ಶ್ರೀ ಜಿ.ಎಸ್. ಸಿದ್ಧಲಿಂಗಯ್ಯ

a17

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೭

ಅಧ್ಯಕ್ಷರು : ಜಿ.ಎಸ್. ಸಿದ್ಧಲಿಂಗಯ್ಯ (೧೯೮೯೧೯೯೨)

ಜೀವನ 

ಶಿಕ್ಷಣತಜ್ಞರೂ ಕವಿಗಳೂ ವಚನ ಸಾಹಿತ್ಯ ವಿದ್ವಾಂಸರೂ ಆದ ಜಿ.ಎಸ್. ಸಿದ್ಧಲಿಂಗಯ್ಯನವರು ತುಮಕೂರಿನ ಬೆಳ್ಳಾವೆಯಲ್ಲಿ ೨0-೨-೧೯೩೧ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನು, ವಿಶ್ವವಿದ್ಯಾನಿಲಯದಿಂದ ೧೯೬೧ರಲ್ಲಿ ಎಂ.ಎ. ಪದವಿ ಗಳಿಸಿದರು. ಸರ್ಕಾರಿ ಕಾಲೇಜಿಗೆ ಉದ್ಯೋಗಕ್ಕಾಗಿ ಅಧ್ಯಾಪಕರಾಗಿ ಸೇರಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ೧೯೮೮ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು.

೧೯೭೪ರಲ್ಲಿ ಚಿತ್ರದುರ್ಗದಲ್ಲಿ ಹಿಂದುಳಿಗ ವರ್ಗದವರ ವಸತಿಶಾಲೆಯನ್ನು ಪ್ರಾರಂಭಿಸಲು ಕಾರಣಕರ್ತರಾದರು. ೧೯೮೯ ರಿಂದ ೧೯೯೨ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ೧೭ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಕವಿಗಳೆಂದು, ವಿಮರ್ಶಕರೆಂದು ಹೆಸರು ಗಳಿಸಿರುವ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೆಲವು ಹೀಗಿವೆ.

ವಿಮರ್ಶೆ : ಮಹಾನುಭಾವ ಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡ ಕಾವ್ಯ.

ಕವನ ಸಂಕಲನ : ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ.

ಸಂಪಾದನೆ : ಶತಾಬ್ದಿ ದೀಪ, ಜಂಗಮಜ್ಯೋತಿ, ಇತ್ಯಾದಿ.

ಸಾಧನೆ :

ಪರಿಷತ್ತಿನ ಅಧ್ಯಕ್ಷರಾಗಿರುವರಲ್ಲಿ ಕನ್ನಡ ಪ್ರಾಧ್ಯಾಪಕರು ಸಾಕಷ್ಟು ಮಂದಿ ಇದ್ದಾರೆ. ಪರಿಷತ್ತು ಪ್ರಾರಂಭವಾದ ಕಾಲದಲ್ಲೂ ಸ್ಥಾಪಕವವರ್ಗದಲ್ಲಿ ಸಾಕಷ್ಟು ಮಂದಿ ಶಿಕ್ಷಕ ವರ್ಗದವರು ಇದ್ದರು. ಬೆಳ್ಳಾವೆ ವೆಂಕಟನಾರಣಪ್ಪ, ಬಿ.ಎಂ. ಶ್ರೀ. ಮೊದಲಾದವರು, ಅನಂತರದ ಕಾಲದಲ್ಲಿ ಎ.ಎನ್. ಮೂರ್ತಿರಾವ್, ಜಿ. ವೆಂಕಟಸುಬ್ಬಯ್ಯ ಮೊದಲಾದವರು ಶಿಕ್ಷಕವರ್ಗಕ್ಕೆ ಸೇರಿದವರು.

ಜಿ.ಎಸ್. ಸಿದ್ಧಲಿಂಗಯ್ಯನವರು ಪರಿಷತ್ತಿನ ಅಧಿಕಾರವಹಿಸಿಕೊಂಡಾಗ ಪರಿಷತ್ತು ಸಂದಿಗ್ಧ ಸನ್ನಿವೇಶದಲ್ಲಿತ್ತು ಸರ್ಕಾರದ ಆಡಳಿತಾಧಿಕಾರಿಗಳ ಆಡಳಿತ ಬಂದ ಮೇಲೆ ಹೇಗೆ ಸಾಗುತ್ತದೆ ಪರಿಷತ್ತು ಎಂಬ ಆತಂಕ ಇತ್ತು. ಅಂಥ ಸನ್ನಿವೇಶದಲ್ಲಿ ಅಧಿಕಾರ ಸ್ವೀಕರಿಸಿದ ಜಿ.ಎಸ್. ಸಿದ್ಧಲಿಂಗಯ್ಯನವರು “ನಾನು ಈ ಕ್ಷಣದವರೆಗೂ ಶುದ್ದವ್ಯಕ್ತಿಯಾಗಿ ನಡೆದುಕೊಂಡು ಬಂದಿದ್ದೇನೆ. ಆ ದೇವರೇ ಬಂದರೂ ನನ್ನನ್ನು ಭ್ರಷ್ಟನನ್ನಾಗಿಸಲಾರ.” ಎಂಬ ಘೋಷಣೆ ಮಾಡಿದಾಗ, ಜನರಲ್ಲಿ ಆತಂಕ ನಿವಾರಣೆ ಆಯಿತು.

ಪರಿಷತ್ತಿಗೊಂದು ಧ್ವಜ : ಬಿ.ಎಂ.ಶ್ರೀ. ಅವರ ಅವಧಿಯಲ್ಲಿ ಒಂದು ಲಾಂಛನ(ಎಂಬಲಮ್) ರೂಪಿಸಿ ಅಂಗೀಕರಿಸಿತ್ತು ಆದರೆ ಧ್ವಜದ ಅಗತ್ಯ ಕಂಡು ಸಿದ್ಧಲಿಂಗಯ್ಯನವರು ತಜ್ಞರ ಸಮಿತಿಯನ್ನು ನೇಮಿಸಿತು. ಧ್ವಜದ ಸ್ವರೂಪ ಲಕ್ಷಣಗಳನ್ನು ನಿರ್ಧರಿಸಿತು. ಕಲಾವಿದ ಕಮಲೇಶ್ ಅವರಿಗೆ ಧ್ವಜರೂಪಿಸುವ ಕಾರ್ಯವನ್ನು ವಹಿಸಿತು. ಅದನ್ನು ಕಾರ್ಯಸಮಿತಿ ೧೬-೧-೧೯೯0 ರಲ್ಲಿ ಅಂಗೀಕರಿಸಿತು. ಅಂದಿನಿಂದ ಪರಿಷತ್ತಿನ ಸಮ್ಮೇಳನಗಳಲ್ಲಿ ಪ್ರಮುಖ ಸಮಾರಂಭಗಳಲ್ಲಿ ಹಾರಿಸಲು ಪ್ರಾರಂಭಿಸಿತು.

ಪ್ರಕಟನೆಗಳು : ಪ್ರಕಟನೆಗಳು ಪರಿಷತ್ತಿನ ಜೀವಾಳ. ಶಿಕ್ಷಕರಾದವರಿಗೆ ಇದರಲ್ಲಿ ಬಹು ಆಸಕ್ತಿ. ಅಧ್ಯಕ್ಷರು ಪುಸ್ತಕ ಆಸಕ್ತಿವುಳ್ಳವರು. ಹೀಗಾಗಿ ಇವರು ಸಹಜವಾಗಿಯೇ ಪ್ರಕಟನೆಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಿದರು. ಆಧುನಿಕ ಸಾಹಿತ್ಯದಲ್ಲಿ ಗಮನಾರ್ಹವಾದ ಸಾಧನೆ ಮಾಡಿದ ಮಹನೀಯರು ನಮ್ಮಲ್ಲಿ ಅನೇಕರಿದ್ದಾರೆ. ಅವರೆಲ್ಲರನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಹೊಸಗನ್ನಡ ಸಾಹಿತ್ಯ ದನಿ ನಿರ್ಮಾಪಕರು ಮಾಲಿಕೆಯಡಿ ಪ್ರಸಿದ್ಧ ಲೇಖಕರಿಂದ ಬರೆಸಿ ಪ್ರಕಟಿಸಿದರು. ಈ ಮಾಲಿಕೆಯಲ್ಲಿ ೨0ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾದವು. ಹಾಗೆಯೇ ಪ್ರಕಟನೆಗಳಲ್ಲಿ ವಿನೂತನ ಯೋಜನೆಯನ್ನು ಜಾರಿಗೆ ತಂದರು. ಅದೆಂದರೆ, ಪಿಎಚ್‍ಡಿ ಸಂಶೋಧನಾ ಪ್ರಬಂಧಗಳ ಪ್ರಕಟನೆ. ಕರ್ನಾಟಕದಲ್ಲಿ ಹಲವಾರು ವಿಶ್ವವಿದ್ಯಾಲಯಗಳಿವೆ. ಕನ್ನಡ ವ್ಯಾಸಂಗವಿರುವ ಸ್ನಾತಕೋತ್ತರ ಕೇಂದ್ರಗಳು ಕರ್ಣಾಟದಾಚೆಗೂ ಇವೆ. ಹೀಗಾಗಿ ವರ್ಷಕ್ಕೆ ಹತ್ತಾರು ಪ್ರಬಂಧಗಳು ಸಿದ್ಧವಾಗುತ್ತವೆ. ಇವುಗಳನ್ನು ಪ್ರಕಟಿಸುವ ಪ್ರಕಾಶಕರು ಅಪರೂಪ. ಹೀಗಾಗಿ ನೂರಾರು ಪಿಎಚ್.ಡಿ., ಗ್ರಂಥಗಳು ಅಪ್ರಕಟಿತವಾಗಿ ಉಳಿದಿದೆ. ಉತ್ತಮ ವಿಚಾರಗಳು ಸಂಶೋಧನಾತ್ಮಕ ವಿವರಗಳಿರುವ ಇಂಥ ಪ್ರಬಂಧಗಳನ್ನು ಪ್ರಕಟಿಸುವ ಯೋಜನೆಯನ್ನು ತಯಾರಿಸಲಾಯಿತು. ಸಂಗ್ರಹರೂಪದಲ್ಲಿ ಹತ್ತಾರು ಪ್ರಬಂಧಗಳು ಪರಿಷತ್ತಿನಿಂದ ಪ್ರಕಟವಾಯಿತು.

ಹೊಸದಾಗಿ ಅಕ್ಷರ ಕಲಿತ ವಯಸ್ಕರಿಗಾಗಿ ಪ್ರಾರಂಭಿಸಿದ ನವಸಾಕ್ಷರಮಾಲಿಕೆಯಲ್ಲಿ ೩0 ಗ್ರಂಥಗಳು ಬೆಳಕು ಕಂಡವು.

ಪರಿಷತ್ತಿನ ಗೌರವ ಸದಸ್ಯತ್ವ ಪಡೆದ ಸಿಂಪಿ ಲಿಂಗಣ್ಣನವರ ಗೌರವಾರ್ಥ ಅವರ ಪ್ರಾತಿನಿಧಿಕ ಕೃತಿ ‘ಸಾಗರಸಿಂಪಿ’ ಪ್ರಕಟವಾಯಿತು.

ಕಾರ್ಯಕ್ರಮಗಳು : ಸ್ವತಃ ಕವಿಗಳಾದ ಜಿ. ಎಸ್. ಸಿದ್ಧಲಿಂಗಯ್ಯನವರು ತಮ್ಮ ಅವಧಿಯಲ್ಲಿ ರಾಜ್ಯೋತ್ಸವ, ಯುಗಾದಿಯಂದು ಕವಿಗೋಷ್ಠಿ ಏರ್ಪಡಿಸುವ ಪದ್ಧತಿ ಪ್ರಾರಂಭಿಸಿದರು.

ಯುವ ಕವಿಗಳಿಗಾಗಿ ಕಾವ್ಯ ಕಮ್ಮಟ ಕಾರ್ಯಕ್ರಮ ಪ್ರಾರಂಭಿಸಿದರು. ಅಷ್ಟೇ ಅಲ್ಲದೆ ಯುವಕವಿಗಳಿಗಾಗಿಯೇ ಕತೆಗಾರರಿಗಾಗಿಯೇ ಸ್ಪರ್ಧೆ ಏರ್ಪಡಿಸಿ ಶ್ರೇಷ್ಠ ಕವನ ಸಂಕಲನವನ್ನು ಶ್ರೇಷ್ಠಕಥಾಸಂಕಲನವನ್ನು ಪ್ರಕಟಿಸತೊಡಗಿದರು.

ಪರಿಷತ್ತಿನ ಕನ್ನಡನುಡಿಯ ಸುವರ್ಣ ಸಂಚಿಕೆಯನ್ನು ಹೊರತಂದರು.

ಕನ್ನಡ ಕಾರ್ಯಕರ್ತರ ಸಂಘಸಂಸ್ಥೆಗಳ ಸಮಾಲೋಚನಾ ಸಭೆಗಳನ್ನು ನಡೆಸಿದರು. ಜಿಲ್ಲಾ – ತಾಲ್ಲೂಕುಮಟ್ಟದ ಸಮ್ಮೇಳನಗಳ ಜತೆಗೆ ಮಹಿಳಾ ಸಮ್ಮೇಳನಗಳನ್ನು ಸಂಘಟಿಸಿದರು.

ಬಂಡಾಯ ಸಮ್ಮೇಳನ : ಬಂಡಾಯ ಸಾಹಿತ್ಯ ಚಳವಳಿಯ ಬರಹಗಾರರು ಪರಿಷತ್ತಿನಿಂದ ದೂರವಿದ್ದುದನ್ನು ಕಂಡು ಸಿದ್ಧಲಿಂಗಯ್ಯನವರು ಆ ಚಳವಳಿಯ ಸಾಹಿತಿಗಳನ್ನೆಲ್ಲ ಕರೆಯಿಸಿ ಮಾತನಾಡಿ ೩0-೬-೧೯೯0 ಮತ್ತು ೧-೭-೯0 ರಂದು ಎರಡು ದಿನಗಳ ಕಾಲ ಸಾಹಿತ್ಯ ಸಮಾವೇಶವೊಂದನ್ನು ಪರಿಷತ್ತಿನಲ್ಲಿ ಏರ್ಪಡಿಸಿದರು. ಇದರಿಂದ ಸಾಹಿತ್ಯವಲಯದ ಒಂದು ವರ್ಗ ಪರಿಷತ್ತಿನಿಂದ ದೂರ ಉಳಿಯುವುದು ತಪ್ಪಿತು.

ನಿಬಂಧನೆಗಳ ತಿದ್ದುಪಡಿ : ಪರಿಷತ್ತಿನ ನಿಬಂಧನೆಗಳು, ತಿದ್ದುಪಡಿಯಾಗಬೇಕೆಂದು ಬಹಳ ಕಾಲದ ಕೋರಿಕೆ ಮೇರೆಗೆ ಅದಕ್ಕಾಗಿ ನೇಮಕಗೊಂಡ ತಜ್ಞರ ಸಮಿತಿ ಸಿದ್ಧಪಡಿಸಿ ಸದಸ್ಯ ಸಭೆಯಲ್ಲಿ ಅಂಗೀಕಾರವಾಗಿ ಜಾರಿಗೆ ಬಂದವು. ಇದರ ಫಲವಾಗಿ ಕೆಲವು ಬದಲಾವಣೆಗಳು ನಿಬಂಧನೆಗಳಲ್ಲಿ ಕಂಡುಬಂದವು. ಮೊದಲನೆಯದಾಗಿ, ಮಹಾರಾಷ್ಟ್ರ ಕೇರಳಗಳಲ್ಲಿ ಪರಿಷತ್ತಿನ ವಿಶೇಷ ಘಟಕಗಳು ಸ್ಥಾಪನೆಯಾಗಲು ಅವಕಾಶವಾಯಿತು. ೧00ಕ್ಕಿಂತ ಹೆಚ್ಚು ಮತದಾರರಿರುವ ಹೊರನಾಡಿನ ಪ್ರದೇಶಗಳಲ್ಲಿ ಪರಿಷತ್ತಿನ ವಿಶೇಷಘಟಕಗಳ ಸ್ಥಾಪನೆ, ೫0ಕ್ಕಿಂತ ಹೆಚ್ಚು ಮತದಾರರಿದ್ದರೆ ಮತದಾನ ಕೇಂದ್ರ ನಿರ್ಮಾಣಕ್ಕೆ ಅವಕಾಶ, ತಾಲ್ಲೂಕು ಘಟಕ ಸ್ಥಾಪನೆ, ಇವೇ ಮೊದಲಾದ ತಿದ್ದುಪಡಿಗಳು ಜಾರಿಗೆ ಬಂದವು.

ಸಮ್ಮೇಳನಗಳು : ಇವರ ಕಾಲದಲ್ಲಿ ೩ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದವು. ಈ ಸಮ್ಮೇಳನಗಳ ಪೈಕಿ ದಾವಣಗೆರೆ ಸಮ್ಮೇಳನದಲ್ಲಿ ಪ್ರೇಕ್ಷಕರೂ ಪಾಲ್ಗೊಳ್ಳುವ ಸಾಹಿತ್ಯ ಸಂವಾದ ಕಾರ್ಯಕ್ರಮ ಹೊಸ ಸಂಶೋಧನೆಗಳ ಬಗೆಗೆ “ಹೊಸಶೋಧ ಗೋಷ್ಠಿ ಏರ್ಪಡಿಸಿದ್ದು ಜನ ಪ್ರಶಂಸೆಗೆ ಪಾತ್ರವಾಯಿತು.

ಪುಸ್ತಕಭಂಡಾರ: ಪರಿಷತ್ತಿನ ಪುಸ್ತಕ ಭಂಡಾರ ೧೯೮೯ರ ವರದಿಯ ಪ್ರಕಾರ ಇದ್ದ ಪುಸ್ತಕಗಳ ಸಂಖ್ಯೆ ೫೬೪೬೭. ಹಿಂದಿನ ವರ್ಷದ ವರದಿಯ ಪ್ರಕಾರ ಕಾಣೆಯಾದ ಪುಸ್ತಕಗಳ ಸಂಖ್ಯೆ ೧೧೩೨೯ ಆಗಿತ್ತು. ಇದರ ಬಗ್ಗೆ ಹಿಂದಿನವರು ಯಾವ ಶಿಸ್ತು ಕ್ರಮವನ್ನೂ ಕೈಗೊಂಡಿರಲಿಲ್ಲ. ಸಿದ್ಧಲಿಂಗಯ್ಯನವರು  ಈ  ನಿಟ್ಟಿನಲ್ಲಿ ಸೂಕ್ತಕ್ರಮ ಕೈಗೊಂಡರು.

ನಿಘಂಟು ಮಾರಾಟ : ಸರ್ಕಾರಿ ಮುದ್ರಣಾಲಯದ ದಾಸ್ತಾನು ಮಳಿಗೆ ಕೊಳೆಯುತ್ತಿದ್ದ ಪರಿಷತ್ತಿನ ಪ್ರಕಟನೆಯಾದ ಕನ್ನಡ ನಿಘಂಟು ಸಂಪುಟಗಳನ್ನು ಪರಿಷತ್ತಿಗೆ ತರಿಸಿ ಮಾರಾಟ ಮಾಡಲಾಯಿತು. ಇದರಿಂದ ಒಂದೂವರೆಲಕ್ಷದಷ್ಟು ಹಣ ಸಂಗ್ರಹವಾಯ್ತು.

ಅಮೃತಮಹೋತ್ಸವ : ಪರಿಷತ್ತಿಗೆ ೨೫, ೫0, ೬0 ವರುಷಗಳು ತುಂಬಿದಾಗಲೆಲ್ಲ ವಿಶೇಷ ಸಮಾರಂಭಗಳು ನಡೆದಿವೆ. ವಿಶೇಷ ಸಂಚಿಕೆಗಳನ್ನು ಹೊರತರಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ೭೫ ವರ್ಷಗಳ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ನಡೆಸಲು ೧೯೯೧ನವೆಂಬರ್ ೧೭,೧೮,೧೯ರಂದು ೩ ದಿನಗಳ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ ರಾಷ್ಟ್ರೀಯ ಕವಿಗೋಷ್ಠಿ ಪುಸ್ತಕಮೇಳ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

Tag: G. S. Siddalingaiaha, G.S.Siddalingaiah

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)