ಸಾಹಿತ್ಯ ಸಮ್ಮೇಳನ-೬0 : ಮೈಸೂರು
ನವೆಂಬರ್ ೧೯೯0

ಅಧ್ಯಕ್ಷತೆ: ಕೆ.ಎಸ್. ನರಸಿಂಹಸ್ವಾಮಿ

ks-narasimha-swamy

0ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕೆ.ಎಸ್. ನರಸಿಂಹಸ್ವಾಮಿ

ಮೈಸೂರ ಮಲ್ಲಿಗೆಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಸುಬ್ಬರಾಯ-ನಾಗಮ್ಮ ದಂಪತಿಗಳಿಗೆ ೨೬-೧-೧೯೧೫ರಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಹೈಸ್ಕೂಲು, ಇಂಟರ್ ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಓದಿದ ಅವರು ಆರ್ಥಿಕ ತೊಂದರೆಗಳಿಂದ ಡಿಗ್ರಿ ವ್ಯಾಸಂಗವನ್ನು ಪೂರ್ಣ ಮಾಡಲಾಗಲಿಲ್ಲ, ಪದವೀಧರರಾಗಲಿಲ್ಲ. ಸಂಸಾರ ನಿರ್ವಹಣೆಗಾಗಿ ೨೨ನೇ ವಯಸ್ಸಿನಲ್ಲಿ ಗುಮಾಸ್ತೆ ಹುದ್ದೆಗೆ ಸೇರಿದರು. ಆ ವೇಳೆಗೆ ತಿಪಟೂರಿನ ವೆಂಕಮ್ಮನವರೊಂದಿಗೆ ವಿವಾಹವಾಗಿತ್ತು. ತಮ್ಮ ವೃತ್ತಿಜೀವನದ ಕಾಲದಲ್ಲಿ ಮೈಸೂರು, ನಂಜನಗೂಡು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸರಕಾರಿ ನೌಕರರಾಗಿ ದುಡಿದು ೨೬-೧-೧೯೭0ರಲ್ಲಿ ನಿವೃತ್ತರಾದರು.

ಕೆ.ಎಸ್.ನ ಅವರ ಮೈಸೂರ ಮಲ್ಲಿಗೆ ೧೯೪೨ರಲ್ಲಿ ಪ್ರಕಟವಾದಾಗಿನಿಂದ ೨೫ಕ್ಕೂ ಹೆಚ್ಚು ಮುದ್ರಣ ಕಂಡಿದೆ. ಅನಂತರ ಹತ್ತಾರು ಕವನ ಸಂಕಲನಗಳ ಮೂಲಕ ನವೋದಯ ಮತ್ತು ನವ್ಯಕವಿತೆಗಳನ್ನು ತಮ್ಮದೇ ಆದ ಛಾಪಿನಲ್ಲಿ ಕನ್ನಡಕ್ಕೆ ಕೊಟ್ಟರು. ಕೆ.ಎಸ್.ನ ಅವರ ಮೈಸೂರ ಮಲ್ಲಿಗೆ ಕೃತಿಗೆ ದೇವರಾಜ ಬಹಾದ್ದೂರ್ ಬಹುಮಾನ ೧೯೪೩ರಲ್ಲಿ ಬಂದಿತು. ೧೯೫೭ರಲ್ಲಿ ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಇಲಾಖೆಯ ಬಹುಮಾನವನ್ನು ಪಡೆದರು. ೧೯೭೭ರಲ್ಲಿ ತೆರೆದ ಬಾಗಿಲು ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ದುಂಡು ಮಲ್ಲಿಗೆ’ ಕವನ ಸಂಕಲನಕ್ಕೆ ಪ್ರತಿಷ್ಠಿತ ಪಂಪ ಪ್ರಶಸ್ತಿಯೂ ೧೯೯೬ರಲ್ಲಿ ಬಂದಿತು. ೧೯೮೭ರಲ್ಲಿ ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ ಇವರಿಗೆ ಸಂದಿದೆ. ಬೆಂಗಳೂರು ವಿಶ್ವವಿದ್ಯಾಲಯವು ೧೯೯೨ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿತು. ಇವರ ಸಾಹಿತ್ಯ ಸಾಧನೆಗಾಗಿ ಮಾಸ್ತಿ ಸಾಹಿತ್ಯ ಪ್ರಶಸ್ತಿ ೧೯೯೬ರಲ್ಲಿ ಲಭಿಸಿತು. ೧೯೯0ರಲ್ಲಿ ಮೈಸೂರಿನಲ್ಲಿ ನಡೆದ ೬0ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರು ಅಧ್ಯಕ್ಷರಾಗಿದ್ದರು. ಈ ಮುಂಚೆ ಕನ್ನಡ ಸಾಹಿತ್ಯ ಪರಿಷತ್ತು ೧೯೮೫ರಲ್ಲಿ ಗೌರವ ಸದಸ್ಯತ್ವ ನೀಡಿರುವುದರ ಜತೆಗೆ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಕೆಎಸ್‍ನ ಅವರನ್ನು ಸನ್ಮಾನಿಸಿದೆ.

ನರಸಿಂಹಸ್ವಾಮಿ ಅವರ ಪ್ರಸಿದ್ಧ ಕವನ ಸಂಕಲನಗಳು: ಮೈಸೂರ ಮಲ್ಲಿಗೆ, ದೀಪದಮಲ್ಲಿ(೧೯೪೭), ಉಂಗುರ(೧೯೪೯), ಇರುವಂತಿಗೆ(೧೯೫೨), ಮನೆಯಿಂದ ಮನೆಗೆ(೧೯೬0), ತೆರೆದ ಬಾಗಿಲು(೧೯೭೭), ದುಂಡು ಮಲ್ಲಿಗೆ(೧೯೯೩), ನೆಲದನಿ(೧೯೯೯), ಸಂಜೆಹಾಡು(೨000) ಇತ್ಯಾದಿ.

ಗದ್ಯಕೃತಿಗಳು :ಮಾದರಿಯ ಕಲ್ಲು(೧೯೪೨), ಉಪವನ(೧೯೫೮), ದಮಯಂತಿ(೧೯೭0).

ಇಂಗ್ಲಿಷಿನಿಂದ ಅನುವಾದಗಳು :ಯೂರಿಪಿಡೀಸಿನ ಮೀಡಿಯಾ(೧೯೬೬), ಸುಬ್ರಹ್ಮಣ್ಯ ಭಾರತಿ(೧೯೭೧), ಮಾಯಾಶಂಖ ಮತ್ತು ಇತರ ಕಥೆಗಳು(೧೯೭೨), ರಾಣಿಯ ಗಿಳಿ ಮತ್ತು ರಾಜನ ಮಂಗ(೧೯೭೨), ಹಕಲ್‍ಬರಿಫಿನ್ನನ ಸಾಹಸಗಳು(೧೯೬೯) ಇತ್ಯಾದಿ.

ಕೆ.ಎಸ್. ನರಸಿಂಹಸ್ವಾಮಿ ಅವರು ೨೮-೧೨-೨00೩ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೬0

ಅಧ್ಯಕ್ಷರು, ಕೆ.ಎಸ್. ನರಸಿಂಹಸ್ವಾಮಿ

ದಿನಾಂಕ ೨೮, ೨೯, ೩0 ನವೆಂಬರ್ ೧೯೯0

ಸ್ಥಳ : ಮೈಸೂರು

ಪರಿಷತ್ತಿನ ಅಮೃತಮಹೋತ್ಸವ

ಸಾಹಿತ್ಯ ಪರಿಷತ್ತಿನ ಅಮೃತ ಮಹೋತ್ಸವ ಮತ್ತು ನನ್ನ ಬದುಕಿನ ಅಮೃತೋತ್ಸವಗಳೆರಡೂ  ಏಕಕಾಲಕ್ಕೇ ಒದಗಿರುವುದೊಂದು ಹೆಮ್ಮೆ-ಸಂತಸಗಳ  ವಿಷಯ. ಅಲ್ಲದೆ ಪರಿಷತ್ತಿನ ಬೆಳವಣಿಗೆಯೊಂದಿಗೇ ನನ್ನ ಕಾವ್ಯಕೃಷಿಯೂ ಬೆಳೆದು ಬಂದಿದೆ.

೧೯೧೫ರಲ್ಲೇ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ವಿಶ್ವವಿದ್ಯಾನಿಲಯಗಳಿಗಿಂತಲೂ ಮುಂಚೆಯೇ ಅವುಗಳು ಮಾಡಬೇಕಾದ ಕೆಲಸವನ್ನೆಲ್ಲ ಮಾಡುತ್ತ ಬಂದಿದೆ. ಅಲ್ಲಿಂದೀಚೆಗೆ ಆರು ವಿಶ್ವವಿದ್ಯಾನಿಲಯಗಳು ಆಗಿವೆ, ವಿವಿಧ ಅಕಾಡೆಮಿಗಳು ರೂಪುಗೊಂಡಿವೆ, ಕನ್ನಡ-ಸಂಸ್ಕೃತಿ ಇಲಾಖೆ ಇದೆ. ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರ ಮತ್ತು ಜನತೆಯನ್ನು ಕನ್ನಡದ ಬಗೆಗೆ ಸದಾ ಎಚ್ಚರಿಸುತ್ತ ಬಂದಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಪರಿಷತ್ತು ಮೇಲಿಂದ ಮೇಲೆ ಸರ್ಕಾರದೊಂದಿಗೆ ವ್ಯವಹರಿಸಿರುವುದೂ, ಸದ್ಯ ಈ ಸಂಬಂಧ ‘ತನಿಖೆ’ಯ ಹಂತಕ್ಕೆ ತಲುಪಿರುವುದು ಸಂತಸದ ಸಂಗತಿ.

ಪರಿಷತ್ತು ಮತ್ತು ಪತ್ರಿಕೆಗಳು

ಬೆಂಗಳೂರಿಂದ ಪ್ರಕಟವಾಗುತ್ತಿರುವ ಕನ್ನಡ ಪತ್ರಿಕೆಗಳಲ್ಲಿ ಇತ್ತೀಚೆಗೆ ಕನ್ನಡ ಅಂಕಿಗಳ ಬಳಕೆ ನಿಲ್ಲಿಸಲಾಗಿರುವುದನ್ನು ನನ್ನ ಮಿತ್ರರೊಬ್ಬರು ಗಮನಕ್ಕೆ ತಂದಿದ್ದಾರೆ. ಈ ಕುರಿತು ಪರಿಷತ್ತು ಪತ್ರಿಕೆಗಳಿಗೆ ಬರೆಯುವ ಮೂಲಕ ಒತ್ತಾಯಿಸಬೇಕು.

ಕನ್ನಡ ಸಾಹಿತ್ಯ ಪರಿಷತ್ತು ಸ್ವಂತ ಮುದ್ರಣಾಲಯ ಹೊಂದಿದ್ದು ಪ್ರಕಟನೆಯ ಅನುಭವವಿರುವುದರಿಂದ ಸರ್ಕಾರವು ಆರ್ಥಿಕ ನೆರವು ನೀಡಿ ತನ್ನ ಪ್ರಕಟನೆಗಳನ್ನೂ ಪರಿಷತ್ತಿಗೆ ವಹಿಸಬಹುದಾಗಿದೆ.

ಡಾ|| ಸರೋಜಿನಿ ಮಹಿಷಿ ವರದಿಯ ಜಾರಿಗೆ ಮಾನ್ಯ ಮುಖ್ಯಮಂತ್ರಿಗಳು ಅಂಗೀಕಾರ ನೀಡಿದ್ದು ಸಂತೋಷದ ಸಂಗತಿ. ಈ ಬಗ್ಗೆ ಸರ್ಕಾರೀ ಆದೇಶ ಹೊರಡಬೇಕಾಗಿದೆ.

ಕನ್ನಡ ಅಭಿವೃದ್ಧಿ ಸಮಿತಿಯು ಕನ್ನಡ ಬೆಳವಣಿಗೆಯ ಸಂಬಂಧವಾದ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಚಾಲಕ ಶಕ್ತಿಯಾಗಿ, ಕಾವಲು ಸಮಿತಿಯಾಗಿ ಕೆಲಸ ಮಾಡಬೇಕೆಂದು ಕೋರುತ್ತೇನೆ.

Tag: Kannada Sahitya Sammelana 60, K.S. Narasimhaswamy,

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)