
ಬೆಂಗಳೂರು: ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಶ್ರೇಷ್ಟವಾದದ್ದು ಎನ್ನುವ ಹೆಗ್ಗಳಿಕೆಯನ್ನು ಪಡೆದಿದ್ದು, ಇದರ ಭದ್ರ ಬುನಾದಿಯ ಮೇಲೆ ನಮ್ಮ ಶಕ್ತಿಯುತ ಪ್ರಜಾಪ್ರಭತ್ವ ನಿಂತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ 76ನೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಭಾರತೀಯ ಸಂವಿಧಾನವನ್ನು ರೂಪಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಹಲವು ಹಿರಿಯರು ಜಗತ್ತಿನ ಪ್ರಮುಖ ಸಂವಿಧಾನಗಳನ್ನೆಲ್ಲಾ ಅಧ್ಯಯನ ಮಾಡಿ ಅದರ ಪ್ರಮುಖ ಅಂಶಗಳನ್ನು ಹೊರ ತೆಗೆದರು, ನಮ್ಮ ಪರಂಪರೆಯನ್ನು ಅವಲೋಕಿಸಿದರು. ಸಮಕಾಲೀನ ಅಗತ್ಯಗಳನ್ನು ಗುರುತಿಸಿ ಕೊಂಡರು. ಈ ಎಲ್ಲಾ ಚಿಂತನ-ಮಂಥನಗಳಿಂದ ಸುಭದ್ರವಾದ ಸಂವಿಧಾನ ರೂಪುಗೊಳ್ಳುವುದು ಸಾಧ್ಯವಾಯಿತು. ಭಾರತದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ದಕ್ಷವಾಗಿ ಕಾರ್ಯ ನಿರ್ವಹಿಸುವುದು ಇದರಿಂದ ಸಾಧ್ಯವಾಯಿತು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಪ್ರತಿ ನಾಗರೀಕರು ತಮ್ಮ ಹಕ್ಕು ಮತ್ತು ಕರ್ತವ್ಯದ ಕುರಿತು ಅರಿತು ಯೋಗ್ಯ ಪ್ರಜೆಯಾಗಿ ಮುನ್ನಡೆಯಲು ಇದು ನೆರವು ನೀಡಿತು, ನಮ್ಮ ರಕ್ಷಣಾ ವ್ಯವಸ್ಥೆ, ಚುನಾವಣಾ ವ್ಯವಸ್ಥೆ ಎಲ್ಲವೂ ಸುಗಮವಾಗಿ ಸಾಗಲು ಇದು ಕಾರಣವಾಗಿದೆ. ಸಂವಿಧಾನದ ಅರಿವನ್ನು ವಿಸ್ತರಿಸಿ ಕೊಳ್ಳುವುದು, ಅದರ ಕುರಿತು ಜಾಗೃತಿಯನ್ನು ಮೂಡಿಸುವುದು ಗಣರಾಜ್ಯೋತ್ಸವದಂದು ನಾವು ಮಾಡ ಬೇಕಾದ ಸಂಕಲ್ಪ. ಯೋಗ್ಯ ನಾಗರೀಕರಾಗಲು ನಾವೆಲ್ಲರೂ ಪಣ ತೊಡೋಣ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಈ ಸಂದರ್ಭದಲ್ಲಿ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು ಮತ್ತು ನೇ.ಭ.ರಾಮಲಿಂಗ ಶೆಟ್ಟಿ ಮುತ್ತು ಪರಿಷತ್ತಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.
ಪ್ರತಿಕ್ರಿಯೆ