ಸಾಹಿತ್ಯ ಸಮ್ಮೇಳನ-೭೯ : ಬಿಜಾಪುರ
ಫೆಬ್ರವರಿ ೨0೧೩

ಅಧ್ಯಕ್ಷತೆ: ಕೋ. ಚೆನ್ನಬಸಪ್ಪ

೭೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು      

ಕೋ. ಚೆನ್ನಬಸಪ್ಪ

ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ಇವರು ಬಸಮ್ಮ-ವೀರಣ್ಣ ದಂಪತಿಗಳ ಸುಪುತ್ರರಾಗಿ ೨೭-೨-೧೯೨೨ರಂದು ಜನಿಸಿದರು. ತವರೂರಿನಲ್ಲಿ ಶಾಲಾವಿದ್ಯಾಭ್ಯಾಸ ಮುಗಿಸಿ ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು.

೧೯೪೬ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು ೧೯೬೫ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು.

ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ಸಲ್ಲಿಸಿದ್ದಾರೆ. ಶ್ರೀ ರಾಮಕೃಷ್ಣ ವಿವೇಕಾನಂದ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿದ್ದಾರೆ. ಕರ್ನಾಟಕದ ಅರವಿಂದಾಶ್ರಮದ ಶಾಖಾ ಪ್ರಾರಂಭಕ್ಕೆ ಕಾರಣಕರ್ತರಾಗಿದ್ದಾರೆ. ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕದಲ್ಲಿ ಉಳಿಸಲು ಕರ್ನಾಟಕ ಏಕೀಕರಣ ಸಮಿತಿಯ ಸದಸ್ಯರಾಗಿ ದುಡಿದಿದ್ದಾರೆ. ಹಲವಾರು ಕಾರ್ಮಿಕ ಸಂಘಗಳ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಸೇವೆಯನ್ನು ಮೆಚ್ಚಿ ಆತ್ಮೀಯರೆಲ್ಲರು ಸೇರಿ ೧೯೮೮ರಲ್ಲಿ ‘ಕೋಚೆ ಯಾರು ಏನು ಎಂತು?’ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದಾರೆ.  ಸ.ಸ. ಮಾಳವಾಡ ಪ್ರಶಸ್ತಿ, ಸಂ.ಶಿ. ಭೂಸನೂರಮಠ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ, ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಡಿಲಿಟ್ ಪದವಿ, ಇತ್ಯಾದಿ ಇವರಿಗೆ ಸಂದಿವೆ. ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ೨0೧೩ರಲ್ಲಿ ಆಯ್ಕೆಮಾಡಲಾಯಿತು.

ನ್ಯಾಯಾಲಯದ ಸತ್ಯ ಕಥೆಗಳು (ಅಂಕಣಬರಹ), ಹಿಂದಿರುಗಿ ಬರಲಿಲ್ಲ, ರಕ್ತತರ್ಪಣ, ಬೇಡಿ ಕಳಚಿತು ದೇಶ ಒಡೆಯಿತು ಮೊದಲಾದ ೯ ಕಾದಂಬರಿಗಳನ್ನು; ಅರವಿಂದ, ಬಸವಣ್ಣ ಮೊದಲಾದ ೮ ಜೀವನ ಚರಿತ್ರೆಗಳನ್ನು; ಪ್ರಾಣಪಕ್ಷಿ, ಜೀವತೀರ್ಥ ಮೊದಲಾದ ೫ ಕವನ ಸಂಕಲನಗಳನ್ನು; ಶ್ರೀ ರಾಮಾಯಣ ದರ್ಶನ ಮಹಾಕಾವ್ಯ ಸಮೀಕ್ಷೆ, ಕುವೆಂಪು ವೈಚಾರಿಕತೆ ಮೊದಲಾದ ವಿಮರ್ಶಾ ಕೃತಿಗಳನ್ನು; ನನ್ನ ಮನಸ್ಸು ನನ್ನ ನಂಬುಗೆ ಎಂಬ ಆತ್ಮಕಥೆಯನ್ನೂ ರಚಿಸಿದ್ದಾರೆ.

 ಕನ್ನಡ ಸಾಹಿತ್ಯ ಸಮ್ಮೇಳನ೭೯

ಅಧ್ಯಕ್ಷರು, ಕೋ. ನ್ನಬಸಪ್ಪ

ದಿನಾಂಕ ೯, 0, ೧೧ ಫೆಬ್ರವರಿ ೨0೧೩

ಸ್ಥಳ : ಬಿಜಾಪುರ

 

ಪರಿಷತ್ತು ಅಧ್ಯಕ್ಷತೆ

ಈ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಎಂದರೆ ಕೇವಲ ಪ್ರತಿಮೆ; ಉತ್ಸವ ವಿಗ್ರಹ, ತಾಯಿ ಸರಸ್ವತಿಯನ್ನು ಪ್ರತಿನಿಧಿಸುವ ಒಂದೇ ವಿಗ್ರಹ. ಈ ನಮ್ರತೆಯಿಂದ ಹುಸಿಯಲ್ಲದ ವಿನಯದಿಂದ ಈ ಸ್ಥಾನವನ್ನು ಪ್ರದಾನ ಮಾಡಿದ ಇಲ್ಲಿ ನೆರೆದ ಮಹಾ ಜನತೆಗೆ, ಸಾರಸ್ವತ ಲೋಕದ ಪ್ರತಿನಿಧಿಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ, ಅದರ ಸ್ಥಳೀಯ ಶಾಖಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಈ ಸಮ್ಮೇಳನ ಸ್ವಾಗತ ಸಮಿತಿಯ ಪದಾಧಿಕಾರಿಗಳಿಗೆ ಈ ಸ್ಥಾನಕ್ಕೆ ಈ ವ್ಯಕ್ತಿ ಯೋಗ್ಯ ಎಂದು ಪರಿಗಣಿಸಿದ ಸಹೃದಯರಿಗೆ ಶರಣಾರ್ಥಿ.

ಸರಕಾರದ ಕಾರ್ಯಕ್ರಮ

ಈ ಸಮ್ಮೇಳನದ ನಿಮಿತ್ತ ದೂರದರ್ಶನದಲ್ಲಿ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ನಾನೂ ಇದ್ದೆ. ಚಂಪಾ, ಡಿ. ವಸುಂಧರಾ ಭೂಪತಿ ಇದ್ದರು. ಕಾರ್ಯಕ್ರಮ ನಡೆಸಿ ಕೊಟ್ಟ ನಿರೂಪಕರು ಚಂಪಾ ಅವರನ್ನು ಕೇಳಿದ ಮೊದಲ ಪ್ರಶ್ನೆ: ಜಾತ್ರೆಯೋಪಾದಿ ಈ ಮೂರು ದಿನದ ಅದ್ದೂರಿ ಆಡಂಬರದ ದುಬಾರಿ “ಸಾಹಿತ್ಯ ಜಾತ್ರೆ” ಎಂಬುದು. ಅದಕ್ಕೆ ಚಂಪಾ ಉತ್ತರ ಕೊಡುತ್ತ ಪರಿಷತ್ತಿನ ಅಧ್ಯಕ್ಷರು ಆಗಲೇ ಹೇಳಿರುವ ಉತ್ತರ “ಇದು ಸರಳವಾಗಿ ಅಡಂಬರವಿಲ್ಲದೆ ಅರ್ಥಪೂರ್ಣ ಸಮಾಲೋಚನಾ (Business Like) ಕೂಟ” ಎಂಬುದಾಗಿ ಹೇಳಿ ಕೊನೆಗೆ ಒಂದು ಮಾತು ಹೇಳಿದರು. “ನಮ್ಮ ಜನ ವರ್ಷವಿಡೀ ದುಡಿದು ದಣಿವಾಗಿ ಹಣ್ಣಾಗಿ ಬೇಸರಗೊಂಡಾಗ ಮೂರು ದಿನ ಇಂಥ ಸಾಹಿತ್ಯ ಸಂತೋಷ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿ ಸಂತೋಷಪಡುವುದರಲ್ಲಿ ಅಷ್ಟೇನು ತಪ್ಪಿಲ್ಲ…… ಎಂದು ಇಂತಹ ಸಮ್ಮೇಳನದ ಔಚಿತ್ಯವನ್ನು ಸಮರ್ಥಿಸಿದರು.

ಅವರು ಹೇಳಿದ `ಕುಣಿದು’ ಎಂಬ ಮಾತು ನನಗೆ, “ಕುಡಿದು” ಎಂದು ಕೇಳಿದಂತಾಯ್ತು-ಚಂಪಾ ಅವರು ಅಂಥ ಹಾಸ್ಯದ ಮಾತು ಆಡಿದ್ದರೂ ಆಡಿರಬಹುದು ಎಂದು ನಾನು ಮನದಲ್ಲೇ ನಕ್ಕೆ. ನನ್ನನ್ನು ಆ ಪ್ರಶ್ನೆ ಕೇಳುತ್ತಾರೆ; ಅದಕ್ಕೆ ತಕ್ಕ ಉತ್ತರ ಕೊಡಲು ನಾನು ಮಾನಸಿಕವಾಗಿ ಸಿದ್ಧತೆ-ಮಾಡಿಕೊಳ್ಳುತ್ತಿದ್ದೆ. ಅವರು ಹೇಳಿದ್ದೇನು ಎಂದು ನನ್ನ ಎಡಬದಿಗೆ ಕುತಿದ್ದವರನ್ನು ಕೇಳಿದೆ. ನನ್ನನ್ನು ಈ ಪ್ರಶ್ನೆ ಕೇಳಿದ್ದರೆ ನಾನು ತಪ್ಪು ಕೇಳಿಸಿಕೊಂಡಿದ್ದ “ಕುಡಿದು ಕುಪ್ಪಳಿಸುವ” ಮಾತನ್ನು ಸಮರ್ಥಿಸುತ್ತಿದ್ದೆ! ಹೇಗೇಂದರೆ; ಚಂಪಾ ಹೇಳಿದ್ದು ಅಷ್ಟೇನೂ ತಪ್ಪಲ್ಲ ಎಂದು ನಾನೂ ದನಿಗೂಡಿಸಿದ್ದರೆ ಪ್ರೇಕ್ಷಕರಿಗೆ ಆಶ್ಚರ್ಯ ಮಾತ್ರವಲ್ಲ  ಅಪಾಯಕಾರಿಯಾಗಿ ಭಾಸವಾಗುತ್ತಿತ್ತು ಅಲ್ಲದೆ ಹಾಸ್ಯ ಪ್ರಜ್ಞೆ ಇದ್ದವರು ನಗುತ್ತಿದ್ದರು! ‘ರಾಮರಸ’ ಪ್ರಿಯರಿಗೆ ಖುಷಿಯಾಗುತ್ತಿತ್ತು.

ಕರ್ನಾಟಕ ಅರಾಷ್ಟ್ರೀಯವಲ್ಲ

ಇಂದು ನಾವಿಲ್ಲಿ ಸೇರಿರುವುದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಇದು ಆರೇಳು ಕೋಟಿ ಜನರ ಪ್ರಾತಿನಿಧಿಕ ಸಮಾವೇಶ. ಕನ್ನಡ ಸಮ್ಮೇಳನದಲ್ಲಿ ‘ಅಖಿಲ’ ಎಂಬ ಗುಣವಾಚಕ ಭಾರತಕ್ಕೂ ಕರ್ನಾಟಕಕ್ಕೂ ಅನ್ವಯಿಸುತ್ತದೆ. ಇದನ್ನು ಬಿಡಿಸಿ. ಹಿಗ್ಗಿಸಿ ಹೇಳುವುದಾದರೆ ಇದು ‘ಅಖಿಲ ಭಾರತ ಮತ್ತು ಅಖಿಲ ಕರ್ನಾಟಕ ಸಮ್ಮೇಳನ’ ಎಂದಾಗುತ್ತದೆ. ಈ ಸಮ್ಮೇಳನಾಧ್ಯಕ್ಷ ಅಖಿಲ ಭಾರತವನ್ನು ಕರ್ನಾಟಕವನ್ನು ಕನ್ನಡವನ್ನು- ಸಾಹಿತ್ಯ ಸಂಸ್ಕೃತಿ ಧರ್ಮವನ್ನು ದೃಷ್ಟಿಯಲ್ಲಿಟ್ಟುಕೊಂಡು, ಈ ಭಾರತಾಂತರ್ಗತ ಅಖಿಲ ಕರ್ನಾಟಕದ ಹಿತ, ರಕ್ಷಣೆ, ಅಭಿವೃದ್ಧಿ, ಕ್ಷೇಮವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಬೇಕು. ಅಂದರೆ ಅಖಂಡ ಭಾರತದ ಹಿತಕ್ಕೆ ಧಕ್ಕೆ ಆಗದಂತೆ ಅಖಿಲ ಕರ್ನಾಟಕದ ಹಿತರಕ್ಷಣ ಮಾಡಬೇಕು. ಇಂದಿನ ಈ ಮಹಾಧಿವೇಶನದ ಪ್ರಾರಂಭದಲ್ಲಿ ಕುವೆಂಪು ವಿರಚಿತ ನಾಡಗೀತೆಯನ್ನು ನಾವು ಎದ್ದು ನಿಂತು ಉಚ್ಛ ಕಂಠದಿಂದ ಕರ್ನಾಟಕ ಮಾತೆಯ ಮಹಿಮೆಯನ್ನು ಹಾಡಿದೆವು. ಆ ಗೀತೆಯ ಮೊದಲನೆಯ ಸಾಲು `ಜಯ ಭಾರತ ಜನನಿಯ ತನುಜಾತೆ’ ಎಂಬ ಜಯ ಘೋಷ, ತರುವಾಯ ಎರಡನೆಯ ಸಾಲು `ಜಯ ಹೇ ಕರ್ನಾಟಕ ಮಾತೆ’ ಎಂಬುದು. ಈ ನಾಡಗೀತೆ ಅರ್ಥ, ಮಹತ್ವ ಇಂಗಿತ ಏನು? ಇದನ್ನು ರಚಿಸಿದ ಕವಿ ಹೀಗೆ ವರ್ಣಿಸಿದ್ದಾರೆ.

‘ಈ ನಮ್ಮ ಕರ್ನಾಟಕತ್ವ ಎಂದೆಂದಿಗೂ ಭಾರತೀಯತ್ವಕ್ಕೆ ಅವಿರುದ್ಧವಾಗಿ ನಿಲ್ಲುತ್ತದೆ. ಕರ್ನಾಟಕ ಮಾತೆಗೆ ಜಯೋಷ ಮಾಡುವಾಗಲೆಲ್ಲ ಭಾರತಮಾತೆಯ ಪುತ್ರಿಯೆಂದು ಮೊದಲೆ ಘೋಷಿಸುತ್ತೇವೆ.”

ರಣಘೋಷ

ಸಮಾಜದ ಗುರುಗಳೂ, ಹಿತರಕ್ಷರೂ ಆದ ಸಾಹಿತಿಗಳು ಈ ಭೂ ಸಮಸ್ಯೆ ನಮ್ಮದಲ್ಲ ಎಂದು ಕರ್ತವ್ಯಚ್ಯುತರಾದರೆ ಅದು ಮಹಾಪರಾಧ. ಮಾಡಬಾರದ ಕೃತ್ಯ ಮಾಡಿದವನು ಅಪರಾಧಿಯಾದರೆ ಮಾಡಬೇಕಾದ ಕರ್ತವ್ಯವನ್ನು ಮಾಡದಿದ್ದರೆ ಅವನೂ ಅಪರಾಧಿಯೇ. ದುಶ್ಯಾಸನ ದ್ರೌಪದಿಯ ವಸ್ತ್ರಾಪಹರಣ ಮಾಡಿದಾಗ ಅದು ತಪ್ಪು ಎಂದು ಹೇಳದ ಅದನ್ನು ತಡೆಯದ ದ್ರೋಣಾಚಾರ್ಯನ ಮೌನ ಅಪರಾಧವೆ, ಶಿಕ್ಷಾರ್ಹವೇ. ಹಾಗೆಯೇ ನಾವು ಸಾಹಿತಿಗಳು ಮಾತನಾಡಲೇ ಬೇಕಾದಾಗ ಮಾತನಾಡದಿದ್ದರೆ ಕರ್ತವ್ಯಲೋಪವೆ. ತನ್ನ ಲೇಖನಿಯೆಂಬ ಖಡ್ಗವನ್ನು ಹಿಡಿದು ಭೂಮಾತೆಯ ಮಾನಸಂರಕ್ಷಣೆಗೆ, ಮುನ್ನುಗ್ಗಬೇಕು.

ಸಾಹಿತ್ಯ ಸಮ್ಮೇಳನವೆಂಬ ಈ ರಥದಲ್ಲಿ ಕುಳಿತು ನಾನು ಕೊಡುವ ದಂಡನಾಯಕನ ಆಜ್ಞೆ ಇದು! ಸಾಹಿತಿಗಳೇ ಈ ಧರ್ಮಯುದ್ಧದಲ್ಲಿ ಜೀವದ ಹಂಗು ತೊರೆದು ಹೋದರೆ ಹೋಗಲಿ. ತಲೆಹಾರಿ ಎಂದು ಸಿಂಹನಾದ ಮಾಡುತ್ತ  ಮುನ್ನುಗ್ಗಿ “ಸತ್ತರೆ ಸ್ವರ್ಗ, ಗೆದ್ದು ಬದುಕಿದರೆ ಭೂರಾಜ್ಯದ ಒಡೆತನ”- ನಾನೀಗ ಕಲ್ಕಿಯೂಗಬೇಕೆಂದು ಬೇಡಿಕೊಂಬೆ. ‘ಜಯ ಜಯ ಮಹಾದೇವ” ಎಂದು ರಣಘೋಷಮಾಡಿ ಕೃತಕೃತ್ಯರಾಗಿ.

ಸಮ್ಮೇಳನಾಧ್ಯಕ್ಷರ ಪ್ರಾರ್ಥನೆ

ನೀವು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳನ್ನಾಗಲಿ, ಸರ್ಕಾರದ ಮುಖ್ಯಮಂತ್ರಿಗಳನ್ನಾಗಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನಾಗಲಿ, ನನ್ನನ್ನಾಗಲಿ  ಕನ್ನಡಕ್ಕಾಗಿ ನೀವೇನು ಮಾಡಿದ್ದೀರಿ? ಏನು ಮಾಡುತ್ತೀರಿ? ಎಂದು ಕೇಳಬೇಡಿ’ ಬದಲು `ಕನ್ನಡಕ್ಕಾಗಿ ನಾನೇನು ಮಾಡಬೇಕು” ಎಂದು ಕೇಳಿ ಎಂದು ನಾನು ಬಿನ್ನೈಸುತ್ತೇನೆ. ಇದೇ ನನ್ನ ಕೊನೆಯ ಪ್ರಾರ್ಥನೆ. ಸಮಾಧಾನದಿಂದ ಕೇಳಿದ ನಿಮಗೆ ಹೃತ್ಪೂವರ್ಕ ವಂದನೆಗಳು. ಈ ಸ್ಥಾನವನ್ನು ಕೊಟ್ಟು ನನ್ನನ್ನು ಪ್ರೀತಿಸಿದ ಗೌರವಿಸಿ ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರಗಳು.

Tag: Kannada Sahitya Sammelana 79, Ko. Channabasappa

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)