ಸಾಹಿತ್ಯ ಸಮ್ಮೇಳನ-೭೩ : ಶಿವಮೊಗ್ಗ
ಡಿಸೆಂಬರ್ ೨00೬

ಅಧ್ಯಕ್ಷತೆ: ಕೆ.ಎಸ್. ನಿಸಾರ್ ಅಹಮದ್

೭೩ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಕೆ.ಎಸ್. ನಿಸಾರ್ ಅಹಮದ್

ನಿತ್ಯೋತ್ಸವ ಕವಿಯಾಗಿ ಪ್ರಸಿದ್ಧರಾದ ಕೆ.ಎಸ್. ನಿಸಾರ್ ಅಹಮದ್ ಅವರು ಮೈಸೂರು ಸರಕಾರದಲ್ಲಿ ರೆವೆನ್ಯೂ ಅಧಿಕಾರಿಯಾಗಿದ್ದ ಕೆ.ಎಸ್. ಹೈದರ್ ಮತ್ತು ಗೃಹ ವಿಜ್ಞಾನ ಪದವೀಧರೆ ಹಮೀದಾ ಬೇಗಂ ದಂಪತಿಗಳ ಪುತ್ರರು. ಇವರು ಜನಿಸಿದ್ದು ೫-೨-೧೯೩೬ರಂದು. ಬೆಂಗಳೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು, ಹೊಸಕೋಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿಗಳಿಸಿದ ಇವರು ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದರು.

ಮೈಸೂರು ಸರಕಾರ ಭೂವಿಜ್ಞಾನ ಇಲಾಖೆಯಲ್ಲಿ ಒಂದಿಷ್ಟು ಕಾಲ ಸೇವೆ ಸಲ್ಲಿಸಿದರು. ಅನಂತರ ಕಾಲೇಜು ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ೧೯೯೪ರಲ್ಲಿ ನಿವೃತ್ತರಾದರು.

೧೯೮೪-೮೭ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದರು. ೧೯೭೮ರಲ್ಲಿ ಕನ್ನಡದ ಪ್ರಥಮ ಧ್ವನಿಸುರುಳಿಯಾಗಿ ಅವರ ನಿತ್ಯೋತ್ಸವ ಬಿಡುಗಡೆ ಆಯಿತು.

ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಗೊರೂರು ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹೆಜ್ಚೆಗುರುತು ಕೃತಿಗೆ ಸೋವಿಯಟ್ ಲ್ಯಾಂಡ್ ಪ್ರಶಸ್ತಿ ಇತ್ಯಾದಿ ಹತ್ತಾರು ಪ್ರಶಸ್ತಿಗಳು ಲಭ್ಯವಾಗಿವೆ.

ಕವಿತೆ, ವಿಮರ್ಶೆ, ಅನುವಾದದ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಇವರ ಮುಖ್ಯಕೃತಿಗಳು ಹೀಗಿವೆ; ಮನಸು ಗಾಂಧಿಬಜಾರು, ನಿತ್ಯೋತ್ಸವ, ನವೋಲ್ಲಾಸ, ಸಮಗ್ರ ಭಾವಗೀತೆಗಳು, ಅಚ್ಚುಮೆಚ್ಚು, ಒಥೆಲೊ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಂ, ಬರೀ ಮರ್ಯಾದಸ್ಥರೇ, ಹಿರಿಯರ ಹರಸಿದ ಹೆದ್ದಾರಿ, ಇದು ಬರಿ ಬೆಡಗಲ್ಲೋ ಅಣ್ಣ ಇತ್ಯಾದಿ.

ಕನ್ನಡ ಸಾಹಿತ್ಯ ಸಮ್ಮೇಳನ೭೩

ಅಧ್ಯಕ್ಷರು: ಕೆ.ಎಸ್. ನಿಸಾರ್ ಅಹಮದ್

ದಿನಾಂಕ ೨0, ೨೧, ೨೨, ೨೩ ಡಿಸೆಂಬರ್ ೨00

ಸ್ಥಳ : ಶಿವಮೊಗ್ಗ

(00೫ರಲ್ಲಿ ಸಮ್ಮೇಳನ ನಡೆಯಲಿಲ್ಲ)

 

ಪ್ರಸ್ತುತ ಅಪ್ರಸ್ತುತ ಸಂಗತಿಗಳು

ಕನ್ನಡ ನಾಡು ನುಡಿಗಳ ಹಲವು ದಶಕಗಳ ಸಮಸ್ಯೆಗಳಾಗಲಿ, ಅವುಗಳಿಗೆ ಹಿಂದಿನ ಸಮ್ಮೇಳಾನಧ್ಯಕ್ಷರುಗಳು ಸೂಚಿಸಿರುವ ಕೆಲವೊಂದು ಪರಿಹಾರೋಪಾಯಗಳಾಗಲಿ ಪ್ರಸ್ತುತವೆನ್ನಿಸುವಂತಹವು. ಬಹುಃಶ ಭವಿಷ್ಯದಲ್ಲೂ  ಆದೇಯವಾಗುವಂತಹವು. ಅಂದಿನ ಕೆಲವು ಆಶಯ, ಆಶೋತ್ತರಗಳು ನೆರವೇರಿ ಇವೊತ್ತಿಗೆ ಅಗತ್ಯವಲ್ಲ ಎನ್ನಿಸುವ ಬಗೆಯವು. ಉದಾಹರಣೆಗೆ, ಕರ್ನಾಟಕ ಏಕೀಕರಣದ ಚಳವಳಿ ಮತ್ತು ಅದರ ಕೈ ಹಿಡಿದೇ ಸಾಗಿ ಬಂದ ರಾಷ್ಟ್ರ್ರ ವಿಮೋಚನೆಯ ಸಂಗ್ರಾಮ. ಹೀಗಿದ್ದರೂ, ಅವುಗಳ ಬಗೆಗಿನ ಆ ಕಾಲದ ಹಿರಿಯರ ಉತ್ಕಟವಾದ ಶ್ರದ್ಧಾಸಕ್ತಿ, ಪ್ರಾಮಾಣಿಕವಾದ ಕಾರ್ಯೋನ್ಮುಖ ನಿಷ್ಠೆ, ಸಾಂಘಿಕ ಸಾಹಸೋತ್ಸಾಹ ಹಾಗೂ ನಿಸ್ವಾರ್ಥಪರ ತ್ಯಾಗ ಜೀವನದ ಕೃತಾರ್ಥತೆ ತಕ್ಕಮಟ್ಟಿಗಾದರೂ ಇಂದಿನವರಿಗೆ ಬೋಧಪ್ರದವಾಗಬೇಕು. ಹುದ್ದೆ, ಮುದ್ದೆ, ನಿದ್ದೆಗಳ ನಿರಂತರ ಸೆಣಸಾಟ ಮಾತ್ರವೇ ಬದುಕಿನ ಉದ್ದೇಶವೆಂದು ಬಗೆದಿರುವ ಅಸಂಖ್ಯ ಸಾಮಾಜಿಕರಿಗೆ ಹಿಂದಿನವರ ಧ್ಯೇಯಾದರ್ಶ, ದೇಶ ಭಾಷೆಗಳ ಬಗೆಗಿನ ಸ್ವಹಿತವಿದೂರವಾದ ಕೃತಜ್ಞತಾಪೂರ್ವಕ ಸೇವಾತ್ಪರ ಮನದಟ್ಟಾಗಬೇಕು.

ಹಿಂದಿನ ಸಮ್ಮೇಳನಗಳ ಮೌಲಿಕ ಸಂಗತಿಗಳು

ಇಂದಿನ ಜೀವನ ಮೌಲ್ಯ ಪೌರರನ್ನು ಸಾವಕಾಶವಾಗಿ ಅಲೋಚಿಸುವುದಕ್ಕಾಗಲಿ, ಸಂಯಮ ಮತ್ತು ಯುಕ್ತಾಯುಕ್ತತೆಯನ್ನು ವಿವೇಚಿಸಿ ಕಾರ್ಯೋನ್ಮುಖವಾಗುವುದಕ್ಕಾಗಲಿ ಇಂಬು ನೀಡುವಂಥದ್ದಲ್ಲ. ಅನವರತ ಧಾವಂತಿಸಿರುವ ನಮ್ಮ ಇವೊತ್ತಿನ ಬಾಳ್ವೆಗೆ ಮೇಲ್ಮೆ, ಮರ್ಯಾದೆಗಳನ್ನು, ಘನತೆ ಕೃತಕೃತ್ಯತೆಗಳನ್ನು ಕೂಡಿಸುವ ಸನ್ಮೌಲ್ಯಗಳ ಬಗೆಗಿನ ತಿಳಿವಳಿಕೆಯನ್ನು ಪಡೆಯಲು ಹಿಂದಿನ ಅಧ್ಯಕ್ಷರ ಕೆಲವೊಂದು ಅಭಿಪ್ರಾಯಗಳು ಸಾಕಾಗದೆನ್ನಿಸಬಹುದು. ಹಾಗೆಂದು ಅವುಗಳನ್ನು ಅವಗಣಿಸುವಂತಿಲ್ಲ. ಚಾರಿತ್ರಿಕ ದಾಖಲೆಗಳಾಗಿ ಅವು ತಮ್ಮ ಮಹತ್ವವನ್ನು ಉಳಿಸಿಕೊಳ್ಳುತ್ತವೆ. ಈ ದೃಷ್ಟಿಯಿಂದ ಹಿಂದಿನ ಸಮ್ಮೇಳನಾಧ್ಯಕ್ಷರ ಸಕಾಲಿಕ ಮತ್ತು ಸಾರ್ವಕಾಲಿಕ ಸಂಗತಿಗಳ ಬಗೆಗಿನ ಕೆಲವು ವಿಚಾರಗಳು ಮನನಯೋಗ್ಯವಾಗಿವೆ. ಕನ್ನಡಿಗನ ಪಾಲಿಗೆ ಉಪಯುಕ್ತವಾಗಿವೆ.

ಸಕಾಲದಲ್ಲಿ ಆಯ್ಕೆ

ನಾಲ್ಕು ವರ್ಷಗಳ ಹಿಂದೆ ನನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಆಯ್ಕೆ ಮಾಡಲು ಸಂಕಲ್ಪಿಸಿದ್ದ ಸಂಬಂಧಪಟ್ಟ ಮಹನೀಯರು ಕೆಲವೊಂದು ಕಾರಣಗಳಿಂದಾಗಿ ಕೊನೆಯ ಗಳಿಗೆಯಲ್ಲಿ ನನ್ನ ಹೆಸರನ್ನು ಕೈಬಿಟ್ಟರಂತೆ. ಆ  ಸುಯೋಗ ಈ ವರ್ಷ ನನಗೆ ಒದಗಿದೆ. “ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು” ಎಂಬ ಒಳ್ನುಡಿಯಂತೆ ಈಗ ಆ ಅಗ್ರಾಸನ ಲಭಿಸಿರುವುದು ಹಲವು ರೀತಿಗಳಿಂದ ಗಮನಾರ್ಹವಾಗಿದೆ. ನನಗೆ ಹೆಚ್ಚಿನ ಹಿಗ್ಗು ಮತ್ತು ಸಮಾಧಾನವನ್ನು ಕೊಟ್ಟಿದೆ. ನಾಡಿನ ಹುಟ್ಟುಹಬ್ಬದ ಹೊನ್ನೊಸಗೆಯನ್ನು ನಮ್ಮ ಸರ್ಕಾರ ಮತ್ತು ಕರ್ನಾಟಕದ ವಿವಿಧ ಊರು, ಪಟ್ಟಣಗಳ ಕನ್ನಡ ಸಂಘ ಸಂಸ್ಥೆಗಳು, ಹೊರಗಿರುವ ನಮ್ಮ ಭಾಷಾ ಬಂಧುಗಳು ಸಂಭ್ರಮಯುತವಾಗಿ ಆಚರಿಸುತ್ತಿರುವ ಈ ಅಪೂರ್ವ, ವಿಶಿಷ್ಟ ಸಂವತ್ಸರದಲ್ಲಿ ನನ್ನ ಆಯ್ಕೆಯಾಗಿರುವುದು ಹೆಮ್ಮೆಯನ್ನು ಹೆಚ್ಚಿಸಿದೆ.

Tag: Kannada Sahitya Sammelana 73, K.S. Nisar Ahmed

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)