ಸಾಹಿತ್ಯ ಸಮ್ಮೇಳನ-೭೭ : ಬೆಂಗಳೂರು
ಫೆಬ್ರವರಿ ೨0೧೧

ಅಧ್ಯಕ್ಷತೆ: ಜಿ. ವೆಂಕಟಸುಬ್ಬಯ್ಯ

೭೭ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಪ್ರೊ. ಜಿ. ವೆಂಕಟಸುಬ್ಬಯ್ಯ

ಶತಾಯುಷಿಯಾದ ಕನ್ನಡ ವಿದ್ವಾಂಸ ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಶ್ರೀರಂಗಪಟ್ಟಣದ ಗಂಜಾಂಗ್ರಾಮಕ್ಕೆ ಸೇರಿದವರು. ಶಿಕ್ಷಕರೂ ವಿದ್ವಾಂಸರೂ ಆದ ಗಂಜಾಂ ತಿಮ್ಮಣ್ಣಯ್ಯ ಮತ್ತು ತಾಯಿ ಸುಬ್ಬಮ್ಮ ದಂಪತಿಗಳ ಜ್ಯೇಷ್ಠಪುತ್ರರಾಗಿ ೨೩-೮-೧೯೧೩ರಂದು ಜನಿಸಿದರು. ೧೯೨೭ ರಿಂದ ೧೯೩0ರ ವರೆಗೆ ಪ್ರೌಢಶಾಲೆ ಶಿಕ್ಷಣವನ್ನು ಮಧುಗಿರಿಯಲ್ಲಿ ಮುಗಿಸಿ ೧೯೩೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನೂ ೧೯೩೮ರಲ್ಲಿ ಬಿ.ಟಿ. ಪದವಿಯನ್ನೂ ಪಡೆದರು.

೧೯೩೮ ರಿಂದ ೧೯೭೨ ರವರೆಗೆ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ೧೯೭೩ರಲ್ಲಿ ನಿವೃತ್ತರಾದರು.

ಇವರು ೧೯೫೪-೫೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದರು. ೧೯೬೪-೬೯ರಲ್ಲಿ ಪರಿಷತ್ತಿನ ಅಧ್ಯಕ್ಷರಾದರು, ೧೯೭೩ ರಿಂದ ೧೯೯೨ವರೆಗೆ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಶ್ರಮಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಅಖಿಲ ಭಾರತ ನಿಘಂಟುಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ(೧೯೮೭), ಮಾಸ್ತಿ ಪ್ರಶಸ್ತಿ(೨00೫) ಸೇಡಿಯಾಪು ಪ್ರಶಸ್ತಿ(೧೯೯೪), ನಾಡೋಜ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಅಧ್ಯಕ್ಷಗೌರವ, ಗೋಕಾಕ್ ಪ್ರಶಸ್ತಿ, ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ ಇತ್ಯಾದಿ ಸಂದಿವೆ.

ನಿಘಂಟು ಸಂಪಾದನೆ, ಸಾಹಿತ್ಯ ಚರಿತ್ರೆ ಗ್ರಂಥ ರಚನೆಯಲ್ಲಿ ತಜ್ಞರಾದ ಇವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ:

ನಯಸೇನ, ಅನುಕಲ್ಪನೆ, ಕಬೀರ್, ಸರ್ವಜ್ಞ, ಕವಿಜನ್ನ, ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, ಕನ್ನಡವನ್ನು ಉಳಿಸಿ ಬೆಳಸಿದವರು, ಎರಲು ಶಬ್ದಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕ್ಲಿಷ್ಟಪದಕೋಶ, ಇಗೋ ಕನ್ನಡ ಇತ್ಯಾದಿ.

ಕನ್ನಡ ಸಾಹಿತ್ಯ ಸಮ್ಮೇಳನ೭೭

ಅಧ್ಯಕ್ಷರು, ಜಿ. ವೆಂಕಟಸುಬ್ಬಯ್ಯ

ದಿನಾಂಕ ೪, , ಫೆಬ್ರವರಿ ೨0೧೧

ಸ್ಥಳ : ಬೆಂಗಳೂರು

 

ಪರಿಷತ್ತು ಎಚ್ಚರಿಕೆ ವಹಿಸಬೇಕಾದ ಸಂಗತಿ

ಕನ್ನಡದಲ್ಲಿ ಸೊಗಸಾದ ಶಬ್ದಗಳಿರುವಾಗ ಅವುಗಳನ್ನೇ ತಳ್ಳಿ ಕನ್ನಡಕ್ಕೆ ಬರಲು ಪ್ರಯತ್ನ ಪಡುತ್ತಿರುವ ಶಬ್ದಗಳು ಉದಾಹರಣೆ: ಚಿಲ್ಲೀಸ್, ರಾಡೀಶ್, ಬೀನ್ಸ್, ಕುಕುಂಬರ್ರು, ಕ್ಯಾಪ್ಸಿಕಮ್, ನೈಫು, ಆಯಿಲ್ಲು, ಬಟರ್ರು, ಪೌಡರು, ಗ್ರೈಂಡರ್ರು ಇತ್ಯಾದಿ ಎಲ್ಲಾ ಅಡಿಗೆ ಮನೆಗೆ ನುಗ್ಗಿಬಿಟ್ಟಿವೆ. ಇದಕ್ಕೆ ಕಾರಣ ದೂರದರ್ಶನದಲ್ಲಿ ‘ಹೊಸರುಚಿಯ’ ಪ್ರದರ್ಶನ ಮಾಡಲು ಕನ್ನಡ ಮಹಿಳಾ ಮಣಿಗಳ ಸಂಭಾಷಣೆಯ ಪರಿಣಾಮ. ಎಫ್.ಎಮ್. ರೇಡಿಯೋ ದೂರದರ್ಶನದ ಅನೇಕ ವಾಹಿನಿಗಳ ಪ್ರಭಾವ ವರ್ತಮಾನ ಪತ್ರಿಕೆಗಳಲ್ಲಿಯೂ ದೂರದರ್ಶನದಲ್ಲಿಯೂ ಆಕಾಶವಾಣಿಯಲ್ಲಿಯೂ ಪ್ರಚಾರವಾಗುವ ಇಂಥ ಪ್ರಯೋಗಗಳನ್ನು ನಿಲ್ಲಿಸಿ ನಮ್ಮಲ್ಲಿ ಪ್ರಚಾರದಲ್ಲಿರುವ ಕನ್ನಡ ಶಬ್ದಗಳನ್ನು ಉಪಯೋಗಿಸುವಂತೆ ಆಯಾ ಕೇಂದ್ರಗಳ ಅಧಿಕಾರಿಗಳು ನಿರ್ದೇಶಿಸಬೇಕು.  ಯಾವ ಶಬ್ದ ಬೇಕಾದರೂ ನಿಧಾನವಾಗಿ ತಾನೇ ತಾನಾಗಿ ಬರಲಿ. ಆದರೆ ನಾವೇ ಅವುಗಳನ್ನು ಅನಾವಶ್ಯಕವಾಗಿ ಅನುವು ಮಾಡಿಕೊಳ್ಳಬಾರದು.  ಹಾಗೆ ಮಾಡಿದರೆ ನಮ್ಮ ಸ್ವಂತ ಶಬ್ದಸಂಪತ್ತು ಮಾಯವಾಗಿ ಬಿಡುತ್ತದೆ. ನಾವು ಅವುಗಳಿಲ್ಲದೆ ಕನ್ನಡ ಶಬ್ದದರಿದ್ರವಾಗಿಬಿಡುತ್ತವೆ. ಸಾಮಾಜಿಕ ಕಾರ್ಯಕರ್ತರು, ವಾರ್ತಾಪತ್ರಿಕೆಗಳ, ಕನ್ನಡ ಚಳುವಳಿಯ ನಾಯಕರು ಇವರೆಲ್ಲರಿಗೂ ಈ ಬಗ್ಗೆ ತಿಳುವಳಿಕೆಯನ್ನು ನೀಡಿರುವ ಒಂದು ಕನ್ನಡ ಅಂದೋಳನ ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತು ಅದರ ಜಿಲ್ಲಾ ಮತ್ತು ತಾಲ್ಲೂಕು ಅಂಗಸಂಸ್ಥೆಗಳು, ಮಹಿಳೆಯರ ಕ್ಲಬ್ಬುಗಳು, ಬೆಳಗ್ಗೆ ವಾಯುವಿಹಾರಕ್ಕೆಂದು ಹೋಗುವ ಹಿರಿಯರ ತಂಡ ಇವರೆಲ್ಲಾ ಈ ಬಗ್ಗೆ ಎಚ್ಚರವಹಿಸಬೇಕು.

ನಿಘಂಟು ವಿಚಾರ

ಎಲ್ಲ ಭಾಷೆಗಳಲ್ಲಿಯೂ ಹಳೆಯ ಶಬ್ದಗಳು ಕೆಲವು ಮಾಯವಾಗುತ್ತವೆ. ಹೊಸ ಶಬ್ದಗಳು ಸೇರಿ ಬಿಡುತ್ತವೆ.  ಶಬ್ದಗಳ ಅರ್ಥವೂ ಬೇರೆಯಾಗಿ ಬಿಡುತ್ತವೆ.  ಕೆಲವು ಅರ್ಥವಿಸ್ತಾರವನ್ನು ಪಡೆಯುತ್ತವೆ.  ಕೆಲವಕ್ಕೆ ಅರ್ಥ ಸಂಕುಚಿತವಾಗುತ್ತವೆ. ಇದನ್ನು ನಿಘಂಟುಕಾರ ಕಣ್ಣಿನಲ್ಲಿ ಕಣ್ಣಿಟ್ಟು ದಾಖಲಿಸುತ್ತ ಹೋಗಬೇಕು. ಅಲ್ಲದೆ ಕನ್ನಡದಲ್ಲಿಯೂ ಭಾರತದ ಇತರ ಭಾಷೆಗಳಲ್ಲಿಯೂ ಆದಾನ ಪ್ರದಾನಕಾರ್ಯಗಳು ಈಗ ನಡೆಯುತ್ತಿವೆ. ಈ ಕೆಲಸ ಮುಂದುವರಿಯಬೇಕಾದರೆ ದ್ವಿಭಾಷಾ ನಿಘಂಟುಗಳು, ತ್ರಿಭಾಷಾ ನಿಘಂಟುಗಳು ನಿರ್ಮಾಣವಾಗಬೇಕು. ಇದಕ್ಕೆ ಇತರ ಭಾಷಾ ಸಾಹಿತ್ಯ ಸಂಸ್ಥೆಗಳೊಡನೆ ಸಂಬಂಧವನ್ನು ಬೆಳೆಸಬೇಕು. ಇದು ಕನ್ನಡ ನಿಘಂಟು ಕಚೇರಿಗೆ ಸುಲಭವಾದ ಕಾರ್ಯ ಇತರ ಭಾಷೆಗಳಲ್ಲಿ ಇಂಥ ಸೌಲಭ್ಯವಿಲ್ಲ. ನಮ್ಮ ಕಚೇರಿಯಲ್ಲಿ ಸಮರ್ಥರಾದ ಕೆಲವರು ಉಪಸಂಪಾದಕರಿದ್ದರು.  ಈಗ ಅವರನ್ನೆಲ್ಲ ನಿವೃತ್ತರನ್ನಾಗಿಸಲಾಗಿದೆ. ಮತ್ತೆ ಹೊಸ ಕಾರ್ಯಕರ್ತರ  ಪಡೆಯನ್ನು  ತಯಾರು ಮಾಡಬೇಕು. ಏನೇ ಆದರೂ ನಿಘಂಟು ಕಚೇರಿಯನ್ನು, ಕೆಲಸವನ್ನು ಸಾಹಿತ್ಯ ಪರಿಷತ್ತು ಕೂಡಲೇ ಪುನರಾರಂಭ ಮಾಡಬೇಕು.  ಎಂದೂ ಈ ಕಚೇರಿಯನ್ನು ಮುಚ್ಚಬಾರದು.

ಈಗಲೂ ಪರಿಷತ್ತಿನ ಇಂಥ ಕಾರ್ಯವನ್ನು ಪ್ರತಿವರ್ಷವೂ ಮಾಡಿದರೆ ಒಂದು ದಶಕದಲ್ಲಿ ನಮ್ಮಲ್ಲಿಯೇ ಹತ್ತು ಭಾಷೆಗಳ ಪ್ರವೀಣರು ತಯಾರಾಗುತ್ತಾರೆ. ಈಗ ಪರಿಷತ್ತು ಸರಕಾರದ ಸಹಾಯದ ದೆಸೆಯಿಂದಲೇ ಆರ್ಥಿಕವಾಗಿ ಗಟ್ಟಿಯಾಗಿ ಬೆಳೆದಿದೆ. ಆದ್ದರಿಂದ ಅದು ಗಟ್ಟಿಯಾದ ಕಾರ್ಯವನ್ನು ಮಾಡಬೇಕು.

೧. ಪರಿಷತ್ತು ಪ್ರತಿವರ್ಷವೂ ಬೆಂಗಳೂರಿನಲ್ಲಿ ಗಡಿನಾಡ-ಹೊರನಾಡ ಕನ್ನಡಿಗ ಒಂದು ಸಮಾವೇಶವನ್ನು ನಡೆಸಬೇಕು. ನಮ್ಮ ಗಡಿನಾಡಿನ ದ್ವಿಭಾಷಾ ವಲಯಗಳಲ್ಲಿ ನೆರವೇರುವ ಸಾಹಿತ್ಯ ಕಾರ್ಯಗಳು ಮತ್ತು ಅಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆಗಳೇನು ಎಂಬುದನ್ನು ನಾವು ತಿಳಿದುಕೊಳ್ಳುತ್ತಿರಬೇಕು. ಪುಣೆ, ಮುಂಬೈ, ನಾಗಪುರ, ಕೋಲ್ಕತ್ತ, ಚೆನ್ನೈ ಮತ್ತು ತಿರುವನಂತಪುರಗಳಲ್ಲಿ ತುಂಬ ಜನ ಕನ್ನಡಿಗರು ನೆಲೆಸಿದ್ದಾರೆ. ಅವರ ಸಂಪರ್ಕವನ್ನು ನಾವು ಸದಾ ಪಡೆದಿದ್ದರೆ ನೆರೆನಾಡುಗಳ ಎಲ್ಲ ವಿದ್ಯಮಾನಗಳನ್ನೂ ಅರಿಯುತ್ತಿರಬಹುದು. ಆದರಿಂದ ನಮಗೆ ಸಹಾಯಕವಾದ ಅನೇಕ ವಿವರಗಳು ದೊರಕುತ್ತವೆ. ಅಂತಹ ವಿವರಗಳಲ್ಲಿ ಕೆಲವು ನಮಗೆ ಅಪಾಯಕಾರಿಯೂ ಆಗಿರಬಹುದು. ಆಗ ಸೂಕ್ತ ಸಮಯದಲ್ಲಿ ನಾವು ಎಚ್ಚೆತ್ತು ಕ್ರಮ ಜರುಗಿಸಲು ಅನುಕೂಲವಾಗಿರುತ್ತದೆ. ನನ್ನ ಈ ಸೂಚನೆಯನ್ನು ಒಂದು ದೃಷ್ಟಾಂತದಿಂದ ವಿಶದಪಡಿಸುತ್ತೇನೆ. ಸುಮಾರು ಒಂದು ತಿಂಗಳ ಹಿಂದೆ ಮುಂಬೈ ನಗರದ ಥಾಣೆಯಲ್ಲಿ ಮರಾಠೀ ಸಾಹಿತ್ಯ ಸಮ್ಮೇಳನವು ನೆರವೇರಿತು. ಅದರ ಅಧ್ಯಕ್ಷರಾಗಿ ಉತ್ತಮ ಕಾಂಬ್ಲೆ ಎಂಬ ಲೇಖಕರು ಆಯ್ಕೆಯಾಗಿದ್ದರು. ಮೂಲತಃ ಅವರು ಕನ್ನಡಿಗರು. ಅವರು ಹುಟ್ಟಿದ್ದು, ವಿದ್ಯಾಭ್ಯಾಸವನ್ನು ಪಡೆದಿದ್ದು ಸಿರುಗಪ್ಪೆಯ ಸುತ್ತಮುತ್ತಲಿನಲ್ಲಿ.  ಅವರು ಮಾಡಿದ ಅಧ್ಯಕ್ಷ ಭಾಷಣದಲ್ಲಿ ಮಹಾಜನ್ ವರದಿಯನ್ನು ಉಲ್ಲೇಖಿಸಿ ಮಹಾರಾಷ್ಟ್ರಕ್ಕೆ ಮಹಾ ಅನ್ಯಾಯವಾಗಿದೆ ಎಂಬ ಉದ್ಗಾರವನ್ನು ತೆಗೆದರೆಂದು ವಾರ್ತಾಪತ್ರಿಕೆಗಳಿಂದ ತಿಳಿದುಬರುತ್ತದೆ.  ಬೆಳಗಾಂ ಜಿಲ್ಲೆಯೂ ನಿಪ್ಪಾಣಿ ತಾಲ್ಲೂಕು ಮತ್ತು ಕಾರವಾರ ಜಿಲ್ಲೆಯ ಅನೇಕ ಭಾಗಗಳೂ ಮಹಾರಾಷ್ಟ್ರಕ್ಕೆ ಸೇರಬೇಕು. ಇದಕ್ಕೆ ಬೇಕಾದ ಘೋರ ಹೋರಾಟವನ್ನು ಮಾಡಿಯೇ ತೀರಬೇಕು ಎಂಬ ಕರೆಯನ್ನು ಮರಾಠೀ ಜನರಿಗೆ ಕರೆಕೊಟ್ಟರು.  ಕನ್ನಡದ ಸರಕಾರವು ಮಹಾರಾಷ್ಟ್ರೀಯರಿಗೆ ಕಿರುಕುಳ ಕೊಡುತ್ತಿದೆ ಎಂದೂ ಮರಾಠೀ ಸಂಸ್ಕೃತಿಯನ್ನೇ ಮಟ್ಟಹಾಕಲು ಸಿನಿಮಾ ಮತ್ತು ನಾಟಕಗಳನ್ನು  ಉಪಯೋಗಿಸುತ್ತಿದೆ ಎಂದೂ ಕನ್ನಡ ಲೇಖಕರು ಮರಾಠಿಗರಿಗೆ ಅಗೌರವದಿಂದ ನಡೆದುಕೊಳ್ಳುತ್ತಾರೆ ಎಂದೂ  ಕರ್ನಾಟಕ ಸರಕಾರಕ್ಕೂ ಕನ್ನಡ ಜನರಿಗೂ ತಕ್ಕ ಬುದ್ಧಿಯನ್ನು ಕಲಿಸಬೇಕೆಂದು ವಿರಾವೇಶದಿಂದ ಮಾತನಾಡಿದರಂತೆ! ಕನ್ನಡ ದೇಶದಲ್ಲಿರುವ ಮರಾಠಿಗರು ಇಂಥ ಸುಳ್ಳು ಹೇಳಿಕೆಗಳನ್ನು ವಿರೋಧಿಸಬೇಕು. ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ.  ಅದನ್ನು ನಮ್ಮ ನಾಡಿಗೆ ಬರುವವರೆಲ್ಲರೂ ಕಲಿಯಬೇಕು. ಇದು ಅನಿವಾರ್ಯವೆಂಬ ಅಂಶವನ್ನು ನಾವು ಅವರ ಅನುಭವಕ್ಕೆ ತರಬೇಕು.

 

ಪತ್ರಿಕೆ ಕನ್ನಡನಾಡ ವಿಚಾರ

ಪರಿಷತ್ತಿನ ಸದಸ್ಯರ ಸಂಖ್ಯೆ ಈಗ ಒಂದು ಲಕ್ಷದ ಹದಿನೆಂಟು ಸಾವಿರದ ನಾನ್ನೂರನ್ನು ಮುಟ್ಟುತ್ತಿದೆ. ಇನ್ನೂ ಹೆಚ್ಚಬಹುದು.  ಈ ಎಲ್ಲ ಸದಸ್ಯರಿಗೂ ಪರಿಷತ್ತಿನಿಂದ ಒಂದೇ ಒಂದು ಪತ್ರವು ಹೋಗಬೇಕಾದರೂ ಸುಮಾರು ಆರು ಲಕ್ಷರೂಪಾಯಿಗಳು ಖರ್ಚಾಗುತ್ತದೆ.  ಇಂಥ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಕಳಿಸಬೇಕಾದರೂ ತೆರೆದ ಅಂಚೆಗಾದರೂ ಐದು ಲಕ್ಷ ರೂಪಾಯಿಗಳು ವ್ಯಯವಾಗುತ್ತದೆ. ಕನ್ನಡನುಡಿ ಪತ್ರಿಕೆಯನ್ನು ಕಳಿಸಬೇಕಾದರೂ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿಗಳಾಗುತ್ತವೆ.  ಈಗ ಸದಸ್ಯತ್ವವನ್ನು ಎರಡು ಭಾಗ ಮಾಡಿ ಒಂದು ತಿಂಗಳ ಕನ್ನಡನುಡಿಯನ್ನು ಮೊದಲ ಭಾಗಕ್ಕೆ ಎರಡನೆಯ ತಿಂಗಳ ಕನ್ನಡನುಡಿಯನ್ನು ಮತ್ತೊಂದು ಭಾಗಕ್ಕೆ ಕಳಿಸಲಾಗುತ್ತಿವೆ ಎಂದು ಸಂಪಾದಕರು ನನಗೆ ತಿಳಿಸಿದರು. ನಿಜವಾಗಿ ಕನ್ನಡನುಡಿ ಪತ್ರಿಕೆಯನ್ನು ಯಾರು ನಿರೀಕ್ಷಿಸುತ್ತಾರೆಯೋ  ಅದನ್ನು ಪರಿಷತ್ತಿಗೆ ತಿಳಿಸಬೇಕೆಂದು ಸದಸ್ಯರನ್ನು ಕೇಳಿಕೊಂಡರೆ ಆಗ ಯಾರು ಉತ್ತರ ಕೊಡುವುದಿಲ್ಲವೋ ಅಂಥವರಿಗೆ ಕಳಿಸದೇ ಇರಬಹುದು. ಈ ಬಗ್ಗೆ ಜಿಲ್ಲೆಯ ಪ್ರತಿನಿಧಿಯಾಗಿರುವ ಪರಿಷತ್ತಿನ ಕಾರ್ಯಸಮಿತಿಯ ಸದಸ್ಯರು ತಮ್ಮ ಜಿಲ್ಲೆಗಳಿಂದ ಇಂಥ ಅಂಕಿ ಅಂಶಗಳನ್ನು ಪ್ರಾಮಾಣಿಕವಾಗಿ ಕಂಡುಹಿಡಿದರೆ ಒಂದು ಉತ್ತಮವಾದ ಉಳಿತಾಯದ ಕೆಲಸವಾಗುತ್ತದೆ. ನಮ್ಮ ಎಲ್ಲ ಸದಸ್ಯರೂ ಪರಿಷತ್ತಿನ ಅಭಿಮಾನಿಗಳು ನಿಜ. ಆದರೆ ಅವರ ವೃತ್ತಿಗಳ ಬಾಹುಳ್ಯದಲ್ಲಿ ಅವರಿಗೆ ಕನ್ನಡನುಡಿಯನ್ನು ಓದುವುದಕ್ಕೆ ಅವಕಾಶವೇ ಸಿಗದ ಎಷ್ಟೋ ಜನರಿರುತ್ತಾರೆ ಇದನ್ನು ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ ಗಣಕಯಂತ್ರದ ಸೌಲಭ್ಯ ಇರುವ ಸದಸ್ಯರಿಗೆ ಇ-ಅಂಕೆಯ ಮೂಲಕ ಕನ್ನಡನುಡಿಯನ್ನು ಕಳುಹಿಸಿ ಅಂಚೆವೆಚ್ಚವನ್ನು ಉಳಿಸಬಹುದು.

ಪರಿಷತ್ತಿನ ಚುನಾವಣೆ

ಪರಿಷತ್ತಿನ ಅಧ್ಯಕ್ಷ ಪದವಿಗೆ ಚುನಾವಣೆಗೆ ನಿಲ್ಲುವವರು ಇನ್ನು ಮುಂದೆ ರಾಜಕೀಯ ಚುನಾವಣೆಗೆ ಖರ್ಚು ಮಾಡುವಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಸಾಹಿತ್ಯದ ಕ್ಷೇತ್ರದಲ್ಲಿ ಇಂಥವರಾದರೂ ಇಲ್ಲವೆಂದು ನನ್ನ ಭಾವನೆ. ಆದ್ದರಿಂದ ಇಂಗ್ಲಿಷಿನಲ್ಲಿ Electroal Collegel ಎಂದು ಕರೆಯುವ ಪದ್ದತಿ ಇದೆ. ಸಂಸ್ಥೆಗಳಿಗೆ ಈ ಬಗೆಯ ಏರ್ಪಾಟು ಮಾದರಿ. ಅದರ ಪ್ರಕಾರ ಎಲ್ಲ ಸದಸ್ಯರು ಎಷ್ಟೇ ಜನರಿರಲಿ ಚುನಾವಣೆಗೆ ನಿಲ್ಲುವ ಮತ್ತು ಮತವನ್ನು ಚಲಾಯಿಸುವ ಒಂದು ಸದಸ್ಯ ವರ್ಗವನ್ನು ರೂಪಿಸಿಕೊಳ್ಳುತ್ತಾರೆ. ಹಾಗೆ ನಮ್ಮಲ್ಲಿ ಸಾಹಿತಿಗಳಾಗಿರುವ ಸದಸ್ಯರನ್ನೆಲ್ಲ ಕೂಡಿಸಿ ಒಂದು ಮತ ಚಲಾಯಿಸುವ ವರ್ಗವನ್ನು ನಿರ್ಮಿಸುವುದು ಸಾಧ್ಯವೇ ಎಂದು ಪರಿಶೀಲನೆ ಮಾಡಬೇಕೆಂದು ಸೂಚಿಸುತ್ತೇನೆ. ಹೀಗೆ ಮಾಡಿದರೆ ಪರಿಷತ್ತಿನ ಸಾಹಿತ್ಯ ಕಾರ್ಯಕ್ಕೆ ಬೆಂಬಲ ಹೆಚ್ಚುತ್ತದೆ. ಈಗಿನಂತೆ ಅಧ್ಯಕ್ಷತೆಗೆ ಅರ್ಹರನ್ನು ಆರಿಸಬಹುದು. ಇಲ್ಲದಿದ್ದರೆ ಮುಂದೆ ಪರಿಷತ್ತು ರಾಜಕೀಯ ಸಂಸ್ಥೆಯಾಗಿ ಬಿಡುತ್ತದೆ. ಸಾಹಿತ್ಯಕ್ಕೆ ಇದು ಅಪಾಯ.

ಪರಿಷತ್ತಿನ ಕಾರ್ಯಕ್ರಮಗಳು

ಪರಿಷತ್ತಿನ ಕಾರ್ಯವ್ಯಾಪ್ತಿ ಹೆಚ್ಚಾಗಿದೆ. ಜಿಲ್ಲೆ ತಾಲ್ಲೂಕುಗಳಲ್ಲಿ ಸಾಹಿತ್ಯಕಾರ್ಯ ನೆರವೇರುತ್ತಿವೆ.  ಈ ಬಗೆಯ ಕಾರ್ಯಕ್ರಮಗಳಿಗೆ ಧರ್ಮಸ್ಥಳದಲ್ಲಿ ನಡೆಯುವ ಧರ್ಮ-ಸಾಹಿತ್ಯ ಸಮ್ಮೇಳನಗಳೂ, ಮೂಡುಬಿದಿರೆಯ ನುಡಿಸಿರಿ  ಸಮ್ಮೇಳನಗಳೂ, ವಿರಾಸತ್ಗಳೂ ಮಾದರಿಯಾಗಬೇಕು. ಕೆಲವು ಮಠಗಳು ನಡೆಸುವ ಸಾಹಿತ್ಯ ಕಾರ್ಯಕ್ರಮಗಳನ್ನೂ ಮಾರ್ಗದರ್ಶಿಗಳಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಕೇಂದ್ರ ಪ್ರದೇಶವಾದ ಬೆಂಗಳೂರಿನಲ್ಲಿ ಸಾಹಿತ್ಯ ಕಾರ್ಯ ಕಡಿಮೆಯಾಗಿದೆ. ಈಗ ಕನ್ನಡ ಸಾಹಿತ್ಯದಲ್ಲಿ ವಿಮರ್ಶನ ಕ್ಷೇತ್ರದಲ್ಲಿ ತುಂಬ ಬದಲಾವಣೆ ನಡೆದಿದೆ. ಈಗಿನ ವಿದ್ವಾಂಸರು ನಮ್ಮ ಪ್ರಾಚೀನ ಕವಿಗಳ ಕೃತಿಗಳನ್ನು ಪುನರ್ ವಿಮರ್ಶೆ ಮಾಡುತ್ತಿದ್ದಾರೆ. ಹೊಸ ಅಲೊಚನೆಯಗಳೂ ಹೊರಹೊಮ್ಮುತ್ತಿವೆ. ಈ ದೃಷ್ಟಿಯಿಂದ  ಪರಿಷತ್ತು ಬೆಂಗಳೂರಿನಲ್ಲಿ ಪ್ರತಿವರ್ಷ ಒಬ್ಬ ಪ್ರಾಚೀನ ಕವಿಯ ಬಗ್ಗೆ ಈ ಹೊಸ ಅಲೋಚನೆಗಳ ವಿಮರ್ಶೆಯ ಒಂದು ವಿಚಾರ ಸಂಕೀರ್ಣವನ್ನು ನಡೆಯಿಸಿ ಆ ಸಭೆಯ ಉಪನ್ಯಾಸಗಳನ್ನು ಒಂದು ಪುಸ್ತಕವನ್ನಾಗಿ ಪ್ರಕಟಿಸಬೇಕೆಂದು ನನ್ನ ಮತ್ತೊಂದು ಸೂಚನೆಯನ್ನು ಪರಿಷತ್ತಿನ ಮುಂದೆ ಇಡುತ್ತೇನೆ.

ಹೀಗೆಯೇ ಸಣ್ಣ ಪ್ರಮಾಣದಲ್ಲಿ ಪ್ರತಿವರ್ಷವು ಎರಡು ತಿಂಗಳಿಗೊಮ್ಮೆ ಯುವ ಪ್ರತಿಭೆ,             ಮಕ್ಕಳ ಸಾಹಿತ್ಯ, ಮಹಿಳೆಯರ ಕೃತಿಗಳು, ಒಂದು ವರ್ಷದ ಎಲ್ಲ ಪ್ರಕಾರದ ಕೃತಿಗಳ ವಿಮರ್ಶೆ ಇತ್ಯಾದಿ ಕಾರ್ಯಕ್ರಮವನ್ನು ಇಟ್ಟುಕೊಂಡು ಅಂಥ ಸಭೆಯಲ್ಲಿ ನಡೆಯುವ ಉಪನ್ಯಾಸಗಳನ್ನು ಬರೆಸಿ ಪ್ರಕಟಿಸುವ ಕಾರ್ಯವೂ ಆಗಬೇಕು. ಆಗ ಕೇಂದ್ರದ ಕಾರ್ಯಕ್ರಮಗಳು ಜಿಲ್ಲೆಗಳಿಗೆ ಮಾದರಿಯಾಗುತ್ತವೆ. ವಿಶಿಷ್ಟವಾಗಿ ಈ ವರ್ಷ ನೇಮಿಚಂದ್ರನ ಬಗ್ಗೆ ಒಂದು ವಿಚಾರ ಸಂಕೀರ್ಣವನ್ನು ಏರ್ಪಡಿಸಬೇಕೆಂದು ನನ್ನ ಸೂಚನೆ. ನೇಮಿಚಂದ್ರನು ಅವನ ನೇಮಿಪುರಾಣವನ್ನು ಪೂರೈಸಿದ್ದರೆ ಮಹಾಕವಿಯಾಗಿ ಪರಿಗಣಿತನಾಗುತ್ತಿದ್ದನು. ಆದಾಗದೆ ಅವನು ಮಹಾಕವಿ ಶಬ್ದದಿಂದ ಪರಿಚಿತನಾಗಿದ್ದಾನೆ. ಅವನನ್ನು ಎತ್ತಿ ಹಿಡಿಯುವ ಕಾರ್ಯ ಆಗಬೇಕಾಗಿದೆ. ಹೀಗೆಯೇ ರುದ್ರಭಟ್ಟನ, ಷಡಕ್ಷರಿಯ ಕೃತಿಗಳನ್ನು ಪರಿಶೀಲಿಸಬೇಕಾದೀತು.

ಕನ್ನಡ ಕವಿ ಕಾವ್ಯ ವಿಚಾರ

ಕನ್ನಡನಾಡಿನಲ್ಲಿ ಕನಕ, ಪುರಂದರ ಕೃತಿಗಳನ್ನು ಕುರಿತ ಅನುಚಿತವಾದ ಕೆಲವು ಹೇಳಿಕೆಗಳು ಬರುತ್ತಿವೆ. ಇಬ್ಬರೂ ಶ್ರೇಷ್ಠ ಸಂತರು. ಇವರ ಕೃತಿಗಳ ಬಗ್ಗೆ ಸತ್ಯಾಸತ್ಯತೆಯನ್ನು ವಿದ್ವತ್ತೆಯಿಂದ ಪರಿಶೀಲಿಸಿ ಸಮರ್ಥವಾಗಿ ತೀರ್ಮಾನವನ್ನು ಸ್ಥಾಪಿಸುವ ಕಾರ್ಯವಾಗಬೇಕಾಗಿದೆ. ಇದು ಒಂದು ಮುಖ್ಯ ಕಾರ್ಯ.

ನಾಡಗೀತೆ ವಿಚಾರ

ಕನ್ನಡದ ನಾಡಗೀತೆಯೆಂದು ಒಂದು ಗೀತೆಯನ್ನು ಆಯ್ಕೆಮಾಡಲಾಗಿದೆ. ಕಾರ್ಯಕ್ರಮಗಳಲ್ಲಿ ಅದನ್ನು ಹಾಡುವಾಗ ಸಭೆಯಲ್ಲಿ ಎಲ್ಲರೂ ನಿಲ್ಲಬೇಕೆಂದು ಸೂಚನೆಯಿದೆ. ಈ ಗೀತೆಯನ್ನು ಹಾಡುವವರು ಸಾಲುಗಳನ್ನು ಎರಡು ಮೂರು ಸಲ ಹಾಡಿ ಹೆಚ್ಚು ಕಾಲವನ್ನು ತೆಗೆದುಕೊಳ್ಳುತ್ತಾರೆ. ನಾಡಗೀತೆ ಯಾವಾಗಲೂ ಸಂಗ್ರಹವಾಗಿ ೩ ನಿಮಿಷಕ್ಕಿಂತ ಹೆಚ್ಚಿಲ್ಲದೆ ಇರಬೇಕು. ಈ ಬಗ್ಗೆ ಪರಿಷತ್ತು ಪರಿಶೀಲನೆ ನಡೆಸಿ ಸರಕಾರಕ್ಕೆ ಸಲಹೆಯನ್ನು ನೀಡಬೇಕು.

ಶಾಸ್ತ್ರೀಯ ಭಾಷೆ

‘ಶಾಸ್ತ್ರೀಯ ಭಾಷೆ’  ಎಂಬ ಅಬದ್ಧವಾದ ಶಬ್ದವು ಸಿಂಹಾಸನದ ಮೇಲೆ ಕುಳಿತುಬಿಟ್ಟಿವೆ. ಅದನ್ನು  ಕೆಳಗಿಳಿಸಿ ಅಭಿಜಾತ ಭಾಷೆ  ಅಥವಾ ಸಮೃದ್ಧ ಪ್ರಾಚೀನ ಭಾಷೆ  ಎಂಬ ಶಬ್ದವನ್ನು ಉಪಯೋಗಿಸಬೇಕು. ಕೇಂದ್ರ ಸರಕಾರದಿಂದ ಕನ್ನಡಕ್ಕೆ ಅಭಿಜಾತ ಭಾಷೆಯೆಂಬ ಪಟ್ಟದಕ್ಕಿದೆ. ಆದರೆ ಯಾವ ಧನವೂ ನಮಗೆ ಬಂದಿಲ್ಲ. ಈ ಹಣವು ದೊರಕಿದರೆ ಆ ಹಣವನ್ನು ಹೇಗೆ ಉಪಯೋಗಿಸಬೇಕೆಂಬ ಒಂದು ಸ್ಪಷ್ಟ ಅಲೋಚನೆಯನ್ನು ಪರಿಷತ್ತು ರಚಿಸಬೇಕು. ಅದಕ್ಕಾಗಿ ಒಂದು ವಿದ್ವಾಂಸರ ಸಮಿತಿಯನ್ನು ಸ್ಥಾಪಿಸಬೇಕು. ಇದು ಕೂಡಲೆ ಆಗಬೇಕು. ಯೋಜನೆಯನ್ನು ಕಳಿಸದಿದ್ದರೆ ಅನುದಾನ ಬರುವುದಿಲ್ಲ ಪರಿಷತ್ತು ಈ ವಿಚಾರವಾಗಿ ನಿರ್ಣಾಯಕವಾದ ತೀರ್ಮಾನವನ್ನು ಕೈಗೊಂಡು ತಾನೇ ಮುಂಚೂಣಿಯ ನಾಯಕ ಎಂಬ ಪಟ್ಟ ಮುಟ್ಟಬೇಕು.

ಕನ್ನಡ ಬಾವುಟ ಗ್ರಂಥ

ಬಿ.ಎಂ.ಶ್ರೀಯವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನವೋದಯದ ನೆನಪಿಗಾಗಿ ‘ಕನ್ನಡ ಬಾವುಟ’ ಎಂಬ ಗ್ರಂಥವನ್ನು ಪ್ರಕಟಿಸಿದರು. ಅದು ಸುಮಾರು ಹತ್ತು ಸಲ ಪುರ್ನಮುದ್ರಣವಾಗಿದೆ. ಈಗ ನವೋದಯ ಶತಮಾನದ ನೆನಪಿಗಾಗಿ ಈ ವರ್ಷವೇ ಇಂದಿನ ಅಧ್ಯಕ್ಷರು ಈ ಶತಮಾನದ ಸಾಹಿತ್ಯ ಕೃಷಿಯಲ್ಲಿ ಅತ್ಯುತ್ತಮವೆಂದು ಕಂಡುಬಂದ ನೂರು ಕವನಗಳನ್ನು ಆಯ್ಕೆಮಾಡಿ ಮತ್ತೊಂದು ಕವನ ಸಂಕಲನವನ್ನು ಪ್ರಕಟಿಸಬೇಕು. ಕನ್ನಡ ಭುವನೇಶ್ವರಿಗೆ ಒಂದು ಧ್ವಜ. ಒಂದು ಶ್ವೇತಚ್ಛತ್ರ ಮುಖ್ಯ. ಕನ್ನಡ ಭಾಷೆಗೆ ಒಂದು ಬಾವುಟವನ್ನು ಬಿ.ಎಂ.ಶ್ರೀ ನೀಡಿದರು.  ಇಂದಿನ ಅಧ್ಯಕ್ಷರು ಈಗ ಒಂದು ‘ಬೆಳ್ಗೊಡೆ’ ಯನ್ನು ನೀಡಲಿ ಸೂಚಿಸುತ್ತೇನೆ.

ಯಶಸ್ವಿನಿ ಯೋಜನೆ

ನಮ್ಮ ಸರಕಾರವು ರೈತರ ಸಮಾಜದ ಒಳಿತಿಗಾಗಿ ‘ಯಶಸ್ವಿನಿ’ ಎಂಬ ಒಂದು ಆರೋಗ್ಯ ವಿಮೆಯ ಸಹಾಯ ಯೋಜನೆಯನ್ನು ಸ್ಥಾಪಿಸಿದೆ. ಇದರಿಂದ ಲಕ್ಷಾಂತರ ರೈತರ ಕುಟುಂಬಗಳಿಗೆ ಸಹಾಯವಾಗುತ್ತಿದೆ. ಅನೇಕ ಸಾಹಿತಿಗಳಿಗೂ ಅವರ ಕುಟುಂಬಕ್ಕೂ ಈ ರೀತಿಯ ಆರೋಗ್ಯವಿಮೆಯ ಆವಶ್ಯಕತೆ ಇದೆ.  ಅಂಥವರಿಗೆ ಯಶಸ್ವಿನಿ ರೀತಿಯ ಆರೋಗ್ಯ ವಿಮೆಯ ಒಂದು ಯೋಜನೆಯನ್ನು ಸ್ಥಾಪಿಸಿದರೆ ಈ ವರ್ಗಕ್ಕೆ ತುಂಬ ಉಪಕಾರವಾಗುತ್ತದೆ ಎಂದು ತಿಳಿದಿದ್ದೇನೆ. ಸಾಹಿತ್ಯ ಪರಿಷತ್ತು ಈ ಬಗ್ಗೆ ಸರಕಾರಕ್ಕೆ ಒಂದು ಶಿಫಾರಸ್ಸು ಕಳಿಸಬಹುದು.

ವಿಜ್ಞಾನ ಗ್ರಂಥಗಳ ಪ್ರಕಟಣೆ

ನಮ್ಮ ರಾಷ್ಟ್ರದ ಪ್ರಸಿದ್ಧ ವೈಜ್ಞಾನಿಕ ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳು (NAL-CSR ) ಎಂಬ ಹೆಸರಿನ ದೊಡ್ಡ ಸಂಸ್ಥೆಯು ಕನ್ನಡದಲ್ಲಿ ವೈಜ್ಞಾನಿಕ ಲೇಖನಗಳ ಬೆಳವಣಿಗೆ ಮಾಡಿರುವಷ್ಟು ಸಹಾಯವನ್ನು ಇತರ ಯಾವ ವೈಜ್ಞಾನಿಕ ಸಂಸ್ಥೆಯೂ ಮಾಡಿಲ್ಲ. ಅದು ಕಳೆದ ಮೂವತ್ತೈದು ವರ್ಷಗಳಿಂದ ‘ಕಣಾದ’ ಎಂಬ ಹೆಸರಿನ ವಾರ್ಷಿಕ ವಿಜ್ಞಾನ ಪತ್ರಿಕೆಯನ್ನು ಪ್ರಕಟಮಾಡುತ್ತ ಇದೆ. ‘ಕಣಾದ’ ಎಂಬುದು ನಮ್ಮ ದೇಶದ ಒಬ್ಬ ಪ್ರಾಚಿನವಾದ ಮಹರ್ಷಿಯ ಹೆಸರು. ಅವನು ಅಣುವಿಜ್ಞಾನಕ್ಕೆ ಆದ್ಯಪ್ರವರ್ತಕ.  ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆ ಅಣುತತ್ವವನ್ನು ಪ್ರತಿಪಾದಿಸಿದನು. ಆತನ ಹೆಸರನ್ನು ಆಶ್ರಯಿಸಿ ಈ ಸಂಸ್ಥೆಯಲ್ಲಿ ನಡೆಯುವ ವಿವಿಧ ಸಂಶೋಧನೆಗಳನ್ನು ಕುರಿತ ಕನ್ನಡ ಭಾಷೆಯ ಲೇಖನಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸುತ್ತಾ ಇದೆ. ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಮೂಲವಿಜ್ಞಾನ ಮತ್ತು ವೈಮಾನಿಕ ಕ್ಷೇತ್ರ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಆಸಕ್ತಿಯನ್ನು ಮೂಡಿಸುತ್ತ ಇದೆ. ಪ್ರತಿವರ್ಷ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ಹಂಚುತ್ತಾ ಇದೆ. ಈ ವರ್ಷದ ಪತ್ರಿಕೆ ೩೬ನೆಯ ಸಂಪುಟವನ್ನು ಓದಿ ನನಗೆ ಸಂತೋಷವಾಯಿತು. ಇದು ಇತರ ವಿಜ್ಞಾನ ಸಂಸ್ಥೆಗಳಿಗೆ ಮಾದರಿಯಾದ ಕಾರ್ಯವಾಗಿದೆ. ಆ ಸಂಸ್ಥೆಗಳು ಕನ್ನಡದ ಪರಂಪರೆಯನ್ನು ಹೀಗೆ ವ್ಯಕ್ತಪಡಿಸಬೇಕು. ಈ ಸಂಸ್ಥೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಾರ್ಗದರ್ಶನ ಮಾಡಬೇಕು.

ಸಮೂಹ ಮಾಧ್ಯಮಗಳು

ಕನ್ನಡ ಬೆಳವಣಿಗೆಯ ದೃಷ್ಟಿಯಲ್ಲಿ ನಮ್ಮ ಸಮೂಹ ಮಾಧ್ಯಮಗಳು  ಮಾಡಬಹುದಾದ ಕಾರ್ಯವು ಅಪಾರವಾಗಿದೆ. ದೂರದರ್ಶನದಲ್ಲಿಯೂ ಇತರ ಖಾಸಗಿ ಪ್ರಸಾರ ಸಂಸ್ಥೆಗಳೂ  ಅವುಗಳಲ್ಲಿ ಪ್ರಸಾರಗೊಳ್ಳುವ ಧಾರವಾಹಿಗಳಲ್ಲಿಯೂ ವಾರ್ತಾವಾಚನಗಳಲ್ಲಿಯೂ ಕನ್ನಡದ ಶ್ರೀಮಂತಿಕೆಯನ್ನು ಪ್ರಕಟಿಸಬೇಕು. ಇಂಗ್ಲಿಷ್ ಶಬ್ದಗಳನ್ನು ಅನಾವಶ್ಯಕವಾಗಿ ಉಪಯೋಗ ಮಾಡುವುದನ್ನು ತಪ್ಪಿಸಬೇಕು. ಧಾರವಾಹಿಗಳ ನಟನಟಿಯರೂ ಕನ್ನಡದ ನುಡಿಗಟ್ಟುಗಳನ್ನು ಪ್ರಭಾವಯುತವಾಗಿ ಉಪಯೋಗಿಸಿದರೆ ವೀಕ್ಷಕರ ಮನಸ್ಸಿನಲ್ಲಿ ಕನ್ನಡದ ಪ್ರೀತಿ ಮೂಡುತ್ತದೆ. ಅವರೆಲ್ಲ ಈ ಕೆಲಸವನ್ನು ಆವಶ್ಯಕವಾಗಿ ಮಾಡಬೇಕು. ವಾರ್ತಾಪತ್ರಿಕೆಗಳಿಗೆ ಅಗತ್ಯವಾಗುವ  ಇಂಗ್ಲಿಷ್ ಮೀಡಿಯಂಗಳಿಗೆ ಸಮಾನವಾದ ಕನ್ನಡ ನುಡಿಗಟ್ಟುಗಳನ್ನು ತಯಾರು ಮಾಡುವ ಒಂದು ವಿಧಾನವಿದೆ. ಇದನ್ನು ಕುರಿತು ಪತ್ರಿಕಾ ಬಳಗದವರು ಸಹಾಯ ಮಾಡಿದರೆ ಒಂದು ಉತ್ತಮ ನುಡಿಗಟ್ಟಿನ ನಿಘಂಟನ್ನು ತಯಾರಿಸಬಹುದು. ವಾರ್ತಾಪತ್ರಿಕೆಗಳಲ್ಲಿ ವಿವಿಧ ಕ್ಷೇತ್ರಗಳ ವರ್ತಮಾನಗಳನ್ನೂ, ವಿಶಿಷ್ಟ ಲೇಖನಗಳನ್ನೂ ಇಂಗ್ಲಿಷಿನಲ್ಲಿ ನಡೆಯುತ್ತವೆ. ಈ ಸಾಮಗ್ರಿಯಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಇಂಗ್ಲಿಷ್ ಮೀಡಿಯಂಗಳು ಇರುತ್ತವೆ. ಆಯಾ ಭಾಗದ ಉಪಸಂಪಾದಕರು ಒಂದು ತಿಂಗಳ ಕಾಲ ಹಾಗೆ ಕಂಡುಬರುವ ಇಂಗ್ಲಿಷ್ ಮೀಡಿಯಂಗಳನ್ನು ಬೇರೆಯಾಗಿ ದಾಖಲಿಸಿ ಇಟ್ಟರೆ ಒಂದು ದೊಡ್ಡ ಮೀಡಿಯಂ ಭಂಡಾರ ಪ್ರಸಿದ್ಧವಾಗುತ್ತದೆ. ಬಳಿಕ ಈ ಮೀಡಿಯಂಗಳಿಗೆ ಸಮಾನವಾದ ಕನ್ನಡದ ನುಡಿಗಟ್ಟುಗಳನ್ನು ಕಂಡುಹಿಡಿಯಬಹುದು. ಇಲ್ಲದಿದ್ದರೆ ಹೊಸದಾಗಿ ನಿರ್ಮಾಣ ಮಾಡಬಹುದು. ವರ್ತಮಾನ ಪತ್ರಿಕೆಯವರು ಈ ಉಪಾಯವನ್ನು ಪ್ರಯೋಗಿಸಿದರೆ ನಾವು ಕೆಲವು ಭಾಷಾಭ್ಯಾಸಿಗಳು ನಿಮಗೆ ಶಾಶ್ವತವಾದ ಕನ್ನಡ ನುಡಿಗಟ್ಟಿನ ಕೋಶವನ್ನು ತಯಾರಿಸಿ ಹಿಂದಿರುಗಿಸುತ್ತೇವೆ. ಎಲ್ಲ ಪತ್ರಿಕೆಗಳ ಉಪಸಂಪಾದಕರು ಈ ದೃಷ್ಟಿಯನ್ನು ಪರಿಶೀಲಿಸಬೇಕೆಂದು ನನ್ನ ವಿನಂತಿ. ಪರಿಷತ್ತು ಈ ಬಗ್ಗೆ ತೀವ್ರವಾಗಿ ಅಲೋಚಿಸಬೇಕು.

ಪತ್ರಿಕಾ ಪ್ರಪಂಚ

ಪತ್ರಿಕಾ ವೃತ್ತಿಯು ಬಹು ಪವಿತ್ರವಾದ ವೃತ್ತಿ. ಕನ್ನಡದ ಪತ್ರಿಕಾಕರ್ತರ ಹಿಂದಿನ ಚರಿತ್ರೆಯನ್ನು ಓದಿದರೆ ಎಂಥ ಶ್ರೀಮಂತ ಮನಸ್ಸಿನ ಮೇಧಾವಿಗಳೂ, ನಿಸ್ವಾರ್ಥ ಪರೋಪಕಾರಿಗಳೂ ವೃತ್ತಿಯಲ್ಲಿ ಪ್ರಾಮಾಣಿಕತೆ, ಧರ್ಮಶ್ರದ್ಧೆ, ಸಾಮಾಜಿಕ ನ್ಯಾಯಪರತೆ ಮತ್ತು ಬಾಳಿನಲ್ಲಿ ಸಂದರ್ಶಕತೆ- ಇವುಗಳನ್ನು ಮೆರೆದಿದ್ದಾರೆ ಎಂಬುದು ಕಣ್ಮುಂದೆ ಕಟ್ಟುತ್ತದೆ. ಆ ಹಿರಿಯರ ಮಾದರಿ ಈಗಲೂ ಅನುಸರಿಸಲು ಆರ್ಹವಾಗಿದೆ. ಜನರ ತಪ್ಪನ್ನು ಜನರಿಗೆ ತಿಳಿಸಿ ಸರಕಾರದ ತಪ್ಪನ್ನು ಸರಕಾರಕ್ಕೆ ತಿಳಿಸಿ ನವಜೀವನಕ್ಕೆ ಅವರು ಮಾರ್ಗದರ್ಶನ ಮಾಡುತಿದ್ದರು. ಈಗ ನಮ್ಮ ಪತ್ರಿಕಾಕರ್ತರು ಅದೇ ರೀತಿ ಕನ್ನಡ ಭಾಷೆಯ ಬಗ್ಗೆ ದುಡಿಯಬೇಕಾದ ಕಾಲ ಒದಗಿ ಬಂದಿದೆ. ಪರಿಷತ್ತು ಪತ್ರಿಕಾ ಪ್ರಪಂಚದ ಜೊತೆ ತುಂಬು ವಿಶ್ವಾಸದಿಂದ ಭಾಷಾಬಾಂಧವ್ಯವನ್ನು ಬೆಳೆಸಬೇಕು.

ನಮ್ಮ ನಾಡಿನ ಮೂಲೆ ಮೂಲೆಗಳಲ್ಲಿ ಅನೇಕ ಚಿಕ್ಕ ಪುಟ್ಟ ಪತ್ರಿಕೆಗಳೂ ನಿಯತಕಾಲಿಕೆಗಳೂ ಪ್ರಕಟವಾಗುತ್ತಾ ಇವೆ. ಇವುಗಳಲ್ಲಿ ಆಯಾ ಪ್ರದೇಶದಲ್ಲಿ ಪ್ರಚಾರದಲ್ಲಿರುವ ಕನ್ನಡ ನುಡಿಗಟ್ಟುಗಳೂ ಪ್ರಯೋಗವಾಗುತ್ತವೆ. ಆಡುಮಾತಿನ  ಆ ಪ್ರಯೋಗಗಳೂ ತುಂಬ ಅರ್ಥವತ್ತಾಗಿರುತ್ತದೆ. ನಾನಿದನ್ನು ಗಮನಿಸಿದ್ದೇನೆ. ಆ ನುಡಿಗಟ್ಟುಗಳು, ಕೆಲವು ವಿಶಿಷ್ಟ ಶಬ್ದಗಳು ಇವುಗಳನ್ನು ನಾವು ಸಂಗ್ರಹಿಸಿ ದಾಖಲಿಸಬೇಕು. ಇಂಥ ಸಣ್ಣ ಸಣ್ಣ ಪತ್ರಿಕೆಗಳಿಗೆ ಆರ್ಥಿಕ ಬಲವಿರುವುದಿಲ್ಲ. ಇಂಥ ಸ್ಥಿತಿ ಕನ್ನಡಕ್ಕೆ ಮಾತ್ರ ಸೇರಿದ್ದಲ್ಲ. ಭಾರತದ ಎಲ್ಲ ಭಾಷೆಗಳಲ್ಲಿಯೂ ಈ ಸ್ಥಿತಿ ಇದೆ. ಇಂಥ ಸ್ಥಿತಿಯಿಂದ ಈ ಸಣ್ಣ ಪತ್ರಿಕೆಗಳನ್ನು ಮೇಲಕ್ಕೆತ್ತುವ ಒಂದು ಉಪಾಯವಿದೆ.  ಅದನ್ನೂ ನಾವು ಗಮನಿಸಬೇಕು. ನಮ್ಮ ದೇಶದಲ್ಲಿರುವ  ಬಹುರಾಷ್ಟ್ರೀಯ ಮತ್ತು ಸ್ವದೇಶಿ  ವಾಣಿಜ್ಯೋದ್ಯಮಿಗಳು ತಮ್ಮ ಜಾಹೀರಾತುಗಳನ್ನು ಪತ್ರಿಕೆಗಳಿಗೆ ದೂರದರ್ಶನ ವಾಹಿನಿಗಳಿಗೆ ನೀಡುತ್ತಾರೆ. ಇದಕ್ಕೆ ನೀಡುವ ಹಣದ ಗಾತ್ರ ಬೃಹತ್ತಾಗಿ ವರ್ಷಕ್ಕೆ ಹಲವು ಸಾವಿರ ಕೋಟಿ ರೂಪಾಯಿಗಳಷ್ಟಾಗುತ್ತವೆ. ಈ ಗಾತ್ರದ ಹಣದಲ್ಲಿ ಶೇಕಡ ೧೫ರಷ್ಟನ್ನು ಎಲ್ಲ ಭಾಷೆಗಳ ಚಿಕ್ಕ ಪುಟ್ಟ ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಕೊಡಲೇಬೇಕೆಂಬ ಕಾನೂನನ್ನು ಕೇಂದ್ರ ಸರಕಾರ ಮಾಡಿಬಿಟ್ಟರೆ ಸಾಕು ಈ ಸಣ್ಣ ಪುಟ್ಟ ಪತ್ರಿಕೆಗಳು ಬದುಕಿ ಹೋಗುತ್ತವೆ. ಇದರಿಂದ ಭಾರತದ ಎಲ್ಲ ಭಾಷೆಗಳ ಚಿಕ್ಕಪುಟ್ಟ ಪತ್ರಿಕೆಗಳಿಗೆ ಸಹಾಯವಾಗಿ ಆ ಪತ್ರಿಕೆಗಳು ಬಳಸುವ ಪ್ರಾದೇಶಿಕ ಸೊಗಡು ಉಳಿದು ಆ ಭಾಷೆಗಳು ಬೆಳೆಯಲು ಸಹಾಯವಾಗುತ್ತದೆ. ಎಲ್ಲ ಪ್ರಾಂತದ ಎಲ್ಲ ಲೋಕಸಭೆ, ರಾಜ್ಯಸಭೆಗಳ ಸದಸ್ಯರು, ಎಲ್ಲ ಕೇಂದ್ರ ಮಂತ್ರಿಗಳು ಈ ಕೆಲಸವನ್ನು ಮಾಡಬೇಕು. ಸಣ್ಣ ಪತ್ರಿಕೆಗಳ, ನಿಯತಕಾಲಿಕೆಗಳ ಒಕ್ಕೂಟವು ಇದರ ಬಗ್ಗೆ ಪ್ರಯತ್ನಪಡಬೇಕು ಮತ್ತು ಉದ್ಯಮಗಳಿಗೆ ಇದನ್ನು ಅವರ ‘ಸಾಮಾಜಿಕ ಹೊಣೆಗಾರಿಕೆ’ ಎಂದು ಪರಿಗಣಿಸುವಂತೆ ಮನವರಿಕೆ ಮಾಡಿಕೊಡಬೇಕು.

Tag: Prof. G. Venkatasubbaiah, Tag: Kannada Sahitya Sammelana 77

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)