ಐತಿಹಾಸಿಕ ಯಶಸ್ವಿ ಸಮ್ಮೇಳನ ಸಂಪನ್ನಗೊಳಿಸಿದ್ದಕ್ಕಾಗಿ ಮಂಡ್ಯ ಜನತೆ ಹಾಗೂ ಸಮಸ್ತ ಕನ್ನಡಿಗರಿಗೆ ನಾಡೋಜ ಡಾ.ಮಹೇಶ ಜೋಶಿ ಕೃತಜ್ಞತೆ

ಬೆಂಗಳೂರು: ಮಂಡ್ಯದಲ್ಲಿ ಡಿಸಂಬರ್ 20,21 ಮತ್ತು 22ರಂದು ಅಯೋಜನೆಗೊಂಡಿದ್ದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನವು ಅಭೂತಪೂರ್ವ ರೀತಿಯಲ್ಲಿ ಯಶಸ್ಸು ಕಂಡಿದೆ. ಸೋದರತೆ, ಸಮನ್ವಯತೆ, ಸಜ್ಜನಿಕೆ, ಸಹಭಾವಕ್ಕೆ ಹೆಸರಾದ ಮಂಡ್ಯ ಜನತೆಯಂತೂ ಇಡೀ ಸಮ್ಮೇಳನವನ್ನು ತಮ್ಮ ಮನೆಯ ಹಬ್ಬದಂತೆ ಭಾವಿಸಿ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿದ್ದಾರೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಮ್ಮ ಮೆಚ್ಚುಗೆ ಮತ್ತು ವಂದನೆಗಳನ್ನು ತಿಳಿಸಿದ್ದಾರೆ. 

ಸಾಗರೋಪಾದಿಯಲ್ಲಿ ನಾಡಿನೆಲ್ಲೆಡೆಯಿಂದ ಜನಸಾಗರವೇ ಹರಿದು ಬಂದಂತೆ, ಹೊರನಾಡಿನಿಂದ ಮತ್ತು ವಿದೇಶಗಳಿಂದ ಕೂಡ ಕನ್ನಡಿಗರು ಈ ನುಡಿ ಹಬ್ಬದಲ್ಲಿ ಭಾಗವಹಿಸಿದ್ದಾರೆ ಈ ಸಮಸ್ತ ಕನ್ನಡಿಗರಿಗೂ ವಂದನೆ ಎಂದು ಹೇಳಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಈ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣವಾದವರಿಗೆಲ್ಲರಿಗೂ ತಮ್ಮ ವಂದನೆಗಳನ್ನು ಸಲ್ಲಿಸಿದ್ದಾರೆ. ಮಾಗಿದ ವ್ಯಕ್ತಿತ್ವದ ಜನಪದ ಭೀಷ್ಮ ಗೊ.ರು.ಚನ್ನಬಸಪ್ಪನವರು ತಮ್ಮ ಹೆಗ್ಗಳಿಕೆಗೆ ತಕ್ಕಂತೆ ನಾಡು-ನುಡಿಯ ಕುರಿತು ಶಿಖರಪ್ರಾಯವಾದ ಮಾತುಗಳನ್ನು ಆಡುವುದರ ಜೊತೆಯಲ್ಲಿ ಇಡೀ ಸಮ್ಮೇಳನದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿ ಅದರ ಯಶಸ್ಸಿಗೆ ಕಾರಣರಾಗಿದ್ದಾರೆ. ಸಮ್ಮೇಳನದಲ್ಲಿ ಅಯೋಜಿತವಾಗಿದ್ದ 31 ವಿವಿಧ ಗೋಷ್ಠಿಗಳಲ್ಲಿ 156 ಜನ ವಿದ್ವಾಂಸರು, ನಾಲ್ಕು ಕವಿಗೋಷ್ಟಿಗಳಲ್ಲಿ ಒಟ್ಟು 83 ಜನ ಕವಿಗಳೂ ಸೇರಿದಂತೆ ಒಟ್ಟು 239 ಜನ ಚಿಂತಕ-ಬರಹಗಾರರು ಭಾಗವಹಿಸಿ ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಲು ಕಾರಣರಾಗಿದ್ದಾರೆ. ಇದಲ್ಲದೆ ನಾಡಿನ ಅನೇಕ ಹಿರಿಯ ಬರಹಗಾರರು, ಚಿಂತಕರು ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕನ್ನಡಾಸಕ್ತರಂತೂ ತಮ್ಮ ಮನೆಯ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದ್ದಾರೆ ಎಂದು ಹೇಳಿರುವ ನಾಡೋಜ ಡಾ.ಮಹೇಶ ಜೋಶಿಯವರು ಅದಕ್ಕೆ ಕಾರಣವಾದವರೆಲ್ಲರನ್ನೂ ಸ್ಮರಿಸಿಕೊಂಡಿದ್ದಾರೆ.  

ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅಯೋಜಿತವಾದಾಗಿನಿಂದಲೂ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾದ ಕನ್ನಡದ ಕಟ್ಟಾಳು ಸಿದ್ದರಾಮಯ್ಯನವರ ಸಹಿತ ರಾಜ್ಯ ಸರ್ಕಾರವು ಸಂಪೂರ್ಣ ಬೆಂಬಲವನ್ನು ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯ ಸ್ವಾಮಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಸಮ್ಮೇಳನಕ್ಕಾಗಿ ರೂಪುಗೊಂಡಿದ್ದ ಎಲ್ಲಾ 28 ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಬಹಳ ಶ್ರದ್ದೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರೂ, ಜನಪ್ರತಿನಿಧಿಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಮತ್ತು ಅವರ ಸಚಿವಾಲಯ ಪೂರ್ಣ ಸಹಕಾರ ನೀಡಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ, ಮಂಡ್ಯ ಜಿಲ್ಲಾ ಸಾಹಿತ್ಯ ಪರಿಷತ್ತಿನ ಘಟಕ, ಮಂಡ್ಯದ ವಿವಿಧ ತಾಲ್ಲೋಕು ಮತ್ತು ಹೊಬಳಿ ಘಟಕಗಳು, ರಾಜ್ಯದ ವಿವಿಧ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳು , ಹೊರನಾಡ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮಹತ್ವದ ಕೊಡುಗೆಯನ್ನು ತಮ್ಮ ತಮ್ಮ ಮಿತಿಯಲ್ಲಿಯೇ ನೀಡಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. 

ಕರ್ನಾಟಕ ಶಾಸನ ಸಭೆಯ ಇತಿಹಾಸದಲ್ಲಿಯೇ ಇದೇ ಮೊದಲ ಸಲ ಬೆಳಗಾವಿಯಲ್ಲಿ ಅಯೋಜಿತವಾಗಿದ್ದ ವಿಧಾನ ಸಭೆಯ ಚಳಿಗಾಲದ ಅಧಿವೇಶನವನ್ನು ಒಂದು ದಿನ ಮೊಟಕುಗೊಳಿಸಿ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮತ್ತು ವಿಧಾನ ಪರಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಾವುಗಳು ಸಮ್ಮೆಳನದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಸದನಗಳ ಮುಖ್ಯ ಸಚೇತಕರು, ಸಚಿವರು, ಶಾಸಕರಾದಿಯಾಗಿ ಅನೇಕ ಜನಪ್ರತಿನಿಧಿಗಳು ಭಾಗವಹಿಸಲು ಕಾರಣಕರ್ತರಾಗಿದ್ದಾರೆ ಅದಕ್ಕಾಗಿ ತಮ್ಮ ವಂದನೆಗಳನ್ನು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಮಂಡ್ಯ ಜಿಲ್ಲಾಡಳಿತ ಸಮ್ಮೇಳನದ ಯಶಸ್ಸಿಗೆ ಹಗಲು-ರಾತ್ರಿ ಎನ್ನದೆ ನಿರಂತರವಾಗಿ ಶ್ರಮಿಸಿದೆ. ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಪೋಲೀಸ್ ಅಧೀಕ್ಷಕರು, ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೋಲೀಸ್ ಇಲಾಖೆಯವರು ಸಮ್ಮೇಳನ ಸುಸಜ್ಜಿತವಾಗಿ ನಡೆಯಲು ಸಹಕಾರ ನೀಡಿದ್ದಾರೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರ ಸ್ವಾಮಿಯವರು ಮಂಡ್ಯದಲ್ಲಿ ಅಯೋಜಿತವಾಗಿದ್ದ ತಮ್ಮ ಹುಟ್ಟು ಹಬ್ಬವನ್ನು ಮುಂದೂಡಿ ಸಮ್ಮೇಳನದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದ್ದಾರೆ ಅವರೆಲ್ಲರಿಗೂ ತಮ್ಮ ವಂದನೆಗಳನ್ನು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. 

ಮಾಧ್ಯಮ ಕ್ಷೇತ್ರವು ಸಮ್ಮೆಳನ ಅಯೋಜಿತವಾದ ದಿನದಿಂದಲೂ ವಿಶೇಷ ಪ್ರಚಾರವನ್ನು ನೀಡುತ್ತಾ ಬಂದಿದೆ. ನಾಡಿನ ಬಹುತೇಕ ಎಲ್ಲಾ ಪತ್ರಿಕೆಗಳೂ ವಿಶೇಷ ಪುರವಣಿಗಳನ್ನು ರೂಪಿಸಿವೆ, ದೂರದರ್ಶನ ಚಂದನ ವಾಹಿನಿ ಸಮ್ಮೇಳನಕ್ಕೆ ಪೂರಕವಾದ ಸರಣಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅದರಲ್ಲಿಯೂ ಮಂಡ್ಯದಲ್ಲಿ ಅಯೋಜನೆಗೊಂಡಿದ್ದ ‘ಮಧುರ ಮಧುರವೀ ಮಂಜುಳಗಾನ-ನಾವಾಡುವ ನುಡಿಯೇ ಕನ್ನಡ ನುಡಿ’ ಕಾರ್ಯಕ್ರಮವು ಸಾಹಿತ್ಯ ಸಮ್ಮೇಳನಕ್ಕೆ ಪೂರಕವಾದ ವಾತಾವರಣವನ್ನು ರೂಪಿಸಿತು. ಆಕಾಶವಾಣಿ ವಿಶೇಷ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಉಂಟು ಮಾಡಿತು, ವಾಹಿನಿಗಳು ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿವೆ, ಬಾನುಲಿ ನಿಲಯಗಳು ವಿಶೇಷ ವರದಿಗಳನ್ನು ಬಿತ್ತರಿಸಿದೆ. ಈ ಮೂಲಕ ಸಮ್ಮೇಳನಕ್ಕೆ ಬರದವರೂ ಕೂಡ ಸಮ್ಮೇಳನದ ಅನುಭವವನ್ನು ಪಡೆಯುವುದು ಸಾಧ್ಯವಾಗಿದೆ. ಅವರೆಲ್ಲರಿಗೂ ವಿಶೇಷ ವಂದನೆಗಳನ್ನು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. 

ಮಂಡ್ಯದಲ್ಲಿ ಅಯೋಜಿತವಾದ 87ನೆಯ ಅಖಿಲ ಭಾರತ ಸಮ್ಮೇಳನವಾಗಿರುವ ಹಿನ್ನೆಲೆಯಲ್ಲಿ ನಾಡು-ನುಡಿಗೆ ವಿಶೇಷ ಸೇವೆ ಸಲ್ಲಿಸದ 87 ಸಾಧಕರನ್ನು ಮತ್ತು ಸುವರ್ಣ ಮಹೋತ್ಸವ ನೆನಪಿನಲ್ಲಿ 50 ಸಾಧಕರು ಸೇರಿದಂತೆ ಒಟ್ಟು 137 ಜನರನ್ನು ಸನ್ಮಾನಿಸಲಾಯಿತು. ಸಾಹಿತ್ಯ ಕನ್ನಡ ಸೇವೆ, ಕನ್ನಡ ಸಂಘಟನೆ, ಆಡಳಿತ ಕನ್ನಡ, ಸಮಾಜ ಸೇವೆ, ಶಿಕ್ಷಣ, ನ್ಯಾಯಾಂಗ, ಮಾಧ್ಯಮ ಕ್ಷೇತ್ರದಲ್ಲಿ ಕನ್ನಡ ವೈದ್ಯಕೀಯ, ಕ್ರೀಡೆ, ರಂಗಭೂಮಿ, ಕಾನೂನು, ವಿಜ್ಞಾನ, ಚಲನಚಿತ್ರ, ಮಹಿಳಾ ಸಬಲೀಕರಣ, ಸಂಗೀತ, ಕನ್ನಡಪರ ಹೋರಾಟ, ಸಹಕಾರ, ಭಾರತೀಯ ಸೇನೆ, ಸಂಶೋಧನೆ, ಪ್ರಾಚ್ಯವಸ್ತು, ಜಾನಪದ \, ಯುವ ಸಬಲೀಕರಣ ಹೀಗೆ 22 ಕ್ಷೇತ್ರದ 137 ಸಾಧಕರನ್ನು ಮೂರು ದಿನಗಳಲ್ಲಿ ಸನ್ಮಾನಿಸಿದಾಗ ಬಹುತೇಕರು ಹಾಜರಿದ್ದು ಸನ್ಮಾನವನ್ನು ಸ್ವೀಕರಿಸಿದ್ದು ಸಮ್ಮೇಳನದ ಮೆರಗನ್ನು ಹೆಚ್ಚಿಸಿ ಅದರ ಚಾರಿತ್ರಿಕತೆಗೆ ಕಾರಣವಾಯಿತು ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಸಾಂಸ್ಕೃತಿಕ ವಲಯದ ಸಾಧಕರು, ವಿವಿಧ ಕಲಾರಂಗಗಳ ದಿಗ್ಗಜರು, ಸಾಹಿತ್ಯ ಕ್ಷೇತ್ರದ ಸಾಧಕರು ಹೀಗೆ ಅನೇಕ ಪ್ರಮುಖರು ಸಮ್ಮೇಳನದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದು ಸಂಭ್ರಮವನ್ನು ತಂದಿತು. ಜಾತಿ-ಧರ್ಮ-ಮತಗಳನ್ನು ಮೀರಿ ಕನ್ನಡವೇ ಐಕ್ಯಮಂತ್ರವಾಗಿ, ಸಾಮಗಾನವಾಗಿ ಸಮ್ಮೇಳನದಲ್ಲಿ ‘ನಾವೆಲ್ಲರೂ ಒಂದೇ’ ಎಂಬ ಭಾವ ಮೂಡಿ ಬಂದಿದ್ದು ಕನ್ನಡ ನಾಡಿಗೆ ಹೊಸ ತೇಜಸ್ಸನ್ನು ತಂದಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. 

ಮಂಡ್ಯದಲ್ಲಿ ಸಮ್ಮೇಳನ ಯೋಜಿತವಾದ ದಿನದಿಂದ ಆರಂಭಿಸಿ ಅಪಸ್ವರ ಎತ್ತುವವರು, ಪ್ರತಿ ಹೆಜ್ಜೆಗೂ ಅಡ್ಡಗಾಲು ಹಾಕುವವರು ಇದ್ದೇ ಇದ್ದರು. ಈಗ ಸಮ್ಮೇಳನ ಯಶಸ್ವಿಯಾದ ನಂತರವೂ ತಪ್ಪುಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಸಮ್ಮೇಳನದ ಯಶಸ್ಸೇ ಉತ್ತರವಾಗಿದೆ. ‘ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ’ ಎಂಬ ಮಾತಿನಂತೆ ಮುಂದಿನ ದಿನಗಳಲ್ಲಿ ಸಮ್ಮೇಳನದ ಯಶಸ್ಸು ಮಾತ್ರ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ ಎಂದಿರುವ ನಾಡೋಜ ಡಾ.ಮಹೇಶ ಜೋಶಿಯವರು ಈ ಮೂಲಕ ಕನ್ನಡ ನಾಡು-ನುಡಿ ಬಹಳ ಮುಖ್ಯವಾಗಿ ಕನ್ನಡಿಗರ ಸಜ್ಜನಿಕೆ ಗೆದ್ದಿದೆ ಎಂದು ಹೇಳಿದ್ದಾರೆ. ಮುಂದೆ ಬಳ್ಳಾರಿಯಲ್ಲಿ ಅಯೋಜಿತವಾಗುವ 88ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಇದೇ ರೀತಿಯ ಬೆಂಬಲ ದೊರಕುವುದು ಎನ್ನುವ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.

ಎನ್.ಎಸ್.ಶ್ರೀಧರ ಮೂರ್ತಿ(ಸಂಚಾಲಕರು, ಪ್ರಕಟಣಾ ವಿಭಾಗ)

ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ

ಪ್ರತಿಕ್ರಿಯೆ

ನಿಮ್ಮ ಇಮೇಲ್ ವಿಳಾಸವನ್ನು ನಾವು ಪಬ್ಲಿಷ್ ಮಾಡುವುದಿಲ್ಲ .


*


Enable Google Transliteration.(To type in English, press Ctrl+g)