ವೈದೇಹಿ

ಸಾಧಕರೊಡನೆ ಸಂವಾದ: ವೈದೇಹಿ
ಸಾಧಕರೊಡನೆ ಸಂವಾದ: ವೈದೇಹಿ

dsc_0411

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ಏರ್ಪಡಿಸುತ್ತಿರುವ ‘ಸಾಧಕರೊಂದಿಗೆ ಸಂವಾದ’ ಸರಣಿಯ ಮೂರನೆಯ ಕಾರ್ಯಕ್ರಮಕ್ಕೆ ಸಂವಾದಿಸಲು ಆಗಮಿಸಿದವರು ಪ್ರಸಿದ್ಧ ಲೇಖಕಿ ಡಾ. ವೈದೇಹಿ ಅವರು. ಈ ಕಾರ್ಯಕ್ರಮ ಆಗಸ್ಟ್ ೨೭, ೨೦೧೬ರಂದು ಪರಿಷತ್ತಿನ ಕೊಶಾಧ್ಯಕ್ಷರಾದ  ಪಿ. ಮಲ್ಲಿಕಾರ್ಜುನಪ್ಪ ಅವರ ಅಧ್ಯಕ್ಷತೆ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅವರ ಉಪಸ್ಥಿತಿಯಲ್ಲಿ ನೆರವೇರಿತು.

ವೈದೇಹಿ

ವೈದೇಹಿ ಅವರು ಕನ್ನಡ ನಾಡಿನ ಸಮಕಾಲೀನ ಬರಹಗಾರರಲ್ಲಿ ವಿಶಿಷ್ಟರಾಗಿದ್ದಾರೆ. ಕುಂದಾಪುರದ  ಎ.ವಿ.ಎನ್. ಹೆಬ್ಬಾರ್ ಮತ್ತು ಮಹಾಲಕ್ಷ್ಮಿಯಮ್ಮ ದಂಪಂತಿಗಳ ಮಗಳಾಗಿ ೧೨ನೆ ಫೆಬ್ರವರಿ ೧೯೪೫ರಂದು ಜನಿಸಿದ ವೈದೇಹಿಯವರ ನಿಜನಾಮ ಜಾನಕಿ.  ಅವರು ಬಿ.ಕಾಂ ಪದವೀಧರೆಯಾಗಿ ಸುತ್ತಮುತ್ತಲಿನವರಿಗೆ ಪರಿಚಯವಾದದ್ದು ಜಾನಕಿ ಹೆಬ್ಬಾರ್ ಎಂದು.  ಆ ಹಂತದಲ್ಲಿ ‘ನೀರೆಯರ ದಿನ’ ಎಂಬ ಒಂದು ಲೇಖನ ಬರೆದದ್ದು ಸುಧಾ ಪತ್ರಿಕೆಯಲ್ಲಿ ಪ್ರಕಟಿಸುವಾಗ ಪತ್ರಿಕೆಯವರು ಇವರಿಗೆ ಕೊಟ್ಟ ಕಾವ್ಯ ನಾಮ ‘ವೈದೇಹಿ’.

ವೈದೇಹಿ ಅವರು ಶಿವಮೊಗ್ಗ ನಗರದಲ್ಲಿ  ನೆಲೆಸಿದ್ದಾಗ ಬರಹಕ್ಕೆ ಅಗತ್ಯವಾದ ಸಾಂಸ್ಕೃತಿಕ ವಾತಾವರಣದ ಬೆಂಬಲ ದೊರೆಯಿತು.   ಅನಂತಮೂರ್ತಿ, ಅಡಿಗ, ಕೆ.ವಿ.ಸುಬ್ಬಣ್ಣ, ಲಂಕೇಶರಂಥವರು ತಮ್ಮ ಪ್ರಮುಖ ಕೃತಿಗಳನ್ನು ಸೃಷ್ಟಿಸುತ್ತಿದ್ದ ಕಾಲದಲ್ಲಿ ಈ ಸಾಹಿತಿಗಳ ಪರಿಚಯ, ಅದರಲ್ಲೂ ಲಂಕೇಶ್ ಮತ್ತು ಸುಬ್ಬಣ್ಣನವರ ಬೆಂಬಲ, ಪ್ರೋತ್ಸಾಹಗಳು ವೈದೇಹಿಯವರ ಬರಹದ ಬದುಕಿಗೆ ಹೆಚ್ಚಿನ ಒತ್ತಾಸೆ, ತೀವ್ರತೆಗಳನ್ನು ಇತ್ತವು.  ಅನುಪಮಾ ನಿರಂಜನರಂಥ ಹಿರಿಯ ಲೇಖಕಿ, ತಮ್ಮ ಕಿರಿಯ ಪೀಳಿಗೆಯವರೆಲ್ಲರಲ್ಲೂ ಪ್ರೇರಣೆ ಉತ್ಸಾಹಗಳನ್ನು ತುಂಬುತ್ತಿದ್ದು, ವೈದೇಹಿಯವರಲ್ಲೂ ಅಂಥ ಬರೆಯುವ ಉಮೇದು ಬೆಳೆಯಲು ಕಾರಣವಾಯಿತು.

ಪತಿ, ಮಕ್ಕಳು, ಮೊಮ್ಮಕ್ಕಳು  ಹೀಗೆ ವಿಸ್ತಾರಗೊಂಡಿರುವ ವೈದೇಹಿ ಕುಟುಂಬ ಜೀವನದ ಎಲ್ಲ ಸುಂದರ ಅಂಶಗಳ ಸವಿಯೊಳಗೆ, ಎಲ್ಲ ಸಂಕಷ್ಟಗಳ ಬಿಸಿ ಝಳದೊಳಗೆ ಹದಗೊಂಡವರು.  ವಿಷಾದ, ವಿನೋದ, ಗಾಂಭೀರ್ಯಗಳನ್ನು ದುಡಿಸಿಕೊಳ್ಳುತ್ತ ಸಮಕಾಲೀನ ಮಹಿಳಾ ಸಾಹಿತ್ಯದಲ್ಲಿ ಒಂದು ದೃಢವಾದ ಸುಮಧುರವಾದ ಧ್ವನಿಯನ್ನು ಮೂಡಿಸಿ ಬೆಳೆಸುತ್ತಿರುವ ಲೇಖಕಿಯಾಗಿದ್ದಾರೆ.

ವೈದೇಹಿ ಅವರ ಬರಹದ ಸ್ವರೂಪ ವೈವಿಧ್ಯದಿಂದ ಕೂಡಿದೆ.  1979ರಲ್ಲಿ ಮೂಡಿದ ‘ಮರ ಗಿಡ ಬಳ್ಳಿ’ಯಿಂದ ಮೊದಲುಗೊಂಡು, ಅಂತರಂಗದ ಪುಟಗಳು, ಗೋಲ,  ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ, ಅಮ್ಮಚ್ಚಿ ಎಂಬ ನೆನಪು, ಹಗಲು ಗೀಚಿದ ನೆಂಟ, ಕ್ರೌಂಚ ಪಕ್ಷಿಗಳು ಇವು ಅವರ ಪ್ರಮುಖ ಕಥಾಸಂಕಲನಗಳು

ಕಮಲಾದೇವಿ ಚಟ್ಟೋಪಾಧ್ಯಾಯ ಅವರ ‘Indian women’s freedom struggle’ ಕೃತಿಯನ್ನು ‘ಭಾರತೀಯ ಮಹಿಳೆಯರ ಸ್ವಾತ್ರಂತ್ರ ಹೋರಾಟ’, ಮೈತ್ರೇಯಿ ಮುಖ್ಯೋಪಾಧ್ಯಾಯ ಅವರ ‘Silver Shakles’ ಕೃತಿಯನ್ನು ‘ಬೆಳ್ಳಿಯ ಸಂಕೋಲೆ’, ಸ್ವಪ್ನ ದತ್ತರ ‘Sun Fairies’ ಕೃತಿಯನ್ನು ‘ಸೂರ್ಯ ಕಿನ್ನರಿಯರು’ ಎಂದು ಕನ್ನಡಕ್ಕೆ ತಂದುಕೊಟ್ಟಿದ್ದಾರೆ.  ಭಾಸ್ಕರ ಚಂದಾವರ್ಕರ ಅವರ ಟಿಪ್ಪಣಿಗಳಿಂದ ಆಯ್ದ ‘ಸಂಗೀತ ಸಂವಾದ’ ಕೂಡಾ ಈ ನಿಟ್ಟಿನಲ್ಲಿ ಪ್ರಮುಖವಾದುದು.

‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ ಎಂಬುದು ಕೊ. ಲ. ಕಾರಂತರ ಜೀವನದ ಅನುಭವಗಳ ಸ್ಮೃತಿ ಚಿತ್ರಣವಾಗಿದೆ.  ಹಾಗೆಯೇ ‘ಸೇಡಿಯಾಪು ಕೃಷ್ಣ ಭಟ್ಟ’ರ ಕುರಿತ ‘ಸೇಡಿಯಾಪು ನೆನಪುಗಳು’ ಮತ್ತು ಬಿ.ವಿ.ಕಾರಂತರ ಕುರಿತ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ವೈದೇಹಿ ಅವರು ಸೃಷ್ಟಿಸಿರುವ ನೆನಪಿನ ಚಿತ್ರಗಳಾಗಿವೆ.  ‘ಬಿಂದು ಬಿಂದಿಗೆ’ ಮತ್ತು ‘ಪಾರಿಜಾತ’ ಕವನ ಸಂಕಲನಗಳು.

‘ಅಸ್ಪೃಶ್ಯರು’ ಎಂಬ ಕಾದಂಬರಿ ಮತ್ತು  ‘ಮಲ್ಲಿನಾಥ ಧ್ಯಾನ’, ‘ಮೇಜು ಮತ್ತು ಬಡಗಿ’ ಎಂಬ ಲಲಿತ ಪ್ರಬಂಧಗಳ ಸಂಕಲನಗಳನ್ನು ವೈದೇಹಿಯವರು ಪ್ರಕಟಿಸಿದ್ದಾರೆ.   ಮಕ್ಕಳ ಸಾಹಿತ್ಯದಲ್ಲಿ ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು, ಗೊಂಬೆ ಮ್ಯಾಕ್ ಬೆಥ್, ಢಣಾಡಂಗೂರ, ನಾಯಿಮರಿ ನಾಟಕ, ಕೋಟು ಗುಮ್ಮ, ಜುಂ ಜಾಂ ಆನೆ ಮತ್ತು ಪುಟ್ಟ, ಸೂರ್ಯ ಬಂದ, ಅರ್ಧಚಂದ್ರ ಮಿಠಾಯಿ, ಹಕ್ಕಿ ಹಾಡು, ಸೋಮಾರಿ ಓಳ್ಯಾ ಪ್ರಕಟಗೊಂಡಿವೆ. ವೈದೇಹಿಯವರ ಹಲವಾರು ಕೃತಿಗಳು ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೆ ಅನುವಾದಿವಾಗಿವೆ.

‘ಕರ್ನಾಟಕ ಲೇಖಕಿಯರ ಸಂಘ’ದಿಂದ ಗೀತಾ ದೇಸಾಯಿ ದತ್ತಿ ನಿಧಿ ಪುರಸ್ಕಾರ (ಅಂತರಂಗದ ಪುಟಗಳು ಮತ್ತು ಬಿಂದು ಬಿಂದಿಗೆ ಕೃತಿಗಳಿಗೆ), ‘ವರ್ಧಮಾನ ಪ್ರಶಸ್ತಿ ಪೀಠ’, ಮೂಡಬಿದಿರೆ ಯಿಂದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ (ಗೊಲ ಕೃತಿಗೆ), ‘ಕಥಾ ಆರ್ಗನೈಝೆಶನ್’ ನವದೆಹಲಿ ಯಿಂದ ಕಥಾ ಪುರಸ್ಕಾರ (ಹಗಲು ಗೀಚಿದ ನೆಂಟ ಕೃತಿಗೆ), ‘ಕರ್ನಾಟಕ ಲೇಖಕಿಯರ ಸಂಘ’ದಿಂದ ಅನುಪಮಾ ಪುರಸ್ಕಾರ (ಸಮಾಜ ಶಾಸ್ತ್ರಗ್ನೆಯ ಟಿಪ್ಪಣಿಗೆ ಕೃತಿಗೆ), ‘ಕರ್ನಾಟಕ ಸಂಘ’ ಶಿವಮೊಗ್ಗ ದಿಂದ ಎಂ.ಕೆ.ಇಂದಿರಾ ಪುರಸ್ಕಾರ (ಅಸ್ಪೃಶ್ಯರು ಕೃತಿಗೆ), ಕರ್ನಾಟಕ ಸಾಹಿತ್ಯ ಅಕೆಡಮಿ ಪುರಸ್ಕಾರ (ಐದು ಮಕ್ಕಳ ನಾಟಕಗಳು ಕೃತಿಗೆ), ‘ಅತ್ತಿಮಬ್ಬೆ ಪ್ರತಿಷ್ಠಾನ’ ದಿಂದ ಅತ್ತಿಮಬ್ಬೆ ಪುರಸ್ಕಾರ, ಸಾಹಿತ್ಯ ಅಕೆಡಮಿ ಪುರಸ್ಕಾರ (ಮಲ್ಲಿನಾಥನ ಧ್ಯಾನ ಕೃತಿಗೆ), ಕರ್ನಾಟಕ ರಾಜ್ಯ ಸರ್ಕಾರದಿಂದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಮತ್ತು  ‘ಕ್ರೌಂಚ ಪಕ್ಷಿಗಳು’ ಎಂಬ  ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಹೀಗೆ ಹಲವಾರು ಗೌರವಗಳು ವೈದೇಹಿ ಅವರನ್ನು ಅರಸಿ ಬಂದಿವೆ.  ಇವರ ಕಥೆ ಆಧರಿಸಿದ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಗುಲಾಬಿ ಟಾಕೀಸು ಚಲನಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಾದೇಶಿಕ ಚಲನಚಿತ್ರಕ್ಕೆ ನೀಡುವ 2009 ವರ್ಷದ ರಾಷ್ಟ್ರೀಯ ಪ್ರಶಸ್ತಿ,  ಹಾಗೂ ಚಿತ್ರದ ಪ್ರಮುಖ ಪಾತ್ರಧಾರಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.

ಲಂಕೇಶ್ ಪತ್ರಿಕೆಯ ಅಂಕಣಗಾರರಾಗಿಯೂ , ಬೇರೆ ಬೇರೆ ಸಂದರ್ಭಗಳಲ್ಲಿ ವೈದೇಹಿಯವರು ಬರೆದಂತ ಚಿಂತನೆ, ಲಲಿತ ಪ್ರಬಂಧ, ವಿಮರ್ಶೆ, ವಿಚಾರ ಲಹರಿಗಳೆಲ್ಲ ಒಗ್ಗೂಡಿ ‘ಮಲ್ಲಿನಾಥನ ಧ್ಯಾನ’ವಾಗಿದೆ.

“ಒಟ್ಟಿಗೇ ಬದುಕಿ ಬದುಕಿ ಕಡೆಗೆ ಹೆಣ್ಣು ಗಂಡು ಎಂಬ ಮಾಯೆಯೇ ಪರಸ್ಪರರಲ್ಲಿ ಮಾಯವಾಗಿ ಕೇವಲ ಜೀವಿಗಳಾಗಿಬಿಡುತ್ತೇವೆಯೇ?” ಬದುಕನ್ನು ಬದುಕುತ್ತಲೇ ಸಾಗುವ ಈ ಪ್ರಕ್ರಿಯೆಯನ್ನು ‘ಪಕ್ವತೆಯತ್ತಲೇ ನಡೆಯಬೇಕಾದ  ಒಂದು ವಿಕಾಸದ ಕ್ರಮವೆಂದು ಭಾವಿಸಿ, ನಂಬಿ ಬದುಕಿದ ನಮ್ಮ ಪುರಾತನರ ಶ್ರದ್ಧೆಯೊಂದನ್ನು ಹೊಸ ಕಾಲದಲ್ಲಿ ಕುಂದಾಪುರದ ಜನಗಳ ಆಡುಮಾತಿನಲ್ಲಿ ಮತ್ತೆ ಕಟ್ಟಿಕೊಡುತ್ತಾರೆ ನಮ್ಮ ವೈದೇಹಿ ಎಂದು ಭಾಸವಾಗುವಂತೆ ಅವರ ಬರಹಲೋಕವಿದೆ.

Tag: Vaidehi

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)