kannadasahityahistoryimage

ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಇತಿಹಾಸ

ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕೀಕರಣದ ಹೋರಾಟಗಾರರೂ ಸಾಹಿತಿಗಳೂ ವಿದ್ವಾಂಸರೂ ಮೈಸೂರಿನ ಆಡಳಿತಗಾರರೂ, ಅಧ್ಯಾಪಕರೂ, ಸಾರ್ವಜನಿಕ ಗಣ್ಯರು ಹೀಗೆ ಹಲವಾರು ಗಣ್ಯವ್ಯಕ್ತಿಗಳ ನಾಡು – ನುಡಿ ಸೇವಕರ ಒಂದು ಗುಂಪಿನ ಜನರ ಸಂಯುಕ್ತ ಶ್ರಮ ತ್ಯಾಗಗಳ ಫಲವಾಗಿ ರೂಪುಗೊಂಡಿತು.

ಬೆಂಗಳೂರಿನಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಮಾಡಿದ ಪ್ರಯತ್ನಗಳೂ ಹೆಚ್.ವಿ. ನಂಜುಂಡಯ್ಯ, ಬೆಳ್ಳಾವೆ ವೆಂಕಟನಾರಣಪ್ಪ, ಕರ್ಪೂರ ಶ್ರೀನಿವಾಸರಾವ್, ಅಚ್ಯುತರಾವ್, ಬಹಾದ್ದೂರ್ ಶ್ಯಾಮರಾವ್, ರಾ.ಹ. ದೇಶಪಾಂಡೆ, ಆಲೂರು ವೆಂಕಟರಾಯರು ಇನ್ನೂ ಅನೇಕರು ಸೇರಿ ಅಹರ್ನಿಶಿ ನಡೆಸಿದ ಚಿಂತನೆ – ಪರಿಶ್ರಮಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ರೂಪುಗೊಂಡು ಸ್ಥಾಪನೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೫ನೇ ಮೇ ೧೯೧೫ರಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ರೀತಿ ಒಂದು ಐತಿಹಾಸಿಕ ಮಹತ್ವದ ಘಟನೆಯಾಗಿದೆ. ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಮೇಲೆ ೧೮೮೧ರಲ್ಲಿ ಚಾಮರಾಜೇಂದ್ರ ಒಡೆಯರ್ ಪಟ್ಟಕ್ಕೆ ಬಂದರು. ಆಗಿನಿಂದ ದಿವಾನರ ಆಡಳಿತ ಪ್ರಾರಂಭವಾಯಿತು. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಕಾಲದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು ೧೯೧೨ರಲ್ಲಿ ದಿವಾನರಾದರು. ಇವರ ಅಧಿಕಾರಾವಧಿ ೧೯೧೨ರಿಂದ ೧೯೧೮ ರವರೆಗೆ ೬ ವರ್ಷಗಳು. ಈ ಮುಂಚೆ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನಕ್ಕೆ ಚೀಫ್ ಇಂಜಿನಿಯರಾಗಿ ೧೯0೯ರಲ್ಲಿ ನೇಮಕಗೊಂಡಿದ್ದರು. ಅನಂತರ ಮೈಸೂರು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ೧೯೧೧ರಲ್ಲಿ ಮೈಸೂರು ಸಂಪದಭಿವೃದ್ಧಿ ಸಮಾಜ (ಮೈಸೂರು ಇಕನಾಮಿಕ್ ಕಾನ್ಪೆರೆನ್ಸ್) ಎಂಬ ಸಂಸ್ಥೆಯನ್ನು ಸ್ಥಾಪಿಸಲು ಮಹಾರಾಜರಿಗೆ ಸಲಹೆ ಕೊಟ್ಟಾಗ ಮಹಾರಾಜರು ಅದನ್ನೊಪ್ಪಿದರು. ಅದಕ್ಕನುಸಾರವಾಗಿ ಆ ಸಂಸ್ಥೆಯ ಅಂಗವಾಗಿ ೩ ಸಮಿತಿಗಳು ಏರ್ಪಟ್ಟವು.