ಸಾಹಿತ್ಯ ಸಮ್ಮೇಳನ-೨೫ : ಧಾರವಾಡ
ಡಿಸೆಂಬರ್ ೧೯೪0

ಅಧ್ಯಕ್ಷತೆ: ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ

y-chandrashekara-shasthri

೨೫ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ

ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ ಹಿರೇಮಠರು ವೀರಶೈವ ಸಾಹಿತ್ಯದಲ್ಲಿ ಪ್ರಕಾಂಡ ಪಂಡಿತರು. ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ ೩-೧-೧೮೯೨ರಲ್ಲಿ ಪಟ್ಟದಯ್ಯ ಮತ್ತು ಬಸವಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಬಾಲ್ಯದ ವಿದ್ಯಾಭ್ಯಾಸವನ್ನು ಬ್ಯಾಡಗಿ ಹಾವೇರಿ ಗದಗುಗಳಲ್ಲಿ ಮುಗಿಸಿ ಕಾಶಿ, ಕಲ್ಕತ್ತ ಸಂಸ್ಕೃತ ಕೇಂದ್ರಗಳಿಗೆ ಹೋಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು. ೧೯೨೪ರಲ್ಲಿ ವ್ಯಾಕರಣ ತೀರ್ಥ ಪದವಿಯನ್ನು ಸಾಹಿತ್ಯಾಚಾರ್ಯ ಪದವಿಯನ್ನು ಪಡೆದು ಕರ್ನಾಟಕಕ್ಕೆ ಹಿಂದಿರುಗಿದರು.

ಕರ್ನಾಟಕಕ್ಕೆ ಹಿಂದಿರುಗಿದ ಮೇಲೆ ಯಾದಗಿರಿಯಲ್ಲಿ ಶಂಕರ ಸಂಸ್ಕೃತ ಕಾಲೇಜು ಸ್ಥಾಪಿಸಿ ೧೯೨೪ರಿಂದ ಅದರ ಪ್ರಿನ್ಸಿಪಾಲರಾದರು. ಹುಬ್ಬಳ್ಳಿಯ ಜಗದ್ಗುರು ಗಂಗಾಧರ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದರು. ೧೯೩೧ರಿಂದ ೧೯೩೮ರವರೆಗೆ ಸಂಸ್ಕೃತ ಮುಖ್ಯಾಧ್ಯಾಪಕರಾಗಿ ದುಡಿದರು.

೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ಸಮಾವೇಶಗೊಂಡಿದ್ದ ೧೯ನೇ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದರು. ಅನೇಕ ಗ್ರಂಥಗಳನ್ನು ಪರಿಶೋಧಿಸಿ ಪರಿಷ್ಕರಿಸಿ ಪ್ರಕಟಿಸಿದರು. ಹಂಪೆಯಲ್ಲಿ ನಡೆದ ವಿಜಯನಗರ ಸಾಮ್ರಾಜ್ಯದ ೬ನೇ ಶತಮಾನೋತ್ಸವ ಕಾರ್ಯಕ್ರಮದ ಸಮಿತಿಯ ಕಾರ್ಯದರ್ಶಿಯಾಗಿ ಶ್ರಮಿಸಿದ್ದಾರೆ. ೨೫ಕ್ಕೂ ಹೆಚ್ಚಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ದಾಖಲೆ ಸ್ಥಾಪಿಸಿದ್ದಾರೆ.

ಕಾಶಿಯಲ್ಲಿ ವ್ಯಾಸಂಗದ ಕಾಲದಲ್ಲಿ ಸಾಹಿತ್ಯಾಚಾರ್ಯರಾಗಿ ವಿದ್ಯಾಲಂಕಾರ, ವಿದ್ಯಾವಾಗೀಶ ಬಿರುದನ್ನು ಗಳಿಸಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವದ ಜತೆಯಲ್ಲೇ ೧೯೪0ರಲ್ಲಿ ನಡೆದ ೨೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಸವತತ್ತ್ವ ರತ್ನಾಕರ ಗ್ರಂಥಕ್ಕೆ ದೊರೆತಿದೆ. ೧೯೮೩ರಲ್ಲಿ ಸರ್ಕಾರದ ರಾಜ್ಯ ಪ್ರಶಸ್ತಿ, ೧೯೯೩ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ ದೊರೆತಿದೆ. ಶಾಸ್ತ್ರಿಗಳು ಶತಾಯುಷಿಗಳಾದಾಗ ಹಡಗಲಿ ಸಂಘರ್ಷ ಸಮಿತಿ ಚಂದ್ರಚೇತನ ಗ್ರಂಥವನ್ನೂ, ಕನ್ನಡ ಸಾಹಿತ್ಯ ಪರಿಷತ್ತು ವ್ಯಾಕರಣ ತೀರ್ಥ ಸಂಭಾವನಾ ಗ್ರಂಥವನ್ನೂ ಸಮರ್ಪಿಸಿದೆ.

ಸಂಸ್ಕೃತ, ಕನ್ನಡ, ಇಂಗ್ಲಿಷ್, ಮರಾಠಿ, ಉರ್ದು ಭಾಷೆಗಳನ್ನು ಬಲ್ಲ ಇವರು ಅನೇಕ ಧಾರ್ಮಿಕ ಗ್ರಂಥಗಳನ್ನು ರಚಿಸಿದ್ದಾರೆ.

ಬಸವತತ್ತ್ವ ರತ್ನಾಕರ, ಚಾಣಕ್ಯ ನೀತಿ ದರ್ಪಣ, ರೇಣುಕ ವಿಜಯ, ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ, ಸಿದ್ಧಲಿಂಗ ವಚನ, ಕಾಡು ಸಿದ್ದೇಶ್ವರ ವಚನ ಇತ್ಯಾದಿ ರಚಿಸಿದ್ದಾರೆ.

ಶಾಸ್ತ್ರಿಗಳು ದಿನಾಂಕ ೨೪-೧0-೧೯೯೭ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ೨೫                                                       

ಅಧ್ಯಕ್ಷರು : ವೈ ಚಂದ್ರಶೇಖರಶಾಸ್ತ್ರಿ

ದಿನಾಂಕ ೨೭,೨೮,೨೯ ಡಿಸೆಂಬರ್ ೧೯೪0

ಸ್ಥಳ : ಧಾರವಾಡ

 

ಪರಿಷತ್ತಿನ ಅಧ್ಯಕ್ಷರ ಮತ್ತು ಮಹಾಪೋಷಕರ ಮರಣ

ಕಳೆದ ೧೫ ವರ್ಷಗಳಿಂದ ಪರಿಷತ್ತಿಗೆ ಅಧ್ಯಕ್ಷರಾಗಿದ್ದ ಮೈಸೂರು ಸಂಸ್ಥಾನದ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ ಜಿ.ಸಿ.ಐ.ಇ. ಅವರು ಇದೇ ವರ್ಷದ ಮಾರ್ಚಿ ತಿಂಗಳ ೧೧ನೆಯ ತಾರೀಖಿನಲ್ಲಿ ದಿವಂಗತರಾದ  ವಿಷಯ ಪರಿಷತ್ತಿಗೆ ಪರಿತಾಪಕರವಾದುದು. ಅನೇಕ ರೀತಿಯಿಂದ ಪರಿಷತ್ತಿಗೆ ಬೆಂಬಲಿಗರಾಗಿದ್ದುದಲ್ಲದೆ ‘ಕನ್ನಡ ನಾಡಿನ ಚರಿತ್ರೆ’ ಯನ್ನು ಅಚ್ಚುಮಾಡಿಸುವುದಕ್ಕೆ ಉದಾರವಾದ ದ್ರವ್ಯ ಸಹಾಯಮಾಡಿದ್ದ ಇಂತಹ ಮಹನೀಯರು ದಿವಂಗತರಾದುದು ಪರಿಷತ್ತಿನ ದೌರ್ಭಾಗ್ಯವೇ ಸರಿ.

ಈ ಸಂಬಂಧವಾದ ದುಃಖ ಆರುವುದರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಹುಟ್ಟಿದಾಗಿನಿಂದ ಅದರ ಮಹಾಪೋಷಕರಾಗಿದ್ದು ಕನ್ನಡನಾಡು ನುಡಿಗಳ ಏಳಿಗೆಗಾಗಿ ಅನೇಕ ವಿಧವಾಗಿ ಸಹಾಯ ಸಂಪತ್ತುಗಳನ್ನು ಅನುಗ್ರಹಿಸುತ್ತಲಿದ್ದ ಮೈಸೂರು ಸಂಸ್ಥಾನದ ಮಹಾರಾಜರವರಾದ ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್, ಜಿ.ಸಿ.ಎಸ್.ಐ., ಜಿ.ಬಿ.ಇ. ಅವರು ಕಳೆದ  ಆಗಸ್ಟ್ ತಿಂಗಳ ೩ನೆಯ ತಾರೀಖಿನಲ್ಲಿ ಹೃದಯ ವೇದನೆಯಿಂದ ದಿವಂಗತರಾದುದು ಕನ್ನಡಿಗರೆಲ್ಲರಿಗೆ ಸಿಡಿಲು ಬಡಿದಂತಾಗಿದೆ. ಅವರು ವಿಧಿವಶರಾಗುವುದಕ್ಕೆ ಒಂದು ತಿಂಗಳು ಹಿಂದೆ ನಮ್ಮ ಪರಿಷತ್ತಿನ ಬೆಳ್ಳಿಯ ಹಬ್ಬದ ಪ್ರಾರಂಭೋತ್ಸವವನ್ನು ನೆರವೇರಿಸಿದಾಗ ಪರಿಷತ್ತನ್ನು ನಾನಾ ವಿಧವಾಗಿ ಪ್ರಶಂಸಿಸಿ ಕನ್ನಡ ನುಡಿಯ ಉತ್ಕರ್ಷದ ಬಗ್ಗೆ ಅಮೋಘವಾದ ಸಲಹೆಗಳನ್ನು ಅಪ್ಪಣೆಕೊಡಿಸಿದ್ದಲ್ಲದೆ ಆ ಕಾಲಕ್ಕೆ ಸಿರಿಗನ್ನಡಂ ಗೆಲ್ಗೆ  ಎಂಬ ಕನ್ನಡಿಗರ ಮೂಲಮಂತ್ರವನ್ನು ತಮ್ಮ ಪವಿತ್ರ  ವಾಣಿಯಿಂದ ಉದ್ಘೋಷಿಸಿ ಸಮಸ್ತ ಕನ್ನಡಿಗರಲ್ಲಿಯೂ ನೂತನ ಚೈತನ್ಯವನ್ನುಂಟುಮಾಡಿದ್ದರು. ಇವರು ತಮ್ಮ ೩೮ ವರ್ಷಗಳ ಆಳಿಕೆಯಲ್ಲಿ ಮೈಸೂರು ಸಂಸ್ಥಾನವನ್ನು ಮಾದರಿಯ ಸಂಸ್ಥಾನವನ್ನಾಗಿ ಮಾಡಿ, ತಮ್ಮ ಪ್ರಜಾವಾತ್ಸಲ್ಯ, ಭೂತದಯೆ, ದೈವಭಕ್ತಿ, ಗಾಂಭೀರ್ಯ, ಸದಾಚಾರವರ್ತನೆ, ಪೂರ್ವಸಂಪ್ರದಾಯ ವಿಶ್ವಾಸ ಮೊದಲಾದ ಗುಣಗಳಿಂದ ರಾಜರ್ಷಿಗಳೆನ್ನಿಸಿಕೊಂಡಿದ್ದರು. ಇವರ ದೈವಭಕ್ತಿ ಅಸಾಧಾರಣವಾದುದೆಂಬುದನ್ನು ನಾನು ಕಾಶಿಯಲ್ಲಿ ಕಂಡಿದ್ದೇನೆ. ಇವರು ಕಾಶಿಯ ಹಿಂದೂವಿಶ್ವವಿದ್ಯಾನಿಲಯದ ಅಧ್ಯಕ್ಷ ಪದವಿಯನ್ನಲಂಕರಿಸಿದ್ದಾಗ ವರ್ಷಕ್ಕೆ ೨-೩ ಸಾರೆ ಕಾಶಿಗೆ ದಯಮಾಡಿಸುತ್ತಿದ್ದರು. ಆ ಕಾಲಕ್ಕೆ ಗಂಗಾಸ್ನಾನವನ್ನು ಮಾಡಿ ೨-೩ ಘಂಟೆಗಳವರೆಗೆ ಅಲ್ಲಿಯ ಹನುಮಾನ್ ಘಾಟಿನಲ್ಲಿ ಅನುಷ್ಠಾನವನ್ನು ಮಾಡಲಿಕ್ಕೆ ಕುಳ್ಳಿರುತ್ತಿದ್ದರು. ಒಂದು ಸಾರೆ ಕಾಶಿಯಲ್ಲಿರುವ ಶ್ರೀ ಜಗದ್ಗುರು ವಿಶ್ವಾರಾಧ್ಯಪೀಠದ ಜಂಗಮವಾಡಿಯ ಮಠಕ್ಕೆ ದಯಮಾಡಿಸಿದಾಗ ಪ್ರಭುಗಳ ಅಸಾಧಾರಣ ದೈವಭಕ್ತಿ ತೋರಿಬಂದಿತು. ಬೆಂಗಳೂರು ನಗರದಲ್ಲಿ ಪ್ರತಿಷ್ಠಿತವಾಗಿರುವ ನಮ್ಮ ಪರಿಷ್ಮನಂದಿರವು ದಿವಂಗತ ಮಹಾರಾಜರವರ ಸಹಾಯದಿಂದಲೇ ಪ್ರಾರಂಭವಾಯಿತೆಂಬುದು ಕನ್ನಡಿಗರೆಲ್ಲರಿಗೆ ತಿಳಿದೇ ಇರುತ್ತದೆ. ಇಂತಹ ಜಗದ್ವಿಖ್ಯಾತರಾದ ಪ್ರಭುಗಳನ್ನು ಕಳೆದುಕೊಂಡುದು ನಮ್ಮ ಪರಿಷತ್ತಿನ ದೌರ್ಭಾಗ್ಯವೆಂದೇ ನಾನು ತಿಳಿಯುತ್ತೇನೆ. ಶ್ರೀಮನ್ಮಹಾರಾಜರವರ ಮತ್ತು ಯುವರಾಜರವರ ಆತ್ಮಗಳಿಗೆ ಭಗವಂತನು ಚಿರಶಾಂತಿಯನ್ನೀಯಲಿ.

ಆನಂದದ ಸಂಗತಿ 

ಸುಖದ ಮೇಲೆ ದುಃಖವೂ, ದುಃಖದ ತರುವಾಯ ಸುಖವೂ ಮನುಷ್ಯನಿಗೆ ಬರುವುದು ಸ್ವಾಭಾವಿಕವಾಗಿರುತ್ತದಷ್ಟೆ. ಅಂತೆಯೇ ಕೃಷ್ಣಭೂಪಾಲರು ದಿವಂಗತರಾದ ವ್ಯಸನವಿರುವಾಗಲೇ  ಶ್ರೀ ಜಯಚಾಮರಾಜೇಂದ್ರ ಒಡೆಯರವರಿಗೆ ಮೈಸೂರು ಸಿಂಹಾಸನದ ಪಟ್ಟಾಭಿಷೇಕವಾದುದು ಕನ್ನಡಿಗರೆಲ್ಲರಿಗೂ ಮಹದಾನಂದ ಸಂಗತಿ. ೧೯೩೯ರಲ್ಲಿ ವಸಂತ ಸಾಹಿತ್ಯೋತ್ಸವಕ್ಕೆ ದಯಮಾಡಿ ಕೆಲಕಾಲ ನಮ್ಮ ಪರಿಷತ್ತಿನ  ಅಧ್ಯಕ್ಷರಾಗಿದ್ದು ಈಚೆಗೆ ಮಹಾಪೋಷಕರಾಗಿರುವ ತರುಣ ಮಹಾರಾಜರ ಆಳಿಕೆಯಲ್ಲಿ ಮೈಸೂರು ಸಂಸ್ಥಾನ ಹೆಚ್ಚು ದೇದೀಪ್ಯಮಾನವಾಗಲೆಂದೂ, ಕನ್ನಡ ನಾಡಿನ ಮತ್ತು ನುಡಿಯ ಉತ್ಕರ್ಷಕ್ಕೆ ಇತೋಪ್ಯತಿಶಯವಾದ ಸಹಾಯಸಂಪತ್ತಿಗಳು ಲಭಿಸುವಂತಾಗಲೆಂದೂ ಹಾರೈಸುತ್ತೇನೆ.

ಕನ್ನಡ ಸಾಹಿತ್ಯ ಪರಿಷತ್ತು:- ಕನ್ನಡ ನಾಡು ಸರ್ವಾಂಗಸುಂದರವಾಗಬೇಕಾದರೆ ಆ ನಾಡಿನ ಆರ್ಥಿಕ ರಾಜಕೀಯ, ಐತಿಹಾಸಿಕ, ಸಾಹಿತ್ಯ ಭಾಷೆಗಳಲ್ಲಿ ಉತ್ಕರ್ಷ ಉಂಟಾಗಬೇಕಾಗಿರುತ್ತದೆ. ಆದುದರಿಂದಲೇ ಕನ್ನಡ ನಾಡಿನ ಅಭಿವೃದ್ಧಿಗೆ ಬೇಕಾದ ಕೆಲವು ಸಂಸ್ಥೆಗಳ ವಿಷಯವನ್ನು ಸಂಕ್ಷೇಪವಾಗಿ ನಾನು ಇಲ್ಲಿ ಹೇಳಿರುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತು ಇಪ್ಪತ್ತೈದು ವರ್ಷಗಳ ಕೆಳಗೆ ಕನ್ನಡ ಮಾತೆಯ ಪುತ್ರರಲ್ಲಿ ಹಿರಿಯರೂ, ಕೀರ್ತಿ ವಿದ್ಯಾಬುದ್ಧಿಗಳಲ್ಲಿ ಜಗದ್ವಿಖ್ಯಾತರೂ ಆಗಿರುವ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದಾಗ ಸ್ಥಾಪಿತವಾಯಿತು. ಇದರ ಬೆಳ್ಳಿಯ ಹಬ್ಬವೂ ಕೂಡ ಕಳೆದ ಜೂನ್ ತಿಂಗಳಿನಲ್ಲಿ ರಾಜವೈಭವದಿಂದ ನಡೆದದ್ದು ತಮಗೆಲ್ಲ ಗೊತ್ತೇ ಇರುತ್ತದೆ. ಈ ಸಂಸ್ಥೆಯು ಕಳೆದ ಇಪ್ಪತೈದು ವರ್ಷಗಳಿಂದ ಅವಿಚ್ಛಿನ್ನವಾಗಿ ಕನ್ನಡ ಸೇವೆಯನ್ನು ಮಾಡುತ್ತ ಬಂದಿರುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಸಾಹಿತ್ಯ ಸಮ್ಮೇಳಗಳನ್ನು ಕೂಡಿಸಿ ಕನ್ನಡಿಗರಲ್ಲಿ ವಿಶೇಷ ಜಾಗೃತಿಯನ್ನು ಹುಟ್ಟಿಸುತ್ತಲಿದೆ. ಇತ್ತೀಚೆಗೆ ವಸಂತ ಸಾಹಿತ್ಯೋತ್ಸವ, ಕಂಠಪಾಠ ಸ್ಪರ್ಧೆ, ಗಮಕ ಶಿಕ್ಷಣ, ಅಕ್ಷರ ಪ್ರಚಾರ, ಕನ್ನಡ ಸಾಹಿತ್ಯ ತರಗತಿಗಳು ಮತ್ತು ಪರೀಕ್ಷೆಗಳು ಮೊದಲಾದ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಪರಿಷತ್ತಿಗೆ ಆರ್ಥಿಕ ಸಹಾಯ

ಕರ್ನಾಟಕದಲ್ಲಿ ಕ್ರಮಬದ್ಧವಾಗಿ ನಡೆಯತಕ್ಕ ಸಂಸ್ಥೆಗಳಲ್ಲಿ ಇದು ಮಿಗಿಲಾಗಿರುತ್ತದೆ. ಇದಕ್ಕೆ ಮೈಸೂರಿನ ಶ್ರೀಮನ್ಮಹಾಜರವರು ಮಹಾಪೋಷಕರು. ಮೈಸೂರ ಅರಮನೆಯ ಮತ್ತು ಸರಕಾರದ ಸಹಾಯದಿಂದಲೂ ಇತರ ಕನ್ನಡದ ಅಭಿಮಾನಿಗಳ ಸಹಾಯದಿಂದಲೂ ೩೫.000 ರೂ. ಗಳನ್ನು ಖರ್ಚುಮಾಡಿ ಕಟ್ಟಿಸಿದ ಸುಂದರವಾದ ಒಂದು ಮಂದಿರ ಬೆಂಗಳೂರಿನಲ್ಲಿ ಇದಕ್ಕೆ ಇರುತ್ತದೆ. ಈ ಸಂಸ್ಥೆಗೆ ಮೈಸೂರು ಸರಕಾರದವರು ಪ್ರತಿವರ್ಷವೂ ೩,000 ರೂ.ಗಳ ಸಹಾಯ ದ್ರವ್ಯವನ್ನು ದಯಪಾಲಿಸುತ್ತಿದ್ದಾರೆ. ಇದರ ಬಗ್ಗೆ ಪ್ರಖ್ಯಾತ ಮಂತ್ರಿವರ್ಯರಾದ ಸರ್. ಮಿರ್ಜಾ ಇಸ್ಮಾಯಿಲ್ ಅವರಿಗೂ ಮೈಸೂರ ಸರ್ಕಾರಕ್ಕೂ ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಅಲ್ಪವೇ ಸರಿ.

ಕಳೆದ ಕಾಲು ಶತಮಾನದಿಂದ ಅನೇಕ ಕನ್ನಡ ನಾಡಿನ ಹಿರಿಯರು ಅವಿಚ್ಛಿನ್ನವಾಗಿ ದುಡಿದು ಈ ಸಂಸ್ಥೆಯನ್ನು ಇಷ್ಟರಮಟ್ಟಿಗೆ ಉನ್ನತಸ್ಥಿತಿಗೆ ತಂದಿರುತ್ತಾರೆ. ಆದರೆ ನಮ್ಮ ಪರಿಷತ್ತಿನ ಕಾರ್ಯ ಇಷ್ಟಕ್ಕೆ ಮುಗಿದಿರುವುದಿಲ್ಲ. ಇನ್ನೂ ಅನಂತ ವಿಧಾಯಕ ಕಾರ್ಯಗಳು ಅದರ ಮುಂದಿರುತ್ತವೆ. ಅದರ ಗುರಿಯನ್ನು ಅದು ಮುಟ್ಟಬೇಕಾದರೆ ಪರಿಷತ್ತಿಗೆ ಪ್ರಚಂಡವಾದ ಜನ ಧನ ಬೆಂಬಲ ಬೇಕು; ಅಖಿಲ ಕನ್ನಡ ನಾಡಿನ ಮಹಾಜನಗಳೆಲ್ಲ ಪರಿಷತ್ತಿಗೆ ಸಭಾಸದರಾಗಿಯೂ ಪೋಷಕರಾಗಿಯೂ ಸೇರಿ ಸಹಾಯಮಾಡುತ್ತಾ ಬಂದರೆ ಪರಿಷತ್ತಿನ ಶಕ್ತಿ ಬೆಳೆಯುವುದು. ೧ ಕೋಟಿ ಕನ್ನಡಿಗರಿರುವ ಕನ್ನಡ ಪ್ರಾಂತದಲ್ಲಿ ಪರಿಷತ್ತಿಗೆ ಸುಮಾರು ಅದು ನೂರು ಸದಸ್ಯರು ಇರುವುದು ಕನ್ನಡಿಗರಿಗೆ ಲಜ್ಜಾಸ್ಪದವಾದುದೇ ಸರಿ. ಪರಿಷತ್ತಿನ ಸಭಾಸದರ ಸಂಖ್ಯೆ ಕನಿಷ್ಠ ಪಕ್ಷ ಸಾವಿರ ಆದರೆ ಹೆಚ್ಚಿನ ಕಾರ್ಯಗಳು ಸಹಜವಾಗಿ ಆಗುವುದರಲ್ಲಿ ಸಂದೇಹವಿಲ್ಲ. ಕೇವಲ ಮೈಸೂರು ಸರ್ಕಾರದವರ ಸಹಾಯವನ್ನು ಅವಲಂಬಿಸಿ ಕುಳಿತಿರುವುದು ಭೂಷಣವಲ್ಲ. ಅಖಿಲ ಕರ್ನಾಟಕ ಪ್ರಾತಿನಿಧ್ಯದಿಂದ ಕೂಡಿದ ಪರಿಷತ್ತಿಗೆ ಜಿಲ್ಲಾ ಮತ್ತು ತಾಲ್ಲೂಕು ಸಂಘಗಳಿರುವುದು ಭೂಷಣ. ನಮ್ಮ ದೇಶದ ಹಳ್ಳಿಹಳ್ಳಿಗಳಲ್ಲಿಯೂ ಪರಿಷತ್ತಿನ ಪ್ರಚಾರವಾಗಬೇಕು. ಸಾಹಿತ್ಯ ಪರಿಷತ್ತು ಎಂದರೆ ಏನೆಂಬುದು ಇನ್ನೂ ಅನೇಕರಿಗೆ ಗೊತ್ತಿರಲಾರದು.

ಈ ವರ್ಷ ಮಾತ್ರ ಪರಿಷತ್ತಿಗೆ ಕೆಲವರು ಮಹನೀಯರು ಮುಕ್ತಹಸ್ತದಿಂದ ದಾನವನ್ನು ಮಾಡಿರುತ್ತಾರೆ.  ಅವರ ಹೆಸರುಗಳನ್ನು ಹೇಳಲಿಕ್ಕೆ ನನಗೆ ಅತ್ಯಂತ ಸಂತೋಷವಾಗುತ್ತಲಿದೆ. ಅನೇಕ ಸಾರ್ವಜನಿಕ ಕಾರ್ಯಗಳಿಗೆ ೧0-೧೫ ಲಕ್ಷ ರೂ.ಗಳನ್ನು ದಾನ ಮಾಡಿರುವ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಸ್ವಾಮಿಗಳವರಿಂದ ೫0೧ ರೂ.ಗಳನ್ನೂ, ಗದುಗಿನ ನಿವೃತ್ತ ಸೆಷನ್ಸ್ ಜಡ್ಜಿಗಳಾದ ಶ್ರೀಮಾನ್ ಆನಂತರಾವ್ ಕೃಷ್ಣರಾವ್ ಆಸುಂಡಿ ಅವರ ಗಮಕ ಕಲೆಯ ಶಿಕ್ಷಣ, ಹರಿದಾಸ ವಾಙ್ಮಯದ ಕಾರ್ಯಗಳಿಗೆ ೩ ಸಾವಿರ ರೂ. ಗಳನ್ನೂ ಪರಿಷತ್ತಿಗೆ ಕೊಟ್ಟಿರುತ್ತಾರೆ. ಕನ್ನಡ ನಾಡಿನ ಕೊಡುಗೈ ದೊರೆಗಳಲ್ಲಿ ಮೇಲಾದವರೂ, ಅನೇಕ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿಗಳನ್ನು ದಾನಮಾಡಿ ಕೀರ್ತಿಯನ್ನು ಪಡೆದಿರುವವರೂ ಆದ ದಾನವೀರ ಶ್ರೀಮಾನ್ ಒಂಟಮುರಿಯ ಯಜಮಾನರಾದ ರಾಜಾ ಲಖಮಗೌಡಾ ಸರದೇಸಾಯಿ ಇವರು ೫00 ರೂಪಾಯಿಗಳನ್ನು ಕೊಟ್ಟಿರುವರಲ್ಲದೆ ಪ್ರತಿವರ್ಷ ತಮ್ಮ ಸಂಸ್ಥಾನದಿಂದ ಪರಿಷತ್ತಿಗೆ ೨0 ರೂ. ವರ್ಗಣಿಯನ್ನು ಕೊಡಲು ಒಪ್ಪಿರುತ್ತಾರೆ. ಈ ಮೂರು ಜನ ಮಹನೀಯರನ್ನು ಹೃತ್ಪೂರ್ವಕ ಅಭಿನಂದಿಸುತ್ತೇನೆ. ಉಳಿದ ಕನ್ನಡ ನಾಡಿನ ಬಂಧುಗಳೂ ಇವರ ಅನುಕರಣವನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ನಮ್ಮ ಬಡವೆಯಾದ ತಾಯಿಗೆ ಎಲ್ಲರೂ ಕಾಣಿಕೆಯನ್ನು ಆರ್ಪಿಸಬೇಕು.

ಬಿ.ಎಂ.ಶ್ರಿ ಅವರ ಸೇವೆ

ಪರಿಷತ್ತಿನ ಈಗಿನ ಉಪಾಧ್ಯಕ್ಷರಾಗಿರುವ ರಾಜಸೇವಾಸಕ್ತ ಶ್ರೀಮಾನ್ ಬಿ.ಎಂ. ಶ್ರೀಕಂಠಯ್ಯ, ಎಂ.ಎ. ಬಿ.ಎಲ್. ಅವರು ಉಪಾಧ್ಯಕ್ಷರಾದ ಅಂದಿನಿಂದ ಪರಿಷತ್ತಿನ ಕಾರ್ಯಗಳನ್ನು ಬಹುಮಟ್ಟಿಗೆ ಮುಂದುವರಿಸುತ್ತಿರುವರು. ಈ ಮಹನೀಯರು ಗಮಕ ಕಲೆಗಾಗಿ ೧000 ರೂ.ಗಳನ್ನೂ, ಪರಿಷತ್ತಿನ ಅಚ್ಚುಕೂಟಕ್ಕಾಗಿ ಹೋದ ವರ್ಷವೇ ೫ ಸಾವಿರ ರೂ.ಗಳನ್ನೂ, ಈ ವರ್ಷ ೧ ಸಾವಿರವನ್ನೂ ಕೊಟ್ಟಿರುತ್ತಾರೆ. ದುಡ್ಡು ಕೊಟ್ಟವರು ಕಾರ್ಯಮಾಡುವುದು ಕಡಿಮೆ. ಕಾರ್ಯ ಮಾಡತಕ್ಕವರಲ್ಲಿ ದುಡ್ಡು ಕೊಡುವವರು ವಿರಳ. ಆದರೆ ಈ ಮಹನೀಯರಿಗೆ ಈ ಎರಡೂ ಗುಣಗಳು ಸಾಧಿಸಿರುವುದರಿಂದ ಕನ್ನಡ ನಾಡೇ ಇವರಿಗೆ ಖುಣಿಯಾಗಿ  ಇರುತ್ತದೆ. ಇವರ ಪಾಂಡಿತ್ಯವನ್ನು ಹೆಚ್ಚಿಗೆ ಹೇಳಬೇಕಾಗಿಲ್ಲ. ಇಂತಹ ಮಹನಿಯರು ನಮ್ಮ ಪರಿಷತ್ತಿಗೆ ಉಪಾಧ್ಯಕ್ಷರಾಗಿ ದೊರೆತದ್ದು ಪರಿಷತ್ತಿನ ಮಹಾಭಾಗ್ಯವೆಂದು ನಾನು ತಿಳಿಯುತ್ತೇನೆ. ‘ಶ್ರೀ’ಯವರಿಗೆ ಆಯುರಾರೋಗ್ಯಗಳು ಲಭಿಸಿ ಅವರಿಂದ ಇನ್ನೂ ಹೆಚ್ಚಿನ ಸೇವೆ ನಡೆಯುವಂತೆ ಅನುಗ್ರಹಿಸಿಲೆಂದು ದೇವರನ್ನು ಪ್ರಾಸುತ್ತೇನೆ. `ಶ್ರೀ’ಯವರು ನಮ್ಮ ಕನ್ನಡ ನಾಡಿನ ಸ್ವತ್ತಾಗಿರುತ್ತಾರೆ. ಕನ್ನಡಿಗರು ಆ ಸ್ವತ್ತನ್ನು ಸರಿಯಾಗಿ ಉಪಯೋಗ ಮಾಡಿಕೊಳ್ಳಲೆಂದು ಹಾರೈಸುತ್ತೇನೆ.

ಶಿಸ್ತು ಸಂಟನೆ

ಸಾಹಿತ್ಯ ಪರಿಷತ್ತಿನ ವಿಧೇಯಕ ಕಾರ್ಯಕ್ರಮಗಳನ್ನು ಮಾಡಬೇಕಾದರೆ ಪರಿಷತ್ತಿನ ಸದಸ್ಯರಲ್ಲಿ ಶಿಸ್ತು ಮತ್ತು ಸಂಘಟನೆ ಅತ್ಯಾವಶ್ಯಕವಾದುದು. ಹಾಗಾದರೇನೇ ಅದರ ಕಾರ್ಯಗಳು  ಯಶಸ್ವಿಯಾಗಿ ನಡೆಯುವುವು. ಪ್ರತಿಯೊಂದು ಸಂಸ್ಥೆಗೂ ಶಿಸ್ತಿನ ಆವಶ್ಯಕತೆ ಬೇಕು. ಭರತಖಂಡದ ರಾಷ್ಟ್ರೀಯ ಮಹಾಸಭೆ ಶಿಸ್ತು ಮತ್ತು ಸಂಘಟನೆಗಳಿಂದ ೫೩ ವರ್ಷಗಳವರೆಗೆ ನಡೆದುಕೊಂಡು ಬಂದುದರಿಂದಲೇ ಅದರ ಕೀರ್ತಿ ಜಗತ್ತಿನಲ್ಲಿ ಹಬ್ಬಿ ತಲೆಯೆತ್ತಿ ಮೆರೆಯುತ್ತಲಿರುವುದು. ಆ ಸಂಸ್ಥೆಯಲ್ಲಿ ಶಿಸ್ತು ಭಂಗಮಾಡಿದಂತಹ ಮಹಾನ್ ಮಹಾನ್ ಪ್ರಭೃತಿಗಳು ಆ ಸಂಸ್ಥೆಯಿಂದ ದೂರ ಸರಿಯಬೇಕಾಯಿತು. ಶಿಸ್ತಿನ ಸಲುವಾಗಿಯೇ ಮಹಾತ್ಮಾಜಿಯವರು ಅದ್ಭುತ ಪ್ರಯತ್ನವನ್ನು ಮಾಡುತ್ತಿರುವರು. ಸಾಹಿತ್ಯ ಪರಿಷತ್ತಿನಲ್ಲಿಯೂ ಶಿಸ್ತು ಸಂಘಟನೆಗಳಿದ್ದರೆ ಅದರ ಗೌರವ ಕರ್ನಾಟಕದ ತುಂಬ ಬೆಳೆಯುವುದು. ಸದಸ್ಯರೆಲ್ಲರೂ ಸುಸಜ್ಜಿತವಾದ ಕನ್ನಡದ ಪಡೆಯಾಗಬೇಕಾಗಿದೆ. ನಾಯಕರಿಗೆ ಗೌರವ ಕೊಡಬೇಕಾಗಿದೆ.

ಕನ್ನಡ ಭಾಷೆಯ ಏಕೀಕರಣ

ಅನೇಕ ಸಲ  ಸಾಮ್ರಾಜ್ಯಗಳನ್ನು ಕಟ್ಟಿ ಭಾರತದಲ್ಲಿ ಬಹುದಿನಗಳವರೆಗೆ ತಲೆಯೆತ್ತಿ ಮೆರೆದ ಕನ್ನಡ ನಾಡು ರಾಜಕೀಯ ವಿಪತ್ತಿಗೆ ಗುರಿಯಾಗಿ ಮದ್ರಾಸಿನ  ಗೌರ್ವನರಾಗಿದ್ದ ಸರ್. ಥಾಮಸ್ ಮನ್ರೋವಿನ ಕಾಲಕ್ಕೆ ಹರಿದು ಹಂಚಿಹೋಗಿ ಅನೇಕ ಸರಕಾರಗಳಲ್ಲಿ ಕೂಡಿತು. ಇದೇ ಕರ್ನಾಟಕದ ಅವನತಿಗೆ ಮೂಲ. ಅಂದಿನಿಂದಲೇ ನಮ್ಮ ಭಾಷೆ ಕೆಟ್ಟಿತು. ಇಂದಿಗೂ ಆ ಹಾನಿ ತುಂಬದಾಗಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಏಕೀಕರಣದ ಸಲುವಾಗಿ ಬಹಳ ಪ್ರಯತ್ನ ಮಾಡುತ್ತಿದ್ದರೂ ಸಾಕಷ್ಟು ಕಾರ್ಯವಾಗಿರುವುದಿಲ್ಲ. ವರ್ತಮಾನ ಪತ್ರಗಳ ಸ್ಥಿತಿ ಪೂರಾ ಕೆಟ್ಟುಹೋಗಿರುವುದು. ಗ್ರಂಥಕಾರರ ಅವಸ್ಥೆಯಾದರೂ ಹಾಗೆಯೇ ಆಗಿರುತ್ತದೆ.

Tag: Kannada Sahitya Sammelana 25, Vyakharanatheertha Chandrashekhara Shastri

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)