ಸಾಹಿತ್ಯ ಸಮ್ಮೇಳನ-೮೧ : ಶ್ರವಣಬೆಳಗೊಳ
(ಫೆಬ್ರವರಿ ೨0೧೫)

ಅಧ್ಯಕ್ಷತೆ: ಸಿದ್ದಲಿಂಗಯ್ಯ

dfsdf
dasfsdfsfsdfsdfdsf
dfsdf

ಸಮ್ಮೇಳನಾಧ್ಯಕ್ಷರು : ಸಿದ್ದಲಿಂಗಯ್ಯ 

ಕವಿ, ಕನ್ನಡ ಪ್ರಾಧ್ಯಾಪಕ ಡಾ. ಸಿದ್ಧಲಿಂಗಯ್ಯನವರು ಹೋರಾಟಗಾರರೂ ಆಗಿದ್ದಾರೆ. ಇವರು ಮಾಗಡಿಯಲ್ಲಿ ವೆಂಕಮ್ಮ-ದೇವಯ್ಯ ದಂಪತಿಗಳಿಗೆ ೩-೨-೧೯೫೪ ರಲ್ಲಿ ಜನಿಸಿದರು. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ೧೯೩೩ರಲ್ಲಿ ನಡೆದ ಅಖಿಲ ಕರ್ನಾಟಕ ವಿಚಾರವಾದಿ ವಿದ್ಯಾಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ೧೯೭೫ರಲ್ಲಿ ದಲಿತ ಸಂರ್ಷ ಸಮಿತಿಯನ್ನು ಹುಟ್ಟು ಹಾಕಿದರು. ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಸಕ್ರಿಯವಾಗಿ ಪಾತ್ರವಹಿಸಿದ್ದಾರೆ.

ಇವರ ಸೇವೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಅನೇಕ. ಅವುಗಳಲ್ಲಿ ಕೆಲವು ಹೀಗಿವೆ : ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೮೬) ಚಲನಚಿತ್ರ ಗೀತರಚನೆ ಪ್ರಶಸ್ತಿ (೧೯೮೪) ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (೧೯೯೬) ಜಾನಪದ ತಜ್ಞ ಪ್ರಶಸ್ತಿ (೨00೧) ಸಂದೇಶ ಪ್ರಶಸ್ತಿ (೨00೧) ಡಾ. ಅಂಬೇಡ್ಕರ್ ಪ್ರಶಸ್ತಿ (೨00೨) ಸತ್ಯಕಾಮ ಪ್ರತಿಷ್ಠಾನ ಪ್ರಶಸ್ತಿ (೨00೨) ನಾಡೋಜ ಪ್ರಶಸ್ತಿ (೨00೭) ಆಳ್ವಾಸ್ ನುಡಿಸಿರಿ ಪ್ರಶಸ್ತಿ (೨0೧೨) ಪ್ರೆಸಿಡೆನ್ಸಿ ಇನ್ಸಿಟ್ಯೂಷನ್ ಪ್ರಶಸ್ತಿ (೨0೧೨) ಇತ್ಯಾದಿ ಪ್ರಶಸ್ತಿಗಳು ಬಂದಿವೆ.

ಕವಿ, ವಿಮರ್ಶಕರಾದ ಸಿದ್ಧಲಿಂಗಯ್ಯನವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು :

ಗ್ರಾಮದೇವತೆಗಳು (ಸಂಶೋಧನ ಪ್ರಬಂಧ), ಊರುಕೇರಿ (ಆತ್ಮಕಥೆ) ಜನಸಂಸ್ಕೃತಿ, ಉರಿಕಂಡಾಯ, ಹಕ್ಕಿನೋಟ, ಪಂಚಮ ಮತ್ತು ನೆಲಸಮ, ಏಕಲವ್ಯ (ನಾಟಕ), ಸಾವಿರಾರು ನದಿಗಳು (೧೯೭೯), ಕಪ್ಪು ಜನರ ಹಾಡು (೧೯೮೨), ಹೊಲೆಮಾದಿಗರ ಹಾಡು (೧೯೭೫) ಇತ್ಯಾದಿ.

ಕನ್ನಡ ಸಾಹಿತ್ಯ ಸಮ್ಮೇಳನ೮೧

ಅಧ್ಯಕ್ಷರು, ಡಾ. ಸಿದ್ಧಲಿಂಗಯ್ಯ

ದಿನಾಂಕ ೩೧ ಜನವರಿ, ,, ಫೆಬ್ರವರಿ ೨0೧೫

ಸ್ಥಳ : ಶ್ರವಣಬೆಳಗೊಳ

 

ಕೃತಜ್ಞತೆ ಸಲ್ಲಿಕೆ

೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ನನ್ನನ್ನು ಆಯ್ಕೆ ಮಾಡಿರುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪುಂಡಲೀಕ ಹಾಲಂಬಿ ಅವರಿಗೆ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಮತ್ತು ಸಮಸ್ತ ಕನ್ನಡಿಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಪರಿಷತ್ತು ನೂರು ವರ್ಷಗಳ ಕಾಲ ನಿರಂತರವಾಗಿ ಕನ್ನಡದ ಸೇವೆ ಸಲ್ಲಿಸುತ್ತಾ ಬಂದಿದೆ. ಪರಿಷತ್ತಿನ ಸ್ಥಾಪನೆಗೆ ಕಾರಣರಾದ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನರಾಗಿದ್ದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ನೂರು ವರ್ಷಗಳ ಕಾಲ ಕನ್ನಡದ ಕೈಂಕರ್ಯವನ್ನು ಮಾಡಿದ ಎಲ್ಲ ಹಿರಿಯ ಚೇತನಗಳಿಗೆ ಈ ಮೂಲಕ ಅನಂತ ನಮನಗಳನ್ನು ಸಲ್ಲಿಸುತ್ತೇನೆ.

ಪರಿಷತ್ತಿನ ಅಭಿನಂದನೀಯ ಕೆಲಸ

ಹಳಗನ್ನಡ ಸಾಹಿತ್ಯದ ಓದು ಮತ್ತು ಅಧ್ಯಯನವಂತು ಮರೆತು ಹೋದಂತೆ ಕಾಣುತ್ತಿದೆ. ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಹಳಗನ್ನಡ ಕಾವ್ಯಗಳ ಗದ್ಯಾನುವಾದದ ನೆರವನ್ನು ಪಡೆದು ಗಮಕಿಗಳ ಮೂಲಕ ಹಾಡಿಸುವ, ವ್ಯಾಖ್ಯಾನಿಸುವ ಪದ್ಧತಿಯನ್ನು ಕೂಡಲೇ ವಿಶ್ವವಿದ್ಯಾಲಯಗಳು ಆರಂಭಿಸಬೇಕು. ಈ ಕ್ರಮದಿಂದ ಹಳಗನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ದಾಟಿಸಿದಂತಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನೋತ್ಸವ ಆಚರಣೆಯ ಈ ಸಂದರ್ಭದಲ್ಲಿ ೧00 ಮೌಲಿಕ ಪುಸ್ತಕಗಳನ್ನು ಮತ್ತು ೧೭ ಸಾಹಿತ್ಯ ಚರಿತ್ರೆಯ ಸಂಪುಟಗಳನ್ನು ಪ್ರಕಟಿಸುತ್ತಿರುವುದು ಅಭಿನಂದನೀಯ.

ಕನ್ನಡ ವರ್ಷ 0೧೫ ಆಚರಣೆ

ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ ಶತಮಾನ ತುಂಬುತ್ತಿರುವ  ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ ೨0೧೫ನೇ ವರ್ಷವನ್ನು ‘ಕನ್ನಡ ವರ್ಷ-೨0೧೫’ ಎಂದು ಘೋಷಿಸಬೇಕು. ಈ ವರ್ಷದುದ್ದಕ್ಕೂ ವಾರದಲ್ಲಿ ಒಂದು ದಿನವನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಕಚೇರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಕನ್ನಡ ವರ್ಷದ ಆಚರಣೆಗಾಗಿ ಮೀಸಲಿಡಬೇಕು. ಆ ದಿನವನ್ನು ಕನ್ನಡ ದಿನ ಎಂದು ಕರೆಯಬೇಕು. ಆ ದಿನದಂದು ಕನ್ನಡ ಭಾಷೆ, ಸಾಹಿತ್ಯ, ಕಲೆ, ಶಿಕ್ಷಣ ಮುಂತಾದ ಕ್ಷೇತ್ರಗಳ ಸಂಬಂಧವಾಗಿ ಚರ್ಚೆ, ಉಪನ್ಯಾಸ ವಿಚಾರ ಸಂಕಿರಣ ಮುಂತಾದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಬೇಕು.

`ಕನ್ನಡ ಮಾತಾಡಿ’ ಆಂದೋಲನ ಮಾಡಿ

ಸರ್ಕಾರಿ ಹಾಗೂ ಅರೆಸರ್ಕಾರಿ ಕಚೇರಿಗಳು, ವಿಶ್ವವಿದ್ಯಾಲಯಗಳು ಕಾರ್ಖಾನೆಗಳು, ಬ್ಯಾಂಕುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಕನ್ನಡ ಮಾತಾಡಲು ಉತ್ತೇಜಿಸುವ ಸಲುವಾಗಿ ಕನ್ನಡ ಮಾತಾಡಿ ಎಂಬ ಚಳುವಳಿಯನ್ನು ಕೂಡಲೇ ಪ್ರಾರಂಭಿಸಬೇಕು. ಈ ಚಳುವಳಿಯಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು,  ಯುವಕರು ಹಾಗೂ ಕನ್ನಡಪರ ಸಂಟನೆಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ಕನ್ನಡ ಸಾಹಿತ್ಯ, ಸಿನಿಮಾ, ಪ್ರಾಧ್ಯಾಪನ, ಚಳವಳಿ  ಮತ್ತು ಸಾಂಸ್ಕೃತಿಕ ಲೋಕದ  ಮಹತ್ವದ  ಪ್ರತಿನಿಧಿಗಳೆಂದು ಖ್ಯಾತರಾಗಿರುವ  ಡಾ. ಬರಗೂರು ರಾಮಚಂದ್ರಪ್ಪನವರು  ರಾಯಚೂರಿನಲ್ಲಿ  ಬರುವ  ಡಿಸೆಂಬರ್ ೨ರಿಂದ ಮೂರು ದಿನಗಳವರೆಗೆ ನಡೆಯಲಿರುವ  ೮೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರಾಗಿ  ಸರ್ವಾನುಮತದಿಂದ  ಆಯ್ಕೆಗೊಂಡಿದ್ದಾರೆ.

‘ಬ್ರಹ್ಮಪುತ್ರ, ಗಂಗಾನದಿಗಳಷ್ಟೆ ಶ್ರೇಷ್ಠವಲ್ಲ, ನಮ್ಮೂರಿನ ಹಳ್ಳ- ಕೊಳ್ಳಗಳೂ ಶ್ರೇಷ್ಠ. ಶ್ರೀಗಂಧ ಮಾತ್ರವಲ್ಲ, ನಮ್ಮೂರಿನ ಜಾಲಿ ಮರವೂ ಶ್ರೇಷ್ಠ. ಕೋಗಿಲೆ ಅಷ್ಟೇ ಅಲ್ಲ, ನಮ್ಮೂರಿನ ಕಾಗೆಯೂ ನನಗೆ ಶ್ರೇಷ್ಠವೇ ಆಗಿದೆ`. ಈ  ಬರಗೂರು ರಾಮಚಂದ್ರಪ್ಪನವರ ಮಾತುಗಳು  ಅವರ ಅಂತರಾಳದ ಒಂದು ನೋಟ. ತಳ ಮಟ್ಟದ ಜನರ ನೋವುಗಳಿಗೆ ಸದಾ ತುಡಿಯುವ, ಚಿಂತಿಸುವ ಮನಸ್ಸು ಅವರದು.  ಅವರನ್ನು ಜನ ಗುರುತಿಸುವುದು ಬಂಡಾಯ ವ್ಯಕ್ತಿತ್ವದವರಾಗಿ,  ಬಂಡಾಯ ಸಾಹಿತಿಯಾಗಿ, ಬಂಡಾಯದ ಮಾತುಗಾರರಾಗಿ.  ಈ ಕುರಿತು ಬರಗೂರರು ಹೇಳುತ್ತಾರೆ “ಬಂಡಾಯವೆಂದರೆ ಹೊಡಿ, ಬಡಿ, ಕೊಲ್ಲು ಎಂದಲ್ಲ.  ಬಂಡಾಯವೆಂಬುದು ನನ್ನ ಪ್ರಕಾರ ಸಿದ್ಧಾಂತ.  ಯಾವುದೇ ಒಂದು ಅನಿವಾರ್ಯ ಪರಿಸ್ಥಿತಿ ಒದಗಿದಾಗ ಅದಕ್ಕೆ ಅಗತ್ಯವಾದ ಪ್ರತಿಕ್ರಿಯೆ ನೀಡದೆ ಸುಮ್ಮನೆ ಮೂಖನಾಗಿರುವುದು ನನಗೆ ಸಾಧ್ಯವಿಲ್ಲ.  ಹಾಗೆ ಸುಮ್ಮನಿರುವುದು ನನಗೆ ಸಮ್ಮತವೂ ಅಲ್ಲ”.  ನಾವು ಬರಗೂರರ ಅಭಿಪ್ರಾಯಗಳನ್ನು ಒಪ್ಪದಿರಬಹುದು ಅಥವಾ ಬಿಡಬಹುದು.  ಆದರೆ ಅವರ ಕನ್ನಡ ಪ್ರೀತಿ, ಕನ್ನಡದ ಹೋರಾಟಗಳು, ಕನ್ನಡ ಕಾಳಜಿಗಳು, ಕನ್ನಡಕ್ಕಾಗಿ ಮಾಡಿದ ಕೆಲಸವನ್ನು ತೆಗೆದು ಹಾಕಲು ಸಾಧ್ಯವಿಲ್ಲ.

ಬರಗೂರು ರಾಮಚಂದ್ರಪ್ಪನವರು 1946ರ ವರ್ಷದ ಅಕ್ಟೋಬರ್ 18ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಪಾಟಿ ಚೀಲ ಹಿಡಿದು ಕೆಂಪು ಬಸ್ಸಿನ ಹಿಂದೆ ಓಡುತ್ತಿದ್ದ ಬರಗೂರರು, ತುಮಕೂರು, ಬೆಂಗಳೂರಿನಲ್ಲಿ ಪ್ರಾಧ್ಯಾಪಕರಾಗಿ, ಸಾಹಿತಿಗಳಾಗಿ, ನಾಡಿನಲ್ಲಿ ಹೊಸ ಆಲೋಚನೆ, ಚಿಂತನೆಗಳಿಗೆ ಕಾರಣರಾದವರು.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಬರಗೂರರು  ಸಲ್ಲಿಸಿದ ಸೇವೆ ಗಣನೀಯವಾದ್ದದ್ದು. ಸಾಹಿತ್ಯದಷ್ಟೆ ಸಿನೆಮಾವನ್ನು ಗಾಢವಾಗಿ ಪ್ರೀತಿಸುವ ಅವರು ಸಿನೆಮಾದ ಕಮರ್ಷಿಯಲ್ ಸೂತ್ರಗಳಿಗೆ ಜೋತು ಬೀಳದೆ ಅಲ್ಲೂ ಕೂಡ ವಿಭಿನ್ನ ಹಾದಿ ಹಿಡಿದವರು. ಬರಗೂರರ ಚಿತ್ರಗಳು ಬಡವರ, ದಲಿತರನ್ನು ಧ್ವನಿಸುವ ಮೂಲಕ ಭಾರತೀಯ ಸಿನೆಮಾ ರಂಗದ ಚರಿತ್ರೆಯ ಪುಟಗಳಾಗಿ ಮಿಂಚಿವೆ. ಅವರು ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.  ಅವರ ಸಿನಿಮಾ ನಿರ್ದೇಶನ, ಹಾಡುಗಳು, ಕಥೆ, ಚಿತ್ರಕಥೆ ಇವೆಲ್ಲಾ ಕಲಾತ್ಮಕ ಹಾಗೂ ಜನಮಾನಸಗಳನ್ನು ತನ್ನದೇ ಆದ ರೀತಿಯಲ್ಲಿ ಸೆಳೆದಿವೆ.

ಆಡಳಿಗಾರರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಇವುಗಳಲ್ಲಿ ಬರಗೂರರು ದಕ್ಷರಾಗಿ ಕೆಲಸಮಾಡಿದ್ದಾರೆ. ಸಾಹಿತ್ಯ ಅಕಾಡೆಮಿಯಲ್ಲಿದ್ದಾಗ ಅಲೆಮಾರಿ ಮತ್ತು  ಅರೆ ಅಲೆಮಾರಿ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿ, ೪೦ಕ್ಕೂ ಅಧಿಕ ಕೃತಿಗಳು ಪ್ರಕಟವಾಗಲು ಕಾರಣರಾಗಿದ್ದಾರೆ.   ಪ್ರಸಕ್ತದಲ್ಲಿ ಅವರು ಪ್ರಾಥಮಿಕ ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.   ಕನ್ನಡ ಪರ ಹೋರಾಟ ಮತ್ತು ಚಿಂತನೆಗಳಲ್ಲಿ ಅವರು ಎಂದೂ ಹಿಂದೆ ಬೀಳದವರು.  ಕನ್ನಡ ಪರ ಕಾರ್ಯಕ್ರಮಗಳು, ಕನ್ನಡದ ಸಾಮಾನ್ಯ ಜನತೆ, ಕನ್ನಡತನವನ್ನು ಬಿತ್ತುವ ಕೆಲಸ ಅವರಿಗೆ ಎಂದೆಂದೂ ಪ್ರಿಯ.  ಹೀಗಾಗಿ ಕನ್ನಡ ಪರ ಆಸಕ್ತರಿಗೆ ಅವರು ಎಂದೆಂದೂ ಪ್ರಿಯರು.  ಹಾಗೆಂದ ಮಾತ್ರಕ್ಕೆ ಅವರು ಎಲ್ಲರನ್ನೂ ಪ್ರಿಯವಾಗಿಸಲು ಬಣ್ಣ ಬಣ್ಣದ ಮಾತುಗಳನ್ನಾಡುವವರಲ್ಲ.  ಹೀಗಾಗಿ ಅವರ ಬಂಡಾಯ ಮನೋಧರ್ಮದ ಮಾತುಗಳು ಎಲ್ಲ ಜನರ ವೈಯಕ್ತಿಕ ಪ್ರೀತಿಗಳನ್ನೂ, ನಿಲುವುಗಳನ್ನೂ ಆಗಾಗ ಕೆದಕುತ್ತದೆ.  ಅವರ ಮಾತುಗಳಿಗೆ ಹಲವು ಬಣ್ಣಗಳನ್ನು ಹಚ್ಚಿ ಅವರು ಹೀಗೆಂದರು, ಹಾಗೆಂದರು, ಅವರನ್ನು ಎಡಬಿಡಂಗಿ ಅಂದರು, ಮತ್ತೊಬ್ಬರು ಪ್ರಶಸ್ತಿಗೆ ಯೋಗ್ಯರಲ್ಲ ಎಂದರು, ಇನ್ನೊಬ್ಬರು ಏಕೆ ವಿಶ್ವಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಬಾರದು ಎಂದರು ಇತ್ಯಾದಿ ವಾಗ್ವಾದಗಳು ಹಲವು ಬಾರಿ  ಪತ್ರಿಕೆಗಳಲ್ಲಿ ಕಂಡಬಂದದ್ದಿದೆ.   ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ಅವರು ಎಲ್ಲರಿಗೂ ಪ್ರಿಯರು ಆದರೆ, ಎಲ್ಲವನ್ನೂ ತಮ್ಮ ಬಂಡಾಯದ ಸಿದ್ಧಾಂತಗಳ ಆಳವಾದ ನಿಲುವಿನ ಮೂಸೆಯಲ್ಲಿಟ್ಟು ಕನ್ನಡದ ಕಾಳಜಿಗಳಲ್ಲಿ ಅಳೆಯುವ ತಮ್ಮ ಮೂಲಭೂತ ಗುಣವನ್ನು ಅವರು ಬಿಟ್ಟುಕೊಡಲು ತಯಾರಿಲ್ಲ.

ಜಾಗತೀಕರಣವೆಂಬ ಭ್ರಮೆಯಲ್ಲಿ ಕಳೆದು ಹೋಗುತ್ತಿರುವ ವಿಶ್ವವನ್ನು ಅವರು ಮನನೀಯವಾಗಿ ಗುರುತಿಸುತ್ತಾರೆ.  “ಕೈಗಾರಿಕೀಕರಣ ಕಾಲದಲ್ಲಿದ್ದ ಜನರ ಕನಸುಗಳೇ ಬೇರೆ. ಜಾಗತೀಕರಣ ಕಾಲದ ಕನಸುಗಳೇ ಬೇರೆ. ಈಗಲೂ ಹಿಂದಿನ ಕನಸುಗಳೇ ಇರಬೇಕೆಂದು ನಾನು ಹೇಳುತ್ತಿಲ್ಲ. ನಮಗೆ ಆರೋಗ್ಯಕರ ಮನೋಧರ್ಮವನ್ನು ಬೆಳೆಸುವ ಕನಸುಗಳು ಬೇಕು; ಆ ಕನಸುಗಳು ಸಾಕಾರಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವುದು, ತಕ್ಕಮಟ್ಟಿನ ಉದ್ಯೋಗ ಪಡೆಯುವುದು, ಬದುಕಲಿಕ್ಕೆ ಬೇಕಿರುವಷ್ಟು ಸಂಬಳ ಪಡೆಯುವುದು, ಮನೆ ಕಟ್ಟಿಸುವುದು, ಕುಟುಂಬದಲ್ಲಿ ನೆಮ್ಮದಿ ಕಾಯ್ದುಕೊಳ್ಳುವುದು – ಈ ಕೆಲವು, ಕೈಗಾರಿಕೀಕರಣ ಕಾಲದ ಕನಸುಗಳು. ಇವು  ‘ಸುಖಮುಖಿಯಾದ’ ಕನಸುಗಳು.

ಆದರೆ ಜಾಗತೀಕರಣ ಹುಟ್ಟುಹಾಕುತ್ತಿರುವುದು ‘ಭೋಗಮುಖಿಯಾದ’ ಕನಸುಗಳು. ಬದುಕಲಿಕ್ಕೆ ಮಾತ್ರ ಸಂಬಳ ಸಾಲದು, ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬೇಕು. ವೈಭೋಗದ ಜೀವನಕ್ಕೆ ವಿಲಾಸದ ವಸ್ತುಗಳು ಬೇಕು. ಇದೇ ಜೀವನ ವಿಧಾನವಾಗಬೇಕು – ಹೀಗೆ ಭೋಗ ಬದುಕನ್ನು ಬಯಸುವ ಜಾಗತೀಕರಣ ಅರ್ಥಾತ್ ಖಾಸಗೀಕರಣ, ಜೀವನದ ಆದ್ಯತೆ ಮತ್ತು ಆದರ್ಶಗಳನ್ನೂ ಬದಲಿಸುತ್ತಿದೆ. ಖಾಸಗಿ ಬಂಡವಾಳಗಾರರ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡುವ ದೃಷ್ಟಿಯಿಂದಲೇ ಮನೋಧರ್ಮವನ್ನು ಬದಲಾಯಿಸಲಾಗುತ್ತಿದೆ.

ಬದುಕಿನ ಬದಲಾವಣೆಯೆಂದರೆ ಮೇಲ್ಪದರದ ಬದಲಾವಣೆ ಎಂದಾಗುತ್ತಿದೆ. `ಮೇಲ್ಪದರ’ ಎನ್ನುವುದು ಸಾಮಾಜಿಕ, ಆರ್ಥಿಕ ಮೇಲ್ಪದರವೂ ಹೌದು; ತೆಳು ಬದಲಾವಣೆಯ ಸ್ವರೂಪವೂ ಹೌದು. ಹೀಗಾಗಿ ಕೈಗಾರಿಕೀಕರಣ ಕಾಲದ ‘ವಿಕಾಸ ಜೀವನ’ವು ಖಾಸಗೀಕರಣ ಕಾಲದಲ್ಲಿ ‘ವಿಲಾಸ ಜೀವನ’ವಾಗುತ್ತಿದೆ. ಖಾಸಗೀಕರಣದ ‘ಕೆನೆಪದರ’ವಾದ ಕಾರ್ಪೊರೇಟ್ ವಲಯವು ಭೋಗವನ್ನೇ ಸುಖವೆಂದು ಬಿಂಬಿಸುತ್ತಿದೆ. ವಾಸ್ತವವಾಗಿ ಭೋಗವೇ ಬೇರೆ, ಸುಖವೇ ಬೇರೆ. ಆದರೆ ಭೋಗದ ಬೆನ್ನು ಹತ್ತಿದವರು ಸುಖಕ್ಕೆ ಬೆನ್ನು ತೋರಿಸುತ್ತಾರೆಂಬ ಸತ್ಯವನ್ನು ಕಾರ್ಪೊರೇಟ್ ವಲಯ ಹೂತುಹಾಕುತ್ತಿದೆ.”

ಬರಗೂರರ ಸಾಹಿತ್ಯದ ಹಾದಿಯಲ್ಲಿನ ಕೆಲವು ಕೃತಿಗಳನ್ನು ನೆನೆಸಿಕೊಳ್ಳುವುದಾದರೆ ‘ಒಂದು ಊರಿನ ಕತೆಗಳು’, ‘ಕನ್ನಡಾಭಿಮಾನ’, ‘ಕಪ್ಪು ನೆಲದ ಕೆಂಪು ಕಾಲು’, ‘ಮರಕುಟಿಗ’, ‘ರಾಜಕಾರಣಿ’, ‘ಸಾಹಿತ್ಯ’, ‘ಸುಂಟರಗಾಳಿ’, ‘ಸೂತ್ರ’, ‘ಕಾಂಟೆಸ್ಸಾ ಕಾವ್ಯ’, ‘ಸಂಸ್ಕೃತಿ, ಶ್ರಮ ಮತ್ತು ಸೃಜನಶೀಲತೆ’, ‘ನೆತ್ತರಲ್ಲಿ ನೆಂದ ಹೂ’, ‘ಗುಲಾಮನ ಗೀತೆ’, `ಸಿನಿಮಾ : ಒಂದು ಜನಪದ ಕಲೆ`, ‘ಮರ್ಯಾದಸ್ಥ ಮನುಷ್ಯರಾಗೋಣ’ ಮುಂತಾದವು ತಕ್ಷಣ ನೆನಪಿಗೆ ಬರುತ್ತವೆ. ಬರಗೂರರ ‘ಸುಂಟರಗಾಳಿ’ ಕಥಾಸಂಕಲನಕ್ಕೆ  ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.

‘ಪಂಪ ಪ್ರಶಸ್ತಿ’,  ‘ನಾಡೋಜ’ ಪ್ರಶಸ್ತಿ,  ಕನ್ನಡ  ಸಾಹಿತ್ಯ ಪರಿಷತ್ತಿನ  ‘ನೃಪತುಂಗ ಪ್ರಶಸ್ತಿ’  ಹಾಗೂ ಹಲವಾರು ರಾಜ್ಯಮಟ್ಟದ, ಸಂಘ ಸಂಸ್ಥೆಗಳ  ಗೌರವಗಳು ಬರಗೂರು  ರಾಮಚಂದ್ರಪ್ಪನವರಿಗೆ  ಸಂದಿವೆ.  ಇವೆಲ್ಲಕ್ಕೂ  ಕಿರೀಟವಿಟ್ಟಂತೆ ಕನ್ನಡ  ಸಾಹಿತ್ಯ ಪರಿಷತ್ತು  ಬರಗೂರು  ರಾಮಚಂದ್ರಪ್ಪನವರನ್ನು  ರಾಯಚೂರಿನಲ್ಲಿ  ಡಿಸೆಂಬರ್ ೨, ೩, ೪ರಂದು  ನಡೆಯಲಿರುವ  ೮೨ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ  ಸರ್ವಾನುಮತದಿಂದ  ಆಯ್ಕೆಮಾಡಿದೆ.  ಈ  ಕುರಿತು  ಪ್ರತಿಕ್ರಿಯಿಸಿರುವ  ಬರಗೂರರು “ಇದು ಕನ್ನಡ  ಸಾಹಿತ್ಯ ಲೋಕದಲ್ಲಿ ದೊರೆಯುವ ಅತ್ಯುನ್ನತ ಗೌರವ ಎಂಬುದು ನನ್ನ ಭಾವನೆ.  ಸರ್ವಾನುಮತದಿಂದ  ಆಯ್ಕೆ ಮಾಡಿರುವುದು ಸಂತಸ ಮೂಡಿಸಿದೆ.  ಹಳ್ಳಿಗಾಡಿನಲ್ಲಿ  ಹುಟ್ಟಿ ಬೆಳೆದ ನನ್ನಂಥವರ ಪ್ರತಿಭೆ ಮೇಲೆ ಬರಲು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಇವೆ.  ಪ್ರತಿಯೊಬ್ಬ ವ್ಯಕ್ತಿ ಪ್ರತಿಭೆ ಮತ್ತು ಸಂಕಲ್ಪಗಳನ್ನು ಒಗ್ಗೂಡಿಸಿಯೇ ಮೇಲೆ ಬರಬೇಕು.  ಸಾಮಾಜಿಕ ನ್ಯಾಯವು ಪ್ರತಿಭೆಗೆ ವಿರೋಧವಾಗಿ ಇರಬಾರದು.  ನಾನು ಎಂದಿಗೂ  ಇಂಥ  ದೊಡ್ಡ ಗೌರವದ ಕನಸನ್ನೇ  ಕಂಡವನಲ್ಲ.  ಕೊಳೆಗೇರಿಗಳ ನಿವಾಸಿಗಳಿಗೆ, ದುರ್ಬಲರಿಗೆ, ಬಡವರಿಗೆ ಐಡೆಂಟಿಟಿ ಏನು ಎಂಬುದು ಈ ಪ್ರಶ್ನೆಗಳ ಸಾಲಿನಲ್ಲಿ  ಮೊದಲನೆಯದು.  ಸಾಮಾಜಿಕ, ಆರ್ಥಿಕ ಐಡೆಂಟಿಟಿ ನಮ್ಮಂಥವರಿಗೆ ಕನಸು ಎಂಬ ಸ್ಥಿತಿಯಲ್ಲಿ  ನಾನು ಶ್ರೇಷ್ಠತೆಯ ಬೆಂಬಲ ಇದ್ದರೆ ಒಳ್ಳೆಯದು ಎಂದುಕೊಂಡು ಅರಸಿದ್ದು ಶಿಕ್ಷಣದ ಐಡೆಂಟಿಟಿಯನ್ನ.  ನಮ್ಮ ಮನೆಯಲ್ಲಿದ್ದ ‘ಜೈಮಿನಿ ಭಾರತ’ದ ಪ್ರತಿಯನ್ನು ಹಿಡಿದಿಕೊಂಡು ಊರೆಲ್ಲ ಓಡಾಡಿದ ಪರಿಯಿಂದಲೇ, ‘ಈತ ಓದುವ ಹುಡುಗ’  ಎಂದು ಕರೆಯಿಸಿಕೊಂಡು, ಐಡೆಂಟಿಟಿ ಕಂಡುಕೊಂಡೆ. ಅದರಿಂದಲೇ ನನ್ನ ಅಸ್ಮಿತೆಯ ಸಮಸ್ಯೆಯನ್ನು ನೀಗಿಸಿಕೊಂಡೆ. ಹಾಗೆಯೇ ಓದುತ್ತ ಸಾಗಿದೆ. ‘ಶ್ರೀಮಂತರಲ್ಲದವರೂ ಬರೆಯುವ ಮೂಲಕ ಬೆಳೆಯಬಹುದು’ ಎಂದು ರವೀಂದ್ರನಾಥ್‌ ಠಾಗೂರರು ಹೇಳಿದಂತೆ, ನಾನೂ ಬದ್ಧತೆಯೊಂದಿಗೆ ಬರೆಯಲು ಆರಂಭಿಸಿದೆ. ಎಂದಿಗೂ ಸಾಮಾಜಿಕ ಕಾಳಜಿ, ಸೃಜನಶೀಲತೆಯನ್ನು ಬಿಡದೆ ಬರೆದೆ. ನನ್ನ ಮೂಲಕ ನನ್ನಂತಹ ಅಸಂಖ್ಯಾತ ಪ್ರತಿಭೆಗಳಿಗೆ ಈ ಗೌರವ ಸಂದಿದೆ ಎಂಬುದೇ ನನ್ನ ಭಾವನೆ. ಇದು ಅಸ್ಮಿತೆಯ ಸವಾಲನ್ನು ಎದುರಿಸಿದ ಫಲ” ಎಂದಿದ್ದಾರೆ.

ಯಾವುದೇ ವ್ಯಾಪಾರೀ ಮಾಧ್ಯಮದ ಸರಕಿಲ್ಲದಿದ್ದರೂ ಉತ್ತಮ ಸಾಂಸ್ಕೃತಿಕ ಮೌಲ್ಯಗಳಿಂದ ಜನಪ್ರೀತಿಗಳಿಸಿ ಶತದಿನೋತ್ಸವ ಆಚರಿಸಿದ ‘ಭಾಗೀರತಿ’ ಚಿತ್ರವೇ ಅಲ್ಲದೆ  ‘ಒಂದು ಊರಿನ ಕಥೆ’, ‘ಬೆಂಕಿ’, ‘ಸೂರ್ಯ’,  ‘ಕೋಟೆ’, ‘ಕ್ಷಾಮ’, ‘ಶಾಂತಿ’, ‘ಕರಡಿಪುರ’, ‘ತಾಯಿ’, ‘ಏಕಲವ್ಯ’, ‘ಶಬರಿ’, ‘ಹಗಲು ವೇಷ’, ‘ಭೂಮಿತಾಯಿ’ ಮುಂತಾದವು ಬರಗೂರರ ಚಿತ್ರಗಳು.  ಇವರ ಹಲವಾರು ಚಿತ್ರಗಳು ರಾಜ್ಯ, ರಾಷ್ಟ್ರ ಮತ್ತು  ಅಂತರರಾಷ್ಟ್ರೀಯ  ಮನ್ನಣೆಗೆ  ಪಾತ್ರವಾಗಿವೆ.  ಒಂದೇ ಪಾತ್ರವನ್ನು ಒಳಗೊಂಡ ವಿಶಿಷ್ಟ ಚಿತ್ರ ‘ಶಾಂತಿ’ ಗಿನ್ನೆಸ್ ಸಾಧನೆಗಳಲ್ಲಿ  ದಾಖಲುಗೊಂಡಿದೆ.    ಇವಲ್ಲದೆ ಬರಗೂರರ ಕಥೆ ಮತ್ತು ಹಾಡುಗಳು ಇತರ ನಿರ್ದೇಶಕರ ಚಲನಚಿತ್ರಗಳಲ್ಲಿ ಖ್ಯಾತಿಗಳಿಸಿವೆ. ‘ತಾಯಿ’ ಚಿತ್ರದ ಗೀತರಚನೆಗೆ  ರಾಷ್ಟ್ರಪ್ರಶಸ್ತಿ ದೊರೆತಿದ್ದು  ಚಿತ್ರ ಸಂಭಾಷಣೆಗೂ  ರಾಜ್ಯಪ್ರಶಸ್ತಿಗಳಿಸಿರುವ  ಹೆಗ್ಗಳಿಕೆ  ಇವರದ್ದಾಗಿದೆ.

ಹೀಗೆ ಹಲವು ರೀತಿಯಲ್ಲಿ ಕನ್ನಡದಲ್ಲಿ ಕ್ರಿಯಾಶೀಲರಾಗಿರುವ ಬರಗೂರು ರಾಮಚಂದ್ರಪ್ಪನವರು  ಕನ್ನಡ  ಸಾಂಸ್ಕೃತಿಕ ಲೋಕದ  ಮಹತ್ವದ  ಕೂಟವಾದ  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷರಾಗಿರುವುದು  ಸಂತಸದ ಸಂಗತಿಯಾಗಿದೆ.

Tag: Kannada Sahitya Sammelana 81, Siddalingaiah

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)