ಡಾ. ಸಿ. ಎನ್. ಮಂಜುನಾಥ್

ಸಾಧಕರೊಡನೆ ಸಂವಾದ: ಡಾ. ಮಂಜುನಾಥ್ ಅವರೊಡನೆ
ಸಾಧಕರೊಡನೆ ಸಂವಾದ: ಡಾ. ಮಂಜುನಾಥ್ ಅವರೊಡನೆ

drmanjunath

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದೊಂದಿಗೆ ಏರ್ಪಡಿಸುತ್ತಿರುವ ‘ಸಾಧಕರೊಂದಿಗೆ ಸಂವಾದ’ ಸರಣಿಯ ನಾಲ್ಕನೆಯ  ಕಾರ್ಯಕ್ರಮಕ್ಕೆ ಸಂವಾದಿಸಲು ಆಗಮಿಸಿದ ಸಾಧಕರು ಜನಾನುರಾಗಿಗಳಾಗಿ ಪ್ರಖ್ಯಾತರಾಗಿರುವ   ಹೃದ್ರೋಗ ತಜ್ಞರಾದ ಡಾ. ಸಿ. ಎನ್. ಮಂಜುನಾಥ್ ಅವರು. ಈ ಕಾರ್ಯಕ್ರಮ  ಸೆಪ್ಟೆಂಬರ್ ೨೪, ೨೦೧೬ರಂದು ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅವರ ಉಪಸ್ಥಿತಿಯಲ್ಲಿ ನೆರವೇರಿತು.

ಡಾ. ಸಿ. ಎನ್. ಮಂಜುನಾಥ್

ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ೧೯೫೭ರಲ್ಲಿ ಜನಿಸಿದ ಡಾ. ಸಿ. ಎನ್. ಮಂಜುನಾಥ್ ಅವರು ಈ ನಾಡು ಕಂಡ ಶ್ರೇಷ್ಠಮಟ್ಟದ ಹೃದಯರೋಗ ತಜ್ಞರು.  ಮೈಸೂರು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತಮ್ಮ  ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ಪೂರ್ಣಗೊಳಿಸಿದರು.  ಇವರು ಹೃದಯಸಂಬಂಧಿ ರೋಗಗಳನ್ನು ಗುಣಪಡಿಸುತ್ತಲೇ ತಮ್ಮ ವೈದ್ಯಕೀಯ ಶಿಕ್ಷಣದಲ್ಲಿ ಉತ್ಕೃಷ್ಟತೆ ಗಳಿಸಿಕೊಂಡರು.

ಡಾ. ಮಂಜುನಾಥ್ ಅವರು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ  ಸಂಸ್ಥೆಯ ನಿರ್ದೇಶಕರಾಗಿ ೨೦೦೬ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.  ಈ ಸಂಸ್ಥೆಯ  ಮುಖ್ಯಸ್ಥರಾದ ಮೇಲೆ ಅದರ ಖ್ಯಾತಿಯು ವಿಶ್ವದಾದ್ಯಂತ ಪಸರಿಸಲು ಕಾರಣಕರ್ತರಾಗಿದ್ದಾರೆ.  ಇವರ ಹಲವಾರು ವಿಶೇಷ ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು  ಅಂತರರಾಷ್ಟ್ರೀಯ ಮಟ್ಟದ ಜರ್ನಲ್ಗಳಲ್ಲಿ ಪ್ರಕಟವಾಗಿವೆ.  ಹಾಗೆಯೇ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಹಲವಾರು ವೈದ್ಯಕೀಯ ಸಮಾವೇಶಗಳನು ಆಯೋಜಿಸಿದ ಖ್ಯಾತಿಯೂ ಇವರದಾಗಿದೆ.  ಹಳ್ಳಿಗಾಡಿನ ಹಾಗೂ ಬಡಜನತೆಯ ಆರೋಗ್ಯದತ್ತ ಇವರು ಹರಿಸಿದ ವಿಶೇಷ ಗಮನ ನಾಡಿನ ಎಲ್ಲ ವರ್ಗದವರ ಮನಗಳನ್ನು ತಟ್ಟಿವೆ.  ಇವರ ಮುಂದಾಳತ್ವದಲ್ಲಿ ಪ್ರತಿನಿತ್ಯ ನಡೆಯುವ ವಿಧವಿಧವಾದ ವಿಶೇಷ ಶಸ್ತ್ರಚಿಕಿತ್ಸೆಗಳು ಅಪಾರ.

ಡಾ.  ಮಂಜುನಾಥ್ ಅವರು  ಸಲ್ಲಿಸುತ್ತಿರುವ ನಿಸ್ವಾರ್ಥಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಾಶಸ್ತಿ ನೀಡಿದೆ. ರಾಜೀವಗಾಂಧೀ ಅರೋಗ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.  ಇವರ ಸೇವೆಗೆ ಮುಕುಟಪ್ರಾಯವೆನ್ನುವಂತೆ ದೇಶದ ಪದ್ಮಶ್ರೀ ಪ್ರಶಸ್ತಿಯು ಇವರಿಗೆ ಸಂದಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

Tag: Dr. C.N. Manjunath

 

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)