ಸಾಹಿತ್ಯ ಸಮ್ಮೇಳನ-೫೭

ಅಧ್ಯಕ್ಷತೆ: ಹಾ.ಮಾ. ನಾಯಕ

ha-ma-nayak

೫೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಹಾ.ಮಾ. ನಾಯಕ

ಅಂಕಣ ಸಾಹಿತ್ಯದಿಂದ ಕನ್ನಡದಲ್ಲಿ ಪ್ರಸಿದ್ಧರಾದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ ಶ್ರೀನಿವಾಸನಾಯಕ-ರುಕ್ಮಿಣಿಯಮ್ಮ ದಂಪತಿಗಳಿಗೆ ಹಿರಿಯ ಮಗನಾಗಿ ೧೨-೧೧-೧೯೩೧ರಂದು ಜನಿಸಿದರು. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ೧೯೫೮ರಲ್ಲಿ ಭಾಷಾವಿಜ್ಞಾನದಲ್ಲಿ ಎಂ.ಎ. ಪದವಿಯನ್ನು ಪಡೆದರು.

೧೯೫೫ರಲ್ಲಿ ತುಮಕೂರಿನಲ್ಲಿ ಕನ್ನಡ ಅಧ್ಯಾಪಕರಾಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದರು. ೧೯೮೪ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ನೇಮಕಗೊಂಡರು. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ೧೯೯೧ರವರೆಗೂ ಸೇವೆಸಲ್ಲಿಸಿ ನಿವೃತ್ತರಾದರು.

ಹಾ.ಮಾ.ನಾ ಅವರಿಗೆ ಬಂದಿರುವ ಪ್ರಶಸ್ತಿಗಳು ಸಾಕಷ್ಟಿವೆ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಅವರಿಗೆ ಲಭ್ಯವಾಗಿವೆ.

‘ಸಲ್ಲಾಪ’ ಗ್ರಂಥಕ್ಕೆ ಮೈ.ವಿ.ವಿ ಸುವರ್ಣ ಮಹೋತ್ಸವ ಪ್ರಶಸ್ತಿ, ‘ಸಂಪ್ರತಿ’ ಗ್ರಂಥಕ್ಕೆ ಐ.ಬಿ.ಎಚ್. ಎಜುಕೇಷನ್ ಟ್ರಸ್ಟ್ ಪ್ರಶಸ್ತಿ ಲಭಿಸಿವೆ.

ದೇಶವಿದೇಶಗಳಲ್ಲಿ ನಾನಾ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದರು. ಬೀದರ್‍ನಲ್ಲಿ ನಡೆದ ೫೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ಭಾಗ್ಯ ಇವರದಾಗಿತ್ತು.

ಇವರು ರಚಿಸಿರುವ ಕೆಲವು ಪ್ರಮುಖ ಕೃತಿಗಳು: ಬಾಳ್ನೋಟಗಳು, ನಮ್ಮ ಮನೆಯ ದೀಪ, ಜಾನಪದ ಸ್ವರೂಪ, ಪ್ರಣಯ ವಿದ್ಯಾವಲಿ, ರವೀಂದ್ರನಾಥ್ ಠಾಕೂರ್, ಗೋರೂರು ಗೌರವ ಗ್ರಂಥ, ಎ.ಆರ್.ಕೃ ಜೀವನ ಸಾಧನೆ, ಜಾನಪದ ಗ್ರಂಥಸೂಚಿ, ಬಿಡುಗಡೆಬಳ್ಳಿ, ಗದ್ಯವಿಹಾರ, ಗಳಗನಾಥ, ಮುದ್ದಣ, ಕನ್ನಡ ಸಾಹಿತ್ಯ ಚರಿತ್ರೆಯ ಸಂಪುಟಗಳು ಇವರಿಂದ ಸಂಪಾದಿತವಾಗಿವೆ.

ಸಂಪ್ರತಿ, ಸಂಕೀರ್ಣ, ಸಮೀಕ್ಷೆ, ಸಂದರ್ಭ, ಸಂಗ್ರಹ, ಸಂಚಯ, ಸೃಜನ, ಸಂಪರ್ಕ, ಸಂವಹನ, ಮೊದಲಾದ ಅಂಕಣ ಬರಹಗಳು ಪುಸ್ತಕಗಳಾಗಿ ಹೊರಬಂದಿವೆ.

ಮೈಸೂರಿನಲ್ಲಿ ನೆಲೆಸಿದ್ದ ಹಾ.ಮಾ.ನಾ ಅವರು ೧0-೧೧-೨000ರಲ್ಲಿ ನಿಧನರಾದರು.

 

ಕನ್ನಡ ಸಾಹಿತ್ಯ ಸಮ್ಮೇಳನ-೫೭,

ಅಧ್ಯಕ್ಷರು, ಹಾ.ಮಾ. ನಾಯಕ

ದಿನಾಂಕ ೫, ೬, ೭ ಏಪ್ರಿಲ್ ೧೯೮೫,

ಸ್ಥಳ : ಬೀದರ್

ಹಿಂದಿನ ಸಮ್ಮೇಳನಾಧ್ಯಕ್ಷರ ಕಾರ್ಯ

ಈ ಮೊದಲು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದವರ ಪಟ್ಟಿಯನ್ನು ನೋಡಿದರೆ ಅವರೆಲ್ಲರನ್ನು ಸ್ಥಳವಾಗಿ ಮೂರು ಗುಂಪು ಮಾಡಬಹುದೆಂದು ತೋರುತ್ತದೆ. ಒಂದು ಗುಂಪಿನವರು ಅದ್ಭುತ ಸೃಜನಶೀಲರು (ಕುವೆಂಪು, ಬೇಂದ್ರೆ, ಕಾರಂತ, ಗೋಕಾಕ್ ಮೊ.); ಇನ್ನೊಂದು ಗುಂಪಿನವರು ಮಹಾ ವಿದ್ವಾಂಸರು (ಉಪಾಧ್ಯೆ, ಪೈ, ಹಳಕಟ್ಟಿ, ಡಿ.ಎಲ್.ಎನ್., ನರಸಿಂಹಾಚಾರ್ ಮೊ.); ಮತ್ತೊಂದು ಗುಂಪಿನವರು ಕನ್ನಡದ ಕೆಲಸಗಾರರು; ಸೃಜನಶೀಲವಾದ ಅಥವಾ ವಿದ್ವತ್ತಿನ ಕೆಲಸವನ್ನು ಅವರು ಮಾಡಿರಬಹುದು ಅಥವಾ ಮಾಡದೆಯೂ ಇರಬಹುದು. ಆದರೆ ಅವರ ಕನ್ನಡದ ಕೆಲಸವೇ ದೊಡ್ಡದು (ಬೆಳ್ಳಾವೆ ವೆಂಕಟನಾರಣಪ್ಪ, ಮುದವೀಡು ಕೃಷ್ಣರಾವ್, ಕೆ.ಪಿ. ಪುಟ್ಟಣ್ಣಶೆಟ್ಟಿ, ಬೆನಗಲ್ ರಾಮರಾವ್, ತಿ.ತಾ. ಶರ್ಮ ಮೊ.). ಭಾಷೆ ಸಾಹಿತ್ಯಗಳ ಬೆಳವಣಿಗೆಗೆ ಇವರೆಲ್ಲರೂ ಮುಖ್ಯರಾದವರು. ಆದ್ದರಿಂದಲೇ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಎಲ್ಲ ಬಗೆಯ ಕೆಲಸಗಾರರನ್ನೂ ಒಂದೇ ದೃಷ್ಟಿಯಿಂದ ನೋಡಿಕೊಂಡು ಬಂದಿದೆ. ನಾನು ಕನ್ನಡದ ಕೆಲಸಗಾರರಲ್ಲಿ ಕೊನೆಯವನು, ಕಿರಿಯವನು, ನನಗಿಂತ ಕೊನೆಯವರಿಲ್ಲ, ಕಿರಿಯವರಿಲ್ಲ. ಇದನ್ನು ತುಂಬ ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡು ಈ ಮಹಾಗೌರವವನ್ನು ವಿನೀತನಾಗಿ ಸ್ವೀಕರಿಸಿದ್ದೇನೆ.

ಪರಿಷತ್ತಿನ ಸಾಧನೆ

ನನ್ನ ಭಾಷಣವನ್ನು ಮುಗಿಸುವ ಮುಂಚೆ ಕನ್ನಡ ಸಾಹಿತ್ಯ ಪರಿಷತ್ತಿನ ವಿಷಯವಾಗಿ ಕೆಲವು ಮಾತುಗಳನ್ನು ಆಡಬೇಕಾಗಿದೆ. ಪರಿಷತ್ತು ಕನ್ನಡಿಗರೆಲ್ಲರಿಗೂ ಮಾತೃಸಂಸ್ಥೆ. ಸಾಹಿತ್ಯ ಸಂಸ್ಕೃತಿಗಳ ವಿಷಯದಲ್ಲಿ ಅದು ಪ್ರಾತಿನಿಧಿಕ ಸಂಸ್ಥೆ. ನಮ್ಮ ಹಿರಿಯರು ಅದನ್ನು ತಮ್ಮ ತ್ಯಾಗ ದುಡಿಮೆಗಳಿಂದ ಕಟ್ಟಿದರು. ಅದಕ್ಕೆ ಧನಬಲವಿಲ್ಲದ ದಿನಗಳಲ್ಲಿ ಪದಾಧಿಕಾರಿಗಳಾಗಿದ್ದವರು ತಮ್ಮ ಸ್ವಂತ ಹಣವನ್ನು ಹಾಕಿ ಪರಿಷತ್ತನ್ನು ನಡೆಸಿಕೊಂಡು ಬಂದರು. ಆ ದಿನಗಳಲ್ಲಿ ಅಲ್ಲಿ ಯಾವ ಬಗೆಯ ಪೈಪೋಟಿಗಳೂ ಇರಲಿಲ್ಲ. ಇದ್ದರೂ ಅದು ಕೇವಲ ಪ್ರಜಾಪ್ರಭುತ್ವ ತತ್ವಕ್ಕನುಸಾರವಾದುದಾಗಿತ್ತು. ಸಣ್ಣ ಪ್ರಮಾಣದಲ್ಲಿತ್ತು. ಅಂದಿನ ದಿನಗಳಲ್ಲೂ ಪರಿಷತ್ತನ್ನು ಟೀಕಿಸುವವರಿದ್ದರು. ಸಾರ್ವಜನಿಕ ಸಂಸ್ಥೆಗಳ ಕಾರ್ಯನಿರ್ವಹಣೆ ಟೀಕೆಗಳಿಗೆ ಒಳಗಾಗುವುದು ಸಹಜ. ಕೆಲಸ ಮಾಡದಿದ್ದಾಗ ಮಾತ್ರ ಟೀಕೆಗಳಿರುವುದಿಲ್ಲ. ಟೀಕೆಗಳು ಬರುತ್ತವೆಂದು ಕೆಲಸ ಮಾಡದೆ ಇರಲಾಗುವುದಿಲ್ಲ. ಜಿ. ನಾರಾಯಣ ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅದನ್ನು ಬಹ್ವೀಕರಿಸಿದರು. ಕಟ್ಟಡ ವಿಸ್ತಾರವಾಯಿತು. ಸದಸ್ಯಬಲ ಬೆಳೆಯಿತು. ಮುಖ್ಯವಾಗಿ ಸರ್ಕಾರದಿಂದ ಉದಾರವಾದ ಧನಸಹಾಯ ದೊರೆಯಿತು. ಇದರ ಫಲವಾಗಿ ಪರಿಷತ್ತಿನ ಚಟುವಟಿಕೆಗಳೂ ಬೆಳೆದವು. ನಾರಾಯಣರ ನಂತರ ಬಂದ ಹಂಪ. ನಾಗರಾಜಯ್ಯನವರಾದರೂ ಪರಿಷತ್ತಿನ ಚಟುವಟಿಕೆಗಳನ್ನು ಬಹುವಾಗಿ ವಿಸ್ತರಿಸುವ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡರು. ಅವರು ಪರಿಷತ್ತಿನ ಅಂಗರಚನೆಯನ್ನು  ಅತ್ಯಂತ ಪರಿಣಾಮಕಾರಿಯಾಗಿ ತಿದ್ದುಪಡಿ ಮಾಡಿದ್ದು ಒಂದು ಬಹುಮುಖ್ಯವಾದ ಸಾಧನೆ ಎಂದು ನಾನು ಭಾವಿಸುತ್ತೇನೆ.

ಪರಿಷತ್ತಿನ ಬಗ್ಗೆ ಟೀಕೆಗಳು

ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣವಾಗಿ ಸರ್ಕಾರದ ಸಹಾಯವನ್ನು ಅವಲಂಬಿಸಿರುವ ಸಂಸ್ಥೆ. ಸರ್ಕಾರದ ಸಹಾಯಧನ ಬರದೆ ಹೋದರೆ ಪರಿಷತ್ತು  ಬಾಗಿಲು ಮುಚ್ಚಬೇಕಾಗುತ್ತದೆ. ಇಂಥ ಪರಿಸ್ಥಿತಿಯಿಂದ ಪರಿಷತ್ತನ್ನು ಪಾರುಮಾಡುವ ಯೋಜನೆಯನ್ನು ಸಿದ್ಧಪಡಿಸಬೇಕಾದ ಕಾಲವೀಗ ಬಂದಿದೆ. ಸಾಹಿತ್ಯ ಸಂಸ್ಕೃತಿಗಳ ವಿಷಯದಲ್ಲಿ ಈವರೆಗಿನ ಕರ್ನಾಟಕದ ಮಂತ್ರಿಮಂಡಳಗಳೆಲ್ಲವೂ ಬಹು ಉದಾರವಾಗಿ ನಡೆದುಕೊಂಡಿವೆ ಎಂಬುದನ್ನು ನಾವು ಅಭಿಮಾನದಿಂದ ಸ್ಮರಿಸಬೇಕು. ಅವು ತಾವಾಗಿಯೇ ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಬೆಂಬಲ ನೀಡಿವೆ. ಆದರೂ ಪರಿಷತ್ತು ಸ್ವಾಯತ್ತ ಸಂಸ್ಥೆಯಾಗಿ ತನ್ನ ಕಾಲ ಮೇಲೆ ತಾನು ನಿಲ್ಲುವುದು ಅಗತ್ಯವೆಂದು ನನ್ನ ಅಭಿಪ್ರಾಯ. ಇಂದಲ್ಲ ನಾಳೆ ಯಾವುದೇ ಸರ್ಕಾರ ಅಥವಾ ಒಬ್ಬ ಮಂತ್ರಿ ಪರಿಷತ್ತು ತನ್ನ ತಾಳಕ್ಕೆ ಸರಿಯಾಗಿ ಕುಣಿಯಬೇಕೆಂದು ಅಪೇಕ್ಷಿಸಬಹುದು. ಪರಿಷತ್ತಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಹುದು. ಸಹಾಯಧನವನ್ನು ನಿಲ್ಲಿಸಬಹುದು ಅಥವಾ ಕಡಿಮೆ ಮಾಡಬಹುದು. ಪರಿಷತ್ತು ಸರ್ಕಾರದ ದನಿಯಾಗಬೇಕಾಗಿಲ್ಲ; ಆಗಬಾರದು. ಕನ್ನಡದ ಸರ್ವಾಂಗೀಣ ಅಭಿವೃದ್ಧಿಯ ವಿಷಯದಲ್ಲಿ ಸರ್ಕಾರ ತಪ್ಪು ಹೆಜ್ಜೆ ಇಡುವ ಸಂದರ್ಭದಲ್ಲಿ ಅದನ್ನು ಎಚ್ಚರಿಸಿ ಮಾರ್ಗದರ್ಶನ ನೀಡುವ ಶಕ್ತಿಯನ್ನು ಗಳಿಸಿಕೊಳ್ಳಬೇಕು. ಕನ್ನಡ ಭಾಷೆ ಸಾಹಿತ್ಯಗಳ ವಿಷಯದಲ್ಲಿ ಪರಿಷತ್ತಿನದೇ ಕೊನೆಯ ಮಾತಾಗಬೇಕು. ಇದು ಸರ್ಕಾರದ ಸಹಾಯಧನವನ್ನು ಅವಲಂಬಿಸಿರುವವರೆಗೂ ಸಾಧ್ಯವಾಗುವುದಿಲ್ಲ.

ಪರಿಷತ್ತಿನ ನಿಧಿ ವಿಚಾರ

ಆದ್ದರಿಂದ ಪರಿಷತ್ತು ತನ್ನದೇ ಒಂದು ನಿಧಿಯನ್ನು ಸ್ಥಾಪಿಸುವ ಯೋಜನೆ ಹಾಕಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಸೂಚಿಸಬಯಸುತ್ತೇನೆ. ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ಎಂಬ ಯೋಜನೆ ಹಾಕಿಕೊಂಡು ಒಂದು ಕೋಟಿ ರೂಪಾಯಿಗಳ ನಿಧಿಯೊಂದನ್ನು ಆರಂಭಿಸಬೇಕು. ನಿಧಿ ಸಂಗ್ರಹ ಕಷ್ಟವಾಗಲಾರದೆಂದು ಭಾವಿಸುತ್ತೇನೆ. ಮಾತು ಮಾತಿಗೆ ನಾವು ಮುಕ್ಕೋಟಿ ಕನ್ನಡಿಗರೆಂದು ಹೇಳುತ್ತೇವೆ. ಈ ಮುಕ್ಕೋಟಿಯಲ್ಲಿ ಎರಡು ಕೋಟಿಯನ್ನು ಬಿಟ್ಟರೂ ಮಿಕ್ಕ ಒಂದು ಕೋಟಿ ಜನ ಪರಿಷತ್ತಿಗೆ ಒಂದೊಂದು ರೂಪಾಯಿ ಕೊಡಲು ಮನಸ್ಸು ಮಾಡುತ್ತಾರೆ ಎಂದು ನಂಬಿದ್ದೇನೆ. ಹೆಚ್ಚು ಕೊಡುವವರಿದ್ದರೆ ಬೇಡ ಎನ್ನುವುದಿಲ್ಲ. ಈ ಒಂದು ಕೋಟಿ ರೂಪಾಯಿಗಳ ಬಡ್ಡಿಯಲ್ಲಿಯೇ ಪರಿಷತ್ತು ಸರ್ಕಾರದ ಮರ್ಜಿಯನ್ನು ಕಾಯದೆ ತನ್ನ ಕೆಲಸ ಮಾಡಬಹುದು. ಪರಿಷತ್ತಿನ ಉತ್ಸಾಹೀ ಅಧ್ಯಕ್ಷರಾದ ಹಂ. ಪ. ನಾಗರಾಜಯ್ಯನವರು ತಮ್ಮ ಅಧಿಕಾರಾವಧಿಯಲ್ಲಿಯೇ ಈ ಯೋಜನೆಯನ್ನು ಕಾರ್ಯರೂಪಕ್ಕೆ ತಂದಾರೆಂದು ನಿರೀಕ್ಷಿಸುತ್ತೇನೆ. ಅವರು ವಂತಿಗೆಯ ಸಂಗ್ರಹಕ್ಕೆ ಹೊರಟಾಗ ನನ್ನದು ನಮ್ರವಾದ ಐದು ನೂರ ಒಂದು ರೂಪಾಯಿಗಳ ಕಾಣಿಕೆ ಇರುತ್ತದೆಂದು ತಿಳಿದುಕೊಳ್ಳಲಿ.

ಪರಿಷತ್ತಿನ ಕಾರ್ಯದಲ್ಲಿ ಪಾಲ್ಗೊಳ್ಳಿ

ಪರಿಷತ್ತಿನ ಧ್ಯೇಯ ಧೋರಣೆಗಳನ್ನು ಒಪ್ಪದವರಲ್ಲಿ ನನ್ನದೊಂದು ಕಳಕಳಿಯ ಪ್ರಾರ್ಥನೆಯಿದೆ: ಪರಿಷತ್ತನ್ನು ತಿಳಿಯದೆ, ಪರಿಷತ್ತಿನ ಒಳಗೆ ಬರದೆ ಪರಿಷತ್ತನ್ನು ಟೀಕಿಸಬೇಡಿ. ಪರಿಷತ್ತು ನಮ್ಮೆಲ್ಲರಿಗೂ ಸೇರಿದ್ದು. ಮೊದಲು ಪರಿಷತ್ತಿನ ಸದಸ್ಯರಾಗಿ, ಒಳಗೆ ಬನ್ನಿ. ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳಿ. ಪರಿಷತ್ತು ಪ್ರಜಾಸತ್ತಾತ್ಮಕ ಸಂಸ್ಥೆ. ಅದರಲ್ಲಿ ನಿಮ್ಮ ದನಿಗೂ ಮಹತ್ವವಿದೆ. ಬರದೆ ಟೀಕೆಗಾಗಿ ಟೀಕೆ ಮಾಡಬೇಡಿ. ಎಲ್ಲ ಸಂಸ್ಥೆಗಳಿಗೂ ಇರುವಂತೆ ಪರಿಷತ್ತಿಗೂ ಅನೇಕ ಸೀಮಿತಗಳಿವೆ. ಎಲ್ಲರೂ ಅಪೇಕ್ಷಿಸುವ ಎಲ್ಲ ಕೆಲಸಗಳನ್ನೂ ಮಾಡುವುದು ಒಬ್ಬರಿಂದ ಸಾಧ್ಯವಾಗುವುದಿಲ್ಲ. ಆದರೆ ಅದು ಮಾಡುವ ಕೆಲಸ ಕನ್ನಡದ, ಕರ್ನಾಟಕದ ಕಲ್ಯಾಣಕ್ಕಾಗಿ ಎಂಬುದರಲ್ಲಿ ಎರಡು ಅಭಿಪ್ರಾಯಗಳಿಗೆ ಅವಕಾಶವಿಲ್ಲ. ಪರಿಷತ್ತು ಕನ್ನಡಿಗರದ್ದು. ಅದು ಕನ್ನಡಿಗರ ಸಾಂಸ್ಕೃತಿಕ ದೇವಾಲಯ. ಅದರ ಅಭಿವೃದ್ಧಿಯನ್ನು ನಾವು ಹಾರೈಸೋಣ. ಅದಕ್ಕಾಗಿ ಶ್ರಮಿಸೋಣ.

Tag: Kannada Sahitya Sammelana 57, Ha.Ma. Nayak,

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)