ಸಾಹಿತ್ಯ ಸಮ್ಮೇಳನ-೩೭ : ಮೈಸೂರು
ಜೂನ್ ೧೯೫೫

ಅಧ್ಯಕ್ಷತೆ: ಕೋಟ ಶಿವರಾಮಕಾರಂತ

೩೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕೋಟ ಶಿವರಾಮಕಾರಂತ

ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿ ಓದಿಗೆ ಮಂಗಳ ಹಾಡಿದರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು.

ಹರಿಜನೋದ್ಧಾರಕ, ಅಸಹಕಾರ ಚಳವಳಿಯಲ್ಲಿ ಪಾಲ್ಗೊಳ್ಳುವಿಕೆ, ಸ್ವಾತಂತ್ರ್ಯ ಚಳವಳಿಗಳಲ್ಲಿ, ನೃತ್ಯ ಸಂಗೀತ ರಂಗಗಳಲ್ಲಿ ನಾನಾರೀತಿ ಸೇವೆ ಮಾಡಿದ ಇವರು ಬಾಲವನವನ್ನು ಮಕ್ಕಳಿಗಾಗಿ ನಡೆಸಿದರು. ಬಿಎಂಶ್ರೀ ಸ್ಮಾರಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು, ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸಿದರು.

೧೯೫೮ರಲ್ಲಿ ಇವರ ಯಕ್ಷಗಾನ ಬಯಲಾಟಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಸ್ವೀಡನ್ ಪ್ರಶಸ್ತಿ ಬಂದಿತು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು. ಕರ್ನಾಟಕ ವಿಶ್ವವಿದ್ಯಾನಿಲಯ ೧೯೬೩ರಲ್ಲಿ ಇವರಿಗೆ ಗೌರವ ಡಾಕ್ಟರೇಟ್ ನೀಡಿದರೆ, ೧೯೬೮ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಬಿರುದಿತ್ತು ಗೌರವಿಸಿತು. ೧೯೫೧ರಲ್ಲಿ ಮೈಸೂರಿನಲ್ಲಿ ನಡೆದ ೩೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಪರಿಷತ್ತು ಸನ್ಮಾನಿಸಿತು. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿತು.

ಕಾರಂತರ ಹಾಗೆ ವೈವಿಧ್ಯಮಯ ಕೃತಿಗಳನ್ನು ರಚಿಸಿದವರು ಕನ್ನಡದಲ್ಲಿ ವಿರಳ.  ೪೪ ಕಾದಂಬರಿ, ೧೪ ನಾಟಕ, ೩ ಕಥಾಸಂಕಲನ, ೬ ಪ್ರಬಂಧಗಳು, ೯ ಕಲಾ ಗ್ರಂಥಗಳು, ೫ ಆತ್ಮಕಥೆ-ಜೀವನ ಚರಿತ್ರೆಗಳು, ಮಕ್ಕಳ ಸಾಹಿತ್ಯ-೨೫, ಇತ್ಯಾದಿ ೧೫0ಕ್ಕೂ ಮಿಗಿಲಾದ ಕೃತಿಗಳನ್ನು ರಚಿಸಿರುವ ಕಾರಂತರು ಕನ್ನಡದ ಹಿರಿಮೆ ಸಾರುವ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ವಿಜ್ಞಾನ ಪ್ರಪಂಚ, ಬಾಲ ಪ್ರಪಂಚ, ಚಿತ್ರಮಯಿ ದಕ್ಷಿಣ ಕನ್ನಡ, ಯಕ್ಷಗಾನ  ಬಯಲಾಟ, ಸಿರಿಗನ್ನಡ ಅರ್ಥಕೋಶ, ಕಿಸಾಗೌತಮಿ, ಹುಚ್ಚುಮನಸ್ಸಿನ ಹತ್ತು ಮುಖಗಳು, ಮೂಕಜ್ಜಿ ಕನಸುಗಳು ಮೊದಲಾದ ಕೃತಿಗಳು ಕನ್ನಡ ಸಾಹಿತ್ಯದ ಪ್ರಪಂಚದಲ್ಲೇ ಮೈಲಿಗಲ್ಲಿನ ಕೃತಿಗಳಾಗಿವೆ.

ತಮ್ಮ ಪ್ರತಿಭೆ ಪ್ರದರ್ಶನ, ಸಾಹಿತ್ಯದ ಕೊಡುಗೆ, ಆದರ್ಶ ವ್ಯಕ್ತಿತ್ವಗಳಿಂದ ಕನ್ನಡದ ಅಪೂರ್ವ ಸಾಹಿತಿಯಾಗಿದ್ದ ಶಿವರಾಮ ಕಾರಂತರು ೯-೧೨-೧೯೯೭ರಲ್ಲಿ ಮಂಗಳೂರಿನಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೩೭,

ಅಧ್ಯಕ್ಷರು: ಶಿವರಾಮ ಕಾರಂತ

ದಿನಾಂಕ ೧0, ೧೧, ೧೨ ಜೂನ್ ೧೯೫೫

ಸ್ಥಳ : ಮೈಸೂರು

ಸಾಹಿತಿಗಳ ಸವಿಗನಸು ಕನ್ನಡ ನಾಡು ಒಂದಾಗಬೇಕು

ಕನ್ನಡದೇಶದ ಇತಿಹಾಸ ವಿಸ್ತಾರವಾದ ಜೀವನದಲ್ಲಿ, ಒಂದೇ ನಾಡಿನವರಾಗಿ ಶತಮಾನ, ಶತಮಾನಗಳ ಕಾಲ ಬಾಳಿ ಬದುಕಿದ ಕನ್ನಡ ಜನರು, ಇಂದು ಭಿನ್ನ ಭಿನ್ನ ರಾಜಕೀಯ ಪ್ರಾಂತಗಳಲ್ಲಿ ಉಳಿದುಕೊಂಡು, ತಮ್ಮ ಆರ್ಥಿಕ, ಸಾಂಸ್ಕೃತಿಕ, ಇಲ್ಲವೆ ಸಾಮಾಜಿಕವಾದ ಯಾವ ಆಶೋತ್ತರಗಳನ್ನೂ ಕಾಲಕ್ಕೆ ತಕ್ಕಂತೆ ಬೆಳೆಯಿಸಿಕೊಳ್ಳಲಾರದೆ ನರಳುತ್ತಿರುವ ಈ ಕಾಲದಲ್ಲಿ, ಈ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಒಂದು ಸಂಸ್ಥೆ ರಾಜಕೀಯ  ಅಡಚಣೆ ಮತ್ತು ಮೇರೆಗಳನ್ನು ಮುರಿದು, ಹರಿದು ಹಂಚಿಹೋದ ಕರ್ಣಾಟಕವನ್ನು ಒಂದುಗೂಡಿಸಿ ನಾಡಿನ ಮಕ್ಕಳ ದನಿಗಳಲ್ಲಿ ಒಂದೇ ಶ್ರುತಿ ಹುಟ್ಟಿ ಬರುವಂತೆ, ಶ್ರಮಿಸುತ್ತಿರುವ ಸಂಸ್ಥೆಯಾಗಿದೆ. ಜೀವನದ ಇತರ ರಂಗಗಳಲ್ಲಿ, ತಾವು ಬೇರೆ ಬೇರೆಯ ‘ಗುಂಪು’, ‘ಬಣ’ ಎಂದು ತಿಳಿದು, ಕಲಹ ಸೆಣಸಾಟಗಳು ನಡೆಯತ್ತಿದ್ದರೂ, ಈ ಸಾಹಿತ್ಯ ಕ್ಷೇತ್ರದಲ್ಲಿ, ಈ ಸಮ್ಮೇಳನದ ಆಸರೆಯಲ್ಲಿ ‘ಕನ್ನಡಿಗರು’ ಹಲರಲ್ಲ; ಕನ್ನಡದ ಕುಲ ಒಂದು; ಜನ ಒಂದು; ‘ನುಡಿ ಒಂದು,’ ಎಂದು ನಮ್ಮ ಸಾಹಿತಿಗಳು ಹಿಂದಿನಿಂದಲೂ ಹೇಳುತ್ತ ಬಂದಿದ್ದಾರೆ. ಯಾರು ಎಷ್ಟೇ ಮೂದಲಿಸಿದರೂ, ರಾಜಕಾರಣಿಗಳು ಎಂತಹ ವಾದ ಮಂಡಿಸಿದರೂ, ನಮ್ಮ ಕನ್ನಡ ಸಾಹಿತಿಗಳು ಮಾತ್ರ ‘ಕನ್ನಡ ನಾಡು ಒಂದುಗೂಡಬೇಕು’ ಎಂಬ ಹಂಬಲವನ್ನು ಇರಿಸಿಕೊಂಡೇ ಬಂದಿದ್ದಾರೆ. ಅದಕ್ಕಾಗಿ ನಾಡಿನಲ್ಲಿ ತೊಳಲಾಡಿದ್ದಾರೆ. ಅವರು ಎಂದೂ ಆ ಸವಿಗನಸನ್ನು ಬಿಟ್ಟುಕೊಟ್ಟವರಲ್ಲ; ಕೊಡುವವರೂ ಅಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ದುಡಿಯುವ ಜನಗಳಿಗೆ ರಾಜಕೀಯದ ಜಾಣ್ಮೆ, ಚಾತುರ್ಯ, ತಂತ್ರ ಹೆಚ್ಚಾಗಿ ತಿಳಿಯದು. ಕನ್ನಡದ ವಿವಿಧ ಭಾಗಗಳನ್ನು ಅವರು ಚೆನ್ನಾಗಿ ಬಲ್ಲರು. ಸ್ವಲಾಭ ಸ್ವಕಾರ್ಯ ಸಾಧನೆಗಳ ಆಸೆಯಿಲ್ಲದೆ, ಕನ್ನಡ ಜನಗಳ ಶ್ರೇಯಸ್ಸು, ಎಲ್ಲಿದೆ ಎಂಬುದನ್ನವರು ಊಹಿಸಬಲ್ಲರು. ಅಂತಹವರಲ್ಲಿ ಸದಾಸಂಚಾರಿಯಾದ ನಾನೂ  ಒಬ್ಬನೆಂದು ಧೈರ್ಯವಾಗಿ ಹೇಳುತ್ತೇನೆ.

ಸಮ್ಮೇಳನದ ಗುರಿ

ಕಳೆದ ಬಾರಿ ಕುಮಟೆಯಲ್ಲಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಕೇಂದ್ರ ಸರಕಾರದ ಉಪಮಂತ್ರಿ ಮಾನ್ಯ ದ.ಪ. ಕರಮರ್‍ಕರ್ ಅವರು ಆಶಾವಾದಿಗಳಾಗಿ, ‘ಮುಂದಿನ ಸಾಹಿತ್ಯ ಸಮ್ಮೇಳನವು ಸ್ವತಂತ್ರ ಕರ್ನಾಟಕದ ರಾಜಧಾನಿಯಲ್ಲಾಗಲಿ’ ಎಂದು ಹರಸಿದ್ದರು. ಆ ಕನಸು ಇಷ್ಟರಲ್ಲೇ ಕೈಗೂಡದಿದ್ದರೂ ಕೈಗೂಡುವುದೆಂಬ ಪೂರ್ವಸೂಚನೆಯಾಗಿಯೇ ಈ ಸಮ್ಮೇಳನವು ಏಕೀಕೃತ ಕರ್ನಾಟಕದ ರಾಜಧಾನಿಯಂತಿರುವ ಮೈಸೂರಿನಲ್ಲಿ ನಡೆಯುತ್ತಿದೆ. ಕನ್ನಡಿಗರ ಈ ಸಹಜವಾದ ಆಕಾಂಕ್ಷೆಗೆ ಯಾರಿಂದಲೂ ವಿಘ್ನ ಬರಲಾರದು. ಬರಬಹುದಾದ ವಿಘ್ನಗಳನ್ನು ತೊಡೆದುಕೊಳ್ಳುವ ಶಕ್ತಿ ಕನ್ನಡ ಜನಕ್ಕೆ ಬರಲಿ-ಎಂದು ಹೇಳಿ ಮುಂದುವರಿಯುತ್ತೇನೆ.

ಪರಿಷತ್ತಿನ ಭಾಷಾ ಹೊಣೆ

ಇನ್ನು ಕನ್ನಡ ಭಾಷೆಯ ಮೂಲಕ ನಾವು ಜನಕ್ಕೆ ಸಲ್ಲಿಸಬಹುದಾದ- ಇತರ ಸೇವೆಗಳನ್ನು ಕುರಿತು ನಾಲ್ಕು ಮಾತು ಹೇಳುತ್ತೇನೆ. ಅದಕ್ಕಿಂತ ಮುಂಚಿತವಾಗಿ ನಮ್ಮ ಕನ್ನಡ ಜನಗಳನ್ನು, ನಾವು ಗುರುತಿಸಬೇಕಾಗಿದೆ. ಅವರ ಆಡುಭಾಷೆ ಒಂದೊಂದು ತೆರನಾಗಿದೆ. ಪ್ರಪಂಚದ ಎಲ್ಲ ದೊಡ್ಡ ಭಾಷೆಗಳ ಗತಿಯೂ ಹೀಗೇನೆ. ಆದರೆ, ನಾವು ಬರೆಯುವುದು ಜನಕ್ಕೆ ತಿಳಿಯಬೇಕಾದಲ್ಲಿ-ನಾವು ಭಾಷೆಯ ಏಕರೂಪತೆಗೆ ಗಮನ ಕೊಡಬೇಕಾಗುತ್ತದೆ. ಇಂದು ಮೈಸೂರು ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ-ಎಂದು ಹೇಳುವ ಸಂಪ್ರದಾಯ ನಮ್ಮ ಬರವಣಿಗೆಯಿಂದಾಗಿ ಬಂದುಬಿಟ್ಟಿದೆ. ನಮ್ಮದು ಅಷ್ಟೊಂದು ದೊಡ್ಡ ದೇಶವಲ್ಲ; ಆದರೂ ಒಂದು ಕಡೆಯ ಜನ, ಇನ್ನೊಂದು ಕಡೆಯವರು ಬರೆದ ಪುಸ್ತಕಗಳನ್ನು, ಪತ್ರಿಕೆಗಳನ್ನು ಓದಿ ತಿಳಿಯುವುದಕ್ಕೆ ಕಷ್ಟವಾಗಿ ಬಂದಲ್ಲಿ, ಆಗ ಬರಹಗಾರರಾದ ನಾವೇ ನಮ್ಮ ಮಾತಿನ ವಿಸ್ತಾರಕ್ಕೆ, ಆಡಚಣೆ ತಂದುಕೊಳ್ಳುತ್ತೇವೆ. ಅಲ್ಲಲ್ಲಿನ ಸ್ಥಳಿಕ ಗ್ರಾಮ್ಯಪದಗಳನ್ನು ಹಟದಿಂದ, ಪುಸ್ತಕಗಳಲ್ಲಿ ತುಂಬಿಸುವ ಪ್ರಯತ್ನದಿಂದ, ಯಾವ ದೇವರಿಗೆ ಪ್ರೀತಿಯೋ ನಾನು ಕಾಣೆ. ಬ್ರಿಟಿಷರಿಂದ ಬಂದ ಪ್ರಾಂತದ ಅಡ್ಡಗೋಡೆಗಳನ್ನು ಮುರಿಯಬೇಕೆನ್ನುತ್ತಿರುವ ನಾವು, ಇನ್ನೊಂದು ದಾರಿಯಿಂದ ಅದನ್ನು ಏರಿಸುತ್ತ ಹೋದರೆ ಹೇಗೆ? ಯಾವೊಂದು ವಿಷಯದಲ್ಲೂ ನಮ್ಮಲ್ಲಿ-ಗ್ರಂಥ, ಪುಸ್ತಕ, ಲೇಖನ, ಪತ್ರಿಕೆಗಳ ಬಾಹುಳ್ಯವಿಲ್ಲ. ಇರುವುದನ್ನು ಎಲ್ಲ ಭಾಗದ ಕನ್ನಡಿಗರಿಗೂ ಅರ್ಥವಾಗುವ ರೀತಿಯಲ್ಲಿ ಸಾಮಾನ್ಯವಾದ ಒಂದು ಭಾಷೆಯ ರೂಪ ಬೆಳೆಯುವಂತೆ ನಾವು ಮಾಡಬೇಡವೆ? ಪರಿಷತ್ತಿನಂತಹ ಒಂದು-ಸಂಸ್ಥೆ-ಇಂಥ ವಿಷಯದಲ್ಲಿ ಹೊಣೆಯನ್ನು ಹೊತ್ತು ಮುಂದೆ ಬರಬೇಕಾಗಿದೆ.

ನಿಘಂಟು ನಿರ್ಮಾಣದಲ್ಲಿ ಪರಿಷತ್ತಿಗೆ ಸಲಹೆ

ವಿಶ್ವಕೋಶದ ಮಾತಿನಿಂದ, ಕನ್ನಡ ನಿಘಂಟಿನ ವಿಷಯಕ್ಕೆ ಬರುತ್ತೇನೆ. ನಾನು, ನನ್ನ ಕೆಲವು ಮಿತ್ರರ ಸಹಾಯದಿಂದ, ವಿದ್ಯಾರ್ಥಿಗಳಿಗಾಗಿ ಸಾಮಾನ್ಯವಾದೊಂದು ಶಬ್ದಕೋಶ ನಿರ್ಮಾಣ ಮಾಡಿದವನು. ಅದನ್ನು ಮಾಡುಮಾಡುತ್ತ ಕನ್ನಡ ಕಲಿಯತೊಡಗಿದವನು. ಹಾಗೆ ಕಲಿಯುವಾಗ-ತಿಳಿದುಕೊಂಡ ಕೆಲವು ಸಂಗತಿಗಳನ್ನು ನಿಮ್ಮ ಮುಂದಿರುಸುತ್ತೇನೆ. ಈ ಕಾರ್ಯದಲ್ಲಿ ನಿರತವಾದ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿಗೆ, ಅದು ಕೆಲವು ಸಲಹೆಗಳನ್ನು ಕೊಡಬಹುದು.

ನಿಘಂಟಿನಲ್ಲಿ, ಶಬ್ದಗಳನ್ನು ಬರೆದು, ಅವುಗಳ ಮುಂದೆ ಸಮಾನ ಪದಗಳನ್ನು ನಾವು ಬರೆಯುತ್ತೇವಷ್ಟೆ. ‘ಗಡಿಗೆ’ ಎಂದು ಬರೆದರೆ ಅದರ ಮುಂದೆ ಸಮಾನ ಪದಗಳು ‘ಮಡಕೆ’, ‘ಕುಡಿಕೆ’ ಎಂದು ಬರೆಯಬಹುದು. ಈ ಅರ್ಥಗಳು ಎಂಥ ಶುಂಠನಿಗೂ ತಿಳಿಯುತ್ತದೆ- ಎಂದು ನಮ್ಮ ದೃಢವಾದ ನಂಬಿಕೆ. ‘ಮಡಕೆ’ ಎಂದರೆ ಮಣ್ಣಿನ ಪಾತ್ರೆಯೆಂದು ತಿಳಿಯಬೇಡವೆ ಜನ? ನಾವು ಹಾವೇರಿಗೋ, ಲಕ್ಷ್ಮೇಶ್ವರಕ್ಕೋ ಹೋಗಿ, ಅಲ್ಲಿನ ಜನಗಳನ್ನು ‘ಮಡಕೆ’ ಏನೆಂದು ಕೇಳಿದರೆ ಅವರಿಗೆ, ಅದು ಅಲಸಂಡೆಯ ಜಾತಿಯ ಒಂದು ಕಾಳು ಎಂದು ಬೋಧೆಯಾಗುತ್ತದೆ. ನಿತ್ಯೋಪಯೋಗಿಯಾದ ಅನೇಕ ವಸ್ತುಗಳಿಗೆ, ಕನ್ನಡದ ಬೇರೆ ಬೇರೆ ಮೂಲೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ನಾವು ಕೊಡುವ ಸಮಾನ ಪದಗಳಿಗೆ, ನಮಗೇ ಬೆರಗು ಹುಟ್ಟಿಸಬಹುದಾದಷ್ಟು ವಿಚಿತ್ರ ಅರ್ಥ ಬರಬಹುದು, ಎಂಬುದನ್ನು ನಾವು ತಿಳಿದಿರಬೇಕು. ಗಿಡ, ಮರ, ಪಶು, ಪ್ರಾಣಿ, ವಸ್ತು, ಒಡವೆ, ರೀತಿ ನೀತಿ-ಎಲ್ಲವನ್ನೂ ಹೇಳುವ ಪದಗಳಿಗೆ ಕನ್ನಡನಾಡಿನ ಒಂದೊಂದು ಮೂಲೆಯಲ್ಲಿ ಒಂದೊಂದು ಅರ್ಥ ಬರುವುದು ಸಾಧ್ಯ. ಬೆಂಗಳೂರು, ಮೈಸೂರುಗಳ ಒಂದು ಮೂಲೆಯಲ್ಲಿ ಕುಳಿತು, ಈ ಕೆಲಸ ಮಾಡುತ್ತ ಕುಳಿತರೆ ಆಯಿತು, ಅದನ್ನು ಜನ ಅರ್ಥಮಾಡಿಕೊಳ್ಳಲೇ ಬೇಕು- ಎಂದು ತಿಳಿಯುವಂತಿಲ್ಲ. ಇಲ್ಲವೆ ‘ನಾವು ಮೊದಲು ಈ ಕೆಲಸ ಮಾಡುತ್ತೇವೆ; ಅಮೇಲೆ ಬೇಕಾದರೆ ಮೈಸೂರೇತರ ಜನಗಳ ಅಭಿಪ್ರಾಯ ಕೇಳುತ್ತೇವೆ’ ಎಂದು ಯಾರಾದರೂ ನನಗೆ ಸಮಾಧಾನ ಹೇಳಿದರೆ, ‘ತಮ್ಮ ಈ ಹಾದಿ ತಪ್ಪು’ ಎಂದು ನಿರ್ಭೀತಿಯಿಂದ ಹೇಳಬೇಕಾಗುತ್ತದೆ.

ಪರಿಷತ್ತಿನ ನಿಘಂಟಿನ ಸ್ವರೂಪ

ಇನ್ನು ಒಂದು ಮಾತು. ನಾವು ಮಾಡುತ್ತಿರುವುದು ಕನ್ನಡ-ಕನ್ನಡ-ನಿಘಂಟನ್ನು, ಇದಕ್ಕೆ ಆಧಾರ, ಶಬ್ದಗಳ ಆಯ್ಕೆಗೆ ಆಧಾರ, ಹಳಗನ್ನಡ, ಹೊಸಗನ್ನಡ ಗ್ರಂಥಗಳು, ಇಷ್ಟೇ ನಮ್ಮ ಶಬ್ದಕೋಶದ ಮಿತಿಯಾದರೆ, ಅದು ತುಂಬ ಖೇದದ ಸಂಗತಿಯೇ ಸರಿ. ಕನ್ನಡ ಬದುಕಿರುವುದು ಗ್ರಂಥಗಳಲ್ಲಿ ಮಾತ್ರವಲ್ಲ, ಕವಿಗಳಲ್ಲಿ, ಕಾವ್ಯಗಳಲ್ಲಿ ಮಾತ್ರವಲ್ಲ. ಅದು ಸಮುದಾಯದ ಭಾಷೆ. ಅಲ್ಲಿ ಅದು ನಿತ್ಯ ನಿತ್ಯ ಬದುಕಿದೆ. ನಾನು ಮಾಡಬೇಕಾದುದು ಮಾತೃಭಾಷೆಯ ನಿಘಂಟನ್ನಲ್ಲ, ಜೀವಂತ ಭಾಷೆಯ ನಿಘಂಟನ್ನು, ಜೀವಂತ ಭಾಷೆಯು ಜನಜೀವನದಲ್ಲಿ ಬದಲಾಗುತ್ತಲೇ ಇರುತ್ತದೆ.  ಗ್ರಂಥಗಳಿರುವ ಹತ್ತು ಪಾಲು ಹೆಚ್ಚಿನ ಮನ್ನಣೆ, ಜನಜೀವನ ಕನ್ನಡಕ್ಕೆ ಸಲ್ಲಬೇಕು. ‘ಆಕ್ಸ್‍ಫರ್ಡ್ ಡಿಕ್ಷನರಿ’ ಮೊದಲಾದ ಮಾದರಿಯ ನಿಘಂಟುಗಳನ್ನು ಸಂಪಾದಿಸಿದ ಮಹಾನುಭಾವರು, ಶಬ್ದಸಂಗ್ರಹಕ್ಕೂ, ನುಡಿಕಟ್ಟುಗಳ ಸಂಗ್ರಹಕ್ಕೂ, ಅರ್ಥ ಅರ್ಥಛಾಯೆಗಳ ಸಂಗ್ರಹಕ್ಕೂ-ಇಂಗ್ಲಿಷ್ ಮಾತೃಭಾಷೆಯಾಗಿರುವ ಜನಗಳ ಎಡೆಯಲ್ಲಿ ಹೋಗಿ ದುಡಿದರು. ಇಂಗ್ಲೆಂಡ್, ಕೆನಡಾ, ಯುನೈಟೆಡ್ ಸ್ಟೇಟ್ಸುಗಳ ವಿವಿಧ ಭಾಗಗಳಲ್ಲಿ ಸಂಚರಿಸಿ, ಕಾಗದ ಪೆನ್ಸಿಲ್ ಹಿಡಿದುಕೊಂಡು, ಕಿವಿಗೆ ಬಿದ್ದದ್ದನ್ನೆಲ್ಲಾ ಬರೆದುಕೊಂಡರು. ‘ಕಿಂಗ್ಸ್ ಇಂಗ್ಲಿಷ್’  ಯಾಕೀ ಜನಗಳ ಕೈಯಲ್ಲಿ ಹೇಗೆ ಸಂಕಟಕ್ಕೊಳಗಾಯಿತೆಂದೂ ಕಂಡುಕೊಂಡರು. ಅದರ ಮೇಲೆ ಅಪಾದನೆ ಹೊರಿಸದೆ, ಅವರ ಬಳಕೆಯ ಅರ್ಥಗಳನ್ನು ಒಪ್ಪಿಕೊಂಡು, ತಮ್ಮ ಶಬ್ದಕೋಶದಲ್ಲಿ ಅವುಗಳನ್ನೆಲ್ಲ ಸೇರಿಸಿದರು. ನಾವು ಈ ವಿಚಾರದಲ್ಲಿ ಕುರುಡರಾಗಬಾರದು. ನಾಲ್ಕೆಂಟು ಮಂದಿ ಪಂಡಿತರು ವಾರಕ್ಕೊಮ್ಮೆಯೋ ದಿನಕ್ಕೊಮ್ಮೆಯೋ ಗ್ರಂಥಗಳಿಂದಾಯ್ದ ಶಬ್ದಗಳನ್ನು ನಮ್ಮ ಮುಂದಿರಿಸಿಕೊಂಡು ‘ಇದು ಸಾಧು, ಇದು ಅಸಾಧು’ ಎಂದು ತೀರ್ಮಾನಿಸುತ್ತಾ ಕುಳಿತರೆ, ಈ ಕೋಶ ನಮ್ಮ ಕೋಶವಾಗುತ್ತದೆಯೇ ಹೊರತು, ಕನ್ನಡದ ಕೋಶವಾಗಲಾರದು. ನಾವು ಗ್ರಾಮ್ಯ ರೂಪಗಳನ್ನು ಬಿಡಬಹುದೇ ಹೊರತು, ಜನಜೀವನದಲ್ಲಿ ಪ್ರಚಾರದಲ್ಲಿರುವ ಅರ್ಥ, ಪ್ರಯೋಗ, ಛಾಯೆ – ಇವುಗಳನ್ನೆಂದೂ ಮರೆಯಕೂಡದು. ನಿಜಕ್ಕೂ ಇಂಥ ವಿಸ್ತಾರವಾದ ಕೆಲಸವನ್ನು ನಾವು ಮಾಡಿದ್ದಾದರೆ, ಹಳಗನ್ನಡ ಭಾಷೆಯು ಹೊಸಗನ್ನಡಕ್ಕಿಂತ ಗಾವುದ, ಗಾವುದ ದೂರ ನಿಂತಿರಲಾರದೆಂದು ನನಗನ್ನಿಸುತ್ತದೆ.

ಜನಭಾಷಾ ನಿಘಂಟು ನಿರ್ಮಾಣವಾಗಲಿ

ಸಾಹಿತಿಗಳಾದ ನಾವೇ ಇಂದು ಕೃತಕ ಪುಸ್ತಕ ಭಾಷೆಯೊಂದನ್ನು ಕಲ್ಪಿಸುತಿದ್ದೇವೆ. ಜೀವಂತ ಭಾಷೆಯಲ್ಲಿ ಪ್ರಚಾರದಲ್ಲಿರುವ ಶಬ್ದಸಂಪತ್ತು, ಅರ್ಥಸಂಪತ್ತುಗಳನ್ನು ಮರೆಯುತ್ತಲಿದ್ದೇವೆ. ಇದು ಕನ್ನಡಕ್ಕೆ ಮಾಡುವ ಅಪಚಾರ ಹೊರತು ಉಪಚಾರವಲ್ಲ. ನಮ್ಮ ಜನಜೀವನದಲ್ಲಿನ ನೂರಾರು ವೃತ್ತಿ, ವಿಚಾರ ಸರಣಿ, ನಂಬಿಕೆಗಳಿಂದ ಹುಟ್ಟಿ ಪ್ರಚಾರದಲ್ಲಿರುವ ಶಬ್ದಸಂಪತ್ತನ್ನು ಭಾಷಾಸೌಂದರ್ಯವನ್ನು ಕಾಯ್ದುಕೊಳ್ಳುವ ಹೊಣೆ ನಮ್ಮದು. ಅದಕ್ಕೆ ನಿಘಂಟಿನಲ್ಲಿ ಸ್ಥಾನ ಕಲ್ಪಿಸುವ ಹೊಣೆಯೂ ನಮ್ಮದು. ನಾವು ಹಳ್ಳಿ ಹಳ್ಳಿಗಳಲ್ಲಿ ಸಂಶೋಧಕರನ್ನು ಬಿಟ್ಟು, ಜನರು ಬಳಸುವ ನಿತ್ಯೋಪಯೋಗಿ ಶಬ್ದಗಳನ್ನೂ, ಹೆಸರುಗಳನ್ನೂ, ಪ್ರಯೋಗಗಳನ್ನೂ ಸಂಗ್ರಹಿಸುವಲ್ಲಿ-ನಮ್ಮ ಶಬ್ದಸಂಗ್ರಹ ಇಮ್ಮಡಿಸೀತು; ಮುಮ್ಮಡಿಸೀತು. ಅದರಿಂದ ಅನೇಕ ಹೊಸ ಶಬ್ದಗಳ ನಿರ್ಮಾಣ ಅನಾವಶ್ಯಕವಾದೀತು. ಹಾಗೆ ಮಾಡದೆ ಹೋದರೆ ಜನಗಳ ಭಾಷಾ ಪ್ರವಾಹವು ತನ್ನ ದಾರಿಯನ್ನು ಹಿಡಿದು ತಾನಾಗಿ ಮುಂದುವರಿಯುತ್ತದೆ. ಅದನ್ನಾರೂ ತಡೆಯಲಾರರು. ಹಾಗೆ ಮಾಡುತ್ತ ಅದು-ಕನ್ನಡವನ್ನು ಮುಖ್ಯ ವಿಷಯವನ್ನಾಗಿ ಕಲಿಯುವವರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಘನಪುಸ್ತಕ ಪಂಡಿತರನ್ನು ದಂಡೆಯಲ್ಲಿಟ್ಟು ಹರಿಯುತ್ತದೆ. ಮುಳುಗಿತು ಕನ್ನಡ ಎಂಬ ಅವರ ಕೂಗು ಅರಣ್ಯರೋದನ ಆಗುತ್ತದೆ.

Tag: Kannada Sahitya Sammelana 37, Shivarama Karantha, Shivaram Karnath

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)