ಸಾಹಿತ್ಯ ಸಮ್ಮೇಳನ-೪೫

ಅಧ್ಯಕ್ಷತೆ: ಕಡೆಂಗೋಡ್ಲು ಶಂಕರಭಟ್ಟ

kadengodlu-shankarabhatta

೪೫ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕಡೆಂಗೋಡ್ಲು ಶಂಕರಭಟ್ಟ

ಕನ್ನಡದ ಪ್ರಸಿದ್ಧ ನವೋದಯ ಕವಿಗಳಲ್ಲಿ ಒಬ್ಬರಾದ ಕಡೆಂಗೋಡ್ಲು ಶಂಕರಭಟ್ಟ ಅವರು ಈಶ್ವರಭಟ್ಟ-ಗೌರಮ್ಮನವರ ಪುತ್ರರಾಗಿ ೯-೮-೧೯0೪ರಲ್ಲಿ ಜನಿಸಿದರು. ಪ್ರಾರಂಭದ ವಿದ್ಯಾಭ್ಯಾಸ ಮುಳಿಯ ತಿಮ್ಮಪ್ಪಯ್ಯನವರ ಮನೆಯಲ್ಲಿ ಮಂಗಳೂರಿನಲ್ಲಿ ನಡೆಯಿತು. ಮದರಾಸಿನ ವಿಶ್ವವಿದ್ಯಾನಿಲಯದಲ್ಲಿ ವಿದ್ವಾನ್ ಪದವಿ ಗಳಿಸಿದರು.

೧೯೨೭ರಲ್ಲಿ ಮಂಗಳೂರಿನ  ಸೆಂಟ್ ಅಗ್ನೆಸ್ ಕಾನ್ವೆಂಟಿನಲ್ಲಿ ಕನ್ನಡ ಅಧ್ಯಾಪಕರಾಗಿ ೧೯೬೪ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ೧೯೫೩ರಿಂದ ೧೯೬೮ರವರೆಗೆ ಸಂಪಾದಕರಾಗಿ ರಾಷ್ಟ್ರಬಂಧು ಪತ್ರಿಕೆಯನ್ನು ನಡೆಸಿದರು. ೧೯೨೭ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ‘ಪಂಚಕಜ್ಜಾಯ’ ನೆನಪಿನ ಸಂಚಿಕೆಗೆ ಶ್ರಮಿಸಿದರು. ನವಯುಗ, ರಾಷ್ಟ್ರಮತ ವಾರಪತ್ರಿಕೆಗಳಿಗೂ ಸ್ವಲ್ಪ ಕಾಲ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ೧೯೩೨ರಲ್ಲಿ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರು ಆಗಿದ್ದರು. ೧೯೩೬ರಲ್ಲಿ ಜರುಗಿದ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ೧೯೬೫ರಲ್ಲಿ ಕಾರವಾರದಲ್ಲಿ ನಡೆದ ೪೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಪ್ರಾಪ್ತವಾಯಿತು.

ಕಡೆಂಗೋಡ್ಲು ಶಂಕರಭಟ್ಟರ ಮುಖ್ಯ ಕೃತಿಗಳು :

ಘೋಷಯಾತ್ರೆ (ಕಾವ್ಯ), ಪತ್ರಪುಷ್ಪ, ನಲ್ಮೆ, ಗಾಂಧಿ ಸಂದೇಶ(ಕವನ ಸಂಕಲನಗಳು), ದೇವತಾಮನುಷ್ಯ, ಧೂಮಕೇತು, ಹೊನ್ನಿಯ ಮದುವೆ (ಕಾದಂಬರಿಗಳು), ಗಾಜಿನ ಬಳೆ, ದುಡಿಯುವ ಮಕ್ಕಳು (ಕಥಾ ಸಂಕಲನಗಳು), ಸ್ವರಾಜ್ಯ ಯುದ್ಧ (ಅನುವಾದ), ವಿರಾಮ (ಏಕಾಂಕ ನಾಟಕ)

ಕೃಷಿಕುಟುಂಬದ ಹವ್ಯಕ ಸಮಾಜದ ಕವಿ, ಪತ್ರಿಕಾಕರ್ತರಾದ ಕಡೆಂಗೋಡ್ಲು ಶಂಕರಭಟ್ಟ ಅವರು                   ೧೭-೫-೧೯೬೮ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೪೫

ಅಧ್ಯಕ್ಷರು: ಕಡೆಂಗೋಡ್ಲು ಶಂಕರಭಟ್ಟ

ದಿನಾಂಕ ೧0,೧೧,೧೨ ಮೇ ೧೯೬೫  

ಸ್ಥಳ : ಕಾರವಾರ

ಮುನ್ನೋಟ

ಇದುವರೆಗೆ ಕನ್ನಡ ಸಾಹಿತ್ಯದ ಕೆಲವು ಪ್ರಾಪ್ತಿಗಳನ್ನು ಅಖ್ಯಾನಿಸಿದುದಾಯಿತು. ಈಗ ‘ಪ್ರಾಪ್ತವ್ಯ’ಗಳನ್ನು ಉಲ್ಲೇಖಿಸಬೇಕಾಗಿದೆ. ಇವುಗಳ ಸಾಧನೆಯಲ್ಲಿ ಶುದ್ಧ ಸಾಹಿತ್ಯಕರೊಂದಿಗೆ ಭಿನ್ನ ಭಿನ್ನ ಅಧಿಕರಣ ಪ್ರತಿಷ್ಠಿತರೂ ಸಹಕರಿಸಬೇಕಾಗಿದೆ.

(೧) ವಿದ್ವಾಂಗದಲ್ಲಿ ಆಮೂಲಾಗ್ರವಾಗಿ, ಕನ್ನಡವೆ ಬೋಧಭಾಷೆಯಾಗಬೇಕು. ಭಾರತದ ಒಳಗಣ ಸಂಪರ್ಕ ಭಾಷೆಯೊಂದಿಗೆ ವಿಶ್ವಸಂಪರ್ಕ ಭಾಷೆಯಾದ ಆಂಗ್ಲಭಾಷೆಗೆ ಗಣನೀಯ ಸ್ಥಾನ ಇರಬೇಕು. ಸಾಂಸ್ಕೃತಿಕ ದೃಷ್ಟಿಯಿಂದ ಅದರ ಅಧ್ಯಾಪನ-ಅಧ್ಯಯನಗಳು ನಡೆಯಬೇಕು; ಶುಕ ಪಾಠಕ್ರಮದಿಂದಲ್ಲ.

(೨) ಆಧುನಿಕ ವಿಚಾರ-ವಿಜ್ಞಾನ-ಶಾಸ್ತ್ರ ಸಂಬಂಧವಾದ ಉತ್ತಮ ಗ್ರಂಥಗಳು ಯಾವ ಭಾಷೆಯಲ್ಲಿದ್ದರೂ ಅವುಗಳನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆಬೇಕು.

(೩) ಪ್ರಾಚೀನ ಕವಿಗಳ ಉತ್ತಮ ಕೃತಿಗಳೆಲ್ಲ ಸಂಗ್ರಹ ರೂಪದಲ್ಲಿ ಆದರೂ ಹದಬೆಲೆಗೆ ದೊರೆಯುವಂತಾಗಬೇಕು.

(೪) ಪ್ರಕಾಶಕರಿಗೆ ಅಥವಾ ಗ್ರಂಥಕರ್ತರಿಗೆ, ಪ್ರೋತ್ಸಾಹ ಕೊಡಬೇಕೆಂಬ ಒಂದೇ ಒಂದು ದೃಷ್ಟಿಯಿಂದ, ನೀರಸ ಗ್ರಂಥಗಳನ್ನು ಪಠ್ಯಪುಸ್ತಕಗಳನ್ನಾಗಿ ನಿಯಮಿಸುವ ಕ್ರಮ ನಿಲ್ಲಬೇಕು.

(೫) ಮಾಧ್ಯಮಿಕ ಶಿಕ್ಷಣ ಹೊಂದುವ ಮಕ್ಕಳಿಗೆ  ನಮ್ಮ ಕವಿಶ್ರೇಷ್ಠರ ಲಘು ಪರಿಚಯವಾದರೂ ಆಗುವಂತೆ ಕೆಳಗಣ ವರ್ಗದಿಂದಲೆ, ಸುಲಲಿತವಾದ ಪ್ರಾಚೀನ ಗದ್ಯ ಪದ್ಯಗಳ ಉತ್ತಮ ಭಾಗಗಳಲ್ಲಿ ಸ್ವಲ್ಪವನ್ನಾದರೂ ಪಠ್ಯಗ್ರಂಥಗಳಲ್ಲಿ ಸೇರಿಸಬೇಕು.

(೬) ಸಾಹಿತ್ಯದ ಸೊಗಸನ್ನು ತಿಳಿದು ಅನುಭವಿಸುವುದಕ್ಕೆ ಅನುಕೂಲವಾಗುವಂತೆ. ಭಾಷಾಪಾಠ ಕ್ರಮವನ್ನು ಸಿದ್ಧಗೊಳಿಸಬೇಕು.

(೭) ಭಾಷೆಯಲ್ಲಿ ಅವತರಿಸುತ್ತಿರುವ ಅಶುದ್ಧ ಪ್ರಯೋಗಗಳನ್ನು ಪರಿಷತ್ತಿನ ಮುಖಪತ್ರಿಕೆಗಳಲ್ಲಿ ಚರ್ಚಿಸಿ ಶುದ್ಧಾಶುದ್ಧ ನಿರ್ಣಯವನ್ನು ಕೊಡುವ ವ್ಯವಸ್ಥೆಯಾಗುವುದು ವಿಹಿತ. ಪರಿಷತ್ತು ವಿದ್ವಾಂಸರ ಸಹಾಯದಿಂದ ಈ ಕೆಲಸವನ್ನು ಕೈಗೂಡಿಸಬೇಕು.

(೮) ಗ್ರಂಥಕರ್ತರೂ ಸಂಪಾದಕರೂ ತಮ್ಮ ಕೃತಿಗಳನ್ನೂ ವೃತ್ತಪತ್ರಿಕೆಗಳನ್ನೂ ಪರಿಷತ್ತಿಗೆ ಕಳುಹಿಸಿಕೊಟ್ಟು ಈ ಕಾರ್ಯದಲ್ಲಿ ನೆರವಾಗಬಹುದು.

(೯) ಲಿಪಿ ಸಂಸ್ಕರಣವು ಆಗಬೇಕಾದೀತು. ತೆಲುಗು ಕನ್ನಡಗಳಲ್ಲಿ ಸಮಾನ ಲಿಪಿಯನ್ನು ಬಳಕೆಗೆ ತರುವುದು ಸುಲಭ. ಈ ವಿಷಯದಲ್ಲಿ ಆಂಧ್ರ ಮೈಸೂರು ರಾಜ್ಯಗಳೊಳಗೆ ಆದ ಸಮತಟ್ಟನ್ನು ಕಾರ್ಯಗತಗೊಳಿಸಬಹುದು.

(೧0) ಕನ್ನಡದ ಗ್ರಾಮ್ಯ ಭಾಷಾರೂಪಗಳಲ್ಲಿಯೂ, ನಾಡಿನಲ್ಲಿರುವ ಸೋದರ ಭಾಷೆಗಳಲ್ಲಿಯೂ ಇದ್ದು, ಗ್ರಂಥಸ್ಥ ಪ್ರಯೋಗದಲ್ಲಿರುವ ಉಚಿತ ಶಬ್ದಗಳನ್ನು ಸಂಗ್ರಹಿಸುವ ಕಾರ್ಯವು ಪರಿಷತ್ತಿನ ಮೂಲಕ ನಡೆಯಬೇಕು.

(೧೧) ಆಧುನಿಕ ವಿಷಯಗಳಲ್ಲಿ ಉತ್ತಮಗ್ರಂಥ  ನಿರ್ಮಾಣವಾಗಬೇಕು.  ಪ್ರ್ರತಿವರ್ಷ ಕೆಲವು ಗ್ರಂಥಗಳನ್ನು ಪ್ರಕಟಪಡಿಸುವ ಯೋಜನಾಬದ್ಧ ವ್ಯವಸ್ಥೆ ಅವಶ್ಯವಾಗಿದೆ.

ಏಕೀಕರಣ ಮತ್ತು ಸಮ್ಮೇಳನ

ಬೇಕಾದುದರ ಪಟ್ಟಿಯನ್ನು ಇನ್ನೂ ಉದ್ದಕ್ಕೆ ಎಳೆಯಬಹುದು. ಆದರೆ ಸಾಹಿತ್ಯ ಸಮ್ಮೇಳನವು, ಸಾಹಿತ್ಯ ಸಮಾರಾಧನೆಯ ಸಮಾರಂಭವಾಗಿರಬೇಕಲ್ಲದೆ ಕೇವಲ ತಾಪತ್ರಯ ನಿವೇದನೆಯ ತಳವಾಗಬಾರದು-ಎನ್ನುವ ದೃಷ್ಟಿಯಿಂದ ವಾಂಛಿತಗಳ ಸಂಖ್ಯೆಯನ್ನು ಹೆಚ್ಚಿಸಲಿಲ್ಲ. ಇದರಿಂದ ಕನ್ನಡಿಗರು ಸುದೈವಿಗಳು. ‘’ಬೇಡಲು ಕನ್ನಡ ದಾಸಯ್ಯ ಬಂದಿಹ” ಎನ್ನುತ್ತಾ ಬೇರೆ ಬೇರೆ ಆಡಳಿತದ ಮನೆಮನೆಗೆ ಭಿಕ್ಷಾರ್ಥಿಗಳಾಗಿ ಹೋಗಬೇಕಾದ ಆವಶ್ಯಕತೆ ಉಂಟಾಗಿದೆ. ಆಣ್ಮರು-ಆಳುಗಳು, ಎನ್ನುವ ಭೇದ ತೊಡೆದುಹೋಗಿದೆ. ನಮ್ಮ ವಿಧಾನ ಪರಿಷತ್ತುಗಳಲ್ಲಿ, ಸಚಿವಾಲಯಗಳಲ್ಲಿ, ವಿವಿಧಾಧಿಕರಣಗಳಲ್ಲಿ ಕನ್ನಡದ ನಾಡಿ ಬಡಿಯುತ್ತಿದೆ. ಒಮ್ಮೊಮ್ಮೆ ಅದರ ಸ್ಪಂದನದ ಗತಿಯಲ್ಲಿ ಹೆಚ್ಚು ಕಡಿಮೆ ಕಾಣಿಸಬಹುದು. ಹೆಚ್ಚಾಗಲಿ, ಕಡಿಮೆಯಾಗಲಿ, ಬಡಿಯುವ ನಾಡಿಯು ಕನ್ನಡದ್ದೆ ಆಗಿದೆ ಎನ್ನುವ ಸಮಾಧಾನದಿಂದ ರಾಜಕೀಯದ ಹೊಲೆ ತಾಗಬಹುದಾದ ಕೆಲವು ಪ್ರಶ್ನೆಗಳನ್ನು ದೂರದಲ್ಲಿಯೇ ಇರಿಸಬೇಕಾಗಿದೆ.

ಪರಿಷತ್ತಿನ ಸ್ಥಾನ ಮಾನ

ಸಾಹಿತ್ಯ ಪರಿಷತ್ತಿನಂತಹ ಸಂಸ್ಕೃತಿ ಸೇವಾ ಸಂಸ್ಥೆಗೂ ಜನ ಪ್ರತಿನಿಧಿ ರಾಜ್ಯಭಾರಕ್ಕೂ ಇರಬೇಕಾದ ಆದರ್ಶಸಂಬಂಧವನ್ನಿಲ್ಲಿ ಪ್ರಸ್ತಾವಿಸದಿದ್ದರೆ ಅದೊಂದು ದೊಡ್ಡ ಲೋಪವಾಗಬಹುದು. ಹಿಂದಿನ ಕಾಲದಲ್ಲಿ ಕವಿಗಳಿಗೂ ವಿದ್ವಾಂಸರಿಗೂ ರಾಜಾಶ್ರಯ ದೊರೆಯುತ್ತಿತ್ತು. ಇದಕ್ಕೆ ಪ್ರತಿಯಾಗಿ ಕೆಲವೇಳೆ ಕವಿಗಳು ರಾಜರಿಗೆ ಕಾವ್ಯಾಶ್ರಯವನ್ನು ಕೊಡುವ ಕ್ರಮವೂ ಇತ್ತು. ಕಾಲಪರಿಸ್ಥಿತಿಗಳು ವ್ಯತ್ಯಾಸಹೊಂದಿವೆ. ಇಂದು ಈ ರೀತಿಯ ಆಶ್ರಯವನ್ನು ಕೊಡುವ ಕೊಳ್ಳುವ ಪ್ರಶ್ನೆ ಇಲ್ಲ. ಲೆಕ್ಕಣಿಕೆಗಳನ್ನು ಒತ್ತೆಯಿಡಬಲ್ಲ ಗಣ್ಯ ಸಾಹಿತ್ಯ ವ್ಯವಸಾಯಿಗಳು ದುರ್ಬಲರು; ಸ್ತುತಿಪಾಠವನ್ನಪೇಕ್ಷಿಸುವ ರಾಜ್ಯಧುರಂಧರರೂ ದುರ್ಲಭರೆ. ಸರ್ಕಾರವು ರಾಜಕೀಯ ಪ್ರಾತಿನಿಧ್ಯವನ್ನು ಪಡೆದಿದ್ದರೆ, ಪರಿಷತ್ತ್ತು ಸಾಂಸ್ಕೃತಿಕ ಪ್ರಾತಿನಿಧ್ಯವನ್ನು ಪಡೆದಿದೆ. ಸರಕಾರದ ಸತ್ತೆಯೂ ಅಧಿಕಾರವೂ ರಾಜ್ಯದ ಸರ್ವಾಂಗಗಳಲ್ಲಿ ವ್ಯಾಪಿಸಿಕೊಂಡಿದೆ. ಪರಿಷತ್ತಿನ ನೈತಿಕ ಬಾಧ್ಯತೆಯು ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಸರ್ವತೋಮುಖವಾಗಿ ಇರತಕ್ಕುದ್ದಾಗಿದೆ. ಸ್ವಯಃಪ್ರಬುದ್ಧ ಪ್ರಜೆಗಳ ಮತವನ್ನು ಸಂಪಾದಿಸಿ ಬೆಳೆದ ಸಂಸ್ಥೆ ಅಲ್ಲವಾದರೂ ವಿದ್ಯಾ ಸಂಸ್ಕೃತಿ ಪುರಸ್ಕೃತರ ಸದಾಶಯದ ಆಧಾರಬಲವನ್ನು ಹೊಂದಿರುವ ಅದರ ಸ್ಥಾನಮಾನಗಳನ್ನು ಲಕ್ಷಿಸಿ, ವಿದ್ಯಾಸಂಸ್ಕೃತಿ ವಿಭಾಗದಲ್ಲಿ ತಾನು ನಿರ್ವಹಿಸುತ್ತಿರುವ ಕಾರ್ಯಭಾರಗಳಲ್ಲಿ ಕೆಲವನ್ನು, ಸರಕಾರವು ಈ ಸಂಸ್ಥೆಗೆ ಬಿಟ್ಟುಕೊಡಬಹುದು; ಅದಕ್ಕೆ ಸರಕಾರದ ನೆರವನ್ನು ನಿರೀಕ್ಷಿಸಬಹುದು; ತನ್ನ ಆರ್ಥಿಕ ಸಹಕಾರದ ಆಶ್ವಾಸನೆಯನ್ನು ನೀಡಬಹುದು. “ದಮ್ಮಯ್ಯ”ಗಳನ್ನು ಅಪೇಕ್ಷಿಸದೆ, ವಿಚಾರಸ್ವಾತಂತ್ರ್ಯಕ್ಕೆ ತಡೆಹಾಕದೆ, ಗ್ರಂಥಕಾರನ ವಿದ್ವತ್ಸಂಭಾವನೆ, ಇತ್ಯಾದಿ ಕಾರ್ಯಗಳಲ್ಲಿ ವಿನಿಯೋಗ ಹೊಂದುವುದಕ್ಕೆ ಬೇಕಾದ ಧನಾನುಕೂಲತೆಯನ್ನು ಸರಕಾರವು ಒದಗಿಸಿಕೊಡುವುದು ಜನಹಿತದೃಷ್ಟಿಗೆ ಮೆಚ್ಚದ ಕೆಲಸವಲ್ಲ. ಅನಾವಶ್ಯಕವಾದ ಕಟ್ಟುನಿಟ್ಟುಗಳಿಂದಲೂ, ದೀರ್ಘಸೂತ್ರಗಳಿಂದಲೂ, ಉದ್ದಿಷ್ಟಕಾರ್ಯ ಸಾಧನೆಗೆ ಆತಂಕವಾಗದಂತೆ ನೋಡಿಕೊಳ್ಳುವುದು ಸರಕಾರದ ಕರ್ತವ್ಯ. ಪಾಲಿಸಬೇಕಾದ ಕರ್ತವ್ಯ ಸರಕಾರದ್ದು ಮಾತ್ರವಲ್ಲ; ಸಂಸ್ಥೆಯದಾದರೂ ಇದೆ. ಮಾಂಸಗ್ರಂಥಿಯಂತಲ್ಲ, ಪರಿಶುದ್ಧರಕ್ತದಂತೆ ಅದು ಸಮಾಜ ಶರೀರದಲ್ಲಿ ತನ್ನ ಚಟುವಟಿಕೆಗಳನ್ನು ಕಾಣಿಸಬೇಕು. ಇಂತಹ ನೀತಿಪ್ರಜ್ಞೆಯಿಲ್ಲದೆ ಯಾವ ಸಂಸ್ಥೆಯೂ ಜನಾದರವನ್ನು ಪಡೆಯಲಾರದು.

Tag: Kannada Sahitya Sammelana 45, Kadengodlu Shankarabhatta, Kadengodlu Shankar Bhat

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)