
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿಗೆ ಪರಂಪರೆಯ ಜೊತೆಗೆ ಆಧುನಿಕತೆಯ ಸ್ಪರ್ಶವನ್ನು ನೀಡಿದ ಸಾ.ಶಿ.ಮರುಳಯ್ಯನವರು ಪರಿಷತ್ತನ್ನು ಬಹುಮುಖಿಯಾಗಿ ಬೆಳೆಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು, ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜನೆಗೊಂಡಿದ್ದ ಸಾ.ಶಿ.ಮರುಳಯ್ಯನವರ 94ನೆಯ ಜನ್ಮದಿನೋತ್ಸದವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಾ.ಶಿ.ಮರುಳಯ್ಯನವರೊಂದಿಗಿನ ತಮ್ಮ ನಿಕಟ ಒಡನಾಟವನ್ನು ವಿವರಿಸಿದ ನಾಡೋಜ ಡಾ.ಮಹೇಶ ಜೋಶಿಯವರು ಕನ್ನಡದಲ್ಲಿ ಐ.ಎ.ಎಸ್. ಬರೆಯುವವರಿಗೆ ಅವರು ಮಾರ್ಗದರ್ಶಕರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಹಲವರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಅವರ ಜೊತೆ ಬಹಳಷ್ಟು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಏಡ್ಸ್ ಪೀಡಿತ ಶಿಬಿರವೊಂದರಲ್ಲಿ ಅವರು ತೋರಿಸಿದ ಮಾನವೀಯ ನೆಲೆಯ ಸ್ಪಂದನ ಇಂದಿಗೂ ಕಾಡುವಂತಹ ಘಟನೆ ಎಂದು ಅವರು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾ.ಶಿ.ಮರುಳಯ್ಯನವರು ನೀಡಿದ ಕೊಡುಗೆಗಳನ್ನು ನೆನಪು ಮಾಡಿಕೊಂಡ ನಾಡೋಜ ಡಾ.ಮಹೇಶ ಜೋಶಿಯವರು ಅವರ ಕಾಲದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವದ ಯೋಜನೆ ಕನ್ನಡ-ಕನ್ನಡ ನಿಘಂಟು ಮುಕ್ತಾಯವಾಯಿತು. ‘ಸಾಮಾಜಿಕ ಚಿಂತನಮಾಲೆ’ ‘ಉಪೇಕ್ಷಿತ ಸಾಹಿತ್ಯ ಮಾಲೆ’ ‘ಭಾಷಾಂತರ ಮಾಲಿಕೆ’ ‘ರಳ ನಿಘಂಟು’ ‘ಪಡಿ ನುಡಿ ಕೋಶ’ದಂತಹ ಮಹತ್ವದ ಯೋಜನೆಗಳು ರೂಪುಗೊಂಡವು. ಪರಿಷತ್ತಿನ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಅವರ ಕಾಲದಲ್ಲಿ ಅನುದಾನ ಸಂಹಿತೆ ಜಾರಿಗೆ ಬಂದು ಸೇವಾ ಭದ್ರತೆ ದೊರಕಿತು. ಕಂಪ್ಯೂಟರ್ ಯಂತ್ರಗಳು ಅವರ ಕಾಲದಲ್ಲಿ ಪರಿಷತ್ತನ್ನು ಪ್ರವೇಶಿಸಿದವು. ಕನ್ನಡ ಸಾಹಿತ್ಯ ಪರಿಷತ್ತಿಗೆ ನಿರಂತರ ನೀರಿನ ಸೌಲಭ್ಯ ಅವರ ಕಾಲದಲ್ಲಿಯೇ ಆರಂಭವಾಯಿತು. ರಾಜ್ಯಾದ್ಯಂತ ಸಂಚಾರ ಮಾಡಲು ಪರಿಷತ್ತಿನ ಅಧ್ಯಕ್ಷರಿಗೆ ಕಾರು ಬಂದಿತು. ಚಾವುಂಡರಾಯ ಪ್ರಶಸ್ತಿ ಅವರ ಕಾಲದಲ್ಲಿಯೇ ಆರಂಭವಾಯಿತು. ಹೀಗೆ ಸಾ.ಶಿ.ಮರುಳಯ್ಯನವರು ಪರಂಪರೆಯೊಂದಿಗೆ ಪರಿಷತ್ತಿಗೆ ಆಧುನಿಕತೆಯ ಸ್ಪರ್ಶ ನೀಡಿದರು. ಅವರ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡುವುದೇ ಅವರಿಗೆ ಸಲ್ಲಿಸುವ ಸೂಕ್ತ ಗೌರವ ಎಂದು ನಾಡೋಜ ಡಾ.ಮಹೇಶ ಜೋಶಿ ನುಡಿ ನಮನವನ್ನು ಸಲ್ಲಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು, ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ ಮತ್ತು ಪರಿಷತ್ತಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರತಿಕ್ರಿಯೆ