ಸಾಹಿತ್ಯ ಸಮ್ಮೇಳನಗಳು

 

ಕನ್ನಡ ನಾಡಿನ  ಏಕೀಕರಣ ಹಾಗೂ  ಇಪ್ಪತ್ತನೆಯ  ಶತಮಾನದಿಂದ  ಮೊದಲ್ಗೊಂಡಂತೆ  ಕನ್ನಡ  ನಾಡು, ನುಡಿ, ಸಾಹಿತ್ಯ, ಸಾಂಸ್ಕೃತಿಕ  ಬೆಳವಣಿಗೆಯಲ್ಲಿ  ಕನ್ನಡ  ಸಾಹಿತ್ಯ  ಪರಿಷತ್ತು  ಮತ್ತು  ಕನ್ನಡ  ಸಾಹಿತ್ಯ  ಪರಿಷತ್ತು  ನಡೆಸುತ್ತಾ  ಬಂದಿರುವ  ಸಾಹಿತ್ಯ ಸಮ್ಮೇಳನಗಳ  ಪಾತ್ರ  ಅತ್ಯಂತ  ಮಹತ್ವದ್ದಾಗಿದೆ.  ಕನ್ನಡ  ಸಾಹಿತ್ಯ ಪರಿಷತ್ತಿನ ಉಗಮದ  ಕುರಿತಾದ  ವಿವರಗಳನ್ನು ಸಾಂಸ್ಕೃತಿಕ  ಇತಿಹಾಸ ಪುಟದಲ್ಲಿ ಸಮಗ್ರವಾಗಿ  ವಿವರಿಸಲಾಗಿದೆ.

೧೯೧೪ರ ಇಸವಿಯಲ್ಲಿ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ  ಕನ್ನಡ ಭಾಷೆಯ ಅಭಿವೃದ್ಧಿಗೆ  ಪೂರಕವಾದ ಪರಿಷತ್ತನ್ನು  ಸ್ಥಾಪಿಸುವ  ವಿಚಾರದಲ್ಲಿ   ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ  ಉಪಸಮಿತಿಯನ್ನು ರಚಿಸಲಾಯಿತು.  ಈ  ಉಪಸಮಿತಿಯು  ಅಂದಿನ  ವಿವಿಧ  ಕನ್ನಡ  ನಾಡುಗಳ  ಪ್ರಾಜ್ಞರೊಡನೆ  ಸಮಾಲೋಚಿಸಿ  ಸಾಹಿತ್ಯ  ಸಮ್ಮೇಳನಗಳನ್ನು  ಆಯೋಜಿಸಿ,  ಆ ಸಮ್ಮೇಳನಗಳಲ್ಲಿ  ಈ ಕೆಳಕಂಡ ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ  ಮಾರ್ಗದರ್ಶನ  ಸೂತ್ರಗಳನ್ನು  ರೂಪಿಸಿತು:

  1. ಕನ್ನಡ ಭಾಷೆಯಲ್ಲಿ ಪಂಡಿತಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು ಈ ಮೂರನ್ನೂ ಬರೆಯಿಸುವುದು, ಅಥವಾ ಬರೆಯುವುದಕ್ಕೆ ಸಹಾಯಮಾಡುವುದು.
  2. ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
  3. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
  4. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
  5. ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
  6. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
  7. ಕರ್ಣಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
  8. ಕರ್ಣಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡುಕೊಳ್ಳುವುದರಿಂದಾಗಲಿ, ಅವರು ಬರೆದಿರುವ ಪುಸ್ತಕಗಳನ್ನು ಅಚ್ಚು ಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ, ಅವರ ಗ್ರಂಥಗಳ ಮುದ್ರಣಾಧಿಕಾರವನ್ನು (Copyright) ಹಣಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ ಸಂಭಾವನೆಯನ್ನಾಗಲಿ ಕೊಡುವುದು.
  9. ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
  10. ಕರ್ಣಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
  11. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
  12. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.

ಅಲ್ಲದೆ, ಸಾಮಾನ್ಯವಾಗಿ ಕರ್ಣಾಟಕ ಭಾಷೋನ್ನತಿಗೂ ಗ್ರಂಥಾಭಿವೃದ್ಧಿಗೂ ಆವಶ್ಯಕವಾದ ಇತರ ಪ್ರಯತ್ನಗಳನ್ನು ಮಾಡುವುದು.

ಹೀಗೆ  ಪ್ರಾರಂಭಗೊಂಡ  ಮಹತ್ವದ  ಚಿಂತನೆಗಳು  ೩ ಮೇ ೧೯೧೫ರಂದು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಗಿ ಏರ್ಪಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ನಾಂದಿಯಾದವು.  ಇದುವರೆಗೆ  ನಡೆದಿರುವ  ಎಲ್ಲ  ಸಾಹಿತ್ಯ  ಸಮ್ಮೇಳನಗಳು ಹಾಗೂ ಸಮ್ಮೇಳನಾಧ್ಯಕ್ಷರ  ಭಾಷಣದ  ಸಂಗ್ರಾಹ್ಯ  ವಿವರಗಳನ್ನು ನೀಡಲಾಗಿದೆ,

ಮಾಹಿತಿ ಕೃಪೆ: ಕನ್ನಡ ಸಾಹಿತ್ಯ ಪರಿಷತ್ತು-೧೦೦, ಪ್ರೊ. ಜಿ. ಅಶ್ವತ್ಥನಾರಾಯಣ

Tag: Sahitya Sammelanagala Hinnele