ಎಸ್. ಸಿ. ನಂದೀಮಠ

sc-nandimath

ಎಸ್. ಸಿ. ನಂದೀಮಠ

ಸಂಸ್ಕೃತ, ಕನ್ನಡಗಳಲ್ಲಿ ಪಾಂಡಿತ್ಯ ಪಡೆದ ಎಸ್. ಸಿ. ನಂದೀಮಠರು  (ಶಿವಲಿಂಗಯ್ಯ ಚನ್ನಬಸವಯ್ಯ ನಂದೀಮಠ) ೧೨-೧೨-೧೯00ರಲ್ಲಿ ಗೋಕಾಕ ತಾಲ್ಲೂಕಿನ ನಂದೀಗ್ರಾಮದಲ್ಲಿ ಜನಿಸಿದರು. ಗೋಕಾಕ ಮತ್ತು ಬೆಳಗಾವಿಗಳಲ್ಲಿ ಆರಂಭದ ವಿದ್ಯಾಭ್ಯಾಸ ಮಾಡಿದ ಇವರು ಧಾರವಾಡದಲ್ಲಿ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಲಂಡನ್ನಿಗೆ ತೆರಳಿ ವೀರಶೈವ ಧರ್ಮ ಹಾಗೂ ತತ್ತ್ವಜ್ಞಾನಗಳ ಕೈಪಿಡಿ ವಿಷಯವಾಗಿ ಪಿಎಚ್.ಡಿ. ಪದವಿ ಪಡೆದರು.

ಸ್ವದೇಶಕ್ಕೆ ಮರಳಿದ ನಂದೀಮಠರು ಕೆಲಕಾಲ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬೆಳಗಾವಿಯಲ್ಲಿ ಗಿಲಗಂಜಿ ಅರಟಾಳ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಅನಂತರ ಧಾರವಾಡದ ಲಿಂಗರಾಜ ಕಾಲೇಜಿನಲ್ಲಿ ೧೧ ವರ್ಷ ಪ್ರಿನ್ಸಿಪಾಲರಾಗಿದ್ದರು. ಬಾಗಿಲಕೋಟೆ ಬಸವೇಶ್ವರ ಕಾಲೇಜಿನಲ್ಲೂ ಸ್ವಲ್ಪ ಕಾಲ ಸೇವೆ ಸಲ್ಲಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ, ಕುಲಪತಿಗಳಾಗಿ ಕೂಡ ಸೇವೆ ಸಲ್ಲಿಸಿದರು.

೧೯೪0ರಲ್ಲಿ ಧಾರವಾಡ ಜಿಲ್ಲಾಮಟ್ಟದ  ೪ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು. ೧೯೫೨ರಲ್ಲಿ ಬೇಲೂರಿನಲ್ಲಿ ಸಮಾವೇಶಗೊಂಡಿದ್ದ ೩೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಇವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ೧೯೭೫ರಲ್ಲಿ ಗೌರವ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿತು.

ಕನ್ನಡ, ಸಂಸ್ಕೃತ, ಪಾಲಿ, ಪ್ರಾಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಶ್ರಮ ಹೊಂದಿದ್ದ ನಂದೀಮಠರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಧರ್ಮಗಳು, ಗಿರಿಜಾಕಲ್ಯಾಣ, ಹರಿಹರ ಕವಿ ಪ್ರಶಸ್ತಿ, ಹ್ಯಾಂಡ್ ಬುಕ್ ಆಫ್ ವೀರಶೈವಿಸಂ, ಕನ್ನಡ ಕುವಲಯಾನಂದ, ವೀರಶೈವತತ್ತ್ವಪ್ರಕಾಶನ, ಇತ್ಯಾದಿ.

ನಂದೀಮಠರು ೨೧-೧೧-೧೯೭೫ರಲ್ಲಿ ನಿಧನರಾದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: S.C. Nandimath

 

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)