ಡಾ. ಎಚ್.ಎಸ್.ದೊರೆಸ್ವಾಮಿ

h-s-doreswamy

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ನಡೆಸುತ್ತಿರುವ ಕಾರ್ಯಕ್ರಮ ಸರಣಿ ‘ಸಾಧಕರೊಡನೆ ಸಂವಾದ’.  ಕನ್ನಡ ನಾಡಿನಲ್ಲಿ ಸಾಹಿತ್ಯ, ಸಂಗೀತ, ಕಲೆ, ಕನ್ನಡ ಹೋರಾಟ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಆಹ್ವಾನಿಸಿ ಅವರೊಂದಿಗೆ ಅರ್ಥಪೂರ್ಣ ಸಂವಾದ ನಡೆಸುವುದು ಈ ಸರಣಿ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಸರಣಿ ಕಾರ್ಯಕ್ರಮದಡಿಯಲ್ಲಿ ನವೆಂಬರ್ ೨೬, ೨೦೧೬ರಂದು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜಸೇವಕರಾದ ಡಾ. ಎಚ್. ಎಸ್. ದೊರೆಸ್ವಾಮಿ ಅವರೊಡನೆ ಸಂವಾದ ಕಾರ್ಯಕ್ರಮ ನಡೆಯಿತು.  ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ  ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಉಪಸ್ಥಿತರಿದ್ದರು.

ಡಾ. ಎಚ್.ಎಸ್. ದೊರೆಸ್ವಾಮಿ

ಬೆಂಗಳೂರು ಸಮೀಪದ ಹಾರೋಹಳ್ಳಿಯಲ್ಲಿ ಏಪ್ರಿಲ್ 10, 1918ರಲ್ಲಿ ಜನಿಸಿದ ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅವರದು ಬಹುಮುಖ ವ್ಯಕ್ತಿತ್ವ. ಅವರು ಕೈಗೊಂಡ ಹೋರಾಟದ ಬದುಕು ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ವರ್ತಮಾನದ ಸರ್ಕಾರದ ಭೂ ಕಬಳಿಕೆಯ ವಿರುದ್ಧದ ಹೋರಾಟದವರೆಗೂ ಸಾಗುತ್ತದೆ.

ಮಹಾತ್ಮರ “ಮೈ ಅರ್ಲೀ ಲೈಫ್” ಪುಸ್ತಕ, ದೊರೆಸ್ವಾಮಿ ಅವರು ಸ್ವಾತಂತ್ರ್ಯ ಚಳವಳಿಗೆ ಧುಮ್ಮಿಕ್ಕಲು ಪ್ರೇರೇಪಿಸಿತು. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಅವರು ಸೆರೆಮನೆ ವಾಸವನ್ನು ಅನುಭವಿಸಿದರು. ಅವರ ಹೋರಾಟದಲ್ಲಿ ಅವರ ಹಿರಿಯ ಸಹೋದರ ಶ್ರೀ ಎಚ್.ಎಸ್. ಸೀತಾರಾಮ್, ಸರ್‍ದಾರ್ ವೆಂಕಟರಾಮಯ್ಯ, ಏ.ಜಿ. ರಾಮಚಂದ್ರರಾವ್ ಮುಂತಾದವರು ಮಾರ್ಗದರ್ಶಕರಾಗಿದ್ದರು. ಪತ್ರಕರ್ತರಾಗಿಯೂ ದೊರೆಸ್ವಾಮಿ ಅವರು ಕಾರ್ಯನಿರ್ವಹಿಸಿ, ಬ್ರಿಟಿಷರ ವಿರುದ್ಧ ತಮ್ಮ ಪತ್ರಿಕೆಯನ್ನು ಒಂದು ಪ್ರಬಲ ಅಸ್ತ್ರವಾಗಿ ಉಪಯೋಗಿಸಿಕೊಂಡರು. ತಮ್ಮ ಬದುಕನ್ನು ಮಹಾತ್ಮ ಗಾಂಧೀಜಿಯವರ ಚಿಂತನೆಗೇ ಪೂರ್ಣವಾಗಿ ಅರ್ಪಿಸಿಕೊಂಡು, ಇಂದಿಗೂ ನಮ್ಮ ಮಧ್ಯೆ ಮಹಾತ್ಮರ ಕೊನೆಯಕೊಂಡಿಯಂತೆ ಜೀವನ ಸಾಗಿಸುತ್ತಿದ್ದಾರೆ. ಕರ್ನಾಟಕ ಏಕೀಕರಣಕ್ಕಾಗಿಯೂ ದುಡಿದು, ಶತಾಯುಷಿಯಾಗುವತ್ತ ದೃಢವಾಗಿ ನಡೆದಿರುವ ಹಿರಿಯರಾದ ದೊರೆಸ್ವಾಮಿ ಅವರ ಸರಳತೆ ಮತ್ತು ಸಜ್ಜನಿಕೆ ಎಲ್ಲರಿಗೂ ಮಾದರಿಯಾಗಿರುವುದು ಈ ನಾಡಿನ ಸೌಭಾಗ್ಯವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗಿನ ತಮ್ಮ ಬಾಂಧವ್ಯದಿಂದ  ಮಾತನ್ನಾರಂಭಿಸಿದ ದೊರೆಸ್ವಾಮಿ ಅವರು ತಮಗೆ ಕನ್ನಡದಲ್ಲಿ ಪ್ರೀತಿ ಹುಟ್ಟುವುದಕ್ಕೆ ಹಾಗೂ ಬದುಕಿನಲ್ಲಿ ಉತ್ತಮವಾಗಿ ಬಾಳಬೇಕೆಂದುದಕ್ಕೆ  ಪ್ರೇರೇಪಣೆ ಆದ  ಆಚಾರ್ಯ ಬಿ.ಎಂ.ಶ್ರೀ, ವಿ. ಸೀತಾರಾಮಯ್ಯ, ಸಿ. ಕೆ. ವೆಂಕಟರಾಮಯ್ಯ,  ಎ. ಆರ್. ಕೃಷ್ಣಶಾಸ್ತ್ರಿ, ಎಂ. ಆರ್. ಶ್ರೀನಿವಾಸಮೂರ್ತಿ ಮುಂತಾದ ಮಹನೀಯರನ್ನು ಭಕ್ತಿಭಾವದಿಂದ ಸ್ಮರಿಸಿದರು.  ತಮ್ಮ ಓದಿನ ನಂತರದ ದಿನಗಳಲ್ಲಿ ಕೆಲಕಾಲ ಉಪಾಧ್ಯಾಯ ವೃತ್ತಿ ನಿರ್ವಹಿಸುತ್ತಿದ್ದ ಹಂತದಲ್ಲಿ ಸ್ವಾತಂತ್ರ್ಯ ಚಳುವಳಿಯ ಕಡೆ ಮನಸ್ಸು ಹರಿದು ಸೆರೆವಾಸಕ್ಕೆ ತಳ್ಳಲ್ಪಟ್ಟ ದೊರೆಸ್ವಾಮಿ ಅವರು ತಮಗೆ ಅಂದಿನ ದಿನಗಳಲ್ಲಿ ಹಿಂಸೆ ಮತ್ತು ಅಹಿಂಸೆಯ ನಡುವೆ ವೆತ್ಯಾಸದ ಅರಿವೇ ಇಲ್ಲದೆ, ಉತ್ಸಾಹದಿಂದ  ಟೈಮ್ ಬಾಂಬ್ ಸರಬರಾಜು ಮಾಡುತ್ತಿದ್ದುದನ್ನು ಮೆಲುಕು ಹಾಕಿದರು.  “ಈ ಟೈಮ್ ಬಾಂಬಿನಿಂದ  ಜೀವಹಾನಿ ಆಗುತ್ತಿರಲಿಲ್ಲ ಎಂಬುದು ಸ್ಪಷ್ಟವಿತ್ತು.  ಈ ಟೈಮ್ ಬಾಂಬ್ ಅನ್ನು ಇಲಿಗಳ ಬಾಲಕ್ಕೆ ಕಟ್ಟಿ ದಾಖಲೆಗಳನ್ನು ನಾಶಪಡಿಸುವುದಕ್ಕಾಗಿ ಸರ್ಕಾರಿ ಕಚೇರಿಗಳಲ್ಲಿ ತೂರಿಬಿಡುತ್ತಿದ್ದೆವು.  ಆ ಉದ್ದೇಶಕ್ಕಾಗಿ ಬಹಳಷ್ಟು ಕೆಲಸ ಮಾಡಿದೆ.  ಹಾಗೆ ಮಾಡುವಾಗ ಒಮ್ಮೆ ಪೋಲೀಸರ ಕೈಗೆ ಸಿಕ್ಕಿ ಭೀಕರ ಏಟಿಗೆ ಸಿಲುಕುವ ಸಂದರ್ಭ ನಿರ್ಮಾಣವಾಗಿತ್ತು.  ಅಕಸ್ಮಾತ್ ಪೋಲೀಸರ ಕೆಂಗಣ್ಣಿನ  ಭೀಕರ ಹೊಡೆತ ತಪ್ಪಿತಾದರೂ,  ೧೪ ತಿಂಗಳುಗಳ ಕಾಲ ಸೆರೆವಾಸವಂತೂ ಆಯಿತು.  ಈ ಸೆರೆಮನೆಗಳಲ್ಲಿದ್ದ ದಿನ  ಅತ್ಯಂತ  ಸಂತಸಭರಿತವಾಗಿಯೂ, ಜೀವನದೃಷ್ಟಿಯಿಂದ ಅತ್ಯುಪಯುಕ್ತವೂ ಆಗಿತ್ತು”  ಹೀಗೆ ದೊರೆಸ್ವಾಮಿ ತಮ್ಮ  ಅಂದಿನ ಚಳುವಳಿಯ ದಿನಗಳನ್ನು ನೆನೆದರು.   ಮುಂದೆ ಮಹಾತ್ಮಾ ಗಾಂಧೀ ಅವರ ಸಂಪರ್ಕದಲ್ಲಿದ್ದ ದಿನಗಳನ್ನು ನೆನೆದ ದೊರೆಸ್ವಾಮಿ ಅವರು “ನಿಜವಾದ ಸಮಾಜವಾದಿ ಅಂದರೆ ಮಹಾತ್ಮರೊಬ್ಬರೇ.  ಅವರ ಬಳಿ ಒಂದು ತುಂಡು ಬಟ್ಟೆ ಮತ್ತು ಕನ್ನಡಕದ ಹೊರತಾಗಿ ಮತ್ತೇನೂ ಇರಲಿಲ್ಲ.  ಹೀಗಾಗಿ ಅವರೊಬ್ಬರೇ ಪರಿಪೂರ್ಣ ಸಮಾಜವಾದಿ.  ಬಹುತೇಕ ಮಂದಿ ಕೇವಲ  ಮಾತಿನಲ್ಲಷ್ಟೇ ಸಮಾಜವಾದಿಗಳು” ಎಂದರು.

ಮುಂದೆ ಇಂದಿರಾಗಾಂಧೀ ಯುಗದಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲುವಾಸ ಅನುಭವಿಸಿದ ದೊರೆಸ್ವಾಮಿ ಅವರು,  ಕಳೆದ ದಶಕದಲ್ಲಿ ಲಕ್ಷಾಂತರ ಎಕರೆ ಭೂಮಿ, ಭೂಗಳ್ಳರ ಹಗರಣಕ್ಕೆ ಸಿಲುಕಿಹೊಗುವುದನ್ನು ಹೋರಾಡಿ ತಪ್ಪಿಸಿದ್ದಾರೆ.  ಹಳ್ಳಿಗಳನ್ನು ಕಸದ ಕೊಂಪೆಗಳನ್ನು ಮಾಡಿ ಕಸದ ಪರ್ವತ ರಾಶಿಗಳಿಂದ ತುಂಬಿ, ಸುತ್ತಮುತ್ತಲಿನ ಜನ ಊಹಿಸಿಕೊಳ್ಳಲಾಗದ ನರಕದ ಬಾಳನ್ನು ಅನುಭವಿಸಬೇಕಾಗಿದ್ದ ಅನಿವಾರ್ಯ ಸಂದರ್ಭದಲ್ಲಿ,  ತಾವೇ ಅಲ್ಲಿನ ಜನರ ನೇತೃತ್ವ ವಹಿಸಿ  ಬೆಳೆಯುತ್ತಿದ್ದ  ಕಸದರಾಶಿಗೆ ಇಂದು ತಡೆ ಉಂಟಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ಮೊನ್ನೆ  ಬೆಳಗಾವಿಯಲ್ಲಿ ವಿದಾನಸಭೆ ಅಧಿವೇಶನದ ಸಮಯದಲ್ಲಿ ತಮ್ಮ ಸಂಗಡಿಗರೊಂದಿಗೆ  ಹೋಗಿ ಹೋರಾಟಮಾಡಿ “ಬಡಜನರಿಗೆ ಭೂಮಿಕೊಟ್ಟು ಅವರ ಬದುಕಿಗೆ ಖಂಡಿತ ಆಸರೆ ಆಗಿಯೇ ಆಗುತ್ತೇವೆ”  ಎಂದು ಆಡಳಿತಪಕ್ಷ ಮಾತ್ರವಲ್ಲದೆ, ವಿರೋಧಪಕ್ಷಗಳಿಂದಲೂ ಮಾತು ತೆಗೆದುಕೊಂಡು ಬಂದಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕರ್ನಾಟಕ ಏಕೀಕರಣದ ಹೋರಾಟದ ನಿಟ್ಟಿನಲ್ಲಿ ಸ್ವಾತಂತ್ರ್ಯ ಬಂದ ದಿನಗಳಲ್ಲಿ ತಾವು ನೆಹರೂ, ಸರ್ದಾರ್ ಪಟೇಲ್ ಮುಂತಾದವರುಗಳೊಡನೆ ಆಡಿದ ಮಾತುಕತೆ, ನಂತರ ಮೈಸೂರು ರಾಜರು ಭಾರತದ ಒಕ್ಕೂಟಕ್ಕೆ  ಸೇರಲು ಮಾಡುವತ್ತ ಹೋರಾಟ, ಕೆಂಗಲ್ ಹನುಮಂತಯ್ಯನವರ  ವಿಶಾಲ ಮೈಸೂರಿಗೆ ಸೇರಲು ಪ್ರಾಂತ್ಯಗಳ ಪ್ರತಿನಿಧಿಗಳಿಗೆ ಆಹ್ವಾನ,  ಆಂಧ್ರದಲ್ಲಿ ಏಕೀಕರಣಕ್ಕೆ ಆದ ಉಪವಾಸ ಸತ್ಯಾಗ್ರಹದ ದುರ್ಘಟನೆ, ನಂತರ  ಭಯಭೀತರಾದ ನೆಹರೂ ಅವರಿಂದ  ಕರ್ನಾಟಕ ನಿರ್ಮಾಣದ ನಿರ್ಧಾರ ಇತ್ಯಾದಿ ಪ್ರತೀ ವಿವರಗಳನ್ನೂ ಮನಮುಟ್ಟುವಂತೆ ವಿವರಿಸಿದರು.  “ಗಾಂಧೀ ಮತ್ತು ಅಂಬೇಡ್ಕರ್ ಅವರುಗಳಲ್ಲಿ ಭಿನ್ನಾಭಿಪ್ರಾಯ ಇತ್ತೇ ವಿನಃ ವಿರೋಧಿತ್ವ ಇರಲಿಲ್ಲ” ಎಂದ ದೊರೆಸ್ವಾಮಿ ಅವರು ಅಂಬೇಡ್ಕರ್ ಅವರು ಬಂಗಾಳದಲ್ಲಿ ಚುನಾವಣೆಯಲ್ಲಿ ಸೋತರೆಂಬ  ಕಾರಣದಿಂದ  ನೆಹರೂ ಅವರು, ಅವರನ್ನು ಯಾವುದಕ್ಕೂ ಪರಿಗಣಿಸದಿದ್ದಾಗ, ಗಾಂಧೀ ಅವರು “ಅಂಬೇಡ್ಕರ್ ಇಲ್ಲದೆ ನೀನು ಸಂವಿಧಾನ ರಚನೆಗೆ ಮತ್ಯಾರೂ ಶ್ರೇಷ್ಠರನ್ನು ಅರಸುವುದು ಸಾಧ್ಯವಿಲ್ಲ ಎಂದು ಮನದಟ್ಟು ಮಾಡಿಸಿ ಅಂಬೇಡ್ಕರ್ ಅವರಿಂದ ಮಹತ್ಕಾರ್ಯ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು” ಎಂದರು.

“ನನಗೆ ನಾನು ಬದುಕಿದ ರೀತಿಯಲ್ಲಿ ಸಂತೃಪ್ತಿಯಿದೆ. ಏನೋ ಒಂದಷ್ಟು ಮಾಡಿದ್ದೇನೆ, ಬದುಕನ್ನು ಯೋಗ್ಯವಾಗಿ ಬಾಳಿದ  ಭಾವವಿದೆ” ಎಂದು ಈ ಮಹಾನುಭಾವರು ನುಡಿವಾಗ ಅವರ ಹಿರಿಯ ಕಣ್ಣುಗಳಲ್ಲಿ ಒಂದು ಮಿಂಚಿದ್ದ ಭಾವ, ಅಲ್ಲಿ ನೆರೆದಿದ್ದ ಕೆಲವು ಆಪ್ತ ಹೃದಯಗಳಿಗೆ  ಕಂಡುಬಂದಿತ್ತು ಎಂದರೆ ಅತಿಶಯೋಕ್ತಿ ಅಲ್ಲ.

Tag: Dr. H.S. Doreswamy.

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)