ಕನ್ನಡ ರಾಜ್ಯೋತ್ಸವ ನಿತ್ಯೋತ್ಸವವಾಗಲಿ’,ಎಂದು ಆಶಿಸಿದ ನಾಡೋಜ ಡಾ.ಮಹೇಶ ಜೋಶಿ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಆಚರಣೆ ನವಂಬರ್ ಗೆ ಸೀಮಿತವಾಗದೆ ನಿತ್ಯೊತ್ಸವವಾಗಿ ಆಚರಣೆಗೊಳ್ಳಲಿ, ಕನ್ನಡಿಗರು ತಮ್ಮ ಭಾಷೆಗೆ ಸಮರ್ಪಸಿ ಕೊಳ್ಳುವ ಕೆಲಸವನ್ನು ಪ್ರತಿನಿತ್ಯವೂ ಮಾಡಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ‘69ನೆಯ ಕನ್ನಡ ರಾಜ್ಯೋತ್ಸವ’ ಮತ್ತು ಪರಿಷತ್ತಿನ ವಿವಿಧ ದತ್ತಿ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕನ್ನಡಿಗ-ಕರ್ನಾಟಕಕ್ಕೆ ದುಡಿಯುವ ಸಂಸ್ಥೆಯಾಗಿದ್ದು ನಿರಂತರವಾಗಿ ಕನ್ನಡವನ್ನು ಜಾಗೃತಿಗೊಳಸುತ್ತಿರುವ ಸಂಸ್ಥೆಯಾಗಿದೆ. ಕನ್ನಡಿಗರಿಗೆ ತಮ್ಮ ಶಕ್ತಿಯ ಅರಿವೇ ಇಲ್ಲ. ಅದಮ್ಯ ಚೈತನ್ಯವನ್ನು ಹೊಂದಿದ್ದರೂ ಮರೆತಂತೆ ಇರುತ್ತಾರೆ. ಹೀಗಾಗಿ ಅವರನ್ನು ನಿತ್ಯವೂ ಎಚ್ಚರಿಸುವ ಕೆಲಸವಾಗ ಬೇಕು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಅರ್ಥಪೂರ್ಣವಾಗಿ ನುಡಿದರು. ಕನ್ನಡಕ್ಕೆ ಅಪಾರ ಕೊಡುಗೆ ನೀಡಿದ ಹಲವು ಹಿರಿಯರ ಮಾತೃಭಾಷೆ ಕನ್ನಡವಾಗಿರಲಿಲ್ಲ. ಅಷ್ಟೇ ಅಲ್ಲ ವಿದೇಶದಿಂದ ಬಂದ ಮೊಗ್ಲಿಂಗ್, ಕಿಟಲ್, ಕಬ್ಬನ್ ಮೊದಲಾದವರು ಕನ್ನಡ ನಾಡಿಗೆ ಬಹು ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಇದು ನಮಗೆ ಪ್ರೇರಣೆಯಾಗ ಬೇಕು ಎಂದು ಹೇಳಿದ ಅವರು ಕನ್ನಡ ಸಾಹಿತ್ಯ ಬಹು ಶ್ರೀಮಂತವಾಗಿದೆ ನಮ್ಮಲ್ಲಿ ಬೆಳಗನ್ನು ‘ಮೂಡಣ ಮನೆಯ ಮುತ್ತಿನ ನೀರಿನ’ ಎಂದು ಬೇಂದ್ರೆಯವರು ವರ್ಣಿಸಿದರೆ, ‘ರಣ ರಣ ಬಿಸಿಲು’ ಎಂದು ಅಡಿಗರು ಮಧ್ಯಾಹ್ನವನ್ನು ಬಣ್ಣಿಸಿದ್ದಾರೆ, ಕೆ.ಎಸ್.ನಿಸಾರ್ ಅಹಮದ್ ‘ಮತ್ತದೇ ಸಂಜೆ’ ಎಂದು ಹಾಡಿದ್ದಾರೆ. ಕೆ.ಎಸ್.ನರಸಿಂಹ ಸ್ವಾಮಿ ‘ರಾಯರು ಬಂದರು ಮಾವನ ಮನೆಗೆ’ ಎಂದು ರಾತ್ರಿಯ ಸೊಬಗನ್ನು ಹಿಡಿದಿಟ್ಟಿರೆ ರಾಷ್ಟ್ರಕವಿ ಕುವೆಂಪು ‘ಬಾ ಇಲ್ಲಿ ಸಂಭವಿಸು’ ಎಂದು ನಿತ್ಯ ಸತ್ಯವನ್ನು ಹಾಡಿದ್ದಾರೆ. ಇಂತಹ ಶ್ರಿಮಂತಿಕೆಯಿಂದಲೇ ಕನ್ನಡ ಸಾಹಿತ್ಯ ಎಂಟು ಜ್ಞಾನಪೀಠಗಳನ್ನು ಪಡೆದು ದೇಶದ ಗಮನ ಸೆಳೆದಿದೆ ಈ ಹೆಮ್ಮೆಯನ್ನು ಬಿತ್ತರಿಸಲು ರಾಜ್ಯೋತ್ಸವ ಪ್ರೇರಣೆಯಾಗ ಬೇಕು ಎಂದು ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳ ಕುರಿತು ಮಾತನಾಡಿ ಎರಡು ಸಾವಿರಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳು ಇಲ್ಲಿಸ್ಥಾಪಿತವಾಗಿದ್ದು ಯಾವುದೇ ಅರ್ಜಿ-ಮರ್ಜಿ ಇಲ್ಲದೆ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತದೆ. ನಿಜವಾದ ಸಾಧಕರನ್ನು ಗುರುತಿಸಿ ಸಮಯಸಾಧಕರನ್ನು ದೂರವಿಡಲಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಮಾಡಿದ ವಿಶ್ರಾಂತ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಕೆ.ಶ್ರೀಧರ ರಾವ್ ಅವರು ನಾಡೋಜ ಡಾ.ಮಹೇಶ ಜೋಶಿಯವರು ಹೊರನಾಡಿನ ಮಾತ್ರವಲ್ಲದೆ ವಿದೇಶಿ ಕನ್ನಡಿಗರನ್ನೂ ಕನ್ನಡಸಾಹಿತ್ಯ ಪರಿಷತ್ತಿನ ಬಿತ್ತಿಯೊಳಗೆ ತರುತ್ತಿರುವುದರ ಕುರಿತು ಮೆಚ್ಚಿಗೆಯನ್ನು ವ್ಯಕ್ತ ಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಗಳು ರಾಜ್ಯ-ಜಿಲ್ಲಾ-ತಾಲ್ಲೋಕು ಮಟ್ಟಗಳಲ್ಲಿಯೂ ಸಾಧಕರನ್ನು ಗುರುತಿಸಿ ಮಹತ್ವದ ಪರಂಪರೆಯನ್ನು ರೂಪಿಸಿದೆ ಎಂದು ಅವರು ಪ್ರಶಂಸಿಸಿದರು. ‘ಕನ್ನಡ ರಾಜ್ಯೋತ್ಸವದ ವಿಶೇಷ ಉಪನ್ಯಾಸ’ವನ್ನು ನೀಡಿದ ಭಾರತಮಿತ್ರ ಸಮ್ಮಾನಿತಿರು, ಇತಿಹಾಸ, ಶಾಸನ ಹಾಗೂ ಭಾರತೀಯ ಕಲಾತಜ್ಞ ಡಾ.ವಸುಂಧರಾ ಕವಲಿ ಫಿಲಿಯೋಜಾ ಅವರು ಕರ್ನಾಟಕದ ಪರಂಪರೆ ವಿಜಯನಗರದ ಸಾಮ್ರಾಜ್ಯದಿಂದ ಆರಂಭವಾಗುತ್ತದೆ. ಅದು ಕನ್ನಡಿಗರ ಹಿರಿಮೆಯನ್ನು ಎತ್ತಿ ಹಿಡಿದಿತ್ತು. ಅದರ ಪತನದ ನಂತರ ಬ್ರಿಟೀಷರು ಕಾಲದಲ್ಲಿ ಕನ್ನಡ ನಾಡು ಹರಿದು ಹಂಚಿ ಹೋಗಿ ಏಕೀಕರಣಕ್ಕಾಗಿ ಮತ್ತು ನಂತರ ಕರ್ನಾಟಕದ ನಾಮಕರಣಕ್ಕಾಗಿ ಚಳುವಳಿ ನಡೆಯ ಬೇಕಾಯಿತು ಎಂದು ಅವರು ಅನೇಕ ಚಾರಿತ್ರಿಕ ದಾಖಲೆಗಳ ಮೂಲಕ ವಿದ್ವತ್ ಪೂರ್ಣವಾಗಿ ವಿವರಿಸಿದರು.
ಇದೇ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡರು ಸ್ಥಾಪಿಸಿರುವ ‘ಕನ್ನಡ ಕಾಯಕ ದತ್ತಿ ಪ್ರಶಸ್ತಿ’ಯನ್ನು 2023ನೆಯ ಸಾಲಿಗೆ ಬೆಂಗಳೂರಿನ ಕನ್ನಡ ಹೋರಾಟಗಾರ ಗೋ. ಮೂರ್ತಿ ಯಾದವ್, ತುಮಕೂರಿನ ರಂಗ ಸಂಘಟಕ ಕೆ.ರೇವಣ್ಣ, ಚಿತ್ರದುರ್ಗ ಮೂಲದ ಬರಹಗಾರ ಡಾ.ಮೀರಸಾಬಿಹಳ್ಳಿ ಶಿವಣ್ಣ ಮತ್ತು 2024ನೆಯ ಸಾಲಿಗೆ ಗೌರಿಬಿದನೂರಿನ ಕನ್ನಡ ಹೋರಾಟಗಾರ ಜಿ.ಬಾಲಾಜಿ, ಉಡುಪಿ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಪ್ರದಾನ ಮಾಡಲಾಯಿತು.
ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳ ಅಭಿಮಾನಿಗಳು ಮತ್ತು ಬಂಧುಗಳು ಸ್ಥಾಪಿಸಿರುವ ‘ಡಾ.ಟಿ.ವಿವೆಂಕಟಾಚಲ ಶಾಸ್ತ್ರಿ ವಿದ್ವತ್ ದತ್ತಿ’ ಪ್ರಶಸ್ತಿಯನ್ನು ಕಾಸರಗೋಡಿನ ಹಿರಿಯ ವಿದ್ವಾಂಸ ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರಿಗೂ ಶೈಲಜಾ.ಟಿ.ಎಸ್ ಅವರು ಸ್ಥಾಪಿಸಿರುವ ‘ಶ್ರೀಮತಿ ಟಿ.ಗಿರಿಜಾ ದತ್ತಿ ಪ್ರಶಸ್ತಿ’ಯನ್ನು ಹೆಸರಾಂತ ಅನುವಾದಕರೂ, ಭಾಷಾತಜ್ಞರೂ ಆಗಿರುವ ಡಾ.ವನಮಾಲಾ ವಿಶ್ವಂನಾಥ್ ಅವರಿಗೂ ಪ್ರದಾನ ಮಾಡಲಾಯಿತು.
ಹೆಸರಾಂತ ಉದ್ಯಮಿಗಳಾದ ಶ್ರೀನಿವಾಸ ಜೋಗಿಯವರು ತಮ್ಮ ಹೆತ್ತವರಾದ ‘ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ನರಸಿಂಹ ಜೋಗಿ’ಯವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಧಾರವಾಡದ ಕಲಾವಿದ, ರಂಗಕರ್ಮಿ ಬಸವರಾಜ ಚನ್ನವೀರಪ್ಪ ಬೆಂಗೇರಿಯವರಿಗೂ ಮತ್ತು ಹಿರಿಯ ಗಾಂಧಿವಾದಿ ನಾರಾಯಣ ಘಟ್ಟ ಅವರು ಸ್ಥಾಪಿಸಿರುವ ‘ಎ.ಆರ್.ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದವಟ್ಟಿನ’ ಪ್ರಶಸ್ತಿಯನ್ನು ಹಿರಿಯ ರಾಜಕಾರಣಿ ಮತ್ತು ಸೇವಾದಳದ ಮುಖಂಡರೂ ಆದ ಹೆಚ್.ಹನುಮಂತಪ್ಪನವರಿಗೂ ಪ್ರದಾನ ಮಾಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಕಾರ್ಯಕ್ರಮವನ್ನು ನಿರೂಪಿಸಿದರೆ, ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟರು ಸ್ವಾಗತಿಸಿ ಡಾ.ಪದ್ಮಿನಿ ನಾಗರಾಜು ಅವರು ವಂದನಾರ್ಪಣೆಯನ್ನು ಮಾಡಿದರು. ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರತಿಕ್ರಿಯೆ