ಸಾಹಿತ್ಯ ಸಮ್ಮೇಳನ-೬೯

ಅಧ್ಯಕ್ಷತೆ: ಯು.ಆರ್. ಅನಂತಮೂರ್ತಿ

ura

೬೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು

ಯು.ಆರ್. ಅನಂತಮೂರ್ತಿ

ಸಮಕಾಲೀನ ಬರಹಗಾರರಲ್ಲಿ ಅದಮ್ಯ ಚೇತನದ, ಬಹುಪ್ರತಿಭೆಯ ಯು.ಆರ್. ಅನಂತಮೂರ್ತಿ ಅವರು. ಉಡುಪಿ ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಪುತ್ರರಾಗಿ ೨೧-೧೨-೧೯೩೨ರಲ್ಲಿ ತೀರ್ಥಹಳ್ಳಿಯ ಮೇಳಿಗೆಯಲ್ಲಿ ಮಲೆನಾಡಿಗರಾಗಿ ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ೧೯೬೬ರಲ್ಲಿ ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿ.ಎಚ್ ಡಿ ಪದವಿ ಪಡೆದರು.

೧೯೫೬ರಲ್ಲಿ ಹಾಸನದ ಕಾಲೇಜಿನಲ್ಲಿ ಅಧ್ಯಾಪಕರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾಗಿ ೧೯೮೭-೯೧ ಅವಧಿಯಲ್ಲಿ ಕಾರ್ಯನಿರ್ವಹಿಸಿದರು. ೧೯೯೨-೯೩ರಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿ, ದೆಹಲಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು. ೨00೩ರಲ್ಲಿ ಕೇಂದ್ರ ಸರ್ಕಾರದ ಫಿಲಿಂ ಇನ್ಸಿಟ್ಯೂಟ್ ಅಂಡ್ ಟೆಲಿವಿಷನ್ ಪೂನಾದ ಅಧ್ಯಕ್ಷರಾಗಿ ನಿಯುಕ್ತರಾಗಿದ್ದರು.

ಇಂಗ್ಲಿಷಿನಲ್ಲಿ ಎಂ.ಎ. ನಲ್ಲಿ ಸ್ವರ್ಣಪದಕ ಪಡೆದ ಇವರು ೧೯೭0ರಲ್ಲಿ ಸಂಸ್ಕಾರ ಕಥೆಗೆ ಚಲನಚಿತ್ರ ಪ್ರಶಸ್ತಿ, ೧೯೮೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ೧೯೮೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ, ೧೯೯೫ರಲ್ಲಿ ಡಿಲಿಟ್ ಗೌರವ, ೧೯೯೫ರಲ್ಲಿ ಶಿಖರ ಸನ್ಮಾನ್, ೧೯೯೮ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.

ಕನ್ನಡದಲ್ಲಿ ನವ್ಯಸಾಹಿತಿಯಾಗಿ, ವಾದವಿವಾದಗಳನ್ನೆಬ್ಬಿಸಿದಂಥ ಸಂಸ್ಕಾರ ಕಾದಂಬರಿಯನ್ನು ಬರೆದ ಅನಂತಮೂರ್ತಿ ಅವರು ಅನೇಕ ಕಥೆ ಕಾದಂಬರಿಗಳನ್ನು ವಿಮರ್ಶಾ ಗ್ರಂಥಗಳನ್ನು ರಚಿಸಿದ್ದಾರೆ. ಕೆಲವು ಪ್ರಮುಖ ಕೃತಿಗಳಿವು : ಸಂಸ್ಕಾರ, ಭಾರತೀಪುರ, ಘಟಶ್ರಾದ್ಧ, ಅವಸ್ಥೆ, ದಿವ್ಯ (ಕಾದಂಬರಿಗಳು) ಸೂರ್ಯನ ಕುದುರೆ, ಆಕಾಶ ಬೆಕ್ಕು ವಡಾನಿ, ಪ್ರಶ್ನೆ (ಕಥೆಗಳು) ಆವಾಹನೆ (ನಾಟಕ) ಸನ್ನಿವೇಶ, ಸಮಕ್ಷಮ (ವಿಮರ್ಶೆ) ದಾವ್ ದ ಜಿಂಗ್ (ಭಾಷಾಂತರ) ಇತ್ಯಾದಿ.

ಇವರು ದಿನಾಂಕ ೨೧-೧೨-೨0೧೪ ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

 

ಕನ್ನಡ ಸಾಹಿತ್ಯ ಸಮ್ಮೇಳನ೬೯

ಅಧ್ಯಕ್ಷರು, ಯು.ಆರ್. ಅನಂತಮೂರ್ತಿ

ದಿನಾಂಕ ೧೫, ೧೬, ೧೭ ಫೆಬ್ರವರಿ ೨00

ಸ್ಥಳ : ತುಮಕೂರು

(00೧ರಲ್ಲಿ ಸಮ್ಮೇಳನ ನಡೆಯಲಿಲ್ಲ)

ಪರಿಷತ್ತಿಗೆ ಸಲಹೆ

ಪರಿಷತ್ತಿಗೆ ನನ್ನ ಸಲಹೆಯೇನು? ಪ್ರಜಾತಾಂತ್ರಿಕ ಚೌಕಟ್ಟಿನಲ್ಲಿ ಕೆಲಸ ಮಾಡುವವ ಕರ್ನಾಟಕದ ಎಲ್ಲೆಲ್ಲೂ ಸದಸ್ಯರನ್ನು ಹೊಂದಿದ ಈ ದೊಡ್ಡ ಸಂಸ್ಥೆಯನ್ನು ಸಾಹಿತ್ಯದಿಂದ ದೂರವಾಗುತ್ತಿದೆಯೆಂದು, ಸೃಜನಶೀಲ ಬರಹಗಾರರನ್ನು ಕಡೆಗಣಿಸುತ್ತಿದೆಯೆಂದು ನಾನು ಈ ಹಿಂದೆ ಟೀಕಿಸಿದ್ದಿದೆ. ಆದರೆ ಅದು ಅವಸರದ ಟೀಕೆ ಎಂದು ನನಗೀಗ ಅನ್ನಿಸುತ್ತಿದೆ. ಕನ್ನಡ ಭಾಷೆಯನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುತ್ತಿರುವ ಡಾ.ಡಿ.ಎನ್. ಶಂಕರಭಟ್ಟರು, ಪಂಪನನ್ನು ವಚನಕಾರರನ್ನು ಈ ನಮ್ಮ ಕಾಲದ ಅನುಭವಕ್ಕೆ ಲಭ್ಯವಾಗುವಂತೆ ಮಾಡಿರುವ ಡಾ. ಎಲ್. ಬಸವರಾಜರು ಸೃಜನಶೀಲ ಚಿಂತಕರಲ್ಲವೆ? ಆಳವಾದ ಪಾಂಡಿತ್ಯಕ್ಕೆ ಮನ್ನಣೆಯಿಲ್ಲದ ಸೃಜನಶೀಲತೆ ಜರ್ನಲಿಸಮ್ಮಿನ ಸಭ್ಯತನವನ್ನು ಮಾತ್ರ ಪಡೆದಿರುತ್ತದೆ. ಪರಿಷತ್ತನ್ನು ಲೇಖಕರ ದೃಷ್ಟಿಯಿಂದ ಮಾತ್ರ ನೋಡುವುದು ಸಲ್ಲದು.

ಒಂದೊಂದು ಕಾಲದಲ್ಲಿ ಕನ್ನಡದ ಎಲ್ಲ ಕೆಲಸದ ಜವಾಬ್ದಾರಿಯನ್ನು ಪರಿಷತ್ತು ಮಾತ್ರ ಹೊರಬೇಕಾಗಿ ಬಂದಿತ್ತು. ಆದರೆ ಈಗ ಸಾಹಿತ್ಯದ ಕೆಲಸಕ್ಕೆ ಅಕಾಡೆಮಿ ಇದೆ. ಪುಸ್ತಕ ಪ್ರಕಾಶನಕ್ಕೆ ಪುಸ್ತಕ ಪ್ರಾಧಿಕಾರವಿದೆ. ಕನ್ನಡ ಭಾಷೆಯನ್ನು ರಕ್ಷಿಸಲು ಸರ್ಕಾರವೇ ರಚಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದೆ. ಜ್ಞಾನ ಶಾಖೆಗಳ ಸರ್ವತೋಮುಖ ಅಭಿವೃದ್ಧಿಗೆ ವಿಶ್ವವಿದ್ಯಾಲಯವೇ ಹಂಪಿಯಲ್ಲಿದೆ. ಈ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸವೇನು?

ಇದಕ್ಕೆ ಉತ್ತರ ಸುಲಭವೂ ಹೌದು ಕಷ್ಟವೂ ಹೌದು ಸುಲಭ ಯಾಕೆಂದರೆ ಗ್ರಾಮಾಂತರ ಪ್ರದೇಶಗಳಲ್ಲಿ ಸದಸ್ಯರನ್ನು ಪಡೆದ, ಪಡೆದಿರದಿದ್ದರೆ ಪಡೆಯಬಹುದಾದ, ಪರಿಷತ್ತು ಉಳಿದ ಎಲ್ಲ ಸಂಸ್ಥೆಗಳ ಕೆಲಸವನ್ನು ಗ್ರಾಮ ಗ್ರಾಮಗಳಿಗೆ ಮುಟ್ಟಿಸಬೇಕೆಂದು ಹೇಳಿದರೆ ಮುಗಿಯಿತು.

ಆದರೆ ಇದು ಕಷ್ಟವು ಹೌದು. ಯಾಕೆಂದರೆ ಇದನ್ನು ಮಾಡಲು ಸಾಕಷ್ಟು ಬಲಬೇಕು.  ಕೇರಳದ ಶಾಸ್ತ್ರ ಸಾಹಿತ್ಯ ಪರಿಷತ್ತಿನಲ್ಲಿ ಇರುವಂತಹ ನಿಷ್ಠಾವಂತ ಕಾರ್ಯಕರ್ತರನ್ನು ಪರಿಷತ್ತು ಪಡೆದು ಗುರುತಿಸಬೇಕು. ಇವರು ಗ್ರಾಮ ಗ್ರಾಮಗಳಲ್ಲಿ ಲೈಬ್ರರಿಗಳನ್ನು ತೆರೆಯುವ ಚಳುವಳಿ ಕೈಗೊಳ್ಳಬೇಕು. ಅಕ್ಷರ ಜ್ಞಾನವನ್ನು ಸರ್ವತ್ರಗೊಳಿಸುವ ಕೆಲಸದಲ್ಲಿ ಮುಂದಾಗಬೇಕು. ಸಹಶಿಕ್ಷಕರಿಗೆ ಅಗತ್ಯವಾದ ಪುಸ್ತಕ ಪ್ರಕಟನೆಯ ಕಾರ್ಯವನ್ನು ಎಲ್ಲ ಬರಹಗಾರರ ಸಹಾಯದಿಂದ ನಿರ್ವಹಿಸಬೇಕು.  ಕನ್ನಡದ ಬುಡವನ್ನು ಭದ್ರಮಾಡುವ ಈ ಕೆಲಸಗಳು ನಾನು ಕೂಡಲೇ ಗುರುತಿಸಿದ ಸಮಾನತೆಯ ಹಸಿವನ್ನೂ ಆಧುನಿಕತೆಯ ಹಸಿವನ್ನೂ ತಣಿಸುವಂಥದ್ದಾಗಿರುತ್ತದೆ. ಜಾಗತೀಕರಣದಲ್ಲಿ ಕನ್ನಡ ಮೂಲೆಗುಂಪಾಗದಂತೆ ಕನ್ನಡ ಜನಶಕ್ತಿಯನ್ನು ಆಗ ಬೆಳೆಸಿದಂತಾಗುತ್ತದೆ. ಈ ಸಲಹೆಯನ್ನು ಪರಿಷತ್ತಿನ ಸದಸ್ಯರೆದುರು ವಿನಯದಿಂದ ಇಡುತ್ತಿದ್ದೇನೆ.

Tag: Kannada Sahitya Sammelana 69, U.R. Anantha Murthy

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)