ಡಾ. ಪಾಟೀಲ ಪುಟ್ಟಪ್ಪ

AMB_3474

ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಏರ್ಪಡಿಸುತ್ತಿರುವ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ದಿನಾಂಕ ೨೮.೦೧.೨೦೧೭ರಂದು ಹಿರಿಯ ಕನ್ನಡ ಹೋರಾಟಗಾರ, ಪತ್ರಕರ್ತ, ಬರಹಗಾರ ನಾಡೋಜ ಪಾಟೀಲ ಪುಟ್ಟಪ್ಪನವರು ಆಗಮಿಸಿ  ತಮ್ಮ ಸಾರ್ಥಕ ಬದುಕಿನ ಒಳಹುಗಳನ್ನು ತಿಳಿಸಿಕೊಟ್ಟರಲ್ಲದೆ, ಸಭಿಕರ ಪ್ರಶ್ನೆಗಳಿಗೆ ಮನನಾತ್ಮಕವಾಗಿ ಉತ್ತರಗಳನ್ನು ನೀಡಿದರು.

ಸಾಧಕರೊಡನೆ ಸಂವಾದ – ಆಶಯ  

ಶತಕ ಪೂರೈಸಿದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂರುವರೆ ದಶಕಗಳಿಗೂ ಮೀರಿ ಮುನ್ನೆಡೆಯುತ್ತಿರುವ ಕರ್ನಾಟಕ ಲೇಖಕಿಯರ ಸಂಘ ಜಂಟಿಯಾಗಿ ಪ್ರಥಮ ಬಾರಿಗೆ ‘ಸಾಧಕರೊಡನೆ ಸಂವಾದ’ ಎಂಬ ಈ ವಿನೂತನ ಕಾರ್ಯಕ್ರಮವನ್ನು ೨೦೧೬ರ ಜೂನ್ ತಿಂಗಳಿಂದ ಆರಂಭಿಸಿವೆ. ಕನ್ನಡ ನಾಡಿನಲ್ಲಿ ಸಾಹಿತ್ಯ, ಸಂಗೀತ, ಕಲೆ, ಕನ್ನಡ ಹೋರಾಟ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಆಹ್ವಾನಿಸಿ ಅವರೊಂದಿಗೆ ಅರ್ಥಪೂರ್ಣ ಸಂವಾದ ನಡೆಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದ ನೈತಿಕ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿ ತಿಂಗಳು ನಾಲ್ಕನೇ ಶನಿವಾರ ಸಂಜೆ ಜರುಗುತ್ತದೆ ಈ ಕಾರ್ಯಕ್ರಮ.

ನಾಡೋಜ ಡಾ. ಪಾಟೀಲ ಪುಟ್ಟಪ್ಪ

ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾಗಿ, ಶ್ರೀಮಂತ ಸಂಸ್ಕøತಿಯ ರಕ್ಷಕರಾಗಿ ನಮ್ಮ ನಡುವೆ ಇರುವ ಡಾ. ಪಾಟೀಲ ಪುಟ್ಟಪ್ಪ ಅವರು ಅಪ್ರತಿಮ ಹೋರಾಟಗಾರರು, ನಿರ್ಭೀತ ಹಾಗೂ ಧೀಮಂತ ಪತ್ರಕರ್ತರು. ಇವರ ವ್ಯಕ್ತಿತ್ವವನ್ನು ಕೆಲವಷ್ಟೇ ಪುಟಗಳಲ್ಲಿ ಕಟ್ಟಿಹಾಕುವುದು ಎಂಥವರಿಗೂ ಅಸಾಧ್ಯ. ಒಬ್ಬ ಸೃಜನಶೀಲ ಸಾಹಿತಿಯಾಗಿಯೂ ಅವರ ಸಾಹಿತ್ಯದ ಮೂಸೆಯಿಂದ ಅನೇಕ ಅಪೂರ್ವ ಕೃತಿಗಳು ಮೂಡಿಬಂದಿವೆ. ಸುಸಂಸ್ಕøತ ಮನಸ್ಸೊಂದು ಹೇಗಿರಬೇಕೆಂಬುದಕ್ಕೆ ನಾಡೋಜ ಪಾಟೀಲ ಪುಟ್ಟಪ್ಪನವರು ಒಂದು ಉದಾಹರಣೆಯಾಗಿ ನಿಲ್ಲುತ್ತಾರೆ. ಎಲ್ಲ ಕ್ಷೇತ್ರದವರಿಗೆ ಒಂದು ಆದರ್ಶಪ್ರಾಯ ವ್ಯಕ್ತಿತ್ವವಾಗಿ ತಮ್ಮ ಬದುಕನ್ನು ಅರ್ಥಪೂರ್ಣವಾಗಿ ಸಾಗಿಸುತ್ತಿದ್ದಾರೆ.

ಪ್ರಪಂಚದಷ್ಟೆ ಓದುಗರ ಜ್ಞಾನವೂ ವಿಸ್ತಾರವಾಗಬೇಕೆಂಬ ಹಂಬಲದಿಂದ ತಮ್ಮ ಸಂಪಾದಕತ್ವದಲ್ಲಿ “ಪ್ರಪಂಚ” ವಾರಪತ್ರಿಕೆಯನ್ನು ನಡೆಸಿದವರು. ೧೯೬೨ ರಿಂದ ೧೯೭೪ ರವರೆಗೆ ಎರಡು ಅವಧಿಗೆ ಪುಟ್ಟಪ್ಪನವರು ರಾಜ್ಯಸಭಾ ಸದಸ್ಯರಾಗಿ ಸಲ್ಲಿಸಿದ ಸೇವೆ ಅನುಪಮ. ಕರ್ನಾಟಕ ಏಕೀಕರಣಕ್ಕಾಗಿ ಅವರು ನಡೆಸಿದ ಹೋರಾಟ ಅನನ್ಯವಾದುದು. ವರ್ತಮಾನದ ಎಲ್ಲ ವಿಚಾರಗಳ ಬಗ್ಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿನ ಅವರ ಅಂಕಣ ಬರಹಗಳು ಓದುಗರಿಗೆ ತುಂಬ ಇಷ್ಟವಾದವುಗಳಾಗಿವೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಪುಟ್ಟಪ್ಪನವರು ನಾಡಿನಾದ್ಯಂತ ಕೈಗೊಂಡ ಕನ್ನಡ ಭಾಷಾ ಜಾಗೃತಿ ಅಭಿಯಾನ ಎಲ್ಲರ ಹೃನ್ಮನ ಸೂರೆಗೊಂಡಿದೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಬಹು ವಿಸ್ತಾರವಾಗಿ ಬೆಳೆಸುವಲ್ಲಿ ಪುಟ್ಟಪ್ಪನವರ ಪಾತ್ರ ಯಾವೊತ್ತಿಗೂ ಉಲ್ಲೇಖನೀಯ. ಬೆಳಗಾವಿಯಲ್ಲಿ ೨೦೦೩ರಲ್ಲಿ ಜರುಗಿದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು. ಅವರು ಪಡೆದ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಟಿ.ಎಸ್.ಆರ್. ಪತ್ರಿಕಾ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. ಪದವಿ. ಹಂಪಿ ವಿಶ್ವವಿದ್ಯಾಲಯದ ‘ನಾಡೋಜ’ ಪುರಸ್ಕಾರ,  ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಸಾಹಿತ್ಯ’ ಪ್ರಶಸ್ತಿ – ಇವೇ ಮುಂತಾದವು ಅವರ ಮುಡಿಗೇರಿವೆ.

Dr. Patil Puttappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)