ಸಾಹಿತ್ಯ ಸಮ್ಮೇಳನ-೪೨ : ಮಣಿಪಾಲ
ಡಿಸೆಂಬರ್ ೧೯೬0

ಅಧ್ಯಕ್ಷತೆ: ಅ.ನ. ಕೃಷ್ಣರಾಯರು

೪೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಅ.ನ. ಕೃಷ್ಣರಾಯರು

ಕಾದಂಬರಿ ಸಾರ್ವಭೌಮರೆನಿಸಿದ್ದ ಕನ್ನಡದ ಜನಪ್ರಿಯ ಕಾದಂಬರಿಕಾರ ಅನಕೃ ಅವರು (ಅರಕಲಗೂಡು ನರಸಿಂಗರಾವ್ ಕೃಷ್ಣರಾವ್) ನರಸಿಂಗರಾವ್- ಅನ್ನಪೂರ್ಣಮ್ಮ ದಂಪತಿಗಳಿಗೆ ೯-೫-೧೯0೮ರಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿ, ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು.

ಬರಹ ಮಾಡಿಯೇ ಬದುಕುವ ಛಲದ ಅನಕೃ ಅವರು ಪತ್ರಿಕಾಕ್ಷೇತ್ರಕ್ಕೆ ಪ್ರವೇಶಿಸಿ ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ನಡೆಸಿದರು. ೧೯೪೩-೪೪ರಲ್ಲಿ ಪ್ರಗತಿಶೀಲ ಸಾಹಿತ್ಯದ ಚಳವಳಿಯಲ್ಲಿ ನಿರತರಾದರು. ಬಿಎಂಶ್ರೀ ಅವರ ಕಾಲದಲ್ಲಿ ಕನ್ನಡ ನುಡಿ ಸಂಪಾದಕರಾಗಿ ದಿವಾಕರರ ಹಿಂದಿ ಪ್ರತಿಪಾದನೆಯನ್ನು ವಿರೋಧಿಸಿ ಪತ್ರಿಕೆಯನ್ನು ತೊರೆದರು.

ಕನ್ನಡ ಚಳವಳಿ ನೇತಾರರಾಗಿ ರಾಮಮೂರ್ತಿ ಅವರೊಡನೆ ಸೇರಿ ಕನ್ನಡಿಗರಲ್ಲಿ ಜನಜಾಗೃತಿ ಮೂಡಿಸಿ ಕನ್ನಡಾಭಿಮಾನ ಬೆಳೆಸಿದರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರಾದರು. ತಮ್ಮ ಅದ್ಭುತ ವಾಗ್ವೈಖರಿಯಿಂದ ನಾಡಿನಲ್ಲೆಲ್ಲಾ ಜನಪ್ರಿಯರಾದರು. ಗೃಹಲಕ್ಷ್ಮೀ ಕಾದಂಬರಿಯಿಂದ ಮೊದಲ್ಗೊಂಡು ಸುಲಭ ಕೈ ಹೊತ್ತಿಗೆಗಳ ಮೂಲಕ ಕನ್ನಡ ಓದುಗರನ್ನು ಹೆಚ್ಚಿಸಿದ್ದು ಇವರ ಅಗ್ಗಳಿಕೆ ಆಗಿದೆ.

ಮೈಸೂರು ವಿಶ್ವವಿದ್ಯಾಲಯ ೧೯೭0ರಲ್ಲಿ ಗೌರವ ಡಾಕ್ಟರೇಟ್ ಅನ್ನು ಅನಕೃ ಅವರಿಗೆಗೆ ನೀಡಿ ಸನ್ಮಾನಿಸಿತು. ಸಾಹಿತ್ಯ ಪರಿಷತ್ತು ೧೯೬0ರಲ್ಲಿ ಮಣಿಪಾಲದಲ್ಲಿ ನಡೆದ ೪೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿತು.

ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟ್ಯ, ನಾಟಕ ಕಲೆಗಳಲ್ಲಿ ಅಪಾರ ಒಲವು, ವಿಮರ್ಶಾ ಶಕ್ತಿ ಇದ್ದ ಅನಕೃ ಅವರು ಅವೆಲ್ಲ ವಿಷಯಗಳ ಬಗ್ಗೆ ಕೃತಿಗಳನ್ನು ರಚಿಸಿದ್ದಾರೆ. ೧00ಕ್ಕೂ ಹೆಚ್ಚಿನ ಕಾದಂಬರಿಗಳನ್ನು ರಚಿಸಿ ಕಾದಂಬರಿ ಸಾರ್ವಭೌಮರೆನಿಸಿದವರು ಅನಕೃ ಅವರು. ನಟಸಾರ್ವಭೌಮವೆಂಬ ಬೃಹತ್ಕಾದಂಬರಿಯನ್ನು, ಸಾಹಿತ್ಯ ಮತ್ತು ಕಾಮಪ್ರಚೋದನೆಯೆಂಬ ವಿಮರ್ಶಾ ಕೃತಿಯನ್ನು ಬರೆದಿದ್ದಾರೆ. ಕನ್ನಡ ಕುಲರಸಿಕರು(ಜೀವನ ಚರಿತ್ರೆ), ಬರಹಗಾರನ ಬದುಕು (ಆತ್ಮಕಥೆ), ಬಣ್ಣದ ಬೀಸಣಿಗೆ, ಮದುವೆಯೋ ಮನೆಹಾಳೋ (ನಾಟಕಗಳು), ಗಾರ್ಕಿಯ ಕಥೆಗಳು, ಸ್ಟೋರಿ ಆಫ್ ಇಂಡಿಯಾ (ಅನುವಾದಗಳು), ಕರ್ನಾಟಕ ಕಲಾವಿದರು ಮುಂತಾದ ೨00ಕ್ಕೂ ಮೀರಿ ಕೃತಿಗಳನ್ನು ರಚಿಸಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉಜ್ವಲನಕ್ಷತ್ರವೆನಿಸಿದ್ದ ಅನಕೃ ಅವರು ೪-೭-೧೯೭೧ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಕನ್ನಡ ಸಾಹಿತ್ಯ ಸಮ್ಮೇಳನ-೪೨

ಅಧ್ಯಕ್ಷರು: ಅ.ನ.ಕೃಷ್ಣರಾಯ

 ದಿನಾಂಕ ೨೭, ೨೮, ೨೯  ಡಿಸೆಂಬರ್ ೧೯೬0

ಸ್ಥಳ : ಮಣಿಪಾಲ

ಸಮ್ಮೇಳಾನಧ್ಯಕ್ಷರ ಅಧಿಕಾರ

ಸಾಹಿತ್ಯ ಸಮ್ಮೇಳನದ ಸ್ಥಾನಬಲದಿಂದ ನಾನು ಕನ್ನಡನಾಡಿನ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದೆಂದೂ, ಕನ್ನಡ ಸಾಹಿತ್ಯ ಪರಿಷತ್ತನ್ನು ಪುನರುಜ್ಜೀವನಗೊಳಿಸಬಹುದೆಂದೂ ತಾವು ದೃಢವಾಗಿ ನಂಬಿದ್ದೀರಿ. ಸಮ್ಮೇಳನಾಧ್ಯಕ್ಷರ ಸ್ಥಾನ ಅಲಂಕಾರಸ್ಥಾನವಾಗಿದೆ. ಪರಿಷತ್ತಿನ ಘಟನೆಯಂತೆ ಸಮ್ಮೇಳನಾಧ್ಯಕ್ಷರಿಗೆ ಯಾವ ಅಧಿಕಾರವೂ ಇಲ್ಲ. ಸಮ್ಮೇಳಾನಧ್ಯಕ್ಷರಿಂದ ಯಾವುದಾದರೂ ಕೆಲಸವಾಗಬೇಕಾದಲ್ಲಿ ಪರಿಷತ್ತಿನ ಘಟನೆಯನ್ನು ಮಾರ್ಪಡಿಸುವುದು ಅಗತ್ಯ. ಸ್ಥಾನಬಲದಿಂದಲ್ಲದಿದ್ದರೂ ವ್ಯಕ್ತಿಬಲದಿಂದ ನಾನು ಕನ್ನಡ ನಾಡು ನುಡಿಗಳಿಗೆ ಸಲ್ಲಿಸುತ್ತ ಬಂದಿರುವ ಸೇವೆಯನ್ನು ಇನ್ನು ಮುಂದೆಯೂ ಸಲ್ಲಿಸುತ್ತೇನೆ.

ಕನ್ನಡ ನಿಘಂಟು ಕೆಲಸ ಆರಂಭವಾಗಿದ್ದು ೨೭-೧-೧೯೪೪ರಲ್ಲಿ. ಈಗ್ಗೆ ಹದಿನಾರು ವರ್ಷಗಳ ಕೆಳಗೆ: ಸಂಪಾದಕ, ಮಂಡಳಿ ೧೬ ವರ್ಷಗಳಲ್ಲಿ ೧೫೩ ಪುಟಗಳನ್ನು ಹಸ್ತಪ್ರತಿಸಿದ್ಧಗೊಳಿಸಿದೆ. ಸುಮಾರು ಐದು ಸಾವಿರ ಪುಟಗಳಾಗುವ ಈ ನಿಘಂಟಿಗೆ ಹದಿನೈದು ಲಕ್ಷ ರೂಪಾಯಿಗಳು ವೆಚ್ಚವಾಗುವುದೆಂದು ಅಂದಾಜು ಮಾಡಲಾಗಿದೆ.  ಸರ್ಕಾರ ಈಗಾಗಲೇ ರೂ. ೧,೨೪,೭೫0 ವ್ಯಯ ಮಾಡಿದೆ. ‘ಆವಶ್ಯಕವಾದ ಧನಸಹಾಯ ತಕ್ಕ ಪ್ರಮಾಣದಲ್ಲಿ ಇನ್ನೂ ಒದಗದಿರುವುದೇ ಕೆಲಸ ನಿಧಾನವಾಗಿರುವುದಕ್ಕೆ ಕಾರಣ’ವೆಂದು ಕನ್ನಡ ಕೋಶದ ಸಂಪಾದಕರು ಅಭಿಪ್ರಾಯಪಡುತ್ತಾರೆ.

ಕನ್ನಡ ಶಬ್ದಕೋಶಕ್ಕಾಗಿ ಅನೇಕ ವರ್ಷಗಳು ಶ್ರಮಿಸಿದ ಪಂಡಿತರು ಸಂಪಾದಕ ಮಂಡಳಿಯಲ್ಲಿಲ್ಲ. ಸಂಪಾದಕ ಮಂಡಳಿಯಲ್ಲಿರುವ ಕೆಲವು ಸದಸ್ಯರು ಒಂದೇ ಒಂದು ಸಭೆಗೂ ಬರುವ ಕೃಪೆ ತೋರಿಲ್ಲ. ಸರ್ಕಾರದ ಘನ ಯೋಜನೆಗಳು ಶ್ರದ್ಧೆ, ದಕ್ಷತೆಯ ಅಭಾವದಿಂದ ವಿರೂಪಗೊಳ್ಳುತ್ತಿರುವುದು ಶೋಚನೀಯ.

ನಿಘಂಟಿನ ಸಂಪಾದಕ ಮಂಡಳಿಯೂ ಪುನರ್ವ್ಯವಸ್ಥೆಗೊಳ್ಳಬೇಕು. ಈ ಕೆಲಸ ತೀವ್ರವಾಗಿ ಮುಗಿದು, ಕನ್ನಡ ನಿಘಂಟು ಬೇಗ ಕನ್ನಡಿಗರ ಕೈಸೇರುವಂತಾಗಲು ಸರ್ಕಾರ ಹಣವನ್ನೊದಗಿಸಬೇಕು.

ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ

ಸಾಹಿತ್ಯ ಪರಿಷತ್ತು ಕನ್ನಡನಾಡಿನ ಪ್ರಪ್ರಥಮ ಸಾಹಿತ್ಯ ಸಂಸ್ಕೃತಿ ಸಂವರ್ಧಕ ಸಂಸ್ಥೆ ಎಂಬ ವಾದವನ್ನಾರಂಭಿಸಿದ ಮಹನೀಯರು ಇಲ್ಲಸಲ್ಲದ ಗೊಂದಲಕ್ಕೆ ಎಡೆಮಾಡಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿತವಾದುದು ೧೯೧೫ರಲ್ಲಿ; ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹುಟ್ಟಿದುದು ೧೮೯0ರಲ್ಲಿ ಪರಿಷತ್ತಿಗಿಂತ ವಿದ್ಯಾವರ್ಧಕ ಸಂಸ್ಥೆ ಕಾಲು ಶತಮಾನ ಹಳೆಯದೆನ್ನುವುದು ಐತಿಹಾಸಿಕ ಸತ್ಯ.

‘ಉತ್ತರ ಕರ್ನಾಟಕದಲ್ಲಿ ಶಾಂತಕವಿಗಳು, ಚುರುಮುರಿ ಮೊದಲಾದ ಮಹನೀಯರೂ, ಮಂಗಳೂರು ಪ್ರಾಂತ್ಯದಲ್ಲಿ ಪಂಜೆ ಮಂಗೇಶರಾಯರೂ, ರಾಜಗೋಪಾಲಕೃಷ್ಣರಾಯರೂ ಮೊದಲಾದ ಮಹನೀಯರೂ ತಮ್ಮ ಕೃತಿಗಳಿಂದ ಜಾಗೃತಿಯನ್ನುಂಟುಮಾಡಿದರು. ಹೀಗೆ ಕನ್ನಡನಾಡಿನಲ್ಲೆಲ್ಲ ಒಂದು ಹೊಸ ಚೈತನ್ಯ ಸ್ಫೂರ್ತಿಯೂ ಉಂಟಾದುವು. ಮೊದಲು ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಹುಟ್ಟಿತು. ಶ್ರೀ ಜಯಚಾಮರಾಜೇಂದ್ರ ಒಡೆಯರು ಸಂಘದ ಕಟ್ಟಡಕ್ಕೆ ಉದಾರವಾಗಿ ಧನಸಹಾಯಮಾಡಿ, ಅದರ ಆಸ್ತಿಭಾರವನ್ನು ಹಾಕಿ ನಾಡುನುಡಿಗಳ ಏಕೀಕರಣಕ್ಕೆ ಕನ್ನಡಿಗರ ಹೃದಯ ಹೇಗೆ ಮಿಡಿಯುತ್ತಿರುವುದೆಂಬುದನ್ನು ಪ್ರತ್ಯಕ್ಷವಾಗಿ ತೋರಿದರು.’

೧೯೧೫ರಲ್ಲಿ ಪರಿಷತ್ತಿನ ಧ್ಯೇಯೋದ್ದೇಶಗಳು

೧೯೧೫ನೆಯ ಮೇ ತಿಂಗಳು ೩ನೆಯ ತಾರೀಖಿನ ದಿನ ಮೊದಲ ಸಮ್ಮೇಳನ ನಡೆದು ಪರಿಷತ್ತು ಸ್ಥಾಪಿತವಾಯಿತು. ಈ ರೀತಿ ಸ್ಥಾಪಿತವಾದ ಪರಿಷತ್ತಿನ ಉದ್ದೇಶಗಳು ಯಾವುದೆಂದರೆ:

೧. ಕನ್ನಡ ಭಾಷೆಯಲ್ಲಿ ಪಂಡಿತ ಯೋಗ್ಯವಾದ ವ್ಯಾಕರಣ, ಚರಿತ್ರೆ ನಿಘಂಟು ಈ ಮೂರನ್ನೂ ಬರೆಯಿಸುವುದು, ಅಥವಾ ಬರೆಯುವುದಕ್ಕೆ ಸಹಾಯ ಮಾಡುವುದು.

೨. ನವೀನ ಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.

೩. ತತ್ವಶಾಸ್ತ್ರ ಪ್ರಕೃತಿ ವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.

೪. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂತರಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.

೫. ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.

೬. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ, ಸಂಗ್ರಹಿಸಿ, ಅವನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ ಕನ್ನಡ ನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.

೭. ಕರ್ನಾಟಕ ಭಾಷಾ ಸಂಸ್ಕರಣ, ಕರ್ನಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತ ಯೋಗ್ಯವಾದ ಲೇಖನಗಳನ್ನೊಳಗೊಂಡು ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.

೮. ಕರ್ನಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡು ಕೊಳ್ಳುವುದರಿಂದಾಗಲಿ, ಅವರು ಬರೆದಿರುವ ಪುಸ್ತಕಗಳನ್ನು ಅಚ್ಚುಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ ಅದರ ಗ್ರಂಥಗಳ ಮುದ್ರಣಾಧಿಕಾರವನ್ನೂ (copy rights)  ಹಣಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ, ಸಂಭಾವನೆಯನ್ನಾಗಲಿ ಕೊಡುವುದು.

೯. ಕರ್ನಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧಕ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತ ವೇತನಗಳನ್ನು ಕೊಡುವುದು.

೧0. ಕರ್ನಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆ ಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.

೧೧. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕ ಭಂಡಾರಗಳನ್ನೂ ಸ್ಥಾಪಿಸುವುದು.

೧೨. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಏರ್ಪಡಿಸುವುದು.

ಕನ್ನಡ ಸಾಹಿತ್ಯ ಪರಿಷತ್ತಿಗೆ ಭದ್ರವಾದ ಬುನಾದಿ ಹಾಕಿ, ಈಗಿರುವ ಕಟ್ಟಡ ನಿರ್ಮಾಣಕ್ಕೆ ಕಾರಣರಾದವರು ಬೆಳ್ಳಾವೆ ವೆಂಕಟನಾರಾಯಣಪ್ಪನವರು. ತರುವಾಯ ಡಿ.ವಿ.ಗುಂಡಪ್ಪನವರು, ಪರಿಷತ್ತಿನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ಪರಿಷತ್ತಿನ ಕಾರ್ಯಕ್ರಮಗಳಿಗೆ ಅಚ್ಚುಕಟ್ಟುತನವನ್ನು ತಂದುಕೊಟ್ಟರು. ಬಿ.ಎಂ.ಶ್ರೀಕಂಠಯ್ಯನವರು ಕೊಡುಗೈಯೊಡೆಯರಾಗಿ ಪರಿಷತ್ತಿನ ಹಲವು ಚಟುವಟಿಕೆಗಳಿಗೆ ಉದಾರವಾಗಿ ಹಣ ಸಹಾಯ ಮಾಡುತ್ತಿದ್ದುದಲ್ಲದೆ, ಗಮಕ ಶಿಕ್ಷಣ ಆರಂಭಿಸುವುದಕ್ಕೂ ಅಚ್ಚುಕೂಟ ಸ್ಥಾಪಿಸುವುದಕ್ಕೂ ಕಾರಣರಾದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು ಪರಿಷತ್ತಿನ ಸದಸ್ಯಸಂಪತ್ತಿಯನ್ನು ಬೆಳೆಸುವುದಕ್ಕೆ ಶ್ರಮಿಸಿದರು.

ಪರಿಷತ್ತಿನ ಸದಸ್ಯ ಸಂಪತ್ತಿಯನ್ನು ತಿಳಿಯಲು ಈ ೧೩ ವರ್ಷಗಳ ಇತಿಹಾಸವನ್ನು ಗಮನಿಸಬಹುದು:

ಪರಿಷತ್ತಿನ ಸದಸ್ಯರು

ವರ್ಷ           ಸಾಮಾನ್ಯ ಸದಸ್ಯರು         ಅಜೀವ ಸದಸ್ಯರು

೧೯೪೭-೪೮                     ೯೭೧                    ೪೪೮

೧೯೪೮-೪೯                     ೯೫೪                    ೪೪೮

೧೯೪೯-೫0                      ೩೭೫                    ೪೪0

೧೯೫0-೫೧                      ೩೩೪                    ೪೨೮

೧೯೫೧-೫೨                      ೪೭೭                    ೪೧೨

೧೯೫೨-೫೩                      ೪೫೭                    ೪೧೨

೧೯೫೩-೫೪                      ೪೫೭                    ೪೧೨

೧೯೫೪-೫೫                      ೧೬0                     ೪೧೨

೧೯೫೫-೫೬                       ೧೯೪                    ೪೧೨

೧೯೫೬-೫೭                       ೪೩೫                    ೪೪೯

೧೯೫೭-೫೮                      ೨೩೮                    ೪೪0

೧೯೫೮-೫೯                      ೨೭೨                    ೪೪೨

೧೯೫೯-೬0                       ೨೭೨                    ೪೪೨

೧೯೬೧ನೆಯ ಇಸವಿಯ ಪರಿಷತ್ತಿನ ಅಂದಾಜು ವರಮಾನ-ವೆಚ್ಚದ ಕೆಲವು ಮುಖ್ಯಾಂಶಗಳನ್ನು ಗಮನಿಸಬೇಕು.

ವರಮಾನ

ಮೈಸೂರು ಸರ್ಕಾರದ ಸಹಾಯ ದ್ರವ್ಯ                      ರೂ. ೫,೫00

ಕಾರ್ಪೋರೇಷನ್ ಸಹಾಯ ದ್ರವ್ಯ                              ರೂ. ೨,000

ಸಂಗೀತ ನಾಟಕ ಅಕಾಡೆಮಿಯಿಂದ                          ರೂ. ೨,000

ಸದಸ್ಯತ್ವ ಚಂದಾ                                                        ರೂ. ೨,000

ಪ್ರಕಟನೆಗಳ ಮಾರಾಟ                                                ರೂ. ೪,000

ಇತರ                                                                          ರೂ.೧೭.೪೮0

                                                                                   ರೂ. ೪೨,೯೮0

ವೆಚ್ಚ

ಕಛೇರಿ ಸಿಬ್ಬಂದಿಯ ಸಂಬಳ                                     ರೂ.  ೬,೯00

ಕನ್ನಡನುಡಿ ಮತ್ತು ಪರಿಷತ್ಪತ್ರಿಕೆ                             ರೂ.  ೪,೫00

ಸಮ್ಮೇಳನಗಳು                                                            ರೂ.  ೨,000

ಪುಸ್ತಕ ಭಂಡಾರ                                                           ರೂ.    ೨00

ಸತ್ಕಾರ ಸಮಾರಂಭಗಳು                                             ರೂ.    ೮00

ನಿಯೋಗಗಳು                                                               ರೂ.    ೩00

ತೇಮಾನ                                                                     ರೂ.  ೨,೫00

ಕಾರ್ಯಸಮಿತಿಯ ವೆಚ್ಚ                                          ರೂ.  ೨,000

ಇತರ                                                                         ರೂ. ೧೫,೪00

                                                                                   ರೂ. ೩೪,೬00

ಪರಿಷತ್ತಿನ ಹಣ ಕನ್ನಡ ನಾಡು ನುಡಿಗಳ ಉತ್ಕರ್ಷಕ್ಕೆ ಎಷ್ಟರಮಟ್ಟಿಗೆ ನೆರವಾಗಿದೆಯೆನ್ನುವುದಕ್ಕೆ ಮೇಲ್ಕಾಣಿಸಿರುವ ಅಂಕಿ ಅಂಶಗಳೇ ಸಾಕ್ಷಿ.

ಜಯಚಾಮರಾಜೇಂದ್ರ ಒಡೆಯರು

ಕನ್ನಡ ಸಾಹಿತ್ಯ ಪರಿಷತ್ತು ೧೨-೧೨-೫೬ರಲ್ಲಿ ಮೈಸೂರಿನ ರಾಜ್ಯಪಾಲರಾದ ಶ್ರೀ ಜಯಚಾಮರಾಜ ಒಡೆಯರವರಿಗೆ ಅರ್ಪಿಸಿದ ವಿಜ್ಞಾಪನಾ ಪತ್ರಿಕೆಗೆ ರಾಜ್ಯಪಾಲರು ಉತ್ತರವಾಗಿ ದಯೆಪಾಲಿಸಿದ ಭಾಷಣದ ಕೆಲವು ಅಂಶಗಳು ಗಮನಾರ್ಹವಾಗಿವೆ:

‘ಇನ್ನು ಮುಂದೆ ಪರಿಷತ್ತಿನ ಕಾರ್ಯದಲ್ಲಿ ಸ್ವಲ್ಪ ಬದಲಾವಣೆಯಾಗಬೇಕೆಂದು ನನಗೆ ತೋರುತ್ತದೆ; ಬಹುಶಃ  ತಮಗೂ ಹಾಗೆಯೇ ತೋರಬೇಕು. ಒಂದಾನೊಂದು ಕಾಲದಲ್ಲಿ ಕನ್ನಡದ ಸ್ಥಾನಮಾನಗಳಾಗಿ ಯುದ್ಧ ಹೂಡಬೇಕಾಗಿತ್ತು. ಜನರನ್ನು ಎಚ್ಚರಿಸಿ ಹುರಿದುಂಬಿಸುವುದಕ್ಕಾಗಿ ಪ್ರಚಾರ, ಭಾಷಣಗಳು, ಉತ್ಸವಗಳು, ಭಾವೋದ್ರೇಕ ಇವೆಲ್ಲಾ ಆವಶ್ಯಕವಾಗಿದ್ದವು. ಈಗ ಕನ್ನಡ ಗೆದ್ದಿದೆ. ಸುಮಾರು ಅರ್ಧ ಶತಮಾನದ ಉಳಿಮೆ ಸ್ವಾದುವಾದ ಫಲ ಕೊಟ್ಟಿದೆ… ಇನ್ನು  ಕನ್ನಡದ ಪರವಾಗಿ ಪ್ರಚಾರಮಾಡಬೇಕಾದ ಆವಶ್ಯಕತೆಯಿಲ್ಲ; ಕನ್ನಡ ಬಾವುಟದ ಮೆರವಣಿಗೆ ಆವಶ್ಯಕವಿಲ್ಲ… ಆ ಬಾವುಟ ಭವನದ ಮೇಲೆ ಗೆಲುವಾಗಿ ಹಾರುತ್ತಿದೆ.

ಅಂದ ಮೇಲೆ ಇನ್ನು ಮುಂದೆ ಭವನದೊಳಗೆ ಕ್ರಮವ್ಯವಸ್ಥೆಗಳನ್ನು ಅನುಗೊಳಿಸುವ ಪ್ರಯತ್ನ ನಡೆಯಬೇಕು. ಆತ್ಮವಿಶ್ವಾಸವನ್ನು ಪಡೆಯುವುದಕ್ಕಾಗಿ ನಮ್ಮ ಹೆಚ್ಚಳವನ್ನು ಉತ್ಪ್ರೇಕ್ಷೆಮಾಡಿಕೊಂಡದ್ದು ಸ್ವಾಭಾವಿಕವೇ. ಆದರೆ ಇನ್ನು ಮುಂದೆ ನಿಷ್ಪಕ್ಷಪಾತವಾಗಿ ಆತ್ಮಪರೀಕ್ಷೆ ಮಾಡಿಕೊಳ್ಳಬೇಕು. ದಿವಂಗತ ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಒಂದು ಬಾರಿ ಹೇಳಿದಂತೆ `ಕೊನೆಗೆ ನಿಲ್ಲುವುದು ಅಭಿಮಾನವಲ್ಲ ಸತ್ಯ’. ಈ ಸತ್ಯವನ್ನು ಎದುರಿಸುವುದಕ್ಕೆ ನಾವು ಹೆದರಬೇಕಾದ್ದೇನೂ ಇಲ್ಲ. ಕನ್ನಡ ಭಾಷೆಯ ಸ್ವರೂಪ, ವ್ಯಾಕರಣ, ಅದಕ್ಕೂ ಇತರ ಭಾಷೆಗಳಿಗೂ ಇರುವ ಸಂಬಂಧ, ಕನ್ನಡ ಛಂದಸ್ಸು, ಲಯ, ಕನ್ನಡ ಸಾಹಿತ್ಯದ ಹಿನ್ನೆಲೆಯಾಗಿರುವ ಮತ್ತು ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತಿರುವ ರಾಜಕೀಯ, ಸಾಮಾಜಿಕ, ಮತೀಯ ಪರಿಸ್ಥಿತಿ-ಇವೆಲ್ಲದರ ವಿಷಯದಲ್ಲೂ ನಿಷ್ಕೃಷ್ಟ ಪಾಂಡಿತ್ಯವನ್ನು ಪಡೆಯಬೇಕು. ಇನ್ನು ಮುಂದೆ ಪರಿಷತ್ತಿನ ಕೆಲಸ ಇದೇ ಎಂದು ನನ್ನ ಭಾವನೆ. ಪರಿಷತ್ತು ಸಾಹಿತ್ಯವನ್ನು ಸೃಷ್ಟಿ ಮಾಡಲಾರದು. ಯಾವುದೊಂದು ಸಂಸ್ಥೆಯೂ ಆ ಕೆಲಸ ಮಾಡಲಾರದು. ದೈವದತ್ತವಾದ ಪ್ರತಿಭೆಯುಳ್ಳವರಿಗೆ ಆ ಕೆಲಸವನ್ನು ಬಿಡೋಣ. ಪರಿಷತ್ತಿನ ಕೆಲಸವೆಂದರೆ ಆ ಸಾಹಿತ್ಯದ ಬೆಲೆಯನ್ನು ಅಧಿಕಾರಯುತವಾಗಿ ನಿರ್ಣಯಿಸುವುದು ಕೂಡಾ ಅಲ್ಲ. ಉದ್ವೇಗರಹಿತವಾದ ಮತ್ತು ಪೂರ್ವಗ್ರಹಗಳಿಗೆ ಸಿಲುಕದ ಸ್ವಚ್ಛವಾದ ವಿಮರ್ಶನ ದೃಷ್ಟಿಯನ್ನು ಬೆಳಸುವುದು, ಹತ್ತಾರು ಕಡೆಗಳಿಂದ ಅಭಿಪ್ರ್ರಾಯ ಬೆಳೆದುಬಂದು ಅವುಗಳ ಘರ್ಷಣೆಯಿಂದ ಸತ್ಯ ಮೂಡಿಬರುವಂತೆ ಸೌಕರ್ಯಗಳನ್ನು ಕಲ್ಪಿಸುವುದು, ನಿಘಂಟು, ವಿಶ್ವಕೋಶ ಮುಂತಾದ್ದನ್ನು ಸಿದ್ಧಗೊಳಿಸುವುದು, ಇತರ ಪ್ರಕಾಶಕರು ಪ್ರಕಟಿಸಲು ಹೆದರುವ ವಿಮರ್ಶೆ, ಶಾಸ್ತ್ರಗ್ರಂಥ ಮುಂತಾದ್ದನ್ನು ಪ್ರಕಟಿಸುವುದು, ಸಂಶೋಧನೆ ನಡೆಸುವುದು – ಇತ್ಯಾದಿ ಕಾರ್ಯಕ್ರಮಗಳಿಗೆ ಪರಿಷತ್ತು ಮೀಸಲಾಗಬೇಕು. ಇದೆಲ್ಲಾ ಮೈಬಗ್ಗಿ ಕುಳಿತು ಮಾಡಬೇಕಾದ ಕೆಲಸ. ಇದರಿಂದ ಸುಲಭದ ಮನೋರಂಜನೆ ಸಾಧ್ಯವಿಲ್ಲ; ಕ್ಷಣಕ್ಷಣಕ್ಕೂ ಜನರಿಂದ ಕರತಾಡನಗಳು ಬರುವುದಿಲ್ಲ. ಕರತಾಡನದ ಆಸೆ, ಅದಕ್ಕೆ ಬೇಕಾದ ಆಡಂಬರ-ಇದನ್ನೆಲ್ಲಾ ಪರಿಷತ್ತು ಬಿಟ್ಟುಕೊಡಬೇಕು.  ಸಾಮಾನ್ಯ ಉಪನ್ಯಾಸಗಳಿಗೆ, ಮನೋರಂಜನೆಯ ಕಾರ್ಯಕ್ರಮಗಳಿಗೆ, ನಾಡಿನಲ್ಲಿ ಬೇಕಾದಷ್ಟು ಕರ್ಣಾಟಕ ಸಂಘಗಳಿವೆ; ಅವು ಈ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿವೆ. ಕನ್ನಡ ಜನತೆಯೂ ಈ ಬಗೆಯ ಕೆಲಸವನ್ನು ಪರಿಷತ್ತು ಮಾಡಬೇಕೆಂದು ಬಯಸಬಾರದು; ಅದರ ಆವರಣದಿಂದ ಕೊಂಬು ಕಹಳೆ ತುತ್ತೂರಿಗಳ ಘೋಷ ಕೇಳಿ ಬರಲಿಲ್ಲವಲ್ಲ ಎಂದು ಆತಂಕಪಡಬಾರದು. ಪರಿಷತ್ತಿನ ಕೆಲಸ ಸದ್ಯದಲ್ಲಿ ಜನರು ಕಣ್ಣು ಕೊರೈಸುವಂಥದಲ್ಲವಾದರೂ ನೂರುಕಾಲ ಬಾಳುವಂಥಾದ್ದಾಗಬೇಕು; ಪರಿಷತ್ತು ಕನ್ನಡ ನಾಡಿನ ಚಿತ್ರಕಲೆ, ನೃತ್ಯ ಸಂಗೀತ ಮೊದಲಾದುದೆಲ್ಲದರ ಅಭ್ಯುದಯಕ್ಕೆ ಪ್ರಯತ್ನಿಸಬೇಕೆಂಬ ಮಾತು ಆಗಾಗ್ಗೆ ಕೇಳಿಬಂದಿದೆ. ಇವು ಒಂದೊಂದೂ ಜೀವಮಾನವನ್ನೆಲ್ಲಾ ಬೇಡುವಂಥ ಕಲೆಗಳು. ಇವೆಲ್ಲದರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆಂದು ಹೊರಟರೆ ಪರಿಷತ್ತು ಇಂಗ್ಲಿಷಿನಲ್ಲಿ ಹೇಳುವಂತೆ ಡಿಲಿಟ್ಯಾಂಟಿ (Dilettante) ಸಂಸ್ಥೆಯಾದೀತೆಂಬ ಭಯವಿದೆ. ಇದನ್ನೆಲ್ಲಾ ಸಂಗೀತ ನಾಟಕ ಅಕಾಡೆಮಿಗಳಂತಹ ಸಂಸ್ಥೆಗಳಿಗೆ ಬಿಟ್ಟು ತನ್ನ ಗಮನವನ್ನು ಸಾಹಿತ್ಯದ ಮೇಲೆ ಕೇಂದ್ರೀಕರಿಸುವುದು ಉತ್ತಮವೆಂದು ತೋರುತ್ತದೆ.”

ಪರಿಷತ್ತು ಮಾಡಿದ್ದೇನು?

ಇಂದು ಪರಿಷತ್ತಿನಲ್ಲಿ ಸಾಹಿತಿಗೆ, ಕನ್ನಡದ ಸೇವೆ ಮಾಡಿ ಧನ್ಯನಾಗಲು  ಬಯಸುವವನಿಗೆ ಎಡೆಯಿಲ್ಲ. ಅಧಿಕಾರಿ ವರ್ಗದವರ ಹಾಗೂ ರಾಜಕೀಯ ಮುಂದಾಳುಗಳ ಮೆರವಣಿಗೆ, ಸನ್ಮಾನೋತ್ಸವ, ಉಪಹಾರ ಮೇಳ, ಸತ್ಕಾರ ಸಮಾರಂಭಗಳಿಗೆ ಪರಿಷತ್ತು       ಸರ್ಕಾರದ ದಾನದ್ರವ್ಯವನ್ನು ನಿವೇದಿಸಿದೆ.

ಪರಿಷತ್ತು ಏನು ಮಾಡಿಲ್ಲ ?

೧. ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ `ಚನ್ನಬಸವನನಾಯಕ’ ೧೯೫೯ರಲ್ಲಿ ಪ್ರಕಟವಾಯಿತು. ೧೯೫೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ಭಾರತೀಯ ಭಾಷೆಗಳಿಗೆ ಅನುವಾದಿಸಲು ಈ ಗ್ರಂಥವನ್ನು ಅರಿಸಿತು. ಸಾಹಿತ್ಯ ಅಕಾಡೆಮಿಯ ಆಯ್ಕೆಯಾದ ತರುವಾಯ ಆ ಗ್ರಂಥದ ಮೇಲೆ ಜಾತಿದ್ವೇಷದ ಅಪಾದನೆ ಹೊರಿಸಿ ಹಲವು ಹೇಳಿಕೆಗಳು, ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದವು. `ಚನ್ನಬಸವನಾಯಕ’ ಗ್ರಂಥವನ್ನೇ ವ್ಯಾಜ್ಯಮಾಡಿಕೊಂಡು ಉತ್ತರ ಕರ್ನಾಟಕದಲ್ಲಿ ಹಲವು ಅಗ್ನಿಭಕ್ಷಕರು, ಜಾತ್ಯಂಧರು ಉಪನ್ಯಾಸ ಸತ್ಯಾಗ್ರಹ ನಡೆಸಿದರು. ಈ ಬಗ್ಗೆ ಪರಿಷತ್ತಿಗೆ ಯಾವ ಹೊಣೆಗಾರಿಕೆಯೂ ಇರಲಿಲ್ಲವೇ? ಪರಿಷತ್ತಿನ ತಜ್ಞಮಂಡಲಿಯೊಂದು ಡಾ||ಮಾಸ್ತಿಯವರ ಪುಸ್ತಕ, ಅದರ ಮೇಲೆ ಬಂದ ಅಪಾದನೆಗಳನ್ನು ಪರೀಕ್ಷಿಸಿ, ನಿಷ್ಕೃಷ್ಟ ಅಭಿಪ್ರಾಯ ವ್ಯಕ್ತಗೊಳಿಸಿ ಈ ರಾಷ್ಟ್ರವಿಘಾತಕ ಚಳುವಳಿಯನ್ನು ನಿಲ್ಲಿಸಲು ಸಾಧ್ಯವಿರಲಿಲ್ಲವೇ?

೨. ಪರಿಷತ್ತು ಪ್ರತಿವರ್ಷ ರೂ.೨,000 ವೆಚ್ಚಮಾಡಿ ನಡೆಸುತ್ತಿರುವ ಪರಿಕ್ಷೆಗಳಿಗೆ ಬಂದೊದಗಿರುವ ದುರವಸ್ಥೆ ಪರಿಷತ್ತಿನ ಅಧಿಕಾರಿಗಳ ಗಮನಕ್ಕೆ ಬಂದಿದೆಯೇ? ಪರೀಕ್ಷಾ ಕೇಂದ್ರಗಳಿಗೆ ಸಕಾಲಕ್ಕೆ ಪ್ರಶ್ನೆಪತ್ರಿಕೆಗಳು ಮುಟ್ಟದಿರುವುದು, ವಿದ್ಯಾರ್ಥಿಗಳೇ ಇಲ್ಲದಿರುವೆಡೆಗಳು ಪರೀಕ್ಷಾ ಕೇಂದ್ರಗಳಾಗಿರುವುದು, ಕೆಲವು ಕೇಂದ್ರಗಳಲ್ಲಿ ಪುಸ್ತಕಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯುತ್ತಿರುವುದು ಪರಿಷತ್ತಿನ ಅಧಿಕಾರ  ವರ್ಗದವರಿಗೆ ಗೊತ್ತಿದೆಯೇ?

೩. ಪರಿಷತ್ತಿನ ಸಭಾಮಂದಿರವನ್ನು ಜಾತಿ ಸಂಸ್ಥೆಗಳಿಗೂ, ರಾಜಕೀಯ ಸಂಸ್ಥೆಗಳಿಗೂ ಬಾಡಿಗೆಗೆ ಕೊಡುತ್ತಿರುವುದೇಕೆ? ಇದು ಪರಿಷತ್ತಿನ ಮೂಲ ಉದ್ದೇಶಕ್ಕೇ ವಿಘಾತಕವಲ್ಲವೇ?

೪. ಸತ್ಕಾರಕೂಟ, ಭೋಜನ ಕೂಟಗಳು ನಡೆಸಬೇಕಾದ ಸಂದರ್ಭವೊದಗಿದಾಗ ಹಿಂದಿದ್ದ ಅಧಿಕಾರಿವರ್ಗದವರು ಚಂದಾ ವಸೂಲ್ಮಾಡಿ ವ್ಯಯ ಮಾಡುತ್ತಿದ್ದುದು ಇಂದಿನ ಅಧಿಕಾರಿ ವರ್ಗದವರಿಗೆ ತಿಳಿದಿದೆಯೇ? ಇವುಗಳಿಗೆ ಪರಿಷತ್ತಿನ ಹಣವನ್ನು ವ್ಯಯಮಾಡುವುದು ಶುದ್ಧ ಅನ್ಯಾಯವಲ್ಲವೇ?

೫. ಸರ್ವಶ್ರೀ ಡಿ.ವಿ. ಗುಂಡಪ್ಪನವರು, ಬಿ.ಎಂ.ಶ್ರೀಕಂಠಯ್ಯನವರು ಉಪಾಧ್ಯಕ್ಷರಾಗಿದ್ದ ಕಾಲದಲ್ಲಿ ಪರಿಷತ್ತಿನ ವರ್ಷದ ಕಾರ್ಯಕ್ರಮವನ್ನು ಪೂರ್ವಭಾವಿಯಾಗಿ ಗೊತ್ತುಮಾಡಿ, ನಾಡಿನ ಎಲ್ಲ ಭಾಗಗಳ ವಿದ್ವಾಂಸರ ಪಾಂಡಿತ್ಯಪೂರ್ಣ ಭಾಷಣವನ್ನೇರ್ಪಡಿಸುತ್ತಿದ್ದುದು ಇಂದಿನ ಅಧಿಕಾರಿವರ್ಗದವರಿಗೆ ತಿಳಿದಿದೆಯೇ?

೬. ಸಾಹಿತ್ಯ ವಿಕಾಸ, ಸಾಹಿತಿಗಳ ಉದ್ಧಾರದ ಸಲುವಾಗಿ ಜನ್ಮತಳೆದಿರುವ ಪರಿಷತ್ತು ಬಡಲೇಖಕರ ಕಷ್ಟ-ಸುಖಗಳನ್ನು ವಿಚಾರಿಸಲು ಪ್ರಯತ್ನಿಸಿದೆಯೇ? ನಿರ್ಗತಿಕಾವಸ್ಥೆಯಲ್ಲಿ ಪ್ರಾಣ ಒಪ್ಪಿಸಿದ ಬಡಲೇಖಕರಿಗಾಗಲಿ, ಅವರ ಸಂಸಾರಕ್ಕಾಗಲಿ ಪರಿಷತ್ತು ಸಹಾಯ ಮಾಡಿದೆಯೇ?

೭. ಪರಿಷತ್ತಿನ ಪುಸ್ತಕಭಂಡಾರ, ಪರಿಷತ್ತಿನ ಸ್ಥಾನಮಾನಗಳಿಗೆ ಅನುಗುಣವಾಗಿದೆಯೇ? ದಿನೇ ದಿನೇ ಕ್ಷೀಣವಾಗುತ್ತಿರುವ ಈ ಭಂಡಾರವನ್ನು ವ್ಯವಸ್ಥೆಗೊಳಿಸಲು ಪರಿಷತ್ತು ಯಾವ ಕ್ರಮಕೈಗೊಂಡಿದೆ? ಇನ್ನಿದುವರೆಗೆ ಭಂಡಾರದ ‘ಪುಸ್ತಕಗಳ ಪಟ್ಟಿ’ ಯೊಂದನ್ನು ಪರಿಷತ್ತು ಏಕೆ ಪ್ರಕಟಿಸಿಲ್ಲ?

೮. ಪರಿಷತ್ತಿನ ಪ್ರಾತಿನಿಧ್ಯ ಅಪೇಕ್ಷಿಸುವ ಸಂಸ್ಥೆಗಳಿಗೆ, ಸಮಿತಿಗಳಿಗೆ ಸಮ್ಮೇಳನಕ್ಕೆ ಪರಿಷತ್ತಿನ ಅಧಿಕಾರಿ ವರ್ಗದವರೇ ಪ್ರತಿನಿಧಿಗಳಾಗಿ ಹೋಗಬೇಕೆಂಬ ನಿಯಮವಿದೆಯೇ?

೯. ಪರಿಷತ್ತಿನ ಪರೀಕ್ಷೆಗಳಿಗೆ ಪಠ್ಯಪುಸ್ತಕಗಳನ್ನು ನಿಯಮಿಸುವಾಗ, ಪರೀಕ್ಷಕರನ್ನು ಗೊತ್ತುಮಾಡುವಾಗ ಪ್ರಾತಿನಿಧ್ಯ ಆವಶ್ಯಕತೆಯಿಲ್ಲವೆ? ಅವು ಸದ್ಯಕ್ಕೆ ಪರಿಷತ್ತಿನ ಅಧಿಕಾರಿಗಳು, ಅವರ ಕೆಲವು ಮಿತ್ರರಿಗೇ ಮೀಸಲಾಗಿಲ್ಲವೇ?

೧0. ರಾಯಚೂರಿನಲ್ಲಿ ಅಧ್ಯಾಪಕರಾಗಿದ್ದ ಶ್ರೀ ಬಿ.ವಿ. ಶ್ರೀನಿವಾಸರಾಯರು, `ಆಂಧ್ರ ಹಿಸ್ಟಾರಿಕಲ್ ರಿಸರ್ಚ್ ಸೊಸೈಟಿ ಜರ್ನಲ್’ ಪತ್ರಿಕೆಗೆ ಒಂದು ಲೇಖನ ಬರೆದು ಮೈಸೂರು ಪ್ರಾಂತ್ಯದ ಬೆಂಗಳೂರು, ತುಮಕೂರು, ಚಿತ್ರದುರ್ಗ, ಕೋಲಾರ ಜಿಲ್ಲೆಗಳು ಆಂಧ್ರಕ್ಕೆ ಸೇರಬೇಕೆಂಬ ವಾದ ಹೂಡಿದರು. ಈ ದುರಾಕ್ರಮಣವನ್ನು ಕನ್ನಡ ಪತ್ರಿಕೆಗಳು ಖಂಡಿಸಿದವು. ಇಂತ ಮುಖ್ಯ ವಿಷಯದ ಬಗ್ಗೆಯೂ ಪರಿಷತ್ತು ಔದಾಸೀನ್ಯ ತೋರಿದುದೇಕೆ?

ಪರಿಷತ್ತು ಏನು ಮಾಡಬೇಕು?

  1. ಮಂತ್ರಿಗಳನ್ನೂ, ರಾಜಕಾರಣಿಗಳನ್ನೂ ಮಠಾಧಿಪತಿಗಳನ್ನೇ ಪರಿಷತ್ತಿಗೆ ಬರಮಾಡಿಕೊಂಡು ಅವರಿಗೆ ಬಿನ್ನವತ್ತಳೆ ಅರ್ಪಿಸಿ, ಅಳತೆ ಮೀರಿ ಹೊಗಳುವುದನ್ನು ಬಿಟ್ಟುಬಿಡಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರಾಧಾನ್ಯವಿರಬೇಕಾದುದು ಸಾಹಿತಿಗಳಿಗೇ ವಿನಾ ರಾಜಕಾರಣಿಗಳಿಗಲ್ಲ.
  2. ಪರಿಷತ್ತಿನ ಹಣವ್ಯಯಮಾಡುವಾಗ ಅಧಿಕಾರಿ ವರ್ಗದವರು ಅತ್ಯಂತ ಎಚ್ಚರವಹಿಸಬೇಕು. ಸಾರ್ವಜನಿಕ ಹಣ ವಿಷಪ್ರಾಯವಾದುದೆಂಬುದನ್ನು ಪರಿಷತ್ತಿನ ಅಧಿಕಾರಿ ವರ್ಗದವರು ಮರೆಯದಿರಬೇಕು.
  3. ಪರಿಷತ್ತು ವಿದ್ವತ್ಪೂರ್ಣ ಭಾಷಣಗಳ ವೇದಿಕೆಯಾಗಬೇಕು. ಈ ಭಾಷಣಗಳನ್ನು ಸಂಗ್ರಹಿಸಿ ಕಿರು ಹೊತ್ತಿಗೆಗಳಾಗಿ ಪ್ರಕಟಿಸಬೇಕು.

ವಯೋನ್ಮುಖ ಸಾಹಿತಿಗಳ ರಕ್ಷಣೆ ಪೋಷಣೆಗೆ ಪರಿಷತ್ತು ಪ್ರಥಮಸ್ಥಾನ ಕೊಡಬೇಕು.

ಅ. ನವ್ಯಸಾಹಿತಿಗಳ ಕೃತಿಗಳನ್ನು ಬರಮಾಡಿಕೊಂಡು ಅವುಗಳನ್ನು ಓದಿ, ಸೂಕ್ತ ಸಲಹೆಗಳನ್ನೀಯಬಲ್ಲ ತಜ್ಞರ ಮಂಡಳಿಯ ನಿಯಾಮಕ.

ಆ. ನವ್ಯಸಾಹಿತಿಗಳಿಗೆ ಸಾಹಿತ್ಯದ ವಿವಿಧ ಪ್ರಕಾರಗಳ ತಂತ್ರ ತಿಳಿಸಿ ಕೊಡುವ ಗ್ರಂಥಗಳ ಪ್ರಕಟನೆ.

ಇ. ಕಾಲಕಾಲಕ್ಕೆ ಒಂದೊಂದು ಸಾಹಿತ್ಯ ಕುರಿತ ಭಾಷಣಮಾಲೆ.

ಈ. ಕಿರಿಯ ಸಾಹಿತಿಗಳ ಅಭ್ಯಾಸಕ್ಕೆ ಅವಶ್ಯಕವಾದ ಗ್ರಂಥಗಳ ಸಂಗ್ರಹಣೆ.

ಉ. ಕಿರಿಯ ಸಾಹಿತಿಗಳು ಹಿರಿಯ ಸಾಹಿತಿಗಳನ್ನು ಕಂಡು ವಿಚಾರವಿನಿಮಯ ಮಾಡಿಕೊಳ್ಳಲವಕಾಶ.

೫. ಬಡ ಲೇಖಕರ ಕಷ್ಟ ನಿವಾರಣೆಗಾಗಿ ಮಾಸಾಶನ ಅಥವಾ ಮೊತ್ತವಾಗಿ ಧನಸಹಾಯ, ಸಹಾಯಶೂನ್ಯರಾದ ಲೇಖಕರ ಸಂಸಾರಕ್ಕೆ ಸಹಾಯ-ಲೇಖಕರ ಮಕ್ಕಳಿಗೆ ವಿದ್ಯಾದಾನ. ಅದಕ್ಕಾಗಿ ಒಂದು ಮೀಸಲು ನಿಧಿಸಂಗ್ರಹವಾಗಬೇಕು.

೬. ಪ್ರಾಚೀನ, ಅರ್ವಾಚೀನ ಕಾವ್ಯ ಪರಿಚಯ ಮಾಡಿಕೊಡುವ ವ್ಯಾಸಂಗ ಗೋಷ್ಠಿಗಳು.

೭. ಸೋದರ ಭಾಷೆಗಳಾದ ತಮಿಳು, ತೆಲುಗು, ಹಿಂದಿ, ಬಂಗಾಳಿ ಭಾಷೆಗಳ ಮತ್ತು ಪರಭಾಷೆಗಳಾದ ಗ್ರೀಕ್, ಫ್ರೆಂಚ್, ಜರ್ಮನ್, ರಷ್ಯನ್ ಭಾಷೆಗಳ ಅಭ್ಯಾಸಕ್ಕೆ ಅನುಕೂಲಿಸುವಂತೆ ತರಗತಿಗಳನ್ನು ಏರ್ಪಡಿಸುವುದು.

೮. ಸೋದರ ಭಾಷೆಗಳ ಹಾಗೂ ಪರಭಾಷೆಗಳ ಸಾಹಿತ್ಯ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವುದು.

೯. ಪರಿಷತ್ತಿನ ಪ್ರಕಟನಾ ಶಾಖೆಯನ್ನಭಿವೃದ್ಧಿಪಡಿಸಿ, ಉಪಲಬ್ಧವಿಲ್ಲದ ಪ್ರಾಚೀನ ಕಾವ್ಯಗಳು, ಪ್ರಕಟವಾಗದಿರುವ ಕಾವ್ಯಗಳನ್ನು ಪ್ರಕಟಿಸುವುದು, ಮಹಾಕವಿ ಪ್ರಶಸ್ತಿ ಗ್ರಂಥಗಳನ್ನು ಪ್ರಕಟಿಸುವುದು.

೧0. ಪರಿಷತ್ತಿನ ಕಟ್ಟಡವನ್ನು ವಿಸ್ತರಿಸಿ, ಪುಸ್ತಕ ಭಂಡಾರಕ್ಕಾಗಿಯೇ ಪ್ರತ್ಯೇಕ ಹಜಾರವನ್ನೇರ್ಪಡಿಸುವುದು.

೧೧. ಪರಿಷತ್ತಿನ ಮುದ್ರಣಾಲಯವನ್ನು ಸುಧಾರಿಸಿ, ಆಧುನಿಕ ಯಂತ್ರೋಪಕರಣಗಳನ್ನು ತೆಗೆದುಕೊಳ್ಳುವುದು.

೧೨. ಕನ್ನಡ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳನ್ನು ಸಂಘಟಿಸಿ ಕನ್ನಡ ಪ್ರಕಟನೆಗಳ ವ್ಯಾಪಕ ಪ್ರಸಾರಕ್ಕವಶ್ಯಕವಾದ ಮಾರ್ಗಗಳನ್ನು ನಿರ್ದೇಶಿಸುವುದು.

೧೩. ಅಂಗಸಂಸ್ಥೆಗಳೊಂದಿಗೆ ನಿಕಟ ಸಂಬಂಧವಿಟ್ಟುಕೊಂಡು, ಅವುಗಳ ಸಹಾಯದಿಂದ ನಾಡಿನ ಎಲ್ಲ ಭಾಗಗಳಲ್ಲಿಯೂ ಸಾಹಿತ್ಯ ಪ್ರಚಾರ ಕೈಗೊಳ್ಳುವುದು.

೧೪. ಕೇಂದ್ರ ಸರ್ಕಾರಕ್ಕೂ, ಸಾಹಿತ್ಯ ಅಕಾಡೆಮಿ ಸಂಸ್ಥೆಗೂ ಪರಿಷತ್ತಿನ ಕಾರ್ಯವ್ಯಾಪ್ತಿಯ ಪರಿಚಯ ಮಾಡಿಕೊಟ್ಟು, ಅದರಿಂದ ಧನಸಹಾಯ ಪಡೆಯುವುದು.

೧೫. ಪರಿಷತ್ತಿನ ಸದಸ್ಯರ ಸಂಖ್ಯೆ ಹೆಚ್ಚಿಸುವುದು, ಕಾರ್ಯಕಾರಿ ಸಮಿತಿಯ ಸದಸ್ಯರು ಪರಿಷತ್ತಿನ ಅಧಿಕಾರಿ ವರ್ಗದವರು ವರ್ಷಕ್ಕೆ ನೂರು ಸದಸ್ಯರನ್ನಾದರೂ ಕೂಡಿಸಿ, ಕೊಡಬೇಕೆಂದು ಒತ್ತಾಯಪಡಿಸತಕ್ಕದ್ದು.

೧೭. ಗಡಿನಾಡುಗಳಲ್ಲಿಯೂ ಪರಪ್ರಾಂತೀಯರ ಧಾಳಿಗೆ ಸಿಕ್ಕಿರುವ ಕೋಲಾರದ ಚಿನ್ನದ ಗಣಿ, ಬೆಂಗಳೂರು, ಸೊಲ್ಲಾಪುರ, ಬೆಳಗಾವಿ, ಕಾರವಾರದಲ್ಲಿ ಕನ್ನಡ ಚಳುವಳಿಯನ್ನು ಬಲಗೊಳಿಸುವುದು.

 

ಪರಿಷತ್ತಿನ ಪ್ರಕಟಣೆಗಳು

ಪ್ರತಿವರ್ಷ ಕನ್ನಡದಲ್ಲಿ ಪ್ರಕಟವಾಗುವ ಎಲ್ಲಾ ಪುಸ್ತಕಗಳು, ಪತ್ರಿಕೆಗಳ ಒಂದು ಪಟ್ಟಿಯನ್ನು ಪರಿಷತ್ತು ಕ್ರಮವಾಗಿ ಪ್ರಕಟಿಸುತ್ತಾ ಬರಬೇಕು.

ಸುಮಾರು ೨೩ ವರ್ಷಗಳಿಂದ ಪರಿಷತ್ತು `ಕನ್ನಡ ಸಾಹಿತ್ಯ ಪತ್ರಿಕೆ’ ತ್ರೈಮಾಸಿಕವನ್ನು ಪ್ರಕಟಿಸುತ್ತಿದೆ. ೧೯೩೮ರಲ್ಲಿ ಶ್ರೀ ಬಿ.ಎಂ. ಶ್ರೀಕಂಠಯ್ಯನವರು ನನ್ನ ಸಂಪಾದಕತ್ವದಲ್ಲಿ, ಕನ್ನಡ ಪ್ರಸಾರದ ಸಲುವಾಗಿ ‘ಕನ್ನಡ ನುಡಿ’ ಮಾಸ ಪತ್ರಿಕೆಯಾಗಿ ಮಾರ್ಪಟ್ಟಿತು.

ಈ ಎರಡು ಪತ್ರಿಕೆಗಳಿಗೆ ಪರಿಷತ್ತು ಪ್ರತಿ ವರ್ಷ ರೂ. ೪,೫00 ಗಳನ್ನು ಖರ್ಚು ಮಾಡುತ್ತಿವೆ. ಇಂದು ಪ್ರಸಾರದ ಸಲುವಾಗಿ ನಾವು ‘ಕನ್ನಡ ನುಡಿ’ ನಡೆಸಿಕೊಂಡು ಹೋಗುವ ಅಗತ್ಯವಿಲ್ಲ. ಕನ್ನಡ ದೈನಂದಿನ, ಸಾಪ್ತಾಹಿಕ, ಮಾಸಪತ್ರಿಕೆಗಳು ಈ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿವೆ.

ಪರಿಷತ್ತಿನ ಅಧಿಕಾರಿವರ್ಗದ ‘ಪಂಗಡ’ ವಾಗಿರುವ ‘ಕನ್ನಡ ನುಡಿ’ಯಿಂದ ಯಾವ ಪ್ರಯೋಜನವೂ ಇಲ್ಲ. ‘ಪರಿಷತ್ಪತ್ರಿಕೆ’ ಮತ್ತು ‘ನುಡಿ’ ಕೂಡಿಸಿ, ಪರಿಷತ್ಪತ್ರಿಕೆಯನ್ನೇ ಬಲಗೊಳಿಸಿ, ವರ್ಷಕ್ಕೆ ಆರು ಸಂಚಿಕೆಗಳನ್ನು ತರಬಹುದು. ಒಂದೊಂದು ಸಂಚಿಕೆ ೧೫0 ರಿಂದ ೨00 ಪುಟಗಳವರೆಗಿರಬಹುದು. ಈ ಆರು ಸಂಚಿಕೆಗಳಲ್ಲಿ ೧) ಪ್ರಾಚೀನ ಕನ್ನಡ ಸಾಹಿತ್ಯ ಸಂಶೋಧನೆಗಳಿಗೂ, ೨) ಕರ್ನಾಟಕದ ಜಾನಪದ ಸಾಹಿತ್ಯಕ್ಕೂ, ೩). ಆಧುನಿಕ ಕನ್ನಡ ಸಾಹಿತ್ಯದ ಪ್ರಗತಿಯನ್ನು ಅನುಲಕ್ಷಿಸುವುದಕ್ಕೂ, ೪). ವಿಮರ್ಶಾ ಶಾಸ್ತ್ರವನ್ನು ಪರಿಚಯ ಮಾಡಿಕೊಡುವುದಕ್ಕೂ ೫) ಕರ್ನಾಟಕ ಲಲಿತಕಲೆಗಳಿಗೂ, ೬) ಕನ್ನಡಿಗರಿಗೆ ವಿವಿಧ ವಿಜ್ಞಾನ ಶಾಸ್ತ್ರಗಳ ಪರಿಚಯಮಾಡಿ ಕೊಡುವುದಕ್ಕೂ ಮಿಸಲಾಗಿರಬಹುದು. ಈ ಒಂದೊಂದು ವಿಭಾಗಕ್ಕೂ ದಕ್ಷವಿದ್ವಾಂಸರ ಸಂಪಾದಕ ಮಂಡಲಿ ಇರತಕ್ಕದ್ದು.

ಪರಿಷತ್ತು ಯಾವ ವ್ಯಕ್ತಿಯ ಸೊತ್ತೂ ಅಲ್ಲ; ಅದು ಎರಡು ಕೋಟಿ ಕನ್ನಡಿಗರ ಹೃದಯ ಕನ್ನಡಿ. ಪರಿಷತ್ತಿನ ಧವಳಕೀರ್ತಿಗೆ ಕಳಂಕಬಾರದಂತೆ, ಅವರ ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ.

ಈ  ಪ್ರಕಾರದ ಪರಿಷತ್ತಿಗೆ ದುಡಿದ ಮಹನೀಯರ ಸೇವೆ ಯಾವ ವ್ಯಕ್ತಿಯ.  ಗುಂಪಿನಿಂದಾಗಲಿ ಅಳಿಸಿಹೋಗಲು ನಾವು ಅವಕಾಶ ಕೊಡಬಾರದು.

ಹೊರನಾಡಿನಲ್ಲಿ ಕನ್ನಡಿಗ

ಹೊರನಾಡಿನ ಕನ್ನಡಿಗರು ಎಚ್ಚತ್ತುಕೊಂಡು ಅಲ್ಲಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿ, ಕನ್ನಡದ ಹಿತಕ್ಕೆ ದುಡಿಯುತ್ತಿರುವುದು ಆಶಾದಾಯಕವಾಗಿದೆ. ಭಾರತದ ವಿವಿಧ ಭಾಗಗಳಲ್ಲಿ ಹೊರನಾಡಿನ ಕನ್ನಡಿಗರ ಕೆಲವು ಸಮ್ಮೇಳನಗಳೂ ನಡೆದವು. ಮುಂಬಯಿ ಕನ್ನಡಿಗರ ಒಂದು ಡೈರೆಕ್ಟರಿ ಪ್ರಕಟಿಸುವ ಕೆಲಸವು ಮುಂಬಯಿಯಲ್ಲಿ ನಡೆಯುತ್ತಿದೆ. ಹೊರನಾಡುಗಳಲ್ಲಿ ಮುಖ್ಯವಾಗಿ ಆಗಬೇಕಾದುದು ಕನ್ನಡ ಶಾಲೆಗಳ ಸ್ಥಾಪನೆ. ಹೊರನಾಡುಗಳಲ್ಲಿರುವ ಕನ್ನಡ ಮಕ್ಕಳು ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದರೂ ಅವರಿಗೆ ಬರೆಯುವುದಕ್ಕೆ ಓದುವುದಕ್ಕೆ ಬಾರದು. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ಪೀಳಿಗೆಗೆ ಕನ್ನಡದ ಸಂಪರ್ಕವೇ ಇಲ್ಲವಾಗುತ್ತದೆ. ರಾಜ್ಯಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇಂಥ ಸಂಘ ಸಂಸ್ಥೆಗಳ ನಿಕಟ ಸಂಬಂಧವನ್ನಿಟ್ಟುಕೊಂಡು, ಅವರಿಗೆ ಕಾಲೋಚಿತ ಸಲಹೆ, ಸಹಾಯಗಳನ್ನು ನೀಡಬೇಕು.

Tag: Kannada Sahitya Sammelana 42, Ana. Krishnarao, A. N. Krishna Rao, Aa.Na. Krishnarao

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)