ನಾವಾಡುವ ನುಡಿಯೇ ಕನ್ನಡ ನುಡಿ

“ನಾವಾಡುವ ನುಡಿಯೇ ಕನ್ನಡ ನುಡಿ” ಎಂಬ ಶೀರ್ಷಿಕೆಯಡಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯಾದ್ಯಂತ ಭಾವಗೀತೆ, ಕವಿ-ಕಾವ್ಯ ಗೀತೆ ಹಾಗೂ ಚಲನಚಿತ್ರ ಗೀತೆಗಳ ಆಧಾರಿತ ‘ಸಂಗೀತ- ನೃತ್ಯ’ ಕಾರ್ಯಕ್ರಮ

ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ ಕಾಪಾಡುವ ಹಿನ್ನೆಲೆಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ನು “ಜನಸಾಮಾನ್ಯರ ಪರಿಷತ್ತನ್ನಾಗಿ” ರೂಪಿಸುವ ಉದ್ದೇಶದಿಂದ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇವುಗಳಲ್ಲಿ ಬಹಳ ಮುಖ್ಯವಾದದ್ದು “ನಾವಾಡುವ ನುಡಿಯೇ ಕನ್ನಡ ನುಡಿ” ಎನ್ನುವ ಕಾರ್ಯಕ್ರಮ. ಈ ಸಾಂಸ್ಕೃತಿಕ ಕಾರ್ಯಕ್ರಮವು ರಾಜ್ಯಾದ್ಯಂತ ನಡೆಯಲಿದ್ದು ಭಾವಗೀತೆ, ಕವಿ-ಕಾವ್ಯ ಗೀತೆ ಮತ್ತು ಚಲನಚಿತ್ರ ಗೀತೆಗಳನ್ನು ವಾದ್ಯಗೋಷ್ಠಿಯ ಸಹಕಾರದೊಂದಿಗೆ ಪ್ರಸ್ತುತಪಡಿಸಲಾಗುವುದು.

ನಾಡೋಜ ಡಾ. ಮಹೇಶ ಜೋಶಿಯವರು ದೂರದರ್ಶನದ ಚುಕ್ಕಾಣಿ ಹಿಡಿದಾಗ ‘ಮಧುರ ಮಧುರವೀ ಮಂಜುಳಗಾನ’ ಎನ್ನುವ ಜನಪ್ರಿಯ ಕಾರ್ಯಕ್ರಮಗಳನ್ನು ಆಯೋಜಿಸಿ, ಜನಸಾಮಾನ್ಯರಿಂದ ದೂರವಾಗಿದ್ದ ದೂರದರ್ಶನವನ್ನು ‘ಸಮೀಪ ದರ್ಶನ’ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ಮಾದರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮುಂಬರುವ ದಿನಗಳಲ್ಲಿ ಕನ್ನಡ ನಾಡಿನ ತೆರೆಯ ಮರೆಯಲ್ಲಿರುವ ಕಲಾವಿದರನ್ನು ಗುರುತಿಸಿ ಅಂತಹವರಿಗೆ ಸೂಕ್ತ ವೇದಿಕೆ ನೀಡಿ ಪ್ರೋತ್ಸಾಹಿಸುವುದಕ್ಕೆ ಅಧ್ಯಕ್ಷರು ಮುಂದಾಗಿದ್ದಾರೆ.

ಸಂಗೀತ, ನೃತ್ಯದಲ್ಲಿ ತೊಡಗಿಸಿಕೊಂಡ ಕಲಾವಿದರು, ಅವಕಾಶ ವಂಚಿತರು, ಜೀವನದಲ್ಲೊಮ್ಮೆ ಬೃಹತ್ ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎನ್ನುವ ಕನಸು ಇಟ್ಟುಕೊಂಡಿರುವವರಿಗೆ ಸದಾವಕಾಶ ನೀಡಲು ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ. ಕನ್ನಡದ ಚಿತ್ರ ಗೀತೆಗಳನ್ನು ಒಳಗೊಂಡ ಈ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡುವವರಿಗೂ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕೋರಿದ್ದಾರೆ. ಈ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಲ್ಲಿಯೂ ಅರ್ಥಪೂರ್ಣವಾಗಿ ಆಯೋಜಿಸಲಾಗುತ್ತದೆ.

ಹಾವೇರಿಯಲ್ಲಿ ಜರುಗಲಿರುವ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ “ನಾವಾಡುವ ನುಡಿಯೇ ಕನ್ನಡ ನುಡಿ”ಯ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮವು ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡರು ರಚಿಸಿದ ಚಿತ್ರಗೀತೆಗಳನ್ನು ಆಧಾರಿಸಿ ಪ್ರಸ್ತುತಪಡಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ಉದ್ದೇಶವನ್ನು ಪರಿಷತ್ತು ಹೊಂದಿದ್ದು, ಸಂಗೀತ ಜ್ಞಾನವುಳ್ಳ, ನೃತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಚಲನಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಬಲ್ಲ ಅಭ್ಯರ್ಥಿಗಳು ಅಥವಾ ತಂಡಗಳಿಗೆ ಅವಕಾಶ ಇರುತ್ತದೆ. ಅಂಥವರು ತಮ್ಮ ಸ್ವವಿವರದೊಂದಿಗೆ ೩೦ ಜೂನ್ ೨೦೨೨ ರೊಳಗೆ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೫೬೦ ೦೧೮ ಇಲ್ಲಿಗೆ ಕಳುಹಿಸಲು ತಿಳಿಸಿದೆ.

ಸಂಪರ್ಕಕ್ಕಾಗಿ : ಕಚೇರಿ ದೂರವಾಣಿ ೦೮೦-೨೬೬೧೨೯೯೧, ೨೬೬೨೩೫೮೪, ೨೨೪೨೩೮೬೭, ೨೬೬೭೨೯೯೨, ಇ-ಮೇಲ್ : kannadaparishattu@gmail.com,, ವೆಬ್‌ಸೈಟ್ : www.kasapa.in, ಯೂಟ್ಯೂಬ್: http://www.youtube.com/c/KannadaParishattu, ಫೇಸ್‌ಬುಕ್: ಕ.ಸಾ.ಪ. ಬೆಂಗಳೂರು
ನಾಡೋಜ ಡಾ. ಮಹೇಶ ಜೋಶಿ
ಅಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್ತು

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)