ಡಾ. ಸಾ. ಶಿ. ಮರುಳಯ್ಯ

a19

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು – ೧೯

ಅಧ್ಯಕ್ಷರು : ಸಾ. ಶಿ. ಮರುಳಯ್ಯ (೧೯೯೫೧೯೯೮)

ಜೀವನ :

ಕವಿಗಳೂ ವಿಮರ್ಶಕರೂ ಅಧ್ಯಾಪಕರೂ ಆಗಿರುವ ಸಾ.ಶಿ. ಮರುಳಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ೨೮-೧-೧೯೩೧ರಲ್ಲಿ ಶಿವರುದ್ರಯ್ಯ-ಸಿದ್ದಮ್ಮ ದಂಪತಿಗಳಿಗೆ ಸುಪುತ್ರರಾಗಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಚಿಕ್ಕನಾಯಕನಹಳ್ಳಿಯಲ್ಲಿ ಮುಗಿಸಿದ ನಂತರ, ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆಸಿ ೧೯೫೫ರಲ್ಲಿ ಬಿ.ಎ. ಆನರ್ಸ್ ಪದವಿಯನ್ನು, ೧೯೫೬ರಲ್ಲಿ ಎಂ.ಎ. ಪದವಿಯನ್ನು ಗಳಿಸಿದರು. ಕಾಲೇಜು ಅಧ್ಯಾಪಕರಾಗಿ ಉದ್ಯೋಗಕ್ಕೆ ಸೇರಿದ ಇವರು ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕೆಲವು ಕಾಲ ಭಾಷಾಂತರ ಇಲಾಖೆಯಲ್ಲೂ ಇದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ೧೯೭೯-೧೯೮೩ರಲ್ಲಿ ವಿಶ್ವಕೋಶದ ಪ್ರಧಾನ ಸಂಪಾದಕರಾಗಿದ್ದರು. ೧೯೮೯-೧೯೯0 ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿದ್ದ ಇವರು, ೧೯೯೫-೧೯೯೮ರ ಅವಧಿಯಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು.

ಅನೇಕ ಶ್ರೇಷ್ಠ ಕೃತಿಗಳನ್ನು ರಚಿಸಿರುವ ಇವರ `ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ’ ಕೃತಿಗೆ ೧೯೭೧ರಲ್ಲಿ ಕರ್ಣಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ದೊರೆತಿದೆ. ಕೆಂಗನಕಲ್ಲು ಕೃತಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಬಂದಿದೆ. ಭಾಸನ ಮಕ್ಕಳು ವಿಮರ್ಶಾ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ದೊರೆತಿದೆ.

ಕವಿತೆ, ವಿಮರ್ಶೆ, ನಾಟಕ, ಪ್ರಬಂಧ, ಜೀವನ ಚರಿತ್ರೆಗಳನ್ನು ರಚಿಸಿದ ಇವರು ಶಿವತಾಂಡವ, ಘೋಷವತಿ, ಬೃಂದಾವನಲೀಲೆ, ರಾಸಲೀಲೆ, ರೂಪಸಿ, ಚೈತ್ರಜ್ಯೋತಿ, ನನ್ನ ಕವನಗಳು, ಬಾರೋ ಮೈಲಾರಕೆ, ಸುರಭಿ, ಮರೀಚಿಕೆ, ವಿಯಜವಾತಾಪಿ, ಶಿವಲೀಲೆ, ಹೇಮಕೂಟ, ಮನಿಷಾ, ಅನುಶೀಲನೆ, ಭಾರತೀಯ ಜ್ಞಾನಪೀಠ ಪ್ರಶಸ್ತಿ ವಿಜೇತರು ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

ಸಾಧನೆ :

ಪರಿಷತ್ತಿಗೆ ಸೌಕರ್ಯಗಳ ವ್ಯವಸ್ಥೆ : ಸಾ.ಶಿ. ಮರುಳಯ್ಯನವರ ಅವಧಿಯಲ್ಲಿ ತಮ್ಮ ಮಗಳು ಅಳಿಯಂದಿರಿಂದ ಕಂಪ್ಯೂಟರ್, ಲೇಸರ್ ಪ್ರಿಂಟರ್‍ಕಿಟ್‍ಗಳನ್ನು ಪರಿಷತ್ತಿಗೆ ಕೊಡಿಸಿದ್ದು ಒಂದು ವಿನೂತನ ಹೆಜ್ಜೆಯಾಗಿದೆ. ಪ್ರಕಟನೆಗಳ ಕಾರ್ಯ ಶೀಘ್ರವಾಗಿ ಅಚ್ಚುಕಟ್ಟಾಗಿ ನಡೆಯಲು ಇದು ಸಹಕಾರಿಯಾಯಿತು. ಪರಿಷತ್ತಿನ ಅಧ್ಯಕ್ಷರು ಕರ್ಣಾಟಕಾದ್ಯಂತ ಕಾರ್ಯಕ್ರಮಗಳಿಗೆ, ಕರ್ತವ್ಯ ನಿರ್ವಹಣೆಗೆ ಸಮ್ಮೇಳನಕ್ಕೆ ಸಂಚರಿಸುವ ಅನಿವಾರ್ಯತೆ ಕಂಡುಬಂದದ್ದರಿಂದ ಸಂಸ್ಥೆಗೆ ತನ್ನದೇ ಆದ ವಾಹನವಿರಬೇಕೆಂದು ಮೊದಲು ಯೋಚಿಸಿದವರು ಸಾ. ಶಿ. ಮರಳಯ್ಯನವರು. ಅದರ ಫಲವಾಗಿ ಅಧ್ಯಕ್ಷರ ಓಡಾಟಕ್ಕೆಂದು ೧೯೯೫ರಲ್ಲಿ ಅಂಬಾಸಿಡರ್ ಡಿಸೈಲ್ ಎಂಜಿನ್ ಕಾರನ್ನು ಪರಿಷತ್ತಿಗಾಗಿ ಕೊಂಡರು.

ಪರಿಷತ್ತಿಗೆ ನೀರಿನ ಕೊರತೆ ನಿವಾರಿಸಲು ಕೊಳವೆ ಬಾವಿ ತೋಡಿಸಿ ಮೋಟರನ್ನು ಅಳವಡಿಸಲಾಯಿತು. ಪರಿಷತ್ತಿನ ಧ್ವಜ ಲಾಂಛನದ ಬಗ್ಗೆ ಬಿಎಂಶ್ರೀ ಚಿಂತಿಸಿದಂತೆ ಮರುಳಯ್ಯನವರು ಬಿ.ಕೆ. ಶ್ರೀನಿವಾಸವರ್ಮ ಅವರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧಿಕ ಸಂಕೇತದಂತೆ ಕರ್ನಾಟಕಮಾತೆಯ ವರ್ಣತೈಲಚಿತ್ರವನ್ನು ಬರೆಸಿದರು.

ಸಿಬ್ಬಂದಿ ಸಂಬಳಕ್ಕೆ ಸರ್ಕಾರದ ಅನುದಾನ: ಯಾವುದೇ ಖಾಸಗೀ ಸಂಸ್ಥೆಯಲ್ಲಿ ಸಂಬಳ ಸಾರಿಗೆಯನ್ನು ಸರ್ಕಾರದ ಸಂಸ್ಥೆಗಳಲ್ಲಿ ಕೊಡುವಂತೆ ಕೊಡಲು ಸಾಧ್ಯವಿಲ್ಲ. ಇದ್ದರೆ ಅದು ಅಪರೂಪದ ಉದಾಹರಣೆ ಅಷ್ಟೆ. ಸಾಹಿತ್ಯ ಪರಿಷತ್ತು ಒಂದು ಕಾಲದಲ್ಲಿ ಮಿತ ಸದಸ್ಯರು ಸೀಮಿತ ಚಟುವಟಿಕೆಗಳಿಗೆ ತಮ್ಮ ಕೈಯಿಂದ ಕಾಸು ಹಾಕಿಕೊಂಡು ಸಂಸ್ಥೆಯ ಕೆಲಸ ಮಾಡುತ್ತಿದ್ದ ಜನ. (ಅವರೆಲ್ಲ ಸಾಕಷ್ಟು ಅನುಕೂಲವಂತರಾಗಿದ್ದರು ಎಂದರೆ ತಪ್ಪಿಲ್ಲ)  ಪರಿಷತ್ತಿನ ಸಿಬ್ಬಂದಿ ಎಂದರೆ ಒಬ್ಬಿಬ್ಬರು ನೌಕರರು ಅಷ್ಟೆ. ಪರಿಷತ್ತಿನ ಪ್ರಾರಂಭಕಾಲದ ಚಿತ್ರ ಇದು. ಆದರೆ ಪರಿಷತ್ತು ಬೆಳೆದು ಬಂದಂತೆಲ್ಲಾ ಜನರೂ ಹೆಚ್ಚಿದರು. ನೌಕರರ ಸಂಬಳ ಸಾರಿಗೆ ವೆಚ್ಚಗಳು ಅಧಿಕಗೊಳ್ಳುತ್ತಾ ಬಂದವು. ಹೀಗಾಗಿ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಯಿತು. ಕೆಲವೊಮ್ಮೆ ಸಂಬಳ ಕೊಡಲು ಪರಿಷತ್ತಿನಲ್ಲೇ ಹಣ ಇರುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಪರಿಷತ್ತಿನ ಅಧ್ಯಕ್ಷರು ಅಥವಾ ಗೌರವ ಕಾರ್ಯದರ್ಶಿಗಳು ತಮ್ಮ ವೈಯಕ್ತಿಕ ನೆಲೆಯಲ್ಲಿ ಸಾಲತಂದು ಸಿಬ್ಬಂದಿಗೆ ಸಂಬಳ ಕೊಟ್ಟಿದ್ದಾರೆ. ಇಂಥ ಪರಿಸ್ಥಿತಿ ತಪ್ಪಬೇಕೆಂದು ಪರಿಷತ್ತನ್ನು ಸರ್ಕಾರದ ಅನುದಾದನ ಸಂಹಿತೆಗೆ ಒಳಗಾಗಿಸಬೇಕೆಂದು ಮೊದಲಿನಿಂದಲೂ ಪ್ರಯತ್ನ ಮಾಡಲಾಗುತ್ತಿತು. ಆದರೆ ಆ ಪ್ರಯತ್ನ ಮರುಳಯ್ಯನವರ ಕಾಲದಲ್ಲಿ ಫಲಿಸಿತು. ೧೯೯೬ ಜೂನ್ ೧ ರಿಂದ ಜಾರಿಗೆ ಬಂದಿತು. ಪರಿಷತ್ತಿನ ೬೨ ಸಿಬ್ಬಂದಿಗಳಿಗೆ ಇದರಿಂದ ಅನುಕೂಲವಾಯಿತು.

ಪುಸ್ತಕ ಪ್ರಕಟನಾ ದತ್ತಿಗಳು: ಸುಮಾರು ಅರ್ಧಶಮಾತನದ ವಿದ್ವಾಂಸರ ಪರಿಶ್ರಮದ ಫಲವಾದ ಪರಿಷತ್ತಿನ ಕನ್ನಡ ನಿಘಂಟಿನ ೮ನೇ ಸಂಪುಟ ಮರುಳಯ್ಯನವರ ಕಾಲದಲ್ಲಿ ಪೂರ್ಣಗೊಂಡು ೨೯-೧೧-೧೯೯೫ರಲ್ಲಿ ಬಿಡುಗಡೆ ಆಯಿತು. ೮ ಸಂಪುಟಗಳ ಕನ್ನಡ ನಿಘಂಟು ಪರಿಷತ್ತಿನ ಹೆಸರನ್ನು ಆಚಂದ್ರಾರ್ಕಪರ್ಯಂತ ಸ್ಥಿರಗೊಳಿಸಿದ ಪ್ರಕಟನೆ ಆಗಿದೆ.

ದತ್ತಿದಾನಿಗಳು ಸಾಮಾನ್ಯವಾಗಿ ಉಪನ್ಯಾಸಗಳ ವ್ಯವಸ್ಥೆಗೆ ಬರುತ್ತಿದ್ದವು. ಹೆಚ್ಚು ಆದರೆ ಪುಸ್ತಕ ಪ್ರಕಟಿಸುವುದಕ್ಕೆ ದತ್ತಿ ಇಡುವಂತೆ ಮಾಡಿದ್ದು ವಿನೂತನ ಪ್ರಯತ್ನವಾಗಿತ್ತು. ಪ್ರತಿವರ್ಷ ಪುಸ್ತಕವನ್ನು ಪ್ರಕಟಿಸಲು ಅಗತ್ಯವಾದಷ್ಟು ಬಡ್ಡಿ ಹಣ ಬರುವಂತೆ ದೊಡ್ಡಮೊತ್ತದ ಪುಸ್ತಕ ದತ್ತಿನಿಧಿ ಇಡಿಸುವುದನ್ನು ಪ್ರಾರಂಭಮಾಡಿದವರು ಸಾಶಿ ಮರುಳಯ್ಯನವರು.  ರುದ್ರಾಕ್ಷಿಮಠದ ಸ್ವಾಮಿಗಳು ಪುಸ್ತಕ ದತ್ತಿನಿಧಿಯನ್ನು ಮೊದಲಿಗೆ ಇಟ್ಟರು. ಅನಂತರ ಭೂಪಾಲಂ ಚಂದ್ರಶೇಖರಯ್ಯನವರ ಪುಸ್ತಕ ಪ್ರಕಟನ ದತ್ತಿ ಬಂದಿತು. ಇವೆರಡು ಮರುಳಯ್ಯನವರ ಪ್ರಯತ್ನದ ಫಲ.

ಕನ್ನಡ ವರನಟ ರಾಜಕುಮಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ಅದರ ಮೊತ್ತ ೧ ಲಕ್ಷವನ್ನು ಕಲಾಪ್ರಕಾರದ ಗ್ರಂಥ ಪ್ರಕಟನೆಗಾಗಿ ಪರಿಷತ್ತಿಗೆ ನೀಡಲಾಯಿತು. ಇದೂ ಒಂದು ಪುಸ್ತಕ ಪ್ರಕಟನಾ ದತ್ತಿನಿಧಿ.

ಕಾರ್ಯಕ್ರಮಗಳು : ಯಥಾಪ್ರಕಾರ ಸಾಹಿತ್ಯದ ನಾನಾ ವಿಷಯಗಳ ಬಗ್ಗೆ ದತ್ತಿನಿಧಿಗಳ ಭಾಷಣ ಮಾಲೆ ಇವರ ಅವಧಿಯಲ್ಲಿ ನಡೆದವು. ಈ ಪೈಕಿ ಉಪೇಕ್ಷಿತ ಸಾಹಿತ್ಯವನ್ನು ಕುರಿತು ಎಂದರೆ ಕನ್ನಡದಲ್ಲಿರುವ ಟೀಕುಸಾಹಿತ್ಯ, ಉದ್ಧರಣೆ ಸಾಹಿತ್ಯ, ಸೋಬಾನೆ ಸಾಹಿತ್ಯ ಮೊದಲಾದ ಶಾಸ್ತ್ರ ಸಾಹಿತ್ಯ – ಸಂಪ್ರದಾಯ ಸಾಹಿತ್ಯ ಕುರಿತು ಉಪನ್ಯಾಸಮಾಲೆ ಏರ್ಪಡಿಸಿ ಅವುಗಳ ಪ್ರಕಟನೆಗಳನ್ನು ಕೈಗೊಳ್ಳಲಾಯಿತು. ಕಾವ್ಯಕಾವೇರಿ ಎಂಬ ಗೀತ ಗಾಯನ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲಾಯಿತು.

೬೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಸನದಲ್ಲಿ ಚನ್ನವೀರಕಣವಿ ಅವರ ಅಧ್ಯಕ್ಷತೆಯಲ್ಲೂ, ೬೬ನೇ ಸಮ್ಮೇಳನ ಮಂಗಳೂರಿನಲ್ಲಿ ಕಯ್ಯಾರ ಕಿಞ್ಞಣ್ಣರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿವಿ ಅತ್ರಿ ನೀಡಿದ ಸಚಿತ್ರ  ಚೆಲುವ ಕನ್ನಡ ನಾಡು ಎಂಬ ಧ್ವನಿಸುರುಳಿ ಪರಿಷತ್ತಿನಿಂದ ಬಿಡುಗಡೆಮಾಡಿತು. ಹೀಗೆ ಮರುಳಯ್ಯನವರು ಕೆಲವು ಹೊಸ ಕೊಡುಗೆಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ನೀಡಿದರು.

Tag: Sa.Shi.Marulaiah, Sa. Shi. Marulaiah

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)