ಕನ್ನಡ ಸಾಹಿತ್ಯ ಪರಿಷತ್ತು

Uncategorized

ಬೇಂದ್ರೆ, ಕುವೆಂಪು ಸಾಹಿತ್ಯಕ್ಕೆ ಹೊಸ ನೆಲೆಗಳನ್ನು ನೀಡಿದ್ದ ನಾಡೋಜ ಡಾ.ಜಿ.ಕೃಷ್ಣಪ್ಪ: ನಾಡೋಜ ಡಾ.ಮಹೇಶ ಜೋಶಿ ನುಡಿ ನಮನ

ಬೆಂಗಳೂರು: ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಳ್ಳುವ ಕೆಲವು ದಿನಗಳ ಹಿಂದಷ್ಟೇ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಭೇಟಿ ನೀಡಿ ಸುದೀರ್ಘವಾಗಿ ನನ್ನೊಂದಿಗೆ ಬೇಂದ್ರೆ ಕಾವ್ಯದ ನೆಲೆಗಳನ್ನು ಚರ್ಚಿಸಿದ್ದ ಬೇಂದ್ರೆ ಕೃಷ್ಣಪ್ಪ ‘ ಎಂದೇ ಹೆಸರಾಗಿದ್ದ ಡಾ.ಜಿ.ಕೃಷ್ಣಪ್ಪ ಇನ್ನಿಲ್ಲ ಎನ್ನುವ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಕಂಬನಿ ಮಿಡಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜನೆಗೊಂಡಿದ್ದ ಡಾ.ಜಿ.ಕೃಷ್ಣಪ್ಪನವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು. ಡಾ.ಜಿ.ಕೃಷ್ಣಪ್ಪನವರ  ‘ನಾಕುತಂತಿ ಒಂದು ಟಿಪ್ಪಣಿ’ ಮತ್ತು ‘ಬೇಂದ್ರ ಕಂಡ ಬೆಳಗು’ ಎರಡೂ ಪುಸ್ತಕಗಳು ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದವು. ‘ನಾಕುತಂತಿ-50’ ರ ಕುರಿತು ಸಾಹಿತ್ಯ ಸಮ್ಮೇಳನದಲ್ಲಿ ಅವರೇ ಮಾತನಾಡಬೇಕು ಎನ್ನುವುದು ನಮ್ಮ  ಆಸೆಯಾಗಿತ್ತು,  ಆದರೆ ಆರೋಗ್ಯದ ಸಮಸ್ಯೆ ಅವರನ್ನು ಮಂಡ್ಯಕ್ಕೆ ಬರದಂತೆ ತಡೆಯಿತು. ‘ನಿಮ್ಮ ಮಾತುಗಳ ವಿಡಿಯೋ ಕಳುಹಿಸಿ’ ಎಂದು ವಿನಂತಿಸಿಕೊಂಡೆ. ಮಗನ ಸಹಾಯ ಪಡೆದು ಹದಿಮೂರು ನಿಮಿಷಗಳ ವಿಡಿಯೋ ಅವರು ಕಳುಹಿಸಿದರು. ಅದನ್ನು ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದೆವು.  ಇದು ಅವರಿಗೆ ಬಹಳ ಸಂತೋಷವನ್ನು ಕೊಟ್ಟಿತ್ತು. ಬಹಳ ವಿವರವಾಗಿ ನಂತರದ ದಿನಗಳಲ್ಲಿ ಬೇಂದ್ರೆ ಕುರಿತು ನನ್ನ ಜೊತೆಯಲ್ಲಿ ಮಾತನಾಡಿದ್ದರು. ಬೇಂದ್ರೆ ಕಾವ್ಯದ ಮಾಂತ್ರಿಕತೆ ಹಿಡಿಯಬಲ್ಲ ಜಾದೂಗಾರ ಎನ್ನಿಸಿಕೊಂಡ ಅವರು ಕುವೆಂಪು ಅವರನ್ನು ಆಳವಾಗಿ ಕೃಷ್ಣಪ್ಪ ಓದಿ ಕೊಂಡಿದ್ದರು. ಕುವೆಂಪು ಪದಸಂಪತ್ತಿನ ಕುರಿತ ಅವರ ಅಂಕಣ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುತ್ತಿತ್ತು. ಜೈಮಿನಿ ಭಾರತ, ಗಿರಿಜಾ ಕಲ್ಯಾಣಗಳನ್ನು ಹೊಸಗನ್ನಡಕ್ಕೆ ತಂದಿದ್ದ ಕೃಷ್ಣಪ್ಪನವರು ‘ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ- ಒಂದು ಅಧ್ಯಯನ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿ ಅವರ ಕೊಡುಗೆಗಳನ್ನು ವಿವರಿಸಿದರು. ಕನ್ನಡ  ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರಮೂರ್ತಿಯವರು ಮಾತನಾಡಿ ಉತ್ಕಟ ಸಾಹಿತ್ಯ ಪ್ರೇಮಿಯಾದ ಕೃಷ್ಣಪ್ಪನವರ ನೀಡುತ್ತಿದ್ದ ಹೊಳಹುಗಳು ಅದ್ಭುತ. ಅಕಾಡಮಿಕ್ ಜಾರ್ಗನ್ ಗಳನ್ನು ಮುರಿದು ಅವರು ವಿಮರ್ಶೆಯನ್ನು ಹೊಸ ರೂಪದಲ್ಲಿ ಕಟ್ಟಿದರು. ಅವರ ಮಾತುಗಳನ್ನು ಏಕಾಂತದಲ್ಲಿ  ಹಲವು ಗಂಟೆಗಳನ್ನು ಕೇಳುವ ಅದೃಷ್ಟ ನನಗೆ ಸಿಕ್ಕಿತ್ತು. ಅವರ ಹಲವು ಕೃತಿಗಳನ್ನು ಹಸ್ತಪ್ರತಿಯಲ್ಲಿಯೇ ಓದುವ ಸೌಭಾಗ್ಯ ನನಗೆ ದೊರಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅವರ ತುಂಬು ಪ್ರೀತಿ ನನಗೆ ಅಖಂಡವಾಗಿ ಮೂವತ್ತು ವರ್ಷಗಳ ಕಾಲ ದೊರಕಿತ್ತು ಎನ್ನುವುದು ಈಗ ‘ಭುವನದ ಭಾಗ್ಯ’ ಎನ್ನಿಸುತ್ತದೆ ಎಂದು ತಮ್ಮ ಒಡನಾಟದ ನೆನಪುಗಳನ್ನು ಹಂಚಿಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ ಮತ್ತು ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್.ಎಸ್.ಶ್ರೀಧರ ಮೂರ್ತಿ(ಸಂಚಾಲಕರು, ಪ್ರಕಟಣಾ ವಿಭಾಗ)

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ : ನಾಡೋಜ ಡಾ.ಮಹೇಶ ಜೋಶಿ ಆತಂಕ

ಬೆಂಗಳೂರು : ಪ್ರಥಮ್ ಎಂಬ ಸ್ವಯಂ ಸೇವಾ ಸಂಸ್ಥೆ ವಾರ್ಷಿಕ ಶೈಕ್ಷಣಿಕ ಪ್ರಗತಿ ಸಮೀಕ್ಷಾ ವರದಿಯ ಪ್ರಕಾರ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿಯ ಪ್ರಮಾಣ ಹಿಮ್ಮುಖವಾಗಿರುವುದು ಆತಂಕತದ ಬೆಳವಣಿಗೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡ ಉಳಿದು ಬೆಳೆಯುತ್ತಿರುವುದು ಸರ್ಕಾರಿ ಶಾಲೆಗಳ ಮೂಲಕ. ಇಲ್ಲಿನ ದಾಖಲಾತಿ ಇಳಿಮುಖವಾದರೆ ಕನ್ನಡದ ಅಸ್ವಿತ್ವಕ್ಕೆ ಕಂಟಕ ಉಂಟಾಗಲಿದೆ ಎನ್ನುವ ಆತಂಕವನ್ನು ಅವರು ವ್ಯಕ್ತ ಪಡಿಸಿದ್ದಾರೆ. ರಾಜ್ಯ ಸರ್ಕಾರ ಇದರ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಆಗ್ರಹ ಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಮೂರನೆಯ ತರಗತಿಯಲ್ಲಿ ಓದುವ ಶೇ 7.1ರಷ್ಟು ವಿದ್ಯಾರ್ಥಿಗಳಿಗೆ ಒಂದೇ ಒಂದು ಅಕ್ಷರವನ್ನು ಓದಲು ಬರುವುದಿಲ್ಲವೆನ್ನುವ ಅಂಶ ಇನ್ನಷ್ಟು ಆತಂಕಕಾರಿಯಾಗಿದೆ. ಶೇ 19.3 ರಷ್ಟು ವಿದ್ಯಾರ್ಥಿಗಳು ಪದಗಳನ್ನು ಓದಲು ಕಷ್ಟಪಡುತ್ತಿದ್ದಾರೆ ಎನ್ನುವಂತಹ ಅಂಶಗಳು ಸೂಕ್ತ ಶಿಕ್ಷಕರು ದೊರಕುತ್ತಿಲ್ಲವೆನ್ನುವ ಸ್ಥಿತಿಯನ್ನು ಸೂಚಿಸುತ್ತದೆ. ನಿರರ್ಗಳವಾಗಿ ಓದಬಲ್ಲ ಮಕ್ಕಳ ಸಂಖ್ಯೆ ಶೇ 21.5 ಮಾತ್ರ ಎಂದರೆ ಭವಿಷ್ಯದಲ್ಲಿ ಕನ್ನಡದ ಸ್ಥಿತಿ ಅಪಾಯಕಾರಿ ಎಂದೇ ಹೇಳಬಹುದು. ಈ ಕುರಿತು ಚರ್ಚೆಗಳು ನಡೆಯಬೇಕಾದ ಅಗತ್ಯವಿದೆ ಎಂದು ನಾಡೋಜ ಡಾ. ಮಹೇಶ ಜೋಶಿಯವರು ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕ ಪ್ರೌಡಶಾಲೆಗಳ ಶೇ 94.5ರಷ್ಟು ಮಕ್ಕಳು ಡಿಜಿಟಲ್ ಸಾಕ್ಷರತೆಗೆ ತೆರೆದುಕೊಂಡಿರುವುದು ಮಕ್ಕಳು ಸರ್ಕಾರಿ ಶಾಲೆಗಳಿಂದ ದೂರ ಉಳಿಯಲು ಕಾರಣ ಎಂಬ ಅಂಶವು ಸಮೀಕ್ಷೆಯಲ್ಲಿ ದಾಖಲಾಗಿದೆ ಎನ್ನುವುದರ ಕುರಿತು ಗಮನ ಸೆಳೆದಿರುವ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಗಟ್ಟಿಯಾಗಬೇಕಾದ ಅಗತ್ಯವನ್ನು ಇದು ಸೂಚಿಸುತ್ತದೆ. ಇವತ್ತು 14ರಿಂದ 16ರ ವಯೋಮಾನದ ಶೇ 70ರಷ್ಟು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರೂ ಅವರಲ್ಲಿ ಶೇ 82ರಷ್ಟು ಜನರ ಆಯ್ಕೆ ಇಂಗ್ಲೀಷ್ ಆಗಿದೆ ಎನ್ನುವುದು. ಭವಿಷ್ಯದಲ್ಲಿ ಅವರೆಲ್ಲರೂ ಕನ್ನಡದಿಂದ ದೂರವಾಗುವ ಸಾಧ್ಯತೆಯನ್ನು ಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವ ಕುರಿತು ಸಮೀಕ್ಷೆ ‘ಎಚ್ಚರಿಕೆ ಗಂಟೆ’ಯನ್ನು ಬಾರಿಸಿದ್ದು ನಾವೆಲ್ಲರೂ ಕೂಡಲೇ ಕಾರ್ಯ ಪ್ರವೃತ್ತರಾಗಬೇಕಿದ್ದು ‘ಕನ್ನಡ ಸಾಹಿತ್ಯ ಪರಿಷತ್ತು’ಇಂತಹ ಪ್ರಯತ್ನದ ಮಂಚೂಣಿಯಲ್ಲಿರಲಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ  ಸಾಹಿತ್ಯ  ಪರಿಷತ್ತಿನ ನಿಬಂಧನೆಯಲ್ಲಿ ಪ್ರಕಟಿಸಿರುವ ಧ್ಯೇಯೋದ್ದೇಶ (4)ರಲ್ಲಿ “ಕನ್ನಡ ಶಾಲೆಗಳ ಪುನಶ್ಚೇತನ: ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣ ಕೊಡುವ ಸ್ಥಿತಿಯಲ್ಲಿಲ್ಲದ ಕನ್ನಡ ಶಾಲೆಗಳನ್ನು ಗುರುತಿಸಿ ಅವುಗಳ ಪುನಶ್ಚೇತನಕ್ಕೆ ಅವಶ್ಯಕವೆನಿಸಿದಲ್ಲಿ ಸರ್ಕಾರ  ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಶ್ರಮಿಸುವುದು” ಎನ್ನುವ ಅಂಶವಿದ್ದು,  ಇದೇ ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಅನೇಕ ಸರಣಿ ಕಾರ್ಯಕ್ರಮಗಳನ್ನು ರೂಪಿಸಿದ್ದು ರಾಜ್ಯಮಟ್ಟದಲ್ಲಿ ಗಣ್ಯರ ಸಮಾವೇಶವನ್ನು ಕೂಡ ನಡೆಸಿದೆ ಎಂದು ಹೇಳಿರುವ ನಾಡೋಜ ಡಾ.ಮಹೇಶ ಜೋಶಿಯವರು ಈ ಕುರಿತು 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ದಲ್ಲಿ ‘ರಾಜ್ಯದಲ್ಲಿರುವ ಸರ್ಕಾರದ ಎಲ್ಲಾ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ, ಕಟ್ಟಡ, ವಾಚನಾಲಯ, ಆಟದ ಮೈದಾನ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಮತ್ತು ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಯ ಕ್ರಮಕ್ಕೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು, ಕನ್ನಡೇತರ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು’ ಎನ್ನುವ ನಿರ್ಣಯವನ್ನು ತೆಗೆದು ಕೊಂಡಿದ್ದು ಇದರ ಅನುಷ್ಟಾನಕ್ಕಾಗಿ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪನವರ ನೇತೃತ್ವದಲ್ಲಿ  ಬರಹಗಾರರ, ಶಿಕ್ಷಣ ತಜ್ಞರರ ನಿಯೋಗವನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರನ್ನು ಭೇಟಿ  ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಎನ್.ಎಸ್.ಶ್ರೀಧರ ಮೂರ್ತಿ(ಸಂಚಾಲಕರು, ಪ್ರಕಟಣಾ ವಿಭಾಗ)

ಫೆಬ್ರವರಿ 7,8 ಮತ್ತು 9 ರಂದು ಕನ್ನಡ ಸಾಹಿತ್ಯ ಪರಿಷತ್ತಿನಕನ್ನಡ ಪ್ರವೇಶ, ಕಾವ, ಜಾಣ ಪರೀಕ್ಷೆಗಳು

ಬೆಂಗಳೂರು  : ಜನ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ ಕನ್ನಡ ಯುವಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀಯವರು ರೂಪಿಸಿದ ಮುಖ್ಯ ಯೋಜನೆ ಕನ್ನಡ ಸಾಹಿತ್ಯ ಪರೀಕ್ಷೆಗಳು. 1940ರ ಜೂನ್ ತಿಂಗಳಿನಿಂದ `ಕನ್ನಡ ಅಣುಗ’, ಕನ್ನಡ ಕಾವ, ಕನ್ನಡ ಜಾಣ ಪರೀಕ್ಷೆಗಳು ಆರಂಭವಾದವು. 1948ರಲ್ಲಿ `ಅಣುಗ’ವನ್ನು ಕೈ ಬಿಡಲಾಯಿತು. 1966ರಲ್ಲಿ ‘ಕನ್ನಡ ರತ್ನ’ ಪರೀಕ್ಷೆ ಆರಂಭವಾಗಿದ್ದು, 1992ರಲ್ಲಿ ಕನ್ನಡ ಪ್ರವೇಶ ಆರಂಭವಾಯಿತು. ಈ ಎಲ್ಲಾ ಪರೀಕ್ಷೆಗಳು ಲಕ್ಷಾಂತರ ಕನ್ನಡಿಗರಲ್ಲಿ ಭಾಷೆ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಈ ವರ್ಷ  ಕನ್ನಡ ಸಾಹಿತ್ಯ ಪರಿಷತ್ತು ೨೦೨೪-೨೫ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು  ೨೦೨೫ ಫೆಬ್ರವರಿ ೦೭, ೦೮ ಮತ್ತು ೦೯ರಂದು ಒಟ್ಟು ೩ ದಿನಗಳ ಕಾಲ ರಾಜ್ಯದ ೧೮ ಕೇಂದ್ರಗಳಲ್ಲಿ ನಡೆಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ಅರ್ಹ ಅಭ್ಯರ್ಥಿಗಳಿಗೆ ಮೇಲ್ಕಂಡ ಪರೀಕ್ಷೆಗಳ  ಪ್ರವೇಶ ಪತ್ರಗಳನ್ನು ನೊಂದಾಯಿತ ಅಂಚೆ ಮೂಲಕ ಕಳುಹಿಸಲಾಗಿದೆ. ದಿನಾಂಕ ೦೧-೦೨-೨೦೨೫ರ ನಂತರವೂ ಪ್ರವೇಶ ಪತ್ರ ತಲುಪದಿದ್ದರೆ  ಈ ಬಗ್ಗೆ ಅಭ್ಯರ್ಥಿಗಳು ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-೧೮ ಇಲ್ಲಿ ವಿಚಾರಿಸಬಹುದು. ಸಂಪರ್ಕಿಸಬೇಕಾದ  ದೂರವಾಣಿ ಸಂಖ್ಯೆ ೦೮೦-೨೬೬೧೨೯೯೧, ೨೬೬೨೩೫೮೪, ೨೬೫೨೩೮೬೭ಅಭ್ಯರ್ಥಿಗಳು  ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತರ್ಜಾಲ ತಾಣ www.kasapa.in  ಮೂಲಕ ಸಹ ಪಡೆದುಕೊಳ್ಳಬಹುದು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಎನ್.ಎಸ್.ಶ್ರೀಧರ ಮೂರ್ತಿ(ಸಂಚಾಲಕರು, ಪ್ರಕಟಣಾ ವಿಭಾಗ)

ಕನ್ನಡದ ಜ್ಞಾನಸೀಮೆಯನ್ನು ವಿಸ್ತರಿಸಿದ ವರಕವಿ ಬೇಂದ್ರೆ: ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು.  ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು.  ರಸವೆ ಜನನ ವಿರಸ ಮರಣ ಸಮರಸವೇ ಜೀವನ ಎಂದು ಬದುಕನ್ನು ಎದೆಗಪ್ಪಿಕೊಂಡು ಅರಳಿದ ಕಾವ್ಯಚೇತನ ಅವರದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವರ್ಣಿಸಿದರು . ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದು ವರಕವಿ ದ.ರಾ.ಬೇಂದ್ರೆಯವರ 129ನೆಯ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗುತ್ತ ಹೋಗುವ ಪವಾಡಸದೃಶ ಶಕ್ತಿ ಎಂದು ವಿಶ್ಲೇಷಿಸಿದ ನಾಡೋಜ ಡಾ.ಮಹೇಶ ಜೋಶಿಯವರು ಬದುಕೇ ಕಾವ್ಯವಾಗುವ ಸಹಜ ಕವಿ ಹೃದಯವನ್ನು ಇಂಥ ಕಡೆ ಗುರುತಿಸಬಹುದು.  ಬದುಕಿಗೆ ತೀವ್ರವಾಗಿ ಸ್ಪಂದಿಸುವ ಕವಿಚೇತನವಾದದ್ದರಿಂದಲೇ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಪಾತರಗಿತ್ತಿ ಪಕ್ಕಗಳ ವೈಭವಗಳು ನವಿಲು ಗರಿಗೆದರಿದಂತೆ ಮೈತೆರೆಯುತ್ತಾ ಹೋಗುತ್ತದೆ.  ಶ್ರಾವಣವಾಗಲಿ, ಧಾರವಾಡದ ಚೆಲುವಾಗಲಿ ಬದುಕಿನ ಕಾವ್ಯ ಅಥವಾ ಸುಂದರ ಮುಖವಾಗಲೀ ಈ ಪ್ರತಿಭೆಗೆ ಸದಾ ಆಹ್ವಾನವಾಗಿರುತ್ತದೆ ಎಂದರು.ಬೇಂದ್ರೆಯವರ ಒಡನಾಟ ತಮಗೆ ಬಾಲ್ಯದಲ್ಲಿ ದೊರಕಿದ ಪ್ರಸಂಗಗಳನ್ನು ನೆನಪು ಮಾಡಿಕೊಂಡ ಅವರು ಅದು ತಮ್ಮ ಬದುಕನ್ನು ಶ್ರೀಮಂತಗೊಳಿಸಿತು ಎಂದರು. ಬೇಂದ್ರೆಯವರಿಗೆ ಜ್ಞಾನಪೀಠ ಬಂದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಏರ್ಪಡಿಸಿದ್ದ ಸನ್ಮಾನ ಸಮಾರಂಭಕ್ಕೆ ಅವರನ್ನು ಕರೆದು ಕೊಂಡು ಹೋಗುವ ಅವಕಾಶ ಸಿಕ್ಕ ಬದುಕಿನ ಅಮೂಲ್ಯ ಘಳಿಗೆಯನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿ ಅಂದಿನ ಬೇಂದ್ರೆಯವರ ಮಾತುಗಳು ಎಲ್ಲರನ್ನೂ ಭಾವುಕವಾಗಿಸಿದ್ದವು. ಅವುಗಳು ಇನ್ನೂ ತಮ್ಮ ನೆನಪಿನ ಭಾವಕೋಶದಲ್ಲಿ ಜೀವಂತವಾಗಿದೆ ಎಂದರು. ಕುವೆಂಪು ಮತ್ತು ಬೇಂದ್ರೆ ಇಬ್ಬರ ಕಾವ್ಯದಲ್ಲಿಯೂ ಇರುವ ಅಧ್ಯಾತ್ಮಿಕ ಹಿನ್ನೆಲೆಯ ಮಹತ್ವವನ್ನು ಹೇಳಿದ ಅವರು ಇಬ್ಬರೂ ಕನ್ನಡ ಕಾವ್ಯದ ಎರಡು ಕಣ್ಣುಗಳಿದ್ದ ಹಾಗೆ ಎಂದು ವರ್ಣಿಸಿದರು. ಭಾಷಣ ಹಾಗೂ ಕಾವ್ಯವಾಚನದಲ್ಲಂತೂ ಬೇಂದ್ರೆಯವರದು ಅಸದೃಶವಾದ ಸೃಜನಶೀಲ ಪ್ರತಿಭೆ.  ನಾವು ಓದುವ ಕವಿತೆಯಷ್ಟೇ ಅಲ್ಲದೆ ಕವಿಗೋಷ್ಠಿಯಲ್ಲಿ ಭಾಗವಹಿಸುವ ಎಲ್ಲರೂ ಕವಿತೆಯನ್ನು ಸಹೃದಯನ ಹೃದಯಕ್ಕೆ ಮುಟ್ಟಿಸಬೇಕೆಂಬುದು ಅವರ ಸದಾಗ್ರಹ.  ವಾಸ್ತವವಾಗಿ ಬೇಂದ್ರೆಯವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಪ್ರಭಾವ ಬೀರಿದ್ದೆ ಅವರ ಕಾವ್ಯದ ವಾಚನದ ಮೂಲಕ ಎನ್ನಬಹುದು ಎಂದು ಹೇಳಿದ 87ನೆಯ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪನವರು 1929ರ ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಹಕ್ಕಿ ಹಾರುತಿದೆ ನೋಡಿದಿರಾ ಕವನವನ್ನು ಓದಿದಾಗ ವಾರಿ ರುಮಾಲು ಸುತ್ತಿದ್ದ ಬೇಂದ್ರೆಯವರ ಗಾರುಡಿಗ ವ್ಯಕ್ತಿತ್ವ ಮಾಸ್ತಿಯಂಥವರನ್ನೂ ಬೆರಗುಗೊಳಿಸಿತು ಎಂದು ಹೇಳಿ, ಕಾರವಾರ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರ ಜೊತೆಗೆ ದಕ್ಕಿದ ನಿಕಟ ಒಡನಾಟದ ಘಟನೆಯನ್ನೂ, ತಮ್ಮ ‘ವಿಭೂತಿ’ ಕೃತಿಗೆ ಅವರು ಲೇಖನ ನೀಡಿದ ಸಂದರ್ಭವನ್ನೂ ನೆನಪು ಮಾಡಿಕೊಂಡು ತರೀಕರೆಯಲ್ಲಿ ತಾವು ಅಯೋಜಿಸಿದ್ದ ಪ್ರಥಮ ಜನಪದ ಸಮ್ಮೇಳನಕ್ಕೆ ಅವರು ಸರ್ವಾಧ್ಯಕ್ಷರಾಗಿದ್ದರು ಎಂದು ತಮ್ಮ ಅನುಭವಗಳನ್ನು ಹಂಚಿ ಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಂಸದೀಯ ವ್ಯವಹಾರ ಇಲಾಖೆಯ ವಿಶ್ರಾಂತ ಕಾರ್ಯದರ್ಶಿ ಜಿ.ದಕ್ಷಿಣಾ ಮೂರ್ತಿ, ನಿವೃತ್ತ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಿ.ಶಿವಲಿಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ಕೋಶಾದ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಹಾವೇರಿ ಜಿಲ್ಲಾಧ್ಯಕ್ಷರಾದ ಲಿಂಗಯ್ಯ. ಬಿ.ಹಿರೇಮಠ, ಬಳ್ಳಾರಿ ಜಿಲ್ಲಾಧ್ಯಕ್ಷರಾದ ನಿಷ್ಠಿ ರುದ್ರಪ್ಪ, ಡಾ.ಎಚ್.ಎಸ್.ಮುದ್ದೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ಎನ್.ಎಸ್.ಶ್ರೀಧರ ಮೂರ್ತಿ (ಸಂಚಾಲಕರು, ಪ್ರಕಟಣಾ ವಿಭಾಗಕನ್ನಡ ಸಾಹಿತ್ಯ ಪರಿಷತ್ತು)

ನಾಡೋಜ ಡಾ ಮಹೇಶ ಜೋಶಿ ಅಧ್ಯಕ್ಷರುಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಆಜೀವ ಸದಸ್ಯರು ಹಾಗೂ ಸಮಸ್ತ ಕನ್ನಡಿಗರ ಪರವಾಗಿ.  

ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ, ಕನ್ನಡ ಭಾಷೆಯ, ಸಂಸ್ಕೃತಿಯ, ಪರಂಪರೆಯ, ಎಲ್ಲಕ್ಕಿಂತ ಹೆಚ್ಚಿನದಾಗಿ, “ನಮ್ಮತನದ” ಅಂದರೆ “ಕನ್ನಡದ ಅಸ್ಮಿತೆಯ” ವಾಸ್ತವಿಕ ಚಿತ್ರಣವನ್ನು, ಮಾನ್ಯ ಉಚ್ಚ ಕರ್ನಾಟಕ ನ್ಯಾಯಾಲಯದಲ್ಲಿ ನೀಡುವ ಸಂದರ್ಭದಲ್ಲಿ, ತಮ್ಮ ಅಮೂಲ್ಯವಾದ ಬೆಂಬಲವನ್ನು , ಎಲ್ಲ ಮಾಧ್ಯಮಗಳ ಮುಖಾಂತರ, ಅಂದರೆ ಸಾಮಾಜಿಕ ಜಾಲತಾಣ, ಇಮೇಲ್, ಲಿಖಿತ ರೂಪ, ಮುಂತಾದವುಗಳ ಮುಖಾಂತರ ತಿಳಿಸಲು, ಏಳು ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆಯಾದ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ತಮ್ಮನ್ನು ಕೋರುತ್ತೇನೆ. WhatsApp +91 94484 90240 Email: nadojamj@gmail.com ವಿಶೇಷ ಮನವಿ. ತಮಗೆ ಪರಿಚಯವಿರುವ, ಯಾವುದೇ ಭೌಗೋಳಿಕ ಹಾಗೂ ಆಡಳಿತಾತ್ಮಕ ಗಡಿ ಇಲ್ಲದೆ, ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಹಾಗೂ ಕನ್ನಡ ಸಂಘ ಸಂಸ್ಥೆಗಳಿಗೆ ಈ ವಿಷಯ ತಿಳಿಸಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಬೆಂಬಲ ನೀಡಲು,  ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ,ತಾವು ಬೆಂಬಲ ಪಡೆಯಲು ತ ಮಗೆ ಸಂಪೂರ್ಣ ಸ್ವಾತಂತ್ರವಿರುತ್ತದೆ ಹಾಗೂ ಈ ಸಂಬಂಧವಾಗಿ ತಾವು ವಹಿಸುವ ಶ್ರಮಕ್ಕೆ,ಕನ್ನಡ ಸಾಹಿತ್ಯ ಪರಿಷತ್ತು ಗೌರವವನ್ನು ಸೂಚಿಸುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ತಿಳಿಸುತ್ತಿದ್ದೇನೆ. ಹಾಗೂ ಈ ಸಂಬಂಧವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ತಮ್ಮ  ಮೂಲಕ ದೊರೆತ ಬೆಂಬಲದ ಮಾಹಿತಿಯನ್ನು  ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ತಿಳಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಹೆಮ್ಮೆ ಎನಿಸುತ್ತದೆ.

Scroll to Top