ಯೋಜನೆಗಳು
ಕನ್ನಡ ಸಾಹಿತ್ಯ ಪರಿಷತ್ತು, ಪರಿಷತ್ತಿನ ಮೂಲ ಕನ್ನಡ ಅಭಿವೃದ್ಧಿ ಆಶಯಗಳು ಮತ್ತು ಸಾಂಸ್ಕೃತಿಕ ಆಶಯಗಳಿಗೆ ಅನುಗುಣವಾಗಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದು ಪ್ರಸ್ತುತ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಹೊಸ ರೀತಿಯ ಯೋಜನೆಗಳನ್ನೂ ಸಹಾ ರೂಪಿಸುತ್ತಾ ಮುನ್ನಡೆದಿದೆ.
ಈ ಕಾರ್ಯಯೋಜನೆಗಳನ್ನು ಸಮರ್ಥವಾಗಿ ನಿರ್ವಹಿಸಲು ನಾಡಿನ ಗಣ್ಯರ ನೇತೃತ್ವದ ಉಪಸಮಿತಿಗಳನ್ನು ರಚಿಸಿ ಆ ಮೂಲಕ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಆ ಸೂತ್ರಗಳ ಅನ್ವಯ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಡೆಸಲಾಗುತ್ತಿದೆ.
ದಿನಾಂಕ 03-03-2016 ರಿಂದ 31-10-2017ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಹೊಸ ಯೋಜನೆಗಳು ಹಾಗೂ ಮುಂದುವರೆದ ಕಾರ್ಯಚಟುವಟಿಕೆಗಳ ವಿವರ
ದಿನಾಂಕ 1-11-2017 ರಿಂದ 5-10-2019ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡ ಹೊಸ ಯೋಜನೆಗಳು ಹಾಗೂ ಮುಂದುವರೆದ ಕಾರ್ಯಚಟುವಟಿಕೆಗಳ ವಿವರ
ಸಮರ್ಪಕ ಅಂತರಜಾಲ ತಾಣ
ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಭಾಷೆಯ ಉಳಿವು, ಉಪಯೋಗ ಮತ್ತು ಬೆಳವಣಿಗೆಗೆ, ಆ ಭಾಷೆ ಹೇಗೆ ಅಂತರಜಾಲದಲ್ಲಿ ಲಭ್ಯವಾಗುತ್ತಿದೆ ಎಂಬುದು ಕೂಡಾ ಅತ್ಯಗತ್ಯ ಎಂಬುದನ್ನು ನಾವು ಮನಗಂಡಿದ್ದೇವೆ. ನಮ್ಮ ಕನ್ನಡ ಭಾಷೆಯನ್ನೂ ಅಂತರಜಾಲದಲ್ಲಿ ಹೆಚ್ಚು ಹೆಚ್ಚು ಬಳಸುವತ್ತ ಬಲ ಒದಗಿಸಬೇಕು ಎಂಬ ನಿಟ್ಟಿನಲ್ಲಿ ನಾವು ಶೀಘ್ರಗತಿಯಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ನೇಮಿಸಿರುವ ‘ಕನ್ನಡಿಗರಿಗೆ ಉದ್ಯೋಗ ಹಾಗೂ ವಿಜ್ಞಾನ ತಂತ್ರಜ್ಞಾನ ಸಂಬಂಧಿತ ಆಧುನೀಕರಣ’ದ ಬಗ್ಗೆ ಪ್ರಖ್ಯಾತ ವಿಮರ್ಶಕರು ಹಾಗೂ ಇಂಟೆಲ್, ಸಿಸ್ಕೋ, ನಾವೆಲ್ , ಎಚ್ ಎಮ್ ಟಿ ಮುಂತಾದ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರೂ ಆದ ಎಸ್. ಆರ್. ವಿಜಯಶಂಕರ್ ಅವರು ಸಂಚಾಲಕರಾಗಿರುವ ಗಣ್ಯರ ಉಪಸಮಿತಿಯ ಸಲಹೆ ಸೂಚನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುತ್ತಿದೆ. ಇದರ ದ್ಯೋತಕವಾಗಿ ಅತ್ಯಂತ ಕಡಿಮೆ ಅವಧಿಯಲ್ಲೇ ನಾವು ನವೀಕರಿಸಿರುವ ಈ ತಾಣದ ಮೂಲಕ ಕನ್ನಡ ಜನ ಸಮೂಹದೊಡಗಿನ ಬಾಂಧವ್ಯವನ್ನು ನಿರಂತರವಾಗಿ ಪೋಷಿಸಿ ಅಭಿವೃದ್ಧಿಪಡಿಸುವುದು ಮತ್ತು ಕನ್ನಡದ ಉಪಯೋಗವನ್ನು ಸಮರ್ಥವಾಗಿ ವಿಸ್ತರಿಸುವುದು ನಮ್ಮ ಅಭಿಲಾಷೆಯಾಗಿದೆ.
ಈ ಅಂತರಜಾಲ ತಾಣದ ಅಭಿವೃದ್ಧಿಯ ಮೊದಲ ಹಂತದಲ್ಲಿ ಪರಿಷತ್ತಿನ ಒಂದು ಶತಮಾನದ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಸಕ್ತ ಕಾರ್ಯಚಟುವಟಿಕೆಗಳ ಕುರಿತಾದ ಸಮಗ್ರ ಮಾಹಿತಿ ಇದೀಗ ತಮ್ಮ ಮುಂದಿದೆ. ಪರಿಷತ್ಪತ್ರಿಕೆ ‘ಕನ್ನಡ ನುಡಿ’ ಸಹಾ ಇಲ್ಲಿ ಲಭ್ಯವಾಗುತ್ತಿದೆ.
Tag: Yojanegalu