ಸಾಹಿತ್ಯ ಸಮ್ಮೇಳನ-೪0

ಅಧ್ಯಕ್ಷತೆ: ವಿ.ಕೃ. ಗೋಕಾಕ್

vk-gokak

0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ವಿ.ಕೃ. ಗೋಕಾಕ್

ಕನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕರಾಗಿ ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕರು ಕೃಷ್ಣರಾಯ-ಸುಂದರಮ್ಮ ದಂಪತಿಗಳಿಗೆ ೯-೮-೧೯0೯ರಲ್ಲಿ ಜನಿಸಿದರು. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ೧೯೩೧ರಲ್ಲಿ ಪುಣೆಯ ಫಗ್ರ್ಯುಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು.

ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್‍ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, ಧಾರವಾಡದ ಕರ್ಣಾಟಕ ಕಾಲೇಜಿನಲ್ಲಿ (೧೯೫೨) ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು. ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದರು. ೧೯೭0ರಲ್ಲಿ ಸಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್ ನಿರ್ದೇಶಕರಾದರು.

ಆಂಧ್ರದ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗೋಕಾಕರು, ಪಿ. ಇ. ಎನ್. ಅಧಿವೇಶನಕ್ಕೆ ೧೯೫೭ರಲ್ಲಿ ಜಪಾನಿಗೆ ತೆರಳಿದರು. ಬೆಲ್ಜಿಯಂನಲ್ಲಿ ಕವಿ ಸಮ್ಮೇಳನದಲ್ಲಿ ಭಾಗವಹಿಸಿದರು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದರು.

ಗೋಕಾಕರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (೧೯೫೮), ಅಮೆರಿಕಾದ ಫೆಸಿಫಿಕ್ ವಿಶ್ವವಿದ್ಯಾಲಯ, ಕರ್ನಾಟಕ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿವೆ. ಪರಿಷತ್ತು ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ೪0ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿ ಗೌರವಿಸಿದೆ. ದ್ಯಾವಾ ಪೃಥಿವಿ ಖಂಡಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.

ತಮ್ಮ ಭಾರತ ಸಿಂಧುರಶ್ಮಿ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಗೋಕಾಕರು ಕನ್ನಡಕ್ಕೆ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಸಮರಸವೇ ಜೀವನ (ಇಜ್ಜೋಡು) ಬೃಹತ್ ಕಾದಂಬರಿ ಇವರಿಗೆ ಹೆಸರನ್ನು ತಂದುಕೊಟ್ಟಿದೆ. ಇವರು ಭಾಷಾ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಗೋಕಾಕವರದಿ ಇತಿಹಾಸವನ್ನೇ ಸೃಷ್ಟಿಸಿತು.

ನವ್ಯತೆ ಹಾಗೂ ಕಾವ್ಯ ಜೀವನ, ವಿಶ್ವಮಾನವ ದೃಷ್ಟಿ, ಸೌಂದರ್ಯಮೀಮಾಂಸೆ, ಆಂಗ್ಲ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಇತ್ಯಾದಿ ವಿಮರ್ಶಾಗ್ರಂಥಗಳು, ಜನನಾಯಕ, ವಿಮರ್ಶಕ ವೈದ್ಯ, ಯುಗಾಂತರ, ಮುಂತಾದ ನಾಟಕಗಳು ಇವರಿಂದ ರಚಿತವಾಗಿವೆ. ಇಂಗ್ಲಿಷಿನಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಅರವಿಂದಭಕ್ತರೂ, ಬೇಂದ್ರೆ ಆರಾಧಕರೂ ಆಗಿದ್ದ ಗೋಕಾಕರು ೨೮-೪-೧೯೯೨ರಲ್ಲಿ ಮುಂಬಯಿಯಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೪0,

ಅಧ್ಯಕ್ಷರು: ವಿನಾಯಕ ಕೃಷ್ಣ ಗೋಕಾಕ್

ದಿನಾಂಕ ೧೮, ೧೯, ೨0 ಜನವರಿ ೧೯೫೮

ಸ್ಥಳ :  ಬಳ್ಳಾರಿ

ಪೆನ್ ಕಾಂಗ್ರೆಸ್ ಸಮ್ಮೇಳನದ ಹಿರಿಮೆ

ಅಕಸ್ಮಾತ್ತಾಗಿ ಈ ಸಲ ಪ್ರಪ್ರಥಮವಾಗಿ ಏಷ್ಯ ಖಂಡದಲ್ಲಿ ನೆರೆದ ಜಾಗತಿಕ ಲೇಖಕರ ಸಮ್ಮೇಳನವಾದ ಪೆನ್ ಕಾಂಗ್ರೆಸ್ಸಿನಲ್ಲಿ ಭಾರತದ ಪ್ರತಿನಿಧಿಗಳಲ್ಲಿ ಒಬ್ಬನಾಗಿ ಭಾಗವಹಿಸುವ ಸುಸಂಧರ್ಭವು ನನಗೆ ಬಂದಿತ್ತು. ಇಷ್ಟು ವರ್ಷ ಭಾರತೀಯ ಪ್ರತಿನಿಧಿಗಳು ಇಂತಹ ಸಮ್ಮೇಳನದಲ್ಲಿರದೆ ಎಂತಹ ಅನುಭವವನ್ನು ನಾವು ಕಳೆದುಕೊಂಡವು ಎಂದೆನಿಸುವಂತಾಯಿತು. ಆ ಅವಶ್ಯಕತೆಯನ್ನು  ವಿವರಿಸುವ ಕಾರಣವಿಲ್ಲ. ಸಾಹಿತ್ಯದ ಪ್ರಗತಿಯಲ್ಲಿ ಅವು ಮೈಲುಗಲ್ಲುಗಳಾಗಿ ನಿಲ್ಲಬಹುದು. ಆಯಾ ವರ್ಷದ ಸಾಹಿತ್ಯಿಕ ಪ್ರಶ್ನೆಗಳ ಮೇಲೆ ನಿಚ್ಚಳವಾದ ಪ್ರಕಾಶವನ್ನು ಕೆಡವಬಹುದು. ಆದರೆ ಈ ಎಲ್ಲ ಭಾರವನ್ನು ಹೊರುವ ಸ್ವಾಗತ ಸಮಿತಿ ಎಲ್ಲಿದೆ? ಯೋಜಕರೇ ಇಲ್ಲಿ ದುರ್ಬಲರಾಗಿದ್ದಾರೆ.

ಪುಸ್ತಕ ಭಂಡಾರಗಳ ಬಗ್ಗೆ ಪರಿಷತ್ತು ಯೋಚಿಸಲಿ

ಪ್ರಾತಿನಿಧಿಕ ಪುಸ್ತಕ ಭಂಡಾರಗಳೆಷ್ಟು ಕರ್ನಾಟಕದಲ್ಲಿವೆಯೆಂದು ಕೇಳುವ ಹಾಗಿದೆ. ದೊಡ್ಡ ಊರಿನ ವಿದ್ಯಾಸಂಸ್ಥೆಗಳು ಇದನ್ನು ಕೈಕೊಳ್ಳಬೇಕು. ಕನ್ನಡ ನಾಡಿನ ಎಲ್ಲಾ ಭಾಗಗಳಲ್ಲಿ ಅಚ್ಚಾದ ಕನ್ನಡ ಪುಸ್ತಕಗಳನ್ನು ವಿಷಯ ಯಾವುದೇ ಇರಲಿ ಒಂದೆಡೆಗೆ ಕಲೆಹಾಕಿ ನಾಡಿನ ದೊಡ್ಡ ದೊಡ್ಡ ಪಟ್ಟಣಗಳಲ್ಲಾದರೂ ಜನತೆಯ ಕಣ್ಣೆದುರಿಗಿರುವ ಪುಣ್ಯಾತ್ಮರು ಇಂದು ಬೇಕಾಗಿದ್ದಾರೆ. ಧಾರವಾಡದಲ್ಲಿ ಬೆಂಗಳೂರ ಪುಸ್ತಕಗಳಿಲ್ಲ, ಬೆಂಗಳೂರಲ್ಲಿ ಧಾರವಾಡದ ಪುಸ್ತಕಗಳಿಲ್ಲ. ಗುಲಬರ್ಗಾದಲ್ಲಿ ಬಹುಶಃ ಅವೂ ಇಲ್ಲ. ಇವು ಇರಲಾರವು. ಮಂಗಳೂರಿನಲ್ಲಿಯೂ ಹಾಗೆಯೇ. ಮಡಿಕೇರಿ ಅದಕ್ಕೂ ದೂರ. ಇಂಥ ಒಂದು ಪುಸ್ತಕ ಭಂಡಾರವಾದರೂ ಆಸ್ತಿತ್ವದಲ್ಲಿದೆಯೇನೆಂದು ಕೇಳುವ ಹಾಗಿದೆ. ಇದ್ದರೆ ಅದಕ್ಕೆ ಸಾರ್ವಜನಿಕ ಸಭೆಯಲ್ಲಿ ಮನ್ನಣೆ ಸಿಕ್ಕಬೇಕು. ಇದ್ದ ಪುಸ್ತಕ ಭಂಡಾರಗಳಲ್ಲಿ ಪ್ರಕಾಶಕ ಮಂಡಲಗಳೂ ಆಗಿರುವ ಭಂಡಾರಗಳೇ ಹೆಚ್ಚು. ಅಲ್ಲಿ ಹೆಚ್ಚಾಗಿ ಬೆಳಕಿಗೆ ಬರುವ ಪುಸ್ತಕಗಳೆಂದರೆ ಆಯಾ ಭಂಡಾರವೇ ಪ್ರಕಾಶಿಸಿದ ಹೊತ್ತಿಗೆಗಳು. ಹೀಗಾಗಿ ಮೊದಲು ನಮ್ಮ ಪುಸ್ತಕ ಭಂಡಾರಗಳಲ್ಲಿ ಕನ್ನಡ ಪುಸ್ತಕಗಳ ಏಕೀಕರಣ ಆಗಬೇಕಾಗಿದೆ. ಊರೂರಿಗೆ ಇಂತಹ ಏಕೀಕರಣ ಕೇಂದ್ರಗಳು ಬೇಕು. ಪರಿಷತ್ತಿನ ಸಮಿತಿಯವರು ಈ ವಿಷಯವನ್ನು ಕುರಿತು ಪರ್ಯಾಲೋಚಿಸುವ ಹಾಗಿದೆ.

ಲೇಖಕರಿಗೆ ಸೂಕ್ತ ಸಂಭಾವನೆ ಸಿಗಲಿ

ಒಳ್ಳೆಯ ಅಜ್ಞಾತ ಕೃತಿಗಳ ಪ್ರಕಾಶನ, ಇತ್ತೀಚೆಗೆ ಸದರ್ನ್ ಬುಕ್  ಟ್ರಸ್ಟ್ನಿಂದ   ಕನ್ನಡದಲ್ಲಿ ಉಳಿದ ದಕ್ಷಿಣ ಭಾಷೆಗಳ ಉತ್ತಮ ಕೃತಿಗಳ ಅನುವಾದಗಳು ಬರಹತ್ತಿವೆ. ಟ್ರಸ್ಟಿನಿಂದ ಹಾಗೂ ದಿಲ್ಲಿಯ ಅಕಾಡೆಮಿಯಿಂದ ಕನ್ನಡ ಕೃತಿಗಳ ಅನುವಾದಗಳು ಉಳಿದ ಭಾಷೆಗಳಲ್ಲಿ ಬೆಳಕು ಕಾಣಹತ್ತಿವೆ. ಜನಸಾಮಾನ್ಯರಲ್ಲಿ ಜ್ಞಾನಪ್ರಸಾರಕ್ಕಾಗಿ ಲಿಟರರಿ ಕೋ-ಅಪರೇಟಿವ್ ಸೊಸೈಟಿಯೊಂದು ಧಾರವಾಡದಲ್ಲಿ ಸ್ಥಾಪಿತವಾಗಿ ಈಗಾಗಲೆ ಆರೇಳು ಕೃತಿಗಳನ್ನು ಪ್ರಕಟಿಸಿದೆ; ಲೇಖಕರಿಗೆ ಉಚಿತ ಸಂಭಾವನೆಯನ್ನು ಸಲ್ಲಿಸುತ್ತಿದೆ. ಆದರೆ ಕಾವ್ಯಕ್ಕೆ ಇಂತಹ ಪ್ರಕಟನೆಗಳಲ್ಲಿ ಸ್ವಾಭಾವಿಕವಾಗಿಯೇ ಹೆಚ್ಚಿನ ಸ್ಥಾನವಿರಲಾರದು. ಯೋಗ್ಯ ಪ್ರಥಮ ಕೃತಿಗಳ ಪ್ರಕಾಶನ ಸಂಸ್ಥೆಯೊಂದು ರೂಪಿತವಾಗಬೇಕಾಗಿದೆ. ಲೇಖಕರಿಗೆ ಸಲ್ಲಬೇಕಾದ ಸಂಭಾವನೆಯನ್ನು ಸಲ್ಲಿಸಿ ಅವರ ಕೃತಿಗಳ ಪ್ರಕಾಶನವನ್ನು ಕೈಕೊಳ್ಳುವ ಏರ್ಪಾಟು ಆಗಬೇಕಾಗಿದೆ. ಕೇರಳದಂತಹ ಚಿಕ್ಕ ಪ್ರಾಂತದಲ್ಲಿ ಇಂತಹ ಯೋಜನೆಯು ಊರ್ಜಿತಾವಸ್ಥೆಯಲ್ಲಿದ್ದು ನಮ್ಮಲ್ಲಿ ಇನ್ನೂ ಅದು ತಲೆದೋರದಿರುವುದು ವಿಚಾರಾಸ್ಪದವಾಗಿದೆ.

ಹೊರನಾಡುಗಳಲ್ಲಿ ಕನ್ನಡ ಮಂದಿರಗಳಿರಲಿ

ಹೊರನಾಡ ಕನ್ನಡಿಗರ ವಿಚಾರ. ಭಾರತದ ಪ್ರಮುಖ ನಗರಗಳಲ್ಲಿ ಭಾರತದ ಮುಖ್ಯ ಭಾಷೆಗಳೆಲ್ಲ ತಮ್ಮ ಸಭಾಮಂದಿರಗಳನ್ನು ಕಟ್ಟಿಸಿಕೊಂಡಿವೆ; ಅತಿಥಿಭವನಗಳನ್ನು ನಿಲ್ಲಿಸಿವೆ; ಪ್ರಾಥಮಿಕ ಶಾಲೆಗಳನ್ನು ಭಾಷೆಗಳ ಈ ಸಹೋದರರು ಹೋದಲ್ಲೆಲ್ಲ ತಮ್ಮ ಭಾಷಾ-ಸಂಸ್ಕೃತಿಗಳ ಜೀವಂತ ಸಂಪರ್ಕವನ್ನಿಟ್ಟುಕೊಳ್ಳುವುದು ಸಾಧ್ಯವಾಗಿದೆ. ಕನ್ನಡಕ್ಕೆ ಇನ್ನೂ ಈ ಸೌಭಾಗ್ಯ ದೊರೆಯದಿರುವದು ವಿಷಾದಕರ. ನಾವೇ ಹೊರಗಿರುವ ನಮ್ಮ ನಾಡವರನ್ನು ಈ ರೀತಿ ಉಪೇಕ್ಷಿಸಿರುವಾಗ ಅವರು ನಮ್ಮ ಬಗ್ಗೆ ಏನೆಂದು ಅಭಿಮಾನಪಡಬೇಕು? ಪರಿಷತ್ತು ಈ ದಾರಿಯಲ್ಲಿ ಪರಿಕ್ರಮಿಸಿ ರಾಜ್ಯ ಸರಕಾರದ ಹಾಗೂ ಉಳಿದ ಸಂಸ್ಥೆಗಳ ಸಹಕಾರವನ್ನು ಪಡೆದು ಮೊದಲು ದಿಲ್ಲಿಯಲ್ಲಿಯೂ ಭಾಷಾ ರಾಜ್ಯಗಳಲ್ಲಿಯೂ ಕೇಂದ್ರ ನಗರಗಳಲ್ಲಿಯೂ ಈ ಸೌಕರ್ಯಗಳನ್ನು ಒದಗಿಸಿಕೊಡುವದು ಅತ್ಯಗತ್ಯವಾಗಿದೆ. ಇದರಲ್ಲಿ ವಿಳಂಬವಾದಷ್ಟು ನಮಗೇ ಹಾನಿ. ಹೊರನಾಡ ಕನ್ನಡಿಗರ ಸಂಸ್ಥೆಯು ಈ ಕೆಲಸದಲ್ಲಿ ಎಲ್ಲ ಸಹಾಯವನ್ನು ಒದಗಿಸುವುದರಲ್ಲ್ಲಿ ಸಂಶಯವಿಲ್ಲ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹುಟ್ಟಿದಾಗ ಅದು ಎಣಿಸಿದ ಗುರಿಗಳೆಲ್ಲ ಬಹುಶಃ ಇಂದು ಸಾಧಿಸಿವೆ. ಹೊರನಾಡ ಕನ್ನಡಿಗರ ಜೀವನಕ್ಕೆ ಒಂದು ವ್ಯವಸ್ಥೆಯನ್ನು ತಂದೊದಗಿಸುವ ಕಾರ್ಯವನ್ನು ಸಂಘವು ಸಹ ನೀಗಿಸುವುದು ಸಾಧ್ಯ.

ಕನ್ನಡದ ಸ್ಥಾನಮಾನದ ಚಿಂತನೆ

ಹಿಂದೆ ಉಲ್ಲೇಖಿಸಿದಂತೆ ಅನ್ಯ ಪ್ರಾಂತಗಳಲ್ಲಿ ಸೇರ್ಪಡೆಯಾದ ಕನ್ನಡ ಭಾಗಗಳಲ್ಲಿ ಆಗಬೇಕಾದ ಸಾಂಸ್ಕೃತಿಕ ಕಾರ್ಯವನ್ನೂ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಕನ್ನಡಕ್ಕೆ ದೊರೆಯಬೇಕಾದ ಸ್ಥಾನಮಾನಗಳನ್ನೂ ಇಲ್ಲಿ ನೆನೆಯಬಹುದು.

ಕೆಲವೊಂದು ಕೊರತೆಗಳು

ಕೆಲವೊಂದು ಕೊರತೆಗಳನ್ನು ಇಲ್ಲಿ ಎತ್ತಿ ತೋರಿಸಿದೆ. ಸರ್ವಸಂಗ್ರಹದಂಥ ಪಟ್ಟಿಯನ್ನು ಇಲ್ಲಿ ಮಾಡುವ ಕಾರಣವಿಲ್ಲ. ಉದಾಹರಣೆಗಾಗಿ, ಕನ್ನಡ ಟೈಪ್‍ರೈಟರ್ ಹಾಗೂ ಶಾರ್ಟ್ ಹ್ಯಾಂಡ್, ಕನ್ನಡ ರಾಜ್ಯದ ಸರಕಾರಕ್ಕೆ ಇದು ಮಹತ್ವದ ಪ್ರಶ್ನೆಯಾಗಿರುವುದರಿಂದ ಇಂದಿಲ್ಲ ನಾಳೆ ಅವು ಬಳಕೆಯಲ್ಲಿ ಬಂದೆ ಬರುತ್ತವೆ. ಕನ್ನಡ ಜ್ಞಾನಕೋಶ ಸರಕಾರದ ಸಾಂಸ್ಕೃತಿಕ ಶಾಖೆಯಲ್ಲಿ ತೀವ್ರವಾಗಿ ರೂಪುಗೊಳ್ಳುತ್ತಲಿದೆ. ಕನ್ನಡ-ಕನ್ನಡ ಶಬ್ದಕೋಶವನ್ನು ಪರಿಷತ್ತು ತಯಾರಿಸುತ್ತಿದೆ. ಕನ್ನಡ ಸಾಹಿತ್ಯದ ಬೃಹತ್ ಚರಿತ್ರೆಯ ಹೊಣೆಯನ್ನು ಕರ್ನಾಟಕ ವಿಶ್ವವಿದ್ಯಾನಿಲಯವು ಹೊತ್ತುಕೊಂಡಿದೆ. ವಿಮರ್ಶಾತ್ಮಕ ಉಪನ್ಯಾಸ ಮಾಲೆಯೊಂದನ್ನೂ ವೈಜ್ಞಾನಿಕ ವಾಙ್ಮಯದ ನಿರ್ಮಾಣವನ್ನೂ ಮೈಸೂರು ವಿಶ್ವವಿದ್ಯಾಲಯವು ತ್ವರೆಯಿಂದ ನಡೆಯಿಸಿಕೊಂಡು ಬಂದಿದೆ. ಅಂತೂ ಕನ್ನಡದ ಭಾಗ್ಯ ತೆರೆಯುವ ಸಮಯ ಬಂದಿದೆ. ಇಂತಹ ಸಮಯದಲ್ಲಿ ಅನೇಕ ಗ್ರಹಣಗಳು ತಾವಾಗಿಯೇ ಬಿಡುತ್ತವೆ.

Tag: Kannada Sahitya Sammelana 40, V.K. Gokak, Vinayaka Krishna Gokak

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)