ಪರಿಷತ್ತಿನ ಉಪಾಧ್ಯಕ್ಷರುಗಳು

 

ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭಗೊಂಡು,  ಎಚ್. ವಿ. ನಂಜುಂಡಯ್ಯನವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಎಂ. ಶಾಮರಾಯರು ಉಪಾಧ್ಯಕ್ಷರಾಗಿದ್ದರು. ನಂಜುಡಯ್ಯನವರ ನಂತರದಲ್ಲಿ ಅಧ್ಯಕ್ಷರಾದವರು ಎಂ. ಕಾಂತರಾಜ ಅರಸು ಅವರು. (೧೯೨0-೧೯೨೩) ಅವರಾದ ಮೇಲೆ ಯುವರಾಜ ಕಂಠೀರವ ಚಾಮರಾಜೇಂದ್ರ ಒಡೆಯರ್ ಪರಿಷತ್ತಿನ ಅಧ್ಯಕ್ಷರಾದರು. ಇವರ ನಂತರ ಒಂಟಿಮುರಿ ಶ್ರೀಮಂತ ಬಸವಪ್ರಭು ಸರದೇಸಾಯಿ ಅವರು (೧೯೪೧-೧೯೪೬) ಆಮೇಲೆ ಜಸ್ಟೀಸ್ ಲೋಕೂರು ನಾರಾಯಣರಾವ್ ಸ್ವಾಮಿರಾವ್ ಅವರು ಅಧ್ಯಕ್ಷರಾಗಿದ್ದರು. ಆಗ ನಿಬಂಧನೆಯಲ್ಲಿ “ರಾಜ್ಯಾಧಿಪತಿಗಳು, ಶ್ರೀಮಂತರು, ಉನ್ನತ ಪದವಿಯಲ್ಲಿರುವವರು ಮಾತ್ರ ಮಹಾಪೋಷಕರು ಅಥವಾ ಪೋಷಕರು ಆಗಿರಬೇಕು” ಎಂಬ ನಿಯಮವಿದ್ದು, ಇವರ ಪೈಕಿ ಅಧ್ಯಕ್ಷರನ್ನು ಆರಿಸಲಾಗುತ್ತಿತ್ತು. ೧೯೪೭ರ ನಂತರ ಈ ನಿಯಮ ರದ್ದಾಯಿತು.

ಈ ಅರಸರು ಅಥವಾ ಶ್ರೀಮಂತರು ಪರಿಷತ್ತಿನ ಅಧ್ಯಕ್ಷರಾದ ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಪಾಂಡಿತ್ಯ ಹೊಂದಿರುವ ವಿದ್ವಾಂಸರನ್ನು ಪರಿಷತ್ತಿನ ಆಜೀವ ಗೌರವ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿತ್ತು. ಇವರ ಪೈಕಿ ಒಬ್ಬರು ಪರಿಷತ್ತಿನ ಉಪಾಧ್ಯಕ್ಷರಾಗಿರುತ್ತಿದ್ದರು. ಹೀಗೆ ಉಪಾಧ್ಯಕ್ಷರೆನಿಸಿಕೊಂಡವರು ಕ್ರಮವಾಗಿ ಕರ್ಪೂರ ಶ್ರೀನಿವಾಸರಾವ್, ಡಿವಿಜಿ, ಬಿಎಂಶ್ರೀ ಮತ್ತು ಮಾಸ್ತಿ. ಅವರು ವಾಸ್ತವಿಕದಲ್ಲಿ ಪರಿಷತ್ತಿನ ಕಾರ್ಯಗಳನ್ನೆಲ್ಲ ಅಧ್ಯಕ್ಷರ ಹೆಸರಿನಲ್ಲಿ ನಡೆಸಿದರು.