶಾಸ್ತ್ರಿಗಳು ದಿನಾಂಕ ೨೪-೧0-೧೯೯೭ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨೫
ಅಧ್ಯಕ್ಷರು : ವೈ ಚಂದ್ರಶೇಖರಶಾಸ್ತ್ರಿ
ದಿನಾಂಕ ೨೭,೨೮,೨೯ ಡಿಸೆಂಬರ್ ೧೯೪0
ಸ್ಥಳ : ಧಾರವಾಡ
ಪರಿಷತ್ತಿನ ಅಧ್ಯಕ್ಷರ ಮತ್ತು ಮಹಾಪೋಷಕರ ಮರಣ
ಕಳೆದ ೧೫ ವರ್ಷಗಳಿಂದ ಪರಿಷತ್ತಿಗೆ ಅಧ್ಯಕ್ಷರಾಗಿದ್ದ ಮೈಸೂರು ಸಂಸ್ಥಾನದ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ ಜಿ.ಸಿ.ಐ.ಇ. ಅವರು ಇದೇ ವರ್ಷದ ಮಾರ್ಚಿ ತಿಂಗಳ ೧೧ನೆಯ ತಾರೀಖಿನಲ್ಲಿ ದಿವಂಗತರಾದ ವಿಷಯ ಪರಿಷತ್ತಿಗೆ ಪರಿತಾಪಕರವಾದುದು. ಅನೇಕ ರೀತಿಯಿಂದ ಪರಿಷತ್ತಿಗೆ ಬೆಂಬಲಿಗರಾಗಿದ್ದುದಲ್ಲದೆ ‘ಕನ್ನಡ ನಾಡಿನ ಚರಿತ್ರೆ’ ಯನ್ನು ಅಚ್ಚುಮಾಡಿಸುವುದಕ್ಕೆ ಉದಾರವಾದ ದ್ರವ್ಯ ಸಹಾಯಮಾಡಿದ್ದ ಇಂತಹ ಮಹನೀಯರು ದಿವಂಗತರಾದುದು ಪರಿಷತ್ತಿನ ದೌರ್ಭಾಗ್ಯವೇ ಸರಿ.
ಈ ಸಂಬಂಧವಾದ ದುಃಖ ಆರುವುದರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದಾಗಿನಿಂದ ಅದರ ಮಹಾಪೋಷಕರಾಗಿದ್ದು ಕನ್ನಡನಾಡು ನುಡಿಗಳ ಏಳಿಗೆಗಾಗಿ ಅನೇಕ ವಿಧವಾಗಿ ಸಹಾಯ ಸಂಪತ್ತುಗಳನ್ನು ಅನುಗ್ರಹಿಸುತ್ತಲಿದ್ದ ಮೈಸೂರು ಸಂಸ್ಥಾನದ ಮಹಾರಾಜರವರಾದ ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್, ಜಿ.ಸಿ.ಎಸ್.ಐ., ಜಿ.ಬಿ.ಇ. ಅವರು ಕಳೆದ ಆಗಸ್ಟ್ ತಿಂಗಳ ೩ನೆಯ ತಾರೀಖಿನಲ್ಲಿ ಹೃದಯ ವೇದನೆಯಿಂದ ದಿವಂಗತರಾದುದು ಕನ್ನಡಿಗರೆಲ್ಲರಿಗೆ ಸಿಡಿಲು ಬಡಿದಂತಾಗಿದೆ. ಅವರು ವಿಧಿವಶರಾಗುವುದಕ್ಕೆ ಒಂದು ತಿಂಗಳು ಹಿಂದೆ ನಮ್ಮ ಪರಿಷತ್ತಿನ ಬೆಳ್ಳಿಯ ಹಬ್ಬದ ಪ್ರಾರಂಭೋತ್ಸವವನ್ನು ನೆರವೇರಿಸಿದಾಗ ಪರಿಷತ್ತನ್ನು ನಾನಾ ವಿಧವಾಗಿ ಪ್ರಶಂಸಿಸಿ ಕನ್ನಡ ನುಡಿಯ ಉತ್ಕರ್ಷದ ಬಗ್ಗೆ ಅಮೋಘವಾದ ಸಲಹೆಗಳನ್ನು ಅಪ್ಪಣೆಕೊಡಿಸಿದ್ದಲ್ಲದೆ ಆ ಕಾಲಕ್ಕೆ ಸಿರಿಗನ್ನಡಂ ಗೆಲ್ಗೆ ಎಂಬ ಕನ್ನಡಿಗರ ಮೂಲಮಂತ್ರವನ್ನು ತಮ್ಮ ಪವಿತ್ರ ವಾಣಿಯಿಂದ ಉದ್ಘೋಷಿಸಿ ಸಮಸ್ತ ಕನ್ನಡಿಗರಲ್ಲಿಯೂ ನೂತನ ಚೈತನ್ಯವನ್ನುಂಟುಮಾಡಿದ್ದರು. ಇವರು ತಮ್ಮ ೩೮ ವರ್ಷಗಳ ಆಳಿಕೆಯಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿಯ ಸಂಸ್ಥಾನವನ್ನಾಗಿ ಮಾಡಿ, ತಮ್ಮ ಪ್ರಜಾವಾತ್ಸಲ್ಯ, ಭೂತದಯೆ, ದೈವಭಕ್ತಿ, ಗಾಂಭೀರ್ಯ, ಸದಾಚಾರವರ್ತನೆ, ಪೂರ್ವಸಂಪ್ರದಾಯ ವಿಶ್ವಾಸ ಮೊದಲಾದ ಗುಣಗಳಿಂದ ರಾಜರ್ಷಿಗಳೆನ್ನಿಸಿಕೊಂಡಿದ್ದರು. ಇವರ ದೈವಭಕ್ತಿ ಅಸಾಧಾರಣವಾದುದೆಂಬುದನ್ನು ನಾನು ಕಾಶಿಯಲ್ಲಿ ಕಂಡಿದ್ದೇನೆ. ಇವರು ಕಾಶಿಯ ಹಿಂದೂವಿಶ್ವವಿದ್ಯಾನಿಲಯದ ಅಧ್ಯಕ್ಷ ಪದವಿಯನ್ನಲಂಕರಿಸಿದ್ದಾಗ ವರ್ಷಕ್ಕೆ ೨-೩ ಸಾರೆ ಕಾಶಿಗೆ ದಯಮಾಡಿಸುತ್ತಿದ್ದರು. ಆ ಕಾಲಕ್ಕೆ ಗಂಗಾಸ್ನಾನವನ್ನು ಮಾಡಿ ೨-೩ ಘಂಟೆಗಳವರೆಗೆ ಅಲ್ಲಿಯ ಹನುಮಾನ್ ಘಾಟಿನಲ್ಲಿ ಅನುಷ್ಠಾನವನ್ನು ಮಾಡಲಿಕ್ಕೆ ಕುಳ್ಳಿರುತ್ತಿದ್ದರು. ಒಂದು ಸಾರೆ ಕಾಶಿಯಲ್ಲಿರುವ ಶ್ರೀ ಜಗದ್ಗುರು ವಿಶ್ವಾರಾಧ್ಯಪೀಠದ ಜಂಗಮವಾಡಿಯ ಮಠಕ್ಕೆ ದಯಮಾಡಿಸಿದಾಗ ಪ್ರಭುಗಳ ಅಸಾಧಾರಣ ದೈವಭಕ್ತಿ ತೋರಿಬಂದಿತು. ಬೆಂಗಳೂರು ನಗರದಲ್ಲಿ ಪ್ರತಿಷ್ಠಿತವಾಗಿರುವ ನಮ್ಮ ಪರಿಷ್ಮನಂದಿರವು ದಿವಂಗತ ಮಹಾರಾಜರವರ ಸಹಾಯದಿಂದಲೇ ಪ್ರಾರಂಭವಾಯಿತೆಂಬುದು ಕನ್ನಡಿಗರೆಲ್ಲರಿಗೆ ತಿಳಿದೇ ಇರುತ್ತದೆ. ಇಂತಹ ಜಗದ್ವಿಖ್ಯಾತರಾದ ಪ್ರಭುಗಳನ್ನು ಕಳೆದುಕೊಂಡುದು ನಮ್ಮ ಪರಿಷತ್ತಿನ ದೌರ್ಭಾಗ್ಯವೆಂದೇ ನಾನು ತಿಳಿಯುತ್ತೇನೆ. ಶ್ರೀಮನ್ಮಹಾರಾಜರವರ ಮತ್ತು ಯುವರಾಜರವರ ಆತ್ಮಗಳಿಗೆ ಭಗವಂತನು ಚಿರಶಾಂತಿಯನ್ನೀಯಲಿ.
ಆನಂದದ ಸಂಗತಿ
ಸುಖದ ಮೇಲೆ ದುಃಖವೂ, ದುಃಖದ ತರುವಾಯ ಸುಖವೂ ಮನುಷ್ಯನಿಗೆ ಬರುವುದು ಸ್ವಾಭಾವಿಕವಾಗಿರುತ್ತದಷ್ಟೆ. ಅಂತೆಯೇ ಕೃಷ್ಣಭೂಪಾಲರು ದಿವಂಗತರಾದ ವ್ಯಸನವಿರುವಾಗಲೇ ಶ್ರೀ ಜಯಚಾಮರಾಜೇಂದ್ರ ಒಡೆಯರವರಿಗೆ ಮೈಸೂರು ಸಿಂಹಾಸನದ ಪಟ್ಟಾಭಿಷೇಕವಾದುದು ಕನ್ನಡಿಗರೆಲ್ಲರಿಗೂ ಮಹದಾನಂದ ಸಂಗತಿ. ೧೯೩೯ರಲ್ಲಿ ವಸಂತ ಸಾಹಿತ್ಯೋತ್ಸವಕ್ಕೆ ದಯಮಾಡಿ ಕೆಲಕಾಲ ನಮ್ಮ ಪರಿಷತ್ತಿನ ಅಧ್ಯಕ್ಷರಾಗಿದ್ದು ಈಚೆಗೆ ಮಹಾಪೋಷಕರಾಗಿರುವ ತರುಣ ಮಹಾರಾಜರ ಆಳಿಕೆಯಲ್ಲಿ ಮೈಸೂರು ಸಂಸ್ಥಾನ ಹೆಚ್ಚು ದೇದೀಪ್ಯಮಾನವಾಗಲೆಂದೂ, ಕನ್ನಡ ನಾಡಿನ ಮತ್ತು ನುಡಿಯ ಉತ್ಕರ್ಷಕ್ಕೆ ಇತೋಪ್ಯತಿಶಯವಾದ ಸಹಾಯಸಂಪತ್ತಿಗಳು ಲಭಿಸುವಂತಾಗಲೆಂದೂ ಹಾರೈಸುತ್ತೇನೆ.
ಕನ್ನಡ ಸಾಹಿತ್ಯ ಪರಿಷತ್ತು:- ಕನ್ನಡ ನಾಡು ಸರ್ವಾಂಗಸುಂದರವಾಗಬೇಕಾದರೆ ಆ ನಾಡಿನ ಆರ್ಥಿಕ ರಾಜಕೀಯ, ಐತಿಹಾಸಿಕ, ಸಾಹಿತ್ಯ ಭಾಷೆಗಳಲ್ಲಿ ಉತ್ಕರ್ಷ ಉಂಟಾಗಬೇಕಾಗಿರುತ್ತದೆ. ಆದುದರಿಂದಲೇ ಕನ್ನಡ ನಾಡಿನ ಅಭಿವೃದ್ಧಿಗೆ ಬೇಕಾದ ಕೆಲವು ಸಂಸ್ಥೆಗಳ ವಿಷಯವನ್ನು ಸಂಕ್ಷೇಪವಾಗಿ ನಾನು ಇಲ್ಲಿ ಹೇಳಿರುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತು ಇಪ್ಪತ್ತೈದು ವರ್ಷಗಳ ಕೆಳಗೆ ಕನ್ನಡ ಮಾತೆಯ ಪುತ್ರರಲ್ಲಿ ಹಿರಿಯರೂ, ಕೀರ್ತಿ ವಿದ್ಯಾಬುದ್ಧಿಗಳಲ್ಲಿ ಜಗದ್ವಿಖ್ಯಾತರೂ ಆಗಿರುವ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದಾಗ ಸ್ಥಾಪಿತವಾಯಿತು. ಇದರ ಬೆಳ್ಳಿಯ ಹಬ್ಬವೂ ಕೂಡ ಕಳೆದ ಜೂನ್ ತಿಂಗಳಿನಲ್ಲಿ ರಾಜವೈಭವದಿಂದ ನಡೆದದ್ದು ತಮಗೆಲ್ಲ ಗೊತ್ತೇ ಇರುತ್ತದೆ. ಈ ಸಂಸ್ಥೆಯು ಕಳೆದ ಇಪ್ಪತೈದು ವರ್ಷಗಳಿಂದ ಅವಿಚ್ಛಿನ್ನವಾಗಿ ಕನ್ನಡ ಸೇವೆಯನ್ನು ಮಾಡುತ್ತ ಬಂದಿರುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಸಾಹಿತ್ಯ ಸಮ್ಮೇಳಗಳನ್ನು ಕೂಡಿಸಿ ಕನ್ನಡಿಗರಲ್ಲಿ ವಿಶೇಷ ಜಾಗೃತಿಯನ್ನು ಹುಟ್ಟಿಸುತ್ತಲಿದೆ. ಇತ್ತೀಚೆಗೆ ವಸಂತ ಸಾಹಿತ್ಯೋತ್ಸವ, ಕಂಠಪಾಠ ಸ್ಪರ್ಧೆ, ಗಮಕ ಶಿಕ್ಷಣ, ಅಕ್ಷರ ಪ್ರಚಾರ, ಕನ್ನಡ ಸಾಹಿತ್ಯ ತರಗತಿಗಳು ಮತ್ತು ಪರೀಕ್ಷೆಗಳು ಮೊದಲಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಪರಿಷತ್ತಿಗೆ ಆರ್ಥಿಕ ಸಹಾಯ
ಕರ್ನಾಟಕದಲ್ಲಿ ಕ್ರಮಬದ್ಧವಾಗಿ ನಡೆಯತಕ್ಕ ಸಂಸ್ಥೆಗಳಲ್ಲಿ ಇದು ಮಿಗಿಲಾಗಿರುತ್ತದೆ. ಇದಕ್ಕೆ ಮೈಸೂರಿನ ಶ್ರೀಮನ್ಮಹಾಜರವರು ಮಹಾಪೋಷಕರು. ಮೈಸೂರ ಅರಮನೆಯ ಮತ್ತು ಸರಕಾರದ ಸಹಾಯದಿಂದಲೂ ಇತರ ಕನ್ನಡದ ಅಭಿಮಾನಿಗಳ ಸಹಾಯದಿಂದಲೂ ೩೫.000 ರೂ. ಗಳನ್ನು ಖರ್ಚುಮಾಡಿ ಕಟ್ಟಿಸಿದ ಸುಂದರವಾದ ಒಂದು ಮಂದಿರ ಬೆಂಗಳೂರಿನಲ್ಲಿ ಇದಕ್ಕೆ ಇರುತ್ತದೆ. ಈ ಸಂಸ್ಥೆಗೆ ಮೈಸೂರು ಸರಕಾರದವರು ಪ್ರತಿವರ್ಷವೂ ೩,000 ರೂ.ಗಳ ಸಹಾಯ ದ್ರವ್ಯವನ್ನು ದಯಪಾಲಿಸುತ್ತಿದ್ದಾರೆ. ಇದರ ಬಗ್ಗೆ ಪ್ರಖ್ಯಾತ ಮಂತ್ರಿವರ್ಯರಾದ ಸರ್. ಮಿರ್ಜಾ ಇಸ್ಮಾಯಿಲ್ ಅವರಿಗೂ ಮೈಸೂರ ಸರ್ಕಾರಕ್ಕೂ ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಅಲ್ಪವೇ ಸರಿ.
ಕಳೆದ ಕಾಲು ಶತಮಾನದಿಂದ ಅನೇಕ ಕನ್ನಡ ನಾಡಿನ ಹಿರಿಯರು ಅವಿಚ್ಛಿನ್ನವಾಗಿ ದುಡಿದು ಈ ಸಂಸ್ಥೆಯನ್ನು ಇಷ್ಟರಮಟ್ಟಿಗೆ ಉನ್ನತಸ್ಥಿತಿಗೆ ತಂದಿರುತ್ತಾರೆ. ಆದರೆ ನಮ್ಮ ಪರಿಷತ್ತಿನ ಕಾರ್ಯ ಇಷ್ಟಕ್ಕೆ ಮುಗಿದಿರುವುದಿಲ್ಲ. ಇನ್ನೂ ಅನಂತ ವಿಧಾಯಕ ಕಾರ್ಯಗಳು ಅದರ ಮುಂದಿರುತ್ತವೆ. ಅದರ ಗುರಿಯನ್ನು ಅದು ಮುಟ್ಟಬೇಕಾದರೆ ಪರಿಷತ್ತಿಗೆ ಪ್ರಚಂಡವಾದ ಜನ ಧನ ಬೆಂಬಲ ಬೇಕು; ಅಖಿಲ ಕನ್ನಡ ನಾಡಿನ ಮಹಾಜನಗಳೆಲ್ಲ ಪರಿಷತ್ತಿಗೆ ಸಭಾಸದರಾಗಿಯೂ ಪೋಷಕರಾಗಿಯೂ ಸೇರಿ ಸಹಾಯಮಾಡುತ್ತಾ ಬಂದರೆ ಪರಿಷತ್ತಿನ ಶಕ್ತಿ ಬೆಳೆಯುವುದು. ೧ ಕೋಟಿ ಕನ್ನಡಿಗರಿರುವ ಕನ್ನಡ ಪ್ರಾಂತದಲ್ಲಿ ಪರಿಷತ್ತಿಗೆ ಸುಮಾರು ಅದು ನೂರು ಸದಸ್ಯರು ಇರುವುದು ಕನ್ನಡಿಗರಿಗೆ ಲಜ್ಜಾಸ್ಪದವಾದುದೇ ಸರಿ. ಪರಿಷತ್ತಿನ ಸಭಾಸದರ ಸಂಖ್ಯೆ ಕನಿಷ್ಠ ಪಕ್ಷ ಸಾವಿರ ಆದರೆ ಹೆಚ್ಚಿನ ಕಾರ್ಯಗಳು ಸಹಜವಾಗಿ ಆಗುವುದರಲ್ಲಿ ಸಂದೇಹವಿಲ್ಲ. ಕೇವಲ ಮೈಸೂರು ಸರ್ಕಾರದವರ ಸಹಾಯವನ್ನು ಅವಲಂಬಿಸಿ ಕುಳಿತಿರುವುದು ಭೂಷಣವಲ್ಲ. ಅಖಿಲ ಕರ್ನಾಟಕ ಪ್ರಾತಿನಿಧ್ಯದಿಂದ ಕೂಡಿದ ಪರಿಷತ್ತಿಗೆ ಜಿಲ್ಲಾ ಮತ್ತು ತಾಲ್ಲೂಕು ಸಂಘಗಳಿರುವುದು ಭೂಷಣ. ನಮ್ಮ ದೇಶದ ಹಳ್ಳಿಹಳ್ಳಿಗಳಲ್ಲಿಯೂ ಪರಿಷತ್ತಿನ ಪ್ರಚಾರವಾಗಬೇಕು. ಸಾಹಿತ್ಯ ಪರಿಷತ್ತು ಎಂದರೆ ಏನೆಂಬುದು ಇನ್ನೂ ಅನೇಕರಿಗೆ ಗೊತ್ತಿರಲಾರದು.
ಈ ವರ್ಷ ಮಾತ್ರ ಪರಿಷತ್ತಿಗೆ ಕೆಲವರು ಮಹನೀಯರು ಮುಕ್ತಹಸ್ತದಿಂದ ದಾನವನ್ನು ಮಾಡಿರುತ್ತಾರೆ. ಅವರ ಹೆಸರುಗಳನ್ನು ಹೇಳಲಿಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತಲಿದೆ. ಅನೇಕ ಸಾರ್ವಜನಿಕ ಕಾರ್ಯಗಳಿಗೆ ೧0-೧೫ ಲಕ್ಷ ರೂ.ಗಳನ್ನು ದಾನ ಮಾಡಿರುವ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಸ್ವಾಮಿಗಳವರಿಂದ ೫0೧ ರೂ.ಗಳನ್ನೂ, ಗದುಗಿನ ನಿವೃತ್ತ ಸೆಷನ್ಸ್ ಜಡ್ಜಿಗಳಾದ ಶ್ರೀಮಾನ್ ಆನಂತರಾವ್ ಕೃಷ್ಣರಾವ್ ಆಸುಂಡಿ ಅವರ ಗಮಕ ಕಲೆಯ ಶಿಕ್ಷಣ, ಹರಿದಾಸ ವಾಙ್ಮಯದ ಕಾರ್ಯಗಳಿಗೆ ೩ ಸಾವಿರ ರೂ. ಗಳನ್ನೂ ಪರಿಷತ್ತಿಗೆ ಕೊಟ್ಟಿರುತ್ತಾರೆ. ಕನ್ನಡ ನಾಡಿನ ಕೊಡುಗೈ ದೊರೆಗಳಲ್ಲಿ ಮೇಲಾದವರೂ, ಅನೇಕ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ದಾನಮಾಡಿ ಕೀರ್ತಿಯನ್ನು ಪಡೆದಿರುವವರೂ ಆದ ದಾನವೀರ ಶ್ರೀಮಾನ್ ಒಂಟಮುರಿಯ ಯಜಮಾನರಾದ ರಾಜಾ ಲಖಮಗೌಡಾ ಸರದೇಸಾಯಿ ಇವರು ೫00 ರೂಪಾಯಿಗಳನ್ನು ಕೊಟ್ಟಿರುವರಲ್ಲದೆ ಪ್ರತಿವರ್ಷ ತಮ್ಮ ಸಂಸ್ಥಾನದಿಂದ ಪರಿಷತ್ತಿಗೆ ೨0 ರೂ. ವರ್ಗಣಿಯನ್ನು ಕೊಡಲು ಒಪ್ಪಿರುತ್ತಾರೆ. ಈ ಮೂರು ಜನ ಮಹನೀಯರನ್ನು ಹೃತ್ಪೂರ್ವಕ ಅಭಿನಂದಿಸುತ್ತೇನೆ. ಉಳಿದ ಕನ್ನಡ ನಾಡಿನ ಬಂಧುಗಳೂ ಇವರ ಅನುಕರಣವನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ನಮ್ಮ ಬಡವೆಯಾದ ತಾಯಿಗೆ ಎಲ್ಲರೂ ಕಾಣಿಕೆಯನ್ನು ಆರ್ಪಿಸಬೇಕು.
ಬಿ.ಎಂ.ಶ್ರಿ ಅವರ ಸೇವೆ
ಪರಿಷತ್ತಿನ ಈಗಿನ ಉಪಾಧ್ಯಕ್ಷರಾಗಿರುವ ರಾಜಸೇವಾಸಕ್ತ ಶ್ರೀಮಾನ್ ಬಿ.ಎಂ. ಶ್ರೀಕಂಠಯ್ಯ, ಎಂ.ಎ. ಬಿ.ಎಲ್. ಅವರು ಉಪಾಧ್ಯಕ್ಷರಾದ ಅಂದಿನಿಂದ ಪರಿಷತ್ತಿನ ಕಾರ್ಯಗಳನ್ನು ಬಹುಮಟ್ಟಿಗೆ ಮುಂದುವರಿಸುತ್ತಿರುವರು. ಈ ಮಹನೀಯರು ಗಮಕ ಕಲೆಗಾಗಿ ೧000 ರೂ.ಗಳನ್ನೂ, ಪರಿಷತ್ತಿನ ಅಚ್ಚುಕೂಟಕ್ಕಾಗಿ ಹೋದ ವರ್ಷವೇ ೫ ಸಾವಿರ ರೂ.ಗಳನ್ನೂ, ಈ ವರ್ಷ ೧ ಸಾವಿರವನ್ನೂ ಕೊಟ್ಟಿರುತ್ತಾರೆ. ದುಡ್ಡು ಕೊಟ್ಟವರು ಕಾರ್ಯಮಾಡುವುದು ಕಡಿಮೆ. ಕಾರ್ಯ ಮಾಡತಕ್ಕವರಲ್ಲಿ ದುಡ್ಡು ಕೊಡುವವರು ವಿರಳ. ಆದರೆ ಈ ಮಹನೀಯರಿಗೆ ಈ ಎರಡೂ ಗುಣಗಳು ಸಾಧಿಸಿರುವುದರಿಂದ ಕನ್ನಡ ನಾಡೇ ಇವರಿಗೆ ಖುಣಿಯಾಗಿ ಇರುತ್ತದೆ. ಇವರ ಪಾಂಡಿತ್ಯವನ್ನು ಹೆಚ್ಚಿಗೆ ಹೇಳಬೇಕಾಗಿಲ್ಲ. ಇಂತಹ ಮಹನಿಯರು ನಮ್ಮ ಪರಿಷತ್ತಿಗೆ ಉಪಾಧ್ಯಕ್ಷರಾಗಿ ದೊರೆತದ್ದು ಪರಿಷತ್ತಿನ ಮಹಾಭಾಗ್ಯವೆಂದು ನಾನು ತಿಳಿಯುತ್ತೇನೆ. ‘ಶ್ರೀ’ಯವರಿಗೆ ಆಯುರಾರೋಗ್ಯಗಳು ಲಭಿಸಿ ಅವರಿಂದ ಇನ್ನೂ ಹೆಚ್ಚಿನ ಸೇವೆ ನಡೆಯುವಂತೆ ಅನುಗ್ರಹಿಸಿಲೆಂದು ದೇವರನ್ನು ಪ್ರಾಸುತ್ತೇನೆ. `ಶ್ರೀ’ಯವರು ನಮ್ಮ ಕನ್ನಡ ನಾಡಿನ ಸ್ವತ್ತಾಗಿರುತ್ತಾರೆ. ಕನ್ನಡಿಗರು ಆ ಸ್ವತ್ತನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಲೆಂದು ಹಾರೈಸುತ್ತೇನೆ.
ಶಿಸ್ತು ಸಂಟನೆ
ಸಾಹಿತ್ಯ ಪರಿಷತ್ತಿನ ವಿಧೇಯಕ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಪರಿಷತ್ತಿನ ಸದಸ್ಯರಲ್ಲಿ ಶಿಸ್ತು ಮತ್ತು ಸಂಘಟನೆ ಅತ್ಯಾವಶ್ಯಕವಾದುದು. ಹಾಗಾದರೇನೇ ಅದರ ಕಾರ್ಯಗಳು ಯಶಸ್ವಿಯಾಗಿ ನಡೆಯುವುವು. ಪ್ರತಿಯೊಂದು ಸಂಸ್ಥೆಗೂ ಶಿಸ್ತಿನ ಆವಶ್ಯಕತೆ ಬೇಕು. ಭರತಖಂಡದ ರಾಷ್ಟ್ರೀಯ ಮಹಾಸಭೆ ಶಿಸ್ತು ಮತ್ತು ಸಂಘಟನೆಗಳಿಂದ ೫೩ ವರ್ಷಗಳವರೆಗೆ ನಡೆದುಕೊಂಡು ಬಂದುದರಿಂದಲೇ ಅದರ ಕೀರ್ತಿ ಜಗತ್ತಿನಲ್ಲಿ ಹಬ್ಬಿ ತಲೆಯೆತ್ತಿ ಮೆರೆಯುತ್ತಲಿರುವುದು. ಆ ಸಂಸ್ಥೆಯಲ್ಲಿ ಶಿಸ್ತು ಭಂಗಮಾಡಿದಂತಹ ಮಹಾನ್ ಮಹಾನ್ ಪ್ರಭೃತಿಗಳು ಆ ಸಂಸ್ಥೆಯಿಂದ ದೂರ ಸರಿಯಬೇಕಾಯಿತು. ಶಿಸ್ತಿನ ಸಲುವಾಗಿಯೇ ಮಹಾತ್ಮಾಜಿಯವರು ಅದ್ಭುತ ಪ್ರಯತ್ನವನ್ನು ಮಾಡುತ್ತಿರುವರು. ಸಾಹಿತ್ಯ ಪರಿಷತ್ತಿನಲ್ಲಿಯೂ ಶಿಸ್ತು ಸಂಘಟನೆಗಳಿದ್ದರೆ ಅದರ ಗೌರವ ಕರ್ನಾಟಕದ ತುಂಬ ಬೆಳೆಯುವುದು. ಸದಸ್ಯರೆಲ್ಲರೂ ಸುಸಜ್ಜಿತವಾದ ಕನ್ನಡದ ಪಡೆಯಾಗಬೇಕಾಗಿದೆ. ನಾಯಕರಿಗೆ ಗೌರವ ಕೊಡಬೇಕಾಗಿದೆ.
ಕನ್ನಡ ಭಾಷೆಯ ಏಕೀಕರಣ
ಅನೇಕ ಸಲ ಸಾಮ್ರಾಜ್ಯಗಳನ್ನು ಕಟ್ಟಿ ಭಾರತದಲ್ಲಿ ಬಹುದಿನಗಳವರೆಗೆ ತಲೆಯೆತ್ತಿ ಮೆರೆದ ಕನ್ನಡ ನಾಡು ರಾಜಕೀಯ ವಿಪತ್ತಿಗೆ ಗುರಿಯಾಗಿ ಮದ್ರಾಸಿನ ಗೌರ್ವನರಾಗಿದ್ದ ಸರ್. ಥಾಮಸ್ ಮನ್ರೋವಿನ ಕಾಲಕ್ಕೆ ಹರಿದು ಹಂಚಿಹೋಗಿ ಅನೇಕ ಸರಕಾರಗಳಲ್ಲಿ ಕೂಡಿತು. ಇದೇ ಕರ್ನಾಟಕದ ಅವನತಿಗೆ ಮೂಲ. ಅಂದಿನಿಂದಲೇ ನಮ್ಮ ಭಾಷೆ ಕೆಟ್ಟಿತು. ಇಂದಿಗೂ ಆ ಹಾನಿ ತುಂಬದಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಏಕೀಕರಣದ ಸಲುವಾಗಿ ಬಹಳ ಪ್ರಯತ್ನ ಮಾಡುತ್ತಿದ್ದರೂ ಸಾಕಷ್ಟು ಕಾರ್ಯವಾಗಿರುವುದಿಲ್ಲ. ವರ್ತಮಾನ ಪತ್ರಗಳ ಸ್ಥಿತಿ ಪೂರಾ ಕೆಟ್ಟುಹೋಗಿರುವುದು. ಗ್ರಂಥಕಾರರ ಅವಸ್ಥೆಯಾದರೂ ಹಾಗೆಯೇ ಆಗಿರುತ್ತದೆ.
Tag: Kannada Sahitya Sammelana 25, Vyakharanatheertha Chandrashekhara Shastri
೩೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ವಿ. ಸೀತಾರಾಮಯ್ಯ
ಕನ್ನಡದ ಕವಿ, ವಿದ್ವಾಂಸ, ವಿಮರ್ಶಕ, ಸದಭಿರುಚಿಯ ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯನವರ ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ೨-೧0-೧೮೯೯ರಲ್ಲಿ ಜನನ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ೧೯೨0ರಲ್ಲಿ ಬಿ. ಎ. ೧೯೨೨ರಲ್ಲಿ ಎಂ. ಎ. ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು.
೧೯೨೩ರಲ್ಲಿ ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯರಾದರು. ೧೯೨೮-೧೯೫೮ರವರೆಗೆ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ಇಂಟರ್ ಮೀಡಿಯೇಟ್ ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಅನಂತರ ಒಂದೆರಡು ವರ್ಷ ಆಕಾಶವಾಣಿಯಲ್ಲಿ ಭಾಷಣ ವಿಭಾಗದ ಮುಖ್ಯಸ್ಥರಾಗಿ ಅನಂತರ ಹೊನ್ನಾವರದ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ೪ ವರ್ಷ ಕಾರ್ಯನಿರ್ವಹಿಸಿದರು.
೧೯೪೩ರಿಂದ ೧೯೪೮ರವರೆಗೆ ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿ ೧೯೩೬ರಿಂದ ೧೯೪೨ರವರೆಗೆ ಕನ್ನಡ ನುಡಿ, ೧೯೫೫-೫೬ರಲ್ಲಿ ಪರಿಷತ್ಪತ್ರಿಕೆ ಮತ್ತು ಕನ್ನಡ ನುಡಿಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೭೧ರಲ್ಲಿ ‘ಕವಿಕಾವ್ಯ ಪರಂಪರೆ’ ಕಾವ್ಯ ಮಾಲೆಗೆ ಸಂಪಾದಕರಾಗಿದ್ದರು. ೧೯೩೪ರಿಂದ ೧೯೩೯ರವರೆಗೆ ಪರಿಷತ್ತಿನ ಕೋಶಾಧಿಕಾರಿಗಳಾಗಿದ್ದರು.
೧೯೫೩ರಲ್ಲಿ ೩೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರಿಗೆ ಪ್ರಾಪ್ತವಾಗಿತ್ತು. ೧೯೫೪ರಲ್ಲಿ ಮುಂಬಯಿ ಪ್ರಾಂತ ಭಾಷಾ ಸಮ್ಮೇಳನಕ್ಕೆ ಅಧ್ಯಕ್ಷರಾದರು. ೧೯೭0ರಲ್ಲಿ ಮಹನೀಯರು ಕೃತಿಗೆ ಪ್ರಶಸ್ತಿ ಲಭ್ಯವಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ‘ಅರಲು ಬರಲು’ ಕವನ ಸಂಕಲನಕ್ಕೆ ದೊರಕಿತು. ಇವರಿಗೆ ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು. ೧೯೭೮ರಲ್ಲಿ ಕೃಷ್ಣಚಾರಿತ್ರ ಕೃತಿಗೆ ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
ಗೀತಗಳು, ದೀಪಗಳು, ನೆಳಲು ಬೆಳಕು, ಅರಲು-ಬರಲು ಮೊದಲಾದ ಕವನಸಂಗ್ರಹಗಳನ್ನೂ, ಪಂಪಾಯಾತ್ರೆ, ಹಣ ಪ್ರಪಂಚ, ಶ್ರೀಶೈಲಶಿಖರ, ವಾಲ್ಮೀಕಿ ರಾಮಾಯಣ, ಹಿರಿಯರು ಗೆಳೆಯರು, ಸಂವಿಧಾನ ಕಾನೂನು ಮೊದಲಾದ ಗದ್ಯಕೃತಿಗಳನ್ನೂ, ಪಂಜೆ ಮಂಗೇಶರಾವ್, ತ್ಯಾಗರಾಜ, ಬಂಗಾಳಿ ಸಾಹಿತ್ಯ ಚರಿತ್ರೆ, ಪುರಂದರದಾಸ, ಪಿಗ್ಮೇಲಿಯನ್ ಮೊದಲಾದ ಕೃತಿಗಳ ಅನುವಾದಗಳನ್ನು ಮಾಡಿರುವ ವಿ.ಸೀ. ಅವರು ಡಿ.ವಿ. ಗುಂಡಪ್ಪ, ಪಂಜೆ, ಕೆ. ವೆಂಟಕಪ್ಪ ಮೊದಲಾದವರ ಕೃತಿಗಳನ್ನು ಇಂಗ್ಲಿಷಿಗೆ ಪರಿವರ್ತಿಸಿದ್ದರು. ಅಂಕಣಕಾರರಾಗಿ ಕನ್ನಡ, ಇಂಗ್ಲಿಷಿನಲ್ಲಿ ನಿಯತಕಾಲಿಕೆಗಳಿಗೆ ಬರೆಯುತ್ತಿದ್ದ ವಿ.ಸೀ. ಅವರು ೧೯೮೩ ಸೆಪ್ಟಂಬರ್ ೪ರಂದು ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೩೬,
ಅಧ್ಯಕ್ಷರು: ವಿ. ಸೀತಾರಾಮಯ್ಯ
ದಿನಾಂಕ ೨೬, ೨೭, ೨೮ ಡಿಸೆಂಬರ್ ೧೯೫೩
ಸ್ಥಳ : ಕುಮಟಾ
ಪರಿಷತ್ತಿನ ಹುಟ್ಟಿಗೆ ಕಾರಣ
ಕನ್ನಡ ನಾಡು ನುಡಿ ಸಂಸ್ಕೃತಿಗಳ ಬಗೆಗೆ ದೊಡ್ಡ ಸೇವೆಯನ್ನು ಸಲ್ಲಿಸಬೇಕು ಈ ನಾಡಿನ ಮಕ್ಕಳು ಒಂದಾಗಬೇಕು. ಈ ಜನ ಸೌಹಾರ್ದದಿಂದ ಬೆಳೆದು ಆಡಳಿತದಲ್ಲಿ ಒಟ್ಟು ಒಂದು ರಾಜ್ಯವಾಗಬೇಕು; ಸಾಹಿತ್ಯ, ಕಲೆ, ಶಾಸ್ತ್ರಜ್ಞಾನ, ಧರ್ಮ, ಬದುಕಿನ ನಯಗಳಲ್ಲಿ ಈ ಮುಂಚೆ ಈ ಜನ ಏನೇನು ಸಾಧಿಸಿ ಗಣ್ಯತೆ ಪಡೆಯಿತೋ ಅದರ ಸಮಗ್ರ ಪರಿಚಯವನ್ನು ಒಳಗೂ ಹೊರಗೂ ಮಾಡಿಕೊಟ್ಟು, ಈ ಕಾಲದಲ್ಲಿಯೂ ಅವೇ ರಂಗಗಳಲ್ಲಿ ಉತ್ಸಾಹವನ್ನೂ ಸಾಧನಸಂಪನ್ನತೆಯನ್ನೂ ಬೆಳಸಬೇಕು; ಇಂದು ಸಲ್ಲಿಸುವ ಕಾಣಿಕೆ, ಶಕ್ಯವಾದರೆ, ಹಿಂದಿನದಕ್ಕಿಂತ ಉತ್ತಮವಾಗಬೇಕು; ಮಾನ್ಯರಾದ ಸಾಹಿತಿಗಳಿಗೆ ಪ್ರೋತ್ಸಾಹವನ್ನೂ ಪ್ರತಿಫಲವನ್ನೂ ಸಲ್ಲಿಸಿ ವಿಶ್ವಾಸ ತೋರಿಸಬೇಕು; ಹಳೆ ಹೊಸ ಗ್ರಂಥಗಳ ಪ್ರಕಟನೆಯನ್ನು ಕೈಕೊಳ್ಳಬೇಕು-ಎಂದು ಕನ್ನಡ ಸಾಹಿತ್ಯ ಪರಿಷತ್ತು ಬಯಸಿತು. ಹುಟ್ಟಿ, ಈಗ್ಗೆ ಮೂವತ್ತೆಂಟು ವರ್ಷಗಳಾದರೂ ಮಾಡಬಹುದಾಗಿದ್ದಷ್ಟು ಸೇವೆಯನ್ನು ಸಲ್ಲಿಸಲು ಅದಕ್ಕೆ ಸಾಧ್ಯವಾಗಿಲ್ಲ. ಅದು ಸಂಸ್ಥೆಯ ಮೇಲೆ ಮಾತ್ರ ಹೊಂದಿದ್ದಲ್ಲ; ಜನಬಲ, ಧನಬಲ, ರಾಜ್ಯಶಕ್ತಿಯ ಬಲ ಸಾಕಷ್ಟು ಇಲ್ಲವಾದರೆ ಇಂತಹ ಕಾರ್ಯ ನೆರವೇರದು. ಅಲ್ಲದೆ ಅಖಿಲ ಕರ್ನಾಟಕ ಸಂಸ್ಥೆಯೆಂದು ಹೆಸರಿಟ್ಟುಕೊಂಡ ಕಾರಣದಿಂದ ಅನುಕೂಲ ಪ್ರತಿಕೂಲ ಎರಡೂ ಉಂಟಾದವು. ಇದರ ಕಾರ್ಯರಂಗ, ಹೊಣೆಗಾರಿಕೆ ಹರಡಿದವು; ಉಪಪತ್ತಿ ಆ ಪ್ರಮಾಣಕ್ಕೆ ಏರದಾಯಿತು. ಸ್ವಂತ ಶಕ್ತಿಯೂ ಅಭಿಲಾಷೆಯೂ ಸಿದ್ಧಿಯೂ ಹೇಗೇ ಇರಲಿ ಸಮಸ್ತ ಕರ್ನಾಟಕ ವ್ಯಾಪ್ತಿ ಉಳ್ಳ ಸಂಸ್ಥೆ ಇದೊಂದೇ, ಇದರ ಕ್ರಿಯಾಶಕ್ತಿಯನ್ನು ಜನರು ಎಷ್ಟು ಹೆಚ್ಚಿಸಿದರೆ ಇದು ಅಷ್ಟು ದೊಡ್ಡದಾಗಲುಳ್ಳದ್ದು. ಎಲ್ಲ ಕನ್ನಡಿಗರ ಸಾಂಸ್ಕೃತಿಕ ಆಶೋತ್ತರಗಳನ್ನೂ ರೂಪಿಸಿ, ಅವರ ವಾಣಿಯಾಗಬೇಕೆಂಬ ಆಸೆಯಿಂದ ನಡೆಯುತ್ತಿರುವ ಈ ಸಂಸ್ಥೆಯ ಮಹೋತ್ಸವವೊಂದರಲ್ಲಿ ನಾವು ಈ ಪುನಃ ನಿಯೋಜಿತರಾಗಿದ್ದೇವೆ.
ಸಮ್ಮೇಳನ ಹೇಗೆ ನಡೆಯಬೇಕು?
ಇಂಥ ವಾರ್ಷಿಕ ಸಮ್ಮೇಳನಗಳ ಕಾರ್ಯವಿವರ ಈ ೩೮ ವರ್ಷಗಳಲ್ಲಿ ಬಗೆ ಬಗೆಯಾಗಿ ವಿರಚಿತವಾಗಿದೆ. ಮೊದಲು ಒಂದೇ ಪ್ರಧಾನ ಸಮ್ಮೇಳನವಾಗಿ ಇರುತ್ತಿದ್ದದ್ದು ಕಾಲಕ್ರಮದಲ್ಲಿ ಇತರ ಗೋಷ್ಠಿಗಳನ್ನು ಒಳಗೊಳ್ಳತೊಡಗಿತು. ಆದರೆ ಎಲ್ಲ ಸಮ್ಮೇಳನಗಳಿಗೂ ಸಾಧಾರಣವಾದ ಒಂದು ಗೋಷ್ಠಿ ವ್ಯವಸ್ಥೆ ಏರ್ಪಡಲು ಆದ ಹಾಗೆ ಕಾಣಲಿಲ್ಲ. ಆದರೂ ಸಮ್ಮೇಳನಕ್ಕೆ ಗೋಷ್ಠಿಗಳ ವಿಶೇಷ ಉತ್ಸಾಹವೂ ಸೇರುವಂತಾದುದು ಒಂದು ದೊಡ್ಡ ಗಳಿಕೆ; ಸಂತೋಷ. ಹಿಂದಿನ ಒಬ್ಬ ಅಧ್ಯಕ್ಷರು ಹೇಳಿದಂತೆ, ಆ ಎಲ್ಲಾ ಒಂದು ಸಾಧಾರಣ ವ್ಯವಸ್ಥೆಗೆ ಒಂದು ಆಲ್ ಇಂಡಿಯಾ ಓರಿಯೆಂಟಲ್ ಕಾನ್ಫರೆನ್ಸ್, ಸೈನ್ಸ್ ಕಾಂಗ್ರೆಸ್, ಫಿಲೊಸಾಫಿಕಲ್ ಕಾನ್ಫರೆನ್ಸ್ ಮುಂತಾದವುಗಳಲ್ಲಿನಂತೆ ಶಾಖೆಗಳಾಗಿ, ಉಪಾಂಗಗಳಾಗಿ ಏರ್ಪಟ್ಟು ಒಂದು ಕ್ರಮ, ಸಂಪ್ರದಾಯಗಳ ನಿರಂತರ ಸಂತತಿಯಂತೆ ನಡೆದರೆ ಮಾತ್ರ ಸಮ್ಮೇಳನದ ಕಾರ್ಯ ಇನ್ನಷ್ಟು ಫಲಕಾರಿಯಾಗಬಲ್ಲದು. ಉತ್ಸವ, ಆರಾಧನೆ, ಮರ್ಯಾದೆಗಳ ಜೊತೆಗೆ ನಾಲ್ಕಾರು ಶಾಖೆಗಳಲ್ಲಿ ಕೆಲಸಮಾಡುವ ಸಾಹಿತಿಗಳೂ ವಿದ್ವಾಂಸರೂ ಸೇರಿ ವರ್ಷ ವರ್ಷವೂ ಮುಖ್ಯವಾದ ತತ್ವಗಳನ್ನೂ ವಾದಗಳನ್ನೂ ಪ್ರಯೋಗಗಳನ್ನೂ ಮಂಡಿಸಿ ವಿದ್ವಜ್ಜನರಲ್ಲಿ ಒಂದು ವಿದ್ಯಾಸಂಭ್ರಮವನ್ನು ಕಲ್ಪಿಸುವುದು ಅಂತಹ ಸಮ್ಮೇಳನ ಮಹಾಕಾರ್ಯ. ಆದರೆ ಈ ಸಮ್ಮೇಳನ ಅವುಗಳಂತೆ ಕೇವಲ ವಿದ್ವಜ್ಜನರ ಸಭೆಯಲ್ಲ. ತಿಂಗಳು ಎರಡು ತಿಂಗಳ ಮುಂಚೆಯೇ ಸಮ್ಮೇಳನದ ಸದಸ್ಯತ್ವದ ಚಂದಾ ಸಲ್ಲಿಸಿ, ಲೇಖನಗಳನ್ನು ಬರೆದು ಕಳಿಸಿ, ನಾವು ಈ ವಿಭಾಗಗಳಲ್ಲಿ ಭಾಗವಹಿಸಲುಳ್ಳವರೆಂದು ಹೊಣೆಗಾರಿಕೆ ಹೊತ್ತು ಬರುವ ವಿದ್ವಾಂಸವರ್ಗ ಮಾತ್ರವೇ ಅಲ್ಲ, ಇಲ್ಲಿ ಸೇರುವುದು. ಆದರೆ ಸ್ವಂತ ಖರ್ಚಿನಿಂದ ಎಲ್ಲ ದೊಡ್ಡ ವಿದ್ವಾಂಸರೂ ಸಮ್ಮೇಳನಕ್ಕೆ ಬರುವ ವಾಡಿಕೆಯನ್ನು ನಮ್ಮಲ್ಲಿ ಏರ್ಪಡಿಸುವುದು ಹೇಗೆ? ವಿದ್ವಾಂಸರು ತಮ್ಮ ವಿಷಯ ಭಾಗವನ್ನು ಕುರಿತು ಭಾಷಣ ಮಾಡುವಾಗ ಸಭೆಯಲ್ಲಿ ೨0 ಜನರಾದರೂ ಕುಳಿತಿರುವಂತೆ ನಂಬಿಕೆ ಕೊಡಬಲ್ಲವರು ಯಾರು? ಹಿಂದೆ ಇಂಥ ಅನುಭವಗಳು ಸಾಕಷ್ಟು ಉಂಟಾಗಿವೆ.
ನಾನಾ ಭಾಗಗಳಿಂದ ಬರುವ ಸಾಹಿತಿಗಳಿಂದಲೂ ವಿದ್ವಾಂಸರಿಂದಲೂ ಜನಸಾಮಾನ್ಯರ ಪ್ರಯೋಜನಕ್ಕಾಗಿ ಸಂಜೆ ಉಪನ್ಯಾಸಗಳನ್ನೇರ್ಪಡಿಸಿ ಜನದ ಜ್ಞಾನಾಭಿವೃದ್ಧಿಗೂ, ಮನರಂಜನೆಯ ಸಂತೋಷಕ್ಕೂ ಈಗಿನಂತೆ ಅವಕಾಶ ಕಲ್ಪಿಸಬಹುದು. ಆಯಾ ಸಮ್ಮೇಳನದ ಅಧ್ಯಕ್ಷರು ಸಾಹಿತ್ಯದ ಯಾವ ಶಾಖೆಯ ವಿದ್ವಾಂಸರಿಗೂ ಆ ಶಾಖೆಯನ್ನು ಬೇಕೆನಿಸಿದರೆ ಬಿಟ್ಟು, ಉಳಿದ ಶಾಖೆಗಳನ್ನು ನಡೆಸುವುದು ಮೇಲು. ಇದು ಸ್ವಾಗತ ಸಮಿತಿಗಳ ಅನುಕೂಲಕ್ಕೆ ಹೊಂದಿಕೊಳ್ಳುವುದರಿಂದ ಪರಿಷತ್ತು ನೇರವಾಗಿ ಏನನ್ನಾದರೂ ಮಾಡಲಾಗುತ್ತದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಸಮ್ಮೇಳನಗಳಲ್ಲಿ ಬಹುಮಟ್ಟಿಗೆ ಎಲ್ಲರಂತೆ ಸಾಹಿತ್ಯ ಪರಿಷತ್ತೂ ಅತಿಥಿ. ಅತಿಥಿಗಳಾದವರು ಆತಿಥ್ಯ ಮಾಡುವವರನ್ನು ಕ್ಲೇಶಗೊಳಿಸಲಾಗದೆಂಬುದನ್ನು ಮರೆಯಬಾರದು. ಸ್ವಾಗತ ಸಮಿತಿಯವರು ಶಕ್ತಿಮೀರಿ ಸೌಕರ್ಯಗಳನ್ನು ಕಲ್ಪಿಸುವರಾದರೂ ಸಮ್ಮೇಳನಕ್ಕೆ ಬಂದವರೆಲ್ಲರಿಗೂ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ದೊರೆಯದಿರುವುದು ಶಕ್ಯ. ಸಮ್ಮೇಳನಕ್ಕೆ ಯಾವ ಯಾವ ವಿದ್ವಾಂಸರು ಬರುವರೆಂದು ಮುಂಚಿತವಾಗಿ ಗೊತ್ತಾದರೆ, ನಮ್ಮ ಇನ್ನು ಕೆಲವರನ್ನೂ, ವಿಶೇಷವಾಗಿ ಒಬ್ಬಿಬ್ಬರು ನೆರೆಯ ಭಾಷೆಗಳ ಪ್ರತಿನಿಧಿಗಳನ್ನೂ ಈ ಸಮಾರಂಭಕ್ಕೆ ಕರೆಸಿಕೊಳ್ಳುವಂತಾದರೆ, ಈ ಕೆಲಸ ಇನ್ನೂ ಯಶಸ್ವಿಯಾದೀತು. ಇಂಥ ಸಮ್ಮೇಳನದಲ್ಲಿ ಮರಾಠಿ, ತೆಲುಗು, ತಮಿಳು, ಮಲೆಯಾಳದ ವಿದ್ವಾಂಸರು ಆಹೂತರಾಗಿ ಬರುವುದೂ ತಮ್ಮ ಭಾಗದಲ್ಲಿ ಏನು ಕೆಲಸ ಹೇಗೆ ನಡೆಯುತ್ತಿದೆ ಎಂದು ತಿಳಿಸುವುದೂ ಅದನ್ನು ಸಾವಧಾನವಾಗಿ ಕೇಳಿ ನಾವು ಆದರಿಸವುದೂ ಒಂದು ಸಂಪ್ರದಾಯವಾದರೆ ಬಹು ಚೆನ್ನ. ಇಲ್ಲಿಗೆ ದಯಾಮಾಡಿಸಿರಬಹುದಾದ ಅಂತಹ ಮಾನ್ಯರಿಗೆ ಸ್ವಾಗತವಿದೆ. ಬಂದ ಕನ್ನಡ ವಿದ್ವಾಂಸರು ಯಾರೆಂದು ತಿಳಿಯದೆ ಅವರಲ್ಲಿ ಮುಖ್ಯರಿಂದ ಕೂಡ ಪ್ರಯೋಜನ ಪಡೆದುಕೊಳ್ಳಲಾಗದೆಯೇ ಸಮ್ಮೇಳನಗಳು ಮುಗಿದು ಹೋಗಿರುವುದುಂಟು. ಈ ಸಂಬಂಧದಲ್ಲಿ ಯಾರನ್ನು ಹೊಣೆಮಾಡುವುದು?
ಸಮ್ಮೇಳನ ಭಾಷಣಗಳ ಸಂಪುಟ ಪ್ರಕಟವಾಗಲಿ
ಈವರೆಗಿನ ಅಧ್ಯಕ್ಷರು ತಮ್ಮ ವಿಶೇಷ ಪರಿಶ್ರಮದಿಂದ ಯಾವ ಯಾವ ವಿಷಯಗಳಲ್ಲಿ ನಿಷ್ಣಾತರೊ ಆ ವಿಷಯಗಳನ್ನು ಪ್ರತಿಪಾದನೆಮಾಡಿ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಪುನರುಕ್ತಿಗಳನ್ನು ಬಿಟ್ಟು ಉಳಿದ ಭಾಗಗಳನ್ನು ಸೇರಿಸಿ ನಾಲ್ಕಾರು ಸಂಪುಟಗಳಲ್ಲಿ ಆ ಎಲ್ಲ ಭಾಷಣಗಳನ್ನೂ ಪ್ರಕಟಿಸಿದರೆ ನಾಡಿಗೆ ವಿಶೇಷ ತಿಳಿವಳಿಕೆ ದೊರೆವುದು. ಆ ಹಿಂದಿನವರ ಪಾಂಡಿತ್ಯವಾಗಲಿ ಅನುಭವವಾಗಲಿ ಸ್ಪೂರ್ತಿ, ದಕ್ಷತೆ ಆಗಲಿ ನನಗಿಲ್ಲ. ಜೀವನದ ಹಲವಾರು ರಂಗಗಳಲ್ಲಿ ತಮ್ಮ ಕೀರ್ತಿಯನ್ನು, ಕಾರ್ಯಶಕ್ತಿಯನ್ನು ಸ್ಥಾಪಿಸಿ ನಾಡಿನ ತಲೆಮಣಿಗಳಂತಿದ್ದ ನನ್ನ ಗುರುಹಿರಿಯರು ಈ ಸ್ಥಾನವನ್ನಲಂಕರಿಸಿ ಬೆಳಗಿದರು. ಅವರಂತೆ ಅಧಿಕಾರದಿಂದ ನುಡಿವ ಶಕ್ತಿ ನನಗಿಲ್ಲ. ಕನ್ನಡ ಭಾಷಾಸಾಹಿತ್ಯಗಳ ಪ್ರಾಚೀನತೆಯನ್ನಾಗಲಿ, ಶಾಸ್ತ್ರ, ಕಲೆ ಇತಿಹಾಸ ಪರಿಶೋಧನೆಗಳನ್ನು ಕುರಿತಾಗಲಿ, ವಿವರಗಳನ್ನು ಹೇಳಲೂ ಇದು ಸಮಯವಲ್ಲ. ನನಗಿಂತ ವಿದ್ವಾಂಸರಾದವರು ಅವನ್ನು ಹಿಂದಿನ ಭಾಷಣಗಳಲ್ಲಿ ಹಲವರೂ ಬೇರೆ ರೀತಿಯಲ್ಲಿ ಕೆಲವರೂ ಹೇಳಿದ್ದಾರೆ.
ಪರಿಷತ್ತಿನ ಹುಟ್ಟು
ಮೊನ್ನೆ ಮೊನ್ನೆಯವರೆಗೂ ಮೈಸೂರಿನಲ್ಲಿ ಕನ್ನಡಕ್ಕೆ, ಪ್ರಧಾನ ಗೌರವ ಹೋಗಲಿ, ಸಾಮಾನ್ಯ ಪ್ರಭಾವ ಕೂಡ ಇರಲಿಲ್ಲ. ಇಂದೂ ಎಷ್ಟಿದೆಯೋ ಕಾಣೆ. ಮಾತಿನಲ್ಲಿ ಕೆಲವರು ಸಹಾನುಭೂತಿ ತೋರಿಸಿ ಪ್ರೋತ್ಸಾಹವನ್ನೂ ಅಲ್ಪ ಸ್ವಲ್ಪ ನೆರವನ್ನೂ ಕೊಟ್ಟುದುಂಟು. ಸರ್. ಎಂ.ವಿಶ್ವೇಶ್ವರಯ್ಯನವರ ಮತ್ತು ಎಚ್.ವಿ. ನಂಜುಂಡಯ್ಯನವರ ದೂರದರ್ಶನದಿಂದ ಪರಿಷತ್ತಿನಂತಹ ಸಂಸ್ಥೆ ಹುಟ್ಟಿತು. ಮೈಸೂರು ಮಹಾರಾಜರು ಕನ್ನಡಿಗರ ಆದರ್ಶಕ್ಕೂ ಏಳಿಗೆಗೂ ಪ್ರೋತ್ಸಾಹ ಕೊಟ್ಟರು. ಕನ್ನಡದ ಅಭಿವೃದ್ಧಿಯಾಗಬೇಕೆಂಬ ಅಭಿಮಾನದಿಂದ ವಿಶ್ವವಿದ್ಯಾನಿಲಯದಲ್ಲಿ ಕೂಡ ಪ್ರಚಾರ ಕಾರ್ಯ ನಡೆಯಬೇಕೆಂದು ನಿರ್ದೇಶನ ಮಾಡಿದರು. ಆಗಾಗ ಎಲ್ಲೊ ಕೆಲವು ದೊಡ್ಡ ಅಧಿಕಾರಿಗಳೂ ನೆರವು ಪ್ರೋತ್ಸಾಹಗಳನ್ನು ಕೊಟ್ಟುದುಂಟು. ಆದರೆ ಮೈಸೂರಿನ ಜನ ಇಂಗ್ಲಿಷಿಗೂ ಅಖಿಲ ಭಾರತ ಪ್ರಯೋಜನವೆಂಬ ಮತ್ತು ಅಂತರ್ರಾಷ್ಟ್ರೀಯವೆಂಬ ಮಾತುಗಳಿಗೂ ಹೆಚ್ಚು ಒಲೆದು, ಇದು ತಪ್ಪಲ್ಲ, ಆದರೆ-ಪ್ರಾಂತಭಾಷೆಯನ್ನು ಉಪೇಕ್ಷೆಮಾಡಿದರು. ಸ್ವಾಭಿಮಾನವಿಲ್ಲದ ಜನಕ್ಕೆ ಇನ್ನಾವ ಮಾನ ದೊರಕೀತು? ಅವರು ಇನ್ನೊಬ್ಬರಿಗೆ ದುಡಿವ ಜನವಾದರು. ಗಳಿಸಿದ ನಮ್ಮದನ್ನು ಇನ್ನೊಬ್ಬರಿಗೆ ಕೊಟ್ಟರೆ ಇನ್ನೊಬ್ಬರಿಂದ ನಾವು ಬೆಲೆಯನ್ನು ಕೊಳ್ಳಬಹುದು. ಇಲ್ಲವಾದರೆ ಅವರ ಕೈಂಕರ್ಯವೇ ನಮಗೆ ಸಿದ್ಧಿ. ಇಂದಿಗೂ ತಿಳಿದವರೆಂಬ ಇಲ್ಲಿನ ಹಲವರ ಮಾತಿನಲ್ಲಿ ಬಹುಮಟ್ಟಿಗೆ ಆ ಮನಸ್ಸೇ ಉಳಿದು ಕನ್ನಡಕ್ಕೆ ಇನ್ನೂ ಕೀಳ್ಮೆಯೇ ಇದೆ.
ಪರಿಷತ್ತು ಮತ್ತು ಏಕೀಕರಣ
ಈಗ ಒಂದು ವರ್ಷದಿಂದೀಚೆಗೆ ನಮ್ಮ ಆಡಳಿತದ ಮುಖಂಡರ ಧೀರವಾದ ಮುನ್ನುಗ್ಗಿನಿಂದ ಕನ್ನಡದ ಕೆಲಸಕ್ಕೆ ಚಮಕೂ ಜೀವಕಳೆಯೂ ಬಂದಿವೆ. ಕನ್ನಡದ ಒಕ್ಕೂಟ ವಿಷಯದಲ್ಲಿ ಒಂದು ಮುಖವಿಲ್ಲ; ಒಂದು ಕೊರಲಿಲ್ಲ. ಪರಿಷತ್ತೂ ಇತರ ಅನೇಕ ಸಂಸ್ಥೆ ಸಮ್ಮೇಳನಗಳೂ ಏಕೀಕರಣದ ಅಗತ್ಯವನ್ನು ಒತ್ತಿ ಹೇಳಿವೆ. ನಾಡಿಗೆ ಬಿಡುಗಡೆ ಬರುವ ಮುಂಚೆ ಕಾಂಗ್ರೆಸಿನವರೇ ಭಾಷಾ ಪ್ರಾಂತ ತತ್ವವನ್ನು ಒಪ್ಪಿದರು. ಆಮೇಲೆ ಇದ್ದಕ್ಕಿದ್ದಂತೆ ಪಕ್ಷದ ಕರ್ನಾಟಕ ಪ್ರಾಂತ ಸಮಿತಿಯನ್ನೇ ಒಡೆದು ಎರಡು ಹೋಳು ಮಾಡಿಬಿಟ್ಟರು. ಈಚೆಗೆ ಕಾಂಗ್ರೆಸಿಗೆ ವಿರೋಧ ಪಂಥಗಳವರು ಏಕೀಕರಣ ವಾದವನ್ನು ಹಿಡಿದು ಕನ್ನಡದ ಕೂಗನ್ನು ಬಲಪಡಿಸಿದ್ದಾರೆ. ಆಳುವ ಪಕ್ಷಕ್ಕೆ ಮನಸ್ಸು ಪ್ರಾಂತಗಳಲ್ಲಾಗಲಿ, ಕೇಂದ್ರದಲ್ಲಾಗಲಿ ಸುಮಾರು ಸೆಡದೇ ಇದೆ. ಆದರೆ ಶಾಸನ ಸಭೆಗಳಿಗೆ ನಾಳೆಯ ಹೊಸ ಚುನಾವಣೆ ಆಗುವಾಗ ಬೇರೆ ಪಕ್ಷದವರ ಕೈ ಈ ಕಾರಣದಿಂದ ಮೇಲಾಗದಂತೆ ಎಚ್ಚರದಿಂದಿರಲು ಇದನ್ನು ಹಾಗೆ ಹೀಗೆ ಒಪ್ಪುತ್ತೇವೆಂದಾದರೂ ಆಡುತ್ತಿರಬೇಕಾಗಿದೆ. ಅದೂ ನಮಗೆ ಒಂದು ಮೇಲೇ.
ಪರಿಷತ್ತಿನ ಸ್ಥಾನ ನೆರವಿನ ವಿಚಾರ
ಈ ಎಲ್ಲ ಸಂಬಂಧಗಳಲ್ಲಿಯೂ ಪರಿಷತ್ತನ್ನು ಬಳಸಿಕೊಳ್ಳುವ ಉಪಕಾರ ಲೇಖಕರದು, ಸಮಾಜದ್ದು, ಸರ್ಕಾರದ್ದು, ಹೊರಗೆ ನಿಂತು ಟೀಕೆ ಮಾಡುವುದಕ್ಕಿಂತ ಒಳಗೆ ಬಂದು ಈ ಎಲ್ಲ ಕೆಲಸಗಳನ್ನೂ ನಿರ್ವಹಿಸಲು ನೆರವು ಕೊಟ್ಟರೆ ಪರಮೋಪಕಾರವಾದೀತು. ಸಾರ್ವಜನಿಕ ಸಂಸ್ಥೆಗಳ ಕೆಲಸ ಶಕಾರರ ಕಾಟಕ್ಕಿಡಾದ ವಸಂತಸೇನೆಯರ ನಾಡಿನದು. ತಮ್ಮ ಕಾಲವನ್ನೂ-ಕೆಲವೇಳೆ ಹಣವನ್ನೂ- ವೆಚ್ಚಮಾಡಿಕೊಂಡು ಕಾರ್ಯದರ್ಶಿಗಳೂ ಅಧ್ಯಕ್ಷರೂ ಆ ಹೊಣೆಯನ್ನು ಒಪ್ಪಿದ ತಪ್ಪಿಗಾಗಿ, ಅವರನ್ನು ಹಿಂದಿನ ಸಂಜೆ ‘ಸರ್ವಾನುಮತ’ದಿಂದ ಬೇಡಿ ಒಪ್ಪಿಸಿದ ಜನ ಮರುದಿನದಿಂದ ಎಲ್ಲರೂ ತಮ್ಮ ಬಾಣಗಳಿಗೆ ಗುರಿಮಾಡುವುದು ಸಭ್ಯವೋ ಕಾರ್ಯಸಾಧಕವೊ ನಾನು ಕಾಣೆ. ಕೆಲವು ಸಲ ಸಂಸ್ಥೆಯ ಮೇಲೂ ಅಂಥವರ ಮೇಲೂ ಬರುವ ಕಿರು ಕುಚೋದ್ಯಗಳಿಗಂತೂ ಲಂಗಿಲ್ಲ ಲಗಾಮಿಲ್ಲ. ಎಲ್ಲರೂ ಸೇರಿ ವಿಶ್ವಾಸದಿಂದ ನಡೆಸಿದರೆ ಯಾವುದೂ ಒಂದು ಸಂಸ್ಥೆ. ಇಲ್ಲಿಗೆ ಎಲ್ಲ ಬಗೆಯವರೂ ಸದಸ್ಯರಾಗಬಹುದು; ಎಲ್ಲ ವರ್ಗದವರ ಮನಸ್ಸನ್ನೂ ಸಂಸ್ಥೆ ಒಲಿಸಿಕೊಳ್ಳಬೇಕಾಗುತ್ತದೆ. ಹೀಗಿರುವಾಗ ಬೇರೆ ಬಗೆಯ, ಆವೇಶದ, ಅಭಿನಿವೇಶದ ಸಾಹಿತಿಗಳೂ ಲೇಖಕರೂ ಇದಕ್ಕೆ ವಿಮುಖರಾದರೆ, ದುರಧರಾಧ್ಯರಾದರೆ ಸಾರ್ವಜನಿಕವಾದ ಸಂಸ್ಥೆ ಪರಸ್ಪರ ವಿರೋಧ ಧರ್ಮವುಳ್ಳ ಎಲ್ಲರಿಗೂ ಹೇಗೆ ಉತ್ತರಕೊಟ್ಟೀತು? ಹೊಂದಲಾದೀತು? ಹತ್ತಾರು ಜನರ ತೃಪ್ತಿಯನ್ನು ಸಾಧಿಸುವ ಕಷ್ಟ ಅಲ್ಲಿ ಕೆಲಸಮಾಡಿದವರಿಗೆ ಮಾತ್ರ ಗೊತ್ತು. ಸಾವಿರಾರು ಮಂದಿ ಸದಸ್ಯರಾಗಿ, ಸಭೆ ಸೇರಿ ಬೇಕಾದ ಕೆಲಸಗಳನ್ನು ಬೇಕಾದ ವಿಚಕ್ಷಣೆಯಿಂದ ಮಾಡಿಸಿಕೊಳ್ಳಲಿ. ಹಳಗನ್ನಡ ಕೃತಿಗಳನ್ನು ತಿದ್ದಿ ಅಚ್ಚುಮಾಡಿಸಲು ಹಣಬೇಕು, ಕಾಲ ಬೇಕು, ಸಿಬ್ಬಂದಿ ಬೇಕು, ಸ್ಥಳ ಬೇಕು. ಸಂಪಾದಕ ವರ್ಗ, ಸಲಹೆಗಾರರ ವಿದ್ವಜ್ಜನ ವರ್ಗಬೇಕು. ಹೊಸಕೃತಿಗಳನ್ನು ತಾನೇ ನೇರವಾಗಿ ಆಯುವುದು ಪರಿಷತ್ತಿಗೆ ಕಷ್ಟ; ಪಕ್ಷಪಾತಗಳ ಆರೋಪಣೆ ಸುಲಭ. ಜೊತೆಗೆ ಎದುರಿಗೆ ಸುತ್ತಲೂ ಇರುವ ಜೀವಂತ ಕೃತಿಕಾರರಲ್ಲಿ ಯಾರದನ್ನು ಪ್ರಕಟಿಸುವುದು? ಯಾರನ್ನು ಬಿಡುವುದು? ಎಲ್ಲರ ಎಲ್ಲವನ್ನೂ ಪ್ರಕಟಿಸುವುದು ಯಾರಿಗೂ ಅಶಕ್ಯ. ಇನ್ನು ಪ್ರೋತ್ಸಾಹ, ಪ್ರಶಸ್ತಿಕೊಡುವ ರೀತಿ: ಅದಕ್ಕೆ ಪುನಃ ದ್ರವ್ಯೋಪಪತ್ತಿಬೇಕು. ಇಂಥ ಸಮಾರಂಭಗಳು ನಡೆಯುವಾಗ ಬಹುಮಾನ ಹಂಚಲಾಗುವಂತೆ ದತ್ತಿಗಳೂ, ಇತರ ಖಚಿತವಾದ ನಿಧಿಗಳೂ, ಸಹಾಯ ದ್ರವ್ಯಗಳೂ ಏರ್ಪಡುವಂತಾದರೆ ಹೊಸಕಾಲದ ಒಂದೊಂದು ಗ್ರಂಥಕ್ಕೂ ಬೇಕೆನ್ನುವಷ್ಟು ಬಹುಮಾನಗಳನ್ನು ಕೊಡಬಹುದು. ಕೊಡುವ ಬಹುಮಾನ ರೂ. ೫00-೧000ಕ್ಕೆ ಕಡಮೆಯಿಲ್ಲದಿರಲಿ. ಇಂಥ ಪ್ರೋತ್ಸಾಹಕ್ಕೆ ಮಿತಿಯೆಲ್ಲಿ? ಯೋಗ್ಯತಾ ನಿರ್ಣಯಕ್ಕೆ ಬೇಕಾದರೆ ಪರಿಷತ್ತನ್ನು ನಿಯಮಿಸಿ: ಇಲ್ಲವಾದರೆ, ವಿಶ್ವವಿದ್ಯಾನಿಲಯಗಳ ಪ್ರತಿನಿಧಿಗಳು, ವಿದ್ಯಾಇಲಾಖೆಯವರು, ಪರಿಷತ್ತಿನ ಪ್ರತಿನಿಧಿಗಳು ದಾತೃಮಂಡಲದ ಒಬ್ಬ ಪ್ರತಿನಿಧಿ ಸಲಹೆಗಾರರಾಗಲಿ. ಸ್ವಾಗತ ಸಮಿತಿಗಳವರ ದ್ರವ್ಯಾನುಕೂಲ ಧಾರಾಳವಾದಾಗ ತಮ್ಮ ಮಸೂಲಿಯ ಹತ್ತರಲ್ಲಿ ಒಂದಂಶವನ್ನು ಇಂಥ ಪುರಸ್ಕಾರಕ್ಕೆ ಮುಡಿಪು ಮಾಡಿದರೆ ಅವರವರ ಊರಲ್ಲಿ ವರ್ಷದ ಒಂದು ಉತ್ತಮ ಕೃತಿಗೆ ಪುರಸ್ಕಾರ ಮಾಡಿದ ಕೀರ್ತಿ ಬರುವುದು. ಈ ನಾನಾ ಬಗೆಯ ಆಶ್ರಯ ನೆರವುಗಳನ್ನು ಕಲ್ಪಿಸುವ ಪುಣ್ಯವನ್ನು ಕಟ್ಟಿಕೊಳ್ಳುವುದು ಎಲ್ಲ ಹಣವಂತ ಶ್ರದ್ಧಾಳುಗಳಿಗೂ ಬರಬಲ್ಲದು. ಕನ್ನಡ-ಕನ್ನಡಕೋಶಕ್ಕಾಗಿ ಒಂದು ಲಕ್ಷ ರೂಪಾಯಿ ದಾನವನ್ನು ಪರಿಷತ್ತಿಗೆ ಒದಗಿಸಿದ ಮೈಸೂರು ಮುಖ್ಯಮಂತ್ರಿಗಳ ಧಾರಾಳ ಇಂಥದಕ್ಕೆ ಮೊದಲಾಗಲಿ.
Tag: Kannada Sahitya Sammelana 36, V. Seetharamaiah
೩೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಶಿ.ಚ. ನಂದೀಮಠ
ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದ ಎಸ್. ಸಿ. ನಂದೀಮಠರು (ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ೧೨-೧೨-೧೯00ರಲ್ಲಿ ಗೋಕಾಕ ತಾಲ್ಲೂಕಿನ ನಂದೀಗ್ರಾಮದಲ್ಲಿ ಜನಿಸಿದರು. ಗೋಕಾಕ ಮತ್ತು ಬೆಳಗಾವಿಗಳಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದ ಇವರು ಧಾರವಾಡದಲ್ಲಿ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಲಂಡನ್ನಿಗೆ ತೆರಳಿ ವೀರಶೈವ ಧರ್ಮ ಹಾಗೂ ತತ್ತ್ವಜ್ಞಾನಗಳ ಕೈಪಿಡಿ ವಿಷಯವಾಗಿ ಪಿಎಚ್.ಡಿ. ಪದವಿ ಪಡೆದರು.
ಸ್ವದೇಶಕ್ಕೆ ಮರಳಿದ ನಂದೀಮಠರು ಕೆಲಕಾಲ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಳಗಾವಿಯಲ್ಲಿ ಗಿಲಗಂಜಿ ಅರಟಾಳ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಅನಂತರ ಧಾರವಾಡದ ಲಿಂಗರಾಜ ಕಾಲೇಜಿನಲ್ಲಿ ೧೧ ವರ್ಷ ಪ್ರಿನ್ಸಿಪಾಲರಾಗಿದ್ದರು. ಬಾಗಿಲಕೋಟೆ ಬಸವೇಶ್ವರ ಕಾಲೇಜಿನಲ್ಲೂ ಸ್ವಲ್ಪ ಕಾಲ ಸೇವೆ ಸಲ್ಲಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ, ಕುಲಪತಿಗಳಾಗಿ ಕೂಡ ಸೇವೆ ಸಲ್ಲಿಸಿದರು.
೧೯೪0ರಲ್ಲಿ ಧಾರವಾಡ ಜಿಲ್ಲಾಮಟ್ಟದ ೪ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೫೨ರಲ್ಲಿ ಬೇಲೂರಿನಲ್ಲಿ ಸಮಾವೇಶಗೊಂಡಿದ್ದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೭೫ರಲ್ಲಿ ಗೌರವ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿತು.
ಕನ್ನಡ, ಸಂಸ್ಕೃತ, ಪಾಲಿ ಪ್ರಾಕೃತ ಇಂಗ್ಲಿಷ್ ಭಾಷೆಗಳಲ್ಲಿ ಪರಿಶ್ರಮ ಹೊಂದಿದ್ದ ನಂದೀಮಠರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಧರ್ಮಗಳು, ಗಿರಿಜಾಕಲ್ಯಾಣ, ಹರಿಹರ ಕವಿ ಪ್ರಶಸ್ತಿ, ಹ್ಯಾಂಡ್ ಬುಕ್ ಆಫ್ ವೀರಶೈವಿಸಂ, ಕನ್ನಡ ಕುವಲಯಾನಂದ, ವೀರಶೈವತತ್ತ್ವಪ್ರಕಾಶನ, ಇತ್ಯಾದಿ.
ನಂದೀಮಠರು ೨೧-೧೧-೧೯೭೫ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೩೫
ಅಧ್ಯಕ್ಷರು, ಶಿ.ಚ. ನಂದೀಮಠ
ದಿನಾಂಕ ೧೬,೧೭,೧೮ ಮೇ ೧೯೫೨
ಸ್ಥಳ : ಬೇಲೂರು
ಪ್ರಾಚೀನ ಗ್ರಂಥಗಳ ಪ್ರಕಟಣೆ
ಕಳೆದ ಅರ್ಧ ಶತಮಾನದ ಅವಧಿಯಲ್ಲಿ ಮೈಸೂರು ಮದ್ರಾಸ್ ಸರ್ಕಾರಗಳು, ಧಾರವಾಡದ ವಿದ್ಯಾವರ್ಧಕ ಸಂಘ ಹಾಗೂ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಕಾವ್ಯ ಕಲಾನಿಧಿಮಾಲೆ ಇವೇ ಮೊದಲಾದವು ಅನೇಕ ಗ್ರಂಥಗಳನ್ನು ಪ್ರಕಟಿಸಿ ಮಹದುಪಕಾರ ಮಾಡಿವೆ. ಆದರೆ ಈಗ ಅವುಗಳಲ್ಲಿ ಅನೇಕ ಗ್ರಂಥಗಳು ದೊರೆಯದಾಗಿವೆ, ಮೇಲಾಗಿ, ಈ ಗ್ರಂಥಗಳನ್ನು ಸಶಾಸ್ತ್ರೀಯವಾಗಿ ಶುದ್ಧವಾದ ಮೂಲ, ಮಹತ್ವದ ಪಾಠಾಂತರ, ಟಿಪ್ಪಣಿಗಳು ಉಪಯುಕ್ತವಾದ ಪ್ರಸ್ತಾವನೆ ಮೊದಲಾದವುಗಳೊಂದಿಗೆ ಅಂದವಾಗಿ ಮುದ್ರಿಸಲು ಆವಶ್ಯಕತೆ ಬಹಳವಾಗಿದೆ. ಈ ಕಾರ್ಯವನ್ನು ವಿಶ್ವವಿದ್ಯಾನಿಲಯದವರೂ ಪರಿಷತ್ತಿನವರೂ ಸಮರ್ಥವಾದ ಮತ್ತಿತರ ಸಂಸ್ಥೆಗಳೂ ಕೈಕೊಳ್ಳಬೇಕು.
ಕನ್ನಡ ನಿಘಂಟು
ಕನ್ನಡ ಸಾಹಿತ್ಯ ಪರಿಷತ್ತಿನವರು ಕನ್ನಡ-ಕನ್ನಡ-ನಿಘಂಟುವಿನ ರಚನೆಯನ್ನು ಕೈಗೊಂಡಿರುವುದು ಎಲ್ಲರಿಗೂ ವಿದಿತವಿದೆ. ಕಳೆದ ೮-೯ ವರ್ಷಗಳಿಂದ ಈ ಕಾರ್ಯ ನಡೆಯುತ್ತಲಿದೆ. ಇದು ಬಹಳ ದೊಡ್ಡ ಕೆಲಸ. ಇದಕ್ಕೆ ಪಂಡಿತರ ಹಾಗೂ ಹಣದ ಸಹಾಯ ಬಹಳ ಬೇಕಾಗುವುದು. ಕರ್ನಾಟಕದ ಮಹಾ ಜನಗಳು ಪರಿಷತ್ತಿಗೆ ಈ ಕಾರ್ಯದಲ್ಲಿ ಸರ್ವವಿಧದಿಂದಲೂ ನೆರವು ನೀಡಿ ಕೋಶವು ಆದಷ್ಟು ತೀವ್ರ ಸಿದ್ಧವಾಗುವಂತೆ ಪ್ರೋತ್ಸಾಹಿಸಬೇಕು.
ಕನ್ನಡ ಭಾಷಾ ನಿರ್ಮಾಣ ಹೇಗೆ?
ಸಂಸ್ಕೃತದಲ್ಲಿ ಎಷ್ಟೋ ಕೋಶಗಳಿದ್ದರೂ ಹೊಸ ಕೋಶವೊಂದನ್ನು ನಿರ್ಮಿಸಲು ಡೆಕ್ಕನ್ ಕಾಲೇಜು ಸಂಶೋಧನ ಸಂಸ್ಥೆಯವರು ದೇಶವಿದೇಶಗಳಿಂದ ಧನಸಹಾಯ, ಪ್ರೋತ್ಸಾಹಗಳನ್ನು ಪಡೆದು ಮುಂದೆ ಬಂದಿರುವುದು ಸ್ತುತ್ಯ. ಉತ್ತಮವಾದ ಕೋಶ ನಿರ್ಮಾಣವು ಎಷ್ಟು ಬಿಕ್ಕಟ್ಟಿನದು, ಎಷ್ಟು ವೆಚ್ಚದ್ದು ಎಂಬುದನ್ನು ತೋರಿಸಲು ಈ ಉದಾಹರಣೆಯನ್ನು ಕೊಟ್ಟುದಾಗಿದೆ.
ಈ ಕನ್ನಡ ಕೋಶಕ್ಕೆ ಕನ್ನಡ ವಿಷಯವನ್ನು ಕಲಿಸುತ್ತಿರುವ ನಮ್ಮ ಸುತ್ತು ಮುತ್ತಲಿನ ವಿಶ್ವವಿದ್ಯಾನಿಲಯಗಳೂ ಆಯಾ ಪ್ರಾದೇಶಿಕ ಸರ್ಕಾರದವರೂ ಸಹಾಯ ಮಾಡಿದರೆ ಈ ಕಾರ್ಯವು ಸುಗಮವಾಗುವುದು. ಪರಿಷತ್ತಿನವರು ಈ ದಿಶೆಯಲ್ಲಿ ಕಾರ್ಯಮಾಡಬೇಕೆಂದು ನಮ್ಮ ಸೂಚನೆ.
ಚಿಕ್ಕಮಕ್ಕಳಿಗಾಗಿ ಬರೆದ ಪಠ್ಯಪುಸ್ತಕಗಳು ಅಂದವಾದ ಮುದ್ರಣ, ಚೆಂದಚೆಂದದ ಚಿತ್ರಗಳಿಂದ ಚಿತ್ತಾಕರ್ಷಕವಾಗಿರಬೇಕು. ಇದು ಮಕ್ಕಳ ಪಠ್ಯಪುಸ್ತಕಗಳ ಮಾತಾಯಿತು. ಇದರಂತೆ ಮಾಧ್ಯಮಿಕ ಮತ್ತು ಉಚ್ಛಶಿಕ್ಷಣ ಕ್ರಮದಲ್ಲಿಯೂ ಸರಿಯಾದ ಪಠ್ಯಪುಸ್ತಕಗಳಿರುವುದು ಅತ್ಯವಶ್ಯ. ಪ್ರತಿಯೊಂದು ವಿಷಯವನ್ನೂ ಬೇರೆ ಬೇರೆ ವರ್ಗಗಳಲ್ಲಿ ಕನ್ನಡದಲ್ಲಿ ಬೋಧಿಸಲು ಅನುಕೂಲವಾಗುವಂತಹ ಪಠ್ಯಪುಸ್ತಕಗಳಿರುವುದು ಕನ್ನಡ ಬೋಧ ಭಾಷೆಯಾಗಬೇಕೆನ್ನುವ ಈ ಕಾಲದಲ್ಲಿ ತೀರ ಅವಶ್ಯ. ಈ ದಿಶೆಯಲ್ಲಿ ವಿದ್ಯಾಖಾತೆಯವರೂ ವಿಶ್ವವಿದ್ಯಾನಿಲಯದವರೂ ಪರಿಷತ್ತಿನಂತಹ ಪ್ರಾತಿನಿಧಿಕ ಸಂಸ್ಥೆಗಳವರೂ ಮುಂದೆ ಬಂದು ಕಾರ್ಯ ಮಾಡಬೇಕಾಗಿದೆ. ಇದರಿಂದ ನಮ್ಮ ನಾಡಿನಲ್ಲಿ ಸರಿಯಾದ ಶಿಕ್ಷಣ ಪ್ರಸಾರವಾಗಿ ಸಾಹಿತ್ಯಕ್ಕೂ ಪ್ರೋತ್ಸಾಹ ದೊರೆಯುವುದು.
Tag: Kannada Sahitya Sammelana 34, S.C. Nandhimatha
೩೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎಂ. ಗೋವಿಂದ ಪೈ
ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂ. ಗೋವಿಂದ ಪೈ. ಹಳಗನ್ನಡ ವಿದ್ವಾಂಸರೂ ಕವಿಗಳೂ ಆದ ಇವರು ಸಾಹುಕಾರ ತಿಮ್ಮಪ್ಪ – ದೇವಕಿಯಮ್ಮ ದಂಪತಿಗಳ ಪುತ್ರರಾಗಿ ೨೩-೩-೧೮೮೩ರಲ್ಲಿ ಮಂಜೇಶ್ವರದಲ್ಲಿ ಜನಿಸಿದರು.
ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದ ಬಿ.ಎ. ವ್ಯಾಸಂಗವನ್ನು ತಂದೆಯ ನಿಧನದ ದೆಸೆಯಿಂದ ನಿಲ್ಲಿಸಿದರು. ಸ್ವಂತ ವ್ಯಾಸಂಗದಲ್ಲೇ ಕನ್ನಡ, ಇಂಗ್ಲಿಷ್, ಗ್ರೀಕ್, ಫ್ರೆಂಚ್, ಸಂಸ್ಕೃತ, ಜರ್ಮನ್, ಪ್ರಾಕೃತ ಮೊದಲಾದ ದೇಶ – ವಿದೇಶಗಳ ಭಾಷೆಗಳನ್ನು ಕಲಿತರು. ಸಾಹಿತ್ಯ ರಚನೆ – ಸಂಶೋಧನೆಯಲ್ಲಿ ತೊಡಗಿದರು. ಎಲ್ಲೂ ಉದ್ಯೋಗಕ್ಕೆ ಸೇರಲಿಲ್ಲ.
ಪೈಗಳ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಮದರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿತು. ಪೈಯವರನ್ನು ೧೯೪೯ರಲ್ಲಿ ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಸನ್ಮಾಸಿದರು.
ಅವರಿಗೆ ಸಾಹಿತ್ಯ ಪರಿಷತ್ತು ೧೯೫೧ರಲ್ಲಿ ಬೊಂಬಾಯಿಯಲ್ಲಿ ನಡೆದ ೩೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಪುರಸ್ಕರಿಸಿತು.
ಸಾಹಿತ್ಯ ಸೇವೆ: ಗೊಮ್ಮಟ ಜಿನಸ್ತುತಿ, ನಂದಾದೀಪ, ಗಿಳಿವಿಂಡು, ಗೊಲ್ಗೊಥಾ ವೈಶಾಖಿ, ಹೆಬ್ಬೆರಳು, ಶ್ರೀಕೃಷ್ಣ ಚರಿತ್ರೆ, ಬರಹಗಾರನ ಹಣೆಬರಹ, ಪಾಶ್ರ್ವನಾಥ ತೀರ್ಥಂಕರ ಚರಿತೆ ಇತ್ಯಾದಿ ಇವರ ಪ್ರಮುಖ ಕೃತಿಗಳು.
ಗೋವಿಂದ ಪೈ ಅವರು ಮಂಜೇಶ್ವರದಲ್ಲಿ ೬-೯-೧೯೬೩ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೩೪
ಅಧ್ಯಕ್ಷರು, ಎಂ. ಗೋವಿಂದ ಪೈ
ದಿನಾಂಕ ೨೬,೨೭,೨೮ ಡಿಸೆಂಬರ್ ೧೯೫೧
ಸ್ಥಳ : ಮುಂಬಯಿ
ಪರಿಷತ್ತು ಕೋಶ ನಿರ್ಮಾಣಕ್ಕೆ ಹಣ ಬೇಡಬೇಕು
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ-ಕನ್ನಡ ಕೋಶವನ್ನು ನಿರ್ಮಿಸತೊಡಗಿದೆ. ವಿಶ್ವಕೋಶವನ್ನು ನಿರ್ಮಿಸಬೇಕೆಂಬ ಯೋಜನೆಯನ್ನು ತನ್ನ ಗುರಿಯಾಗಿ ಇಟ್ಟುಕೊಂಡಿದೆ. ಇವೆರಡೂ ಕೆಲಸಗಳಿಗೆ ಲಕ್ಷಗಟ್ಟಲೆಯ ಹಣಬೇಕು. ಇದು ಎಲ್ಲಿಂದ ಬರಬೇಕು? ಕಣ್ಣು ಕೈಗಳನ್ನು ಎತ್ತಿ ಆಕಾಶಕ್ಕೆ ತೋರಿಸುವುದಲ್ಲದೆ ಬೇರೆ ಉತ್ತರವಿಲ್ಲ. ಕೊಡಲಾಗುವವರು ಹೇರಳವಿದ್ದಾರೆ. ಅವರಲ್ಲಿ ಕೊಡುವವರು ಎಷ್ಟು? ಕೊಡುವ ಮನಸ್ಸಿದ್ದರೆ, ಕೊಡುವವರು ಕೊಟ್ಟರೆ, ಹಲವು ಬಲ್ಲವರ ಒಡಗೂಟದಿಂದ ತಾನೆ ನೆರವೇರಬೇಕಾದ ಈ ಕೆಲಸಗಳು ಆ ಒಗ್ಗಟ್ಟನ್ನು ಪೂರ್ಣವಾಗಿ ಸಂಪಾದಿಸುವ ತನಕ ಕೊಂಚ ದುಸ್ಸಾಧ್ಯವೆನಿಸಬಹುದಾದರೂ, ಅವು ಸರ್ವಥಾ ಅಸಾಧ್ಯವಲ್ಲ.
ಕನ್ನಡಕ್ಕೆ ಒಂದು ಅರಸ್ಥಾನವಿದೆ. ಮೂರು ವಿಶ್ವವಿದ್ಯಾಲಯಗಳಿವೆ ಮಾತ್ರ್ರವಲ್ಲ, ಕನ್ನಡ ನಾಡಿನಲ್ಲಿ ಎಷ್ಟೋ ಲಕ್ಷಪತಿಗಳೂ ಇದ್ದಾರೆ. ಅವರೆಲ್ಲ ಮನಸ್ಸು ಮಾಡಿದರೆ, ಈ ಕೋಶಗಳ ನಿರ್ಮಾಣವೆಂದರೆ ಕೇವಲ ಎಡಗೆಯ್ಯಾಟ ತಾನೆ. ಅವರನ್ನು ಬೇಡಬೇಕು ಒಮ್ಮೆ ಬೇಡಿ ಅವರು ಯದೃಚ್ಛಯಾ ನೀಡದಿದ್ದರೆ, ಇಮ್ಮೆ, ಮೂಮೆ, ಕೊನೆಗೆ ಹಲಮೆ. ‘ಭವಾನ್ ಭಿಕ್ಷಾಂ ದದಾತು’ ಎಂಬ ಸಪ್ತಾಕ್ಷರಿಯನ್ನು ಜಪಿಸುತ್ತ ಮನೆ ಮನೆ ತಿರಿವಾತನ ಗೋಪಾಲಬುಟ್ಟಿಯಲ್ಲಿ ಅಲ್ಲಲ್ಲಿ ಏನಿಕೆ ಹಣಕಾಸು ಬೀಳದೆ ಇದ್ದೀತೆ? ಎಂಬ ಆಶೆಯ ಊರುಗೋಲನ್ನು ಹಿಡಿದು ಮುಂದೆ ಸಾಗಬೇಕು.
ಸಮ್ಮೇಳನಗಳು ಮತ್ತು ವಿಜ್ಞಾನಗಳು
ವರ್ಷೇವರ್ಷೇ ಅಲ್ಲಲ್ಲಿ ನಡೆಯತಕ್ಕ ಸಾಹಿತ್ಯ ಸಮ್ಮೇಳನದ ಜತೆಯಲ್ಲಿ ಕನ್ನಡ ನಾಡಿನ ವೈಜ್ಞಾನಿಕ ಸಮ್ಮೇಳನವನ್ನು ಕರೆಯುತ್ತಿರಬೇಕು. ಇದು ಮುಂದಣ ಪ್ರತಿ ವಾರ್ಷಿಕ ಸಾಹಿತ್ಯ ಸಮ್ಮೇಳನವನ್ನು ಕರೆಯಿಸುವ ಆಯಾ ಸ್ಥಳವಂದಿಗರಿಗೆ ಮಾಡುವ ಸೂಚನೆ, ಅವರಲ್ಲಿ ಮಾಡುವ ವಿಜ್ಞಾಪನೆ ಅಷ್ಟೆ. ಇಂದಿನ ಯುಗವೆಂದರೆ ಯಂತ್ರದ ಯುಗ, ವಿಜ್ಞಾನದ (Science) ಯುಗ, ವಿವಿಧ ಬಾಂಬುಗಳ (bombs) ಯುಗ. ಈ ಯುಗದಲ್ಲಿ ನಾವು ಹತ್ತು ಮಂದಿಯ ಜತೆಯಲ್ಲಿ ಇರಬೇಕಲ್ಲದೆ, ಬೆಕ್ಕಿನ ಬಿಡಾರ ಬೇರೆಯಂತೆ ಲೋಕದಿಂದ ಪೃಥಕ್ಕಾಗಿ ವಿಂಗಡವಾಗಿ ಇದ್ದಿರಲಾರೆವು. ಹಾಗೂ ಈ ಹತ್ತು ಮಂದಿ ವಿಜ್ಞಾನದಲ್ಲಿ ವಿಚಕ್ಷಣರಾಗಿದ್ದು ಅವರ ನಡುವೆ ನಾವು ಅವರಂತೆಯೇ ಸ್ವತಂತ್ರವಾಗಿ ತಲೆಯನ್ನು ಮೇಲೆತ್ತಿ ಬಾಳ ಬೇಕಾದರೆ ನಮಗೆ ಸಾಹಿತ್ಯ ನೆರವಾಗದು, ವಿಜ್ಞಾನ ಬೇಕು. ವಿಜ್ಞಾನವಲ್ಲದೆ ಅನ್ಯಗತಿಯಿಲ್ಲ. ಈ ಕಾರಣ ನಮ್ಮಲ್ಲಿ ಸಾಹಿತ್ಯ ಹತ್ತುವವರು ಸಾಹಿತ್ಯವನ್ನು ಹೇಗೋ ಹಾಗೆ ವಿಜ್ಞಾನ ಹತ್ತುವವರು ವಿಜ್ಞಾನವನ್ನು ಆಶ್ರಯಿಸಬೇಕು. ಹಾಗೆ ಎರಡೂ ದಾರಿಗಳಿಂದ ನಮ್ಮ ಜನ ಮುಂದುವರಿಸಬೇಕು.
ಸರ್ಕಾರಗಳ ಕರ್ತವ್ಯ
ರಾಜಕೀಯ ದೃಷ್ಟಿಯಿಂದ ಹೇಳುವುದಾದರೆ, ಸಾಹಿತ್ಯ ಸಮ್ಮೇಳನಗಳನ್ನು ಸರಕಾರದವರು ಜರುಗಿಸಲಿ, ಜರುಗಿಸದಿರಲಿ, ವೈಜ್ಞಾನಿಕ ಸಮ್ಮೇಳನಗಳನ್ನಾದರೂ ಕೇಂದ್ರ ಸರಕಾರದವರಾಗಲಿ, ಆಯಾ ಪ್ರಾಂತಿಕ ಸರಕಾರದವರಾಗಲಿ ಕರೆಯಿಸುತ್ತಿರಬೇಕು.
Tag: Kannada Sahitya Sammelana 34, M. Govinda Pai
೩೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎಂ.ಆರ್. ಶ್ರೀನಿವಾಸಮೂರ್ತಿ
ಕನ್ನಡ ಶ್ರೀರತ್ನತ್ರಯರಲ್ಲಿ ಒಬ್ಬರಾದ (ಬಿಎಂಶ್ರೀ, ಎಂ ಆರ್ ಶ್ರೀ, ತೀನಂಶ್ರೀ) ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹಾಸನದಲ್ಲಿ ರಾಮಚಂದ್ರಯ್ಯ ಸಾವಿತ್ರಮ್ಮ ದಂಪತಿಗಳಿಗೆ ೨೮-೮-೧೮೯೨ರಲ್ಲಿ ಜನಿಸಿದರು. ಮೈಸೂರು, ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಪೂರೈಸಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು (೧೯೧೫) ಪಡೆದರು.
ವಿದ್ಯಾ ಇಲಾಖೆಯಲ್ಲಿ ಕೆಲಸಕ್ಕೇ ಸೇರಿ ಹಂತಹಂತವಾಗಿ ಮೇಲಧಿಕಾರ ಸ್ವೀಕರಿಸುತ್ತಾ ಡಿಪಿಐ ಕಚೇರಿಯಲ್ಲಿ, ನಾರ್ಮಲ್ ಸ್ಕೂಲಿನಲ್ಲಿ, ರೇಂಜ್ ಹಾಗೂ ಶಿಕ್ಷಣಾಧಿಕಾರಿಗಳಾಗಿ ೧೯೪೭ರಲ್ಲಿ ನಿವೃತ್ತರಾದರು.
ಪರಿಷತ್ತಿಗೆ ವಿಶೇಷ ಸೇವೆ ಸಲ್ಲಿಸಿದವರಲ್ಲಿ ಎಂ ಆರ್ ಶ್ರೀ ಒಬ್ಬರು. ೧೯೨0ರಿಂದ ೨0 ವರ್ಷಗಳವರೆಗೆ ಪರಿಷತ್ತಿನ ಕಾರ್ಯಸಮಿತಿ ಸದಸ್ಯರು, ೧೯೩೪ರಲ್ಲಿ ವಿಶೇಷ ಸಾಹಿತ್ಯೋತ್ಸವದ ಕಾರ್ಯದರ್ಶಿಗಳೂ ಆಗಿದ್ದು ೧೯೫0-೫೩ರವರೆಗೆ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಪ್ರಬುದ್ಧ ಕರ್ನಾಟಕ, ಕನ್ನಡ ನುಡಿ, ಮೈಸೂರು ಸ್ಕೌಟ್ ಸಂಘದ ಪತ್ರಿಕೆಗಳಿಗೆ ಸಂಪಾದಕರಾಗಿ ಒಳ್ಳೆಯ ಕೆಲಸ ಮಾಡಿದರು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ – ಕನ್ನಡ ನಿಘಂಟಿಗೆ ಅಮೋಘ ಸೇವೆ ಸಲ್ಲಿಸಿದರು. (೧೯೨೯-೧೯೪೩).
ಸೊಲ್ಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಪರಿಷತ್ತು ನೀಡಿ ಪುರಸ್ಕರಿಸಿತು.
ಬಾದಾಮಿ ಶಿವಯೋಗ ಮಂದಿರವು ೧೯೪0ರಲ್ಲಿ ವಚನವಾಙ್ಮಯ ವಿಶಾರದ ಎಂಬ ಪ್ರಶಸ್ತಿಯನ್ನು ಇವರಿಗೆ ನೀಡಿತು.
ಶ್ರೇಷ್ಠ ಶಿಕ್ಷಕರಾಗಿ, ಸಂಶೋಧಕರಾಗಿ ಸಾಹಿತಿಗಳಾಗಿ ಎಂ ಆರ್ ಶ್ರೀ ರಚಿಸಿದ ಕೆಲವು ಮುಖ್ಯ ಕೃತಿಗಳು ಹೀಗಿವೆ:
ಭಕ್ತಿಭಂಡಾರಿ ಬಸವಣ್ಣನವರು, ವಚನಧರ್ಮಸಾರ, ಪ್ರಭುಲಿಂಗಲೀಲೆಯ ಸಂಗ್ರಹ, ಕವಿಯ ಸೋಲು (ಕವನ ಸಂಗ್ರಹ), ನಾಗರಿಕ (ನಾಟಕ), ಧರ್ಮದೂತ (ನಾಟಕ), ಆಯಸ್ಕಾಂತತೆ ಮತ್ತು ವಿದ್ಯುಚ್ಛಕ್ತಿ, ಸಾವಿತ್ರಿ, ರಂಗಣ್ಣನ ಕನಸಿನ ದಿನಗಳು.
ದಕ್ಷ ಆಡಳಿತಗಾರರೂ, ವಿದ್ವಾಂಸರೂ ಆಗಿದ್ದ ಎಂ. ಆರ್. ಶ್ರೀ. ಅವರು ಬೆಂಗಳೂರಿನಲ್ಲಿ ೧೬-೯-೧೯೫೩ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೩೩
ಅಧ್ಯಕ್ಷರು, ಎಂ.ಆರ್. ಶ್ರೀನಿವಾಸಮೂರ್ತಿ
ದಿನಾಂಕ ೨೪, ೨೫, ೨೬ ಮೇ ೧೯೫0
ಸ್ಥಳ : ಸೊಲ್ಲಾಪುರ
ಪರಿಷತ್ತಿನ ಸಾಧನೆ
ಕನ್ನಡ ಸಾಹಿತ್ಯ ಪರಿಷತ್ತು ಮುವ್ವತ್ತುಮೂರು ವರುಷಗಳಿಂದ ಕನ್ನಡಿಗರಲ್ಲಿ ಒಕ್ಕೂಟವನ್ನು ಬೆಳಸುವುದಕ್ಕಾಗಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಶ್ರಮಿಸಿದೆ. ಆಡಳಿತ ದೃಷ್ಟಿಯಿಂದ ಒಕ್ಕೂಟವಾಗದಿದ್ದರೂ ಸೌಹಾರ್ದವನ್ನೂ ಸೌಭ್ರಾತ್ರವನ್ನೂ ಬೆಳಸಿ ಕುಟುಂಬದ ಒಕ್ಕೂಟವನ್ನು ಸಾಧಿಸಿದೆ. ಕನ್ನಡ ಸಾಹಿತ್ಯದ ಹಳಮೆಯನ್ನೂ ಹಿರಿಮೆಯನ್ನೂ ಉದಾಸೀನರಾಗಿದ್ದ ಕನ್ನಡಿಗರಿಗೆ ಪರಿಚಯ ಮಾಡಿಸಿ ಸಾಹಿತ್ಯ ಪ್ರೇಮವನ್ನು ಅವರಲ್ಲಿ ತುಂಬಿದೆ. ಕನ್ನಡ ನಾಡಿನ ಮುಖ್ಯಮುಖ್ಯ ಪಟ್ಟಣಗಳಲ್ಲಿ-ಅವು ಯಾರ ಆಡಳಿತಕ್ಕೆ ಒಳಪಟ್ಟಿದ್ದರೂ-ಕನ್ನಡಿಗರ ನೆಲೆವೀಡೆಂದು ಭಾವಿಸಿ ಸಮ್ಮೇಳನಗಳನ್ನು ನಡೆಸಿ ತನ್ನ ಧ್ವಜವನ್ನು ಸ್ಥಾಪಿಸಿದೆ. ಈ ಪಟ್ಟಣಗಳ ಸ್ಥಾನಗಳನ್ನು ತಾವು ಗಮನಿಸಿದರೆ ಹೆಚ್ಚು ಕಡಮೆಯಾಗಿ ಕನ್ನಡ ನಾಡಿನ-ಇಂದಿನ ಕನ್ನಡ ನಾಡಿನ-ಸೀಮಾರೇಖೆ ಕಣ್ಣಮುಂದೆ ನಿಲ್ಲದೆ ಹೋಗುವುದಿಲ್ಲ. `ಕಾವೇರಿಯಿಂದ ಗೋದಾವರಿವರೆಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’ ಎಂಬ ನೃಪತುಂಗನ ಭೌಗೋಳಿಕ ಸೂತ್ರ ಈಗ ಸಿದ್ಧಿಸದೇ ಹೋದರೂ ಕೃಷ್ಣಾನದಿಯನ್ನು ದಾಟಿ ಗೋದಾವರಿಯ ಹತ್ತಿರದಲ್ಲಿ ನಾವು ನಿಂತಿರುವುದೇ ಒಂದು ಸೌಭಾಗ್ಯ! ಇಷ್ಟೇ ಅಲ್ಲದೆ ಬೊಂಬಾಯಿ, ಹೈದರಾಬಾದ್ ಮತ್ತು ಮದ್ರಾಸ್ ಎಂಬ ಮಿಶ್ರ ಜನತೆಗಳಿರುವ ಪಟ್ಟಣಗಳಲ್ಲಿ ಕನ್ನಡಿಗರ ಸಂಖ್ಯೆಯು ಅಲಕ್ಷ್ಯ ಮಾಡತಕ್ಕದ್ದಲ್ಲವೆಂದೂ ಅಲ್ಲಿಯೂ ಸಮ್ಮೇಳನ ನಡೆಸುವ ಹಕ್ಕು ನಮಗಿರುವುದೆಂದೂ ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದೇವೆ.
ಕನ್ನಡವನ್ನು ಮಾತನಾಡುವವರು, ಕನ್ನಡದ ಅಭಿಮಾನಿಗಳು, ಕನ್ನಡದ ಸೇವೆ ಮಾಡುವವರು-ಎಲ್ಲರೂ ಕನ್ನಡಿಗರೇ; ಅವರು ಎಲ್ಲಿದ್ದರೂ ಅದು ಕನ್ನಡ ನಾಡೇ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಹೀಗೆ ಪರಿಷತ್ತು ಕನ್ನಡಿಗರ ಮತ್ತು ಕನ್ನಡ ಭಾಷೆಯ ಅಭ್ಯುದಯಕ್ಕಾಗಿ ಶ್ರಮಿಸುತ್ತ ಬಂದಿದೆ; ನ್ಯಾಯಕ್ಕಾಗಿ ಹಲವು ಸರ್ಕಾರಗಳೊಡನೆ ಹೋರಾಡಿಯೂ ಇದೆ.
ಪರಿಷತ್ತಿನ ಬಗ್ಗೆ ಔದಾಸೀನ್ಯ
ಹಿಂದೆ ಮದರಾಸ್, ಬೊಂಬಾಯಿ, ಹೈದರಾಬಾದಿನ ಸರ್ಕಾರಗಳೂ, ಜಮಖಂಡಿ, ಸಾಂಗ್ಲಿ ಮೊದಲಾದ ಸಣ್ಣಪುಟ್ಟ ಸಂಸ್ಥಾನಗಳ ಸರ್ಕಾರಗಳೂ ಪರಿಷತ್ತಿನ ವಿಚಾರದಲ್ಲಿ ಮತ್ತು ಕನ್ನಡಿಗರ ವಿಚಾರದಲ್ಲಿ ತೋರಿಸಿದ ಅಕ್ಷಮ್ಯವಾದ ಔದಾಸೀನ್ಯ ಮಾತ್ರವಲ್ಲ, ಪ್ರತ್ಯಕ್ಷ ವಿರೋಧವನ್ನು ನೆನೆಸಿಕೊಂಡರೆ ತಾಳ್ಮೆಯಿಂದಿರುವುದು ಕಷ್ಟ. ಪರಿಷತ್ತಿನ ಕಚೇರಿಯ ನಿಕಟ ಸಂಬಂಧವನ್ನು ಹಲವು ವರ್ಷಗಳಿಂದ ಪಡೆದು ಈ ಪತ್ರ ವ್ಯವಹಾರಗಳನ್ನೆಲ್ಲ ತಿಳಿದವನಾಗಿ ಈ ಮಾತನ್ನು ತಮಗೆ ಹೇಳುತ್ತಿದ್ದೇನೆ. ಆ ಪತ್ರವ್ಯವಹಾರಗಳಲ್ಲಿ ಬಹುಭಾಗ ಶ್ರೀ ಡಿ.ವಿ. ಗುಂಡಪ್ಪನವರು ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ನಡೆದದ್ದು ಎಂಬುದನ್ನು ತಮ್ಮೆಲ್ಲರ ಸ್ಮರಣೆಗೆ ತರಲು ಬಯಸುತ್ತೇನೆ. ನಾವು ಈಗ ಬಹುಮಟ್ಟಿಗೆ ಎಲ್ಲ ತೊಡಕುಗಳನ್ನು ದಾಟಿಕೊಂಡು ಒಂದಾಗುವ ಸಮುಹೂರ್ತದಲ್ಲಿದ್ದೇವೆ. ಸ್ವಲ್ಪ ತಡವಾದರೂ ಕರ್ಣಾಟಕ ಪ್ರಾಂತ ಬಡವಾಗುವುದಿಲ್ಲ.
ಪರಸ್ಪರ ಸಾಹಿತ್ಯ ವಿನಿಮಯ ಆಗಲಿ
ಕನ್ನಡ ನಾಡು ಪ್ರತಿವರ್ಷವೂ ಆಂಧ್ರ ಪ್ರಾಂತ, ತಮಿಳುನಾಡು, ಮಹಾರಾಷ್ಟ್ರ- ಮೊದಲಾದ ಪ್ರಾಂತಗಳ ಪಟ್ಟಣಗಳಿಗೆ ನಮ್ಮ ಸಾಹಿತಿಗಳನ್ನೂ ವಿದ್ವಜ್ಜರನ್ನೂ ಸಾಹಿತ್ಯ ನಿಯೋಗಿಗಳನ್ನಾಗಿ ಕಳಿಸಿಕೊಟ್ಟು ಆಯಾ ಪ್ರಾಂತದವರಿಗೆ ಆಯಾ ಪ್ರಾಂತ ಭಾಷೆಯಲ್ಲಿಯೇ ನಮ್ಮ ಸಾಹಿತ್ಯದ ವಿಷಯದಲ್ಲಿ ಭಾಷಣಗಳನ್ನೇರ್ಪಡಿಸಬೇಕು. ಹಾಗೆಯೇ ನೆರೆಯ ಪ್ರಾಂತಗಳಿಂದಲೂ ನಿಯೋಗಗಳನ್ನು ಕನ್ನಡನಾಡಿಗೆ ಬರಮಾಡಿಕೊಳ್ಳಬೇಕು. ಈ ಕೆಲಸವನ್ನು ನಮ್ಮ ವಿಶ್ವವಿದ್ಯಾನಿಲಯಗಳೂ ಕನ್ನಡ ಸಾಹಿತ್ಯ ಪರಿಷತ್ತೂ ಕರ್ನಾಟಕ ವಿದ್ಯಾವರ್ಧಕ ಸಂಘವೂ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಒಂದು ಗೊತ್ತಾದ ಕಾರ್ಯಕ್ರಮದಂತೆ ನೆರೆವೇರಿಸುವುದು ಮೇಲು.
ಪರಿಷತ್ತು ಮತ್ತು ವಿದೇಶಿ ಕರ್ನಾಟಕ ಸಂಘಗಳು
ಈ ಸಂದರ್ಭದಲ್ಲಿ ಅನ್ಯಪ್ರಾಂತಗಳಲ್ಲಿರುವ ಕರ್ಣಾಟಕ ಸಂಘಗಳ ಪಾತ್ರವನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಬೇಕಾಗಿದೆ. ದೆಹಲಿ, ಕಾಶಿ, ಕಲ್ಕತ್ತ ಮೊದಲಾದ ಮುಖ್ಯ ಪಟ್ಟಣಗಳಲ್ಲಿಯೂ ಈ ಸಂಘಗಳು ಸ್ಥಾಪಿತವಾಗಿರುವುದು ಸಂತೋಷ. ಹೀಗೆಯೇ ಪ್ರಪಂಚದ ಮುಖ್ಯ ಪಟ್ಟಣಗಳಾದ ಲಂಡನ್, ನ್ಯೂಯಾರ್ಕ್, ಪ್ಯಾರಿಸ್, ಬರ್ಲಿನ್, ಮಾಸ್ಕೋ ಮೊದಲಾದವುಗಳಲ್ಲಿಯೂ ಕರ್ಣಾಟಕ ಸಂಘಗಳು ಸ್ಥಾಪಿತವಾಗುವ ಸುಯೋಗ ಕನ್ನಡಕ್ಕೆ ದೊರೆಯಲೆಂದು ಹಾರೈಸುತ್ತೇನೆ. ಆದರೆ ಕರ್ಣಾಟಕ ಸಂಘಗಳು ಈಗ ಇರುವಂತೆ ಅಲ್ಲಿಯ ಕನ್ನಡಿಗರನ್ನು ಒಟ್ಟುಗೂಡಿಸುವುದಕ್ಕೆ ಮಾತ್ರ, ಅವರ ಭಾಷಾಜ್ಞಾನವನ್ನು ಮತ್ತು ಭಾಷಾ ಪ್ರೇಮವನ್ನು ಜೀವಂತವಾಗಿಡುವುದಕ್ಕೆ ಮಾತ್ರ ಉಪಯೋಗವಾಗುತ್ತಿದ್ದರೆ ನನಗೆ ತೃಪ್ತಿಯಿಲ್ಲ. ಅವು ಕನ್ನಡಿಗರ ಸಾಹಿತ್ಯ ಸಂಸ್ಕೃತಿಗಳ ಪ್ರಚಾರ ಕೇಂದ್ರಗಳಾಗಿ ಪರಿವರ್ತನೆ ಹೊಂದಬೇಕೆಂಬುದು ನನ್ನ ಉತ್ಕಟೇಚ್ಛೆ. ಆ ಪಟ್ಟಣಗಳಲ್ಲಿ ನೆಲೆಸಿರುವ ಕನ್ನಡಿಗರು ಆಯಾ ಪ್ರಾಂತ ಭಾಷೆಗಳನ್ನು ಚೆನ್ನಾಗಿ ಕಲಿಯಬೇಕು. ಆಯಾ ಪ್ರಾಂತ ಸಾಹಿತ್ಯ ಹೇಗೆ ಮುಂದುವರಿಯುತ್ತದೆ ಎಂಬುದನ್ನು ನಮಗೆ ತಿಳಿಸಬೇಕು; ಕನ್ನಡ ಭಾಷೆಯನ್ನು ಅಲ್ಲಿಯ ಜನಗಳಿಗೆ ಕಲಿಸಿ ಕನ್ನಡ ಗ್ರಂಥಗಳನ್ನು ಅವರು ಓದುವಂತೆ ಮಾಡಬೇಕು.
ಎರಡನೆಯದಾಗಿ, ಆ ಸಂಘಗಳಿಗೆ ಆಯಾ ಪ್ರಾಂತದ ಜನರು ಸದಸ್ಯರಾಗುವಂತೆಯೂ ಪ್ರೋತ್ಸಾಹಿಸಬೇಕು; ಉಭಯ ಸಾಹಿತ್ಯಗಳ ಮೇಲೆ ಉಭಯ ಭಾಷೆಗಳಲ್ಲಿ ಉಪನ್ಯಾಸಗಳಾಗುವಂತೆ ಏರ್ಪಾಡು ಮಾಡಬೇಕು; ದ್ವಿಭಾಷೆಗಳಲ್ಲಿ-ಕನ್ನಡ ಮತ್ತು ಆ ಪ್ರಾಂತಭಾಷೆಗಳಲ್ಲಿ-ಲೇಖನಗಳುಳ್ಳ ಮಾಸಪತ್ರಿಕೆಗಳನ್ನು ಪ್ರಕಟಿಸಬೇಕು. ಇಂತಹ ಸಾಹಿತ್ಯ ಕಾರ್ಯಗಳಲ್ಲಿ ಈ ಸಂಘಗಳು ನಿರತವಾದರೆ ಮತ್ತು ಕೇಂದ್ರ ಸಂಸ್ಥೆಯಾದ ಸಾಹಿತ್ಯ ಪರಿಷತ್ತಿನ ನಿಕಟ ಸಂಬಂಧವನ್ನು ಬೆಳಸಿಕೊಂಡು ಬಂದರೆ ಕನ್ನಡಿಗರ ಪ್ರಭಾವ ಚೆನ್ನಾಗಿ ಹರಡುತ್ತದೆ.
ಪರಿಷತ್ತು ಮತ್ತು ಸ್ವದೇಶಿ ಕರ್ನಾಟಕ ಸಂಘಗಳು
ಕರ್ಣಾಟಕ ಸಂಘಗಳನ್ನು ಗ್ರಾಮ ಪಂಚಾಯಿತಿಗಳಂತೆ ಪ್ರತಿಯೊಂದು ಹಳ್ಳಿಯಲ್ಲಿಯೂ ಸ್ಥಾಪಿಸಬೇಕು. ಹೀಗೆ ಹಳ್ಳಿಗಳಲ್ಲಿ ಸ್ಥಾಪಿಸುವ ಮತ್ತು ಬೆಳೆಸುವ ಜವಾಬ್ದಾರಿಯುಳ್ಳ ತಾಲ್ಲೂಕು ಕರ್ಣಾಟಕ ಸಂಘಗಳು ಪ್ರತಿಯೊಂದು ತಾಲ್ಲೂಕು ಸ್ಥಳದಲ್ಲಿಯೂ ಇರಬೇಕು. ಜಿಲ್ಲಾ ಕೇಂದ್ರಗಳಲ್ಲಿ ಕರ್ಣಾಟಕ ಸಂಘಗಳು ಪ್ರತಿಯೊಂದು ತಾಲ್ಲೂಕು ಸ್ಥಳದಲ್ಲಿಯೂ ಇರಬೇಕು. ಜಿಲ್ಲಾ ಕೇಂದ್ರಗಳಲ್ಲಿ ಕರ್ಣಾಟಕ ಸಂಘಗಳು ಸ್ಥಾಪಿತವಾಗಿ ತಾಲ್ಲೂಕು ಸಂಘಗಳ ಸಂಬಂಧವನ್ನು ಬೆಳಸಿಕೊಂಡು ಬರಬೇಕು. ಈ ಎಲ್ಲ ಸಂಘಗಳೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಂಗಸಂಸ್ಥೆಗಳಾಗಿರಬೇಕು. ಇದೊಂದು ಕನಸಿನ ಮಾತು! ಆದರೂ ನನಸಾಗಬಹುದೋ ಏನೋ ಎಂಬ ಒಂದು ಆಶೆಯಿಂದ ಹೇಳುತ್ತಿದ್ದೇನೆ.
ವಯಸ್ಕರ ಶಿಕ್ಷಣ, ಗ್ರ್ರಾಮ ಪುಸ್ತಕ ಭಂಡಾರಗಳ ಸ್ಥಾಪನೆ, ಮತ್ತು ಗ್ರಾಮ, ಕರ್ಣಾಟಕ-ಸಂಘಗಳ ಪಾಲನೆ-ಇವು ಮೂರು ಗ್ರ್ರಾಮ ಪಂಚಾಯಿತಿಗಳ ಕಡ್ಡಾಯವಾಗದ ಸಾಹಿತ್ಯ ಕಾರ್ಯಗಳಾಗಿ ಎಂದು ಆಚರಣೆಗೆ ಬರುತ್ತವೆಯೋ ಅಂದು ದೇಶ ಉದ್ಧಾರವಾಗುತ್ತದೆ, ಭಾಷೆ ಉದ್ಧಾರವಾಗುತ್ತದೆ, ಜನತೆ ಉದ್ಧಾರವಾಗುತ್ತದೆ.
ಪರಿಷತ್ತಿನ ಪತ್ರಿಕೆ ಹೇಗಿರಬೇಕು?
ಕರ್ಣಾಟಕ ಸಂಘಗಳು ಸಾಹಿತ್ಯ ವಿಚಾರದಲ್ಲಿ ಜನಾಭಿಪ್ರಾಯವನ್ನು ರೂಪಿಸಬೇಕೆಂದು ಹಿಂದೆ ಹೇಳಿದೆನಷ್ಟೆ. ಅದಕ್ಕೆ ಸಹಾಯಕವಾಗಿ ನಾಡಿನಲ್ಲಿ ಪ್ರಕಟವಾಗುತ್ತಿರುವ ಗ್ರಂಥಗಳ ವಿವರಗಳನ್ನೂ ವಿಷಯಗಳನ್ನೂ ಸ್ಥೂಲವಾಗಿ ತಿಳಿಸುವ ತ್ರೈಮಾಸಿಕವೊಂದನ್ನು ನಾವು ಹೊರಡಿಸಬೇಕಾಗಿದೆ.
ಆದರೆ ನಾನು ಉದ್ದೇಶಿಸಿರುವ ತ್ರೈಮಾಸಿಕ ಸಮಗ್ರರೂಪದಲ್ಲಿ ಗ್ರಂಥ ವಿವರಗಳನ್ನು ಕೊಡತಕ್ಕ ನಿಯತಕಾಲಿಕ ಪತ್ರಿಕೆ. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆ ಇಂತಹ ಪತ್ರಿಕೆಯನ್ನು ಪರಿಷತ್ಪತ್ರಿಕೆಗೆ ಅನುಬಂಧವಾಗಿ ಕೊಡಬಹುದಾಗಿದೆ. ಲೇಖಕರು, ಗ್ರಂಥ ಪ್ರಕಾಶಕರು, ಕರ್ಣಾಟಕ ಸಂಘಗಳು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಈ ಮೂಲಕ ಚೆನ್ನಾಗಿ ಸಂಬಂಧ ಬೆಳೆಸಲು ಅನುಕೂಲವಾಗುತ್ತದೆ. ಪುಸ್ತಕ ಭಂಡಾರಗಳಿಗೆ ಗ್ರಂಥಗಳನ್ನು ಆರಿಸಿಕೊಳ್ಳುವವರಿಗೆ ಇಂತಹ ಪತ್ರಿಕೆಯಿಂದ ಲಾಭವು ಉಂಟು.
ನಿಮ್ಮ ಧೂಮಪಾನ ಅಂಗರಾಗ ಕೇಶಪ್ರಸಾದನಗಳಿಗೆ ವ್ಯಯಮಾಡುವ ಹಣದಲ್ಲಿ ಕಾಲುಭಾಗ, ಕಡೆಗೆ ಹತ್ತರಲ್ಲೊಂದು ಭಾಗವನ್ನು ಕನ್ನಡ ಪುಸ್ತಕಗಳನ್ನು ಕೊಂಡುಕೊಳ್ಳುವುದಕ್ಕೆ ವಿನಿಯೋಗಿಸಿ; ನಿಮ್ಮ ಕಾಫಿ ಕ್ಲಬ್ಬು ಸಿನಿಮಾ ವ್ಯಾಮೋಹಗಳಿಗಾಗಿಯೂ ನಟಿನಟಿಯರ ಭಾವಚಿತ್ರ ಸಂಗ್ರಹಣಕ್ಕಾಗಿಯೂ ವ್ಯಯಮಾಡುವ ಹಣದಲ್ಲಿ ಸ್ವಲ್ಪಭಾಗವನ್ನು ಕನ್ನಡದ ಪುಸ್ತಕಗಳಿಗಾಗಿ ವಿನಿಯೋಗಿಸಿ; ವಿವಾಹ ಕಾಲದಲ್ಲಿ ಮಾವನವರಿಂದ ಹಲವು ಉಡುಗೊರೆಗಳನ್ನು ತೆಗೆದುಕೊಳ್ಳುವಾಗ ಒಂದು ನೂರು ರೂಪಾಯಿಗಳ ಬೆಲೆಯ ಕನ್ನಡ ಪುಸ್ತಕಗಳನ್ನು ರಿಸ್ಟ್ವಾಚಿಗೆ ಬದಲಾಗಿ ಸ್ವೀಕರಿಸುವ ಸಂಕಲ್ಪವನ್ನು ಮಾಡಿಕೊಳ್ಳಿ; ನಿಮ್ಮ ಮೆಚ್ಚಿನ ಸ್ನೇಹಿತರಿಗೆ ಉಡುಗೊರೆಗಳನ್ನು ಕೊಡಬೇಕಾದರೆ ಕನ್ನಡ ಪುಸ್ತಕಗಳನ್ನು ಮೆಚ್ಚುಗಳಾಗಿ ಕೊಡಿರಿ; ಸ್ನೇಹಿತರ ಮನೆಗಳಿಗೆ ಹೋಗುವಾಗ ಒಂದು ಕನ್ನಡ ಪುಸ್ತಕ ಕಣ್ಣಿಗೆ ಬಿದ್ದರೆ ಎರವಲು ಕೇಳಿ ಆತ್ಮಗೌರವವನ್ನು ಕೆಡಿಸಿಕೊಳ್ಳದೆ ಪೇಟೆಯಲ್ಲಿ ಸ್ವಂತಕ್ಕೆ ಕೊಂಡು ಆತ್ಮಗೌರವವನ್ನುಳಿಸಿಕೊಂಡು ಬೆಳಸುತ್ತ ಹೋಗಿ. ಆಗ ತಾನಾಗಿಯೇ ಕನ್ನಡ ಗ್ರಂಥಗಳಿಗೆ ವಾಚಕಲೋಕ ವಿಸ್ತಾರವಾಗುತ್ತದೆ; ಪಠ್ಯಪುಸ್ತಕಗಳಾಗಿ ಇಡದಿದ್ದರೂ ಗ್ರಂಥಗಳ ಮಾರಾಟ ಕೊಂಚವಾದರೂ ತೃಪ್ತಿಕರವಾಗಿ ನಡೆಯುತ್ತದೆ; ಕನ್ನಡದ ಕೋಟೆ ಬಲಪಡುತ್ತದೆ; ಕನ್ನಡದ ಕೀರ್ತಿಧ್ವಜ ಉನ್ನತವಾಗಿ ಹಾರಾಡುತ್ತದೆ.
ಪರಿಷತ್ತಿನ ಆರ್ಥಿಕ ಸುಧಾರಣೆ ಹೇಗೆ?
ಕೊನೆಯದಾಗಿ, ಪರಿಷತ್ ಸಂಸ್ಥೆಯ ವಿಚಾರದಲ್ಲಿ ಎರಡು ಮಾತನ್ನು ಹೇಳಿ ಈ ನನ್ನ ಭಾಷಣವನ್ನು ಮುಕ್ತಾಯ ಮಾಡುತ್ತೇನೆ. ಪರಿಷತ್ತು ಈಗ ಸುಮಾರು ಮುವ್ವತ್ತುನಾಲ್ಕು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಸಂಸ್ಥೆ. ಈ ದೀರ್ಘಾವಧಿಯಲ್ಲಿ ಅದರ ಶಕ್ತಿ, ಸಂಪತ್ತು ಮತ್ತು ಪ್ರಭಾವ ಎಷ್ಟರಮಟ್ಟಿಗೆ ಬೆಳೆಯಬೇಕೆಂದು ಆಶಿಸಿದ್ದೇವೋ ಅಷ್ಟೊಂದು ಬೆಳೆದಿಲ್ಲ. ಮೊದಲಿಂದಲೂ ಅದಕ್ಕೆ ಧನಬಲ ಮತ್ತು ಜನಬಲಗಳ ಕೊರತೆ ಇದ್ದೇ ಇದೆ. ಮೊದಲಿನಿಂದಲೂ ಆಕ್ಷೇಪಕರು ಇದ್ದೇ ಇದ್ದಾರೆ; ಅದನ್ನು ಟೀಕಿಸುತ್ತಲೇ ಬಂದಿದ್ದಾರೆ. ನಮಗೂ ಪರಿಷತ್ತಿನ ಬಗ್ಗೆ ಅಸಂತುಷ್ಟಿಯಿದೆ. ‘ಅಸಂತೋಷಃ ಶ್ರಿಯೋ ಮೂಲಂ’, ‘ಬೈದವರೆನ್ನ ಬಂಧುಗಳೆಂಬೆ’ ಎಂದು ಸಮಾಧಾನ ತಂದುಕೊಳ್ಳುತ್ತೇವೆ. ಆದರೆ ಸದಸ್ಯರ ಸಂಖ್ಯೆಗಿಂತ ಆಕ್ಷೇಪಕರ ಸಂಖ್ಯೆ ಹೆಚ್ಚಾಗಿದ್ದರೆ ಫಲವೇನು? ಪರಿಷತ್ತು ಮಾಡಬೇಕಾದ ಕೆಲಸಗಳು ಬಹಳವಾಗಿವೆ ನಿಜ. ಕನ್ನಡ ನಾಡಿನ ಮೂಲೆಮೂಲೆಗಳಿಂದ ಕನ್ನಡದ ಮುಂದಾಳುಗಳು ಬೆಂಗಳೂರಿನಲ್ಲಿ ಸೇರಿ ಪರಿಷತ್ತನ್ನು ಸ್ಥಾಪಿಸಿದರು. ಅದರ ಸದಸ್ಯರು ನಾಡಿನ ಎಲ್ಲ ಕಡೆಗಳಲ್ಲೂ ಇದ್ದಾರೆ. ಅದರ ಆಡಳಿತದಲ್ಲಿ ಎಲ್ಲ ಭಾಗಗಳ ಪ್ರತಿನಿಧಿಗಳೂ ಸೇರಿದ್ದಾರೆ. ಈ ದೃಷ್ಟಿಯಿಂದ ಅದು ಕರ್ಣಾಟಕದ ಏಕೈಕ ಪ್ರತಿನಿಧಿ ಸಂಸ್ಥೆ. ಆದರೆ ಪರಿಷತ್ತಿನ ಕಟ್ಟಡ ಮತ್ತು ಕಚೇರಿ ಇರುವುದು ಬೆಂಗಳೂರಿನಲ್ಲಿ! ಆ ಕಟ್ಟಡಕ್ಕಾಗಿ ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳ ಸಹಾಯ ದ್ರವ್ಯವನ್ನು ಮೈಸೂರು ಸರ್ಕಾರದವರು ಹಿಂದೆ ಕೊಟ್ಟ ಪಾಪಕ್ಕಾಗಿ ಪ್ರತಿವರ್ಷವೂ ಅದರ ಬಡ್ಡಿಯೆನ್ನುವಂತೆ ಮೂರು ಸಾವಿರ ರೂಪಾಯಿಗಳ ವರ್ಷಾಸನವನ್ನು-ಬೇಕಾದ ಸಹಾಯ ದ್ರವ್ಯವೆಂದು ಕರೆಯೋಣ-ತೆರುತ್ತ ಆ ಸಂಖ್ಯೆಯನ್ನು ಜೀವಂತವಾಗಿ ಉಳಿಸಿದ್ದಾರೆ. ಅವರು ಏನಾದರೂ ನೆಪ ಹೇಳಿ ಈ ದಿನ ಆ ಸಹಾಯವನ್ನು ನಿಲ್ಲಿಸಿದರೆ ನಾಳೆಯೇ ಪರಿಷತ್ತು ಸಾಯುತ್ತದೆ. ಪರಿಷತ್ತು ಎಲ್ಲ ಪ್ರಾಂತಗಳಲ್ಲಿರುವ ಕನ್ನಡಿಗರಿಗೂ ಸೇರಿದ್ದು; ಅದರ ಪೋಷಣೆ ರಕ್ಷಣೆ ಎಲ್ಲ ಕನ್ನಡಿಗರಿಗೂ ಸೇರಿದ್ದು-ಎಂದು ಜಾಗಟೆಯನ್ನು ಬಾರಿಸಿ ಬಾರಿಸಿ ಹೇಳುತ್ತಿದ್ದೇವೆ.
ಎರಡನೆಯದಾಗಿ, ಪರಿಷತ್ತಿನ ಸದಸ್ಯರಾಗಿರಲು ಆತ್ಮಸಂತೋಷದಿಂದಲೋ ಪರಪ್ರೇರಣೆಯಿಂದಲೋ ಒಪ್ಪಿಕೊಂಡು ಅದಕ್ಕೆ ಸೇರಿದವರಲ್ಲಿ ಹಲವರು ತಮ್ಮ ಚಂದಾ ಬಾಕಿಗಳನ್ನು ಸಲ್ಲಿಸುವುದಿಲ್ಲ. ಅವರು ನಿಲ್ಲಿಸಿಕೊಂಡಿರುವ ಸುಮಾರು ಐದು ಸಾವಿರ ರೂಪಾಯಿಗಳಷ್ಟು ಬಾಕಿಯನ್ನು ಶೀಘ್ರದಲ್ಲಿಯೇ ಸಲ್ಲಿಸಿಬಿಟ್ಟರೆ ಹತ್ತುಸಾವಿರ ರೂಪಾಯಿಗಳಷ್ಟು ಕೆಲಸ ಮಾಡಬಹುದು.
ಪರಿಷತ್ತಿನ ಪ್ರಕಟಣೆಗಳು ಮತ್ತು ಧನಸಹಾಯ
ಪರಿಷತ್ತು ಮಾಡಬೇಕಾದ ಕೆಲಸಗಳಲ್ಲಿ ಕೆಲವು ತಾತ್ಕಾಲಿಕ ಪ್ರಯೋಜನಕಾರಿಗಳು; ಇಂಥವು ಸಾಮಾನ್ಯವಾಗಿ ಜನಪ್ರಿಯವಾಗಿರುತ್ತವೆ; ಇವುಗಳಿಂದ ಪರಿಷತ್ತಿನ ಹೆಸರು ಹರಡುತ್ತದೆ. ಆಗ, ಎಲ್ಲರೂ ಪರಿಷತ್ತನ್ನು ಪ್ರಶಂಸೆ ಮಾಡುತ್ತಾರೆ. ಸಾಹಿತ್ಯೋತ್ಸವಗಳು, ಉಪನ್ಯಾಸ ಮಾಲೆಗಳು, ಸ್ಪರ್ಧೆಗಳು ಮೊದಲಾದುವೆಲ್ಲ ಈ ಜಾತಿಗೆ ಸೇರಿದುವು. ಇನ್ನು ಕೆಲವು ಕೆಲಸಗಳು ಶಾಶ್ವತ ಪ್ರಯೋಜನಕಾರಿಗಳು; ಇಂತಹ ಜನಪ್ರಿಯವಾಗಿರುವುದಿಲ್ಲ; ಕೆಲಸ ನಡೆಯುತ್ತಿರುವಾಗ ಜನರ ಕಣ್ಣಿಗೆ ಗೋಚರವಾಗುವುದಿಲ್ಲ. ಆದ್ದರಿಂದ ಪರಿಷತ್ತಿಗೆ ಪ್ರಶಂಸೆ ಸದ್ಯದಲ್ಲಿ ದೊರೆಯುವುದಿಲ್ಲ. ಪೂರ್ವ ಗ್ರಂಥಗಳ ಶಾಸ್ತ್ರೀಯ ಸಂಪಾದನೆ, ಕನ್ನಡ-ಕನ್ನಡ ಕೋಶ ನಿರ್ಮಾಣ, ವಿಶ್ವಕೋಶದ ಪ್ರಯತ್ನ- ಮೊದಲಾದುವೆಲ್ಲ ಈ ಜಾತಿಗೆ ಸೇರಿದುವು.
ಪರಿಷತ್ತು ಹಿಂದೆ ಪಂಪ ರಾಮಾಯಣ, ಪಂಪ ಭಾರತ ಮತ್ತು ಕುಸುಮಾವಳೀ ಕಾವ್ಯಗಳನ್ನು ಸಂಪಾದನೆ ಮಾಡಿ ಪ್ರಕಟಿಸಿತು. ಪಂಪ ರಾಮಾಯಣ, ಪಂಪ ಭಾರತಗಳ ಪ್ರತಿಗಳು ಮುಗಿದು ಹೋಗಿರುವುದರಿಂದ ಅವುಗಳನ್ನು ಪರಿಷ್ಕರಿಸಿ ಮುದ್ರಣ ಮಾಡಬೇಕಾಗಿದೆ. ಕನ್ನಡ-ಕನ್ನಡ ಕೋಶದ ಕಾರ್ಯ ಕಷ್ಟತರವಾದುದು. ಅದಕ್ಕೆ ಸುಮಾರು ಒಂದು ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಹತ್ತಾರು ಜನ ಪಂಡಿತರ ಪೂರ್ಣಕಾಲದ ಪೂರ್ಣ ಸಹಾಯ ಅದಕ್ಕೆ ಅತ್ಯಾವಶ್ಯಕ. ಆ ಕೋಶದ ಸಲುವಾಗಿ ಪ್ರತ್ಯೇಕವಾದ ಕಚೇರಿಯೊಂದನ್ನು ಸ್ಥಾಪಿಸಿ ಪಂಡಿತರುಗಳನ್ನು ವೇತನಗಳನ್ನು ಕೊಟ್ಟು ನೇಮಿಸಿಕೊಳ್ಳಬೇಕಾಗಿದೆ.
ಹಣ ಕೊಡುವ ಪುಣ್ಯಾತ್ಮರು ಯಾರು? ಮೈಸೂರು ಸರ್ಕಾರದವರು ವರ್ಷಕ್ಕೆ ಎರಡು ಸಾವಿರ ರೂಪಾಯಿಗಳಂತೆ ಐದು ವರ್ಷಗಳಿಗೆ ಧನಸಹಾಯ ನೀಡಿದ್ದಾರೆ. ಈ ಅಲ್ಪ ಸಹಾಯದಲ್ಲಿ ಏನು ಕೆಲಸ ಮುಂದುವರೆದೀತು? ಏನು ಪ್ರಕಾಶಕ್ಕೆ ಬಂದೀತು? ನಾಡಿನಲ್ಲಿರುವ ಶ್ರೀಮಂತರೂ ಇತರ ಸರ್ಕಾರಗಳೂ ನೀಡಿದರೆ ಐದು ವರ್ಷಗಳಲ್ಲಿ ನಿಘಂಟಿನ ಕೆಲಸ ಮುಗಿದೀತು. ಕನ್ನಡದಲ್ಲಿ ಒಂದು ವಿಶ್ವಕೋಶವನ್ನು ಸಿದ್ಧಗೊಳಿಸಬೇಕೆಂಬ ಯೋಜನೆಯೂ ಯೋಚನೆಯೂ ಇವೆ. ಈ ಕೆಲಸಕ್ಕೆ ಹತ್ತು ಹನ್ನೆರಡು ಲಕ್ಷ ರೂಪಾಯಿಗಳೂ ಬೇಕು. ಪ್ರಚಾರೋಪನ್ಯಾಸಗಳ ಏರ್ಪಾಟನ್ನು ಕೈಕೊಂಡು ಚಲನಚಿತ್ರಗಳ ಸಹಾಯದಿಂದ ಜ್ಞಾನ ಪ್ರಚಾರ ಮಾಡಬೇಕೆಂಬ ಹಿರಿಯ ಯೋಜನೆಯೊಂದನ್ನು ಶ್ರೀ ಡಿ.ವಿ. ಗುಂಡಪ್ಪನವರು ತಮ್ಮ ಉಪಾಧ್ಯಕ್ಷ ಅಧಿಕಾರಾವಧಿಯಲ್ಲಿ ಸಿದ್ಧಗೊಳಿಸಿದರು; ಸಹಾಯಕ್ಕಾಗಿ ಪರಿಷತ್ತು ಯಾಚನೆ ಮಾಡಿತು. ‘ದೇಹಿ’ ಎಂದು ಹೊರಟರೆ ‘ನಾಸ್ತಿ’ ಎಂದು ಎಲ್ಲರೂ ಹೇಳುವರೇ!
ಪರಿಷತ್ತು -ಪಾಂಡಿತ್ಯದ ಅಭಾವ
ಪರಿಷತ್ತನ್ನು ಆಕ್ಷೇಪಿಸಲಿ; ಬೇಡವೆನ್ನುವುದಿಲ್ಲ ಅಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುವ ಜನ ತಿದ್ದಿಕೊಳ್ಳುತ್ತಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ನಿಂತವರಿಗೆ ಕೊರಳಿಗೆ ಹೂವಿನ ಹಾರಗಳು ತಲೆಗೆ ಕಲ್ಲಿನೇಟುಗಳು ಬೀಳುತ್ತವೆ. ಕಲ್ಲು ಬೀರುವವರಲ್ಲಿ ಎಷ್ಟು ಮಂದಿ ಪರಿಷತ್ತಿಗೆ ಧನಸಹಾಯ ಮಾಡುತ್ತಾರೆ; ಅದರ ಕಾರ್ಯಗಳಲ್ಲಿ ನೆರವಾಗುವ ಚೈತನ್ಯವನ್ನು ಪಡೆದಿರುತ್ತಾರೆ? ಹಿಂದಿನ ಕಾಲದಲ್ಲಿ ಪ್ರಸಿದ್ಧರಾದ ಪಂಡಿತರು ದಕ್ಷರಾದ ಕನ್ನಡಿಗರು ನಮ್ಮಲ್ಲಿದ್ದರು. ಪಂಪ ಭಾರತವನ್ನೋ ಶಬ್ದಮಣಿದರ್ಪಣವನ್ನೋ ಕಾವ್ಯಾವಲೋಕನವನ್ನೋ ವಾಚೋವಿಧೇಯವಾಗಿ ಹೇಳಬಲ್ಲ. ಪದಪ್ರಯೋಗಗಳನ್ನು ಹಲವಾರು ಗ್ರಂಥಗಳಿಂದ ನಿಂತಲ್ಲಿಯೇ ಕುಳಿತಲ್ಲಿಯೇ ಉದಾಹರಿಸಬಲ್ಲ ದೊಡ್ಡ ದೊಡ್ಡ ಪಂಡಿತರು ನಮ್ಮಲ್ಲಿದ್ದರು. ಅವರ ಕಾಲವಾಯಿತು. ಅವರ ಅನಂತರದ ತಲೆಮೊರೆಯುವರಲ್ಲಿ ಕೆಲವರು ಉದ್ಧಾಮ ಪಂಡಿತರಿದ್ದಾರೆ. ನಮಗೆ ನೆರವಾಗತಕ್ಕ ಚೈತನ್ಯವಿರುವವರು ಕನ್ನಡನಾಡಿನಲ್ಲೆಲ್ಲಾ ಹತ್ತು ಹದಿನೈದು ಮಂದಿ ದೊರೆಯಬಹುದು. ಅವರಿಗೆಲ್ಲ ಈಗಾಗಲೇ ನಲವತ್ತು ವರ್ಷ ವಯಸ್ಸು ಆಗಿದೆ. ಭಗವಂತನು ಅವರಿಗೆ ದೀರ್ಘಾಯಸ್ಸನ್ನು ಕೊಟ್ಟಿರಲೆಂದು ಪ್ರಾರ್ಥಿಸುತ್ತೇನೆ. ಅವರ ಕೆಳಗಿನ ಪೀಳಿಗೆಯವರನ್ನು ನೋಡಿದರೆ ಕನ್ನಡದ ಬಗ್ಗೆ ನನಗೆ ಬಹಳ ಅಧೈರ್ಯವೂ ಮಹತ್ತರವಾದ ದುಃಖವೂ ಉಂಟಾಗುತ್ತವೆ. ಬಹುಮಟ್ಟಿಗೆ ಏಕಾಂಕ ನಾಟಕದವರು, ಸಣ್ಣಕಥೆಗಳವರು, ಜುಜುಬಿ ಭಾವಗೀತೆಗಳವರು, ಸಣ್ಣಪುಟ್ಟ ಕಾದಂಬರೀಕಾರರು, ಪಠ್ಯಪುಸ್ತಕವಾಗಬೇಕೆಂಬ ಹಂಬಲಿನ ಲೇಖಕರು, ಎಂ.ಎ. ಪ್ರಶಸ್ತಿ ಪತ್ರಧಾರಕರಾದರೂ ಘನವಾದ ಪಾಂಡಿತ್ಯವಿಲ್ಲದವರು. ಭರತಖಂಡದ ವಿವಿಧ ಭಾಷೆಗಳ ಪರಿಷತ್ತು ಸೇರಿ ವಿವಿಧ ಪ್ರಾಂತಗಳ ಪಂಡಿತ ದಿಗ್ಗಜಗಳು ಅಲ್ಲಿ ನೆರೆದರೆ ನಮ್ಮ ಈ ಪೀಳಿಗೆಯವರಲ್ಲಿ ಯಾರನ್ನು ಕನ್ನಡದ ಧ್ವಜದೊಂದಿಗೆ ಕಳಿಸಬಹುದೆಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ನಾಲ್ಕು ಜನ ನನ್ನ ಕಣ್ಣಿಗೆ ಬೀಳುವುದಿಲ್ಲ.
ಟೀಕೆಗೆ ಮುಂದಾಗದೆ ನೆರವಿಗೆ ಬನ್ನಿ
ಇಂತಹ ದುಃಸ್ಥಿತಿ ನಮ್ಮನ್ನು ಆವರಿಸಿಕೊಂಡಿದೆ. ನಮ್ಮನ್ನು ಟೀಕಿಸುವವರಲ್ಲಿ ಬಹುಮಂದಿ ರಾಜಕೀಯದ ಗಾಳಿಗೆ ಸಿಕ್ಕಿರುವ ಉತ್ಸಾಹಶಾಲಿಗಳಾದ ಅನನುಭವಿಗಳಾದ ಪಾಂಡಿತ್ಯ ಪ್ರತಿಭೆಗಳಿಲ್ಲದ ತರುಣರು. ಕೆಲಸ ಮಾಡುವುದಕ್ಕೆ ಇಷ್ಟವುಳ್ಳವರು ನೆರವಾಗುವುದಕ್ಕೆ ತವಕ ಪಡುತ್ತಿರುವವರು ಅಗತ್ಯವಾಗಿ ಪರಿಷತ್ತಿಗೆ ಬರಲಿ. ಪರಿಷತ್ತಿನ ಕೆಲಸಗಳಲ್ಲಿ ಭಾಗವಹಿಸಲಿ, ಕೀರ್ತಿಯನ್ನು ಗಳಿಸಲಿ. ಪರಿಷತ್ತು ಮಾಡಬಹುದಾದ ಕೆಲಸಗಳಿಗೆ ಹಲವು ಕಾರಣಗಳಿಂದ ಒಂದು ಮಿತಿಯುಂಟು ಈ ಮಿತಿಯನ್ನು ವಿೂರಿ ಅದು ಕೆಲಸ ಮಾಡಲಾರದು. ಪ್ರತ್ಯಕ್ಷವಾಗಿ ರಾಜಕೀಯದಲ್ಲಿ ಅದು ಕೈಹಾಕಲಾರದು. ಅದರ ಉಪಕಾರಿಗಳನ್ನು ಕೃತಜ್ಞತೆಯಿಂದ ಸ್ಮರಿಸದೆ ಕೈಬಿಡಲಾರದು. ಆದ್ದರಿಂದ ಪರಿಷತ್ತಿನಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಂಡು ಟೀಕಿಸುವುದು ಮೇಲು; ಪರಿಷತ್ತಿನ ಹಲವು ಕಾರ್ಯಕ್ಷೇತ್ರಗಳಲ್ಲಿ ಪ್ರತ್ಯಕ್ಷವಾಗಿ ನೆರವಾಗುವುದು ಮತ್ತೂ ಮೇಲು. ಪರಿಷತ್ತು ಬೇರೆಯಲ್ಲ ಕನ್ನಡ ಜನ ಬೇರೆಯಲ್ಲ. ಪರಿಷತ್ತು ಕನ್ನಡಿಗರ, ಅವರ ಸಾಹಿತ್ಯ ಸಂಸ್ಕೃತಿಗಳ, ಅವರ ಬದುಕಿನ ಬಾಳಿನ ಪ್ರತೀಕ; ಕನ್ನಡಿಗರ ಆರಾಧನ ಮಂದಿರ. ಕನ್ನಡ ಮಾತೆ ತನ್ನ ಮಕ್ಕಳನ್ನು ಪ್ರೇಮದೃಷ್ಟಿಯಿಂದ ಆದರಿಸುತ್ತಿದ್ದಾಳೆ, ಅವರ ಆಭ್ಯುದಯವನ್ನೇ ಹಾರೈಸುತ್ತಿದ್ದಾಳೆ, ಅವರ ಒಕ್ಕೂಟವನ್ನೇ ಬಯಸುತ್ತಿದ್ದಾಳೆ. ಮಕ್ಕಳು ಕಣ್ಣು ಬಿಟ್ಟು ನೋಡಲಿ! ಆಕೆಯ ಆಶೀರ್ವಾದಕ್ಕೆ ಪಾತ್ರರಾಗಲಿ!
Tag: Kannada Sahitya Sammelana 33, M.R. Sreenivasa Murthy
೩೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ರೆವರೆಂಡ್ ಉತ್ತಂಗಿಚೆನ್ನಪ್ಪ
ಅಭಿನವ ಸರ್ವಜ್ಞ ಕವಿ ಎಂದೇ ಬಿರುದಾಂಕಿತರಾದ ರೆವರೆಂಡ್ ಉತ್ತಂಗಿ ಚೆನ್ನಪ್ಪನವರು ದಾನಿಯೇಲಪ್ಪ – ಸುಭದ್ರವ್ವ ದಂಪತಿಗಳಿಗೆ ೨೮-೧0-೧೮೮೧ರಂದು ಹಿರಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು. ಪೂರ್ವಜರು ಮೂಲದಲ್ಲಿ ವೀರಶೈವರಾಗಿ ಊರು ಪಾರುಪತ್ತೇಗಾರಿಕೆ ನಡೆಸುತ್ತಿದ್ದರು. ಇವರ ಶಾಲಾ ಶಿಕ್ಷಣವು ಧಾರವಾಡ, ಗದಗ, ಬೆಟಗೇರಿಗಳಲ್ಲಿ ನಡೆಯಿತು. ೧೯೩0ರಲ್ಲಿ ಮೆಟ್ರಿಕ್ ಪರೀಕ್ಷೆ ಫೇಲಾದರು. ಅನಂತರ ೧೯0೮ರಲ್ಲಿ ತಾಯಿಯ ಅಪೇಕ್ಷೆಯಂತೆ ಬಾಸೆಲ್ ಮಿಷನ್ ಸಂಸ್ಥೆಯಲ್ಲಿ ಧರ್ಮೋಪದೇಶಕರಾಗಿ ಸೇರಿದರು.
ಧರ್ಮೋಪದೇಶಕರಾಗಿ ೧೯0೮ರಿಂದ ೧೯೪೨ರವರೆಗೆ ನಿಸ್ಪ್ರುಹರಾಗಿ ಸೇವೆ ಸಲ್ಲಿಸಿದರು. ಧಾರವಾಡ, ಮುಂಡರಗಿ, ಹಾವೇರಿ, ಹುಬ್ಬಳ್ಳಿಗಳಲ್ಲಿ ಕ್ರೈಸ್ತಧರ್ಮ ಪ್ರಚಾರಕ್ಕಾಗಿ ಕೈಂಕರ್ಯನಡೆಸಿದರು. ೩೩ ವರ್ಷಗಳ ಸೇವೆಯ ನಂತರ ನಿವೃತ್ತರಾದರು.
ಕನ್ನಡ ಭಾಷೆಯ ಬೈಬಲ್ ಪರಿಷ್ಕರಣ ಮಂಡಳಿಯ ಅಧ್ಯಕ್ಷರಾಗಿ ಇವರು ರಾಷ್ಟ್ರೀಯ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ಖಾದಿ ಧರಿಸಿದರು. ಕ್ರೈಸ್ತ ಮತಾವಲಂಬಿ ಆಗಿದ್ದರೂ ವೀರಶೈವ ಸಿದ್ಧಾಂತ ಅಧ್ಯಯನ ಪ್ರಸಾರದಲ್ಲಿ ತೊಡಗಿದ್ದರು. ಕನ್ನಡ ಭಾಷೆಯ ಕಟ್ಟಾಭಿಮಾನಿಗಳಾದ ಇವರು ಬಾಸಲ್ ಸುವಾರ್ತಿಕ ಸಂಘದ ಹೆಸರನ್ನು ಕನ್ನಡ ಸುವಾರ್ತಿಕ ಸಂಘವೆಂದು ಪರಿವರ್ತಿಸಿದರು.
ಗ್ರೀಕ್ ಮತ್ತು ಹೀಬ್ರೂ ಭಾಷೆಯ ಮೂಲಪಾಠದೊಂದಿಗೆ ಕನ್ನಡ ಬೈಬಲ್ಗೆ ಹೋಲಿಸಿ ಪರಿಷ್ಕರಿಸಿದರು. ರೆವರೆಂಡ್ ಪ್ರಶಸ್ತಿಗೆ ಪಾತ್ರರಾದರು. ೧೯೪೪ರಲ್ಲಿ ರಬಕವಿಯಲ್ಲಿ ನಡೆದ ೨೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಜನಪದ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಲು ಕರೆ ನೀಡಲಾಗಿತ್ತು. ೧೯೪೯ರಲ್ಲಿ ಕಲಬುರ್ಗಿಯಲ್ಲಿ ನಡೆದ ೩೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೫೭-೫೮ರಲ್ಲಿ ಇವರು ರಚಿಸಿದ ‘ಸಿದ್ಧರಾಮ ಸಾಹಿತ್ಯ ಸಂಗ್ರಹ’ ಗ್ರಂಥಕ್ಕೆ ದೇವರಾಜ ಬಹಾದ್ದೂರ್ ಬಹುಮಾನ ಬಂದಿತು. ೬-೩-೧೯೪೯ರಿಂದ ೧೬-೨-೧೯೫0ರವರೆಗೆ ಪರಿಷತ್ತಿನ ಗೌರವಾಧ್ಯಕ್ಷರಾಗಿದ್ದರು.
ಉತ್ತಂಗಿ ಅವರ ಬದುಕಿನ ಸಾಧನೆ ಎಂದರೆ ಅಜ್ಞಾತ ಕವಿಯಾಗಿದ್ದ ಸರ್ವಜ್ಞ ಕವಿಯನ್ನು ಬೆಳಕಿಗೆ ತಂದಿದ್ದು : `ಸರ್ವಜ್ಞ ವಚನಗಳು’ ಗ್ರಂಥ ಇವರ ದೀರ್ಘಕಾಲದ ಸಂಶೋಧನೆಯ ಫಲ. ಇದಲ್ಲದೆ ಸುಮಾರು ೧೪ ಕೃತಿಗಳನ್ನು ಬರೆದಿದ್ದಾರೆ:
ಬನಾರಸಕ್ಕೆ ಬೆತ್ಲಹೇಮನ ವಿನಂತಿ (೧೯೨೧), ಮೃತ್ಯುಂಜಯ, ಹಿಂದೂ ಸಮಾಜ ಚಿಂತಕ, ನಾರಾಯಣ ವಾಮನ ತಿಲಕರ ಜೀವನಚರಿತ್ರೆ, ಬಸವೇಶ್ವರರೂ ಅಸ್ಪೃಶ್ಯರ ಉದ್ಧಾರವೂ, ಮಕ್ಕಳ ಶಿಕ್ಷಣ ಪಟ, ಸಿದ್ಧರಾಮ ಸಾಹಿತ್ಯ ಸಂಗ್ರಹ, ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಿಯರ ವಚನಗಳು, ಆದಯ್ಯನ ವಚನಗಳು ಇತ್ಯಾದಿ.
ಸರ್ವಜ್ಞ ವಚನ ಸಂಶೋಧನೆಯಲ್ಲಿಯೇ ದೃಷ್ಟಿ ಕಳೆದುಕೊಂಡ ಇವರು ೨೮-೮-೧೯೬೨ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೩೨
ಅಧ್ಯಕ್ಷರು, ಉತ್ತಂಗಿ ಚೆನ್ನಪ್ಪ
ದಿನಾಂಕ ೫, ೬, ೭ ಮಾರ್ಚ್ ೧೯೪೯
ಸ್ಥಳ : ಕಲಬುರ್ಗಿ
ಲಿಪಿ ಸಂಸ್ಕರಣ ಮತ್ತು ಪರಿಷತ್ತು
ಇಂದಿನ ಕನ್ನಡ ಲಿಪಿ ಬಲು ಚೆಲುವಾದುದು. ಇದು ಹಲವು ವಿದ್ವಾಂಸರು ತಿಳಿದಿರುವಂತೆ ಬ್ರಾಹ್ಮೀ ಲಿಪಿಯಿಂದ ಹುಟ್ಟಿದಂತಿಲ್ಲ. ಮೊಹೆಂಜೊದಾರೋದ ಚಿತ್ರಲಿಪಿ ಇದಕ್ಕೆ ಮೂಲವಿದ್ದಂತೆ ಅನಿಸುತ್ತದೆ. ನಡುವೆ ಎಂದೋ ಈ ಲಿಪಿ ಸೊನ್ನೆಗೆ ತಿರುಗಿಕೊಂಡು ಹಲವು ಶತಮಾನಗಳ ನಂತರ ಈಗಿನ ಆಕಾರವನ್ನು ತಳೆದಿರಬೇಕು. ಈಗಿನ ನಮ್ಮ ಲಿಪಿ-ಸೌಂದರ್ಯವು ಹಲವು ಶತಮಾನಗಳ ಮಾರ್ಪಾಟಿನ ಫಲವಾಗಿರುವುದರಿಂದ ಅದರ ಅಂದವು ಕೆಡದಂತೆ ನೋಡಿಕೊಳ್ಳುವುದು ನಮ್ಮ ಪ್ರಥಮ ಕರ್ತವ್ಯ. ಇನ್ನೊಂದು ಮಾತು;
ನಮ್ಮ ಲಿಪಿಗೆ ದ್ರಾವಿಡರ ಚಿತ್ರಲಿಪಿಯೆ ಮೂಲವಾಗಿದ್ದರೂ ಅದರ ಮೇಲೆ ಸಂಸ್ಕೃತ ವರ್ಣಮಾಲೆಯ ಪ್ರಭಾವವೂ ಉಂಟಾಗಿದೆ. ದೀರ್ಘ, ಮಹಾಪ್ರಾಣ, ಒತ್ತಕ್ಷರ, ಕಾಗುಣಿತ, ಇವಕ್ಕೆ ಕೆಲವು ತಿದ್ದುಪಾಟುಗಳು ಈಗ ಅಗತ್ಯವೆಂದು ಕಾಣುತ್ತದೆ. ಈ ತಿದ್ದುಪಾಟುಗಳು ಲಿಪಿ ತತ್ವಗಳಿಗನುಸಾರವಾಗಿ ಯಂತ್ರಸೌಕರ್ಯಗಳಿಗೆ ಅನುಗುಣವಾಗಿ ಸೂಚಿಸಲ್ಪಡಬೇಕು. ಇಂದಿನ ನಮ್ಮ ಲಿಪಿ ಹಲವು ನ್ಯೂನ್ಯತೆಗಳಿಂದ ಕೂಡಿದ್ದಾಗಿ ಚಿಕ್ಕಮಕ್ಕಳಿಗೆ ಹಾಗೂ ನಿರಕ್ಷರಿಗಳಾದ ವಯಸ್ಕರಿಗೆ ಕಲಿಯಲು ಬಹು ತೊಡಕಾಗಿದೆ. ಈ ದೋಷಗಳ ನಿವಾರಣೆಯಾಗಲೇಬೇಕು. ಆದರೆ ಯಂತ್ರ ಸೌಕರ್ಯಕ್ಕಾಗಿ ಈಗಿನ ಲಿಪಿಯನ್ನು ತೀರ ವಿಕೃತಗೊಳಿಸುವುದೂ ತಪ್ಪಾದೀತು. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿಯ ಲಿಪಿತಜ್ಞರೆಲ್ಲ ಒಂದೆಡೆಗೆ ಸೇರುವಂತೆ ಲಿಪಿ-ಸಮ್ಮೇಳನವೊಂದನ್ನು ಕರೆದು ಅದರಲ್ಲಿ ನಿರ್ಣಯವಾಗುವ ತಿದ್ದುಪಾಟುಗಳನ್ನು ಸ್ವೀಕರಿಸುವುದು ಹೆಚ್ಚು ವಿಹಿತ. ಲಿಪಿ-ಸಂಸ್ಕರಣದ ಬಗೆಗೆ ಆಗಾಗ ಕೆಲವು ಪ್ರಯತ್ನಗಳೇನೋ ನಡೆದಂತೆ ತೋರಿದರೂ ಈ ವಿಚಾರದಲ್ಲಿ ಇರಬೇಕಾದ ಆಸ್ಥೆ ಕನ್ನಡ ಜನತೆಯಲ್ಲಿ ಇನ್ನೂ ಹುಟ್ಟಿಲ್ಲವೆಂದೇ ಹೇಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯವನ್ನು ಮೊದಲು ಆರಂಭ ಮಾಡಿತು. ಅದೇ ಈ ಕಾರ್ಯವನ್ನು ಪೂರ್ತಿಗೊಳಿಸಬಲ್ಲ ಸಂಸ್ಥೆ. ಕನ್ನಡ ವಿದ್ವಾಂಸರೂ ಸಂಘ-ಸಂಸ್ಥೆಗಳೂ ಈ ಕಾರ್ಯದಲ್ಲಿ ನೆರವಿತ್ತು ಸಹಕರಿಸಿ ನಾಡಿನ ಪ್ರಗತಿಗೆ ಕೈದೀವಿಗೆಯಾಗಬೇಕು.
Tag: Kannada Sahitya Sammelana 32, Reverend Uttangi Channappa
೩೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ತಿರುಮಲೆ ತಾತಾಚಾರ್ಯಶರ್ಮ
ಮೊನೆಚಾದ ಬರಹ ಸಿಡಿಲಿನಂಥ ಮಾತಿಗೆ ಪ್ರಸಿದ್ಧರಾಗಿ ವಿಶ್ವಕರ್ನಾಟಕ ಪತ್ರಿಕೆಯ ಮೂಲಕ ಇತಿಹಾಸವನ್ನೇ ನಿರ್ಮಿಸಿದ ಕನ್ನಡ ಭೀಷ್ಮರು ಎಂದರೆ ತಿರುಮಲೆ ತಾತಾಚಾರ್ಯಶರ್ಮರು. ಇವರು ಶ್ರೀನಿವಾಸ ತಾತಾಚಾರ್ಯ-ಜಾನಕಿ ಅವರ ಪುತ್ರರಾಗಿ ೨೭-೪-೧೮೯೫ರಲ್ಲಿ ಚಿಕ್ಕಬಳ್ಳಾಪುರದಲ್ಲಿ ರಾಜಮನೆತನದಲ್ಲಿ ಜನಿಸಿದರು.
ಗುರುಕುಲಪದ್ಧತಿಯ ಶಿಕ್ಷಣ ಮನೆಯಲ್ಲಿ ಸಿಕ್ಕಿತು. ಶಾಲಾ ವಿದ್ಯಾಭ್ಯಾಸ ಚಿಕ್ಕಬಳ್ಳಾಪುರ, ಬೆಂಗಳೂರು ಹಾಸನಗಳಲ್ಲಿ ನಡೆಯಿತು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿಗೆ ಸೇರಿದರೂ ಧನಾಭಾವದಿಂದ ವಿದ್ಯಾಭ್ಯಾಸ ಮುಂದಕ್ಕೆ ಸಾಗಲಿಲ್ಲ.
೧೯೧೯ರಲ್ಲಿ ಶಾಸನ ಇಲಾಖೆಯಲ್ಲಿ ತೆಲುಗು – ಕನ್ನಡ ಸಹಾಯಕ ಅಧಿಕಾರಿಯಾಗಿ ೫ ವರ್ಷ ಸೇವೆ ಸಲ್ಲಿಸಿದ ಮೇಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಕೆಲಸಕ್ಕೆ ರಾಜೀನಾಮೆಯಿತ್ತರು. ಗಾಂಧೀಜಿಯವರನ್ನು ಭೇಟಿ ಆಗಿ ಅವರ ಆಣತಿಯಂತೆ ವಿಶ್ವಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ೨೭ ವರ್ಷಗಳ ಕಾಲ ಅವರು ಆ ಪತ್ರಿಕೆಯನ್ನು ನಡೆಸಿದರು.
೧೯೪೩ರಲ್ಲಿ ಮೈಸೂರು ಪತ್ರಿಕೋದ್ಯೋಗಿಗಳ ಸಂಘದ ಅಧ್ಯಕ್ಷರಾದರು, ೧೯೪೪-೫0ರಲ್ಲಿ ಬೆಂಗಳೂರು ಮುನಿಸಿಪಲ್ ಕೌನ್ಸಿಲ್ರಾದರು. ಬೆಂಗಳೂರಿನ ಅಮೆಚೂರ್ ನಾಟಕ ಮಂಡಳಿ ಮೂಲಕ ಟೊಳ್ಳುಗಟ್ಟಿ ನಾಟಕವನ್ನು ಬೆಳಕಿಗೆ ತಂದರು. ಬೆಂಗಳೂರು ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
೧೯೪೭ರಲ್ಲಿ ಕಾಸರಗೋಡಿನಲ್ಲಿ ನಡೆದ ೩೧ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶರ್ಮರನ್ನು ಅಧ್ಯಕ್ಷರನ್ನಾಗಿ ಆರಿಸಿ ಸನ್ಮಾಸಿದರು. ೧೯೭0ರಲ್ಲಿ ಮಂಡ್ಯ ಜಿಲ್ಲಾಪರಿಷತ್ತಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ೧೯೪೭ರಿಂದ ೧೯೪೯ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಯ್ಕೆಗೊಂಡರು.
ಸ್ವಾತಂತ್ರ್ಯ ಹೋರಾಟಗಾರರೂ, ಬರಹಗಾರರೂ, ಪತ್ರಿಕಾಕರ್ತರೂ ಸರಳ ಜೀವಿಗಳು ವಾಗ್ಮಿಗಳೂ ಗಾಂಧಿ ಭಕ್ತರೂ ಹಾಸ್ಯಪ್ರಿಯರೂ ಆಗಿದ್ದ ತಿ. ತಾ. ಶರ್ಮರ ಲೇಖನಿಯಿಂದ ಹತ್ತಾರು ಗ್ರಂಥಗಳು ಬಂದಿವೆ. ಅವರ ಕೆಲವು ಗ್ರಂಥಗಳು ಹೀಗಿವೆ :
ಕನ್ನಡ ಕವಿಗಳು (ಜೀವನ ಚರಿತ್ರೆ), ಮೋಕ್ಷಗುಂಡಂ ವಿಶ್ವೇಶ್ವರಯ್ಯ (ಜೀವನ ಚರಿತ್ರೆ), ಕರ್ಮಫಲ (ಕಥಾಸಂಗ್ರಹ), ವಿಕ್ರಾಂತ ಭಾರತ (ಇತಿಹಾಸ), ಜಗತ್ಕಥಾವಲ್ಲರಿ (ಅನುವಾದ), ಕರ್ಣಾಟಕ ಕೈಪಿಡಿ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಮಾಸ್ತಿಯವರ ಮನೋಧರ್ಮ ವಿಚಾರ ಕರ್ನಾಟಕ, ಕರ್ಣಾಟಕ ಕೈಪಿಡಿ – ಇತ್ಯಾದಿ.
ಇವರು ೧-೯-೧೯೭೩ರಂದು ದಿವಂಗತರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೩೧
ಅಧ್ಯಕ್ಷರು, ತಿ.ತಾ. ಶರ್ಮ
ದಿನಾಂಕ ೨೯, ೩0, ೩೧ ಡಿಸೆಂಬರ್ ೧೯೪೮
ಸ್ಥಳ : ಕಾಸರಗೋಡು
ಜನರ ಅಭಿಲಾಷೆ
“ಸಂಪ್ರದಾಯದ ನಾನಾ ಸಿಕ್ಕುಗಳಲ್ಲಿ ವಿಲಿವಿಲಿ ಒದ್ದಾಡುತ್ತಿರುವ ಪರಿಷತ್ತಿನಲ್ಲಿ ನೀವು ಕೆಲವು ಪ್ರಗತಿಪರ ಮಾರ್ಪಾಡುಗಳನ್ನು ಅನುಷ್ಠಾನದಲ್ಲಿ ತರುವಿರೆಂದು ಆಶಿಸುತ್ತೇನೆ.”
“ಕರ್ನಾಟಕದ ಜಟಿಲ ಪ್ರಶ್ನೆ ಸಮ್ಮೇಳನಾಧ್ಯಕ್ಷರಾದ ನಿಮ್ಮ ಮೇಲೆ ಬಿದ್ದಿದೆ.”
“ತಾವು ಸಮ್ಮೇಳನಾಧ್ಯಕ್ಷರಾಗಿ, ಪ್ರಗತಿಯ ದಾರಿಯಲ್ಲಿ ನಡೆಯುವ ಸಾವಿರಾರು ಯುವಕರಿಗೆ ಬೆಂಬಲವಾಗಿ ನಿಂತು, ಕನ್ನಡ ಸಾಹಿತ್ಯದ ಪ್ರತಿಗಾಮಿ ಧೋರಣೆಯನ್ನು ವಿರೋಧಿಸಿ, ಪ್ರಗತಿ ಪಥದಲ್ಲಿ ಇನ್ನಷ್ಟು ವೇಗವಾಗಿ ಮುಂದುವರಿಯುವಂತೆ ಶ್ರಮಿಸುವಿರಾಗಿ ಹಾರೈಸುತ್ತೇನೆ.”
“ಕ್ರಾಂತಿಯ ಒಳ್ಳೆಯ ಸಮಯದಲ್ಲಿ ತಾವು ಅಧ್ಯಕ್ಷರಾದುದು ಸಂತೋಷ. ಸಮಸ್ತ ಕನ್ನಡ ದೇಶಕ್ಕೆ ಬೇಕಾದುದು ತಮಗೇ ವಿಧಿತ.”
ಈ ಅಭಿನಂದನ ವಚನಗಳಲೆಲ್ಲ ಕನ್ನಡ ನಾಡಿನ ನಾಡಿಯ ಹೊಡೆತ ಹೇಗಿದೆಯೆಂಬುದು ಕಾಣಬರುತ್ತದೆ. ಕನ್ನಡಿಗರೆಲ್ಲರ ಆಶಯ ಆದರ್ಶವೇನು. ಅವರ ಆತುರ ಕಾತರಗಳೇನೆಂಬುದು ಸ್ಪಷ್ಟವಾಗುತ್ತದೆ. ಕ್ರಾಂತಿ ಬೇಕು! ಕನ್ನಡ ನಾಡೆಲ್ಲ ಒಂದಾಗಬೇಕು! ನನ್ನ ಅಧ್ಯಕ್ಷ ಪದವಿಯ ಅವಧಿಯಲ್ಲೇ ಆ ಕಾರ್ಯಸಿದ್ಧಿ ಆಗಿಬಿಡಬೇಕು!!
ಸಮ್ಮೇಳನಾಧ್ಯಕ್ಷರ ಹೊಣೆ
“ಸ್ವತಂತ್ರ-ಏಕೀಕೃತ-ಕನ್ನಡನಾಡನ್ನು ಕಟ್ಟಲು ಹೆಣಗಬೇಕು. ಈ ಬಾರಿಯ ಸಮ್ಮೇಳನಾಧ್ಯಕ್ಷರಾಗಿ ಆರಸಿ ಬಂದವರ ಹೊಣೆ ದೊಡ್ಡದಿದೆ. ಆರಿಸಿ ಬಂದವರು ಹಿಂದಿನ ಸಮ್ಮೇಳನಾಧ್ಯಕ್ಷರಂತೆ ಮೂರೋ ನಾಲ್ಕೋ ದಿನಗಳ ಸಮ್ಮೇಳನದ ಕಾರ್ಯಕಲಾಪಗಳನ್ನು ಮುಗಿಸಿ ಮನೆ ಸೇರಬಾರದು. ಈ ವರ್ಷ ಇಡೀ ಕರ್ಣಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಹೆಣಗಬೇಕು. ಸಮ್ಮೇಳನದಲ್ಲಿ ಬಹುಮತ ದೊರಕಿಸಿಕೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು. ಕಾಂಗ್ರೆಸ್ ಅಧ್ಯಕ್ಷರಂತೆ ನಾಡಿನಲ್ಲೆಲ್ಲಾ ಪ್ರವಾಸ ಕೈಕೊಂಡು ಪ್ರಚಾರ ನಡೆಸಿ, ಕನ್ನಡಿಗರಲ್ಲಿ ಕನ್ನಡದ ಕುರಿತು ಜಾಗೃತಿ ಹುಟ್ಟಿಸಬೇಕು. ಕರ್ತವ್ಯೋನ್ಮುಖರಾಗುವಂತೆ ಹುರಿದುಂಬಿಸಬೇಕು. ಹಾಗಾದಲ್ಲಿ ಮಾತ್ರ ಅಧ್ಯಕ್ಷರಾಗಿ ಆರಿಸಿ ಬಂದವರ ಕರ್ತವ್ಯ ಸಾರ್ಥಕತೆಯನ್ನು ಪಡೆಯುತ್ತದೆ.”
ಇದು ಉಡುಪಿಯ “ಪ್ರಕಾಶ”ವಾಣಿ ಬರಹ. ಈ ಅಧ್ಯಕ್ಷ ಪದವಿಯ ಜವಾಬ್ದಾರಿ ಎಷ್ಟೆಂಬುದು ಸ್ಪಷ್ಟವಾಗುತ್ತದೆ. “ಕನ್ನಡ ನಾಡನ್ನು ಕಟ್ಟಲು ಹೆಣಗಾಡಬೇಕು” – ಈ ವಾಕ್ಯವೊಂದರಲ್ಲಿ ಸಮ್ಮೇಳನದ-ಪರಿಷತ್ತಿನ-ಕರ್ತವ್ಯ ಏನೆಂಬುದು ಸೂಚಿತವಾಗಿದೆ. ಅಧ್ಯಕ್ಷನೆಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ. ಈ ಸಮ್ಮೇಳನದ ಮುಖ-ಪರಿಷತ್ತಿನ ಮುಖ-ಕನ್ನಡ ಜನಪದದ ಮಹಾಮುಖ. ಕನ್ನಡ ನಾಡಿನ ಜನರು “ನಾಡನ್ನು ಕಟ್ಟಬೇಕು” ಎಂದು ಸಂಕಲ್ಪ ಮಾಡಿ ಅನೇಕ ವರ್ಷಗಳಾದುವು. ಈ ಸಂಕಲ್ಪ ಸಾಧನೆಯ ಸಿದ್ಧಿಯ ಕಾಲ ಸವಿೂಪಿಸುತ್ತಿರುವ ಹಾಗಿದೆ. “ಇಗೋ ಸಿದ್ಧಿಸಿತು” ಎಂದು ಕಾಸರಗೋಡಿನ ವೇದಿಕೆಯಿಂದ ಕನ್ನಡಿಗರೆಲ್ಲ ಉಚ್ಛಕಂಠದಿಂದ ಸಾಗರಘೋಷವನ್ನು ವಿೂರಿಸಿ ಘೋಷಿಸಿದ್ದಾದರೆ ಸಿದ್ಧಿಸಿತು! ಇಚ್ಛಾಶಕ್ತಿಯನ್ನು ವಿೂರಿಸಿದ ಶಕ್ತಿ ಮತ್ತೊಂದಿಲ್ಲ.
ಪರಿಷತ್ತಿನ ಬಗ್ಗೆ ಉಷ್ಣೋದ್ರೇಕ ವಚನಗಳು
“ಪರಿಷತ್ತು-ಸಾಹಿತ್ಯ ಪರಿಷತ್ತು-ಎಂದಿನವರೆಗೆ ರಾಜಕಾರಣದಿಂದ ಲಿಪ್ತವಾಗದೆ ಇರುವುದೋ ಅಂದಿನವರೆಗೆ ಅದು ಭದ್ರವಾಗಿರುವುದು; ಬೆಳೆದು ಬೆಳಗುತ್ತ ಹೋಗುವುದು. ಅದು ಎಂದು ರಾಜಕೀಯ ಕ್ರೀಡಾಕ್ಷೇತ್ರವಾಗುವುದೋ, ರಾಜಕಾರಣದಲ್ಲಿ ಓಡಾಡುವವರ ಕೈಗೆ ಪರಿಷತ್ತಿನ ಆಡಳಿತ ಸೂತ್ರಗಳು ಬರುವುವೋ ಅಂದೇ ಮುಗಿಯಿತು ಪರಿಷತ್ತಿನ ಕೆಲಸ.”
ಈ ಬಗೆಯ ಉಷ್ಣೋದ್ರೇಕ ವಚನಗಳು ಅಲ್ಲಿ ಇಲ್ಲಿ ಕೇಳಿ ಬರದೆ ಇಲ್ಲ. ಇಂತಹ ವಚನಗಳ ರಚನೆಯಾಗಿರುವುದೇ ಆಕ್ಷೇಪಣೆಗೆ ಸಮಾಧಾನ ಸಾಕ್ಷಿಗಳಾಗಿವೆ. ಕೋಪದಿಂದ, ಅಸಮಾಧಾನದಿಂದ, ‘ಹಾಳಾಗಿ ಹೋಯಿತಲ್ಲಾ’ ಎಂಬ ಭಂಗಿತ ಭಾವದಿಂದ ಅಂದ ಮಾತು ಗದ್ಯರಚನೆಗೊಂದು ಉತ್ತಮ ಮಾದರಿಯಾಯಿತು.
ಪರಿಷತ್ ಏನಾಗಬೇಕು?
‘ಜೀವನ ಪಥನಿರ್ಣಯ, ನಿತ್ಯಜೀವನ-ಈ ಕರ್ತವ್ಯವನ್ನು ಮೇಲ್ಮಟ್ಟದಲ್ಲಿ ನಿರ್ವಹಿಸಬಲ್ಲವರು ಸಾಹಿತಿಗಳು, ಕಲಾವಿದರು, ಸಂಸ್ಕೃತಿ ಪೋಷಕರು. ಇಂತಹ ರಾಷ್ಟ್ರಜೀವ ನಿರ್ಮಾಣ ನಿರ್ವಾಹಕಶಕ್ತಿಯನ್ನು ಉತ್ಪತ್ತಿ ಮಾಡಬಲ್ಲ, ಮಹಾಶಿಲ್ಪಿಗಳನ್ನೂ ಸಾಹಿತಿಗಳನ್ನೂ, ಚಿತ್ರಕರ್ಮಿಗಳನ್ನೂ, ರೂಪಕಾರಿಗಳನ್ನೂ, ಗಾಯಕವಾದಕರನ್ನೂ ಸೃಷ್ಟಿಸಬಲ್ಲ ಮೂಲಸ್ಥಾನವೆನಿಸಬೇಕು ಪರಿಷತ್.
ಪರಿಷತ್ತು ಶಕ್ತಿಯ ಉತ್ಪತ್ತಿಸ್ಥಾನ ಆಗಬೇಕು
ಕಲಾವಿದ ಸಾಹಿತಿ ಅವರಿಬ್ಬರೂ ರಾಷ್ಟ್ರ ಸೃಷ್ಟಿಸ್ಥಿತಿ ಕಾರ್ಯಕರ್ತರು ಅಂದ ಮೇಲೆ ಅವರ ಸ್ಥಾನವು ಜನಪದದಲ್ಲಿ ಎಷ್ಟು ಶ್ರೇಷ್ಠವೆಂಬುದನ್ನು ಪ್ರತಿಯೊಬ್ಬರೂ ಗ್ರಹಿಸಬಲ್ಲರು. ಸಾಹಿತಿಗಳೇನು ಸೃಷ್ಟಿಮಾಡುವರು, ಕಲಾವಿದರೇನು ನಿರ್ಮಾಣ ಮಾಡುವರು. ಅದು ಇಂದಿನ ಜನಜೀವನದ ಪ್ರತಿಬಿಂಬವಾಗಿರಬೇಕು. ನಾಳೆಯ ಭವ್ಯಜೀವನದ ಆದರ್ಶಚಿತ್ರಗಳನ್ನು ಸಾಹಿತಿಗಳು, ಕಲಾವಿದರು ನಿರ್ಮಾಣಮಾಡುವರು. ಒಂದು ಕಡೆ ಇರುವ ನಡೆಯುವ, ಪ್ರಸಕ್ತ ಜೀವನದ ಸತ್ಯಚಿತ್ರಗಳನ್ನೆತ್ತಿ ತೋರಿಸುವುದು ಇನ್ನೊಂದು ಕಡೆ ಇರಬೇಕಾದ ಸಾಧಿಸಬೇಕಾದ ಆದರ್ಶ ಜೀವನಚಿತ್ರಗಳನ್ನು ನಿರ್ಮಿಸುವುದು- ಇವೆರಡೂ ಕೆಲಸಗಳು ಮುಂದುವರಿಯಬೇಕು. ಈ ಕೆಲಸಗಳಿಗೆ ಬೇಕಾದ ಶಕ್ತಿಯನ್ನು ರಾಷ್ಟ್ರದಲ್ಲಿ ಉತ್ಪತ್ತಿ ಮಾಡಬೇಕು. ಅಂತಹ ಶಕ್ತಿಯ ಉತ್ಪತ್ತಿಸ್ಥಾನವೆನಿಸಬೇಕು ಸಾಹಿತ್ಯ ಪರಿಷತ್ತು.
ಪರಿಷತ್ತು ಮತ್ತು ಕನ್ನಡ ನಾಡಿನ ಕನಸು
ಕನ್ನಡ ನಾಡು ದೀರ್ಘಕಾಲದಿಂದ ಸವಿಕನಸೊಂದನ್ನು ಕಾಣುತ್ತಿದೆ. ಈ ಕನಸೇನೆಂಬುದನ್ನು ನಾಡಿನವರೆಲ್ಲ ಚೆನ್ನಾಗಿ ಬಲ್ಲರು. ಆ ಕನಸು ನನಸಾಗುವ, ಅಮೃತಘಳಿಗೆ ಬಂದಿದೆ. ಕರ್ಣಾಟಕ ಮಹಾರಾಷ್ಟ್ರವನ್ನು-ವಿಶ್ವಕರ್ಣಾಟಕವನ್ನು- ನಿರ್ಮಿಸಬೇಕೆಂದು ಎಲ್ಲ ಜನರೂ, ಲಿಂಗ, ವಯಸ್ಸು, ಸ್ಥಾನ ಗೌರವ, ವೃತ್ತಿ, ಪಕ್ಷ, ಕುಲ ಯಾವುದನ್ನೂ ಲೆಕ್ಕಿಸದೆ ಏಕೈಕ ಧ್ಯೇಯದಿಂದ, ಒಂದಲ್ಲ ಒಂದು ಪ್ರಮಾಣದಲ್ಲಿ ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ಕೆಲಸಮಾಡುತ್ತಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಯಿತು. ಅದಕ್ಕೆ ಕೊಂಚಕಾಲದ ಹಿಂದೆಯೇ ಧಾರವಾಡದ ವಿದ್ಯಾವರ್ಧಕ ಸಂಘವೇ ಮುಂತಾದ ಒಂದೆರಡು ಸಂಸ್ಥೆಗಳು ಹುಟ್ಟಿದ್ದವು. ಕರ್ಣಾಟಕ ಸಾಹಿತ್ಯ ಪರಿಷತ್ತು ಬೆಳೆದಂತೆಲ್ಲ ನಾಡಿನಲ್ಲಿ ನಾನಾ ಕನ್ನಡ ಸಂಘಗಳು ಸಾಹಿತ್ಯ ಸಮಿತಿಗಳು ಗೆಳೆಯರ ಗುಂಪುಗಳು, ತುಂಟರ ತಂಡಗಳು, ಬಳಗಗಳು, ಸಮಿತಿಗಳು ಅವತಾರ ಮಾಡಿದವು. ಅವುಗಳಲ್ಲನೇಕ ಸಂಸ್ಥೆಗಳು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಅಂಗಸಂಸ್ಥೆಗಳಾದವು. ಜೊತೆ ಜೊತೆಯಲ್ಲೇ ಕರ್ಣಾಟಕದ ಏಕೀಕರಣ ಸಂಘದ ಸ್ಥಾಪನೆಯಾಗಿ ಆ ಸಂಸ್ಥೆಯೂ ತನ್ನದೇ ಆದ ವಿಶಿಷ್ಟ ರೂಪದಲ್ಲಿ ಕರ್ಣಾಟಕವನ್ನೆಲ್ಲ ಒಂದುಗೂಡಿಸುವ ಧ್ಯೇಯಸಾಧನೆಗಾಗಿ ಕೆಲಸ ಮಾಡುತ್ತಾ ಬಂದಿದೆ.
ಸುಧಾರಣೆಗಳಾಗಬೇಕು
ಈ ಕನ್ನಡ ಸಾಹಿತ್ಯ ಪರಿಷತ್ ರಾಷ್ಟ್ರ ನಿರ್ಮಾಣಶಕ್ತಿಯ ಉತ್ಪತ್ತಿ ಸ್ಥಾನವೆನಿಸಬೇಕು ಎಂದೇನೋ ಹೇಳಿದ್ದಾಯಿತು. ರಾಷ್ಟ್ರ ಮತ್ತು ವ್ಯಕ್ತಿಗೆ ಸಂಬಂಧಪಟ್ಟಂತೆ ಮಹಾಜೀವನಪಥ ತೋರಿಸಲು ಸಮರ್ಥರಾದ ರಾಜಶಿಲ್ಪಿಗಳನ್ನೂ, ಸಾಹಿತಿಗಳನ್ನೂ, ಚಿತ್ರಕರ್ಮಿಗಳನ್ನೂ, ಗಾಯಕ ವಾದಕರನ್ನೂ ವಾಗ್ಮಿಗಳನ್ನೂ ಈ ಪರಿಷತ್ತು ನಿರ್ಮಿಸಬೇಕು. ಇಂತಹ ರಾಷ್ಟ್ರಶಿಲ್ಪಿಗಳ ಪ್ರವಾಹ ಅವಿಚ್ಛಿನ್ನವಾಗಿ ನಾಡಿನೊಳಗೆ ಹರಿಯಬೇಕು; ಶಾಖೋಪಶಾಖೆಗಳಾಗಿ ಹರಿಯಬೇಕು; ನಾಡಿನ ನಾಡಿನಾಡಿಗಳಲ್ಲಿ ಹೊಸಶಕ್ತಿ ಹರಿಸಬೇಕು. ಹೊಸ ಚೈತನ್ಯವಿತ್ತು ನಾಡನ್ನೆಲ್ಲ ಬೆಳೆಸಿ, ಬೆಳಗಿಸಬೇಕು.
ಅಂದಮೇಲೆ ಇಷ್ಟು ಮಾತ್ರ ಸ್ಥಿರವಾಯಿತು. ಪರಿಷತ್ತಿನ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕು. ಕಾರ್ಯಕ್ಷೇತ್ರ ವಿಸ್ತಾರವಾಗಬೇಕು. ಒಂದೊಂದು ಕ್ಷೇತ್ರದಲ್ಲೂ ಸುವ್ಯವಸ್ಥೆಯಿಂದ, ಭರದಿಂದ ಕೆಲಸ ನಡೆಯಬೇಕು. ಹೀಗೆ ಕೆಲಸ ನಡೆಯಲು ನಾಡಿನ ಉತ್ಸಾಹ, ತಾರುಣ್ಯ, ಅನುಭವ, ನೈಪುಣ್ಯ, ಸಾಹಸ, ಜನ, ಧನ, ಅಭಿಮಾನ, ಎಲ್ಲವನ್ನೂ ಉಪಯೋಗ ಮಾಡಿಕೊಳ್ಳಬೇಕು. ಎಲ್ಲವನ್ನೂ ಕಟ್ಟಿಕೊಳ್ಳಬೇಕು. ಎಲ್ಲರನ್ನೂ ಕಟ್ಟಿಕೊಳ್ಳಬೇಕು. ಆಗ ಮಾತ್ರ ನಾವು ರಾಷ್ಟ್ರವನ್ನು ಕಟ್ಟಲು ಸಮರ್ಥರಾಗುವೆವು.
ಪರಿಷತ್ತಿನ ರಚನೆ ಆಡಳಿತ ವ್ಯವಸ್ಥೆಯಲ್ಲಿ ತಕ್ಕ ಬದಲಾವಣೆಗಳಾಗಬೇಕೆಂಬ ಅಪೇಕ್ಷೆಯನ್ನು ನಾಡಿನ ಹಿತೈಷಿಗಳೆಲ್ಲ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ನಾಡಿನ ಎಲ್ಲ ಭಾಗಗಳಲ್ಲೂ `ಪರಿಷತ್ತಿನಲ್ಲಿ ಸುಧಾರಣೆಗಳಾಗಬೇಕು’ ಎಂಬ ಕೂಗು ಕೇಳಿಬರುತ್ತಿದೆ. ಏನಾಗಬೇಕು, ಹೇಗಾಗಬೇಕೆಂಬ ನಿರ್ಣಯ ಮಾಡುವ ಸ್ಥಳವಿದಲ್ಲ. ಆದರೆ ಜನತೆಯ ಹೃದಯದಲ್ಲಿ ಈ ಬಗೆಯ ಅಪೇಕ್ಷೆಯೊಂದಿದೆಯೆಂಬುದನ್ನು ಒತ್ತಿ ಹೇಳಬೇಕಾಗಿದೆ. ಸ್ವಾಗತಿಸಬೇಕಾಗಿದೆ. ಅಲ್ಲದೆ ಪರಿಷತ್ತಿನ ಆಗುಹೋಗುಗಳ ಹೊಣೆಗಾರಿಕೆ ಹೊತ್ತವರ ಲಕ್ಷ್ಯವನ್ನಿತ್ತ ಕಡೆ ಎಳೆಯುವುದು ಆವಶ್ಯಕವೆಂದು ಕಂಡುಬರುತ್ತದೆ.
ಬಿಜಾಪುರದ ರಾವ್ ಬಹದ್ದೂರ್ ಶ್ರೀ ಪಿ.ಜಿ. ಹಳಕಟ್ಟಿಯವರು ನನಗೆ ಇತ್ತೀಚೆಗೆ ಬರೆದ ಪತ್ರಗಳೊಂದರಲ್ಲಿ ಹೀಗೆ ಹೇಳಿದ್ದಾರೆ. ಇದನ್ನು ನಾನು ಎತ್ತಿ ಕೊಡುವುದರಲ್ಲಿ ಯಾವ ಔಚಿತ್ಯಕ್ಕೂ ಲೋಪವನ್ನುಂಟುಮಾಡುತ್ತಿಲ್ಲ.
“ಹೊಸ ಪರಿಸ್ಥಿತಿನುಸರಿಸಿ ಪರಿಷತ್ತಿನ ನಿಬಂಧನೆಗಳಲ್ಲಿ ಮಾರ್ಪಾಡುಗಳಾಗುವುದು ಅತ್ಯಾವಶ್ಯಕವಾಗಿದೆ. ಮನ್ನಣೆಗಾಗಿ ಆರಿಸಿದ ಅಧ್ಯಕ್ಷ, ಉಪಾಧ್ಯಕ್ಷರಿರಕೂಡದು. ಹೀಗೆ ನಡೆದುಬಂದುದನ್ನು ಇನ್ನು ಮುಂದೆ ನಿಲ್ಲಿಸಬೇಕು. ಪರಿಷತ್ತಿನ ಅಧಿವೇಶನದ ಅಧ್ಯಕ್ಷರೇ ವರ್ಷಾದ್ಯಂತದವರೆಗೆ ಅಧ್ಯಕ್ಷರಾಗಿ ಉಳಿಯತಕ್ಕದ್ದು. ಅವರು ತಮ್ಮ ಸಹಾಯಕ್ಕೋಸ್ಕರ ಉಪಾಧ್ಯಕ್ಷಸ್ಥಾನಕ್ಕೆ ನಾಲ್ಕಾರು ಜನರನ್ನು ಸೂಚಿಸಿ ಅವರನ್ನು ಪರಿಷತ್ತಿನ `ಜನರಲ್ ಕಮಿಟಿ’ಯವರು ಆರಿಸತಕ್ಕದ್ದು.
ಕಾರ್ಯಕ್ಷೇತ್ರ ವಿಸ್ತಾರ
ಈ ಪರಿಷತ್ತಿನ-ರಾಷ್ಟ್ರ ಪರಿಷತ್ತಿನ ಕಾರ್ಯಕ್ಷೇತ್ರ ವಿಸ್ತಾರವಾಗಬೇಕೆಂಬುದನ್ನು ಗ್ರಹಿಸಿದ್ದಾಯಿತು. ಆ ಕ್ಷೇತ್ರ ವಿಸ್ತಾರ ವಿವರಗಳನ್ನಿಲ್ಲೀಗ ಕೊಡಲು ಸಾಧ್ಯವಿಲ್ಲವಾದರೂ ಸಂಗ್ರಹವಾಗಿ ಸೂಚನೆ ಮಾಡಬಹುದು. ಎಲ್ಲ ಕೆಲಸಗಳನ್ನೂ, ಕಾರ್ಯವಿಧಾನಗಳನ್ನೂ “ಇನ್ನೇನೂ ಉಳಿದಿಲ್ಲ” ಅನ್ನುವ ಹಾಗೆ ಮಾಡುವುದು ಸಾಧ್ಯವೂ ಅಲ್ಲ; ಹಾಗೆ ಮಾಡಲೆತ್ನಿಸುವುದು ಸಂಸ್ಥೆಯ ಸಹಜ ಬೆಳವಣಿಗೆಯಲ್ಲಿ ವಿಶ್ವಾಸವುಳ್ಳವರಿಗೆ ನ್ಯಾಯವೆಂದೂ ಕಾಣುವುದಿಲ್ಲ. ಯಾವ ಸಂಸ್ಥೆಯ ಕಾರ್ಯಕ್ಷೇತ್ರವಾದರೂ, ಕಾರ್ಯಸಾಧನ ವಿಧಾನವಾದರೂ ಕಾಲಧರ್ಮ ಮತ್ತು ಜನತೆಯ ಆಶಯದಂತೆ ಸಹಜ ಪರಿವರ್ತನ ಮತ್ತು ಅನುಗೊಳ್ಳುವ ಸ್ವಭಾವದಿಂದ ಕೂಡಿರಬೇಕು. ಚೌಕಟ್ಟೇಕೆ ಉಕ್ಕಿನದಾಗಿರಬೇಕು?
ಭಾಷೆ ಸಾಹಿತ್ಯ
೧. ಭಾಷಾಸಾಹಿತ್ಯ ಸಂಶೋಧನ, ವ್ಯವಸಾಯ ಮತ್ತು ಪ್ರಚಾರ.
೨. ಪ್ರಾಚೀನ ಗ್ರಂಥಗಳ ಸಂಗ್ರಹ, ಸಂರಕ್ಷಣೆ ಮತ್ತು ಪ್ರಕಟನೆ.
೩. ವಿಶ್ವಕೋಶ, ನಿಘಂಟುಗಳ ನಿರ್ಮಾಣ.
೪. ಶಬ್ದ ಸಂಪತ್ತು ಲಿಪಿ.
೫. ಪ್ರಮಾಣ ವಿಶಿಷ್ಟ (standardised) ಪಠ್ಯಪುಸ್ತಕಗಳ ಪ್ರಕಟನೆ.
೬. ಗ್ರಂಥಕರ್ತರಿಗೆ ಪ್ರೋತ್ಸಾಹ.
೭ ವಯೋನುಪೂರ್ವ ಸಾಹಿತ್ಯ ಮತ್ತು ಶಿಶುಸಾಹಿತ್ಯ.
೮. ಗದ್ಯ ಸಾಹಿತ್ಯ ಪ್ರಾಧಾನ್ಯ.
ಸಾಂಸ್ಕೃತಿಕ ಸಂಶೋಧನೆ
೧. ಇತಿಹಾಸ, ಗತವೈಭವಾವಶೇಷಗಳ, ಅಧ್ಯಯನ .
೨. ಶಿಲಾಶಾಸನಾನ್ವೇಷಣ.
೩. ಪ್ರಾಚೀನ ವಸ್ತು, ವಾಸ್ತುಶಿಲ್ಪ ಪರೀಕ್ಷೆ.
೪. ಸಂಶೋಧನ ಕಾರ್ಯಕ್ಕಾಗಿ ಪುದುವಟ್ಟುಗಳ ಏರ್ಪಾಟು.
೫. ಚಿತ್ರಕರ್ಮ, ಚಿತ್ರಕೂಟ ವ್ಯವಸ್ಥೆ.
೬. ನಾನಾ ಪ್ರಾಚೀನ ಲಿಪ್ಯನ್ವೇಷಣ ಶಾಖೆಗಳು, ಸಂಶೋಧ ಸಂಸ್ಥೆಗಳೊಂದಿಗೆ ಸಂಬಂಧ
೭. ಸಂಸ್ಕೃತಿಗೆ ಸಂಬಂಧsಪಟ್ಟಂತೆ ಅನುಸಂಧೇಯ, ನಿದರ್ಶನ (Reference) ಗ್ರಂಥಗಳ ರಚನೆ ಪ್ರಕಟನೆ.
ಪ್ರಚಾರ-ಪ್ರಕಟನೆ
೧. ಪ್ರಭುತ್ವ ಕಾರ್ಯಗಳೆಲ್ಲ ಕನ್ನಡದ ಮೂಲಕವೇ ಆಗುವಂತೆ ಮಾಡಬೇಕು.
೨. ನ್ಯಾಯಸ್ಥಾನಗಳ ಕೆಲಸವೆಲ್ಲ ಕನ್ನಡದಲ್ಲೇ ಆಗಬೇಕು.
೩. ಮಕ್ಕಳ ಶಿಕ್ಷಣವು ಕಲಾವಸ್ಥೆಗಳಲ್ಲೂ ಕನ್ನಡದ ಮೂಲಕವಾಗಿಯೇ ನಡೆಯಬೇಕು.
೪. ವಿಶ್ವವಿದ್ಯಾನಿಲಯಗಳ ಶಿಕ್ಷಣವೂ ಕನ್ನಡದ ಮೂಲಕವಾಗಿಯೇ ನಡೆಯಬೇಕು.
೫. ಸಂಚಾರೋಪನ್ಯಾಸಗಳು, ನಾಟಕ ಪ್ರದರ್ಶನಗಳು, ಯಕ್ಷಗಾನಗಳು, ಹರಿಕಥೆಗಳ ವ್ಯವಸ್ಥೆ.
೬. ಪ್ರದರ್ಶನಗಳ ಏರ್ಪಾಟು; ಚಲನಚಿತ್ರಗಳ ನಿರ್ಮಾಣ ಮತ್ತು ಪ್ರದರ್ಶನ ವ್ಯವಸ್ಥೆ.
೭. ಸುವ್ಯವಸ್ಥಿತ ಸರ್ವಾಂಗ ಪರಿಪೂರ್ಣ ಮುದ್ರಣಾಲಯ; ಗ್ರಂಥಪ್ರಕಟನೆ ಮತ್ತು ಮಾರಾಟದ ವ್ಯವಸ್ಥೆ.
೮. ಕನ್ನಡ ನಾಡಿನ ಸಂಸ್ಕೃತಿ, ಅಭಿಮಾನ ಪ್ರಚಾರ ಮಾಡಲು ನೈಪುಣ್ಯ ಪಡೆದ ಶ್ರದ್ಧಾಳುಗಳನ್ನು ಉತ್ಸಾಹಿಗಳನ್ನು ಸಿದ್ಧಗೊಳಿಸುವ ಶಿಕ್ಷಣ ಕೇಂದ್ರವಾಗಬೇಕು.
ವಸಂತ ಸಾಹಿತ್ಯೋತ್ಸವ
ಈಗ ಸಮ್ಮೇಳನಗಳು ನಡೆಯುವಾಗಲೂ ಮತ್ತು ಅಲ್ಲಲ್ಲಿ ವಸಂತ ಸಾಹಿತ್ಯೋತ್ಸವಗಳು ನಡೆಯುವಾಗಲೂ ಅವುಗಳ ಅಂಗವಾಗಿ ಪ್ರದರ್ಶನಗಳು ನಡೆಯುತ್ತಿವೆ. ಆದರೆ ಈಗ ನಡೆಯುತ್ತಿರುವಂತೆ ಅವು ಸಾಕಾದಷ್ಟು ಬೋಧಪ್ರದವಾಗಿಯೂ ಇಲ್ಲ; ಜ್ಞಾನಪ್ರಚಾರ ದೃಷ್ಟಿಯಿಂದ ಪರಿಣಾಮಕಾರಿಯಾಗಿಯೂ ಇಲ್ಲ. ಗ್ರಂಥಪ್ರದರ್ಶನ ಕಲಾಪ್ರದರ್ಶನ ವೃತ್ತಪತ್ರಿಕಾ ಪ್ರದರ್ಶನ ಹೀಗೆ ಅನೇಕ ಸಾಂಸ್ಕೃತಿಕ ಮತ್ತು ಇತರ ಪ್ರಾಚೀನ ಮತ್ತು ಅರ್ವಾಚೀನ ವಸ್ತುಸಂಗ್ರಹ ಮತ್ತು ಪ್ರದರ್ಶನಗಳನ್ನು ಸುವ್ಯವಸ್ಥೆಯಿಂದ ಏರ್ಪಡಿಸುವುದೇ ಒಂದು ಮುಖ್ಯ ಕರ್ತವ್ಯವೆಂದು ಭಾವಿಸಿ ಅದನ್ನು ತೃಪ್ತಿಕರವಾಗಿ ಪೂರೈಸಬೇಕು.
ಪರಿಷತ್ತಿನ ಮುದ್ರಣಾಲಯ
ಕೀರ್ತಿಶೇಷ ಶ್ರೀ ಬಿ.ಎಂ.ಶ್ರೀಕಂಠಯ್ಯನವರ ಅಪಾರ ದೇಶಭಕ್ತಿ ಮತ್ತು ಔದಾರ್ಯದ ಫಲವಾಗಿ ಒಂದು ಮುದ್ರಣಾಲಯವು ಪರಿಷತ್ತಿನ ಆಸ್ತಿಯಾಗಿದೆ. ಅದರ ಪ್ರಯೋಜನವಷ್ಟಿಷ್ಟೆಂದು ಹೇಳಲಾಗದು. ಅನುಭವದಿಂದ ಈಗಿನ ಯಂತ್ರೋಪಕರಣಗಳೂ ಮತ್ತು ಇತರ ಸಲಕರಣೆಗಳು ಸಾಕಾದಷ್ಟು ಇಲ್ಲ. ಮುದ್ರಣಾಲಯವನ್ನು ಸರ್ವಾಂಗ ಪರಿಪೂರ್ಣವಾಗಿ ಮಾಡಬೇಕಾಗಿದೆ. ಪ್ರಾಚೀನ ಗ್ರಂಥಗಳನ್ನು ಪ್ರಕಟಿಸಬೇಕಾಗಿದೆ. ಹಿಂದಿನ “ಕಾವ್ಯಕಲಾನಿಧಿ” ಪ್ರಾರಂಭಿಸಿದ ಕೆಲಸವನ್ನು ಮತ್ತಷ್ಟು ವಿತರಣೆಯಿಂದ ಮುಂದುವರಿಸಬೇಕಾಗಿದೆ. ಇಷ್ಟು ಮಾತ್ರವೇ ಅಲ್ಲ. ಇಂದಿನ ನೂರಾರು ಲೇಖಕರು ತಾವು ಬರೆದ ಗ್ರಂಥಗಳನ್ನು ಮುದ್ರಣ ಮಾಡಿಸಿ ಪ್ರಕಟಿಸಲು ಸಾಧ್ಯವಿಲ್ಲದೆ ನಿರಾಶರಾಗಿ ಕೂತಿದ್ದಾರೆ. ಸಾಹಸಿಗಳಾದ ಒಬ್ಬಿಬ್ಬರು ಸಾಲಸೋಲಗಳನ್ನು ಮಾಡಿ ಮುದ್ರಣ ಮಾಡಿಸುವ ಮಟ್ಟಿಗೆ ತಮ್ಮ ಚಾಪಲ್ಯವನ್ನು ತೀರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕೇವಲ ಲಾಭದೃಷ್ಟಿಯಿಂದ ಮಾತ್ರ ವ್ಯಾಪಾರ ಮಾಡುವ ಪುಸ್ತಕ ಪ್ರಚಾರಕರ ಕೈಗೆ ಸಿಕ್ಕಿ ಗೋಳಾಡುತ್ತಿದ್ದಾರೆ. ಈ ದುಃಖದಿಂದ ಈ ಗುಂಪಿನ ಸಾಹಿತ್ಯ ಸೇವಕರನ್ನು ಪಾರುಮಾಡಲು ಪರಿಷತ್ತು ಒಂದು ಆಲೋಚನೆಯನ್ನು ಮಾಡಬೇಕು. ಗ್ರಂಥಗಳನ್ನು ಪ್ರಕಟಿಸುವ ಮತ್ತು ಮಾರಾಟದ ಏರ್ಪಾಟನ್ನು ಮಾಡುವುದರ ಕಡೆಗೆ ಗಮನವನ್ನು ಕೊಡಬೇಕು.
ಭಾಷಾಭ್ಯಾಸ
ಕನ್ನಡ ಭಾಷೆಯ ಚರಿತ್ರೆಯನ್ನು ಸಂಪೂರ್ಣವಾಗಿ ಶಾಸ್ತ್ರೀಯವಾಗಿ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹಾಗೆ ತಿಳಿದುಕೊಳ್ಳಲು ಸಾಕಾದಷ್ಟು ಸಾಹಿತ್ಯಬೇಕು. ಅಂತಹ ನಿದರ್ಶನ (ರೆಫರೆನ್ಸ್) ಸಾಹಿತ್ಯ ಗ್ರಂಥಗಳು ನಮ್ಮಲ್ಲಿ ಇಲ್ಲವೇ ಇಲ್ಲ. ಅವುಗಳು ಇನ್ನಮೇಲೆ ನಿರ್ಮಾಣ ಆಗಬೇಕಾಗಿವೆ. ಈ ಭಾಗದಲ್ಲಿ ರೆ|| ಕಿಟ್ಟಲ್, ಲೂಯಿ ರೈಸ್, ಆರ್. ನರಸಿಂಹಾಚಾರ್ಯ ಮೊದಲಾದ ನಿಪುಣರು ಅತ್ಯಪೂರ್ವ ಮತ್ತು ಆಶ್ಚರ್ಯಕರವಾದಂಥ ಆರಂಭ ಕಾರ್ಯವನ್ನು ಮಾಡಿದ್ದಾರೆ. ಆ ಕಾರ್ಯವನ್ನು ಮುಂದುವರಿಸುವುದರ ಕಡೆಗೆ ಸಾಕಾದಷ್ಟು ಗಮನ ಹೋಗಿಲ್ಲ. ಇಂತಹ ಕೆಲಸವನ್ನು ಒಬ್ಬಿಬ್ಬರು ವಿದ್ವಾಂಸರು ಮಾತ್ರ ಅಥವಾ ಸಂಶೋಧಕರು ಮಾತ್ರ ಮಾಡುವುದು ಸಾಧ್ಯವಿಲ್ಲ. ಪರಿಷತ್ತಿನಂತಹ ಮಹಾಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು, ಪ್ರಭುತ್ವಗಳು ಇವುಗಳಿಂದ ಮಾತ್ರ ಸಾಧ್ಯ. ನಿಘಂಟುಗಳು, ವಿಶ್ವಕೋಶದ ನಿರ್ಮಾಣದ ಕತೆಗಳನ್ನು ನಾವು ತಿಳಿದುಕೊಳ್ಳಲು ಪ್ರಯತ್ನಪಟ್ಟಾಗ ಮೇಲಿನ ಮಾತಿನ ಸತ್ಯ ವಿಸ್ತಾರಪಡುತ್ತದೆ,
ಅಂತು ಕನ್ನಡ ಬಾಷೆಯ ಪ್ರಾಚೀನತೆ ಕುರಿತು ಅದರ ಮೂಲ ಸ್ವರೂಪ ಮತ್ತು ಕ್ರಮವಾದ ಬೆಳವಣಿಗೆ ಕುರಿತು ನಿಕರವಾದ ಜ್ಞಾನ ಸಂಪಾದನೆಗೆ ಈಗ ಸಾಕಾದಷ್ಟು ಅವಕಾಶವಿಲ್ಲವಾಗಿದೆ. ಭಾಷಾಶಾಸ್ತ್ರದಲ್ಲಿ ಆಸಕ್ತರಾದ ವಿದ್ಯಾರ್ಥಿಗಳು ಏನನ್ನು ನೋಡಬೇಕು, ಹೇಗೆ ಮುಂದುವರಿಯಬೇಕು ಎಂಬುದನ್ನರಿಯದೆ ಬಹಳ ಭಾಷೆಯ ಸ್ವರೂಪದ ವಿಮರ್ಶಾಕಾರ್ಯ ಪರೀಕ್ಷಾ ಕಾರ್ಯ ಶಾಸ್ತ್ರೋಕ್ತವಾಗಿ ನಡೆಯಬೇಕಾಗಿದೆ.
ಪರಿಷತ್ತಿನ ಪುಸ್ತಕ ಭಂಡಾರ
ಭರತಖಂಡದ, ಪ್ರಮುಖ ಸರಸ್ವತೀ ಭಂಡಾರಗಳನ್ನೆಲ್ಲಾ ನೋಡಿ ಅವುಗಳಲ್ಲಿ ಎಲ್ಲಾದರೂ ಕನ್ನಡ ಗ್ರಂಥಗಳಿದ್ದರೆ ಅಥವಾ ಕನ್ನಡ ನಾಡಿನ ಸಂಸ್ಕೃತಿ ಇತಿಹಾಸ ಮೊದಲಾದವುಗಳಿಗೆ ಸಂಬಂಧಪಟ್ಟ ಯಾವುದಾದರೂ ಗ್ರಂಥವಿದ್ದರೆ ಅಂತಹ ಗ್ರಂಥಗಳ ಪ್ರತಿಗಳನ್ನು ಮಾಡಿಸಿ ಅವುಗಳನ್ನು ಪರಿಷತ್ತಿನಲ್ಲಿ ಭದ್ರಪಡಿಸಬೇಕಾಗಿದೆ. ಮೊದಲು ಈ ಗ್ರಂಥಸಂಗ್ರಹ ಮತ್ತು ಸಂರಕ್ಷಣೆ ಅಗತ್ಯವಾಗಿ ಆಗಬೇಕು. ಪ್ರಕಟಣೆ ಕಾರ್ಯವಂತೂ ಆಗಲೇಬೇಕು. ಭಾಷೆ, ಸಾಹಿತ್ಯ, ಸಂಸ್ಕೃತಿ, ಈ ಕ್ಷೇತ್ರಗಳಲ್ಲಿ ಪರಿಶೋಧನೆಗಳನ್ನು ನಡೆಸಬೇಕೆಂದು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇಂತಹ ಗ್ರಂಥಸಂಗ್ರಹಸ್ಥಾನವು ಎಂತಹ ಕ್ಷೇತ್ರ ಎಂಬುದನ್ನು ವರ್ಣಿಸಬೇಕಾಗಿಲ್ಲ. ಪರಿಷತ್ತು ಅಂತಹ ಜ್ಞಾನತೀರ್ಥವೆನಿಸಬೇಕು.
ಪರಿಷತ್ತು-ಪಠ್ಯಗಳು
ಭಾಷೆಯಲ್ಲಿ ಐಕ್ಯತೆಯನ್ನು ಉಂಟುಮಾಡಬೇಕೆಂದು ಸಾಹಿತ್ಯ ಪರಿಷತ್ತು ಹುಟ್ಟಿದಂದಿನಿಂದ ಪ್ರಯತ್ನಗಳಾಗುತ್ತಿವೆ. ಇಂದಿನವರೆಗೆ ಈ ಕನ್ನಡ ಏಕೀಕರಣವಾಗಿಲ್ಲ ಏಕಾಗಿಲ್ಲವೆಂಬ ಪ್ರಶ್ನೆಯನ್ನೀಗ ಎತ್ತಬೇಕಾಗಿಲ್ಲ. ಈ ಕೆಲಸ ಸಾಧ್ಯವಾಗಬೇಕಾದರೆ ಪ್ರಾಥಮಿಕ ಶಾಲೆಗಳಿಂದ ಪ್ರಾರಂಭವಾಗಿ ಪ್ರೌಢವಿದ್ಯಾಪೀಠಗಳಿಂದ ಬಾಲಕ ಬಾಲಕಿಯರು ಹೊರಬೀಳುವವರೆಗೆ ಅವರ ಪಠ್ಯಪುಸ್ತಕಗಳು ಒಂದೇ ರೂಪದಿಂದ ಕೂಡಿರುವಂತಾಗಬೇಕು. ಪ್ರಮಾಣವಿಶಿಷ್ಟವಾದ-ಸ್ಟ್ಯಾಂಡ್ಡ್ರೈಸ್ಡ್- ಪಠ್ಯಪುಸ್ತಕಗಳ ನಿರ್ಮಾಣವಾಗಬೇಕು. ಆ ಪುಸ್ತಕಗಳಿಗೆ ನಾನಾ ಪ್ರಭುತ್ವಗಳ ಅಂಗೀಕಾರ ಮುದ್ರೆ ಬೀಳಬೇಕು. ಆಗ ಮಾತ್ರ ಭಾಷೆಯ ಏಕೀಕರಣ ಮಾರ್ಗದಲ್ಲಿ ಕಾಲಿಟ್ಟಂತಾಗುತ್ತದೆ. ಈ ಕಾರ್ಯಸಾಧನೆಯಲ್ಲಿ ಪರಿಷತ್ತಿನ ಕರ್ತವ್ಯ ಅಷ್ಟಿಷ್ಟೆಂದು ಹೇಳಲಾಗದು.
ವಯೋನುಪೂರ್ವ ಸಾಹಿತ್ಯ
ಪಾಶ್ಚಾತ್ಯ ದೇಶಗಳಲ್ಲಿ ನಾನಾ ಬಗೆಯ ಸಾಹಿತ್ಯವನ್ನು ಸೃಷ್ಟಿಸುತ್ತಾರೆ. ಈ ಕೆಲಸದಲ್ಲಿ ಅವರು ವಯೋನುಗುಣವಾಗಿ ಎಲ್ಲ ಗ್ರಂಥಗಳನ್ನೂ ಬರೆಸಿ ಕ್ರಮವಾಗಿ ಪ್ರಕಟಿಸುತ್ತಾ ಹೋಗುತ್ತಾರೆ. ಷೇಕ್ಸ್ಪಿಯರಿನ ಕೃತಿಗಳ ಮಾತನ್ನು ಎತ್ತಿಕೋಳೋಣ. ಮಗುವಿಗೆ ಷೇಕ್ಸ್ಪಿಯರಿನ ಪರಿಚಯ ಮಾಡಿಕೊಡಬೇಕೆಂಬುದು ಪ್ರಕಾಶಕರ ಆಶೆ. ಆದಕಾರಣ ಆರೇಳು ವರ್ಷದ ಕೂಸನ್ನು ಲಕ್ಷ್ಯದಲ್ಲಿಟ್ಟುಕೊಂಡು ಷೇಕ್ಸ್ಪಿಯರಿನ ಕೃತಿಗಳಲ್ಲಿ ಕೆಲವು ಚಿತ್ತಾಕರ್ಷಕ ಸಂದರ್ಭಗಳನ್ನು ಆರಿಸಿ ಒಳ್ಳೆಯ ಚಿತ್ರಗಾರನಿಂದ ಸಂದರ್ಭೋಚಿತ ಚಿತ್ರಗಳನ್ನು ಬರೆಸಿ, ಆ ಚಿತ್ರಗಳ ಕೆಳಗೆ ಒಂದೆರಡು ವಾಕ್ಯಗಳನ್ನು ಬರೆದು ಮುದ್ದಾಗಿ ಅಚ್ಚುಮಾಡಿ ಮಕ್ಕಳ ಕೈಯಲ್ಲಿಡುತ್ತಾರೆ. ಹತ್ತು ಹನ್ನೆರಡು ವಯಸ್ಸಿನ ಬಾಲಕ ಬಾಲಕಿಯರಿಗಾಗಿ ಇದೇ ವಸ್ತುವುಳ್ಳ ಸಾಹಿತ್ಯವನ್ನು ಮತ್ತಷ್ಟು ವಿಸ್ತಾರ ಮಾಡಿಕೊಡುತ್ತಾರೆ. ಮತ್ತು ಭಾಷೆಯ ಮಟ್ಟವನ್ನು ತಕ್ಕಮಟ್ಟಿಗೆ ಹೆಚ್ಚಿಸುತ್ತಾರೆ. ಹನ್ನೆರಡರಿಂದ ಇಪ್ಪತ್ತು ವಯಸ್ಸಿನ ವಿದ್ಯಾರ್ಥಿಗಳಿಗೆಂದು ಮಹಾಮಹಾ ಗ್ರಂಥಗಳೆಂದು ಹೆಸರಿಟ್ಟು ಮೂಲಕ್ಕೆ ಲೇಶವೂ ಕುಂದುಬಾರದಂತೆ, ಸಿದ್ಧಗೊಳಿಸಿ ಪ್ರಕಟಿಸುವ ಸಂಪ್ರದಾಯವನ್ನು ರೂಢಿಗೆ ತಂದಿದ್ದಾರೆ. ಈ ಸಂಪ್ರದಾಯವನ್ನು ನಾವು ಅನುಸರಿಸಿ ಅದರ ಪೂರ್ಣಲಾಭವನ್ನು ನಮ್ಮವರಿಗೆ ಗಳಿಸಿ ಕೊಡಬೇಕು. ಒಬ್ಬ ಕಾಳಿದಾಸ, ಒಬ್ಬ ರವೀಂದ್ರನಾಥ ಠಾಕೂರ್, ಒಬ್ಬ ಪಂಪ, ಒಬ್ಬ ಬೇಂದ್ರೆ, ಒಬ್ಬ ಪುಟ್ಟಪ್ಪ, ಒಬ್ಬ ಮಾಸ್ತಿ, ಒಬ್ಬ ಶ್ರೀ, ಒಬ್ಬ ಪಂಜೆ, ಒಬ್ಬ ನಂದಳಿಕೆ, ಒಬ್ಬ ರೂಪಕಾರಿ ವೆಂಕಟಪ್ಪ, ವೈಣಿಕ ಶೇಷಣ್ಣ, ಗಾಯಕ ಕೃಷ್ಣಪ್ಪ ಇವರ ಪರಿಚಯವನ್ನು ಆರು ವರ್ಷದ ಕೂಸಿಗೆ, ಹತ್ತು ವರ್ಷದ ಮಗುವಿಗೆ, ಇಪ್ಪತ್ತು ವಯಸ್ಸಿನ ತರುಣ ತರುಣಿಯರಿಗೆ, ಪ್ರಾಪ್ತ ವಯಸ್ಕರಿಗೆ, ಪ್ರೌಢ ವಿದ್ಯಾರ್ಥಿಗಳಿಗೆ ಮತ್ತು ಜ್ಞಾನವೃದ್ಧರಿಗೆ ಇವರೆಲ್ಲರಿಗೂ ಬೇಕೆನಿಸುವಂತಹ ರೀತಿಯಲ್ಲಿ ಗ್ರಂಥಗಳನ್ನು ಬರೆಸಿ ಪ್ರಕಟಿಸುವ ಕೆಲಸವಾರಂಭವಾಗಬೇಕು. ಇಂತಹ ಕೆಲಸವನ್ನು ಪರಿಷತ್ತಿನಂತಹ ಸಂಸ್ಥೆಗಳು ಮತ್ತು ಸುವ್ಯವಸ್ಥಿತ ಪುಸ್ತಕ ವ್ಯಾಪಾರಿಗಳು ಮಾತ್ರ ಮಾಡಲು ಸಾಧ್ಯ. ಮನಸ್ಸು ಮಾಡಿದರೆ ಪ್ರಭುತ್ವದ ಶಿಕ್ಷಣಶಾಖೆಯವರೂ ಸಹ ಈ ಕೆಲಸವನ್ನು ಸಮಪರ್ಕವಾಗಿ ನೆರವೇರಿಸಲು ಸಾಧ್ಯ.
ಮಕ್ಕಳ ಸಾಹಿತ್ಯ ನಿರ್ಮಾಣ
ಜಪಾನರ ಕಾರ್ಯೋತ್ಸಾಹ ಮತ್ತು ಕಾರ್ಯ ವಿಧಾನಗಳು ನಮ್ಮನ್ನು ಪ್ರೇರೇಪಿಸಬೇಕು. ಕನ್ನಡ ನಾಡಿನಲ್ಲಿ ಇತ್ತೀಚೆಗೆ ಕೆಲವರು ಮಕ್ಕಳಿಗಾಗಿಯೇ ಪುಟ್ಟ ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರಿನ ಬಾಲಸಾಹಿತ್ಯ ಮಂಡಲವು ನನ್ನ ನೆನಪಿಗೆ ಬರುತ್ತದೆ. ಸ್ವರ್ಗವಾಸಿ ಪಂಜೆ ಮಂಗೇಶರಾಯರು ಶಿಶುಸಾಹಿತ್ಯ ನಿರ್ಮಾಣವಾಗಬೇಕೆಂದು ವಿಶೇಷ ಶ್ರದ್ಧೋತ್ಸಾಹಗಳನ್ನು ತೋರಿಸುತ್ತಿದ್ದರು. ಧಾರವಾಡ ಸೀಮೆಯಲ್ಲೂ ಮೈಸೂರು ಸೀಮೆಯಲ್ಲೂ ತರುಣ ಲೇಖಕರನೇಕರು ಮಕ್ಕಳಿಗಾಗಿಯೇ ಪುಟ್ಟ ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಿದ್ದಾರೆ. ಶ್ರೀ ಜಿ.ಪಿ. ರಾಜರತ್ನಂ ಅವರು ಮಾಡಿರುವ ಕೆಲಸ ಅಭಿನಂದನೀಯವಾದುದು. ವಯೋನುಪೂರ್ವ ಸಾಹಿತ್ಯದಂತೆಯೇ ಶಿಶುಸಾಹಿತ್ಯ ನಿರ್ಮಾಣ ಮತ್ತು ಪ್ರಕಟನ ಕಾರ್ಯದಲ್ಲಿ ಪರಿಷತ್ತು, ನಾನಾ ಪ್ರಭುತ್ವಗಳು ಮುಂದೆ ಬಂದು ಒಂದು ಕಾರ್ಯವಿಧಾನವನ್ನು ಹಾಕಿಕೊಂಡು ನಾನಾ ಲೇಖಕರ ಸಹಕಾರವನ್ನು ಒದಗಿಸಿಕೊಂಡು ಶಿಶುಸಾಹಿತ್ಯ ಗ್ರಂಥಮಾಲೆಯನ್ನು ಪ್ರಕಟಿಸಬೇಕು. ಕನ್ನಡ ನಾಡಿನಲ್ಲಿ ಈ ವಾಙ್ಮಯದ ಕೊರತೆ ಅಸಾಧ್ಯವಾಗಿದೆ. ಇದನ್ನು ನಿವಾರಿಸುವುದರ ಕಡೆಗೆ ಪ್ರತಿಯೊಬ್ಬರೂ ಗಮನ ಕೊಡಬೇಕು.
ಸಂಶೋಧನೆ ಮತ್ತು ಪರಿಷತ್ತು
ಪರಿಷತ್ತಿನಲ್ಲಿ ಭಾಷಾಸಾಹಿತ್ಯ ಇತಿಹಾಸ ಸಂಸ್ಕೃತಿಗಳ ಕುರಿತು ಶಾಸ್ತ್ರೀಯವಾದ ಸಂಶೋಧನಾ ಕಾರ್ಯ ನಡೆಯುವಂತಾಗಬೇಕು. ಪರಿಷತ್ತಿನಂತೆಯೇ ಇತರ ಇಂತಹ ಸಂಸ್ಥೆಗಳ ಮೂಲಕವಾಗಿಯೂ ಈ ಕಾರ್ಯ ನಡೆಯಬೇಕು. ಕನ್ನಡ ನಾಡಿನಲ್ಲಿ ಈಗಾಗಲೇ ಸಾವಿರಾರು ಶಿಲಾಶಾಸನಗಳೂ, ತಾಮ್ರಶಾಸನಗಳೂ ಹೊರಕ್ಕೆ ಬಂದಿವೆ. ಭಾರತ ಮೈಸೂರು ಪ್ರಾಚಿನ ಲಿಪ್ಯನ್ವೇಷಣ ಶಾಖೆಗಳವರೂ ಅನೇಕ ಶಾಸನಗಳನ್ನು ಪ್ರಕಟಿಸಿದ್ದಾರೆ. ಎಪಿಗ್ರಾಫಿಯಾ ಕರ್ಣಾಟಕ ಎಂಬ ಗ್ರಂಥಮಾಲೆಯು ಪ್ರಕಟನವಾಗಿ ಹತ್ತಾರು ವರ್ಷಗಳಾದವು. ಅನೇಕರಿಗೆ ಅದರ ಹೆಸರೇ ಗೊತ್ತಿಲ್ಲ. ಅನೇಕ ಪಾಶ್ಚಾತ್ಯ ವಿದ್ವಾಂಸರು ಕನ್ನಡ ನಾಡಿನ ಕನ್ನಡ ಶಾಸನಗಳನ್ನು ಇಂಡಿಯನ್ ಆಂಟಿಕ್ವೇರಿ ಎಫಿಗ್ರಾಫಿಯಾ ಇಂಡಿಕ ಮೊದಲಾದ ಪ್ರೌಢ ಮಾಸಪತ್ರಿಕೆಗಳಲ್ಲಿ ಮತ್ತು ತ್ರೈಮಾಸಿಕಗಳಲ್ಲಿ ಪ್ರಕಾಶಗೊಳಿಸಿದ್ದಾರೆ. ಈಗಲೂ ಪ್ರಕಟಿಸುತ್ತಿದ್ದಾರೆ; ಕನ್ನಡ ನಾಡಿನ ವಾಸ್ತು ಶಿಲ್ಪ, ರೂಪಕರ್ಮ ಕುರಿತ ಅವಶೇಷಗಳು ರಾಶಿರಾಶಿಯಾಗಿ ಬಿದ್ದಿವೆ.
“ಇವೆಲ್ಲವನ್ನೂ ಕ್ರೋಡೀಕರಿಸಿ ದೇಶಭಾಷಾ ಚರಿತ್ರಗಳನ್ನೇ ಮುಖ್ಯೋದ್ದೇಶಗಳನ್ನಾಗಿ ಮುಂದಿಟ್ಟುಕೊಂಡು ಜಾಣತನದಿಂದಲೂ, ವಾಕ್ಪ್ರಭವದಿಂದಲೂ ಚಾಚೂ ಬಿಡದೆ ಬರೆಯಿಸುವ ಭಾರವು ಮುಂದಾದರೂ ಸಾಹಿತ್ಯ ಪರಿಷತ್ತಿನದಾಗಿಯೇ ಇರಬೇಕಾಗುತ್ತದೆ.” ಹೀಗೆಂದು ಸಾಹಿತ್ಯ ಸಮ್ಮೇಳನದ ಹತ್ತನೆಯ ೧೯೨೪ ಅಧಿವೇಶನಾಧ್ಯಕ್ಷತೆ ವಹಿಸಿದ್ದ ಕೈಲಾಸವಾಸಿ ರಾವ್ ಬಹದ್ದೂರ್ ಹೊಸಕೋಟೆ ಕೃಷ್ಣಶಾಸ್ತ್ರಿಗಳವರು ಅಪ್ಪಣೆ ಕೊಡಿಸಿದರು. ಅದೇ ಸಂದರ್ಭದಲ್ಲೇ ಅವರು ಮೈಸೂರು ಹೊರಗಿನ ಕರ್ಣಾಟಕ ಶಾಸನಶಾಖೆಯಲ್ಲಿ ಮಾಡಿರುವ ಕೆಲಸವನ್ನು ಸಂಗ್ರಹವಾಗಿ ನಿರ್ದೇಶಿಸಿದ್ದಾರೆ. ಹೆಚ್ಚು ವಿವರಗಳಿಗೆ ಈಗ ಹೋಗಬೇಕಾಗಿಲ್ಲ.
ಸಂಶೋಧನೆಗೆ ದತ್ತಿನಿಧಿ ವ್ಯವಸ್ಥೆ
ಕನ್ನಡ ನಾಡಿನ ಚರಿತ್ರೆ ಸಂಸ್ಕೃತಿ ವಾಸ್ತುಶಿಲ್ಪ ಇವುಗಳಿಗೆ ಸಂಬಂಧಪಟ್ಟಂತೆ ಸಂಶೋಧನ ಅಧ್ಯಯನ ಕಾರ್ಯ, ಸುವ್ಯವಸ್ಥೆಯಿಂದ ನಡೆಯಬೇಕು. ಶಿಲಾಶಾಸನಗಳ ಅನ್ವೇಷಣ ಮತ್ತು ಅಧ್ಯಯನವಾಗಬೇಕು. ಇದಕ್ಕಾಗಿ ಪರಿಷತ್ತಿನಲ್ಲಿ ಪ್ರತ್ಯೇಕವಾಗಿ ಒಂದು ಸಂಶೋಧನ ಶಾಖೆಯು ಏರ್ಪಾಟಾಗಬೇಕು. ಈ ಶಾಖೆಯಲ್ಲಿ ಕೆಲಸವನ್ನು ನಡೆಸಲು ಮತ್ತು ಈ ಕೆಲಸವನ್ನು ಕಲಿಸಲು ವಿದ್ಯಾನಿಪುಣರ ಸಹಾಯ ಪಡೆಯಬೇಕು. ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು. ಅವರಿಗೆ ವೇತನಗಳನ್ನು ಕೊಡುವುದಕ್ಕೆ ಪುದುವಟ್ಟುಗಳನ್ನಿಡಿಸುವ ಅಥವಾ ದತ್ತಿಗಳನ್ನು ಬಿಡಿಸುವ ಕೆಲಸವನ್ನು ಕೈಗೊಳ್ಳಬೇಕು. ಕನ್ನಡನಾಡಿನಲ್ಲಿ ಭೂಶೋಧನ ಕಾರ್ಯವು ಸಮರ್ಪಕವಾಗಿ ನಡೆದಿಲ್ಲ. ಚಿತ್ರದುರ್ಗದ ಚಂದವಳ್ಳಿ ಕೆಲಸವೇ ಅರೆಬರೆಯಾಗಿ ಸಾಗಿದೆ.
ನಾಡಿನ ದೌರ್ಭಾಗ್ಯದಿಂದ ಪ್ರಭುತ್ವಗಳ ಔದಾಸೀನ್ಯದಿಂದ ನಾಡಿನ ಈ ಸಂಪತ್ತು ಕ್ಷಣಕ್ಷಣಕ್ಕೂ ನಾಶವಾಗುತ್ತಿದೆ. ಇನ್ನು ಮೇಲೂ ನಾವು ಉದಾಸೀನವಾಗಿ ಕುಳಿತುಕೊಳ್ಳಲಾಗದು. ಪರಿಷತ್ತು ಮತ್ತು ಅದರ ಅಂಗಸಂಸ್ಥೆಗಳು ನಾನಾ ಪ್ರಾಚೀನ ಲಿಪ್ಯನ್ವೇಷಣ ಶಾಖೆಗಳೊಂದಿಗೂ ಸಂಶೋಧನ ಸಂಸ್ಥೆಗಳೊಂದಿಗೂ ಸಹಕಾರಮಾಡಿ ಇವುಗಳ ಸಂರಕ್ಷಣ ಕಾರ್ಯದಲ್ಲಿ ಉದ್ಯುಕ್ತವಾಗಬೇಕು.
ಈ ಸಂದರ್ಭದಲ್ಲಿ “ಮ್ಯೂಸಿಯಂ”ಗಳ ವ್ಯವಸ್ಥೆಯನ್ನೂ ಸಹ ನಾವು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಪ್ರ್ರಾಚೀನ ಶಾಸನ, ನಾಣ್ಯ, ಚಿತ್ರಕರ್ಮ, ವಾಸ್ತುಶಿಲ್ಪ, ಗ್ರಂಥ ಮತ್ತು ಸಾಮಾನ್ಯ ಸಂಸ್ಕೃತಿಗೆ ಸಂಬಂಧಪಟ್ಟ ಅನೇಕ ವಸ್ತುಗಳು ನಾಡಿನಲ್ಲೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದು, ಅಜ್ಞಾನದಿಂದ ಜನರು ಅವುಗಳನ್ನು ಕೆಡಿಸುತ್ತಿದ್ದಾರೆ, ಇವುಗಳನ್ನೆಲ್ಲಾ ನಿಲ್ಲಿಸಬೇಕು. ಅಲ್ಲದೆ ಜನರಿಗೆ ಇವುಗಳಲ್ಲಿ ಅಭಿಮಾನ ಹುಟ್ಟಿಸಬೇಕು. ಮೇಲಿಂದ ಮೇಲೆ ಅವುಗಳನ್ನು ನೋಡಲು ಜನರಿಗೆ ಅವಕಾಶಗಳನ್ನು ಕಲ್ಪಿಸಬೇಕು. ಇವುಗಳಿಂದಲೇ ನಗರಗಳಲ್ಲಿ ಮ್ಯೂಸಿಯಂಗಳನ್ನು ಸ್ಥಾಪಿಸಿರುವುದು. ಈ ಮ್ಯೂಸಿಯಂಗಳು ಭರತಖಂಡದ ನಾನಾ ನಗರಗಳಲ್ಲಿವೆ. ಅವುಗಳಲ್ಲೊಂದೊಂದೂ ಸಂಶೋಧನ ಕಾರ್ಯದ ಒಂದೊಂದು ವಿಶಿಷ್ಟ ಕ್ಷೇತ್ರಗಳೆನಿಸಿವೆ. ಅಂತಹ ಮ್ಯೂಸಿಯಂ ಒಂದು ಬೆಂಗಳೂರಿನಲ್ಲಿದೆ. ಬೆಂಗಳೂರಿನಂತಹ ಕರ್ನಾಟಕದ ಮಹಾನಗರಕ್ಕೆ ಒಂದು ಮ್ಯೂಸಿಯಂ ಸಾಲದು. ಈಗಿರುವಂತೆ ಆ ಮ್ಯೂಸಿಯಂ ವ್ಯವಸ್ಥೆಯೂ ಸಹ ಸಮರ್ಪಕವಾಗಿಲ್ಲ. ಸಂಶೋಧನೆಗೆ ಯಾವ ಏರ್ಪಾಡನ್ನೂ ಮಾಡಿಲ್ಲ. ಸಾಂಸ್ಕೃತಿಕ ವಸ್ತುಸಂಗ್ರಹ ಕಾರ್ಯವಂತೂ ಇಲ್ಲವೆ ಇಲ್ಲ. ಇನ್ನು ಮೇಲಾದರೂ ಈ ಕಾರ್ಯದ ಕಡೆಗೆ ಮೈಸೂರು ಸರಕಾರವು ಲಕ್ಷ್ಯ ಕೊಡಬೇಕೆಂದು ನಾನು ಸೂಚನೆ ಮಾಡುತ್ತಿದ್ದೇನೆ. ಅಷ್ಟು ಮಾತ್ರವಲ್ಲದೆ ಕನ್ನಡ ನಾಡಿನ ಬೇರೆ ಬೇರೆ ಕಡೆಗಳಲ್ಲಿ ಇಂತಹ ಸಾಂಸ್ಕೃತಿಕ ವಿಶಿಷ್ಟವೆನಿಸಿದ ಮತ್ತು ಸಂಶೋಧನ ಕಾರ್ಯೋತ್ಸುಕರಾದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಮ್ಯೂಸಿಯಂಗಳನ್ನು ಏರ್ಪಡಿಸುವ ಪ್ರಯತ್ನವಾಗಬೇಕು. ಪರಿಷತ್ತಿನಲ್ಲೂ ಸಹ ಅಂತಹ ಒಂದು ಆದರ್ಶದ ಮ್ಯೂಸಿಯಂ ಏರ್ಪಾಟಾಗುವುದಾದರೆ ಯಾರಿಗೆ ತಾನೆ ಸಂತೋಷವಾಗುವುದಿಲ್ಲ. ಹಾಗೆಯೇ ಪರಿಷತ್ತಿನಲ್ಲಿ ಒಂದು ಚಿತ್ರಕೂಟ (ಪಿಕ್ಚರ್ ಗ್ಯಾಲರಿ)ವೂ ಏರ್ಪಾಟಾಗಬೇಕೆಂಬ ಆಶೆಯ ನನ್ನಲ್ಲಿ ಅಪಾರವಾಗಿದೆ. ಈ ಚಿತ್ರಕೂಟದಲ್ಲಿ ಪ್ರಾಚೀನ ಮತ್ತು ಅರ್ವಾಚೀನ ಕಲಾವಿದರ ಕೆಲಸ ಅಲ್ಲಿ ಕಂಡುಬರುವಂತಾಗಬೇಕು.
ರೆಫರೆನ್ಸ್ ಗ್ರಂಥ ನಿರ್ಮಾಣ
ಪಾಶ್ಚಾತ್ಯ ದೇಶಗಳಲ್ಲಿ ರೆಫರೆನ್ಸ್ ಬುಕ್ಸ್ ಎಂಬ ಸಾಹಿತ್ಯರಾಶಿಗೆ ವಿಶೇಷ ಬೆಲೆಯುಂಟು. ಪಂಡಿತರೂ ನಿಪುಣರೂ ಇಂತಹ ಗ್ರಂಥಗಳ ರಚನೆಯಲ್ಲಿ ವಿಶೇಷ ಸಾಹಸ ತೋರಿಸುತ್ತಾರೆ. ಪ್ರಭುತ್ವಗಳು, ಪಂಡಿತ ಸಂಸ್ಥೆಗಳು, ಈ ಬಗೆಯ ಗ್ರಂಥರಚನೆಗೂ ಪ್ರಕಟನೆಗೂ ಬೇಕಾದ ಜನಧನ ಸಹಾಯವನ್ನು ಒದಗಿಸಿಕೊಂಡು ಆಶ್ಚರ್ಯಕರವಾದ ಪ್ರಮಾಣ ನಿದರ್ಶನ ಗ್ರಂಥರಾಶಿಯ ನಿರ್ಮಾಣವಾಗಬೇಕು. ಪರಿಷತ್ತು ಮಾಡಬೇಕಾದ ಅನೇಕ ಕೆಲಸಗಳಲ್ಲಿ ಇದೂ ಒಂದು.
ಸಹಾಯಕ ಸೀಮಾನಿಶ್ಚಯ ವಿಚಾರ ಸಮಿತಿ
ಕರ್ನಾಟಕದ ಸುತ್ತ ಮೇರೆಗಲ್ಲುಗಳನ್ನು ಗುರುತು ಮಾಡಿ ಆಯಾ ಸ್ಥಳಗಳಲ್ಲಿ ಉಭಯಭಾಷಾವರ್ಯರಿಗೂ ಸಮ್ಮತವಾಗುವಂತೆ ನಿಲ್ಲಿಸಬೇಕು. ಡೊಮಿನಿಯನ್ನರ ಸರ್ಕಾರದವರು ಸೀಮಾ ನಿಶ್ಚಯ ಸಮಿತಿಯನ್ನು ಕೂಡಲೆ ನಿರ್ಮಿಸಲಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ಕೇರಳ ನಾಲ್ಕುಕಡೆಗಳಲ್ಲಿ ಕರ್ನಾಟಕ ಸೀಮಾರೇಖೆ ನಿಶ್ಚಯವಾಗಬೇಕು. ಕನ್ನಡನಾಡಿನವರೆಲ್ಲ ಶಾಸನಬದ್ಧವಾದ ಚೌಂಚರಿ ಕಮೀಷನ್ ಮುಂದೆ ಅಂಕಿ, ಅಂಶ, ನಕ್ಷೆಗಳನ್ನಿಟ್ಟು ಅದಕ್ಕೆ ಕರ್ನಾಟಕವಾದದ ನ್ಯಾಯವನ್ನು ಮನಗಾಣಿಸಬೇಕಾಗಿದೆ. ಈ ಭಾಗದಲ್ಲಿ ಏಕೀಕರಣ ಮಹಾಸಭೆ ಮಾಡುವ ಕೆಲಸ ಅದು ಮಾಡಿಯೇ ಮಾಡುತ್ತದೆ, ಈ ಪರಿಷತ್ತು ಸಹ ಒಂದು ಸಹಾಯಕ ಸೀಮಾ ನಿಶ್ಚಯವಿಚಾರ ಸಮಿತಿಯೊಂದನ್ನು ನೇಮಕಮಾಡಿ ಆ ಮೂಲಕ ಪೂರ್ವಭಾವಿ ಕೆಲಸಗಳನ್ನೆಲ್ಲ ಪೂರೈಸಬೇಕಾಗಿದೆ.
Tag: Thirumale Thathacharya Shrama, Thi.tha. Sharma, Kannada Sahitya Sammelana 31
೩0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಸಿ. ಕೆ. ವೆಂಕಟರಾಮಯ್ಯ
ಪ್ರಸಿದ್ಧ ವಾಗ್ಮಿಗಳು, ಗ್ರಂಥಕರ್ತರೂ ಆದ ಸಿ. ಕೆ. ವೆಂಕಟರಾಮಯ್ಯನವರು ಕೃಷ್ಣಪ್ಪ-ನಂಜಮ್ಮನವರಿಗೆ ಪುತ್ರರಾಗಿ ೧0-೧೨-೧೮೯೬ರಲ್ಲಿ ಜನಿಸಿದರು. ಸೋಲೂರು, ಕುಂದೂರು ಮಾಗಡಿ, ಚೆನ್ನಪಟ್ಟಣಗಳಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಬಿ.ಎ. ಪದವಿ ಗಳಿಸಿದರು. ಮುಂಬೈಗೆ ಹೋಗಿ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ ಪಡೆದರು.
ಶ್ರೀರಂಗಪಟ್ಟಣದಲ್ಲಿ ವಕೀಲಿ ನಡೆಸಿದರು. ೧೯೨೪ರಲ್ಲಿ ಮೈಸೂರು ಸರ್ಕಾರದಲ್ಲಿ ಭಾಷಾಂತರಕಾರರಾಗಿ ಸೇರಿ ೩0 ವರ್ಷಗಳ ಕಾಲ ನಿಸ್ಪೃಹಸೇವೆ ಸಲ್ಲಿಸಿ ನಿವೃತ್ತರಾದರು.
ಇವರು ಮಾತಿನಲ್ಲಿ ಮೋಡಿ ಮಾಡಬಲ್ಲ ವಾಗ್ಮಿಗಳಾಗಿದ್ದರು. ಬರಹದಲ್ಲಿ ಸರಳವಾಗಿ ಜನಮೆಚ್ಚುಗೆ ಪಡೆಯುವ ಗ್ರಂಥಗಳನ್ನು ರಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಸಿಕೆವೆಂ ೧೯೩೬-೧೯೩೭ ಮತ್ತು ೧೯೩೮-೧೯೪0ರ ಅವಧಿಗಳಲ್ಲಿ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದರು. ೫ ವರ್ಷಗಳ ಕಾಲ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾಗಿದ್ದರು.
ಇವರ ನಿಸ್ಪೃಹ ಸೇವೆಯನ್ನು ಗೌರವಿಸಿ ಮೈಸೂರು ಮಹಾರಾಜರು ರಾಜ ಸೇವಾ ಪ್ರಸಕ್ತ ಬಿರುದನ್ನು ಇತ್ತಿದ್ದರು. ಭಾರತ ಸರ್ಕಾರ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತು. ರಾಜ್ಯ ಸಾಹಿತ್ಯ ಅಕಾಡೆಮಿ ೧೯೭0ರಲ್ಲಿ ಇವರಿಗೆ ಗೌರವ ಪ್ರಶಸ್ತಿ ಸಲ್ಲಿಸಿತು. ೧೯೪೭ರಲ್ಲಿ ಹರಪನಹಳ್ಳಿಯಲ್ಲಿ ೩0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೭೧ರಲ್ಲಿ ಬೆಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆಯಾಗಿದ್ದರು.
ಭಾಷಣಗಳಿಂದ ಪ್ರಖ್ಯಾತರಾದ ಸಿ. ಕೆ. ವೆಂಕಟರಾಮಯ್ಯನವರು ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ನಾಟಕ, ಸಣ್ಣಕತೆ, ಜೀವನಚರಿತ್ರೆಗಳಲ್ಲಿ ಸಿದ್ಧಹಸ್ತರಾಗಿದ್ದರು. ಅವರು ಬರೆದ ಕೃತಿಗಳು ಹೀಗಿವೆ:
ಹಳ್ಳಿಯ ಕಥೆಗಳು, ಮಂಡೋದರಿ (ನಾಟಕ)
ತುರಾಯಿ (ಕಥೆಗಳು), ನಚಿಕೇತ (ನಾಟಕ)
ಬುದ್ಧ (ಜೀವನಚರಿತ್ರೆ), ಆಳಿದ ಮಹಾಸ್ವಾಮಿಯವರು (ಜೀವನ ಚರಿತ್ರೆ)
ಪೈಗಂಬರ್ (ಜೀವನ ಚರಿತ್ರೆ), ಹರ್ಷವರ್ಧನ (ಜೀವನಚರಿತ್ರೆ) ಇತ್ಯಾದಿ
ಜನಪ್ರಿಯ ಸಾಹಿತಿಗಳೂ ವಿದ್ವಾಂಸರೂ ಆಗಿದ್ದ ಸಿ. ಕೆ. ವೆಂಕಟರಾಮಯ್ಯನವರು ೩-೪-೧೯೭೩ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೩0
ಅಧ್ಯಕ್ಷರು, ಸಿ.ಕೆ. ವೆಂಕಟರಾಮಯ್ಯ
ದಿನಾಂಕ ೭, ೮, ೯ ಮೇ ೧೯೪೭
ಸ್ಥಳ : ಹರಪನಹಳ್ಳಿ, ಬಳ್ಳಾರಿ
ಪರಿಷತ್ತಿನಿಂದ ನಡೆಯಬೇಕಾದ ಕಾರ್ಯಗಳು
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾದುದೇ ಕನ್ನಡ ಸಾಹಿತ್ಯವನ್ನು ಅಭಿವೃದ್ಧಿಗೊಳಿಸಿ, ಕನ್ನಡಿಗರಲ್ಲಿ ಭಾಷಾಭಿಮಾನವನ್ನು ಹೆಚ್ಚಿಸುವ ಉದ್ದೇಶದಿಂದ ಅದು ಸ್ಥಾಪಿತವಾದಾಗಿನಿಂದ ಇದುವರೆಗೂ ಆ ಉದ್ದೇಶಸಾಧನೆಗಾಗಿ ಅದರಿಂದ ಯಥಾಶಕ್ತಿಯಾಗಿ ಸೇವೆ ಸಲ್ಲುತ್ತಾ ಬಂದಿದೆ. ಪರಿಷತ್ತಿನ ಸಂಬಂಧವಾಗಿ ಅನೇಕ ಮಂದಿ ಸಾಹಿತ್ಯ ಪ್ರೇಮಿಗಳು ಶ್ರದ್ಧಾಸಕ್ತಿಗಳಿಂದ ಕೆಲಸ ಮಾಡಿಯೂ ಕೆಲಸ ಮಾಡುತ್ತಲೂ ಬಂದಿದ್ದಾರೆ. ಕನ್ನಡಿಗರ ಹೃದಯದಲ್ಲಿ ಇಂದು ಕನ್ನಡದ ಮೆಲೆ ಮಮತೆಯೇನಾದರೂ ಹುಟ್ಟಿದ್ದರೆ, ಅದಕ್ಕೆ ಮೂಲ ಕಾರಣಗಳಿಂದ ಪ್ರೇರಣೆಗಳಲ್ಲಿ ಪರಿಷತ್ತಿನ ಸೇವೆಯೂ ಮುಖ್ಯವಾದವುಗಳಲ್ಲೊಂದೆಂದು ಧಾರಾಳವಾಗಿ ಹೇಳಬಹುದಾಗಿದೆ.
ನಾಡಿನ ಜನರೆಲ್ಲಾ ಸದಸ್ಯರಾಗಬೇಕು
ಪರಿಷತ್ತಿಗೆ ಮಹಾಜನರಿಂದ ಎಷ್ಟರಮಟ್ಟಿಗೆ ಪ್ರೋತ್ಸಾಹವೂ ಸಹಾಯವೂ ದೊರೆಯುವುದು ಆವಶ್ಯಕವೋ ಅಷ್ಟರಮಟ್ಟಿಗೆ ಅವು ದೊರೆತಿಲ್ಲ. ಅದರ ಸದಸ್ಯ ಸಂಪತ್ತು ಇನ್ನೂ ೨,೫00ಕ್ಕಿಂತ ಹೆಚ್ಚಾಗಿಲ್ಲದಿರುವುದು ನಿಜವಾಗಿಯೂ ಶೋಚನೀಯವಾಗಿದೆ. ಈ ಅಲ್ಪಸಂಖ್ಯೆಯ ಸದಸ್ಯರಲ್ಲಿ ತಾವು ಕೊಡಬೇಕಾದ ಹಣವನ್ನು ಪೂರ್ತಿಯಾಗಿ ಸಲ್ಲಿಸಿರತಕ್ಕವರ ಸಂಖ್ಯೆಯು ತೀರ ಕಡಿಮೆ. ಮೈಸೂರು ಸಂಸ್ಥಾನದ ಶ್ರೀಮನ್ಮಹಾರಾಜರ ಸರ್ಕಾರದವರ ಉದಾರಾಶ್ರಯವೂ ಸಹಾಯವೂ ಇಲ್ಲದೆ ಹೋಗಿದ್ದರೆ ಪರಿಷತ್ತಿನಿಂದ ಈಗ ನಡೆಯುತ್ತಿರುವಷ್ಟು ಭಾಷಾಸೇವೆಯು ನಡೆಯುವುದಕ್ಕೂ ಅವಕಾಶವಿರುತ್ತಿರಲಿಲ್ಲ. ಒಟ್ಟು ಒಂದೂವರೆ ಕೋಟಿಗಿಂತಲೂ ಹೆಚ್ಚು ಮಂದಿ ಕನ್ನಡಿಗರಿರುವ ನಾಡಿನಲ್ಲಿ ಪರಿಷತ್ತಿನ ಸದಸ್ಯರ ಸಂಖ್ಯೆ ೨,೨೫೫ ಕ್ಕಿಂತ ಹೆಚ್ಚಾಗಿಲ್ಲದಿರುವುದು ವಿಷಾದಕರವಾಗಿದೆ. ಒಂದು ಲಕ್ಷಮಂದಿಗಳಾದರೂ ಪರಿಷತ್ತಿನ ಸದಸ್ಯರಾಗಕೂಡದೆ?
ಹಳ್ಳಿಗಳತ್ತ ಪರಿಷತ್ತು ಸಾಗಬೇಕು
ಭರತಖಂಡದಲ್ಲಿ ಸ್ವಾತಂತ್ರ್ಯದ ಸುವರ್ಣಯುಗವು ಮುಂದಿನ ವರ್ಷದಿಂದ ಪ್ರಾರಂಭವಾಗುತ್ತದೆ. ಪ್ರಪಂಚದ ನಾನಾ ಜನಾಂಗಗಳ ಜೊತೆಯಲ್ಲಿ ಭಾರತೀಯರೂ ಸಮಾನಸ್ಕಂಧರಾಗಿ ತಲೆಯೆತ್ತಿ ನಿಂತು ಒಟ್ಟು ಮಾನವ ವರ್ಗದ ಶ್ರೇಯಸ್ಸಿಗೇ ಸಾಧಕವಾಗುವಂತೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸಬೇಕಾಗಿದೆ. ಅದಕ್ಕೆ ಸಹಾಯವಾಗುವಂತೆ ಕನ್ನಡಿಗರೂ ತಮ್ಮ ಪಾಲಿನ ಕೆಲಸವನ್ನು ನಿರ್ವಹಿಸಬೇಕು. ಅದು ಕೇವಲ ಚಪ್ಪಾಳೆಗಳಿಂದಾಗಲಿ ಜಯಕಾರಗಳಿಂದಾಗಲಿ ಸಾಗುವಂತಿಲ್ಲ; ಕಲಹಗಳಿಂದಲಂತೂ ಅದು ಸುತರಾಂ ಸಾಗಲಾರದು ಅದು ಸಮರ್ಪಕವಾಗಿ ಸಾಗಬೇಕಾದರೆ ಅಪಾರವಾದ ಶಕ್ತಿ ಸಾಮರ್ಥ್ಯಗಳು ವೃದ್ಧಿಯಾಗಿ ಅವುಗಳೆಲ್ಲ ಒಮ್ಮುಖವಾಗಿ ರಚನಾತ್ಮಕವಾದ ಕ್ರಿಯಾ ಮಾಧುರ್ಯದ ಕಡೆಗೆ ತಿರುಗಬೇಕು. ಹಾಗಾಗುವುದಕ್ಕೆ ಜ್ಞಾನಾಭಿವೃದ್ಧಿಯೇ ಮೂಲಾಧಾರ. ಅಜ್ಞಾನದ ಅಂಧಕಾರದಲ್ಲಿ ತತ್ತರಿಸುತ್ತಿರುವ ಹಳ್ಳಿಹಳ್ಳಿಗೂ ಊರೂರಿಗೂ, ಸುಜ್ಞಾನದ ರತ್ನದೀಪಗಳನ್ನೊದಗಿಸುವ ದೊಡ್ಡ ಸಂಸ್ಥೆಯೊಂದು ಸಿದ್ಧವಾಗಬೇಕು. ನಮ್ಮ ಪರಿಷತ್ತು ಆ ದೊಡ್ಡ ಸಂಸ್ಥೆಯಾಗಿ ಪರಿಣಮಿಸಬೇಕೆಂಬುದು ನನ್ನ ಹಿರಿಯ ಬಯಕೆ. ನಮ್ಮ ಪರಿಷತ್ತು ಜನತೆಯ ವಿಶ್ವವಿದ್ಯಾನಿಲಯವಾಗಬೇಕೆಂಬುದು ನನ್ನ ತೀವ್ರಾಭಿಲಾಷೆ.
ಪುಸ್ತಕ ಪ್ರಕಟನೆ ಕೆಲಸ
ಮೊದಲನೆಯದಾಗಿ ಪುಸ್ತಕ ಪ್ರಕಟನೆಯ ಕೆಲಸ: ಪರಿಷತ್ತಿನಿಂದ ಪ್ರೌಢವಾದ ಗ್ರಂಥಗಳೂ ಪ್ರಕಟವಾಗಬೇಕು; ಅಲ್ಲದೆ ನಾನಾ ವಿಚಾರಗಳಲ್ಲಿ ತಿಳಿವಳಿಕೆಯನ್ನು ಹೆಚ್ಚಿಸುವಂತೆ ತಿಳಿಗನ್ನಡದಲ್ಲಿ ಬರೆದ ಸುಲಭಬೆಲೆಯ ಚಿಕ್ಕ ಚಿಕ್ಕ ಪುಸ್ತಕಗಳೂ ಪ್ರಕಟವಾಗಬೇಕು. ಸಾಧ್ಯವಾದಲ್ಲಿ ಓಲೆಯಗರಿ ಪುಸ್ತಕಗಳನ್ನು ಸಂಗ್ರಹಿಸುವ ಕೆಲಸವೂ ಮತ್ತು ಸಂಶೋಧನೆಯ ಕೆಲಸವೂ ನಡೆಯಬೇಕು. ವಿಶ್ವವಿದ್ಯಾನಿಲಯವೇ ಮುಂತಾದ ಸಂಸ್ಥೆಗಳಿಂದಲೂ, ಅನೇಕ ಗ್ರಂಥಮಾಲೆಗಳು ಮತ್ತು ಪ್ರಕಟನಮಂದಿರಗಳಿಂದಲೂ ಈ ಕೆಲಸವು ಈಗ ನಡೆಯುತ್ತಿರುವುದು ನಿಜ; ಅದು ಅಭಿನಂದನಯೋಗ್ಯವೂ ಹೌದು. ಆದಾಗ್ಯೂ, ಈಗ ನಡೆದಿರುವ ಕೆಲಸವು ಸಾಸಿವೆಯಷ್ಟು ಮಾತ್ರ; ನಡೆಯಬೇಕಾಗಿರುವ ಕೆಲಸವು ಬೆಟ್ಟದಷ್ಟಿದೆ. ಪ್ರೌಢವಾದ ಗ್ರಂಥರಚನೆ ಮಾಡಲು ಬಹುಮಾನಗಳನ್ನು ಸಲ್ಲಿಸಬೇಕು. ಬಹುಮಾನದ ಮೊತ್ತವು ಸಾವಿರ ರೂಪಾಯಿಗಳಿಗೆ ಕಡಮೆಯಾಗಿರಬಾರದು; ದ್ರವ್ಯಾನುಕೂಲತೆಗೆ ತಕ್ಕಂತೆ ಬಹುಮಾನದ ಮೊಬಲಗೂ, ಬಹುಮಾನಗಳ ಸಂಖ್ಯೆಯೂ ಇರಬಹುದು. ಬಹುಮಾನದ ಮೊಬಲಗು ಎಷ್ಟು ಹೆಚ್ಚಾಗಿದ್ದರೆ ಅಷ್ಟು ಉತ್ತಮ. ಸ್ಪರ್ಧೆಗೆ ಬಂದ ಗ್ರಂಥಗಳಲ್ಲಿ ಉತ್ತಮವಾದವುಗಳಿಗೆ ಬಹುಮಾನಗಳನ್ನು ಕೊಡುತ್ತಾ ಬಂದಷ್ಟೂ ಶ್ರೇಷ್ಠವಾದ ಗ್ರಂಥಗಳು ಹೊರಬೀಳಲು ಅನುಕೂಲಿಸುತ್ತವೆ. ಪ್ರಕಟವಾದ ಗ್ರಂಥಗಳಲ್ಲಿ ಉತ್ತಮವಾದವುಗಳಿಗೆ ಈಗ ಬಹುಮಾನಗಳನ್ನು ಕೊಡುತ್ತಿರುವುದು ಸರಿಯಷ್ಟೆ. ಅದರ ಜೊತೆಗೆ ಈ ಸ್ಪರ್ಧೆಯು ಪ್ರೌಢಗ್ರಂಥಗಳ ಸಲುವಾಗಿ ಮಾತ್ರವೇ ನಡೆಯುತ್ತ ಬರಬೇಕೆಂಬುದು ನನ್ನ ಸಲಹೆ. ಉಪಯುಕ್ತವಾದ ವಿಚಾರಗಳನ್ನು ಕುರಿತು ಬರೆದ ಸಣ್ಣಸಣ್ಣಪುಸ್ತಕಗಳನ್ನು ಪ್ರಕಟಿಸುವ ಕೆಲಸವೂ ಅತ್ಯಾವಶ್ಯವಾಗಿದೆ; ಮುಖ್ಯವಾಗಿ ವಿಜ್ಞಾನ ವಿಚಾರಗಳಿಗೂ ಜನಜೀವನಕ್ಕೆ ಸಂಬಂಧಪಟ್ಟ ಇತರ ವಿಚಾರಗಳಿಗೂ ಗಮನಕೊಟ್ಟು ಆ ಬಗೆಯ ಪುಸ್ತಕಗಳನ್ನೂ ಪ್ರಕಟಿಸಬೇಕು. ಹಾಗೆ ಪ್ರಕಟಿಸುವ ಪುಸ್ತಕಗಳಿಂದ ಜನತೆಗೆ ಬಹಳ ಪ್ರಯೋಜನವಾಗುತ್ತದೆ. ಕನ್ನಡದಲ್ಲಿ ಈಚಿನ ವರ್ಷಗಳಲ್ಲಿ ಶ್ರೇಷ್ಠವಾದ ಅನೇಕ ಸಾಹಿತ್ಯ ಕೃತಿಗಳು ಹೊರಬಿದ್ದಿವೆಯೆಂಬುದನ್ನೂ ಸೊಗಸಾದ ಕವಿತೆಗಳೂ, ಕಥೆಗಳೂ, ನಾಟಕಗಳೂ, ಹಾಸ್ಯ ಪ್ರಬಂಧಗಳೂ, ಹರಟೆಗಳೂ, ಕಾದಂಬರಿಗಳೂ ಪ್ರಕಟವಾಗಿರುವುದನ್ನೂ ನಾನು ಸಂತೋಷದಿಂದ ಒಪ್ಪುತ್ತೇನೆ. ಆದರೂ, ಸೊಬಗಿನ ಸಾಹಿತ್ಯವು ವೃದ್ಧಿಯಾಗಿರುವ ಮಟ್ಟಿಗೆ ಸಂಗತಿಗಳನ್ನು ತಿಳಿಸುವ ಸಾಹಿತ್ಯವು ವೃದ್ಧಿಯಾಗಿಲ್ಲ. ಅಡಿಗೆಯ ಸಾಮಾನುಗಳಾದ ಅಕ್ಕಿ ಬೇಳೆ ಮುಂತಾದ ಸಾಮಗ್ರಿಗಳನ್ನು ತೀರ ಅಲ್ಪಸ್ವಲ್ಪವಾಗಿ ಸಂಗ್ರಹಿಸಿ, ಲೆಕ್ಕವಿಲ್ಲದಷ್ಟು ಬೆಳ್ಳಿಯ ತಟ್ಟೆಗಳಲ್ಲಿ ಚಿಗುರು ವೀಳೆಯಗಳನ್ನು ಸಿದ್ಧಪಡಿಸಿದ ಮದುವೆ ಮನೆಯಂತಿದೆ, ನಮ್ಮ ಕನ್ನಡ ಸಾಹಿತ್ಯದ ಇಂದಿನ ಸ್ಥಿತಿ. ಇದು ತಪ್ಪುವಂತೆ ಸ್ವತಂತ್ರವಾದ ಗ್ರಂಥಗಳೂ, ಇತರ ಭಾಷೆಗಳಿಂದ ಅನುವಾದ ಮಾಡಿದ ಗ್ರಂಥಗಳೂ ಪ್ರಕಟವಾಗುವ ಕೆಲಸ ನಡೆಯಬೇಕು.
ಕಲಾ ಸಾಹಿತ್ಯ ಪ್ರಚಾರ ಕಾರ್ಯ
ಎರಡನೆಯದಾಗಿ, ಪ್ರಚಾರ ಕಾರ್ಯ ವಿಚಾರ. ಪರಿಷತ್ತಿನ ಆಶ್ರಯದಲ್ಲಿ ಕನ್ನಡ ನಾಡಿನ ಎಲ್ಲ ಪ್ರದೇಶಗಳಿಗೂ ಉಪನ್ಯಾಸಕರೂ, ಗಮಕಿಗಳೂ ಸಾಧ್ಯವಾದಲ್ಲಿ ಸಂಗೀತಗಾರರೂ ಮತ್ತು ಕೀರ್ತನಕಾರರೂ ಹೋಗಿ ಸೇವೆ ಸಲ್ಲಿಸುವಂತಾಗಬೇಕು. ಪರಿಷತ್ತಿನಲ್ಲಿ ವರ್ಷದಲ್ಲಿ ನಡೆಯಬೇಕಾದ ಉಪನ್ಯಾಸಗಳೇ ಮುಂತಾದ ಕಾರ್ಯಕಲಾಪಗಳ ಮತ್ತು ವ್ಯಾಸಂಗಗೋಷ್ಠಿ ಮುಂತಾದ ವಿಶೇಷ ಕಾರ್ಯಗಳ ಪಂಚಾಂಗವನ್ನು ಮೊದಲೇ ಸಿದ್ಧಗೊಳಿಸಬೇಕು. ಕಾವ್ಯವಾಚನಗಳು, ನಾಟಕ ಪ್ರದರ್ಶನಗಳು, ಸಂಗೀತಗಳು ಮುಂತಾದವುಗಳು ಈಗ ನಡೆಯುತ್ತಿರುವುದಕ್ಕಿಂತ ಹೆಚ್ಚಾಗಿ ನಡೆಯುಬೇಕು. ಪಂಪ ಜಯಂತಿ, ರನ್ನ ಜಯಂತಿ, ತ್ಯಾಗರಾಜ ಜಯಂತಿ, ಶಂಕರ ಜಯಂತಿ, ರಾಮಾನುಜ ಜಯಂತಿ, ಬಸವ ಜಯಂತಿ, ಮಧ್ವ ಜಯಂತಿ, ವಿದ್ಯಾರಣ್ಯ ಜಯಂತಿ, ಮುಂತಾದವುಗಳು ನಡೆಯಬೇಕು. ವಸಂತ ಸಾಹಿತ್ಯೋತ್ಸವ, ನಾಡಹಬ್ಬ ಮುಂತಾದವುಗಳೂ ನಡೆಯಬೇಕು. ಕನ್ನಡ ನಾಡಿನ ನಾನಾ ಸಂಸ್ಥೆಗಳೂ ಪರಿಷತ್ತಿನ ಅಂಗಸಂಸ್ಥೆಗಳಾಗಿ ಸೇರಿ ಸಹಕರಿಸಿ ತಮ್ಮ ತಮ್ಮ ಊರುಗಳಲ್ಲಿಯೂ ಇವುಗಳೆಲ್ಲ ನಡೆದು ಜ್ಞಾನಪ್ರಚಾರವಾಗುವಂತೆ ಮಾಡಬೇಕು. ಈ ಬಗೆಯ ಉತ್ಸವ ಕಾಲಗಳಲ್ಲಿ ನಡೆದ ಭಾಷಣಗಳೆಲ್ಲ ಗಾಳಿಗೆ ಹೋಗದಂತೆ ಅವುಗಳನ್ನು ಆ ಆ ಸಂಸ್ಥೆಗಳು ಪ್ರಕಟಿಸುವ ಕೆಲಸವೂ ನಡೆಯಬೇಕು. ಸರ್ಕಾರದವರ ಸಹಾಯದಿಂದಲೂ, ಸ್ಥಳೀಯ ಸಂಸ್ಥೆಗಳ (ಎಂದರೆ ಪೌರಸಭೆಗಳು, ಗ್ರಾಮಪಂಚಾಯಿತಿಗಳು ಮುಂತಾದವುಗಳ) ಸಹಾಯದಿಂದಲೂ, ಸ್ಥಳಪರಸ್ಥಳಗಳ ಮಹಾಜನರ ಸಹಾಯದಿಂದಲೂ ಗ್ರಾಮ ಗ್ರಾಮದಲ್ಲಿಯೂ ಒಂದೊಂದು ಪುಟ್ಟ ಪುಸ್ತಕ ಭಂಡಾರವನ್ನೇರ್ಪಡಿಸುವಂತೆ ಮಾಡಲು ಪರಿಷತ್ತಿನಿಂದ ಪ್ರೇರಣೆಯೂ ಪ್ರಯತ್ನವೂ ನಡೆಯಬೇಕು. ಅಲ್ಲದೆ ಪರಿಷತ್ತಿನ ಪುಸ್ತಕ ಭಂಡಾರವು ಇನ್ನೂ ದೊಡ್ಡದಾಗಬೇಕು.
ಇಂದು ಜನಜೀವನ ಬರಡು
ಮೂರನೆಯದಾಗಿ ಅಭಿರುಚಿಯನ್ನು ರೂಪಿಸುವ ಕೆಲಸದ ಮಾತು. ಇದನ್ನು ನೊಂದ ಮನಸ್ಸಿನಿಂದ ನುಡಿಯುತ್ತಿದ್ದೇನೆ. ಓದುಬರಹಗಳ ಗಂಧವಿಲ್ಲದ ಹಳ್ಳಿಗಳಲ್ಲಿ ಬಡತನದ ಬಾಧೆಯಿಂದಲೂ ಕಾರ್ಪಣ್ಯದಿಂದಲೂ ಕಂದಿಹೋಗಿರುವ ನಮ್ಮ ದೇಶಬಾಂಧವರ ಅಭಿರುಚಿಯಂತೂ ವೃದ್ಧಿಯಾಗಿಲ್ಲ. ಆದರೆ, ವಿದ್ಯಾವಂತರೆನಿಸಿ ಧನಿಕರಾಗಿರುವ ಪಟ್ಟಣಿಗರಿಗೆ ಕೂಡ ಸಂಗೀತ, ಸಾಹಿತ್ಯ ಮಂತಾದವುಗಳಲ್ಲಿ ಅಭಿರುಚಿಯಿಲ್ಲದಿರುವುದು ನಾವು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡುತ್ತದೆ. ಅದರಲ್ಲಿ ಕೆಲವರಿಗಂತೂ, ತಮಗೆ ಅವುಗಳಲ್ಲಿ ಅಭಿರುಚಿಯಿಲ್ಲದಿರುವುದೇ ಒಂದು ಹೆಮ್ಮೆ; ನಮ್ಮ ಅರಸಿಕತೆಯೇ ತಮಗೊಂದು ಭೂಷಣವೆಂಬ ಭಾವನೆ. ಇದರ ಪರಿಣಾಮವಾಗಿ ನಮ್ಮ ನಾಡಿನ ಲಲಿತ ಕಲೆಗಳು ಸೊರಗುತ್ತಿವೆ. ಸಂಗೀತಗಾರರೂ, ಗ್ರಂಥಕರ್ತರೂ, ಪತ್ರಿಕೋದ್ಯೋಗಿಗಳೂ ಬಹುಮಂದಿ ಕಾರ್ಪಣ್ಯದ ಸುಳಿಗೆ ಸಿಕ್ಕಿ ತಾವು ಎಷ್ಟು ವಿದ್ವತ್ತನ್ನು ಗಳಿಸಿ ಫಲವೇನೆಂದು ಕೊರಗುತ್ತಿದ್ದಾರೆ. ಸಂಗೀತದ ಮೇಲಿನ ಅಭಿರುಚಿಯಂತೂ ಪಾತಾಳಕ್ಕಿಳಿದು ಹೋಗಿ ಸಿನಿಮಾ ಹಾಡುಗಳ ಹುಚ್ಚು ಹಿಡಿದುಹೋಗಿದೆ. ನಮ್ಮ ನಾಡಿನ ನಿಜವಾದ ಚರಿತ್ರೆಯೇ ನಮಗೆ ತಿಳಿಯದು. ನಮ್ಮ ನಾಡಿನ ವಿಭೂತಿ ಪುರುಷರನ್ನು ಹೊರಗಿನವರೆಲ್ಲ ಹೊಗಳುತ್ತಿದ್ದರೂ ಅವರಲ್ಲಿ ನಮಗೆ ತಾತ್ಸಾರ. ವಿದ್ಯಾವಂತರೆನಿಸಿಕೊಂಡಿರುವವರಲ್ಲೇ ಬಹು ಮಂದಿಗಳಿಗೆ ಸಹೃದಯತೆ ರಸಿಕತೆಗಳ ಗಂಧವೇ ಗೊತ್ತಿಲ್ಲ; ಪುಸ್ತಕಗಳನ್ನೂ ಪತ್ರಿಕೆಗಳನ್ನೂ ಕೊಳ್ಳುವ ಅಭ್ಯಾಸವೇ ಇಲ್ಲ; ಉಚಿತವಾಗಿ ಅವುಗಳನ್ನು ಕೊಟ್ಟರೂ ಓದಲು ಮನಸ್ಸಿಲ್ಲ; ಸಂಗೀತ ಗೋಷ್ಠಿಗಳಿಗೂ ನಾಟಕ ಮುಂತಾದವುಗಳಿಗೂ ಆಗಾಗ್ಗೆ ಒಂದೊಂದು ಸಲವಾದರೂ ಹೋಗಿ ಪ್ರೋತ್ಸಾಹಿಸುವುದಂತೂ ಜಾಯಮಾನಕ್ಕೆ ಅಂಟಿಬಂದಿಲ್ಲ. ಕೆಲವರಿಗಂತೂ ತಮಗಿಂತ ಅಲ್ಪಸ್ವಲ್ಪ ಆದಾಯ ಕಡಮೆಯಾಗಿರುವರೊಡನೆ ಸ್ನೇಹವಾಗಿ ಮಾತನಾಡುವಷ್ಟು ಸೌಜನ್ಯವೂ ಇಲ್ಲ, ಒಗ್ಗಟ್ಟಂತೂ ಕನಸಿನ ಮಾತು. ಈ ಬಗೆಯ ಬರಡು ಜೀವನವು ನಮ್ಮದು.
ಬರಡು ಜೀವನ ಬದಲಾಗಲು ದಾರಿ
ಈ ನ್ಯೂನ್ಯತೆಯು ಪರಿಹಾರವಾಗಬೇಕಾದರೆ ಧನಿಕರಿಗೆ ಗೌರವ ಕೊಡುವುದಕ್ಕಿಂತಲೂ ವಿದ್ಯಾವಂತರಿಗೆ ಗೌರವ ಕೊಡುವುದು ಹೆಚ್ಚಬೇಕು. ಹಳ್ಳಿಹಳ್ಳಿಗೂ ನಮ್ಮ ಯುವಕರು ಹೋಗಬೇಕು; ಕಾವ್ಯವಾಚನ, ಸಂಗೀತ, ಭಾಷಣಗಳು ಮುಂತಾದವುಗಳಿಂದ ಜನಗಳ ಅಭಿರುಚಿಯನ್ನು ತಿದ್ದಿ ರೂಪಿಸಬೇಕು. ಈ ಕೆಲಸವೂ ಪರಿಷತ್ತಿನ ಆಶ್ರಯದಲ್ಲಿ ನಡೆಯಬೇಕು; ಸ್ಥಳೀಯ ಸಂಸ್ಥೆಗಳೇ ಮುಂತಾದವುಗಳ ಸಹಾಯದಿಂದ ಈ ಕೆಲಸವು ನಡೆಯಬೇಕು. ಬೇಸಗೆ ರಜಾ, ನವರಾತ್ರಿ ರಜಾ, ಮುಂತಾದ ಬಿಡುವಿನ ಕಾಲಗಳಲ್ಲಿ ವಿದ್ಯಾರ್ಥಿಗಳಾದ ತರುಣರು ನಾನಾ ಕೇಂದ್ರಗಳನ್ನು ಗೊತ್ತುಮಾಡಿಕೊಂಡು ಈ ಕೆಲಸಕ್ಕೆ ಗಮನ ಕೊಡಬಹುದು. ನಾನು ವಿದ್ಯಾರ್ಥಿಯಾಗಿದ್ದಾಗ್ಗೆ ಕುಮಾರವ್ಯಾಸ ಭಾರತ, ರಾಮಾಯಣ ಮುಂತಾದವುಗಳನ್ನು ಓದಿ ಹೇಳಿದ್ದೇನೆ; ಆಗ ಹಳ್ಳಿಯವರಿಗೆ ಉಂಟಾದ ಆನಂದವನ್ನು ಕಂಡು ಹರ್ಷಿಸಿದ್ದೇನೆ. ಕಾಲೇಜು ವಿದ್ಯಾರ್ಥಿಗಳೆ ಮುಂತಾದವರು ಪ್ರಾಥಮಿಕ ಮತ್ತು ಮಾಧ್ಯಮಿಕ ಪಾಠಶಾಲೆಗಳ ಉಪಾಧ್ಯಾಯರುಗಳಿಗಾಗಿ ರಜಾದ ದಿನಗಳಲ್ಲಿ ಅಲ್ಲಲ್ಲಿ ಸಾಹಿತ್ಯ ವಿಜ್ಞಾನ, ಕಲೆಗಳು ಮುಂತಾದ ಸಂಸ್ಕೃತಿವರ್ಧಕವಾದ ವಿಚಾರಗಳಲ್ಲಿ ಉಪನ್ಯಾಸ ಗೋಷ್ಠಿಗಳನ್ನು ಏರ್ಪಡಿಸಬಹುದು; ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಇದೇ ಉದ್ದೇಶದಿಂದ ವಸಂತಸಾಹಿತ್ಯೋತ್ಸವ ಕಾಲದಲ್ಲಿ ಹಿಂದೆ ನಡೆಯುತ್ತಿದ್ದಂತೆ ಉಪನ್ಯಾಸ ಮಾಲೆಗಳನ್ನು ಏರ್ಪಡಿಸಬಹುದು; ಅದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುವಂತೆ ಡಿಸ್ಟ್ರಿಕ್ಟು ಮತ್ತು ತಾಲ್ಲೂಕು ಕಚೇರಿಗಳಲ್ಲಿ ಬೇಸಿಗೆ ರಜಾದ ಅವಧಿಯಲ್ಲಿ ತರುಣರಿಂದಲೂ ಇತರರಿಂದಲೂ ಉಪನ್ಯಾಸಮಾಲೆಗಳನ್ನು ಏರ್ಪಡಿಸಬಹುದಾಗಿದೆ. (ಆಹಾರ ಪರಿಸ್ಥಿತಿಯು ಬಿಕ್ಕಟ್ಟಾಗಿರುವ ಅವಧಿಯಲ್ಲಿ ಇದು ನಡೆಯುವುದು ಬಹುಶಃ ಹೆಚ್ಚಾಗಿ ಸಾಗಲಾರದು). ಹೀಗೆ ಉಪಾಧ್ಯಾಯರ ಅಭಿರುಚಿಯನ್ನು ವೃದ್ಧಿಮಾಡಿ ಅವರ ತಿಳಿವಳಿಕೆಯನ್ನು ಹೆಚ್ಚಿಸಿದರೆ ಅವರಲ್ಲಿ ವ್ಯಾಸಂಗ ಮಾಡುವವರಿಗೆಲ್ಲ ಬಹಳ ಪ್ರಯೋಜನವಾಗುವುದು.
ಯುವಕರ ಪಾತ್ರ
ಇವಕ್ಕೆಲ್ಲ ಅಗತ್ಯವಾದ ಜನಬಲವೂ ಧನಬಲವೂ ಒದಗುವ ಬಗೆ ಹೇಗೆಂಬ ಪ್ರಶ್ನೆಯು ಹುಟ್ಟುವುದು ಸಹಜವಾಗಿಯೆ ಇದೆ. ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಒಟ್ಟಿನ ಮೇಲೆ ಪರಿಷತ್ತಿನ ಉದ್ದೇಶಗಳಿಗೆ ವಿರೋಧ ಬಾರದಂತೆ ಯುವಜನ ಶಾಖೆ ವಿದ್ಯಾರ್ಥಿಗಳೇ ಮೊದಲಾದ ಯುವಕರ ಸಹಾಯ ಸಹಾನುಭೂತಿಯನ್ನು ಪಡೆಯುವುದರಿಂದಲೂ, ಕರ್ಣಾಟಕ ಸಂಘಗಳು, ಸ್ಥಳೀಯ ಸಂಸ್ಥೆಗಳು ಮುಂತಾದವುಗಳ ಮತ್ತು ಪರಿಷತ್ತಿನ ಸದಸ್ಯರುಗಳ ಸಹಕಾರವನ್ನು ಪಡೆಯುವುದರಿಂದಲೂ, ತಕ್ಕಷ್ಟು ಜನಬಲವು ಒದಗಬಹುದು. ಪರಿಷತ್ತಿನ ಅಂಗಶಾಖೆಯಾಗಿ “ಯುವಜನ ಶಾಖೆ”ಯೊಂದು ಇರಬೇಕೆಂಬ ಒಂದು ನಿರ್ಣಯವೂ ಈ ಸಾರಿ ಚರ್ಚೆಗೆ ಬರುವುದಾಗಿದೆ. ನಾಡಿನ ಯುವಜನರೇ ಅದರ ಕ್ರಿಯಾಶಕ್ತಿಯ ಪ್ರತೀಕ. ಸುಶಿಕ್ಷಿತವಾದ ಯುವಕರ ಉತ್ಸಾಹವೂ ಸಹೃದಯರಾದ ವೃದ್ಧರ ಅನುಭವೂ ಒಟ್ಟುಗೂಡಿದರೆ ದೇಶೋನ್ನತಿ ಸಾಧನೆಯು ಕಟ್ಟಿಟ್ಟ ಬುತ್ತಿ.
ಶಾಖೆಗೆ ಸೇರಿದ ನಮ್ಮ ಪರಿಷತ್ತಿನ ಮಹಿಳಾ ಸೋದರಿಯರೂ, ಇತರರೂ, ಗಂಡಸರನ್ನು ಹಾಗೆ ಸ್ಫೂರ್ತಿಗೊಳಿಸಿ ಹುರಿದುಂಬಿಸಬೇಕು. ಇತರ ದೇಶಗಳ ಯುವಕರನ್ನು ಮೀರಿಸಿ-ಅಥವಾ ಕನಿಷ್ಠ ಪಕ್ಷ ಅವರಷ್ಟು ಮಟ್ಟಿಗಾದರೂ-ನಮ್ಮ ದೇಶದ ಯುವ ಜನರೂ ಕೆಲಸ ಮಾಡಿ ನಾನಾ ರೀತಿಗಳಲ್ಲಿ ದೇಶೋನ್ನತಿ ಸಾಧನೆ ಮಾಡಲಾರರೆ? ಅವರ ಕ್ರಿಯಾಸಾಮರ್ಥ್ಯದಲ್ಲಿ ನನಗೆ ಪೂರ್ಣ ಭರವಸೆಯಿದೆ. ಯಾವ ನಾಡಿನವರಾದರೂ ಹೆಮ್ಮೆಪಡಬಹುದಾದಷ್ಟು ಮೇಧಾವಿಗಳೂ, ಉದ್ಯೋಗಶೀಲರೂ, ವಿದ್ಯಾ ವಿನಯಸಂಪನ್ನರೂ, ಉಜ್ವಲ ದೇಶಾಭಿಮಾನಿಗಳೂ ಆದ ಯುವಜನರು ನಮ್ಮ ನಾಡಿನಲ್ಲಿದ್ದಾರೆ. ಅವರೊಡನೆ ಮಾತನಾಡುವುದೇ ಒಂದು ಸಂತೋಷ; ಅದನ್ನು ನಾನು ಯಥೇಷ್ಟವಾಗಿ ಅನುಭವಿಸಿದ್ದೇನೆ. ಪರಿಷತ್ತಿನ ಅಂಗಸಂಸ್ಥೆಯಾಗಿ ಒಂದು ಯುವಜನ ಶಾಖೆಯು ಸ್ಥಾಪಿತವಾಗಿ ಒಟ್ಟು ಕನ್ನಡನಾಡಿನ ಹಿತಸಾಧನೆಯ ದೃಷ್ಟಿಯಿಂದ ಕೆಲಸ ನಡೆದರೆ ಪರಿಷತ್ತಿನಿಂದ ನಡೆಯಬೇಕೆಂದು ನಾನು ಸೂಚಿಸಿರುವ ಕೆಲಸಗಳಿಗೆಲ್ಲ ಜನಬಲವು ಲಭಿಸಲು ಅನುಕೂಲವಾಗುತ್ತದೆ.
ಧನಸಂಗ್ರಹಕ್ಕೆ ದಾರಿ
ಪರಿಷತ್ತಿನ ಕಾರ್ಯ ನಿರ್ವಾಹಕ ಮಂಡಲಿಯ ಸದಸ್ಯರೂ, ಪ್ರಾದೇಶಿಕ ಸಮಿತಿಯ ಸದಸ್ಯರೂ ತಮ್ಮ ತಮ್ಮ ಸ್ಥಳಗಳಲ್ಲಿ ಮಹಾಜನರಿಂದ ಪರಿಷತ್ತಿಗಾಗಿ ಹಣವನ್ನೆತ್ತುವ ಕೆಲಸವನ್ನು ಮಾಡಬೇಕು. ಈ ಕೆಲಸದಲ್ಲಿ ಸ್ವಯಂಸೇವಕರಾಗಿ ಆಸ್ಥೆಯಿಂದ ಸಹಾಯ ಮಾಡುವುದಕ್ಕೂ ಯುವಜನ ಶಾಖೆಯ ಸದಸ್ಯರೂ ವಿದ್ಯಾರ್ಥಿಗಳೂ ಮುಂದೆ ಬರಬೇಕು. ಹಿಂದೆ “ಪೈಸಾ ಫಂಡ್” ಎಂಬ ನಿಧಿಯನ್ನು ಕೂಡಿಸಿದ ಮಾದರಿಯಲ್ಲಿ ಮನೆಮನೆಯಿಂದಲೂ ಯುಗಾದಿ ದೀಪಾವಳಿಗಳಲ್ಲಿ ಹಣವನ್ನೆತ್ತಿದರೆ, ಹನಿಗೂಡಿ ಹಳ್ಳವಾಗುತ್ತದೆ. ಕನ್ನಡ ನಾಡಿನ ನಾನಾ ಸರ್ಕಾರಗಳಿಂದಲೂ ಸ್ಥಳೀಯ ಸಂಸ್ಥೆಗಳಿಂದಲೂ, ಧನಿಕರಿಂದಲೂ ಹೆಚ್ಚು ಹೆಚ್ಚಾಗಿ ಸಹಾಯದ್ರವ್ಯಗಳನ್ನು ಪರಿಷತ್ತಿಗೆ ದೊರೆಯಿಸುವ ಕೆಲಸವೂ ಸತತವಾಗಿ ನಡೆಯಬೇಕು. ಪರಿಷತ್ತಿನ ಸದಸ್ಯಸಂಪತ್ತನ್ನು ಹೆಚ್ಚಿಸುವ ಪ್ರಯತ್ನವೂ ಅವಿಚ್ಛಿನ್ನವಾಗಿ ನಡೆಯಬೇಕು. ಈ ವಿಷಯದಲ್ಲಿ ಏಕೆಂದರೆ ಮಹಿಳೆಯರು ಮುನಿದರೆ ಹೊತ್ತಿಗೆ ಸರಿಯಾಗಿ ಊಟವೆಲ್ಲಿ ದೊರೆಯದೆ ಹೋಗುವುದೋ-ಎಂಬ ಕಳವಳದಿಂದಲಾದರೂ ಗಂಡಸರು ಪರಿಷತ್ತಿನ ಸದಸ್ಯರಾಗುವುದಕ್ಕೂ, ಪರಿಷತ್ತಿಗೆ ದತ್ತಿಗಳನ್ನು ಕೊಡುವುದಕ್ಕೂ, ಕನ್ನಡ ಪುಸ್ತಕಗಳನ್ನೂ ಪತ್ರಿಕೆಗಳನ್ನೂ ಕೊಳ್ಳುವುದಕ್ಕೂ ಸಿದ್ಧವಾಗುತ್ತಾರೆ. ಕನ್ನಡದಲ್ಲಿ ನಡೆಯುವ ಪ್ರತಿಯೊಂದು ವಿವಾಹ ಕಾಲದಲ್ಲಿಯೂ ಪರಿಷತ್ತಿನ ಕಾಣಿಕೆಯನ್ನು ಸಲ್ಲಿಸುವ, ಸಂಪಾದನೆಯು ಪ್ರಾರಂಭವಾದಾಗ ಅಥವಾ ಸಂಪಾದನೆಯು ಹೆಚ್ಚಾದಾಗ, ಮೊದಲನೆಯ ಸಾರಿ ಕೈಸೇರಿದ ಹಣದಲ್ಲಿ ಒಂದು ಭಾಗವನ್ನು ಕನ್ನಡ ತಾಯಿಗೆ ಕಾಣಿಕೆಯಾಗಿ ಸಲ್ಲಿಸುವ ಸತ್ಸಂಪ್ರದಾಯಗಳೂ ಪ್ರಾರಂಭವಾಗಬೇಕು. ಪುಸ್ತಕಗಳ ಮಾರಾಟದಿಂದಲೂ ಪರಿಷತ್ತಿಗೆ ಧನಸಂಗ್ರಹವಾಗಬೇಕು. ಉಪನಯನ ಕಾಲದಲ್ಲಿ ವಟುವಿಗೂ ವಿವಾಹ ಕಾಲದಲ್ಲಿ ವಧೂವರರಿಗೂ ಬೆಳ್ಳಿಯ ಪಾತ್ರೆಗಳಿಗೆ ಪ್ರತಿಯಾಗಿ ಅಥವಾ ಅವುಗಳ ಜೊತೆಗೆ ಕನ್ನಡ ಪುಸ್ತಕಗಳನ್ನೂ, ಕನ್ನಡ ಪತ್ರಿಕೆಗಳ ವಿಶೇಷ ಸಂಚಿಕೆಗಳನ್ನೂ ಮೆಚ್ಚಾಗಿ ಕೊಡುವ ಒಳ್ಳೆಯ ಸಂಪ್ರದಾಯವೂ ಪ್ರಾರಂಭವಾಗಬೇಕು. ಜನಬಲವೂ ಧನಬಲವೂ ಯಥೇಷ್ಟವಾಗಿ ಒದಗಿದಲ್ಲಿ ಮಾತ್ರವೇ, ಮೇಲೆ ಸೂಚಿತವಾಗಿವ ಕೆಲಸಗಳೆಲ್ಲ ಪರಿಷತ್ತಿನಿಂದ ನಡೆಯುವುದಕ್ಕೆ ಅನುಕೂಲವಾದೀತು.
ದಿವಂಗತ ಸಾಹಿತಿಗಳ ಕುಟುಂಬಕ್ಕೆ ನೆರವುನಿಧಿ
ಸಾಹಿತ್ಯ ಸೇವೆ ಮಾಡಿ ಸಂಪಾದನೆಗೆ ಹೆಚ್ಚು ಅವಕಾಶವಿಲ್ಲದೆ ಮೃತಪಡುವ ದುರದೃಷ್ಟಶಾಲಿಗಳಾದ ಗ್ರಂಥಕರ್ತರೇ ಮುಂತಾದ ಕಲೋಪಾಸಕರ ಕುಟುಂಬಗಳವರ ಸಹಾಯಕ್ಕಾಗಿ ಪರಿಷತ್ತಿನಲ್ಲಿ ಒಂದು ನಿಧಿಯನ್ನು ಏರ್ಪಡಿಸಬಹುದಾಗಿದೆ. ಗ್ರಂಥಕರ್ತರೇ ಮುಂತಾದವರು ಆ ನಿಧಿಗಾಗಿ ವರ್ಷಕ್ಕೆ ತಲೆಯೊಂದಕ್ಕೆ ಒಂದು ರೂಪಾಯಿ ಅಥವಾ ಎರಡು ರೂಪಾಯಿಗಳಿಗೆ ಕಡಿಮೆಯಿಲ್ಲದೆ ಹಣವನ್ನು ಸಲ್ಲಿಸಬೆಕು. ಹಾಗೆ ಹಣವನ್ನು ಸಲ್ಲಿಸುತ್ತಿರುವವರಲ್ಲಿ ಯಾರಾದರೂ ಮೃತಪಟ್ಟು, ಅವರ ಕುಟುಂಬದವರು ಸಹಾಯವನ್ನಪೇಕ್ಷಿಸುವ ಸ್ಥಿತಿಯಲ್ಲಿದ್ದರೆ ನಿಧಿಯಿಂದ ಸಹಾಯಮಾಡಬೇಕು. ಸಹಾಯದ ಮೊಬಲಗಿನ ಪರಮಾವಧಿಯನ್ನೂ ಗೊತ್ತು ಮಾಡಬಹುದು. ಗ್ರಂಥಕರ್ತರೆಲ್ಲರೂ ಸೇರಿ ಪ್ರತಿಫಲಾಪೇಕ್ಷೆಯಿಲ್ಲದೆ ಈ ಕೆಲಸವನ್ನು ನಡೆಯಿಸಬೇಕು. ಮೃತರ ಕುಟುಂಬಕ್ಕೆ ಅದರಿಂದ ಸಹಾಯಕ; ಜೀವಂತರಾಗಿ ಉಳಿದಿರುವ ಗ್ರಂಥಕರ್ತರಿಗೆ ಅದರಿಂದ ಪುಣ್ಯ.
ಪರಿಷತ್ತು ಶಕ್ತಿಕೇಂದ್ರವಾಗಬೇಕು
ಮೇಲೆ ಹೇಳಿದ ಕೆಲಸಗಳೆಲ್ಲ ಸಾಂಗವಾಗಿ ನಡೆಯಬೇಕಾದರೆ-ಮುಂದಿನ ಬೃಹತ್ತರವಾದ ಮತ್ತು ಭವ್ಯತರವಾದ ಕನ್ನಡ ನಾಡು ನಿರ್ಮಿತವಾಗಲು ಸಾಹಿತ್ಯ ಸಂಸ್ಕೃತಿಗಳ ಪುರೋಭಿವೃದ್ಧಿ ಸಾಧನೆಯ ಮೂಲಕವಾಗಿ ಸಹಾಯವಾಗಬೇಕಾದರೆ -ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಶಕ್ತಿ ಕೇಂದ್ರವಾದ ಶಿವನಸಮುದ್ರವಾಗಬೇಕು. ನಮ್ಮ ಕನ್ನಡ ನಾಡಿನ ಕರ್ಣಾಟಕ ಸಂಘಗಳೇ ಮುಂತಾದ ಸಂಸ್ಥೆಗಳು ಆ ಶಿವನಸಮುದ್ರದಲ್ಲಿ ಉತ್ಪತ್ತಿಯಾಗಿ ತಮ್ಮಲ್ಲಿಗೆ ಬಂದ ವಿದ್ಯುಚ್ಛಕ್ತಿಯನ್ನು ಒಟ್ಟು ಕನ್ನಡ ನಾಡಿನ ಮೂಲೆ ಮೂಲೆಗೂ ಹಂಚಿ, ಅದರಿಂದ ಬೆಳಗುವ ಜ್ಞಾನದೀಪಗಳ ತಂಡಗಳನ್ನು ನೋಡಿ ನೋಡಿ ನಲಿಯಬೇಕು. ಆ ಜ್ಞಾನದೀಪಗಳ ತಂಡಗಳಿಂದ ಕನ್ನಡ ನಾಡಿನ ಅಜ್ಞಾನಾಂಧಕಾರವು ತೊಲಗಿ, ಕನ್ನಡ ತಾಯಿಯ ಪವಿತ್ರ ದೇವಾಲಯದಲ್ಲಿ ನಿತ್ಯದೀಪಾವಳಿಯ ಉತ್ಸವವು ನಡೆಯಬೇಕು. ಅದು ನಡೆದಂದು ಶುಭತಾರೆ; ಅದು ನಡೆದಂದು ದೇಶಮಾತೆಯ ವರ್ಧಂತ್ಯುತ್ಸವ; ಅದು ನಡೆಯುವವರೆಗೂ ನಾವೆಲ್ಲರೂ ಮನುಷ್ಯರ ಛಾಯೆಗಳೇ ಹೊರತು ಮನುಷ್ಯರೆಂಬ ಹೆಸರಿಗೆ ಆರ್ಹರಲ್ಲ.
Tag: Kannada Sahitya Sammelana 30, C.K. Venkataramaiah
೨೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಟಿ. ಪಿ. ಕೈಲಾಸಂ
ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ ೨೯-೭-೧೮೮೫ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ – ಕಲಮಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ೧೯0೮ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ ೬ ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ ೧೯೧೫ಕ್ಕೆ ಬೆಂಗಳೂರಿಗೆ ಹಿಂತಿರುಗಿದರು.
ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ ೫ ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು.
ವ್ಯಾಯಾಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕೈಲಾಸಂ ಕನ್ನಡ ನಾಟಕಕಾರರಾಗಿ ರಂಗ ನಾಟಕರಂಗಕ್ಕೆ ವಿಶೇಷ ಕೊಡುಗೆಗಳನ್ನಿತ್ತರು. ಅನೇಕರಿಗೆ ಹಾಸ್ಯ ಸಾಹಿತ್ಯ ನಾಟಕಗಳ ಮೂಲಕ ಜನಜಾಗೃತಿ ಮಾಡಿದರು.
೧೯೪೫ರಲ್ಲಿ ಮದರಾಸಿನಲ್ಲಿ ನಡೆದ ೨೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಕೈಲಾಸಂ ಬರೆದುದಕ್ಕಿಂತ ಹೆಚ್ಚಾಗಿ ಹೇಳಿ ಬರೆಸಿದ ಇತರರು ಬರೆದುಕೊಂಡ ನಾಟಕಗಳೇ ಹೆಚ್ಚು.
ಟೊಳ್ಳೂಗಟ್ಟಿ, ಬಹಿಷ್ಕಾರ, ಗಂಡಸ್ಕತ್ರಿ, ಪೋಲಿಕಿಟ್ಟಿ, ಸೂಳೆ, ನಂತರ ಕನ್ನಡ ಸಾಮಾಜಿಕ ನಾಟಕಗಳನ್ನೂ ತಾವರೆಕೆರೆ (ಕಥಾಸಂಗ್ರಹ), ಕೋಳಿಕೇರಂಗ (ಹಾಡುಗಳು), ಕರ್ಣ, ಕೀಚಕ (ಇಂಗ್ಲಿಷ್ ನಾಟಕಗಳು).
ಕರ್ನಾಟಕ ಪ್ರಹಸನ ಪಿತಾಮಹ ಎನಿಸಿದ್ದ ಕೈಲಾಸಂ ೨೩-೧೧-೧೯೪೬ರಲ್ಲಿ ಕೈಲಾಸವಾಸಿಗಳಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨೯
ಅಧ್ಯಕ್ಷರು, ಟಿ.ಪಿ. ಕೈಲಾಸಂ
ದಿನಾಂಕ ೨೬, ೨೭, ೨೮ ಡಿಸೆಂಬರ್ ೧೯೪೫
ಸ್ಥಳ : ಮದರಾಸು
ಈ ಕನ್ನಡ ಪ್ರಾಂತವನ್ನು ಕಟ್ಟಬೇಕೆನ್ನುವುದೇತಕ್ಕೆ? ಇದರಂತೆ ತಮಿಳು, ತೆಲುಗು, ಕೇರಳ, ಮಹಾರಾಷ್ಟ್ರ ಪ್ರಾಂತಗಳೂ ಆಗಲಿ ಎಂದಲ್ಲವೆ? ದಕ್ಷಿಣ ದೇಶದ ನಾಲ್ಕು ಪ್ರಾಂತಗಳೂ ನಾಲ್ಕು ಭುಜದಂತೆ, ಚತುರಂಗ ಬಲದಂತೆ, ಏಕವಾಗಿ ಐಕಮತ್ಯದಿಂದ ವರ್ತಿಸಬೇಕೆಂದಲ್ಲವೆ? ಇಲ್ಲ ಪರಸ್ಪರ ವೈಷ್ಯಮ್ಯಕ್ಕಾಗಿಯೇ? ತಮಿಳೇನು ತೆಲುಗೇನು ಮಲಯಾಳವೇನು? ಕನ್ನಡಕ್ಕೆ ಅಣ್ಣ ತಮ್ಮ ಎಲ್ಲವೂ ದ್ರಾವಿಡ ಭಾಷೆಯೇ. ಒಂದು ಅಕ್ಷರ ಬದಲಾದರೆ ಕನ್ನಡ ಶಬ್ದ ತೆಲುಗು ಶಬ್ದವಾಯಿತು. ಇನ್ನೊಂದು ಅಕ್ಷರ ಬದಲಾದರೆ ತಮಿಳಾಯಿತು. ಕನ್ನಡ-ತೆಲುಗುಗಳಿಗೆ ಬೇರೆ ಬೇರೆ ಲಿಪಿ ಇಲ್ಲ; ಎರಡೂ ಒಂದೇ. ಕೇರಳ ವರ್ಣಮಾಲೆ ಕನ್ನಡ ಗೀರ್ವಾಣಕ್ಕೆ ಸಮೀಪವಾಗಿದೆ. ಇನ್ನು ಆಚಾರ ವ್ಯವಹಾರ, ಧರ್ಮ ದೈವ ಋಣಾನುಬಂಧ- ಎಲ್ಲರಲ್ಲೂ ಈ ದಾಕ್ಷಿಣಾತ್ಯರಲ್ಲಿ ಅಂಥ ಪ್ರಖರ ಭೇದವಿಲ್ಲ. ನಾವು ಕರ್ನಾಟಕರು ಎಲ್ಲ ದ್ರಾವಿಡ ಸಂಪ್ರದಾಯಕ್ಕೂ ಒಕ್ಕಲು. ಎಲ್ಲ ದ್ರಾವಿಡ ಭಾಷೆಗೂ ಆಶ್ರಯದಾತರು. ತೆಲುಗು, ತಮಿಳು, ಕೇರಳ ಪ್ರಾಂತಗಳಲ್ಲಿ ಕಾಣದ ಭಾಷಾತೀತವಾದ ಕರ್ನಾಟಕತ್ವ ನಮ್ಮಲ್ಲಿ ಹಿಂದಿನಿಂದಲೂ ಬೆಳೆದುಬಂದಿದೆ. ಅದು ಕರ್ನಾಟಕದ ವೈಶಿಷ್ಟ್ಯ. ಈಗಿನ ಪ್ರಾಂತೀಕರಣದ ರಭಸದಲ್ಲಿ ಈ ವೈಶಿಷ್ಟ್ಯವನ್ನು ಅಲ್ಲಗೆಳೆಯಬಾರದು. ಈ ಭಾಷಾವಾರು ಭೇದ ಭಾವನೆ ನಮ್ಮ ರಾಜಕೀಯದ ದುಷ್ಪಲ. ಅಖಂಡ ಭಾರತದ ನಿರ್ಮಾಣಕ್ಕೆ ಮುಂಚೆ ನಮ್ಮ ನಮ್ಮ ಪ್ರಾಂತೀಯ ದ್ವೇಷ ದಮನವಾಗಬೇಕು. ಒಳಗೂ ಹೊರಗೂ ಎಲ್ಲರೊಡನೆ ಸಮರಸವಾಗಿ ನಡೆದು ನಾವು ಕರ್ನಾಟಕರು ಉಳಿದ ದಾಕ್ಷಿಣಾತ್ಯರಿಗೆ ಮೇಲುಪಂಕ್ತಿಯಾಗಿರೋಣ. ದಾಕ್ಷಿಣಾತ್ಯರೆಲ್ಲ ಒಂದಾಗಿ ಉತ್ತರಾದಿಯವರಿಗೆ ಮೇಲುಪಂಕ್ತಿಯಾಗೋಣ. ನಮ್ಮ ನೆರೆಯವರನ್ನು ಬಿಟ್ಟು ನಮಗೆ ಪ್ರಾಂತ ಬಂದರೆ ಕಣ್ಣುರಿ, ನಮಗೆ ಇಲ್ಲದೆ ಅವರಿಗೆ ಬಂದರೂ ಕಣ್ಣುರಿ. ಎಲ್ಲರಿಗೂ ಒಂದೇ ಮೋಕ್ಷ. ಇದು ಸಮಷ್ಟಿ ರಾಜಕೀಯ.
ಸಮ್ಮೇಳನ ಮತ್ತು ಏಕೀಕರಣ
ಈ ಸಮ್ಮೇಳನದಿಂದ ಕರ್ನಾಟಕದ ಏಕೀಕರಣಕ್ಕೆ ಸಹಾಯವಾಗಿದೆ. ಏಕೀಕರಣಕ್ಕಿಂತ ಮುಖ್ಯವಾದ್ದು ನಮ್ಮ ಜನತೆಯ ಏಕೀಭಾವ. ಆ ಏಕೀಭಾವವೇ ಕರ್ನಾಟಕದ ನಿಜವಾದ ಆಸ್ತಿಭಾರ. ಈ ಮನೋಭಾವವಿಲ್ಲದೆ ರಾಜಕೀಯ ಏಕೀಕರಣ ಫಲಕಾರಿಯಲ್ಲ. ಆ ಏಕೀಭಾವಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನ ದ್ರೋಹವೆಸಗುತ್ತದೆ. ಕಲಾವಿದರ ಮನಸ್ಸ್ಸು ನಿರ್ಮತ್ಸರವಾಗಿ ನಿಷ್ಪಕ್ಷವಾಗಿ ಅಭೇದವಾಗಿ ಐಕಮತ್ಯದ ಪರಿಮಳವನ್ನು ಸೂಸಿದರೆ ಕರ್ನಾಟಕ. ಅವರ ಕಣ್ಣಿಗೇ ಕಾಣದೆ ಅವರ ಮನಸ್ಸಿಗೇ ಸಿಕ್ಕದೆ ಇದ್ದರೆ ಸಾಮಾನ್ಯ ಜನಕ್ಕೆ ಕರ್ನಾಟಕ ಗಗನ ಕುಸುಮ.
ಪರಿಷತ್ತಿನ ಗುರಿ
ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದಾಗಲೇ ಅಖಂಡ ಕರ್ನಾಟಕವನ್ನು ತನ್ನ ಕಣ್ಣಿನ ಮುಂದೆ ಇರಿಸಿಕೊಂಡಿತ್ತು. ಪರಿಷತ್ತು ಸದ್ದಿಲ್ಲದೆ ವ್ಯಕ್ತಾವ್ಯಕ್ತವಾಗಿ ಕರ್ನಾಟಕವನ್ನು ಒಂದು ಮಾಡುತ್ತಿದೆ. ಪರಿಷತ್ತನ್ನು ಮೊದಲು ಮಾಡಿದ ಶ್ರೀ ನಂಜುಂಡಯ್ಯನವರಿಂದ ಪ್ರಾರಂಭಮಾಡಿ ಈಗ ಅದರ ಭಾರ ಹೊತ್ತು ನಡೆಸುತ್ತಿರುವ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರವರೆಗೂ ಪರಿಷತ್ತನ್ನು ರಚಿಸಿದ ಎಲ್ಲರೂ ಕರ್ನಾಟಕ ನಿರ್ಮಾಣದಲ್ಲೇ ತಮ್ಮ ಆಯುಷ್ಯವನ್ನು ಕಳೆದಿದ್ದಾರೆ.
Tag: Kannada Sahitya Sammelana 29, T.P. Kailasam
೨೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಶಿ. ಶಿ. ಬಸವನಾಳ
ನವಕರ್ನಾಟಕದ ನಿರ್ಮಾಪಕರಲ್ಲಿ ಒಬ್ಬರಾಗಿ ವೀರಶೈವ ಧರ್ಮ ಸಾಹಿತ್ಯಕ್ಕೆ ಶ್ರಮಿಸಿದ ವಿದ್ವಾಂಸ ಶಿ. ಶಿ. ಬಸವನಾಳರು (ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳ) ಶಿವಯೋಗಪ್ಪ ಮತ್ತು ಸಿದ್ದಮ್ಮನವರ ಪುತ್ರರಾಗಿ ೭-೧೧-೧೮೯೩ರಲ್ಲಿ ಜನಿಸಿದರು. ಮೆಟ್ರಿಕ್ ಪರೀಕ್ಷೆಯನ್ನು ೧೯೧0ರಲ್ಲಿ ಮುಗಿಸಿ ೧೯೧೫ರಲ್ಲಿ ಡೆಕ್ಕನ್ ಕಾಲೇಜಿನಲ್ಲಿ ಎಂ. ಎ. ಪದವಿಗಳಿಸಿದರು.
ಸರ್ಕಾರಿ ಕೆಲಸಕ್ಕೆ ಹೋಗದೆ ಸಾರ್ವಜನಿಕ ಸೇವೆಗೆ ಟೊಂಕಕಟ್ಟಿ ನಿಂತರು. ಧಾರವಾಡದಲ್ಲಿ ಕೆಎಲ್ಇ ಸೊಸೈಟಿಯನ್ನು ಸ್ಥಾಪಿಸಿದರು. ಕೆಲವು ಕಾಲ ಧಾರವಾಡದ ಆರ್. ಎಲ್. ಎಸ್. ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ, ಲಿಂಗರಾಜ ಕಾಲೇಜಿನಲ್ಲಿ ವೈಸ್ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. ಕೆಎಲ್ಇ ಸೊಸೈಟಿಯ ಕಾರ್ಯದರ್ಶಿಯಾಗಿ ದುಡಿದರು.
ಪ್ರಬೋಧ ಮಾಸಪತ್ರಿಕೆ, ಜಯಕರ್ನಾಟಕದ ಮಾಸಪತ್ರಿಕೆಗಳ ಸಂಪಾದಕರಾಗಿ, ಸಾಹಿತ್ಯ ಸಮಿತಿ, ಪತ್ರಿಕೆ ಸ್ಥಾಪಕರಾಗಿ ಶ್ರಮಿಸಿದ್ದಾರೆ. ಬೆಳಗಾಂವಿ ಜಿ. ಐ. ಹೈಸ್ಕೂಲ್, ಧಾರವಾಡದ ಲಿಂಗರಾಜು ಕಾಲೇಜು, ಕರ್ನಾಟಕ ವಿಶ್ವವಿದ್ಯಾನಿಲಯದ ಸ್ಥಾಪನೆಯ ಕಾರ್ಯಗಳಲ್ಲಿ ಇವರ ಕೊಡುಗೆ ಅಪಾರ. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಕರಾಗಿ ಹಲವು ಕಾರ್ಯ ಮಾಡಿದ್ದರು.
೧೯೪೪ರಲ್ಲಿ ರಬಕವಿಯಲ್ಲಿ ನಡೆದ ೨೮ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾದರು. ಹುಬ್ಬಳ್ಳಿಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ ೧೩ನೇ ಅಧಿವೇಶನದ ಅಧ್ಯಕ್ಷರಾದರು. ೧೯೨೬ರಲ್ಲಿ ಸಿದ್ಧಗಂಗಾದಲ್ಲಿ ನಡೆದ ವೀರಶೈವ ತರುಣ ಸಂಘಗಳ ಸಮ್ಮೇಳನ ಸಭಾಧ್ಯಕ್ಷರಾದರು.
ವಚನ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯಕ್ಕೆ ಅನುಪಮ ಕೊಡುಗೆಗಳನ್ನಿತ್ತ ಶಿ ಶಿ. ಬಸವನಾಳರ ಪ್ರಸಿದ್ಧ ಕೃತಿಗಳು ಹಲವು ಹೀಗಿವೆ:
ಚೆನ್ನಬಸವಪುರಾಣ, ಪ್ರಭುಲಿಂಗಲೀಲೆ, ಶಬರಶಂಕರ ವಿಳಾಸ, ಗಿರಿಜಾ ಕಲ್ಯಾಣ ಮೊದಲಾದ ವೀರಶೈವ ಕಾವ್ಯಗಳ ಸಂಪಾದನೆ. ಕಾವ್ಯಾವಲೋಕನ, ಬಸವಣ್ಣನವರ ಷಟ್ಸ್ಥಲ ವಚನಗಳು, ಸಂಶೋಧನೆ ಸಂಪಾದನೆ, ವೀರಶೈವ ತತ್ವಪ್ರಕಾಶ (ಪಂಡಿತ ಬರಹಗಳ ಸಂಕಲನ), ಮ್ಯೂಸಿಂಗ್ಸ್ ಆಫ್ ಬಸವ (ಬಸವಣ್ಣನವರ ವಚನಗಳ ಆಂಗ್ಲಾನುವಾದ).
ಸಮರ್ಥ ಆಡಳಿತಗಾರ ಪರಿಣತ ಗ್ರಂಥ ಸಂಪಾದನಕಾರರಾಗಿದ್ದ ಶಿ. ಶಿ. ಬಸವನಾಳರು ೨೨-೨-೧೯೫೧ರಲ್ಲಿ ಕೈಲಾಸವಾಸಿಗಳಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨೮
ಅಧ್ಯಕ್ಷರು, ಶಿ.ಶಿ. ಬಸವನಾಳ
ದಿನಾಂಕ ೨೮,೨೯,೩0 ಡಿಸೆಂಬರ್ ೧೯೪೪
ಸ್ಥಳ : ರಬಕವಿ
ಸಮ್ಮೇಳನದ ಇದುವರೆಗಿನ ಕಾರ್ಯ
ಈಗ ಮೂವತ್ತು ವರ್ಷಗಳಿಂದ ತಿರುಳ್ಗನ್ನಡದ ಗಂಡುಮೆಟ್ಟಿನ ಸ್ಥಾನಗಳಲ್ಲಿಯೂ ಗಡಿನಾಡಿನ ಇಕ್ಕಟ್ಟಿನ ಆದರೂ ಆಯಕಟ್ಟಿನ ಸ್ಥಳಗಳಲ್ಲಿಯೂ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಚೋದನೆಯಿಂದ, ಅದರ ಕಾರ್ಯಕ್ರಮದ ಒಂದು ಅಂಗವಾಗಿ ನಡೆಯುತ್ತಿರುವುದಷ್ಟೆ. ಇದರಿಂದಾಗಿ ಕನ್ನಡ ಜನತೆಯಲ್ಲಿ ಸಾರ್ವತ್ರಿಕವಾದ ಜಾಗೃತಿಯುಂಟಾಗಿ ತಮ್ಮ ನಾಡು ನುಡಿಗಳ ವಿಷಯವಾಗಿ ಅಭಿಮಾನವು ಬೆಳೆದಿದೆ ಎನ್ನಬಹುದು. ಕನ್ನಡ ಸಾಹಿತ್ಯದ ಬಗೆಗೆ ಕೆಲಮಟ್ಟಿನ ತಿಳವಳಿಕೆಯೂ ಬಹುಮಟ್ಟಿನ ಆದರವೂ ಕನ್ನಡಿಗರಲೆಲ್ಲಾ ತಲೆದೋರಲು ಅನುವಾಗಿದೆ ಎಂಬಲ್ಲಿ ಸಂದೇಹವಿಲ್ಲ. ಸಮ್ಮೇಳನದ ಅಂಗವಾಗಿ ಅಲ್ಲಲ್ಲಿ ಆಗಾಗ ಜರುಗುತ್ತಿರುವ ಕವಿಗೋಷ್ಠಿ, ಸಾಹಿತ್ಯ ಗೋಷ್ಠಿ, ಮಹಿಳಾಗೋಷ್ಠಿ ಇವುಗಳ ಮೂಲಕ ಸುಪ್ರಸಿದ್ಧರಾದ ಸಾಹಿತಿಗಳ ಪ್ರತ್ಯಕ್ಷ ಪರಿಚಯವಾಗಲು ಇಂಬಾಗಿರುವುದಲ್ಲದೆ ನೂತನ ತರುಣ ಬರೆಹಗಾರರನ್ನು ಬೆಳಕಿಗೆ ತರಲೂ ಮಾರ್ಗವಾಗಿದೆಯೆನ್ನಬಹುದು. ಕನ್ನಡದ ಮುಖ್ಯ ಸಮಸ್ಯೆಗಳ ಚರ್ಚೆಗಳು ಮೇಲಿಂದ ಮೇಲೆ ನಡೆವುದರ ಮೂಲಕ ಅವುಗಳ ವಿಸ್ತಾರ ಮತ್ತು ಆಳದ ಯಥಾರ್ಥ ಕಲ್ಪನೆಯುಂಟಾಗಲು ಅನುಕೂಲವಾಗಿರುವುದಲ್ಲದೆ, ಅವುಗಳನ್ನು ಬಿಡಿಸುವುದರಲ್ಲಿ ಬರಬಹುದಾದ ತೊಡಕುಗಳ, ಮಾಡಬೇಕಾದ ಪ್ರಯತ್ನಗಳ ಅರಿವು ಕೆಲಮಟ್ಟಿಗಾದರೂ ಉಂಟಾಗಿದೆ ಎನ್ನಬಹುದು. ಪರಿಷತ್ತಿನ ಅಧಿಕಾರಿಗಳ, ಅದರಲ್ಲಿಯೂ ಮುಖ್ಯವಾಗಿ ಆ ಆ ಕಾಲದ ಉಪಾಧ್ಯಕ್ಷರ, ಪ್ರಚಾರ ಸಂಚಾರಗಳ ಪರಿಣಾಮವಾಗಿ, ಸತತ ಪ್ರಯತ್ನದ ಫಲವಾಗಿ ಅಲ್ಲಲ್ಲಿ ಕರ್ನಾಟಕ ಸಂಘಗಳು ಏರ್ಪಟ್ಟು, ಸದಸ್ಯರ ಸಂಖ್ಯೆ ಬೆಳೆದು, ಪರಿಷತ್ತಿನ ಉದ್ದೇಶ ಕಾರ್ಯಕ್ರಮಗಳ ಸಾಕಷ್ಟು ತಿಳಿವಳಿಕೆ ಕನ್ನಡಿಗರಲ್ಲಿ ಹರಡಿರುವುದಲ್ಲದೆ, ಆ ಸಂಸ್ಥೆಗೆ ಜನಬಲ ಧನಬಲಗಳೂ ಧಾರಾಳವಾಗಿ ದೊರೆಯುತ್ತಿವೆ ಎಂಬುದು ಸಂತೋಷದ ಮಾತಾಗಿದೆ. ಒಟ್ಟಿನಲ್ಲಿ ಈ ಬಗೆಯ ಪ್ರಚಾರಕಾರ್ಯ ಸಮಾಧಾನಕರವಾಗಿ ಸಾಗಿದೆ, ಸಾಗುತ್ತಲಿದೆ, ಇನ್ನು ಮುಂದೆಯೂ ಸಾಗುವುದೆಂಬ ಭರವಸೆ ಇದೆ.
ಸಮ್ಮೇಳನದ ಇನ್ನು ಮುಂದಿನ ಕಾರ್ಯ
ಸಾಮಾನ್ಯವಾದ ಈ ಬಗೆಯ ಕನ್ನಡದ ಪ್ರಚಾರ ಹಿಂದಿನಂತೆ ಮುಂದೆಯೂ ಸಾಗುವುದು ಹಿತಕರವಾಗಿರುವುದಾದರೂ ಇನ್ನು ಮುಂದಿನ ಪ್ರಚಾರ ಕಾರ್ಯಕ್ರಮದಲ್ಲಿ ಸದ್ಯಕ್ಕೆ ಅತಿ ಮಹತ್ತ್ವದುದೆನಿಸಿದ ಹಲವು ಸಮಸ್ಯೆಗಳ ಸೇರ್ಪಡೆಯಾಗಬೇಕಾಗಿದೆ. ಈ ಪ್ರಚಾರಕಾರ್ಯ ಕೆಲವು ದಿಸೆಗಳಲ್ಲಿ ಸತತವಾಗಿ ನಡೆಯುವುದು ಅತ್ಯಗತ್ಯವಿದೆ. ಅಲ್ಲದೆ ಪ್ರಚಾರದ ಕ್ಷೇತ್ರವು ಬರಿಯ ಕರ್ನಾಟಕಕ್ಕಷ್ಟೆ ನಿರ್ಬಂಧಿತವಾಗಿರದೆ ಇನ್ನೂ ವಿಸ್ತಾರಗೊಳ್ಳಬೇಕಾಗಿದೆ. ಮೂಡ ಪಡುವಣ ಗಡಿನಾಡುಗಳಲ್ಲಿ ನೆರೆಯ ಪ್ರಬಲ ಭಾಷೆಗಳ ದವಡೆಯೊಳಗಿಂದ ಕನ್ನಡವನ್ನು ಉಳಿಸಿ ಕಾಪಾಡುವ ಹೊಣೆ ಕನ್ನಡಿಗರಾದ ನಮ್ಮೆಲ್ಲರ ಮೇಲೆಯೂ ಇದೆ. ಆಯಾ ವಿಭಾಗಗಳಲ್ಲಿಯ ಕನ್ನಡ ಜನ ಸಾಮಾನ್ಯರಲ್ಲೆಲ್ಲ ಜಾಗೃತಿಯನ್ನುಂಟುಮಾಡಿ ಅದು ಸದಾ ಪ್ರಜ್ವಲಿಸುವಂತೆ ನೋಡಿಕೊಳ್ಳುವ ಭಾರವೂ ನಮ್ಮದಾಗಿದೆ. ಅದಕ್ಕಾಗಿ ಸತತ ಪ್ರಚಾರಕ್ಕೆಂದು ವೇತನದ ಪ್ರಚಾರಕರನ್ನು ನಿಯಮಿಸುವುದು ಅಗತ್ಯವೆನಿಸುತ್ತದೆ. ಸ್ಥಳೀಯ ಪ್ರಮುಖರು ಮಾಡಬಹುದಾದ ಪ್ರಯತ್ನಗಳಿಗೆ ಅಖಿಲ ಕರ್ಣಾಟಕದ ಪರವಾಗಿ ಬೆಂಬಲವನ್ನೂ ಸರಕಾರವನ್ನು ನೀಡಬೇಕಾಗುತ್ತದೆ. ಗಡಿನಾಡ ಸಮಸ್ಯೆ ಬೇರೆ ಬೇರೆ ಕಡೆಗೆ ಪರಿಸ್ಥಿತಿಗನುಸಾರವಾಗಿ ಬೇರೆಬೇರೆಯಾಗಿ ತೋರಬಹುದಾದುದರಿಂದ ಅವನ್ನೆಲ್ಲ ಚೆನ್ನಾಗಿ ಅಭ್ಯಾಸ ಮಾಡಿ ಸರಿಯಾದ ಉಪಾಯಗಳನ್ನು ಕೈಕೊಳ್ಳುವುದೂ ಅವಶ್ಯವೆನಿಸುವುದು. ಇದಕ್ಕೆಲ್ಲ ಸ್ವತಂತ್ರವಾದ ಕಾರ್ಯಾಲಯವೂ ಧನನಿಧಿಯೂ ಬೇಕೆಂಬುದರಲ್ಲಿ ಸಂದೇಹವಿಲ್ಲ. ಈ ಕೊರತೆಯನ್ನು ಪೂರೈಸುವ ಹೊಣೆಯನ್ನು ಅಖಿಲ ಕರ್ಣಾಟಕ ಸಂಸ್ಥೆಯೆನಿಸಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ತೇ ಹೊರಬೇಕಾಗುವುದು. ಇದಕ್ಕಾಗಿ ಪರಿಷತ್ತು ಬೇರೊಂದು ಕಾರ್ಯಶಾಖೆ (Department) ಯನ್ನು ಏರ್ಪಡಿಸಿಕೊಳ್ಳುವುದು ಒಳ್ಳೆಯದು. ಸಾಧ್ಯವಾದರೆ ಅಖಿಲ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಟ್ಟುಕೊಂಡಂತಹ (ಕ.ವಿ.ವ. ಸಂಘದಂತಹ) ಇತರ ಸಂಸ್ಥೆಗಳ ನೆರವನ್ನು ದೊರಕಿಸಿಕೊಳ್ಳತಕ್ಕದ್ದು.
ಈಗ ಕೆಲವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಈ ಬಗೆಗೆ ಗೊತ್ತುವಳಿಗಳನ್ನು ಅಂಗೀಕರಿಸುತ್ತಿದ್ದರೂ ಅದರಿಂದ ಯಾವ ಪರಿಣಾಮವೂ ಆಗಲಿಲ್ಲವಾದುದರಿಂದ ಇದಕ್ಕೂ ತೀವ್ರತರವಾದ ಉಪಾಯಗಳನ್ನು ಕೈಕೊಳ್ಳುವುದು ಅತ್ಯಾವಶ್ಯಕವೆಂದು ನನ್ನ ಮತಿಗೆ ತೋರುತ್ತಿದೆ.
ಪರಿಷತ್ತಿನ ಕರ್ತವ್ಯ
ನೆರೆಯ ಪ್ರಾಂತಗಳ ಆಕ್ರಮಣ ಪ್ರವೃತ್ತಿಯನ್ನು ಪ್ರತಿಭಟಿಸುವುದೂ ಕರ್ನಾಟಕದ ಏಕೀಕರಣವನ್ನು ಹೆಚ್ಚು ಬಲವತ್ತರವಾಗಿ ಪ್ರಯತ್ನಪಟ್ಟು ಸಾಧಿಸುವುದೂ ಕರ್ನಾಟಕ ವಿಶ್ವವಿದ್ಯಾನಿಲಯದ ಯೋಜನೆಯನ್ನು ಮುಂದುವರಿಸುವುದೂ-ಈ ಮೂರು ವಿಧದ ಪ್ರಯತ್ನಗಳು-ಒಂದೊಂದು ಪ್ರತ್ಯೇಕ ಸಂಸ್ಥೆಯ ಮುಖಾಂತರವಾಗಲಿ, ಇಲ್ಲವೆ ಈ ಮೂರು ಪ್ರಯತ್ನಗಳು ಮುಪ್ಪುರಿಗೊಂಡು ಒಂದೇ ಸಂಸ್ಥೆಯ ಮುಖಾಂತರವಾಗಲಿ- ಸತತವಾಗಿ ನಡೆಯುತ್ತಿರಬೇಕು; ಅಲ್ಲದೆ, ಉಳಿದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳೂ ವ್ಯಕ್ತಿಗಳೂ, ಈ ಪ್ರಯತ್ನಗಳಿಗೆ ಸದಾ ಬೆಂಬಲ ಸಹಕಾರ ನೀಡಲು ಸಿದ್ಧರಿರಬೇಕು. ಇದಕ್ಕೆಲ್ಲ ಅವಶ್ಯಕವಾಗಿ ಬೇಕಾಗುವ ಅನುಕೂಲ ಪರಿಸ್ಥಿತಿಯನ್ನು ಸಾಹಿತ್ಯ ಸಮ್ಮೇಳನ ಹಾಗೂ ಪರಿಷತ್ತು ಉಂಟುಮಾಡಿ ಕೊಡತಕ್ಕದ್ದೆಂದು ನನ್ನ ತಿಳಿವಳಿಕೆ.
ಪರಿಷತ್ತು–ಸಮ್ಮೇಳನಗಳ ಧ್ಯೇಯ–ಧೋರಣೆ
ಸಮ್ಮೇಳನವಾಗಲಿ ಪರಿಷತ್ತಾಗಲಿ ಆಸ್ತಿತ್ವದಲ್ಲಿ ಬಂದುದೂ ಬದುಕಿರುವುದೂ ಕನ್ನಡ ಸಾಹಿತ್ಯದ ಏಳ್ಗೆ-ಹೆಚ್ಚಳ ಇವುಗಳಿಗಾಗಿ ಎನ್ನುವುದನ್ನು ಮತ್ತೆ ಬೇರೆಯಾಗಿ ಹೇಳಬೇಕಾಗಿಲ್ಲ; ಅವುಗಳ ಹೆಸರುಗಳೇ ಸಾಕ್ಷಿ. ಆದುದರಿಂದ ಕನ್ನಡ ಸಾಹಿತ್ಯಕ್ಕೆ ಅವುಗಳ ಮುಖಾಂತರ ಯಾವ ಬಗೆಯ ಸೇವೆಯನ್ನು ಬಯಸಬೇಕೆಂಬುದನ್ನು ನಾವು ವಿವೇಚಿಸಿದರೆ ಅಪ್ರಸ್ತುತವಾಗಲಾರದು. ಈ ದೃಷ್ಟಿಯಿಂದ ನೋಡಿದರೆ ಆ ಸಂಸ್ಥೆಗಳ- ಅದರಲ್ಲಿಯೂ ಮುಖ್ಯವಾಗಿ ಪರಿಷತ್ತಿನ-ಕಾರ್ಯಕ್ಷೇತ್ರವನ್ನು ಎರಡು ತೆರನಾಗಿ ವಿಭಾಗಿಸಬಹುದು; (೧) ಹಳೆಯ ಸಾಹಿತ್ಯವನ್ನು ಸಂರಕ್ಷಿಸುವುದು ಹಾಗೂ ಅದರ ಅಭ್ಯಾಸಕ್ಕೆ ತಕ್ಕ ಸೌಕರ್ಯಗಳನ್ನು ಒದಗಿಸಿಕೊಡುವುದು. (೨) ಹೊಸ ಸಾಹಿತ್ಯದ ನಿರ್ಮಾಣಕ್ಕೆ ಅವಶ್ಯವಾದ ಚಲನೆ ಪ್ರೋತ್ಸಾಹಗಳನ್ನು ಕೊಡುವುದು. ಆದರೆ ಇದು ಬಹು ವಿಶಾಲವಾದ ಕ್ಷೇತ್ರ. ಬಹು ಉನ್ನತವಾದ ಧ್ಯೇಯ. ಆದುದರಿಂದ ಇಲ್ಲಿ ನಾವು ನಿರ್ಧಾರವಾದ ದೀರ್ಘಾವಧಿಯ ಕಾರ್ಯಕ್ರಮವನ್ನು ಇಟ್ಟುಕೊಳ್ಳದೆ ಸುಮ್ಮನೆ ಕಾರ್ಯಪ್ರವೃತ್ತರಾದರೆ, ವೆಚ್ಚಮಾಡಿದ ವೇಳೆ ಹಾಗೂ ಧನಕ್ಕೆ ಸರಿಯಾದ, ಪಟ್ಟ ಪ್ರಯತ್ನಕ್ಕೆ ತಕ್ಕುದಾದ ಫಲ ದೊರೆಯದೆ ಹೋಗುವ ಸಂಭವವಿದೆ. ಅಲ್ಲದೆ ಕಾಗದದಲ್ಲಿಯೇ ಉಳಿಯಬಹುದಾದ ಗೊತ್ತುವಳಿಗಳಿಂದಾಗಲಿ, ಪ್ರಕಟನೆಯ ಕ್ಷೇತ್ರವನ್ನು ದಾಟದಿರುವ ಧ್ಯೇಯಗಳಿಂದಾಗಲಿ ಪರಿಷತ್ತಿನ (ಅಥವಾ ಸಮ್ಮೇಳನದ) ಬೆಲೆಯನ್ನು ಯಾರೂ ಅಳೆಯುವುದಿಲ್ಲ. ಆದರೆ ಕಣ್ಣಿಗೆ ಕಾಣುವಂ, ಅಳತೆಗೆ ತೂಕಕ್ಕೆ ಎಣಿಕೆಗೆ ಅಳಡುವಂತೆ, ಗೈದ ಕಾರ್ಯದಿಂದಲೆ ಅಳೆಯುವರೆಂಬುದನ್ನು ನೆನಪಿನಲ್ಲಿಡತಕ್ಕದು.
ವಿಮರ್ಶೆಗೆ ಪರಿಷತ್ತಿನ ನೆರವು
ಹಿಂದಣವರು ಕೊಟ್ಟ ಕೋಡಿನ ಫಲವಾದ ಭಾಷೆಯ ಅಗ್ಗಳತೆಗಾಗಿಯೂ ಸಾಹಿತ್ಯದ ವಿಫುಲತೆಗಾಗಿಯೂ ನಾವು ಅಭಿಮಾನ ತಳೆಯುವುದು ಅರಿದಲ್ಲ. ಈ ಅಭಿಮಾನದೊಡನೆ ಭಾಷೆ ಮತ್ತು ಸಾಹಿತ್ಯಗಳ ಆಳವಾದ ಪರಿಚಯ, ಕೂಲಂಕಷವಾದ ತಿಳಿವಳಿಕೆ, ಸಹೃದಯಾತ್ಮಕ ವಿಮರ್ಶೆ- ಇವುಗಳೂ ನಮಗೆ ಹೆಚ್ಚಾಗಿ ಬೇಕಾಗಿವೆ. ಇಂತಹ ಫಲಕಾರಿಯಾದ ಅಭ್ಯಾಸಕ್ಕೆ ಅನುಕೂಲವಾದ ಸಲಕರಣೆಗಳೆಲ್ಲವನ್ನೂ ಒದಗಿಸಿಕೊಡುವುದು ಪರಿಷತ್ತಿನ ಕರ್ತವ್ಯವಾಗಿದೆ. ಅದಕ್ಕೆ ತಕ್ಕ ವಾತಾವರಣವನ್ನು ಕಲ್ಪಿಸಿಕೊಡುವುದು ಸಮ್ಮೇಳನದ ಉದ್ದೇಶವಾಗಿರಬೇಕು.
ಪರಿಷತ್ತಿನ ನಿಘಂಟು
ಕನ್ನಡ ಭಾಷೆ ಮತ್ತು ಸಾಹಿತ್ಯಗಳ ಆಳವಾದ ಅಭ್ಯಾಸದ ಸಾಧನಗಳಲ್ಲಿ ನಮಗೆ ಈಗ ಅತ್ಯಗತ್ಯದ ಕೊರತೆಯೆಂದರೆ ಉತ್ತಮವಾದ ಕನ್ನಡ ನಿಘಂಟು ಎಂಬಲ್ಲಿ ಯಾವ ಸಂದೇಹವೂ ಇಲ್ಲ. ಕಿಟ್ಟೆಲ್ ಅವರ ಬಹು ಅಮೂಲ್ಯವಾದ ಡಿಕ್ಷನರಿಯು ಈಗ ಹಳತಾಗಿರುವುದಲ್ಲದೆ ಬರಿಯ ಕನ್ನಡ ಬಲ್ಲವರಿಗೆ ಅಷ್ಟು ಪ್ರಯೋಜನಕಾರಿಯಾಗಿಲ್ಲ. ಮೇಲಾಗಿ ಅದರ ಪ್ರತಿಗಳೂ ಈಗ ದುರ್ಮಿಳವಾಗಿವೆ. ಈಗಿನ ಪರಿಸ್ಥಿತಿಗೆ ತಕ್ಕ ನಿಘಂಟುವೊಂದನ್ನು ಸಿದ್ಧಪಡಿಸುವ ವಿಷಯದಲ್ಲಿ ನಮ್ಮ ಸಾಹಿತ್ಯ ಪರಿಷತ್ತು ಕೆಲಮಟ್ಟಿಗೆ ಪ್ರಯತ್ನಪಟ್ಟಿದ್ದರೂ ಅದು ಫಲಕಾರಿಯಾಗಿಲ್ಲ. ಷಟ್ಪದಿ ಕಾವ್ಯಗಳ ಅಭ್ಯಾಸಕ್ಕಾಗಿಯೆ ಒಂದು ನಿಘಂಟನ್ನು ಪ್ರಕಟಿಸಬೇಕೆಂಬ ಪರಿಷತ್ತಿನ (೧೯೧೯)ರ ಗೊತ್ತುವಳಿ ಕಾರ್ಯರೂಪಕ್ಕೆ ಇಳಿಯಲಿಲ್ಲ. “ಪದವೈಚಿತ್ರ್ಯ, ಪ್ರಯೋಗ ವೈಚಿತ್ರ್ಯ, ಅನ್ಯಭಾಷಾ ಶಬ್ದಗಳ” ಕೋಶವೊಂದನ್ನು ಸಿದ್ಧಪಡಿಸಬೇಕೆಂಬ (೧೯೨೧) ನಿರ್ಧಾರ ಮುಂದುವರಿಯಲಿಲ್ಲ. ಇತ್ತೀಚೆಗೆ ಕನ್ನಡ ನಿಘಂಟುವನ್ನು ಸಿದ್ಧಪಡಿಸುವ ಮೂರನೆಯ ಪ್ರಯತ್ನ ಆರಂಭವಾಗಿದೆ. ಆದರೆ ಅದಕ್ಕೆ ಹಣದ ಯೋಜನೆ ಅಷ್ಟು ತೃಪ್ತಿಕರವಾಗಿಲ್ಲವೆಂಬ ಸೊಲ್ಲು ಈಗಾಗಲೆ ಅಲ್ಲಲ್ಲಿ ಕೇಳಿಸುತ್ತದೆ. ಅದು ಏನೇ ಇರಲಿ, ಆಂಗ್ಲ ಭಾಷೆಗಾಗಿಯೇ ಪ್ರಕಟವಾಗಿರುವ “ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ” (Oxford English Dictionary) ಯ ರೀತಿಯಲ್ಲಿ-ನಿಘಂಟುಗಳಲ್ಲಿ ಅವಶ್ಯವಾಗಿ ಇರಬೇಕಾದ ಶಬ್ದೋತ್ಪತ್ತಿ, ಮೂಲರೂಪಿ, ವಿವಿಧರೂಪ ನಾನಾರ್ಥ ಈ ಸಂಗತಿಗಳಲ್ಲದೆ ಪ್ರತಿಯೊಂದು ಶಬ್ದದ ಬಳಕೆಯ, ಹಾಗೂ ಅರ್ಥ ವ್ಯತ್ಯಾಸದ, ಸಾಹಿತ್ಯದಲ್ಲಿ ಅದು ಮೊದಲು ಬಳಕೆಗೆ ಬಂದ ಕಾಲ ಹಾಗೂ ಗ್ರಂಥ, ಅದರ ಅರ್ಥದಲ್ಲಿ ಯಾವ ಯಾವ ಕಾಲದಲ್ಲಿ ಯಾವ ಗ್ರಂಥಕರ್ತನ ಬಳಕೆಯು ಪರಿಣಾಮವಾಗಿ ಮಾರ್ಪಾಟು ಆಗಿದೆ.- ಈ ಮುಂತಾದವುಗಳ ಇತಿಹಾಸವನ್ನು ಸೂಚಿಸುವ ನಿಘಂಟುವೆ ನಮಗೆ ಈಗ ಅತ್ಯಾವಶ್ಯಕ. ಈ ಮಹತ್ಕಾರ್ಯಕ್ಕೆ ಬಹುಜನ ವಿದ್ವಾಂಸರ, ಬಹುಭಾಷಾ ಪಂಡಿತರ ಸಹಕಾರವು ಅತ್ಯಂತಾವಶ್ಯಕ.
ಸಂಶೋಧನೆ ಪತ್ರಿಕೆ ಪರಿಷತ್ತಿನ ಗುರಿ ಆಗಲಿ
ಅಧಿಕೃತ ಸಂಶೋಧನೆ ಅಖಿಲ ಕರ್ನಾಟಕ ಸಂಸ್ಥೆಯಾದ ಪರಿಷತ್ತಿನ ಪರವಾಗಿ ನಡೆಯುವುದು ಬಹು ಇಷ್ಟವಾದುದು. ಆದಕಾರಣ ಪರಿಷತ್ತು ಈ ವಿಷಯದಲ್ಲಿ ಸಂಶೋಧನದ ಬೇರೆಬೇರೆ ಶಾಖೆಗಳಲ್ಲಿ ನಿಷ್ಣಾತರಾದ ವಿದ್ವಾಂಸರನ್ನೊಳಗೊಂಡು, ಒಳ್ಳೆಯ ಪ್ರಾತಿನಿಧಿಕವಾದ ಸಂಪಾದಕ ಮಂಡಲವನ್ನು ನಿಯಮಿಸಿ, ಅವರಿಂದ ಒಪ್ಪಿಗೆಯನ್ನು ಪಡೆದಂತಹ ಸಂಶೋಧ ಲೇಖನಗಳಿಗೆ ಮಾತ್ರ ಪರಿಷತ್ತಿನ ಪರವಾಗಿ ಪ್ರಕಟನೆ ದೊರೆಯಬೇಕು. ಇದಕ್ಕಾಗಿ ಪರಿಷತ್ತು ಒಂದು ಪತ್ರಿಕೆಯನ್ನು ಪ್ರತ್ಯೇಕವಾಗಿಯೆ ನಡೆಸಬಹುದು. ಪ್ರತಿಯೊಂದು ಲೇಖನಕ್ಕೂ ತಳಹದಿಯಾದ ಆಧಾರಗಳ ಸಮಗ್ರಪಟ್ಟಿಯನ್ನು ಆಯಾ ಲೇಖನದೊಡನೆ ಸಂಪಾದಕ ಮಂಡಳವು ತರಿಸಿಕೊಳ್ಳಬೇಕು. ಪ್ರಯೋಜನಕಾರಿಯಾದ ಸಂಶೋಧನ ಹೆಚ್ಚಾಗಿ ನಡೆಯುವಂತೆ ಪ್ರೋತ್ಸಾಹವನ್ನು ಕೊಡಬೇಕು.
ಇದೇ ರೀತಿ ಪರಿಷತ್ತು ಹಳಗನ್ನಡದ ಕಾವ್ಯ ಮೊದಲಾದ ಗ್ರಂಥಗಳನ್ನು ಪ್ರಚುರಪಡಿಸಲಿಕ್ಕೂ ಹಳಗನ್ನಡದ ಅಭ್ಯಾಸವನ್ನು ಮುಂದುವರಿಸಲಿಕ್ಕೂ ಬೇರೊಂದು ಪತ್ರಿಕೆಯನ್ನು, ಬೇರೆ ಬೇರೆ ಶಾಖೆಗಳಲ್ಲಿ ತಜ್ಞರಾದ ವಿದ್ವಜ್ಜನರ ಮಂಡಳದ ಅಧೀನತೆಯಲ್ಲಿ ಹೊರಡಿಸುವುದು ಆವಶ್ಯಕ. ಮೇಲ್ಕಂಡ ಎರಡೂ ಉದ್ದೇಶಗಳನ್ನು ಎಂದರೆ ಸಂಶೋಧನ ಹಾಗೂ ಹಳಗನ್ನಡ ಸಾಹಿತ್ಯ ಪ್ರಕಟನೆ ಒಂದೇ ದ್ವಾರ ಸಾಧಿಸಬಹುದು. ಆದರೆ ಆಗ ಪತ್ರಿಕೆಯ ಗಾತ್ರ ಸಾಕಷ್ಟು ದೊಡ್ಡದಾಗಿರುವುದು ಆವಶ್ಯಕ.
ಪರಿಷತ್ತಿನ ಗ್ರಂಥಾಲಯ ಹೇಗಿರಬೇಕು?
ಸಂಶೋಧನಕ್ಕೂ ಅಭ್ಯಾಸಕ್ಕೂ ಅನುಕೂಲವಾಗುವಂತಹ ಉತ್ತಮ ಪುಸ್ತಕಾಲಯವನ್ನು ಸ್ಥಾಪಿಸುವುದು ಅತ್ಯಂತಾವಶ್ಯಕ. ಇಂತಹ ಪುಸ್ತಕಾಲಯದಲ್ಲಿ ಕನ್ನಡದಲ್ಲಿ ಮುದ್ರಿತವಾದ ಎಲ್ಲ ಪುಸ್ತಕಗಳೂ, ವೃತ್ತಪತ್ರಗಳ, ನಿಯತಕಾಲಿಕ ಪತ್ರಿಕೆಗಳ ಪ್ರತಿವರ್ಷದ ಕಟ್ಟುಗಳೂ ಸಂಶೋಧಕರಿಗೂ ಅಭ್ಯಾಸಿಗಳಿಗೂ ದೊರೆಯಬೇಕಲ್ಲದೆ ಬೇರೆಬೇರೆ ಭಾಷೆಗಳ ನಿಘಂಟು, ಕೋಶ ಇನ್ನಿತರ (Reference) ಉಪಯುಕ್ತ ಗ್ರಂಥಗಳೂ ಶಿಲಾಶಾಸನ ಮೊದಲಾದವುಗಳ ಪ್ರತಿಕೃತಿಗಳೂ ಬೇಕಾದಾಗ ಕೈಗೆ ಸಿಕ್ಕುವಂತಿರಬೇಕು. ಅಲ್ಲದೆ ಹಳೆಯತಾಳೆವೋಲೆಯ ಕೈಬರಹದ ಪ್ರತಿಗಳನ್ನು ಸಂಗ್ರಹಿಸಿ ಸುವ್ಯವಸ್ಥಿತವಾಗಿ ಇಡುವ ಏರ್ಪಾಟು ಇಂತಹ ಪುಸ್ತಕಾಲಯದಲ್ಲಿರಬೇಕು. ಈ ಬಗೆಯ ಪುಸ್ತಕಾಲಯವೊಂದು ಪರಿಷತ್ತಿನ ಮುಖ್ಯ ಕಾರ್ಯಾಲಯದಲ್ಲಿರಬೇಕಲ್ಲದೆ ಕಾಲಾನುಕ್ರಮದಲ್ಲಿ ಕರ್ನಾಟಕದ ಬೇರೆ ಬೇರೆ ಕೇಂದ್ರಗಳಲ್ಲಿಯೂ ಸ್ಥಾಪಿತವಾಗುವ ಗುರಿಯನ್ನು ಇಟ್ಟುಕೊಂಡಿರುವುದು ಒಳ್ಳೆಯದು. ಪರಿಷತ್ತು ಈ ದಿಸೆಯಲ್ಲಿ ಕಾರ್ಯಾರಂಭವನ್ನು ತೀವ್ರವೇ ಮಾಡುವುದು ಯಥಾಯೋಗ್ಯವೆಂಬುದನ್ನು ಇಲ್ಲಿ ನಾನು ಸೂಚಿಸುತ್ತೇನೆ.
ವಿಶ್ವವಿದ್ಯಾಲಯಗಳೊಡನೆ ಸಂಬಂಧ
ಕರ್ನಾಟಕದ ಮತ್ತು ಅದರ ಸುತ್ತಮುತ್ತಲು ಸ್ಥಾಪಿತವಾಗಿರುವ ವಿಶ್ವವಿದ್ಯಾನಿಲಯಗಳೊಡನೆ ಪರಿಷತ್ತು ಆದಷ್ಟು ನಿಕಟವಾದ ಸಂಬಂಧವನ್ನು ಇಟ್ಟುಕೊಳ್ಳುವುದು ಹಿತಕರ. ಇದರಿಂದ ಆಯಾ ಸಂಸ್ಥೆಗಳಲ್ಲಿ ಕನ್ನಡ ಹಾಗೂ ದ್ರಾವಿಡ ಭಾಷೆಗಳನ್ನು ಕುರಿತು ನಡೆಯುತ್ತಿರುವ ಅಭ್ಯಾಸ, ಸಂಶೋಧನ ಇವುಗಳ ಲಾಭವನ್ನು ಪಡೆದುಕೊಳ್ಳಬಹುದಲ್ಲದೆ ಅಲ್ಲಲ್ಲಿ ಗೋಚರವಾಗಬಹುದಾದ ಕೊರತೆಗಳನ್ನು ಪೂರೈಸಲು ಸಾಧ್ಯವಾಗಬಹುದು. ಇದೇ ರೀತಿ ಇನ್ನಿತರ ಪ್ರಾಂತೀಯ ಪರಿಷತ್ತುಗಳೊಡನೆ ಪರಸ್ಪರ ಸಂಬಂಧವನ್ನು ಬೆಳೆಸಿಕೊಳ್ಳುವುದು ಪರಿಷತ್ತಿಗೆ ಲಾಭಕರವಾಗುವುದರಲ್ಲಿ ಸಂದೇಹವಿಲ್ಲ.
ಸಮ್ಮೇಳನದ ಕಾರ್ಯಕ್ರಮಗಳು ಹೇಗಿರಬೇಕು
ಇದುವರೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳೆಲ್ಲ ಒಂದು ಸಂಪ್ರದಾಯಾನುಸಾರವಾಗಿ ಜರುಗಿದೆ. ಮೂರು ದಿನಗಳ ಒಂದು ಅವಧಿಯಲ್ಲಿ ಮುಖ್ಯ ಸಮ್ಮೇಳನಕ್ಕಾಗಿ ಕೆಲಕಾಲ, ಸಮ್ಮೇಳನದ ಅಂಶಗಳೆಂದು ಸಾಹಿತ್ಯ ಮಹಿಳಾ ಮುಂತಾದ ಗೋಷ್ಠಿಗಳಿಗಾಗಿ ಕೆಲಕಾಲ, ಆ ಬಳಿಕ ಮನರಂಜನೆ ಜನರಂಜನೆಗಳ ಕಾರ್ಯಕ್ರಮಕ್ಕಾಗಿ ಉಳಿದಕಾಲ-ಹೀಗೆ ವಿನಿಯೋಗವಾಗುತ್ತಿರುವುದು ಸಾಮಾನ್ಯವಾಗಿದೆ. ಸಮ್ಮೇಳನದ ಅಂಗವೆಂದು ಜರುಗುವ ಗೋಷ್ಠಿ ಯಾವುವು ಹಾಗೂ ಎಷ್ಟು ಎಂಬುದು ಸಮ್ಮೇಳನವನ್ನು ಜರುಗಿಸುವ ಸ್ವಾಗತ ಸಮಿತಿಯವರ ಅನುಕೂಲತೆಯನ್ನೇ ಅವಲಂಬಿಸುತ್ತಿದೆ. ಅಲ್ಲದೆ, ಒಮ್ಮೆ ಕವಿಗೋಷ್ಠಿ ಜರುಗಿದರೆ ಇನ್ನೊಮ್ಮೆ ಅದಕ್ಕೂ ವಿಸ್ತಾರವಾದ ಸಾಹಿತ್ಯಗೋಷ್ಠಿ ಜರುಗುವುದುಂಟು. ಒಮ್ಮೆ ನಾಟಕ ಗೋಷ್ಠಿ ಪ್ರತ್ಯೇಕವಾಗಿ ಜರುಗಿದ್ದರೆ ಮುಂದೆ ಕೆಲವರ್ಷ ಆ ಗೋಷ್ಠಿಯ ಸ್ಮರಣೆ ಸಹ ಇಲ್ಲದಂತಾಗುವುದೂ ಉಂಟು. ಹೀಗೆ ವರ್ಷದಿಂದ ವರ್ಷಕ್ಕೆ ಗೋಷ್ಠಿಗಳ ಸ್ವರೂಪ, ಕ್ಷೇತ್ರ, ಸಂಖ್ಯೆಗಳಲ್ಲಿ ಹೆಚ್ಚು ಕಡಮೆ ಇರುವುದರಿಂದ ಒಟ್ಟಿನಲ್ಲಿ ಅನಿಶ್ಚಿತತೆಯುಂಟಾಗುವುದಲ್ಲದೆ, ಒಂದು ಸಲ ಗೋಷ್ಠಿಯಿಂದ ಮುಂದಿನ ಸಲದ ಅದೇ ಗೋಷ್ಠಿಗೆ ಇರಬೇಕಾದ ಏಕಸೂತ್ರತೆಯಾಗಲಿ ಕಾರ್ಯಕಲಾಪದಲ್ಲಿ ತೋರಬೇಕಾದ ಪ್ರಗತಿಯಾಗಲಿ ಇಲ್ಲದಂತಾಗುವುದು ಸಹಜವಿದೆ. ಇದೂ ಅಲ್ಲದೆ, ಇಡಿಯ ಸಮ್ಮೇಳನ ಕಾರ್ಯಕ್ರಮವನ್ನು ವಿವೇಚಿಸಿದರೆ ಅದೊಂದು ಮೂರು ದಿನದ ಜಾತ್ರೆಯಂತೆ ತೋರುವುದೇ ಹೆಚ್ಚು ಸಂಭವವಲ್ಲದೆ ಶಾಶ್ವತವಾದ ಕಾರ್ಯಕ್ರಮವಾಗುವುದು ಅಪರೂಪವೆಂದೇ ಹೇಳಬೇಕಾಗುವುದು. ಪ್ರಚಾರ ದೃಷ್ಟಿಯಿಂದ ಈಗಿನ ಒಟ್ಟಿನಲ್ಲಿಯ ಕಾರ್ಯಕ್ರಮ ಯಥಾರ್ಥವಾದುದೇ ಆದರೆ ಸಮ್ಮೇಳನವು ಜನ್ಮತಾಳಿ ಮೂವತ್ತು ವರ್ಷವಾದುದರಿಂದ, ಇನ್ನು ಮುಂದೆ ಕಾರ್ಯಭಾಗವನ್ನು ಕೊಂಚ ಹೆಚ್ಚು ಮಾಡುವುದು ವಿಹಿತವೆನಿಸಬಹುದು. ಈಗಿನಂತೆ ಮುಂದೆಯೂ ಮನರಂಜನೆಯ ಕಾರ್ಯಕ್ರಮಗಳನ್ನು ಸಾಯಂಕಾಲದ ಮೇಲೆ ಪ್ರತಿದಿನವೂ ಇಟ್ಟುಕೊಳ್ಳಲು ಸಾಧ್ಯವಿದೆ. ಆದರೆ ಸಾಹಿತ್ಯ ಮೊದಲಾದ ಗೋಷ್ಠಿಗಳನ್ನು ಸಮ್ಮೇಳನದ ಅಂಗಗಳೆಂದು ಪ್ರತ್ಯೇಕವಾಗಿ ಇಟ್ಟುಕೊಳ್ಳದೆ ಸಮ್ಮೇಳನವನ್ನೇ ಆಯಾ ಶಾಖೆಗಳಿಗಾಗಿ-ಪ್ರಾಚ್ಯ ಸಮ್ಮೇಳನದಂತೆ- ಒಡೆಯುವುದು ಹೆಚ್ಚು ಫಲಕಾರಿಯಾಗಬಹುದಾಗಿದೆ. ಲೇಖಕರ ಗೋಷ್ಠಿ, ವೃತ್ತಪತ್ರಿಕಾ ಗೋಷ್ಠಿ, ನಾಟ್ಯ ಗೋಷ್ಠಿ, ಮಹಿಳಾ ಗೋಷ್ಠಿ, ಸಂಶೋಧನ ವಿಭಾಗ, ಭಾಷಾಶಾಸ್ತ್ರ ವಿಭಾಗ, ಪಾರಿಭಾಷಿಕ ಶಬ್ದರಚನೆಗಾಗಿ ಒಂದು ವಿಭಾಗ-ಈ ರೀತಿಯಾಗಿ ಸಾಹಿತ್ಯದ ಯಾವ ಮಹತ್ತ್ವದ ಶಾಖೆಗೆ ಬೇರೆ ಸಂಸ್ಥೆಗಳಿಲ್ಲವೋ ಅವುಗಳಿಗೆಲ್ಲ ಇಲ್ಲಿ ಎಡೆ ಇಡಬೇಕು. ಈ ಎಲ್ಲ ವಿಭಾಗಗಳು ಮೊದಲೆ ನಿಯೋಜಿತರಾದ ಶಾಖಾಧ್ಯಕ್ಷರ ಅಧೀನದಲ್ಲಿ ನಡೆಯಬೇಕು. ಈ ದೃಷ್ಟಿಯಿಂದ ಸಮ್ಮೇಳನವನ್ನು ಯಾವ ಯಾವ ಶಾಖೆಯಾಗಿ ವಿಭಾಗಿಸಬೇಕೆಂಬುದನ್ನು ತಜ್ಞ, ಉಪಮಂಡಲದ ಸಲಹೆಯ ಮೇಲೆ ನಿರ್ಣಯಿಸಬೇಕು. ವರ್ಷ ವರ್ಷವೂ ಅದೇ ಶಾಖೆಗಳು ಜರುಗುತ್ತಿರಬೇಕು; ಕಾರಣವಿಲ್ಲದೆ ಬದಲಿಸಬಾರದು. ಈ ಎಲ್ಲ ವಿಭಾಗಗಳ ವಿಚಾರದ ಫಲವಾಗಿ, ಅಲ್ಲದೆ ಪ್ರತ್ಯೇಕವಾಗಿಯೂ, ಅವಶ್ಯವೆನಿಸುವ ನಿರ್ಣಯಗಳು ಸಮ್ಮೇಳನದ ಸಮಗ್ರ ಅಧಿವೇಶನದಲ್ಲಿ ಕೊನೆಗೆ ಅಂಗೀಕೃತವಾಗತಕ್ಕದ್ದು. ಪ್ರತಿ ವರ್ಷ ಈ ಶಾಖೆಗಳಲ್ಲಿ ಜರುಗುವ ಕಾರ್ಯಕಲಾಪದ ಸಂಪೂರ್ಣ ವರದಿಯೊಂದಿಗೆ ಅವುಗಳಲ್ಲಿ ಸ್ವೀಕೃತವಾಗುವ ಪಂಡಿತರ, ಸಂಶೋಧಕರ, ತಜ್ಞರ ವಿದ್ವತ್ಪೂರ್ಣವಾದ ಲೇಖನಗಳೊಂದಿಗೆ ಇಡಿಯ ಸಮ್ಮೇಳನದ ಸಂಪೂರ್ಣ ವರದಿ ಮುದ್ರಿತವಾಗತಕ್ಕದ್ದು. ಈ ಬಗೆಯ ನೂತನ ಸಂಪ್ರದಾಯ ಬಹು ಫಲಕಾರಿಯಾಗಬಹುದೆಂದು ತೋರುತ್ತದೆ. ಹೀಗೆ ನಿಶ್ಚಿತವಾದ ಕಾರ್ಯಕ್ರಮವಲ್ಲದೆ ಅವಶ್ಯಕಂಡಾಗ ಬೇರೆ ತಾತ್ಪೂರ್ತಿಕ ಗೋಷ್ಠಿಗಳನ್ನು ಸಮ್ಮೇಳನದ ಅಂಗವಾಗಿ ಜರುಗಿಸಬಹುದು. ಈ ಸಂದರ್ಭದಲ್ಲಿ ”ಹಿಂದೀ” ಸಾಹಿತ್ಯ ಸಮ್ಮೇಳನದವರು ವಿಜ್ಞಾನ ಗೋಷ್ಠಿ, ಸಮಾಜಶಾಸ್ತ್ರ್ರ ಗೋಷ್ಠಿಗಳನ್ನು ನೆಡೆಸುತ್ತಿರುವುದು ಅನುಕರಣೀಯವಾಗಿದೆಯೆಂದು ಹೇಳಬಹುದು. ಈ ಸಲ ಅವರು ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಮಾಡುವುದಕ್ಕೆಂದು ಒಂದು ಸ್ವತಂತ್ರ ಗೋಷ್ಠಿಯನ್ನೇ ಶ್ರೀ ಕೆ.ಎಂ. ಮುನಿಷಿಯವರ ಅಧ್ಯಕ್ಷತೆಯಲ್ಲಿ ನೆರವೇರಿಸಿದುದು ತಮ್ಮೆಲ್ಲರಿಗೆ ಗೊತ್ತಿರಬಹುದು.
ಸಂಗೀತ ಗೋಷ್ಠಿ ಮತ್ತು ಪರಿಷತ್ತು
ನಮ್ಮ ದೇಶದಲ್ಲಿ ಸಂಗೀತ ಗೋಷ್ಠಿಗಳು ಪ್ರತ್ಯೇಕವಾಗಿ ನಡೆಯುತ್ತಿಲ್ಲವಾದುದರಿಂದ ಇನ್ನು ಮುಂದೆ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಗೀತಗೋಷ್ಠಿ ಜರುಗುವುದು ವಿಹಿತವೆನಿಸುತ್ತಿದೆ. ಇಂತಹ ಗೋಷ್ಠಿಗಳಲ್ಲಿ ಸಂಗೀತಕ್ಕೂ ಸಾಹಿತ್ಯಕ್ಕೂ ಇರಬೇಕಾದ ಸಂಬಂಧವನ್ನು ತಾತ್ತ್ವಿಕವಾಗಿ ಶಾಸ್ತ್ರೀಯವಾಗಿ ಚರ್ಚಿಸಲು ಅನುಕೂಲವಾಗುವುದಲ್ಲದೆ, ಉತ್ತರ ಹಾಗೂ ದಕ್ಷಿಣದ ಸಂಗೀತ ರೀತಿಗಳ ಸಂಬಂಧ, ಸಮನ್ವಯ ಮುಂತಾದವುಗಳನ್ನು ಅಭ್ಯಾಸಿಸಲೂ ಅನುಕೂಲವಾಗಬಹುದು. ಕೀರ್ತನ ಕಲೆಗೂ ಯೋಗ್ಯ ಪ್ರೋತ್ಸಾಹ ದೊರೆಯುವುದಕ್ಕೆ ಇದು ಸಹಾಯಕವಾಗಬಹುದು. ಮೇಲಾಗಿ ಪ್ರತ್ಯಕ್ಷ ಸಂಗೀತ ಸುಧೆಯನ್ನೀಂಟುವ ಸುಸಂಧಿಯು ಇದರಿಂದ ಉಂಟಾಗುವುದೆಂಬುದನ್ನು ಬೇರೆ ಹೇಳಬೇಕಾಗಿಲ್ಲ.
Tag: Kannada Sahitya Sammelana 28, S.S. Basavanala
೨೭ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ದ.ರಾ. ಬೇಂದ್ರೆ
ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ರಾಮಚಂದ್ರ ಬೇಂದ್ರೆ-ಅಂಬವ್ವನವರ ಪುತ್ರರಾಗಿ ೩೧-೧-೧೮೯೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಧಾರವಾಡದಲ್ಲಿ ೧೯೧೩ರಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೯೧೮ರಲ್ಲಿ ಬಿ.ಎ. ಮಾಡಿದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ೧೯೩೫ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು.
ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ಆಮೇಲೆ ೧೯೪೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಒಪ್ಪೊತ್ತಿನ ಶಿಕ್ಷಕರಾದರು. ೧೯೪೪ರಲ್ಲಿ ಸೊಲ್ಲಾಪುರದ ಡಿಎವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೧೯೪೪ರಲ್ಲಿ ನೇಮಕಗೊಂಡರು. ೧೯೫೬ರಲ್ಲಿ ನಿವೃತ್ತರಾದ ಮೇಲೆ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದರು.
ಮುಂಬಯಿಯಲ್ಲಿ ನಡೆದ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಅಧ್ಯಕ್ಷರಾಗಿದ್ದರು. ೧೯೩0ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಠಿಯನ್ನು ನಿರ್ವಹಿಸಿದರು. ಕೆಲವು ಕಾಲ ಜೀವನ ಮಾಸಪತ್ರಿಕೆ ಮತ್ತು ಜಯಕರ್ನಾಟಕ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದರು.
ಬೇಂದ್ರೆ ಅವರಿಗೆ ೧೯೬೮ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿತು. ೧೯೭೬ರಲ್ಲಿ ಕಾಶಿಯ ವಿದ್ಯಾಪೀಠವೂ ಗೌರವ ಡಾಕ್ಟರೇಟ್ ನೀಡಿತು. ಕೇಂದ್ರ ಸರ್ಕಾರ ೧೯೬೮ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತು. ಕೇಂದ್ರದ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ಇವರಿಗೆ ಸಂದಿದೆ. ಅದಮಾರು ಮಠದವರು ಕರ್ನಾಟಕ ಕವಿಕುಲತಿಲಕ ಬಿರುದನ್ನು ೧೯೭೨ರಲ್ಲಿ ನೀಡಿದರು. ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ೨೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಇವರಿಗೆ ನೀಡಲಾಯಿತು. ೧೯೫೬ರಲ್ಲಿ ಅರಳು ಮರಳು ಕವನಸಂಗ್ರಹಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ದೊರೆತರೆ ೧೯೭೪ರಲ್ಲಿ ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ೧೯೬೭ರಿಂದ ರಾಜ್ಯ ಸರ್ಕಾರ ಗೌರವ ಮಾಶಾಸನ ನೀಡಿತು.
ಪ್ರತಿಭಾವಂತ ದ.ರಾ. ಬೇಂದ್ರೆಯವರ ಕವನಗಳು ಕನ್ನಡ ಜನತೆಯನ್ನು ಮುಗ್ಧಗೊಳಿಸಿದೆ. ಗಾಯಕರು ಹಾಡಿ ತಣಿದಿದ್ದಾರೆ. ಜನತೆ ಪದೇ ಪದೇ ಕೇಳಿ ಆನಂದಿಸುತ್ತಿದೆ. ಇಂಥ ಬೇಂದ್ರೆಯವರ ಕೃತಿಗಳಲ್ಲಿ ಕೆಲವು ಹೀಗಿವೆ.
ಕೃಷ್ಣಕುಮಾರಿ, ಸಖೀಗೀತ, ಉಯ್ಯಾಲೆ, ಗರಿ, ನಾದಲೀಲೆ, ಅರುಳುಮರುಳು ಇತ್ಯಾದಿ ೨೫ ಕವನ ಸಂಕಲನಗಳು. ಸಾಹಿತ್ಯ ಮತ್ತು ವಿಮರ್ಶೆ, ಕಾವ್ಯೋದ್ಯೋಗ, ಸಾಹಿತ್ಯ ವಿರಾಟ ಸ್ವರೂಪ, ನಾಕುತಂತಿ, ನಿರಾಭರಣ ಸುಂದರಿ, ಶಾಂತಲಾ (ಅನುವಾದ) ಇತ್ಯಾದಿ.
ಅಂಬಿಕಾತನಯದತ್ತ ಕಾವ್ಯನಾಮದ ದ.ರಾ. ಬೇಂದ್ರೆಯವರು ೨೬-೧0-೧೯೮೨ರಲ್ಲಿ ಮುಂಬಯಿಯಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨೭
ಅಧ್ಯಕ್ಷರು, ದ.ರಾ. ಬೇಂದ್ರೆ
ದಿನಾಂಕ ೨೬,೨೭,೨೮ ಜನವರಿ ೧೯೪೩
ಸ್ಥಳ : ಶಿವಮೊಗ್ಗ
ಸಾಹಿತ್ಯ ಸಮ್ಮೇಳನವು ಸಂಜಿವಿನಿ
ನನ್ನನ್ನು ಪರಿಷತ್ತಿನ ಸದಸ್ಯರು ಪ್ರೇಮದಿಂದ ಈ ಅಧ್ಯಕ್ಷಪೀಠದಲ್ಲಿರಿಸಿದ್ದಾರೆ. ಅವರಿಗೆ ನನ್ನ ನಮಸ್ಕಾರ. ನನ್ನನ್ನು ಅನೇಕ ಹಿರಿಯರು, ಕಿರಿಯರು, ಸಂದವರು, ಸಮಾಜದವರು, ಪತ್ರ ಪತ್ರಿಕೆಗಳವರು ಇದಕ್ಕಾಗಿ ಅಭಿನಂದಿಸಿದರು; ಅವರಿಗೆ ಅಭಿವಂದಿಸುತ್ತೇನೆ. ಈಗ ಕೂಡಿದ ಸಭೆ ನನ್ನನ್ನು ಸ್ನೇಹದಿಂದ ತಮ್ಮವನೆಂದು ಇದಿರುಗೊಳ್ಳುತ್ತಿದೆ, ಅದಕ್ಕೆ ಅನೇಕ ಸಲ ನಮಸ್ಕರಿಸುತ್ತೇನೆ.
ಹದಿಮೂರು ವರ್ಷಗಳ ಪೂರ್ವದಲ್ಲಿ, ಮೈಸೂರಿನಲ್ಲಿ, ಮೈಸೂರು ಸಾಹಿತ್ಯ ಸಮ್ಮೇಳನವು ನನ್ನನ್ನು ಲೇಖಕರ ಗೋಷ್ಠಿಯ ಅಧ್ಯಕ್ಷನನ್ನಾಗಿ ಮಾಡಿತು. ಇಷ್ಟು ವರ್ಷಗಳ ಅನಂತರ ಮತ್ತೊಮ್ಮೆ ಸಾಹಿತ್ಯ ಸಮ್ಮೇಳನವು ಮೈಸೂರು ರಾಜ್ಯವನ್ನು ಸೇರುತ್ತಿದೆ; ಶಿವಮೊಗ್ಗ ನನ್ನನ್ನು ಸಾಹಿತ್ಯ ಸಮ್ಮೇಳನಕ್ಕೇ ಅಧ್ಯಕ್ಷನೆಂದು ಬರಮಾಡಿಕೊಳ್ಳುತ್ತಿದೆ. ಆ ನಾಡಿನ ಅಧಿವತಕ್ಕೆ ನಾನು ಎಷ್ಟು ಬಾಗಿದರೂ ಸಾಲದು. ಅಣ್ಣ ಮಾಸ್ತಿಯವರೊಡನೆ ೧೯೩0ರಲ್ಲಿ ಇಲ್ಲಿಗೆ ಬಂದಾಗಲೇ ಸ್ಥಾಪಿತವಾದ ಇಲ್ಲಿಯ ಕರ್ನಾಟಕ ಸಂಘ, ಅಣ್ಣ ಮಾಸ್ತಿಯವರೇ ಪರಿಷತ್ತಿನ ಉಪಾಧ್ಯಕ್ಷರಿರುವಾಗ, ತಾನು ಕಟ್ಟಿಸಿಕೊಂಡ ಕನ್ನಡದ ಗುಡಿಯಲ್ಲಿ, ಸರಸ್ವತಿಯ ಮಹಾಪೂಜೆಯ ಕಾಲಕ್ಕೆ, ನನ್ನನ್ನು ಪೂಜಾರಿಯೆಂದು ಸಾಹಿತ್ಯದ ಮಂತ್ರಗಳನ್ನು ಉಚ್ಚರಿಸಲು ಕರೆಸಿಕೊಂಡಿದೆ. ಈ ಘಟನೆ ಇಲ್ಲಿಯ ಹಿರಿಯರ ಗೆಳೆಯರ ನಿರಂತರ ಸ್ನೇಹದ ಪರಿಪಾಕವೇ ಆಗಿದೆ. ಅದಕ್ಕೆ ನನ್ನ ಸ್ನೇಹವನ್ನೇ ಆರ್ಪಿಸದೆ- ನನ್ನ ಹತ್ತಿರ ಬೇರೆ ಏನಿದೆ? ಇಲ್ಲಿಯ ಕಾರ್ಯಕರ್ತರು ಕನ್ನಡ ನಾಡಿನ ಅನೇಕ ಕಾರ್ಯಕರ್ತರಂತೆ ಪಂಚಾಗ್ನಿಯ ಸಾಧನೆ ಮಾಡಿ, ಈ ಸಾರಸ್ವತ ಯಜ್ಞ ಹೂಡಿದ್ದೀರಿ. ಇದು ಬರಿಯ ಉತ್ಸಾಹದ ಉತ್ಸವವಲ್ಲ; ನಾವೆಲ್ಲರೂ ಬಲ್ಲೆವು. ಆದರೂ “ಯುದ್ಧ, ಬರಗಾಲ, ಪಿಡುಗು, ಒಳಜಗಳ ಮಧ್ಯೆ ಸಾಹಿತ್ಯ ಸಮ್ಮೇಳನವೇನು ನೆರೆದಿದೆ” ಎಂದು ಈಗಿನ ಕಾಲಕ್ಕೆ ಒಂದು ಪ್ರಶ್ನೆ ಮನದಲ್ಲಿ ಹುಟ್ಟಿದರೆ ಅಸಹಜವಲ್ಲ. “ಹೊರಗಿನ ಬೇಜಾರು ತಪ್ಪಿಸಿಕೊಳ್ಳಲು ನಾವಿಲ್ಲಿ ನೆರೆದಿದ್ದೇವೆ” ಎಂದು ತಿಳಿದುಕೊಳ್ಳಲಾಗದು. ಒಂದು ಕಡೆಗೆ ಹಸಿವೆಯ ಕಾಡುಗಿಚ್ಚು, ಇನ್ನೊಂದು ಕಡೆಗೆ ಯುದ್ಧದ ಮದ್ದಾನೆ, ಮತ್ತೊಂದು ಕಡೆಗೆ ಪಿಡುಗಿನ ಹೆಬ್ಬುಲಿ- ಇವುಗಳಿಂದ ತಪ್ಪಿಸಿಕೊಳ್ಳಲು ಓಡಿದರೆ, ಅನಾಯಕ ಸಮಾಜದ ಹಾಳುಬಾವಿಯಲ್ಲಿ ನಾವು ಬೀಳಲಿರಲು, ಪಕ್ಷಪಂಗಡಗಳ, ಘಟಸರ್ಪ ನಮಗೆ ಅಲ್ಲಿಯೂ ಕಾದಿದೆಯಲ್ಲಾ ಎಂದು ಕಕ್ಕಾಬಿಕ್ಕಿಯಾಗಿ ಸಮ್ಮೇಳನದ ಹರಕು ಬಳ್ಳಿಗಳಿಗೆ ಜೋತುಬಿದ್ದಿರುವಾಗ ಸಾಹಿತಿಗಳ ಜೇನು ಹುಟ್ಟಿನ ಒಂದು ತೊಟ್ಟಾದರೂ ಮೂಗಿಗೆ ತಗುಲಿದರೆ ಸಾಕು, ಮೂಗಿಗೆ ಹತ್ತಿದ ಆ ಹನಿತುಪ್ಪವನ್ನು ನಿಲುಕದ ನಾಲಗೆಯನ್ನಾದರೂ ಚಾಚಿ ರುಚಿ ನೋಡೋಣವೆಂಬ ನಗೆಗೇಡು ಪ್ರಯತ್ನ ಮಾಡಲು ತಾವು ನೆರೆದಿದ್ದೀರೆಂದು ತಿಳಿಯಬೇಡಿ. ಸಾಹಿತ್ಯವು ಸಂಜೀವನ ವಿದ್ಯೆ. ಆ ಸಂಜೀವಿನಿಗೆ ನಾವು ತಾವೆಲ್ಲರೂ ಶರಣಾಗತರಾಗಿದ್ದೇವೆ.
Tag: Kannada Sahitya Sammelana 27, Da.Ra. Bendre, Dattatreya Ramachandra Bendre, Ambikatanaya Datta
೨೬ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎ.ಆರ್. ಕೃಷ್ಣಶಾಸ್ತ್ರಿ
ಕನ್ನಡದ ಸೇನಾನಿ ಎನಿಸಿ ಹೊಸಗನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾಗಿ, ಪ್ರಬುದ್ಧ ಕರ್ನಾಟಕದ ಸ್ಥಾಪಕರಾಗಿ, ಪತ್ರಿಕಾ ಇತಿಹಾಸದಲ್ಲಿ ವಿಕ್ರಮ ಸಾಧಿಸಿದ ಎ.ಆರ್. ಕೃಷ್ಣಶಾಸ್ತ್ರಿಗಳು ೧೨-0೨-೧೮೯0 ಮೈಸೂರಿನಲ್ಲಿ ಅಂಬಳೆ ರಾಮಕೃಷ್ಣಶಾಸ್ತ್ರಿ-ವೆಂಕಮ್ಮ ದಂಪತಿಗಳಿಗೆ ಜನಿಸಿದರು. ತಂದೆಯಿಂದಲೇ ಬಾಲ್ಯದಲ್ಲಿ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿದ ಮೇಲೆ ೧೯೧೩ರಲ್ಲಿ ಬಿ.ಎ. ಪದವಿ ಗಳಿಸಿ ೧೯೧೫ರಲ್ಲಿ ಮದರಾಸಿನಲ್ಲಿ ಕನ್ನಡ ಎಂ.ಎ. ಮಾಡಿದರು.
ಪ್ರಾರಂಭದಲ್ಲಿ ಡೆಪ್ಯೂಟಿ ಕಮೀಷನರ್ ಆಫೀಸಿನಲ್ಲಿ ಅನಂತರ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸ ಮಾಡಿದ ಮೆಲೆ ೧೯೧೬ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ೧೯೩೯ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೧೯೪೬ರಲ್ಲಿ ನಿವೃತ್ತರಾದರು. ಅನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪರಿಷತ್ಪತ್ರಿಕೆ ಮತ್ತು ನಿಘಂಟು ಸಂಪಾದಕರೂ, ಅಧ್ಯಕ್ಷರಾಗಿ ಅಮೋಘ ಸೇವೆ ಸಲ್ಲಿಸಿದ್ದಾರೆ. ಪರಿಷತ್ತಿನಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ ದತ್ತಿನಿಧಿ ಇಟ್ಟಿದ್ದಾರೆ. ೧೯೧೮ರಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಸಂಘ ಸ್ಥಾಪಿಸಿದರು. ಪ್ರಬುದ್ಧ ಕರ್ನಾಟಕ ಸಂಪಾದಕರಾದರು. ೧೯೪೨-೧೯೪೫ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಪ್ರಕಾಶನ ಸಮಿತಿ ಅಧ್ಯಕ್ಷರಾಗಿ ದುಡಿದರು. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು ಸಮಿತಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದರು.
ಎ.ಆರ್. ಕೃಷ್ಣಶಾಸ್ತ್ರಿಗಳು ನಿಷ್ಕಾಮ ಕನ್ನಡ ಸೇವೆ ಮಾಡಿದ ಮಹನೀಯರು. ಯಾವ ಪ್ರಶಸ್ತಿ ಅಧಿಕಾರ ಸ್ಥಾನವನ್ನು ಎಂದೂ ನಿರೀಕ್ಷಿಸಲಿಲ್ಲ. ಆದರೂ ಕೆಲವು ಪ್ರಶಸ್ತಿ, ಗೌರವಗಳು ಇವರಿಗೆ ಸಂದಿವೆ. ೧೯೬0ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ದೊರೆತಿದೆ. ಇವರ ಬಂಕಿಂಚಂದ್ರ ಕೃತಿಗೆ ೧೯೬೧ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ೧೯೪೧ರಲ್ಲಿ ಹೈದರಾಬಾದಿನಲ್ಲಿ ನಡೆದ ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಜನತೆ ಆರಿಸಿತು. ೧೯೫೬ರಲ್ಲಿ ಅವರ ಸೇವೆಗೆ ಕೃತಜ್ಞತೆಯ ಕುರುಹಾಗಿ ಅಭಿವಂದನಾ ಗ್ರಂಥ ಸಮರ್ಪಣೆ ಮಾಡಿದರು.
ವಚನ ಭಾರತದಂಥ ಸರ್ವಜನಪ್ರಿಯ ಗ್ರಂಥ ಬರೆದ ಎ.ಆರ್. ಕೃ. ಬರೆದ ಗ್ರಂಥಗಳು ಕೆಲವೇ ಆದರೂ ಅವೆಲ್ಲಾ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ. ಆ ಪೈಕಿ ಕೆಲವು ಗ್ರಂಥಗಳು:
ಹರಿಶ್ಚಂದ್ರಕಾವ್ಯ ಸಂಗ್ರಹ, ವಚನ ಭಾರತ, ನಾಗಮಹಾಶಯ (ಅನುವಾದ), ನಿಬಂಧಮಾಲಾ (ಅನುವಾದ), ಭಾಷಣಗಳು ಮತ್ತು ಲೇಖನಗಳು (ಬಿಡಿವಿಚಾರಗಳು), ಬಂಕಿಮಚಂದ್ರ, ಶ್ರೀ ರಾಮಕೃಷ್ಣ ಪರಮಹಂಸರ ಜೀವನಚರಿತ್ರೆ, ಕನ್ನಡ ಕೈಪಿಡಿ (ಭಾಗ-೧), ನಯಸೇನನ ಧರ್ಮಾಮೃತ ಇತ್ಯಾದಿ
ಶಾಸ್ತ್ರಿಗಳು ದಿನಾಂಕ ೧-೨-೧೯೬೮ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨೬
ಅಧ್ಯಕ್ಷರು, ಎ.ಆರ್. ಕೃಷ್ಣಶಾಸ್ತ್ರಿ
ದಿನಾಂಕ ೨೭, ೨೮, ೨೯ ಡಿಸೆಂಬರ್ ೧೯೪೧
ಸ್ಥಳ : ಹೈದರಾಬಾದ್
ಹೈದರಬಾದ್ ಹಿರಿಮೆ
ಹೈದರಾಬಾದು ಪ್ರಾಂತ ಕನ್ನಡಿಗರಿಗೆ ಹೆಮ್ಮೆಯ ಪ್ರಾಂತ; ಕನ್ನಡ ಸಾಹಿತ್ಯ ಗಂಗೆಯ ಗಂಗೋತ್ರಿ; ತಿರುಳ್ಗನ್ನಡದ ಕನ್ನಡಿ; ಕಲಾರತ್ನಗಳ ಖನಿ; ಭಕ್ತ ಶಿರೋಮಣಿಗಳ ತವರುಮನೆ. ಈ ಪ್ರಾಂತದ ರಾಜಧಾನಿಯಾದ ಭಾಗ್ಯನಗರದಲ್ಲಿ ಸಮ್ಮೇಳನ ಸೇರಿರುವುದು ಕನ್ನಡಿಗರ ಅಪೂರ್ವಭಾಗ್ಯವೆಂದು ನಾನು ಎಣಿಸುತ್ತೇನೆ. ಈ ಭಾಗ್ಯವು ಸಾಧ್ಯವಾಗಿ ಹೈದರಾಬಾದಿನ ಕರ್ಣಾಟಕದವರೂ ಮೈಸೂರಿನ ಕರ್ಣಾಟಕದವರೂ ಅಣ್ಣತಮ್ಮಂದಿರು ಅಕ್ಕತಂಗಿಯರು ಎಂಬ ಭಾವನೆ ಬರುವುದಕ್ಕೆ ಕಾರಣ ಕನ್ನಡ ಸಾಹಿತ್ಯ ಪರಿಷತ್ತು.
ಕನ್ನಡ ಪ್ರಾಂತಾಭಿಮಾನ
ಕನ್ನಡಿಗರಲ್ಲಿ ಎಷ್ಟು ಒಗ್ಗಟ್ಟೂ, ಒಂದೆಂಬ ಭಾವನೆ, ಇರಬೇಕೋ ಅಷ್ಟೂ ಇಂದು ಇಲ್ಲದಿದ್ದರೂ ಅದು ಇರುವಷ್ಟು ಮಟ್ಟಿಗಾದರೂ ಹುಟ್ಟು ಬೆಳೆದಿರುವುದು ಸಾಹಿತ್ಯ ಪರಿಷತ್ತಿನಿಂದ; ಅದನ್ನು ಕರೆದು ಹೀಗೆ ಸಮ್ಮೇಳನಗಳನ್ನು ಕೂಡಿಸಲು ಸಾಧ್ಯವಾಗಿರುವುದು ಕನ್ನಡದ ಅಭಿಮಾನಿಗಳಿಂದ. ಮೈಸೂರಿನವರು, ಧಾರವಾಡದವರು, ಮಂಗಳೂರಿನವರು, ಹೈದರಾಬಾದಿನವರು, ಕೊಡಗಿನರು ಎನ್ನುವುದಕ್ಕಿಂತ `ಕನ್ನಡಿಗರು’ ಎನ್ನುವುದು ಶ್ರೇಯಸ್ಸು. ಕನ್ನಡಿಗರು, ಮರಾಠಿಗರು, ತೆಲುಗರು, ತಮಿಳರು ಎನ್ನುವುದಕ್ಕಿಂತ ಭಾರತೀಯರು ಎನ್ನುವುದು ಮತ್ತೂ ಶ್ರೇಯಸ್ಸು, ಭಾರತೀಯರು, ಇಂಗ್ಲಿಷರು, ಅಮೇರಿಕನರು, ಆಫ್ರಿಕನರು ಎನ್ನುವುದಕ್ಕಿಂತ ನಾವೆಲ್ಲ ಈ ಭೂಮಿ ತಾಯಿಯ ಮಕ್ಕಳು ಎನ್ನುವುದು-ವಿಶ್ವಭಾವನೆಯು-ಸರ್ವೋತ್ತಮ. ಹೀಗೆಂದು ಪ್ರತಿಯೊಬ್ಬ ವ್ಯಕ್ತಿಯೂ ವಿಶ್ವಪ್ರಜೆಯಾಗಿ ಕೆಲಸ ಮಾಡುವುದಕ್ಕಾಗುತ್ತದೆಯೇ? ಪ್ರಪಂಚವನ್ನೇ ಉದ್ಧಾರಮಾಡುತ್ತೇನೆಂದು ಹೊರಡುವುದಕ್ಕಿಂತ ಹೆಚ್ಚಿನ ಅವಿವೇಕ ಇನ್ನೊಂದಿಲ್ಲ. ‘’ತಾನುಂಟೋ ಮೂರು ಲೋಕವುಂಟೋ!”ಎನ್ನುವುದು ಒಂದು ವಿಧದಲ್ಲಿ ನಿಜ. ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳಬೇಕು; ಆ ಮೇಲೆ ತನ್ನವರು, ತನ್ನ ನಾಡು, ತನ್ನ ಲೋಕ. ಉದ್ಧಾರ ಕಾರ್ಯವು ದಾನದಂತೆ ತನ್ನಿಂದಲೇ ಆರಂಭವಾಗಬೇಕು; ಆದರೆ ತನ್ನಲ್ಲಿಯೇ ನಿಲ್ಲಬಾರದು, ಮುಗಿಯಬಾರದು. ತಾನು ವಿದ್ಯಾವಂತನಾದರೆ, ಐಶ್ವರ್ಯವಂತನಾದರೆ, ಮತ್ತೊಬ್ಬನಿಗೆ ಹೇಳಿಕೊಡಬಹುದು. ಹಣಕೊಡಬಹುದು. ಅಂಥ ವ್ಯಕ್ತಿಗಳು ಒಂದು ಸಾವಿರ ಜನವಾದರೆ ದೇಶ ತಾನೇ ಮೇಲಕ್ಕೆ ಏಳುತ್ತದೆ, ಮುಂದಕ್ಕೆ ಬರುತ್ತದೆ ಹಾಗಲ್ಲದೆ ದೇಶವನ್ನು ಉದ್ಧಾರಮಾಡುತ್ತೇನೆಂದು ಯಾರಾದರೂ ತನ್ನನ್ನೂ ತನ್ನ ತಾಯಿ ತಂದೆ ಹೆಂಡತಿ ಮಕ್ಕಳನ್ನೂ ಅಲಕ್ಷ್ಯಮಾಡಿದರೆ ಅದು ದೇಶೋದ್ಧಾರವಲ್ಲ; ಕ್ಷೇಮವೇ. ಹೀಗೆ ಕನ್ನಡಿಗರಾಗಲಿ, ಆಂಧ್ರರಾಗಲಿ, ತಮಿಳರಾಗಲಿ, ತನ್ನ ನಾಡಿನ ಅಭಿಮಾನದಿಂದ ಅದನ್ನು ಪುಷ್ಟಿಗೊಳಿಸಿಕೊಳ್ಳಬೇಕೆಂದು ಪ್ರಯತ್ನಪಟ್ಟರೆ ಅದು ಸ್ವಾಭಾವಿಕವೂ ನ್ಯಾಯವೂ ಆಗಿರುವುದಲ್ಲದೆ, ಒಟ್ಟು ದೇಶಕ್ಕೂ ಕ್ಷೇಮವೇ.
ಭಾಷಾವಾರು ಪ್ರಾಂತ ವಿಭಾಗವಾಗಲಿ
ಮುಂದೆ ಭರತಖಂಡವನ್ನು ಪ್ರಗತಿದೃಷ್ಟಿಯಿಂದ ಸಂಘಟನೆಗೊಳಿಸುವಾಗ ವಿಭಾಗಗಳು ಹೇಗಿರಬೇಕೆಂದು ರಾಜತಂತ್ರಜ್ಞರು ಯೋಚಿಸುತ್ತಿದ್ದಾರೆ. ಅದನ್ನು ಚರ್ಚಿಸುವುದು ಸಾಹಿತ್ಯ ಸಮ್ಮೇಳನದ ಅಥವಾ ಅದರ ಅಧ್ಯಕ್ಷನ ಕೆಲಸವಲ್ಲ. ಆದರೆ ನಮಗೆಲ್ಲ ಪ್ರಕೃತವಾದ ಅಂಶವೇನೆಂದರೆ, ಈ ವಿಭಾಗ ಕ್ರಮದಲ್ಲಿ ಬಹುತರವಾದ ಒಪ್ಪಿಗೆಯನ್ನು ಪಡೆದಿರುವುದು ಭಾಷಾನುಸಾರಿಯಾದ ಪ್ರಾಂತವಿಭಾಗ. ಇದನ್ನು ಸಾಧಿಸಲು ದಕ್ಷಿಣ ದೇಶದಲ್ಲಿ ನಮ್ಮ ಸೋದರರಾದ ಆಂಧ್ರರು ಮುನ್ನುಗ್ಗಿದರು. ಅವರ ಕೂಗು ಕಡಲನ್ನೂ ದಾಟಿ ಹೋಗಿ ಇನ್ನೇನು ಕೈಗೂಡಿತೆನ್ನುವಂತಾಯಿತು. ಅವರ ನೆರೆಯಲ್ಲಿ ನಾವು ಅವರಂತೆ ಒಂದು ಕನ್ನಡ ನಾಡನ್ನು ಕಟ್ಟಿಕೊಳ್ಳಬಹುದೆಂದು ಯೋಚಿಸಿದೆವು. ಕನ್ನಡ ಸಾಹಿತ್ಯ ಪರಿಷತ್ತು ಈ ಕನಸನ್ನು ತನ್ನ ಧ್ವಜ ಚಿನ್ನೆಯಾಗಿ ಮಾಡಿ ಎತ್ತಿ ಹಿಡಿಯಿತು. ಆದರೆ ಅಷ್ಟರಲ್ಲಿ ವಿಶ್ವಗ್ರಾಸಿಯಾದ ಎರಡನೆಯ ಮಹಾಸಂಗ್ರಾಮವು ಆರಂಭವಾಗಿ ಎಲ್ಲಿಯದು ಅಲ್ಲಿಯೇ ಉಳಿಯಿತು. ಈ ಯುದ್ಧವು ಬೇಗ ಮುಗಿದು, ಬ್ರಿಟಿಷರಿಗೆ ಜಯವಾಗಿ, ನಮ್ಮ ನಾಡು ನನ್ನ ಆಶೆಯನ್ನು ನೆರವೇರಿಸಿಕೊಳ್ಳುವ ಕಾಲ ಬರಲಿ!
ತಾಯಿನುಡಿಯ ಅಭಿಮಾನ
ಸಾಹಿತ್ಯ ಪರಿಷತ್ತು ಈ ಭಾವನೆಯನ್ನು ನಮ್ಮಲ್ಲಿ ಉಂಟುಮಾಡಲು ಬಹುವಾಗಿ ಕೆಲಸಮಾಡಿದೆ ಎಂದು ಆಗಲೆ ಹೇಳಿದೆ. ಅದರ ಸ್ಥಾಪಕರ ಉದ್ದೇಶವೇ ಇದಾಗಿತ್ತು. ಆದರೆ ಕನ್ನಡಿಗರಲ್ಲಿ ಕಾವು ಏರದು; ಅವರು ಕದಳೀಗರ್ಭ-ಶ್ಯಾಮರೂ ಹೌದು, ಶೀತರೂ ಹೌದು. ಈ ಸಂದರ್ಭದಲ್ಲಿ ನನಗೆ ಪದೇ ಪದೇ ಒಂದು ಸಂಗತಿ ನೆನಪಿಗೆ ಬರುತ್ತದೆ. ಅದೇನೆಂದರೆ: ಪರಿಷತ್ತು ಸ್ಥಾಪಿತವಾದ ವರ್ಷ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀಮಾನ್ ಎಚ್.ವಿ. ನಂಜುಂಡಯ್ಯನವರು ಸಮ್ಮೇಳನ ಮುಗಿದಮೇಲೆ ಅಲ್ಲಿ ಸೇರಿದ್ದ ಸದಸ್ಯರನ್ನು ಕುರಿತು “ನಿಮಗೆ ಕನ್ನಡ ಬೇಕೆ ಸಂಸ್ಕೃತ ಬೇಕೆ?” ಎಂದು ಕೇಳಿದರು. ಆಗ ಪ್ರತಿಯೊಬ್ಬರೂ ಸಂಸ್ಕೃತಬೇಕೆಂದರು ಇಲ್ಲವೆ, ಎರಡೂ ಬೇಕೆಂದರು; ಕನ್ನಡ ಬೇಕು ಎಂದು ಯಾರೂ ನಿಷ್ಕೃಷ್ಟವಾಗಿ ಮತನಾಡಲಿಲ್ಲ. ಇದನ್ನೆಲ್ಲಾ ಶಾಂತವಾಗಿ ಕೇಳುತ್ತಿದ್ದು ಅಧ್ಯಕ್ಷರು ಕೊನೆಗೆ ಎದ್ದುನಿಂತು “ಇದು ಕರ್ಣಾಟಕ ಸಾಹಿತ್ಯ ಪರಿಷತ್ತು; ನೀವೆಲ್ಲಾ ಅದರ ಸದಸ್ಯರು ಆದರೆ ಯಾರೊಬ್ಬರೂ ಕನ್ನಡ ಬೇಕೆಂದು ಧಾರಾಳವಾಗಿ ಹೇಳಲಿಲ್ಲ. ಇದು ಆಶ್ಚರ್ಯ!” ಎಂದರು. ಆ ಮಾತನ್ನು ಕೇಳಿ ಅನೇಕರು ತಲೆತಗ್ಗಿಸಿಕೊಂಡರು. ಆದರೂ ಅವರಲ್ಲಿ ಸಂಸ್ಕೃತದ ಅಭಿಮಾನ ಎಷ್ಟುಮಟ್ಟಿಗಿತ್ತೆಂದರೆ, ತಗ್ಗಿದ ತಲೆ “ಮುಟ್ಟಿದರೆ ಮುನಿಯ” ಗಿಡದಂತೆ ಬಹು ಬೇಗ ಎದ್ದಿತು; ಶೂಲದಂತೆ ಇರಿಯ ಬೇಕಾದ ಮಾತು ಮರೆತುಹೋಯಿತು. ಇಂದು ಅದನ್ನು ಯಾರಾದರೂ ಜ್ಞಾಪಕದಲ್ಲಿಟ್ಟಿದ್ದಾರೆಯೋ ಏನೋ ತಿಳಿಯದು. ಆದರೆ ಪರಿಸ್ಥಿತಿಯು ಆಗಿಗಿಂತ ಈಗ ಅಷ್ಟೇನೂ ಹೆಚ್ಚು ಬದಲಾಯಿಸಿಲ್ಲ; ಆಗ ಒಂದು ಭಾಷೆಯ ಮೇಲೆ ಹಿಂದಿನಿಂದ ಬಂದ ಅಭಿಮಾನವಿದ್ದರೆ; ಈಗ ಮತ್ತೊಂದು ಭಾಷೆಯ ಮೇಲೆ ಇಂದು ತಾನೇ ಬಂದ ಅಭಿಮಾನವುಂಟಾಯಿತು. ಮೊದಲು ಹುಟ್ಟಿದ ಕಿವಿಗಿಂತ ಆ ಮೇಲೆ ಹುಟ್ಟುದ ಕೋಡೇ ಮುಂದಾಯಿತು; ಅದು ತಿವಿಯುವುದಕ್ಕೂ ಮೊದಲಾಯಿತು. ಕನ್ನಡದ ಅಭಿಮಾನವೆಂಬ ಮಗು ತಪ್ಪು ಹೆಜ್ಜೆ ಹಾಕಿಕೊಂಡು ಮುಂದೆ ಮುಂದೆ ಬರುತ್ತಿದ್ದುದು ಹಿಂದಕ್ಕೆ ಸರಿಯಿತು.
ಎಂಥ ಸಮ್ಮೇಳನ?
ನಾವು ಐಶ್ವರ್ಯವಂತರಾಗುವುದು ಹೇಗೆ ಎಂಬುದನ್ನು ನಾನು ಹೇಳಲರಿಯೆ; ಅದನ್ನು ನನಗಿಂತ ದೊಡ್ಡವರು ಯೋಚಿಸುತ್ತಿದ್ದಾರೆ, ಹೇಳುತ್ತಿದ್ದಾರೆ, ಮಾಡಿ ತೋರಿಸುತ್ತಿದ್ದಾರೆ; ಅದರ ಪ್ರಸ್ತಾಪ ಇಲ್ಲಿ ಬೇಕಿಲ್ಲ; ಇದು ಸಾಹಿತ್ಯ ಸಮ್ಮೇಳನ, ಆರ್ಥಿಕಕ ಸಮ್ಮೇಳನವಲ್ಲ, ರಾಜಕೀಯ ಸಮ್ಮೇಳನವಲ್ಲ.
ಸಂಶೋಧನ ಕಾರ್ಯ ಮತ್ತು ಕನ್ನಡ
ಸಂಶೋಧನೆಯು ಭೂಮಿ ಅಗೆದು ಚಿನ್ನ ತೆಗೆಯುವ ಹಾಗೆ; ಅದಕ್ಕೆ ಬುದ್ಧಿ ಬೇಕು, ಆಯುಧ ಬೇಕು, ಯಂತ್ರ ಸಾಮಗ್ರಿ ಬೇಕು; ಹಲವು ಕೆಲಸಗಾರರ, ಶಾಸ್ತ್ರಜ್ಞರ ಸಹಕಾರ ಬೇಕು. ಅಗೆಯುತ್ತ ಅಗೆಯುತ್ತ ಶ್ರಮವು ಹೆಚ್ಚಾಗುತ್ತದೆ, ಹೊನ್ನು ಕಡಿಮೆಯಾಗುತ್ತದೆ. ನಮ್ಮಲ್ಲಿ ಇವೆಲ್ಲಕ್ಕೂ ಅಭಾವ. ಪಾಶ್ಚಾತ್ಯರು, ನಮ್ಮ ಚಿನ್ನದ ಗಣಿಗಳಲ್ಲಿ ಕೆಲಸಮಾಡಿರುವಂತೆ ಈ ಕ್ಷೇತ್ರದಲ್ಲಿಯೂ ಕೆಲಸಮಾಡಿದ್ದಾರೆ. ಅವರೊಡನೆ ಈಗ ಪೈಪೋಟಿ ನಡೆಸಿ ಸೈಯೆನ್ನಿಸಿಕೊಳ್ಳುವುದು ಕಷ್ಟ. ವೈಜ್ಞಾನಿಕ ಸಂಶೋಧನ ಕಾರ್ಯದಲ್ಲಿ ಪ್ರಪಂಚವೇ ಒಂದು. ವಿಶ್ವಕಿರಣಗಳು ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಇನ್ನೊಂದು ಅಲ್ಲ. ಅವರಿಗೆ ದೊರೆಯುವ ಅಕರಾದಿ ಅನುಕ್ರಮಣಿಕೆಗಳು ಕೂಡ ನಮಗೆ ದೊರೆಯುವುದಿಲ್ಲ. ಕ್ಷೇತ್ರವೋ ವಿಸ್ತಾರವಾದದ್ದು; ನಾನಾ ದ್ರಾವಿಡ ಸಂಸ್ಕೃತ ಪ್ರಾಕೃತ ಭಾಷೆಗಳು, ಪಾಶ್ಚಾತ್ಯ ಭಾಷೆಗಳು, ಪ್ರಾಕ್ತನ ಶಾಸ್ತ್ರಗಳು, ಸಾಹಿತ್ಯ ಚರಿತ್ರೆ ಇವುಗಳನ್ನು ಎಷ್ಟು ಓದಿದರೂ ಇದೆ; ಅವುಗಳ ಮೇಲೆ ಪತ್ರಿಕಾ ಲೇಖನಗಳೂ ಗ್ರಂಥಗಳಿಗೂ ಕೊನೆ ಮೊದಲಿಲ್ಲ. ಇವುಗಳಲ್ಲಿ ಒಂದಕ್ಕೊಂದಕ್ಕೆ ಸಂಬಂಧವಿರುತ್ತದೆ; ಯಾವುದೋ ಒಂದು ಸಣ್ಣ ಅಂಶವನ್ನು ಹಿಡಿದುಕೊಂಡು ಹೋದರೂ ಅದು ಎಲ್ಲಿಗೋ ತೆಗೆದುಕೊಂಡು ಹೋಗುತ್ತದೆ; ಸಂದೇಹವು ಸಿದ್ಧಾಂತವಾಗುವುದೇ ಕಷ್ಟವಾಗುತ್ತದೆ. ಅದಕ್ಕೇ ಅಭಿರುಚಿ ಇರುವವರು ಕೆಲವರು; ಅವರಿಗೆ ನಡೆದೀತು. ಈ ಕ್ಷೇತ್ರದಲ್ಲಿ ನಮಗೆ ಸಂಬಂಧಪಡುವಂತೆ ಏನು ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿಯಾದರೂ ಪರಿಚಯ ಮಾಡಿಕೊಡಬೇಕೆಂದು ‘ಪ್ರಾಚ್ಯ ಲೇಖನಾವಳಿ’ ಎಂಬ ಭಾಗವನ್ನು `ಪರಿಷತ್ ಪತ್ರಿಕೆ’ಯಲ್ಲಿಯೂ `ಪ್ರಬುದ್ಧ ಕರ್ಣಾಟಕ’ ದಲ್ಲಿಯೂ ಇಟ್ಟುಕೊಂಡಿರುವುದಾಗಿದೆ. ಆದರೆ ನಮಗೆ ಇರುವ ಉಪಪತ್ತಿ ಸಹಕಾರ, ಸೌಕರ್ಯ ಇವಕ್ಕೆ ಏನೇನೂ ಸಾಲದು. ಇವೊತ್ತು ಪಂಪನ ಅಥವಾ ಬಸವಣ್ಣನವರ ಮೇಲೇ ಏನೇನು ಲೇಖನಗಳು ಬಂದಿವೆ ಎಂದು ಒಂದು ಕಡೆ ನೋಡಬೇಕೆಂದರೆ ಎಲ್ಲಿಯೂ ಆ ವಿಷಯ ಸಮಗ್ರವಾಗಿ ಸಿಕ್ಕುವುದಿಲ್ಲ. ಹೊಸ ಸಾಮಗ್ರಿಯಂತೂ ದೊರಕುವುದೇ ಇಲ್ಲ. ಪರಿಷತ್ಪತ್ರಿಕೆಯಲ್ಲಿ ಈಗ ಇಪ್ಪತ್ತೈದು ವರ್ಷಗಳಿಂದ ಬಂದ ಲೇಖನಗಳಿಗೆ ಅಕಾರಾದಿ ಮಾಡಿಕೊಡಬೇಕೆಂದು ಪರಿಷತ್ತು ಯೋಚಿಸಿತು. ಅದೂ ನಡೆದಿಲ್ಲ; ಇಂಗ್ಲಿಷಿನಲ್ಲಿ ‘ರಾಯಲ್ ಏಷಿಯಾಟಿಕ್ ಸೊಸೈಟಿ’ಯ ಪತ್ರಿಕೆ ‘ಇಂಡಿಯನ್ ಆಂಟಿಕ್ವೆರಿ’ ಯಂ ಪತ್ರಿಕೆಗಳಿಗೆ ಈ ಸೌಕರ್ಯವಿದೆ.
ಸಾಹಿತ್ಯ ಪರಿಷತ್ತು ಮತ್ತು ಕನ್ನಡ
ಪರಿಷತ್ತು ಅದು ಮಾಡಲಿಲ್ಲ, ಇದು ಮಾಡಲಿಲ್ಲ; ಅದು ಮಾಡಬೇಕಾಗಿತ್ತು. ಇದು ಮಾಡಬೇಕಾಗಿತ್ತು ಎಂದು ಸೂಚಿಸುವವರು ಅದು ಹುಟ್ಟಿದಂದಿನಿಂದ ಇದ್ದಾರೆ. ಅದರಲ್ಲಿ ಕೆಲಸಮಾಡುವವರೆಲ್ಲರೂ ಅಕ್ಷರಶಃ ತನು ಮನ ಧನಗಳನ್ನು ಅದಕ್ಕೆ ಸೇರಿಸಿ ಕೆಲಸಮಾಡಿಯೂ ಇದ್ದಾರೆ. ಅದರಲ್ಲೇನೂ ಕಡಿಮೆಯಿಲ್ಲ. ಆದರೆ ಪರಿಷತ್ತೆಂದರೆ ಯಾರು? ಅದರ ನಾಲ್ಕಾರು ಜನ ಅಧಿಕಾರಿವರ್ಗದವರೇ? ಪರಿಷತ್ತು ಒಂದೂವರೆ ಕೋಟಿ ಪ್ರಜೆಯ ಪ್ರತಿನಿಧಿ ಎಂದರೆ, ನಾಲ್ಕಾರು ಜನ ಸಾಕೇ? ಅವರು ಗೌರವಾರ್ಥವಾಗಿ ಕೆಲಸ ಮಾಡುವವರು; ಎಷ್ಟು ಕಾಲವನ್ನು, ಎಷ್ಟು ಶಕ್ತಿಯನ್ನು, ಎಷ್ಟು ಭಕ್ತಿಯನ್ನು, ಎಷ್ಟು ಭುಕ್ತಿಯನ್ನು ಕೊಡಬಲ್ಲರು? ಅದಕ್ಕಿರುವ ಅಡ್ಡಿ ಅನುಪಪತ್ತಿಗಳನ್ನು ನೋಡಿದರೆ ಈಗ ನಡೆದಿರುವ ಕೆಲಸ ತೋರಿಸುವುದಕ್ಕಾಗುವುದಿಲ್ಲ. ಕನ್ನಡಿಗರು ತಮ್ಮ ಅಭಿಮಾನದ ಕಣ್ಣಿನಿಂದ ನೋಡಿದರೆ ಆಗ ಇದು ಕಾಣುತ್ತೆ. ಇನ್ನೂ ಉಳಿದಿರುವ ಕಾರ್ಯಕ್ಕೆ ಹೋಲಿಸಿದರೆ ಅದು ಅತ್ಯಲ್ಪ, ನಿಜ. ಆದರೆ ಯಾವ ಕೆಲಸಕ್ಕೂ ಬೇಕಾದದ್ದು ಧನ, ಜನ, ಅಭಿಮಾನ; ಧನವಿದ್ದರೆ ಮಿಕ್ಕೆರಡೂ ಒದಗುತ್ತವೆ. ಪರಿಷತ್ತಿಗೆ ವರ್ಷಕ್ಕೆ ಹತ್ತು ಹದಿನೈದು ಲಕ್ಷ ರೂಪಾಯಿನ ವರಮಾನವಿದ್ದರೆ ಒಂದು ವಿಶ್ವವಿದ್ಯಾನಿಲಯದ ಕೆಲಸವನ್ನೇ ಕೈಕೊಂಡು ಮಾಡಬಹುದು. ಆದರೆ ಅದರ ದಾರಿದ್ರ್ಯ ಲೋಕವಿದಿತವಾಗಿದೆ; ಅದರ ಅಧಿಕಾರಿಗಳು ದಿನಕ್ಕೆ ನಾಲ್ಕು ಸಲ ಕಚೇರಿಗೆ ಬಂದು ಹೋಗಿ ದುಡಿದರೆ, ಅವರಿಗೆ ಗಾಡಿಬಾಡಿಗೆಯೆಂದು ನಾಲ್ಕು ಆಣೆ ಕೊಡುವುದಕ್ಕೆ ಅದಕ್ಕೆ ಚೈತನ್ಯವಿಲ್ಲ. ಅವರು ಪುಣ್ಯವಂತರಾದರೆ, ತಾವೇ ಸಾವಿರಾರು ರೂಪಾಯಿ ದಾನಮಾಡುತ್ತಾರೆ. ಇಲ್ಲದಿದ್ದರೆ ಸಾಲ ಮಾಡಿಕೊಳ್ಳಬೇಕೇ? ಮಾಡಿದರೆ ತೀರಿಸುವವರು ಯಾರು? ಮಿಕ್ಕ ಭಾಷೆಗಳಿಗಾಗಿ ದುಡಿಯುತ್ತಿರುವವರಿಗೆ ಇರುವ ಸಂಪಾದನೆಯಲ್ಲಿ ಒಂದು ಭಾಗವನ್ನಾದರೂ ಕೊಡಬಲ್ಲೆವಾದರೆ, ಅವರು ಸಂತೋಷದಿಂದ ಕನ್ನಡಕ್ಕೆ ದುಡಿದಾರು. ಆದರೆ ಕೊಡಲು ಪರಿಷತ್ತಿಗೆ ಹಣವೆಲ್ಲಿದೆ? ಅದರ ಸದಸ್ಯ ಸಂಪತ್ತು ಸುಮಾರು ಏಳುನೂರಾಗಿದೆ. ಇವರಲ್ಲಿ ಅನೇಕರು ಆಜೀವ ಸದಸ್ಯರು; ಅವರ ಹಣವನ್ನು ನಿಧಿಯಾಗಿ ಬ್ಯಾಂಕಿನಲ್ಲಿಟ್ಟಿದೆ; ಅದಕ್ಕೆ ಬರುವುದು ವರ್ಷಕ್ಕೆ ಒಂದು ಎರಡು ರೂಪಾಯಿ ಬಡ್ಡಿ; ಹಲವರು ಹೆಸರು ಮಾತ್ರದವರು; ಅವರಿಂದ ಹಣವೇ ಬರುವುದಿಲ್ಲ. ಚಂದಾ ನಾಲ್ಕಾಣೆ ಮಾಡಿದರೆ ಬಹು ಜನ ಸೇರುವರೆಂದು ಒಂದು ಸಲಹೆ ಬಂತು; ಒಂದು ಲಕ್ಷ ಜನವಾದರೂ ಸದಸ್ಯರಾದರೆ ಈ ಸಲಹೆಯಿಂದ ಪ್ರಯೋಜನ; ಅಂಥ ಕನಸನ್ನು ಕಾಣುವುದು ಸಾಧ್ಯವೇ? ಸರಕಾರದವರು, ಮಠಗಳು, ಮಾನ್ಯ ಮಹನೀಯರು ಈಚೆಗೆ ಉದಾರಹಸ್ತದಿಂದ ಸಾವಿರಾರು ರೂಪಾಯಿಗಳನ್ನು ಕೊಟ್ಟಿರುವುದರಿಂದ, ಮುಖ್ಯವಾಗಿ ಮೈಸೂರು ಸರ್ಕಾರವು ಪರಿಷತ್ತಿನ ಕೆಲಸ ಹೆಚ್ಚಾಗುತ್ತ ಬಂದಂತೆಲ್ಲ ಧನಸಹಾಯವನ್ನು ಹೆಚ್ಚು ಮಾಡಿಕೊಟ್ಟು ಅದರ ಅಭ್ಯುದಯದಲ್ಲಿ ಆಸಕ್ತವಾಗಿರುವುದರಿಂದ, ಶ್ರೀಮನ್ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರವರು, ಕಂಠೀರವ ನರಸಿಂಹರಾಜ ಒಡೆಯರವರು, ಶ್ರೀ ಜಯಚಾಮರಾಜ ಒಡೆಯರವರು ಅದನ್ನು ಮಮತೆಯಿಂದ ತಮ್ಮ ಕೃಪಾಛತ್ರದ ನೆರಳಿನಲ್ಲಿ ಪೋಷಿಸಿಕೊಂಡು ಬಂದದ್ದರಿಂದ, ಇದೊಂದು ಸಂಸ್ಥೆಯು ನಿಂತಿದೆ. ಅದು ಬೆಳೆಯಬೇಕಾದರೆ ಮಿಕ್ಕಾದ ಸಂಸ್ಥಾನಾಧಿಪತಿಗಳೂ, ಸಾಹುಕಾರರೂ ಅದಕ್ಕೆ ಸಾಂಪತ್ತಿಕ ಮತ್ತು ನೈತಿಕ ಬೆಂಬಲಗಳನ್ನು ಕೊಡಬೇಕು; ಜನರು ಅದರಲ್ಲಿ ಅಭಿಮಾನವಿಟ್ಟು ಸಹಕರಿಸಬೇಕು. ಕನ್ನಡ ವಾತಾವರಣವನ್ನು ಹಬ್ಬಿಸಿ ಕನ್ನಡವನ್ನು ಬಲಪಡಿಸಿಕೊಳ್ಳಬೇಕು. ಪರಿಷತ್ತು ಶಾರದೆಯ ದೇವಸ್ಥಾನ; ಅದಕ್ಕೆ ಗುಡಿ ಗೋಪುರಗಳನ್ನು ಕಟ್ಟಿಸುವುದೂ ಸೇವಾಕಾರ್ಯಕ್ಕೆಂದು ದತ್ತಿ ಬಿಡುವುದೂ ಅದರ ಭಕ್ತಾದಿಗಳ ಕೆಲಸ. ಏನೇ ಆದರೂ, ಇದು ಸರ್ಕಾರದ ಇಲಾಖೆಯಂತೆ ಅಧಿಕಾರ ಬಲದಿಂದ ಕೆಲಸ ನಡೆಸಲಾರದು. ಇಂಗ್ಲೆಂಡಿನ ರಾಯಲ್ ಏಷಿಯಾಟಿಕ್ ಸೊಸೈಟಿಯಂಥವುಗಳಿಗೂ ಇದು ಸಾಧ್ಯವಾಗಿಲ್ಲ. ಇಲ್ಲಿ ಕೆಲಸ ಮಾಡುವುದು ಸತ್ವಕ್ಕಿಂತಲೂ ಹೆಚ್ಚಾಗಿ ಸ್ನೇಹ.
Tag: Kannada Sahitya Sammelana 26, A.R. Krishnashastri
೨೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ
ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ ಹಿರೇಮಠರು ವೀರಶೈವ ಸಾಹಿತ್ಯದಲ್ಲಿ ಪ್ರಕಾಂಡ ಪಂಡಿತರು. ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ ೩-೧-೧೮೯೨ರಲ್ಲಿ ಪಟ್ಟದಯ್ಯ ಮತ್ತು ಬಸವಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಬ್ಯಾಡಗಿ ಹಾವೇರಿ ಗದಗುಗಳಲ್ಲಿ ಮುಗಿಸಿ ಕಾಶಿ, ಕಲ್ಕತ್ತ ಸಂಸ್ಕೃತ ಕೇಂದ್ರಗಳಿಗೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ೧೯೨೪ರಲ್ಲಿ ವ್ಯಾಕರಣ ತೀರ್ಥ ಪದವಿಯನ್ನು ಸಾಹಿತ್ಯಾಚಾರ್ಯ ಪದವಿಯನ್ನು ಪಡೆದು ಕರ್ನಾಟಕಕ್ಕೆ ಹಿಂದಿರುಗಿದರು.
ಕರ್ನಾಟಕಕ್ಕೆ ಹಿಂದಿರುಗಿದ ಮೇಲೆ ಯಾದಗಿರಿಯಲ್ಲಿ ಶಂಕರ ಸಂಸ್ಕೃತ ಕಾಲೇಜು ಸ್ಥಾಪಿಸಿ ೧೯೨೪ರಿಂದ ಅದರ ಪ್ರಿನ್ಸಿಪಾಲರಾದರು. ಹುಬ್ಬಳ್ಳಿಯ ಜಗದ್ಗುರು ಗಂಗಾಧರ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದರು. ೧೯೩೧ರಿಂದ ೧೯೩೮ರವರೆಗೆ ಸಂಸ್ಕೃತ ಮುಖ್ಯಾಧ್ಯಾಪಕರಾಗಿ ದುಡಿದರು.
೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ಸಮಾವೇಶಗೊಂಡಿದ್ದ ೧೯ನೇ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು. ಅನೇಕ ಗ್ರಂಥಗಳನ್ನು ಪರಿಶೋಧಿಸಿ ಪರಿಷ್ಕರಿಸಿ ಪ್ರಕಟಿಸಿದರು. ಹಂಪೆಯಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ೬ನೇ ಶತಮಾನೋತ್ಸವ ಕಾರ್ಯಕ್ರಮದ ಸಮಿತಿಯ ಕಾರ್ಯದರ್ಶಿಯಾಗಿ ಶ್ರಮಿಸಿದ್ದಾರೆ. ೨೫ಕ್ಕೂ ಹೆಚ್ಚಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ದಾಖಲೆ ಸ್ಥಾಪಿಸಿದ್ದಾರೆ.
ಕಾಶಿಯಲ್ಲಿ ವ್ಯಾಸಂಗದ ಕಾಲದಲ್ಲಿ ಸಾಹಿತ್ಯಾಚಾರ್ಯರಾಗಿ ವಿದ್ಯಾಲಂಕಾರ, ವಿದ್ಯಾವಾಗೀಶ ಬಿರುದನ್ನು ಗಳಿಸಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವದ ಜತೆಯಲ್ಲೇ ೧೯೪0ರಲ್ಲಿ ನಡೆದ ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಸವತತ್ತ್ವ ರತ್ನಾಕರ ಗ್ರಂಥಕ್ಕೆ ದೊರೆತಿದೆ. ೧೯೮೩ರಲ್ಲಿ ಸರ್ಕಾರದ ರಾಜ್ಯ ಪ್ರಶಸ್ತಿ, ೧೯೯೩ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ ದೊರೆತಿದೆ. ಶಾಸ್ತ್ರಿಗಳು ಶತಾಯುಷಿಗಳಾದಾಗ ಹಡಗಲಿ ಸಂಘರ್ಷ ಸಮಿತಿ ಚಂದ್ರಚೇತನ ಗ್ರಂಥವನ್ನೂ, ಕನ್ನಡ ಸಾಹಿತ್ಯ ಪರಿಷತ್ತು ವ್ಯಾಕರಣ ತೀರ್ಥ ಸಂಭಾವನಾ ಗ್ರಂಥವನ್ನೂ ಸಮರ್ಪಿಸಿದೆ.
ಸಂಸ್ಕೃತ, ಕನ್ನಡ, ಇಂಗ್ಲಿಷ್, ಮರಾಠಿ, ಉರ್ದು ಭಾಷೆಗಳನ್ನು ಬಲ್ಲ ಇವರು ಅನೇಕ ಧಾರ್ಮಿಕ ಗ್ರಂಥಗಳನ್ನು ರಚಿಸಿದ್ದಾರೆ.
ಬಸವತತ್ತ್ವ ರತ್ನಾಕರ, ಚಾಣಕ್ಯ ನೀತಿ ದರ್ಪಣ, ರೇಣುಕ ವಿಜಯ, ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ, ಸಿದ್ಧಲಿಂಗ ವಚನ, ಕಾಡು ಸಿದ್ದೇಶ್ವರ ವಚನ ಇತ್ಯಾದಿ ರಚಿಸಿದ್ದಾರೆ.
ಶಾಸ್ತ್ರಿಗಳು ದಿನಾಂಕ ೨೪-೧0-೧೯೯೭ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೨೫
ಅಧ್ಯಕ್ಷರು : ವೈ ಚಂದ್ರಶೇಖರಶಾಸ್ತ್ರಿ
ದಿನಾಂಕ ೨೭,೨೮,೨೯ ಡಿಸೆಂಬರ್ ೧೯೪0
ಸ್ಥಳ : ಧಾರವಾಡ
ಪರಿಷತ್ತಿನ ಅಧ್ಯಕ್ಷರ ಮತ್ತು ಮಹಾಪೋಷಕರ ಮರಣ
ಕಳೆದ ೧೫ ವರ್ಷಗಳಿಂದ ಪರಿಷತ್ತಿಗೆ ಅಧ್ಯಕ್ಷರಾಗಿದ್ದ ಮೈಸೂರು ಸಂಸ್ಥಾನದ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ ಜಿ.ಸಿ.ಐ.ಇ. ಅವರು ಇದೇ ವರ್ಷದ ಮಾರ್ಚಿ ತಿಂಗಳ ೧೧ನೆಯ ತಾರೀಖಿನಲ್ಲಿ ದಿವಂಗತರಾದ ವಿಷಯ ಪರಿಷತ್ತಿಗೆ ಪರಿತಾಪಕರವಾದುದು. ಅನೇಕ ರೀತಿಯಿಂದ ಪರಿಷತ್ತಿಗೆ ಬೆಂಬಲಿಗರಾಗಿದ್ದುದಲ್ಲದೆ ‘ಕನ್ನಡ ನಾಡಿನ ಚರಿತ್ರೆ’ ಯನ್ನು ಅಚ್ಚುಮಾಡಿಸುವುದಕ್ಕೆ ಉದಾರವಾದ ದ್ರವ್ಯ ಸಹಾಯಮಾಡಿದ್ದ ಇಂತಹ ಮಹನೀಯರು ದಿವಂಗತರಾದುದು ಪರಿಷತ್ತಿನ ದೌರ್ಭಾಗ್ಯವೇ ಸರಿ.
ಈ ಸಂಬಂಧವಾದ ದುಃಖ ಆರುವುದರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದಾಗಿನಿಂದ ಅದರ ಮಹಾಪೋಷಕರಾಗಿದ್ದು ಕನ್ನಡನಾಡು ನುಡಿಗಳ ಏಳಿಗೆಗಾಗಿ ಅನೇಕ ವಿಧವಾಗಿ ಸಹಾಯ ಸಂಪತ್ತುಗಳನ್ನು ಅನುಗ್ರಹಿಸುತ್ತಲಿದ್ದ ಮೈಸೂರು ಸಂಸ್ಥಾನದ ಮಹಾರಾಜರವರಾದ ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್, ಜಿ.ಸಿ.ಎಸ್.ಐ., ಜಿ.ಬಿ.ಇ. ಅವರು ಕಳೆದ ಆಗಸ್ಟ್ ತಿಂಗಳ ೩ನೆಯ ತಾರೀಖಿನಲ್ಲಿ ಹೃದಯ ವೇದನೆಯಿಂದ ದಿವಂಗತರಾದುದು ಕನ್ನಡಿಗರೆಲ್ಲರಿಗೆ ಸಿಡಿಲು ಬಡಿದಂತಾಗಿದೆ. ಅವರು ವಿಧಿವಶರಾಗುವುದಕ್ಕೆ ಒಂದು ತಿಂಗಳು ಹಿಂದೆ ನಮ್ಮ ಪರಿಷತ್ತಿನ ಬೆಳ್ಳಿಯ ಹಬ್ಬದ ಪ್ರಾರಂಭೋತ್ಸವವನ್ನು ನೆರವೇರಿಸಿದಾಗ ಪರಿಷತ್ತನ್ನು ನಾನಾ ವಿಧವಾಗಿ ಪ್ರಶಂಸಿಸಿ ಕನ್ನಡ ನುಡಿಯ ಉತ್ಕರ್ಷದ ಬಗ್ಗೆ ಅಮೋಘವಾದ ಸಲಹೆಗಳನ್ನು ಅಪ್ಪಣೆಕೊಡಿಸಿದ್ದಲ್ಲದೆ ಆ ಕಾಲಕ್ಕೆ ಸಿರಿಗನ್ನಡಂ ಗೆಲ್ಗೆ ಎಂಬ ಕನ್ನಡಿಗರ ಮೂಲಮಂತ್ರವನ್ನು ತಮ್ಮ ಪವಿತ್ರ ವಾಣಿಯಿಂದ ಉದ್ಘೋಷಿಸಿ ಸಮಸ್ತ ಕನ್ನಡಿಗರಲ್ಲಿಯೂ ನೂತನ ಚೈತನ್ಯವನ್ನುಂಟುಮಾಡಿದ್ದರು. ಇವರು ತಮ್ಮ ೩೮ ವರ್ಷಗಳ ಆಳಿಕೆಯಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿಯ ಸಂಸ್ಥಾನವನ್ನಾಗಿ ಮಾಡಿ, ತಮ್ಮ ಪ್ರಜಾವಾತ್ಸಲ್ಯ, ಭೂತದಯೆ, ದೈವಭಕ್ತಿ, ಗಾಂಭೀರ್ಯ, ಸದಾಚಾರವರ್ತನೆ, ಪೂರ್ವಸಂಪ್ರದಾಯ ವಿಶ್ವಾಸ ಮೊದಲಾದ ಗುಣಗಳಿಂದ ರಾಜರ್ಷಿಗಳೆನ್ನಿಸಿಕೊಂಡಿದ್ದರು. ಇವರ ದೈವಭಕ್ತಿ ಅಸಾಧಾರಣವಾದುದೆಂಬುದನ್ನು ನಾನು ಕಾಶಿಯಲ್ಲಿ ಕಂಡಿದ್ದೇನೆ. ಇವರು ಕಾಶಿಯ ಹಿಂದೂವಿಶ್ವವಿದ್ಯಾನಿಲಯದ ಅಧ್ಯಕ್ಷ ಪದವಿಯನ್ನಲಂಕರಿಸಿದ್ದಾಗ ವರ್ಷಕ್ಕೆ ೨-೩ ಸಾರೆ ಕಾಶಿಗೆ ದಯಮಾಡಿಸುತ್ತಿದ್ದರು. ಆ ಕಾಲಕ್ಕೆ ಗಂಗಾಸ್ನಾನವನ್ನು ಮಾಡಿ ೨-೩ ಘಂಟೆಗಳವರೆಗೆ ಅಲ್ಲಿಯ ಹನುಮಾನ್ ಘಾಟಿನಲ್ಲಿ ಅನುಷ್ಠಾನವನ್ನು ಮಾಡಲಿಕ್ಕೆ ಕುಳ್ಳಿರುತ್ತಿದ್ದರು. ಒಂದು ಸಾರೆ ಕಾಶಿಯಲ್ಲಿರುವ ಶ್ರೀ ಜಗದ್ಗುರು ವಿಶ್ವಾರಾಧ್ಯಪೀಠದ ಜಂಗಮವಾಡಿಯ ಮಠಕ್ಕೆ ದಯಮಾಡಿಸಿದಾಗ ಪ್ರಭುಗಳ ಅಸಾಧಾರಣ ದೈವಭಕ್ತಿ ತೋರಿಬಂದಿತು. ಬೆಂಗಳೂರು ನಗರದಲ್ಲಿ ಪ್ರತಿಷ್ಠಿತವಾಗಿರುವ ನಮ್ಮ ಪರಿಷ್ಮನಂದಿರವು ದಿವಂಗತ ಮಹಾರಾಜರವರ ಸಹಾಯದಿಂದಲೇ ಪ್ರಾರಂಭವಾಯಿತೆಂಬುದು ಕನ್ನಡಿಗರೆಲ್ಲರಿಗೆ ತಿಳಿದೇ ಇರುತ್ತದೆ. ಇಂತಹ ಜಗದ್ವಿಖ್ಯಾತರಾದ ಪ್ರಭುಗಳನ್ನು ಕಳೆದುಕೊಂಡುದು ನಮ್ಮ ಪರಿಷತ್ತಿನ ದೌರ್ಭಾಗ್ಯವೆಂದೇ ನಾನು ತಿಳಿಯುತ್ತೇನೆ. ಶ್ರೀಮನ್ಮಹಾರಾಜರವರ ಮತ್ತು ಯುವರಾಜರವರ ಆತ್ಮಗಳಿಗೆ ಭಗವಂತನು ಚಿರಶಾಂತಿಯನ್ನೀಯಲಿ.
ಆನಂದದ ಸಂಗತಿ
ಸುಖದ ಮೇಲೆ ದುಃಖವೂ, ದುಃಖದ ತರುವಾಯ ಸುಖವೂ ಮನುಷ್ಯನಿಗೆ ಬರುವುದು ಸ್ವಾಭಾವಿಕವಾಗಿರುತ್ತದಷ್ಟೆ. ಅಂತೆಯೇ ಕೃಷ್ಣಭೂಪಾಲರು ದಿವಂಗತರಾದ ವ್ಯಸನವಿರುವಾಗಲೇ ಶ್ರೀ ಜಯಚಾಮರಾಜೇಂದ್ರ ಒಡೆಯರವರಿಗೆ ಮೈಸೂರು ಸಿಂಹಾಸನದ ಪಟ್ಟಾಭಿಷೇಕವಾದುದು ಕನ್ನಡಿಗರೆಲ್ಲರಿಗೂ ಮಹದಾನಂದ ಸಂಗತಿ. ೧೯೩೯ರಲ್ಲಿ ವಸಂತ ಸಾಹಿತ್ಯೋತ್ಸವಕ್ಕೆ ದಯಮಾಡಿ ಕೆಲಕಾಲ ನಮ್ಮ ಪರಿಷತ್ತಿನ ಅಧ್ಯಕ್ಷರಾಗಿದ್ದು ಈಚೆಗೆ ಮಹಾಪೋಷಕರಾಗಿರುವ ತರುಣ ಮಹಾರಾಜರ ಆಳಿಕೆಯಲ್ಲಿ ಮೈಸೂರು ಸಂಸ್ಥಾನ ಹೆಚ್ಚು ದೇದೀಪ್ಯಮಾನವಾಗಲೆಂದೂ, ಕನ್ನಡ ನಾಡಿನ ಮತ್ತು ನುಡಿಯ ಉತ್ಕರ್ಷಕ್ಕೆ ಇತೋಪ್ಯತಿಶಯವಾದ ಸಹಾಯಸಂಪತ್ತಿಗಳು ಲಭಿಸುವಂತಾಗಲೆಂದೂ ಹಾರೈಸುತ್ತೇನೆ.
ಕನ್ನಡ ಸಾಹಿತ್ಯ ಪರಿಷತ್ತು:- ಕನ್ನಡ ನಾಡು ಸರ್ವಾಂಗಸುಂದರವಾಗಬೇಕಾದರೆ ಆ ನಾಡಿನ ಆರ್ಥಿಕ ರಾಜಕೀಯ, ಐತಿಹಾಸಿಕ, ಸಾಹಿತ್ಯ ಭಾಷೆಗಳಲ್ಲಿ ಉತ್ಕರ್ಷ ಉಂಟಾಗಬೇಕಾಗಿರುತ್ತದೆ. ಆದುದರಿಂದಲೇ ಕನ್ನಡ ನಾಡಿನ ಅಭಿವೃದ್ಧಿಗೆ ಬೇಕಾದ ಕೆಲವು ಸಂಸ್ಥೆಗಳ ವಿಷಯವನ್ನು ಸಂಕ್ಷೇಪವಾಗಿ ನಾನು ಇಲ್ಲಿ ಹೇಳಿರುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತು ಇಪ್ಪತ್ತೈದು ವರ್ಷಗಳ ಕೆಳಗೆ ಕನ್ನಡ ಮಾತೆಯ ಪುತ್ರರಲ್ಲಿ ಹಿರಿಯರೂ, ಕೀರ್ತಿ ವಿದ್ಯಾಬುದ್ಧಿಗಳಲ್ಲಿ ಜಗದ್ವಿಖ್ಯಾತರೂ ಆಗಿರುವ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದಾಗ ಸ್ಥಾಪಿತವಾಯಿತು. ಇದರ ಬೆಳ್ಳಿಯ ಹಬ್ಬವೂ ಕೂಡ ಕಳೆದ ಜೂನ್ ತಿಂಗಳಿನಲ್ಲಿ ರಾಜವೈಭವದಿಂದ ನಡೆದದ್ದು ತಮಗೆಲ್ಲ ಗೊತ್ತೇ ಇರುತ್ತದೆ. ಈ ಸಂಸ್ಥೆಯು ಕಳೆದ ಇಪ್ಪತೈದು ವರ್ಷಗಳಿಂದ ಅವಿಚ್ಛಿನ್ನವಾಗಿ ಕನ್ನಡ ಸೇವೆಯನ್ನು ಮಾಡುತ್ತ ಬಂದಿರುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಸಾಹಿತ್ಯ ಸಮ್ಮೇಳಗಳನ್ನು ಕೂಡಿಸಿ ಕನ್ನಡಿಗರಲ್ಲಿ ವಿಶೇಷ ಜಾಗೃತಿಯನ್ನು ಹುಟ್ಟಿಸುತ್ತಲಿದೆ. ಇತ್ತೀಚೆಗೆ ವಸಂತ ಸಾಹಿತ್ಯೋತ್ಸವ, ಕಂಠಪಾಠ ಸ್ಪರ್ಧೆ, ಗಮಕ ಶಿಕ್ಷಣ, ಅಕ್ಷರ ಪ್ರಚಾರ, ಕನ್ನಡ ಸಾಹಿತ್ಯ ತರಗತಿಗಳು ಮತ್ತು ಪರೀಕ್ಷೆಗಳು ಮೊದಲಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಪರಿಷತ್ತಿಗೆ ಆರ್ಥಿಕ ಸಹಾಯ
ಕರ್ನಾಟಕದಲ್ಲಿ ಕ್ರಮಬದ್ಧವಾಗಿ ನಡೆಯತಕ್ಕ ಸಂಸ್ಥೆಗಳಲ್ಲಿ ಇದು ಮಿಗಿಲಾಗಿರುತ್ತದೆ. ಇದಕ್ಕೆ ಮೈಸೂರಿನ ಶ್ರೀಮನ್ಮಹಾಜರವರು ಮಹಾಪೋಷಕರು. ಮೈಸೂರ ಅರಮನೆಯ ಮತ್ತು ಸರಕಾರದ ಸಹಾಯದಿಂದಲೂ ಇತರ ಕನ್ನಡದ ಅಭಿಮಾನಿಗಳ ಸಹಾಯದಿಂದಲೂ ೩೫.000 ರೂ. ಗಳನ್ನು ಖರ್ಚುಮಾಡಿ ಕಟ್ಟಿಸಿದ ಸುಂದರವಾದ ಒಂದು ಮಂದಿರ ಬೆಂಗಳೂರಿನಲ್ಲಿ ಇದಕ್ಕೆ ಇರುತ್ತದೆ. ಈ ಸಂಸ್ಥೆಗೆ ಮೈಸೂರು ಸರಕಾರದವರು ಪ್ರತಿವರ್ಷವೂ ೩,000 ರೂ.ಗಳ ಸಹಾಯ ದ್ರವ್ಯವನ್ನು ದಯಪಾಲಿಸುತ್ತಿದ್ದಾರೆ. ಇದರ ಬಗ್ಗೆ ಪ್ರಖ್ಯಾತ ಮಂತ್ರಿವರ್ಯರಾದ ಸರ್. ಮಿರ್ಜಾ ಇಸ್ಮಾಯಿಲ್ ಅವರಿಗೂ ಮೈಸೂರ ಸರ್ಕಾರಕ್ಕೂ ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಅಲ್ಪವೇ ಸರಿ.
ಕಳೆದ ಕಾಲು ಶತಮಾನದಿಂದ ಅನೇಕ ಕನ್ನಡ ನಾಡಿನ ಹಿರಿಯರು ಅವಿಚ್ಛಿನ್ನವಾಗಿ ದುಡಿದು ಈ ಸಂಸ್ಥೆಯನ್ನು ಇಷ್ಟರಮಟ್ಟಿಗೆ ಉನ್ನತಸ್ಥಿತಿಗೆ ತಂದಿರುತ್ತಾರೆ. ಆದರೆ ನಮ್ಮ ಪರಿಷತ್ತಿನ ಕಾರ್ಯ ಇಷ್ಟಕ್ಕೆ ಮುಗಿದಿರುವುದಿಲ್ಲ. ಇನ್ನೂ ಅನಂತ ವಿಧಾಯಕ ಕಾರ್ಯಗಳು ಅದರ ಮುಂದಿರುತ್ತವೆ. ಅದರ ಗುರಿಯನ್ನು ಅದು ಮುಟ್ಟಬೇಕಾದರೆ ಪರಿಷತ್ತಿಗೆ ಪ್ರಚಂಡವಾದ ಜನ ಧನ ಬೆಂಬಲ ಬೇಕು; ಅಖಿಲ ಕನ್ನಡ ನಾಡಿನ ಮಹಾಜನಗಳೆಲ್ಲ ಪರಿಷತ್ತಿಗೆ ಸಭಾಸದರಾಗಿಯೂ ಪೋಷಕರಾಗಿಯೂ ಸೇರಿ ಸಹಾಯಮಾಡುತ್ತಾ ಬಂದರೆ ಪರಿಷತ್ತಿನ ಶಕ್ತಿ ಬೆಳೆಯುವುದು. ೧ ಕೋಟಿ ಕನ್ನಡಿಗರಿರುವ ಕನ್ನಡ ಪ್ರಾಂತದಲ್ಲಿ ಪರಿಷತ್ತಿಗೆ ಸುಮಾರು ಅದು ನೂರು ಸದಸ್ಯರು ಇರುವುದು ಕನ್ನಡಿಗರಿಗೆ ಲಜ್ಜಾಸ್ಪದವಾದುದೇ ಸರಿ. ಪರಿಷತ್ತಿನ ಸಭಾಸದರ ಸಂಖ್ಯೆ ಕನಿಷ್ಠ ಪಕ್ಷ ಸಾವಿರ ಆದರೆ ಹೆಚ್ಚಿನ ಕಾರ್ಯಗಳು ಸಹಜವಾಗಿ ಆಗುವುದರಲ್ಲಿ ಸಂದೇಹವಿಲ್ಲ. ಕೇವಲ ಮೈಸೂರು ಸರ್ಕಾರದವರ ಸಹಾಯವನ್ನು ಅವಲಂಬಿಸಿ ಕುಳಿತಿರುವುದು ಭೂಷಣವಲ್ಲ. ಅಖಿಲ ಕರ್ನಾಟಕ ಪ್ರಾತಿನಿಧ್ಯದಿಂದ ಕೂಡಿದ ಪರಿಷತ್ತಿಗೆ ಜಿಲ್ಲಾ ಮತ್ತು ತಾಲ್ಲೂಕು ಸಂಘಗಳಿರುವುದು ಭೂಷಣ. ನಮ್ಮ ದೇಶದ ಹಳ್ಳಿಹಳ್ಳಿಗಳಲ್ಲಿಯೂ ಪರಿಷತ್ತಿನ ಪ್ರಚಾರವಾಗಬೇಕು. ಸಾಹಿತ್ಯ ಪರಿಷತ್ತು ಎಂದರೆ ಏನೆಂಬುದು ಇನ್ನೂ ಅನೇಕರಿಗೆ ಗೊತ್ತಿರಲಾರದು.
ಈ ವರ್ಷ ಮಾತ್ರ ಪರಿಷತ್ತಿಗೆ ಕೆಲವರು ಮಹನೀಯರು ಮುಕ್ತಹಸ್ತದಿಂದ ದಾನವನ್ನು ಮಾಡಿರುತ್ತಾರೆ. ಅವರ ಹೆಸರುಗಳನ್ನು ಹೇಳಲಿಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತಲಿದೆ. ಅನೇಕ ಸಾರ್ವಜನಿಕ ಕಾರ್ಯಗಳಿಗೆ ೧0-೧೫ ಲಕ್ಷ ರೂ.ಗಳನ್ನು ದಾನ ಮಾಡಿರುವ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಸ್ವಾಮಿಗಳವರಿಂದ ೫0೧ ರೂ.ಗಳನ್ನೂ, ಗದುಗಿನ ನಿವೃತ್ತ ಸೆಷನ್ಸ್ ಜಡ್ಜಿಗಳಾದ ಶ್ರೀಮಾನ್ ಆನಂತರಾವ್ ಕೃಷ್ಣರಾವ್ ಆಸುಂಡಿ ಅವರ ಗಮಕ ಕಲೆಯ ಶಿಕ್ಷಣ, ಹರಿದಾಸ ವಾಙ್ಮಯದ ಕಾರ್ಯಗಳಿಗೆ ೩ ಸಾವಿರ ರೂ. ಗಳನ್ನೂ ಪರಿಷತ್ತಿಗೆ ಕೊಟ್ಟಿರುತ್ತಾರೆ. ಕನ್ನಡ ನಾಡಿನ ಕೊಡುಗೈ ದೊರೆಗಳಲ್ಲಿ ಮೇಲಾದವರೂ, ಅನೇಕ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ದಾನಮಾಡಿ ಕೀರ್ತಿಯನ್ನು ಪಡೆದಿರುವವರೂ ಆದ ದಾನವೀರ ಶ್ರೀಮಾನ್ ಒಂಟಮುರಿಯ ಯಜಮಾನರಾದ ರಾಜಾ ಲಖಮಗೌಡಾ ಸರದೇಸಾಯಿ ಇವರು ೫00 ರೂಪಾಯಿಗಳನ್ನು ಕೊಟ್ಟಿರುವರಲ್ಲದೆ ಪ್ರತಿವರ್ಷ ತಮ್ಮ ಸಂಸ್ಥಾನದಿಂದ ಪರಿಷತ್ತಿಗೆ ೨0 ರೂ. ವರ್ಗಣಿಯನ್ನು ಕೊಡಲು ಒಪ್ಪಿರುತ್ತಾರೆ. ಈ ಮೂರು ಜನ ಮಹನೀಯರನ್ನು ಹೃತ್ಪೂರ್ವಕ ಅಭಿನಂದಿಸುತ್ತೇನೆ. ಉಳಿದ ಕನ್ನಡ ನಾಡಿನ ಬಂಧುಗಳೂ ಇವರ ಅನುಕರಣವನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ನಮ್ಮ ಬಡವೆಯಾದ ತಾಯಿಗೆ ಎಲ್ಲರೂ ಕಾಣಿಕೆಯನ್ನು ಆರ್ಪಿಸಬೇಕು.
ಬಿ.ಎಂ.ಶ್ರಿ ಅವರ ಸೇವೆ
ಪರಿಷತ್ತಿನ ಈಗಿನ ಉಪಾಧ್ಯಕ್ಷರಾಗಿರುವ ರಾಜಸೇವಾಸಕ್ತ ಶ್ರೀಮಾನ್ ಬಿ.ಎಂ. ಶ್ರೀಕಂಠಯ್ಯ, ಎಂ.ಎ. ಬಿ.ಎಲ್. ಅವರು ಉಪಾಧ್ಯಕ್ಷರಾದ ಅಂದಿನಿಂದ ಪರಿಷತ್ತಿನ ಕಾರ್ಯಗಳನ್ನು ಬಹುಮಟ್ಟಿಗೆ ಮುಂದುವರಿಸುತ್ತಿರುವರು. ಈ ಮಹನೀಯರು ಗಮಕ ಕಲೆಗಾಗಿ ೧000 ರೂ.ಗಳನ್ನೂ, ಪರಿಷತ್ತಿನ ಅಚ್ಚುಕೂಟಕ್ಕಾಗಿ ಹೋದ ವರ್ಷವೇ ೫ ಸಾವಿರ ರೂ.ಗಳನ್ನೂ, ಈ ವರ್ಷ ೧ ಸಾವಿರವನ್ನೂ ಕೊಟ್ಟಿರುತ್ತಾರೆ. ದುಡ್ಡು ಕೊಟ್ಟವರು ಕಾರ್ಯಮಾಡುವುದು ಕಡಿಮೆ. ಕಾರ್ಯ ಮಾಡತಕ್ಕವರಲ್ಲಿ ದುಡ್ಡು ಕೊಡುವವರು ವಿರಳ. ಆದರೆ ಈ ಮಹನೀಯರಿಗೆ ಈ ಎರಡೂ ಗುಣಗಳು ಸಾಧಿಸಿರುವುದರಿಂದ ಕನ್ನಡ ನಾಡೇ ಇವರಿಗೆ ಖುಣಿಯಾಗಿ ಇರುತ್ತದೆ. ಇವರ ಪಾಂಡಿತ್ಯವನ್ನು ಹೆಚ್ಚಿಗೆ ಹೇಳಬೇಕಾಗಿಲ್ಲ. ಇಂತಹ ಮಹನಿಯರು ನಮ್ಮ ಪರಿಷತ್ತಿಗೆ ಉಪಾಧ್ಯಕ್ಷರಾಗಿ ದೊರೆತದ್ದು ಪರಿಷತ್ತಿನ ಮಹಾಭಾಗ್ಯವೆಂದು ನಾನು ತಿಳಿಯುತ್ತೇನೆ. ‘ಶ್ರೀ’ಯವರಿಗೆ ಆಯುರಾರೋಗ್ಯಗಳು ಲಭಿಸಿ ಅವರಿಂದ ಇನ್ನೂ ಹೆಚ್ಚಿನ ಸೇವೆ ನಡೆಯುವಂತೆ ಅನುಗ್ರಹಿಸಿಲೆಂದು ದೇವರನ್ನು ಪ್ರಾಸುತ್ತೇನೆ. `ಶ್ರೀ’ಯವರು ನಮ್ಮ ಕನ್ನಡ ನಾಡಿನ ಸ್ವತ್ತಾಗಿರುತ್ತಾರೆ. ಕನ್ನಡಿಗರು ಆ ಸ್ವತ್ತನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಲೆಂದು ಹಾರೈಸುತ್ತೇನೆ.
ಶಿಸ್ತು ಸಂಟನೆ
ಸಾಹಿತ್ಯ ಪರಿಷತ್ತಿನ ವಿಧೇಯಕ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಪರಿಷತ್ತಿನ ಸದಸ್ಯರಲ್ಲಿ ಶಿಸ್ತು ಮತ್ತು ಸಂಘಟನೆ ಅತ್ಯಾವಶ್ಯಕವಾದುದು. ಹಾಗಾದರೇನೇ ಅದರ ಕಾರ್ಯಗಳು ಯಶಸ್ವಿಯಾಗಿ ನಡೆಯುವುವು. ಪ್ರತಿಯೊಂದು ಸಂಸ್ಥೆಗೂ ಶಿಸ್ತಿನ ಆವಶ್ಯಕತೆ ಬೇಕು. ಭರತಖಂಡದ ರಾಷ್ಟ್ರೀಯ ಮಹಾಸಭೆ ಶಿಸ್ತು ಮತ್ತು ಸಂಘಟನೆಗಳಿಂದ ೫೩ ವರ್ಷಗಳವರೆಗೆ ನಡೆದುಕೊಂಡು ಬಂದುದರಿಂದಲೇ ಅದರ ಕೀರ್ತಿ ಜಗತ್ತಿನಲ್ಲಿ ಹಬ್ಬಿ ತಲೆಯೆತ್ತಿ ಮೆರೆಯುತ್ತಲಿರುವುದು. ಆ ಸಂಸ್ಥೆಯಲ್ಲಿ ಶಿಸ್ತು ಭಂಗಮಾಡಿದಂತಹ ಮಹಾನ್ ಮಹಾನ್ ಪ್ರಭೃತಿಗಳು ಆ ಸಂಸ್ಥೆಯಿಂದ ದೂರ ಸರಿಯಬೇಕಾಯಿತು. ಶಿಸ್ತಿನ ಸಲುವಾಗಿಯೇ ಮಹಾತ್ಮಾಜಿಯವರು ಅದ್ಭುತ ಪ್ರಯತ್ನವನ್ನು ಮಾಡುತ್ತಿರುವರು. ಸಾಹಿತ್ಯ ಪರಿಷತ್ತಿನಲ್ಲಿಯೂ ಶಿಸ್ತು ಸಂಘಟನೆಗಳಿದ್ದರೆ ಅದರ ಗೌರವ ಕರ್ನಾಟಕದ ತುಂಬ ಬೆಳೆಯುವುದು. ಸದಸ್ಯರೆಲ್ಲರೂ ಸುಸಜ್ಜಿತವಾದ ಕನ್ನಡದ ಪಡೆಯಾಗಬೇಕಾಗಿದೆ. ನಾಯಕರಿಗೆ ಗೌರವ ಕೊಡಬೇಕಾಗಿದೆ.
ಕನ್ನಡ ಭಾಷೆಯ ಏಕೀಕರಣ
ಅನೇಕ ಸಲ ಸಾಮ್ರಾಜ್ಯಗಳನ್ನು ಕಟ್ಟಿ ಭಾರತದಲ್ಲಿ ಬಹುದಿನಗಳವರೆಗೆ ತಲೆಯೆತ್ತಿ ಮೆರೆದ ಕನ್ನಡ ನಾಡು ರಾಜಕೀಯ ವಿಪತ್ತಿಗೆ ಗುರಿಯಾಗಿ ಮದ್ರಾಸಿನ ಗೌರ್ವನರಾಗಿದ್ದ ಸರ್. ಥಾಮಸ್ ಮನ್ರೋವಿನ ಕಾಲಕ್ಕೆ ಹರಿದು ಹಂಚಿಹೋಗಿ ಅನೇಕ ಸರಕಾರಗಳಲ್ಲಿ ಕೂಡಿತು. ಇದೇ ಕರ್ನಾಟಕದ ಅವನತಿಗೆ ಮೂಲ. ಅಂದಿನಿಂದಲೇ ನಮ್ಮ ಭಾಷೆ ಕೆಟ್ಟಿತು. ಇಂದಿಗೂ ಆ ಹಾನಿ ತುಂಬದಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಏಕೀಕರಣದ ಸಲುವಾಗಿ ಬಹಳ ಪ್ರಯತ್ನ ಮಾಡುತ್ತಿದ್ದರೂ ಸಾಕಷ್ಟು ಕಾರ್ಯವಾಗಿರುವುದಿಲ್ಲ. ವರ್ತಮಾನ ಪತ್ರಗಳ ಸ್ಥಿತಿ ಪೂರಾ ಕೆಟ್ಟುಹೋಗಿರುವುದು. ಗ್ರಂಥಕಾರರ ಅವಸ್ಥೆಯಾದರೂ ಹಾಗೆಯೇ ಆಗಿರುತ್ತದೆ.
Tag: Kannada Sahitya Sammelana 25, Vyakharanatheertha Chandrashekhara Shastri
೪೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಜಯದೇವಿತಾಯಿ ಲಿಗಾಡೆ
ಕರ್ನಾಟಕದ ಏಕೀಕರಣಕ್ಕೆ ಗಡಿನಾಡ ಕನ್ನಡಿಗರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಕವಯಿತ್ರಿ ಜಯದೇವಿತಾಯಿ ಲಿಗಾಡೆ ಅವರು ಚೆನ್ನಬಸಪ್ಪ ಮಡಕಿ-ಸಂಗವ್ವ ಮಡಕಿ ದಂಪತಿಗಳ ಪುತ್ರಿಯಾಗಿ ೨೩-೬-೧೯೧೨ರಲ್ಲಿ ಸೊಲ್ಲಾಪುರದಲ್ಲಿ ಜನಿಸಿದರು. ಸೊಲ್ಲಾಪುರದಲ್ಲಿ ಮರಾಠಿ ಶಾಲೆಯಲ್ಲಿ ಇವರ ಶಿಕ್ಷಣ ಆರಂಭವಾಯಿತು. ೧೪ನೇ ವಯಸ್ಸಿನಲ್ಲಿ ವಿವಾಹವಾದ ನಂತರ ಇವರು ಕನ್ನಡ ಕಲಿತು ಕನ್ನಡಿಗರ ಜಾಗೃತಿಗಾಗಿ ಶ್ರಮಿಸತೊಡಗಿದರು.
ಅಖಿಲ ಭಾರತ ವೀರಶೈವ ಮಹಿಳಾ ಪರಿಷತ್ತಿನ ಅಧ್ಯಕ್ಷತೆ ವಹಿಸಿದ ಹೆಗ್ಗಳಿಕೆ ಇವರದು. ೧೯೫೨ರಲ್ಲಿ ಬೇಲೂರಿನಲ್ಲಿ ನಡೆದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ದಿಟ್ಟತನದಿಂದ ಮಾತಾಡಿದರು. ೧೯೫0ರಲ್ಲಿ ಮುಂಬಯಿಯಲ್ಲಿ ನಡೆದ ೩೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾಗೋಷ್ಠಿಯ ಅಧ್ಯಕ್ಷೆ ಆಗಿದ್ದರು. ಮಂಡ್ಯದಲ್ಲಿ ನಡೆದ ೪೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾದರು. ಪರಿಷತ್ತಿನ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷಿಣಿ ಎಂಬುದು ಈಕೆಯ ಹೆಗ್ಗಳಿಕೆಯಾಗಿದೆ.
ಜಯದೇವಿತಾಯಿ ಲಿಗಾಡೆ ಅವರ ಸಿದ್ಧರಾಮೇಶ್ವರ ಪುರಾಣ ಕಾವ್ಯಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ದೇವರಾಜ ಬಹಾದ್ದೂರ್ ಬಹುಮಾನ ಬಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಸ್ತ್ರೀ ಹೃದಯದ ರಸಾನುಭವದ ಸಂಪತ್ತಿನ ಅಭಿವ್ಯಕ್ತಿಯಾಗಿ ಇವರು ರಚಿಸಿರುವ ಕಾವ್ಯ ಕವಿತೆಗಳು ಜಾನಪದದ ಸೊಗಡಿನಿಂದ ಕೂಡಿವೆ.
ಜಯಗೀತ, ತಾಯಿಯ ಪದಗಳು, ತಾರಕ ತಂಬೂರಿ, ಸಿದ್ಧರಾಮೇಶ್ವರ ಪುರಾಣ (ಕನ್ನಡದ ಮಹಾಕಾವ್ಯಗಳಲ್ಲಿ ಒಂದಾಗಿದೆ) ಇವು ಇವರ ಕೆಲವು ಕನ್ನಡ ಕೃತಿಗಳಾಗಿವೆ. ಸಿದ್ಧರಾಮ, ಸಿದ್ಧವಾಣಿ, ಬಸವದರ್ಶನ, ಮಹಾಯೋಗಿನಿ, ಸಮೃದ್ಧ ಕರ್ನಾಟ ಶಾರದೆ, ಬಸವವಚನಾಮೃತ ಮುಂತಾದವು ಇವರ ಮರಾಠಿ ಕೃತಿಗಳಾಗಿವೆ.
ಜಯದೇವಿತಾಯಿ ಅವರು ೨೪-೭-೧೯೮೬ರಲ್ಲಿ ಕೈಲಾಸವಾಸಿಗಳಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೪೮,
ಅಧ್ಯಕ್ಷರು, ಜಯದೇವಿತಾಯಿ ಲಿಗಾಡೆ
ದಿನಾಂಕ ಮೇ ೩೧, ಜೂನ್ ೧,೨, ೧೯೭೪
ಸ್ಥಳ : ಮಂಡ್ಯ
[ಟಿಪ್ಪಣಿ ೧೯೭೧, ೧೯೭೨, ೧೯೭೩ ಸಮ್ಮೇಳನ ನಡೆಯಲಿಲ್ಲ]
ನೀವು ರೂಪಿಸಿರುವ ಈ ಸಾಹಿತ್ಯ ಸಮ್ಮೇಳನದ ವೇದಿಕೆಯು ಕನ್ನಡದ “ನಾನಾ” ಸಮಸ್ಯೆಗಳನ್ನು ಬಿಚ್ಚು ಮನಸ್ಸಿನಿಂದ ಚರ್ಚಿಸಿ, ನಮ್ಮಲ್ಲಿ ಕನ್ನಡದ ಪ್ರಜ್ಞೆಯನ್ನು ಒಡಮೂಡಿಸಿ, ಮತ್ತಷ್ಟು ಬಲಗೊಳಿಸಲು ನೆರವಾಗುವುದೆಂದು ನಂಬಿದ್ದೇನೆ. ಇದಕ್ಕೆ ಒಂದು ಸದಾವಕಾಶವನ್ನು ನೀವು ಒದಗಿಸಿಕೊಟ್ಟಿದ್ದೀರಿ. ಇದು ನಿಮ್ಮ ವಾತ್ಸಲ್ಯ, ನಿಮ್ಮ ಪ್ರೀತಿ.
ಪರಿಷತ್ ಅಧ್ಯಕ್ಷ ಜಿ. ನಾರಾಯಣರ ಸೇವೆ
ಕನ್ನಡದ ಸರ್ವತೋಮುಖವಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಲವನ್ನು ತಂದುಕೊಟ್ಟು ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ಭದ್ರ ನೆಲೆಗಟ್ಟಿನ ಮೇಲೆ ನಿಲ್ಲಿಸಿ; ಕನ್ನಡ ಸಾಹಿತ್ಯವನ್ನು ಮನೆಮನೆಗೂ ಮುಟ್ಟಿಸುವ ಧೀರ ಸಂಕಲ್ಪವನ್ನು ತಾಳಿ, ಅವಿರತವಾಗಿ ದುಡಿಯುತ್ತಿರುವ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೋದರ ಜಿ. ನಾರಾಯಣ ಅವರು ಇದೇ ಜಿಲ್ಲೆಯವರು ಎನ್ನುವುದು ಹೆಮ್ಮೆಯ ಮಾತು. ಅವರ ಸೇವೆ ಇನ್ನೂ ಕನ್ನಡಕ್ಕೆ ಲಭಿಸುವಂತಾಗಲಿ.
ನಿಷ್ಕ್ರಿಯವಾಗಿದ್ದ ಪರಿಷತ್ತು
ಅಖಂಡ ಕರ್ನಾಟಕದ ದಿವ್ಯ ಸ್ವಪ್ನವನ್ನು ಹೃದಯದಲ್ಲಿ ಹೊತ್ತುಕೊಂಡು ಜನತೆ ಮುನ್ನಡೆದಾಗ, ಅಂದು ಸಾಹಿತ್ಯ ಪರಿಷತ್ತು ಕೂಡ ರಾಜಕೀಯ ದೌರ್ಬಲ್ಯ ಮತ್ತು ಒತ್ತಡಕ್ಕೆ ಒಳಗಾಗಿತ್ತು. ೧೯೫೨ರ ಬೇಲೂರಿನ ಸಾಹಿತ್ಯ ಸಮ್ಮೇಳನದಲ್ಲಿ ಅಖಂಡ ಕರ್ನಾಟಕದ ಒಂದು ಗೊತ್ತುವಳಿಯನ್ನು ಕೂಡ ಮಂಡಿಸಿ, ಅದನ್ನು ನಿರ್ಣಯಿಸಲಾಗದಷ್ಟು ಅದು ನಿಷ್ಕ್ರಿಯವಾಗಿತ್ತು. ಅಂಥ ಮಬ್ಬು ಮಸುಕಿದ ಕಾಲದಲ್ಲಿ ಕಣ್ಣೀರಿನಿಂದ ಬೇಲೂರಿನ ಚೆನ್ನಕೇಶವನ ಪಾದ ತೊಳೆದು, ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅಖಂಡ ಕರ್ನಾಟಕದ ಗೊತ್ತುವಳಿಯನ್ನು ಮಂಡಿಸಿ, ‘ಗಂಡುಸಾದರೆ ನಿನ್ನ ಬಲಿ ಕೊಡುವಿಯೇನು?’ ಎಂದ ಕನ್ನಡ ಕವಿಯ ಸವಾಲಿಗೆ ‘ಗಂಡುಸಾದರೆ ನನ್ನ ಬಲಿ ತೆಗೆದುಕೊಳ್ಳುವಿರಾ?’ ಎಂದು ನಾನು ಮೊರೆಯಿಸಬೇಕಾಯಿತು. ಅದೇ ಸಮಯದಲ್ಲಿ ಮುಂದುವರೆದು ಮಾತನಾಡುತ್ತಾ, ಅಖಂಡ ಕರ್ನಾಟಕದ ಈ ಹೋರಾಟವನ್ನು ಯಾವುದೇ ಆಶೆಗಳನ್ನಿಟ್ಟುಕೊಂಡು ನಾವು ಕೈಗೆತ್ತಿಕೊಂಡಿಲ್ಲ. ಇದಕ್ಕೆ ಸೊನ್ನಲಿಗೆಯ ಸಿದ್ಧರಾಮನೇ ಸಾಕ್ಷಿ. ಪಂಪಾಪತಿ ವಿರೂಪಾಕ್ಷ, ಬೇಲೂರಿನ ಚೆನ್ನಕೇಶವ, ಶ್ರವಣಬೆಳಗೊಳದ ಗೊಮ್ಮಟೇಶ್ವರರೇ ಸಾಕ್ಷಿ. ಕರ್ನಾಟಕ ಒಂದುಗೂಡುವುದು ನಿಶ್ಚಿತ. ಇದು ಅಂತಃಕರಣದ ಬಯಕೆ, ಇದು ಆಗಲೇಬೇಕು” ಎಂದು ಬಿನ್ನವಿಸಿದೆ. ನನ್ನ ಕೇಳಿಕೆ ಅಂದಿನ ನನ್ನ ಅಣ್ಣಂದಿರ, ಸೋದರಿಯರ ಮನಮುಟ್ಟಿತು. ಉದ್ರಿಕ್ತ ವಾತಾವರಣ ತಿಳಿಯಾಗಿ ಅಖಂಡ ಕರ್ನಾಟಕದ ಗೊತ್ತುವಳಿ ಅವಿರೋಧವಾಗಿ ಪಾಸಾಯಿತು”.
ಪರಿಷತ್ತು ಮತ್ತು ಭಾಷಾ ಸಾಮರಸ್ಯ
ಜೀವಮಾನದುದ್ದಕ್ಕೂ ಹಗಲಿರುಳು ಹಂಬಲಿಸಿ, ನೂರು ಯಾತನೆಗಳನ್ನು ನುಂಗಿ, ಭಾಷಾವಾರು ಪ್ರಾಂತ ರಚನೆಗೆ ಹಲುಬಿದೆವು; ವಿಧವಿಧದ ಪರಿಶ್ರಮ ಹೋರಾಟಗಳನ್ನು ನಡೆಸಿದೆವು. “ನೊಂದ ನೋವ ನೋಯದವರೆತ್ತ ಬಲ್ಲರು?” ಎಂದು ಕನ್ನಡ ತಾಯಿ ಇಂದು ಮಿಡುಕುವಂತಾಗಿದೆ. ಒಮ್ಮೊಮ್ಮೆ ಈ ಭಾಷಾವಾರು ಪ್ರಾಂತ ರಚನೆಯಾದದ್ದು ತಪ್ಪಾಯಿತೇನೋ ಎನ್ನುವ ವಿಚಾರ ನನ್ನಲ್ಲಿಯೂ ಸುಳಿದು ಹೋಗುತ್ತದೆ. ದೇಶದಲ್ಲಿ ಇಂಥ ಒಂದು ಪರಿಸ್ಥಿತಿಯುಂಟಾಗಲು ಮೂಲ ಕಾರಣ ಭಾಷಾ ದುರಭಿಮಾನ; ಮತ್ತು ರಾಷ್ಟ್ರೀಯ ಮನೋಭಾವದ ಕೊರತೆ. ಈ ಭಾಷಾ ಪ್ರಾಂತಗಳ ರಥವನ್ನು ಸರಿಯಾದ ದಾರಿಗೆ ತಿರುಗಿಸಿ ಮುನ್ನಡೆಸಬೇಕಾಗಿದೆ. ಮರಾಠಿಯ ನನ್ನ ಬಂಧುಗಳಿಗೂ ಅನೇಕ ಸಲ ಈ ಮಾತನ್ನು ಭಾಷಣ ಬರಹಗಳ ಮೂಲಕ ತಿಳಿಸಿ ಹೇಳಿದ್ದೇನೆ. ಮರಾಠಿ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ನಾನು ಮಾತನಾಡಿ ಈ ವಿಷಯಗಳನ್ನು ವಿವರಿಸಿದಾಗ, “ನೀವು ಕನ್ನಡದಲ್ಲಿ ಮಾತಾಡಿ, ನಾವು ಕೇಳಲು ಸಿದ್ಧರು” ಎಂದು ಕೂಗಿದ್ದುಂಟು. ಪುಣೆಯಲ್ಲಿ, ಮರಾಠಿ ಸಾಹಿತ್ಯ ಪರಿಷತ್ತಿನಲ್ಲಿ ಈ ಪ್ರತಿಕ್ರಿಯೆಯನ್ನು ನಾನು ಕಂಡಿದ್ದೇನೆ. ಮರಾಠಿ ಸಾಹಿತಿಯೊಬ್ಬನು ಬಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾತನಾಡಿದಾಗ, “ಮರಾಠಿಯಲ್ಲಿ ಮಾತನಾಡಬಹುದು” ಎನ್ನುವ ಮಾತನ್ನು ನಾನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ಕೇಳಬಯಸುತ್ತೇನೆ ಎಂದು ಅವರಿಗೆ ಹೇಳಿದೆನು. ಭಾಷೆಯು ಪಟ್ಟಭದ್ರ ರಾಜಕೀಯ ಜನರ ಕೈಗೆ ಸಿಕ್ಕಾಗ, ಒಂದು ಮಾರಕ ಅಸ್ತ್ರವಾಗಿ ಪರಿಣಮಿಸುತ್ತದೆ. ಆದರೆ ಅದೇ ಭಾಷೆ, ಸಾಹಿತಿಗಳ ಸೃಜನಶೀಲತೆಯಿಂದ ಜನ-ಜನರನ್ನು ಒಂದುಗೂಡಿಸುವ, ಹೃದಯ-ಹೃದಯಗಳಲ್ಲಿ ಬೆಸೆಯುವ ಭಾವಸೇತುವೆಯಾಗುತ್ತದೆ.
ಪರಿಷತ್ತು ದಾರಿ ತೋರಬೇಕು
ಈ ಒಂದು ಸೌಹಾರ್ದ ಮೈತ್ರಿಗಳು ಬೌದ್ಧಿಕ ಮಟ್ಟದಲ್ಲಿ, ಸಾಹಿತ್ಯದ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ ಎನ್ನುವ ಭಾವನೆಯಿಂದ ಈ ವಿಷಯಗಳನ್ನು ವಿವರಿಸುತ್ತಿದ್ದೇನೆ. ಒಂದು ವೇಳೆ ರಾಜ್ಯದ ಸೂತ್ರಗಳು ಸರಿಯಾದ ಮಾರ್ಗದಲ್ಲಿ ರಾಷ್ಟ್ರಹಿತ ದೃಷ್ಟಿಯಲ್ಲಿ ಮುನ್ನಡೆಯದಿದ್ದರೆ ಸಾಹಿತಿಗಳು, ಸಾಹಿತ್ಯ ಪರಿಷತ್ತಿನಂತಹ ಸಾಂಸ್ಕೃತಿಕ ಸಂಸ್ಥೆಗಳು ಅವುಗಳನ್ನು ಸರಿಯಾದ ಹಾದಿಗೆ ತರಲು ಯತ್ನಿಸಬೇಕು. ಹಾಗೂ ಸರಕಾರವು ಕೂಡ ಇಂಥ ಜನದಿಂದ, ಸಂಸ್ಥೆ ನಿರ್ದೇಶನ ಸೂತ್ರಗಳನ್ನು ಪಡೆಯಬೇಕಾಗುತ್ತದೆ. ಇದನ್ನು ಸರಕಾರಕ್ಕೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಬೇಕಾಗುತ್ತದೆ.
ಪರಿಷತ್ತು ಅಂದಿನಿಂದ ಇಂದಿನವರೆಗೆ
೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಲ್ಪಟ್ಟಿತು. ಆಗ ಕನ್ನಡ ಮಾತನಾಡುವ ಜನರು ಆಂಗ್ಲ ಮತ್ತು ದೇಶೀಯ ಆಳರಸರ ಇಪ್ಪತ್ತೆರಡು ಆಡಳಿತಕ್ಕೆ ಒಳಪಟ್ಟಿದ್ದರು. ಅಲ್ಲದೆ ಅವರಿಗೆ ಕಡ್ಡಾಯವಾಗಿ ಇಂಗ್ಲೀಷ್, ಮರಾಠಿ, ಉರ್ದು, ತಮಿಳು, ತೆಲುಗು, ಮಲೆಯಾಳ ಇತ್ಯಾದಿ ಭಾಷೆಗಳನ್ನು ಕಲಿಯಬೇಕಾಗುತ್ತಿತ್ತು. ಮತ್ತೆ ಅವರಿಗೆ ಪ್ರಾದೇಶಿಕ ಉಡುಗೆ ತೊಡಿಗೆ, ರೀತಿ ನೀತಿಗಳೊಡನೆ ಹೊಂದಿಕೊಂಡು ಹೋಗಬೇಕಾಗುತ್ತಿತ್ತು. ಈ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರಿಗೆ ಕನ್ನಡದ ಲಿಪಿಯ ಪರಿಚಯ ಸಹಾ ಇರಲಿಲ್ಲ. ಆದರೆ ಅವರೆಲ್ಲರಿಗೂ ಸಾಮಾನ್ಯವಾದ ಒಂದು ಸಂಪರ್ಕಭಾಷೆ ಕನ್ನಡವೇ ಆಗಿತ್ತು. ಇವರೆಲ್ಲರನ್ನೂ ಒಂದುಗೂಡಿಸಿ, ಒಂದೇ ಆಡಳಿತದ ಸೂತ್ರಕ್ಕೆ ಒಳಪಡಿಸಿ, ಕನ್ನಡವನ್ನು ಉಳಿಸಿ, ಬೆಳೆಸಿ ನಾವೆಲ್ಲರೂ ಕನ್ನಡಿಗರು ಎಂಬ ಭಾವೈಕ್ಯವನ್ನು ಸಾಧಿಸುವ ಮಹೋದ್ದೇಶವೇ ಕನ್ನಡ ಸಾಹಿತ್ಯ ಪರಿಷತ್ತಿನ ಗುರಿಯಾಯಿತು. ಅಂದಿನಿಂದ ಪರಿಷತ್ತಿನ ಕನ್ನಡದ ಹಿರಿಯರು ಮುಂದಾಲೋಚನೆಯಿಂದ ಪರಿಷತ್ತನ್ನು ಪರಿಣಾಮಕಾರಿಯಾಗಿ ಸಂಘಟಿಸುವಲ್ಲಿ ತನು-ಮನ-ಧನಗಳನ್ನು ಸವೆಯಿಸಿದರು. ಕನ್ನಡ ಜನರನ್ನು ಒಂದುಗೂಡಿಸಲು ಏಕಮೇವ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತು ಎಂಬುದು ಕನ್ನಡ ಜನರಿಗೆ ಅರಿವಾಯಿತು. ಅಂದಿನಿಂದ ಕನ್ನಡ ನಾಡನ್ನು ಒಂದುಗೂಡಿಸುವ ಹೋರಾಟದಲ್ಲಿ ತನ್ನ ನಿಲುವನ್ನು ಬದಲಿಸದೆ, ಕನ್ನಡ ಸಾಹಿತ್ಯ ಪರಿಷತ್ತು ದುಡಿಯುತ್ತಾ ಬಂದಿದೆ. ಕನ್ನಡ ಸಾಹಿತ್ಯವನ್ನು ಬೆಳೆಸಿ, ಕನ್ನಡದ ಪ್ರಜ್ಞೆಯನ್ನು ಕನ್ನಡದ ಜನಾಂಗಕ್ಕೆ ನೀಡಿದ ಆ ಪರಿಷತ್ತಿನ ಹಿಂದಿನ ಅಧ್ಯಕ್ಷರುಗಳ ಹಾಗೂ ಅಭಿಮಾನಿಗಳ ಸೇವೆಯನ್ನು ನಾವಿಂದು ಸ್ಮರಿಸಬೇಕು. ಎಚ್.ವಿ. ನಂಜುಂಡಯ್ಯ, ಕರ್ಪೂರ ಶ್ರೀನಿವಾಸರಾಯರು, ಅವರೇ ಆದಿಯಾಗಿ ಜಿ. ನಾರಾಯಣ ಅವರವರೆಗೆ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಮುಖವಾಗಿ ಬೆಳೆಯುತ್ತ ಬಂದಿದೆ. ಈಗ ಕನ್ನಡ ಸಾಹಿತ್ಯ ಪರಿಷತ್ತು ತ್ರೈವಾರ್ಷಿಕ ಯೋಜನೆಯನ್ನು ಪೂರ್ತಿಗೊಳಿಸಿ, ಕನ್ನಡ-ಕನ್ನಡ ನಿಘಂಟಿನ ಕಾರ್ಯವನ್ನು ಮುಂದುವರಿಸಿ, ಸುವರ್ಣ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿ, ಅದರ ಸ್ಮರಣಾರ್ಥವಾಗಿ ಭವ್ಯ ಕಟ್ಟಡವನ್ನು ಕಟ್ಟಿಸಿ ಕರ್ನಾಟಕಕ್ಕೆ ಗೌರವವನ್ನು ತಂದಿದೆ. ಈಗ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿ, ಪ್ರಾಚೀನ ಹಳೆಗನ್ನಡ ಕಾವ್ಯವನ್ನೆಲ್ಲಾ ಹೊಸಗನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸುವ ಕಾರ್ಯ ಕೈಗೊಂಡಿದೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕನ್ನಡ-ಕನ್ನಡ ಶಬ್ದಕೋಶವನ್ನು ಪರಿಷತ್ತು ಸಿದ್ಧಗೊಳಿಸುತ್ತಿರುವುದು ಸಂತೋಷದ ಸಂಗತಿ. ಮತ್ತು ಪ್ರಾಚೀನ ತಾಳೆಯೋಲೆ ಗ್ರಂಥಗಳನ್ನು, ತಾಮ್ರ ಶಾಸನಗಳ ಮತ್ತು ಶಿಲಾಶಾಸನಗಳ ಪ್ರತಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಪರಿಷತ್ತು ಕೈಗೊಂಡಿರುವುದು ಕನ್ನಡ ಸಂಸ್ಕೃತಿಯ ರಕ್ಷಣೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಕನ್ನಡ ನಾಡಿನ ಜನ ಒಂದುಗೂಡಬೇಕು, ಮುನ್ನಡೆಯಬೇಕೆಂಬ ದೃಷ್ಟಿಯಿಂದ ಕರ್ನಾಟಕವಾಗಲು ಕಾರಣವಾಯಿತು. ವಿಭಿನ್ನ ಪ್ರದೇಶಗಳ ಜನರು ಒಂದೇ ಆಡಳಿತ ಸೂತ್ರಕ್ಕೆ ಒಳಪಟ್ಟರು. ಇವರಲ್ಲಿ ಭಾವೈಕ್ಯವನ್ನು ಒಡಮೂಡಿಸುವ ಹೊಣೆ ಸರಕಾರ ಮತ್ತು ಸಾಹಿತಿಗಳ ಮೇಲೆ ಇದೆ. ಆದರೆ ಕೆಲವು ಪ್ರದೇಶದ ಸಾಹಿತಿಗಳಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎನ್ನುವ ಧ್ವನಿ ಕೇಳಿಬರುತ್ತಿದೆ. ನಾಡಿನ ಭದ್ರತೆಯ ದೃಷ್ಟಿಯಿಂದ ಸರಕಾರ, ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತುಗಳು ಇದನ್ನು ಗಮನಿಸಬೇಕು.
ಪರಿಷತ್ತು ಮಾಡಬೇಕಾದ ಚಳವಳಿ
ನಾವು ಜನತೆಗೆ ಮೊದಲು ಅನ್ನ, ಅರಿವೆ, ಆಸರೆ, ಅಕ್ಷರ, ಔಷಧ ಈ ಐದು ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಸಮರ್ಥರಾಗದೆ ದೊಡ್ಡ ದೊಡ್ಡ ಮಾತುಗಳನ್ನು ಆಡಿ ಕೇವಲ ಸಾಹಿತ್ಯಕ ಸಮಸ್ಯೆಗಳನ್ನು ಎದುರಿಸುವುದು ಸಾಧ್ಯವಿಲ್ಲ. ಸಾಹಿತಿಯಾದವರಿಗೆ ಸಾಮಾಜಿಕ ಪ್ರಜ್ಞೆ ಇರಬೇಕು. ನಮ್ಮ ಕವಿತೆಗಳ ಹಿಂದೆ ಸಂವೇದನೆಗಳಿರುವಂತೆ ಹಸಿದವನ ಹೊಟ್ಟೆಯಲ್ಲಿ ವೇದನೆ ಇದೆ. ಆ ವೇದನೆಯನ್ನು ಅವನು ಹೊರಗೆಡವಲು ನಾಲ್ಕು ಜನಗಳ ಮುಂದೆ ಹೇಳುವಂತೆ ಆಗಲು ಅಕ್ಷರದ ಅಸ್ತ್ರ ಅವರಿಗೆ ಬೇಕು. ಈ ಸಮಸ್ಯೆಯನ್ನು ಕುರಿತು ಬಹಳಷ್ಟು ಆಲೋಚನೆ ಮಾಡಿದಾಗಲೆಲ್ಲ ನನಗೆ ಈ ಅನ್ನ ಅಕ್ಷರ ಇತ್ಯಾದಿಗಳನ್ನು ಕುರಿತು ಅವುಗಳ ನಿವಾರಣೆಯಲ್ಲಿ ನಮ್ಮ ಸಾಹಿತ್ಯವು ಎಷ್ಟರ ಮಟ್ಟಿಗೆ ಮೂಡುತ್ತದೆ. ನಮ್ಮ ದೇಶದಲ್ಲಿ ಇಂದು ಹಸಿರು ಕ್ರಾಂತಿಯಾಗಬೇಕು ಎಂಬ ಆಂದೋಲನವನ್ನು ಪ್ರಾರಂಭಿಸಿದಂತೆ ಅಕ್ಷರ ಕ್ರಾಂತಿಯ ಆಂದೋಲನವನ್ನು ಪ್ರಾರಂಭಿಸಬೇಕು. ಸಾಹಿತಿಗಳ, ಕವಿಗಳ, ಸಾಹಿತ್ಯ ಪರಿಷತ್ತುಗಳ, ಸಾಂಸ್ಕೃತಿಕ ಸಂಘ ಸಂಸ್ಥೆಗಳ, ಧಾರ್ಮಿಕ ಮಠಮಾನ್ಯಗಳ ಹೊಣೆಯು ದೊಡ್ಡದಾಗಿದೆ. ಸರ್ಕಾರವು ಸಾಧಿಸಲಾರದ್ದನ್ನು ಸಾಹಿತಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿ ಕೈಗೆತ್ತಿಕೊಂಡು
ಮುನ್ನಡೆದು, ಸರ್ಕಾರವನ್ನು ಜೊತೆಯಲ್ಲಿ ಕೊಂಡೊಯ್ದು, ಒಂದು ಸಾಂಸ್ಕೃತಿಕ ಹಾಗೂ ಬೌದ್ಧಿಕ ಆಂದೋಲನವನ್ನು ಹಮ್ಮಿಕೊಳ್ಳಬೇಕು ಎಂಬುದಾಗಿ ನಾನು ನಿಮ್ಮನ್ನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ಇದರಲ್ಲಿ ಸಾಹಿತ್ಯದ ಸತ್ವ-ಪುಸ್ತಕಗಳ ಪ್ರಚಾರ-ಪತ್ರಿಕೆಗಳ ಪ್ರಸಾರ ಇವು ಅಡಕವಾಗಿವೆಯೆಂದೇ ಇಷ್ಟೆಲ್ಲ ವಿವರಣೆ.
Tag: Kannada Sahitya Sammelana 48, Jayadevi Tayi Ligade, Jayadevi Thayi Ligade
೪೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಆ.ನೇ ಉಪಾಧ್ಯೆ
ಪಾಂಡಿತ್ಯಕ್ಕೆ ಮತ್ತು ವಿನಯಕ್ಕೆ ಇನ್ನೊಂದು ಹೆಸರಾಗಿದ್ದ ಆ.ನೇ. ಉಪಾಧ್ಯೆ ಅವರು ಬೆಳಗಾಂ ಜಿಲ್ಲೆಯ ಸದಲಗಾ ಎಂಬ ಹಳ್ಳಿಯಲ್ಲಿ ನೇಮಿನಾಥ ಉಪಾಧ್ಯೆ ಮತ್ತು ಚಂದ್ರಾಬಾಯಿ ದಂಪತಿಗಳಿಗೆ ೬-೨-೧೯0೬ರಲ್ಲಿ ಮಗನಾಗಿ ಜನಿಸಿದರು. ಉಪಾಧ್ಯೆ ಅವರು ಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢಶಾಲೆಯಲ್ಲಿನ ಶಿಕ್ಷಣಕ್ಕಾಗಿ ಬೆಳಗಾವಿಗೆ ಬಂದರು. ೧೯೨೩ರಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆ ಮುಗಿಸಿ ೧೯೨೮ರಲ್ಲಿ ಬಿ.ಎ. ಪದವೀಧರರಾಗಿ ೧೯೩0ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದರು. ಈ ಸಮಯದಲ್ಲಿ ಅರ್ಧಮಾಗಧಿ, ಅಪಭ್ರಂಶ, ಸಂಸ್ಕೃತ, ಗುಜರಾತಿ, ಹಿಂದಿ, ಮರಾಠಿ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದರು. ೧೯೩೯ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಡಿಲಿಟ್ ಪದವಿ ಪಡೆದರು.
೧೯೩0ರಲ್ಲಿಯೇ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಅರ್ಧಮಾಗಧಿ ಪ್ರಾಕೃತ ಭಾಷಾ ಅಧ್ಯಾಪಕರಾಗಿ ಸೇರಿ ೩೨ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ೧೯೬೨ರಲ್ಲಿ ನಿವೃತ್ತರಾದರು. ೧೯೭೧ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗಕ್ಕೆ ಸಂಸ್ಥಾಪಕ ಪ್ರಾಧ್ಯಾಪಕರಾಗಿ ಕಾರ್ಯಪ್ರವೃತ್ತರಾದರು. ೧೯೭೫ರಲ್ಲಿ ಅಲ್ಲಿಂದ ನಿವೃತ್ತರಾಗಿ ಕೊಲ್ಲಾಪುರಕ್ಕೆ ಮರಳಿದರು.
೧೯೬೩ರಲ್ಲಿ ಬಿಹಾರದ ಪ್ರಾಚ್ಯ ವಿದ್ಯಾಸಂಸ್ಥೆಯು ತನ್ನ ವಜ್ರ ಮಹೋತ್ಸವ ಸಂದರ್ಭದಲ್ಲಿ ಉಪಾಧ್ಯೆಯವರಿಗೆ ಸಿದ್ಧಾಂತಾಚಾರ್ಯ ಪ್ರಶಸ್ತಿ ನೀಡಿತು. ೧೯೭೫ರಲ್ಲಿ ನ್ಯಾಯಾವತಾರ ಗ್ರಂಥಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವದ ಪಾರಿತೋಷಕ ಲಭಿಸಿತು. ಕೇಂದ್ರ ಸರ್ಕಾರದ ಸಂಸ್ಕೃತ ರಾಷ್ಟ್ರೀಯ ಪಂಡಿತ ಪ್ರಶಸ್ತಿ ರಾಷ್ಟ್ರಪತಿಗಳಿಂದ ೧೯೭೫ರಲ್ಲಿ ಲಭ್ಯವಾಯಿತು. ೧೯೬೬ರಲ್ಲಿ ಆಲಿಘರ್ನಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೬೭ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ೪೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಭಾರತೀಯ ಜ್ಞಾನಪೀಠ ನಿರ್ವಹಿಸುತ್ತಿದ್ದ ಮೂರ್ತಿದೇವಿ ಗ್ರಂಥಮಾಲೆಯ ಗೌರವ ಪ್ರಧಾನ ಸಂಪಾದಕರಾಗಿದ್ದರು. ೨೯ನೇ ವಿಶ್ವಪ್ರಾಚ್ಯ ವಿದ್ವಾಂಸ ಮಹಾಸಭೆಗೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದಕ ಮಂಡಲಿಯ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.
ಗ್ರಂಥ ಸಂಪಾದನಾ ಕಾರ್ಯದಲ್ಲಿ ನಿಷ್ಣಾತರಾದ ಆ.ನೇ. ಉಪಾಧ್ಯೆಯವರು ಸುಮಾರು ೨೫ ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಸುಮಾರು ಇನ್ನೂರು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳನ್ನು ವಿದೇಶಗಳ ಗಣ್ಯ ವಿದ್ವತ್ ಪತ್ರಿಕೆಗಳಲ್ಲಿ ಪ್ರಶಂಸೆಗೆ ಒಳಗಾಗಿದೆ. ಅವರು ಸಂಪಾದಿಸಿದ ಕೆಲವು ಗಣ್ಯ ಗ್ರಂಥಗಳು ಹೀಗಿವೆ:
ಪ್ರವಚನಸಾರ, ಪರಮಾತ್ಮ ಪ್ರಕಾಶ, ಪಂಪಸುತ್ತಂ ವರಾಂಗಚರಿತ, ಬೃಹತ್ ಕಥಾಕೋಶ, ಶೃಂಗಾರಮಂಜರಿ, ಕಥಾಕೋಶ, ಗೀತವೀತರಾಗ, ತಿಲೋಯಿ ಪಣ್ಣತ್ತಿ, ಧರ್ಮರತ್ನಾಕರ, ಕಂಸವಹೋ ಇತ್ಯಾದಿ.
ಡಾ. ಉಪಾಧ್ಯೆಯವರು ಕೊಲ್ಲಾಪುರದಲ್ಲಿ ೯-೧0-೧೯೭೫ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೪೬
ಅಧ್ಯಕ್ಷರು: ಆ.ನೇ ಉಪಾಧ್ಯೆ
ದಿನಾಂಕ ೨೬,೨೭,೨೮ ಮೇ ೧೯೬೭
ಸ್ಥಳ : ಶ್ರವಣಬೆಳಗೊಳ
ಸಮ್ಮೇಳನಾಧ್ಯಕ್ಷರ ವಿಚಾರಧಾರೆ
ಈಗ ಇಲ್ಲಿ ನಡೆಯುತ್ತಿರುವುದು ೪೬ನೇ ಸಾಹಿತ್ಯ ಸಮ್ಮೇಳನವಾಗಿದೆ. ಈ ಹಿಂದಿನ ನಲವತ್ತೈದು ಸಮ್ಮೇಳನಗಳ ಅಧ್ಯಕ್ಷಪದವಿಯನ್ನು ಬೆಳಗಿದ ಮಹಾನುಭಾವರ ಸಾಹಿತ್ಯಭ್ಯಾಸ, ಸಿದ್ಧಿಗಳನ್ನು ಸ್ಮರಿಸಿಕೊಂಡರೆ ಯಾರಿಗಾದರೂ ರೋಮಾಂಚನವಾಗದೆ ಇರದು. ಅವರ ನಾಡು, ನುಡಿಗಳ ಭಕ್ತಿ, ಅವರು ಸಲ್ಲಿಸಿದ ಸೇವೆ, ಅವರು ನಿರ್ಮಿಸಿದ ಕೃತಿಗಳು, ಅವರು ಕಂಡ ಕನಸುಗಳು, ಕೈಕೊಂಡ ಯೋಜನೆಗಳು, ಇವೆಲ್ಲ ಇಂದಿಗೂ ಕನ್ನಡ ಕಾರ್ಯಕರ್ತರಿಗೆ ಸ್ಪೂರ್ತಿಯನ್ನೀಯುವಂಥವಾಗಿವೆ. ಕನ್ನಡ ನಾಡಿನ ಏಕೀಕರಣ, ವಿಶಾಲ ಕರ್ನಾಟಕದ ನಿರ್ಮಾಣ, ಬೇರೆ ಬೇರೆ ಪ್ರದೇಶಗಳ ಕನ್ನಡಿಗರಲ್ಲಿ ಪರಸ್ಪರ ಸೌಹಾರ್ದಭಾವನೆ, ಎಲ್ಲ ಸೀಮೆಗಳಿಗೂ ಸಮಾನವಾದ ಗ್ರಾಂಥಿಕ ವ್ಯಾವಹಾರಿಕ ಭಾಷೆಯ ನಿರ್ಮಾಣ, ಕನ್ನಡದ ಸ್ಥಾನಮಾನ ವಿಚಾರ, ಹಳೆಯ ಸಾಹಿತ್ಯದ ಸಂರಕ್ಷಣ, ಪ್ರಕಟಣೆ-ಪ್ರಸಾರಗಳು ಜನತೆಗೆ ಒಳ್ಳೆಯ ಸಾಹಿತ್ಯವನ್ನು ನೀಡುವಿಕೆ, ಹೊಸ ಸಾಹಿತ್ಯಕ್ಕೆ ಪ್ರೋತ್ಸಾಹ, ಕನ್ನಡ ಭಾಷಾಭ್ಯಾಸದ ಬೆಳವಣಿಗೆ, ಭಾಷಾ ಶಾಸ್ತ್ರದ ತೌಲನಿಕ ಅಭ್ಯಾಸ, ಪ್ರಬುದ್ಧ ಪಾಂಡಿತ್ಯದ ಸಮೃದ್ಧಿ, ಕನ್ನಡ ನಾಡಿನ ರಾಜಕೀಯ-ಸಾಮಾಜಿಕ ಧಾರ್ಮಿಕ ಇತಿಹಾಸಗಳ ಬಗೆಗಿನ ಲೇಖನ, ಅದಕ್ಕಾಗಿ ನಡೆಯಬೇಕಾದ ಸಂಶೋಧನೆ, ವಿಶ್ವಕೋಶದ ರಚನೆ, ಸಮೃದ್ಧವೂ ಸಂಪುಷ್ಟವೂ ಆದ ಸಂಪನ್ನ ಶಬ್ದಕೋಶದ ನಿರ್ಮಾಣ, ವೈಜ್ಞಾನಿಕ ಗ್ರಂಥಗಳ ರಚನೆಗೆ ಪ್ರೋತ್ಸಾಹ, ಸಾಹಿತಿಗಳಿಗೆ ಸನ್ಮಾನ ಗೌರವಗಳು ಸಮಾಜದಲ್ಲಿ ರಸಿಕತೆ, ಸಾಹಿತ್ಯಪ್ರೇಮಗಳ ಬೆಳವಣಿಗೆ- ಹೀಗೆ ಹಲವಾರು ವಿಚಾರಗಳನ್ನು ಹಮ್ಮಿಕೊಂಡಿದ್ದಾರೆ. ಅವೆಲ್ಲವುಗಳ ಹಿಂದೆ ಭಾರತೀಯ ರಾಷ್ಟ್ರೀಯ ದೃಷ್ಟಿಯ ಕಾಣ್ಕೆಯಿದೆ.
ಬೆಂಗಳೂರಿನಲ್ಲಿ ಪರಿಷತ್ತಿನ ಕಾರ್ಯಕ್ರಮಗಳು
ಇದೀಗ ರೂಪುಗೊಳ್ಳುತ್ತಿರುವ ಬೆಂಗಳೂರು ವಿಶ್ವವಿದ್ಯಾನಿಲಯವೂ ತನ್ನ ರೀತಿಯಲ್ಲಿ ಪ್ರಗತಿಯ ಹೆಜ್ಜೆಗಳನ್ನು ಇಡುವುದರಲ್ಲಿ ಸಂಶಯವಿಲ್ಲ. ಇಲ್ಲಿ ರಾಜಾಜಿನಗರದ ಸಾಹಿತ್ಯಾಭ್ಯಾಸಿಗಳು ಕನ್ನಡಿಗರ ಕೂಟದವರು, ಗಾಂಧೀ ಸಾಹಿತ್ಯ ಸಂಘದವರು ಪರಿಷತ್ತಿನ ಸಹಾಕಾರದಿಂದ ವಿವಿಧ ಸಾಹಿತಿಗಳ ಸಮಗ್ರ ಕೃತಿಗಳ ಪರಿಚಯಾತ್ಮಕ ಭಾಷಣಗಳನ್ನು ಏರ್ಪಡಿಸುತ್ತಿರುವುದನ್ನೂ ನೆನೆಯಬೇಕು.
ಅಧಿಕ ಜನ ಸದಸ್ಯರಾಗಲಿ
ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಪ್ರೊ. ಜಿ. ವೆಂಕಟಸುಬ್ಬಯ್ಯನವರ ದಕ್ಷ ನೇತೃತ್ವದಲ್ಲಿ ನಮ್ಮ ಈ ಹಿರಿಯ ಸಂಸ್ಥೆ ಧನಬಲವನ್ನೇ ಗಳಿಸುತ್ತ ಕಿರಿಯ ಚೈತನ್ಯಗಳನ್ನು ಬೆಳಸುತ್ತ ವಿಶಾಲ ಭಾವನೆಯನ್ನು ದೂರದೃಷ್ಟಿಯನ್ನೂ ಕೈಗೂಡಿಸಿಕೊಳ್ಳುತ್ತ ಮುಂದುವರಿದಿದೆ. ಇಂಥ ಸಂಸ್ಥೆಗೆ ಬಹು ಸಂಖ್ಯೆಯಲ್ಲಿ ಜನ ಬೆಂಬಲವಾಗಿ ನಿಂತರೆ ಕನ್ನಡದ ಮುನ್ನಡೆ ಬೇಗ ಸಾಧಿತವಾಗಿತ್ತದೆ. ನಮ್ಮ ಜನ ಈ ಕಡೆ ಗಮನವಿಡಲಿ.
Tag: Kannada Sahitya Sammelana 46, Aa.Ne. Upadhye
೪೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕಡೆಂಗೋಡ್ಲು ಶಂಕರಭಟ್ಟ
ಕನ್ನಡದ ಪ್ರಸಿದ್ಧ ನವೋದಯ ಕವಿಗಳಲ್ಲಿ ಒಬ್ಬರಾದ ಕಡೆಂಗೋಡ್ಲು ಶಂಕರಭಟ್ಟ ಅವರು ಈಶ್ವರಭಟ್ಟ-ಗೌರಮ್ಮನವರ ಪುತ್ರರಾಗಿ ೯-೮-೧೯0೪ರಲ್ಲಿ ಜನಿಸಿದರು. ಪ್ರಾರಂಭದ ವಿದ್ಯಾಭ್ಯಾಸ ಮುಳಿಯ ತಿಮ್ಮಪ್ಪಯ್ಯನವರ ಮನೆಯಲ್ಲಿ ಮಂಗಳೂರಿನಲ್ಲಿ ನಡೆಯಿತು. ಮದರಾಸಿನ ವಿಶ್ವವಿದ್ಯಾನಿಲಯದಲ್ಲಿ ವಿದ್ವಾನ್ ಪದವಿ ಗಳಿಸಿದರು.
೧೯೨೭ರಲ್ಲಿ ಮಂಗಳೂರಿನ ಸೆಂಟ್ ಅಗ್ನೆಸ್ ಕಾನ್ವೆಂಟಿನಲ್ಲಿ ಕನ್ನಡ ಅಧ್ಯಾಪಕರಾಗಿ ೧೯೬೪ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ೧೯೫೩ರಿಂದ ೧೯೬೮ರವರೆಗೆ ಸಂಪಾದಕರಾಗಿ ರಾಷ್ಟ್ರಬಂಧು ಪತ್ರಿಕೆಯನ್ನು ನಡೆಸಿದರು. ೧೯೨೭ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ‘ಪಂಚಕಜ್ಜಾಯ’ ನೆನಪಿನ ಸಂಚಿಕೆಗೆ ಶ್ರಮಿಸಿದರು. ನವಯುಗ, ರಾಷ್ಟ್ರಮತ ವಾರಪತ್ರಿಕೆಗಳಿಗೂ ಸ್ವಲ್ಪ ಕಾಲ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರು ಆಗಿದ್ದರು. ೧೯೩೬ರಲ್ಲಿ ಜರುಗಿದ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ೧೯೬೫ರಲ್ಲಿ ಕಾರವಾರದಲ್ಲಿ ನಡೆದ ೪೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಪ್ರಾಪ್ತವಾಯಿತು.
ಕಡೆಂಗೋಡ್ಲು ಶಂಕರಭಟ್ಟರ ಮುಖ್ಯ ಕೃತಿಗಳು :
ಘೋಷಯಾತ್ರೆ (ಕಾವ್ಯ), ಪತ್ರಪುಷ್ಪ, ನಲ್ಮೆ, ಗಾಂಧಿ ಸಂದೇಶ(ಕವನ ಸಂಕಲನಗಳು), ದೇವತಾಮನುಷ್ಯ, ಧೂಮಕೇತು, ಹೊನ್ನಿಯ ಮದುವೆ (ಕಾದಂಬರಿಗಳು), ಗಾಜಿನ ಬಳೆ, ದುಡಿಯುವ ಮಕ್ಕಳು (ಕಥಾ ಸಂಕಲನಗಳು), ಸ್ವರಾಜ್ಯ ಯುದ್ಧ (ಅನುವಾದ), ವಿರಾಮ (ಏಕಾಂಕ ನಾಟಕ)
ಕೃಷಿಕುಟುಂಬದ ಹವ್ಯಕ ಸಮಾಜದ ಕವಿ, ಪತ್ರಿಕಾಕರ್ತರಾದ ಕಡೆಂಗೋಡ್ಲು ಶಂಕರಭಟ್ಟ ಅವರು ೧೭-೫-೧೯೬೮ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೪೫
ಅಧ್ಯಕ್ಷರು: ಕಡೆಂಗೋಡ್ಲು ಶಂಕರಭಟ್ಟ
ದಿನಾಂಕ ೧0,೧೧,೧೨ ಮೇ ೧೯೬೫
ಸ್ಥಳ : ಕಾರವಾರ
ಮುನ್ನೋಟ
ಇದುವರೆಗೆ ಕನ್ನಡ ಸಾಹಿತ್ಯದ ಕೆಲವು ಪ್ರಾಪ್ತಿಗಳನ್ನು ಅಖ್ಯಾನಿಸಿದುದಾಯಿತು. ಈಗ ‘ಪ್ರಾಪ್ತವ್ಯ’ಗಳನ್ನು ಉಲ್ಲೇಖಿಸಬೇಕಾಗಿದೆ. ಇವುಗಳ ಸಾಧನೆಯಲ್ಲಿ ಶುದ್ಧ ಸಾಹಿತ್ಯಕರೊಂದಿಗೆ ಭಿನ್ನ ಭಿನ್ನ ಅಧಿಕರಣ ಪ್ರತಿಷ್ಠಿತರೂ ಸಹಕರಿಸಬೇಕಾಗಿದೆ.
(೧) ವಿದ್ವಾಂಗದಲ್ಲಿ ಆಮೂಲಾಗ್ರವಾಗಿ, ಕನ್ನಡವೆ ಬೋಧಭಾಷೆಯಾಗಬೇಕು. ಭಾರತದ ಒಳಗಣ ಸಂಪರ್ಕ ಭಾಷೆಯೊಂದಿಗೆ ವಿಶ್ವಸಂಪರ್ಕ ಭಾಷೆಯಾದ ಆಂಗ್ಲಭಾಷೆಗೆ ಗಣನೀಯ ಸ್ಥಾನ ಇರಬೇಕು. ಸಾಂಸ್ಕೃತಿಕ ದೃಷ್ಟಿಯಿಂದ ಅದರ ಅಧ್ಯಾಪನ-ಅಧ್ಯಯನಗಳು ನಡೆಯಬೇಕು; ಶುಕ ಪಾಠಕ್ರಮದಿಂದಲ್ಲ.
(೨) ಆಧುನಿಕ ವಿಚಾರ-ವಿಜ್ಞಾನ-ಶಾಸ್ತ್ರ ಸಂಬಂಧವಾದ ಉತ್ತಮ ಗ್ರಂಥಗಳು ಯಾವ ಭಾಷೆಯಲ್ಲಿದ್ದರೂ ಅವುಗಳನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆಬೇಕು.
(೩) ಪ್ರಾಚೀನ ಕವಿಗಳ ಉತ್ತಮ ಕೃತಿಗಳೆಲ್ಲ ಸಂಗ್ರಹ ರೂಪದಲ್ಲಿ ಆದರೂ ಹದಬೆಲೆಗೆ ದೊರೆಯುವಂತಾಗಬೇಕು.
(೪) ಪ್ರಕಾಶಕರಿಗೆ ಅಥವಾ ಗ್ರಂಥಕರ್ತರಿಗೆ, ಪ್ರೋತ್ಸಾಹ ಕೊಡಬೇಕೆಂಬ ಒಂದೇ ಒಂದು ದೃಷ್ಟಿಯಿಂದ, ನೀರಸ ಗ್ರಂಥಗಳನ್ನು ಪಠ್ಯಪುಸ್ತಕಗಳನ್ನಾಗಿ ನಿಯಮಿಸುವ ಕ್ರಮ ನಿಲ್ಲಬೇಕು.
(೫) ಮಾಧ್ಯಮಿಕ ಶಿಕ್ಷಣ ಹೊಂದುವ ಮಕ್ಕಳಿಗೆ ನಮ್ಮ ಕವಿಶ್ರೇಷ್ಠರ ಲಘು ಪರಿಚಯವಾದರೂ ಆಗುವಂತೆ ಕೆಳಗಣ ವರ್ಗದಿಂದಲೆ, ಸುಲಲಿತವಾದ ಪ್ರಾಚೀನ ಗದ್ಯ ಪದ್ಯಗಳ ಉತ್ತಮ ಭಾಗಗಳಲ್ಲಿ ಸ್ವಲ್ಪವನ್ನಾದರೂ ಪಠ್ಯಗ್ರಂಥಗಳಲ್ಲಿ ಸೇರಿಸಬೇಕು.
(೬) ಸಾಹಿತ್ಯದ ಸೊಗಸನ್ನು ತಿಳಿದು ಅನುಭವಿಸುವುದಕ್ಕೆ ಅನುಕೂಲವಾಗುವಂತೆ. ಭಾಷಾಪಾಠ ಕ್ರಮವನ್ನು ಸಿದ್ಧಗೊಳಿಸಬೇಕು.
(೭) ಭಾಷೆಯಲ್ಲಿ ಅವತರಿಸುತ್ತಿರುವ ಅಶುದ್ಧ ಪ್ರಯೋಗಗಳನ್ನು ಪರಿಷತ್ತಿನ ಮುಖಪತ್ರಿಕೆಗಳಲ್ಲಿ ಚರ್ಚಿಸಿ ಶುದ್ಧಾಶುದ್ಧ ನಿರ್ಣಯವನ್ನು ಕೊಡುವ ವ್ಯವಸ್ಥೆಯಾಗುವುದು ವಿಹಿತ. ಪರಿಷತ್ತು ವಿದ್ವಾಂಸರ ಸಹಾಯದಿಂದ ಈ ಕೆಲಸವನ್ನು ಕೈಗೂಡಿಸಬೇಕು.
(೮) ಗ್ರಂಥಕರ್ತರೂ ಸಂಪಾದಕರೂ ತಮ್ಮ ಕೃತಿಗಳನ್ನೂ ವೃತ್ತಪತ್ರಿಕೆಗಳನ್ನೂ ಪರಿಷತ್ತಿಗೆ ಕಳುಹಿಸಿಕೊಟ್ಟು ಈ ಕಾರ್ಯದಲ್ಲಿ ನೆರವಾಗಬಹುದು.
(೯) ಲಿಪಿ ಸಂಸ್ಕರಣವು ಆಗಬೇಕಾದೀತು. ತೆಲುಗು ಕನ್ನಡಗಳಲ್ಲಿ ಸಮಾನ ಲಿಪಿಯನ್ನು ಬಳಕೆಗೆ ತರುವುದು ಸುಲಭ. ಈ ವಿಷಯದಲ್ಲಿ ಆಂಧ್ರ ಮೈಸೂರು ರಾಜ್ಯಗಳೊಳಗೆ ಆದ ಸಮತಟ್ಟನ್ನು ಕಾರ್ಯಗತಗೊಳಿಸಬಹುದು.
(೧0) ಕನ್ನಡದ ಗ್ರಾಮ್ಯ ಭಾಷಾರೂಪಗಳಲ್ಲಿಯೂ, ನಾಡಿನಲ್ಲಿರುವ ಸೋದರ ಭಾಷೆಗಳಲ್ಲಿಯೂ ಇದ್ದು, ಗ್ರಂಥಸ್ಥ ಪ್ರಯೋಗದಲ್ಲಿರುವ ಉಚಿತ ಶಬ್ದಗಳನ್ನು ಸಂಗ್ರಹಿಸುವ ಕಾರ್ಯವು ಪರಿಷತ್ತಿನ ಮೂಲಕ ನಡೆಯಬೇಕು.
(೧೧) ಆಧುನಿಕ ವಿಷಯಗಳಲ್ಲಿ ಉತ್ತಮಗ್ರಂಥ ನಿರ್ಮಾಣವಾಗಬೇಕು. ಪ್ರ್ರತಿವರ್ಷ ಕೆಲವು ಗ್ರಂಥಗಳನ್ನು ಪ್ರಕಟಪಡಿಸುವ ಯೋಜನಾಬದ್ಧ ವ್ಯವಸ್ಥೆ ಅವಶ್ಯವಾಗಿದೆ.
ಏಕೀಕರಣ ಮತ್ತು ಸಮ್ಮೇಳನ
ಬೇಕಾದುದರ ಪಟ್ಟಿಯನ್ನು ಇನ್ನೂ ಉದ್ದಕ್ಕೆ ಎಳೆಯಬಹುದು. ಆದರೆ ಸಾಹಿತ್ಯ ಸಮ್ಮೇಳನವು, ಸಾಹಿತ್ಯ ಸಮಾರಾಧನೆಯ ಸಮಾರಂಭವಾಗಿರಬೇಕಲ್ಲದೆ ಕೇವಲ ತಾಪತ್ರಯ ನಿವೇದನೆಯ ತಳವಾಗಬಾರದು-ಎನ್ನುವ ದೃಷ್ಟಿಯಿಂದ ವಾಂಛಿತಗಳ ಸಂಖ್ಯೆಯನ್ನು ಹೆಚ್ಚಿಸಲಿಲ್ಲ. ಇದರಿಂದ ಕನ್ನಡಿಗರು ಸುದೈವಿಗಳು. ‘’ಬೇಡಲು ಕನ್ನಡ ದಾಸಯ್ಯ ಬಂದಿಹ” ಎನ್ನುತ್ತಾ ಬೇರೆ ಬೇರೆ ಆಡಳಿತದ ಮನೆಮನೆಗೆ ಭಿಕ್ಷಾರ್ಥಿಗಳಾಗಿ ಹೋಗಬೇಕಾದ ಆವಶ್ಯಕತೆ ಉಂಟಾಗಿದೆ. ಆಣ್ಮರು-ಆಳುಗಳು, ಎನ್ನುವ ಭೇದ ತೊಡೆದುಹೋಗಿದೆ. ನಮ್ಮ ವಿಧಾನ ಪರಿಷತ್ತುಗಳಲ್ಲಿ, ಸಚಿವಾಲಯಗಳಲ್ಲಿ, ವಿವಿಧಾಧಿಕರಣಗಳಲ್ಲಿ ಕನ್ನಡದ ನಾಡಿ ಬಡಿಯುತ್ತಿದೆ. ಒಮ್ಮೊಮ್ಮೆ ಅದರ ಸ್ಪಂದನದ ಗತಿಯಲ್ಲಿ ಹೆಚ್ಚು ಕಡಿಮೆ ಕಾಣಿಸಬಹುದು. ಹೆಚ್ಚಾಗಲಿ, ಕಡಿಮೆಯಾಗಲಿ, ಬಡಿಯುವ ನಾಡಿಯು ಕನ್ನಡದ್ದೆ ಆಗಿದೆ ಎನ್ನುವ ಸಮಾಧಾನದಿಂದ ರಾಜಕೀಯದ ಹೊಲೆ ತಾಗಬಹುದಾದ ಕೆಲವು ಪ್ರಶ್ನೆಗಳನ್ನು ದೂರದಲ್ಲಿಯೇ ಇರಿಸಬೇಕಾಗಿದೆ.
ಪರಿಷತ್ತಿನ ಸ್ಥಾನ ಮಾನ
ಸಾಹಿತ್ಯ ಪರಿಷತ್ತಿನಂತಹ ಸಂಸ್ಕೃತಿ ಸೇವಾ ಸಂಸ್ಥೆಗೂ ಜನ ಪ್ರತಿನಿಧಿ ರಾಜ್ಯಭಾರಕ್ಕೂ ಇರಬೇಕಾದ ಆದರ್ಶಸಂಬಂಧವನ್ನಿಲ್ಲಿ ಪ್ರಸ್ತಾವಿಸದಿದ್ದರೆ ಅದೊಂದು ದೊಡ್ಡ ಲೋಪವಾಗಬಹುದು. ಹಿಂದಿನ ಕಾಲದಲ್ಲಿ ಕವಿಗಳಿಗೂ ವಿದ್ವಾಂಸರಿಗೂ ರಾಜಾಶ್ರಯ ದೊರೆಯುತ್ತಿತ್ತು. ಇದಕ್ಕೆ ಪ್ರತಿಯಾಗಿ ಕೆಲವೇಳೆ ಕವಿಗಳು ರಾಜರಿಗೆ ಕಾವ್ಯಾಶ್ರಯವನ್ನು ಕೊಡುವ ಕ್ರಮವೂ ಇತ್ತು. ಕಾಲಪರಿಸ್ಥಿತಿಗಳು ವ್ಯತ್ಯಾಸಹೊಂದಿವೆ. ಇಂದು ಈ ರೀತಿಯ ಆಶ್ರಯವನ್ನು ಕೊಡುವ ಕೊಳ್ಳುವ ಪ್ರಶ್ನೆ ಇಲ್ಲ. ಲೆಕ್ಕಣಿಕೆಗಳನ್ನು ಒತ್ತೆಯಿಡಬಲ್ಲ ಗಣ್ಯ ಸಾಹಿತ್ಯ ವ್ಯವಸಾಯಿಗಳು ದುರ್ಬಲರು; ಸ್ತುತಿಪಾಠವನ್ನಪೇಕ್ಷಿಸುವ ರಾಜ್ಯಧುರಂಧರರೂ ದುರ್ಲಭರೆ. ಸರ್ಕಾರವು ರಾಜಕೀಯ ಪ್ರಾತಿನಿಧ್ಯವನ್ನು ಪಡೆದಿದ್ದರೆ, ಪರಿಷತ್ತ್ತು ಸಾಂಸ್ಕೃತಿಕ ಪ್ರಾತಿನಿಧ್ಯವನ್ನು ಪಡೆದಿದೆ. ಸರಕಾರದ ಸತ್ತೆಯೂ ಅಧಿಕಾರವೂ ರಾಜ್ಯದ ಸರ್ವಾಂಗಗಳಲ್ಲಿ ವ್ಯಾಪಿಸಿಕೊಂಡಿದೆ. ಪರಿಷತ್ತಿನ ನೈತಿಕ ಬಾಧ್ಯತೆಯು ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಸರ್ವತೋಮುಖವಾಗಿ ಇರತಕ್ಕುದ್ದಾಗಿದೆ. ಸ್ವಯಃಪ್ರಬುದ್ಧ ಪ್ರಜೆಗಳ ಮತವನ್ನು ಸಂಪಾದಿಸಿ ಬೆಳೆದ ಸಂಸ್ಥೆ ಅಲ್ಲವಾದರೂ ವಿದ್ಯಾ ಸಂಸ್ಕೃತಿ ಪುರಸ್ಕೃತರ ಸದಾಶಯದ ಆಧಾರಬಲವನ್ನು ಹೊಂದಿರುವ ಅದರ ಸ್ಥಾನಮಾನಗಳನ್ನು ಲಕ್ಷಿಸಿ, ವಿದ್ಯಾಸಂಸ್ಕೃತಿ ವಿಭಾಗದಲ್ಲಿ ತಾನು ನಿರ್ವಹಿಸುತ್ತಿರುವ ಕಾರ್ಯಭಾರಗಳಲ್ಲಿ ಕೆಲವನ್ನು, ಸರಕಾರವು ಈ ಸಂಸ್ಥೆಗೆ ಬಿಟ್ಟುಕೊಡಬಹುದು; ಅದಕ್ಕೆ ಸರಕಾರದ ನೆರವನ್ನು ನಿರೀಕ್ಷಿಸಬಹುದು; ತನ್ನ ಆರ್ಥಿಕ ಸಹಕಾರದ ಆಶ್ವಾಸನೆಯನ್ನು ನೀಡಬಹುದು. “ದಮ್ಮಯ್ಯ”ಗಳನ್ನು ಅಪೇಕ್ಷಿಸದೆ, ವಿಚಾರಸ್ವಾತಂತ್ರ್ಯಕ್ಕೆ ತಡೆಹಾಕದೆ, ಗ್ರಂಥಕಾರನ ವಿದ್ವತ್ಸಂಭಾವನೆ, ಇತ್ಯಾದಿ ಕಾರ್ಯಗಳಲ್ಲಿ ವಿನಿಯೋಗ ಹೊಂದುವುದಕ್ಕೆ ಬೇಕಾದ ಧನಾನುಕೂಲತೆಯನ್ನು ಸರಕಾರವು ಒದಗಿಸಿಕೊಡುವುದು ಜನಹಿತದೃಷ್ಟಿಗೆ ಮೆಚ್ಚದ ಕೆಲಸವಲ್ಲ. ಅನಾವಶ್ಯಕವಾದ ಕಟ್ಟುನಿಟ್ಟುಗಳಿಂದಲೂ, ದೀರ್ಘಸೂತ್ರಗಳಿಂದಲೂ, ಉದ್ದಿಷ್ಟಕಾರ್ಯ ಸಾಧನೆಗೆ ಆತಂಕವಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಪಾಲಿಸಬೇಕಾದ ಕರ್ತವ್ಯ ಸರಕಾರದ್ದು ಮಾತ್ರವಲ್ಲ; ಸಂಸ್ಥೆಯದಾದರೂ ಇದೆ. ಮಾಂಸಗ್ರಂಥಿಯಂತಲ್ಲ, ಪರಿಶುದ್ಧರಕ್ತದಂತೆ ಅದು ಸಮಾಜ ಶರೀರದಲ್ಲಿ ತನ್ನ ಚಟುವಟಿಕೆಗಳನ್ನು ಕಾಣಿಸಬೇಕು. ಇಂತಹ ನೀತಿಪ್ರಜ್ಞೆಯಿಲ್ಲದೆ ಯಾವ ಸಂಸ್ಥೆಯೂ ಜನಾದರವನ್ನು ಪಡೆಯಲಾರದು.
Tag: Kannada Sahitya Sammelana 45, Kadengodlu Shankarabhatta, Kadengodlu Shankar Bhat
೪೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ರಂಗನಾಥ ಶ್ರೀನಿವಾಸ ಮುಗಳಿ
ಕರ್ನಾಟಕದ ಗಡಿನಾಡಿನ ಕನ್ನಡ ದೀಪ, ಕನ್ನಡದ ಪಾರಿಜಾತ ಇತ್ಯಾದಿ ಬಿರಾದಾಂಕಿತರಾದ ರಂ.ಶ್ರೀ. ಮುಗಳಿ (ರಂಗನಾಥ ಶ್ರೀನಿವಾಸ ಮುಗಳಿ) ಶ್ರೀನಿವಾಸರಾವ್-ಕಮಲಕ್ಕನವರ ಪುತ್ರರಾಗಿ ೧೫-೭-೧೯0೬ರಲ್ಲಿ ಜನಿಸಿದರು. ಬಾಗಲಕೋಟೆ, ಬಿಜಾಪುರಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಬಿ.ಎ. ೧೯೩0ರಲ್ಲಿ ಎಂ.ಎ. ಮಾಡಿದರು. ೧೯೩೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಿಕ್ಷಕರಾಗಿ ಸೇರಿದರು. ೧೯೩೩ರಲ್ಲಿ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ೧೯೬೬ರಲ್ಲಿ ನಿವೃತ್ತರಾದರು. ಕೆಲವು ಕಾಲ ಸರಕಾರದ ಸಾಹಿತ್ಯ ಸಂಸ್ಕೃತಿ ಇಲಾಖೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅನಂತರ ಬೆಂಗಳೂರಿನಲ್ಲಿ ೧೯೬೭-೧೯೭0ರ ಅವಧಿಯಲ್ಲಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು.
ಮುಗಳಿಯವರು ೧೯೪0-೪೩ರಲ್ಲಿ ಜೀವನ ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಸಿದರು.
೧೯೫೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಇವರ ಕನ್ನಡ ಸಾಹಿತ್ಯ ಚರಿತ್ರೆ ಗ್ರಂಥಕ್ಕೆ ದೊರೆಯಿತು. ೧೯೫೫ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಮರ್ಶಾ ಗೋಷ್ಠಿಯ ಅಧ್ಯಕ್ಷತೆ, ೧೯೫೭ರಲ್ಲಿ ಧಾರವಾಡದಲ್ಲಿ ೧೯ನೇ ಶತಮಾನದ ಸಾಹಿತ್ಯ ವಿಮರ್ಶೆಯ ಗೋಷ್ಠಿಯ ಅಧ್ಯಕ್ಷತೆಗಳನ್ನು ವಹಿಸಿದ್ದರು. ೧೯೬೩ರಲ್ಲಿ ತುಮಕೂರು ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆದ ೪೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಮುಗಳಿ ಅವರು ಬರೆದಿರುವ ಪ್ರಮುಖ ಕೃತಿಗಳಲ್ಲಿ ಕೆಲವು:
ಕನ್ನಡ ಸಾಹಿತ್ಯ ಚರಿತ್ರೆ
ಹೆರಿಟೇಜ್ ಆಫ್ ಕರ್ನಾಟಕ (ಇಂಗ್ಲಿಷ್)
ಕನ್ನಡ ಕೃತಿರತ್ನ
ಕನ್ನಡ ಕಾವ್ಯ ಸಂಚಯ
ಅನ್ನ (ಕಾದಂಬರಿ)
ಸಾಹಿತ್ಯ ವಿಮರ್ಶೆಯ ಮಾರ್ಗದರ್ಶನ ಸೂತ್ರಗಳು (ವಿಮರ್ಶೆ)
ರಂ.ಶ್ರೀ ಮುಗಳಿ ಅವರು ೨0-೨-೧೯೯೩ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೪೪
ಅಧ್ಯಕ್ಷರು, ರಂ.ಶ್ರೀ.ಮುಗಳಿ
ದಿನಾಂಕ ೨೮,೨೯,೩0 ಡಿಸೆಂಬರ್ ೧೯೬೩
ಸ್ಥಳ : ತುಮಕೂರು
ಪರಿಷತ್ತು ಸಮ್ಮೇಳನಗಳ ವಿಚಾರಕ್ಷೇತ್ರ್ರ-ಕಾರ್ಯಕ್ಷೇತ್ರ
ಎಲ್ಲಕ್ಕೆ ಮೊದಲು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನ ಇವುಗಳ ವಿಚಾರಕ್ಷೇತ್ರ ಮತ್ತು ಈ ವಿಷಯದಲ್ಲಿ ಸ್ಪಷ್ಟವಾದ ತಿಳಿವಳಿಕೆ ಇಂದು ತೀರ ಆವಶ್ಯಕವೆಂದು ನನಗೆ ತೋರುತ್ತದೆ. ಸಾಹಿತ್ಯದ ಎಲ್ಲ ಶಾಖೆಗಳಲ್ಲಿ ಆಗಿರುವ ಪ್ರಗತಿ, ಆಗಬೇಕಾದ ಕಾರ್ಯ, ಸಾಹಿತ್ಯ ಸಂವರ್ಧನೆಗೆ ಆವಶ್ಯಕವಾದ ವಿಮರ್ಶೆಯ ಸ್ಥಿತಿಗತಿ, ಸಾಹಿತ್ಯ ಸೇವಕರ ಮತ್ತು ಪ್ರಕಾಶಕರ ಪರಿಸ್ಥಿತಿ, ಈ ಮುಂತಾದ ಸಾಹಿತ್ಯ ಸಂಬಂಧಿಯಾದ ವಿಷಯಗಳಿಗೆ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನಗಳು ತಮ್ಮ ಮುಖ್ಯವಾದ ಗಮನವನ್ನೀಯಬೇಕು; ಉದಾತ್ತ ಧ್ಯೇಯದಿಂದ, ವಿಧಾಯಕ ಕಾರ್ಯದಿಂದ, ವರುಷದಿಂದ ವರುಷಕ್ಕೆ ಮುನ್ನಡೆಯುತ್ತ ಸಾರ್ಥಕತೆಯನ್ನು ಗಳಿಸಬೇಕು. ಸಾಹಿತ್ಯದ ಮಂದಿರಕ್ಕೆ ಮೂಲ ಆಧಾರ ಭಾಷೆ, ಅದರ ಶಿಖರ ಸಂಸ್ಕೃತಿ. ಭಾಷೆ, ಸಾಹಿತ್ಯ, ಸಂಸ್ಕೃತಿ ಈ ಮುಪ್ಪರಿಯ ಮುನ್ನಡೆ, ಪರಿಷತ್ತು-ಸಮ್ಮೇಳನಗಳ ಹಿರಿಯ ಗುರಿಯಾಗಿರಬೇಕು. ಅಷ್ಟರಮಟ್ಟಿಗೆ ಅವುಗಳ ವಿಚಾರಕ್ಷೇತ್ರ, ಕಾರ್ಯಕ್ಷೇತ್ರಗಳು ವಿಸ್ತಾರಗೊಳ್ಳುತ್ತವೆ. ಆದರೆ ಅವು ಇನ್ನೂ ಹಿಗ್ಗುತ್ತ ಹೋಗಿ ರಾಜಕೀಯದ ರಣರಂಗವಾಗುವುದಾದರೆ ಅದಕ್ಕಿಂತ ಬೇರೆ ಅನಿಷ್ಟವಿಲ್ಲ. ಸಾಹಿತ್ಯ ಸೇವಕರಿಗೆ ಭಾಷಿಕ ರಾಜಕಾರಣ, ದೇಶದ ರಾಜಕಾರಣ ಮುಂತಾದ ಅನೇಕ ವಿಷಯಗಳಲ್ಲಿ ಆಸ್ಥೆಯಿರಬಹುದು. ಆ ಬಗ್ಗೆ ಅವರ ಸ್ವಂತ ಅಭಿಪ್ರಾಯಗಳೂ ಇರಬಹುದು. ಆದರೆ ಅವನ್ನು ವ್ಯಕ್ತಗೊಳಿಸಲು ಸಾಹಿತ್ಯದ ವೇದಿಕೆಯನ್ನು ಅವರು ಬಳಸಬಾರದು. ಅವಕ್ಕೆ ಸಂಬಂಧಪಟ್ಟ ವೇದಿಕೆಗಳಲ್ಲಿ ಹೋಗಿ ನಿಲ್ಲಬೇಕು. ಈ ಸೂಕ್ಷ್ಮಸಂಯಮ ಇಂದು ನಮ್ಮ ಜನಕ್ಕೆ ಅತ್ಯಂತ ಅವಶ್ಯವಾಗಿದೆ. ಯಾರೂ ಬೇಕಾದವರು ಯಾವಲ್ಲಿಯೂ ನುಗ್ಗಬಹುದು, ಏನನ್ನೂ ಹೇಳಬಹುದು ಎಂಬುದು ಕೇಡಿಗೆ ತೋಡಿಕೊಟ್ಟ ದಾರಿಯಾಗುವುದು ಖಂಡಿತ. ಭಾಷೆ-ಭಾಷೆಗಳ ಅನ್ಯೋನ್ಯ ಸಂಬಂಧ, ಭಾಷಾನುಗುಣ ಪ್ರಾಂತರಚನೆಯಿಂದ ತಲೆಯೆತ್ತಿದ ಸಮಸ್ಯೆಗಳು, ಇವನ್ನು ಸಾಹಿತ್ಯ ಪರಿಷತ್ತು ಹಾಗೂ ಸಮ್ಮೇಳನಗಳು ತಾತ್ವಿಕವಾಗಿ ಪರಿಶೀಲಿಸಬೇಕು-ಆಂದೋಲನ ದೃಷ್ಟಿಯಿಂದಲ್ಲ. ಆಂದೋಲನ್ನಕೆ ಬೇರೆ ಸಮ್ಮುಖಗಳಿರುತ್ತವೆ. ಭಾಷಿಕ ರಾಜಕಾರಣದ ಅತಿರೇಕಗಳಿಂದ ಭಾರತೀಯ ಐಕ್ಯಕ್ಕೆ ಬಾಧೆ ತರುವ ಮತ್ತು ಸರಸ್ವತಿಯ ಪವಿತ್ರ ಪೀಠವನ್ನು ಮಲಿನಗೊಳಿಸುವ ಪ್ರವೃತ್ತಿಯನ್ನು ಯಾವ ಭಾಷೆಯವರೇ ತೋರಲಿ ಅದು ಅವರಿಗೂ ನಾಡಿಗೂ ಅಪಶಕುನವೆಂದು ತಿಳಿಯಬೇಕು.
ಸಾಹಿತಿಗಳು ಭಾರತ ಸಂಚಾರ ಮಾಡಬೇಕು?
ಪ್ರಾಂತಪ್ರಾಂತದ ಜನರಲ್ಲಿ ಅನ್ಯೋನ್ಯ ಸ್ನೇಹ ಬೆಳೆಯಲೆಂದೂ ಅವರವರ ಸಾಹಿತ್ಯ ಪರಿಚಯವಾಗಲೆಂದೂ, ಪಿ.ಇ.ಎನ್., ಅಂತರಭಾರತಿ ಸಾಹಿತ್ಯ ಅಕಾಡೆಮಿ ಮುಂತಾದ ಸಂಸ್ಥೆಗಳು ತಂತಮ್ಮ ರೀತಿಯಲ್ಲಿ ಬೆಲೆಯುಳ್ಳ ಕಾರ್ಯ ಮಾಡುತ್ತ ಬಂದಿರುತ್ತವೆ. ಭಾರತೀಯ ಭಾವೈಕ್ಯದ ಮಹತ್ವವನ್ನರಿತ ವಿಚಾರವಂತರು ಮತ್ತು ಕಾರ್ಯಕರ್ತರು ಇಂಥ ಸಂಸ್ಥೆಗಳ ಉತ್ಕರ್ಷಕ್ಕಾಗಿ ಹೆಚ್ಚು ಗಮನ ಕೊಡಬೇಕು. ಇವುಗಳಿಂದ ಪ್ರಕಾಶಿತವಾಗುವ ಪತ್ರಿಕೆ ಪುಸ್ತಕಗಳ ಪ್ರಸಾರವು ಜನರಲ್ಲಿ ಹೆಚ್ಚುವಂತೆ ಪ್ರಯತ್ನಿಸಬೇಕು. ಸಾಹಿತಿಗಳು ಮತ್ತು ಸಾಹಿತ್ಯ ಪ್ರೇಮಿಗಳು, ಇಷ್ಟೇಕೆ ಸಾಧ್ಯವಿದ್ದಷ್ಟು ಭಾರತೀಯರೂ ಭಾರತದ ಎಲ್ಲ ಪ್ರಾಂತಗಳಲ್ಲಿ ಸಂಚಾರ ಮಾಡಿ ಅಲ್ಲಲ್ಲಿಯ ಪ್ರೇಕ್ಷಣೀಯ ಸ್ಥಳಗಳನ್ನು ಕಂಡು ಜನರೊಡನೆ ಸಂಪರ್ಕ ಬೆಳೆಯಿಸಿ ಪ್ರತ್ಯಕ್ಷವಾಗಿ ಭಾರತದರ್ಶನವನ್ನು ಪಡೆಯಬೇಕು. ಹೊಸ ಬಂಧುತ್ವದ ಪರಂಪರೆಯನ್ನು ನಿರ್ಮಿಸಬೇಕು. ತಂತಮ್ಮ ಸರಕಾರಗಳ ನೆರವಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ ಸಂಸ್ಥೆಗಳು ಇತರ ಪ್ರಾಂತಗಳಲ್ಲಿ ತಮ್ಮಲ್ಲಿಯ ಸಾಹಿತಿಗಳ ಸಂಚಾರವನ್ನು ಏರ್ಪಡಿಸಬೇಕು, ಅಲ್ಲಲ್ಲಿಯ ಸಾಹಿತಿಗಳ ಸಂಪರ್ಕವುಂಟಾಗುವಂಥ ಕಾರ್ಯಕ್ರಮಗಳನ್ನು ಯೋಜಿಸಬೇಕು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ
ಕರ್ನಾಟಕ ವಿದ್ಯಾವರ್ಧಕ ಸಂಘ, ತರುವಾಯ ಕನ್ನಡ ಸಾಹಿತ್ಯ ಪರಿಷತ್ತು ಈ ಸಂಸ್ಥೆಗಳು ಅತ್ಯಂತ ಪ್ರತಿಕೂಲವಾದ ಪರಿಸ್ಥಿತಿಯಲ್ಲಿ ಕನ್ನಡಿಗರನ್ನು ಒಂದುಗೂಡಿಸಲು ಮತ್ತು ಅವರ ಆಶೋತ್ತರಗಳನ್ನು ಮೂರ್ತಗೊಳಿಸಲು ಪ್ರಯತ್ನಮಾಡಿದವು. ಕರ್ನಾಟಕ ಪ್ರಾಂತವಾಗಬೇಕೆಂಬುದು ಅವು ಕಂಡ ಹಿರಿಗನಸುಗಳಲ್ಲಿ ಹಿರಿಯದಾಗಿತ್ತು. ಆ ಕನಸು ನನಸಾಗಿ ಕನ್ನಡ ನಾಡು ಒಂದಾಗಿರುವ ಸಂದರ್ಭದಲ್ಲಿ ಈ ಸಂಸ್ಥೆಗಳನ್ನೂ ಇವನ್ನು ಕಟ್ಟಲೆಸಗಿದ ಹಿರಿಯರನ್ನೂ, ಇಂದಿಗೂ ಮನಃಪೂರ್ವಕವಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರನ್ನೂ ನಾವು ಅತ್ಯಂತ ಕೃತಜ್ಞತೆಯಿಂದ ವಂದಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಭಾಗದ ಕನ್ನಡಿಗರ ಮತ್ತು ಸಾಹಿತ್ಯ ಪ್ರೇಮಿಗಳ ಪ್ರಾತಿನಿಧಿಕ ಸಂಸ್ಥೆಯಾಗಿ ಸುಮಾರು ಐವತ್ತು ವರ್ಷಗಳವರೆಗೆ ಅವ್ಯಾಹತವಾಗಿ ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಗಳ ಅಭಿವೃದ್ಧಿ ಕಾರ್ಯವನ್ನು ಮಾಡುತ್ತ ಬಂದಿದೆ. ಅದು ಕೈಗೊಂಡಿರುವ ಅನೇಕ ಕಾರ್ಯಗಳಲ್ಲಿ ಕನ್ನಡ-ಕನ್ನಡ-ನಿಘಂಟು ಚಿರಸ್ಮರಣೀಯವಾದ ಕಾರ್ಯ. ಶಾಸ್ತ್ರಶುದ್ಧವಾದ ತಳಹದಿಯ ಮೇಲೆ ಅದರ ಯೋಜನೆಯನ್ನು ಮಾಡಿ ಸಾಧ್ಯವಾದಷ್ಟು ಮಟ್ಟಿಗೆ ಸರ್ವಸಂಗ್ರಹವೂ ನಿರ್ದಿಷ್ಟವೂ ಆಗುವಂತೆ ಅದನ್ನು ರಚಿಸಲಾಗುತ್ತಿದೆ. ಅದರ ಮೊದಲನೆಯ ಸಂಚಿಕೆ ಬೇಗನೆ ಪ್ರಕಟವಾಗಲಿದೆಯೆಂಬ ನಿರೀಕ್ಷೆಯಿದೆ. ಕನ್ನಡದ ಮೇಲಿನ ಅಕ್ಕರೆಯಿಂದ ಅದಕ್ಕಾಗಿ ಶ್ರಮಿಸುತ್ತಿರುವ ವಿದ್ವಾಂಸರಿಗೂ ಅದರ ಪ್ರಕಟನೆಗಾಗಿ ಧನಸಹಾಯವನ್ನು ಪೂರ್ತಿಯಾಗಿ ನೀಡಿರುವ ಮೈಸೂರು ಸರಕಾರಕ್ಕೂ ಕನ್ನಡಿಗರು ಕೃತಜ್ಞರಾಗಿರಬೇಕು. ತುರ್ತು ಪರಿಸ್ಥಿತಿಯ ಝಳವು ಅದಕ್ಕೆ ತಾಕದಂತೆ, ಎಲ್ಲ ಸಂಚಿಕೆಗಳು ಬೇಗನೆ ಪ್ರಕಟವಾಗುವಂತೆ ಸರಕಾರವು ಎಲ್ಲ ಬಗೆಯ ಸೌಕರ್ಯಗಳನ್ನು ನಿಯತವಾಗಿ ಒದಗಿಸುವುದೆಂದು ನಾವು ಹಾರೈಸೋಣ. ಸಾಹಿತ್ಯ ಪರಿಷತ್ತು ಘಟನಾಬದ್ಧವಾದ, ಅನೇಕ ಹಿರಿಯರ ತ್ಯಾಗಸೇವೆಗಳಿಂದ ಪರಿಪೂತವಾದ, ಕನ್ನಡಿಗರ ಆಶಾಸ್ಥಾನವಾದ ಸಂಸ್ಥೆ. ಅದರ ಉದಾತ್ತವಾದ ಪರಂಪರೆಯನ್ನು ಸಾಗಿಸಿಕೊಂಡು ಹೋಗುವ ಹೊಣೆ ಎಲ್ಲ ಸಾಹಿತ್ಯ ಪ್ರೇಮಿಗಳ ಮೇಲಿದೆ. ಅದರಲ್ಲಿ ನಡೆಯುವ ಯಾವ ಚಟುವಟಿಕೆಯೂ ಉನ್ನತ ಮಟ್ಟದಲ್ಲಿ ನಡೆಯುವುದು ಅವಶ್ಯ. ಅದರ ಲೋಪದೋಷಗಳ ವಿಮರ್ಶೆ ಇರಲಿ, ಘಟನೆಗೆ ಸಂಬಂಧವಾದ ಚರ್ಚೆಯಿರಲಿ ಎಲ್ಲವೂ ಒಂದು ಮಾದರಿಯ ತೂಕದಿಂದ ನಡೆಯಬೇಕು. ಕೊನೆಗೆ ನಿಯಮಾನುಸಾರವಾಗಿ ಕೈಕೊಂಡ ನಿರ್ಣಯಗಳನ್ನು ನಾವೆಲ್ಲರೂ ಅನುಸರಿಸಬೇಕು. ಲೋಕಕ್ಕೆಲ್ಲ ವಿವೇಕವನ್ನು ಹೇಳ ಹೊರಟ ಸಾಹಿತ್ಯಪ್ರೇಮಿಗಳಾದ ನಾವು ಅದಕ್ಕೆ ವಿರುದ್ಧವಾಗಿ ನಡೆದರೆ ಗತಿಯೇನು? ಪರಿಷತ್ತಿನ ಆರ್ಥಿಕಸ್ಥಿತಿ ಎಷ್ಟೂ ಸಮಾಧಾನಕರವಾಗಿಲ್ಲ. ಎರಡು ಕೋಟಿಗೂ ಹೆಚ್ಚಾಗಿರುವ ಕನ್ನಡಿಗರನ್ನು ಪ್ರತಿನಿಧಿಸುವ ಸಾಹಿತ್ಯ ಪರಿಷತ್ತಿಗೆ ಸಾವಿರ ಜನ ಕೂಡ ಸದಸ್ಯರಿಲ್ಲವೆಂದರೆ ಏನು? ಹತ್ತು ಸಾವಿರ ಜನರಾದರೂ ಸದಸ್ಯರಾಗುವಂತೆ ನಾವು ನೀವೆಲ್ಲ ಯತ್ನಿಸಬೇಕು, ಐವತ್ತು ಸಾವಿರವಾದರೂ ವಾರ್ಷಿಕ ಸಹಾಯ ದ್ರವ್ಯ ನೀಡುವಂತೆ ಸರಕಾರವನ್ನು ಪ್ರಾರ್ಥಿಸಬೇಕು.
ಎಲ್ಲ ಪುಸ್ತಕಗಳ ಪಟ್ಟಿ ಪ್ರಕಟನೆ ಆಗಬೇಕು
ಗ್ರಂಥರಚನೆಗೆ ಪೂರ್ವಸಿದ್ಧತೆಯಾಯಿತು, ಅದಕ್ಕೆ ಸಂಸ್ಕಾರವಾಗಿ ಅದು ಪ್ರಕಾಶಿತವೂ ಆಯಿತು ಎಂದು ಇಟ್ಟು ಕೊಳ್ಳೋಣ. ಅದನ್ನು ಬೆಲೆಕೊಟ್ಟು ಕೊಳ್ಳುವುದೆಲ್ಲಿ? ಓದುವರೆಷ್ಟು ಜನ? ಓದಿದ ಮೇಲೆ ಮೆಚ್ಚಿಗೆಯನ್ನೊ ವಿಮರ್ಶೆಯನ್ನೊ ತಿಳಿಸುವವರು ಎಲ್ಲಿದ್ದಾರೆ? ಹಿಂದಿಗಿಂತ ಇಂದು ವಾಚನಾಭಿರುಚಿ ಹೆಚ್ಚಿದೆ. ಗ್ರಂಥಕಾರರಿಗೆ ಕೆಲಮಟ್ಟಿಗೆ ಪ್ರತಿಫಲ ದೊರೆಯುತ್ತದೆ. ಇದನ್ನೆಲ್ಲ ಒಪ್ಪಿಯೂ ಕನ್ನಡಿಗರ ಜನಸಂಖ್ಯೆ, ಓದಬಲ್ಲ ಓದುಗರ ಸಂಖ್ಯೆ ಈ ಮಾನದಿಂದ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಲಿಕ್ಕೆ ಬಾರದು. ಕೆಲವೊಂದು ಸಲ ಯಾವೊಂದು ಪುಸ್ತಕವನ್ನು ಕೊಳ್ಳುವವರು ಕಡಿಮೆ, ಓದುವವರು ಹೆಚ್ಚು, ರಸಜ್ಞರಂತೂ ಶೂನ್ಯ ಎಂಬ ಪರಿಸ್ಥಿತಿಯಿರುತ್ತದೆ. ಅದೂ ಕತೆ, ಕಾದಂಬರಿಯಿದ್ದರೆ ಮಾತ್ರ. ಕವಿತೆಯಿದ್ದರೆ, ಎಲ್ಲಕ್ಕೂ ಶೂನ್ಯವೇ ದೊರೆಯುವ ಪ್ರತಿಫಲ! ನಾಟಕ ಪ್ರಬಂಧಾದಿಗಳು ಇವೆರಡರ ಮಧ್ಯದಲ್ಲಿ ಬಹುಶಃ ಇರುತ್ತವೆ. ಒಟ್ಟಿನಲ್ಲಿ ಬೆಲೆಕೊಟ್ಟು ಪುಸ್ತಕಗಳನ್ನು ಸ್ವಂತಕ್ಕೆ ಸಂಗ್ರಹಿಸುವ ಮತ್ತು ಓದುವ ವಾಚಕವರ್ಗದ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯಬೇಕು. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಒಂದು ಯೋಜನೆಯನ್ನು ಮಾಡಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ಸಾಹಿತ್ಯ ರೂಪದ ಪ್ರಕಾರ ವಿಂಗಡಿಸಿ ಆಯಾ ವರ್ಷದಲ್ಲಿ ಪ್ರಕಟವಾಗಿರುವ ಎಲ್ಲ ಪುಸ್ತಕಗಳ ಪಟ್ಟಿಯನ್ನು ಸಂಕ್ಷಿಪ್ತ ಪರಿಚಯದೊಡನೆ ‘ಕನ್ನಡ ನುಡಿ’ಯಲ್ಲಿ ಪ್ರಕಟಿಸಬೇಕು. ಜೊತೆಗೆ ಒಮ್ಮೆ ಕಾವ್ಯ ಇನ್ನೊಮ್ಮೆ ಕತೆ ಕಾದಂಬರಿ, ಮುಂದೆ ನಾಟಕ, ಕೊನೆಗೆ ಪ್ರಬಂಧಾದಿ ವಾಙ್ಮಯ ಹೀಗೆ ಪ್ರತ್ಯೇಕ ಸಾಹಿತ್ಯ ರೂಪದಲ್ಲಿ ಹಿಂದಿನ ವರುಷದಲ್ಲಿ ಆಗಿರುವ ಪ್ರಗತಿಯನ್ನು, ಎತ್ತಿತೋರಿಸಬೇಕಾದ ಕೃತಿಪರಿಚಯದೊಡನೆ ವಿಮರ್ಶಕರಿಂದ ಬರೆಯಿಸಿ ಪ್ರಕಟಿಸಬೇಕು. ಬೇರೆ ಭಾಷೆಗಳಲ್ಲಿ ಇಂಥ ಕಾರ್ಯ ನಡೆದಿರುತ್ತವೆ. ಇದರಿಂದ ವಾಚನಾಭಿರುಚಿಯಿದ್ದವರು ತಮ್ಮ ವೇದಿಕೆಯ ಪುಸ್ತಕಗಳನ್ನಾಯ್ದುಕೊಂಡು ತಂತಮ್ಮ ಯೋಗ್ಯತಾನುಸಾರವಾಗಿ ಬೆಲೆಕೊಟ್ಟು ಕೊಂಡು ಓದಬಹುದು. ಮನೆಮನೆಯ ವಾಚನಾಲಯಗಳನ್ನು ಸಮೃದ್ಧಗೊಳಿಸಬಹುದು. ಶಾಲೆ ಕಾಲೇಜುಗಳ ಮತ್ತು ಇತರ ಸಂಸ್ಥೆಗಳ ಗ್ರಂಥಾಲಯಗಳಿಗೂ ಇಂಥ ಪರಿಚಯ ಪಟ್ಟಿಗಳಿಂದ ಪ್ರಯೋಜನವಾಗುವುದು. ಸಾಹಿತ್ಯ ಪರಿಷತ್ತಲ್ಲದೆ ಇಂಥ ಸೇವೆಯ ಅಭಿರುಚಿ ಮತ್ತು ಹವ್ಯಾಸವುಳ್ಳ ವ್ಯಕ್ತಿಗಳೂ ಇದನ್ನು ಕೈಕೊಳ್ಳಬಹುದು. ಭಿನ್ನ ಭಿನ್ನ ಪರಿಚಯ ಪಟ್ಟಿಗಳಿಂದ ಆಯ್ಕೆಗೆ ಇನ್ನೂ ಹೆಚ್ಚು ಅವಕಾಶವಿರುತ್ತದೆ.
ಸಮ್ಮೇಳನಗಳು ಮತ್ತು ಗೋಷ್ಠಿಗಳು
ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿವರ್ಷವೂ ಒಂದೆರಡು ಸಾಹಿತ್ಯ ರೂಪಗಳನ್ನು ಕುರಿತು ಗೋಷ್ಠಿಗಳು ಏರ್ಪಡಬೇಕೆಂಬ ಮನೀಷೆ ಬಹುಕಾಲದಿಂದ ವ್ಯಕ್ತವಾಗಿದೆ. ಆದರೆ ಇದಕ್ಕೆ ೨-೩ ತಿಂಗಳ ಸಿದ್ದತೆ ಸಾಲದು, ಹನ್ನೆರಡು ತಿಂಗಳಾದರೂ ಬೇಕು. ಯಾವೊಂದು ಸಮ್ಮೇಳನದ ಕಾಲಕ್ಕೆ ಲೇಖಕರೂ ವಿಮರ್ಶಕರೂ ಸೇರಿ ಮುಂಬರುವ ವರ್ಷದ ಗೋಷ್ಠಿಯ ರೂಪರೇಖೆಯನ್ನು ಗೊತ್ತುಪಡಿಸಿ ಅದರ ಚಾಲಕರನ್ನು ನಿರ್ಧರಿಸಿ ಕಾರ್ಯ ಪ್ರಾರಂಭ ಮಾಡಬೇಕು. ಸಮ್ಮೇಳನದ ಕಾಲಕ್ಕೆ ಎಲ್ಲ ಕನ್ನಡಿಗರಿಗೆ ಮುಕ್ತದ್ವಾರವಿದ್ದ ಕಾರ್ಯಕ್ರಮಗಳು ಎರಡು ದಿನ ನಡೆದು ಮುಗಿದ ಮೇಲೆ ಒಂದು ಸಂಪೂರ್ಣ ದಿನವಾದರೂ ಆಯಾ ಗೋಷ್ಠಿಗೆ ಮೀಸಲಾಗಿರಬೇಕು. ಗೋಷ್ಠಿಯ ನಿಯೋಜಿತ ಅಧ್ಯಕ್ಷರು ಆ ಸಾಹಿತ್ಯರೂಪದಲ್ಲಿ ಅಲ್ಲಿಯವರೆಗಾದ ನಿರ್ಮಿತಿಯ ಅವಲೋಕನ ಮಾಡಬೇಕು, ಕೆಲವರು ಬರೆದು ತಂದ ಪ್ರಬಂಧಗಳನ್ನು ಓದಬೇಕು, ಅವುಗಳ ಮೇಲೆ ಚರ್ಚೆ ನಡೆಯಬೇಕು. ಪ್ರಬಂಧ ವಿಷಯಗಳನ್ನು ಪೂರ್ವಭಾವಿಯಾಗಿ ಸರ್ವಂಕಷವಾಗುವಂತೆ ಪುನರುಕ್ತಿಯಾಗದಂತೆ ಆರಿಸಿ ಸಾಕಷ್ಟು ಮುಂಚಿತವಾಗಿ ಲೇಖಕರಿಗೆ ತಿಳಿಸಿರಬೇಕು. ಗೋಷ್ಠಿಯ ಫಲಶ್ರುತಿಯೆಂದು ಅಧ್ಯಕ್ಷರ ಅವಲೋಕನದೊಂದಿಗೆ ಎಲ್ಲ ಪ್ರಬಂಧಗಳನ್ನಾಗಲಿ ಅವುಗಳ ಸಾರವನ್ನಾಗಲಿ ಪುಸ್ತಕರೂಪದಲ್ಲಿ ಪ್ರಕಟಿಸಬೇಕು. ಸಾಹಿತ್ಯ ಸಮ್ಮೇಳನಗಳು ಇಂತ ಗೋಷ್ಠಿಯೊಡನೆ ಜರಗುವುದಾದರೆ ಸಾಹಿತಿಗಳೂ ಸಹೃದಯರೂ ಸಮ್ಮೇಳನಗಳಿಗೆ ಹೆಚ್ಚು ಹೆಚ್ಚಾಗಿ ಪ್ರೇಮದಿಂದಲೂ ಆಸಕ್ತಿಯಿಂದಲೂ ಬರುವರೆಂದು ನೀರಿಕ್ಷಿಸಲು ಆಸ್ಪದವುಂಟಾಗುತ್ತದೆ.
Tag: Kannada Sahitya Sammelana 44, Ram.Shree. Mugali, Ranganatha Sreenivasa Mugali
೪೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕೆ.ಜಿ. ಕುಂದಣಗಾರ
ಕನ್ನಡ ಸಂಶೋಧನೆ, ಜೈನ ಸಾಹಿತ್ಯ, ವೀರಶೈವ ಸಾಹಿತ್ಯಗಳಲ್ಲಿ ಅದ್ವಿತೀಯ ಪಂಡಿತರಾಗಿದ್ದ ಕೆ. ಜಿ. ಕುಂದಣಗಾರರು ಗೋಕಾಕ ತಾಲ್ಲೂಕಿನ ಕೌಜಲಗಿ ಗ್ರಾಮದಲ್ಲಿ ಗಿರಿಮಲ್ಲಪ್ಪ-ಶಾಕಾಂಬರಿ ದಂಪತಿಗಳಿಗೆ ಮೂರನೇ ಮಗನಾಗಿ ೧೪-೮-೧೮೮೫ರಲ್ಲಿ ಜನಿಸಿದರು. ಬೆಳಗಾವಿ ಧಾರವಾಡಗಳಲ್ಲಿ ಶಾಲಾ ಶಿಕ್ಷಣ ಪೂರೈಸಿದರು. ೧೯0೯ರಲ್ಲಿ ಮೆಟ್ರಿಕ್ ಮುಗಿಸಿದರು. ೧೯೧೯ರಲ್ಲಿ ಬಿ.ಎ. ಪದವಿಧರರಾದ ಮೇಲೆ ೧೯೨೫ರಲ್ಲಿ ಎಂ.ಎ. ಪದವೀಧರರಾದರು.
ಗಳಿಕೆಯೊಂದಿಗೆ ಕಲಿಕೆ ಎಂಬಂತೆ ಶಿಕ್ಷಕರಾಗಿದ್ದುಕೊಂಡೇ ಬಿ.ಎ. ಮುಗಿಸಿದ ಅವರು ಎಂ.ಎ. ಮಾಡಿದ ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿ ೧೯೨೭ರಲ್ಲಿ ಕೆಲಸದಿಂದ ಬಿಡುಗಡೆ ಹೊಂದಿದರು. ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಪ್ರಾಚ್ಯವಸ್ತು ವಿಭಾಗದಲ್ಲಿದ್ದುಕೊಂಡೇ ಸಂಶೋಧನೆ, ಕನ್ನಡ ವಿಭಾಗ ಬೆಳೆಸುವ ಕಾರ್ಯ ಮಾಡಿದರು. ೧೯೪೮ರಲ್ಲಿ ನಿವೃತ್ತರಾದರು.
ಮುಂಬೈ, ಕರ್ನಾಟಕ ವಿಶ್ವವಿದ್ಯಾಲಯಗಳ ಸೆನೆಟ್ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿಎಚ್. ಡಿ. ಮಾರ್ಗದರ್ಶಕರಾಗಿದ್ದರು. ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆಯ ಸ್ಥಾಪನೆಗೆ ಶ್ರಮಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಂಪಾದಕ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಕೊಲ್ಲಾಪುರದಲ್ಲಿ ಕರ್ನಾಟಕ ಸಂಘ ಸ್ಥಾಪಿಸಿದರು. ಬ್ರಹ್ಮಪುರಿ ಪಂಚಗಂಗಾ ತೀರಗಳಲ್ಲಿ ಉತ್ಖನನ ಕೈಗೊಂಡಿದ್ದರು. ನಾಣ್ಯಶಾಸ್ತ್ರದ ವಿಚಾರಗೋಷ್ಠಿಗಳಲ್ಲಿ ಅಪೂರ್ವ ಪ್ರಬಂಧಗಳನ್ನು ಮಂಡಿಸಿದ್ದರು.
೧೯೬೨ರಲ್ಲಿ ಗದುಗಿನಲ್ಲಿ ನಡೆದ ೪೩ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನವನ್ನು ಇವರು ಅಲಂಕರಿಸಿದ್ದರು. ಮುಂಬೈಯಲ್ಲಿ ೧೯೪೬ರಲ್ಲಿ ನಡೆದ ಅಖಿಲ ಭಾರತ ಓರಿಯಂಟಲ್ ಕಾನ್ಫರೆನ್ಸ್ನಲ್ಲಿ ಕನ್ನಡ – ದ್ರಾವಿಡ ವಿಭಾಗದ ಗೋಷ್ಠಿಯ ಅಧ್ಯಕ್ಷರಾಗಿದ್ದರು.
ಸಂಶೋಧನಾತ್ಮಕ, ಐತಿಹಾಸಿಕ, ಪ್ರಾಚೀನ ಕೃತಿಗಳ ಸಂಪಾದನೆಯಲ್ಲಿ ಎತ್ತಿದ ಕೈ ಕುಂದಣಗಾರರದು. ಅವರ ಹತ್ತಾರು ಕೃತಿಗಳು ಅನುಪಲಬ್ಧ. ಉಪಲಬ್ಧ ಕೃತಿಗಳಲ್ಲಿ ಕೆಲವು ಹೀಗಿವೆ :
ಪಂಪನ ಆದಿಪುರಾಣ (೧೯೫೩ ಸಂಪಾದನೆ), ಪೂರ್ವಪುರಾಣಂ (೧೯೪೩), ಕುಮುದೇಂದು ರಾಮಾಯಣ (೧೯೩೬), ಲೀಲಾವತಿ ಪ್ರಬಂಧಂ (೧೯೪೬), ಹರಿಹರದೇವ ಪ್ರಶಸ್ತಿ(೧೯೩೭), ಮಹಾದೇವಿಯಕ್ಕ (ಚರಿತ್ರೆ) ೧೯೩೭, ಗದ್ಯಮಂಜರಿ (ಪಠ್ಯ ೧೯೫೪), ಚಿನ್ಮಯಿ ಚಿಂತಾಮಣಿ (೧೯೩0).
ಕುಂದಣಗಾರರು ೨೨-೮-೧೯೬೫ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೪೩
ಅಧ್ಯಕ್ಷರು: ಕೆ.ಜಿ. ಕುಂದಣಗಾರ
ದಿನಾಂಕ ೨೭,೨೮,೨೯ ಡಿಸೆಂಬರ್ ೧೯೬೧
ಸ್ಥಳ : ಗದಗ
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸಾಹಿತ್ಯ ಸಂಸ್ಕೃತಿಗಳ ಸಂವರ್ಧನೆಗೆ ಮೈವೆತ್ತ ಸಂಸ್ಥೆಗಳಲ್ಲಿ ಹಿರಿಯ ಸಂಸ್ಥೆ. ಅದು ತನ್ನ ಪಾಲಿನ ಕರ್ತವ್ಯವನ್ನು ಕಾಲಕಾಲಕ್ಕೆ ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುತ್ತ ಬಂದಿದೆ. ಏಕೈಕ ಕರ್ನಾಟಕ ಅಸಾಧ್ಯವೆಂದು ಅನೇಕರ ಮನದಲ್ಲಿದ್ದಾಗ, ಪರಿಷತ್ತು ಅದರ ಕನಸು ಕಂಡು, ಕೊನೆಗೆ ಅದು ನಿರ್ಮಾಣಗೊಂಡುದನ್ನೂ ಕಂಡಿತು! ನಾಡಿನ ಪುಣ್ಯದ ಪೂರ್ವದಿಂಗತದಲ್ಲಿ ನವರಾಜ್ಯಭಾನು ಉದಯವಾದನು. ರಾಜ್ಯೋದಯವಾದ ಮೇಲೆ ಪರಿಷತ್ತು ತನ್ನ ಕರ್ತವ್ಯವನ್ನು ಇನ್ನೂ ಹೆಚ್ಚು ದಕ್ಷತೆಯಿಂದ ನೆರೆವೇರಿಸುತ್ತಿದೆ ಎಂಬುದಕ್ಕೆ ಅದು ಕೈಕೊಂಡು ಕೆಳಗಿನ ಯೋಜನೆಗಳೇ ಸಾಕ್ಷಿ.
ಕನ್ನಡ-ಕನ್ನಡ ಕೋಶ
ಕನ್ನಡ ವಾಙ್ಮಯದ ಅಭ್ಯಾಸಕ್ಕೆ ಒಂದು ಸಮರ್ಪಕ ಕೋಶದ ಅವಶ್ಯಕತೆ ವಿಶೇಷವಾಗಿದೆಯೆಂದು ಪಂಡಿತರೆಲ್ಲರ ನಿದರ್ಶನಕ್ಕೆ ಬಂದ ಮಾತು. ರೆ. ಕಿಟಲ್ ಅವರ ಕನ್ನಡ-ಇಂಗ್ಲಿಷ್ ಕೋಶ, ಭಾರತೀಯ ಭಾಷೆಗಳಲ್ಲಿದ್ದ ಕೋಶಗಳಲ್ಲಿಯೇ ಅತ್ಯಂತ ಗಣನೀಯವಾದುದಾಗಿದ್ದರೂ ಅದು ಇನ್ನೂ ಅಸಮರ್ಪಕವಾಗಿದೆ. ಕಿಟೆಲ್ಲರ ಕಾಲಕ್ಕೆ ಅನೇಕ ಕನ್ನಡ ಗ್ರಂಥಗಳಿನ್ನೂ ಪ್ರಕಟವಾಗಿರಲಿಲ್ಲ. ಉದಾಹರಣೆಗಾಗಿ, ಪಂಪಭಾರತ, ವಚನ ವಾಙ್ಮಯದಂತಹ ಸಾಹಿತ್ಯ ಕೃತಿಗಳನ್ನು ಅಳವಡಿಸಿಕೊಳ್ಳುವ ಯೋಗ ಆ ಕಾಲಕ್ಕೆ ಬಂದಿರಲಿಲ್ಲ. ಕಳೆದ ೭೫ ವರುಷಗಳ ಅವಧಿಯಲ್ಲಿ ಅನೇಕ ಕನ್ನಡದ ಉದ್ಗ್ರಂಥಗಳು ಬೆಳಕುಕಂಡಿವೆ; ಭಾಷಾಶಾಸ್ತ್ರದ ಪ್ರಗತಿಯಾಗಿದೆ. ಆದುದರಿಂದ ಆಧುನಿಕ ತತ್ತ್ವಗಳನ್ನು ಅಳವಡಿಸಿಕೊಂಡು ಶಬ್ದಗಳ ನಿಷ್ಪತ್ತಿ, ಅರ್ಥವಿಶೇಷ, ಪ್ರಯೋಗ ಮೊದಲಾದವುಗಳನ್ನು ಒಳಗೊಂಡ ಒಂದು ಕೋಶವನ್ನು ನಿರ್ಮಿಸಬೇಕೆಂಬ ಯೋಜನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಎರಡು ದಶಕಗಳ ಹಿಂದೆಯೇ ಕೈಕೊಂಡಿತು. ಆ ಯೋಜನೆ ಮೊನ್ನೆ ಮೊನ್ನೆಯವರೆಗೆ ಬಹು ಮಂದಗತಿಯಿಂದ ಸಾಗಿದ್ದಿತು. ಪರಿಷತ್ತು ವಿಶ್ವ ಪ್ರಯತ್ನ ಮಾಡಿ ಈ ಕೋಶದ ಮಹತ್ವವನ್ನು ಸರಕಾರದ ಅವಗಾಹನೆಗೆ ತಂದುಕೊಟ್ಟು, ಅದರಿಂದ ೧೫ ಲಕ್ಷರೂಪಾಯಿಗಳ ಸಹಾಧನವನ್ನು ಪಡೆದಿದೆ. ಕೋಶದ ಕೆಲಸ ಈಗ ಬಹುವೇಗದಿಂದ ನಡೆದಿದೆ. ನಾಡಿನ ನಾನಾ ಭಾಗದ ಗಣ್ಯವಿದ್ವಾಂಸರನ್ನು ಕೋಶದ ಸಂಪಾದಕ-ಮಂಡಲಿಯಲ್ಲಿ ಸೇರಿಸಿಕೊಂಡು, ಕೋಶದ ಕಾರ್ಯಕ್ರಮವನ್ನು ಶಾಸ್ತ್ರೀಯವಾಗಿಯೂ ತೀವ್ರವಾಗಿಯೂ ಮುಂದುವರೆಸಿರುವುದು. ೫ ಲಕ್ಷದಷ್ಟು ಪಟ್ಟಿಕೆಗಳು ಈಗಾಗಲೇ ಸಿದ್ಧವಾಗಿವೆ. ಪ್ರಕಟವಾಗಿರುವ ಪ್ರತಿಯೊಂದು ಹಳಗನ್ನಡ ಗ್ರಂಥವನ್ನೂ ಅಚ್ಚಾಗದೆ ಇರುವ ಅನೇಕ ತಾಳೆಯೋಲೆಯ ಗ್ರಂಥಗಳನ್ನೂ ಸಹಸ್ರಾರು ಶಾಸನಗಳನ್ನೂ ಇದಕ್ಕಾಗಿಯೇ ಉಪಯೋಗಿಸಿಕೊಂಡಿರುವದು ಈ ಕೋಶದ ವೈಶಿಷ್ಟ್ಯ. ಈ ಕೋಶಕ್ಕಾಗಿಯೇ ಹೊಸ ಅಚ್ಚುಕೂಟವೊಂದನ್ನು ಪರಿಷತ್ತು ಕೊಂಡಿದೆ. ಮೊದಲಿನ ೯೬ ಪುಟಗಳು ಈ ಮಾರ್ಚದೊಳಗಾಗಿಯೇ ತಪ್ಪದೆ ಅಚ್ಚಾಗಲಿವೆ. ಮುಂದಿನ ಕಾರ್ಯ ಭರದಿಂದ ನಡೆದು ೫000 ಪುಟಗಳ ನಾಲ್ಕು ಸಂಪುಟಗಳು ಬಹುಬೇಗನೆ ಪ್ರಕಟವಾಗಲಿರುವುವು. ಇದಕ್ಕಾಗಿ ವಿದ್ಯಾಸಚಿವರಾದ ಶ್ರೀ ಗಣಮುಖಿ ಅಣ್ಣಾರಾಯರನ್ನು ಪರಿಷತ್ತಿನ ಅಧ್ಯಕ್ಷರಾದ ಪಂಡಿತರತ್ನಂ ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳನ್ನು, ಕೋಶ ಸಮಿತಿಯ ಸಂಪಾದಕ ಮಂಡಲಿಯನ್ನು, ಪರಿಷತ್ತಿನ ಕಾರ್ಯಕಾರಿ ಮಂಡಳಿಯನ್ನು, ಇದಕ್ಕೆ ಸಂಬಂಧಪಟ್ಟ ಇನ್ನಿತರ ಸರಕಾರಿ ಅಧಿಕಾರಿಗಳನ್ನೂ, ಹೃತ್ಪೂವರ್ಕವಾಗಿ ಅಭಿನಂದಿಸುತ್ತೇನೆ.
ಗ್ರಂಥ ಪ್ರಕಟನೆ
ಕರ್ನಾಟಕ ಕವಿಚರಿತೆಗಳು ನಮ್ಮ ಸಾಹಿತ್ಯದ ಅಮೌಲ್ಯ ಕೃತಿಗಳು. ಕಳೆದ ಅನೇಕ ವರ್ಷಗಳಿಂದ ಅವು ದೊರೆಯದಾಗಿದ್ದುವು. ಅದರಿಂದ ಸಾಹಿತ್ಯಾಭ್ಯಾಸಿಗಳಿಗೂ ಸಂಶೋಧಕರಿಗೂ ವಿಶೇಷ ತೊಂದರೆಯಾಗಿದ್ದಿತು. ಪರಿಷತ್ತು ಈ ಕೊರತೆಯನ್ನು ಪೂರೈಸಲು ಮುಂದೆ ಬಂದು ಕರ್ನಾಟಕ ಕವಿಚರಿತೆಗಳನ್ನು ಪ್ರಕಟಿಸುವ ಯೋಜನೆಗೆ ಅಣಿಯಾಗಿದೆ. ಈಗಾಗಲೇ ಕವಿಚರಿತೆಯ ಪ್ರಥಮ ಸಂಪುಟ ಪ್ರಕಟವಾಗಿದೆ. ಅದು ಮೊದಲಿನ ಕವಿಚರಿತೆಯ ವಿಷಯದೊಡನೆ ಈಚೆಗೆ ಬಂದ ಹೊಸ ವಿಷಯಗಳನ್ನು ಒಳಗೊಂಡಿದೆ. ದ್ವಿತೀಯ ಸಂಪುಟವೂ ಅಚ್ಚಿನಲ್ಲಿದೆ. ಇದಲ್ಲದೆ ಪರಿಷತ್ತು ವಿವೇಕಚಿಂತಾಮಣಿ, ಸೂಕ್ತಿಸುಧಾವರ್ಣದಂತಹ ಉದ್ಗ್ರಂಥಗಳನ್ನು ಪ್ರಕಟಿಸುವ ಒಂದು ಯೋಜನೆಯನ್ನಿಟ್ಟು ಕೊಂಡಿರುವುದು ಸ್ತುತ್ಯವಾಗಿದೆ. ಈ ಕಾರ್ಯವನ್ನು ಅದು ತೀವ್ರಗೊಳಿಸಲಿ.
ಸಾಹಿತ್ಯ ಸಮ್ಮೇಳನಗಳು
ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ನಾನಾ ಭಾಗಗಳಲ್ಲಿ ೪೨ನೇ ಸಾಹಿತ್ಯ ಸಮ್ಮೇಳನಗಳನ್ನು ಜರುಗಿಸಿ ಈಗ ೪೩ನೆಯ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗಿ ನಿಂತಿದೆ. ಹಿಂದೆ ಕನ್ನಡಿಗರು ಇನ್ನೂ ಜಾಗೃತವಾಗಿರದ ಕಾಲದಲ್ಲಿ ಅವರನ್ನು ಬಡಿದೆಬ್ಬಿಸುವ ಮಹತ್ಕಾರ್ಯವನ್ನು ಸಮ್ಮೇಳನಗಳು ಮಾಡುತ್ತಿದ್ದವು. ಉತ್ಸಾಹಿ ಯುಗದಲ್ಲಿ, ಸಂಭ್ರಮ, ಸನ್ಮಾನ, ಮೆರವಣಿಗೆ ಮುಂತಾದುವೆಲ್ಲ ನಡೆದುವು. ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಮಹನೀಯರನ್ನು ಗೌರವಿಸಿ ಅವರನ್ನು ಸತ್ಕರಿಸಿದುದೂ ಆಯಿತು. ಸಮ್ಮೇಳನಗಳನ್ನು ನೆರವೇರಿಸುವುದು ಒಂದು ದೃಷ್ಟಿಯಿಂದ ನೋಡಿದರೆ ಬಹು ಸುಲಭವಾದ ಕಾರ್ಯವಲ್ಲ. ಅದಕ್ಕಾಗಿ ಸಹಸ್ರಾರು ರೂಪಾಯಿಗಳನ್ನು ವ್ಯಯಮಾಡಬೇಕಾಗುತ್ತದೆ; ಕಾರ್ಯಕರ್ತರಲ್ಲಿ ಸಂಘಟನೆ ಮೂಡಬೇಕಾಗುತ್ತದೆ. ಪರಿಷತ್ತು ಹಾಗೂ ಸ್ವಾಗತ ಸಮಿತಿಗಳೂ ೪-೬ ತಿಂಗಳೂ ಇದೇ ಕಾರ್ಯವನ್ನು ಮಾಡಬೇಕಾಗುತ್ತದೆಯೆಂದರೂ ಸಲ್ಲುವುದು. ಸಂಭ್ರಮ ಸನ್ಮಾನಗಳ ಹೊರತಾಗಿ ಇದರ ಫಲಶೃತಿ ಏನು ಎಂಬುದನ್ನು ವಿಚಾರಿಸುವ ಕಾಲ ಈಗ ಸಂಪ್ರಾಪ್ತವಾಗಿದೆ. ಇದು ಬುದ್ಧಿಮತ್ತೆಯ ಯುಗ. ಭಾವನಾಪ್ರಧಾನವಾದ ಉತ್ಸವ ಯುಗ ನಿಂತುಹೋಗಿದೆ. ಇನ್ನು ಮುಂದೆ ನಮ್ಮ ಸಮ್ಮೇಳನಗಳ ಬೌದ್ಧಿಕಮಟ್ಟ ಮೇಲಕ್ಕೇರಬೇಕು. ನಮ್ಮ ನಾಡಿನಲ್ಲಿ ಸಂಶೋಧನೆ, ಲಲಿತವಾಙ್ಮಯ ಇವು ಯಾವ ಯಾವ ದಿಸೆಯಲ್ಲಿ ನಡೆದಿವೆಯೆಂಬುದರ ಮಾಪನವಾಗಿ, ಅವುಗಳಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡುವ ಯೋಜನೆ ಸಮ್ಮೇಳನಗಳ ಕಾಲದಲ್ಲಿ ನಡೆಯಬೇಕು. ಸಂಶೋಧಕರು, ಬರೆಹಗಾರರು ಸುಸಂಘಟಿತವಾಗಿ ನಮ್ಮ ಜ್ಞಾನದ ಪ್ರತಿಯೊಂದು ಕ್ಷೇತ್ರದ ಸಮೀಕ್ಷೆಯನ್ನು ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ೨ ವರ್ಷಕ್ಕೊಮ್ಮೆ ನಡೆಯುತ್ತಿರುವ ಅಖಿಲ ಭಾರತ ಪ್ರಾಚ್ಯ ಸಮ್ಮೇಳನವನ್ನು ನೆನಪಿಗೆ ತಂದುಕೊಳ್ಳಬಹುದು ಎರಡು ವರ್ಷಗಳ ಪೂರ್ವದಲ್ಲಿಯೇ ಮುಂದಿನ ಸಮ್ಮೇಳನದ ಸ್ಥಳ ಅಧ್ಯಕ್ಷರ ಆಯ್ಕೆ ಯಾವ ಗಲಭೆಯಿಲ್ಲದೆ ಆಗಿಹೋಗುತ್ತದೆ. ಸಮ್ಮೇಳನದ ಅಂಗವಾಗಿ ನಡೆದು. ಇಂಥ ಶಾಖೆಗಳನ್ನು ಅವುಗಳ ಅಧ್ಯಕ್ಷರನ್ನೂ ಭಾಷಣಕಾರರನ್ನೂ ಮೊದಲೇ ಗೊತ್ತುಮಾಡಿರುತ್ತಾರೆ. ಎರಡು ವರ್ಷಗಳ ಅಭ್ಯಾಸ ಸಮೀಕ್ಷಣಗಳ ಬಲದಿಂದ ಆ ಸಮ್ಮೇಳನವು ಕೆಲಮಟ್ಟಿಗೆ ಶಾಶ್ವತವಾದ ಫಲಗಳನ್ನು ಒದಗಿಸಿಕೊಡುತ್ತದೆ. ನಮ್ಮ ಸಾಹಿತ್ಯ ಸಮ್ಮೇಳನಗಳೂ ಹೀಗೆ ನೆರವೇರಬಹುದೇ? ಸಂಬಂಧಪಟ್ಟವರು ಸಮಾಲೋಚನೆ ಮಾಡಿ ಸೂಕ್ತ ಕ್ರಮಗಳನ್ನು ಕೈಕೊಂಡರೆ ಈಗ ಅನವಶ್ಯ ಏಳುತ್ತಿರುವ ಯಾವ ಗಲಭೆಗಳಿಗೂ ಮುಂದೆ ಅಸ್ಪದವಾಗಲಿಕ್ಕಿಲ್ಲ ವೆನಿಸುತ್ತದೆ.
Tag: Kannada Sahitya Sammelana 43, K.G. Kundanagara
೪೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಅ.ನ. ಕೃಷ್ಣರಾಯರು
ಕಾದಂಬರಿ ಸಾರ್ವಭೌಮರೆನಿಸಿದ್ದ ಕನ್ನಡದ ಜನಪ್ರಿಯ ಕಾದಂಬರಿಕಾರ ಅನಕೃ ಅವರು (ಅರಕಲಗೂಡು ನರಸಿಂಗರಾವ್ ಕೃಷ್ಣರಾವ್) ನರಸಿಂಗರಾವ್- ಅನ್ನಪೂರ್ಣಮ್ಮ ದಂಪತಿಗಳಿಗೆ ೯-೫-೧೯0೮ರಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿ, ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು.
ಬರಹ ಮಾಡಿಯೇ ಬದುಕುವ ಛಲದ ಅನಕೃ ಅವರು ಪತ್ರಿಕಾಕ್ಷೇತ್ರಕ್ಕೆ ಪ್ರವೇಶಿಸಿ ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ನಡೆಸಿದರು. ೧೯೪೩-೪೪ರಲ್ಲಿ ಪ್ರಗತಿಶೀಲ ಸಾಹಿತ್ಯದ ಚಳವಳಿಯಲ್ಲಿ ನಿರತರಾದರು. ಬಿಎಂಶ್ರೀ ಅವರ ಕಾಲದಲ್ಲಿ ಕನ್ನಡ ನುಡಿ ಸಂಪಾದಕರಾಗಿ ದಿವಾಕರರ ಹಿಂದಿ ಪ್ರತಿಪಾದನೆಯನ್ನು ವಿರೋಧಿಸಿ ಪತ್ರಿಕೆಯನ್ನು ತೊರೆದರು.
ಕನ್ನಡ ಚಳವಳಿ ನೇತಾರರಾಗಿ ರಾಮಮೂರ್ತಿ ಅವರೊಡನೆ ಸೇರಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸಿ ಕನ್ನಡಾಭಿಮಾನ ಬೆಳೆಸಿದರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರಾದರು. ತಮ್ಮ ಅದ್ಭುತ ವಾಗ್ವೈಖರಿಯಿಂದ ನಾಡಿನಲ್ಲೆಲ್ಲಾ ಜನಪ್ರಿಯರಾದರು. ಗೃಹಲಕ್ಷ್ಮೀ ಕಾದಂಬರಿಯಿಂದ ಮೊದಲ್ಗೊಂಡು ಸುಲಭ ಕೈ ಹೊತ್ತಿಗೆಗಳ ಮೂಲಕ ಕನ್ನಡ ಓದುಗರನ್ನು ಹೆಚ್ಚಿಸಿದ್ದು ಇವರ ಅಗ್ಗಳಿಕೆ ಆಗಿದೆ.
ಮೈಸೂರು ವಿಶ್ವವಿದ್ಯಾಲಯ ೧೯೭0ರಲ್ಲಿ ಗೌರವ ಡಾಕ್ಟರೇಟ್ ಅನ್ನು ಅನಕೃ ಅವರಿಗೆಗೆ ನೀಡಿ ಸನ್ಮಾನಿಸಿತು. ಸಾಹಿತ್ಯ ಪರಿಷತ್ತು ೧೯೬0ರಲ್ಲಿ ಮಣಿಪಾಲದಲ್ಲಿ ನಡೆದ ೪೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿತು.
ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟ್ಯ, ನಾಟಕ ಕಲೆಗಳಲ್ಲಿ ಅಪಾರ ಒಲವು, ವಿಮರ್ಶಾ ಶಕ್ತಿ ಇದ್ದ ಅನಕೃ ಅವರು ಅವೆಲ್ಲ ವಿಷಯಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ೧00ಕ್ಕೂ ಹೆಚ್ಚಿನ ಕಾದಂಬರಿಗಳನ್ನು ರಚಿಸಿ ಕಾದಂಬರಿ ಸಾರ್ವಭೌಮರೆನಿಸಿದವರು ಅನಕೃ ಅವರು. ನಟಸಾರ್ವಭೌಮವೆಂಬ ಬೃಹತ್ಕಾದಂಬರಿಯನ್ನು, ಸಾಹಿತ್ಯ ಮತ್ತು ಕಾಮಪ್ರಚೋದನೆಯೆಂಬ ವಿಮರ್ಶಾ ಕೃತಿಯನ್ನು ಬರೆದಿದ್ದಾರೆ. ಕನ್ನಡ ಕುಲರಸಿಕರು(ಜೀವನ ಚರಿತ್ರೆ), ಬರಹಗಾರನ ಬದುಕು (ಆತ್ಮಕಥೆ), ಬಣ್ಣದ ಬೀಸಣಿಗೆ, ಮದುವೆಯೋ ಮನೆಹಾಳೋ (ನಾಟಕಗಳು), ಗಾರ್ಕಿಯ ಕಥೆಗಳು, ಸ್ಟೋರಿ ಆಫ್ ಇಂಡಿಯಾ (ಅನುವಾದಗಳು), ಕರ್ನಾಟಕ ಕಲಾವಿದರು ಮುಂತಾದ ೨00ಕ್ಕೂ ಮೀರಿ ಕೃತಿಗಳನ್ನು ರಚಿಸಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉಜ್ವಲನಕ್ಷತ್ರವೆನಿಸಿದ್ದ ಅನಕೃ ಅವರು ೪-೭-೧೯೭೧ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೪೨
ಅಧ್ಯಕ್ಷರು: ಅ.ನ.ಕೃಷ್ಣರಾಯ
ದಿನಾಂಕ ೨೭, ೨೮, ೨೯ ಡಿಸೆಂಬರ್ ೧೯೬0
ಸ್ಥಳ : ಮಣಿಪಾಲ
ಸಮ್ಮೇಳಾನಧ್ಯಕ್ಷರ ಅಧಿಕಾರ
ಸಾಹಿತ್ಯ ಸಮ್ಮೇಳನದ ಸ್ಥಾನಬಲದಿಂದ ನಾನು ಕನ್ನಡನಾಡಿನ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದೆಂದೂ, ಕನ್ನಡ ಸಾಹಿತ್ಯ ಪರಿಷತ್ತನ್ನು ಪುನರುಜ್ಜೀವನಗೊಳಿಸಬಹುದೆಂದೂ ತಾವು ದೃಢವಾಗಿ ನಂಬಿದ್ದೀರಿ. ಸಮ್ಮೇಳನಾಧ್ಯಕ್ಷರ ಸ್ಥಾನ ಅಲಂಕಾರಸ್ಥಾನವಾಗಿದೆ. ಪರಿಷತ್ತಿನ ಘಟನೆಯಂತೆ ಸಮ್ಮೇಳನಾಧ್ಯಕ್ಷರಿಗೆ ಯಾವ ಅಧಿಕಾರವೂ ಇಲ್ಲ. ಸಮ್ಮೇಳಾನಧ್ಯಕ್ಷರಿಂದ ಯಾವುದಾದರೂ ಕೆಲಸವಾಗಬೇಕಾದಲ್ಲಿ ಪರಿಷತ್ತಿನ ಘಟನೆಯನ್ನು ಮಾರ್ಪಡಿಸುವುದು ಅಗತ್ಯ. ಸ್ಥಾನಬಲದಿಂದಲ್ಲದಿದ್ದರೂ ವ್ಯಕ್ತಿಬಲದಿಂದ ನಾನು ಕನ್ನಡ ನಾಡು ನುಡಿಗಳಿಗೆ ಸಲ್ಲಿಸುತ್ತ ಬಂದಿರುವ ಸೇವೆಯನ್ನು ಇನ್ನು ಮುಂದೆಯೂ ಸಲ್ಲಿಸುತ್ತೇನೆ.
ಕನ್ನಡ ನಿಘಂಟು ಕೆಲಸ ಆರಂಭವಾಗಿದ್ದು ೨೭-೧-೧೯೪೪ರಲ್ಲಿ. ಈಗ್ಗೆ ಹದಿನಾರು ವರ್ಷಗಳ ಕೆಳಗೆ: ಸಂಪಾದಕ, ಮಂಡಳಿ ೧೬ ವರ್ಷಗಳಲ್ಲಿ ೧೫೩ ಪುಟಗಳನ್ನು ಹಸ್ತಪ್ರತಿಸಿದ್ಧಗೊಳಿಸಿದೆ. ಸುಮಾರು ಐದು ಸಾವಿರ ಪುಟಗಳಾಗುವ ಈ ನಿಘಂಟಿಗೆ ಹದಿನೈದು ಲಕ್ಷ ರೂಪಾಯಿಗಳು ವೆಚ್ಚವಾಗುವುದೆಂದು ಅಂದಾಜು ಮಾಡಲಾಗಿದೆ. ಸರ್ಕಾರ ಈಗಾಗಲೇ ರೂ. ೧,೨೪,೭೫0 ವ್ಯಯ ಮಾಡಿದೆ. ‘ಆವಶ್ಯಕವಾದ ಧನಸಹಾಯ ತಕ್ಕ ಪ್ರಮಾಣದಲ್ಲಿ ಇನ್ನೂ ಒದಗದಿರುವುದೇ ಕೆಲಸ ನಿಧಾನವಾಗಿರುವುದಕ್ಕೆ ಕಾರಣ’ವೆಂದು ಕನ್ನಡ ಕೋಶದ ಸಂಪಾದಕರು ಅಭಿಪ್ರಾಯಪಡುತ್ತಾರೆ.
ಕನ್ನಡ ಶಬ್ದಕೋಶಕ್ಕಾಗಿ ಅನೇಕ ವರ್ಷಗಳು ಶ್ರಮಿಸಿದ ಪಂಡಿತರು ಸಂಪಾದಕ ಮಂಡಳಿಯಲ್ಲಿಲ್ಲ. ಸಂಪಾದಕ ಮಂಡಳಿಯಲ್ಲಿರುವ ಕೆಲವು ಸದಸ್ಯರು ಒಂದೇ ಒಂದು ಸಭೆಗೂ ಬರುವ ಕೃಪೆ ತೋರಿಲ್ಲ. ಸರ್ಕಾರದ ಘನ ಯೋಜನೆಗಳು ಶ್ರದ್ಧೆ, ದಕ್ಷತೆಯ ಅಭಾವದಿಂದ ವಿರೂಪಗೊಳ್ಳುತ್ತಿರುವುದು ಶೋಚನೀಯ.
ನಿಘಂಟಿನ ಸಂಪಾದಕ ಮಂಡಳಿಯೂ ಪುನರ್ವ್ಯವಸ್ಥೆಗೊಳ್ಳಬೇಕು. ಈ ಕೆಲಸ ತೀವ್ರವಾಗಿ ಮುಗಿದು, ಕನ್ನಡ ನಿಘಂಟು ಬೇಗ ಕನ್ನಡಿಗರ ಕೈಸೇರುವಂತಾಗಲು ಸರ್ಕಾರ ಹಣವನ್ನೊದಗಿಸಬೇಕು.
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ
ಸಾಹಿತ್ಯ ಪರಿಷತ್ತು ಕನ್ನಡನಾಡಿನ ಪ್ರಪ್ರಥಮ ಸಾಹಿತ್ಯ ಸಂಸ್ಕೃತಿ ಸಂವರ್ಧಕ ಸಂಸ್ಥೆ ಎಂಬ ವಾದವನ್ನಾರಂಭಿಸಿದ ಮಹನೀಯರು ಇಲ್ಲಸಲ್ಲದ ಗೊಂದಲಕ್ಕೆ ಎಡೆಮಾಡಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾದುದು ೧೯೧೫ರಲ್ಲಿ; ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹುಟ್ಟಿದುದು ೧೮೯0ರಲ್ಲಿ ಪರಿಷತ್ತಿಗಿಂತ ವಿದ್ಯಾವರ್ಧಕ ಸಂಸ್ಥೆ ಕಾಲು ಶತಮಾನ ಹಳೆಯದೆನ್ನುವುದು ಐತಿಹಾಸಿಕ ಸತ್ಯ.
‘ಉತ್ತರ ಕರ್ನಾಟಕದಲ್ಲಿ ಶಾಂತಕವಿಗಳು, ಚುರುಮುರಿ ಮೊದಲಾದ ಮಹನೀಯರೂ, ಮಂಗಳೂರು ಪ್ರಾಂತ್ಯದಲ್ಲಿ ಪಂಜೆ ಮಂಗೇಶರಾಯರೂ, ರಾಜಗೋಪಾಲಕೃಷ್ಣರಾಯರೂ ಮೊದಲಾದ ಮಹನೀಯರೂ ತಮ್ಮ ಕೃತಿಗಳಿಂದ ಜಾಗೃತಿಯನ್ನುಂಟುಮಾಡಿದರು. ಹೀಗೆ ಕನ್ನಡನಾಡಿನಲ್ಲೆಲ್ಲ ಒಂದು ಹೊಸ ಚೈತನ್ಯ ಸ್ಫೂರ್ತಿಯೂ ಉಂಟಾದುವು. ಮೊದಲು ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಹುಟ್ಟಿತು. ಶ್ರೀ ಜಯಚಾಮರಾಜೇಂದ್ರ ಒಡೆಯರು ಸಂಘದ ಕಟ್ಟಡಕ್ಕೆ ಉದಾರವಾಗಿ ಧನಸಹಾಯಮಾಡಿ, ಅದರ ಆಸ್ತಿಭಾರವನ್ನು ಹಾಕಿ ನಾಡುನುಡಿಗಳ ಏಕೀಕರಣಕ್ಕೆ ಕನ್ನಡಿಗರ ಹೃದಯ ಹೇಗೆ ಮಿಡಿಯುತ್ತಿರುವುದೆಂಬುದನ್ನು ಪ್ರತ್ಯಕ್ಷವಾಗಿ ತೋರಿದರು.’
೧೯೧೫ರಲ್ಲಿ ಪರಿಷತ್ತಿನ ಧ್ಯೇಯೋದ್ದೇಶಗಳು
೧೯೧೫ನೆಯ ಮೇ ತಿಂಗಳು ೩ನೆಯ ತಾರೀಖಿನ ದಿನ ಮೊದಲ ಸಮ್ಮೇಳನ ನಡೆದು ಪರಿಷತ್ತು ಸ್ಥಾಪಿತವಾಯಿತು. ಈ ರೀತಿ ಸ್ಥಾಪಿತವಾದ ಪರಿಷತ್ತಿನ ಉದ್ದೇಶಗಳು ಯಾವುದೆಂದರೆ:
೧. ಕನ್ನಡ ಭಾಷೆಯಲ್ಲಿ ಪಂಡಿತ ಯೋಗ್ಯವಾದ ವ್ಯಾಕರಣ, ಚರಿತ್ರೆ ನಿಘಂಟು ಈ ಮೂರನ್ನೂ ಬರೆಯಿಸುವುದು, ಅಥವಾ ಬರೆಯುವುದಕ್ಕೆ ಸಹಾಯ ಮಾಡುವುದು.
೨. ನವೀನ ಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
೩. ತತ್ವಶಾಸ್ತ್ರ ಪ್ರಕೃತಿ ವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
೪. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂತರಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
೫. ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
೬. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ, ಸಂಗ್ರಹಿಸಿ, ಅವನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ ಕನ್ನಡ ನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
೭. ಕರ್ನಾಟಕ ಭಾಷಾ ಸಂಸ್ಕರಣ, ಕರ್ನಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತ ಯೋಗ್ಯವಾದ ಲೇಖನಗಳನ್ನೊಳಗೊಂಡು ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
೮. ಕರ್ನಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡು ಕೊಳ್ಳುವುದರಿಂದಾಗಲಿ, ಅವರು ಬರೆದಿರುವ ಪುಸ್ತಕಗಳನ್ನು ಅಚ್ಚುಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ ಅದರ ಗ್ರಂಥಗಳ ಮುದ್ರಣಾಧಿಕಾರವನ್ನೂ (copy rights) ಹಣಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ, ಸಂಭಾವನೆಯನ್ನಾಗಲಿ ಕೊಡುವುದು.
೯. ಕರ್ನಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧಕ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತ ವೇತನಗಳನ್ನು ಕೊಡುವುದು.
೧0. ಕರ್ನಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆ ಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
೧೧. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕ ಭಂಡಾರಗಳನ್ನೂ ಸ್ಥಾಪಿಸುವುದು.
೧೨. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಏರ್ಪಡಿಸುವುದು.
ಕನ್ನಡ ಸಾಹಿತ್ಯ ಪರಿಷತ್ತಿಗೆ ಭದ್ರವಾದ ಬುನಾದಿ ಹಾಕಿ, ಈಗಿರುವ ಕಟ್ಟಡ ನಿರ್ಮಾಣಕ್ಕೆ ಕಾರಣರಾದವರು ಬೆಳ್ಳಾವೆ ವೆಂಕಟನಾರಾಯಣಪ್ಪನವರು. ತರುವಾಯ ಡಿ.ವಿ.ಗುಂಡಪ್ಪನವರು, ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ಪರಿಷತ್ತಿನ ಕಾರ್ಯಕ್ರಮಗಳಿಗೆ ಅಚ್ಚುಕಟ್ಟುತನವನ್ನು ತಂದುಕೊಟ್ಟರು. ಬಿ.ಎಂ.ಶ್ರೀಕಂಠಯ್ಯನವರು ಕೊಡುಗೈಯೊಡೆಯರಾಗಿ ಪರಿಷತ್ತಿನ ಹಲವು ಚಟುವಟಿಕೆಗಳಿಗೆ ಉದಾರವಾಗಿ ಹಣ ಸಹಾಯ ಮಾಡುತ್ತಿದ್ದುದಲ್ಲದೆ, ಗಮಕ ಶಿಕ್ಷಣ ಆರಂಭಿಸುವುದಕ್ಕೂ ಅಚ್ಚುಕೂಟ ಸ್ಥಾಪಿಸುವುದಕ್ಕೂ ಕಾರಣರಾದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಪರಿಷತ್ತಿನ ಸದಸ್ಯಸಂಪತ್ತಿಯನ್ನು ಬೆಳೆಸುವುದಕ್ಕೆ ಶ್ರಮಿಸಿದರು.
ಪರಿಷತ್ತಿನ ಸದಸ್ಯ ಸಂಪತ್ತಿಯನ್ನು ತಿಳಿಯಲು ಈ ೧೩ ವರ್ಷಗಳ ಇತಿಹಾಸವನ್ನು ಗಮನಿಸಬಹುದು:
ಪರಿಷತ್ತಿನ ಸದಸ್ಯರು
ವರ್ಷ ಸಾಮಾನ್ಯ ಸದಸ್ಯರು ಅಜೀವ ಸದಸ್ಯರು
೧೯೪೭-೪೮ ೯೭೧ ೪೪೮
೧೯೪೮-೪೯ ೯೫೪ ೪೪೮
೧೯೪೯-೫0 ೩೭೫ ೪೪0
೧೯೫0-೫೧ ೩೩೪ ೪೨೮
೧೯೫೧-೫೨ ೪೭೭ ೪೧೨
೧೯೫೨-೫೩ ೪೫೭ ೪೧೨
೧೯೫೩-೫೪ ೪೫೭ ೪೧೨
೧೯೫೪-೫೫ ೧೬0 ೪೧೨
೧೯೫೫-೫೬ ೧೯೪ ೪೧೨
೧೯೫೬-೫೭ ೪೩೫ ೪೪೯
೧೯೫೭-೫೮ ೨೩೮ ೪೪0
೧೯೫೮-೫೯ ೨೭೨ ೪೪೨
೧೯೫೯-೬0 ೨೭೨ ೪೪೨
೧೯೬೧ನೆಯ ಇಸವಿಯ ಪರಿಷತ್ತಿನ ಅಂದಾಜು ವರಮಾನ-ವೆಚ್ಚದ ಕೆಲವು ಮುಖ್ಯಾಂಶಗಳನ್ನು ಗಮನಿಸಬೇಕು.
ವರಮಾನ
ಮೈಸೂರು ಸರ್ಕಾರದ ಸಹಾಯ ದ್ರವ್ಯ ರೂ. ೫,೫00
ಕಾರ್ಪೋರೇಷನ್ ಸಹಾಯ ದ್ರವ್ಯ ರೂ. ೨,000
ಸಂಗೀತ ನಾಟಕ ಅಕಾಡೆಮಿಯಿಂದ ರೂ. ೨,000
ಸದಸ್ಯತ್ವ ಚಂದಾ ರೂ. ೨,000
ಪ್ರಕಟನೆಗಳ ಮಾರಾಟ ರೂ. ೪,000
ಇತರ ರೂ.೧೭.೪೮0
ರೂ. ೪೨,೯೮0
ವೆಚ್ಚ
ಕಛೇರಿ ಸಿಬ್ಬಂದಿಯ ಸಂಬಳ ರೂ. ೬,೯00
ಕನ್ನಡನುಡಿ ಮತ್ತು ಪರಿಷತ್ಪತ್ರಿಕೆ ರೂ. ೪,೫00
ಸಮ್ಮೇಳನಗಳು ರೂ. ೨,000
ಪುಸ್ತಕ ಭಂಡಾರ ರೂ. ೨00
ಸತ್ಕಾರ ಸಮಾರಂಭಗಳು ರೂ. ೮00
ನಿಯೋಗಗಳು ರೂ. ೩00
ತೇಮಾನ ರೂ. ೨,೫00
ಕಾರ್ಯಸಮಿತಿಯ ವೆಚ್ಚ ರೂ. ೨,000
ಇತರ ರೂ. ೧೫,೪00
ರೂ. ೩೪,೬00
ಪರಿಷತ್ತಿನ ಹಣ ಕನ್ನಡ ನಾಡು ನುಡಿಗಳ ಉತ್ಕರ್ಷಕ್ಕೆ ಎಷ್ಟರಮಟ್ಟಿಗೆ ನೆರವಾಗಿದೆಯೆನ್ನುವುದಕ್ಕೆ ಮೇಲ್ಕಾಣಿಸಿರುವ ಅಂಕಿ ಅಂಶಗಳೇ ಸಾಕ್ಷಿ.
ಜಯಚಾಮರಾಜೇಂದ್ರ ಒಡೆಯರು
ಕನ್ನಡ ಸಾಹಿತ್ಯ ಪರಿಷತ್ತು ೧೨-೧೨-೫೬ರಲ್ಲಿ ಮೈಸೂರಿನ ರಾಜ್ಯಪಾಲರಾದ ಶ್ರೀ ಜಯಚಾಮರಾಜ ಒಡೆಯರವರಿಗೆ ಅರ್ಪಿಸಿದ ವಿಜ್ಞಾಪನಾ ಪತ್ರಿಕೆಗೆ ರಾಜ್ಯಪಾಲರು ಉತ್ತರವಾಗಿ ದಯೆಪಾಲಿಸಿದ ಭಾಷಣದ ಕೆಲವು ಅಂಶಗಳು ಗಮನಾರ್ಹವಾಗಿವೆ:
‘ಇನ್ನು ಮುಂದೆ ಪರಿಷತ್ತಿನ ಕಾರ್ಯದಲ್ಲಿ ಸ್ವಲ್ಪ ಬದಲಾವಣೆಯಾಗಬೇಕೆಂದು ನನಗೆ ತೋರುತ್ತದೆ; ಬಹುಶಃ ತಮಗೂ ಹಾಗೆಯೇ ತೋರಬೇಕು. ಒಂದಾನೊಂದು ಕಾಲದಲ್ಲಿ ಕನ್ನಡದ ಸ್ಥಾನಮಾನಗಳಾಗಿ ಯುದ್ಧ ಹೂಡಬೇಕಾಗಿತ್ತು. ಜನರನ್ನು ಎಚ್ಚರಿಸಿ ಹುರಿದುಂಬಿಸುವುದಕ್ಕಾಗಿ ಪ್ರಚಾರ, ಭಾಷಣಗಳು, ಉತ್ಸವಗಳು, ಭಾವೋದ್ರೇಕ ಇವೆಲ್ಲಾ ಆವಶ್ಯಕವಾಗಿದ್ದವು. ಈಗ ಕನ್ನಡ ಗೆದ್ದಿದೆ. ಸುಮಾರು ಅರ್ಧ ಶತಮಾನದ ಉಳಿಮೆ ಸ್ವಾದುವಾದ ಫಲ ಕೊಟ್ಟಿದೆ… ಇನ್ನು ಕನ್ನಡದ ಪರವಾಗಿ ಪ್ರಚಾರಮಾಡಬೇಕಾದ ಆವಶ್ಯಕತೆಯಿಲ್ಲ; ಕನ್ನಡ ಬಾವುಟದ ಮೆರವಣಿಗೆ ಆವಶ್ಯಕವಿಲ್ಲ… ಆ ಬಾವುಟ ಭವನದ ಮೇಲೆ ಗೆಲುವಾಗಿ ಹಾರುತ್ತಿದೆ.
ಅಂದ ಮೇಲೆ ಇನ್ನು ಮುಂದೆ ಭವನದೊಳಗೆ ಕ್ರಮವ್ಯವಸ್ಥೆಗಳನ್ನು ಅನುಗೊಳಿಸುವ ಪ್ರಯತ್ನ ನಡೆಯಬೇಕು. ಆತ್ಮವಿಶ್ವಾಸವನ್ನು ಪಡೆಯುವುದಕ್ಕಾಗಿ ನಮ್ಮ ಹೆಚ್ಚಳವನ್ನು ಉತ್ಪ್ರೇಕ್ಷೆಮಾಡಿಕೊಂಡದ್ದು ಸ್ವಾಭಾವಿಕವೇ. ಆದರೆ ಇನ್ನು ಮುಂದೆ ನಿಷ್ಪಕ್ಷಪಾತವಾಗಿ ಆತ್ಮಪರೀಕ್ಷೆ ಮಾಡಿಕೊಳ್ಳಬೇಕು. ದಿವಂಗತ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಒಂದು ಬಾರಿ ಹೇಳಿದಂತೆ `ಕೊನೆಗೆ ನಿಲ್ಲುವುದು ಅಭಿಮಾನವಲ್ಲ ಸತ್ಯ’. ಈ ಸತ್ಯವನ್ನು ಎದುರಿಸುವುದಕ್ಕೆ ನಾವು ಹೆದರಬೇಕಾದ್ದೇನೂ ಇಲ್ಲ. ಕನ್ನಡ ಭಾಷೆಯ ಸ್ವರೂಪ, ವ್ಯಾಕರಣ, ಅದಕ್ಕೂ ಇತರ ಭಾಷೆಗಳಿಗೂ ಇರುವ ಸಂಬಂಧ, ಕನ್ನಡ ಛಂದಸ್ಸು, ಲಯ, ಕನ್ನಡ ಸಾಹಿತ್ಯದ ಹಿನ್ನೆಲೆಯಾಗಿರುವ ಮತ್ತು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತಿರುವ ರಾಜಕೀಯ, ಸಾಮಾಜಿಕ, ಮತೀಯ ಪರಿಸ್ಥಿತಿ-ಇವೆಲ್ಲದರ ವಿಷಯದಲ್ಲೂ ನಿಷ್ಕೃಷ್ಟ ಪಾಂಡಿತ್ಯವನ್ನು ಪಡೆಯಬೇಕು. ಇನ್ನು ಮುಂದೆ ಪರಿಷತ್ತಿನ ಕೆಲಸ ಇದೇ ಎಂದು ನನ್ನ ಭಾವನೆ. ಪರಿಷತ್ತು ಸಾಹಿತ್ಯವನ್ನು ಸೃಷ್ಟಿ ಮಾಡಲಾರದು. ಯಾವುದೊಂದು ಸಂಸ್ಥೆಯೂ ಆ ಕೆಲಸ ಮಾಡಲಾರದು. ದೈವದತ್ತವಾದ ಪ್ರತಿಭೆಯುಳ್ಳವರಿಗೆ ಆ ಕೆಲಸವನ್ನು ಬಿಡೋಣ. ಪರಿಷತ್ತಿನ ಕೆಲಸವೆಂದರೆ ಆ ಸಾಹಿತ್ಯದ ಬೆಲೆಯನ್ನು ಅಧಿಕಾರಯುತವಾಗಿ ನಿರ್ಣಯಿಸುವುದು ಕೂಡಾ ಅಲ್ಲ. ಉದ್ವೇಗರಹಿತವಾದ ಮತ್ತು ಪೂರ್ವಗ್ರಹಗಳಿಗೆ ಸಿಲುಕದ ಸ್ವಚ್ಛವಾದ ವಿಮರ್ಶನ ದೃಷ್ಟಿಯನ್ನು ಬೆಳಸುವುದು, ಹತ್ತಾರು ಕಡೆಗಳಿಂದ ಅಭಿಪ್ರ್ರಾಯ ಬೆಳೆದುಬಂದು ಅವುಗಳ ಘರ್ಷಣೆಯಿಂದ ಸತ್ಯ ಮೂಡಿಬರುವಂತೆ ಸೌಕರ್ಯಗಳನ್ನು ಕಲ್ಪಿಸುವುದು, ನಿಘಂಟು, ವಿಶ್ವಕೋಶ ಮುಂತಾದ್ದನ್ನು ಸಿದ್ಧಗೊಳಿಸುವುದು, ಇತರ ಪ್ರಕಾಶಕರು ಪ್ರಕಟಿಸಲು ಹೆದರುವ ವಿಮರ್ಶೆ, ಶಾಸ್ತ್ರಗ್ರಂಥ ಮುಂತಾದ್ದನ್ನು ಪ್ರಕಟಿಸುವುದು, ಸಂಶೋಧನೆ ನಡೆಸುವುದು – ಇತ್ಯಾದಿ ಕಾರ್ಯಕ್ರಮಗಳಿಗೆ ಪರಿಷತ್ತು ಮೀಸಲಾಗಬೇಕು. ಇದೆಲ್ಲಾ ಮೈಬಗ್ಗಿ ಕುಳಿತು ಮಾಡಬೇಕಾದ ಕೆಲಸ. ಇದರಿಂದ ಸುಲಭದ ಮನೋರಂಜನೆ ಸಾಧ್ಯವಿಲ್ಲ; ಕ್ಷಣಕ್ಷಣಕ್ಕೂ ಜನರಿಂದ ಕರತಾಡನಗಳು ಬರುವುದಿಲ್ಲ. ಕರತಾಡನದ ಆಸೆ, ಅದಕ್ಕೆ ಬೇಕಾದ ಆಡಂಬರ-ಇದನ್ನೆಲ್ಲಾ ಪರಿಷತ್ತು ಬಿಟ್ಟುಕೊಡಬೇಕು. ಸಾಮಾನ್ಯ ಉಪನ್ಯಾಸಗಳಿಗೆ, ಮನೋರಂಜನೆಯ ಕಾರ್ಯಕ್ರಮಗಳಿಗೆ, ನಾಡಿನಲ್ಲಿ ಬೇಕಾದಷ್ಟು ಕರ್ಣಾಟಕ ಸಂಘಗಳಿವೆ; ಅವು ಈ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿವೆ. ಕನ್ನಡ ಜನತೆಯೂ ಈ ಬಗೆಯ ಕೆಲಸವನ್ನು ಪರಿಷತ್ತು ಮಾಡಬೇಕೆಂದು ಬಯಸಬಾರದು; ಅದರ ಆವರಣದಿಂದ ಕೊಂಬು ಕಹಳೆ ತುತ್ತೂರಿಗಳ ಘೋಷ ಕೇಳಿ ಬರಲಿಲ್ಲವಲ್ಲ ಎಂದು ಆತಂಕಪಡಬಾರದು. ಪರಿಷತ್ತಿನ ಕೆಲಸ ಸದ್ಯದಲ್ಲಿ ಜನರು ಕಣ್ಣು ಕೊರೈಸುವಂಥದಲ್ಲವಾದರೂ ನೂರುಕಾಲ ಬಾಳುವಂಥಾದ್ದಾಗಬೇಕು; ಪರಿಷತ್ತು ಕನ್ನಡ ನಾಡಿನ ಚಿತ್ರಕಲೆ, ನೃತ್ಯ ಸಂಗೀತ ಮೊದಲಾದುದೆಲ್ಲದರ ಅಭ್ಯುದಯಕ್ಕೆ ಪ್ರಯತ್ನಿಸಬೇಕೆಂಬ ಮಾತು ಆಗಾಗ್ಗೆ ಕೇಳಿಬಂದಿದೆ. ಇವು ಒಂದೊಂದೂ ಜೀವಮಾನವನ್ನೆಲ್ಲಾ ಬೇಡುವಂಥ ಕಲೆಗಳು. ಇವೆಲ್ಲದರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆಂದು ಹೊರಟರೆ ಪರಿಷತ್ತು ಇಂಗ್ಲಿಷಿನಲ್ಲಿ ಹೇಳುವಂತೆ ಡಿಲಿಟ್ಯಾಂಟಿ (Dilettante) ಸಂಸ್ಥೆಯಾದೀತೆಂಬ ಭಯವಿದೆ. ಇದನ್ನೆಲ್ಲಾ ಸಂಗೀತ ನಾಟಕ ಅಕಾಡೆಮಿಗಳಂತಹ ಸಂಸ್ಥೆಗಳಿಗೆ ಬಿಟ್ಟು ತನ್ನ ಗಮನವನ್ನು ಸಾಹಿತ್ಯದ ಮೇಲೆ ಕೇಂದ್ರೀಕರಿಸುವುದು ಉತ್ತಮವೆಂದು ತೋರುತ್ತದೆ.”
ಪರಿಷತ್ತು ಮಾಡಿದ್ದೇನು?
ಇಂದು ಪರಿಷತ್ತಿನಲ್ಲಿ ಸಾಹಿತಿಗೆ, ಕನ್ನಡದ ಸೇವೆ ಮಾಡಿ ಧನ್ಯನಾಗಲು ಬಯಸುವವನಿಗೆ ಎಡೆಯಿಲ್ಲ. ಅಧಿಕಾರಿ ವರ್ಗದವರ ಹಾಗೂ ರಾಜಕೀಯ ಮುಂದಾಳುಗಳ ಮೆರವಣಿಗೆ, ಸನ್ಮಾನೋತ್ಸವ, ಉಪಹಾರ ಮೇಳ, ಸತ್ಕಾರ ಸಮಾರಂಭಗಳಿಗೆ ಪರಿಷತ್ತು ಸರ್ಕಾರದ ದಾನದ್ರವ್ಯವನ್ನು ನಿವೇದಿಸಿದೆ.
ಪರಿಷತ್ತು ಏನು ಮಾಡಿಲ್ಲ ?
೧. ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ `ಚನ್ನಬಸವನನಾಯಕ’ ೧೯೫೯ರಲ್ಲಿ ಪ್ರಕಟವಾಯಿತು. ೧೯೫೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ಭಾರತೀಯ ಭಾಷೆಗಳಿಗೆ ಅನುವಾದಿಸಲು ಈ ಗ್ರಂಥವನ್ನು ಅರಿಸಿತು. ಸಾಹಿತ್ಯ ಅಕಾಡೆಮಿಯ ಆಯ್ಕೆಯಾದ ತರುವಾಯ ಆ ಗ್ರಂಥದ ಮೇಲೆ ಜಾತಿದ್ವೇಷದ ಅಪಾದನೆ ಹೊರಿಸಿ ಹಲವು ಹೇಳಿಕೆಗಳು, ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದವು. `ಚನ್ನಬಸವನಾಯಕ’ ಗ್ರಂಥವನ್ನೇ ವ್ಯಾಜ್ಯಮಾಡಿಕೊಂಡು ಉತ್ತರ ಕರ್ನಾಟಕದಲ್ಲಿ ಹಲವು ಅಗ್ನಿಭಕ್ಷಕರು, ಜಾತ್ಯಂಧರು ಉಪನ್ಯಾಸ ಸತ್ಯಾಗ್ರಹ ನಡೆಸಿದರು. ಈ ಬಗ್ಗೆ ಪರಿಷತ್ತಿಗೆ ಯಾವ ಹೊಣೆಗಾರಿಕೆಯೂ ಇರಲಿಲ್ಲವೇ? ಪರಿಷತ್ತಿನ ತಜ್ಞಮಂಡಲಿಯೊಂದು ಡಾ||ಮಾಸ್ತಿಯವರ ಪುಸ್ತಕ, ಅದರ ಮೇಲೆ ಬಂದ ಅಪಾದನೆಗಳನ್ನು ಪರೀಕ್ಷಿಸಿ, ನಿಷ್ಕೃಷ್ಟ ಅಭಿಪ್ರಾಯ ವ್ಯಕ್ತಗೊಳಿಸಿ ಈ ರಾಷ್ಟ್ರವಿಘಾತಕ ಚಳುವಳಿಯನ್ನು ನಿಲ್ಲಿಸಲು ಸಾಧ್ಯವಿರಲಿಲ್ಲವೇ?
೨. ಪರಿಷತ್ತು ಪ್ರತಿವರ್ಷ ರೂ.೨,000 ವೆಚ್ಚಮಾಡಿ ನಡೆಸುತ್ತಿರುವ ಪರಿಕ್ಷೆಗಳಿಗೆ ಬಂದೊದಗಿರುವ ದುರವಸ್ಥೆ ಪರಿಷತ್ತಿನ ಅಧಿಕಾರಿಗಳ ಗಮನಕ್ಕೆ ಬಂದಿದೆಯೇ? ಪರೀಕ್ಷಾ ಕೇಂದ್ರಗಳಿಗೆ ಸಕಾಲಕ್ಕೆ ಪ್ರಶ್ನೆಪತ್ರಿಕೆಗಳು ಮುಟ್ಟದಿರುವುದು, ವಿದ್ಯಾರ್ಥಿಗಳೇ ಇಲ್ಲದಿರುವೆಡೆಗಳು ಪರೀಕ್ಷಾ ಕೇಂದ್ರಗಳಾಗಿರುವುದು, ಕೆಲವು ಕೇಂದ್ರಗಳಲ್ಲಿ ಪುಸ್ತಕಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯುತ್ತಿರುವುದು ಪರಿಷತ್ತಿನ ಅಧಿಕಾರ ವರ್ಗದವರಿಗೆ ಗೊತ್ತಿದೆಯೇ?
೩. ಪರಿಷತ್ತಿನ ಸಭಾಮಂದಿರವನ್ನು ಜಾತಿ ಸಂಸ್ಥೆಗಳಿಗೂ, ರಾಜಕೀಯ ಸಂಸ್ಥೆಗಳಿಗೂ ಬಾಡಿಗೆಗೆ ಕೊಡುತ್ತಿರುವುದೇಕೆ? ಇದು ಪರಿಷತ್ತಿನ ಮೂಲ ಉದ್ದೇಶಕ್ಕೇ ವಿಘಾತಕವಲ್ಲವೇ?
೪. ಸತ್ಕಾರಕೂಟ, ಭೋಜನ ಕೂಟಗಳು ನಡೆಸಬೇಕಾದ ಸಂದರ್ಭವೊದಗಿದಾಗ ಹಿಂದಿದ್ದ ಅಧಿಕಾರಿವರ್ಗದವರು ಚಂದಾ ವಸೂಲ್ಮಾಡಿ ವ್ಯಯ ಮಾಡುತ್ತಿದ್ದುದು ಇಂದಿನ ಅಧಿಕಾರಿ ವರ್ಗದವರಿಗೆ ತಿಳಿದಿದೆಯೇ? ಇವುಗಳಿಗೆ ಪರಿಷತ್ತಿನ ಹಣವನ್ನು ವ್ಯಯಮಾಡುವುದು ಶುದ್ಧ ಅನ್ಯಾಯವಲ್ಲವೇ?
೫. ಸರ್ವಶ್ರೀ ಡಿ.ವಿ. ಗುಂಡಪ್ಪನವರು, ಬಿ.ಎಂ.ಶ್ರೀಕಂಠಯ್ಯನವರು ಉಪಾಧ್ಯಕ್ಷರಾಗಿದ್ದ ಕಾಲದಲ್ಲಿ ಪರಿಷತ್ತಿನ ವರ್ಷದ ಕಾರ್ಯಕ್ರಮವನ್ನು ಪೂರ್ವಭಾವಿಯಾಗಿ ಗೊತ್ತುಮಾಡಿ, ನಾಡಿನ ಎಲ್ಲ ಭಾಗಗಳ ವಿದ್ವಾಂಸರ ಪಾಂಡಿತ್ಯಪೂರ್ಣ ಭಾಷಣವನ್ನೇರ್ಪಡಿಸುತ್ತಿದ್ದುದು ಇಂದಿನ ಅಧಿಕಾರಿವರ್ಗದವರಿಗೆ ತಿಳಿದಿದೆಯೇ?
೬. ಸಾಹಿತ್ಯ ವಿಕಾಸ, ಸಾಹಿತಿಗಳ ಉದ್ಧಾರದ ಸಲುವಾಗಿ ಜನ್ಮತಳೆದಿರುವ ಪರಿಷತ್ತು ಬಡಲೇಖಕರ ಕಷ್ಟ-ಸುಖಗಳನ್ನು ವಿಚಾರಿಸಲು ಪ್ರಯತ್ನಿಸಿದೆಯೇ? ನಿರ್ಗತಿಕಾವಸ್ಥೆಯಲ್ಲಿ ಪ್ರಾಣ ಒಪ್ಪಿಸಿದ ಬಡಲೇಖಕರಿಗಾಗಲಿ, ಅವರ ಸಂಸಾರಕ್ಕಾಗಲಿ ಪರಿಷತ್ತು ಸಹಾಯ ಮಾಡಿದೆಯೇ?
೭. ಪರಿಷತ್ತಿನ ಪುಸ್ತಕಭಂಡಾರ, ಪರಿಷತ್ತಿನ ಸ್ಥಾನಮಾನಗಳಿಗೆ ಅನುಗುಣವಾಗಿದೆಯೇ? ದಿನೇ ದಿನೇ ಕ್ಷೀಣವಾಗುತ್ತಿರುವ ಈ ಭಂಡಾರವನ್ನು ವ್ಯವಸ್ಥೆಗೊಳಿಸಲು ಪರಿಷತ್ತು ಯಾವ ಕ್ರಮಕೈಗೊಂಡಿದೆ? ಇನ್ನಿದುವರೆಗೆ ಭಂಡಾರದ ‘ಪುಸ್ತಕಗಳ ಪಟ್ಟಿ’ ಯೊಂದನ್ನು ಪರಿಷತ್ತು ಏಕೆ ಪ್ರಕಟಿಸಿಲ್ಲ?
೮. ಪರಿಷತ್ತಿನ ಪ್ರಾತಿನಿಧ್ಯ ಅಪೇಕ್ಷಿಸುವ ಸಂಸ್ಥೆಗಳಿಗೆ, ಸಮಿತಿಗಳಿಗೆ ಸಮ್ಮೇಳನಕ್ಕೆ ಪರಿಷತ್ತಿನ ಅಧಿಕಾರಿ ವರ್ಗದವರೇ ಪ್ರತಿನಿಧಿಗಳಾಗಿ ಹೋಗಬೇಕೆಂಬ ನಿಯಮವಿದೆಯೇ?
೯. ಪರಿಷತ್ತಿನ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳನ್ನು ನಿಯಮಿಸುವಾಗ, ಪರೀಕ್ಷಕರನ್ನು ಗೊತ್ತುಮಾಡುವಾಗ ಪ್ರಾತಿನಿಧ್ಯ ಆವಶ್ಯಕತೆಯಿಲ್ಲವೆ? ಅವು ಸದ್ಯಕ್ಕೆ ಪರಿಷತ್ತಿನ ಅಧಿಕಾರಿಗಳು, ಅವರ ಕೆಲವು ಮಿತ್ರರಿಗೇ ಮೀಸಲಾಗಿಲ್ಲವೇ?
೧0. ರಾಯಚೂರಿನಲ್ಲಿ ಅಧ್ಯಾಪಕರಾಗಿದ್ದ ಶ್ರೀ ಬಿ.ವಿ. ಶ್ರೀನಿವಾಸರಾಯರು, `ಆಂಧ್ರ ಹಿಸ್ಟಾರಿಕಲ್ ರಿಸರ್ಚ್ ಸೊಸೈಟಿ ಜರ್ನಲ್’ ಪತ್ರಿಕೆಗೆ ಒಂದು ಲೇಖನ ಬರೆದು ಮೈಸೂರು ಪ್ರಾಂತ್ಯದ ಬೆಂಗಳೂರು, ತುಮಕೂರು, ಚಿತ್ರದುರ್ಗ, ಕೋಲಾರ ಜಿಲ್ಲೆಗಳು ಆಂಧ್ರಕ್ಕೆ ಸೇರಬೇಕೆಂಬ ವಾದ ಹೂಡಿದರು. ಈ ದುರಾಕ್ರಮಣವನ್ನು ಕನ್ನಡ ಪತ್ರಿಕೆಗಳು ಖಂಡಿಸಿದವು. ಇಂತ ಮುಖ್ಯ ವಿಷಯದ ಬಗ್ಗೆಯೂ ಪರಿಷತ್ತು ಔದಾಸೀನ್ಯ ತೋರಿದುದೇಕೆ?
ಪರಿಷತ್ತು ಏನು ಮಾಡಬೇಕು?
ವಯೋನ್ಮುಖ ಸಾಹಿತಿಗಳ ರಕ್ಷಣೆ ಪೋಷಣೆಗೆ ಪರಿಷತ್ತು ಪ್ರಥಮಸ್ಥಾನ ಕೊಡಬೇಕು.
ಅ. ನವ್ಯಸಾಹಿತಿಗಳ ಕೃತಿಗಳನ್ನು ಬರಮಾಡಿಕೊಂಡು ಅವುಗಳನ್ನು ಓದಿ, ಸೂಕ್ತ ಸಲಹೆಗಳನ್ನೀಯಬಲ್ಲ ತಜ್ಞರ ಮಂಡಳಿಯ ನಿಯಾಮಕ.
ಆ. ನವ್ಯಸಾಹಿತಿಗಳಿಗೆ ಸಾಹಿತ್ಯದ ವಿವಿಧ ಪ್ರಕಾರಗಳ ತಂತ್ರ ತಿಳಿಸಿ ಕೊಡುವ ಗ್ರಂಥಗಳ ಪ್ರಕಟನೆ.
ಇ. ಕಾಲಕಾಲಕ್ಕೆ ಒಂದೊಂದು ಸಾಹಿತ್ಯ ಕುರಿತ ಭಾಷಣಮಾಲೆ.
ಈ. ಕಿರಿಯ ಸಾಹಿತಿಗಳ ಅಭ್ಯಾಸಕ್ಕೆ ಅವಶ್ಯಕವಾದ ಗ್ರಂಥಗಳ ಸಂಗ್ರಹಣೆ.
ಉ. ಕಿರಿಯ ಸಾಹಿತಿಗಳು ಹಿರಿಯ ಸಾಹಿತಿಗಳನ್ನು ಕಂಡು ವಿಚಾರವಿನಿಮಯ ಮಾಡಿಕೊಳ್ಳಲವಕಾಶ.
೫. ಬಡ ಲೇಖಕರ ಕಷ್ಟ ನಿವಾರಣೆಗಾಗಿ ಮಾಸಾಶನ ಅಥವಾ ಮೊತ್ತವಾಗಿ ಧನಸಹಾಯ, ಸಹಾಯಶೂನ್ಯರಾದ ಲೇಖಕರ ಸಂಸಾರಕ್ಕೆ ಸಹಾಯ-ಲೇಖಕರ ಮಕ್ಕಳಿಗೆ ವಿದ್ಯಾದಾನ. ಅದಕ್ಕಾಗಿ ಒಂದು ಮೀಸಲು ನಿಧಿಸಂಗ್ರಹವಾಗಬೇಕು.
೬. ಪ್ರಾಚೀನ, ಅರ್ವಾಚೀನ ಕಾವ್ಯ ಪರಿಚಯ ಮಾಡಿಕೊಡುವ ವ್ಯಾಸಂಗ ಗೋಷ್ಠಿಗಳು.
೭. ಸೋದರ ಭಾಷೆಗಳಾದ ತಮಿಳು, ತೆಲುಗು, ಹಿಂದಿ, ಬಂಗಾಳಿ ಭಾಷೆಗಳ ಮತ್ತು ಪರಭಾಷೆಗಳಾದ ಗ್ರೀಕ್, ಫ್ರೆಂಚ್, ಜರ್ಮನ್, ರಷ್ಯನ್ ಭಾಷೆಗಳ ಅಭ್ಯಾಸಕ್ಕೆ ಅನುಕೂಲಿಸುವಂತೆ ತರಗತಿಗಳನ್ನು ಏರ್ಪಡಿಸುವುದು.
೮. ಸೋದರ ಭಾಷೆಗಳ ಹಾಗೂ ಪರಭಾಷೆಗಳ ಸಾಹಿತ್ಯ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವುದು.
೯. ಪರಿಷತ್ತಿನ ಪ್ರಕಟನಾ ಶಾಖೆಯನ್ನಭಿವೃದ್ಧಿಪಡಿಸಿ, ಉಪಲಬ್ಧವಿಲ್ಲದ ಪ್ರಾಚೀನ ಕಾವ್ಯಗಳು, ಪ್ರಕಟವಾಗದಿರುವ ಕಾವ್ಯಗಳನ್ನು ಪ್ರಕಟಿಸುವುದು, ಮಹಾಕವಿ ಪ್ರಶಸ್ತಿ ಗ್ರಂಥಗಳನ್ನು ಪ್ರಕಟಿಸುವುದು.
೧0. ಪರಿಷತ್ತಿನ ಕಟ್ಟಡವನ್ನು ವಿಸ್ತರಿಸಿ, ಪುಸ್ತಕ ಭಂಡಾರಕ್ಕಾಗಿಯೇ ಪ್ರತ್ಯೇಕ ಹಜಾರವನ್ನೇರ್ಪಡಿಸುವುದು.
೧೧. ಪರಿಷತ್ತಿನ ಮುದ್ರಣಾಲಯವನ್ನು ಸುಧಾರಿಸಿ, ಆಧುನಿಕ ಯಂತ್ರೋಪಕರಣಗಳನ್ನು ತೆಗೆದುಕೊಳ್ಳುವುದು.
೧೨. ಕನ್ನಡ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳನ್ನು ಸಂಘಟಿಸಿ ಕನ್ನಡ ಪ್ರಕಟನೆಗಳ ವ್ಯಾಪಕ ಪ್ರಸಾರಕ್ಕವಶ್ಯಕವಾದ ಮಾರ್ಗಗಳನ್ನು ನಿರ್ದೇಶಿಸುವುದು.
೧೩. ಅಂಗಸಂಸ್ಥೆಗಳೊಂದಿಗೆ ನಿಕಟ ಸಂಬಂಧವಿಟ್ಟುಕೊಂಡು, ಅವುಗಳ ಸಹಾಯದಿಂದ ನಾಡಿನ ಎಲ್ಲ ಭಾಗಗಳಲ್ಲಿಯೂ ಸಾಹಿತ್ಯ ಪ್ರಚಾರ ಕೈಗೊಳ್ಳುವುದು.
೧೪. ಕೇಂದ್ರ ಸರ್ಕಾರಕ್ಕೂ, ಸಾಹಿತ್ಯ ಅಕಾಡೆಮಿ ಸಂಸ್ಥೆಗೂ ಪರಿಷತ್ತಿನ ಕಾರ್ಯವ್ಯಾಪ್ತಿಯ ಪರಿಚಯ ಮಾಡಿಕೊಟ್ಟು, ಅದರಿಂದ ಧನಸಹಾಯ ಪಡೆಯುವುದು.
೧೫. ಪರಿಷತ್ತಿನ ಸದಸ್ಯರ ಸಂಖ್ಯೆ ಹೆಚ್ಚಿಸುವುದು, ಕಾರ್ಯಕಾರಿ ಸಮಿತಿಯ ಸದಸ್ಯರು ಪರಿಷತ್ತಿನ ಅಧಿಕಾರಿ ವರ್ಗದವರು ವರ್ಷಕ್ಕೆ ನೂರು ಸದಸ್ಯರನ್ನಾದರೂ ಕೂಡಿಸಿ, ಕೊಡಬೇಕೆಂದು ಒತ್ತಾಯಪಡಿಸತಕ್ಕದ್ದು.
೧೭. ಗಡಿನಾಡುಗಳಲ್ಲಿಯೂ ಪರಪ್ರಾಂತೀಯರ ಧಾಳಿಗೆ ಸಿಕ್ಕಿರುವ ಕೋಲಾರದ ಚಿನ್ನದ ಗಣಿ, ಬೆಂಗಳೂರು, ಸೊಲ್ಲಾಪುರ, ಬೆಳಗಾವಿ, ಕಾರವಾರದಲ್ಲಿ ಕನ್ನಡ ಚಳುವಳಿಯನ್ನು ಬಲಗೊಳಿಸುವುದು.
ಪರಿಷತ್ತಿನ ಪ್ರಕಟಣೆಗಳು
ಪ್ರತಿವರ್ಷ ಕನ್ನಡದಲ್ಲಿ ಪ್ರಕಟವಾಗುವ ಎಲ್ಲಾ ಪುಸ್ತಕಗಳು, ಪತ್ರಿಕೆಗಳ ಒಂದು ಪಟ್ಟಿಯನ್ನು ಪರಿಷತ್ತು ಕ್ರಮವಾಗಿ ಪ್ರಕಟಿಸುತ್ತಾ ಬರಬೇಕು.
ಸುಮಾರು ೨೩ ವರ್ಷಗಳಿಂದ ಪರಿಷತ್ತು `ಕನ್ನಡ ಸಾಹಿತ್ಯ ಪತ್ರಿಕೆ’ ತ್ರೈಮಾಸಿಕವನ್ನು ಪ್ರಕಟಿಸುತ್ತಿದೆ. ೧೯೩೮ರಲ್ಲಿ ಶ್ರೀ ಬಿ.ಎಂ. ಶ್ರೀಕಂಠಯ್ಯನವರು ನನ್ನ ಸಂಪಾದಕತ್ವದಲ್ಲಿ, ಕನ್ನಡ ಪ್ರಸಾರದ ಸಲುವಾಗಿ ‘ಕನ್ನಡ ನುಡಿ’ ಮಾಸ ಪತ್ರಿಕೆಯಾಗಿ ಮಾರ್ಪಟ್ಟಿತು.
ಈ ಎರಡು ಪತ್ರಿಕೆಗಳಿಗೆ ಪರಿಷತ್ತು ಪ್ರತಿ ವರ್ಷ ರೂ. ೪,೫00 ಗಳನ್ನು ಖರ್ಚು ಮಾಡುತ್ತಿವೆ. ಇಂದು ಪ್ರಸಾರದ ಸಲುವಾಗಿ ನಾವು ‘ಕನ್ನಡ ನುಡಿ’ ನಡೆಸಿಕೊಂಡು ಹೋಗುವ ಅಗತ್ಯವಿಲ್ಲ. ಕನ್ನಡ ದೈನಂದಿನ, ಸಾಪ್ತಾಹಿಕ, ಮಾಸಪತ್ರಿಕೆಗಳು ಈ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿವೆ.
ಪರಿಷತ್ತಿನ ಅಧಿಕಾರಿವರ್ಗದ ‘ಪಂಗಡ’ ವಾಗಿರುವ ‘ಕನ್ನಡ ನುಡಿ’ಯಿಂದ ಯಾವ ಪ್ರಯೋಜನವೂ ಇಲ್ಲ. ‘ಪರಿಷತ್ಪತ್ರಿಕೆ’ ಮತ್ತು ‘ನುಡಿ’ ಕೂಡಿಸಿ, ಪರಿಷತ್ಪತ್ರಿಕೆಯನ್ನೇ ಬಲಗೊಳಿಸಿ, ವರ್ಷಕ್ಕೆ ಆರು ಸಂಚಿಕೆಗಳನ್ನು ತರಬಹುದು. ಒಂದೊಂದು ಸಂಚಿಕೆ ೧೫0 ರಿಂದ ೨00 ಪುಟಗಳವರೆಗಿರಬಹುದು. ಈ ಆರು ಸಂಚಿಕೆಗಳಲ್ಲಿ ೧) ಪ್ರಾಚೀನ ಕನ್ನಡ ಸಾಹಿತ್ಯ ಸಂಶೋಧನೆಗಳಿಗೂ, ೨) ಕರ್ನಾಟಕದ ಜಾನಪದ ಸಾಹಿತ್ಯಕ್ಕೂ, ೩). ಆಧುನಿಕ ಕನ್ನಡ ಸಾಹಿತ್ಯದ ಪ್ರಗತಿಯನ್ನು ಅನುಲಕ್ಷಿಸುವುದಕ್ಕೂ, ೪). ವಿಮರ್ಶಾ ಶಾಸ್ತ್ರವನ್ನು ಪರಿಚಯ ಮಾಡಿಕೊಡುವುದಕ್ಕೂ ೫) ಕರ್ನಾಟಕ ಲಲಿತಕಲೆಗಳಿಗೂ, ೬) ಕನ್ನಡಿಗರಿಗೆ ವಿವಿಧ ವಿಜ್ಞಾನ ಶಾಸ್ತ್ರಗಳ ಪರಿಚಯಮಾಡಿ ಕೊಡುವುದಕ್ಕೂ ಮಿಸಲಾಗಿರಬಹುದು. ಈ ಒಂದೊಂದು ವಿಭಾಗಕ್ಕೂ ದಕ್ಷವಿದ್ವಾಂಸರ ಸಂಪಾದಕ ಮಂಡಲಿ ಇರತಕ್ಕದ್ದು.
ಪರಿಷತ್ತು ಯಾವ ವ್ಯಕ್ತಿಯ ಸೊತ್ತೂ ಅಲ್ಲ; ಅದು ಎರಡು ಕೋಟಿ ಕನ್ನಡಿಗರ ಹೃದಯ ಕನ್ನಡಿ. ಪರಿಷತ್ತಿನ ಧವಳಕೀರ್ತಿಗೆ ಕಳಂಕಬಾರದಂತೆ, ಅವರ ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ.
ಈ ಪ್ರಕಾರದ ಪರಿಷತ್ತಿಗೆ ದುಡಿದ ಮಹನೀಯರ ಸೇವೆ ಯಾವ ವ್ಯಕ್ತಿಯ. ಗುಂಪಿನಿಂದಾಗಲಿ ಅಳಿಸಿಹೋಗಲು ನಾವು ಅವಕಾಶ ಕೊಡಬಾರದು.
ಹೊರನಾಡಿನಲ್ಲಿ ಕನ್ನಡಿಗ
ಹೊರನಾಡಿನ ಕನ್ನಡಿಗರು ಎಚ್ಚತ್ತುಕೊಂಡು ಅಲ್ಲಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿ, ಕನ್ನಡದ ಹಿತಕ್ಕೆ ದುಡಿಯುತ್ತಿರುವುದು ಆಶಾದಾಯಕವಾಗಿದೆ. ಭಾರತದ ವಿವಿಧ ಭಾಗಗಳಲ್ಲಿ ಹೊರನಾಡಿನ ಕನ್ನಡಿಗರ ಕೆಲವು ಸಮ್ಮೇಳನಗಳೂ ನಡೆದವು. ಮುಂಬಯಿ ಕನ್ನಡಿಗರ ಒಂದು ಡೈರೆಕ್ಟರಿ ಪ್ರಕಟಿಸುವ ಕೆಲಸವು ಮುಂಬಯಿಯಲ್ಲಿ ನಡೆಯುತ್ತಿದೆ. ಹೊರನಾಡುಗಳಲ್ಲಿ ಮುಖ್ಯವಾಗಿ ಆಗಬೇಕಾದುದು ಕನ್ನಡ ಶಾಲೆಗಳ ಸ್ಥಾಪನೆ. ಹೊರನಾಡುಗಳಲ್ಲಿರುವ ಕನ್ನಡ ಮಕ್ಕಳು ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದರೂ ಅವರಿಗೆ ಬರೆಯುವುದಕ್ಕೆ ಓದುವುದಕ್ಕೆ ಬಾರದು. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ಪೀಳಿಗೆಗೆ ಕನ್ನಡದ ಸಂಪರ್ಕವೇ ಇಲ್ಲವಾಗುತ್ತದೆ. ರಾಜ್ಯಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇಂಥ ಸಂಘ ಸಂಸ್ಥೆಗಳ ನಿಕಟ ಸಂಬಂಧವನ್ನಿಟ್ಟುಕೊಂಡು, ಅವರಿಗೆ ಕಾಲೋಚಿತ ಸಲಹೆ, ಸಹಾಯಗಳನ್ನು ನೀಡಬೇಕು.
Tag: Kannada Sahitya Sammelana 42, Ana. Krishnarao, A. N. Krishna Rao, Aa.Na. Krishnarao
೪೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್
ಕನ್ನಡದ ಪ್ರಕಾಂಡ ಪಂಡಿತ, ಸಹೃದಯರು ಸಂಶೋಧಕ ಶ್ರೇಷ್ಠ ಸಂಶೋಧಕ ಆಚಾರ್ಯ ದೊಡ್ಡ ಬೆಲೆ ಲಕ್ಷ್ಮೀನರಸಿಂಹಾಚಾರ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಶ್ಯಾಮಯ್ಯಂಗಾರ್ – ಲಕ್ಷ್ಮಮ್ಮನವರ ಸುಪುತ್ರರಾಗಿ ೨೭-೧0-೧೯0೬ರಂದು ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಪಾವಗಡ, ಸಿರಾ ತುಮಕೂರುಗಳಲ್ಲಿ ಮುಗಿಸಿ ೧೯೨೪ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದು, ನಂತರ ೧೯೨೯ರಲ್ಲಿ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದರು.
೧೯೩0ರಲ್ಲಿ ಮೈಸೂರು ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ರೆಸಿಡೆಂಟ್ ಕನ್ನಡ ಪಂಡಿತರಾಗಿ ನೇಮಕವಾದರು. ೧೯೩೯ರಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿ, ೧೯೫೬ರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೩೧-೩-೧೯೬೨ರಲ್ಲಿ ನಿವೃತ್ತರಾದರು. ಅನಂತರ ಕೆಲವು ಕಾಲ ಯುಜಿಸಿ ಅಧ್ಯಾಪಕರಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಸದಸ್ಯ, ಉಪಾಧ್ಯಾಕ್ಷ, ಅಧ್ಯಕ್ಷ, ಸಂಪಾದಕರಾಗಿ ವಿಧಿವಶರಾಗುವವರೆಗೂ (೭-೫-೧೯೭೧ವರೆಗೆ) ಶಕ್ತಿ ಮೀರಿ ದುಡಿದರು.
ಅವರು ೧೯೫೯ರಿಂದ ೧೯೬೨ ಪ್ರಬುದ್ಧ ಕರ್ನಾಟಕದ ಪ್ರಧಾನ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.
೧೯೬೭ರಲ್ಲಿ ಡಿಎಲ್ಎನ್ ಅಭಿಮಾನಿಗಳು ಉಪಾಯನವೆಂಬ ವಿದ್ವತ್ ಗ್ರಂಥ ಅರ್ಪಿಸಿ ಸನ್ಮಾನ ಮಾಡಿದರು. ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ಮೈಸೂರು ವಿಶ್ವವಿದ್ಯಾನಿಲಯ ೧೯೭0ರಲ್ಲಿ ಡಿ.ಎಲ್.ಎನ್. ಅವರಿಗೆ ಗೌರವ ಡಾಕ್ಟರೇಟ್ ನೀಡಿತು. ೧೯೬0ರಲ್ಲಿ ಬೀದರ್ನಲ್ಲಿ ನಡೆದ ೪೧ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
ಚಲಿಸುವ ವಿಶ್ವಕೋಶವೆಂದು ಹೆಸರುಗಳಿಸಿದ್ದ, ಹಳಗನ್ನಡದ ಪ್ರಕಾಂಡ ಪಂಡಿತರಾಗಿದ್ದ, ಅಪಾರ ನೆನಪಿನ ಶಕ್ತಿಯ ದೊಡ್ಡಬೆಲೆ ನರಸಿಂಹಾಚಾರ್ (ಡಿಎಲ್ಎನ್) ಅವರ ಕೃತಿಗಳು ಪಾಂಡಿತ್ಯಪೂರ್ಣವಾದವು; ದೀರ್ಘ ಪರಿಶ್ರಮದಿಂದ ಸಂಪಾದಿತವಾದವು.
ವಡ್ಡಾರಾಧನೆ, ಭೀಷ್ಮಪರ್ವ, ಪಂಪಭಾರತ ದೀಪಿಕೆ, ಶಬ್ದಮಣಿ ದರ್ಪಣಂ, ಸಿದ್ಧರಾಮ ಚಾರಿತ್ರ ಸಂಗ್ರಹ, ಸುಕುಮಾರ ಚರಿತಂ, ಕನ್ನಡ ಗ್ರಂಥಸಂಪಾದನೆ, ಪಂಪರಾಮಾಯಣ ಸಂಗ್ರಹ, ಗೋವಿನ ಹಾಡು, ಇತ್ಯಾದಿ ಇವರ ಕೃತಿಗಳು.
ಪೀಠಿಕೆಗಳು ಮತ್ತು ಲೇಖನಗಳು ಅವರ ಸಂಶೋಧನ ಬರಹಗಳ ಸಂಕಲನವಾಗಿದೆ.
ಕನ್ನಡ ಸಾಹಿತ್ಯದಲ್ಲಿ ವಿದ್ವತ್ತಿನ ಮೇರು ಶಿಖರವಾಗಿದ್ದ ಡಿಎಲ್ಎನ್ ಅವರು ೭-೫-೧೯೭೧ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೪೧
ಅಧ್ಯಕ್ಷರು: ಡಿ.ಎಲ್. ನರಸಿಂಹಾಚಾರ್ಯ
ದಿನಾಂಕ ೧೧, ೧೨, ೧೩ ಫೆಬ್ರವರಿ ೧೯೬0
ಸ್ಥಳ : ಬೀದರ್
ಸಮ್ಮೇಳನಾಧ್ಯಕ್ಷರುಗಳ ಭಾಷಣಗಳ ಸಾರ
ಈಗ ಇಲ್ಲಿ ನಡೆಯುತ್ತಿರುವ ಸಮಾರಂಭ ನಲ್ವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆಯಷ್ಟೆ? ಹಿಂದೆ ಅಧ್ಯಕ್ಷರ ಪದವಿಯನ್ನು ಬೆಳಗಿದ ಮಹಾನುಭಾವರನ್ನೂ ಅವರ ವಾಗಮೃತವನ್ನೂ ಸ್ಮರಿಸಿಕೊಂಡರೆ ಎಂತವನಿಗಾದರೂ ರೋಮಾಂಚನವಾಗುತ್ತದೆ. ಅವರ ನಡೆ ನುಡಿಗಳ ಭಕ್ತಿ, ಅವರು ಸಲ್ಲಿಸಿರುವ ತ್ಯಾಗಮುಖವಾದ ಸೇವೆ, ಅವರು ನಿರ್ಮಿಸಿರುವ ಕೃತಿಗಳು, ಅವರು ಕೈಗೊಂಡ ಯೋಜನೆಗಳು, ಅವರು ಕಂಡ ಕನಸುಗಳು ಇವೆಲ್ಲಾ ಇಂದಿಗೂ ಕನ್ನಡದ ಕೆಲಸಗಾರರಿಗೆ ಸ್ಫೂರ್ತಿಯನ್ನು ಕೊಡತಕ್ಕವು. ಕನ್ನಡ ನಾಡಿನ ಏಕೀಕರಣ, ಏಕರೂಪವಾದ ಆಡಳಿತದ ವ್ಯವಸ್ಥೆ, ಬೇರೆ ಬೇರೆ ಪ್ರದೇಶಗಳ ಕನ್ನಡಿಗರಲ್ಲಿ ಪರಸ್ಪರ ಸೌಹಾರ್ದಸಾಧನೆ, ಎಲ್ಲ ಪ್ರದೇಶಗಳಿಗೂ ಸಮಾನವಾದ ಗ್ರಾಂಥಿಕ ವ್ಯವಹಾರಿಕ ಭಾಷೆಯ ನಿರ್ಮಾಣ, ಕನ್ನಡದ ಸ್ಥಾನಮಾನ ವಿಚಾರ, ಕನ್ನಡ ನಾಡಿನ ಭಾಷಾಸಮಸ್ಯೆಗಳು, ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯವನ್ನು ಒದಗಿಸುವುದು, ಹಳೆಯ ಸಾಹಿತ್ಯದ ರಕ್ಷಣೆ ಉದ್ಧಾರ ಪ್ರಚಾರಗಳು, ಹೊಸ ಸಾಹಿತ್ಯಕ್ಕೆ ಪ್ರೋತ್ಸಾಹ, ಪಾಂಡಿತ್ಯ ರಸಿಕತೆಗಳ ಬೆಳವಣಿಗೆ, ಸಾಹಿತಿಗಳಿಗೆ ಸನ್ಮಾನ ಸತ್ಕಾರಗಳು, ಕನ್ನಡಿಗರ ರಾಜಕೀಯ ಸಾಮಾಜಿಕ ಧಾರ್ಮಿಕ ಇತಿಹಾಸದ ರಚನೆ ಮತ್ತು ಅದಕ್ಕಾಗಿ ನಡೆಯಬೇಕಾದ ಸಂಶೋಧನೆ, ಸುಪುಷ್ಟವೂ ಸಶಾಸ್ತ್ರೀಯವೂ ಆಗಿರುವ ಕನ್ನಡ ಬೃಹತ್ಕೋಶದ ನಿರ್ಮಾಣ, ವಿಶ್ವಕೋಶದ ರಚನೆ, ವೈಜ್ಞಾನಿಕ ಸಾಮಾಜಿಕ ಶಾಸ್ತ್ರೀಯ ಗ್ರಂಥಗಳ ರಚನೆ-ಹೀಗೆ ಒಂದೇ ಎರಡೇ ಅವರು ತಮ್ಮೆದುರಿಗೆ ಕಟ್ಟಿಕೊಂಡಿದ್ದ ಸ್ವಪ್ನಮಂದಿರಗಳು! ಇವೆಲ್ಲ ಹಿನ್ನೆಲೆಯಾಗಿ ಭಾರತದ ಸ್ವಾತಂತ್ರ್ಯ ಸಾಧನೆಯ ಮಹಾಕಾರ್ಯದಲ್ಲಿ ಹಿಮಾಚಲದೃಶರಾದ ಮಹಾತ್ಮ ಗಾಂಧೀಜಿಯವರು ಹರಿಯಬಿಟ್ಟಿದ್ದ ಶಕ್ತಿವಾಹಿನಿಯ ಅದಮ್ಯ ನಿರ್ಘೋಷ!
Tag: Kannada Sahitya Sammelana 41, Dodbele Narasimhachar, D.L.N, D.L. Narasimhachar, Narasimhacharya
೪0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ವಿ.ಕೃ. ಗೋಕಾಕ್
ಕನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕರಾಗಿ ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕರು ಕೃಷ್ಣರಾಯ-ಸುಂದರಮ್ಮ ದಂಪತಿಗಳಿಗೆ ೯-೮-೧೯0೯ರಲ್ಲಿ ಜನಿಸಿದರು. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ೧೯೩೧ರಲ್ಲಿ ಪುಣೆಯ ಫಗ್ರ್ಯುಸನ್ ಕಾಲೇಜಿನಲ್ಲಿ ಅನಂತರ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು.
ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, ಧಾರವಾಡದ ಕರ್ಣಾಟಕ ಕಾಲೇಜಿನಲ್ಲಿ (೧೯೫೨) ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು. ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದರು. ೧೯೭0ರಲ್ಲಿ ಸಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್ ನಿರ್ದೇಶಕರಾದರು.
ಆಂಧ್ರದ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗೋಕಾಕರು, ಪಿ. ಇ. ಎನ್. ಅಧಿವೇಶನಕ್ಕೆ ೧೯೫೭ರಲ್ಲಿ ಜಪಾನಿಗೆ ತೆರಳಿದರು. ಬೆಲ್ಜಿಯಂನಲ್ಲಿ ಕವಿ ಸಮ್ಮೇಳನದಲ್ಲಿ ಭಾಗವಹಿಸಿದರು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದರು.
ಗೋಕಾಕರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (೧೯೫೮), ಅಮೆರಿಕಾದ ಫೆಸಿಫಿಕ್ ವಿಶ್ವವಿದ್ಯಾಲಯ, ಕರ್ನಾಟಕ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿವೆ. ಪರಿಷತ್ತು ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ೪0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿ ಗೌರವಿಸಿದೆ. ದ್ಯಾವಾ ಪೃಥಿವಿ ಖಂಡಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.
ತಮ್ಮ ಭಾರತ ಸಿಂಧುರಶ್ಮಿ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಗೋಕಾಕರು ಕನ್ನಡಕ್ಕೆ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಸಮರಸವೇ ಜೀವನ (ಇಜ್ಜೋಡು) ಬೃಹತ್ ಕಾದಂಬರಿ ಇವರಿಗೆ ಹೆಸರನ್ನು ತಂದುಕೊಟ್ಟಿದೆ. ಇವರು ಭಾಷಾ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಗೋಕಾಕವರದಿ ಇತಿಹಾಸವನ್ನೇ ಸೃಷ್ಟಿಸಿತು.
ನವ್ಯತೆ ಹಾಗೂ ಕಾವ್ಯ ಜೀವನ, ವಿಶ್ವಮಾನವ ದೃಷ್ಟಿ, ಸೌಂದರ್ಯಮೀಮಾಂಸೆ, ಆಂಗ್ಲ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಇತ್ಯಾದಿ ವಿಮರ್ಶಾಗ್ರಂಥಗಳು, ಜನನಾಯಕ, ವಿಮರ್ಶಕ ವೈದ್ಯ, ಯುಗಾಂತರ, ಮುಂತಾದ ನಾಟಕಗಳು ಇವರಿಂದ ರಚಿತವಾಗಿವೆ. ಇಂಗ್ಲಿಷಿನಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಅರವಿಂದಭಕ್ತರೂ, ಬೇಂದ್ರೆ ಆರಾಧಕರೂ ಆಗಿದ್ದ ಗೋಕಾಕರು ೨೮-೪-೧೯೯೨ರಲ್ಲಿ ಮುಂಬಯಿಯಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೪0,
ಅಧ್ಯಕ್ಷರು: ವಿನಾಯಕ ಕೃಷ್ಣ ಗೋಕಾಕ್
ದಿನಾಂಕ ೧೮, ೧೯, ೨0 ಜನವರಿ ೧೯೫೮
ಸ್ಥಳ : ಬಳ್ಳಾರಿ
ಪೆನ್ ಕಾಂಗ್ರೆಸ್ ಸಮ್ಮೇಳನದ ಹಿರಿಮೆ
ಅಕಸ್ಮಾತ್ತಾಗಿ ಈ ಸಲ ಪ್ರಪ್ರಥಮವಾಗಿ ಏಷ್ಯ ಖಂಡದಲ್ಲಿ ನೆರೆದ ಜಾಗತಿಕ ಲೇಖಕರ ಸಮ್ಮೇಳನವಾದ ಪೆನ್ ಕಾಂಗ್ರೆಸ್ಸಿನಲ್ಲಿ ಭಾರತದ ಪ್ರತಿನಿಧಿಗಳಲ್ಲಿ ಒಬ್ಬನಾಗಿ ಭಾಗವಹಿಸುವ ಸುಸಂಧರ್ಭವು ನನಗೆ ಬಂದಿತ್ತು. ಇಷ್ಟು ವರ್ಷ ಭಾರತೀಯ ಪ್ರತಿನಿಧಿಗಳು ಇಂತಹ ಸಮ್ಮೇಳನದಲ್ಲಿರದೆ ಎಂತಹ ಅನುಭವವನ್ನು ನಾವು ಕಳೆದುಕೊಂಡವು ಎಂದೆನಿಸುವಂತಾಯಿತು. ಆ ಅವಶ್ಯಕತೆಯನ್ನು ವಿವರಿಸುವ ಕಾರಣವಿಲ್ಲ. ಸಾಹಿತ್ಯದ ಪ್ರಗತಿಯಲ್ಲಿ ಅವು ಮೈಲುಗಲ್ಲುಗಳಾಗಿ ನಿಲ್ಲಬಹುದು. ಆಯಾ ವರ್ಷದ ಸಾಹಿತ್ಯಿಕ ಪ್ರಶ್ನೆಗಳ ಮೇಲೆ ನಿಚ್ಚಳವಾದ ಪ್ರಕಾಶವನ್ನು ಕೆಡವಬಹುದು. ಆದರೆ ಈ ಎಲ್ಲ ಭಾರವನ್ನು ಹೊರುವ ಸ್ವಾಗತ ಸಮಿತಿ ಎಲ್ಲಿದೆ? ಯೋಜಕರೇ ಇಲ್ಲಿ ದುರ್ಬಲರಾಗಿದ್ದಾರೆ.
ಪುಸ್ತಕ ಭಂಡಾರಗಳ ಬಗ್ಗೆ ಪರಿಷತ್ತು ಯೋಚಿಸಲಿ
ಪ್ರಾತಿನಿಧಿಕ ಪುಸ್ತಕ ಭಂಡಾರಗಳೆಷ್ಟು ಕರ್ನಾಟಕದಲ್ಲಿವೆಯೆಂದು ಕೇಳುವ ಹಾಗಿದೆ. ದೊಡ್ಡ ಊರಿನ ವಿದ್ಯಾಸಂಸ್ಥೆಗಳು ಇದನ್ನು ಕೈಕೊಳ್ಳಬೇಕು. ಕನ್ನಡ ನಾಡಿನ ಎಲ್ಲಾ ಭಾಗಗಳಲ್ಲಿ ಅಚ್ಚಾದ ಕನ್ನಡ ಪುಸ್ತಕಗಳನ್ನು ವಿಷಯ ಯಾವುದೇ ಇರಲಿ ಒಂದೆಡೆಗೆ ಕಲೆಹಾಕಿ ನಾಡಿನ ದೊಡ್ಡ ದೊಡ್ಡ ಪಟ್ಟಣಗಳಲ್ಲಾದರೂ ಜನತೆಯ ಕಣ್ಣೆದುರಿಗಿರುವ ಪುಣ್ಯಾತ್ಮರು ಇಂದು ಬೇಕಾಗಿದ್ದಾರೆ. ಧಾರವಾಡದಲ್ಲಿ ಬೆಂಗಳೂರ ಪುಸ್ತಕಗಳಿಲ್ಲ, ಬೆಂಗಳೂರಲ್ಲಿ ಧಾರವಾಡದ ಪುಸ್ತಕಗಳಿಲ್ಲ. ಗುಲಬರ್ಗಾದಲ್ಲಿ ಬಹುಶಃ ಅವೂ ಇಲ್ಲ. ಇವು ಇರಲಾರವು. ಮಂಗಳೂರಿನಲ್ಲಿಯೂ ಹಾಗೆಯೇ. ಮಡಿಕೇರಿ ಅದಕ್ಕೂ ದೂರ. ಇಂಥ ಒಂದು ಪುಸ್ತಕ ಭಂಡಾರವಾದರೂ ಆಸ್ತಿತ್ವದಲ್ಲಿದೆಯೇನೆಂದು ಕೇಳುವ ಹಾಗಿದೆ. ಇದ್ದರೆ ಅದಕ್ಕೆ ಸಾರ್ವಜನಿಕ ಸಭೆಯಲ್ಲಿ ಮನ್ನಣೆ ಸಿಕ್ಕಬೇಕು. ಇದ್ದ ಪುಸ್ತಕ ಭಂಡಾರಗಳಲ್ಲಿ ಪ್ರಕಾಶಕ ಮಂಡಲಗಳೂ ಆಗಿರುವ ಭಂಡಾರಗಳೇ ಹೆಚ್ಚು. ಅಲ್ಲಿ ಹೆಚ್ಚಾಗಿ ಬೆಳಕಿಗೆ ಬರುವ ಪುಸ್ತಕಗಳೆಂದರೆ ಆಯಾ ಭಂಡಾರವೇ ಪ್ರಕಾಶಿಸಿದ ಹೊತ್ತಿಗೆಗಳು. ಹೀಗಾಗಿ ಮೊದಲು ನಮ್ಮ ಪುಸ್ತಕ ಭಂಡಾರಗಳಲ್ಲಿ ಕನ್ನಡ ಪುಸ್ತಕಗಳ ಏಕೀಕರಣ ಆಗಬೇಕಾಗಿದೆ. ಊರೂರಿಗೆ ಇಂತಹ ಏಕೀಕರಣ ಕೇಂದ್ರಗಳು ಬೇಕು. ಪರಿಷತ್ತಿನ ಸಮಿತಿಯವರು ಈ ವಿಷಯವನ್ನು ಕುರಿತು ಪರ್ಯಾಲೋಚಿಸುವ ಹಾಗಿದೆ.
ಲೇಖಕರಿಗೆ ಸೂಕ್ತ ಸಂಭಾವನೆ ಸಿಗಲಿ
ಒಳ್ಳೆಯ ಅಜ್ಞಾತ ಕೃತಿಗಳ ಪ್ರಕಾಶನ, ಇತ್ತೀಚೆಗೆ ಸದರ್ನ್ ಬುಕ್ ಟ್ರಸ್ಟ್ನಿಂದ ಕನ್ನಡದಲ್ಲಿ ಉಳಿದ ದಕ್ಷಿಣ ಭಾಷೆಗಳ ಉತ್ತಮ ಕೃತಿಗಳ ಅನುವಾದಗಳು ಬರಹತ್ತಿವೆ. ಟ್ರಸ್ಟಿನಿಂದ ಹಾಗೂ ದಿಲ್ಲಿಯ ಅಕಾಡೆಮಿಯಿಂದ ಕನ್ನಡ ಕೃತಿಗಳ ಅನುವಾದಗಳು ಉಳಿದ ಭಾಷೆಗಳಲ್ಲಿ ಬೆಳಕು ಕಾಣಹತ್ತಿವೆ. ಜನಸಾಮಾನ್ಯರಲ್ಲಿ ಜ್ಞಾನಪ್ರಸಾರಕ್ಕಾಗಿ ಲಿಟರರಿ ಕೋ-ಅಪರೇಟಿವ್ ಸೊಸೈಟಿಯೊಂದು ಧಾರವಾಡದಲ್ಲಿ ಸ್ಥಾಪಿತವಾಗಿ ಈಗಾಗಲೆ ಆರೇಳು ಕೃತಿಗಳನ್ನು ಪ್ರಕಟಿಸಿದೆ; ಲೇಖಕರಿಗೆ ಉಚಿತ ಸಂಭಾವನೆಯನ್ನು ಸಲ್ಲಿಸುತ್ತಿದೆ. ಆದರೆ ಕಾವ್ಯಕ್ಕೆ ಇಂತಹ ಪ್ರಕಟನೆಗಳಲ್ಲಿ ಸ್ವಾಭಾವಿಕವಾಗಿಯೇ ಹೆಚ್ಚಿನ ಸ್ಥಾನವಿರಲಾರದು. ಯೋಗ್ಯ ಪ್ರಥಮ ಕೃತಿಗಳ ಪ್ರಕಾಶನ ಸಂಸ್ಥೆಯೊಂದು ರೂಪಿತವಾಗಬೇಕಾಗಿದೆ. ಲೇಖಕರಿಗೆ ಸಲ್ಲಬೇಕಾದ ಸಂಭಾವನೆಯನ್ನು ಸಲ್ಲಿಸಿ ಅವರ ಕೃತಿಗಳ ಪ್ರಕಾಶನವನ್ನು ಕೈಕೊಳ್ಳುವ ಏರ್ಪಾಟು ಆಗಬೇಕಾಗಿದೆ. ಕೇರಳದಂತಹ ಚಿಕ್ಕ ಪ್ರಾಂತದಲ್ಲಿ ಇಂತಹ ಯೋಜನೆಯು ಊರ್ಜಿತಾವಸ್ಥೆಯಲ್ಲಿದ್ದು ನಮ್ಮಲ್ಲಿ ಇನ್ನೂ ಅದು ತಲೆದೋರದಿರುವುದು ವಿಚಾರಾಸ್ಪದವಾಗಿದೆ.
ಹೊರನಾಡುಗಳಲ್ಲಿ ಕನ್ನಡ ಮಂದಿರಗಳಿರಲಿ
ಹೊರನಾಡ ಕನ್ನಡಿಗರ ವಿಚಾರ. ಭಾರತದ ಪ್ರಮುಖ ನಗರಗಳಲ್ಲಿ ಭಾರತದ ಮುಖ್ಯ ಭಾಷೆಗಳೆಲ್ಲ ತಮ್ಮ ಸಭಾಮಂದಿರಗಳನ್ನು ಕಟ್ಟಿಸಿಕೊಂಡಿವೆ; ಅತಿಥಿಭವನಗಳನ್ನು ನಿಲ್ಲಿಸಿವೆ; ಪ್ರಾಥಮಿಕ ಶಾಲೆಗಳನ್ನು ಭಾಷೆಗಳ ಈ ಸಹೋದರರು ಹೋದಲ್ಲೆಲ್ಲ ತಮ್ಮ ಭಾಷಾ-ಸಂಸ್ಕೃತಿಗಳ ಜೀವಂತ ಸಂಪರ್ಕವನ್ನಿಟ್ಟುಕೊಳ್ಳುವುದು ಸಾಧ್ಯವಾಗಿದೆ. ಕನ್ನಡಕ್ಕೆ ಇನ್ನೂ ಈ ಸೌಭಾಗ್ಯ ದೊರೆಯದಿರುವದು ವಿಷಾದಕರ. ನಾವೇ ಹೊರಗಿರುವ ನಮ್ಮ ನಾಡವರನ್ನು ಈ ರೀತಿ ಉಪೇಕ್ಷಿಸಿರುವಾಗ ಅವರು ನಮ್ಮ ಬಗ್ಗೆ ಏನೆಂದು ಅಭಿಮಾನಪಡಬೇಕು? ಪರಿಷತ್ತು ಈ ದಾರಿಯಲ್ಲಿ ಪರಿಕ್ರಮಿಸಿ ರಾಜ್ಯ ಸರಕಾರದ ಹಾಗೂ ಉಳಿದ ಸಂಸ್ಥೆಗಳ ಸಹಕಾರವನ್ನು ಪಡೆದು ಮೊದಲು ದಿಲ್ಲಿಯಲ್ಲಿಯೂ ಭಾಷಾ ರಾಜ್ಯಗಳಲ್ಲಿಯೂ ಕೇಂದ್ರ ನಗರಗಳಲ್ಲಿಯೂ ಈ ಸೌಕರ್ಯಗಳನ್ನು ಒದಗಿಸಿಕೊಡುವದು ಅತ್ಯಗತ್ಯವಾಗಿದೆ. ಇದರಲ್ಲಿ ವಿಳಂಬವಾದಷ್ಟು ನಮಗೇ ಹಾನಿ. ಹೊರನಾಡ ಕನ್ನಡಿಗರ ಸಂಸ್ಥೆಯು ಈ ಕೆಲಸದಲ್ಲಿ ಎಲ್ಲ ಸಹಾಯವನ್ನು ಒದಗಿಸುವುದರಲ್ಲ್ಲಿ ಸಂಶಯವಿಲ್ಲ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹುಟ್ಟಿದಾಗ ಅದು ಎಣಿಸಿದ ಗುರಿಗಳೆಲ್ಲ ಬಹುಶಃ ಇಂದು ಸಾಧಿಸಿವೆ. ಹೊರನಾಡ ಕನ್ನಡಿಗರ ಜೀವನಕ್ಕೆ ಒಂದು ವ್ಯವಸ್ಥೆಯನ್ನು ತಂದೊದಗಿಸುವ ಕಾರ್ಯವನ್ನು ಸಂಘವು ಸಹ ನೀಗಿಸುವುದು ಸಾಧ್ಯ.
ಕನ್ನಡದ ಸ್ಥಾನಮಾನದ ಚಿಂತನೆ
ಹಿಂದೆ ಉಲ್ಲೇಖಿಸಿದಂತೆ ಅನ್ಯ ಪ್ರಾಂತಗಳಲ್ಲಿ ಸೇರ್ಪಡೆಯಾದ ಕನ್ನಡ ಭಾಗಗಳಲ್ಲಿ ಆಗಬೇಕಾದ ಸಾಂಸ್ಕೃತಿಕ ಕಾರ್ಯವನ್ನೂ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಕನ್ನಡಕ್ಕೆ ದೊರೆಯಬೇಕಾದ ಸ್ಥಾನಮಾನಗಳನ್ನೂ ಇಲ್ಲಿ ನೆನೆಯಬಹುದು.
ಕೆಲವೊಂದು ಕೊರತೆಗಳು
ಕೆಲವೊಂದು ಕೊರತೆಗಳನ್ನು ಇಲ್ಲಿ ಎತ್ತಿ ತೋರಿಸಿದೆ. ಸರ್ವಸಂಗ್ರಹದಂಥ ಪಟ್ಟಿಯನ್ನು ಇಲ್ಲಿ ಮಾಡುವ ಕಾರಣವಿಲ್ಲ. ಉದಾಹರಣೆಗಾಗಿ, ಕನ್ನಡ ಟೈಪ್ರೈಟರ್ ಹಾಗೂ ಶಾರ್ಟ್ ಹ್ಯಾಂಡ್, ಕನ್ನಡ ರಾಜ್ಯದ ಸರಕಾರಕ್ಕೆ ಇದು ಮಹತ್ವದ ಪ್ರಶ್ನೆಯಾಗಿರುವುದರಿಂದ ಇಂದಿಲ್ಲ ನಾಳೆ ಅವು ಬಳಕೆಯಲ್ಲಿ ಬಂದೆ ಬರುತ್ತವೆ. ಕನ್ನಡ ಜ್ಞಾನಕೋಶ ಸರಕಾರದ ಸಾಂಸ್ಕೃತಿಕ ಶಾಖೆಯಲ್ಲಿ ತೀವ್ರವಾಗಿ ರೂಪುಗೊಳ್ಳುತ್ತಲಿದೆ. ಕನ್ನಡ-ಕನ್ನಡ ಶಬ್ದಕೋಶವನ್ನು ಪರಿಷತ್ತು ತಯಾರಿಸುತ್ತಿದೆ. ಕನ್ನಡ ಸಾಹಿತ್ಯದ ಬೃಹತ್ ಚರಿತ್ರೆಯ ಹೊಣೆಯನ್ನು ಕರ್ನಾಟಕ ವಿಶ್ವವಿದ್ಯಾನಿಲಯವು ಹೊತ್ತುಕೊಂಡಿದೆ. ವಿಮರ್ಶಾತ್ಮಕ ಉಪನ್ಯಾಸ ಮಾಲೆಯೊಂದನ್ನೂ ವೈಜ್ಞಾನಿಕ ವಾಙ್ಮಯದ ನಿರ್ಮಾಣವನ್ನೂ ಮೈಸೂರು ವಿಶ್ವವಿದ್ಯಾಲಯವು ತ್ವರೆಯಿಂದ ನಡೆಯಿಸಿಕೊಂಡು ಬಂದಿದೆ. ಅಂತೂ ಕನ್ನಡದ ಭಾಗ್ಯ ತೆರೆಯುವ ಸಮಯ ಬಂದಿದೆ. ಇಂತಹ ಸಮಯದಲ್ಲಿ ಅನೇಕ ಗ್ರಹಣಗಳು ತಾವಾಗಿಯೇ ಬಿಡುತ್ತವೆ.
Tag: Kannada Sahitya Sammelana 40, V.K. Gokak, Vinayaka Krishna Gokak
೩೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕೆ.ವಿ. ಪುಟ್ಟಪ್ಪ
ಕನ್ನಡದ ಮಹಾಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ) ವೆಂಕಟಪ್ಪಗೌಡ- ಸೀತಮ್ಮ ದಂಪತಿಗಳಿಗೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ೨೯-೧೨-೧೯0೪ರಲ್ಲಿ ಜನಿಸಿದರು. ೧೯೧೬ರಲ್ಲಿ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ೧೯೨೯ರಲ್ಲಿ ಎಂ.ಎ. ಪದವಿ ಗಳಿಸಿದರು.
೧೯೨೯ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ೧೯೬0ರಲ್ಲಿ ನಿವೃತ್ತರಾದರು.
ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು. ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು. ಮೈಸೂರಿನಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ ೧೯೫೭ರಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿಯನ್ನೂ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು.
ಬೆಂಗಳೂರು ವಿಶ್ವವಿದ್ಯಾನಿಲದಿಂದ ೧೯೬೯ರಲ್ಲಿ ಗೌರವ ಡಿ.ಲಿಟ್. ಲಭಿಸಿತು. ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿಗಳು ಕುವೆಂಪು ಅವರ ದೈತ್ಯಸಾಹಿತ್ಯ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳಾಗಿವೆ.
೧೯೬೮ರಲ್ಲಿ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಆಗಿದೆ. ೧೯೯೫ರಲ್ಲಿ ನಾಡೋಜ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರ ನೀಡಲಾಯಿತು. ೧೯೮೫ರಲ್ಲಿ ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.
ಅಪಾರ ಅನುಪಮ ಸಾಹಿತ್ಯ ರಚನೆ ಮಾಡಿದ್ದ ಕುವೆಂಪು ಅವರು, ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು. ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು. ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು. ಮಾಸ್ತಿ ಜತೆ ಕರ್ಣಾಟಕ ಭಾರತ ಕಥಾಮಂಜರಿಯನ್ನು ಸಂಪಾದಿಸಿದ್ದಾರೆ.
ಅವರ ಕೆಲವು ಪ್ರಸಿದ್ಧ ಕೃತಿಗಳು ಇವು:
ಶ್ರೀರಾಮಯಣ ದರ್ಶನಂ, ಕಬ್ಬಿಗನ ಕೈಬುಟ್ಟಿ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ವಿಚಾರ ಕ್ರಾಂತಿಗೆ ಆಹ್ವಾನ, ಬೆರಳ್ಗೆ ಕೊರಳ್, ಶೂದ್ರತಪಸ್ವಿ, ಸ್ವಾಮಿ ವಿವೇಕಾನಂದ, ಚಿತ್ರಾಂಗದಾ, ಪಾಂಚಜನ್ಯ, ಬೊಮ್ಮನಹಳ್ಳ್ಳಿ ಕಿಂದರಿಜೋಗಿ, ಕೊಳಲು ಇತ್ಯಾದಿ.
ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದ ಕುವೆಂಪು ಅವರು ೧೧-೧೧-೧೯೯೪ರಲ್ಲಿ ಮೈಸೂರಿನಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೩೯,
ಅಧ್ಯಕ್ಷರು: ಕೆ.ವಿ. ಪುಟ್ಟಪ್ಪ
ದಿನಾಂಕ: ೭, ೮, ೯ ಮೇ ೧೯೫೭
ಸ್ಥಳ : ಧಾರವಾಡ
ಪರಿಷತ್ತಿಗೂ ಪ್ರಾಂತರಚನೆಗೂ ಏನು ಸಂಬಂಧ?
ನಾವಿಂದು ಇಲ್ಲಿ ಏಕೀಕೃತ ಅಖಂಡ ಕರ್ಣಾಟಕದ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ವಾರ್ಷಿಕ ಸಮ್ಮೇಳನೋತ್ಸವದಲ್ಲಿ ಭಾಗಿಗಳಾಗಲು ಬಂದಿದ್ದೇವೆ. ನಾವು ನಿಜವಾಗಿಯೂ ಭಾಗ್ಯಶಾಲಿಗಳಲ್ಲವೆ? ಧನ್ಯರಲ್ಲವೆ?
ಹೌದು, ಅದರೆ ಏಕೆ ಧನ್ಯರು? ಏನು ಧನ್ಯತೆ? ಶಾಶ್ವತ ಪ್ರಯೋಜನರೂಪವಾದ ಯಾವ ಪುರುಷಾರ್ಥ ದೊರೆಕೊಂಡಿದೆ? ಅಥವಾ ಅಂತಹ ಪುರುಷಾರ್ಥ ಸಾಧನೆಗೆ ಹಾದಿಯಾದರೂ ಸಿದ್ಧವಾಗಿದೆಯೆ?
ಸಂಸ್ಕೃತಿ ಸಾಹಿತ್ಯ ಮತ್ತು ಕಲೆಯ ಭೂಮಿಕೆಯಲ್ಲಿ ವ್ಯವಹರಿಸುವ ಸಾಹಿತ್ಯ ಪರಿಷತ್ತಿಗೂ ಈ ಪ್ರಾಂತರಚನೆಯ ರಾಜಕೀಯಕ್ಕೂ ಏನು ಸಂಬಂಧ? ಕನ್ನಡ ಜನತೆಯ ಸಹೃದಯದಲ್ಲಿ ಅಂತರ್ಗತವಾಗಿದ್ದ ಯಾವ ಮೂಕ ಆಶಯವನ್ನು ವಾಙ್ಮಯವನ್ನಾಗಿ ಮಾಡಲು ಪ್ರಯತ್ನಿಸಿ ಸಾಹಿತ್ಯ ಪರಿಷತ್ತು ಕಳೆದ ಮೂವತ್ತೆಂಟು ವರ್ಷಗಳಿಂದ ವರುಷ ವರುಷವೂ ನಾಡಿನ ಕೇಂದ್ರದಲ್ಲಿ ನೇಮಿಯಲ್ಲಿ ಗಡಿಮೂಲೆಗಳಲ್ಲಿ ವಾರ್ಷಿಕ ಸಮ್ಮೇಳನೋತ್ಸವವನ್ನು ನೆರಪಿ ಜನಚೇತನಕ್ಕೆ ನವೋತ್ಸಾಹವನ್ನು ತುಂಬಿ, ನಾಡಿನ ಮಕ್ಕಳನ್ನು ಮತ್ತೆ ಮತ್ತೆ ಎಚ್ಚರಿಸಿ ದೀಕ್ಷಾಬದ್ಧರನ್ನಾಗಿ ಮಾಡುತ್ತಿತ್ತೊ ಆ ಮೂಕ ಆಶಯವೆ ಕಳೆದ ಮೂವತ್ತು ನಾಲ್ವತ್ತು ವರ್ಷಗಳಿಂದಲೂ ನಮ್ಮ ನಾಡಿನ ಕವಿಗಳಲ್ಲಿ, ಲೇಖಕರಲ್ಲಿ ವಿದ್ವಾಂಸರಲ್ಲಿ, ಸಾರ್ವಜನಿಕ ಮುಂದಾಳುಗಳಲ್ಲಿ, ರಾಜಕೀಯ ಆಂದೋಲನಕಾರರಲ್ಲಿ, ವಿದ್ಯಾರ್ಥಿಗಳಲ್ಲಿ, ಅಧ್ಯಾಪಕರಲ್ಲಿ, ಕರ್ಣಾಟಕ ಸಂಘಗಳಂತಹ ಸಂಸ್ಥೆಗಳಲ್ಲಿ, ದೇಶಭಾಷೆಯ ಪತ್ರಿಕೆಗಳಲ್ಲಿ ನಾನಾರೂಪಗಳಿಂದ ಅನೇಕ ಮುಖವಾಗಿ ಅಭಿವ್ಯಕ್ತವಾಗಿ ಸ್ವಯಂ ಕ್ರಿಯಾಸಮರ್ಥವಾದ ಕರ್ತೃಶಕ್ತಿಯಾಗಿ ಏಕೀಕೃತ ಅಖಂಡ ಕರ್ಣಾಟಕವಾಗಿ ಪರಿಣಮಿಸಿತು. ವಾಸ್ತವವಾಗಿ ಈ ಏಕೀಕರಣ ಮತ್ತು ಆಝಂಡತೆ ಹೊಚ್ಚಹೊಸದಾಗಿ ಸೃಷ್ಟಿಯಾದುದೇನೂ ಅಲ್ಲ. ಸಾಂಸ್ಕೃತಿಕವಾಗಿ ದೇಶದ ಮನೋಮಂಡಲದಲ್ಲಿ ಯಾವುದು ಅನೇಕ ಶತಮಾನಗಳಿಂದಲೂ ಅಚ್ಯುತವಾದ ಭಾವಸತ್ಯವಾಗಿದ್ದಿತೊ ಅದು ಈಗ ಭೌಗೋಲಿಕವಾಗಿಯೂ ಸಿದ್ಧವಾಯಿತೆಷ್ಟೋ ಅಷ್ಟೆ.
ಸಮ್ಮೇಳನೋಚಿತ ವಿಚಾರಗಳು
ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಈ ವಿಷಯವಾಗಿ ಇಷ್ಟು ದೀರ್ಘವಾಗಿ ಸಮಾಲೋಚನೆ ಮಾಡಿದುದರ ಅರ್ಥವೇನು? ಉದ್ದೇಶವೇನು? ಸಾಹಿತ್ಯದ ವಿಚಾರವಾಗಿಯೊ ಕವಿಕಾವ್ಯವನ್ನು ಕುರಿತೊ, ಪ್ರತಿಭೆರಸಾಸ್ವಾದಾದಿ ಅಲೌಕಿಕಾನುಭವಗಳನ್ನೊ ಸಾಹಿತ್ಯ ವಿಮರ್ಶೆಯ ಅಥವಾ ಕಾವ್ಯ ವಿೂಮಾಂಸೆಯ ತತ್ತ್ವಗಳನ್ನೊ ಸ್ವಾರಸ್ಯವಾಗಿ ಪ್ರಸ್ತಾವಿಸುತ್ತಾ ಹೋಗದೆ ಭಾಷೆ, ಶಿಕ್ಷಣ ಮಾಧ್ಯಮ, ಪಾರಿಭಾಷಿಕ ಪದಸಮಸ್ಯೆ ಇತ್ಯಾದಿ ಶಿಕ್ಷಣಶಾಸ್ತ್ರ ಸಮ್ಮೇಳನೋಚಿತ ಎನಿಸಬಹುದಾದ ವಿಷಯಗಳ ಪ್ರವೇಶಕ್ಕೆ ಇಲ್ಲಿ ಅಗತ್ಯವೇನಿತ್ತು?
ಯಾರ ಮನಸ್ಸಿನಲ್ಲಾದರೂ ಅಂತಹ ಪ್ರರ್ಶನಾರ್ಥಕ ಚಿಹ್ನೆ ಹೆಡೆಯೆತ್ತಿದ್ದರೆ ಅಥವಾ ಆಶ್ಚರ್ಯ ಚಿಹ್ನೆ ನಿಮಿರಿ ನಿಂತಿದ್ದರೆ ಅದಕ್ಕೆ ಉತ್ತರ ಇಷ್ಟೆ! ಕೇರಳದಲ್ಲಿ ಮಲೆಯಾಳಿಯಂತೆ ಆಂಧ್ರದಲ್ಲಿ ತೆಲುಗಿನಂತೆ ತಮಿಳು ನಾಡಿನಲ್ಲಿ ತಮಿಳಿನಂತೆ ಕರ್ಣಾಟಕದಲ್ಲಿ ಕನ್ನಡ ಪ್ರಥಮಭಾಷೆಯಾಗದಿದ್ದರೆ ಕನ್ನಡವೆ ಶಿಕ್ಷಣ ಮಾಧ್ಯಮವಾಗದಿದ್ದದ್ದರೆ ಕನ್ನಡಿಗರ ಬಾಳು ಕುಂಠಿತವಾಗುತ್ತದೆ; ನಮ್ಮ ತಾಯಿಗೆ ನಮ್ಮ ಮನೆಯಲ್ಲಿಯ ವರಾಂಡದಲ್ಲಿ ಮಲಗಿಕೊಳ್ಳಲು ತಾಣವೂ ಅಲ್ಲ, ನಿಲ್ದಾಣ ಕೊಡಬೇಕಾಗುತ್ತದೆ; ನಮ್ಮ ಜನಸಾಮಾನ್ಯರ ಸರ್ವಾಂಗೀಣವಾದ ನ್ಯಾಯಬದ್ಧವಾದ ವಿಕಾಸಕ್ಕೆ ಅಡಚಣೆ ಒದಗುತ್ತದೆ; ನಮ್ಮ ಸಾಹಿತ್ಯವೂ ಸಮೃದ್ಧವಾಗಿ ಪುಷ್ಟವಾಗಿ ಬಹುಮುಖವಾಗಿ ಸರ್ವತೋಮುಖವಾಗಿ ಬದುಕಿನ ಮತ್ತು ವಿದ್ಯೆಯ ಸರ್ವಶಾಖೆಗಳಲ್ಲಿಯೂ ಚೈತನ್ಯಮಯವಾದ ಜನಜೀವನದ ನೆಲದಿಂದ ಹೊಮ್ಮದೆ ಪ್ರದರ್ಶನಕ್ಕಾಗಿ ತೂಗುಹಾಕಿರುವ ಕುಂಡಗಳಲ್ಲಿ ಬೆಳೆಯುವ ಲಘುಮನೋರಂಜನೆಯ ವಸ್ತುವಾಗುತ್ತದೆ. ಅಂತಹ ದುಃಖದ ಅಮಂಗಳದ ದುರಂತದ ಪರಿಸ್ಥಿತಿಗೆ ಕಾರಣವಾಗುವವರೆಲ್ಲರೂ, ವ್ಯಕ್ತಿಗಳಾಗಲಿ ಸಂಸ್ಥೆಗಳಾಗಲಿ, ಚಿರಂತನವಾಗಿ ಶಾಪಗ್ರಸ್ತರಾಗುತ್ತ್ತಾರೆ; ಕವಿ ಪ್ರವಾದಿಯೂ ಆಗುತ್ತಾನೆ.
ಆದರೆ ಹಾಗಾಗುವುದಿಲ್ಲ. ನಮ್ಮ ಜನ ಹಾಗೆ ಆಗಗೊಡಲು ಬಿಡುವುದಿಲ್ಲ. ಒಂದು ವೇಳೆ ಕನ್ನಡಿಗರ ದೌರ್ಬಲ್ಯೋಪಮವಾದ ಅತ್ಯೌದಾರ್ಯದಿಂದಲೋ ಅತಿ ದಾಕ್ಷಿಣ್ಯದಿಂದಲೋ ಅವರು ಔದಾಸೀನ್ಯವನ್ನಲಂಬಿಸಿದರೆ ತೆಲುಗು ತಮಿಳು ಮಲೆಯಾಳಿ ಮರಾಠಿ ಬಂಗಾಳಿ ಮೊದಲಾದ ಭಾರತೀಯ ಭಾಷೆಗಳ ನಮ್ಮ ನೆರೆಯ ಸಹೋದರರು ತಮ್ಮ ತಮ್ಮ ಭಾಷೆಗಳಿಗೆ ತಮ್ಮ ತಮ್ಮ ನಾಡುಗಳಲ್ಲಿ ಸರಿಯಾದ ಸ್ಥಾನಮಾನಗಳನ್ನು ಕಲ್ಪಿಸುವುದರಿಂದಲೆ ನಮ್ಮನ್ನು ಸರಿಯಾದ ದಾರಿಗೆ ಅನಿವಾರ್ಯವಾಗಿಯೆ ತಳ್ಳುವುದರಲ್ಲಿ ಸಂದೇಹವಿಲ್ಲ, ಆದ್ದರಿಂದಲೆ ನಾನು ಸಂಪೂರ್ಣ ಆಶಾವಾದಿಯಾಗಿದ್ದೇನೆ.
ಪರಿಷತ್ತಿನ ಮುಂದಿನ ಗುರಿ
ಕನ್ನಡ ಜನರ ಆಶೋತ್ತರ ಮತ್ತು ಕರ್ಣಾಟಕ ಸಂಸ್ಕೃತಿಯ ಪ್ರತಿನಿಧಿಯಾದ ಕನ್ನಡ ಸಾಹಿತ್ಯ ಪರಿಷತ್ತು ಸದ್ಯಕ್ಕೆ ನಮ್ಮ ಅಭ್ಯುದಯಕ್ಕೆ ಆವಶ್ಯಕವಾದ ಭೌಗೋಲಿಕ ಚೌಕಟ್ಟನ್ನು ಸಾಧಿಸಿದೆ. ನವಮೈಸೂರು ರಾಜ್ಯದ ಆ ಚೌಕಟ್ಟಿನ ಮೇಲೆ ನಮ್ಮ ಸಂಸ್ಕೃತಿಯ ಆದರ್ಶದ ‘ಕರ್ಣಾಟಕ’ವನ್ನು ಕಟ್ಟಬೇಕಾಗಿದೆ. ಇದುವರೆಗೆ ಪರಿಷತ್ತಿನ ವಾರ್ಷಿಕ ಸಮ್ಮೇಳನ ಸ್ವಲ್ಪ ಹೆಚ್ಚು ಕಡಮೆ ಉತ್ಸವರೂಪದ ಪ್ರಚ್ಛನ್ನ ರಾಜಕೀಯ ಚಳುವಳಿಯಾಗಿಯೆ ಸಾಗುತ್ತಿತ್ತು. ಇನ್ನು ಮೇಲೆ ಈ ವಾರ್ಷಿಕ ಸಮ್ಮೇಳನ ಮಾತ್ರವಾಗಿ ಪರ್ಯವಸಾನ ಹೊಂದುವುದರಲ್ಲಿ ಔಚಿತ್ಯವಿಲ್ಲ, ಇದು ಸಾಹಿತ್ಯಕ್ಷೇತ್ರದ ಶ್ರಮಜೀವಿಗಳ ಮತ್ತು ಕಲಾಸಾಧಕರ ವಾರ್ಷಿಕ ಸಾಹಸಸಿದ್ಧಿಗಳ ಪರೀಕ್ಷೆಯ ನಿಕಷವೇದಿಕೆಯಾಗಿ ಪರಿಣಮಿಸಬೇಕು. ನಮ್ಮ ನೆರೆಯ ಸೋದರ ಭಾಷಾಸಾಹಿತ್ಯಗಳೊಡನೆ ಹೆಚ್ಚು ಹೆಚ್ಚು ಸಂಪರ್ಕ ಬೆಳೆಯಲು ಪರಸ್ಪರ ಹೃದಯ ಪರಿಚಯದ ಮೈತ್ರಿ ಸಾಧನೆಯ ರಂಗವಾಗಿ ಪರಿವರ್ತಿತವಾಗಬೇಕು. ಅಖಿಲ ಭಾರತೀಯವಾದ ಯಾವ ಮಹೋದ್ದೇಶದಿಂದ ಸಾಹಿತ್ಯ ಅಕಾಡೆಮಿ ಪ್ರೇರಿತವಾಗಿ ವಿವಿಧ ಕಾರ್ಯಗಳಲ್ಲಿ ಪ್ರವೃತ್ತವಾಗಿದೆಯೊ ಅದರ ಪ್ರಾದೇಶಿಕ ಪ್ರತಿನಿಧಿಯಾಗಬೇಕು. ಕರ್ಣಾಟಕದ ವಿವಿಧ ಸಂಸ್ಥೆಗಳಲ್ಲಿ ವಿವಿಧ ಸಂಘಗಳಲ್ಲಿ ವಿವಿಧ ವ್ಯಕ್ತಿಗಳಲ್ಲಿ ರೂಪುಗೊಳ್ಳುತ್ತಿರುವ ಮತ್ತು ಅಭಿವ್ಯಕ್ತವಾಗುತ್ತಿರುವ ಪುರೋಗಾಮಿಗಳಾದ ಹೃದಯದ ಮತ್ತು ಬುದ್ಧಿಯ ಶಕ್ತಿಗಳನ್ನೆಲ್ಲ ಕ್ರೋಢೀಕರಿಸಿ, ಅವುಗಳನ್ನು ತಾತ್ಕಾಲಿಕತೆಯ, ವಿಫಲತೆಯ, ಅಲ್ಪ ಮನೋರಂಜನೆಯ, ವಿಕೃತ ಕಲ್ಪನೆಯ, ಶೀಘ್ರಕೀರ್ತಿಯ, ಅಲ್ಪಪ್ರಯೋಜನದ ವ್ಯರ್ಥಸಾಹಸೋದ್ಯಮದಿಂದ ವಿಮುಖವನ್ನಾಗಿ ಮಾಡಿ, ರಕ್ಷಿಸಿ, ಮಹೋದ್ದೇಶದ ಹಾಗೂ ಚಿರಂತನ ಪ್ರಯೋಜನದ ಕಡೆಗೆ ತಿರುಗಿ ಶಿಷ್ಟಸಂಕಲ್ಪನಿಷ್ಠವನ್ನಾಗಿ ಮಾಡಬೇಕು.
ಪರಿಷತ್ತಿನ ಸಾಧನೆ ಏನು
ಈ ಮೂವತ್ತು ನಲ್ವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಾಧಿಸಿರುವ ಸಂಪತ್ತು, ಪರಿಷತ್ತು ಸಕಾರಣವಾಗಿ ನಿಸ್ಸಂಕೋಚವಾಗಿ ಹೆಮ್ಮೆಪಟ್ಟುಕೊಳ್ಳುವಷ್ಟು ವೈಭವಪೂರ್ಣವಾಗಿದೆ, ವೈವಿಧ್ಯಪೂರ್ಣವಾಗಿದೆ, ಶ್ರೀಮಂತವಾಗಿದೆ. ಲೋಕ ಸಾಹಿತ್ಯದ ವಿಚಾರವಾಗಿ ಹಿಂದೆ ಹೇಳಿದುದಕ್ಕಿಂತಲೂ ನೂರುಮಡಿ ಹೆಚ್ಚಾಗಿ ಹೇಳಬಹುದು. ಭಾಷಾಸಾಹಿತ್ಯದ ವಿಚಾರವಾಗಿ. ಉದ್ದಾರಕ್ಕೆ ಎಲ್ಲೆ ಇದೆಯೆ? ಮಹಚ್ಚೇತನದ ಅಭೀಪ್ಸೆ ನಿಖರವಾದುದಲ್ಲವೆ? “ಉತ್ಸರ್ಪಿಣೀ ಖಲು ಮಹಾತಾಂ ಪ್ರಾರ್ಥನಾ!” ಉದ್ಧಾರದ ಕೊನೆ ಮುಟ್ಟಿದೆವು ಎಂದುಕೊಳ್ಳುವುದೆ ಪತನಕ್ಕೆ ಮೊದಲ ಹೆಜ್ಜೆಯಾದೀತು! ಆದ್ದರಿಂದ ನಮ್ಮ ಉದ್ಧಾರದ ವಿಷಯದಲ್ಲಿ ಸ್ವಲ್ಪ ಅತೃಪ್ತಿಯಿರಬೇಕಾದ್ದು ಪ್ರಗತಿಗೆ ಆವಶ್ಯಕ. ಆದರೆ, ಆ ಅತೃಪ್ತಿ ಆತ್ಮಧಿಕ್ಕಾರದ ಮಟ್ಟಕ್ಕೇರಿ, ಸಾಧಿಸಿರುವ ಕಾರ್ಯದ ಅವಹೇಳನದ ರೂಪಕ್ಕೂ ತಿರುಗಿ ದೋಷೈಕದೃಷ್ಟಿಯಾಗಿ ಉತ್ತಮಾಂಶವನ್ನೆಲ್ಲಾ ಅಸೂಯಾಜನ್ಯವಾದ ನಿಂದಾಗ್ನಿಯಲ್ಲಿ ಹೋಮಮಾಡುವಂತಾದರೆ ಅಂತಹ ಅತೃಪ್ತಿಯನ್ನು ಮನೋವಿಕಾಸ ಸಂಭೂತವಾದ ಒಂದು ರೋಗವನ್ನಾಗಿ ಭಾವಿಸಬೇಕಾಗುತ್ತದೆ. ಅಂತಹ ರೋಗದಿಂದ ವಿಮುಕ್ತರಾಗಿ ಪೂರ್ವಗ್ರಹದೂರವಾದ ಅಧಿಕಾರ ಬುದ್ಧಿಯಿಂದಲೂ ಅನೇಕ ಸಾಹಿತ್ಯಾಧ್ಯಯನದಿಂದ ಸಿದ್ಧವಾದ ನಿಷ್ಪಕ್ಷಪಾತ ವಿಮರ್ಶೆಯ ದೃಷ್ಟಿಯಿಂದ ಸಮೀಕ್ಷಿಸಿದರೆ ಕನ್ನಡ ಸಾಹಿತ್ಯ ಈ ಮೂವತ್ತು ನಾಲ್ವತ್ತು ವರ್ಷಗಳಲ್ಲಿ ಅದ್ಭುತವನ್ನೆ ಸಾಧಿಸಿದೆ ಎಂದು ಹೇಳಬೇಕಾಗುತ್ತದೆ.
Tag: Kannada Sahitya Sammelana 39, K.V. Puttappa, Kuvempu
೩೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಆದ್ಯ ರಂಗಾಚಾರ್ಯ
ಶ್ರೀರಂಗರೆಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ವಾಸುದೇವಾಚಾರ್ಯ ಜಾಗೀರದಾರ್ ಮತ್ತು ರಮಾಬಾಯಿ ಅವರ ಪುತ್ರರಾಗಿ ೨೬-೯-೧೯0೪ರಲ್ಲಿ ವಿಜಾಪುರದ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ ಜನಿಸಿದರು. ವಿಚಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, ೧೯೨೧ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ೧೯೨೫ರಲ್ಲಿ ಬಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೨೫ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು ೧೯೨೮ರಲ್ಲಿ ಭಾರತಕ್ಕೆ ಮರಳಿದರು.
ಕೆಲವು ಕಾಲ ಹಾಫ್ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು ೧೯೩0ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ ೧೮ ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ಅನಂತರ ಆ ಕೆಲಸಕ್ಕೆ ರಾಜೀನಾಮೆಯಿತ್ತು, ಭಾರತ ವಾರ್ತಾಶಾಖೆಯಲ್ಲಿ ನಾಟಕ ವಿಭಾಗದ ನಿರ್ದೇಶಕರಾಗಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದರು.
ಶ್ರೀರಂಗರು ವಿಶೇಷವಾಗಿ ರಂಗಭೂಮಿಗೆ ತಮ್ಮ ಹೊಸ ಪ್ರಯೋಗಗಳಿಂದ ಕೊಡುಗೆಗಳನ್ನು ನೀಡಿದರು. ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಶ್ರೀರಂಗರು ಪರಿಷತ್ತಿಗೆ ಉತ್ತರ ಕರ್ನಾಟಕ ಪ್ರಾಂತ ಸಮಿತಿಯ ಅಧ್ಯಕ್ಷರಾಗಿದ್ದರು. ೧00ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ ಶ್ರೀರಂಗರು ಮೂರು ವರ್ಷಗಳ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ‘ಜಯಂತಿ’, ‘ಪ್ರೇಮ’ ಪತ್ರಿಕೆಗಳಿಗಾಗಿ ಶ್ರಮಿಸಿದರು.
ಇವರು ಕನ್ನಡ ನಾಟ್ಯ ವಿಲಾಸಿ ಸಂಸ್ಥೆಯನ್ನು ೧೯೩೩ರಲ್ಲಿ ಆರಂಭಿಸಿದರು. ಇವರಿಗೆ ೧೯೬೮ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್ ಗೌರವ ದೊರಕಿತು, ೧೯೭೨ರಲ್ಲಿ ಭಾರತ ಸರ್ಕಾರದವರು ಪದ್ಮಭೂಷಣ ಪ್ರಶಸ್ತಿ ದಯಪಾಲಿಸಿದರು. ಇವರ ಕಾಳಿದಾಸ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಯಿತು.
ರಾಯಚೂರಿನಲ್ಲಿ ನಡೆದ ೧೯೫೫ರ ೩೮ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ನಾಟಕರಂಗದಲ್ಲಿ ಕೇವಲ ಕೃತಿರಚನೆಗಳಿಂದಷ್ಟೇ ಅಲ್ಲದೆ ರಂಗ ಪ್ರಯೋಗಗಳಲ್ಲಿ ನೂತನತೆ ತಂದವರು ಶ್ರೀರಂಗರು. ಅವರು ಶೋಕಚಕ್ರ, ಹರಿಜನ್ವಾರ, ಕೇಳು ಜನಮೇಜಯ, ರಂಗಭಾರತ, ಕತ್ತಲು-ಬೆಳಕು, ಉದರ ವೈರಾಗ್ಯ ಮೊದಲಾದ ಪ್ರಸಿದ್ಧ ನಾಟಕಗಳನ್ನು ರಚಿಸಿದ್ದಾರೆ. ವಿಶ್ವಾಮಿತ್ರ, ಪುರುಷಾರ್ಥ ಮೊದಲಾದ ಕಾದಂಬರಿಗಳನ್ನೂ ಶಾರದೆಯ ಸಂಸಾರ (ಭಾಷಾಶಾಸ್ತ್ರ), ಗೀತಾ ಗಾಂಭೀರ್ಯ, ನಗೆ, ಸಾಹಿತಿಯ ಆತ್ಮಜಿಜ್ಞಾಸೆ, ಕೆಮಾಲ್ ಪಾಷಾ, ಕಿಟ್ಟಣ್ಣನ ಕ್ಲಬ್ಬು, ಭಗವಾನ್ ಬುದ್ಧ (ಅನುವಾದ), ನಮ್ಮ ನೆಚ್ಚಿನ ನೆಹರೂ ಮೊದಲಾದ ಆತ್ಮಕಥೆ, ಜೀವನ ಚರಿತ್ರೆ, ವಿಡಂಬನೆ ಕಥಾಸಂಕಲನ, ಭಾಷಾಶಾಸ್ತ್ರ ಗೀತೆ, ರಂಗ ಮೀಮಾಂಸೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದರು. ಆದರೆ ಅವರು ನಾಟಕಕಾರರೆಂದೇ ಹೆಸರಾಗಿದ್ದಾರೆ.
ಕನ್ನಡಕ್ಕೆ ಬಹುಮುಖ ಕೊಡುಗೆಗಳನ್ನಿತ್ತ ಶ್ರೀರಂಗರು ೧೭-೧0-೧೯೮೪ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೩೮,
ಅಧ್ಯಕ್ಷರು: ಆದ್ಯ ರಂಗಾಚಾರ್ಯ
ದಿನಾಂಕ ೨೫, ೨೬, ೨೭ ಡಿಸೆಂಬರ್ ೧೯೫೫
ಸ್ಥಳ : ರಾಯಚೂರು
ಹಿಂದೀ ಭಾಷೆಯನ್ನಾಡುವವರ ಸಂಖ್ಯೆ ತೀರ ದೊಡ್ಡದಿದ್ದರೆ ಮಲಯಾಳಿಗರ ಸಂಖ್ಯೆ ಕಡಿಮೆ ಇದೆ. ಹಿಂದೀ ಸಾಹಿತ್ಯಕ್ಕೆ-ಜೊತೆಗೆ ಆಡಳಿತದ ಭಾಷೆ ಎನಿಸುವುದರಿಂದ-ಇನ್ನಿಷ್ಟು ಹೆಚ್ಚು ಓದುಗರು ದೊರೆತರೆ-ಮೈಸೂರು ಧಾರವಾಡ ಎಂಬ ವಾದದಲ್ಲಿ ಕನ್ನಡ ಸಾಹಿತ್ಯಕ್ಕೆ ಇನ್ನಿಷ್ಟು ಕಡಿಮೆ ಓದುಗರು ದೊರೆಯಬಹುದು. ಓದುಗರು ಕಡಿಮೆಯಾದ ಮಟ್ಟಿಗೆ ಉತ್ತಮ ಸಾಹಿತ್ಯ ನಿರ್ಮಾಣಕ್ಕೆ ಉತ್ತೇಜನವೂ ಕಡಿಮೆಯಾಗಬಹುದು. ಈ ಪರಿಸ್ಥಿತಿಯನ್ನು ಯೋಚಿಸುವುದು ಯೋಗ್ಯ ಸಾಹಿತ್ಯವನ್ನು ನಿರ್ಮಿಸಬಲ್ಲ ಸಾಹಿತಿಗಳ ಕೈಯಲ್ಲಿದೆಯಲ್ಲದೆ ಕಾಯಿದೆಗಳನ್ನು ಗೊತ್ತುಮಾಡುವ ಸರಕಾರಗಳ ಕೆಲಸವಿದಲ್ಲ. ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಈ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಹೆಚ್ಚು ಸಹಾಯಕವಾಗಬಲ್ಲವು. ಮೊದಲನೆಯದಾಗಿ, ಆಯಾ ಭಾಷೆಯ ಕೇಂದ್ರ ಸಾಹಿತ್ಯ ಸಂಸ್ಥೆಗಳು ಪ್ರತಿವರ್ಷ ದೇಶದ ಬೇರೆ ಬೇರೆ ಸಾಹಿತ್ಯಗಳಿಂದ ಒಂದೊಂದು ಉತ್ತಮ ಕೃತಿಯನ್ನು ತಮ್ಮ ಭಾಷೆಗೆ, ತಮ್ಮ ಕೆಲವು ಉತ್ತಮ ಕೃತಿಗಳನ್ನು ಬೇರೆ ಬೇರೆ ಭಾಷೆಗಳಿಗೆ ಪರಿವರ್ತಿಸುವಂತಹ ತಜ್ಞರ ಸಮಿತಿಗಳನ್ನು ಏರ್ಪಡಿಸಬೇಕು. ಪ್ರತಿವರ್ಷವೂ ಕೇಂದ್ರ ಮತ್ತು ಸಂಬಂಧಿಸಿದ ರಾಜ್ಯ ಸರಕಾರಗಳು ಮೇಲಿನ ಕೃತಿಗೆ ಕೊಡುವಂತೆ ಉತ್ತಮ ಬಾಷಾಂತರಿತ ಕೃತಿಗಳಿಗೂ ಪಾರಿತೋಷಕಗಳನ್ನು ಕೊಡಬೇಕು. ಹೀಗಾದಲ್ಲಿ ಪ್ರತಿಯೊಂದು ಸಾಹಿತ್ಯವೂ ಪರಸ್ಪರ ಪೋಷಕತೆಯಿಂದ ಬಲಗೊಳ್ಳುವದಲ್ಲದೆ ದೇಶದ ಯಾವುದೇ ಭಾಷೆಯ ಉತ್ತಮ ಸಾಹಿತಿಯ ಪರಿಚಯವು ಇಡಿಯ ದೇಶಕ್ಕಾಗುವುದು.
ಹೊರನಾಡ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿ
ಇದೇ ಸಂದರ್ಭದಲ್ಲಿ ಒಂದು ವಿಷಯದ ಕಡೆ ತಮ್ಮ ಲಕ್ಷ್ಯವನ್ನು ಸೆಳೆಯಬಯಸುತ್ತೇನೆ. ಕಳೆದ ಎರಡು ವರ್ಷಗಳ ಸ್ವಂತ ಅನುಭವಕ್ಕಾಗಿಯೂ – ಇದನ್ನು ತುಸು ಹಟದಿಂದ ಹೇಳಬಯಸುತ್ತೇನೆ. ದೇಶದ ಮಿಕ್ಕ ಸಾಹಿತ್ಯಗಳೊಡನೆ ಸಂಪರ್ಕ ಬೆಳೆಯಬೇಕೆಂದು ಹೇಳಿದೆನಲ್ಲವೆ? ಈಗಾಗಲೆ ಈ ಕೆಲಸ ನಡೆದಿದೆ. ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಹೊರನಾಡ ಕನ್ನಡಿಗರ ಸಂಸ್ಥೆ ಎಂಬ ಹೆಸರಿನಿಂದ ನಮ್ಮ ಕನ್ನಡ ಗೆಳೆಯರು ದೇಶದ ಅನೇಕ ಕಡೆಗಳಲ್ಲಿ ಕರ್ನಾಟಕ ಸಂಘಗಳನ್ನು ರಚಿಸಿಕೊಂಡು, ವರ್ಷಕ್ಕೊಮ್ಮೆ ಸಮ್ಮೇಳನವನ್ನು ನಡೆಯಿಸಿದ್ದಾರೆ. ಆದರೂ ಅವರ ಕನ್ನಡನಾಡು-ನುಡಿ-ಸಾಹಿತ್ಯ-ಸಂಸ್ಕೃತಿಗಳ ಪರಿಚಯ ಕಾರ್ಯಕ್ಕೆ ಸಾಕಷ್ಟು ಬಲ ಬಂದಿಲ್ಲ, ನಮ್ಮೆಲ್ಲರ ಪ್ರೋತ್ಸಾಹ-ಆಶ್ರಯಗಳಿಲ್ಲದೆ ಅದು ಬರುವಂತಿಲ್ಲ. ಹೊರನಾಡ ಕನ್ನಡಿಗರ ಚಟುವಟಿಕೆಗಳ ಬಗ್ಗೆಯ ಪರಿಣಾಮಗಳನ್ನು ನೋಡಿದರೆ ಈ ಪ್ರೋತ್ಸಾಹ-ಆಶ್ರಯಗಳು ಅಗತ್ಯ, ಅರ್ಹ ಎಂದು ಖಂಡಿತವಾಗಿ ಕಂಡುಬರುವುದು. ಕನಿಷ್ಠ ಪಕ್ಷಕ್ಕೆ ನಾವು-ಪರಿಷತ್ತಿನ ವತಿಯಿಂದ ಕೆಲವು ವಿದ್ವಾಂಸ ಉಪನ್ಯಾಸಕರನ್ನು, ಆಗಾಗ ನಾಟಕ-ನೃತ್ಯ ಕಲೆಗಾರರನ್ನು ಮತ್ತು ಕರ್ನಾಟಕದ ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಅಂಕಿ-ಸಂಖ್ಯೆ-ನಕ್ಷೆ-ಸಮಾಚಾರಗಳನ್ನು ಒದಗಿಸುತ್ತ ಹೋದರೂ ಹೊರನಾಡ ಕನ್ನಡ ಕಾರ್ಯಕರ್ತರಿಗೆ ಹೆಚ್ಚಿನ ಉತ್ಸಾಹ ಬರುವುದು. ಅದರಂತೆ ಅಲ್ಲಲ್ಲಿಯ ಬೇರೆ ದೇಶೀಯ ಸಾಹಿತ್ಯಗಳ ಪರಿಚಯವನ್ನು ಮಾಡಿಕೊಡಲು ಹೊರನಾಡ ಸಂಘಗಳು ಸಹಾಯಕವು.
ಸಮ್ಮೇಳನಾಧ್ಯಕ್ಷರ ಭಾಷಣ ಹೇಗಿರಬೇಕು
ರಸಿಕ ಮಹಾನುಭಾವರೆ, ಇಂತಹ ಭಾಷಣದಲ್ಲಿ ಸಾಮಾನ್ಯವಾಗಿ ಅಪೇಕ್ಷಿಸಲಾದ ಕೆಲವು ಸಂದರ್ಭಗಳು ಇಲ್ಲ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ಕನ್ನಡ ಸಾಹಿತ್ಯದ ಬೆಳವಣಿಗೆಯ ಹಿನ್ನೆಲೆಯಲ್ಲಿ, ಪ್ರಕಟವಾಗುತ್ತಿರುವ ಸಾಹಿತ್ಯ ಕೃತಿಗಳ ಸಮಾಲೋಚನೆ, ಅವುಗಳನ್ನು ಬರೆದವರ ಹೆಸರುಗಳ ಪಟ್ಟಿ, ಔಪಚಾರಿಕವಾದ ವಿಮರ್ಶಾತ್ಮಕ ಮಾತುಗಳು- ಇದೆಲ್ಲ ಇಲ್ಲಿ ಇರಬೇಕೆಂದು ತಾವು ಬಯಸುವುದು. ಸಂಪ್ರದಾಯದ ದೃಷ್ಟಿಯಿಂದ ಸಹಜ. ಆದರೆ ನನ್ನ ಅಭಿಪ್ರಾಯ ಬೇರೆಯಾಗಿದೆ. ಸಮ್ಮೇಳನದ ಅಧ್ಯಕ್ಷನಾಗುವವನು ಆಯಾ ವರ್ಷಾವಧಿಯ ಪ್ರತಿಯೊಂದು ಪ್ರಕಟನೆಯನ್ನು ಅರಿತಿಕೊಂಡು ಅಭ್ಯಾಸಿಸಿಕೊಂಡು ಸಜ್ಜಾಗಿರಬೇಕೆಂದು ಬಯಸುವುದು ಒಂದು ವ್ಯಕ್ತಿಗೆ ಅನ್ಯಾಯ, ಒಂದು ಮಹತ್ತ್ವದ ಕೆಲಸ ವಿರಸ. ಸಾಹಿತ್ಯದ ಸಮಾಲೋಚನೆಯನ್ನು ನಿಧಾನವಾಗಿ ಮಾಡುವುದು ಉಚಿತ; ಅಲ್ಪಾವಧಿಯಲ್ಲಿ ಅಧ್ಯಕ್ಷ ಭಾಷಣವನ್ನು ಬರೆಯುವಾಗ ಮಾಡಬಾರದಂತಹ ಮಹತ್ವದ ಕೆಲಸವದು. ಇದಲ್ಲದೆ ಸಾಹಿತ್ಯದ ಬೆಳವಣಿಗೆ ಕೃತಿಗಳ ಯೋಗ್ಯತೆಯನ್ನು ಅವಲಂಬಿಸಿರುವುದು, ಅವನ್ನು ಬರೆದವರ ಹೆಸರುಗಳನ್ನಲ್ಲ. ಹೀಗೆ ಹೇಳಿ ಈ ಕೆಲಸ ಅನಾವಶ್ಯಕ ಎಂದು ನಾನು ಹೇಳಬಯಸುವುದಿಲ್ಲ.
ವಾರ್ಷಿಕ ಸಾಹಿತ್ಯ ಸಮಾಲೋಚನೆ ಗ್ರಂಥರಚನೆ
ವರ್ಷ ವರ್ಷಕ್ಕೆ ಈ ಸಾಹಿತ್ಯ ಸಮಾಲೋಚನೆ ಎಷ್ಟು ಅಗತ್ಯದ್ದೊ ಅಷ್ಟೆ ಮಹತ್ವದ್ದೂ ಆಗಿದೆ. ಈ ಬಗ್ಗೆ ನನ್ನದೊಂದು ಸೂಚನೆ ಇದೆ. ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಯು ಈ ಕೆಲಸವನ್ನು ಮಾಡುವುದು ಯೋಗ್ಯ. ಪ್ರತಿ ವರ್ಷ ಸಾಹಿತ್ಯ ಸಮ್ಮೇಳನದ ಕಾಲಕ್ಕೆ ಪರಿಷತ್ತು ಈ ವರ್ಷದ ಸಾಹಿತ್ಯ ಸಮಾಲೋಚನೆಯನ್ನು ತನ್ನ ವಾರ್ಷಿಕ ವರದಿಯ ಅಂಗವಾಗಿ ಪ್ರಕಟಿಸಬಹುದಲ್ಲ? ಪರಿಷತ್ತಿನಂತಹ ಸಂಸ್ಥೆ ಒಂದೇ ಒಂದಾಗಿ ಈ ಕಾರ್ಯವನ್ನು ಮಾಡಲು ಶಕ್ಯವಿಲ್ಲ ಎಂಬುದನ್ನು ಬಲ್ಲೆ. ಇದಕ್ಕೆ ಪ್ರಕಾಶಕರು, ಗ್ರಂಥಕರ್ತರು ಪೂರ್ತಿಯಾಗಿ ಸಹಕಾರವನ್ನು ನೀಡಬೇಕು. ಪುಸ್ತಕದ ಪ್ರತಿಯನ್ನು ಕಳಿಸುವುದು ಬೇಡ: ಕನಿಷ್ಠ ಪಕ್ಷಕ್ಕೆ ಒಂದು ಗ್ರಂಥ ಪ್ರಕಟವಾದೊಡನೆ ಅದರ ಹೆಸರು, ಗ್ರಂಥಕರ್ತ, ಪ್ರಕಾಶಕ, ಪುಟ ಸಂಖ್ಯೆ, ಆಕಾರ, ಬೆಲೆ, ಪ್ರಕಟನೆಯ ತಿಂಗಳೂ ಇಲ್ಲವೆ ತಾರೀಖು-ಇಷ್ಟನ್ನಾದರೂ ಪ್ರಕಾಶಕನಾಗಲಿ ಗ್ರಂಥಕರ್ತನಾಗಲಿ ಪರಿಷತ್ತಿನ ಕಚೇರಿಗೆ ತಿಳಿಸಬಹುದಲ್ಲ? ಅದರಂತೆಯೇ ಶಕ್ಯವಾದರೆ, ಆಯಾ ಸಾಹಿತ್ಯ ಮಾದರಿಯ ಆ ವರ್ಷದ ವೈಶಿಷ್ಟ್ಯಗಳ, ಸ್ಥೂಲರೂಪದಲ್ಲಿ ಮಾತ್ರವೇ ಆಗಲಿ ವಿಮರ್ಶಿಸುವ ಯೋಚನೆಯನ್ನು ಪರಿಷತ್ತು ಮಾಡಬಹುದು. ಇಂದು ನಾವು ಮುಂದುವರಿಯುತ್ತಿರುವೆವೆ ಇಲ್ಲವೆ ಎಂಬುದನ್ನು ತಿಳಿದುಕೊಳ್ಳಲು ಈ ತರಹದ ಆತ್ಮವಿಮರ್ಶೆ ಅಗತ್ಯವಾಗಿದೆ.
ಸಾಮಾಜಿಕ ಹೊಣೆ: ಇಂದಿನವರೆಗೆ, ಈ ಪೀಠವನ್ನು ಅಲಂಕರಿಸಿದವರು ನನಗಿಂತ ಹಿರಿಯರು, ವಿದ್ವಾಂಸರು, ಕನ್ನಡ ಸಾಹಿತ್ಯಕ್ಕೆ ಪ್ರತಿಭಾನ್ವಿತ ಕಾಣಿಕೆಗಳನ್ನು ಸಲ್ಲಿಸಿದವರು. ತಮ್ಮ ಅಧಿಕಾರವಾಣಿಯಿಂದ ಅವರು ಸಾಹಿತ್ಯ ಮತ್ತು ಸಾಹಿತಿಯ ಕುರಿತು ಕೂಲಂಕುಷವಾಗಿ ವಿವೇಚನೆಯನ್ನು ಮಾಡಿದ್ದಾರೆ. ಪುನರುಕ್ತಿ ಬೇಡವೆಂದೊ ಇಲ್ಲವೆ ಆ ಯೋಗ್ಯತೆ ಇಲ್ಲವೆಂದೊ ನಾನು ಬೇರೊಂದು ದಾರಿಯನ್ನು ಹಿಡಿದಿದ್ದೇನೆ. ನನ್ನ ಕಿರಿದಾದ ಅನುಭವದಲ್ಲಿ ತೋಚಿದ ನಾಲ್ಕಾರು ಮಾತುಗಳನ್ನು ಹೇಳುತ್ತಲಿದ್ದೇನೆ. ಒಂದು ವೇಳೆ ನಾನು ಪಂಡಿತನೆನ್ನಿಸಲಿಕ್ಕಿಲ್ಲ, ಆದರೆ ಪೂರ್ತಿಯಾದ ಪ್ರಾಮಾಣಿಕತೆಯಿಂದ ಹೇಳುತ್ತಲಿದ್ದೇನೆ ಎಂಬುದನ್ನು ತಾವು ದಯವಿಟ್ಟು ಮನ್ನಿಸಬೇಕು. ಸಾಹಿತ್ಯವೇ ನನ್ನ ಜೀವನದ ಉಸಿರಾಗಿದೆ. ಉಚ್ಚ ಅಧಿಕಾರ ಸ್ಥಾನದಲ್ಲಿ ಸುಖದಿಂದ ಇರುವುದಕ್ಕಿಂತ ಉಪವಾಸದಿಂದಿದ್ದರೂ ಸಾಹಿತಿಯಾಗಿರುವುದು ನನಗೆ ಮೆಚ್ಚುಗೆಯಾಗಿದೆ.
ಸಮ್ಮೇಳನಾಧ್ಯಕ್ಷರ ಸಲಹೆ
ಸಾಹಿತ್ಯಾಭಿಮಾನಿಗಳಾದ ಸಭಿಕಮಹಾಶಯರೆ, ಇನ್ನೂ ಅನೇಕ ಮಾತುಗಳನ್ನು ನಾನು ಹೇಳಬಹುದಾಗಿತ್ತು. ಆದರೆ ವರ್ಷವರ್ಷಕ್ಕೆ ಸೇರುವ ಈ ಸಮ್ಮೇಳನದಲ್ಲಿ ಇಡಿಯ ಭವಿಷ್ಯತ್ಕಾಲಕ್ಕಾಗಿ ಮಾತನಾಡುವಷ್ಟು ಆಶೆಬುರುಕನಾಗುವುದು ಅಷ್ಟೊಂದು ಯೋಗ್ಯವಾಗಲಿಕ್ಕಿಲ್ಲ. ಈ ಕ್ಷಣ ನಮ್ಮೆದುರಿಗಿದ್ದ ಕೆಲವು ಸಮಸ್ಯೆಗಳು, ಅವುಗಳನ್ನು ಬಿಡಿಸಲು ಒಂದು ವರ್ಷದ ಅವಧಿಯಲ್ಲಿ ಮಾಡಬಹುದಾದ ಉಪಾಯಗಳು, ಇವಕ್ಕೆ ಹಿನ್ನೆಲೆಯಾದ ಪರಿಸ್ಥಿತಿ ಇಷ್ಟನ್ನು ಹೇಳಿದರೆ ನನ್ನ ಕೆಲಸ ಮುಗಿಯಿತು ಎಂದು ನಾನು ತಿಳಿಯುತ್ತೇನೆ. ಸಾಹಿತಿಯ ಸಮಸ್ಯೆ ಬಹುಮುಖವಾದ ಸಮಸ್ಯೆ. ಉಪಜೀವನ ಪ್ರಶ್ನೆ ಅವನ ವೈಯಕ್ತಿಕ ಸಮಸ್ಯೆ ಎನ್ನಿಸಿದರೆ, ಅವನು ಅನ್ಯೋಪಜೀವಿಯಾಗುವುದು ಸಾಮಾಜಿಕ ಸಮಸ್ಯೆ ಎನ್ನಿಸುವುದು. ಅನ್ಯೋಪಜೀವಿಯಾದ ಸಾಹಿತಿ ಸಮಾಜಕ್ಕೆ ಕಂಟಕನಾಗಬಹುದಾಗಿದೆ. ಸಾಹಿತಿಯನ್ನು ಅನ್ಯೋಪ ಜೀವಿಯನ್ನಾಗಿ ಮಾಡುವ ಅನೇಕ ಶಕ್ತಿಗಳು ನಮ್ಮ ಸಮಾಜ ರಚನೆಯಲ್ಲಿವೆ. ಧನಿಕ ಒಡೆಯನಿಗಾದ ಅಗ್ರಲೇಖನಗಳನ್ನು ಬರೆಯುವ ಸಂಪಾದಕರು, ದೇಶದ ಸರಕಾರಕ್ಕಾಗಿ ಸ್ತುತಿಪಾಠವನ್ನು ಬರೆಯುವ ಸಾಹಿತಿಗಳು, ಪ್ರೊಪಾಯಿಟರ್ ಇಲ್ಲವೆ ಅವನ ಸೂಳೆಗಾಗಿ ನಾಟಕಗಳನ್ನು ಬರೆಯುವ ನಾಟಕಕಾರರು, ಬರೆದುದಕ್ಕೆ ಚಿತ್ರನಿರ್ಮಾಪಕನ ಹೆಸರನ್ನು ಕೊಡುವ ಕತೆಗಾರರು-ಇಂತಹ ವ್ಯಕ್ತಿಗಳು ದೊರೆಕಿಯೇ ದೊರಕುತ್ತಾರೆ, ಅವರಲ್ಲಿ ಯೋಗ್ಯತೆ ಇದ್ದರೆ ಆ ಮಟ್ಟಿಗೆ ಸಮಾಜಕ್ಕೆ ಹಾನಿ, ಯೋಗ್ಯತೆ ಇಲ್ಲದಿದ್ದರೆ ಆ ಮಟ್ಟಿಗೆ ಸಮಾಜದಲ್ಲಿ ಅನ್ಯಾಯ.
Tag: Kannada Sahitya Sammelana 38, Sriranga, Adhya Rangachar, Sriranga
೩೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕೋಟ ಶಿವರಾಮಕಾರಂತ
ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು.
ಹರಿಜನೋದ್ಧಾರಕ, ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಿಕೆ, ಸ್ವಾತಂತ್ರ್ಯ ಚಳವಳಿಗಳಲ್ಲಿ, ನೃತ್ಯ ಸಂಗೀತ ರಂಗಗಳಲ್ಲಿ ನಾನಾರೀತಿ ಸೇವೆ ಮಾಡಿದ ಇವರು ಬಾಲವನವನ್ನು ಮಕ್ಕಳಿಗಾಗಿ ನಡೆಸಿದರು. ಬಿಎಂಶ್ರೀ ಸ್ಮಾರಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು, ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದರು.
೧೯೫೮ರಲ್ಲಿ ಇವರ ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸ್ವೀಡನ್ ಪ್ರಶಸ್ತಿ ಬಂದಿತು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕರ್ನಾಟಕ ವಿಶ್ವವಿದ್ಯಾನಿಲಯ ೧೯೬೩ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ, ೧೯೬೮ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಬಿರುದಿತ್ತು ಗೌರವಿಸಿತು. ೧೯೫೧ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು.
ಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳ. ೪೪ ಕಾದಂಬರಿ, ೧೪ ನಾಟಕ, ೩ ಕಥಾಸಂಕಲನ, ೬ ಪ್ರಬಂಧಗಳು, ೯ ಕಲಾ ಗ್ರಂಥಗಳು, ೫ ಆತ್ಮಕಥೆ-ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ-೨೫, ಇತ್ಯಾದಿ ೧೫0ಕ್ಕೂ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಮೂಕಜ್ಜಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳಾಗಿವೆ.
ತಮ್ಮ ಪ್ರತಿಭೆ ಪ್ರದರ್ಶನ, ಸಾಹಿತ್ಯದ ಕೊಡುಗೆ, ಆದರ್ಶ ವ್ಯಕ್ತಿತ್ವಗಳಿಂದ ಕನ್ನಡದ ಅಪೂರ್ವ ಸಾಹಿತಿಯಾಗಿದ್ದ ಶಿವರಾಮ ಕಾರಂತರು ೯-೧೨-೧೯೯೭ರಲ್ಲಿ ಮಂಗಳೂರಿನಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೩೭,
ಅಧ್ಯಕ್ಷರು: ಶಿವರಾಮ ಕಾರಂತ
ದಿನಾಂಕ ೧0, ೧೧, ೧೨ ಜೂನ್ ೧೯೫೫
ಸ್ಥಳ : ಮೈಸೂರು
ಸಾಹಿತಿಗಳ ಸವಿಗನಸು ಕನ್ನಡ ನಾಡು ಒಂದಾಗಬೇಕು
ಕನ್ನಡದೇಶದ ಇತಿಹಾಸ ವಿಸ್ತಾರವಾದ ಜೀವನದಲ್ಲಿ, ಒಂದೇ ನಾಡಿನವರಾಗಿ ಶತಮಾನ, ಶತಮಾನಗಳ ಕಾಲ ಬಾಳಿ ಬದುಕಿದ ಕನ್ನಡ ಜನರು, ಇಂದು ಭಿನ್ನ ಭಿನ್ನ ರಾಜಕೀಯ ಪ್ರಾಂತಗಳಲ್ಲಿ ಉಳಿದುಕೊಂಡು, ತಮ್ಮ ಆರ್ಥಿಕ, ಸಾಂಸ್ಕೃತಿಕ, ಇಲ್ಲವೆ ಸಾಮಾಜಿಕವಾದ ಯಾವ ಆಶೋತ್ತರಗಳನ್ನೂ ಕಾಲಕ್ಕೆ ತಕ್ಕಂತೆ ಬೆಳೆಯಿಸಿಕೊಳ್ಳಲಾರದೆ ನರಳುತ್ತಿರುವ ಈ ಕಾಲದಲ್ಲಿ, ಈ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಒಂದು ಸಂಸ್ಥೆ ರಾಜಕೀಯ ಅಡಚಣೆ ಮತ್ತು ಮೇರೆಗಳನ್ನು ಮುರಿದು, ಹರಿದು ಹಂಚಿಹೋದ ಕರ್ಣಾಟಕವನ್ನು ಒಂದುಗೂಡಿಸಿ ನಾಡಿನ ಮಕ್ಕಳ ದನಿಗಳಲ್ಲಿ ಒಂದೇ ಶ್ರುತಿ ಹುಟ್ಟಿ ಬರುವಂತೆ, ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಜೀವನದ ಇತರ ರಂಗಗಳಲ್ಲಿ, ತಾವು ಬೇರೆ ಬೇರೆಯ ‘ಗುಂಪು’, ‘ಬಣ’ ಎಂದು ತಿಳಿದು, ಕಲಹ ಸೆಣಸಾಟಗಳು ನಡೆಯತ್ತಿದ್ದರೂ, ಈ ಸಾಹಿತ್ಯ ಕ್ಷೇತ್ರದಲ್ಲಿ, ಈ ಸಮ್ಮೇಳನದ ಆಸರೆಯಲ್ಲಿ ‘ಕನ್ನಡಿಗರು’ ಹಲರಲ್ಲ; ಕನ್ನಡದ ಕುಲ ಒಂದು; ಜನ ಒಂದು; ‘ನುಡಿ ಒಂದು,’ ಎಂದು ನಮ್ಮ ಸಾಹಿತಿಗಳು ಹಿಂದಿನಿಂದಲೂ ಹೇಳುತ್ತ ಬಂದಿದ್ದಾರೆ. ಯಾರು ಎಷ್ಟೇ ಮೂದಲಿಸಿದರೂ, ರಾಜಕಾರಣಿಗಳು ಎಂತಹ ವಾದ ಮಂಡಿಸಿದರೂ, ನಮ್ಮ ಕನ್ನಡ ಸಾಹಿತಿಗಳು ಮಾತ್ರ ‘ಕನ್ನಡ ನಾಡು ಒಂದುಗೂಡಬೇಕು’ ಎಂಬ ಹಂಬಲವನ್ನು ಇರಿಸಿಕೊಂಡೇ ಬಂದಿದ್ದಾರೆ. ಅದಕ್ಕಾಗಿ ನಾಡಿನಲ್ಲಿ ತೊಳಲಾಡಿದ್ದಾರೆ. ಅವರು ಎಂದೂ ಆ ಸವಿಗನಸನ್ನು ಬಿಟ್ಟುಕೊಟ್ಟವರಲ್ಲ; ಕೊಡುವವರೂ ಅಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ದುಡಿಯುವ ಜನಗಳಿಗೆ ರಾಜಕೀಯದ ಜಾಣ್ಮೆ, ಚಾತುರ್ಯ, ತಂತ್ರ ಹೆಚ್ಚಾಗಿ ತಿಳಿಯದು. ಕನ್ನಡದ ವಿವಿಧ ಭಾಗಗಳನ್ನು ಅವರು ಚೆನ್ನಾಗಿ ಬಲ್ಲರು. ಸ್ವಲಾಭ ಸ್ವಕಾರ್ಯ ಸಾಧನೆಗಳ ಆಸೆಯಿಲ್ಲದೆ, ಕನ್ನಡ ಜನಗಳ ಶ್ರೇಯಸ್ಸು, ಎಲ್ಲಿದೆ ಎಂಬುದನ್ನವರು ಊಹಿಸಬಲ್ಲರು. ಅಂತಹವರಲ್ಲಿ ಸದಾಸಂಚಾರಿಯಾದ ನಾನೂ ಒಬ್ಬನೆಂದು ಧೈರ್ಯವಾಗಿ ಹೇಳುತ್ತೇನೆ.
ಸಮ್ಮೇಳನದ ಗುರಿ
ಕಳೆದ ಬಾರಿ ಕುಮಟೆಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಕೇಂದ್ರ ಸರಕಾರದ ಉಪಮಂತ್ರಿ ಮಾನ್ಯ ದ.ಪ. ಕರಮರ್ಕರ್ ಅವರು ಆಶಾವಾದಿಗಳಾಗಿ, ‘ಮುಂದಿನ ಸಾಹಿತ್ಯ ಸಮ್ಮೇಳನವು ಸ್ವತಂತ್ರ ಕರ್ನಾಟಕದ ರಾಜಧಾನಿಯಲ್ಲಾಗಲಿ’ ಎಂದು ಹರಸಿದ್ದರು. ಆ ಕನಸು ಇಷ್ಟರಲ್ಲೇ ಕೈಗೂಡದಿದ್ದರೂ ಕೈಗೂಡುವುದೆಂಬ ಪೂರ್ವಸೂಚನೆಯಾಗಿಯೇ ಈ ಸಮ್ಮೇಳನವು ಏಕೀಕೃತ ಕರ್ನಾಟಕದ ರಾಜಧಾನಿಯಂತಿರುವ ಮೈಸೂರಿನಲ್ಲಿ ನಡೆಯುತ್ತಿದೆ. ಕನ್ನಡಿಗರ ಈ ಸಹಜವಾದ ಆಕಾಂಕ್ಷೆಗೆ ಯಾರಿಂದಲೂ ವಿಘ್ನ ಬರಲಾರದು. ಬರಬಹುದಾದ ವಿಘ್ನಗಳನ್ನು ತೊಡೆದುಕೊಳ್ಳುವ ಶಕ್ತಿ ಕನ್ನಡ ಜನಕ್ಕೆ ಬರಲಿ-ಎಂದು ಹೇಳಿ ಮುಂದುವರಿಯುತ್ತೇನೆ.
ಪರಿಷತ್ತಿನ ಭಾಷಾ ಹೊಣೆ
ಇನ್ನು ಕನ್ನಡ ಭಾಷೆಯ ಮೂಲಕ ನಾವು ಜನಕ್ಕೆ ಸಲ್ಲಿಸಬಹುದಾದ- ಇತರ ಸೇವೆಗಳನ್ನು ಕುರಿತು ನಾಲ್ಕು ಮಾತು ಹೇಳುತ್ತೇನೆ. ಅದಕ್ಕಿಂತ ಮುಂಚಿತವಾಗಿ ನಮ್ಮ ಕನ್ನಡ ಜನಗಳನ್ನು, ನಾವು ಗುರುತಿಸಬೇಕಾಗಿದೆ. ಅವರ ಆಡುಭಾಷೆ ಒಂದೊಂದು ತೆರನಾಗಿದೆ. ಪ್ರಪಂಚದ ಎಲ್ಲ ದೊಡ್ಡ ಭಾಷೆಗಳ ಗತಿಯೂ ಹೀಗೇನೆ. ಆದರೆ, ನಾವು ಬರೆಯುವುದು ಜನಕ್ಕೆ ತಿಳಿಯಬೇಕಾದಲ್ಲಿ-ನಾವು ಭಾಷೆಯ ಏಕರೂಪತೆಗೆ ಗಮನ ಕೊಡಬೇಕಾಗುತ್ತದೆ. ಇಂದು ಮೈಸೂರು ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ-ಎಂದು ಹೇಳುವ ಸಂಪ್ರದಾಯ ನಮ್ಮ ಬರವಣಿಗೆಯಿಂದಾಗಿ ಬಂದುಬಿಟ್ಟಿದೆ. ನಮ್ಮದು ಅಷ್ಟೊಂದು ದೊಡ್ಡ ದೇಶವಲ್ಲ; ಆದರೂ ಒಂದು ಕಡೆಯ ಜನ, ಇನ್ನೊಂದು ಕಡೆಯವರು ಬರೆದ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದಿ ತಿಳಿಯುವುದಕ್ಕೆ ಕಷ್ಟವಾಗಿ ಬಂದಲ್ಲಿ, ಆಗ ಬರಹಗಾರರಾದ ನಾವೇ ನಮ್ಮ ಮಾತಿನ ವಿಸ್ತಾರಕ್ಕೆ, ಆಡಚಣೆ ತಂದುಕೊಳ್ಳುತ್ತೇವೆ. ಅಲ್ಲಲ್ಲಿನ ಸ್ಥಳಿಕ ಗ್ರಾಮ್ಯಪದಗಳನ್ನು ಹಟದಿಂದ, ಪುಸ್ತಕಗಳಲ್ಲಿ ತುಂಬಿಸುವ ಪ್ರಯತ್ನದಿಂದ, ಯಾವ ದೇವರಿಗೆ ಪ್ರೀತಿಯೋ ನಾನು ಕಾಣೆ. ಬ್ರಿಟಿಷರಿಂದ ಬಂದ ಪ್ರಾಂತದ ಅಡ್ಡಗೋಡೆಗಳನ್ನು ಮುರಿಯಬೇಕೆನ್ನುತ್ತಿರುವ ನಾವು, ಇನ್ನೊಂದು ದಾರಿಯಿಂದ ಅದನ್ನು ಏರಿಸುತ್ತ ಹೋದರೆ ಹೇಗೆ? ಯಾವೊಂದು ವಿಷಯದಲ್ಲೂ ನಮ್ಮಲ್ಲಿ-ಗ್ರಂಥ, ಪುಸ್ತಕ, ಲೇಖನ, ಪತ್ರಿಕೆಗಳ ಬಾಹುಳ್ಯವಿಲ್ಲ. ಇರುವುದನ್ನು ಎಲ್ಲ ಭಾಗದ ಕನ್ನಡಿಗರಿಗೂ ಅರ್ಥವಾಗುವ ರೀತಿಯಲ್ಲಿ ಸಾಮಾನ್ಯವಾದ ಒಂದು ಭಾಷೆಯ ರೂಪ ಬೆಳೆಯುವಂತೆ ನಾವು ಮಾಡಬೇಡವೆ? ಪರಿಷತ್ತಿನಂತಹ ಒಂದು-ಸಂಸ್ಥೆ-ಇಂಥ ವಿಷಯದಲ್ಲಿ ಹೊಣೆಯನ್ನು ಹೊತ್ತು ಮುಂದೆ ಬರಬೇಕಾಗಿದೆ.
ನಿಘಂಟು ನಿರ್ಮಾಣದಲ್ಲಿ ಪರಿಷತ್ತಿಗೆ ಸಲಹೆ
ವಿಶ್ವಕೋಶದ ಮಾತಿನಿಂದ, ಕನ್ನಡ ನಿಘಂಟಿನ ವಿಷಯಕ್ಕೆ ಬರುತ್ತೇನೆ. ನಾನು, ನನ್ನ ಕೆಲವು ಮಿತ್ರರ ಸಹಾಯದಿಂದ, ವಿದ್ಯಾರ್ಥಿಗಳಿಗಾಗಿ ಸಾಮಾನ್ಯವಾದೊಂದು ಶಬ್ದಕೋಶ ನಿರ್ಮಾಣ ಮಾಡಿದವನು. ಅದನ್ನು ಮಾಡುಮಾಡುತ್ತ ಕನ್ನಡ ಕಲಿಯತೊಡಗಿದವನು. ಹಾಗೆ ಕಲಿಯುವಾಗ-ತಿಳಿದುಕೊಂಡ ಕೆಲವು ಸಂಗತಿಗಳನ್ನು ನಿಮ್ಮ ಮುಂದಿರುಸುತ್ತೇನೆ. ಈ ಕಾರ್ಯದಲ್ಲಿ ನಿರತವಾದ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿಗೆ, ಅದು ಕೆಲವು ಸಲಹೆಗಳನ್ನು ಕೊಡಬಹುದು.
ನಿಘಂಟಿನಲ್ಲಿ, ಶಬ್ದಗಳನ್ನು ಬರೆದು, ಅವುಗಳ ಮುಂದೆ ಸಮಾನ ಪದಗಳನ್ನು ನಾವು ಬರೆಯುತ್ತೇವಷ್ಟೆ. ‘ಗಡಿಗೆ’ ಎಂದು ಬರೆದರೆ ಅದರ ಮುಂದೆ ಸಮಾನ ಪದಗಳು ‘ಮಡಕೆ’, ‘ಕುಡಿಕೆ’ ಎಂದು ಬರೆಯಬಹುದು. ಈ ಅರ್ಥಗಳು ಎಂಥ ಶುಂಠನಿಗೂ ತಿಳಿಯುತ್ತದೆ- ಎಂದು ನಮ್ಮ ದೃಢವಾದ ನಂಬಿಕೆ. ‘ಮಡಕೆ’ ಎಂದರೆ ಮಣ್ಣಿನ ಪಾತ್ರೆಯೆಂದು ತಿಳಿಯಬೇಡವೆ ಜನ? ನಾವು ಹಾವೇರಿಗೋ, ಲಕ್ಷ್ಮೇಶ್ವರಕ್ಕೋ ಹೋಗಿ, ಅಲ್ಲಿನ ಜನಗಳನ್ನು ‘ಮಡಕೆ’ ಏನೆಂದು ಕೇಳಿದರೆ ಅವರಿಗೆ, ಅದು ಅಲಸಂಡೆಯ ಜಾತಿಯ ಒಂದು ಕಾಳು ಎಂದು ಬೋಧೆಯಾಗುತ್ತದೆ. ನಿತ್ಯೋಪಯೋಗಿಯಾದ ಅನೇಕ ವಸ್ತುಗಳಿಗೆ, ಕನ್ನಡದ ಬೇರೆ ಬೇರೆ ಮೂಲೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ನಾವು ಕೊಡುವ ಸಮಾನ ಪದಗಳಿಗೆ, ನಮಗೇ ಬೆರಗು ಹುಟ್ಟಿಸಬಹುದಾದಷ್ಟು ವಿಚಿತ್ರ ಅರ್ಥ ಬರಬಹುದು, ಎಂಬುದನ್ನು ನಾವು ತಿಳಿದಿರಬೇಕು. ಗಿಡ, ಮರ, ಪಶು, ಪ್ರಾಣಿ, ವಸ್ತು, ಒಡವೆ, ರೀತಿ ನೀತಿ-ಎಲ್ಲವನ್ನೂ ಹೇಳುವ ಪದಗಳಿಗೆ ಕನ್ನಡನಾಡಿನ ಒಂದೊಂದು ಮೂಲೆಯಲ್ಲಿ ಒಂದೊಂದು ಅರ್ಥ ಬರುವುದು ಸಾಧ್ಯ. ಬೆಂಗಳೂರು, ಮೈಸೂರುಗಳ ಒಂದು ಮೂಲೆಯಲ್ಲಿ ಕುಳಿತು, ಈ ಕೆಲಸ ಮಾಡುತ್ತ ಕುಳಿತರೆ ಆಯಿತು, ಅದನ್ನು ಜನ ಅರ್ಥಮಾಡಿಕೊಳ್ಳಲೇ ಬೇಕು- ಎಂದು ತಿಳಿಯುವಂತಿಲ್ಲ. ಇಲ್ಲವೆ ‘ನಾವು ಮೊದಲು ಈ ಕೆಲಸ ಮಾಡುತ್ತೇವೆ; ಅಮೇಲೆ ಬೇಕಾದರೆ ಮೈಸೂರೇತರ ಜನಗಳ ಅಭಿಪ್ರಾಯ ಕೇಳುತ್ತೇವೆ’ ಎಂದು ಯಾರಾದರೂ ನನಗೆ ಸಮಾಧಾನ ಹೇಳಿದರೆ, ‘ತಮ್ಮ ಈ ಹಾದಿ ತಪ್ಪು’ ಎಂದು ನಿರ್ಭೀತಿಯಿಂದ ಹೇಳಬೇಕಾಗುತ್ತದೆ.
ಪರಿಷತ್ತಿನ ನಿಘಂಟಿನ ಸ್ವರೂಪ
ಇನ್ನು ಒಂದು ಮಾತು. ನಾವು ಮಾಡುತ್ತಿರುವುದು ಕನ್ನಡ-ಕನ್ನಡ-ನಿಘಂಟನ್ನು, ಇದಕ್ಕೆ ಆಧಾರ, ಶಬ್ದಗಳ ಆಯ್ಕೆಗೆ ಆಧಾರ, ಹಳಗನ್ನಡ, ಹೊಸಗನ್ನಡ ಗ್ರಂಥಗಳು, ಇಷ್ಟೇ ನಮ್ಮ ಶಬ್ದಕೋಶದ ಮಿತಿಯಾದರೆ, ಅದು ತುಂಬ ಖೇದದ ಸಂಗತಿಯೇ ಸರಿ. ಕನ್ನಡ ಬದುಕಿರುವುದು ಗ್ರಂಥಗಳಲ್ಲಿ ಮಾತ್ರವಲ್ಲ, ಕವಿಗಳಲ್ಲಿ, ಕಾವ್ಯಗಳಲ್ಲಿ ಮಾತ್ರವಲ್ಲ. ಅದು ಸಮುದಾಯದ ಭಾಷೆ. ಅಲ್ಲಿ ಅದು ನಿತ್ಯ ನಿತ್ಯ ಬದುಕಿದೆ. ನಾನು ಮಾಡಬೇಕಾದುದು ಮಾತೃಭಾಷೆಯ ನಿಘಂಟನ್ನಲ್ಲ, ಜೀವಂತ ಭಾಷೆಯ ನಿಘಂಟನ್ನು, ಜೀವಂತ ಭಾಷೆಯು ಜನಜೀವನದಲ್ಲಿ ಬದಲಾಗುತ್ತಲೇ ಇರುತ್ತದೆ. ಗ್ರಂಥಗಳಿರುವ ಹತ್ತು ಪಾಲು ಹೆಚ್ಚಿನ ಮನ್ನಣೆ, ಜನಜೀವನ ಕನ್ನಡಕ್ಕೆ ಸಲ್ಲಬೇಕು. ‘ಆಕ್ಸ್ಫರ್ಡ್ ಡಿಕ್ಷನರಿ’ ಮೊದಲಾದ ಮಾದರಿಯ ನಿಘಂಟುಗಳನ್ನು ಸಂಪಾದಿಸಿದ ಮಹಾನುಭಾವರು, ಶಬ್ದಸಂಗ್ರಹಕ್ಕೂ, ನುಡಿಕಟ್ಟುಗಳ ಸಂಗ್ರಹಕ್ಕೂ, ಅರ್ಥ ಅರ್ಥಛಾಯೆಗಳ ಸಂಗ್ರಹಕ್ಕೂ-ಇಂಗ್ಲಿಷ್ ಮಾತೃಭಾಷೆಯಾಗಿರುವ ಜನಗಳ ಎಡೆಯಲ್ಲಿ ಹೋಗಿ ದುಡಿದರು. ಇಂಗ್ಲೆಂಡ್, ಕೆನಡಾ, ಯುನೈಟೆಡ್ ಸ್ಟೇಟ್ಸುಗಳ ವಿವಿಧ ಭಾಗಗಳಲ್ಲಿ ಸಂಚರಿಸಿ, ಕಾಗದ ಪೆನ್ಸಿಲ್ ಹಿಡಿದುಕೊಂಡು, ಕಿವಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಂಡರು. ‘ಕಿಂಗ್ಸ್ ಇಂಗ್ಲಿಷ್’ ಯಾಕೀ ಜನಗಳ ಕೈಯಲ್ಲಿ ಹೇಗೆ ಸಂಕಟಕ್ಕೊಳಗಾಯಿತೆಂದೂ ಕಂಡುಕೊಂಡರು. ಅದರ ಮೇಲೆ ಅಪಾದನೆ ಹೊರಿಸದೆ, ಅವರ ಬಳಕೆಯ ಅರ್ಥಗಳನ್ನು ಒಪ್ಪಿಕೊಂಡು, ತಮ್ಮ ಶಬ್ದಕೋಶದಲ್ಲಿ ಅವುಗಳನ್ನೆಲ್ಲ ಸೇರಿಸಿದರು. ನಾವು ಈ ವಿಚಾರದಲ್ಲಿ ಕುರುಡರಾಗಬಾರದು. ನಾಲ್ಕೆಂಟು ಮಂದಿ ಪಂಡಿತರು ವಾರಕ್ಕೊಮ್ಮೆಯೋ ದಿನಕ್ಕೊಮ್ಮೆಯೋ ಗ್ರಂಥಗಳಿಂದಾಯ್ದ ಶಬ್ದಗಳನ್ನು ನಮ್ಮ ಮುಂದಿರಿಸಿಕೊಂಡು ‘ಇದು ಸಾಧು, ಇದು ಅಸಾಧು’ ಎಂದು ತೀರ್ಮಾನಿಸುತ್ತಾ ಕುಳಿತರೆ, ಈ ಕೋಶ ನಮ್ಮ ಕೋಶವಾಗುತ್ತದೆಯೇ ಹೊರತು, ಕನ್ನಡದ ಕೋಶವಾಗಲಾರದು. ನಾವು ಗ್ರಾಮ್ಯ ರೂಪಗಳನ್ನು ಬಿಡಬಹುದೇ ಹೊರತು, ಜನಜೀವನದಲ್ಲಿ ಪ್ರಚಾರದಲ್ಲಿರುವ ಅರ್ಥ, ಪ್ರಯೋಗ, ಛಾಯೆ – ಇವುಗಳನ್ನೆಂದೂ ಮರೆಯಕೂಡದು. ನಿಜಕ್ಕೂ ಇಂಥ ವಿಸ್ತಾರವಾದ ಕೆಲಸವನ್ನು ನಾವು ಮಾಡಿದ್ದಾದರೆ, ಹಳಗನ್ನಡ ಭಾಷೆಯು ಹೊಸಗನ್ನಡಕ್ಕಿಂತ ಗಾವುದ, ಗಾವುದ ದೂರ ನಿಂತಿರಲಾರದೆಂದು ನನಗನ್ನಿಸುತ್ತದೆ.
ಜನಭಾಷಾ ನಿಘಂಟು ನಿರ್ಮಾಣವಾಗಲಿ
ಸಾಹಿತಿಗಳಾದ ನಾವೇ ಇಂದು ಕೃತಕ ಪುಸ್ತಕ ಭಾಷೆಯೊಂದನ್ನು ಕಲ್ಪಿಸುತಿದ್ದೇವೆ. ಜೀವಂತ ಭಾಷೆಯಲ್ಲಿ ಪ್ರಚಾರದಲ್ಲಿರುವ ಶಬ್ದಸಂಪತ್ತು, ಅರ್ಥಸಂಪತ್ತುಗಳನ್ನು ಮರೆಯುತ್ತಲಿದ್ದೇವೆ. ಇದು ಕನ್ನಡಕ್ಕೆ ಮಾಡುವ ಅಪಚಾರ ಹೊರತು ಉಪಚಾರವಲ್ಲ. ನಮ್ಮ ಜನಜೀವನದಲ್ಲಿನ ನೂರಾರು ವೃತ್ತಿ, ವಿಚಾರ ಸರಣಿ, ನಂಬಿಕೆಗಳಿಂದ ಹುಟ್ಟಿ ಪ್ರಚಾರದಲ್ಲಿರುವ ಶಬ್ದಸಂಪತ್ತನ್ನು ಭಾಷಾಸೌಂದರ್ಯವನ್ನು ಕಾಯ್ದುಕೊಳ್ಳುವ ಹೊಣೆ ನಮ್ಮದು. ಅದಕ್ಕೆ ನಿಘಂಟಿನಲ್ಲಿ ಸ್ಥಾನ ಕಲ್ಪಿಸುವ ಹೊಣೆಯೂ ನಮ್ಮದು. ನಾವು ಹಳ್ಳಿ ಹಳ್ಳಿಗಳಲ್ಲಿ ಸಂಶೋಧಕರನ್ನು ಬಿಟ್ಟು, ಜನರು ಬಳಸುವ ನಿತ್ಯೋಪಯೋಗಿ ಶಬ್ದಗಳನ್ನೂ, ಹೆಸರುಗಳನ್ನೂ, ಪ್ರಯೋಗಗಳನ್ನೂ ಸಂಗ್ರಹಿಸುವಲ್ಲಿ-ನಮ್ಮ ಶಬ್ದಸಂಗ್ರಹ ಇಮ್ಮಡಿಸೀತು; ಮುಮ್ಮಡಿಸೀತು. ಅದರಿಂದ ಅನೇಕ ಹೊಸ ಶಬ್ದಗಳ ನಿರ್ಮಾಣ ಅನಾವಶ್ಯಕವಾದೀತು. ಹಾಗೆ ಮಾಡದೆ ಹೋದರೆ ಜನಗಳ ಭಾಷಾ ಪ್ರವಾಹವು ತನ್ನ ದಾರಿಯನ್ನು ಹಿಡಿದು ತಾನಾಗಿ ಮುಂದುವರಿಯುತ್ತದೆ. ಅದನ್ನಾರೂ ತಡೆಯಲಾರರು. ಹಾಗೆ ಮಾಡುತ್ತ ಅದು-ಕನ್ನಡವನ್ನು ಮುಖ್ಯ ವಿಷಯವನ್ನಾಗಿ ಕಲಿಯುವವರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಘನಪುಸ್ತಕ ಪಂಡಿತರನ್ನು ದಂಡೆಯಲ್ಲಿಟ್ಟು ಹರಿಯುತ್ತದೆ. ಮುಳುಗಿತು ಕನ್ನಡ ಎಂಬ ಅವರ ಕೂಗು ಅರಣ್ಯರೋದನ ಆಗುತ್ತದೆ.
Tag: Kannada Sahitya Sammelana 37, Shivarama Karantha, Shivaram Karnath
೬0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕೆ.ಎಸ್. ನರಸಿಂಹಸ್ವಾಮಿ
ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಸುಬ್ಬರಾಯ-ನಾಗಮ್ಮ ದಂಪತಿಗಳಿಗೆ ೨೬-೧-೧೯೧೫ರಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ, ಪದವೀಧರರಾಗಲಿಲ್ಲ. ಸಂಸಾರ ನಿರ್ವಹಣೆಗಾಗಿ ೨೨ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು ೨೬-೧-೧೯೭0ರಲ್ಲಿ ನಿವೃತ್ತರಾದರು.
ಕೆ.ಎಸ್.ನ ಅವರ ಮೈಸೂರ ಮಲ್ಲಿಗೆ ೧೯೪೨ರಲ್ಲಿ ಪ್ರಕಟವಾದಾಗಿನಿಂದ ೨೫ಕ್ಕೂ ಹೆಚ್ಚು ಮುದ್ರಣ ಕಂಡಿದೆ. ಅನಂತರ ಹತ್ತಾರು ಕವನ ಸಂಕಲನಗಳ ಮೂಲಕ ನವೋದಯ ಮತ್ತು ನವ್ಯಕವಿತೆಗಳನ್ನು ತಮ್ಮದೇ ಆದ ಛಾಪಿನಲ್ಲಿ ಕನ್ನಡಕ್ಕೆ ಕೊಟ್ಟರು. ಕೆ.ಎಸ್.ನ ಅವರ ಮೈಸೂರ ಮಲ್ಲಿಗೆ ಕೃತಿಗೆ ದೇವರಾಜ ಬಹಾದ್ದೂರ್ ಬಹುಮಾನ ೧೯೪೩ರಲ್ಲಿ ಬಂದಿತು. ೧೯೫೭ರಲ್ಲಿ ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಇಲಾಖೆಯ ಬಹುಮಾನವನ್ನು ಪಡೆದರು. ೧೯೭೭ರಲ್ಲಿ ತೆರೆದ ಬಾಗಿಲು ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ದುಂಡು ಮಲ್ಲಿಗೆ’ ಕವನ ಸಂಕಲನಕ್ಕೆ ಪ್ರತಿಷ್ಠಿತ ಪಂಪ ಪ್ರಶಸ್ತಿಯೂ ೧೯೯೬ರಲ್ಲಿ ಬಂದಿತು. ೧೯೮೭ರಲ್ಲಿ ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ ಇವರಿಗೆ ಸಂದಿದೆ. ಬೆಂಗಳೂರು ವಿಶ್ವವಿದ್ಯಾಲಯವು ೧೯೯೨ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿತು. ಇವರ ಸಾಹಿತ್ಯ ಸಾಧನೆಗಾಗಿ ಮಾಸ್ತಿ ಸಾಹಿತ್ಯ ಪ್ರಶಸ್ತಿ ೧೯೯೬ರಲ್ಲಿ ಲಭಿಸಿತು. ೧೯೯0ರಲ್ಲಿ ಮೈಸೂರಿನಲ್ಲಿ ನಡೆದ ೬0ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. ಈ ಮುಂಚೆ ಕನ್ನಡ ಸಾಹಿತ್ಯ ಪರಿಷತ್ತು ೧೯೮೫ರಲ್ಲಿ ಗೌರವ ಸದಸ್ಯತ್ವ ನೀಡಿರುವುದರ ಜತೆಗೆ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಕೆಎಸ್ನ ಅವರನ್ನು ಸನ್ಮಾನಿಸಿದೆ.
ನರಸಿಂಹಸ್ವಾಮಿ ಅವರ ಪ್ರಸಿದ್ಧ ಕವನ ಸಂಕಲನಗಳು: ಮೈಸೂರ ಮಲ್ಲಿಗೆ, ದೀಪದಮಲ್ಲಿ(೧೯೪೭), ಉಂಗುರ(೧೯೪೯), ಇರುವಂತಿಗೆ(೧೯೫೨), ಮನೆಯಿಂದ ಮನೆಗೆ(೧೯೬0), ತೆರೆದ ಬಾಗಿಲು(೧೯೭೭), ದುಂಡು ಮಲ್ಲಿಗೆ(೧೯೯೩), ನೆಲದನಿ(೧೯೯೯), ಸಂಜೆಹಾಡು(೨000) ಇತ್ಯಾದಿ.
ಗದ್ಯಕೃತಿಗಳು :ಮಾದರಿಯ ಕಲ್ಲು(೧೯೪೨), ಉಪವನ(೧೯೫೮), ದಮಯಂತಿ(೧೯೭0).
ಇಂಗ್ಲಿಷಿನಿಂದ ಅನುವಾದಗಳು :ಯೂರಿಪಿಡೀಸಿನ ಮೀಡಿಯಾ(೧೯೬೬), ಸುಬ್ರಹ್ಮಣ್ಯ ಭಾರತಿ(೧೯೭೧), ಮಾಯಾಶಂಖ ಮತ್ತು ಇತರ ಕಥೆಗಳು(೧೯೭೨), ರಾಣಿಯ ಗಿಳಿ ಮತ್ತು ರಾಜನ ಮಂಗ(೧೯೭೨), ಹಕಲ್ಬರಿಫಿನ್ನನ ಸಾಹಸಗಳು(೧೯೬೯) ಇತ್ಯಾದಿ.
ಕೆ.ಎಸ್. ನರಸಿಂಹಸ್ವಾಮಿ ಅವರು ೨೮-೧೨-೨00೩ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೬0
ಅಧ್ಯಕ್ಷರು, ಕೆ.ಎಸ್. ನರಸಿಂಹಸ್ವಾಮಿ
ದಿನಾಂಕ ೨೮, ೨೯, ೩0 ನವೆಂಬರ್ ೧೯೯0
ಸ್ಥಳ : ಮೈಸೂರು
ಪರಿಷತ್ತಿನ ಅಮೃತಮಹೋತ್ಸವ
ಸಾಹಿತ್ಯ ಪರಿಷತ್ತಿನ ಅಮೃತ ಮಹೋತ್ಸವ ಮತ್ತು ನನ್ನ ಬದುಕಿನ ಅಮೃತೋತ್ಸವಗಳೆರಡೂ ಏಕಕಾಲಕ್ಕೇ ಒದಗಿರುವುದೊಂದು ಹೆಮ್ಮೆ-ಸಂತಸಗಳ ವಿಷಯ. ಅಲ್ಲದೆ ಪರಿಷತ್ತಿನ ಬೆಳವಣಿಗೆಯೊಂದಿಗೇ ನನ್ನ ಕಾವ್ಯಕೃಷಿಯೂ ಬೆಳೆದು ಬಂದಿದೆ.
೧೯೧೫ರಲ್ಲೇ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ವಿಶ್ವವಿದ್ಯಾನಿಲಯಗಳಿಗಿಂತಲೂ ಮುಂಚೆಯೇ ಅವುಗಳು ಮಾಡಬೇಕಾದ ಕೆಲಸವನ್ನೆಲ್ಲ ಮಾಡುತ್ತ ಬಂದಿದೆ. ಅಲ್ಲಿಂದೀಚೆಗೆ ಆರು ವಿಶ್ವವಿದ್ಯಾನಿಲಯಗಳು ಆಗಿವೆ, ವಿವಿಧ ಅಕಾಡೆಮಿಗಳು ರೂಪುಗೊಂಡಿವೆ, ಕನ್ನಡ-ಸಂಸ್ಕೃತಿ ಇಲಾಖೆ ಇದೆ. ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರ ಮತ್ತು ಜನತೆಯನ್ನು ಕನ್ನಡದ ಬಗೆಗೆ ಸದಾ ಎಚ್ಚರಿಸುತ್ತ ಬಂದಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಪರಿಷತ್ತು ಮೇಲಿಂದ ಮೇಲೆ ಸರ್ಕಾರದೊಂದಿಗೆ ವ್ಯವಹರಿಸಿರುವುದೂ, ಸದ್ಯ ಈ ಸಂಬಂಧ ‘ತನಿಖೆ’ಯ ಹಂತಕ್ಕೆ ತಲುಪಿರುವುದು ಸಂತಸದ ಸಂಗತಿ.
ಪರಿಷತ್ತು ಮತ್ತು ಪತ್ರಿಕೆಗಳು
ಬೆಂಗಳೂರಿಂದ ಪ್ರಕಟವಾಗುತ್ತಿರುವ ಕನ್ನಡ ಪತ್ರಿಕೆಗಳಲ್ಲಿ ಇತ್ತೀಚೆಗೆ ಕನ್ನಡ ಅಂಕಿಗಳ ಬಳಕೆ ನಿಲ್ಲಿಸಲಾಗಿರುವುದನ್ನು ನನ್ನ ಮಿತ್ರರೊಬ್ಬರು ಗಮನಕ್ಕೆ ತಂದಿದ್ದಾರೆ. ಈ ಕುರಿತು ಪರಿಷತ್ತು ಪತ್ರಿಕೆಗಳಿಗೆ ಬರೆಯುವ ಮೂಲಕ ಒತ್ತಾಯಿಸಬೇಕು.
ಕನ್ನಡ ಸಾಹಿತ್ಯ ಪರಿಷತ್ತು ಸ್ವಂತ ಮುದ್ರಣಾಲಯ ಹೊಂದಿದ್ದು ಪ್ರಕಟನೆಯ ಅನುಭವವಿರುವುದರಿಂದ ಸರ್ಕಾರವು ಆರ್ಥಿಕ ನೆರವು ನೀಡಿ ತನ್ನ ಪ್ರಕಟನೆಗಳನ್ನೂ ಪರಿಷತ್ತಿಗೆ ವಹಿಸಬಹುದಾಗಿದೆ.
ಡಾ|| ಸರೋಜಿನಿ ಮಹಿಷಿ ವರದಿಯ ಜಾರಿಗೆ ಮಾನ್ಯ ಮುಖ್ಯಮಂತ್ರಿಗಳು ಅಂಗೀಕಾರ ನೀಡಿದ್ದು ಸಂತೋಷದ ಸಂಗತಿ. ಈ ಬಗ್ಗೆ ಸರ್ಕಾರೀ ಆದೇಶ ಹೊರಡಬೇಕಾಗಿದೆ.
ಕನ್ನಡ ಅಭಿವೃದ್ಧಿ ಸಮಿತಿಯು ಕನ್ನಡ ಬೆಳವಣಿಗೆಯ ಸಂಬಂಧವಾದ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಚಾಲಕ ಶಕ್ತಿಯಾಗಿ, ಕಾವಲು ಸಮಿತಿಯಾಗಿ ಕೆಲಸ ಮಾಡಬೇಕೆಂದು ಕೋರುತ್ತೇನೆ.
Tag: Kannada Sahitya Sammelana 60, K.S. Narasimhaswamy
೫೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಆರ್.ಸಿ. ಹಿರೇಮಠ
ಕನ್ನಡದ ಭಾಷಾವಿಜ್ಞಾನಿ, ವಚನಶಾಸ್ತ್ರಕೋವಿದ ಸಂಶೋಧಕ ಆಗಿದ್ದ ಆರ್.ಸಿ. ಹಿರೇಮಠರು ರೋಣ ತಾಲ್ಲೂಕಿನ ಕುರುಡಗಿಯಲ್ಲಿ ಚಂದ್ರಯ್ಯ-ವೀರಮ್ಮ ದಂಪತಿಗಳಿಗೆ ೧೫-೧-೧೯೨0ರಲ್ಲಿ ಜನಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಧಾರವಾಡ, ಬೆಳಗಾಂಗಳಲ್ಲಿ ಪೂರೈಸಿದರು. ಮುಂಬೈ ವಿಶ್ವವಿದ್ಯಾಲಯದಿಂದ ೧೯೪0ರಲ್ಲಿ ಕನ್ನಡ ಎಂ.ಎ.ಪದವಿ ಗಳಿಸಿದರು.
ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ೧೯೫೧ರಲ್ಲಿ ಪಿಎಚ್.ಡಿ ಪದವಿ ಗಳಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ ಕೊನೆಗೆ ೧೯೭೫ರಿಂದ ೧೯೮0ವರೆಗೆ ಕುಲಪತಿಗಳಾಗಿ ವಿಶ್ವವಿದ್ಯಾನಿಲಯದ ಪ್ರಗತಿಗೆ ಶ್ರಮಿಸಿದರು. ಕನ್ನಡ ವಿಭಾಗ ಇವರ ಕಾಲದಲ್ಲಿ ಕನ್ನಡ ಅಧ್ಯಯನ ಪೀಠವಾಯಿತು. ಕುಲಪತಿಗಳಾಗಿ ನಿವೃತ್ತರಾದ ಅನಂತರ ತಿರುವನಂತಪುರದ ಅಂತರರಾಷ್ಟ್ರೀಯ ದ್ರಾವಿಡ ಭಾಷಾವಿಜ್ಞಾನದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬಹುಕಾಲದ ನಿಕಟ ಸಂಬಂಧವನ್ನು ಹೊಂದಿದ್ದ ಇವರು ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
೧೯೯0ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೫೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾದ ಇವರು ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದರು. ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದರು.
ಭಾಷಾಶಾಸ್ತ್ರ, ವೀರಶೈವ ಸಾಹಿತ್ಯ, ವಚನ ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿದ್ವತ್ಪೂರ್ಣ ಗ್ರಂಥಗಳನ್ನು ಸಂಪಾದಿಸಿದ ಹೆಗ್ಗಳಿಕೆ ಇವರದು.
ಸುಮನಾಂಜಲಿ, ಮೌನ ಸ್ಪಂದನ, ಸಾಹಿತ್ಯ ಸಂಸ್ಕೃತಿ, ಕವಿ ಪದ್ಮಣಾಂಕ, ತಥಾಗತ ಚಾರಿತ್ರ್ಯ(ಅಪೂರ್ಣ ಕಾವ್ಯ). ಇವು ಇವರು ರಚಿಸಿದ ಕೃತಿಗಳು.
ಬಸವ ಪುರಾಣ, ಪದ್ಮರಾಜಹುರಾನಿ, ರಾಜಶೇಖರ ವಿಳಾಸ, ರಾಮಚಂದ್ರಚರಿತ ಪುರಾಣ, ಅಮೃತ ಬಿಂದುಗಳು ಇತ್ಯಾದಿಗಳು ಇವರು ಸಂಪಾದಿಸಿದ ಕಾವ್ಯ ಗ್ರಂಥಗಳು
ಲಿಂಗ್ವಿಸ್ಟಿಕ್ ಇನ್ವೆಸ್ಟಿಗೇಷನ್ ಆಫ್ ಸಂಪ್ಲಾಬ್ಲಂಸ್ ಆನ್ ದಿ ರಿಲೇಷನ್ಷಿಪ್ ಆಫ್ ಇಂಡೋ-ಆರ್ಯನ್ ಅಂಡ್ ದ್ರವಿಡಿಯನ್ ಲ್ಯಾಂಗ್ವೇಜಸ್(ಪಿಎಚ್.ಡಿ ಗ್ರಂಥ), ಪ್ಲೇಸ್ ನೇಮ್ಸ್ ಇನ್ ಕರ್ನಾಟಕ, ದಿ ಸ್ಟ್ರಕ್ಚರ್ ಆಫ್ ಕನ್ನಡ, ಕಾಂಪೌಂಡ್ವರ್ಡ್ಸ್ ಇನ್ ಕನ್ನಡ ಇತ್ಯಾದಿ ಕೃತಿಗಳು ಇಂಗ್ಲಿಷ್ನಲ್ಲಿ ರಚಿತವಾಗಿವೆ.
ಸಿದ್ಧರಾಮೇಶ್ವರ ವಚನಗಳು, ಬಸವಣ್ಣನವರ ವಚನಗಳು, ನೀಲಮ್ಮ ಮತ್ತು ಲಿಂಗಮ್ಮನ ವಚನಗಳು, ಇಪ್ಪತ್ತೇಳು ಶಿವಶರಣೆಯರ ವಚನಗಳು, ಷಟ್ಸ್ಥಲ ಜ್ಞಾನಸಾರಾಮೃತ ವೀರಶೈವ ಚಿಂತಾಮಣಿ, ಚೆನ್ನಬಸವಣ್ಣನವರ ವಚನಗಳು ಮೊದಲಾದವು ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಸಂಪಾದಿತ ಕೃತಿಗಳು.
ಆರ್.ಸಿ. ಹಿರೇಮಠರು (ರುದ್ರಯ್ಯ, ಚಂದ್ರಯ್ಯ ಹಿರೇಮಠ) ಅವರು ಧಾರವಾಡದಲ್ಲಿ ೨-೧೧-೧೯೯೮ರಲ್ಲಿ ಕೈಲಾಸವಾಸಿಗಳಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೫೯
ಅಧ್ಯಕ್ಷರು, ಆರ್.ಸಿ. ಹಿರೇಮಠ
ದಿನಾಂಕ ೧೬, ೧೭, ೧೮ ಫೆಬ್ರವರಿ ೧೯೯0
ಸ್ಥಳ : ಹುಬ್ಬಳ್ಳಿ
(ಟಿಪ್ಪಣಿ ೧೯೮೮,೧೯೮೯ರಲ್ಲಿ ಸಮ್ಮೇಳನ ನಡೆಯಲಿಲ್ಲ)
ಕನ್ನಡ ಸಾಹಿತ್ಯ ಪರಿಷತ್ತು
ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘ, ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು, ಈ ಸಂಸ್ಥೆಗಳು ಕನ್ನಡಿಗರ ತಪಸ್ಸಿನ ಫಲವಾಗಿ ಮೂಡಿ ಬಂದಿವೆ. ಕನ್ನಡಿಗರ ಸರ್ವತೋಮುಖ ಏಳ್ಗೆ ಈ ಸಂಸ್ಥೆಗಳ ಉದ್ದೇಶ. ಘನವಾದ ಈ ಉದ್ದೇಶ ಸಾಧನೆಯತ್ತ ಪರಿಷತ್ತು ನಿರಂತರ ಪ್ರಯತ್ನ ನಡೆಸಿದೆ. ಪರಿಷತ್ತು, ತನ್ನ ಪ್ರಕಟನೆ, ಕಮ್ಮಟ, ಜಾನಪದ ವಸ್ತುಸಂಗ್ರಹ, ಶಾಸನಶಾಸ್ತ್ರ, ಲಿಪಿಶಾಸ್ತ್ರ, ಬೋಧನೆ ಮುಂತಾದ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೊಯ್ಕೆಯ್ ಎನಿಸುವಂತೆ ಕೆಲಸ ಮಾಡುತ್ತಿದ್ದಿತು. ಅದು ಒಂದು ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಪಡೆಯುವ ಹಂತದಲ್ಲಿದ್ದಿತು. ಅಮೃತ ಮಹೋತ್ಸವ ಜೈತ್ರಯಾತ್ರೆ ನಡೆದು ಸಾರ್ವಜನಿಕರಿಂದ ಒಂದು ಕೋಟಿ ರೂಪಾಯಿ ನಿಧಿ ಸಂಗ್ರಹಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದಿತು. ಇಂತಹ ಸಮಯದಲ್ಲಿ ಸರಕಾರ ಹಠಾತ್ತನೆ, ಪೂರ್ವಭಾವಿ ಸೂಚನೆ ಕೊಡದೆ ಪರಿಷತ್ತಿನ ಆಡಳಿತ ಮಂಡಳವನ್ನು ರದ್ದುಪಡಿಸಿ ಹಸ್ತಕ್ಷೇಪ ಮಾಡಿದುದು ಪರಿಷತ್ತಿನ ಬೆಳವಣಿಗೆಗೆ ಅಘಾತವಾದಂತಾಯಿತು. ಅದರಿಂದ ಇನ್ನೂ ಪರಿಷತ್ತು ಚೇತರಿಸಿಕೊಂಡಿಲ್ಲ. ಸುಶಿಕ್ಷಿತರೂ ಸುಸಂಸ್ಕೃತರೂ ಆದ ಪರಿಷತ್ತಿನ ಸದಸ್ಯ ಸಾಹಿತ್ಯಿಕರು ಇದನ್ನು ಗಂಭೀರವಾಗಿ ಸಮಾಲೋಚನೆ ಮಾಡಬೇಕು.
ಕನ್ನಡ-ಕನ್ನಡ-ನಿಘಂಟು
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಂಭೀರವಾದ ಸಾಹಿತ್ಯಿಕ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ. ಇಂತಹ ಕಾರ್ಯಗಳಲ್ಲಿ ಕನ್ನಡ-ಕನ್ನಡ ನಿಘಂಟಿನ ರಚನೆಯ ಕಾರ್ಯವೊಂದು ಅತ್ಯಂತ ಮಹತ್ವವಾದುದು. ನಿಘಂಟು ರಚನಾ ಶಾಸ್ತ್ರದಲ್ಲಿ ಬಲ್ಲಿದರಾದ ಸಿಬ್ಬಂದಿಯವರು ಈಗ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಘಂಟಿನ ಕಾರ್ಯ ಕನ್ನಡ-ಕನ್ನಡ ನಿಘಂಟನ್ನು ಮುಗಿಸಿದೊಡನೆಯೇ ಮುಗಿಯಲಾರದೆ, ಪುನಃ ಅದರ ಪರಿಷ್ಕರಣ ಕಾರ್ಯ ಮುಂದುವರಿಯಬೇಕು. ಇದು ಮುಗಿದೊಡನೆ ಶಬ್ದಗಳನ್ನು ರೋಮನ್ ಲಿಪಿಯಲ್ಲಿ ಬರೆಯುವುದು, ಅರ್ಥವನ್ನು ಇಂಗ್ಲಿಷಿನಲ್ಲಿ ವಿವರಿಸುವುದು ಅವಶ್ಯವೆನಿಸಿದೆ. ಆದ್ದರಿಂದ ಈ ಕೋಶದ ವ್ಯಾಪ್ತಿ, ಉಪಯುಕ್ತತೆ ಹೆಚ್ಚುತ್ತದೆ. ರೋಮನ್ ಲಿಪಿಗೆ ಪರಿವರ್ತನ, ಆಂಗ್ಲಭಾಷೆಯ ಅರ್ಥವಿವರಣೆ ಕೊಟ್ಟರೆ ಕನ್ನಡ ಬಾರದೆ ಇದ್ದವರೂ ಸಹ ಇದನ್ನು ಉಪಯೋಗಿಸಬಹುದು. ಇದರ ಸಂಕ್ಷಿಪ್ತ ಅವೃತ್ತಿಗಳನ್ನು ತರಬಹುದು. ಜಾನಪದ ಶಬ್ದಕೋಶ ಸಿದ್ಧಪಡಿಸಬಹುದು. ಇನ್ನೂ ಹತ್ತೆಂಟು ಬಗೆಯ ಕೋಶಗಳ ಆವಶ್ಯಕತೆ ಕನ್ನಡಕ್ಕಿದೆ. ಇದನ್ನು ಮನಗೊಂಡು ಕೇರಳ ವಿಶ್ವವಿದ್ಯಾಲಯ ನಿಘಂಟು ವಿಭಾಗವೆಂಬ ಶಾಶ್ವತ ವಿಭಾಗವನ್ನೇ ಪ್ರಾರಂಭಿಸಿ ಮಲಯಾಳಂ ಶಬ್ದಕೋಶವನ್ನು ಸಿದ್ಧಪಡಿಸುತ್ತಿದೆ. ಅಂದರೆ ನಿಘಂಟಿಗಾಗಿ ಒಂದು ಸ್ವತಂತ್ರ ವಿಭಾಗದ ಆವಶ್ಯಕತೆ ಇದೆಯೆಂಬುದರಲ್ಲಿ ಸಂದೇಹವಿಲ್ಲ. ಕಾರಣ ಸರಕಾರವು ಇದನ್ನು ಒಂದು ಶಾಶ್ವತ (ಖಾಯಂ) ವಿಭಾಗವೆಂದು ಪರಿವರ್ತಿಸಿ, ಸಿಬ್ಬಂದಿಯವರಿಗೆ ಸರಕಾರಿ ನೌಕರರ ಸವಲತ್ತುಗಳನ್ನೆಲ್ಲ ಕೊಟ್ಟು ಪರಿಷತ್ತಿನಲ್ಲಿ ಈ ಕಾರ್ಯವನ್ನು ಮುಂದುವರಿಸಬೇಕು.
Tag: Kannada Sahitya Sammelana 59, R.C. Hirematha, R.C. Hiremath
೫೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಸಿದ್ದಯ್ಯ ಪುರಾಣಿಕ
ಪ್ರಸಿದ್ಧ ಕವಿ, ಆಡಳಿತಗಾರ, ಆಧುನಿಕ ವಚನಕಾರ ಸಾಹಿತಿ ಸಿದ್ದಯ್ಯ ಪುರಾಣಿಕರು ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲ್ಲೂಕಿನ ದ್ಯಾಂಪುರದಲ್ಲಿ ಕಲ್ಲಿನಾಥಶಾಸ್ತ್ರಿ-ದಾನಮ್ಮ ದಂಪತಿಗಳಿಗೆ ೧೮-೮-೧೯೧೮ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ದ್ಯಾಂಪುರ, ಕುಕ್ಕನೂರುಗಳಲ್ಲಿ ಮುಗಿಸಿ, ಇಂಟರ್ಮೀಡಿಯೇಟ್ವರೆಗಿನ ಶಿಕ್ಷಣವನ್ನು ಗುಲ್ಬರ್ಗದಲ್ಲಿ ಪೂರೈಸಿದರು. ಬಿ.ಎ., ಎಲ್.ಎಲ್.ಬಿ ಪದವಿಗಳನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪಡೆದ ಮೇಲೆ ಐ.ಎ.ಎಸ್ ಪರೀಕ್ಷೆಯನ್ನು ಪಾಸು ಮಾಡಿದರು. ಅಸಿಸ್ಟೆಂಟ್ ಕಲೆಕ್ಟರ್ ಆಗಿ ೧೯೪೪ರಲ್ಲಿ ಕೆಲಸಕ್ಕೆ ಸೇರಿ, ಅನಂತರ ಸಹಾಯಕ ಕಂದಾಯ ಕಾರ್ಯದರ್ಶಿ, ಆಡಳಿತ ಸಚಿವರ ಕಾರ್ಯದರ್ಶಿ, ಡೆಪ್ಯೂಟಿ ಕಲೆಕ್ಟರ್ ಮೊದಲಾದ ಸ್ಥಾನಗಳಲ್ಲಿ ಕಾರ್ಯನಿರ್ವಹಣೆ ಮಾಡಿದರು. ಐ.ಎ.ಎಸ್. ಅಧಿಕಾರಿಗಳಾದ ಮೇಲೆ ವಿದ್ಯಾ ಇಲಾಖೆಯ ಉಪಕಾರ್ಯದರ್ಶಿ, ವಾರ್ತಾ ಪ್ರವಾಸೋದ್ಯಮ ನಿರ್ದೇಶಕರಾಗಿ ಅರ್ಥಖಾತೆಯಲ್ಲಿ ಉಪಕಾರ್ಯದರ್ಶಿಗಳಾಗಿ, ಚಿನ್ನ ನಿಯಂತ್ರಣಾಧಿಕಾರಿಯಾಗಿ, ಡೆಪ್ಯುಟಿ ಕಮಿಷನರ್ ಆಗಿ, ಸಾರಿಗೆ ಖಾತೆಯ ಆಯುಕ್ತರಾಗಿ, ರಾಜ್ಯದ ಲೇಬರ್ ಕಮಿಷನರ್ ಆಗಿ ನಾನಾ ಹುದ್ದೆಗಳಲ್ಲಿ ಸಮರ್ಥ ರೀತಿಯಲ್ಲಿ ಸೇವೆ ಸಲ್ಲಿಸಿ ೧೯೭೬ರಲ್ಲಿ ನಿವೃತ್ತಿ ಹೊಂದಿದರು.
ಇವರ ಆಡಳಿತ ಸೇವೆ, ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿ ಗೌರವ ಸನ್ಮಾನಗಳು ಇವರಿಗೆ ಲಭಿಸಿವೆ. ಅವುಗಳಲ್ಲಿ ಮುಖ್ಯವಾದವುವೆಂದರೆ ೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ನೀಡಿದ ಡಾಕ್ಟರೇಟ್, ೧೯೭೮ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿ, ೧೯೮೧ರಲ್ಲಿ ಪ್ರದಾನ ಮಾಡಿದ ಸ.ಸ.ಮಾಳನಾಡರ ಪ್ರಶಸ್ತಿ, ವಚನೋದ್ಯಾನ ಗ್ರಂಥಕ್ಕೆ ಭಾರತೀಯ ಭಾಷಾ ಪರಿಷತ್ತು ನೀಡಿದ ಬಿಲ್ವಾ ಪ್ರಶಸ್ತಿ, ಮೊದಲಾದವು. ಉರ್ದು, ಮರಾಠಿ, ಪರ್ಷಿಯನ್, ಸಂಸ್ಕೃತ ಭಾಷೆಗಳನ್ನು ಚೆನ್ನಾಗಿ ಅರಿತಿದ್ದ ಸಿದ್ದಯ್ಯ ಪುರಾಣಿಕರು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಕೆಲವು ಕಾಲ ಗುಲ್ಬರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವರು ಗುಲ್ಬರ್ಗದಲ್ಲಿ ಜರುಗಿದ ೫೮ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
‘ಕಾವ್ಯಾನಂದ’ ಎಂಬ ಕಾವ್ಯನಾಮದಲ್ಲಿ ಇವರು ೩೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ : ಜಲಪಾತ, ಕರುಣಾ ಶ್ರಾವಣ, ಮಾನಸ ಸರೋವರ, ವಚನೋದ್ಯಾನ, ಮರುಳ ಸಿದ್ದನ ಕತೆ ಇತ್ಯಾದಿ ಕವನ ಸಂಕಲನಗಳು, ಮೊದಲು ಮಾನವನಾಗು, ಕಲ್ಲೋಲಮಾಲೆ, ಹಾಲ್ದೆನೆ, ಹರ್ಡೇಕರ ಮಂಜಪ್ಪ, ಮಿರ್ಜಾಗಾಲಿಬ್, ಶರಣ ಚರಿತಾಮೃತ, ಮಹಾದೇವಿ ಇತ್ಯಾದಿ ಜೀವನ ಚರಿತ್ರೆಗಳು. ಗಿಲ್ಗಿಲ್ಗಿಲ್ಗಚ್ಚಿ, ತುಪ್ಪರೊಟ್ಟಿ, ಗೇಗೇಗೇ ಎಂಬ ಮಕ್ಕಳ ಕೃತಿಗಳು.
ಕನಕದಾಸ ಪ್ರಶಸ್ತಿ ಮಣಿಹ, ಶರಣರ ಪ್ರಸಾದ ಇವರ ಸಂಪಾದಿತ ಕೃತಿಗಳು. ಕಥಾಮಂಜರಿ, ತುಷಾರಹಾರ ಎಂಬ ಕಥಾಸಂಕಲನಗಳು, ರಜತರೇಖೆ, ನಿರ್ಬಂಧನ, ಆತ್ಮಾರ್ಪಣ, ಗಿರಿಜಾಕಲ್ಯಾಣ-ನಾಟಕಗಳು ಇತ್ಯಾದಿ ಕೃತಿಗಳನ್ನು ಕೂಡ ರಚಿಸಿದ್ದರೂ ಇವರು ಕವಿಗಳೆಂದೇ ಪ್ರಸಿದ್ಧರಾಗಿದ್ದಾರೆ.
ಇವರು ಬೆಂಗಳೂರಿನಲ್ಲಿ ೧೮-೯-೧೯೯೪ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೫೮
ಅಧ್ಯಕ್ಷರು, ಸಿದ್ದಯ್ಯ ಪುರಾಣಿಕ
ದಿನಾಂಕ: ೨೯, ೩0, ೩೧ ಅಕ್ಟೋಬರ್, ೧ ನವೆಂಬರ್ ೧೯೮೭
ಸ್ಥಳ : ಕಲಬುರ್ಗಿ
(ಟಿಪ್ಪಣಿ ೧೯೮೬ರಲ್ಲಿ ಸಮ್ಮೇಳನ ನಡೆಯಲಿಲ್ಲ)
ಕನ್ನಡ ಹಿಂದಕ್ಕೆ ಹೋಗಿದೆ
ಮೊದಲನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದ ಆರಂಭದಲ್ಲಿಯೇ-೧೯೧೫ರಷ್ಟು ಹಿಂದೆಯೇ- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರೂ, ಆ ಕಾಲಕ್ಕೇ ಅರ್ಥಶಾಸ್ತ್ರ, ಲೇಖ್ಯಬೋಧಿನಿ, ವ್ಯವಹಾರ ದೀಪಿಕೆಯಂಥ ಉಪಯುಕ್ತ ಗ್ರಂಥಗಳನ್ನು ಕನ್ನಡಿಗರಿಗೆ ಕೊಟ್ಟವರೂ ಆದ ರಾಜಮಂತ್ರ ಪ್ರವೀಣ ಎಚ್.ವಿ. ನಂಜುಂಡಯ್ಯನವರು ಹೇಳಿದುದು ಹೀಗಿದೆ: ಪತ್ರಗಳಲ್ಲಿಯೂ, ವಾಣಿಜ್ಯದಲ್ಲಿಯೂ ಬಳಕೆಯಲ್ಲಿರತಕ್ಕ ಭಾಷೆಯಾಗಿದೆ. ಈ ದೇಶದಲ್ಲಿ ಕನ್ನಡವನ್ನು ಮಾತೃಭಾಷೆಯಾಗಿ ಮನೆಯಲ್ಲಿ ಮಾತನಾಡದಿರುವ ಅನೇಕ ಜನಗಳು ಇರುವುದೂ ನಿಶ್ಚಯವೇ; ಆದರೆ ಅವೆಲ್ಲರೂ ಚಿಕ್ಕಂದಿನಿಂದಲೂ ದೇಶಭಾಷೆಯಾದ ಕನ್ನಡವನ್ನು ಕಲಿಯುವರು. ಪ್ರಾಯಶಃ ಮುಸಲ್ಮಾನರನ್ನು ಬಿಟ್ಟರೆ ಮಿಕ್ಕ ಜನರೆಲ್ಲರೂ ಕನ್ನಡವನ್ನೇ ಮೊದಲು ಕಲಿತು, ತಮ್ಮ ಬಂಧುಗಳಿಗೆ ಕ್ಷೇಮ ಸಮಾಚಾರದ ಕಾಗದಗಳನ್ನು ಬರೆಯುವಾಗಲೂ ತೆಲುಗು, ತಮಿಳುಗಳಿಗೆ ಬದಲಾಗಿ ಕನ್ನಡವನ್ನೇ ಬಳಸುವರು.”
೧೯೧೫ರಲ್ಲಿ ಇದ್ದ ಈ ಸುಸ್ಥಿತಿ ಕನ್ನಡಕ್ಕೆ ಈಗ ಇದೆಯೆಂದು-ಸಾಹಿತ್ಯ ಸೃಷ್ಟಿಯು ದೃಷ್ಟಿಯಿಂದಲ್ಲ, ಜನಬಳಕೆಯ ದೃಷ್ಟಿಯಿಂದ ಇದೆಯೆಂದು-ನಮ್ಮ ಸರಕಾರದ ಸೂತ್ರಧಾರಿಗಳು ಎದೆ ತಟ್ಟಿ ಹೇಳಬಲ್ಲರೆ? ಹೊಸಗನ್ನಡ ಸಾಹಿತ್ಯ ಸೃಷ್ಟಿ ಅದ್ಭುತವಾಗಿ ಆಗಿದೆ. ನಿಜ. ಅದರ ಬಗ್ಗೆ ಮುಂದೆ ಪ್ರಸ್ತಾಪಿಸುವೆನು. ಆದರೆ ಜನಬಳಕೆಯ ದೃಷ್ಟಿಯಿಂದ, ಕನ್ನಡ ರಾಜ್ಯೋದಯವಾಗಿ ಮೂರು ದಶಕಗಳು ಕಳೆದ ಮೇಲೂ, ಕನ್ನಡದ ತೇರು ೧೯೧೫ಕ್ಕೂ ಹಿಂದೇ ಹೋಗಿದೆಯೆಂಬುದು ಎಂತ ಲಜ್ಜಾಸ್ಪದವಾದ ವಿಷಯ.
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ನಾಡು ಚರಗ ಚೆಲ್ಲಿದಂತೆ ಚೆದುರಿ ಚೆಲ್ಲಾಪಿಲ್ಲಿಯಾಗಿದ್ದಾಗಲೂ ಕನ್ನಡಕುಲದ ಗಮನೀಯ ಕಲ್ಪನೆಯನ್ನು ವಿದ್ಯಾವರ್ಧಕ ಸಂಘದೊಡನೆ ಎಲ್ಲ ಭಾಗಗಳ ಕನ್ನಡಿಗರ ಮುಂದೆ ಮನೋಜ್ಞವಾಗಿ ಮಂಡಿಸಿ, ಕನ್ನಡಿಗರ ಸಾಂಸ್ಕೃತಿಕ ಏಕೀಕರಣಕ್ಕೆ ಬುನಾದಿಯನ್ನು ಹಾಕಿ, ಕನ್ನಡ ನುಡಿ ತಲೆ ಎತ್ತಲು, ಹೊಸಗನ್ನಡ ಸಾಹಿತ್ಯ ಹುಲುಸಾಗಿ ಬೆಳೆಯಲು ಕಳೆದ ಏಳು ದಶಕಗಳಿಂದಲೂ ಸಾಕಷ್ಟು ಶ್ರಮಿಸುತ್ತ ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲೋದ್ದೇಶಗಳಲ್ಲಿ ಕೆಲವು ಈಡೇರಿದ ಸಂತೃಪ್ತಿಯೊಡನೆ, ನಿರಂತರವಾಗಿ ಮುಂದುವರಿಯಬೇಕಾದ ಇನ್ನುಳಿದ ಉದ್ದೇಶಗಳನ್ನು ಮುಂದುವರಿಸಿಕೊಂಡು ನಡೆದಿದೆ, ಧನಬಲ ಜನಬಲಗಳನ್ನು ಗಳಿಸಿಕೊಳ್ಳುತ್ತ ನಡೆದಿದೆ, ಸಂತೋಷ.
ಪರಿಷತ್ತಿನ ಸಾಮರ್ಥ್ಯ ಹೆಚ್ಚಬೇಕು
ಆದರೆ ವ್ಯಕ್ತಿ, ಸಂಘ, ಸಂಸ್ಥೆ, ನಾಡು, ರಾಷ್ಟ್ರಗಳ ಬೆಳವಣಿಗೆ, ಅರ್ಥಪೂರ್ಣ ಅಭಿವೃದ್ಧಿಗೆ ಜನಬಲ ಧನಬಲಗಳಷ್ಟೇ ಸಾಲವು; ಅವುಗಳೊಡನೆ ನೈತಿಕ ಬಲವೂ ಬೇಕೆಂಬುದು ಪರಿಷತ್ತಿನ ಭವಿತವ್ಯದ ಬಗ್ಗೆ ನಿಷ್ಪಕ್ಷಪಾತವಾಗಿ ಚಿಂತಿಸುವವರ ನ್ಯಾಯವಾದ ನಿಲುವಾಗಿದೆ. ಕನ್ನಡ ಸರಸ್ವತಿಯ ಈ ಪವಿತ್ರ ಮಂದಿರ ಪವಿತ್ರವಾಗಿಯೇ ಉಳಿಯಬೇಕೆಂಬುದು ಅವರ ಆಸೆ. ಈ ಆಸೆ ಈಡೇರಬೇಕು. ಪರಿಷತ್ತಿನ ಘನತೆ ಗೌರವಗಳಿಗೆ ಧಕ್ಕೆ ಬರದ ರೀತಿಯಲ್ಲಿ ಈಡೇರಬೇಕು. ಪದಾಧಿಕಾರಿಗಳು, ಪರಿಷತ್ತು ಒಂದೇ ಅಲ್ಲ. ಪದಾಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ, ಆದರೆ ಪರಿಷತ್ತು ಕೊನೆಯವರೆಗೆ ಉಳಿಯಬೇಕಾದುದು, ಉಳಿಯಬೇಕು. ನೈತಿಕ ನೆಲಗಟ್ಟಿನ ಮೇಲೆ ಪರಿಷತ್ತು ಪ್ರಚಂಡ ಶಕ್ತಿಯಾಗಿ ಬೆಳೆಯುವಂತೆ ಪರಿಷತ್ತಿನ ಪದಾಧಿಕಾರಿಗಳೂ ಸರ್ವಕನ್ನಡಿಗರೂ ಧ್ಯೇಯರತಿಯೊಡನೆ ದುಡಿಯಬೇಕು. ಅದರ ಅಂಗರಚನೆಯಲ್ಲಿ ಇನ್ನೂ ಮಾರ್ಪಾಟುಗಳು ಅಗತ್ಯವೆನಿಸಿದರೆ ಮುಕ್ತ, ಮನಸ್ಸಿನ ಚರ್ಚೆ ನಡೆಸಿ ತೀರ್ಮಾನಿಸಿಕೊಳ್ಳಬೇಕು. ಈ ಮಾರ್ಪಾಟುಗಳಲ್ಲಿ ಪರಿಷತ್ತಿನ ಚುನಾವಣಾಧಿಕಾರಿಗಳನ್ನು ಸರಕಾರವೇ ನೇಮಿಸಬೇಕೆಂಬುದು ಬಹಳ ಮುಖ್ಯವಾದುದು. ಪರಿಷತ್ತು ಪ್ರಜಾಸತ್ತಾತ್ಮಕ ಸಂಸ್ಥೆಯಾಗಿ ಉಳಿದೂ ಅದಕ್ಕೆ ಹೊರಗುಳಿವ ಹಿರಿಯ ಸಾಹಿತಿಗಳೆಲ್ಲರ ಸಲಹೆ ಸಿಕ್ಕುತ್ತಿರುವಂತೆ ಏರ್ಪಾಟು ಆಗಬೇಕು; ಎಲ್ಲ ಭಾಗಗಳ ಕನ್ನಡ ಸೇವಾಸಕ್ತರ ಸಕ್ರಿಯ ಸಹಕಾರ ಅದಕ್ಕೆ ದೊರೆಯುವ ಹಾಗೆ ವ್ಯವಸ್ಥೆಯಾಗಬೇಕು; ಜಿಲ್ಲಾ ಪರಿಷತ್ತುಗಳ ಶಕ್ತಿ, ಕಾರ್ಯ, ಕ್ಷಮತೆಗಳು ಹೆಚ್ಚಬೇಕು.
ಪರಿಷತ್ತಿಗೆ ನೂರಾರು ಹೊಣೆಗಳು
ಯಾಕೆಂದರೆ ಪರಿಷತ್ತು ಹೊರಬೇಕಾದ ಹೊಣೆಗಳು ಹೆಚ್ಚುತ್ತಿವೆ. ‘ಕನ್ನಡಕುಲ’ ವೆಂಬುದು ಕೇವಲ ಕವಿಗಳ ಕಲ್ಪನೆ ಮಾತ್ರವಲ್ಲ, ಅದು ನಮ್ಮ ಸಾಂಸ್ಕೃತಿಕ ಸತ್ಯವೆಂಬುದನ್ನು ಪರಿಷತ್ತು ಪ್ರತ್ಯಕ್ಷೀಕರಿಸಿ ತೋರಿಸಬೇಕಾಗಿದೆ; ಕನ್ನಡ ನಾಡಿನ ಗಡಿಹುದ್ದೆಗಳು ಎಚ್ಚತ್ತ ಕೆಚ್ಚೆದೆಯ ಕನ್ನಡಿಗರ ಕೋಟೆಯನ್ನು ಕಟ್ಟಬೇಕಾಗಿದೆ; ಗಡಿಯಾಚೆ ಕನ್ನಡಿಗರು, ಹೊರದೇಶಗಳಲ್ಲಿರುವ ಕನ್ನಡಿಗರು ತಮ್ಮ ಕನ್ನಡತನವನ್ನು ಉಳಿಸಿಕೊಳ್ಳುವುದು ಸಾಧ್ಯವಾಗುವಂತೆ ಅವರಿಗೆ ಶಕ್ಯವಿರುವ ಎಲ್ಲ ನೆರವನ್ನೂ ನೀಡಬೇಕಿದೆ; ಕನ್ನಡನಾಡಿನ ಹೊರಗೆ ಉಳಿದಿರುವ ಕಾಸರಗೋಡಿನಂಥ ಕನ್ನಡ ಭಾಗಗಳನ್ನು ಕನ್ನಡ ನಾಡಿಗೆ ಕೂಡಿಸಲು ಪ್ರಭಾವೀ ಪ್ರಯತ್ನಗಳನ್ನು ಮಾಡಬೇಕಿದೆ: ಬಹಳಷ್ಟು ಭರವಸೆಯನ್ನು ಹುಟ್ಟುಸಿರುವ ಕನ್ನಡ ಲೇಖಕಿಯರಿಗೆ ವಿಶೇಷ ಪ್ರೋತ್ಸಾಹವನ್ನು ನೀಡಬೇಕಿದೆ; ಮಕ್ಕಳ ಸಾಹಿತ್ಯ ಅಕಾಡೆಮಿ, ಮಕ್ಕಳ ಸಾಹಿತ್ಯ ಪರಿಷತ್ತು, ಗಮಕ ಕಲಾ ಪರಿಷತ್ತು, ಕನ್ನಡ ಇತಿಹಾಸ ಅಕಾಡೆಮಿಗಳು ಹುಟ್ಟಿರುವುದು ಹಿಗ್ಗಿನ ಸಂಗತಿ; ಅವುಗಳನ್ನು ಬೆಳೆಸಬೇಕಿದೆ; ಕನ್ನಡ ರಂಗಭೂಮಿಯ ಪುನರುಜ್ಜೀವನ ಪ್ರಯತ್ನ ಪ್ರಾರಂಭವಾಗಬೇಕಿದೆ; ಕನ್ನಡ ಪದವೀಧರರ, ಬೆರಳಚ್ಚುಗಾರರ, ಶೀಘ್ರಲಿಪಿಕಾರರ, ಪಂಡಿತ ವಿದ್ವಾನ್ ಪದವಿಗಳನ್ನು ಪಡೆದವರ, ಕನ್ನಡ ಜಾಣ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಉದ್ಯೋಗಾವಕಾಶಗಳ ವಿಸ್ತರಣೆಗಾಗಿ ಹೋರಾಟ ನಡೆಸಬೇಕಿದೆ. ಕನ್ನಡ ಸಂಗೀತ ಸಭೆಗಳನ್ನು ಜನಪ್ರಿಯಗೊಳಿಸಬೇಕಿದೆ; ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ, ವಿಚಾರ ಸಾಹಿತ್ಯ, ಶಾಸ್ತ್ರ ಸಾಹಿತ್ಯಗಳು ವೆಗ್ಗಳವಾಗಿ ಬೆಳೆಯುವಂತೆ ಉಳುಮೆ ಮಾಡಬೇಕಿದೆ; ಹೊಸಗನ್ನಡ ಸಾಹಿತ್ಯವು ನಮಗೆ ನೀಡಿರುವ ವಿವಿಧ ಪ್ರಕಾರಗಳ ಅತ್ಯುತ್ತಮ ಭಾಗಗಳ ಸಂಕಲನಗಳನ್ನು ಪ್ರಕಟಿಸಿ ಶ್ರೀಸಾಮಾನ್ಯರೂ ಕೊಳ್ಳಬಹುದಾದ ಬೆಲೆಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕಿದೆ; ವಾಚನಾಲಯಗಳ ಚಳುವಳಿಯನ್ನು ವ್ಯಾಪಕವಾಗಿ ನಡೆಸಬೇಕಿದೆ; ಮಹಾರಾಷ್ಟ್ರದಲ್ಲಿ ಜನಪ್ರಿಯವೂ ಬಹೂಪಯೋಗಿಯೂ ಆಗಿರುವ ‘ಗ್ರಂಥಾಲಿ’ ಆಂದೋಲನಕ್ಕೆ ಸಂವಾದಿಯಾದ ಸಾಹಿತ್ಯ ಪ್ರಕಟನ, ಸಾಹಿತ್ಯದಾನ ಅಭಿಯಾನವೊಂದನ್ನು ಪ್ರಾರಂಭಿಸಬೇಕಿದೆ. ಈ ಯಾದಿಯನ್ನು ವಿಸ್ತರಿಸುತ್ತಲೇ ಹೋಗಬಹುದು. ಪರಿಷತ್ತಿನ ಕಾರ್ಯಕ್ಷೇತ್ರ ಎಷ್ಟು ವಿಸ್ತಾರವಾಗುತ್ತ ನಡೆದಿದೆ, ಅದರ ಹೊಣೆಗಳು ಎಷ್ಟು ಹೆಚ್ಚಿವೆ ಎಂಬುದಕ್ಕೆ- ಸಂಕೇತ ಮಾತ್ರ ಈ ಯಾದಿ. ಇದನ್ನು ಅನುಲಕ್ಷಿಸಿ ಪರಿಷತ್ತಿನ ಶಕ್ತಿ ಸಂವರ್ಧನೆಗೆ, ಶೀಲ ಸಂವರ್ಧನೆಗೆ ಅದರ ಪದಾಧಿಕಾರಿಗಳೂ ಪ್ರಯತ್ನಿಸಬೇಕು. ಸರ್ವ ಕನ್ನಡಿಗರೂ ಸಹಕರಿಸಬೇಕು.
Tag: Kannada Sahitya Sammelana 58, Siddaiah Puranika, Sidhaiah Puranik
೫೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಹಾ.ಮಾ. ನಾಯಕ
ಅಂಕಣ ಸಾಹಿತ್ಯದಿಂದ ಕನ್ನಡದಲ್ಲಿ ಪ್ರಸಿದ್ಧರಾದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಶ್ರೀನಿವಾಸನಾಯಕ-ರುಕ್ಮಿಣಿಯಮ್ಮ ದಂಪತಿಗಳಿಗೆ ಹಿರಿಯ ಮಗನಾಗಿ ೧೨-೧೧-೧೯೩೧ರಂದು ಜನಿಸಿದರು. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ೧೯೫೮ರಲ್ಲಿ ಭಾಷಾವಿಜ್ಞಾನದಲ್ಲಿ ಎಂ.ಎ. ಪದವಿಯನ್ನು ಪಡೆದರು.
೧೯೫೫ರಲ್ಲಿ ತುಮಕೂರಿನಲ್ಲಿ ಕನ್ನಡ ಅಧ್ಯಾಪಕರಾಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದರು. ೧೯೮೪ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ನೇಮಕಗೊಂಡರು. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ೧೯೯೧ರವರೆಗೂ ಸೇವೆಸಲ್ಲಿಸಿ ನಿವೃತ್ತರಾದರು.
ಹಾ.ಮಾ.ನಾ ಅವರಿಗೆ ಬಂದಿರುವ ಪ್ರಶಸ್ತಿಗಳು ಸಾಕಷ್ಟಿವೆ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಲಭ್ಯವಾಗಿವೆ.
‘ಸಲ್ಲಾಪ’ ಗ್ರಂಥಕ್ಕೆ ಮೈ.ವಿ.ವಿ ಸುವರ್ಣ ಮಹೋತ್ಸವ ಪ್ರಶಸ್ತಿ, ‘ಸಂಪ್ರತಿ’ ಗ್ರಂಥಕ್ಕೆ ಐ.ಬಿ.ಎಚ್. ಎಜುಕೇಷನ್ ಟ್ರಸ್ಟ್ ಪ್ರಶಸ್ತಿ ಲಭಿಸಿವೆ.
ದೇಶವಿದೇಶಗಳಲ್ಲಿ ನಾನಾ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದರು. ಬೀದರ್ನಲ್ಲಿ ನಡೆದ ೫೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಭಾಗ್ಯ ಇವರದಾಗಿತ್ತು.
ಇವರು ರಚಿಸಿರುವ ಕೆಲವು ಪ್ರಮುಖ ಕೃತಿಗಳು: ಬಾಳ್ನೋಟಗಳು, ನಮ್ಮ ಮನೆಯ ದೀಪ, ಜಾನಪದ ಸ್ವರೂಪ, ಪ್ರಣಯ ವಿದ್ಯಾವಲಿ, ರವೀಂದ್ರನಾಥ್ ಠಾಕೂರ್, ಗೋರೂರು ಗೌರವ ಗ್ರಂಥ, ಎ.ಆರ್.ಕೃ ಜೀವನ ಸಾಧನೆ, ಜಾನಪದ ಗ್ರಂಥಸೂಚಿ, ಬಿಡುಗಡೆಬಳ್ಳಿ, ಗದ್ಯವಿಹಾರ, ಗಳಗನಾಥ, ಮುದ್ದಣ, ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಇವರಿಂದ ಸಂಪಾದಿತವಾಗಿವೆ.
ಸಂಪ್ರತಿ, ಸಂಕೀರ್ಣ, ಸಮೀಕ್ಷೆ, ಸಂದರ್ಭ, ಸಂಗ್ರಹ, ಸಂಚಯ, ಸೃಜನ, ಸಂಪರ್ಕ, ಸಂವಹನ, ಮೊದಲಾದ ಅಂಕಣ ಬರಹಗಳು ಪುಸ್ತಕಗಳಾಗಿ ಹೊರಬಂದಿವೆ.
ಮೈಸೂರಿನಲ್ಲಿ ನೆಲೆಸಿದ್ದ ಹಾ.ಮಾ.ನಾ ಅವರು ೧0-೧೧-೨000ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೫೭,
ಅಧ್ಯಕ್ಷರು, ಹಾ.ಮಾ. ನಾಯಕ
ದಿನಾಂಕ ೫, ೬, ೭ ಏಪ್ರಿಲ್ ೧೯೮೫
ಸ್ಥಳ : ಬೀದರ್
ಹಿಂದಿನ ಸಮ್ಮೇಳನಾಧ್ಯಕ್ಷರ ಕಾರ್ಯ
ಈ ಮೊದಲು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದವರ ಪಟ್ಟಿಯನ್ನು ನೋಡಿದರೆ ಅವರೆಲ್ಲರನ್ನು ಸ್ಥಳವಾಗಿ ಮೂರು ಗುಂಪು ಮಾಡಬಹುದೆಂದು ತೋರುತ್ತದೆ. ಒಂದು ಗುಂಪಿನವರು ಅದ್ಭುತ ಸೃಜನಶೀಲರು (ಕುವೆಂಪು, ಬೇಂದ್ರೆ, ಕಾರಂತ, ಗೋಕಾಕ್ ಮೊ.); ಇನ್ನೊಂದು ಗುಂಪಿನವರು ಮಹಾ ವಿದ್ವಾಂಸರು (ಉಪಾಧ್ಯೆ, ಪೈ, ಹಳಕಟ್ಟಿ, ಡಿ.ಎಲ್.ಎನ್., ನರಸಿಂಹಾಚಾರ್ ಮೊ.); ಮತ್ತೊಂದು ಗುಂಪಿನವರು ಕನ್ನಡದ ಕೆಲಸಗಾರರು; ಸೃಜನಶೀಲವಾದ ಅಥವಾ ವಿದ್ವತ್ತಿನ ಕೆಲಸವನ್ನು ಅವರು ಮಾಡಿರಬಹುದು ಅಥವಾ ಮಾಡದೆಯೂ ಇರಬಹುದು. ಆದರೆ ಅವರ ಕನ್ನಡದ ಕೆಲಸವೇ ದೊಡ್ಡದು (ಬೆಳ್ಳಾವೆ ವೆಂಕಟನಾರಣಪ್ಪ, ಮುದವೀಡು ಕೃಷ್ಣರಾವ್, ಕೆ.ಪಿ. ಪುಟ್ಟಣ್ಣಶೆಟ್ಟಿ, ಬೆನಗಲ್ ರಾಮರಾವ್, ತಿ.ತಾ. ಶರ್ಮ ಮೊ.). ಭಾಷೆ ಸಾಹಿತ್ಯಗಳ ಬೆಳವಣಿಗೆಗೆ ಇವರೆಲ್ಲರೂ ಮುಖ್ಯರಾದವರು. ಆದ್ದರಿಂದಲೇ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಎಲ್ಲ ಬಗೆಯ ಕೆಲಸಗಾರರನ್ನೂ ಒಂದೇ ದೃಷ್ಟಿಯಿಂದ ನೋಡಿಕೊಂಡು ಬಂದಿದೆ. ನಾನು ಕನ್ನಡದ ಕೆಲಸಗಾರರಲ್ಲಿ ಕೊನೆಯವನು, ಕಿರಿಯವನು, ನನಗಿಂತ ಕೊನೆಯವರಿಲ್ಲ, ಕಿರಿಯವರಿಲ್ಲ. ಇದನ್ನು ತುಂಬ ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡು ಈ ಮಹಾಗೌರವವನ್ನು ವಿನೀತನಾಗಿ ಸ್ವೀಕರಿಸಿದ್ದೇನೆ.
ಪರಿಷತ್ತಿನ ಸಾಧನೆ
ನನ್ನ ಭಾಷಣವನ್ನು ಮುಗಿಸುವ ಮುಂಚೆ ಕನ್ನಡ ಸಾಹಿತ್ಯ ಪರಿಷತ್ತಿನ ವಿಷಯವಾಗಿ ಕೆಲವು ಮಾತುಗಳನ್ನು ಆಡಬೇಕಾಗಿದೆ. ಪರಿಷತ್ತು ಕನ್ನಡಿಗರೆಲ್ಲರಿಗೂ ಮಾತೃಸಂಸ್ಥೆ. ಸಾಹಿತ್ಯ ಸಂಸ್ಕೃತಿಗಳ ವಿಷಯದಲ್ಲಿ ಅದು ಪ್ರಾತಿನಿಧಿಕ ಸಂಸ್ಥೆ. ನಮ್ಮ ಹಿರಿಯರು ಅದನ್ನು ತಮ್ಮ ತ್ಯಾಗ ದುಡಿಮೆಗಳಿಂದ ಕಟ್ಟಿದರು. ಅದಕ್ಕೆ ಧನಬಲವಿಲ್ಲದ ದಿನಗಳಲ್ಲಿ ಪದಾಧಿಕಾರಿಗಳಾಗಿದ್ದವರು ತಮ್ಮ ಸ್ವಂತ ಹಣವನ್ನು ಹಾಕಿ ಪರಿಷತ್ತನ್ನು ನಡೆಸಿಕೊಂಡು ಬಂದರು. ಆ ದಿನಗಳಲ್ಲಿ ಅಲ್ಲಿ ಯಾವ ಬಗೆಯ ಪೈಪೋಟಿಗಳೂ ಇರಲಿಲ್ಲ. ಇದ್ದರೂ ಅದು ಕೇವಲ ಪ್ರಜಾಪ್ರಭುತ್ವ ತತ್ವಕ್ಕನುಸಾರವಾದುದಾಗಿತ್ತು. ಸಣ್ಣ ಪ್ರಮಾಣದಲ್ಲಿತ್ತು. ಅಂದಿನ ದಿನಗಳಲ್ಲೂ ಪರಿಷತ್ತನ್ನು ಟೀಕಿಸುವವರಿದ್ದರು. ಸಾರ್ವಜನಿಕ ಸಂಸ್ಥೆಗಳ ಕಾರ್ಯನಿರ್ವಹಣೆ ಟೀಕೆಗಳಿಗೆ ಒಳಗಾಗುವುದು ಸಹಜ. ಕೆಲಸ ಮಾಡದಿದ್ದಾಗ ಮಾತ್ರ ಟೀಕೆಗಳಿರುವುದಿಲ್ಲ. ಟೀಕೆಗಳು ಬರುತ್ತವೆಂದು ಕೆಲಸ ಮಾಡದೆ ಇರಲಾಗುವುದಿಲ್ಲ. ಜಿ. ನಾರಾಯಣ ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅದನ್ನು ಬಹ್ವೀಕರಿಸಿದರು. ಕಟ್ಟಡ ವಿಸ್ತಾರವಾಯಿತು. ಸದಸ್ಯಬಲ ಬೆಳೆಯಿತು. ಮುಖ್ಯವಾಗಿ ಸರ್ಕಾರದಿಂದ ಉದಾರವಾದ ಧನಸಹಾಯ ದೊರೆಯಿತು. ಇದರ ಫಲವಾಗಿ ಪರಿಷತ್ತಿನ ಚಟುವಟಿಕೆಗಳೂ ಬೆಳೆದವು. ನಾರಾಯಣರ ನಂತರ ಬಂದ ಹಂಪ. ನಾಗರಾಜಯ್ಯನವರಾದರೂ ಪರಿಷತ್ತಿನ ಚಟುವಟಿಕೆಗಳನ್ನು ಬಹುವಾಗಿ ವಿಸ್ತರಿಸುವ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡರು. ಅವರು ಪರಿಷತ್ತಿನ ಅಂಗರಚನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ತಿದ್ದುಪಡಿ ಮಾಡಿದ್ದು ಒಂದು ಬಹುಮುಖ್ಯವಾದ ಸಾಧನೆ ಎಂದು ನಾನು ಭಾವಿಸುತ್ತೇನೆ.
ಪರಿಷತ್ತಿನ ಬಗ್ಗೆ ಟೀಕೆಗಳು
ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣವಾಗಿ ಸರ್ಕಾರದ ಸಹಾಯವನ್ನು ಅವಲಂಬಿಸಿರುವ ಸಂಸ್ಥೆ. ಸರ್ಕಾರದ ಸಹಾಯಧನ ಬರದೆ ಹೋದರೆ ಪರಿಷತ್ತು ಬಾಗಿಲು ಮುಚ್ಚಬೇಕಾಗುತ್ತದೆ. ಇಂಥ ಪರಿಸ್ಥಿತಿಯಿಂದ ಪರಿಷತ್ತನ್ನು ಪಾರುಮಾಡುವ ಯೋಜನೆಯನ್ನು ಸಿದ್ಧಪಡಿಸಬೇಕಾದ ಕಾಲವೀಗ ಬಂದಿದೆ. ಸಾಹಿತ್ಯ ಸಂಸ್ಕೃತಿಗಳ ವಿಷಯದಲ್ಲಿ ಈವರೆಗಿನ ಕರ್ನಾಟಕದ ಮಂತ್ರಿಮಂಡಳಗಳೆಲ್ಲವೂ ಬಹು ಉದಾರವಾಗಿ ನಡೆದುಕೊಂಡಿವೆ ಎಂಬುದನ್ನು ನಾವು ಅಭಿಮಾನದಿಂದ ಸ್ಮರಿಸಬೇಕು. ಅವು ತಾವಾಗಿಯೇ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಬೆಂಬಲ ನೀಡಿವೆ. ಆದರೂ ಪರಿಷತ್ತು ಸ್ವಾಯತ್ತ ಸಂಸ್ಥೆಯಾಗಿ ತನ್ನ ಕಾಲ ಮೇಲೆ ತಾನು ನಿಲ್ಲುವುದು ಅಗತ್ಯವೆಂದು ನನ್ನ ಅಭಿಪ್ರಾಯ. ಇಂದಲ್ಲ ನಾಳೆ ಯಾವುದೇ ಸರ್ಕಾರ ಅಥವಾ ಒಬ್ಬ ಮಂತ್ರಿ ಪರಿಷತ್ತು ತನ್ನ ತಾಳಕ್ಕೆ ಸರಿಯಾಗಿ ಕುಣಿಯಬೇಕೆಂದು ಅಪೇಕ್ಷಿಸಬಹುದು. ಪರಿಷತ್ತಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಹುದು. ಸಹಾಯಧನವನ್ನು ನಿಲ್ಲಿಸಬಹುದು ಅಥವಾ ಕಡಿಮೆ ಮಾಡಬಹುದು. ಪರಿಷತ್ತು ಸರ್ಕಾರದ ದನಿಯಾಗಬೇಕಾಗಿಲ್ಲ; ಆಗಬಾರದು. ಕನ್ನಡದ ಸರ್ವಾಂಗೀಣ ಅಭಿವೃದ್ಧಿಯ ವಿಷಯದಲ್ಲಿ ಸರ್ಕಾರ ತಪ್ಪು ಹೆಜ್ಜೆ ಇಡುವ ಸಂದರ್ಭದಲ್ಲಿ ಅದನ್ನು ಎಚ್ಚರಿಸಿ ಮಾರ್ಗದರ್ಶನ ನೀಡುವ ಶಕ್ತಿಯನ್ನು ಗಳಿಸಿಕೊಳ್ಳಬೇಕು. ಕನ್ನಡ ಭಾಷೆ ಸಾಹಿತ್ಯಗಳ ವಿಷಯದಲ್ಲಿ ಪರಿಷತ್ತಿನದೇ ಕೊನೆಯ ಮಾತಾಗಬೇಕು. ಇದು ಸರ್ಕಾರದ ಸಹಾಯಧನವನ್ನು ಅವಲಂಬಿಸಿರುವವರೆಗೂ ಸಾಧ್ಯವಾಗುವುದಿಲ್ಲ.
ಪರಿಷತ್ತಿನ ನಿಧಿ ವಿಚಾರ
ಆದ್ದರಿಂದ ಪರಿಷತ್ತು ತನ್ನದೇ ಒಂದು ನಿಧಿಯನ್ನು ಸ್ಥಾಪಿಸುವ ಯೋಜನೆ ಹಾಕಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಸೂಚಿಸಬಯಸುತ್ತೇನೆ. ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ಎಂಬ ಯೋಜನೆ ಹಾಕಿಕೊಂಡು ಒಂದು ಕೋಟಿ ರೂಪಾಯಿಗಳ ನಿಧಿಯೊಂದನ್ನು ಆರಂಭಿಸಬೇಕು. ನಿಧಿ ಸಂಗ್ರಹ ಕಷ್ಟವಾಗಲಾರದೆಂದು ಭಾವಿಸುತ್ತೇನೆ. ಮಾತು ಮಾತಿಗೆ ನಾವು ಮುಕ್ಕೋಟಿ ಕನ್ನಡಿಗರೆಂದು ಹೇಳುತ್ತೇವೆ. ಈ ಮುಕ್ಕೋಟಿಯಲ್ಲಿ ಎರಡು ಕೋಟಿಯನ್ನು ಬಿಟ್ಟರೂ ಮಿಕ್ಕ ಒಂದು ಕೋಟಿ ಜನ ಪರಿಷತ್ತಿಗೆ ಒಂದೊಂದು ರೂಪಾಯಿ ಕೊಡಲು ಮನಸ್ಸು ಮಾಡುತ್ತಾರೆ ಎಂದು ನಂಬಿದ್ದೇನೆ. ಹೆಚ್ಚು ಕೊಡುವವರಿದ್ದರೆ ಬೇಡ ಎನ್ನುವುದಿಲ್ಲ. ಈ ಒಂದು ಕೋಟಿ ರೂಪಾಯಿಗಳ ಬಡ್ಡಿಯಲ್ಲಿಯೇ ಪರಿಷತ್ತು ಸರ್ಕಾರದ ಮರ್ಜಿಯನ್ನು ಕಾಯದೆ ತನ್ನ ಕೆಲಸ ಮಾಡಬಹುದು. ಪರಿಷತ್ತಿನ ಉತ್ಸಾಹೀ ಅಧ್ಯಕ್ಷರಾದ ಹಂ. ಪ. ನಾಗರಾಜಯ್ಯನವರು ತಮ್ಮ ಅಧಿಕಾರಾವಧಿಯಲ್ಲಿಯೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಾರೆಂದು ನಿರೀಕ್ಷಿಸುತ್ತೇನೆ. ಅವರು ವಂತಿಗೆಯ ಸಂಗ್ರಹಕ್ಕೆ ಹೊರಟಾಗ ನನ್ನದು ನಮ್ರವಾದ ಐದು ನೂರ ಒಂದು ರೂಪಾಯಿಗಳ ಕಾಣಿಕೆ ಇರುತ್ತದೆಂದು ತಿಳಿದುಕೊಳ್ಳಲಿ.
ಪರಿಷತ್ತಿನ ಕಾರ್ಯದಲ್ಲಿ ಪಾಲ್ಗೊಳ್ಳಿ
ಪರಿಷತ್ತಿನ ಧ್ಯೇಯ ಧೋರಣೆಗಳನ್ನು ಒಪ್ಪದವರಲ್ಲಿ ನನ್ನದೊಂದು ಕಳಕಳಿಯ ಪ್ರಾರ್ಥನೆಯಿದೆ: ಪರಿಷತ್ತನ್ನು ತಿಳಿಯದೆ, ಪರಿಷತ್ತಿನ ಒಳಗೆ ಬರದೆ ಪರಿಷತ್ತನ್ನು ಟೀಕಿಸಬೇಡಿ. ಪರಿಷತ್ತು ನಮ್ಮೆಲ್ಲರಿಗೂ ಸೇರಿದ್ದು. ಮೊದಲು ಪರಿಷತ್ತಿನ ಸದಸ್ಯರಾಗಿ, ಒಳಗೆ ಬನ್ನಿ. ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳಿ. ಪರಿಷತ್ತು ಪ್ರಜಾಸತ್ತಾತ್ಮಕ ಸಂಸ್ಥೆ. ಅದರಲ್ಲಿ ನಿಮ್ಮ ದನಿಗೂ ಮಹತ್ವವಿದೆ. ಬರದೆ ಟೀಕೆಗಾಗಿ ಟೀಕೆ ಮಾಡಬೇಡಿ. ಎಲ್ಲ ಸಂಸ್ಥೆಗಳಿಗೂ ಇರುವಂತೆ ಪರಿಷತ್ತಿಗೂ ಅನೇಕ ಸೀಮಿತಗಳಿವೆ. ಎಲ್ಲರೂ ಅಪೇಕ್ಷಿಸುವ ಎಲ್ಲ ಕೆಲಸಗಳನ್ನೂ ಮಾಡುವುದು ಒಬ್ಬರಿಂದ ಸಾಧ್ಯವಾಗುವುದಿಲ್ಲ. ಆದರೆ ಅದು ಮಾಡುವ ಕೆಲಸ ಕನ್ನಡದ, ಕರ್ನಾಟಕದ ಕಲ್ಯಾಣಕ್ಕಾಗಿ ಎಂಬುದರಲ್ಲಿ ಎರಡು ಅಭಿಪ್ರಾಯಗಳಿಗೆ ಅವಕಾಶವಿಲ್ಲ. ಪರಿಷತ್ತು ಕನ್ನಡಿಗರದ್ದು. ಅದು ಕನ್ನಡಿಗರ ಸಾಂಸ್ಕೃತಿಕ ದೇವಾಲಯ. ಅದರ ಅಭಿವೃದ್ಧಿಯನ್ನು ನಾವು ಹಾರೈಸೋಣ. ಅದಕ್ಕಾಗಿ ಶ್ರಮಿಸೋಣ.
Tag: Kannada Sahitya Sammelana 57, Ha.Ma. Nayak,
೫೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎ.ಎನ್. ಮೂರ್ತಿರಾವ್
ಕನ್ನಡದಲ್ಲಿ ಶ್ರೇಷ್ಠ ಪ್ರಬಂಧಕಾರರೂ, ವಿಮರ್ಶಕರೂ, ಆಗಿದ್ದು ‘ದೇವರು’ ಪುಸ್ತಕದ ಮೂಲಕ ಜನಪ್ರಿಯರಾದ ಪ್ರೊ.ಎ.ಎನ್. ಮೂರ್ತಿರಾವ್ ಅವರು ಎಂ.ಸುಬ್ಬರಾವ್ ಮತ್ತು ಪುಟ್ಟಮ್ಮ ದಂಪತಿಗಳ ಪುತ್ರರಾಗಿ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್) ೧೮-೬-೧೯00ರಲ್ಲಿ ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ ಜನ್ಮ ತಳೆದರು. ಬಾಲ್ಯದ ದಿನಗಳನ್ನು ಮೇಲುಕೋಟೆ, ನಾಗಮಂಗಲಗಳಲ್ಲಿ ಕಳೆದ ಮೇಲೆ ೧೯೧೩ರಲ್ಲಿ ಮೈಸೂರಲ್ಲಿ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ಶಾಲಾ ಶಿಕ್ಷಣ ಮುಗಿಸಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು. ೧೯೨೨ರಲ್ಲಿ ಬಿ.ಎ. ಪದವಿ ಮುಗಿಸಿ ೧೯೨೪ರಲ್ಲಿ ಎಂ.ಎ.ಪದವಿ ಪಡೆದರು.
೧೯೨೪ರಲ್ಲಿ ಮಹಾರಾಜ ಕಾಲೇಜಿನಲ್ಲಿ ಟ್ಯೂಟರ್ ಆಗಿ ೧೯೨೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ೧೯೪0ರಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಬಡ್ತಿ ಪಡೆದರು. ೧೯೪0ರಿಂದ ೧೯೪೩ವರೆಗೆ ಶಿವಮೊಗ್ಗ ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ೧೯೪೩ರಲ್ಲಿ ಆಕಾಶವಾಣಿಯ ಸಹಾಯಕ ನಿರ್ದೇಶಕರಾದರು. ೧೯೪೮ರಲ್ಲಿ ಚಿತ್ರದುರ್ಗ ಕಾಲೇಜಿನಲ್ಲಿ ಮುಖ್ಯಸ್ಥರಾಗಿದ್ದು, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ೧೯೫೫ರಲ್ಲಿ ನಿವೃತ್ತಿಗೊಂಡರು.
೧೯೫೫ರಲ್ಲಿ ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದರು. ೧೯೫೪-೫೬ರಲ್ಲಿ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಸದರ್ನ್ ಲಾಂಗ್ವೇಜಸ್ ಬುಕ್ ಟ್ರಸ್ಟ್ನ ಕನ್ನಡ ಶಾಖೆಯ ಸಂಚಾಲಕ ಅಧ್ಯಕ್ಷರಾಗಿ ೪ ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೆಂಟ್ರಲ್ ಪ್ರೋಗ್ರಾಂ ಅಡ್ವೈಸರಿ ಕಮಿಟಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಎ.ಎನ್. ಮೂರ್ತಿರಾವ್ ಅವರು ಸಾಕಷ್ಟು ವಿದೇಶ ಪ್ರವಾಸ ಮಾಡಿದ್ದರು. ಅವರು ತಮ್ಮ ಲೋಕಾನುಭವದಿಂದ ಬರೆದ ಅಪರ ವಯಸ್ಕನ ಅಮೇರಿಕ ಯಾತ್ರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಚಿತ್ರಗಳು ಮತ್ತು ಪತ್ರಗಳು ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ, ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(೧೯೭೭), ಸಮಗ್ರ ಸಾಹಿತ್ಯಕ್ಕೆ ಮಾಸ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ, ಡಿ.ಲಿಟ್. ಪ್ರಶಸ್ತಿ, ‘ದೇವರು’ ಗ್ರಂಥಕ್ಕೆ ಪಂಪ ಪ್ರಶಸ್ತಿ ಮುಂತಾದವು ಇವರಿಗೆ ಸಂದಿವೆ.
೧೯೮೪ರಲ್ಲಿ ಕೈವಾರಗಳಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೫೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು.
ಇವರು ರಚಿಸಿರುವ ಕೃತಿಗಳಲ್ಲಿ ಹಗಲುಕನಸುಗಳು, ಅಲೆಯುವ ಮನ, ಮಿನುಗು ಮಿಂಚು(ಪ್ರಬಂಧ ಸಂಕಲನ), ಬಿಎಂಶ್ರೀ, ಪೂರ್ವಸೂರಿಗಳೊಡನೆ, ಶೇಕ್ಸ್ಪಿಯರ್, ಮಾಸ್ತಿಯವರ ಕಥೆಗಳು(ವಿಮರ್ಶಾ ಕೃತಿಗಳು), ಆಷಾಢಭೂತಿ, ಮೋಲಿಯೇರನ ೨ ನಾಟಕಗಳು, ಚಂಡಮಾರುತ(ನಾಟಕಗಳು), ಪಾಶ್ಚಾತ್ಯ ಸಣ್ಣ ಕಥೆಗಳು ಇತ್ಯಾದಿ ಕೃತಿಗಳು ಪ್ರಸಿದ್ಧವಾಗಿವೆ.
ಇಂಗ್ಲಿಷಿನಲ್ಲೂ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ.
ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯನ್ನು `ದಿ ರಿಟರ್ನ್ ಟು ದಿ ಸಾಯಲ್’ ಎಂದು ಅನುವಾದಿಸಿದ್ದಾರೆ. ಎಸ್. ರಾಧಾಕೃಷ್ಣನ್, ಎಂ.ವಿಶ್ವೇಶ್ವರಯ್ಯ, ಬಿ.ಎಂ.ಶ್ರೀಕಂಠಯ್ಯ ಅವರುಗಳನ್ನು ಕುರಿತು ಇಂಗ್ಲಿಷಿನಲ್ಲಿ ಸ್ವತಂತ್ರವಾಗಿ ಬರೆದಿದ್ದಾರೆ.
ಎ.ಎನ್. ಮೂರ್ತಿರಾವ್ರು ತಮ್ಮ ೧0೪ನೇ ವಯಸ್ಸಿನಲ್ಲಿ ೨೩-೮-೨00೩ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೫೬,
ಅಧ್ಯಕ್ಷರು, ಎ.ಎನ್.ಮೂರ್ತಿರಾವ್
ದಿನಾಂಕ ೨೩, ೨೪, ೨೫, ಮಾರ್ಚ್ ೧೯೮೪
ಸ್ಥಳ : ಕೈವಾರ
[ಟಿಪ್ಪಣಿ : ೧೯೯೩ರಲ್ಲಿ ಸಮ್ಮೇಳನ ನಡೆಯಲಿಲ್ಲ]
೫೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಕೈವಾರದಲ್ಲಿ ನಡೆಯುತ್ತದೆಂದು ಕೇಳಿದಾಗ ನಾನು ಈ ಅನುಭವವನ್ನು ಜ್ಞಾಪಿಸಿಕೊಂಡೆ. ಇತ್ತ ಕೈವಾರದ ಸ್ವಾಗತ ಸಮಿತಿಯವರು, ಅತ್ತ ಕನ್ನಡ ಸಾಹಿತ್ಯ ಪರಿಷತ್ತಿನವರು-ಇಬ್ಬರೂ ಹೊಸದೊಂದು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ದೊಡ್ಡ ಪಟ್ಟಣಗಳಲ್ಲಿ ಸಭೆ ಶಿಬಿರ ವಿಚಾರ ಸಂಕಿರಣಗಳು ಹಳಸಲಾಗಿ ಹೋಗಿವೆ. ಇಲ್ಲಾದರೋ-ಈಗ ಶ್ರೀ ಎಂ.ಎಸ್. ರಾಮಯ್ಯನವರ ನೇತೃತ್ವದಲ್ಲಿ ಸ್ವಾಗತ ಸಮಿತಿಯವರು ನಡೆಸಿರುವ ಸಿದ್ಧತೆಯನ್ನು ನೋಡಿದರೇ ಗೊತ್ತಾಗುತ್ತದೆ, ಸಾಹಿತ್ಯ-ಸಂಸ್ಕೃತಿಗಳ ವಿಷಯದಲ್ಲಿ ಜನರಿಗೆ ಎಂಥ ಸಂಭ್ರಮವಿದೆಯೆಂಬುದು. ನಗರಭೂತದ ಮಾರಕ ಅಪ್ಪುಗೆಯಿಂದ ಕಳಚಿಕೊಂಡು ಇಲ್ಲಿಗೆ ಬರುವುದೇ ಒಂದು ಆನಂದ.
ಕೈವಾರ ಸಮ್ಮೇಳನದ ವೈಶಿಷ್ಟ್ಯ
ಆ ಗತಕಾಲದ ವೀರರ, ಮೇಧಾವಿಗಳ, ಪುಣ್ಯಪುರುಷರ ನಾಡಿನಲ್ಲಿ ನಾವು ಹುಟ್ಟಿದೆವೆಂದು ಹೇಳಿಕೊಳ್ಳುವುದು ಸ್ವಾಭಾವಿಕ. ಆದರೆ ಅವರ ಕೀರ್ತಿಯನ್ನು ಮುಂದುವರಿಸುವಂಥ, ಸಾಹಸದ ಎಲ್ಲೆಗಳನ್ನು ತಳ್ಳಿಕೊಂಡು ಮುಂದೆ ಸಾಗುವಂಥ ಬದುಕನ್ನು ಬಾಳುವುದೇ ನಾವು ಪೂರ್ವಿಕರಿಗೆ ಸಲ್ಲಿಸಬೇಕಾದ ಕಾಣಿಕೆ; ಅವರನ್ನು ಅನುಕರಿಸುತ್ತ ಅವರ ಸತ್ವಹೀನ ಪ್ರತಿಕೃತಿಗಳಂತೆ ಬಾಳುವುದಲ್ಲ.
ಈ ಸತ್ಯ ಕನ್ನಡ ಸಾಹಿತ್ಯ ಪ್ರಪಂಚಕ್ಕೂ ಅನ್ವಯಿಸುತ್ತದೆಂಬುದನ್ನು ಮನಗಂಡು ಅದರ ಬೆಳಕಿನಲ್ಲಿ ತಮ್ಮ ಜೀವನವನ್ನು ರೂಪಿಸಿಕೊಂಡವರು-ನನ್ನ ಪೂಜ್ಯ ಗುರುಗಳಾದ ಬಿ.ಎಂ. ಶ್ರೀಕಂಠಯ್ಯನವರು. ಅವರ ಪ್ರಭಾವದಿಂದಾಗಿ, ಅವರ ಸತತ ಪ್ರಚಾರದಿಂದಾಗಿ, ಅವರು ಸ್ವತಃ ನಡೆಸಿದ ಪ್ರಯೋಗಗಳಿಂದಾಗಿ ಕನ್ನಡ ಸಾಹಿತ್ಯದಲ್ಲಿ ಹೊಸ ಯುಗವೊಂದು ಆರಂಭವಾಯಿತು. ಅದು ಹಿಂದಿನ ಯಾವ ಯುಗವೂ ಇಡದಷ್ಟು ದೊಡ್ಡ ದಾಪನ್ನು ಇಟ್ಟು ಅತ್ಯಂತ ಪರಿಣಾಮಕಾರಿಯಾದ ಪ್ರಗತಿಯನ್ನು ಸಾಧಿಸಿದೆ. ಶತಮಾನಗಳ ಕಾಲದಿಂದ ಬಂದ ಸಂಪ್ರದಾಯಗಳ ಪ್ರಯೋಜನವನ್ನು ಬಿಟ್ಟುಕೊಡದೆ, ಆದರೆ ಆ ಸಂಪ್ರದಾಯದ ಎಲ್ಲೆ ಕಟ್ಟುಗಳಲ್ಲೇ ಉಳಿದು ‘ಬಂಧನವೇ ಒಂದು ಸೌಖ್ಯ’ ಎಂದುಕೊಳ್ಳುವ ಮನೋವೃತ್ತಿಗೆ ಬಲಿಬೀಳದೆ ಹೊಸ ಯೌವನದ ಉತ್ಸಾಹದಿಂದ ಮುನ್ನುಗ್ಗಿದ ಯುಗ, ನಮ್ಮದು ಅದರ ಪ್ರವರ್ತಕರಾದ ಬಿ.ಎಂ.ಶ್ರೀಯವರು ಬದುಕಿದ್ದರೆ ಈ ವರ್ಷದ ಆದಿಯಲ್ಲಿ ಅವರಿಗೆ ನೂರು ವರ್ಷ ತುಂಬುತ್ತಿತ್ತು. ಕನ್ನಡ ನಾಡು ಬಿ.ಎಂ.ಶ್ರೀಯವರ ಶತಮಾನೋತ್ಸವವನ್ನು ಆಚರಿಸುತ್ತಿರುವ ವರ್ಷದಲ್ಲೇ ಇಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕೈವಾರದ ವೈಶಿಷ್ಟ್ಯಗಳಲ್ಲಿ ಇದೂ ಒಂದು.
ಪರಿಷತ್ತು ಹೊಣೆ ಅಲ್ಲ
ನಾನು ಅರ್ಧ ಶತಮಾನದ ಹಿಂದೆ ಕೇಳುತ್ತಿದ್ದ ಅರ್ಥಪೂರ್ಣ ತರ್ಕಬದ್ಧ ಭಾಷಣಗಳಿಗೆ ಬದಲಾಗಿ ಹಿಂದಿನ ಭಾಷಣಗಳ ತಿರುಳನ್ನೇ-ಅಂದರೆ ಕನ್ನಡ ಹಾಳಾಗುತ್ತಿದೆ, ಉಳಿಸಬೇಕು ಎಂಬ ತಿರುಳನ್ನೇ-ಉಳ್ಳ, ಆದರೆ ಭಾವಾವೇಶದಿಂದ ಜ್ವಲಿಸುವ, ಜನರಲ್ಲಿ ಅಸಹನೆಯನ್ನೂ ರೋಷವನ್ನೂ ಕೆರಳಿಸುವ ಭಾಷಣ ಘೋಷಣೆಗಳು ಈಗ ಕೇಳಿಬರುತ್ತಿವೆ. ಇದರಿಂದಾಗಿ ಜನಜೀವನ ಕದಡಿಹೋಗಿದೆ; ಇತ್ತ ಬೆದರಿಕೆಯಿಂದಾಗಿ ಭಯ ಕವಿದುಕೊಂಡಿದೆ; ಈ ಪರಿಸ್ಥಿತಿಯ ಬೆಂಕಿ ನಿರಪರಾಧಿಗಳನ್ನು ಸುಟ್ಟಿದೆ; ರಾಜ್ಯ ಎದುರಿಸಲೇಬೇಕಾದ ಮತ್ತು ಇದಕ್ಕಿಂತ ಮುಖ್ಯವಾದ ಸಮಸ್ಯೆಗಳು ಹಿನ್ನೆಲೆಗೆ ಹೋಗಿ ಬಿದ್ದಿವೆ. ಆದ್ದರಿಂದಲೇ ನನ್ನ ಮಾತಿನಲ್ಲಿ ಇದಕ್ಕೆ ಹೆಚ್ಚಿನ ಸ್ಥಾನವನ್ನು ಕೊಟ್ಟಿದ್ದೇನೆ. ಸಂಸ್ಕೃತಕ್ಕೆ ಯಾವ ಮಟ್ಟದಲ್ಲಿ ಯಾವ ಸ್ಥಾನವಿರಬೇಕು; ಯಾವ ಪರೀಕ್ಷಾ ಪತ್ರಕ್ಕೆ ಎಷ್ಟು ಅಂಕಗಳಿರಬೇಕು; ಹುದ್ದೆಯೊಂದಕ್ಕೆ ಅರ್ಜಿದಾರನಾದವನು ಅರ್ಜಿ ಹಾಕುವುದಕ್ಕಿಂತ ಮುಂಚೆಯ ಕನ್ನಡ ಪರೀಕ್ಷೆಯೊಂದನ್ನು ಪ್ಯಾಸು ಮಾಡಬಹುದೆ-ಇತ್ಯಾದಿ ವಿವರಗಳಿಗೆ ನಾನು ಇಲ್ಲಿ ಕೈಹಾಕುವುದಿಲ್ಲ. ನಾನು ತಮ್ಮೊಡನೆ ಪರಿಶೀಲಿಸಬೇಕೆಂದಿರುವುದು ಈ ಚಳವಳಿಯ ಹಿಂದಿರುವ ಮನೋವೃತ್ತಿಯನ್ನು, ಈಗ ನಾನು ಹೇಳುವುದೆಲ್ಲ ನನ್ನ ಸ್ವಂತ, ವೈಯಕ್ತಿಕ ಅಭಿಪ್ರಾಯ. ಇದರ ಹೊಣೆ ಪರಿಷತ್ತಿನ ಮೇಲಾಗಲಿ ಸಮ್ಮೇಳನದ ಮೇಲಾಗಲಿ ಏನೇನೂ ಇಲ್ಲ. ಇದು ಸ್ಪಷ್ಟವೇ ಆದರೂ ಇಲ್ಲಿ ಅದನ್ನು ಕಾಣಿಸುವುದು ಒಳ್ಳೆಯದು.
ಕರ್ನಾಟಕದ ಉದಾರ ಭಾವ
ಇನ್ನು ನಮ್ಮನ್ನು ಕಾಡುತ್ತಿರುವ ಇತರ ಸಮಸ್ಯೆಗಳ ಕಡೆಗೆ ತಿರುಗೋಣ. ಇಂದು ಚಾಲತಿಯಲ್ಲಿರುವ ರಾಜ್ಯ ವ್ಯವಸ್ಥೆಯಿಂದಾಗಿ ರಾಜ್ಯಭ್ರಷ್ಟರಾಗಿರುವ ನಮ್ಮ ಸೋದರ ಕನ್ನಡಿಗರ ಮಾತು ಬಹುಶಃ ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲೂ ಬಂದಿದೆ. ಅಂಥವರೊಬ್ಬರು ನನಗೆ ಬರೆದ ಪತ್ರದಲ್ಲಿ ತಮ್ಮನ್ನು ‘ಅನಾಥರು’ ಎಂದು ಕರೆದುಕೊಂಡಿದ್ದರು. ನಾನು ಕೇಳಿರುವ ಮಟ್ಟಿಗೆ ಅವರು ಹಾಗೆಂದು ಕೊಂಡದ್ದು ಸರಿ ಎಂದು ತೋರುತ್ತದೆ. ಅನೇಕ ರಾಜ್ಯಗಳಲ್ಲಿ ಗಡಿಯ ಎರಡು ಕಡೆಗಳಲ್ಲೂ ಭಾಷಾ ಅಲ್ಪಸಂಖ್ಯಾತರಿರುತ್ತಾರೆ. ಇದು ಅನಿವಾರ್ಯ. ಆದರೆ ಅಲ್ಪಸಂಖ್ಯಾತರೆಂಬ ಕಾರಣದಿಂದಾಗಿ ಅವರು ಅನಾಥರಾಗಬೇಕಾದ್ದಿಲ್ಲ. ಅವರು ಯಾವ ರಾಜ್ಯದ ಪ್ರಜೆಗಳಾಗಿದ್ದಾರೋ ಆ ರಾಜ್ಯ ತನ್ನ ಕರ್ತವ್ಯವನ್ನು ಪಾಲಿಸಿದರೆ ಅವರು-ತಮ್ಮ ಭಾಷಾಸೋದರರಿಂದ ದೂರವಾದೆವಲ್ಲ ಎಂಬುದೊಂದನ್ನು ಬಿಟ್ಟು ಸುಖವಾಗಿರಬಹುದು. ನನಗೆ ತಿಳಿದಮಟ್ಟಿಗೆ ಕರ್ನಾಟಕ ಈ ಸಂದರ್ಭದಲ್ಲಿ ಉದಾರವಾಗಿಯೇ ವರ್ತಿಸುತ್ತಿದೆ.
Tag: Kannada Sahitya Sammelana 56, A.N. Murthy Rao, A.N. Murthyrao
೫೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಇವರು ಗೊರೂರು ಗ್ರಾಮದಲ್ಲಿ ೪-೭-೧೯0೪ರಲ್ಲಿ ಶ್ರೀನಿವಾಸ ಅಯ್ಯಂಗಾರ್-ಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದರು. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು.
ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. ಅನಂತರ ಬೆಂಗಳೂರಿಗೆ ಬಂದು ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿದರು. ಅಖಿಲ ಭಾರತ ಚರಖಾ ಸಂಘದ ಖಾದಿ ವಸ್ತ್ರಾಲಯದ ಮಳಿಗೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ಇದರೊಂದಿಗೆ ಜಿಲ್ಲಾ ಮಂಡಳಿ ಮತ್ತು ಸ್ಥಳೀಯ ವಿದ್ಯಾಸಮಿತಿಗಳಲ್ಲಿ ಸೇವೆ ಸಲ್ಲಿಸಿದರು. ೧೯೫೨ರಲ್ಲಿ ವಿಧಾನಸಭೆಗೆ ನಾಮಕರಣಗೊಂಡರು.
೧೯೪೨ರಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿದರು. ೧೯೬೭ರಲ್ಲಿ ತರೀಕೆರೆಯಲ್ಲಿ ನಡೆದ ಮೊದಲನೇ ಅಖಿಲ ಕರ್ನಾಟಕ ಜನಪದ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ೧೯೬೯ರಲ್ಲಿ ಗೌರವ ಪ್ರಶಸ್ತಿ ನೀಡಿತು. ೧೯೭೧ರಲ್ಲಿ ಹಾಸನಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಮೈಸೂರು ವಿಶ್ವವಿದ್ಯಾಲಯ ೧೯೭೯ರಲ್ಲಿ ಗೌರವ ಡಾಕ್ಟರೇಟ್ ನೀಡಿತು. ಅಮೆರಿಕಾದಲ್ಲಿ ಗೊರೂರು ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ೧೯೮೨ರಲ್ಲಿ ಶಿರಸಿಯಲ್ಲಿ ನಡೆದ ೫೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
ಕಥೆ, ಕಾದಂಬರಿ, ಲಲಿತಪ್ರಬಂಧ, ಜೀವನಚರಿತ್ರೆಗಳಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದಾರೆ. ೬0ಕ್ಕೂ ಮೀರಿ ಕೃತಿಗಳನ್ನು ರಚಿಸಿರುವ ಗೊರೂರು ಅವರ ಕೃತಿಗಳು ಜನಪ್ರಿಯವಾಗಿವೆ. ಅವರ ಪ್ರಧಾನ ಕೃತಿಗಳು ಹೀಗಿವೆ :
ಹಳ್ಳಿಯ ಚಿತ್ರಗಳು, ನಮ್ಮ ಊರಿನ ರಸಿಕರು, ಬೈಲಹಳ್ಳಿ ಸರ್ವೆ, ಪುನರ್ಜನ್ಮ, ಮೆರವಣಿಗೆ, ಊರ್ವಶಿ, ಕಥೆಗಳು ಮತ್ತು ಇತರ ಚಿತ್ರಗಳು, ಶಿವರಾತ್ರಿ, ಬೆಸ್ತರ ಕರಿಯ, ಗೋಪುರದ ಬಾಗಿಲು ಇತ್ಯಾದಿ ಗದ್ಯ ಕೃತಿಗಳು. ಹಳ್ಳಿಯ ಹಾಡು, ಹಳ್ಳಿಯ ಬಾಳು, ಜನಪದ ಜೀವನ ಮತ್ತು ದರ್ಶನ ಇತ್ಯಾದಿ ಜಾನಪದ ಕೃತಿಗಳು. ಅಮೆರಿಕಾದಲ್ಲಿ ಗೊರೂರು-ಪ್ರವಾಸ ಗ್ರಂಥ, ಗಾಂಧೀಜಿ ಆತ್ಮಕಥೆ, ಅನುವಾದ.
ಕನ್ನಡ ಸಾಹಿತ್ಯ ಸಮ್ಮೇಳನ-೫೫,
ಅಧ್ಯಕ್ಷರು, ಗೊರೂರು ರಾಮಸ್ವಾಮಿ ಅಯ್ಯಂಗಾರ್
ದಿನಾಂಕ ೨೩, ೨೪, ೨೫, ೨೬ ಡಿಸೆಂಬರ್ ೧೯೮೨
ಸ್ಥಳ : ಶಿರಸಿ
ಗಮಕಕ್ಕೆ ಪ್ರೋತ್ಸಾಹ
ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಗಮಕವು ಹೊಂದಿರುವ ಸ್ಥಾನ ಮುಖ್ಯವಾದುದು. ಕಾವ್ಯವನ್ನು ರಾಗವಾಗಿ ವಾಚಿಸುವುದು ನಮ್ಮ ದೇಶದಲ್ಲಿ ಹಿಂದಲಿಂದ ಬಂದ ಪದ್ಧತಿಯಾಗಿದ್ದಿರಬೇಕು. ರಾಜರಿಗೆ ದಂಡನಾಯಕರಿಗೆ ಕಾವ್ಯಗಳನ್ನು ಅರ್ಪಿಸಿದಾಗ ಆಸ್ಥಾನದಲ್ಲಿಯೇ ಕವಿಯಿಂದಲೋ ಅಥವಾ ಗಮಕಿಗಳಿಂದಲೋ ವಾಚನ ನಡೆಯುತ್ತಿದ್ದಿತು. ಕವಿ, ವಾದಿ, ವಾಗ್ಮಿ ಗಮಕಿಗಳು ಆಸ್ಥಾನಗಳ ಭೂಷಣರೆಂಬ ನುಡಿ ಇದೆ. ಗಮಕಿಗಳು ತಮ್ಮ ಕಾರ್ಯಗಳಿಂದ ಈಚಿನ ದಿನಗಳಲ್ಲಿ ಸಾಹಿತ್ಯಕ್ಕೆ ತುಂಬಾ ಸೇವೆ ಸಲ್ಲಿಸಿದ್ದಾರೆ. ನಮ್ಮ ಪ್ರಾಚೀನ ಕಾವ್ಯಗಳು ಸಾಮಾನ್ಯವಾಗಿಯೇ ಹಾಡಲು ಅನುಕೂಲವಾದ ಛಂದಸ್ಸು ಪದಬಂಧಗಳುಳ್ಳವಾಗಿವೆ. ಅವುಗಳನ್ನು ಸಂಗೀತದ ಮಿತಿಯಲ್ಲಿ ಹಾಡಿದರೆ ಶ್ರೋತೃಗಳಿಗೆ ಹಿತವಾಗುವುದಲ್ಲದೆ ಸಾಹಿತ್ಯದ ಸವಿಯ ಅನುಭವವುಂಟಾಗುವುದು. ‘ಕುಮಾರವ್ಯಾಸಭಾರತ’, ‘ಜೈಮಿನಿ ಭಾರತ’, `ಬಸವ ಪುರಾಣ’, ‘ಭರತೇಶ ವೈಭವ’, ‘ಭಾಗವತ’ ಇವೆಲ್ಲ ಗಮಕಿಗಳಿಂದಲೇ ಜನತೆಯಲ್ಲಿ ಪ್ರಚಾರವಾಗಿವೆ. ಪರಿಷತ್ತು ಈ ಕಲೆಗೆ ಪ್ರೋತ್ಸಾಹವನ್ನು ಕೊಡುತ್ತಿದೆ. ಪರಿಷತ್ತಿನ ಸಭಾ ಕಾರ್ಯಗಳಲ್ಲಿಯೂ ಸಮ್ಮೇಳನದ ಸಭಾ ಕಾರ್ಯಗಳಲ್ಲಿಯೂ ಗಮಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಸಲಹೆಯನ್ನು ಪರಿಶೀಲಿಸಬಹುದು. ಈಗ ಶ್ರೀಮಾನ್ ಜಿ. ನಾರಾಯಣರು ಗಮಕ ಕಲಾ ಪರಿಷತ್ತನ್ನು ಸ್ಥಾಪಿಸಿ ಅದರ ಅಭಿವೃದ್ಧಿಗೆ ದೊಡ್ಡ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ನಮ್ಮ ಲೇಖಕಿಯರು
ನಮ್ಮ ಸೋದರಿಯರು ಹೆಚ್ಚು ಹೆಚ್ಚಾಗಿ ಸಾಹಿತ್ಯ ರಚನೆಗೆ ಕೈಹಾಕುತ್ತಿರುವುದು ಸಂತೋಷದ ಸಂಗತಿ. ಮೊದಮೊದಲು ಅವರು ಬರಿಯ ಕಥೆ ಕಾದಂಬರಿಗಳನ್ನು ಮಾತ್ರ ಬರೆಯುತ್ತಿದ್ದರು. ಈಗ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ-ಕವನಗಳು, ಪ್ರವಾಸ ಕಥನ, ಸರಳ ರಗಳೆಯ ನಾಟಕಗಳು, ವಿಮರ್ಶೆ ಎಲ್ಲವುಗಳನ್ನೂ ಬರೆಯುತ್ತಿದ್ದಾರೆ. ಈಗ ಲೇಖಕಿಯರ ಸಂಖ್ಯೆಯೂ ಹೆಚ್ಚಿದೆ. ಸಾಹಿತ್ಯ ಪರಿಷತ್ತಿನ ಒಂದು ಪಟ್ಟಿಯಂತೆ ಅವರ ಸಂಖ್ಯೆ ಇನ್ನೂರ ಐವತ್ತನ್ನೂ ದಾಟಿದೆ. ಒಬ್ಬರು ನೂರು ಕಾದಂಬರಿಗಳನ್ನು ಬರೆದಿದ್ದಾರೆಂದು ಕೇಳಿದೆ. ಇದೊಂದು ಗಣನೀಯ ಪ್ರಮಾಣ. ಮಹಿಳೆಯರು ಸಾಹಿತ್ಯವನ್ನು ರಚಿಸುವುದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಮಹಿಳೆಯರು ಆತ್ಮಾಭಿಮಾನ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಸಾಧಕವಾದ ಸಾಹಿತ್ಯವನ್ನು ರಚಿಸಬೇಕು. ಈಚಿನ ದಿನಗಳಲ್ಲಿ ಅವರು ಸಮಾಜದಲ್ಲಿ ತುಂಬ ಹೊಣೆಗಾರಿಕೆಯ ಕರ್ತವ್ಯಗಳನ್ನೆಲ್ಲ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಅವರು ಯಾವ ಕೆಲಸವನ್ನೂ ಚೆನ್ನಾಗಿ ಮಾಡಬಲ್ಲರು. ಅವರು ಹೆಚ್ಚು ಹೆಚ್ಚಾಗಿ ಶಿಶುಸಾಹಿತ್ಯವನ್ನೂ ರಚಿಸಬೇಕು. ಮೂಢನಂಬಿಕೆಗಳನ್ನು ನಿರ್ಮೂಲ ಮಾಡಬೇಕು. ಅವರಿಗೆ ಸಮಾನ ಅವಕಾಶವನ್ನು ಮೊದಲು ಕೊಟ್ಟವನು ಭಗವಾನ್ ಬುದ್ಧ. ಈಚಿನ ದಿನಗಳಲ್ಲಿ ಗಾಂಧೀಜಿ. ಉತ್ತರ ಕನ್ನಡ ಜಿಲ್ಲೆಯ ಕರನಿರಾಕರಣ ಚಳುವಳಿಯಲ್ಲಿ, ತ್ಯಾಗ ಮತ್ತು ಕಷ್ಟಸಹಿಷ್ಣುತೆಯಲ್ಲಿ ಮಹಿಳೆಯರೇ ಪ್ರಧಾನ ಪಾತ್ರ ವಹಿಸಿದ್ದರು. ರಷ್ಯನ್ ಮಹಿಳೆಯೊಬ್ಬಳು ಗಗನಯಾತ್ರಿಯೂ ಆದಳು.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು
ಸಾಹಿತ್ಯ ಪರಿಷತ್ತು, ಸರ್ಕಾರ, ಪ್ರಜೆಗಳು, ಸದಸ್ಯರು ಇವರ ಸಹಾಯದಿಂದ ನಡೆಯುವ ಸಾರ್ವಜನಿಕ ಸಂಸ್ಥೆ. ಇದಕ್ಕೆ ಒಂದು ಸಂವಿಧಾನವೂ ಇದೆ. ಕಾರ್ಯಕಾರಿ ಸಮಿತಿಯೂ ಇದೆ. ಈಚಿನ ದಿನಗಳಲ್ಲಿ ಇದರ ಸದಸ್ಯರ ಸಂಖ್ಯೆಯೂ ಹೆಚ್ಚುತ್ತಿದೆ. ಸದಸ್ಯರ ಸಂಖ್ಯೆ ಸಾಕಷ್ಟು ಇಲ್ಲ ಎಂಬುದೇ ಹಿಂದಲ ಎಲ್ಲ ಅಧ್ಯಕ್ಷರ ಕೊರಗು ಆಗಿತ್ತು. ಡಿ.ವಿ.ಜಿ.ಯವರು ಸದಸ್ಯರನ್ನು ಹೆಚ್ಚಿಸಿದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಹೇಳಿದ್ದರು. ಸದಸ್ಯ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಏರಿಸಬೇಕೆಂದು ಹೇಳಿದ ಒಬ್ಬ ಅಧ್ಯಕ್ಷರೂ ಇದ್ದಾರೆ. ಸರ್ಕಾರದ ಧನಸಹಾಯವೂ ಈಗ ಹೆಚ್ಚಾಗಿ ದೊರೆಯುತ್ತಿದೆ. ಶ್ರೀ ಜಿ. ನಾರಾಯಣ, ಶ್ರೀ ಹಂಪ. ನಾಗರಾಜಯ್ಯ ಇವರ ಅಧ್ಯಕ್ಷಗಿರಿಯ ಅವಧಿಯಲ್ಲಿ ಪರಿಷತ್ತಿನ ಕೆಲಸ ಕಾರ್ಯಗಳು ಚಟುವಟಿಕೆ ಎಲ್ಲ ದಾಪುಗಾಲಿನಲ್ಲಿ ನಡೆದು ಅನೇಕ ಕೊಂಬೆಗಳು ಒಡೆದ ಆಲದಮರದಂತೆ ವಿಸ್ತರಿಸಿವೆ. ಬೆಳ್ಳಿ ಬಿಟ್ಟ ಬಳ್ಳಿ ಮಾಲೆಯಲ್ಲಿ ಪ್ರಕಟವಾದ ೧0೧ ಪುಸ್ತಕಗಳು ಕನ್ನಡಿಗರಿಗೆ ಪರಿಷತ್ತಿನ ಬಹುದೊಡ್ಡ ಕೊಡುಗೆಯಾಗಿವೆ.
ಈಚಿನ ದಿನಗಳಲ್ಲಿ ಪರಿಷತ್ತು
ಆದರೆ ಈಚಿನ ದಿನಗಳಲ್ಲಿ ಪರಿಷತ್ತಿನಲ್ಲಿ ವಾತಾವರಣ ಗೊಂದಲಮಯವಾಗಿ ಅಹಿತಕರವೂ ರಾಡಿಯೂ ಆಗಿರುವುದು ಕನ್ನಡಿಗರಿಗೆ ವಿಷಾದದ ವಿಷಯವಾಗಿದೆ. ಸಂವಿಧಾನದಂತೆ ನಡೆದು ಏನನ್ನೂ ಸಾಧಿಸಲು ಎಲ್ಲರಿಗೂ ಅಧಿಕಾರವಿದೆ. ಆದರೆ ಇತರ ವಿಷಯಗಳಲ್ಲಿ ಭಿನ್ನಾಭಿಪ್ರಾಯವುಂಟಾದರೆ, ಸದಸ್ಯರೆಲ್ಲ ಒಟ್ಟಾಗಿ ಸೇರಿ ಚರ್ಚೆಯಿಂದ ಪರಿಹರಿಸಿಕೊಳ್ಳಬೇಕು. ಯಾರೂ ಉದ್ವೇಗಕ್ಕೆ ಒಳಗಾಗಬಾರದು. ಬಹಿರಂಗ ಹೇಳಿಕೆ ಕೊಡಬಾರದು. ನ್ಯಾಯಸ್ಥಾನಗಳಿಗೂ ಹೋಗಬಾರದು. ಯಾವುದೇ ಸಾರ್ವಜನಿಕ ಸಂಸ್ಥೆಗಳಿಗೂ ಇದು ಸಾಮಾನ್ಯ ನಿಯಮ. ಪರಿಷತ್ತಿನಂಥ ಸಾಂಸ್ಕೃತಿಕ ಸಂಸ್ಥೆಯಲ್ಲಿ ಸದಸ್ಯರೆಲ್ಲ ಇದನ್ನು ಅನುಸರಿಸಬೇಕು. ಪರಿಷತ್ತಿನಲ್ಲಿ ಹಿಂದೆಯೂ ಸಹ ಇಂಥ ವಿಷಯ ತಲೆದೋರಿದೆ. ೩೨ ವರುಷಗಳ ಹಿಂದೆಯೇ ಶ್ರೀಮಾನ್ ಎಂ.ಆರ್. ಶ್ರೀನಿವಾಸಮೂರ್ತಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ “ಮೊದಲಿನಿಂದಲೂ ಆಕ್ಷೇಪಕರು ಇದ್ದೇ ಇದ್ದಾರೆ. ನಮಗೂ ಪರಿಷತ್ತಿನ ಬಗ್ಗೆ ಅಸಂತುಷ್ಟಿ ಇದೆ. ಅಸಂತೋಷ : ಶ್ರಿಯೋ ಮೂಲಃ ಬೈದವರನ್ನು ಬಂಧುಗಳೆಂಬೆ” ಎಂದು ಸಮಾಧಾನ ತಂದುಕೊಳ್ಳುತ್ತೇವೆ. ಆದರೆ ಸದಸ್ಯರ ಸಂಖ್ಯೆಗಿಂತ ಆಕ್ಷೇಪಕರ ಸಂಖ್ಯೆಯೇ ಹೆಚ್ಚಾಗಿದ್ದರೆ ಫಲವೇನು….ಪರಿಷತ್ತು ಮಾಡಬೇಕಾದ ಕೆಲಸಗಳು ಬಹಳವಾಗಿವೆ. ಅದರ ಸದಸ್ಯರು ನಾಡಿನ ಎಲ್ಲ ಕಡೆಗಳಲ್ಲಿಯೂ ಇದ್ದಾರೆ ಎಂದು ಹೇಳಿದ್ದರು. ಆದುದರಿಂದ ಪರಿಷತ್ತಿನ ಮೇಲೆ ಈಗಷ್ಟೇ ಆಕ್ಷೇಪಣೆ ಬಂದಿದೆಯೆಂದು ಭಾವಿಸಬಾರದು.
ಪರಿಷತ್ತು ಸರಸ್ವತೀ ದೇವಾಲಯ
ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಅರ್ಥದಲ್ಲಿಯೂ ನಮ್ಮ ಸಾರಸ್ವತ ದೇವಾಲಯ. ಅದನ್ನು ಪ್ರಾತಃಸ್ಮರಣೀಯರಾದ ಅನೇಕ ಮಹಾನುಭಾವರು ತಮ್ಮ ಸರ್ವಸ್ವವನ್ನೂ ಅರ್ಪಿಸಿ ಕಟ್ಟಿದ್ದಾರೆ. ಸರಿಯಾಗಿ ನಡೆಸಿದರೆ ಕನ್ನಡಿಗರ ಹಿತವನ್ನು ರಕ್ಷಿಸಬಲ್ಲ ಸಂಸ್ಥೆ ಅದೊಂದೆ. ಅದು ಹಾಗೆ ಮಾಡುತ್ತಲೂ ಬಂದಿದೆ. ನೆರೆ ಪ್ರಾಂತಗಳಲ್ಲಿ ಪರಪ್ರಾಂತಗಳಲ್ಲಿ ಪರದೇಶಗಳಲ್ಲಿ ಕನ್ನಡಿಗರು ಎಲ್ಲಿಯೇ ಇರಲಿ-ಇವರೆಲ್ಲರನ್ನೂ ಒಂದು ಛತ್ರದ ಕೆಳಗೆ ಕೂಡಿಸುವ ಸಂಸ್ಥೆ ಇದೊಂದೆ. ನಾವು ಯಾವ ರೀತಿಯಿಂದಲೂ ಪರಸ್ಪರ ಕಚ್ಚಾಡಿ ಇಂಥ ಉತ್ತಮ ಸಂಸ್ಥೆಯನ್ನು ಹಾಳುಮಾಡಬಾರದು ಇದಕ್ಕೆ ದೀರ್ಘವಾದ ಸತ್ಪರಂಪರೆಯ ಇತಿಹಾಸವಿದೆ. ಹಿರಿಯರು ಬೆಳೆಸಿ ನಮ್ಮ ಕೈಯಲ್ಲಿಟ್ಟಿರುವ ಈ ಸಂಸ್ಥೆಗೆ ನಾವು ವಿಶ್ವಸ್ತರಾಗಿ ಇದನ್ನು ಬೆಳೆಸಿ ಮುಂದಲವರಿಗೆ ವರ್ಗಾಯಿಸಬೇಕು. ಸಂಯಮ ಹೊಂದಾಣಿಕೆ ತ್ಯಾಗ ಇವು ಎಲ್ಲರಲ್ಲಿಯೂ ಇರಬೇಕು. ಪರಸ್ಪರ ಕಾದಾಟ ಆತ್ಮಘಾತುಕವಾಗುವುದು.
Tag: Kannada Sahitya Sammelana 55, Goruru Ramaswamy Iyengar, Gorur
೫೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಶಂ.ಬಾ. ಜೋಶಿ
ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಬಾಳದೀಕ್ಷಿತ ಜೋಶಿ ಮತ್ತು ಉಮಾಬಾಯಿ ಅವರ ಮಗನಾಗಿ ೪-೧-೧೮೯೬ರಲ್ಲಿ ಗುರ್ಲಹೊಸೂರಿನಲ್ಲಿ ಜನಿಸಿದರು. ಜೋಶಿ ಅವರ ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. ೧೯೧೬ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು.
ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ ೧೯೨೬-೨೭ರಲ್ಲಿ ಸೇವೆ ಸಲ್ಲಿಸಿದ ಮೇಲೆ ೧೯೨೮ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದರು. ಅಲ್ಲಿ ೧೯೪೬ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕರ್ನಾಟಕ ವೃತ್ತ, ಧನಂಜಯ, ಕರ್ಮವೀರ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ೧೯೩೮ರಲ್ಲಿ ಹಾವೇರಿಯಲ್ಲಿ ಜರುಗಿದ ೩ನೇ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ, ೧೯೪೯ರಲ್ಲಿ ಜರುಗಿದ ೨ನೇ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ೧೯೮೧ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
ಕರ್ಣಾಟಕ ಸಂಸ್ಕೃತಿಯ ಪೂರ್ವಪೀಠಿಕೆ ಎಂಬ ಗ್ರಂಥಕ್ಕೆ ೧೯೭0ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಮೈಸೂರು ವಿಶ್ವವಿದ್ಯಾನಿಲಯವು ೧೯೭೧ರಲ್ಲಿ ಡಿಲಿಟ್ ನೀಡಿ ಇವರನ್ನು ಗೌರವಿಸಿತು. ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಸಂಸ್ಕೃತ, ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿಬಲ್ಲ ಶಂ.ಬಾ. ಜೋಶಿ ಅವರು ಮರಾಠಿಯಲ್ಲಿಯೂ ಕೆಲವು ಕೃತಿಗಳನ್ನು ಬರೆದಿದ್ದಾರೆ. ಶಂ.ಬಾ. ಜೋಶಿ ಅವರ ಪ್ರಮುಖ ಕೃತಿಗಳು ಹೀಗಿವೆ :
ಕಣ್ಮರೆಯಾದ ಕನ್ನಡ, ಕರ್ಣಾಟಕ ಸಂಸ್ಕೃತಿಯ ಪೂರ್ವಪೀಠಿಕೆ, ಕನ್ನಡ ನುಡಿಯ ಜೀವಾಳ, ಕನ್ನಡ ಸಾಹಿತ್ಯ ಅಭಿವೃದ್ಧಿ, ಅನ್ನವಿದ್ಯೆ, ಯಕ್ಷಪ್ರಶ್ನೆ, ಹಾಲುಮತದರ್ಶನ, ನಾಗಪ್ರತಿಮಾ ವಿಚಾರ, ಕರ್ಣನ ಮೂರು ಚಿತ್ರಗಳು, ಕಂನಾಡ ಕಥೆ, ಕನ್ನಡದ ನೆಲೆ ಇತ್ಯಾದಿ.
ಕನ್ನಡ ಸಾಹಿತ್ಯ ಸಮ್ಮೇಳನ-೫೪,
ಅಧ್ಯಕ್ಷರು, ಶಂ.ಬಾ. ಜೋಶಿ
ದಿನಾಂಕ ೨೭, ೨೮, ೨೯, ೩0 ನವೆಂಬರ್ ೧೯೮೧
ಸ್ಥಳ : ಮಡಿಕೇರಿ
ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾದ ಕೆಲಸ
ಕನ್ನಡ ಸಾಹಿತ್ಯ ಪರಿಷತ್ತು ತನ್ನ ದೀರ್ಘ ಬದುಕಿನಲ್ಲಿ ಕನ್ನಡದ ಸಾಂಸ್ಕೃತಿಕ ಬದುಕಿಗೆ ಮಹತ್ವದ ಕಾಣ್ಕೆ ನೀಡಿದ ಸಂಸ್ಥೆ. ಹಿಂದೊಮ್ಮೆ ಬೀಸಿಹೋದ ಸ್ಪರ್ಧೆಯ ಸುಂಟರಗಾಳಿ ಇಂದು ಮತ್ತೆ ಪರಿಷತ್ತಿನಲ್ಲಿ ಪ್ರವೇಶಿಸುವಂತೆ ಕಾಣುತ್ತಿದೆ. ಪರಿಷತ್ತಿನ ಮೂಲ ಆಶಯಕ್ಕೆ ಭಂಗ ತರುವ ಕಾರ್ಯ ನಡೆಯದಿರಲೆಂದು ಸೂಚಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.
ಸಾಹಿತ್ಯ ಪರಿಷತ್ತು ವಿಕೇಂದ್ರೀಕರಣದ ಹಾದಿಯಲ್ಲಿ ಸಾಗಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪರಿಷತ್ತಿನ ಘಟಕಗಳನ್ನೇನೊ ರಚಿಸಲಾಗಿದೆ. ಆದರೆ ಅವು ಸ್ವತಂತ್ರವಾಗಿ ಕಾರ್ಯ ಮಾಡಲು ಶಕ್ತವಾಗುವಂತೆ ಜೀವ ತುಂಬುವ ಕಾರ್ಯವನ್ನು ಕೇಂದ್ರ ಪರಿಷತ್ತು ಇನ್ನೂ ಮಾಡಿಲ್ಲ. ವರ್ಷದುದ್ದಕ್ಕೂ ಕಾರ್ಯ-ಚಟುವಟಿಕೆ ನಡೆಯಿಸಿಕೊಂಡು ಹೋಗುವ ಸಲುವಾಗಿ ವರ್ಷದಾದಿಯಲ್ಲೇ ರೂಪ-ರೇಷೆ ತಯಾರಿಸಿ, ಸಾಕಷ್ಟು ಹಣಕಾಸು ಮಂಜೂರು ಮಾಡಿ, ಅವು ಕಾರ್ಯಗತವಾಗುವಂತೆ ಅನಂತರ ಮೇಲ್ನೋಟ ಇಡಬೇಕು.
ಪರಿಷತ್ತಿನ ಸಾಹಿತ್ಯಿಕ ಪ್ರಕಟನೆಗಳು, ಉಪನ್ಯಾಸಗಳು ಮುಂತಾದ ಚಟುವಟಿಕೆಗಳಲ್ಲಿ ಕರ್ನಾಟಕದ ಕಡೆಯ ಗಡಿಯಲ್ಲಿರುವವರೂ ಭಾಗವಹಿಸಲು ಅವಕಾಶ ಕಲ್ಪಿಸಬೇಕು. ಪರಿಷತ್ತು ಬೆಂಗಳೂರಿನವರಿಗಾಗಿ, ಬೆಂಗಳೂರಿನ ಸಮೀಪದವರಿಗಾಗಿ ಇದೆಯೆಂದು ಆರೋಪಿಸುತ್ತಿರುವುದು ತೀರ ಸುಳ್ಳಲ್ಲ. ಅಖಿಲ ಕರ್ನಾಟಕದ ಜಿಜ್ಞಾಸುಗಳನ್ನೆಲ್ಲ ವಿಶ್ವಾಸದಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಬೇಕೆಂದು ಹಾರೈಸುವೆ.
ಸಾಹಿತ್ಯ ಸಮ್ಮೇಳನ ಹೇಗಿರಬೇಕು?
ಸಾಹಿತ್ಯ ಸಮ್ಮೇಳನ ಜಾತ್ರೆಯ ಸ್ವರೂಪ ಪಡೆಯುತ್ತಿರುವುದರಿಂದ ಗಂಭೀರ ವಾದ ವಿಚಾರ ವಿನಿಮಯಕ್ಕೆ ಅವಕಾಶವಿಲ್ಲದಾಗಿದೆಯೆಂಬ ಆರೋಪದಿಂದ ಮುಕ್ತವಾಗಲು, ಒಂದು ಸೂಚನೆ ಮಾಡಬಯಸುವೆ. ಕರ್ನಾಟಕದಲ್ಲಿಯ ಎಲ್ಲ ವಿಶ್ವವಿದ್ಯಾಲಯಗಳಲ್ಲಿಯ ಎಲ್ಲ ಜ್ಞಾನಶಾಖೆಗಳ ಪರಿಣತರು ಮತ್ತು ಇನ್ನುಳಿದ ಪ್ರಖ್ಯಾತ ಪ್ರಜ್ಞಾವಂತರನ್ನು ಸಾಹಿತ್ಯ ಪರಿಷತ್ತು ಸಂಘಟಿಸಿ ಉಚ್ಛಮಟ್ಟದ ವಿಚಾರ ವಿನಿಮಯ, ಗಂಭೀರ ಚರ್ಚೆಗಳಿಗೆ ಅನುವು ಮಾಡಿಕೊಡಬೇಕು. ಪ್ರತಿ ಮೂರು ವರ್ಷಗಳಿಗೊಮ್ಮೆ ಇಂಥ ತಜ್ಞರ ಸಮ್ಮೇಲನ ಸೇರಿಸಿ, ಸಾಹಿತ್ಯದೊಂದಿಗೆ ಉಳಿದ ಜ್ಞಾನ ಶಾಖೆಗಳ ಸಂಬಂಧ, ಅವುಗಳಲ್ಲಿಯ ಇತ್ತೀಚೆಗಿನ ಸಂಶೋಧನಗಳ ಉಪಯೋಗವನ್ನು ಸಾಹಿತ್ಯ ಕ್ಷೇತ್ರ ಪಡೆದುಕೊಳ್ಳುವ ಯೋಜನೆ ಇತ್ಯಾದಿಗಳ ಬಗ್ಗೆ ಪ್ರೌಢ ಪ್ರಬಂಧಗಳನ್ನು ಮಂಡಿಸಲು ಏರ್ಪಾಡು ಮಾಡಬೇಕು. ಮತ್ತು ಅಲ್ಲಿ ಮುಕ್ತ ಚರ್ಚೆ ಮಾಡಲು ಅವಕಾಶ ಇರಬೇಕು. ಈ ಉದ್ದೇಶಕ್ಕಾಗಿ ಪರಿಷತ್ತು ಪ್ರಾತಿನಿಧಿಕ ಸ್ವರೂಪದ ಸ್ಥಾಯಿಮಂಡಲಿ ರಚಿಸಿ ಕಾರ್ಯ ಆರಂಭಿಸಬೇಕು.
Tag: Kannada Sahitya Sammelana 54, Shamba Joshi, Shambaa, Shambha
೫೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಪು.ತಿ ನರಸಿಂಹಾಚಾರ್
ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಪುತಿನ ಅವರು (ಪುರೋಹಿತ ತಿರುನಾರಾಯಣ ನರಸಿಂಹಾಚಾರ್) ತಿರುನಾರಾಯಣ ಅಯ್ಯಂಗಾರ್-ಶಾಂತಮ್ಮ ದಂಪತಿಗಳ ಪುತ್ರರಾಗಿ ೧೭-೩-೧೯0೫ರಲ್ಲಿ ಮೇಲುಕೋಟೆಯಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ ೧೯೩೮ರಲ್ಲಿ ವ್ಯವಸ್ಥಾಪಕರಾಗಿಯೂ ೧೯೪೫ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದರು. ಅನಂತರ ೧೯೫೨ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆದರು. ೧೯೬೩ರಿಂದ ೧೯೬೬ವರೆಗೆ ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರರಾಗಿ, ೧೯೬೬ರಿಂದ ೧೯೭೧ವರೆಗೆ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕ ವರ್ಗದಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸಿದರು. ಹೀಗೆ ನಿರಂತರವಾಗಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೂ, ಕವಿಯಾಗಿ ಅನೇಕ ಕೃತಿಗಳನ್ನು ರಚಿಸುತ್ತಾ ಬಂದು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರೆನಿಸಿದರು.
ಇವರು ರಚಿಸಿದ ‘ಹಂಸದಮಯಂತಿ ಮತ್ತು ಇತರ ರೂಪಕಗಳು’ ಎಂಬ ಕೃತಿಗೆ ೧೯೬೫ರಲ್ಲಿ ಕೇಂದ್ರ ಸಾಹಿತ್ಯಾ ಅಕಾಡೆಮಿ ಬಹುಮಾನವೂ, ೧೯೬೬ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನವೂ ಲಭಿಸಿದವು. ೧೯೭೧ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿತು. ೧೯೮೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ೫೩ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಆದರು. ೧೯೯0ರಲ್ಲಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್, ೧೯೯೧ರಲ್ಲಿ ಇವರ ಸೃಜನಶೀಲ ಕೃತಿ ಶ್ರೀ ಹರಿಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ ದೊರೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯದ ಗೌರವಕ್ಕೂ ಪಾತ್ರರಾಗಿದ್ದಾರೆ.
ಕನ್ನಡ, ತಮಿಳು, ಇಂಗ್ಲಿಷ್, ಸಂಸ್ಕೃತ, ಫ್ರೆಂಚ್ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದ ವಿದ್ವಾಂಸರಾದ ಪು.ತಿ.ನ. ಅವರು ಗೇಯಕಾವ್ಯ ನಾಟಕ ಪ್ರಬಂಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ. ಅವರ ಕೆಲವು ಪ್ರಸಿದ್ಧ ಕೃತಿಗಳು ಹೀಗಿವೆ : ಗೋಕುಲ ನಿರ್ಗಮನ, ಸತ್ಯಾಯನ ಹರಿಶ್ಚ್ಚಂದ್ರ, ಹಂಸದಮಯಂತಿ ಮತ್ತು ಇತರ ರೂಪಕಗಳು, ಅಹಲ್ಯೆ, ಶ್ರೀರಾಮ ಪಟ್ಟಾಭಿಷೇಕ ಮೊದಲಾದ ಗೀತ ರೂಪಕಗಳು, ರಥ ಸಪ್ತಮಿ ಮತ್ತು ಇತರ ಚಿತ್ರಗಳು (೧೯೪೫), ಈಚಲು ಮರದ ಕೆಳಗೆ (೧೯೪೯), ಧೇನುಕ ಪುರಾಣ (೧೯೪೭), ಇತ್ಯಾದಿ ಪ್ರಬಂಧಗಳು, ಕಾವ್ಯಕುತೂಹಲ, ರಸಪ್ರಜ್ಞೆ, ದೀಪರೇಖೆ ಇತ್ಯಾದಿ ವಿಮರ್ಶಾ ಗ್ರಂಥಗಳು, ಹತ್ತಾರು ವರ್ಷಗಳ ಪರಿಶ್ರಮದಿಂದ ರಚಿಸಿದ ಅನುವಾದಗಳು- ಕನ್ನಡ ಭಗವದ್ಗೀತೆ, ಸಮಕಾಲೀನ ಭಾರತೀಯ ಸಾಹಿತ್ಯ.
ಪು.ತಿ.ನ. ಅವರು ಬೆಂಗಳೂರಿನಲ್ಲಿ ೧೩-೧0-೧೯೯೮ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೫೩,
ಅಧ್ಯಕ್ಷರು, ಪು.ತಿ. ನರಸಿಂಹಾಚಾರ್
ದಿನಾಂಕ ೧೩, ೧೪, ೧೫ ಮಾರ್ಚ್ ೧೯೮೧
ಸ್ಥಳ : ಚಿಕ್ಕಮಗಳೂರು
ಕನ್ನಡ ನಾಡಿನಲ್ಲಿ ಕನ್ನಡದ ಸ್ಥಿತಿಗತಿ
ಅರವತ್ತಾರು ವರ್ಷಗಳ ಹಿಂದೆ ಈ ಪರಿಷತ್ತು ನಾಡುನುಡಿಗಳ ಭಕ್ತಶ್ರೇಷ್ಠರಿಂದ ಸ್ಥಾಪಿತವಾಗಿದ್ದು ಇಂದಿನವರೆಗೂ ವರುಷವರುಷಕ್ಕೆ ಬಲಗೊಂಡು ಬೆಳೆಯುತ್ತಾ ಬರುತ್ತಿದೆ. ನಾಡಿನ ಮತ್ತು ನುಡಿಗಳ ಪ್ರಗತಿಗೆ ಎದುರು ಹಾಯುತ್ತಿದ್ದ ಅಸತ್ ಪ್ರವೃತ್ತಿಗಳನ್ನು ಪ್ರತಿಭಟಿಸುವ ಸಲುವಾಗಿ ಆ ಸತ್ಪುರುಷರಿಂದ ಈ ಪರಿಷತ್ತು ನಿರ್ಮಾಣವಾಯಿತು. ಅಂಥವರು ತಮ್ಮ ಸೂಕ್ಷ್ಮ ಸಂವೇದನೆಗಳಿಂದ ಗುರುತಿಸಿದ್ದ ಹಾನಿಕರವಾದ ಓಲುವೆಗಳು ಇಂದಿಗೂ ನಾಶಹೊಂದಿಲ್ಲ. ಅದಕ್ಕೆ ಬದಲು ವರ್ಧಿಸುತ್ತಿರುವಂತೆಯೇ ತೋರುತ್ತಿದೆ. ೧೯೧೫ರಲ್ಲಿ ಪರಿಷತ್ತಿನ ಸಂಸ್ಥಾಪಕರಾದ ಶ್ರೀಮಾನ್ ಎಚ್.ವಿ. ನಂಜುಂಡಯ್ಯನವರು ಆರಂಭದಲ್ಲೇ ಇಂಗ್ಲಿಷಿನ ವ್ಯಾಮೋಹದಿಂದ ಕನ್ನಡಕ್ಕೆ ಉಂಟಾಗಬಹುದಾದ ಕೇಡನ್ನು ಕುರಿತು ಪ್ರಸ್ತಾಪಿಸಿದ್ದಾರೆ. ಸಂಸ್ಕೃತದಿಂದ ಕನ್ನಡಕ್ಕೆ ಆಗುವ ಉಪಕಾರವೂ ಅಷ್ಟರಲ್ಲೇ ಇದೆ ಎಂದು ಹೇಳಿ ಸಂಸ್ಕೃತದ ವಿದ್ವಾಂಸರು ಕನ್ನಡದ ವಿಷಯದಲ್ಲಿ ತಳೆದಿದ್ದ ತಾತ್ಸಾರ ಭಾವವನ್ನು ತಿವಿದಿದ್ದಾರೆ.
ಕಾಸರಗೋಡು ಸಮಸ್ಯೆ
ಇನ್ನು ನಮ್ಮ ಪರಿಷತ್ತಿನ ಮತ್ತೊಂದು ಧ್ಯೇಯವಾದ ಕನ್ನಡಿಗರೆಲ್ಲರೂ ಒಂದು ಅಖಂಡ ರಾಜ್ಯದಲ್ಲಿ ಒಂದುಗೂಡುವ ಬಯಕೆ ಪೂರ್ಣವಾಗಿ ನೆರವೇರಿದೆಯೇ ಎಂಬುದನ್ನು ಸ್ವಲ್ಪ ಆಲೋಚಿಸೋಣ. ನಮ್ಮ ಪರಿಷತ್ತು ಆರಂಭದಿಂದಲೇ ನುಡಿಯ ಜೊತೆಗೆ ನಾಡಿನ ವಿಷಯವನ್ನೂ ತಲೆಗೆ ಹಚ್ಚಿಕೊಂಡಿದೆ. ಅನ್ಯರಾಜ್ಯಗಳಲ್ಲಿ ಖಂಡತುಂಡವಾಗಿ ಚೆದರಿಹೋಗಿದ್ದ ಕನ್ನಡಿಗರ ನೆಲೆಗಳನ್ನು ಒಂದೇ ಒಂದು ಆಡಳಿತ ವ್ಯವಸ್ಥೆಗೆ ತರುವ ಹಂಬಲವನ್ನು ಅರವತ್ತಾರು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ತಳೆದಿದೆ. ಈ ಆಸೆ ತೀರಿ ಚೆದರಿದ ಕನ್ನಡ ಭಾಗಗಳು ರಭಸದಿಂದ ಒಂದುಗೂಡುತ್ತಿರುವಾಗ ಕೆಲವು ಚೂರುಗಳು ಕಿತ್ತುಹೋಗಿ ಇದ್ದಲ್ಲೆ ಉಳಿದುಕೊಂಡಿವೆ. ಆ ಗಾಸಿಯ ವೇದನೆಯನ್ನು ಅವು ಹಾಗೂ ಒಟ್ಟು ನಾಡು ಪಡುತ್ತಿವೆ. ತಜ್ಞರ ಪರಿಹಾರ ಸೂತ್ರ ಕಾರ್ಯಗತವಾಗಿಲ್ಲ. ಇದರಲ್ಲಿ ಯಾವ ರಾಜಕೀಯ ರಹಸ್ಯವಡಗಿದೆಯೋ ನಮಗೆ ಗೊತ್ತಿಲ್ಲ ಮೇಲುನೋಟಕ್ಕೆ ಇದು ಸರಳವಾಗಿ ಕಾಣುತ್ತಿದೆ. ಕನ್ನಡ ನೆಲೆಗಳು ಒಂದಾದಾಗಿನಿಂದ ಇದುವರೆಗೂ ಕಾಸರಗೋಡು ಕರ್ನಾಟಕದೊಂದಿಗೆ ಸೇರಿಕೊಳ್ಳಬೇಕೆಂಬ ಹೆಬ್ಬಯಕೆಯನ್ನು ಅನೇಕಬಾರಿ ಇಂಥ ಅನೇಕ ಸಮ್ಮೇಳನಗಳಲ್ಲಿ ತೋಡಿಕೊಂಡಿದೆ. ಯಾವ ಪ್ರಭಾವಕ್ಕೆ ಮರುಳಾಗಿ ಕೇಂದ್ರ ಸರ್ಕಾರ ಕಾಸರಗೋಡನ್ನು ಕೇರಳದಲ್ಲೇ ಪ್ರಾರಂಭದಲ್ಲಿ ಉಳಿಸಿತೋ, ಈಗೇಕೆ ಮಹಾಜನ ವರದಿಯ ತೀರ್ಮಾನವನ್ನು ಸ್ಥಗಿತಗೊಳಿಸಿದೆಯೋ ಕಾಣೆವು. ಈ ಪ್ರಭಾವ ಮೊದಲಿನಷ್ಟೆ ಈಗಲೂ ಶಕ್ತಿಯುತವಾಗಿದೆಯೇ ಆ ಪ್ರಭಾವವನ್ನು ಯಾವ ಪ್ರತಿಪ್ರಭಾವದಿಂದ ದುರ್ಬಲಗೊಳಿಸಿ ಆ ಕೀರ್ತಿವೆತ್ತ ಭಾಗದವರ ಮಹದಾಶಯವನ್ನು ಈಡೇರಿಸಬಹುದು? ಕಾಸರಗೋಡನ್ನು ತುಂಬಿರುವ ಕನ್ನಡ ಜನ ತಾವು ಕೇರಳದಲ್ಲಿ ಬಯಲು ಬಂದೀಖಾನೆಯಲ್ಲಿರುವಂತಿರಬಾರದಷ್ಟೆ. ಸ್ವತಂತ್ರ ಭಾರತಕ್ಕೆ ಇದು ಭೂಷಣವೇ? ನಮ್ಮ ಮುಖ್ಯಮಂತ್ರಿಗಳು ಈ ದಿಶೆಯಲ್ಲಿ ತಟಸ್ಥರಾಗಲಾರರು. ಅವರ ಹೇಳಿಕೆಗಳು ತುಂಬ ಆಶಾದಾಯಕವಾಗಿವೆ. ಪ್ರಭಾವಶಾಲಿಗಳೂ ಚತುರರೂ ಆದ ಇವರು ನ್ಯಾಯವಾಗಿ ನಮಗೆ ಸಂದಿರುವುದನ್ನು ಯಾವ ಸಂಶಯಕ್ಕೂ ಎಡೆಕೊಡದೆ ಉಳಿಸಿಕೊಂಡು ನ್ಯಾಯವಾಗಿ ಬರಬೇಕಾದ ಭಾಗಗಳನ್ನು ಗಳಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಬಹುಕಾಲದ ಪೂಣ್ಕೆಯನ್ನು ಸಲ್ಲಿಸುತ್ತಾರೆಂದು ನನಗನ್ನಿಸುತ್ತದೆ. ನ್ಯಾಯದ ವಿಷಯದಲ್ಲಿ ದಿಟ್ಟತನದ ನಿಲುವು, ಜತೆಗೆ ಸ್ನೇಹಹಸ್ತ, ಇಲ್ಲಿದೆ ನಮ್ಮ ರಾಜನೀತಿಯ ನೈಪುಣ್ಯ.
ಕನ್ನಡದಲ್ಲಿ ವೈಜ್ಞಾನಿಕ ಜ್ಞಾನಪ್ರಸರಣ
ವೈಜ್ಞಾನಿಕ ಜ್ಞಾನ ಬೆಳೆದಂತೆಲ್ಲ ಬಾಹ್ಯ ಜಗತ್ತಿಗೂ ಮಾನವ ಜೀವಿತಕ್ಕೂ ಇರುವ ಅನಿವಾರ್ಯ ಸಂಬಂಧಗಳಲ್ಲಿ ಅಂಧಶ್ರದ್ಧೆ ಕಡಿಮೆಯಾಗಿ ಅಂತರಾತ್ಮೋಪಾಸನೆ ಬೆಳೆಯುತ್ತದೆ ನಮ್ಮ ಜನದಲ್ಲಿ. ಈ ವೈಜ್ಞಾನಿಕ ಜ್ಞಾನವನ್ನು ಕನ್ನಡನುಡಿಗೆ ತುಂಬಿ ಜನರ ಇಂಗ್ಲಿಷ್ ವ್ಯಾಮೋಹವನ್ನು ತಪ್ಪಿಸುವಲ್ಲಿ ನಮ್ಮ ವಿದ್ವಾಂಸರು ಪ್ರವೃತ್ತರಾಗಿರುವುದು ತುಂಬ ನೆಮ್ಮದಿಯ ಸಂಗತಿ. ಕನ್ನಡ ನಾಡಿನ ಮೇಲ್ಮೆಗೆ ದುಡಿಯುತ್ತಿರುವ ಈ ಸಾಹಿತ್ಯ ಪರಿಷತ್ತು ಈ ಕೆಲಸಗಳನ್ನು ತನ್ನ ಗಮನಕ್ಕೆ ತಂದುಕೊಳ್ಳುವುದೂ ಜನರಲ್ಲಿ ಪ್ರಸಾರ ಮಾಡುವುದೂ ಆವಶ್ಯಕ.
ಪರಿಷತ್ತು ಸಂಪರ್ಕ ಮಾಧ್ಯಮ ಆಗಬೇಕು
ಕನ್ನಡವನ್ನು ವಿದ್ಯಾಭ್ಯಾಸದ ಎಲ್ಲ ಸ್ತರಗಳಲ್ಲೂ ಮಾಧ್ಯಮವಾಗಿ ತರಲು ಇವು ತಕ್ಕ ಮಾನಸಿಕ ಪರಿಸರವನ್ನು ಸೃಜಿಸುತ್ತಿವೆ. ಕನ್ನಡ ನಾಡು ಮಿಕ್ಕ ಸ್ವತಂತ್ರ ದೇಶಗಳಂತೆ, ತನ್ನ ಬದುಕಿಗೆ ಬೇಕಾದ ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳನ್ನು ಸ್ವತಂತ್ರ ದೇಶಗಳಂತೆ, ತನ್ನ ಬದುಕಿಗೆ ಬೇಕಾದ ವೈಜ್ಞಾನಿಕ ಹಾಗೂ ತಾಂತ್ರಿಕ ವಿಷಯಗಳನ್ನು ಸ್ವತಂತ್ರವಾಗಿ ತಮ್ಮ ತಾಯಿ ನುಡಿಯಲ್ಲೇ ಚಿಂತಿಸಬಲ್ಲ ವೈಜ್ಞಾನಿಕರನ್ನು ಪಡೆಯಬೇಕು. ತಿಳಿವಳಿಕೆಯ ವಿಷಯದಲ್ಲಿ ಆಮದೂ ರಫ್ತೂ ಸಮವಾದ ಹೊರತು ಕನ್ನಡನಾಡು ಪ್ರೌಢ ದೇಶಗಳ ನಕ್ಷೆಗೆ ಸೇರಲಾರದು. ಈ ದಿಸೆಯಲ್ಲಿ ವಿಜ್ಞಾನಿಗಳು ಸ್ಫೂರ್ತಿಯನ್ನು ಪಡೆಯಬೇಕಾದರೆ ಗ್ರಾಮಸ್ಥರೊಡನೆ ಸರಾಗವಾಗಿ ಮಿಳಿತರಾಗಬೇಕು. ಸಾಹಿತ್ಯ ಪರಿಷತ್ತು ಇಂಥ ಸಂಪರ್ಕ ತರುವಲ್ಲಿ ಹೆಚ್ಚು ಆಸಕ್ತಿ ವಹಿಸಿದರೆ ನಾಡಿಗೆ ತುಂಬ ಉಪಕಾರವಾಗುತ್ತದೆ. ಇದಕ್ಕುಪಾಯ ಆದಷ್ಟು ಮಂದಿ ಪ್ರೌಢವಿಜ್ಞಾನಿಗಳನ್ನು ತನ್ನ ಸದಸ್ಯತ್ವಕ್ಕೆ ಸೇರಿಸಿಕೊಳ್ಳುವುದು.
ಕಸುಬಿನವರ ಪದಕೋಶ
ಸಾಹಿತ್ಯ ಪರಿಷತ್ತು ಈ ದೆಸೆಯಲ್ಲಿ ಮಾಡಬಹುದಾದ ಮತ್ತೊಂದು ಕೆಲಸ ನನಗೆ ಮುಖ್ಯವೆನಿಸುತ್ತದೆ. ಹಿಂದಿನ ನಮ್ಮ ಭಾರತದ ಐಶ್ವರ್ಯವೆಲ್ಲ ಕಸುಬುದಾರರಿಂದ ಸಂಪಾದಿತವಾದದ್ದು. ನಾವು ಈಗ ವಿದೇಶೀಯರಿಗೆ ಮೆರೆಸುತ್ತಿರುವುದೂ ಗುಡಿ ಗೋಪುರ ವಿಗ್ರಹಾದಿಗಳ ಆ ಮಹಾ ಸಂಪತ್ತನ್ನೇ. ಈಗ ಪರಿಷತ್ತು ಗ್ರಂಥಸ್ಥವಾಗಿರುವ ಕನ್ನಡ ಪದಗಳ ಬೃಹತ್ಕೋಶವನ್ನು ಸಂಪಾದಿಸಿ ಪ್ರಕಟಿಸುತ್ತಿದೆ. ಇದರ ಜತೆಗೆ ಕಸಬುದಾರರ ಪದಕೋಶವೊಂದನ್ನು-ಅಕ್ಕಸಾಲೆ, ಬಡಗಿ, ಕಂಚುಗಾರ, ಕಮ್ಮಾರ, ಕುಂಬಾರ, ಕೃಷಿಕ, ನೂಲುಗಾರ, ನೇಯ್ಗೆಯವ, ಬಳೆಗಾರ, ದರ್ಜಿ, ಗೌಳಿಗ, ಮೇದರವ, ಕ್ಷೌರಿಕ, ವಾದ್ಯಗಾರ ಮುಂತಾದವರು ಉಪಯೋಗಿಸುವ ವಸ್ತುಗಳ ಕ್ರಿಯೆಗಳ ಬೋಧನಾಕ್ರಮ ಮೊದಲಾದುವುಗಳಲ್ಲಿ ಬಳಸುವ ಮಾತುಗಳ ಹಾಗೂ ಆಧುನಿಕ ಯಂತ್ರಗಳೊಡನೆ ಸರಸವಾಡುವ ಕಾರ್ಮಿಕರು ಉಪಯೋಗಿಸುವ ತದ್ಭವಗಳ ಪಟ್ಟಿಗಳನ್ನು ಅಗತ್ಯ ಸಂಗ್ರಹಿಸಿ ಕೋಶಗಳನ್ನು ತಯಾರಿಸಿದರೆ ಒಂದು ಅಪರಿಚಿತವೂ ಅದ್ಭುತವೂ ಜೀವಪೂರ್ಣವೂ ಆದ ಜಗತ್ತು ನಮಗೆ ಗೋಚರಿಸಿತು. ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆ ವೃತ್ತಿಪದಕೋಶವನ್ನು ರಚಿಸಲು ತೊಡಗಿದೆ ಎಂದು ಕೇಳಿ ಹರ್ಷಿತನಾದೆ. ಪರಿಷತ್ತೂ ಇದರಲ್ಲಿ ಭಾಗಿಯಾದರೆ ಒಳ್ಳೆಯದು. ಜತೆಗೆ ಸಂಗೀತಗಾರರೂ ವೀಣಾ ವೇಣು ಮೃದಂದಗಾದಿ ವಾದ್ಯಪಟುಗಳೂ ತಮ್ಮ ಶಿಷ್ಯರಿಗೆ ಕಲಿಸುವಾಗ ಉಪಯೋಗಿಸುವ ದೇಶೀ ಪಾರಿಭಾಷಿಕ ಶಬ್ದಗಳೂ ಇವುಗಳಲ್ಲಿ ಬರಬಹುದು. ಈ ಕೆಲಸದ ಹರಹು ತುಂಬ ಹೆಚ್ಚು. ಕ್ಷೇತ್ರಗಳನ್ನು ವಿಭಾಗಿಸಿಕೊಂಡು ಪರಿಷತ್ತು ಹಾಗೂ ಅಧ್ಯಯನ ಸಂಸ್ಥೆಗಳು ಈ ಕೆಲಸಕ್ಕೆ ತೊಡಗಬಹುದು. ಇದರಿಂದ ಅವುಗಳ ಕೀರ್ತಿಯೂ ವ್ಯಾಪ್ತಿಯೂ ಹೆಚ್ಚುತ್ತದೆ. ಅಲ್ಲದೆ ಗ್ರಾಮಸ್ಥರೊಡನೆ ವ್ಯವಹರಿಸುವಾಗ ಇಂಗ್ಲಿಷೊಂದನ್ನೇ ಆಶ್ರಯಿಸಿರುವ ಆಧುನಿಕ ವಿಜ್ಞಾನಿಗಳಿಗೆ ತಮ್ಮ ಬೋಧನೆಗೆ ತಕ್ಕ ಪಾರಿಭಾಷಿಕ ಶಬ್ದಗಳೂ ಸಿಕ್ಕುತ್ತವೆ.
ವಿಮರ್ಶಾ ಮಂಡಲಿ
ಈ ವಿಷಯವನ್ನು ಕುರಿತು ಚಿಂತಿಸುವಾಗ ಗೋಪಾಲಕೃಷ್ಣ ಅಡಿಗರ ಒಂದು ಸಲಹೆ ನೆನಪಿಗೆ ಬರುತ್ತದೆ. ಸದ್ಗ್ರಂಥಗಳ ಗುಣ ಮೌಲ್ಯಗಳ ನಿಷ್ಕರ್ಷೆಗಾಗಿ ಒಂದು ವಿದ್ವನ್ಮಂಡಲಿ ಇರಬೇಕೆಂದು ಅವರು ಅಪೇಕ್ಷೆ ಪಡುತ್ತಾರೆ. ಆದರೆ ಕಟ್ಟೀಮನಿಯವರು ಇಂಥ ಹೊಸ ಮಂಡಲಿ ಬೇಡ ಎನ್ನುತ್ತಾರೆ. ನನ್ನ ಅಭಿಪ್ರಾಯವೂ ಕಟ್ಟೀಮನಿಯವರತ್ತ ವಾಲುತ್ತದೆ. ಕವಿಗಳೂ ಕೃತಿಕಾರರೂ ಯಾವ ವಿದ್ವನ್ಮಂಡಲಿಯ ಅಥವಾ ಸಂಘಸಂಸ್ಥೆಗಳ ಪ್ರಭಾವಕ್ಕೂ ಒಳಗಾಗಬಾರದು. ಅವರ ಸ್ವಾತಂತ್ರ್ಯ ಕೆಡುತ್ತದೆ. ಸೃಜನಶಕ್ತಿ ಕುಗ್ಗುತ್ತದೆ. ಪ್ರತಿಭಾಶಾಲಿಗಳು ಎಲ್ಲ ಸಂಘ ಸಂಸ್ಥೆಗಳಿಂದಲೂ ಹೊರಗುಳಿಯುವುದು ಒಳಿತು. ಮಾನವ ಸಹಜವಾಗಿಯೇ ಗುಣ ಪಕ್ಷಪಾತಿ. ಆ ನಂಬಿಕೆಯಲ್ಲಿ ಸಾಹಿತಿಗಳು ನಡೆದರೆ ಅವರಿಗೂ ಕುಶಲ, ನುಡಿಗೂ ಸಿರಿವಂತಿಕೆ.
ಕನ್ನಡದ ಸುಪುತ್ರರಿಬ್ಬರ ಜನ್ಮಶತಾಬ್ದಿ
ಕಳೆದ ವರ್ಷ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯಗಳ ಅಧ್ಯಯನ ಸಂಸ್ಥೆಗಳೂ ಅಕಾಡೆಮಿಯೂ ಇತರ ಸಂಘಸಂಸ್ಥೆಗಳೂ ಕನ್ನಡನಾಡಿನ ಮಹಾಮಹಿಮರಾದ ಇಬ್ಬರು ಸುಪುತ್ರರ ಜನ್ಮಶತಾಬ್ದಿಯನ್ನು ಸಡಗರದಿಂದ ಆಚರಿಸಿ ಧನ್ಯವಾಯಿತು. ಶ್ರೀ ಆಲೂರು ವೆಂಕಟರಾಯರು ಅಸಾಮಾನ್ಯ ಪುರುಷರು. ಶ್ರೀ ಹಳಕಟ್ಟಿಯವರು ವಚನಗಳ ಪ್ರಕಟನೆಯಲ್ಲಿ ತೋರಿಸಿದ ತ್ಯಾಗ, ಸಹನೆ, ತಪೋನಿಷ್ಠೆಗಳು ಅಸಾಧಾರಣವಾದವು. ವಚನಗಳ ಸಂಪಾದನೆ ಮತ್ತು ಪ್ರಕಟನೆ ಬಹು ಮಹತ್ವದ ಕೆಲಸ. ಅವುಗಳ ಪ್ರಭಾವದಿಂದ ಎಷ್ಟೊಂದು ಹುಲುಸಾಗಿದೆ ಕನ್ನಡ ಸಾಹಿತ್ಯ! ನವ್ಯಕಾವ್ಯದ ಛಂದಸ್ಸಿಗೆ ಅವು ಮೂಲ ಮಾತೃಕೆಗಳೆನ್ನಬಹುದು.
ಪರಿಷತ್ತಿನ ಪ್ರಾಮುಖ್ಯತೆ
ಕನ್ನಡ ಸಾಹಿತ್ಯವನ್ನೂ ಕಲೆಗಳನ್ನೂ ಸಂಸ್ಕೃತಿಯನ್ನೂ ಬೆಳೆಸಿ ಕಾಪಾಡಲು ವಿಶ್ವವಿದ್ಯಾನಿಲಯಗಳ ಅಧ್ಯಯನ ಸಂಸ್ಥೆಗಳು, ಪ್ರಸಾರಾಂಗಗಳು, ರಾಜ್ಯದ ಸಾಹಿತ್ಯ ಸಂಗೀತಕಲಾ ಅಕಾಡೆಮಿಗಳು ಜಾನಪದ ಅಕಾಡೆಮಿ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ, ಕರ್ನಾಟಕ ನವೋದಯ, ವಿದ್ಯಾವರ್ಧಕ ಸಂಘ, ಕುವೆಂಪು ಟ್ರಸ್ಟ್ ಇನ್ನೂ ಮುಂತಾದ ಅನೇಕ ಸಂಸ್ಥೆಗಳು ತೊಡಗಿವೆ. ಸರ್ಕಾರಿಯಲ್ಲದ ಸಾರ್ವಜನಿಕ ಸಂಸ್ಥೆಗಳಲ್ಲಿ ಪರಿಷತ್ತು ಅತ್ಯಂತ ಪ್ರಭಾವಶಾಲಿ ಸಂಸ್ಥೆಯೆಂದು ನನ್ನೆಣಿಕೆ. ಸರ್ಕಾರದ ಬೆಂಬಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಂದ ಸಹಕಾರ ಸಹಾಯಗಳು ಇದಕ್ಕೆ ದೊರೆಯಬೇಕೆಂಬುದು ನನ್ನ ಆಶಯ. ಇದರ ಸದಸ್ಯತ್ವದಲ್ಲಿ ಪ್ರೌಢವಿದ್ವಾಂಸರ ಸಂಖ್ಯೆ ಹೆಚ್ಚಬೇಕು. ಇದರ ವೇದಿಕೆಯ ಮೇಲೆ ಅನೇಕ ವಿಜ್ಞಾನಿಗಳು ಭಾಷಣ ಮಾಡಬೇಕು. ಶ್ರೀ ಜಿ. ನಾರಾಯಣ ಮತ್ತು ಶ್ರೀ ಹಂಪ ನಾಗರಾಜಯ್ಯನವರ ಉತ್ಸಾಹಪೂರ್ಣವಾದ ನೇತೃತ್ವದಲ್ಲಿ ಪರಿಷತ್ತು ಎಂದೂ ಕಾಣದಷ್ಟು ಅಭಿವೃದ್ಧಿ ಹೊಂದಿದೆ, ಪರಿಷತ್ತು ತನ್ನ ಚಟುವಟಿಕೆಗಳನ್ನು ಕುರಿತು ಹೊರಡಿಸಿರುವ ಪುಸ್ತಿಕೆಗಳಲ್ಲಿ ಈ ಬೆಳವಣಿಗೆ ಪ್ರಮಾಣ ಗೋಚರಿಸುತ್ತದೆ. ಇದರ ಮುನ್ನಡೆಯನ್ನು ವಿಷಯ ನಿಯಾಮಕ ಚರ್ಚಿಸಿ ಸೂಕ್ತ ಸಲಹೆಗಳನ್ನು ಸಭೆಯ ಮುಂದಿಡಲಿರುವುದರಿಂದ ಆ ವಿಷಯ ಕುರಿತು ಇಲ್ಲಿ ಹೆಚ್ಚು ಪ್ರಸ್ತಾಪಿಸುವುದಿಲ್ಲ.
ಗಮಕ ಕಲೆ ಮತ್ತು ಪರಿಷತ್ತು
ಪರಿಷತ್ತು ಹಳಗನ್ನಡ, ನಡುಗನ್ನಡ ಕಾವ್ಯಗಳನ್ನು ರಾಗವಾಗಿ ಹಾಡುವ ಗಮಕ ಕಲೆಗೆ ಸಾಕಷ್ಟು ಪ್ರೋತ್ಸಾಹ ಕೊಡುತ್ತಿದೆ. ಆದರೆ ಗಮಕ ಎಂದರೆ ಇಷ್ಟಕ್ಕೆ ಮುಗಿಯುವುದಿಲ್ಲ. ವಾಚನಕಲೆ ಎಂಬುದೊಂದುಂಟು. ಈ ಕಲೆ ವಾಚನ ಧ್ವನಿಯ ಏರಿಳಿತಗಳನ್ನು ಎಂದರೆ ‘ಕಾಕು’ಗಳನ್ನು ಉಚಿತ ಅಂಗಾಭಿನಯವನ್ನೂ ಒಳಗೊಂಡಿದೆ. ಈ ಕಲೆಗೆ ಪರಿಷತ್ತು ಅಗತ್ಯವಾಗಿ ಗಮನಕೊಟ್ಟು ಶಿಕ್ಷಣ ಶಿಬಿರಗಳನ್ನು ಏರ್ಪಡಿಸಬೇಕೆಂಬುದು ನನ್ನ ಸಲಹೆ. ಹರಿಕಥೆಗಳನ್ನು ಪ್ರೋತ್ಸಾಹಿಸಿ ಅವಕ್ಕೆ ಇಂಥ ಸಮ್ಮೇಳನಗಳ ಮನರಂಜನೆಯ ಕಾರ್ಯಕ್ರಮಗಳಲ್ಲಿ ಸ್ಥಳ ಕೊಡಬೇಕೆನಿಸುತ್ತದೆ. ಅದೊಂದು ವಿಶಿಷ್ಟ ಕಲೆ. ದಿ. ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಇದರಲ್ಲಿ ಪರಿಣಿತರಾಗಿದ್ದರು. ಈಗ ಇದು ಖಿಲವಾಗುತ್ತಿದೆ.
ಕನ್ನಡ ಪ್ರಾಚೀನ ಕಾವ್ಯಗಳ ಸರಳಾನುವಾದ
ಪ್ರಾಚೀನ ಕಾವ್ಯಗಳ ಭಾಷೆ ಈಗ ಸಾಮಾನ್ಯವಾಗಿ ಯಾರಿಗೂ ಅರ್ಥವಾಗುವುದು ಕಷ್ಟ. ಆ ಕಾವ್ಯಗಳನ್ನು ಹೊಸಗನ್ನಡದ ಗದ್ಯಕ್ಕೆ ಅನುವಾದಿಸುವ ಯೋಜನೆಯೊಂದನ್ನು ಪರಿಷತ್ತು ಹಾಕಿಕೊಂಡಿರುವಂತಿದೆ. ಶ್ರೀ ಗೋಪಾಲಕೃಷ್ಣ ಅಡಿಗರು ಇದನ್ನು ಕೈಬಿಡಬೇಕೆಂದು ಕೋರಿದ್ದಾರೆ. ಅವರ ಕೋರಿಕೆಗೆ ನಾನೂ ಕೈಜೋಡಿಸುತ್ತೇನೆ. ಇದು ನಿಷ್ಪ್ರಯೋಜಕವಾದ ಕೆಲಸ. ಪಂಪಭಾರತಕ್ಕೆ ಶ್ರೀ ದೊಲನ ಅವರು ಮಾಡಿರುವ ವ್ಯಾಖ್ಯಾನದಂತೆ, ಬೇಕಾದರೆ ಉತ್ಕೃಷ್ಟ ಹಳಗನ್ನಡದ ಕಾವ್ಯಗಳಿಗೆ ವಿದ್ವಾಂಸರು ಪ್ರತಿ ಪದಾರ್ಥದೊಡನೆ ಟೀಕೆಗಳನ್ನು ಬರೆದು ಪರಿಷತ್ತು ಅವನ್ನು ಪ್ರಕಟಿಸುವುದು ಒಳಿತು.
ಭಾಷಾಂತರ ಕಾರ್ಯಕ್ಕೆ ಸೂಚನೆ
ಅನ್ಯಭಾಷೆಗಳ ಉದ್ಗ್ರಂಥಗಳನ್ನು, ಮುಖ್ಯವಾಗಿ ಸಂಸ್ಕೃತದ ದರ್ಶನಶಾಸ್ತ್ರಗಳನ್ನೂ ಪಾಶ್ಚಾತ್ಯದರ್ಶನಗಳ ಸಾರವತ್ತಾದ ಗ್ರಂಥಗಳನ್ನೂ ಒಳ್ಳೆಯ ದೇಸೀ ಕನ್ನಡಕ್ಕೆ ಅನುವಾದಿಸುವ ಯತ್ನವನ್ನು ಪರಿಷತ್ತು ಕೈಗೊಳ್ಳಬೇಕೆಂದು ಸೂಚಿಸುತ್ತೇನೆ. ಪ್ರಸಾರಾಂಗಗಳು ಮತ್ತು ಅಕಾಡೆಮಿಗಳೊಡನೆ ಸಮಾಲೋಚಿಸಿ ಗ್ರಂಥಗಳನ್ನು ಹಂಚಿಕೊಂಡು ಈ ಕೆಲಸವನ್ನು ನೆರವೇರಿಸಬಹುದು. ಕನ್ನಡದಲ್ಲಿ ಹುರುಳಾದ ಜ್ಞಾನವನ್ನು ತುಂಬಲು ಇದು ತುಂಬ ಸಹಕಾರಿಯಾಗುತ್ತದೆ. ಪ್ರಮುಖ ದಿನಪತ್ರಿಕೆಗಳಲ್ಲಿ ಗೋಚರಿಸುವ ಕನ್ನಡದ ಭಾಷಾಂತರಗಳು ಬಹು ಚೆನ್ನಾಗಿವೆ. ಇಂಥ ಭಾಷಾಂತರಕಾರರು ಪರಿಷತ್ತಿಗೆ ದೊರೆತರೆ ಆ ಸಂಸ್ಥೆಗೆ ತುಂಬ ಲಾಭ ಎನಿಸುತ್ತದೆ.
ಉಪಸಂಹಾರ
ಬಂಧುಗಳೇ, ಕನ್ನಡನಾಡನ್ನೂ ನುಡಿಯನ್ನೂ ಜ್ಞಾನಾನಂದಗಳಿಂದ ಸಂಪನ್ನಗೊಳಿಸುವ ಸುಕಾಲ ಈಗ ನಮಗೆ ದೇವರ ದಯದಿಂದ ಒದಗಿ ಬಂದಿವೆ. ಖ್ಯಾತಿ ಲಾಭ ಪೂಜೆಗಳನ್ನು ಗೌಣವಾಗಿ ಎಣಿಸಿ ಈಗ ಈ ಕೆಲಸದಲ್ಲಿ ನಾವೆಲ್ಲ ತೊಡಗುವುದೊಳಿತು. ಇಂಥ ಕಾಲ ಬೇರೆ ಬಾರದು. ಕನ್ನಡದ ಜನವನ್ನು ಕನ್ನಡದ ನೆಲ ಚೆನ್ನಾಗಿ ಬಾಳಿಸಲಾಗದಿದ್ದರೆ ಅವರನ್ನು ಮತ್ತಾವ ನೆಲ ಭಾವಿಸೀತು, ಬಾಳಿಸೀತು? ನಾವು ಕಳಪೆ ಜನವಾಗಬಾರದು. ಕಳಪೆ ಜನವನ್ನು ಕಳಪೆಯವರು ಆಳುತ್ತಾರೆ, ಘನವಂತರಿಗೆ ಘನವಂತರ ಆಡಳಿತ ದೊರೆಯುತ್ತದೆ ಎಂಬ ಮಿಲ್ ಮಹಾಶಯನ ಉಕ್ತಿಯನ್ನು ಹಿಂದೆ ದಿ. ದೇಶಭಕ್ತ ವೆಂಕಟಕೃಷ್ಣಯ್ಯನವರು ಎತ್ತಿ ಹೇಳಿದ್ದಾರೆ. ಅದನ್ನು ನಾನು ಮರಳಿ ತಮ್ಮ ನೆನಪಿಗೆ ತರುತ್ತಿದ್ದೇನೆ. ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ತಾನು ಹುಟ್ಟಿದಾಗಿನಿಂದ ಕನ್ನಡನಾಡು ನುಡಿಗಳನ್ನು ಕೀಳ್ಮೆಗೊಳಿಸುವ ಎಲ್ಲ ಪ್ರವೃತ್ತಿಗಳನ್ನೂ ಪ್ರತಿಭಟಿಸುತ್ತಿರುವ ಸಂಸ್ಥೆ, ದೇಶ ದಾಸ್ಯದಲ್ಲಿರುವಾಗಲೇ ನಾಡನ್ನು ಎಚ್ಚರಿಸುವ ಕೆಲಸದಲ್ಲಿ ಅದು ತೊಡಗಿತ್ತು. ಈಗ ನಾವು ಸ್ವತಂತ್ರರು. ಆದುದರಿಂದಲೇ ಘನವಂತರು ನಮ್ಮ ಬದುಕಿನ ಎಲ್ಲ ಸ್ತರದಲ್ಲೂ ಈ ಘನವಂತಿಕೆ ಮೆರೆಯಬೇಕು. ಅದು ಗ್ರಾಮಗಳಲ್ಲಿ ಪ್ರಾರಂಭವಾಗಿ ರಾಜಧಾನಿಗಳನ್ನು ವ್ಯಾಪಿಸಬೇಕು. ವಿಜ್ಞಾನದಿಂದ ವಸ್ತು ಸಮೃದ್ಧಿ; ಸಾಹಿತ್ಯಾದಿ ಕಲೆಗಳಿಂದ ಭಾವನಾ ಸಮೃದ್ಧಿ. ನಾಡುನುಡಿಗಳ ಈಗಿನ ಬಡತನಕ್ಕೂ ಜಡತೆಗೂ ಯಾರು ಹೊಣೆ, ನಾವಲ್ಲದೆ ಮತ್ತಾರು? ಇದಕ್ಕೆ ನಾವು ನಾಚಿಕೆಪಡಬೇಕು, ಕಾರ್ಯಪ್ರವೃತ್ತರಾಗಬೇಕು. ವಿಜ್ಞಾನಿಗಳಲ್ಲಿ ಹೃದಯಸಂಪನ್ನತೆಯನ್ನೂ ಸಾಹಿತಿಗಳಲ್ಲಿ ಜ್ಞಾನಾನಂದಸಂಪನ್ನತೆಯನ್ನೂ ನಾಡು ಈಗ ಎಂದಿಗಿಂತ ಹೆಚ್ಚಾಗಿ ಬಯಸುತ್ತದೆ. ಜ್ಞಾನದ ತಳದಲ್ಲಿ ಅರಿಷಡ್ವರ್ಗದ ಸೆಳೆತಗಳ ಗಾಢವಾದ ತಿಳಿವಳಿಕೆಯಿದೆ; ಆನಂದದ ಮೂಲದಲ್ಲಿ ಅನುಕಂಪೆಯ ಸೆಲೆಯಿದೆ. ಆರೋಗ್ಯ ದೃಢಕಾಯರಾದ ಶ್ರೀಮಂತರ ಆಹಾರ ವಿಹಾರ ನಿಯಮಗಳು ಬೇರೆ, ತೇರಿಕೊಳ್ಳುತ್ತಿರುವ ದುರ್ಬಲರ ನಿಯಮಾವಳಿಗಳು ಬೇರೆ. ನಮ್ಮ ಬದುಕನ್ನು ನಮ್ಮ ಭಾಷೆ ಬಿಂಬಿಸುತ್ತದೆ. ಅದಕ್ಕೆ ಪರಭಾಷೆಗಳ ಪೀಡೆ ತಪ್ಪಬೇಕು, ಪುಷ್ಟಿತುಷ್ಟಿಗಳು ದೊರೆಯಬೇಕು. ಗಣರಾಜ್ಯದಲ್ಲಿ ನ್ಯಾಯವೊಂದೇ ಸಾಮ್ರಾಟ್. ನಿರ್ಮಲವಾದ ಗಾಳಿ, ನೀರು, ಪುಷ್ಟಿಕರವಾದ ಅನ್ನ ಇವುಗಳಂತೆ ನ್ಯಾಯ ಎಲ್ಲರಿಗೂ ಲಭಿಸುವಂತಾದ ಹೊರತು ನಾಡು ಚೇತರಿಸಿಕೊಳ್ಳದು, ಅದರಂತೆಯೇ ನುಡಿಯೂ ಸಹ. ಅನ್ಯೋನ್ಯ ಅಬಾಧಾವಿಧಿಯೇ ನ್ಯಾಯ ಎಂಬುದನ್ನು ನಾವು ಮರೆಯಬಾರದು.
೫೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಬಸವರಾಜ ಕಟ್ಟೀಮನಿ
ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದ ಬಸವರಾಜ ಕಟ್ಟೀಮನಿಯವರು ಶಿರೂರಿನ ಅಯ್ಯಣ್ಣ-ಮಲಾಮರಡಿಯ ಬಾಳವ್ವ ದಂಪತಿಗಳ ಪುತ್ರರಾಗಿ ೫-೧0-೧೯೧೯ ರಲ್ಲಿ ಜನಿಸಿದರು.
ಗೋಕಾಕ, ಸುಲದಾಳ, ಚಿಕ್ಕೋಡಿ, ನಿಪ್ಪಾಣಿ, ಬೆಳಗಾವಿ, ಪುಣೆ ಮುಂತಾದ ಕಡೆಗಳಲ್ಲಿ ಕಟ್ಟೀಮನಿ ಅವರ ಶಾಲಾ ಶಿಕ್ಷಣ ನಡೆಯಿತು. ಅನಂತರ ವಿದ್ಯಾಭ್ಯಾಸ ಮುಂದುವರಿಸಲಾಗದೆ ಪತ್ರಿಕಾರಂಗ ಪ್ರವೇಶಿಸಿದರು.
೧೯೩೬ರಲ್ಲಿ ಬೆಳಗಾವಿಯಿಂದ ಹೊರಡುತ್ತಿದ್ದ ಸಂಯುಕ್ತ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿದರು. ಮುಂದೆ ‘ತರುಣ ಕರ್ನಾಟಕ’ (೧೯೩೭) ‘ಸಮಾಜ ಸೇವೆ’ ‘ಹುಬ್ಬಳ್ಳಿಯ ಲೋಕಮತ’, ‘ಗದುಗಿನ ಕರ್ಣಾಟ ಬಂಧು’, ‘ಬೆಂಗಳೂರಿನ ಸ್ವತಂತ್ರ ಕರ್ನಾಟಕ’, ‘ಉಷಾ’ ಪತ್ರಿಕೆಗಳ ಉಪಸಂಪಾದಕರಾಗಿ ಸಂಪಾದಕರಾಗಿ ದುಡಿದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ೧೯೬೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದರು. ೧೯೬೮ ರಿಂದ ೧೯೭೪ ವರೆಗೆ ವಿಧಾನ ಪರಿಷತ್ತಿನ ಸದಸ್ಯರಾದರು. ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ೧೯೮0ರಲ್ಲಿ ಬೆಳಗಾವಿಯಲ್ಲಿ ಜರುಗಿದ ೫೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
ಇವರ ಜ್ವಾಲಾಮುಖಿಯ ಮೇಲೆ ಕಾದಂಬರಿಗೆ ೧೯೬೮ರಲ್ಲಿ ಸೋವಿಯೆಟ್ ಲ್ಯಾಂಡ್ ಪ್ರಶಸ್ತಿ ಸಿಕ್ಕಿದೆ.
ಇವರು ಕಾರವಾನ್, ಸುಂಟರಗಾಳಿ, ಹುಲಿಯಣ್ಣನ ಮಗಳು (ಕಥಾಸಂಕಲನಗಳು), ಸ್ವಾತಂತ್ರದೆಡೆಗೆ, ಮಾಡಿಮಡಿದವರು, ಜ್ವಾಲಾಮುಖಿಯ ಮೇಲೆ, ಮೋಹದ ಬಲೆಯಲ್ಲಿ, ಬಂಗಾರದ ಜಿಂಕೆ ಹಿಂದೆ (ಕಾದಂಬರಿಗಳು), ಕಾದಂಬರಿಕಾರನ ಕಥೆ (ಆತ್ಮಕಥೆ), ಇನ್ನೂ ಅನೇಕ ಕೃತಿಗಳನ್ನು ಬರೆದಿದ್ದಾರೆ.
ಬಸವರಾಜ ಕಟ್ಟೀಮನಿ ಅವರು ೨೩-೧0-೧೯೮೯ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೫೨,
ಅಧ್ಯಕ್ಷರು, ಬಸವರಾಜ ಕಟ್ಟೀಮನಿ
ದಿನಾಂಕ ೭, ೮, ೯, ೧0 ಫೆಬ್ರವರಿ ೧೯೮0
ಸ್ಥಳ : ಬೆಳಗಾವಿ
ಇದು ಸಾಂಸ್ಕೃತಿಕ ಪರಿಷತ್ತು
೧೯೧೫ರಲ್ಲಿ ಜನಿಸಿದ ಕನ್ನಡ ಸಾಹಿತ್ಯ ಪರಿಷತ್ತು ಈ ೬೫ ವರ್ಷಗಳಲ್ಲಿ ಪ್ರಚಂಡ ಆಲದಮರದಂತೆ ಬೆಳೆದು ಕರ್ನಾಟಕದುದ್ದಕ್ಕೂ ಹರಡಿಕೊಂಡಿದೆ. ಶ್ರೀ ಜಿ. ನಾರಾಯಣರು ಅಧ್ಯಕ್ಷರಾಗಿದ್ದಾಗ ಜಿಲ್ಲಾಸಮಿತಿಗಳ ಸ್ಥಾಪನೆಯಾಯಿತು. ಅವುಗಳ ಮೂಲಕ ಪರಿಷತ್ತಿನ ಕಾರ್ಯಕ್ರಮಗಳು ನಿಯಮಿತವಾಗಿ ವ್ಯವಸ್ಥಿತವಾಗಿ ನಡೆಯುತ್ತಿವೆ. ಸರಕಾರದಿಂದ ಪರಿಷತ್ತಿಗೆ ೫ ಲಕ್ಷ ರೂ.ಗಳ ವಾರ್ಷಿಕ ಅನುದಾನ ಸಲ್ಲುತ್ತಿದೆ. ಅಲ್ಲದೆ ವಜ್ರಮಹೋತ್ಸವ ಕಾಲಕ್ಕೆ ೧೫ ಲಕ್ಷ ೩೧ ಸಾವಿರ ಸಂದಿದೆ. ಪರಿಷತ್ತಿನ ಹಳೆಯ ಕಟ್ಟಡಕ್ಕೆ ಹೊಂದಿಕೊಂಡೇ ಭವ್ಯವಾದ ನೂತನ ಭವನ ಎದ್ದು ನಿಂತಿದೆ. ವಜ್ರಮಹೋತ್ಸವದ ನೆನಪಿಗಾಗಿ ಇನ್ನೊಂದು ಕಟ್ಟಡ ಏಳಲಿದೆ.
ಇದೆಲ್ಲ ಸಂತೋಷದ ವಿಚಾರ. ಆದರೆ, ಇನ್ನು ಮುಂದೆ ಜಿಲ್ಲಾಸಮಿತಿಗಳನ್ನು ಬಲಪಡಿಸುವುದರತ್ತ ಪರಿಷತ್ತು ಗಮನವೀಯಬೇಕು. ಸ್ಥಳಾಭಾವದಿಂದಾಗಿ ಎಷ್ಟೋ ಜಿಲ್ಲೆಗಳಲ್ಲಿ ಜಿಲ್ಲಾಸಮಿತಿಗಳ ಚಟುವಟಿಕೆಗಳು ನಡೆಯದಂತಾಗಿದೆ. ಪ್ರತಿಯೊಂದು ಜಿಲ್ಲಾ ಸ್ಥಳದಲ್ಲೂ ಪರಿಷತ್ತಿನದೇ ಆದ ಒಂದು ಸಣ್ಣ ಕಟ್ಟಡ ನಿರ್ಮಿತವಾಗಬೇಕು. ಅದಕ್ಕೆ ೧ ಲಕ್ಷ ರೂ. ಸಾಕು. ಈ ಯೋಜನೆಗಾಗಿ ೨0 ಲಕ್ಷ ರೂ. ಕೇಳಿದರೆ ಸರಕಾರ ಕೊಟ್ಟೇ ಕೊಡುತ್ತದೆ. ಶ್ರೀ ಹಂಪ. ನಾಗರಾಜಯ್ಯನವರಂಥ ಹುರುಪಿನ ಅಧ್ಯಕ್ಷರ ಅಧಿಕಾರಾವಧಿಯಲ್ಲಿಯೇ ಈ ಮಹತ್ವದ ಕಾರ್ಯ ನಡೆಯಬೇಕಾಗಿದೆ.
ಪರಿಷತ್ತಿನ ಚಟುವಟಿಕೆಗಳು
ಪರಿಷತ್ತು ಈಗ ಕೇವಲ ಸಾಹಿತ್ಯಕ ಸಂಸ್ಥೆಯಾಗಿ ಉಳಿದಿಲ್ಲ; ಅಖಿಲ ಕರ್ನಾಟಕ ಸ್ವರೂಪದ ಸಾಂಸ್ಕೃತಿಕ ಸಂಸ್ಥೆಯಾಗಿಯೂ ರೂಪುಗೊಳ್ಳುತ್ತಿದೆ. ಸಾಹಿತ್ಯ ಮತ್ತು ಕಲೆಗಳ ಅಭಿವೃದ್ಧಿಗಾಗಿ, ಸಂರಕ್ಷಣೆಗಾಗಿ ಅದು ದುಡಿಯುತ್ತಿದೆ. ಕಳೆದ ೯ ವರ್ಷಗಳಿಂದ ಕನ್ನಡ ಬೆರಳಚ್ಚು ಮತ್ತು ಶೀಘ್ರಲಿಪಿ ತರಗತಿಗಳನ್ನೂ ನಡೆಸುತ್ತಿದೆ. ಪರಿಷತ್ತಿನ ಆಶ್ರಯದಲ್ಲಿ ಸಾಕ್ಷರತಾ ತರಗತಿಗಳೂ ನಡೆಯುತ್ತಿವೆಯೆಂದರೆ ಕೆಲವರಿಗೆ ಅಚ್ಚರಿಯೆನಿಸಬಹುದು. ಸಾಹಿತ್ಯಕ ಸಂಸ್ಥೆಗೆ ಈ ಉಪದ್ವ್ಯಾಪವೇಕೆ? ಎಂದು ಪ್ರಶ್ನಿಸುವ ದಡ್ಡರೂ ಇದ್ದಾರೆ. ಓದುವವರೇ ಇರದಿದ್ದರೆ ಇವರ ಸಾಹಿತ್ಯವನ್ನಾರು ಕೇಳುತ್ತಾರೆ? ಎಂದು ಇವರಿಗೆ ಉತ್ತರ ಕೊಡಬೇಕಾಗುತ್ತದೆ. ದತ್ತಿ ಉಪನ್ಯಾಸಗಳು, ಗಮಕ ತರಗತಿಗಳು, ಕನ್ನಡ ಪರೀಕ್ಷೆಗಳು, ಕೀರ್ತನ ಮಹೋತ್ಸವಗಳು, ಸಾಹಿತ್ಯ ಪ್ರದರ್ಶನಗಳು, ಅಂತರರಾಷ್ಟ್ರೀಯ ಪುಸ್ತಕವರ್ಷ, ಮಹಿಳಾ ವರ್ಷಗಳ ಆಚರಣೆ, ಕಳೆದ ಡಿಸೆಂಬರ್ನಲ್ಲಿ ನಡೆದ ಅಖಿಲ ಕರ್ನಾಟಕ ಮಕ್ಕಳ ಮೇಳ, ಅದಕ್ಕೂ ಮೊದಲು ನಡೆದ ‘ದಲಿತ ಮಕ್ಕಳು’ ಎಂಬ ವಿಚಾರ ಸಂಕಿರಣ-ಹೀಗೆ ಸದಾಕಾಲವೂ ಚಟುವಟಿಕೆಗಳಲ್ಲಿ ನಿರತವಾಗಿರುವ ಪರಿಷತ್ತು ಸರಕಾರದ ಸಾಂಸ್ಕೃತಿಕ ವಿಭಾಗದಂತೆಯೇ ಕೆಲಸ ಮಾಡುತ್ತಿದೆಯೆಂದರೆ ಅತಿಶಯೋಕ್ತಿಯಾಗದು. ಸಾಹಿತ್ಯ ಪರಿಷತ್ತು ಇದನ್ನೆಲ್ಲ ಮಾಡಬಾರದೆಂದು ವಾದಿಸುವವರೂ ಇದ್ದಾರೆ. ಅದು ಅವರ ಅಭಿಪ್ರಾಯ. ಕರ್ನಾಟಕದ ಮಟ್ಟದಲ್ಲಿ ವ್ಯಾಪಕವಾದ ರೀತಿಯಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಿರುವ ಪರಿಷತ್ತಿನ ಕಾರ್ಯಕರ್ತರನ್ನು ನಾವು ಮೆಚ್ಚಿಕೊಳ್ಳಲೇಬೇಕಾಗುತ್ತದೆ.
ಫ್ರೆಂಚ್ ಮಾದರಿ
ಕಳೆದ ವರ್ಷ ಧರ್ಮಸ್ಥಳದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷಪೀಠದಿಂದ ಮಾತನಾಡುತ್ತ ಶ್ರೀ ಗೋಪಾಲಕೃಷ್ಣ ಅಡಿಗರು- “ನಾನಾ ಗ್ರಂಥಗಳು ಪ್ರಕಟವಾಗುತ್ತಿರುವ ಈ ಕಾಲದಲ್ಲಿ ಯಾವುದು ಸಾಹಿತ್ಯ, ಯಾವುದು ಸಾಹಿತ್ಯವಲ್ಲ, ಕೇವಲ ವರದಿ, ಕೇವಲ ಕೃತಕ ಎಂಬುದಾಗಿ ವಿಂಗಡಿಸಲು ಮಾಡುವ ಪ್ರಯತ್ನವೇ ನಾವು ನಮ್ಮ ಭಾಷೆಗೂ ಜನಕ್ಕೂ ಸಲ್ಲಿಸಬೇಕಾದ ಸೇವೆ, ಉಳಿದದ್ದೆಲ್ಲ ದ್ರೋಹ. ಈ ಕೆಲಸ ಸಾಹಿತ್ಯ ಪರಿಷತ್ತಿನಿಂದ ನಿರಂತರವಾಗಿ ನಡೆಯುತ್ತಲೇ ಇರಬೇಕು. ಈ ರೀತಿಯಲ್ಲಿ ಈ ಸಂಸ್ಥೆ ಮಾರ್ಪಾಟಾಗಲು ತಕ್ಕ ಏರ್ಪಾಟು ಆಗಬೇಕೆಂದು ನನ್ನ ಕಳಕಳಿಯ ಪ್ರಾರ್ಥನೆ”-ಎಂದು ಹೇಳಿದ್ದರು.
ಹನ್ನೊಂದು ತಿಂಗಳುಗಳ ಅಲ್ಪಾವಧಿಯಲ್ಲಿ ಇಂಥ ಮಾರ್ಪಾಟಾಗುವುದು ಶಕ್ಯವೇ ಇಲ್ಲವೆನ್ನುವುದು ಸ್ಪಷ್ಟವಿದೆ. ನೂತನವಾಗಿ ಸೃಷ್ಟಿಯಾಗುವ ಸಾಹಿತ್ಯದ ಮೌಲ್ಯಮಾಪನ ಕಾರ್ಯವನ್ನು ಪರಿಷತ್ತು ಮಾಡಬೇಕೆಂಬುದೇ ಶ್ರೀ ಅಡಿಗರ ಸೂಚನೆಯ ತಿರುಳು. ಪರಿಷತ್ತು ಪಂಡಿತರ, ವಿದ್ವಾಂಸರ, ವಿಮರ್ಶಕರ, ಶ್ರೇಷ್ಠ ಸಾಹಿತಿಗಳ ಅತ್ಯುಚ್ಚ್ಚ ನ್ಯಾಯಪೀಠವಾಗಲೆಂಬುದು ಅವರ ಆಶಯ.
“ಸಾಹಿತ್ಯ ಕೃತಿಗಳಿಗೆ ಸಂಬಂಧಪಟ್ಟ ವಿಮರ್ಶೆ, ಮೌಲ್ಯನಿರ್ಣಯ ಮುಂತಾದುವುಗಳಿಗಾಗಿಯೇ ಫ್ರೆಂಚ್ ಅಕಾಡೆಮಿಯ ರೀತಿಯ ಅತ್ಯುಚ್ಚ ಧೀಮಂತರ ಒಂದು ವಿಶಿಷ್ಟ ಸಂಸ್ಥೆಯನ್ನು ಸಾಹಿತ್ಯ ಪರಿಷತ್ತು ಸ್ಥಾಪಿಸಿ ಅದನ್ನು ಸ್ವತಂತ್ರವಾದ ಒಂದು ಸಣ್ಣ ಘಟಕವನ್ನಾಗಿ ನಡೆಸಿಕೊಂಡು ಬರುವುದು ಸಾಧ್ಯವಾದೀತೇ ಎಂದು ಪರೀಕ್ಷಿಸಿ ನೋಡಬೇಕು. ಇದು ತೀರ ದೊಡ್ಡ ಸಂಘವಾಗದೆ ಇಡೀ ಕರ್ನಾಟಕದಲ್ಲಿ ೧0-೧೫ ಮಂದಿ ನಿಷ್ಪಕ್ಷಪಾತ ವಿದ್ವಾಂಸರಿಗೆ ಆ ಕೆಲಸ ಒಪ್ಪಿಸಬಹುದು ಎಂದು ಸೂಚಿಸಿದ್ದರು.
ಗ್ರಂಥಾಲಯ ಇಲಾಖೆ
ಈ ಕನ್ನಡ ಅಧ್ಯಯನ ಪೀಠಗಳ ಕನ್ನಡ ಸಾಹಿತ್ಯ ಪರಿಷತ್ತೂ ಸಾಹಿತ್ಯ ಅಕಾಡೆಮಿಯೂ ಪ್ರಕಟಿಸುವ ಪುಸ್ತಕಗಳ ಮಾರಾಟವೂ ಒಂದು ಸಮಸ್ಯೆಯೇ. ನಮ್ಮಲ್ಲಿ ಕೊಂಡು ಓದುವವರು ಕಡಿಮೆ. ೫0-೬0 ರೂ. ಬೆಲೆಯ ಪುಸ್ತಕಗಳನ್ನಂತೂ ಕೇವಲ ಗ್ರಂಥಾಲಯಗಳೇ ಕೊಳ್ಳಬೇಕು. ನಮ್ಮ ಸರಕಾರದ ಗ್ರಂಥಾಲಯ ಇಲಾಖೆ ಕಳೆದ ಹಲವು ವರ್ಷಗಳಿಂದ ಅತ್ಯಂತ ಸಮರ್ಥವಾದ ರೀತಿಯಲ್ಲಿ ಕೆಲಸ ಮಾಡುತ್ತಿದೆ.
ಸಮುದಾಯ
“ಸಮುದಾಯ”ದ ಕಲಾವಿದರು ತಮ್ಮ ಕ್ರಾಂತಿಕಾರಕ ನಾಟಕಗಳನ್ನಾಡುತ್ತ ಕರ್ನಾಟಕದಲ್ಲೆಲ್ಲ ಯಾತ್ರೆ ಮಾಡಿದುದು ಇತ್ತೀಚೆಗಿನ ಇತಿಹಾಸದಲ್ಲಿ ಮಹತ್ವದ ಘಟ್ಟ. ಓದುಬರಹ ಅರಿಯದ ನಮ್ಮ ಹಳ್ಳಿಗರನ್ನೂ ಬಡಜನರನ್ನೂ ಜಾಗೃತಗೊಳಿಸಲು “ಸಮುದಾಯ”ದಂಥ ಪ್ರಾಮಾಣಿಕ ಪ್ರಯತ್ನಗಳು ಎಲ್ಲ ಕಡೆಗಳಲ್ಲೂ ನಡೆಯಬೇಕು.
ಮಾನವನ ಭವಿತವ್ಯದ ಬಗೆಗೆ ಪೂರ್ಣ ನಂಬುಗೆಯಿರಿಸಿಕೊಂಡು ನಾವು ಮುಂದುವರಿಯಬೇಕು. ನಮ್ಮಿಂದ ಮಾತ್ರವೇ ಲೋಕದ ಉದ್ಧಾರ-ಎಂಬ ಸಂಕುಚಿತ ಭಾವನೆಯು ಯಾರಿಗೂ ಸಲ್ಲದು. ತಮತಮಗೆ ಸರಿಯೆನಿಸಿದ ರೀತಿಯಲ್ಲಿ ಅನೇಕರು, ಅನೇಕ ಸಂಸ್ಥೆಗಳು ಮಾನವನ ಕಲ್ಯಾಣಕ್ಕಾಗಿ ಶ್ರಮಿಸುತ್ತಿವೆ. “ನೂರು ಹೂಗಳು ಅರಳಲಿ” ಎಂಬುದೇ ಸರಿಯಾದ ನಿಲುಮೆ.
ಕನ್ನಡ ಸಾಹಿತ್ಯ ಪರಿಷತ್ತು ಈ ದಿಸೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ಇನ್ನಿತರ ಸಂಸ್ಥೆಗಳೂ ತಮ್ಮಿಂದಾಗುವುದನ್ನು ಮಾಡಲಿ. ಆದರೆ, ಪರಿಷತ್ತನ್ನು ವಿರೋಧಿಸುವ ಅಸಹಕಾರದ ನಿಲುಮೆಯನ್ನು ಮಾತ್ರ ಯಾರೂ ತಳೆಯಬಾರದು.
ಆಲೂರವರ ಜನ್ಮಶತಮಾನೋತ್ಸವ
ಮರಾಠೀಮಯವಾಗಿದ್ದ ಉತ್ತರ ಕರ್ನಾಟಕದ ಕನ್ನಡಿಗರನ್ನು ತಮ್ಮ ಲೇಖನಗಳಿಂದಲೂ ಭಾಷಣಗಳಿಂದಲೂ ‘ಜಯ ಕರ್ನಾಟಕ’ ಪತ್ರಿಕೆಯಿಂದಲೂ ಜಾಗೃತಗೊಳಿಸಿ, ಈ ಶತಮಾನದ ಆದಿಭಾಗದಲ್ಲಿ ಕನ್ನಡ ಚಳವಳಿಯ ಮಹಾ ಮುಖಂಡರಾಗಿ ದುಡಿದು ಅಮರರಾದ ಆಲೂರು ವೆಂಕಟರಾಯರ ಜನ್ಮಶತಮಾನೋತ್ಸವವು ಈ ವರ್ಷದ ಜುಲೈ ತಿಂಗಳಿನಿಂದ ಮುಂದಿನ ವರ್ಷ ಜೂನ್ ತಿಂಗಳಿನವರೆಗೆ ಕರ್ನಾಟಕದಲ್ಲೆಲ್ಲ ವಿಜೃಂಭಣೆಯಿಂದ ಜರುಗಲಿದೆ. ಅದಕ್ಕಾಗಿ ಹಲವಾರು ಸಮಿತಿಗಳು ರಚಿತವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಸಹ ಒಂದು ಕೇಂದ್ರ ಸಮಿತಿ ರಚಿಸಿ ಈ ಬಗೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಹಳಕಟ್ಟಿಯವರ ಜನ್ಮಶತಮಾನೋತ್ಸವ
ದಿ|| ಫ.ಗು. ಹಳಕಟ್ಟಿಯವರೂ, ದಿ|| ಆಲೂರವರೂ ಓರಗೆಯವರು; ಒಂದೇ ಸಂವತ್ಸರದಲ್ಲಿ ಜನಿಸಿದವರು. ವಚನ ಸಾಹಿತ್ಯವನ್ನು ಬೆಳಕಿಗೆ ತರುವುದರ ಮೂಲಕ ಹಳಕಟ್ಟಿಯವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಚಿರಸ್ಮರಣೀಯ. ಮರಾಠೀಮಯವಾಗಿದ್ದ ಪ್ರದೇಶಗಳಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಲೂ ಅವರು ಪ್ರಯತ್ನಪಟ್ಟಿದ್ದರು. ಅವರು ಬದುಕಿ-ಬಾಳಿ ಕೊನೆಯುಸಿರೆಳೆದ ವಿಜಾಪುರದಲ್ಲಿ ಅವರಿಗಾಗಿ ಸ್ಮಾರಕ ರಚಿಸಲು ಸಿದ್ಧತೆ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತೂ ಸಹ ಒಂದು ಕೇಂದ್ರ ಸಮಿತಿ ರಚಿಸಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ದಿ|| ಆಲೂರರವರ ಜನ್ಮಶತಮಾನೋತ್ಸವದಂತೆಯೇ ದಿ|| ಹಳಕಟ್ಟಿಯವರ ಜನ್ಮಶತಮಾನೋತ್ಸವವನ್ನೂ ಸಾಹಿತ್ಯ ಪರಿಷತ್ತು, ಇನ್ನಿತರ ಸಂಸ್ಥೆಗಳು ವಿಶಿಷ್ಟವಾದ ರೀತಿಯಲ್ಲಿ ಜರುಗಿಸಬೇಕು.
Tag: Kannada Sahitya Sammelana 52, Basvaraja Kattimani
೫೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎಂ. ಗೋಪಾಲಕೃಷ್ಣ ಅಡಿಗ
ಪ್ರಸಿದ್ಧ ನವ್ಯಕಾವ್ಯದ ಕವಿಗಳೂ, ವಿಮರ್ಶಕರೂ ಆಗಿದ್ದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರು ರಾಮಪ್ಪ ಮತ್ತು ಗೌರಮ್ಮನವರ ಪುತ್ರರಾಗಿ ೧೮-೨-೧೯೧೮ರಲ್ಲಿ ಜನಿಸಿದರು.
ಶಾಲಾ ಶಿಕ್ಷಣ ಬೈಂದೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಆಯಿತು. ೧೯೪೨ರಲ್ಲಿ ಬಿ.ಎ. ಆನರ್ಸ್ ಪದವಿಯನ್ನು ಗಳಿಸಿದರು. ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ ಮೇಲೆ ೧೯೪೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ ಗಳಿಸಿದರು. ೧೯೪೮ ರಿಂದ ೧೯೫೨ರವರೆಗೆ ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ೧೯೫೨ ರಿಂದ ೫೪ರವರೆಗೆ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ೧೯೬೪-೬೮ವರೆಗೆ ಸಾಗರದ ಎಲ್.ಬಿ. ಕಾಲೇಜಿನಲ್ಲಿ ಮತ್ತು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಇವರು ಕಾರ್ಯನಿರ್ವಹಿಸಿದರು. ಅನಂತರ ೧೯೭೧ರಲ್ಲಿ ನ್ಯಾಷನಲ್ ಬುಕ್ ಟ್ರಸ್ಟಿನ ನಿರ್ದೇಶಕರಾದರು. ಇದಾದ ನಂತರ ೧೯೭೧ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಸಂಸತ್ತಿನ ಚುನಾವಣೆಗೆ ಸ್ಪರ್ಧಿಸಿದ್ದರು. ಸಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ನಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸಮಾಡಿದರು.
ಸಾಕ್ಷಿ ಎಂಬ ತ್ರೈಮಾಸಿಕವನ್ನು ಕೆಲಕಾಲ ನಡೆಸಿದ ಇವರು ಕನ್ನಡದಲ್ಲಿ ಶ್ರೇಷ್ಠ ಕವನಗಳನ್ನೂ ವಿಮರ್ಶಾಕೃತಿಗಳನ್ನೂ ಬರೆದಿದ್ದಾರೆ. ಇವರ ಸೇವೆಗೆ ಮೆಚ್ಚಿ ಹಲವಾರು ಪ್ರಶಸ್ತಿಗಳು ಬಂದಿವೆ. ೧೯೭೩ರ ರಾಜ್ಯ ಸರಕಾರ ‘ವರ್ಧಮಾನ’ ಕವನ ಸಂಕಲನಕ್ಕೆ ಪ್ರಶಸ್ತಿ, ೧೯೭೪ರಲ್ಲಿ ಕೇಂದ್ರ ಸರಕಾರದ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ಸರಕಾರ ಪಂಪ ಪ್ರಶಸ್ತಿ, ಮಧ್ಯಪ್ರದೇಶ ಸರಕಾರದ ಕಬೀರ್ ಸನ್ಮಾನ ಪ್ರಶಸ್ತಿ ಇವರಿಗೆ ಲಭಿಸಿತ್ತು. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ೫೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಇವರಿಗೆ ಪರಿಷತ್ತು ನೀಡಿತ್ತು.
ಅಡಿಗರು ರಚಿಸಿದ ಕೆಲವು ಮುಖ್ಯ ಕೃತಿಗಳು ಇವು: ಭಾವತರಂಗ, ಕಟ್ಟುವೆವು ನಾವು, ನಡೆದುಬಂದ ದಾರಿ, ಭೂಮಿಗೀತ, ಚಂಡಮದ್ದಲೆ, ವರ್ಧಮಾನ ಇತ್ಯಾದಿ ಕವನಸಂಕಲಗಳು. ಅನಾಥೆ, ಆಕಾಶದೀಪ (ಕಾದಂಬರಿಗಳು), ಮಣ್ಣಿನ ವಾಸನೆ, ವಿಚಾರಪಥ, ಕನ್ನಡದ ಅಭಿಮಾನ (ಗದ್ಯ ಲೇಖನಗಳು), ಹುಲ್ಲಿನ ದಳಗಳು, ಭೂಗರ್ಭಯಾತ್ರೆ, ಇತಿಹಾಸಚಿತ್ರ (ಅನುವಾದಗಳು).
ಗೋಪಾಲಕೃಷ್ಣ ಅಡಿಗರು ಬೆಂಗಳೂರಿನಲ್ಲಿ ೧೪-೧೧-೧೯೯೨ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೫೧,
ಅಧ್ಯಕ್ಷರು, ಎಂ. ಗೋಪಾಲಕೃಷ್ಣ ಅಡಿಗ
ದಿನಾಂಕ 0೯, ೧0, ೧೧ ಮಾರ್ಚ್ ೧೯೭೯
ಸ್ಥಳ : ಧರ್ಮಸ್ಥಳ
ಸಮಾನತೆಯ ದುಷ್ಪರಿಣಾಮ
ಶಕ್ತಿಗಳಲ್ಲಿ ಅಸಮಾನತೆಯಿದ್ದರೂ ವ್ಯಕ್ತಿಗಳಾಗಿ ಎಲ್ಲರೂ ಸಮಾನ ಗೌರವಕ್ಕೆ ಪಾತ್ರರು ಎಂಬುದೇ ಪ್ರಜಾಪ್ರಭುತ್ವದ ಮೂಲ ಸೂತ್ರ. ಆದರೆ ಸಮಾನತೆಯ ರಾಜಕೀಯ ಸಾಮಾಜಿಕ ವಾತಾವರಣ ಸೃಷ್ಟಿಯಾಗುತ್ತ ಬಂದ ಹಾಗೆ ಶಕ್ತಿ ವಿಶೇಷಗಳ ಬಗ್ಗೆ, ಅಪೂರ್ವ ಸಿದ್ಧಿಗಳ ಬಗ್ಗೆ ಒಟ್ಟಿನಲ್ಲಿ ಶ್ರೇಷ್ಠತೆಯೆಂಬ ಮೌಲ್ಯದ ಬಗ್ಗೆ ಇರಬೇಕಾದ ಎಚ್ಚರ ಮಾಯವಾಗಿ, ಬರೆದಿರುವುದೆಲ್ಲ ಸಾಹಿತ್ಯ ಎಂಬ ಭಾವನೆ, ಸರಾಸರಿಯೇ ದೊಡ್ಡ ಸಂಖ್ಯೆಗಿಂತ ಹೆಚ್ಚಿಗೆ ಎಂಬ ಅಜ್ಞಾನ ಹುಟ್ಟುತ್ತದೆ. ಶ್ರೇಷ್ಠವಾದದ್ದರ ಕಲ್ಪನೆಯನ್ನೇ ಅಳಿಸಿಹಾಕಬಲ್ಲ ಈ ಅಪಾಯವನ್ನೆದುರಿಸುವುದೇ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾನಿಲಯ ಮುಂತಾದ ಸಾಂಸ್ಕೃತಿಕ ಸಂಸ್ಥೆಗಳ ಮೂಲಭೂತ ಕೆಲಸ ಎನ್ನುವುದನ್ನು ನಾವು ಮರೆಯಲಾಗದು. ನಿರ್ದಿಷ್ಟವಾದ ತಾರತಮ್ಯಜ್ಞಾನವನ್ನು ಕೊಡುವ ವಿಮರ್ಶೆಯ ವಿವೇಕ ಕುದುರಿಸುವ ಕೆಲಸವೊಂದೇ ಈ ಯುಗದಲ್ಲಿ ನಾವು ಸಾಹಿತಿಗಳೂ ವಿದ್ಯಾವಂತರೂ ಅತ್ಯಗತ್ಯವಾಗಿ ಮಾಡಬೇಕಾದ ಕೆಲಸ. ಪಂಪ ದೊಡ್ಡ ಕವಿಯೋ ಪೊನ್ನನೋ? ಪಂಪ ಕುಮಾರವ್ಯಾಸರಲ್ಲಿ ಯಾರ ಸಾಧನೆ ಹೆಚ್ಚಿನದು. ಏಕೆ ಎಂಬ ಪ್ರಶ್ನೆ ಜಾತೀಯ ಪ್ರಶ್ನೆ ಅಲ್ಲ. ಸಿದ್ಧಿಯ ತಾರತಮ್ಯಗಳನ್ನು ಅಳೆಯುವ ಪ್ರಶ್ನೆ. ಈಗ ಸಾಹಿತ್ಯ ಪರಿಷತ್ತು ಮಾಡಬೇಕಾದ ಕೆಲಸವೂ ಇದೇ. ಆಡಂಬರ, ಜಾತ್ರೆ, ಮೇಳ ಇವುಗಳಿಂದ ನೋಡಿದವರ ಕಣ್ಣು ಸೆಳೆಯುವ ಕೆಲಸವಲ್ಲ, ಮನೋರಂಜನೆ ಒದಗಿಸುವ ವಿವಿಧ ವಿನೋದಾವಳಿಯಲ್ಲ, ಸಾಹಿತ್ಯ ಕೃತಿಗಳ ಅಧ್ಯಯನಕ್ಕೂ ಅವುಗಳನ್ನು ತೂಗಿ ನೋಡುವ ಕೆಲಸಕ್ಕೂ ತಕ್ಕ ಮಾನಸಿಕ ಸಲಕರಣೆಗಳನ್ನು ನಮ್ಮ ಜನಕ್ಕೆ, ತಮ್ಮ ಜನರಲ್ಲಿ ಸಾಹಿತ್ಯ ಪ್ರಿಯರಾದವರಿಗೆ ಒದಗಿಸಿಕೊಡುವ ಕೆಲಸ. ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಸಂಸ್ಥೆ ಕನ್ನಡದ ಅಭಿಮಾನವನ್ನು ಭಾಷಣಗಳ ಮೂಲಕ ಪ್ರದರ್ಶನಗಳ ಮೂಲಕ ಮೆರವಣಿಗೆಗಳ ಮೂಲಕ ಪ್ರದರ್ಶಿಸುವುದಲ್ಲ, ಕನ್ನಡ ಕೃತಿಗಳ ಆಳವಾದ ಅಭ್ಯಾಸಕ್ಕೆ ವಿಮರ್ಶೆಗೆ ತಕ್ಕ ವಾತಾವರಣವನ್ನು ಸೃಷ್ಟಿಸುವುದು, ಕನ್ನಡ ಜನಕ್ಕೆ ಆಧುನಿಕ ಜ್ಞಾನವನ್ನು, ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ ಮುಂತಾದ ಸಾಹಿತ್ಯಕ್ಕೆ ಹತ್ತಿರವಾದ ಆಧುನಿಕ ಶಾಸ್ತ್ರಗಳಲ್ಲಿ ನಡೆದ ಸಂಶೋಧನೆಗಳ ಸಾರವನ್ನು ಬಹುಜನಕ್ಕೆ ಮುಟ್ಟಿಸಿ ಆ ಮೂಲಕವೇ ಈ ಯುಗಧರ್ಮಕ್ಕೆ ತಕ್ಕ ಕೆಲಸವನ್ನು ಮಾಡುವುದು. ಇದು ಮಾತ್ರ ಸಲ್ಲುವ ಕೆಲಸ, ಉಳಿದದ್ದೆಲ್ಲ ವ್ಯರ್ಥ.
ಸಾರ್ವಜನಿಕ ಶಿಕ್ಷಣದ ಪ್ರಶ್ನೆ
ಒಂದು ಭಾಷೆಯ ಯೋಗ್ಯತೆಯನ್ನು ಅಳೆಯುವುದು ಅದರಲ್ಲಿ ಎಷ್ಟು ಪುಸ್ತಕಗಳು ಪ್ರಕಟವಾಗಿವೆ ಎಂಬುದರ ಮೇಲಲ್ಲ; ಅದು ನಮ್ಮ ಮನಸ್ಸಿನ ಸೂಕ್ಷ್ಮವಾದ ಕೆಲಸಗಳಿಗೆ ಎಷ್ಟರಮಟ್ಟಿಗೆ ಸಮರ್ಥವಾಗಿದೆ ಎನ್ನುವುದರ ಮೇಲೆ; ನಮ್ಮ ಅಭಿಪ್ರಾಯಗಳನ್ನೂ ಆಧುನಿಕ ವಿಚಾರಗಳನ್ನೂ ಯಥಾವತ್ತಾಗಿ ಮೂಡಿಸುವುದಕ್ಕೆ ನಾವು ಕಂಡ ಹೊಸ ಸತ್ಯಗಳನ್ನು ಮಾಡುವ ಹೊಸ ಸಂಶೋಧನೆಗಳನ್ನೂ ಎಷ್ಟು ಕರಾರುವಾಕ್ಕಾಗಿ, ನಿಃಸಂದಿಗ್ಧವಾಗಿ, ಸಂಕ್ಷೇಪವಾಗಿ ಆದರೂ ಸ್ಪಷ್ಟವಾಗಿ ಹೇಳಲು ಸಮರ್ಥವಾಗಿದೆ ಎನ್ನುವುದರ ಮೇಲೆ. ನಮ್ಮ ಮನಸ್ಸುಗಳು ಬೆಳೆಯದೆ ನಮ್ಮ ಭಾಷೆಯೂ ಬೆಳೆಯುವುದಿಲ್ಲ. ಆದಕಾರಣ ಇದು ಮುಖ್ಯವಾಗಿ ಶಿಕ್ಷಣದ ಪ್ರಶ್ನೆ, ಸಾಹಿತ್ಯ ಪರಿಷತ್ತಿನ ದೃಷ್ಟಿಯಿಂದ ಇದು ಸಾರ್ವಜನಿಕ ಶಿಕ್ಷಣದ ಪ್ರಶ್ನೆ.
ಸಮ್ಮೇಳನದ ಅಧ್ಯಕ್ಷರ ಅಧಿಕಾರ ಏನು?
ಸಾಹಿತ್ಯ ಪರಿಷತ್ತಿನ ಈಗಿನ ನಿಯಮಗಳಿಗನುಸಾರವಾಗಿ ಅದರ ವಾರ್ಷಿಕ ಸಮ್ಮೇಳನದ ಅಧ್ಯಕ್ಷನಿಗೆ ಯಾವ ಅಧಿಕಾರವೂ ಇಲ್ಲ, ಅವನು ಕೇವಲ ಒಂದು ಉತ್ಸವ ಮೂರ್ತಿ. ಆದ ಕಾರಣ ಸಮ್ಮೇಳನಾಧ್ಯಕ್ಷನಾಗಿ ನಾನು ಸಾಧಿಸಲು ಸಾಧ್ಯವಾಗಬಹುದಾದ ಕೆಲಸಕ್ಕೆ ಅವಕಾಶ ಬಹಳ ಕಡಿಮೆಯೇ. ಅಲ್ಲದೆ ಸಾಹಿತ್ಯ ಪರಿಷತ್ತೂ ಪ್ರಜಾತಂತ್ರಾತ್ಮಕವಾದ ಚುನಾವಣೆಯ ಪದ್ಧತಿಯಿಂದ ರೂಪುಗೊಂಡದ್ದು. ಅದನ್ನು ಯಾವನೇ ಒಬ್ಬ ವ್ಯಕ್ತಿ ತನ್ನ ಇಷ್ಟದಂತೆ ನಡೆಸಿಕೊಳ್ಳುವುದು ಸಾಧ್ಯವಿಲ್ಲ. ಬಹುಮತದಂತೆಯೇ ಅದು ನಡೆಯಬೇಕು. ಸಾಹಿತ್ಯ ಕಲೆಗಳಂಥ ಮನುಷ್ಯನ ವಿಶೇಷ ಸಾಧನೆಗಳಿಗೆ ಈ ಬಹುಮತ ವ್ಯವಸ್ಥೆ ಸರಿಯೇ? ಎಂದು ನಾವೆಲ್ಲರೂ ಯೋಚಿಸಬೇಕು. ಒಂದು ಕಾವ್ಯದ ಯೋಗ್ಯತೆಯನ್ನು ಓಟಿಗೆ ಹಾಕಿ ನಿರ್ಧರಿಸಬಹುದೇ? ಇಲ್ಲವಾದರೆ ಏನು ಮಾಡಬೇಕು? ಅದರ ನಿರ್ಧಾರವನ್ನು ಕಾಲಕ್ಕೆ ಬಿಡುವುದೇನೋ ಕ್ಷೇಮ. ಇಲ್ಲವಾದರೆ ಆ ವಿಷಯದಲ್ಲಿ ದಕ್ಷರಾದ ನಿಸ್ಪೃಹ ವಿಮರ್ಶಕರು ಪ್ರಜಾತಂತ್ರಾತ್ಮಕವಾಗಿ ಈ ಕೆಲಸ ಮಾಡಲು ಬಿಡಬೇಕು. ಒಂದು ಕಾಲದಲ್ಲಿ ಕನ್ನಡದಲ್ಲಿ ಬರೆಯುವವರಾಗಲೀ ಬರೆದದ್ದನ್ನು ಓದುವವರಾಗಲೀ ತೀರ ವಿರಳವಾಗಿದ್ದಾಗ ಸ್ಥಾಪಿತವಾಗಿರುವುದು ಈ ಪರಿಷತ್ತು. ಆ ಕಾಲದಲ್ಲಿ ಈ ಸಂಸ್ಥೆಯನ್ನು ಕನ್ನಡಿಗರೆಲ್ಲರಿಗೂ ವಯಸ್ಕರಾದ ಎಲ್ಲರಿಗೂ ಮುಕ್ತವಾಗಿಟ್ಟಿದ್ದು ಆ ಕಾಲಕ್ಕೆ ಸರಿ, ಆದರೆ ಈಗ ಅದು ಸರಿಹೋಗುವುದಿಲ್ಲ ಎನ್ನಿಸಿದಾಗ ಏನು ಮಾಡಬೇಕು?
ಪರಿಷತ್ತು ಈ ಕಾಲಕ್ಕೆ ಏನು ಮಾಡಬೇಕು
ನಮ್ಮಲ್ಲಿ ಪ್ರತಿಯೊಂದು ಸಂಸ್ಥೆಯೂ ಬಹು ಬೇಗ ಜಡವಾಗಿ ಹೋಗುವಂತೆ ಈ ಸಂಸ್ಥೆಯೂ ತೀರ ಜಡವಾಗಿ ಯಾಂತ್ರಿಕವಾಗಿ ಈವರೆಗೆ ಮಾಡಿಕೊಂಡು ಬಂದದ್ದನ್ನೇ ಮಾಡುತ್ತ ಹೋಗುತ್ತಿದೆ. ಇದನ್ನು ನಿವಾರಿಸುವ ದಾರಿ ಯಾವುದು ಎಂದು ನಾವೆಲ್ಲರೂ ಯೋಚಿಸಬೇಕು? ಸಾಹಿತ್ಯ ಕೃತಿಗಳಿಗೆ ಸಂಬಂಧಪಟ್ಟ ವಿಮರ್ಶೆ ಮೌಲ್ಯ ನಿರ್ಣಯ ಮುಂತಾದುವುಗಳಿಗಾಗಿಯೇ ಫ್ರೆಂಚ್ ಅಕಾಡೆಮಿಯ ರೀತಿಯ ಅತ್ಯುಚ್ಚ ಧೀಮಂತರ ಒಂದು ವಿಶಿಷ್ಟ ಸಂಸ್ಥೆಯನ್ನು ಸಾಹಿತ್ಯ ಪರಿಷತ್ತು ಸ್ಥಾಪಿಸಿ ಅದನ್ನು ಸ್ವತಂತ್ರವಾದ ಒಂದು ಸಣ್ಣ ಘಟಕವನ್ನಾಗಿ ನಡಸಿಕೊಂಡು ಬರುವುದು ಸಾಧ್ಯವಾದೀತೇ ಎಂದು ಪರೀಕ್ಷಿಸಿ ನೋಡಬೇಕು. ಇದು ತೀರ ದೊಡ್ಡ ಸಂಘವಾಗದೆ ಇಡೀ ಕರ್ನಾಟಕದಲ್ಲಿ ಅತ್ಯುತ್ತಮ ಧೀಮಂತರಾದ ಹತ್ತು ಹದಿನೈದು ಮಂದಿ ನಿಷ್ಪಕ್ಷಪಾತ ವಿದ್ವಾಂಸರಿಗೆ ಆ ಕೆಲಸವನ್ನು ಒಪ್ಪಿಸಬಹುದು ಎಂದು ನನ್ನ ಸೂಚನೆ. ಆ ವಿದ್ವಾಂಸ ಮಂಡಳಿಯಲ್ಲಿ ಸಾಹಿತಿಗಳೇ ಇರಬೇಕಾದ ಅಗತ್ಯವಿಲ್ಲ. ಇತರ ಕಲೆಗಳು ಶಾಸ್ತ್ರಗಳ ವಿಜ್ಞಾನಗಳ ಪರಿಣತರೂ ಇರಬಹುದು. ಶ್ರೇಷ್ಠತೆಯ ಪ್ರಶ್ನೆ, ತತ್ವದ ಪ್ರಶ್ನೆ, ಮೌಲ್ಯಮಾಪನದ ಪ್ರಶ್ನೆ ಬಂದಾಗ ಆ ಪ್ರಶ್ನೆಗಳು ಈ ಸ್ವತಂತ್ರ ಧೀಮಂತ ಮಂಡಳಿಗೆ ಒಪ್ಪಿಸಿ ಅದರ ತೀರ್ಮಾನವನ್ನು ಎಲ್ಲರೂ ಗೌರವಿಸಬಹುದು.
ಶ್ರೇಷ್ಠ ಕೃತಿಗಳ ಪ್ರಕಟನೆ
ಪ್ರಜಾತಂತ್ರದ ಸಂದರ್ಭದಲ್ಲಿ ಇಂಥ ಒಂದು ಮಂಡಳಿ ಅತ್ಯಗತ್ಯ ಎಂದು ನನಗೆ ತೋರುತ್ತದೆ. ಆಗ ಪರಿಷತ್ತು ತನ್ನ ಈ ಪ್ರಜಾತಂತ್ರದ ಚೌಕಟ್ಟಿನಲ್ಲೇ ಸಾರ್ವಜನಿಕ ಶಿಕ್ಷಣದ ಕೆಲಸವನ್ನೂ ಇನ್ನೂ ಯಾರೂ ಪ್ರಕಟಿಸಲು ಮುಂದೆ ಬಾರದೆ ಇರಬಹುದಾದ ಆದರೆ ಅತ್ಯಂತ ಶ್ರೇಷ್ಠವಾದ ಕೃತಿಗಳನ್ನು ಪ್ರಕಟಿಸುವುದು, ಸಾಹಿತ್ಯಾಭ್ಯಾಸಕ್ಕೆ ಅಗತ್ಯವಾದ ನಿಘಂಟು ಮುಂತಾದ ಸಹಾಯಕ ಪ್ರೌಢ ಗ್ರಂಥಗಳನ್ನು ಪ್ರಕಟಿಸುವುದು, ಒಂದು ವರ್ಷದಲ್ಲಿ ಪ್ರಕಟವಾದ ಅತ್ಯುತ್ತಮ ಕವನಗಳನ್ನೋ ಕಥೆಗಳನ್ನೋ ಪ್ರಬಂಧಗಳನ್ನೋ ಪುಸ್ತಕ ರೂಪದಲ್ಲಿ ಪ್ರಕಟಿಸುವುದು ಮುಂತಾದ ಕೆಲಸಗಳನ್ನು ಮಾಡಬಹುದು. ಪ್ರಕಟಿಸುವಾಗ ಅತ್ಯುತ್ತಮವಾದವುಗಳನ್ನೇ ಆರಿಸಲು ತಕ್ಕ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
ಗದ್ಯಾನುವಾದಗಳು ಬೇಡ
ಹಳೆಗನ್ನಡ ಕಾವ್ಯಗಳ ಗದ್ಯಾನುವಾದಗಳನ್ನು ಪ್ರಕಟಿಸುವ ಒಂದು ಯೋಜನೆಯನ್ನು ಪರಿಷತ್ತು ಇನ್ನೂ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಯಾವ ಕಾವ್ಯವನ್ನೇ ಆಗಲಿ ಅದನ್ನು ಕಾವ್ಯರೂಪದಲ್ಲೇ ಓದಬೇಕಲ್ಲದೆ ಅದರ ಗದ್ಯ ರೂಪವನ್ನು ಸಿದ್ಧಪಡಿಸಿದರೆ ಕವಿಗೆ ಭಾರೀ ಅಪಚಾರ ಮಾಡಿದಂತೆ. ನಮ್ಮ ವಿದ್ಯಾರ್ಥಿಗಳನೇಕರು ಕವನವನ್ನು ಓದದೆ ಅವುಗಳ ಸಾರಾಂಶವನ್ನೇ ಗೈಡುಗಳಲ್ಲಿ ಕೊಟ್ಟಿರುವ ಗದ್ಯ ಭಾಷಾಂತರಗಳನ್ನೇ ಓದಿ ಕಾವ್ಯದಿಂದ ಸಿಕ್ಕುವ ಸಂಸ್ಕಾರಕ್ಕೆ ಬಾಹಿರವಾಗುತ್ತ ಬರುತ್ತಿದ್ದಾರೆ. ಈ ರೋಗವನ್ನು ಇನ್ನಷ್ಟು ಸಾರ್ವಜನಿಕವಾಗಿ ಮಾಡುವ ಈ ಪ್ರಯತ್ನ ಅತ್ಯಂತ ಹಾಸ್ಯಾಸ್ಪದವಾದುದಾದರೂ ನಮ್ಮ ಇಂದಿನ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನನಗೆ ಅಳು ಬರುವಂತೆ ಮಾಡುತ್ತಿದೆ. ಕಾವ್ಯದ ಅಭ್ಯಾಸಕ್ಕೆ ಬೇಕಾದ ಕಠಿಣ ಪದಗಳ ಅರ್ಥ, ವಿಶೇಷ ಸಂದರ್ಭಗಳ ವಿವರ, ಟೀಕೆ ಟಿಪ್ಪಣಿ ಇವು ನಮ್ಮ ಕಾವ್ಯಗಳಿಗೆ ಅಗತ್ಯವಾಗಬಹುದು. ಆದರೆ ಗದ್ಯಾನುವಾದ ಖಂಡಿತ ಅಲ್ಲ. ಇಂದೂ ಕೂಡ ನಮ್ಮ ಜನ ಪಂಪನನ್ನು ನಾರಣಪ್ಪನನ್ನೂ ಓದಬೇಕು, ಸರಿಯಾಗಿ ಲಯ ಹಿಡಿದು ಓದುವುದಕ್ಕೆ ಕಲಿಯಬೇಕು ಅದರಿಂದಲೇ ನಮ್ಮ ಜನದಲ್ಲಿ ಕಾವ್ಯಾಭಿರುಚಿ ಹುಟ್ಟುವುದು ಸಾಧ್ಯ. ಆ ಬಗ್ಗೆ ಪರಿಷತ್ತು ತಕ್ಕ ಏರ್ಪಾಟು ಮಾಡಲಿ. ಆದರೆ ನಾನು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ ಇಂಥ ಗದ್ಯಾನುವಾದಗಳನ್ನು ಸಾಹಿತ್ಯ ಪರಿಷತ್ತು ಖಂಡಿತವಾಗಿ ಪ್ರಕಟಿಸಬಾರದು. ಕಾವ್ಯದ ಅನುಭವದಲ್ಲಿ ಅರ್ಥದಲ್ಲಿ ಕೊನೆಯ ಪಕ್ಷ ಅರ್ಧದಷ್ಟನ್ನಾದರೂ ಅದರ ಲಯವೇ ಪದಸಮ್ಮಿಳನದ ನಾದವೇ ಹುಟ್ಟಿಸುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಸಾಹಿತ್ಯ ಪರಿಷತ್ತು ಖಂಡಿತವಾಗಿಯೂ ಮರೆಯಬಾರದು.
ಸಮ್ಮೇಳನದ ಗೋಷ್ಠಿಗಳು ಹೇಗಿರಬೇಕು?
ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹಳೆಯ ಹೊಸ ಕವಿಗಳ ಮೇಲೆ ವಿಚಾರ ಗೋಷ್ಠಿಗಳನ್ನು ಸಾಹಿತ್ಯ ಪರಿಷತ್ತು ನಡೆಸಿಕೊಂಡು ಬರುತ್ತಿದೆ. ಕವಿಯ ಪರಿಚಯವೇ ನಮ್ಮ ಜನಕ್ಕೆ ಇಲ್ಲದೆ ಇರುವಾಗ ಇಂಥ ಗೋಷ್ಠಿಗಳು ನಿರರ್ಥಕವಾಗುತ್ತವೆ. ಪಂಡಿತರ ವಾದಸರಣಿಯನ್ನು ಸಭಿಕರಿಗೆ ಅನುಸರಿಸುವುದು ಸಾಧ್ಯವಾಗುವುದಿಲ್ಲ. ಸಭಿಕರ ಮುಂದೆ ತೀರ ಪ್ರೌಢವಾದ ಪ್ರಬಂಧವನ್ನು ಮಂಡಿಸಲು ತಕ್ಕ ವಿಮರ್ಶಕರೂ ಕಡಿಮೆ, ಕೇಳಿ ಮೆಚ್ಚುವವರಿಲ್ಲದೆ ಅವರ ಶ್ರಮ ನಿರರ್ಥಕವೂ ಆಗಬಹುದು. ಆದಕಾರಣ ನಮ್ಮ ನಾಡಿನ ಎಲ್ಲ ಕಡೆಗಳಲ್ಲೂ ಹಳ್ಳಿಗಳಲ್ಲೂ ಕೂಡ ಸಾಹಿತ್ಯ ಪರಿಷತ್ತು ಒಂದು ಸಾಂಸ್ಕೃತಿಕ ಸಂಸ್ಥೆಯಾಗಿ ಕೆಲಸ ಮಾಡುತ್ತ ನಮ್ಮ ಹಳೆಗನ್ನಡದ ನಡುಗನ್ನಡದ ಕವಿ ಸಾಹಿತಿಗಳ ಕೃತಿಗಳ ಪರಿಚಯ ಮಾಡಿಕೊಡುವ ವ್ಯವಸ್ಥೆಯನ್ನು ಕೈಗೊಳ್ಳಬಹುದು. ಕಾವ್ಯವನ್ನು ಹೇಗೆ ಓದಬೇಕು, ಕಾವ್ಯ ಅರ್ಥವನ್ನು ಹೇಗೆ ಸೃಷ್ಟಿಸುತ್ತದೆ ಎನ್ನುವುದನ್ನು ಉದಾಹರಣೆಗಳ ಮೂಲಕ ನಮ್ಮ ಪ್ರಭುಗಳಾದ ಸಾಮಾನ್ಯ ಜನತೆಗೆ ತೋರಿಸಿಕೊಡಬಹುದು. ಇದರಿಂದ ಸಾಹಿತ್ಯದಿಂದ ಬರಬೇಕಾದ ಸಂಸ್ಕಾರ ಅನೇಕ ಜನರಿಗೆ ದೊರೆವಂತಾಗಿ ಸಾಹಿತ್ಯ ಪರಿಷತ್ತಿನ ಕೆಲಸ ನಿಜವಾಗಿಯೂ ಜನೋಪಯೋಗಿ ಆಗುತ್ತದೆ. ಒಟ್ಟಿನಲ್ಲಿ ಸಾಹಿತ್ಯ ಪರಿಷತ್ತು ನಿಜವಾದ ಸಾಹಿತ್ಯ ಪರಿಷತ್ತೇ ಆಗುವಂತೆ ಮಾಡಲು ನಾನೂ ನೀವೂ ಸೇರಿ ಪ್ರಯತ್ನಿಸೋಣ.
Tag: Kannada Sahitya Sammelana 51, M. Gopalakrishna Adiga
೫0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಜಿ.ಪಿ. ರಾಜರತ್ನಂ
ಕನ್ನಡದಲ್ಲಿ ರತ್ನನ ಪದಗಳಿಂದ ಜನಪ್ರಿಯರಾಗಿದ್ದ ಮಕ್ಕಳ ಸಾಹಿತ್ಯದಿಂದ ಹೆಸರುಗಳಿಸಿರುವ ಜಿ.ಪಿ.ರಾಜರತ್ನಂ ಅವರು ಮೈಸೂರಿನ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್ ಅವರ ಪುತ್ರರಾಗಿ ೮-೧೨-೧೯0೮ರಲ್ಲಿ ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ (ಕ್ಲೋಸ್ಪೇಟೆ) ಜನಿಸಿದರು.
ರಾಜರತ್ನಂ ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ., ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ೧೯೬೪ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು.
ಕವಿ, ನಾಟಕಕಾರ, ಮಕ್ಕಳ ಸಾಹಿತ್ಯರಚಕರಾಗಿ ಕನ್ನಡ ಸಾಹಿತ್ಯದ ಪರಿಚಾರಿಕೆ ಮಾಡಿದ ಜಿ.ಪಿ.ರಾಜರತ್ನಂ ಅವರು ರಚಿಸಿದ ರತ್ನನ ಪದಗಳು, ಬುದ್ಧವಚನ ಪರಿಚಯ ಕೃತಿಗಳಿಗೆ ದೇವರಾಜ ಬಹಾದ್ದೂರ್ ಪ್ರಶಸ್ತಿ ದೊರಕಿತು. ೧೯೬೯ರಲ್ಲಿ ರಾಜ್ಯಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ನೀಡಿದೆ. ೧೯೭0ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಿಲಿಟ್ ಪದವಿ ನೀಡಿತು. ೧೯೭೮ರಲ್ಲಿ ದೆಹಲಿಯಲ್ಲಿ ನಡೆದ ೫0ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಗೌರವ ಇವರಿಗೆ ಲಭ್ಯವಾಯಿತು.
ಪರಿಷತ್ತಿನ ನಿಕಟವರ್ತಿಗಳಾದ ರಾಜರತ್ನಂ ಅವರು ಪರಿಷತ್ತಿನ ಗೌರವ ಕೋಶಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವನ್ನು ಪುನಶ್ಚೇತನಗೊಳಿಸಿದರು. ಬಳ್ಳಾರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖಕರ ಗೋಷ್ಠಿ (೧೯೩೮), ರಬಕವಿಯಲ್ಲಿ ನಡೆದ ೨೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿ(೧೯೪೪), ಕಾರ್ಕಳದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆ ಸಾಹಿತ್ಯ ಸಮ್ಮೇಳನ(೧೯೭೨), ಧರ್ಮಸ್ಥಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಮಕ್ಕಳ ಗೋಷ್ಠಿ(೧೯೭೯), ಮೊದಲಾದ ಗೋಷ್ಠಿಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಜಿ.ಪಿ. ರಾಜರತ್ನಂ ಅವರು ಮಕ್ಕಳಿಗಾಗಿ ಚಿಕ್ಕ ಹೊತ್ತಿಗೆಗಳನ್ನು ದೊಡ್ಡವರಿಗಾಗಿ ದೊಡ್ಡ ಹೊತ್ತಿಗೆಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಬುದ್ಧ ಸಾಹಿತ್ಯ, ಜೈನ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಚೀನಾದೇಶದ ಬೌದ್ಧಯಾತ್ರಿಕರು ಮೊದಲಾದ ೨0 ಬೌದ್ಧ ಸಾಹಿತ್ಯ ಕೃತಿಗಳು, ರತ್ನನ ಪದಗಳು, ಶಾಂತಿ, ನಾಗನ ಪದಗಳು, ಪುರುಷ ಸರಸ್ವತಿ(ಕಾವ್ಯ), ಗಂಡುಗೊಡಲಿ(ನಾಟಕ), ಹೊಸಗನ್ನಡ, ಯಶೋಧರ ಚರಿತ್ರೆ ಕೈಗನ್ನಡಿ, ಶ್ರೀಕವಿಪಂಪ, ತುತ್ತೂರಿ ಚುಟುಕ ಕಡಲೇಪುರಿ, ಗುಲಗಂಜಿ ಇತ್ಯಾದಿ ಮಕ್ಕಳ ಸಾಹಿತ್ಯ. ಜೈನಸಾಹಿತ್ಯಕ್ಕೆ ಸಂಬಂಧಿಸಿದ ಶ್ರೀ ಗೊಮ್ಮಟೇಶ್ವರ ಭಗವಾನ್ ಮಹಾವೀರ, ಅಲ್ಲದೆ ವಿಚಾರರಶ್ಮಿ, ನಿರ್ಭಯಾಗ್ರಫಿ ಇತ್ಯಾದಿ ಇವರ ವಿಮರ್ಶಾ ಕೃತಿಗಳು.
ಜಿ.ಪಿ.ರಾಜರತ್ನಂ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದಿಂದ ಹಿಂದಿರುಗಿದ ಒಂದೆರಡು ದಿನಗಳಲ್ಲೇ ಅಂದರೆ ದಿನಾಂಕ ೧೩-೩-೧೯೭೯ರಂದು ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ-೫0
ಅಧ್ಯಕ್ಷರು, ಜಿ.ಪಿ. ರಾಜರತ್ನಂ
ದಿನಾಂಕ ೨೩, ೨೪, ೨೫ ಏಪ್ರಿಲ್ ೧೯೭೮
ಸ್ಥಳ : ನವದೆಹಲಿ
[ಟಿಪ್ಪಣಿ : ೧೯೭೭ರಲ್ಲಿ ಸಮ್ಮೇಳನ ನಡೆಯಲಿಲ್ಲ]
ಕನ್ನಡ ಸಾಹಿತ್ಯ ಪರಿಷತ್ತೂ ನಾನೂ
ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿಗೆ ನಾನು ಹೊರಗಿನವನಲ್ಲ. ೧೯೩0ರಲ್ಲಿ ನಾನು ಮೊದಲನೇ ಎಂ.ಎ., ತರಗತಿಯಲ್ಲಿ ಓದುತ್ತಿದ್ದಾಗ ಪರಿಷತ್ತು ನಡೆಸಿದ ೧೬ನೇ ಸಾಹಿತ್ಯ ಸಮ್ಮೇಳನದಲ್ಲಿ ನನಗೂ ನಾಲ್ಕಾರು ರೀತಿಯ ಪರಿಚಾರಿಕೆಗಳನ್ನು ಮಾಡುವುದಕ್ಕೆ ಅವಕಾಶ ಲಭಿಸಿತ್ತು. ಅಂದಿನಿಂದ ಪರಿಷತ್ತಿಗೂ ನನಗೂ ಅವಿಚ್ಛಿನ್ನವಾದ ಅಂಟು, ಗಂಟು, ನಂಟು. ನಾನೂ ಹತ್ತಾರು ವರ್ಷ ಪರಿಷತ್ತಿನ ಒಳಗೆ ಇದ್ದು, ಅಲ್ಲಿ ನನ್ನ ಪಾಲಿಗೆ ಹಿರಿಯರು ವಹಿಸಿದ ಭಾರಗಳನ್ನು ನನ್ನ ಕೈಲಾದಷ್ಟು ನಿರ್ವಹಿಸಿದ್ದೇನೆ. ಮುಂದೆ ಇತರ ಕಾರ್ಯಗೌರವಗಳ ಒತ್ತಡದಿಂದ ಪರಿಷತ್ತಿಗೆ ಬಂದುಹೋಗಲು ನನಗೆ ಬಿಡುವು ಆಗದಿದ್ದರೂ ನಾನು ಇಂದಿನವರೆಗೂ ಪರಿಷತ್ತಿನೊಂದಿಗೇ ಇದ್ದೇನೆ. ನಮ್ಮ ನಾಡಿನ ಜನರ ಏಳಿಗೆಗಾಗಿ ಪರಿಷತ್ತು ಏನೇನು ಮಾಡುತ್ತಿದೆಯೋ ಅದಕ್ಕೆ ಪೂರಕವಾಗುವ ಹಾಗೆ ನಾನು ನನ್ನ ಕೈಲಾದಷ್ಟು ಪರಿಚಾರಿಕೆ ಮಾಡುತ್ತಿದ್ದೇನೆ. ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿಗೆ ೫0 ವರ್ಷ ತುಂಬಿದಾಗ ನಾನು ಬರೆದು ಪ್ರಕಟಿಸಿದ ‘ಕನ್ನಡ ಸೇತುವೆ’ ಎಂಬ ಸಣ್ಣ ಹೊತ್ತಿಗೆಯಲ್ಲಿ ಪರಿಷತ್ತಿಗೂ ನನಗೂ ಬೆಸೆದು ಬಂದಿರುವ ಬಾಂಧವ್ಯವನ್ನು ಸೂಚಿಸಿದ್ದೇನೆ.
ಪರಿಷತ್ತಿನ ಗುರಿ
೬೪ ವರ್ಷಗಳ ಹಿಂದೆ ನಮ್ಮ ನಾಡಿನ ಹಿರಿಯರು ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದಾಗ ತಮ್ಮ ಮುಂದೆ ಎರಡು ಗುರಿಗಳನ್ನು ಇಟ್ಟುಕೊಂಡಿದ್ದರು: ೧. ಕನ್ನಡ ನುಡಿ ಬೆಳೆಯಬೇಕು, ಕನ್ನಡ ಸಾಹಿತ್ಯ ಬೆಳೆಯಬೇಕು, ಕನ್ನಡ ನಾಡು ಒಂದಾಗಬೇಕು, ಕನ್ನಡ ಜನ ಮುಂದುವರಿಯಬೇಕು; ೨. ಭಾರತವು ಸ್ವತಂತ್ರವಾಗಬೇಕು. ಭಾರತವು ಸ್ವತಂತ್ರವಾದ ಹೊರತು ಕರ್ಣಾಟಕ ಏಕೀಕರಣ ಸಾಧ್ಯವಾಗದು ಎಂಬುದನ್ನು ಅಂದಿನ ಹಿರಿಯರು ತಿಳಿದಿದ್ದರು. ಆ ಸ್ವಾತಂತ್ರ್ಯ ಬರುವವರೆಗೂ ಏಕೀಕರಣದ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕೆಂದು, ಕನ್ನಡದ ಮೂಲಕವಾಗಿ ಎರಡನ್ನೂ ಏಕಕಾಲದಲ್ಲಿ ನಡೆಸಿಕೊಂಡು ಹೋದರು. ಅವರ ತಪಸ್ಸಿನ ಫಲವಾಗಿ, ಅವರಿಗೆ ವಿಧೇಯರಾಗಿ ನಡೆದವರ ಪ್ರಯತ್ನಗಳ ಪರಿಣಾಮವಾಗಿ, ೧೯೪೭ರಲ್ಲಿ ಭಾರತ ಸ್ವತಂತ್ರವಾಯಿತು, ಅದರ ತರುವಾಯ ಕರ್ಣಾಟಕ ಒಂದಾಯಿತು. ಆದರೆ, ದೇಶ ಸ್ವತಂತ್ರವಾದ್ದರಿಂದ ದೇಶದ ಜನರಿಗೆ ಏನು ಬಂತು? ಕನ್ನಡ ನಾಡು ಒಂದಾದ್ದರಿಂದ ಕನ್ನಡಿಗರಿಗೆ ಏನು ಬಂತು? ಇದು ನಾನು ಕೇಳುತ್ತಿರುವ ಪ್ರಶ್ನೆಯಲ್ಲ. ದೇಶಕ್ಕೆ ದೇಶವೇ ನಾಡಿಗೆ ನಾಡೇ ಈ ಪ್ರಶ್ನೆಯನ್ನು ಕೇಳುತ್ತಿದೆ. ಇದಕ್ಕೆ ಉತ್ತರವನ್ನು, ಅದಕ್ಕೆ ಪರಿಹಾರವನ್ನು ಹುಡುಕಬೇಕಾದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅದರಲ್ಲೂ ಮಾತಿನ ಶಕ್ತಿಯನ್ನು ಬಲ್ಲವನಾದ ಸಾಹಿತಿಯ ಹೊಣೆಗಾರಿಕೆ ಈ ಸಂದರ್ಭದಲ್ಲಿ ಮಿಕ್ಕವರಿಗಿಂತ ಹೆಚ್ಚಾಗಿರುತ್ತದೆ.
ಕರ್ತವ್ಯಪರರಾಗಿರಬೇಕು
ಒಳಗೆ ಅಡಿಗೆ ಮಾಡುವವರು ಹದಿನೈದು ಮಂದಿ. ಊಟಕ್ಕೆ ಕುಳಿತವರು ಸಾವಿರಾರು. ಬಡಿಸುವವರು ತಕ್ಕಷ್ಟು ಸಂಖ್ಯೆಯಲ್ಲಿ ಇಲ್ಲದೆ ಹೋದರೆ, ಮಾಡಿದ ಅಡುಗೆ ವ್ಯರ್ಥ, ಊಟಕ್ಕೆ ಕುಳಿತವರಿಗೆ ಅರೆಹೊಟ್ಟೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭ ಮಾಡಿದ ಕಾಲಕ್ಕೆ ನಮ್ಮ ಹಿರಿಯರು ಯಾವ ಎರಡು ಘನವಾದ ಉದ್ದೇಶಗಳನ್ನು ತಮ್ಮ ಮುಂದೆ ಇರಿಸಿಕೊಂಡು ತೊಡಗಿದರೋ ಅದು ಇನ್ನೂ ಸಮರ್ಪಕವಾಗಿ ಈಡೇರಿಲ್ಲ. ಅದು ನೆರವೇರುವವರೆಗೂ ನಾವು ಅಪ್ರಮತ್ತರಾಗಿ ಕರ್ತವ್ಯಪರರಾಗಿರಲೇಬೇಕು.
ಸಮ್ಮೇಳನದ ಚರ್ಚೆಗಳು
‘ಶಬ್ದಪಾರಮಾರ್ಗಮಶಕ್ಯಂ’ ಎಂದು ಕೇಶಿರಾಜ ಹೇಳಿದ ಹಾಗೆ, ಎಲ್ಲರೂ ಎಲ್ಲಾ ಭಾಷೆಗಳನ್ನೂ ಕಲಿಯಬೇಕಾದ್ದಿಲ್ಲ. ಕಲಿತ ಕೆಲವರು ಪುಣ್ಯವಂತರು ತಾವು ಕಲಿತದ್ದನ್ನು ನಮಗೆ ಕನ್ನಡದಲ್ಲಿ ತಂದು ತಿಳಿಸಿದರೆ ನಾವು ಧನ್ಯರು.
ಈ ಕೆಲಸ ಸಾವಿರ ವರ್ಷಗಳ ಉದ್ದಕ್ಕೂ ನಮ್ಮಲ್ಲಿ ನಡೆಯುತ್ತಲೇ ಇದೆ. ಆದರೆ ಎಷ್ಟು ಮುಂದುವರಿದಿದ್ದೇವೆಯೋ ಅಷ್ಟೇ ಊಧ್ರ್ವಮುಖಿಗಳಾಗುತ್ತಿದ್ದೇವೆಯೆ ಎಂಬುದು ವಿಚಾರ ಮಾಡಬೇಕಾದ ವಿಷಯ. ಅದಕ್ಕೋಸ್ಕರವಾಗಿಯೇ ಸಮ್ಮೇಳನದ ಮೂರು ದಿವಸಗಳಲ್ಲಿ ಬೇರೆ ಬೇರೆ ಗೋಷ್ಠಿಗಳು ಸೇರಿ ಚರ್ಚೆ ಮಾಡುವುದರಿಂದ ಅದನ್ನು ಕುರಿತು ಮಾತನಾಡಲು ನನಗೆ ಇದು ಸ್ಥಳವೂ ಅಲ್ಲ, ನನಗೆ ಇಲ್ಲಿ ಸಮಯವೂ ಇಲ್ಲ.
Tag: Kannada Sahitya Sammelana 50, G.P. Rajaratnam
೪೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎಸ್.ವಿ. ರಂಗಣ್ಣ
ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವೀಣ್ಯ ಪಡೆದಿದ್ದ ಎಸ್.ವಿ. ರಂಗಣ್ಣನವರು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ವೆಂಕಟಸುಬ್ಬಯ್ಯ-ವೆಂಕಟಲಕ್ಷ್ಮಮ್ಮನವರ ಮಗನಾಗಿ ೨೪-೧೨-೧೮೯೮ರಲ್ಲಿ ಜನಿಸಿದರು.
ಇವರ ವಿದ್ಯಾಭ್ಯಾಸ ಚಿಕ್ಕಮಗಳೂರು, ಬೆಂಗಳೂರು, ಮೈಸೂರುಗಳಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿಯನ್ನೂ, ೧೯೨೧ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು.
೧೯೨೩ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ೧೯೨೮-೩೩ರವರೆಗೆ ತುಮಕೂರಿನಲ್ಲಿ, ೧೯೩೩ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ ೧೯೫೪ರಲ್ಲಿ ನಿವೃತ್ತರಾದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಎಂ.ಶ್ರೀ. ಅವರು ಉಪಾಧ್ಯಕ್ಷರಾಗಿದ್ದಾಗ ಕಾರ್ಯದರ್ಶಿಯಾಗಿಯೂ, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಪರಿಷ್ಕರಣ ಸಮಿತಿಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರಿನ ಸಹಕಾರ ಸಂಘ, ಪದವೀಧರರ ಸಹಕಾರ ಸಂಘ, ಅನಾಥಾಲಯ ಇವುಗಳ ಅಧ್ಯಕ್ಷರಾಗಿಯೂ, ಶಾರದಾವಿಲಾಸ ವಿದ್ಯಾ ಸಂಸ್ಥೆಗಳ ಗೌರವ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
೧೯೬೫ರಲ್ಲಿ ಇವರ ರಂಗಬಿನ್ನಪ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ೧೯೭0ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಿ.ಲಿಟ್. ಪದವಿಯನ್ನೂ ನೀಡಿತು.
೧೯೩೩ರಿಂದ ೧೯೩೮ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿದ್ದರು. ೧೯೭೬ರಲ್ಲಿ ಶಿವಮೊಗ್ಗೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಸ್ಕೌಟ್ ಚಳುವಳಿಯಲ್ಲಿ ಸದಾ ನಿರತರಾಗಿದ್ದು ರಜತಗಜ ಪ್ರಶಸ್ತಿಗೆ ಪಾತ್ರರಾಗಿದ್ದರು.
ಇವರು ರಚಿಸಿದ ಕನ್ನಡ ಕೃತಿಗಳೆಂದರೆ: ಕುಮಾರವ್ಯಾಸನ ವಾಣಿ, ಕಾಳಿದಾಸನ ನಾಟಕಗಳ ವಿಮರ್ಶೆ, ರಂಗಬಿನ್ನಪ, ಮರುಬಿನ್ನಪ, ಕವಿಕಥಾಮೃತ, ನಾಟುನುಡಿ, ಹರಿಶ್ಚಂದ್ರಕಾವ್ಯ(ನಾಟಕ), ಉತ್ತರಕುಮಾರ(ನಾಟಕ), ಪಾಶ್ಚಾತ್ಯ ಗಂಭೀರ ನಾಟಕಗಳು(ಬೃಹದ್ಗ್ರಂಥ), ಶೈಲಿ ಇತ್ಯಾದಿ.
ಇಂಗ್ಲಿಷಿನಲ್ಲಿ ಪರಿಣತಿ ಹೊಂದಿದ್ದ ಇವರು ಹಲವಾರು ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದಾರೆ. ದಿ ಲೇಡಿ ಅಂಡ್ ರಿಂಗ್, ಓಲ್ಡ್ ಟೇಲ್ಸ್ ರಿ ಟೋಲ್ಡ್, ಆನ್ ದಿ ಸೆಲ್ಫ್, ಬಿಎಂಶ್ರೀ(ಬಯೋಗ್ರಾಫಿ) ಇತ್ಯಾದಿ.
ರಂಗಣ್ಣನವರು ೧೭-೨-೧೯೮೭ರಂದು ಇಹಲೋಕವನ್ನು ತ್ಯಜಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನ-೪೯,
ಅಧ್ಯಕ್ಷರು, ಎಸ್.ವಿ. ರಂಗಣ್ಣ
ದಿನಾಂಕ ೧೧, ೧೨, ೧೩ ಡಿಸೆಂಬರ್ ೧೯೭೬
ಸ್ಥಳ : ಶಿವಮೊಗ್ಗ
[ಟಿಪ್ಪಣಿ : ೧೯೭೫ರಲ್ಲಿ ಸಮ್ಮೇಳನ ನಡೆಯಲಿಲ್ಲ]
ಹಿಂದಿನ ಸಮ್ಮೇಳನಾಧ್ಯಕ್ಷರುಗಳ ಭಾಷಣಗಳ ಮೂರು ಸಂಪುಟಗಳನ್ನು ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಯಂತೆ ವ್ಯಾಸಂಗ ಮಾಡಿದೆ, ಆಸಕ್ತಿಯಿಂದ ಆಹ್ಲಾದಪಡುತ್ತ ವ್ಯಾಸಂಗ ಮಾಡಿದೆ. ಉಜ್ವಲ ದಾರಿದೀಪ ದೊರಕಿದುವು ನನಗೆ. ಅಲ್ಲದೆ ಹಲವು ಕುತೂಹಲ ಕೆರಳಿಸುವ ಸಂಗತಿಗಳೂ ಅನೇಕ ಉಪಯುಕ್ತ ಮಾಹಿತಿಗಳೂ ಕೈವಶವಾಗಿ ತೃಪ್ತಿಯನ್ನು ತಂದುಕೊಟ್ಟುವು. ಒಂದೆರಡನ್ನು ನಿರೂಪಿಸಲು ನಿಮ್ಮ ಅನುಮತಿ ಬೇಡುತ್ತೇನೆ. ೪೬ ಅಧ್ಯಕ್ಷರುಗಳಲ್ಲಿ ೩೪ ಮಂದಿಗೆ ೫0ರ ಮೇಲೆ, ೯ ಮಂದಿಗೆ ೬0ರ ಮೇಲೆ, ಮೂವರಲ್ಲಿ ಇಬ್ಬರಿಗೆ ೭0, ಇನ್ನೊಬ್ಬರಿಗೆ ೭೮. ೭೮ ವರ್ಷದವರಾರೆಂದರೆ ಎಂ. ವೆಂಕಟಕೃಷ್ಣಯ್ಯನವರು, ಉರುಫ್ ತಾತಯ್ಯ, ಅವರ ನಾಮಧೇಯವನ್ನು ಏಕೆ ಉಚ್ಚರಿಸುತ್ತಿದ್ದೇನೆ ಎಂದರೆ ಕಾಕತಾಳೀಯ ನ್ಯಾಯದಿಂದ ನನಗೂ ೭೮! ನನ್ನನ್ನು ‘ಜ್ಞಾನವೃದ್ಧ’, ‘`ವಯೋವೃದ್ಧ’ ಎಂದು ಸಂಬೋಧಿಸುವುದು ಪರಿಚಯ ಭಾಷಣಕಾರರ ವಾಡಿಕೆಯಾಗಿದೆ. ಮೊದಲನೆಯದನ್ನು ನಾನು ಸುತರಾಂ ಒಪ್ಪುವುದಿಲ್ಲ; ಎರಡನೆಯದರಲ್ಲಿ ‘ವೃದ್ಧ’ ಎಂಬುದನ್ನು ಕಿತ್ತುಹಾಕಿದರೆ ‘ವಯೋ’ ಎಂಬುದಕ್ಕೆ ನನ್ನ ಸಮ್ಮತಿ, ಹಾಗೂ “ಮನುಷ್ಯನ ಮನಸ್ಸಿನಂತೆ ಅವನ ವಯಸ್ಸು” ಎಂಬ ನಿಜಾಂಶದ ಕಡೆಗೆ ನಿಮ್ಮ ಲಕ್ಷ್ಯವನ್ನು ಎಳೆಯುವುದು ನನ್ನ ನಿರ್ಧಾರ, ಕಿರಿಯ ವಯಸ್ಸಿನ ಅಧ್ಯಕ್ಷರೂ ಉಂಟು ಪಟ್ಟಿಯಲ್ಲಿ; ೧೯೨೯ರಂದು ಬೆಳಗಾವಿಯಲ್ಲಿ ಕೂಡಿದ್ದ ಸಮ್ಮೇಳನಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಅಧ್ಯಕ್ಷರಾದಾಗ ಅವರಿಗೆ ಮೂವತ್ತೆಂಟೇ ವರ್ಷ! ಹಿಂದೊಮ್ಮೆ ಬ್ರಿಟಿಷ್ ಪಾರ್ಲಿಮೆಂಟಿಗೆ ೪೫ ವರ್ಷದವನೊಬ್ಬ ಚುನಾಯಿತನಾಗಿ ಬಂದಾಗ ಹಳೆಯ ಸದಸ್ಯರಲ್ಲಿ ಹಲವರು “ಇದೇನು ನಮ್ಮ ಸಂಸತ್ತು ತರುಣರ ಪಾಲಾಗುತ್ತಿದೆ!” ಎಂದು ಗೊಣಗುಟ್ಟಿದರಂತೆ, ನಮ್ಮ ಕರ್ನಾಟಕದ ಜನತೆ ಮೇಲು ಎಂದು ನಾವು ಹೆಮ್ಮೆಗೊಳ್ಳಬಹುದು.
ವಯಸ್ಸಾದ ಮೇಲೆ ವಿಸ್ತೀರ್ಣ, ಎಂದರೆ ಅಧ್ಯಕ್ಷರುಗಳ ದೇಹಾಕೃತಿಯ ಉದ್ದ ಅಗಲವಲ್ಲ ನನ್ನ ಅರ್ಥ; ಅವರ ವಚೋವಿಲಾಸದ ವಿಸ್ತೀರ್ಣ. ಅದರಲ್ಲಿ ಇನ್ನೂ ಹೆಚ್ಚಿನ ವೈವಿಧ್ಯ ಗೋಚರವಾಗುತ್ತದೆ. ಎಂ. ವೆಂಕಟಕೃಷ್ಣಯ್ಯನವರ ಭಾಷಣ ಅಚ್ಚಿನಲ್ಲಿ ಕೇವಲ ೬ ಪುಟಗಳು, ಟಿ.ಪಿ. ಕೈಲಾಸಂ ಅವರದ್ದು ೭ ಪುಟ; ರೊದ್ದ ಶ್ರೀನಿವಾಸರಾಯರದ್ದು ೭ ೧/೨ ಪುಟ. ಇನ್ನೊಂದು ಕೊನೆಯಲ್ಲಿ ಸಿ.ಕೆ. ವೆಂಕಟರಾಮಯ್ಯನವರ ಭಾಷಣ ೬೪ ೧/೬ ಪುಟ, ಟಿ.ಟಿ. ಶರ್ಮರದ್ದು ೬೪ ೧/೨ ಪುಟ. ಮಹಾಶಯರಿಬ್ಬರು ತಮ್ಮ ಆಯುರ್ದಾದಷ್ಟೇ ಸಂಖ್ಯೆಯ ಪುಟಗಳ ಭಾಷಣ ಕೊಟ್ಟಿದ್ದಾರೆ; ವಿ. ಸೀತಾರಾಮಯ್ಯನವರು, ೫೩; ಅ.ನ. ಕೃಷ್ಣರಾಯರು ೫೩! ಅದು ದಿಟವಾಗಿ ಅನುದ್ದಿಷ್ಟ ಹೊಂದಾವಣೆ; ಬಹುಶಃ ವೈಚಿತ್ರ್ಯವನ್ನು ಅರಸುವ ನನ್ನ ವೈಯಕ್ತಿಕ “ರೊಮ್ಯಾಂಟಿಕ್” ಲೋಚನ ಮಾತ್ರ ಕಂಡುಹಿಡಿದ ಆಕಸ್ಮಿಕ ಹೊಂದಾವಣೆ.
ಸಮ್ಮೇಳನ ಅಧ್ಯಕ್ಷರ ಭಾಷಣ ವೈಖರಿ
ವೈಚಿತ್ರ್ಯ ಎಂದೆನಷ್ಟೆ. ಇನ್ನೂ ಬೇಕಾದಷ್ಟನ್ನು ವಿವರಿಸಬಲ್ಲೆ ಒಂದನ್ನು ಕುರಿತು ಕೊಂಚ ಹೇಳಿ ಈ ಪ್ರಸ್ತಾಪವನ್ನು ಮುಕ್ತಾಯಗೊಳಿಸುತ್ತೇನೆ. ಅದು ಅಧ್ಯಕ್ಷ ಭಾಷಣಗಳಲ್ಲಿ ಪಲ್ಲವಿಯೋಪಾದಿ ಪುನಃ ಪುನಃ ಕೇಳಿಬರುವ “ಅಲ್ಪಮತಿ ನಾನು, ಹೊರಿಸಿರುವ ಜವಾಬ್ದಾರಿ ಗುರುಭಾರ, ಅನರ್ಹನನ್ನು ಒಲುಮೆಯಿಂದ ಮನ್ನಿಸಿ!” ಎಂಬ ಶಬ್ದಗುಚ್ಚಕ್ಕೆ ಸಂಬಂಧಿಸಿದುದು. ೧೯೨೨ರ ದಾವಣಗೆರೆ ಸಮ್ಮೇಳನದಲ್ಲಿ ಎಂ. ವೆಂಕಟಕೃಷ್ಣಯ್ಯನವರು “ಇಂತಹ ಸನ್ಮಾನಕ್ಕೆ ನಾನು ಅರ್ಹನಲ್ಲ” ಎಂದು ಖಂಡಿತವಾಗಿ ನುಡಿದು, ಅಧ್ಯಕ್ಷ ಪೀಠದಲ್ಲಿ ಮಹಾರಾಜರ ಚಿತ್ರವನ್ನು ಇಟ್ಟು, ಮಗ್ಗುಲಲ್ಲಿ ನಿಂತುಕೊಂಡು ತಮ್ಮ ಪುಟ್ಟ ಭಾಷಣವನ್ನು ಮಾಡಿದವರಂತೆ, ೧೯೨೭ರ ಮಂಗಳೂರಿನ ಕೂಟದಲ್ಲಿ ರಾಜಕವಿ ತಾತಾಚಾರ್ಯರು “ನನ್ನ ಭಾಷಣ” ‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ಹಿಂದಿನ ಭಾಷಣಗಳಂತೆ ಇಲ್ಲವೇ ಇಲ್ಲ; ಇನ್ನು ಮುಂದೆ ಬರಲಿಕ್ಕಿರುವ ಭಾಷಣಗಳಂತೆಯೂ ಇರಲಾರದು” ಎಂದು ಘೋಷಿಸಿ, ತಕ್ಷಣವೇ ನಾಟುನುಡಿಯಂಥ ವ್ಯಾಖ್ಯಾನವನ್ನು ತಾವೇ ಮಾಡಿದರು : “ಗುಣವೂ ಇಲ್ಲ, ಹಿತಸೂಚನೆಯೂ ಇಲ್ಲ, ವಾಗ್ಧಾಟಿಯೂ ಇಲ್ಲ ನನ್ನಲ್ಲಿ.” ೧೯೩೫ ರಂದು ಬೆಳಗಾವಿ ಸಮ್ಮೇಳನದಲ್ಲಿ ಮುದವೀಡು ಕೃಷ್ಣರಾಯರು ತಮ್ಮದೇ ಆದ ಗಂಡುದನಿಯಲ್ಲಿ ಹೀಗೆಂದರು : “ನೀವೆಲ್ಲ ಹಿಡಿದು ತಂದು ಈ ಪೀಠಕ್ಕೆ ಬಿಗಿದು ಕಟ್ಟಿದಿರಿ. ತಮ್ಮ ಈ ಕೃತಿಯು ಅನುಚಿತವೆಂದು ಹೇಳುವೆನೆ? ತಮ್ಮೆಲ್ಲರ ಸಾರಾಸಾರ ವಿವೇಚಕ ವಿಮರ್ಶಾಬುದ್ಧಿಗೆ ಕುಂದನ್ನಿಟ್ಟು ಮಾತನಾಡುವ ಎದೆಗಾರಿಕೆಯನ್ನು ಮಾಡಿದಂತಾಗುವುದು. ಅಂತಹ ಮಹಾಪರಾಧವನ್ನು ನಾನೆಂದಿಗೂ ಮಾಡಲಾರೆನು.” ಅವರ ಹೆಜ್ಜೆಯನ್ನು ಹಿಂಬಾಲಿಸಬೇಕೆಂಬುದು ನನ್ನ ಆಂತರ್ಯದ ಚಪಲ; ಆದರೆ ಅವರು “ಬಿರುಗಾಳಿ”, ನಾನು ಕಿರುಗಾಳಿಯೂ ಅಲ್ಲ. ನನ್ನ ವಚನಗಳಲ್ಲಿ ಆಗಾಗ “ಸ್ವರ್ಗವೆಲ್ಲಿಹುದಯ್ಯ ಸ್ವರ್ಗವೆಲ್ಲಿಲ್ಲವಯ್ಯ”, “ಶಿಲಾಬಾಲಿಕೆಯ ನೋಡದವ ಕಲ್ಲು ನೋಡಿದವ ನೂಲ್ಲು” ಇತ್ಯಾದಿ ವಿರುದ್ಧ ದ್ವಂದ್ವ ತಾನಾಗಿ ಬರುತ್ತದೆ. ನನ್ನ ಪೂರ್ವಾರ್ಜಿತ ಪುಣ್ಯ, ಪ್ರಾಮಾಣಿಕ ಸಾಹಿತ್ಯಕ ಪ್ರಯತ್ನ, ನಿಮ್ಮೆಲ್ಲರ ಪ್ರೀತಿ-ಔದಾರ್ಯ ಮೂರೂ ಒಟ್ಟಾಗಿ ನನಗೆ ಈ ಹೆಗ್ಗೌರವವನ್ನು ತಂದುಕೊಟ್ಟಿವೆ. ನಿಮಗೆ ನನ್ನ ಅಳತೆಮೀರಿದ ಅಪಾರ ಧನ್ಯವಾದ.
ಸಾಹಿತ್ಯ ಪರಿಷತ್ತು
೧೯೧೫ರ ಏಪ್ರಿಲಿನಲ್ಲಿ ರೂಪುಗೊಂಡ “ಕರ್ನಾಟಕ ಸಾಹಿತ್ಯ ಪರಿಷತ್ತು” ಮೇ ತಿಂಗಳಿನಲ್ಲಿಯೇ ಪ್ರಥಮ ಸಮ್ಮೇಳನ ನಡೆಸಿ, ಸಿದ್ಧಾಂತಿ ಶಿವಶಂಕರಶಾಸ್ತ್ರಿಗಳು ಒದಗಿಸಿಕೊಟ್ಟ “ಸದುದ್ದೇಶ ಪಂಚಕ”ವನ್ನು ತನ್ನ ಪ್ರಣಾಳಿಕೆಯನ್ನಾಗಿ ಒಪ್ಪಿಕೊಂಡಿತು. ೧) ಪಾರಿಭಾಷಿಕ ಶಬ್ದಗಳ ರಚನೆ ೨) ಪ್ರಾದೇಶಿಕ ಭಾಷಾಭೇದಗಳ ನಿವಾರಣೆ ೩) ಹೊಸಗನ್ನಡ ವ್ಯಾಕರಣ ನಿರ್ಮಾಣ ೪) ನಾಡಿಗೆಲ್ಲ ಸಮಾನವಾದ ಪಠ್ಯಪುಸ್ತಕ ತಯಾರಿಕೆ ೫) ಕನ್ನಡತನದ ಪ್ರಚಾರ. ಭಾಷಾಶುದ್ಧತೆಯ ವಿಚಾರವಾಗಿ ಇಷ್ಟೊಂದು ಶ್ರದ್ಧೆ ಪರಿಷತ್ತಿಗೆ ಇದ್ದುದನ್ನು ನೋಡಿದರೆ ಅದು “ಫ್ರೆಂಚ್ ಅಕಾಡೆಮಿ”ಯಿಂದ ಪ್ರಭಾವಿತವಾಗಿತ್ತೆಂದು ಊಹಿಸಬಹುದು. ಅದು ಕೇವಲ ಅಗ್ರ ವಿದ್ವನ್ಮಂಡಲಿ; ಅದರ ಸದಸ್ಯರು ನಲವತ್ತೇ ಮಂದಿ; ಒಬ್ಬನ ಜಾಗ ತೆರವಾಗುವವರೆಗೂ ಚುನಾವಣೆಯಿಲ್ಲ. ಕಟ್ಟುಗ್ರ ಮಡಿವಂತಿಕೆ ಅದರ ಮುಖ್ಯ ಲಕ್ಷಣ. ೧೬೩೪ ರಂದು ಹುಟ್ಟಿಬಂದ ಆ ಉತ್ತಮ ಸಂಸ್ಥೆಯ ಬಿಗಿದರ್ಪ ಎಷ್ಟೆಂದರೆ ೧೯೩೩ರಲ್ಲೂ ತನ್ನ ಪರಿಷ್ಕೃತ ನಿಘಂಟುವಿನಲ್ಲಿ ಯೂರೋಪಿನ ಸಮಸ್ತ ರಾಷ್ಟ್ರಗಳೂ ಒಪ್ಪಿಕೊಂಡು ಬಳಸುತ್ತಿರುವ “ಕ್ಲಾಸಿಸಿಸ್ಮ್” (.., ಶಿಷ್ಟತೆ) ಎಂಬ ಪದವನ್ನು “ನವೀನತೆ” (..)ಯೆಂದು ನಿರ್ಣಯಿಸಿ ಹೊರದೂಡಿದೆ! ಅಂಥ ಕಠೋರ ನೇಮ ಕರ್ಣಾಟಕ ಸಾಹಿತ್ಯ ಪರಿಷತ್ತಿಗೆ ಇದ್ದಂತೆ ತೋರುವುದಿಲ್ಲ. ಇದ್ದಿದ್ದರೂ ಅದರ ಆಶಯ ಬರಿ ಪುಸ್ತಕದ ಬದನೆಯಕಾಯಿಯೇ ಆಗಿ ಮೂಲೆಹಿಡಿಯಬೇಕಾಗುತ್ತಿತ್ತು; ಏತಕ್ಕೆಂದರೆ ಕನ್ನಡ ಸಾಹಿತ್ಯದ ಹೊಸ ಹುಟ್ಟು (..) ಸುಮಾರು ೧೯೨0ರಿಂದಲೇ ತಲೆಯೆತ್ತಿತಲ್ಲವೆ? ಪರಿಷತ್ತಿನ ಮೂಲ ಧ್ಯೇಯಗಳಲ್ಲಿ ಒಂದಾದ “ಕನ್ನಡತನದ ಪ್ರಚಾರ”ದತ್ತ ನಿಮ್ಮ ಗಮನ ಸೆಳೆಯುವುದು ನನ್ನ ಕರ್ತವ್ಯ. ಮೊದಮೊದಲು ಪರಿಷತ್ತಿನ ಕಾರ್ಯಕ್ಷೇತ್ರ ಸಂಕುಚಿತವಾಗಿದ್ದರೂ ಅದರ ಒಂದು ಸಾಧನೆ ಮಹತ್ತರವಾದದ್ದೆ: ಅದೇನೆಂದರೆ “ಸಾಕ್ಷರರನ್ನು ರಾಕ್ಷಸರನ್ನಾಗಿಸಿದುದು”! ವಾಕ್ಯದ ವ್ಯಂಗ್ಯಾರ್ಥವನ್ನು ಪಂಡಿತವರ್ಯರಿಂದ ನಾನು ಕಲಿತೆ: ಸಾಕ್ಷರರು=ಪರಭಾಷೆಗಳಲ್ಲಿ ಪರಿಶ್ರಮ ಹೊಂದಿದವರು; ರಾಕ್ಷಸರು=ಅನ್ಯಭಾಷೆಗಳ ವ್ಯಾಮೋಹಾತಿರೇಕವನ್ನು ಕಿತ್ತೊಗೆದ ಪ್ರಚಂಡರು ಅಥವಾ ದೈತ್ಯರು!
ಪರಿಷತ್ತಿಗೆ ಬಿ.ಎಂ.ಶ್ರೀ. ಅವರ ಸೇವೆ
ಸುಮಾರು ೧೯೩೪ ರಿಂದ ಕನ್ನಡದ ಬಗೆಗೆ ಆವೇಶವೊ ಎಂಬಂಥ ಉಲ್ಲಾಸೋತ್ಸಾಹ ಹೆಚ್ಚು ಹೆಚ್ಚು ಜನರಲ್ಲೂ ಹೆಚ್ಚು ಹೆಚ್ಚು ಊರುಗಳಲ್ಲೂ ಮೂಡಲಾರಂಭಿಸಿತು. ಆ ಉತ್ಸಾಹ ಸುಭದ್ರವಾದ ನಾಲೆಗಳ ಮೂಲಕ ಪ್ರಯೋಜನಕರವಾಗಿ ಹರಿಯುವುದಕ್ಕೆ ಮಾರ್ಗದರ್ಶನವಾಗಲೆಂದು ಪರಿಷತ್ತು ತನ್ನ ಸ್ವಂತ ಮಂದಿರದಲ್ಲಿ ಗ್ರಂಥ ಪ್ರದರ್ಶನ, ಸಾಹಿತ್ಯೋತ್ಸವ, ಉಪನ್ಯಾಸಮಾಲೆ, ಕಾವ್ಯವಾಚನ, ಮಹಿಳೆಯರ ಗೋಷ್ಠಿಗಳನ್ನು ಅಚ್ಚುಕಟ್ಟಾಗಿ ನಡೆಯಿಸಿತು. ಆಗ ದಿವಂಗತ ಡಿ.ವಿ. ಗುಂಡಪ್ಪನವರು ಉಪಾಧ್ಯಕ್ಷರಾಗಿದ್ದರು. ಅವರ ತರುವಾಯ ಆಡಳಿತ ಸೂತ್ರಗಳನ್ನು ಕೈಗೆ ತೆಗೆದುಕೊಂಡ ದಿವಂಗತ ಬಿ.ಎಂ. ಶ್ರೀಕಂಠಯ್ಯನವರು ಪರಿಷತ್ತಿನ ನಿಯತ ಕಾರ್ಯಕ್ರಮಕ್ಕೆ ಹೊಸ ಅಂಶಗಳನ್ನು ಸೇರಿಸಿದರು: ವ್ಯಾಸಂಗ ಗೋಷ್ಠಿ, ಸಾಹಿತ್ಯ ಪರೀಕ್ಷೆ, ಸಂಶೋಧನೆ, ನಾಟಕಾಭಿನಯ, ಬಾಲಕ ಬಾಲಕಿಯರ ಸ್ಪರ್ಧೆ, ಸಂತೋಷ ಭೋಜನ-ಇತ್ಯಾದಿ. “ಶ್ರೀ”ಯವರು ತಮ್ಮ ಪ್ರಾಧ್ಯಾಪಕ ಅವಧಿ ಇನ್ನೂ ಒಂದು ವರ್ಷ ಅಧಿಕವಾದ್ದರಿಂದ ಸಂಬಳದ ಅರ್ಧಭಾಗವನ್ನು, ಎಂದರೆ ೬000 ರೂಪಾಯನ್ನು ಪರಿಷತ್ತಿಗೆ ದಾನಮಾಡಿ ಅಚ್ಚುಕೂಟವನ್ನು ಒದಗಿಸಿಕೊಟ್ಟರು. ಅವರ ಇನ್ನೊಂದು ವಿಶಿಷ್ಟ ಕೊಡುಗೆ : “ಕನ್ನಡ ಬಾವುಟ”. ಅದು ಪ್ರಕಟವಾಗುವುದಕ್ಕೆ ಮುನ್ನ ಜರುಗಿದ ನಾಟಕೀಯ ಪ್ರಸಂಗ ಪ್ರಾಯಶಃ ಅನೇಕರಿಗೆ ಗೊತ್ತಿಲ್ಲ. ನವರಾತ್ರಿಯ ಸಮಯ; ಕಾರ್ಯಕಾರಿ ಸಮಿತಿ ಕೂಡಿದ್ದಾಗ ಇದ್ದಕ್ಕಿದ್ದಂತೆ “ಶ್ರೀ”ಯವರು “ನಮ್ಮ ಕನ್ನಡ ಬಾವುಟವನ್ನು ಹಾರಿಸೋಣ!” ಎಂದರು. ಸಮಿತಿಯ ಸದಸ್ಯರಿಗೆ ಭೀತಿ ಉಂಟಾಯ್ತು; ಏತಕ್ಕೆಂದರೆ ಆಗ ಕೆಂಪಾಂಬುಧಿ ಕೆರೆಯ ಅಂಗಳದಲ್ಲಿ “ಕಾಂಗ್ರೆಸ್ ಧ್ವಜ”ವನ್ನು ಹಾರಿಸಲು ಸ್ವಾತಂತ್ರ್ಯ ಹೋರಾಟದವರು ಪ್ರಯತ್ನಿಸಿದಾಗ ಗಲಭೆ, ಲಾಟಿ ಪ್ರಯೋಗ, ೧೪೪ನೇ ವಿಧಿಯ ಜಾರಿ ಆಗಿ ವಾತಾವರಣ ಕದಡಿಹೋಗಿತ್ತು. ಆದರೆ ಸಮಿತಿಯ ಸದಸ್ಯರಾರೂ ಮಾತನಾಡಲಿಲ್ಲ. ನಾನು ಎದೆಗಾರಿಕೆಯಿಂದ-ಎಂದರೆ ಕಾರ್ಯದರ್ಶಿ ಆಗಿದ್ದುದರಿಂದ “ಈಗ ಆ ಪ್ರಯತ್ನ ಬೇಡಿ, ಸ್ವಾಮಿ; ಮುಂದೊಂದು ದಿವಸ ಪರಿಸ್ಥಿತಿ ಶಾಂತವಾದಾಗ ಏರಿಸೋಣ” ಎಂದು ಪ್ರತಿಭಟಿಸಿದೆ. ಆಮೇಲಾದ ಚರ್ಚೆಯಲ್ಲಿ ಸದಸ್ಯರೆಲ್ಲ ನನ್ನನ್ನು ಅನುಮೋದಿಸಿದರು; ನನ್ನ ಗುರುಗಳು ತಮ್ಮ ಪ್ರಬಲೇಚ್ಛೇಯನ್ನು ಒಳಕ್ಕೇ ಅದುಮಬೇಕಾಯ್ತು. ಕವಿಶ್ರೇಷ್ಠರಾದ್ದರಿಂದ ಬೇರೊಂದು ಸ್ಫೂರ್ತಿ ಅವರ ಚಿತ್ತದಲ್ಲಿ ಮಿಂಚಿತು. ೧೫00 ಸಂವತ್ಸರಗಳ ಕನ್ನಡ ಕಾವ್ಯ ‘ಬೆಳೆ’ಯಲ್ಲಿ ಉತ್ಕೃಷ್ಟ ‘ತೆನೆ’ಗಳನ್ನು ಆರಿಸಿಕೊಂಡು ಸಂಪಾದಿಸಿ ಏತಕ್ಕೆ ಪ್ರಕಟಿಸಬಾರದು? ಅಗತ್ಯವಾಗಿ ಆ ಕೆಲಸ ಮಾಡೋಣ ಎಂಬ ಸಮ್ಮತಿ ನೀಡಿದವರಲ್ಲಿ ಬಹುಶಃ ನಾನೇ ಮೊದಲಿಗ! ಸಮಿತಿಯ ಕಾರ್ಯಕಲಾಪ ಮುಗಿದು ನಾವಿಬ್ಬರೇ ಇದ್ದಾಗ “ಶ್ರೀ”ಯವರು ಮಾಡಿದ ಚಿಕ್ಕ ಗುಣಕಥನ ಇನ್ನೂ ನೆನಪಿನಿಂದ ಅಳಿಸಿಹೋಗಿಲ್ಲ; ಏನಪ್ಪಾ, ನೀವು ಬಹಳ ಹಠ ಹಿಡಿಯುತ್ತೀರಿ”. ಇನ್ನೊಂದು ನೋವು-ನಲಿವಿನ ಪ್ರಕರಣ. ನಿಯಾನ್ ವಿದ್ಯುದ್ದೀಪ ಆಗತಾನೆ ಪ್ರಸಾರಗೊಳ್ಳುತ್ತಿತ್ತು. ಅದರಿಂದ ಕಟ್ಟಡವನ್ನು ಅಲಂಕರಿಸುವ ಅಭಿಲಾಷೆ “ಶ್ರೀ”ಯವರಲ್ಲಿ ಎದ್ದುಬಂತು. “ಕರ್ನಾಟಕ ಸಾಹಿತ್ಯ ಪರಿಷತ್ತು” ಎಂದು ಕೂಗುವ ತಿಳಿಹಸಿರು ದೀಪನಾಮ ಭವನದ ಫಾಲದಿಂದ ಜಾಜ್ವಲಿಸತೊಡಗಿತು; ಅನೇಕರಿಗೆ ಸಂತಸ ಉಂಟಾಯ್ತು. ೧೯೧೮ ರಿಂದ ೧೯೩0ರ ವರೆಗೆ ಕಾರ್ಯದರ್ಶಿ ಅಥವಾ ಕೋಶಾಧಿಕಾರಿಯಾಗಿ ಪರಿಷತ್ತಿನ ಭಾರವನ್ನು ಹೊತ್ತು ನಿವೃತ್ತರಾಗಿ, ಇಂಗ್ಲಿಷು ನಿಘಂಟುವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಸಮಿತಿಗೆ ಮುಖ್ಯಸ್ಥರಾಗಿ ಪರಿಷನ್ಮಂದಿರ ಒಂದು ಕೋಣೆಯಲ್ಲೇ `ಕಛೇರಿ’ ಕೆಲಸವನ್ನು ಕೈಗೊಂಡಿದ್ದ ಅತಿ ಶಿಸ್ತಿನ ಬೆಳ್ಳಾವೆ ವೆಂಕಟನಾರಣಪ್ಪನವರಿಗಾದರೂ ಆಗ್ರಹ ಉಲ್ಬಣವಾಯ್ತು: “ಕರ್ಣಾಟಕ” ಎಂಬುದಾಗಿ ರೂಪಾಂತರಗೊಳಿಸಿದ್ದೇತಕ್ಕೆ? ಮಾರ್ಪಾಟನ್ನು ಸಕಲ ಸದಸ್ಯರ ಅಧಿವೇಶನದಲ್ಲಿ ಚರ್ಚೆಗೆ ತಂದು ಒಪ್ಪಿಗೆ ಪಡೆಯಲಾಯ್ತೆ? ಎನ್ನುತ್ತ ಬಲವಾದ ವಿರೋಧ ಹೂಡಿದರು. ಅದು ಸರಿ ಇದು ಸರಿ ಎನ್ನುವ ಪಕ್ಷಗಳು ಜನಿಸಿದುವು, ತೀವ್ರ ವಿವಾದವೂ ಹಗರಣವೂ ಸೌಹಾರ್ದವನ್ನು ಕಲಕಿಬಿಟ್ಟುವು. ಅಧ್ಯಕ್ಷರಾಗಿದ್ದ ಯುವರಾಜರ ವರೆಗೂ ದೂರು ತಟ್ಟಿತು. ಕೊನೆಗೆ ಎರಡನ್ನೂ ಬಿಟ್ಟುಕೊಟ್ಟು “ಕನ್ನಡ ಸಾಹಿತ್ಯ ಪರಿಷತ್ತು” ಎಂಬ ಮುದ್ದಾದ ಹೆಸರನ್ನು ಇರಿಸಿಕೊಳ್ಳಲು ಸರ್ವಾನುಮತದಿಂದ ತೀರ್ಮಾನವಾಯ್ತು. ಹದಿರು ಮಾತಿನ ಪ್ರೇಮಿಗಳು ‘ನೊಣ’ದ ವ್ಯಾಜ್ಯ ಫೈಸಲಾಯ್ತು!” ಎನ್ನುತ್ತ ಗಹಗಹಿಸಿದರು! ಅಂತ ಅನಿರೀಕ್ಷಿತ ಘಟನೆಗಳಿಂದ ತಮಗೆ ಎಷ್ಟು ಯಾತನೆ ಉಂಟಾದರೂ ಅದನ್ನು ಈಶದಪಿ ತೋರಗೊಡದೆ “ಶ್ರೀ”ಯವರು ಕನ್ನಡ ಮಮತೆಯನ್ನು ಬೇರೂರಿಸುವ ಕೈಂಕರ್ಯದಲ್ಲಿ ದಣಿವಿಲ್ಲದೆ ದುಡಿಯುತ್ತಿದ್ದರು. ಕನ್ನಡ ನಾಡಿನ ಭೂಪಟವನ್ನು ಬಿಳಿಯ ಕರವಸ್ತ್ರದ ಮೇಲೆ ಕಸೂತಿ ಹಾಕಿಸಿಕೊಂಡು ಎಲ್ಲ ಕಡೆಯಲ್ಲೂ ಶ್ರೋತೃಗಳಿಗೆ ಪ್ರದರ್ಶಿಸುವುದು ಅವರ ವಾಡಿಕೆ. ನಾವು ಕೆಲವರು ಅವರನ್ನು ಅನುಸರಿಸಿದೆವು. ನನ್ನ ಧರ್ಮಪತ್ನಿ ರೇಸಿಮೆ ಕರವಸ್ತ್ರದ ಮೇಲೆ ಕಸೂತಿ ಹಾಕಿರುವ ಭೂಪಟ ನನ್ನ ಬಳಿ ಈಗಲೂ ಇದೆ. “ಕನ್ನಡ ನುಡಿ” ವಾರಪತ್ರಿಕೆಯಾಗಿ ಆರಂಭವಾದದ್ದು “ಶ್ರೀ”ಯವರ ಸಂಕಲ್ಪದಿಂದಲೇ, ಆ ಚಾರಿತ್ರಿಕ ಬಾವುಟ ಪ್ರಸಂಗದ ಸಮಿತಿ ಸಭೆಯಲ್ಲಿಯೇ!
ಪರಿಷತ್ತಿನ ಸದಸ್ಯರು
೧೯೩೭ರಲ್ಲಿ ಪರಿಷತ್ತಿನ ಸದಸ್ಯರ ಸಂಖ್ಯೆ ೪೩೨: ‘ಆಜೀವ’ ೧೩೧, ‘ಸಾಮಾನ್ಯ’ ೩0೨; ಆದಾಯ ರೂ.೪೫೪೭, ವೆಚ್ಚ ೪೯00! ಪರಿಷತ್ತು ಜನ್ಮ ತಾಳಿದಂದು ಸದಸ್ಯರ ಸಂಖ್ಯೆ ೧೩೭, ವರಮಾನವಾಗಿ ಸರಕಾರದ ಮಾಸಾಶನ ೧೩0. ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಉದ್ಯಮವನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ವ್ರತವನ್ನಾಗಿ ತಮ್ಮ ಉಪಾಧ್ಯಕ್ಷತೆಯಲ್ಲಿ ಆಚರಿಸಿದರು. ಆದರೂ ಲಭಿಸಿದ್ದು ಅಷ್ಟೇನೂ ತೃಪ್ತಿಕರವಾಗಿರಲಿಲ್ಲ. ಯಾರನ್ನು ಸಂಧಿಸಿದರೂ ಅವರು “ಹೇಗಿದ್ದೀರಿ?” ಎಂಬ ಕುಶಲ ಪ್ರಶ್ನೆಗೆ ಬದಲಾಗಿ, “ನೀವು ಪರಿಷತ್ತಿಗೆ ಸದಸ್ಯರಾಗಿದ್ದೀರಾ?” “ಆಗಿದ್ದರೆ ಈಗಲೇ ಆಜೀವ ಸದಸ್ಯರಾಗಿ” ಎಂದು ಕೇಳುತ್ತಿದ್ದರು. ಆದರೇನು? ೧೯೫೭ರಲ್ಲಿ ಸದಸ್ಯರ ಸಂಖ್ಯೆ ೯೧0, ೧೯೬೭ರಲ್ಲಿ ೮೭೩: ಅದೇತಕ್ಕೆ ಈ ಇಳಿತಾಯ, ಇಂಥ ಅನ್ಯಾಯ? ಪರಿಷತ್ತಿನ ಸದಸ್ಯತ್ವ ಕನ್ನಡತನದ ಒಂದು ಗುರುತಲ್ಲವೆ? ೧೯೭೫ರ ಹೊತ್ತಿಗೆ ೨೩೬೪ಕ್ಕೆ ಏರಿದ್ದು ಸಮಾಧಾನಕರ.
ಪರಿಷತ್ತಿನ ವರಮಾನದ ಹೆಚ್ಚಳ ವಿಧಾನ
ವರಮಾನ ೧೯೬೭ರಲ್ಲಿ ೭೫,೫೪೧ ರೂಪಾಯಿ ಇದ್ದದ್ದು ೧೯೭೫ರಲ್ಲಿ ೧೧,0೭,೮೫೧ಕ್ಕೆ ಉಬ್ಬಿರುವುದು ನಿಜವಾಗಿ ಸಂತೋಷಕರ; ಆದರೆ ಕೃತಜ್ಞತೆ ಸಲ್ಲಬೇಕಾದದ್ದು ಮುಖ್ಯವಾಗಿ ನಮ್ಮ ಘನ ಸರ್ಕಾರಕ್ಕೆ! ಪರಿಷತ್ತು ವಹಿಸಿಕೊಂಡಿರುವ ಪಂಚವಾರ್ಷಿಕ ಯೋಜನೆಗೆ ಸುಮಾರು ೫0 ಲಕ್ಷ ರೂಪಾಯಿನ ಅಂದಾಜಿದೆ. ಮುಕ್ತಹಸ್ತದ ದಾನಿಗಳಿಗೆ ಉತ್ಕೃಷ್ಟ ಅವಕಾಶ. ವರಮಾನದ ವಿಚಾರವನ್ನು ಆಲೋಚಿಸುವಾಗ ಕೆಲವು ಸಂಗತಿ ಜ್ಞಾಪಕಕ್ಕೆ ಬರುತ್ತವೆ. ಪ್ರಾರಂಭದ ದಿವಸಗಳಲ್ಲಿ ಒಮ್ಮೆ ಐದು ರೂಪಾಯಿನ ‘ಷೇರುಗಳ ಜಾಯಿಂಟ್ಸ್ಟಾಕ್ ಕಂಪೆನಿ’ಯನ್ನು ತೆರೆಯುವ ಯೋಜನೆ ಎದ್ದುಬಂದು ಬಲುಬೇಗ ಸದ್ದಿಲ್ಲದಂತಾಯ್ತು. ೧೯೨೩ ರಂದು ಬಿಜಾಪುರದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷರಾದ ಶಿವಶಂಕರ ಶಾಸ್ತ್ರಿಗಳು “ನಮ್ಮ ಈ ಕನ್ನಡ ನಾಡಿಗರೆಲ್ಲರೂ ತಿಂಗಳಿಗೊಮ್ಮೆ ತಲೆಗೊಂದು ಕಾಸು ಕನ್ನಡಕ್ಕೆ ಎಂದು ಪ್ರತಿ ಕುಟುಂಬವೂ ದ್ರವ್ಯಸಹಾಯ” ನೀಡಿ ಪರಿಷತ್ತಿನ ಮೂಲಧನವನ್ನು ಬೆಳೆಸಬೇಕೆಂದು ಹೇಳಿ, ಕಂದಪದ್ಯದ ಮೂಲಕ ತಮ್ಮ ಅಭಿಪ್ರಾಯಕ್ಕೆ ಮೆರುಗುಕೊಟ್ಟರು:
“ಬಡಗನ್ನಡ ನುಡಿವೆಣ್ಣಂ
ಬಡತನದಿಂ ಬಿಡಿಸಿ ನಾಡೆ ಸಿರಿವೆಣ್ಣಂ ಮಾ |
ಳ್ಪೊಡೆ ಮನೆಮನೆಗಂ ನಾಡಿಗ
ರಿಡಲಕ್ಕುಂ ಮಾಸಮಾಸಕೆನಸುಂ ಪಣಮಂ ||
ಹನಿಗೂಡಿದರೆ ಬರಿ ಹಳ್ಳವಲ್ಲ ವಿಶಾಲ ಸರೋವರ ಆಗುವುದು ನಿಸ್ಸಂದೇಹ. ಪ್ರಪಂಚದ ಸ್ಕೌಟುಗಳೆಲ್ಲ ತಲೆಗೆ ಒಂದಾಣೆಯಂತೆ ನಿಧಿ ಕೂಡಿಸಿ ೧೯೨೯ರಂದು ಸ್ಕೌಟು ಪದ್ಧತಿಯ ಜನಕನಾದ ಲಾರ್ಡ್ ಬೇಡನ್ಪೊವೆಲನಿಗೆ ರೋಲ್ಸ್ರಾಯ್ಸ್ ಕಾರು ಮತ್ತು ಕ್ಯಾರವಾನ್, ಪ್ರಖ್ಯಾತ ಚಿತ್ರಕಲಾವಿದ ಜೀಗರ್ ನಿರ್ಮಿಸಿದ ತೈಲ ಭಾವಚಿತ್ರಗಳನ್ನು ಮುಖ್ಯ ಕಾಣಿಕೆಯಾಗಿ ಅರ್ಪಿಸಿದರು! ಈಚಿನ ಆರೇಳು ವರ್ಷಗಳಲ್ಲಿ ನಮ್ಮ ಪರಿಷತ್ತು ಪುಷ್ಟಿಗೊಳ್ಳುತ್ತ ಆಕರ್ಷಕ ಲವಲವಿಕೆಯನ್ನು ಮೆರೆಯಿಸುತ್ತಿದೆ; ಅಧ್ಯಕ್ಷ ಜಿ. ನಾರಾಯಣ ಅವರನ್ನು ಕುರಿತು ೧೯೭0ರಲ್ಲಿ ಪ್ರೊ. ದೇ. ಜವರೇಗೌಡರು ಆಡಿದ ಮಾತುಗಳನ್ನು ತಮ್ಮ ಅವಗಾಹನೆಗೆ ತರುತ್ತೇನೆ: “ಶ್ರೀ ನಾರಾಯಣ ಅವರು ಬರಿಯ ಭಾವುಕರಲ್ಲ, ಕನಸುಗಾರರಲ್ಲ, ವಾಸ್ತವವಾದಿಗಳು ಕ್ರಿಯಾಶೀಲರು ಎಂಬುದನ್ನು ನಾ ಬಲ್ಲೆ. ಬಹು ಶೀಘ್ರವಾಗಿ ಅವರ ಯೋಜನೆಗಳೆಲ್ಲ ಕಾರ್ಯರೂಪಕ್ಕಿಳಿಯಲಿ, ಅವರ ಕಾಲದಲ್ಲಿ ಪರಿಷತ್ತಿನ ಕೀರ್ತಿ ದಿಗ್ಧಿಗಂತ ವ್ಯಾಪಿಯಾಗಲಿ ಎಂದು ಹಾರೈಸುತ್ತೇನೆ”. ನಮ್ರನಾದ ನನ್ನದೂ ಅದೇ ಹಾರೈಕೆ.
ಪರಿಷತ್ತಿನ ಕರ್ತವ್ಯ
ಪರಿಷತ್ತು ಇಂದು ಜಿಲ್ಲಾ ಅಂಗ ಸಂಸ್ಥೆಗಳ ಮೂಲಕವೂ ತಾನೇ ಖುದ್ದಾಗಿಯೂ ಮಹೋತ್ಸವಗಳನ್ನು ಏರ್ಪಡಿಸಿ ವಿದ್ಯಾವಂತರಿಗೂ ಇತರರಿಗೂ ಮಧ್ಯೆ ಇರುವ ಮತ್ತು ಇರಬಹುದಾದ ತೆರೆಗಳನ್ನೂ ಭಯಗಳನ್ನೂ ತೆಗೆದು ಹಾಕುತ್ತಿದೆ, ಅಥವಾ ತೆಗೆದುಹಾಕಲು ಹವಣಿಸುತ್ತಿದೆ. ಅದು ಅತ್ಯಗತ್ಯವಾದ ಸಂಘಟನಾಕಾರ್ಯವೆಂದೇ ನನ್ನ ಅಭಿಮತ. ಸುಮಾರು ಇಪ್ಪತ್ತು ಸಂವತ್ಸರದ ಹಿಂದೆ ಮಹನೀಯರೊಬ್ಬರು “ಕರತಾಡನದ ಆಸೆ, ಅದಕ್ಕೆ ಬೇಕಾದ ಆಡಂಬರ-ಇದನ್ನೆಲ್ಲ ಪರಿಷತ್ತು ಬಿಟ್ಟುಕೊಡಬೇಕು … ಪರಿಷತ್ತಿನ ಕೆಲಸ ನೂರು ಕಾಲ ಬಾಳುವಂಥದ್ದಾಗಿರಬೇಕು” ಎಂದರಂತೆ. ನಾನಾದರೊ ಪರಿಷತ್ತು ಈಗ ಹಿಡಿದು ನೆರವೇರಿಸುತ್ತಿರುವ ಕಾರ್ಯಕ್ರಮಗಳಲ್ಲಿ ಒಂದನ್ನೂ ಬಿಟ್ಟುಕೊಡದೆ, ಸಮಯ ಸಂದರ್ಭಕ್ಕೆ ಅನುಗುಣವಾಗಿ ಹೊಸವನ್ನೂ ಸೇರಿಸಿಕೊಳ್ಳುತ್ತ ಮುಂದೆ ಸಾಗಲಿ, ಪ್ರತಿಷ್ಠಾವಂತ ಆತ್ಮತೇಜಸ್ಸಿನ ಪೂರ್ಣ ಕನ್ನಡಿಗತ್ವ ಕನ್ನಡಿಗರೆಲ್ಲರಿಗೂ ಮೈಗೂಡುವತನಕ ಎಂದು ಸಾರುತ್ತೇನೆ. ಪ್ರಚಾರ, ರಾಗೋತ್ಕರ್ಷ, ನಿಶಾನಿಯ ಮೆರವಣಿಗೆ, ಜೈಕಾರ-ಯಾವುದೂ ಬೇಡ ಎನ್ನಲಾಗದು; ಕನ್ನಡ ಗೆಲ್ಲುತ್ತಿದೆ, ಇನ್ನೂ ಪೂರ್ತಿ ಗೆದ್ದಿಲ್ಲ!
ತ್ರೈವಾರ್ಷಿಕ ಯೋಜನೆ
ಹೊಸಹುಟ್ಟಿನ ಬಲಿಷ್ಠ ಪ್ರಚೋದನೆಯಿಂದ ಪರಿಷತ್ತು ೧೯೭0ರಂದು ತ್ರೈವಾರ್ಷಿಕ ಯೋಜನೆಯನ್ನು ತಯಾರಿಸಿಕೊಂಡು ಅದರ ಬಹು ಅಂಶಗಳನ್ನು ೧೯೭೩ರ ಅಂತ್ಯದೊಳಗೆ ಕಾರ್ಯರೂಪಕ್ಕೆ ತಂದಿತು. ೧೯೭೪ರ ಜನವರಿಯಿಂದ ೨೭ ಅಂಶಗಳ “ಪಂಚವಾರ್ಷಿಕ” ಯೋಜನೆ ಜಾರಿಗೆ ಬಂದಿದೆ. ಅದರ ವಿವರಗಳನ್ನು ಪರಿಶೀಲಿಸಿದಾಗ, ಕನ್ನಡ ನಾಡು ನುಡಿ ಸಂಸ್ಕೃತಿಗಳ ಸುಧಾರಣೆಗೂ ಪುರೋಭಿವೃದ್ಧಿಗೂ ಆಸರೆಯಾಗಬಲ್ಲ ಮತ್ತಾವ ಕಾರ್ಯಕ್ರಮವುಂಟು ಎಂಬ ಪ್ರಶ್ನೆಗೆ ಯಾವುದೂ ಇಲ್ಲ ಎಂದೇ ನನ್ನ ಬುದ್ಧಿಗೆ ತೋರುತ್ತದೆ. ಮೇಧಾವಿಗಳ ಮತಿಗೆ ಇದೆ ಎಂದು ಕಂಡುಬಂದಲ್ಲಿ ಅದನ್ನು ಗಮನಕ್ಕೆ ತಂದುಕೊಳ್ಳುವುದರಲ್ಲಿ ಪರಿಷತ್ತು ಆಸಕ್ತಿ ವಹಿಸಿಯೇ ವಹಿಸುತ್ತದೆ ಎಂಬುದು ಖಂಡಿತ. ಯೋಜನೆ ೧೯೭೮ ಮುಗಿಯುವ ಮುನ್ನ ಸಂಪೂರ್ಣವಾಗಿ ಕಾರ್ಯಗತವಾಗಲಿ ಎಂದು ನಿರೀಕ್ಷಿಸೋಣ, ದುಡಿಯೋಣ.
ಅಧ್ಯಕ್ಷರು ಮುದುಕರಲ್ಲ
ದಿವಂಗತ ಡಿ.ವಿ. ಗುಂಡಪ್ಪನವರು ೧೯೩೨ರಂದೇ “ಈ ಅಧ್ಯಕ್ಷ ಪದವಿಯ ಕರ್ತವ್ಯಭಾರಗಳಲ್ಲಿ ಹೆಚ್ಚಿನದು ಉಪನ್ಯಾಸ ರಚನೆಯದು” ಎಂದು ಗಂಭೀರವಾಕ್ಯ ಘೋಷಿಸಿದರು. ಅದು ಎಷ್ಟೊಂದು ಭಾರ ಎಂಬುದನ್ನು ನಿಷ್ಕರ್ಷಿಸುವುದಕ್ಕೆ ನನ್ನ ಬಳಿ ತೂಕದ ಬಟ್ಟುಗಳೇ ಇಲ್ಲ. ನಾನು ಪ್ರಸ್ತಾಪಿಸಬೇಕೆಂದು ನಾನೂ ಮಹಾಜನರೂ ನಿರೀಕ್ಷಿಸಿದ್ದರಲ್ಲಿ ಕಿಂಚಿತ್ತು ಪಾಲಾದರೂ ವಿವರಣೆಗೊಂಡಿದ್ದರೆ ನಾನು ಧನ್ಯ. ದಿವಂಗತ ಪಂಜೆ ಮಂಗೇಶರಾಯರು ೧೯೩೪ರಲ್ಲಿ “ವಯಸ್ಸಾದವರಿಗೆ ಪಟ್ಟ ಕಟ್ಟಬಾರದು” ಎಂಬ ಸ್ವಾರಸ್ಯೋಕ್ತಿಯ ಮಂತ್ರವನ್ನು ಉಚ್ಚರಿಸಿದರು. ನನ್ನ ಬಗೆಗೆ ಒಂದು ಅಂಶವನ್ನು ಬಿನ್ನಯಿಸಲು ನಿಮ್ಮ ಅಪ್ಪಣೆ ಬೇಡುತ್ತೇನೆ. “ವಯಸ್ಸಾದವರು” ಎಂದರೆ “ಮುದುಕರು” ಎಂದು ಅರ್ಥ ಮಾಡಿದರೆ, ನನಗೆ ವಯಸ್ಸಾಗಿದ್ದರೂ “ಮುದುಕ”ನಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ.
Tag: Kannada Sahitya Sammelana 49, S.V. Ranganna
ವಿಧ ಅಕಾಡೆಮಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಸಮಿತಿ ಮುಂತಾದ ಸ್ವಾಯುತ್ತ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡಿ ಅಷ್ಟೇ ಅಲ್ಲ ಅಕಾಡೆಮಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ವಿವಿಧ ಜಿಲ್ಲೆಗಳಲ್ಲಿ ವಿಕೇಂದ್ರೀಕರಣಗೊಂಡು ಕಾರ್ಯ ನಿರ್ವಹಿಸುವಂತಾಬೇಕು. ಈ ಸಂಸ್ಥೆಗಳಾದರೂ ರಾಜಧಾನಿ ಕೇಂದ್ರಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಪ್ರತಿ ಹಳ್ಳಿ, ಪ್ರತಿ ವ್ಯಕ್ತಿಗೂ ಕಾರ್ಯಕ್ರಮಗಳನ್ನು ಮುಟ್ಟಿಸಬೇಕು. ಇಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಅಲಕ್ಷಿತರು ಹೆಚ್ಚೆಚ್ಚು ತೊಡಗುವಂತೆ ನಿಗಾ ವಹಿಸಬೇಕು. ಈ ಮೇಲಿನ ಎಲ್ಲ ಅಕಾಡೆಮಿಗಳು ಗಡಿಭಾಗಗಳಲ್ಲಿ ವಿಶೇಷ ಮುತುವರ್ಜಿ ವಹಿಸಿ ಕಾರ್ಯಕ್ರಮ ನಡೆಸುವ ಮೂಲಕ ಈ ಜನತೆಯಲ್ಲಿ ನಾಡು-ನುಡಿಯ ಪ್ರೇಮ ಗಟ್ಟಿಗೊಳಿಸುವಂತೆ ಮಾಡಬೇಕು. ಈ ತೆರನ ಸಾಂಸ್ಕೃತಿಕ ಐಡೆಂಟಿಟಿಯನ್ನು ತಾಜಾಗೊಳಿಸುವ ಮೂಲಕವೇ ಅವರಲ್ಲಿ ಅವರಿಸಿಕೊಂಡಿರುವ ಅನಾಥ ಪ್ರಜ್ಞೆ, ಅಭದ್ರತೆಯನ್ನು ಹೋಗಲಾಡಿಸಬೇಕು.
ಸಮ್ಮೇಳನಗಳು ಸಾರ್ಥಕವೆನಿಸಬೇಕು
ಮಹನೀಯರೇ, ನಮ್ಮ ಮುಂದಿನ ಸಮಸ್ಯೆಗಳು, ಸವಾಲುಗಳು ಸಂಖ್ಯಾತೀತವಾಗುತ್ತಿವೆ. ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ಕಳೆದ ಅರ್ಧ ಶತಮಾನದಿಂದಲೂ ಈ ನಾಡ ಮನೆಯ ಅಂಗಳದ ಮೂಲೆ ಮೊಡಕುಗಳಲ್ಲಿ ಕಸ ತುಂಬಿಟ್ಟಿದ್ದೇವೆ. ನಮ್ಮ ಮನಸ್ಸುಗಳಲ್ಲಿಯೂ ಸಹಸ್ರಮಾನದ ಮೌಢ್ಯವೆಂಬ ಧೂಳು ತುಂಬಿಬಿಟ್ಟಿದ್ದೇವೆ. ಇದನ್ನು ಹಸನುಗೊಳಿಸಲು ಸಾವಿರ, ಲಕ್ಷ, ಕೋಟಿ ಅಸಂಖ್ಯ ಕೈಗಳು ಮುಂದೆ ಬರಬೇಕು. ದೇಶವನ್ನು ಆಳುತ್ತಿರುವ ಸರಕಾರ, ಪಕ್ಷಗಳು ನಿಜವಾದ ಜನಪರ ಕಾಳಜಿಯೊಂದಿಗೆ ಮುನ್ನುಗ್ಗಬೇಕು. ಧರ್ಮದ ಮುಖಂಡರು ಸ್ವಾರ್ಥ ಸಂಕುಚಿತತೆಯ ಪರದೆ ಹರಿದು ಅಸಲಿ ಮಾನವೀಯತೆಯ ಹಣತೆ ಹಚ್ಚಬೇಕು. ಅಂದಾಗಲೇ ಇಂಥ ನುಡಿ ಶಬ್ದಗಳಿಗೆ ಅರ್ಥ ಮತ್ತು ಗೌರವ ಬರುತ್ತದೆ. ಇಲ್ಲವಾದರೆ ಸಮ್ಮೇಳನಗಳು ಬರುತ್ತವೆ ಹೋಗುತ್ತವೆ. ಜನರ ಬದುಕು ಮಾತ್ರ ಅದೇ ದುಃಖ ದುಮ್ಮಾನಗಳಲ್ಲಿ ಕೊಳೆಯುತ್ತಿದ್ದರೆ ಇವು ಯಾರಿಗಾಗಿ ಮತ್ತು ಏತಕ್ಕಾಗಿ ಎಂಬ ಪ್ರಶ್ನೆಗಳು ಕಾಡುತ್ತಲೆ ಇರುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಹಂಚಿಕೊಳ್ಳುವ ಹಾದಿಯಲ್ಲಿ ನಾವೂ ನೀವೂ ಹಣತೆಯ ಒಂದೊಂದೇ ಹನಿ ಎಣ್ಣೆಯಾಗಿ ಒಂದಾಗಿ ಜಗವ ಬೆಳೆಸೋಣ.
Tag: Kannada Sahitya Sammelana 72, Shantarasa Hemberaalu
೭೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕಮಲಾ ಹಂಪನಾ
ಲೇಖಕಿಯಾಗಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಕಮಲಾ ಹಂಪನಾ ಅವರು, ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ ಸಿ. ರಂಗಧಾಮನಾಯಕ್-ಲಕ್ಷಮ್ಮ ದಂಪತಿಗಳ ಪುತ್ರಿಯಾಗಿ ೨೮-೧0-೧೯೩೫ರಲ್ಲಿ ಜನಿಸಿದರು. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ೧೯೫೩ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ೧೯೫೫-೫೮ರಲ್ಲಿ ಬಿ.ಎ. ಆನರ್ಸ್ ಮಾಡಿದರು. ೧೯೫೯ರಲ್ಲಿ ಕನ್ನಡ ಅಧ್ಯಾಪಕಿಯಾಗಿ ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು.
ಅಧ್ಯಾಪನ, ಲೇಖನ, ಭಾಷಣಗಳ ಮೂಲಕ ಮಾಡಿರುವ ಸಾಹಿತ್ಯ ಸೇವೆಯನ್ನು ಗುರುತಿಸಿ ನಾಡಿನ ನಾನಾ ಸಂಘ ಸಂಸ್ಥೆಗಳಿಂದ ಅನೇಕ ಗೌರವ ಪ್ರಶಸ್ತಿಗಳು ದೊರೆತಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ರನ್ನಕವಿ ಪ್ರಶಸ್ತಿ, ಐಐಟಿ ಮದರಾಸು ಕನ್ನಡ ಸಂಘದ ರಜತೋತ್ಸವ ಪುರಸ್ಕಾರ, ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕದ ರಾಷ್ಟ್ರೀಯ ಪುರಸ್ಕಾರ, ಶ್ರೀ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಇತ್ಯಾದಿ ಪ್ರಶಸ್ತಿಗಳು ದೊರೆತಿವೆ. ೨00೩ರಲ್ಲಿ ಮೂಡಬಿದ್ರೆಯಲ್ಲಿ ನಡೆದ ೭೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಲಭಿಸಿದೆ.
ಮಹಿಳಾ ಸಾಹಿತಿಯಾಗಿ ಕನ್ನಡದಲ್ಲಿ ಹೆಚ್ಚು ಕೃತಿಗಳನ್ನು ರಚಿಸಿದವರಲ್ಲಿ ಕಮಲಾ ಹಂಪನಾ ಅವರೂ ಒಬ್ಬರು. ೪೮ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜೈನಧರ್ಮ ಹಳಗನ್ನಡ ಗ್ರಂಥ ಸಂಪಾದನೆ, ಜೀವನ ಚರಿತ್ರೆ, ಕಥೆ, ಕವನ, ವ್ಯಕ್ತಿಚಿತ್ರ ಮುಂತಾದ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಇವರು ಕೃತಿರಚನೆ ಮಾಡಿದ್ದಾರೆ. ತುರಂಗ ಭಾರತವನ್ನು ಕುರಿತು ವಿಶೇಷ ಅಧ್ಯಯನಮಾಡಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಅವರು ರಚಿಸಿದ ಕೆಲವು ಮುಖ್ಯಕೃತಿಗಳು ಇವು – ಕಾವ್ಯ : ಬಿಂದಲಿ, ಬುಗುಡಿ. ವ್ಯಕ್ತಿಚಿತ್ರ: ನುಡಿಮಲ್ಲಿಗೆ, ಆ ಮುಖ. ವೈಚಾರಿಕ: ಬಾಸಿಂಗ, ಬಾಂದಳ, ಬಡಬಾಗಿ, ಬಿತ್ತರ, ಬಕುಳ. ನಾಟಕ : ಬೆಳ್ಳಕ್ಕಿ, ಬಾನಾಡಿ, ಗ್ರಂಥಸಂಪಾದನೆ : ಸುಕುಮಾರ ಚರಿತೆಯ ಸಂಗ್ರಹ, ಶ್ರೀ ಪಚ್ಚೆ, ಧರಣೇಂದ್ರಯ್ಯ ಸ್ಮೃತಿಗ್ರಂಥ, ಡಿ.ಎಲ್.ಎನ್. ಆಯ್ದ ಲೇಖನಗಳು, ಹಳೆಯ ಗದ್ಯಸಾಹಿತ್ಯ (ಇತರರೊಡನೆ) ಅನುವಾದ: ಬೀಜಾಕ್ಷರ ಮಾಲೆ.
ಕನ್ನಡ ಸಾಹಿತ್ಯ ಸಮ್ಮೇಳನ–೭೧
ಅಧ್ಯಕ್ಷರು, ಕಮಲಾ ಹಂಪನಾ
ದಿನಾಂಕ ೧೮, ೧೯, ೨0, ೨೧ ಡಿಸೆಂಬರ್ ೨00೩
ಸ್ಥಳ : ಮೂಡಬಿದರೆ
ಪರಿಷತ್ತಿನ ಎಲ್ಲಾ ಶಾಖೆಗಳಲ್ಲಿ ಪುಸ್ತಕ ಮಳಿಗೆ
ಹೈಟೆಕ್ ಮತ್ತು ತಂತ್ರಜ್ಞಾನದ ಎಲ್ಲ ಕ್ಷೇತ್ರಗಳ ಮೇಲೆ ಸಾಹಿತಿಗಳು, ಕಲಾವಿದರೂ, ಚಲನಚಿತ್ರ ನಿರ್ಮಾಪಕರು, ಪುಸ್ತಕ ಪ್ರಕಾಶಕರೂ ತಟಸ್ಥರಾಗಿರುವುದು ಅಸಾಧ್ಯ. ಪುಸ್ತಕ ಸಂಸ್ಕೃತಿಯ ಅಪಾಯಗಳನ್ನು ನಿವಾರಿಸುವುದಕ್ಕೂ ಸನ್ನದ್ಧವಾಗಿರಬೇಕಾಗುತ್ತದೆ. ನಾಡಿನ ಸಂಸ್ಕೃತಿಯ ಅಂತಸ್ಸತ್ವವನ್ನು ಅರಿಯಲೂ ಪರಿಚಯಿಸಲೂ ಸೂಕ್ತ ಪರಿಸರವನ್ನು ನಿರ್ಮಿಸುವ ಸದುದ್ದೇಶದಿಂದ ಪ್ರೇರಿತರಾಗಿ ಹಿಂದೆ ಕೆಂಗಲ್ ಹನುಮಂತಯ್ಯನವರು ಕನ್ನಡ-ಸಂಸ್ಕೃತಿ ಇಲಾಖೆಯನ್ನು ತೆರೆದರು, ಹಳ್ಳಿಗಳಲ್ಲಿ ಉಪನ್ಯಾಸಗಳಿಗೆ ಎಡೆಮಾಡಿದರು, ಎರಡು ರೂಪಾಯಿಗೆ ಕುಮಾರವ್ಯಾಸ ಭಾರತ ಕಾವ್ಯ ಜನರಿಗೆ ಎಟಕುವಂತೆ ಮಾಡಿದರು. ಇಂದು ಪುಸ್ತಕ ವಿತರಣಾ ನೀತಿ ಸಂಹಿತೆಯನ್ನು ರೂಪಿಸಿ ಗ್ರಂಥ ಉದ್ಯಮವನ್ನು ಸಶಕ್ತವಾಗಿಸಬೇಕಾಗಿದೆ. ವಿಶ್ವವಿದ್ಯಾಲಯಗಳು, ಅನುದಾನಿತ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ- ಇವೆಲ್ಲದರ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯಲಿ. ಓದುಗನಿಗೆ ಒಂದೇ ಸೂರಿನಡಿ ತನಗೆ ಬೇಕಾದ ಪುಸ್ತಕ ಸಿಗುವ ಹಾಗೆ ಅನುಕೂಲ ಕಲ್ಪಿಸುವುದೆಂದರೆ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಮಾರಾಟ ಮಳಿಗೆ ತೆರೆಯಲಿ.
ಸಾಹಿತಿಗಳಿಗೆ ವೇದಿಕೆ ಸಲ್ಲಲಿ
ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳ ಅನಭಿಷಿಕ್ತ ಸಾರ್ವಭೌಮ ಸಂಸ್ಥೆ. ನಾಡು ನುಡಿ ಕಲೆ ಸಂಸ್ಕೃತಿಗಳ ಸರ್ವಾಂಗೀಣ ಸಂವರ್ಧನೆಗಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಂಸ್ಥೆ ಲೇಖಕರಿಗೂ ಸಾಹಿತ್ಯಾಸಕ್ತರಿಗೂ ಅಂತರ್ಜಾಲವನ್ನು ನೇಯುವ, ಸಾಂಸ್ಕೃತಿಕ ಚೈತನ್ಯವನ್ನು ಉಕ್ಕಿಸುವ ಸಂಸ್ಥೆ. ನಾಡಿನ ಉದ್ದಗಲಗಳಲ್ಲಿ ಇದರ ಕೊಂಬೆ ರೆಂಬೆಗಳು ಪಲ್ಲವಿಸಿವೆ. ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳಲ್ಲದೆ ಇತರ ಚಟುವಟಿಕೆಗಳೂ ಚೆನ್ನಾಗಿ ನಡೆಯುತ್ತಿವೆ. ಆದರೆ ಅಲ್ಲಿಯೂ ಸಾಹಿತಿಗಳಿಗೆ ವೇದಿಕೆಗಳು ಸಲ್ಲುವಂತೆ ನಿಗಾ ವಹಿಸುವುದು ಒಳ್ಳೆಯದು.
ಕನ್ನಡ ಭವನಗಳು ನಿರ್ಮಾಣವಾಗಲಿ
ಸಮ್ಮೇಳನ ಇನ್ನಷ್ಟು ಪ್ರಭಾವಶಾಲಿ ಆಗಲು ಸಾಧ್ಯವಿದೆ. ಗೋಷ್ಠಿಗಳ ವಿನ್ಯಾಸ ಅರ್ಥಪೂರ್ಣ ವಾಗಿಸಬಹುದು. ನಾಲ್ಕೈದು ತಿಂಗಳ ಮುಂಚೆಯೇ ಪತ್ರವ್ಯವಹಾರ ನಡೆಸಿದರೆ ಪ್ರಬಂಧಕಾರರಿಗೆ ಸಿದ್ದತೆಗೆ ಹೆಚ್ಚು ಸಮಯಾವಕಾವಿರುತ್ತದೆ.
ಸಾಹಿತ್ಯ ಪರಿಷತ್ತಿನ ಜಿಲ್ಲೆ ಮತ್ತು ತಾಲ್ಲೂಕು ಘಟಕಗಳ ಪುನಶ್ಚೇತನಕ್ಕೆ ತಕ್ಕ ತಳಪಾಯವೆಂದರೆ ಕನ್ನಡ ಭವನಗಳ ನಿರ್ಮಾಣ, ಬಹುಪಯೋಗಿ ಜಿಲ್ಲಾ ಕನ್ನಡ ಭವನಗಳ ಪರಿಕಲ್ಪನೆಯನ್ನು ೧೯೭೮-೭೯ರಲ್ಲಿ ಆಗಿನ ಪರಿಷದಧ್ಯಕ್ಷರು ಸರಕಾರಕ್ಕೆ ಒಪ್ಪಿಸಿದ್ದರೂ ಇದುವರೆಗೆ ನಾಲ್ಕೈದು ಜಿಲ್ಲಾ ಕನ್ನಡ ಭವನಗಳು ರೂಪುಗೊಂಡಿವೆ. ಇದು ಇನ್ನೂ ಬೇಗ ವ್ಯಾಪಕವಾಗಿ ಎಲ್ಲ ಜಿಲ್ಲೆ- ತಾಲ್ಲೂಕುಗಳಿಗೆ ಹಬ್ಬಿದರೆ ಆಗ ಕನ್ನಡಪರ ಸಾಹಿತ್ಯ ಸಂಸ್ಕೃತಿ ಚಟುವಟಿಕೆಗಳಿಗೆ ಕಾಯಕಲ್ಪವಾಗುತ್ತದೆ. ಕನ್ನಡದ ಪುಸ್ತಕಗಳು, ಪ್ರಕಾಶಕರು, ಯಾರೇ ಇರಲಿ, ಎಲ್ಲ ಲೇಖಕರ ಪುಸ್ತಕಗಳು ಕನ್ನಡ ಭವನದಲ್ಲಿ ದೊರೆಯುವಂತಾಗಲಿ. ಕನ್ನಡ ಕಾರ್ಯಕ್ರಮಗಳಿಗೆ ಅದರಲ್ಲಿ ಸುಸಜ್ಜಿತ, ಅತ್ಯಾಧುನಿಕ ಸಭಾಂಗಣವಿರಲಿ. ಲಾಭ-ನಷ್ಟ ಇರದ ಕಡಿಮೆ ಬಾಡಿಗೆ ದರದಲ್ಲಿ ಆ ಸಭಾಂಗಣ ಎಲ್ಲ ಕನ್ನಡ ಚಟುವಟಿಕೆಗಳಿಗೆ ಸಿಗಬೇಕೆ ವಿನಾ ಅದು ಮದುವೆಗಳಿಗೆ ತೆರೆದ ಇನ್ನೊಂದು ಕಲ್ಯಾಣಮಂಟಪ ಆಗಬಾರದು.
ಪರಿಷತ್ತು ಗದಾ ಪ್ರಹಾರ ತಡೆಯಲಿ
ಹಳ್ಳಿಗಳ ಅಚ್ಚಗನ್ನಡದ ಹಳೆಯ ಹೆಸರುಗಳು ಸಂಸ್ಕೃತಮಯವಾಗಿರುವುದು ತರವಲ್ಲ. ಸಾಂಸ್ಕೃತಿಕ ಇತಿಹಾಸ ಹಿನ್ನೆಲೆ ಇರುವ ಎಮ್ಮೆಯೂರು, ಬೆಳ್ಳೂರುಗಳನ್ನು ಸುರಧೇನುಪುರ, ಶ್ವೇತಪುರ ಎಂದೇಕೆ ಬದಲಾಯಿಸಬೇಕು. ದೊಮ್ಮಲೂರನ್ನು ಭಗತ್ಸಿಂಗ್ರನ್ನಾಗಿ ಮಾಡುವುದರಲ್ಲಿ ಅರ್ಥವಿಲ್ಲ. ಕನ್ನಡ ಪರಂಪರೆಯ ಮೇಲೆ ಆಗುವ ಈ ಬಗೆಯ ಗದಾಪ್ರಹಾರವನ್ನು ತಡೆಯುವ ಭೀಮಬಲ ಸಾಹಿತ್ಯ ಪರಿಷತ್ತಿನಿಂದ ವ್ಯಕ್ತವಾಗಬೇಕು. ನಮ್ಮ ನಾಡಿನ ಮೂಲೆ ಮುಡುಕಗಳಿಗೆ ಕನ್ನಡವನ್ನು ಬೆಳಗಿಸುವ ನಂದಾದೀಪವಾಗುವುದರ ಜೊತೆಗೆ ಅವಿರತ ಎಚ್ಚರಿಸುವ ದುಂದುಭಿಯೂ ಆಗಿರಬೇಕು.
Tag: Kannada Sahitya Sammelana 71, Kamala Hampana
೭0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಪಾಟೀಲ ಪುಟ್ಟಪ್ಪ
ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ಗಣ್ಯರಾದ ಪಾಟೀಲ ಪುಟ್ಟಪ್ಪನವರು `ಪಾಪು’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದಲ್ಲಿ ಸಿದ್ಧಲಿಂಗಪ್ಪ-ಮಲ್ಲಮ್ಮ ದಂಪತಿಗಳಿಗೆ ೧೪-೧-೧೯೨೨ರಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. ೧೯೪೯ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು.
ವಿಶಾಲ ಕರ್ನಾಟಕ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ನವಯುಗ ಮಾಸಪತ್ರಿಕೆ ಸಂಪಾದಕರಾದರು. ಆಮೇಲೆ ೧೯೫೪ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ತಾವೇ ಹುಟ್ಟು ಹಾಕಿದರು. ೧೯೫೭ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟನ್ನು ಪ್ರಾರಂಭಿಸಿದರು. ೧೯೫೯ರಲ್ಲಿ ವಿಶ್ವವಾಣಿ ದಿನಪತ್ರಿಕೆಯನ್ನೂ ಮನೋರಮಾ ಎಂಬ ಚಲನಚಿತ್ರ ಮಾಸಿಕವನ್ನೂ ಆರಂಭಿಸಿದರು. ಹೀಗೆ ಪತ್ರಿಕೆಗಳನ್ನು ಹುಟ್ಟು ಹಾಕುತ್ತಲೂ ನಡೆಸುತ್ತಲೂ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಇದರ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ, ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಅಂಕಣಕಾರರಾಗಿ ಮಿಂಚಿದರು. ಹೀಗೆ ಪತ್ರಿಕಾ ಸಂಪಾದಕರಾಗಿ ನಾಡಿನ ಮನೆಮಾತಾದರು. ಇದಲ್ಲದೆ ಇತರ ಸಂಸ್ಥೆಗಳಲ್ಲಿ ಸಾರ್ವಜನಿಕ ರಂಗಗಳಲ್ಲಿ ದುಡಿದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ರಾಜ್ಯ ಸಭೆಯ ಸದಸ್ಯರಾಗಿ (೧೯೬೨-೭೧) ಧಾರವಾಡ ಮತ್ತು ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ೧೯೬೭ ರಿಂದ ಅಧ್ಯಕ್ಷರಾಗಿದ್ದಾರೆ. ಗೋಕಾಕ ವರದಿ ಜಾರಿಗೆ ಬರಲು ನಡೆದ ಚಳುವಳಿಯ ನೇತೃತ್ವ ವಹಿಸಿದ್ದರು. ಕರ್ನಾಟಕ ಸರಕಾರ ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ರಚಿಸಿ ಇವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದಾಗ ಕನ್ನಡ ಅನುಷ್ಠಾನಕ್ಕೆ ಇವರು ಶ್ರಮಿಸಿದರು. ೧೯೯೨ರಲ್ಲಿ ಅಖಿಲ ಕರ್ನಾಟಕ ಹೋರಾಟ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿದ್ದರು. ಹೀಗೆ ನಾನಾ ರಂಗಗಳಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.
ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೯೪ರಲ್ಲಿ ಡಿ’ಲಿಟ್’ ಪದವಿ ಕೊಟ್ಟಿದೆ. ಕರ್ನಾಟಕ ಸರಕಾರ ನೀಡುವ ಟಿ.ಎಸ್.ಆರ್.ಪ್ರಶಸ್ತಿ ಇವರಿಗೆ ೧೯೯೪ರಲ್ಲಿ ಲಭಿಸಿದೆ. ೧೯೭೬ರಲ್ಲಿ ರಾಜ್ಯ ಪ್ರಶಸ್ತಿ, ೧೯೯0 ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ, ೧೯೯೯ರಲ್ಲಿ ಹುಬ್ಬಳ್ಳಿಯ ತಿಲಕ್ ಮೊಹರೆ ಪ್ರಶಸ್ತಿ, ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲದ ನಾಡೋಜ ಗೌರವ, ೨00೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೨00೨ರಲ್ಲಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ‘ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ’ ಪ್ರಶಸ್ತಿ ಇತ್ಯಾದಿ ಲಭಿಸಿವೆ. ಬೆಳಗಾವಿಯಲ್ಲಿ ನಡೆದ ೭0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ ೨00೩ರಲ್ಲಿ ದೊರೆಕಿತು.
ಪಾಟೀಲ ಪುಟ್ಟಪ್ಪನವರು ಕೇವಲ ಪತ್ರಕರ್ತರಲ್ಲ ಗ್ರಂಥಕರ್ತರೂ ಹೌದು. ಅವರು ಬರೆದ ಗ್ರಂಥಗಳಲ್ಲಿ ಕೆಲವು ಹೀಗಿವೆ: ನನ್ನದು ಈ ಕನ್ನಡ ನಾಡು(೧೯೭೫), ನಮ್ಮದು ಈ ಭರತಭೂಮಿ(೧೯೭೭), ಕರ್ನಾಟಕ ಕಥೆ(೧೯೯೧), ಸೋವಿಯತ್ ದೇಶ ಕಂಡೆ(೧೯೪೪), ಗವಾಕ್ಷಿ ತೆರೆಯಿತು(೧೯೭೪), ಶಿಲಾಬಾಲಿಕೆ ನುಡಿದಳು(೧೯೭೪), ನಮ್ಮ ದೇಶ ನಮ್ಮ ಜನ(೧೯೭೩), ಈಗ ಹೊಸದನ್ನು ಕಟ್ಟೋಣ(೧೯೭೫), ಪಾಪು ಪ್ರಪಂಚ(೨000).
ಕನ್ನಡ ಸಾಹಿತ್ಯ ಸಮ್ಮೇಳನ–೭0
ಅಧ್ಯಕ್ಷರು, ಪಾಟೀಲ ಪುಟ್ಟಪ್ಪ
ದಿನಾಂಕ ೭, ೮, ೯ ಮಾರ್ಚ್ ೨00೩
ಸ್ಥಳ : ಬೆಳಗಾವಿ
ಇಂದೂ ಅದೇ ಸಮೀಕ್ಷೆ
ಪ್ರೊಫೆಸರ್ ಎ.ಆರ್. ಕೃಷ್ಣಶಾಸ್ತ್ರಿಗಳು, ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭಾಷಣದಲ್ಲಿ ಕನ್ನಡಕ್ಕೋಸುಗ ಕಳವಳಗೊಂಡು, “ನಿಮಗೆ ಕನ್ನಡ ಬೇಡವೋ? ಹಾಗಿದ್ದರೆ ಅದನ್ನು ಅರಬ್ಬೀ ಸಮುದ್ರಕ್ಕೆ ತಳ್ಳಿಬಿಡಿ” ಎಂದು ಮನನೊಂದು ನುಡಿದಿದ್ದರು. ಕನ್ನಡದ ಆಚಾರ್ಯ ಪುರುಷರಾದ ಪ್ರೊ. ಬಿ.ಎಂ. ಶ್ರೀಕಂಠಯ್ಯ ಅವರು ತೊಂಬತ್ತು ವರ್ಷಗಳ ಹಿಂದೆ ೧೯೧೧ ರಲ್ಲಿ ತಮ್ಮ ಮೊದಲ ಸಾರ್ವಜನಿಕ ಭಾಷಣವನ್ನು ಕರ್ನಾಟಕದ ಬಗೆಗೆ ಕನ್ನಡಿಗರನ್ನು ಜಾಗೃತಗೊಳಿಸಿದ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕೊಟ್ಟರು. ಆಗ ಅವರು ತಮ್ಮ ಭಾಷಣಕ್ಕೆ ಆರಿಸಿಕೊಂಡ ವಿಷಯ “ಕನ್ನಡ ಮಾತು ತಲೆಯೆತ್ತುವ ಬಗೆ”. ಅವರು ಆ ಮಾತು ಹೇಳಿ ಒಂದು ಶತಮಾನವೇ ಸಮೀಪಿಸುತ್ತ ಬಂದಿದ್ದರೂ, ಅಂದು ಬಿ.ಎಂ.ಶ್ರೀ ಅವರು ಆಡಿದ ಮಾತನ್ನೇ ಬಿಡಲಾಗದ ಒಂದು ಧಾರ್ಮಿಕ ವಿಧಿಯಂತೆ ಇಂದೂ ಹೇಳುತ್ತಿದ್ದೇವೆ.
ಮಿತವ್ಯಯದ ಕನ್ನಡ ಸಂಸ್ಥೆ
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಮೊದಲಾದ ಸಂಸ್ಥೆಗಳು, ಸಾಹಿತ್ಯ ಸಂಸ್ಕೃತಿ ಸಂವರ್ಧನೆಯಲ್ಲಿ ಹಲವಾರು ದಶಕಗಳಿಂದ ಬಹು ಉಪಯುಕ್ತ ಕಾರ್ಯವನ್ನು ಮಾಡಿಕೊಂಡು ಬಂದಿವೆ. ಅವುಗಳ ಕಾರ್ಯಚಟುವಟಿಕೆಗಳು ಬೆಳೆದು ಇನ್ನೂ ಹೆಚ್ಚು ಮಾಡಬೇಕಾದ ಆವಶ್ಯಕತೆ ಇದೆಯೆನ್ನುವುದನ್ನು ಸರಕಾರ ಮನವರಿಕೆ ಮಾಡಿಕೊಳ್ಳಬೇಕು. ಸರಕಾರ ಮಾಡುವುದಕ್ಕಿಂತಲೂ ಸಾಹಿತ್ಯ ಸಂಸ್ಕೃತಿ ಸಂವರ್ಧನೆಯ ಕಾರ್ಯವನ್ನು ಈ ಸಂಸ್ಥೆಗಳು ಕಡಿಮೆ ಖರ್ಚಿನಲ್ಲಿ ಮಾಡುತ್ತವೆ.
Tag: Kannada Sahitya Sammelana 70, Patil Puttappa, Papu, Pateela Puttappa
೬೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಯು.ಆರ್. ಅನಂತಮೂರ್ತಿ
ಸಮಕಾಲೀನ ಬರಹಗಾರರಲ್ಲಿ ಅದಮ್ಯ ಚೇತನದ, ಬಹುಪ್ರತಿಭೆಯ ಯು.ಆರ್. ಅನಂತಮೂರ್ತಿ ಅವರು. ಉಡುಪಿ ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಪುತ್ರರಾಗಿ ೨೧-೧೨-೧೯೩೨ರಲ್ಲಿ ತೀರ್ಥಹಳ್ಳಿಯ ಮೇಳಿಗೆಯಲ್ಲಿ ಮಲೆನಾಡಿಗರಾಗಿ ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ೧೯೬೬ರಲ್ಲಿ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿ.ಎಚ್ ಡಿ ಪದವಿ ಪಡೆದರು.
೧೯೫೬ರಲ್ಲಿ ಹಾಸನದ ಕಾಲೇಜಿನಲ್ಲಿ ಅಧ್ಯಾಪಕರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ೧೯೮೭-೯೧ ಅವಧಿಯಲ್ಲಿ ಕಾರ್ಯನಿರ್ವಹಿಸಿದರು. ೧೯೯೨-೯೩ರಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿ, ದೆಹಲಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ೨00೩ರಲ್ಲಿ ಕೇಂದ್ರ ಸರ್ಕಾರದ ಫಿಲಿಂ ಇನ್ಸಿಟ್ಯೂಟ್ ಅಂಡ್ ಟೆಲಿವಿಷನ್ ಪೂನಾದ ಅಧ್ಯಕ್ಷರಾಗಿ ನಿಯುಕ್ತರಾಗಿದ್ದರು.
ಇಂಗ್ಲಿಷಿನಲ್ಲಿ ಎಂ.ಎ. ನಲ್ಲಿ ಸ್ವರ್ಣಪದಕ ಪಡೆದ ಇವರು ೧೯೭0ರಲ್ಲಿ ಸಂಸ್ಕಾರ ಕಥೆಗೆ ಚಲನಚಿತ್ರ ಪ್ರಶಸ್ತಿ, ೧೯೮೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ೧೯೮೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ, ೧೯೯೫ರಲ್ಲಿ ಡಿಲಿಟ್ ಗೌರವ, ೧೯೯೫ರಲ್ಲಿ ಶಿಖರ ಸನ್ಮಾನ್, ೧೯೯೮ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.
ಕನ್ನಡದಲ್ಲಿ ನವ್ಯಸಾಹಿತಿಯಾಗಿ, ವಾದವಿವಾದಗಳನ್ನೆಬ್ಬಿಸಿದಂಥ ಸಂಸ್ಕಾರ ಕಾದಂಬರಿಯನ್ನು ಬರೆದ ಅನಂತಮೂರ್ತಿ ಅವರು ಅನೇಕ ಕಥೆ ಕಾದಂಬರಿಗಳನ್ನು ವಿಮರ್ಶಾ ಗ್ರಂಥಗಳನ್ನು ರಚಿಸಿದ್ದಾರೆ. ಕೆಲವು ಪ್ರಮುಖ ಕೃತಿಗಳಿವು : ಸಂಸ್ಕಾರ, ಭಾರತೀಪುರ, ಘಟಶ್ರಾದ್ಧ, ಅವಸ್ಥೆ, ದಿವ್ಯ (ಕಾದಂಬರಿಗಳು) ಸೂರ್ಯನ ಕುದುರೆ, ಆಕಾಶ ಬೆಕ್ಕು ವಡಾನಿ, ಪ್ರಶ್ನೆ (ಕಥೆಗಳು) ಆವಾಹನೆ (ನಾಟಕ) ಸನ್ನಿವೇಶ, ಸಮಕ್ಷಮ (ವಿಮರ್ಶೆ) ದಾವ್ ದ ಜಿಂಗ್ (ಭಾಷಾಂತರ) ಇತ್ಯಾದಿ.
ಇವರು ದಿನಾಂಕ ೨೨-೦೮-೨೦೧೪ ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೬೯
ಅಧ್ಯಕ್ಷರು, ಯು.ಆರ್. ಅನಂತಮೂರ್ತಿ
ದಿನಾಂಕ ೧೫, ೧೬, ೧೭ ಫೆಬ್ರವರಿ ೨00೨
ಸ್ಥಳ : ತುಮಕೂರು
(೨00೧ರಲ್ಲಿ ಸಮ್ಮೇಳನ ನಡೆಯಲಿಲ್ಲ)
ಪರಿಷತ್ತಿಗೆ ಸಲಹೆ
ಪರಿಷತ್ತಿಗೆ ನನ್ನ ಸಲಹೆಯೇನು? ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ಕೆಲಸ ಮಾಡುವವ ಕರ್ನಾಟಕದ ಎಲ್ಲೆಲ್ಲೂ ಸದಸ್ಯರನ್ನು ಹೊಂದಿದ ಈ ದೊಡ್ಡ ಸಂಸ್ಥೆಯನ್ನು ಸಾಹಿತ್ಯದಿಂದ ದೂರವಾಗುತ್ತಿದೆಯೆಂದು, ಸೃಜನಶೀಲ ಬರಹಗಾರರನ್ನು ಕಡೆಗಣಿಸುತ್ತಿದೆಯೆಂದು ನಾನು ಈ ಹಿಂದೆ ಟೀಕಿಸಿದ್ದಿದೆ. ಆದರೆ ಅದು ಅವಸರದ ಟೀಕೆ ಎಂದು ನನಗೀಗ ಅನ್ನಿಸುತ್ತಿದೆ. ಕನ್ನಡ ಭಾಷೆಯನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತಿರುವ ಡಾ.ಡಿ.ಎನ್. ಶಂಕರಭಟ್ಟರು, ಪಂಪನನ್ನು ವಚನಕಾರರನ್ನು ಈ ನಮ್ಮ ಕಾಲದ ಅನುಭವಕ್ಕೆ ಲಭ್ಯವಾಗುವಂತೆ ಮಾಡಿರುವ ಡಾ. ಎಲ್. ಬಸವರಾಜರು ಸೃಜನಶೀಲ ಚಿಂತಕರಲ್ಲವೆ? ಆಳವಾದ ಪಾಂಡಿತ್ಯಕ್ಕೆ ಮನ್ನಣೆಯಿಲ್ಲದ ಸೃಜನಶೀಲತೆ ಜರ್ನಲಿಸಮ್ಮಿನ ಸಭ್ಯತನವನ್ನು ಮಾತ್ರ ಪಡೆದಿರುತ್ತದೆ. ಪರಿಷತ್ತನ್ನು ಲೇಖಕರ ದೃಷ್ಟಿಯಿಂದ ಮಾತ್ರ ನೋಡುವುದು ಸಲ್ಲದು.
ಒಂದೊಂದು ಕಾಲದಲ್ಲಿ ಕನ್ನಡದ ಎಲ್ಲ ಕೆಲಸದ ಜವಾಬ್ದಾರಿಯನ್ನು ಪರಿಷತ್ತು ಮಾತ್ರ ಹೊರಬೇಕಾಗಿ ಬಂದಿತ್ತು. ಆದರೆ ಈಗ ಸಾಹಿತ್ಯದ ಕೆಲಸಕ್ಕೆ ಅಕಾಡೆಮಿ ಇದೆ. ಪುಸ್ತಕ ಪ್ರಕಾಶನಕ್ಕೆ ಪುಸ್ತಕ ಪ್ರಾಧಿಕಾರವಿದೆ. ಕನ್ನಡ ಭಾಷೆಯನ್ನು ರಕ್ಷಿಸಲು ಸರ್ಕಾರವೇ ರಚಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ. ಜ್ಞಾನ ಶಾಖೆಗಳ ಸರ್ವತೋಮುಖ ಅಭಿವೃದ್ಧಿಗೆ ವಿಶ್ವವಿದ್ಯಾಲಯವೇ ಹಂಪಿಯಲ್ಲಿದೆ. ಈ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸವೇನು?
ಇದಕ್ಕೆ ಉತ್ತರ ಸುಲಭವೂ ಹೌದು ಕಷ್ಟವೂ ಹೌದು ಸುಲಭ ಯಾಕೆಂದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸದಸ್ಯರನ್ನು ಪಡೆದ, ಪಡೆದಿರದಿದ್ದರೆ ಪಡೆಯಬಹುದಾದ, ಪರಿಷತ್ತು ಉಳಿದ ಎಲ್ಲ ಸಂಸ್ಥೆಗಳ ಕೆಲಸವನ್ನು ಗ್ರಾಮ ಗ್ರಾಮಗಳಿಗೆ ಮುಟ್ಟಿಸಬೇಕೆಂದು ಹೇಳಿದರೆ ಮುಗಿಯಿತು.
ಆದರೆ ಇದು ಕಷ್ಟವು ಹೌದು. ಯಾಕೆಂದರೆ ಇದನ್ನು ಮಾಡಲು ಸಾಕಷ್ಟು ಬಲಬೇಕು. ಕೇರಳದ ಶಾಸ್ತ್ರ ಸಾಹಿತ್ಯ ಪರಿಷತ್ತಿನಲ್ಲಿ ಇರುವಂತಹ ನಿಷ್ಠಾವಂತ ಕಾರ್ಯಕರ್ತರನ್ನು ಪರಿಷತ್ತು ಪಡೆದು ಗುರುತಿಸಬೇಕು. ಇವರು ಗ್ರಾಮ ಗ್ರಾಮಗಳಲ್ಲಿ ಲೈಬ್ರರಿಗಳನ್ನು ತೆರೆಯುವ ಚಳುವಳಿ ಕೈಗೊಳ್ಳಬೇಕು. ಅಕ್ಷರ ಜ್ಞಾನವನ್ನು ಸರ್ವತ್ರಗೊಳಿಸುವ ಕೆಲಸದಲ್ಲಿ ಮುಂದಾಗಬೇಕು. ಸಹಶಿಕ್ಷಕರಿಗೆ ಅಗತ್ಯವಾದ ಪುಸ್ತಕ ಪ್ರಕಟನೆಯ ಕಾರ್ಯವನ್ನು ಎಲ್ಲ ಬರಹಗಾರರ ಸಹಾಯದಿಂದ ನಿರ್ವಹಿಸಬೇಕು. ಕನ್ನಡದ ಬುಡವನ್ನು ಭದ್ರಮಾಡುವ ಈ ಕೆಲಸಗಳು ನಾನು ಕೂಡಲೇ ಗುರುತಿಸಿದ ಸಮಾನತೆಯ ಹಸಿವನ್ನೂ ಆಧುನಿಕತೆಯ ಹಸಿವನ್ನೂ ತಣಿಸುವಂಥದ್ದಾಗಿರುತ್ತದೆ. ಜಾಗತೀಕರಣದಲ್ಲಿ ಕನ್ನಡ ಮೂಲೆಗುಂಪಾಗದಂತೆ ಕನ್ನಡ ಜನಶಕ್ತಿಯನ್ನು ಆಗ ಬೆಳೆಸಿದಂತಾಗುತ್ತದೆ. ಈ ಸಲಹೆಯನ್ನು ಪರಿಷತ್ತಿನ ಸದಸ್ಯರೆದುರು ವಿನಯದಿಂದ ಇಡುತ್ತಿದ್ದೇನೆ.
Tag: Kannada Sahitya Sammelana 69, U.R. Anantha Murthy
೬೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಶಾಂತಾದೇವಿ ಮಾಳವಾಡ
ಉತ್ತರ ಕರ್ನಾಟಕದಲ್ಲಿ ಮಹಿಳಾ ಸಾಹಿತ್ಯ ಪರಂಪರೆಯ ಪ್ರವರ್ತಕರಲ್ಲಿ ಒಬ್ಬರಾದ ಶಾಂತಾದೇವಿ ಮಾಳವಾಡರು ಸಾಹಿತಿಯಾಗಿ ಸಾಮಾಜಿಕ ಕಾರ್ಯಕರ್ತೆಯಾಗಿ ಶ್ರಮಿಸಿದವರು. ಕರ್ಜಗಿ ಮುರಗಪ್ಪ ಶೆಟ್ಟಿ-ಜಯವಂತಿ ದೇವಿ ದಂಪತಿಗಳಿಗೆ ಬೆಳಗಾವಿಯಲ್ಲಿ ೧0-೧೨-೧೯೨೨ರಲ್ಲಿ ಜನಿಸಿದ ಸುಪುತ್ರಿ ಶಾಂತಾದೇವಿಯವರ ಹುಟ್ಟು ಹೆಸರು ದಾನಮ್ಮ. ಬೆಳಗಾವಿ ವನಿತಾ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಪ್ರಾರಂಭಿಸಿದ ಇವರು ಹೈಸ್ಕೂಲ್ ಎರಡನೇ ತರಗತಿಯಲ್ಲಿ ಇರುವಾಗ ಶಾಲೆಯನ್ನು ಬಿಡಬೇಕಾಯಿತು. ಮನೆಯಲ್ಲಿಯೇ ಕುಳಿತು ಇಂಗ್ಲಿಷ್ ಹಿಂದಿ ಭಾಷೆಯನ್ನು ಕಲಿತರು. ಸಾಹಿತ್ಯ ಪರಿಷತ್ತಿನ ಕಾವ್ಯ, ಜಾಣ ಪರೀಕ್ಷೆಗಳಿಗೆ ಕುಳಿತು ಉತ್ತೀರ್ಣರಾದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಸ.ಸ. ಮಾಳವಾಡರ ಧರ್ಮಪತ್ನಿ ಅದಮೇಲೆ ಇವರ ವ್ಯಾಸಂಗಕ್ಕೆ ಅವರಿಂದ ಸ್ಪೂರ್ತಿ ಮಾರ್ಗದರ್ಶನ ಸಿಕ್ಕಿತು. ಮಹಿಳೆಯರ ಉನ್ನತಿಗಾಗಿ ಶ್ರಮಿಸುತ್ತ ಸಾಮಾಜಿಕ ಸೇವೆಯಲ್ಲಿ ನಿರತರಾದ ಶಾಂತಾದೇವಿ ಅವರು ಧಾರವಾಡ ಜಿಲ್ಲಾ ಮಹಿಳಾ ಮಂಡಳಕ್ಕೆ ಹೊಸ ಚೈತನ್ಯ ನೀಡಿದರು. ೧೯೫೮ ರಿಂದ ಧಾರವಾಡ ಜಿಲ್ಲಾ ರಿಮ್ಯಾಂಡ್ ಹೋಂ ಕಾರ್ಯಕಾರಿ ಮಂಡಳದ ಸದಸ್ಯೆಯಾಗಿಯೂ ೧೯೫೯ ರಿಂದ ೧೯೬೪ ವರೆಗೆ ಆನರರಿ ಲೇಡಿ ಮ್ಯಾಜಿಸ್ಟ್ರೇಟ್ ಆಗಿಯೂ ಸೇವೆ ಸಲ್ಲಿಸಿದರು. ರಾಜ್ಯಮಟ್ಟದ ಸಾಮಾಜಿಕ ನೈತಿಕ ಸ್ವಾಸ್ಥ ಸಮಿತಿ ಸದಸ್ಯರಾಗಿ ಕೆಲಸ ಮಾಡಿದರು. ಧಾರವಾಡದ ಗಾಂಧೀ ಶಾಂತಿ ಪ್ರತಿಷ್ಠಾನ ಕೇಂದ್ರದಲ್ಲಿ ಮಹಿಳಾ ವಿಭಾಗಕ್ಕೆ ಕಾರ್ಯಾಧ್ಯಕ್ಷರಾಗಿ, ತೋಟಗಾರಿಕಾ ಸಂಸ್ಥೆಯ ಸದಸ್ಯೆಯಾಗಿ, ಜಿಲ್ಲಾ ಅಭಿವೃದ್ಧಿ ಮಂಡಳದಲ್ಲಿ ಮಹಿಳಾ ಸಾಮಾಜಿಕ ಶಿಕ್ಷಣ ಸಮಿತಿ ಸದಸ್ಯೆಯಾಗಿ ಹೀಗೆ ನಾನಾ ಸಂಸ್ಥೆಗಳಲ್ಲಿ ಮಹಿಳೆಯರ ಉನ್ನತಿಗೆ ಶ್ರಮಿಸಿದರು.
ಶಾಂತಾದೇವಿ ಮಾಳವಾಡರ ಸಾಹಿತ್ಯ ಸೇವೆಗೆ ಮತ್ತು ಮಹಿಳಾ ಉನ್ನತಿಗಾಗಿ ಶ್ರಮಿಸಿದ್ದಕ್ಕೆ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಪ್ರಶಸ್ತಿ ನೀಡಿವೆ. ೧೯೭೭ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೭ರಲ್ಲಿ ಕರ್ನಾಟಕ ಸರ್ಕಾರದ ಅತ್ತಿಮಬ್ಬೆ ಪ್ರಶಸ್ತಿ ಇವರಿಗೆ ದೊರಕಿದೆ. ಬಾಗಲುಕೋಟೆಯಲ್ಲಿ ೨000ರಲ್ಲಿ ಜರುಗಿದ ೬೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪರಿಷತ್ತಿನ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಅಧ್ಯಕ್ಷಿಣಿಯಾದವರಲ್ಲಿ ಇವರು ೨ನೆಯವರು. ೧೯೯೭ರಲ್ಲಿ ಸ್ವರಲಿಪಿ ಪ್ರತಿಷ್ಠಾನದ ಲಿಪಿಪ್ರಾಜ್ಞ ಪ್ರಶಸ್ತಿ, ೧೯೯೬ರಲ್ಲಿ ಚಿತ್ರದುರ್ಗದ ಬೃಹ್ಮಮಠದ ಜಗದ್ಗುರುಗಳಿಂದ ಸಾಹಿತ್ಯರತ್ನ ಪ್ರಶಸ್ತಿ, ೧೯೯೪ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯುನ್ನತ ಪ್ರಶಸ್ತಿಯಾದ ಗೌರವ ಸದಸ್ಯತ್ವ, ೧೯೯೧ರಲ್ಲಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ೧೯೯೩ರಲ್ಲಿ ಅಖಿಲ ಕರ್ನಾಟಕ ಲೇಖಕಿಯರ ಮೂರನೇ ಸಮ್ಮೇಳನದ ಅಧ್ಯಕ್ಷತೆ ಮೊದಲಾದ ಸನ್ಮಾನ ಪ್ರಶಸ್ತಿ ಗೌರವಗಳು ಇವರಿಗೆ ಲಭ್ಯವಾಗಿವೆ.
೪೫ಕ್ಕೂ ಜಾಸ್ತಿ ಕೃತಿಗಳನ್ನು ರಚಿಸಿರುವ ಶಾಂತಾದೇವಿ ಮಾಳವಾಡರು ಕಥೆ, ಕಾದಂಬರಿ, ವೈಚಾರಿಕ ಪ್ರಬಂಧ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. ಅವರ ಕೆಲವು ಮುಖ್ಯ ಕೃತಿಗಳು ಹೀಗಿವೆ.
ಗೃಹೋಪಯೋಗಿ ಕೃತಿಗಳು : ಸೋಗಿನಮನೆ, ಮಹಿಳೆಯರ ಅಲಂಕಾರ, ದಾಂಪತ್ಯಯೋಗ, ವಧುವಿಗೆ ಉಡುಗೊರೆ, ರಸಪಾಕ ಗ್ರಂಥಗಳು.
ಕಥಾಸಂಕಲನಗಳು : ಮೊಗ್ಗೆಯಮಾಲೆ, ಕುಂಕುಮ ಬಲ.
ಕಾದಂಬರಿ : ಬಸವ ಪ್ರಕಾಶ, ಶೂರರಾಣಿ, ಕೆಳದಿಯ ಚೆನ್ನಮ್ಮಾಜಿ.
ಜೀವನಚರಿತ್ರೆಗಳು : ಭಾರತದ ಮಾನಸ ಪುತ್ರಿಯರು, ನೀಲಾಂಬಿಕೆ, ಬೆಳವಾಡಿ ಮಲ್ಲಮ್ಮ, ಗಂಗಾಂಬಿಕೆ, ಕನ್ನಡತಾಯಿ ಇತ್ಯಾದಿ.
ಶಾಂತಾದೇವಿ ಮಾಳವಾಡರು ೭-೮-೨00೫ರಲ್ಲಿ ದೈವಾಧೀನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೬೮
ಅಧ್ಯಕ್ಷರು, ಶಾಂತಾದೇವಿ ಮಾಳವಾಡ
ದಿನಾಂಕ ೨೪, ೨೫, ೨೬ ಜೂನ್ ೨000
ಸ್ಥಳ : ಬಾಗಲಕೋಟೆ
ಒಗ್ಗೂಡಲಿ ಎರಡು ಸಂಸ್ಥೆ
ಕನ್ನಡದ ಕಣ್ವರೆನಿಸಿದ್ದ ಬಿ.ಎಂ.ಶ್ರೀ ಅವರು ತಮ್ಮ ಒಂದು ಭಾಷಣದಲ್ಲಿ ಹೀಗೆ ಹೇಳಿದ್ದರು. ಧಾರವಾಡ ಕನ್ನಡ, ಗಂಡು ಕನ್ನಡ, ಬೆಂಗಳೂರು ಕನ್ನಡ, ಹೆಣ್ಣು ಕನ್ನಡ, ಈ ಎರಡೂ ಭಾಷೆಯ ನಾಡು ಒಂದಾದರೆ ಒಳಿತು, ನಾಡಿನ ಜನತೆಯಲ್ಲಿ ಭಾವೈಕ್ಯ ಮೂಡಿದರೆ, ಕನ್ನಡದ ಅಭಿಮಾನ ರಕ್ತದ ಕಣಕಣದಲ್ಲಿ ಮಿಡಿದರೆ ನಾಡು ಅಖಂಡ ಕರ್ನಾಟಕ ಆಗುವುದು ಎನ್ನುವ ಅವರ ಮಾತುಗಳೂ ಇಂದಿಗೂ ಪ್ರಸ್ತುತವಾಗಿದೆ. ಶತಮಾನ ಕಂಡ ಉತ್ತರ ಕರ್ನಾಟಕದ ಹಿರಿಯ ಸಂಸ್ಥೆ ಕರ್ನಾಟಕ ವಿದ್ಯಾವರ್ಧಕ ಸಂಘ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಪರಸ್ಪರ ಕೂಡಿಕೊಂಡು ಒಂದಾಗಿ ಕನ್ನಡದ ಕಾರ್ಯಕ್ಕೆ ಅಣಿಯಾದರೆ ನಾಡು ನುಡಿಯ ಅಭಿಮಾನ ಜನಕೋಟಿಯಲ್ಲಿ ಇನ್ನೂ ಹೆಚ್ಚುಹೆಚ್ಚಾಗಿ ಬೆಳೆಯುತ್ತದೆಂಬ ವಿಜ್ಞಾನ ನನ್ನದಾಗಿದೆ.
ಸಮ್ಮೇಳನಗಳು ಅಭಿಮಾನ ಬೆಳಸಲಿ
ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದ ಪ್ರತಿಭಾವಂತರಿದ್ದಾರೆ. ಇನ್ನೂ ಹಲವಾರು ಪ್ರಶಸ್ತಿಗಳನ್ನು ಪಡೆದ ಪ್ರತಿಭಾವಂತರಿದ್ದಾರೆ. ಇಷ್ಟೆಲ್ಲಾ ಇದ್ದರೂ, ಒಂದೇ ಒಂದು ಕೊರತೆಯಿದೆ. ಅದು ನಾಡು ನುಡಿಯ ಅಭಿಮಾನದ ಕೊರೆತ. ಕನ್ನಡಾಭಿಮಾನ ನಮ್ಮೆಲ್ಲರ ರಕ್ತ ಕಣಕಣದಲ್ಲಿರಬೇಕು. ನರನರಗಳಲ್ಲಿ ಮಿಡಿಯಬೇಕು. ಕನ್ನಡ ಎಂಬ ಮಂತ್ರ ಸದಾ ನಮ್ಮೆಲ್ಲರ ಮನದಲ್ಲಿ ಮಿಡಿಯುತಿರಲಿ. ಕನ್ನಡಿಗರಲ್ಲಿ ನಾಡು-ನುಡಿ-ಸಾಹಿತ್ಯ-ಕಲೆ ಇವುಗಳ ಅಭಿಮಾನವನ್ನು ಬೆಳೆಸುವುದು ಇಂಥ ಕನ್ನಡ ಸಾಹಿತ್ಯ ಸಮ್ಮೇಳನಗಳ ಪ್ರಧಾನ ಗುರಿಯಾಗಿರಬೇಕು.
ಪರಿಷತ್ತಿಗೆ ಸರ್ಕಾರದ ನೆರವು ಎಷ್ಟು ಬೇಕು?
ಕನ್ನಡ ಸಂಸ್ಕೃತಿ ಇಲಾಖೆಯು ಬೇಂದ್ರೆ ಭವನ, ಸಾಹಿತ್ಯ ಭವನ, ಮನಸೂರ ಟ್ರಸ್ಟ್ ಇವೇ ಮೊದಲಾದ ವಿವಿಧ ಟ್ರಸ್ಟ್ಗಳಿಗೆ ನೆರವು ನೀಡಿದ್ದು ಅವು ಈಗ ಆನಾಥ ಸ್ಥಿತಿಯಲ್ಲಿವೆ. ಅವುಗಳಲ್ಲಿ ಸಾಹಿತ್ಯ ಸಂಸ್ಕೃತಿ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ಕ್ರಮ ಕೈಕೊಳ್ಳಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಾಹಿತ್ಯ ಸಂಸ್ಥೆಯಾಗಿದೆ. ಕನ್ನಡದ ಕಾರ್ಯಗಳನ್ನು ಕ್ರಿಯಾಶೀಲವಾಗಿ ನಡೆಸುವುದಕ್ಕೆ ಪ್ರತಿವರ್ಷ ಕನಿಷ್ಠ ೧ ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ನಿರಂತರವಾಗಿ ನೀಡಬೇಕು.
Tag: Kannada Sahitya Sammelana 68, Shantha Devi Malavada
೬೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎಸ್.ಎಲ್. ಭೈರಪ್ಪ
ಗಳಗನಾಥರು ಮತ್ತು ಅನಕೃ ಅನಂತರ ಕನ್ನಡದಲ್ಲಿ ಕತೆ ಕಾದಂಬರಿ ಓದುವ ಸಾವಿರಾರು ಓದುಗರನ್ನು ಸೃಷ್ಟಿಸಿದವರೆಂದರೆ ಎಸ್.ಎಲ್. ಭೈರಪ್ಪನವರು. ಕಾದಂಬರಿಕಾರರೂ ಮೀಮಾಂಸಕರು ಆಗಿರುವ ಎಸ್.ಎಲ್. ಭೈರಪ್ಪನವರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ ಲಿಂಗಣ್ಣಯ್ಯ-ಗೌರಮ್ಮ ದಂಪತಿಗಳಿಗೆ ೨0-೮-೧೯೩೧ರಲ್ಲಿ ಜನಿಸಿದರು. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿ ೧೯೫೮ರಿಂದ ೧೯೬0ವರೆಗೆ ಕೆಲಸ ಮಾಡಿದರು. ೧೯೬0ರಿಂದ ೧೯೬೬ವರೆಗೆ ೬ ವರ್ಷಗಳ ಕಾಲ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದರು. ೧೯೬೭ರಿಂದ ೧೯೭೧ವರೆಗೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಮೇಲೆ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾಗಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ೧೯೯೧ರಲ್ಲಿ ವೃತ್ತಿಯಿಂದ ನಿವೃತ್ತರಾದರು. ಭೈರಪ್ಪನವರ ಸಾಹಿತ್ಯ ಸಾಧನೆಗೆ ಅನೇಕ ಪ್ರಶಸ್ತಿ ಬಂದಿವೆ, ಸನ್ಮಾನಗಳು ಸಂದಿವೆ. ತಂತು ಕಾದಂಬರಿಗೆ ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ ಲಭಿಸಿದೆ.ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ವಂಶವೃಕ್ಷ, ಸಾಕ್ಷಿ, ದಾಟು ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ,
೧೯೯೪ರಲ್ಲಿ ಮಾಸ್ತಿ ಪ್ರಶಸ್ತಿ, ೧೯೮೫ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಇವರಿಗೆ ಲಭಿಸಿದೆ. ಕನಕಪುರದಲ್ಲಿ ೧೯೯೯ರಲ್ಲಿ ನಡೆದ ೬೭ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ. ಸರಸ್ವತೀ ಸಮ್ಮಾನ್ ಪ್ರಶಸ್ತಿಯನ್ನು ಕನ್ನಡದಲ್ಲಿ ಪಡೆದವರಲ್ಲಿ ಮೊದಲಿಗರು ಇವರು. ಬರೆದ ಕಾದಂಬರಿಗಳೆಲ್ಲಾ ಜನಪ್ರಿಯವಾಗಿ ಹತ್ತಾರು ಮರುಮುದ್ರಣಗಳಾಗಿವೆ. ಮರಾಠಿ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಿಗೆ ಅನುವಾದವಾಗಿವೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮೊದಲಾದವು ಚಲನಚಿತ್ರಗಳಾಗಿವೆ. ಇವರು ಕಾದಂಬರಿಗಳನ್ನಷ್ಟೆ ಅಲ್ಲದೆ ಸೌಂದರ್ಯಮೀಮಾಂಸೆಯ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಸತ್ಯ ಮತ್ತು ಸೌಂದರ್ಯ ಇವರು ರಚಿಸಿದ ಪಿ ಎಚ್ ಡಿ ಗ್ರಂಥವಾಗಿದೆ. ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು ಗ್ರಂಥಗಳು ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿವೆ. ನಾನೇಕೆ ಬರೆಯುತ್ತೇನೆ. ಭಿತ್ತಿ ಆತ್ಮವೃತ್ತಾದ ಗ್ರಂಥವಾಗಿವೆ. ಆವರಣ, ಕವಲು ಅವರ ಈಚಿನ ಕಾದಂಬರಿಗಳಾಗಿವೆ. ವಂಶವೃಕ್ಷ, ದಾಟು, ತಂತು, ಅಂಚು, ಪರ್ವ, ಗೃಹಭಂಗ, ಅನ್ವೇಷಣ, ಮಂದ್ರ, ಸಾರ್ಥ, ನಾಯಿನೆರಳು, ಧರ್ಮಶ್ರೀ, ದೂರಸರಿದರು ಮತದಾನ ಮುಂತಾದವು ಅವರು ಬರೆದ ಪ್ರಸಿದ್ಧ ಕಾದಂಬರಿಗಳಾಗಿವೆ.
ಕನ್ನಡ ಸಾಹಿತ್ಯ ಸಮ್ಮೇಳನ–೬೭
ಅಧ್ಯಕ್ಷರು, ಎಸ್. ಎಲ್. ಭೈರಪ್ಪ
ದಿನಾಂಕ ೧೧, ೧೨, ೧೩, ೧೪ ಫೆಬ್ರವರಿ ೧೯೯೯
ಸ್ಥಳ : ಕನಕಪುರ
ಕಾರ್ಯಗತಗೊಳಿಸುವ ಶಕ್ತಿ ಇಲ್ಲ
ರ್ದೀರ್ಘ ಇತಿಹಾಸವುಳ್ಳ ಈ ಸಮ್ಮೇಳನಗಳ ಹಿಂದಿನ ಅಧ್ಯಕ್ಷರ ಹೆಸರುಗಳನ್ನು ನೋಡಿದಾಗ ಈ ಸ್ಥಾನದಲ್ಲಿ ಕೂರಲು ನನಗೆ ಸಂಕೋಚವಾಗುತ್ತದೆ. ಅವರೆಲ್ಲ ಕನ್ನಡ ನಾಡುನುಡಿಗಳನ್ನು ಕಟ್ಟಿ ಬೆಳೆಸಲು ಶ್ರಮಿಸಿದವರು. ಸದಾ ಆ ಬೆಳವಣಿಗೆಯ ಬಗೆಗೆ ಚಿಂತಿಸಿದವರು. ಕನ್ನಡ ನುಡಿ ಮತ್ತು ನಾಡಿನ ಏಳ್ಗೆಗಾಗಿ ಪ್ರತಿಯೊಬ್ಬ ಸಮ್ಮೇಳನಾಧ್ಯಕ್ಷರೂ ತಮ್ಮ ಒಳನೋಟಗಳಿಂದ ಕೂಡಿದ ವಿಶ್ಲೇಷಣೆಗಳನ್ನು ಮುಂದಿಟ್ಟಿದ್ದಾರೆ. ಅವುಗಳಿಗಿಂತ ಹೆಚ್ಚು ಹೇಳುವ ತಿಳವಳಿಕೆ ನನಗಿಲ್ಲ. ಒಳನೋಟ, ವಿಶ್ಲೇಷಣೆ, ಚಿಂತನೆಗಳಿಗೆ ಕರ್ನಾಟಕದಲ್ಲಿ ಯಾವತ್ತೂ ಕೊರತೆ ಇಲ್ಲ. ಕೊರತೆ ಇರುವುದು ಅವುಗಳನ್ನು, ಕಾರ್ಯಗತಗೊಳಿಸಲು ಬೇಕಾದ ರಾಜಕೀಯ ಸಂಕಲ್ಪಶಕ್ತಿಯಲ್ಲಿ, ನಾಡು ನುಡಿಗಳ ಹಿತರಕ್ಷಣೆ ಮತ್ತು ಬೆಳವಣಿಗೆಗಳ ಬಗೆಗೆ ನೆರೆರಾಜ್ಯಗಳ ಜನರಿಗಿರುವಷ್ಟು ಸ್ಪಷ್ಟ ಪ್ರಜ್ಞೆ ಕನ್ನಡಿಗರಿಗಿಲ್ಲ ಎಂಬುದನ್ನು ವಿಷಾದದಿಂದ ಹೇಳಬೇಕಾಗಿದೆ.
ಸಾಹಿತ್ಯದ ಮೇಲಿನ ದಾಳಿ
ಇದು ಸಾಹಿತ್ಯ ಸಮ್ಮೇಳನ, ಸಾಹಿತಿಗಳ, ಸಹೃದಯಿಗಳ ಹಾಗೂ ರಾಜ್ಯದ ಸಮ್ಮೇಳನ. ಸಾಹಿತ್ಯದ ಮೂಲಗುಣದ ಬಗೆಗೆ ಸಾಹಿತಿಯೇ ವ್ಯಾಖ್ಯೆ ಮಾಡುವ ಅಗತ್ಯವಿಲ್ಲ. ಅವನ ಕೃತಿಗಳೇ ಅವನ ಸಾಹಿತ್ಯ ಕಲ್ಪನೆಯನ್ನು ಸೂಚಿಸುತ್ತವೆ. ಹಾಗೆ ನೋಡಿದರೆ ತನ್ನ ಸೃಜನಾತ್ಮಕ ಕೃತಿಗಳ ಹೊರಗೆ ಸಾಹಿತಿಯ ಸಾಹಿತ್ಯದ ವ್ಯಾಖ್ಯೆ ಮಾಡುವುದು ಇತ್ತೀಚಿನ ಪರಿಪಾಠ. ತನ್ನ ಕೃತಿ ಮತ್ತು ಸೃಷ್ಟಿಯ ಬಗೆಗೆ ಸಂಗೀತಗಾರ, ವಾಸ್ತುಶಿಲ್ಪಿ, ಚಿತ್ರಕಾರ, ನರ್ತಕ ಮೊದಲಾಗಿ ಯಾರೂ ಹೆಚ್ಚು ಮಾತನಾಡುವುದಿಲ್ಲ. ಸಾಹಿತ್ಯಿಕ ಕೃತಿಗಳನ್ನು ಕುರಿತು ಬರುತ್ತಿರುವಷ್ಟು ಲೇಖನಗಳು, ಪುಸ್ತಕಗಳು ಬೇರಾವ ಕಲಾ ಪ್ರಕಾರಗಳನ್ನು ಕುರಿತೂ ಬರುತ್ತಿಲ್ಲ. ಸಾಹಿತ್ಯದ ಮಾಧ್ಯಮವೇ ಮಾತಾದುದರಿಂದ ಸಾಹಿತ್ಯದ ಬಗೆಗೆ ಅತಿ ಪ್ರಮಾಣದಲ್ಲಿ ಮಾತು ನಡೆಯುತ್ತಿದೆ. ಒಂದು ಸಾಹಿತ್ಯ ಕೃತಿಯ ಮೇಲೆ ಮಾತನಾಡುವುದು ಸುಲಭ. ಏನಿಲ್ಲವೆಂದರೂ ಅದರ ಸನ್ನಿವೇಶವನ್ನೂ ಕಥೆಯನ್ನೋ ಭಾಷ್ಯವನ್ನೋ ಹೇಳಬಹುದು. ಅದರ ಒಳನೋಟಗಳು, ಒಪ್ಪಂದದ ದೃಷ್ಟಿ, ಪಾತ್ರಪಾತ್ರಗಳ ನಡುವೆ ಬರುವ ಚರ್ಚೆಗಳನ್ನು ಕುರಿತು ಬಂದಿರಬಹುದು. ಗಾಯಕನು ಒಂದು ರಾಗವನ್ನು ಹಾಡಿದರೆ, ವಾದಕನು ನುಡಿಸಿದರೆ, ಮಾತಿನಲ್ಲಿ ಏನೆಂದು ಹೇಳಬೇಕು? ಏನೆಂದು ಲಂಬಿಸಬೇಕು. ಅವನು ಸ್ವರಸ್ಥಾನಗಳನ್ನು ಮುಟ್ಟುವ ಕ್ರಮ, ದಾಟುಸ್ವರ ಚಾರುಸ್ವರಗಳನ್ನು ನಿರ್ವಹಿಸುವ ಕೌಶಲ ಮೊದಲಾಗಿ ಏನು ಹೇಳಿದರೂ ಬರಡಾಗುತ್ತದೆ. ಇವನ್ನು ನಾಲ್ಕು ವಾಕ್ಯಗಳಿಗಿಂತ ಹೆಚ್ಚು ಹೇಳಲೂ ಸಾಧ್ಯವಿಲ್ಲ. ಸಂಗೀತವು ಭಾಷೆಯ ಹಿಡಿತಕ್ಕೆ ಸಿಕ್ಕದ, ಭಾಷೆಯ ಸ್ವರವನ್ನು ಮೀರಿದ ಕಲೆ. ನರ್ತನ, ಚಿತ್ರ, ವಾಸ್ತು, ಶಿಲ್ಪ ಮೊದಲಾದುವೆಲ್ಲಾ ನೋಡಿ ಆನಂದಿಸಬೇಕು. ವಿಮರ್ಶೆಯು ಸಹಾಯ ಮಾಡುತ್ತದಾದರೂ ತುಸು ಹೆಚ್ಚಾದರೂ ಬೇಸರವನ್ನುಂಟು ಮಾಡುತ್ತದೆ. ಸಾಹಿತ್ಯ ವಿಮರ್ಶೆಗೂ ಈ ಮಾತು ಅನ್ವಯವಾದರೂ ಇಲ್ಲಿ ಅತಿಮಾತಿಗೆ ಅವಕಾಶವಿದೆ. ಇತರ ಕಲೆಗಳಲ್ಲಿ ಇಲ್ಲ. ಅಲ್ಲಿ ಎಷ್ಟೋ ಕಲಾವಿದರಿಗೆ ಮಾತುಗಾರಿಕೆ ಇಲ್ಲವೇ ಇಲ್ಲ. ಸಭೆಯಲ್ಲಿ ನಿಲ್ಲಿಸಿ ಮಾತನಾಡೆಂದರೆ ಎಷ್ಟೋ ಸಂಗೀತಗಾರರು ತೊದಲುತ್ತಾರೆ. ಆದರೆ ಭಾಷಣ ಮಾಡಲು ಬಾರದ ಸಾಹಿತಿ ಸಾಹಿತಿಯೇ ಅಲ್ಲ ಎಂದು ನಿರ್ಣಯಿಸುವ ಮಟ್ಟಿಗೆ ಸಾಹಿತ್ಯದ ಮೇಲೆ ಮಾತಿನ ದಾಳಿ ನಡೆದಿದೆ.
Tag: Kannada Sahitya Sammelana 67, S.L. Bhyrappa
೬೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕಯ್ಯಾರ ಕಿಞ್ಞಣ್ಣ ರೈ
ಗಡಿನಾಡಿನಲ್ಲಿ ಕನ್ನಡದ ದನಿಯಾಗಿ, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಸತತವಾಗಿ ಹೋರಾಟ ನಡೆಸಿದ ಶಿಕ್ಷಕ, ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣದ ಮುಂದಾಳು, ಶತಾಯುಷಿ ಕಯ್ಯಾರ ಕಿಞ್ಞಣ್ಣರೈ ಅವರು ಕಾಸರಗೋಡು ತಾಲ್ಲೂಕಿನ ಪೆರಡಾಲದಲ್ಲಿ ದುಗ್ಗಪ್ಪ ರೈ ಮತ್ತು ಶ್ರೀಮತಿ ಕಯ್ಯಾರ ಯ್ಯ ರೈ ದಂಪತಿಗಳ ಮಗನಾಗಿ ೮-೬-೧೯೧೫ರಲ್ಲಿ ಜನಿಸಿದರು. ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂತ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿದರು. ಅನಂತರ ಕನ್ನಡ ಮತ್ತು ಸಂಸ್ಕೃತಗಳಲ್ಲಿ ವಿದ್ವಾನ್ ಪದವಿ ಗಳಿಸಿದರು. ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ೩೨ ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. ಶಿಕ್ಷಕರಾಗಿದ್ದಾಲೇ ಬಿ.ಎ. ಪದವಿಯನ್ನು, ಅಧ್ಯಾಪಕ ತರಬೇತಿಯನ್ನು ಪಡೆದರು. ಸ್ವಾತಂತ್ರ್ಯ ಸಂಗ್ರಾಮದ ಕಾಲಟ್ಟದಲ್ಲಿ ಪತ್ರಿಕೋದ್ಯಮಿಯಾಗಿ ಮಂಗಳೂರಿನ ಪ್ರಸಿದ್ಧ ಪತ್ರಿಕಾ ಕಚೇರಿಯಲ್ಲಿ ಬರವಣಿಗೆಗೆ ತೊಡಗಿದ್ದ ಇವರು ರಾತ್ರಿವೇಳೆ ಸ್ವಾತಂತ್ರ್ಯ ಹೋರಾಟಗಾರರಾಗಿ ಸಾಹಿತ್ಯ ಒದಗಿಸುತ್ತಿದ್ದರು. ಗಾಂಧೀಜಿಯ ಕರೆಗೆ ಓಗೊಟ್ಟು ತಮ್ಮ ಜಮೀನಿನಲ್ಲಿ ಕೃಷಿಕರಾಗಿ ಕಾಯಕ ಮಾಡುತ್ತಿದ್ದರು. ೧೯೮೬-೮೭ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಕಯ್ಯಾರರ ಸಾಹಿತ್ಯ ಸೇವೆ, ಕೃಷಿ ಕಾಯಕ. ಸ್ವಾತಂತ್ರ್ಯ ಹೋರಾಟ ಸಾಮಾಜಿಕ ಸೇವೆಯನ್ನು ಗೌರವಿಸಿ ಹಲವಾರು ಪ್ರಶಸ್ತಿ ಗೌರವಗಳನ್ನು ಅವರಿಗೆ ಸಂಘ-ಸಂಸ್ಥೆಗಳು, ಸರಕಾರ ನೀಡಿವೆ. ೧೯೬೯ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ, ೧೯೬೯-೭0ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೫ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಫೆಲೋಷಿಪ್, ಬೆಂಗಳೂರಿನ ಕನ್ನಡ ಸಂಘಗಳ ಸನ್ಮಾನ. ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ, ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ. ೬೬ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ೧೯೯೭ರಲ್ಲಿ ನಡೆದಾಗ ಅದರ ಅಧ್ಯಕ್ಷತೆ, ೧೯೬೯ರಲ್ಲಿ ಅಖಿಲ ಭಾರತ ತುಳು ಸಮ್ಮೇಳನದ ಸನ್ಮಾನ ಇವರಿಗೆ ಲಭಿಸಿದೆ. ೨0೧೩ರಲ್ಲಿ ಪಂಪ ಪ್ರಶಸ್ತಿಯನ್ನು ಸರಕಾರ ಇವರಿಗೆ ನೀಡಿತು.
ದೇಶಪ್ರೇಮಿ, ಖಾದಿಧಾರಿ, ಕೃಷಿಕ, ಅಧ್ಯಾಪಕ, ಸಾಹಿತಿ, ಹೋರಾಟಗಾರ ಕಯ್ಯಾರ ಕಿಞ್ಞಣ್ಣರೈ ಅವರು ನಾನಾ ಬಗೆಯ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅವರ ಮುಖ್ಯವಾದ ಕೆಲವು ಕೃತಿಗಳು ಹೀಗಿವೆ :
ಕವನಸಂಕಲನಗಳು: ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಪಂಚಮಿ, ಶತಮಾನದ ಗಾನ, ಪ್ರತಿಭಾ ಪಯಾಸ್ವಿನಿ, ಗಂಧವತೀ ಇತ್ಯಾದಿ.
ತುಳು ಭಾಷೆಯ ಎನ್ನಪ್ಪೆ ತುಳುವಪ್ಪೆ ಕವನಸಂಕಲನ.
ಅನುವಾದಗಳು :ಕುಮಾರನ್ ಆಶಾನ್ ಅವರ ಖಂಡಕಾವ್ಯ ಅನುವಾದ, ಮಲೆಯಾಳಂ ಸಾಹಿತ್ಯ ಚರಿತ್ರೆಯ ಅನುವಾದ.
ಕಥಾಸಂಗ್ರಹಗಳು :ಲಕ್ಷ್ಮೀಶನ ಲಲಿತ ಕಥೆಗಳು, ಅನ್ನದೇವರು ಮತ್ತು ಇತರ ಕಗಳು.
ಜೀವನಚರಿತ್ರೆಗಳು : ಪರಶುರಾಮ, ಎಬಿಶೆಟ್ಟಿ, ಕಾರ್ನಾಡು ಸದಾಶಿವರಾಮ್, ನಾರಾಯಣ ಕಿಲ್ಲೆ ಸಾಹಿತ್ಯ ಸಾಧನೆ.
ಪದ್ಯಗಳು : ಕನ್ನಡಪಾಠ ಮಾಲೆ ೮ ಭಾಗಗಳು, ಮಕ್ಕಳ ಪದ್ಯ ಮಂಜರಿ ಭಾಗ ೧, ವ್ಯಾಕರಣ ಮತ್ತು ಪ್ರಬಂಧ ಕುರಿತು ೪ ಕೃತಿಗಳು.
ಆತ್ಮಕಥನ : ದುಡಿತವೇ ನನ್ನ ದೇವರು, ನಾಟಕ : ವಿರಾಗಿಣಿ ಇತ್ಯಾದಿ.
ಶತಾಯುಷಿಗಳಾಗಿ ಬಾಳಿ ಮಹತ್ಸಾಧನೆ ಮಾಡಿದ ಕಯ್ಯಾರ ಕಿಞ್ಞಣ್ಣ ರೈ ಅವರು ಆಗಸ್ಟ್ ೯, ೨0೧೫ರಂದು ಈ ಲೋಕವನ್ನಗಲಿದರು.
ಕನ್ನಡ ಸಾಹಿತ್ಯ ಸಮ್ಮೇಳನ–೬೬
ಅಧ್ಯಕ್ಷರು, ಕಯ್ಯಾರ ಕಿಞ್ಞಣ್ಣ ರೈ
ದಿನಾಂಕ ೧೧, ೧೨, ೧೩, ೧೪ ಡಿಸೆಂಬರ್ ೧೯೯೭
ಸ್ಥಳ : ಮಂಗಳೂರು
ಅಖಿಲ ಭಾರತ ವ್ಯಾಪ್ತಿಯ ಸಮ್ಮೇಳನ
ಜಗತ್ತಿನ ಸಕಲ ಭಾಷೆಗಳ ಉತ್ಪತ್ತಿಯೂ ನಿಸರ್ಗ ಸಹಜ ಸ್ಪೂರ್ತಿಯಿಂದ ಒಂದೇ ತೆರನ ನಿಯಮದಂತೆ, ಭಾವನೆಗಳ ಭಿನ್ನತೆಗೆ ಅನುಗುಣವಾಗಿ ಆಗಿದೆ ಎಂದು ತಿಳಿದುಕೊಂಡಲ್ಲಿ, ವಿಶ್ವಮಾನವ್ಯ ವಿಶಾಲ ಸಂಸ್ಕೃತಿ ನಮ್ಮಲ್ಲಿ ಉಂಟಾಗುವುದು: ವಾಗ್ದೇವಿ ‘ಸರ್ವಭಾಷಾಮಯಿದೇವಿ’ ಎಂಬ ಕನ್ನಡ ವೈಯಾಕರಣಿಯ ವಾಣಿ ಉತ್ತಮ ಆದರ್ಶ ತೋರುವ ಮಂತ್ರವಾಣಿಯಂತಿದೆ. ಈ ಮಹಾ ಸಮ್ಮೇಳನ, ಅಖಿಲ ಭಾರತ ವ್ಯಾಪ್ತಿಯದ್ದಾಗಿದ್ದು. ದೇಶ ವಿದೇಶಗಳಿಂದಲೂ ಧೀಮಂತರು ಆಗಮಿಸಿದ್ದೀರಿ ಎಂಬುದರಿಂದ ನಿಮ್ಮೆಲ್ಲರ ಉದಾರ ಅವಗಾಹನೆಗಾಗಿ ಪ್ರಾರಂಭದಲ್ಲಿ ಈ ಪ್ರಸ್ತಾವನೆಯನ್ನು ಮಾಡಲಾಗಿದೆ. ‘ಮನುಷ್ಯಜಾತಿ ತಾನೊಂದು ವಲಂ’ ಎಂಬ ಆದಿಕವಿ ಪಂಪನ ಸೂಕ್ತಿಗೂ ಈ ವಿಚಾರಧಾರೆ ಅನ್ವಯಿಸುತ್ತದೆ.
ಪುಸ್ತಕಕೊಳ್ಳುವ ಸಂಸ್ಕೃತಿ ಬೆಳೆಸೋಣ
ಈ ಸಮಸ್ಯೆಯನ್ನು ಕನ್ನಡ ಹಿತಚಿಂತಕರು ರಚನಾತ್ಮಕ ರೀತಿಯಲ್ಲಿ ಪರಿಹರಿಸಬೇಕು. ಈ ಬಗ್ಗೆ ಒಂದು ಸಲಹೆ ತಮ್ಮೆಲರ ಮುಂದಿಡಲು ಅನುಮತಿ ಯಾಚಿಸುತ್ತೇನೆ.
ಕೇರಳದಲ್ಲಿ ಕಾರ್ಮಿಕರೆಂಬವರೂ ದಿನನಿತ್ಯ ಪತ್ರಿಕೆ ಕೊಂಡು ಓದುತ್ತಾರೆ: ಹೊಸ ಪುಸ್ತಕಗಳು ಪ್ರಕಟವಾದಾಗ ಪಡೆದು ಓದುವುದು ಅವರ ನಿತ್ಯದ ಅಭ್ಯಾಸಗಳಲ್ಲಿ ಒಂದು. ಕನ್ನಡಿಗರೂ ಪತ್ರಿಕೆಗಳನ್ನು ಪುಸ್ತಕಗಳನ್ನೂ ಓದುತ್ತಾರೆ. ವಾಚನಾಲಯಗಳಿಂದಲೋ ಪುಸ್ತಕ ಭಂಡಾರಗಳಿಂದಲೋ ಓದುವವರು ಹೆಚ್ಚು. ಇನ್ನು ಕೆಲವರು, ಸ್ವತಃ ಕೊಂಡು ಓದಲು ಶಕ್ತರಿದ್ದರೂ ಬೇರೆಯವರಿಂದ ಕೇಳಿ ಪಡೆದು ಓದಿ ಮರಳಿಸುತ್ತಾರೆ. ಈ ಪ್ರವೃತ್ತಿ ನಿಲ್ಲಬೇಕು: ಅದಕ್ಕೆ ಒಂದು ಸೂಚನೆಯೆಂದರೆ, ಪ್ರತಿಮನೆಯಲ್ಲೂ ಅವರವರ ಅಭಿರುಚಿಗೆ ತಕ್ಕಂತಹ ವಿಷಯಗಳ ಕನ್ನಡ ಪುಸ್ತಕಗಳನ್ನು ಪಡೆದು ಒಂದೊಂದು ಪುಸ್ತಕಭಂಡಾರ ಪ್ರಾರಂಭಿಸಬೇಕು. ಒಂದೊಂದು ಕನ್ನಡ ದೈನಿಕ, ವಾರಿಕ, ಪಾಕ್ಷಿಕ, ಮಾಸಿಕಗಳನ್ನಾದರೂ ಪ್ರತಿಮನೆಗೂ ತರಿಸಬೇಕು. ಸಾಕಷ್ಟು ಮಂದಿ ಶ್ರೀಮಂತರೂ ಧೀಮಂತರೂ ಇದ್ದಾರೆ. ಈ ರಚನಾತ್ಮಕ ಸಾಹಿತ್ಯಿಕ ಆಂದೋಲನವನ್ನು ಇಂದು ಕೈಗೊಳ್ಳತಕ್ಕದ್ದಿದೆ. ಅದರಿಂದ ಕನ್ನಡಿಗರ ಜ್ಞಾನ ಭಂಡಾರ, ಸಂಸ್ಕೃತಿ ಸಂಪತ್ತು ಹೆಚ್ಚುವುದಲ್ಲದೆ ಇಡೀ ಕುಟುಂಬದ ಸಂಸ್ಕೃತಿ ಸಮುನ್ನತಿಯೂ ಸಾಧಿತವಾಗುವುದು. ಇಂತಹ ಒಂದು ಜನಾಂದೋಲನ ಈ ಸಮ್ಮೇಳನದ ಸುಮೂಹರ್ತ ಕಾಲದಿಂದಲೆ ಪ್ರಾರಂಭವಾಗಲಿ. ಸಮ್ಮೇಳನ ಸಭಾಮಂಟಪದ ಸುತ್ತ ಶೋಭಿಸುತ್ತಿರುವ ಪುಸ್ತಕ ಮಾರಾಟದ ಮಳಿಗೆಗಳಲ್ಲಿರುವ ಉತ್ತಮ ಗ್ರಂಥಗಳೆಲ್ಲವೂ ಮಾರಾಟವಾಗುವ ಚಾರಿತ್ರಿಕ ದಾಖಲೆ ಇಲ್ಲಿಂದಲೇ ತೊಡಗಲಿ ಎಂದೂ ಅರಿಕೆಮಾಡಿಕೊಳ್ಳುತ್ತೇನೆ. ಇದು ಪರೋಪಕಾರ ತ್ಯಾಗವಲ್ಲ; ಆಶೋದ್ಧಾರ, ಕುಟುಂಬ, ಸಂತಾನದ ಏಳಿಗೆಯ ಮಾರ್ಗ. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರದೊಡನೆಯೂ ನನ್ನ ವಿನಂತಿಯೊಂದಿದೆ; ಕನ್ನಡದಲ್ಲಿ ಪ್ರಕಟವಾಗುವ ಉತ್ತಮ ಸಾಹಿತ್ಯ ಕೃತಿಗಳನ್ನು ರಾಜ್ಯದ ಎಲ್ಲ ಪುಸ್ತಕ ಭಂಡಾರಗಳಿಗೂ ಸರಕಾರ ಒದಗಿಸುವ ವ್ಯವಸ್ಥಿತ ಕಾರ್ಯಕ್ರಮ ಕೈಗೊಳ್ಳಬೇಕು. ನನ್ನ ಸೂಚನೆಗಳು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತ್ಯಕ್ಷವಾಗಿಯೇ ಸಂಬಂಧಿಸಿದವುಗಳಾದುದರಿಂದ ಸಮಸ್ತರೂ ಸಂಪೂರ್ಣ ಮನಸ್ಸಿನಿಂದ ಸಹಕರಿಸುವಂತಾಗಲೂ ಒಂದು ನೈತಿಕ ಅಂದೋಲನ ಪ್ರಾರಂಭಿಸತಕ್ಕದಿದೆ. ಅದರ ಯಶಸ್ಸಿಗೆ ಇಂದು ಇಲ್ಲಿಯೇ ಪ್ರತಿಜ್ಞಾಬದ್ಧರಾಗಿ ನಾಡು-ನುಡಿಗಳ ಏಳಿಗೆಯ ಪವಿತ್ರಕಾರ್ಯದಲ್ಲಿ ಪಾಲ್ಗೊಳ್ಳೋಣ ಎಂದು ಪ್ರಾರ್ಥಿಸುತ್ತೇನೆ.
ಕಾಸರಗೋಡು ಸಮ್ಮೇಳನ
ಶತಮಾನಗಳ ತನಕವೂ ದಾಸ್ಯದ ಕೆಸರಲ್ಲಿ ಅದ್ದಿ ಹೋಗಿದ್ದ ನಮ್ಮ ರಾಷ್ಟ್ರ ಗಾಂಧೀಜಿಯಂತಹವರ ನೇತೃತ್ವದಲ್ಲಿ ಸ್ವತಂತ್ರವಾಯಿತು. ಸ್ವಾತಂತ್ರ್ಯ ಸಂಗ್ರಾಮದ ಆ ಸಂದರ್ಭದಲ್ಲಿಯೇ ಭಾಷಾಮೂಲವಾದ ರಾಜ್ಯರಚನೆಯಾಗಬೇಕೆಂಬ ಸಂಕಲ್ಪದಿಂದ ರಚಿಸಿದ ಸಮಿತಿ ಅನುಕೂಲ ವರದಿಯೊಪ್ಪಿಸಿತು. ಆಡಳಿತಭಾಷೆ, ಕೋರ್ಟು ಕಚೇರಿಗಳ ವ್ಯವಹಾರ, ಸಾಮಾನ್ಯ ಜನತೆಗೂ ಮನದಟ್ಟಾಗುವಂತೆ ಆಗಬೇಕೆಂಬುದು ಆ ಬಗ್ಗೆ ಭಾಷಾ ರಾಜ್ಯವಾಗಬೇಕೆಂದು ದೇಶಧುರೀಣರು ನಿರ್ಧರಿಸಿದರು. ಆಲೂರು ವೆಂಕಟರಾಯರು, ಕಡಪಾ ರಾಘವೇಂದ್ರರಾಯರು, ರಂಗನಾಥ ದಿವಾಕರರು, ಕೋಟ ರಾಮಕೃಷ್ಣ ಕಾರಂತರು, ಜಿನರಾಜ ಹೆಗ್ಗಡೆಯವರು, ನಿಜಲಿಂಗಪ್ಪನವರು ಇಂತಹ ರಾಷ್ಟ್ರನಾಯಕರೇ ಏಕೀಕರಣದ ಮುಂದಾಳುಗಳೂ ಆದರು. ಇಂದಿಗೆ ಐವತ್ತು ವರ್ಷಗಳ ಹಿಂದೆ ದೇಶ ಸ್ವತಂತ್ರವಾಯಿತು. ದೇಶಧುರೀಣರು ಸಮ್ಮತಿಸಿದಂತೆ ಭಾಷಾರಾಜ್ಯ ರಚನೆಯಾಗಲಿಲ್ಲವೆಂದು ಆಂಧ್ರದ ಪೊಟ್ಟಿ ಶ್ರೀರಾಮಲು ಆತ್ಮಬಲಿದಾನವಿತ್ತರು. ಅದರಿಂದಾಗಿ, ಆ ಕೂಡಲೇ ಆಂಧ್ರಪ್ರಾಂತ ನಿರ್ಮಾಣವಾಯಿತು. ಅದೇ ವರ್ಷ ಕಾಸರಗೋಡಿನಲ್ಲೇ ಸೇರಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ಹಿರಿಯ ನೇಕಾರರೆಲ್ಲರೂ ಏಕಕಂಠದಿಂದ ಏಕೀಕರಣ ಆಗಲೇಬೇಕೆಂಬ ಘೋಷಣೆ ಮಾಡಿದರು. ಕೇಂದ್ರ ಸರಕಾರ, ಫಜಲಾಲಿ ಆಯೋಗ ನೇಮಿಸಿ, ಅದರ ವರದಿಯಂತೆ ಸಮಸ್ತ ಭಾರತದಲ್ಲಿ ಭಾಷಾ ಮೂಲ ರಾಜ್ಯಗಳ ರಚಿತವಾದವು; ಹತ್ತಾರು ಆಡಳಿತಗಳಲ್ಲಿ ಹರಿದುಹಂಚಿ ಹೋಗಿದ್ದ ಕರ್ನಾಟಕವೂ ಏಕೀಕೃತವಾಗಿ ಜನತೆಯ ಇಚ್ಛೆಗೆ ಮನ್ನಣೆ ದೊರೆತಂತಾಯಿತು.
ಕರ್ನಾಟಕದ ಹೊರಗೆ ಘಟಕಗಳಾಗಲಿ
ಸ್ವಾತಂತ್ರ್ತವು ದೊರೆತು ಏಕೀಕರಣವಾದ ಈ ಅವಕಾಶದಲ್ಲಿ ಯಾವುದೇ ದೌರ್ಬಲ್ಯವನ್ನು ಕಿತ್ತೊಗೆವ ಸಾಮರ್ಥ್ಯ ಕನ್ನಡಿಗರಲ್ಲಿ ಮೂಡಿಬರಬಹುದು ಎಂದು ನಾನು ಭರವಸೆಯುಳ್ಳವನು. ‘ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪಕಲಿಗೆ ಕಲಿಯುಗ ವೀಪರಿತನ್’ ಎಂಬ ಕನ್ನಡಿಗನ ಕುರಿತಾದ ಪ್ರಾಚೀನ ಶಾಸನ ಉಲ್ಲೇಖದಂತೆ, ಕನ್ನಡಿಗರು ಜನ್ಮತಃ ಕೆಲವೊಂದು ಆರ್ಹತೆಯುಳ್ಳವರು. ಇಂದು ಮುಂಬಯಿ, ಚೆನ್ನೈ, ದೆಹಲಿ ಇಂತಹ ಕೇಂದ್ರ ನಗರಗಳಲ್ಲಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಕನ್ನಡದ ಕೀರ್ತಿಯನ್ನು ಎತ್ತಿಹಿಡಿಯುತ್ತಿದ್ದಾರೆ. ಅಲ್ಲಿನ ಅನ್ಯಭಾಷಿಕರೊಂದಿಗೆ ಸಮರಸವಾಗಿ ಬೆರೆತು ಕನ್ನಡತನ ಬೆಳೆಸಿಕೊಳ್ಳುತ್ತಿರುವುದು ಅಭಿನಂದನೀಯ. ಮುಂಬಯಿಗೆ ಹೋದಲ್ಲಿ ನಾವು ಕರ್ನಾಟಕ ರಾಜ್ಯದ ಒಂದು ನಗರಕ್ಕೆ ಹೋದಂತೆಯೂ ನಮಗನ್ನಿಸುತ್ತದೆ. ಅಷ್ಟು ಮಂದಿ ಕನ್ನಡಿಗರು, ಕನ್ನಡ ಸಂಸ್ಥೆಗಳು, ಪತ್ರಿಕೆಗಳೆಲ್ಲವೂ ಅಲ್ಲಿವೆ. ಅಲ್ಲಿ ಕನ್ನಡವನ್ನು ಅಭಿಮಾನದಿಂದ ಅಭ್ಯಸಿಸುತ್ತಿದ್ದಾರೆ. ಕನ್ನಡ ವಿದ್ವಾಂಸರು, ಕವಿಗಳು, ಕತೆಗಾರರು, ಲೇಖಕರು ಬಹುಮಂದಿ ಅಲ್ಲಿರುವರು. ಹೊರರಾಜ್ಯಗಳಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಕನ್ನಡ ಸಂಘ ಸಂಸ್ಥೆಗಳು ಚಟುವಟಿಕೆ ನಡೆಸುತ್ತಿವೆ. ಹೀಗೆ ದೇಶ ವಿದೇಶಗಳಲ್ಲಿ ಕನ್ನಡ ಬಾವುಟವನ್ನು ಎತ್ತಿ ಹಿಡಿದಿರುವ ಕನ್ನಡಿಗರನ್ನು ನಾವು ಮನಸಾರೆ ಅಭಿನಂದಿಸಬೇಕು. ಕರ್ಣಾಟಕ ಸರ್ಕಾರವೂ ಅವರನ್ನು ಪ್ರೋತ್ಸಾಹಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅಲ್ಲೆಲ್ಲಾ ಸದಸ್ಯರನ್ನು ನೋಂದಾಯಿಸುವುದಲ್ಲದೆ ವಿಶೇಷ ಘಟಕಗಳನ್ನು ಸ್ಥಾಪಿಸುವ ಮೂಲಕವೂ ಸಂಪರ್ಕ ಸಂವರ್ಧನೆ ಮಾಡತಕ್ಕದ್ದು ಅತ್ಯಗತ್ಯ.
ಪರಿಷತ್ತಿನ ಬೆಳವಣಿಗೆ
ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಮಹಾರಾಜರ ಕೃಪಾಶ್ರಯದಿಂದ ಪ್ರಾರಂಭವಾಗಿ ಮುಂದೆ ಸಮಸ್ತ ಕನ್ನಡಿಗರ ಮನ್ನಣೆಗೂ ಪಾತ್ರವಾಯಿತೆಂಬುದು ಅಭಿನಂದನೀಯ. ಬೆಂಗಳೂರು ಮಾತ್ರ ಕೇಂದ್ರವಾಗಿ ಸಾಹಿತ್ಯಿಕ ಚಟುವಟಿಕೆಗಳು ಪ್ರಾರಂಭದಲ್ಲಿ ನಡೆಯುತ್ತಿದ್ದರೂ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ಷೇತ್ರ ಮತ್ತೆ ನಾಡಿನಾದ್ಯಂತ ವಿಸ್ತಾರಗೊಂಡಿತು. ಆ ಕಾಲದಲ್ಲಿಯೇ ಭಿನ್ನ ಭಿನ್ನ ಆಡಳಿತಗಳಿಗೆ ಸೇರಿದ ಕನ್ನಡದ ಜಿಲ್ಲೆ ಜಿಲ್ಲೆಗಳಲ್ಲೂ ಶಾಖೆಗಳನ್ನು ತೆರೆದು ಸಾಹಿತ್ಯ ಕಾರ್ಯಕ್ರಮಗಳನ್ನು ಪರಿಷತ್ತು ವಿಸ್ತರಿಸಿದ್ದಲ್ಲದೆ ಈಚೆಗೆ ತಾಲ್ಲೂಕು ಮಟ್ಟದಲ್ಲಿಯೂ ಶಾಖೋಪಶಾಖೆಗಳನ್ನು ಸ್ಥಾಪಿಸುತ್ತಾ ಬಂದಿರುವುದು ನಿಜವಾಗಿಯೂ ಉತ್ತಮ ಕಾರ್ಯ. ಅಖಿಲ ಭಾರತ ಸಮ್ಮೇಳಗಳನ್ನು ವಿಜೃಂಭಣೆಯಿಂದ ಜರುಗಿಸುತ್ತಿರುವಂತೆ ಜಿಲ್ಲಾ ತಾಲ್ಲೂಕು ಮಟ್ಟಗಳಲ್ಲಿಯೂ ಸಾಹಿತ್ಯ ಸಮ್ಮೇಳನಗಳು ಇಂದು ಜರುಗುತ್ತಿವೆ. ಈ ಸ್ತುತ್ಯಕಾರ್ಯ ಗ್ರಾಮ, ಗ್ರಾಮಗಳಿಗೂ ಪಸರಿಸಬೇಕು. ನಮ್ಮ ದೇಶಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲದರ ಭದ್ರವಾದ ತಳಹದಿ ಗ್ರಾಮಗಳಲ್ಲಿಯೂ ವ್ಯವಸ್ಥಿತವಾಗಿ ಸ್ಥಾಪಿತವಾಗುವುದೇ ಸರಿಯಾದ ಸಾಹಿತ್ಯ ಸಂಸ್ಕೃತಿಗಳ ಜನಸಂಪರ್ಕ ಕಾರ್ಯವಾಗಿದೆ. ಈ ಮಹತ್ಕಾರ್ಯ ವ್ಯವಸ್ಥಿತವಾಗಿ ಜರುಗಿ ಹಳ್ಳಿಯಿಂದ ಡಿಲ್ಲಿಯ ತನಕ ವಿಸ್ತರಿಸುತ್ತಾ ಹೋಗಬೇಕೆಂದು ನಾವೆಲ್ಲರೂ ಪ್ರಯತ್ನಿಸೋಣ.
ವಿದ್ಯಾವರ್ಧಕ ಸ್ಥಾಪನೆ ನೆರವು
ಕನ್ನಡ ಸಾಹಿತ್ಯ ಪರಿಷತ್ತಿನ ಈ ಬೆಳವಣಿಗೆಯನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಕನ್ನಡನಾಡು ನುಡಿಗಳ ಅಭಿವೃದ್ಧಿಗಾಗಿ ಪರಿಷತ್ತಿಗಿಂತಲೂ ಹಿಂದೆಯೇ ಸ್ಥಾಪಿತವಾಗಿ, ಕನ್ನಡದ ಉತ್ತಮ ಕಾರ್ಯಗಳನ್ನು ಅಂದಿನಿಂದ ಇಂದಿನವರೆಗೂ ಮಾಡುತ್ತ ಬರುತ್ತಿರುವ ಧಾರವಾಡದ ವಿದ್ಯಾವರ್ಧಕ ಸಂಘದ ಸಾಧನೆಗಳನ್ನೂ ಕೊಂಡಾಡಲೇಬೇಕಾಗಿದೆ. ಕನ್ನಡದ ಶ್ರೇಷ್ಠಕವಿ ಸಾಹಿತಿಗಳು, ಏಕೀಕರಣದ ಅಗ್ರಗಣ್ಯ ನೇತಾರರು ಅನೇಕರು ಈ ಮಹಾಸಂಸ್ಥೆಯಲ್ಲಿ ದುಡಿದಿದ್ದಾರೆ. ಇಂದಿಗೂ ಹಲವರು ಧುರೀಣರು ದುಡಿಯುತ್ತ ಇದ್ದು ನಾಡುನುಡಿಗಳ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಧಾರವಾಡದ ವಿದ್ಯಾವರ್ಧಕ ಸಂಘ, ಸಾಹಿತ್ಯ ಪರಿಷತ್ತಿಗಿಂತ ಪ್ರಾಚೀನ ಸಂಸ್ಥೆಯಾದರೂ ತನ್ನ ವೈಯಕ್ತಿಕ ಘನತೆ ಯೋಗ್ಯತೆಗಳನ್ನು ಉಳಿಸಿಕೊಂಡೇ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗಳಿಗೆ ಸಂಪೂರ್ಣ ಸಹಕರಿಸುತ್ತಾ ಬಂದಿರುವುದು ಅಭಿನಂದನೀಯ. ವಿದ್ಯಾವರ್ಧಕ ಸಂಘದ ಈ ಉತ್ತಮ ಸಹಕಾರವನ್ನು ಕೊಂಡಾಡುವುದೂ ಮಾತ್ರವಲ್ಲ ಆ ಸಂಸ್ಥೆಯು ಇತ್ಯೋಪತಿಶಯ ಸಾಧನೆಗಳನ್ನು ಮಾಡಿ ಕನ್ನಡಿಗರೆಲ್ಲರ ಅಭಿಮಾನದ ಸಂಸ್ಥೆಯಾಗಿ ಚಿರಕಾಲ ಪ್ರಗತಿಪಥದಲ್ಲಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ.
ಸಮ್ಮೇಳನಗಳ ವಿಷಯಗಳ ವ್ಯಾಪ್ತಿ
ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಕಲೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ವಿವಿಧ ಗೋಷ್ಠಿಗಳು ಏರ್ಪಡಿಸಲಾಗುತ್ತಿದೆ. ಈ ಗೋಷ್ಠಿಗಳಲ್ಲಿ ಅಖಿಲ ಭಾರತ, ಅಖಿಲ ಕರ್ನಾಟಕ ಹಾಗೂ ಸಮ್ಮೇಳನ ಜರಗುವ ಪ್ರದೇಶಗಳಿಗೆ ಸಂಬಂಧಿಸಿದ ವಿಷಯ ವಿಚಾರಗಳಿರಬೇಕು. ಐತಿಹಾಸಿಕ, ಧಾರ್ಮಿಕ, ಸಾಹಿತ್ಯಿಕ ಸಾಮಾಜಿಕ ವಿಷಯಗಳು ಹಿಂದಿನಿಂದ ಇಂದಿನ ತನಕವೂ ಮುಂದಕ್ಕೂ ಹೇಗಿರಬೇಕು ಎಂಬ ಚಿಂತನ-ಮಂಥನಗಳು ಗೋಷ್ಠಿಗಳಲ್ಲಿ ನಡೆಯತಕ್ಕದ್ದು. ಅದರಿಂದ ಸಮ್ಮೇಳನದ ಸಭಾಸದರಿಗೆ ತೃಪ್ತಿಕರವಾದ ಜ್ಞಾನದ ಉಣಿಸನ್ನು ಬಡಿಸಿದಂತಾಗುವುದು. ಪರಂಪರೆಯಿಂದ ಇಂದಿನ ಈ ಇಪ್ಪತ್ತನೆಯ ಶತಮಾನದ ತನಕದ ಮತ್ತೆ ಮುಂದಿನ ಶತಮಾನದ ಸಾಹಿತ್ಯ ಇತಿಹಾಸಾದಿಗಳಿಗೂ ಅನ್ವಯಿಸುವ ಪ್ರಗತಿ ಚರ್ಚೆಗಳು ಈ ಗೋಷ್ಠಿಗಳಲ್ಲಿ ನಡೆಯಬೇಕು. ನಿರಂಕುಶಾಃ ಎಂಬ ಸೂಕ್ತಿಯಿದ್ದರೂ, ವ್ಯವಹಾರದಲ್ಲಿ, ಲೇಖಕರಿಗೆ, ಪತ್ರಿಕೆಯವರಿಗೆ ಅವರ ಬರೆಹಗಳ ಕುರಿತು ಟೀಕೆಗಳನ್ನು ಆಗಾಗ ಕೇಳುತ್ತಾ ಇದ್ದೇವೆ. ಇಂತಹ ವಿಚಾರ ಸಮ್ಮೇಳನದ ಗೋಷ್ಠಿಗಳಲ್ಲಿ ಚರ್ಚಿಸಬೇಕಾದ ಒಂದು ಮಹತ್ವದ ವಿಷಯ. ಜಗತ್ತಿನಲ್ಲಿ ಹಾಗೂ ಭಾರತದಲ್ಲಿ ಕನ್ನಡದ ಸ್ಥಾನಮಾನ, ಗಡಿನಾಡು ಹೊರನಾಡುಗಳಲ್ಲಿ ವಿದೇಶಗಳಲ್ಲೂ ಕನ್ನಡದ ಉಳಿವು, ಬೆಳವಣಿಗೆ, ಕನ್ನಡಿಗರ ಉದ್ಯೋಗ, ನಾಡಿನ ಪರಿಸರ, ಜಲ ಗಡಿ ಸಮಸ್ಯೆಗಳೂ ಸಮ್ಮೇಳನದಲ್ಲಿ ಚರ್ಚಿತವಾಗತಕ್ಕದ್ದು; ಗೋಷ್ಠಿಗಳ ಚರ್ಚೆಯಿಂದ ಸಾರ್ವಜನಿಕರಿಗೂ ಸರಕಾರಕ್ಕೂ ಸರಿಯಾದ ಮಾರ್ಗದರ್ಶನ ನೀಡಬೇಕು. ದೇಶದ ವಿವಿಧ ಭಾಷೆಗಳ ಕವಿಗೋಷ್ಠಿಗಳು ಸಮ್ಮೇಳನಕ್ಕೆ ಶೋಭೆ ತರುವವು. ಸರ್ವ ಭಾಷೆಗಳ ಸಾಮರಸ್ಯವು ಅದರಿಂದ ಸ್ಥಾಪಿತವಾಗುವುದು.
ಪರಿಷತ್ತಿನ ಪ್ರಕಟಣೆಗಳು ಹೇಗಿರಬೇಕು?
ಇಂದು ಜಿಲ್ಲಾ ತಾಲ್ಲೂಕು ಮಟ್ಟಗಳಲ್ಲಿ ಸಾಹಿತ್ಯ ಪರಿಷತ್ತು ಸ್ಥಾಪಿತವಾಗಿ ಸಾಹಿತ್ಯಿಕ ಕಾರ್ಯಕಲಾಪಗಳನ್ನು ನಡೆಸುತ್ತಿರುವುದು. ಸಮ್ಮೇಳನಗಳನ್ನು ಜರಗಿಸುತ್ತಿರುವುದೂ ಯೋಗ್ಯವೇ; ಆದರೆ ಸಮ್ಮೇಳನವೆಂದಾಗ ಹೆಚ್ಚಾಗಿ ಜಾತ್ರೆಗಳ ರೀತಿಯಲ್ಲಿ ಜನ ಸೇರುವಿಕೆ ಹಬ್ಬಗಳ ಆಚರಣೆಯಂತೆ ಎಲ್ಲರೂ ಒಗ್ಗೂಡಿ ನಡೆಯುವ ಊಟೋಪಚಾರ – ಇದೇ ಮನೋಭಾವನೆಯಿರುತ್ತದೆ. ಅದೂ ಇರಲಿ, ಸಾಹಿತ್ಯ ಸಮ್ಮೇಳನಗಳನ್ನು ಜಿಲ್ಲಾ ತಾಲ್ಲೂಕು ಮಟ್ಟಗಳಲ್ಲಿಯೂ ಜರುಗಿಸುವ ಜೊತೆಗೆ ಪ್ರತಿ ಜಿಲ್ಲೆಯ, ಪ್ರತಿ ತಾಲ್ಲೂಕಿನ ಪ್ರಾತಿನಿಧಿಕ ಕವಿ, ಕತೆಗಾರ, ನಾಟಕಕಾರ, ಲೇಖಕರ ಆಯ್ದ ಕೃತಿಗಳನ್ನು ವರ್ಷಕ್ಕೆ ಒಂದರಂತೆ ಪ್ರಕಟಿಸುವ ಕಾರ್ಯಕ್ರಮವನ್ನೂ ಇಟ್ಟುಕೊಳ್ಳಬಹುದು. ಪರಿಷತ್ತಿನ ಘಟನೆಯಂತೆ, ಪ್ರತಿ ಜಿಲ್ಲಾ ತಾಲ್ಲೂಕು ಪರಿಷತ್ತುಗಳ ಕಾಲಾವಧಿ ಮೂರು ವರ್ಷವಾಗಿರುವಾಗ, ಒಂದು ವರ್ಷ ಅಲ್ಲಿನ ಕವಿಗಳ ಕವಿತಾ ಸಂಪುಟ, ಇನ್ನೊಂದು ವರ್ಷ ಕಥಾಸಂಗ್ರಹ, ಮುಂದಿನ ವರ್ಷ ಇತರ ಶೈಲಿಯ ಲೇಖನಗಳು- ಹೀಗೆ ವರ್ಷಕ್ಕೆ ಒಂದರಂತೆ ಉತ್ತಮ ಸಾಹಿತ್ಯಕೃತಿ ಸಂಗ್ರಹಗಳು ಪ್ರಕಟವಾಗಬೇಕು. ಆಯಾಯ ಪ್ರದೇಶದ ಸಾಹಿತ್ಯಾಭಿಮಾನಿಗಳ ನೆರವನ್ನು ಸರಿಯಾಗಿ ಪಡೆದುಕೊಳ್ಳತಕ್ಕದ್ದು, ಆ ಸಂಗ್ರಹ ಕೃತಿಯ ಬಿಡುಗಡೆಯ ಸಮಾರಂಭವನ್ನು ಏರ್ಪಡಿಸಬೇಕು. ಬಿಡುಗಡೆಯ ಸಮಾರಂಭದಂದೇ ಆ ಪ್ರಕಟಿತ ಪುಸ್ತಕದ ಮುದ್ರಣ ವೆಚ್ಚವಾದರೂ ಬರುವ ರೀತಿಯಲ್ಲಿ ಮಾರಾಟದ ವ್ಯವಸ್ಥೆ ಮಾಡುವುದು ಅಗತ್ಯ. ಮತ್ತೆ ಇಡೀ ವರ್ಷದಲ್ಲಿ ಉಳಿದ ಪುಸ್ತಕಗಳ ಮಾರಾಟ ಮಾಡಿಕೊಳ್ಳಬಹದು. ಸಾಹಿತ್ಯ ಭಾವನಾತ್ಮಕವಾಗಿರುವಂತೆ, ವ್ಯಾವಹಾರಿಕವೂ ಆದಲ್ಲಿ ಆ ಕ್ಷೇತ್ರದಲ್ಲಿಯೂ ಪ್ರಗತಿ ಸಾಧಿಸಬಹುದು. ತಾಲ್ಲೂಕು ಮಟ್ಟದ ಈ ತೆರನ ಪ್ರಾತಿನಿಧಿಕ ಲೇಖಕರ ಪುಸ್ತಕ ಪ್ರಕಟಣೆಯ ಆಧಾರದಲ್ಲಿ ಅವುಗಳಿಂದಲೇ ಶ್ರೇಷ್ಠವಾದವುಗಳನ್ನು ಆಯ್ಕೆ ಮಾಡಿ ಕೇಂದ್ರ ಸಾಹಿತ್ಯ ಪರಿಷತ್ ಮಟ್ಟದಲ್ಲಿ ಹೀಗೆ ಇಡೀ ಕನ್ನಡನಾಡಿನ ಪ್ರಾತಿನಿಧಿಕ ಲೇಖಕರ ಕೃತಿಪರಿಚಯ ಸಮಸ್ತ ಕನ್ನಡಿಗರಿಗೆ ಪ್ರತಿವರ್ಷ ಆಗುವುದು ಯೋಗ್ಯ. ಆ ಮೂಲಕ ಸಾಹಿತ್ಯ ಸಂಸ್ಕೃತಿಯ ಪ್ರಚಾರವೂ ನಡೆಯುತ್ತಾ ಇದ್ದಲ್ಲಿ ಕನ್ನಡ ಭಾಷೆ ಸಾಹಿತ್ಯದ ಸಂವರ್ಧನೆ ಸಮೃದ್ಧವಾದೀತು.
ತಿಂಗಳ ಗೋಷ್ಠಿ ನಡೆಸಿ
ಇಂದು ಗ್ರಾಮ ತಾಲ್ಲೂಕು ಜಿಲ್ಲಾ ಮಟ್ಟಗಳಲ್ಲಿ ಅಲ್ಲಲ್ಲಿ ನಾಡಿನಾದ್ಯಂತ ಕನ್ನಡ ಸಂಘ ಸಂಸ್ಥೆಗಳು ಇರುವುದು ಶುಭ ಚಿಹ್ನೆ. ಆ ಸಂಘ ಸಂಸ್ಥೆಗಳು ಆಯಾಯ ಪ್ರದೇಶಗಳಲ್ಲಿ ಎಂದರೆ ಗ್ರಾಮ ತಾಲ್ಲೂಕು ಜಿಲ್ಲಾ ಮಟ್ಟದ ಒಂದು ಕೇಂದ್ರ ಸ್ಥಳದಲ್ಲಿ ಪ್ರಾತಿನಿಧಿಕವಾಗಿ ಸೇರಿ ಪ್ರತಿ ತಿಂಗಳೂ ಒಂದೊಂದು ಸಾಹಿತ್ಯ ಗೋಷ್ಠಿ ನಡೆಸುವುದು ಸಾಹಿತ್ಯಾಭಿವೃದ್ಧಿಗೆ ಪೋಷಕ. ಈ ಗೋಷ್ಠಿಗಳು ಸಮಕಾಲೀನ ಪ್ರಕಟಿತ ಕೃತಿಗಳ ಕುರಿತು ಇರಬಹುದು. ಪಂಪ, ರನ್ನ, ಕುಮಾರವ್ಯಾಸಾದಿ ಮಹಾಕವಿಗಳ ಹಾಗೂ ಆಧುನಿಕರಾದ ಬಿ.ಎಂ.ಶ್ರಿ, ಪಂಜೆ, ಕುವೆಂಪು, ಬೇಂದ್ರೆ ಇಂತಹವರ ಕೃತಿ ವಿಷಯವಾಗಿಯೂ ನಡೆಸಬಹುದು. ಪತ್ರಿಕೆಗಳಲ್ಲಿ ಆಧುನಿಕ ಲೇಖಕರ ಕೃತಿ ವಿಮರ್ಶೆ ಬರುವವುಗಳಲ್ಲಿ ಯಾವುದನ್ನಾದರೂ ಆರಿಸಿಕೊಂಡು ಗೋಷ್ಠಿ ನಡೆಸುವುದೂ ಸೂಕ್ತ. ಶ್ರೇಷ್ಠ ಗಮಕಿಗಳನ್ನು ಆಹ್ವಾನಿಸಿ ಅದರಿಂದ ಕವನ ಹಾಡಿಸಿ ಆನಂದಪಡಬಹುದು. ಸ್ವರಚಿತ ಕೃತಿಗಳನ್ನೋ ಇತರರ ಕಾವ್ಯಗಳನ್ನೋ ಸ್ವಾರಸ್ಯಕರವಾದ ರೀತಿಯಲ್ಲಿ ಹಾಡಿ, ಹೇಳಿ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವ ಕವಿಗಳನ್ನೋ ವಿದ್ವಾಂಸರನ್ನೋ ಆಮಂತ್ರಿಸಿ ಗೋಷ್ಠಿಗಳ ವ್ಯವಸ್ಥೆ ಮಾಡುವುದೂ ವಿಹಿತ. ಯಾವುದೇ ರೀತಿಯಲ್ಲಿ ಸಾಹಿತ್ಯ ಗೋಷ್ಠಿ ನಡೆಸಿದರೂ ಅದರಿಂದ ಶ್ರೋತೃಗಳಲ್ಲಿ ಉತ್ತಮ ಪರಿಣಾಮವಾದೀತು, ಸಾಹಿತ್ಯ ಸಂಸ್ಕೃತಿಗಳ ಪ್ರಚಾರದ ಫಲ ದೊರಕುವುದು. ‘ಮಾಲೆಗಾರನ ಪೊಸಬಾಸಿಗಂ ಮುಡಿವ ಯೋಗಿಗಳಿಲ್ಲದೆ ಬಾಡಿಪೊಗದೇ” ಎಂದು ಕನ್ನಡದ ಹಿರಿಯ ಕವಿಯೊಬ್ಬನು ಉದ್ಗರಿಸಿದ್ದಾನೆ. ಮಾಲೆಗಳನ್ನು ಕನ್ನಡ ಲೇಖಕರಿಗೆ ನಾಡಿನ ಜನತೆ ನೀಡುವ ಅವಶ್ಯವಿದೆ. ಆದರಿಂದ ರಚನಾತ್ಮಕವಾಗಿ ಸಾಹಿತ್ಯಾಭಿವೃದ್ಧಿ ಕಾರ್ಯ ಆಗುವುದು.
ಸಮ್ಮೇಳನಗಳಿಗೆ ಹಣದ ವ್ಯವಸ್ಥೆ
ಸಾಹಿತ್ಯ ಸಮ್ಮೇಳನಗಳಲ್ಲಿ ಇಂದು ಖರ್ಚು ವೆಚ್ಚಗಳು ಹೆಚ್ಚಾಗುತ್ತಿವೆ; ಸಾಹಿತಿಗಳಿಗಿಂತ ಹೆಚ್ಚು ಸಾಹಿತ್ಯೇತರ ಧುರೀಣರಿಗೆ ಮನ್ನಣೆ ಮಣೆ ನೀಡಲಾಗುತ್ತಿದೆ. ಸಮ್ಮೇಳನಗಳು ಜಾತ್ರೆ ಆಡಂಬರಗಳಾಗದೆ ಕ್ರಿಯಾತ್ಮಕ ಸಾಹಿತ್ಯ ವಿಚಾರಗಳ ವೇದಿಕೆಯಂತಿರಬೇಕು – ಎಂಬಿತ್ಯಾದಿ ಮಾತುಗಳನ್ನು ಕೇಳುತ್ತಿದ್ದೇವೆ. ಮಹಾರಾಷ್ಟ್ರ ಸಾಹಿತ್ಯ ಸಮ್ಮೇಳನಗಳ ಮಾದರಿಯನ್ನು ಅನುಸರಿಸಬೇಕು. ಹಿತೋಪದೇಶವೂ ಬಂದಿದೆ. ಈ ಉಪದೇಶವೂ ಸ್ವೀಕಾರಾರ್ಹ, ಮನುಷ್ಯರ ಒಂದು ಸಹಜ ಪ್ರವೃತ್ತಿಯೆಂದರೆ ತಮ್ಮ ತಮ್ಮ ಸ್ವಂತ ಮನೆಗಳಲ್ಲಿಯಾದರೂ ಆಗುವ ವಿವಾಹಾದಿ ಸಾಮಾಜಿಕ ಕಾರ್ಯಗಳನ್ನೂ ಆದಷ್ಟು ವಿಜೃಂಭಣೆಯಿಂದ ಸಾಲಮಾಡಿಯಾದರೂ ನೆರವೇರಿಸಬೇಕೆಂಬುದು; ಆಮಂತ್ರಿತರನ್ನು ಸಂತುಷ್ಟಗೊಳಿಸುವ ಉತ್ಸಾಹದಲ್ಲಿ ಕೆಲವೊಮ್ಮೆ ಆಡಂಬರದ ಸಂದರ್ಭವೂ ಬರುತ್ತದೆ. ಅಂತಹ ಪ್ರವೃತ್ತಿಯನ್ನು ಗೃಹಸ್ಥರು ಸಡಿಲುಬಿಡದೆ, ಅಂಕೆಯಲ್ಲಿಟ್ಟುಕೊಂಡು, ಆಹ್ವಾನಿತರನ್ನು ಸಂತೋಷಗೊಳಿಸುವುದರೊಂದಿಗೆ ತಮ್ಮ ಗೃಹ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ಮುನ್ನೆಡೆಸುವ ಮುಂಜಾಗ್ರತೆ ಇಟ್ಟುಕೊಳ್ಳತಕ್ಕದ್ದು ಯೋಗ್ಯವಷ್ಟೆ. ಕರ್ನಾಟಕ ರಾಜ್ಯರಚನೆಯಾದ ನಂತರ ಮಾತ್ರ ಸಾಹಿತ್ಯ ಸಮ್ಮೇಳನಗಳಿಗೆ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಲು ಪ್ರಾರಂಭಿಸಿದ್ದು ಅದಕ್ಕಿಂತ ಹಿಂದೆಯೇ ಮದ್ರಾಸು, ಬೊಂಬಾಯಿ, ಹೈದರಾಬಾದ್ ಮುಂತಾದ ರಾಜ್ಯಗಳಲ್ಲಿ ಕನ್ನಡ ಹಂಚಿದ್ದಾಗಲೂ ಸರಕಾರದ ಹಣ ಪಡೆಯದೆ ಬೇರೆ ಬೇರೆ ಪ್ರದೇಶಗಳಲ್ಲಿ ಯಶಸ್ವಿಯಾಗಿ ಸಮ್ಮೇಳನಗಳು ಜರುಗಿವೆ. ವಸತಿ ಊಟೋಪಚಾರಗಳೂ ವ್ಯವಸ್ಥಿತವಾಗಿ ಆಗಿವೆ. ಇಂದು ಸರಕಾರ ಧನಸಹಾಯ ಮಾಡುವುದಿದ್ದರೂ, ಅದು ಜನತೆ ನೀಡಿದ ತೆರಿಗೆಗಳು ಆದಾಯದ ಭಾಗವಲ್ಲದೆ, ಬೇರೆಯಲ್ಲ; ಅದೂ ಜನಸಾಮಾನ್ಯರ ಕೊಡುಗೆಯೇ; ಅದನ್ನು ಸ್ವೀಕರಿಸುವುದರಲ್ಲಿ ಅಪರಾಧವಿಲ್ಲ; ಹಣ ನೀಡಿದ ಬಗ್ಗೆ ಸರಕಾರಕ್ಕೆ ಸಂಪೂರ್ಣ ಕೃತಜ್ಞರಾಗಿರಲೇಬೇಕು. ಸಕಾಲದಲ್ಲಿ ಸರಿಯಾದ ಲೆಕ್ಕಪತ್ರಗಳನ್ನು ಒದಗಿಸತಕ್ಕದ್ದು. ಹಾಗೆಂದು ಹಣ ಪಡೆದದ್ದರಿಂದ ಆತ್ಮಾಭಿಮಾನಶೂನ್ಯವಾಗಬಾರದು. ಅಥವಾ ಧನಸಹಾಯ ಪಡೆದು ಆಡಂಬರ ಮಾಡಕೂಡದು. ಸಾಹಿತ್ಯ ಸಮ್ಮೇಳನಗಳು ನಿರುದ್ದೇಶದ ಜನಜಂಗುಳಿಯ ಜಾತ್ರೆಯಾಗಿ ಸದುದ್ದೇಶದ ಪುಣ್ಯಯಾತ್ರೆಯಂತಿರಬೇಕು’ ಈ ಸಲದ ಸಾಹಿತ್ಯ ಸಮ್ಮೇಳನ ಅಂತಹ ಉತ್ತಮ ಆದರ್ಶವನ್ನು ಮುಂದಿಟ್ಟು ಸುವ್ಯವಸ್ಥಿತವಾಗಿ ಜರುಗುತ್ತದೆ. ಜರುಗಲಿ ಎಂಬುದು ನನ್ನ ಹಾರೈಕೆ. ಸಮ್ಮೇಳನಗಳನ್ನು ರಾಜ್ಯ ಜಿಲ್ಲಾ ತಾಲ್ಲೂಕು ಮಟ್ಟಗಳಲ್ಲಿ ಯಶಸ್ವಿಯಾಗಿಸಿದ ಮಹನಿಯರೇ ಇಲ್ಲಿಯೂ ಮುಂದಾಳುತನ ವಹಿಸಿರುವುದು ಅಭಿನಂದನೀಯ. ಮುಂದಿನ ಸಮ್ಮೇಳನಗಳ ಸಮರ್ಥ ಸಂಘಟನೆಗೆ ಈ ಸಮ್ಮೇಳನ ಮಾದರಿಯಾಗಲಿ ಎಂದು ಹಾರೈಸುವುದರೊಂದಿಗೆ, ಆ ಬಗ್ಗೆ ಮುಂದೆಯೂ ಉದಾರಹೃದಯದಿಂದ ಸರ್ವರೂ ಸಹಕರಿಸಬೇಕೆಂದು ವಿನಂತಿಸುತ್ತೇನೆ.
ಸಮ್ಮೇಳನದ ನಿರ್ಣಯಗಳು
ಸಾಹಿತ್ಯ ಸಮ್ಮೇಳನಗಳಲ್ಲಿ ಮಂಜೂರಾಗುವ ನಿರ್ಣಯಗಳು ಜಾರಿಯಾಗುವಂತೆ ಪ್ರಯತ್ನಿಸಬೇಕಾದ ಮಹತ್ವದ ಕರ್ತವ್ಯವಿದೆ. ಪ್ರತಿ ಸಮ್ಮೇಳನದಲ್ಲೂ ಆದ ನಿರ್ಣಯಗಳನ್ನು ಸಂಬಂಧಪಟ್ಟವರಿಗೆ ತಿಳಿಸಿ ಯೋಗ್ಯ ಕಾರ್ಯಕ್ರಮ ಕೈಕೊಳ್ಳುವರ ಕೇಳಿಕೊಂಡು ಪತ್ರವ್ಯವಹಾರ ಮಾಡಿ ಅವರಿಂದ ಸಕಾಲದಲ್ಲಿ ಉತ್ತರ ಬರದಿದ್ದರೆ ಮರಳಿ ನೆನಪಿಸುವ ಪತ್ರವನ್ನೂ ಪರಿಷತ್ತು ಕಳುಹಿಸಬೇಕು. ನಿರ್ಣಯಗಳಲ್ಲಿ ಪ್ರಸ್ತಾಪಿಸಿದ ವಿಷಯದಲ್ಲಿ ಸಂಬಂಧಪಟ್ಟವರು ಅವಶ್ಯವಿರುವ ಕಾರ್ಯಕ್ರಮ ಕೈಗೊಳ್ಳುತ್ತಾರೆ. ಅಥವಾ ಕೈಗೊಳ್ಳುವುದಿಲ್ಲ ಈ ಸಂಗತಿಗಳನ್ನು ಖಚಿತವಾಗಿ ತಿಳಿದುಕೊಳ್ಳುವುದು ತೀರಾ ಅವಶ್ಯ; ಹಾಗಿಲ್ಲವಾದರೆ ಸಹಸ್ರ ಸಹಸ್ರ ಕಂಠಗಳ ಒಮ್ಮತದಿಂದ ಮಾಡಿದ ನಿರ್ಣಯಗಳಿಗೆ ಬೆಲೆಯೇನು? ಯಾರು ಯಾವ ನಿರ್ಣಯ ಮಂಡಿಸಿದ್ದಾರೋ ಅವರಿಗೆ ಅದರ ಪರಿಣಾಮದ ಕುರಿತು ತಿಳಿಸುವುದೂ ಅಗತ್ಯ. ಹಾಗೆ ತಿಳಿಸಿದಲ್ಲಿ ಮಂಡಿತವಾಗಿ ಮಂಜೂರಾದ ನಿರ್ಣಯಗಳು ತಿರಸ್ಕೃತವಾದರೆ ಮುಂದಿನ ಹೆಜ್ಜೆ ಅವರೂ ನಿರ್ಣಯಿಸಬಹುದು. ಸಮ್ಮೇಳನಗಳಲ್ಲಿ ಮಂಜೂರು ಮಾಡತಕ್ಕ ನಿರ್ಣಯಗಳನ್ನು ನಾಡುನುಡಿಗಳಿಗೆ, ಸಾಹಿತ್ಯ ಸಂಸ್ಕೃತಿಗಳಿಗೆ ಸಂಬಂಧಪಟ್ಟವುಗಳೇ ಆಗಿರಬೇಕೆಂಬ ಮೂಲತತ್ವವನ್ನು ಎಲ್ಲರೂ ಪರಿಪಾಲಿಸತಕ್ಕದ್ದು, ಹಾಗಾದರೆ ಮಾತ್ರ ನಿರ್ಣಯಗಳಿಗೆ ಬೆಲೆ ಬರುವುದು. ಸಂಬಂಧಪಟ್ಟವರಾದರೂ ಅದನ್ನು ಪರಿಶೀಲಿಸಿ ಯುಕ್ತ ಕಾರ್ಯಕ್ರಮ ಕೈಗೊಂಡರೆ ಅನುಕೂಲವಾಗುವುದು. ಹಾಗಾಗಿ ನಿರ್ಣಯ ಮಂಡನೆ ಕುರಿತೂ, ಗಂಭೀರ ಪರಿಶೀಲನೆ ಅಗತ್ಯ. ಹೀಗೆ ಶ್ರದ್ಧೆಯಿಂದ ಈ ನಿರ್ಣಯ ಮಂಜೂರಾತಿ ಕಾರ್ಯ ನಡೆದಲ್ಲಿ ಕೆಲವು ಕಡೆಗಳಿಂದ ಕೇಳಿಬರುವ ದೂರು ಇಲ್ಲವಾಗಿ ಸಮ್ಮೇಳನದ ಕಾರ್ಯಕಲಾಪಗಳಿಗೆ ಕಳೆಯೇರುವುದು.
Tag: Kannada Sahitya Sammelana 66, Kayyara Kinhanna Rai
೬೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಚೆನ್ನವೀರ ಕಣವಿ
ಪ್ರಸಿದ್ಧ ಕವಿ, ವಿಮರ್ಶಕ ಚೆನ್ನವೀರ ಕಣವಿ ಅವರು ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಸಕ್ರಪ್ಪ-ಪಾರ್ವತವ್ವ ದಂಪತಿಗಳಿಗೆ ೨೮-೬-೧೯೨೮ರಲ್ಲಿ ಜನಿಸಿದರು. ಶಿರುಂಡ, ಗರಗಗಳಲ್ಲಿ ೧೯೪0-೪೬ರಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೫0ರಲ್ಲಿ ಬಿ.ಎ. ಪದವಿಯನ್ನು, ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿಯನ್ನೂ ಗಳಿಸಿದರು.
೧೯೫೨ರಲ್ಲಿ ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿಯಾಗಿ ಸೇವೆ ಪ್ರಾರಂಭಿಸಿದ ಕಣವಿ ಅವರು ಅನಂತರ ೧೯೫೮ರಲ್ಲಿ ಅದರ ನಿರ್ದೇಶಕರಾದರು.
ಹಲವಾರು ಪ್ರಶಸ್ತಿಗಳು ಕಣವಿ ಅವರ ಸಾಹಿತ್ಯ ಸಾಧನೆಗಾಗಿ ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೧), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೫), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(೧೯೮೯), ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸ್ಕೃತಿ ವಿಭಾಗದ ಎಮರಿಟಿಸ್ ಫೆಲೋಷಿಪ್(೧೯೯೬-೯೮), ಪಂಪ ಪ್ರಶಸ್ತಿ(೧೯೯೯), ಇತ್ಯಾದಿ. ೧೯೯೬ರಲ್ಲಿ ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಸನದಲ್ಲಿ ಜರುಗಿದಾಗ ಕಣವಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು.
ಕಣವಿ ಅವರು ಕವಿತೆ, ವಿಮರ್ಶೆ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕನ್ನಡ ನಾಡಿನ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ.
ಕಣವಿ ಅವರ ಕಾವ್ಯಸಂಕಲನಗಳಲ್ಲಿ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ದೀಪಧಾರಿ, ಮೆರವಣಿಗೆ, ಜೀವಧ್ವನಿ, ನಗರದಲ್ಲಿ ನೆರಳು, ಚಿರಂತನದಾಸ ಪ್ರಸಿದ್ಧವಾಗಿವೆ.
ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ ಇತ್ಯಾದಿ ವಿಮರ್ಶಾ ಗ್ರಂಥಗಳು ಜನಪ್ರಿಯವಾಗಿವೆ.
ಧಾರವಾಡದ ಕಲ್ಯಾಣ ನಗರದ ಚೆಂಬೆಳಕು ನಿವಾಸದಲ್ಲಿ ಕಣವಿ ಅವರು ನಿವೃತ್ತಜೀವನ ನಡೆಸುತ್ತಿದ್ದಾರೆ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನ–೬೫
ಅಧ್ಯಕ್ಷರು, ಚೆನ್ನವೀರ ಕಣವಿ
ದಿನಾಂಕ ೨೧, ೨೨, ೨೩, ೨೪ ಡಿಸೆಂಬರ್ ೧೯೯೬
ಸ್ಥಳ : ಹಾಸನ
ಸಮ್ಮೇಳನ ನೋಡುವುದೇ ಆನಂದ
ಕವಿ ಪು.ತಿ.ನ ಅವರು ನನಗೆ ಬರೆದ ಅಭಿನಂದನ ಪತ್ರದಲ್ಲಿರುವ ಒಂದು ಮಾತು ಹೀಗಿದೆ; ‘ಕನ್ನಡ ನಾಡಿನ ಎಲ್ಲ ಭಾಗಗಳಿಂದಲೂ ಹೊಮ್ಮಿ ಹರಿದು ಬರುವ ಕನ್ನಡಿಗರ ನೆರವಿಯನ್ನು ನೋಡುವುದೇ ಒಂದು ಸಂತೋಷ. ಅದರಲ್ಲೂ ವೇದಿಕೆ ಅಧ್ಯಕ್ಷ ಸ್ಥಾನದಿಂದ ಅವರ ದರ್ಶನ ಇನ್ನೂ ಆನಂದದಾಯವಾದ್ದು’. ಅಂಥ ‘ದರ್ಶನ’ ದ ಆನಂದವನ್ನು ತಾವೆಲ್ಲರೂ ನನಗೆ ದಯಪಾಲಿಸಿರುವ ಇಂದಿನ ಸಂದರ್ಭದಲ್ಲಿ ೫೨ವರ್ಷಗಳ ಹಿಂದೆ ನಾನು ಹೈಸ್ಕೂಲ್ ವಿದಾರ್ಥಿಯಾಗಿದ್ದಾಗ ನೋಡಿದ ಮೊಟ್ಟ ಮೊದಲ ಸಾಹಿತ್ಯ ಸಮ್ಮೇಳದ ನೆನಪಾಗುತ್ತದೆ.
ರಬಕವಿ ಸಮ್ಮೇಳನ
೧೯೪೪ರಲ್ಲಿ ರಬಕವಿಯಲ್ಲಿ ನಡೆದ ಆ (೨೮ನೆಯ) ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು ಧಾರವಾಡದ ಪ್ರೊ. ಶಿ.ಶಿ. ಬಸವನಾಳರು, ಅಂದು ಜೋಳದರಾಶಿ ದೊಡ್ಡನಗೌಡರ ಕಂಚಿನ ಕಂಠದಿಂದ ಹೊಮ್ಮಿದ ಪ್ರಾರ್ಥನೆ ಸುತ್ತಲಿನ ಕಟ್ಟಡಗಳಿಂದ ಪ್ರತಿಧ್ವನಿಗೊಂಡಿತ್ತು. ಒಬ್ಬರು ಮೆಲ್ಲನೆ ಮೇಲೆದ್ದು ಮುಗುಳು ನಗುತ್ತಲೇ ಪ್ರೀತಿ ತುಂಬಿದ ಧ್ವನಿಯಲ್ಲಿ ‘ಅಣ್ಣಂದಿರೇ, ತಾಯಂದಿರೆ’ ಎಂದು ಸಂಬೋಧಿಸಿ ಕನ್ನಡದ ಬಗ್ಗೆ ಅತ್ಯಂತ ಕಳಕಳಿಯಿಂದ ಮಾತನಾಡಿದ್ದನ್ನು ನಾನು ಮಂತ್ರಮುಗ್ಧನಾಗಿ ಕೇಳಿದೆ. ಅವರೇ ಮಾಸ್ತಿಯವರು ಎಂದು ತಿಳಿದಾಗ ನನಗೆ ನಿಜಕ್ಕೂ ರೋಮಾಂಚನವಾಯಿತು. ಕವಿಗೋಷ್ಠಿಯ ಉದ್ಘಾಟಕರಾಗಿ ಬಿ.ಎಂ.ಶ್ರೀ ಅವರ ಕಾವ್ಯವಾಣಿ ಕಿವಿಗಳನ್ನು ತುಂಬಿತು. ಆಗ ಪ್ರಗತಿಶೀಲ ಸಾಹಿತ್ಯ ಕುರಿತು ಪತ್ರಿಕೆಗಳಲ್ಲಿ ನಡೆಯುತ್ತಿದ್ದ ಮುಖ್ಯವಾಗಿ ‘ಉಷಾ ಮಾಸಪತ್ರಿಕೆ’ ವಾದ ವಿವಾದವನ್ನು ನಾನು ಗಮನಿಸಿದ್ದನಾದ್ದರಿಂದ ಗೋಕಾಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿಶೀಲ ಸಾಹಿತ್ಯಗೋಷ್ಠಿ ಸಹಜವಾಗಿಯೇ ನನ್ನ ಕುತೂಹಲವನ್ನು ಕೆರಳಿಸಿತು. ಆ ಗೋಷ್ಠಿಯಲ್ಲಿ ಅ.ನ.ಕೃ, ತ.ರಾ.ಸು, ಕುಳಕುಂದ ಶಿವರಾಯ (ನಿರಂಜನ), ನಾಡಿಗೇರ ಕೃಷ್ಣರಾಯ, ಅರ್ಚಕ ವೆಂಕಟೇಶ, ಮಾ.ನಾ. ಚೌಡಪ್ಪ ಇವರು ಭಾಗವಹಿಸಿ ಆವೇಶದಿಂದ ಮಾತನಾಡಿದ್ದು ನನಗಿನ್ನೂ ನೆನಪಿದೆ. ಉತ್ತಂಗಿ ಚೆನ್ನಪ್ಪನವರು, ಜಿ.ಪಿ. ರಾಜರತ್ನಂ, ಸಿಂಪಿ ಲಿಂಗಣ್ಣ, ಈಶ್ವರ ಸಣಕಲ್ಲ ಮೊದಲಾದವರು ಬೇರೆ ಬೇರೆ ಗೋಷ್ಠಿಗಳ ಅಧ್ಯಕ್ಷರಾಗಿ, ಉದ್ಘಾಟಕರಾಗಿ ತಮ್ಮ ತಮ್ಮ ವಿಶಿಷ್ಟ ಶೈಲಿಯಲ್ಲಿ ಭಾಷಣ ಮಾಡಿದ್ದನ್ನು ನಾನು ಇಂದಿಗೂ ಮರೆತಿಲ್ಲ. ಮಲ್ಲಿಕಾರ್ಜುನ ಮನಸೂರ ಅವರ ಸಂಗೀತವಂತೂ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತು.
ನಾನು ಮೇಲೆ ಹೆಸರಿಸಿದ ಎಲ್ಲಾ ಮಹನೀಯರು, ಇಂದು ಕಣ್ಮರೆಯಾಗಿದ್ದರೂ ತಮ್ಮ ಅಮೂಲ್ಯವಾದ ಸಾಹಿತ್ಯ ಕೃತಿಗಳ ಮೂಲಕ ಜೀವಂತವಾಗಿ ನಮ್ಮಲ್ಲಿ ಉಸಿರಾಡುತ್ತಿದ್ದಾರೆ. ಸ್ಪೂರ್ತಿದಾಯಕವಾದ ಈ ಪ್ರಸಂಗವನ್ನು ಇಲ್ಲಿ ಹೇಳಬೇಕಾಗಿ ಬಂದ ಉದ್ದೇಶವಿಷ್ಟೆ. ಸಾಹಿತ್ಯ ಸಮ್ಮೇಳನ ಬಹಿರಂಗದಲ್ಲಿ, ಸಂಖ್ಯಾ ಬಾಹುಳ್ಯದಿಂದ ‘ಜಾತ್ರೆಯ ಸ್ವರೂಪವನ್ನು ಪಡೆದಿದ್ದರೂ ಅಂತರಂಗದಲ್ಲಿ ಸಾಹಿತ್ಯ ಯಾತ್ರೆಯಾಗಿ ಪರಿಣಮಿಸುವುದನ್ನು ಮರೆಯಬಾರದು’. ಸಾಹಿತ್ಯ ಪ್ರೇಮಿಗಳ, ವಾಚನಾಸಕ್ತರ ದೊಡ್ಡ ಜನಸಮೂಹ ಸಮ್ಮುಖದಲ್ಲಿಯೂ ಸಾರ್ವಜನಿಕ ಆವೇಶ, ಭಾವಿಕ ಪ್ರತಿಕಿಯೆಗಳನ್ನು ದೂರವಿಟ್ಟು, ಮೌಲಿಕ ಚರ್ಚೆ ನಡೆಸುವುದು ಅಸಾಧ್ಯವೇನೂ ಅಲ್ಲ. ಅಸಾಹಿತ್ಯಕವಾದ ರಾಜಕೀಯ ಒತ್ತಡಗಳಿಗೆ ಮಾತ್ರ ಪರಿಷತ್ತು ಮಣಿಯದಂತಿದ್ದರೆ ಸಾಕು. ಅದರ ಗೌರವ ಹೆಚ್ಚುವುದರಲ್ಲಿ ಸಂದೇಹವಿಲ್ಲ. ನಿಜವಾದ, ಜೀವಂತವಾದ ಸಾಹಿತ್ಯದ ಕೆಲಸಗಳಿಗೂ ಇದರಿಂದ ದಾರಿ ಸುಗಮಗೊಳ್ಳಬಹುದೆಂದು ನಾನು ಆಶಿಸಿದ್ದೇನೆ.
ಪರಿಷತ್ತು ಕನ್ನಡಿಗರ ಸಂಸ್ಥೆ
ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ನಾಡಿನ ಬಹುದೊಡ್ಡ ಪ್ರಾತಿನಿಧಿಕ ಸಂಸ್ಥೆ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ತರುವಾಯ ಸಮಸ್ತ ಕರ್ನಾಟಕದ ವ್ಯಾಪ್ತಿಯುಳ್ಳ ಸಂಸ್ಥೆಯೆಂದರೆ ಇದೊಂದೇ. ಇದರ ಕಾರ್ಯರಂಗ ಹಾಗೂ ಹೊಣೆಗಾರಿಕೆ ಹರಡಿಕೊಂಡು ಬಂದಂತೆ, ತಮ್ಮನ್ನು ‘ತಾಯ್ನುಡಿಯ ತಮ್ಮಡಿ’ ಎಂದು ಕರೆದುಕೊಂಡು ನಾಡಿನ ಹಿರಿಯರು ಕನ್ನಡ ನಾಡು, ನುಡಿ, ದುಡಿ ಸಂಸ್ಕೃತಿಗಳ ಬೆಳವಣಿಗಾಗಿ ಹಿರಿದಾದ ಸೇವೆಯನ್ನು ಸಲ್ಲಿಸಿ, ನುಡಿಯ ಮಕ್ಕಳನ್ನು ಒಂದಾಗಿಸಿ ಸೌಹಾರ್ದದಿಂದ ಬೆಳೆಸಿ, ಕನ್ನಡಿಗರೆಲ್ಲರ ಸಾಂಸ್ಕೃತಿಕ ಆಶೋತ್ತರಗಳನ್ನು ರೂಪಿಸುವಲ್ಲಿ ತಮ್ಮ ಆತ್ಮಶಕ್ತಿಯನ್ನು ಈ ಸಂಸ್ಥೆಗೆ ಧಾರೆಯೆದು ಇದರ ಕ್ರಿಯಾಶಕ್ತಿಯನ್ನು ಹೆಚ್ಚಿಸುತ್ತ ಬಂದಿದ್ದಾರೆ. ಆ ಎಲ್ಲಾ ಹಿರಿಯ ಚೇತನಗಳನ್ನು ಸ್ಮರಿಸಿಕೊಂಡು ಹೊಸ ಕಾಲದ ಅಗತ್ಯಗಳನ್ನು ಅರಿತುಕೊಂಡು ಎಲ್ಲರೂ ಒಂದಾಗಿ ಮುಂದುವರಿಯೋಣ.
ಶತಮಾನೋತ್ಸವ ಮತ್ತು ಪರಿಷತ್ತು
ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ಸಲ್ಲಿಸಿರುವ ಮೂವರು ಮಹನೀಯರ ಶತಮಾನೋತ್ಸವವನ್ನು ಆಚರಿಸುವ ಅವಕಾಶ ಈ ವರ್ಷ ಕನ್ನಡಿಗರಿಗೆ ಒದಗಿದೆ. ಅವರೆಂದರೆ ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಹಿಂದಿನ ಅವಿಭಕ್ತತ್ವವನ್ನು ಕಂಡು ಹಿಡಿದ ಹಾಗೂ ಪ್ರಜ್ಞಾಪ್ರಕಾಶ ಪಾತಳಿಯ ನೆಲೆಯಲ್ಲಿ ಕರುನಾಡ ಸಂಸ್ಕೃತಿ, ಭಾರತೀಯ ಸಂಸ್ಕೃತಿ ಮತ್ತು ಮಾನವ ಸಂಸ್ಕೃತಿಗಳ ಬೆಳವಣಿಗೆಯನ್ನು ವಿವರಿಸಿದ ಶಂಬಾ ಅವರು ಪ್ರಖರವಾದ ಸಂಶೋಧನ ಪ್ರಯತ್ನದಿಂದ ಕನ್ನಡ ಚಿಂತನ ಲೋಕಕ್ಕೆ ಹೊಸ ಬೆಳಕು ನೀಡಿದವರು. ಎರಡನೆಯದಾಗಿ, ‘ವಿಶ್ವ ಕರ್ನಾಟಕ’ದ ಮೂಲಕ ಪ್ರಭುತ್ವದ ವಿರುದ್ಧ ತತ್ವಬದ್ಧವಾದ ಪ್ರತಿರೋಧವೊಡ್ಡಿದ, ಇತಿಹಾಸ ಸಂಶೋಧನೆಗಳಲ್ಲಿ ವಿಶೇಷ ಆಸಕ್ತಿ ವಹಿಸಿ ಗಣನೀಯ ಕಾರ್ಯಗೈದ ತಿ.ತಾ. ಶರ್ಮರು ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಮಹತ್ವದ ಪಾತ್ರವಹಿಸಿದವರು. ಮೂರನೆಯದಾಗಿ ಬರೆದಷ್ಟು ಕಾದಂಬರಿಗಳನ್ನು ಒಂದೊಂದು ಮಾದರಿಯಾಗಿ ನಿಲ್ಲಿಸಿದ ಸಾಹಿತ್ಯದ ಸತ್ವಕ್ಕೆ ಎರವಾಗದಂತೆ ಬೌದ್ಧಿಕತೆಯನ್ನು ಬಳಸಿ ಪೌರಾಣಿಕ ಕಾದಂಬರಿಗಳ ಮೂಲಕ ತಮ್ಮ ಕಲ್ಪನಾ ಸೃಷ್ಟಿಯ ಮಹತಿಯನ್ನು ಸಾಧಿಸಿದ ದೇವುಡು ಅವರು.
ಈ ಎಲ್ಲಾ ಸಾಹಿತ್ಯ ಶ್ರೇಷ್ಠರ ಜನ್ಮ ಶತಮಾನೋತ್ಸವವನ್ನು ಸಾರ್ಥಕಗೊಳಿಸುವಂತೆ ಆಚರಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಮೊದಲುಗೊಂಡ ಇತರ ಸಂಘ ಸಂಸ್ಥೆಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಮುಖ ಪಾತ್ರವಹಿಸಿ ಈ ಲೇಖಕರ ಅಪ್ರಕಟಿತ ಕೃತಿಗಳ ಹಾಗೂ ಸಮಗ್ರ ಗ್ರಂಥಗಳ ಪ್ರಕಟಣೆಯ ಮುಲಕ ಅದನ್ನು ಸಾರ್ಥಕಗೊಳಿಸಬೇಕು.
ಕನ್ನಡ ನಿಘಂಟು
ಕನ್ನಡ-ಕನ್ನಡ ನಿಘಂಟಿನ ಎಂಟನೆಯ ಸಂಪುಟದೊಂದಿಗೆ ಬಹು ದೊಡ್ಡ ಯೋಜನೆಯೊಂದನ್ನು ಪೂರ್ಣಗೊಳಿಸಿರುವ ಕನ್ನಡ ಸಾಹಿತ್ಯ ಪರಿಷತ್ತು ಈ ದಿಸೆಯಲ್ಲಿ ಹಾಕಿಕೊಂಡಿರುವ ಹೊಸ ಯೋಜನೆಗಳು ತುಂಬ ಆಶಾದಾಯಕವಾಗಿವೆ. ಎಂಟೂ ಸಂಪುಟಗಳ ಪರಿಷ್ಕರಣ ಯೋಜನೆಯನ್ನು ಪರಿಷತ್ತು ಈಗ ಕೈಗೆತ್ತಿಕೊಂಡಿದ್ದು, ಇಂಗ್ಲಿಷ್ ಸಂವಾದಿ ಪದಗಳನ್ನು ಕೊಡುವ ಮೂಲಕ ಕನ್ನಡ-ಇಂಗ್ಲಿಷ್ ನಿಘಂಟನ್ನಾಗಿಸಿ ಇದರ ವ್ಯಾಪ್ತಿಯನ್ನು ವಿಸ್ತಾರಗೊಳಿಸಲಿದೆ.
ಕಾರ್ಯಕರ್ತರ ಪಡೆಬೇಕು?
ಮಾಸ್ತಿಯವರು ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾಗ ಕನ್ನಡದ ಕೆಲಸವನ್ನು ಕುರಿತು ಮಾತನಾಡುತ್ತ ಒಮ್ಮೆ ಹೀಗೆ ಅಂದಿದ್ದರಂತೆ, ‘ನನಗೆ ಒಂದು ನೂರು ಜನ ಒಳ್ಳೇ ಕಾರ್ಯಕರ್ತರನ್ನು ಕೊಡಿ. ಕನ್ನಡದಲ್ಲಿ ಒಂದು ಕ್ರಾಂತಿಯನ್ನೇ ಮಾಡಿ ತೋರಿಸುತ್ತೇನೆ’. ಕನ್ನಡದ ಬಗ್ಗೆ ನಿಜವಾದ ಕಳಕಳಿಯುಳ್ಳ ಅಂಥ ಕಾರ್ಯಕರ್ತರ ಒಂದು ಪಡೆಯನ್ನೇ ನಿರ್ಮಿಸಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಂಘ ಸಂಸ್ಥೆಗಳು ಒಟ್ಟಾಗಿ ಕಾರ್ಯೋನ್ಮುಖವಾಗುವ ಅಗತ್ಯ ಎಂದಿಗಿಂತಲೂ ಇಂದು ಹೆಚ್ಚಾಗಿದೆ.
Tag: Channaveera Kanavi, Kannada Sahitya Sammelana 65
೬೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಹೆಚ್. ಎಲ್. ನಾಗೇಗೌಡ
ಜಾನಪದ ವಿದ್ವಾಂಸ, ಕಾದಂಬರಿಕಾರ, ಅನುವಾದಕ, ದಕ್ಷ ಆಡಳಿತಗಾರ ಎನಿಸಿದ ಹೆಚ್.ಎಲ್. ನಾಗೇಗೌಡ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯಲ್ಲಿ ಲಿಂಗೇಗೌಡ-ಹುಚ್ಚಮ್ಮದೇವಿ ದಂಪತಿಗಳಿಗೆ ೭-೧೨-೧೯೧೫ರಲ್ಲಿ ಜನಿಸಿದರು. ನಾಗತಿಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಚೆನ್ನರಾಯಪಟ್ಟಣದಲ್ಲಿ ಲೋಯರ್ ಸೆಕೆಂಡರಿಯನ್ನು, ಬೆಂಗಳೂರಿನಲ್ಲಿ ಇಂಟರ್ ಡಿಯೇಟ್ ಪರೀಕ್ಷೆಯನ್ನು ಪಾಸು ಮಾಡಿದ ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.ಸ್ಸಿ ಪದವಿಯನ್ನೂ, ಪುನಾದಲ್ಲಿ ಎಲ್.ಎಲ್.ಬಿ. ಪದವಿಯನ್ನೂ ಪಡೆದರು.
೧೯೪0ರಲ್ಲಿ ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ೧೯೬0ರಲ್ಲಿ ಐ.ಎ.ಎಸ್ ಶ್ರೇಣಿಗೆ ಆಯ್ಕೆಯಾದರು. ೧೯೬೧ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ, ೧೯೬೩ರಲ್ಲಿ ಚಿಕ್ಕಮಗಳೂರಿನಲ್ಲಿ, ೧೯೬೫ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಪ್ಯೂಟಿ ಕಷನರ್ ಆಗಿ ಕೆಲಸ ಮಾಡಿದ ಇವರು, ೧೯೬೯ರಲ್ಲಿ ರಾಜ್ಯದ ಲೇಬರ್ ಕಷನರ್ ಆದರು. ೧೯೭೩ರಲ್ಲಿ ಲೋಕಸೇವಾ ಆಯೋಗದ ಸದಸ್ಯರಾದರು. ೧೯೭೮ರಲ್ಲಿ ನಿವೃತ್ತರಾದರು.
ಇವರು ಬೆಂಗಳೂರು ರಾಮನಗರದ ಬಳಿ ಜಾನಪದ ಲೋಕವೆಂಬ ಜಾನಪದ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದ್ದಾರೆ. ‘ಜಾನಪದ ಜಗತ್ತು’ ಎಂಬ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನೂರಾರು ಜಾನಪದ ಮೇಳಗಳನ್ನು ಸಂಟಿಸಿ ನೂರಾರು ಜಾನಪದ ಕಲಾವಿದರಿಗೆ ಮಾಸಾಶನ, ಪ್ರಶಸ್ತಿ, ಗೌರವಧನ, ನೀಡಿದ್ದಾರೆ. ನೂರಾರು ಗಂಟೆಗಳ ಕಾಲ ಕೇಳುವಷ್ಟು ಪ್ರಮಾಣದ ಮೂಲ ಜಾನಪದ ಗಾಯಕರ ಧ್ವನಿಗಳನ್ನು ಮುದ್ರಿಸಿಕೊಂಡಿದ್ದಾರೆ. ಸುಮಾರು ೫0 ಗಂಟೆಗಳ ಕಾಲದಷ್ಟು ದೃಶ್ಯ ಚಿತ್ರೀಕರಣ(ವೀಡಿಯೋ) ಮಾಡಿದ್ದಾರೆ.
೧೯೯೫ರಲ್ಲಿ ಮುಧೋಳದಲ್ಲಿ ನಡೆದ ೬೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ನಾಗೇಗೌಡರ ಜಾನಪದ ಸೇವೆಯನ್ನು, ಸಾಹಿತ್ಯ ಸೇವೆಯನ್ನು, ಪರಿಗಣಿಸಿ ನಾಡಿನ ನಾನಾ ಸಂಘ ಸಂಸ್ಥೆಗಳೂ ಮತ್ತು ಸರಕಾರವೂ ಸನ್ಮಾನ, ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿವೆ. ೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ೧೯೮೮ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ೧೯೯0ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್, ೧೯೯೨ರಲ್ಲಿ ಪಂಪ ಪ್ರಶಸ್ತಿ, ೨00೩ರಲ್ಲಿ ನಾಡೋಜ ಗೌರವ ಪ್ರಶಸ್ತಿ ಇವೇ ಮುಂತಾದ ಪ್ರಶಸ್ತಿಗಳು ದೊರಕಿವೆ.
ಇವರ ಅನೇಕ ಗ್ರಂಥಗಳು ಪ್ರಶಸ್ತಿ ಪಡೆದಿವೆ, ನಾಡಿನ ಜನರ ಮನ್ನಣೆಗೆ ಪಾತ್ರವಾಗಿವೆ. ಜಾನಪದತಜ್ಞರಾಗಿ, ಸಾಹಿತಿಗಳಾಗಿ ಇವರು ರಚಿಸಿರುವ ಕೆಲವು ಮುಖ್ಯ ಕೃತಿಗಳು ಹೀಗಿವೆ :
ಜಾನಪದ ಕೃತಿಗಳು : ಪದವವೆ ನಮ್ಮ ಎದೆಯಲ್ಲಿ, ಮೈಲಾರ ಲಿಂಗನ ಕಾವ್ಯ, ಹಾಡಾನ ಬನ್ನಿ ದನಿಯೆತ್ತಿ, ಆನೆ ಬಂತೊಂದಾನೆ, ಗಾದೆಗಳು, ಗ್ರಾಮದೇವತೆ ಮಾರಮ್ಮ, ಸೋಬಾನೆ ಚಿಕ್ಕಮ್ಮನ ಪದಗಳು, ಹೆಳವರು ಮತ್ತು ಅವರ ಕಾವ್ಯಗಳು ಇತ್ಯಾದಿ.
ಕಾದಂಬರಿಗಳು : ದೊಡ್ಡ ಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗಿಳಿದು ಬಂದ ಗಂಧರ್ವ, ಕೆನಿಲ್ವರ್ತ್
ಪ್ರವಾಸ ಸಾಹಿತ್ಯ :ಪ್ರವಾಸಿ ಕಂಡ ಇಂಡಿಯಾ ಎಂಬ ಹೆಸರಿನಲ್ಲಿ ಹತ್ತು ಸಂಪುಟಗಳಲ್ಲಿ ೨00ಕ್ಕೂ ಹೆಚ್ಚು ವಿದೇಶೀಯರು ಭಾರತದಲ್ಲಿ ಸಂಚರಿಸಿ ಬರೆದಿಟ್ಟ ಬರಹಗಳ ಅನುವಾದ.
ಕವನಸಂಕಲನ :ನಾನಾಗುವೆ ಗೀಜಗನ ಹಕ್ಕಿ, ಕಥೆವ್ಯಥೆ
ಇತರ ಗ್ರಂಥಗಳು : ಸರೋಜಿನಿದೇವಿ(ಜೀವನ ಚರಿತ್ರೆ), ವೆರಿಯರ್ ಎಲ್ವಿನ್ನರ ಗಿರಿಜನ ಪ್ರಪಂಚ(ಅನುವಾದ), ನಾಗಸಿರಿ(ಆತ್ಮ ಕಥೆ), ನನ್ನೂರು, ಬೆಟ್ಟದಿಂದ ಬಟ್ಟಲಿಗೆ.
ಎಚ್.ಎಲ್. ನಾಗೇಗೌಡರು ೨೫-೯-೨00೫ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೬೪
ಅಧ್ಯಕ್ಷರು, ಎಚ್.ಎಲ್. ನಾಗೇಗೌಡ
ದಿನಾಂಕ ೩, ೪, ೫ ಜೂನ್ ೧೯೯೫
ಸ್ಥಳ : ಮುಧೋಳ
ಸಮ್ಮೇಳನಾಧ್ಯಕ್ಷರ ವಯೋಮಾನ
ಇಲ್ಲಿ ನಡೆಯುತ್ತಿರುವುದು ೬೪ನೇ ಸಾಹಿತ್ಯ ಸಮ್ಮೇಳನ ಇದಕ್ಕೆ ಮುಂಚೆ ೬೩ ಸಮ್ಮೇಳನಗಳು ಆಗಿಹೋಗಿವೆ. ೬೩ ಮಹಾನುಭಾವರುಗಳು ಹಿಂದಿನ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿದ್ದಾರೆ. ಅವರಲ್ಲಿ ಕೇವಲ ಸಾಹಿತಿಗಳು, ಪಂಡಿತರುಗಳಷ್ಟೇ ಅಲ್ಲ. ನನ್ನಂಥವರೂ ಅಧ್ಯಕ್ಷರಾಗಿದ್ದರು. ೧೯೭೬ರಲ್ಲಿ ಶಿವಮೊಗ್ಗಾದಲ್ಲಿ ನಡೆದ ೪೯ನೆಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀ ಎಸ್.ವಿ. ರಂಗಣ್ಣವರು ತಮ್ಮ ಭಾಷಣದಲ್ಲಿ ಪೀಠಿಕೆಯಾಗಿ ಸಮ್ಮೇಳನದ ಅಧ್ಯಕ್ಷರುಗಳ ವಯಸ್ಸುಗಳ ಮಾಹಿತಿಯನ್ನು ಕೊಟ್ಟಿದ್ದಾರೆ. ೪೬ ಅಧ್ಯಕ್ಷರುಗಳಲ್ಲಿ ೩೪ ಮಂದಿಗೆ ವಯಸ್ಸು ೫0ರ ಮೇಲೆ, ೯ ಮಂದಿಗೆ ೬0ರ ಮೇಲೆ, ಮೂವರಲ್ಲಿ ಇಬ್ಬರಿಗೆ ೭0, ಇನ್ನೊಬ್ಬರಿಗೆ ೭೮, ೭೮ ವರ್ಷದವರೆಂದರೆ ಮೈಸೂರಿನ ಎಂ. ವೆಂಕಟಕೃಷ್ಣಯ್ಯ ಉರುಫ್ ತಾತಯ್ಯನವರು. ರಂಗಣ್ಣನವರಿಗೂ ಅಧ್ಯಕ್ಷರಾದಾಗ ೭೮. ಅಲ್ಲಿಂದೀಚೆಗೆ ಅಧ್ಯಕ್ಷರಾದವರಲ್ಲಿ ೮0 ಮೀರಿದವರೆಂದರೆ ಡಾ|| ಶಂಬಾ ಜೋಶಿ ಮತ್ತು ಡಾ|| ಎ, ಎನ್. ಮೂರ್ತಿರಾವ್. ಈ ಇಬ್ಬರು ಮಹಾನುಭಾವರ ಪಂಕ್ತಿಗೆ ವಯಸ್ಸಿನಲ್ಲಾದರೂ ಸೇರಲಿ ಎಂದು ನನಗೆ ೮0 ಆಗುವುದಕ್ಕಾಗಿ ಕಾಯುತ್ತಿದ್ದಂತೆ ಕಾಣುತ್ತದೆ. ಅಷ್ಟೇ ಅಲ್ಲ, ಕಾಕತಾಳೀಯ ನ್ಯಾಯವೋ ಎಂಬಂತೆ ಸಾಹಿತ್ಯ ಪರಿಷತ್ತಿಗೆ ೮0 ಆದ ವರ್ಷ ನಾನು ಸಮ್ಮೇಳನದ ಅಧ್ಯಕ್ಷನಾಗಬೇಕೆ! ವಾಸ್ತವವಾಗಿ ನಾನು ಸಾಹಿತ್ಯ ಪರಿಷತ್ತಿಗಿಂತ ಮೂರು ತಿಂಗಳು ಹಿರಿಯ.
ಸಮ್ಮೇಳನಾಧ್ಯಕ್ಷರ ನಾಲ್ಕು ಮಾತುಗಳು
ಇನ್ನೊಂದು ವೈಚಿತ್ರವನ್ನು ರಂಗಣ್ಣನವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅದೇನೆಂದರೆ ಅಧ್ಯಕ್ಷ ಭಾಷಣಗಳಲ್ಲಿ ಪಲ್ಲವಿಯೋಪಾದಿ ಪುನಃ ಪುನಃ ಕೇಳಿಬರುವ ‘ಅಲ್ಪಮತಿ ನಾನು, ಹೊರಿಸಿರುವ ಜವಾಬ್ದಾರಿ ಗುರುಭಾರ. ಅನರ್ಹನನ್ನು ಒಲುಮೆಯಿಂದ ಮನ್ನಿಸಿ’ ಎಂಬ ಮಾತುಗಳು.
Tag: Kannada Sahitya Sammelana 64, H.L. Nagegowda
೬೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಚದುರಂಗ
ಕನ್ನಡದ ಸಣ್ಣ ಕಥೆಗಾರ, ಕಾದಂಬರಿಕಾರ, ನಾಟಕಕಾರ ಆದ ಚದುರಂಗರು (ಎಂ. ಸುಬ್ರಹ್ಮಣ್ಯರಾಜೇ ಅರಸ್ ಅವರು) ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ೧-೧-೧೯೧೬ರಂದು ಮುದ್ದುರಾಜೇ ಅರಸ್ ಮತ್ತು ಮರುದೇವಿ ಅರಸ್ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ರಾಜಮನೆತನದ ಒಡನಾಟವಿದ್ದ ಇವರ ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ರಾಯಲ್ ಸ್ಕೂಲ್, ಬೆಂಗಳೂರಿನ ಇಂಟರ್ಮೀಡಿಯೇಟ್ ಕಾಲೇಜು, ಮೈಸೂರು ಮಹಾರಾಜ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ಕಾನೂನು ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಕಾರಣಾಂತರಗಳಿಂದ ಶಿಕ್ಷಣ ಪೂರ್ಣಗೊಳ್ಳಲಿಲ್ಲ. ಗಾಂಧಿ ಪ್ರಭಾವಕ್ಕೆ ಒಳಗಾದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು, ಖಾದಿವಾರಿಗಳಾದರು. ಹಳ್ಳಿಯ ಉದ್ಧಾರಕ್ಕಾಗಿ ಮೈಸೂರನ್ನು ಬಿಟ್ಟು ಕಲ್ಲಹಳ್ಳಿಗೆ ಹೋಗಿ ಕೃಷಿಕರಾದರು. ಮಾಸ್ತಿ, ಗೊರೂರು, ಅನಕೃ, ತರಾಸು, ಟಾಲ್ಸ್ಟಾಯ್, ಗಾರ್ಕಿ ಮೊದಲಾದ ಸಾಹಿತಿಗಳ ಬರಹಗಳಿಂದ ಪ್ರೇರಿತರಾದ ಇವರು ಸಾಹಿತ್ಯ ಕೃಷಿಗೆ ಇಳಿದರು. ಪುಣೆಯಲ್ಲಿದ್ದಾಗ ಸಿನಿಮಾ ತಂತ್ರದ ಬಗ್ಗೆ ಅಧ್ಯಯನ ಮಾಡಿದ ಚದುರಂಗರು ಚಲನಚಿತ್ರರಂಗದಲ್ಲೂ ದುಡಿದರು. ಭಕ್ತ ಕುಂಬಾರ ಚಿತ್ರಕ್ಕೆ ಕಥಾ ಲೇಖಕರಾಗಿದ್ದರು. ಇಂಗ್ಲಿಷಿನ ‘ಮಾಯಾ’ ಚಿತ್ರದ ಸಹ ನಿರ್ದೇಶಕರಾಗಿದ್ದರು. ಇವರೇ ತಯಾರಿಸಿದ ‘ಸರ್ವಮಂಗಳಾ’ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ‘ಉಯ್ಯಾಲೆ’ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿ ಬಂದಿದೆ. ರಾಷ್ಟ್ರಕವಿ ಕುವೆಂಪು ಮತ್ತು ನಾಟ್ಯವಿಶಾರದೆ ವೆಂಕಟಲಕ್ಷ್ಮಮ್ಮನವರನ್ನು ಕುರಿತು ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. ಇವರ ವೈಶಾಖ ಕಾದಂಬರಿಗೆ ೧೯೮೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
ಇವರ ಸಾಹಿತ್ಯ ಸಾಧನೆಗೆ ಹತ್ತಾರು ಪ್ರಶಸ್ತಿ ಗೌರವ, ಸನ್ಮಾನಗಳು ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೮ ಮತ್ತು ೧೯೯೪ರಲ್ಲಿ), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨ರಲ್ಲಿ ವೈಶಾಖ ಕಾದಂಬರಿಗೆ), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್(೧೯೯೩) ಇವರಿಗೆ ದೊರೆತಿದೆ. ೧೯೯೪ರಲ್ಲಿ ಮಂಡ್ಯದಲ್ಲಿ ಜರುಗಿದ ೬೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಭಾಗ್ಯ ಇವರದಾಗಿತ್ತು.
ಚದುರಂಗರು ರಚಿಸಿದ ಕೃತಿಗಳು ಕೆಲವು ಹೀಗಿವೆ :
ಕಾದಂಬರಿಗಳು : ಸರ್ವಮಂಗಳಾ(೧೯೫0), ಉಯ್ಯಾಲೆ(೧೯೬0), ವೈಶಾಖ (೧೯೮೧), ಹೆಜ್ಜಾಲ(೧೯೯೮)
ಕಥಾಸಂಕಲನಗಳು : ಸ್ವಪ್ನ ಸುಂದರಿ(೧೯೪೮), ಶವದ ಮನೆ(೧೯೫0), ಇಣುಕು ನೋಟ(೧೯೫0), ಬಂಗಾರದ ಹೆಜ್ಜೆ(೧೯೫೧), ಮೀನಿನ ಹೆಜ್ಜೆ(೧೯೫೮), ಕ್ವಾಟೆ(೧೯೯೨), ಮೃಗಯಾ(೧೯೯೮) ಇತ್ಯಾದಿ ಕೃತಿಗಳು.
ನಾಟಕಗಳು : ಕುಮಾರರಾಮ(೧೯೬೬), ಇಲಿಬೋನು(೧೯೭೨), ಬಿಂಬ(೧೯೯0).
ಚದುರಂಗರು ೧೯-೧0-೧೯೯೮ರಲ್ಲಿ ದಿವಂಗತರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೬೩
ಅಧ್ಯಕ್ಷರು, ಚದುರಂಗ
ದಿನಾಂಕ ೧೧, ೧೨, ೧೩ ಫೆಬ್ರವರಿ ೧೯೯೪
ಸ್ಥಳ : ಮಂಡ್ಯ
ವಿಕೇಂದ್ರೀಕರಣದ ಪರಿಷತ್ತು
೧೯೧೫ರಲ್ಲಿ ಕೆಲವು ಹಿರಿಯ ಚೇತನಗಳು ಒಂದುಗೂಡಿ ಕನ್ನಡದ ಪುರೋಭಿವೃದ್ಧಿಗಾಗಿ ಕಟ್ಟಿ ಬೆಳೆಸಿದ ಕನ್ನಡ ಜನತೆಯ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ ಇವೆಲ್ಲದರ ಬೆಳವಣಿಗೆ. ಇದು ಶ್ರದ್ಧೆಯಿಂದ ನಿರಂತರವಾಗಿ ದುಡಿಯುತ್ತಾ ಬಂದಿದೆ. ಅಷ್ಟೇ ಅಲ್ಲದೆ ಗಡಿ ವಿವಾದದ ಬಗ್ಗೆಯೂ ಇದು ಹೋರಾಡುತ್ತಾ ಬಂದು, ಮಹಾಜನ ವರದಿಯನ್ನು ಒಪ್ಪಿಕೊಳ್ಳುವಂತೆ ಒತ್ತಾಯವನ್ನು ಮೇಲಿಂದ ಮೆಲೆ ತರುತ್ತಲೇ ಇದೆ. ಹೊರನಾಡ ಕನ್ನಡಿಗರ ಬಗ್ಗೆಯೂ ಇದು ವ್ಯವಸ್ಥಿತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಕೇಂದ್ರ ಬೆಂಗಳೂರಿನಲ್ಲಿದ್ದರೂ, ಕನ್ನಡ ನಾಡಿನ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲೂ ಸಮಿತಿಗಳನ್ನು ರಚಿಸಿ, ಪರಿಷತ್ತಿನ ಕೆಲಸ ನಾಡಿನ ಉದ್ದಗಲಕ್ಕೆ ಹರಡುವಂತೆ ಮಾಡಿದೆ. ಹೀಗೆ ಆಡಳಿತವನ್ನು ವಿಕೇಂದ್ರೀಕರಣ ಮಾಡಿಕೊಂಡು ಸಾಹಿತ್ಯ ಸೇವೆಯನ್ನು ಸಲ್ಲಿಸುತ್ತಿರುವ ಇಂಥ ಸಂಸ್ಥೆ, ಭಾರತದ ಬೇರಾವ ರಾಜ್ಯದಲ್ಲೂ ಬಹುಶಃ ಇಲ್ಲವೆಂದೇ ಹೇಳಬೇಕು.
ಆರ್ಥಿಕ ವಿಚಾರ
ಕನ್ನಡಿಗರ ಈ ಹಿರಿಯ ಸಂಸ್ಥೆ ಪ್ರತಿಯೊಂದಕ್ಕೂ ಸರ್ಕಾರವನ್ನೇ ಕಾಯದೆ ಅದಷ್ಟು ಸ್ವಾವಲಂಬಿಯಾಗಿ ತನ್ನ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುವುದು ತೀರಾ ಅಗತ್ಯ. ಈ ದಿಸೆಯಲ್ಲಿ ರಾಜ್ಯ ಸರ್ಕಾರೀ ನೌಕರರ ಮಹಾ ಮಂಡಲವು ಪರಿಷತ್ತಿನ ಮನವಿಗೆ ಮನ್ನಣೆಕೊಟ್ಟು, ತನ್ನ ಸದಸ್ಯರಿಂದ ತಲಾ ಇಪ್ಪತ್ತು ರೂಪಾಯಿಗಳ ಕೊಡುಗೆ ನೀಡುವ ಬಗ್ಗೆ ಒಂದು ಆಜ್ಞೆ ಹೊರಡಿಸಿ ನೌಕರರ ಸಂಬಳದಲ್ಲಿ ಇಪ್ಪತ್ತು ರೂಪಾಯಿಗಳ ಕೊಡುಗೆಯನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಿದರೆ ಸುಮಾರು ಐದು ಲಕ್ಷದಷ್ಟಿರುವ ಸರ್ಕಾರಿ ನೌಕರರಿಂದ ಪರಿಷತ್ತಿನ ಅಮೃತ ನಿಧಿಗೆ ಒಂದು ಕೋಟಿ ರೂಪಾಯಿ ನಿಧಿ ಕೂಡಿ ಬರುತ್ತದೆ. ಸರ್ಕಾರ ತುರ್ತಾಗಿ ಈ ವ್ಯವಸ್ಥೆಯನ್ನು ಜಾರಿಗೆ ತಂದಲ್ಲಿ ಪರಿಷತ್ತು ಸ್ವಾವಲಂಬಿಯಾಗುವ ದಿಸೆಯಲ್ಲಿ ದಿಟ್ಟ ಹೆಜ್ಜೆಯಿಟ್ಟಂತಾಗುತ್ತದೆ.
ಪರಿಷತ್ತು ಹೀಗೆ ವ್ಯಾಪಕವಾಗಿ ಕಾರ್ಯಪ್ರವೃತ್ತವಾಗಿದ್ದರೂ, ಕನ್ನಡಕ್ಕಾಗಿ ಮಾಡಬೇಕಾದ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಬೃಹತ್ ಆಗಿ ಬೆಳೆದಿದೆ. ಆದ್ದರಿಂದ ಸರ್ಕಾರದಿಂದ ಹೊಸದಾಗಿ ನಿಯೋಜಿಸಲ್ಪಟ್ಟ ಅನೇಕ ಸಂಸ್ಥೆಗಳು ಕೆಲಸ ಮಾಡಲಾರಂಭಿಸಿದೆ.
ಸಂಸ್ಥೆಗಳು ಸಾಮೂಹಿಕವಾಗಿ ದುಡಿಯಲಿ
ಕನ್ನಡನುಡಿ ಮತ್ತು ಸಾಹಿತ್ಯದ ಅಭಿವೃದ್ಧಿಗೆ ಕನ್ನಡ ಜಾಗೃತಿ ವರ್ಷವೆಂದು ಕರೆಯಲಾದ ಈ ವರ್ಷದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಒಳಗೊಂಡಂತೆ ಎಲ್ಲಾ ಪ್ರಾಧಿಕಾರಗಳು, ವಿಶ್ವವಿದ್ಯಾನಿಲಯಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ, ಲಲಿತಕಲೆ, ನಾಟಕ, ಜಾನಪದ, ಸಂಗೀತ ಇವುಗಳಿಗೆ ಸಂಬಂಧಪಟ್ಟ ವಿವಿಧ ಅಕಾಡೆಮಿಗಳು ಎಲ್ಲವನ್ನೂ ಒಂದು ಸಮಗ್ರ ನೀಲನಕ್ಷೆಯ ಚೌಕಟ್ಟಿನಲ್ಲಿ ಕೆಲಸಮಾಡುವಂತೆ ನಿಯೋಜಿಸಿದರೆ ಸಂಪನ್ಮೂಲಗಳನ್ನು ಹೆಚ್ಚು ಫಲಪ್ರದವಾಗಿ ಬಳಸುವುದಕ್ಕೆ ಅನುಕೂಲವಾಗುತ್ತದೆ. ಅಂದರೆ ಕನ್ನಡ ಅಭಿವೃದ್ಧಿಗೆ ಸರಕಾರವು ಸಮಗ್ರ ಯೋಜನೆಯನ್ನು ತಯಾರಿಸುವುದು ಅತ್ಯಾವಶ್ಯಕವಾಗಿದೆ. ಈ ಯೋಜನೆಯು ಎಲ್ಲ ಸಂಸ್ಥೆಗಳು ಯಾವುದನ್ನು ಮಾಡಲು ತಮಗೆ ಸಾಧ್ಯವೋ ಅದನ್ನು ಹರಡಿಕೊಂಡು ಕೆಲಸಮಾಡಿದರೆ ಉಪಯುಕ್ತವಾಗುತ್ತದೆ. ಒಬ್ಬರು ಮಾಡಿದ ಕೆಲಸವನ್ನೇ ಉಳಿದವರು ಮಾಡುವುದು ತಪ್ಪುತ್ತದೆ. ಒಂದು ಗೊತ್ತಾದ ಅವಧಿಯಲ್ಲಿ ಕೆಲಸ ಪೂರೈಸಲೂ ಸಾಧ್ಯವಾಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಸರ್ಕಾರದ ದೃಷ್ಟಿಯಿಂದ ಮಿತವ್ಯಯ ಸಾಧಿತವಾಗಿ ಹಣದ ಸದುಪಯೋಗವೂ ಅದಂತಾಗುತ್ತದೆ. ಈ ಎಲ್ಲ ಸಂಸ್ಥೆಗಳ ಜತೆಗೆ ವಯಸ್ಕರ ಶಿಕ್ಷಣ ಸಮಿತಿ ಸೇರಿದಂತೆ ಉತ್ತಮ ಗ್ರಂಥಗಳನ್ನು ಮುದ್ರಿಸಿ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಜನರು ಆ ಪುಸ್ತಕಗಳನ್ನು ಕೊಳ್ಳಲು ಸಹಾಯವಾಗುತ್ತದೆ.
Tag: Kannada Sahitya Sammelana 63, Chaduranga
೬೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಸಿಂಪಿ ಲಿಂಗಣ್ಣ
ಹಿರಿಯ ಜಾನಪದ ದಿಗ್ಗಜ, ಆದರ್ಶ ಶಿಕ್ಷಕ, ಸಾಹಿತಿ ಆಗಿದ್ದ ಸಿಂಪಿ ಲಿಂಗಣ್ಣನವರು ಶಿವಯೋಗಪ್ಪ-ಸಾವಿತ್ರಿ ದಂಪತಿಗಳಿಗೆ ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದಲ್ಲಿ ೧0-೨-೧೯0೫ರಂದು ಜನಿಸಿದರು. ೧೯೨೨ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಪಾಸಾದ ಇವರು ೧೯೨೫ರಿಂದ ೧೯೬0ವರೆಗೆ ೩೫ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೬0ರಲ್ಲಿ ಇವರು ಅತ್ಯುತ್ತಮ ಶಿಕ್ಷಕರೆಂದು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದರು. ೧೯೨೩ರಲ್ಲಿ ವಾಗ್ವಿಲಾಸ ಭವನ ಎಂಬ ವಾಚನಾಲಯವನ್ನು ಚಡಚಣದಲ್ಲಿ ಸ್ಥಾಪಿಸಿದರು. ೧೯೨೫ರಲ್ಲಿ ಬತಗುಣಶಿಯಲ್ಲಿದ್ದಾಗ ಬಸವೇಶ್ವರ ವಾಚನಾಲಯ ಪ್ರಾರಂಭಿಸಿದರು. ‘ಮುದ್ದು’ ಮತ್ತು ‘ಕಮತಿಗ’ ಎಂಬ ಕೈಬರಹ ಪತ್ರಿಕೆಗಳನ್ನು ಮೂಡಿಸುವುದರ ಮೂಲಕ ನಾಗಪ್ಪ ಶಿವಯೋಗಪ್ಪ ಸಿಂಪಿ ಅವರು ಸಿಂಪಿ ಲಿಂಗಣ್ಣ ಎಂಬ ಹೆಸರಿನಲ್ಲಿ ಬರಹಕ್ಕೆ ಇಳಿದರು. ‘ಭರತ’ ಎಂಬ ಕಾವ್ಯನಾಮ ಇವರದು.
ಹಲಸಂಗಿಯ ಮಧುರಚೆನ್ನ, ಕಾಪಸೆ ರೇವಣ್ಣ, ಧೂಲಾಸಾಹೇಬ್ ಅವರುಗಳ ನಡುವಿನ ಒಡನಾಟದಲ್ಲಿ ಕನ್ನಡ ಜಾನಪದ ಗೀತೆಗಳನ್ನು ಸಂಗ್ರಹಿಸಿ, ಗರತಿಯ ಬಾಳು ಕೃತಿಯನ್ನು ಅಧ್ಯಯನ ಮಾಡಿದರು. ಅರವಿಂದರ ಹೆಸರಿನಲ್ಲಿ ಚಡಚಣದಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿದರು. ಅನೇಕ ಪುಸ್ತಕಗಳನ್ನು ಹೊರತಂದರು.
‘ಜನಾಂಗದ ಜೀವಾಳ’ ಗ್ರಂಥಕ್ಕೆ ೧೯೬೧ರಲ್ಲಿ, ಶ್ರುತಾಶ್ರುತ ಕವನ ಸಂಕಲನಕ್ಕೆ ೧೯೬೯ರಲ್ಲಿ, ‘ನಾಟ್ಯ ಸಾಧನೆ’ ಕೃತಿಗೆ ೧೯೭೬ರಲ್ಲಿ ರಾಜ್ಯ ಸರಕಾರ ಬಹುಮಾನ ನೀಡಿದೆ. ಸ್ವರ್ಗದೋಲೆಗಳು ಕೃತಿಗೆ ಮುಂಬಯಿ ಸರಕಾರದ ಬಹುಮಾನ ೧೯೫೬ರಲ್ಲಿ, ‘ನೂರುಗಡಿಗೆ ಒಂದು ಬಡಿಗೆ’ಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ೧೯೮0ರಲ್ಲಿ ಬಂದಿದೆ. ೧೯೮೮ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಪ್ರತಿಷ್ಠಿತ ಜಾನಪದ ತಜ್ಞ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ೧೯೮೯ರಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ೧೯೯0ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮುಂತಾದವು ಲಭಿಸಿತ್ತು. ೧೯೬೯ರಲ್ಲಿ ಮಂಗಳೂರಿನಲ್ಲಿ ಜರುಗಿದ ೨ನೇ ಜಾನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ೧೯೭೯ರಲ್ಲಿ ಇಳಕಲ್ಲಿನಲ್ಲಿ ನಡೆದ ೯ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಸೊಲ್ಲಾಪುರದಲ್ಲಿ ನಡೆದ ಹೊರನಾಡ ಕನ್ನಡಿಗರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೌರವ ಇವರದು.
೧೯೯೩ರಲ್ಲಿ ಕೊಪ್ಪಳದಲ್ಲಿ ನಡೆದ ೬೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನೂ ಇವರು ವಹಿಸಿದ್ದರು.
ಸಿಂಪಿ ಲಿಂಗಣ್ಣನವರು ರಚಿಸಿರುವ ಕೃತಿಗಳು ನೂರಕ್ಕೂ ಹೆಚ್ಚು ಇವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಲಾಗಿದೆ.
ಜಾನಪದ ಕೃತಿಗಳು : ಗರತಿಯ ಬಾಳು(೧೯೫೪), ಜನಾಂಗದ ಜೀವಾಳ(೧೯೬0), ಉತ್ತರ ಕರ್ನಾಟಕದ ಜನಪದ ಕಥೆಗಳು(೧೯೭೨)
ಕಥಾಸಂಕಲನಗಳು: ಬೆಟ್ಟದ ಹೊಳೆ, ಪವಿತ್ರ ಜೀವನ, ದೀಪವರ್ತಿ ದೃಷ್ಟಾಂತ ಕಥೆಗಳು.
ನಾಟಕಗಳು: ಮರೆಮುಚ್ಚಕ, ಜನಜೀವನ, ಭಕ್ತರಹಸ್ಯ, ಚಂಡಾಳ ಚೌಕಡಿ
ಜೀವನ ಚರಿತ್ರೆಗಳು : ಕನ್ನಡಿಗರ ಕುಲಗುರು, ದತ್ತವಾಣಿ ಅರವಿಂದರು
ಕವನಸಂಕಲನಗಳು :ಮುಗಿಲ ಜೇನು, ಮಾತೃವಾಣಿ, ಶ್ರುತಾಶ್ರುತ
ಸಿಂಪಿ ಲಿಂಗಣ್ಣನವರು ೫-೫-೧೯೯೩ರಲ್ಲಿ ದಿವಂಗತರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೬೨
ಅಧ್ಯಕ್ಷರು, ಸಿಂಪಿ ಲಿಂಗಣ್ಣ
ದಿನಾಂಕ ೫, ೬, ೭ ಫೆಬ್ರವರಿ ೧೯೯೩
ಸ್ಥಳ : ಕೊಪ್ಪಳ
ಅಮೃತನಿಧಿ ಯೋಜನೆ
ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿಯೊಬ್ಬ ಕನ್ನಡಿಗನಿಂದ ಒಂದು ರೂ. ನಂತೆ ಹಣ ಸಂಗ್ರಹಿಸುವ ‘ಅಮೃತ ನಿಧಿ’ಯ ಕಾರ್ಯ ಕನ್ನಡಿಗನಿಂದ ಕೈಗೊಂಡಿದೆ. ಇದೊಂದು ಅತ್ಯಂತ ಯೋಗ್ಯವಾದ ಉಪಕ್ರಮವಾಗಿದೆ. ನಾಲ್ಕು ಕೋಟಿ ಕನ್ನಡಿಗರಿರುವ ಕರ್ನಾಟಕದಲ್ಲಿ ಕನಿಷ್ಠ ಒಂದು ಕೋಟಿ ರೂ. ಹಣ ಕೂಡಿದರೂ ಅದೆಷ್ಟೋ ಕಾರ್ಯ ಸುಗಮವಾಗಿ ಸಾಗುತ್ತದೆ. ಕನ್ನಡ ನಾಡಿನ ಸಾಹಿತ್ಯಕ ಸಾಂಸ್ಕೃತಿಕ ಸಾರ್ವಭೌಮ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಯುತ್ತ ಸಂಸ್ಥೆಯಾಗಿ ಬೆಳೆದು ನಿಲ್ಲುವ ಆವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಾಗಿದೆ. ಅದು ಸರ್ಕಾರದ ಬಾಗಿಲಲ್ಲಿ ನಿಂತು ಹಣ ಯಾಚಿಸುವ ಪ್ರಸಂಗ ಬರಬಾರದು. ಯಾವುದೇ ಮುಲಾಜಿಲ್ಲದೆ ಪರಿಷತ್ತು ವರುಷದುದ್ದಕ್ಕೂ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತಹ ಸ್ಥಿತಿಯಲ್ಲಿರಬೇಕು. ಆದರೆ ಪರಿಷತ್ತಿನಂತಹ ಸಾಂಸ್ಕೃತಿಕ ಹಾಗೂ ಪ್ರಾತಿನಿಧಿಕ ಸಂಸ್ಥೆಗೆ ಉದಾರ ನೆರವು ನೀಡುವುದು ಸರ್ಕಾರದ ಕರ್ತವ್ಯವೂ ಹೌದೆಂಬುದನ್ನು ನಾವು ಮರೆಯುವಂತಿಲ್ಲ. ಆದುದರಿಂದ ಸಕಾರ ಇದಕ್ಕೆ ಒಂದು ಶಾಶ್ವತ ವ್ಯವಸ್ಥೆ ಮಾಡಬೇಕು. ಪ್ರತಿ ವರ್ಷ ಸರ್ಕಾರದ ಮಂಜೂರಾತಿಗಾಗಿಯೇ ಪರಿಷತ್ತು ಕಾಯುವಂತಾಗಬಾರದು. ಅಂತಾದರೆ ಕನ್ನಡದ ಸಂದರ್ಭದಲ್ಲಿ ಅದರ ಕೀರ್ತಿ ಚಿರಸ್ಥಾಯಿಯಾಗುತ್ತದೆ.
ದತ್ತಿನಿಧಿ ಯೋಜನೆ
ವರ್ಷದ ೩೬೫ ದಿನಗಳಲ್ಲಿ ಕರ್ನಾಟಕದ ಎಲ್ಲ ಹಳ್ಳಿ ಪಟ್ಟಣಗಳಲ್ಲಿ ಒಂದಿಲ್ಲೊಂದು ಕಡೆ ಸಾಹಿತ್ಯಕ ಕಾರ್ಯಕ್ರಮ ನಡೆಯುವಂತೆ ದತ್ತಿ ಉಪನ್ಯಾಸಗಳನ್ನು ಇಡುವ ಪರಿಷತ್ತಿನ ಇನ್ನೊಂದು ಯೋಜನೆ ತುಂಬ ಒಳ್ಳೆಯದಾಗಿದೆ. ಪ್ರತಿ ತಾಲ್ಲೂಕಿಗೆ ಎರಡು ದತ್ತಿ ಉಪನ್ಯಾಸಗಳ ಲಾಭವಾಗಲಿದೆ. ಒಂದೊಂದು ದತ್ತಿ ಉಪನ್ಯಾಸಕ್ಕೆ ೧0,000 ರೂ. ಕೊಟ್ಟರೆ ಸಾಕು. ಅದರ ಬಡ್ತಿ ಬಡ್ಡಿಯ ಮೇಲಿಂದ ಶಾಶ್ವತವಾಗಿ ದತ್ತಿ ಉಪನ್ಯಾಸಗಳನ್ನು ಇಡಬೇಕೆನ್ನುವ ಪರಿಷತ್ತಿನ ಯೋಜನೆ ತುಂಬ ಚೆನ್ನಾಗಿದೆ.
ವಿವಿಧ ವಿಷಯಗಳ ಕುರಿತು ಜನಸಮುದಾಯಕ್ಕೆ ತಿಳುವಳಿಕೆ ಕೊಡುವ ನೂರಾರು ಪುಸ್ತಕಗಳನ್ನು ಪ್ರಕಟಿಸುವ ಪರಿಷತ್ತಿನ ಯೋಜನೆ ತುಂಬ ಸೂಕ್ತವಾಗಿದೆ. ಇಂದು ನಮ್ಮ ಜನರಲ್ಲಿ ಮನೆಮಾಡಿಕೊಂಡಿರುವ ಅಜ್ಞಾನವನ್ನು ಹೋಗಲಾಡಿಸಲು ಇಂಥ ಪುಸ್ತಕ ಪ್ರಕಟನೆಗಳಿಗಿಂತ ಬೇರೆ ಯಾವ ಉಪಾಯವೂ ಇಲ್ಲ.
ಶತಮಾನದ ಸಾಹಿತ್ಯ ಚರಿತ್ರೆ
ಆಧುನಿಕ ಕನ್ನಡ ಸಾಹಿತ್ಯಕ್ಕೆ ಈಗ ಕನಿಷ್ಠ ೧00 ವರ್ಷಗಳಾದವು ಅದಕ್ಕಾಗಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿಯೂ ಸಾಧನೆಯನ್ನು ಬಿಂಬಿಸುವ ಶತಮಾನದ ಸಾಹಿತ್ಯ ಚರಿತ್ರೆಯ ಸಂಪುಟಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು, ಕನ್ನಡ ವಿಶ್ವವಿದ್ಯಾಲಯಗಳು, ಸಂಯುಕ್ತವಾಗಿ ಪ್ರಕಟಿಸುವ ಯೋಜನೆ ಹಾಕಿಕೊಳ್ಳಬೇಕು.
ವಿಚಾರಸಂಕೀರ್ಣಗಳು
ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಇತರ ಸಾಂಸ್ಕೃತಿಕ ಕೇಂದ್ರಗಳಾದ ಮಂಗಳೂರು, ಧಾರವಾಡ, ಶಿವಮೊಗ್ಗ, ಚಿತ್ರದುರ್ಗಗಳಲ್ಲಿ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಸಾಹಿತ್ಯದ ವಿವಿಧ ಮಗ್ಗಲುಗಳ ಬಗ್ಗೆ ವಿಚಾರ ಸಂಕೀರ್ಣಗಳನ್ನು ಸಾಹಿತ್ಯ ಪರಿಷತ್ತು ಏರ್ಪಡಿಸಬೇಕು.
ಸಾಹಿತ್ಯ ವಿಮರ್ಶಾ ಚರಿತ್ರೆ ಗ್ರಂಥ ಬರಲಿ
ಸಾಹಿತ್ಯ ವಿಮರ್ಶೆ ಈಗ ಪ್ರಬುದ್ಧವಾಗಿ ಬೆಳೆದಿದೆ. ವಿಮರ್ಶೆಯ ಪರಿಕರಗಳನ್ನು ಸೂಕ್ಷ್ಮವಾಗಿ ಬಳಸುವ ವಿಮರ್ಶಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸಾಹಿತ್ಯ ವಿಮರ್ಶೆಯ ಸಾಧನೆಯ ಕುರಿತು ವಿಸ್ತೃತವಾದ ಚರಿತ್ರೆ ಬರೆಯಿಸಿ ಪ್ರಕಟಿಸುವ ಕಾಲ ಇದೀಗ ಸನ್ನಿಹಿತವಾಗಿದೆ.
ಅನುವಾದ ಸಂಯುಕ್ತ ಯೋಜನೆ
ಕನ್ನಡ ಸಾಹಿತ್ಯದ ಮೇರುಕೃತಿಗಳನ್ನು ಇಂಗ್ಲಿಷಿಗೆ ಹಾಗೂ ಇತರ ಭಾರತೀಯ ಭಾಷೆಗಳಿಗೆ ಅನುವಾದಿಸುವ ಒಂದು ಮಹಾಯೋಜನೆಯನ್ನು ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ರೂಪಿಸಬೇಕು. ಹಾಗಾದಾಗ ಮಾತ್ರ ಕನ್ನಡ ಸಾಹಿತ್ಯದ ಶ್ರೇಷ್ಠತೆ ಎಲ್ಲ ಕಡೆಗೆ ಹರಡುತ್ತದೆ. ಅದರಂತೆ ವಿವಿಧ ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ಜ್ಞಾನ ವಿಜ್ಞಾನ ಮಹತ್ವ ಗ್ರಂಥಗಳನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನೂ ಮಾಡಬೇಕು. ವಿಚಾರ ಸಾಹಿತ್ಯದ ಸಂವರ್ಧನೆಗೆ ಹೆಚ್ಚಿನ ಒತ್ತು ಕೊಡಬೇಕು.
Tag: Simpi Linganna, Kannada Sahitya Sammelana 62
೬೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಜಿ.ಎಸ್. ಶಿವರುದ್ರಪ್ಪ
ಕನ್ನಡದ ರಾಷ್ಟ್ರಕವಿಗಳಲ್ಲಿ ಒಬ್ಬರಾಗಿ ವಿಮರ್ಶಕರು ಕವಿಗಳೆಂದು ಪ್ರಸಿದ್ಧರಾದ ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೭-೨-೧೯೨೬ರಲ್ಲಿ ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಸರಕಾರಿ ನೌಕರಿ ಹಿಡಿದು ದುಡಿಯಲಾರಂಭಿಸಿದರು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ೧೯೪೯ರಲ್ಲಿ ಬಿ.ಎ. ಪದವಿಯನ್ನು, ೧೯೫೩ರಲ್ಲಿ ಸ್ವರ್ಣಪದಕದೊಂದಿಗೆ ಎಂ.ಎ. ಪದವಿಯನ್ನು ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ೧೯೪೯ರಿಂದ ೧೯೬೩ವರೆಗೆ ಸೇವೆ ಸಲ್ಲಿಸಿದ ಇವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೩ರಿಂದ ೬೬ವರೆಗೆ ದುಡಿದರು. ೧೯೬೬ರಿಂದ ೧೯೮೬ವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ಇವರ ಸಾಹಿತ್ಯ ಸೇವೆಗೆ ಹತ್ತಾರು ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ(೧೯೭೪), ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ(೧೯೮೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೪), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ(೧೯೮೪), ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ(೧೯೮೬), ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ೬೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ(೧೯೮೭), ಪಂಪ ಪ್ರಶಸ್ತಿ(೧೯೯೮), ೨000ರಲ್ಲಿ ರಾಷ್ಟ್ರಕವಿ ಗೌರವ ಕುವೆಂಪು ವಿಶ್ವವಿದ್ಯಾಲಯ(೨00೬) ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್(೨00೩) ದೊರೆಯಿತು.
ಜಿ.ಎಸ್. ಶಿವರುದ್ರಪ್ಪನವರ ಮುಖ್ಯವಾದ ಕೃತಿಗಳು :ಬಹುಮುಖ ಪ್ರತಿಭೆಯ ಸಮನ್ವಯ ಕವಿ ಎನಿಸಿದ ಜಿ.ಎಸ್.ಎಸ್ ಅವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಆಗಿರುವಂತೆಯೇ ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ಬರೆದ ಕೆಲವು ಕೃತಿಗಳನ್ನು ಇಲ್ಲಿ ಉಲ್ಲೇಖಿಸಿದೆ :
ಸಂಪಾದನೆ : ೧೯೭೧ರಿಂದ ಹೊರಬಂದ ಸಾಹಿತ್ಯ ವಾರ್ಷಿಕಗಳು, ಶಬರವಿಳಾಸ ಸಂಗ್ರಹ (ಬಿ.ಎನ್. ಶಾಸ್ತ್ರಿ ಜತೆ), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ೬ ಸಂಪುಟಗಳು, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ೧0 ಸಂಪುಟಗಳು, ಕೆ.ಎಸ್.ನ ಸಂಭಾವನಾ ಗ್ರಂಥ ಚಂದನ.
ವಿಮರ್ಶಾ ಕೃತಿಗಳು : ವಿಮರ್ಶೆಯ ಪೂರ್ವಪಶ್ಚಿಮ(೧೯೬೧), ಸೌಂದರ್ಯ ತಿಬಿಂಬ(೧೯೬೯), ಕನ್ನಡ ಕವಿಗಳ ಕಾವ್ಯ ಕಲ್ಪನೆ(೧೯೮೯) ಇತ್ಯಾದಿ.
ಪ್ರವಾಸ ಗ್ರಂಥಗಳು :ಮಾಸ್ಕೊದಲ್ಲಿ ೨೨ ದಿನ(೧೯೭೩), ಗಂಗೆಯ ಶಿಖರಗಳಲ್ಲಿ, ಅಮೇರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ.
ಕವನ ಸಂಗ್ರಹಗಳು : ಸಾಮಗಾನ(೧೯೫೧), ಚೆಲುವು-ಒಲವು(೧೯೫೩), ದೇವಶಿಲ್ಪ(೧೯೫೬), ದೀಪದ ಹೆಜ್ಜೆ(೧೯೫೯), ಕಾರ್ತೀಕ(೧೯೬೧), ತೀರ್ಥವಾಣಿ(೧೯೬0), ಅನಾವರಣ(೧೯೬೩), ನನ್ನ ನಿನ್ನ ನಡುವೆ(೧೯೭೩), ವ್ಯಕ್ತ-ಮಧ್ಯ(೧೯೯೯) ಇತ್ಯಾದಿ.
ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ ೨೩-೧೨-೨0೧೩ರಲ್ಲಿ ದೈವಾಧೀನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೬೧
ಅಧ್ಯಕ್ಷರು, ಜಿ.ಎಸ್. ಶಿವರುದ್ರಪ್ಪ
ದಿನಾಂಕ ೯, ೧0, ೧೧, ೧೨ ಜನವರಿ ೧೯೯೨
ಸ್ಥಳ : ದಾವಣಗೆರೆ
(ಟಿಪ್ಪಣಿ ೧೯೯೧ರಲ್ಲಿ ಸಮ್ಮೇಳನ ನಡೆಯಲಿಲ್ಲ)
ಪರಿಷತ್ತಿನ ಈಡೇರದ ಆಶೋತ್ತರಗಳು
‘ಹಿಂದಣ ಹೆಜ್ಜೆಯರಿತಲ್ಲದೆ ನಿಂದ ಹೆಜ್ಜೆಯನರಿಯಬಾರದು’ ಎನ್ನುತ್ತಾರೆ ಮಹಾನುಭಾವಿ ಅಲ್ಲಮಪ್ರಭುಗಳು ತಮ್ಮದೊಂದು ವಚನದಲ್ಲಿ. ಅಂದರೆ, ನಾವು ನಿಂತ ಹೆಜ್ಜೆಯನ್ನು ಅಥವಾ ವರ್ತಮಾನವನ್ನು ಅರಿಯಬೇಕಾದರೆ, ಹಿಂದಣ ಹೆಜ್ಜೆಯನ್ನು, ಅಂದರೆ ಪರಂಪರೆಯನ್ನು ಚೆನ್ನಾಗಿ ಅರಿತವರಾಗಬೇಕು. ಅದಕಾರಣ ಹಿಂದಣ ಹೆಜ್ಜೆಯನ್ನು ಅಥವಾ ಪರಂಪರೆಯನ್ನು ಅರಿತಲ್ಲದೆ, ನಾವು ನಿಂದ ಹೆಜ್ಜೆಯನ್ನು ಅಥವಾ ವರ್ತಮಾನವನ್ನು ಅರಿಯಲು ಬರುವುದಿಲ್ಲ. ನಾನು, ಹಿಂದಿನ ಅರವತ್ತು ಸಮ್ಮೇಳನಗಳ ಅಧ್ಯಕ್ಷರು, ಈಗಾಗಲೇ ಇಂಥ ಸಮ್ಮೇಳನಗಳ ಸಂದರ್ಭದಲ್ಲಿ ಏನು ಹೇಳಿದ್ದಾರೆ ಎಂಬುದನ್ನು, ಕನ್ನಡ ಸಾಹಿತ್ಯ ಪರಿಷತ್ತು, ಪ್ರಕಟಿಸಿರುವ ಸಮ್ಮೇಳನಾಧ್ಯಕ್ಷರ ಭಾಷಣಗಳ ಸಂಪುಟಗಳನ್ನು ಓದಿ ನೋಡಿದ್ದೇನೆ, ಅವುಗಳನ್ನು ಓದಿದ ಮೆಲೆ ನಾನು ಹೊಸದಾಗಿ ಹೇಳತಕ್ಕದ್ದೇನೂ ಉಳಿದಿಲ್ಲವೆಂದೇ ನನಗನ್ನಿಸುತ್ತದೆ. ಅದರಲ್ಲಿಯೂ ಕನ್ನಡ ನಾಡು-ನುಡಿ-ಗಡಿ, ಇತ್ಯಾದಿಗಳಿಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳನ್ನೂ, ಹಿಂದಿನ ಅರವತ್ತೂ ಸಮ್ಮೇಳನಾಧ್ಯಕ್ಷರು ಅತ್ಯಂತ ತಲಸ್ಪರ್ಶಿಯಾಗಿ ವಿವೇಚಿಸಿ, ಈ ಜನ, ಸರ್ಕಾರ ಹಾಗೂ ವಿವಿಧ ಸಾಂಸ್ಕೃತಿಕ ಸಂಸ್ಥೆಗಳು ಕನ್ನಡದ ಸರ್ವಾಂಗೀಣ ಪ್ರಗತಿಗೆ ಕೈಕೊಳ್ಳಬೇಕಾದ ಕರ್ತವ್ಯಗಳೂ, ಕಾರ್ಯಗಳೂ ಏನೆಂಬುದನ್ನು ನಿರ್ದೇಶಿಸಿದ್ದಾರೆ. ಆದರೆ, ಕನ್ನಡದ ಪರವಾಗಿ ‘ನಿರಂತರ ಜಪ’ ದಂತೆ ಮಂಡಿತವಾದ ಎಷ್ಟೋ ನಿರ್ದೇಶನಗಳೂ, ಆಶೋತ್ತರಗಳೂ ಇನ್ನೂ ಸಮರ್ಪಕವಾಗಿ ಈಡೇರಿಲ್ಲ ಎನ್ನುವುದು ಒಂದು ವಿಪರ್ಯಾಸದ ಸಂಗತಿಯಾಗಿದೆ.
ಸಮಸ್ಯೆಗಳಿಗೆ ಪರಿಹಾರ ಹೇಗೆ?
ಕನ್ನಡ ನಾಡು-ನುಡಿಗೆ ಒದಗಿರುವ ವಿಪತ್ತನ್ನೂ, ಅದಕ್ಕಾಗಿ ಕನ್ನಡ ಜನ ನಡೆಯಿಸಬೇಕಾದ ಹೋರಾಟದ ಸ್ವರೂಪವನ್ನೂ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದಂದಿನಿಂದಲೂ, ನಮ್ಮ ಪ್ರಮುಖ ಸಾಹಿತಿಗಳೂ, ವಿಚಾರವಂತರೂ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಗೋಕಾಕ್ ಚಳುವಳಿಯಂಥ ಮಹತ್ವದ ಆಂದೋಲನದ ನಂತರ ಜನಮನದಲ್ಲಿ ಮೊದಲಿಗಿಂತ ಹೆಚ್ಚು ವ್ಯಾಪಕವಾದ ರೀತಿಯಲ್ಲಿ ಕನ್ನಡದ ಸಮಸ್ಯೆಗಳನ್ನು ಕುರಿತ ಎಚ್ಚರವೊಂದು ಹುಟ್ಟಿಕೊಂಡಿದ್ದುದು ನಿಜವಾದರೂ ಮತ್ತು ಈ ಆಂದೋಲನದ ನಂತರ ರೂಪುಗೊಂಡ ವಿವಿಧ ಕನ್ನಡಪರ ಸಂಘಟನೆಗಳೂ ಅದರಲ್ಲಿಯೂ ಕನ್ನಡ ಪರ ಹೋರಾಟಕ್ಕೆ, ಹೊಸ ಆಯಾಮಗಳನ್ನು ತಂದುಕೊಟ್ಟ ಕನ್ನಡಶಕ್ತಿ ಕೇಂದ್ರದ ಚಟುವಟಿಕೆಗಳೂ ಜನತೆಯಲ್ಲಿ, ಸರ್ಕಾರದಲ್ಲೂ ಈ ಕುರಿತ ಕಾಳಜಿಗಳನ್ನು ಹುಟ್ಟಿಸುವರಲ್ಲಿ ಕ್ರಿಯಾಶೀಲವಾದರೂ ದೃಢವಾದ ಹಾಗೂ ಪ್ರಾಮಾಣಿಕವಾದ ರಾಜಕೀಯ ಸಂಕಲ್ಪವೇ ಕನ್ನಡದ ಸಮಸ್ಯೆಗಳ ಪರಿಹಾರಕ್ಕೆ ಇರುವ ಪ್ರಬಲವಾದ ಸಾಧನ ಎಂಬುದು ನನ್ನ ತಿಳಿವಳಿಕೆಯಾಗಿದೆ.
ಇಂಥ ಪುಸ್ತಕದಂಗಡಿಗಳು ಬೇಕು?
ಇನ್ನು ಕನ್ನಡದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳ ಸಂಖ್ಯೆ ಕಡಿಮೆಯೇನಿಲ್ಲ. ಕರ್ನಾಟಕದ ವಿವಿಧ ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು ಹಾಗೂ ಪ್ರಸಾರಂಗಗಳು, ಸಾಹಿತ್ಯ ಅಕಾಡೆಮಿ, ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇನ್ನಿತರ ಪ್ರತಿಷ್ಠತ ಪ್ರಕಾಶನ ಸಂಸ್ಥೆಗಳು ಪ್ರಕಟಿಸುವ ಪುಸ್ತಕಗಳು ಓದಬಲ್ಲವರನ್ನು ತಲುಪುವ ವ್ಯವಸ್ಥೆ ಕ್ರಮಬದ್ಧವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸಮಾಡುತ್ತಿಲ್ಲ. ಬೆಂಗಳೂರು ಮೈಸೂರಿನಂತಹ ಒಂದೆರಡು ನಗರಗಳನ್ನು ಹೊರತುಪಡಿಸಿದರೆ, ಸರಿಯಾದ ಪುಸ್ತಕದ ಅಂಗಡಿಗಳು ಬೇರೆಯ ಕಡೆ ಇಲ್ಲ.
ರಾಷ್ಟ್ರೀಯ ಗ್ರಂಥಾಲಯಗಳು ಅನೇಕ ಊರುಗಳಲ್ಲಿ ಇದ್ದರೂ, ಅದರೊಳಗೆ ಕೆಲಸ ಮಾಡುವವರ ಅಭಿರುಚಿ ಹಾಗೂ ಆಯ್ಕೆಗೆ ಅನುಗುಣವಾದ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿರಬಹುದೇ ಹೊರತು, ಬೇರೆಯ ಒಳ್ಳೆಯ ಪುಸ್ತಕಗಳು ವಿರಳ. ಹತ್ತಿರಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆಗಳು ರೂಪುಗೊಳ್ಳಬೇಕು; ರೈಲು ನಿಲ್ದಾಣಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಇರುವ ಪುಸ್ತಕದ ಅಂಗಡಿಗಳಲ್ಲಿ, ಜನಕ್ಕೆ ಉತ್ತಮ ಅಭಿರುಚಿ ನಿರ್ಮಾಣ ಮಾಡುವಂಥ ಪುಸ್ತಕಗಳು ಕಣ್ಣಿಗೆ ಬೀಳುವಂತಾಗಬೇಕು. ಕರ್ನಾಟಕದ ವಿವಿಧ ಭಾಗಗಳಲ್ಲಿ ಪುಸ್ತಕಮೇಳಗಳು ಏರ್ಪಾಡಾಗಬೇಕು. ಈ ದಿಕ್ಕಿನಲ್ಲಿ ಕನ್ನಡ-ಸಂಸ್ಕೃತಿ ನಿರ್ದೇಶನಾಲಯವು ಪ್ರಾರಂಭಿಸಿರುವ ‘ಜನಪ್ರಿಯ ಪುಸ್ತಕ ಮಾಲೆ’ಯ ಯೋಜನೆ ಅತ್ಯಂತ ಸ್ವಾಗತಾರ್ಹವಾದದ್ದು. ಇನ್ನು ಸರ್ಕಾರವು ಪ್ರಾರಂಭಿಸಲು ಉದ್ದೇಶಿಸಿರುವ ಪುಸ್ತಕ ಪ್ರಾಧಿಕಾರ’ವು ನಾಳಿನ ಪುಸ್ತಕೋದ್ಯಮಕ್ಕೆ ಹೊಸ ಆಯಾಮಗಳನ್ನು ಕೊಡಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ಗ್ರಾಮಾಂತರ ಪರಿಸರಗಳಲ್ಲಿ ವಾಚನಾಲಯಗಳು, ಗ್ರಂಥಾಲಯಗಳು ಹೆಚ್ಚಾಗಬೇಕು. ದೇವಸ್ಥಾನಗಳನ್ನೂ ಕಲ್ಯಾಣಮಂಟಪಗಳನ್ನೂ ಕಟ್ಟಿಸುವುದರಲ್ಲಿ ನಮ್ಮ ಜನಕ್ಕೆ ಇರುವ ಉತ್ಸಾಹ ಗ್ರಂಥಾಲಯಗಳನ್ನು ನಿರ್ಮಿಸುವುದರಲ್ಲಿ ಇಲ್ಲ. ಗ್ರಂಥಾಲಯಗಳನ್ನು ಸ್ಥಾಪಿಸುವುದು ನಿಜವಾಗಿಯೂ ಪುಣ್ಯದ ಕೆಲಸ ಎಂಬುದನ್ನು ಯಾಕೆ ನಮ್ಮ ಜನ ಅರ್ಥಮಾಡಿಕೊಳ್ಳುವುದಿಲ್ಲ? ದೇವಸ್ಥಾನಗಳಿಗಿಂತ ಗ್ರಂಥಾಲಯಗಳು ಮಹತ್ವವೆಂದು ನಮ್ಮ ಜನಕ್ಕೆ ಅನ್ನಿಸುವುದು ಯಾವಾಗ?
ಆದಾನ ಪ್ರದಾನ ಕಾರ್ಯ ಹೆಚ್ಚಾಗಲಿ
ಇದಕ್ಕಿಂತಲೂ ಮುಖ್ಯವಾದದ್ದೆಂದರೆ, ಕನ್ನಡ ಸಾಹಿತ್ಯದ ಸಾಧನೆಯನ್ನೂ, ವಿಶಿಷ್ಟತೆಯನ್ನೂ, ಉತ್ಕೃಷ್ಟತೆಯನ್ನೂ ಇಂಗ್ಲಿಷ್ ಭಾಷೆಯ ಮೂಲಕ ಭಾರತೀಯ ಹಾಗೂ ಪಾಶ್ಚಿಮಾತ್ಯ ವಲಯಗಳಿಗೆ ಪರಿಚಯ ಮಾಡಿಕೊಡುವ ಕೆಲಸ. ಏಕೆಂದರೆ, ಇತರ ಭಾಷಾ ಸಾಹಿತ್ಯಗಳು ನಮಗೆ ಅನುವಾದಗಳ ಮೂಲಕ ಪರಿಚಯವಾಗಿರುವ ಅಲ್ಪ-ಸ್ವಲ್ಪ ಪ್ರಮಾಣಕ್ಕೆ ಹೋಲಿಸಿ ನೋಡಿದರೂ, ನಮ್ಮ ಸಾಹಿತ್ಯವು ಮುಖ್ಯವಾಗಿ ಇಂಗ್ಲಿಷಿನ ಮೂಲಕ ಕರ್ನಾಟಕದಾಚೆಗೆ ಪರಿಚಯವಾಗಿರುವುದು ತೀರಾ ಕಡಿಮೆಯೆಂದೇ ಹೇಳಬೇಕು. ಈವರೆಗಿನ ಆದಾನ-ಪ್ರದಾನ ಕಾರ್ಯವು, ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಹಾಗೂ ಇನ್ನಿತರ ವೈಯಕ್ತಿಕ ಪರಿಶ್ರಮ ಮತ್ತು ಶ್ರದ್ಧೆಗಳಿಂದ ತಕ್ಕಮಟ್ಟಿಗೆ ನಡೆದಿರುವುದಾದರೂ, ಇದೂ ಏನೇನೂ ಸಾಲದು. ಇದಕ್ಕಾಗಿ ವಿವಿಧ ಭಾಷೆಗಳಲ್ಲಿ ಪರಿಣಿತರಾದವರನ್ನೊಳಗೊಂಡ ಪ್ರತ್ಯೇಕವಾದ ಹಾಗೂ ಸ್ಥಾಯಿಯಾದ ಅನುವಾದ ವಿಭಾಗವೊಂದನ್ನು, ಕನ್ನಡ ಸಾಹಿತ್ಯ ಪರಿಷತ್ತಾಗಲಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಾಗಲಿ ಅಥವಾ ಇದೀಗ ಪ್ರಾರಂಭವಾಗಿರುವ ಕನ್ನಡ ವಿಶ್ವವಿದ್ಯಾಲಯವಾಗಲಿ ಒಳಕೊಳ್ಳುವುದಾದರೆ ಅದೊಂದು ಮಹತ್ವದ ಹೆಜ್ಜೆಯಾಗುತ್ತದೆ.
ಬಹುಭಾಷಾ ಬಾಂಧವ್ಯ ಬೇಕು
ನಮ್ಮ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಪರಿಸರದ ಬರಹಗಾರರ ಸಮಸ್ಯೆಗಳನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಸಾಹಿತ್ಯಿಕ ಚಟುವಟಿಕೆಗಳು, ಪುಸ್ತಕ ಪ್ರಕಾಶನ, ವಿಮರ್ಶೆಯ ಹಾಗೂ ಸಂವಹನದ ಮಾಧ್ಯಮಗಳು, ಬಹುಮಟ್ಟಿಗೆ ನಗರ ಕೇಂದ್ರಿತವಾಗುತ್ತಿರುವ ಸಂದರ್ಭದಲ್ಲಿ, ಗ್ರಾಮೀಣ ಪರಿಸರದ ಬರಹಗಾರರಿಗೆ ಸರಿಯಾದ ಪರಿಗಣನೆಯಾಗಲೀ, ಪ್ರೋತ್ಸಾಹವಾಗಲೀ, ಅವರ ಕೃತಿಗಳ ಬಗ್ಗೆ ಸಮರ್ಪಕವಾದ ವಿಮರ್ಶೆಯಾಗಲೀ ನಡೆಯುತ್ತಿಲ್ಲ ಎಂಬ ಅಭಿಪ್ರಾಯವೊಂದು ಪ್ರಚಲಿತವಾಗಿದೆ. ಎಷ್ಟೋ ವೇಳೆ ನಗರ ಕೇಂದ್ರಗಳಲ್ಲಿ ವಿವಿಧ ಸಮೂಹ ಮಾಧ್ಯಮಗಳಿಗೆ ಸಮೀಪದಲ್ಲಿರುವವರಿಗೆ ದೊರಕುವ ‘ಪ್ರಕಾಶನ’ದ ಅನುಕೂಲ ಇವರಿಗೆ ಇಲ್ಲದಿರಬಹುದೆಂಬ ಸಂಗತಿಯನ್ನು ತಳ್ಳಿಹಾಕಲಾಗದಿದ್ದರೂ, ನಿಜವಾದ ಲೇಖಕ ಅವನು ಎಲ್ಲಿಯೇ ಇರಲಿ ಅವನು ಪಡೆಯಬೇಕಾದಷ್ಟು ಪರಿಗಣನೆಯಿಂದ ವಂಚಿತನಾಗಲಾರನೆಂದೇ ನನ್ನ ತಿಳಿವಳಿಕೆ. ಆದರೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳು ನಗರಕೇಂದ್ರಗಳಾಚೆಯ ಪ್ರತಿಭೆಗಳನ್ನು ಹೆಚ್ಚು ಹೆಚ್ಚಾಗಿ ತಮ್ಮ ಕಾರ್ಯಕ್ರಮಗಳೊಳಗೆ ತೊಡಗಿಸಿಕೊಳ್ಳುವುದರ ಮೂಲಕ, ಅವರನ್ನು ಪರಿಗಣನೆಗೆ ತೆಗೆದುಕೊಂಡು ಪ್ರೋತ್ಸಾಹಿಸುವುದು ಅಗತ್ಯವಾಗಿದೆ.
ಬಹುಭಾಷಾ ಬಾಂಧವ್ಯ ಬೇಕು
ಹಾಗೆಯೇ ನಮ್ಮ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು, ಸಾಧ್ಯವಾದ ಮಟ್ಟಿಗೆ ದೊಡ್ಡ ದೊಡ್ಡ ನಗರಗಳಿಗೆ ಸೀಮಿತವಾಗದಂತೆ ಅವುಗಳ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಬೇಕಾಗಿದೆ. ಅಚೆಗೂ ಹಮ್ಮಿಕೊಳ್ಳಬೇಕು. ಮತ್ತು ಈ ಬಗೆಯ ಕಾರ್ಯಕ್ರಮಗಳಲ್ಲಿ ಆಯಾ ಗಡಿಗಳಾಚೆಯ ಸೋದರ ಭಾಷಾಸಾಹಿತಿಗಳನ್ನು, ಕಲಾವಿದರನ್ನು ನಮ್ಮವರ ಜೊತೆಗೆ ತೊಡಗಿಸಿಕೊಳ್ಳಬೇಕು. ಬಹುಭಾಷಿಕ ಪರಿಸರದ ನಡುವೆ ಬದುಕುವ ನಾವೆಲ್ಲರೂ ಈ ಬಗೆಯ ಭಾಷಾಬಾಂಧವ್ಯಗಳ ಮೂಲಕವಾಗಿಯೇ ಬೆಳೆಯಬೇಕಾಗುತ್ತದೆ.
Tag: Kannada Sahitya Sammelana 61, G.S. Shivarudrappa
೮೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಕಲಬುರಗಿ
ದಿನಾಂಕ : ೫, ೬ ಹಾಗೂ ೭ ಫೆಬ್ರವರಿ ೨೦೨೦
ಸಮ್ಮೇಳನಾಧ್ಯಕ್ಷರ ಭಾಷಣ
ಡಾ. ಎಚ್.ಎಸ್. ವೆಂಕಟೇಶಮೂರ್ತಿ
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರೇ…, ಉಪಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಗೋವಿಂದ ಎಂ. ಕಾರಜೋಳ ಅವರೇ…, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯಶ್ರೀ ಸಿ.ಟಿ.ರವಿ ಅವರೇ…, ಕನ್ನಡ ನಾಡಿನ ಹಿರಿಯ ಕವಿಗಳೂ, ನಾಟಕಕಾರರೂ ಆದ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರೇ…, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ್ ಅವರೇ…, ವೇದಿಕೆಯ ಮೇಲೆ ಆಸೀನರಾಗಿರುವ ಎಲ್ಲ ಹಿರಿಯರೇ…
ಅಖಿಲ ಕರ್ನಾಟಕದ ಈ ಬೃಹತ್ ಕನ್ನಡ ಸಮುದಾಯ, ಕನ್ನಡ ತಾಯಿಯ ರೂಪದಲ್ಲಿ ಕಲಬುರ್ಗಿಯೆಂಬ ತನ್ನ ವರದ ಹಸ್ತದಿಂದ ನನ್ನನ್ನು ಆಶೀರ್ವದಿಸುತ್ತಿರುವ ಈ ಶುಭ ಸಂದರ್ಭವು, ನನ್ನ ಬಾಳಿನ ಅಮೃತ ಕ್ಷಣವೆನ್ನಲು ಅಭಿಮಾನಪಡುತ್ತೇನೆ. ಅಖಂಡ ಕರ್ನಾಟಕದ ಪ್ರತಿಮಾ ಸ್ವರೂಪಿಯಾದ ಕನ್ನಡ ತಾಯಿಯು ಕನ್ನಡ ಸಾಹಿತ್ಯ ಪರಿಷತ್ತೆಂಬ ನಮ್ಮ ನಾಡಿನ ಹೃದಯ ಸಂಸ್ಥೆಯ ಮೂಲಕ ಈ ಬಾರಿ ಈ ಭಾಗ್ಯವನ್ನು ನನಗೆ ಕರುಣಿಸಿದೆ. ಅದೂ ಇತ್ತೀಚಿಗಷ್ಟೆ ಕಲ್ಯಾಣ ಕರ್ನಾಟಕವೆಂದು ನವನಾಮಕರಣಗೊಂಡ ಈ ಪುಣ್ಯ ಸ್ಥಳದಲ್ಲಿ. ಪುಣ್ಯಸ್ಥಳ ಏಕೆಂದರೆ ಇದು ಅನೇಕ ಗಂಡಾಂತರಗಳ ನಡುವೆ ಕನ್ನಡ ನಂದಾದೀಪವನ್ನು ಎದೆಗೂಡಲ್ಲಿ ಆರದುಳಿಸಿಕೊಂಡು ಬಂದ ಕರಿಮಣ್ಣಿನ ಹಣತೆ. ಶ್ರೀ ಶರಣ ಬಸವೇಶ್ವರ, ಪೂಜ್ಯ ಖ್ವಾಜಾ ಬಂದೇನವಾಜ್, ಮಹಾತ್ಮ ಗಾಂಧಿಯವರ ಭಾವೈಕ್ಯದ ಪರಮ ಆಶಯವನ್ನು ತಮ್ಮ ಬದುಕಿನ ಮೂಲಕವೇ ಅಭಿವ್ಯಕ್ತಿಸಿದ ಪವಾಡ ಭೂಮಿ. ಕನ್ನಡ ಸಾಹಿತ್ಯ ಎಂಬ ಅವಿರತ ಜೀವ ನದಿಯ ತಲಕಾವೇರಿ. ದಾಸಿಮಯ್ಯ, ದುಗ್ಗಲೆ, ನಾಗಚಂದ್ರ, ಕೇಶಿರಾಜ, ಲಕ್ಷೀಷ, ಆವಿನಹಾಳ ಕಲ್ಲಯ್ಯ, ಕಡಕೋಳ ಮಡಿವಾಳಪ್ಪ, ಹಜರತ್ ಸಾಬರು, ಮೊದಲಾದ ಮಹಾಂತರು ಜನ್ಮವೆತ್ತಿದ ಪುಣ್ಯಭೂಮಿಯಿದು. ಭೀಮೆ ಕೃಷ್ಣೆಯರು ತಮ್ಮ ಆರ್ದ್ರ ಹೃದಯದ ಅಭಿವ್ಯಕ್ತಿಗಾಗಿ ನೀರ್ಗಣ್ಣು ತೆರೆದ ಪುಣ್ಯಸ್ಥಳ. ಮಳಖೇಡದ ಈ ಜಾಗರಣ ಸ್ಥಳದಲ್ಲೇ ನೃಪತುಂಗನ ಆಸ್ಥಾನ ಕವಿ ಶ್ರೀವಿಜಯ ಸೈರಣೆಯ ಉದಾತ್ತ ಕಹಳೆ ಮೊಳಗಿಸಿದ್ದು. ಕಲ್ಯಾಣ ಕರ್ನಾಟಕದ ಕಡಕೋಳ ಮಡಿವಾಳಪ್ಪ, ಜಲಾಲ ಸಾಹೇಬ, ರಾಮದಾಸ ನಾಮಾಂಕಿತ ಪಿಂಜಾರ ಬಡಾಸಾಹೇಬ, ಮೊದಲಾದ ತತ್ವಪದಕಾರರ ಧರ್ಮಸಹಿಷ್ಣುತೆಯ ನಿಲುವು ಈ ಹೊತ್ತು ನಮ್ಮ ನಾಡಿಗೆ ಮಾರ್ಗದರ್ಶಕವಾದದ್ದು. ಪರಧರ್ಮ ಪರವಿಚಾರಗಳನ್ನು ಸೇರಿಸುವುದು ಮೊದಲ ನೆಲೆ; ಹಾಗೆ ಸೇರಿಸಿ ಪರಸ್ಪರ ಹೊಕ್ಕಾಡುತ್ತಾ ಒಗ್ಗೂಡಿ ಪ್ರವಹಿಸುವುದು ಮುಂಬರಿವ ನೆಲೆ. ನಾನು ದಶಕಗಳ ಹಿಂದೆ ಓದಿದ ಕೇರಳದ ಮಹಾನ್ ಲೇಖಕ ವೈಕಂ ಮಹಮದ್ ಬಷೀರರು ಒಂದಕ್ಕೆ ಒಂದು ಸೇರಿದರೆ ಆಗುವುದು ಎರಡಲ್ಲ, ಬಹುದೊಡ್ಡ ಒಂದು ಎಂದು ಬಾಲ್ಯದಲ್ಲೆ ಹೊಸ ಗಣಿತ ಬೋಧಿಸಿದ್ದು ನನ್ನನ್ನು ಹಗಲಿರುಳೂ ಕಾಡುವ ಜೀವ ತತ್ತ್ವ. ಅದೇ ನಾನು ಜೀವಿಸಲು ಮತ್ತು ಉಜ್ಜೀವಿಸಲು ಬಯಸುವ ಪರಮಾದರ್ಶ. ಒಂದು ದೇಶದ ಚಲನಶೀಲ ಜೀವನಕ್ಕೆ ಬಹು ಯೋಗ್ಯವಾದ ಪ್ರತೀಕ ಹರಿಯುವ ಜೀವ ನದಿ. ಅದು ಆದಿಯಲ್ಲಿ ಒಂದು. ಮುಂದೆ ಅದರೊಂದಿಗೆ ಬೆರೆತು ಒಂದಾಗುವ ಅದೆಷ್ಟು ತೊರೆ ಹಳ್ಳ ಕಿರುಝರಿಗಳೋ. ನಮ್ಮ ರಾಷ್ಟçಪುರುಷರು ಕಂಡ ದಿವ್ಯವಾದ ಕನಸು ಅದೇ; ಅವರು ಆಚರಣೆಗೆ ತರಲು ಬಾಳುದ್ದಕ್ಕೂ ಸೆಣೆಸಿದ ಆದರ್ಶವೂ ಅದೇ. ರಾಷ್ಟçವಾಹಿನಿ ಎಂಬ ಈ ಮಹಾನದಿಯು ಅಸಂಖ್ಯ ಧ್ವನಿಗಳಲ್ಲಿ ಮಾತಾಡುವ ಏಕಮುಖಿ. ಇದನ್ನೇ ನನ್ನ ಕವಿತೆಯೊಂದು ತಾಯಿ ಭಾರತಿಯು ಹಲವು ನುಡಿಗಳಿಂದ ಕಂದರನ್ನು ಮುದ್ದಿಸುವ ವಾಗ್ವಿದೆ ಎಂದು ಅಂದದ್ದು. ಭಾರತದ ಲಿಪಿಯುಳ್ಳ, ಇಲ್ಲದ, ಎಲ್ಲ ಭಾಷೆಗಳೂ ನಮ್ಮ ಅವ್ವನ ಆಡುನುಡಿಗಳೇ. ಹಾಗಾಗಿ ಅವೆಲ್ಲವೂ ನಮ್ಮ ರಾಷ್ಟç ಭಾಷೆಗಳೇ. ಹಿಂದಿಯವರೂ ಮಂದಿಯವರೇ ಎಂಬ ಬೇಂದ್ರೆಯ ದರ್ಶನದೀಪ್ತ ನುಡಿ ನಮಗೆ ಸಮ್ಮತ. ಆದರೆ ಹಿಂದಿಗೆ ಸಮಾನತೆಯಲ್ಲೂ ಪ್ರಥಮ ಸ್ಥಾನ ಎಂಬ ಮಾತನ್ನು ನಾನು ಒಪ್ಪಲಾರೆ. ಭಾರತದ ಒಗ್ಗೂಡಿಕೆ ಮತ್ತು ಪ್ರಾಂತ್ಯ ಪ್ರಾಂತ್ಯಗಳ ನಡುವಣ ಸಲೀಸು ವ್ಯವಹರಣಕ್ಕಾಗಿ ಒಂದು ಭಾಷೆ ಅಗತ್ಯವೆನ್ನುವುದಾದರೆ ಅದು ಹಿಂದಿ ಆಗಬಾರದು. ಯಾವ ಭಾಷೆಯು ಯಾವುದೋ ಒಂದು ಪ್ರಾಂತ್ಯದ ಭಾಷೆಯಲ್ಲವೇ, ಯಾವ ಭಾಷೆ ಒಂದು ಕಾಲದಲ್ಲಿ ಭಾರತದ ವೈಚಾರಿಕ ಸಾಹಿತ್ಯಕ ಮತ್ತು ಚಿಂತನೆಯ ಭಾಷೆಯಾಗಿತ್ತೋ ಅಂಥ ಸಂಸ್ಕೃತವನ್ನೋ ಅಥವಾ ಜನಸಾಮಾನ್ಯರ ವ್ಯವಹರಣ ಭಾಷೆಯಾಗಿದ್ದ ಪ್ರಾಕೃತವನ್ನೋ ನಾವು ಸೇತುವೆಯ ಭಾಷೆಯಾಗಿ ಬಹುವಾರ್ಷಿಕ ಯೋಜನೆಯಾಗಿ ಸಂಕಲ್ಪಿಸಿ ರೂಢಿಸುವುದು ಅಗತ್ಯವೆಂದು ನನಗನ್ನಿಸುವುದು. ಯಹೂದಿಗಳು ಯಿದ್ದಿಷ್ ಭಾಷೆಯನ್ನು ರೂಢಿಸಿದಂತೆ. ಸದ್ಯಕ್ಕೆ ಇಂಗ್ಲಿಷ್ ಭಾಷೆಯನ್ನು ಭಾರತದ ಬೇರೆಬೇರೆ ಪ್ರಾಂತ್ಯಗಳ ನಡುವಿನ ಸಂಪರ್ಕ ಭಾಷೆಯಾಗಿ ಬಳಸಬಹುದು. ಅಂಥ ವ್ಯಾವಹಾರಿಕ ಇಂಗ್ಲಿಷನ್ನು ಎಲ್ಲ ಭಾಷಿಕರಿಗೂ ಕೆಲವೇ ತಿಂಗಳ ಭಾಷಾ ಶಿಬಿರಗಳಲ್ಲಿ ಕಲಿಸಬಹುದು. ಆ ಭಾಷೆ ವ್ಯವಹಾರಕ್ಕೆ ಅಗತ್ಯವಿರುವಷ್ಟು ಶಬ್ದಕೋಶದಿಂದ ರೂಪಿತವಾಗಬೇಕು. ಆ ಭಾಷೆಯಲ್ಲಿ ವ್ಯಾಕರಣಕ್ಕಿಂತ ವ್ಯವಹರಣ, ಪ್ರೌಢಿಮೆಗಿಂತ ಸಂವಹನ, ಪರಿಶುದ್ಧಿಗಿಂತ ಪ್ರಯೋಜನ ಮುಖ್ಯವಾಗಬೇಕು. ಅಮೆರಿಕನ್ ಇಂಗ್ಲಿಷ್ ಎಂಬAತೆ ಅದು ನಾವÉÃ ರೂಢಿಸುವ ಭಾರತೀಯರ ನಾಲಗೆಗೆ ಒಗ್ಗುವ ಇಂಡಿಯನಿAಗ್ಲಿಷ್ ಆಗಬೇಕು. ಅಂಥ ಒಂದು ಇಂಗ್ಲಿಷ ಅನ್ನು ಯು.ಆರ್.ಅನಂತಮೂರ್ತಿಗಳು ಅಬ್ಯೂಜಿಂಗ್ ಇಂಗ್ಲಿಷ್ ಎಂದು ಕರೆಯಲು ಬಯಸುವರು. ನಾವದನ್ನು ಬೇಕಾದರೆ “ಅಗ್ಗದಾಂಗ್ಲ” ಎಂದು ಕರೆಯಬಹುದು. ನಮ್ಮ ದÉÃಶದ ಹಾಗÉÃ ವಸಾಹತು ನೆಲೆಯಾಗಿಯೇ ಪಾಡುಪಟ್ಟ ಸಿಂಗಪೂರಿಯನ್ನರ ನಿಲುವು ಬೇರೆಯೇ ಇದೆ. ನಮಗೆ ಇಂಗ್ಲಿಷ್ ಬೇಕು ಆದರೆ ಷೇಕ್ಸ್ಪಿಯರ್ ಬೇಡ ಎನ್ನುವುದು ಅವರ ಭಾಷಾಚಿಂತನೆ. ನಾವು ಹಾಗೆ ಭಾವಿಸಬೇಕಾಗಿಲ್ಲ. ನಮಗೆ ವ್ಯವಹಾರಕ್ಕೆ ಅಗತ್ಯವಿರುವಷ್ಟು ಇಂಗ್ಲಿಷ್ ಸಾಕು. ಷೇಕ್ಸ್ಪಿಯರ್ ಬೇಕು ಎನ್ನುವ ಸಾಹಿತ್ಯ ಜಿಜ್ಞಾಸುಗಳು ಆಳವಾಗಿ ಇಂಗ್ಲಿಷನ್ನು ಒಂದು ಐಚ್ಛಿಕ ಭಾಷೆಯಾಗಿ ಕಲಿಯಬಹುದು. ಹಾಗೆ ಕಲಿತು ಅವರಲ್ಲಿ ಸಮರ್ಥರಾದವರು ಇಂಗ್ಲಿಷ್ ಭಾಷೆಯ ಮಹತ್ವದ ಕೃತಿಗಳನ್ನು-ಸಾಹಿತ್ಯ ವÉÊಚಾರಿಕ ತಾತ್ವಿಕ ವÉÊಜ್ಞಾನಿಕ ಇತ್ಯಾದಿ ವಿಷಯಗಳಿಗೆ ಸಂಬAಧಿಸಿದ ಕೃತಿಗಳನ್ನು- ಕನ್ನಡಕ್ಕೆ ತರಬೇಕು. ದಕ್ಕಬೇಕಾದ ಎಲ್ಲವೂ ನಮಗೆ ಕನ್ನಡದ ಮೂಲಕವÉÃ ದಕ್ಕಬೇಕು. ಬೆಂಗಾಳಿಯ, ಮರಾಠಿಯ, ರಷ್ಯನ್ ಭಾಷೆಯ ಮಹಾನ್ ಲೇಖಕರನ್ನು ನಾವು ಕನ್ನಡ ಅನುವಾದದ ಮೂಲಕವÉÃ ದಕ್ಕಿಸಿಕÉÆಂಡÉವಲ್ಲವÉÃ? ಕನ್ನಡ ಸಂದರ್ಭದಲ್ಲಿ ಅನುವಾದ ಸಂಸ್ಕೃತಿಯನ್ನು ನಾವು ವಿಭಿನ್ನ ನೆಲೆಯಲ್ಲಿ ಗ್ರಹಿಸಿದವರು ಎಂಬುದನ್ನೂ ನಾನಿಲ್ಲಿ ಸೂಚಿಸಬಯಸುತ್ತೇನೆ. ನಮಗೆ ಅನುವಾದವೆಂದರೆ ಮೂಲವನ್ನು ಸಮಕಾಲೀನ ಸಂದರ್ಭಕ್ಕೆ ಆವಾಹಿಸಿಕÉÆಂಡು ನಮ್ಮದÉÃ ಸ್ವಂತದ್ದಾಗಿಸಿಕÉÆಳ್ಳುವ ಕ್ರಿಯಾಶೀಲವೃತ್ತಿ. ಪಂಪ, ಕುಮಾರವ್ಯಾಸರ ಕೃತಿಗಳು ಅಂಥ ಪುನರವತರಣದ ಫಲಗಳಾಗಿವೆ. ಸಂಸ್ಕೃತ ಕನ್ನಡಕ್ಕೆ ಸಂಬAಧಿಸಿ ಆದದ್ದು ಅದÉÃ. ಕನ್ನಡ ಇಂಗ್ಲಿಷ್ಗೆ ಸಂಬAಧಿಸಿಯೂ ಆಗಬೇಕಾದದ್ದು ಅದÉÃ. ನಮ್ಮಲ್ಲಿ ಅನುವಾದವೆಂದರೆ ತತ್ಸಮವಲ್ಲ; ತದ್ಭವ. ಆಧುನಿಕ ಕನ್ನಡದಲ್ಲಿ ಬೇಂದ್ರೆಯವರ ಮೇಘದೂತ, ಕುವೆಂಪು ಅವರ ಶ್ರೀರಾಮಾಯಣದರ್ಶನಂ, ಪುತಿನ ಅವರ ಶ್ರೀ ಹರಿಚರಿತೆ ಆ ಪ್ರವೃತ್ತಿಗೆ ಸೂಕ್ತ ಉದಾಹರಣೆಗಳಾದಾವು. ಇದರ ಜೊತೆಜೊತೆಗÉÃ ಮೂಲವನ್ನು ಮೈಮನಗೆಡಿಸದೆ ನಮ್ಮ ಭಾಷೆಗೆ ತಂದುಕÉÆಳ್ಳುವ ಮೂಲನಿಷ್ಠತೆಯ ತತ್ಸಮ ಅನುವಾದಗಳೂ ಅಕಡೆಮಿಕ್ ದೃಷ್ಟಿಯಿಂದ ತುಂಬ ಅಗತ್ಯ. ಬಂಗಾಳಿ, ಮರಾಠಿ, ರಷ್ಯನ್, ಫ್ರೆಂಚ್, ಚಿಲಿ, ಜರ್ಮನ್ ಭಾಷೆಗಳ ಕೃತಿಗಳು ಈ ಮಾದರಿಯಲ್ಲೇ ನಿಸಾರ್ ಅಹಮದ್, ಪಿ.ಲಂಕÉÃಶ್, ಎನ್.ಎಸ್. ಲಕ್ಷಿö್ಮÃನಾರಾಯಣ ಭಟ್ಟ, ರಾಮಚಂದ್ರಶರ್ಮ, ಎಸ್. ದಿವಾಕÀರ, ಓ.ಎಲï. ನಾಗಭೂಷಣಸ್ವಾಮಿ, ಜಿ.ಎನ್. ರಂಗನಾಥರಾವ್, ಎಂ.ಆರ್. ಕಮಲ, ಜ.ನಾ. ತÉÃಜಶ್ರೀ ಮೊದಲಾದ ಸಮರ್ಥ ಲೇಖಕರಿಂದ ಆಗಿರುವುದಲ್ಲವೆ? ಅದÉÃ ಮಾತು ಇಂಗ್ಲಿಷ್ ಭಾಷೆಯ ಮಹಾಕೃತಿಗಳಿಗೂ ಅನ್ವಯಿಸುವಂತಾಗಬೇಕು. ಭಾರತದಿಂದ ಜಪಾನ್ ಜರ್ಮನಿ ಫ್ರಾನ್ಸ್ ಚೈನಾಕ್ಕೆ ಹÉÆÃಗುವ ಉದ್ಯೋಗಾರ್ಥಿಗಳಿಗೆ ಆಯಾ ದÉÃಶದ ಭಾಷೆಗಳನ್ನು ಕ್ಷಿಪ್ರವಾಗಿ ಕೆಲವÉÃ ತಿಂಗಳಲ್ಲಿ ಕಲಿಸುವ ಶಿಬಿರಗಳಿವೆಯಲ್ಲವೆ? ಹಾಗÉÃ ಪ್ರಾಂತ್ಯದಿAದ ಪ್ರಾಂತ್ಯಕ್ಕೆ ಉದ್ಯೋಗಾರ್ಥ ವಾಗಿಯೋ ವಲಸೆಗಾರರಾಗಿಯೋ ಹÉÆÃಗುವ ಮಂದಿಗೆ ಕ್ಷಿಪ್ರ ಇಂಗ್ಲಿಷ್ ಕಲಿಕೆ ಶಿಬಿರಗಳನ್ನು ರೂಪಿಸಬೇಕು. ಅದÉÃ ರೀತಿ ಭಾರತದ ಬೇರೆ ಬೇರೆ ಪ್ರಾಂತ್ಯಭಾಷೆಗಳನ್ನು ವ್ಯವಹಾರ ದೃಷ್ಟಿಯಿಂದ ಕಲಿಸುವ ಸಮಾನಾಂತರ ಕಲಿಕೆ ಶಿಬಿರಗಳ ವ್ಯವಸ್ಥೆಯೂ ಆಗಬೇಕು. ಕರ್ನಾಟಕಕ್ಕೆ ಬಂದು ವ್ಯವಹರಿಸುತ್ತಿರುವ ಅನ್ಯಭಾಷಿಕರು ಪಂಪ ಕುಮಾರವ್ಯಾಸರ ಬಸವÉÃಶ್ವರರನ್ನು ಓದುವಷ್ಟು ಭಾಷಾ ಪರಿಣತಿ ಪಡೆಯುವುದು ಅಪÉÃಕ್ಷಣೀಯವÉÃನÉÆÃ ಹËದು. ಆದರೆ ಅದು ಕಡ್ಡ್ಡಾಯವಾಗಬೇಕಾಗಿಲ್ಲ. ನಿತ್ಯ ಜೀವನದಲ್ಲಿ ನಮ್ಮ ಅಂಗಡಿ ಮುಂಗಟ್ಟು ಮಾಲು ಉದ್ಯೋಗ ಕ್ಷೇತ್ರಗಳಲ್ಲಿ ವ್ಯವಹರಿಸುವಷ್ಟು ಅವರು ಕನ್ನಡ ಕಲಿಯುವುದಂತೂ ಅತ್ಯಗತ್ಯ. ನಿತ್ಯ ವ್ಯವಹಾರವನ್ನು ಕರ್ನಾಟಕದಲ್ಲಿ ನೆಲೆಸಿರುವ ಕನ್ನಡÉÃತರರು ಕನ್ನಡದಲ್ಲೇ ನಿಭಾಯಿಸುವುದು ಈವತ್ತಿನ ತುರ್ತು ಅಗತ್ಯ. ಅವರÉÆಂದಿಗೆ ವ್ಯವಹರಿಸಲು ನಮ್ಮ ರÉÊತರು ಕಾರ್ಮಿಕರು ಬ್ಯಾಂಕು ಮಾಲುಗಳಲ್ಲಿ ಕೆಲಸ ಮಾಡುವ ಸ್ಥಳೀಯರು ಬಂದವರ ಭಾಷೆಗೆ ತಾವು ಹಾರುವುದಕ್ಕೆ ಬದಲು, ಅವರು ಕನ್ನಡದಲ್ಲೇ ವ್ಯವಹರಿಸುವುದು ಅನಿವಾರ್ಯವಾಗುವಂತೆ ಕನ್ನಡದಲ್ಲೇ ವ್ಯವಹರಿಸಬೇಕು. ಶಾಲೆಗಳಲ್ಲಿ ನಾವು ಮಕ್ಕಳಿಗೆ ಕಲಿಸುವ ಇಂಗ್ಲಿಷ್ ಭಾಷೆ ಈ ಉದ್ದೇಶಗಳಿಂದಲೇ ರೂಪಿತವಾಗಬೇಕು. ಸಾಹಿತ್ಯಕ ಸಾಂಸ್ಕೃತಿಕ ಚಿಂತನೆಯ ಭಾಷೆಯಾಗಿ ಇಂಗ್ಲಿಷನ್ನು ಭಾರತದ ಸಮಸ್ತರು ಕಲಿಯಬೇಕಾದ ಶಿರÉÆÃಭಾರವನ್ನು ಮೊದಲು ತಪ್ಪಿಸಬೇಕು. ಕರ್ನಾಟಕಕ್ಕೆ ಸಂಬAಧಿಸಿ ಮಾತಾಡುವುದಾದರೆ, ಕನ್ನಡ, ತುಳು, ಕÉÆಂಕಣಿ, ಕÉÆಡವ, ಉರ್ದು, ಲಂಬಾಣಿ, ಅರೆಭಾಷೆ-ಎಲ್ಲವೂ ಕನ್ನಡಮ್ಮನ ನಲ್ನುಡಿಗಳÉÃ. ಈ ಎಲ್ಲ ದಿವ್ಯ ಮಣಿಗಳನ್ನೂ ಪÉÆÃಣಿಸಿ ಕನ್ನಡ ತಾಯಿ ಧರಿಸಿದ ದಿವಿನಾದ ಕಂಠೀಹಾರ ಕರ್ನಾಟಕದ ಈ ಭಾಷಾ ಸಮುಚ್ಚಯ. ಮನೆಯಲ್ಲಿ ಮನೆಮಾತು. ವ್ಯವಹಾರ ಸಂಪರ್ಕ ಸಂಸ್ಕೃತಿ ಚಿಂತನೆ ಸಾಹಿತ್ಯ ನಿರ್ಮಾಣ ಶಿಕ್ಷಣ ಮುಂತಾದ ಎಲ್ಲ ಜೀವನ ರಂಗದಲ್ಲೂ ನಮ್ಮ ಪರಿಸರ ಭಾಷೆಯಾದ ಕನ್ನಡದ ಹೂಡುವಿಕೆ. ಬೇರೆ ಬೇರೆ ಮನೆಮಾತಿನ ನಮ್ಮ ಮಹಾನ್-ಲೇಖಕ ಸಮುದಾಯವು ಬದುಕಿದ್ದೂ, ಬರೆದದ್ದೂ, ಕನ್ನಡದ ಅಹಂಗÉÆÃಲವನ್ನು ನಕ್ಷತ್ರರೂಪೀ ಪುಷ್ಪಗಳಿಂದ ಅಲಂಕರಿಸಿ ನಾಡಿನ ಅಸ್ಮಿತೆಯನ್ನೂ ಅಭಿಮಾನವನ್ನು ಹೆಚ್ಚಿಸಿದ್ದೂ ಈ ಉಪಕ್ರಮದಲ್ಲಿಯೇ ಅಲ್ಲವೆ? ಬೇಂದ್ರೆ ಮಾಸ್ತಿ ಕಸ್ತೂರಿಯವರ ಮನೆಮಾತು ಯಾವುದÉÃ ಇರಬಹುದು, ಅವರು ಬರೆದದ್ದೂ, ತಮ್ಮ ತಮ್ಮ ಸೃಷ್ಟಿ ಪ್ರತಿಭೆಯ ಮಹಾ ಪ್ರವಹಣಕ್ಕೆ ಬಳಸಿದ್ದೂ, ಬೆಳೆಸಿದ್ದೂ ಸಾವಿರ ವರ್ಷಗಳ ಅರ್ಥಪÉÆÃಷಣೆಯಿಂದ ಪುಷ್ಟವಾಗಿರುವ, ಎಂಥ ಸೂಕ್ಷö್ಮಗಳನ್ನೂ ನಿಭಾಯಿಸುವ ಶಕ್ತಿಯುಳ್ಳ ಸಿರಿಗನ್ನಡವನ್ನು. ಇದÉÃ ನಮ್ಮ ಆದರ್ಶವಾಗಬೇಕೆಂದು ನಿಶ್ಚಯಿಸುವುದರಲ್ಲಿ ಅಖಂಡ ಕರ್ನಾಟಕದ ಸರ್ವೋಚ್ಚ ಹಿತವಿದೆ. ಕರ್ನಾಟಕ ಎಂಬ ಹೆಸರು ಮಾತ್ರವಲ್ಲ ಕನ್ನಡವೆಂಬ ಉಸಿರೂ ಹಿರಿಯರ ಆಶಯದಂತೆ ನಮ್ಮದಾಗಿ ಸಿದ್ಧಿಸುತ್ತದೆ. ಕರ್ನಾಟಕದಲ್ಲಿ ಜೀವಂತವಾಗಿರುವ ತುಳು ಕÉÆಂಕಣಿ ಮೊದಲಾದ ಉಳಿದ ಭಾಷೆಗಳಲ್ಲಿ ನಿರ್ಮಿತವಾದ ಸಾಹಿತ್ಯವು ವರ್ಷ ಕಳೆಯುವುದರಲ್ಲಿ ಕನ್ನಡ ಭಾಷೆಗೆ ತರ್ಜುಮೆಗÉÆಂಡು ಕರ್ನಾಟಕ ಸಾಹಿತ್ಯಕಲಾಭಿವ್ಯಕ್ತಿಯ ಸಮಗ್ರ ಚಿತ್ರಣ ನಮಗೆ ದÉÆರಕುವಂತಾಗಲು ಒಂದು ಅನುವಾದ ಯೋಜನೆಯನ್ನೇ ನಾವು ಕÉÊಗÉÆಳ್ಳಬೇಕು. ಕನ್ನಡ ಸಾಹಿತ್ಯ ಆಗ ಕರ್ನಾಟಕ ಸಾಹಿತ್ಯವಾಗುತ್ತದೆ. ಹೃದಯದ ಹಿಗ್ಗುವಿಕೆ ದÉÃಹಶಾಸ್ತçದಲ್ಲಿ ದÉÆÃಷ. ಆದರೆ ಸಂಸ್ಕೃತಿಗೆ ಸಂಬAಧಿಸಿದAತೆ ಅದು ಉಪಾಧÉÃಯ. ರಷ್ಯಾದಲ್ಲಿ ಹಾಗೆ ಆಗುತ್ತಿದೆ. ಕರ್ನಾಟಕದಲ್ಲಿ ಹಾಗೆ ಆಗುವುದು ಅಶಕ್ಯವÉÃನಲ್ಲ. ಮುಂದೆ ಈ ಸೂತ್ರ ಅಖಿಲ ಭಾರತಕ್ಕೂ ಅನ್ವಯಿಸಬೇಕು. ಕರ್ನಾಟಕದ ಮಹಾನ್ ಲೇಖಕರು ವರ್ಷೊಪ್ಪತ್ತಿನಲ್ಲಿ ಭಾರತದ ಹೆಚ್ಚಿನ ಭಾಷೆಗಳಲ್ಲಿ ಪುನರವತರಣ ಗÉÆಂಡು ನಮ್ಮ ಕುವೆಂಪು ಬೇಂದ್ರೆ ಕಾರಂತ ಮೊದಲಾದ ವಿಶ್ವ ಮಟ್ಟದ ಕನ್ನಡ ಲೇಖಕರ ಹೆಸರು ಇಡೀ ಭಾರತದ ಮೂಲೆ ಮೂಲೆಯಲ್ಲೂ ಅನುರಣಿಸು ವಂತಾಗಬೇಕು. ಕನ್ನಡದ ಮಹತ್ ಕೃತಿಗಳು ಇಂಗ್ಲಿಷ್ಗೆ ಬರುವುದು ವಿಶ್ವ ನೆಲೆಯಲ್ಲಿ ಕನ್ನಡ ಸಾಹಿತ್ಯವು ಸ್ಥಾಪಿತವಾಗಲು ಅತ್ಯಗತ್ಯ. ಕನ್ನಡ ಕೃತಿಗಳು ಹಿಂದಿ ಮೊದಲಾದ ಭಾರತದ ಇತರ ಭಾಷೆಗಳಿಗೆ ತರ್ಜುಮೆಗÉÆಳ್ಳುವುದು ಅದಕ್ಕಿಂತ ತುರ್ತು ಅಗತ್ಯ. ಇವು ಅಳಿವಿಲ್ಲದೆ ಹರಿಯಬೇಕು. ಬೆರೆಯಬೇಕು. ಒಂದರಿAದ ಒಂದು ಪುಷ್ಟಗÉÆಳ್ಳಬೇಕು. ಕಲಬುರ್ಗಿ ನೆಲವು ಕನ್ನಡ ಮತ್ತು ಉರ್ದುವನ್ನು ಹÉÃಗೆ ಬೆರೆಸಿ ಬಳಸಿ ಹÉÆಸ ಜೀವ ಭಾಷೆಯನ್ನು ನಿರ್ಮಿಸಿ ಸಾರ್ಥಕ್ಯ ಪಡೆಯಿತು ಎಂಬುದನ್ನು ನಾವು ತತ್ವಪದಕಾರರ ಭಾಷಾ ನಿಯೋಗದಲ್ಲಿ ಬಲ್ಲವರಾಗಿರುವೆವು. ಭಾಷೆಗಳ ಬೆರೆಯುವಿಕೆ ಭಾವಗಳ ಬೆರೆಯುವಿಕೆಯೂ ಹËದು. ಅರ್ಥ, ಪರಮಾರ್ಥ, ಪ್ರಯೋಗಾರ್ಥಗಳೆಲ್ಲಾ ಈ ಸಂಯುಕ್ತ ಸಂಗಮದಲ್ಲಿ ಒಡನಾಡಿ ಬೆರೆಯುವವು. ಬೆರೆತೂ ತಮ್ಮ ಮೂಲ ರೂಪವನ್ನು ಜತನವಾಗಿ ಕಾಯ್ದುಕÉÆಳ್ಳುವುವು. ಮಾರ್ಗವು ದÉÃಸಿಯೊಂದಿಗೂ ದÉÃಸಿಯು ಮಾರ್ಗದÉÆಂದಿಗೂ ಹÉÆಕ್ಕಾಡುತ್ತಾ, ಪುಗುವ ಫಲಿಸುವ ನಿತ್ಯಾನುಸಂಧಾನವು ನಿರಂತರವಾಗಿ ನಡೆಯುವುದು.
ನಾವು ನಮ್ಮ ಮನೆಯ ಮಕ್ಕಳÉÆಂದಿಗೆ ಮಾತಾಡಬೇಕಾದದ್ದು ನಮ್ಮ ತಾಯ್ನುಡಿಯಲ್ಲಿ. ಅಂದರೆ ತಮಿಳು ಬಂಧುಗಳು ತಮ್ಮ ಮನೆಯಲ್ಲಿ ತಮ್ಮ ಮಕ್ಕಳÉÆಂದಿಗೆ ತಮಿಳನ್ನೇ ಆಡಲಿ. ಆದರೆ ಅವರು ಬೀದಿಗೆ ಬಂದಕೂಡಲೆ ವ್ಯವಹಾರದ ಭಾಷೆಯೂ ಬಹುಕಾಲದಿಂದ ಕರ್ನಾಟಕದಲ್ಲಿ ನೆಲೆಸಿದ ಕಾರಣಕ್ಕಾಗಿ ಮಾತೃಭಾಷೆಯೂ ಆಗಿರುವ ಕನ್ನಡದಲ್ಲೇ ವ್ಯವಹರಿಸಬೇಕು. ಇದು ಕರ್ನಾಟಕಕ್ಕೆ ವಲಸೆ ಬಂದು ನೆಲೆಸಿರುವ ಎಲ್ಲ ಕನ್ನಡÉÃತರರಿಗೂ ಅನ್ವಯಿಸುವಂಥದ್ದು. ನಮ್ಮ ನಮ್ಮ ಮನೆ ಮಾತಲ್ಲಿ ಮಕ್ಕಳÉÆಂದಿಗೆ ಮಾತು. ಆದರೆ ಅವರು ಶಾಲೆಗಳಲ್ಲಿ ಬೀದಿ ಅಂಗಡಿ ಮುಂಗಟ್ಟುಗಳಲ್ಲಿ ವ್ಯವಹರಿಸಬೇಕಾದದ್ದು ಕನ್ನಡದಲ್ಲಿ. ಕಲಿಯಬೇಕಾದದು ಕನ್ನಡದಲ್ಲಿ. ಪ್ರಾಥಮಿಕ ಶಾಲಾ ಶಿಕ್ಷಣವಂತೂ ಕನ್ನಡ ಭಾಷೆಯ ಮೂಲಕವÉÃ ಆಗತಕ್ಕದ್ದು. ಮನೆ ಮಾತು, ಬೀದಿ ಮಾತು ಎಂಬ ಎರಡು ಕಲ್ಪನೆಗಳು ನಮ್ಮ ಅನÉÃಕ ದ್ವಂದ್ವವನ್ನು ನಿವಾರಿಸಬಲ್ಲವು. ಈ ಬೀದಿ ಮಾತು ಎಂಬುದನ್ನೇ ವ್ಯವಹಾರ ಭಾಷೆಯೆಂದೂ ರಾಜ್ಯಭಾಷೆಯೆಂದೂ ಪರಿಸರ ಭಾಷೆಯೆಂದೂ ನಾವು ಪರ್ಯಾಯ ನಾಮಗಳಲ್ಲಿ ಕರೆಯಬಹುದು. ಕನ್ನಡ ಪರಿಸರ ಭಾಷೆಯನ್ನೇ ಮಾತೃಭಾಷೆಯೆಂದು ವ್ಯಾಖ್ಯೆಯನ್ನು ಹಿಗ್ಗಿಸಿಕÉÆಂಡರೆ ನಮ್ಮ ಅನÉÃಕ ವ್ಯಾವಹಾರಿಕ ಸಮಸ್ಯೆಗಳು ಪರಿಹಾರವಾಗುವುವು. ಕಲಿಯುವ ಮತ್ತು ಕಲಿಸುವ ಭಾಷೆಯು ಈ ವ್ಯವಹಾರ ಭಾಷೆಯಾಗಬೇಕು ಎಂದು ಈವರೆಗಿನ ಎಲ್ಲ ಸಂಶÉÆÃಧನೆಗಳೂ ನಮಗೆ ಬೋಧಿಸಿವೆ. ಯುನೆಸ್ಕೋ ಸಿದ್ಧಾಂತವೂ ಅದÉÃ. ಬಿಡಿಗಳೆಲ್ಲಾ ಕೂಡಿ ಒಂದು ಅಖಂಡತ್ವದಲ್ಲಿ ತನ್ನತನ ಉಳಿಸಿಕÉÆಳ್ಳಲು ಕರ್ಮಣಿಸರದಲ್ಲಿ ಕೆಂಬವಳಗಳನ್ನು ಕÉÆÃದ ಈ ಕಂಠೀಹಾರ ನಮ್ಮ ಈವತ್ತಿನ ವ್ಯಾವಹಾರಿಕ ಅಗತ್ಯ. ನಮ್ಮ ಸೃಷ್ಟಿಶೀಲತೆಯನ್ನು ಈ ಅನುಸಂಧಾನವೂ ಈವರೆಗೂ ರಕ್ಷಿಸಿಕÉÆಂಡು ಬಂದಿದೆ. ಯಾವ ಧರ್ಮೀಯನÉÃ ಇರಲಿ, ಹೆಣ್ಣಾಗಿರಲಿ, ಗಂಡಾಗಿರಲಿ, ಬಡವನÉÆÃ ಬಲ್ಲಿದನÉÆÃ ಆಗಿರಲಿ, ಪರಿಸರದ ಭಾಷೆ ಅವನ ಆತ್ಮಾಭಿವ್ಯಕ್ತಿಗೆ ಪೂರಕವೂ ಪÉÆÃಷಕವೂ ಆಗಿ ಮೊದಲಿಂದಲೂ ಹÉÆಂದಿಕÉÆAಡು ಬಂದಿದೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮನೆಮಾತು ತಮಿಳಾಗಿದ್ದರೂ ಅವರ ಸೃಷ್ಟಿಶೀಲತೆ ವಿಜೃಂಭಿಸಿದ್ದು ಪರಿಸರದ ಮಾತಾದ ಕನ್ನಡದಲ್ಲಿ. ತಮಿಳು ತನ್ನಷ್ಟಕ್ಕೆ ಶಕ್ತಿಶಾಲಿಯಾದ ಅಭಿವ್ಯಕ್ತಿಭಾಷೆ ಯಾಗಿದ್ದಾಗಲೂ. ಯಾಕೆಂದರೆ ಭಾಷೆಯೆಂಬುದು ತನ್ನೊಳಗೆ ತಾನು ಆಡಿಕÉÆಳ್ಳುವ ಸಂವÉÃದನೆಯ ಭಾಷೆ ಹÉÃಗÉÆÃ ಹಾಗÉÃ ಪಕ್ಕದವರÉÆಂದಿಗೆ ನಮ್ಮ ಅನುಭವ ದ್ರವ್ಯಗಳನ್ನು ಹಂಚಿಕÉÆಳ್ಳುವ ನಿವÉÃದನೆಯ ಭಾಷೆಯೂ ಆಗಿದೆ. ಭಾಷೆಯ ಪರಮ ಸಾರ್ಥಕ್ಯ ಆಡುವವರ ಆಲಿಸುವವರ ಅನ್ಯೋನ್ಯ ಅನುಬಂಧದಲ್ಲಿರುವುದು. ಹುಟ್ಟಿದ ಮಾತು ನಮ್ಮ ಕಿವಿಗೆ ಹಾಗೂ ನಮ್ಮ ಸಹಜೀವಿಗಳ ಕಿವಿಗೆ ಮುಟ್ಟಿದಾಗಲೇ ಅದಕ್ಕೆ ಭಾಷೆಯ ಅಂತಸ್ತು ಲಭ್ಯವಾಗುವುದು. ಅದಕ್ಕಾಗಿಯೇ ಮಾಸ್ತಿಯವರು ತಾವು ಕುರಿತು ಆಡಬೇಕಾದ ಸಮುದಾಯ ಕನ್ನಡ ಸಂದರ್ಭವಾದ ಕಾರಣ ಕನ್ನಡದಲ್ಲಿ ತಮ್ಮ ಸೃಷ್ಟಿಶೀಲತೆಯನ್ನು ರೂಢಿಸುವುದು ಅನಿವಾರ್ಯವಾಗಿತ್ತು. ಇದು ಬೇಂದ್ರೆ, ಪುತಿನ, ಗÉÆÃವಿಂದ ಪÉÊ, ಪಂಜೆ ಮಂಗÉÃಶರಾವ್, ಷರೀಫ ಸಾಹÉÃಬ, ಕಸ್ತೂರಿ, ಕÉÊಲಾಸಂ, ಗುಂಡಪ್ಪ, ಅಷ್ಟೇಕೆ ಕಲಬುರ್ಗಿ ಪ್ರಾಂತ್ಯದ ಮುಸ್ಲಿಮï ತತ್ವಪದಕಾರರಿಗೂ ಅನ್ವಯಿಸುವ ಮಾತು. ಒಟ್ಟಿನಲ್ಲಿ ನಾವು ನಿಸ್ಸಂದಿಗ್ಧವಾಗಿ ಗ್ರಹಿಸಬೇಕಾದದ್ದು- ನಮ್ಮ ಪರಿಸರ ನುಡಿಯಲ್ಲೇ ನಮ್ಮ ಸರೀಕರÉÆಂದಿಗೆ ನಾವು ವ್ಯವಹರಿಸಬೇಕು. ಕರ್ನಾಟಕದ ಒಜ್ಜೀವನಶಕ್ತಿ ಕನ್ನಡದಲ್ಲಿರುವುದರಿಂದ ನಮ್ಮ ಒಕ್ಕೊರಲ ಹಾಡುಗಳು ಕನ್ನಡದಲ್ಲಿಯೇ ಅನುರಣಿಸಬೇಕು. ನಮ್ಮ ಪ್ರಾಥಮಿಕ ಕಲಿಕೆಯಂತೂ ನಮ್ಮ ಪರಿಸರದ ಭಾಷೆಯಾದ ಕನ್ನಡದಲ್ಲೇ ನಡೆಯಬೇಕು.
ಕಲಿಕೆ ಎಂಬ ಮಾತು ಬಂದಕೂಡಲೇ ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮ ಕಣ್ಮುಂದೆ ಮೆರವಣಿಗೆ ನಡೆಸುತ್ತದೆ. ನಾವು ಕಲಿಯಬೇಕಾದದ್ದು ಕನ್ನಡದಲ್ಲಿ. ಜೊತೆಜೊತೆಯಲ್ಲೇ ಮಕ್ಕಳು ಇನ್ನೆರಡು ಭಾಷೆಗಳನ್ನೂ ಭಾಷೆಯಾಗಿ ಕಲಿಯಬಹುದು ಎಂಬ ತ್ರಿಭಾಷಾ ಸೂತ್ರವನ್ನು ನಾವು ಮಾನ್ಯ ಮಾಡುವುದಾದರೆ ಭಾರತದ ಎಲ್ಲ ಪ್ರಾಂತ್ಯಗಳಿಗೂ ಅದು ಸಮಾನವಾಗಿ ಅನ್ವಯಿಸಬೇಕು. ದಕ್ಷಿಣದ ಮಕ್ಕಳಿಗೆ ಮೂರು ಭಾಷೆ, ಹಿಂದಿ ಮಾತೃಭಾಷೆಯಾಗಿರುವ ಉತ್ತರದ ಬಹುಪಾಲು ಪ್ರಾಂತ್ಯಗಳ ಮಕ್ಕಳಿಗೆ ಎರಡು ಭಾಷೆ ಎಂಬAತಾಗಬಾರದು. ಹಿಂದಿ ಭಾಷೆಯನ್ನು ಆಡುವ ಮಕ್ಕಳು ಹಿಂದಿ ಇಂಗ್ಲಿಷ್ಗಳ ಜೊತೆಗೆ ಇನ್ನೊಂದು ತಮ್ಮ ಆಯ್ಕೆಯ ಭಾರತದ ಭಾಷೆಯನ್ನು ಕಲಿಯುವಂತಾಗಬೇಕು. ಒಂದು ತನ್ನ ಪರಿಸರದ ನುಡಿ, ಮತ್ತೆರಡು ಆಯಾ ಮಗುವಿನ ಅಗತ್ಯಕ್ಕೆ ತಕ್ಕಂತೆ ಇನ್ನೆರಡು ಭಾಷೆಗಳು. ಆದರೆ ಕಲಿಯುವ ಭಾಷೆಗಿಂತ ಮಕ್ಕಳಿಗೆ ಕಲಿಸುವ ಭಾಷೆ ಯಾವುದಾಗಬೇಕೆಂಬುದÉà ಈವತ್ತಿನ ಜರೂರು ಸಮಸ್ಯೆ. ಬೇರೆ ಬೇರೆ ವಿಷಯಗಳನ್ನು ಮಕ್ಕಳು ಪರಿಸರದ ನುಡಿಯಲ್ಲೇ ಕಲಿಯುವುದು ಯುಕ್ತ ಎಂಬುದು ಭಾಷಾ ವಿಜ್ಞಾನಿಗಳ, ಶಿಕ್ಷಣ ಪರಿಣತರ, ಭವಿಷ್ಯದ ದೃಷ್ಟಿಯಿಂದ ಚಿಂತಿಸುವ ರಾಷ್ಟç ಪುರುಷರ ನಿಸ್ಸಂದಿಗ್ಧ ನಿಲುವು. ಗಾಂಧಿಯವರ ಪ್ರಕಾರ ಇಂಗ್ಲಿಷ್ ಭಾಷೆ ಮತ್ತು ವಿದ್ಯಾಭ್ಯಾಸ ಕ್ರಮ ಭಾರತ ಅನುಭವಿಸುತ್ತಿರುವ ದÉÆಡ್ಡ ಪೀಡೆ; ಶಾಪ. ಅದರಿಂದ ಭಾರತದ ತರುಣರು ದುರ್ಬಲರೂ ನಿಷ್ಪçಯೋಜಕರೂ ನಾಡಿಗÉà ಪರಕೀಯರೂ ಆಗುತ್ತಿರುವರು. ಇಂಗ್ಲಿಷ್ ವಿಶ್ವಭಾಷೆ – ಅದಕ್ಕಾಗಿ ನಾವು ಇಂಗ್ಲಿಷ್ ಕಲಿಯಬೇಕು ಎಂಬ ವಾದವಿದೆಯಲ್ಲ! ಲೋಹಿಯ ಹÉÃಳುತ್ತಾರೆ: ಇಂಗ್ಲಿಷ್ ಭಾಷೆ ಅಂತಾರಾಷ್ಟಿçÃಯ ಮಾಧ್ಯಮವೆನ್ನುವುದು ಕÉÃವಲ ಕಟ್ಟು ಕತೆ. ಕುವೆಂಪು ಸ್ಪಷ್ಟವಾಗಿ ಹÉÃಳುತ್ತಾರೆ: ಇಂಗ್ಲಿಷ್ ಇನ್ನು ಮುಂದೆ ಎಲ್ಲರೂ ಅಲ್ಲ ಅಗತ್ಯವಿರುವ ಕೆಲವರು ಮಾತ್ರ ಕಲಿಯಬಹುದಾದ ಭಾಷೆ! ವ್ಯವಹಾರಕ್ಕೆ ಇಂಗ್ಲಿಷ್ ಬೇಕು ಎನ್ನುವವರಿಗೆ ಐದಾರು ತಿಂಗಳ ಕ್ಷಿಪ್ರ ಕಲಿಕೆ ಶಿಬಿರಗಳಲ್ಲಿ ಒಂದು ಭಾಷೆಯನ್ನು ಕಲಿಸುವುದು ಸಾಧ್ಯವಿರುವಾಗ ಭಾರತದ ಅಸಂಖ್ಯ ತರುಣರು ತಮ್ಮ ಶಿಕ್ಷಣಾವಧಿಯ ಉದ್ದಕ್ಕೂ ಇಂಗ್ಲಿಷ್ ಕಲಿಯುವ, ಇಂಗ್ಲಿಷ್ ಮೂಲಕ ಎಲ್ಲ ಪಠ್ಯ ವಿಷಯಗಳನ್ನು ಕಲಿಯುವ ಹÉÆರೆ ಯಾಕೆ? ಆರು ತಿಂಗಳಲ್ಲಿ ಕಲಿತು ಬಳಸಬಹುದಾದ ಒಂದು ಭಾಷೆಗಾಗಿ ಇಷ್ಟು ಶ್ರಮವÉÃಕೆ?-ಎಂದು ಪುತಿನ ಉದ್ಗಾರ ತೆಗೆದಿದ್ದಾರೆ.
ಅಷ್ಟಕ್ಕೂ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆಗಬೇಕೆಂಬ ನಿಲುವು ವ್ಯಕ್ತಪಡಿಸುತ್ತಿರುವವರು ಯಾರು? ಶಿಕ್ಷಣ ಸಂಸ್ಥೆಗಳನ್ನು ಹಣ ಸಂಪಾದನೆಯ ದಂಧೆ ಮಾಡಿಕÉÆಂಡಿರುವ ವ್ಯಾಪಾರಮುಖಿಗಳು. ಇಂಗ್ಲಿಷ್ ಮಾಧ್ಯಮದ ಬೃಹದ್ಗಾತ್ರದ ನಾಜೂಕು ಸಂಸ್ಥೆಗಳಿಗೆ ಹಣ ಹೂಡಿ, ದ್ವಿಗುಣ ತ್ರಿಗುಣವಾಗಿ ಹಣ ಬೆಳೆಯಬೇಕೆಂಬ ವ್ಯಾಪಾರÉÆÃದ್ದೇಶಿಗಳು. ಇದನ್ನು ಸಾಧಿಸಲು ಇವರು ನಾನಾ ಬಗೆಯ ವಕ್ರೋಪಾಯಗಳಲ್ಲಿ ತÉÆಡಗುವರು. ಮುಖವಾಡದ ಮಾತುಗಳನ್ನು ಆಡುವರು. ನಮ್ಮ ಮನೆಮಾತು ಬೇರೆ. ನಾವು ಬೇರೆ ಕಡೆಯಿಂದ ಕರ್ನಾಟಕಕ್ಕೆ ಬಂದು ಜೀವನÉÆÃಪಾಯಕ್ಕಾಗಿ ಇಲ್ಲಿ ನೆಲೆಸಿದವರು. ಹಾಗೆ ನೆಲೆಸುವುದಕ್ಕೆ ಭಾರತದ ಸಂವಿಧಾನದ ಸಮ್ಮತಿಯೂ ಇದೆ. ಪ್ರತಿಯೊಂದು ಮಗುವೂ ಮಾತೃಭಾಷೆಯಲ್ಲಿ ಕಲಿಯುವುದು ಅಗತ್ಯವೆಂದಾದಲ್ಲಿ ನೀವು ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಹÉÃರಿದಲ್ಲಿ ಕನ್ನಡÉÃತರ ಅನ್ಯಭಾಷಿಕರ ಮೂಲಭೂತ ಹಕ್ಕಿಗೆ, ಮಕ್ಕಳು ಅವರವರ ಮಾತೃ ಭಾಷೆಯಲ್ಲಿ ಕಲಿಯುವ ಹಕ್ಕಿಗೆ ಚ್ಯುತಿಯೊದಗುವುದು. ನಮ್ಮ ಮೂಲಭೂತ ಹಕ್ಕನ್ನು ನಾವು ಅನುಭವಿಸಲು ಬಿಡಿ ಎಂಬುದÉÆAದು ಮುಖವಾಡದ ಮಾತು. ಯಾವುದು ಪರಿಸರ ಭಾಷೆಯೋ ಅದರಲ್ಲಿ ಮಾತ್ರ ಮಕ್ಕಳು ಲೋಕಾಕೃತಿಯನ್ನು ಚೆನ್ನಾಗಿ ಗ್ರಹಿಸಬಲ್ಲರು. ಆದ ಕಾರಣ ಕನ್ನಡವು ಶಿಕ್ಷಣ ಮಾಧ್ಯಮವಾಗಬೇಕು ಎನ್ನುವವರು ನಾವು. ಮಗುವÉÇಂದು ತನ್ನ ಪಂಚÉÃAದ್ರಿಯಗಳಿAದ ಸಹಜವಾಗಿ ಗ್ರಹಿಸಿದ ಲೋಕ ಗ್ರಹಿಕೆಯು ಪರಿಷ್ಕಾರಗÉÆಳ್ಳಬೇಕಾದದ್ದು ಪರಿಸರದ ಭಾಷೆಯಲ್ಲಿ. ಆಗ ಮಾತ್ರ ಅನುಭವ ಮತ್ತು ಅರಿವು ಒಂದಕ್ಕೊAದು ಪೂರಕ-ಪÉÆÃಷಕವಾಗಿ ಮಗುವಿನ ಕಲಿಕೆ ಅನುಭವದ ನೆಲೆಗೆ ಏರುವುದು. ಹಾಗಾಗದೆ ಇಂಗ್ಲಿಷ್ ಭಾಷೆಯಲ್ಲಿ ಬೇರೆ ಬೇರೆ ವಿಷಯಗಳನ್ನು ಮಕ್ಕಳಿಗೆ ಬೋಧಿಸಿದರೆ ಅದು ಮಾಹಿತಿಗಳ ಒದಗಣೆ ಆಗುವುದÉÃ ವಿನಾ ಲೋಕಾನುಭವವು ಭಾಷಾನುಭವವಾಗಿ ದಾಟಿಕÉÆಳ್ಳಲಾರದು.
ಪÉÆÃಷಕರು ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಬೇಕು ಎಂದು ಆಗ್ರಹಿಸುವಾಗ ನಾವಾದರೂ ಏನು ಮಾಡಲಿಕ್ಕೆ ಸಾಧ್ಯ? ಬೇಡಿಕೆಯ ಅನುಸಾರ ಪೂರÉÊಕೆ ನಡೆಸಬೇಕಾದದ್ದು ನಮ್ಮ ಧರ್ಮ ಎನ್ನುತ್ತವೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಅಡಳಿತ ಮಂಡಲಿಗಳು. ಅದು ನಿಮ್ಮ ಧರ್ಮ ಹËದು. ಆದರೆ ಅದು ವ್ಯಾಪಾರಿ ಧರ್ಮ. ಶಿಕ್ಷಣ ಒಂದು ವ್ಯಾಪಾರೀ ಉದ್ಯಮವಲ್ಲ. ಅನುಭವವನ್ನು ಮಾತಾಗಿಯೂ ಮಾತನ್ನು ಅನುಭವವಾಗಿಯೂ ಅಖಂಡತ್ವದಲ್ಲಿ ಸಿದ್ಧಿಸಿಕÉÆಳ್ಳುವ ವ್ಯಕ್ತಿರೂಪಣದ ಸೃಷ್ಟಿಶಾಲೆ. ಇಂಗ್ಲಿಷ್ ಅನ್ನವನ್ನು ಕÉÆಡುವ ಭಾಷೆ ಅನ್ನುವಿರÉÆÃ? ನಮ್ಮ ರÉÊತರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಅನ್ನ ಬೆಳೆಯುವ ಕÉÆಡುವ ನಿತ್ಯಾನುಷ್ಠಾನದಲ್ಲಿ ತತ್ಪರರಾಗಿದ್ದಾರೆ. ರಾಜರು ಉದಿಸಲಿ ರಾಜರು ಅಳಿಯಲಿ ಬಿತ್ತುಳುವುದನವ ಬಿಡುವುದೆ ಇಲ್ಲ-ಎಂದು ಕುವೆಂಪು ನÉÃಗಿಲಯೋಗಿ ಕವಿತೆಯಲ್ಲಿ ಹÉÃಳಿದ್ದನ್ನು ಇಲ್ಲಿ ನೆನೆಯೋಣ. ಆ ಕವಿತೆ ಈಗ ನಮ್ಮ ಸರ್ಕಾರ ಅಂಗೀಕರಿಸಿರುವ ರÉÊತಗೀತೆಯೂ ಹËದು. ಲಕ್ಷಾಂತರ ಕೂಲಿ, ಕಾರ್ಮಿಕ, ನಿತ್ಯಸÉÃವಾ ಜನರು ಇಂಗ್ಲಿಷ್ ಭಾಷೆಯ ಹಂಗಿಲ್ಲದೆ ಸ್ವಾಭಿಮಾನಿ ಬದುಕು ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡವನ್ನು ಅನ್ನದ ಭಾಷೆಯಾಗಿ ರೂಢಿಸುವುದೆಂದರೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಂಹ ಪಾಲು ಉದ್ಯೋಗ ಮೀಸಲಾತಿಯನ್ನು ಜಾರಿಗೆ ತರುವುದು ಬಹು ಮುಖ್ಯ ಅಗತ್ಯ. ಅನ್ನ ಸಂಪಾದನೆಯು ಕÉÊಂಕರ್ಯ ಮತ್ತು ದುಡಿಮೆಯ ಕಾಯಕಯೋಗವಲ್ಲದೆ ಭಾಷಾ ಪರಿಣತಿಯ ಫಲವಲ್ಲ ಎಂಬುದನ್ನು ನಾವು ಗ್ರಹಿಸಬೇಕಾಗಿದೆ. ಇಂಗ್ಲಿಷ್ ಮೀಡಿಯಮ್ಮಿನಲ್ಲಿ ಓದುವ ನಮ್ಮ ಮಕ್ಕಳು ಹೆಚ್ಚು ಜಾಣರಾಗುವರÉÆÃ? ಕರ್ನಾಟಕದ ದÉÆಡ್ಡ ವಿಜ್ಞಾನಿಗಳು, ಉದ್ಯಮಿಗಳು, ಕವಿ, ಸಾಹಿತಿಗಳು, ರಾಜಕೀಯ ಮುತ್ಸದ್ದಿಗಳು, ದÉÃಶಕ್ಕಾಗಿ ತಮ್ಮ ಬಾಳನ್ನೇ ಧಾರೆಯೆರೆದ ರಾಷ್ಟçಪುರುಷರು ಕನ್ನಡ ಭಾಷೆಯಲ್ಲೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ ಈಗ ಸಾಧನೆಯ ಉತ್ತುಂಗ ಶಿಖರವÉÃರಿರು ವಂಥವರು. ಐನ್ಸ್ಟೈನ್ರಂಥ ಮಹಾ ವಿಜ್ಞಾನಿಗೂ ಜರ್ಮನ್ ಭಾಷೆಯೇ ಜ್ಞಾನದ ಮಾಧ್ಯಮವಾಗಿತ್ತು. ಇಂಗ್ಲಿಷ್ ಸಂವಹನದ ಭಾಷೆ ಮಾತ್ರ ಆಗಿತ್ತು. ಇಂಗ್ಲಿಷ್ ಭಾಷೆಯಲ್ಲಿ ಉಲುಹುವ ಅರಗಿಳಿಗಳೆಲ್ಲಾ ಕÉÆÃಹಂ ಧ್ಯಾನದಲ್ಲಿ ಮುಳುಗುವ ಹಂಸಗಳಾಗಲಾರರು. ಅಸ್ಖಲಿತವಾಗಿ ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತಾಡುವ ವಾಗ್ಮಿಗಳು ಸತ್ಯವಾಚಿಗಳೆಂದೂ ಹÉÃಳಲಾಗದು. ಅದಕ್ಕೇ ಭಾಷೆಯು ಹÉÃಗಿರಬೇಕೆಂದು ವಿವÉÃಚಿಸುವಾಗ ಬಸವಣ್ಣನವರು ಮುತ್ತಿನಹಾರ, ಮಾಣಿಕ್ಯದ ದೀಪ್ತಿ, ಸ್ಫಟಿಕದ ಶಲಾಕೆ ಇವುಗಳ ಅನಂತರ ಲಿಂಗ ಮೆಚ್ಚಿ ಅಹುದೆನ್ನಬೇಕೆಂಬ ಪರಮಪ್ರಮೇಯವನ್ನು ಶೃಂಗ ಸ್ಥಾನದಲ್ಲಿ ಇರಿಸಿದ್ದು. ನಡೆ ನುಡಿ ಒಂದಾಗದ ಬದುಕು ಅಕ್ಷಮ್ಯವೆಂದು ಸತ್ಯನಿಷ್ಠುರವಾದ ಕಟೂಕ್ತಿಯನ್ನಾಡಿದ್ದು. ಪದವಿಟ್ಟಳುಪದÉÆಂದಗ್ಗಳಿಕೆ ಎಂದು ಕುಮಾರವ್ಯಾಸ ತನ್ನ ಭಾಷೆಯ ಮೂಲಧರ್ಮವನ್ನು ಕುರಿತು ಹÉÃಳುವನಲ್ಲ, ಆ ಪದ್ಯವನ್ನೊಮ್ಮೆ ನೆನೆಯೋಣ. ಅದು ಕÉÃವಲ ಕವಿಯ ಲೇಖನಿಯ ಅಸ್ಖಲನವನ್ನು ಕುರಿತಷ್ಟೇ ಮಾತಾಡುತ್ತಿಲ್ಲ. ಪದ ಎಂಬ ಮಾತಿಗೆ ಕನ್ನಡದಲ್ಲಿ ಎರಡರ್ಥವಿದೆ. ಒಂದು ಭಾಷೆಯ ಶಬ್ದ; ಇನ್ನೊಂದು ವ್ಯಕ್ತಿತ್ವದ ಚಾರಿತ್ರ್ಯದ ದೃಢತೆ. ಪದವಿಟ್ಟು ಅಳುಪದಿರುವುದು ಚಾರಿತ್ರ್ಯಶುದ್ಧಿ, ಭಾಷಾ ಶುದ್ಧಿ ಎರಡನ್ನೂ ಒಂದÉÃ ಉಸುರಿಗೆ ಇಬ್ಬಾಯಿಖಡ್ಗದಂತೆ ನುಡಿಯುತ್ತಾ ಇದೆ. ಬಸವಣ್ಣನವರ ನಡೆ ನುಡಿಯ ಅಭÉÃದವನ್ನು ಕುಮಾರವ್ಯಾಸನ ರೂಪಕ ಬೇರÉÆಂದು ಪರಿಭಾಷೆಯಲ್ಲಿ ಉದ್ಗರಿಸುತ್ತಿದೆ. ನಮ್ಮ ಖಾಸಗಿ ವಿದ್ಯಾಸಂಸ್ಥೆಗಳನ್ನು ನಡೆಸುವ ಉದ್ಯಮಿಗಳು ಮಾತೃಭಾಷೆಯಲ್ಲಿ ಕಲಿಯುವುದು ಅನ್ಯಭಾಷಿಕರ, ಅಲ್ಪಸಂಖ್ಯಾತರ ಹಕ್ಕು ಮತ್ತು ಪÉÆÃಷಕರ ಬೇಡಿಕೆಯ ಒತ್ತಾಯ ಎನ್ನುವ ವಾದವನ್ನು ಮುಂದಿಟ್ಟು ಉಚ್ಚ ನ್ಯಾಯಾಲಯಕ್ಕೆ ಮೊರೆಹÉÆÃಗುತ್ತಾರೆ. ಆಗ ಉಚ್ಚ ನ್ಯಾಯಾಲಯವು ಕನ್ನಡ ಪರವಲ್ಲದ, ಮಕ್ಕಳ ಶಿಕ್ಷಣ ಮಾಧ್ಯಮವನ್ನು ನಿರ್ಧರಿಸುವುದು ಪÉÆÃಷಕರ ಹಕ್ಕು ಅನ್ನುವ ತೀರ್ಪು ನೀಡುವುದು. ಹಿಂದೆ ಅದÉÃ ಉಚ್ಚ ನ್ಯಾಯಾಲಯವು ಕನ್ನಡ (ಅಂದರೆ ತಾಯ್ನುಡಿ-ಪರಿಸರ ನುಡಿ) ಶಿಕ್ಷಣ ಮಾಧ್ಯಮವಾಗಬೇಕು ಎಂಬ ತೀರ್ಪು ನೀಡಿದ್ದು ವಿಸ್ಮರಣೆಗೆ ಸಲ್ಲುತ್ತದೆ. ಮತ್ತೆ ನಾವು ನ್ಯಾಯಾಂಗದ ಮೊರೆಹೋಗಬೇಕಾದ, ಕಾನೂನಿನ ಹÉÆÃರಾಟ ನಡೆಸಬೇಕಾದ ತಿರುಮುರುವು ಸ್ಥಿತಿ ಉಂಟಾಗುವುದು. ಶಿಕ್ಷಣ ಮಾಧ್ಯಮ ಕನ್ನಡ ಆಗಬೇಕು ಎನ್ನುವು ತತ್ತ÷್ವಕ್ಕೆ ಕಾನೂನಿನ ತÉÆಡಕುಗಳು ಉಂಟಾಗುವುವು.
ಕಾಲಕಾಲಕ್ಕೆ ನಮ್ಮ ಸರ್ಕಾರೀ ನಿಲುವುಗಳೂ ವ್ಯತ್ಯಸ್ತಗÉÆಳ್ಳುತ್ತಾ ಹÉÆÃಗಿರುವುದನ್ನೂ ನಾನು ಈ ಮಹಾಸಮ್ಮೇಳನದ ಸಮಕ್ಷಮ ಪ್ರಸ್ತಾಪಿಸ ಬಯಸುತ್ತೇನೆ. ಮೊದಲು ಕನ್ನಡ ಪರ ನಿಲುವು. ಬಳಿಕ ಅನುದಾನ ಪಡೆಯುವ ಮತ್ತು ಪೂರ್ಣ ನಿರ್ವಹಣೆಯ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಶಿಕ್ಷಣ ಮಾಧ್ಯಮ! ಕÉÆನೆಗೆ ಸರ್ಕಾರವÉÃ ಇಂಗ್ಲಿಷï ಮಾಧ್ಯಮದ ಒಂದು ಸಾವಿರ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸುವ ಹಿಡಿದ ಹಠ ಬಿಡದ ಮೊಂಡು ನಿಲುವು ತಾಳುವುದು. ಹಾಗೆ ಸ್ಥಾಪಿತವಾದ ಇಂಗ್ಲಿಷ್ ಮಾಧ್ಯಮದ ಪ್ರÉÊಮರಿ ಶಾಲೆಗಳ ಭವಿಷ್ಯ ಏನಾಯಿತೆಂಬುದು ಅಧ್ಯಯನದ ವಿಷಯ. ಇದಕ್ಕಾಗಿ ಯಾವ ಪೂರ್ವ ಸಿದ್ಧತೆಗಳು ನಡೆದವು? ಯಾವ ಶಿಕ್ಷಣ ಸಮಿತಿಯ ಸಲಹೆ-ಸೂಚನೆ ಪಡೆಯಲಾಯಿತು? ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳಿಗೆ ಬೋಧಿಸುವ ಶಿಕ್ಷಕರು ಸಿದ್ಧವಿದ್ದಾರೆಯೇ? ನಾನು ಈಚಿನ ಅಭ್ಯಾಸದಿಂದ ಉಪಲಬ್ಧವಿರುವ ಅಂಕಿ ಅಂಶಗಳ ಪ್ರಕಾರ ಇಂಗ್ಲಿಷ್ ಶಾಲೆಗಳು ಶಿಕ್ಷಣ ಮಟ್ಟದ ಇಳಿವಿಗೆ ಕಾರಣವಾಗಿವೆ. ಜಿ.ಎಸ್.ಜಯದÉÃವ, ಎಚ್.ಎನ್.ಮುರಳೀಧರ ಸಂಪಾದಿಸಿರುವ ನೆಲದ ನುಡಿಯ ನಂಟು ಎಂಬ, ಕನ್ನಡಿಗರೆಲ್ಲ ಮನನ ಮಾಡಲೇಬೇಕಾದ ಕೃತಿಯಲ್ಲಿ ಈ ಬಗ್ಗೆ ಅಂಕಿ ಅಂಶ ಸಹಿತ ಮಾಹಿತಿಗಳಿವೆ. ಮಕ್ಕಳು ಶಾಲೆ ಬಿಡುವ ಪ್ರಮಾಣ ಹೆಚ್ಚಾಗುತ್ತಿದೆ. ಅವರು ನಿಸ್ತೇಜರೂ ನಿರ್ವೀರ್ಯರೂ ಆಗುತ್ತಿರುವರು. ಇದು ಕನ್ನಡ ಮಕ್ಕಳು ಮತ್ತು ಕನ್ನಡ ಭಾಷೆಯ ಸ್ಥಿತಿ ಮಾತ್ರವಲ್ಲ. ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ಕಾಣುತ್ತಿರುವ ಸಾಮಾನ್ಯ ದೃಶ್ಯ. ಆಂಗ್ಲಮಾಧ್ಯಮದ ಮೂಲಕ ಮಾಹಿತಿಗಳನ್ನು ನೆನಪಿನ ಶÉÊತ್ಯಾಗಾರಕ್ಕೆ ಸುರಿದುಕÉÆಳ್ಳುತ್ತಿರುವ ಎಲ್ಲ ಮಕ್ಕಳ ಸ್ಥಿತಿಯೂ ಅದÉÃ ಆಗಿದೆ.
ಶಿಕ್ಷಣ ಮಾಧ್ಯಮ ಮತ್ತು ಸಾಹಿತ್ಯ ಸಂಸ್ಕೃತಿಯ ಸಂಬAಧವೂ ನಾವು ಊಹಿಸಲಾರದಷ್ಟು ನಿಕಟವಾದದ್ದು. ನಾವೆಲ್ಲಾ ಹಳ್ಳಿಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದವರು. ಕಲಿಯಬೇಕಾದ ಪಠ್ಯಗಳನ್ನೆಲ್ಲಾ ಕನ್ನಡದಲ್ಲೇ ಕಲಿತವರು. ಒಂದು ವಿಷಯ ಕಲಿಯುವಾಗ ವಸ್ತು ಮತ್ತು ಅದನ್ನು ಸೂಚಿಸುವ ಭಾಷೆ ಎರಡನ್ನೂ ಕಲಿಯುವ ದ್ವಿಮುಖೀ ಒತ್ತಡವಿಲ್ಲದೆ ಬೆಳೆದವರು. ನಮಗೆ ಎಲೆ ಗÉÆತ್ತಿತ್ತು. ಒಲೆ ಗÉÆತ್ತಿತ್ತು. ಅಲ್ಲಿ ನಮ್ಮ ತಾಯಿ ಉರುವಲು ಹಾಕಿ ಅನ್ನ ತಯಾರಿಸುವುದು ಗÉÆತ್ತಿತ್ತು. ಸೂರ್ಯ ರಶ್ಮಿ ಮತ್ತು ಅದರ ಶಾಖ ಗÉÆತ್ತಿತ್ತು. ಮರದ ಎಲೆ, ಮರಕ್ಕೆ ಅನ್ನ ತಯಾರಿಸಿ ಬಡಿಸುವ ಅಡುಗೆ ಮನೆ ಎಂಬುದು ನಮಗೆ ಅನುಭವವÉÃದ್ಯವಾದ ಸಂಗತಿ. ಇನ್ನೂ ಉಚಾಯಿಸಿ ಹÉÃಳಬೇಕೆಂದರೆ ಅದು ಸಂಗತಿಯೇ ಅಲ್ಲ. ಒಂದು ನಿತ್ಯಾನುಭವದ ವಿಸ್ತರಣೆ. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗಾದರೆ ಗ್ರಹಿಸಬೇಕಾದ ಸಂಗತಿ ಮತ್ತು ಮಾಧ್ಯಮದ ಭಾಷೆ ಈ ಎರಡರ ನಡುವೆ ಯಾವಾಗಲೂ ಬಿರುಕುಗಳು. ಪುಸ್ತಕವನ್ನು ಕಪಾಟಿನಲ್ಲಿ ಅವರು ಜೋಡಿಸುವರು ಅಷ್ಟೆ. ಅದು ವಾತಾಪಿ ಜೀರ್ಣೋಭವ ಆಗಿ ಅನುಭವವಿದಿತವಾಗದು. ಹÉÆಟ್ಟೆಯ ಮೇಲೆ ಕಟ್ಟಿದ ಕಟ್ಟೋಗರ ಹಸಿವನ್ನು ನೀಗಬಲ್ಲುದೆ? ಮಸ್ತಕದಲ್ಲಿ ತುರುಕಿದ ಪುಸ್ತಕ ಮನÉÆÃಗತವಾಗಬಲ್ಲುದೆ?
ನಾವು ಪ್ರÉÊಮರಿ ಮಾಧ್ಯಮಿಕ ಪ್ರËಢ ಶಾಲೆಗಳಲ್ಲಿ ಏನನ್ನು ಕಲಿತೆವÉÇÃ ಅದಕ್ಕೆ ಪೂರಕವೂ ಪÉÆÃಷಕವೂ ಆದಂಥ ಸಂಗತಿಗಳನ್ನು ಶಾಲೆಯ ಹÉÆರಗೆ ಕಲಿತದ್ದು ಮಾತ್ರ ಸತ್ಯ. ರಾತ್ರಿ ನÉÆÃಡಿದ ಯಕ್ಷಗಾನ, ಸಂಜೆ ನಡೆದ ಭಜನಾ ಮಂಡಲಿಯ ಪಾದಯಾತ್ರೆ, ಅವರು ಒಕ್ಕೊರಲಲ್ಲಿ ಹಾಡುತ್ತಾ ಹÉÆÃಗುತ್ತಿದ್ದ ತತ್ವಪದಕಾರರ ಪದ, ಗÉÆÃವಿಂದಾ ಎಂದು ಕೂಗುತ್ತಾ ಮನೆಮನೆಗೆ ಬರುತ್ತಿದ್ದ ದಾಸಯ್ಯಗಳ ದಾಸರ ಹಾಡುಗಳು, ಅವರು ತರುವ ಎಣ್ಣೆ ಗಿಮಟಿನ ಕಾಲ್ದೀಪ, ಮಿರುಗುಟ್ಟುವ ಗÉÆÃಪಾಲ ಬುಟ್ಟಿ, ಗಂಟೆ ಜಾಗಟೆಯ ಭÉÆÃರ್ಗರೆತ….ಅದೆಲ್ಲಾ ಶಾಲೆಯ ಹÉÆರಗೆ ನಾವು ಕಲಿಯುತ್ತಿದ್ದ ಜೀವನ ವÉÊವಿಧ್ಯದ ಒಂದು ಎದೆಹೊಗುವ ಅನುಭವ. ನಮ್ಮ ಈ ನಿತ್ಯಾನುಭವ ಶಾಲೆಗಳಲ್ಲಿ ಭಾಷೆಯ ಮೂಲಕ ಪಠ್ಯಗಳ ಮೂಲಕ ಭಾಷಾವತರಣಗÉÆಳ್ಳುವ ಚÉÆÃದ್ಯ ಸಂಭವಿಸುತ್ತಾ ಇತ್ತು. ಅನುಭವ ಮತ್ತು ಕಲಿಕೆಯ ನಡುವೆ ಅಂತರವಿರಲಿಲ್ಲ. ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ನಾನು ಕಾರಂತ, ಅನಕೃ, ತರಾಸು, ಕಟ್ಟೀಮನಿ ಅವರ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದ್ದೆ. ಪ್ರËಢ ಶಾಲೆಗಳಲ್ಲಿ ನರಸಿಂಹ ಶಾಸ್ತಿç ಎಂಬ ಹೆಸರಿನ ನನ್ನ ಅಧ್ಯಾಪಕರು ಶಾಲೆಯ ಪಠ್ಯವನ್ನು ಮಾತ್ರವಲ್ಲ ನಮಗೆ ಕುವೆಂಪು ಅವರ ಮಲೆನಾಡಿನ ಚಿತ್ರಗಳು, ಕÉÊಲಾಸಂ ಅವರ ಟೊಳ್ಳುಗಟ್ಟಿ ನಾಟಕವನ್ನು ಓದಿ ಹÉÃಳುತ್ತಾ ಇದ್ದರು. ಆ ವÉÃಳೆಗೆ ನಾನು ಕುವೆಂಪು ಬೇಂದ್ರೆಯವರ ಕವಿತೆಗಳನ್ನು ಓದುವ ಹುಚ್ಚಿಗೆ ಬಿದ್ದಿದ್ದೆ. ನಾನು ಬರೆದರೆ ಆಗ ಕನ್ನಡದಲ್ಲೇ ಬರೆಯಬೇಕಾಗಿತ್ತು. ಕನ್ನಡ ಆ ಕಾಲದಲ್ಲಿ ಅನ್ಯಥಾ ಶರಣಂ ನಾಸ್ತಿ ಎಂಬ ಆತ್ಮ ಕ್ಷೇಮದ ನೆಲೆಯಲ್ಲಿತ್ತು. ನಾನು ನನ್ನ ಗೆಳೆಯರು ಕನ್ನಡದಲ್ಲೇ ಓದಿದೆವು ಕನ್ನಡದಲ್ಲೇ ಬರೆದೆವು. ಈವತ್ತು ನಮ್ಮ ಮಕ್ಕಳು ಮೊಮ್ಮಕ್ಕಳು ಓದಿದರೆ ಇಂಗ್ಲಿಷ್ ನಾವೆಲ್ಲುಗಳನ್ನು ಓದುವರು. ಬರೆದರೆ ಇಂಗ್ಲಿಷ್ ಕಥೆ ಕವಿತೆ ಬರೆಯುವರು. ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಅವಜ್ಞತೆಗೆ ಒಳಗಾಯಿತೆಂದರೆ, ಎಲ್ಲವನ್ನೂ ಮಕ್ಕಳಿಗೆ ನಾವು ಇಂಗ್ಲಿಷಲ್ಲೇ ಬೋಧಿಸುವುದಾದರೆ ಕನ್ನಡದಲ್ಲಿ ಹÉÆಸದನ್ನು ಹುಟ್ಟಿಸುವ ಶಕ್ತಿಯನ್ನು ನಮ್ಮ ಮಕ್ಕಳು ಕಳೆದುಕÉÆಳ್ಳುವರು. ಸೃಷ್ಟಿಯ ಶಕ್ತಿಯನ್ನು ಕಳೆದುಕÉÆಳ್ಳುವಂತೆಯೇ ಗ್ರಹಿಕೆಯ ಶಕ್ತಿಯನ್ನೂ ಕಳೆದುಕÉÆಳ್ಳುವರು. ಬಹಳ ಸಮರ್ಥರಾದ ಹಿರಿಯ ಸಾಹಿತಿಗಳು ಈಗ ಮಕ್ಕಳಿಗಾಗಿ ಕವಿತೆ, ಕಥೆ, ನಾಟಕಗಳನ್ನು ಬರೆಯುತ್ತಿರುವರು. ಹÉÆಸಬರÉÆಂದಿಗೆ ಚೆನ್ನವೀರ ಕಣವಿ, ಎನ್.ಎಸ್. ಲಕ್ಷಿö್ಮÃನಾರಾಯಣ ಭಟ್ಟ, ಕೆ.ವಿ.ತಿರುಮಲೇಶ, ಚಂದ್ರಶÉÃಖರ ಕಂಬಾರ, ವÉÊದÉÃಹಿ, ಈಗ ಮಕ್ಕಳ ಸಾಹಿತ್ಯ ರಚನೆಯಲ್ಲೂ ತೊಡಗಿರುವರು. ಪ್ರತಿಭಾಶಾಲಿಗಳಾದ ಹÉÆಸ ಲೇಖಕರ ದÉÆಡ್ಡ ಪಟ್ಟಿಯೇ ಇದೆ. ಮಕ್ಕಳ ಸಾಹಿತ್ಯದ ಬೃಹತ್ ಸಂಪುಟಗಳು, ಮೀಮಾಂಸಾ ಕೃತಿಗಳು ಹÉÆರಬಂದಿವೆ. ಈ ವಿಷಯದಲ್ಲಿ ಬೊಳುವಾರು ಮತ್ತು ಆನಂದ ಪಾಟೀಲರನ್ನು ನಾವು ವಿಶÉÃಷವಾಗಿ ನೆನೆಯಬೇಕಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲೂ ಮಕ್ಕಳ ಪತ್ರಿಕೆ ಹÉÆರಬರುತ್ತಿರುವುದು. ಸಮಸ್ಯೆ ಇರುವುದು ಸೃಷ್ಟಿಶೀಲರಲ್ಲಲ್ಲ. ಗ್ರಾಹಕರಲ್ಲಿ. ಮಕ್ಕಳ ನಾಲಗೆಯಿಂದ ಕನ್ನಡದ ಬೀಜಾಕ್ಷರಗಳÉÃ ಮಾಯವಾಗುತ್ತಿರಲು ಅವರಾದರೂ ಕನ್ನಡ ಕೃತಿಗಳನ್ನು ಓದಲು ಹÉÃಗೆ ಸಮರ್ಥರಾಗುವರು? ಇದೆಲ್ಲದರ ಮೂಲ ತÉÆಡಕು ಕನ್ನಡ ಶಿಕ್ಷಣ ಮಾದ್ಯಮವಾಗಿ ಚ್ಯುತಗÉÆಳ್ಳುತ್ತಿರುವ ದುರಂತದಲ್ಲಿಯೇ ಇದೆ. ಈವತ್ತಿನ ಸಾಹಿತ್ಯದ ಪರಿಸ್ಥಿತಿಯನ್ನೇ ನÉÆÃಡಿ. ನಡುಪ್ರಾಯದಿಂದ ಕೆಳಗಿನ ಎಷ್ಟು ಮಂದಿ ಗಟ್ಟಿ ಕೃತಿಗಳನ್ನೀಗ ನಿರ್ಮಾಣ ಮಾಡುತ್ತಿದ್ದಾರೆ? ಬೆರಳೆಣಿಕೆಯಷ್ಟು ಮಂದಿ ಸಿಕ್ಕಾರು. ಬರೆಯಬಲ್ಲ ನಮ್ಮ ಯುವಕ ಯುವತಿಯರೆಲ್ಲ ಎಲ್ಲಿ ಹÉÆÃದರು? ಅಥವಾ ಯಾವ ಭಾಷೆಯಲ್ಲಿ ತಮ್ಮ ಅನುಭವವನ್ನು ತÉÆÃಡಿಕÉÆಳ್ಳುತ್ತಿರುವರು? ಇಪ್ಪತ್ತನÉÃ ಶತಮಾನದ ದÉÆಡ್ಡ ಲೇಖಕರನ್ನು ನಮ್ಮ ಈವತ್ತಿನ ತರುಣ ಪೀಳಿಗೆ ಆಳವಾಗಿ ಅಭ್ಯಾಸ ಮಾಡುತ್ತಿದೆಯೇ? ಇಪ್ಪತ್ತನÉÃ ಶತಮಾನದ ಕಥೆಯೇ ಇಷ್ಟಾದರೆ ಹತ್ತು, ಹನ್ನೆರಡು, ಹದಿನÉÊದು, ಹದಿನಾರು, ಈ ಶತಮಾನಗಳಲ್ಲಿ ಹÉÆರಬಂದ ನಮ್ಮ ಅತ್ಯುತ್ಕೃಷ್ಟ ಕೃತಿಗಳನ್ನು ಎಷ್ಟು ಮಂದಿ ಹÉÆಸ ಲೇಖಕರು ಹಚ್ಚಿಕÉÆಂಡು ಓದುತ್ತಿರುವರು? ಈ ವಿಸ್ಮರಣೆಯು ಉಂಟುಮಾಡುವ ದಾರುಣ ಪರಿಣಾಮವÉÃನು? ಇಂಥವು ಉತ್ತರಿಸಲು ದುಸ್ಸಾಧ್ಯವಾದ ಪ್ರಶ್ನೆಗಳು. ಈ ಪರಿತಾಪದ ನೆಲೆಯಲ್ಲೇ ನನ್ನ ಅವತರಣಿಕೆ ಮಾಲೆ, ಕುಮಾರವ್ಯಾಸ ಕಥಾಂತರದAಥ ಮರು ಓದಿನ ಕೃತಿಗಳು ರಚಿತವಾದದ್ದು.
ನಮ್ಮ ಸಾವಿರ ವರ್ಷದ ಕನ್ನಡ ಸಾಹಿತ್ಯ ಪರಂಪರೆಯ ನೆನಪನ್ನು ನಮ್ಮ ಹÉÆಸ ಪೀಳಿಗೆಯ ಮನಸ್ಸಲ್ಲಿ ಮತ್ತೆ ಉಜ್ಜೀಸುವ ಯೋಜನೆಗಳನ್ನು ಕÉÊಗÉÆಳ್ಳುವ ತುರ್ತುಯತ್ನಗಳನ್ನು ನಾವು ಕÉÊಗÉÆಳ್ಳಲೇಬೇಕಾಗಿದೆ. ಮೊದಲೆಲ್ಲಾ ಪಠ್ಯಗಳಲ್ಲಾದರೂ ಪ್ರಾಚೀನ ಸಾಹಿತ್ಯದ ಒಂದೆರಡು ವೃತ್ತಗಳÉÆÃ, ಕಂದಗಳÉÆÃ, ಕಥಾಭಾಗಗಳÉÆÃ, ವಚನಖಂಡಗಳÉÆÃ, ಕೀರ್ತನೆ-ಸುಳಾದಿ-ಉಗಾಭÉÆÃಗಗಳÉÆÃ, ರಗಳೆಗಳÉÆÃ ನಮ್ಮ ಮಕ್ಕಳಿಗೆ ಪರಿಚಯವಾಗುತ್ತಿದ್ದವು. ಈಗ ಶಿಕ್ಷಣ ಕ್ರಮದಿಂದಲೇ ಕನ್ನಡ ಭಾಷೆ-ಆ ಭಾಷೆಯಲ್ಲಿ ಮೈದಾಳಿದ ಸಾಹಿತ್ಯ ಮತ್ತು ವÉÊಚಾರಿಕತೆ ನಮ್ಮ ಮಕ್ಕಳಿಂದ ದೂರವಾಗುತ್ತಿದೆ. ಕನ್ನಡದಲ್ಲಿ ಕಲಿಯುವ ಮಾತಿರಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಶಾಲೆಗಳು ಕೂಡ ದಿನÉÃದಿನೇ ಕಡಿಮೆಯಾಗುತ್ತಿವೆ. ಹಳ್ಳಿಗಳಲ್ಲಿ ನಾವು ಮಕ್ಕಳಿದ್ದಾಗ ಇದ್ದಂಥ ಸಾಹಿತ್ಯಕ ಸಾಂಸ್ಕೃತಿಕ ಸಾಮುದಾಯಿಕ ಜೀವನ ಕ್ರಮಗಳು ಈಗ ಕಾಣೆಯಾಗುತ್ತಾ ಇವೆ. ನಮ್ಮೂರಲ್ಲಿ ಕುಂಬಾರಿಕೆ ನಡೆಯುತ್ತಾ ಇಲ್ಲ. ಮರಗೆಲಸದಲ್ಲಿದ್ದ ಗುಡಿಕಾರರು ಕಾಣುತ್ತಿಲ್ಲ. ಕÉÊಮಗ್ಗಗಳು ಬಂದಾಗಿವೆ. ನಾಟಕ ಯಕ್ಷಗಾನ ಪ್ರಯೋಗಗಳು ಕ್ಷೀಣಿಸುತ್ತಾ ಇವೆ. ಭಜನಾಮಂಡಲಿಗಳು ಕಾಣವು. ಕುರಿತÉÆÃದೆಯೂ ಸರ್ವಜ್ಞ ಬಸವಣ್ಣ ಕುಮಾರವ್ಯಾಸ ಲಕ್ಷಿö್ಮÃಶ ಪುರಂದರ ಕನಕರನ್ನು ಅವರ ಕೃತಿಗಳನ್ನೂ ಸಲೀಲವಾಗಿ ಮಾತುಗಳಲ್ಲಿ ಪ್ರಸ್ತಾಪಿಸುತ್ತಿದ್ದ ನಮ್ಮ ಹಳ್ಳಿಯ ಹತ್ತು ಸಮಸ್ತರು ಈಗ ಕಾಲಹತಿಯಿಂದ ನಿಶ್ಶೇಷವಾಗಿದ್ದಾರೆ. ಹರಟೆಕಟ್ಟೆ ದÉÃವಾಲಯದ ಅಂಗಳ ನಿರ್ಜನವಾಗಿವೆ. ಹಳ್ಳಿ ಹಳ್ಳಿಯಲ್ಲೂ ಕುಡಿಯುವ ಅಡ್ಡೆಗಳು. ನಮ್ಮಲ್ಲಿಂದು ಸಮುದಾಯ ನೆರೆಯುತ್ತಿದ್ದ ಬಾವಿ ಕೆರೆ ತÉÆರೆ ಗುಡಿ ದರ್ಗ ಮಸೀದಿ ಚರ್ಚುಗಳು ಜನಜೀವನದಿಂದ ದೂರವಾಗಿ ನಮ್ಮ ಮನೆ ಮತ್ತು ಅದರಲ್ಲಿ ಪ್ರತಿಷ್ಠಾಪಿತವಾಗಿರುವ ವಿಶ್ವದ ಬೇಕು ಬೇಡದ ಎಲ್ಲ ಮಾಹಿತಿಗಳನ್ನು ನಡುಮನೆಗೆ ತಂದು ಸುರಿಯುವ ಟೀವಿಗಳು, ಮನುಷ್ಯ ಸಂಬAಧಗಳನ್ನು ದೂರವಾಣಿಯ ಮೂಲಕ ನಿಜದ ಭ್ರಮೆಗೆ ತರುವ ವ್ಯವಸ್ಥೆ ದ್ವಿಗುಣಿತವಾಗುತ್ತಾ ಇದೆ. ಮನೆಮನೆಗಳಿಗೀಗ ನಲ್ಲಿಗಳು ಬಂದು, ಊರಿಗೆ ಬಂದÉÆÃರು ಬಾವಿಗೆ ಬರÉÆÃಲ್ವೆ? ಎಂಬ ಗಾದೆ ಅರ್ಥಹೀನವೆನಿಸುತ್ತಿದೆ. ಎಂದರೆ ಸಮುದಾಯದ ಬದುಕು ನಮ್ಮಲ್ಲಿ ತೀವ್ರಗತಿಯಲ್ಲಿ ಕ್ಷೀಣಿಸುತ್ತಿದೆ. ನಮ್ಮ ಅರ್ಥವ್ಯವಸ್ಥೆ ಮತ್ತು ಜೀವನ ಕ್ರಮ ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಸಂದರ್ಭದಲ್ಲಿ ನಾವು ಏನನ್ನು ಗಳಿಸುತ್ತಿದ್ದೇವೆ ಏನನ್ನು ಕಳೆದುಕÉÆಳ್ಳುತ್ತಿದ್ದೇವೆ ಎಂದು ಪರ್ಯಾಲೋಚಿಸುವ ವ್ಯವಧಾನವೂ ನಮಗೆ ಇಲ್ಲವಾಗಿದೆ. ಹಳ್ಳಿ ಕಳಾಹೀನವಾಗುತ್ತಿದೆ. ಹಳ್ಳಿಗಳನ್ನು ಪÉÆÃಷಿಸುತ್ತಿದ್ದ ಗÉÆÃವರ್ಧನಗಿರಿಗಳೂ ಈಗ ನುಣ್ಣಗೆ ನಿಂತಲ್ಲೇ ಮಂಗಮಾಯವಾಗುತ್ತಿವೆ. ನದಿಗಳು ವಿಜೃಂಭಿತ ಚರಂಡಿಗಳಾಗುತ್ತಿವೆ. ಕಾಡುಗಳು ಉಪವನವಾಗುವುದಿರಲಿ ಖಂಡತುAಡಾಗಿ ಕÉÊಕಾಲು ಕಡಿದು ಬಟ್ಟಬಯಲಾಗಿ, ಮನೆಕಟ್ಟುವ ನಿವÉÃಶನಗಳಾಗಿ ರೂಪಾಂತರಗÉÆಳ್ಳುತ್ತಿವೆ. ಪರಿಸರದ ನಾಶವೆಂಬುದು ಜೀವಜಗತ್ತಿನ ನಾಶ….ವಿಶÉÃಷವಾಗಿ ಬಡವರ ನಾಶ. ಮಾಧವ ಗಾಡ್ಗೀಳ್ ಎಂಬ ಪರಿಸರ ವಿಜ್ಞಾನಿಯು ಕಾಗದದ ಉದ್ಯಮಕ್ಕಾಗಿ ಬಿದಿರ ಕಾಡುಗಳು ನಾಶವಾಗಿ ಬಿದಿರು ಬುಟ್ಟಿ ಚಾಪೆ ಹೆಣೆಯುವ ಜನರ ಬದುಕು ಹÉÃಗೆ ದುಸ್ತರವಾಯಿತು ಎನ್ನುವುದನ್ನು ವಿವರಿಸಿದ್ದಾರೆ. ಕಾಂಕ್ರಿಟ್ ಬಂದು ನಾಡಹೆಂಚುಗಳು ಮಾಯವಾದವು. ಮಾರುಕಟ್ಟೆಯಲ್ಲಿ ಸಿದ್ಧ ವಸ್ತುಗಳ ಮಾಸ್ ಒದಗಣೆಯಿಂದಾಗಿ ಗ್ರಾಮಜೀವನ ತನ್ನ ಸ್ವಾವಲಂಬೀ ಸತ್ವವನ್ನು ಕಳೆದುಕÉÆಂಡಿದೆ. ಬೀಸುವ ಕುಟ್ಟುವ ಕÉÃರುವ ಉತ್ತು ಬಿತ್ತುವ ನಿತ್ಯ ವ್ಯವಸಾಯಗಳು, ದÉÊಹಿಕ ಶ್ರಮಗಳು ಕಾಣದಾಗಿ ರೆಡಿಮೇಡ್ ಸಾಮಗ್ರಿಗಳು ಮತ್ತು ಪ್ರತಿಯೊಂದು ಕಾಯಕಕ್ಕೂ ಪರ್ಯಾಯವಾಗಿ ಒದಗಿರುವ ಯಂತ್ರ ವ್ಯವಸ್ಥೆ ಗಾಮೀಣ ಬದುಕನ್ನು ನಿರ್ಜೀವಗÉÆಳಿಸುತ್ತಿದೆ. ಒಟ್ಟಾರೆ ಸಮುದಾಯದ ಬದುಕು ಕಾಣೆಯಾಗುತ್ತಿದೆ. ಹಳ್ಳಿಗಳಲ್ಲೇ ಹೀಗಾಗುತ್ತಿದೆ ಎನ್ನುವಾಗ ನಗರದ ವಿಷಯ ಹÉÃಳುವುದÉÃ ಬೇಡ. ಬದುಕು ಕÉÃವಲ ತನಗಾಗಿ, ತಾನು ಮೊದಲು, ಬಳಿಕ ಇನ್ನೊಬ್ಬರು ಎಂಬುದು ಈವತ್ತು ಆಧುನಿಕ ಸಂಸ್ಕೃತಿಯ ನಿತ್ಯ ಬೋಧೆ. ವಿಮಾನಯಾನದಲ್ಲಿ ಕಾಣುವ ಸೂಚನಾಪತ್ರ ತಾವು ನÉÆÃಡಿರಬಹುದು. ಅವಗಢ ಸಂಭವಿಸಿದಲ್ಲಿ ಮೊದಲು ನಿಮ್ಮ ರಕ್ಷಣೆ ಮಾಡಿಕÉÆಳ್ಳಿ. ಆಮೇಲೆ ಉಳಿದವರ ಕಡೆ ಗಮನಕÉÆಡಬಹುದು! ತಾನು ಬದುಕಬೇಕಾದದ್ದು ತನಗಾಗಿಯಲ್ಲ, ಇತರರಿಗಾಗಿ ಎನ್ನುವುದು ಭಾರತೀಯ ಜೀವನಕ್ರಮದ ಪ್ರಧಾನ ಆಶಯವಾಗಿತ್ತು. ರಾಮಾಯಣದಲ್ಲಿ ಬರುವ ಸಂಪಾತಿ ಮತ್ತು ಜಟಾಯುವಿನ ಕಥೆ ನನಗೀಗ ನೆನಪಾಗುತ್ತಿದೆ. ಸಂಪಾತಿ ಮತ್ತು ಜಟಾಯು ಇಬ್ಬರು ಮಹಾ ಗೃಧ್ರಸÉÆÃದರರು. ಒಮ್ಮೆ ಇಬ್ಬರೂ ಜಿದ್ದು ಕಟ್ಟಿ ಆಕಾಶದಲ್ಲಿ ಎತ್ತರೆತ್ತರಕ್ಕೆ ಹಾರತÉÆಡಗಿದ್ದಾರೆ. ಜಟಾಯು ಅಣ್ಣ ಸಂಪಾತಿಯನ್ನು ಮೀರಿಸಬೇಕೆಂಬ ಜಿದ್ದಿನಲ್ಲಿ ಅವನಿಗಿಂತ ಮೇಲೆ ಸೂರ್ಯನ ಸಮೀಪಕ್ಕೆ ಹಾರತÉÆಡಗಿದಾಗ ಅಣ್ಣ ಸಂಪಾತಿ ತಮ್ಮನನ್ನು ಉಳಿಸಬೇಕೆಂಬ ಉದ್ದೇಶದಿಂದ ಜಟಾಯುವುಗಿಂತ ಮೇಲೆ ಹಾರಿ ಸೂರ್ಯನ ತೀಕ್ಷ÷್ಣ ಕಿರಣಗಳಿಂದ ತಮ್ಮನನ್ನು ರೆಕ್ಕೆ ಹರಡಿ ರಕ್ಷಿಸುತ್ತಾನೆ. ತಮ್ಮ ಕ್ಷೇಮವಾಗಿ ಉಳಿದ; ಅಣ್ಣ ರೆಕ್ಕೆ ಸೀದು ಭೂಮಿಗೆ ಬಿದ್ದ. ಆಧುನಿಕ ವಿಮಾನಪಕ್ಷಿಯ ಬೋಧನೆ ಸಂಪಾತಿಯ ನಿಲುವಿಗೆ ತದ್ವಿರುದ್ಧವಾಗಿದೆ!
ಈಗ ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಈ ಸ್ವಾರ್ಥ ಕÉÃಂದ್ರಿತ ಜೀವನ ಸಿದ್ಧಾಂತವÉÃ ಪ್ರಧಾನಕಾರಣವಾಗಿದೆ. ನಮಗೆ ಗಣಿ ಮಾಡಿ ಹಣ ಮಾಡುವುದು ಮುಖ್ಯ. ಖನಿಜ ಸಂಪತ್ತು ಈ ದಂದಾದುAದಿಯಲ್ಲಿ ನಾಶವಾದರೆ ಭವಿಷ್ಯದ ಗತಿಯೇನು ಎಂಬ ಚಿಂತೆ ಯಾರಿಗೂ ಇಲ್ಲ. ನಾವು ಹೆಚ್ಚು ಹೆಚ್ಚು ಕಾರ್ಖಾನೆಗಳನ್ನು ಮಾಡÉÆÃಣ. ಅವುಗಳ ತ್ಯಾಜ್ಯವಸ್ತುವಿನಿಂದ ನಮ್ಮ ಜೀವನದಿಗಳು ಕಾಳಿಂದಿ ಮಡುಗಳಾದರೆ ಆಗಲಿ. ಈವತ್ತಿನ ಲಾಭವÉÃ ನಮ್ಮ ಪರಮ ಗುರಿ. ಸ್ವಾರ್ಥಕ್ಕಾಗಿ ಪರ್ವತಾರಣ್ಯಗಳ ನಾಶ. ಅಲ್ಲಿ ವಾಸಿಸುತ್ತಿದ್ದ ವನ್ಯಜೀವಿಗಳ ನಾಶ. ನದಿ ನದಗಳ ನಾಶ. ವಿಶಿಷ್ಟ ಜಾತಿಯ ಮರಗಿಡಗಳ ನಾಶ! ಇಕಾಲಜಿ ಎಂಬ ತತ್ವವನ್ನು ಗಾಳಿಗೆ ತೂರಿ ನಾನಾಯಿತು ಮೂರುಲೋಕವಾಯಿತು ಎಂದು ಕÉÆÃಟ್ಯಂತರ ಲೆಕ್ಕದ ಐಶ್ವರ್ಯ ಸಂಪಾದನೆ ಅವ್ಯಾಹತವಾಗಿ ನಡೆಯುತ್ತಿದೆ. ನಮ್ಮ ಗುರಿ ಬಡತನದ ನಿರ್ಮೂಲನವಲ್ಲ. ಐಶ್ವರ್ಯದ ಧ್ರುವೀಕರಣ. ಬಡವ ಬಲ್ಲಿದರ ನಡುವೆ ನಿತ್ಯ ನಿತ್ಯ ವಿಸ್ತರಿಸುವ ಮಹಾಕಂದರ. ಸರ್ವರಿಗೆ ಸಮಪಾಲು ಬೆಳದಿಂಗಳು ಅನ್ನುವುದು ಕÉÃವಲ ಆದರ್ಶದ ಮಾತಾಗಬೇಕೆ? ಸಂಪತ್ತು ನಾಚಿಕೆಯ ಸಂಗತಿಯಾಗದೆ ನಾಡಿನ ಉದ್ಧಾರವಿಲ್ಲ. ಸಿರಿವಂತರು ಕೆರೆ ಕÉÆಳ್ಳಗಳಂತೆ ಅಗತ್ಯಬಿದ್ದಾಗ ಹಳ್ಳಿಗೆ ನೀರುಣಿಸುವ ಟ್ರಸ್ಟಿಗಳಾಗಬೇಕೆಂದು ಪುತಿನ ಯಾವಾಗಲೂ ಹÉÃಳುತ್ತಿದ್ದರು. ಐಟಿಗಳ ಹದ್ದಿನ ಕಣ್ಣನ್ನೂ ತಪ್ಪಿಸಿ ನಗನಿಕ್ಷೇಪಗಳು ಕತ್ತಲ ರಕ್ಷಾ ಕÉÆÃಣೆಗಳಲ್ಲಿ ವೃದ್ಧಿಸುತ್ತಲೇ ಇವೆ. ತಾಯ ಮೊಲೆ ಹಾಲೇ ವಿಷವಾಗಿ ಕÉÆಲ್ಲಲೆಳಸಿದರೆ ಕಾಯಬಲ್ಲ ದÉÊವವನ್ನು ಎಲ್ಲಿಂದ ತರÉÆÃಣ?
ಈವತ್ತಿನ ಸಮಾಜದಲ್ಲಿ ಆತ್ಮರಕ್ಷಣೆ ಮುಖ್ಯವಾಗಿದೆಯೇ ವಿನಾ ಆರ್ತರಕ್ಷಣೆಯಲ್ಲ. ಮಹಾರಥಿ ಎಂಬ ಪರಿಕಲ್ಪನೆಯನ್ನು ನಾನೀಗ ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಯಾವನು ಯುದ್ಧದಲ್ಲಿ ತನ್ನ ಸಾರಥಿಯನ್ನು, ತನ್ನ ರಥವನ್ನು, ತನ್ನ ಧ್ವಜವನ್ನು, ತನ್ನ ಕುದುರೆಗಳನ್ನು, ತನ್ನ ಸÉÃನೆಯನ್ನು ಮತ್ತೂ ತನ್ನನ್ನು ರಕ್ಷಿಸಿಕÉÆಳ್ಳಲು ಸಮರ್ಥನÉÆÃ ಅವನು ಮಾತ್ರ ಮಹಾರಥ. ಈವತ್ತೂ ಈ ತತ್ವವನ್ನು ನಮ್ಮ ನಾಯಕರಿಗೆ ಅನ್ವಯಿಸಿ ಅರ್ಥೈಸಬೇಕಾಗಿದೆ. ಯಾರು ತನ್ನ ನೆಲೆಯನ್ನು, ನಾಡನ್ನು, ಕಾಡು ಬೆಟ್ಟಗಳನ್ನು, ಅಲ್ಲಿ ಜೀವಿಸುವ ಮೃಗಪಕ್ಷಿಗಳನ್ನು, ತನ್ನ ಆಶ್ರಿತರನ್ನು, ಮತ್ತೂ ಕÉÆನೆಗೆ ತನ್ನನ್ನು ರಕ್ಷಿಸಿಕÉÆಳ್ಳಬಲ್ಲನÉÆÃ ಆತ ಈವತ್ತಿನ ರಾಜಧರ್ಮದ ಮಹಾರಥಿ. ಅಂಥವರನ್ನು ನಾವೀಗ ಶಬರಿ ಶ್ರದ್ಧೆಯಲ್ಲಿ ನಿರೀಕ್ಷಿಸಬೇಕಾಗಿದೆ. ನಮ್ಮ ನಾಡು ನುಡಿ ನಾಡವರನ್ನು ಕಾಯ್ದು ದÉÃಶದ ಅಖಂಡತ್ವವನ್ನು ಕಾಯ್ದುಕÉÆಳ್ಳಬೇಕಾಗಿದೆ.
ನಿಜಾಮರ ದಬ್ಬಾಳಿಕೆ, ಅದರಲ್ಲೂ ರಜಾಕಾರರ ಉಗ್ರಗಾಮಿ ಹಾವಳಿಗಳಿಂದ ಕನ್ನಡಿಗರು ಆಗ ಗಡಿಶಿಬಿರಗಳನ್ನು ಸ್ಥಾಪಿಸಿಕÉÆಂಡು ಹÉÆÃರಾಡಬೇಕಾಯಿತು. ಮತಾಂಧರಾದ ರಜಾಕಾರರ ಸಂಘಟನೆ ನಿಜಾಮರ ಸÉÊನ್ಯ ಮತ್ತು ಪÉÆಲೀಸಿಗಿಂತ ನಾಲಕ್ಕು ಪಟ್ಟು ಹೆಚ್ಚು ಇತ್ತು ಎಂಬುದು ಅದು ಹÉÃಗೆ ಒಂದು ಪರ್ಯಾಯ ಮಿಲಿಟರಿ ವ್ಯವಸ್ಥೆಯೇ ಆಗಿತ್ತು ಎಂಬುದು ನಮ್ಮ ಗಮನಕ್ಕೆ ತರುವುದು. ಅಂಥ ಸಂದರ್ಭದಲ್ಲಿ ಅಸ್ಮಿತೆಯ ರಕ್ಷಣೆಗಾಗಿ ಹುಟ್ಟಿಕÉÆಂಡವು ಗಡಿಶಿಬಿರಗಳು. ಇಂಥ ಆತ್ಮಜಾಗರಣೆಯ ಶಿಬಿರಗಳು, ಕನ್ನಡವನ್ನು ಉಳಿಸಿ ಬೆಳೆಸಲು ಶಿಕ್ಷಣ ವಲಯದಲ್ಲಿ ನಡೆದ ಮಹತ್ವದ ಪ್ರಯೋಗಗಳು, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ದÉÃಶಪ್ರೇಮ, ಭಾಷಾಪ್ರೀತಿ ಮತ್ತು ರಾಜಕೀಯ ಎಚ್ಚರಗಳು ಈ ಪ್ರಾಂತ್ಯದಲ್ಲಿ ಅನÉÃಕ ರಾಷ್ಟçಪುರುಷರ, ರಾಜಕೀಯ ಮುತ್ಸದ್ದಿಗಳ ಹುಟ್ಟಿಗೆ ಕಾರಣವಾಗಿವೆ.
ಭಾಷಾವಾರು ಪ್ರಾಂತ್ಯ ಪ್ರಾಪ್ತಿಗಾಗಿ ಎಂತೆAಥ ಆತ್ಮಬಲಿಗಳು ನಡೆದವು, ನಿಸ್ವಾರ್ಥ ಹÉÆÃರಾಟಗಳು ನಡೆದವು ನಾವೀಗ ನೆನೆಯಬೇಕಾಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ಬಳ್ಳಾರಿಯ ರಂಜಾನ್ಸಾಬï ಆತ್ಮತ್ಯಾಗ ಮಾಡಿಕÉÆಂಡರು- ತೆಲುಗು ಏಕೀಕರಣಕ್ಕಾಗಿ ಪÉÆಟ್ಟಿಶ್ರೀರಾಮುಲು ಆತ್ಮಾರ್ಪಣೆ ಮಾಡಿಕÉÆಂಡAತೆ. ಕರ್ನಾಟಕದಲ್ಲಿ ವಿಲೀಕರಣಗÉÆಳ್ಳಲು ಈ ಕಲ್ಯಾಣ ಕರ್ನಾಟಕವು ನಡೆಸಿದ ಹÉÆÃರಾಟವÉÃನು ಸಾಮಾನ್ಯವಾದುದೆ? ಕಲಬುರ್ಗಿ ಪ್ರಾಂತ್ಯವು ಕನ್ನಡ ಸಾಹಿತ್ಯದ ಉಗಮಸ್ಥಲ ಎಂದು ಇತಿಹಾಸ ಬಲ್ಲವರೆಲ್ಲರಿಗೂ ಗÉÆತ್ತು. ಕನ್ನಡ ಭಾಷೆಯ ಪ್ರಥಮ ಕೃತಿ ಕವಿರಾಜಮಾರ್ಗ ಸೃಷ್ಟಿಯಾದದ್ದು ಕಲಬುರ್ಗಿ ಪ್ರಾಂತ್ಯದಲ್ಲಿ. ಕ್ರಿಸ್ತಶಕ ಎಂಟರಿAದ ಹತ್ತನÉÃ ಶತಮಾನದ ವರೆಗೆ ಕರ್ನಾಟಕವನ್ನು ಆಳಿದ ರಾಷ್ಟçಕೂಟರಿಗೆ ಮಳಖೇಡ ರಾಜಧಾನಿಯಾಗಿತ್ತು. ಕವಿರಾಜಮಾರ್ಗದ ಕರ್ತೃ ಶ್ರೀವಿಜಯ ರಾಷ್ಟçಕೂಟ ದÉÆರೆ ನೃಪತುಂಗನ ಆಸ್ಥಾನ ಕವಿ. ಕವಿವರ್ಯ ಬೇಂದ್ರೆಯವರು ಹÉÃಳುವಂತೆ ಜÉÊನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಬೀಡು ಕಲ್ಯಾಣ ಕರ್ನಾಟಕ. ದÉÃವರದಾಸಿಮಯ್ಯ – ಆತನ ಪತ್ನಿ ದುಗ್ಗಲೆ, ಕೆಂಭಾವಿ ಭÉÆÃಗಣ್ಣ, ಏಕಾಂತದರಾಮಯ್ಯ, ಕÉÆÃಲೂರು ಶಾಂತಯ್ಯ, ಷಣ್ಮುಖಸ್ವಾಮಿ ಮೊದಲಾದ ಮಹನೀಯರು ಈ ಪ್ರಾಂತ್ಯಕ್ಕೆ ಸÉÃರಿದವರು. ಸಮೀಪದಲ್ಲಿರುವ ದÉÃವನೂರು ಕವಿ ಲಕ್ಷಿö್ಮÃಶನ ಜನ್ಮಸ್ಥಲವೆಂದು ಈಗಲೂ ಅನÉÃಕ ವಿದ್ವಾಂಸರು ಅಭಿಪ್ರಾಯಪಡುವರು. ದಾಸ ಸಾಹಿತ್ಯಕ್ಕೂ ಕಲಬುರ್ಗಿಯ ಕÉÆಡಿಗೆ ಅಸಾಮಾನ್ಯವಾದುದÉÃ. ಸುರಪುರದ ಆನಂದದಾಸ, ಮಣ್ಣೂರ ದಾಸ, ನಾಯಕಲï ರಾಮಾಚಾರ್ಯ ಹೀಗೆ ಅನÉÃಕರನ್ನು ನಾವೀಗ ನೆನೆಯಬೇಕಾಗಿದೆ. (ಹೆಚ್ಚಿನ ವಿವರಗಳಿಗೆ ಕಲಬುರ್ಗಿ ಜಿಲ್ಲೆಯ ಕವಿ-ಕಾವ್ಯ ಪರಂಪರೆ-ಸAಪಾದಕರು: ಪ್ರಧಾನ ಸಂಪಾದಕರು- ವೀರಭದ್ರ ಸಿಂಪಿ ನೆಲೋಗಿ, ಕಲಬುರ್ಗಿ ಜಿಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ – ಸಂಪಾದಕರು: ಪ್ರಧಾನ ಸಂಪಾದಕರು-ವೀರಭದ್ರ ಸಿಂಪಿ ನೆಲೋಗಿ, ಸಂಪಾದಕರು: ಡಾ ಇಂದುಮತಿ ಪಾಟೀಲ, ಸಹ ಸಂಪಾದಕರು- ಡಾ ಎಂ.ಎಸï. ಸಿರವಾಳ- ಈ ಗಣ್ಯ ಕೃತಿಗಳನ್ನು ಆಸಕ್ತರು ಗಮನಿಸಬಹುದು). ಇಂಥ ಕಲ್ಬುರ್ಗಿಯಲ್ಲಿ ಆರಂಭದ ನಾಲಕ್ಕು ಶತಮಾನಗಳ ನಂತರ, ಆರುನೂರು ವರ್ಷಗಳ ಮುಸ್ಲಿಮï ಆಳ್ವಿಕೆಯ ಪರಿಣಾಮವಾಗಿ (ಬಹಮನಿ ಸುಲ್ತಾನರು, ಆನಂತರ ಬಿಜಾಪುರದ ಆದಿಲ್ಶಾಹಿಗಳು, ಮುಂದೆ ಹÉÊದ್ರಾಬಾದಿನ ನಿಜಾಮರ ಆಳ್ವಿಕೆಗೆ ಈ ಪ್ರಾಂತ್ಯವು ಒಳಪಟ್ಟಿತ್ತು) ಉರ್ದು ಭಾಷೆಯು ಮಾಧ್ಯಮವಾಗಿದ್ದ ಕಾರಣ ಕನ್ನಡ ಸಂಪೂರ್ಣವಾಗಿ ಕಡೆಗಣಿತವಾಗಿತ್ತು. ಕಲಬುರ್ಗಿ (ಕಲ್ಲು ಬರಗ-ಬರಗ ಒಂದು ಧಾನ್ಯ ವಿಶÉÃಷ) ಗುಲ್ಬರ್ಗ(ಗುಲï ಬರ್ಗ-ಹೂ ಎಲೆ- ಎಂದು ಪರ್ಶಿಯನ್ ಭಾಷೆಯ ನಿಷ್ಪತ್ತಿಯ ಅರ್ಥಾಂತರಕ್ಕೆ ಒಪ್ಪಿಸಿಕÉÆಂಡಿದ್ದು ಭಾಷೆಯ ವÉÊಪರೀತ್ಯದ ಪರಿಣಾಮವÉÃ ಸರಿ). ಕಲ್ಬುರ್ಗಿ ಜಿಲ್ಲೆಯ ವಿಮೋಚನೆಗಾಗಿ ವಿಮೋಚನಾ ಚಳುವಳಿಯ ನಾಯಕರು ನಡೆಸಿದ ಹÉÆÃರಾಟವನ್ನೂ ನಾವು ಕೃತಜ್ಞತೆಯಿಂದ ನೆನೆಯಬೇಕಾಗಿದೆ. ಇಂಥ ಕಲಬುರ್ಗಿಯಲ್ಲಿ ೧೮೮೮ರ ವರೆಗೆ ಮಕ್ಕಳಿಗೆ ಮಾತೃ ಭಾಷೆಯಾದ ಕನ್ನಡದಲ್ಲಿ ಶಾಲೆಗಳÉÃ ಇರಲಿಲ್ಲ. ಕನ್ನಡ ಮಕ್ಕಳೂ ಆಗ ಓದುತ್ತಿದ್ದುದು ಉರ್ದು ಅಥವಾ ಮರಾಠಿ ಮಾಧ್ಯಮದಲ್ಲಿ. ಹÉÊದ್ರಾಬಾದ್ ಕರ್ನಾಟಕ ಕರ್ನಾಟಕದಲ್ಲಿ ೧೯೪೮ರಲ್ಲಿ ಏಕೀಕರಣಗÉÆಂಡ ಮೇಲೆ ಕನ್ನಡದ ಉಳಿವಿಗಾಗಿ ದÉÆಡ್ಡ ಹÉÆÃರಾಟವÉÃ ನಡೆದಿದೆ. ಕಲ್ಯಾಣ ಕರ್ನಾಟಕದಲ್ಲಿ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಿದ ಮಹನೀಯರನ್ನು ನಾವಿಂದು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ. ಪೂಜ್ಯ ದÉÆಡ್ಡಪ್ಪ ಅಪ್ಪ, ಬಿ.ಬಿ.ಚಿಮ್ಮಲಗಿ, ನರಸಿಂಹರಾವು, ಕಪಟರಾಳ ಕೃಷ್ಣರಾವ್, ಭೀಮಸÉÃನ ರಾವ್ ತವರ್, ಪೂಜ್ಯ ಬಾಲ ಪಟ್ಟದÉÃವರು, ರಾಘವÉÃಂದ್ರಾಚಾರ್ಯ ಕುಷ್ಟಗಿ, ಅಣ್ಣಾರಾವ್ ಗಣಮುಖಿ, – ಇಂಥ ಹಿರಿಯರ ಪಟ್ಟಿ ಬಹುದÉÆಡ್ಡದು. ಪ್ರಾತಿನಿಧಿಕವಾಗಿ ಕೆಲವು ಹೆಸರುಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ ಗಡಿವಿವಾದಗಳು ಇನ್ನೂ ಬಗೆಹರಿದಿಲ್ಲ. ಕನ್ನಡ ಪರವಾಗಿ ಬಂದ ವರದಿಗಳು ಅನುಷ್ಠಾನಕ್ಕೆ ಬಂದಿಲ್ಲ. ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ಗಡಿಶಿಬಿರಗಳು ಪ್ರಜಾಪ್ರಭುತ್ವವಾದೀ ನೆಲೆಯಲ್ಲಿ ಮತ್ತೆ ಸ್ಥಾಪಿತವಾಗಬೇಕೇ ಎಂಬ ಅನಿಸಿಕೆ ಮನಸ್ಸಲ್ಲಿ ಮೂಡುತ್ತಾ ಇದೆ. ಗಡಿ ಪ್ರಾಂತ್ಯಗಳು ಬಹುಭಾಷಾ ಸಂಸ್ಕೃತಿಯನ್ನು ಒಪ್ಪಿಕÉÆಳ್ಳುವುದು ಅನಿವಾರ್ಯವೆನ್ನಿಸುತ್ತಾ ಇದೆ. ಆದರೆ ಯಾವ ಭಾಷೆಯೂ ಇನ್ನೊಂದು ಭಾಷೆಯನ್ನು ಅಳಿಸಿಹಾಕಲು ಯತ್ನಿಸಬಾರದು. ಬರಗೂರು ರಾಮಚಂದ್ರಪ್ಪನವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹÉÃಳಿರುವಂತೆ ಗಡಿಗ್ರಾಮ ಮನ್ನಣೆ ದÉÆರೆಯದ ಕನ್ನಡಿಗರು ನೆಲೆಸಿರುವ ಗ್ರಾಮಗಳಿಗೆ ತುರ್ತಾಗಿ ಗಡಿಗ್ರಾಮ ಮನ್ನಣೆ ದÉÆರಕಬೇಕು. ಅವರು ಕನ್ನಡ ಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಬಾರದು. ಬಹುಭಾಷಾ ಸಂಸ್ಕೃತಿಯು ಯಾವಾಗಲೂ ಉಪಾಧÉÃಯವಾದುದೆ. ಭಾಷೆಯನ್ನೂ ಆ ಮೂಲಕ ಸಮುದಾಯಗಳನ್ನು ಒಳಗÉÆಳ್ಳುವುದಕ್ಕೆ ನಮಗÉÆದಗಿದ ಸದವಕಾಶವೆಂದÉÃ ಬಹುಭಾಷಾ ಸಂಸ್ಕೃತಿಯನ್ನು ನಾವು ಮಾನ್ಯ ಮಾಡಬೇಕು. ಅದರಲ್ಲೇ ಅಖಂಡ ಭಾರತದ ಹಿತವಿದೆ. ಬಹುತ್ವವನ್ನು ಮನ್ನಿಸುವ ಏಕೀಕರಣ ನಮ್ಮ ಈವತ್ತಿನ ಅಗತ್ಯ. ಬಹುಳ ಸಂಸ್ಕೃತಿಯನ್ನು ನಾವು ಪÉÆÃಷಿಸದೆ ಹÉÆÃದರೆ ಮುಂದಿನ ಪೀಳಿಗೆ ದÉÆಡ್ಡ ನಷ್ಟವನ್ನು ಅನುಭವಿಸುವುದು. ತಾಳುವಿಕೆಯೇ ತಪವಾದ ಕನ್ನಡಿಗರಿಗೆ ಸÉÊರಣೆಯನ್ನು ಬೋಧಿಸಬೇಕಾದ್ದಿಲ್ಲ. ಅತಿ ಸÉÊರಣೆ ಆತ್ಮನಾಶಕ್ಕೆ ಎಡೆಗÉÆಡಬಹುದೆಂಬ ಎಚ್ಚರಿಕೆ ಮಾತನ್ನು ಮಾತ್ರ ಹÉÃಳಬೇಕಾಗಿದೆ. ಒಂದು ಕಡೆ ವಲಸೆಗೆ ಅನುಮತಿ, ಇನ್ನೊಂದು ಕಡೆ ಭಾಷಾವಾರು ಪ್ರಾಂತ್ಯಗಳ ರಚನೆ ಈ ಎರಡು ಆಳದಲ್ಲಿ ವಿರುದ್ಧಮುಖೀ ನಿಲುವುಗಳಾಗಿವೆ. ಈ ಬಗ್ಗೆ ಆಳವಾದ ಚಿಂತನೆ ಮತ್ತು ಹÉÆಸ ಸರ್ವಹಿತಕಾರೀ ನಿಲುವುಗಳು ಅಗತ್ಯವಾಗಿವೆ. ಪ್ರಾಂತ್ಯ ಪ್ರಾಂತ್ಯಗಳ ನಡುವಿನ ಸಂಬAಧ(ನದಿ ಗಡಿ ಶಿಕ್ಷಣ ಮಾಧ್ಯಮ ಸಮಸ್ಯೆ), ಪ್ರಾಂತ್ಯ ಕÉÃಂದ್ರ ಸರಕಾರಗಳ ಸಂಬAಧ ಮರುವ್ಯಾಖ್ಯೆಯ ಮೂಲಕ ವಿವÉÃಚನೆಗೆ ಒಳಗಾಗಬೇಕು. ಕುವೆಂಪು ಅವರು ಕÉÃಂದ್ರ ಮತ್ತು ಪ್ರಾಂತ್ಯ ಸಂಬAಧವನ್ನು ತಾಯಿ ಮಕ್ಕಳ ಸಂಬAಧವಾಗಿ ಪರ್ಯಾಲೋಚಿಸಿ ಅವುಗಳ ನಡುವಿನ ಬಿಕ್ಕಟ್ಟನ್ನು ಪರಿಹರಿಸುವ ಹೃದಯದ ಹಾದಿಯನ್ನು ತಮ್ಮ ಕವಿತೆಯಲ್ಲಿ ಪ್ರಮೀಕರಿಸಿದ್ದಾರೆ. ಬೇಂದ್ರೆಯವರು ಪ್ರಾಂತ್ಯ ಪ್ರಾಂತ್ಯಗಳ ನಡುವೆ ಸÉÆÃದರ ಸಂಬAಧವನ್ನು ಕಲ್ಪಿಸಿ ಪ್ರಾಂತ್ಯ ಪ್ರಾಂತ್ಯಗಳ ಸಂಬAಧದ ವಿಷಮತೆಯನ್ನು ಪರಿಹರಿಸಿಕÉÆಳ್ಳುವ ಉಪಾಯ ಸೂಚಿಸಿದ್ದಾರೆ. ಭಾವನೆಯ ನೆಲೆಯಲ್ಲಿ ಇವು ಮಹತ್ವದ ಕಲ್ಪನೆಗಳು. ಆದರೆ ವಾಸ್ತವ ಸತ್ಯ ಆದರ್ಶದ ಮಾತುಗಳನ್ನು ಯಾವಾಗಲೂ ತಿರಸ್ಕರಿಸುತ್ತಾ ಬರುತ್ತಿದೆ. ಕÉÃಂದ್ರ ಪ್ರಾಂತ್ಯಗಳ ಸಂಬAಧವನ್ನು ಕುರಿತು ಮಾತಾಡುವಾಗ ನಾವು ಬಯಸುವುದು ಸ್ವಾಯತ್ತೆಯನ್ನೇ ಹÉÆರತು ಪಾರತಂತ್ರö್ಯವನ್ನಲ್ಲ ಎಂದು ತಮ್ಮ ಅಧ್ಯಕ್ಷಭಾಷಣದಲ್ಲಿ ಪುತಿನ ಸ್ಪಷ್ಟವಾಗಿ ಹÉÃಳಿದ್ದಾರೆ. ಹಾಗಾಗದೆ ಹÉÆÃದಲ್ಲಿ ರಾಜಾಜಿಯವರು ಬಹುಹಿಂದೆಯೇ ಸೂಚಿಸಿದಂತೆ ರಾಜ್ಯ ಸರಕಾರಗಳು ಕÉÃಂದ್ರ ವ್ಯವಸ್ಥೆಯ ಹಿಡಿತದಲ್ಲಿ ನಲುಗುವ ವಿಜೃಂಭಿತ ಕಾರ್ಪೊರÉÃಷನ್ಗಳು ಆಗಿಬಿಡಬಹುದು. ಕÉÃಂದ್ರದ ನಿಯಂತ್ರಣ ಪ್ರಾಂತ್ಯಗಳನ್ನು ಚದುರಿಹÉÆÃಗದಂತೆ ಒಗ್ಗೂಡಿಸುವಲ್ಲಿ ಅಗತ್ಯ. ಬಳ್ಳಿಯಲ್ಲಿ ಪ್ರತಿಯೊಂದು ಹೂವೂ ತನ್ನಷ್ಟಕ್ಕೆ ಸಂಪೂರ್ಣವಾಗಿ ಅರಳುವಂತೆ ಪ್ರಾಂತ್ಯಗಳು ಸ್ವಾಯತ್ತತೆಯನ್ನು ಸಾಧಿಸುವುದು ಅತ್ಯಗತ್ಯ. ದÉÃಹದ ಯಾವ ಭಾಗ ದುರ್ಬಲವಾದರೂ ದÉÃಹಿ ವಿಕಲಾಂಗಿಯೇ. ಸಮುದ್ರವನ್ನು ಸÉÃರಿದ ಮೇಲೂ ತಮ್ಮ ಪಾಡಿಗೆ ತಾವು ಹರಿಯುವ ನದಿಗಳ ಸ್ವಾತಂತ್ರö್ಯ, ಕÉÃಂದ್ರ ಪ್ರಾಂತ್ಯ ಸಂಬAಧವನ್ನು ಆದರ್ಶದ ನೆಲೆಯಲ್ಲಿ ಹಿಡಿಯಬಹುದಾದ ಅದ್ಭುತ ರೂಪಕ.
ವಾಸ್ತವ ಮತ್ತು ಆದರ್ಶಗಳ ಸಂಘರ್ಷದ ಪ್ರಸ್ತಾಪ ಮಾಡುವಾಗ ನನಗೆ ಬದುಕು ಮತ್ತು ಕಲೆಯ ನಡುವಿನ ಈವತ್ತಿನ ವಿಷಮ ನೆಲೆಯೂ ಕಾಡುವುದು. ನಮ್ಮ ಬಹುಪಾಲು ಜನ ನÉÆÃಡುತ್ತಿರುವ ಓದುತ್ತಿರುವ ಮಾಡುತ್ತಿರುವ ವಿಭಿನ್ನ ಕಲಾಪ್ರಕಾರಗಳು ಈಗ ಆತ್ಮಾಭಿವ್ಯಕ್ತಿಗಿಂತ, ಸಾಮಾಜಿಕ ಬದ್ಧತೆಗಿಂತ ಹೆಚ್ಚಾಗಿ ಹಣಮಾಡುವ ಉದ್ಯಮಗಳಾಗುತ್ತಿವೆಯೆಂಬ ಕಠÉÆÃರ ಸತ್ಯ ಎದೆಗೆಡಿಸುವಂತಿದೆ. ಬದುಕಿನಿಂದ ಬಹು ದೂರವಿದ್ದು ಭ್ರಮೆಗಳನ್ನು ಬಿತ್ತುವ ಕಲಾಮಾಧ್ಯಮಗಳÉÃ ಈವತ್ತು ವಿಜೃಂಭಿಸುತ್ತಿರುವುದು. ಕನ್ನಡ ಕಲೆ ಕನ್ನಡ ಜೀವನದ ದಿಗ್ದರ್ಶಿಯಾಗಬೇಕು. ಈವತ್ತಿನ ವ್ಯಾಪಾರಿ ಕಲಾಮಾಧ್ಯಮಗಳು ಆ ಜವಾಬುದಾರಿಯನ್ನು ನಿರ್ವಹಿಸುತ್ತಿವೆಯೇ? ಬಿ.ವಿ.ಕಾರಂತ, ಗಿರೀಶ ಕಾಸರವಳ್ಳಿ ಈಗ ಬಹುಜನದ ಆಯ್ಕೆಯಲ್ಲ. ಕರ್ನಾಟಕದಲ್ಲಿ ಕಲೆಯು ಕನ್ನಡ ಸಂಸ್ಕೃತಿಯ ಅಭಿವ್ಯಕ್ತಿಯಾಗಬೇಕು; ಅಗ್ಗದ ಮನರಂಜನೆಯ ಸಾಧನವಲ್ಲ ಎಂದು ನಂಬುವ ಗಂಭೀರ ಕಲಾಚಿಂತನೆಯ ಹತ್ತಾರು ಕಲಾತ್ಮಕ ಚಿತ್ರಗಳು ಕನ್ನಡದಲ್ಲಿ ಈಗಲೂ ನಿರ್ಮಾಣಗÉÆಳ್ಳುತ್ತಿವೆ. ಈಗ ಹÉÆಸ ಹÉÆಸ ನಿರ್ದೇಶಕರು ಈ ನಿರ್ಮಾಣಗಳ ಮುಂಚೂಣಿಯಲ್ಲಿದ್ದಾರೆ. ಈ ಚಿತ್ರಗಳ ಬಿಡುಗಡೆಗಾಗಿ ಪ್ರತಿ ಜಿಲ್ಲೆಯಲ್ಲೂ ಕಿರು ಚಿತ್ರಮಂದಿರಗಳನ್ನು ನಿರ್ಮಿಸುವುದು ನಮ್ಮ ಸರ್ಕಾರದ ಬಹು ದÉÆಡ್ಡ ಹÉÆಣೆಗಾರಿಕೆ. ಬೆಂಗಳೂರಿನಲ್ಲೇ ಇದ್ದ ಪುಟ್ಟಣ್ಣ ಕಣಗಾಲï ಚಿತ್ರಮಂದಿರ ಅಂಥ ಉದ್ದೇಶಕ್ಕಾಗಿ ಮತ್ತೆ ಚಾಲೂ ಆಗಬೇಕು.. ಭ್ರಮೆಗಳನ್ನು ಬಿತ್ತುವ ಕ್ರËರ್ಯವನ್ನು ವಿಜೃಂಭಿಸುವ ಭಾರತ ಬಯಸುವ ನಾಯಕತ್ವ ಎಂಥದೆAದು ಗ್ರಹಿಸಲು ವಿಫಲವಾಗುತ್ತಿರುವ ಕಲಾವ್ಯಾಪಾರವು ಈವತ್ತು ನಮ್ಮನ್ನು ಆಕರ್ಷಿಸುತ್ತಿರುವ ಸರಕು. ಅವು ತÉÆÃರಿಸುವ ಕಣ್ಕುಕ್ಕುವ ವÉÊಭವ, ಕಲಾಕಾರರ ಉಡುಪು ಕುಣಿತ ಹಾಡು ಯಾವುದೂ ಕನ್ನಡದ ಆತ್ಮವನ್ನು ಪ್ರತಿಬಿಂಬಿಸದಾಗಿದೆ. ಕಲೆ ಕÉÃವಲ ಮನರಂಜನೆಯ ಬಾಬತ್ತೋ? ಹಣ ಹೂಡಿ ಹಣ ಬೆಳೆಯುವ ವ್ಯಾಪಾರÉÆÃದ್ಯಮವÉÇÃ ಈ ಬಗ್ಗೆ ನಮ್ಮ ಕಲಾಪ್ರಬುದ್ಧರು ಮರುಚಿಂತನೆ ನಡೆಸಬೇಕಾಗಿದೆ. ಕಲಾತ್ಮಕ ಎಚ್ಚರ, ಸಹಜವಾದ ಆತ್ಮಾಭಿವ್ಯಕ್ತಿ ಇದ್ದೂ ಜನಪ್ರೀತಿಗಳಿಸುವುದು ಈವತ್ತಿನ ತುರ್ತು ಅಗತ್ಯ. ಪುಟ್ಟಣ್ಣ ಕಣಗಾಲï, ಎನï.ಲಕ್ಷಿö್ಮÃನಾರಾಯಣರಂಥವರು ಇಂಥ ಹÉÆಸದಾರಿಗೆ ತೂರುದೀಪವಾಗಬಲ್ಲರು. ಸಾಹಿತ್ಯದಲ್ಲೂ ಅಷ್ಟೆ. ಪಂಪನದ್ದು ಘನವಾದ ಕಾವ್ಯ. ಕುಮಾರವ್ಯಾಸ ವಚನಕಾರರು ದಾಸರು ಘನವಾದದ್ದನ್ನು ಜನ ತಣಿಯುವಂತೆ ಒಪ್ಪಿಸುವ ದÉÃಸೀ ಮಾರ್ಗ. ಇವೆರಡನ್ನೂ ಬಿಟ್ಟು ಕಲೆ ಮಾರಾಟದ ಸರಕಾಗುವುದು, ಹಣ ಬೆಳೆಯುವ ಹುನ್ನಾರವಾಗುವುದು ಕನ್ನಡ ಸಂಸ್ಕೃತಿಗೆ ಮಾರಕ.
ನಮ್ಮ ನವಯುಗದ ನಾಯಕರು ಯಾರು ಎಂಬುದನ್ನು ನಾವು ಗುರುತಿಸಿಕÉÆಳ್ಳಬೇಕಾದುದು ಈವತ್ತಿನ ಮೊದಲ ಅಗತ್ಯ; ನಾಯಕತ್ವದ ಹÉÆಣೆ ಅರಿತು ಜೀವನದ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ನಾಯಕರಾಗಿ ನಿಲ್ಲುವುದು ಎರಡನೆಯ ಗುರುತರ ಜವಾಬುದಾರಿ. ರಾಜಕೀಯ ನಾಯಕರಿರುವಂತೆ ರÉÊತ ನಾಯಕರು, ಯೋಧ ನಾಯಕರು, ಉದ್ಯಮಿ ನಾಯಕರು, ಸಿನಿಮಾ ನಾಯಕರು, ಕ್ರೀಡಾ ನಾಯಕರು, ಭಾಷಾಸಂಸ್ಕೃತಿ ನಾಯಕರ ಪಡೆ ನಿರ್ಮಾಣಗÉÆಳ್ಳಬೇಕಾಗಿದೆ. ನಾಯಕತ್ವ ಎಂಬುದು ವ್ಯಕ್ತಿತ್ವದ ವಿಜೃಂಭಣೆಯಲ್ಲ. ಪರಹಿತ ಸಾಧನೆಯ ಗುರುತರವಾದ ಜವಾಬುದಾರಿ. ಅಂಥ ನಾಯಕರು ದÉÃಶದ ಘನತೆಯನ್ನು ಕಾಯಬಲ್ಲವರಾಗುತ್ತಾರೆ. ಅಂಥ ನಾಯಕರು ತಮ್ಮ ತಮ್ಮ ಭಾಷಾ ಮತ್ತು ಅಸ್ಮಿತೆಯ ರಕ್ಷಣೆಯಲ್ಲೂ ತÉÆಡಗುವರು. ಡಾ. ರಾಜಕುಮಾರï ಅಂಥವರು ನಮ್ಮ ಹÉÆಸ ಕಲಾವಿದರಿಗೆ ಆದರ್ಶವಾಗಬೇಕು. ಸರಳ ಉದಾಹರಣೆ ಮೂಲಕ ನನ್ನ ವಿಚಾರವನ್ನು ವಿವರಿಸುತ್ತೇನೆ: ಕ್ರಿಕೆಟ್ ಕಲಿಯೊಬ್ಬ ವಿಕೆಟ್ಟುಗಳ ರಕ್ಷಣೆ ಮಾಡಿಕÉÆಂಡರೆ ಸಾಲದು. ತನ್ನ ನಡೆ-ನುಡಿ, ಚಾರಿತ್ರö್ಯ ಸಂಗಡಿಗರ ಸ್ವಾಭಿಮಾನ ರಕ್ಷಣೆ, ಒಟ್ಟು ಪಂಗಡದ ನ್ಯಾಯಶೀಲ ತÉÆಡಗುವಿಕೆ-ಎಲ್ಲದರಲ್ಲೂ ತನ್ನ ನಾಯಕತ್ವವನ್ನು ಮೆರೆಯಬೇಕಾಗಿದೆ. ಗೆಲ್ಲುವುದÉÃ ಆಟದ ಗುರಿಯಲ್ಲ. ನೂರಕ್ಕೆ ನೂರು ಮನಸ್ಸು ಹಾಕಿ ಪ್ರಾಮಾಣಿಕವಾಗಿ ಕ್ರೀಡಾಧರ್ಮಕ್ಕೆ ಲೋಪವಾಗದಂತೆ ಆಡುವುದÉÃ ಕ್ರೀಡಾನಾಯಕನ ಗುರಿ. ಈ ಮಾತು ಸಾಹಿತ್ಯ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹೀಗೆ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವಂಥದ್ದು.
ನಾನು ಕನ್ನಡವನ್ನು ಬದುಕುವುದಕ್ಕಿಂತ ನಮ್ಮ ಜನಪ್ರಿಯ ಚಲನಚಿತ್ರ ನಾಯಕ, ನಾಯಕಿ, ಕ್ರೀಡಾ ಪಟು, ಚಿತ್ರಶಿಲ್ಪಿ, ಸಂಗೀತಜ್ಞ ಕನ್ನಡವನ್ನು ಬದುಕುವುದು ಸಮುದಾಯದ ಆತ್ಮಾಭಿಮಾನವನ್ನು ತಕ್ಷಣವÉà ಊರ್ಜಿತಗÉÆಳಿಸಬಲ್ಲುದು. ಕ್ರಿಕೆಟï ಮೈದಾನದಲ್ಲಿ ನಮ್ಮ ಅನಿಲ್ ಕುಂಬ್ಳೆಯೋ, ರಾಹುಲï ದ್ರಾವಿಡ್ಡೋ ಕನ್ನಡದಲ್ಲಿ ಕೆಲವು ತುಂಡು ಮಾತು ಹÉÃಳಿದಾಗಲೂ ನಮ್ಮ ಹುಡುಗರು ಸಡಗರಪಟ್ಟಿದ್ದು ರÉÆÃಮಾಂಚಿತರಾಗಿದ್ದು ನಾನು ಬಲ್ಲೆ! ಜೀವನದ ಎಲ್ಲ ರಂಗದ ನಾಯಕರೂ ಕನ್ನಡವನ್ನು ಜೀವಿಸಬೇಕೆಂಬುದು ನನ್ನ ಆಗ್ರಹ ಪೂರ್ವಕ ಮನವಿ. ಕನ್ನಡ ಪತ್ರಿಕೆ ಓದುವ, ಕನ್ನಡ ನಾಟಕ ಸಿನಿಮಾ ನÉÆÃಡುವ, ಕನ್ನಡ ಭಾವಗೀತೆ ಹಾಡುವ, ಕನ್ನಡದಲ್ಲಿ ಮಾತಾಡುವ ನಿತ್ಯೋತ್ಸವ ಕನ್ನಡವನ್ನು ಯಾವತ್ತೂ ಬೆಳಗುವ ದೀಪವಾಗಿ ಉಳಿಸಬಲ್ಲುದು. ಇಲ್ಲಿ ಕನ್ನಡ ಹವ್ಯಾಸಿ ರಂಗಭೂಮಿ, ಮತ್ತು ಸುಗಮ ಸಂಗೀತ ರಂಗದ ಬಗ್ಗೆ ಪ್ರಶಂಸೆಯ ಮಾತÉÆಂದನ್ನು ಹÉÃಳಲೇ ಬೇಕು. ಕರ್ನಾಟಕದಲ್ಲಿ ರಂಗಶಿಕ್ಷಣ ಕÉÆಡುವ ಹತ್ತಾರು ಶಿಕ್ಷಣ ಸಂಸ್ಥೆಗಳಿವೆ. ಭಾವಗೀತೆ ಕಲಿಸುವ ನೂರಾರು ಸುಗಮ ಸಂಗೀತ ಶಾಲೆಗಳಿವೆ. ಸಾವಿರಾರು ಮಕ್ಕಳು, ತರುಣರು ಇಂಥ ಶಾಲೆಗಳಲ್ಲಿ ಸ್ವ-ಇಚ್ಛೆಯಿಂದ ಕಲಿಯುತ್ತಿದ್ದಾರೆ. ಈ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮ ಕÉÃವಲ ಕನ್ನಡ ಮಾತ್ರ! ಇದು ನಾವೆಲ್ಲಾ ಹೆಮ್ಮೆ ಪಡಬೇಕಾದ ಸಂಗತಿ. ಒತ್ತಾಯವಿಲ್ಲದೆ ಈ ಶಾಲೆಗಳಲ್ಲಿ ಕನ್ನಡ ಶಿಕ್ಷಣ ಮಾಧ್ಯಮವಾಗಿ ಚಾಲ್ತಿಯಲ್ಲಿದೆ. ಇನ್ನು ರಂಗÉÆÃತ್ಸವಗಳು ಬೆಂಗಳೂರು, ಮೈಸೂರು, ಧಾರವಾಡ, ಕಲಬುರ್ಗಿ, ಹೆಗ್ಗೋಡು, ಸಿರಿಗೆರೆ, ಸಾಣೇಹಳ್ಳಿ, ಮಲ್ಲಾಡಿಹಳ್ಳಿ, ಮಂಗಳೂರು, ದಾವಣಗೆರೆ ಹೀಗೆ ಕರ್ನಾಟಕದ ನಾನಾ ಭಾಗಗಳಲ್ಲಿ ನಿರಂತರವಾಗಿ ನಡೆಯುತ್ತಾ ಇವೆ. ಕನ್ನಡ ಕವಿಗಳ ಭಾವಗೀತೆಗಳ ಗಾಯನದ ಹಬ್ಬಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆಯುತ್ತಾ ಇವೆ. ಕನ್ನಡ ಸಾಹಿತ್ಯ ಸಮ್ಮೇಳನದ ವÉÊಭವವನ್ನು ನೆನಪಿಸುವಂಥ ಸಂಭ್ರಮದ ಸುಗಮ ಸಂಗೀತ ಸಮ್ಮೇಳನಗಳು ವÉÊ.ಕೆ.ಮುದ್ದುಕೃಷ್ಣರ ನÉÃತೃತ್ವದಲ್ಲಿ ಪ್ರತಿವರ್ಷವೂ ನಡೆಯುತ್ತಾ ಇವೆ. ಉಪಾಸನ, ಗಾಯನಗಂಗಾ, ಸಾಧನಾ ಮ್ಯೂಜಿಕ್ ಸ್ಕೂಲ್, ಸಂಗೀತ ಗಂಗಾ, ಆದರ್ಶ, ಸರಸ್ವತಿ, ಹೊಂಬಾಳೆ, ಸೃಜನ ಸಂಗೀತ ಶಾಲೆ, ಸಂಗೀತ ಧಾಮ, ಸುಗಮ ಸಂಗೀತ ಒಕ್ಕೂಟ – ಮೊದಲಾದ ಸಂಸ್ಥೆಗಳಿಗೆ ಭಾವಗೀತಾ ಉತ್ಸವ ನಿತ್ಯೋತ್ಸವದ ವಿದ್ಯಮಾನ. ಬೇಂದ್ರೆ, ಕುವೆಂಪು, ಕೆ.ಎಸ್.ನ ಅವರಂಥ ಕನ್ನಡದ ಮಹÉÆÃನ್ನತ ಕಾವ್ಯ ದನಿಗಳನ್ನು ಕನ್ನಡ ಜನಸಮುದಾಯದ ಹೃದಯದಲ್ಲಿ ಬಿತ್ತುವಲ್ಲಿ ನಮ್ಮ ಸುಗಮ ಸಂಗೀತ ಕಲಾವಿದರು ಶ್ಲಾಘ್ಯ ಕೆಲಸ ಮಾಡುತ್ತಿರುವರು. ಇನ್ನು ರಂಗ ಪಠ್ಯಗಳನ್ನು ನಮ್ಮ ಹÉÆಸ ಜನಾಂಗ ಎಷ್ಟರ ಮಟ್ಟಿಗೆ ಅಧ್ಯಯನ ಮಾಡುವುದÉÆÃ ತಿಳಿಯದು. ನಮ್ಮ ರಂಗಮAದಿರಗಳAತೂ ಪ್ರತಿ ನಿತ್ಯವೂ ಕಾರ್ನಾಡ, ಕಂಬಾರ, ಶ್ರೀರಂಗ, ಕÉÊಲಾಸಂ ಮೊದಲಾದ ನಾಟಕಕಾರರ ಕೃತಿಗಳನ್ನು ರಂಗಸ್ಥಲದಲ್ಲಿ ಪ್ರತ್ಯಕ್ಷೀಕರಿಸುವ ಘನವಾದ ಕಾರ್ಯದಲ್ಲಿ ತÉÆಡಗಿವೆ. ಕನ್ನಡದ ಮುಖ್ಯ ಕೃತಿಗಳ ಡಿಜಟಲೀಕರಣ ನಿರಂತರವಾಗಿ ಸಾಗುತ್ತಾ ಇದೆ. ಮಾಸ್ ಮೀಡಿಯಾಗಳನ್ನು ಸಾರ್ಥಕವಾಗಿ ಕನ್ನಡದ ಅಭಿವೃದ್ಧಿಗೆ ಬಳಸಿಕÉÆಳ್ಳುವ ಕೆಲಸವೂ ನಡೆಯುತ್ತಾ ಇದೆ. ಕರ್ನಾಟಕದ ಹÉÆರಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಕನ್ನಡ ಶಾಲೆಗಳು ಇನ್ನೂ ಕಾರ್ಯಪ್ರವೃತ್ತವಾಗಿಯೇ ಇವೆ. ಕೆಲವು ಕಡೆ ಕನ್ನಡ ಸ್ನಾತಕÉÆÃತ್ತರ ಅಭ್ಯಾಸ ಕೂಡ ನಡೆಯುತ್ತಾ ಇದೆ. ಕರ್ನಾಟಕ ಮತ್ತು ಭಾರತದ ವಿಷಯ ಹಾಗಿರಲಿ, ಅಮೆರಿಕಾ, ಇಂಗ್ಲೆAಡ್, ಸಿಂಗಪೂರ್, ಆಸ್ಟೆçÃಲಿಯ, ದುಬಾಯï, ಕತಾರ್, ಬೆಹರÉÃನ್ ಮೊದಲಾದ ಹÉÆರ ದÉÃಶಗಳಲ್ಲೂ ಕನ್ನಡವನ್ನು ಮಕ್ಕಳಿಗೆ ಕಲಿಸುವ ವ್ಯವಸ್ಥೆಯಿದೆ. ಬೇರೆ ಬೇರೆ ದÉÃಶಗಳ ಕನ್ನಡ ಸಂಘಗಳು ಪ್ರತಿವರ್ಷವೂ ಕನ್ನಡ ಲೇಖಕರನ್ನು ಬರಮಾಡಿಕÉÆಳ್ಳುತ್ತಾ ಕನ್ನಡ ಶ್ರದ್ಧೆಯನ್ನು ಬತ್ತದ ತÉÆರೆಯಂತೆ ರಕ್ಷಿಸಿಕÉÆಂಡಿವೆ. ಅಮೆರಿಕಾದಲ್ಲಿ ಇಂಗ್ಲೆAಡಲ್ಲಿ ಸಾಹಿತ್ಯ ಸಮ್ಮೇಳನವೂ ನಡೆಯುತ್ತಾ ಇವೆ. ಆ ದÉÃಶಗಳಲ್ಲಿ ಸಮರ್ಥರಾದ ಲೇಖಕರೂ ಕನ್ನಡ ಸಾಹಿತ್ಯ ನಿರ್ಮಾಣದಲ್ಲಿ ತÉÆಡಗಿದ್ದಾರೆ. ಗ್ರಂಥ ಪ್ರಕಾಶನವನ್ನೂ ಕÉÊಗÉÆಂಡಿದ್ದಾರೆ. ಆ ಎಲ್ಲ ಅನಿವಾಸಿ ಕನ್ನಡಿಗರ ಮನಸ್ಸು ಈಗ ಕಲ್ಬುರ್ಗಿಯ ಸಾಹಿತ್ಯ ಸಮ್ಮೇಳನದಲ್ಲಿ ಕÉÃಂದ್ರೀಕೃತವಾಗಿದೆ ಎಂದು ನಾನು ವಿಶ್ವಾಸದಿಂದ ಹÉÃಳಬಲ್ಲೆ.
ಹÉÃಳೀ ಕÉÃಳಿ ಇದು ಸಾಹಿತ್ಯ ಸಮ್ಮೇಳನ. ಕನ್ನಡ ಪುಸ್ತಕÉÆÃದ್ಯಮ ಮತ್ತು ಸದ್ಯದ ಸಾಹಿತ್ಯ ಸಂದರ್ಭದ ಬಗ್ಗೆ ಕೆಲವು ಮಾತುಗಳನ್ನು ಹÉÃಳುವುದು ನನ್ನ ಕರ್ತವ್ಯ. ಪುಸ್ತಕ ಪ್ರಕಾಶನ ಮತ್ತು ಮುದ್ರಣದ ಗುಣಮಟ್ಟ ನಿಜಕ್ಕೂ ಸಾಹಿತ್ಯಾಭಿಮಾನಿಗಳು ಹೆಮ್ಮೆ ಪಡುವಂತಿದೆ. ಇದರಲ್ಲಿ ಎರಡು ಮಾತಿಲ್ಲ. ಪುಸ್ತಕ ಪ್ರಕಾಶನವು ದಂಡಿಯಾಗಿ ಹಣ ತರುವ ದಂಧೆಯಲ್ಲ. ಆದಾಗ್ಯು ಕÉÃವಲ ಸಾಹಿತ್ಯಪ್ರೀತಿಯಿಂದ ಹತ್ತಾರು ಪ್ರಕಾಶನ ಸಂಸ್ಥೆಗಳು ಈಗ ಪ್ರಕಟಣ ಸಾಹಸದಲ್ಲಿ ತÉÆಡಗಿಕÉÆಂಡಿವೆ. ಪ್ರತಿ ವಾರವೂ ಒಂದಲ್ಲ ಒಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಬೆಂಗಳೂರಲ್ಲAತೂ ನಡೆಯುತ್ತಲೇ ಇರುತ್ತದೆ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ, ನವ ಕರ್ನಾಟಕ, ಮನÉÆÃಹರ ಗ್ರಂಥಮಾಲೆ, ಸಪ್ನ ಬುಕ್ ಹËಸ್, ಅಂಕಿತ ಪುಸ್ತಕ, ಅಭಿನವ ಪುಸ್ತಕ, ಅಕ್ಷರ ಪ್ರಕಾಶನ, ರಾಘವÉÃಂದ್ರ ಪ್ರಕಾಶನ, ಮುಂತಾದ ಅನÉÃಕ ಪ್ರಕಟಣ ಸಂಸ್ಥೆಗಳು ಈಚಿನ ದಿನಗಳಲ್ಲಿ ನಿರಂತರವಾಗಿ ಗ್ರಂಥ ಪ್ರಕಾಶನದಲ್ಲಿ ತÉÆಡಗಿವೆ. ಹÉÆಸ ಹÉÆಸ ಲೇಖಕರು (ಅವರು ಸಮಾಜದ ಬೇರೆಬೇರೆ ವಲಯಗಳಿಂದ ಬಂದAಥವರು! ಕÉÃವಲ ಕನ್ನಡ ಇಂಗ್ಲಿಷ್ ಅಧ್ಯಾಪಕರಲ್ಲ) ಬರವಣಿಗೆಯಲ್ಲಿ ಕ್ರಿಯಾಶೀಲವಾಗಿ ತÉÆಡಗಿಕÉÆಂಡಿದ್ದಾರೆ. ಕನ್ನಡ ಸಾಹಿತ್ಯದಲ್ಲೀಗ ಪ್ರವಾಹರೂಪಿಯಾದ ಸಾಹಿತ್ಯ ಚಳುವಳಿಯ ಉಕ್ಕು ಕಾಣುತ್ತಿಲ್ಲವಾದರೂ ಸಮರ್ಥರಾದ, ಬೇರೆ ಬೇರೆ ಮನÉÆÃಧರ್ಮದ ಅನÉÃಕ ಹÉÆಸ ಪೀಳಿಗೆಯ ಲೇಖಕರು ಹÉÆಸ ವಸ್ತು ವಿಷಯ ಹÉÆಸ ಸಂವÉÃದನೆ ಹÉÆಸ ಆಶಯಗಳ ಕೃತಿಗಳನ್ನು ಪುಂಖಾನುಪುAಖವಾಗಿ ಪ್ರಕಟಿಸುತ್ತಾ ಇದ್ದಾರೆ. ಆತ್ಮಶÉÆÃಧಕವಾದ ಕೃತಿಗಳೂ, ಸಮಾಜಮುಖಿಯಾದ ಕೃತಿಗಳ ಹೆಗಲಿಗೆ ಹೆಗಲು ತಾಗಿಸುತ್ತಾ ಈಗ ಪೆರÉÃಡು ನಡೆಸುತ್ತಾ ಇವೆ. ಈಚಿನ ದಿನಗಳಲ್ಲಿ ನನ್ನ ಓದಿಗೆ ದÉÆರೆತ ಕೆಲವು ಪುಸ್ತಕಗಳನ್ನು ನೆನೆದರೂ ಹÉÆಸ ಜನಾಂಗದ ಕ್ರಿಯಾಶೀಲತೆಯ ಮಟ್ಟ ಮನಸ್ಸಿಗೆ ಸಮಾಧಾನ ನೀಡುವಂತಿದೆ. ಯುವಪೀಳಿಗೆಯಲ್ಲಿ ಸಂಯುಕ್ತಾ ಪುಲಿಗಲï, ರಾಜೇಂದ್ರ ಪ್ರಸಾದ್, ಮಂಜುನಾಯಕ ಚೆಲ್ಲೂರು, ಶಶಿ ತರೀಕೆರೆ, ಕರ್ಕಿ ಕೃಷ್ಣಮೂರ್ತಿ, ಕಾವ್ಯ ಕಡಮೆ, ಎಚ್.ಎಸ್.ಅನುಪಮ, ವಿಕ್ರಮï ಹತ್ವಾರ್, ಸುಬ್ಬು ಹೊಲೆಯಾರ್, ಟಿ. ಯಲ್ಲಪ್ಪ – ರಂಥ ಆಸೆಹುಟ್ಟಿಸುವ ಲೇಖಕರು ಕಾಣಿಸಿಕÉÆಂಡಿದ್ದಾರೆ. ಈ ಸಾಲಿಗೆ ಸÉÃರಬೇಕಾದ ನನ್ನ ಕಣ್ತಪ್ಪಿ ಹÉÆÃದ ಇನ್ನೂ ಅನÉÃಕ ಮಂದಿ ಇರಲಿಕ್ಕೆ ಸಾಧ್ಯ. ಕಥೆ ಕಾದಂಬರಿ ಕ್ಷೇತ್ರಗಳಲ್ಲಿಯಂತೂ ನಮ್ಮ ಸಾಹಿತ್ಯದ ಬೆಳೆ ಹುಲುಸಾಗಿದೆ. ನಿರಂತರವಾಗಿ ಬೃಹತ್ ಗಾತ್ರದ ಕಾದಂಬರಿಗಳು ಪ್ರಕಟವಾಗುತ್ತಲೇ ಇವೆ. ಇದÉà ಬಗೆಯ ಮಹತ್ವಾಕಾಂಕ್ಷೆ ಅನುವಾದ ಕೃತಿಗಳಲ್ಲೂ ಕಂಡುಬರುತ್ತಿದೆ. ಕಳೆದ ಒಂದೆರಡು ವರ್ಷಗಳನ್ನು ನೆನೆದರೂ ಅದೆಂಥ ಹೆಮ್ಮೆ ಪಡುವ ಸಾಹಿತ್ಯ ಕೃಷಿಯನ್ನು ನಾವು ಕಂಡಿದ್ದೇವೆ! ಬಂಡಾಯ ದಲಿತ ಮುಸ್ಲಿಮï-ಸಂವÉÃದನೆ, ಸ್ತಿçà ಸಂವÉÃದನೆಯ ಬೆಲೆಬಾಳುವ ಸಾಹಿತ್ಯ ಮಾಲೆ ಈಚಿನ ವರ್ಷಗಳಲ್ಲಿ ಪ್ರಕಟಗÉÆಂಡಿವೆ. ಈಗಾಗಲೇ ಹೆಸರು ಮಾಡಿರುವ ಲೇಖಕರ ಈಚಿನ ಕೃತಿ ಸಂಪದವು ಕೂಡ ಅಭಿಮಾನ ಮೂಡಿಸುವಂತಿದೆ. ಪುರುಷÉÆÃತ್ತಮ ಬಿಳಿಮಲೆಯವರ ಕನ್ನಡ ಕಥನಗಳು, ಡಿ.ಎಸ್. ನಾಗಭೂಷಣ ಅವರ ಗಾಂಧಿಕಥನ, ಷ. ಶೆಟ್ಟರ್ ಅವರ ರೂವಾರಿ, ಕೆ.ವಿ.ಅಕ್ಷರ ಅವರ ಶಂಕರ ವಿಹಾರ, ರಹಮತ್ ತರೀಕೆರೆಯವರ ಹಿತ್ತಲ ಜಗತ್ತು, ನರಹಳ್ಳಿ ಅವರ ಬಾ ಕುವೆಂಪು ದರ್ಶನಕ್ಕೆ ವಸುಧೇಂದ್ರ ಅವರ ತೇಜೋ ತುಂಗಭದ್ರಾ – ಕಳೆದ ಕೆಲವು ತಿಂಗಳುಗಳಲ್ಲಿ ಸಾಹಿತ್ಯಾಸಕ್ತರ ಗಮನವನ್ನು ವಿಶÉÃಷವಾಗಿ ಸೆಳೆದಂಥ ಕೃತಿಗಳು. ನಮ್ಮ ಹಿರಿಯ ಲೇಖಕರು ಆತ್ಮಕಥೆಗಳನ್ನು ಪ್ರಕಟಿಸುತ್ತಿದ್ದಾರೆ. ಅವುಗಳಲ್ಲಿ ನಮ್ಮ ಸÉÆÃದರಿಯರು ಬರೆದ ನಿರ್ಭಿಡೆಯ ಕೃತಿಗಳು ಓದುಗ ಬಳಗದ ವಿಶÉÃಷ ಪ್ರಶಂಸೆಗೆ ಪಾತ್ರವಾಗಿವೆ. ನಮ್ಮ ಅನÉÃಕ ಮುಖ್ಯ ಲೇಖಕರ ಕೃತಿಗಳು ಇಂಗ್ಲಿಷ್ ಭಾಷೆಗೆ ಅನುವಾದಗÉÆಂಡು ವಿಶ್ವ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿರುವ ಹÉÆಸ ವಿದ್ಯಮಾನವÉÇಂದು ಈಗ ಚಾಲ್ತಿಗೆ ಬಂದಿದೆ. ವಿವÉÃಕ ಶಾನಭಾಗ, ವಸುಧÉÃಂದ್ರ, ರಾಘವÉÃಂದ್ರ ಪಾಟೀಲ, ಜಯಂತ ಕಾಯ್ಕಿಣಿ ಮೊದಲಾದ ನಮ್ಮ ಲೇಖಕರೀಗ ಇಂಗ್ಲಿಷ್ ಅನುವಾದಗಳಿಂದ ವಿಶ್ವ ಸಾಹಿತ್ಯರಂಗವು ಕನ್ನಡದತ್ತ ಕಣ್ಣು ಹಾಯಿಸುವಂತೆ ಮಾಡಿರುವರು. ಜೊತೆಜೊತೆಗೆ ಕನ್ನಡದ ಅನÉÃಕ ಕ್ಲಾಸಿಕ್ಕುಗಳನ್ನು ಇಂಗ್ಲಿಷ್ ಭಾಷೆಗೆ ತರುವ ಸಾಹಸದಲ್ಲಿ ನಮ್ಮ ಸಮರ್ಥ ಅನುವಾದಕ ಬಳಗ ತÉÆಡಗಿಕÉÆಂಡಿದೆ. ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ, ಕುವೆಂಪು, ಬೇಂದ್ರೆ, ಪುತಿನ, ಆನಂದಕAದ, ಕಟ್ಟೀಮನಿ ಮೊದಲಾದ ಲೇಖಕರ ಹೆಸರಲ್ಲಿ ಸ್ಥಾಪಿತವಾದ ಟ್ರಸ್ಟುಗಳು ಬೆಲೆಬಾಳುವ ಕೃತಿಗಳ ಪ್ರಕಟಣೆಯಲ್ಲಿ ನಿರಂತರವಾಗಿ ತÉÆಡಗಿಕÉÆಂಡಿವೆ. ಬಹು ಸಂಖ್ಯೆಯಲ್ಲಿ ಹÉÆಸ ಕೃತಿಗಳು ಬರುತ್ತಿರುವುದರಿಂದ ನಾನು ಈಚೆಗೆ ಓದಿ ಸಂತÉÆÃಷ ಪಟ್ಟ ಕೆಲವು ಮುಖ್ಯ ಕೃತಿಗಳನ್ನು ಮಾತ್ರ ನನಗಿಲ್ಲಿ ಪ್ರಸ್ತಾಪಿಸುವುದು ಸಾಧ್ಯವಾಗುತ್ತಿದೆ. ಇಲ್ಲಿ ಉಲ್ಲೇಖಗÉÆಳ್ಳಬೇಕಾದ ಇನ್ನೂ ಅನÉÃಕ ಹೆಸರುಗಳಿವೆ ಎಂಬುದನ್ನು ನಾನು ಬಲ್ಲೆ.
ಈಚಿನ ದಿನಗಳಲ್ಲಿ ಕನ್ನಡ ಗಣಕ ಪರಿಷತ್ತಿನ ಡಾ. ಶ್ರೀನಾಥ ಶಾಸ್ತಿç, ಶ್ರೀ ನರಸಿಂಹಮೂರ್ತಿ ಮತ್ತು ಬಳಗದವರು ಮಾತಾಡಿದ್ದು ಅಕ್ಷರ ರೂಪದಲ್ಲಿ ಮೂಡುವಂಥ ತಂತ್ರಾAಶವನ್ನು ರೂಪಿಸಿದ್ದನ್ನು ಇಲ್ಲಿ ಅಭಿಮಾನದಿಂದ ಸ್ಮರಿಸುತ್ತೇನೆ,.
ಈವತ್ತು ಕನ್ನಡಿಗರ ಉತ್ಸವ ಕಲಬುರ್ಗಿಯಲ್ಲಿ ನಡೆಯುತ್ತಾ ಇದೆ. ಕನ್ನಡ ನಾಡು ನುಡಿಗಳ ಬಗ್ಗೆ ಕನ್ನಡಿಗರ ಅಭಿಮಾನವನ್ನು ಜಾಗೃತಗÉÆಳಿಸುವ ಮಹಾನ್ ವÉÃದಿಕೆಯಿದು. ಲೇಖಕರು, ಪ್ರಕಾಶಕರು, ಅಭಿಮಾನಿಗಳು- ಹೀಗೆ ಸರಸ್ವತೀ ದÉÃಗುಲದ ಮೂರೂ ಆಧಾರ ಸ್ತಂಭಗಳು- ಒಂದÉÃ ಅಸ್ತಿವಾರದಲ್ಲಿ ನೆಲೆಗÉÆಳ್ಳುವ ಈ ಸಮಾರಂಭದಲ್ಲಿ ಕನ್ನಡದ ಹೆಸರಲ್ಲಿ ಎಲ್ಲ ಧರ್ಮೀಯರೂ ಪಂಥೀಯರೂ ಪಕ್ಷೀಯರೂ ಒಂದಾಗುವರು. ಬಹುವಚನಿಗಳೂ ಸಮಾನಸ್ಕಂಧರೂ ಆಗುವರು. ಸಾವಿರಾರು ಪುಸ್ತಕಗಳು ಮಾರಾಟವಾಗಿ ಕಲಬುರ್ಗಿಯಿಂದ ಕನ್ನಡ ಸರಸ್ವತಿಯ ರಥÉÆÃತ್ಸವ ನಾಡಿನಾದ್ಯಂತ ಮನೆಮನೆಯ ಅಭ್ಯಾಸದ ಕÉÆÃಣೆಗೆ ತಲಪುವುದು. ಎಂಥ ವಿಶ್ವ ವÉÊಶಾಲ್ಯಕ್ಕೆ ಅದೆಂಥ ಪುಟ್ಟ ತಂಗುಮನೆ! ವಿಶ್ವವÉÃ ನಮ್ಮ ಎದೆಗೂಡಲ್ಲಿ ಇಷ್ಟದೀಪವಾಗಿ ಪ್ರತಿಷ್ಠಿತವಾಗುವ ಈ ದಿವ್ಯ ಮುಹೂರ್ತದಂದು ಕನ್ನಡ ಸÉÆÃದರ ಸÉÆÃದರಿಯರಿಗೆ ನನ್ನ ಎದೆತುಂಬಿದ ಶುಭಾಶಯಗಳು. ನನ್ನ ಮಾತುಗಳನ್ನು ಈವರೆಗೆ ತಾಳ್ಮೆಯಿಂದ ಕÉÃಳಿಸಿಕÉÆಂಡ ಕನ್ನಡ ಸÉÆÃದರ ಸÉÆÃದರಿಯರಿಗೆ ವಿನಯಪೂರ್ವಕ ವಂದನೆಗಳು.
ಗೆಲ್ಲಲಿ ಕನ್ನಡ; ಬಾಳಲಿ ಕನ್ನಡ
ನಮ್ಮೊಳಮಾತಿನ ಮೆಲ್ಲುಲಿ ಕನ್ನಡ !
೮೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಧಾರವಾಡ
ದಿನಾಂಕ : ೪, ೫ ಹಾಗೂ ೬ ಜನವರಿ ೨೦೧೯
ಸಮ್ಮೇಳನಾಧ್ಯಕ್ಷರ ಭಾಷಣ
ಡಾ. ಚಂದ್ರಶೇಖರ ಕಂಬಾರ
ಓಂ ಪ್ರಥಮದಲ್ಲಿ ಸಾವಳಗಿ ಶಿವಲಿಂಗೇಶ್ವರ ಮತ್ತು ಎಸ್.ಎಸ್. ಭೂಸನೂರಮಠ ಗುರುದೇವರುಗಳನ್ನು ನೆನೆದು ಕನ್ನಡ ತಾಯಿಗೆ ಸುಪ್ರಭಾತ ಹೇಳೋಣ…
ಮುಂಗೋಳಿ ಕೂಗ್ಯಾವು ಮೂಡsಣ ಬೆಳಗಿ!
ತಂಗಾಳಿ ಬೀಸ್ಯಾವು ತವರೀ ಹೂವರಳಿ
ಹೂಹೂವಿನೊಳಗೊಂದು ಕೈಲಾಸವರಳ್ಯಾವು
ಕೈಲಾಸ ಕೈಮುಗಿದು ಭೂಲೋಕಕಿಳಿದಾವು
ಸಾವಿರದ ಶರಣವ್ವ ಕನ್ನಡದ ತಾಯೇ ||ತಾಯೇ||
ಪಡುಗಡಲ ತೆರೆಗಳಲಿ ಪಾದ ತೊಳೆದವಳೆ
ಬೆಟ್ಟಬಯಲುಗಳನ್ನ ತೊಟ್ಟು ನಿಂತವಳೆ
ಮಲೆನಾಡ ಶಿಖರದಲಿ ಮಳೆಬಿಲ್ಲ ಮುಡಿದವಳೆ
ಅವ್ವಾ ಅಂದಾಗೊಮ್ಮೆ ಸಾಕಾರಗೊಂಬವಳೆ
ನಗೆಮೊಗದ ಜಗದಂಬೆ ಬೆಳಕಿನ ತಾಯೇ ||ತಾಯೇ||
ಕುರಿತು ಓದದ ಕಾವ್ಯ ಪರಿಣತರ ಮಾತೆ
ಸಂತsರ ಶರಣsರ ಮಂತ್ರsದ ಮಾತೆ
ಶಬ್ದಕ್ಕೆ ಬೆಳಕನ್ನ ಮುಡಿಸುವ ಕವಿಗsಣ
ದಿನಬೆಳಗು ಹಾಡುವರು ನಿನ್ನ ಕೀರ್ತಿಯನೆ
ಸಾವಿರದ ಶರಣವ್ವ ಕನ್ನಡದ ತಾಯೇ ||ತಾಯೇ||
ಹಕ್ಕಿ ಹರ್ಯಾಡಾವು ಹಾಡುsತ ಏನಂತ?
ಬಾಗಿದವರಿಗೆ ಭಾಗ ಹೃದಯ ಕೊಡುವವಳೆ
ನಿನ್ಹಾಂಗ ಧರ್ಮದಲಿ ಧಾರಾಳತನದಲ್ಲಿ
ಈ ಭೂಮಿಯಲಿ ಕಾಣೆ ಧರೆಗೆ ದೊಡ್ಡವಳೆ
ಸಾವಿರದ ಶರಣವ್ವ ಕನ್ನಡದ ತಾಯೇ || ತಾಯೇ||
ಧಾರವಾಡದ ಎಲ್ಲ ಪೂಜ್ಯ ಹಿರಿಯರೇ, ನಾಡಿನ ಸನ್ಮಾನ್ಯರೇ, ಸಾಹಿತ್ಯ ಸಂಸ್ಕೃತಿ ಸಹೃದಯರೇ ನಾನು ನಿಮ್ಮವನು. ಇದೇ ನೆಲದಲ್ಲಿ ನಿಮ್ಮೆದುರಿನಲ್ಲಿಯೇ ಓಡಾಡಿ ನಿಮ್ಮಿಂದಲೇ ನಾಲ್ಕಕ್ಷರ ಕಲಿತು ದೊಡ್ಡವನಾದವನು. ನನಗೆ ಕಲಿಸಿದ ಗುರುಗಳೊಬ್ಬರೂ ಈಗ ನನ್ನೆದುರಿಗಿಲ್ಲ ನಿಜ, ಸಾಲದ್ದಕ್ಕೆ ನನ್ನಿಬ್ಬರು ಸ್ನೇಹಿತರು: ಕಲಬುರ್ಗಿ ಮತ್ತು ಗಿರಡ್ಡಿ ಅವರನ್ನೂ ಕಳೆದುಕೊಂಡು ಹತಾಶ ಭಾವದಿಂದ ನಿಂತ ನನ್ನನ್ನು ಅವರೆಲ್ಲರ ಚೇತನಗಳು ಆಶೀರ್ವದಿಸುತ್ತಿವೆಯೆಂಬ ನಂಬಿಕೆಯಿಂದ ಒಂದೆರಡು ನುಡಿಗಳನ್ನಾಡುತ್ತೇನೆ; ಸಹನೆಯಿಂದ ಕೇಳುವಿರಾಗಿ ನಂಬಿದ್ದೇನೆ.
ನಮ್ಮ ದೇಶದ ಆಧುನಿಕ ಚರಿತ್ರೆಯನ್ನು ನೆನೆವಾಗ ಬ್ರಿಟಿಷರನ್ನು ನೆನೆಯದೆ ಅದರಲ್ಲೂ ಶಿಕ್ಷಣ ಹಾಗೂ ಸಂಸ್ಕೃತಿಗಳ ವಿಷಯ ನೆನೆವಾಗ ಬ್ರಿಟಿಷ್ ಆಡಳಿತ ಮತ್ತು ಮೆಕಾಲೆ ಮಹಾಶಯನನ್ನು ನೆನೆಯದೆ ಮುಂದುವರೆಯುವಂತೆಯೇ ಇಲ್ಲ. ಭಾರತದ ಆಧುನಿಕ ಚರಿತ್ರೆ ಸುರುವಾದದ್ದು ೧೮೩೬ರಲ್ಲಿ. ಮೆಕಾಲೆಯವರು ‘ಭಾರತೀಯರಿಗೆ ಎಂಥ ಶಿಕ್ಷಣ ಕೊಡಬೇಕೆಂದು’ ತೀರ್ಮಾನಿಸಲು ತಮ್ಮ ನೇತೃತ್ವದಲ್ಲಿ ಆರು ಜನರ ಒಂದು ಆಯೋಗವನ್ನು ನಿಯಮಿಸಿದರು. ಅದರಲ್ಲಿ ಮೂರು ಜನ ಬ್ರಿಟಿಷ್ ಪಂಡಿತರು, ಇನ್ನು ಮೂವರು ಭಾರತೀಯ ಪಂಡಿತರು – ಇವರಲ್ಲಿ ರಾಜಾರಾಮ್ ಮೋಹನ್ರಾಯ್ ಒಬ್ಬರಾಗಿದ್ದರು. ಆಯೋಗದಲ್ಲಿದ್ದ ಬ್ರಿಟಿಷ್ ಸದಸ್ಯರು ಭಾರತೀಯರಿಗೆ ದೇಶೀಯ ಪದ್ಧತಿಯಲ್ಲೇ ಶಿಕ್ಷಣ ಕೊಡಬೇಕೆಂದು ವಾದಿಸಿದರು. ಆದರೆ ಭಾರತೀಯ ಸದಸ್ಯರು ಭಾರತೀಯರಿಗೆ ಆಧುನಿಕ ಬ್ರಿಟಿಷ್ ಶಿಕ್ಷಣವನ್ನೇ ಕೊಡಬೇಕೆಂದು ಒತ್ತಾಯಿಸಿದರು. ಅಂತಿಮವಾಗಿ ಮೆಕಾಲೆ ತಮ್ಮ ನಿರ್ಣಾಯಕವಾದ ಅಧ್ಯಕ್ಷೀಯ ಮುದ್ರೆ ಒತ್ತಿ ಬ್ರಿಟಿಷ್ ಶಿಕ್ಷಣವನ್ನು ಅಳವಡಿಸಿದರು.
ಮೆಕಾಲೆಯವರ ಶೈಕ್ಷಣಿಕ ಸಿಫಾರಸುಗಳ ಆಧಾರದ ಮೇಲೆ ಇಂಗ್ಲಿಷ್ ನಮ್ಮ ಆಡಳಿತ ಭಾಷೆಯಾಯಿತು. ಅಲ್ಲಿಯವರೆಗೆ ಉರ್ದು ಮತ್ತು ಪಾರ್ಸಿ ನಮ್ಮ ಅಧಿಕೃತ ಭಾಷೆಗಳಾಗಿದ್ದರೂ ಅವು ನಮಗೇನೂ ಹೊಸದನ್ನು ಕಲಿಸಲಿಲ್ಲ. ಆದರೆ ಬ್ರಿಟಿಷರು ಬೇರೊಂದು ಬಗೆಯ ಸಂಸ್ಕೃತಿಯನ್ನು ತಂದರು; ಬೇರೊಂದು ಬಗೆಯ ರಾಜ್ಯ ವ್ಯವಸ್ಥೆಯನ್ನು ತಂದರು. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಇಂಗ್ಲಿಷ್ ಭಾಷೆಯನ್ನು ಕಲಿಸಿದರು. ಹಿಂದೆ ಆಳಿದವರು ತಮ್ಮ ಅರೇಬಿಕ್, ಪರ್ಶಿಯನ್ ಭಾಷೆಗಳನ್ನು ನಮಗೆ ಕಲಿಸಿರಲಿಲ್ಲ. ಆದರೆ ಇವರು ಇಂಗ್ಲಿಷನ್ನು ಕಡ್ಡಾಯವಾಗಿ ಕಲಿಸಿದರು. ಇಂಗ್ಲಿಷ್ ಬರುವ ತನಕ ನಮಗೆ ಸಂಸ್ಕೃತವೇ ಜ್ಞಾನದ ಭಾಷೆಯಾಗಿತ್ತು.
ಬ್ರಿಟಿಷರು ಕೊಟ್ಟ ಶಿಕ್ಷಣ ವ್ಯವಸ್ಥೆಯಲ್ಲೇ ನಮ್ಮ ಮನಸ್ಸುಗಳು ತರಬೇತಿ ಹೊಂದಿದವೆಂಬ ತಿಳುವಳಿಕೆಯಿಂದಲೇ ನಾವೀಗ ಮುಂದುವರೆದೆವು, ಹಾಗಾಗಿ ನಮ್ಮವೇ ಮನಸ್ಸುಗಳನ್ನು ಪ್ರಶ್ನಿಸುವ ಸಾಮರ್ಥ್ಯವನ್ನೂ ಕಳೆದುಕೊಂಡೆವು. ಅವರು ನಮ್ಮನ್ನು ಮೂಢರು ಎಂದರು. ನಾವು ‘ಹೌದು’ ಎಂದೆವು. ಸಂಸ್ಕೃತದಲ್ಲಿರುವುದೆಲ್ಲ ‘ಮೂಢ ನಂಬಿಕೆ’ ಎಂದರು. ಇದಕ್ಕೂ ‘ಹೌದು’ ಎಂದೆವು. ಭಾರತೀಯರಿಗೆ ‘ಚಾರಿತ್ರಿಕ ಪ್ರಜ್ಞೆಯಿಲ್ಲ ಎಂದರು, ‘ಭಾರತೀಯರಲ್ಲಿರುವುದೆಲ್ಲ ಗೊಡ್ಡು ಪುರಾಣ’ ಎಂದರು. ಅವರು ಹೇಳಿದ್ದಕ್ಕೆಲ್ಲ ‘ಹೌದು ಎಂದೆವು. ಅದೇ ಕಾಲಕ್ಕೆ ಭೂಮಿಯನ್ನು ಸರ್ವೆ ಮಾಡುವ ಪದ್ಧತಿ ಬೆಳಕಿಗೆ ಬಂತು. ಇದರಿಂದ ಭೂಮಿಯ ಫಲವತ್ತತೆಯೇನೂ ಹೆಚ್ಚಾಗಲಿಲ್ಲ, ಆದರೆ ಆಳರಸರಿಗೆ ಆಳಲು ಅನುಕೂಲವಾಯಿತು. ಅವರೇ ನಮ್ಮ ದೇಶದ ಇತಿಹಾಸವನ್ನೂ ಬರೆಸಿದರು. ಇದು ಒಂದು ದೃಷ್ಟಿಯಿಂದ ಭಾರತದ ಅನುವಾದ. – ಹೀಗೆ ಸರ್ವೆ ಮೂಲಕ ನಮ್ಮ ಭೂಮಿಯನ್ನು, ಇತಿಹಾಸದ ಮೂಲಕ ಇಲ್ಲಿಯ ಸಂಸ್ಕೃತಿಯನ್ನು, ಇಂಗ್ಲಿಷ್ ಭಾಷೆಯ ಮೂಲಕ ಇಲ್ಲಿಯ ಸಾಹಿತ್ಯ ಮತ್ತು ಧರ್ಮಗಳನ್ನು ತಿಳಿದುಕೊಂಡರು. ಸಾಲದ್ದಕ್ಕೆ ಆಡಳಿತ, ಶಾಲೆ ಕಾಲೇಜು ವಿಶ್ವವಿದ್ಯಾಲಯ, ನ್ಯಾಯಾಲಯ, ಕಛೇರಿ, ಟಪಾಲು ಮುಂತಾದ ನಮ್ಮ ಊಹೆಗೂ ನಿಲುಕದ ಸಂಸ್ಥೆ, ಆಫೀಸು ಮುಂತಾದ ಕ್ರಾಂತಿಕಾರಕ ಬದಲಾವಣೆಗಳಿಂದಾಗಿ ಇಡೀ ದೇಶ ರೋಮಾಂಚಿತವಾಗುವಂತೆ ಮಾಡಿದರು.
ಈಗ ನಮ್ಮ ಸಾಹಿತ್ಯದ ಸ್ಫೂರ್ತಿಯನ್ನು ಪಶ್ಚಿಮದ ಆಧುನಿಕ ಸಾಹಿತ್ಯ ಪ್ರಕಾರಗಳಲ್ಲಿ ಕಂಡು ಅವುಗಳ ಪುನರ್ರಚನೆಯನ್ನು ನಮ್ಮ ಭಾಷೆಗಳಲ್ಲಿ ಮಾಡಬೇಕೆಂದಾಗ; ಇದಕ್ಕೆ ಬ್ರಿಟಿಷರ ಅನುವಾದದ ನಿಯಮಗಳು ಅಡ್ಡಬಂದವು. ಅವರ ಪ್ರಕಾರ ಒಂದು ಕೃತಿಗೆ ಒಬ್ಬನೇ ಕೃತಿಕಾರ. ಪಠ್ಯ ಅವನ ಸೊತ್ತು, ಅನುವಾದವೆಂದೂ ಮೂಲವಾಗಲಾರದು. ಅಥವಾ ಅನಿವಾರ್ಯವಾದಲ್ಲಿ ಅನುವಾದ, ಮೂಲಕ್ಕೆ ಸಮೀಪವಾಗಿರಬೇಕು. ಮೂಲಕ್ಕೆ ಎಷ್ಟೆಷ್ಟು ಸಮೀಪವಾಗಿದೆಯೋ ಅಷ್ಟಷ್ಟೂ ಒಳ್ಳೆಯದು.
ಆದರೆ ಅನುವಾದದ ನಮ್ಮ ಕಲ್ಪನೆಯೇ ಬೇರೆ, ನಮ್ಮ ಪ್ರಕಾರ ಮೂಲದಿಂದ ಅನುವಾದ ದೂರವಾದಷ್ಟೂ ಅದರ ಮೌಲ್ಯ ಹೆಚ್ಚಾಗುತ್ತದೆ, ಒಂದು ಪಠ್ಯವನ್ನು ಯಾವುದೇ ಭಾಷೆ ತನ್ನದಾಗಿಸಿಕೊಳ್ಳುವ ಕ್ರಮವೆಂದರೆ ಅದಕ್ಕೆ ಸ್ಥಳೀಯವಾದ ಪ್ರಸ್ತುತತೆಯನ್ನು ನೀಡುವುದು. ಪಂಪ ಕುಮಾರವ್ಯಾಸರ ಮಹಾಭಾರತಗಳು ನಮಗೆ ಲಭ್ಯವಿರುವುದೇ ಹೀಗೆ.
ಬಿ.ಎಂ.ಶ್ರೀ. ಅವರ ”ಇಂಗ್ಲಿಷ್ ಗೀತೆ”ಗಳ ಸ್ಫೂರ್ತಿಯಿಂದ ಭಾವಗೀತೆಗಳಿಗೆ ಸಮೃದ್ಧಿ ಬಂದರೂ ಬಹುಬೇಗ ನಮ್ಮ ಕವಿಗಳು ತಮ್ಮ ಸ್ಫೂರ್ತಿಯ ಮೂಲವನ್ನು ಕಂಡುಕೊಂಡರು. ನಮ್ಮ ಕವಿಗಳಿಗೆ ಪಶ್ಚಿಮದ ಹೊಸ ಸಾಹಿತ್ಯ ಪ್ರಕಾರಗಳ ಪರಿಚಯವಾಗಿ ಕೊಂಚ ಅನುಕರಿಸಿ, ತಕ್ಷಣ ಎಚ್ಚತ್ತು ಸದರಿ ಪ್ರಕಾರಗಳು ನಮ್ಮಲ್ಲಿ ಮೊದಲಿನಿಂದ ಇದ್ದುವೆಂಬಂತೆ ಹೊಸ ಕತೆ, ಕಾದಂಬರಿ, ನಾಟಕ, ಆತ್ಮಕತೆ, ಪ್ರವಾಸ ಸಾಹಿತ್ಯ ಮುಂತಾದ ಪ್ರಕಾರಗಳು ಬಂದು ಕನ್ನಡವನ್ನು ಅಲಂಕರಿಸಿದವು. ಕಾದಂಬರಿ, ನಾಟಕ ಸಾಹಿತ್ಯವಂತೂ ಪಶ್ಚಿಮದ ಮಾದರಿಗಳೊಂದಿಗೆ ಸ್ಪರ್ಧಿಸುವಂತೆ ಬಂದವು. ಆದರೆ ಇದೇ ಯಶಸ್ಸಿನ ಕತೆ ಶಿಕ್ಷಣದಲ್ಲಿ, ಅದರಲ್ಲೂ ವಿಜ್ಞಾನ ಶಿಕ್ಷಣದಲ್ಲಿ ಕಂಡುಬರಲಿಲ್ಲ. ಭಾರತೀಯ ಭಾಷೆಗಳ ಸಮಸ್ಯೆ ಸುರುವಾದದ್ದೇ ಇಲ್ಲಿ. ದೇಶಕ್ಕೆ ಸ್ವಾತಂತ್ರ ಬಂದು ಬ್ರಿಟಿಷರು ತೊಲಗಿ ಎಪ್ಪತ್ತು ವರ್ಷಗಳಾದರೂ ಇಂಗ್ಲಿಷ್ ನಮ್ಮಿಂದ ತೊಲಗಿಲ್ಲ.ದಿನೇ ದಿನೇ ಹೆಚ್ಚು ಹೆಚ್ಚು ವ್ಯಾಪಿಸುತ್ತ ಹೆಚ್ಚು ಹೆಚ್ಚು ಆಳವಾಗಿ ಪ್ರಭಾವಶಾಲಿಯಾಗಿ ದೇಶೀಯ ಭಾಷೆಗಳ ಕತ್ತು ಹಿಸುಕುತ್ತಿದೆ!
ಸಾಮಾನ್ಯವಾಗಿ ನಮ್ಮ ದೇಶದ ಯಾವುದೇ ರಾಜ್ಯಭಾಷೆ ಕಾವ್ಯ, ಕಥೆ, ನಾಟಕಗಳಲ್ಲಿ ತನ್ನನ್ನು ಅಭಿವ್ಯಕ್ತಿಸಿಕೊಂಡಂತೆ ಶಾಸ್ತ್ರದ ಕಡೆಗೆ ಗಮನ ಹರಿಸಿಯೇ ಇಲ್ಲ. ಶಾಸ್ತ್ರಜ್ಞಾನವನ್ನೆಲ್ಲಾ ಸಂಸ್ಕೃತದಲ್ಲೇ ಸಂಗ್ರಹಗೊಂಡು ಅಗತ್ಯ ಬಿದ್ದಾಗ ಉಭಯ ಭಾಷಾ ಪಂಡಿತರಿಂದ ಪ್ರಯೋಜನ ಪಡೆದಿವೆ. ಇಷ್ಟಾಗಿ ಶಾಸ್ತ್ರಜ್ಞಾನವೇನೂ ನಿತ್ಯದ ಅಗತ್ಯವಲ್ಲವಾದ್ದರಿಂದ ಬಹುಶಃ ಆ ಕಡೆಗೆ ನಾವು ಗಮನ ಹರಿಸಿಲ್ಲವೆಂದು ತೋರುತ್ತದೆ. ಕಾವ್ಯ, ನಾಟಕಗಳ ಭಾಷೆ ಎಲ್ಲರ ನೆನಪು ಕನಸುಗಳನ್ನು ಅವಲಂಬಿಸಿದಂತೆ ಶಾಸ್ತ್ರಜ್ಞಾನವನ್ನು ಅವಲಂಬಿಸಿಲ್ಲ. ಆದರೆ ಬ್ರಿಟಿಷರು ಪರಿಚಯಿಸಿದ ಶಾಸ್ತ್ರಜ್ಞಾನ ದಿನನಿತ್ಯ ಉಪಯೋಗದ್ದು ಎಂದು ಖಾತ್ರಿಯಾದುದರಿಂದ, ಅದನ್ನು ಈಗ ಹೊಸದಾಗಿ ಕಲಿಯಬೇಕಾಯಿತು. ಈ ಹೊಸ ವಿಜ್ಞಾನ ತನ್ನ ಪರಿವಾರ ಸಮೇತ, ಅಂದರೆ ಶಿಕ್ಷಣ ಕಲಿಸುವ ವಿಧಾನ ಹಾಗೂ ಪ್ರಯೋಗಾಲಯ ಇವುಗಳ ಸಮೇತ ಬಂದಿತು. ಹೀಗೆ ದೊರೆತ ಜ್ಞಾನ ಅಮೂರ್ತವಾದುದಲ್ಲ. ದೊರೆತ ತಿಳುವಳಿಕೆಯನ್ನು ಪ್ರಯೋಗಾಲಯದಲ್ಲಿ ಪ್ರಯೋಗಿಸಿ ಪರಿಣಾಮವನ್ನು ಅಲ್ಲೇ ಕಣ್ಣೆದುರಲ್ಲೇ ಕಾಣುವಂತಾದುದು – ಅದರ ಆಕರ್ಷಣೆಯನ್ನು ಹೆಚ್ಚಿಸಿತು. ಕ್ರಾಂತಿಯಂತೆ ಜರುಗಿದ ಈ ಶಿಕ್ಷಣಕ್ಕೆ ನಾವು ಬಹುಬೇಗ ಒಗ್ಗಿ ಹೋದೆವು. ನಮ್ಮಲ್ಲಿ ಸಿಕ್ಕುವ ಇಂಗ್ಲಿಷ್ ವಿದ್ಯೆಗಿಂತ ಇನ್ನೂ ಹೆಚ್ಚಿನ ವಿದ್ಯೆ ಇಂಗ್ಲೆಂಡಿನಲ್ಲಿದೆ ಎಂದಾಗ ಗಾಂಧೀಜಿ, ನೆಹರೂ, ಅಂಬೇಡ್ಕರ್ ಮುಂತಾದವರು ಅಲ್ಲಿಗೂ ಹೋಗಿ ಬ್ಯಾರಿಸ್ಟರುಗಳಾಗಿ ಹಿಂದಿರುಗಿದ ಕತೆ ನಮಗೆ ಗೊತ್ತೇ ಇದೆ. ಅದನ್ನೇ ಇಲ್ಲಿ ಮುಂದುವರೆಸಿ ಆಕ್ಸಫರ್ಡ್ ಮಾದರಿಯ ಕಾಲೇಜು ವಿಶ್ವವಿದ್ಯಾಲಯಗಳ ಕಟ್ಟಡಗಳೂ ಬಂದವು. ಕರ್ನಾಟಕ ಕಾಲೇಜಿನ ಕಟ್ಟಡ ನಮ್ಮ ಕಣ್ಣೆದುರಿನಲ್ಲೇ ಇದೆ. ಆದರೆ ಇಂಗ್ಲಿಷ್ ಸಾಹಿತ್ಯವನ್ನು ಸ್ಥಳೀಕರಿಸಿಕೊಂಡಂತೆ ವಿಜ್ಞಾನ ಶಿಕ್ಷಣವನ್ನು ನಾವು ಸ್ಥಳೀಕರಿಸಲಿಲ್ಲ. ನಮ್ಮ ದೇಶದ ಎಲ್ಲಾ ದೇಶೀ ಭಾಷೆಗಳ ದೌರ್ಬಲ್ಯವೂ ಇದೇ ಆಗಿದೆ.
ಸದರಿ ದೌರ್ಬಲ್ಯವನ್ನು ಮೀರುವ ಪ್ರಯತ್ನ ಮಾಡಿ ನಮ್ಮ ಭಾಷೆಗೆ ಮಾರ್ಗದರ್ಶನ ಮಾಡಿದ ಇಬ್ಬರು ದಾರ್ಶನಿಕರನ್ನು ನಾವು ನೆನೆಯಲೇ ಬೇಕು; ಒಬ್ಬರು ಶಿವರಾಮ ಕಾರಂತರು, ಇನ್ನೊಬ್ಬರು ಕುವೆಂಪು ಅವರು. ಶಿವರಾಮ ಕಾರಂತರು ಕನ್ನಡದ ಮೂಲಕ ವಿಜ್ಞಾನದ ತಿಳುವಳಿಕೆ ಸಾಧ್ಯವೆಂದು, ಅದು ನಮ್ಮ ಇಂದಿನ ಅಗತ್ಯವೆಂದು ತೋರಿಸಲು ವಿಜ್ಞಾನ ಪ್ರಪಂಚ ಬರೆದರು. ಹಾಗೆಂದೇ ಕುವೆಂಪು ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಅವರ ವಿಜ್ಞಾನದ ತಿಳುವಳಿಕೆಯನ್ನು ಜನಸಾಮಾನ್ಯರಿಗೆ, ಕನ್ನಡ ಭಾಷೆಯಲ್ಲಿ ತಿಳಿಸಬೇಕೆಂದು ಹಳ್ಳಿಗಳಲ್ಲಿ ಅವರ ಭಾಷಣಗಳನ್ನು ಏರ್ಪಡಿಸಿದರು. ಹಾಗೂ ಆ ಭಾಷಣಗಳನ್ನು ಬರೆಸಿ ಚಿಕ್ಕ ಪುಸ್ತಿಕೆಗಳಾಗಿ ಪ್ರಕಟಿಸಿ ವಿಜ್ಞಾನದ ಪ್ರಚಾರ ಕಾರ್ಯ ಸುರುಮಾಡಿದರು. ಮೈಸೂರು ವಿಶ್ವವಿದ್ಯಾಲಯದ ಈ ನಾಲ್ಕಾಣೆ ಮಾಲೆ ಎಷ್ಟು ಜನಪ್ರಿಯವಾಯಿತೆಂದರೆ ಈ ಪುಸ್ತಿಕೆಗಳನ್ನು ಮನೆಯಲ್ಲಿಟ್ಟುಕೊಳ್ಳುವುದೇ ಒಂದು ಘನತೆಯಾಯಿತು. ಇದೇ ಹುರುಪಿನಲ್ಲಿ ನಮ್ಮ ಪ್ರಾಧ್ಯಾಪಕರು ವಿಜ್ಞಾನವನ್ನು ಶಾಲೆ ಕಾಲೇಜುಗಳಲ್ಲಿ, ಕನ್ನಡದಲ್ಲಿ ಬೋಧನೆ ಮಾಡಿದ್ದರೆ ಇವತ್ತಿನ ನಮ್ಮ ಭಾಷಾ ಸಮಸ್ಯೆ ಇರುತ್ತಿರಲಿಲ್ಲ.
ಇಂಥದೇ ಒಂದು ಸಣ್ಣ ಪ್ರಯೋಗವನ್ನು ನಾನು ಕುಲಪತಿಯಾಗಿದ್ದಾಗ ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರು ಮಾಡಿದೆವು. ಅಂದಿನ ಪಿ.ಯು. ವಿಜ್ಞಾನದ ನಾಲ್ಕು ಪಠ್ಯಗಳನ್ನು ಕನ್ನಡಕ್ಕೆ ಅನುವಾದಿಸಿ ನಾಡಿನಾದ್ಯಂತ ಬಿಡುಗಡೆ ಮಾಡಿದೆವು. ಈ ಯೋಜನೆ ಎಷ್ಟು ಜನಪ್ರಿಯವಾಯಿತೆಂದರೆ ಲಕ್ಷಾಂತರ ಪ್ರತಿಗಳು ಮಾರಾಟವಾಗಿ ಆ ವರ್ಷಗಳಲ್ಲಿ ಹಳ್ಳಿಗಾಡಿನ ಕಾಲೇಜುಗಳ ಪರೀಕ್ಷೆಯ ಫಲಿತಾಂಶ ಅತ್ಯುತ್ತಮವಾಗಿತ್ತೆಂದು ಅಂದಿನ ಶಿಕ್ಷಣಾಧಿಕಾರಿಗಳೇ ಹೇಳಿದರು. ಸ್ವಯಂ ಶಿವರಾಮ ಕಾರಂತರು ಕೂಡ ನಮ್ಮ ಈ ಯೋಜನೆಯನ್ನು ಮೆಚ್ಚಿಕೊಂಡರು.ಅಂದರೆ ಮಕ್ಕಳು ಈವರೆಗೆ ಇಂಗ್ಲಿಷ್ ಪಠ್ಯಗಳನ್ನು ಕಂಠಪಾಠ ಮಾಡಿ ಉತ್ತರಿಸುತ್ತಿದ್ದರು. ಈಗ ಕನ್ನಡದಲ್ಲಿ ವಿಷಯ ತಿಳಿದುಕೊಂಡು ಇಂಗ್ಲಿಷಿನಲ್ಲಿ ಉತ್ತರ ಬರೆದರು. ಮೊದಲನೆಯದು ಕಂಠಪಾಠದ ಪರೀಕ್ಷೆ, ಎರಡನೆಯದು ವಿಷಯ ತಿಳಿದುದರ ಪರೀಕ್ಷೆ. ಈಗಲೂ ನಾನು ಹೇಳುವುದೇನೆಂದರೆ ವಿಜ್ಞಾನದ ಯಾವುದೇ ಪಠ್ಯವಿರಲಿ ಅದನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟರೆ ವಿದ್ಯಾರ್ಥಿಗಳಿಗೆ ಖಂಡಿತ ಸಹಾಯವಾಗುತ್ತದೆ. ಆದರೆ ಯಾವಾಗ ವಿಜ್ಞಾನದ ಶಿಕ್ಷಣಕ್ಕೆ ಕನ್ನಡದ ಆಸರೆ ಇಲ್ಲವಾಯಿತೋ ಆಗಲೇ ಇಂಗ್ಲಿಷ್ ನಮ್ಮ ಶಿಕ್ಷಣದ ಅವಿಭಾಜ್ಯ ಅಂಗವಾಯಿತು. ಈಗ ಕನ್ನಡ ಉಳಿಯುವ ಬಗ್ಗೆಯೇ ಅನುಮಾನ ಬರುವಷ್ಟರ ಮಟ್ಟಿಗೆ ಇಂಗ್ಲಿಷ್ನ ವ್ಯಾಪ್ತಿ ಹೆಚ್ಚಿದೆ.
ಒಂದು ರಾಜ್ಯದ ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ್ದು. ಇದನ್ನರಿತು ತನ್ನ ರಾಜ್ಯದ ಪ್ರಜೆಗಳಿಗೆ ಎಂಥ ಶಿಕ್ಷಣ ಕೊಡಬೇಕೆಂದು ನಿರ್ಧರಿಸುವ ಕರ್ತವ್ಯ ಮತ್ತು ಅಧಿಕಾರ ಸರಕಾರದ್ದು. ಕನ್ನಡವೇ ನಮ್ಮೆಲ್ಲ ದೈನಿಕ ವ್ಯವಹಾರಕ್ಕೆ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಕಾಸಕ್ಕೆ ಬೇಕಾದ್ದು. ಸರಕಾರವಾಗಲಿ, ಶಿಕ್ಷಣ ಮತ್ತು ಸಂಸ್ಕೃತಿ ಸಂಸ್ಥೆಗಳಾಗಲಿ ವ್ಯಾಪಾರ ವಾಣಿಜ್ಯ ವ್ಯವಹಾರಗಳಲ್ಲಿ ಕೂಡ ಕನ್ನಡ ಭಾಷೆಗೆ ಮೊದಲ ಆದ್ಯತೆಯ ಸ್ಥಾನ ಕೊಡಬೇಕು. ರಾಜ್ಯಭಾಷೆಯ ವಿಚಾರದಲ್ಲಿ ಎಷ್ಟು ಶ್ರಮಿಸಿದರೂ ಸಾಲದೆಂದು, ಎಷ್ಟು ಪ್ರೋತ್ಸಾಹ ಕೊಟ್ಟರೂ ಅದೆಂದಿಗೂ ಅತಿರೇಕ ಎನ್ನಿಸಿಕೊಳ್ಳಲಾರದೆಂದು ಕುವೆಂಪು ಅವರೇ ಹೇಳಿದ್ದಾರೆ. “ಪರಭಾಷೆಯ ಮೂಲಕದ ಶಿಕ್ಷಣ ನಮ್ಮ ಮಕ್ಕಳ ಬುದ್ಧಿಶಕ್ತಿಯನ್ನು ಬೆಂಡು ಮಾಡಿದೆ. ಅವರ ನರಗಳನ್ನು ದುರ್ಬಲಗೊಳಿಸಿದೆ. ಅವರನ್ನು ಬಾಯಿಪಾಟ ಮಾಡುವ ಗಿಳಿಗಳನ್ನಾಗಿ ಮಾಡಿದೆ. ಪ್ರತಿಭಾನ್ವಿತ ಸೃಷ್ಟಿಕಾರ್ಯಕ್ಕೆ ಅನರ್ಹರನ್ನಾಗಿ ಮಾಡಿದೆ.” ಎಂದು ಗಾಂಧೀಜಿ ಹೇಳಿದ್ದರು. ಅಲ್ಲದೆ ಈ ದೇಶ ಸ್ವಂತಂತ್ರವಾದ ಕೂಡಲೇ ಶಿಕ್ಷಣ ಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗಿ ಉಳಿಯುವುದಿಲ್ಲ ಎಂದೂ ಗಾಂಧೀಜಿ ಹೇಳಿದ್ದರು. ಆದರೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದ ಮೇಲೂ ನಮ್ಮ ದೇಶದ ಶಿಕ್ಷಣದ ಸ್ಥಿತಿ ಹ್ಯಾಗಿದೆ? ಪ್ರಾಥಮಿಕ ಶಿಕ್ಷಣದ ಆರಂಭದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳು ಸುರುವಾಗಿವೆ.
ಈ ಮಧ್ಯೆ ನಾಡಿನ ನದಿಗಳಲ್ಲಿ ಬೇಕಾದಷ್ಟು ನೀರು ಹರಿಯಿತು. ಶಾಲೆಗಳಲ್ಲಿ ಮಾತೃಭಾಷೆ, ರಾಜ್ಯಭಾಷೆ ಮತ್ತು ಕಲಿಕೆಯ ಭಾಷೆ ಯಾವುದಾಗಬೇಕೆಂದು ಜನರು, ಶಿಕ್ಷಣ ತಜ್ಞರು, ಗೋಕಾಕ ವರದಿ ಇತ್ಯಾದಿಗಳಾಗಿ ಕೊನೆಗೆ ನ್ಯಾಯಾಲಯದ ಮೆಟ್ಟಿಲನ್ನೂ ಏರಿ ಅಂತೂ ತೀರ್ಮಾನ ಹೊರಬಿದ್ದಾಗ ಕನ್ನಡ ಭಾಷೆಯ ಕುತ್ತಿಗೆಗೇ ಸಂಕಟ ಬಂದುದು ಗೊತ್ತಾಯಿತು. ಜನಪ್ರತಿನಿಧಿಗಳು, ಶಾಸಕರು ನಾಡಿನ ಮಕ್ಕಳ ಬಗ್ಗೆ ಅಪಾರವಾದ ಆಸಕ್ತಿ ತಳೆದರು; ಇಂಗ್ಲಿಷು ಅನ್ನದ ಭಾಷೆ. ಇಂಗ್ಲಿಷಿನಲ್ಲಿ ಓದಿದವರು ವಿಶಾಲ ಪ್ರಪಂಚದ ನಾಗರಿಕರಾಗುವರೆಂದು ಪ್ರಪಂಚದ ಯಾವುದೇ ಭಾಗದಲ್ಲಿ ನೌಕರಿ ಮಾಡಲು ಅರ್ಹರಾಗುವರೆಂದು, ಅವರ ಚಿಂತನೆ ವಿಶ್ವವ್ಯಾಪಿಯಾಗುವುದೆಂದು ಪ್ರಚಾರ ಮಾಡಿ ಆಂಗ್ಲ ಮಾಧ್ಯಮದ ಶಾಲೆಗಳನ್ನು ಸ್ಥಾಪಿಸಿ ಆ ಕಡೆಗೆ ಮಕ್ಕಳನ್ನು ಸೆಳೆಯತೊಡಗಿದರು.
ಈಗ ಪ್ರತಿವರ್ಷ ಸಾವಿರಾರು ಕನ್ನಡ ಮಾಧ್ಯಮದ ಶಾಲೆಗಳು ಮುಚ್ಚಿ ಇಂಗ್ಲಿಷ್ ಮಾಧ್ಯಮದ ಖಾಸಗಿ ಸ್ಕೂಲುಗಳು ಹಳ್ಳಿ ಹಳ್ಳಿಗಳಲ್ಲಿ ಏಳತೊಡಗಿದವು. ಮತ್ತು ಇಂಥ ಸ್ಕೂಲುಗಳ ಆಡಳಿತ ಮಂಡಳಿಗಳಲ್ಲಿ ರಾಜಕಾರಣಿಗಳು ಜನಪ್ರತಿನಿಧಿಗಳೇ ಇದ್ದಾರೆ! ಈ ಎಲ್ಲ ಸಂಸ್ಥೆಗಳಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗಿ ಶಿಕ್ಷಣವೊಂದು ವ್ಯಾಪಾರವಾಗಿ ಪರಿವರ್ತನೆ ಹೊಂದಿವೆ. ನ್ಯಾಯವಾಗಿ ಸರಕಾರೀ ಕನ್ನಡ ಶಾಲೆಗಳಲ್ಲಿ ಸೌಕರ್ಯಗಳು ಹೆಚ್ಚಿ ಮಕ್ಕಳಿಗೆ ಬೆಂಚುಗಳು, ಕಂಪ್ಯೂಟರ್ಗಳು ಬರಬೇಕಿತ್ತು. ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯಗಳಿರಬೇಕಿತ್ತು. ಆದರೆ ಅಲ್ಲಿಯ ಮಕ್ಕಳನ್ನು ನೋಡಿದರೆ ನಿರ್ಗತಿಕರ ಮಕ್ಕಳಂತೆ ಕಾಣುತ್ತಾರೆ. ಸರಕಾರದ ಕನ್ನಡ ಶಾಲೆಗಳು ಮುಚ್ಚಿ ಖಾಸಗಿ ಇಂಗ್ಲಿಷ್ ಸ್ಕೂಲುಗಳು ಎದ್ದ ಸಂಖ್ಯೆ ನೋಡಿರಿ: ೨೦೧೩-೧೪ ರಿಂದ ೨೦೧೭-೧೮ರ ವರೆಗೆ ಅಂದರೆ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ೧೩ ಲಕ್ಷ ಮಕ್ಕಳು ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳಲ್ಲಿ ಕಡಿಮೆ ಆಗಿ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಸುಮಾರು ೧೫ ಲಕ್ಷ ಮಕ್ಕಳು ಹೆಚ್ಚಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಬಂದ ನಂತರ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಅಧಿಕೃತವಾಗಿ ಆಂಗ್ಲ ಮಾಧ್ಯಮವಾಗಿ ಪರಿವರ್ತನೆ ಹೊಂದಿವೆ! ಸಾಲದ್ದಕ್ಕೆ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಮಕ್ಕಳನ್ನು ಸರಕಾರವೇ ಫೀಜು ಕೊಟ್ಟು ಆರ್.ಟಿ.ಇ. (ಶಿಕ್ಷಣ ಹಕ್ಕು ಕಾಯ್ದೆಯಂತೆ) ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದೆ. ೨೦೧೮-೧೯ರ ಅವಧಿಯಲ್ಲಂತೂ ಸುಮಾರು ಮೂರುವರೆ ಲಕ್ಷ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರ್ಪಡೆಯಾದ ಭಯಾನಕ ಸುದ್ದಿ. “ನಿಜವಾಗಿ ಈಗಿಂದೀಗ ಇಂಗ್ಲಿಷಿನಿಂದ ರಾಜ್ಯಭಾಷೆಗೆ ಮಾಧ್ಯಮ ಪಲ್ಲಟಗೊಳ್ಳುವುದು ಶಿಕ್ಷಣದ ದೃಷ್ಟಿಯಿಂದ ಅತ್ಯಗತ್ಯವಾಗಿದೆ” ಎಂದು ಪಂಡಿತರು ಹೇಳಿದ್ದಾರೆ.
ಇದ್ಯಾವುದೂ ತನ್ನ ಗಮನಕ್ಕೆ ಬಂದಿಲ್ಲವೆಂಬಂತೆ ಸರಕಾರ ಜಾಣ ಮರೆವನ್ನು ಅಭಿನಯಿಸುತ್ತಿದೆ. ಮಾಧ್ಯಮದ ಎದುರಿಗೆ ಪ್ರಶ್ನಿಸಿದರೆ ಅಕಾಡೆಮಿ ಬೇಕೇ? ಪ್ರಾಧಿಕಾರ ಬೇಕೇ? ಕಾವಲು ಸಮಿತಿ ಬೇಕೇ ಎಂದು ಕೇಳಿ, ಕೊನೆಗೆ ತಪ್ಪಿತಸ್ಥರನ್ನು ಶಿಕ್ಷಿಸಲು ಕಿಂಚಿತ್ತೂ ಅಧಿಕಾರವಿಲ್ಲದ ಒಂದು ಸಂಸ್ಥೆಯನ್ನು ಸ್ಥಾಪಿಸಿ ಪಾರಾಗುತ್ತಿದೆ. ಹೀಗಾದಾಗ ಕನ್ನಡದ ಬಗ್ಗೆ ಯಾವುದಾದರೂ ಆಸೆ ಉಳಿಯುವುದು ಸಾಧ್ಯವೇ?
ಇಂಗ್ಲಿಷ್ ಭಾಷೆ ಅನೇಕ ಪ್ರಲೋಭನೆಗಳನ್ನು ಒಡ್ಡಿದ ಭಾಷೆ. ಇಂದಿಗೂ ಆ ಭಾಷೆ ಕಲಿಯದವನು ವಿದ್ಯಾವಂತನೇ ಅಲ್ಲ. ಯಾವುದೇ ಭಾಷೆ ಮನುಷ್ಯನ ತಿಳುವಳಿಕೆಯನ್ನು ತನ್ನ ರೀತಿಯಲ್ಲಿ ತಿದ್ದುತ್ತದೆ. ಇಂಗ್ಲಿಷ್ ಹಾಗೇ ಮಾಡಿತು.ನಮ್ಮ ಸಮಾಜ ತ್ವರಿತಗತಿಯಲ್ಲಿ ಬದಲಾವಣೆ ಹೊಂದುತ್ತಿರುವುದಕ್ಕೆ ಈ ಮಾಧ್ಯಮ ಕಾರಣವಾಗಿದೆ. ಇಂಗ್ಲಿಷ್ ಕಲಿತ ಮೇಲೆ ನಾವು ನಮ್ಮ ಇತಿಹಾಸದ ಕಲ್ಪನೆಯನ್ನು ರೂಪಿಸಿಕೊಂಡೆವು. ಈ ಐತಿಹಾಸಿಕ ಪ್ರಜ್ಞೆಯಿಂದ ನಮ್ಮ ಹಳೆಯ ಜ್ಞಾನಶಾಸ್ತ್ರವನ್ನು ರೂಪಿಸಿಕೊಂಡೆವು. ನಮ್ಮಲ್ಲಿರುವ ತರತಮ ಭಾವನೆಗಳಿಗೆ, ಮೌಲ್ಯಗಳಿಗೆ, ಕೀಳರಿಮೆಗೆ, ಸರಿತಪ್ಪುಗಳ ಕಲ್ಪನೆಗಳಿಗೆ ಈ ಭಾಷೆಯೇ ಕಾರಣವೆಂದರೂ ತಪ್ಪಿಲ್ಲ. ಇದರ ಪರಿಣಾಮವಾಗಿ ನಮ್ಮಲ್ಲಿದ್ದ ವಿಜ್ಞಾನಗಳೆಲ್ಲ ಗೊಡ್ಡು ಪುರಾಣಗಳಾದವು. ಆಯುರ್ವೇದದಂಥ ವಿಜ್ಞಾನ, ದೇವಸ್ಥಾನ ರಚನೆಯಂಥ ನಮ್ಮ ಇಂಜಿನಿಯರಿAಗ್ ಕೂಡ ಗೊಡ್ಡು ಪುರಾಣಗಳಾಗಿ ವಿಶ್ವಾಸ ಕಳೆದುಕೊಂಡವು. ನೆಲ, ಹೊಲ ಕನ್ನಡವಾಗಿದ್ದರೂ ಕೃಷಿ ಶಾಸ್ತ್ರ ಕೂಡ ಇಂಗ್ಲಿಷಿನಲ್ಲಿ ರೂಪುಗೊಳ್ಳುತ್ತಿರುವ ವಿಪರ್ಯಾಸ ನಮ್ಮದಾಗಿದೆ.
ಈ ವಿಪರ್ಯಾಸವನ್ನು ತಡೆಗಟ್ಟುವುದಕ್ಕೆ ನನಗೆ ತೋರುತ್ತಿರುವ ದಾರಿ ಒಂದೇ ಒಂದು: ೧) ೧ ರಿಂದ ೭ನೇ ತರಗತಿಯವರೆಗಿನ ಕನ್ನಡ ಪ್ರಾಥಮಿಕ ಶಿಕ್ಷಣವನ್ನು (ಪ್ರಾಥಮಿಕ ಪೂರ್ವ ತರಗತಿಯೊಂದಿಗೆ) ರಾಷ್ಟ್ರೀಕರಣ ಮಾಡಬೇಕು; ೨) ತುರ್ತಾಗಿ ತೀವ್ರವಾಗಿ ಸರಕಾರಿ ಶಾಲೆಗಳ ಸುಧಾರೀಕರಣ ನಡೆಯಬೇಕು; ೩) ಅನಂತರದ ೮ ನೆಯ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು. ಇದಾಗದಿದ್ದಲ್ಲಿ ರಾಜ್ಯಭಾಷೆಗಳಿಗೆ ಭವಿಷ್ಯವಿಲ್ಲ. ಖಂಡಿತ ಭವಿಷ್ಯವಿಲ್ಲ.
ತಾಯಿ ನುಡಿಯಲ್ಲಿ ಶಿಕ್ಷಣ ಕೊಡಬೇಕೆಂಬ ಸಿದ್ಧಾಂತ ಈಗ ಸರ್ವಸಮ್ಮತವಾಗಿದೆ, ನಮ್ಮ ಖಾಸಗಿ ಶಾಲೆ ನಡೆಸುವವರನ್ನು ಹೊರತು ಪಡಿಸಿ ಶಿಕ್ಷಣ ತಜ್ಞರೆಲ್ಲ ಸರ್ವಾನುಮತದಿಂದ ಒಪ್ಪುವ ಮಾತಿದು. ಆದರೆ ಅದಕ್ಕೆ ಅಡಚಣೆಗಳಿವೆಯೆಂದೂ ಹಿಂಜರಿಯುತ್ತಾರೆ. ಕನ್ನಡ ಸಾಹಿತ್ಯವನ್ನು ಕಲಿಸಬಹುದು, ಸಂಸ್ಕೃತ ಸಾಹಿತ್ಯವನ್ನು ಕಲಿಸಬಹುದು. ಆದರೆ ಮಹತ್ವದ ವಿಷಯಗಳಾದ ಭೌತಶಾಸ್ತ್ರ , ಗಣಿತ, ವೈದ್ಯಶಾಸ್ತ್ರ ತಂತ್ರಜ್ಞಾನ – ಇವನ್ನು ಕನ್ನಡದಲ್ಲಿ ಕಲಿಸುವುದು ಸಾಧ್ಯವಿಲ್ಲವೆಂದೇ ಎಲ್ಲರೂ ಹೇಳುತ್ತಾರೆ. ನಾವು ಕಲಿಸಬೇಕಾದ ಶಾಸ್ತ್ರಜ್ಞಾನ ವೆಲ್ಲ ಇಂಗ್ಲಿಷಿನಲ್ಲಿ ಲಭ್ಯವಿರುವುದರಿಂದ, ಶಿಕ್ಷಕರೆಲ್ಲ ಇಂಗ್ಲಿಷಿನಲ್ಲಿ ಕಲಿತು ಬಂದವರಾದ್ದರಿಂದ ಇಂಗ್ಲಿಷ್ ಭಾಷೆಯೇ ಇದಕ್ಕೆ ಸರಿಯಾದ ಮಾಧ್ಯಮವೆಂಬುದನ್ನು ಎಲ್ಲರೂ ದೃಢವಾಗಿ ನಂಬಿಬಿಟ್ಟಿದ್ದಾರೆ. ಇಂಗ್ಲಿಷ್ ಅಂತರಾಷ್ಟ್ರೀಯ ಭಾಷೆಯಾಗಿರುವುದರಿಂದ ಅದು ನಮ್ಮ ಭಾಷೆಯೂ ಹೌದು, ನಮ್ಮ ರಾಷ್ಟ್ರದ ಸಂವಿಧಾನ ಆಂಗ್ಲ ಭಾಷೆಯನ್ನು ಭಾರತೀಯ ಭಾಷೆಯೆಂದು ಗುರುತಿಸಿದೆ. ಈ ಭಾಷೆ ವಸಾಹತುಶಾಹಿ ಇತಿಹಾಸದ ಒಂದು ಕೊಡುಗೆ ನಿಜ. ಆದರೆ ಇತಿಹಾಸವನ್ನು ಮರೆಯುವದಾದರೂ ಹ್ಯಾಗೆ? ಒಟ್ಟಿನಲ್ಲಿ ಶಿಕ್ಷಣ ಯಶಸ್ವಿಯಾಗಿ ನಡೆದು ಬಿಟ್ಟರೆ, ಭಾವನಾತ್ಮಕ ಕಾರಣಗಳಿಗಾಗಿ ತಾನಾಗಿ ಬಂದಿರುವ ಒಂದು ಭಾಷೆಯನ್ನು ಬಿಟ್ಟುಕೊಡುವುದು ಮೂರ್ಖತನವಾಗಬಹುದು. ನಮ್ಮ ದೇಶ ಉಳಿದ ದೇಶಗಳೊಂದಿಗೆ ಪ್ರಗತಿಪಥದಲ್ಲಿ ನಡೆಯಬೇಕಾದರೆ ಆಂಗ್ಲ ಭಾಷೆ ಅನಿವಾರ್ಯವಾಗುತ್ತದೆ ಎನ್ನುವುದು ಒಂದು ವಾದ. ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿಸಿದರೆ ಐತಿಹಾಸಿಕವಾಗಿ ನಾವು ಹಿಂದುಳಿಯಬಹುದು ಎಂಬ ಭಯವೂ ಕೆಲವರಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಭಾಷೆಯ ವ್ಯಾಮೋಹ ನಮ್ಮನ್ನು ಏನೂ ಯೋಚಿಸದಂತೆ ಮಾಡಿದೆ.
ಯಾಕೆಂದರೆ ವಿದ್ಯೆ ಎಂದರೆ ಇಂಗ್ಲಿಷ್ ಎನ್ನುವ ಸಮೀಕರಣ ನಮ್ಮಲ್ಲಿ ಮೊದಲಿನಿಂದ ಇದೆ. ಈ ವಾದವನ್ನು ಸಮರ್ಥಿಸುವಂತೆ ಅವರು ಸ್ಥಾಪಿಸಿಕೊಟ್ಟ ಸಂಸ್ಥೆಗಳು ಹಾಗೇ ಮುಂದುವರಿದಿವೆ. ಅವರೇ ನಿರ್ಮಿಸಿಕೊಟ್ಟ ಗ್ರಾಮ ತಾಲ್ಲೂಕು ಜಿಲ್ಲೆ, ಪ್ರಾಂತಗಳು, ಪ್ರಾಥಮಿಕ ಮಾಧ್ಯಮಿಕ ಉನ್ನತ ಶಾಲೆ ಕಾಲೇಜು ಕೊನೆಯಲ್ಲಿ ವಿಶ್ವವಿದ್ಯಾಲಯಗಳು – ಇವೆಲ್ಲ ಅವರಿಟ್ಟ ಕ್ರಮದಲ್ಲೇ ಮುಂದುವರಿದಿವೆ. ಬ್ರಿಟಿಷರು ಬಿಟ್ಟು ಹೋದ ಆಡಳಿತ ವ್ಯವಸ್ಥೆ, ನ್ಯಾಯ ವ್ಯವಸ್ಥೆ, ಅಂಚೆ ತಂತಿಯ ವ್ಯವಸ್ಥೆ, ವಿಶ್ವವಿದ್ಯಾಲಯಗಳ ವ್ಯವಸ್ಥೆ ಇದೆಲ್ಲ ಪರಸ್ಪರ ಅಂಟಿಕೊಂಡೇ ಮುಂದುವರಿಯುತ್ತಿವೆ. ಆದ್ದರಿಂದಲೇ ಈಗಲೂ ನಮ್ಮ ಹುಡುಗರು ಕಲಿಯುವುದು Light, Electricity ಮತ್ತು sound ನ್ನೇ ಶಿವಾಯಿ ಬೆಳಕು ವಿದ್ಯುತ್ ಮತ್ತು ಧ್ವನಿಯನ್ನಲ್ಲ.
ಹಾಗಿದ್ದರೆ ಕನ್ನಡ ಭಾಷೆಗೆ ವಿಜ್ಞಾನದ ಮಾಧ್ಯಮವಾಗುವ ಶಕ್ತಿ ಇಲ್ಲವೆ? ಅಂದರೆ ಕನ್ನಡ ಪರ ಇದ್ದವರು ಹೇಳುವ ಉತ್ತರ: ಕನ್ನಡ ಭಾಷೆಗೆ ಒಂದೂವರೆ ಸಾವಿರ ವರ್ಷಗಳ ಸಾಹಿತ್ಯ ಪರಂಪರೆ ಇದೆ! ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ಬಗ್ಗೆ ಎರಡು ಮಾತಿಲ್ಲ ನಿಜ. ಆದರೆ ಪ್ರಾಚೀನ ಕಾಲದಿಂದಲೂ ಸಂಸ್ಕೃತವೇ ನಮ್ಮ ಶಾಸ್ತ್ರಗ್ರಂಥಗಳಿಗೆ ತಾಯಿ. ಪಾಣಿನಿಯ ಅಷ್ಟಾಧ್ಯಾಯಿ, ಪತಂಜಲಿಯ ಮಹಾಭಾಷ್ಯ, ಭರತನ ನಾಟ್ಯಶಾಸ್ತ್ರ, ಕೌಟಿಲ್ಯನ ಅರ್ಥಶಾಸ್ತ್ರದಂಥ ಕೃತಿಗಳು ಒಂದಾದರೂ ಶಾಸ್ತ್ರಗ್ರಂಥ ಕನ್ನಡದಲ್ಲಿ ಅಥವಾ ದೇಶೀ ಭಾಷೆಗಳಲ್ಲಿ ಇಲ್ಲವಲ್ಲ! ಕನ್ನಡಕ್ಕೆ ಅದ್ಭುತವಾದ ಅಭಿವ್ಯಕ್ತಿ ಸಾಮರ್ಥ್ಯವನ್ನು ಕೊಟ್ಟವರು ವಚನಕಾರರು. ಆದರೂ ಆಡಳಿತ, ಶಿಕ್ಷಣ ಹಾಗೂ ಬೌದ್ಧಿಕ ಚಟುವಟಿಕೆಗಳ ಭಾಷೆ ಇಂಗ್ಲಿಷ್, ಪೂಜೆ ಪುನಸ್ಕಾರಗಳ ಭಾಷೆ ಸಂಸ್ಕೃತ, ಕನ್ನಡ ಮಾತ್ರ ಸಾಹಿತ್ಯದ ಭಾಷೆಯಾಗಿದೆ. ಇದರಿಂದಾಗಿ ಶಿಕ್ಷಣ ಮಾಧ್ಯಮವಾಗಲು ಕನ್ನಡ ಇನ್ನೂ ಹಿಂಜರಿಯುತ್ತಿದೆ. ಈಗ ಕನ್ನಡಕ್ಕೆ ನೆರವಾಗಬಲ್ಲ ಪ್ರಮುಖ ವ್ಯಕ್ತಿ ಮತ್ತು ಶಕ್ತಿ – ಶಿಕ್ಷಕ ಮಾತ್ರ!
ಸುದೈವದಿಂದ ಈ ಕಾಲದಲ್ಲಿ ಕೂಡ ನಮ್ಮ ದೇಶದ ವಿದ್ಯಾರ್ಥಿ-ಶಿಕ್ಷಕರ ಸಂಬಂಧ ಹಾರ್ದಿಕವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರ ಮೇಲಿನ ತಮ್ಮ ನಂಬಿಕೆಯನ್ನು ಇನ್ನೂ ಕಳೆದುಕೊಂಡಿಲ್ಲ. ಕನ್ನಡಕ್ಕೆ ಶಕ್ತಿ ತುಂಬುವಲ್ಲಿ ನಮ್ಮ ಶಿಕ್ಷಕರೆಲ್ಲ ಒಟ್ಟಾಗಿ ವಿಜ್ಞಾನದ ಪುಸ್ತಕ ಯಾವುದೇ ಭಾಷೆಯಲ್ಲಿರಲಿ ಅದನ್ನು ಕನ್ನಡದಲ್ಲಿ ಕಲಿಸುವ ಸಂಕಲ್ಪಕ್ಕೆ ಬದ್ಧರಾಗಬೇಕು. ಒಂದು ಕಾಲಕ್ಕೆ ನಮ್ಮ ಹಳೆಯ ಪಾಠಶಾಲೆಗಳಲ್ಲಿ ಸಂಸ್ಕೃತ ಗ್ರಂಥಗಳನ್ನು ಹೀಗೆಯೇ ಕಲಿಸಲಾಗುತ್ತಿತ್ತು. ಇದು ಮಾತ್ರ ನಾವು ಊಹಿಸಿದಷ್ಟು ಕಷ್ಟದ ಕೆಲಸವಲ್ಲ. ಒಂದು ಭಾಷೆಯಲ್ಲಿ ಪರಿಣತನಾದವನು ಯಾವ ಭಾಷೆಯನ್ನೂ ಬೇಕಾದಾಗ ಕಲಿಯಬಹುದು. ನಮ್ಮ ಶಿಕ್ಷಕರು ತಾವು ಬೇರೆ ಭಾಷೆಗಳನ್ನು ಕಲಿತು ಅಲ್ಲಿ ದೊರೆತದ್ದನ್ನು ಕನ್ನಡದಲ್ಲಿ ತಿಳಿಸುವ ಸಾಮರ್ಥ್ಯವನ್ನು ಪಡೆಯಬೇಕು. ಯಾಕೆಂದರೆ ಕನ್ನಡದಿಂದಲೇ ನಮ್ಮ ವಿದ್ಯಾರ್ಥಿಗಳ ತಿಳುವಳಿಕೆ ಅರಳಬೇಕಾಗಿದೆ. ಭಾಷೆ ಕೇವಲ ತಿಳುವಳಿಕೆಯ ಆಗರವಲ್ಲ. ಅದು ಯೋಚನೆಯ ಪ್ರಭಲವಾದ ಉಪಕರಣವಾಗಿದೆ. ವಿದ್ಯಾರ್ಥಿ ತನ್ನ ಭಾಷೆಯಲ್ಲಿ ಯೋಚಿಸುವುದನ್ನು ಮೊದಲು ಕಲಿಯಬೇಕು.
ಇನ್ನೊಂದು ವಿಚಾರ: ನಾವೆಷ್ಟೇ ಕನ್ನಡದಲ್ಲಿ ಯೋಚನೆ ಮಾಡುತ್ತೇವೆಂದರೂ ಅಣು ವಿಜ್ಞಾನದ ಬಗ್ಗೆ, ಫ್ರಾಯ್ಡ್ ನ ಮನಃಶಾಸ್ತçದ ಬಗ್ಗೆ ಹಾಗೂ ಇನ್ನಿತರೆ ಇಂಥ ಶಾಸ್ತ್ರಗಳ ಬಗ್ಗೆ ಕನ್ನಡದಲ್ಲಿ ಚರ್ಚಿಸುವುದು ಸಾಧ್ಯವಿಲ್ಲ ನಿಜ. ಒಮ್ಮೆಲೆ ಆಧುನಿಕವಾಗಲೆಳಸುವ ಮನುಷ್ಯನಿಗೆ ಇರುವ ಅನೇಕ ಮುಜುಗರಗಳಲ್ಲಿ ಇದೂ ಒಂದು. ಈ ದೃಷ್ಟಿಯಿಂದ ನೋಡಿದಾಗ ಮೈಸೂರು ವಿಶ್ವವಿದ್ಯಾಲಯದ ನಾಲ್ಕಾಣೆ ಪ್ರಚಾರ ಪುಸ್ತಿಕೆಗಳು ನೆನಪಾಗುತ್ತವೆ. ಈ ಚಿಕ್ಕ ಪುಸ್ತಿಕೆಗಳ ಲೇಖಕರು ಕನಿಷ್ಠಪಕ್ಷ ಆ ಪುಸ್ತಿಕೆಗಳ ಮಟ್ಟಿಗಾದರೂ ಕನ್ನಡದಲ್ಲಿ ವಿಚಾರ ಮಾಡುವಂತಾಯಿತು. ಅವರ ವಿಚಾರಗಳಾಗಲಿ, ಸಿದ್ಧಾಂತವಾಗಲಿ ಸ್ವೋಪಜ್ಞವಾಗಿರಲಿಲ್ಲ. ಆದರೆ ಸ್ವೋಪಜ್ಞವಾದ ವೈಚಾರಿಕತೆಯ ಅಭಿವ್ಯಕ್ತಿಗೆ ಒಂದು ಭಾಷೆ ಅಲ್ಲಿ ನಿರ್ಮಾಣವಾಯಿತು! ಇದು ಸಣ್ಣ ಮಾತಲ್ಲ.
ಸಾಹಿತ್ಯವೊಂದರಲ್ಲಿ ಮಾತ್ರ ಭಾಷೆಯ ಸೃಜನಶೀಲವಾದ ಉಪಯೋಗ ವಾಗುತ್ತದೆಂಬ ತಪ್ಪು ಗ್ರಹಿಕೆ ನಮ್ಮಿಂದ ದೂರವಾಗಬೇಕು. ಶಿಕ್ಷಣ ಕೂಡ ಒಂದು ಸೃಜನಶೀಲವಾದ ಕ್ರಿಯೆ, ಇದು ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧ, ವ್ಯವಸಾಯದ ಸಂಬಂಧ. ಶಿಕ್ಷಕ ಹೇಳಿದ್ದನ್ನು ವಿದ್ಯಾರ್ಥಿ ಬರೆದುಕೊಂಡು ಬಾಯಿಪಾಠ ಮಾಡಿ ಪರೀಕ್ಷೆಯ ಹೊತ್ತಿನಲ್ಲಿ ಅದನ್ನು ತಿರುಗಿ ಶಿಕ್ಷಕನಿಗೇ ಮುಟ್ಟಿಸುವುದು ಶಿಕ್ಷಣವಾಗುವುದಿಲ್ಲ. ಶಿಕ್ಷಣವು ಶಾಸ್ತ್ರಕ್ಕಿಂತ ಹೆಚ್ಚಾಗಿ ಒಂದು ಕಲೆ. ಶಿಕ್ಷಕ ನಟನಂತೆ ಒಬ್ಬ ಕ್ರಿಯಾಶೀಲ ಕಲಾವಿದ. ಅವನು ಭಾಷೆಯನ್ನು ಸೃಜನಶೀಲವಾಗಿ ಉಪಯೋಗಿಸುತ್ತಾನೆ. ಅವನ ಭಾಷೆ ವಿದ್ಯೆಯನ್ನು ಸೃಷ್ಟಿಸುತ್ತದೆ. ಶಿಕ್ಷಣದ ಮಾಧ್ಯಮ ಇಂಗ್ಲಿಷಿನಂಥ ಪರಭಾಷೆಯಾದರೆ ಈ ಸೃಜನಶೀಲತೆ ಸಾಧ್ಯವಾಗುವುದಿಲ್ಲ. ಅದಕ್ಕೆ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕು. ಶಿಕ್ಷಕನೊಬ್ಬನ ಸಂಕಲ್ಪದಿಂದ ಮಾತ್ರ ಮಾಧ್ಯಮ ಬದಲಾಗುವುದಿಲ್ಲ. ನಾನು ಮೊದಲೇ ಹೇಳಿದ ಹಾಗೆ ಶಿಕ್ಷಣ ವ್ಯವಸ್ಥೆ ರಾಜ್ಯ ಸರಕಾರದ ಜವಾಬ್ದಾರಿಯಾಗಿರುವುದರಿಂದ ಸರಕಾರವೂ ಮನಸ್ಸು ಮಾಡಬೇಕು. ಜನತೆಯೂ ಅದನ್ನೇ ಬಯಸಬೇಕು. ಈ ಮೂರೂ – ಶಿಕ್ಷಕ, ಸರಕಾರ ಮತ್ತು ಜನ ಸೇರಿದಾಗಲೇ ಕನ್ನಡ ಮಾಧ್ಯಮ ಸುಲಭ ಸಾಧ್ಯ. ಈಗ ಸರಕಾರ ಮೊದಲು ಮುಂದೆ ಬಂದು ತತ್ಕ್ಷಣವೇ ಹಂಗಾಮಿ ಶಿಕ್ಷಕರನ್ನು ಕಾಯಮಾತಿಗೊಳಿಸಬೇಕು. ಶಿಕ್ಷಕರನ್ನು ಅಮಾನವೀಯವಾಗಿ ನಡೆಸಿಕೊಳ್ಳುವುದು ಯಾವ ಸರಕಾರಕ್ಕೂ ಶೋಭೆಯಲ್ಲ.
ಪೂರ್ವ ತಯಾರಿಗಳು
ತಂತ್ರಾಂಶ
“ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಹಾಗಾದಲ್ಲಿ ಯಾವದೇ ಪ್ರಶಸ್ತಿ, ಸರಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳುವಳಿ ಇತ್ಯಾದಿಗಳು ಯಾವವೂ ಆ ಭಾಷೆಯನ್ನು ಉಳಿಸಲಾರವು. ಇದಕ್ಕೆ ಸಂಸ್ಕೃತವೇ ಜ್ವಲಂತ ಉದಾಹರಣೆ. ಈ ದೃಷ್ಟಿಯಿಂದ ಜಾಗತೀಕರಣದ ಈ ಪರ್ವಕಾಲದಲ್ಲಿ ಭಾರತದ ಎಲ್ಲ ದೇಶ ಭಾಷೆಗಳೂ ತುಂಬ ಅಪಾಯಕರ ಸ್ಥಿತಿಯಲ್ಲಿವೆ ಎಂಬುದನ್ನು ನಿಸ್ಸಂಶಯವಾಗಿ ಒಪ್ಪಬಹುದು. ಇದಕ್ಕೆ ಮುಖ್ಯ ಕಾರಣ ಮನುಷ್ಯ ಸಮಾಜದ ಎಲ್ಲ ವಹಿವಾಟುಗಳೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬದಲಾಗುತ್ತಿರುವುದು. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಸರ್ವವ್ಯಾಪಿಯಾಗಿ ಆವರಿಸುತ್ತಿದೆ. ನಾವು ಕಂಪ್ಯೂಟರ್ನಲ್ಲಿ ಇಂಗ್ಲಿಷ್ ಭಾಷೆಯಷ್ಟೇ ಸರ್ವಸಮರ್ಥವಾಗಿ ನಮ್ಮ ಭಾಷೆಯನ್ನು ಬಳಸಲು ಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ” ಎಂದು ಪೂರ್ಣಚಂದ್ರ ತೇಜಸ್ವಿ ಸಾರಿ ಸಾರಿ ಹೇಳಿದ್ದರು. ನಾಡಿನ ಸುಪ್ರಸಿದ್ಧ ವಿಜ್ಞಾನಿ ಡಾ. ರಾಜಾರಾಮಣ್ಣ ಕೂಡ ಇದೇ ಮಾತನ್ನು ಹೇಳಿದ್ದರು.
ಸದರಿ ಸಂದೇಶವನ್ನೇ ಹೊತ್ತುಕೊಂಡು ತೇಜಸ್ವಿ ಮತ್ತು ನಾನು ಅಂದಿನ ಅನೇಕ ಮಂತ್ರಿಗಳನ್ನು ಭೇಟಿಯಾಗಿ ತಂತ್ರಾAಶದ ಅಗತ್ಯವನ್ನು ಹೇಳಿ ಕೂಡಲೇ ಈ ಬಗ್ಗೆ ಸರಕಾರ ಗಮನ ಹರಿಸಬೇಕೆಂದು ಕೇಳಿಕೊಂಡೆವು. ಭೇಟಿಯಾದರ್ಯಾರೂ ನಮ್ಮ ಸಹಾಯಕ್ಕೆ ಬರಲಿಲ್ಲ. ಆಗ ಮುಂದೆ ಬಂದವರು ಸನ್ಮಾನ್ಯ ಯಡಿಯೂರಪ್ಪನವರು ಮತ್ತು ಅಂದಿನ ಸಂಸ್ಕೃತಿ ಇಲಾಖೆಯ ಅಧಿಕಾರಿಯಾಗಿದ್ದ ಡಾ. ಮನು ಬಳಿಗಾರ್ ಅವರು. ಆಗ ಅವರು ಪ್ರೊ. ಚಿದಾನಂದ ಗೌಡರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿ ಅಗತ್ಯಕ್ರಮ ಕೈಗೊಳ್ಳಲು ಹೇಳಿದರು. ಸದರಿ ಸಮಿತಿ ತಂತ್ರಾಂಶದಲ್ಲಿ ಆಗಬೇಕಾದ ಕಾರ್ಯಕ್ರಮಗಳ ಒಂದು ಪಟ್ಟಿ ಮಾಡಿ ಅಂದಿನ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಿಗೆ ಕೊಟ್ಟರು. ಶ್ರೀ ದಯಾನಂದ ಇರೋತನಕ ಅಲ್ಲಿ ನಡೆದ ಒಳ್ಳೆಯ ಕಾರ್ಯಕ್ರಮ ಮುಂದುವರಿಯಿತು. ಅವರು ಬೇರೆ ಇಲಾಖೆಗೆ ಹೋದ ನಂತರ ಯಾರೂ ಆ ಕಡೆಗೆ ಗಮನ ಹರಿಸಲೇ ಇಲ್ಲ.
ಮಾಹಿತಿ ತಂತ್ರಜ್ಞಾನದ ವಿವಿಧ ಅಂಗಗಳಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗೆ ಸರಿಹೊಂದುವಂತೆ ಆಗಾಗ ಸರಕಾರಕ್ಕೆ ಸಲಹೆ ಕೊಡಲು ಒಂದು ತಜ್ಞರ ಸಮಿತಿಯ ಅಗತ್ಯವಿದೆ. ಇದರಲ್ಲಿ ಸಾಫ್ಟ್ವೇರ್ ತಂತ್ರಜ್ಞರು, ಭಾಷಾ ತಜ್ಞರು ಮತ್ತು ಕೆಲವು ಅಧಿಕಾರಿಗಳು ಇರಬೇಕು. ಐ-ಕ್ಯಾನ್ ಈಗ ಕನ್ನಡದ ಜಾಲತಾಣಗಳ ವಿಳಾಸಗಳನ್ನು ಕೊಡುವುದಕ್ಕೆ ಮುಂದಾಗಿದೆ. ಆದರೆ ಅದರಲ್ಲಿ ಕನ್ನಡವನ್ನು ಅಧಿಕೃತವಾಗಿ ಪ್ರತಿನಿಧಿಸುವವರಿಲ್ಲ.
ಕರ್ನಾಟಕ ಸರಕಾರ ತನ್ನ ಅನುದಾನದಲ್ಲಿ ರೂಪುಗೊಳ್ಳುವ ತಂತ್ರಾಂಶಗಳ ಲೈಸೆನ್ಸಿಂಗ್ ಏನಾಗಿರಬೇಕೆಂಬ ಬಗ್ಗೆ ಸ್ಪಷ್ಟವಾದ ನೀತಿ ಹೊಂದಿರಬೇಕು. ಕನ್ನಡದ ಶಿಷ್ಟತೆಯ ವಿಚಾರವನ್ನು ಯಾರು ನೋಡಿಕೊಳ್ಳಬೇಕು? ಇ-ಗವರ್ನನ್ಸ್? ಅಥವಾ ಕನ್ನಡ ಸಂಸ್ಕೃತಿ ಇಲಾಖೆ?
ಕರ್ನಾಟಕ ಸರಕಾರ ಯೂನಿಕೋಡ್ ಕನ್ಸಾರ್ಷಿಯಂ ಮತ್ತು ಆ ಬಗೆಯ Standerdization body ಗಳಲ್ಲಿ ಸದಸ್ಯತ್ವ ಪಡೆದು ಅಧಿಕೃತ ಪ್ರತಿನಿಧಿಯನ್ನು ನೇಮಿಸಬೇಕು. ತೆಲುಗು ಮತ್ತು ತಮಿಳು ಭಾಷೆಗಳು ಹೀಗೆ ಸದಸ್ಯತ್ವ ಪಡೆದುಕೊಂಡು ಅಧಿಕೃತ ಪ್ರತಿನಿಧಿಗಳನ್ನು ನೇಮಿಸಿವೆ.
ಕೋಶಗಳು
ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಯಾವುದೇ ಇಂಗ್ಲಿಷ್ ಪಠ್ಯವಾಗಲಿ, ಆಯಾ ವರ್ಷವೇ ಅದನ್ನು ಕನ್ನಡಕ್ಕೆ ಅನುವಾದ ಮಾಡಬೇಕು. ಇದಕ್ಕಾಗಿ ಸರಕಾರದ ಅಪ್ಪಣೆಗಾಗಿ ಕಾಯುತ್ತ ಕೂರಬಾರದು. ಈ ಕಾರ್ಯಕ್ಕೆ ಕನ್ನಡ ವಿಶ್ವವಿದ್ಯಾಲಯ ಮುಂದೆ ಬರಬೇಕು ಮತ್ತು ಅವರೇ ಆ ಕೃತಿಗಳನ್ನು ಪ್ರಕಟಿಸಬೇಕು. ಇದರಿಂದ ಶಿಕ್ಷಕ ಮತ್ತು ವಿದ್ಯಾರ್ಥಿ ಇಬ್ಬರಿಗೂ ಪ್ರಯೋಜನವಾಗುವುದರಲ್ಲಿ ಸಂಶಯವಿಲ್ಲ. ಏನಿಲ್ಲದಿದ್ದರೂ ವಿದ್ಯಾರ್ಥಿಗಳು ಇಂಥ ಪ್ರಕಟಣೆಗಳನ್ನು ‘ಗೈಡ್’ಗಳಂತೆ ಓದಿದರೂ ಪ್ರಯೋಜನಕಾರಿಯಾಗಿದೆ.
ವಿಜ್ಞಾನ ವಿಷಯಗಳಲ್ಲಿ ಹೊಸ ಶೋಧನೆಗಳು, ಚಿಂತನೆಗಳು ಸತತ ನಡೆಯುತ್ತಿರಬೇಕಾದರೆ, ಓದಿ ತಿಳಿದ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಸ್ವತಂತ್ರವಾದ ಸೃಜನಶೀಲ ಸಂಶೋಧನೆಗಳನ್ನು ಮಾಡಲು ಅನುಕೂಲವಾಗುವಂತೆ ಕೋಶಗಳ ರಚನೆಯಾಗಬೇಕು. ಮತ್ತು ಈ ಕೋಶಗಳು ದೇಶದ ಎಲ್ಲ ಭಾಷೆಗಳಿಗೆ ಸಾಮಾನ್ಯವಾದ ಮತ್ತು ಸಾಧ್ಯವಾದಷ್ಟೂ ಸಂಸ್ಕೃತ, ಇಂಗ್ಲಿಷ್ ತಾಂತ್ರಿಕ ಪದಗಳನ್ನು ಬಳಸಿಕೊಂಡು ತಯಾರಾಗಿರಬೇಕು. ಅಂದರೆ ನಡೆದ ಶೋಧಗಳ ವಿಷಯ ಸಂಬಂಧಪಟ್ಟ ಸಂಸ್ಥೆಗಳಿಗೆ, ಅಲ್ಲಿಯ ಪಂಡಿತರಿಗೆ ತಿಳಿಯುವಂತಾಗಬೇಕು. ಇದು ಬಹುದೊಡ್ಡ ಯೋಜನೆಯೆಂದು ತಲೆ ಕೆಡಿಸಿಕೊಳ್ಳಬೇಕಾದ್ದಿಲ್ಲ. ಯುಜಿಸಿಯಂಥ ಶಿಕ್ಷಣ ಸಂಸ್ಥೆ ಮುಂದೆ ಬಂದರೆ ಇದಕ್ಕೆ ನೆರವಿನ ಸಮಸ್ಯೆ ಉಂಟಾಗುವುದೇ ಇಲ್ಲ.
ಕೆಲವು ವೈದ್ಯರು ಸ್ಥಳೀಯ ರೋಗಿಗಳೊಂದಿಗೆ ವ್ಯವಹರಿಸುವಾಗ ತಮಗೇ ಗೊತ್ತಿಲ್ಲದ ಅನೇಕ ಪದಗಳನ್ನು ಸೃಷ್ಟಿ ಮಾಡಿರುತ್ತಾರೆ. ಕೆಲವು ಸಲ ಮೂಲಶಾಸ್ತ್ರಕ್ಕೇ ಸೇರಿಸಬಹುದಾದ ಆವಿಷ್ಕಾರಗಳನ್ನೂ ಮಾಡಿ ಕೃತಿ ರಚನೆ ಮಾಡಿದ್ದಾರೆ. ಅಂಥವರಲ್ಲಿ ಡಾ. ಎನ್.ಡಿ.ಪುರುಷೋತ್ತಮ್ ಮತ್ತು ಡಾ. ಸುರೇಶ್ ಹಾಗೂ ಡಾ. ರುದ್ರೇಶ್ ಇಂಥವರನ್ನು ಸರಕಾರ ಇಲ್ಲವೆ ಕನ್ನಡ ಪ್ರಾಧಿಕಾರದವರು ಗುರುತಿಸಿ ಅವರ ಪ್ರಯೋಜನ ನಾಡಿಗಾಗುವಂತೆ ಮಾಡಬೇಕು.
ಟಿ.ವಿ. ಜ್ಞಾನವಾಹಿನಿ
ಕನ್ನಡಕ್ಕೆ ಬೇರೆ ಭಾಷೆಯ ಚಲನಚಿತ್ರಗಳನ್ನು ಡಬ್ ಮಾಡಬಾರದೆಂದು ಕನ್ನಡ ಚಲನಚಿತ್ರ ಮಂಡಳಿ ನಿರ್ಣಯ ತಗೊಂಡದ್ದು ಸರಿಯಷ್ಟೆ. ಚಲನಚಿತ್ರಗಳನ್ನು ಡಬ್ ಮಾಡಬಾರದೆಂಬುದು ಯೋಗ್ಯವಾದ ನಿರ್ಣಯ. ಆದರೆ ಕನ್ನಡ ಟಿವಿಗಳಲ್ಲಿ ವಿದೇಶಗಳ ಇತಿಹಾಸ, ಎನಿಮಲ್ ಪ್ಲಾನೆಟ್, ಡಿಸ್ಕವರಿ ಮುಂತಾದ ಮಕ್ಕಳಿಗೆ ಯೋಗ್ಯ ಪಾಠವಾಗಬಹುದಾದ ಚಾನಲ್ಗಳಿವೆ. ಅವನ್ನೂ ಡಬ್ ಮಾಡಬಾರದೆಂದರೇನು? ಅವನ್ನೀಗ ನಮ್ಮ ಮಕ್ಕಳು ತೆಲುಗು, ತಮಿಳು ಟೀವಿಗಳಲ್ಲಿ ನೋಡುತ್ತಿದ್ದಾರೆ. ಅದರ ಬದಲು ಮನೆಯಿಂದಲೇ ಕನ್ನಡದಲ್ಲಿ ನೋಡಿದರೆ ಒಳ್ಳಯದಲ್ಲವೆ?
ಜಾಲತಾಣ
ಕನ್ನಡ ಸಾಹಿತ್ಯ, ಸಂಸ್ಕೃತಿಗಳು ಬೇರೆ ರಾಜ್ಯಗಳಿಗಿಂತ ಭಿನ್ನವಾಗಿವೆ, ವಿಶಿಷ್ಟವಾಗಿವೆ. ಆಧುನಿಕ ಕನ್ನಡ ಸಾಹಿತ್ಯ ಜಗತ್ತಿನ ಎಲ್ಲಾ ಚಿಂತನಾಕ್ರಮಗಳಿಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡಷ್ಟು ಭಾರತದ ಇತರ ಭಾಷೆಗಳು ತೆರೆದುಕೊಂಡಿಲ್ಲ. ಇಷ್ಟಿದ್ದರೂ ನಾವು ನಮ್ಮ ಹಿರಿಮೆಯನ್ನು ಹೊರಗಿನವರಿಗೆ ಸಮರ್ಥವಾಗಿ ವಿವರಿಸುವಲ್ಲಿ ವಿಫಲರಾಗಿದ್ದೇವೆ. ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳನ್ನು ಬೇರೆಯವರಿಗೆ ತಿಳಿಸುವುದು ಅಗತ್ಯ. ಈ ವಿಷಯದಲ್ಲಿ ನಾವು ತಮಿಳು, ಬಂಗಾಲಿ ಭಾಷೆಗಳಿಗಿಂತ ಹಿಂದೆ ಇದ್ದೇವೆ. ಈ ಕೆಲಸ ಯಶಸ್ವಿಯಾಗಿ ನಡೆಯಬೇಕಾದರೆ ಹೊರದೇಶಗಳಲ್ಲಿ ಕನ್ನಡ ಅಧ್ಯಯನ ಪೀಠಗಳನ್ನು ಸ್ಥಾಪಿಸಬೇಕು. ಆದರೆ ದುರ್ದೈವದ ಸಂಗತಿ ಎಂದರೆ ಹೊರನಾಡು ಮತ್ತು ಹೊರದೇಶಗಳಲ್ಲಿರುವ ಪೀಠಗಳನ್ನು ಸರಕಾರ ಮುಚ್ಚುತ್ತಿದೆ. ಬನಾರಸ್, ಅಹಮದಾಬಾದ್, ದೆಹಲಿ ವಿಶ್ವವಿದ್ಯಾಲಯಗಳಲ್ಲಿ ಇದ್ದ ಪೀಠಗಳು ಇತ್ತೀಚೆಗೆ ಮುಚ್ಚಿ ಹೋಗಿವೆ.
ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿರುವ ಕನ್ನಡ ಅಧ್ಯಯನ ಪೀಠವು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ವಿದೇಶಿಯರಿಗೆ ಕಲಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ. ಇದೀಗ ಪೀಠವು ಕನ್ನಡೇತರರು ಕನ್ನಡವನ್ನು ಕಲಿಯಲು ಸಹಾಯ ಮಾಡುವಂಥ ‘ಕನ್ನಡ ಕಲಿಕೆ’ಎಂಬ ಹೊಸಬಗೆಯ ಜಾಲತಾಣವನ್ನು ಸಿದ್ಧಪಡಿಸಿದೆ. ಈಗಾಗಲೇ ೧೬ ಸಾವಿರಕ್ಕೂ ಹೆಚ್ಚು ಜನ ‘ಕನ್ನಡ ಕಲಿಕೆ ಜಾಲತಾಣದ ಮೂಲಕ ಕನ್ನಡವನ್ನು ಕಲಿಯುತ್ತಿದ್ದಾರೆ. ಈ ಪ್ರಯತ್ನವನ್ನು ಮುಂದುವರೆಸಿ ವರ್ಚುವಲ್ ತರಗತಿಗಳನ್ನು ನಡೆಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು.
ಒಂದು ಭಾಷೆಯ ಅತ್ಯಂತ ಸಂವೇದನಾಶೀಲವಾದ ಅಂಗಗಳೆದರೆ ಅದರ ಪುರಾಣ ಕಲ್ಪನೆ ಮತ್ತು ರೂಪಕ ಶಕ್ತಿ. ನಮ್ಮ ಸಂಸ್ಕೃತಿಯಲ್ಲಿ ಅತ್ಯಂತ ಪಲ್ಲಟಕ್ಕೆ ಒಳಗಾಗಿರುವುದು ನಮ್ಮ ಭಾಷೆ. ಸದ್ಯದ ಪರಿಸ್ಥಿತಿಯಲ್ಲಿ ನೆನಪು ಮತ್ತು ಭವಿಷ್ಯದ ನಡುವಿನ ರಣಾಂಗಣವಾಗಿದೆ ನಮ್ಮ ಭಾಷೆ. ಸಾವಿರ ವರ್ಷಗಳ ಇತಿಹಾಸವುಳ್ಳ ನಮ್ಮ ಭಾಷೆಗೆ ಈ ತರಹದ ಕುತ್ತು ಹಿಂದೆಂದೂ ಬಂದಿರಲಿಲ್ಲ. ಇದನ್ನು ಎಲ್ಲರೂ ಸೇರಿ ಒಂದಾಗಿ ಬಗೆಹರಿಸಬೇಕು. ತಜ್ಞರ ಸಲಹೆಗಳನ್ನು ಗೌರವಿಸಬೇಕು. ವ್ಯಕ್ತಿ, ಪರಿಪೂರ್ಣನಲ್ಲ. ಸುದೈವದಿಂದ ನಮ್ಮಲ್ಲಿನ್ನೂ ಪರಿಣತ ವ್ಯಕ್ತಿಗಳಿದ್ದಾರೆ.
ಸಾಹಿತ್ಯದ ಏಕಮೇವ ಮಾಧ್ಯಮವಾಗಿದ್ದ ಭಾಷೆ ಇನ್ನು ಮುಂದೆ ಎಲ್ಲ ಶಾಸ್ತ್ರ ಗಳಿಗೂ ಮಾಧ್ಯಮವಾಗಬೇಕಾಗಿದೆ. ಒಂದು ಕಾಲಕ್ಕೆ ಸಂಸ್ಕೃತವು ಶಾಸ್ತçದ ಮಾಧ್ಯಮವಾಗಿತ್ತು. ಆದರೆ ಶಾಸ್ತ್ರ ಚಿಂತನೆ ಭಾರತದ ಉಳಿದ ಭಾಷೆಗಳಲ್ಲಿಯೂ ನಡೆಯುತ್ತಿದೆ. ಸಾಹಿತ್ಯವನ್ನು ಹೊರತುಪಡಿಸಿ ಭಾಷೆ ಬೇರೆ ಚಿಂತನೆಯ ಕ್ರಮಗಳನ್ನು ಕಲಿಯತೊಡಗಿದೆ. ಮಾನವ ಶಾಸ್ತ್ರ ಮತ್ತು ಭೌತಿಕ ಶಾಸ್ತ್ರ ಗಳು ಭಾಷೆಯಲ್ಲಿ ಮೈದಾಳಲು ಕಾಯುತ್ತಿವೆ.
ಇಂಗ್ಲಿಷ್ ಕಲಿಯುವ ಮುನ್ನ ನಮ್ಮಲ್ಲಿ ವ್ಯಕ್ತಿ ಸಮಾಜದ ಅವಿಭಾಜ್ಯ ಅಂಗವಾಗಿದ್ದ. ಸಮಾಜ ಕಾಯ್ದುಕೊಂಡು ಬಂದ ಪರಂಪರೆಯನ್ನು ಅನುಸರಿಸುತ್ತಿದ್ದ. ಪರಂಪರೆಯೆAದರೆ ಸಮಾಜದ ಶರೀರದಲ್ಲಿ ಹರಿಯುವ ರಕ್ತವಿದ್ದಂತೆ. ಆದ್ದರಿಂದ ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಬೆಳಗುವ ಪರಂಪರೆ ಒಂದೇ ಆಗಿತ್ತು ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತಗಳು ಕೃತಿಯಿಂದ ಸ್ಫೂರ್ತಿ ಪಡೆದವರು ಭಾವಗೀತೆಯನ್ನು ಸ್ಥಳೀಕರಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದರು. ಕನ್ನಡ ಸಾಹಿತ್ಯ ಈಗಲೂ ಸಮೃದ್ಧವಾಗಿ ಮುಂದುವರಿದು ಬೇರೆ ಭಾಷೆಗಳ ಮೇಲೂ ಪ್ರಭಾವ ಬೀರಿದ್ದು ಈಗಿನ ಕತೆ.
ಎರಡು ಕರ್ನಾಟಕ ಬೇಕೆನ್ನುವ ಮಹಾನುಭಾವರಿದ್ದಾರೆ. ಒಂದೇ ಜಿಲ್ಲೆಯನ್ನು ಎರಡಾಗಿ ಒಡೆಯಬೇಕೆಂಬವರೂ ಇದ್ದಾರೆ. ಅನೇಕ ಕರ್ನಾಟಕಗಳು ಒಂದಾಗುವುದಕ್ಕೇ ಏನೇನಾಯಿತೆಂದು ಕೊಂಚ ನೆನಪು ಮಾಡಿಕೊಳ್ಳೋಣ. ಒಂದಿರುವ ಜಿಲ್ಲೆಯನ್ನು ಎರಡು ಮಾಡಿ ಇಡೀ ಜಿಲ್ಲೆಯನ್ನು ಕಳೆದುಕೊಳ್ಳದಿರೋಣ. ಕರ್ನಾಟಕವಾಗಿ ಎಪ್ಪತ್ತು ವರ್ಷಗಳಾದರೂ ಒಂದು ಆಡಳಿತ ಭಾಷೆಯನ್ನು ನೂರಾರು ಸರಕಾರೀ ಆಜ್ಞೆಗಳನ್ನು ಹೊರಡಿಸಿದರೂ ತರಲಾಗದೆ ಕೈಸೋತು ಕೂತಿದ್ದೇವೆ. ಸಾಲದೆ? ಬ್ರಿಟಿಷರು ಕೊಟ್ಟ ಇಂಗ್ಲಿಷನ್ನೇ ಈಗಲೂ ತಿದ್ದುತ್ತ ಕೂತಿದ್ದೇವೆ.
ಕನ್ನಡಿಗರ ಸಾಮುದಾಯಿಕ ಹರವು ಈಗ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ವಿಶ್ವವ್ಯಾಪಿಯಾಗಿದೆ. ನೃಪತುಂಗನ ಕಾಲದಲ್ಲಿ ಕಾವೇರಿ ಮತ್ತು ಗೋದಾವರಿಗಳ ನಡುನೆಲವೆಂದು ಕವಿರಾಜಮಾರ್ಗದಲ್ಲಿ ಗುರುತಿಸಲಾಗಿತ್ತು. ಆ ನಂತರದ ಕಾಲದಲ್ಲಿ ಕರ್ನಾಟಕ ಮೂಲದ ಜನರು ಕರ್ನಾಟಕದ ಹೊರಗೆ ಸಂಚರಿಸಿ, ನೆಲಸಿ, ರಚಿಸಿ ಕನ್ನಡದ ಕಂಪನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಸರಿಸಿದರು. ಉದಾ: ಕನ್ನಡ ಮೂಲದ ವಚನ ಸಂಸ್ಕೃತಿಯ ಪ್ರಭಾವವಾಗದೆ ಹೋಗಿದ್ದರೆ ಪಾಲ್ಕುರಿಕೆ ಸೋಮನಾಥನೆಂಬ ಕವಿ ತೆಲುಗು ನಾಡು ನುಡಿಗಳಿಗೆ ದೊರೆಯುತ್ತಿರಲಿಲ್ಲ. ಮತ್ತು ಆ ಭಾಷೆಯಲ್ಲಿ ಹೊಸ ಬಗೆಯ ಕಾವ್ಯವೊಂದು ಉದಿಸುತ್ತಿರಲಿಲ್ಲ. ತೆಲುಗಿನ ವೇಮನನೂ ಕನ್ನಡದ ಶರಣ ಚಿಂತನೆಯಿಂದ ಪ್ರೇರಿತನಾದವನು.
ಚೀನಾ ದೇಶಕ್ಕೆ ಬೌದ್ಧ ಧರ್ಮವನ್ನು ಕೊಂಡೊಯ್ದ, ಇಡೀ ಪೂರ್ವೇಷಿಯಾದ ಸಂಸ್ಕೃತಿಯಲ್ಲಿ ಮೂಲಭೂತ ಬದಲಾವಣೆಯನ್ನುಂಟು ಮಾಡಿದ ಬೋಧಿಧರ್ಮ ನಮ್ಮ ಕಡಲ ತೀರದ ಹೊನ್ನಾವರದವನೆಂಬ ಐತಿಹ್ಯವಿದೆ. ಕನ್ನಡದ ತವನಿಧಿ ವಚನ ಸಾಹಿತ್ಯ ಇಂಗ್ಲಿಷಿಗೆ ಅನುವಾದವಾದ ಮೇಲೆ ಇಡೀ ಪ್ರಪಂಚದ ಓದುಗರನ್ನು ಸೆಳೆಯುತ್ತಿದೆ. ಕನ್ನಡದ ಹೆಚ್ಚು ಹೆಚ್ಚು ಕೃತಿಗಳು ಅನುವಾದವಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಸಾರಸ್ವತ ಲೋಕದ ಬಗೆಗಿನ ಗೌರವ ಜಗತ್ತಿನ ಕಣ್ಣಿನಲ್ಲಿ ಇನ್ನೂ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಹೀಗೆ ಕನ್ನಡ ಭಾಷಿಕರು ಮತ್ತು ಅವರ ಸಂಸ್ಕೃತಿ ಕಾವೇರಿ ಗೋದಾವರಿಗಳ ಸೀಮೆ ದಾಟಿ ಇಡೀ ಭಾರತವನ್ನು ವ್ಯಾಪಿಸಿ ಕಡಲುಗಳಾಚೆಯೂ ಹರಡಿ ಕನ್ನಡವನ್ನು ವಿಶ್ವಭಾಷೆ, ವಿಶ್ವಸಂಸ್ಕೃತಿಗಳಾಗಿಸುತ್ತಿವೆ. ನಮ್ಮ ಬದುಕಿಗೆ ಕನ್ನಡ ಭಾಷೆಯೊಂದೇ ಜೀವ, ಜೀವನ, ಪರಂಪರೆ ಮತ್ತು ಸಂಸ್ಕೃತಿ.
ಒAದು ಕುಟುಂಬದ ಜೀವನಕ್ಕಾಗಿ ನಿರ್ಮಿತವಾದ ಮನೆಗೆ ಗೋಡೆಗಳಿರುತ್ತವೆ. ಎರಡು ಬಾಗಿಲುಗಳೂ ಇರುತ್ತವೆ. ಗೋಡೆಗಳು ನಮ್ಮನ್ನು ಪ್ರಪಂಚದಿಂದ ಬೇರ್ಪಡಿಸುತ್ತವೆ ಮತ್ತು ಕಾಪಾಡುತ್ತವೆ. ಬಾಗಿಲುಗಳು ಹೊರಗಿನ ಪ್ರಪಂಚದೊಡನೆ ಸಂಪರ್ಕ ಸಾಧಿಸಲು ಅನುಕೂಲ ಕಲ್ಪಿಸುತ್ತವೆ. ಈಗಿನ ನಮ್ಮ ಮನೆಯ ಗೋಡೆ ಒಡೆದು ಇರುವ ಬಾಗಿಲುಗಳಿಗೆ ಇನ್ನಷ್ಟು ಬಾಗಿಲು ಹಚ್ಚಿ ಬಯಲು ಮಾಡುವುದು ಬೇಡವೆಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ.
ಈ ಗೌರವದ ಸ್ಥಾನಕ್ಕೆ ನನ್ನನ್ನು ಆರಿಸಿ ಆಶೀರ್ವದಿಸಿದ್ದಕ್ಕೆ ನನ್ನೆಲ್ಲ ಪೂಜ್ಯ ಹಿರಿಯರಿಗೆ ಸಹೋದರ ಸಹೋದರಿಯರಿಗೆ, ಈವರೆಗೆ ನನ್ನ ಮಾತುಗಳನ್ನು ಶಾಂತರೀತಿಯಿಂದ ಆಲಿಸಿದ್ದಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳನ್ನು ಅರ್ಪಿಸುತ್ತೇನೆ.
ನಮಸ್ಕಾರ.
೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸಮಸ್ತರಿಗೆ ನಾನು ಆಭಾರಿಯಾಗಿದ್ದೇನೆ. ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆಂಬ ಮಾಹಿತಿ ಸಿಕ್ಕ ಕೂಡಲೇ ನನ್ನ ನೆನಪಿಗೆ ಬಂದವರು- ನನಗೆ ಅಕ್ಷರ ಕಲಿಸಿದ ಗುರುಗಳು ಮತ್ತು ಶಾಲೆಗೆ ಸೇರಿಸಿದ ತಾಯಿ, ತಂದೆ ಆನಂತರ ನನ್ನನ್ನು ಬೆಳೆಸಿದ ಪ್ರಗತಿಪರ ಚಳವಳಿಗಳು, ಸಾರ್ವಜನಿಕ ಬದುಕಿನ ಬವಣೆಗಳ ಮುಖಾಮುಖಿಗೆ ಬೆನ್ನೆಲುಬಾಗಿ ನಿಂತ ಕುಟುಂಬವರ್ಗ ಮತ್ತು ಸ್ನೇಹಿತರು. ಒಂದೇ ವಾಕ್ಯದಲ್ಲಿ ಹೇಳುವುದಾದರೆ ‘ಸ್ನೇಹಿತರೇ ನನ್ನ ಸಂಪತ್ತು’. ಈ ಎಲ್ಲರಿಗೂ ನನ್ನ ಮೊದಲ ನಮನಗಳು.
ನನ್ನ ಅಧಿಕೃತ ಭಾಷಣವನ್ನು ಒಂದು ಸಂಕಟದ ಸಂವೇದನೆಯೊಂದಿಗೆ ಆರಂಭಿಸುತ್ತೇನೆ. ಸಂವೇದನೆ ಎಂಬ ಪದದಲ್ಲೇ ‘ವೇದನೆ’ಯಿದೆ. ವೇದನೆ ಮತ್ತು ಸಂವೇದನೆ ಒಂದಾದ ಕಾಲಘಟ್ಟ ನಮ್ಮದು. ಅಷ್ಟೇಕೆ ವೇದನೆಯೇ ಸಂವೇದನೆಯಾಗುತ್ತಿರುವ ವೈರುಧ್ಯ ವಲಯವೂ ನಮ್ಮದು. ಅಂದು ಆಗಸ್ಟ್ ೩0-೨0೧೫ರ ಬೆಳಗ್ಗೆ. ಸಾಂಸ್ಕøತಿಕ ಲೋಕ ದಿಗ್ಭ್ರಮೆಗೊಂಡು ಮೂಕವಾದ ಮುಂಜಾವು. ಅದಕ್ಕೆ ಕಾರಣ ಎಂ.ಎಂ. ಕಲಬುರ್ಗಿಯವರ ಸಾವು. ಕಲಬುರ್ಗಿಯವರನ್ನು ಕೊಂದ ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ನಿಧಾನದ್ರೋಹದ ಕಳಂಕದಿಂದ ಮುಕ್ತವಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಭಿನ್ನಾಭಿಪ್ರಾಯಗಳನ್ನು ಬಲಿಪೀಠವಾಗಿಸಿದ ಆ ದಾರುಣದ ದಿನದ ನೆನಪು ನುಗ್ಗಿ ಬರುತ್ತಿರುವಾಗ ಎಂ.ಎಂ. ಕಲಬುರ್ಗಿಯವರ ಚೇತನಕ್ಕೆ ನನ್ನ ನಮನ ಸಲ್ಲಿಸಿ ಮಾತು ಮುಂದುವರೆಸುತ್ತೇನೆ.
ನನ್ನ ಮುಂದೆ ಕುವೆಂಪು ಅವರ ಮಲೆನಾಡು ಇರಲಿಲ್ಲ. ಬೇಂದ್ರೆಯವರ ಸಾಧನಕೇರಿಯಿರಲಿಲ್ಲ. ಶಿವರಾಮಕಾರಂತರ ಕಡಲು ಇರಲಿಲ್ಲ. ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆಯಿರಲಿಲ್ಲ. ಪು.ತಿ.ನ. ಅವರ ಮೇಲುಕೋಟೆಯಿರಲಿಲ್ಲ. ಬದುಕಿನ ಬೇಟೆಯಲ್ಲಿ ಬೆಳೆಯುತ್ತ ಬಂದ ಅನೇಕರಲ್ಲಿ ನಾನೂ ಒಬ್ಬ. ಈ ‘ಬೇಟೆ ಬದುಕಿನಲ್ಲಿ’ ಶ್ರೀಗಂಧದ ಮರಗಳಿರಲಿಲ್ಲ. ಜಾಲಿಯ ಮರಗಳಿದ್ದವು; ಜೊತೆಗೆ ಹೊಂಗೆ ಹುಣಸೆಮರಗಳಿದ್ದವು. ಕೋಗಿಲೆಯಿರಲಿಲ್ಲ ಕಾಗೆಗಳಿದ್ದವು, ಗುಬ್ಬಚ್ಚಿಗಳಿದ್ದವು. ಮುಗಿಲು ಮುನಿದು ಬಿರುಕುನೆಲದ ಕೆರೆಗಳಿದ್ದವು. ನಳನಳಿಸುತ್ತಲೇ ಕೂಳೆ ಹೊಲಗಳಾದ ಜಮೀನುಗಳಿದ್ದವು. ಹೆಡೆ ಎತ್ತಿದ ಹಾದಿಗಳಿದ್ದವು. ಹತ್ತಿರದಲ್ಲೇ ಊದುವ ಪ್ರೀತಿಪುಂಗಿಗಳಿದ್ದವು. ಚಿತ್ತದಲ್ಲಿ ಬಿತ್ತಿ ಬೆಳೆಯುವ ಭಾವನೆಗಳಿದ್ದವು. ಬರವಿಲ್ಲದ ಭೂಮಿಭಾವನೆಗಳಿಂದ ಬೆಳೆಯುತ್ತಲೇ ಚಿಂತನೆಯ ಚೌಕಬಾರದಲ್ಲಿ ಕೊನೆಯ ಮನೆ ಸೇರಿ ಗೆಲ್ಲುವ ಆತ್ಮವಿಶ್ವಾಸವನ್ನು ಪಡೆದ ಬದುಕು ನನ್ನದು. ಇರುವಲ್ಲಿ ಮತ್ತು ಇರುವುದರಲ್ಲಿ ನಮ್ಮ ಸೃಜನಶೀಲತೆಯನ್ನು ಬೆಳೆಸಿಕೊಳ್ಳುವ ಸಂಕಲ್ಪ ನಮ್ಮದಾಗಬೇಕೆಂದು ನಂಬಿದವನು ನಾನು. ಸೃಜನಶೀಲತೆಗೆ ಬಡವ-ಬಲ್ಲಿದ ಎಂಬ ಭೇದವಿಲ್ಲ. ಆದ್ದರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವ ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೆ: ಈ ಗೌರವ ನನ್ನಂತಹ ಅಸಂಖ್ಯಾತ ಆತ್ಮವಿಶ್ವಾಸಿಗಳಿಗೆ ಸಲ್ಲುವ ಗೌರವ; ಇಲ್ಲಿ ಅಧ್ಯಕ್ಷನಾದವನು ‘ನಾನು’ ಅಲ್ಲ – ‘ನಾವು’. ಈ ನಾವುಗಳ ಸಂಕೇತವಾಗಿ ‘ನಾನು’ ಇಲ್ಲಿದ್ದೇನೆ; ನಾನು ಅಧ್ಯಕ್ಷನಾಗಿ ಇಲ್ಲಿರುವುದನ್ನು ಕಂಡು, ಕೇಳಿ ಸಂಭ್ರಮಿಸುವ ಸಮಸ್ತರೂ ಅಧ್ಯಕ್ಷರೇ ಎಂದು ಭಾವಿಸುತ್ತೇನೆ.
ಹೈದರಾಬಾದ್ ಕರ್ನಾಟಕವೆಂದು ಕರೆಯಲ್ಪಡುತ್ತಿರುವ ಕರ್ನಾಟಕದ ಈ ವಲಯದ ರಾಯಚೂರಿಗೆ ವಿಶಿಷ್ಟ ಇತಿಹಾಸವಿದೆ. ಕ್ರಿ.ಪೂ. ೩00ರಲ್ಲಿ ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತೆಂದು ಉಲ್ಲೇಖವುಳ್ಳ ಮಸ್ಕಿಶಾಸನವು ಅಶೋಕನನ್ನು ದೇವನಾಂಪ್ರಿಯ, ಪ್ರಿಯದರ್ಶಿ ಅಶೋಕ ಎಂದು ಕರೆದ ಆರಂಭಿಕ ದಾಖಲೆಯೆಂದು ಹೇಳಲಾಗುತ್ತಿದೆ. ಶಾಂತಿಪ್ರಿಯ ಅಶೋಕನ ಶಾಸನವುಳ್ಳ ರಾಯಚೂರು ಸರ್ವಧರ್ಮ ಸಮನ್ವಯದ ನೆಲೆಯೂ ಆಗಿದೆ. ಕಲ್ಯಾಣ ಕ್ರಾಂತಿಯ ಸಂದೇಶವನ್ನು ಪ್ರಸಾರಗೊಳಿಸುವ ಕಾರ್ಯದಲ್ಲಿ ರಾಯಚೂರು ಜಿಲ್ಲೆಯ ಪಾತ್ರ ಪ್ರಮುಖವಾಗಿದೆ. ‘ಕಾಯಕವೇ ಕೈಲಾಸ’ವೆಂಬ ಮಾತನ್ನು ಮೊದಲು ಬಳಸಿದ ಆಯ್ದಕ್ಕಿ ಮಾರಯ್ಯ ಈ ಜಿಲ್ಲೆಯ ವಚನಕಾರ. ಸಾಹಿತ್ಯ, ಸಂಗೀತ, ಚಿತ್ರಕಲೆಯಲ್ಲಿ ಅಪೂರ್ವ ಸಾಧಕರನ್ನು ಪಡೆದ ರಾಯಚೂರಿನ ಸಾಧಕರ ಪಟ್ಟಿ ದೊಡ್ಡದು ಪ್ರಸಿದ್ಧಿಯೂ ದೊಡ್ಡದು. (ಹೀಗಾಗಿ ನಾನು ಹೆಸರುಗಳನ್ನು ಪಟ್ಟಿಮಾಡಿಲ್ಲ)
ಹೈದರಾಬಾದ್ ಕರ್ನಾಟಕ ವಲಯವು ನಿಜಾಮರ ಆಳ್ವಿಕೆಯಲ್ಲಿದ್ದುದರಿಂದ ಇಲ್ಲಿ ಉರ್ದುವಿನ ಪ್ರಭಾವ ಸ್ವಾಭಾವಿಕವಾಗಿ ಹರಡಿಕೊಂಡಿದೆ. ಜೊತೆಗೆ ಗಡಿಭಾಗದ ಭಾಷೆಗಳ ಪ್ರಭಾವವೂ ಇದೆ. ಇದು ಹೋರಾಟಗಳ ಭೂವಲಯವೂ ಹೌದು. ನಿಜಾಮರ ವಿರುದ್ಧ ನಡೆದ ಕಾರ್ಯಾಚರಣೆಯಿಂದ ೧೯೪೮ರ ಸೆಪ್ಟಂಬರ್ನಲ್ಲಿ ಸ್ವತಂತ್ರವಾದ ಈ ಭೂಭಾಗದಲ್ಲಿ ರೈತ ಹೋರಾಟಗಳೂ ಇದ್ದವು. ನಿಜಾಮರ ದಮನದ ಜೊತೆಗೆ ರೈತ ಹೋರಾಟಗಳ ದಮನವೂ ನಡೆದ ವಿಪರ್ಯಾಸಕ್ಕೆ ತೆಲಂಗಾಣವನ್ನು ಒಳಗೊಂಡ ಈ ಭೂಭಾಗ ಸಾಕ್ಷಿಯಾದದ್ದು ಈಗ ಇತಿಹಾಸ. ಇಷ್ಟಾದರೂ ಇದು ಸೌಹಾರ್ದ ಸಂಸ್ಕøತಿಯ ಬೀಡು. ಸೂಫಿ ಸಂತರು ಮತ್ತು ತತ್ವ ಪದಕಾರರ ಪರಂಪರೆಯುಳ್ಳ ಭೂಮಿ. ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಸೌಹಾರ್ದ ಸಂಸ್ಕøತಿಯ ವಿಸ್ತರಣೆಗೆ ಕಾರಣವಾಗಲಿ, ಎಂದು ಹಾರೈಸುತ್ತೇನೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವೆಂದರೆ ನೆರೆದ ಜನಕ್ಕೆ ಮತ್ತು ನಾಡಿಗೆ ಕೊಡುವ ಸಂದೇಶವೆಂದು ತಿಳಿಯುತ್ತ ಬರಲಾಗಿದೆ. ಜನರು, ಸಾಹಿತಿಗಳ ಚರ್ಚೆ, ಚಿಂತನೆಗಳ ಮೂಲಕ ಬೌದ್ಧಿಕ ಬೆಳಕು ಪಡೆಯಲು ಬರುತ್ತಾರೆಂದೂ ಸಮ್ಮೇಳನದ ಚಿಂತನೆಗಳಿಂದ ಒಂದಿಷ್ಟು ಕಲಿಯುತ್ತಾರೆಂದೂ ಕಲಿಯಬೇಕೆಂದೂ ಆಶಿಸಲಾಗಿದೆ. ಇದು ನಿಜವಾದ ಆಶಯವೇ ಇರಬಹುದು. ಆದರೆ ನನಗನ್ನಿಸುತ್ತದೆ: ಇಲ್ಲಿ ನೆರೆದಿರುವ ನೀವು ನಮ್ಮಿಂದ ಕಲಿಯುವುದಲ್ಲ. ವೇದಿಕೆಯ ಮೇಲಿರುವ ನಾವು ನಿಮ್ಮಿಂದ ಕಲಿಯಬೇಕು. ನೀವು ನಮ್ಮನ್ನು ನೋಡುವುದು ಮುಖ್ಯವಲ್ಲ; ನಾವು ನಿಮ್ಮನ್ನು ನೋಡುವುದು ಮುಖ್ಯ. ನಾವು ನಿಮ್ಮನ್ನು ನೋಡುತ್ತಲೇ ನೀವಾಗುವುದು, ನೀವು ನಮ್ಮನ್ನು ನೋಡುತ್ತಲೇ ನಾವಾಗುವುದು, ಹೀಗೆ ಪರಸ್ಪರ ಪ್ರವೇಶ ಪ್ರಕ್ರಿಯೆಯಲ್ಲಿ ತೊಡಗುವುದು ಮುಖ್ಯವೆಂದು ನಾನು ತಿಳಿದಿದ್ದೇನೆ. ಕನ್ನಡದ ಹೆಸರಲ್ಲಿ, ಕರ್ನಾಟಕದ ಹೆಸರಲ್ಲಿ, ಸಾಹಿತ್ಯಾಸಕ್ತಿಯಲ್ಲಿ ಇಲ್ಲಿ ನೆರೆದಿರುವ ಈ ಬಹು ದೊಡ್ಡ ಸಮೂಹವು ವೇದಿಕೆಯಲ್ಲಿರುವವರಿಗೊಂದು ವಿವೇಕದ ಎಚ್ಚರ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಮ್ಮಿಂದ ನೀವು ಕಲಿಯುವುದೆಷ್ಟೆಂದು ಲೆಕ್ಕ ಹಾಕುವುದರ ಬದಲು ನಿಮ್ಮಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ತಿಳಿಯಬೇಕಿದೆ. ಒಂದು ಸಮ್ಮೇಳನಕ್ಕೆ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಸೇರಿದ್ದಾರಲ್ಲ, ಇವರ ವಿಶ್ವಾಸಾರ್ಹತೆಗೆ ಧಕ್ಕೆ ತರಬಾರದು ಎಂಬ ಎಚ್ಚರ ನಮಗಿರಬೇಕು; ಅಪಾರ ನಿರೀಕ್ಷೆಯಿಂದ ನೆರೆದವರಿಗೆ ನಿರಾಶೆಯಂಟು ಮಾಡದಿರಬೇಕೆಂಬ ಹೊಣೆಗಾರಿಕೆ ನಮ್ಮದಾಗಬೇಕು. ಈ ಸಂದರ್ಭದಲ್ಲಿ ರಷ್ಯಾದ ಚಿಂತಕ ಪ್ಲೆಖನೋವ್ ಹೇಳಿದ ಒಂದು ಅಭಿಪ್ರಾಯ ನೆನಪಿಗೆ ಬರುತ್ತಿದೆ: “ಕಲಾಕಾರರು ಜನಗಳಿಂದ ಗೌರವ ಮತ್ತು ಮನ್ನಣೆಗಳನ್ನು ಬಯಸುತ್ತಾರೆ. ಜನರು ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ.”
ಹೌದು; ಜನರು ನಮ್ಮಿಂದ ಜವಾಬ್ದಾರಿಯನ್ನು ಬಯಸುತ್ತಾರೆ. ಆದ್ದರಿಂದ ಸಾಂಸ್ಕøತಿಕ ಪ್ರತಿನಿಧಿಗಳೆಂಬ ಹಣೆಪಟ್ಟಿಯ ನಾವು ಆತ್ಮವಂಚನೆ ಮಾಡಿಕೊಳ್ಳಬಾರದು; ಜನರು ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ವಂಚನೆ ಮಾಡಬಾರದು. ನಾವು ಜನಗಳಿಗೆ ಜವಾಬ್ದಾರರಾಗಬೇಕು. ಇದು ಈ ಸಮ್ಮೇಳನದಿಂದ ನಾವು ಕಲಿಯಬೇಕಾದ ಪ್ರಥಮ ಪಾಠ.
ಏಕೀಕರಣ, ಪ್ರತ್ಯೇಕೀಕರಣ ಮತ್ತು ಪರಕೀಯತೆ
ಕರ್ನಾಟಕದ ಏಕೀಕರಣವಾಗಿ ೬೦ ವರ್ಷಗಳು ತುಂಬಿ ವಜ್ರ ಮಹೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿ ಸಮ್ಮೇಳನ ನಡೆಯುತ್ತಿದೆ. ಸಹಜವಾಗಿಯೇ ಏಕೀಕರಣದ ಫಲಿತಗಳನ್ನು ಕುರಿತ ಪ್ರಶ್ನೆ ಎದುರಾಗುತ್ತದೆ. ಕನ್ನಡ ಮಾತು ಪ್ರಧಾನವಾಗಿರುವ ಪ್ರದೇಶಗಳೆಲ್ಲ ಒಂದಾಗಬೇಕೆಂಬ ಏಕೀಕರಣದ ಪ್ರಧಾನ ಆಶಯ ಬಹುಮಟ್ಟಿಗೆ ಈಡೇರಿದ್ದರೂ ಇನ್ನೂ ಕೆಲವು ಕನ್ನಡ ಮಾತಿನ ಪ್ರದೇಶಗಳು ಬೇರೆ ರಾಜ್ಯದಲ್ಲಿ ಉಳಿದಿವೆ. ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಗಡಿವಿವಾದ ಬಗೆಹರಿಸಲು ರಚಿತವಾದ ಮಹಾಜನ್ ಆಯೋಗದ ವರದಿಯು ಇನ್ನೂ ಅನುಷ್ಠಾನಗೊಂಡಿಲ್ಲ. ಕೇರಳದ ಕಾಸರಗೋಡು ಕರ್ನಾಟಕವಾಗಲಿಲ್ಲ. ಆಂಧ್ರದಲ್ಲಿರುವ ಕನ್ನಡ ಪ್ರಧಾನ ಮಡಕಶಿರಾ ಕರ್ನಾಟಕಕ್ಕೆ ಸೇರಲಿಲ್ಲ. ತಮಿಳುನಾಡಿನಲ್ಲಿರುವ ತಾಳವಾಡಿಫಿರ್ಕಾ, ಕೇರಳದಲ್ಲಿರುವ ಕಾಸರಗೋಡು, ಹೊಸದುರ್ಗ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಮುಂತಾದ ಕನ್ನಡ ಪ್ರಧಾನ ಪ್ರದೇಶಗಳು ನಮ್ಮ ನಾಡಿನ ಭಾಗವಾಗಿಲ್ಲ. ಅಷ್ಟೇಕೆ ಕರ್ನಾಟಕ ಸರ್ಕಾರವು ಹೊರ ರಾಜ್ಯದ ಕೆಲವು ಪ್ರದೇಶಗಳಿಗೆ ನೀಡಿರುವ ಅಧಿಕೃತ ಗಡಿಗ್ರಾಮ ಮನ್ನಣೆಯು ರಾಯಚೂರು ಪಕ್ಕದ ಮೆಹಬೂಬುನಗರ ಜಿಲ್ಲೆಯ ಕೃಷ್ಣಾ, ಗುರ್ಜಾಲೆ, ತಂಗಡಗಿ, ಕುಸಮುರ್ತಿ, ಹೈನಾಪುರ, ಜೆಗುಂಟಾ, ಶುಕ್ರಲಿಂಗದಹಳ್ಳಿ, ಖಾನಾಪುರ, ಕುನಸಿ, ಹಾಲಂಪಲ್ಲಿ, ಕೊತ್ತಪಲ್ಲಿ ಗುಡೆವೆಲ್ಲೂರ್, ಇಂದುಪುರ-ಎಂಬ ಹದಿನೂರು ಗ್ರಾಮಗಳಿಗೆ ಲಭ್ಯವಾಗಿಲ್ಲ. ಗೋವಾದಲ್ಲಿರುವ ಕನ್ನಡಿಗರ ಬವಣೆ ಬತ್ತಿಲ್ಲ. ಕರ್ನಾಟಕದ ಒಳನಾಡಿನವರಿಗೆ ಸಿಗುವ ಶೈಕ್ಷಣಿಕ ಮತ್ತು ಔದ್ಯೋಗಿಕ ಸೌಲಭ್ಯಗಳು ಕನ್ನಡಮಾಧ್ಯಮದಲ್ಲೇ ವ್ಯಾಸಂಗ ಮಾಡಿದ ಹೊರನಾಡಿನ ಕನ್ನಡಿಗರಿಗೆ ಪೂರ್ಣಪ್ರಮಾಣದಲ್ಲಿ ಸಿಗುತ್ತಿಲ್ಲ, ಸಿಗಬೇಕು. ಕರ್ನಾಟಕವು ಇನ್ನೂ ಒಳನಾಡು, ಗಡಿನಾಡು ಮತ್ತು ಹೊರನಾಡು ಎಂಬ ವಿಂಗಡನೆಯ ವಿಷಾದವನ್ನು ಒಡಲುರಿಯಾಗಿ ಅನುಭವಿಸುತ್ತಿದೆ. ಇಂಥ ಒಡಲುರಿ ಇರಬಾರದೆಂದೇ ಅಂದು ಏಕೀಕರಣದ ಹೋರಾಟ ಹುಟ್ಟಿಕೊಂಡಿತ್ತು. ಧಾರವಾಡದಲ್ಲಿ ೨೦.೦೭.೧೮೯೦ರಲ್ಲಿ ಸ್ಥಾಪಿತವಾದ ಕರ್ನಾಟಕ ವಿದ್ಯಾವರ್ಧಕ ಸಂಘದ ‘ವಾಗ್ಭೂಷಣ’ ಪತ್ರಿಕೆಯಲ್ಲಿ ಆಲೂರು ವೆಂಕಟರಾಯರು. “ಕರ್ನಾಟಕವು ಒಂದಾಗದಿದ್ದರೆ ಕರ್ನಾಟಕದ ಸ್ಥಿರ ಏಳಿಗೆಯು ಎಂದೆಂದಿಗೂ ಸಾಧ್ಯವಿಲ್ಲ” ಎಂದು ಬರೆದರು. ೧೯೧೭ರ ಜನವರಿ ೭ರಂದು ವಿದ್ಯಾವರ್ಧಕ ಸಂಘದ ವ್ಯವಸ್ಥಾಪಕ ಸಮಿತಿಯು ಒಂದು ಗೊತ್ತುವಳಿಯನ್ನು ಸ್ವೀಕರಿಸಿ ಏಕೀಕರಣದ ಆಶಯವನ್ನು ದಾಖಲಿಸಿತು. “ಬ್ರಿಟಿಷ್ ಅಧಿಕಾರಕ್ಕೆ ಒಳಗಾದ. ಎಲ್ಲ ಕನ್ನಡ ಊರು, ತಾಲ್ಲೂಕು ಮತ್ತು ಜಿಲ್ಲೆಗಳನ್ನು ಒಟ್ಟುಗೂಡಿಸಿ, ಒಂದು ರಾಜಕೀಯ ವಿಭಾಗವನ್ನಾಗಿ ಮಾಡಿ, ಅದನ್ನು ಕರ್ನಾಟಕವೆಂದು ಕರೆಯಬೇಕು” ಎಂದು ಈ ಗೊತ್ತುವಳಿಯು ಕರೆ ನೀಡಿತು. ೧೯೧೫ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಏಕೀಕರಣದ ಹೋರಾಟಕ್ಕೆ ಒತ್ತಾಸೆಯಾಗಿ ನಿಂತಿತು. ೧೯೧೬ರಲ್ಲಿ ಏಕೀಕರಣದ ಉದ್ದೇಶಕ್ಕಾಗಿಯೇ ‘ಕರ್ನಾಟಕ ಏಕೀಕರಣ ಸಭೆ’ ಎಂಬ ಸಂಸ್ಥೆ ಸ್ಥಾಪನೆಯಾಯಿತು. ಆನಂತರದ ದಿನಗಳಲ್ಲಿ ಇದಕ್ಕೆ ‘ಕರ್ನಾಟಕ ಏಕೀಕರಣ ಸಂಘ’ ಎಂದು ಮರುನಾಮಕರಣ ಮಾಡಲಾಯಿತು. ಈ ಸಂಸ್ಥೆಯು ಏಕೀಕರಣದ ಉದ್ದೇಶಕ್ಕಾಗಿಯೇ ೧೯೨೬ರಿಂದ ೧೯೪೭ರೊಳಗೆ ಒಟ್ಟು ೧೨ ಸಮ್ಮೇಳನಗಳನ್ನು ನಡೆಸಿತು. ನಮ್ಮ ದೇಶ ಸ್ವಾತಂತ್ರ್ಯಗಳಿಸಿದ ನಂತರವೂ ಏಕೀಕರಣದ ಹೋರಾಟ ಮತ್ತಷ್ಟು ಪ್ರಬಲಗೊಂಡಿತು. ವಿಶೇಷವೆಂದರೆ ೧೯೫೧ರಲ್ಲಿ ಕಮ್ಯುನಿಸ್ಟ್ ಪಕ್ಷವೂ ಏಕೀಕರಣಕ್ಕೆ ಬೆಂಬಲವಾಗಿ ನಿಂತಿತು. ಕಮ್ಯೂನಿಸ್ಟರು, ಸೋಷಲಿಸ್ಟರು ತಮ್ಮ ಸಮಾನತೆಯ ಆಶಯಗಳ ಮೂಲ ಆಶಯವನ್ನಿಟ್ಟುಕೊಂಡೇ ಏಕೀಕರಣದ ಅಗತ್ಯವನ್ನು ಪ್ರತಿಪಾದಿಸಿದರು. ಈ ನಡುವೆ ೧೯೫೨ರಲ್ಲಿ ಆಂದ್ರದ ಪೊಟ್ಟಿಶ್ರೀರಾಮುಲು ಅವರು ತೆಲುಗು ಮಾತಿನ ಪ್ರದೇಶಗಳ ಏಕೀಕರಣಕ್ಕಾಗಿ ಆಮರಣಾಂತ ಉಪವಾಸ ಆರಂಭಿಸಿದರು. ೫೮ ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಪೊಟ್ಟಿಶ್ರೀರಾಮುಲು ನಿಧನ ಹೊಂದಿ ಹುತಾತ್ಮರಾದರು. ಕನ್ನಡನಾಡಿನಲ್ಲಿ ಬಳ್ಳಾರಿಯ ರಂಜಾನ್ ಸಾಬ್ ಅವರು ಏಕೀಕರಣ ಹೋರಾಟದಲ್ಲಿ ಜೀವ ತೆತ್ತರು. ಈ ಜೀವ ಕನ್ನಡನಾಡಿನ ಜಾತ್ಯತೀತ ಮೌಲ್ಯದ ಒಂದು ಮಾದರಿಯಾಗಿ ಇಂದಿಗೂ ಸ್ಮರಣೀಯವಾಗಿದೆ.
ಹೀಗೆ ಕನ್ನಡ ಮತ್ತು ತೆಲುಗು ಕೇಂದ್ರಿತ ಏಕೀಕರಣ ಹೋರಾಟಗಳ ಫಲವಾಗಿ ಕೇಂದ್ರ ಸರ್ಕಾರವು ೧೯೫೩ರಲ್ಲಿ ಫಜಲ್ ಆಲಿ ಅವರ ನೇತೃತ್ವದಲ್ಲಿ ರಾಜ್ಯ ಪುನರ್ವಿಂಗಡನಾ ಆಯೋಗವನ್ನು ರಚಿಸಿತು. ಇದೇ ವರ್ಷ, ಪೊಟ್ಟಿ ಶ್ರೀರಾಮುಲು ಅವರ ಹೋರಾಟ ಮತ್ತು ಮರಣದ ಫಲವೆಂಬಂತೆ ತೆಲುಗು ಪ್ರಧಾನ ಪ್ರಾಂತ್ಯವಾಗಿ ‘ಆಂದ್ರಪ್ರದೇಶ’ ರಚನೆಯಾಯಿತು. ಮುಂದೆ ಫಜಲ್ ಆಲಿ ಆಯೋಗದ ಶಿಫಾರಿಸಿನಂತೆ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ೦೧.೧೧.೧೯೫೬ರಂದು ‘ವಿಶಾಲ ಮೈಸೂರು’ ಅಸ್ತಿತ್ವಕ್ಕೆ ಬಂದಿತು. ಕನ್ನಡ ಮಾತು ಪ್ರಧಾನವಾದ ಕೇರಳದ ಕಾಸರಗೋಡು, ಹೊಸದುರ್ಗವನ್ನೂ ಒಳಗೊಂಡಂತೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿರುವ ಕನ್ನಡಪ್ರಧಾನ ಪ್ರದೇಶಗಳನ್ನು ಒಳಗೊಳ್ಳದೆ ‘ವಿಶಾಲ ಮೈಸೂರು’ ಎಂಬ ಕನ್ನಡದ ಬಹುಪಾಲು ಪ್ರದೇಶದ ಏಕೀಕೃತ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಆದರೆ ‘ಕರ್ನಾಟಕ’ ಎಂದು ಹೆಸರಿಡಲು ೧೯೭೩ರವರೆಗೆ ಕಾಯಬೇಕಾಯಿತು. ಅದರಲ್ಲೂ ‘ಮೈಸೂರು’ ಹೆಸರಿನ ಪರವಾಗಿದ್ದ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ‘ಕರ್ನಾಟಕ’ ಎಂದು ಹೆಸರಿಡಬೇಕಾಯಿತು. ಜನಾಭಿಪ್ರಾಯಕ್ಕೆ ಮನ್ನಣೆಕೊಟ್ಟ ದೇವರಾಜ ಅರಸು ತಮ್ಮ ಹಿಂದಿನ ಅಭಿಪ್ರಾಯವನ್ನು ಬದಿಗೊತ್ತಿ ೦೧.೧೧.೧೯೭೩ ರಂದು ಈ ‘ವಿಶಾಲ ಮೈಸೂರು’ ಬದಲು ‘ಕರ್ನಾಟಕ’ ಎಂದು ಹೆಸರು ಬದಲಾಯಿಸಿದ್ದು ಸಾಂಕೇತಿಕವಾಗಿ ಜನಾಭಿಪ್ರಾಯದ ವಿಜಯ. ಅರಸು ಅವರ ಪ್ರಜಾಸತಾತ್ಮಕ ನಿಲುವಿನ ಫಲ. ಅಂದು ಅರಸು ಅವರು ಕರ್ನಾಟಕದ ಜನಮಾನಸದ ಅಭಿನಂದನೆಗೆ ಪಾತ್ರರಾದರು. ಹಾಗೆ ನೋಡಿದರೆ ಕರ್ನಾಟಕದೊಳಗಿನ ವಿವಿಧ ಸಾಮಾಜಿಕ ಮತ್ತು ಭೌಗೋಳಿಕ ವಲಯಗಳನ್ನು ಒಳಗೊಳ್ಳುವಂತೆ ಪ್ರತಿನಿಧೀಕರಣದ ಪ್ರಕ್ರಿಯೆಗೆ ಕಾರಣರಾದ ಅರಸು ‘ಸಾಮಾಜಿಕ ಏಕೀಕರಣ’ದ ರೂವಾರಿ ಎಂದರೂ ತಪ್ಪಾಗಲಾರದು. ಕರ್ನಾಟಕದ ವಿಧಾನ ಮಂಡಲದಲ್ಲಿ ವಿವಿಧ ಪ್ರದೇಶ, ವಿವಿಧ ಸಾಮಾಜಿಕ ಹಿನ್ನಲೆಯ ಸಂಕೇತಗಳು ಸಮಾವೇಶಗೊಳ್ಳುವಂತೆ ಮಾಡಿದ ಅರಸು ಅವರ ‘ಸಾಮಾಜಿಕ ಏಕೀಕರಣ’ದ ರಾಜಕಾರಣ ಅಸಾಧಾರಣ.
ಆದರೆ ಆಮೇಲೆ ಏನಾಯಿತು? ಭಾಷೆ ಮತ್ತು ಭೂಗೋಳವನ್ನು ಬೆಸೆದ ಏಕೀಕರಣವು ಮಾನಸಿಕ ಏಕೀಕರಣಕ್ಕೆ ಕಾರಣವಾಯಿತೆ? ಏಕೀಕರಣದ ವಿಸ್ತರಣೆಗಾಗಿ ಭೂಗೋಳ ಪ್ರಜ್ಞೆಯೇ ಪ್ರಧಾನವಾಯಿತೆ? ಸ್ವಲ್ಪಮಟ್ಟಿಗೆ ಹೌದು. ಆದ್ದರಿಂದಲೇ ಕರ್ನಾಟಕದ ವಿಸ್ತಾರವನ್ನು ಕುರಿತು ಮತ್ತೆ ಮತ್ತೆ ಮಾತನಾಡುವವರು ಭೂಗೋಳ ಪ್ರಜ್ಞೆಯ ಪರಿಧಿಯಲ್ಲೇ ಉಳಿದಿದ್ದಾರೆ. ನಿಜ; ಕಾವೇರಿಯಿಂದ ಗೋದಾವರಿವರೆಗೆ ನಮ್ಮ ಅಂದಿನ ನಾಡು ಇತ್ತು ಎಂದುಕೊಳ್ಳೋಣ. ಅಷ್ಟೇಕೆ ಅಚ್ಚಕನ್ನಡ ರಾಜವಂಶವೆಂಬ ಕೀರ್ತಿಗೆ ಭಾಜನರಾದ ಮತ್ತು ೨೧೫ ವರ್ಷಗಳವರೆಗೆ ಆಳಿದ ಕದಂಬರ ಸಾಮ್ರಾಜ್ಯವು ಮೃಗೇಶ ವರ್ಮನ ಕಾಲದಲ್ಲಿ ಉತ್ತರದ ನರ್ಮದಾ ನದಿಯವರೆಗೆ ವಿಸ್ತಾರಗೊಂಡಿತ್ತು. ಬಾದಾಮಿ ಚಾಲುಕ್ಯರ ಸಾಮ್ರಾಜ್ಯದಲ್ಲಿ ಅಜಂತ, ಎಲ್ಲೋರ, ನಾಸಿಕ್, ಓರಂಗಲ್ ಮುಂತಾದ ಪ್ರದೇಶಗಳೂ ಇದ್ದವು. ರಾಷ್ಟ್ರಕೂಟರ ಸಾಮ್ರಾಜ್ಯದಲ್ಲಿಯೂ ಅಜಂತ, ಎಲ್ಲೋರ, ಇದ್ದವು. ಕಲ್ಯಾಣಿ ಚಾಲುಕ್ಯರ ಸಾಮ್ರಾಜ್ಯದಲ್ಲಿ ಓರಂಗಲ್ಲು, ಪಂಡರಪುರ, ದೇವಗಿರಿ, ನವಸಾರಿಕ ಮುಂತಾದ ಪ್ರದೇಶಗಳಿದ್ದವು. ಹೊಯ್ಸಳರ ಸಾಮ್ರಾಜ್ಯದಲ್ಲಿ ಕಂಚಿ, ಕಣ್ಣಾನೂರುಗಳಿದ್ದವು. ವಿಜಯನಗರ ಸಾಮ್ರಾಜ್ಯದಲ್ಲಿ ತೇಡಪತ್ರಿ, ಲೇಪಾಕ್ಷಿ, ತಿರುಪತಿ, ವೆಲ್ಲೂರು, ಮಧುರೆ, ಪಾಂಡಿಚೆರಿ ಮುಂತಾದ ಪ್ರದೇಶಗಳು ಇದ್ದವು. ಹೀಗೆ ವಿವಿಧ ಸಾಮ್ರಾಜ್ಯಗಳಲ್ಲಿದ್ದ ಪ್ರದೇಶಗಳಲ್ಲಿ ಕನ್ನಡವೂ ಇತ್ತು. ಆದರೆ ಎಲ್ಲ ಪ್ರದೇಶಗಳಲ್ಲೂ ಕನ್ನಡವಿರಲಿಲ್ಲ. ಇದರರ್ಥ ಏನು? ಈ ಪ್ರದೇಶಗಳೆಲ್ಲ ಕನ್ನಡ ಪ್ರದೇಶಗಳಲ್ಲ; ಕನ್ನಡ ಬಲ್ಲ ರಾಜರ ಪ್ರದೇಶಗಳು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು ಶ್ರೀಕೃಷ್ಣದೇವರಾಯ. ಆಂಧ್ರಪ್ರದೇಶದವರು ಶ್ರೀಕೃಷ್ಣದೇವರಾಯನನ್ನು ತಮ್ಮವನೆಂದು ತಿಳಿದಿದ್ದಾರೆ. ನಾವು ಕನ್ನಡಿಗರು ನಮ್ಮವನೆಂದು ತಿಳಿದಿದ್ದೇವೆ. ಆಂಧ್ರದಲ್ಲಿ ನಮಗಿಂತ ಮೊದಲೇ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತದೆ. ಶ್ರೀಕೃಷ್ಣ ದೇವರಾಯ ತೆಲುಗು ಸಿನಿಮಾ ತಯಾರಾಗುತ್ತದೆ. ಆನಂತರ ನಮ್ಮಲ್ಲಿ ಶ್ರೀಕೃಷ್ಣದೇವರಾಯ ಸಿನಿಮಾ ನಿರ್ಮಾಣ; ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ಥಾಪನೆ. ಇದರರ್ಥ ಏನು? ಶ್ರೀಕೃಷ್ಣದೇವರಾಯನ ಸಾಮ್ರಾಜ್ಯ ಪೂರ್ಣ ಕನ್ನಡ ಸಾಮ್ರಾಜ್ಯವಲ್ಲ. ಅಷ್ಟೇಕೆ, ಯಾವುದೇ ರಾಜರ ಸಾಮ್ರಾಜ್ಯಗಳು ಒಂದೇ ಭಾಷೆಯ ರಾಜ್ಯಗಳಲ್ಲ. ಆದ್ದರಿಂದ ಕನ್ನಡ ರಾಜವಂಶಗಳ ಸಾಮ್ರಾಜ್ಯಗಳನ್ನು ಇಡಿಯಾಗಿ ಕನ್ನಡ ಪ್ರದೇಶಗಳೆಂದು ಕರೆಯುವುದು ಚಾರಿತ್ರಿಕವಾಗಿ ಸರಿಯಲ್ಲ.
ಸಮಸ್ಯೆ ಇರುವುದೇ ಇಲ್ಲಿ. ಭೂಗೋಳಪ್ರಜ್ಞೆ ಮತ್ತು ಚರಿತ್ರೆಯ ಪ್ರಜ್ಞೆ ಒಂದಾಗಿ ಬೆಸೆದ ಕನ್ನಡ ಪ್ರಜ್ಞೆಯ ಕೊರತೆಯಿಂದ ಸಾಮ್ರಾಜ್ಯಪ್ರಜ್ಞೆಯೇ ಪ್ರಧಾನವಾಗಿಬಿಡುತ್ತದೆ. ಚರಿತ್ರೆಯ ಪ್ರಜ್ಞೆಯೆಂಬುದು ಸಹ ಗತಕಾಲದ ಕನವರಿಕೆಯಲ್ಲ. ಇಲ್ಲಿ ಡಿ.ಡಿ. ಕೊಸಾಂಬಿಯವರ ವ್ಯಾಖ್ಯಾನವನ್ನು ಉಲ್ಲೇಖಿಸಬೇಕು: “ಚರಿತ್ರೆಕಾರನ ಕೆಲಸ ಕೇವಲ ಭೂತಕಾಲವನ್ನು ಪ್ರೀತಿಸುವುದು ಅಥವಾ ಭೂತ ಕಾಲದಿಂದ ದೂರವಾಗುವುದಲ್ಲ. ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಭೂತಕಾಲವನ್ನು ಕೀಲಿಕೈ ಎಂದು ತಿಳಿಯಬೇಕು. ಭೂತಕಾಲದ ಬೆಳಕಿನಲ್ಲಿ ವರ್ತಮಾನವನ್ನು ಅರಿಯುವುದೆಂದರೆ, ವರ್ತಮಾನದ ಬೆಳಕಿನಲ್ಲಿ, ಭೂತಕಾಲವನ್ನು ಸಹ ಅರಿಯುವುದು ಎಂದರ್ಥ”
ಭಾಷಾಭಿಮಾನಕ್ಕೆ ಭೂತಕಾಲ ಮತ್ತು ವರ್ತಮಾನಗಳ ಉಚಿತಾನುಸಂಧಾನ ಮುಖ್ಯ. ಭೂತದಲ್ಲೇ ಹೂತು ಹೋಗುವುದು ಕೇವಲ ಕನವರಿಕೆಯಾಗುತ್ತದೆ. ವರ್ತಮಾನವೇ ಸರ್ವಸ್ವ ಎಂದುಕೊಂಡರೆ ಪರಂಪರೆಯ ಪ್ರಜ್ಞೆ ಪತನಗೊಳ್ಳುತ್ತದೆ. ಒಂದರಿಂದ ಇನ್ನೊಂದನ್ನು ಅರಿಯುವ ಅರ್ಥಪೂರ್ಣತೆ ಮುಖ್ಯ.
ಆದ್ದರಿಂದ, ನಾವು ಅರ್ಥಮಾಡಿಕೊಳ್ಳಬೇಕು: ಭಾಷೆ ಮತ್ತು ಭೂಗೋಳದ ಸಂಬಂಧವಷ್ಟೇ ಕನ್ನಡಾಭಿಮಾನವಲ್ಲ. ಭೂಗೋಳ ಮಿತಿಯ ಚಿಂತನೆಯೊಂದೇ ಕರ್ನಾಟಕದ ಮನಸ್ಸನ್ನು ಒಂದುಗೂಡಿಸುವ ಅಂತಿಮ ಸಾಧನವಾಗುವುದಿಲ್ಲ. ಸಾಮಾಜಿಕ-ಆರ್ಥಿಕ ಸಮಾನತೆಯ ಆಧಾರದಲ್ಲಿ ಅಭಿವೃದ್ಧಿಯ ಸಮತೋಲನವನ್ನು ಸಾಧಿಸದಿದ್ದರೆ ಕರ್ನಾಟಕದ ಒಳಗೆ ಒಡಕು ಹುಟ್ಟುತ್ತದೆ. ಹುಟ್ಟುತ್ತದೆ ಅನ್ನುವುದಾದರೂ ಏಕೆ? ಹುಟ್ಟುತ್ತಿದೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನದ ಅಸಮಾಧಾನ ಪ್ರಕಟಗೊಳ್ಳುತ್ತಿದೆ. ನಿಜ; ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳೂ ಹಿಂದುಳಿದಿವೆ. ಆದರೆ ಮೈಸೂರು ರಾಜ್ಯಕ್ಕೆ ಸೇರಿದ ಹೊಸ ಪ್ರದೇಶಗಳು ಹೆಚ್ಚು ಹಿಂದುಳಿದಿವೆ. ಕೇವಲ ಆರ್ಥಿಕ ಅಭಿವೃದ್ಧಿಯ ಅಸಮತೋಲನವಷ್ಟೇ ಅಲ್ಲ, ಸಾಂಸ್ಕøತಿಕ ಪ್ರಾತಿನಿಧ್ಯದ ಪರಕೀಯತೆಯೂ ಇವರನ್ನು ಕಾಡಿಸುತ್ತಿದೆ. ರಾಜಧಾನಿ ಕೇಂದ್ರಿತ ನೋಟದಿಂದ ಸಿಗುವ ಸಾಂಕೇತಿಕ ಪ್ರಾತಿನಿಧ್ಯವು ಸಾಂಸ್ಕøತಿಕ ಪರಕೀಯತೆಯನ್ನು ಸಲೀಸಾಗಿ ಹೋಗಲಾಡಿಸಲಾರದು. ಕರ್ನಾಟಕದ ಸಮಸ್ತ ಭೂಗೋಳದೊಳಗೆ ಇರುವ ಜನರ ಸಾಂಸ್ಕøತಿಕ ವೈಶಿಷ್ಟ್ಯಗಳನ್ನು ಉಳಿಸಿ ಬೆಳೆಸಬೇಕಾದ್ದು ಒಂದು ಹೊಣೆಗಾರಿಕೆಯಾದರೆ, ಏಕೀಕರಣದ ಫಲವಾಗಿ ಜೊತೆಗೂಡಿದ ಪ್ರದೇಶಗಳ ಪ್ರತಿಭಾವಂತರಿಗೆ ಪ್ರತೀಕಾತ್ಮಕ ಪ್ರಾತಿನಿಧ್ಯ ನೀಡುವ ಹೊಣೆಗಾರಿಕೆಯೂ ಆಡಳಿತಗಾರರ ಮೇಲಿದೆ; ಸಾಂಸ್ಕøತಿಕ ಸಂಘಸಂಸ್ಥೆಗಳ ಜವಾಬ್ದಾರಿಯೂ ಆಗಿದೆ. ಅಷ್ಟೇಕೆ ಸಾಮಾಜಿಕವಾಗಿ ತುಳಿತಕ್ಕೊಳಗಾದವರನ್ನು ಪರಕೀಯತೆಯಿಂದ ಪಾರು ಮಾಡಬೇಕಾಗಿದೆ. ಸಮಗ್ರ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ದೃಷ್ಟಿ ಕೋನದ ದೂರಗಾಮಿಚಿಂತನೆ ಮತ್ತು ಬದ್ಧಕ್ರಿಯಾಶೀಲತೆಯಿಂದ ಮಾತ್ರ ಇದು ಸಾಧ್ಯ. ಇಲ್ಲದಿದ್ದರೆ, ಬೇಕೊ ಬೇಡವೊ, ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿರುವವರ ದನಿ ಮುಂದೊಂದು ದಿನ ಸಮೂಹ ಸನ್ನಿಯಾದರೆ ಅಚ್ಚರಿಯಿಲ್ಲ.
ಏಕೀಕರಣದಿಂದ ಪ್ರತ್ಯೇಕೀಕರಣದ ಕಿರುದನಿಯತ್ತ ವಾಲುತ್ತಿರುವ ನಮ್ಮ ಸಂದರ್ಭದಲ್ಲಿ ಆತ್ಮಾವಲೋಕನ ಅಗತ್ಯ ಎಂದು ನಾನು ಭಾವಿಸುತ್ತೇನೆ. ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿರುವವರು ಪ್ರತ್ಯೇಕತೆಯೊಂದೇ ಪರಿಹಾರವೇ ಎಂದು ತಮ್ಮೊಳಗನ್ನು ಕೇಳಿಕೊಳ್ಳಬೇಕು. ಪ್ರತ್ಯೇಕ ರಾಜ್ಯವೆನ್ನುವುದು ಭೂಗೋಳ ವಿಭಜನೆ ಮತ್ತು ಅಧಿಕಾರ ಹಂಚಿಕೆಗೆ ನೆರವಾಗಬಹುದು. ಆದರೆ ಒಂದು ರಾಜ್ಯದ ಅಭಿವೃದ್ಧಿಗೆ ಅದಷ್ಟೇ ಸಾಕೆ? ನಿರ್ದಿಷ್ಟ ಭೂಗೋಳದೊಳಗೆ ಇರುವ ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕøತಿಕ ಪ್ರತ್ಯೇಕತೆಯು ಪ್ರತ್ಯೇಕ ರಾಜ್ಯ ರಚನೆಯಿಂದ ಪರಿಹಾರವಾಗುತ್ತದೆಯೆ? ಖಂಡಿತ ಇಲ್ಲ. ಜಾತಿ, ವರ್ಣ, ಲಿಂಗತ್ವ ಅಸಮಾನತೆಗಳನ್ನು ಆಧಾರಿಸಿದ ಸಾಮಾಜಿಕ ಪ್ರತ್ಯೇಕತೆಗೆ ಸಾಮಾಜಿಕ ನ್ಯಾಯದ ರಾಜ್ಯಬೇಕು; ಪ್ರತ್ಯೇಕರಾಜ್ಯವಲ್ಲ. ಸಾಂಸ್ಕøತಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಬಹುತ್ವ ಬದ್ಧ ಚಿಂತನೆ ಮತ್ತು ಕ್ರಿಯೆ ಬೇಕು. ನಾವು ತಿಳಿಯಬೇಕು: ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕøತಿಕ ಪ್ರತ್ಯೇಕತೆಯನ್ನುವುದು ಕೇವಲ ಪ್ರತ್ಯೇಕತೆಯಲ್ಲ. ಅದು ಪರಕೀಯತೆ. ಕನ್ನಡ ಭಾಷಾ ಭೂಗೋಳದಲ್ಲೇ ಅನುಭವಿಸುವ ಪರಕೀಯತೆ. ಈ ಪರಕೀಯತೆ ಏಕೀಕೃತ ಅಖಂಡ ಕರ್ನಾಟಕದಲ್ಲಿಯೇ ಕೊನೆಗಾಣಬೇಕು. ಪ್ರತ್ಯೇಕ ರಾಜ್ಯಬೇಡಿಕೆಯವರಿಗೆ ಅಭಿವೃದ್ಧಿಯ ಅಸಮತೋಲನ ಮತ್ತು ಅಧಿಕಾರ ಮುಖ್ಯವಾದಂತೆ ಸಾಮಾಜಿಕ ಮತ್ತು ಸಾಂಸ್ಕøತಿಕ ಸಮಸ್ಯೆ ಮುಖ್ಯವಾದಂತೆ ಕಾಣಿಸುತ್ತಿಲ್ಲ. ಆದ್ದರಿಂದ ಪ್ರತ್ಯೇಕ ರಾಜ್ಯ ಬೇಡಿಕೆಯವರಲ್ಲಿ ನನ್ನದೊಂದು ಬೇಡಿಕೆ. ನಾವು ಒಂದಾಗಿ ಸಮಸ್ಯೆಗಳನ್ನು ಬಿಡಿಸೋಣ. ಸವಾಲುಗಳನ್ನು ಒಂದಾಗಿ ಎದುರಿಸೋಣ. ಭಾವನಾತ್ಮಕವಾಗಿ ಮಾತ್ರವಲ್ಲ. ಕ್ರಿಯಾತ್ಮಕವಾಗಿ ಕೆಲಸ ಮಾಡೋಣ. ಕರ್ನಾಟಕದ ಯಾವುದೇ ಪ್ರದೇಶಕ್ಕೆ ಅನ್ಯಾಯವಾದರೂ ಒಂದಾಗಿ ಪ್ರತಿಭಟಿಸೋಣ. ಒಡೆದು ಹೋಗುವುದಕ್ಕೆ ನಾವು ಒಂದಾಗಲಿಲ್ಲ ಎಂಬುದನ್ನು ತೋರಿಸಿಕೊಡೋಣ. ಇಂಥದೊಂದು ಕ್ರಿಯೆಗೆ ಕರ್ನಾಟಕದ ಎಲ್ಲ ಪ್ರದೇಶಗಳ ನೋಟವೇ ಬದಲಾಗಬೇಕು. ಅಪನಂಬಿಕೆಯ ವಾತಾವರಣ ಹೋಗಬೇಕು. ಈ ನಿಟ್ಟಿನಲ್ಲಿ ಆಳುವ ಸರ್ಕಾರಗಳ ಜವಾಬ್ದಾರಿಯೂ ದೊಡ್ಡದಾಗಬೇಕು. ಎಲ್ಲ ಪ್ರದೇಶದ ಜನಪ್ರತಿನಿಧಿಗಳ ದನಿ ಗಟ್ಟಿಯಾಗಬೇಕು.
ತಕ್ಷಣಕ್ಕೆ ಸರ್ಕಾರ ಮಾಡಬೇಕಾದ ಕೆಲಸ ಒಂದಿದೆ. ಕರ್ನಾಟಕದ ಏಕೀಕರಣವಾದ ಈ ಅರವತ್ತು ವರ್ಷಗಳಲ್ಲಿ ವಿವಿಧ ಪ್ರದೇಶಗಳಿಗೆ ಒದಗಿಸಿದ ಹಣ, ಕೈಗೊಂಡ ಯೋಜನೆಗಳು, ಅಭಿವೃದ್ಧಿಯ ಹಂತಗಳು, ಸಾಮಾಜಿಕ ಸಾಂಸ್ಕøತಿಕ ಪ್ರತಿನಿಧೀಕರಣ, ಮಹಿಳಾ ಪ್ರಾತಿನಿಧ್ಯ ಮುಂತಾದ ಸಮಸ್ತ ಸಂಗತಿಗಳನ್ನು ಒಳಗೊಂಡ ಹೊತ್ತಿಗೆಯೊಂದನ್ನು ಹೊತ್ತಿಗೆ ಸರಿಯಾಗಿ ಸಿದ್ಧಪಡಿಸಿ ಮುಂದಿನ ವಿಶ್ವಕನ್ನಡ ಸಮ್ಮೇಳನದ ವೇಳೆಗೆ ಬಿಡುಗಡೆಗೊಳಿಸಬೇಕು. ನಾನು ಬೇಕಾಗಿಯೇ ಶ್ವೇತಪತ್ರ ಎಂಬ ಪದವನ್ನು ಬಳಸಿಲ್ಲ. ಶ್ವೇತಪತ್ರವೆನ್ನುವುದು ಈಗ ರಾಜಕೀಯ ಪರಿಭಾಷೆಯಾಗಿಬಿಟ್ಟಿದೆ. ಆದ್ದರಿಂದ ನಮಗೆ ಬೇಕಾದ್ದು ಪತ್ರವಲ್ಲ; ಪುಸ್ತಕ; ಈ ಮೂಲಕ ಪ್ರಗತಿ ಪ್ರಾತಿನಿಧ್ಯದ ಕುರಿತ ಚರ್ಚೆ, ಚಿಂತನೆ ನಡೆಯ ಬೇಕು; ಅಸಮತೋಲನ ಮತ್ತು ಅಸಮಾಧಾನಗಳ ಕಾರಣಗಳನ್ನು ಕಂಡುಕೊಂಡು ಕರ್ನಾಟಕದ ಏಕೀಕರಣಕ್ಕೆ ಆರ್ಥಿಕತೆಯನ್ನಷ್ಟೇ ಅಲ್ಲ ಸಾರ್ಥಕತೆಯನ್ನು ತಂದುಕೊಡಬೇಕು. ಸಾಮಾಜಿಕ ನ್ಯಾಯ ನೆಲೆಗೊಳ್ಳಬೇಕು; ಸಮತೆಯ ಸಂವೇದನೆ ನಮ್ಮ ಬಲವಾಗಬೇಕು.
ಇದೇ ಸಂದರ್ಭದಲ್ಲಿ ಸರ್ಕಾರಕ್ಕೊಂದು ಸಲಹೆಯನ್ನು ಕೊಡಬಯಸುತ್ತೇನೆ. ಅಭಿವೃದ್ಧಿಯ ಅಸಮತೋಲನವನ್ನು ತಪ್ಪಿಸಲು, ಜನಮುಖಿ ನ್ಯಾಯದ ವೇಗವನ್ನು ವೃದ್ಧಿಸಲು, ರಾಜಧಾನಿ ಕೇಂದ್ರಿತ ಸಚಿವಾಲಯವನ್ನು ವಿಕೇಂದ್ರೀಕರಣಗೊಳಿಸಬೇಕು. ಅಂದರೆ ಕರ್ನಾಟಕದ ಪ್ರತಿ ಕಂದಾಯ ವಿಭಾಗಕ್ಕೊಂದು ಸಚಿವಾಲಯವನ್ನು ಸ್ಥಾಪಿಸಬೇಕು. ಸರ್ಕಾರದ ನೀತಿನಿಯಮಗಳಿಗೆ ಸಂಬಂಧಿಸಿದ ಮುಖ್ಯವಿಷಯಗಳನ್ನು ಮಾತ್ರ ರಾಜಧಾನಿ ಕೇಂದ್ರಿತ ಮಾಡಿ, ಉಳಿದೆಲ್ಲ ಅನುಷ್ಠಾನದ ಅಧಿಕಾರವನ್ನು ವಿಭಾಗೀಯ ಸಚಿವಾಲಯಗಳಿಗೆ ಕೊಡಬೇಕು; ಕೇವಲ ಅಧಿಕಾರ ಕೊಟ್ಟರೆ ಸಾಲದು; ಬಜೆಟ್ ಹಂಚಿಕೆಯನ್ನು ಅಧಿಕೃತಗೊಳಿಸಬೇಕು. ರಾಜ್ಯ ಮಂತ್ರಿಮಂಡಲದ ನಿರ್ಣಯಗಳನ್ನು ಆಯಾ ವಿಭಾಗದ ಮಂತ್ರಿಗಳ ಉಪಸಮಿತಿಯು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊರಬೇಕು. ನೀತಿ ನಿಯಮ ನಿರ್ಧಾರಗಳನ್ನು ಹೊರತು ಪಡಿಸಿ ವಿಭಾಗೀಯ ಸಚಿವಾಲಯಗಳು ಸಾಯತ್ವ ಸ್ವರೂಪದಲ್ಲಿ ಕೆಲಸ ಮಾಡುವಂತಾಗಬೇಕು. ಪ್ರತಿ ಮಂಜೂರಾತಿಗೂ ಕೇಂದ್ರೀಯ ಸಚಿವಾಲಯಕ್ಕೆ ಮೊರೆಯಿಡುವುದು ತಪ್ಪಿ ಮಾಹಿತಿ ಮಾತ್ರ ಕಳಿಸುವಂತಾಗಬೇಕು. ರಾಜ್ಯದೊಳಗೆ ಇಂಥದೊಂದು ಸ್ವಾಯತ್ತತೆಯ ಸಂರಚನೆ ಆಗಿ ಅನುಷ್ಠಾನಗೊಳ್ಳದೆ ಹೋದರೆ ಇಂದಲ್ಲ ನಾಳೆ ಪ್ರತ್ಯೇಕತೆ ತಪ್ಪಿದ್ದಲ್ಲ. ಆದ್ದರಿಂದ ನನ್ನ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ, ಪರಿಶೀಲಿಸಿ, ಅಗತ್ಯ ರೂಪಾಂತರಗಳೊಂದಿಗೆ ಕಾರ್ಯರೂಪಕ್ಕೆ ತರುವುದು ಅಗತ್ಯ ಎಂದು ಭಾವಿಸುತ್ತೇನೆ. ಇನ್ನೊಮ್ಮೆ ಹೇಳುತ್ತೇನೆ: ವಿಭಾಗೀಯ ಸ್ವಾಯತ್ತ ಸಚಿವಾಲಯಗಳಿಂದ ವಿವಿಧ ಪ್ರದೇಶಗಳ ಆಡಳಿತಾತ್ಮಕ ಅನಾಥ ಪ್ರಜ್ಞೆಗೆ ಪರಿಹಾರ ಸಿಗುತ್ತದೆ. ಸರ್ಕಾರದ ನೀತಿಗಳಿಂದ ಸಾಮಾಜಿಕ, ಸಾಂಸ್ಕøತಿಕ ಪರಕೀಯತೆಯನ್ನು ಪರಿಹರಿಸಲು ಕ್ರಿಯಾತ್ಮಕ ಹಿಡಿತ ಸಿಕ್ಕುತ್ತದೆ. ಈಗಾಗಲೇ ಧಾರವಾಡ ಮತ್ತು ಗುಲ್ಬರ್ಗದಲ್ಲಿ ಹೈಕೋರ್ಟ್ಪೀಠ ಸ್ಥಾಪನೆಯಾಗಿ ನ್ಯಾಯಾಂಗ ವ್ಯವಸ್ಥೆಯ ವಿಕೇಂದ್ರೀಕರಣವಾಗಿದೆ. ಈ ಹೈಕೋರ್ಟ್ಗಳು ಸ್ವಾಯತ್ತವಾಗಿ ಕೆಲಸ ಮಾಡುತ್ತಿವೆ. ಅದೇ ರೀತಿ ವಿಭಾಗೀಯ ಸ್ವಾಯತ್ತ ಸಚಿವಾಲಯಗಳನ್ನು ಸ್ಥಾಪಿಸಬಹುದಾಗಿದೆ. ಬೆಂಗಳೂರಲ್ಲಿ ಸುಗಮ ಸಂಚಾರಕ್ಕೆ ‘ಮೇಲ್ ಸೇತುವೆ’ಗಳನ್ನು ನಿರ್ಮಿಸುವ ಸರ್ಕಾರ, ಕರ್ನಾಟಕದಾದ್ಯಂತ ‘ಮನೋ ಸೇತುವೆ’ಗಳನ್ನು ನಿರ್ಮಿಸಬೇಕಾಗಿದೆ.
ರಾಜ್ಯ ಸ್ವಾಯತ್ತತೆ ಮತ್ತು ರಾಜ್ಯದೊಳಗೆ ಸ್ವಾಯತ್ತತೆ
ನಾನು ಅತ್ಯಂತ ಸ್ಪಷ್ಟವಾಗಿ ಹೇಳಬಯಸುತ್ತೇನೆ: ನಮಗೀಗ ರಾಜ್ಯದ ಸ್ವಾಯತ್ತತೆ ಮತ್ತು ರಾಜ್ಯದೊಳಗಿನ ಸ್ವಾಯತ್ತತೆ ಎರಡೂ ಮುಖ್ಯ. ರಾಜ್ಯದೊಳಗಿನ ಸ್ವಾಯತ್ತತೆ ಮುಖ್ಯವಾಗಿ ನಮಗೇ ಸೇರಿದ್ದರಿಂದ ಸೂಕ್ಷ್ಮಗ್ರಾಹಿತ್ವದಿಂದ ಸ್ಥಾಪಿಸಿಕೊಳ್ಳಬೇಕು ಮತ್ತು ಸ್ಥಾಪಿತ ಹಿತಾಸಕ್ತಿಗಳಿಂದ ಸಂರಕ್ಷಿಸಬೇಕು. ರಾಜ್ಯದ ಸ್ವಾಯತ್ತತೆಗಾಗಿ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಬೇಕು. ರಾಜ್ಯದ ಸ್ವಾಯತ್ತತೆಯೆಂಬುದು ಕೇವಲ ನಮ್ಮ ರಾಜ್ಯದ ಪ್ರಶ್ನೆಯಲ್ಲ. ಭಾರತವೆಂಬ ಒಕ್ಕೂಟ ವ್ಯವಸ್ಥೆಯ ಎಲ್ಲ ರಾಜ್ಯಗಳ ಪ್ರಶ್ನೆ. ರಾಜ್ಯಗಳಿಗೆ ಸ್ವಾಯತ್ತತೆ ಕೊಡಬೇಕೆಂಬುದು ಇಂದು ನೆನ್ನೆಯ ನೋಟವಲ್ಲ. ಸ್ವಾತಂತ್ರ್ಯಪೂರ್ವದಲ್ಲೇ ಕಾಂಗ್ರೆಸ್ ಈ ಬಗ್ಗೆ ಪ್ರಸ್ಥಾಪಿಸಿದೆ. ಚಲೇಜಾವ್ ಚಳವಳಿಗೆ ಕರೆಕೊಟ್ಟ ನಿರ್ಣಯದಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಪ್ರತಿಪಾದಿಸಲಾಗಿದೆ:
“ಕಾಂಗ್ರೆಸ್ನ ದೃಷ್ಟಿಯಲ್ಲಿ ಸಂವಿಧಾನವು ಒಕ್ಕೂಟ ಸ್ವರೂಪದ್ದಾಗಿದ್ದು ಈ ಒಕ್ಕೂಟದ ಘಟಕಗಳಿಗೆ ಅತಿ ಹೆಚ್ಚಿನ ಸ್ವಾಯತ್ತತೆಯನ್ನು ನೀಡಬೇಕು. ಒಕ್ಕೂಟ ಮತ್ತು ಘಟಕಗಳ ನಡುವೆ ಹಂಚಿಕೆಯಾಗದ ಉಳಿಕೆ ಅಧಿಕಾರವೂ ಈ ಘಟಕಗಳಿಗೇ ಸಲ್ಲಬೇಕು” – ಇದು ಅಂದಿನ ಕಾಂಗ್ರೆಸ್ ನಿರ್ಣಯದ ಭಾಗ. ನಮ್ಮ ಕವಿ ಕುವೆಂಪು ಅವರಲ್ಲಿ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯು ಸ್ವಾತಂತ್ರ್ಯ ಪೂರ್ವದಲ್ಲೇ ಮೂಡಿಬಂದದ್ದಕ್ಕೆ ೦೭-೧೨-೧೯೨೮ರಂದು ಬರೆದ ‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ಆರಂಭವಾಗುವ ಇಂದಿನ ನಾಡಗೀತೆಯೇ ಸಾಕ್ಷಿ. ನಮಗೆ ಭಾರತವೆಂಬ ದೇಶ ಕರ್ನಾಟವೆಂಬ ಸ್ವಾಯತ್ತ ರಾಜ್ಯ ಎರಡೂ ಮುಖ್ಯವೆಂಬ ಮುನ್ನೋಟ ಈ ಗೀತೆಯಲ್ಲೇ ಅಡಗಿದೆ. ಅದೀಗ ನಮ್ಮ ಸಂವಿಧಾನದ ಭಾಗವೇ ಆಗಿದೆ.
ಅಂದರೆ ಈಗ ಸಂವಿಧಾನಾತ್ಮಕವಾಗಿ ರಚಿತಗೊಂಡ ಒಕ್ಕೂಟ ವ್ಯವಸ್ಥೆಯ ಬೀಜ, ಸ್ವಾತಂತ್ರ್ಯ ಚಳವಳಿಯ ಒಂದು ಭಾಗವಾಗಿತ್ತು. ಆದರೆ ಸಂವಿಧಾನದಲ್ಲಿ ಅಡಕವಾದ ಈ ಪರಿಕಲ್ಪನೆಯನ್ನು ನಿರ್ಲಕ್ಷಿಸುವ ನಿಲುವುಗಳನ್ನು ‘ಕೇಂದ್ರ’ ಸರ್ಕಾರಗಳು ಅನುಸರಿಸುತ್ತ ಬಂದ ಫಲವಾಗಿ ರಾಜ್ಯಗಳು ಅಧೀನ ಹಾಗೂ ವಿಧೇಯ ವಲಯಗಳಾಗಿ ಮಾರ್ಪಟ್ಟಿವೆ. ರಾಜ್ಯಗಳಿಗೆ ಒದಗಿದ ಇಂಥ ಸ್ಥಿತಿಯನ್ನು ಕಂಡು ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿಯವರಾಗಿದ್ದ ಶ್ರೀ ರಾಜಾಜಿಯವರು ೧೯೫೨ರಲ್ಲಿ ವಿಧಾನ ಸಭೆಯಲ್ಲಿ ಭಾಷಣ ಮಾಡುತ್ತ “ರಾಜ್ಯ ಸರ್ಕಾರಗಳೆಂದರೆ ವೈಭವೀಕೃತ ಮುನಿಸಿಪಾಲಿಟಿಗಳು ಎಂಬಂತಾಗಿದೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಪೂರ್ಣ ಅಧಿಕಾರ ಮತ್ತು ಹಣ ಎಲ್ಲಿದೆ?” ಎಂದು ಪ್ರಶ್ನಿಸಿದರು. ಕೇರಳದಲ್ಲಿ ರಚನೆಯಾದ ದೇಶದ ಮೊದಲ ಎಡಪಕ್ಷಗಳ ಮುಖ್ಯಮಂತ್ರಿಯವರಾದ ಶ್ರೀನಂಬೂದರಿಪಾದ್ ಅವರು ಸಹ ರಾಜ್ಯಗಳ ಸ್ವಾಯತ್ತತೆಯನ್ನು ಪ್ರತಿಪಾದಿಸಿದರು (೧೯೫೭). ಮುಂದೆ ೧೯೭೭ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾದ ಶ್ರೀ ಜ್ಯೋತಿಬಸು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗಿರಬೇಕಾದ ಸ್ವಾತಂತ್ರ್ಯ, ಸ್ವಾಯತ್ತತೆಗಳ ಪರವಾಗಿ ದನಿ ಎತ್ತುತ್ತ ಬಂದರು. ಆ ನಂತರದ ವರ್ಷಗಳಲ್ಲಿ ಸರ್ಕಾರಿಯಾ ಆಯೋಗ ರಚನೆಯಾಗಿ ರಾಜ್ಯಗಳ ಸ್ವಾಯತ್ತತೆ ಕುರಿತು ಮಾಡಿದ ಶಿಫಾರಸ್ಸುಗಳು ಸಹ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ.
ಈಗ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆಯ ಅಧಿಕಾರಿ ಹಂಚಿಕೆಯನ್ನೇ ನೋಡಿ. ಅಧಿಕಾರ ಹಂಚಿಕೆಯಾಗಿ ಕೇಂದ್ರಪಟ್ಟಿ, ರಾಜ್ಯಪಟ್ಟಿ ಮತ್ತು ಎರಡಕ್ಕೂ ಅಧಿಕಾರವಿರುವ ಪಟ್ಟಿ ಎಂದು ಮೂರು ವಿಭಾಗ ಮಾಡಲಾಗಿದೆ. ಕೇಂದ್ರ ಸರ್ಕಾರದ ಅರ್ಥಾತ್ ಸಂವಿಧಾನದಲ್ಲಿ ಕರೆದಿರುವಂತೆ ಸಂಯುಕ್ತ ಸರ್ಕಾರದ, ಅಧಿಕಾರ ವ್ಯಾಪ್ತಿಯಲ್ಲಿ ವಿದೇಶಾಂಗ ವ್ಯವಹಾರ, ರಕ್ಷಣೆ, ಹಣಕಾಸು, ರೈಲ್ವೆ, ವಿಮಾನ, ಅಂಚೆ, ಟೆಲಿಫೋನ್, ಒಟ್ಟಾರೆ ಸಂಪರ್ಕ, ಅಂತರರಾಜ್ಯ ವ್ಯವಹಾರ ಮುಂತಾದವು ಇರುವುದು ಸರಿ. ಆದರೆ ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಬಹುಪಾಲು ಶಿಕ್ಷಣ – ಮುಂತಾದ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಅಂತಿಮ ಅಧಿಕಾರವಿರಬೇಕು. ಆದರೆ ಹೀಗೆ ಆಗಿಲ್ಲ. ಇಲ್ಲಿಯೇ ಸಂಯುಕ್ತ ಸರ್ಕಾರವು ‘ಕೇಂದ್ರ’ ಸರ್ಕಾರವಾಗಿಬಿಟ್ಟಿದೆ. ಈಗಂತೂ ತೆರಿಗೆ, ಉನ್ನತ ಶಿಕ್ಷಣ ಮುಂತಾದ ವಿಷಯಗಳಲ್ಲಿ ಏಕರೂಪತೆ ತರುವ ಪ್ರಯತ್ನದಲ್ಲಿ ರಾಜ್ಯದ ಹಕ್ಕುಗಳು ಮೊಟಕಾಗುತ್ತಿವೆ. ತೆರಿಗೆಗಳ ಸರಳೀಕರಣದಂತಹ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುವುದು ಸರಿಯೆಂದೇ ತಿಳಿಯೋಣ. ದೇಶದ ಆರ್ಥಿಕ ಶಕ್ತಿ ಮತ್ತು ವಹಿವಾಟುದಾರರ ಶಕ್ತಿಯೆರಡೂ ವೃದ್ಧಿಯಾಗುತ್ತವೆಯೆಂದು ನಂಬೋಣ. ಆದರೆ ತೆರಿಗೆಯ ಏಕರೂಪತೆ ಮತ್ತು ಸರಳೀಕರಣಗಳು ಆರ್ಥಿಕ ಕೇಂದ್ರೀಕರಣಕ್ಕೆ ದಾರಿ ಮಾಡಿಕೊಟ್ಟರೆ ರಾಜ್ಯಗಳು ಕೇಂದ್ರದ ಮುಂದೆ ಕೈಕಟ್ಟಿ ಕುಳಿತುಕೊಳ್ಳಬೇಕು; ರಾಜ್ಯಗಳ ಸ್ವಾಯತ್ತತೆಯನ್ನು ಕಾಪಾಡುತ್ತಲೇ ತೆರಿಗೆಯ ಸರಳೀಕರಣ ಸಾಧ್ಯವಿಲ್ಲವೆ? ಈ ಬಗ್ಗೆ ಯೋಚಿಸಬೇಕಲ್ಲವೆ? ಜೊತೆಗೆ ನೋಡಿ; ಕೇಂದ್ರವು ರಾಜ್ಯದಲ್ಲಿ ಜಾರಿಮಾಡುವ ರೈಲ್ವೆ , ಸಾರಿಗೆ ಮುಂತಾದ ಯೋಜನೆಗಳಿಗೆ ರಾಜ್ಯಗಳ ಪಾಲು ಕೇಳುತ್ತದೆ. ರಾಜ್ಯಗಳು ಗರಿಷ್ಠ ಸಂಪನ್ಮೂಲವನ್ನು ಕ್ರೋಡೀಕರಿಸಲು ಸಾಧ್ಯವಾಗದಿದ್ದರೆ ಕೇಂದ್ರದ ಯೋಜನೆಗಳು ರಾಜ್ಯದಲ್ಲಿ ಜಾರಿಯಾಗುವುದೇ ಇಲ್ಲ. ಆದ್ದರಿಂದ ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಮರುಚಿಂತನೆ ನಡೆದು ರಾಜ್ಯಗಳ ಸ್ವಾಯತ್ತತೆಗೆ ಪೂರಕ ನೀತಿಯನ್ನು ರೂಪಿಸಬೇಕು. ಮುಂದುವರೆದು ಹೇಳುವುದಾದರೆ, ರಾಜ್ಯಗಳ ಯೋಜನೆಗಳ ಬಗ್ಗೆ ಚರ್ಚಿಸುವುದಕ್ಕಾಗಿ ಸ್ಥಾಪನೆಯಾಗಿದ್ದ ಯೋಜನಾ ಆಯೋಗವನ್ನು ವಿಸರ್ಜಿಸಲಾಗಿದೆ. ಆ ಜಾಗದಲ್ಲಿ ‘ನೀತಿ ಆಯೋಗ’ ಬಂದಿದೆ. ರಾಜ್ಯಸರ್ಕಾರಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಇದ್ದ ‘ರಾಷ್ಟ್ರೀಯ ಅಭಿವೃದ್ಧಿ ಮಂಡಳಿ’ಯನ್ನು ನಿರ್ಜೀವಗೊಳಿಸಲಾಗಿದೆ. ಸಂವಿಧಾನದ ೨೬೩ನೇ ಪರಿಚ್ಛೇದದ ಪ್ರಕಾರ ಇರುವ ಅಂತರ ರಾಜ್ಯ ಮಂಡಳಿಯ ಸಭೆಗಳು ಸಹ ಸರಿಯಾಗಿ ನಡೆಯುತ್ತಿಲ್ಲವೆಂಬ ಆಕ್ಷೇಪವಿದೆ. ಒಟ್ಟಾರೆ ಹೇಳುವುದಾದರೆ ರಾಜ್ಯಗಳು ಸಂಯುಕ್ತ ಭಾರತದ ಭಾಗವಾಗುವ ಬದಲು ‘ಕೇಂದ್ರ’ ಸರ್ಕಾರದ ತೋರು ಬೆರಳ ದಾರಿಯಲ್ಲಿ ಸಾಗುವ ಪಾದಚಾರಿಗಳಾಗುತ್ತಿವೆ.
ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ನೀತಿಗಳಿಂದ ಅಧಿಕಾರ ಮೊಟಕಾಗುವುದು ಮತ್ತು ಆರ್ಥಿಕ ಶಕ್ತಿ ಕುಗ್ಗುವುದಷ್ಟೇ ಸಮಸ್ಯೆಯಲ್ಲ. ಶೈಕ್ಷಣಿಕವಾಗಿ, ಭಾಷಿಕವಾಗಿ, ಸಾಂಸ್ಕøತಿಕವಾಗಿ ಸಮಸ್ಯೆಗಳು ಎದುರಾಗುತ್ತವೆ. ಕೇಂದ್ರ ಕೃಪಾಪೋಷಿತ ಶಿಕ್ಷಣವೇ ಶ್ರೇಷ್ಠವೆಂಬ ಭ್ರಮೆ ಬೆಳೆಯುತ್ತಲೇ ಇರುವುದನ್ನು ಈಗ ಗಮನಿಸಬಹುದು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನೂ ರಾಷ್ಟ್ರಮಟ್ಟದಲ್ಲಿ ಕೇಂದ್ರೀಕರಿಸಿಕೊಂಡಿದ್ದು ರಾಜ್ಯಗಳ ಹಕ್ಕು ಮೊಟಕಾಗಿರುವುದನ್ನೂ ನೋಡಬಹುದು. ನಾನಿಲ್ಲಿ ಪ್ರತಿಪಾದಿಸುತ್ತಿರುವುದು ಕೇಂದ್ರ ಸರ್ಕಾರದ ಮಧ್ಯಪ್ರವೇಶ ಬೇಡವೇ ಬೇಡ ಎಂದಲ್ಲ. ಒಕ್ಕೂಟ ವ್ಯವಸ್ಥೆಯೆನ್ನುವುದು ಕೇಂದ್ರೀಕೃತ ಪದ್ಧತಿಗೆ ವಿರುದ್ಧವಾದುದು ಎಂಬ ವಿವೇಕದಿಂದ ನಡೆದುಕೊಳ್ಳಬೇಕು ಎಂದು ಹೇಳಬಯಸುತ್ತೇನೆ. ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆಯಾಗದ ಸಮತೋಲನದ ಅಗತ್ಯವನ್ನು ಪ್ರತಿಪಾದಿಸುತ್ತಿದ್ದೇನೆ. ಒಟ್ಟಾರೆಯಾಗಿ ರಾಜ್ಯಗಳ ಸ್ವಾಯತ್ತತೆ ಮತ್ತು ರಾಜ್ಯಗಳೊಳಗಿನ ಸ್ವಾಯತ್ತತೆ – ಎರಡೂ ಮುಖ್ಯವಾಗಬೇಕು ಎಂಬುದು ನನ್ನ ಆಶಯ ಮತ್ತು ಆಗ್ರಹ.
ಮಾತೃಭಾಷೆ ಅಥವಾ ರಾಜ್ಯಭಾಷಾ ಶಿಕ್ಷಣ ಮಾಧ್ಯಮ
ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಘಟನಾವಳಿಗಳಲ್ಲಿ ಉದಾಹರಿಸಲೇಬೇಕಾದ ಇತ್ತೀಚಿನ ಮುಖ್ಯ ಪ್ರಕರಣ- ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮದ ಅಳವಡಿಕೆ ಸಂಬಂಧಿಸಿದೆ. ಕರ್ನಾಟಕ ಶಿಕ್ಷಣ ಅಧಿನಿಯಮದ ಮೂರನೇ ಪರಿಚ್ಛೇದವು ಸಾಮಾನ್ಯ ಶಿಕ್ಷಣವನ್ನೂ ಒಳಗೊಂಡಂತೆ ಎಲ್ಲ ಹಂತದ ಶಿಕ್ಷಣವನ್ನು ಕ್ರಮಬದ್ಧಗೊಳಿಸುವ ಅಧಿಕಾರವನ್ನು ರಾಜ್ಯಸರ್ಕಾರಕ್ಕೆ ನೀಡಿದೆ. ಇದೇ ಅಧಿನಿಯಮದ ಏಳನೇ ಪರಿಚ್ಛೇದವು ಯಾವುದೇ ರೀತಿಯ ಪಠ್ಯಕ್ರಮವನ್ನು ನಿಗದಿಗೊಳಿಸುವ ಅಧಿಕಾರವನ್ನೂ ರಾಜ್ಯಸರ್ಕಾರಕ್ಕೆ ನೀಡಿದೆ. ಇದು ರಾಜ್ಯದ ವಿಧಾನಮಂಡಲವು ಅಂಗೀಕರಿಸಿದ ಕಾಯಿದೆ. ಆದರೂ ಇದರ ಅನುಷ್ಠಾನಕ್ಕೆ ಅನೇಕ ಅಡ್ಡಿಗಳು ಎದುರಾಗುತ್ತಿದೆ. ಪ್ರಾಥಮಿಕ ಶಿಕ್ಷಣದ ಬೋಧನಾ ಮಾಧ್ಯಮವನ್ನೂ ರಾಜ್ಯ ಸರ್ಕಾರವು ನಿರ್ಧರಿಸಲಾಗದಂತಹ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿಬಿಟ್ಟಾಗಿದೆ. ಅದರ ಇತಿಹಾಸವನ್ನೊಮ್ಮೆ ನೋಡಿ:
ದಿನಾಂಕ ೦೬.೦೫.೨೦೧೪ರಂದು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಸರ್ಕಾರವು ಕಡ್ಡಾಯಮಾಡುವಂತಿಲ್ಲ ಎಂದು ತೀರ್ಪು ನೀಡಿದೆ. ಇದು ದೇಶದ ಎಲ್ಲ ಮಾತೃಭಾಷೆ ಹಾಗೂ ರಾಜ್ಯ ಭಾಷೆಗಳಿಗೆ ಆಘಾತಕಾರಿಯಾಗುವ ತೀರ್ಪು. ಕರ್ನಾಟಕ ಸರ್ಕಾರವು ರಾಜ್ಯದ ಉಚ್ಚನ್ಯಾಯಾಲಯದ ೦೩.೦೭.೨೦೦೮ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿಯ ಬಗ್ಗೆ ನೀಡಿದ ಈ ತೀರ್ಪು ಇಡೀ ದೇಶದ ಪ್ರಾಥಮಿಕ ಶಿಕ್ಷಣ ಮತ್ತು ರಾಜ್ಯಗಳ ಹಕ್ಕಿನ ಪ್ರಶ್ನೆಯಾಗಿ ಪರಿಣಮಿಸುತ್ತದೆ. ವಿಶೇಷ ಮತ್ತು ವಿಚಿತ್ರವೆಂದರೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷೆಯ ಮಾಧ್ಯಮ ಕಡ್ಡಾಯವಾಗಬೇಕೆಂದು ಸುಪ್ರೀಂಕೋರ್ಟ್ನಲ್ಲಿ ಹೋರಾಡಿದ ಏಕೈಕ ರಾಜ್ಯವೆಂದರೆ ಕರ್ನಾಟಕ. ನಮ್ಮ ರಾಜ್ಯದ ಕೆಲವು ಕನ್ನಡಪರ ಚಿಂತಕರು ಮತ್ತು ಹೋರಾಟಗಾರರು ಭಾಷಾಭಿಮಾನಕ್ಕೆ ಏಕೈಕ ಉದಾಹರಣೆಯೆಂಬಂತೆ ಬಿಂಬಿಸುತ್ತ ಬಂದ ತಮಿಳುನಾಡಿನ ಅರ್ಜಿಯೂ ಸುಪ್ರೀಂಕೋರ್ಟಿನಲ್ಲಿ ಇತ್ತಾದರೂ ತಮಿಳುನಾಡಿನ (ಜಯಲಲಿತ) ಸರ್ಕಾರ ಈ ಅರ್ಜಿಯನ್ನು ಹಿಂಪಡೆದು ಕಾನೂನು ಹೋರಾಟವನ್ನು ಕೈಬಿಟ್ಟಿತು! ಆಂಗ್ಲ ಮಾಧ್ಯಮದವರಿಗೆ ಮುಕ್ತ ಅವಕಾಶ ನೀಡಲು ಸಿದ್ಧವಾಯಿತು. ಇನ್ನು ಆಂಧ್ರಪ್ರದೇಶದ ಒಂದು ಅರ್ಜಿಯು ಸುಪ್ರೀಂಕೋರ್ಟಿನಲ್ಲಿ ಇತ್ತಾದರೂ ತೆಲಂಗಾಣ ರಾಜ್ಯ ರಚನೆಯ ಸಮಸ್ಯೆಯಲ್ಲಿ ಸೆಣಸುತ್ತಿದ್ದ ಆ ರಾಜ್ಯಕ್ಕೆ ಈ ಅರ್ಜಿ ಮುಖ್ಯವಾಗಲಿಲ್ಲ. ಕಡೆಗೆ ಉಳಿದದ್ದು ಕರ್ನಾಟಕದ ಮೇಲ್ಮನವಿಯ ಅರ್ಜಿ ಮಾತ್ರ.
ಕಿರಿಯ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮ ಕಡ್ಡಾಯವಾಗಬೇಕೆಂಬ ಕರ್ನಾಟಕದ ಕಾನೂನು ಹೋರಾಟಕ್ಕೆ ಒಂದು ಇತಿಹಾಸವಿದೆ. ದಾಖಲೆಯಲ್ಲಿರಲೆಂದು ಮುಂದಿನ ವಿವರ ಕೊಡುತ್ತಿದ್ದೇನೆ.
ಅದು ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಕಾಲ. ಪ್ರೌಢಶಾಲೆಯಲ್ಲಿ ಪ್ರಥಮಭಾಷೆಯಾಗಿ ಕನ್ನಡವನ್ನೂ ಒಳಗೊಂಡಂತೆ ತಮಿಳು, ತೆಲುಗು ಮುಂತಾದ ಭಾಷೆಗಳ ಜೊತೆಗೆ ಸಂಸ್ಕøತವೂ ಇತ್ತು. ಭಾಷಾ ಅಲ್ಪಸಂಖ್ಯಾತರಿಗೆ ಭಾಷಿಕ ರಕ್ಷಣೆ ಕೊಡಬೇಕೆಂಬುದು ಸಂವಿಧಾನದತ್ತ ನಿಯಮವಾದ್ದರಿಂದ ಆಯಾ ರಾಜ್ಯಗಳಲ್ಲಿರುವ ಅಲ್ಪಸಂಖ್ಯಾತರ ಭಾಷೆಗಳನ್ನು ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಸೇರಿಸುವುದು ಒಂದು ಕಾನೂನಾತ್ಮಕ ಪದ್ಧತಿ. ಆದರೆ ಅಲ್ಪಸಂಖ್ಯಾತರು ಅವರದೇ ಭಾಷೆಯನ್ನು ಆಯ್ಕೆಮಾಡಿಕೊಳ್ಳಬೇಕೆಂಬ ಕಡ್ಡಾಯವೇನೂ ಇಲ್ಲ. ಇದೊಂದು ಸಂವಿಧಾನದತ್ತ ಅವಕಾಶ. ಈ ಭಾಷೆಗಳಿಂದ ಕನ್ನಡ ಭಾಷೆಗೆ ಧಕ್ಕೆಯಾಗಲಿಲ್ಲ. ಸಂಸ್ಕøತದಿಂದ ಧಕ್ಕೆಯಾಗತೊಡಗಿತು. ಇದಕ್ಕೆ ಕಾರಣವಿತ್ತು. ಸಂಸ್ಕøತವನ್ನು ತೆಗೆದುಕೊಂಡ ಪ್ರೌಢಶಾಲಾ ವಿದ್ಯಾರ್ಥಿಗಳು ಸಂಸ್ಕøತಭಾಷೆಯಲ್ಲೇ ಉತ್ತರಿಸಬೇಕೆಂಬ ನಿಯಮವಿರಲಿಲ್ಲ. ಕನ್ನಡ ಅಥವಾ ಇಂಗ್ಲಿಷ್ನಲ್ಲೂ ಉತ್ತರಿಸ ಬಹುದಿತ್ತು. ಪ್ರಥಮ ಭಾಷೆಯೆನ್ನುವುದು ಭಾಷಾಪ್ರಧಾನ ಕಲಿಕೆಯಾಗಿದ್ದರೂ ಈ ರಿಯಾಯಿತಿಯಿತ್ತು. ಜೊತೆಗೆ ಸಂಸ್ಕøತದ ಪಠ್ಯ ತುಂಬಾ ಸುಲಭವಾಗಿತ್ತು. ಹೀಗೆ ಸಂಸ್ಕøತವು ಎಸ್.ಎಸ್.ಎಲ್.ಸಿ.ಯಲ್ಲಿ ರ್ಯಾಂಕ್ ಪಡೆಯುವ ಒಂದು ಸುಲಭ ಸಾಧನವಾಗಿತ್ತು. ಇದರ ಫಲವಾಗಿ ಪ್ರೌಢಶಾಲೆಯಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗತೊಡಗಿತು. ಒಂದು ಉದಾಹರಣೆ ಕೊಡುವುದಾದರೆ ಪ್ರತಿಷ್ಠಿತವೆನ್ನಿಸಿಕೊಂಡ ಪ್ರೌಢಶಾಲೆಯೊಂದರಲ್ಲಿ ಕನ್ನಡ ಪ್ರಥಮಭಾಷೆಯ ಒಂದು ಸೆಕ್ಷನ್ ಇದ್ದರೆ, ಸಂಸ್ಕøತ ಪ್ರಥಮ ಭಾಷೆಯ ನಾಲ್ಕು ಸೆಕ್ಷನ್ಗಳಿದ್ದವು. ಪ್ರೌಢಶಾಲೆಯಲ್ಲಿ ಕನ್ನಡ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಆತಂಕಪಟ್ಟುಕೊಂಡ ಅನೇಕ ಸಾಹಿತಿ-ಕಲಾವಿದರು, ಶಿಕ್ಷಣತಜ್ಞರು ಈ ಬಗ್ಗೆ ಸಾರ್ವಜನಿಕವಾಗಿ ಮಾತಾಡತೊಡಗಿದರು. ಸರ್ಕಾರದ ಗಮನಕ್ಕೂ ತಂದರು. ಪಠ್ಯ ಕ್ರಮದಲ್ಲಿ ಪ್ರಥಮ ಭಾಷೆಯೆನ್ನುವುದು ಮಾತೃಭಾಷೆಯಾಗಿರಬೇಕು. ಆದರೆ ಯಾರ ಮಾತೃಭಾಷೆಯೂ ಅಲ್ಲದ ಸಂಸ್ಕøತವನ್ನು ಪ್ರಥಮ ಭಾಷೆಗಳ ಪಟ್ಟಿಯಲ್ಲಿ, ಸೇರಿಸಿರುವುದು ತಪ್ಪು ಎಂಬ ತಾತ್ವಿಕತೆಯನ್ನೂ ಮಂಡಿಸಲಾಯಿತು. ಆಗ ರಾಜ್ಯದ ಮುಖ್ಯಮಂತ್ರಿಯವರಾಗಿದ್ದ ದೇವರಾಜ ಅರಸು ಅವರು ಕೂಡಲೇ ಸ್ಪಂದಿಸಿದರು. ಪ್ರೌಢಶಾಲೆ ಪಠ್ಯಕ್ರಮದ ಪ್ರಥಮಭಾಷೆ ಪಟ್ಟಿಯಲ್ಲಿದ್ದ ಸಂಸ್ಕøತವನ್ನು ಮೂರನೇ ಭಾಷೆಯ ಪಟ್ಟಿಗೆ ಸೇರಿಸುವ ತೀರ್ಮಾನ ಕೈಗೊಂಡರು. ಸರ್ಕಾರ ಆದೇಶ ಹೊರಡಿಸಿತು. ಯಾವ ಒತ್ತಡಕ್ಕೂ ಮಣಿಯಲಿಲ್ಲ. ಸಂಸ್ಕøತವು ಪ್ರಥಮ ಭಾಷೆಯ ಪಟ್ಟಿಯಲ್ಲಿರುವುದನ್ನು ವಿರೋಧಿಸಿದವರು (ನನ್ನನ್ನೂ ಒಳಗೊಂಡಂತೆ) ಸಂಸ್ಕøತ ಕಲಿಕೆಯ ವಿರೋಧಿಗಳಾಗಿರಲಿಲ್ಲ. ಪ್ರಥಮ ಭಾಷೆಗಳ ಪಟ್ಟಿಯಲ್ಲಿ ಈಗ ಚಾಲ್ತಿಯಲ್ಲಿರುವ ಜನಭಾಷೆಗಳು ಮಾತ್ರ ಇರಬೇಕೆಂಬ ತತ್ವ ನಮ್ಮದಾಗಿತ್ತು.
ಮುಂದೆ, ದೇವರಾಜ ಅರಸು ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಯಿತು. ಗುಂಡೂರಾವ್ ಅವರು ಮುಖ್ಯಮಂತ್ರಿಯಾದರು. ಸಂಸ್ಕøತ ಪರವಾದವರು ಕೂಡಲೇ ಕಾರ್ಯ ಪ್ರವೃತ್ತರಾದರು. ಗುಂಡೂರಾಯರು ಮೂರನೇ ಭಾಷೆಯಾಗಿದ್ದ ಸಂಸ್ಕøತವನ್ನು ಮತ್ತೆ ಪ್ರಥಮ ಭಾಷೆ ಮಾಡಿದರು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಬಂಡಾಯ ಸಾಹಿತ್ಯ ಸಂಘಟನೆಯು ಕನ್ನಡದ ಐವತ್ತಕ್ಕೂ ಹೆಚ್ಚು ಸಾಹಿತಿಗಳ ಸಹಿಸಂಗ್ರಹ ಮಾಡಿ ಇಪ್ಪತ್ತೈದು ಸಾವಿರ ಕರಪತ್ರ ಮುದ್ರಿಸಿ ರಾಜ್ಯಾದ್ಯಂತ ಹಂಚಿತು. ‘ಕನ್ನಡ ಹೋರಾಟ ವಾರ’ ಎಂಬ ಒಂದು ವಾರದ ಕಾರ್ಯಕ್ರಮ ನಡೆಸಿತು. ಬೆಂಗಳೂರು, ಧಾರವಾಡ ಮುಂತಾದ ಕಡೆಯ ಕನ್ನಡಪರ ಸಂಘಟನೆಗಳು ಈ ಸರ್ಕಾರದ ಆದೇಶವನ್ನೂ ಸಮರ್ಥವಾಗಿ ಪ್ರತಿರೋಧಿಸಿದವು. ರಾಜ್ಯಾದ್ಯಂತ ಹಬ್ಬುತ್ತಿದ್ದ ಪ್ರತಿರೋಧಕ್ಕೆ ಉತ್ತರವಾಗಿ ಗುಂಡೂರಾವ್ ಸರ್ಕಾರವು ಪ್ರೌಢಶಾಲೆಯ ಭಾಷಾ ಪಠ್ಯಕ್ರಮದ ಬಗ್ಗೆ ಪರಿಶೀಲಿಸಿ ಶಿಫಾರಸ್ಸು ಮಾಡಲು ಡಾ. ವಿ.ಕೃ.ಗೋಕಾಕ್ ನೇತೃತ್ವದ ಸಮಿತಿ ರಚಿಸಿತು. ಗೋಕಾಕ್ ಸಮಿತಿಯು ಪ್ರಥಮಭಾಷೆ ಪಟ್ಟಿಯಿಂದ ಸಂಸ್ಕøತವನ್ನು ತೆಗೆದು ಹಾಕಿದ್ದಲ್ಲದೆ ಕನ್ನಡದ ಜೊತೆಗಿದ್ದ ಉಳಿದ ಭಾಷೆಗಳನ್ನು ತೆಗೆದುಹಾಕಿತು. ಕನ್ನಡವೊಂದೇ ಪ್ರಥಮ ಭಾಷೆಯಾಗಿರಬೇಕು ಎಂದು ಶಿಫಾರಸ್ಸು ಮಾಡಿತು. ಜೊತೆಗೆ ಮಾತೃಭಾಷಾಮಾಧ್ಯಮದ ಬಗ್ಗೆಯೂ ಪ್ರಸ್ತಾಪಿಸಿತು.
‘ಗೋಕಾಕ್ ವರದಿ’ಯನ್ನು ಜಾರಿಗೆ ತರಬೇಕೆಂದು ಮೊದಲು ಒತ್ತಾಯ ತಂದವರು ಸಾಹಿತಿ-ಕಲಾವಿದರು. ಬೆಂಗಳೂರು, ಧಾರವಾಡಗಳಲ್ಲಿ ಸತ್ಯಾಗ್ರಹ ಶುರುವಾಯಿತು. ಈ ಘಟ್ಟದಲ್ಲಿ ಡಾ. ರಾಜಕುಮಾರ್ ಚಳವಳಿಗೆ ಧುಮುಕಿದರು. ರಾಜ್ಯಾದ್ಯಂತ ಸಂಚರಿಸಿ ಕನ್ನಡಪರ ಅಲೆಗೆ ಕಾರಣರಾದರು. ಸರ್ಕಾರವು ಗೋಕಾಕ್ ವರದಿಗನುಗುಣವಾಗಿ ೨೦.೦೭.೧೯೮೨ರಂದು ಆದೇಶ ಹೊರಡಿಸಿತು. ಇದರ ಪ್ರಕಾರ ಪ್ರೌಢಶಾಲೆಗಳಲ್ಲಿ ಕನ್ನಡವೊಂದೇ ಪ್ರಥಮ ಭಾಷೆ. ಒಂದರಿಂದ ನಾಲ್ಕನೇ ತರಗತಿವರೆಗೆ ಮಾತೃಭಾಷಾ ಮಾಧ್ಯಮ. ಕನ್ನಡೇತರ ಮಾಧ್ಯಮ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಕನ್ನಡ ಐಚ್ಛಿಕ ಭಾಷೆ. ಆದರೆ ಈ ಆದೇಶವನ್ನು ರಾಜ್ಯದ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಕನ್ನಡಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಆರಂಭವಾಯಿತು.
ಸಾಕಷ್ಟು ಕಾಲ ವಿಚಾರಣೆ ನಡೆದು ರಾಜ್ಯದ ಉಚ್ಚ ನ್ಯಾಯಾಲಯವು ೨೦.೦೭.೧೯೮೨ರ ಸರ್ಕಾರಿ ಆದೇಶವನ್ನು ರದ್ದುಮಾಡಿತ್ತು ಈ ಆದೇಶವು ಸಂವಿಧಾನದ ೧೪, ೨೯(೧) ಮತ್ತು ೩೯(೧) ನೇ ಪರಿಚ್ಛೇದಗಳನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿತು. ಸಂವಿಧಾನದ ೧೪ನೇ ಪರಿಚ್ಛೇದವು ಸಮಾನತೆಯ ತತ್ವವನ್ನೂ ೨೯(೧) ಮತ್ತು ೩೦(೧)ನೇ ಅಲ್ಪಸಂಖ್ಯಾತರ ಪರವಾದ ಆಶಯವನ್ನು ಪ್ರತಿಪಾದಿಸುತ್ತವೆ. ಕನ್ನಡವೊಂದೇ ಪ್ರಥಮ ಭಾಷೆಯಾದೆ, ಅಲ್ಪ ಸಂಖ್ಯಾತರು ಅವರವರ ಭಾಷೆಯನ್ನು ಕಲಿಯುವ ಹಕ್ಕಿನಿಂದ ವಂಚಿತರಾಗುತ್ತದೆಯೆಂಬ ಅಂಶ ಇಲ್ಲಿ ಮುಖ್ಯವಾಯಿತು. ಆಗ ಸರ್ಕಾರವು ೧೯.೦೬.೧೯೮೯ ರಂದು ಹೊಸ ಆದೇಶವನ್ನು ಹೊರಡಿಸಿ ಅಲ್ಪಸಂಖ್ಯಾತರ ಭಾಷೆಗಳಿಗೆ ಅವಕಾಶ ಕಲ್ಪಿಸಿತು. (ಈ ನಡುವೆ ಸಂಸ್ಕøತವೂ ಮತ್ತೆ ಪ್ರಥಮ ಭಾಷೆಯ ಪಟ್ಟಿಗೆ ಸೇರಿಬಿಟ್ಟಿತು!) ಜೊತೆಗೆ ಮಾತೃಭಾಷಾ ಮಾಧ್ಯಮದ ನಿಯಮವನ್ನು ಮುಂದುವರೆಸಿತು.
ಆದರೆ ಮಾತೃಭಾಷಾ ಮಾಧ್ಯಮದ ವಿಷಯವನ್ನು ಪ್ರಶ್ನಿಸಿ ಕೆಲವರು (ಖಾಸಗಿ ಶಿಕ್ಷಣ ಸಂಸ್ಥೆಯವರು) ಸುಪ್ರೀಂಕೋರ್ಟಿಗೆ ಹೋದರು. ೧೯೯೩ರಲ್ಲಿ ತೀರ್ಪು ನೀಡಿದ ಸುಪ್ರೀಂಕೋರ್ಟು ಕರ್ನಾಟಕ ಸರ್ಕಾರದ ೧೯-೦೬-೧೯೮೯ರ ಆದೇಶವನ್ನು ಎತ್ತಿ ಹಿಡಿಯಿತು. ಅಷ್ಟೇ ಅಲ್ಲ, ‘ಭಾಷಾ ನೀತಿಯನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ರಾಜ್ಯಕ್ಕೆ ತಿಳಿದಿದೆ. ಈ ವಿಚಾರದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದೂ ಹೇಳಿತು.
ಸುಪ್ರೀಂ ಕೋರ್ಟಿನ ತೀರ್ಪಿನ ನಂತರ ೨೯.೦೪.೧೯೯೪ರಲ್ಲಿ ಕರ್ನಾಟಕ ಸರ್ಕಾರವು ಹೊಸ ಆದೇಶವನ್ನು ಹೊರಡಿಸಿತು. ಈ ಆದೇಶದ ಪ್ರಕಾರ ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತೃ ಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮ, ಕನ್ನಡೇತರ ಶಾಲೆಗಳಲ್ಲಿ ಮೂರನೇ ತರಗತಿಯಿಂದ ಕನ್ನಡ ಕಲಿಕೆ, ಐದನೇ ತರಗತಿಯಿಂದ ಯಾವುದೇ ಭಾಷಾ ಮಾಧ್ಯಮಕ್ಕೆ ಮುಕ್ತ ಅವಕಾಶ, ಸಿಬಿಎಸ್ಇ, ಐಸಿಎಸ್ಇ- ಶಾಲೆಗಳಿಗೆ ರಾಜ್ಯ ಸರ್ಕಾರದ ನಿರಾಕ್ಷೇಪಣಾ ಪತ್ರ ಕಡ್ಡಾಯ- ಈ ಅಂಶಗಳು ಇದ್ದವು. ಸಹ್ಯಾದ್ರಿ ಸಂಸ್ಥೆಯು ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೊರ್ಟಿಗೆ ಹೋದಾಗ ೧೯೯೯ರಲ್ಲಿ ಸುಪ್ರೀಂ ಕೋರ್ಟು ‘ಈ ಪ್ರಕರಣವೇ ನಿರರ್ಥಕ’ ಎಂದು ಅರ್ಜಿಯನ್ನು ತಳ್ಳಿಹಾಕಿತು.
ಅಂದರೆ ೧೯೯೩ ಮತ್ತು ೧೯೯೯ರಲ್ಲಿ ಸುಪ್ರೀಂಕೋರ್ಟು ಒಂದರಿಂದ ನಾಲ್ಕನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡುವುದಕ್ಕೆ- ಒಪ್ಪಿಗೆ ನೀಡಿತ್ತು.
ಆದರೆ ಕಾನೂನು ಹೋರಾಟ ನಿಲ್ಲಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ‘ಕುಸ್ಮಾ’ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ೧೯೯೪ರ ಸರ್ಕಾರಿ ಆದೇಶವನ್ನು ಮತ್ತೆ ಪ್ರಶ್ನಿಸಿದ್ದು ವಿಚಾರಣೆ ಮುಂದುವರೆಯಿತು. ೦೩.೦೭.೨೦೦೮ರಂದು ತೀರ್ಪು ನೀಡಿದ ರಾಜ್ಯದ ಉಚ್ಚ ನ್ಯಾಯಾಲಯವು ‘ಮಾತೃಭಾಷಾ ಮಾಧ್ಯಮವನ್ನು ಸರ್ಕಾರಿ ಮತ್ತು ಸರ್ಕಾರದ ಅನುದಾನಿತ ಶಾಲೆಗಳಿಗೆ ಮಾತ್ರ ಕಡ್ಡಾಯ ಮಾಡಬಹುದು. ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಕಡ್ಡಾಯ ಮಾಡುವಂತಿಲ್ಲ’ ಎಂದು ಹೇಳಿತು.
ಅಂದರೆ ಕೋರ್ಟಿನ ಈ ತೀರ್ಪು ಖಚಿತವಾಗಿ ಖಾಸಗಿಯವರ ಪರವಾಗಿದೆ. ಶೈಕ್ಷಣಿಕ ವಿವೇಕದ ನೀತಿಯನ್ನು ನಿರ್ಲಕ್ಷಿಸಿದೆ. ಉಚ್ಚನ್ಯಾಯಾಲಯದ ಈ ತೀರ್ಪು ೧೯೯೪ರ ಸರ್ಕಾರಿ ಆದೇಶವನ್ನು ರದ್ದುಗೊಳಿಸಲು ಸಂವಿಧಾನದ ೧೯(೧)ಜಿ ೨೬ ಮತ್ತು ೩0(೧) ಪರಿದಚ್ಛೇದಗಳನ್ನು ಬಳಸಿಕೊಳ್ಳುತ್ತದೆ. ೧೯(೧)ಜಿ ಪರಿಚ್ಛೇದವು ‘ಭಾರತದ ನಾಗರಿಕರ ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ ವಹಿವಾಟುಗಳನ್ನು ನಡೆಸುವ ಹಕ್ಕನ್ನು ನೀಡುತ್ತದೆ’, ಈ ಹಕ್ಕನ್ನು ಶಿಕ್ಷಣಕ್ಷೇತ್ರಕ್ಕೆ ಅನ್ವಯಿಸುವುದು ಸರಿಯೆ? ತನ್ಮೂಲಕ ಶಿಕ್ಷಣ ಕ್ಷೇತ್ರವೂ ಒಂದು ವ್ಯಾಪಾರ ಎಂದು ಅಧಿಕೃತವಾಗಿ ಒಪ್ಪಿಕೊಂಡಂತಾಗಲಿಲ್ಲವೆ?
ಇನ್ನು, ೨೬ನೇ ಪರಿಚ್ಛೇದವು ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ. ೩0(೧) ನೇ ಪರಿಚ್ಛೇದವು – ಅಲ್ಪಸಂಖ್ಯಾತರು ತಮ್ಮ ಇಚ್ಛೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಆಡಳಿತ ನಡೆಸುವ ಹಕ್ಕನ್ನು ನೀಡುತ್ತದೆ. ಮಾತೃಭಾಷಾ ಮಾಧ್ಯಮವು ಅಲ್ಪಸಂಖ್ಯಾತರ ಭಾಷಾ ಮಾಧ್ಯಮಕ್ಕೂ ಮನ್ನಣೆ ಕೊಡುತ್ತದೆಯಾದ್ದರಿಂದ ಅವರ ಭಾಷೆ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೇಗೆ ಧಕ್ಕೆ ತರುತ್ತದೆಯೆಂದು ಅರ್ಥವಾಗುವುದಿಲ್ಲ. ಹಾಗೆ ನೋಡಿದರೆ ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಭಾಷಾಶಾಲೆಗಳಿಗೆ ಅವಕಾಶ ಕಲ್ಪಿಸುವುದರ ಮೂಲಕ ಸಂವಿಧಾನದ ೩೫0ಎ ವಿಧಿಯನ್ನು ಎತ್ತಿಹಿಡಿದಿದೆ. (೩೫0ಎ ವಿಧಿಯು ಭಾಷಾ ಅಲ್ಪಸಂಖ್ಯಾತರು ತಮ್ಮ ಮಾತೃಭಾಷೆಯಲ್ಲಿ ಕಲಿಯಲು ಅವಕಾಶವಿರಬೇಕೆಂದು ಹೇಳುತ್ತದೆ. ಕರ್ನಾಟಕದಲ್ಲಿ ಉರ್ದುವನ್ನೂ ಒಳಗೊಂಡಂತೆ ಸ್ಥಾಪಿತವಾಗಿರುವ ಅಲ್ಪಸಂಖ್ಯಾತ ಭಾಷಾಶಾಲೆಗಳ ಪಟ್ಟಿಯು ಸಂವಿಧಾನದ ಆಶಯವನ್ನು ಪೂರೈಸಿರುವುದಕ್ಕೆ ಸಾಕ್ಷಿಯಾಗಿದೆ.)
ಅದೇನೇ ಇರಲಿ, ೩.೭.೨00೮ರ ತೀರ್ಪು ರಾಜ್ಯಸರ್ಕಾರದ ೧೯೯೪ರ ಆದೇಶಕ್ಕೆ ವಿರುದ್ಧವಾಗಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತು. ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠವು ಈ ಅರ್ಜಿಯನ್ನು ಐವರು ನ್ಯಾಯಾಧೀಶರಿದ್ದ ಸಂವಿಧಾನ ಪೀಠಕ್ಕೆ ವರ್ಗಾಹಿಸಿತು. ಈ ಸಂವಿಧಾನ ಪೀಠವು ರಾಜ್ಯ ಹೈಕೋರ್ಟ್ ನೀಡಿದ ೨00೮ರ ತೀರ್ಪನ್ನೇ ಎತ್ತಿಹಿಡಿದಿದೆ. ೧೯೯೪ರ ಸರ್ಕಾರಿ ಆದೇಶವನ್ನು ರದ್ದುಪಡಿಸಿದೆ ತನ್ನ ತೀರ್ಪಿಗೆ ಅದು ಬಳಸಿಕೊಂಡಿರುವ ಸಂವಿಧಾನದ ಪರಿಚ್ಛೇದ ೧೯(೧), ಮುಖ್ಯವಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಈ ದೇಶದ ನಾಗರಿಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ವಿವಿಧ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸುವ ಸ್ವಾತಂತ್ರ್ಯವನ್ನು ನೀಡುವ ಈ ಪರಿಚ್ಛೇದವನ್ನು ಶಿಕ್ಷಣದ ಆಯ್ಕೆಯ ಹಕ್ಕಿಗೆ ಲಗತ್ತಿಸಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸುವುದು ಅಗತ್ಯ. ಪೋಷಕರು ತಮ್ಮ ಮಕ್ಕಳಿಗೆ ಯಾವ ಭಾಷಾಮಾಧ್ಯಮ ಬೇಕೆಂದು ಆಯ್ಕೆ ಮಾಡಿಕೊಳ್ಳುವ ಹಕ್ಕು ಹೊಂದಿದ್ದಾರೆಂಬ ತೀರ್ಪಿಗೂ ವಾಕ್ ಸ್ವಾತಂತ್ರ್ಯದ ಸಂಬಂಧ ಇದೆ ಎನ್ನುವುದು ತೀರಾ ತೆಳುವಾದ ತಿಳುವಳಿಕೆ. ೧೯(೧) ನೇ ಪರಿಚ್ಛೇದವು ಸಹ ಮುಖ್ಯವಾಗಿ ಅಭಿಪ್ರಾಯ- ಅಭಿವ್ಯಕ್ತಿಗೆ ಸಂಬಂಧಿಸಿರುವುದರಿಂದ ಭಾಷೆ ಮತ್ತು ಶಿಕ್ಷಣ ನೀತಿಯ ಆಯ್ಕೆಗೆ ಸಂಬಂಧಿಸಿದ್ದಲ್ಲ ಎಂದು ನನ್ನ ನಮ್ರ ತಿಳುವಳಿಕೆ. ಅಲ್ಪಸಂಖ್ಯಾತರ ಭಾಷೆಗೆ ಸಂಬಂಧಿಸಿದ ೩೫0(ಎ) ಪರಿಚ್ಛೇದವನ್ನು ತನ್ನ ತೀರ್ಪಿಗಾಗಿ ಸುಪ್ರೀಂಕೋರ್ಟ್ ನ್ಯಾಯಾಮೂರ್ತಿಗಳು ಬಳಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದ ೧೯೯೪ರ ಆದೇಶವು ಅಲ್ಪಸಂಖ್ಯಾತರ ಹಕ್ಕು ಮತ್ತು ಆಯ್ಕೆಗಳಿಗೆ ಧಕ್ಕೆ ತರುವುದಿಲ್ಲ. ಈ ಆದೇಶಕ್ಕೆ ಸ್ವತಃ ಸುಪ್ರೀಂಕೋರ್ಟ್ ೧೯೯೩ ಮತ್ತು ೧೯೯೯ರಲ್ಲಿ ಮನ್ನಣೆ ನೀಡಿತ್ತು ಎಂಬುದನ್ನು ಇಲ್ಲಿ ನೆನೆಯಬಹುದು. ಸುಪ್ರೀಂಕೋರ್ಟಿನಿಂದಲೇ ಎರಡು ಸಾರಿ ಮಾತೃಭಾಷಾ ಶಿಕ್ಷಣಕ್ಕೆ ಮನ್ನಣೆ ನೀಡಿದ ಆದೇಶವು ಹೊರ ಬಂದಿದ್ದು, ನ್ಯಾಯಾಧೀಶರು ಬದಲಾದ ಕೂಡಲೇ ರದ್ದಾಗುತ್ತದೆ ಅಂದರೆ ಏನರ್ಥ? ೧೯೯೩ ಮತ್ತು ೧೯೯೯ರಲ್ಲಿ ಮೂಲಭೂತ ಹಕ್ಕಿಗೆ ಧಕ್ಕೆ ತಾರದೆ ಇದ್ದ ಆದೇಶ ಈಗ ತಂದುಬಿಟ್ಟಿತೆ? ಹಾಗಾದರೆ ನ್ಯಾಯಾಲಯದ ತೀರ್ಪುಗಳು ನ್ಯಾಯಾಧೀಶರ ವೈಯಕ್ತಿಕ ಅಭಿಪ್ರಾಯಕ್ಕನುಗುಣವಾಗಿ ಬರುತ್ತವೆಯೆ? ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ಪ್ರಶ್ನೆಗಳು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಸಂಬಂಧಿಸಿವೆ. ಈಗಂತೂ ವಾದ-ಪ್ರತಿವಾದ ಪೂರ್ಣವಾಗುವವರೆಗೂ ಕಾಯದೆ ನಡುನಡುವೆಯೇ ಅಡ್ಡಬಂದು ತಮ್ಮ ಅಭಿಪ್ರಾಯವನ್ನು ಹೇಳುವ ಪ್ರವೃತ್ತಿಯನ್ನು ಕೆಲ ನ್ಯಾಯಾಧೀಶರು ತೋರಿಸುತ್ತಿದ್ದಾರೆ-ಇದು ಸರಿಯಾದ ಕ್ರಮವೆ ಎಂಬ ಬಗ್ಗೆಯೂ ಚರ್ಚೆಯಾಗಬೇಕಾಗಿದೆ. ೧೯೯೩ ಮತ್ತು ೧೯೯೯ರಲ್ಲಿ ಮಾತೃಭಾಷಾ ಶಿಕ್ಷಣದ ಪರವಾಗಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ೨0೧೪ರಲ್ಲಿ ಸುಪ್ರೀಂಕೋರ್ಟ್ ಉಲ್ಲಂಘಿಸಿದ್ದು ನ್ಯಾಯದ ನಿಂದನೆಯಲ್ಲವೆ ಎಂದು ಜನರು ಕೇಳುವಂತಾಗಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷೆ ಮಾಧ್ಯಮದಲ್ಲಿ ಕಲಿತರೆ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗುತ್ತದೆಯೆಂದೂ ಉದ್ಯೋಗ ಸಿಗುವುದಿಲ್ಲವೆಂದೂ ಪೋಷಕರು ಭಾವಿಸುವುದು ಸಹ ಸರಿಯಲ್ಲ. ಯಾಕೆಂದರೆ, ಕಿರಿಯ ಪ್ರಾಥಮಿಕ ಶಿಕ್ಷಣದಲ್ಲಿ ಯಾವ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಾರೆಂಬ ಮಾನದಂಡದಿಂದ ಯಾರೂ ಉದ್ಯೋಗ ಕೊಡುವುದಿಲ್ಲ. ಉದ್ಯೋಗವೊಂದಕ್ಕೆ ಬೇಕಾದ ವಿದ್ಯಾರ್ಹತೆ ಮತ್ತು ಪರಿಣತಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಇಷ್ಟಕ್ಕೂ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ ಕಲಿಸುವ ಅವಕಾಶ ಕರ್ನಾಟಕದಲ್ಲಿರುವುದರಿಂದ ಮುಂದೆ ಇಂಗ್ಲಿಷ್ ಮಾಧ್ಯಮಕ್ಕೆ ಹೋಗಲು ಅನುಕೂಲವೂ ಆಗುತ್ತದೆ. ಕಿರಿಯ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮ ಮತ್ತು ಒಂದನೇ ತರಗತಿಯಿಂದ ಒಂದು ಪಠ್ಯ ವಿಷಯವಾಗಿ ಇಂಗ್ಲಿಷ್-ಎಂಬ ಪದ್ಧತಿ ಖಂಡಿತ ಯಾರ ಹಕ್ಕಿಗೂ ಉದ್ಯೋಗಕ್ಕೂ ಧಕ್ಕೆ ತರುವುದಿಲ್ಲ.
ಈಗ ಮುಂದಿರುವ ದಾರಿ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಇಡಿ ರಾಷ್ಟ್ರದಲ್ಲಿಯೇ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮಕ್ಕೆ ಅವಕಾಶವಾಗುವಂತೆ ಸಂವಿಧಾನದ ತಿದ್ದುಪಡಿಗೆ ಪ್ರಯತ್ನಿಸುವುದು ಮುಖ್ಯ. ಈ ದಿಕ್ಕಿನಲ್ಲಿ ವಿವಿಧ ರಾಜ್ಯಗಳ ಸಮಾನ ಮನಸ್ಕರು ಸಂಘಟಿತರಾಗಬೇಕು. ಸಂಸದರ ಮತ್ತು ಕೇಂದ್ರ ಸರ್ಕಾರದ ಮನವೊಲಿಸಬೇಕು. ಈ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸರ್ಕಾರವು ನಾಂದಿ ಹಾಡಬೇಕು. ದೇಶದ ಶಿಕ್ಷಣ ತಜ್ಞರು, ಸಾಮಾಜಿಕ ಚಿಂತಕರು, ಸಾಮಾಜಿಕ ಕಾರ್ಯಕರ್ತರ ಸಹಕಾರವನ್ನು ಪಡೆದು ಅಭಿಪ್ರಾಯ ಮೂಡಿಸಬೇಕು. ವಿವಿಧ ರಾಜ್ಯಗಳ ರಾಜಕೀಯ ಮುಖಂಡರಿಗೂ ಮನವರಿಕೆ ಮಾಡಿಕೊಡಬೇಕು. ಈ ದಿಕ್ಕಿನ ಮೊದಲ ಹೆಜ್ಜೆಯಾಗಿ ವಿವಿಧ ರಾಜ್ಯಗಳ ನೇತಾರರ, ಚಳವಳಿಗಾರರ ಮತ್ತು ಚಿಂತಕರ ಸಭೆಯನ್ನು ಕರೆದು ಚರ್ಚಿಸಿ ಚಾಲನೆ ನೀಡಬೇಕು. ಜೊತೆಗೆ ಸಾರ್ವಜನಿಕರಿಗೆ ವಸ್ತುಸ್ಥಿತಿಯನ್ನು ತಿಳಿಸಿ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮ ಕಡ್ಡಾಯವಾದರೆ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗುವುದಿಲ್ಲವೆಂಬುದನ್ನು ಮನವರಿಕೆ ಮಾಡಿಕೊಡಬೇಕು.
ಇದೇ ಸಂದರ್ಭದಲ್ಲಿ ಕೆಲವರು ಮಾತೃಭಾಷೆ ಮತ್ತು ರಾಜ್ಯಭಾಷೆಯ ವಿಷಯದಲ್ಲಿ ಗೊಂದಲ ಎಬ್ಬಿಸುತ್ತಿರುವುದನ್ನು ಗಮನಿಸಿ, ಸ್ಪಷ್ಟನೆ ನೀಡಬಯಸುತ್ತೇನೆ. ಇಂಥವರ ಪ್ರಕಾರ ಮಾತೃಭಾಷಾ ಮಾಧ್ಯಮ ಎಂದು ಹೇಳಬಾರದು, ರಾಜ್ಯಭಾಷಾ ಮಾಧ್ಯಮ ಎಂದು ಮಾತ್ರ ಹೇಳಬೇಕು. ಆಗ ಎಲ್ಲವೂ ಸರಿಹೋಗುತ್ತದೆಯಂತೆ. ಹೀಗೆ ಹೇಳುವವರಿಗೆ ಸಂವಿಧಾನದ ಜ್ಞಾನವಾಗಲಿ, ವಾಸ್ತವದ ಅರಿವಾಗಲಿ ಇಲ್ಲ ಎಂಬ ಅನುಮಾನ ನನ್ನದು. ರಾಜ್ಯ ಭಾಷಾ ಮಾಧ್ಯಮದಲ್ಲಿ ಮಾತ್ರ ಶಿಕ್ಷಣ ಮಾಧ್ಯಮ- ಎಂದು ಸರ್ಕಾರವೊಂದು ತೀರ್ಮಾನಿಸಿದರೆ ಸಂವಿಧಾನದ ೩೫0 ಎ ವಿಧಿಯಲ್ಲಿರುವ ಭಾಷಾ ಅಲ್ಪಸಂಖ್ಯಾತರ ಮಾತೃಭಾಷಾ ಸೌಲಭ್ಯಕ್ಕೆ ಅದು ವಿರುದ್ಧವಾಗುತ್ತದೆ. ವಾಸ್ತವದ ಇನ್ನೊಂದು ಅಂಶವೆಂದರೆ ಕೋಟ್ಯಾಂತರ ಜನರ ಮಾತೃಭಾಷೆಯಾದ ಉರ್ದುವಿಗೆ ಸಂಬಂಧಿಸಿದ ಯಾವುದೇ ರಾಜ್ಯವೂ ಇಲ್ಲ. ಅದ್ದರಿಂದ ಉರ್ದುವಿಗೆ ರಾಜ್ಯಭಾಷೆಯ ಸ್ಥಾನಮಾನವಿಲ್ಲ. ರಾಜ್ಯಾಭಾಷಾ ಮಾಧ್ಯಮ ಮಾತ್ರ ಕಡ್ಡಾಯ ಎಂದರೆ ಉರ್ದುಭಾಷಿಕರು ಎಲ್ಲಿಗೆ ಹೋಗಬೇಕು? ಅಷ್ಟೇಕೆ, ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರು ತಮ್ಮ ಮಾತೃ ಭಾಷೆಯಾದ ಕನ್ನಡ ಮಾಧ್ಯಮದಲ್ಲಿ ಶಾಲೆ ತೆರೆಯುವುದರಿಂದ ವಂಚಿತರಾಗುತ್ತಾರೆ. ಕನ್ನಡ ಮಾಧ್ಯಮದಲ್ಲಿ ಅವರು ವ್ಯಾಸಂಗ ಮಾಡುವಂತೆಯೇ ಇಲ್ಲ. ಆಯಾ ರಾಜ್ಯಭಾಷೆಯಲ್ಲಿಯೇ ಪೂರ್ಣಪ್ರಮಾಣದ ವ್ಯಾಸಂಗ ಮಾಡಬೇಕಾಗುತ್ತದೆ. ಇದು ಎಲ್ಲ ಭಾಷಾ ಅಲ್ಪಸಂಖ್ಯಾತರಿಗೂ ಅನ್ವಯಿಸುತ್ತದೆ. ಇದೆಲ್ಲವನ್ನೂ ಪರಿಗಣಿಸಿಯೇ ಕರ್ನಾಟಕ ಸರ್ಕಾರವು ಸಂವಿಧಾನ ಸಮ್ಮತವಾಗುವಂತೆ ‘ಮಾತೃಭಾಷೆ ಅಥವಾ ರಾಜ್ಯಭಾಷಾಮಾಧ್ಯಮ’ ಎಂದು ಆದೇಶದಲ್ಲಿ ನಮೂದಿಸಿದೆ. ಈಗ ಸುಪ್ರೀಂಕೋರ್ಟ್ ತೀರ್ಪಿನಿಂದ ಇದಕ್ಕೂ ಸಂಚಕಾರ ಬಂದಿದೆ.
ಭಾಷಾ ಹೋರಾಟವು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷಾ ಮಾಧ್ಯಮವನ್ನು ಅಳವಡಿಸುವಷ್ಟಕ್ಕೇ ನಿಲ್ಲುವುದಿಲ್ಲ. ಕೇಂದ್ರ ಸರ್ಕಾರದ ಕೆಲವು ಕ್ರಮಗಳನ್ನು ಪ್ರಶ್ನಿಸಬೇಕು. ಸಂವಿಧಾನದ ಅವಕಾಶಗಳನ್ನು ಬಳಸಿಕೊಂಡು ದೇಶಭಾಷೆಗಳಿಗಿಂತ ಅಂದರೆ ವಿವಿಧ ರಾಜ್ಯಗಳ ಅಧಿಕೃತ ಭಾಷೆಗಳಿಗಿಂತ ಹಿಂದಿ ಭಾಷೆಗೆ ಅತಿ ಹೆಚ್ಚು ಪ್ರಾಧಾನ್ಯ ಕೊಡಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರವು ಜಾರಿಗೊಳಿಸಲು ಸಜ್ಜಾಗಿರುವ ಹೊಸ ಶಿಕ್ಷಣ ನೀತಿಯಲ್ಲಿ ಸಂಸ್ಕøತವನ್ನು ವಿಜೃಂಭಿಸಲಾಗಿದೆ. ಮಾಹಿತಿ ತಂತ್ರಜ್ಞಾನದ ಹೆಸರು ಹೇಳಿಕೊಂಡು ಆಂಗ್ಲಭಾಷೆಯೊಂದೇ ‘ಲೋಕಸಾಧನ’ ವೆಂಬಂತೆ ಬಿಂಬಿಸಲಾಗುತ್ತಿದೆ. ಆಂಗ್ಲಭಾಷೆಯನ್ನು ಶಿಕ್ಷಣದಲ್ಲಿ ತಳವೂರುವಂತೆ ಮಾಡಿ ಗಟ್ಟಿಗೊಳಿಸಿದವರು ಬ್ರಿಟಿಷರು. ಆಡಳಿತದಲ್ಲಿ ಅನಿವಾರ್ಯವಾಗಿ ಕನ್ನಡವನ್ನು ಬೆಳೆಸಿದ ಆಂಗ್ಲರ ಆಡಳಿತವು ಶಿಕ್ಷಣಕ್ಕೆ ಇದೇ ನೀತಿಯನ್ನು ಅನುಸರಿಸಲಿಲ್ಲ. ಮಾಹಿತಿಗಾಗಿ ಹೇಳುವುದಾದರೆ ೧೮00ರಲ್ಲಿ ಹೊನ್ನಾವರದಲ್ಲಿ ಮೊದಲ ಆಂಗ್ಲಮಾಧ್ಯಮ ಶಾಲೆ ಆರಂಭವಾಯಿತು. ಆನಂತರ ೧೮೧0ಕ್ಕೆ ಲಂಡನ್ ಮಿಷನ್ ನಿಂದ ಬಳ್ಳಾರಿ ಮತ್ತು ಬೆಳಗಾವಿಯಲ್ಲಿ, ೧೮೨0ಕ್ಕೆ ಬೆಂಗಳೂರಿನಲ್ಲಿ, ಅದೇ ವರ್ಷ ವೆಸ್ಲಿಯನ್ಮಿಷನ್ನಿಂದ ಮೈಸೂರಿನಲ್ಲಿ, ೧೮೩೫ಕ್ಕೆ ಹಡ್ಸನ್ ಮಿಷನ್ನಿಂದ ಮೈಸೂರು ಮತ್ತು ಮಂಗಳೂರಿನಲ್ಲಿ, ೧೮೪೮ಕ್ಕೆ ಧಾರವಾಡ, ೧೮೫೫ಕ್ಕೆ ಮಡಿಕೇರಿಗಳಲ್ಲಿ ಸಂಪೂರ್ಣ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಯಿತು.
ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿ ಹೇಗೆ ವ್ಯಾಪಿಸಿತೆಂದರೆ ೧೯೧೪ರ ವೇಳೆಗೆ ಕನ್ನಡ ನುಡಿ ಪ್ರದೇಶಗಳಲ್ಲಿ ೩೨೨ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳಿದ್ದರೆ, ೧೭೩ ಶಾಲೆಗಳು ಮಾತ್ರ ಕನ್ನಡ ಮಾಧ್ಯಮದಲ್ಲಿದ್ದವು. ೨೬ ಸಂಸ್ಥೆಗಳಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಿದ್ದರೆ, ಕೇವಲ ೫ ಸಂಸ್ಥೆಗಳಲ್ಲಿ ಮಾತ್ರ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿದ್ದವು. ಸತ್ಯ ಸಂಗತಿಯೆಂದರೆ ಸ್ವಾತಂತ್ರ್ಯೋತ್ತರ ಕನ್ನಡ ನಾಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಹೆಚ್ಚಾದವು. ಈಗ ಅನೇಕ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಸರ್ಕಾರವೂ ವಿಲೀನ ಎಂಬ ಹೆಸರಿನಲ್ಲಿ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಜೊತೆಗೆ ಆರ್.ಟಿ.ಇ. ಅಡಿಯಲ್ಲಿ ತಾನೇ ಹಣಕೊಟ್ಟು ಶೇ. ೨೫ರಷ್ಟು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿದೆ. ಈ ಮೂಲಕ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಇಲ್ಲ ಖಾಸಗಿ ಶಾಲೆಗಳಲ್ಲಿ ಇದೆ ಎಂದು ಸರ್ಕಾರವೇ ಒಪ್ಪಿಕೊಂಡಂತಾಗುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣದ ಬದಲು ದುರ್ಬಲೀಕರಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಖಾಸಗಿ ಶಾಲೆಗಳ ಶಿಕ್ಷಣದ ಬಗ್ಗೆ ಅಷ್ಟೊಂದು ಅಕ್ಕರೆಯಿದ್ದರೆ ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ಅವರು ಉಚಿತ ಪ್ರವೇಶ ಕೊಡುವ ಕಾಯಿದೆ ತರಲಿ. ಇಂಥ ಕಾಯಿದೆಯನ್ನು ಕೆಲ ನ್ಯಾಯಾಧೀಶರು ರದ್ದು ಪಡಿಸಬಹುದೇನೊ ಗೊತ್ತಿಲ್ಲ. ಆದರೂ ಅಂಥ ಪ್ರಯತ್ನವನ್ನಾದರೂ ಮಾಡುವ ಬದಲು ಸರ್ಕಾರವು ಆರ್.ಟಿ.ಇ. ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೊಡುತ್ತಿದೆ. ಸರ್ಕಾರಿ ಶಾಲೆಗಳ ಸಂಖ್ಯೆ ಮತ್ತು ಶಕ್ತಿಗೆ ಕುಂದುಂಟಾಗುತ್ತಿದೆ.
ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣ
ಸರ್ಕಾರವು ಕೂಡಲೇ ಕೈಗೆತ್ತಿಕೊಳ್ಳಬೇಕಾದ ಕೆಲಸವೆಂದರೆ-ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣ. ಇವತ್ತಿನ ಶಿಕ್ಷಣ ಪದ್ಧತಿಯ ಪ್ರಕಾರ ಅಂಗನವಾಡಿಯಿಂದಲೇ ಅಸಮಾನತೆ ಆರಂಭವಾಗುತ್ತದೆ. ಒಂದೇ ವಯಸ್ಸಿನ ಹಸುಗೂಸುಗಳಲ್ಲಿ ಬಡಮಕ್ಕಳು ಅಂಗನವಾಡಿಗೆ ಬರುತ್ತಾರೆ; ಇತರರು ಎಲ್.ಕೆ.ಜಿ, ಯು.ಕೆ.ಜಿ.ಗಳಿಗೆ ಹೋಗುತ್ತಾರೆ. ಹಸುಗೂಸುಗಳ ಮನಸ್ಸಿನಲ್ಲಿಯೇ ಕೀಳರಿಮೆ ಮತ್ತು ಮೇಲರಿಮೆಗಳ ಕಳೆಯನ್ನು ಬೆಳೆಯುವ ಈ ಪದ್ಧತಿ ಅಮಾನವೀಯವಾದುದು. ಇನ್ನು ಪ್ರಾಥಮಿಕ ಶಾಲೆಗೆ ಬಂದರೂ ಇದೇ ಪರಿಪಾಠ. ಬಡವರಿಗೊಂದು ಬಲ್ಲಿದರಿಗೊಂದು ಎಂಬಂತೆ ಸರ್ಕಾರಿ ಶಾಲೆ-ಖಾಸಗಿ ಶಾಲೆ, ಕನ್ನಡ ಅಥವಾ ಮಾತೃಭಾಷಾ ಮಾಧ್ಯಮ- ಆಂಗ್ಲಭಾಷಾ ಮಾಧ್ಯಮ ಎಂದು ವಿಂಗಡಿಸಿದ ಶಿಕ್ಷಣವಿಧಾನ. ಪ್ರೌಢಶಾಲೆಗೆ ಬಂದರೂ ಇದೇ ಹಾದಿ. ಜೊತೆಗೆ ಮಾದರಿಶಾಲೆಗಳೆಂಬ ಪ್ರತ್ಯೇಕ ವ್ಯವಸ್ಥೆ. ಮೊರಾರ್ಜಿ ಶಾಲೆ, ರಾಣಿಚೆನ್ನಮ್ಮ ಶಾಲೆ, ಕೇಂದ್ರದ ನವೋದಯ ಶಾಲೆ-ಹೀಗೆ ಕೆಲವರಿಗೆ ಸುಸಜ್ಜಿತ ಮಾದರಿಯ ಶಾಲೆಗಳು, ಅನೇಕರಿಗೆ ಅದೇ ಹಳೆಯ ಸೋರು ಸೂರಿನ ಶಾಲೆಗಳು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಏಕರೂಪತೆ ಮತ್ತು ಸಮಾನತೆಯ ಶಿಕ್ಷಣ ಪದ್ಧತಿಯನ್ನು ರೂಪಿಸಿ ಜಾರಿ ಮಾಡಲಾಗದ ಆಡಳಿತಕ್ಕೆ ಅಂತಃಕರಣವಿಲ್ಲ. ಹೀಗೆ ಅಸಮಾನತೆಯನ್ನು ಮುಂದುವರೆಸಲು ಪ್ರಬಲ ಕಾರಣಗಳೂ ಇಲ್ಲ. ಇನ್ನೂ ಎಂಥ ವಿಪರ್ಯಾಸವಿದೆಯೆಂದರೆ ಕೆಲವು ಮಾದರಿ ಶಾಲೆಗಳನ್ನು ಸಮಾಜಕಲ್ಯಾಣ ಇಲಾಖೆ ನಡೆಸುತ್ತದೆ; ಮಾಮೂಲಿ ಶಾಲೆಗಳನ್ನು ಶಿಕ್ಷಣ ಇಲಾಖೆ ನಡೆಸುತ್ತದೆ. ಒಟ್ಟಾರೆ ಹೇಳುವುದಾದರೆ ಒಡಲೊಳಗೆ ಅಸಮಾನತೆಯ ಆಯಾಮವನ್ನು ಇಟ್ಟುಕೊಂಡು ಹಸುಗೂಸುಗಳಲ್ಲಿ ವ್ಯತ್ಯಾಸ ಮಾಡುವ ಅವೈಜ್ಞಾನಿಕ ಪದ್ಧತಿಯನ್ನು ರದ್ದುಮಾಡಿ ಮೂಲಭೂತ ಬದಲಾವಣೆಗಳನ್ನು ತರಬೇಕು. ಸಮಾನ ಶಿಕ್ಷಣ ನೀತಿಗಾಗಿ ಒಂದು ಆಂದೋಲನವೇ ನಡೆಯಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಸಾಹಿತಿಗಳು, ಸಾಮಾಜಿಕ ಚಿಂತಕರು, ವಿವಿಧ ಸಂಘಟನೆಗಳ ಚಳವಳಿಗಾರರು ಒಂದಾಗಿ ಈ ಚಳವಳಿಯನ್ನು ಮುನ್ನಡೆಸಬೇಕು ಸಾಹಿತ್ಯ ಪರಿಷತ್ತು ಪ್ರೇರಕ ಶಕ್ತಿಯಾಗಬೇಕು. ಈ ದಿಕ್ಕಿನಲ್ಲಿ ಮುಂದಿನ ಅಂಶಗಳನ್ನು ಗಮನಿಸಬೇಕು;
೧. ವಿವಿಧ ಮಾದರಿ ಶಾಲೆಗಳನ್ನು ಬಿಡಿ ಬಿಡಿಯಾಗಿ ಸ್ಥಾಪಿಸಿ ಮಕ್ಕಳಲ್ಲಿ ತಾರತಮ್ಯ ಮಾಡುವ ಬದಲು ಪ್ರತಿ ಗ್ರಾಮಪಂಚಾಯಿತಿಗೊಂದು ಸುಸಜ್ಜಿತ ಹಾಗೂ ಸಮಸ್ತ ಸೌಲಭ್ಯಗಳುಳ್ಳ ಏಕರೂಪದ ಮಾದರಿ ಶಾಲೆಯನ್ನು ಸ್ಥಾಪಿಸಬೇಕು. ಈ ಶಾಲೆಯು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಒಳಗೊಂಡಿರಬೇಕು. ಉಳಿದ ಹಳ್ಳಿಗಳಲ್ಲಿ ಅಗತ್ಯಕ್ಕನುಗುಣವಾಗಿ ಕಿರಿಯ ಪ್ರಾಥಮಿಕ ಶಾಲೆಗಳಿರಬೇಕು. ಗ್ರಾಮಪಂಚಾಯಿತಿಗೊಂದು ಇರುವ ಸುಸಜ್ಜಿತ ಶಾಲೆಗೆ ಹತ್ತಿರದ ಊರುಗಳಿಂದ ಮಕ್ಕಳು ಬರಲು ವಾಹನ ವ್ಯವಸ್ಥೆ ಮಾಡಬೇಕು. ನಗರ ಮತ್ತು ಪಟ್ಟಣಗಳಲ್ಲಿ ಪ್ರತಿ ವಾರ್ಡಿಗೊಂಡು ಇಂತಹ ಶಾಲೆಯನ್ನು ಸ್ಥಾಪಿಸಬೇಕು. ಈ ಕೆಲಸವನ್ನು ಸಮರೋಪಾದಿಯಲ್ಲಿ ಮಾಡಿ ಸಮಾನ ಶಿಕ್ಷಣಕ್ಕೆ ಬುನಾದಿ ಹಾಕಬೇಕು. ಶಿಕ್ಷಣದ ಹೊಣೆ ಪೂರ್ಣವಾಗಿ ಶಿಕ್ಷಣ ಇಲಾಖೆಯದಾಗಿರಬೇಕು.
೨ ಕನ್ನಡವನ್ನೂ ಒಳಗೊಂಡಂತೆ ಮಾತೃಭಾಷಾ ಶಾಲೆಗಳಲ್ಲಿ ಇಂಗ್ಲಿಷ್ ಒಂದನೇ ತರಗತಿಯಿಂದಲೇ ಒಂದು ಕಡ್ಡಾಯ ವಿಷಯವಾಗಬೇಕು. ಕನ್ನಡೇತರ ಶಾಲೆಗಳಲ್ಲಿ ಕನ್ನಡ ಒಂದು ಕಡ್ಡಾಯ ವಿಷಯವಾಗಬೇಕು.
೩. ಬಹುಮುಖ್ಯವಾಗಿ, ಸರ್ಕಾರವು ಪ್ರಾಥಮಿಕ ಪೂರ್ವ (Pre Primary) ಶಾಲೆಗಳನ್ನು ಸ್ಥಾಪಿಸಬೇಕು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಅಂಗನವಾಡಿಗಳನ್ನು ಪ್ರಾಥಮಿಕ ಪೂರ್ವ ಶಾಲೆಗಳಾಗಿ ರೂಪಾಂತರಿಸಿ ಕ್ರಮಬದ್ಧಗೊಳಿಸುವಂತೆ ಮಾಡಿದ ಶಿಫಾರಸ್ಸಿಗೆ ಅಂದಿನ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ಎಲ್.ಕೆ.ಜಿ.; ಯು.ಕೆ.ಜಿ.ಯಂತೆ ಪ್ರಾಥಮಿಕ ಪೂರ್ವ ಶಾಲೆಗಳನ್ನು ಆರಂಭಿಸಿ ಆನಂತರ ಒಂದನೇ ತರಗತಿಯಿಂದ ಮಾತೃಭಾಷೆ ಅಥವಾ ರಾಜ್ಯಭಾಷಾಮಾಧ್ಯಮದ ಜೊತೆಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಿದರೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಾಕಷ್ಟು ಕೊಡುಗೆ ನೀಡಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನೂ ಒದಗಿಸಬೇಕು. ಎಲ್.ಕೆ.ಜಿ; ಯು.ಕೆ.ಜಿ. ಮತ್ತು ಸರ್ಕಾರಿ ಪ್ರಾಥಮಿಕ ಪೂರ್ವ ಶಾಲೆಗಳಿಗೆ ಏಕರೂಪದ ಹೊಸ ಕಾಯಿದೆ ರೂಪಿಸಬೇಕು.
೪. ಮಾತೃಭಾಷೆ ಅಥವಾ ರಾಜ್ಯ ಭಾಷಾ ಶಿಕ್ಷಣ ಮಾಧ್ಯಮವನ್ನು ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಒತ್ತಾಯ ಮತ್ತು ಹೋರಾಟಕ್ಕೆ ಅಣಿಯಾಗುವುದರ ಜೊತೆಗೆ ಯಾವುದೇ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡದ ಪರಿಸರವನ್ನು ನಿರ್ಮಾಣ ಮಾಡುವ ಕುರಿತು ಪರ್ಯಾಯ ಮಾರ್ಗಗಳನ್ನು ಶೋಧಿಸಬೇಕು. ಈ ವಿಷಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು, ಕನ್ನಡ ಕಾರ್ಯಕ್ರಮಗಳ ಆಯೋಜನೆ, ಕನ್ನಡ ಸಾಂಸ್ಕøತಿಕ ಸಾಧಕರೊಂದಿಗೆ ಸಂವಾದ, ಕನ್ನಡ ರಾಜ್ಯೋತ್ಸವದ ಕಡ್ಡಾಯ ಆಚರಣೆ, ಕನ್ನಡ ಭಾಷಾಧಾರಿತ ವಿವಿಧ ಸ್ಪರ್ಧೆ ಇತ್ಯಾದಿಗಳನ್ನು ಇಂತಿಷ್ಟು ನಡೆಸಬೇಕೆಂಬ ನಿಯಮಾವಳಿಯು ಶಾಲಾ ಮಂಜೂರಾತಿಯ ಭಾಗವಾಗಬೇಕು. ಹೀಗೆ ಕನ್ನಡ ಪರಿಚಯ ಮತ್ತು ಪರಿಸರವನ್ನು ಕಾಪಾಡುವ ಕೆಲಸವಾಗಬೇಕು.
೫. ಪ್ರಾಥಮಿಕ ಶಿಕ್ಷಣದಲ್ಲಿ ವಿಷಯವಾರು ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕು, ಪ್ರಾಥಮಿಕ ಶಿಕ್ಷಣವನ್ನು ಅನಗತ್ಯ ಪ್ರಯೋಗಗಳ ಬಲಿಪೀಠದ ಮೇಲೆ ಪ್ರತಿಷ್ಠಾಪಿಸಬಾರದು.
೬. ಶಾಲೆಗಳಲ್ಲಿ ಕಲಿಸುವ ವ್ಯಾಕರಣದ ಬಗ್ಗೆ ಮರುಚಿಂತನೆ ನಡೆದು ‘ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ’ ಎಂಬ ಪರಿಕಲ್ಪನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಬಗ್ಗೆ ತಜ್ಞರ ಜೊತೆ ಸಮಾಲೋಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು.
ಉನ್ನತ ಶಿಕ್ಷಣದ ವೈಪರೀತ್ಯ
ಇನ್ನು ಉನ್ನತ ಶಿಕ್ಷಣಕ್ಕೆ ಬಂದರೆ ಅಲ್ಲಿಯೂ ಅಸಮಾನತೆ ಮತ್ತು ಅರಾಜಕತೆ ತಾಂಡವವಾಡುತ್ತಿದೆ. ಆಡಳಿತಾತ್ಮಕ ಸುಧಾರಣೆಗಳನ್ನೇ ಶೈಕ್ಷಣಿಕ ಸುಧಾರಣೆಗಳೆಂದು ಭ್ರಮಿಸಿದವರ ಬೌದ್ಧಿಕ ರಾಜಕಾರಣಕ್ಕೆ ಉನ್ನತ ಶಿಕ್ಷಣ ಬಲಿಯಾಗುತ್ತಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಒಂದೇ ಕಾಯಿದೆ ಜಾರಿಗೊಳಿಸುವ ಅಪಾಯಕಾರಿ ಅಲೋಚನೆ ಮುಂಚೂಣಿಯಲ್ಲಿದೆ. ಹಾಗಾದರೆ ವಿಷಯಾಧಾರಿತ ವಿಶಿಷ್ಟ ಸ್ವರೂಪದ ವಿಶವಿದ್ಯಾಲಯಗಳನ್ನು ಸ್ಥಾಪಿಸಿದವರೆಲ್ಲ ಮೂರ್ಖರೇನು? ಉದಾಹರಣೆಗಾಗಿ, ಈಗ ಕನ್ನಡ ವಿಶ್ವವಿದ್ಯಾಲಯದ ವಿಷಯಕ್ಕೆ ಬರೋಣ. ಕನ್ನಡ ಕೇಂದ್ರಿತ ಸಂಶೋಧನೆ ಮತ್ತು ಪ್ರಕಟಣೆಗಾಗಿ ಸ್ಥಾಪಿತವಾದ ಕನ್ನಡ ವಿಶ್ವವಿದ್ಯಾಲಯವು ಅನೇಕ ನಿಕಾಯಗಳ ಮೂಲಕ ತನಗೆ ದತ್ತವಾದ ಕೆಲಸವನ್ನು ಮಾಡುತ್ತ ಬಂದಿದೆ. ಕನ್ನಡ ವಿಶ್ವವಿದ್ಯಾಲಯದ ಕಾರ್ಯವಿಸ್ತಾರ ಸಾಮಾನ್ಯ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗ/ಅಧ್ಯಯನ ಕೇಂದ್ರಗಳಿಗೆ ಇರುವುದಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು. ಕನ್ನಡ ವಿಭಾಗಗಳು ಕನ್ನಡ ಭಾಷೆ-ಸಾಹಿತ್ಯಕ್ಕೆ ಮಾತ್ರ ಬದ್ಧವಾಗಿದ್ದರೆ ಕನ್ನಡ ವಿಶ್ವವಿದ್ಯಾಲಯವು ಎಲ್ಲ ಜ್ಞಾನ ಶಾಖೆಗಳನ್ನೂ ಶೋಧನಾತ್ಮವಾಗಿ ಕನ್ನಡದಲ್ಲಿ ಕಾಣಿಸುವ ಕ್ರಿಯಾ ಬದ್ಧತೆಯನ್ನು ಹೊಂದಿದೆ. ಇದೇ ರೀತಿ ತಂತಮ್ಮ ಕಾರ್ಯಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ವಿಶೇಷ ವಿಶ್ವವಿದ್ಯಾಲಯಗಳು ಕರ್ನಾಟಕದಲ್ಲಿವೆ. ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ವಿಶ್ವವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯ, ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ, ಸಂಗೀತ ವಿಶ್ವವಿದ್ಯಾಲಯ, ಇತ್ಯಾದಿ ಹೀಗೆ ಉದಾಹರಿಸಬಹುದು. ವಿಶೇಷ ವಿಶ್ವವಿದ್ಯಾಲಯಗಳು ಒಂದೊಂದೂ ವಿಶಿಷ್ಟ. ಇವು ಸಾಮಾನ್ಯ ವಿಶ್ವವಿದ್ಯಾಲಯಗಳ ಮಾದರಿಯ ಪದವಿ, ಸ್ನಾತಕೋತ್ತರ ಪದವಿಗಳನ್ನು ಕೊಡುವ ಬದಲು ನಿರ್ದಿಷ್ಟ ವಿಷಯ ಕೇಂದ್ರಿತವಾಗಿರುತ್ತವೆ; ಪ್ರತ್ಯೇಕ ಅಧಿನಿಯಮಗಳನ್ನು ಹೊಂದಿವೆ. ಸಾಮಾನ್ಯ ವಿಶ್ವವಿದ್ಯಾಲಯಗಳಂತೆಯೇ ಎಲ್ಲಾ ವಿಶ್ವವಿದ್ಯಾಲಯಗಳನ್ನೂ ಒಂದೇ ಕಣ್ಣಿನಿಂದ ನೋಡುವ ಏಕರೂಪಿ ಅಧಿನಿಯಮ ತರುವುದು ಸೂಕ್ತವಲ್ಲ; ಸೂಕ್ಷ್ಮವಲ್ಲ. ಅದರ ಬದಲು ಇಂಥ ವಿಶಿಷ್ಟ ವಿಶ್ವವಿದ್ಯಾಲಯಗಳನ್ನು ಸಶಕ್ತಗೊಳಿಸಿ ಜಾಗತೀಕರಣದ ಏಕಮುಖತೆಗೆ ಬಹುಮುಖತೆಯ ಉತ್ತರಕೊಡಬೇಕು.
ಉನ್ನತ ಶಿಕ್ಷಣದಲ್ಲಷ್ಟೇ ಅಲ್ಲ ಪ್ರಾಥಮಿಕ-ಪ್ರೌಢಶಿಕ್ಷಣದಲ್ಲೂ ಹೊಸ
ತಂತ್ರಜ್ಞಾನವನ್ನು ಅಳವಡಿಸುವ ಪ್ರಯತ್ನಗಳು ನಡೆದಿವೆ. ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನವೇ ಮೇಲುಗೈ ಸಾಧಿಸುವಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆಡಳಿತಾತ್ಮಕ ವಿಷಯಗಳಿಗೆ ತಂತ್ರಜ್ಞಾನವನ್ನು ಬಳಸುವುದಕ್ಕೂ ಬೋಧನೆಗೆ ಬಳಸುವುದಕ್ಕೂ ವ್ಯತ್ಯಾಸವಿದೆ. ತರಗತಿಗಳಲ್ಲಿ ತಂತ್ರಜ್ಞಾನವು ಪೂರಕವಾಗಿರಬೇಕೇ ಹೊರತು ತಂತ್ರಜ್ಞಾನವೇ ತರಗತಿಯಾಗಬಾರದು. ಗುರುವಾಗಬಾರದು. ಗುರುವಿಗೆ ಸಹಾಯಕ ಮಾತ್ರವಾಗಿರಬೇಕು. ತಂತ್ರಜ್ಞಾನದ ಪರಿಕರಗಳನ್ನೇ (ಕಂಪ್ಯೂಟರ್, ಟ್ಯಾಬ್, ಮೊಬೈಲ್ ಇತ್ಯಾದಿ) ಗುರುವಾಗಿಸಿ ಅವುಗಳ ಮೂಲಕವೇ ಪಾಠಗಳನ್ನು ರವಾನಿಸುವ ಯೋಜನೆ ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನೇ ಕಡಿದು ಹಾಕುತ್ತದೆ; ಕಂಪನಿಗಳಿಗೆ ಲಾಭದಾಯಕವಾಗುತ್ತದೆ. ನಾನು ತಂತ್ರಜ್ಞಾನದ ವಿರೋಧಿಯಲ್ಲ. ನನ್ನ ದೃಷ್ಟಿಯಲ್ಲಿ ತಂತ್ರಜ್ಞಾನವು ಜ್ಞಾನವಾಗಬೇಕೇ ಹೊರತು ಉದ್ಯಮದ ತಂತ್ರ ಮಾತ್ರವಾಗಬಾರದು. ಆಧುನಿಕ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸುವಾಗ ವಿವೇಕ ಮತ್ತು ಔಚಿತ್ಯಜ್ಞಾನ ಮುಖ್ಯ ಎಂಬುದು ನನ್ನ ಕಾಳಜಿ. ಯಾವತ್ತೂ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಜಡಗೋಡೆ ನಿರ್ಮಾಣವಾಗಬಾರದು, ಯಾಂತ್ರಿಕವಾಗಬಾರದು.
ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ
ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ಮಾಡಬೇಕಾದ ಕೆಲಸ ಸಾಕಷ್ಟಿದೆ. ಕನ್ನಡವನ್ನು ತಂತ್ರಜ್ಞಾನದ ಭಾಷೆಯನ್ನಾಗಿ ವಿಸ್ತರಿಸುವ ಯೋಜನೆಗಳನ್ನು ಸರ್ಕಾರವು ತೀವ್ರಗತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ಭಾಷಾಶಾಸ್ತ್ರೀಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅಗತ್ಯವೂ ಇದೆ. ಇದಕ್ಕಾಗಿ ಕರ್ನಾಟಕ ಸರ್ಕಾರವು ‘ಯೂನಿಕೋಡ್ ಕನ್ಸಾರ್ಟಿಯಂ’ ಎಂಬ ಜಾಗತಿಕ ಸಂಸ್ಥೆಯಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವದ ಮೂಲಕ ಮತ ಚಲಾವಣೆಯ ಹಕ್ಕನ್ನು ಪಡೆಯಬೇಕು. ಇದರಿಂದ ಜಾಗತಿಕ ಸಂಸ್ಥೆಯಲ್ಲಿ ಕನ್ನಡದ ಸಮಸ್ಯೆಗಳನ್ನು ಗಮನಕ್ಕೆ ತಂದು ಸರಿಪಡಿಸಬಹುದು. ಕಂಪ್ಯೂಟರ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಬಳಕೆಯಾಗುವ ಕನ್ನಡ ಅಕ್ಷರಗಳು ಮತ್ತು ತಂತ್ರಜ್ಞಾನದ ಶಿಷ್ಟತೆಯನ್ನು ರೂಪಿಸುವುದಕ್ಕೆ ಒಂದು ಶಾಶ್ವತ ಸಲಹಾ ಸಮಿತಿಯನ್ನು ರಚಿಸಬೇಕು. ಇದರಲ್ಲಿ ಭಾಷಾ ತಜ್ಞರು ಜೊತೆಗೆ ತಂತ್ರಜ್ಞರು ಇರಬೇಕು.
ಕರ್ನಾಟಕದಲ್ಲಿ ದೇಶದ ಯಾವುದೇ ರಾಜ್ಯದಲ್ಲಿ ಇರುವುದಕ್ಕಿಂತ ಹೆಚ್ಚು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿದ್ದರೂ ಅವುಗಳಿಂದ ಕನ್ನಡಕ್ಕೆ ಆಗಿರುವ ಅನುಕೂಲ ಸೊನ್ನೆಯೆಂದೇ ಹೇಳಬೇಕು. ಈ ಸಂಸ್ಥೆಗಳನ್ನು ಕನ್ನಡಕ್ಕಾಗಿ ತೊಡಗಿಸಿಕೊಳ್ಳುವ ಕೆಲಸವಾಗಬೇಕು, ಜೊತೆಗೆ ಕರ್ನಾಟಕ ಸರ್ಕಾರವು ತಂತ್ರಾಂಶ ನೀತಿಯಲ್ಲಿ ಭಾಷೆಗೆ ಒತ್ತು ನೀಡುವ ಅಂಶವನ್ನು ಅಳವಡಿಸಿಕೊಳ್ಳಬೇಕು, ಸರ್ಕಾರದ ಇ-ಇಲಾಖೆಯ ಕನ್ನಡ ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಒಟ್ಟಾರೆ ಕನ್ನಡವನ್ನು ಮಾಹಿತಿ ತಂತ್ರಜ್ಞಾನದ ಭಾಷೆಯನ್ನಾಗಿ ಸಜ್ಜುಗೊಳಿಸುವ ಕೆಲಸವು ಪ್ರತ್ಯೇಕ ವಿಭಾಗ ಹಾಗೂ ತಂಡದ ಮೂಲಕ ಯೋಜನಾ ಬದ್ಧವಾಗಿ ಶೀಘ್ರಗತಿಯಲ್ಲಿ ನಡೆಯಬೇಕು, ಇದು ಕನ್ನಡವನ್ನು ತಂತ್ರಜ್ಞಾನದ ಸಂದರ್ಭದಲ್ಲಿ ಬೆಳೆಸುವ ಕ್ರಮ.
ಹೀಗೆ ಕನ್ನಡ ಮತ್ತು ತಂತ್ರಜ್ಞಾನದ ಸಂಬಂಧ ಮತ್ತು ಪ್ರಗತಿಯನ್ನು ಗಟ್ಟಿಗೊಳಿಸುವ ಯೋಜನೆಗಳನ್ನು ಕಾರ್ಯಗತಗೊಳಿಸುವ ಬದಲು ಶಿಕ್ಷಣದಲ್ಲಿ ಅಗತ್ಯಮೀರಿ ತಂತ್ರಜ್ಞಾನದ ಸರ್ವಾಧಿಕಾರ ಸ್ಥಾಪಿಸುವುದು ಸರಿಯಲ್ಲ. ಕಂದಕ ನಿರ್ಮಾಣವೂ ಸೂಕ್ತವಲ್ಲ.
ಸಾಮಾನ್ಯ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ
ಈ ಹಿನ್ನೆಲೆಯಲ್ಲಿ ಸಾಮಾನ್ಯ ಶಿಕ್ಷಣ ಮತ್ತು ವೃತ್ತಿ ಶಿಕ್ಷಣದ ನಡುವಿನ ಕಂದಕ ಮತ್ತು ಕೀಳರಿಮೆಯ ಸಮಸ್ಯೆಯನ್ನು ಪ್ರಸ್ತಾಪಿಸಲೇಬೇಕು. ಇಂದು ವೃತ್ತಿ ಶಿಕ್ಷಣಕ್ಕಿರುವ ಕಿಮ್ಮತ್ತು ಸಾಮಾನ್ಯ ಶಿಕ್ಷಣಕ್ಕೆ ಇಲ್ಲದಂತಾಗಿದೆ. ವೃತ್ತಿ ಶಿಕ್ಷಣ ಶ್ರೇಷ್ಠ, ಸಾಮಾನ್ಯ ಶಿಕ್ಷಣ ಕನಿಷ್ಠ ಎಂಬಂತಾಗಿದೆ. ಈ ಸಮಸ್ಯೆಯನ್ನು ಸರಿಮಾಡುವುದು ಹೇಗೆಂದು ಚಿಂತಿಸುವ, ಯೋಚಿಸುವ ಬದಲು ಏಕಮುಖೀ ಸಂಚಾರಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ, ಇಡೀ ಉನ್ನತ ಶಿಕ್ಷಣವನ್ನು ಪುನರ್ ಸಂಯೋಜಿಸುವ ಅಗತ್ಯವಿದೆ. ಇತಿಹಾಸ, ಸಾಹಿತ್ಯ, ರಾಜಕೀಯ ವಿಜ್ಞಾನ, ಸಮಾಜ ವಿಜ್ಞಾನಗಳಂಥ ವಿಷಯಗಳು ವೃತ್ತಿ ಶಿಕ್ಷಣದ ಭರಾಟೆಯಲ್ಲಿ ಅಪ್ರಯೋಜಕವೆಂಬ ಸ್ಥಿತಿ ನಿರ್ಮಾಣವಾಗುತ್ತಿದ್ದು, ವೃತ್ತಿ ಶಿಕ್ಷಣ ಮತ್ತು ಸಾಮಾನ್ಯ ಶಿಕ್ಷಣದ ಪುನರ್ ಸಂಯೋಜನೆಯ ಮೂಲಕ ಪರಿಹಾರ ಹುಡುಕಬೇಕಾಗಿದೆ.
ಮಾಹಿತಿಗಾಗಿ ಹೇಳವುದಾದರೆ, ಕೆಲವು ವರ್ಷಗಳ ಹಿಂದೆ ವಿದೇಶಿ ವಿಶ್ವವಿದ್ಯಾಲಯಗಳ ಜೊತೆ ನಮ್ಮ ದೇಶದ ವಿಶ್ವವಿದ್ಯಾಲಯಗಳು ಮಾಡಿಕೊಂಡ ಎಂ.ಓ. ಯು. ಗಳ ಸರಾಸರಿ ಪ್ರಮಾಣ ಹೀಗಿದೆ.
ಅ. ವಾಣಿಜ್ಯ ವ್ಯವಹಾರ ಕೋರ್ಸ್ – ಶೇ. ೬0; ಆ. ವಾಸ್ತು ಶಿಲ್ಪ ಕೋರ್ಸ್ – ಶೇ. ೧೫ ಇ. ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್- ಶೇ. ೧0 ಈ. ಫ್ಯಾಷನ್ ಡಿಸೈನಿಂಗ್ ಕೋರ್ಸ್ – ಶೇ – ೧0 ಉ. ಮಾನಸಿಕ ವಿಷಯಗಳ ಒಟ್ಟು ಕೋರ್ಸ್ಗಳು ಶೇ. ೫.
ಈ ಸರಾಸರಿ ಪ್ರಮಾಣವು ನಮ್ಮ ಶಿಕ್ಷಣವು ಸಾಗುತ್ತಿರುವ ದಿಕ್ಕನ್ನು ಸೂಚಿಸುತ್ತದೆ. ನಾನು ಓದುತ್ತಿರುವಾಗ ವಿಜ್ಞಾನ ಓದುವವರು ಬುದ್ಧಿವಂತರು, ವಾಣಿಜ್ಯ ಪದವಿ ಓದುವವರು ಜಾಣರು, ಕಲಾವಿಭಾಗಕ್ಕೆ ಬಂದವರು ದಡ್ಡರು, ಅದರಲ್ಲೂ ಕನ್ನಡ ಸಾಹಿತ್ಯ ಪದವಿಗೆ ಬಂದವರು ಶತದಡ್ಡರು ಎಂದು ಆಡಿಕೊಳ್ಳುತ್ತಿದ್ದರು. ಈಗ ನೋಡಿ ಬುದ್ಧಿವಂತರ ಕೋರ್ಸ್ ಎನ್ನುತ್ತಿದ್ದ ವಿಜ್ಞಾನಕ್ಕೇ ಹೆಚ್ಚು ವಿದ್ಯಾರ್ಥಿಗಳಿಲ್ಲ. ಎಲ್ಲರೂ ವಾಣಿಜ್ಯ ಮುಖಿವ್ಯಾಸಂಗಿಗಳು. ಎಲ್ಲವೂ ವಾಣಿಜ್ಯಮುಖಿಯಾದರೆ ಜ್ಞಾನ ಮುಖಿಯಾಗುವುದು ಯಾವಾಗ? ಒಟ್ಟು ಶಿಕ್ಷಣ ಕ್ಷೇತ್ರದಲ್ಲಿ ಯಾವ ಹಂತದವರೆಗೆ ಜ್ಞಾನಮುಖಿ ಶಿಕ್ಷಣ, ಯಾವ ಹಂತದಿಂದ ಉದ್ಯೋಗಮುಖಿ ಶಿಕ್ಷಣ ಎಂಬ ವಿವೇಚನೆ ಮತ್ತು ವಿವೇಕದ ಆಧಾರದ ಮೇಲೆ ಶಿಕ್ಷಣ ಪದ್ಧತಿಯನ್ನು ರೂಪಿಸಬೇಕು. ಕಂದಕಗಳನ್ನು ಮುಚ್ಚಬೇಕು. ಇಂದು ಕಂದಕಗಳನ್ನು ಮುಚ್ಚುವ ಬದಲು ಕಂದಕಗಳಲ್ಲಿ ಕೆಡವುವ ಕೆಲಸವೇ ಹೆಚ್ಚಾಗಿ ನಡೆಯುತ್ತಿದೆ. ಅದನ್ನು ಹೊಸ ಪ್ರಯೋಗ ಎಂದು ವಿವರಿಸಲಾಗುತ್ತಿದೆ. ಶಿಕ್ಷಣದ ಶರೀರ ಶೃಂಗಾರವೇ ಸುಧಾರಣೆ ಎಂಬ ಸಂಭ್ರಮ ಕಾಣಿಸುತ್ತಿದೆ. ಆತ್ಮ ಬೇಕಾದಂತೆ ಕಾಣುತ್ತಿಲ್ಲ. ಎಲ್ಲ ವಿಶ್ವವಿದ್ಯಾಲಯಗಳಿಗೂ ಒಂದೇ ಪಠ್ಯಪುಸ್ತಕ ನಿಗದಿಪಡಿಸುವುದು ಅದನ್ನು ತಂತ್ರಜ್ಞಾನಕ್ಕೆ ಅಳವಡಿಸಲು ಕಂಪನಿಗಳಿಗೆ ಕೋಟ್ಯಾಂತರ ಹಣ ಕೊಡುವುದು, ಕುಲಪತಿಗಳು ಪಾಠಮಾಡಿ ಎನ್ನುವುದು, ಪ್ರಧಾನ ಕಾರ್ಯದರ್ಶಿಯೇ ಕುಲಪತಿಗಳಿಗೆ ನಿರ್ದೇಶನ ನೀಡುವುದು, ಸರ್ಕಾರದ ವಿಶ್ವವಿದ್ಯಾಲಯಗಳನ್ನು ಮಾತ್ರ ಗುರಿ ಮಾಡಿಕೊಂಡು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಸ್ವಾಯತ್ತ ಕಾಲೇಜುಗಳ ವಹಿವಾಟಿನತ್ತ ನೋಡದೆ ಇರುವುದು ಯಾವ ಶಿಕ್ಷಣ ಸುಧಾರಣೆ?
ಸ್ವಾಯತ್ತ ಕಾಲೇಜುಗಳದು ಯಾರೂ ಪ್ರಶ್ನಿಸದ ದಾರಿ- ಖಾಸಗಿ ವಿಶ್ವವಿದ್ಯಾಲಯಗಳದು ಅಂಜದ ಹಾದಿ. ಸರ್ಕಾರಿ ವಿಶ್ವವಿದ್ಯಾಲಯಗಳದು ದುರ್ಬಲ ಗಾದಿ. ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿ ಆಯ್ಕೆಗೆ ಶೋಧನಾ ಸಮಿತಿ, ಸರ್ಕಾರ ಮತ್ತು ರಾಜ್ಯಪಾಲರ ವಿವೇಚನೆಯಿದ್ದರೆ, ಖಾಸಗಿ, ಡೀಮ್ಡ್ ವಿ.ವಿ.ಗಳಿಗೆ ಮ್ಯಾನೇಜ್ಮೆಂಟ್ ಇಚ್ಚಿಸಿದವರೇ ಕುಲಪತಿ. ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ಇವರೆಲ್ಲ ಸಮಾನ. ನಿಯಂತ್ರಣ ಮತ್ತು ನಿರ್ದೇಶನ ಮಾತ್ರ ಸರ್ಕಾರಿ ವಿ.ವಿ. ಕುಲಪತಿಗಳಿಗೆ. ಅದೂ ನೌಕರ ಶಾಹಿಯ ಎದುರು ಕುಲಪತಿಗಳು ಕುಗ್ಗಿ ಬಗ್ಗಿ ಬೆದರಬೇಕಾದ ಗತಿ. ಇದು ಕರ್ನಾಟಕ ಉನ್ನತ ಶಿಕ್ಷಣದ ಸ್ಥಿತಿ. ಕುಲಪತಿಗಳು ಆತ್ಮಗೌರವ ಮತ್ತು ಆತ್ಮಸ್ಥೈರ್ಯದಿಂದ ಒಗ್ಗೂಡಿ ಗಟ್ಟಿದನಿಯಾಗದಿದ್ದರೆ ಗ್ಲೋರಿಫೈಡ್ ಗುಮಾಸ್ತರಾಗಬೇಕಾದೀತು. ನೌಕರ ಶಾಹಿಯನ್ನು ನಿಯಂತ್ರಿಸಿ ಸರ್ಕಾರಿ ವಿ.ವಿ.ಗಳಿಗೆ ಶಕ್ತಿ ತುಂಬಿ ಗೌರವದಿಂದ ನಡೆಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಕಟ್ಟಿಟ್ಟ ಬುತ್ತಿಯಾದೀತು. ಆದ್ದರಿಂದ ಶರೀರ ಶೃಂಗಾರದ ಸುಧಾರಣೆಯಲ್ಲಿ ಮುಳುಗಿ ಹೋಗದೆ ಮೂಲಭೂತ ಬದಲಾವಣೆಗಳ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ವಿಶ್ವವಿದ್ಯಾಲಯಗಳ ಬಹುಮುಖಿ ಸ್ವರೂಪ ಮತ್ತು ಸ್ವಾಯತ್ತತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ವಿಶ್ವವಿದ್ಯಾಲಯಗಳು ಹಳೆಯಕಾಲದ ಕೂಲಿಮಠಗಳೂ ಅಲ್ಲ; ಹೊಸ ಕಾಲದ ವಿದೇಶಿ ವ್ಯಾಸಂಗದ ವಿಧೇಯ ವಲಯಗಳೂ ಅಲ್ಲ. ನಮ್ಮ ದೇಶದ ಮಾನವ ಸಂಪನ್ಮೂಲದ ಸ್ವಾಯತ್ತ ಸಂಸ್ಥೆಗಳು. ಈ ಅಂಶವೇ ಉನ್ನತ ಶಿಕ್ಷಣ ಸುಧಾರಣೆಗೆ ಪ್ರೇರಣೆಯಾಗಬೇಕು.
ಉನ್ನತ ಶಿಕ್ಷಣದಲ್ಲಿರುವ ವೃತ್ತಿ ಮತ್ತು ಸಾಮಾನ್ಯ ಶಿಕ್ಷಣದ ಕಂದಕವನ್ನು ಮುಚ್ಚುವ ದೂರಗಾಮಿ ಚಿಂತನೆಗಳ ಜೊತೆಗೆ ಕನ್ನಡಕ್ಕೆ ಸೂಕ್ತ ಸ್ಥಾನ ಕಲ್ಪಿಸಿ ಗಟ್ಟಿಗೊಳಿಸುವ ಬಗ್ಗೆ ದಿಟ್ಟ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ಕರ್ನಾಟಕದ ಸಾಮಾನ್ಯ ವಿಶ್ವವಿದ್ಯಾಲಯಗಳ ಎಲ್ಲ ಕೋರ್ಸುಗಳಲ್ಲೂ ಮೊದಲ ಎರಡು ವರ್ಷ ಕನ್ನಡ ಪಠ್ಯ ಕಡ್ಡಾಯವಾಗಬೇಕು; ಗರಿಷ್ಠ ಅವಧಿಗಳನ್ನು (period) ನಿಗದಿ ಮಾಡಬೇಕು. ಕೆಲವು ವಿಶ್ವವಿದ್ಯಾಲಯಗಳಲ್ಲಿ ಕಲೆ ಮತ್ತು ವಿಜ್ಞಾನ ಕೋರ್ಸ್ಗಳಲ್ಲಿರುವಂತೆ, ವಾಣಿಜ್ಯ ತರಗತಿಗಳಲ್ಲಿ ಕನ್ನಡ ವಿಷಯಕ್ಕೆ ಅಗತ್ಯ ಅವಕಾಶ ನೀಡಿಲ್ಲವಾದ್ದರಿಂದ ಈ ಮಾತು ಹೇಳುತ್ತಿದ್ದೇನೆ. ಇನ್ನು ಸ್ವಾಯತ್ತ ಕಾಲೇಜುಗಳು, ಖಾಸಗಿ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಷಯದ ಸ್ಥಿತಿಗತಿ ಏನೆಂದು ಸರ್ಕಾರ ವಿಚಾರಿಸುತ್ತಿದೆಯೆ? ಅಲ್ಲಿ ಬೇಕಾಬಿಟ್ಟಿ ಪಠ್ಯಕ್ರಮವಿರುವುದು ಸರಿಯೆ? ಸ್ವಾಯತ್ತತೆ ಮತ್ತು ಖಾಸಗಿ ಸವಲತ್ತುಗಳ ಶಿಕ್ಷಣ ಸಂಸ್ಥೆಗಳು ಕನ್ನಡಕ್ಕೆ ಸೂಕ್ತ ಉನ್ನತ ಶಿಕ್ಷಣದಲ್ಲಿ ಸ್ಥಾನ ನೀಡದೆ ಅನ್ಯಾಯ ಮಾಡುತ್ತಿರುವುದನ್ನು ತಪ್ಪಿಸಲು ಸೂಕ್ತ ನಿಯಮಾವಳಿ ರೂಪಿಸಬೇಕು.
ವೃತ್ತಿ ಶಿಕ್ಷಣದ ಎಲ್ಲ ಕೋರ್ಸುಗಳಲ್ಲೂ ಮೊದಲ ಎರಡು ಸೆಮಿಸ್ಟರ್ ಅಥವಾ ಒಂದು ವರ್ಷ ಕನ್ನಡ ಪಠ್ಯವನ್ನು ಕಡ್ಡಾಯ ಮಾಡಬೇಕೆಂದು ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಮಾಡಿದ ಶಿಫಾರಸ್ಸನ್ನು ಅಂದಿನ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಒಪ್ಪಿಕೊಂಡಿತ್ತು. ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ್ ಮತ್ತು ನಾನು ತಾಂತ್ರಿಕ ಹಾಗೂ ವೈದ್ಯಕೀಯ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆದು ಕನ್ನಡ ಪಠ್ಯವನ್ನು ಕಡ್ಡಾಯ ಮಾಡುವಂತೆ ಮನವರಿಕೆ ಮಾಡಿಕೊಟ್ಟ ಫಲವಾಗಿ ಅದು ಜಾರಿಗೆ ಬಂತು. ಆನಂತರ ಪರೀಕ್ಷೆಗೂ ಕಡ್ಡಾಯ ಮಾಡುವಂತೆ ತಿಳಿಸಲಾಯಿತಾದರೂ ಅದು ಜಾರಿಗೆ ಬರದೆ ಇದ್ದುದರಿಂದ ಕನ್ನಡ ಪಠ್ಯ ಬರಬರುತ್ತ ಕಾಟಾಚಾರದ ಕಲಿಕೆಯಾಗತೊಡಗಿತು. ಕನ್ನಡ ಬಲ್ಲವರಿಗೆ ಕನ್ನಡ ಸಾಂಸ್ಕøತಿಕ ಪಠ್ಯ ಮತ್ತು ಕನ್ನಡ ಬಾರದವರಿಗೆ ಇಂಗ್ಲೀಷ್ ಮೂಲಕ ಕನ್ನಡ ಕಲಿಕೆ -ಎಂಬ ಈ ನೀತಿಗೆ ಈಗ ಮತ್ತೆ ಜೀವ ಕೊಡಬೇಕು. ಬಿ.ಇ. ಎಂ.ಬಿ.ಬಿ.ಎಸ್, ದಂತ ವೈದ್ಯಕೀಯ ಕೃಷಿ, ಕಾನೂನು ಮುಂತಾದ ಎಲ್ಲ ವೃತ್ತಿಪರ ಕೋರ್ಸುಗಳಲ್ಲೂ ಮೊದಲ ಒಂದು ವರ್ಷದ ಅವಧಿಗೆ ಕನ್ನಡ ವಿಷಯ ಮತ್ತು ಪರೀಕ್ಷೆ ಕಡ್ಡಾಯವಾಗಬೇಕು. ಕನ್ನಡದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಕೆಲವು ಕನ್ನಡ ಪರ ಚಿಂತಕರು – ವಿದ್ವಾಂಸರು ಈ ವಿಷಯದಲ್ಲಿ ಮಾತನಾಡಲಿಲ್ಲ. ಈಗಲೂ ಮಾತಾಡುತ್ತಿಲ್ಲ. ಸರ್ಕಾರಕ್ಕೆ ಇದೆಲ್ಲ ಆದ್ಯತೆಯ ವಿಷಯವಾಗಿಯೇ ಇಲ್ಲ.
ಈಗಲಾದರೂ ಸರ್ಕಾರವು ವೃತ್ತಿ ಶಿಕ್ಷಣವನ್ನೂ ಒಳಗೊಂಡಂತೆ ಒಟ್ಟು ಉನ್ನತ ಶಿಕ್ಷಣದಲ್ಲಿ ಕನ್ನಡದ ಸ್ಥಾನವನ್ನು ಗಟ್ಟಿಗೊಳಿಸಬೇಕು. ಕುಂಟು ನೆಪಗಳನ್ನು ಕೈಬಿಡಬೇಕು. ಒಟ್ಟು ಶಿಕ್ಷಣದಲ್ಲಿ ಆಯಾ ಕೋರ್ಸುಗನುಸಾರ ಉಚಿತ ರೀತಿಯಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಉನ್ನತ ಶಿಕ್ಷಣದ ಕಾರ್ಪೋರೇಟರೀಕರಣದ ಬದಲು ಕರ್ನಾಟಕೀಕರಣ ಮಾಡಬೇಕು. ಬಹುತ್ವದ ಭಾರತೀಕರಣವಾಗಬೇಕು. ಪದವಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯದ ಕಾರ್ಪೋರೇಟ್ ಸಂಸ್ಕøತಿಗೆ ಪರ್ಯಾಯ ಮಾದರಿಗಳನ್ನೂ ನೆಲೆಗೊಳಿಸಬೇಕು. ಜಾನಪದವೆಂದರೆ ಕೇವಲ ಹಳೆಯದಲ್ಲ. ಕಲೆಗಳ ಪ್ರದರ್ಶನ ಮಾತ್ರವಲ್ಲ. ಇಂದು ನಗರ ಜಾನಪದ, ಲಿಖಿತ ಜಾನಪದ ಎಂಬ ಪರಿಕಲ್ಪನೆಗಳೂ ಬಂದಿವೆ. ಜಾನಪದವನ್ನು ಆಧುನಿಕ ವಿವೇಕದಿಂದ ಗ್ರಹಿಸುವ ಐಚ್ಚಿಕ ಪಠ್ಯ ವಿಷಯವನ್ನಾಗಿಸಿ ನಾವು ಜಾಗತೀಕರಣದ ಸವಾಲುಗಳಿಗೆ ಒಂದಷ್ಟು ಉತ್ತರವನ್ನಾದರೂ ಕೊಡಬಹುದಾಗಿದೆ.
ಉದ್ಯೋಗನೀತಿ, ಕನ್ನಡ ಮತ್ತು ಕನ್ನಡಿಗರು
ಇನ್ನು ಉದ್ಯೋಗದ ವಿಷಯಕ್ಕೆ ಬಂದರೆ ಕೇಳಲೇಬೇಡಿ. ಸರ್ಕಾರಿ ಕಾಲೇಜುಗಳಲ್ಲಿ ೧೪000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ಖಾಯಂ ಉಪನ್ಯಾಸಕರ ಸಂಖ್ಯೆ ಹೆಚ್ಚೆಂದರೆ ೬000ವನ್ನೂ ಮೀರುವುದಿಲ್ಲ. ಅಂದರೆ ಸರ್ಕಾರಿ ಪದವಿ ಕಾಲೇಜುಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದ ಎಂದಂತಾಯಿತು. ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂ ಮಾಡುವುದಿರಲಿ, ಬೇರೆ ರಾಜ್ಯಗಳಲ್ಲಿ ಕೊಡುತ್ತಿರುವಷ್ಟು ಗೌರವಧನವನ್ನೂ ಕೊಡುತ್ತಿಲ್ಲ. ಯಾರ್ಯಾರದೋ ಶಿಫಾರಸ್ಸಿನಿಂದ ಬಂದಿರುವ ಅತಿಥಿ ಉಪನ್ಯಾಸಕರು ಖಾಯಂ ಮಾತಿಗೆ ಅನರ್ಹರು ಎಂಬ ಮಾತೊಂದು ಸರ್ಕಾರಿ ಮತ್ತು ಕೆಲ ಖಾಸಗಿ ವಲಯದಲ್ಲಿ ಚಾಲ್ತಿಯಲ್ಲಿದೆ. ಹಾಗಾದರೆ ಇಷ್ಟು ವರ್ಷ ಅನರ್ಹರಿಂದ ಬೋಧನೆ ಮಾಡಿಸಿ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದ ಸರ್ಕಾರಕ್ಕೆ ಯಾವ ಶಿಕ್ಷೆ? ನನಗೆ ಗೊತ್ತು; ಖಾಯಮಾತಿ ಕಷ್ಟದ ಕೆಲಸ. ಜೊತೆಗೆ ಹೊಸ ನಿರುದ್ಯೋಗಿಗಳ ಸಂಖ್ಯೆಯೂ ಸಾಕಷ್ಟಿದೆ. ಅಗತ್ಯವಾದಷ್ಟು ಹುದ್ದೆಗಳನ್ನು ಸೃಷ್ಟಿಮಾಡಿ ಸೇವಾವಧಿ ಮತ್ತು ಅರ್ಹತೆಯ ಆಧಾರದ ಮೇಲೆ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿ ಹೊಸ ನಿರುದ್ಯೋಗಿಗಳ ಆಯ್ಕೆಗೂ ಅವಕಾಶ ನೀಡುವ ಹೊಸ ನಿಯಮಾವಳಿ ರೂಪಿಸಲು ಸಾಧ್ಯ. ಹೀಗೆ ಮಾಡದೆ ಹೋದರೆ ಶಿಕ್ಷಣಕ್ಷೇತ್ರವನ್ನು ಶೋಷಣೆ ಕೇಂದ್ರವಾಗಿಸಿದ ಸತ್ಕೀರ್ತಿ ಸರ್ಕಾರಕ್ಕೆ ಸಿಗುತ್ತದೆ.
ಇದೊಂದೇ ವಿಷಯವಲ್ಲ. ನಿವೃತ್ತಿ ಮತ್ತಿತರ ಕಾರಣಗಳಿಂದ ಕಾಲೇಜುಗಳಲ್ಲಿ ಖಾಲಿಯಾದ ಹುದ್ದೆಗಳನ್ನು ಕೂಡಲೇ ಭರ್ತಿಮಾಡುವ ಪರಿಪಾಠವೇ ಇಲ್ಲ. ಅನೇಕ ಖಾಸಗಿ ಕಾಲೇಜುಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡುತ್ತಿಲ್ಲ. ಇನ್ನು ಕೆಲವು ಕಾಲೇಜುಗಳು ಮೀಸಲಾತಿ ನೀತಿಯನ್ನು ಅನುಸರಿಸಬೇಕಾಗುತ್ತದೆಯೆಂಬ ಕಾರಣಕ್ಕಾಗಿ ಸರ್ಕಾರದ ಅನುದಾನವನ್ನೇ ನಿರಾಕರಿಸುತ್ತಿವೆ. ಅಂದು ಅನುದಾನ ಕೊಡಿ ಎಂದು ಕೇಳುತ್ತಿದ್ದ ಕಾಲೇಜುಗಳು ಇಂದು ಬೇಡ ಎನ್ನುವ ಹಂತಕ್ಕೆ ಬಂದಿರುವುದರ ಹಿಂದೆ ಇರುವ ಸಾಮಾಜಿಕ ಕಾರಣಗಳು ಆಘಾತಕಾರಿಯೆನ್ನದೆ ವಿಧಿಯಿಲ್ಲ. ಇದೆಲ್ಲವನ್ನೂ ಉನ್ನತ ಶಿಕ್ಷಣ ಇಲಾಖೆಯು ಸೂಕ್ತಕ್ರಮದ ಮೂಲಕ ಸರಿಪಡಿಸಬೇಕು.
ಕೇವಲ ಶಿಕ್ಷಣಕ್ಷೇತ್ರದ ನೇಮಕಾತಿ ಮಾತ್ರವಲ್ಲ, ಎಲ್ಲ ಇಲಾಖೆಗಳ ಅಗತ್ಯ ಹಾಗೂ ಖಾಲಿ ಹುದ್ದೆಗಳನ್ನು ಗುರುತಿಸಿ ಏಕಕಾಲಕ್ಕೆ ಭರ್ತಿ ಮಾಡುವ ಸಮರ ಸಮಾನ ನೀತಿಯನ್ನು ಅನುಷ್ಠಾನಗೊಳಿಸುವುದು ಅಗತ್ಯ ಮತ್ತು ಆದ್ಯತೆಯಾಗಬೇಕು. ಇದರಿಂದ ಉದ್ಯೋಗ ಪಡೆದವರ ಕುಟುಂಬಗಳ ಬದುಕಲ್ಲಿ ಬೆಳಕು ಮೂಡುತ್ತದೆ. ಆದರೆ ಅಧಿಕಾರವರ್ಗದ ಅತಿಕ್ರಮಣ ಎಂಥ ವೈಪರೀತ್ಯಗಳಿಂದ ಕೂಡಿದೆ ಅನ್ನೋದಕ್ಕೆ ಅಕಾಡೆಮಿಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರ ಮೇಲೆ ಪ್ರಯೋಗಿಸುತ್ತಿರುವ ಅನುಚಿತ ಅಲಿಖಿತ ನಿಯಮವನ್ನು ಉದಾಹರಿಸಬಹುದು. ಅಕಾಡೆಮಿಗಳಲ್ಲಿ ಸುಮಾರು ೧0 ವರ್ಷದಿಂದ ೨೫ ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿದ್ದಾರೆ. ಇವರಿಗೆ ನಿಗದಿತ ಗೌರವಧನ ಅಥವಾ ಸಂಬಳವನ್ನು ಅಕಾಡೆಮಿಗಳ ಅನುದಾನದಲ್ಲೇ ಭರಿಸಬೇಕು. ಅಕಾಡೆಮಿಗಳೇ ಆಗಾಗ್ಗೆ ಈ ಸಂಬಳವನ್ನು ಹೆಚ್ಚಿಸುತ್ತವೆ. ಈ ವರ್ಷವೂ ಇದೇ ರೀತಿ ಮಾಡಿದಾಗ ಇಲಾಖೆ ಅಧಿಕಾರಿಗಳು ಶೇ. ೫ಕ್ಕಿಂತ ಹೆಚ್ಚಿಸಬಾರದು ಎಂದು ಪರ್ಮಾನು ಹೊರಡಿಸಿದ್ದಾರೆ. ಹಾಗಾದರೆ ಹಿಂದಿನಿಂದ ನಡೆದುಕೊಂಡು ಬಂದದ್ದು ತಪ್ಪೆ? ನಾನು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದಾಗ ಶೇ.೬0ರಷ್ಟು ಹೆಚ್ಚಿಸಿದ್ದೆವು. ಅಕಾಡೆಮಿಗಳು ತಮ್ಮ ಅನುದಾನದಲ್ಲಿ ಎಂದಿನಂತೆಯೇ ಕೊಡುವ ಸಂಬಳದ ವಿಚಾರದಲ್ಲಿ ಇದ್ದಕ್ಕಿದ್ದಂತೆ ಮೂಗು ತೂರಿಸುವ ನಿಯಮಬಾಹಿರ ಹಾಗೂ ನೀತಿಬಾಹಿರ ನಿರ್ಧಾರ ಖಂಡನೀಯ. ವಾಸ್ತವವಾಗಿ ಅಕಾಡೆಮಿಗಳಲ್ಲಿರುವ ಗುತ್ತಿಗೆ ನೌಕರರನ್ನೆಲ್ಲ ಖಾಯಂ ಮಾಡುವ ಮಾರ್ಗೋಪಾಯ ಹುಡುಕಿ ಸರ್ಕಾರಕ್ಕೆ ಕಡತ ಸಲ್ಲಿಸುವ ಬದಲು ಕಿರುಕುಳ ಕೊಡುವುದು ಯಾವ ಸಂಸ್ಕøತಿ?
ಸಾಂಸ್ಕøತಿಕ ಸಂಸ್ಥೆಗಳಲ್ಲೇ ಇಂತಹ ಸ್ಥಿತಿಯೆಂದರೆ ಉಳಿದ ಕಡೆ ಹೇಗಿರಬೇಡ! ಸರ್ಕಾರದ ವಿವಿಧ ಇಲಾಖೆಗಳಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವವರ ಪಟ್ಟಿಯನ್ನು ತಯಾರಿಸಿ ಒಟ್ಟಿಗೇ ಬದುಕಿನ ಭದ್ರತೆ ಕೊಡುವ ಉದ್ಯೋಗ ನೀತಿಗೆ ಸರ್ಕಾರ ಮುಂದಾಗಬೇಕು, ಕಡೆ ಪಕ್ಷ, ಒಂದು ‘ಉದ್ಯೋಗ ಪರಿಶೀಲನಾ ಸಮಿತಿ’ ನೇಮಿಸಿ ಸಮಸ್ತ ವಿವರಗಳೊಂದಿಗೆ ನಿರ್ದಿಷ್ಟ ಪರಿಹಾರಗಳನ್ನು ಪಡೆದು ಕಾರ್ಯ ಪ್ರವೃತ್ತರಾಗಬೇಕು. ಕನ್ನಡಿಗರ ಅನಿಶ್ಚಿತ ವ್ಯಕ್ತಿ ಬದುಕಿಗೆ ಕೊನೆ ಹಾಡಬೇಕು. ಇದು ಮಾನವೀಯ ಸರ್ಕಾರವೊಂದರ ನೈತಿಕ ಜವಾಬ್ದಾರಿ ಎಂದು ಭಾವಿಸುತ್ತೇನೆ.
ಹಾಗೆ ನೋಡಿದರೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ರಾಷ್ಟ್ರೀಯ ನೀತಿಯ ಅಗತ್ಯವಿದೆ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸ್ಥಳೀಯ ಅರ್ಹರಿಗೆ ಆದ್ಯತೆಯ ಮೇಲೆ ಉದ್ಯೋಗ ನೀಡುವುದು, ಆಯಾ ರಾಜ್ಯ ಭಾಷೆಯ ಕಲಿಕೆಯನ್ನು ಉದ್ಯೋಗ ನೀಡಿಕೆಗೆ ಕಡ್ಡಾಯ ಮಾಡುವುದು ಈ ರಾಷ್ಟ್ರೀಯ ಉದ್ಯೋಗ ನೀತಿಯ ಕೇಂದ್ರವಾಗಬೇಕು. ಆಗ ರಾಜ್ಯ ಭಾಷೆಗಳು ವಿಸ್ತಾರಗೊಳ್ಳುತ್ತವೆ. ಸ್ಥಳೀಯರಲ್ಲಿ ಬೆಳೆಯುವ ಪರಿಕೀಯತೆ ಮತ್ತು ಪ್ರತ್ಯೇಕತಾವಾದವೂ ತಪ್ಪುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ೧೯೬೮ ರಲ್ಲಿ ರಾಷ್ಟ್ರೀಯ ಭಾವೈಕ್ಯತಾ ಆಯೋಗವು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ವಿಷಯವನ್ನು ಪ್ರಸ್ತಾಪಿಸಿತ್ತು. ಆಗ ಭಾಷಾವಾರು ರಾಜ್ಯಗಳ ರಚನೆಯಾಗಿ ೧೨ ವರ್ಷಗಳಾಗಿದ್ದವು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಜನರ ಅಗತ್ಯ ಮತ್ತು ಆಕಾಂಕ್ಷೆಗಳನ್ನು ರಾಷ್ಟ್ರೀಯ ಭಾವೈಕ್ಯತಾ ಆಯೋಗ ಗಮನಿಸಿತ್ತು. ದೇಶದಲ್ಲಿರುವ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಆಯಾರಾಜ್ಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕೆಂದೂ ಇಲ್ಲದಿದ್ದರೆ ಪ್ರತ್ಯೇಕತಾವಾದ ಬೆಳೆದು ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ಯಾಗುವುದೆಂದೂ ಪ್ರತಿಪಾದಿಸಿ ಶಿಫಾರಸು ಮಾಡಿತ್ತು. ಆದರೆ ಆಗ ಈ ಶಿಫಾರಸು ಅಂಗೀಕಾರವಾಗಲಿಲ್ಲ. ಜಾರಿಯಾಗಲಿಲ್ಲ. ಇದು ಈಗಲಾದರೂ ಜಾರಿಯಾಗಬೇಕು. ಬಹುರಾಷ್ಟ್ರೀಯ ಕಂಪನಿಗಳನ್ನೂ ಈ ವ್ಯಾಪ್ತಿಗೆ ಒಳಪಡಿಸಬೇಕು. ಸಂವಿಧಾನಕ್ಕಿಂತ ಯಾವ ಕಂಪನಿಯೂ ದೊಡ್ಡದಲ್ಲವಾದ್ದರಿಂದ ಖಾಸಗಿ ವಲಯದಲ್ಲಿ ಸ್ಥಳೀಯ ಅರ್ಹರಿಗೆ ಆದ್ಯತೆ ಕೊಡುವುದರ ಜೊತೆಗೆ ಸಂವಿಧಾನದತ್ತ ಮೀಸಲಾತಿಯನ್ನೂ ಅರ್ಹತೆಯ ಆಧಾರದ ಮೇಲೆ ನೀಡಬೇಕು. ಹೀಗೆ ಸಮಗ್ರ ರಾಷ್ಟ್ರೀಯ ಉದ್ಯೋಗ ನೀತಿ ನಿರೂಪಣೆ ಮಾಡಿ ಅನುಷ್ಠಾನಗೊಳಿಸುವುದರಿಂದ ಸ್ಥಳೀಯರಿಗೆ ಹಾಗೂ ಸಾಮಾಜಿಕ ಆರ್ಥಿಕ ದುರ್ಬಲರಿಗೆ ಉದ್ಯೋಗ ಸಿಕ್ಕುತ್ತದೆ-ದೇಶದ ಒಕ್ಕೂಟ ವ್ಯವಸ್ಥೆಗೆ ಅರ್ಥಬರುತ್ತದೆ. ಭಾಷೆ ಮತ್ತು ಬದುಕಿಗೆ ಭವಿಷ್ಯದ ಭರವಸೆ ಬರುತ್ತದೆ.
ಭಾಷೆ ಮತ್ತು ಬದುಕು
ಭಾಷೆ ಮತ್ತು ಬದುಕಿಗೆ ಸಂಬಂಧ ಸಾಧಿಸದ ಭಾಷಾಭಿಮಾನಕ್ಕೆ ಬದ್ಧತೆಯ ಕೊರತೆ ಉಂಟಾಗುತ್ತದೆ. ಯಾಕೆಂದರೆ ಬದುಕನ್ನು ಬಿಟ್ಟು ಭಾಷೆಯಿಲ್ಲ. ಭಾಷೆಯೊಂದು ಉಳಿದು ಬೆಳೆಯಬೇಕಾದರೆ ಭಾಷೆಯನ್ನಾಡುವ ಜನರ ಬದುಕು ಉಳಿಯಬೇಕು; ಬೆಳೆಯಬೇಕು. ಆದ್ದರಿಂದ ನಾವು ಭಾಷೆಯ ಮೂಲಕ ಜನರನ್ನು ನೋಡುತ್ತೇವೆಯೋ, ಜನರ ಮೂಲಕ ಭಾಷೆಯನ್ನು ನೋಡುತ್ತೇವೆಯೊ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ನನ್ನ ಉತ್ತರವಂತೂ ಸ್ವಷ್ಟ: ಜನರ ಮೂಲಕ ಭಾಷೆಯನ್ನು ನೋಡಬೇಕು. ಕನ್ನಡ ಭಾಷೆಯನ್ನಾಡುವ ಜನರನ್ನು ಬದುಕಿಸಿ, ಅವರು ಭಾಷೆಯನ್ನು ಬದುಕಿಸಿಕೊಳ್ಳುತ್ತಾರೆ. ಸಾವಿರಾರು ವರ್ಷದಿಂದ ಕನ್ನಡ ಜನರು ತಾವೂ ಬದುಕುತ್ತ ಕನ್ನಡವನ್ನು ಬದುಕಿಸಿಕೊಂಡಿರುವುದೇ ನನ್ನ ಮಾತಿಗೆ ಸಾಕ್ಷಿ ಮತ್ತು ಸಮರ್ಥನೆ. ಹೀಗೆ ಕನ್ನಡವನ್ನು ಉಳಿಸಿಕೊಂಡು ಬಂದವರು ಬಡಕನ್ನಡಿಗರು. ಇವರು ಹಳ್ಳಿಗಳಲ್ಲೂ ಇದ್ದಾರೆ; ನಗರಗಳಲ್ಲೂ ಇದ್ದಾರೆ. ಆದ್ದರಿಂದ, ಕನ್ನಡವನ್ನು ಉಳಿಸಿಕೊಂಡು ಬಂದ ಬಡಕನ್ನಡಿಗರ ಬದುಕನ್ನು ಉಳಿಸುವುದು ನಿಜವಾದ ಕನ್ನಡಾಭಿಮಾನ. ಜನರನ್ನು ಉಳಿಸಿದರೆ ಜನಭಾಷೆ ಉಳಿಯುತ್ತದೆ.
ಒಂದು ಮಾತು ನೆನಪಿರಲಿ: ಕನ್ನಡಕ್ಕೆ ಸಾವಿಲ್ಲ; ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಕನ್ನಡಿಗರಿಗೆ ಕೊಟ್ಟರೆ ಕನ್ನಡದ ಕಂಟಕಗಳಿಗೆ ಅವರೇ ಸವಾಲು ಎಸೆಯುತ್ತಾರೆ. ಹಾಗಾದರೆ ಕನ್ನಡಿಗರಿಗೆ ನಾವು ಕೊಡಬೇಕಾದ ಶಕ್ತಿ ಯಾವುದು? ಬದುಕುವ ಶಕ್ತಿ; ಸಾಮಾಜಿಕ ಶಕ್ತಿ; ಆರ್ಥಿಕ ಶಕ್ತಿ; ಶಿಕ್ಷಣದ ಶಕ್ತಿ; ಉದ್ಯೋಗ ಶಕ್ತಿ; ಹಸಿವುಮುಕ್ತ ಶಕ್ತಿ; ಸಮಾನತೆಯ ಶಕ್ತಿ.
ಅಂದರೆ ನಮ್ಮ ಭಾಷಾ ಹೋರಾಟಗಳು ಸಾಮಾಜಿಕ ಹೋರಾಟಗಳೂ ಆಗಬೇಕು. ಬದುಕಿನ ಅಗತ್ಯಗಳಿಗೂ ಭಾಷೆಗೂ ಇರುವ ಅಂತರ್ ಸಂಬಂಧವನ್ನು ಗ್ರಹಿಸಿದ ತಾತ್ವಿಕತೆ ಕೇಂದ್ರಪ್ರಜ್ಞೆಯಾಗಬೇಕು. ಸಮೂಹ ಸನ್ನಿಯಾಗದ ಸಮೂಹ ಪ್ರಜ್ಞೆ ಬೇಕು. ಭಾಷೆಯನ್ನು ಉಳಿಸುವುದೆಂದರೆ ಬದುಕನ್ನು ಉಳಿಸುವುದು, ಬದುಕನ್ನು ಉಳಿಸುವುದೆಂದರೆ ಭಾಷೆಯನ್ನು ಉಳಿಸುವುದು ಎಂದಾಗಬೇಕು.
ಇಲ್ಲಿ ಯಾರ ಬದುಕನ್ನು ಉಳಿಸಬೇಕು? ಈ ವಿಷಯದಲ್ಲಿ ಕನ್ನಡಾಭಿಮಾನಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಬೇಕು. ಯಾವ ಕನ್ನಡಿಗರ ಬದುಕನ್ನು ಬೆಳೆಸಲು ಬದ್ಧರಾಗಬೇಕೆಂಬ ಖಚಿತತೆ ಬೇಕು. ಕೋಟ್ಯಾಧೀಶ ಕನ್ನಡಿಗರು ಕಡು ಬಡವ ಕನ್ನಡಿಗರಿಗೆ ಕಂಟಕರಾದಾಗ ನಾವು ಯಾರ ಬೆಂಬಲಕ್ಕಿರಬೇಕು? ಭೂಮಾಲೀಕರು ಬಡ ರೈತರು ಮತ್ತು ಕೃಷಿ ಕೂಲಿಕಾರ ಕನ್ನಡಿಗರನ್ನು ಶೋಷಣೆ ಮಾಡುತ್ತಿದ್ದರೆ ನಾವು ಯಾರ ಪರ? ಉದ್ಯಮಪತಿ ಕನ್ನಡಿಗರು ತಮ್ಮ ಉದ್ಯೋಗಿಗಳಿಗೆ ಮಾರಕವಾದರೆ ನಾವು ನಿಲ್ಲಬೇಕಾದ್ದು ಎಲ್ಲಿ? ಕನ್ನಡಿಗನೊಬ್ಬ ಕನ್ನಡಿಗ ಮಹಿಳೆಯನ್ನು ಶೋಷಣೆ ಮಾಡಿದರೆ, ನಾವು ಕನ್ನಡಿಗ ಪುರುಷನ ಪರವೊ ಕನ್ನಡ ಮಹಿಳೆಯ ಪರವೊ? ಸವರ್ಣೀಯ ಕನ್ನಡಿಗರು ದಲಿತ ಕನ್ನಡಿಗರನ್ನು ದೂರವಿಟ್ಟರೆ ನಾವು ಯಾರಿಗೆ ಸಮೀಪವಾಗಬೇಕು? ಧಾರ್ಮಿಕ ಮೂಲಭೂತವಾದಿ ಕನ್ನಡಿಗರು ಕನ್ನಡಿಗರೆಂಬ ಕಾರಣಕ್ಕೆ ಕ್ಷಮಾರ್ಹರಾಗಬೇಕೆ? ಇಲ್ಲವೆ ಮೂಲಭೂತವಾದದ ಬಲಿಪಶು ಕನ್ನಡಿಗರ ಪರವಾಗಿ ನಾವು ನಿಲ್ಲಬೇಕೆ?. ಹಿಂದೂ, ಮುಸ್ಲಿಂ, ಕ್ರೈಸ್ತ ಮುಂತಾಗಿ ಭೇದವೆನಿಸಿ ಸಂಘರ್ಷಕ್ಕಿಳಿಯುವ ಮನೋಧರ್ಮ ಆದರ್ಶವಾಗಬೇಕೇ? ಇಂತಹ ಸಾಮಾಜಿಕ ಆರ್ಥಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಖಚಿತ ನಿಲುವಿನಲ್ಲಿ ನಮ್ಮ ಕನ್ನಡಾಭಿಮಾನದ ತಾತ್ವಿಕ ನೆಲೆ ಸ್ಪಷ್ಟವಾಗಬೇಕು. ನಿಜ; ಹೊರರಾಜ್ಯದವರು ತೆಗೆಯುವ ನೆಲ-ಜಲದ ಜಗಳಗಳ ಸಂದರ್ಭದಲ್ಲಿ ನಮ್ಮ ರಾಜ್ಯದೊಳಗಿನ ಸಾಮಾಜಿಕ – ಆರ್ಥಿಕ ಪ್ರತ್ಯೇಕತೆ ಪ್ರಧಾನವಾಗಬಾರದು; ಆಗ ಕರ್ನಾಟಕದ ನಾವೆಲ್ಲ ಒಂದಾಗಿ ಉತ್ತರಿಸಬೇಕು. ಆದರೆ ಕರ್ನಾಟಕದೊಳಗಿನ ಸಾಮಾಜಿಕ-ಆರ್ಥಿಕ ಸ್ತರಗಳ ಸಂದರ್ಭದಲ್ಲಿ ಭಿನ್ನ ನಿಲುವಿಗೆ ಬದ್ಧರಾಗಬೇಕು. ಅಂದರೆ ನಾವು ಕನ್ನಡ ಕೋಟ್ಯಾಧಿಪತಿಗಳಿಂದ ಕಷ್ಟಕ್ಕೆ ಸಿಕ್ಕಿದ ಬಡಕನ್ನಡಿಗರ ಪರವಾಗಿರಬೇಕು; ಶೋಷಿತ ಮಹಿಳೆಯರಿಗೆ ಬೆಂಬಲವಾಗಬೇಕು; ಶೋಷಿತ ರೈತರಿಗೆ ಮಿಡಿಯಬೇಕು. ವಂಚಿತ ಉದ್ಯೋಗಿಗಳ ಪರವಾಗಿರಬೇಕು. ದಲಿತರಿಗೆ ದನಿಯಾಗಬೇಕು; ಧಾರ್ಮಿಕ ಸಹಿಷ್ಣುತೆಗೆ ಸ್ಪಂದಿಸಬೇಕು. ಸಮಾನತೆ ಆದರ್ಶವಾಗಬೇಕು. ಕನ್ನಡಪರ ಹೋರಾಟದ ಅಂತರಂಗದ ಅರಿವಾಗಿ ಸಾಮಾಜಿಕ ಆಯಾಮವೊಂದು ಇರಬೇಕು. ಇದು ಜನಪರ ಕನ್ನಡಾಭಿಮಾನ ನಮಗೆ ಬೇಕಾದ್ದು ಕೊರಳಿನ ಕನ್ನಡಾಭಿಮಾನ ಅಲ್ಲ. ಕರುಳಿನ ಕನ್ನಡಾಭಿಮಾನ. ಕರುಳು ಕೊರಳಿಗೆ ಬಂದು ದನಿಯಾಗುವ ಕನ್ನಡಾಭಿಮಾನ. ಇದಕ್ಕೆ ಕನ್ನಡ ಸಾಹಿತ್ಯ ಸಾಕ್ಷಿಯಾಗಿದೆ. ಕರುಳ ಬಳ್ಳಿಯ ಕೊರಳಾಗಿ ಕನ್ನಡಕ್ಕೆ ಶಕ್ತಿ ತುಂಬಿದೆ. ಇದು ನಮ್ಮ ಕನ್ನಡಾಭಿಮಾನದ ಆದರ್ಶದ ಮಾದರಿ.
ಕನ್ನಡ ಸಾಹಿತ್ಯದ ನಿಜದನಿಯಲ್ಲಿ ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಸಹಿಷ್ಣು ಸಾಧಕರೆಲ್ಲ ಅಕ್ಷರವಾಗಿದ್ದಾರೆ. ಮೌಖಿಕ ಪರಂಪರೆಯಲ್ಲೂ ಪ್ರತೀಕವಾಗಿದ್ದಾರೆ. ಹೀಗೆಂದ ಕೂಡಲೇ ಕರ್ನಾಟಕ ಸಮಾಜದಲ್ಲಿ ಸದಾ ಸಂಪೂರ್ಣ ಉತ್ತಮಿಕೆಯಿತ್ತು ಎಂದಲ್ಲ. ವಿಭಜಿತ ಸಮಾಜದಲ್ಲಿ ಉತ್ತಮವಾದದ್ದನ್ನು ಮುನ್ನೆಲೆಗೆ ತಂದ ಕೀರ್ತಿಯಂತೂ ಕನ್ನಡ ಜನತೆಗಿದೆ; ಕನ್ನಡ ಸಾಹಿತ್ಯಕ್ಕಿದೆ; ಕನ್ನಡ ಸಂವೇದನೆಗಿದೆ.
ಕನ್ನಡ ಸಂವೇದನೆಯ ಆಯಾಮ
ಕನ್ನಡ ಸಂವೇದನೆಯು ಏಕಕಾಲಕ್ಕೆ ಸ್ಥಳೀಯವೂ ರಾಷ್ಟ್ರೀಯವೂ ಅಂತರರಾಷ್ಟ್ರೀಯವೂ ಆಗಿರುವ ಹೆಗ್ಗಳಿಕೆಯನ್ನು ಹೊಂದಿದೆ. ಸಾಹಿತ್ಯ ಮತ್ತು ಸಾಂಸ್ಕøತಿಕ ವೈವಿಧ್ಯವನ್ನು ಸಾಕ್ಷಿರೂಪದಲ್ಲಿ ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ಕರ್ನಾಟಕದೊಳಗೆ ನಮ್ಮನಾಡಿಗೇ ಸೇರಿದ ತುಳು, ಕೊಡವ, ಕೊಂಕಣಿ, ಲಂಬಾಣಿ, ಅರೆಭಾಷೆ ಮುಂತಾದ ಭಾಷಿಕ ಸಮುದಾಯಗಳಿವೆ; ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟುಗಳಿವೆ. ಕನ್ನಡಸಂವೇದನೆಯು ಈ ಎಲ್ಲ ವೈವಿದ್ಯಗಳನ್ನು ಒಳಗೊಂಡೇ ಕರ್ನಾಟಕ ಸಂಸ್ಕøತಿಯಾಗಿದೆ. ಇದೇ ನಿಜವಾದ ಸಾಂಸ್ಕøತಿಕ ನ್ಯಾಯ.
ಕನ್ನಡ ಸಂವೇದನೆಯು ಸಾಹಿತ್ಯದ ಮೂಲಕ ಪ್ರಕಟಣೆಗೊಂಡ ಬಗೆಯೂ ಅದರ ವಿಸ್ತಾರವನ್ನು ಮನವರಿಕೆ ಮಾಡಿಕೊಡುತ್ತದೆ. ಕನ್ನಡ ಸಂವೇದನೆಯು ಸ್ಥಳೀಯ ಬದುಕನ್ನು ಅದರ ಸಂಭ್ರಮ ಸಂಕಟಗಳೊಂದಿಗೆ ಅಭಿವ್ಯಕ್ತಿಸಿದೆ; ಸ್ವಾತಂತ್ರ್ಯ ಚಳುವಳಿಯನ್ನು ಒಳಗೊಂಡಂತೆ ಕರ್ನಾಟಕೇತರ ಸಾಧಕರ ಬಗ್ಗೆಯೂ ಬರೆಯುತ್ತ ರಾಷ್ಟ್ರೀಯವಾಗಿದೆ. ಕನ್ನಡದಲ್ಲಿ ಗಾಂಧಿ, ಅಂಬೇಡ್ಕರ್ ಮುಂತಾದವರನ್ನು ಕುರಿತು ಬಂದಿರುವ ರಚನೆಗಳನ್ನು ಗಮನಿಸಿದರೆ ಕನ್ನಡ ಸಂವೇದನೆಯ ರಾಷ್ಟ್ರೀಯ ಆಯಾಮ ತಾನಾಗಿಯೇ ತಿಳಿಯುತ್ತದೆ. ದೇಶಭಕ್ತಿಯ ವಿಷಯದಲ್ಲಿ ಕನ್ನಡ ಸಂವೇದನೆ ಸದಾ ರಾಷ್ಟ್ರೀಯವಾಗಿದೆ. ಅಂತೆಯೇ ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಸ್ಪಂದಿಸುತ್ತ ಅಂತರ ರಾಷ್ಟ್ರೀಯವೂ ಆಗಿದೆ. ಅಬ್ರಾಹಂ ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೆಲ – ಮುಂತಾದವರನ್ನು ಗೌರವಿಸುವ ಅಭಿವ್ಯಕ್ತಿಗಳಲ್ಲಿ ಕನ್ನಡದ ಅಂತರ ರಾಷ್ಟ್ರೀಯ ಸಂವೇದನೆಯಿದೆ. ಅಷ್ಟೇಕೆ, ಕೆಲವರ್ಷಗಳ ಹಿಂದೆ ನಿಧನ ಹೊಂದಿದ ಬೆಂಜಾಮಿನ್ ಮೊಲಾಯಿಸ್ ಎಂಬ ಕವಿಯನ್ನು ಕುರಿತು ಮೂವತ್ತಕ್ಕೂ ಹೆಚ್ಚು ಕವಿತೆಗಳನ್ನು ಅಭಿವ್ಯಕ್ತಿಸಿದ ಹೆಗ್ಗಳಿಕೆ ಕನ್ನಡದ ಅಂತರ ರಾಷ್ಟ್ರೀಯ ಸಂವೇದನೆಗೆ ಸಲ್ಲಬೇಕು. ಕನ್ನಡ ಭಾಷಾಭಿಮಾನದ ಒಳ ತಿಳುವಳಿಕೆಯಾಗಿ ಈ ಕನ್ನಡ ಸಂವೇದನೆ ಕೆಲಸ ಮಾಡುತ್ತಿರಬೇಕು.
ಕನ್ನಡ ಸಂವೇದನೆಯು ಸಾಹಿತ್ಯದ ಮೂಲಕ ಪ್ರಕಟಿಸಿದ ಪ್ರತಿಕ್ರಿಯೆಗಳನ್ನು ನಮ್ಮೊಳಗಿನ ಪ್ರತೀಕವಾಗಿಸಿಕೊಳ್ಳದೆ ಹೋದರೆ ಓದು ವ್ಯರ್ಥವಾಗುವುದಿಲ್ಲವೆ ಎಂಬ ಪ್ರಶ್ನೆಯನ್ನು ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕು. ನಮ್ಮ ದೇಶದಲ್ಲಿ ಓದು ಒಂದು ಹೋರಾಟ; ಅರಿವು ಒಂದು ಆಂದೋಲನ. ಅನೇಕರ ಸುಧಾರಕರ ಪರಿಶ್ರಮದಿಂದ ಶಿಕ್ಷಣವು ಹಟ್ಟಿಗಳಿಗೆ, ಗುಡಿಸಲುಗಳಿಗೆ, ಕೊಳಗೇರಿಗಳಿಗೆ, ಬಡವರಿಗೆ, ಮಹಿಳೆಯರಿಗೆ ಬಂದು ಸೇರಿದೆ. ಶತಮಾನಗಳಿಂದ ಸೆರೆವಾಸಿಯಾಗಿದ್ದ ಶಿಕ್ಷಣದ ವಿಮೋಚನೆಯಾಗಿದೆ. ಹೀಗೆ ವಿಮೋಚನೆಗೊಂಡ ಶಿಕ್ಷಣದಿಂದ ಜನರು ವಿಮೋಚನಾ ಶಕ್ತಿಯನ್ನು ಪಡೆಯಬೇಕಾಗಿದೆ. ಶಿಕ್ಷಣವನ್ನು ಸೆರೆಯಲ್ಲಿಟ್ಟ ಶಕ್ತಿಗಳು ಸಹ ಬದಲಾಗಬೇಕಾದ ಮತ್ತು ಬದಲಾಗುತ್ತ ಬಂದ ಇತಿಹಾಸವನ್ನುಳ್ಳ ನಮ್ಮ ಸಮಾಜದಲ್ಲಿ ಓದು ಒಂದು ಹೋರಾಟದ ಫಲವಾಗಿದ್ದು ಅದರಿಂದ ಹೊಸ ಅರಿವು ಮೂಡುತ್ತ ಬಂದದ್ದರಿಂದ ನಾನು ‘ಓದು ಒಂದು ಹೋರಾಟ-ಅರಿವು ಒಂದು ಆಂದೋಲನ’ ಎಂದು ಕರೆದಿದ್ದೇನೆ.
‘ಅರಿವೇ ಆಂದೋಲನ’ವಾಗಿದ್ದರ ಫಲವಾಗಿ ಕರ್ನಾಟಕದ ಸಮಾಜವು ಕೆಡಕು ಮತ್ತು ಕೊಳಕುಗಳನ್ನು ಕರಗಿಸಿಕೊಂಡು ಮಾನವೀಯ ಬೆಳಕನ್ನು ಮುನ್ನೆಲೆಗೆ ತರಲು ಸಾಧ್ಯವಾಯಿತು. ಇದರ ಫಲವಾಗಿ ಕನ್ನಡ ಸಂವೇದನೆಯಲ್ಲಿ ಕತ್ತಲನ್ನು ಬೆತ್ತಲುಗೊಳಿಸಿದ ಬೆಳಕು ಹುಟ್ಟಿ ಬೆಳೆಯಿತು. ನಮ್ಮ ಸಾಮಾಜಿಕ ಸನ್ನಿವೇಶದೊಂದಿಗೆ ಮುಖಾಮುಖಿಯಾಗುತ್ತ ಅಗತ್ಯವಾದಾಗ ಅನುಸಂಧಾನಿಸುತ್ತ ಹೊಳೆಯಿತು. ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಹೋರಾಟ, ರೈತ ಹೋರಾಟ, ಮಹಿಳಾ ಹೋರಾಟ, ಹಾಗೂ ಕ್ಷುಲ್ಲಕ ಸಂಘರ್ಷಗಳನ್ನು ಕರಗಿಸಿ ಹೊಮ್ಮಿದ ಸೌಹಾರ್ದಗಳನ್ನು ಅಭಿವ್ಯಕ್ತಿಸಿತು.
ಕನ್ನಡ ಸಂವೇದನೆ ಮತ್ತು ದೇಶಭಕ್ತಿ
ಈಗ ತುಂಬಾ ಚರ್ಚೆಗೆ ಅಥವಾ ಚರ್ಚೆಯ ಹೆಸರಿನ ಹಗ್ಗಜಗ್ಗಾಟಕ್ಕೆ ಹೆಸರಾಗಿರುವ ದೇಶಭಕ್ತಿಯ ವಿಷಯವನ್ನೇ ತೆಗೆದುಕೊಳ್ಳಿ. ರಾಷ್ಟ್ರೀಯತೆಯ ಪ್ರಶ್ನೆಯನ್ನೂ ಪರಿಶೀಲಿಸಿ ನೋಡಿ. ಕನ್ನಡ ಸಂವೇದನೆಯು ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಂದಿಸುತ್ತ ಸ್ವಾತಂತ್ರ್ಯನಂತರವೂ ರಾಷ್ಟ್ರೀಯ ಸಮಗ್ರತೆಯನ್ನು ಪ್ರತಿಪಾದಿಸುತ್ತ ಬಂದಿದೆ.
ಬೇಂದ್ರೆಯವರು ‘ಎಂದೆಂದೂ ಈ ಮಕ್ಕಳ ಕೈ ಮೈ ಹಿಡಿದಾಕೆ ಯರ್ಯಾರಿಗೂ ಬಾಗಿದರೂ ನಮ್ಮೆದೆ ಬಿಡದಾಕೆ| ಆಪತ್ತನ್ನು ತಡೆದಾಕೆ | ಜೊತೆ ಜೊತೆಗೆ ನಡೆದಾಕೆ|” ಎಂದು ತಾಯಿ-ಮಕ್ಕಳ ಸಂಬಂಧದಲ್ಲಿ ದೇಶಭಕ್ತಿಯನ್ನು ಕಟ್ಟುವ ರೀತಿ ಸರಳವೂ ಅನನ್ಯವೂ ಆಗಿದೆ. ಕುವೆಂಪು ಅವರು – “ಭಾರತಾಂಬೆಯೇ ಜನಿಸಿ ನಿನ್ನೊಳು| ಧನ್ಯನಾದೆನು ದೇವಿಯೆ| ನಿನ್ನ ಪ್ರೇಮದಿ ಬೆಳದು ಜೀವವು| ಮಾನ್ಯವಾದುದು ತಾಯಿಯೇ” ಎಂದು ಧನ್ಯತಾ ಭಾವದಲ್ಲಿ ತಾಯಿ ರೂಪವಾಗಿಸುತ್ತಾರೆ. ಗೋವಿಂದಪೈ ಅವರಿಗೆ ನಮ್ಮ ದೇಶಮಾತೆ ‘ಜೀವನ ನಳಿನಿ……. ಭಾರತ ಜನನಿ’ಯಾಗುತ್ತಾಳೆ. ಸ್ವಾತಂತ್ರ್ಯಾನಂತರದಲ್ಲಿ ಪು.ತಿ.ನ ಅವರು ಬರೆಯುತ್ತಾರೆ: “ಕಿರೀಟಪತಿಗಳ ರಾಜ್ಯವಿದಲ್ಲ| ನಮ್ಮೀಭಾರತದೇಶ| ಈ ಮೊದಲಿನ್ನೀ ರಾಜ್ಯದಿ ನಡೆವುದು| ನಾಡಮಕ್ಕಳ ಆದೇಶ|”
ಹೀಗೆ ಕನ್ನಡ ಕವಿಗಳು ದೇಶಭಕ್ತಿಯನ್ನು ಭಾವುಕ ಮತ್ತು ಬೌದ್ಧಿಕ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ ಇತ್ತೀಚಿಗೆ ದೇಶಭಕ್ತಿಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿನ ಅನ್ಯಾರ್ಥ, ಅಪಾರ್ಥಗಳು ಅನಾರೋಗ್ಯಕರ ಅನರ್ಥಕ್ಕೆ ಕಾರಣವಾಗುತ್ತಿವೆ. ದೇಶಭಕ್ತಿಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು; ನಮ್ಮ ದೇಶದ ಪ್ರತಿ ಪ್ರಜೆಯದೂ ದೇಶಭಕ್ತಿ ಬದ್ಧತೆಯನ್ನೊಳಗೊಂಡ ವ್ಯಕ್ತಿತ್ವವಾಗಿರಬೇಕು. ಆದರೆ ದೇಶಭಕ್ತಿಯನ್ನು ರಾಜಕೀಯ ಪಕ್ಷಗಳ ಅಪ್ರಬುದ್ಧ ವ್ಯಾಖ್ಯಾನದ ಬಲಿಪಶು ಮಾಡಬಾರದು. ಆಡಿದ ಮಾತಿಗೆ ಅನ್ಯಾರ್ಥ ಮತ್ತು ಅಪಾರ್ಥ ಕಲ್ಪಿಸಿ, ಆಗದವರ ಮೇಲೆಲ್ಲ ದೇಶದ್ರೋಹದ ಆರೋಪ ಹೊರಿಸುವುದೇ ದೇಶಪ್ರೇಮವಾಗಬಾರದು. ಯಾವ ಪಕ್ಷ, ಯಾವ ಧರ್ಮ ಎಂದು ನೋಡಿ ದೇಶಭಕ್ತಿಯ ಮಾನದಂಡವನ್ನು ನಿರ್ಧರಿಸಬಾರದು. ಬಹುಮುಖ್ಯವಾಗಿ ನಮ್ಮ ಸೈನಿಕರ ತ್ಯಾಗವನ್ನು ಕಡೆಗಣಿಸುವ ಕುಬ್ಜರಾಗಬಾರದು. ದೇಶದೊಳಗಿನ ಸಮಸ್ತ ಸಮುದಾಯವನ್ನು ರಕ್ಷಿಸಲು ಸದಾ ಸಿದ್ಧವಾಗಿರುವ ಸೈನಿಕರು ಗಡಿಕಾಯುತ್ತ ಅನುಭವಿಸುವ ಪರಕೀಯತೆಯ ಅನುಭವವನ್ನು ನಮ್ಮದಾಗಿಸಿಕೊಳ್ಳುವುದರಲ್ಲಿ ಶ್ರೇಷ್ಠ ಮಾದರಿಯ ದೇಶಭಕ್ತಿಯಿದೆಯೆಂದು ನನ್ನ ಭಾವನೆ. ತಮ್ಮ ಕುಟುಂಬದೊಂದಿಗೆ ನಮ್ಮಂತೆ ನಿರಂತರ ಸಂಪರ್ಕ ಸಾಧ್ಯವಾಗದೆ ಆಯುಧಗಳನ್ನೇ ಆತ್ಮೀಯರನ್ನಾಗಿಸಿಕೊಂಡು ಬದುಕುವ ಸೈನಿಕರಿಗೆ ಒಂಟಿತನ ಕಾಡುವುದಿಲ್ಲವೆ? ಆದ್ದರಿಂದ ಸಾವಿನ ಸ್ನೇಹದಲ್ಲಿ ಸಮಯ ಕಳೆಯುವ ಸೈನಿಕರು ನಮ್ಮ ಸಂವೇದನೆಯ ಸ್ನೇಹಿತರಾದಾಗ ನಮ್ಮ ದೇಶಭಕ್ತಿಗೆ ಅರ್ಥ ಬರುತ್ತದೆಯಲ್ಲವೆ? ಸೈನಿಕರನ್ನೂ ಪಕ್ಷರಾಜಕೀಯದ ಅಂಗವಾಗಿ ನೋಡುವ, ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರವೃತ್ತಿ ದೇಶಭಕ್ತಿಗೆ ಬಗೆಯುವ ದ್ರೋಹವಾಗುತ್ತದೆ. ಇತ್ತೀಚಿನ ಪಾಕ್ ಉಗ್ರಗಾಮಿಗಳ ಅಡಗುದಾಣಗಳ ಮೇಲೆ ನಡೆದ ನಿರ್ಧಿಷ್ಟ ದಾಳಿಗಾಗಿ ನಮ್ಮ ಸೈನಿಕರಿಗೆ ಸಲಾಂ ಹೇಳಲೇಬೇಕು. ಸಾವಿಗಂಜದ ಸೈನಿಕರ ದೇಶಭಕ್ತಿಯನ್ನು ಮೆಚ್ಚಲೇ ಬೇಕು. ಅದೇ ಸಂದರ್ಭದಲ್ಲಿ ಸೈನಿಕರ ಸರ್ಜಿಕಲ್ ದಾಳಿಯು ರಾಜಕೀಯ ಚರ್ಚೆಯಾಗಬಾರದೆಂಬ ವಿವೇಕ, ಔಚಿತ್ಯಗಳು ನಮ್ಮ ದೇಶಭಕ್ತಿಗೆಬೇಕು.
ಸಾಮಾಜಿಕ ಸರ್ಜಿಕಲ್ದಾಳಿ
ದೇಶಭಕ್ತಿಗೆ ಪಕ್ಷಗಳ ಪಟ್ಟ ಕಟ್ಟಬಾರದು. ಉಗ್ರಗಾಮಿ ವಿರುದ್ಧದ ಸರ್ಜಿಕಲ್ ದಾಳಿಯನ್ನು ಮೆಚ್ಚಲು ಪಕ್ಷ ರಾಜಕೀಯ ಅಡ್ಡಿಯಾಗಬಾರದು. ಸೈನಿಕ ಸರ್ಜಿಕಲ್ ದಾಳಿಯನ್ನು ಮೆಚ್ಚಿದರೆ ನಾವು ಬಿ.ಜೆ.ಪಿ ಯಾಗುವುದಿಲ್ಲ. ಅನ್ನ ಭಾಗ್ಯ ಯೋಜನೆ ಮೆಚ್ಚಂದರೆ ಕಾಂಗ್ರೆಸ್ ಆಗುವುದಿಲ್ಲ. ನಿಜದ ಮೆಚ್ಚುಗೆಗೆ ಮಡಿವಂತಿಕೆ ಬೇಕಾಗಿಲ್ಲ. ಈ ಮಡಿವಂತಿಕೆ ಕನ್ನಡ ಸಾಹಿತ್ಯದಲ್ಲಿ ಇಲ್ಲ. ಕನ್ನಡ ಸಾಹಿತ್ಯದಲ್ಲಿ ಮತ್ತು ಮನಸ್ಸಿದೆ ಆದರೆ ದೇಶದ ಹೊರಗಿನ ಸೈನಿಕ ಸರ್ಜಿಕಲ್ ದಾಳಿಯನ್ನು ಮೆಚ್ಚುತ್ತಲೇ ದೇಶದ ಒಳಗಿನ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ನಾವು ವಿರೋಧಿಸಬೇಕು. ಹಾಗಾದರೆ ಈ ಸಾಮಾಜಿಕ ಸರ್ಜಿಕಲ್ ದಾಳಿಗಳು ಯಾವುವು? ಜಾತಿವಾದ, ಕೋಮುವಾದ, ಲಿಂಗತ್ವ ಅಸಮಾನತೆ, ಆರ್ಥಿಕ ಅಸಮಾನತೆ – ಮುಂತಾದ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ವಿರೋಧಿಸಿ, ಜಾತಿವಿನಾಶ, ಧಾರ್ಮಿಕ ಸೌಹಾರ್ದ, ಮಹಿಳಾ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಳನ್ನು ಸ್ಥಾಪಿಸುವುದು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿಯಾಗಬೇಕು. ಇಲ್ಲಿ ಎಲ್ಲ ಜಾತಿಗಳೂ ಸಮಾನ, ಎಲ್ಲಧರ್ಮಗಳೂ ಸಮಾನ, ಪುರುಷ ಮಹಿಳೆಯರಿಬ್ಬರೂ ಸಮಾನ- ಈ ಸಮಾನತೆಯ ಸಂವೇದನೆ ನಮ್ಮದಾಗಬೇಕು. ಶತ ಶತಮಾನದ ಸಾಮಾಜಿಕ ಸರ್ಜಿಕಲ್ ದಾಳಿಗಳನ್ನು ಎದುರಿಸಿ ಮಾನವೀಯ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು. ಈ ಬದ್ಧತೆಯನ್ನು ಕನ್ನಡ ಸಾಹಿತ್ಯ ಸಂವೇದನೆಯಲ್ಲಿ ಕಾಣಬೇಕು. ಕನ್ನಡ ಸಂವೇದನೆಯು ಸಾಮಾಜಿಕ ಸರ್ಜಿಕಲ್ ದಾಳಿಗೆ ಎದುರಾಗಿ ನಿಂತ ಧೀಮಂತ ಮೌಲ್ಯವನ್ನು ಅರ್ಥಮಾಡಿ ಕೊಳ್ಳದಿದ್ದರೆ ನಮ್ಮ ಕನ್ನಡ ಸಾಹಿತ್ಯದ ಓದು ವ್ಯರ್ಥವಾಗುತ್ತದೆ. ಕನ್ನಡಾಭಿಮಾನವೂ ಅರೆಕೊರೆಯಾಗುತ್ತದೆ.
ಜಾತಿಗಳಾಗಿ ಜನಗಳನ್ನು ಒಡೆದ ಪದ್ಧತಿ ಹಾಗೂ ಪರಿಕಲ್ಪನೆಯನ್ನೇ ಪಲ್ಲಟಗೊಳಿಸಿದ ಪಂಪನ ಪ್ರತಿಪಾದನೆಯನ್ನು ಗಮನಿಸಿ: “ಕುಲಂ ಕುಲಮಲ್ತು ಚಲಂ ಕುಲಂ| ಅನನ್ಯ ಕುಲಮಭಿಮಾನ ಮದೊಂನೆ” ಎಂದ ಪಂಪ ಕವಿ, “ಕುಲವೆಂಬುದುಂಟೆ ಬೀರಮೆ ಕುಲಮಲ್ಲದೆ” ಎಂದು ತನ್ನ ಚಾರಿತ್ರಿಕ ಸಂದರ್ಭಕ್ಕನುಗುಣವಾಗಿ ಪುನರ್ ವ್ಯಾಖ್ಯಾನ ಮಾಡಿ ಜನ್ಮ ಮೂಲ ಕುಲಪದ್ಧತಿಯನ್ನು ನಿರಾಕರಿಸಿದ. ಅಲ್ಲದೆ ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬ ಆದರ್ಶ ವಾಕ್ಯ ನುಡಿದದ್ದು ಸಹ ಪಂಪನ ಕಾವ್ಯ. ಬಸವಣ್ಣನವರ ನೇತೃತ್ವದ ವಚನ ಚಳವಳಿಯು ಜಾತಿ ಶ್ರೇಷ್ಠತೆಯನ್ನು ಧಿಕ್ಕರಿಸಿ ಶಿವಸಂಸ್ಕøತಿಯಲ್ಲಿ ತಳಸಮುದಾಯಗಳನ್ನು ಒಳಗೊಂಡ ಪರ್ಯಾಯವನ್ನೇ ರೂಪಿಸಿತು. ಕನಕದಾಸರು “ಕುಲಕುಲಕುಲವೆಂದು ಹೊಡೆದಾಡದಿರಿ” ಎಂದು ನೇರ ಕರೆ ಕೊಟ್ಟರು. ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?” ಎಂದು ಸರ್ವಜ್ಞ ಪ್ರಶ್ನಿಸಿದ. ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ನವೋದಯ ಸಾಹಿತ್ಯ ಮಾನವೀಯ ಮೌಲ್ಯವನ್ನು ಪ್ರತಿಪಾದಿಸಿತು. ವಿಶೇಷವಾಗಿ ಕುವೆಂಪು ಅವರ ಜಲಗಾರ, ಶೂದ್ರ ತಪಸ್ವಿಯಂತಹ ನಾಟಕಗಳು ಆಧ್ಯಾತ್ಮಕ್ಕೆ ಹೊಸ ಆಯಾಮ ಒದಗಿಸಿ ಸಾಮಾಜಿಕ ಪ್ರಜ್ಞೆಯ ಪ್ರತೀಕವಾದವು. ಪ್ರಗತಿಶೀಲ ಸಾಹಿತ್ಯ ವರ್ಗಭೇದವನ್ನು ವಿರೋಧಿಸಿತು. ದಲಿತ-ಬಂಡಾಯ ಸಾಹಿತ್ಯವು ಚಳವಳಿಯ ಸ್ವರೂಪ ಪಡೆದು ಜಾತಿಮೂಲ, ವರ್ಗಮೂಲದ ಸ್ವದೇಶಿ ಸರ್ಜಿಕಲ್ ದಾಳಿಗಳನ್ನು ಧಿಕ್ಕರಿಸಿತು. ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೂ ಜಾತಿಮೀರಿದ ಕ್ರಿಯೆಯಲ್ಲಿ ತೊಡಗಿದವರಲ್ಲಿ ಮೇಲ್ಜಾತಿಯವರೂ ಇದ್ದಾರೆ. ಸಾಮಾಜಿಕ ಚಳುವಳಿ ಕಟ್ಟಿದವರಲ್ಲಿ ಶೋಷಿತ ಸಮುದಾಯದವರು ಇದ್ದಾರೆ. ಕನ್ನಡ ಸಂವೇದನೆ ಇದೆಲ್ಲವನ್ನೂ ಒಳಗೊಂಡಿದೆ. ಜಾತಿಮೂಲ ಸರ್ಜಿಕಲ್ ದಾಳಿಗಳನ್ನು ಎದುರಿಸಿದೆ.
ಇಂದು ಧರ್ಮ-ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಜಗತ್ತಿನಲ್ಲಿ ಭಯೋತ್ಪಾದನೆ ಮತ್ತು ಯುದ್ಧೋತ್ಪಾದನೆಗಳು ಒಟ್ಟಿಗೇ ವಿಜೃಂಭಿಸುತ್ತಿವೆ.ನಮಗೆ ಭಯೋತ್ಪಾದನೆಯೂ ಬೇಡ; ಯುದ್ಧೋತ್ಪಾದನೆಯೂ ಬೇಡ. ಧರ್ಮ-ಧರ್ಮಗಳ ನಡುವೆ ವೈಷಮ್ಯ ಹುಟ್ಟುಹಾಕುವ ಕೋಮುವಾದವೂ ಬೇಡ. ಕೋಮುವಾದದ ವಿರೋಧವೆಂದರೆ ಎಲ್ಲಧರ್ಮಗಳ ಮೂಲಭೂತವಾದದ ವಿರೋಧ. ಜನರನ್ನು ಒಡೆಯುವುದಕ್ಕಾಗಿ ಧರ್ಮ, ದೇವರುಗಳನ್ನು ಬಳಸಿಕೊಳ್ಳುವ ಸಂಕುಚಿತ ಧಾರ್ಮಿಕ ಸರ್ಜಿಕಲ್ ದಾಳಿಗಳನ್ನು ನಾವು ಒಟ್ಟಾಗಿ ಹಿಮ್ಮೆಟ್ಟಿಸಬೇಕು. ದೀನ ದಲಿತರ, ಬಡಬಗ್ಗರ, ಮಹಿಳೆಯರ, ಮಕ್ಕಳ, ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದು ಆದ್ಯತೆಯಾಗಬೇಕು, ಇಂಥ ಆಶಯವು ಕನ್ನಡ ಸಾಹಿತ್ಯ ಸಂವೇದನೆಯ ಭಾಗವಾಗಿದೆ. “ನಿತ್ಯೋತ್ಸವ ತಾಯಿ ನಿತ್ಯೋತ್ಸವ” ಎಂದು ಹಾಡಿದ ಕೆ.ಎಸ್. ನಿಸಾರ್. ಅಹಮದ್ ಅವರ ಇನ್ನೊಂದು ಪದ್ಯದ ಈ ಭಾಗವನ್ನು ನೋಡಿ: “ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ| ನೋವು ನಗೆಯ ಸಮ್ಮಿಶ್ರದಲ್ಲಿ ಎದೆಯಾಯಿತದರ ವಶ್ಯ| ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ| ಒಂದೆ ನೆಲದ ರಸ ಹೀರಲೇನು? ಸಿಹಿಕಹಿಯ ರುಚಿಯಕಾಯಿ”. ಇನ್ನೊಂದು ಪದ್ಯದಲ್ಲಿ ಅಪನಂಬಿಕೆಯ ಸನ್ನಿವೇಶದ ಬಗ್ಗೆ ಹೀಗೆ ಹೇಳುತ್ತಾರೆ: “ಪಕ್ಕದ ಬೂಳನ ಏಜೆಂಟರೆಂದೆ ಹಳೆ ಹೇಳಿಗೆಯ ನಂಜೆದೆಯ ತಳಿಗಳ ಜೊತೆಯಲ್ಲ್ಲೆ ಹೊಸಪೀಳಿಗೆಯ ನಿರಪಾಯ ಸುಳಿಗಳನು| ದೂಡುವೆ ಸಂಶಯದ ಖೆಡ್ಡಕ್ಕೆ ತಾಯಿ| ಲೇಬಲ್ಲನಂಟಿಸುವ ಗಡ್ಡಕ್ಕೆ ತಾಯಿ| ಸವತಿ ಮಕ್ಕಳ ಹಾಗೆ ಕಾಣಬೇಡವ್ವ.| ಸವತಿ ಮಕ್ಕಳ ಹಾಗೆ ಕಾಡ ಬೇಡ”- ದೇಶಪ್ರೇಮಿ ನಿಸಾರ್ ಅಹಮದ್ ಅವರು ಅಂದೆಂದೋ ಬರೆದ ಈ ಪದ್ಯ ಇಂದಿಗೂ ಪ್ರಸ್ತುತವಾಗಿದೆಯೆಂದರೆ ನಮ್ಮ ಸನ್ನಿವೇಶಕ್ಕೆ ನಾವೇ ನಾಚಬೇಕು. ಅಪನಂಬಿಕೆಯ, ಅಸಹನೆಯ ಅನೈತಿಕ ಪೊಲೀಸ್ ಗಿರಿ ನಿಲ್ಲಬೇಕು. ಈಗ ಚಂದ್ರಶೇಖರ ಕಂಬಾರರ ಒಂದು ಪದ್ಯದ ಈ ಸಾಲುಗಳನ್ನು ಗಮನಿಸಿ: “ಏನು ಹೇಳಲೆವ್ವ ಭಾರತಿ ಇಡೀ ಜಗದಾಗೆಲ್ಲ ಹೆಚ್ಚೇತಾವ ನಿನ್ನಕೀರುತಿ | ಹತ್ತವತಾರಕೆ ಹೆತ್ತವಳಾದೆ ಚಿಲ್ಲರೆ ದೇವರ ಛತ್ತೀಸು ಕೋಟಿ| ದೇವರಿಗೊಂದು ಜಾತಿಯ ಕಟ್ಟಿ ಒಬ್ಬೊಬ್ಬರಿಗೊಬ್ಬರು ಎತ್ತೆತ್ತಿ ಕಟ್ಟಿ | ಜನಗಣವೆಲ್ಲ ರಣರಂಗಮಾಡಿ ಧರ್ಮವಮಾರಿ ದೇವರ ಕೊಂಡಿ| ಏನುಹೇಳಲೆವ್ವ ಭಾರತಿ ಜಗದಾಗೆಲ್ಲ ಹಬ್ಬೇ ತಾವ ನಿನ್ನ ಕೀರುತಿ|”
ಇಲ್ಲಿ ಜಾತಿ, ಧರ್ಮ, ದೇವರ ದುರುಪಯೋಗವನ್ನು ಕವಿ ವಿಷಾದದಿಂದ ಕಟ್ಟಿಕೊಟ್ಟಿದ್ದಾರೆ. ಧಾರ್ಮಿಕ ಸಂಘರ್ಷ ಕೇವಲ ಒಂದು ಆಧುನಿಕ ಗುಣಲಕ್ಷಣವಲ್ಲ. ಕರ್ನಾಟಕದಲ್ಲಿ ಹಿಂದೆಯೂ ಸಂಘರ್ಷಗಳು ಸಂಭವಿಸಿವೆ. ಜೊತೆಗೆ ಸೌಹಾರ್ದದ ಆಶಯ ಮತ್ತು ಪರಿಹಾರದ ಉದಾಹರಣೆಗಳೂ ಇವೆ. ೮ನೇ ಶತಮಾನದಲ್ಲೇ ಶ್ರೀ ವಿಜಯ ತನ್ನ ‘ಕವಿರಾಜ ಮಾರ್ಗ’ದಲ್ಲಿ ಹೇಳಿದ ಸೌಹಾರ್ದ ಸಂದೇಶವನ್ನು ಇಲ್ಲಿ ನೆನಯಬಹುದು: “ಕಸವರಮೆಂಬುದು ನೆರೆಸೈ| ರಿಸಲಾರ್ಪೋಡೆ ಪರವಿಚಾರಮುಂ ಧರ್ಮಮುಮುಂ| ಕಸವೇಂ ಕಸವರವೆನು| ಬಬ್ಬಸಮಂ ಬಸವಲ್ಲದಿರ್ದು ಮಾಡುವರೆಲ್ಲಂ”| ಎಂಬ ಪದ್ಯದಲ್ಲಿ ಕವಿರಾಜಮಾರ್ಗಕಾರನು’ ‘ಅನ್ಯಧರ್ಮ ಮತ್ತು ಅನ್ಯವಿಚಾರಗಳನ್ನು ಸಹಿಸುವುದೇ ಬಂಗಾರ’ ಎಂದು ಹೇಳುತ್ತಾನೆ. ಸಹಿಷ್ಣುತೆಯಿಲ್ಲದಿದ್ದರೆ ಕಸವೂ ಅಷ್ಟೇ ಬಂಗಾರವೂ ಅಷ್ಟೇ ಎಲ್ಲವೂ ಕಷ್ಟವುಂಟು ಮಾಡುತ್ತದೆಯೆಂಬ ವಿವೇಕ ನುಡಿಯುತ್ತಾನೆ. ೧೩೫೪ರ ಒಂದು ಶಾಸನವನ್ನು ಗಮನಿಸಬಹುದು. ಈ ಶಾಸನದಲ್ಲಿ ಉಲ್ಲೇಖವಾಗಿರುವಂತೆ ಜೈನರಿಗೂ ವೈಷ್ಣವರಿಗೂ ನಡೆದ ಧಾರ್ಮಿಕ ಸಂಘರ್ಷವನ್ನು ರಾಜನು ತನ್ನದೇ ರೀತಿಯಲ್ಲಿ ಬಗೆಹರಿಸುತ್ತಾನೆ. ವೈಷ್ಣವರು ಜಿನಮಂದಿರಕ್ಕೆ ಹೋಗಿ ಪಂಚ ವಾದ್ಯಗಳನ್ನು ಬಾರಿಸಬೇಕು ಮತ್ತು ಜೈನರು ವೈಷ್ಣವರ ದೇವಾಲಯಗಳಿಗೆ ಸುಣ್ಣಬಣ್ಣ ಬಳಿಯಬೇಕು ಎಂದು ರಾಜ ಆದೇಶಿಸಿ ಎರಡೂ ಧರ್ಮಗಳ ಪರಸ್ಪರ ಒಳಗೊಳ್ಳುವಿಕೆಗೆ ಕಾರಣವಾಗುತ್ತಾನೆ. ಸೌಹಾರ್ದ ಸ್ಥಾಪಿಸುತ್ತಾನೆ. ಅಂದು ಸಾಧ್ಯವಾದ ಸೌಹಾರ್ದ ಇಂದೇಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಯೊಂದಿಗೆ ಕನ್ನಡ ಸಂವೇದನೆಯು ಸಮಕಾಲೀನ ಸೌಹಾರ್ದ ಸಂವೇದನೆಯಾಗಬೇಕಾದ ಅಗತ್ಯವನ್ನು ಒತ್ತಿ ಹೇಳಬೇಕಾಗಿದೆ. ಇಲ್ಲದಿದ್ದರೆ ಕೋಮುವಾದಕ್ಕೆ ಕೊನೆಯಿಲ್ಲ. ಆದ್ದರಿಂದ ಕನ್ನಡ ಸಂವೇದನೆ ಕೋಮುವಾದಕ್ಕೆ ಕೊನೆ ಹಾಡಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಯಾವುದೇ ಧರ್ಮದ ಮೂಲಭೂತವಾದವನ್ನು ವಿರೋಧಿಸಬೇಕು. ಹಿಂದೂ ಮುಸ್ಲಿಂ ಬಂಧುಗಳು ಒಂದಾಗಿ ಹಬ್ಬಗಳ ಆಚರಣೆಯಲ್ಲಿ ತೊಡಗುತ್ತ ಬಂದ ಪರಂಪರೆಯನ್ನು ನೆನೆಯಬೇಕು. ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದ ಸೂಫಿಸಂತರು ಮತ್ತು ತತ್ವಪದಕಾರರು ನಮ್ಮ ಸಮಾಜಕ್ಕೆ ಆದರ್ಶವಾಗಬೇಕು. ಹೈದರಾಬಾದ್ ಕರ್ನಾಟಕವು ಸೂಫಿಸಂತರು ಮತ್ತು ತತ್ವಪದಕಾರರ ಸಮೃದ್ಧ ಭೂಮಿ. ಈ ಭೂಮಿ ಮಾನವ ಬಾಂಧವ್ಯವನ್ನು ಬಿತ್ತಿ ಬೆಳೆಯುವಂತೆ ಮಾಡಿದ ಕೀರ್ತಿ ಸೂಫಿಗಳಿಗೆ ತತ್ವಪದಕಾರರಿಗೆ ಸಲ್ಲಬೇಕು. ಇಂತಹ ಸೌಹಾರ್ದ ಸಂಸ್ಕøತಿಯನ್ನು ಕೋಮುವಾದಕ್ಕೆ ಪರ್ಯಾಯವಾಗಿ ಎದುರಾಗಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಸೂಫಿ ಸಿದ್ಧಾಂತ ಮತ್ತು ತತ್ವಪದ ಪದ್ಧತಿಯನ್ನು ಸಂಶೋಧಿಸಿ, ಪ್ರಕಟಿಸಿ, ಪ್ರಸಾರ ಮಾಡಿ, ಜಾತಿವಾದ ಕೋಮುವಾದ ನಿರ್ಮೂಲನದ ಪ್ರಕ್ರಿಯೆಯನ್ನಾಗಿಸಲು ಒಂದು ‘ಸೂಫಿ ಮತ್ತು ತತ್ವಪದ ಸಂಶೋಧನೆ ಮತ್ತು ಪ್ರಸಾರ ಸಂಸ್ಥೆ’ಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸುತ್ತೇನೆ.
ಹಾಗೆ ನೋಡಿದರೆ ಕನ್ನಡ ಸಾಹಿತ್ಯದಲ್ಲಿ ಆಯಾ ಧರ್ಮದವರೇ ಆಯಾಧರ್ಮದ ಮೂಲಭೂತವಾದಿ, ಪ್ರಗತಿವಿರೋಧಿ ಅಂಶಗಳನ್ನು ವಿರೋಧಿಸಿದ ಸಾಕ್ಷಿಗಳಿವೆ. ದಲಿತ ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ ಪ್ರಬಲ ಆಯಾಮವಾಗಿ ಅಭಿವ್ಯಕ್ತಿಯ ಗಟ್ಟಿತನ ತೋರಿದ ‘ಮುಸ್ಲಿಂ ಸಂವೇದನೆ’ಯು ಕನ್ನಡ ಸಂವೇದನೆಯ ಭಾಗವೇ ಆಗಿದೆ. ಮುಸ್ಲಿಂ ಸಂವೇದನೆಯ ಅನೇಕ ಲೇಖಕರು ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಸಂಸ್ಕøತಿಯನ್ನು ಬೆಳೆಸಿದ್ದಾರೆ. ಧಾರ್ಮಿಕ ಮೂಲಭೂತಾದಿಗಳ ಅಸಹಿಷ್ಣುತೆಯನ್ನು ವಿರೋಧಿಸುತ್ತಲೇ ಸ್ವಧರ್ಮ ವಿಮರ್ಶೆ ಮಾಡಿದವರೂ ಇದ್ದಾರೆ. ಒಟ್ಟಾರೆ ಮುಸ್ಲಿಂ ಸಂವೇದನೆಯು ಕನ್ನಡದಲ್ಲಿ ಸೌಹಾರ್ದಕ್ಕೆ ಸಹಯಾನಿಯಾಗಿ ಸಾಗುತ್ತ ಬಂದಿದೆ.
ಇದೇ ಸಂದರ್ಭದಲ್ಲಿ ಕನ್ನಡವನ್ನು ಎಲ್ಲ ಧರ್ಮೀಯರೂ ಕಟ್ಟಿ ಬೆಳೆಸಿದ್ದಾರೆಂಬುದನ್ನು ನೆನೆಯಬೇಕು. ಕ್ರೈಸ್ತರಾದ ಕಿಟ್ಟಲ್, ಫ್ಲೀಟ್, ರೈಸ್ ಮುಂತಾದವರು ಕಟ್ಟಿದ ನಿಘಂಟು, ಸಂಗ್ರಹಿಸಿದ ಶಾಸನಗಳು ನಮ್ಮ ಸಾಂಸ್ಕøತಿಕ ಕ್ಷೇತ್ರದ ಬೃಹತ್ ಆಕರಗಳಾಗಿವೆ. ಶಿಶುನಾಳ ಶರೀಫರನ್ನು ಒಳಗೊಂಡಂತೆ ಆನಂತರದ ಅನೇಕ ಮುಸ್ಲಿಂ ಲೇಖಕ-ಲೇಖಕಿಯರು ಕನ್ನಡವನ್ನು ಬೆಳೆಸಿದ್ದಾರೆ. ಆಧುನಿಕ ಕ್ರೈಸ್ತ ಬರಹಗಾರರ ಕನ್ನಡಾಭಿವ್ಯಕ್ತಿಯೂ ಗಮನೀಯವಾಗಿದೆ. ಹೀಗಾಗಿ ಕನ್ನಡವನ್ನು ಜಾತ್ಯತೀತವಾಗಿ ಕಟ್ಟಲಾಗಿದೆಯೆಂದು ನಾವು ತಿಳಿಯಬೇಕು. ಕನ್ನಡ ಒಂದು ಜಾತ್ಯತೀತ ಭಾಷೆ. ನಾವು ಜಾತ್ಯತೀತರಾಗಿ ಬದುಕುವುದು ಒಂದು ಮುಖ್ಯ ಕನ್ನಡ ಸೇವೆ. ಆದರೆ ಕರ್ನಾಟಕದಲ್ಲೂ ಕನ್ನಡ ಕ್ರೈಸ್ತರನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೂ ಮುಸ್ಲಿಮರ ನಡುವೆ ಅಪನಂಬಿಕೆ ಬಿತ್ತುವ ಹುನ್ನಾರಗಳು ಕಾಣಿಸುತ್ತಿವೆ.
ಕರ್ನಾಟಕವನ್ನು ಕುವೆಂಪು ಆಶಿಸಿದಂತೆ ‘ಸರ್ವ ಜನಾಂಗದ ಶಾಂತಿಯತೋಟ’ ಎಂದು ಭಾವಿಸಿ ಬದುಕಬೇಕು. ‘ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ’ ಎಂಬ ಪರಿಕಲ್ಪನೆಯ ಪ್ರತಿಪಾದಕರಾಗಬೇಕು. ಕನ್ನಡಾಭಿಮಾನಕ್ಕೆ ಈ ಜಾತ್ಯತೀತ ತತ್ವದ ತುಡಿತವಿರಬೇಕು. ಆಗ ನಮಗೆ ಮುಸ್ಲಿಂ ಸಂವೇದನೆ ಮತ್ತು ಕ್ರೈಸ್ತ ಕೊಡುಗೆಗಳ ಮಹತ್ವದ ಅರಿವಾಗುತ್ತದೆ.
ಸಾವಿರಾರು ವರ್ಷಗಳ ಸಾಮಾಜಿಕ ಸರ್ಜಿಕಲ್ ದಾಳಿಗೆ ತುತ್ತಾದವರು ಈ ದೇಶದ ದಲಿತರು. ಕರ್ನಾಟಕದಲ್ಲಿ ಬಿ. ಕೃಷ್ಣಪ್ಪನವರ ನೇತೃತ್ವದಲ್ಲಿ ರೂಪುಗೊಂಡ ದಲಿತ ಚಳವಳಿಯು ಇಂತಹ ದಾಳಿಗಳಿಗೆ ಪ್ರತಿರೋಧ ಒಡ್ಡಿತು. ದೇಶದ ಅನೇಕ ಭಾಗಗಳಲ್ಲಿಯೂ ದಲಿತ ಚಳವಳಿಗಳು ನಡೆದವು. ಆದರೆ ೨೧ನೇ ಶತಮಾನದಲ್ಲೂ ಅಸ್ಪøಶ್ಯತೆಯ ಆಚರಣೆ ನಿಂತಿಲ್ಲ. ಈಗಲೂ ನಮ್ಮ ದೇಶದಲ್ಲಿ ೧ಕೋಟಿ ೭೮ ಲಕ್ಷ ೨೯೬ ದಲಿತರು ಕೈಯಲ್ಲಿ ಮಲ ಎತ್ತುತ್ತಿದ್ದಾರೆ. ೮ಕೋಟಿ ೮೨ ಲಕ್ಷ ೨೭೧ ಜನ ದಲಿತರು ಚರಂಡಿ ಇತ್ಯಾದಿಗಳಿಗೆ ಮಲ ಸಾಗಿಸುತ್ತಿದ್ದಾರೆ. ಈಗಲೂ ೫ ದಿನಕ್ಕೊಂದು ದಲಿತ ಕೊಲೆಯಾಗುತ್ತಿದೆ. ಪ್ರತಿ ೫ಗಂಟೆಗೊಂದು ದಲಿತ ದೌರ್ಜನ್ಯದ ಪ್ರಕರಣ ದಾಖಲಾಗುತ್ತಿದೆ. ದೇಶದಲ್ಲಿ ೨0೧೪ರಲ್ಲಿ ೪೭,0೬೪ ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ೨0೧೫ರಲ್ಲಿ ೨0೩೫ ಪ್ರಕರಣಗಳು ದಾಖಲಾಗಿವೆ. ೬೯ ದಲಿತರ ಕೊಲೆ ೧೭೧ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಸಂಭವಿಸಿದೆ. ಆದರೂ ನಾವು ಅಭಿವೃದ್ಧಿಯತ್ತ ಸಾಗುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದೇವೆ ಮನಷ್ಯರನ್ನೇ ಮುಟ್ಟದ ಸಾಮಾಜಿಕ ಸಂವಿಧಾನವನ್ನು ವಿಸ್ತರಿಸುವ ಕಾರ್ಯ ನಿಲ್ಲದೆ ಹೋದರೆ ಅಭಿವೃದ್ಧಿಗೆ ಏನರ್ಥ? ನಮ್ಮ ಸನಾತನ ‘ಸಾಮಾಜಿಕ ಸಂವಿಧಾನವು’ ಆಧುನಿಕ ‘ರಾಜಕೀಯ ಸಂವಿಧಾನ’ಕ್ಕೆ ಸವಾಲೊಡ್ಡುವಷ್ಟು ಕೆಟ್ಟ ಶಕ್ತಿ ಪಡೆದಿದೆಯೆಂದ ಮೇಲೆ ಮಾನವೀಯತೆಗೆ ಅಪಮಾನವಲ್ಲವೆ’?
ಈ ಪ್ರಶ್ನೆಯನ್ನು ಕನ್ನಡ ಸಾಹಿತ್ಯ ಕೇಳುತ್ತ ಬಂದಿದೆ. ೧೨ನೇ ಶತಮಾನದ ವಚನ ಚಳವಳಿಯು ದಲಿತರಿಗೂ ಮಹಿಳೆಯರಿಗೂ ಧಾರ್ಮಿಕ ಸಮಾನತೆ ಕೊಟ್ಟು ಗೌರವಿಸಿದ್ದು ಗೊತ್ತೇ ಇದೆ. ‘ಹರಿಶ್ಚಂದ್ರಕಾವ್ಯ’ದ ಅನಾಮಿಕೆಯರು ವಿವಾಹವಾಗಲು ಹರಿಶ್ಚಂದ್ರನನ್ನು ಕೇಳಿದಾಗ ಆತ ನಿರಾಕರಿಸಿದ ಸಂದರ್ಭದಲ್ಲೂ ಅಸ್ಪøಶ್ಯತೆಯ ಪ್ರಶ್ನೆಯಿದೆ. ‘ನಿನಗೆ ಸ್ಪರ್ಶೇಂದ್ರಿಯ ಮಾತ್ರ ಶ್ರೇಷ್ಠವಾಯಿತೆ?’ ಎಂದು ಅನಾಮಿಕೆಯರೇ ಜಗ್ಗಿಸಿ ಕೇಳುತ್ತಾರೆ. ಕಡೆಯಲ್ಲಿ ಹರಿಶ್ಚಂದ್ರ ಅಸ್ಪøಶ್ಯ ವೀರಬಾಹುಕನ ಸೇವೆ ಮಾಡಿದಾಗ ಶಿವಸಾಕ್ಷಾತ್ಕಾರವಾಗುವುದು ಕುಲಮದ ನಿರಸನದ ಪ್ರತೀಕವಾಗಿದೆ. ಆಧುನಿಕ ಸಾಹಿತ್ಯ ಸಂದರ್ಭದಲ್ಲಂತೂ ಗಟ್ಟಿದನಿಯ ಹಾಗೂ ಸೂಕ್ಷ್ಮಸಂವೇದನೆಯ ಅನೇಕ ದಲಿತ ಬರಹಗಾರರು ಬಂದಿದ್ದಾರೆ. ಇದರ ಫಲವಾಗಿ ದಲಿತ ಸಂವೇದನೆಯು ಕನ್ನಡದ- ಕರ್ನಾಟಕದ ಪ್ರಮುಖ ಸಂವೇದನೆಯಾಗಿದೆ. ಕನ್ನಡ ಸಾಹಿತ್ಯ ಯಾವತ್ತೂ ದಲಿತ ಪರ ಅಭಿವ್ಯಕ್ತಿಗೆ ಹೆಸರಾಗಿದೆ. ಇದೇ ಹೊತ್ತಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒಂದು ಮಾತು ಹೇಳಬೇಕಾಗಿದೆ. ದಲಿತರಿಗೆ ಮೊದಲು ಭೂಮಿಕೊಡಿ. ಭೂಮಿ ಆಧಾರದಲ್ಲಿ ಸ್ವಯಂ ಅನ್ನಭಾಗ್ಯ ಪಡೆಯುವ ಹಂತಕ್ಕೆ ಅವರ ಬದುಕನ್ನು ಬೆಳೆಸಿ. ನಮ್ಮ ದಲಿತಪರ ಚಳವಳಿಗಳಿಗೆ ಭೂಮಿ ಮತ್ತು ಉದ್ಯೋಗಗಳೇ ಆದ್ಯತೆಯಗುರಿಗಳಾಗಬೇಕು. ದೇವರು ಮತ್ತು ದೇಗುಲಗಳ ಗುರಿ ಮೊದಲ ಆದ್ಯತೆಯಲ್ಲ. ಬುದ್ಧಗುರು ದೇವರ ಬಗ್ಗೆ ಮೌನ ವಹಿಸಿದರು. ಬಸವಣ್ಣನವರು ಸ್ಥಾವರ ದೇಗುಲಗಳನ್ನು ಧಿಕ್ಕರಿಸಿ ‘ದೇಹವೇ ದೇಗುಲ’ ಎಂಬ ತತ್ವಕೊಟ್ಟರು. ಅಂಬೇಡ್ಕರ್ ಸಾಮಾಜಿಕ ಆರ್ಥಿಕ ಸಮಾನತೆಗಾಗಿ ದುಡಿದರು. ಬುದ್ಧ, ಬಸವ, ಅಂಬೇಡ್ಕರ್ ಹೆಸರಿನ ಮೇಲೆ ನಡೆಯುವ ಚಳವಳಿಗಳು ಈ ಸಾಧಕರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕು. ಈ ಸಾಧಕ ತಾತ್ವಿಕ ಆದರ್ಶಗಳು ಚಳವಳಿಯ ಆದ್ಯತೆಯಾದಾಗ ದಲಿತರಿಗಷ್ಟೇ ಅಲ್ಲ ಎಲ್ಲರಿಗೂ ಭೂಮಿ ಮತ್ತು ಉದ್ಯೋಗ ಕೊಡಿ ಎಂಬ ಹೋರಾಟ ಮುಖ್ಯವಾಗುತ್ತದೆ.
ನಮ್ಮ ಸಮಾಜದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತ ಬಂದ ದಾಳಿಗಳಿಗೆ ಇತಿಹಾಸವೇ ಇದೆ. ಲಿಂಗತ್ವ ಅಸಮಾನತೆಯನ್ನು ಒಡಲಲ್ಲಿ ಇಟ್ಟುಕೊಂಡು ರೂಪಿತವಾದ ಸಾಮಾಜಿಕ – ಆರ್ಥಿಕ ಸಂರಚನೆಯ ಸಂಕೀರ್ಣತೆಯನ್ನು ಕನ್ನಡ ಸಾಹಿತ್ಯ ಬಿಡಿಸುತ್ತ ಬಂದಿದೆ. ಮಹಿಳೆಯರ ವಿಮೋಚನೆಗೆ ಪೂರಕವಾದ ಮಾನಸಿಕ ಆವರಣ ನಿರ್ಮಿತಿಯಲ್ಲಿ ಕನ್ನಡ ಸಂವೇದನೆಯ ಪಾತ್ರ ದೊಡ್ಡದು. ಕನ್ನಡ ಸಂವೇದನೆಯ ಭಾಗವಾಗಿ ಬೆಳೆದ ಸ್ತ್ರೀಪರ ಸಂವೇದನೆಯ ಫಲವಾಗಿ ಸ್ತ್ರೀ ಸ್ವಾತಂತ್ರ್ಯದ ಸಿದ್ಧಾಂತ ಮತ್ತು ಸಂವೇದಾಶೀಲತೆಗಳನ್ನು ಅನೇಕ ಕನ್ನಡ ಲೇಖಕಿಯರ ಕೃತಿಗಳಲ್ಲಿ ಕಾಣಬಹುದಾಗಿದೆ. ಕಟ್ಟುಪಾಡುಗಳನ್ನು ಒಡೆದು ಹೊಸದಾಗಿ ಕಟ್ಟುವ ಕ್ರಿಯೆಯಲ್ಲಿ ಕನ್ನಡ ಮಹಿಳಾ ಸಾಹಿತ್ಯ ಹಿಂದೆ ಬಿದ್ದಿಲ್ಲ. ಆದರೆ ಇಂದು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರದ ಪ್ರಕರಣಗಳು ಕ್ರೌರ್ಯದ ಕತೆಗಳಾಗಿ ಕಾಡುತ್ತಿವೆ. ಕಣ್ಣೀರ ಕವಿತೆಗಳು ಎದುರುನಿಂತಿವೆ. ಅಸಹಾಯಕತೆ ಆಕ್ರೋಶಗಳೊಂದಾದ ವೈರುಧ್ಯಗಳು ಪ್ರಶ್ನಿಸುತ್ತಿವೆ. ಆದ್ದರಿಂದ ಮಹಿಳೆಯರ ಮೇಲಿನ ದೌರ್ಜನ್ಯ, ಹಾಗೂ ಅತ್ಯಾಚಾರಗಳೆಂಬ ಸರ್ಜಿಕಲ್ ದಾಳಿಗೆ ವಿರುದ್ಧವಾಗಿ ಕನ್ನಡ ಮತ್ತು ಕರ್ನಾಟಕದ ಸಂವೇದನೆ ನಿಲ್ಲಬೇಕು.
ಹಾಗೆ ನೋಡಿದರೆ ಕನ್ನಡ ಸಾಹಿತ್ಯದಲ್ಲಿ ವಿಭಿನ್ನ ವಿಶಿಷ್ಟ ವ್ಯಕ್ತಿತ್ವದ ಮಹಿಳಾ ಪಾತ್ರಗಳು ಆಧುನಿಕ ಪೂರ್ವದಲ್ಲಿಯೇ ಬಂದಿವೆ. ಜನ್ನನ ‘ಯಶೋಧರ ಚರಿತೆ’ಯ ಅಮೃತ ಮತಿ ಒಂದು ಸಂಕೀರ್ಣಪಾತ್ರ. ರಾಜನ ಪತ್ನಿಯಾಗಿಯೂ ಒಂಟಿತನದ ಅನುಭವದಿಂದಲೊ ಏನೋ ಮಾವುತನಲ್ಲಿ ಅನುರಕ್ತಳಾಗುವ ಮನಸ್ಥಿತಿಯು ವಿಶೇಷ ಅಧ್ಯಯನಕ್ಕೆ ಆಕರವಾಗಿದೆ. ಕುಮಾರವ್ಯಾಸನ ‘ದ್ರೌಪದಿ’ ಪಾತ್ರವು ಪಗಡೆಯಾಟದಲ್ಲಿ ತನ್ನನ್ನು ಸೋತ ಪತಿಯಂದಿರ ಕ್ರಮವನ್ನು ಖಂಡಿಸುವ ಮತ್ತು ಪ್ರಶ್ನಿಸುವ ರೀತಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ‘ಸತಿಯನೆನ್ನನು ಮಾರಿ ಧರ್ಮ ಸ್ಥಿತಿಯ ಕೊಂಡರು’ ಎಂಬ ಆಕೆಯ ವ್ಯಂಗ್ಯ ಒಂದು ಚಾರಿತ್ರಿಕ ವ್ಯಾಖ್ಯಾನವಾಗಿದೆ. ಮುದ್ದಣ ಚಿತ್ರಿಸಿದ ಮನೋರಮೆಯು ಸ್ವತಂತ್ರ ಪ್ರವೃತ್ತಿಯ ವ್ಯಕ್ತಿತ್ವದ ಜೊತೆಗೆ ಭಾಷಾ ತಜ್ಞೆಯೂ ಆಗುವುದೊಂದು ವಿಶೇಷ. ಹೀಗೆ ಕನ್ನಡ ಸಾಹಿತ್ಯವು ಸ್ತ್ರೀ ಸ್ವಾತಂತ್ರ್ಯ ಮತ್ತು ಸಂವೇದನೆಯ ಸೂಕ್ಷ್ಮ ಗ್ರಾಹಿಯಾಗಿ ಬೆಳೆದು ಬಂದಿದೆ. ಆದ್ದರಿಂದ ಸ್ತ್ರೀ ಸ್ವಾತಂತ್ರ್ಯ ಮತ್ತು ಸಂವೇದನೆಯು ಕನ್ನಡಿಗರ ಒಂದು ಮುಖ್ಯ ಮನೋಧರ್ಮವಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಮಹಾದೇವಿಯ ರಚನೆಗಳನ್ನು ನೋಡಬಹುದು. ರಾಜಪ್ರಭುತ್ವ ಮತ್ತು ಪುರಷಪ್ರಧಾನ ಮೌಲ್ಯವ್ಯವಸ್ಥೆಗೆ ವಿರುದ್ಧವಾಗಿ ಹೊರಟ ಅಕ್ಕಮಹಾದೇವಿಯ ದಿಟ್ಟತನವು ಚಾರಿತ್ರಿಕ ಸ್ತ್ರೀಸಂವೇದನೆ. ಅಂತೆಯೇ ಆಕೆ ಅನುಭವಿಸಿದ ‘ಅನಾಥಪ್ರಜ್ಞೆ’ಯೂ ಚಾರಿತ್ರಿಕ ಮಹತ್ವವನ್ನು ಪಡೆದಿದೆ. ‘ಚಿಲಿಪಿಲಿಯೆಂದೋದುವ ಗಿಳಿಗಳಿರಾ ನೀವು ಕಾಣಿರೆ’ ಎಂದು ಕೇಳುತ್ತ ತನ್ನ ಪತಿಸ್ವರೂಪಿ ಶಿವನನ್ನು ಹುಡುಕುವ ಅಕ್ಕ ಯಾಕೆ ಮನುಷ್ಯರನ್ನು ಕೇಳಲಿಲ್ಲ? ಮನುಷ್ಯರನ್ನು ಮಾತಾಡಿಸಲಾಗದ ಪರಕೀಯತೆಯಲ್ಲಿ ಪ್ರಾಣಿಪಕ್ಷಿಗಳ ಜೊತೆ ಮಾತಾಡುವುದು ಅನಿವಾರ್ಯವಾಗುತ್ತದೆ. ಈ ಅನಿವಾರ್ಯದಲ್ಲಿ ಅಕ್ಕ ಮಹಾದೇವಿ ಅನುಭವಿಸಿದ ಅನಾಥ ಪ್ರಜ್ಞೆಯು ಪುರುಷರದೂ ಆಗುವುದಾದರೆ ಸ್ತ್ರೀ ಸಮಾನತೆಗೆ ಶಕ್ತಿಬರುತ್ತದೆ.
ಕನ್ನಡ ಸಾಹಿತ್ಯವು ರೈತರ ಸಮಸ್ಯೆಗಳಿಗೂ ಸ್ಪಂದಿಸಿ, ರೈತಸಂವೇದನೆಯನ್ನು ಒಳಗೊಂಡಿದೆ. ಅನ್ನದಾತರೆಂದು ಕರೆಸಿಕೊಳ್ಳುವ ರೈತರ ಸಮಸ್ಯೆಗಳು ಇಂದು ಸಂಕೀರ್ಣರೂಪತಾಳುತ್ತಿವೆ. ರೈತರು ತತ್ತರಿಸಿದ ಬದುಕಿಗೆ ಬಲಿಯಾಗುತ್ತಿದ್ದಾರೆ. ಸಾವಿರಾರು ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕನ್ನಡ ಸಾಹಿತ್ಯ ಸಂವೇದನೆ ಯಾವತ್ತೂ ರೈತಪರವಾಗಿದೆ. ಕುವೆಂಪು ಅವರ ‘ನೇಗಿಲಯೋಗಿ’ ಮತ್ತು ಬೇಂದ್ರೆಯವರ ‘ಭೂಮಿತಾಯಿಯ ಚೊಚ್ಚಲ ಮಗ’ ಕವಿತೆಗಳನ್ನು ಪ್ರಾತಿನಿಧಿಕವಾಗಿ ನೆನಯಬಹುದು. ಭೂಮಿ ತಾಯಿಯ ಮೊದಲ ಮಕ್ಕಳಾದ ರೈತರಿಗೆ ಯೋಗಿಯ ಸ್ಥಾನವನ್ನು ನೀಡಿದ ಕನ್ನಡ ಸಂವೇದನೆಯ ಆಶಯ ಎಲ್ಲರದೂ ಆಗಬೇಕಾಗಿದೆ. ದಯವಿಟ್ಟು ಗಮನಿಸಿ: ೧೯೫೨ರಲ್ಲಿ ಕೇಂದ್ರ ಸರ್ಕಾರವು ತನ್ನ ಬಜೆಟ್ನಲ್ಲಿ ಶೇ. ೧೨.೫ರಷ್ಟು ಹಣವನ್ನು ಕೃಷಿಗಾಗಿ ಒದಗಿಸಿತ್ತು. ೨0೧೫ರಲ್ಲಿ ಈಗಿನ ಕೇಂದ್ರ ಸರ್ಕಾರವು ತನ್ನ ಬಜೆಟ್ನಲ್ಲಿ ಶೇ. ೩.೭ರಷ್ಟು ಹಣವನ್ನು ಒದಗಿಸಿದೆ. ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ ೩೭.೩ರಷ್ಟು ಪಾಲು ಒದಗಿತ್ತು. ಹತ್ತನೇ ಪಂಚವಾರ್ಷಿಕ ಯೋಜನೆಯ ವೇಳೆಗೆ ಇದು ಶೇ. ೧0.೬ಕ್ಕೆ ಇಳಿದಿದೆ. ನಬಾರ್ಡ್ ಮತ್ತು ರಿಜರ್ವ್ ಬ್ಯಾಂಕ್ ವರದಿಯ ಪ್ರಕಾರ ಶೇ. ೬೯ರಷ್ಟು ಸಣ್ಣ ರೈತರಿಗೆ ಮತ್ತು ಶೇ. ೮೭ರಷ್ಟೂ ಅತಿ ಸಣ್ಣ ರೈತರಿಗೆ ಸರ್ಕಾರಿ ಸಾಂಸ್ಥಿಕ ಸಾಲ ಸಿಗುತ್ತಿಲ್ಲ. ಆದ್ದರಿಂದ ಅವರು ಹೆಚ್ಚಿನ ಬಡ್ಡಿ ತೆತ್ತು ಖಾಸಗಿ ಸಾಲನೀಡಿಕೆದಾರರಿಂದ ಸಾಲ ಪಡೆಯುತ್ತಾರೆ. ಇದೇ ವರದಿ ಪ್ರಕಾರ ದೇಶದಲ್ಲಿ ಶೇ. ೭0ರಷ್ಟು ಖಾಸಗಿ ಸಾಲ ನೀಡಿಕೆದಾರರು ಇದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಯಾರೆಂದು ನೋಡಿ; ಉತ್ತರ ಸ್ಪಷ್ಟ. ಸಣ್ಣರೈತರು ಮತ್ತು ಅತಿ ಸಣ್ಣ ರೈತರು ಆತ್ಮಹತ್ಯೆಮಾಡಿಕೊಳ್ಳುತ್ತಿದ್ದಾರೆ. ನೂರಾರು ಎಕರೆಯ ಒಡೆಯರಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯದ ಹಿಂದೆ ನಮ್ಮ ದೇಶ ಅಳುವಡಿಸಿಕೊಂಡ ಅಮೇರಿಕ ಆರ್ಥಿಕ ನೀತಿಯ ಪಾಲು ಸಾಕಷ್ಟಿದೆ. ಕೃಷಿಗೆ ಸಬ್ಸಿಡಿ ಕಡಿತದ ನೋಟ ಬಂದದ್ದು ಅಲ್ಲಿಂದಲೇ ಆದರೆ ಅದೇ ಅಮೇರಿಕದಲ್ಲಿ ಶೇ. ೫ರಷ್ಟಿರುವ ರೈತರಿಗೆ ಒಟ್ಟು ಶೇ. ೨೬ರಷ್ಟು ಸಬ್ಸಿಡಿ ಸಿಗುತ್ತದೆ. ಶೇ. ೬0ಕ್ಕೂ ಹೆಚ್ಚು ರೈತರಿರುವ ನಮ್ಮ ದೇಶದ್ಲಲಿ ಶೇ. ೨.೩೩ ರಷ್ಟು ಸಬ್ಸಿಡಿ ಕೊಡಲಾಗುತ್ತದೆ. ಎಲ್ಲಕ್ಕೂ ಅಮೇರಿಕಾದ ಕಡೆ ನೋಡುವ ನಮ್ಮ ಸರ್ಕಾರಗಳು ರೈತರ ಸಬ್ಸಿಡಿ ವಿಷಯದಲ್ಲಿ ಅದೇ ಅಮೇರಿಕವನ್ನು ಯಾಕೆ ಅನುಸರಿಸುತ್ತಿಲ್ಲ? ವಿಶ್ವಬ್ಯಾಂಕ್ ಹೆಚ್ಚು ಸಬ್ಸಿಡಿ ಕೊಡುವುದನ್ನು ಒಪ್ಪುತ್ತಿಲ್ಲ. ಇದೇ ಜಾಗತೀಕರಣದ ರಹಸ್ಯ.
ಜಾಗತೀಕರಣ ಮತ್ತು ಜಾತೀಕರಣ
ಜಾಗತೀಕರಣದ ಫಲವಾದ ಖಾಸಗೀಕರಣ ಮತ್ತು ಬಂಡವಾಳಶಾಹಿ ಉದಾರೀಕರಣಗಳನ್ನು ನಮ್ಮಂತಹ ದೇಶಗಳು ಆಮದು ಮಾಡಿಕೊಂಡು ಅನುಷ್ಠಾನಗೊಳಿಸುತ್ತಿವೆ. ವಿದೇಶಿ ಉತ್ಪನ್ನಗಳ್ನನ್ನೂ ಆಮದು ಮಾಡಿಕೊಂಡು ಅವರಿಗೆ ಮಾರುಕಟ್ಟೆಯಾಗುತ್ತಿವೆ. ನಮ್ಮ ಉತ್ಪನ್ನಗಳಿಗೆ ಮಾತ್ರ ಅಲ್ಲಿ ಮಾರುಕಟ್ಟೆಯಿಲ್ಲ. ಜಾಗತೀಕರಣದಲ್ಲಿ ಇರಬೇಕಾದ ಪರಸ್ಪರ ಕೊಳು-ಕೊಡುಗೆ ಇಲ್ಲಿಲ್ಲ. ಬಲಾಢ್ಯದೇಶಗಳ ಆರ್ಥಿಕ ಸಮೃದ್ಧಿಗೆ, ವಿದೇಶಿ ಬಂಡವಾಳಕ್ಕೆ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳು ಲಾಭದಾಯಕ ಮಾರುಕಟ್ಟೆಗಳಾಗುತ್ತಿವೆ. ಇಂದಿನ ಜಾಗತೀಕರಣದಲ್ಲಿರುವುದು ಅದೇ ಹಳೆಯ ಊಳಿಗಮಾನ್ಯ ಪದ್ಧತಿಯ ಪರೋಕ್ಷಪ್ರಭುತ್ವ ಮತ್ತು ಅಧೀನತೆಯ ತತ್ವ; ಇದು ಏಕಮುಖೀ ಆರ್ಥಿಕ ಚಲನೆ. ನಮ್ಮ ದೇಶದಲ್ಲಿ ಇನ್ನೊಂದು ವಿಚಿತ್ರ ಚಲನೆ. ಯಾಕೆಂದರೆ ನಮ್ಮ ದೇಶವು ಜಾತೀಕರಣದಿಂದ ಜಾಗತೀಕರಣದತ್ತ ಚಲಿಸಿದೆ. ಜಾತೀಕರಣ ಮತ್ತು ಜಾಗತೀಕರಣಗಳು ಒಟ್ಟಿಗೇ ಬಲವಾಗುತ್ತಿರುವ ವಿಶಿಷ್ಟ ಸನ್ನಿವೇಶ ನಮ್ಮದಾಗಿದೆ. ನಿಜ; ಜಾತಿ ಪದ್ಧತಿಯ ಬೇರುಗಳು ಶಿಥಿಲಗೊಂಡಿವೆ. ಆದರೆ ನಾಶವಾಗಿಲ್ಲ. ಈಗ ಎಲ್ಲ ಜಾತಿ ಸಮುದಾಯಗಳೂ ತಮ್ಮ ಪಾಲು ಪಡೆಯಲು ಸ್ಪರ್ಧೆಯಲ್ಲಿವೆ. ನಮ್ಮ ಸಾಮಾಜಿಕ ಸನ್ನಿವೇಶದಲ್ಲಿ ಇದು ಸ್ವಾಭಾವಿಕ ಕ್ರಿಯೆಯಿರಬಹುದು. ಆದರೆ ದೇವರಾಜ ಅರಸು ಅವರು ಹಾವನೂರು ವರದಿಯನ್ನು ಜಾರಿಗೆ ತರುವಾಗ ಆದರ್ಶಿಸಿದ್ದನ್ನು ನೆನೆಯೋಣ.
‘ಜಾತಿಯನ್ನು ಗುರುತಿಸಿ; ಜಾತಿಯನ್ನು ಅಳಿಸಿ’ – ಎಂದು ಅರಸು ಸಾರಿದರು. ಈಗ ‘ಜಾತಿಯನ್ನು ಗುರುತಿಸಿ; ಜಾತಿಯನ್ನು ಬೆಳೆಸಿ’ ಎಂಬಂತಾಗಿದೆ. ಇದರ ಫಲವಾಗಿ ಜಾತಿವಾದವು ಬಹುಪಾಲು ಜಾತಿಗಣ್ಯರ ಮನೋವ್ಯಾದಿಯಾಗತೊಡಗಿದೆ; ಈ ಜಾತಿ ಸಂಕೀರ್ಣತೆಯ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವುದರ ಜೊತೆಗೆ ಜಾಗತೀಕರಣಕ್ಕೆ ಪರ್ಯಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಇಂದಿನ ಸನ್ನಿವೇಶದಲ್ಲಿ ಜಾಗತೀಕರಣವನ್ನು ಹಿಂದಕ್ಕೆ ಕಳಿಸಲು ಸಾಧ್ಯವಿಲ್ಲ. ಅದಕ್ಕೆ ಪ್ರತ್ಯೇಕ ರಾಜಕೀಯ ವ್ಯವಸ್ಥೆಯೇ ಬೇಕು. ಆದ್ದರಿಂದ ಪರ್ಯಾಯ ಚಳವಳಿಗಳ ಮೂಲಕ ಸಮಾನತೆಯ ಹಕ್ಕುಗಳಿಗಾಗಿ ಒತ್ತಾಯಿಸಬೇಕು. ಪರ್ಯಾಯವೆಂದರೆ ಆಧುನಿಕತೆಯನ್ನು ನಿರಾಕರಿಸುವ ಹಿಂಚಲನೆಯಲ್ಲ. ಆಧುನಿಕತೆಯ ಆರೋಗ್ಯಕರ ಪರಿಕರಗಳನ್ನು ಒಳಗೊಳ್ಳುವ ಪರ್ಯಾಯ ಮಾರ್ಗಗಳು ಮುಖ್ಯವಾಗಬೇಕು. ಈ ದೇಶದ ದಲಿತರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು, ಎಲ್ಲ ಜಾತಿ ಧರ್ಮಗಳ ಬಡವರು ಹಸಿವು ಮುಕ್ತರಾಗಿ ಬದುಕುವ ಸಮಾನ ಸಮಾಜದ ಆಶಯ ಅನುಷ್ಠಾನಗೊಳ್ಳುವಂತೆ ಮಾಡಬೇಕು. ಜಾತಿ ಆದಿಯೇ ಹೊರತು ಅಂತ್ಯವಲ್ಲ. ಹುಟ್ಟುವಾಗ ಇರುವ ಜಾತಿ ಸಾವು ಸಾಯುವಾಗ ಇರಬಾರದು. ಹೀಗಾದಾಗ ಸಾಮಾಜಿಕ ಸಮಾನತೆ ನೆಲೆಗೊಳ್ಳುತ್ತದೆ. ಇನ್ನು ಬಡತನದ ವಿಷಯ. ಬಡವರ ಬದುಕನ್ನು ಕುರಿತು ಕನ್ನಡ ಕವಿಗಳು ಹಿಂದಿನಿಂದಲೂ ಸ್ಪಂದಿಸಿದ್ದಾರೆ. ಮಧ್ಯಕಾಲೀನ ಕನ್ನಡಕವಿ ಕುಮಾರವ್ಯಾಸ ಪದ್ಯವೊಂದರ ಸಾಲುಗಳೇ ಸಾಕು: “ಅರಸು ರಾಕ್ಷ ಮಂತ್ರಿಯೆಂಬುವ | ಮೊರೆವಹುಲಿ ಪರಿವಾರಹದ್ದಿನ ನೆರವಿ| ಬಡವರ ಭಿನ್ನಪವನಿನ್ನಾರು ಕೇಳುವರು?” ಎಂಬ ಸಾಲುಗಳ ವಿವರ ಮತ್ತು ಪ್ರಶ್ನೆ ಪ್ರಜಾಪ್ರಭುತ್ವದಲ್ಲೂ ಪ್ರಸ್ತುತವಾಗಿರುವುದು ವಿಷಾದಕರ ವಿಪರ್ಯಾಸ. ಬಡವರ ಬಿನ್ನಪವನಿನ್ನಾರು ಕೇಳುವರು’ ಎಂಬ ಪ್ರಶ್ನೆ ಇಂದಿನ ಆರ್ಥಿಕ ಸರ್ಜಿಕಲ್ ದಾಳಿಗೆ ಎದುರಾದ ಪ್ರತೀಕವಾಗಿದೆ. ಬೇಂದ್ರೆಯವರು ಹಿಂದೆಯೇ ನುಡಿದಂತೆ ಈಗಲೂ “ಕುರುಡು ಕಾಂಚಾಣ ಕುಣಿಯುತ್ತಿದೆ ಕಾಲಿಗೆ ಬಿದ್ದವರ ತುಳಿಯುತ್ತಿದೆ.” ಕುವೆಂಪು ಆತಂಕಿಸಿದಂತೆ “ಕಲ್ಕಿ ಕಲ್ಕಿ ಎನ್ನುತ ಚೀರಿ ಕನಸೊಡೆದೆದ್ದೆ. ಇನ್ನೆಲ್ಲಿಯ ನಿದ್ದೆ?” ನಿದ್ದೆಯಿಲ್ಲದ ಇಂದಿನ ನಮ್ಮ ದೇಶದ ಸ್ಥಿತಿ ಹೇಗಾಗಿದೆಯೆಂದರೆ ಇಲ್ಲಿ ದಲಿತರು. ರೈತರು, ಮಹಿಳೆಯರು, ಬಡವರು ಮಾತ್ರ ಶೋಷಿತರಲ್ಲ. ನಮ್ಮ ದೇಶದಲ್ಲಿ ದೇವರುಗಳೂ ಶೋಷಿತರೇ ಆಗಿದ್ದಾರೆ. ಜನರ ಶೋಷಣೆ ಮಾಡಲು ದೇವರುಗಳನ್ನು ಸಾಧನವಾಗಿ ಬಳಸುವುದೂ ಒಂದು ಶೋಷಣೆಯೇ ಆಗಿದೆ. ಬಡವರು ನಂಬಿದ ದೇವರೇ ಶೋಷಣೆಗೊಳಗಾಗುತ್ತಿರುವಾಗ ಅವರ ‘ಭಿನ್ನಪವನಿನ್ನಾರು ಕೇಳುವರು?’ ನಾವೊಂದು ದಿಟ್ಟ ನಿಲುವಿಗೆ ಬರಬೇಕು; ನಾವು ದೇಶದ ಹೊರಗೆ ನಡೆಯುವ ಸೈನಿಕ ಸರ್ಜಿಕಲ್ ದಾಳಿಗಳನ್ನು ಬೆಂಬಲಿಸೋಣ. ದೇಶದೊಳಗಿನ ಸಾಮಾಜಿಕ, ಸರ್ಜಿಕಲ್ ದಾಳಿಗಳನ್ನು ಸೋಲಿಸೋಣ. ಆರ್ಥಿಕ ಸರ್ಜಿಕಲ್ ದಾಳಿಗಳನ್ನು ಹತ್ತಿಕ್ಕೋಣ.
ಕೈಗಾರಿಕೀಕರಣದಿಂದ ಬಂದ ಯಂತ್ರ ಜ್ಞಾನದ ಆದ್ಯತೆ ಮತ್ತು ಜಾಗತೀಕರಣದಿಂದ ಬಂದ ತಂತ್ರಜ್ಞಾನದ ಆದ್ಯತೆಗಳಿಗೆ ಪ್ರಾಚೀನ ಪದ್ಧತಿಗಳು ಪರ್ಯಾಯವೂ ಪರಿಹಾರವೂ ಆಗುವುದಿಲ್ಲ. ಕೈಗಾರೀಕರಣದ ಸಂದರ್ಭದಲ್ಲಿ ಏನಿಲ್ಲವೆಂದರೂ ಕುಲಮೂಲ ಪದ್ಧತಿ ಶಿಥಿಲಗೊಂಡು ಸಾಮೂಹಿಕ ಉತ್ಪಾದನೆಯ ಪದ್ಧತಿ ಜಾರಿಗೆ ಬಂತು. ಜನರು ಕೈಗಾರಿಕೆಗಳಲ್ಲಿ ಸಾಮೂಹಿಕವಾಗಿ ದುಡಿಯತೊಡಗಿದರು. ಜಾಗತೀಕರಣದ ಹೊಸ ತಂತ್ರಜ್ಞಾನದಲ್ಲಿ ಸಾಮೂಹಿಕ ಉತ್ಪಾದನೆ ಮತ್ತು ದುಡಿಮೆ ಹಿಂದಕ್ಕೆ ಸರಿಯುತ್ತ ವ್ಯಕ್ತಿಮೂಲ ದುಡಿಮೆ ಆದ್ಯತೆ ಪಡೆಯುತ್ತಿದೆ. ವ್ಯಕ್ತಿಯೊಬ್ಬ ಕಂಪ್ಯೂಟರ್ ಮುಂದೆ ಕುಳಿತರೆ ಸಾಕು ಒಂಟಿ ಉತ್ಪಾದನೆ ಎಂಬಂತಾಗುತ್ತಿದೆ. ಹೊಸ ತಂತ್ರಜ್ಞಾನದ ಬಳಕೆಯಿಂದ ಕೈಗಾರಿಕಾ ಕಲ್ಪನೆಯೇ ಪಲ್ಲಟಗೊಂಡಿದೆ. ತಂತ್ರಜ್ಞಾನವು ಉದ್ಯಮವಾಗಿ ಇನ್ನಿಲ್ಲದ ರಭಸದಿಂದ ಮುನ್ನುಗ್ಗುತ್ತಿರುವುದರಿಂದ ಸಮತೋಲನ ತಪ್ಪುತ್ತಿದೆ. ಉದ್ಯೋಗಗಳಲ್ಲಿ ಸಂವಿಧಾನದ ಆಶಯ ಅಧಃ ಪತನಕ್ಕೆ ಹೋಗುತ್ತಿದೆ. ಸರ್ಕಾರದ ಸಾಮಾಜಿಕ ನ್ಯಾಯದ ಕಲ್ಪನೆಗೂ ಹೊಸ ತಂತ್ರಜ್ಞಾನ ಪ್ರಣೀತ ಉದ್ಯೋಗ ಪದ್ಧತಿಗೂ ಸಂಬಂಧವಿಲ್ಲದಂತಾಗಿದೆ. ಅಷ್ಟೇ ಅಲ್ಲ. ಹೊಸ ತಂತ್ರಜ್ಞಾನ ಫಲಿತಗಳಾದ ಸಾಮಾಜಿಕ ಜಾಲತಾಣಗಳಲ್ಲಿ ಆಧುನಿಕ ಮನಸ್ಸಿಗೆ ಬದಲಾಗಿ ಹಳೆಯ ಕೊಳಕು ಹಸಿಹಸಿಯಾಗಿ ವಿಜೃಂಭಿಸುತ್ತಿದೆ. ಜನರ ನಡುವಿನ ಅಂತರವೂ ಹೆಚ್ಚುತ್ತಿದೆ. ಹೀಗಾಗಿ ಹೊಸ ತಂತ್ರಜ್ಞಾನದ ಜೊತೆಗೆ ಹೊಸ ವರ್ಣಾಶ್ರಮವೂ ಪ್ರಬಲಗೊಳ್ಳುತ್ತಿದೆಯೆ ಎಂಬ ಪ್ರಶ್ನೆ ನನಗೆ ಎದುರಾಗುತ್ತಿದೆ. ಆದ್ದರಿಂದ ಜಾತೀಕರಣ ಮತ್ತು ಜಾಗತೀಕರಣಗಳು ಒಂದೇ ಸಂದರ್ಭದಲ್ಲಿ ಬಲವಾಗಿರುವ ವಿಚಿತ್ರ ಸನ್ನಿವೇಶವನ್ನು ಸಾವಧಾನದಿಂದ ಪರಿಶೀಲಿಸಿ ಪಕ್ಷಪಾತರಹಿತವಾಗಿ ಪರ್ಯಾಯಗಳನ್ನು ಕಂಡುಕೊಳ್ಳಬೇಕಾಗಿದೆ.
ನಮಗೆ ಕೈಗಾರಿಕರಣದಿಂದ ಹೊಸ ಯಂತ್ರ ಜ್ಞಾನ ಬಂತು. ಜಾಗತೀಕರಣದಿಂದ ಹೊಸ ತಂತ್ರಜ್ಞಾನ ಬಂತು. ಆದರೆ ಮೌಢ್ಯಾಚರಣೆಗಳು ಹೋಗಲಿಲ್ಲ. ಯಾಕೆ? ಯಾಕೆಂದರೆ ಇವು ಜ್ಞಾನ ಪ್ರಧಾನವಾಗುವ ಬದಲು ಯಂತ್ರ ಮತ್ತು ತಂತ್ರಪ್ರಧಾನವಾದವು. ಮನುಷ್ಯರ ಹೊರಮೈಯ್ಯನ್ನು ಬದಲಾಯಿಸಿದವು. ಒಳಮನಸ್ಸನ್ನು ಸಂಪೂರ್ಣವಾಗಿ ಬದಲಾಯಿಸಲಿಲ್ಲ. ವೈಜ್ಞಾನಿಕ ಮನೋಧರ್ಮ ಪ್ರಬಲವಾಗಲಿಲ್ಲ. ಆದ್ದರಿಂದಲೇ ಜಾಗತೀಕರಣದ ಸಂದರ್ಭದಲ್ಲೂ ಜಾತೀಕರಣ ಮೂಲವಾದ ಮೌಢ್ಯಾಚರಣೆಗಳು ಉಳಿದು ಬೆಳೆದು ಬರುತ್ತಿವೆ. ಮನುಷ್ಯರ ಘನತೆಗೆ ಧಕ್ಕೆ ತರುವ ಮೌಢ್ಯಾಚರಣೆಗಳನ್ನು ಕನ್ನಡ ಸಂವೇದನೆಯು ನಿರಾಕರಿಸುತ್ತ ಬಂದಿರುವುದಕ್ಕೆ ಉದಾಹರಣೆಗಳಿವೆ. ವಿಶೇಷವಾಗಿ ಕನ್ನಡ ಸಾಹಿತ್ಯದಲ್ಲಿರುವ ಮೌಢ್ಯ ವಿರೋಧಿ ಆಶಯಗಳಿಗಾಗಿ ವಚನಸಾಹಿತ್ಯವನ್ನು ಒಂದು ಸಾಕ್ಷಿಪ್ರಜ್ಞೆಯಾಗಿ ನೋಡ ಬಹುದಾಗಿದೆ. ‘ಸೋಮವಾರ, ಮಂಗಳವಾರ, ಮಾಡುವ ಭಕ್ತನ ಲಿಂಗ ಭಕ್ತಂಗೆಂತು ಸರಿಎಂಬೆನಯ್ಯ, ಎನ್ನುವ ಬಸವಣ್ಣ ಹೋಮಾದಿಗಳನ್ನು ವಿರೋಧಿಸುವುದಲ್ಲದೆ ಶಾಸ್ತ್ರ, ಕರ್ಮಗಳನ್ನು ಅಲ್ಲಿಗಳೆಯುತ್ತಾರೆ. ಚನ್ನಬಸವಣ್ಣ, ‘ವಾರ ತಿಥಿ, ಸುಮೂಹೂರ್ತವೆಂದು ಲೌಕಿಕವಾದ ಮಾಡಿದಡೆ ನಿಮ್ಮ ಸದ್ಭಕ್ತರಿಗೆ ದೂರವಯ್ಯ ಕೂಡಲ ಚೆನ್ನಸಂಗಮದೇವ’ ಎನ್ನುತ್ತಾರೆ. ಅಂಬಿಗರ ಚೌಡಯ್ಯನವರಂತೂ ಪಾದೋದಕ ಸೇವನೆಯಿಂದ ಹಿಡಿದು, ಸಮಕಾಲೀನರ ಮೌಢ್ಯಾಚರಣೆಗಳನ್ನು ಕಟುವಾಗಿ ಖಂಡಿಸುತ್ತಾರೆ. ಅಲ್ಲಮಪ್ರಭು ಹೊಸ ಆತ್ಮ ಜ್ಞಾನವನ್ನೇ ಕಟ್ಟಿಕೊಡುತ್ತಾರೆ. ಒಟ್ಟಾರೆ ಎಲ್ಲ ವಚನಕಾರರೂ ತಂತಮ್ಮ ಪರಿಧಿಯಲ್ಲಿ ಮೌಢ್ಯಾಚರಣೆಗಳನ್ನು ವಿರೋಧಿಸಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯಕ್ಕೆ ಬಂದರೆ ಕುವೆಂಪು ವರ್ಣಮೂಲ ಶಾಸ್ತ್ರಗಳ ಮೌಢ್ಯವನ್ನು ಧಿಕ್ಕರಿಸಿ ‘ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು’ ಎಂದು ಪ್ರಶ್ನಿಸಿದ್ದಾರೆ – ಬೇಂದ್ರೆಯವರು ‘ಪುಟ್ಟವಿಧವೆ’ಯ ಸಂಕಟಕ್ಕೆ ಸಂವೇದಕರಾಗಿದ್ದಾರೆ. ಇವರು ನಮ್ಮ ಸಾಂಕೇತಿಕ ಸಾಕ್ಷಿ ಪ್ರಜ್ಞೆ ಹೀಗಾಗಿ ಕನ್ನಡ ಸಾಹಿತ್ಯವನ್ನು ಗೌರವಿಸುವುದೇ ನಿಜವಗಿದ್ದಲ್ಲಿ ಸಮಾಜ ಮತ್ತು ಸರ್ಕಾರಗಳಿಗೆ ಮೌಢ್ಯಾಚರಣೆ ಪ್ರತಿಬಂಧಕಕಾಯಿದೆಯನ್ನ ರೂಪಿಸಲು ಮತ್ತು ಜಾರಿಗೊಳಿಸಲು ಮತ್ತೇನು ಒತ್ತಾಸೆಬೇಕು? ಮೌಢ್ಯಗಳ ಸನಾತನ ಸಂಪ್ರದಾಯಗಳನ್ನು ಹಿಂದಿಕ್ಕಿ ಮುಂದೆ ಬಂದ ಪ್ರಗತಿಪರ ಪರಂಪರೆಯ ಪ್ರಜ್ಞೆಯ ಆಧಾರದಲ್ಲಿ, ಎಲ್ಲ ಧಾರ್ಮಿಕ, ಚಿಂತಕ ವಲಯಗಳೊಂದಿಗಿನ ಪ್ರಜಾಸತ್ತಾತ್ಮಕ ಚರ್ಚೆ – ಚಿಂತನೆಯೊಂದಿಗೆ ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಜಾರಿಗೆ ಬಂದು ಕನ್ನಡ ಸಾಹಿತ್ಯದ ಪ್ರಗತಿ ಪರಂಪರೆಗೆ ಮನ್ನಣೆ ಕೊಡುವಂತಾಗಬೇಕು.
ಆಹಾರ ಸಂಸ್ಕøತಿಯ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸಿಬೇಕು. ಯಾಕೆಂದರೆ ಆಹಾರ ಸಂಸ್ಕøತಿಗೂ ಕನ್ನಡ ಸಾಹಿತ್ಯ ಪ್ರತಿಕ್ರಿಯಿಸಿದೆ. ಇಂದು ಆಹಾರ ಸಂಸ್ಕøತಿಯನ್ನು ಕುರಿತಂತೆ ಶ್ರೇಷ್ಠ ಮತ್ತು ಕನಿಷ್ಠತೆಯ ಆಧಾರದಲ್ಲಿ ಅನಗತ್ಯ ವಿವಾದವನ್ನು ಎಬ್ಬಿಸಲಾಗುತ್ತಿದೆ. ಸಮಾಜ ಬದಲಾವಣೆಯ ಆದ್ಯತೆಗಳನ್ನೇ ಬದಲಾಯಿಸಲಾಗುತ್ತಿದೆ. ಅಂದು ದಲಿತ ವಚನಕಾರ್ತಿ ಕಾಳವ್ವೆ ಒಂದು ಪ್ರಶ್ನೆ ಕೇಳಿದರು:
“ಕುರಿ ಕೋಳಿ ಕರಿಮೀನು ತಿಂಬವರಿಗೆಲ್ಲ| ಕುಲಜ ಕುಲಜರೆಂದೆಂಬರು| ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ| ಮಾದಿಗ ಕೀಳು ಜಾತಿಯೆಂಬರು| ಅವರೆಂತು ಕೀಳುಜಾತಿಯಾದರು?| ಜಾತಿಗಳು ನೀವೇಕೆ ಕೀಳಾಗಿರೊ?” ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವೈಯವರ ಈ ವಚನ ಸ್ವಯಂವೇದ್ಯವಾಗಿದೆ – ಪ್ರಸ್ತುತ ಸಂದರ್ಭದ ಪ್ರಶ್ನೆಯೂ ಆಗಿದೆ.
ಅಷ್ಟೇಕೆ, ಕುಮಾರವ್ಯಾಸ ಕವಿ ವ್ಯಾಧನೊಬ್ಬನನ್ನು ‘ಧರ್ಮವ್ಯಾಧ’ ಎಂದು ಕರೆದದ್ದು ಇಲ್ಲಿ ಉಲ್ಲೇಖನೀಯ. ವಿಪ್ರನೊಬ್ಬನು ತನಗೆ ಭಿಕ್ಷೆನೀಡಲು ತಡಮಾಡಿದ ಮಹಿಳೆಯ ವಿರುದ್ಧ ರೇಗಾಡುತ್ತಾನೆ. ಆಕೆ ‘ನಿನ್ನ ಚಿತ್ತದೊಳಿಲ್ಲ ಪರಿಹಾರ’ ವಿಂದು ಹೇಳಿದ್ದಲ್ಲದೆ ವ್ಯಾಧನೊಬ್ಬನ ವಿಳಾಸ ಹೇಳಿ ಅಲ್ಲಿಗೆ ಕಳಿಸುತ್ತಾಳೆ. ಆ ವ್ಯಾಧನು ತನ್ನ ತಾಯಿತಂದೆಯರನ್ನು ಸಾಕಲು ಎಷ್ಟುಬೇಕೋ ಅಷ್ಟು ಬೇಟೆಯಾಡುತ್ತಿರುತ್ತಾನೆ. ‘ಭೂತ ಹಿಂಸೆಯಿದಲ್ಲ. ನಮಗಿದು ಮಾತೃಪಿತೃ ರಕ್ಷಾರ್ಥವು’ ಎಂಬ ಸಮರ್ಥನೆ ನೀಡುತ್ತಾನೆ. ಮುಖ್ಯವಾಗಿ ಧನ ಮದವ, ಸತ್ಕುಲ ಮದವ, ಯವ್ವನ ಮದವ, ಪರಿಜನ ಮದವ, ವೈಭವ ಮದವ, ಆಚಾರಪದ ಮದವ’ ಬಿಟ್ಟು ‘ವಿದ್ಯಾವಿನಯ ಸೌಶೀಲ್ಯದಲಿ ನಡೆಯುವುದು’ ಎಂದು ವಿಪ್ರನಿಗೆ ತಿಳಿ ಹೇಳುತ್ತಾನೆ. ಈತನೇ ಧರ್ಮವ್ಯಾದ. ಕುಮಾರವ್ಯಾಸನ ದೃಷ್ಟಿಯಲ್ಲಿ ಈತ ಕೇವಲ ‘ವ್ಯಾಧ’ ಅಲ್ಲ ‘ಧರ್ಮ’ ವ್ಯಾದ. ಈತನ ತಿಳುವಳಿಕೆಯು ಇಂದಿಗೂ ಪ್ರಸ್ತುತ. ಜಾತಿ, ವಿದ್ಯೆ, ವೈಭವ, ಆಚಾರ ಇತ್ಯಾದಿಗಳ ಅಹಂಕಾರವನ್ನು ಬಿಡಬೇಕೆಂಬ ಆತನ ಮಾತು ಆಹಾರ ಸಂಸ್ಕøತಿಯ ಸಮರ್ಥನೆಯಾಚೆಗೂ ಚಾಚಿಕೊಂಡ ಸಾಮಾಜಿಕ ಸಮಾನತೆಯ ಅರಿವಾಗಿ ಹೊಮ್ಮಿದೆ. ಆದ್ದರಿಂದ ಆಹಾರ ಸಂಸ್ಕøತಿಯ ಅತಿಕ್ರಮಣದ ಬದಲು ಕಾಲದ ಕಾಳಜಿಗೆ ಬಿಟ್ಟರೆ ಅವರವರ ಅರಿವಿನ ಆಯ್ಕೆಗೆ ತಕ್ಕಂತೆ ಬಳಸುತ್ತಾರೆ; ಬೇಕೆಂದರೆ ಬದಲಾಗುತ್ತಾರೆ. ಆದ್ದರಿಂದ ಆಹಾರ ಸಂಸ್ಕøತಿ ಚರ್ಚೆಯನ್ನು ಹಾದಿ ಬದಿಯ ಪ್ರದರ್ಶನ ಮಾಡದೆ, ಸಮಾಜ ಬದಲಾವಣೆಯ ಆದ್ಯತೆಗಳತ್ತ ಗಮನಹರಿಸಬೇಕಾಗಿದೆ.
ಧರ್ಮ, ದೇವರು, ಆಸ್ತಿಕತೆ, ನಾಸ್ತಿಕತೆ, ಆಹಾರ, ಪೂಜೆ ಪುನಸ್ಕಾರವೇ ಮುಂತಾದ ವಿಷಯಗಳನ್ನು ಮುನ್ನೆಲೆಗೆ ತಂದು ಜನಸಾಮಾನ್ಯರ ಬದುಕನ್ನು ಬಲಿ ತೆಗೆದುಕೊಳ್ಳುತ್ತಿರುವ ಸಾಮಾಜಿಕ ಆರ್ಥಿಕ ನೀತಿಗಳ ಚರ್ಚೆಗಳನ್ನು ಮರೆಸುವ ತಂತ್ರಕ್ಕೆ ನಾವು ಬಲಿಯಾಗಬಾರದು. ಕೃಷಿಯಿಂದ ಹಿಡಿದು ಎಲ್ಲಕ್ಷೇತ್ರಗಳೂ ಉದ್ಯಮ ಮಾತ್ರವಾಗುವ ಅಪಾಯವನ್ನು ಮರೆಯಬಾರದು. ನಾನು ‘ಉದ್ಯಮ ಮಾತ್ರ’ ಎಂಬ ಪದವನ್ನು ಪ್ರಜ್ಞಾಪೂರ್ವಕವಾಗಿ ಬಳಸಿದ್ದೇನೆ. ಯಾಕೆಂದರೆ ವಿವಿಧ ಪ್ರಮಾಣದಲ್ಲಿ ಉದ್ಯಮ ಇಲ್ಲದಿರುವ ಸಮಾಜ ಇಲ್ಲ. ಆದರೆ ಎಲ್ಲವೂ ಉದ್ಯಮ ಮಾತ್ರವೇ ಆಗಿಬಿಟ್ಟರೆ ಅದು ಅಪಾಯಕಾರಿ. ಸೇವಾ ಕ್ಷೇತ್ರಗಳಾಗಿದ್ದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಈಗ ಸಂಪೂರ್ಣ ಉದ್ಯಮಗಳಾಗಿವೆ. ಗ್ಯಾಟ್ ಒಪ್ಪಂದದಲ್ಲಿ ಶಿಕ್ಷಣವನ್ನು ಅಧಿಕೃತವಾಗಿಯೇ ‘Education Industry’ ಎಂದು ಹೆಸರಿಸಲಾಗಿದೆ. ‘Health Industry’ ಎಂಬ ಪರಿಕಲ್ಪನೆ ಚಾಲ್ತಿಗೆ ಬಂದಿದೆ. ಇದು ಇಷ್ಟಕ್ಕೇ ನಿಂತಿಲ್ಲ. ಮಾಧ್ಯಮ ಕ್ಷೇತ್ರಗಳೆಲ್ಲ ಉದ್ಯಮ ಕ್ಷೇತ್ರಗಳಾಗುತ್ತಿವೆ. ಪುಸ್ತಕ ಮಾಧ್ಯಮವನ್ನು ಪುಸ್ತಕೋದ್ಯಮ ಎನ್ನಲಾಗುತ್ತಿದೆ. ಪತ್ರಿಕಾ ಮಾಧ್ಯಮವನ್ನು ಪತ್ರಿಕೋದ್ಯಮ ಎಂದು ಕರೆಯಲಾಗುತ್ತಿದೆ. ಚಲನಚಿತ್ರ ಮಾಧ್ಯಮ ಚಲನಚಿತ್ರೋದ್ಯಮವಾಗಿದೆ. ಮಾಧ್ಯಮಕ್ಕೆ ಸಂವೇದನೆ ಮುಖ್ಯ. ಉದ್ಯಮಕ್ಕೆ ಸಂಪಾದನೆ ಮುಖ್ಯ. ‘ಸಂಪಾದನೆ’ಯು ‘ಸಂವೇದನೆ’ಯ ಸಾವಿಗೆ ಕಾರಣವಾಗಬಾರದು. ಸಂಪಾದನೆ ಮತ್ತು ಸಂವೇದನೆಗಳ ನಡುವೆ ಸಮತೋಲನ ಸಾಧಿಸಿ ‘ಮಾಧ್ಯಮ ಸಂಸ್ಕøತಿ’ಯನ್ನು ಬೆಳೆಸಬೇಕು.
ಕನ್ನಡ ಸಿನಿಮಾ ಸಂವೇದನೆ
ನಾನು ಸಿನಿಮಾ ಕ್ಷೇತ್ರಕ್ಕೂ ಸಂಬಂಧಿಸಿದವನಾದ್ದರಿಂದ ಮತ್ತು ಸಿನಿಮಾ ಬಹುಮುಖ್ಯ ಪ್ರಭಾವಶಾಲಿ ದೃಶ್ಯ ಮಾಧ್ಯಮವಾದ್ದರಿಂದ ಕನ್ನಡ ಸಿನಿಮಾದ ಒಳಿತಿನ ಬಗ್ಗೆ ಮಾತಾಡುವುದು ನನ್ನ ಒಂದು ಜವಾಬ್ದಾರಿ. ಮೊದಲಿಗೆ ನಾನು ಇತ್ತೀಚಿಗೆ ಸಂಬಂದಿಸಿದ ಸಿನಿಮಾ ದುರಂತವೊಂದನ್ನು ಪ್ರಸ್ತಾಪಿಸಬಯಸುತ್ತೇನೆ. ನವೆಂಬರ್ ೭ರಂದು (೨0೧೬) ಬೆಂಗಳೂರು ಬಳಿಯ ತಿಪ್ಪಗೊಂಡನಹಳ್ಳಿ ಕೆರೆಯ ಬಳಿ ‘ಮಾಸ್ತಿಗುಡಿ’ ಸಿನಿಮಾದ ಸಾಹಸ ಚಿತ್ರೀಕರಣ ನಡೆದದ್ದು ಮತ್ತು ಇಬ್ಬರು ಕಲಾವಿದರಾದ ಅನಿಲ್ ಮತ್ತು ಉದಯ್ ದುರಂತ ಸಾವಿಗೀಡಾದದ್ದು ನಿಮಗೆ ಗೊತ್ತೇ ಇದೆ. ಮೊದಲಿಗೆ ದುರಂತ ಸಾವಿಗೆ ತುತ್ತಾದ ಅನಿಲ್ ಮತ್ತು ಉದಯ್ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸುತ್ತೇನೆ. ೧00ಅಡಿ ಮೇಲಿನಿಂದ ಕೆರೆಯ ನೀರಿಗೆ ಜಿಗಿಯುವ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಅಗತ್ಯ ಸುರಕ್ಷಿತ ಕ್ರಮಗಳಿಲ್ಲದೆಯೂ ನಾಯಕರಾಗಿ ವಿಜಯ್ ಮತ್ತು ಖಳನಾಯಕರಾಗಿ ಅನಿಲ್ ಮತ್ತು ಉದಯ್ ಭಾಗವಹಿಸಿ, ಯಾವುದೇ ಡ್ಯೂಪ್ಗಳಿಲ್ಲದೆ ನೇರವಾಗಿ ಜಿಗಿದರು. ವಿಜಯ್ ಉಳಿದರು. ಅನಿಲ್-ಉದಯ್ ಸತ್ತರು. ಇದು ಕನ್ನಡ ಸಿನಿಮಾರಂಗದ ದುರಂತ ರೂಪಕವಾಗಿ ನನಗೆ ಕಾಣಿಸುತ್ತದೆ. ನೇರ ಸಾಹಸದ ಪ್ರಚಾರಗಳಿಸುವ ಹುಚ್ಚು ಆಕಾಂಕ್ಷೆ, ಸಹಕಲಾವಿದರಿಗಿಲ್ಲದ ರಕ್ಷಣೆ, ನೀರಿನ ಆಳದಲ್ಲಿ ಹೂಳು ಇದೆ ಎಂಬುದನ್ನು ಗಮನಿಸದ ಅವಿವೇಕ, ಈಜುಬಾರದಿದ್ದರೂ ಸಾಹಸಕ್ಕೆ ಸೈ ಎನ್ನುವ ಹುಂಬುತನ. ಅಮಾಯಕರು ಬಲಿಯಾದ ಮೇಲೆ ಒಬ್ಬರ ಮೇಲೊಬ್ಬರು ಮಾಡುತ್ತಿರುವ ಆರೋಪ, ಪ್ರತ್ಯಾರೋಪ – ಇವೆಲ್ಲವನ್ನೂ ಹೆಣೆದರೆ ಅದು ಒಟ್ಟು ಚಿತ್ರ ರಂಗದ ಸೂಕ್ಷ್ಮರಹಿತ ಸತ್ಯದ ದುರಂತ ರೂಪಕವೇ ಆಗುತ್ತದೆ. ಈ ದುರಂತ ರೂಪಕ ಸ್ಥಾಯಿಯಾಗದಂತೆ ಮಾಡುವ ಜವಾಬ್ದಾರಿ ನಮ್ಮ ಸಿನಿಮಾರಂಗದ ಮೇಲಿದೆ. ಕನ್ನಡ ಸಿನಿಮಾದ ವೈಶಿಷ್ಟ್ಯವೆಂದರೆ- ಮೊದಲ ಚಿತ್ರದಿಂದಲೇ ಪುರಾಣದ ಪ್ರಧಾನ ಧಾರೆಯ ಬದಲು ಉಪಧಾರೆಯ ಅಭಿವ್ಯಕ್ತಿಯ ಆರಂಭ. ಮೊಟ್ಟಮೊದಲು ಚಿತ್ರೀಕರಣ ಪ್ರಾರಂಭಿಸಿದ್ದು ಕನ್ನಡ ವಾಕ್ಚಿತ್ರ ‘ಭಕ್ತಧ್ರುವ’. ಆದರೆ ಮೊಟ್ಟಮೊದಲು ಬಿಡುಗಡೆಯಾದ ಮೊದಲ ವಾಕ್ಚಿತ್ರ ‘ಸತಿಸುಲೋಚನ’ (೧೯೩೪). ರಾಮಾಯಣದ ಸೀತೆಯಾಗಲಿ, ಶ್ರೀರಾಮನಾಗಲಿ ಈ ಚಿತ್ರದ ಪ್ರಧಾನ ಪಾತ್ರಗಳಲ್ಲ. ರಾವಣನ ಮಗ ಇಂದ್ರಜಿತು ನಾಯಕ. ಆತನ ಪತ್ನಿ ಸುಲೋಚನೆ ನಾಯಕಿ. ಒಟ್ಟು ಚಿತ್ರದ ಅಂತಿಮ ವಿಚಾರಧಾರೆ ಏನೇ ಇರಲಿ, ಶ್ರೀರಾಮ, ಸೀತೆ ಪ್ರಧಾನವಾದ ಪಾತ್ರಗಳಲ್ಲ. ಪುರಾಣದ ವಿವಿಧ ಉಪಕಥಾ ಧಾರೆಗಳೇ ಕನ್ನಡ ಸಿನಿಮಾದ ಮೊದಲ ಕಾಲು ಶತಮಾನದ ಕೇಂದ್ರ ಪ್ರಜ್ಞೆಯಾಗಿದ್ದು ಒಂದು ವಿಶಿಷ್ಟ ಪರಂಪರೆ ಎಂದೇ ನನ್ನ ತಿಳುವಳಿಕೆ. ಕನ್ನಡ ಸಿನಿಮಾ ಮೊದಲಿನಿಂದಲೂ ರಂಗಭೂಮಿ ಮತ್ತು ಸಾಹಿತ್ಯದ ಸಂಬಂಧವನ್ನು ಕಾಯ್ದುಕೊಂಡು, ತೊಡಗಿಸಿಕೊಂಡು ಬೆಳೆಯುತ್ತ ಬಂದು ಕಾಲಾನುಸಂಧಾನದ ಸ್ಥಿತ್ಯಂತರಗಳಿಗೆ ಒಳಗಾಗಿದೆ. ಎಲ್ಲ ಮಾದರಿಯ ಸಿನಿಮಾಗಳನ್ನೂ ಕೊಡುತ್ತ ಬಂದಿದೆ. ಅನೇಕ ಮುಖ್ಯವಾಹಿನಿ ಸಿನಿಮಾಗಳು ಸ್ಥೂಲ ಗ್ರಹಿಕೆಯಲ್ಲಾದರೂ ಪ್ರಗತಿಪರ ವಿಚಾರಗಳನ್ನು ಭಾವನಾತ್ಮಕ ಶೈಲಿಯಲ್ಲಿ ಪ್ರತಿಪಾದಿಸುತ್ತ ಬಂದಿರುವುದು ಅಭಿನಂದನೀಯ. ಪರ್ಯಾಯ ಸಿನಿಮಾಗಳು (ಕಲಾತ್ಮಕದ, ಹೊಸ ಅಲೆ) ವ್ಯಕ್ತಿಗಳ ಮಾನಸಿಕ ಶೋಧದ ಮೂಲಕ ಸಾಮಾಜಿಕ ಸಂಬಂಧಗಳ ವಿನ್ಯಾಸ ರೂಪಕಗಳನ್ನು ಕಟ್ಟಿಕೊಟ್ಟಿದ್ದು ಒಂದು ವಿಶಿಷ್ಟತೆ. ಮುಖ್ಯವಾಹಿನಿ ಸಿನಿಮೋದ್ಯಮವು ಅಪಾರ ಜನಸ್ತೋಮದ ಆಕರ್ಷಣೆಗೆ ಒಳಗಾಗುತ್ತ ಹೋದಂತೆ ಜನಸಾಮಾನ್ಯರ ಬೇಕು-ಬೇಡಗಳ ಜೊತೆಗೆ ಆದರ್ಶದ ಸ್ಥೂಲ ಮಾದರಿಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿತು. ಜನರ ಸಮಸ್ಯೆಗಳಿಗೆ ಸಿನಿಮಾದಲ್ಲಷ್ಟೇ ಅಲ್ಲ ಸಮಾಜದಲ್ಲೂ ಸ್ಪಂದಿಸತೊಡಗಿತು. ಕನ್ನಡ ಸಿನಿಮಾರಂಗದ ಸಾಮಾಜಿಕ ಕ್ರಿಯೆ ಆರಂಭದಲ್ಲಿ ವೈಯಕ್ತಿಕ ನೆಲೆಯಲ್ಲಿ ನಡೆಯುತ್ತಿತ್ತು. ಡಾ. ರಾಜಕುಮಾರ್ ಮುಂತಾದವರು ಕಷ್ಟದಲ್ಲಿದ್ದ ನಾಟಕ ಕಂಪನಿಗಳಿಗಾಗಿ ಸಹಾಯಧನ ಪ್ರದರ್ಶನಗಳಲ್ಲಿ ಭಾಗಿಯಾಗತೊಡಗಿದರು. ಆನಂತರ ೧೯೬೧-೬೨ರಲ್ಲಿ ಪ್ರವಾಹ ಪರಿಹಾರ ನಿಧಿ ಸಂಗ್ರಹಣೆಗಾಗಿ ವರನಟ ರಾಜಕುಮಾರ್ ನೇತೃತ್ವದಲ್ಲಿ ಅಂದಿನ ಎಲ್ಲ ಚಲನಚಿತ್ರ ಕಲಾವಿದ – ಕಲಾವಿದೆಯರು ಕರ್ನಾಟಕದಾದ್ಯಂತ ಸಂಚರಿಸಿದರು. ನಿಧಿ ಸಂಗ್ರಹಿಸಿ ಸಂತ್ರಸ್ಥರಿಗೆ ನೆರವಾದರು. (ಈ ಪ್ರವಾಸದ ಪ್ರಾಯೋಜಕರು -ಪ್ರಜಾವಾಣಿ) ಆನಂತರ ತಂತಮ್ಮ ಪರಿಮಿತಿಯಲ್ಲಿ ಕನ್ನಡದ ನಾಯಕ ನಟರು ಕಷ್ಟದಲ್ಲಿದ್ದವರಿಗೆ ವೈಯಕ್ತಿಕ ನೆಲೆಯಲ್ಲಿ ನೆರವಾಗುತ್ತ ಬಂದರು. ಇಡೀ ಕರ್ನಾಟಕದಲ್ಲಿಯೇ ಬಹುದೊಡ್ಡ ಪ್ರಮಾಣದ ಆಂದೋಲನವೆಂದು ಹೆಸರಾದ ಗೋಕಾಕ್ ಚಳವಳಿಗೆ ಡಾ. ರಾಜ್ಕುಮಾರ್ ನೇತೃತ್ವದ ಶಕ್ತಿ ಸಂಚಲನವಾದದ್ದು, ಅದರಲ್ಲಿ ಇಡೀ ಕನ್ನಡ ಚಿತ್ರರಂಗ ಭಾಗವಹಿಸಿದ್ದು ಒಂದು ಇತಿಹಾಸ. (ಗೋಕಾಕ್ ಚಳುವಳಿಯ ಆರಂಭ ಆದದ್ದು ಸಾಹಿತಿ -ಕಲಾವಿದರಿಂದ ಕನ್ನಡಪರ ಸಂಘಟನೆಗಳಿಂದ. ಆಮೇಲೆ ಡಾ. ರಾಜಕುಮಾರ್ ಪ್ರವೇಶ) ಇತ್ತೀಚೆಗೆ ಇಡೀ ಕನ್ನಡ ಮುಖ್ಯವಾಹಿನಿ ಚಿತ್ರರಂಗವು ಕಳಸಾ ಬಂಡೂರಿ ಚಳವಳಿಗೆ ಬೆಂಬಲ ಸೂಚಿಸಿ ದೊಡ್ಡ ರ್ಯಾಲಿ ನಡೆಸಿತು. ಕಾವೇರಿ ಸಮಸ್ಯೆಗೆ ಸ್ಪಂದಿಸಿತು. ಕರ್ನಾಟಕದ ಸಮಸ್ಯೆಗಳಿಗೆ ಸಾಂಕೇತಿಕ ಸ್ಪಂದನೆ ನೀಡುತ್ತ ಬಂದಿರುವ ಕನ್ನಡ ಚಿತ್ರರಂಗದ ನಡೆ ಮೆಚ್ಚುವಂಥದ್ದು. ಈ ಮೆಚ್ಚುಗೆಯೊಂದಿಗೆ ನಿರೀಕ್ಷೆಯೂ ಹೆಚ್ಚಾಗಿದೆ. ಹೆಚ್ಚು ಹೆಚ್ಚು ಸದಭಿರುಚಿಯ ಸಿನಿಮಾಗಳಿಗಾಗಿ ಕನ್ನಡ ಜನತೆ ಕಾಯುತ್ತಿದೆ. ‘ಮೈಮುಟ್ಟುವ ಸಿನಿಮಾ ಬೇಡ; ಮನಸ್ಸು ಮುಟ್ಟುವ ಸಿನಿಮಾ ಬೇಕು’ -ಇದು ನನ್ನಂತಹ ಸದಭಿರುಚಿಯುಳ್ಳವರ ಅಪೇಕ್ಷೆ. ಆದರೆ ಚಲನಚಿತ್ರರಂಗದಲ್ಲಿರುವ ಗುತ್ತಿಗೆದಾರರು ಎಷ್ಟರ ಮಟ್ಟಿಗೆ ಸದಭಿರುಚಿ ಮತ್ತು ಸತ್ಯಶೋಧಗಳ ಆತ್ಮಸಾಕ್ಷಿಯಾಗುತ್ತಾರೆಂಬ ಪ್ರಶ್ನೆ ನನ್ನನ್ನು ಕಾಡಿಸುತ್ತಲೇ ಬಂದಿದೆ. ಒಂದು ಕಡೆ ಆರ್ಥಿಕ ಗುತ್ತಿಗೆದಾರರು; ಇನ್ನೊಂದು ಕಡೆ ಬೌದ್ಧಿಕ ಗುತ್ತಿಗೆದಾರರು. ಸಿನಿಮಾಕ್ಕೆ ಆರ್ಥಿಕ ಬಂಡವಾಳ ಹಾಕುವವರನ್ನೆಲ್ಲ ನಾನು ‘ಗುತ್ತಿಗೆದಾರರು’ ಎನ್ನುವುದಿಲ್ಲ. ಅಂತೆಯೇ ಬೌದ್ಧಿಕ ಚಿಂತನೆ ಇರುವವರೆಲ್ಲ ಬೌದ್ಧಿಕ ಗುತ್ತಿಗೆದಾರರಲ್ಲ. ತಾವು ಮಾತ್ರವೇ ಅಂತಿಮ ಸತ್ಯದ ಹರಿಕಾರರೆಂದು ಭ್ರಮಿಸಿ ಅಭಿಪ್ರಾಯದ ಹೆಸರಲ್ಲಿ ಅನ್ಯಾಕ್ರಮಣಶೀಲತೆ ತೋರುವವರು ‘ಗುತ್ತಿಗೆದಾರರು’. ಸೃಜನಶೀಲತೆಯು ಯಾವತ್ತೂ ಗುತ್ತಿಗೆದಾರರ ದಾಸನೋ ದಾಸಿಯೋ ಆಗಬಾರದು. ಆದರೆ ಆರ್ಥಿಕ ಗುತ್ತಿಗೆದಾರರು ಮತ್ತು ಬೌದ್ಧಿಕ ಗುತ್ತಿಗೆದಾರರು ಕನ್ನಡ ಚಿತ್ರರಂಗದಲ್ಲಿ ಅಘೋಷಿತ ವಿಭಜನೆಗೆ ಕಾರಣರಾಗುತ್ತಿದ್ದಾರೆ. ತಮ್ಮದಲ್ಲದ ಮಾದರಿಗಳ ಸಿನಿಮಾ ಬಗ್ಗೆ ಪ್ರೀತಿಯಿಲ್ಲದ ವರ್ತನೆ ಮಾಡುವುದರ ಜೊತೆಗೆ ತಂತಮ್ಮ ಮಾದರಿಯಲ್ಲೇ ಇರುವ ಅನ್ಯರ ಸಿನಿಮಾಭಿವ್ಯಕ್ತಿಗಳ ಬಗ್ಗೆಯೂ ಸೂಕ್ತ ಸ್ಪಂದನ ನೀಡದೆ ‘ದೂರ’ ಆಲೋಚನೆಯುಳ್ಳವರಾಗುತ್ತಾರೆ. ಈ ಮಾತಿಗೆ ನಿರ್ದಿಷ್ಟ ವ್ಯಕ್ತಿಗಳನ್ನು ಹೆಸರಿಸಲಾಗದು. ಇದು ವ್ಯಕ್ತಿಗಳ ವಿಷಯವಲ್ಲ. ಒಂದು ಮನೋಧರ್ಮದ ವಿಷಯ; ದೃಷ್ಟಿ ಧೋರಣೆಗಳ ವಿಷಯ. ನಮ್ಮ ಚಿತ್ರರಂಗ ‘ದೂರ’ ಆಲೋಚನೆಗಳಿಂದ ದೂರವಾಗಿ ಪರಸ್ಪರ ಸಮೀಪವಾಗುವುದರಿಂದ ಮತ್ತಷ್ಟು ಸತ್ಯಶೋಧ, ಸದಭಿರುಚಿ ಮತ್ತು ಸೃಜನಶೀಲತೆ ಸಾಧ್ಯ.
ಕನ್ನಡ ಚಿತ್ರರಂಗ ಎದುರಿಸುತ್ತಿರುವ ಅನೇಕ ಬಿಕ್ಕಟ್ಟುಗಳ ನಡುವೆಯೂ ಹೊಸ ಪ್ರತಿಭೆಗಳ ಪ್ರಯೋಗ ಪ್ರಶಂಸೆಗೆ ಅರ್ಹವಾಗಿದೆ. ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ ಹೊಸಬರ ಮತ್ತು ಹಳಬರ ಹೊಸ ಪ್ರಯೋಗಗÀಳಿಗಾಗಿ ಮಿನಿ ಚಿತ್ರಮಂದಿರಗಳ ಅಗತ್ಯವಿದೆ. ಸಿನಿಮಾ ಫ್ಲೆಕ್ಸ್ಗಳು ಅಗ್ಗವಾದರೂ ಮಲ್ಟಿಫ್ಲೆಕ್ಸ್ಗಳು ದುಬಾರಿಯಾಗಿವೆÉ. ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸಹಾಯ ಮಾಡುತ್ತಿರುವ ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಕೊಡಬೇಕಾಗಿದೆÀ. ಅಂತೆಯೇ ಕನ್ನಡ ರಂಗಭೂಮಿಗಾಗಿ ಮಿನಿ ರಂಗಮಂದಿರಗಳ ನಿರ್ಮಾಣ, ಹೊಸರಂಗ ಪ್ರಯೋಗಗಳನ್ನು ಗ್ರಾಮೀಣ ಭಾಗಕ್ಕೆ ಪರಿಚಯಿಸುವ ಅಭಿಯಾನಗಳೂ ನಡೆಯಬೇಕಾಗಿದೆ. ಇಲ್ಲದಿದ್ದರೆ ನಗರ ಹಳ್ಳಿಗಳ ಕಲಾ ಸಂಬಂಧದ ಕಂದಕ ಇನ್ನೂ ಹೆಚ್ಚುತ್ತಾ ಹೋಗುತ್ತದೆ.
ನಿಜದ ನೆಲೆಯೆಂದರೆ – ಮಾಧ್ಯಮಗಳೆಲ್ಲ ಉದ್ಯಮ ಪ್ರಧಾನವಾಗಿರುವ ಈ ಸಂದರ್ಭದಲ್ಲಿ ಕಡಿಮೆ ಬಂಡವಾಳದ ಸಿನಿಮಾಗಳು, ಪುಸ್ತಕ ಪ್ರಕಾಶಕರು ಮತ್ತು ಪತ್ರಿಕೆಗಳು ದೊಡ್ಡ ಪ್ರಮಾಣದಲ್ಲಿ ಸೃಜನಾತ್ಮಕವಾಗಿವೆ. ಸಿನಿಮಾಗಳ ಬಗ್ಗೆ ಈಗಾಗಲೇ ಪ್ರಸ್ತಾಪಿಸಿದ್ದೇನೆ. ಪುಸ್ತಕ ಪ್ರಕಾಶಕರಲ್ಲಿ ಗಂಭೀರ, ಚಿಂತನಾರ್ಹಕೃತಿ ಪ್ರಕಟಣೆಯಲ್ಲಿ ತೊಡಗಿರುವವರು ಬೃಹತ್ ಬಂಡವಾಳಗಾರರಲ್ಲ. ಚಿಕ್ಕ ಪ್ರಮಾಣದ ಪುಸ್ತಕ ಪ್ರಕಾಶಕರು. ಪತ್ರಿಕೆಗಳ ವಿಷಯಕ್ಕೆ ಬಂದರೆ ಮುಖ್ಯವಾಹಿನಿ ಪತ್ರಿಕೆಗಳು ತಮ್ಮ ವಿಶೇಷ ಪುರವಣಿಗಳ ಮೂಲಕ ಸಾಹಿತ್ಯ-ಸಂಸ್ಕøತಿ ಕ್ರಿಯೆಗಳಿಗೆ ವಿಶೇಷ ಅವಕಾಶ ಒದಗಿಸಿವೆ. ಮುಖ್ಯ ಪುಟಗಳಲ್ಲಿ ಸುದ್ದಿ ಪ್ರಕಟಣೆಯನ್ನೂ ಮಾಡುತ್ತಿವೆ. ಮುಖ್ಯವಾಹಿನಿ ಪತ್ರಿಕೆಗಳ ಈ ಕೆಲಸವನ್ನು ಗೌಣಗೊಳಿಸುವಂತಿಲ್ಲ. ಆದರೆ ಈ ಪತ್ರಿಕೆಗಳಿಗೆ ಪ್ರಸಾರ ಸಂಖ್ಯೆಯ ಸ್ಪರ್ಧೆ ಮುಖ್ಯವಾಗಿರುವುದರಿಂದ ಸೃಜನಶೀಲ ಮಿತಿಯೊಂದು ಇರುತ್ತದೆ. ಈ ಮಿತಿಯನ್ನು ಮೀರಿ ಸಾಹಿತ್ಯ ಸಂಸ್ಕøತಿಗಳ ಚರ್ಚೆ- ಚಿಂತನೆಗಳನ್ನು ಕನ್ನಡದ ಕಿರುಪತ್ರಿಕೆಗಳು/ ವಿವಿಧ ನಿಯತಕಾಲಿಕೆಗಳು ಮಾಡುತ್ತ ಬಂದಿವೆ.
‘ವಾಗ್ಭೂಷಣ’ ಪತ್ರಿಕೆಯಿಂದ ಆರಂಭವಾದ ನಿಯತಕಾಲಿಕೆ ಪ್ರಕಟಣೆ ಒಂದು ಪರಂಪರೆಯಾಗಿ ಬೆಳೆಯಿತು. ಸಂಕ್ರಮಣ, ಸಾಕ್ಷಿ, ಶೂದ್ರ, ಅನ್ವೇಷಣೆ, ಕವಿತಾ, ಪುಸ್ತಕಮನೆ, ಅರುಹು ಕುರುಹು, ರುಜುವಾತು, ದೇಶಕಾಲ, ಸಾಹಿತ್ಯ ಪರಿಷತ್ಪತ್ರಿಕೆ, ಕನ್ನಡನುಡಿ, ಕೊರವಂಜಿ, ವಿನೋದ, ಗ್ರಂಥಲೋಕ, ದಲಿತ, ಗಾಂಧಿಬಜಾರ್, ಜೀವನ, ಪ್ರಬುದ್ಧಕರ್ನಾಟಕ, ಕರ್ನಾಟಕ ಭಾರತಿ, ಸಾಧನೆ ಸ್ಥಿತಿ-ಗತಿ, ಸಂಚಯ, ಅನಿಕೇತನ, ಅಚಲ ಒಡನಾಡಿ, ಸಮನ್ವಯ, ಸಮುದಾಯ ವಾರ್ತಾಪತ್ರ ಮುಂತಾದ ನಿಯತಕಾಲಿಕೆಗಳಲ್ಲದೆ, ಹೊಸತು, ಸಂವಾದ, ಈ ಭಾನುವಾರದಂತಹ ಪತ್ರಿಕೆಗಳ ಕೊಡುಗೆಯೂ ಗಮನಾರ್ಹ. ವಿಶೇಷವಾಗಿ ೫0 ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ‘ಸಂಕ್ರಮಣ’ವು ಒಳಗೊಳ್ಳುತ್ತಿರುವ ವಿವಿಧ ಪ್ರದೇಶದ ಬರಹಗಾರರ ಆಧಾರದ ಮೇಲೆ ಅದನ್ನು ‘ಏಕೀಕರಣ ನಿಯತಕಾಲಿಕೆ’ ಎಂದು ಕರೆಯಬಹುದು.
ಈ ಎಲ್ಲ ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಪ್ರಕಾಶಕರ ಮೂಲಕ ಕನ್ನಡದಲ್ಲಿ ಅನೇಕ ಪ್ರತಿಭಾನ್ವಿತ ಲೇಖಕ- ಲೇಖಕಿಯರು ಪರಿಚಯವಾಗಿದ್ದಾರೆ.
ಕನ್ನಡದಲ್ಲಿ ಹೊಸದಾಗಿ ಬರೆಯುತ್ತಿರುವವರ ಬಗ್ಗೆ ನನಗೆ ಅಪಾರ ಭರವಸೆಯಿದೆ. ಯುವ ಪ್ರತಿಭೆಗಳು ಅತ್ಯಂತ ಸ್ವಾಯತ್ತ ಸೃಜನಶೀಲತೆಯಿಂದ ಅಭಿವ್ಯಕ್ತಿಗೊಳ್ಳುತ್ತಿದ್ದಾರೆ. ಆದರೆ ನನಗೆ ಕಾಣುತ್ತಿರುವ ಒಂದು ಸಮಸ್ಯೆಯೆಂದರೆ ‘ದಿಕ್ಸೂಚಿ’ಯ ಕೊರತೆ. ಬಹುಪಾಲು ಹೊಸ ಬರಹಗಾರರು ಪ್ರಗತಿಪರ ಆಶಯಗಳನ್ನೇ ಅಭಿವ್ಯಕ್ತಿಸುತ್ತಿದ್ದರೂ ಸಾಮುದಾಯಿಕ ಸಂಬಂಧವೊಂದು ಪ್ರಬಲವಾಗದೆ ವ್ಯಕ್ತಿ ವಿಶಿಷ್ಟತೆಯಲ್ಲೇ ಪರ್ಯಾಯಸಾನವಾಗುವ ಅಳುಕು ನನ್ನನ್ನು ಕಾಡಿಸುತ್ತಿದೆ. ಯಾಕೆಂದರೆ ಸೃಜನಶೀಲ ಸೈದ್ಧಾಂತಿಕತೆಯ ಸ್ವರ್ಶದಿಂದ ವಂಚಿತವಾಗುವ ಸೃಷ್ಟಿರೂಪಗಳು ಬಿಡಿ ಬಿಡಿಯಾಗಿ ಗಮನ ಸೆಳೆದರೂ ದಿಕ್ಸೂಚಿ ಶಕ್ತಿಯಿಂದ ವಂಚಿತವಾಗತ್ತವೆ. ಸಿದ್ಧಾಂತವೆಂದರೆ ಸಂಕೋಲೆಯಲ್ಲ. ಅದೊಂದು ನೋಟ; ಆ ನೋಟದ ಮೂಲಕ ಬದುಕನ್ನು ತಿಳಿಯುವುದು, ಈ ತಿಳುವಳಿಕೆಯಿಂದ ನೋಟವನ್ನು ನಿರ್ದಿಷ್ಟಗೊಳಿಸಿಕೊಳ್ಳುವುದು ಒಂದು ಸಕಾರಾತ್ಮಕ ಪ್ರಕ್ರಿಯೆ. ಇಂಥದೊಂದು ಸೈದ್ಧಾಂತಿಕ ಪ್ರಕ್ರಿಯೆಗೆ ಪೂರಕವಾದ ಪರಿಸರವು ಪ್ರಧಾನವಾಗದಿರುವುದೇ ಸಮಕಾಲೀನ ಬಿಕ್ಕಟ್ಟು.
ಜನಪಂಥೀಯತೆ
ಇಂದು ನಮ್ಮ ಸಾಂಸ್ಕøತಿಕ ಕ್ಷೇತ್ರದ ಚರ್ಚೆಗಳ ಪ್ರಧಾನವಾಗಿ ಎಡಪಂಥೀಯತೆ ಮತ್ತು ಬಲಪಂಥೀಯತೆಯೆಂದು ವಿಂಗಡನೆಗೊಂಡಿದೆ. ಎಡ ಮತ್ತು ಬಲಪಂಥೀಯತೆಗಳ ನಿರ್ಣಯಾತ್ಮಕ ಮಾನದಂಡವಾಗಿ ಧಾರ್ಮಿಕ ಮೂಲಭೂತವಾದ ಅಥವಾ ಕೋಮುವಾದ ಮುನ್ನೆಲೆಗೆ ಬಂದಿದೆ. ಎಡಪಂಥವೆಂದರೆ ಕಮ್ಯುನಿಸ್ಟರು, ಬಲಪಂಥವೆಂದರೆ ಸಂಘಪರಿವಾರದವರು ಎಂದಷ್ಟೇ ಆಗಿ ಅದರಾಚೆಗಿನ ವಾಸ್ತವಗಳು ಕಣ್ಮುಚ್ಚದಿದ್ದರೂ ಕೊನೆಯ ಸಾಲಿಗೆ ಸರಿದಿವೆ. ಕೋಮುವಾದವೆನ್ನುವುದು ಈಗ ಒಂದು ಪಕ್ಷ- ಒಂದು ಪಂಥ- ಒಂದು ಧರ್ಮ ಸೀಮಿತ ಮಾತ್ರವಾಗದೆ ಮನೋನ್ಮಾದವಾಗಿ ಬೆಳೆಯುತ್ತಿದೆ. ಇಂಥ ಸಂದರ್ಭದಲ್ಲಿ ಎಡಪಂಥವನ್ನೂ ಒಳಗೊಂಡಂತೆ ಯಾವ ಪಂಥವೂ ಜಡಪಂಥವಾಗಬಾರದು. ನಮಗಿಂದು ಬೇಕಾದ್ದು ಕಂಠಪಾಠ ಒಪ್ಪಿಸುವ ಜಡಪಂಥೀಯತೆಯಲ್ಲ; ಸದಾ ಸೃಜನಶೀಲವಾಗಿರುವ ಜನಪಂಥೀಯತೆ. ಜನಪಂಥೀಯತೆಯಲ್ಲಿ ಜನರ ಒಳಿತೇ ಆದ್ಯತೆ, ಜನರಿಂದ ಜನರಿಗಾಗಿ, ಜನರಿಗೋಸ್ಕರ ಜನಪಂಥೀಯತೆ. ಇದೇ ಜನಪ್ರಭುತ್ವ. ಇಲ್ಲಿ ಜಾತಿವಾದವಿರಬಾರದು; ಮೂಲಭೂತವಾದವಿರಬಾರದು. ಪಂಥಪ್ರತಿಷ್ಠೆಯಿರಬಾರದು. ವಿವಿಧ ಪ್ರಗತಿಪರ ಪಂಥಗಳ ನಡುವೆ ಪ್ರೀತಿಸೇತುವಿರಬೇಕು.
ನನ್ನ ದೃಷ್ಟಿಯಲ್ಲಿ ಜನಪಂಥೀಯತೆಯೆನ್ನುವುದು ಸಾಮಾನ್ಯ ಜನರ ಸಮಾನ ವಿವೇಕವನ್ನು ಒಳಗೊಂಡಿರುತ್ತದೆ. ಈಗ ನೋಡಿ: ಗಾಂಧಿ- ಅಂಬೇಡ್ಕರ್ ನಡುವೆ ಭಿನ್ನಭಿಪ್ರಾಯಗಳಿದ್ದವು. ಗಾಂಧಿ-ಸುಭಾಷ್ಚಂದ್ರಬೋಸ್ರ ಸ್ವಾತಂತ್ರ್ಯ ಹೋರಾಟದ ಮಾದರಿ ಒಂದೇ ಅಲ್ಲ. ಬಾಲಗಂಗಾಧರ ತಿಲಕರ ರಾಷ್ಟ್ರೀಯತೆಯ ಹೋರಾಟದಲ್ಲಿ ಗಣೇಶೋತ್ಸವಗಳ ಬಳಕೆಯೂ ಒಂದಾಗಿತ್ತು. ಆದರೆ ಶ್ರೀರಾಮಭಕ್ತರಾದ ಗಾಂಧೀಜಿಯ ಹೋರಾಟಕ್ಕೆ ಶ್ರೀರಾಮ ಸಾಧನವಾಗಿರಲಿಲ್ಲ. ಇನ್ನು ಭಗತ್ಸಿಂಗ್ ಹೋರಾಟಕ್ಕೂ ಗಾಂಧೀಜಿಯವರ ಹೋರಾಟದ ದಾರಿಗೂ ಸಂಬಂಧವೇ ಇಲ್ಲ. ಇಷ್ಟಾದರೂ ನಮ್ಮ ಸಮಾಜದ ಬಹುಪಾಲು ಜನ ಸಾಮಾನ್ಯರು ಪರಸ್ಪರ ಭಿನ್ನನೆಲೆಯ ಈ ಸಾಧಕರನ್ನು ಸಮಾನವಾಗಿ ಗೌರವಿಸುತ್ತ ಬಂದಿದ್ದಾರೆ. ನಿರ್ದಿಷ್ಟ ಚಾರಿತ್ರಿಕ ಸಂದರ್ಭದ ಇವರ ಹೋರಾಟಗಳ ಹಿಂದಿನ ಪ್ರಾಮಾಣಿಕತೆಗೆ ಮನ್ನಣೆ ಕೊಟ್ಟಿದ್ದಾರೆ. ಬೌದ್ಧಿಕ ಭ್ರಮೆಯ ಕೆಲವರು ಈ ಸಾಧಕರನ್ನು ಪರಸ್ಪರ ಎದುರಾಳಿಗಳಾಗಿ ಕಟಕಟೆಯಲ್ಲಿ ನಿಲ್ಲಿಸಿದರೂ ನಿಜ ಬೌದ್ಧಿಕರು ವೈಚಾರಿಕ ವಿಶ್ಲೇಷಣೆ, ವಿಮರ್ಶೆಗಳಿಂದ ಅವರನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಅಂದು ಅವರೆಲ್ಲರೂ ತಾವು ನಂಬಿದ ನಿಲುವುಗಳಿಗೆ ಬದ್ದರಾಗಿ ಕ್ರಿಯಾಶೀಲರಾಗಿದ್ದ ಕಾಲ ನಿರ್ದಿಷ್ಟ ಚಾರಿತ್ರಿಕ ಸಂದರ್ಭ. ಇಂದಿನದು ನಿರ್ದಿಷ್ಟ ಚಾರಿತ್ರಿಕ ಅನಿವಾರ್ಯತೆ. ನಮ್ಮ ನಮ್ಮ ಸೈದ್ಧಾಂತಿಕ ಆಶಯಗಳನ್ನು ಬಿಡದೆಯೂ ಒಟ್ಟಾರೆ ಸಮಾನತೆಗಾಗಿ ಸೌಹಾರ್ದಕ್ಕಾಗಿ ಒಂದು ಒಕ್ಕೂಟ ವೇದಿಕೆಯಾಗುವುದು ಇಂದಿನ ಚಾರಿತ್ರಿಕ ಅನಿವಾರ್ಯತೆ. ಜನಪಂಥೀಯತೆಯು ಬಲಪಂಥೀಯತೆಯೊಂದಿಗಿನ ರಾಜಿಯಲ್ಲ. ಇದು ಪ್ರಗತಿಪರ ಪಂಥಗಳ ಸ್ವಯಂ ಪರಿವರ್ತನೆಯ ಪರಿಕಲ್ಪನೆ ಮತ್ತು ಪರಿಭಾಷೆ. ಜಡಪೊರೆ ಹರಿದು ಹೊಸರೂಪದಲ್ಲಿ ಬರಬೇಕಾದ ಭರವಸೆ. ಈಗ ಜನರ ಹಿತಕ್ಕಾಗಿ ತೊಡಗಿಸಿಕೊಳ್ಳುವ ಮತ್ತು ಜನರಲ್ಲಿ ಭರವಸೆ ಮೂಡಿಸುವ ಸಾಮಾನ್ಯ ಕನಿಷ್ಠ ಕಾರ್ಯಸೂಚಿಯ ಕ್ರಿಯಾತತ್ವವೇ ಜನಪಂಥಿಯತೆಯಾಗಿ ಹೊರಹೊಮ್ಮಬೇಕು. ಇಲ್ಲದಿದ್ದರೆ ಜನರ ವಿಶ್ವಾಸಾರ್ಹತೆಯಿಂದ ನಾವು ವಂಚಿತರಾಗುತ್ತೇವೆ.
ಹೌದು; ಇಂದು ಸಾಂಸ್ಕøತಿಕ ಕ್ಷೇತ್ರವನ್ನೂ ಒಳಗೊಂಡಂತೆ ಎಲ್ಲ ಕ್ಷೇತ್ರಗಳೂ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬಲುನಂಬುಗೆಯ ನ್ಯಾಯಾಂಗವೂ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಎದುರಿಸುತ್ತಿದೆಯೆಂದ ಮೇಲೆ ನಮ್ಮ ಸನ್ನಿವೇಶದ ಸಂಕೀರ್ಣತೆ ಅರ್ಥವಾಗುತ್ತದೆ. ಹಾಗಾದರೆ ಜನರು ಯಾರನ್ನು ನಂಬಬೇಕು? ನಮಗೆ ಎಂಥ ನಾಯಕತ್ವ ಬೇಕು? ಸದ್ಯದ ಸುಡುವಾಸ್ತವಗಳ ಸನ್ನಿವೇಶದ ನಡುವೆ ನಾವು ಉತ್ತರ ಹುಡುಕಬೇಕು. ಎಂಥ ನೋಟದ ನಾಯಕತ್ವ ಬೇಕೆಂದು ಕಂಡುಕೊಳ್ಳಬೇಕು. ನನಗನ್ನಿಸುತ್ತದೆ: ನಮಗೆ ಈಗ ನಿರ್ದಿಷ್ಟ ಜಾತಿಯೊಳಗಿದ್ದೂ ಜಾತಿಯನ್ನು ಮೀರಿದ ಸಾಮಾಜಿಕ ನಾಯಕತ್ವ ಬೇಕು. ನಿರ್ದಿಷ್ಟ ಧರ್ಮದೊಳಗಿದ್ದೂ ಧರ್ಮವನ್ನು ಮೀರಿದ ನೋಟವುಳ್ಳ ಸಾಮಾಜಿಕ ನಾಯಕತ್ವಬೇಕು. ನಿರ್ದಿಷ್ಟ ಪಕ್ಷದೊಳಗಿದ್ದೂ ಪಕ್ಷವನ್ನು ಮೀರಿದ ರಾಜಕೀಯ ನಾಯಕತ್ವ ಬೇಕು. ನಾಯಕರೊಡನಿದ್ದೂ ಮೀರುವ ಪ್ರತಿನಾಯಕರಾಗುವ ಸಾಂಸ್ಕøತಿಕ ನಾಯಕತ್ವ ಬೇಕು. ಆದರೆ ಇವತ್ತು ಜಾತಿನಾಯಕರೇ ಸಾಮಾಜಿಕ ನಾಯಕರಾಗುತ್ತಿದ್ದಾರೆ. ಪಕ್ಷ ಪಾತಾಳದಲ್ಲಿರುವವರೇ ರಾಜಕೀಯ ನಾಯಕರಾಗುತ್ತಿದ್ದಾರೆ. ಭಕ್ತಿ ಬಿಟ್ಟು ಬಂಡವಾಳವುಳ್ಳ ಮಠೀಯತೆಯ ಮುಂದಾಳುಗಳೇ ಧಾರ್ಮಿಕ ನಾಯಕರಾಗುತ್ತಿದ್ದಾರೆ. ನಿಜ, ಜಾತಿ, ಧರ್ಮ, ಪಕ್ಷ ಇಂದಿನ ವಾಸ್ತವ. ಆದರೆ ಅಲ್ಲಿದ್ದೂ ಅದನ್ನು ಮೀರಿದ ನೋಟ ಪಡೆಯುವವರದೇ ಅತ್ಯುತ್ತಮ ನಾಯಕತ್ವ. ಓಟು ಮತ್ತು ನೋಟುಗಳ ಸುತ್ತ ರಾಜಕೀಯ ತಂತ್ರ ಹೆಣೆಯುವುದೇ ನಾಯಕತ್ವ ಅಲ್ಲ. ಆದ್ದರಿಂದ ನಮ್ಮ ಜನರು ಕೇಳಿಕೊಳ್ಳಬೇಕು; ನಮಗೆ ನೋಟು ಬದಲಿಸುವ ಭಾರತ ಬೇಕೊ? ನೋಟ ಬದಲಿಸುವ ಭಾರತಬೇಕೊ?
ಇಂದು ಸಾಹಿತ್ಯ ಕ್ಷೇತ್ರವೂ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿರವುದರಿಂದ ನಾವು ನಮ್ಮ ನೋಟವನ್ನು ಶುದ್ಧವಾಗಿ ಬದ್ಧವಾಗಿ ಬೆಳೆಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಜನರು ನಮ್ಮನ್ನೂ ನಂಬುವುದಿಲ್ಲ. ಸಾಹಿತ್ಯಾದಿ ಸಾಂಸ್ಕøತಿಕ ಕ್ಷೇತ್ರ ವಿಶಾಲ ವ್ಯಾಪ್ತಿಯ ಜನಪಂಥೀಯತೆಯನ್ನು ಒಳಗೊಂಡ ಅಂತಃಕರಣವಾಗಬೇಕು. ಆಗ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಜನರ ಸ್ವಾತಂತ್ರ್ಯ ಎರಡನ್ನೂ ಒಳಗೊಳ್ಳಲು ಸಾಧ್ಯವಾಗುತ್ತದೆ.
ನಮ್ಮ ಹೋರಾಟಗಳಿಗೂ ವಿಶ್ವಾಸಾರ್ಹತೆಯ ಬಿಕ್ಕಟ್ಟು ಬಡಿದಿದೆ. ಸೈದ್ಧಾಂತಿಕ ಬದ್ಧತೆಯ ಬಡತನ ಮತ್ತು ತಾತ್ಕಾಲಿಕ ಲಾಭದ ನೋಟಗಳು ಬಹುಪಾಲು ಹೋರಾಟಗಳ ವಿಶ್ವಾಸಾರ್ಹತೆಯ ಬಿಕ್ಕಟ್ಟಿನ ಮೂಲ. ಅಲ್ಲದೆ ವೈಯಕ್ತಿಕ ಕಾರಣಗಳ ಜೊತೆಗೆ ಚಾರಿತ್ರಿಕ ಕಾರಣಗಳನ್ನೂ ಗಮನಿಸಬೇಕು. ಇಪ್ಪತ್ತನೆಯ ಶತಮಾನ- ಪ್ರಧಾನವಾಗಿ ಸಂಘಟನೆಯ ಶತಮಾನ; ಇಪ್ಪತ್ತೊಂದನೆಯ ಶತಮಾನ ವಿಘಟನೆಯ ಶತಮಾನ. ಸಂಘಟನೆಯೆಂದರೆ ಸಮೂಹ ಪ್ರಜ್ಞೆ; ವಿಘಟನೆಯೆಂದರೆ ವ್ಯಕ್ತಿಪ್ರಜ್ಞೆ. ಸಮೂಹಪ್ರಜ್ಞೆಯಲ್ಲಿ ಸಾಮುದಾಯಿಕ ಸ್ವಾಭಿಮಾನ. ವ್ಯಕ್ತಿಪ್ರಜ್ಞೆಯಲ್ಲಿ ಸ್ವಕೇಂದ್ರಿತ ಸ್ವಾರ್ಥಮಾನ. ಈ ಚಾರಿತ್ರಿಕ ಸಂದರ್ಭದ ವೈರುಧ್ಯದಲ್ಲಿ ಹೋರಾಟಗಳೂ ಹೋರಾಟಗಾರರೂ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಎದುರಿಸುತ್ತಿದ್ದಾರೆ. ಈ ಪ್ರಶ್ನೆಗೆ ಹೊರತಾದ ಹೋರಾಟಗಳೂ ಹೋರಾಟಗಾರರೂ ಇದ್ದಾರೆಂಬುದನ್ನು ನಾವಿಲ್ಲಿ ಮರೆಯಬಾರದು. ನಾನು ಯಾವತ್ತೂ ಯಾವುದೇ ಹೋರಾಟಗಾರರ ಕ್ರಿಯಾಶೀಲತೆಯ ಪರ. ಯಾಕೆಂದರೆ ಹೋರಾಟಗಳೇ ಇಲ್ಲದಿದ್ದರೆ ನಮ್ಮ ನಾಡಿನ ಸ್ಥಿತಿ ಏನಾಗುತ್ತಿತ್ತೆಂದು ಯೋಚಿಸಿ. ಹೇಳುವವರು ಕೇಳುವವರು ಇರುತ್ತಲೇ ಇರಲಿಲ್ಲ. ನಿಜ, ನಮ್ಮ ಕೆಲವು ಹೋರಾಟಗಾರರಲ್ಲಿ ಸೈದ್ಧಾಂತಿಕ ಸ್ಪಷ್ಟತೆಯಿಲ್ಲ. ಕೆಲವೊಮ್ಮೆ ಹೋಗುವ ದಾರಿ ಸರಿ ಇಲ್ಲ. ಇಂಥ ಆಕ್ಷೇಪವನ್ನು ವಿಶೇಷವಾಗಿ ಕನ್ನಡಪರ ಹೋರಾಟಗಾರರಿಗೆ ಅನ್ವಯಿಸಲಾಗುತ್ತಿದೆ. ಈ ಆಕ್ಷೇಪದಲ್ಲಿ ಸ್ವಲ್ಪ ಸತ್ಯವಿದ್ದರೂ ಕನ್ನಡ ಹೋರಾಟಗಾರರು ಮಾತ್ರವೇ ಈ ಸನ್ನಿವೇಶಕ್ಕೆ ಕಾರಣರಲ್ಲ. ಎಷ್ಟು ಜನ ಚಿಂತಕರೂ ಸಾಹಿತಿಗಳೂ ಈ ಕನ್ನಡ ಹೋರಾಟಗಾರರ ವೇದಿಕೆಗಳ ಭಾಗವಾಗಿದ್ದಾರೆ? ಎಷ್ಟು ಜನ ಸ್ನೇಹಪರವಾಗಿಯಾದರೂ ಸಂವಾದಿಸಿದ್ದಾರೆ? ಎಷ್ಟು ಜನ ನಿಮ್ಮದು ತಪ್ಪು ತಿದ್ದಿಕೊಳ್ಳಿ ಎಂದು ತಿಳಿಹೇಳಿದ್ದಾರೆ? ಎಲ್ಲೊ ಕೆಲವರನ್ನು ಬಿಟ್ಟರೆ ಅನೇಕರು ದೂರ ಇದ್ದಾರೆ ಅಥವಾ ದೂರ ಇಡಲ್ಪಟ್ಟಿದ್ದಾರೆ. ಆದ್ದರಿಂದ ಕನ್ನಡದ ಚಾರಿತ್ರಿಕ ಸಂದರ್ಭದಲ್ಲಿ ನಮ್ಮನ್ನು ನಾವೂ ಕೇಳಿಕೊಳ್ಳಬೇಕಾಗಿದೆ. ಕನ್ನಡ ಚಳುವಳಿಗಾರರು ಮತ್ತು ಕನ್ನಡಪರ ಚಿಂತಕರ ನಡುವಿನ ಕಂದಕವನ್ನು ತ್ವರಿತಗತಿಯಲ್ಲಿ ಮುಚ್ಚಬೇಕಾಗಿದೆ. ತಮಿಳುನಾಡು, ಆಂದ್ರ, ಕೇರಳ ಮುಂತಾದ ರಾಜ್ಯಗಳಲ್ಲಿ ಈ ಕಂದಕ ಇರಲಿಲ್ಲ. ಭಾಷಾ ಚಳುವಳಿ, ಸಮೂಹ ಚಳವಳಿ ಮತ್ತು ಸಂಬಂಧಿಸಿದ ಚಿಂತಕರ ಸಮನ್ವಯ ಇತ್ತು. ಅಲ್ಲೆಲ್ಲೂ ಭಾಷಾ ಚಳವಳಿ ಪ್ರತ್ಯೇಕವಾಗಿರಲಿಲ್ಲ. ಕರ್ನಾಟಕದಲ್ಲಿ ಭಾಷಾಚಳುವಳಿ ಮತ್ತು ಸಮೂಹ ಚಳವಳಿ (ಕಾರ್ಮಿಕ-ರೈತ – ಮುಂತಾದ ಚಳವಳಿ)ಗಳ ನಡುವೆ ಮೊದಲಿಂದ ಕಂದಕ ಇತ್ತು.
ನನಗನ್ನಿಸುತ್ತಿದೆ: ಇದು ಕಂದಕಗಳ ಕಾಲ. ಈಗಾಗಲೇ ತಿಳಿಸಿದಂತೆ ಭಾಷಾಚಳವಳಿ ಸಮೂಹ ಚಳವಳಿ ಮತ್ತು ಚಿಂತಕರ ನಡುವೆ ಕಂದಕವಿದೆ. ಭಾಷೆ ಮತ್ತು ಬದುಕಿನ ನಡುವೆ ಕಂದಕವಿದೆ. ಆಕಾಶದ ಆರ್ಥಿಕ ತಜ್ಞರು ಮತ್ತು ಭೂಮಿ ಬಡವರ ನಡುವೆ ಕಂದಕವಿದೆ. ಬೌದ್ಧಿಕ ಕಲಾತಜ್ಞರು ಮತ್ತು ಜನ ಸಾಮಾನ್ಯರ ನಡುವೆ ಕಂದಕವಿದೆ. ಶಿಕ್ಷಣೋದ್ಯಮಿಗಳು ಮತ್ತು ಶಿಕ್ಷಣದ ನಡುವೆ ಕಂದಕವಿದೆ. ಪರಿಸರ ಪ್ರೇಮಿಗಳು ಮತ್ತು ಅಭಿವೃದ್ಧಿಯ ನಡುವೆ ಕಂದಕವಿದೆ. ಹಳ್ಳಿ ನಗರಗಳ ನಡುವೆ ಕಂದಕವಿದೆ. ಬಡವÀ ಬಲ್ಲಿದರ ನಡುವೆ ಕಂದಕದ ಚರಿತ್ರೆಯೇ ಇದೆ. ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ಕಂದಕವಿದೆ. ಅಷ್ಟೇ ಅಲ್ಲ ನಿರ್ದಿಷ್ಟ ಜಾತಿಯೊಳಗೇ ಧರ್ಮದೊಳಗೆ ಕಂದಕಗಳಿವೆ. ಕಡೆಗೆ ಮನುಷ್ಯ ಮನುಷ್ಯರ ನಡುವೆ ಮತ್ತು ಮನುಷ್ಯ ಮನಸ್ಸಿನೊಳಗೇ ಕಂದಕಗಳಿವೆ. ಲೆಕ್ಕವಿಲ್ಲದಷ್ಟು ಕಂದಕಗಳ ನಡುವೆ ನಮ್ಮ ಬಹುಪಾಲು ಸಾಮಾಜಿಕ ಬದುಕು ಸಂಕಟ ಪಡುತ್ತಿದೆ; ಕುಂಟು ನೋಟದ ನಡಿಗೆಯಲ್ಲಿ ನರಳುತ್ತಿದೆ. ಇಂಥ ಸಂದರ್ಭದಲ್ಲಿ ನಾವು ನಾಗರವಾಗದ ನಾಲಗೆಯಾಗಬೇಕು. ನಾಲಗೆಯು ನೆಲದ ನುಡಿಯಾಗಬೇಕು. ನುಡಿಯು ಬತ್ತದ ಬೆಳಕಾಗಬೇಕು. ನಾವು ಜಾತಿ, ಮತ, ಧರ್ಮಗಳ ದ್ವೀಪಗಳನ್ನು ದಾಟಬೇಕು. ಕಂದಕಗಳನ್ನು ಮುಚ್ಚಬೇಕು. ಈ ಕಂದಕ ಮುಚ್ಚುವ ಕಾಯಕದಲ್ಲಿ ಸಾಹಿತಿಗಳ ಪಾತ್ರ ದೊಡ್ಡದಾಗಬೇಕು. ಮನುಷ್ಯ ಬದುಕಿನ ಶೋಧಾಭಿವ್ಯಕ್ತಿಗೆ ತೊಡಗುವ ಸಾಹಿತ್ಯ ಸ್ವತಃ ಮನುಷ್ಯ ರೂಪಕವಾಗಬೇಕು.
ಕರ್ನಾಟಕದ ತಾಯೀಕರಣ
ಆದರೆ ಇವತ್ತು ಮನುಷ್ಯರ ಸ್ಥಿತಿ ಹೇಗಾಗಿದೆ ಎಂಬುದÀನ್ನಿಲ್ಲಿ ನೋಡಿ: ಕೋಮುಘರ್ಷಣೆ ನಡೆದ ಪ್ರದೇಶದ ಪರಿಶೀಲನೆಗೆ ಒಂದು ಸಮಿತಿ ಹೋಗಿದೆ. ಅವರು ಪರಿಶೀಲನೆಯ ನಂತರ ವಿಷಾದದಿಂದ ನುಡಿಯುತ್ತಾರೆ: ‘ಇಲ್ಲಿ ೧0 ಜನ ಮುಸ್ಲಿಮರು ಸತ್ತರು. ೧0 ಜನ ಹಿಂದೂಗಳು ಸತ್ತರು. ೫ಜನ ಕ್ರೈಸ್ತರು ಸತ್ತರು ಎಂದೆಲ್ಲ ಲೆಕ್ಕಕೊಟ್ಟರು. ಆದರೆ ಯಾರೊಬ್ಬರೂ ಎಷ್ಟು ಜನ ಮನುಷ್ಯರು ಸತ್ತರು ಅಂತ ಲೆಕ್ಕ ಕೊಡಲಿಲ್ಲ’ ಇದು ಸಮಿತಿಯವರ ವಿಷಾದದ ನುಡಿ. ಧ್ವನ್ಯತ್ಮಾಕ ಮಾತು. ಇತ್ತೀಚೆಗೆ ಇನ್ನೊಂದು ಪ್ರವೃತ್ತಿ ಬೆಳೆಯುತ್ತಿದೆ. ಪ್ರಾಣಕ್ಕೂ ಪಕ್ಷದಪಟ್ಟಿ ಅಂಟಿಸಲಾಗುತ್ತಿದೆ. ಮನುಷ್ಯರ ಪ್ರಾಣಗಳೂ ಈ ಪಕ್ಷಗಳಾಗಿ ವಿಂಗಡಿತವಾಗುತ್ತಿವೆ. ಇಲ್ಲಿಯೂ ಮನುಷ್ಯರ ಲೆಕ್ಕ ಇಡುತ್ತಿಲ್ಲ.
ನಾವು ತಿಳಿಯಬೇಕು: ಮನುಷ್ಯರ ಲೆಕ್ಕಕೊಡುವುದು ಸಾಹಿತ್ಯದ ಕೆಲಸ. ಧರ್ಮವು ಶಾಸ್ತ್ರ ಮತ್ತು ಶಸ್ತ್ರ ಎರಡೂ ಆಗಬಾರದು ಎಂದು ಸಾಹಿತ್ಯ ಹೇಳಬೇಕು. ಸಾಹಿತ್ಯಕ್ಕೆ ತಾನು ಕಂಡ ಸತ್ಯವನ್ನು ಹೇಳುವ ಸಂವೇದನಾ ಸ್ಥೈರ್ಯ ಬೇಕು. ಸಾಹಿತಿಗಳು ಜನಪರಂಪರೆಯ ಪಾಲುದಾರರಾಗಬೇಕು.
ನನ್ನ ನೋಟದ ಪ್ರಕಾರ ಸಾಹಿತ್ಯ ಕ್ಷೇತ್ರದಲ್ಲಿ ಮೂರು ಪರಂಪರೆಗಳಿವೆ.
೧. ಋಷಿ ಪರಂಪರೆ
೨. ಜಗದ್ಗುರು ಪರಂಪರೆ
೩. ಜನಪರಂಪರೆ.
ಋಷಿ ಪರಂಪರೆಗೆ ಸಾಹಿತ್ಯವೂ ಒಂದು ತಪಸ್ಸು. ತನ್ನ ಮೂಲತಪಸ್ಸಿನೊಳಗಿನ ತಪಸ್ಸು. ದೈವ ಸಾಕ್ಷಾತ್ಕಾರಕ್ಕಾಗಿ ಕಣ್ಮುಚ್ಚಿ ಕೂತು ಮಾಡುವ ತಪಸ್ಸಿನಂತೆಯೇ ಅನುಭವಗಳನ್ನು ಧ್ಯಾನಸ್ಥಿತಿಗೆ ತಂದುಕೊಂಡು ಕ್ರೋಡೀಕರಿಸಿ ಅಭಿವ್ಯಕ್ತಿಸುವುದು ಋಷಿಪರಂಪರೆ. ಇಲ್ಲಿ ಅಭಿವ್ಯಕ್ತಿಯೆನ್ನುವುದು ಧ್ಯಾನದ ಫಲರೂಪ. ತನ್ನಲ್ಲಿ ತಾನು ತನ್ಮಯಾಗುವ ಋಷಿಪರಂಪರೆಯಿಂದ ರಾಮಾಯಣ ಮಹಾಭಾರತದಂತಹ ಪುರಾಣ ಮಹಾಕಾವ್ಯಗಳು ರೂಪುಗೊಂಡಿದೆ. ಬದುಕಿನ ಬಹುರೂಪಗಳ ಕಟ್ಟು ಈ ಪುರಾಣ ಕಾವ್ಯಗಳು. ‘ರಾಮಾಯಣ’ ಬರೆದ ವಾಲ್ಮೀಕಿ ಬುಡಕಟ್ಟಿನ ಮಹಾಪ್ರತಿಭೆ. ‘ಮಹಾಭಾರತ’ ಬರೆದ ವ್ಯಾಸ ಹಿಂದುಳಿದ ವಲಯದ ಮಹಾಪ್ರತಿಭೆ. ಮೂಲ ಪುರಾಣ ಕಾವ್ಯಗಳು ಬೆಳೆಯುತ್ತ ಬದುಕುತ್ತಾ ಇಂದಿನವರೆಗೆ ಬಂದಿವೆ. ಅನೇಕ ಕವಿಗಳಿಂದ ಪುನರ್ಸೃಷ್ಟಿ ಹೊಂದಿವೆ.
ವಿಷಾದಕರ ಅಂಶವೆಂದರೆ, ಋಷಿ ಪರಂಪರೆಯ ಈ ಮಹಾಕಾವ್ಯಗಳು ಜಗದ್ಗುರು ಪರಂಪರೆಯ ಸಾಂಸ್ಕøತಿಕ ಸರಕಾಗಿ ಪರಿಣಮಿಸಿವೆ. ಹೇಳಿ ಕೇಳಿ ಜಗದ್ಗುರು ಪರಂಪರೆಗೆ ಧಾನಸ್ಥ ತನ್ಮಯತೆ ಮುಖ್ಯವಲ್ಲ. ತನ್ನೆದುರು ಇರುವವರಿಗೆ ಉಪದೇಶಕೊಡುವುದು ಮುಖ್ಯ. ಅದೂ ಅಧಿಕಾರಯುತ ಉಪದೇಶ! ತಾನು ಹೇಳುವ ಮಾತು ತನಗೂ ಹೇಳಿಕೊಳ್ಳುವಮಾತು. ಎಂದು ಜಗದ್ಗುರು ಪರಂಪರೆ ಭಾವಿಸುವುದಿಲ್ಲ. ಯಾಕೆಂದರೆ ಇದು ಪೀಠ ಪರಂಪರೆ.
ಈ ಜಗದ್ಗುರು ಪರಂಪರೆಯವರು ರಾಮಾಯಣ, ಮಹಾಭಾರತಗಳನ್ನು ಪುಣ್ಯಕೃತಿಗಳೆಂದೂ ಧರ್ಮಗ್ರಂಥಗಳೆಂದೂ ತಿಳಿದು, ತಿಳಿಯುವಂತೆ ಮಾಡಿ, ಗರ್ಭಗುಡಿಯಲ್ಲಿಟ್ಟರು. ಪುರಾಣವನ್ನು ಚರಿತ್ರೆಯಾಗಿಸಿದರು; ಚರಿತ್ರೆಯನ್ನು ಪುರಾಣವಾಗಿಸಿದರು. ಪಾತ್ರಗಳನ್ನು ದೈವೀಕರಣಗೊಳಿಸಿದರು; ಮಾನವೀಕರಣವನ್ನು ಮೂಲೆಗೆ ತಳ್ಳಿದರು. ‘ಗರ್ಭಗುಡಿ ವಿಮರ್ಶಕ’ರಾದರು. ಇವರನ್ನು ವಿರೋಧಿಸುವ ಭರದಲ್ಲಿ ನಮ್ಮ ಕೆಲವು ಪ್ರಗತಿಪರರು ಗರ್ಭಗುಡಿ ವಿಮರ್ಶಕರು ತೋಡಿದ ಖೆಡ್ಡಾಕ್ಕೇ ಬಿದ್ದರು. ಗರ್ಭಗುಡಿ ವಿಮರ್ಶಕರು ಒಂದು ಪಾತ್ರ, ಒಂದು ಸನ್ನಿವೇಶವೆಂಬ ನೆಲೆಯಲ್ಲಿ ವ್ಯಾಖ್ಯಾನಿಸಿ ಕಾವ್ಯವನ್ನು ಇಡಿಯಾಗಿ ವಿಶ್ಲೇಷಿಸುವ ವಿಧಾನಕ್ಕೆ ವಂಚನೆ ಮಾಡಿದಂತೆ, ಈ ಕೆಲವು ಪ್ರಗತಿಪರರು, ಒಂದು ಪಾತ್ರ, ಒಂದು ಸನ್ನಿವೇಶಕ್ಕೆ ಕಟ್ಟು ಬಿದ್ದು ವಿಮರ್ಶಿಸತೊಡಗಿದರು. ಪುರಾಣಶಾಸ್ತ್ರ ಬೇರೆ, ಪುರಾಣಕಾವ್ಯ ಬೇರೆ ಎಂಬ ಸಾಮಾನ್ಯ ಸಾಹಿತ್ಯ ವಿವೇಕದಿಂದಲೂ ವಂಚಿತರಾದರು. ಶಾಸ್ತ್ರವೆಂಬುದು ವಾಚ್ಯ, ಕಾವ್ಯವೆಂಬುದು ಧ್ವನಿ ಎಂಬುದನ್ನು ಇಬ್ಬರೂ ಮರೆತರು. ಸನಾತನಿ ಜಗದ್ಗುರು ಪರಂಪರೆಯವರು ಶ್ರೀ ರಾಮನನ್ನು ದೇವರು ಎಂದರೆ ಈ ಎದುರಾಳಿ ವಿಮರ್ಶಕರು ‘ಶ್ರೀರಾಮಕೊಲೆಗಡುಕ, ಪತ್ನಿ ಪೀಡಕ’ ಎಂದರು. ಅವರು ಶ್ರೀ ಕೃಷ್ಣನನ್ನು ದೈವ ಎಂದರೆ ಇವರು ವ್ಯಭಿಚಾರಿ ಎಂದರು. ‘ಅವರು’ ಪಾಂಡವರನ್ನು ನೀತಿನಿಷ್ಠರೆಂದರೆ ‘ಇವರು’ ಹಾದರಕ್ಕೆ ಹುಟ್ಟಿದವರು ಎಂದರು. ಪುರಾಣಕಾವ್ಯಗಳನ್ನು ಸಾಂಸ್ಕøತಿಕವಾಗಿ ಮಾನವಿಕ ರಾಜಕೀಯವಾಗಿ ಬಹುಮುಖಿ ನೋಟದಿಂದ ಇಡಿಯಾಗಿ ವಿಶ್ಲೇಷಿಸುವ ವಿಧಾನ, ವಿಚಾರ, ಇಬ್ಬರಲ್ಲೂ ಇರಲಿಲ್ಲ. ಹೀಗಾಗಿ ಜಗದ್ಗುರು ಪರಂಪರೆಯದು ‘ಗರ್ಭಗುಡಿ ವಿಮರ್ಶೆ’ ಯಾಯಿತು. ಪ್ರಗತಿಪರರೆಂಬ ಕೆಲವು ಎದುರಾಳಿಗಳದು ‘ಗರ್ಭಪಾತ ವಿಮರ್ಶೆ’ ಯಾಯಿತು. ಇಬ್ಬರಲ್ಲೂ ಕಾವ್ಯವಿಮರ್ಶೆಯ ಪ್ರಥಮ ಪಾಠ ಮರೆಯಾಯಿತು. ನಾವಿರುವುದೇ ಹೇಳುವುದಕ್ಕೆ ಕೇಳುವುದಕ್ಕಲ್ಲ ಎಂಬ ಜಗದ್ಗುರು ಪರಂಪರೆ ಇಬ್ಬರಲ್ಲೂ ಪ್ರಕಟವಾಯಿತು. ಇದು ಒಬ್ಬರೊ ಇಬ್ಬರೊ ವ್ಯಕ್ತಿಗಳನ್ನು ಗುರಿಯಾಗಿಟ್ಟುಕೊಂಡ ಮಾತಲ್ಲ. ಇದು ಎಲ್ಲ ಪ್ರಗತಿಪರರನ್ನು ಕುರಿತು ಮಾತಂತೂ ಅಲ್ಲವೇ ಅಲ್ಲ. ಎಲ್ಲ ಸಂಪ್ರದಾಯಸ್ಥರನ್ನು ಕುರಿತ ಟೀಕೆಯೂ ಅಲ್ಲ. ಜಗದ್ಗುರು ಪರಂಪರೆಯೆಂಬ ಉಪದೇಶಾತ್ಮಕ ಮನೋಧರ್ಮಕ್ಕೆ ಸಂಬಂಧಿಸಿದ ಒಟ್ಟಾರೆ ಮಾತು.
ಇವತ್ತು ನಮಗೆ ಬೇಕಾದ್ದು ಜನಪರಂಪರೆ. ಜನಪರಂಪೆಯು ಕೇವಲ ಹೇಳುವುದಕ್ಕೆ ಇರುವುದಿಲ್ಲ. ತಾನು ಹೇಳುವ ಮಾತು ತನಗೂ ಹೇಳಿಕೊಂಡ ಮಾತು ಎಂದು ಭಾವಿಸುತ್ತದೆ. ಅಂದರೆ ಸಾಹಿತ್ಯಾದಿ ಕಲೆಗಳನ್ನು ಋಷಿಪರಂಪರೆಯ ಧ್ಯಾನಸ್ಥ ಸ್ಥಿತಿಯಿಂದ ಜನಸ್ಥ ಸ್ಥಿತಿಗೆ ತರುತ್ತದೆ. ಅಂತರಂಗ ಬಹಿರಂಗಗಳನ್ನು ಬೆಸೆಯುತ್ತದೆ. ಒಳ ಹೊರಗಿನ ಅನುಸಂಧಾನವಾಗುತ್ತದೆ. ಅಗತ್ಯವಿದ್ದಾಗ ಮುಖಾಮುಖಿಗೆ ಮುಂದಾಗುತ್ತದೆ. ಇಂಥ ಜನಪರಂಪರೆಗೆ ಕನ್ನಡ ಸಾಹಿತ್ಯದಲ್ಲಿ ಪ್ರ್ರಾಚೀನದಿಂದ ಆಧುನಿಕ ಸಂದರ್ಭದವರೆಗೂ ಸಾಕ್ಷಿರೂಪಗಳಿವೆ. ನಮ್ಮ ಎಲ್ಲ ಸಾಹಿತ್ಯಧಾರೆಗಳು ಜನಪರಂಪರೆಯನ್ನು ಒಂದು ಭಾಗವಾಗಿ ಒಳಗೊಂಡರೆ, ಪ್ರಗತಿ ಶೀಲ ಮತ್ತು ದಲಿತ – ಬಂಡಾಯ ಸಾಹಿತ್ಯವು ಸಮಗ್ರವಾಗಿ ಜನಪರಂಪರೆಯೇ ಆಗಲು ಪ್ರಯತ್ನಿಸಿದೆ.
ಇಂದಿನ ಸಂದರ್ಭದಲ್ಲಿ ನಮ್ಮ ಸಾಹಿತ್ಯವು ಮತ್ತೊಮ್ಮೆ ಜನಪರಂಪರೆಯನ್ನು ಪ್ರಧಾನ ಗುಣ ಲಕ್ಷಣವಾಗಿಸಿಕೊಳ್ಳಬೇಕಾಗಿದೆ. ಜನ ಸಾಮಾನ್ಯರ ಸಂಕಷ್ಟದ ಕಾಲವಿದು. ರೈತರು, ಮಹಿಳೆಯರು, ದಲಿತರು, ಕಾರ್ಮಿಕರು, ಎಲ್ಲ ಬಡವರು ವಿವಿಧ ಪ್ರಮಾಣದ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಭಯೋತ್ಪಾದನೆ, ಯುದ್ಧೋತ್ಪಾದನೆಗಳಷ್ಟೇ ಹಿಂಸೆಯಾಗದೆ ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೇ ಹಿಂಸೆ ಅಂತರ್ಗತವಾಗಿ ಬಿಟ್ಟಿದೆ. ವ್ಯವಸ್ಥೆಯೊಳಗಿನ ಹಿಂಸೆಯು ಜಾತಿಯಾಗಿ, ವರ್ಣವಾಗಿ, ವರ್ಗವಾಗಿ ಲಿಂಗವಾಗಿ ಅಂಗಾಂಗಗಳನ್ನೂ ಅಣ್ವಸ್ತ್ರವಾಗಿಸಿ ಬಿಟ್ಟಿದೆ. ಆದ್ದರಿಂದ ಇಂದು ಸಾಮಾಜಿಕ ಆರ್ಥಿಕ ವ್ಯವಸ್ಥೆಯಿಂದ ವಿಮೋಚನೆಗೊಳಿಸಲು ಹೊಸ ಪರ್ಯಾಯಗಳೂ ಬೇಕಾಗಿವೆ ನನಗನ್ನಿಸುತ್ತದೆ. – ತಾಯ್ತನ ಈಗ ನಮ್ಮ ಪ್ರತೀಕವಾಗಬೇಕು. ತಾಯಿಗೆ ತನ್ನ ಮಕ್ಕಳೆಲ್ಲರೂ ಸಮಾನ. ಗಂಡಾಗಲಿ ಹೆಣ್ಣಾಗಲಿ, ಹಿರಿಯರಾಗಲಿ ಕಿರಿಯರಾಗಲಿ ಭೇದ ಭಾವವಿಲ್ಲದ ಒಂದೇ ಮನೋಭಾವ ಮನೆಯ ಪಡಸಾಲೆ, ಹಜಾರ, ಅಡುಗೆಮನೆ ಬಚ್ಚಲು, ಹಿತ್ತಲು-ಎಲ್ಲ ಪ್ರದೇಶಗಳ ಬಗ್ಗೆಯೂ ತಾಯಿಯದು ಸಮಾನ ದೃಷ್ಟಿ. ಆದ್ದರಿಂದ ನಮ್ಮ ಸಮಾಜಕ್ಕೆ ತಾಯ್ತನ ಬೇಕು. ಸರ್ಕಾರಕ್ಕೆ ತಾಯ್ತನ ಬೇಕು. ಸಾಹಿತ್ಯ – ಸಂಸ್ಕøತಿಗೆ ತಾಯ್ತನ ಬೇಕು. ನಾವೆಲ್ಲ ತಾಯೀಕರಣಗೊಳ್ಳಬೇಕು. ತಾಯಿಯೆಂದರೆ ಮಮತೆ ಮತ್ತು ಸಮತೆ. ಈ ಸಮತಾಮಯಿ ತಾಯಿ ಸಂಕಟಪಡುತ್ತಾಳೆ; ಸಂತಳಾಗುತ್ತಾಳೆ; ಸಿಟ್ಟಾಗುತ್ತಾಳೆ; ಸ್ಫೋಟಿಸುತ್ತಾಳೆ. ಅಂತಃಕರಣವಾಗುತ್ತಾಳೆ. ಜಾತೀಕರಣ ಮತ್ತು ಜಾಗತೀಕರಣಕ್ಕೆ ಎದುರಾಗುವ ‘ತಾಯೀಕರಣ’ವಾಗುತ್ತಾಳೆ. ನನಗೀಗ ಖಲೀಲ್ ಜಿಬ್ರಾನ್ ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ. ಆತ ಹೇಳಿದ: ‘ನನ್ನ ತಾಯಿ ಒಂದೂ ಕವಿತೆಯನ್ನು ಬರೆಯಲಿಲ್ಲ. ಆದರೆ ನೂರಾರು ಕವಿತೆಗಳನ್ನು ಬದುಕಿದಳು. ನಿಜ, ನಮ್ಮಲ್ಲೂ ಬರೆಯದ ಬರಹಗಾರರಿದ್ದಾರೆ. ನರ್ತಿಸದ ನೃತ್ಯಗಾರರಿದ್ದಾರೆ. ಹಾಡದ ಹಾಡುಗಾರರಿದ್ದಾರೆ; ಅಭಿನಯಿಸದ ಕಲಾವಿದರಿದ್ದಾರೆ. ಆದರೆ ಇವರೆಲ್ಲ ನೂರಾರು ಕವಿತೆಗಳನ್ನು ಬದುಕುತ್ತಿದ್ದಾರೆ.
ಸಾಂಸ್ಕøತಿಕ ಕ್ಷೇತ್ರದ ನಾವು ನೂರಾರು ಕವಿತೆಗಳನ್ನು ಬದುಕುವ ಈ ಭಾವ ಬಂಧುಗಳನ್ನು ಬದುಕಿಸಿಕೊಳ್ಳಬೇಕು. ಸಾವಿರಾರು ಕವಿತೆಗಳನ್ನು ಬದುಕುವ ಕರ್ನಾಟಕವನ್ನು ಕಟ್ಟಬೇಕು; ಕರ್ನಾಟಕ ತಾಯೀಕರಣಗೊಳ್ಳಬೇಕು. ಕನ್ನಡ ಸಂವೇದನೆಯಲ್ಲಿ ಸಮತೆಯ ಸಾಮಾಜಿಕ ಆಯಾಮ ಸದಾ ಇರಬೇಕು. ತಾಯೀಕರಣಗೊಂಡ ಸಮತೆಯ ಕರ್ನಾಟಕ ನಮ್ಮದಾಗಬೇಕು.
* * *
(ವಿ.ಸೂ: ಈ ಮಾತುಗಳು ನಿಮಗೆ ಹೇಳಿದ ಮಾತುಗಳು ಮಾತ್ರವಲ್ಲ. ನನಗೆ ನಾನೇ ಹೇಳಿಕೊಂಡ ಮಾತುಗಳೂ ಹೌದು.
ನನ್ನ ಈ ಭಾಷಣದಲ್ಲಿ ಉಲ್ಲೇಖಿಸಿರುವ ಬರಹಗಾರರು ಸಾಂಕೇತಿಕ. ಉಲ್ಲೇಖ ಮಾಡದೆ ಇರುವ ಇದೇ ಆಶಯದ ಅನೇಕ ಬರಹಗಾರರಿದ್ದಾರೆ. ನಾನು ಪ್ರಸ್ತಾಪಿಸಿದ ವಿಷಯಗಳಿಗೆ ಸಾಹಿತ್ಯದ ಸಂಬಂಧವಿರಬೇಕು ಎಂಬ ಉದ್ದೇಶದಿಂದ ಕೆಲವರನ್ನು ಸಾಂಕೇತಿಕವಾಗಿ ಹೆಸರಿಸಿದ್ದೇನೆ. ಉದ್ದೇಶಪೂರ್ವಕವಾಗಿ ಯಾರನ್ನೂ ಬಿಟ್ಟಿಲ್ಲ.)
Tag: Baraguru Ramachandrappa, 82ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, Baragur Ramachandrappa, 82 Sahitya Sammelana
ಸಮ್ಮೇಳನಾಧ್ಯಕ್ಷರು : ಸಿದ್ದಲಿಂಗಯ್ಯ
ಕವಿ, ಕನ್ನಡ ಪ್ರಾಧ್ಯಾಪಕ ಡಾ. ಸಿದ್ಧಲಿಂಗಯ್ಯನವರು ಹೋರಾಟಗಾರರೂ ಆಗಿದ್ದಾರೆ. ಇವರು ಮಾಗಡಿಯಲ್ಲಿ ವೆಂಕಮ್ಮ-ದೇವಯ್ಯ ದಂಪತಿಗಳಿಗೆ ೩-೨-೧೯೫೪ ರಲ್ಲಿ ಜನಿಸಿದರು. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ೧೯೩೩ರಲ್ಲಿ ನಡೆದ ಅಖಿಲ ಕರ್ನಾಟಕ ವಿಚಾರವಾದಿ ವಿದ್ಯಾಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ೧೯೭೫ರಲ್ಲಿ ದಲಿತ ಸಂರ್ಷ ಸಮಿತಿಯನ್ನು ಹುಟ್ಟು ಹಾಕಿದರು. ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಸಕ್ರಿಯವಾಗಿ ಪಾತ್ರವಹಿಸಿದ್ದಾರೆ.
ಇವರ ಸೇವೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಅನೇಕ. ಅವುಗಳಲ್ಲಿ ಕೆಲವು ಹೀಗಿವೆ : ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೮೬) ಚಲನಚಿತ್ರ ಗೀತರಚನೆ ಪ್ರಶಸ್ತಿ (೧೯೮೪) ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೯೬) ಜಾನಪದ ತಜ್ಞ ಪ್ರಶಸ್ತಿ (೨00೧) ಸಂದೇಶ ಪ್ರಶಸ್ತಿ (೨00೧) ಡಾ. ಅಂಬೇಡ್ಕರ್ ಪ್ರಶಸ್ತಿ (೨00೨) ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ (೨00೨) ನಾಡೋಜ ಪ್ರಶಸ್ತಿ (೨00೭) ಆಳ್ವಾಸ್ ನುಡಿಸಿರಿ ಪ್ರಶಸ್ತಿ (೨0೧೨) ಪ್ರೆಸಿಡೆನ್ಸಿ ಇನ್ಸಿಟ್ಯೂಷನ್ ಪ್ರಶಸ್ತಿ (೨0೧೨) ಇತ್ಯಾದಿ ಪ್ರಶಸ್ತಿಗಳು ಬಂದಿವೆ.
ಕವಿ, ವಿಮರ್ಶಕರಾದ ಸಿದ್ಧಲಿಂಗಯ್ಯನವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು :
ಗ್ರಾಮದೇವತೆಗಳು (ಸಂಶೋಧನ ಪ್ರಬಂಧ), ಊರುಕೇರಿ (ಆತ್ಮಕಥೆ) ಜನಸಂಸ್ಕೃತಿ, ಉರಿಕಂಡಾಯ, ಹಕ್ಕಿನೋಟ, ಪಂಚಮ ಮತ್ತು ನೆಲಸಮ, ಏಕಲವ್ಯ (ನಾಟಕ), ಸಾವಿರಾರು ನದಿಗಳು (೧೯೭೯), ಕಪ್ಪು ಜನರ ಹಾಡು (೧೯೮೨), ಹೊಲೆಮಾದಿಗರ ಹಾಡು (೧೯೭೫) ಇತ್ಯಾದಿ.
ಕನ್ನಡ ಸಾಹಿತ್ಯ ಸಮ್ಮೇಳನ–೮೧
ಅಧ್ಯಕ್ಷರು, ಡಾ. ಸಿದ್ಧಲಿಂಗಯ್ಯ
ದಿನಾಂಕ ೩೧ ಜನವರಿ, ೧,೨,೩ ಫೆಬ್ರವರಿ ೨0೧೫
ಸ್ಥಳ : ಶ್ರವಣಬೆಳಗೊಳ
ಕೃತಜ್ಞತೆ ಸಲ್ಲಿಕೆ
೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ನನ್ನನ್ನು ಆಯ್ಕೆ ಮಾಡಿರುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಮತ್ತು ಸಮಸ್ತ ಕನ್ನಡಿಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಪರಿಷತ್ತು ನೂರು ವರ್ಷಗಳ ಕಾಲ ನಿರಂತರವಾಗಿ ಕನ್ನಡದ ಸೇವೆ ಸಲ್ಲಿಸುತ್ತಾ ಬಂದಿದೆ. ಪರಿಷತ್ತಿನ ಸ್ಥಾಪನೆಗೆ ಕಾರಣರಾದ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ನೂರು ವರ್ಷಗಳ ಕಾಲ ಕನ್ನಡದ ಕೈಂಕರ್ಯವನ್ನು ಮಾಡಿದ ಎಲ್ಲ ಹಿರಿಯ ಚೇತನಗಳಿಗೆ ಈ ಮೂಲಕ ಅನಂತ ನಮನಗಳನ್ನು ಸಲ್ಲಿಸುತ್ತೇನೆ.
ಪರಿಷತ್ತಿನ ಅಭಿನಂದನೀಯ ಕೆಲಸ
ಹಳಗನ್ನಡ ಸಾಹಿತ್ಯದ ಓದು ಮತ್ತು ಅಧ್ಯಯನವಂತು ಮರೆತು ಹೋದಂತೆ ಕಾಣುತ್ತಿದೆ. ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಹಳಗನ್ನಡ ಕಾವ್ಯಗಳ ಗದ್ಯಾನುವಾದದ ನೆರವನ್ನು ಪಡೆದು ಗಮಕಿಗಳ ಮೂಲಕ ಹಾಡಿಸುವ, ವ್ಯಾಖ್ಯಾನಿಸುವ ಪದ್ಧತಿಯನ್ನು ಕೂಡಲೇ ವಿಶ್ವವಿದ್ಯಾಲಯಗಳು ಆರಂಭಿಸಬೇಕು. ಈ ಕ್ರಮದಿಂದ ಹಳಗನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ದಾಟಿಸಿದಂತಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನೋತ್ಸವ ಆಚರಣೆಯ ಈ ಸಂದರ್ಭದಲ್ಲಿ ೧00 ಮೌಲಿಕ ಪುಸ್ತಕಗಳನ್ನು ಮತ್ತು ೧೭ ಸಾಹಿತ್ಯ ಚರಿತ್ರೆಯ ಸಂಪುಟಗಳನ್ನು ಪ್ರಕಟಿಸುತ್ತಿರುವುದು ಅಭಿನಂದನೀಯ.
ಕನ್ನಡ ವರ್ಷ – ೨0೧೫ ಆಚರಣೆ
ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ ಶತಮಾನ ತುಂಬುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ ೨0೧೫ನೇ ವರ್ಷವನ್ನು ‘ಕನ್ನಡ ವರ್ಷ-೨0೧೫’ ಎಂದು ಘೋಷಿಸಬೇಕು. ಈ ವರ್ಷದುದ್ದಕ್ಕೂ ವಾರದಲ್ಲಿ ಒಂದು ದಿನವನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಕಚೇರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಕನ್ನಡ ವರ್ಷದ ಆಚರಣೆಗಾಗಿ ಮೀಸಲಿಡಬೇಕು. ಆ ದಿನವನ್ನು ಕನ್ನಡ ದಿನ ಎಂದು ಕರೆಯಬೇಕು. ಆ ದಿನದಂದು ಕನ್ನಡ ಭಾಷೆ, ಸಾಹಿತ್ಯ, ಕಲೆ, ಶಿಕ್ಷಣ ಮುಂತಾದ ಕ್ಷೇತ್ರಗಳ ಸಂಬಂಧವಾಗಿ ಚರ್ಚೆ, ಉಪನ್ಯಾಸ ವಿಚಾರ ಸಂಕಿರಣ ಮುಂತಾದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಬೇಕು.
`ಕನ್ನಡ ಮಾತಾಡಿ’ – ಆಂದೋಲನ ಮಾಡಿ
ಸರ್ಕಾರಿ ಹಾಗೂ ಅರೆಸರ್ಕಾರಿ ಕಚೇರಿಗಳು, ವಿಶ್ವವಿದ್ಯಾಲಯಗಳು ಕಾರ್ಖಾನೆಗಳು, ಬ್ಯಾಂಕುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಕನ್ನಡ ಮಾತಾಡಲು ಉತ್ತೇಜಿಸುವ ಸಲುವಾಗಿ ಕನ್ನಡ ಮಾತಾಡಿ ಎಂಬ ಚಳುವಳಿಯನ್ನು ಕೂಡಲೇ ಪ್ರಾರಂಭಿಸಬೇಕು. ಈ ಚಳುವಳಿಯಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು, ಯುವಕರು ಹಾಗೂ ಕನ್ನಡಪರ ಸಂಟನೆಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು.
ಕನ್ನಡ ಸಾಹಿತ್ಯ, ಸಿನಿಮಾ, ಪ್ರಾಧ್ಯಾಪನ, ಚಳವಳಿ ಮತ್ತು ಸಾಂಸ್ಕೃತಿಕ ಲೋಕದ ಮಹತ್ವದ ಪ್ರತಿನಿಧಿಗಳೆಂದು ಖ್ಯಾತರಾಗಿರುವ ಡಾ. ಬರಗೂರು ರಾಮಚಂದ್ರಪ್ಪನವರು ರಾಯಚೂರಿನಲ್ಲಿ ಬರುವ ಡಿಸೆಂಬರ್ ೨ರಿಂದ ಮೂರು ದಿನಗಳವರೆಗೆ ನಡೆಯಲಿರುವ ೮೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
‘ಬ್ರಹ್ಮಪುತ್ರ, ಗಂಗಾನದಿಗಳಷ್ಟೆ ಶ್ರೇಷ್ಠವಲ್ಲ, ನಮ್ಮೂರಿನ ಹಳ್ಳ- ಕೊಳ್ಳಗಳೂ ಶ್ರೇಷ್ಠ. ಶ್ರೀಗಂಧ ಮಾತ್ರವಲ್ಲ, ನಮ್ಮೂರಿನ ಜಾಲಿ ಮರವೂ ಶ್ರೇಷ್ಠ. ಕೋಗಿಲೆ ಅಷ್ಟೇ ಅಲ್ಲ, ನಮ್ಮೂರಿನ ಕಾಗೆಯೂ ನನಗೆ ಶ್ರೇಷ್ಠವೇ ಆಗಿದೆ`. ಈ ಬರಗೂರು ರಾಮಚಂದ್ರಪ್ಪನವರ ಮಾತುಗಳು ಅವರ ಅಂತರಾಳದ ಒಂದು ನೋಟ. ತಳ ಮಟ್ಟದ ಜನರ ನೋವುಗಳಿಗೆ ಸದಾ ತುಡಿಯುವ, ಚಿಂತಿಸುವ ಮನಸ್ಸು ಅವರದು. ಅವರನ್ನು ಜನ ಗುರುತಿಸುವುದು ಬಂಡಾಯ ವ್ಯಕ್ತಿತ್ವದವರಾಗಿ, ಬಂಡಾಯ ಸಾಹಿತಿಯಾಗಿ, ಬಂಡಾಯದ ಮಾತುಗಾರರಾಗಿ. ಈ ಕುರಿತು ಬರಗೂರರು ಹೇಳುತ್ತಾರೆ “ಬಂಡಾಯವೆಂದರೆ ಹೊಡಿ, ಬಡಿ, ಕೊಲ್ಲು ಎಂದಲ್ಲ. ಬಂಡಾಯವೆಂಬುದು ನನ್ನ ಪ್ರಕಾರ ಸಿದ್ಧಾಂತ. ಯಾವುದೇ ಒಂದು ಅನಿವಾರ್ಯ ಪರಿಸ್ಥಿತಿ ಒದಗಿದಾಗ ಅದಕ್ಕೆ ಅಗತ್ಯವಾದ ಪ್ರತಿಕ್ರಿಯೆ ನೀಡದೆ ಸುಮ್ಮನೆ ಮೂಖನಾಗಿರುವುದು ನನಗೆ ಸಾಧ್ಯವಿಲ್ಲ. ಹಾಗೆ ಸುಮ್ಮನಿರುವುದು ನನಗೆ ಸಮ್ಮತವೂ ಅಲ್ಲ”. ನಾವು ಬರಗೂರರ ಅಭಿಪ್ರಾಯಗಳನ್ನು ಒಪ್ಪದಿರಬಹುದು ಅಥವಾ ಬಿಡಬಹುದು. ಆದರೆ ಅವರ ಕನ್ನಡ ಪ್ರೀತಿ, ಕನ್ನಡದ ಹೋರಾಟಗಳು, ಕನ್ನಡ ಕಾಳಜಿಗಳು, ಕನ್ನಡಕ್ಕಾಗಿ ಮಾಡಿದ ಕೆಲಸವನ್ನು ತೆಗೆದು ಹಾಕಲು ಸಾಧ್ಯವಿಲ್ಲ.
ಬರಗೂರು ರಾಮಚಂದ್ರಪ್ಪನವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಪಾಟಿ ಚೀಲ ಹಿಡಿದು ಕೆಂಪು ಬಸ್ಸಿನ ಹಿಂದೆ ಓಡುತ್ತಿದ್ದ ಬರಗೂರರು, ತುಮಕೂರು, ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ನಾಡಿನಲ್ಲಿ ಹೊಸ ಆಲೋಚನೆ, ಚಿಂತನೆಗಳಿಗೆ ಕಾರಣರಾದವರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಬರಗೂರರು ಸಲ್ಲಿಸಿದ ಸೇವೆ ಗಣನೀಯವಾದ್ದದ್ದು. ಸಾಹಿತ್ಯದಷ್ಟೆ ಸಿನೆಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನೆಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ಕೂಡ ವಿಭಿನ್ನ ಹಾದಿ ಹಿಡಿದವರು. ಬರಗೂರರ ಚಿತ್ರಗಳು ಬಡವರ, ದಲಿತರನ್ನು ಧ್ವನಿಸುವ ಮೂಲಕ ಭಾರತೀಯ ಸಿನೆಮಾ ರಂಗದ ಚರಿತ್ರೆಯ ಪುಟಗಳಾಗಿ ಮಿಂಚಿವೆ. ಅವರು ಕನ್ನಡದ ಮೇರು ನಟ ಡಾ.ರಾಜ್ಕುಮಾರ್ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಸಿನಿಮಾ ನಿರ್ದೇಶನ, ಹಾಡುಗಳು, ಕಥೆ, ಚಿತ್ರಕಥೆ ಇವೆಲ್ಲಾ ಕಲಾತ್ಮಕ ಹಾಗೂ ಜನಮಾನಸಗಳನ್ನು ತನ್ನದೇ ಆದ ರೀತಿಯಲ್ಲಿ ಸೆಳೆದಿವೆ.
ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಇವುಗಳಲ್ಲಿ ಬರಗೂರರು ದಕ್ಷರಾಗಿ ಕೆಲಸಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯಲ್ಲಿದ್ದಾಗ ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿ, ೪೦ಕ್ಕೂ ಅಧಿಕ ಕೃತಿಗಳು ಪ್ರಕಟವಾಗಲು ಕಾರಣರಾಗಿದ್ದಾರೆ. ಪ್ರಸಕ್ತದಲ್ಲಿ ಅವರು ಪ್ರಾಥಮಿಕ ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಪರ ಹೋರಾಟ ಮತ್ತು ಚಿಂತನೆಗಳಲ್ಲಿ ಅವರು ಎಂದೂ ಹಿಂದೆ ಬೀಳದವರು. ಕನ್ನಡ ಪರ ಕಾರ್ಯಕ್ರಮಗಳು, ಕನ್ನಡದ ಸಾಮಾನ್ಯ ಜನತೆ, ಕನ್ನಡತನವನ್ನು ಬಿತ್ತುವ ಕೆಲಸ ಅವರಿಗೆ ಎಂದೆಂದೂ ಪ್ರಿಯ. ಹೀಗಾಗಿ ಕನ್ನಡ ಪರ ಆಸಕ್ತರಿಗೆ ಅವರು ಎಂದೆಂದೂ ಪ್ರಿಯರು. ಹಾಗೆಂದ ಮಾತ್ರಕ್ಕೆ ಅವರು ಎಲ್ಲರನ್ನೂ ಪ್ರಿಯವಾಗಿಸಲು ಬಣ್ಣ ಬಣ್ಣದ ಮಾತುಗಳನ್ನಾಡುವವರಲ್ಲ. ಹೀಗಾಗಿ ಅವರ ಬಂಡಾಯ ಮನೋಧರ್ಮದ ಮಾತುಗಳು ಎಲ್ಲ ಜನರ ವೈಯಕ್ತಿಕ ಪ್ರೀತಿಗಳನ್ನೂ, ನಿಲುವುಗಳನ್ನೂ ಆಗಾಗ ಕೆದಕುತ್ತದೆ. ಅವರ ಮಾತುಗಳಿಗೆ ಹಲವು ಬಣ್ಣಗಳನ್ನು ಹಚ್ಚಿ ಅವರು ಹೀಗೆಂದರು, ಹಾಗೆಂದರು, ಅವರನ್ನು ಎಡಬಿಡಂಗಿ ಅಂದರು, ಮತ್ತೊಬ್ಬರು ಪ್ರಶಸ್ತಿಗೆ ಯೋಗ್ಯರಲ್ಲ ಎಂದರು, ಇನ್ನೊಬ್ಬರು ಏಕೆ ವಿಶ್ವಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಬಾರದು ಎಂದರು ಇತ್ಯಾದಿ ವಾಗ್ವಾದಗಳು ಹಲವು ಬಾರಿ ಪತ್ರಿಕೆಗಳಲ್ಲಿ ಕಂಡಬಂದದ್ದಿದೆ. ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ಅವರು ಎಲ್ಲರಿಗೂ ಪ್ರಿಯರು ಆದರೆ, ಎಲ್ಲವನ್ನೂ ತಮ್ಮ ಬಂಡಾಯದ ಸಿದ್ಧಾಂತಗಳ ಆಳವಾದ ನಿಲುವಿನ ಮೂಸೆಯಲ್ಲಿಟ್ಟು ಕನ್ನಡದ ಕಾಳಜಿಗಳಲ್ಲಿ ಅಳೆಯುವ ತಮ್ಮ ಮೂಲಭೂತ ಗುಣವನ್ನು ಅವರು ಬಿಟ್ಟುಕೊಡಲು ತಯಾರಿಲ್ಲ.
ಜಾಗತೀಕರಣವೆಂಬ ಭ್ರಮೆಯಲ್ಲಿ ಕಳೆದು ಹೋಗುತ್ತಿರುವ ವಿಶ್ವವನ್ನು ಅವರು ಮನನೀಯವಾಗಿ ಗುರುತಿಸುತ್ತಾರೆ. “ಕೈಗಾರಿಕೀಕರಣ ಕಾಲದಲ್ಲಿದ್ದ ಜನರ ಕನಸುಗಳೇ ಬೇರೆ. ಜಾಗತೀಕರಣ ಕಾಲದ ಕನಸುಗಳೇ ಬೇರೆ. ಈಗಲೂ ಹಿಂದಿನ ಕನಸುಗಳೇ ಇರಬೇಕೆಂದು ನಾನು ಹೇಳುತ್ತಿಲ್ಲ. ನಮಗೆ ಆರೋಗ್ಯಕರ ಮನೋಧರ್ಮವನ್ನು ಬೆಳೆಸುವ ಕನಸುಗಳು ಬೇಕು; ಆ ಕನಸುಗಳು ಸಾಕಾರಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವುದು, ತಕ್ಕಮಟ್ಟಿನ ಉದ್ಯೋಗ ಪಡೆಯುವುದು, ಬದುಕಲಿಕ್ಕೆ ಬೇಕಿರುವಷ್ಟು ಸಂಬಳ ಪಡೆಯುವುದು, ಮನೆ ಕಟ್ಟಿಸುವುದು, ಕುಟುಂಬದಲ್ಲಿ ನೆಮ್ಮದಿ ಕಾಯ್ದುಕೊಳ್ಳುವುದು – ಈ ಕೆಲವು, ಕೈಗಾರಿಕೀಕರಣ ಕಾಲದ ಕನಸುಗಳು. ಇವು ‘ಸುಖಮುಖಿಯಾದ’ ಕನಸುಗಳು.
ಆದರೆ ಜಾಗತೀಕರಣ ಹುಟ್ಟುಹಾಕುತ್ತಿರುವುದು ‘ಭೋಗಮುಖಿಯಾದ’ ಕನಸುಗಳು. ಬದುಕಲಿಕ್ಕೆ ಮಾತ್ರ ಸಂಬಳ ಸಾಲದು, ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬೇಕು. ವೈಭೋಗದ ಜೀವನಕ್ಕೆ ವಿಲಾಸದ ವಸ್ತುಗಳು ಬೇಕು. ಇದೇ ಜೀವನ ವಿಧಾನವಾಗಬೇಕು – ಹೀಗೆ ಭೋಗ ಬದುಕನ್ನು ಬಯಸುವ ಜಾಗತೀಕರಣ ಅರ್ಥಾತ್ ಖಾಸಗೀಕರಣ, ಜೀವನದ ಆದ್ಯತೆ ಮತ್ತು ಆದರ್ಶಗಳನ್ನೂ ಬದಲಿಸುತ್ತಿದೆ. ಖಾಸಗಿ ಬಂಡವಾಳಗಾರರ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡುವ ದೃಷ್ಟಿಯಿಂದಲೇ ಮನೋಧರ್ಮವನ್ನು ಬದಲಾಯಿಸಲಾಗುತ್ತಿದೆ.
ಬದುಕಿನ ಬದಲಾವಣೆಯೆಂದರೆ ಮೇಲ್ಪದರದ ಬದಲಾವಣೆ ಎಂದಾಗುತ್ತಿದೆ. `ಮೇಲ್ಪದರ’ ಎನ್ನುವುದು ಸಾಮಾಜಿಕ, ಆರ್ಥಿಕ ಮೇಲ್ಪದರವೂ ಹೌದು; ತೆಳು ಬದಲಾವಣೆಯ ಸ್ವರೂಪವೂ ಹೌದು. ಹೀಗಾಗಿ ಕೈಗಾರಿಕೀಕರಣ ಕಾಲದ ‘ವಿಕಾಸ ಜೀವನ’ವು ಖಾಸಗೀಕರಣ ಕಾಲದಲ್ಲಿ ‘ವಿಲಾಸ ಜೀವನ’ವಾಗುತ್ತಿದೆ. ಖಾಸಗೀಕರಣದ ‘ಕೆನೆಪದರ’ವಾದ ಕಾರ್ಪೊರೇಟ್ ವಲಯವು ಭೋಗವನ್ನೇ ಸುಖವೆಂದು ಬಿಂಬಿಸುತ್ತಿದೆ. ವಾಸ್ತವವಾಗಿ ಭೋಗವೇ ಬೇರೆ, ಸುಖವೇ ಬೇರೆ. ಆದರೆ ಭೋಗದ ಬೆನ್ನು ಹತ್ತಿದವರು ಸುಖಕ್ಕೆ ಬೆನ್ನು ತೋರಿಸುತ್ತಾರೆಂಬ ಸತ್ಯವನ್ನು ಕಾರ್ಪೊರೇಟ್ ವಲಯ ಹೂತುಹಾಕುತ್ತಿದೆ.”
ಬರಗೂರರ ಸಾಹಿತ್ಯದ ಹಾದಿಯಲ್ಲಿನ ಕೆಲವು ಕೃತಿಗಳನ್ನು ನೆನೆಸಿಕೊಳ್ಳುವುದಾದರೆ ‘ಒಂದು ಊರಿನ ಕತೆಗಳು’, ‘ಕನ್ನಡಾಭಿಮಾನ’, ‘ಕಪ್ಪು ನೆಲದ ಕೆಂಪು ಕಾಲು’, ‘ಮರಕುಟಿಗ’, ‘ರಾಜಕಾರಣಿ’, ‘ಸಾಹಿತ್ಯ’, ‘ಸುಂಟರಗಾಳಿ’, ‘ಸೂತ್ರ’, ‘ಕಾಂಟೆಸ್ಸಾ ಕಾವ್ಯ’, ‘ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ’, ‘ನೆತ್ತರಲ್ಲಿ ನೆಂದ ಹೂ’, ‘ಗುಲಾಮನ ಗೀತೆ’, `ಸಿನಿಮಾ : ಒಂದು ಜನಪದ ಕಲೆ`, ‘ಮರ್ಯಾದಸ್ಥ ಮನುಷ್ಯರಾಗೋಣ’ ಮುಂತಾದವು ತಕ್ಷಣ ನೆನಪಿಗೆ ಬರುತ್ತವೆ. ಬರಗೂರರ ‘ಸುಂಟರಗಾಳಿ’ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
‘ಪಂಪ ಪ್ರಶಸ್ತಿ’, ‘ನಾಡೋಜ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’ ಹಾಗೂ ಹಲವಾರು ರಾಜ್ಯಮಟ್ಟದ, ಸಂಘ ಸಂಸ್ಥೆಗಳ ಗೌರವಗಳು ಬರಗೂರು ರಾಮಚಂದ್ರಪ್ಪನವರಿಗೆ ಸಂದಿವೆ. ಇವೆಲ್ಲಕ್ಕೂ ಕಿರೀಟವಿಟ್ಟಂತೆ ಕನ್ನಡ ಸಾಹಿತ್ಯ ಪರಿಷತ್ತು ಬರಗೂರು ರಾಮಚಂದ್ರಪ್ಪನವರನ್ನು ರಾಯಚೂರಿನಲ್ಲಿ ಡಿಸೆಂಬರ್ ೨, ೩, ೪ರಂದು ನಡೆಯಲಿರುವ ೮೨ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬರಗೂರರು “ಇದು ಕನ್ನಡ ಸಾಹಿತ್ಯ ಲೋಕದಲ್ಲಿ ದೊರೆಯುವ ಅತ್ಯುನ್ನತ ಗೌರವ ಎಂಬುದು ನನ್ನ ಭಾವನೆ. ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಸಂತಸ ಮೂಡಿಸಿದೆ. ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ನನ್ನಂಥವರ ಪ್ರತಿಭೆ ಮೇಲೆ ಬರಲು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಇವೆ. ಪ್ರತಿಯೊಬ್ಬ ವ್ಯಕ್ತಿ ಪ್ರತಿಭೆ ಮತ್ತು ಸಂಕಲ್ಪಗಳನ್ನು ಒಗ್ಗೂಡಿಸಿಯೇ ಮೇಲೆ ಬರಬೇಕು. ಸಾಮಾಜಿಕ ನ್ಯಾಯವು ಪ್ರತಿಭೆಗೆ ವಿರೋಧವಾಗಿ ಇರಬಾರದು. ನಾನು ಎಂದಿಗೂ ಇಂಥ ದೊಡ್ಡ ಗೌರವದ ಕನಸನ್ನೇ ಕಂಡವನಲ್ಲ. ಕೊಳೆಗೇರಿಗಳ ನಿವಾಸಿಗಳಿಗೆ, ದುರ್ಬಲರಿಗೆ, ಬಡವರಿಗೆ ಐಡೆಂಟಿಟಿ ಏನು ಎಂಬುದು ಈ ಪ್ರಶ್ನೆಗಳ ಸಾಲಿನಲ್ಲಿ ಮೊದಲನೆಯದು. ಸಾಮಾಜಿಕ, ಆರ್ಥಿಕ ಐಡೆಂಟಿಟಿ ನಮ್ಮಂಥವರಿಗೆ ಕನಸು ಎಂಬ ಸ್ಥಿತಿಯಲ್ಲಿ ನಾನು ಶ್ರೇಷ್ಠತೆಯ ಬೆಂಬಲ ಇದ್ದರೆ ಒಳ್ಳೆಯದು ಎಂದುಕೊಂಡು ಅರಸಿದ್ದು ಶಿಕ್ಷಣದ ಐಡೆಂಟಿಟಿಯನ್ನ. ನಮ್ಮ ಮನೆಯಲ್ಲಿದ್ದ ‘ಜೈಮಿನಿ ಭಾರತ’ದ ಪ್ರತಿಯನ್ನು ಹಿಡಿದಿಕೊಂಡು ಊರೆಲ್ಲ ಓಡಾಡಿದ ಪರಿಯಿಂದಲೇ, ‘ಈತ ಓದುವ ಹುಡುಗ’ ಎಂದು ಕರೆಯಿಸಿಕೊಂಡು, ಐಡೆಂಟಿಟಿ ಕಂಡುಕೊಂಡೆ. ಅದರಿಂದಲೇ ನನ್ನ ಅಸ್ಮಿತೆಯ ಸಮಸ್ಯೆಯನ್ನು ನೀಗಿಸಿಕೊಂಡೆ. ಹಾಗೆಯೇ ಓದುತ್ತ ಸಾಗಿದೆ. ‘ಶ್ರೀಮಂತರಲ್ಲದವರೂ ಬರೆಯುವ ಮೂಲಕ ಬೆಳೆಯಬಹುದು’ ಎಂದು ರವೀಂದ್ರನಾಥ್ ಠಾಗೂರರು ಹೇಳಿದಂತೆ, ನಾನೂ ಬದ್ಧತೆಯೊಂದಿಗೆ ಬರೆಯಲು ಆರಂಭಿಸಿದೆ. ಎಂದಿಗೂ ಸಾಮಾಜಿಕ ಕಾಳಜಿ, ಸೃಜನಶೀಲತೆಯನ್ನು ಬಿಡದೆ ಬರೆದೆ. ನನ್ನ ಮೂಲಕ ನನ್ನಂತಹ ಅಸಂಖ್ಯಾತ ಪ್ರತಿಭೆಗಳಿಗೆ ಈ ಗೌರವ ಸಂದಿದೆ ಎಂಬುದೇ ನನ್ನ ಭಾವನೆ. ಇದು ಅಸ್ಮಿತೆಯ ಸವಾಲನ್ನು ಎದುರಿಸಿದ ಫಲ” ಎಂದಿದ್ದಾರೆ.
ಯಾವುದೇ ವ್ಯಾಪಾರೀ ಮಾಧ್ಯಮದ ಸರಕಿಲ್ಲದಿದ್ದರೂ ಉತ್ತಮ ಸಾಂಸ್ಕೃತಿಕ ಮೌಲ್ಯಗಳಿಂದ ಜನಪ್ರೀತಿಗಳಿಸಿ ಶತದಿನೋತ್ಸವ ಆಚರಿಸಿದ ‘ಭಾಗೀರತಿ’ ಚಿತ್ರವೇ ಅಲ್ಲದೆ ‘ಒಂದು ಊರಿನ ಕಥೆ’, ‘ಬೆಂಕಿ’, ‘ಸೂರ್ಯ’, ‘ಕೋಟೆ’, ‘ಕ್ಷಾಮ’, ‘ಶಾಂತಿ’, ‘ಕರಡಿಪುರ’, ‘ತಾಯಿ’, ‘ಏಕಲವ್ಯ’, ‘ಶಬರಿ’, ‘ಹಗಲು ವೇಷ’, ‘ಭೂಮಿತಾಯಿ’ ಮುಂತಾದವು ಬರಗೂರರ ಚಿತ್ರಗಳು. ಇವರ ಹಲವಾರು ಚಿತ್ರಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿವೆ. ಒಂದೇ ಪಾತ್ರವನ್ನು ಒಳಗೊಂಡ ವಿಶಿಷ್ಟ ಚಿತ್ರ ‘ಶಾಂತಿ’ ಗಿನ್ನೆಸ್ ಸಾಧನೆಗಳಲ್ಲಿ ದಾಖಲುಗೊಂಡಿದೆ. ಇವಲ್ಲದೆ ಬರಗೂರರ ಕಥೆ ಮತ್ತು ಹಾಡುಗಳು ಇತರ ನಿರ್ದೇಶಕರ ಚಲನಚಿತ್ರಗಳಲ್ಲಿ ಖ್ಯಾತಿಗಳಿಸಿವೆ. ‘ತಾಯಿ’ ಚಿತ್ರದ ಗೀತರಚನೆಗೆ ರಾಷ್ಟ್ರಪ್ರಶಸ್ತಿ ದೊರೆತಿದ್ದು ಚಿತ್ರ ಸಂಭಾಷಣೆಗೂ ರಾಜ್ಯಪ್ರಶಸ್ತಿಗಳಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.
ಹೀಗೆ ಹಲವು ರೀತಿಯಲ್ಲಿ ಕನ್ನಡದಲ್ಲಿ ಕ್ರಿಯಾಶೀಲರಾಗಿರುವ ಬರಗೂರು ರಾಮಚಂದ್ರಪ್ಪನವರು ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಕೂಟವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಸಂತಸದ ಸಂಗತಿಯಾಗಿದೆ.
Tag: Kannada Sahitya Sammelana 81, Siddalingaiah
೮0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ನಾ. ಡಿಸೋಜ
ಪರಿಸರದ ನಾಶವಾದರೆ ಮಾನವ ಜನಾಂಗದ ವಿನಾಶ, ಪರಿಸರವನ್ನು ರಕ್ಷಿಸುವುದರಿಂದ ಮಾನವನ ಬಾಳು ಸಂತೋಷವಾಗಲು ಶಕ್ಯ ಎಂಬ ಧ್ಯೇಯದ ಹಿನ್ನೆಲೆಯಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿರುವ ನಾ. ಡಿಸೋಜ ಅವರು ಎಫ್.ಪಿ. ಡಿಸೋಜ-ರೂಪಿನಾ ಬಾಯಿ ದಂಪತಿಗಳ ಪುತ್ರರಾಗಿ ೬-೬-೧೯೩೭ರಲ್ಲಿ ಜನಿಸಿದರು. ಬಾಲ್ಯದಿಂದಲೂ ಸಾಹಿತ್ಯಿಕ ವಾತಾವರಣದಲ್ಲಿ ಬೆಳೆದ ಅವರು ಸಾಗರದಲ್ಲಿ ಶಾಲಾ ಶಿಕ್ಷಣವನ್ನು, ಶಿವಮೊಗ್ಗದಲ್ಲಿ ಕಾಲೇಜು ಶಿಕ್ಷಣವನ್ನು ಪಡೆದರು.
ನಂತರ ಅವರು ಲೋಕೋಪಯೋಗಿ ಇಲಾಖೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿ ಶರಾವತಿ ಯೋಜನೆ, ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.
ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ (೧೯೯೩-೯೫) ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ (೧೯೯೫), ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ.
೨00೭ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಅವರಿಗೆ, ೧೯೯೮ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ೨00೩ರಲ್ಲಿ ನಿರಂಜನ ಸಾಹಿತ್ಯ ಪ್ರಶಸ್ತಿ, ೨00೬ರಲ್ಲಿ ಆಳ್ವಾಸ್ ನುಡಿಸಿರಿ ಅಧ್ಯಕ್ಷ ಗೌರವ, ೨0೧0ರಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ದೊರೆತಿದೆ. ೨0೧೪ರಲ್ಲಿ ಮಡಿಕೇರಿಯಲ್ಲಿ ನಡೆದ ೮0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನಾ. ಡಿಸೋಜ ಅವರಿಗೆ ದೊರಕಿತ್ತು.
ಕಥೆ ಕಾದಂಬರಿಕಾರರಾದ ನಾ. ಡಿಸೋಜ ಬರೆದ ಕೃತಿಗಳಲ್ಲಿ ಕೆಲವು ಪಠ್ಯಗಳಾಗಿವೆ, ಹಲವು ಕೃತಿಗಳು, ಚಲನಚಿತ್ರಗಳಾಗಿವೆ. ಅವುಗಳಲ್ಲಿ ಕೆಲವು : ಮುಳುಗಡೆ, ಬಣ್ಣ, ಪಾದರಿಯಾದ ಹುಡುಗ, ಸಿರಿಗಂಧ, ದ್ವೀಪ, ಬಳುವಳಿ, ಏಸುಕ್ರಿಸ್ತ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ, ಕುಂಜಾಲು ಕಣಿವೆಯ ಕೆಂಪು ಹೂ, ಇಗರ್ಜಿ ಸುತ್ತಲಿನ ಹತ್ತುಮುಖಗಳು ಇತ್ಯಾದಿ.
ಕನ್ನಡ ಸಾಹಿತ್ಯ ಸಮ್ಮೇಳನ–೮0
ಅಧ್ಯಕ್ಷರು, ನಾ. ಡಿಸೋಜ
ದಿನಾಂಕ ೭, ೮, ೯ ಜನವರಿ ೨0೧೪
ಸ್ಥಳ : ಮಡಿಕೇರಿ
ಕಳೆದ ಐವತ್ತು ವರ್ಷಗಳ ನನ್ನ ಕನ್ನಡ ಸೇವೆಯನ್ನು ಗುರುತಿಸಿ ನನಗೆ ೮0ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ದಯಪಾಲಿಸಿ ನನ್ನನ್ನ ಇಲ್ಲಿ ಬರಮಾಡಿಕೊಂಡಿದ್ದಾರೆ.
ಸಾಹಿತ್ಯ ಮತ್ತು ಕಲೆ
ನಮ್ಮ ಜನ ಯಾವತ್ತು ಸಾಹಿತ್ಯಕ್ಕೆ ಹೆಚ್ಚಿನ ಸ್ಥಾನಮಾನವನ್ನು ಕೊಡುತ್ತ ಬಂದಿದ್ದಾರೆ. ಸಾಹಿತ್ಯ ಸಮ್ಮೇಳನ ಅಂದರೆ ಇಡೀ ನಾಡಿನ ಉದ್ದಕ್ಕೂ ಒಂದು ಸಂಚಲನ ಕಾಣಿಸುತ್ತದೆ. ಸಾಹಿತ್ಯ ಸಮ್ಮೇಳನಗಳನ್ನು ಸಂತೆ ಜಾತ್ರೆ ಎಂದು ಕೆಲವರು ಕರೆದರೂ ಅದಕ್ಕೆ ಬರುವ ಜನ ಕಡಿಮೆ ಆಗಿಲ್ಲ. ಸಮ್ಮೇಳನದ ಗೋಷ್ಠಿಗಳಲ್ಲಿ ಜನ ಭಾಗವಹಿಸುತ್ತಾರೆ. ಕವಿಗೋಷ್ಠಿಯನ್ನು ಕೇಳುತ್ತಾರೆ. ಪುಸ್ತಕ ಪ್ರದರ್ಶನದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ. ಸಮ್ಮೇಳನ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚು ಮಾಡಿಕೊಳ್ಳುತ್ತದೆ. ಈ ಸಮ್ಮೇಳನವನ್ನು ಬೇರೊಂದು ರೀತಿಯಲ್ಲಿ ನಡೆಸಬೇಕು ಅನ್ನುವ ಮಾತು ಇದೆಯಾದರೂ ಆಗಿಲ್ಲ. ಇದಕ್ಕೆ ಕಾರಣ, ಮೊದಲನೆಯದು ಸಾಹಿತ್ಯ ಬದುಕನ್ನು ಪ್ರತಿಬಿಂಬಿಸುತ್ತದೆ ಅನ್ನುವುದು, ಎರಡನೆಯದು ಅದೊಂದು ಭಾಷೆಯನ್ನು ಅವಲಂಬಿಸಿಕೊಂಡಿದೆ ಅನ್ನುವುದು.
ಸಮ್ಮೇಳನದ ನಿರ್ಣಯಗಳು
ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳ ಬಗ್ಗೆ ಸದಾ ಒಂದು ತಕರಾರಿದೆ. ಈ ಬಾರಿ ಯಾವುದೇ ನಿರ್ಣಯ ಕೈಕೊಳ್ಳಬೇಡಿ. ಅದು ನೆರವೇರುವುದಿಲ್ಲ ಅನ್ನುವ ಸಲಹೆ ನನಗೆ ಬಂದಿದೆ. ಸಮ್ಮೇಳನಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳುವುದು ಒಂದು ಪದ್ದತಿ. ಎಷ್ಟೋ ನಿರ್ಣಯಗಳು ಅನುಷ್ಠಾನಗೊಂಡಿವೆ. ಪರಿಷತ್ತು ಕೈಕೊಂಡ ನಿರ್ಣಯಗಳನ್ನು ಯಾವ ಕ್ರಮದಲ್ಲಿ ಸರಕಾರಕ್ಕೆ ಸಲ್ಲಿಸುತ್ತೆ ನನಗೆ ಗೊತ್ತಿಲ್ಲ. ಸರಕಾರದಲ್ಲಿ ವಿವಿಧ ವಿಭಾಗಗಳು ಇರುತ್ತವೆ. ಆ ಆ ವಿಭಾಗಕ್ಕೆ ಪ್ರತ್ಯೇಕವಾಗಿ ನಿರ್ಣಯಗಳು ತಲುಪಬೇಕು. ಆ ಇಲಾಖೆ ಅದನ್ನು ಪರಿಶೀಲಿಸಿ ಕ್ರಮ ಕೈಕೊಳ್ಳಬೇಕು. ಆ ನಿರ್ಣಯ ಸರ್ಕಾರದ ಪಾಲಿಸಿಗಳಿಗೆ ಅನುಗುಣವಾಗಿರಬೇಕು. ಆ ನಿರ್ಣಯಗಳ ಹಿಂದೆ ಬೆನ್ನು ಹತ್ತಿ ಹೋಗುವ ಜನ ಇರಬೇಕು. ಸರಕಾರ ಸಮ್ಮೇಳನಗಳ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಒಂದು ಹೊಣೆಯನ್ನು ಹೊರಬೇಕು. ಸಮ್ಮೇಳನಕ್ಕೆ ಕೋಟಿ ಹಣ ನೀಡುವ ಸರಕಾರ ಅಷ್ಟಕ್ಕೇ ಸುಮ್ಮನಿರಬಾರದು. ತನ್ನ ಓರ್ವ ಅಧಿಕಾರಿಯನ್ನು ನಿಯೋಜಿಸಿ ಸರಕಾರಕ್ಕೆ ಇಡೀ ಸಮ್ಮೇಳನದಲ್ಲಿ ಏನೇನು ಸಲಹೆ ಸೂಚನೆ ಬರುತ್ತೆ ಅನ್ನುವುದನ್ನು ದಾಖಲೆ ಮಾಡುವಂತೆ ಮಾಡಬೇಕು. ಈ ಎಲ್ಲ ವಿಚಾರಗಳು ಜಾರಿ ಆಗುವ ಹಾಗೆ ಆ ಅಧಿಕಾರಿ ಮಾಡಬೇಕು. ಅಲ್ಲದೆ ಕನ್ನಡ ಸಾಹಿತ್ಯ ಸಮ್ಮೇಳನ ಏನೋ ಒಂದು ಜಾತ್ರೆ ಅನ್ನುವ ಅಭಿಪ್ರಾಯ ಸರಕಾರದ್ದಾಗಬಾರದು. ದೇಶ, ಭಾಷೆಯನ್ನು ಜನಜೀವನವನ್ನು ಗಮನದಲ್ಲಿ ಇರಿಸಿಕೊಂಡು ನಡೆಸುವ ಈ ಸಮ್ಮೇಳನಕ್ಕೆ ಸರಕಾರ ಗೌರವ, ಪ್ರಾತಿನಿಧ್ಯವನ್ನು ನೀಡಬೇಕು. ಇಲ್ಲಿ ಕೇಳಿ ಬರುವ ವಿಚಾರಗಳಿಗೆ ಸರಕಾರದ ಮುದ್ರೆ ಬೀಳಬೇಕು.
ಕನ್ನಡ ಸಾಹಿತ್ಯ, ಸಿನಿಮಾ, ಪ್ರಾಧ್ಯಾಪನ, ಚಳವಳಿ ಮತ್ತು ಸಾಂಸ್ಕೃತಿಕ ಲೋಕದ ಮಹತ್ವದ ಪ್ರತಿನಿಧಿಗಳೆಂದು ಖ್ಯಾತರಾಗಿರುವ ಡಾ. ಬರಗೂರು ರಾಮಚಂದ್ರಪ್ಪನವರು ರಾಯಚೂರಿನಲ್ಲಿ ಬರುವ ಡಿಸೆಂಬರ್ ೨ರಿಂದ ಮೂರು ದಿನಗಳವರೆಗೆ ನಡೆಯಲಿರುವ ೮೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ.
‘ಬ್ರಹ್ಮಪುತ್ರ, ಗಂಗಾನದಿಗಳಷ್ಟೆ ಶ್ರೇಷ್ಠವಲ್ಲ, ನಮ್ಮೂರಿನ ಹಳ್ಳ- ಕೊಳ್ಳಗಳೂ ಶ್ರೇಷ್ಠ. ಶ್ರೀಗಂಧ ಮಾತ್ರವಲ್ಲ, ನಮ್ಮೂರಿನ ಜಾಲಿ ಮರವೂ ಶ್ರೇಷ್ಠ. ಕೋಗಿಲೆ ಅಷ್ಟೇ ಅಲ್ಲ, ನಮ್ಮೂರಿನ ಕಾಗೆಯೂ ನನಗೆ ಶ್ರೇಷ್ಠವೇ ಆಗಿದೆ`. ಈ ಬರಗೂರು ರಾಮಚಂದ್ರಪ್ಪನವರ ಮಾತುಗಳು ಅವರ ಅಂತರಾಳದ ಒಂದು ನೋಟ. ತಳ ಮಟ್ಟದ ಜನರ ನೋವುಗಳಿಗೆ ಸದಾ ತುಡಿಯುವ, ಚಿಂತಿಸುವ ಮನಸ್ಸು ಅವರದು. ಅವರನ್ನು ಜನ ಗುರುತಿಸುವುದು ಬಂಡಾಯ ವ್ಯಕ್ತಿತ್ವದವರಾಗಿ, ಬಂಡಾಯ ಸಾಹಿತಿಯಾಗಿ, ಬಂಡಾಯದ ಮಾತುಗಾರರಾಗಿ. ಈ ಕುರಿತು ಬರಗೂರರು ಹೇಳುತ್ತಾರೆ “ಬಂಡಾಯವೆಂದರೆ ಹೊಡಿ, ಬಡಿ, ಕೊಲ್ಲು ಎಂದಲ್ಲ. ಬಂಡಾಯವೆಂಬುದು ನನ್ನ ಪ್ರಕಾರ ಸಿದ್ಧಾಂತ. ಯಾವುದೇ ಒಂದು ಅನಿವಾರ್ಯ ಪರಿಸ್ಥಿತಿ ಒದಗಿದಾಗ ಅದಕ್ಕೆ ಅಗತ್ಯವಾದ ಪ್ರತಿಕ್ರಿಯೆ ನೀಡದೆ ಸುಮ್ಮನೆ ಮೂಖನಾಗಿರುವುದು ನನಗೆ ಸಾಧ್ಯವಿಲ್ಲ. ಹಾಗೆ ಸುಮ್ಮನಿರುವುದು ನನಗೆ ಸಮ್ಮತವೂ ಅಲ್ಲ”. ನಾವು ಬರಗೂರರ ಅಭಿಪ್ರಾಯಗಳನ್ನು ಒಪ್ಪದಿರಬಹುದು ಅಥವಾ ಬಿಡಬಹುದು. ಆದರೆ ಅವರ ಕನ್ನಡ ಪ್ರೀತಿ, ಕನ್ನಡದ ಹೋರಾಟಗಳು, ಕನ್ನಡ ಕಾಳಜಿಗಳು, ಕನ್ನಡಕ್ಕಾಗಿ ಮಾಡಿದ ಕೆಲಸವನ್ನು ತೆಗೆದು ಹಾಕಲು ಸಾಧ್ಯವಿಲ್ಲ.
ಬರಗೂರು ರಾಮಚಂದ್ರಪ್ಪನವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಪಾಟಿ ಚೀಲ ಹಿಡಿದು ಕೆಂಪು ಬಸ್ಸಿನ ಹಿಂದೆ ಓಡುತ್ತಿದ್ದ ಬರಗೂರರು, ತುಮಕೂರು, ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ನಾಡಿನಲ್ಲಿ ಹೊಸ ಆಲೋಚನೆ, ಚಿಂತನೆಗಳಿಗೆ ಕಾರಣರಾದವರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಬರಗೂರರು ಸಲ್ಲಿಸಿದ ಸೇವೆ ಗಣನೀಯವಾದ್ದದ್ದು. ಸಾಹಿತ್ಯದಷ್ಟೆ ಸಿನೆಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನೆಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ಕೂಡ ವಿಭಿನ್ನ ಹಾದಿ ಹಿಡಿದವರು. ಬರಗೂರರ ಚಿತ್ರಗಳು ಬಡವರ, ದಲಿತರನ್ನು ಧ್ವನಿಸುವ ಮೂಲಕ ಭಾರತೀಯ ಸಿನೆಮಾ ರಂಗದ ಚರಿತ್ರೆಯ ಪುಟಗಳಾಗಿ ಮಿಂಚಿವೆ. ಅವರು ಕನ್ನಡದ ಮೇರು ನಟ ಡಾ.ರಾಜ್ಕುಮಾರ್ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಸಿನಿಮಾ ನಿರ್ದೇಶನ, ಹಾಡುಗಳು, ಕಥೆ, ಚಿತ್ರಕಥೆ ಇವೆಲ್ಲಾ ಕಲಾತ್ಮಕ ಹಾಗೂ ಜನಮಾನಸಗಳನ್ನು ತನ್ನದೇ ಆದ ರೀತಿಯಲ್ಲಿ ಸೆಳೆದಿವೆ.
ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಇವುಗಳಲ್ಲಿ ಬರಗೂರರು ದಕ್ಷರಾಗಿ ಕೆಲಸಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯಲ್ಲಿದ್ದಾಗ ಅಲೆಮಾರಿ ಮತ್ತು ಅರೆ ಅಲೆಮಾರಿ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿ, ೪೦ಕ್ಕೂ ಅಧಿಕ ಕೃತಿಗಳು ಪ್ರಕಟವಾಗಲು ಕಾರಣರಾಗಿದ್ದಾರೆ. ಪ್ರಸಕ್ತದಲ್ಲಿ ಅವರು ಪ್ರಾಥಮಿಕ ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಪರ ಹೋರಾಟ ಮತ್ತು ಚಿಂತನೆಗಳಲ್ಲಿ ಅವರು ಎಂದೂ ಹಿಂದೆ ಬೀಳದವರು. ಕನ್ನಡ ಪರ ಕಾರ್ಯಕ್ರಮಗಳು, ಕನ್ನಡದ ಸಾಮಾನ್ಯ ಜನತೆ, ಕನ್ನಡತನವನ್ನು ಬಿತ್ತುವ ಕೆಲಸ ಅವರಿಗೆ ಎಂದೆಂದೂ ಪ್ರಿಯ. ಹೀಗಾಗಿ ಕನ್ನಡ ಪರ ಆಸಕ್ತರಿಗೆ ಅವರು ಎಂದೆಂದೂ ಪ್ರಿಯರು. ಹಾಗೆಂದ ಮಾತ್ರಕ್ಕೆ ಅವರು ಎಲ್ಲರನ್ನೂ ಪ್ರಿಯವಾಗಿಸಲು ಬಣ್ಣ ಬಣ್ಣದ ಮಾತುಗಳನ್ನಾಡುವವರಲ್ಲ. ಹೀಗಾಗಿ ಅವರ ಬಂಡಾಯ ಮನೋಧರ್ಮದ ಮಾತುಗಳು ಎಲ್ಲ ಜನರ ವೈಯಕ್ತಿಕ ಪ್ರೀತಿಗಳನ್ನೂ, ನಿಲುವುಗಳನ್ನೂ ಆಗಾಗ ಕೆದಕುತ್ತದೆ. ಅವರ ಮಾತುಗಳಿಗೆ ಹಲವು ಬಣ್ಣಗಳನ್ನು ಹಚ್ಚಿ ಅವರು ಹೀಗೆಂದರು, ಹಾಗೆಂದರು, ಅವರನ್ನು ಎಡಬಿಡಂಗಿ ಅಂದರು, ಮತ್ತೊಬ್ಬರು ಪ್ರಶಸ್ತಿಗೆ ಯೋಗ್ಯರಲ್ಲ ಎಂದರು, ಇನ್ನೊಬ್ಬರು ಏಕೆ ವಿಶ್ವಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಬಾರದು ಎಂದರು ಇತ್ಯಾದಿ ವಾಗ್ವಾದಗಳು ಹಲವು ಬಾರಿ ಪತ್ರಿಕೆಗಳಲ್ಲಿ ಕಂಡಬಂದದ್ದಿದೆ. ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ಅವರು ಎಲ್ಲರಿಗೂ ಪ್ರಿಯರು ಆದರೆ, ಎಲ್ಲವನ್ನೂ ತಮ್ಮ ಬಂಡಾಯದ ಸಿದ್ಧಾಂತಗಳ ಆಳವಾದ ನಿಲುವಿನ ಮೂಸೆಯಲ್ಲಿಟ್ಟು ಕನ್ನಡದ ಕಾಳಜಿಗಳಲ್ಲಿ ಅಳೆಯುವ ತಮ್ಮ ಮೂಲಭೂತ ಗುಣವನ್ನು ಅವರು ಬಿಟ್ಟುಕೊಡಲು ತಯಾರಿಲ್ಲ.
ಜಾಗತೀಕರಣವೆಂಬ ಭ್ರಮೆಯಲ್ಲಿ ಕಳೆದು ಹೋಗುತ್ತಿರುವ ವಿಶ್ವವನ್ನು ಅವರು ಮನನೀಯವಾಗಿ ಗುರುತಿಸುತ್ತಾರೆ. “ಕೈಗಾರಿಕೀಕರಣ ಕಾಲದಲ್ಲಿದ್ದ ಜನರ ಕನಸುಗಳೇ ಬೇರೆ. ಜಾಗತೀಕರಣ ಕಾಲದ ಕನಸುಗಳೇ ಬೇರೆ. ಈಗಲೂ ಹಿಂದಿನ ಕನಸುಗಳೇ ಇರಬೇಕೆಂದು ನಾನು ಹೇಳುತ್ತಿಲ್ಲ. ನಮಗೆ ಆರೋಗ್ಯಕರ ಮನೋಧರ್ಮವನ್ನು ಬೆಳೆಸುವ ಕನಸುಗಳು ಬೇಕು; ಆ ಕನಸುಗಳು ಸಾಕಾರಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವುದು, ತಕ್ಕಮಟ್ಟಿನ ಉದ್ಯೋಗ ಪಡೆಯುವುದು, ಬದುಕಲಿಕ್ಕೆ ಬೇಕಿರುವಷ್ಟು ಸಂಬಳ ಪಡೆಯುವುದು, ಮನೆ ಕಟ್ಟಿಸುವುದು, ಕುಟುಂಬದಲ್ಲಿ ನೆಮ್ಮದಿ ಕಾಯ್ದುಕೊಳ್ಳುವುದು – ಈ ಕೆಲವು, ಕೈಗಾರಿಕೀಕರಣ ಕಾಲದ ಕನಸುಗಳು. ಇವು ‘ಸುಖಮುಖಿಯಾದ’ ಕನಸುಗಳು.
ಆದರೆ ಜಾಗತೀಕರಣ ಹುಟ್ಟುಹಾಕುತ್ತಿರುವುದು ‘ಭೋಗಮುಖಿಯಾದ’ ಕನಸುಗಳು. ಬದುಕಲಿಕ್ಕೆ ಮಾತ್ರ ಸಂಬಳ ಸಾಲದು, ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬೇಕು. ವೈಭೋಗದ ಜೀವನಕ್ಕೆ ವಿಲಾಸದ ವಸ್ತುಗಳು ಬೇಕು. ಇದೇ ಜೀವನ ವಿಧಾನವಾಗಬೇಕು – ಹೀಗೆ ಭೋಗ ಬದುಕನ್ನು ಬಯಸುವ ಜಾಗತೀಕರಣ ಅರ್ಥಾತ್ ಖಾಸಗೀಕರಣ, ಜೀವನದ ಆದ್ಯತೆ ಮತ್ತು ಆದರ್ಶಗಳನ್ನೂ ಬದಲಿಸುತ್ತಿದೆ. ಖಾಸಗಿ ಬಂಡವಾಳಗಾರರ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡುವ ದೃಷ್ಟಿಯಿಂದಲೇ ಮನೋಧರ್ಮವನ್ನು ಬದಲಾಯಿಸಲಾಗುತ್ತಿದೆ.
ಬದುಕಿನ ಬದಲಾವಣೆಯೆಂದರೆ ಮೇಲ್ಪದರದ ಬದಲಾವಣೆ ಎಂದಾಗುತ್ತಿದೆ. `ಮೇಲ್ಪದರ’ ಎನ್ನುವುದು ಸಾಮಾಜಿಕ, ಆರ್ಥಿಕ ಮೇಲ್ಪದರವೂ ಹೌದು; ತೆಳು ಬದಲಾವಣೆಯ ಸ್ವರೂಪವೂ ಹೌದು. ಹೀಗಾಗಿ ಕೈಗಾರಿಕೀಕರಣ ಕಾಲದ ‘ವಿಕಾಸ ಜೀವನ’ವು ಖಾಸಗೀಕರಣ ಕಾಲದಲ್ಲಿ ‘ವಿಲಾಸ ಜೀವನ’ವಾಗುತ್ತಿದೆ. ಖಾಸಗೀಕರಣದ ‘ಕೆನೆಪದರ’ವಾದ ಕಾರ್ಪೊರೇಟ್ ವಲಯವು ಭೋಗವನ್ನೇ ಸುಖವೆಂದು ಬಿಂಬಿಸುತ್ತಿದೆ. ವಾಸ್ತವವಾಗಿ ಭೋಗವೇ ಬೇರೆ, ಸುಖವೇ ಬೇರೆ. ಆದರೆ ಭೋಗದ ಬೆನ್ನು ಹತ್ತಿದವರು ಸುಖಕ್ಕೆ ಬೆನ್ನು ತೋರಿಸುತ್ತಾರೆಂಬ ಸತ್ಯವನ್ನು ಕಾರ್ಪೊರೇಟ್ ವಲಯ ಹೂತುಹಾಕುತ್ತಿದೆ.”
ಬರಗೂರರ ಸಾಹಿತ್ಯದ ಹಾದಿಯಲ್ಲಿನ ಕೆಲವು ಕೃತಿಗಳನ್ನು ನೆನೆಸಿಕೊಳ್ಳುವುದಾದರೆ ‘ಒಂದು ಊರಿನ ಕತೆಗಳು’, ‘ಕನ್ನಡಾಭಿಮಾನ’, ‘ಕಪ್ಪು ನೆಲದ ಕೆಂಪು ಕಾಲು’, ‘ಮರಕುಟಿಗ’, ‘ರಾಜಕಾರಣಿ’, ‘ಸಾಹಿತ್ಯ’, ‘ಸುಂಟರಗಾಳಿ’, ‘ಸೂತ್ರ’, ‘ಕಾಂಟೆಸ್ಸಾ ಕಾವ್ಯ’, ‘ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ’, ‘ನೆತ್ತರಲ್ಲಿ ನೆಂದ ಹೂ’, ‘ಗುಲಾಮನ ಗೀತೆ’, `ಸಿನಿಮಾ : ಒಂದು ಜನಪದ ಕಲೆ`, ‘ಮರ್ಯಾದಸ್ಥ ಮನುಷ್ಯರಾಗೋಣ’ ಮುಂತಾದವು ತಕ್ಷಣ ನೆನಪಿಗೆ ಬರುತ್ತವೆ. ಬರಗೂರರ ‘ಸುಂಟರಗಾಳಿ’ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
‘ಪಂಪ ಪ್ರಶಸ್ತಿ’, ‘ನಾಡೋಜ’ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’ ಹಾಗೂ ಹಲವಾರು ರಾಜ್ಯಮಟ್ಟದ, ಸಂಘ ಸಂಸ್ಥೆಗಳ ಗೌರವಗಳು ಬರಗೂರು ರಾಮಚಂದ್ರಪ್ಪನವರಿಗೆ ಸಂದಿವೆ. ಇವೆಲ್ಲಕ್ಕೂ ಕಿರೀಟವಿಟ್ಟಂತೆ ಕನ್ನಡ ಸಾಹಿತ್ಯ ಪರಿಷತ್ತು ಬರಗೂರು ರಾಮಚಂದ್ರಪ್ಪನವರನ್ನು ರಾಯಚೂರಿನಲ್ಲಿ ಡಿಸೆಂಬರ್ ೨, ೩, ೪ರಂದು ನಡೆಯಲಿರುವ ೮೨ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬರಗೂರರು “ಇದು ಕನ್ನಡ ಸಾಹಿತ್ಯ ಲೋಕದಲ್ಲಿ ದೊರೆಯುವ ಅತ್ಯುನ್ನತ ಗೌರವ ಎಂಬುದು ನನ್ನ ಭಾವನೆ. ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಸಂತಸ ಮೂಡಿಸಿದೆ. ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ನನ್ನಂಥವರ ಪ್ರತಿಭೆ ಮೇಲೆ ಬರಲು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಇವೆ. ಪ್ರತಿಯೊಬ್ಬ ವ್ಯಕ್ತಿ ಪ್ರತಿಭೆ ಮತ್ತು ಸಂಕಲ್ಪಗಳನ್ನು ಒಗ್ಗೂಡಿಸಿಯೇ ಮೇಲೆ ಬರಬೇಕು. ಸಾಮಾಜಿಕ ನ್ಯಾಯವು ಪ್ರತಿಭೆಗೆ ವಿರೋಧವಾಗಿ ಇರಬಾರದು. ನಾನು ಎಂದಿಗೂ ಇಂಥ ದೊಡ್ಡ ಗೌರವದ ಕನಸನ್ನೇ ಕಂಡವನಲ್ಲ. ಕೊಳೆಗೇರಿಗಳ ನಿವಾಸಿಗಳಿಗೆ, ದುರ್ಬಲರಿಗೆ, ಬಡವರಿಗೆ ಐಡೆಂಟಿಟಿ ಏನು ಎಂಬುದು ಈ ಪ್ರಶ್ನೆಗಳ ಸಾಲಿನಲ್ಲಿ ಮೊದಲನೆಯದು. ಸಾಮಾಜಿಕ, ಆರ್ಥಿಕ ಐಡೆಂಟಿಟಿ ನಮ್ಮಂಥವರಿಗೆ ಕನಸು ಎಂಬ ಸ್ಥಿತಿಯಲ್ಲಿ ನಾನು ಶ್ರೇಷ್ಠತೆಯ ಬೆಂಬಲ ಇದ್ದರೆ ಒಳ್ಳೆಯದು ಎಂದುಕೊಂಡು ಅರಸಿದ್ದು ಶಿಕ್ಷಣದ ಐಡೆಂಟಿಟಿಯನ್ನ. ನಮ್ಮ ಮನೆಯಲ್ಲಿದ್ದ ‘ಜೈಮಿನಿ ಭಾರತ’ದ ಪ್ರತಿಯನ್ನು ಹಿಡಿದಿಕೊಂಡು ಊರೆಲ್ಲ ಓಡಾಡಿದ ಪರಿಯಿಂದಲೇ, ‘ಈತ ಓದುವ ಹುಡುಗ’ ಎಂದು ಕರೆಯಿಸಿಕೊಂಡು, ಐಡೆಂಟಿಟಿ ಕಂಡುಕೊಂಡೆ. ಅದರಿಂದಲೇ ನನ್ನ ಅಸ್ಮಿತೆಯ ಸಮಸ್ಯೆಯನ್ನು ನೀಗಿಸಿಕೊಂಡೆ. ಹಾಗೆಯೇ ಓದುತ್ತ ಸಾಗಿದೆ. ‘ಶ್ರೀಮಂತರಲ್ಲದವರೂ ಬರೆಯುವ ಮೂಲಕ ಬೆಳೆಯಬಹುದು’ ಎಂದು ರವೀಂದ್ರನಾಥ್ ಠಾಗೂರರು ಹೇಳಿದಂತೆ, ನಾನೂ ಬದ್ಧತೆಯೊಂದಿಗೆ ಬರೆಯಲು ಆರಂಭಿಸಿದೆ. ಎಂದಿಗೂ ಸಾಮಾಜಿಕ ಕಾಳಜಿ, ಸೃಜನಶೀಲತೆಯನ್ನು ಬಿಡದೆ ಬರೆದೆ. ನನ್ನ ಮೂಲಕ ನನ್ನಂತಹ ಅಸಂಖ್ಯಾತ ಪ್ರತಿಭೆಗಳಿಗೆ ಈ ಗೌರವ ಸಂದಿದೆ ಎಂಬುದೇ ನನ್ನ ಭಾವನೆ. ಇದು ಅಸ್ಮಿತೆಯ ಸವಾಲನ್ನು ಎದುರಿಸಿದ ಫಲ” ಎಂದಿದ್ದಾರೆ.
ಯಾವುದೇ ವ್ಯಾಪಾರೀ ಮಾಧ್ಯಮದ ಸರಕಿಲ್ಲದಿದ್ದರೂ ಉತ್ತಮ ಸಾಂಸ್ಕೃತಿಕ ಮೌಲ್ಯಗಳಿಂದ ಜನಪ್ರೀತಿಗಳಿಸಿ ಶತದಿನೋತ್ಸವ ಆಚರಿಸಿದ ‘ಭಾಗೀರತಿ’ ಚಿತ್ರವೇ ಅಲ್ಲದೆ ‘ಒಂದು ಊರಿನ ಕಥೆ’, ‘ಬೆಂಕಿ’, ‘ಸೂರ್ಯ’, ‘ಕೋಟೆ’, ‘ಕ್ಷಾಮ’, ‘ಶಾಂತಿ’, ‘ಕರಡಿಪುರ’, ‘ತಾಯಿ’, ‘ಏಕಲವ್ಯ’, ‘ಶಬರಿ’, ‘ಹಗಲು ವೇಷ’, ‘ಭೂಮಿತಾಯಿ’ ಮುಂತಾದವು ಬರಗೂರರ ಚಿತ್ರಗಳು. ಇವರ ಹಲವಾರು ಚಿತ್ರಗಳು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿವೆ. ಒಂದೇ ಪಾತ್ರವನ್ನು ಒಳಗೊಂಡ ವಿಶಿಷ್ಟ ಚಿತ್ರ ‘ಶಾಂತಿ’ ಗಿನ್ನೆಸ್ ಸಾಧನೆಗಳಲ್ಲಿ ದಾಖಲುಗೊಂಡಿದೆ. ಇವಲ್ಲದೆ ಬರಗೂರರ ಕಥೆ ಮತ್ತು ಹಾಡುಗಳು ಇತರ ನಿರ್ದೇಶಕರ ಚಲನಚಿತ್ರಗಳಲ್ಲಿ ಖ್ಯಾತಿಗಳಿಸಿವೆ. ‘ತಾಯಿ’ ಚಿತ್ರದ ಗೀತರಚನೆಗೆ ರಾಷ್ಟ್ರಪ್ರಶಸ್ತಿ ದೊರೆತಿದ್ದು ಚಿತ್ರ ಸಂಭಾಷಣೆಗೂ ರಾಜ್ಯಪ್ರಶಸ್ತಿಗಳಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.
ಹೀಗೆ ಹಲವು ರೀತಿಯಲ್ಲಿ ಕನ್ನಡದಲ್ಲಿ ಕ್ರಿಯಾಶೀಲರಾಗಿರುವ ಬರಗೂರು ರಾಮಚಂದ್ರಪ್ಪನವರು ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಕೂಟವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಸಂತಸದ ಸಂಗತಿಯಾಗಿದೆ.
Tag: Kannada Sahitya Sammelana 80, Na D’souza, Na Dsouza
೭೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕೋ. ಚೆನ್ನಬಸಪ್ಪ
ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ಇವರು ಬಸಮ್ಮ-ವೀರಣ್ಣ ದಂಪತಿಗಳ ಸುಪುತ್ರರಾಗಿ ೨೭-೨-೧೯೨೨ರಂದು ಜನಿಸಿದರು. ತವರೂರಿನಲ್ಲಿ ಶಾಲಾವಿದ್ಯಾಭ್ಯಾಸ ಮುಗಿಸಿ ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು.
೧೯೪೬ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು ೧೯೬೫ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು.
ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ಸಲ್ಲಿಸಿದ್ದಾರೆ. ಶ್ರೀ ರಾಮಕೃಷ್ಣ ವಿವೇಕಾನಂದ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿದ್ದಾರೆ. ಕರ್ನಾಟಕದ ಅರವಿಂದಾಶ್ರಮದ ಶಾಖಾ ಪ್ರಾರಂಭಕ್ಕೆ ಕಾರಣಕರ್ತರಾಗಿದ್ದಾರೆ. ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕದಲ್ಲಿ ಉಳಿಸಲು ಕರ್ನಾಟಕ ಏಕೀಕರಣ ಸಮಿತಿಯ ಸದಸ್ಯರಾಗಿ ದುಡಿದಿದ್ದಾರೆ. ಹಲವಾರು ಕಾರ್ಮಿಕ ಸಂಘಗಳ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ಸೇವೆಯನ್ನು ಮೆಚ್ಚಿ ಆತ್ಮೀಯರೆಲ್ಲರು ಸೇರಿ ೧೯೮೮ರಲ್ಲಿ ‘ಕೋಚೆ ಯಾರು ಏನು ಎಂತು?’ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದಾರೆ. ಸ.ಸ. ಮಾಳವಾಡ ಪ್ರಶಸ್ತಿ, ಸಂ.ಶಿ. ಭೂಸನೂರಮಠ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ, ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಡಿಲಿಟ್ ಪದವಿ, ಇತ್ಯಾದಿ ಇವರಿಗೆ ಸಂದಿವೆ. ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ೨0೧೩ರಲ್ಲಿ ಆಯ್ಕೆಮಾಡಲಾಯಿತು.
ನ್ಯಾಯಾಲಯದ ಸತ್ಯ ಕಥೆಗಳು (ಅಂಕಣಬರಹ), ಹಿಂದಿರುಗಿ ಬರಲಿಲ್ಲ, ರಕ್ತತರ್ಪಣ, ಬೇಡಿ ಕಳಚಿತು ದೇಶ ಒಡೆಯಿತು ಮೊದಲಾದ ೯ ಕಾದಂಬರಿಗಳನ್ನು; ಅರವಿಂದ, ಬಸವಣ್ಣ ಮೊದಲಾದ ೮ ಜೀವನ ಚರಿತ್ರೆಗಳನ್ನು; ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ೫ ಕವನ ಸಂಕಲನಗಳನ್ನು; ಶ್ರೀ ರಾಮಾಯಣ ದರ್ಶನ ಮಹಾಕಾವ್ಯ ಸಮೀಕ್ಷೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಕೃತಿಗಳನ್ನು; ನನ್ನ ಮನಸ್ಸು ನನ್ನ ನಂಬುಗೆ ಎಂಬ ಆತ್ಮಕಥೆಯನ್ನೂ ರಚಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನ–೭೯
ಅಧ್ಯಕ್ಷರು, ಕೋ. ನ್ನಬಸಪ್ಪ
ದಿನಾಂಕ ೯, ೧0, ೧೧ ಫೆಬ್ರವರಿ ೨0೧೩
ಸ್ಥಳ : ಬಿಜಾಪುರ
ಪರಿಷತ್ತು ಅಧ್ಯಕ್ಷತೆ
ಈ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಎಂದರೆ ಕೇವಲ ಪ್ರತಿಮೆ; ಉತ್ಸವ ವಿಗ್ರಹ, ತಾಯಿ ಸರಸ್ವತಿಯನ್ನು ಪ್ರತಿನಿಧಿಸುವ ಒಂದೇ ವಿಗ್ರಹ. ಈ ನಮ್ರತೆಯಿಂದ ಹುಸಿಯಲ್ಲದ ವಿನಯದಿಂದ ಈ ಸ್ಥಾನವನ್ನು ಪ್ರದಾನ ಮಾಡಿದ ಇಲ್ಲಿ ನೆರೆದ ಮಹಾ ಜನತೆಗೆ, ಸಾರಸ್ವತ ಲೋಕದ ಪ್ರತಿನಿಧಿಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ, ಅದರ ಸ್ಥಳೀಯ ಶಾಖಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಈ ಸಮ್ಮೇಳನ ಸ್ವಾಗತ ಸಮಿತಿಯ ಪದಾಧಿಕಾರಿಗಳಿಗೆ ಈ ಸ್ಥಾನಕ್ಕೆ ಈ ವ್ಯಕ್ತಿ ಯೋಗ್ಯ ಎಂದು ಪರಿಗಣಿಸಿದ ಸಹೃದಯರಿಗೆ ಶರಣಾರ್ಥಿ.
ಸರಕಾರದ ಕಾರ್ಯಕ್ರಮ
ಈ ಸಮ್ಮೇಳನದ ನಿಮಿತ್ತ ದೂರದರ್ಶನದಲ್ಲಿ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ನಾನೂ ಇದ್ದೆ. ಚಂಪಾ, ಡಿ. ವಸುಂಧರಾ ಭೂಪತಿ ಇದ್ದರು. ಕಾರ್ಯಕ್ರಮ ನಡೆಸಿ ಕೊಟ್ಟ ನಿರೂಪಕರು ಚಂಪಾ ಅವರನ್ನು ಕೇಳಿದ ಮೊದಲ ಪ್ರಶ್ನೆ: ಜಾತ್ರೆಯೋಪಾದಿ ಈ ಮೂರು ದಿನದ ಅದ್ದೂರಿ ಆಡಂಬರದ ದುಬಾರಿ “ಸಾಹಿತ್ಯ ಜಾತ್ರೆ” ಎಂಬುದು. ಅದಕ್ಕೆ ಚಂಪಾ ಉತ್ತರ ಕೊಡುತ್ತ ಪರಿಷತ್ತಿನ ಅಧ್ಯಕ್ಷರು ಆಗಲೇ ಹೇಳಿರುವ ಉತ್ತರ “ಇದು ಸರಳವಾಗಿ ಅಡಂಬರವಿಲ್ಲದೆ ಅರ್ಥಪೂರ್ಣ ಸಮಾಲೋಚನಾ (Business Like) ಕೂಟ” ಎಂಬುದಾಗಿ ಹೇಳಿ ಕೊನೆಗೆ ಒಂದು ಮಾತು ಹೇಳಿದರು. “ನಮ್ಮ ಜನ ವರ್ಷವಿಡೀ ದುಡಿದು ದಣಿವಾಗಿ ಹಣ್ಣಾಗಿ ಬೇಸರಗೊಂಡಾಗ ಮೂರು ದಿನ ಇಂಥ ಸಾಹಿತ್ಯ ಸಂತೋಷ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿ ಸಂತೋಷಪಡುವುದರಲ್ಲಿ ಅಷ್ಟೇನು ತಪ್ಪಿಲ್ಲ…… ಎಂದು ಇಂತಹ ಸಮ್ಮೇಳನದ ಔಚಿತ್ಯವನ್ನು ಸಮರ್ಥಿಸಿದರು.
ಅವರು ಹೇಳಿದ `ಕುಣಿದು’ ಎಂಬ ಮಾತು ನನಗೆ, “ಕುಡಿದು” ಎಂದು ಕೇಳಿದಂತಾಯ್ತು-ಚಂಪಾ ಅವರು ಅಂಥ ಹಾಸ್ಯದ ಮಾತು ಆಡಿದ್ದರೂ ಆಡಿರಬಹುದು ಎಂದು ನಾನು ಮನದಲ್ಲೇ ನಕ್ಕೆ. ನನ್ನನ್ನು ಆ ಪ್ರಶ್ನೆ ಕೇಳುತ್ತಾರೆ; ಅದಕ್ಕೆ ತಕ್ಕ ಉತ್ತರ ಕೊಡಲು ನಾನು ಮಾನಸಿಕವಾಗಿ ಸಿದ್ಧತೆ-ಮಾಡಿಕೊಳ್ಳುತ್ತಿದ್ದೆ. ಅವರು ಹೇಳಿದ್ದೇನು ಎಂದು ನನ್ನ ಎಡಬದಿಗೆ ಕುತಿದ್ದವರನ್ನು ಕೇಳಿದೆ. ನನ್ನನ್ನು ಈ ಪ್ರಶ್ನೆ ಕೇಳಿದ್ದರೆ ನಾನು ತಪ್ಪು ಕೇಳಿಸಿಕೊಂಡಿದ್ದ “ಕುಡಿದು ಕುಪ್ಪಳಿಸುವ” ಮಾತನ್ನು ಸಮರ್ಥಿಸುತ್ತಿದ್ದೆ! ಹೇಗೇಂದರೆ; ಚಂಪಾ ಹೇಳಿದ್ದು ಅಷ್ಟೇನೂ ತಪ್ಪಲ್ಲ ಎಂದು ನಾನೂ ದನಿಗೂಡಿಸಿದ್ದರೆ ಪ್ರೇಕ್ಷಕರಿಗೆ ಆಶ್ಚರ್ಯ ಮಾತ್ರವಲ್ಲ ಅಪಾಯಕಾರಿಯಾಗಿ ಭಾಸವಾಗುತ್ತಿತ್ತು ಅಲ್ಲದೆ ಹಾಸ್ಯ ಪ್ರಜ್ಞೆ ಇದ್ದವರು ನಗುತ್ತಿದ್ದರು! ‘ರಾಮರಸ’ ಪ್ರಿಯರಿಗೆ ಖುಷಿಯಾಗುತ್ತಿತ್ತು.
ಕರ್ನಾಟಕ ಅರಾಷ್ಟ್ರೀಯವಲ್ಲ
ಇಂದು ನಾವಿಲ್ಲಿ ಸೇರಿರುವುದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಇದು ಆರೇಳು ಕೋಟಿ ಜನರ ಪ್ರಾತಿನಿಧಿಕ ಸಮಾವೇಶ. ಕನ್ನಡ ಸಮ್ಮೇಳನದಲ್ಲಿ ‘ಅಖಿಲ’ ಎಂಬ ಗುಣವಾಚಕ ಭಾರತಕ್ಕೂ ಕರ್ನಾಟಕಕ್ಕೂ ಅನ್ವಯಿಸುತ್ತದೆ. ಇದನ್ನು ಬಿಡಿಸಿ. ಹಿಗ್ಗಿಸಿ ಹೇಳುವುದಾದರೆ ಇದು ‘ಅಖಿಲ ಭಾರತ ಮತ್ತು ಅಖಿಲ ಕರ್ನಾಟಕ ಸಮ್ಮೇಳನ’ ಎಂದಾಗುತ್ತದೆ. ಈ ಸಮ್ಮೇಳನಾಧ್ಯಕ್ಷ ಅಖಿಲ ಭಾರತವನ್ನು ಕರ್ನಾಟಕವನ್ನು ಕನ್ನಡವನ್ನು- ಸಾಹಿತ್ಯ ಸಂಸ್ಕೃತಿ ಧರ್ಮವನ್ನು ದೃಷ್ಟಿಯಲ್ಲಿಟ್ಟುಕೊಂಡು, ಈ ಭಾರತಾಂತರ್ಗತ ಅಖಿಲ ಕರ್ನಾಟಕದ ಹಿತ, ರಕ್ಷಣೆ, ಅಭಿವೃದ್ಧಿ, ಕ್ಷೇಮವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಬೇಕು. ಅಂದರೆ ಅಖಂಡ ಭಾರತದ ಹಿತಕ್ಕೆ ಧಕ್ಕೆ ಆಗದಂತೆ ಅಖಿಲ ಕರ್ನಾಟಕದ ಹಿತರಕ್ಷಣ ಮಾಡಬೇಕು. ಇಂದಿನ ಈ ಮಹಾಧಿವೇಶನದ ಪ್ರಾರಂಭದಲ್ಲಿ ಕುವೆಂಪು ವಿರಚಿತ ನಾಡಗೀತೆಯನ್ನು ನಾವು ಎದ್ದು ನಿಂತು ಉಚ್ಛ ಕಂಠದಿಂದ ಕರ್ನಾಟಕ ಮಾತೆಯ ಮಹಿಮೆಯನ್ನು ಹಾಡಿದೆವು. ಆ ಗೀತೆಯ ಮೊದಲನೆಯ ಸಾಲು `ಜಯ ಭಾರತ ಜನನಿಯ ತನುಜಾತೆ’ ಎಂಬ ಜಯ ಘೋಷ, ತರುವಾಯ ಎರಡನೆಯ ಸಾಲು `ಜಯ ಹೇ ಕರ್ನಾಟಕ ಮಾತೆ’ ಎಂಬುದು. ಈ ನಾಡಗೀತೆ ಅರ್ಥ, ಮಹತ್ವ ಇಂಗಿತ ಏನು? ಇದನ್ನು ರಚಿಸಿದ ಕವಿ ಹೀಗೆ ವರ್ಣಿಸಿದ್ದಾರೆ.
‘ಈ ನಮ್ಮ ಕರ್ನಾಟಕತ್ವ ಎಂದೆಂದಿಗೂ ಭಾರತೀಯತ್ವಕ್ಕೆ ಅವಿರುದ್ಧವಾಗಿ ನಿಲ್ಲುತ್ತದೆ. ಕರ್ನಾಟಕ ಮಾತೆಗೆ ಜಯೋಷ ಮಾಡುವಾಗಲೆಲ್ಲ ಭಾರತಮಾತೆಯ ಪುತ್ರಿಯೆಂದು ಮೊದಲೆ ಘೋಷಿಸುತ್ತೇವೆ.”
ರಣಘೋಷ
ಸಮಾಜದ ಗುರುಗಳೂ, ಹಿತರಕ್ಷರೂ ಆದ ಸಾಹಿತಿಗಳು ಈ ಭೂ ಸಮಸ್ಯೆ ನಮ್ಮದಲ್ಲ ಎಂದು ಕರ್ತವ್ಯಚ್ಯುತರಾದರೆ ಅದು ಮಹಾಪರಾಧ. ಮಾಡಬಾರದ ಕೃತ್ಯ ಮಾಡಿದವನು ಅಪರಾಧಿಯಾದರೆ ಮಾಡಬೇಕಾದ ಕರ್ತವ್ಯವನ್ನು ಮಾಡದಿದ್ದರೆ ಅವನೂ ಅಪರಾಧಿಯೇ. ದುಶ್ಯಾಸನ ದ್ರೌಪದಿಯ ವಸ್ತ್ರಾಪಹರಣ ಮಾಡಿದಾಗ ಅದು ತಪ್ಪು ಎಂದು ಹೇಳದ ಅದನ್ನು ತಡೆಯದ ದ್ರೋಣಾಚಾರ್ಯನ ಮೌನ ಅಪರಾಧವೆ, ಶಿಕ್ಷಾರ್ಹವೇ. ಹಾಗೆಯೇ ನಾವು ಸಾಹಿತಿಗಳು ಮಾತನಾಡಲೇ ಬೇಕಾದಾಗ ಮಾತನಾಡದಿದ್ದರೆ ಕರ್ತವ್ಯಲೋಪವೆ. ತನ್ನ ಲೇಖನಿಯೆಂಬ ಖಡ್ಗವನ್ನು ಹಿಡಿದು ಭೂಮಾತೆಯ ಮಾನಸಂರಕ್ಷಣೆಗೆ, ಮುನ್ನುಗ್ಗಬೇಕು.
ಸಾಹಿತ್ಯ ಸಮ್ಮೇಳನವೆಂಬ ಈ ರಥದಲ್ಲಿ ಕುಳಿತು ನಾನು ಕೊಡುವ ದಂಡನಾಯಕನ ಆಜ್ಞೆ ಇದು! ಸಾಹಿತಿಗಳೇ ಈ ಧರ್ಮಯುದ್ಧದಲ್ಲಿ ಜೀವದ ಹಂಗು ತೊರೆದು ಹೋದರೆ ಹೋಗಲಿ. ತಲೆಹಾರಿ ಎಂದು ಸಿಂಹನಾದ ಮಾಡುತ್ತ ಮುನ್ನುಗ್ಗಿ “ಸತ್ತರೆ ಸ್ವರ್ಗ, ಗೆದ್ದು ಬದುಕಿದರೆ ಭೂರಾಜ್ಯದ ಒಡೆತನ”- ನಾನೀಗ ಕಲ್ಕಿಯೂಗಬೇಕೆಂದು ಬೇಡಿಕೊಂಬೆ. ‘ಜಯ ಜಯ ಮಹಾದೇವ” ಎಂದು ರಣಘೋಷಮಾಡಿ ಕೃತಕೃತ್ಯರಾಗಿ.
ಸಮ್ಮೇಳನಾಧ್ಯಕ್ಷರ ಪ್ರಾರ್ಥನೆ
ನೀವು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನಾಗಲಿ, ಸರ್ಕಾರದ ಮುಖ್ಯಮಂತ್ರಿಗಳನ್ನಾಗಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನಾಗಲಿ, ನನ್ನನ್ನಾಗಲಿ ಕನ್ನಡಕ್ಕಾಗಿ ನೀವೇನು ಮಾಡಿದ್ದೀರಿ? ಏನು ಮಾಡುತ್ತೀರಿ? ಎಂದು ಕೇಳಬೇಡಿ’ ಬದಲು `ಕನ್ನಡಕ್ಕಾಗಿ ನಾನೇನು ಮಾಡಬೇಕು” ಎಂದು ಕೇಳಿ ಎಂದು ನಾನು ಬಿನ್ನೈಸುತ್ತೇನೆ. ಇದೇ ನನ್ನ ಕೊನೆಯ ಪ್ರಾರ್ಥನೆ. ಸಮಾಧಾನದಿಂದ ಕೇಳಿದ ನಿಮಗೆ ಹೃತ್ಪೂವರ್ಕ ವಂದನೆಗಳು. ಈ ಸ್ಥಾನವನ್ನು ಕೊಟ್ಟು ನನ್ನನ್ನು ಪ್ರೀತಿಸಿದ ಗೌರವಿಸಿ ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರಗಳು.
Tag: Kannada Sahitya Sammelana 79, Ko. Channabasappa
೭೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಸಿ.ಪಿ. ಕೃಷ್ಣಕುಮಾರ್
ಸಿ.ಪಿ.ಕೆ. ಎಂಬ ಮೂರಕ್ಷಗಳಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿರುವ ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ್ ಅವರು ೮-೪-೧೯೩೯ರಲ್ಲಿ ಮೈಸೂರು ಜಿಲ್ಲೆಯ ಕೃಷ್ಣರಾಜ ನಗರದ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿ ಸಾಲಿಗ್ರಾಮದಲ್ಲಿ ಪೂರೈಸಿ ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಮುಂದುವರಿಸಿ ೧೯೬೧ರಲ್ಲಿ ಎಂ.ಎ. ಪದವಿ ಗಳಿಸಿದರು.
೧೯೬೧ರಿಂದ ೧೯೬೪ರವರೆಗೆ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿ ೧೯೬೭ರಿಂದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ೧೯೯೯ರಲ್ಲಿ ನಿವೃತ್ತರಾದರು.
ನಿವೃತ್ತಿಯ ನಂತರ ಸಂದರ್ಶಕ ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ಗ್ರಂಥಪ್ರಕಟನಾ ಅಧ್ಯಕ್ಷರಾಗಿ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ, ಕನಕಪೀಠ ಸಲಹಾ ಸಮಿತಿ ಮೊದಲಾದ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅನೇಕ ಸಾಹಿತ್ಯ ಸಮ್ಮೇಳನಗಳ ಗೋಷ್ಠಿ ಅಧ್ಯಕ್ಷರಾಗಿ, ಕಾರ್ಯನಿರ್ವಹಿಸಿದ ಇವರು ೨0೧೧ರಲ್ಲಿ ಗಂಗಾವತಿಯಲ್ಲಿ ನಡೆದ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅನೇಕ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಆ ಪೈಕಿ ಕೆಲವು ಹೀಗಿವೆ: ಬಸವ ಸಾಹಿತ್ಯಶ್ರೀ, ವಿದ್ವತ್ ಶಿರೋಮಣಿ, ಹನಿಗವನ ಹರಿಕಾರ, ಜಾನಪದತಜ್ಞ, ನೃಪತುಂಗ ಸಾಹಿತ್ಯ ಪ್ರಶಸ್ತಿ ಇತ್ಯಾದಿ.
ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆದಿದ್ದಾರೆ. ಚುಟುಕ, ವ್ಯಕ್ತಿಚಿತ್ರ, ಪ್ರಬಂಧ, ಸಂಶೋಧನೆ, ಜಾನಪದ ವಿಮರ್ಶೆ, ಹಾಸ್ಯ ಭಾಷಾಂತರ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ಇವರ ಕೆಲವು ಕೃತಿಗಳು: ತಾರಾಸಖ, ಕನ್ನಡ ಚತುರ್ಮುಖ, ಏಳು ಗ್ರೀಕ್ ನಾಟಕಗಳು, ಕನ್ನಡ ಉತ್ತರ ರಾಮಚರಿತೆ, ಗೀತಾಂಜಲಿ, ಅರಣ್ಯ ಪರ್ವ, ಕನ್ನಡ ಛಂದಸ್ಸಿನ ಚರಿತ್ರೆ, ಒಗಟು ಮತ್ತು ಗಾದೆ. ಕನ್ನಡ ಸಂಸ್ಕೃತಿ ಸಂಬಂಧ ಇತ್ಯಾದಿ.
ಕನ್ನಡ ಸಾಹಿತ್ಯ ಸಮ್ಮೇಳನ–೭೮
ಅಧ್ಯಕ್ಷರು, ಸಿ.ಪಿ. ಕೃಷ್ಣಕುಮಾರ್
ದಿನಾಂಕ ೯, ೧0, ೧೧ ಡಿಸೆಂಬರ್ ೨0೧೧
ಸ್ಥಳ : ಗಂಗಾವತಿ
ಸಮ್ಮೇಳನದ ಲಾಭ
ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳು ಎಂದು ಅನೇಕರು ಟೀಕಿಸುವುದುಂಟು ಟೀಕೆಯನ್ನು ಅಲ್ಲಗಳೆಯಬೇಕಿಲ್ಲ. ಆದರೆ ಜಾತ್ರೆಗಳಿಂದ, ಅಷ್ಟೇ ಅಲ್ಲ, ಸಂತೆಗಳಿಂದ ಕೂಡ ಪ್ರಯೋಜನಗಳುಂಟು ಎಂಬುದನ್ನು ಮರೆಯದಿರೋಣ. ಜಾತ್ರೆ ಎಂಬುದು ‘ಯಾತ್ರೆ’ಯ, ‘ಸಂತೆ’ ಎಂಬುದು ‘ಸಂಸ್ಥೆ’ಯ ತದ್ಭವಗಳಷ್ಟೆ. ಬದುಕು ಆಸತ್ತಿನಿಂದ ಸತ್ತಿನೆಡೆಗೆ, ಕತ್ತಲೆಯಿಂದ ಬೆಳಕಿನಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ ಅನಂತ ಯಾತ್ರೆಯಾಗಬೇಕು. ನಾವು ಪ್ರತಿವರ್ಷ ಒಂದು ಕಡೆ ಸೇರುವುದು. ಒಬ್ಬರ ಮುಖವನ್ನೊಬ್ಬರು ನೋಡುವುದು, ಪರಸ್ಪರ ಮಾತನಾಡುವುದು, ಒಟ್ಟಿಗೆ ಉಣ್ಣುವುದು ಭಿನ್ನಾಭಿಪ್ರಾಯಗಳನ್ನಿಟ್ಟುಕೊಂಡೂ ಬೆರೆಯುವುದು ಸಾಮಾನ್ಯ ಲಾಭವಲ್ಲ. “ಸಿನಿಕ”ತನ ಬೇಡ; ಸಕರಾತ್ಮಕವಾಗಿ ಅಲೋಚಿಸೋಣ. ಸಾಹಿತ್ಯ ಎನ್ನುವುದು ಜಾತ್ರೆಯ ನಡುವೆ ಹುಟ್ಟುವುದಿಲ್ಲ. ಅದು ಏಕಾಂತ ಸ್ವಗತ ಪ್ರಕ್ರಿಯೆ ಎಂಬುದು ದಿಟ.
ಸಮ್ಮೇಳನದ ನಿರ್ಣಯಗಳು
ನನ್ನ ಈ ಅಧ್ಯಕ್ಷ ಭಾಷಣದಲ್ಲಿ ಹಿಂದಿನವರು ಹೇಳಿರದ ಹೊಸತೇನನ್ನೂ ಬಹುಶಃ ನಾನು ಹೇಳುತ್ತಿಲ್ಲ. ಹೇಳುವುದು ಸಾಧುವೂ ಇಲ್ಲ. ಇದು ಬಹುತೇಕ ಚರ್ವಿತ ಚರ್ವಣವಾಗುವುದು ಅನಿವಾರ್ಯ ಆದರೆ ಅನುಚಿತವೇನಲ್ಲ. ಹಿಂದಿನ ಸಮ್ಮೇಳನಗಳಲ್ಲಿ ಕೈಕೊಂಡ ಅಥವಾ ಬಾಯ್ಕೊಂಡ ನಿರ್ಣಯಳೆಲ್ಲ ಅನುಷ್ಠಾನಗೊಂಡಿಲ್ಲ ಎಂಬ ವಿಷಾದನೀಯ ಸತ್ಯವನ್ನು ಸ್ಮರಿಸಬೇಕಾಗಿದೆ. ಹಾಗೆ ಅನುಷ್ಠಾನಗೊಂಡಿದ್ದರೆ ಇಷ್ಟರಲ್ಲಿ ಕರ್ನಾಟಕ ಭೂತಲ ಸ್ವರ್ಗವಾಗಬಹುದಿತ್ತು. ಸಮ್ಮೇಳನಾಧ್ಯಕ್ಷ ಭಾಷಣವೂ ಪರೋಕ್ಷವಾಗಿ ನಿರ್ಣಯಗಳ ಸರಣಿಯೇ ಆಗಿರುತ್ತದಲ್ಲವೆ. ಇದೆಲ್ಲ ಕಾರ್ಯರೂಪಕ್ಕೆ ಬರುತ್ತದೆ ಎಂಬ ಭರವಸೆಯಾಗಲಿ ಆಶಾವಾದವಾಗಲಿ ನನಗಿಲ್ಲ. ಆದರೆ ನಿರಾಶೆಯೂ ಅನಗತ್ಯ. ಆಶೆ, ನಿರಾಶೆಗಳ ಹಾಸುಹೊಕ್ಕು ಬದುಕು!
ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವಲ್ಲಿ “ಕನ್ನಡ ಸಾಹಿತ್ಯ” ಎಂಬುದನ್ನು ಈ ಹೊತ್ತು ಏಕಶಬ್ದವಾಗಿ ಗ್ರಹಿಸದೆ, ಕನ್ನಡ, ಸಾಹಿತ್ಯ ಎಂದು ಬಿಡಿಸಿ ಪರಿಭಾವಿಸುವುದು ಯುಕ್ತವೆನಿಸುತ್ತದೆ. ಇದುವರೆಗೆ ‘ಸಾಹಿತ್ಯ’ದ ಮೇಲೆ ಒತ್ತು ಹಾಕುತ್ತ ಬಂದಿದ್ದೇವೆ. ಈಗ ‘ಕನ್ನಡ’ದ ಮೇಲೆ ಒತ್ತು ಹಾಕಬೇಕಾಗಿದೆ. ಭಾಷೆಯಿಲ್ಲದೆ ಸಾಹಿತ್ಯವೆಲ್ಲಿ? ಕನ್ನಡವನ್ನು ಗಟ್ಟಿಗೊಳಿಸಿ ಕಟ್ಟುವ, ತನ್ಮೂಲಕ ಸಮಷ್ಟಿ ಜೀವನವನ್ನು ಕಟ್ಟುವ ಕೆಲಸ ಇನ್ನು ಮುಂದೆ ಹಿಂದೆಂದಿಗಿಂತ ಮಿಗಿಲಾಗಿ ನಡೆಯಬೇಕಿದೆ. ಈ ದೃಷ್ಟಿಯಿಂದ ‘ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು `ಕನ್ನಡ ಸಮ್ಮೇಳನ’ ಎಂದಷ್ಟೇ ಕರೆದರೆ ಸಾಕೆನಿಸುತ್ತದೆ!
ಮಹಿಳೆಯರಿಗೆ ಹೆಚ್ಚು ಅವಕಾಶ
ಸಾಹಿತ್ಯ ಸಮ್ಮೇಳನಗಳಲ್ಲಿ ಸ್ತ್ರೀಯರಿಗೆ ಮತ್ತು ದಲಿತರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸುವುದು ಅಗತ್ಯ. ‘ನೊಂದವರ ನೋವ ನೋಯದವರೆತ್ತ ಬಲ್ಲರು?’ ಎಂದು ಕೇಳಿದಳು ಅಕ್ಕ, “ಕಾವಿನಿಂದ ಕಾವ್ಯ” ಎಂದರು ಎ.ಆರ್.ಕೃ. ಮಹಿಳೆಯರ ಮತ್ತು ದಲಿತರ ನೋವು, ಕಾವುಗಳು ಮುಕ್ತವಾಗಿ ಅಭಿವ್ಯಕ್ತವಾಗಬೇಕು.
ರಾಜಕಾರಣಿಗಳ ಪಾತ್ರ
ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಿಣಿಗಳ ಪಾತ್ರವೇನು ಎಂಬುದೊಂದು ಪ್ರಶ್ನೆ. ಅವರೂ ಕನ್ನಡಿಗರೇ ಸಾಹಿತ್ಯ ಸಂಸ್ಕೃತಿಗಳಲ್ಲಿ ಅಸಕ್ತರಾದವರು ಅವರಲ್ಲಿ ಇರಬಾರದೆಂದಿಲ್ಲ. ಅಲ್ಲದೆ, ಸಾಹಿತ್ಯ ಎಲ್ಲರಿಗಾಗಿ. ಆದರೂ ಕನ್ನಡ ಸಾಹಿತ್ಯ ಪರಿಷತ್ತು ಸ್ವಂತ ಸಂಪನ್ಮೂಲಗಳನ್ನು ರೂಢಿಸಿಕೊಂಡು ಸಂಪೂರ್ಣ ಸ್ವಾವಲಂಬಿಯಾದಾಗ, ಸರ್ಕಾರದ ಹಂಗನ್ನು ಹರಿದುಕೊಂಡಾಗ, ರಾಜಕಾರಿಣಿಗಳ ಮೆರೆತವನ್ನು ತಪ್ಪಿಸಬಹುದು. ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು ಮಾತ್ರ ವೇದಿಕೆಯನ್ನು ಅಲಂಕರಿಸುತ್ತಾರೆ. ರಾಜಕಾರಣಿಗಳು ಕೆಳಗೆ ಕುಳಿತುಕೊಳ್ಳುತ್ತಾರೆ ಎಂಬುದು ಕೂತೂಹಲಕಾರಿ ಸಂಗತಿ.
ಉತ್ಸವಮೂರ್ತಿ
ಸಮ್ಮೇಳನಾಧ್ಯಕ್ಷರು ಕೇವಲ ಉತ್ಸವಮೂರ್ತಿಯಾಗಬೇಕೆ. ಅವರನ್ನು ಮೆರವಣಿಗೆ ಮಾಡಿ ಮನೆಗೆ ಕಳುಹಿಸಬೇಕೆ ಎಂಬುದು ವಿಚಾರಯೋಗ್ಯ. ಅವರಿಗೆ ಕ್ರಿಯಾತ್ಮಕವಾದ ಯಾವುದಾದರೂ ಪಾತ್ರವನ್ನು ಕೊಡುವುದು ಒಳ್ಳೆಯದು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕೆಲವೊಂದು ಕರ್ತವ್ಯಗಳನ್ನು ಅಧಿಕಾರಗಳನ್ನು ಕೂಡ ಸಮ್ಮೇಳನಾಧ್ಯಕ್ಷರಿಗೆ ವಹಿಸಬಾರದೇಕೆ?
Tag: Kannada Sahitya Sammelana 78, C.P. Krishna Kumar, C.P. Krishnakumar
೭೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಪ್ರೊ. ಜಿ. ವೆಂಕಟಸುಬ್ಬಯ್ಯ
ಶತಾಯುಷಿಯಾದ ಕನ್ನಡ ವಿದ್ವಾಂಸ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಶ್ರೀರಂಗಪಟ್ಟಣದ ಗಂಜಾಂಗ್ರಾಮಕ್ಕೆ ಸೇರಿದವರು. ಶಿಕ್ಷಕರೂ ವಿದ್ವಾಂಸರೂ ಆದ ಗಂಜಾಂ ತಿಮ್ಮಣ್ಣಯ್ಯ ಮತ್ತು ತಾಯಿ ಸುಬ್ಬಮ್ಮ ದಂಪತಿಗಳ ಜ್ಯೇಷ್ಠಪುತ್ರರಾಗಿ ೨೩-೮-೧೯೧೩ರಂದು ಜನಿಸಿದರು. ೧೯೨೭ ರಿಂದ ೧೯೩0ರ ವರೆಗೆ ಪ್ರೌಢಶಾಲೆ ಶಿಕ್ಷಣವನ್ನು ಮಧುಗಿರಿಯಲ್ಲಿ ಮುಗಿಸಿ ೧೯೩೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ೧೯೩೮ರಲ್ಲಿ ಬಿ.ಟಿ. ಪದವಿಯನ್ನೂ ಪಡೆದರು.
೧೯೩೮ ರಿಂದ ೧೯೭೨ ರವರೆಗೆ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ೧೯೭೩ರಲ್ಲಿ ನಿವೃತ್ತರಾದರು.
ಇವರು ೧೯೫೪-೫೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದರು. ೧೯೬೪-೬೯ರಲ್ಲಿ ಪರಿಷತ್ತಿನ ಅಧ್ಯಕ್ಷರಾದರು, ೧೯೭೩ ರಿಂದ ೧೯೯೨ವರೆಗೆ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಶ್ರಮಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಅಖಿಲ ಭಾರತ ನಿಘಂಟುಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ(೧೯೮೭), ಮಾಸ್ತಿ ಪ್ರಶಸ್ತಿ(೨00೫) ಸೇಡಿಯಾಪು ಪ್ರಶಸ್ತಿ(೧೯೯೪), ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಅಧ್ಯಕ್ಷಗೌರವ, ಗೋಕಾಕ್ ಪ್ರಶಸ್ತಿ, ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ ಇತ್ಯಾದಿ ಸಂದಿವೆ.
ನಿಘಂಟು ಸಂಪಾದನೆ, ಸಾಹಿತ್ಯ ಚರಿತ್ರೆ ಗ್ರಂಥ ರಚನೆಯಲ್ಲಿ ತಜ್ಞರಾದ ಇವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ:
ನಯಸೇನ, ಅನುಕಲ್ಪನೆ, ಕಬೀರ್, ಸರ್ವಜ್ಞ, ಕವಿಜನ್ನ, ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳಸಿದವರು, ಎರಲು ಶಬ್ದಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕ್ಲಿಷ್ಟಪದಕೋಶ, ಇಗೋ ಕನ್ನಡ ಇತ್ಯಾದಿ.
ಕನ್ನಡ ಸಾಹಿತ್ಯ ಸಮ್ಮೇಳನ–೭೭
ಅಧ್ಯಕ್ಷರು, ಜಿ. ವೆಂಕಟಸುಬ್ಬಯ್ಯ
ದಿನಾಂಕ ೪, ೫, ೬ ಫೆಬ್ರವರಿ ೨0೧೧
ಸ್ಥಳ : ಬೆಂಗಳೂರು
ಪರಿಷತ್ತು ಎಚ್ಚರಿಕೆ ವಹಿಸಬೇಕಾದ ಸಂಗತಿ
ಕನ್ನಡದಲ್ಲಿ ಸೊಗಸಾದ ಶಬ್ದಗಳಿರುವಾಗ ಅವುಗಳನ್ನೇ ತಳ್ಳಿ ಕನ್ನಡಕ್ಕೆ ಬರಲು ಪ್ರಯತ್ನ ಪಡುತ್ತಿರುವ ಶಬ್ದಗಳು ಉದಾಹರಣೆ: ಚಿಲ್ಲೀಸ್, ರಾಡೀಶ್, ಬೀನ್ಸ್, ಕುಕುಂಬರ್ರು, ಕ್ಯಾಪ್ಸಿಕಮ್, ನೈಫು, ಆಯಿಲ್ಲು, ಬಟರ್ರು, ಪೌಡರು, ಗ್ರೈಂಡರ್ರು ಇತ್ಯಾದಿ ಎಲ್ಲಾ ಅಡಿಗೆ ಮನೆಗೆ ನುಗ್ಗಿಬಿಟ್ಟಿವೆ. ಇದಕ್ಕೆ ಕಾರಣ ದೂರದರ್ಶನದಲ್ಲಿ ‘ಹೊಸರುಚಿಯ’ ಪ್ರದರ್ಶನ ಮಾಡಲು ಕನ್ನಡ ಮಹಿಳಾ ಮಣಿಗಳ ಸಂಭಾಷಣೆಯ ಪರಿಣಾಮ. ಎಫ್.ಎಮ್. ರೇಡಿಯೋ ದೂರದರ್ಶನದ ಅನೇಕ ವಾಹಿನಿಗಳ ಪ್ರಭಾವ ವರ್ತಮಾನ ಪತ್ರಿಕೆಗಳಲ್ಲಿಯೂ ದೂರದರ್ಶನದಲ್ಲಿಯೂ ಆಕಾಶವಾಣಿಯಲ್ಲಿಯೂ ಪ್ರಚಾರವಾಗುವ ಇಂಥ ಪ್ರಯೋಗಗಳನ್ನು ನಿಲ್ಲಿಸಿ ನಮ್ಮಲ್ಲಿ ಪ್ರಚಾರದಲ್ಲಿರುವ ಕನ್ನಡ ಶಬ್ದಗಳನ್ನು ಉಪಯೋಗಿಸುವಂತೆ ಆಯಾ ಕೇಂದ್ರಗಳ ಅಧಿಕಾರಿಗಳು ನಿರ್ದೇಶಿಸಬೇಕು. ಯಾವ ಶಬ್ದ ಬೇಕಾದರೂ ನಿಧಾನವಾಗಿ ತಾನೇ ತಾನಾಗಿ ಬರಲಿ. ಆದರೆ ನಾವೇ ಅವುಗಳನ್ನು ಅನಾವಶ್ಯಕವಾಗಿ ಅನುವು ಮಾಡಿಕೊಳ್ಳಬಾರದು. ಹಾಗೆ ಮಾಡಿದರೆ ನಮ್ಮ ಸ್ವಂತ ಶಬ್ದಸಂಪತ್ತು ಮಾಯವಾಗಿ ಬಿಡುತ್ತದೆ. ನಾವು ಅವುಗಳಿಲ್ಲದೆ ಕನ್ನಡ ಶಬ್ದದರಿದ್ರವಾಗಿಬಿಡುತ್ತವೆ. ಸಾಮಾಜಿಕ ಕಾರ್ಯಕರ್ತರು, ವಾರ್ತಾಪತ್ರಿಕೆಗಳ, ಕನ್ನಡ ಚಳುವಳಿಯ ನಾಯಕರು ಇವರೆಲ್ಲರಿಗೂ ಈ ಬಗ್ಗೆ ತಿಳುವಳಿಕೆಯನ್ನು ನೀಡಿರುವ ಒಂದು ಕನ್ನಡ ಅಂದೋಳನ ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅದರ ಜಿಲ್ಲಾ ಮತ್ತು ತಾಲ್ಲೂಕು ಅಂಗಸಂಸ್ಥೆಗಳು, ಮಹಿಳೆಯರ ಕ್ಲಬ್ಬುಗಳು, ಬೆಳಗ್ಗೆ ವಾಯುವಿಹಾರಕ್ಕೆಂದು ಹೋಗುವ ಹಿರಿಯರ ತಂಡ ಇವರೆಲ್ಲಾ ಈ ಬಗ್ಗೆ ಎಚ್ಚರವಹಿಸಬೇಕು.
ನಿಘಂಟು ವಿಚಾರ
ಎಲ್ಲ ಭಾಷೆಗಳಲ್ಲಿಯೂ ಹಳೆಯ ಶಬ್ದಗಳು ಕೆಲವು ಮಾಯವಾಗುತ್ತವೆ. ಹೊಸ ಶಬ್ದಗಳು ಸೇರಿ ಬಿಡುತ್ತವೆ. ಶಬ್ದಗಳ ಅರ್ಥವೂ ಬೇರೆಯಾಗಿ ಬಿಡುತ್ತವೆ. ಕೆಲವು ಅರ್ಥವಿಸ್ತಾರವನ್ನು ಪಡೆಯುತ್ತವೆ. ಕೆಲವಕ್ಕೆ ಅರ್ಥ ಸಂಕುಚಿತವಾಗುತ್ತವೆ. ಇದನ್ನು ನಿಘಂಟುಕಾರ ಕಣ್ಣಿನಲ್ಲಿ ಕಣ್ಣಿಟ್ಟು ದಾಖಲಿಸುತ್ತ ಹೋಗಬೇಕು. ಅಲ್ಲದೆ ಕನ್ನಡದಲ್ಲಿಯೂ ಭಾರತದ ಇತರ ಭಾಷೆಗಳಲ್ಲಿಯೂ ಆದಾನ ಪ್ರದಾನಕಾರ್ಯಗಳು ಈಗ ನಡೆಯುತ್ತಿವೆ. ಈ ಕೆಲಸ ಮುಂದುವರಿಯಬೇಕಾದರೆ ದ್ವಿಭಾಷಾ ನಿಘಂಟುಗಳು, ತ್ರಿಭಾಷಾ ನಿಘಂಟುಗಳು ನಿರ್ಮಾಣವಾಗಬೇಕು. ಇದಕ್ಕೆ ಇತರ ಭಾಷಾ ಸಾಹಿತ್ಯ ಸಂಸ್ಥೆಗಳೊಡನೆ ಸಂಬಂಧವನ್ನು ಬೆಳೆಸಬೇಕು. ಇದು ಕನ್ನಡ ನಿಘಂಟು ಕಚೇರಿಗೆ ಸುಲಭವಾದ ಕಾರ್ಯ ಇತರ ಭಾಷೆಗಳಲ್ಲಿ ಇಂಥ ಸೌಲಭ್ಯವಿಲ್ಲ. ನಮ್ಮ ಕಚೇರಿಯಲ್ಲಿ ಸಮರ್ಥರಾದ ಕೆಲವರು ಉಪಸಂಪಾದಕರಿದ್ದರು. ಈಗ ಅವರನ್ನೆಲ್ಲ ನಿವೃತ್ತರನ್ನಾಗಿಸಲಾಗಿದೆ. ಮತ್ತೆ ಹೊಸ ಕಾರ್ಯಕರ್ತರ ಪಡೆಯನ್ನು ತಯಾರು ಮಾಡಬೇಕು. ಏನೇ ಆದರೂ ನಿಘಂಟು ಕಚೇರಿಯನ್ನು, ಕೆಲಸವನ್ನು ಸಾಹಿತ್ಯ ಪರಿಷತ್ತು ಕೂಡಲೇ ಪುನರಾರಂಭ ಮಾಡಬೇಕು. ಎಂದೂ ಈ ಕಚೇರಿಯನ್ನು ಮುಚ್ಚಬಾರದು.
ಈಗಲೂ ಪರಿಷತ್ತಿನ ಇಂಥ ಕಾರ್ಯವನ್ನು ಪ್ರತಿವರ್ಷವೂ ಮಾಡಿದರೆ ಒಂದು ದಶಕದಲ್ಲಿ ನಮ್ಮಲ್ಲಿಯೇ ಹತ್ತು ಭಾಷೆಗಳ ಪ್ರವೀಣರು ತಯಾರಾಗುತ್ತಾರೆ. ಈಗ ಪರಿಷತ್ತು ಸರಕಾರದ ಸಹಾಯದ ದೆಸೆಯಿಂದಲೇ ಆರ್ಥಿಕವಾಗಿ ಗಟ್ಟಿಯಾಗಿ ಬೆಳೆದಿದೆ. ಆದ್ದರಿಂದ ಅದು ಗಟ್ಟಿಯಾದ ಕಾರ್ಯವನ್ನು ಮಾಡಬೇಕು.
೧. ಪರಿಷತ್ತು ಪ್ರತಿವರ್ಷವೂ ಬೆಂಗಳೂರಿನಲ್ಲಿ ಗಡಿನಾಡ-ಹೊರನಾಡ ಕನ್ನಡಿಗ ಒಂದು ಸಮಾವೇಶವನ್ನು ನಡೆಸಬೇಕು. ನಮ್ಮ ಗಡಿನಾಡಿನ ದ್ವಿಭಾಷಾ ವಲಯಗಳಲ್ಲಿ ನೆರವೇರುವ ಸಾಹಿತ್ಯ ಕಾರ್ಯಗಳು ಮತ್ತು ಅಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆಗಳೇನು ಎಂಬುದನ್ನು ನಾವು ತಿಳಿದುಕೊಳ್ಳುತ್ತಿರಬೇಕು. ಪುಣೆ, ಮುಂಬೈ, ನಾಗಪುರ, ಕೋಲ್ಕತ್ತ, ಚೆನ್ನೈ ಮತ್ತು ತಿರುವನಂತಪುರಗಳಲ್ಲಿ ತುಂಬ ಜನ ಕನ್ನಡಿಗರು ನೆಲೆಸಿದ್ದಾರೆ. ಅವರ ಸಂಪರ್ಕವನ್ನು ನಾವು ಸದಾ ಪಡೆದಿದ್ದರೆ ನೆರೆನಾಡುಗಳ ಎಲ್ಲ ವಿದ್ಯಮಾನಗಳನ್ನೂ ಅರಿಯುತ್ತಿರಬಹುದು. ಆದರಿಂದ ನಮಗೆ ಸಹಾಯಕವಾದ ಅನೇಕ ವಿವರಗಳು ದೊರಕುತ್ತವೆ. ಅಂತಹ ವಿವರಗಳಲ್ಲಿ ಕೆಲವು ನಮಗೆ ಅಪಾಯಕಾರಿಯೂ ಆಗಿರಬಹುದು. ಆಗ ಸೂಕ್ತ ಸಮಯದಲ್ಲಿ ನಾವು ಎಚ್ಚೆತ್ತು ಕ್ರಮ ಜರುಗಿಸಲು ಅನುಕೂಲವಾಗಿರುತ್ತದೆ. ನನ್ನ ಈ ಸೂಚನೆಯನ್ನು ಒಂದು ದೃಷ್ಟಾಂತದಿಂದ ವಿಶದಪಡಿಸುತ್ತೇನೆ. ಸುಮಾರು ಒಂದು ತಿಂಗಳ ಹಿಂದೆ ಮುಂಬೈ ನಗರದ ಥಾಣೆಯಲ್ಲಿ ಮರಾಠೀ ಸಾಹಿತ್ಯ ಸಮ್ಮೇಳನವು ನೆರವೇರಿತು. ಅದರ ಅಧ್ಯಕ್ಷರಾಗಿ ಉತ್ತಮ ಕಾಂಬ್ಲೆ ಎಂಬ ಲೇಖಕರು ಆಯ್ಕೆಯಾಗಿದ್ದರು. ಮೂಲತಃ ಅವರು ಕನ್ನಡಿಗರು. ಅವರು ಹುಟ್ಟಿದ್ದು, ವಿದ್ಯಾಭ್ಯಾಸವನ್ನು ಪಡೆದಿದ್ದು ಸಿರುಗಪ್ಪೆಯ ಸುತ್ತಮುತ್ತಲಿನಲ್ಲಿ. ಅವರು ಮಾಡಿದ ಅಧ್ಯಕ್ಷ ಭಾಷಣದಲ್ಲಿ ಮಹಾಜನ್ ವರದಿಯನ್ನು ಉಲ್ಲೇಖಿಸಿ ಮಹಾರಾಷ್ಟ್ರಕ್ಕೆ ಮಹಾ ಅನ್ಯಾಯವಾಗಿದೆ ಎಂಬ ಉದ್ಗಾರವನ್ನು ತೆಗೆದರೆಂದು ವಾರ್ತಾಪತ್ರಿಕೆಗಳಿಂದ ತಿಳಿದುಬರುತ್ತದೆ. ಬೆಳಗಾಂ ಜಿಲ್ಲೆಯೂ ನಿಪ್ಪಾಣಿ ತಾಲ್ಲೂಕು ಮತ್ತು ಕಾರವಾರ ಜಿಲ್ಲೆಯ ಅನೇಕ ಭಾಗಗಳೂ ಮಹಾರಾಷ್ಟ್ರಕ್ಕೆ ಸೇರಬೇಕು. ಇದಕ್ಕೆ ಬೇಕಾದ ಘೋರ ಹೋರಾಟವನ್ನು ಮಾಡಿಯೇ ತೀರಬೇಕು ಎಂಬ ಕರೆಯನ್ನು ಮರಾಠೀ ಜನರಿಗೆ ಕರೆಕೊಟ್ಟರು. ಕನ್ನಡದ ಸರಕಾರವು ಮಹಾರಾಷ್ಟ್ರೀಯರಿಗೆ ಕಿರುಕುಳ ಕೊಡುತ್ತಿದೆ ಎಂದೂ ಮರಾಠೀ ಸಂಸ್ಕೃತಿಯನ್ನೇ ಮಟ್ಟಹಾಕಲು ಸಿನಿಮಾ ಮತ್ತು ನಾಟಕಗಳನ್ನು ಉಪಯೋಗಿಸುತ್ತಿದೆ ಎಂದೂ ಕನ್ನಡ ಲೇಖಕರು ಮರಾಠಿಗರಿಗೆ ಅಗೌರವದಿಂದ ನಡೆದುಕೊಳ್ಳುತ್ತಾರೆ ಎಂದೂ ಕರ್ನಾಟಕ ಸರಕಾರಕ್ಕೂ ಕನ್ನಡ ಜನರಿಗೂ ತಕ್ಕ ಬುದ್ಧಿಯನ್ನು ಕಲಿಸಬೇಕೆಂದು ವಿರಾವೇಶದಿಂದ ಮಾತನಾಡಿದರಂತೆ! ಕನ್ನಡ ದೇಶದಲ್ಲಿರುವ ಮರಾಠಿಗರು ಇಂಥ ಸುಳ್ಳು ಹೇಳಿಕೆಗಳನ್ನು ವಿರೋಧಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅದನ್ನು ನಮ್ಮ ನಾಡಿಗೆ ಬರುವವರೆಲ್ಲರೂ ಕಲಿಯಬೇಕು. ಇದು ಅನಿವಾರ್ಯವೆಂಬ ಅಂಶವನ್ನು ನಾವು ಅವರ ಅನುಭವಕ್ಕೆ ತರಬೇಕು.
ಪತ್ರಿಕೆ ಕನ್ನಡನಾಡ ವಿಚಾರ
ಪರಿಷತ್ತಿನ ಸದಸ್ಯರ ಸಂಖ್ಯೆ ಈಗ ಒಂದು ಲಕ್ಷದ ಹದಿನೆಂಟು ಸಾವಿರದ ನಾನ್ನೂರನ್ನು ಮುಟ್ಟುತ್ತಿದೆ. ಇನ್ನೂ ಹೆಚ್ಚಬಹುದು. ಈ ಎಲ್ಲ ಸದಸ್ಯರಿಗೂ ಪರಿಷತ್ತಿನಿಂದ ಒಂದೇ ಒಂದು ಪತ್ರವು ಹೋಗಬೇಕಾದರೂ ಸುಮಾರು ಆರು ಲಕ್ಷರೂಪಾಯಿಗಳು ಖರ್ಚಾಗುತ್ತದೆ. ಇಂಥ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕಳಿಸಬೇಕಾದರೂ ತೆರೆದ ಅಂಚೆಗಾದರೂ ಐದು ಲಕ್ಷ ರೂಪಾಯಿಗಳು ವ್ಯಯವಾಗುತ್ತದೆ. ಕನ್ನಡನುಡಿ ಪತ್ರಿಕೆಯನ್ನು ಕಳಿಸಬೇಕಾದರೂ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿಗಳಾಗುತ್ತವೆ. ಈಗ ಸದಸ್ಯತ್ವವನ್ನು ಎರಡು ಭಾಗ ಮಾಡಿ ಒಂದು ತಿಂಗಳ ಕನ್ನಡನುಡಿಯನ್ನು ಮೊದಲ ಭಾಗಕ್ಕೆ ಎರಡನೆಯ ತಿಂಗಳ ಕನ್ನಡನುಡಿಯನ್ನು ಮತ್ತೊಂದು ಭಾಗಕ್ಕೆ ಕಳಿಸಲಾಗುತ್ತಿವೆ ಎಂದು ಸಂಪಾದಕರು ನನಗೆ ತಿಳಿಸಿದರು. ನಿಜವಾಗಿ ಕನ್ನಡನುಡಿ ಪತ್ರಿಕೆಯನ್ನು ಯಾರು ನಿರೀಕ್ಷಿಸುತ್ತಾರೆಯೋ ಅದನ್ನು ಪರಿಷತ್ತಿಗೆ ತಿಳಿಸಬೇಕೆಂದು ಸದಸ್ಯರನ್ನು ಕೇಳಿಕೊಂಡರೆ ಆಗ ಯಾರು ಉತ್ತರ ಕೊಡುವುದಿಲ್ಲವೋ ಅಂಥವರಿಗೆ ಕಳಿಸದೇ ಇರಬಹುದು. ಈ ಬಗ್ಗೆ ಜಿಲ್ಲೆಯ ಪ್ರತಿನಿಧಿಯಾಗಿರುವ ಪರಿಷತ್ತಿನ ಕಾರ್ಯಸಮಿತಿಯ ಸದಸ್ಯರು ತಮ್ಮ ಜಿಲ್ಲೆಗಳಿಂದ ಇಂಥ ಅಂಕಿ ಅಂಶಗಳನ್ನು ಪ್ರಾಮಾಣಿಕವಾಗಿ ಕಂಡುಹಿಡಿದರೆ ಒಂದು ಉತ್ತಮವಾದ ಉಳಿತಾಯದ ಕೆಲಸವಾಗುತ್ತದೆ. ನಮ್ಮ ಎಲ್ಲ ಸದಸ್ಯರೂ ಪರಿಷತ್ತಿನ ಅಭಿಮಾನಿಗಳು ನಿಜ. ಆದರೆ ಅವರ ವೃತ್ತಿಗಳ ಬಾಹುಳ್ಯದಲ್ಲಿ ಅವರಿಗೆ ಕನ್ನಡನುಡಿಯನ್ನು ಓದುವುದಕ್ಕೆ ಅವಕಾಶವೇ ಸಿಗದ ಎಷ್ಟೋ ಜನರಿರುತ್ತಾರೆ ಇದನ್ನು ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ ಗಣಕಯಂತ್ರದ ಸೌಲಭ್ಯ ಇರುವ ಸದಸ್ಯರಿಗೆ ಇ-ಅಂಕೆಯ ಮೂಲಕ ಕನ್ನಡನುಡಿಯನ್ನು ಕಳುಹಿಸಿ ಅಂಚೆವೆಚ್ಚವನ್ನು ಉಳಿಸಬಹುದು.
ಪರಿಷತ್ತಿನ ಚುನಾವಣೆ
ಪರಿಷತ್ತಿನ ಅಧ್ಯಕ್ಷ ಪದವಿಗೆ ಚುನಾವಣೆಗೆ ನಿಲ್ಲುವವರು ಇನ್ನು ಮುಂದೆ ರಾಜಕೀಯ ಚುನಾವಣೆಗೆ ಖರ್ಚು ಮಾಡುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಸಾಹಿತ್ಯದ ಕ್ಷೇತ್ರದಲ್ಲಿ ಇಂಥವರಾದರೂ ಇಲ್ಲವೆಂದು ನನ್ನ ಭಾವನೆ. ಆದ್ದರಿಂದ ಇಂಗ್ಲಿಷಿನಲ್ಲಿ Electroal Collegel ಎಂದು ಕರೆಯುವ ಪದ್ದತಿ ಇದೆ. ಸಂಸ್ಥೆಗಳಿಗೆ ಈ ಬಗೆಯ ಏರ್ಪಾಟು ಮಾದರಿ. ಅದರ ಪ್ರಕಾರ ಎಲ್ಲ ಸದಸ್ಯರು ಎಷ್ಟೇ ಜನರಿರಲಿ ಚುನಾವಣೆಗೆ ನಿಲ್ಲುವ ಮತ್ತು ಮತವನ್ನು ಚಲಾಯಿಸುವ ಒಂದು ಸದಸ್ಯ ವರ್ಗವನ್ನು ರೂಪಿಸಿಕೊಳ್ಳುತ್ತಾರೆ. ಹಾಗೆ ನಮ್ಮಲ್ಲಿ ಸಾಹಿತಿಗಳಾಗಿರುವ ಸದಸ್ಯರನ್ನೆಲ್ಲ ಕೂಡಿಸಿ ಒಂದು ಮತ ಚಲಾಯಿಸುವ ವರ್ಗವನ್ನು ನಿರ್ಮಿಸುವುದು ಸಾಧ್ಯವೇ ಎಂದು ಪರಿಶೀಲನೆ ಮಾಡಬೇಕೆಂದು ಸೂಚಿಸುತ್ತೇನೆ. ಹೀಗೆ ಮಾಡಿದರೆ ಪರಿಷತ್ತಿನ ಸಾಹಿತ್ಯ ಕಾರ್ಯಕ್ಕೆ ಬೆಂಬಲ ಹೆಚ್ಚುತ್ತದೆ. ಈಗಿನಂತೆ ಅಧ್ಯಕ್ಷತೆಗೆ ಅರ್ಹರನ್ನು ಆರಿಸಬಹುದು. ಇಲ್ಲದಿದ್ದರೆ ಮುಂದೆ ಪರಿಷತ್ತು ರಾಜಕೀಯ ಸಂಸ್ಥೆಯಾಗಿ ಬಿಡುತ್ತದೆ. ಸಾಹಿತ್ಯಕ್ಕೆ ಇದು ಅಪಾಯ.
ಪರಿಷತ್ತಿನ ಕಾರ್ಯಕ್ರಮಗಳು
ಪರಿಷತ್ತಿನ ಕಾರ್ಯವ್ಯಾಪ್ತಿ ಹೆಚ್ಚಾಗಿದೆ. ಜಿಲ್ಲೆ ತಾಲ್ಲೂಕುಗಳಲ್ಲಿ ಸಾಹಿತ್ಯಕಾರ್ಯ ನೆರವೇರುತ್ತಿವೆ. ಈ ಬಗೆಯ ಕಾರ್ಯಕ್ರಮಗಳಿಗೆ ಧರ್ಮಸ್ಥಳದಲ್ಲಿ ನಡೆಯುವ ಧರ್ಮ-ಸಾಹಿತ್ಯ ಸಮ್ಮೇಳನಗಳೂ, ಮೂಡುಬಿದಿರೆಯ ನುಡಿಸಿರಿ ಸಮ್ಮೇಳನಗಳೂ, ವಿರಾಸತ್ಗಳೂ ಮಾದರಿಯಾಗಬೇಕು. ಕೆಲವು ಮಠಗಳು ನಡೆಸುವ ಸಾಹಿತ್ಯ ಕಾರ್ಯಕ್ರಮಗಳನ್ನೂ ಮಾರ್ಗದರ್ಶಿಗಳಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಕೇಂದ್ರ ಪ್ರದೇಶವಾದ ಬೆಂಗಳೂರಿನಲ್ಲಿ ಸಾಹಿತ್ಯ ಕಾರ್ಯ ಕಡಿಮೆಯಾಗಿದೆ. ಈಗ ಕನ್ನಡ ಸಾಹಿತ್ಯದಲ್ಲಿ ವಿಮರ್ಶನ ಕ್ಷೇತ್ರದಲ್ಲಿ ತುಂಬ ಬದಲಾವಣೆ ನಡೆದಿದೆ. ಈಗಿನ ವಿದ್ವಾಂಸರು ನಮ್ಮ ಪ್ರಾಚೀನ ಕವಿಗಳ ಕೃತಿಗಳನ್ನು ಪುನರ್ ವಿಮರ್ಶೆ ಮಾಡುತ್ತಿದ್ದಾರೆ. ಹೊಸ ಅಲೊಚನೆಯಗಳೂ ಹೊರಹೊಮ್ಮುತ್ತಿವೆ. ಈ ದೃಷ್ಟಿಯಿಂದ ಪರಿಷತ್ತು ಬೆಂಗಳೂರಿನಲ್ಲಿ ಪ್ರತಿವರ್ಷ ಒಬ್ಬ ಪ್ರಾಚೀನ ಕವಿಯ ಬಗ್ಗೆ ಈ ಹೊಸ ಅಲೋಚನೆಗಳ ವಿಮರ್ಶೆಯ ಒಂದು ವಿಚಾರ ಸಂಕೀರ್ಣವನ್ನು ನಡೆಯಿಸಿ ಆ ಸಭೆಯ ಉಪನ್ಯಾಸಗಳನ್ನು ಒಂದು ಪುಸ್ತಕವನ್ನಾಗಿ ಪ್ರಕಟಿಸಬೇಕೆಂದು ನನ್ನ ಮತ್ತೊಂದು ಸೂಚನೆಯನ್ನು ಪರಿಷತ್ತಿನ ಮುಂದೆ ಇಡುತ್ತೇನೆ.
ಹೀಗೆಯೇ ಸಣ್ಣ ಪ್ರಮಾಣದಲ್ಲಿ ಪ್ರತಿವರ್ಷವು ಎರಡು ತಿಂಗಳಿಗೊಮ್ಮೆ ಯುವ ಪ್ರತಿಭೆ, ಮಕ್ಕಳ ಸಾಹಿತ್ಯ, ಮಹಿಳೆಯರ ಕೃತಿಗಳು, ಒಂದು ವರ್ಷದ ಎಲ್ಲ ಪ್ರಕಾರದ ಕೃತಿಗಳ ವಿಮರ್ಶೆ ಇತ್ಯಾದಿ ಕಾರ್ಯಕ್ರಮವನ್ನು ಇಟ್ಟುಕೊಂಡು ಅಂಥ ಸಭೆಯಲ್ಲಿ ನಡೆಯುವ ಉಪನ್ಯಾಸಗಳನ್ನು ಬರೆಸಿ ಪ್ರಕಟಿಸುವ ಕಾರ್ಯವೂ ಆಗಬೇಕು. ಆಗ ಕೇಂದ್ರದ ಕಾರ್ಯಕ್ರಮಗಳು ಜಿಲ್ಲೆಗಳಿಗೆ ಮಾದರಿಯಾಗುತ್ತವೆ. ವಿಶಿಷ್ಟವಾಗಿ ಈ ವರ್ಷ ನೇಮಿಚಂದ್ರನ ಬಗ್ಗೆ ಒಂದು ವಿಚಾರ ಸಂಕೀರ್ಣವನ್ನು ಏರ್ಪಡಿಸಬೇಕೆಂದು ನನ್ನ ಸೂಚನೆ. ನೇಮಿಚಂದ್ರನು ಅವನ ನೇಮಿಪುರಾಣವನ್ನು ಪೂರೈಸಿದ್ದರೆ ಮಹಾಕವಿಯಾಗಿ ಪರಿಗಣಿತನಾಗುತ್ತಿದ್ದನು. ಆದಾಗದೆ ಅವನು ಮಹಾಕವಿ ಶಬ್ದದಿಂದ ಪರಿಚಿತನಾಗಿದ್ದಾನೆ. ಅವನನ್ನು ಎತ್ತಿ ಹಿಡಿಯುವ ಕಾರ್ಯ ಆಗಬೇಕಾಗಿದೆ. ಹೀಗೆಯೇ ರುದ್ರಭಟ್ಟನ, ಷಡಕ್ಷರಿಯ ಕೃತಿಗಳನ್ನು ಪರಿಶೀಲಿಸಬೇಕಾದೀತು.
ಕನ್ನಡ ಕವಿ ಕಾವ್ಯ ವಿಚಾರ
ಕನ್ನಡನಾಡಿನಲ್ಲಿ ಕನಕ, ಪುರಂದರ ಕೃತಿಗಳನ್ನು ಕುರಿತ ಅನುಚಿತವಾದ ಕೆಲವು ಹೇಳಿಕೆಗಳು ಬರುತ್ತಿವೆ. ಇಬ್ಬರೂ ಶ್ರೇಷ್ಠ ಸಂತರು. ಇವರ ಕೃತಿಗಳ ಬಗ್ಗೆ ಸತ್ಯಾಸತ್ಯತೆಯನ್ನು ವಿದ್ವತ್ತೆಯಿಂದ ಪರಿಶೀಲಿಸಿ ಸಮರ್ಥವಾಗಿ ತೀರ್ಮಾನವನ್ನು ಸ್ಥಾಪಿಸುವ ಕಾರ್ಯವಾಗಬೇಕಾಗಿದೆ. ಇದು ಒಂದು ಮುಖ್ಯ ಕಾರ್ಯ.
ನಾಡಗೀತೆ ವಿಚಾರ
ಕನ್ನಡದ ನಾಡಗೀತೆಯೆಂದು ಒಂದು ಗೀತೆಯನ್ನು ಆಯ್ಕೆಮಾಡಲಾಗಿದೆ. ಕಾರ್ಯಕ್ರಮಗಳಲ್ಲಿ ಅದನ್ನು ಹಾಡುವಾಗ ಸಭೆಯಲ್ಲಿ ಎಲ್ಲರೂ ನಿಲ್ಲಬೇಕೆಂದು ಸೂಚನೆಯಿದೆ. ಈ ಗೀತೆಯನ್ನು ಹಾಡುವವರು ಸಾಲುಗಳನ್ನು ಎರಡು ಮೂರು ಸಲ ಹಾಡಿ ಹೆಚ್ಚು ಕಾಲವನ್ನು ತೆಗೆದುಕೊಳ್ಳುತ್ತಾರೆ. ನಾಡಗೀತೆ ಯಾವಾಗಲೂ ಸಂಗ್ರಹವಾಗಿ ೩ ನಿಮಿಷಕ್ಕಿಂತ ಹೆಚ್ಚಿಲ್ಲದೆ ಇರಬೇಕು. ಈ ಬಗ್ಗೆ ಪರಿಷತ್ತು ಪರಿಶೀಲನೆ ನಡೆಸಿ ಸರಕಾರಕ್ಕೆ ಸಲಹೆಯನ್ನು ನೀಡಬೇಕು.
ಶಾಸ್ತ್ರೀಯ ಭಾಷೆ
‘ಶಾಸ್ತ್ರೀಯ ಭಾಷೆ’ ಎಂಬ ಅಬದ್ಧವಾದ ಶಬ್ದವು ಸಿಂಹಾಸನದ ಮೇಲೆ ಕುಳಿತುಬಿಟ್ಟಿವೆ. ಅದನ್ನು ಕೆಳಗಿಳಿಸಿ ಅಭಿಜಾತ ಭಾಷೆ ಅಥವಾ ಸಮೃದ್ಧ ಪ್ರಾಚೀನ ಭಾಷೆ ಎಂಬ ಶಬ್ದವನ್ನು ಉಪಯೋಗಿಸಬೇಕು. ಕೇಂದ್ರ ಸರಕಾರದಿಂದ ಕನ್ನಡಕ್ಕೆ ಅಭಿಜಾತ ಭಾಷೆಯೆಂಬ ಪಟ್ಟದಕ್ಕಿದೆ. ಆದರೆ ಯಾವ ಧನವೂ ನಮಗೆ ಬಂದಿಲ್ಲ. ಈ ಹಣವು ದೊರಕಿದರೆ ಆ ಹಣವನ್ನು ಹೇಗೆ ಉಪಯೋಗಿಸಬೇಕೆಂಬ ಒಂದು ಸ್ಪಷ್ಟ ಅಲೋಚನೆಯನ್ನು ಪರಿಷತ್ತು ರಚಿಸಬೇಕು. ಅದಕ್ಕಾಗಿ ಒಂದು ವಿದ್ವಾಂಸರ ಸಮಿತಿಯನ್ನು ಸ್ಥಾಪಿಸಬೇಕು. ಇದು ಕೂಡಲೆ ಆಗಬೇಕು. ಯೋಜನೆಯನ್ನು ಕಳಿಸದಿದ್ದರೆ ಅನುದಾನ ಬರುವುದಿಲ್ಲ ಪರಿಷತ್ತು ಈ ವಿಚಾರವಾಗಿ ನಿರ್ಣಾಯಕವಾದ ತೀರ್ಮಾನವನ್ನು ಕೈಗೊಂಡು ತಾನೇ ಮುಂಚೂಣಿಯ ನಾಯಕ ಎಂಬ ಪಟ್ಟ ಮುಟ್ಟಬೇಕು.
ಕನ್ನಡ ಬಾವುಟ ಗ್ರಂಥ
ಬಿ.ಎಂ.ಶ್ರೀಯವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನವೋದಯದ ನೆನಪಿಗಾಗಿ ‘ಕನ್ನಡ ಬಾವುಟ’ ಎಂಬ ಗ್ರಂಥವನ್ನು ಪ್ರಕಟಿಸಿದರು. ಅದು ಸುಮಾರು ಹತ್ತು ಸಲ ಪುರ್ನಮುದ್ರಣವಾಗಿದೆ. ಈಗ ನವೋದಯ ಶತಮಾನದ ನೆನಪಿಗಾಗಿ ಈ ವರ್ಷವೇ ಇಂದಿನ ಅಧ್ಯಕ್ಷರು ಈ ಶತಮಾನದ ಸಾಹಿತ್ಯ ಕೃಷಿಯಲ್ಲಿ ಅತ್ಯುತ್ತಮವೆಂದು ಕಂಡುಬಂದ ನೂರು ಕವನಗಳನ್ನು ಆಯ್ಕೆಮಾಡಿ ಮತ್ತೊಂದು ಕವನ ಸಂಕಲನವನ್ನು ಪ್ರಕಟಿಸಬೇಕು. ಕನ್ನಡ ಭುವನೇಶ್ವರಿಗೆ ಒಂದು ಧ್ವಜ. ಒಂದು ಶ್ವೇತಚ್ಛತ್ರ ಮುಖ್ಯ. ಕನ್ನಡ ಭಾಷೆಗೆ ಒಂದು ಬಾವುಟವನ್ನು ಬಿ.ಎಂ.ಶ್ರೀ ನೀಡಿದರು. ಇಂದಿನ ಅಧ್ಯಕ್ಷರು ಈಗ ಒಂದು ‘ಬೆಳ್ಗೊಡೆ’ ಯನ್ನು ನೀಡಲಿ ಸೂಚಿಸುತ್ತೇನೆ.
ಯಶಸ್ವಿನಿ ಯೋಜನೆ
ನಮ್ಮ ಸರಕಾರವು ರೈತರ ಸಮಾಜದ ಒಳಿತಿಗಾಗಿ ‘ಯಶಸ್ವಿನಿ’ ಎಂಬ ಒಂದು ಆರೋಗ್ಯ ವಿಮೆಯ ಸಹಾಯ ಯೋಜನೆಯನ್ನು ಸ್ಥಾಪಿಸಿದೆ. ಇದರಿಂದ ಲಕ್ಷಾಂತರ ರೈತರ ಕುಟುಂಬಗಳಿಗೆ ಸಹಾಯವಾಗುತ್ತಿದೆ. ಅನೇಕ ಸಾಹಿತಿಗಳಿಗೂ ಅವರ ಕುಟುಂಬಕ್ಕೂ ಈ ರೀತಿಯ ಆರೋಗ್ಯವಿಮೆಯ ಆವಶ್ಯಕತೆ ಇದೆ. ಅಂಥವರಿಗೆ ಯಶಸ್ವಿನಿ ರೀತಿಯ ಆರೋಗ್ಯ ವಿಮೆಯ ಒಂದು ಯೋಜನೆಯನ್ನು ಸ್ಥಾಪಿಸಿದರೆ ಈ ವರ್ಗಕ್ಕೆ ತುಂಬ ಉಪಕಾರವಾಗುತ್ತದೆ ಎಂದು ತಿಳಿದಿದ್ದೇನೆ. ಸಾಹಿತ್ಯ ಪರಿಷತ್ತು ಈ ಬಗ್ಗೆ ಸರಕಾರಕ್ಕೆ ಒಂದು ಶಿಫಾರಸ್ಸು ಕಳಿಸಬಹುದು.
ವಿಜ್ಞಾನ ಗ್ರಂಥಗಳ ಪ್ರಕಟಣೆ
ನಮ್ಮ ರಾಷ್ಟ್ರದ ಪ್ರಸಿದ್ಧ ವೈಜ್ಞಾನಿಕ ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳು (NAL-CSR ) ಎಂಬ ಹೆಸರಿನ ದೊಡ್ಡ ಸಂಸ್ಥೆಯು ಕನ್ನಡದಲ್ಲಿ ವೈಜ್ಞಾನಿಕ ಲೇಖನಗಳ ಬೆಳವಣಿಗೆ ಮಾಡಿರುವಷ್ಟು ಸಹಾಯವನ್ನು ಇತರ ಯಾವ ವೈಜ್ಞಾನಿಕ ಸಂಸ್ಥೆಯೂ ಮಾಡಿಲ್ಲ. ಅದು ಕಳೆದ ಮೂವತ್ತೈದು ವರ್ಷಗಳಿಂದ ‘ಕಣಾದ’ ಎಂಬ ಹೆಸರಿನ ವಾರ್ಷಿಕ ವಿಜ್ಞಾನ ಪತ್ರಿಕೆಯನ್ನು ಪ್ರಕಟಮಾಡುತ್ತ ಇದೆ. ‘ಕಣಾದ’ ಎಂಬುದು ನಮ್ಮ ದೇಶದ ಒಬ್ಬ ಪ್ರಾಚಿನವಾದ ಮಹರ್ಷಿಯ ಹೆಸರು. ಅವನು ಅಣುವಿಜ್ಞಾನಕ್ಕೆ ಆದ್ಯಪ್ರವರ್ತಕ. ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆ ಅಣುತತ್ವವನ್ನು ಪ್ರತಿಪಾದಿಸಿದನು. ಆತನ ಹೆಸರನ್ನು ಆಶ್ರಯಿಸಿ ಈ ಸಂಸ್ಥೆಯಲ್ಲಿ ನಡೆಯುವ ವಿವಿಧ ಸಂಶೋಧನೆಗಳನ್ನು ಕುರಿತ ಕನ್ನಡ ಭಾಷೆಯ ಲೇಖನಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸುತ್ತಾ ಇದೆ. ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಮೂಲವಿಜ್ಞಾನ ಮತ್ತು ವೈಮಾನಿಕ ಕ್ಷೇತ್ರ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಆಸಕ್ತಿಯನ್ನು ಮೂಡಿಸುತ್ತ ಇದೆ. ಪ್ರತಿವರ್ಷ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ಹಂಚುತ್ತಾ ಇದೆ. ಈ ವರ್ಷದ ಪತ್ರಿಕೆ ೩೬ನೆಯ ಸಂಪುಟವನ್ನು ಓದಿ ನನಗೆ ಸಂತೋಷವಾಯಿತು. ಇದು ಇತರ ವಿಜ್ಞಾನ ಸಂಸ್ಥೆಗಳಿಗೆ ಮಾದರಿಯಾದ ಕಾರ್ಯವಾಗಿದೆ. ಆ ಸಂಸ್ಥೆಗಳು ಕನ್ನಡದ ಪರಂಪರೆಯನ್ನು ಹೀಗೆ ವ್ಯಕ್ತಪಡಿಸಬೇಕು. ಈ ಸಂಸ್ಥೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಾರ್ಗದರ್ಶನ ಮಾಡಬೇಕು.
ಸಮೂಹ ಮಾಧ್ಯಮಗಳು
ಕನ್ನಡ ಬೆಳವಣಿಗೆಯ ದೃಷ್ಟಿಯಲ್ಲಿ ನಮ್ಮ ಸಮೂಹ ಮಾಧ್ಯಮಗಳು ಮಾಡಬಹುದಾದ ಕಾರ್ಯವು ಅಪಾರವಾಗಿದೆ. ದೂರದರ್ಶನದಲ್ಲಿಯೂ ಇತರ ಖಾಸಗಿ ಪ್ರಸಾರ ಸಂಸ್ಥೆಗಳೂ ಅವುಗಳಲ್ಲಿ ಪ್ರಸಾರಗೊಳ್ಳುವ ಧಾರವಾಹಿಗಳಲ್ಲಿಯೂ ವಾರ್ತಾವಾಚನಗಳಲ್ಲಿಯೂ ಕನ್ನಡದ ಶ್ರೀಮಂತಿಕೆಯನ್ನು ಪ್ರಕಟಿಸಬೇಕು. ಇಂಗ್ಲಿಷ್ ಶಬ್ದಗಳನ್ನು ಅನಾವಶ್ಯಕವಾಗಿ ಉಪಯೋಗ ಮಾಡುವುದನ್ನು ತಪ್ಪಿಸಬೇಕು. ಧಾರವಾಹಿಗಳ ನಟನಟಿಯರೂ ಕನ್ನಡದ ನುಡಿಗಟ್ಟುಗಳನ್ನು ಪ್ರಭಾವಯುತವಾಗಿ ಉಪಯೋಗಿಸಿದರೆ ವೀಕ್ಷಕರ ಮನಸ್ಸಿನಲ್ಲಿ ಕನ್ನಡದ ಪ್ರೀತಿ ಮೂಡುತ್ತದೆ. ಅವರೆಲ್ಲ ಈ ಕೆಲಸವನ್ನು ಆವಶ್ಯಕವಾಗಿ ಮಾಡಬೇಕು. ವಾರ್ತಾಪತ್ರಿಕೆಗಳಿಗೆ ಅಗತ್ಯವಾಗುವ ಇಂಗ್ಲಿಷ್ ಮೀಡಿಯಂಗಳಿಗೆ ಸಮಾನವಾದ ಕನ್ನಡ ನುಡಿಗಟ್ಟುಗಳನ್ನು ತಯಾರು ಮಾಡುವ ಒಂದು ವಿಧಾನವಿದೆ. ಇದನ್ನು ಕುರಿತು ಪತ್ರಿಕಾ ಬಳಗದವರು ಸಹಾಯ ಮಾಡಿದರೆ ಒಂದು ಉತ್ತಮ ನುಡಿಗಟ್ಟಿನ ನಿಘಂಟನ್ನು ತಯಾರಿಸಬಹುದು. ವಾರ್ತಾಪತ್ರಿಕೆಗಳಲ್ಲಿ ವಿವಿಧ ಕ್ಷೇತ್ರಗಳ ವರ್ತಮಾನಗಳನ್ನೂ, ವಿಶಿಷ್ಟ ಲೇಖನಗಳನ್ನೂ ಇಂಗ್ಲಿಷಿನಲ್ಲಿ ನಡೆಯುತ್ತವೆ. ಈ ಸಾಮಗ್ರಿಯಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಇಂಗ್ಲಿಷ್ ಮೀಡಿಯಂಗಳು ಇರುತ್ತವೆ. ಆಯಾ ಭಾಗದ ಉಪಸಂಪಾದಕರು ಒಂದು ತಿಂಗಳ ಕಾಲ ಹಾಗೆ ಕಂಡುಬರುವ ಇಂಗ್ಲಿಷ್ ಮೀಡಿಯಂಗಳನ್ನು ಬೇರೆಯಾಗಿ ದಾಖಲಿಸಿ ಇಟ್ಟರೆ ಒಂದು ದೊಡ್ಡ ಮೀಡಿಯಂ ಭಂಡಾರ ಪ್ರಸಿದ್ಧವಾಗುತ್ತದೆ. ಬಳಿಕ ಈ ಮೀಡಿಯಂಗಳಿಗೆ ಸಮಾನವಾದ ಕನ್ನಡದ ನುಡಿಗಟ್ಟುಗಳನ್ನು ಕಂಡುಹಿಡಿಯಬಹುದು. ಇಲ್ಲದಿದ್ದರೆ ಹೊಸದಾಗಿ ನಿರ್ಮಾಣ ಮಾಡಬಹುದು. ವರ್ತಮಾನ ಪತ್ರಿಕೆಯವರು ಈ ಉಪಾಯವನ್ನು ಪ್ರಯೋಗಿಸಿದರೆ ನಾವು ಕೆಲವು ಭಾಷಾಭ್ಯಾಸಿಗಳು ನಿಮಗೆ ಶಾಶ್ವತವಾದ ಕನ್ನಡ ನುಡಿಗಟ್ಟಿನ ಕೋಶವನ್ನು ತಯಾರಿಸಿ ಹಿಂದಿರುಗಿಸುತ್ತೇವೆ. ಎಲ್ಲ ಪತ್ರಿಕೆಗಳ ಉಪಸಂಪಾದಕರು ಈ ದೃಷ್ಟಿಯನ್ನು ಪರಿಶೀಲಿಸಬೇಕೆಂದು ನನ್ನ ವಿನಂತಿ. ಪರಿಷತ್ತು ಈ ಬಗ್ಗೆ ತೀವ್ರವಾಗಿ ಅಲೋಚಿಸಬೇಕು.
ಪತ್ರಿಕಾ ಪ್ರಪಂಚ
ಪತ್ರಿಕಾ ವೃತ್ತಿಯು ಬಹು ಪವಿತ್ರವಾದ ವೃತ್ತಿ. ಕನ್ನಡದ ಪತ್ರಿಕಾಕರ್ತರ ಹಿಂದಿನ ಚರಿತ್ರೆಯನ್ನು ಓದಿದರೆ ಎಂಥ ಶ್ರೀಮಂತ ಮನಸ್ಸಿನ ಮೇಧಾವಿಗಳೂ, ನಿಸ್ವಾರ್ಥ ಪರೋಪಕಾರಿಗಳೂ ವೃತ್ತಿಯಲ್ಲಿ ಪ್ರಾಮಾಣಿಕತೆ, ಧರ್ಮಶ್ರದ್ಧೆ, ಸಾಮಾಜಿಕ ನ್ಯಾಯಪರತೆ ಮತ್ತು ಬಾಳಿನಲ್ಲಿ ಸಂದರ್ಶಕತೆ- ಇವುಗಳನ್ನು ಮೆರೆದಿದ್ದಾರೆ ಎಂಬುದು ಕಣ್ಮುಂದೆ ಕಟ್ಟುತ್ತದೆ. ಆ ಹಿರಿಯರ ಮಾದರಿ ಈಗಲೂ ಅನುಸರಿಸಲು ಆರ್ಹವಾಗಿದೆ. ಜನರ ತಪ್ಪನ್ನು ಜನರಿಗೆ ತಿಳಿಸಿ ಸರಕಾರದ ತಪ್ಪನ್ನು ಸರಕಾರಕ್ಕೆ ತಿಳಿಸಿ ನವಜೀವನಕ್ಕೆ ಅವರು ಮಾರ್ಗದರ್ಶನ ಮಾಡುತಿದ್ದರು. ಈಗ ನಮ್ಮ ಪತ್ರಿಕಾಕರ್ತರು ಅದೇ ರೀತಿ ಕನ್ನಡ ಭಾಷೆಯ ಬಗ್ಗೆ ದುಡಿಯಬೇಕಾದ ಕಾಲ ಒದಗಿ ಬಂದಿದೆ. ಪರಿಷತ್ತು ಪತ್ರಿಕಾ ಪ್ರಪಂಚದ ಜೊತೆ ತುಂಬು ವಿಶ್ವಾಸದಿಂದ ಭಾಷಾಬಾಂಧವ್ಯವನ್ನು ಬೆಳೆಸಬೇಕು.
ನಮ್ಮ ನಾಡಿನ ಮೂಲೆ ಮೂಲೆಗಳಲ್ಲಿ ಅನೇಕ ಚಿಕ್ಕ ಪುಟ್ಟ ಪತ್ರಿಕೆಗಳೂ ನಿಯತಕಾಲಿಕೆಗಳೂ ಪ್ರಕಟವಾಗುತ್ತಾ ಇವೆ. ಇವುಗಳಲ್ಲಿ ಆಯಾ ಪ್ರದೇಶದಲ್ಲಿ ಪ್ರಚಾರದಲ್ಲಿರುವ ಕನ್ನಡ ನುಡಿಗಟ್ಟುಗಳೂ ಪ್ರಯೋಗವಾಗುತ್ತವೆ. ಆಡುಮಾತಿನ ಆ ಪ್ರಯೋಗಗಳೂ ತುಂಬ ಅರ್ಥವತ್ತಾಗಿರುತ್ತದೆ. ನಾನಿದನ್ನು ಗಮನಿಸಿದ್ದೇನೆ. ಆ ನುಡಿಗಟ್ಟುಗಳು, ಕೆಲವು ವಿಶಿಷ್ಟ ಶಬ್ದಗಳು ಇವುಗಳನ್ನು ನಾವು ಸಂಗ್ರಹಿಸಿ ದಾಖಲಿಸಬೇಕು. ಇಂಥ ಸಣ್ಣ ಸಣ್ಣ ಪತ್ರಿಕೆಗಳಿಗೆ ಆರ್ಥಿಕ ಬಲವಿರುವುದಿಲ್ಲ. ಇಂಥ ಸ್ಥಿತಿ ಕನ್ನಡಕ್ಕೆ ಮಾತ್ರ ಸೇರಿದ್ದಲ್ಲ. ಭಾರತದ ಎಲ್ಲ ಭಾಷೆಗಳಲ್ಲಿಯೂ ಈ ಸ್ಥಿತಿ ಇದೆ. ಇಂಥ ಸ್ಥಿತಿಯಿಂದ ಈ ಸಣ್ಣ ಪತ್ರಿಕೆಗಳನ್ನು ಮೇಲಕ್ಕೆತ್ತುವ ಒಂದು ಉಪಾಯವಿದೆ. ಅದನ್ನೂ ನಾವು ಗಮನಿಸಬೇಕು. ನಮ್ಮ ದೇಶದಲ್ಲಿರುವ ಬಹುರಾಷ್ಟ್ರೀಯ ಮತ್ತು ಸ್ವದೇಶಿ ವಾಣಿಜ್ಯೋದ್ಯಮಿಗಳು ತಮ್ಮ ಜಾಹೀರಾತುಗಳನ್ನು ಪತ್ರಿಕೆಗಳಿಗೆ ದೂರದರ್ಶನ ವಾಹಿನಿಗಳಿಗೆ ನೀಡುತ್ತಾರೆ. ಇದಕ್ಕೆ ನೀಡುವ ಹಣದ ಗಾತ್ರ ಬೃಹತ್ತಾಗಿ ವರ್ಷಕ್ಕೆ ಹಲವು ಸಾವಿರ ಕೋಟಿ ರೂಪಾಯಿಗಳಷ್ಟಾಗುತ್ತವೆ. ಈ ಗಾತ್ರದ ಹಣದಲ್ಲಿ ಶೇಕಡ ೧೫ರಷ್ಟನ್ನು ಎಲ್ಲ ಭಾಷೆಗಳ ಚಿಕ್ಕ ಪುಟ್ಟ ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಕೊಡಲೇಬೇಕೆಂಬ ಕಾನೂನನ್ನು ಕೇಂದ್ರ ಸರಕಾರ ಮಾಡಿಬಿಟ್ಟರೆ ಸಾಕು ಈ ಸಣ್ಣ ಪುಟ್ಟ ಪತ್ರಿಕೆಗಳು ಬದುಕಿ ಹೋಗುತ್ತವೆ. ಇದರಿಂದ ಭಾರತದ ಎಲ್ಲ ಭಾಷೆಗಳ ಚಿಕ್ಕಪುಟ್ಟ ಪತ್ರಿಕೆಗಳಿಗೆ ಸಹಾಯವಾಗಿ ಆ ಪತ್ರಿಕೆಗಳು ಬಳಸುವ ಪ್ರಾದೇಶಿಕ ಸೊಗಡು ಉಳಿದು ಆ ಭಾಷೆಗಳು ಬೆಳೆಯಲು ಸಹಾಯವಾಗುತ್ತದೆ. ಎಲ್ಲ ಪ್ರಾಂತದ ಎಲ್ಲ ಲೋಕಸಭೆ, ರಾಜ್ಯಸಭೆಗಳ ಸದಸ್ಯರು, ಎಲ್ಲ ಕೇಂದ್ರ ಮಂತ್ರಿಗಳು ಈ ಕೆಲಸವನ್ನು ಮಾಡಬೇಕು. ಸಣ್ಣ ಪತ್ರಿಕೆಗಳ, ನಿಯತಕಾಲಿಕೆಗಳ ಒಕ್ಕೂಟವು ಇದರ ಬಗ್ಗೆ ಪ್ರಯತ್ನಪಡಬೇಕು ಮತ್ತು ಉದ್ಯಮಗಳಿಗೆ ಇದನ್ನು ಅವರ ‘ಸಾಮಾಜಿಕ ಹೊಣೆಗಾರಿಕೆ’ ಎಂದು ಪರಿಗಣಿಸುವಂತೆ ಮನವರಿಕೆ ಮಾಡಿಕೊಡಬೇಕು.
Tag: Prof. G. Venkatasubbaiah, Tag: Kannada Sahitya Sammelana 77
೭೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಗೀತಾ ನಾಗಭೂಷಣ
ಕನ್ನಡದ ಹೆಸರಾಂತ ಲೇಖಕಿಯರಲ್ಲಿ ಒಬ್ಬರಾದ ಶ್ರೀಮತಿ ಗೀತಾ ನಾಗಭೂಷಣ ಅವರು ಗುಲ್ಬರ್ಗದ ಬಡ ಕುಟುಂಬದಲ್ಲಿ ಶಾಂತಪ್ಪ-ಶರಣಮ್ಮ ದಂಪತಿಗಳಿಗೆ ಮಗಳಾಗಿ ೨೫-೩-೧೯೪೨ರಲ್ಲಿ ಜನಿಸಿದರು. ಇವರು ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು.
ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ ೩0ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು.
‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ(೨00೨) ಕರ್ನಾಟಕ ರಾಜ್ಯ ಪ್ರಶಸ್ತಿ(೧೯೯೮), ನಾಡೋಜ ಪ್ರಶಸ್ತಿ(೨00೪), ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಪರಿಷತ್ತಿನಿಂದ ಮಲ್ಲಿಕಾ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಹೆಗ್ಗಳಿಕೆ ಇವರದು.
ಇವರು ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಹಸಿಮಾಂಸ ಮತ್ತು ಹದ್ದುಗಳು (ಕಾದಂಬರಿ), ಬದುಕು (ಕಾದಂಬರಿ), ಅವ್ವ ಮತ್ತು ಇತರ ಕಥೆಗಳು (ಕಥಾಸಂಗ್ರಹ), ಸಪ್ತವರ್ಣದ ಹಾಡು, ದುರಗಮುರಗಿಯವರ ಸಂಸ್ಕೃತಿ (ಸಂಶೋಧನೆ) ಜ್ವಲಂತ (ಕಥಾಸಂಗ್ರಹ) ಜೋಗಿಣಿ (ನಾಟಕ), ನನ್ನ ಚೆಲುವು ನಿನ್ನ ಒಲವು ಇತ್ಯಾದಿ.
ಕನ್ನಡ ಸಾಹಿತ್ಯ ಸಮ್ಮೇಳನ–೭೬
ಅಧ್ಯಕ್ಷರು, ಗೀತಾ ನಾಗಭೂಷಣ
ದಿನಾಂಕ ೧೯,೨0,೨೧ ಫೆಬ್ರವರಿ ೨0೧0
ಸ್ಥಳ : ಗದಗ
ಕರ್ನಾಟಕದ ಶರಣ ಪರಂಪರೆಯ ಮಠಗಳ ನಡುವೆ ವೈಚಾರಿಕ ಮಠವೆಂದೇ ಕರೆಸಿಕೊಂಡಿರುವ ತೋಂಟದಾರ್ಯರ ಫೌಳಿಯವರೆಗೆ ಮಹಿಳೆಯೊಬ್ಬಳು ಸವೆಸಿದ ಸಾಹಿತ್ಯಿಕ ದಾರಿಯು ಕನ್ನಡ ಸಂಸ್ಕ್ಕೃತಿಯ ವೈಶಿಷ್ಟ್ಯವೆಂದೇ ನನಗೆ ಅನಿಸಿದೆ. ಏಕೆಂದರೆ ಎರಡು ಸಾವಿರ ವರುಷಕ್ಕೂ ಮಿಕ್ಕ ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯ ಹಿರಿಮೆ-ಗರಿಮೆಯನ್ನು ಎಷ್ಟು ಕೊಂಡಾಡಿದರೂ ಒಟ್ಟು ಸಾಹಿತ್ಯದಲ್ಲಿ ಮಹಿಳೆಯರ ಚಿತ್ರಣ ಮತ್ತು ಸಾಹಿತಿಯಾಗಿ ಮಹಿಳೆಯ ಪಾಲುದಾರಿಕೆ ನಗಣ್ಯವೇ ಸರಿ.
ಹತ್ತೊಂಬತ್ತು ವರ್ಷ ಅಂದರೆ ಹತ್ತಿರ ಹತ್ತಿರವೆಂದರೂ ಒಂದು ಶತಮಾನ ಗತಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ನಂಥಹ ಗೌರವಾನ್ವಿತ ಸಂಸ್ಥೆಯಲ್ಲಿ ಅದು ನಡೆಸಿಕೊಂಡು ಬಂದಿರುವ ಎಪ್ಪತ್ತಾರು ಸಮ್ಮೇಳನಗಳಲ್ಲಿ ಮಹಿಳೆಯರಿಗೆ ಸಂದ ಪಾಲು ಎಷ್ಟು? ಕೇವಲ ಮೂರು ಈ ಹೊತ್ತು ನಾನು ನಾಲ್ಕನೆಯವಳು.
ಸಂಘರ್ಷ ಮತ್ತು ಕನ್ನಡ ಸಾಹಿತ್ಯ
ಈವರೆಗೆ ನಡೆದು ಬಂದ ಬಹುತೇಕ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಒಟ್ಟು ಕನ್ನಡ ಸಾಹಿತ್ಯದ ಪರಂಪರೆ ಪ್ರಯೋಗ ಕುರಿತು ಸುರ್ದೀರ್ಘವಾಗಿ ಚರ್ಚಿಸಲಾಗಿದೆ. ಕೆಲವೊಮ್ಮೆಯಂತೂ ತೀರ ಚರ್ವಿತ ಚರ್ವಣ ಎನ್ನುವಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ನಾನಂತೂ ಅಖಂಡ ಕನ್ನಡ ಸಾಹಿತ್ಯವನ್ನು ಆಯಾ ಕಾಲಟ್ಟದ ಸೃಜನಶೀಲ ಸಂಘರ್ಷದ ಮೊತ್ತವಾಗಿಯೇ ಗ್ರಹಿಸುತ್ತೇನೆ.
Tag: Kannada Sahitya Sammelana 76, Geetha Nagabhushana,
೭೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎಲ್. ಬಸವರಾಜು
ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ ೭-೧0-೧೯೧೯ರಂದು ಲಿಂಗಪ್ಪ-ಈರಮ್ಮ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು.
ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಇವರ ಸಾಹಿತ್ಯ ಕೆಲಸಕ್ಕಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ, ಗೌರವಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೭೭), ಕನ್ನಡ ರಾಜ್ಯೋತ್ಸವ ಪ್ರಶಸ್ತಿ(೧೯೯೪), ಚಿದಾನಂದ ಪ್ರಶಸ್ತಿ(೧೯೯೪), ಪಂಪ ಪ್ರಶಸ್ತಿ(೨000), ಚಾವುಂಡರಾಯ ಪ್ರಶಸ್ತಿ(೨00೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೨000) ಇತ್ಯಾದಿಗಳು ಇವರಿಗೆ ಸಂದಿವೆ.
ಸಂಶೋಧಕರಾಗಿ, ಗ್ರಂಥ ಸಂಪಾದಕರಾಗಿ ಇವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಮೋಘವಾದುದು.
ಸರಳ ಪಂಪಭಾರತ(೧೯೯೯), ಪಂಪನ ಆದಿಪುರಾಣ(ಸಂಪಾದನೆ), ರನ್ನನ ಸರಳ ಗದಾಯುದ್ಧ, ಅಲ್ಲಮನ ವಚನ ಚಂದ್ರಿಕೆ(ಸಂಶೋಧನೆ), ಬಸವಣ್ಣನವರ ವಚನಗಳು, ಸರ್ವಜ್ಞನ ವಚನಗಳು, ಕೇಶಿರಾಜನ ಶಬ್ದಮಣಿದರ್ಪಣಂ ಇತ್ಯಾದಿಗಳು ಇವರ ಕೃತಿಗಳು.
ಎಲ್. ಬಸವರಾಜು ಅವರು ೨೯-೧-೨0೧೨ರಲ್ಲಿ ನಿಧನರಾದರು.
ಕನ್ನಡ ಸಾಹಿತ್ಯ ಸಮ್ಮೇಳನ–೭೫
ಅಧ್ಯಕ್ಷರು, ಎಲ್. ಬಸವರಾಜು
ದಿನಾಂಕ: ೪,೫,೬,೭ ಜನವರಿ, ೨00೯
ಸ್ಥಳ : ಚಿತ್ರದುರ್ಗ
(ಟಿಪ್ಪಣಿ: ೨00೮ರಲ್ಲಿ ಸಮ್ಮೇಳನ ನಡೆಯಲಿಲ್ಲ)
ಸರ್ಕಾರ ಕಡೆಗಣಿಸುತ್ತಾ ಬಂದ ಸಂಸ್ಥೆ
ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಗಳು ಆಧುನಿಕ ಕನ್ನಡ ನಾಡು-ನುಡಿ-ಸಾಹಿತ್ಯ ಪರಂಪರೆಯ ಎರಡು ಕಣ್ಣುಗಳು. ಇವುಗಳ ಮುಖ್ಯ ದೃಷ್ಟಿ ಕರ್ನಾಟಕದ ಏಕೀಕರಣವೆಂಬುದೂ- ಅದು ಸಾಧಿತವಾಗಿರುವುದೂ ಈಗ ಇತಿಹಾಸ. ಆ ಕಾಲದ ಒತ್ತಾಸೆಯಿಂದ ನಾಡಿನ ಮಹನೀಯರು ಕಟ್ಟಿದ ಮಹತ್ವದ ಸಂಸ್ಥೆಗಳಿವು. ಶತಮಾನದ ಸಂಭ್ರಮದ ಅಂಚಿನಲ್ಲಿರುವ ಈ ಮಹಾನ್ ಸಂಸ್ಥೆಗಳು ಈ ವೇಳೆಗಾಗಲೇ ನಾಡಿನ ಸಾರ್ವಭೌಮ ಸಂಸ್ಥೆಗಳಾಗಿ ಬೆಳೆಯಬೇಕಾಗಿತ್ತು. ಆದರೆ ಜನತೆ- ಮುಖ್ಯವಾಗಿ ಸರಕಾರ ವ್ಯವಸ್ಥಿತವಾಗಿ ಅವನ್ನು ಬೆಳೆಸುವ ಬದಲು ಕಾಲಕ್ರಮೇಣ ಕಡೆಗಣಿಸುತ್ತ ಬಂದದ್ದು ಬಹಳ ಆಶ್ಚರ್ಯಕರವಾದ ಮತ್ತು ದುರದೃಷ್ಟಕರವಾದ ಸಂಗತಿ.
ಹೊಸ ಸಂಸ್ಥೆಗಳ ಉದಯ ಸಾಧನೆ
ಬದಲಾದ ಸನ್ನಿವೇಶಗಳಿಗನುಗುಣವಾಗಿ ಅವನ್ನು ಬಲಪಡಿಸುತ್ತ ಬಂದಿದ್ದರೆ- ಇಂದು ಅವು ಮೂಲೆಗುಂಪಾಗುವ ಸ್ಥಿತಿಗೆ ಬರುತ್ತಿರಲಿಲ್ಲ. ಅಲ್ಲಿ ಕಾರ್ಯಗತಗೊಳಿಸಬಹುದಾಗಿದ್ದ ಯೋಜನೆಗಳನ್ನು ಸರಕಾರ ಒಂದೊಂದಾಗಿ ತನ್ನ ಕಡೆಗೆ ವರ್ಗಾಯಿಸಿಕೊಳ್ಳುತ್ತ ಬಂದಿದ್ದರಿಂದ- ಹೊಸ ಹೊಸ ಹೆಸರಿನ ಸರಕಾರೀ ಸಂಸ್ಥೆಗಳು ಹುಟ್ಟಿಕೊಂಡಂತಾಯಿತೇ ಹೊರತು- ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿದ್ಯಾವರ್ಧಕ ಸಂಘಗಳ ವಿಕಾಸ ಸಾಧ್ಯವಾಗಲಿಲ್ಲ. ಅಂದರೆ-ಸರಕಾರ ಹೊಸದಾಗಿ ಹುಟ್ಟುಹಾಕಿದ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಚಟುವಟಿಕೆಗಳು ಸರಕಾರೀಕರಣಗೊಂಡು ಜನದೂರವಾಗಿ ಕನ್ನಡ ಸಂಬಂಧವಾದ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯಲಾರದೆ ಹೋದವು. ಕೆಲವೇ ಆಯ್ದ ಲೇಖಕರ ಕೃತಿಗಳ ಪ್ರಕಟಣೆ, ಕೆಲವೇ ಬಗೆಯ ವಿಚಾರ ಸಂಕೀರ್ಣ, ಅಪೂರ್ಣ ಗಡಿವೀಕ್ಷಣೆ, ಕನ್ನಡ ಆಡಳಿತ ಭಾಷಾನೀತಿಯ ಅಸಮರ್ಪಕ ನಿರ್ವಹಣೆ, ಅನಿಯಂತ್ರಿತ ಪ್ರಶಸ್ತಿ- ಪುರಸ್ಕಾರ ಪ್ರದಾನ- ಇವಿಷ್ಟೆ ತಾನೆ ಇಲ್ಲಿ ನಡೆಯುತ್ತಿರುವ ಕೆಲಸಗಳು? ಈ ಯೋಜನೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳಿಗೆ ಹಂಚಿಕೊಟ್ಟು ಕನ್ನಡ ಜನತೆಯ ಕೈಗಳನ್ನು ಬಲಪಡಿಸಬಹುದಾಗಿತ್ತು. ಅದರೆ ಹಾಗಾಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ; ಕನ್ನಡದ ಪರಿಚಾರಿಕೆಯನ್ನು ಕೈಗೊಂಡಿರುವ ಸರಕಾರದ ಸಂಸ್ಥೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವ್ಯಾಪ್ತಿಯಲ್ಲಿ ತಂದರೆ ಹೇಗೆ ಎಂಬುದು ಚರ್ಚಾಸ್ಪದವಾಗಿರುವ ಪ್ರಮೇಯವೇ ಇರುವುದಿಲ್ಲ. ಈ ವಿಲೀನ ಪ್ರಕ್ರಿಯೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘಗಳಿಗೆ ತನ್ನ ತಾನೇ ಹೊಸ ಶಕ್ತಿ ಬಂದಂತಾಗುತ್ತದೆ. ಯೋಜನೆಗಳ ನಿರ್ಬಲೀಕರಣವೂ ತಪ್ಪುತ್ತದೆ. ಸಂಘಗಳಂತಹ ಶುದ್ಧ ಜನಪರ ಸಂಸ್ಥೆಗಳು ತಮ್ಮ ಜಾಯಮಾನದಿಂದಲೇ ಈ ಕನ್ನಡದ ಕಾರ್ಯಗಳನ್ನು ಎಷ್ಟು ನವೋನವ ಉತ್ಸಾಹದಿಂದಲೂ ಜನಸಮ್ಮತಿಯಿಂದಲೂ ನಡೆಸಬಹುದಾಗಿತ್ತೋ ಅದಕ್ಕೆ ಬದಲಾಗಿ ಅನಿರೀಕ್ಷಿತ ಬದಲಾವಣೆ ತಾಳಿ ಜನದೂರ ಕಾರ್ಯ ವೈಖರಿಗಳಿಗೆ ಒಳಗಾಗುವ ಅಪಾಯದಿಂದ ಪಾರಾಗಬಹುದಾಗಿತ್ತು.
ಎರಡು ಸಂಸ್ಥೆಗಳ ಹಿರಿಮೆ
ವಾಸ್ತವವಾಗಿ ನಾವು ವಿಷಯಗಳ ಸಂಬಂಧವಾಗಿಯೇ ಖಾಸಗೀಕರಣ ಮತ್ತು ಉದಾರೀಕರಣ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಆಗ ಕನ್ನಡಿಗರು ಅಧಿಕೃತವಾಗಿ ತಮ್ಮ ಕನಸಿನ ಸಂಸ್ಥೆಗಳಾದ ಪರಿಷತ್ತು, ವಿದ್ಯಾವರ್ಧಕ ಸಂಗಳ ಮೂಲಕ ತಮ್ಮ ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯದ ಜವಾಬ್ದಾರಿಗಳನ್ನು ತಾವೇ ನೇರವಾಗಿ ನಿರ್ವಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರಕಾರ ವ್ಯವಸಾಯ, ಕಂದಾಯ, ಅಬಕಾರಿ, ಲೋಕೋಪಯೋಗಿ ಮತ್ತಿತರ ವ್ಯಾವಹಾರಿಕ- ಆವಶ್ಯಕ ಕರ್ತವ್ಯಗಳಲ್ಲಿ ತೊಡಗಿರಲಿ. ಹೀಗಾದರೆ ಜನರ ಆಶೋತ್ತರಗಳನ್ನು, ಆವೇಶಗಳನ್ನು ಕನಸು ಮನಸುಗಳನ್ನು ನೋಯಿಸದೆ ನೆರವೇರಿಸಲು ಅನುವಾಗುತ್ತದೆ. ಸರಕಾರ ಪ್ರವೇಶ ಮಾಡಬಾರದಂತಹ, ದೂರನಿಂತು, ಗೌರವದಿಂದ ಪ್ರೋತ್ಸಾಹ ನೀಡಬೇಕಾದಂತಹ ರೀತಿ ಇದಾಗುವುದಿಲ್ಲವೆ. ಸಾಹಿತ್ಯವೆನ್ನುವುದು ಸರಕಾರದಿಂದ ನಿರ್ಣಯವಾಗುವಂಥದ್ದಲ್ಲ, ಅದು ತೀರ ಭಾವನಾತ್ಮಕವಾದ ವಿಚಾರ. ಇದನ್ನೆಲ್ಲ ನೇರವಾಗಿ ಜನತೆ ತನ್ನ ಸಂಘಸಂಸ್ಥೆಗಳ ಮೂಲಕ ತಾನೇ ನಿರ್ವಹಿಸಿಕೊಳ್ಳಬೇಕಾದ್ದು ಹಲವು ಧಾರ್ಮಿಕ ವಿಚಾರಗಳಿಗೆ ಇಂದೂ ಕೂಡ ಸರಕಾರ ಪ್ರವೇಶ ಮಾಡುವುದು ಹೇಗೆ ಸಾಧ್ಯವಿಲ್ಲವೋ ಹಾಗೇ ಇಂಥ ಭಾವನಾತ್ಮಕ ಆವೇಶಭರಿತ ವಿಷಯಗಳ ಗೊಡವೆಗೆ ಹೋಗದಿರುವುದು ಜನಕ್ಕೂ ಜನಪರ ಅಭಿವೃದ್ಧಿಗಾಗಿ ನಡೆಯುತ್ತಿರುವ ಸರಕಾರಗಳಿಗೂ ಶೋಭೆ ತರುವಂಥದ್ದು, ಈ ಕೆಲಸ ಅಂದರೆ- ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ ಮತ್ತು ಸಂಸ್ಕೃತಿ ಇಲಾಖೆ- ಇವನ್ನೆಲ್ಲಾ ಸರಕಾರ ಸಾಹಿತ್ಯ ಪರಿಷತ್ತು ಮತ್ತು ವಿದ್ಯಾವರ್ಧಕ ಸಂಘಗಳಿಗೆ ವರ್ಗಾಯಿಸುವುದು ಅಗತ್ಯ. ಈ ಸಂಸ್ಥೆಗಳನ್ನು ಎರಡು ಸ್ವಾಯತ್ತ ವಿಶ್ವವಿದ್ಯಾನಿಲಯಗಳನ್ನಾಗಿ ಪರಿವರ್ತಿಸಲಿ. ಆಗ ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗಳ ಅಭಿವೃದ್ಧಿ ಇತೋಪ್ಯತಿಶಯವಾಗಿ ನಡೆಯುತ್ತದೆ. ಕಾಲಕ್ರಮದಲ್ಲಿ ಅವು ಸ್ವತಂತ್ರ ಜನತಾ ಸಂಸ್ಥೆಗಳಾಗಿ ಬೆಳೆದು ದೇಶ ವಿದೇಶ, ಇಡಿಯಾಗಿ ವಿಶ್ವದಲ್ಲಿ ಕನ್ನಡ ಭಾಷೆ-ಸಾಹಿತ್ಯ- ಸಂಸ್ಕೃತಿ ಪ್ರಸಾರ ಕಾರ್ಯಗಳನ್ನು ಕೈಗೊಳ್ಳಲು ಸಮರ್ಥವಾಗುತ್ತದೆ.
Tag: Kannada Sahitya Sammelana 75, L. Basavaraju
೭೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಎಲ್.ಎಸ್. ಶೇಷಗಿರಿರಾವ್
ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಪ್ರಬುದ್ಧ ವಿಮರ್ಶಕರೆನಿಸಿರುವ ಎಲ್.ಎಸ್. ಶೇಷಗಿರಿರಾಯರು ಸ್ವಾಮಿರಾವ್-ಕಮಲಾಬಾಯಿ ದಂಪತಿಗಳ ಸುಪುತ್ರರಾಗಿ ೧೬-೨-೧೯೨೫ರಲ್ಲಿ ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು.
ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.
೧೯೪೭-೫0ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ನ್ಯಾಷನಲ್ ಬುಕ್ ಟ್ರಸ್ಟ್ ಮೊದಲಾದ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಇವರ ಇಂಗ್ಲಿಷ್ ಸಾಹಿತ್ಯ ಚರಿತ್ರೆ (೧೯೯೬) ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆಧುನಿಕ ಸಾಹಿತ್ಯ ವಿಮರ್ಶೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅನಕೃ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ ಮೊದಲಾದವು ಇವರಿಗೆ ಲಭ್ಯವಾಗಿದೆ.
ಇವರ ಕೆಲವು ಸುಪ್ರಸಿದ್ಧ ಕೃತಿಗಳು ಹೀಗಿವೆ : ಕನ್ನಡದ ಅಳಿವು ಉಳಿವು (ಪ್ರಬಂಧ) ಸಿರಿಸಂಪದ (ವ್ಯಕ್ತಿ ಚಿತ್ರ), ಆಕಾಂಕ್ಷೆ ಮತ್ತು ಆಸೆ (ನಾಟಕ), ಹೊಸಗನ್ನಡ ಸಾಹಿತ್ಯ (ವಿಮರ್ಶೆ), ಕಾದಂಬರಿ ಮತ್ತು ಸಾಮಾನ್ಯ ಮನುಷ್ಯ (ವಿಮರ್ಶೆ), ವಿಲಿಯಂ ಷೇಕ್ಸ್ಪಿಯರ್, ಫ್ರಾನ್ಸ್ ಕಾಫ್ಕ, ಭಾರತೀಯ ಸಾಹಿತ್ಯ ಸಮೀಕ್ಷೆ ಇತ್ಯಾದಿ. ಇವರು ಇಂಗ್ಲಿಷಿನಲ್ಲೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನ–೭೪
ಅಧ್ಯಕ್ಷರು, ಎಲ್.ಎಸ್. ಶೇಷಗಿರಿರಾವ್
ದಿನಾಂಕ ೧೨, ೧೩, ೧೪. ೧೫ ಡಿಸೆಂಬರ್ ೨00೭
ಸ್ಥಳ : ಉಡುಪಿ
ಪ್ರಮಾಣಿಕ ಅಧ್ಯಕ್ಷ
ಈವರೆಗೆ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕಾದಂಬರಿಕಾರರು, ಕವಿಗಳು, ಸಣ್ಣಕಥೆಗಳ ಬರಹಗಾರರು, ನಾಟಕಕಾರರು, ಪ್ರಬಂಧಕಾರರು ಅಲ್ಲದೆ ಮಹಾನ್ ವಿದ್ವಾಂಸರನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರನ್ನಾಗಿ ಆರಿಸಿ, ನಾಡು ಗೌರವಿಸಿದೆ. ಮೊದಲಬಾರಿಗೆ ವಿಮರ್ಶಕನೆಂದೇ ಗುರುತಿಸಲಾಗುವ ಸಾಹಿತಿಯನ್ನು ಈ ಪೀಠಕ್ಕೆ ನಾಡು ಆರಿಸಿದೆ.
ಸಾಹಿತ್ಯ ವಿಮರ್ಶೆಗಳನ್ನು ಕುರಿತು ಕೆಲವು ಅನಿಸಿಕೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅದಕ್ಕೆ ಮೊದಲು ಒಂದು ಮಾತನ್ನು ನಿವೇದಿಸಬೇಕು. ನಾನು ಸಾಹಿತ್ಯವನ್ನು ಪ್ರವೇಶಿಸಿದ್ದು ಸಣ್ಣಕಥೆಗಳ ಬರಹಗಾರರನಾಗಿ, ೧೯೪೭ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಅಖಿಲ ಕರ್ನಾಟಕ ಸಣ್ಣಕಥೆಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದೆ. ನನ್ನ ನಾಲ್ಕು ಕಥೆಗಳ ಸಂಗ್ರಹಗಳು ಪ್ರಕಟವಾಗಿವೆ.
ಕನ್ನಡ ಭಾಷೆ ಬೆಳವಣಿಗೆ
ಕನ್ನಡ ಭಾಷೆಯ ಬೆಳವಣಿಗೆಯ ಕಾರ್ಯ ವ್ಯವಸ್ಥಿತವಾಗಿ ನಡೆಯಬೇಕು. ಮತ್ತು ಈ ಕಾರ್ಯದಲ್ಲಿ ನಿರತವಾದ ಸಂಸ್ಥೆಗಳ ನಡುವೆ ಹೊಂದಾಣಿಕೆಯ ಅಗತ್ಯವಿದೆ. ಕನ್ನಡ ವಿಶ್ವವಿದ್ಯಾನಿಲಯ, ಇತರ ಎಲ್ಲ ವಿಶ್ವವಿದ್ಯಾನಿಲಯಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಈ ಎಲ್ಲ ಸಂಸ್ಥೆಗಳ ಯೋಜನೆಗಳು ಮತ್ತು ಪ್ರಕಟಣೆಗಳ ವಿಷಯದಲ್ಲಿ ಹೊಂದಾಣಿಕೆಗೆ ವ್ಯವಸ್ಥೆಯ ಅಗತ್ಯವಿದೆ.
ವಿದ್ವತ್ ಪೋಷಣೆಮಾಡಿ
ನಾಡಿನಲ್ಲಿ ವಿದ್ವತ್ತಿನ ಅನ್ವೇಷಣೆಗೆ ಪೋಷಕವಾದ ವಾತಾವರಣವನ್ನು ಸೃಷ್ಟಿಸಬೇಕೆಂದು ಸರ್ಕಾರದಲ್ಲಿಯೂ ವಿಶ್ವವಿದ್ಯಾನಿಲಯಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ನನ್ನ ಮನವಿ. ಹಳಗನ್ನಡ, ವ್ಯಾಕರಣ, ಛಂದಸ್ಸು ಮೊದಲಾದವುಗಳ ಅಧ್ಯಯನವು ಮುಂದುವರಿಯಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಿಘಂಟಿನ ಕಾರ್ಯ ಮುಂದುವರೆಯಲು ಗ್ರಂಥಾಲಯವನ್ನು ಸಜ್ಜುಗೊಳಿಸಬೇಕು. ಸರ್ಕಾರವು ಹಣ ಸಹಾಯವನ್ನು ನೀಡಬೇಕು. ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಮಟ್ಟದ ಸಂಶೋಧನೆ ನಡೆಯಬೇಕು. ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಅನ್ವಯವಾಗುವ ಸಾಮಾನ್ಯ ನಿಯಮಗಳೇನೋ ಇವೆ. ಇವು ಆಡಳಿತಕ್ಕೆ ಅನ್ವಯಿಸುವುವು. ವಿದ್ವತ್ತಿನ ಕೆಲಸಕ್ಕೆ ಹೊಂದಾಣಿಕೆಯ ಅಭಾವವಿದೆ.
ಜಗತ್ತಿನ ಇನ್ನೂರು ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತದ ಒಂದೂ ವಿಶ್ವವಿದ್ಯಾನಿಲಯದ ಹೆಸರಿಲ್ಲ. ವಿಶ್ವವಿದ್ಯಾನಿಲಯಗಳ ಗುಣಮಟ್ಟವನ್ನು ಸುಧಾರಿಸಿ ಕರ್ನಾಟಕದ ವಿಶ್ವವಿದ್ಯಾನಿಲಯಗಳನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಸಂಕಲ್ಪವನ್ನು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಮಾಡಬೇಕು, ಉನ್ನತಮಟ್ಟದ ವಿದ್ವತ್ ಪತ್ರಿಕೆಗಳು ಕನ್ನಡದಲ್ಲಿ ಎಷ್ಟಿವೆ? ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಮೊದಲಾದ ಸಂಸ್ಥೆಗಳಿಗೆ ಶಿಕ್ಷಣ ಕ್ಷೇತ್ರದೊಡನೆ ಸಂಬಂಧವಿರುವವರನ್ನು ಮಾತ್ರ ಆಯ್ಕೆ ಮಾಡಬೇಕು.
ಕನ್ನಡ ಸಾರ್ವಭೌಮ ಸ್ಥಾನ
ಪ್ರಾಥಮಿಕ ತರಗತಿಯಿಂದ ಪದವಿ ತರಗತಿಯವರೆಗೆ ಇಂಗ್ಲಿಷ್ ಬೋಧನೆಯ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಸಮಗ್ರವಾಗಿ ಶಿಫಾರಸು ಮಾಡಲು ಇಂಗ್ಲಿಷ್ ಬೋಧನೆಯ ತಜ್ಞರೂ ಇರುವ ಸಮಿತಿಯೊಂದನ್ನು ಸರ್ಕಾರವಾಗಲಿ, ಕನ್ನಡ ಸಾಹಿತ್ಯ ಪರಿಷತ್ತಾಗಲಿ ರಚಿಸುವುದು ಸೂಕ್ತ. ಮುಖ್ಯವಾಗಿ, ಕನ್ನಡ ನಾಡಿನ ಇಡೀ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಸಾರ್ವಭೌಮ ಸ್ಥಾನ ದಕ್ಕಬೇಕು.
Tag: L.S. Sheshagiri Rao, Tag: Kannada Sahitya Sammelana 74
೭೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು
ಕೆ.ಎಸ್. ನಿಸಾರ್ ಅಹಮದ್
ನಿತ್ಯೋತ್ಸವ ಕವಿಯಾಗಿ ಪ್ರಸಿದ್ಧರಾದ ಕೆ.ಎಸ್. ನಿಸಾರ್ ಅಹಮದ್ ಅವರು ಮೈಸೂರು ಸರಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ ದಂಪತಿಗಳ ಪುತ್ರರು. ಇವರು ಜನಿಸಿದ್ದು ೫-೨-೧೯೩೬ರಂದು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು.
ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ೧೯೯೪ರಲ್ಲಿ ನಿವೃತ್ತರಾದರು.
೧೯೮೪-೮೭ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದರು. ೧೯೭೮ರಲ್ಲಿ ಕನ್ನಡದ ಪ್ರಥಮ ಧ್ವನಿಸುರುಳಿಯಾಗಿ ಅವರ ನಿತ್ಯೋತ್ಸವ ಬಿಡುಗಡೆ ಆಯಿತು.
ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಗೊರೂರು ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹೆಜ್ಚೆಗುರುತು ಕೃತಿಗೆ ಸೋವಿಯಟ್ ಲ್ಯಾಂಡ್ ಪ್ರಶಸ್ತಿ ಇತ್ಯಾದಿ ಹತ್ತಾರು ಪ್ರಶಸ್ತಿಗಳು ಲಭ್ಯವಾಗಿವೆ.
ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಇವರ ಮುಖ್ಯಕೃತಿಗಳು ಹೀಗಿವೆ; ಮನಸು ಗಾಂಧಿಬಜಾರು, ನಿತ್ಯೋತ್ಸವ, ನವೋಲ್ಲಾಸ, ಸಮಗ್ರ ಭಾವಗೀತೆಗಳು, ಅಚ್ಚುಮೆಚ್ಚು, ಒಥೆಲೊ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಂ, ಬರೀ ಮರ್ಯಾದಸ್ಥರೇ, ಹಿರಿಯರ ಹರಸಿದ ಹೆದ್ದಾರಿ, ಇದು ಬರಿ ಬೆಡಗಲ್ಲೋ ಅಣ್ಣ ಇತ್ಯಾದಿ.
ಕನ್ನಡ ಸಾಹಿತ್ಯ ಸಮ್ಮೇಳನ–೭೩
ಅಧ್ಯಕ್ಷರು: ಕೆ.ಎಸ್. ನಿಸಾರ್ ಅಹಮದ್
ದಿನಾಂಕ ೨0, ೨೧, ೨೨, ೨೩ ಡಿಸೆಂಬರ್ ೨00೬
ಸ್ಥಳ : ಶಿವಮೊಗ್ಗ
(೨00೫ರಲ್ಲಿ ಸಮ್ಮೇಳನ ನಡೆಯಲಿಲ್ಲ)
ಪ್ರಸ್ತುತ ಅಪ್ರಸ್ತುತ ಸಂಗತಿಗಳು
ಕನ್ನಡ ನಾಡು ನುಡಿಗಳ ಹಲವು ದಶಕಗಳ ಸಮಸ್ಯೆಗಳಾಗಲಿ, ಅವುಗಳಿಗೆ ಹಿಂದಿನ ಸಮ್ಮೇಳಾನಧ್ಯಕ್ಷರುಗಳು ಸೂಚಿಸಿರುವ ಕೆಲವೊಂದು ಪರಿಹಾರೋಪಾಯಗಳಾಗಲಿ ಪ್ರಸ್ತುತವೆನ್ನಿಸುವಂತಹವು. ಬಹುಃಶ ಭವಿಷ್ಯದಲ್ಲೂ ಆದೇಯವಾಗುವಂತಹವು. ಅಂದಿನ ಕೆಲವು ಆಶಯ, ಆಶೋತ್ತರಗಳು ನೆರವೇರಿ ಇವೊತ್ತಿಗೆ ಅಗತ್ಯವಲ್ಲ ಎನ್ನಿಸುವ ಬಗೆಯವು. ಉದಾಹರಣೆಗೆ, ಕರ್ನಾಟಕ ಏಕೀಕರಣದ ಚಳವಳಿ ಮತ್ತು ಅದರ ಕೈ ಹಿಡಿದೇ ಸಾಗಿ ಬಂದ ರಾಷ್ಟ್ರ್ರ ವಿಮೋಚನೆಯ ಸಂಗ್ರಾಮ. ಹೀಗಿದ್ದರೂ, ಅವುಗಳ ಬಗೆಗಿನ ಆ ಕಾಲದ ಹಿರಿಯರ ಉತ್ಕಟವಾದ ಶ್ರದ್ಧಾಸಕ್ತಿ, ಪ್ರಾಮಾಣಿಕವಾದ ಕಾರ್ಯೋನ್ಮುಖ ನಿಷ್ಠೆ, ಸಾಂಘಿಕ ಸಾಹಸೋತ್ಸಾಹ ಹಾಗೂ ನಿಸ್ವಾರ್ಥಪರ ತ್ಯಾಗ ಜೀವನದ ಕೃತಾರ್ಥತೆ ತಕ್ಕಮಟ್ಟಿಗಾದರೂ ಇಂದಿನವರಿಗೆ ಬೋಧಪ್ರದವಾಗಬೇಕು. ಹುದ್ದೆ, ಮುದ್ದೆ, ನಿದ್ದೆಗಳ ನಿರಂತರ ಸೆಣಸಾಟ ಮಾತ್ರವೇ ಬದುಕಿನ ಉದ್ದೇಶವೆಂದು ಬಗೆದಿರುವ ಅಸಂಖ್ಯ ಸಾಮಾಜಿಕರಿಗೆ ಹಿಂದಿನವರ ಧ್ಯೇಯಾದರ್ಶ, ದೇಶ ಭಾಷೆಗಳ ಬಗೆಗಿನ ಸ್ವಹಿತವಿದೂರವಾದ ಕೃತಜ್ಞತಾಪೂರ್ವಕ ಸೇವಾತ್ಪರ ಮನದಟ್ಟಾಗಬೇಕು.
ಹಿಂದಿನ ಸಮ್ಮೇಳನಗಳ ಮೌಲಿಕ ಸಂಗತಿಗಳು
ಇಂದಿನ ಜೀವನ ಮೌಲ್ಯ ಪೌರರನ್ನು ಸಾವಕಾಶವಾಗಿ ಅಲೋಚಿಸುವುದಕ್ಕಾಗಲಿ, ಸಂಯಮ ಮತ್ತು ಯುಕ್ತಾಯುಕ್ತತೆಯನ್ನು ವಿವೇಚಿಸಿ ಕಾರ್ಯೋನ್ಮುಖವಾಗುವುದಕ್ಕಾಗಲಿ ಇಂಬು ನೀಡುವಂಥದ್ದಲ್ಲ. ಅನವರತ ಧಾವಂತಿಸಿರುವ ನಮ್ಮ ಇವೊತ್ತಿನ ಬಾಳ್ವೆಗೆ ಮೇಲ್ಮೆ, ಮರ್ಯಾದೆಗಳನ್ನು, ಘನತೆ ಕೃತಕೃತ್ಯತೆಗಳನ್ನು ಕೂಡಿಸುವ ಸನ್ಮೌಲ್ಯಗಳ ಬಗೆಗಿನ ತಿಳಿವಳಿಕೆಯನ್ನು ಪಡೆಯಲು ಹಿಂದಿನ ಅಧ್ಯಕ್ಷರ ಕೆಲವೊಂದು ಅಭಿಪ್ರಾಯಗಳು ಸಾಕಾಗದೆನ್ನಿಸಬಹುದು. ಹಾಗೆಂದು ಅವುಗಳನ್ನು ಅವಗಣಿಸುವಂತಿಲ್ಲ. ಚಾರಿತ್ರಿಕ ದಾಖಲೆಗಳಾಗಿ ಅವು ತಮ್ಮ ಮಹತ್ವವನ್ನು ಉಳಿಸಿಕೊಳ್ಳುತ್ತವೆ. ಈ ದೃಷ್ಟಿಯಿಂದ ಹಿಂದಿನ ಸಮ್ಮೇಳನಾಧ್ಯಕ್ಷರ ಸಕಾಲಿಕ ಮತ್ತು ಸಾರ್ವಕಾಲಿಕ ಸಂಗತಿಗಳ ಬಗೆಗಿನ ಕೆಲವು ವಿಚಾರಗಳು ಮನನಯೋಗ್ಯವಾಗಿವೆ. ಕನ್ನಡಿಗನ ಪಾಲಿಗೆ ಉಪಯುಕ್ತವಾಗಿವೆ.
ಸಕಾಲದಲ್ಲಿ ಆಯ್ಕೆ
ನಾಲ್ಕು ವರ್ಷಗಳ ಹಿಂದೆ ನನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಆಯ್ಕೆ ಮಾಡಲು ಸಂಕಲ್ಪಿಸಿದ್ದ ಸಂಬಂಧಪಟ್ಟ ಮಹನೀಯರು ಕೆಲವೊಂದು ಕಾರಣಗಳಿಂದಾಗಿ ಕೊನೆಯ ಗಳಿಗೆಯಲ್ಲಿ ನನ್ನ ಹೆಸರನ್ನು ಕೈಬಿಟ್ಟರಂತೆ. ಆ ಸುಯೋಗ ಈ ವರ್ಷ ನನಗೆ ಒದಗಿದೆ. “ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು” ಎಂಬ ಒಳ್ನುಡಿಯಂತೆ ಈಗ ಆ ಅಗ್ರಾಸನ ಲಭಿಸಿರುವುದು ಹಲವು ರೀತಿಗಳಿಂದ ಗಮನಾರ್ಹವಾಗಿದೆ. ನನಗೆ ಹೆಚ್ಚಿನ ಹಿಗ್ಗು ಮತ್ತು ಸಮಾಧಾನವನ್ನು ಕೊಟ್ಟಿದೆ. ನಾಡಿನ ಹುಟ್ಟುಹಬ್ಬದ ಹೊನ್ನೊಸಗೆಯನ್ನು ನಮ್ಮ ಸರ್ಕಾರ ಮತ್ತು ಕರ್ನಾಟಕದ ವಿವಿಧ ಊರು, ಪಟ್ಟಣಗಳ ಕನ್ನಡ ಸಂಘ ಸಂಸ್ಥೆಗಳು, ಹೊರಗಿರುವ ನಮ್ಮ ಭಾಷಾ ಬಂಧುಗಳು ಸಂಭ್ರಮಯುತವಾಗಿ ಆಚರಿಸುತ್ತಿರುವ ಈ ಅಪೂರ್ವ, ವಿಶಿಷ್ಟ ಸಂವತ್ಸರದಲ್ಲಿ ನನ್ನ ಆಯ್ಕೆಯಾಗಿರುವುದು ಹೆಮ್ಮೆಯನ್ನು ಹೆಚ್ಚಿಸಿದೆ.
Tag: Kannada Sahitya Sammelana 73, K.S. Nisar Ahmed