ಶಾಂತಾದೇವಿ ಮಾಳವಾಡ

shantadevi-malavada

ಶಾಂತಾದೇವಿ ಮಾಳವಾಡ ಅವರು ಸಾಹಿತಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.  ತಮ್ಮ  ಆಪ್ತವೆನಿಸುವ ವ್ಯಕ್ತಿತ್ವದಿಂದಾಗಿ ಎಲ್ಲರಲ್ಲೂ ‘ಶಾಂತಕ್ಕ’ನೆಂದು ಹೆಸರುವಾಸಿಯಾಗಿದ್ದವರು.

ಶಾಂತಾದೇವಿಯವರು 1922ರ ಡಿಸೆಂಬರ್ 10ರಂದು ಬೆಳಗಾಂವಿಯಲ್ಲಿ ಜನಿಸಿದರು.  ಅಪ್ಪ ಅಮ್ಮ ಇಟ್ಟ ಹೆಸರು ದಾನಮ್ಮ.  ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡು “ಬಾಲ್ಯದಲ್ಲಿ ನಾನು ಎಲ್ಲ ಮಕ್ಕಳಂತೆ ತಾಯಿಯ ಮೊಲೆ ಹಾಲು ಕುಡಿಯಲಿಲ್ಲ, ತಂದೆಯ ತೊಡೆಯನ್ನೇರಿ ಮುದ್ದು ಮಾತನಾಡಲಿಲ್ಲ” ಎಂಬ ನೋವು ಅವರಲ್ಲಿ ಬಾಲ್ಯದ ನೆನಪಿನೊಂದಿಗೆ ಅಂಟಿಕೊಂಡಿತ್ತು.  ಅಜ್ಜಿಯ ಅಂತಃಕರಣದಲ್ಲಿ ದಾನಮ್ಮ ರಾಮಾಯಣ, ಶಿವಪುರಾಣ, ರಾಜರಾಣಿಯರ ಅದ್ಭುತ ಕತೆಗಳನ್ನು ಕೇಳುತ್ತ ಬೆಳೆದಳು.  ಹೆಣ್ಣು ಮಕ್ಕಳಿಗೆ ನಾಲ್ಕನೆಯ ಇಯತ್ತೆಯವರೆಗೆ ಮಾತ್ರ ಕಲಿಸಿ ಮದುವೆ ಮಾಡುವ ಅಂದಿನ ಕಾಲದಲ್ಲಿ ದಾನಮ್ಮ ಮುಂದೆ ಓದುತ್ತೇನೆ ಎಂದು ಮಾಡಿದ ಎರಡು ದಿನದ ಉಪವಾಸ ಸತ್ಯಾಗ್ರಹ ಫಲಕಾರಿಯಾಗಲಿಲ್ಲ.  ಮನೆಯಲ್ಲೇ ಉಳಿದು ಕಥೆ ಕಾದಂಬರಿಗಳ ಓದಿನ ಜೊತೆಗೆ ಹೊಲಿಗೆ-ಹೆಣಿಗೆಯಂಥ ಕಲಾಭಿರುಚಿಯನ್ನು ಬೆಳೆಸಿಕೊಂಡಳು.

ದಾನಮ್ಮನಿಗೆ ಹದಿನಾಲ್ಕುವರ್ಷ ವಯಸ್ಸಾದಾಗ ಸ.ಸ ಮಾಳವಾಡ ಅವರೊಡನೆ ಮದುವೆ ನಿಶ್ಚಯವಾಯಿತು.  ಮದುವೆ ಮಾಡಲು 15 ವರ್ಷ ತುಂಬಬೇಕಾಗಿತ್ತು.  ಹೀಗಾಗಿ ಮದುವೆಯಾಗುವವರೆಗೂ ಇವರಲ್ಲಿ ಪತ್ರಗಳ ಓಡಾಟ ನಡೆದಿತ್ತು.  ಒಂದು ಪತ್ರದಲ್ಲಿ ಮಾಳವಾಡರು ‘ತಮ್ಮ ಪತ್ನಿ ಮನೆಗೆಲಸದ ದಾಸಿಯಾಗದೆ ಬಾಳ ಸಂಗಾತಿಯಾಗಿರಬೇಕು’ ಎಂದು ಬರೆದಿದ್ದರು.  ಇದು ಕೇವಲ ಘೋಷಣೆಯಾಗಿ ಉಳಿಯದೆ ಅವರಿಬ್ಬರ ಬದುಕಿನ ಮೂಲ ಮರ್ಮವೂ ಆಗಿ ಮುಂದೆ ರೂಪುಗೊಂಡಿತು.   ದಾನಮ್ಮನ ಜ್ಞಾನಾಭಿವೃದ್ದಿಗಾಗಿ ಮಾಳವಾಡರು ಓದಲು ಪುಸ್ತಕಗಳನ್ನು ಕಳುಹಿಸುತ್ತಿದ್ದರು.  ಮದುವೆಯಾದಾಗ ದಾನಮ್ಮ ಶಾಂತಾದೇವಿ ಎಂಬ ಹೆಸರಿಗೆ ಬದಲಾದರು.  ಕಟ್ಟಾ ವೀರಶೈವ ಸಂಪ್ರದಾಯಸ್ಥ ಕುಟುಂಬದ ಮಗಳಾಗಿ  ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದ ಅಪ್ಪಟ ಸಾಹೇಬರ ಶಿಸ್ತನ್ನು ರೂಢಿಸಿಕೊಂಡವರ ಹೆಂಡತಿಯಾಗಿ ಶಾಂತಾದೇವಿ ಸಂಪ್ರದಾಯ ಮತ್ತು ಆಧುನಿಕತೆಗಳಿಗೆ ಕೊಂಡಿಯಾದರು.

ಬಾಲ್ಯದಿಂದಲೂ ಓದುವ ಹವ್ಯಾಸ ರೂಢಿಸಿಕೊಂಡಿದ್ದ ಶಾಂತಾದೇವಿ ಗೃಹಿಣೀತ್ವದ ಜವಾಬ್ಧಾರಿಯ ನಡುವೆಯೂ ಅದನ್ನು ಕಾಪಾಡಿಕೊಂಡು ಬಂದರು.  ಆರಂಭದಲ್ಲಿ ಲಲಿತ ಸಾಹಿತ್ಯಕ್ಕೆ ಸೀಮಿತವಾದ ಅವರ ಓದು ನಂತರ ವಿಚಾರಸಾಹಿತ್ಯ, ಪ್ರಾಚೀನ ಕಾವ್ಯಗಳಿಗೂ ವಿಸ್ತರಿಸಿತು.  ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯ, ಜಾಣ ಪರೀಕ್ಷೆಗಳಿಗೆ ಅಭ್ಯಾಸ ಮಾಡಿ ಅವುಗಳಲ್ಲಿ ಉತ್ತೀರ್ಣರಾದದ್ದು ಅವರ ಸಾಹಿತ್ಯಾಸಕ್ತಿಗೆ ಬಲ ನೀಡಿತು.  ಸಾಹಿತಿ ಪತಿಯೊಡನೆ ವಿಚಾರ ವಿನಿಮಯದ ಜೊತೆಗೆ ತಮ್ಮ ಮನೆಗೆ ಬಂದು ಹೋಗುವವರಿಂದಲೂ ಸಾಹಿತ್ಯದ ಮಾತನ್ನೇ ಕೇಳುವುದು ಅವರ ದಿನಚರಿ ಆಯಿತು.  ಕನ್ನಡ ಸಾಹಿತ್ಯದ ಓದಿಗಷ್ಟೇ ಸೀಮಿತಗೊಳ್ಳದ ಅವರ ಆಸಕ್ತಿ ಹಿಂದೀ ಹಾಗೂ ಇಂಗ್ಲೀಷ್ ಭಾಷಾಜ್ಞಾನದ ಕಡೆಗೆ ತುಡಿಯಿತು.  ಮನೆಯಲ್ಲಿಯೇ ಅಕ್ಕಾ ಕುಲಕರ್ಣಿ ಎಂಬ ಇಂಗ್ಲೀಷ್ ಅಧ್ಯಾಪಕಿಯಿಂದ ಇಂಗ್ಲೀಷನ್ನೂ, ಗುರುನಾಥ ಜೋಶಿಯವರಿಂದ ಹಿಂದಿಯನ್ನೂ ಕಲಿತರು.  ಔಪಚಾರಿಕ ಶಿಕ್ಷಣದಿಂದ ವಂಚಿತರಾದ ಶಾಂತಾದೇವಿ ತಮ್ಮ ಸ್ವಸಾಮರ್ಥ್ಯದಿಂದ ಸತತ ಪರಿಶ್ರಮದಿಂದ ಮತ್ತು ತಮ್ಮ ಪತಿಯ ಪ್ರೋತ್ಸಾಹದಿಂದ ಜ್ಞಾನಾರ್ಜನೆ ಮಾಡಿದ್ದು ವಿರಳಮಾದರಿ ಎಂದೇ ಹೇಳಬೇಕು.

ಶಾಂತಾದೇವಿ ರೂಪವತಿಯೂ ಹೌದು.  “ಶರಶ್ಚಂದ್ರರ, ರವೀಂದ್ರರ ಕಾದಂಬರಿಗಳ ನಾಯಕಿಯಂತಿದ್ದ ಆ ಕೋಮಲ ಬಾಲೆ … ವಿಶುದ್ಧ ಹೃದಯದ ಸದುವಿನಯದ ಸ್ನೇಹಮಯ ಹುಡುಗಿ” ಎಂದು ಬಸವರಾಜ ಕಟ್ಟೀಮನಿಯವರು ಬೆಳಗಾವಿಯ ತಮ್ಮ ಓಣಿಯಲ್ಲೇ ವಾಸವಾಗಿದ್ದ ಈ ಹುಡುಗಿಯನ್ನು ವರ್ಣಿಸಿದ್ದರು.

ತಮ್ಮ ಹವ್ಯಾಸ ಹಾಗೂ ಸಾಹಿತ್ಯಾಧ್ಯಯನಗಳ ಜೊತೆಗೆ ಶಾಂತಾದೇವಿ ಸಾರ್ವಜನಿಕ ಚಟುವಟಿಕೆಗಳಲ್ಲೂ ಕ್ರಿಯಾತ್ಮಕವಾಗಿ ತೊಡಗಿಕೊಂಡರು.  ಹೆಣ್ಣುಮಕ್ಕಳು ಮನೆಯಿಂದ ಹೊರಬರುವುದೇ ಅಸಾಧ್ಯವಾದ ಅಂದಿನ ಪರಿಸ್ಥಿತಿಯಲ್ಲಿ ಶಾಂತಕ್ಕ ಮಹಿಳೆಯರ ಜಾಗೃತಿಗಾಗಿ ಕೈಕೊಂಡ ಕಾರ್ಯ ಗಮನಾರ್ಹವಾದುದು.  ತಮ್ಮ ಮನೆಯ ಮಹಿಳೆಯರನ್ನು ಇವರೊಂದಿಗೆ ಸಂಘಟನಾ ಕಾರ್ಯದಲ್ಲಿ ಕಳಿಸಲು ಒಪ್ಪದ ಹಿರಿಯರು ಇವರನ್ನು ಕಂಡೊಡನೆ ಮನೆಯ ಬಾಗಿಲನ್ನು ಮುಚ್ಚಿಕೊಳ್ಳುತ್ತಿದ್ದ ಕಹಿ ಪ್ರಸಂಗ ಅವರಿಗೆ ದಿನ ನಿತ್ಯ ಎದುರಾಗುತ್ತಿತ್ತು.

ಕರ್ನಾಟಕ ಕಾಲೇಜಿನಲ್ಲಿ ಪ್ರಾಧ್ಯಾಪಕರ ಪತ್ನಿಯರ ಸಂಘ ಸ್ಥಾಪನೆಯಾದಾಗ ಶಾಂತಾದೇವಿಯವರ ಸಂಘ ಸಂಸ್ಥೆಗಳ ಸಂಪರ್ಕ ಆರಂಭಗೊಂಡಿತು.  1938ರಲ್ಲಿ ಅಕ್ಕನಬಳಗ ಪ್ರಾರಂಭಿಸಿದ್ದರಲ್ಲಿ ಶಾಂತಾದೇವಿಯವರ ಪಾಲೂ ಇದೆ.  1940ರಲ್ಲಿ ಶ್ಯಾಮಲಾದೇವಿ ಬೆಳಗಾಂವಕರ ಅವರು ಶಾಂತಾದೇವಿಯವರನ್ನು ಅಖಿಲ ಭಾರತ ಮಹಿಳಾ ಪರಿಷತ್ತಿನ ಧಾರವಾಡ ಜಿಲ್ಲಾ ಶಾಖೆಗೆ ಸದಸ್ಯಳನ್ನಾಗಿ ಮಾಡಿದರು.  ಆಗ ಅಲ್ಲಿಯ ವಾತಾವರಣ ಸಂಪೂರ್ಣ ಮರಾಠಿಮಯವಾಗಿತ್ತು.  ಅದನ್ನು ಹೋಗಲಾಡಿಸಿ ಅಲ್ಲಿ ಕನ್ನಡ ಸ್ಥಾಪಿಸಲು ಮಳಿಮಠರ ನೇತ್ರತ್ವದಲ್ಲಿ ನಡೆದ ಹೋರಾಟದಲ್ಲಿ ಮಾಳವಾಡ ಶಾಂತಕ್ಕನೂ ಭಾಗಿಯಾದರು.  ಅಲ್ಲಿ ಕನ್ನಡತಿಯರ ಸಂಖ್ಯೆ ಹೆಚ್ಚಿ ಧಾರವಾಡ ಜಿಲ್ಲಾ ಮಹಿಳಾ ಮಂಡಳವಾಗಿ ಹೊಸರೂಪ ಪಡೆಯಿತು.  ಶಾಂತಕ್ಕ ಕಾರ್ಯದರ್ಶಿಯಾದರು.  1947ರಲ್ಲಿ ಅಧ್ಯಕ್ಷೆಯಾಗಿಯೂ ನೇಮಕಗೊಂಡರು.  ಆಗ ಹೂಮಾಲೆಯೊಂದಿಗೆ ರೂ. 200 ಸಾಲದ ಹೊರೆಯನ್ನೂ ಒಪ್ಪಿಕೊಂಡ ಶಾಂತಕ್ಕ ಮುಂದೆ ಹತ್ತೇ ವರ್ಷಗಳಲ್ಲಿ ಮಂಡಳಕ್ಕೆ ಸ್ವಂತ ಕಟ್ಟಡವಾಗುವಂತೆ ಅಹರ್ನಿಶಿ ದುಡಿದರು.  ಆ ಮಂಡಳಕ್ಕಾಗಿ 20ವರ್ಷ ಸತತವಾಗಿ ಕೆಲಸ ಮಾಡಿದ ಶಾಂತಕ್ಕನ ಸಾಧನೆ ಉಳಿದವರಿಗೆ ಮಾದರಿಯಾಗಿತ್ತು.  ಅವರ ಕರ್ತವ್ಯನಿಷ್ಠೆ, ಕಾರ್ಯತತ್ಪರತೆ, ಅಚ್ಚುಕಟ್ಟುತನ, ಜವಾಬ್ದಾರಿಯ ನಿರ್ವಹಣೆ, ಮುಂದಾಳತ್ವ ಪ್ರಶಂಸನೀಯವಾಗಿದ್ದವು.

ಶಾಂತಾದೇವಿಯವರು 1958ರಿಂದ ಧಾರವಾಡ ಜಿಲ್ಲಾ ರಿಮಾಂಡ್ ಹೋಂ ಕಾರ್ಯಕಾರಿ ಮಂಡಳದ ಸದಸ್ಯೆಯಾಗಿಯೂ, 1959ರಿಂದ 1964ರವರೆಗೆ ಆನರರಿ ಲೇಡಿ ಮ್ಯಾಜಿಸ್ಟ್ರೇಟ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.  ಸರಸ್ವತಿದೇವಿ ಗೌಡ ಅವರ ಜೊತೆಗೂಡಿ ಈ ಸಂಸ್ಥೆಗಾಗಿ ಸಾಕಷ್ಟು ದುಡಿದರು.  ಒಂದು ವರ್ಷ ಅವಧಿಗೆ ಇಲ್ಲಿ ಚೆರ್ಮನ್ನರೂ ಆಗಿದ್ದರು.  ರಾಜ್ಯಮಟ್ಟದ ‘ಸಾಮಾಜಿಕ ನೈತಿಕ ಸ್ವಾಸ್ಥ್ಯ ಸಮಿತಿ’ಯ ಸದಸ್ಯರಾಗಿಯೂ ಕೆಲವು ವರ್ಷ ಕೆಲಸ ಮಾಡಿದರು.  ಶೋಷಣೆಗೀಡಾದ ಮಹಿಳೆಯರಿಗೆ ರಕ್ಷಣಾ ಗೃಹಗಳಲ್ಲಿ ವೃತ್ತಿಮಾರ್ಗದರ್ಶನ ನೀಡುವ ಯೋಜನೆಯೊಂದಿಗೆ ವೇಶ್ಯಾವೃತ್ತಿ ನಿರ್ಮೂಲನೆಗಾಗಿ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದರು.

ಸಮಾಜ ಕಲ್ಯಾಣ ಕೇಂದ್ರವು 1954ರಲ್ಲಿ ಧಾರವಾಡ ಜಿಲ್ಲೆಯಲ್ಲಿ ತನ್ನ ಕಾರ್ಯ ಆರಂಭಿಸಿದಾಗ ಶಾಂತಾದೇವಿಯವರು ಅದರ ಕೋಶಾಧ್ಯಕ್ಷೆಯಾಗಿ ಮರೇವಾಡದಲ್ಲಿ ಶಿಶುವಿಹಾರ, ಮಹಿಳಾ ಮಂಡಲಗಳ ಕೆಲಸ ಆರಂಭಿಸಿದರು.  ರಾಜ್ಯದ ‘ಮಹಿಳೆಯರ ಸಾಮಾಜಿಕ ಶಿಕ್ಷಣ ಸಮಿತಿ’ಯ ಸದಸ್ಯರಾಗಿ ಸ್ತ್ರೀಯರ ಶೈಕ್ಷಣಿಕ ಪ್ರಗತಿಗಾಗಿ ಪ್ರಯತ್ನಿಸಿದರು.  ಧಾರವಾಡ ತಾಲ್ಲೂಕ್ಕು ಅಭಿವೃದ್ಧಿ ಮಂಡಳಿ, ಜಿಲ್ಲಾ ಅಭಿವೃದ್ಧಿ ಮಂಡಳ, ತೋಟಗಾರಿಕಾ ಸಂಸ್ಥೆಯ ಸದಸ್ಯೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ಧಾರವಾಡದ ಗಾಂಧೀ ಶಾಂತಿ ಪ್ರತಿಷ್ಠಾನ ಕೇಂದ್ರದಲ್ಲಿ ಶಂಕುಂತಲಾ ಕುರ್ತಕೋಟಿಯವರು ಆರಂಭಿಸಿದ ಮಹಿಳಾ ವಿಭಾಗಕ್ಕೆ 1967ರಲ್ಲಿ ಶಾಂತಾದೇವಿಯವರು ಕಾರ್ಯಾಧ್ಯಕ್ಷರಾಗಿದ್ದು ಧಾರವಾಡದ ಮಹಿಳಾ ಸಂಸ್ಥೆಗಳೊಂದಿಗೆ ಕೂಡಿಕೊಂಡು ಹಲವಾರು ಪ್ರಗತಿಪರ ಕಾರ್ಯ ಕೈಗೊಂಡರು.  ಹೀಗೆ ಜನಸಂಪರ್ಕ ಹೆಚ್ಚುತ್ತಾ ಅವರ ಅನುಭವದ ವ್ಯಾಪ್ತಿಯೂ ಹಿಗ್ಗುತ್ತಾ ಹೋಯಿತು.  ಧಾರವಾಡದ  ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿಯೂ, ಸಾಹಿತ್ಯ ಮಂಟಪದ ಸಹ ನಿಯೋಜಕಿಯಾಗಿಯೂ ಸಂಘದ ಉಪಾಧ್ಯಕ್ಷೆಯಾಗಿಯೂ ಶಾಂತಾದೇವಿಯವರು ಸೇವೆ ಸಲ್ಲಿಸಿದರು.

ಶಾಂತಾದೇವಿಯವರ ಸಾಹಿತ್ಯ ರಚನೆ ವಿಪುಲವಾಗಿರುವಂತೆ ವೈವಿಧ್ಯಪೂರ್ಣವೂ ಆಗಿದೆ.  ಕಥೆ, ಕಾದಂಬರಿ, ನಾಟಕ, ಲಲಿತ ಪ್ರಬಂಧ ಮುಂತಾದ ಪ್ರಕಾರಗಳಲ್ಲಿ ಅವರು ಕೃಷಿ ಮಾಡಿದ್ದಾರೆ.  ನಲವತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ.

ತಮ್ಮ ಹದಿನೈದರ ಹೊಸ್ತಿಲಲ್ಲೇ ಶಾಂತಾದೇವಿ ಒಂದೆರಡು ಕತೆಗಳನ್ನು ಬರೆದಿದ್ದರು.  ಸುತ್ತಲಿನ ಜೀವನದಲ್ಲಿ ಅವರು ಕಂಡಂತ ಸತ್ಯ ಸಂಗತಿಗಳಿಗೆ ಕಲ್ಪನೆಯನ್ನು ಸೇರಿಸಿ ಬರೆದ ಆ ಕತೆಗಳು 1941ರಲ್ಲಿ ‘ಮೊಗ್ಗೆಯ ಮಾಲೆ’ ಸಂಗ್ರಹದಲ್ಲಿ ಪ್ರಕಟವಾದವು.  ಅದಕ್ಕೆ ಪ್ರೊ. ರಂ. ಶ್ರೀ. ಮುಗಳಿಯವರ ಮುನ್ನುಡಿ, ಮಾಸ್ತಿಯವರ ಹರಕೆ ಲಭ್ಯವಾಗಿದೆ.  1954ರಲ್ಲಿ ಪ್ರಕಟಗೊಂಡ ಎರಡನೆಯ ಕಥಾ ಸಂಕಲನ ‘ಕುಂಕುಮ ಬಲ’.  “ಹೆಣ್ಣಿನ ಕಣ್ಣಿನಿಂದ ಕಂಡ ಹೆಣ್ಣಿನ ಬದುಕನ್ನು” ಚಿತ್ರಿಸಿದ್ದಾಗಿ ಶಾಂತಾದೇವಿಯವರು ಈ ಸಂಕಲನದ ಅರಿಕೆಯಲ್ಲಿ ನಿವೇದಿಸಿದ್ದಾರೆ.  ಅವರ ಎಲ್ಲ ಕತೆಗಳಲ್ಲೂ ಭಾರತೀಯ ನಾರಿಯ ಆದರ್ಶಮಯ ವ್ಯಕ್ತಿತ್ವದ ತಳಹದಿಯ ಮೇಲೆ ರೂಪುಗೊಳ್ಳುವ ಸುಖೀ ಕುಟುಂಬದ ಹಂಬಲವೇ ಜೀವಸೆಲೆಯಾಗಿ ಮಿಡಿದಿದೆ.

ಶಾಂತಾದೇವಿಯವರಿಗೆ ಕನ್ನಡದ ಬಗ್ಗೆ ಅಪಾರ ಪ್ರೀತಿ.  ಹೆಚ್ಚಿನ ಕಳಕಳಿ.  ಅಂದು ಬೆಳಗಾವಿ ಮರಾಠಿಮಯವಾಗಿತ್ತು.  ಅಂದಿನ ದಿನದಲ್ಲಿ ಅಲ್ಲಿಯ ಅಂಗಡಿಗಳಲ್ಲಿ ಮರಾಠಿಯಲ್ಲಿಯೇ ರಸೀದಿ ಕೊಡುವ ಪರಿಪಾಠವಿತ್ತು.  12-14ರ ಶಾಂತಾದೇವಿ ಅಂದಿನ ದಾನಮ್ಮ ಅದನ್ನು ತಿರಸ್ಕರಿಸಿ ಖಂಡಿಸಿ ಕನ್ನಡದಲ್ಲಿ ರಸೀದಿ ಪಡೆಯಲು ನಡೆಸಿದ ಪ್ರಯತ್ನ ಶ್ಲಾಘನೀಯವಾದುದು.  ಅವರ ‘ಕನ್ನಡ ತಾಯಿ’ ಕೃತಿಯಲ್ಲಿ ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಮತ್ತು ಕನ್ನಡದ ತಾಯಂದಿರ ಜೀವನ ಚಿತ್ರ ನೀಡುವ ಲೇಖನಗಳಿವೆ.  ಆ ಮಹಿಳೆಯರ ಬಾಳಿನ ಹಿರಿಮೆಯಿಂದ ‘ನಿರ್ಬಲರಾದ ನಾವು ಸಬಲರಾಗಬಹುದು’ ಎಂಬ ಆಶಯದಿಂದ ಕಟ್ಟಿಕೊಟ್ಟ ಈ ಹಿರಿಯ ಚೇತನಗಳ ಗರಿಮೆ ಕನ್ನಡಿಗರಿಗೆ ಮಾದರಿಯಾಗಿವೆ.  ಅವರ ‘ಜನನಿ ಜನ್ಮ ಭೂಮಿಶ್ಚ’ ಸಂಕಲನದಲ್ಲೂ ಇದೇ ಬಗೆಯ ಲೇಖನಗಳಿವೆ.  ಶಾಂತಾದೇವಿಯವರು ನಾಡುನುಡಿಗೆ ಸಂಬಂಧಿಸಿದಂತೆ ಬರೆದ ಲೇಖನಗಳನ್ನಾಯ್ದು ಕನ್ನಡ ಸಾಹಿತ್ಯ ಪರಿಷತ್ತು 1998ರಲ್ಲಿ ‘ಹಚ್ಚೇವು ಕನ್ನಡದ ದೀಪ’ ಹೆಸರಿನಲ್ಲಿ ಪ್ರಕಟಿಸಿವೆ.

ಮಹಿಳೆಯರ ಅಭಿರುಚಿಯನ್ನು ಬಿಂಬಿಸುವ ಪತ್ರಿಕೆಗಳು ಅಂದಿನ ದಿನಗಳಲ್ಲಿ ಇರಲಿಲ್ಲ.  ಈ ಕೊರತೆಯನ್ನು ಲಕ್ಷಿಸಿದ ಶಾಂತಾದೇವಿಯವರು ಮಹಿಳೆಯರಿಗೆ ಉಪಯುಕ್ತವೆನಿಸುವ ವಿಷಯಗಳನ್ನು ಆಧರಿಸಿ ‘ಸೊಬಗಿನ ಮನೆ’, ‘ವಧುವಿಗೆ ಉಡುಗೊರೆ’, ‘ರಸಪಾಕ’ದಂತಹ ಕೃತಿಗಳನ್ನು ರಚಿಸಿದರು.  ಅವು ತುಂಬಾ ಜನಪ್ರಿಯವಾಗಿದ್ದು ಈಗಲೂ ಮರು ಮುದ್ರಣಗೊಳ್ಳುತ್ತಿವೆ.  ಮಹಿಳೆಯರ ಅಲಂಕಾರವೂ ಶಾಂತಾದೇವಿಯವರ ಆಸ್ಥೆಯ ವಿಷಯ.  ಶಿಲ್ಪಕಲಾ ವೈಭವದಲ್ಲಿ ಎದ್ದುಕಾಣುವ ಅಲಂಕಾರಗಳು ಇವರ ಮನ ಸೆಳೆದವು.  ಜೊತೆಗೆ ಪ್ರಾಚೀನ ಸಾಹಿತ್ಯದಲ್ಲಿಯ ಷೋಡಶಾಲಂಕಾರಗಳ ಬಗ್ಗೆ, ಇವರು ವಿಷಯ ಸಂಗ್ರಹಿಸುತ್ತಲೇ ಇದ್ದರು.  ಇದರಿಂದ ‘ಮಹಿಳೆಯರ ಅಲಂಕಾರ’ ಪುಸ್ತಕ ಹೊರಬಂದಿತು.

ಶಾಂತಾದೇವಿಯವರ ಅಧ್ಯಯನದ ಹರಹು ವಚನ ಸಾಹಿತ್ಯವನ್ನು ವ್ಯಾಪಿಸಿದಾಗ ಅದು ಅವರ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರಿತು.  ಅದರ ಫಲವಾಗಿ ‘ಬಸವ ಪ್ರಕಾಶ’ ಕಾದಂಬರಿಯ ರಚನೆಯಾಯಿತು.  ಪುರಾಣದ ಪವಾಡಗಳನ್ನು ಒಪ್ಪದ ಶಾಂತಾದೇವಿಯವರು, ‘ಬಸವಣ್ಣನವರ ಆತ್ಮಶಕ್ತಿಯ ಪ್ರಭಾವದಿಂದ ಸಾವಿರಾರು ಜನರ ಹೃದಯ ಪರಿವರ್ತನೆ ಹೊಂದಿರುವುದೇ ಪವಾಡ’ ಎಂಬಂತೆ ವಿರಳ ಚಾರಿತ್ರಿಕ ವ್ಯಕ್ತಿಯಾದ ಬಸವಣ್ಣನ ಬದುಕನ್ನು ಚಿತ್ರಿಸಿದ್ದಾರೆ.

ಪ್ರವಾಸ ಸಾಹಿತ್ಯಕ್ಕೂ ಶಾಂತಾದೇವಿಯವರ ಕೊಡುಗೆ ಸಂದಿದೆ.  ಮಾಳವಾಡರೊಂದಿಗೆ ಅಖಿಲ ಭಾರತ ಪ್ರವಾಸ ಮಾಡುವ ಅವಕಾಶ ದೊರೆತದ್ದನ್ನು ಬಳಸಿಕೊಂಡು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಪ್ರವಾಸದ ಅನುಭವವನ್ನು ‘ಶ್ರೀಗಿರಿಯಿಂದ ಹಿಮಗಿರಿಗೆ’ ಪುಸ್ತಕದಲ್ಲಿ ದಾಖಲಿಸಿದ್ದಾರೆ.  ಮಹಿಳೆಯರಿಗಾಗಿ ಶಾಂತಾದೇವಿಯವರು ಬರೆದ ಪುಸ್ತಕಗಳಲ್ಲಿ ಮಹತ್ವದ ಕೃತಿಗಳಿಂದರೆ ‘ದಾಂಪತ್ಯ ಯೋಗ’, ‘ಮಹಿಳೆಯರಿಗಾಗಿ ಆತ್ಮಶ್ರೀ’ ಮತ್ತು ‘ಮಹಿಳಾ ಚೇತನ’.  ವೇದ ಪುರಾಣಕಾಲದ ಮಹಿಳೆಯರ, ದಂಪತಿಗಳ ಹಿರಿಮೆ, ಬಸವಯುಗದಲ್ಲಿ ಶಿವಶರಣೆಯರಿಗೆ ಸಾಧ್ಯವಾದ ಉಜ್ವಲ ಬದುಕು ಇಂದಿನ ಆದರ್ಶದ ನೆಲೆಯಾಗಬೇಕಿರುವುದನ್ನು ಶಾಂತಾದೇವಿಯವರು ಇಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ.  ಇವರ ‘ಮಹಿಳಾ ಚೇತನ’ ಒಂದು ವಿಶಿಷ್ಟ ಕೊಡುಗೆ.  ಜಗತ್ತಿನಾದ್ಯಂತ ಮಹಿಳಾ ವರ್ಷವನ್ನು ಆಚರಿಸಿದ ಸಂದರ್ಭದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ಇದನ್ನು ಪ್ರಕಟಿಸಿದೆ.  ಮಹಿಳೆಯ ಆತ್ಮಶ್ರೀಯ ಓಜಸ್ಸನ್ನು ಎತ್ತಿ ಹೇಳುವುದೇ ಈ ಕೃತಿಯ ಆಶಯವಾಗಿದೆ.

ಮಹಿಳೆಯರ ಸಾಧನೆಗಳೊಂದಿಗೆ ಅವರ ಸಮಸ್ಯೆ – ಪರಿಹಾರ ಹಾಗೂ ಸಾಮಾಜಿಕ ಬದುಕಿನಲ್ಲಿ ಮಹಿಳೆಯ ಸ್ಥಿತಿಗತಿಗಳನ್ನು ಕುರಿತು ರಚಿಸಿದ ಚಿಂತನಶೀಲ ಲೇಖನಗಳ ಸಂಗ್ರಹ ‘ಸಮುಚ್ಚಯ’ದಲ್ಲಿ ಶಾಂತಾದೇವಿಯವರ ಸಮತೋಲನ ದೃಷ್ಟಿ, ಸ್ವಸ್ಥ ಮನೋಭಾವ ಸ್ಪಷ್ಟಗೋಚರವಾಗಿವೆ.  ‘ಸಾರ್ವಜನಿಕ ರಂಗದಲ್ಲಿ ಮಹಿಳೆ’ ಪುಸ್ತಕದಲ್ಲಿ ಅವರು ಪ್ರಾಚೀನ ಕಾಲದಿಂದಲೂ ಇತ್ತೀಚಿನವರೆಗಿನ ಮಹಿಳಾ ಆಂದೋಲನದ ಇತಿಹಾಸವನ್ನು ಜೊತೆಗೆ ಇಂದಿನ ಮಹಿಳೆಯ ತುಡಿತ ಮಿಡಿತಗಳನ್ನು ವಿವೇಚಿಸಿದ್ದಾರೆ.  ವಿದೇಶಗಳಲ್ಲಿ ಹುಟ್ಟಿದರೂ ಭಾರತೀಯ ಸಾಂಸ್ಕೃತಿಕ ಪರಂಪರೆ ಹಾಗೂ ಅಧ್ಯಾತ್ಮಿಕ ಶ್ರೀಮಂತಿಕೆಗೆ ಮಾರುಹೋದ ಐವರು ಮಹಿಳೆಯರು ಭಾರತವನ್ನು ತಮ್ಮ ಕರ್ಮಭೂಮಿಯಾಗಿಸಿಕೊಂಡು ಬಾಳು ಬೆಳಗಿಸಿಕೊಂಡ ಜೀವನ – ಸಾಧನೆಗಳ ಚರಿತ್ರೆಗಳನ್ನು ಒಳಗೊಂಡ ಕೃತಿ ‘ಭಾರತದ ಮಾನಸ ಪುತ್ರಿಯರು’.  ಶಾಂತಾದೇವಿಯವರ ಮಹತ್ವದ ಕೊಡುಗೆ ಎಂದರೆ – ತಮ್ಮ ಪತಿ ಬರೆಯಲಾರಂಭಿಸಿದ್ದ ಆತ್ಮಚರಿತ್ರೆ ‘ದಾರಿಸಾಗಿದೆ’ ಅವರ ಆಕಸ್ಮಿಕ ಮರಣದಿಂದ ಅರ್ಧದಲ್ಲೇ ಉಳಿದಾಗ ಅದನ್ನು ಪೂರ್ಣಗೊಳಿಸಿದ್ದು.   ಎಳೆಯ ಮಕ್ಕಳಿಗಾಗಿ ‘ನಾಗಲಾಂಬಿಕೆ’, ‘ಕೆಳದಿ ಚೆನ್ನಮ್ಮ’, ‘ಬೆಳವಾಡಿ ಮಲ್ಲಮ್ಮ’, ‘ನೀಲಾಂಬಿಕೆ’, ‘ಕುಟುಂಬ’ ಈ ಐದು ಪುಸ್ತಿಕೆಗಳನ್ನು ಶಾಂತಾದೇವಿ ರಚಿಸಿದ್ದಾರೆ.

1998ರಲ್ಲಿ ಪ್ರಕಟಗೊಂಡ ‘ಶೂರರಾಣಿ ಕೆಳದಿಯ ಚೆನ್ನಮ್ಮಾಜಿ’ ಶಾಂತಾದೇವಿಯವರ ಮಹತ್ವಾಕಾಂಕ್ಷೆಯ ಕೃತಿಯಾಗಿದೆ.  ಈ ಕಾದಂಬರಿ ಅಪೂರ್ವ ಸಂಶೋಧನಾ ಗ್ರಂಥ ಕೂಡ ಹೌದು.  ಇದು ಅವರ ಹಲವು ವರ್ಷಗಳ ತಪಸ್ಸಿನ ಫಲ.

ಶಾಂತಾದೇವಿ ಮಾಳವಾಡರು ತಮ್ಮ ಸಾಹಿತ್ಯ ಕೃಷಿ ಆರಂಭಿಸಿದಾಗ ಹೆಚ್ಚಿನ ಮಹಿಳೆಯರು ಬರವಣಿಗೆಯಲ್ಲಿ ತೊಡಗಿರಲಿಲ್ಲ.  ಬೆಳೆಯುವ ಇಚ್ಛೆ ಪ್ರಬಲವಾಗಿದ್ದರೆ ಏನೆಲ್ಲ ಸಾಧ್ಯ ಎಂಬುದಕ್ಕೆ ಅವರು ಸಾಕ್ಷಿಯಾದರು.  ಆಳವಾದ ಓದು, ವಿಪುಲವಾದ ಲೋಕಾನುಭವ, ವ್ಯಾಪಕ ಸಂಚಾರ ಹಾಗೂ ಪಕ್ವವಾದ ಮನಸ್ಸು ಅವರ ಬರಹಕ್ಕೆ ಲಾಲಿತ್ಯವನ್ನೂ ಪ್ರೌಢಿಮೆಯನ್ನೂ ತಂದುಕೊಟ್ಟಿವೆ.  ಅವರ ‘ಕನ್ನಡ ತಾಯಿ’ ಅಂತಹ ಕೆಲವು ಪುಸ್ತಕಗಳು ಪಠ್ಯಪುಸ್ತಕಗಳಾಗಿಯೂ ಮಾನ್ಯತೆ ಪಡೆದಿವೆ.

ಶಾಂತಾದೇವಿ ಮಾಳವಾಡರಿಗೆ ಹಲವು ಪ್ರಶಸ್ತಿ ಗೌರವಗಳು ದೊರೆತಿವೆ.  1977ರಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಪುರಸ್ಕಾರ ದೊರೆಯಿತು.  1973ರಿಂದ 1978ರವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿಯೂ, 1979ರಲ್ಲಿ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿಯೂ ಗೌರವಕ್ಕೆ ಪಾತ್ರರಾಗಿದ್ದಾರೆ.  1994ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ನೀಡಲಾಯಿತು. 1997ರಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಅವರಿಗೆ ಸಂದಿತು.   1999ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಹಿರಿಯ ಗೌರವ ಕೂಡ ಅವರಿಗೆ ನೀಡಲಾಯಿತು.

ಸಾಹಿತ್ಯ ಪ್ರೀತಿ, ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲ ಆಸಕ್ತಿ, ಸಜ್ಜನರ ಸ್ನೇಹ ಜ್ಞಾನಾರ್ಜನೆಯ ಹಸಿವು, ಶಿವಶರಣರ ಮಾರ್ಗಾನುಸರಣೆ, ಅರವಿಂದಾಶ್ರಮದ ಸಂಪರ್ಕಗಳು ಶಾಂತಾದೇವಿ ಮಾಳವಾಡ ಅವರ ಬದುಕನ್ನು, ಸಾಹಿತ್ಯವನ್ನು ಹಸನುಗೊಳಿಸಿವೆ.

ಶಾಂತಾದೇವಿ ಮಾಳವಾಡರು ಆಗಸ್ಟ್ 7, 2005ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

(ಆಧಾರ:  ಈ ಲೇಖನ ಹೇಮಾ ಪಟ್ಟಣಶೆಟ್ಟಿಯವರು ಬರೆದ ಶಾಂತಾದೇವಿ ಮಾಳವಾಡ ವರ ಕುರಿತ ಬರಹವನ್ನು ಆಧರಿಸಿದೆ)

Tag: Shantadevi Malavada

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)