ಸಾಹಿತ್ಯ ಸಮ್ಮೇಳನ-೫೧ : ಧರ್ಮಸ್ಥಳ
ಮಾರ್ಚ್ ೧೯೭೯

ಅಧ್ಯಕ್ಷತೆ: ಎಂ. ಗೋಪಾಲಕೃಷ್ಣ ಅಡಿಗ

adiga

೫೧ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಎಂ. ಗೋಪಾಲಕೃಷ್ಣ ಅಡಿಗ

ಪ್ರಸಿದ್ಧ ನವ್ಯಕಾವ್ಯದ ಕವಿಗಳೂ, ವಿಮರ್ಶಕರೂ ಆಗಿದ್ದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರು ರಾಮಪ್ಪ ಮತ್ತು ಗೌರಮ್ಮನವರ ಪುತ್ರರಾಗಿ ೧೮-೨-೧೯೧೮ರಲ್ಲಿ ಜನಿಸಿದರು.

ಶಾಲಾ ಶಿಕ್ಷಣ ಬೈಂದೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಆಯಿತು. ೧೯೪೨ರಲ್ಲಿ ಬಿ.ಎ. ಆನರ್ಸ್ ಪದವಿಯನ್ನು ಗಳಿಸಿದರು. ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ ಮೇಲೆ ೧೯೪೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ ಗಳಿಸಿದರು. ೧೯೪೮ ರಿಂದ ೧೯೫೨ರವರೆಗೆ ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ೧೯೫೨ ರಿಂದ ೫೪ರವರೆಗೆ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ೧೯೬೪-೬೮ವರೆಗೆ ಸಾಗರದ ಎಲ್.ಬಿ. ಕಾಲೇಜಿನಲ್ಲಿ ಮತ್ತು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಇವರು ಕಾರ್ಯನಿರ್ವಹಿಸಿದರು. ಅನಂತರ ೧೯೭೧ರಲ್ಲಿ ನ್ಯಾಷನಲ್ ಬುಕ್ ಟ್ರಸ್ಟಿನ ನಿರ್ದೇಶಕರಾದರು. ಇದಾದ ನಂತರ ೧೯೭೧ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಸಂಸತ್ತಿನ ಚುನಾವಣೆಗೆ ಸ್ಪರ್ಧಿಸಿದ್ದರು. ಸಿಮ್ಲಾದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್‍ನಲ್ಲಿ ರಿಸರ್ಚ್ ಫೆಲೋ ಆಗಿ ಕೆಲಸಮಾಡಿದರು.

ಸಾಕ್ಷಿ ಎಂಬ ತ್ರೈಮಾಸಿಕವನ್ನು ಕೆಲಕಾಲ ನಡೆಸಿದ ಇವರು ಕನ್ನಡದಲ್ಲಿ ಶ್ರೇಷ್ಠ ಕವನಗಳನ್ನೂ ವಿಮರ್ಶಾಕೃತಿಗಳನ್ನೂ ಬರೆದಿದ್ದಾರೆ. ಇವರ ಸೇವೆಗೆ ಮೆಚ್ಚಿ ಹಲವಾರು ಪ್ರಶಸ್ತಿಗಳು ಬಂದಿವೆ. ೧೯೭೩ರ ರಾಜ್ಯ ಸರಕಾರ ‘ವರ್ಧಮಾನ’ ಕವನ ಸಂಕಲನಕ್ಕೆ ಪ್ರಶಸ್ತಿ, ೧೯೭೪ರಲ್ಲಿ ಕೇಂದ್ರ ಸರಕಾರದ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ಸರಕಾರ ಪಂಪ ಪ್ರಶಸ್ತಿ, ಮಧ್ಯಪ್ರದೇಶ ಸರಕಾರದ ಕಬೀರ್ ಸನ್ಮಾನ ಪ್ರಶಸ್ತಿ ಇವರಿಗೆ ಲಭಿಸಿತ್ತು. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ೫೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಇವರಿಗೆ ಪರಿಷತ್ತು ನೀಡಿತ್ತು.

ಅಡಿಗರು ರಚಿಸಿದ ಕೆಲವು ಮುಖ್ಯ ಕೃತಿಗಳು ಇವು: ಭಾವತರಂಗ, ಕಟ್ಟುವೆವು ನಾವು, ನಡೆದುಬಂದ ದಾರಿ, ಭೂಮಿಗೀತ, ಚಂಡಮದ್ದಲೆ, ವರ್ಧಮಾನ ಇತ್ಯಾದಿ ಕವನಸಂಕಲಗಳು. ಅನಾಥೆ, ಆಕಾಶದೀಪ (ಕಾದಂಬರಿಗಳು), ಮಣ್ಣಿನ ವಾಸನೆ, ವಿಚಾರಪಥ, ಕನ್ನಡದ ಅಭಿಮಾನ (ಗದ್ಯ ಲೇಖನಗಳು), ಹುಲ್ಲಿನ ದಳಗಳು, ಭೂಗರ್ಭಯಾತ್ರೆ, ಇತಿಹಾಸಚಿತ್ರ (ಅನುವಾದಗಳು).

ಗೋಪಾಲಕೃಷ್ಣ ಅಡಿಗರು ಬೆಂಗಳೂರಿನಲ್ಲಿ ೧೪-೧೧-೧೯೯೨ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೫೧,

ಅಧ್ಯಕ್ಷರು, ಎಂ. ಗೋಪಾಲಕೃಷ್ಣ ಅಡಿಗ

ದಿನಾಂಕ 0೯, ೧0, ೧೧ ಮಾರ್ಚ್ ೧೯೭೯

ಸ್ಥಳ : ಧರ್ಮಸ್ಥಳ

 

ಸಮಾನತೆಯ ದುಷ್ಪರಿಣಾಮ

ಶಕ್ತಿಗಳಲ್ಲಿ ಅಸಮಾನತೆಯಿದ್ದರೂ ವ್ಯಕ್ತಿಗಳಾಗಿ ಎಲ್ಲರೂ ಸಮಾನ ಗೌರವಕ್ಕೆ ಪಾತ್ರರು ಎಂಬುದೇ ಪ್ರಜಾಪ್ರಭುತ್ವದ ಮೂಲ ಸೂತ್ರ. ಆದರೆ ಸಮಾನತೆಯ ರಾಜಕೀಯ ಸಾಮಾಜಿಕ ವಾತಾವರಣ ಸೃಷ್ಟಿಯಾಗುತ್ತ ಬಂದ ಹಾಗೆ ಶಕ್ತಿ ವಿಶೇಷಗಳ  ಬಗ್ಗೆ, ಅಪೂರ್ವ ಸಿದ್ಧಿಗಳ ಬಗ್ಗೆ ಒಟ್ಟಿನಲ್ಲಿ ಶ್ರೇಷ್ಠತೆಯೆಂಬ ಮೌಲ್ಯದ ಬಗ್ಗೆ ಇರಬೇಕಾದ ಎಚ್ಚರ ಮಾಯವಾಗಿ, ಬರೆದಿರುವುದೆಲ್ಲ ಸಾಹಿತ್ಯ ಎಂಬ ಭಾವನೆ, ಸರಾಸರಿಯೇ ದೊಡ್ಡ ಸಂಖ್ಯೆಗಿಂತ ಹೆಚ್ಚಿಗೆ ಎಂಬ ಅಜ್ಞಾನ ಹುಟ್ಟುತ್ತದೆ. ಶ್ರೇಷ್ಠವಾದದ್ದರ ಕಲ್ಪನೆಯನ್ನೇ ಅಳಿಸಿಹಾಕಬಲ್ಲ ಈ ಅಪಾಯವನ್ನೆದುರಿಸುವುದೇ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾನಿಲಯ ಮುಂತಾದ ಸಾಂಸ್ಕೃತಿಕ ಸಂಸ್ಥೆಗಳ ಮೂಲಭೂತ ಕೆಲಸ ಎನ್ನುವುದನ್ನು ನಾವು ಮರೆಯಲಾಗದು. ನಿರ್ದಿಷ್ಟವಾದ ತಾರತಮ್ಯಜ್ಞಾನವನ್ನು ಕೊಡುವ ವಿಮರ್ಶೆಯ ವಿವೇಕ ಕುದುರಿಸುವ ಕೆಲಸವೊಂದೇ ಈ ಯುಗದಲ್ಲಿ ನಾವು ಸಾಹಿತಿಗಳೂ ವಿದ್ಯಾವಂತರೂ ಅತ್ಯಗತ್ಯವಾಗಿ ಮಾಡಬೇಕಾದ ಕೆಲಸ. ಪಂಪ ದೊಡ್ಡ ಕವಿಯೋ ಪೊನ್ನನೋ? ಪಂಪ ಕುಮಾರವ್ಯಾಸರಲ್ಲಿ ಯಾರ ಸಾಧನೆ ಹೆಚ್ಚಿನದು. ಏಕೆ ಎಂಬ ಪ್ರಶ್ನೆ ಜಾತೀಯ ಪ್ರಶ್ನೆ ಅಲ್ಲ. ಸಿದ್ಧಿಯ ತಾರತಮ್ಯಗಳನ್ನು ಅಳೆಯುವ ಪ್ರಶ್ನೆ. ಈಗ ಸಾಹಿತ್ಯ ಪರಿಷತ್ತು ಮಾಡಬೇಕಾದ ಕೆಲಸವೂ ಇದೇ. ಆಡಂಬರ, ಜಾತ್ರೆ, ಮೇಳ ಇವುಗಳಿಂದ ನೋಡಿದವರ ಕಣ್ಣು ಸೆಳೆಯುವ ಕೆಲಸವಲ್ಲ, ಮನೋರಂಜನೆ ಒದಗಿಸುವ ವಿವಿಧ ವಿನೋದಾವಳಿಯಲ್ಲ, ಸಾಹಿತ್ಯ ಕೃತಿಗಳ ಅಧ್ಯಯನಕ್ಕೂ ಅವುಗಳನ್ನು ತೂಗಿ ನೋಡುವ ಕೆಲಸಕ್ಕೂ ತಕ್ಕ ಮಾನಸಿಕ ಸಲಕರಣೆಗಳನ್ನು ನಮ್ಮ ಜನಕ್ಕೆ, ತಮ್ಮ ಜನರಲ್ಲಿ ಸಾಹಿತ್ಯ ಪ್ರಿಯರಾದವರಿಗೆ ಒದಗಿಸಿಕೊಡುವ ಕೆಲಸ. ಸಾಹಿತ್ಯಕ್ಕೆ ಸಂಬಂಧಪಟ್ಟ ಒಂದು ಸಂಸ್ಥೆ ಕನ್ನಡದ ಅಭಿಮಾನವನ್ನು ಭಾಷಣಗಳ ಮೂಲಕ ಪ್ರದರ್ಶನಗಳ ಮೂಲಕ ಮೆರವಣಿಗೆಗಳ ಮೂಲಕ ಪ್ರದರ್ಶಿಸುವುದಲ್ಲ, ಕನ್ನಡ ಕೃತಿಗಳ ಆಳವಾದ ಅಭ್ಯಾಸಕ್ಕೆ ವಿಮರ್ಶೆಗೆ ತಕ್ಕ ವಾತಾವರಣವನ್ನು ಸೃಷ್ಟಿಸುವುದು, ಕನ್ನಡ ಜನಕ್ಕೆ ಆಧುನಿಕ ಜ್ಞಾನವನ್ನು, ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ ಮುಂತಾದ ಸಾಹಿತ್ಯಕ್ಕೆ ಹತ್ತಿರವಾದ ಆಧುನಿಕ ಶಾಸ್ತ್ರಗಳಲ್ಲಿ ನಡೆದ ಸಂಶೋಧನೆಗಳ ಸಾರವನ್ನು ಬಹುಜನಕ್ಕೆ ಮುಟ್ಟಿಸಿ ಆ ಮೂಲಕವೇ ಈ ಯುಗಧರ್ಮಕ್ಕೆ ತಕ್ಕ ಕೆಲಸವನ್ನು ಮಾಡುವುದು. ಇದು ಮಾತ್ರ ಸಲ್ಲುವ ಕೆಲಸ, ಉಳಿದದ್ದೆಲ್ಲ ವ್ಯರ್ಥ.

ಸಾರ್ವಜನಿಕ ಶಿಕ್ಷಣದ ಪ್ರಶ್ನೆ

ಒಂದು ಭಾಷೆಯ ಯೋಗ್ಯತೆಯನ್ನು ಅಳೆಯುವುದು ಅದರಲ್ಲಿ ಎಷ್ಟು ಪುಸ್ತಕಗಳು ಪ್ರಕಟವಾಗಿವೆ ಎಂಬುದರ ಮೇಲಲ್ಲ; ಅದು ನಮ್ಮ ಮನಸ್ಸಿನ ಸೂಕ್ಷ್ಮವಾದ ಕೆಲಸಗಳಿಗೆ ಎಷ್ಟರಮಟ್ಟಿಗೆ ಸಮರ್ಥವಾಗಿದೆ ಎನ್ನುವುದರ ಮೇಲೆ; ನಮ್ಮ ಅಭಿಪ್ರಾಯಗಳನ್ನೂ ಆಧುನಿಕ ವಿಚಾರಗಳನ್ನೂ ಯಥಾವತ್ತಾಗಿ ಮೂಡಿಸುವುದಕ್ಕೆ ನಾವು ಕಂಡ ಹೊಸ ಸತ್ಯಗಳನ್ನು ಮಾಡುವ ಹೊಸ ಸಂಶೋಧನೆಗಳನ್ನೂ ಎಷ್ಟು ಕರಾರುವಾಕ್ಕಾಗಿ, ನಿಃಸಂದಿಗ್ಧವಾಗಿ, ಸಂಕ್ಷೇಪವಾಗಿ ಆದರೂ ಸ್ಪಷ್ಟವಾಗಿ ಹೇಳಲು ಸಮರ್ಥವಾಗಿದೆ ಎನ್ನುವುದರ ಮೇಲೆ. ನಮ್ಮ ಮನಸ್ಸುಗಳು ಬೆಳೆಯದೆ ನಮ್ಮ ಭಾಷೆಯೂ ಬೆಳೆಯುವುದಿಲ್ಲ. ಆದಕಾರಣ ಇದು ಮುಖ್ಯವಾಗಿ ಶಿಕ್ಷಣದ ಪ್ರಶ್ನೆ, ಸಾಹಿತ್ಯ ಪರಿಷತ್ತಿನ ದೃಷ್ಟಿಯಿಂದ ಇದು ಸಾರ್ವಜನಿಕ ಶಿಕ್ಷಣದ ಪ್ರಶ್ನೆ.

ಸಮ್ಮೇಳನದ ಅಧ್ಯಕ್ಷರ ಅಧಿಕಾರ ಏನು?

ಸಾಹಿತ್ಯ ಪರಿಷತ್ತಿನ ಈಗಿನ ನಿಯಮಗಳಿಗನುಸಾರವಾಗಿ ಅದರ ವಾರ್ಷಿಕ ಸಮ್ಮೇಳನದ ಅಧ್ಯಕ್ಷನಿಗೆ ಯಾವ ಅಧಿಕಾರವೂ ಇಲ್ಲ, ಅವನು ಕೇವಲ ಒಂದು ಉತ್ಸವ ಮೂರ್ತಿ. ಆದ ಕಾರಣ ಸಮ್ಮೇಳನಾಧ್ಯಕ್ಷನಾಗಿ ನಾನು ಸಾಧಿಸಲು ಸಾಧ್ಯವಾಗಬಹುದಾದ ಕೆಲಸಕ್ಕೆ ಅವಕಾಶ ಬಹಳ ಕಡಿಮೆಯೇ. ಅಲ್ಲದೆ ಸಾಹಿತ್ಯ  ಪರಿಷತ್ತೂ ಪ್ರಜಾತಂತ್ರಾತ್ಮಕವಾದ ಚುನಾವಣೆಯ ಪದ್ಧತಿಯಿಂದ ರೂಪುಗೊಂಡದ್ದು. ಅದನ್ನು ಯಾವನೇ ಒಬ್ಬ ವ್ಯಕ್ತಿ ತನ್ನ ಇಷ್ಟದಂತೆ ನಡೆಸಿಕೊಳ್ಳುವುದು ಸಾಧ್ಯವಿಲ್ಲ. ಬಹುಮತದಂತೆಯೇ ಅದು ನಡೆಯಬೇಕು. ಸಾಹಿತ್ಯ ಕಲೆಗಳಂಥ ಮನುಷ್ಯನ ವಿಶೇಷ ಸಾಧನೆಗಳಿಗೆ ಈ ಬಹುಮತ ವ್ಯವಸ್ಥೆ ಸರಿಯೇ? ಎಂದು ನಾವೆಲ್ಲರೂ ಯೋಚಿಸಬೇಕು. ಒಂದು ಕಾವ್ಯದ ಯೋಗ್ಯತೆಯನ್ನು ಓಟಿಗೆ ಹಾಕಿ ನಿರ್ಧರಿಸಬಹುದೇ? ಇಲ್ಲವಾದರೆ ಏನು ಮಾಡಬೇಕು? ಅದರ ನಿರ್ಧಾರವನ್ನು ಕಾಲಕ್ಕೆ ಬಿಡುವುದೇನೋ ಕ್ಷೇಮ. ಇಲ್ಲವಾದರೆ ಆ ವಿಷಯದಲ್ಲಿ ದಕ್ಷರಾದ ನಿಸ್ಪೃಹ ವಿಮರ್ಶಕರು ಪ್ರಜಾತಂತ್ರಾತ್ಮಕವಾಗಿ ಈ ಕೆಲಸ ಮಾಡಲು ಬಿಡಬೇಕು. ಒಂದು ಕಾಲದಲ್ಲಿ ಕನ್ನಡದಲ್ಲಿ ಬರೆಯುವವರಾಗಲೀ ಬರೆದದ್ದನ್ನು ಓದುವವರಾಗಲೀ ತೀರ ವಿರಳವಾಗಿದ್ದಾಗ ಸ್ಥಾಪಿತವಾಗಿರುವುದು ಈ ಪರಿಷತ್ತು. ಆ ಕಾಲದಲ್ಲಿ ಈ ಸಂಸ್ಥೆಯನ್ನು ಕನ್ನಡಿಗರೆಲ್ಲರಿಗೂ ವಯಸ್ಕರಾದ ಎಲ್ಲರಿಗೂ ಮುಕ್ತವಾಗಿಟ್ಟಿದ್ದು ಆ ಕಾಲಕ್ಕೆ ಸರಿ, ಆದರೆ ಈಗ ಅದು ಸರಿಹೋಗುವುದಿಲ್ಲ ಎನ್ನಿಸಿದಾಗ ಏನು ಮಾಡಬೇಕು?

ಪರಿಷತ್ತು ಈ ಕಾಲಕ್ಕೆ ಏನು ಮಾಡಬೇಕು

ನಮ್ಮಲ್ಲಿ ಪ್ರತಿಯೊಂದು ಸಂಸ್ಥೆಯೂ ಬಹು ಬೇಗ ಜಡವಾಗಿ ಹೋಗುವಂತೆ ಈ ಸಂಸ್ಥೆಯೂ ತೀರ ಜಡವಾಗಿ ಯಾಂತ್ರಿಕವಾಗಿ ಈವರೆಗೆ ಮಾಡಿಕೊಂಡು ಬಂದದ್ದನ್ನೇ ಮಾಡುತ್ತ ಹೋಗುತ್ತಿದೆ. ಇದನ್ನು ನಿವಾರಿಸುವ ದಾರಿ ಯಾವುದು ಎಂದು ನಾವೆಲ್ಲರೂ ಯೋಚಿಸಬೇಕು? ಸಾಹಿತ್ಯ ಕೃತಿಗಳಿಗೆ ಸಂಬಂಧಪಟ್ಟ ವಿಮರ್ಶೆ ಮೌಲ್ಯ ನಿರ್ಣಯ ಮುಂತಾದುವುಗಳಿಗಾಗಿಯೇ ಫ್ರೆಂಚ್ ಅಕಾಡೆಮಿಯ ರೀತಿಯ ಅತ್ಯುಚ್ಚ ಧೀಮಂತರ ಒಂದು ವಿಶಿಷ್ಟ ಸಂಸ್ಥೆಯನ್ನು ಸಾಹಿತ್ಯ ಪರಿಷತ್ತು ಸ್ಥಾಪಿಸಿ ಅದನ್ನು ಸ್ವತಂತ್ರವಾದ ಒಂದು ಸಣ್ಣ ಘಟಕವನ್ನಾಗಿ ನಡಸಿಕೊಂಡು ಬರುವುದು ಸಾಧ್ಯವಾದೀತೇ ಎಂದು ಪರೀಕ್ಷಿಸಿ ನೋಡಬೇಕು. ಇದು ತೀರ ದೊಡ್ಡ ಸಂಘವಾಗದೆ ಇಡೀ ಕರ್ನಾಟಕದಲ್ಲಿ ಅತ್ಯುತ್ತಮ ಧೀಮಂತರಾದ ಹತ್ತು ಹದಿನೈದು ಮಂದಿ ನಿಷ್ಪಕ್ಷಪಾತ ವಿದ್ವಾಂಸರಿಗೆ ಆ ಕೆಲಸವನ್ನು ಒಪ್ಪಿಸಬಹುದು ಎಂದು ನನ್ನ ಸೂಚನೆ. ಆ ವಿದ್ವಾಂಸ ಮಂಡಳಿಯಲ್ಲಿ ಸಾಹಿತಿಗಳೇ ಇರಬೇಕಾದ ಅಗತ್ಯವಿಲ್ಲ. ಇತರ ಕಲೆಗಳು ಶಾಸ್ತ್ರಗಳ ವಿಜ್ಞಾನಗಳ ಪರಿಣತರೂ ಇರಬಹುದು. ಶ್ರೇಷ್ಠತೆಯ ಪ್ರಶ್ನೆ, ತತ್ವದ ಪ್ರಶ್ನೆ, ಮೌಲ್ಯಮಾಪನದ ಪ್ರಶ್ನೆ ಬಂದಾಗ ಆ ಪ್ರಶ್ನೆಗಳು ಈ ಸ್ವತಂತ್ರ ಧೀಮಂತ ಮಂಡಳಿಗೆ ಒಪ್ಪಿಸಿ ಅದರ ತೀರ್ಮಾನವನ್ನು ಎಲ್ಲರೂ ಗೌರವಿಸಬಹುದು.

ಶ್ರೇಷ್ಠ ಕೃತಿಗಳ ಪ್ರಕಟನೆ

ಪ್ರಜಾತಂತ್ರದ ಸಂದರ್ಭದಲ್ಲಿ ಇಂಥ ಒಂದು ಮಂಡಳಿ ಅತ್ಯಗತ್ಯ ಎಂದು ನನಗೆ ತೋರುತ್ತದೆ. ಆಗ ಪರಿಷತ್ತು ತನ್ನ ಈ ಪ್ರಜಾತಂತ್ರದ ಚೌಕಟ್ಟಿನಲ್ಲೇ ಸಾರ್ವಜನಿಕ ಶಿಕ್ಷಣದ ಕೆಲಸವನ್ನೂ ಇನ್ನೂ ಯಾರೂ ಪ್ರಕಟಿಸಲು ಮುಂದೆ ಬಾರದೆ ಇರಬಹುದಾದ ಆದರೆ ಅತ್ಯಂತ ಶ್ರೇಷ್ಠವಾದ ಕೃತಿಗಳನ್ನು ಪ್ರಕಟಿಸುವುದು, ಸಾಹಿತ್ಯಾಭ್ಯಾಸಕ್ಕೆ ಅಗತ್ಯವಾದ ನಿಘಂಟು ಮುಂತಾದ ಸಹಾಯಕ ಪ್ರೌಢ ಗ್ರಂಥಗಳನ್ನು ಪ್ರಕಟಿಸುವುದು, ಒಂದು ವರ್ಷದಲ್ಲಿ ಪ್ರಕಟವಾದ ಅತ್ಯುತ್ತಮ ಕವನಗಳನ್ನೋ ಕಥೆಗಳನ್ನೋ ಪ್ರಬಂಧಗಳನ್ನೋ ಪುಸ್ತಕ ರೂಪದಲ್ಲಿ ಪ್ರಕಟಿಸುವುದು ಮುಂತಾದ ಕೆಲಸಗಳನ್ನು ಮಾಡಬಹುದು. ಪ್ರಕಟಿಸುವಾಗ ಅತ್ಯುತ್ತಮವಾದವುಗಳನ್ನೇ ಆರಿಸಲು ತಕ್ಕ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.

ಗದ್ಯಾನುವಾದಗಳು ಬೇಡ

ಹಳೆಗನ್ನಡ ಕಾವ್ಯಗಳ ಗದ್ಯಾನುವಾದಗಳನ್ನು ಪ್ರಕಟಿಸುವ ಒಂದು ಯೋಜನೆಯನ್ನು ಪರಿಷತ್ತು ಇನ್ನೂ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಶೋಚನೀಯ ಸಂಗತಿ. ಯಾವ ಕಾವ್ಯವನ್ನೇ ಆಗಲಿ ಅದನ್ನು ಕಾವ್ಯರೂಪದಲ್ಲೇ ಓದಬೇಕಲ್ಲದೆ ಅದರ ಗದ್ಯ ರೂಪವನ್ನು ಸಿದ್ಧಪಡಿಸಿದರೆ ಕವಿಗೆ ಭಾರೀ ಅಪಚಾರ ಮಾಡಿದಂತೆ. ನಮ್ಮ ವಿದ್ಯಾರ್ಥಿಗಳನೇಕರು ಕವನವನ್ನು ಓದದೆ ಅವುಗಳ ಸಾರಾಂಶವನ್ನೇ ಗೈಡುಗಳಲ್ಲಿ ಕೊಟ್ಟಿರುವ ಗದ್ಯ ಭಾಷಾಂತರಗಳನ್ನೇ ಓದಿ ಕಾವ್ಯದಿಂದ ಸಿಕ್ಕುವ ಸಂಸ್ಕಾರಕ್ಕೆ ಬಾಹಿರವಾಗುತ್ತ ಬರುತ್ತಿದ್ದಾರೆ. ಈ ರೋಗವನ್ನು ಇನ್ನಷ್ಟು ಸಾರ್ವಜನಿಕವಾಗಿ ಮಾಡುವ ಈ ಪ್ರಯತ್ನ ಅತ್ಯಂತ ಹಾಸ್ಯಾಸ್ಪದವಾದುದಾದರೂ ನಮ್ಮ ಇಂದಿನ ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ನನಗೆ ಅಳು ಬರುವಂತೆ ಮಾಡುತ್ತಿದೆ. ಕಾವ್ಯದ ಅಭ್ಯಾಸಕ್ಕೆ ಬೇಕಾದ ಕಠಿಣ ಪದಗಳ ಅರ್ಥ, ವಿಶೇಷ ಸಂದರ್ಭಗಳ ವಿವರ, ಟೀಕೆ ಟಿಪ್ಪಣಿ ಇವು ನಮ್ಮ ಕಾವ್ಯಗಳಿಗೆ ಅಗತ್ಯವಾಗಬಹುದು. ಆದರೆ ಗದ್ಯಾನುವಾದ ಖಂಡಿತ ಅಲ್ಲ. ಇಂದೂ ಕೂಡ ನಮ್ಮ ಜನ ಪಂಪನನ್ನು ನಾರಣಪ್ಪನನ್ನೂ ಓದಬೇಕು, ಸರಿಯಾಗಿ ಲಯ ಹಿಡಿದು ಓದುವುದಕ್ಕೆ ಕಲಿಯಬೇಕು ಅದರಿಂದಲೇ ನಮ್ಮ ಜನದಲ್ಲಿ ಕಾವ್ಯಾಭಿರುಚಿ ಹುಟ್ಟುವುದು ಸಾಧ್ಯ. ಆ ಬಗ್ಗೆ ಪರಿಷತ್ತು ತಕ್ಕ ಏರ್ಪಾಟು ಮಾಡಲಿ. ಆದರೆ ನಾನು ಸೆರಗೊಡ್ಡಿ ಬೇಡಿಕೊಳ್ಳುತ್ತೇನೆ ಇಂಥ ಗದ್ಯಾನುವಾದಗಳನ್ನು ಸಾಹಿತ್ಯ ಪರಿಷತ್ತು ಖಂಡಿತವಾಗಿ ಪ್ರಕಟಿಸಬಾರದು. ಕಾವ್ಯದ ಅನುಭವದಲ್ಲಿ ಅರ್ಥದಲ್ಲಿ ಕೊನೆಯ ಪಕ್ಷ ಅರ್ಧದಷ್ಟನ್ನಾದರೂ ಅದರ ಲಯವೇ ಪದಸಮ್ಮಿಳನದ ನಾದವೇ ಹುಟ್ಟಿಸುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಸಾಹಿತ್ಯ ಪರಿಷತ್ತು ಖಂಡಿತವಾಗಿಯೂ ಮರೆಯಬಾರದು.

ಸಮ್ಮೇಳನದ ಗೋಷ್ಠಿಗಳು ಹೇಗಿರಬೇಕು?

ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹಳೆಯ ಹೊಸ ಕವಿಗಳ ಮೇಲೆ ವಿಚಾರ ಗೋಷ್ಠಿಗಳನ್ನು ಸಾಹಿತ್ಯ ಪರಿಷತ್ತು ನಡೆಸಿಕೊಂಡು ಬರುತ್ತಿದೆ. ಕವಿಯ ಪರಿಚಯವೇ ನಮ್ಮ ಜನಕ್ಕೆ ಇಲ್ಲದೆ ಇರುವಾಗ ಇಂಥ ಗೋಷ್ಠಿಗಳು ನಿರರ್ಥಕವಾಗುತ್ತವೆ. ಪಂಡಿತರ ವಾದಸರಣಿಯನ್ನು ಸಭಿಕರಿಗೆ ಅನುಸರಿಸುವುದು ಸಾಧ್ಯವಾಗುವುದಿಲ್ಲ. ಸಭಿಕರ ಮುಂದೆ ತೀರ ಪ್ರೌಢವಾದ ಪ್ರಬಂಧವನ್ನು ಮಂಡಿಸಲು ತಕ್ಕ ವಿಮರ್ಶಕರೂ ಕಡಿಮೆ, ಕೇಳಿ ಮೆಚ್ಚುವವರಿಲ್ಲದೆ ಅವರ ಶ್ರಮ ನಿರರ್ಥಕವೂ ಆಗಬಹುದು. ಆದಕಾರಣ ನಮ್ಮ ನಾಡಿನ ಎಲ್ಲ ಕಡೆಗಳಲ್ಲೂ ಹಳ್ಳಿಗಳಲ್ಲೂ ಕೂಡ ಸಾಹಿತ್ಯ ಪರಿಷತ್ತು ಒಂದು ಸಾಂಸ್ಕೃತಿಕ ಸಂಸ್ಥೆಯಾಗಿ ಕೆಲಸ ಮಾಡುತ್ತ ನಮ್ಮ ಹಳೆಗನ್ನಡದ ನಡುಗನ್ನಡದ ಕವಿ ಸಾಹಿತಿಗಳ ಕೃತಿಗಳ ಪರಿಚಯ ಮಾಡಿಕೊಡುವ ವ್ಯವಸ್ಥೆಯನ್ನು ಕೈಗೊಳ್ಳಬಹುದು. ಕಾವ್ಯವನ್ನು ಹೇಗೆ ಓದಬೇಕು, ಕಾವ್ಯ ಅರ್ಥವನ್ನು ಹೇಗೆ ಸೃಷ್ಟಿಸುತ್ತದೆ ಎನ್ನುವುದನ್ನು ಉದಾಹರಣೆಗಳ ಮೂಲಕ ನಮ್ಮ ಪ್ರಭುಗಳಾದ ಸಾಮಾನ್ಯ ಜನತೆಗೆ ತೋರಿಸಿಕೊಡಬಹುದು. ಇದರಿಂದ ಸಾಹಿತ್ಯದಿಂದ ಬರಬೇಕಾದ ಸಂಸ್ಕಾರ ಅನೇಕ ಜನರಿಗೆ ದೊರೆವಂತಾಗಿ ಸಾಹಿತ್ಯ ಪರಿಷತ್ತಿನ ಕೆಲಸ ನಿಜವಾಗಿಯೂ ಜನೋಪಯೋಗಿ ಆಗುತ್ತದೆ. ಒಟ್ಟಿನಲ್ಲಿ ಸಾಹಿತ್ಯ ಪರಿಷತ್ತು ನಿಜವಾದ ಸಾಹಿತ್ಯ ಪರಿಷತ್ತೇ ಆಗುವಂತೆ ಮಾಡಲು ನಾನೂ ನೀವೂ ಸೇರಿ ಪ್ರಯತ್ನಿಸೋಣ.

Tag: Kannada Sahitya Sammelana 51, M. Gopalakrishna Adiga

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)