ಸಾಹಿತ್ಯ ಸಮ್ಮೇಳನ-೩೮ : ರಾಯಚೂರು
ಡಿಸೆಂಬರ್ ೧೯೫೫

ಅಧ್ಯಕ್ಷತೆ: ಆದ್ಯ ರಂಗಾಚಾರ್ಯ

೩೮ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಆದ್ಯ ರಂಗಾಚಾರ್ಯ

ಶ್ರೀರಂಗರೆಂದೇ ಖ್ಯಾತರಾಗಿರುವ ಆದ್ಯರಂಗಾಚಾರ್ಯರು ವಾಸುದೇವಾಚಾರ್ಯ ಜಾಗೀರದಾರ್ ಮತ್ತು ರಮಾಬಾಯಿ ಅವರ ಪುತ್ರರಾಗಿ ೨೬-೯-೧೯0೪ರಲ್ಲಿ ವಿಜಾಪುರದ ಇಂಡಿ ತಾಲ್ಲೂಕಿನ ಅಗರ ಖೇಡದಲ್ಲಿ ಜನಿಸಿದರು. ವಿಚಾಪುರದಲ್ಲಿ ಶಾಲಾ ಶಿಕ್ಷಣ ಪೂರೈಸಿ, ೧೯೨೧ರಲ್ಲಿ ಪುಣೆಯ ಡೆಕ್ಕನ್ ಕಾಲೇಜಿಗೆ ಸೇರಿ ೧೯೨೫ರಲ್ಲಿ ಬಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೨೫ರಲ್ಲಿ ಇಂಗ್ಲೆಂಡಿಗೆ ತೆರಳಿದ ಶ್ರೀರಂಗರು ಲಂಡನ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ ಎಂ. ಎ. ಪದವಿ ಪಡೆದು ೧೯೨೮ರಲ್ಲಿ ಭಾರತಕ್ಕೆ ಮರಳಿದರು.

ಕೆಲವು ಕಾಲ ಹಾಫ್‍ಕಿನ್ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದು ೧೯೩0ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ ೧೮ ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ಅನಂತರ ಆ ಕೆಲಸಕ್ಕೆ ರಾಜೀನಾಮೆಯಿತ್ತು, ಭಾರತ ವಾರ್ತಾಶಾಖೆಯಲ್ಲಿ ನಾಟಕ ವಿಭಾಗದ ನಿರ್ದೇಶಕರಾಗಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದರು.

ಶ್ರೀರಂಗರು ವಿಶೇಷವಾಗಿ ರಂಗಭೂಮಿಗೆ ತಮ್ಮ ಹೊಸ ಪ್ರಯೋಗಗಳಿಂದ ಕೊಡುಗೆಗಳನ್ನು ನೀಡಿದರು. ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಶ್ರೀರಂಗರು ಪರಿಷತ್ತಿಗೆ ಉತ್ತರ ಕರ್ನಾಟಕ ಪ್ರಾಂತ ಸಮಿತಿಯ ಅಧ್ಯಕ್ಷರಾಗಿದ್ದರು. ೧00ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ ಶ್ರೀರಂಗರು ಮೂರು ವರ್ಷಗಳ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ‘ಜಯಂತಿ’, ‘ಪ್ರೇಮ’ ಪತ್ರಿಕೆಗಳಿಗಾಗಿ ಶ್ರಮಿಸಿದರು.

ಇವರು ಕನ್ನಡ ನಾಟ್ಯ ವಿಲಾಸಿ ಸಂಸ್ಥೆಯನ್ನು ೧೯೩೩ರಲ್ಲಿ ಆರಂಭಿಸಿದರು. ಇವರಿಗೆ ೧೯೬೮ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್ ಗೌರವ ದೊರಕಿತು, ೧೯೭೨ರಲ್ಲಿ ಭಾರತ ಸರ್ಕಾರದವರು ಪದ್ಮಭೂಷಣ ಪ್ರಶಸ್ತಿ ದಯಪಾಲಿಸಿದರು. ಇವರ ಕಾಳಿದಾಸ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಯಿತು.

ರಾಯಚೂರಿನಲ್ಲಿ ನಡೆದ ೧೯೫೫ರ ೩೮ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ನಾಟಕರಂಗದಲ್ಲಿ ಕೇವಲ ಕೃತಿರಚನೆಗಳಿಂದಷ್ಟೇ ಅಲ್ಲದೆ ರಂಗ ಪ್ರಯೋಗಗಳಲ್ಲಿ ನೂತನತೆ ತಂದವರು ಶ್ರೀರಂಗರು. ಅವರು ಶೋಕಚಕ್ರ, ಹರಿಜನ್ವಾರ, ಕೇಳು ಜನಮೇಜಯ, ರಂಗಭಾರತ, ಕತ್ತಲು-ಬೆಳಕು, ಉದರ ವೈರಾಗ್ಯ ಮೊದಲಾದ ಪ್ರಸಿದ್ಧ ನಾಟಕಗಳನ್ನು ರಚಿಸಿದ್ದಾರೆ. ವಿಶ್ವಾಮಿತ್ರ,  ಪುರುಷಾರ್ಥ ಮೊದಲಾದ ಕಾದಂಬರಿಗಳನ್ನೂ ಶಾರದೆಯ ಸಂಸಾರ (ಭಾಷಾಶಾಸ್ತ್ರ), ಗೀತಾ ಗಾಂಭೀರ್ಯ, ನಗೆ, ಸಾಹಿತಿಯ ಆತ್ಮಜಿಜ್ಞಾಸೆ, ಕೆಮಾಲ್ ಪಾಷಾ, ಕಿಟ್ಟಣ್ಣನ ಕ್ಲಬ್ಬು, ಭಗವಾನ್ ಬುದ್ಧ (ಅನುವಾದ), ನಮ್ಮ ನೆಚ್ಚಿನ ನೆಹರೂ ಮೊದಲಾದ ಆತ್ಮಕಥೆ, ಜೀವನ ಚರಿತ್ರೆ, ವಿಡಂಬನೆ ಕಥಾಸಂಕಲನ, ಭಾಷಾಶಾಸ್ತ್ರ ಗೀತೆ, ರಂಗ ಮೀಮಾಂಸೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದರು. ಆದರೆ ಅವರು ನಾಟಕಕಾರರೆಂದೇ ಹೆಸರಾಗಿದ್ದಾರೆ.

ಕನ್ನಡಕ್ಕೆ ಬಹುಮುಖ ಕೊಡುಗೆಗಳನ್ನಿತ್ತ ಶ್ರೀರಂಗರು ೧೭-೧0-೧೯೮೪ರಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೩೮,

ಅಧ್ಯಕ್ಷರು: ಆದ್ಯ ರಂಗಾಚಾರ್ಯ

ದಿನಾಂಕ ೨೫, ೨೬, ೨೭ ಡಿಸೆಂಬರ್ ೧೯೫೫

ಸ್ಥಳ : ರಾಯಚೂರು

ಹಿಂದೀ ಭಾಷೆಯನ್ನಾಡುವವರ ಸಂಖ್ಯೆ ತೀರ ದೊಡ್ಡದಿದ್ದರೆ ಮಲಯಾಳಿಗರ ಸಂಖ್ಯೆ ಕಡಿಮೆ ಇದೆ. ಹಿಂದೀ ಸಾಹಿತ್ಯಕ್ಕೆ-ಜೊತೆಗೆ ಆಡಳಿತದ ಭಾಷೆ ಎನಿಸುವುದರಿಂದ-ಇನ್ನಿಷ್ಟು ಹೆಚ್ಚು ಓದುಗರು ದೊರೆತರೆ-ಮೈಸೂರು ಧಾರವಾಡ ಎಂಬ ವಾದದಲ್ಲಿ ಕನ್ನಡ ಸಾಹಿತ್ಯಕ್ಕೆ ಇನ್ನಿಷ್ಟು ಕಡಿಮೆ ಓದುಗರು ದೊರೆಯಬಹುದು. ಓದುಗರು ಕಡಿಮೆಯಾದ ಮಟ್ಟಿಗೆ ಉತ್ತಮ ಸಾಹಿತ್ಯ ನಿರ್ಮಾಣಕ್ಕೆ ಉತ್ತೇಜನವೂ ಕಡಿಮೆಯಾಗಬಹುದು. ಈ ಪರಿಸ್ಥಿತಿಯನ್ನು ಯೋಚಿಸುವುದು ಯೋಗ್ಯ ಸಾಹಿತ್ಯವನ್ನು ನಿರ್ಮಿಸಬಲ್ಲ ಸಾಹಿತಿಗಳ ಕೈಯಲ್ಲಿದೆಯಲ್ಲದೆ ಕಾಯಿದೆಗಳನ್ನು ಗೊತ್ತುಮಾಡುವ ಸರಕಾರಗಳ ಕೆಲಸವಿದಲ್ಲ. ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಈ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಹೆಚ್ಚು ಸಹಾಯಕವಾಗಬಲ್ಲವು. ಮೊದಲನೆಯದಾಗಿ, ಆಯಾ ಭಾಷೆಯ ಕೇಂದ್ರ ಸಾಹಿತ್ಯ ಸಂಸ್ಥೆಗಳು ಪ್ರತಿವರ್ಷ ದೇಶದ ಬೇರೆ ಬೇರೆ ಸಾಹಿತ್ಯಗಳಿಂದ ಒಂದೊಂದು ಉತ್ತಮ ಕೃತಿಯನ್ನು ತಮ್ಮ ಭಾಷೆಗೆ, ತಮ್ಮ ಕೆಲವು ಉತ್ತಮ ಕೃತಿಗಳನ್ನು ಬೇರೆ ಬೇರೆ ಭಾಷೆಗಳಿಗೆ ಪರಿವರ್ತಿಸುವಂತಹ ತಜ್ಞರ ಸಮಿತಿಗಳನ್ನು ಏರ್ಪಡಿಸಬೇಕು. ಪ್ರತಿವರ್ಷವೂ ಕೇಂದ್ರ ಮತ್ತು ಸಂಬಂಧಿಸಿದ ರಾಜ್ಯ ಸರಕಾರಗಳು ಮೇಲಿನ ಕೃತಿಗೆ ಕೊಡುವಂತೆ ಉತ್ತಮ ಬಾಷಾಂತರಿತ ಕೃತಿಗಳಿಗೂ ಪಾರಿತೋಷಕಗಳನ್ನು ಕೊಡಬೇಕು. ಹೀಗಾದಲ್ಲಿ ಪ್ರತಿಯೊಂದು ಸಾಹಿತ್ಯವೂ ಪರಸ್ಪರ ಪೋಷಕತೆಯಿಂದ ಬಲಗೊಳ್ಳುವದಲ್ಲದೆ ದೇಶದ ಯಾವುದೇ ಭಾಷೆಯ ಉತ್ತಮ ಸಾಹಿತಿಯ ಪರಿಚಯವು ಇಡಿಯ ದೇಶಕ್ಕಾಗುವುದು.

ಹೊರನಾಡ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿ

ಇದೇ ಸಂದರ್ಭದಲ್ಲಿ ಒಂದು ವಿಷಯದ ಕಡೆ ತಮ್ಮ ಲಕ್ಷ್ಯವನ್ನು ಸೆಳೆಯಬಯಸುತ್ತೇನೆ. ಕಳೆದ ಎರಡು ವರ್ಷಗಳ ಸ್ವಂತ ಅನುಭವಕ್ಕಾಗಿಯೂ – ಇದನ್ನು ತುಸು ಹಟದಿಂದ ಹೇಳಬಯಸುತ್ತೇನೆ. ದೇಶದ ಮಿಕ್ಕ ಸಾಹಿತ್ಯಗಳೊಡನೆ ಸಂಪರ್ಕ ಬೆಳೆಯಬೇಕೆಂದು ಹೇಳಿದೆನಲ್ಲವೆ? ಈಗಾಗಲೆ ಈ ಕೆಲಸ ನಡೆದಿದೆ. ಕಳೆದ ಹತ್ತು-ಹನ್ನೆರಡು ವರ್ಷಗಳಿಂದ ಹೊರನಾಡ ಕನ್ನಡಿಗರ ಸಂಸ್ಥೆ ಎಂಬ ಹೆಸರಿನಿಂದ ನಮ್ಮ ಕನ್ನಡ ಗೆಳೆಯರು ದೇಶದ ಅನೇಕ ಕಡೆಗಳಲ್ಲಿ ಕರ್ನಾಟಕ ಸಂಘಗಳನ್ನು ರಚಿಸಿಕೊಂಡು, ವರ್ಷಕ್ಕೊಮ್ಮೆ ಸಮ್ಮೇಳನವನ್ನು ನಡೆಯಿಸಿದ್ದಾರೆ. ಆದರೂ ಅವರ ಕನ್ನಡನಾಡು-ನುಡಿ-ಸಾಹಿತ್ಯ-ಸಂಸ್ಕೃತಿಗಳ ಪರಿಚಯ ಕಾರ್ಯಕ್ಕೆ ಸಾಕಷ್ಟು ಬಲ ಬಂದಿಲ್ಲ, ನಮ್ಮೆಲ್ಲರ ಪ್ರೋತ್ಸಾಹ-ಆಶ್ರಯಗಳಿಲ್ಲದೆ ಅದು ಬರುವಂತಿಲ್ಲ. ಹೊರನಾಡ ಕನ್ನಡಿಗರ ಚಟುವಟಿಕೆಗಳ ಬಗ್ಗೆಯ ಪರಿಣಾಮಗಳನ್ನು ನೋಡಿದರೆ ಈ ಪ್ರೋತ್ಸಾಹ-ಆಶ್ರಯಗಳು ಅಗತ್ಯ, ಅರ್ಹ ಎಂದು ಖಂಡಿತವಾಗಿ ಕಂಡುಬರುವುದು. ಕನಿಷ್ಠ ಪಕ್ಷಕ್ಕೆ ನಾವು-ಪರಿಷತ್ತಿನ ವತಿಯಿಂದ ಕೆಲವು ವಿದ್ವಾಂಸ ಉಪನ್ಯಾಸಕರನ್ನು, ಆಗಾಗ ನಾಟಕ-ನೃತ್ಯ ಕಲೆಗಾರರನ್ನು ಮತ್ತು ಕರ್ನಾಟಕದ ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಅಂಕಿ-ಸಂಖ್ಯೆ-ನಕ್ಷೆ-ಸಮಾಚಾರಗಳನ್ನು ಒದಗಿಸುತ್ತ ಹೋದರೂ ಹೊರನಾಡ ಕನ್ನಡ ಕಾರ್ಯಕರ್ತರಿಗೆ ಹೆಚ್ಚಿನ ಉತ್ಸಾಹ ಬರುವುದು. ಅದರಂತೆ ಅಲ್ಲಲ್ಲಿಯ ಬೇರೆ ದೇಶೀಯ ಸಾಹಿತ್ಯಗಳ ಪರಿಚಯವನ್ನು ಮಾಡಿಕೊಡಲು ಹೊರನಾಡ ಸಂಘಗಳು ಸಹಾಯಕವು.

ಸಮ್ಮೇಳನಾಧ್ಯಕ್ಷರ ಭಾಷಣ ಹೇಗಿರಬೇಕು

ರಸಿಕ ಮಹಾನುಭಾವರೆ, ಇಂತಹ ಭಾಷಣದಲ್ಲಿ ಸಾಮಾನ್ಯವಾಗಿ ಅಪೇಕ್ಷಿಸಲಾದ ಕೆಲವು ಸಂದರ್ಭಗಳು ಇಲ್ಲ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ಕನ್ನಡ ಸಾಹಿತ್ಯದ ಬೆಳವಣಿಗೆಯ ಹಿನ್ನೆಲೆಯಲ್ಲಿ, ಪ್ರಕಟವಾಗುತ್ತಿರುವ ಸಾಹಿತ್ಯ ಕೃತಿಗಳ ಸಮಾಲೋಚನೆ, ಅವುಗಳನ್ನು ಬರೆದವರ ಹೆಸರುಗಳ ಪಟ್ಟಿ, ಔಪಚಾರಿಕವಾದ ವಿಮರ್ಶಾತ್ಮಕ ಮಾತುಗಳು- ಇದೆಲ್ಲ ಇಲ್ಲಿ ಇರಬೇಕೆಂದು ತಾವು ಬಯಸುವುದು. ಸಂಪ್ರದಾಯದ ದೃಷ್ಟಿಯಿಂದ ಸಹಜ. ಆದರೆ ನನ್ನ ಅಭಿಪ್ರಾಯ ಬೇರೆಯಾಗಿದೆ. ಸಮ್ಮೇಳನದ ಅಧ್ಯಕ್ಷನಾಗುವವನು ಆಯಾ ವರ್ಷಾವಧಿಯ ಪ್ರತಿಯೊಂದು ಪ್ರಕಟನೆಯನ್ನು ಅರಿತಿಕೊಂಡು ಅಭ್ಯಾಸಿಸಿಕೊಂಡು ಸಜ್ಜಾಗಿರಬೇಕೆಂದು ಬಯಸುವುದು ಒಂದು ವ್ಯಕ್ತಿಗೆ ಅನ್ಯಾಯ, ಒಂದು ಮಹತ್ತ್ವದ ಕೆಲಸ ವಿರಸ. ಸಾಹಿತ್ಯದ ಸಮಾಲೋಚನೆಯನ್ನು ನಿಧಾನವಾಗಿ ಮಾಡುವುದು ಉಚಿತ; ಅಲ್ಪಾವಧಿಯಲ್ಲಿ ಅಧ್ಯಕ್ಷ ಭಾಷಣವನ್ನು ಬರೆಯುವಾಗ ಮಾಡಬಾರದಂತಹ  ಮಹತ್ವದ ಕೆಲಸವದು. ಇದಲ್ಲದೆ ಸಾಹಿತ್ಯದ ಬೆಳವಣಿಗೆ ಕೃತಿಗಳ ಯೋಗ್ಯತೆಯನ್ನು ಅವಲಂಬಿಸಿರುವುದು, ಅವನ್ನು ಬರೆದವರ ಹೆಸರುಗಳನ್ನಲ್ಲ. ಹೀಗೆ ಹೇಳಿ ಈ ಕೆಲಸ ಅನಾವಶ್ಯಕ ಎಂದು ನಾನು ಹೇಳಬಯಸುವುದಿಲ್ಲ.

ವಾರ್ಷಿಕ ಸಾಹಿತ್ಯ ಸಮಾಲೋಚನೆ ಗ್ರಂಥರಚನೆ

ವರ್ಷ ವರ್ಷಕ್ಕೆ  ಈ ಸಾಹಿತ್ಯ ಸಮಾಲೋಚನೆ ಎಷ್ಟು ಅಗತ್ಯದ್ದೊ ಅಷ್ಟೆ ಮಹತ್ವದ್ದೂ ಆಗಿದೆ.  ಈ ಬಗ್ಗೆ ನನ್ನದೊಂದು ಸೂಚನೆ ಇದೆ. ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಯು ಈ ಕೆಲಸವನ್ನು ಮಾಡುವುದು ಯೋಗ್ಯ. ಪ್ರತಿ ವರ್ಷ ಸಾಹಿತ್ಯ ಸಮ್ಮೇಳನದ ಕಾಲಕ್ಕೆ ಪರಿಷತ್ತು ಈ ವರ್ಷದ ಸಾಹಿತ್ಯ ಸಮಾಲೋಚನೆಯನ್ನು ತನ್ನ ವಾರ್ಷಿಕ ವರದಿಯ ಅಂಗವಾಗಿ ಪ್ರಕಟಿಸಬಹುದಲ್ಲ? ಪರಿಷತ್ತಿನಂತಹ ಸಂಸ್ಥೆ ಒಂದೇ ಒಂದಾಗಿ ಈ ಕಾರ್ಯವನ್ನು ಮಾಡಲು ಶಕ್ಯವಿಲ್ಲ ಎಂಬುದನ್ನು ಬಲ್ಲೆ. ಇದಕ್ಕೆ ಪ್ರಕಾಶಕರು, ಗ್ರಂಥಕರ್ತರು ಪೂರ್ತಿಯಾಗಿ ಸಹಕಾರವನ್ನು ನೀಡಬೇಕು. ಪುಸ್ತಕದ ಪ್ರತಿಯನ್ನು  ಕಳಿಸುವುದು ಬೇಡ: ಕನಿಷ್ಠ ಪಕ್ಷಕ್ಕೆ ಒಂದು ಗ್ರಂಥ ಪ್ರಕಟವಾದೊಡನೆ ಅದರ ಹೆಸರು, ಗ್ರಂಥಕರ್ತ, ಪ್ರಕಾಶಕ, ಪುಟ ಸಂಖ್ಯೆ, ಆಕಾರ, ಬೆಲೆ, ಪ್ರಕಟನೆಯ ತಿಂಗಳೂ ಇಲ್ಲವೆ ತಾರೀಖು-ಇಷ್ಟನ್ನಾದರೂ ಪ್ರಕಾಶಕನಾಗಲಿ ಗ್ರಂಥಕರ್ತನಾಗಲಿ ಪರಿಷತ್ತಿನ ಕಚೇರಿಗೆ ತಿಳಿಸಬಹುದಲ್ಲ? ಅದರಂತೆಯೇ ಶಕ್ಯವಾದರೆ, ಆಯಾ ಸಾಹಿತ್ಯ ಮಾದರಿಯ ಆ ವರ್ಷದ ವೈಶಿಷ್ಟ್ಯಗಳ, ಸ್ಥೂಲರೂಪದಲ್ಲಿ ಮಾತ್ರವೇ ಆಗಲಿ ವಿಮರ್ಶಿಸುವ ಯೋಚನೆಯನ್ನು ಪರಿಷತ್ತು ಮಾಡಬಹುದು. ಇಂದು ನಾವು ಮುಂದುವರಿಯುತ್ತಿರುವೆವೆ ಇಲ್ಲವೆ ಎಂಬುದನ್ನು ತಿಳಿದುಕೊಳ್ಳಲು ಈ ತರಹದ ಆತ್ಮವಿಮರ್ಶೆ ಅಗತ್ಯವಾಗಿದೆ.

ಸಾಮಾಜಿಕ ಹೊಣೆ:  ಇಂದಿನವರೆಗೆ, ಈ ಪೀಠವನ್ನು ಅಲಂಕರಿಸಿದವರು ನನಗಿಂತ ಹಿರಿಯರು, ವಿದ್ವಾಂಸರು, ಕನ್ನಡ ಸಾಹಿತ್ಯಕ್ಕೆ ಪ್ರತಿಭಾನ್ವಿತ ಕಾಣಿಕೆಗಳನ್ನು ಸಲ್ಲಿಸಿದವರು. ತಮ್ಮ ಅಧಿಕಾರವಾಣಿಯಿಂದ ಅವರು ಸಾಹಿತ್ಯ ಮತ್ತು ಸಾಹಿತಿಯ ಕುರಿತು ಕೂಲಂಕುಷವಾಗಿ ವಿವೇಚನೆಯನ್ನು ಮಾಡಿದ್ದಾರೆ. ಪುನರುಕ್ತಿ  ಬೇಡವೆಂದೊ ಇಲ್ಲವೆ ಆ ಯೋಗ್ಯತೆ ಇಲ್ಲವೆಂದೊ ನಾನು ಬೇರೊಂದು ದಾರಿಯನ್ನು ಹಿಡಿದಿದ್ದೇನೆ. ನನ್ನ ಕಿರಿದಾದ ಅನುಭವದಲ್ಲಿ ತೋಚಿದ ನಾಲ್ಕಾರು ಮಾತುಗಳನ್ನು ಹೇಳುತ್ತಲಿದ್ದೇನೆ. ಒಂದು ವೇಳೆ ನಾನು ಪಂಡಿತನೆನ್ನಿಸಲಿಕ್ಕಿಲ್ಲ, ಆದರೆ ಪೂರ್ತಿಯಾದ ಪ್ರಾಮಾಣಿಕತೆಯಿಂದ ಹೇಳುತ್ತಲಿದ್ದೇನೆ ಎಂಬುದನ್ನು ತಾವು ದಯವಿಟ್ಟು ಮನ್ನಿಸಬೇಕು. ಸಾಹಿತ್ಯವೇ ನನ್ನ ಜೀವನದ ಉಸಿರಾಗಿದೆ. ಉಚ್ಚ ಅಧಿಕಾರ ಸ್ಥಾನದಲ್ಲಿ ಸುಖದಿಂದ ಇರುವುದಕ್ಕಿಂತ ಉಪವಾಸದಿಂದಿದ್ದರೂ ಸಾಹಿತಿಯಾಗಿರುವುದು ನನಗೆ ಮೆಚ್ಚುಗೆಯಾಗಿದೆ.

ಸಮ್ಮೇಳನಾಧ್ಯಕ್ಷರ ಸಲಹೆ

ಸಾಹಿತ್ಯಾಭಿಮಾನಿಗಳಾದ ಸಭಿಕಮಹಾಶಯರೆ, ಇನ್ನೂ ಅನೇಕ ಮಾತುಗಳನ್ನು ನಾನು ಹೇಳಬಹುದಾಗಿತ್ತು. ಆದರೆ ವರ್ಷವರ್ಷಕ್ಕೆ ಸೇರುವ ಈ ಸಮ್ಮೇಳನದಲ್ಲಿ ಇಡಿಯ ಭವಿಷ್ಯತ್ಕಾಲಕ್ಕಾಗಿ ಮಾತನಾಡುವಷ್ಟು ಆಶೆಬುರುಕನಾಗುವುದು ಅಷ್ಟೊಂದು ಯೋಗ್ಯವಾಗಲಿಕ್ಕಿಲ್ಲ. ಈ ಕ್ಷಣ ನಮ್ಮೆದುರಿಗಿದ್ದ ಕೆಲವು ಸಮಸ್ಯೆಗಳು, ಅವುಗಳನ್ನು ಬಿಡಿಸಲು ಒಂದು ವರ್ಷದ ಅವಧಿಯಲ್ಲಿ ಮಾಡಬಹುದಾದ ಉಪಾಯಗಳು, ಇವಕ್ಕೆ ಹಿನ್ನೆಲೆಯಾದ ಪರಿಸ್ಥಿತಿ ಇಷ್ಟನ್ನು ಹೇಳಿದರೆ ನನ್ನ ಕೆಲಸ ಮುಗಿಯಿತು ಎಂದು ನಾನು ತಿಳಿಯುತ್ತೇನೆ. ಸಾಹಿತಿಯ ಸಮಸ್ಯೆ ಬಹುಮುಖವಾದ ಸಮಸ್ಯೆ. ಉಪಜೀವನ ಪ್ರಶ್ನೆ ಅವನ ವೈಯಕ್ತಿಕ ಸಮಸ್ಯೆ ಎನ್ನಿಸಿದರೆ, ಅವನು ಅನ್ಯೋಪಜೀವಿಯಾಗುವುದು ಸಾಮಾಜಿಕ ಸಮಸ್ಯೆ ಎನ್ನಿಸುವುದು. ಅನ್ಯೋಪಜೀವಿಯಾದ ಸಾಹಿತಿ ಸಮಾಜಕ್ಕೆ ಕಂಟಕನಾಗಬಹುದಾಗಿದೆ. ಸಾಹಿತಿಯನ್ನು ಅನ್ಯೋಪ ಜೀವಿಯನ್ನಾಗಿ ಮಾಡುವ ಅನೇಕ ಶಕ್ತಿಗಳು ನಮ್ಮ ಸಮಾಜ ರಚನೆಯಲ್ಲಿವೆ. ಧನಿಕ ಒಡೆಯನಿಗಾದ ಅಗ್ರಲೇಖನಗಳನ್ನು ಬರೆಯುವ ಸಂಪಾದಕರು, ದೇಶದ ಸರಕಾರಕ್ಕಾಗಿ ಸ್ತುತಿಪಾಠವನ್ನು ಬರೆಯುವ ಸಾಹಿತಿಗಳು, ಪ್ರೊಪಾಯಿಟರ್ ಇಲ್ಲವೆ ಅವನ ಸೂಳೆಗಾಗಿ ನಾಟಕಗಳನ್ನು ಬರೆಯುವ ನಾಟಕಕಾರರು, ಬರೆದುದಕ್ಕೆ ಚಿತ್ರನಿರ್ಮಾಪಕನ ಹೆಸರನ್ನು ಕೊಡುವ ಕತೆಗಾರರು-ಇಂತಹ ವ್ಯಕ್ತಿಗಳು ದೊರೆಕಿಯೇ ದೊರಕುತ್ತಾರೆ, ಅವರಲ್ಲಿ ಯೋಗ್ಯತೆ ಇದ್ದರೆ ಆ ಮಟ್ಟಿಗೆ ಸಮಾಜಕ್ಕೆ  ಹಾನಿ, ಯೋಗ್ಯತೆ ಇಲ್ಲದಿದ್ದರೆ ಆ ಮಟ್ಟಿಗೆ ಸಮಾಜದಲ್ಲಿ ಅನ್ಯಾಯ.

Tag: Kannada Sahitya Sammelana 38, Sriranga, Adhya Rangachar, Sriranga

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)