ಸಾಹಿತ್ಯ ಸಮ್ಮೇಳನ-೫೪ : ಮಡಿಕೇರಿ
ನವೆಂಬರ್ ೧೯೮೧

ಅಧ್ಯಕ್ಷತೆ: ಶಂ.ಬಾ. ಜೋಶಿ

sham-ba-joshi

೫೪ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಶಂ.ಬಾ. ಜೋಶಿ

ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಬಾಳದೀಕ್ಷಿತ ಜೋಶಿ ಮತ್ತು ಉಮಾಬಾಯಿ ಅವರ ಮಗನಾಗಿ ೪-೧-೧೮೯೬ರಲ್ಲಿ ಗುರ್ಲಹೊಸೂರಿನಲ್ಲಿ ಜನಿಸಿದರು. ಜೋಶಿ ಅವರ ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. ೧೯೧೬ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು.

ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ ೧೯೨೬-೨೭ರಲ್ಲಿ ಸೇವೆ ಸಲ್ಲಿಸಿದ ಮೇಲೆ ೧೯೨೮ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದರು. ಅಲ್ಲಿ ೧೯೪೬ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು. ಕರ್ನಾಟಕ ವೃತ್ತ, ಧನಂಜಯ, ಕರ್ಮವೀರ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ೧೯೩೮ರಲ್ಲಿ ಹಾವೇರಿಯಲ್ಲಿ ಜರುಗಿದ ೩ನೇ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ, ೧೯೪೯ರಲ್ಲಿ ಜರುಗಿದ ೨ನೇ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ೧೯೮೧ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.

ಕರ್ಣಾಟಕ ಸಂಸ್ಕೃತಿಯ ಪೂರ್ವಪೀಠಿಕೆ ಎಂಬ ಗ್ರಂಥಕ್ಕೆ ೧೯೭0ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಮೈಸೂರು ವಿಶ್ವವಿದ್ಯಾನಿಲಯವು ೧೯೭೧ರಲ್ಲಿ ಡಿಲಿಟ್ ನೀಡಿ ಇವರನ್ನು ಗೌರವಿಸಿತು. ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಸಂಸ್ಕೃತ, ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿಬಲ್ಲ ಶಂ.ಬಾ. ಜೋಶಿ ಅವರು ಮರಾಠಿಯಲ್ಲಿಯೂ ಕೆಲವು ಕೃತಿಗಳನ್ನು ಬರೆದಿದ್ದಾರೆ. ಶಂ.ಬಾ. ಜೋಶಿ ಅವರ ಪ್ರಮುಖ ಕೃತಿಗಳು ಹೀಗಿವೆ :

ಕಣ್ಮರೆಯಾದ ಕನ್ನಡ, ಕರ್ಣಾಟಕ ಸಂಸ್ಕೃತಿಯ ಪೂರ್ವಪೀಠಿಕೆ, ಕನ್ನಡ ನುಡಿಯ ಜೀವಾಳ, ಕನ್ನಡ ಸಾಹಿತ್ಯ ಅಭಿವೃದ್ಧಿ, ಅನ್ನವಿದ್ಯೆ, ಯಕ್ಷಪ್ರಶ್ನೆ, ಹಾಲುಮತದರ್ಶನ, ನಾಗಪ್ರತಿಮಾ ವಿಚಾರ, ಕರ್ಣನ ಮೂರು ಚಿತ್ರಗಳು, ಕಂನಾಡ ಕಥೆ, ಕನ್ನಡದ ನೆಲೆ ಇತ್ಯಾದಿ.

ಕನ್ನಡ ಸಾಹಿತ್ಯ ಸಮ್ಮೇಳನ-೫೪,

ಅಧ್ಯಕ್ಷರು, ಶಂ.ಬಾ. ಜೋಶಿ

ದಿನಾಂಕ ೨೭, ೨೮, ೨೯, ೩0 ನವೆಂಬರ್ ೧೯೮೧

ಸ್ಥಳ : ಮಡಿಕೇರಿ

ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾದ ಕೆಲಸ

ಕನ್ನಡ ಸಾಹಿತ್ಯ ಪರಿಷತ್ತು ತನ್ನ ದೀರ್ಘ ಬದುಕಿನಲ್ಲಿ ಕನ್ನಡದ ಸಾಂಸ್ಕೃತಿಕ ಬದುಕಿಗೆ ಮಹತ್ವದ ಕಾಣ್ಕೆ ನೀಡಿದ ಸಂಸ್ಥೆ. ಹಿಂದೊಮ್ಮೆ ಬೀಸಿಹೋದ ಸ್ಪರ್ಧೆಯ ಸುಂಟರಗಾಳಿ ಇಂದು ಮತ್ತೆ ಪರಿಷತ್ತಿನಲ್ಲಿ ಪ್ರವೇಶಿಸುವಂತೆ ಕಾಣುತ್ತಿದೆ. ಪರಿಷತ್ತಿನ ಮೂಲ ಆಶಯಕ್ಕೆ ಭಂಗ ತರುವ ಕಾರ್ಯ ನಡೆಯದಿರಲೆಂದು ಸೂಚಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.

ಸಾಹಿತ್ಯ ಪರಿಷತ್ತು ವಿಕೇಂದ್ರೀಕರಣದ ಹಾದಿಯಲ್ಲಿ ಸಾಗಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪರಿಷತ್ತಿನ ಘಟಕಗಳನ್ನೇನೊ ರಚಿಸಲಾಗಿದೆ. ಆದರೆ ಅವು ಸ್ವತಂತ್ರವಾಗಿ ಕಾರ್ಯ ಮಾಡಲು ಶಕ್ತವಾಗುವಂತೆ ಜೀವ ತುಂಬುವ ಕಾರ್ಯವನ್ನು ಕೇಂದ್ರ ಪರಿಷತ್ತು ಇನ್ನೂ ಮಾಡಿಲ್ಲ. ವರ್ಷದುದ್ದಕ್ಕೂ ಕಾರ್ಯ-ಚಟುವಟಿಕೆ ನಡೆಯಿಸಿಕೊಂಡು ಹೋಗುವ ಸಲುವಾಗಿ ವರ್ಷದಾದಿಯಲ್ಲೇ ರೂಪ-ರೇಷೆ ತಯಾರಿಸಿ, ಸಾಕಷ್ಟು ಹಣಕಾಸು ಮಂಜೂರು ಮಾಡಿ, ಅವು ಕಾರ್ಯಗತವಾಗುವಂತೆ ಅನಂತರ ಮೇಲ್ನೋಟ ಇಡಬೇಕು.

ಪರಿಷತ್ತಿನ ಸಾಹಿತ್ಯಿಕ ಪ್ರಕಟನೆಗಳು, ಉಪನ್ಯಾಸಗಳು ಮುಂತಾದ ಚಟುವಟಿಕೆಗಳಲ್ಲಿ ಕರ್ನಾಟಕದ ಕಡೆಯ ಗಡಿಯಲ್ಲಿರುವವರೂ ಭಾಗವಹಿಸಲು ಅವಕಾಶ ಕಲ್ಪಿಸಬೇಕು. ಪರಿಷತ್ತು ಬೆಂಗಳೂರಿನವರಿಗಾಗಿ, ಬೆಂಗಳೂರಿನ ಸಮೀಪದವರಿಗಾಗಿ ಇದೆಯೆಂದು ಆರೋಪಿಸುತ್ತಿರುವುದು ತೀರ ಸುಳ್ಳಲ್ಲ. ಅಖಿಲ ಕರ್ನಾಟಕದ ಜಿಜ್ಞಾಸುಗಳನ್ನೆಲ್ಲ ವಿಶ್ವಾಸದಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಬೇಕೆಂದು ಹಾರೈಸುವೆ.

ಸಾಹಿತ್ಯ ಸಮ್ಮೇಳನ ಹೇಗಿರಬೇಕು?

ಸಾಹಿತ್ಯ ಸಮ್ಮೇಳನ ಜಾತ್ರೆಯ ಸ್ವರೂಪ ಪಡೆಯುತ್ತಿರುವುದರಿಂದ ಗಂಭೀರ ವಾದ ವಿಚಾರ ವಿನಿಮಯಕ್ಕೆ ಅವಕಾಶವಿಲ್ಲದಾಗಿದೆಯೆಂಬ ಆರೋಪದಿಂದ ಮುಕ್ತವಾಗಲು, ಒಂದು ಸೂಚನೆ ಮಾಡಬಯಸುವೆ. ಕರ್ನಾಟಕದಲ್ಲಿಯ ಎಲ್ಲ ವಿಶ್ವವಿದ್ಯಾಲಯಗಳಲ್ಲಿಯ ಎಲ್ಲ ಜ್ಞಾನಶಾಖೆಗಳ ಪರಿಣತರು ಮತ್ತು ಇನ್ನುಳಿದ ಪ್ರಖ್ಯಾತ ಪ್ರಜ್ಞಾವಂತರನ್ನು ಸಾಹಿತ್ಯ ಪರಿಷತ್ತು ಸಂಘಟಿಸಿ ಉಚ್ಛಮಟ್ಟದ ವಿಚಾರ ವಿನಿಮಯ, ಗಂಭೀರ ಚರ್ಚೆಗಳಿಗೆ ಅನುವು ಮಾಡಿಕೊಡಬೇಕು. ಪ್ರತಿ ಮೂರು ವರ್ಷಗಳಿಗೊಮ್ಮೆ ಇಂಥ ತಜ್ಞರ ಸಮ್ಮೇಲನ ಸೇರಿಸಿ, ಸಾಹಿತ್ಯದೊಂದಿಗೆ ಉಳಿದ ಜ್ಞಾನ ಶಾಖೆಗಳ ಸಂಬಂಧ, ಅವುಗಳಲ್ಲಿಯ ಇತ್ತೀಚೆಗಿನ ಸಂಶೋಧನಗಳ ಉಪಯೋಗವನ್ನು ಸಾಹಿತ್ಯ ಕ್ಷೇತ್ರ ಪಡೆದುಕೊಳ್ಳುವ ಯೋಜನೆ ಇತ್ಯಾದಿಗಳ ಬಗ್ಗೆ ಪ್ರೌಢ ಪ್ರಬಂಧಗಳನ್ನು ಮಂಡಿಸಲು ಏರ್ಪಾಡು ಮಾಡಬೇಕು. ಮತ್ತು ಅಲ್ಲಿ ಮುಕ್ತ ಚರ್ಚೆ ಮಾಡಲು ಅವಕಾಶ ಇರಬೇಕು. ಈ ಉದ್ದೇಶಕ್ಕಾಗಿ ಪರಿಷತ್ತು ಪ್ರಾತಿನಿಧಿಕ ಸ್ವರೂಪದ ಸ್ಥಾಯಿಮಂಡಲಿ ರಚಿಸಿ ಕಾರ್ಯ ಆರಂಭಿಸಬೇಕು.

Tag: Kannada Sahitya Sammelana 54, Shamba Joshi, Shambaa, Shambha

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)