ಬೆಳಗಾವಿ: ಮಂಡ್ಯದಲ್ಲಿ ಅಯೋಜನೆಗೊಂಡಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಕಲಾಪಗಳ ಸಂದರ್ಭದಲ್ಲಿ ಭೇಟಿಯಾಗಿ ಅಧಿಕೃತವಾಗಿ ಆಹ್ವಾನಿಸಿದರು. ಇದಕ್ಕಾಗಿಯೇ ಅವರು ವಿಶೇಷವಾಗಿ ಬೆಳಗಾವಿಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಮುಖ್ಯಮಂತ್ರಿಗಳು ಆಹ್ವಾನ ಪತ್ರಿಕೆಯ ಕುರಿತು ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ದತೆಗಳ ಕುರಿತು ಅಪಾರ ಮೆಚ್ಚಿಗೆಯನ್ನು ವ್ಯಕ್ತ ಪಡಿಸಿ ಸಮ್ಮೇಳನವು ದಾಖಲೆಯನ್ನು ಸೃಷ್ಟಿ ಮಾಡುವಂತೆ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕನ್ನಡ ಕಾವಲು ಸಮಿತಿ ಮೊದಲ ಅಧ್ಯಕ್ಷರಾಗಿ ತಾವು ಕೆಲಸ ಮಾಡಿದ ದಿನಗಳನ್ನು ಸ್ಮರಿಸಿ ಕನ್ನಡ ನಾಡು-ನುಡಿಯ ಕುರಿತು ಆಗ ಬೇಕಾದ ಪ್ರಮುಖ ಕಾರ್ಯಗಳ ಕುರಿತು ಚರ್ಚಿಸಿದರು. ಹಿಂದೆ ತಾವು ಮುಖ್ಯಮಂತ್ರಿಗಳಾಗಿದ್ದಾಗ ನಡೆದ ನಾಲ್ಕು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅನುಭವಗಳನ್ನು ಹಂಚಿ ಕೊಂಡು ತಮ್ಮ ಅವಧಿಯಲ್ಲಿ ಆಯೋಜನೆಗೊಂಡಿರುವ ಐದನೆಯದೆಯದಾದ ‘ಈ ಸಮ್ಮೇಳನವು ತುಂಬಾ ಯಶಸ್ವಿಯಾಗಲಿ, ಸರ್ಕಾರದ ಕಡೆಯಿಂದ ಎಲ್ಲಾ ನೆರವೂ ದೊರಕಲಿದೆ ಎಂಬ ಭರವಸೆಯನ್ನು ನೀಡಿದರು. ಇತ್ತೀಚೆಗೆ ನಮ್ಮನ್ನು ಅಗಲಿದ ರಾಜಕೀಯ ಮತ್ಸುದ್ದಿ ಎಸ್.ಎಂ.ಕೃಷ್ಣ ಅವರ ಹೆಸರನ್ನು ವೇದಿಕೆಗೆ ಇಡುವ ಮೂಲಕ ಅವರನ್ನು ಸ್ಮರಿಸುವ ಕಾರ್ಯ ಸಮ್ಮೇಳನದಲ್ಲಿ ನಡೆಯುತ್ತಿರುವುದರ ಕುರಿತೂ ಅವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಎಂದು ನಾಡೋಜ ಡಾ. ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಕ್ರಿಯೆ